ಮಾಲೋಜಿ

ಮಹತ್ವದ ಯುದ್ಧದಲ್ಲಿ ನೈಪುಣ್ಯತೆಯನ್ನು ತೋರಿಸಿದ ಮಾಲೋಜಿಯು ಮತ್ತು ಅಖೈಜಿಯವರು ನಿಜಾಂಶಾ ವ ಖಾಸಿಂಬರೀದ ಇವರನ್ನು ಸೋಲಿಸಿ ಬೆನ್ನಟ್ಟಿದ್ದರು. ಅದನ್ನು ಗ್ರಹಿಸಿದ ಬಾದಶಹಾನು ‘ಮಾರ್ಜಾಲ ಹಾಥಿ’ ಎರಡು ಆನೆಗಳನ್ನು ಕೊಟ್ಟನು. ೧೫೨೯ರಲ್ಲಿ ಗುಜರಾತದ ಬಹದ್ದೂರಶಹಾನು ನಿಜಾಂಶಾಹಿಯ ಸಹಾಯಕ್ಕೆ ಇವನನ್ನು ಕಳಿಸಿದನು. ಖಾಸಿಂ ಬರೀದನನ್ನು ಮಲಗಿದಾಗ ಅನಾವತ್ತಾಗಿ ಎತ್ತಿಕೊಂಡು ಬಂದನು.

ಅಖೈಜಿ

ಇವನು ಕೂಡ ಯುದ್ಧದಲ್ಲಿ ‘ಮಾರ್ಜಾಲ’ ತಂತ್ರ ಅನುಸರಿಸಿ ಮಕ್ಕಳಿಗೆ ತರಬೇತಿ ನೀಡಿದ್ದನು. ಅಸದ ಖಾನನೊಂದಿಗೆ ಇದ್ದುಕೊಂಡು ಆದೋನಿ, ಖಿಲ್ಲೆ ಪಡೆದರು. ೧೫೪೦ರಲ್ಲಿ ಖಾಸಿಂಖರೀದ ಮತ್ತು ಬುರಾನ್ ನಿಜಾಂ ಶಹಾ ಇವರನ್ನು ಬೆನ್ನೆತ್ತಿ ವಿಜಾಪುರ ಸೈನ್ಯ ಹೋಗಿತ್ತು. ಅದರಲ್ಲಿ ಅಖೈಜಿ ಹಾಗೂ ಅವರ ಮಕ್ಕಳಿದ್ದರು ಎನ್ನುವುದು ಇಲ್ಲಿ ಪ್ರಮುಖವಾಗಿದೆ. ಇವರ ಇನ್ನೊಂದು ಮಹತ್ವದ ಶೂರತನವೆಂದರೆ ಯಾದಗೀರ ಹತ್ತಿರ ನಡೆದ ಯುದ್ಧದಲ್ಲಿ ಅಸದ ಖಾನನೊಂದಿಗೆ ಅಖೈಸಿಂಗ-ಕರ್ಣಸಿಂಗ ಹೋಗಿ ಕುತುಬ್ ಶಹಾನನ್ನು ಸೋಲಿಸಿದರು.

ತಾಳಿಕೋಟೆ ಯುದ್ಧ

೧೫೬೫ರಲ್ಲಿ ಯುದ್ಧವು ವಿಜಯನಗರ ಸಾಮ್ರಾಜ್ಯದ ಪತನಕ್ಕೆ ನಾಂದಿ ಹಾಡಿತ್ತು. ಈ ಯುದ್ಧದಲ್ಲಿ ತೋರಿಸಿದ ಅವರ ಚಾಣಾಕ್ಷತೆ ಹಾಗೂ ಧೈರ್ಯ-ಸಾಹಸವು ಮೆಚ್ಚುವಂತಹದ್ದು. ಅಖೈಜಿ ಮೃತ್ಯು ನಂತರ ಕರ್ಣಸಿಂಗ ಮತ್ತು ಭೀಮಸಿಂಗರು ಪ್ರವರ್ಧಮಾನಕ್ಕೆ ಬಂದರು. ಖಡ್ಗ ಮತ್ತು ಕಂಜೀರದ ಉಪಯೋಗ ಇವರ ಯುದ್ಧದ ವಿಶೇಷ. ಇದರ ಹೊರತಾಗಿ ಬೇರೆ ಬೇರೆ ವಸ್ತುಗಳ ಬಳಕೆಯಿಂದ ಶತ್ರುಗಳನ್ನು ನಾಶ ಮಾಡುವುದು. ಶೌರ್ಯದ ಕೆಲಸವಲ್ಲವೆಂದು, ತಿಳಿದ ಇವರು ಖಡ್ಗದ ಹೊರತಾಗಿ ಕಂಜೀರನ್ನು ಬಳಿಸಿದರು. ವಿಜಯನಗರ ಯುದ್ಧದಲ್ಲಿ ಧೈರ್ಯಶಾಲಿಯಾಗಿ ಕಡಿಮೆ ಸೈನ್ಯದೊಂದಿಗೆ ನದಿ ಆಚೆಗೆ ಹೋಗಿ ಶತ್ರು ಸೈನ್ಯದಲ್ಲಿ ನುಗ್ಗಿದರು. ಆದಿಲ್‌ಶಾಹಾನ ಸುತ್ತಲೂ ಸೈನ್ಯ ಮುತ್ತಿದಾಗ ಮಾಲೋಜಿಯು ಜೀವದ ಹಂಗು ತೊರೆದು ಹೋರಾಡಿ ಬಾದಶಹಾನನ್ನು ಸುರಕ್ಷಿತವಾಗಿ ನದಿ ಆಚೆಗೆ ತಂದನು. ಪ್ರತಿಯಾಗಿ ಆದಿಲ್‌ಶಹಾ ತನ್ನ ಎದುರಿಗೆ ತಲೆ ಬಾಗಿಸಿ ಸಲಾಮ ಮಾಡುವ ಬದಲಿಗೆ ಕತ್ತಿ ಹಿರಿದು ಸಲಾಮ ಮಡುವ ಕೊಡುಗೆ ನೀಡಿದನು. ಬಗ್ಗಿ ಸಲಾಮು ಮಾಡುವುದು ಇಲ್ಲಿಂದ ನಿಂತು ಹೋಯಿತು.

ಮುಂದೆ ದಿಲಾವರಖಾನ್ ಹಮೀದ್‌ಖಾನ್ ಇವರ ಕೈ ಕೆಳಗೆ (ಈ ಹಬಸಿ ಸರದಾರರ) ಪಿಲಾಜಿ ಕೆಲಸ ಮಾಡಬೇಕಾಯಿತು. ೧೦೦ ವರ್ಷದಲ್ಲಿ ಘೋರ‍್ಪಡೆ ಮನೆತನದವರು ಪ್ರಾಮಾಣಿಕವಾಗಿ ಬಿಜಾಪುರ, ದರ್ಬಾರದಲ್ಲಿ ನಂಬಿಕೆ, ನಿಷ್ಠೆಯಿಂದ ಪರಾಕ್ರಮದ ಕೆಲಸಗಳನ್ನು ಮಾಡಿದರು. ಮತ್ತು ಮಾನ-ಸನ್ಮಾನ ಜಾಗಗಳನ್ನು ತಮ್ಮ ಮನೆತನದಲ್ಲಿ ಉಳಿಸಿಕೊಂಡು ಬಂದು ಘೋರ‍್ಪಡೆ ಘರಾಣೆಗೆ ಕೀರ್ತಿ ತಂದಿದ್ದಾರೆ. ಕರ್ಣಸಿಂಗ ಮತ್ತು ಭೀಮಸಿಂಗರು ತಾಳಿಕೋಟೆ ಕದನದ ನಂತರ ಹೋರಾಟ ನಡೆಸಿದ್ದು ಅಪ್ರತಿಮವಾಗಿದೆ.

ಕರ್ಣಸಿಂಗ ಮತ್ತು ಭೀಮಸಿಂಗ

ಅಖೈಸಿಂಗನ ಇಬ್ಬರು ಮಕ್ಕಳಾದ ಕರ್ಣಸಿಂಗ ಮತ್ತು ಭೀಮಸಿಂಗ ವೀರರಾಗಿದ್ದರು. ತಂದೆಯಂತೆಯೇ ಇಬ್ಬರೂ ಜೀವದ ಹಂಗು ತೊರೆದು ಹೋರಾಡುವ ಶೂರರಾಗಿದ್ದರು. ಅಖೈಸಿಂಗನು ೧೫೪೮ರಲ್ಲಿ ಮರಣವನ್ನಪ್ಪಿದನು. ಈರ್ವರು ತಂದೆಯ ಆಣತಿಯಂತೆ ಬಿಜಾಪುರದ ಅರಸೊತ್ತಿಗೆಯಲ್ಲೆ ಇದ್ದು ನಿಯತ್ತಿನಿಂದಲೇ ಸೇವೆ ಮಾಡಿದರು. ವಿಜಾಪುರ ಹಾಗೂ ವಿಜಯನಗರದ ಅರಸರಿಗೆ ಕೃಷ್ಣಾ ನದಿಯ ದಡದಲ್ಲಿ ಕದನ ಏರ್ಪಟ್ಟಿತ್ತು. ಆಗ ಘೋರ‍್ಪಡೆ ಮನೆತನದವರಾದ ಕರ್ಣಸಿಂಗ ಅವನ ಮಗ ಚೋಳರಾಜ ಮತ್ತು ಭೀಮಸಿಂಗ ಭಾಗವಹಿಸಿದ್ದರು. ಆ ಯುದ್ಧದಲ್ಲಿ ಕರ್ಣಸಿಂಗನು ಹತನಾದನು. ಚೋಳರಾಜನ ಹತ್ತಿರ ೭೦೦೦ ಸೈನಿಕ ದಂಡು ಸರದಾರಿಕೆ ಪೈಕಿ ಕೆಲವು ಹೊಸ ಜಾಗೀರ ಸಿಕ್ಕಿತೆಂದು ಮುದ್ಗಲ ಮತ್ತು ಕೊಲ್ಲೂರು ಈ ಹಳ್ಳಿಗಳನ್ನು ಸೈನಿಕರ ಖರ್ಚಿಗಾಗಿ ನೀಡುತ್ತಾನೆ. ಈ ಎರಡು ನದಿಗಳ ನಡುವಿನ ಪ್ರದೇಶದಲ್ಲಿ ಬರುವ ಪ್ರದೇಶವನ್ನು ನೇರವಾಗಿ ಘೋರ‍್ಪಡೆಯವರಿಗೆ ವಹಿಸಿ ಮುಧೋಳದ ರಾಮನಗರ ಎಂದು ಉಲ್ಲೇಖಿಸಿದರು. ನಂತರದಲ್ಲಿ ಅದಕ್ಕೆ ಚೋಳರಾಜ ಪಟ್ಟಣವೆಂದು ಉಲ್ಲೇಖಿಸಿದ್ದು ತಿಳಿದುಬರುತ್ತದೆ. ‘ಗೋವಾ’ವನ್ನು ಪಡೆಯಲು ಅಂಕುಶಖಾನನೊಂದಿಗೆ ಸಹಕರಿಸಿ ಪ್ರತಿಯಾಗಿ ಚೋಳರಾಜ ಮತ್ತು ಭೀಮಸಿಂಗ ಇವರು ಆದೋನಿ ಕಿಲ್ಲಾ ಪಡೆದರು.

ಮುಸ್ತಪಾ ಅರ್ಧಸಾನಿಯೊಂದಿಗೆ ಚೋಳರಾಜ ತನ್ನ ಚಿಕ್ಕಪ್ಪನಾದ ಭೀಮಸಿಂಗನೊಂದಿಗೆ ಇದ್ದುಕೊಂಡು ತೋರಗಲ್ ಖಿಲ್ಲೆ ಪಡೆದುಕೊಂಡಿದ್ದು, ಅಸದೃಶ್ಯ ಹೋರಾಟವೆಂದೇ ಹೇಳಬೇಕು. ಹಾಗೇ ವೆಂಗಟಿ ದೇಸಾಯಿಯನ್ನು ಹೊಡೆದು ನಂತರ ಧಾರವಾಡ ಕಿಲ್ಲೆ ಪಡೆದುದು ಮತ್ತೊಂದು ವಿಶೇಷ. ೧೫೭೪ರಲ್ಲಿ ಮುಸ್ತಾಪಖಾನನು ಬಂಕಾಪುರ ಕಿಲ್ಲೆ ಮೇಲೆ ಆದಿಪತ್ಯ ಸ್ಥಾಪಿಸಿದನು.

ಚೋಳರಾಜ

ಚೋಳರಾಜನು ಕರ್ಣಸಿಂಗನ ಮಗನು. ತನ್ನ ಚಿಕ್ಕಪ್ಪನಾದ ಭೀಮಸಿಂಗನ ಜೊತೆಗೆ ಸೇರಿಸಿಕೊಂಡು ಹೋರಾಡಿದ್ದು ವಿಶೇಷವಾಗಿದೆ. ೧೫೭೪ರಲ್ಲಿ ನಡೆದ ಬಂಕಾಪುರ ಕಿಲ್ಲೆ ಹೋರಾಟದಲ್ಲಿ ಭೀಮಸಿಂಗನು ಮಡಿದನು. ಚೋಳರಾಜನಿಗೆ ಗೆಲುವಿನ ಸಂಕೇತವಾಗಿ ಸಪ್ತ ಹಜಾರಿಕಿ ಹಾಗೂ ವಿಜಯನಗರದ ಸುತ್ತಮುತ್ತಲಿನ ೨೬ ಹಳ್ಳಿಗಳು ವ ವಾಯಿ, ಸುತ್ತಮುತ್ತಲಿನ ೪೦ ಹಳ್ಳಿಗಳ ಜಹಗೀರ ಆಗಿ ದೊರಕಿದವು. ಒಂದರ ಬೆನ್ನ ಹಿಂದೆ ಒಂದರಂತೆ ಯುದ್ಧಗಳು ನಡೆದೇ ಇದ್ದವು. ವಿಜಯನಗರದೊಂದಿಗೆ ೧೫೭೮ರಲ್ಲಿ ವಿಜಯಪುರದ ರಾಜರಾದ ತಿರುಮಲ ಹಾಗೂ ಶ್ರೀರಂಗ ಇವರೊಂದಿಗೆ ಭಯಂಕರ ಯುದ್ಧ ನಡೆದಾಗ ಚೋಳರಾಜನು ಮಡಿದನು. ಇದರಿಂದ ಆದಿಲ್‌ಶಾಹಿಯ ಸೈನ್ಯಕ್ಕೆ ಬಹಳಷ್ಟು ನಷ್ಟ ಸಂಭವಿಸಿತು.

ಪಿಲಾಜಿ ೧೫೬೨ ರಿಂದ ೧೫೮೨

ಪಿಲಾಜಿಯೂ ಕೂಡ ಬಹುದೊಡ್ಡ ನಿಷ್ಟಾವಂತ ಸೈನಿಕ ಹಾಗೂ ಹೋರಾಟಗಾರನಾಗಿದ್ದ. ಮುರ್ತುಜಾ ನಿಜಾಂಶಾಹಿಯೊಂದಿಗೆ ಕೈ ಜೋಡಿಸಿ ಹೋರಾಡಲು ವಿಜಾಪುರದ ವತಿಯಿಂದ ಪಿಲಾಜಿ-ಖಾನೋಜಿ ವ ವಲ್ಲಭಸಿಂಗ ಘೋರ‍್ಪಡೆ ಈ ಮೂರು ಜನರು ಹೋಗಿದ್ದರು ಎಂದು ತಿಳಿದುಬರುತ್ತದೆ. ಆದರೆ ಅವರ ಹೋರಾಟದ ಕುರಿತು ವಿವರವಾದ ಮಾಹಿತಿ ಸಿಗುವುದಿಲ್ಲ. ನಂತರ ಖಾನೋಜಿ ವಲ್ಲಬಸಿಂಗ ಇವರ ವಂಶ ಬೇರೆ ಬೇರೆ ಕಡೆಗೆ ಬೆಳೆದುದನ್ನು ವಂಶಾವಳಿಯಿಂದ ತಿಳಿಯಬಹುದು. ವಲ್ಲಭಸಿಂಗ ವಂಶವು ಸಂಡೂರು, ಗಜೇಂದ್ರಗಡ ಕಡೆಗೆ ಹಂಚಿ ಹೋಯಿತು. ದಿವಾಲಖಾನನ ಆಜ್ಞೆಯಂತೆ ಪಿಲಾಜಿ ಘೋರ‍್ಪಡೆ ಬರಗಿ ಸ್ಟಾರ ಕಡೆಗೆ ಹೋಗಿದ್ದನು. ದಿವಾಲಖಾನ ಮಂಜಲ್‌ಖಾನನ ಆದಿಪತ್ಯದಲ್ಲಿ ಪಿಲಾಜಿ ಅವರ ಬಂಧು ಬಂಕಾಪುರದ ಕಡೆಗೆ ಸೈನ್ಯದೊಂದಿಗೆ ಹೋದರು. ಮತ್ತು ಕರ್ನಾಟಕದಲ್ಲಿಯ ಸೊನ್ನದ ಗಂಗ ನಾಯಕ ಮತ್ತು ಅರಸಪ್ಪ ನಾಯಕ ಇವರ ಕಡೆಯಿಂದ ತೆರಿಗೆ ವಸೂಲಿ ಮಾಡಿದರು. ಇದೆ ಸಮಯದಲ್ಲಿ ಅಕ್ಬರನು ತನ್ನ ಸಾರ್ವಭೌತ್ವವನ್ನು ಅಲಿ ಆದಿಲ್‌ಶಾಹನಿಗೆ ಮನವರಿಕೆ ಮಾಡಿಕೊಡುವ ಸಲುವಾಗಿ ಐನ್-ಉಲ್ ಮುಲ್ಕ ಶಿರಾಜಿಯನ್ನು ಮೊಘಲ ಪ್ರತಿನಿಧಿಯನ್ನಾಗಿ ವಿಜಾಪುರಕ್ಕೆ ಕಳುಹಿಸಿದ್ದನು. ಅವನನ್ನು ಗೌರವದಿಂದ ಸ್ವೀಕರಿಸಿದ ಅಲಿಯು ಶಿರಾಜಿಯೊಂದಿಗೆ ಕಷೂಡ ಉಲ್ ಮುಲ್ಕ ತನ್ನ ಪ್ರತಿನಿಧಿಯಾಗಿ ಅಕ್ಬರನ ಆಸ್ಥಾನಕ್ಕೆ ಕಳುಹಿಸಿದನು ಮೊಘಲ ಅಧಿಕಾರಿ ಹಕೀಮ ಅಲಿ ಗಿಲಾನಿಯು ಅಕ್ಬರನನ್ನು ಮದೂರು ಹಾಕಿಕೊಂಡರೆ ಯುದ್ಧ ಎದುರಿಸಬೇಕಾದಿತೆಂದು ಅಲಿಗೆ ಎಚ್ಚರಿಕೆ ನೀಡಿದನು. ಹೀಗೆ ಮೊಗಲರ ಸಂಪರ್ಕ ಮೊದಲ ಬಾರಿಗೆ ವಿಜಾಪುರದೊಂದಿಗೆ ಅಲಿಯ ಅಧಿಕಾರಾವಧಿಯಲ್ಲಿ ಆಯಿತು. ಐನ್-ಉಲ್ ಮುಲ್ಕ ಶಿರಾಜಿ ಇವನು ಬೆಳಗಾಂ ಕಡೆಗೆ ಬಂಡೆಬ್ಬಿಸಿದನು. ಈ ಸಂದರ್ಭದಲ್ಲಿ ಹಮೀದಖಾನನೊಂದಿಗೆ ಪಿಲಾಜಿ ಘೋರ‍್ಪಡೆ ಇವನನ್ನು ಕಳಿಸಲಾಗಿತ್ತು. ಇದರಲ್ಲಿ ಐನ್-ಮುಲ್ಕ-ಉಲ್ ಹೊಡೆಯಲ್ಪಟ್ಟನು. ೧೫೯೫ರ ವೇಳೆಗೆ ಶಹಾಬದ್ದೂರಘರ ಯದ್ಧದಲ್ಲಿ ಪಿಲಾಜಿ ಸತ್ತನು. ಪ್ರತಾಪರಾವ ಅವನ ಜೊತೆಗಿದ್ದು ಸಹಕರಿಸುತ್ತಿದ್ದನು. ಮುಂದೆ ಅವನೇ ಈ ಪರಂಪರೆಯಲ್ಲಿ ಕಂಡುಬರುತ್ತಾನೆ.

ಪ್ರತಾಪರಾವ (೧೫೮೨೧೬೪೫)

ಈತ ಆದಿಲ್‌ಷಾಹಿಯ ಕಂದಾಯ ಸಚಿವನಾಗಿದ್ದ. ಜೊತೆಗೆ ಮಹಾ ಮುತ್ಸದ್ಧಿ ಮೇದಾವಿಯಾದ ಪ್ರತಾಪರಾವ್ ಕಾನೂನು ಸಲಹೆಗಾರನಾಗಿದ್ದನು. ಪೀರಾಜಿ ಜೊತೆಗೆ ಸೈನ್ಯದಲ್ಲಿದ್ದು ಹೋರಾಟ ಮಾಡಿ ದ್ರವ್ಯ ಸಂಚಯ ಮಾಡಿಕೊಟ್ಟಿದ್ದರಿಂದ ಮುಖ್ಯ ಸೇನಾಪತಿ ಅಲ್ಲದೆ ದಿವಾನಗಿರಿ ಕೊಟ್ಟು ಆಡಳಿತದ ಉಸ್ತುವಾರಿ ನೀಡಿದ್ದು ಇದೆ. ಆದಿಲ್‌ಶಾಹಿ ದರ್ಬಾರದಲ್ಲಿ ಬಹುದೊಡ್ಡ ಹುದ್ದೆಯಾದ ಕಂದಾಯ ಸಚಿವ ಸ್ಥಾನ ದೊರೆತದ್ದು ಅವನ ಪ್ರಾಮಾಣಿಕ ಮತ್ತು ನಂಬಿಕೆಗೆ ಸಾಕ್ಷಿಯಾಗಿದೆ. ಪ್ರತಾಪಸಿಂಗನು ಮೊಗಲರ ಜೊತೆಗಿದ್ದು, ವೇಲೂರ ಯುದ್ಧದಲ್ಲಿ ಹೋರಾಟ ಮಾಡಿದರು. ಆದರೆ ಬಿಜಾಪುರವನ್ನು ಅಷ್ಟು ಸರಳವಾಗಿ ಗೆಲ್ಲಲು ಸಾಧ್ಯವಿರಲಿಲ್ಲ. ಏಕೆಂದರೆ ೩ ನಿಟ್ಟಿನಿಂದ ಮೊಗಲರ ಸೈನ್ಯವು ಸುತ್ತುವರಿದಿತ್ತು. ಪ್ರತಾಪಸಿಂಗನು ಒಂದು ನಿಟ್ಟಿನಿಂದ ತನ್ನ ಎಲ್ಲ ಸೈನ್ಯದೊಂದಿಗೆ ತನ್ನ ಮಗನಾದ ಬಾಜಿರಾಜೆಯನ್ನು ಈ ಯುದ್ಧದಲ್ಲಿ ಸೇರಿಸಿಕೊಂಡಿದ್ದನು. ಅಲ್ಲದೆ ಆಗ ನಡೆದದ್ದು ಕಿರುಕುಳಗಳಿಂದ ಅದನ್ನು ಸದೆ ಬಡೆಯುತ್ತಲೇ ನಡೆದಿದ್ದನು. ಒಂದೆಡೆ ಮೊಗಲರು ಒಂದೆಡೆ ನಿಜಾಮನು, ಒಂದೆಡೆ ಶಿವಾಜಿಯ ಕಿರುಕುಳಗಳಿಂದ ಖಿನ್ನನಾಗಿದ್ದನು. ಆದರೆ ಬಾಜಿರಾಜೆಗೆ ನೋಡಿಕೊಳ್ಳಲು ಎರಡು ಸಾವಿರ ಕುದುರೆಗಳನ್ನು ಮತ್ತು ಸೈನಿಕರ ಉಸ್ತುವಾರಿಯು ಸಿಕ್ಕಿದ್ದು ಅವರ ಧೈರ್ಯ ಸಾಹಸಕ್ಕೆ ಎಂಬುದು ವಿಧಿತವಾಗುತ್ತದೆ. ರಣದುಲ್ಲಾಖಾನನ ಧೈರ್ಯ ಸಾಹಸದಲ್ಲಿ ಅವನ ಕೈಕೆಳಗೆ ಎಲ್ಲ ಬಿಜಾಪುರದ ಸರದಾರರು ಇದ್ದು ಅವನ ಸಲಹೆ ಮೇರೆಗೆ ಮುನ್ನಡೆಯುತ್ತಾರೆ. ಅವರ ಮುಖ್ಯ ಸ್ಥಾನದಲ್ಲಿ ಬಾಜಿರಾಜೆ ಘೋರ‍್ಪಡೆಯು ಸೇವೆ ಸಲ್ಲಿಸುವುದು ಮುಂದುವರೆಯುತ್ತದೆ.

ಮುಂದೆ ಚಂದ್ರಗಿರಿ ರಾಜ್ಯದೊಂದಿಗೆ ಯುದ್ಧ ನಡೆದಾಗ ಶ್ರೀರಂಗ ರಾಯನೊಂದಿಗೆ ಮುಖಾಮುಖಿಯಲ್ಲಿ ಅವನ ಹತ್ಯಾರದಿಂದಲೇ ೧೬೪೫ರಂದು ರಾಜೆ ಪ್ರತಾಪಸಿಂಗನು ಜಹಾಗೀರಾಗಿ ಸ್ವೀಕರಿಸಿದ ‘ವಾಯಿ’ ಪ್ರದೇಶದಲ್ಲಿ ಮರಣವನ್ನಪ್ಪುತ್ತಾನೆ.

ಈವರೆಗೆ ನಡೆಸಿದ ಹೋರಾಟದ ಪ್ರತೀಕವಾಗಿ ಅನೇಕ ಪ್ರದೇಶಗಳು ಜಾಗೀರಾಗಿ ಸಿಕ್ಕರೂ ವೈಯಕ್ತಿಕ ಬಳಕೆಗೆ ಪಡೆಯದೇ ಅಷ್ಟೇ ಖುಷಿಯಿಂದ ಮರಳಿ ನೀಡಿದ್ದು ಇದೆ. ತಾನು ಒಬ್ಬ ಪ್ರಮುಖ ಸೇನಾಪತಿ ಮತ್ತು ಕಂದಾಯ ಸಚಿವ, ಕಾನೂನು ಸಚಿವನಾಗಿ ಆಡಳಿತದ ದೊಡ್ಡ ಹುದ್ದೆಗಳಲ್ಲಿದ್ದರೂ ವೈಯಕ್ತಿಕವಾಗಿ ಹೋರಾಡುವ ಮತ್ತು ಧೈರ್ಯ-ಸಾಹಸಗಳನ್ನು ತುಂಬುವ ಧೀಮಂತರು ಘೋರ‍್ಪಡೆ ರಾಜರೆಂಬುದು ಅವರ ಇತಿಹಾಸದ ಚಿಕ್ಕ ಚಿಕ್ಕ ತುಣುಕುಗಳಿಂದಲೂ ವಿಧಿತವಾಗುತ್ತದೆ.

ಮಾಲೋಜಿ ಮತ್ತು ಶಂಕ್ರಾಜಿ ಉರ್ಪ ಜೈಸಿಂಹ

ಬಾಜಿರಾಯನ ಮಕ್ಕಳಾದ ಮಾಲೋಜಿ ಮತ್ತು ಶಂಕ್ರಾಜಿ ಉರ್ಪ್ ಜೈಸಿಂಹ. ಇವರು ದಖ್ಖನ್ ಇತಿಹಾಸದಲ್ಲಿ ಪ್ರಸಿದ್ಧರಾದ ವ್ಯಕ್ತಿಗಳು. ಆದಿಲ್‌ಷಾನ ನಿಕಟವರ್ತಿ ಮತ್ತು ಅವನ ರಾಜಕೀಯ ಜವಾಬ್ದಾರಿಗಳ ಕಡೆಗೆ ಅತ್ಯಂತ ಕಾಳಜಿ ವಹಿಸಿ ಹಾಗೇ ಅವನ ಅತೀ ಸಮೀಪದಲ್ಲಿ ಬಾಳತೊಡಗಿದವರು. ಸುಮಾರು ೧೬೬೪ರಲ್ಲಿ ಬಾಜೀರಾವ ಮತ್ತು ಶಿವಾಜಿ ವಿರುದ್ಧವಾಗಿ ಯುದ್ಧವಾಯಿತು. ಆಗ ಬಾಜಿರಾವನು ಮಡಿದನು. ಆ ಸಂದರ್ಭದಲ್ಲಿ ಮಾಲೋಜಿ ವ ಶಂಕ್ರಾಜಿ ಹಿಂದುಸ್ಥಾನದ ದಹೀರ ಮುಕ್ಕಾಂದಲ್ಲಿದ್ದರು. ಆದಿಲ್‌ಶಾಹಿಯು ಇವರನ್ನು ಕರೆಸಿ ಅವರಿಗೆ ಅಭಯಹಸ್ತ ನೀಡಿದನು. ಇದರಿಂದ ಹರ್ಷಿತರಾದ ಇವರು ತಮ್ಮ ತಂದೆಯ ಮತ್ತು ರಾಜನ ಜವಾಬ್ದಾರಿಗಳತ್ತ ಗಮನ ಹರಿಸಿದರು. ಇಂತ ಸಮಯವನ್ನು ಕಾದುಕುಳಿತಾಗಲೇ ಅನೇಕ ತಾಪತ್ರಯಗಳು ಬಂದೊದಗಿದವು. ಆದಿಲ್‌ಶಾಹಿಯ ಸರದಾರರಲ್ಲಿಯೇ ಮುಂಚೂಣಿಯಲ್ಲಿದ್ದು ಇತರ ಸುಲ್ತಾನರು ಹಾಗೂ ಸೇನಾಧಿಪತಿಗಳಿಗಿಂತಲೂ ಪ್ರಸಿದ್ಧರಾಗಿದ್ದರು. ಇವರಿಬ್ಬರೂ ವಿಜಾಪುರಕ್ಕಾಗಿಯೇ ಹೋರಾಡಿದರು. ಮೊಗಲ್‌ ಮತ್ತು ಶಿವಾಜಿ ವಿರುದ್ಧ ಸ್ವಾರಿ ತೆಗೆದುಕೊಂಡು ಅಣ್ಣ-ತಮ್ಮಂದಿರು ಬಹಳ ಪರಾಕ್ರಮ ಮಾಡಿದರು. ಇದನ್ನರಿತ ಆದಿಲ್‌ಶಾಹಿ ಬಾಜಿರಾಯನ ಅಭೂತಪೂರ್ವ ರಾಜಭಕ್ತಿ ಮತ್ತು ಅವನ ಶೂರ ಮಕ್ಕಳಿಂದ ಸಂತುಷ್ಟನಾಗಿ ಘೋರ‍್ಪಡೆಗಳಿಗೆ ಜಹಾಗೀರ್‌ ನೀಡಿದರು. ಅಂದರೆ ಘೋರ‍್ಪಡೆ ಜಹಾಗೀರ ಖಾಯಂ ಆಗಿ ‘ಆ ಮನೆತನದಲ್ಲಿ ೭೦೦೦/ಸೇನಾಪತಿಗಳ ೭೦೦೦/ಕುದುರೆ ಸವಾರಿಗಳನ್ನು ನಿಭಾಯಿಸುವಿಕೆ ಜಹಾಗೀರಿಯಲ್ಲಿ ಕೊಡಲಾದ ಪ್ರಾಂತ್ಯಗಳೊಂದಿಗೆ ಇದು ಮುಂದುವರೆಯಿತು. (ಪರ್ಶಿಯನ್‌ ಫಮಾನ್ ಮರಾಠಿ + ಹಿಂದಿ, ಪು-೬೩-೬೪ ಅನುಬಂಧ)

ಈ ಘೋರ‍್ಪಡೆ ಸಹೋದರರು ಪ್ರಸಿದ್ಧರಾಗಿದ್ದು ಅವರ ಶೌರ್ಯ ಕಾರ್ಯಗಳಿಂದ. ಅದು ಬಿಜಾಪುರದ ಮಿರ್ಜಾ ರಾಜಾ ಜಯಸಿಂಹನ ದಾಳಿಯ ಸಮಯದಲ್ಲಿ ತೋರಿದ ಅಸಮಾನ್ಯ ಪರಾಕ್ರಮದಿಂದ. ಬಿಜಾಪುರ ಸೈನ್ಯೆ ಶಿವಾಜಿಯ ಜೊತೆಗೆ ಯುದ್ಧಕ್ಕೆ ನಿಂತಾಗ ಶಿವಾಜಿಯು ಮೊಘಲರ ಜೊತೆಗೆ ಕೈ ಜೋಡಿಸಿದನು. ಆಗ ಅನಿವಾರ್ಯವಾಗಿ ಬಿಜಾಪುರ ಸೈನ್ಯವು ಒಂಟಿಯಾಗಿ, ವೈಯಕ್ತಿಕವಾಗಿ ಹೋರಾಟಕ್ಕೆ ನಿಲ್ಲಬೇಕಾಯಿತು. ಶಿವಾಜಿಯು ಈ ಸಮಯದಲ್ಲಿ ಬಿಜಾಪುರ ದೊಂದಿಗೆ ಭೀಕರ ಹೋರಾಟ ಮಾಡಿ ಗೆದ್ದು ವಶಪಡಿಸಿಕೊಂಡನು. ಈ ಯುದ್ಧ ಶಿವಾಜಿಯೊಂದಿಗೆ ಆತನ ಜಹಗೀರ ಭಾಗಗಳಲ್ಲಿ ಅಂದರೆ ತಾಸಗಾಂವದ ಹತ್ತಿರ ಸಂಭವಿಸಿತು. ಈ ಯುದ್ಧದಲ್ಲಿ ಶಂಕ್ರಾಜಿ ಹತ್ಯೆಯಾದನು. ಇದರಿಂದ ನೊಂದ ಮಾಲೋಜಿ ಮಾನಸಿಕವಾಗಿ ಕುಗ್ಗಿದನು. ಈ ಯುದ್ಧದಲ್ಲಿ ಬಿಜಾಪುರದ ಆಕ್ರಮಣ ಇನ್ನಷ್ಟು ಅಪಾಯಕ್ಕೆ ಸಿಲುಕಿದ್ದರಿಂದ ಖಿನ್ನನಾದನು. ಆದರೆ ಅವನ ನಿಷ್ಠಾವಂತ ಮನಸ್ಸು ಆದಿಲ್‌ಶಾಹಿ ಸಾಮ್ರಾಜ್ಯದ ರಕ್ಷಣೆಗಾಗಿ ನಿಲ್ಲಬೇಕಾಯಿತು. ಶಿವಾಜಿಯು ನಿರಂತರವಾಗಿ ಯುದ್ಧ ನಡೆಸಿದ್ದರಿಂದ ತನ್ನ ಚಕ್ರಾಧಿಪತ್ಯದ ಎಳೆಗಳನ್ನು ಅಲ್ಲಲ್ಲಿ ಬಿಟ್ಟು ಒಳನುಗ್ಗಲ್ಪಟ್ಟನು. ಇದರ ಪರಿಣಾಮದಿಂದ ಬಿಜಾಪುರ ಸುಲ್ತಾನರ ಪ್ರದೇಶ ಮತ್ತು ಪ್ರಜೆಗಳು ಸಹ ಅವನ ವಶದಲ್ಲಿ ಉಳಿದರು. ಅಲಿ ಆದಿಲ್‌ಶಾಹನು ಕೂಡ ಸಿದ್ಧಿಯಕರ್ನೂಲ ವಶಪಡಿಸಿಕೊಂಡನು. ಪ್ರಧಾನಮಂತ್ರಿ ಅಬ್ದುಲ್‌ ಅಹ್ಮದ್‌ನ ರಾಜಭಕ್ತಿ ಮತ್ತು ಪ್ರಾಮಾಣಿಕತೆಯ ಕೆಲಸ ಕಂಡು ಸಾರ್ವಭೌಮ ವಿಜಾಪುರ ರಾಜ್ಯದ ರಾಜಧಾನಿಯ ವೈಭವ ಮತ್ತು ಮಂಡಲದ ಅಧಿಕಾರವನ್ನು ನೀಡಿದನು. ಅಲಿ ಆದಿಲ್‌ಶಾಹಿ ಕಾಲದಲ್ಲಿ ನಿರ್ಮಿಸಿದ ಕಟ್ಟಡಗಳ ಮೇಲುಸ್ತುವಾರಿಕೆಯನ್ನು ವಹಿಸಿದ್ದು ಕಂಡುಬರುತ್ತದೆ. ಮಾಲೋಜಿಯು ಸೈನ್ಯದ ನೇತೃತ್ವ ಹಾಗೂ ಮಂಡಲದ ಕೆಲಸ ಕೈಗೆತ್ತಿಕೊಂಡಿದ್ದರಿಂದ ಹಲವಾರು ಕಾನೂನನ್ನು ರಾಜ್ಯಕ್ಕಾಗಿ ಮಾಡಿದನು.

ಹೀಗೆ ಬಹುದೊಡ್ಡ ಜವಾಬ್ದಾರಿ ಹೊತ್ತ ಮಾಲೋಜಿ ಹಾಗೂ ಶಂಕ್ರಾಜಿಯವರು ಆದಿಲ್‌ಶಾಹಿಗೆ ಬಲಗೈಯಂತೆ ಇದ್ದರು. ಶಿವಾಜಿಯ ವಿರುದ್ಧ ಹೋರಾಡುವುದರೊಂದಿಗೆ ಆದಿಲ್‌ಶಾಹಿಯ ಸ್ವಾಯತ್ತತೆಯನ್ನು ಉಳಿಸಿಕೊಳ್ಳುವಲ್ಲಿ ವಿಫಲರಾದರೂ ತಕ್ಕ ಮಟ್ಟಿಗೆ ಪ್ರಭುತ್ವ ಉಳಿಸಿಕೊಳ್ಳಲು ಪ್ರಯತ್ನಿಸಿದರು. ೧೬೬೫ರಲ್ಲಿ ಮಾಲೋಜಿ ಮತ್ತು ಖವಾಸಖಾನ ಸೇರಿ ಶಿವಾಜಿ ವಿರುದ್ಧ ಬಂಡೆದ್ದರು. ಶಿವಾಜಿಯು ತನ್ನ ದಿಕ್ಕನ್ನು ಬದಲಾಯಿಸಿ ಪುಣೆ ಕಡೆಗೆ ಹೋದನು.

ಕ್ರಿ.ಶ. ೧೬೦೦ರಲ್ಲಿ ಮಾಲೋಜಿಯ ಸಾಹಸ ಕಂಡು ಬಿಜಾಪೂರದ ವೈಭವದ ರಾಜಧಾನಿ ನೋಡಿಕೊಳ್ಳುವುದರ ಜೊತೆಗೆ ತನ್ನಲ್ಲಿರುವ ನೌಕರಿ ಮಾಫಿ ಮಾಡಿ ಮುಧೋಳದ ಐದು ಮಹಲಗಳ ಕಂದಾಯದ ಭಾಗವನ್ನು ಕೊಟ್ಟನು.

೩ನೇ ಮಾಲೋಜಿ

೩ನೇ ಮಾಲೋಜಿ ಬಿಜಾಪುರದ ರಾಜಪ್ರತಿನಿಧಿಯಾಗಿದ್ದು, ಸುಮಾರು ೧೭೪೦ರಲ್ಲಿ ಅದು ಮೊಘಲ ಆಡಳಿತದ (ಕೈಕೆಳಗೆ) ದಕ್ಷಿಣ ಭಾಗದಲ್ಲಿ ತನ್ನ ಅಧಿಕಾರ ವ್ಯಾಪ್ತಿಯಿಂದ ಬಹಳ ದೂರ ಉಳಿಯಬೇಕಾಯಿತು. ಈ ಸಂದರ್ಭದಲ್ಲಿ ಮರಾಠರು ತುಂಬ ಬಲಶಾಲಿಗಳಾಗಿದ್ದರು. ಅದು ಅಲ್ಲದೆ ಔರಂಗಜೇಬನ ತಪ್ಪು ನೀತಿಯ ಆಡಳಿತದ ಪರಿಣಾಮ ದಖನ್‌ದಲ್ಲಿಯೂ ಆಗಿ ಮಹ್ಮದಿಯ ಸಂತತಿ ನಾಶವಾಗುವ ಹಂತದಲ್ಲಿತ್ತು. ಈ ಸಮಯದಲ್ಲಿ ಪೇಶ್ವೆಗಳು ಉಚಿತವಾಗಿಯೇ ತಮ್ಮ ಹಸ್ತಕ್ಷೇಪವನ್ನು ಈ ಭಾಗದಲ್ಲಿ ತೋರಿದರು. ಅವರ ಸಾಮ್ರಾಜ್ಯ ಸೈನಿಕರ ಮುಖ್ಯ ಭಾಗಗಳು ತಮ್ಮ ಸಂಸ್ಥಾನಗಳಿಂದ ದೂರ ದೂರದ ದಂಡಯಾತ್ರೆ ಬೆಳೆಸಿದವು. ಮರಾಠ ಸೇನಾಪತಿಗಳು ಒಳಸಂಚು ಇಲ್ಲವೆ ಮೈತ್ರಿಯ ಮೂಲಕ ತಮ್ಮ ಭೂಭಾಗವನ್ನು ವಿಸ್ತರಿಸಲು ಪ್ರಯತ್ನಿಸುತ್ತಿದ್ದರು. ಅಲ್ಲದೆ ಈ ಮುಂಚೆ ಪುರಾತನ ಕರ್ನಾಟಕ ಜಹಾಗೀರ ಹೊಂದಿದ ಶಾಹು ಕುಟುಂಬದ ಭೂಭಾಗದ ಮೇಲೆ ಸತಾರ ನ್ಯಾಯಾಲಯದಿಂದ ಪ್ರಯತ್ನ ನಡೆದಿತ್ತು. ಈ ಪ್ರಯತ್ನದಲ್ಲಿ ಭೋಸಲೆ ಮನೆತನಗಳು ಆಸಕ್ತಿ ಹೊಂದಿದ್ದವು. ಅವು ತಮ್ಮ ಪಾಲಿನ ಹಳೇ ಜಹಾಗೀರಿ ಪಡೆಯಲು ಸತಾರಾ ಸರ್ಕಾರಕ್ಕೆ ಸಹಾಯ ಕೋರಿದ್ದರು. ಆದರೆ ಈ ಮನೆತನಗಳು ನೇರವಾಗಿ ಈ ಸರ್ಕಾರದೊಂದಿಗೆ ಇದೇ ಉದ್ದೇಶಕ್ಕಾಗಿ ಕೈ ಜೋಡಿಸಲು ಇಚ್ಛೆಪಡಲಿಲ್ಲ. ಕಾರಣ ಅವರು ಈ ಹಳೆಯ ಜಹಾಗೀರಿ ಮರಳಿ ಪಡೆಯುವುದು ಅಷ್ಟು ಸುಲಭವಲ್ಲದ ಕೆಲಸವಲ್ಲವೆಂದು ಮನಗಂಡಿದ್ದರು. ಅದಕ್ಕಾಗಿ ಅವರು ಈ ಸರ್ಕಾರದೊಂದಿಗೆ ತಾವು ದಂಡೆಯಾತ್ರೆ ಬೆಳೆಸಿ ಹಳೆಯ ಜಹಾಗೀರಿ ಭಾಗಗಳ ಕಂದಾಯವನ್ನು ಲೂಟಿ ಮಾಡುವ ಪ್ರಯತ್ನ ನಡೆಸಿದರು. ಇದರಿಂದಾಗಿಯೇ ಆದಿ‌ಲ್‌ಶಾಹಿ ಮತ್ತು ಕುತುಬ್‌ಶಾಹಿ ರಾಜಧಾನಿಗಳ ಹಲವು ಸರದಾರರ ಕೆಲಸಕ್ಕೆ ಕುತ್ತು ತಂದರು. ಸೇನಾ ನಾಯಕರ ಎಲ್ಲೆಯಾಗಲಿ ಯಾವಾಗಲೇ ಆಗಲಿ ಒಂದು ಅವಕಾಶ ಸಿಕ್ಕರೆ ಸಾಕು ಸುಲಿಗೆ ಮಾಡುತ್ತಿರುವುದನ್ನು ಮುಂದುವರೆಸಿದರು. ಇದಕ್ಕಾಗಿಯೇ ಯಾವುದೇ ಜಾಗೀರ ಪಡೆದ ವ್ಯಕ್ತಿ ಆನಂದದಿಂದ ಶಾಂತವಾಗಿಯೂ ಜೀವನ ಕಳೆಯಲು ಬಯಸದ ಸ್ಥಿತಿ ಈ ಸಮಯದಲ್ಲಿ ಉಂಟಾಗುತ್ತಿತ್ತು. ಬಹುತೇಕ ಅಂಶವು ಘೋರ‍್ಪಡೆಯ ಅರಸನಾದ ಮಾಲೋಜಿ ರಾಜೆಯವರಿಗೂ ಹೊರತಾಗಿರಲಿಲ್ಲ. ಕಾರಣ ಬಹಮನಿ ಅರಸರಿಂದ ಖಾಯಂ ಆಗಿ ಜಹಾಗೀರ ಪಡೆದಿದ್ದ ದಖ್ಖನ್ ಮತ್ತು ಬೇರಾರ್ ಭಾಗಗಳ ರಕ್ಷಣೆಗಾಗಿ ಅವನು ಸಾಕಷ್ಟು ಸೈನ್ಯವನ್ನು ಒಟ್ಟುಗೂಡಿಸಿದ್ದನು. ಕಾರಣ ಸಾತಾರ ಸರ್ಕಾರದಲ್ಲಿ ಬಾಕಿಯಿರುವ ಮೊಘಲ್ ಸರ್ಕಾರ ನಂಬಿಕೊಂಡಿರುವ ಏಕೈಕ ಸ್ವತಂತ್ರ ರಾಜ ಇವನಾದುದರಿಂದ ಇವನಿಗೆ ಒಂದು ಗರಿ ಮೂಡಿತ್ತು. ಅಲ್ಲದೆ ಮೊಘಲ ಸರಕಾರದ ವ್ಯಾಪ್ತಿಗೆ ಮುಧೋಳ ಒಳಪಟ್ಟಿತ್ತೆನ್ನುವುದು ಇಲ್ಲಿನ ಪ್ರಮುಖ ಅಂಶವಾಗಿದೆ.

ಪೇಶ್ವೆಗಳಿಗೆ ಮಾಲೋಜಿರಾವನು ವಿಭಿನ್ನ ಆಡಳಿತಗಾರನಾಗಿ ಸೇವೆ ಸಲ್ಲಿಸಿದಂತೆ ವೈರಿಗಳಿಗೂ ಕೂಡ ತಾನೊಬ್ಬ ಸಮರ್ಥ ಎದುರಾಳಿ ಎಂದು ತೋರಿಸಿದ್ದು ಗಮನಾರ್ಹ. ಮಾಲೋಜಿಯ ಸಾಮರ್ಥ್ಯ, ಸಾಧನೆ ಹಾಗೂ ಸೇವೆಗಳಿಂದ, ದೊಡ್ಡ ಸೈನ್ಯ ಸಂಗ್ರಹದಿಂದ ಪೇಶ್ವೆಗಳ ಪ್ರೀತಿಗೆ ಪಾತ್ರನಾದ, ಅಲ್ಲದೆ ಅವನ ದಂಡಯಾತ್ರೆಗಳು ಕಳೆದು ಹೋದ ಕೆಲವು ಭೂಭಾಗಗಳನ್ನು ವಶಪಡಿಸಿಕೊಳ್ಳುವ ಬಯಕೆಯಿಂದ ಈತನು ಪೇಶ್ವೆ ರಾಜರೊಂದಿಗೆ ಸೇರಲು ಬಯಸಿದ.

ಮುಧೋಳ ಘೋರ‍್ಪಡೆ ಮನೆತನವು ಮೊಘಲ ಸಾಮ್ರಾಜ್ಯದಿಂದ ಜಹಾಗೀರಿಯಾಗಿ ಪಡೆದ ದೋ-ಅಬ್‌ ಸಮೀಪದ ಭಾಗಗಳನ್ನು ನೋಡಿಕೊಳ್ಳುತ್ತಿದ್ದರು. ಈ ಕಾರಣಕ್ಕಾಗಿಯೇ ಅವರು ಮೊಘಲರ ಮತ್ತು ನಿಜಾಮನ ಸೇವೆಗಾಗಿ ನಿಂತರು. ಕಾರಣ ಮುಧೋಳ ಜಹಾಗೀರಿಯನ್ನು ಮತ್ತೆ ಮರಳಿ ಪಡೆಯುವಲ್ಲಿ ಈತನ ಸಹಾಯವೇ ಹಿರಿದಾಗಿತ್ತು. ಅಷ್ಟೇ ಅಲ್ಲದೆ ಪ್ರಸ್ತುತ ಬಿಜಾಪೂರ ಜಿಲ್ಲೆಯ ಇಂಡಿಯ ತಾಂಬಾ ಮತ್ತು ಆಲಮೇಲಗಳನ್ನು ಕೊಟ್ಟನು. ಈತನ ತಮ್ಮನು ಅವುಗಳ ನೇತೃತ್ವ ವಹಿಸುವಂತೆ ಆದೇಶಿಸಿದ್ದು ಬರೆದಿಟ್ಟ ದಾಖಲೆಯಿಂದ ಸಿಗುತ್ತದೆ. ಮಾಲೋಜಿ ಸಾವಿನ ನಂತರ (ಕ್ರಿ.ಶ. ೧೭೭೮) ಈ ಭಾಗಗಳನ್ನು ಬಾಪು ಗೋಖಲೆಗೆ ನೀಡಿದ್ದು ಇದೆ. ಹೀಗೆ ಜಹಾಗೀರಗಳು ನಿರಂತರ ಬಳುವಳಿಯಾಗಿ ಬಂದಿರುವುದು ಅವುಗಳ ನಿರ್ವಹಣೆ ಹಾಗೂ ಅವುಗಳ ವಿಭಜನೆ ಮಾಡಿದ್ದು ಕಂಡುಬರುತ್ತದೆ. ಆದರೆ ಮುಧೋಳ ಘರಾಣಾ ಕೈಬಿಡುವ ಪ್ರಸಂಗವಿದ್ದರೂ ಮರಳಿ ಪಡೆಯುವಲ್ಲಿ ೩ನೇ ಮಾಲೋಜಿಯ ಪ್ರಯತ್ನವಿರುವುದು ಅವರ ಇತಿಹಾಸದಿಂದ ತಿಳಿದುಬರುತ್ತದೆ.

ಮಕ್ಕಳ ಹತ್ಯೆ ವಿರಾಟರೂಪ

ಮಾಲೋಜಿಯು ಪೇಶ್ವೆಯವರೊಂದಿಗೆ ಸಾಕಷ್ಟು ಭಾರಿ ದಂಡಯಾತ್ರೆ ಕೈಗೊಂಡು ತೀವ್ರಗತಿಯ ಸೇವೆಯನ್ನು ಮರಾಠರಿಗೆ ನೀಡಿದ್ದ. ೧೭೭೯ರಂದು ವಡಗಾಂನಲ್ಲಿ ಬ್ರಿಟಿಷರಿಗೂ ಮತ್ತು ಮರಾಠರಿಗೂ ನಡೆದ ಯುದ್ಧದಲ್ಲಿ ಈ (ಘರಾಣದ) ಘೋರ‍್ಪಡೆ ಮನೆತನ ಭಾಗವಹಿಸಿತ್ತು. ಈ ಯುದ್ಧದಲ್ಲಿ ಮಾಲೋಜಿಯು ತೀವ್ರ ಗಾಯಗೊಂಡನು ಮತ್ತು ಅವನ ಮಗ ರಾಣೋಜಿ ತಾಳೇಗೇನ ಸಮೀಪದಲ್ಲಿ ಕೊಲ್ಲಲ್ಪಟ್ಟನು. ಮಾಲೋಜಿಯ ಎರಡನೇ ಮಗ ಶಂಕ್ರಾಜಿ ಪೇಶ್ವೆರಾಜರ ಪರವಾಗಿ ಹೋರಾಡಿದ ಕೊನೆಗೆ ಲಾಭವಾಗಿದ್ದು, ರಾಣೋಜಿಯ ಮಗ ಬಾಹಿರಜಿರಾವಗೆ. ಇವನು ಪಡಸಲಗಿಯನ್ನು ಜಹಗೀರಾಗಿ ಪಡೆದ. ಅಲ್ಲದೆ ಶಂಕ್ರಾಜಿ ಬೀಳಗಿ ಸಮೀಪದ ಬಿದರಿ ಮತ್ತು ತಿಕೋಟಾ ಪಡೆದರೆ ಸ್ವತಃ ಮಾಲೋಜಿ ನಂದಗಾಂವ ಮತ್ತು ಕುಮಟಾದಂತ ಹಳ್ಳಿಗಳ ಬೇಡಿಕೆಯನ್ನು ಪೇಶ್ವೆರಾಜರ ಮುಂದಿಟ್ಟನು. ಬಹುತೇಕ ಈ ಮನೆತನಗಳು ದೇಶಮುಖರ ಮನೆತನದ ಹಳೆಯ ಜಹಾಗೀರಿ ಭಾಗಗಳಾಗಿದ್ದು ಸಾತಾರಾ ರಾಜನು ಕಷ್ಟ ಸಮಯದಲ್ಲಿ ದೇಶಮುಖ ಮನೆತನಕ್ಕೆ ಇವುಗಳನ್ನು ನೀಡಿದ್ದು ವಿಶೇಷವಾಗಿತ್ತು. ಪುರಾತನ ಕಾಲದ ನಂಬಿಕೆ ಆಕಾರಣ ಕ್ಷತ್ರೀಯನು ತನ್ನ ಪುರಾತನ ಆಸ್ತಿಯನ್ನು ತ್ಯಜಿಸದಿರುವುದು ವಿಶೇಷ ಲಕ್ಷಣವಾಗಿತ್ತು. ಘೋರ‍್ಪಡೆ ಮನೆತನವು ಕೂಡ ಈ ಸಣ್ಣ ಆಸ್ತಿಗಾಗಿ ಸಾಕಷ್ಟು ವೈಶಮ್ಯವನ್ನು ಈ ದೇಶಮುಖ ಮನೆತನದೊಂದಿಗೆ ಹೊಂದಿತ್ತು. ಇದಕ್ಕಾಗಿಯೇ ಮಾಲೋಜಿ ಪೇಶ್ವೆಯ ಮುಂದೆ ಈ ಹಳ್ಳಿಗಳ ಬೇಡಿಕೆ ಇಟ್ಟಿದ್ದು ಮತ್ತು ಆ ವೈಶಮ್ಯವು ದೂರವಾಗಲೂ ಸಹ ಸಂಬಂಧಗಳು ಬೆಸೆದುಕೊಂಡವು.

೧೭೯೫ರಲ್ಲಿ ನಡೆದ ನಿಜಾಮ ಮತ್ತು ಪೇಶ್ವೆ ವಿರುದ್ಧದ ಖಾರ್ದಾ ಯುದ್ಧದಲ್ಲಿ ಮಾಲೋಜಿ ಭಾಗವಹಿಸಿದ. ಇವನ ಜೊತೆ ಇವನ ಮಗ ಗೋವಿಂದನ ಮಗನಾದ (ಅಂದರೆ ಮೊಮ್ಮಗ) ನಾರಾಯಣರಾಮ ಇದ್ದ. ಅಲ್ಲದೇ ಹೋಳ್ಕಾಳ ರಾಜನ ವಿರುದ್ಧದ ಹೋರಾಟದಲ್ಲಿ ಮತ್ತೊಮ್ಮೆ ಗಾಯಗೊಂಡ. ಅದು ೧೮೦೨ರಲ್ಲಿ. ಈ ರೀತಿಯ ದೀರ್ಘವಾದ ಯುದ್ಧದ ಅನುಭವ ಧೈರ್ಯ ಹೋಲಿಕೆಯಿಲ್ಲದ ರಾಜನೀತಿ ಹೇಳಲು ಸಾಧ್ಯವಾಗದ ಪ್ರಾಮಾಣಿಕತೆಯಿಂದಾಗಿ ಪೇಶ್ವೆ ರಾಜರು ಇವನನ್ನು ಅತ್ಯಂತ ಗೌರವದಿಂದ ಕಾಣುತ್ತಿರಬೇಕೆನಿಸುತ್ತದೆ.

ಪೇಶ್ವೆಯವರ ಪ್ರೀತಿಯಿಂದ ಘೋರ‍್ಪಡೆ ರಾಜರಿಗೆ ಇದ್ದ ಅನನ್ಯತೆಯು ತುಂಬಾ ಮೆಚ್ಚುವಂತಹದ್ದು. ಏಕೆಂದರೆ ಅದಕ್ಕಾಗಿ ಪುಣಾ (ಅದರ ಒಂದು ಭಾಗ)ವನ್ನು ಜಹಾಗೀರ ನೀಡಿದ್ದು ಇದೆ. ಮಾಲೋಜಿಯು ಪೂಣಾವನ್ನು ತನ್ನ ಶಾಶ್ವತ ವಸತಿ ನಿಲಯವನ್ನಾಗಿ ಮಾಡಿಕೊಂಡ. ಇವತ್ತಿಗೂ ಕೂಡ ಅದು ೧೧೧ (ಒಂದುನೂರಾ ಹನ್ನೊಂದು) ಘೋರ‍್ಪಡೆ ಗಲ್ಲಿಯಾಗಿಯೇ ಕರೆಯಲ್ಪಡುತ್ತದೆ. ಮಾಲೇಜಿ ಪೂಣಾದಲ್ಲಿ ತನ್ನ ಮೊಮ್ಮಗನೊಂದಿಗೆ ವಾಸವಾಗಿದ್ದನು. ಆಗಲೇ ತನ್ನ ಮಗನಿಗೆ ಮುಧೋಳ ಜಹಾಗೀರಿಯನ್ನು ನೀಡಿದ. ಇದನ್ನು ಮಗನಾದ ಮಹಾರರಾವ ನಿಭಾಯಿಸುತ್ತಿದ್ದುದು ಕಂಡುಬರುತ್ತದೆ.

ಮಹಾರರಾವ್

ಮಹಾರರಾವು ತುಂಬಾ ಚತುರ ಹಾಗೂ ಜನಸೇವಕನಾಗಿದ್ದನು. ತನ್ನ ಜಹಾಗೀರಿಯಲ್ಲಿ ಆಗಾಗ ನಡೆಯುತ್ತಿದ್ದ ಎಲ್ಲ ಗಲಭೆಗಳನ್ನು ಹತ್ತಿಕ್ಕಲು ನೂರ ಜನ ತಂಡದ ಸೈನ್ಯ ರಚಿಸಿದ್ದನು. ತನ್ನ ಮಗ ನಾರಾಯಣನಿಗೆ ಈ ಸೈನ್ಯದ ನೇತೃತ್ವ ವಹಿಸಿದ. ಅಷ್ಟೇ ಅಲ್ಲದೆ ಸುತ್ತಿನ ಸಾಮಂತರ ದೇಸಾಯಿಗಳ ಜೊತೆ ಜೊತೆ ಒಳ್ಳೆಯ ಬಾಂದವ್ಯ ಹೊಂದಿದ್ದ. ಬಿಜಾಪುರ ಜಿಲ್ಲೆಯ ಕೊಲ್ಹಾರದ ರಾಜನಿಗೆ ಸಾಕಷ್ಟು ಹಣ ನೀಡಿ ಮುಧೋಳ ಮರಳಿ ಪಡೆದನು. ನಂತರದಲ್ಲಿ ರಾಯಭಾಗ ಯುದ್ಧದಲ್ಲಿ ಮಹಾರರಾವ್ ಸೋತನು. ನಾಗಪುರ ನಂತರ ಗ್ವಾಲೀಯರ್‌ಗೆ ಓಡಿಹೋಗಿ ಅಲ್ಲಿನ ಸಿಂದ್ಯಾನ ಹತ್ತಿರ ಆಶ್ರಯ ಪಡೆದನು.

ವೆಂಕಟರಾವ್ ೧೮೦೦೧೮೫೪

ಮುಧೋಳ ಜಹಗೀರನ್ನು ನಡೆಸಿದವನೆಂದರೆ ರಾಜಾ ವೆಂಕಟರಾವ ಎಂದೇ ಹೇಳಬೇಕು. ಅವನ ಹೆಸರಿನಿಂದಲೇ ಇಂದಿಗೂ ಮುಧೋಳದಲ್ಲಿ ವೆಂಕಟರಾವ್ ಕೆರೆ ಪ್ರಸಿದ್ಧಿ ಪಡೆದಿದೆ. ವೆಂಕಟರಾವ್ ಧರ್ಮಿಷ್ಟ ಹಾಗೂ ಸ್ವಾಭಿಮಾನಿ ಅಲ್ಲದೆ ಸೇವಾನಿರತ ವ್ಯಕ್ತಿಯಾಗಿದ್ದನು. ಇವನ ಕಾಲವು ಸುಭಿಕ್ಷ ಕಾಲವೆಂದೇ ಹೇಳಬೇಕು. ಯಾವುದೇ ಕಿರುಕುಳ ಇಲ್ಲದೆ ಏಕ ನಿಷ್ಠೆಯಿಂದ ಆಳ್ವಿಕೆ ಮಾಡಿದ್ದು ಇದೆ. ಮುಧೋಳ ಜಹಾಗೀರದಲ್ಲಿ ತಾನು ಸಾಯುವವರೆಗೂ ಆಡಳಿತ ನಡೆಸಿದ. ಈ ಆಡಳಿತಕ್ಕೆ ತಮ್ಮ ಲಕ್ಷಣರಾವ್ ಹಾಗೂ ಮಹಾರಾಷ್ಟ್ರ ರಾಜರು ಸಹಾಯ ಮಾಡಿದ್ದು ಮಹತ್ವದ್ದಾಗಿದೆ. ಈತನು ಕಾಠೇವಾಡ ಮತ್ತು ಗ್ವಾಲೀಯರದಿಂದ ತರುವ ಒಳ್ಳೆ ಜಾತಿಯ ಕುದುರೆಗಳನ್ನು ಸಾಕುವ ಮತ್ತು ಪಳಗಿಸುವ ಪರಿಣಿತನಾಗಿದ್ದನು. ಹಾಗಾಗಿ ಪೇಶ್ವೆ ರಾಜ್ಯಕ್ಕೆ ಒಳ್ಳೆಯ ಕುದುರೆ ನೀಡುವಲ್ಲಿ ಪ್ರಸಿದ್ಧಿಯಾಗಿದ್ದ. ಬಲವನ್ನು ೩೮ ವರ್ಷಗಳ ಸುದೀರ್ಘ ಆಡಳಿತ ನೀಡಿದ.

ವೆಂಕಟರಾವ್‌ನ ಕಾಲದಲ್ಲಿಯೇ ಬೇಟೆ ಮುಧೋಳ್ ನಾಯಿ ಮತ್ತು ಕುದುರೆಗೆ ಪ್ರಸಿದ್ಧಿ ಪಡೆದುದು ವಿಶೇಷವಾಗಿತ್ತು. ಕುಸ್ತಿ ಅಖಾಡಾ, ಕುದುರೆ, ಅಖಾಡಾ ಇತ್ತೀಚಿನವರೆಗೂ ಇತ್ತು. ಆಂಗ್ಲ ಮರಾಠ ಯುದ್ಧದಲ್ಲಿ ಮುಧೋಳ ಕುದುರೆಗಳು ಕರ್ನಾಟಕಕ್ಕೆ ಗೌರವ ತಂದು ಕೊಟ್ಟುವಲ್ಲದೆ ವಿಷಯವಾಗಿದ್ದು, ಘೋರ‍್ಪಡೆಯವರ ಘನತೆಯನ್ನು ಹೆಚ್ಚಿಸಿದವು. ಬ್ರಿಟಿಷರಿಗೆ ಸ್ನೇಹದಂತಿದ್ದ ಧಾರವಾಡ ಮತ್ತು ಶಿರಾಗಳು ತಮ್ಮ ಪ್ರಭುತ್ವ ಸ್ಥಾನಗಳನ್ನು ಕಳೆದುಕೊಂಡಿದ್ದವು. ಚಾರ್ಲ್ಸ ಮನ್ರೊ ಪ್ರಕಾರ ಮುಧೋಳದ ಕುದುರೆಗಳು ಕರ್ನಾಟಕದಲ್ಲಿಯೇ ಉತ್ತಮವಾಗಿದ್ದವು. ಇಲ್ಲಿನ ನೀರು ಮತ್ತು ಹವೆ ಅವುಗಳ ಬೆಳವಣಿಗೆಗೆ ಸಾಕಷ್ಟು ಸಹಕರಿಸುತ್ತದೆ. ಅಲ್ಲದೆ ಬಹುದೊಡ್ಡ ಕುದುರೆ ಅಖಾಡ ಇರುವುದರಿಂದ ಚೆನ್ನಾಗಿ ಪಳಗಿಸುವ ಮತ್ತು ತಯಾರಿಸುವ ಕಲೆ ಇದೆ ಎಂದು ಹೇಳುತ್ತಾನೆ. ಹೀಗೆ ವೆಂಕಟರಾವ್‌ನ(೧೮೫೪) ಮರಣದ ನಂತರ ಅವನ ಮಗ ಬಲವಂತರಾವ ೧೮ನೇ ವರ್ಷದಲ್ಲಿ ಅಧಿಕಾರಕ್ಕೆ ಬಂದ. ಈತ ತನ್ನ ೧೧ ವರ್ಷದ ಮಗುವನ್ನು ಬಿಟ್ಟು ೧೮೬೧ರಲ್ಲಿ ಮಡಿದನು. ಇವನ ಮಗನ ಹೆಸರೂ ಕೂಡ ವೆಂಕಟರಾವ್‌ ಎಂದೇ ಇತ್ತು. ತನ್ನ ೧೯ನೇ ವರ್ಷಕ್ಕೆ ಆಡಳಿತದ ಜವಾಬ್ದಾರಿ ಹೊತ್ತ. ಇವನಿಗೆ ೩ ಜನ ಮಕ್ಕಳಿದ್ದರು. ೧. ರಾಮಚಂದ್ರರಾವ ೨. ಮಾಲೋಜಿರಾವ ೩. ಲಕ್ಷ್ಮಣರಾವ.

೧೮೮೨ರಲ್ಲಿ ವೆಂಕಟರಾವ ರಾಜನಿಗೆ ಪೂರ್ಣ ಅಧಿಕಾರ ದೊರೆಯಿತು. ೪ನೇ ಮಾಲೋಜಿಯು ರಾಜಪುತ್ರನಾಗಿ ಎಲ್ಲ ವಿಧದಲ್ಲಿ ತೇಜಸ್ವಿಯಾಗಿ ಹೊರ ಹೊಮ್ಮಿದ. ತನ್ನ ರಾಜ್ಯದಲ್ಲಿ ಪ್ರಜಾಹಿತರ ಅನೇಕ ಕಲ್ಯಾಣ ಕಾರ‍್ಯಗಳನ್ನು ಮಾಡಿದ. ತನ್ನ ೧೮ನೇ ವರ್ಷ ರಾಜ್ಯಭಾರ ಮಾಡಿದ. ನಂತರ ಇವನನ್ನು ಅಕಾಲಿಕವಾಗಿ ಒಮ್ಮೆಲೊಮ್ಮೆಲೆ ಪದಚ್ಯುತ ಮಾಡಲಾಯಿತು. ೧೮೮೪ರಲ್ಲಿ ಇವರ ಪುತ್ರ ಮಾಲೋಜಿರಾವ ಸಿಂಹಾಸನವನ್ನು ಏರಿದನು. ೧೯೦೪ರಲ್ಲಿ ಅವನಿಗೆ ಸರ್ವಾಧಿಕಾರ ಪ್ರಾಪ್ತವಾಯಿತು. ಮಹಾರಾಜರು ತನ್ನ ರಾಜ್ಯದಲ್ಲಿ ಉನ್ನತ ಶಿಕ್ಷಣವನ್ನು ಪ್ರಾರಂಭಿಸಿದರು. ಅನೇಕ ಸಂಘ ಸಂಸ್ಥೆಗಳಿಗೆ ದಾನವಿತ್ತರು. ಇವು ಶಿಕ್ಷಣ ಕ್ಷೇತ್ರದಲ್ಲಿ ತಲೆ ಎತ್ತಿ ನಿಂತಿವೆ. ಮಾಲೋಜಿರಾಜೆ ಘೋರ‍್ಪಡೆ ಶಿಕ್ಷಣ ಮಹಾವಿದ್ಯಾಲಯವೆಂದು ಹೆಸರು ಚಿರಸ್ಥಾಯಿಯಾಗಿ ಉಳಿದಿದೆ. ಮಾಲೋಜಿರಾಜೆಯವರು ೧೯೩೬ರಲ್ಲಿ ನಿಧನ ಹೊಂದಿದರು. ನಂತರ ಯುವರಾಜ ಭೈರವಸಿಂಗ ಮಹಾರಾಜರು ಘೋರ‍್ಪಡೆ ಘರಾಣೇದ ರಾಜವಂಶದ ಕೊನೆ ಮಹಾರಾಜರಾಗಿ ಮೆರೆದರು. ೧೯೩೬ರ ನಂತರ ಸಿಂಹಾಸನವೇರಿ ೧೯೮೪ರಲ್ಲಿ ಅವರು ಅಪಘಾತದಲ್ಲಿ ಮರಣ ಹೊಂದಿದರು. (ಕನ್ನಡ ದಿನಪತ್ರಿಕೆ ೨೦೦೮) ಇಂಥ ನಿಷ್ಠಾವಂತ ಸೇನಾ ನಾಯಕರು ಇರುವುದರಿಂದಲೇ ಅನೇಕ ರಾಜಮಹಾರಾಜರು ಆಡಳಿತ ನಡೆಸಿದ್ದು ಕಂಡುಬರುತ್ತದೆ. ಹೋರಾಟವೆನ್ನುವುದು ಜೀವನದ ಸಾರ್ಥಕತೆಗಾಗಿ ಅಲ್ಲ ಅದು ಸಾಂಸ್ಕೃತಿಕ, ಸಾಮಾಜಿಕ ಹಾಗೂ ರಾಜಕೀಯ ಪ್ರಗತಿಯನ್ನು ಕಟ್ಟಿಕೊಡುವ ದೈವಪ್ರತೀಕವಾಗಿದೆ. ಎಂತೆಂತಹ ಮಹಾನ್ ರಾಜಾಧಿರಾಜರಾಗಿ ಮೆರೆದು ಮರೆಮಾಡಿದರು. ಅವರ ತ್ಯಾಗ ಬಲಿದಾನಗಳ ಹಾಗೂ ನಂಬಿಕೆ-ನಿಷ್ಠೆಗಳ ಪ್ರತಿಯೊಂದು ಹೆಜ್ಜೆ ಇಲ್ಲಿ ಮಡುಗಟ್ಟಿ ನಿಂತಿದೆ.

ಸಂಶೋಧಕರು ಈ ಕುರಿತು ಇನ್ನೂ ಹೆಚ್ಚಿನ ಅಧ್ಯಯನಕ್ಕೆ ತೊಡಗಿಸಿ ಹೆಪ್ಪುಗಟ್ಟಿನಿಂತ ಸಂಸ್ಥಾನಿಕರ ಇತಿಹಾಸಕ್ಕೆ ಕೈ ಜೋಡಿಸಲು ಈ ಕೃತಿ ಸಹಾಯವಾಗುವುದೆಂಬ ಆಸೆಯೊಂದಿಗೆ ಈ ಕೃತಿ ಸಂಶೋಧಕರ ಮುಂದೆ ಇಡುತ್ತೇನೆ.

ಸಾಂಸ್ಕೃತಿಕ ಕೊಡುಗೆಗಳು

ಜೀವನದಲ್ಲಿ ಏನಾದರೊಂದು ಸಾರ್ವಜನಿಕ ಸೇವೆ ಮಾಡಬೇಕು. ದೇವಾಲಯವನ್ನು ಕಟ್ಟಿಸಬೇಕು. ಇಲ್ಲವೆ ಕೆರೆ ಬಾವಿ ತೋಡಿಸಬೇಕು ಅಥವಾ ದಾನಮನ್ನಾದರೂ ಮಾಡಬೇಕು ಎಂಬುದು ನಮ್ಮ ಪ್ರಾಚೀನ ಸಂಸ್ಕೃತಿಯ ಧಾರ್ಮಿಕ ಭಾವನೆಯಾಗಿತ್ತು. ಎಲ್ಲ ಸಂಪತ್ತುಗಳಿಗೂ ಪುಣ್ಯವೇ ಮೊದಲು, ಎಲ್ಲ ಪುಣ್ಯಕ್ಕೂ ಈಶ್ವರ ಪ್ರತಿಷ್ಠೆಯೇ ಮೊತ್ತ ಮೊದಲು. ಯಾವ ವ್ಯಕ್ತಿ ದೇವರು ಮತ್ತು ದೇವಾಲಯವನ್ನು ಪ್ರತಿಷ್ಠಾಪಿಸುತ್ತಾನೋ ಅವನು ದೇವರೇ ಆಗಿ ಬಿಡುತ್ತಾನೆ. ಈ ನಂಬಿಕೆ ಪ್ರತಿಷ್ಠಾಪಿಸುವವನಲ್ಲಿ ಇರದಿದ್ದರೂ ಪೂರ್ವಜರಲ್ಲಿ ಬಲವಾಗಿ ಬೇರೂರಿದ್ದವು. ದೇವಸ್ಥಾನ ನಿರ್ಮಾಣದ ನಂತರ ಅದರ ಉಸ್ತುವಾರಿ ನೋಡಿಕೊಂಡು ಬರುವ ಕೆಲಸ ಸುಲಭವಲ್ಲ. ಕಾಲಕಾಲಕ್ಕೆ ಅವುಗಳ ಜೀರ್ಣೋದ್ಧಾರ, ಪೂಜೆ, ಪೂಜಾರಿ ಕೈಂಕರ್ಯಗಳು ಸರಾಗವಾಗಿ ನಡೆದುಕೊಂಡು ಬರಲು ಸಾಕಷ್ಟು ಆರ್ಥಿಕ ನೆರವೂ ಕೂಡ ಅಷ್ಟೇ ಅಗತ್ಯವಾಗಿದ್ದಿತು. ಇಂಥವುಗಳನ್ನು ಜನಸಾಮಾನ್ಯರು ಕಟ್ಟಿಸುತ್ತಿರಲಿಲ್ಲ. ಎಲ್ಲ ವರ್ತಕರು ಸೇರಿ ದೇವಾಲಯಗಳಿಗೆ ನಿರಂತರ ಪೂಜೆ ನೆರವೇರಿಸಲು ದಾನ ದತ್ತಿ ಬಿಡುತ್ತಿರುವುದು ಪ್ರಾಚೀನ ಇತಿಹಾಸದಿಂದ ತಿಳಿದುಬರುತ್ತದೆ. ಅದಕ್ಕಾಗಿಯೇ ಸಾರ್ವಜನಿಕರಿಗಾಗಿ ಅವರ ಅಲ್ಪಸೇವೆಯೂ ಅದರಲ್ಲಿ ಸೇರಲೆಂದು ಕಾಣಿಕೆ (ಹುಂಡಿ) ಪೆಟ್ಟಿಗೆ ಇಟ್ಟಿರುವುದು ಸಾಕ್ಷಿಯಾಗಿದೆ. ಹಾಗೇ ಗೌಡ ಕುಲಗಳ ರಾಜರು ದೇವಾಲಯದ ಬ್ರಹ್ಮದೇಯ ದೇವದಯಾ ಎಂಬ ದಾನ ಬಿಡುತ್ತಿದ್ದರಿಂದ ದೇವಾಲಯದ ಪೂಜೆ ನಿರಾತಂಕವಾಗಿ ನಡೆದುಕೊಂಡು ಬಂದಿದೆ. ಅದನ್ನು ಮಧ್ಯದಲ್ಲಿ ಯಾರಾದರೂ ನಿಲ್ಲಿಸಿದರೆ ಧರ್ಮ ದತ್ತಿಯನ್ನು ಕೆಡಸಿದರೆ ಶಾಪಾಶಯ ಹಾಕಿದ್ದು, ಒಂದು ಮಹತ್ವದ ಅಂಶವಾಗಿ ಕಂಡುಬರುತ್ತದೆ. ಒಂದು ಕೆಲಸದಲ್ಲಿ ನಿರಾಶಕ್ತಿ ಹಾಗೂ ಕುಚೇಷ್ಠೆಯಿಂದ ಅದು ನಿಲ್ಲಬಾರದೆಂಬ ಉದ್ದೇಶದಿಂದ ಇಂಥ ಹೇಳಿಕೆಗಳು ಶಾಸನ ಬರಹಗಳಲ್ಲಿ ಸಾಕಷ್ಟು ಕಾಣಿಸುತ್ತವೆ. ಘೋರ‍್ಪಡೆ ಘರಾಣಾದ ವಂಶಸ್ಥರೂ ಕೂಡ ತಮ್ಮ ಜಹಗೀರ ಇರುವ ಪ್ರದೇಶದಲ್ಲಿ ಅನೇಕ ದಾನದತ್ತಿಗಳನ್ನು ಬಿಡುವುದರೊಂದಿಗೆ ಕಲೆ ಮತ್ತು ವಾಸ್ತುಶಿಲ್ಪಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿದ್ದು ಕಂಡುಬರುತ್ತದೆ.