ಕಲೆ ಮತ್ತು ವಾಸ್ತುಶಿಲ್ಪ
ಶಿವದೇವಾಲಯ

ಮುಧೋಳಕ್ಕೆ ಒಂದು ನವ ಬುಜಾಕೃತಿಯ ಎತ್ತರದ ಮೇಲೆ ಬೃಹತ್ ಗಾತ್ರದ ಕೋಟೆ ಇದ್ದು ಕೋಟೆಯೊಳಗಡೆಗೆ ಅನೇಕ ದೇವಾಲಯಗಳನ್ನು ಕಾಣುತ್ತೇವೆ. ಅವುಗಳಲ್ಲಿ ಶಿವದೇವಾಲಯ ಒಂದಾಗಿದೆ. ಪ್ರಸ್ತುತ ಶಿಥಿಲ ಸ್ಥಿತಿಯಲ್ಲಿದೆ. ಈ ದೇವಾಲಯದ ಗರ್ಭಗೃಹ ಮತ್ತು ಅಂತರಾಳ ಮಾತ್ರ ಉಳಿದುಕೊಂಡಿದೆ. ಅದರ ಸುತ್ತಲೂ ವರ್ತಕರು ಕಟ್ಟಡ ಕಟ್ಟಿದ್ದರಿಂದ ಮೂಲ ದೇವಸ್ಥಾನ ಸ್ವರೂಪ ಇಲ್ಲದಾಗಿದೆ. ಈಶ್ವರನ ಪಿಂಡವು ಉತ್ತರದ ಜಗಲೆ ಮೇಲೆ ನಿರ್ಮಾಣವಾಗಿತ್ತು. ಅದನ್ನು ಗುರುತಿಸಲಾರದಷ್ಟು ಹಾಳು ಮಣ್ಣು ಹಾಕಿ ನೆಲ ಸಾರಿಸಿರುವಂತೆ ಕಂಡುಬರುತ್ತದೆ. ದೇವಾಲಯದ ಅಧಿಷ್ಠಾನ ಹಾಳಾಗಿದೆ. ಈ ಈಶ್ವರ ದೇವರನ್ನು ಅರಮನೆಯವರು ಮಾತ್ರ ಪೂಜಿಸುತ್ತಿದ್ದರು. ಅರಮನೆಯಿಂದಲೇ ನೇರವಾಗಿ ಈ ದೇವಾಲಯಕ್ಕೆ ದ್ವಾರವಿದ್ದು ನಿತ್ಯಪೂಜೆ ನಡೆಯುತ್ತಿತ್ತು. ದೇವಾಲಯದ ಒಳಗಡೆ ಒಬ್ಬರಿಗೆ ಮಾತ್ರ ಕುಳಿತುಕೊಳ್ಳಲು ಅವಕಾಶವಿದ್ದು ಅವರೊಬ್ಬರೆ ಭಕ್ತಿಯಿಂದ ಪೂಜಿಸುವುದು ಮನಬಿಚ್ಚಿ ಮಾತನಾಡುವುದು ಬೇಡಿಕೊಳ್ಳುವುದು ರಾಣಿಯರ ನಿತ್ಯ ಕಾಯಕವಾಗಿತ್ತೆಂದು ಹಿರಿಯರಿಂದ ತಿಳಿದುಬರುತ್ತದೆ. ದೇವಾಲಯದ ಗರ್ಭಗೃಹ ಬಾಗಿಲು ಅತೀ ಚಿಕ್ಕದಾಗಿದ್ದು ಹೊಸ್ತಿಲಿಗೆ ಹೊಂದಿಸಿರುವ ಕಪ್ಪು ಶಿಲೆ ಗಮನ ಸೆಳೆಯುತ್ತದೆ. ಅದರ ಮೇಲೆ ಕಮಲಗಳು ಇವೆ. ಈ ಎಲ್ಲ ಅಂಶಗಳನ್ನು ಗಮನಿಸಿದಾಗ ಈ ಕಟ್ಟಡ, ಶಿವಲಿಂಗ ಪ್ರಾಚೀನತೆಯನ್ನು ಬಿಂಬಿಸುತ್ತದೆ. ಅದರ ಉಸ್ತುವಾರಿಕೆ ಅಲಕ್ಷಿತವಾಗಿರುವುದರಿಂದ ವಿನಾಶದ ಅಂಚಿನಲ್ಲಿದೆ.

ರಾಮಮಂದಿರ

ಈ ದೇವಾಲಯವು ಅರಮನೆಯ ಪಶ್ಚಿಮದ್ವಾರದ ಬಳಿ ಇದ್ದು ವಿಶಾಲವಾದ ಪ್ರಾಂಗಣ ಹೊಂದಿದೆ. ಇಲ್ಲಿ ಕೇವಲ ಅರಮನೆಯ ಸ್ತ್ರೀಯರಿಗೆ ಮಾತ್ರ ಪ್ರವೇಶವಿದ್ದು, ಪುರುಷರಿಗೆ ನಿಷಿದ್ಧ. ಈ ದೇವಾಲಯವು ಸುಮಾರು ಮೂರು ಅಡಿ ಎತ್ತರದ ವಿಶಾಲ ಪ್ರಾಂಗಣದ ಮೇಲೆ ನಿರ್ಮಾಣಗೊಂಡಿದೆ. ಇದು ೩ ಮಂಟಪಗಳನ್ನು ಹೊಂದಿದ್ದು, ಕೋಟೆ ಒಳಗಡೆ ಕಟ್ಟಿಸಿದ ಅರಮನೆಯ ಒಂದು ಪಾರ್ಶ್ವ ನೋಟ ಇದಾಗಿದೆ. ಉತ್ತರಾಭಿಮುಖವಾಗಿರುವ ಈ ದೇವಾಲಯದಲ್ಲಿ ರಾಮನ ಮೂರ್ತಿಯಿದ್ದು, ಸುಂದರವಾಗಿಯೇ ಇದೆ. ಬಾಗಿಲುವಾಡ ಚಿಕ್ಕದಿದ್ದು, ಸುಮಾರು ೫ ರಿಂದ ೬ ಜನರು ಗರ್ಭಗುಡಿಯಲ್ಲಿ ನಿಲ್ಲಬಹುದಾಗಿದೆ. ಹೊರಗಡೆಗೆ ಕೂಡ ಸುಮಾರು ೨೦೦ ರಿಂದ ೩೦೦ ಜನರವರೆಗೆ ಅಶ್ವಾರೋಹಿಗಳಾಗಿ ನಿಲ್ಲಬಹುದು. ಇನ್ನೊಂದು ವಿಶೇಷತೆಯೆಂದರೆ ರಾಮದೇವರಯೆದುರಿಗೆ ಬಹುಸುಂದರವಾದ ತುಳಸಿ ಕಟ್ಟೆಯಿದೆ. ಅದನ್ನು ೨ ಶಾಖೆಗಳಿಂದ ವಿಂಗಡಿಸಲಾಗಿದೆ. ಮೊದಲನೆಯದು ತಳಪಾಯದಿಂದ ಅರ್ಧದಾಸಿಗೆವರೆಗೆ ನಾಗ ಬಂಧನ ಕಟ್ಟಿ ಎಂತಲೂ ಎರಡನೆದಾಗಿ ಹನುಮನ ವಾಸವೆಂದು ಮೂರನೆಯದಾಗಿ ತುಳಸಿ ಪೀಠವೆಂದು ಕರೆಯುತ್ತಾರೆ. ನಾಗದೇವತೆಯ ಕೆತ್ತನೆಯಿದ್ದು ಇಡೀ ದೇವಾಲಯದ ಪ್ರದಕ್ಷಣೆಯು ನಾಗದೇವತೆಯ ಸಂರಕ್ಷಣೆಯೆಲ್ಲಿದೆಯೆಂದು ಕರೆಯುವುದು ರೂಢಿಯಲ್ಲಿದೆ. ಅದೇ ಎರಡನೇ ಮಂಟಪವನ್ನು ಗಮನಿಸಿದಾಗ ಲತಾಸುರಳಿ, ಪುಷ್ಪಸುರಳಿ ಮತ್ತು ರತ್ನಪಟ್ಟಿಗಳಿವೆ. ಬಹಳಷ್ಟು ಸುಂದರವಾದ ಕಲಾಕೃತಿಗಳನ್ನು ಕಪ್ಪು ಶಿಲೆಯಿಂದ ರಚಿಸಿದ್ದು ಇದೆ. ಪಶ್ಚಿಮ ದಿಕ್ಕಿನ ಪುಷ್ಪ ಸುರಳಿ ಕೆಳಗೆ ಶಾಸನ ಒಂದೇ ಸಾಲಿನಲ್ಲಿದ್ದು, ಅದರ ರಚನಾ ಕಾಲವನ್ನು ಸೂಚಿಸುತ್ತದೆ. ಅದು ಮಸಕಾಗಿರುವುದರಿಂದ ಅದರ ಮೇಲೆ ಸುಣ್ಣ ಬಳಿದಿರುವುದರಿಂದ ಅಸ್ಪಷ್ಟವಾಗುತ್ತದೆ. ಹಾಗೇ ತುಳಸಿಕಟ್ಟೆ ದಾಟಿದ ಮೇಲೆ ಉತ್ತರ ದಿಕ್ಕಿಗೆ ಮುಖ್ಯ ದ್ವಾರವಿದ್ದು ನೋಡಲು ಸುಂದರವಾಗಿದೆ. ಅದರ ಮುಖಾಂತರ ೧೦ ರಿಂದ ೧೨ ಅಡಿ ದೂರದಲ್ಲಿ ಶಿವ ದೇವಾಲಯಕ್ಕೆ ಬಂದು ಅರಮನೆ ಸ್ತ್ರೀಯರು ಪೂಜೆ ಸಲ್ಲಿಸುತ್ತಿದ್ದರೆಂದು ಸೇವಕರು ಹೇಳಿದ್ದು ಇದೆ.

ಅರಮನೆ ಸ್ತ್ರೀಯರಿಗಾಗಿ ‘ಮೈಲಿ ದೇವಿ’ ಎಂಬ ದೇವಿಯನ್ನು ರಚನೆ ಮಾಡಿ ಅನೇಕಾನೇಕ ಬಾಲಪೀಡೆ ದೋಷಗಳನ್ನು ಕಳೆದುಕೊಳ್ಳಲು ನಿರ್ಮಿಸಿದ್ದೆಂದು ೧೮೦೦ ಸುಮಾರಿಗೆ ಇಂಥ ಪೀಡೆಗೆ ಬಲಿಯಾಗಿರುವುದರಿಂದ ದೇವಿ ಪ್ರತಿಷ್ಠಾಪಿಸಿದ್ದಾಗಿದೆ. ಅಲ್ಲದೆ ಪ್ರಜೆಗಳಿಗೋಸ್ಕರ ದೇವರಿಗೆ ಕಣಕರಮೂರ್ತಿ ‘ಬಲಿ’ಯನ್ನು ಕೊಡುವುದು ಸಂಪ್ರದಾಯವಾಗಿತ್ತು. ಈ ಪರಂಪರೆಯಲ್ಲಿ ನಾವು ಪ್ರಾಚೀನ ಭಾರತೀಯ ಸಂಸ್ಕೃತಿಯನ್ನು ಕಾಣುತ್ತೇವೆ. ಇದರಿಂದ ಪ್ರತಿವರ್ಷ ವಿಜಯದಶಮಿಯ ಶುಭವೇಳೆಯಲ್ಲಿ ಕಣಕದಂತ ಹಿಟ್ಟಿನ ಮೂರ್ತಿಯನ್ನು ತಯಾರಿಸಿ ಬನ್ನಿ ಮುಡಿದು ದೇವರಿಗೆ ಬಲಿ ಕೊಡುತ್ತಿದ್ದರು. ಬರುಬರುತ್ತ ಅದು ಅಳಿದು ಹೋಯಿತು. ಸಂಸ್ಥಾನಿಕರ ವಿಲಿನೀಕರಣದ ವೇಳೆಗೆ ಪೂಜಾ ಕೈಂಕರ್ಯ ಹಾಗೂ ವಾರಸುದಾರಿಕೆಗೆ ಸಂಬಂಧಿಸಿದಂತೆ ಎಲ್ಲ ಕೆಲಸಗಳು ಸ್ಥಗಿತಗೊಂಡವೆಂದು ೩ ತಲೆಮಾರಿನಿಂದ ದೇವಾಲಯಗಳಿಗೆ ಸುಣ್ಣ ಬಣ್ಣ ಬಳೆಯುವ ೮೫ವರ್ಷದ ವೃದ್ಧ ಶಂಕರಪ್ಪ ಡೆಂಗಿ ಹೇಳುತ್ತಾರೆ.

೨ನೇ ರಾಮಮಂದಿರ

ಕೋಟೆ ಒಳಗಡೆಗೆ ಇರುವ ಎರಡನೇ ರಾಮಮಂದಿರ ಕೂಡ ವಿಶಾಲವಾಗಿದೆ. ಈ ದೇವಾಲಯದ ಗರ್ಭಗೃಹವು ಮತ್ತು ಅಂತರಾಳ ಉಳಿದುಕೊಂಡಿದೆ. ದೇವಾಲಯದ ಅಧಿಷ್ಠಾನ ಸಂಪೂರ್ಣ ಹಾಳಾಗಿದೆ. ಮರು ಜೀರ್ಣೋದ್ಧಾರ ವಾದುದು ಕಂಡುಬರುತ್ತದೆ. ರಾಮಸೀತೆಯರ ಮೂರ್ತಿಗಳಿದ್ದು ನಿತ್ಯ ಪೂಜೆಗೊಳ್ಳುವುದು ಅದಕ್ಕಾಗಿಯೇ ಬ್ರಾಹ್ಮಣರನ್ನು ಕರೆಸಿ ದಾನ ನೀಡಿದ್ದು, ಸ್ಥಳೀಯರಿಂದ ತಿಳಿದುಬರುತ್ತದೆ. ಅರಮನೆಯ ಇತರೆ ಸಿಬ್ಬಂದಿಗಳಿಗೆ ಹಾಗೂ ರಾಜರುಗಳಿಗೆ ಪ್ರವೇಶವಿದ್ದು, ಸ್ತ್ರೀಯರಿಗೂ ನಿಷಿದ್ಧವಾಗಿತ್ತು. ರಾಮನವಮಿ ಹಾಗೂ ಇತರೆ ಹಬ್ಬದ ಹರಿದಿನಗಳಂದು ಪೂಜೆಗೊಳ್ಳುತ್ತಿರುವುದು ವಾಡಿಕೆಯಾಗಿತ್ತು. ಆ ದೇವರ ಪೂಜೆಗಾಗಿ ಬಾಜಿ ಬ್ರಾಹ್ಮಣರನ್ನು ಕರೆಸಿದ್ದು ಇದೆ. ಅಲ್ಲದೆ ಬ್ರಹ್ಮ ದಯವೆಂದು ಮಹಾಜನಗಳಿಗೆ ಭೂದಾನ ಮಾಡಿರುವುದನ್ನು ಕಾಣಬಹುದು.

ಲಕ್ಷ್ಮೀ ನಾರಾಯಣ ದೇವಸ್ಥಾನ

ಈ ದೇವಾಲಯವು ಮಣ್ಣಿನ ಛಾವಣಿಯೊಂದಿಗೆ ಪೂರ್ಣಗೊಂಡದ್ದು ಇದೆ. ಇದು ಕೋಟೆಯ ಹೊರಗಡೆ ಇದ್ದು ಕುಳಲಿ ದೇಸಾಯಿ ಸ್ಥಾಧೀನದಲ್ಲಿತ್ತು. ಈ ದೇವಾಲಯದ ವೈಶಿಷ್ಟ್ಯವೆಂದರೆ ಬಾಲಗೋಪಾಲನು ಬೆತ್ತಲೆಯಾಗಿದ್ದು, ಎರಡು ಅಡಿ ಎತ್ತರದ ಪೀಠದ ಮೇಲೆ ಸಂಗಮವರಿ ಕಲ್ಲಿನಿಂದ ಬಹು ಸುಂದರವಾಗಿ ಒಬ್ಬರ ಮೇಲೋಬ್ಬರಾಗಿ ಮೂರು ಬಾಲ ಗೋಪಾರು ಎದ್ದು ನಿಂತಿದ್ದಾರೆ. ಹಾಗೇ ಬಲಗಡೆ ಎಡಗಡೆಗೆ ಇನ್ನೂ ಇಬ್ಬರು ಗೋಪಾಲರನ್ನು ಹೊತ್ತು ನಿಂತಿದ್ದು ಇನ್ನೂ ಸುಂದರಗೊಳಿಸಿದೆ. ನಿರಂತರ ಪೂಜೆಗೆ ಘೋರ‍್ಪಡೆಯವರ ವಿಶೇಷ ದತ್ತಿ ಇತ್ತಿದ್ದು ಕಂಡುಬರುತ್ತದೆ. ಬಹುತೇಕ ಈ ದೇವಾಲಯದ ಮೂರ್ತಿಯನ್ನು ರಾಜಸ್ಥಾನದಿಂದಲೇ ತಂದು ಪ್ರತಿಷ್ಠಾಪಿಸಿದ್ದು ಕುಳಲಿ ದೇಸಗತಿ ಮೋಡಿ ದಾಖಲೆಯಿಂದ ಕಂಡುಬರುತ್ತದೆ.

ಜಗದಂಬಾ ದೇವಾಲಯ

ನಗರದ ಮಧ್ಯದಲ್ಲಿ ಒಂದು ಚಿಕ್ಕದಾದ ಜಗದಂಬಾ ದೇವಾಲಯವಿದೆ ಇದರ ರಚನೆ ನೋಡಿದಾಗ ಇದು ತೀರ ಇತ್ತೀಚಿನದಾಗಿರುವುದು ಕಂಡುಬರುತ್ತದೆ. ಈ ಗುಡಿಯನ್ನು ಕೂಡ ೧೮ನೇ ಶತಮಾನದಲ್ಲಿ ನಿರ್ಮಿಸಿರಬೇಕೆನಿಸುತ್ತದೆ. ಆದರೆ ಈ ಗುಡಿಗೆ ದತ್ತಿಬಿಟ್ಟ ಉಲ್ಲೇಖ ಕಂಡುಬರುವುದಿಲ್ಲ. ಇಲ್ಲಿಗೆ ಬ್ರಾಹ್ಮಣ ಪುರೋಹಿತರು ಹೆಚ್ಚು ನಡೆದುಕೊಳ್ಳುತ್ತಾರೆ. ಹಾಗೇ ಮೊಟ್ಟಮೊದಲನೇ ದೇವಿಗೆ ಉಡಗೊರೆ ಹಾಗೂ “ಬಾಜಿ” ಕುಟುಂಬದವರಿಗೆ ಅರಮನೆ ಪುರೋಹಿತರೆಂದು ನೇಮಿಸಿದ್ದು ಇದೆ. ಇಲ್ಲಿ ದೇವಾಲಯದ ವೈವಿಧ್ಯತೆ ಏನೂ ಕಂಡುಬರುವುದಿಲ್ಲ. ಮೂರ್ತಿ ಮಾತ್ರ ಸುಂದರವಾಗಿದ್ದು ನೋಡಲು ಆಕರ್ಷಣೀಯವಾಗಿದೆ. ಕಾರ್ತಿಕ ಮಾಸದಲ್ಲಿ ದೀಪಾವಳಿಯಲ್ಲಿ ಮತ್ತು ದಸರಾ ಹಬ್ಬದಲ್ಲಿ ಈ ಜಗದಂಬಾ ದೇವಿಯನ್ನು ಆರಾಧಿಸುವುದು ಕಾಣುತ್ತದೆ. ಹಾಗೇ ಸಾರ್ವಜನಿಕರಿಗೂ ಕೂಡ ಇದು ಗ್ರಾಮದೇವತೆಯಾಗಿರುವುದು ಕಂಡುಬರುತ್ತದೆ.

ದಕ್ಷಿಣ ದಿಕ್ಕಿನಲ್ಲಿರುವ ಸಿದ್ದೇಶ್ವರ ದೇವಾಲಯ

ಘಟಪ್ರಭೆಯ ತಟಾಕದಲ್ಲಿರುವ ಎತ್ತರದ ಮಟ್ಟಿಯ ಮೇಲೆ ನಿರ್ಮಿಸಿರುವ ದೇವಾಲಯವೇ ಸಿದ್ದೇಶ್ವರ ದೇವಾಲಯ. ಇದು ಕೂಡ ಇತ್ತೀಚಿನದು. ಮೂಲ ಅರಮನೆಯನ್ನು ಬಿಟ್ಟು ೧೮ನೇ ಶತಮಾನದ ಪ್ರಾರಂಭದಲ್ಲಿ ವಾಸ್ತುವನ್ನು ಗುರುತಿಸಿ ಹೊಸ ಅರಮನೆಯನ್ನು ವಿಶಾಲವಾದ ಬಯಲಿನಲ್ಲಿ ಕಟ್ಟಿಸಿರುವುದು ಇದೆ. ಅರಮನೆ ಪಾಯಕ್ಕೆ ಮೊದಲು ದೇವಾಲಯದ ಮೂರ್ತವನ್ನು ಮಾಡಿದ್ದೆಂದು ಸೊನ್ನದ ದೇಸಾಯಿಮನಿ ದೇವರಾದ ಸಿದ್ದರಾಮೇಶ್ವರನನು ಮಹಾರಾಣಿಯರ ಅಪೇಕ್ಷೆ ಮೆರೆಗೆ ನಿರ್ಮಿಸಿದ್ದೆಂದು ಹಿರಿಯ ತಲೆಮಾರಿನ ರಾಣಿಯವರು ಹೇಳಿರುವುದನ್ನು ಚಂದ್ರಶೇಖರ ದೇಸಾಯಿ ಹೇಳುತ್ತಾರೆ. ಹಾಗೇ ದೇವಾಲಯದ ಉಸ್ತುವಾರಿಗೆ ಆಗಾಗ ನೋಡಿಕೊಳ್ಳುವುದು ಹಾಗೇ ಯಡಹಳ್ಳಿ ದೇಸಗತಿಯ ಪುರಾಣಿಕರು ಕೂಡ ಬರುತ್ತಿದ್ದರೆಂದು ಪುರಾಣೀಕ ಮನೆತನದವರೇ ಈ ದೇವಾಲಯದ ಅರ್ಚಕರಾಗಿರುವುದು ಇಂದಿಗೂ ನಡೆದುಕೊಂಡು ಬಂದಿದೆ.

ಸಿದೇಶ್ವರ ದೇವಾಲಯವೆಂದು ಕರೆಯಲ್ಪಡುವ ಶಿವಲಿಂಗವು ಬೃಹತ್‌ ಗಾತ್ರದ್ದು ಇದೆ. ನೆಲಕ್ಕೆ ಹೊಂದಿಕೊಂಡಂತೆ ವಿಶಾಲವಾದ ಪಾನ ಬಟ್ಟಲಲ್ಲಿ ಪ್ರತಿಷ್ಠಾಪಿಸಲಾಗಿದೆ. ಎದುರಿಗೆ ನಂದಿ ಮಂಟಪವೆನ್ನುವಂತೆ ಅಷ್ಟಕೋನಾಕಾರದ ಕಮಾನುಗಳಿದ್ದು ಅದರ ನಡುಮಧ್ಯೆ ಎತ್ತರದ ಅಧಿಷ್ಟಾನದ ಮೇಲೆ ಕಪ್ಪು ಶಿಲೆಯ ಅಪರೂಪದ ನಂದಿ ವಿಗ್ರಹವಿದೆ. ಮೂರ್ತಿ ಚಿಕ್ಕದಾದರೂ ನೋಡಲು ಆಕರ್ಷಣೀಯವಾಗಿದೆ. ಇದನ್ನು ಇತ್ತಿಚೆಗೆ ತಂದು ಪ್ರತಿಷ್ಠಾಪಿಸಿರಬೇಕು. ದೇವಾಲಯದ ಮಹಾದ್ವಾರವು ಕಲಾ ನೈಪುಣ್ಯತೆಯಿಂದ ಕೂಡಿದ್ದಾಗಿದೆ. ಬಹುಷ ಇದು ಕಲ್ಯಾಣಿ ಚಾಲುಕ್ಯರ ಕಾಲದ ಮಹಾದ್ವಾರವಾಗಿದ್ದು ಬೆಳಗಲಿ ೫೦೦ರಲ್ಲಿ ಬರುವ ಸುಮಾರು ಗ್ರಾಮಗಳಲ್ಲಿ ಕಲ್ಮೇಶ್ವರ ದೇವಾಲಯದ ಅವಶೇಷಗಳನ್ನು ಸಂಗ್ರಹಿಸಿ ಅವನ್ನು ಇಲ್ಲಿ ಸಂರಕ್ಷಣೆ ರೂಪದಲ್ಲಿ ತಂದು ಜೋಡಿಸಲಾಗಿದೆ. ಹಾಳಾಗಿ ನಾಶ ಹೊಂದುವ ಶಿಲ್ಪಗಳನ್ನು ಕಲಾ ಕೆತ್ತನೆಗಳನ್ನು ಸಂರಕ್ಷಿಸಿ ಉಳಿಸುವ ಹೊಣೆ ಘೋರ‍್ಪಡೆಯವರ ಪ್ರಮುಖ ಕರ್ತವ್ಯವಾಗಿತ್ತೆಂದು ಜೀರ್ಣೋದ್ಧಾರದ ಜೊತೆಗೆ ಗುಡಿ ಕಟ್ಟಿಸಿದರೆ ಪುಣ್ಯ ಲಭಿಸುತ್ತದೆಂಬ ಬಲವಾದ ನಂಬಿಕೆಗೆ ಈ ದೇವಾಲಯವು ಸಾಕ್ಷಿಯಾಗಿದೆ.

ವಿಜೃಂಭಣಿಯಿಂದ ಸಿದ್ದೇಶ್ವರ ಜಾತ್ರೆ ನಡೆಯುತ್ತ ಬಂದಿದೆ. ಇಂದಿಗೂ ಅರಮನೆಯ ಈ ಘರಾಣೆದ ವಂಶಸ್ಥರಾದ ಮೋಣಕಾರಾಜೆ ಮೌರ‍್ಯ ಅವರು ಅಷ್ಟೇ ಭಕ್ತಿಯಿಂದ ನಡೆದುಕೊಂಡು ಬರುತ್ತಿದ್ದಾರೆ. ಹಾಗೇ ಸ್ಥಳೀಯ ಎಲ್ಲ ದೇವಾಲಯಗಳಿಗೆ ವಾರ್ಷಿಕ ಹಮ್ಮಿನಿಯನ್ನು ಕೊಟ್ಟು ನಿತ್ಯ ಪೂಜೆಗೆ ಸಹಾಯ ನೀಡುತ್ತಿರುವುದು ಮೋಣಕಾರಾಜೆ ಅವರ ಉದಾರತೆ ಮೆಚ್ಚುವಂತಹದ್ದು. ಅರಮನೆ ಉಸ್ತುವಾರಿ ನೋಡುತ್ತಿರುವ ನಾರಾಯಣ ಕೊಡಗ ಅವರು ಜೀರ್ಣೋದ್ಧಾರ ಸಲುವಾಗಿ ಸುತ್ತಮುತ್ತಲ ದೇವಾಲಯಗಳನ್ನು ಖಾಸಾ ಮರ್ಜಿವಹಿಸಿ ಸಂರಕ್ಷಿಸುತ್ತಿರುವುದು ಇನ್ನೂ ಅನುಕೂಲವಾಗಿದೆ.

ಜಹಗೀರ ಪಡೆದ ಪ್ರದೇಶದಲ್ಲಿದ್ದ ದೇವಾಲಯಗಳು

ಇಲ್ಲಿಯವರೆಗೆ ಸ್ಥಳೀಯವಾಗಿ ದೇವಾಲಯಗಳ ಜೀರ್ಣೋದ್ಧಾರ ಹಾಗೂ ದಾನ ದತ್ತಿಗಳ ಕುರಿತು ಚರ್ಚಿಸಿದೆ. ಆದರೆ ಆಗಾಗ ಅಲಲ್ಲಿ ಜಹಗೀರ ಪಡೆದ ಪ್ರದೇಶದಲ್ಲಿ ದಾನ ನೀಡಿದ್ದು ದೇವಾಲಯಗಳನ್ನು ಕಟ್ಟಿಸಿದ್ದು ಕಂಡುಬರುತ್ತದೆ. ಕ್ರಿ.ಶ. ೧೮೦೦ರಲ್ಲಿ ಬಿಜಾಪೂರ ಆಲಮೇಲ ಪೇಶ್ವೆಗಳ ಆಡಳಿತದಲ್ಲಿತ್ತು. ಆಗ ಸಂಪೂರ್ಣ ಜಹಾಗೀರವು ಈ ಭಾಗದ ಸರದಾರನಾದ ಮಾಲೋಜಿ ಘೋರ‍್ಪಡೆಯವರ ವಶದಲ್ಲಿದ್ದರಿಂದ ಆಲಮೇಲು ಪ್ರಾಂತದಲ್ಲಿ “ಭವಾನಿ” ಗುಡಿಯನ್ನು ಹಾಗೇ ರಾಮದೇವರ ಗುಡಿಯನ್ನು ಕಟ್ಟಿಸಿ ತನ್ನ ಸಾಮಂತನಾಗಿದ್ದ ಆಲಮೇಲ ದೇಶಪಾಂಡೆಯನ್ನು ಕೂಡ ಧಾರ್ಮಿಕದತ್ತ ಒಲಿಸಿದ್ದು ಇದೆ.

ಪಂಢರಪೂರ

ಘೋರ‍್ಪಡೆ ಅರಸರು ಪಂಢರಪೂರದ ವಿಠೋಬಾ ದೇವರ ಪಶ್ಚಿಮದ್ವಾರವನ್ನು ಕಟ್ಟಿಸಿರುವುದು ಶಕೆ ೧೬೬೫ ಇಸ್ವಿಸನ್ ೧೭೪೩ರಲ್ಲಿ ಉಲ್ಲೇಖವಿದೆ. ಕೊಲ್ಹಾಪುರಗಳಲ್ಲಿ ಕೂಡ ಇವರು ದಾನ ಮಾಡಿದ್ದು ಸಂಸ್ಕೃತಿಯ ದೃಷ್ಠಿಯಿಂದ ಮಹತ್ವದ್ದಾಗಿದೆ. ಆಡಳಿತ ಹೋರಾಟ ಮಾಡುವುದರ ಜೊತೆಗೆ ಮಾಡಿದ ಪಾಪದ ಪ್ರಯಶ್ಚಿತಕ್ಕಾಗಿ ಅನೇಕ ದೇವಾಲಯಗಳಿಗೆ ನಿತ್ಯಪೂಜೆ ಹಾಗೂ ಉಡುಗೊರೆ ಕೊಟ್ಟು ಪುಣ್ಯಕ್ಕಾಗಿ ಬೇಡಿಕೊಳ್ಳುವುದು ಒಂದು ಭಾಗ್ಯವೆಂದಿದ್ದಾರೆ.

ಮುಧೋಳ ಸಯ್ಯದ ಸಾಬ್ದರ್ಗಾ

ಈ ದರ್ಗಾವು ಹಿಂದು-ಮುಸಲ್ಮಾನರ ಭಾವೈಕ್ಯದ ಸಂಕೇತವಾಗಿದ್ದು ಮುಧೋಳ ೮೪ ಹಳ್ಳಿಗಳಿಗೂ ಪ್ರಸಿದ್ಧಿ ಪಡೆದಿದೆ. ಸಯ್‌ದ ಎಂದರೆ ಪೂಜಾರಿ ಸಂತ ಸೇವಕ ಎಂದು ಬೇರೆ ಬೇರೆ ಅರ್ಥಗಳು ಸಿಗುತ್ತವೆ. ಇವನು ಆದಿಲ್ ಶಾಹಿಯ ಆಸ್ಥಾನದಲ್ಲಿ ಶ್ರೇಷ್ಠ ಸಂತನಾಗಿದ್ದ ಅಲ್ಲದೆ ಒಬ್ಬ ವೈದ್ಯನಾಗಿದ್ದ. ಅರಮನೆಯ ರೋಗಿಗಳಿಗೆ ಮಾತ್ರ ಅವನ ಸೇವೆ ಮೀಸಲಾಗಿತ್ತು. ಕಾರಣಾಂತರದಿಂದ ಮುಧೋಳ ಹಾಗೂ ಆದಿಲ್‌ಶಾಹಿಗಳ ನಡುವಿನ ಕೊಂಡಿಯಾಗಿ ಸೇತುವೆಯಂತಿದ್ದನು. ಮುಧೋಳ ಘೋರ‍್ಪಡೆ ಅರಸರು “ಸೈಯದ್ ಹಸನ್ ಅಲಿ” ಎಂದು ಕರೆಯುತ್ತಿದ್ದರು. ಸೈಯದ್‌ರು ಮುಧೋಳದಿಂದ ಬಿಜಾಪೂರಕ್ಕೆ ಒಳ್ಳೆಯ ಉದ್ದೇಶಕ್ಕಾಗಿ ಅಲೆದಾಡುತ್ತಿದ್ದರು. ಸೈಯದ್‌ರಿಗೆ ಕುದುರೆಯೂ ಕೂಡಾ ಇತ್ತು. ಬಿಳಿ ಕುದುರೆಯೇರಿ ಹೋಗುತ್ತಿದ್ದರು, ಬರುತ್ತಿದ್ದರು. ಶಿವಾಜಿ ಮತ್ತು ಘೋರ‍್ಪಡೆಯವರ ನಡುವಿನ ವಿರಸದಿಂದ ಸೈಯದರು ಬಲಿಯಾದರು. ಒಬ್ಬ ದೈವೀಪುರುಷನಾಗಿ ಜನಮನದಲ್ಲಿ ಉಳಿದಿದ್ದಾನೆ. ಅವನ ಜಾಗೃತ ಸಮುದಾಯ ಊರಿನ ಉತ್ತರ ದಿಕ್ಕಿಗೆ ಇದ್ದು ಸರ್ವಜನರ ಗೌರವಕ್ಕೆ ಪಾತ್ರವಾಗಿದೆ. ಇಂಥ ಹಿಂದು-ಮುಸ್ಲಿಂ ಭಾವೈಕ್ಯದ ಸಂಕೇತವಾದ ಗದ್ದುಗೆ ಇರುವುದು ಮುಧೋಳದಲ್ಲಿ ಒಂದೇ ಆಗಿದೆ. ಇಲ್ಲಿರುವ ಉಳಿದ ಗದ್ದುಗೆಗಳು ತೋರು ಗದ್ದುಗೆಗಳಾಗಿವೆ.

ಘೋರ‍್ಪಡೆ ಘರಾಣಾದ ಶಿಖೆಗಳು

ಮುಧೋಳ ಘೋರ‍್ಪಡೆ ಘರಾಣಾದಲ್ಲಿ ರಾಜ ದರ್ಬಾರ ಮಾಡಿದ ಕಾಲಾವಧಿಯಲ್ಲಿ ಬಳಸಿದ ಶಿಖೆಗಳನ್ನು ದಪ್ತರದಲ್ಲಿ ಕಾಣಬಹುದಾಗಿದೆ. ೨ನೇ ಮಾಲೋಜಿ ರಾಜೆಯು ಸ್ವತಂತ್ರವಾಗಿ ಆಳ್ವಿಕೆ ಮಾಡುವಾಗ ಆದಿಲ್‌ಶಾಹಿಯ ಪರವಾನಿಗೆ ಮೇರೆಗೆ ಸಂಸ್ಥಾನಿಕರ ಪ್ರಕಾರ ಚೌಕೋನಿ ಅಷ್ಟಕೋನಿ ಶಿಖೆಯನ್ನು ಬಳಸಿದ್ದು ಆಡಳಿತದ ದೃಷ್ಟಿಯಿಂದ ಮಹತ್ವದ್ದಾಗಿದೆ.

೧೭ ಮಾಲೋಜಿ ರಾಜೆ ದುಸರೆ
ಶಿಕ್ಕಾ : ಚೌಕೋನಿ ಅದರ ಮೇಲೆ ಬಾಲ ಬೋಧ ಲಿಪಿ

೧. ಶ್ರೀರಾಮನಾಮ
ಸಾಹಿ ಮಾಲೋಜಿ
ರಾಜೆ ಘೋರ‍್ಪಡೆ
ಆದಿಲ್‌ಶಾಹಿ
೧. ಮೊರ್ತಬ್
ಬದಾಮಿ ಬಾಲಬೋಧ
ಮೋರ್ತ
ಶುದ್ಧ
೨. ೨೦-೩ ಶಂಕಾರಾಜಿ ರಾಜೆ
ಶಿಕ್ಕಾ: ಚೌಕೋನಿ ಫಾರಸಿಲಿಪಿ
ರಾಜಾ ಶಂಕರರಾವ್
ಜಿ ೧೧೮೩
ಬಹದ್ದೂರ ಘೋರ‍್ಪರಹ
೨. ಮೊರ್ತಬ್ ಇಲ್ಲ
ಶಿಕ್ಕಾ: ವಾಚೋಳಿ ಫಾರಸಿಲಿಪಿ
ರಾಜ್ಹಾ ಸಂಕ್ರಾಜಿ
ಪೋರ‍್ಟರಹ ೧೧೮೩, ಬಹುದ್ದೂರ
ಮೊರ್ತಬ್ ಇಲ್ಲ
೩. ಶಿಕ್ಕಾ ಚೌಕೋನಿ ಬಾಲಬೋಧ
ಶ್ರೀರಾಮ
ಶ್ರೀರಾಮನಾಮ
ಸಹಿ ಸಕರಾಜಿ
ಸಹಿ ಸಕರಾಜಿ
ರಾಜೆ ಘೋರ‍್ಪಡೆ
ಇದಲಶಾಹಿ
ಮೊರ್ತಬ್ ಇಲ್ಲ
೪. ನಾರಾಯಣರಾವ ರಾಜೆ
ಶಿಕ್ಕಾ : ಬದಾಮಿ ಬಾಲಬೋಧ
ಶ್ರೀರಾಮಚರಣಿ
ತತ್ಪರ ನಾರಾಯಣರಾವ
ರಾಜೆ ಬಹದ್ದೂರ ಘೋರ ಪಡೆ
ಆದಿಲ್‌ಷಾಹಿ
ನಿರತರ
ಮೊರ್ತಬ್
ಬದಾಮಿ ಬಾಲಬೋಧ
ಮೊರ್ತಬ ಸುದ್
ಶಿಕ್ಕಾ : ಬದಾಮಿ ಬಾಲಬೋಧ
ಶ್ರೀರಾಮ ನಾಮ
ಸಹಿ ನಾರಾಯಣರಾವ
ರಾಜೆ ಘೋರ‍್ಪಡೆ ಅ
ವರಂಗ ಷಾಹಿ
ಸದರ
೨೩. ಬಾಕಾಬಾಯಿ-ನಾರಾಯಣರಾವ
ಶಿಕ್ಕಾ : ಇಲ್ಲ
ಮೊರ್ತಬ್
ಚೌಕೋನಿ ಬಾಲಬೋಧ
ರಾಮ
ಸೀತಾ
೨೩. ವೆಂಕಟರಾವ ರಾಜೆ
ಶಿಕ್ಕಾ : ಬದಾಮಿ ಬಾಲಬೋಧ
ಶ್ರೀರಾಮನಾಮ
ವ ರಾಜೆ ಘೋರ‍್ಪಡೆ
ಆದಿಲ್‌ಶಾ
ಮೊರ್ತಬ್
ಬದಾಮಿ ಬಾಲಬೋಧ
ಮೊರ್ತಬ್
ಮೊರ್ತಬ್
೨೪. ಬಳವಂತರಾವ್ ರಾಜೆ
ಶಿಕ್ಕಾ : ಬದಾಮಿ ಬಾಲಬೋಧ
ಬದಾಮಿ ಬಾಲಬೋಧ
ಶ್ರೀ ರಾಮಚರಣಿ
ತತ್ಪರ ಬಳವಂತ
ರಾವ ರಾಜೆ ಘೋರ‍್ಪಡೆ
ಆದಿಲ್‌ಶಾಹಿ ನಿರಂತರ
ಮೊರ್ತಬ್
ಮೊರ್ತಬ್
ಸುದ್

ಇಲ್ಲಿ ಬದಲಾವಣೆಗೊಂಡ ಶಿಖೆಗಳನ್ನು ಮಾತ್ರ ಗುರುತಿಸಲಾಗಿದೆ. ಎರಡು ಶಿಖೆಗಳಿದ್ದು ಒಂದು ರಾಜಾಜ್ಞೆ ಹೊರಡಿಸುವಾಗ ಬಳಸುವ ಮುದ್ರೆ ಹಾಗೂ ಎರಡನೆಯದು ಮೊರ್ತಬ್ ಸುದ್ ಕಾರಬಾರಿಗಳ ಕಡೆಗೆ ಇದ್ದು ಪ್ರತಿ ಪತ್ರದ ಲೇಖನಿ ಮುಗಿದ ಮೇಲೆ ಬಳಸುವುದು. ಇವುಗಳ ಪ್ರಾಮುಖ್ಯತೆ ಇದೆ.

ಪತಾಕೆ ಮತ್ತು ಲಾಂಛನ

ಕ್ರಿ.ಶ.೧೪೧೭ರಲ್ಲಿ ಕೊಂಕಣ ಪ್ರದೇಶದಲ್ಲಿ ಲಡಾಯಿ ವೇಳೆಯಲ್ಲಿ ಶೌರ‍್ಯ ಸಾಹಸವನ್ನು ತೋರಿಸಿದ್ದರಿಂದ ಅದರಲ್ಲಿ ಅಣ್ಣ ತಮ್ಮರಲ್ಲಿ ಒಬ್ಬ ವ್ಯಕ್ತಿ ಕೋಟೆಯ ಹತ್ತುವಾಗ ಮರಣವನ್ನಪ್ಪಿದನು. ತಮ್ಮನನ್ನು ಕಳೆದುಕೊಂಡ ವ್ಯಕ್ತಿ ತನ್ನ ಶೂರತನ ತೋರಿಸಿ ಕೋಟೆ ವಶಪಡಿಸಿಕೊಂಡಾಗ ಬಹಮನಿ ಅರಸರು ಅವರಿಗೆ ಪ್ರತ್ಯೇಕ ಪ್ರತಾಕೆ ನೀಡಿದ್ದು ಇದೆ. ಜೊತೆಗೆ ಲಾಂಛನವು ಅದರಲ್ಲಿ ಕಂಡುಬರುತ್ತದೆ. ಅವರ ಒಟ್ಟು ಪತಾಕೆ ವಿವರ ಈ ರೀತಿ ಇದೆ. ಮೊದಲನೇ ಪತಾಕೆಯು ಭಗವಾ ಇದೆ (ಮುಧೋಳ ಘರನಾಚೆ, ಇತಿಹಾಸ ಬಖರ., ಪು.ಸಂ೧೮) ಭಗವಾಧ್ವಜದಲ್ಲಿ ಹಸೀರು ಬ್ಬಣದ ಉಡದ ಲಾಂಛನವಿರುವುದು ಈ ಧ್ವಜದ ವಿಶೇಷವಾಗಿದೆ. ಸ್ವಾರಿ ತೆಗೆದುಕೊಂಡು ಹೋಗುವಾಗ ಅರಮನೆಯ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಬಳಸುವುದು ಇದೆ. ಆದಿಲ್‌ಷಾಹಿಗಳ ಕಾಲದಲ್ಲಿ ಧ್ವಜ ಚಿನ್ನೆ ಜೊತೆಗೆ ಪತಾಕೆಯ ಬಣ್ಣ ಬೇರೆ ಇದ್ದು ಅದು ಹಸಿರು ಮತ್ತು ಕಪ್ಪು ಬಣ್ಣನಿಂದ ಕೂಡಿದೆ. (ಇಂಟರ್‌ ನೆಟ್‌ ರಾಯಲ್ ಪೇಮಿಲ್ ಆಪ್ ಮುಧೋಳ) ಬಹುತೇಕ ಇದು ಮುಸ್ಲಿಂ ಸಂಕೇತವಾಗಿದ್ದು ಸಾಮಂತ ಅರಸರಿಗೆ ನೀಡುವ ಪತಾಕೆಯಾಗಿದ್ದೆಂದು ಗುರುತಿಸಬಹುದೆನೋ. ಅದರಲ್ಲಿ ಕಪ್ಪು ಬಣ್ಣದ ಉಡದ ಚಿನ್ನೆ ಇರುವುದರಿಂದ ನಿಷೇಧ ಸಂಕೇತವಾಗಿದೆ. ಘೋರ‍್ಪಡೆ ಅರಸರು ಎಂತಹ ಸಮಯದಲ್ಲಿ ಮತ್ತೊಬ್ಬರ ಸಂಗಡ ಒಪ್ಪಂದ ಮಾಡಿಕೊಳ್ಳುವವರಲ್ಲ ಎಂಬುದಕ್ಕಾಗಿ ಈ ಬಣ್ಣದ ಪಟ್ಟಿ ಇರಬಹುದೆಂದು ಹಿರಿಯ ಮರಾಠಿ ತಜ್ಞ ಭಗವಾನದಾಸ ತಲಾಠಿ ಹೇಳುತ್ತದೆ. ಆದರೆ ಹಿಂದೂ ಧರ್ಮದ ಪ್ರಭಾವದಲ್ಲಿ ಪರಿಸರದಲ್ಲಿ ಇರುವುದರಿಂದ ಭಗವಾಧ್ವಜವೇ ಅವರ ಮೂಲದ್ದೆಂದು ಅರಮನೆ ಮೇಲೆ ಹಾರಾಡುತ್ತಿರುವುದನ್ನು ಕಂಡಿದ್ದು ಇದೆ.

ಮುಧೋಳ ಘರಾಣೆ ಚಿನ್ನದ ಮೊಹರು

ಈ ಚಿನ್ನದ ಮೋಹರು ಬಹಳಷ್ಟು ಸುಂದರವಾದುದು. ಇದರಲ್ಲಿರುವ ಕೆಲವು ಪ್ರಮುಖ ಅಂಶಗಳು ಅರಸು ಮನೆತನಕ್ಕೆ ಸಂಬಂಧಿಸಿದ ಪ್ರಮುಖ ವಿಚಾರವನ್ನು ಒಳಗೊಂಡಿವೆ. ಅವೆಲ್ಲವೂಗಳನ್ನು ಒಂದೊಂದಾಗಿ ಬಿಡಿಸಿಕೊಂಡು ಈ ರೀತಿ ಗುರ್ತಿಸಲಾಗಿದೆ.

ಮೊದಲನೇದಾಗಿ ಎರಡು ಗಧೆಗಳು, ಎಡಬಲಗಳಲ್ಲಿ ಎರಡು ಹುಲ್ಲೆಗಳು ಕಾಲೆತ್ತಿ ನಿಂತಿವೆ. ಸೂರ್ಯನಿದ್ದಾನೆ, ಹಾಗೇ ಚಂದ್ರನಿದ್ದಾನೆ. ಕೀರಿಟಧ್ಯೋತಕವಾಗಿ ಶಿರಪೊಚಗಳಿವೆ. “ಉಡ”ದ ಪ್ರತಿರೂಪವಿದೆ ಜಯಶಾಲಿಯ ವೀರ ಸಂಕೇತವೆಂದು ಎತ್ತಿ ಹಿಡಿದ ಖಡ್ಗವಿದೆ. ಮನೆದೇವರೆಂದು ತಿಳಿಸುವಲ್ಲಿ ಶ್ರೀರಾಮ ಎಂಬ ಪದ ಉಲ್ಲೇಖವಿದೆ. ಶಕ್ತಿದೇವತೆಯ ಪ್ರತೀಕವೆಂದು ಜಯ-ಭವಾನಿ ಎಂಬ ಉಕ್ತಿ ಇದೆ. ಈ ಚಿನ್ನೆಯಲ್ಲಿ ಮಹತ್ವದ ಉಲ್ಲೇಖವನ್ನು ಮರಾಠಿಯಲ್ಲಿ ಲೇಖಿಸಿದ್ದು ಇದೆ. ಅದು ಕೀರ್ತಿ ಮಾಂಗೇ ಉರಾವಿ ಎಂದಿದೆ. ಈ ಘರಾಣಾದ ಉತ್ಕೃಷ್ಟತೆಯ ಪ್ರತೀಕಕ್ಕೆ ಈ ವಾಕ್ಯವು ಹೊಳಪಿಟ್ಟಂತೆ ಕಂಡುಬರುತ್ತದೆ. ಒಳಗಡೆ ಆಕಾಶಕಾಯದಂತೆ ವಿಶಾಲವಾದ ಜಾಗೆಯಲ್ಲಿ ನಕ್ಷತ್ರಗಳು ಅಜರಾಮರತೆಯನ್ನು ಸೂಚಿಸುತ್ತವೆ.

ಒಟ್ಟಂದದಲ್ಲಿ ಅಲ್ಲಿರುವ ಎಲ್ಲ ಅಂಶಗಳು ಘೋರ್ಪಡೆ ಘರಾಣಾದ ಆಡಳಿತದ ಅಂಶಗಳಿಗಾಗಿರುವುದಲ್ಲದೆ ಮಧ್ಯ ಇರುವ ಸೂರ್ಯನು ಸೂರ್ಯವಂಶದ ಪ್ರತೀಕವಾಗಿರುವುದು ಗಮನಾರ್ಹವೆನಿಸಿದೆ. ಹೀಗೆ ಒಂದೆಡೆಯಿಂದ ಅವನ್ನು ಗಮನಿಸಿದ್ದನ್ನು ಮಾತ್ರ ಇಲ್ಲಿ ಸಂಕ್ಷಿಪ್ತವಾಗಿ ಗಮನಿಸಲಾಗಿದೆ.

ಉಪಸಂಹಾರ

೧೪ನೇ ಶತಮಾನದ ಪೂರ್ವ ಭಾಗದಲ್ಲಿ ಮುಸಲ್ಮಾನರ ದಖನ್ ಭಾಗವನ್ನು ತಮ್ಮ ಖಾಯಂ ವಾಸಸ್ಥಾನವನ್ನಾಗಿ ಮಾಡಿ ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿದರು. ಅವರ ಸಹಾಯ ಕೋರಿದ ರಜಪೂತ ಸೇನಾವೀರರು ಸೇನಾಪತಿಯಾಗಿ ಇವರೆಲ್ಲ ಸಹಾಯಕ್ಕೆ ನಿಂತಿದ್ದರು. ಅವಕಾಶ ಕಲ್ಪಸಿಕೊಂಡ ಈ ವೀರಮಣಿಗಳು ಸಂದರ್ಭ ಬಂದಾಗಲೆಲ್ಲಾ ಅದರ ಸದುಪಯೋಗವೊಂದನ್ನು ಸಂಪೂರ್ಣ ಮೈಮೇಲೆ ಹೊತ್ತು ಜೀವಕ್ಕೆ ಜೀವ ಕೊಟ್ಟ ವ್ಯಕ್ತಿ ಸುಜನಸಿಂಗನದಾಗಿತ್ತು. ಮಹಮ್ಮದೀಯರೂ ಕೂಡ ಹಿಂದುಗಳಿಗೆ ತಮ್ಮ ರಾಜಧಾನಿಯಲ್ಲಿ ಒಳ್ಳೆಯ ಸ್ಥಾನ ನೀಡಿದ್ದರು. ಇದಕ್ಕೆ ಬಹಮನಿ ಸಾಮ್ರಾಜ್ಯ ಉತ್ತಮ ಉದಾಹರಣೆ. ಮರಾಠ ಸಾಮ್ರಾಜ್ಯ ನಿರ್ಮಾತೃ ಮತ್ತು ವ್ಯಾಪಕ ಬೆಳವಣಿಗೆಯಲ್ಲಿ ಶಿವಾಜಿ ಮಹಾರಾಜನ ಕುಟುಂಬವೂ ಕೂಡ ಸಾಮ್ರಾಜ್ಯಕ್ಕೆ ಒಳ್ಳೆಯ ಪ್ರಾಮಾಣಿಕ ಸೇವೆ ನೀಡಿತ್ತು. ಅದಕ್ಕೆ ಸುಜನ ಸಿಂಗನನ್ನು ಮರೆಯುವ ಹಾಗಿಲ್ಲ.

ಉಗ್ರಸೇನ ಉರ್ಫ್ ಇಂದ್ರಸೇನನ ೬ನೇ ಸಂತಾನವೇ ಸುಜನಸಿಂಗ ಆಗಿದ್ದಾನೆ. ಇವನಿಗೆ ಕರ್ಣಸಿಂಗ ಮತ್ತು ಶುಭಕೃಷ್ಣ ಇಬ್ಬರು ಮಕ್ಕಳಿದ್ದರು. ಸುಪ್ರಸಿದ್ಧ ಶಿವಾಜಿ ಮಹಾರಾಜನು ಹುಟ್ಟಿರುವುದು ಶುಭಕೃಷ್ಣ ಮೂಲ ವಂಶವೃಕ್ಷದಿಂದ ಎಂದೇ ತಿಳಿದುಬರುತ್ತದೆ. ಉಗ್ರಸೇನನು ಹಿರಿಯ ಮಗನಾಗಿದ್ದನು. ಕರಣಸಿಂಗನು ಮತ್ತು ಅವನ ವಂಶಸ್ಥರು ಮುಧೋಳದಲ್ಲಿ ಆಳ್ವಿಕೆ ಮಾಡುತ್ತಿದ್ದರು. ಜೊತೆಗೆ ಮೂಲದಲ್ಲಿ ಬಿಜಾಪುರದ ಆದಿಲ್ ಷಾಹಿಯಿಂದ ಖಾಯಂ ಜಹಾಗೀರ ಪಡೆದುದರಿಂದ ಮುಧೋಳದ ರಾಜ ಪದವಿಗೆ ಅರ್ಹರಾಗಿದ್ದರು. ತನ್ನ ದೊರೆ ಸುಲ್ತಾನನಿಗೆ ಅಂದರೆ ಆದಿಲ್‌ ಷಾಹಿ ಆಡಳಿತದಲ್ಲಿ ಸೇನಾ ನಾಯಕರಾಗಿ ಸೇವೆಸಲ್ಲಿಸುತ್ತಿದ್ದರು. ಸುಜನ ಸಿಂಗನ ೩ನೇ ಸಂತಾನವೇ ಬೋಸಾಜಿ ಇವನ ಸಂತಾನವೇ ಬೋಸಲೇಗಳು ಮತ್ತು ಇವರನ್ನು ಬೋಸ್ಲಾ ಎಂದು ಕರೆಯಲಾಗುತ್ತದೆ.

ಕರಣಸಿಂಗನ ಕುಟುಂಬವು ಅತೀ ಬೇಗನೇ ತನ್ನ ಮನೆತನದ ಹೆಸರನ್ನು ಬದಲಾಯಿಸಿಕೊಂಡಿತು. ಕಾರಣ ಈತನ ಮಗ ಭೀಮಸೇನನು ತನ್ನ ಎದುರಾಳಿಗಳನ್ನು ಸದೆ ಬಡಿಯಲು ಸೇನಾ ಕಾರ‍್ಯದಲ್ಲಿ ಚಾಣಾಕ್ಷ ಹಾಗು ಮುಂಗೋಪಿಯಂತೆ ಇದ್ದುದ್ದರಿಂದ ದೈತ್ಯಕಾರದಲ್ಲಿ ಮುನ್ನುಗ್ಗುವ ಕುತಂತ್ರಿಯಾಗಿದ್ದನು. ಹಾಗಾಗೀ ತನ್ನ ಚಾಕ್ಷುಕ ಬುದ್ಧಿ ಉಪಯೋಗಿಸಿ ಕೋಟೆ ಹತ್ತಲು ಹಲ್ಲಿ ಜಾತಿಗೆ ಸೇರಿದ “ಉಡ”ವನ್ನೂ ಬಳಸಿದನು. ಇದರಿಂದ ಅವನಿಗೆ ಹೋರಾಟದಲ್ಲಿ ಜಯ ಲಭಿಸಿತು. ಮರಾಠಿ ಭಾಷೆಯಲ್ಲಿ ಉಡವನ್ನು ಘೋರ್ಪಡ ಎಂದು ಕರೆಯುತ್ತಾರೆ. ಆ ಕಾರಣದಿಂದ ಇವರ ವಂಶಸ್ಥರಿಗೆ “ಬೋಸಾಜಿ” ಜೊತೆಗೆ ಘೋರ್ಪಡೆ ಎಂಬ ನಾಮದೇಯವು ರೂಢಿಯಲ್ಲಿದೆ. ಮರಾಠ ಸಾಮ್ರಾಜ್ಯದ ಸಿಂಹ ಎಂದೇ ಹೆಸರಾದ ಶಿವಾಜಿ ಹಾಗೂ ಶಿವಾಜಿ ತಂದೆ ಮತ್ತು ಚಿಕ್ಕಪ್ಪರ ಮನೆತನಗಳೇ ದಕ್ಷಿಣದಲ್ಲಿ ಪ್ರಸಿದ್ಧಿ ಹೊಂದಿ ಮುಧೋಳದಲ್ಲಿ ಭೋಸಲೇ ಮತ್ತು ಘೋರ್ಪಡೆ ಮನೆತನಗಳೆಂದು ಗುರುತಿಸಲ್ಪಟ್ಟವು. ಅವೆರಡು ಒಂದೇ ಬೊಡ್ಡೆಯ ಎರಡು ಕವಲುಗಾಳಾಗಿ ಒಡೆದು ಮಹಾರಾಷ್ಟ್ರದಲ್ಲಿ ಒಂದು, ಕರ್ನಾಟಕದಲ್ಲಿ ಇನ್ನೊಂದಾಗಿ ಬೇರು ಬಿಟ್ಟು ಇತಿಹಾಸದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದು ಗಮನಾರ್ಹವಾಗಿದೆ.

ಮುಧೋಳದ ರಾಜಾ ಘೋರ್ಪಡೆಯವರು ವಿಜಾಪುರದ ಕೊನೆಯ ಸುಲ್ತಾನ ಸಿಕಂದರ ಆದಿಲ್‌ ಷಾಹಿಯವರೆಗೂ ತಮ್ಮ ಸೇವೆ, ನಿಷ್ಠೆ ಹಾಗೂ ಪ್ರಾಮಾಣಿಕತೆಯನ್ನು ಮುಂದುವರೆಸಿಕೊಂಡು ಹೋದರು. ಈ ಸಮಯದಲ್ಲಿ ಶಿವಾಜಿ ಮಹಾರಾಜನು ಹಸ್ತಕ್ಷೇಪವು ಕೆಲವು ವೈಯುಕ್ತಿಕ ತಿಟ್ಟಿಗಳಿಂದ ಮುಧೋಳ ಮೊದಲಾದವು ಆದರೂ ಅವರು ತಮ್ಮ ಸ್ವಾಮಿ ನಿಷ್ಠೆಯನ್ನು ಬಿಡಲಿಲ್ಲ. ೩ನೇ ಮಾಲೋಜಿಯವರೆಗೂ ಅವರು (ಮುಧೋಳ ರಾಜರು) ಸುಭಿಕ್ಷಷ್ಟ ಆಡಳಿತಗಾರರಾಗಿದ್ದು ಬಿಜಾಪುರದ ಸುಲ್ತಾನರ ಬಂಟರಾಗಿ ಮೆರೆದವರು. ಮಾಲೋಜಿಯು ೯೨ ವರ್ಷ ವಯಸ್ಸಿನಲ್ಲಿ ವೀರಾವೇಶದಿಂದ ಹೋರಾಡಿ ಹೊಳ್ಕಾರ ಯುದ್ಧದಲ್ಲಿ ಮರಣ ಹೊಂದಿದಾಗ ಪೇಶ್ವೆಗಳು ಈ ಪರಾಕ್ರಮಣ ನೋಡಿ ಈ ಮನೆತನಕ್ಕೆ ಅತೀ ಹತ್ತಿರವಾದದು ಇದೆ. ಪೇಶ್ವೆಗಳು ನಿರಂತರವಾಗಿ ಅವರ ಸೇವಾ ನಿಷ್ಠೆಗೆ ಅನೇಕ ಬಿರುದು ಬಾವಲಿಗಳನ್ನು ನೀಡಿದರು. ಬಹುಮನಿ ರಾಜರು ಕೂಡ ಇವರಿಗೆ ಮೂಲದಲ್ಲಿ ದೇಶಮುಖ ಮನೆತನಕ್ಕೆ ಸಂಬಂಧಿಸಿದ ಒಳ್ಳೆಯ ಜಹಾಗೀರಿ ಭಾಗಗಳನ್ನು ಕೂಡ ನೀಡುತ್ತಿದ್ದರು. “ದೇಶಮುಖ” ಎಂಬ ಜಹಾಗೀರಿಯು ಉನ್ನತವಾದ ಗೌರವ ತರುವಂತ ಹುದ್ದೆಯಾಗಿತ್ತೆಂದು ಹೇಳಬಹುದು. ಬಹುತೇಕ ಮಹಮ್ಮದಿಯರು ಊದಾತ್ತತೆ ಹಾಗು ಹಿಂದೂಗಳ ಸ್ವಾಮಿನಿಷ್ಠೆಯ ಜೊತೆಗೆ ಮಾನವೀಯತೆ ಮೌಲ್ಯಗಳ ಪ್ರತೀಕದಂತೆ ಈ ಮುಧೋಳ ರಾಜ್ಯದ ಇತಿಹಾಸ ಬೆಳೆದು ಬಂದಿದೆ.