ಚಂದು ಪಣಿಕ್ಕರ್ —ಕೇರಳದ ಹಲವು ಕಥಕ್ಕಳಿ ನೃತ್ಯ ಸಂಪ್ರದಾಯಗಳಲ್ಲಿ ‘ಕಲ್ಲಟಿಕೋಟನ್’ ಸಂಪ್ರದಾಯಕ್ಕೆ ಹೊಸ ಗೌರವ ತಂದುಕೊಟ್ಟ ನೃತ್ಯ ವಿಶಾರದರು. ಸ್ವಸಾಮರ್ಥ್ಯ ಗುರುಭಕ್ತಿ, ನಿಷ್ಠೆ, ಸರಳತೆ, ಆತ್ಮಾಭಿಮಾನಗಳಿಂದ ಬಹುದೊಡ್ಡ ಸಾಧನೆ ಮಾಡಿದರು.

 

ಚಂದು ಪಣಿಕ್ಕರ್

ಈ ಶತಮಾನದಲ್ಲಿ ಭಾರತದಲ್ಲಿ ನೃತ್ಯಕಲೆಯ ಪ್ರಪಂಚದ ಶ್ರೇಷ್ಠರ ಪಂಕ್ತಿಗೆ ಸೇರಿದವರು ಚಂದು ಪಣಿಕ್ಕರ್ ಅವರು. ಅವರು ಹುಟ್ಟಿದ್ದು, ಬೆಳೆದದ್ದು, ಬಹುಮಟ್ಟಿಗೆ ಇದ್ದದ್ದು ಕೇರಳದಲ್ಲಿ. ಅವರು ನೃತ್ಯ ಕಲೆಯನ್ನು ಕಲಿತ ಕಾಲ, ಸುಲಭವಾಗಿ  ಕಲೆಯನ್ನು ಕಲಿಯುವ ಕಾಲವಲ್ಲ. ಇಂದು ಸಂಗೀತ, ನೃತ್ಯ ಇಂತಹ ಕಲೆಗಳನ್ನು ಕಲಿಯಬೇಕೆಂದರೆ ಶಾಲೆಗಳಿವೆ. ಈ ಶಾಲೆಗಳು ಪತ್ರಿಕೆಗಳಲ್ಲಿ ಜಾಹೀರಾತು ಕೊಡುತ್ತವೆ. ಮನೆಯಲ್ಲಿದ್ದುಕೊಂಡು ಗೊತ್ತಾದ ವೇಳೆಗೆ ಶಾಲೆಗೆ ಹೋಗಬಹುದು, ಪಾಠ ಮುಗಿಯುತ್ತಲೆ ಮನೆಗೆ ಬರಬಹುದು. ಚಂದು ಪಣಿಕ್ಕರರು ನೃತ್ಯಕಲೆಯನ್ನು ಕಲಿತ ದಿನಗಳಲ್ಲಿ ಈ ಅನುಕೂಲಗಳು ಯಾವುವೂ ಇರಲಿಲ್ಲ. ಒಬ್ಬ ಗುರುವನ್ನು ಆರಿಸಿಕೊಂಡು, ಅಗತ್ಯವಾದರೆ ಅವರ ಮನೆಯಲ್ಲಿ ಇದ್ದು ಅವರ ಸೇವೆ ಮಾಡಬೇಕು; ಅವರು ಹೇಳಿಕೊಟ್ಟಾಗ ಕಲಿಯಬೇಕು. ಹೀಗೆ ನೃತ್ಯವನ್ನು ಕಲಿತು ಕೀರ್ತಿವಂತರಾದವರು ಚಂದು ಪಣಿಕ್ಕರ್.

ಜನಸಾಮಾನ್ಯರಲ್ಲೂ ಕಲಾಪ್ರೇಮ

ಒಂದು ಕಡೆ ಸಹ್ಯಾದ್ರಿ ಪರ್ವತಗಳ ಸಾಲು, ಮತ್ತೊಂದು ಕಡೆ ಅರಬ್ಬಿ ಸಮುದ್ರ. ಇವುಗಳ ಮಧ್ಯೆ ವೃಕ್ಷಸಂಪದ್ಭರಿತವಾಗಿ ಪ್ರಕೃತಿ ಸೌಂದರ್ಯದಿಂದ ಕೂಡಿದೆ ಕೇರಳ ರಾಜ್ಯ. ಕೇರಳದ ಜನ ಮೊದಲಿನಿಂದಲೂ ನೃತ್ಯ ಕಲಾಪ್ರಿಯರು. ಈ ಕಲೆಯಲ್ಲಿ ಶಕ್ತಿ ಸಂಪಾದನೆ ಮತ್ತು ದೈವಾರಾಧನೆಯ ಮೂಲತತ್ತ್ವವನ್ನು ಹಾಸುಹೊಕ್ಕಾಗಿ ಬೆರೆಸಿರುವುದೇ ಇವರ ನೃತ್ಯಕಲಾಪ್ರೇಮಕ್ಕೆ ಕಾರಣ. ಆಯುಧಾಭ್ಯಾಸವೂ ಸಹ ಒಂದು ಕಲೆಯೆಂದೇ ಇವರ ಭಾವನೆ. ಇದನ್ನು ಕಳರಿಪೈಯಟ್ ಎಂಬ ನೃತ್ಯಾಭ್ಯಾಸದಿಂದ ರೂಢಿಸಿಕೊಂಡು ಬಂದಿದ್ದಾರೆ. ಸಮಯ ಬಂದಾಗ ಈ ಅಭ್ಯಾಸವು ಅವರ ಉತ್ಸಾಹವನ್ನು ಹೆಚ್ಚಿಸಿ ಯುದ್ಧಕ್ಕೆ ಸಹಾಯವಾಗುತ್ತದೆ. ಅಲ್ಲದೆ ಈ ಜನರ ಆರಾಧ್ಯದೈವಗಳಾದ ಅಯ್ಯಪ್ಪನ್, ವೇಟ್ಟಕ್ಕರನ್, ಭದ್ರಕಾಳಿ ಮೊದಲಾದ ದೇವತೆಗಳನ್ನು ಅರಾಧಿಸುವಾಗ ಈ ಸಾಮೂಹಿಕ ನೃತ್ಯವು ನಡೆಯುತ್ತದೆ. ಈ ನೃತ್ಯವು ಜನರ ಒಗ್ಗಟ್ಟಿನ ಬಾಳ್ವೆಗೆ ಅನುಕೂಲಕರ ವಾತಾವರಣವನ್ನುಂಟು ಮಾಡಿದೆ. ಗಂಡು ಮಕ್ಕಳು ಈ ಅಭ್ಯಾಸ ಮಾಡಿದರೆ, ಹೆಣ್ಣುಮಕ್ಕಳು ಪಾಟ್ಟುಂಕಳಿ (ಕುಮ್ಮಿ-ಕೈಕೊಟ್ಟಕಳಿ) ಅಭ್ಯಾಸ ಮಾಡುತ್ತಾರೆ. ಓಣಂ, ತಿರುವಾತಿರ ಇತ್ಯಾದಿ ವಿಶೇಷೋತ್ಸವ ಸಂದರ್ಭಗಳಲ್ಲಿ ಹೆಣ್ಣುಮಕ್ಕಳ ಪಾಟ್ಟುಂಕಳಿ ನೃತ್ಯವು ನಡೆಯುವ ರೂಢಿಯಿದೆ.

ಜನನ – ಬಾಲ್ಯ

ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿದ್ದ ಕಾಸರಗೋಡು ತಾಲ್ಲೂಕಿನಲ್ಲಿರುವ ತ್ರಿಕ್ಕರಿಪುರ ಎಂಬ ಸ್ಥಳದಲ್ಲಿ ೧೮೭೬ನೇ ಇಸವಿಯಲ್ಲಿ ತೀರ ಬಡಕುಟುಂಬದಲ್ಲಿ ಚಂದು ಪಣಿಕ್ಕರ್ ಜನಿಸಿದರು. ಮಗು ತುಂಬ ಮುದ್ದಾಗಿತ್ತು. ತಂದೆ ತಾಯಿ ಮಗುವಿಗೆ ಹೆಸರಿಡಲು ಸ್ಥಳೀಯ ಜ್ಯೋತಿಷಿಯನ್ನು ವಿಚಾರಿಸಿದರು. ಹುಟ್ಟಿದ ಘಳಿಗೆ, ನಕ್ಷತ್ರ ಇವುಗಳನ್ನು ಲೆಖ್ಖಹಾಕಿ ಜ್ಯೋತಿಷಿ ಮಗುವಿಗೆ ಚಂದು ಎಂದು ಹೆಸರಿಡಲು ಸೂಚಿಸಿದರು. ಜತೆಗೆ ಮಗುವು ಕಲಾ ಜೀವನದಲ್ಲಿ ಉಜ್ವಲ ಕೀರ್ತಿ ಹಾಗೂ ಯಶಸ್ಸ್ಸುಗಳಿಸುವುದು ಎಂದು ಭವಿಷ್ಯ ನುಡಿದರು.

ಹಣಕಾಸಿನ ವಿಷಯದಲ್ಲಿ ಕಡುಬಡತನವಿದ್ದರೂ ಚಂದುವಿನ ತಂದೆ ತಾಯಿ ಪ್ರೀತಿಗೆ ಬಡತನ ಮಾಡಲಿಲ್ಲ. ಮಗುವಿನ ಪೋಷಣೆಯನ್ನು ಶಕ್ತಿಮೀರಿ ಮಾಡುತ್ತಿದ್ದರು. ಚಿಕ್ಕಂದಿನಿಂದಲೇ ಚಂದುವಿಗೆ ಕಲೆಯ ಬಗೆಗೆ ವಿಶೇಷ ಆಸಕ್ತಿ. ಬಡತನದ ದೆಸೆಯಿಂದ ವಿದ್ಯಾಭ್ಯಾಸಕ್ಕಾಗಿ ಶಾಲೆಗೆ ಸೇರಲು ಸಾಧ್ಯವಾಗಲಿಲ್ಲ. ಎರಡು ಹೊತ್ತು ಊಟ ಮಾಡುವುದೇ ಕಷ್ಟವಾದಾಗ ಹುಡುಗನನ್ನು ಓದಿಸುವುದು ಹೇಗೆ? ಚಂದುವಿಗೆ ವಿದ್ಯಾಭ್ಯಾಸದ ಮಾತು ಕನಸಾಯಿತು. ಆದರೆ ಕಥಕ್ಕಳಿ ಕಾರ್ಯಕ್ರಮ ಎಲ್ಲಿ ನಡೆದರೂ ಸರಿ, ಒಂದು ಘಂಟೆ ಮುಂಚೆಯೇ ಅಲ್ಲಿ ಚಂದುವಿನ ಹಾಜರಿ. ಆ ರಾತ್ರಿ ತಾನು ಏನನ್ನು ಕಂಡು ಆನಂದಿಸಿ ಬಂದನೋ ಅದನ್ನು ಮರುದಿನ ಅನುಕರಿಸುವನು. ಯಾವಾಗಲೂ ಕಲಾವಿದರ ಹಿಂದೆಯೇ ಓಡಾಟ. ಕಲಾವಿದರ ಗುಂಪು ಸೇರಿದ್ದಲ್ಲಿ ಚಂದು ಇರಲೇಬೇಕು. ಎಲ್ಲರಿಗೂ ಇವನ ಮೇಲೆ ಅಕ್ಕರೆ. ಹತ್ತಾರು ಮೈಲಿ ನಡೆದುಕೊಂಡು ಹೋಗಿ ಕಥಕಳಿ ಕಾರ್ಯಕ್ರಮವನ್ನು ನೋಡಿ ಉಪವಾಸ ಹಿಂದಿರುಗಿದ ದಿನಗಳಿಗೇನೂ ಕೊರತೆಯಿಲ್ಲ.

ಚಂದು ಸ್ವಂತ ಗ್ರಾಮದಲ್ಲೇ ಅವರಿವರಿಂದ ಅಲ್ಪಸ್ವಲ್ಪ ಓದು ಬರಹಗಳನ್ನು ಕಲಿತ. ಇಷ್ಟು ಹೊತ್ತಿಗೆ ಅವನಿಗೆ ಕಲೆಯ ಗೀಳು ಅಂಟಿಹೋಗಿತ್ತು. ಕಲೆಯೇ ತನ್ನ ಜೀವನ ಸಾರಸರ್ವಸ್ವವನ್ನಾಗಿ ಮಾಡಿಕೊಳ್ಳಬೇಕೆಂದು ಬಾಲಕ ನಿರ್ಧರಿಸಿದ.

ಹೀಗೆ ಹದಿನೈದು ವರ್ಷಗಳು ಉರುಳಿದವು. ಅಷ್ಟು ಹೊತ್ತಿಗೆ ಕಥಕಳಿ ನೃತ್ಯವನ್ನು ನೋಡಿ, ಕಲಾವಿದರೊಂದಿಗೆ ಮಾತಾಡಿ ಕಥಕಳಿಯನ್ನು ಎಲ್ಲಿ ಕಲಿಯಬಹುದು, ಹೇಗೆ ಹೇಳಿಕೊಡುತ್ತಾರೆ? ಎಂದು ತಿಳಿದುಕೊಂಡ. ಇದನ್ನು ಗುರುಗಳಿಂದ ಕಲಿಯಬೇಕು, ಭಕ್ತಿಯಿಂದ ಸೇವೆ ಮಾಡಬೇಕು. ಕಥಕಳಿಯನ್ನು ಬಹು ಶ್ರದ್ಧೆಯಿಂದ ಕಷ್ಟಪಟ್ಟು ಅಭ್ಯಾಸ ಮಾಡಬೇಕು. ಇದೆಲ್ಲವನ್ನೂ ಹುಡುಗ ತಿಳಿದುಕೊಂಡ. ಆದರೆ ಇದೆಲ್ಲ ಕಥಕಳಿಯನ್ನು ಕಲಿಯಬೇಕೆಂಬ ಅವನ ನಿಶ್ಚಯವನ್ನು ಕದಲಿಸಲಿಲ್ಲ. ಸಾಧನೆಗೆ ಬೇಕಾದ ತಾಳ್ಮೆ, ಗುರುವಿನಲ್ಲಿ ಭಕ್ತಿ ಹುಟ್ಟ್ಟಿದಂದಿನಿಂದಲೇ ಚಂದುವಿಗೆ ಬಂದಿದ್ದರಿಂದ ಯಾವುದಕ್ಕೂ ವಿಚಲಿತನಾಗಲಿಲ್ಲ. ಸರಿಯಾದ ಗುರುವನ್ನು ಪಡೆದು ನೃತ್ಯವನ್ನು ಕಲಿಯಬೇಕೆಂದು ನಿಶ್ಚಯ ಮಾಡಿದ. ಗುರುಸೇವೆಗೆ ಸಿದ್ಧನಾಗಿ ಮನೆಯನ್ನು ಬಿಟ್ಟು ಹೊರಟ.

ಕಲಾಶಿಕ್ಷಣ

ಪ್ರಾರಂಭದಲ್ಲಿ ವಾಳಕ್ಕೋಡನ್ ಕಣ್ಣನ್ ಎಂಬ ವಿದ್ವಾಂಸರಲ್ಲಿ ಸ್ವಲ್ಪ ಮಟ್ಟಿನ ಶಿಕ್ಷಣವನ್ನು ಪಡೆದ ಚಂದು. ಇದು ಇವನ ಮುಂದಿನ ವ್ಯಾಸಂಗಕ್ಕೆ ತಳಹದಿಯಾಯಿತು. ಕಥಕಳಿ ನೃತ್ಯವು ಸಾಂಘಿಕ ಶಕ್ತಿಯುಳ್ಳದ್ದು, ಏಕಾಕೀ ಪಾತ್ರಾಭಿನಯಕ್ಕೆ ಅವಕಾಶ ಕಡಮೆ. ಆದ್ದರಿಂದ ಆತನು ಯಾವುದಾದರೊಂದು ಸಂಘಕ್ಕೆ ಸೇರಿ ತನ್ನ ಅಭ್ಯಾಸವನ್ನು ಮುಂದುವರಿಸಬೇಕೆಂದು ಅವನ ಗುರು ಹೇಳಿದರು. ಅವರ ಮಾರ್ಗದರ್ಶನದಂತೆ ತೋಲನೂರು ಈಚ್ಚರಮೆನನ್ ರವರಲ್ಲಿಗೆ ಬಂದ. ಆ ಕಾಲದಲ್ಲಿ ತ್ರಿಕ್ಕಾರಿಪುರ ದಲ್ಲಿನ ತಾಳಕ್ಕಾಡು ಮನೆಯವರು ಒಂದು ಕಥಕಳಿ ಸಂಘವನ್ನು ನಡೆಸುತ್ತಿದ್ದರು. ವಾಸುದೇವನ್ ತಿರುಮಂಬ್ ಎಂಬುವರು ಆ ಸಂಘದ ಮಾಲೀಕರು ೧೮೯೩ರಲ್ಲಿ ಚಂದು ತಾಳಕ್ಕಾಡ ಮನೆಯವರ ಆಶ್ರಯದಲ್ಲಿ ತನ್ನ ಶಿಕ್ಷಣವನ್ನು ಮುಂದುವರಿಸಿದ.

ಪ್ರಸಿದ್ಧ ಕಥಕಳಿ ಅಧ್ಯಾಪಕರಾಗಿದ್ದ ತೋಲನೂರು ಈಚ್ಚರಮೆನನ್‌ರವರಲ್ಲಿ ಅಭ್ಯಾಸಮಾಡುವುದು ಸಾಮಾನ್ಯವಾದ ಕೆಲಸವಾಗಿರಲಿಲ್ಲ. ಕಠಿಣ ಪರಿಶ್ರಮಪಟ್ಟೇ ಗುರುಗಳ ದಯೆಗೆ ಪಾತ್ರನಾಗಬೇಕಿತ್ತು. ಒಂದಿಷ್ಟು ಕಾಲ ಕಳೆಯಲು ನೃತ್ಯ ಕಲಿಯುತ್ತೇನೆ ಎನ್ನುವವರನ್ನು ಅವರ ಹತ್ತಿರ ಸೇರಿಸುತ್ತಲೇ ಇರಲಿಲ್ಲ. ಅಲ್ಲಿನ ಶಿಸ್ತು, ನಿಯಮ, ನಿರ್ಬಂಧಗಳು ಕಠಿಣವಾಗಿದ್ದವು. ಆದರೆ ಚಂದುವಿಗೆ ಇದೇನೂ ಹೊಸದೇನೂ ಆಗಿರಲಿಲ್ಲ. ಚಂದುವಿನ ಲಕ್ಷಣ, ದೃಢಶರೀರ, ಬುದ್ಧಿ ಕುಶಲತೆ, ಆತ್ಮವಿಶ್ವಾಸ, ಗುರು-ದೈವಭಕ್ತಿ ಮತ್ತು ಕಲಾಸಕ್ತಿ ಶಿಷ್ಯನನ್ನಾಗಿ ಅಂಗೀಕರಿಸಿದರು.

ಕಥಕಳಿ ನೃತ್ಯ ಶಿಕ್ಷಣ ಕೊಡಲು ಗುರುವಿನಲ್ಲಿಯೂ ಸಾಕಷ್ಟು ಶರೀರ ಶಕ್ತಿ ಬೇಕು. ತೋಲನೂರು ಈಚ್ಚರಮೆನನ್ ಗುರುಗಳಿಗೆ ಜ್ಞಾನವೋ ಅಪಾರವಾಗಿತ್ತು. ಆದರೆ ಚಂದು ಅವರ ಹತ್ತಿರ ಕಲಿಯಲು ಹೋದಾಗ ಅವರಿಗೆ ಮುಪ್ಪು. ಈ ಬಾಲಕನ ಶಕ್ತಿಗೆ ತಕ್ಕ ಕೆಲಸಕೊಟ್ಟು ಸಾಧಿಸುವ ತ್ರಾಣವಿರಲಿಲ್ಲ. ಅವರು ತಮ್ಮೆಲ್ಲ ಜ್ಞಾನವನ್ನೂ ಬೋಧಿಸುತ್ತಾ ಬಂದರು. ಈಚ್ಚರಮೆನನ್‌ರವರ ಮಗನಾದ ಕರುಣಾಕರಮೆನನ್‌ರವರು ಪ್ರಯೋಗ ಭಾಗದಲ್ಲಿ ತಂದೆಗೆ ಸಹಾಯಕನಾಗಿ ನಿಂತು ಚಂದುವಿಗೆ ಪ್ರಯೋಗ ಭಾಗವನ್ನು ಉಪದೇಶಿಸಿದರು. ಹೀಗೆ ವಯೋವೃದ್ಧ ಗುರುಗಳ ಜ್ಞಾನಲಾಭದ ಜೊತೆಗೆ ಸಾಮರ್ಥ್ಯಶಾಲಿ ಮಗನ ಪ್ರಯೋಗಾನುಭವವೂ ಏಕಕಾಲದಲ್ಲಿ ಚಂದುವಿಗೆ ದೊರೆಯಿತು. ಇಂಥ ಕ್ರಮಬದ್ಧವಾದ ಶಿಕ್ಷಣ ಪಡೆಯುವ ಸಾಮರ್ಥ್ಯವೂ ಬಾಲಕನಿಗೆ ಇತ್ತು.

ಕಥಕಳಿ ಕಳರಿ ವಿದ್ಯಾಲಯದಲ್ಲಿ

ತಾಳಕ್ಕಾಡು ಮನೆಯಲ್ಲಿ ಶಿಕ್ಷಣ ಪಡೆಯುವುದು ಸುಲಭವಾಗಿರಲಿಲ್ಲ. ಬೆಳಗಿನ ಜಾವ ಮೂರು ಗಂಟೆಗೆ ವಿದ್ಯಾರ್ಥಿಗಳೆಲ್ಲರೂ ಹಾಸಿಗೆಯಿಂದ ಏಳಬೇಕು. ಒಡನೆಯೇ ಅಂಗಸಾಧನೆ ಪ್ರಾರಂಭ. ಕಣ್ಣಿನ ಚಾಲನೆಯ ಅಭ್ಯಾಸ. ಎಣ್ಣೆದೀಪದ ಹತ್ತಿರ ಕುಳಿತು ಕಣ್ಣಿಗೆ ಹಸುವಿನ ತುಪ್ಪವನ್ನು ಹಾಕಿಕೊಂಡು ಕಣ್ಣಿನ ಚಾಲನೆಯ ಅಭ್ಯಾಸ. ಮನಸ್ಸಿನ ಭಾವನೆಗಳನ್ನು ದೃಷ್ಟಿಯಲ್ಲೇ ತೋರಿಸಬೇಕು. ಅದು ಅಭ್ಯಾಸ ಸತತವಾಗಿರಬೇಕು. ಕಣ್ಣಿನ ಸಾಧನೆಯೇ ಕಥಕಳಿಯ ಜೀವಾಳ. ಇದರ ಅಭ್ಯಾಸ ಸುಮಾರು ಎರಡು ತಾಸುಗಳಿಗೆ ಕಡಮೆಯಿಲ್ಲ. ಅನಂತರ ಮೈಗೆ ಎಣ್ಣೆ ಹಚ್ಚಿಕೊಂಡು ಶಾರೀರಿಕ ಅಭ್ಯಾಸ ನಡೆಸಬೇಕು. ಅನಂತರ ಪಾದಾಭ್ಯಾಸ. ಎಷ್ಟು ವಿಧವಾದ ಹೆಜ್ಜೆ- ಅಡವುಗಳುಂಟೋ ಅವುಗಳೆಲ್ಲವನ್ನೂ ಮೂರು ಕಾಲಗಳಲ್ಲಿ, ಐದು ನಡೆಗಳಲ್ಲಿ ಅಭ್ಯಾಸ. ಬೇರೆ ಬೇರೆ ವೇಗಗಳಲ್ಲಿ ತಾಳಕ್ಕೆ ಅನುಗುಣವಾಗಿ ಹೆಜ್ಜೆ ಹಾಕಲು ಬರಬೇಕು. ಅನಂತರ ‘ಉಳಿಚ್ಚಲ್’ ಕ್ರಿಯೆ. ಉಳಿಚ್ಚಲ್ ಎಂದರೆ ಅಂಗ ಮರ್ದನ. ಇದು ಬಹಳ ಕಷ್ಟವೂ ಹೌದು ಸೂಕ್ಷ್ಮವೂ ಹೌದು. ಹೇಗೆಂದರೆ, ಬೆನ್ನು ಮೇಲಾಗಿ ಎರಡು ಮಂಡಿಗಳಿಗೂ ಒಂದೊಂದು ಸಿಂಬೆಯನ್ನಿಟ್ಟುಕೊಂಡು ಮಂಡಿಯೂರಿ ಮಲಗಿಕೊಳ್ಳಬೇಕು. ಅನಂತರ ಇನ್ನೊಬ್ಬ ವ್ಯಕ್ತಿಯು ತನ್ನ ಪಾದಗಳಿಂದ ಆತನ ಶರೀರ ಪೂರ್ತಿಯಾಗಿ ಮರ್ದನ ಮಾಡಬೇಕು. ಉಳಿಚ್ಚಲ್ ಕ್ರಿಯೆಯನ್ನು ಮಾಡುವ ವ್ಯಕ್ತಿಗೆ ಶರೀರದ ನರ-ನಾಡಿ  ಪರಿಚಯ ಚೆನ್ನಾಗಿ ತಿಳಿದಿರುತ್ತದೆ. ಇಂಥ ಕ್ರಿಯೆಯು ನಟನ ಶರೀರ ದಾರ್ಢ್ಯತೆಗೆ ಬಹಳ ಸಹಕಾರಿ. ಇದಾದನಂತರ ತಣ್ಣೀರು ಸ್ನಾನ, ಉಪಹಾರ. ಮತ್ತೆ ಕುಳಿತು ಮಾಡುವ ಅಭ್ಯಾಸ. ಅನಂತರ ಊಟ. ಪುನಃ ಶಾಸ್ತ್ರಾಭ್ಯಾಸ. ಹಗಲು ನಿದ್ರೆ ಮಾಡಕೂಡದು. ಮಧ್ಯಾಹ್ನ ಮೂರು ಗಂಟೆಯ ನಂತರ ಅಭ್ಯಾಸ. ಸಂಜೆಯವರೆಗೂ ಬಿಡುವಿಲ್ಲದೆ ನಡೆಯುತ್ತಿತ್ತು. ಸಂಜೆ ಪ್ರಾರ್ಥನೆ. ಅನಂತರ ಊಟ. ಬಳಿಕ ಸಾಹಿತ್ಯಾಭ್ಯಾಸ. ಪುರಾಣೇತಿಹಾಸಗಳನ್ನು ಕೇಳುವುದು ಮತ್ತು ಪಠನ. ಅನಂತರ ರಾತ್ರಿ ಹತ್ತು ಗಂಟೆಯವರೆಗೆ ಸಹಪಾಟಿಗಳೊಂದಿಗೆ ನೃತ್ಯಕಲೆಯನ್ನು ಕುರಿತು ಮಾತುಕತೆ.

ಅಂಬು ಪಣಿಕ್ಕರ್, ವಲ್ಲೆಯಿಲ್ ಚಂದು, ಕಾವಿಲ್ ರಾಮನ್, ಚಿಂಡಪಣಿಕ್ಕರ್ ಇವರೆಲ್ಲರೂ ಚಂದುವಿನ ಸಹಪಾಠಿಗಳು. ಎಲ್ಲ ಶಿಷ್ಯರಿಗಿಂತ ಗುರುಗಳಿಗೆ ಚಂದುವಿನ ಮೇಲೆ ಅತಿಪ್ರೇಮ. ಈ ಪ್ರೇಮಕ್ಕೆ ಕಾರಣ ಚಂದುವಿನಲ್ಲಿ ಇದ್ದ ಸದ್ಗುಣಗಳು. ಆತನಿಗಿದ್ದ ಗುರುಭಕ್ತಿ, ಅಭ್ಯಾಸಾಸಕ್ತಿ. ಜಾಗ್ರತ ಸ್ವಭಾವ, ಗುರುಗಳಾದ ಈಚ್ಚರಮೆನನ್‌ವರು ಅಭ್ಯಾಸ ಮಾಡಿಸುವ ಕಾಲದಲ್ಲಿ ಯಾವ ಶಿಷ್ಯರಲ್ಲೂ ದಾಕ್ಷಿಣ್ಯ ತೋರುತ್ತಿರಲಿಲ್ಲ. ನೃತ್ಯವನ್ನು ಆಶ್ರಯಿಸಬೇಕೆಂದಿರುವ ವ್ಯಕ್ತಿಯನ್ನು ನೃತ್ಯವೂ ಕಠಿಣವಾಗಿ ಪರೀಕ್ಷಿಸುತ್ತದೆ ಎಂಬುದು ಅವರ ನಿರ್ದಿಷ್ಟ ಅಭಿಪ್ರಾಯವಾಗಿತ್ತು. ಕಠಿಣವಾದ ಅಭ್ಯಾಸಕ್ಕೆ ಬಗ್ಗುವ ಶರೀರ, ದೃಢಸಂಕಲ್ಪದ ಮನಸ್ಸು, ತಾನು ಯಾವ ಪಾತ್ರವನ್ನು ವಹಿಸಿಕೊಂಡಿರುವನೋ ಅದರಲ್ಲಿ ತನ್ನನ್ನೇ ಮರೆಯುವ ಸಹಜ ಅಭಿನಯ. ಇವೆಲ್ಲವುಗಳಿಂದಾಗಿ ಗುರುಗಳು ಚಂದು ಶಿಷ್ಯನನ್ನು ಉತ್ತಮ ನಟನನ್ನಾಗಿಸುವ ಮಹತ್ವಾಕಾಂಕ್ಷೆಯಿಂದ ತಮ್ಮ ವಿದ್ಯೆಯನ್ನು ಧಾರೆಯೆರೆದರು.

ಅಭ್ಯಾಸನಿಷ್ಠೆ – ಗುರುಹಿರಿಯರಲ್ಲಿ ಭಕ್ತಿ

ಗುರುಹಿರಿಯರಲ್ಲಿ ಭಕ್ತಿ ಮತ್ತು ನಿತ್ಯಾಭ್ಯಾಸ ಚಂದುವಿನ ಸಹಜ ಸಂಪತ್ತು. ಒಮ್ಮೆ ಚಂದುವಿಗೆ ಜ್ವರ ಕಾಣಿಸಿಕೊಂಡಿತು. ಇದಕ್ಕೆ ಗಮನವೇ ಕೊಡದೆ ಬೆಳಿಗ್ಗೆ ತನ್ನ ನಿತ್ಯಾಭ್ಯಾಸವನ್ನು ತಪ್ಪಿಸಲಿಲ್ಲ. ಬೆಳಗಿನ ಅಭ್ಯಾಸ ಮುಗಿಯಿತು. ಜ್ವರ ಏರಿತು. ಮಧ್ಯಾಹ್ನ ಅಹಾರ ಬೇಕಾಗಲಿಲ್ಲ. ಬಾಯಿಗೆ ಯಾವ ರುಚಿಯೂ ಹತ್ತದು. ಹಾಗೆಯೇ ಸ್ವಲ್ವ ವಿರಮಿಸಿ ಸಂಜೆಯ ಅಭ್ಯಾಸಕ್ಕೆ ತೊಡಗಿದ. ಮೊದಲೇ ಜ್ವರದ ತಾಪದಿಂದ ಬಳಲಿದ್ದ ಶರೀರಕ್ಕೆ ಆಹಾರವೂ ಇಲ್ಲದೆ ಸಂಜೆ ಪುನಃ ಅಭ್ಯಾಸಕ್ಕೆ ತೊಡಗಿದಾಗ ಬಹಳ ನಿತ್ರಾಣದಿಂದಾಗಿ ಹುಡುಗನಿಗೆ ಜ್ಞಾನ ತಪ್ಪಿತು. ಕೂಡಲೇ ಸಹಪಾಠಿಗಳು ಮಾಲೀಕರಿಗೂ ಗುರುಗಳಿಗೂ ತಿಳಿಸಿದರು. ಮಾಲೀಕರಾದ ವಾಸುದೇವನ್ ತಿರುಮಂಬರು ಮತ್ತು ಇತರ ಸದಸ್ಯರು ಚಿಕಿತ್ಸೆಗಾಗಿ ಸ್ಥಳೀಯ ಆಯುರ್ವೇದ ವೈದ್ಯರನ್ನು ಕರೆದುತಂದರು. ವೈದ್ಯರು ಪರೀಕ್ಷಿಸಿ ಚಿಕಿತ್ಸೆ ನಡೆಸಿದರು. ಸ್ವಲ್ಪ ಹೊತ್ತಿನ ನಂತರ ಚಂದುವಿಗೆ ಮರಳಿ ಪ್ರಜ್ಞೆ ಬಂತು. ಕಣ್ಣು ತೆರೆದು ಸುತ್ತಲೂ ನೋಡಿದ. ಎದುರಿಗೆ ವಾಸುದೇವನ್ ತಿರುಮಂಬರು, ಗುರುಗಳು ನಿಂತಿರುವುದನ್ನು ಕಂಡ ತಕ್ಷಣ ಎದ್ದು ನಮಸ್ಕರಿಸಲು ಪ್ರಯತ್ನಿಸಿದ. ಎಷ್ಟು ಹೇಳಿದರೂ ಏಳುವುದನ್ನು ನಿಲ್ಲಿಸಲೊಲ್ಲ. ಗುರುಗಳೂ ಮತ್ತು ಮಾಲೀಕರೂ ಅವನು ಮಲಗಿಕೊಂಡಿ ರುವಂತೆ ಮಾಡಲು ವಿಶೇಷ ಕ್ರಮವಹಿಸಬೇಕಾಯಿತು. ಇಂಥ ಗುರುಭಕ್ತಿ, ನಿಷ್ಠೆ ಮತ್ತು ಸತತವಾದ ಅಭ್ಯಾಸದಿಂದಾಗಿ ಕೆಲವೇ ವರ್ಷಗಳಲ್ಲಿ ಚಂದು ಶ್ರೇಷ್ಠನಟನೆಂದು ಹೆಸರು ಗಳಿಸಿದ. ಪ್ರಧಾನ ಪಾತ್ರಗಳನ್ನು ತನ್ಮಯನಾಗಿ ಅಭಿನಯಿಸಿ ಪಂಡಿತ ಪಾಮರರ ಮೆಚ್ಚಿಗೆ ಸಂಪಾದಿಸಿಕೊಂಡ. ಕಲ್ಲಟಿಕೋಟ ಸಂಪ್ರದಾಯವನ್ನು ಅವಹೇಳನಮಾಡುತ್ತಿದ್ದ. ಅಂದಿನ ಜನ ಚಂದುವಿನ ಅಭಿನಯಕ್ಕೆ ಮನಸೋತರು.

ಅತಿಶ್ರೇಷ್ಠ ಕಲಾವಿದ

ಶಿಷ್ಯನ ಗುಣಸಂಪತ್ತನ್ನೂ, ಕೀರ್ತಿಯನ್ನು ಕಂಡು ಗುರುಗಳು ಮನದಲ್ಲೇ ಆನಂದಿಸಿದರು. ಇನ್ನೂ ಈತನು ಅಭಿವೃದ್ಧಿಗೆ ಬರಬೇಕೆಂಬುದೇ ಅವರ ಇಚ್ಛೆಯಾಗಿತ್ತು. ಕಲ್ಲಟಕೋಟಿ ಸಂಪ್ರದಾಯ ಎಂದರೆ ಜನಕ್ಕೆ ಆವರೆಗೆ ಇದ್ದ ತಿರಸ್ಕಾರ ಚಂದು ಪಣಿಕ್ಕರರಿಂದ ದೂರವಾಯಿತು. ಆದರೆ ಚಂದು ಅವರಿಂದ ಇನ್ನೂ ದೊಡ್ಡ ಕೆಲಸ ಸಾಧ್ಯ ಎಂದು ಗುರುಗಳಿಗೆ ತಿಳಿದಿತ್ತು. ಅವರು ತಮ್ಮಲ್ಲಿ ಹುದುಗಿದ್ದ ಅತ್ಯಮೂಲ್ಯ ಕಲಾರಹಸ್ಯವನ್ನು ಚಂದುವಿಗೆ ಉಪದೇಶಿಸಿದರು. ಇದರಿಂದ ಚಂದುವಿಗೆ ದೇಹ ಸೌಂದರ್ಯ, ದಾರ್ಢ್ಯ ಹೆಚ್ಚಿತು. ಕಥಕಳಿಯಲ್ಲಿನ ಪಚ್ಚಾ, ಕತ್ತಿ, ಇತ್ಯಾದಿ ವೇಷಗಳು ಈತನಿಗೆ ಸುಂದರವಾಗಿ ಒಪ್ಪುವಂತಾಯಿತು. ಕಥಾಪಾತ್ರದಲ್ಲಿ ನಟನು ಲೀನವಾಗಿ ಹೋಗುವ ಸಹಜ ಅಭಿನಯದ ರೀತಿ ಗುರು-ದೈವಾನುಗ್ರಹದಿಂದ ಪ್ರಾಪ್ತವಾದಾಗ ಅವರ ನೃತ್ಯವನ್ನು ಜನ ಬೆರಗಾದರು. ಧರ್ಮರಾಜ, ಭೀಮ, ಅರ್ಜುನ, ದಕ್ಷಯಾಗದಲ್ಲಿನ ದಕ್ಷ, ಉತ್ತರಾಸ್ವಯಂವರದ ದುರ್ಯೋಧನ, ರಾವಣ, ಸಂತಾನಗೋಪಾಲದ ಬ್ರಾಹ್ಮಣ, ರುಕ್ಮಿಣೀ ಸ್ವಯಂವರದ ಸುಂದರ ಬ್ರಾಹ್ಮಣ, ಅಂಬರೀಷ ಚರಿತ್ರೆಯಲ್ಲಿನ ದೂರ್ವಾಸ, ದುರ್ಯೋಧನ ವಧೆಯಲ್ಲಿನ ರೌದ್ರ ಭೀಮಸೇನ, ಕಲ್ಯಾಣ ಸೌಗಂಧಿಕದಲ್ಲಿ ಆಂಜನೇಯ ಇವೇ ಮೊದಲಾದ ವಿವಿಧ ಪಾತ್ರಗಳಲ್ಲಿ ಅವರು ಅದ್ಭುತವಾಗಿ ಅಭಿನಯಿಸುತ್ತಿದ್ದರು. ಅವರ ವಿವಿಧ ಭಾವ ರಸಪ್ರದರ್ಶನವನ್ನು ಕಂಡ ರಸಿಕರ ಆನಂದಕ್ಕೆ ಪಾರವೇ ಇಲ್ಲ. ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಅಭಿಮಾನಿಗಳು ಹೆಚ್ಚಿದರು. ಇದು ಚಂದು ಅವರ ಕಲಾಜೀವನದ ಅಭ್ಯುದಯ ಕಾಲ ಎನ್ನಬಹುದು.

ವ್ಯಕ್ತಿತ್ವ

ಒಂದು ಉತ್ತಮ ಕಥೆಯ ನಾಯಕನ ಪಾತ್ರಕ್ಕೆ ಹೇಳಿ ಮಾಡಿಸಿದಂತಿದ್ದ ಮಾಟವಾದ ಶರೀರ. ಐದು ಮುಕ್ಕಾಲು ಅಡಿ ಎತ್ತರ, ಗಟ್ಟಿಮುಟ್ಟಾಗಿ ಲವಲವಿಕೆಯಿಂದ ಕೂಡಿದ ಶರೀರ ಭಂಗಿ, ಕಾಂತಿಯಿಂದ ಕೂಡಿದ ಮೈಬಣ್ಣ, ಬಟ್ಟಮೊಗದಲ್ಲಿನ ವಿಶಾಲ ನೇತ್ರ, ಸುಂದರವಾದ ದಂತಪಂಕ್ತಿಗಳು, ಸದಾ ಪ್ರಸನ್ನಭಾವದಿಂದ ಎಲ್ಲರೊಡನೆ ನಗು ನಗುತ ಮಾತನಾಡುವ ರೀತಿ, ಗೌರವದ ಮಿತಭಾಷೆಯ ನಮ್ರತೆ, ಪಾತ್ರಗೌರವವನ್ನು ಕುರಿತು ಆಲೋಚಿಸುತ್ತಿದ್ದ ರೀತಿ, ಅಭಿನಯ ಕೌಶಲ್ಯ ಇವೆಲ್ಲವೂ ಕಥಕಳಿ ಪ್ರೇಮಿಗಳ ಮನಸ್ಸನ್ನು ಸೂರೆಗೊಂಡು ಚಂದು ಅವರೆಲ್ಲರ ಅದರ ವಿಶ್ವಾಸಗಳಿಗೆ ಪಾತ್ರರಾದರು.

ಚಂದು ಅವರ ಕೀರ್ತಿ ಬೆಳೆದಂತೆ ಅನೇಕ ಸಂಘ ಸಂಸ್ಥೆಗಳವರು ಅವರನ್ನು ಆಹ್ವಾನಿಸುತ್ತಿದ್ದರು. ೧೯೦೦ರಲ್ಲಿ ಸಾಮುದಿರಿ ಕೋವಿಲಗದವರು ತಾಳಕ್ಕಾಡು ಕಥಕಳಿ ಸಂಘದವರ ಕಥಕಳಿ ಕಾರ್ಯಕ್ರಮವೊಂದನ್ನು ಏರ್ಪಡಿಸಿದ್ದ್ದರು. ಸಹಸ್ರಾರು ಸಂಖ್ಯೆಯಲ್ಲಿ ಜನ ಸೇರಿದ್ದರು. ಚಂದು ಅವರ ನೃತ್ಯ ಪ್ರೇಕ್ಷಕರ ಮನವನ್ನು ಸೂರೆಗೊಂಡಿತು. ಚಂದು ಅವರ ಆ ದಿನದ ಅಭಿನಯವನ್ನು ಮೆಚ್ಚಿ ಅಂಬಾಡಿ ಕೋವಿಲಕಂರವರು “ಚಂದು”ವಿನ ಮುಂದೆ “ಪಣಿಕ್ಕರ್” ಎಂದು ಸೇರಿಸಿ ಸಭೆಯಲ್ಲಿ ಗೌರವಿಸಿದರು. ಅಂದಿನಿಂದ ಚಂದು ಪಣಿಕ್ಕರ್ ಆಗಿ ವಿರಾಜಿಸಿದರು. ಅನಂತರ ಮಲ್ಲಿಶ್ಶೇರಿ ಕಥಕಳಿ ಸಂಘದ ಆಹ್ವಾನವನ್ನು ಮನ್ನಿಸಿ ಅಲ್ಲಿಗೆ ಹೋದಾಗ ತಳಿಪ್ಪರಂಬಿನ ಕೊಟ್ಟಂಬರತ್ತು ಕ್ಷೇತ್ರದಿಂದ ಕಥಕಳಿ ಕ್ಷೇತ್ರದ ರಾಜನೆಂದು ಸರಿ ಕಿರೀಟ ಮತ್ತು ರಾಜಯೋಗ್ಯವಾದ ಅಂಗಾಭರಣಗಳನ್ನಿತ್ತು ಗೌರವಿಸಿದರು. ವಡಕ್ಕಾಂಚೆರಿ ಕಥಕಳಿ ಸಂಘದಲ್ಲಿರುವಾಗ ಕೊಚ್ಚಿಯಲ್ಲಿನ ಕೊಚ್ಚುಣ್ಣಿ ತಂಬುರಾನ್‌ರವರು ಸುವರ್ಣ ಪದಕವನ್ನು ನೀಡಿ ಗೌರವಿಸಿದರು.

ಕೋಟೋತ್ತ್ ಕಳಿಯೋಗಂ

ದಿನೇದಿನೇ ಅಭಿವೃದ್ಧಿ ಹೊಂದುತ್ತಿದ್ದ ಚಂದು ಪಣಿಕ್ಕರ್‌ರವರ ಜೀವನದಲ್ಲಿ ಹಠಾತ್ತನೆ ಕಷ್ಟ ಬಂದು ಒದಗಿತು. ೧೯೦೬ರಲ್ಲಿ ತಾಳಕ್ಕಾಡುಮನ ಕಥಕಳಿ ಸಂಘದ ಮಾಲೀಕರಾದ ವಾಸುದೇವನ್ ತಿರುಮಂಬ್‌ರವರು ಸ್ವರ್ಗವಾಸಿಗಳಾದರು. ಆ ಮನೆತನದಲ್ಲಿ ಮತ್ತೆ ಯಾರೂ ಸಂಘವನ್ನು ನಡೆಸಿಕೊಂಡು ಬರುವ ಶಕ್ತಿಯಿಲ್ಲದ ಕಾರಣ ಸಂಘವನ್ನು ಮುಚ್ಚಬೇಕಾಯಿತು. ಅಲ್ಲಿನವರೆಗೂ ಈ ಸಂಘದಲ್ಲಿ ಪ್ರಧಾನ ಪಾತ್ರಗಳನ್ನು ವಹಿಸುತ್ತಿದ್ದ ಚಂದು ಪಣಿಕ್ಕರ್ ಬೇರೆ ಸಂಘದ ಆಶ್ರಯವನ್ನು ಪಡೆಯಬೇಕಾಯಿತು. ಅಷ್ಟರಲ್ಲಿ ಕೋಟೋತ್ತ್ ಕಳಿಯೋಗಂ ಕಥಕಳಿ ಸಂಘದವರಿಂದ ಗೌರವದ ಆಹ್ವಾನ ಬಂದಿತು. ಈ ಆಹ್ವಾನವನ್ನು ಮನ್ನಿಸಿ ಕೋಟೋತ್ತ್ ಕಳಿಯೋಗಂ ಸಂಘದಲ್ಲಿ ಪ್ರಧಾನ ನಟರಾಗಿ ಮತ್ತು ಅಧ್ಯಾಪಕರಾಗಿ ಸುಮಾರು ಹದಿಮೂರು ವರ್ಷಗಳ ಮತ್ತು ದೀರ್ಘಕಾಲ ಸೇವೆ ಸಲ್ಲಿಸಿದರು. ಈ ಸಂಘವು ಕಥಕಳಿ ರಂಗದಲ್ಲಿ ಚಂದು ಪಣಿಕ್ಕರ್ ಅವರ ಕೀರ್ತಿ ಪ್ರತಿಷ್ಠೆಗಳು ಉನ್ನತ ಮಟ್ಟಕ್ಕೆ ಬರಲು ಬಹುಮಟ್ಟಿಗೆ ಕಾರಣವಾಯಿತು.

೧೯೨೦-೨೧ ರಲ್ಲಿ ತಳಿಪ್ಪರೆಂಬಿನ ಹತ್ತಿರದ ಪೆರಿಂಜಲ್ಲೂರ್ ಎಂಬಲ್ಲಿ ಮೊತಶ್ಶರ ಮಲ್ಲಿಶ್ಶೇರಿ ನಂಬೂದಿರಿಯವರ ಕಥಕಳಿ ಸಂಘದಿಂದ ಚಂದು ಅವರಿಗೆ ಕರೆಬಂತು. ಅಲ್ಲಿಯೂ ಪ್ರಧಾನ ನಟರಾಗಿ ಕೆಲಸ ಮಾಡಿ ಉತ್ತರ ಕೇರಳದ ಅಸಂಖ್ಯಾತ ಕಲಾಭಿಮಾನಿಗಳ ಸ್ನೇಹ ಗೌರವಗಳಿಗೆ ಪಾತ್ರರಾದರು. ಮುಂದೆ ಸುಮಾರು ಐದು ವರ್ಷಗಳ ಕಾಲ ಚಂದು ಪಣಿಕ್ಕರ್‌ರವರು ದಕ್ಷಿಣ ಮಲಬಾರಿನ ಹಲವಾರು ಕಥಕಳಿ ಸಂಘಗಳಲ್ಲಿ ಪ್ರಧಾನ ನಟರಾಗಿ ಉಳಿದಿದ್ದರು.

ದುಷ್ಟ ಶತ್ರುಗಳು

೧೯೨೮ರ ಸುಮಾರಿನಲ್ಲಿ ಚಿರಕ್ಕಲ್ ತಾಲ್ಲೂಕಿನ ಚಿರುತಾಳಂ ಎಂಬ ಊರಿನ ವಾರಣಕ್ಕೋಡು ಮನೆಯವರು ನಡೆಸುತ್ತಿದ್ದ ವಾರಣಕ್ಕೋಡು ಕಥಕಳಿ ಸಂಘದ ಆಹ್ವಾನದ ಮೇಲೆ ಅಲ್ಲಿಗೆ ಹೋದರು. ಅಲ್ಲಿ ಪ್ರಧಾನ ನಟರಾಗಿಯೂ ಅಧ್ಯಾಪಕರಾಗಿಯೂ ಕಾರ್ಯ ನಿರ್ವಹಣಾ ಜವಾಬ್ದಾರಿಯನ್ನು ಹೊತ್ತು ಈ ಎರಡು ಕ್ಷೇತ್ರಗಳಲ್ಲೂ ಪ್ರಚಂಡ ಕೀರ್ತಿ ಗಳಿಸಿದರು. ಕೇವಲ ೩-೪ ವರ್ಷಗಳಲ್ಲಿ ಇವರು ಮಾಡಿದ ಕೆಲಸದಿಂದ ಜನರಿಗೆಲ್ಲ ಚಂದು ಪಣಿಕ್ಕರ್ ಎಂದರೆ ತುಂಬಾ ಗೌರವ. ಅಲ್ಲೇ ಅನೇಕ ವರ್ಷಗಳ ಕಾಲ ಕೆಲಸ ಮಾಡಿದವರಿಗೂ ಅಷ್ಟು ಗೌರವವಿರಲಿಲ್ಲ. ಇದರಿಂದಾಗಿ ಅಲ್ಲಿನ ಅನೇಕರಿಗೆ ಹೊಟ್ಟೆಕಿಚ್ಚು ಏನಾದರೂ ಮಾಡಿ ಅವರ ಹೆಸರು ಕೆಡಿಸಬೇಕು, ಜನರಿಗೆ ಅವರಲ್ಲಿರುವ ಗೌರವ ಹೋಗುವಂತೆ ಮಾಡಬೇಕು, ಅವರನ್ನು ಅಲ್ಲಿಂದ ಓಡಿಸಬೇಕು ಎಂದು ಈ ದುಷ್ಟರ ಯೋಚನೆ. ಅವರು ಚಂದು ಅವರಿಗೆ ಕಿರುಕುಳ ಕೊಡಲು ಪ್ರಾರಂಭಿಸಿದರು. ಎಲ್ಲ ವಿಷಯಗಳಲ್ಲೂ ಆಕ್ಷೇಪ, ಪಾತ್ರಗಳನ್ನು ಕೆಡಿಸುವ ಪ್ರಯತ್ನ, ರಂಗಸ್ಥಳದಲ್ಲಿ ಅಡ್ಡದಾರಿಯ ಹೊಂಚಾಟ, ವಿಷಪ್ರಾಸನ ಮಾಡಿಸಿ ಕೊಲ್ಲಿಸಲೂ ಸಹ ಸನ್ನಾಹ ಮಾಡಹತ್ತಿದರು. ಪಣಿಕ್ಕರರದು ಶಾಂತ, ಸಜ್ಜನ ಸ್ವಭಾವ. ಇಂಥ ಸಂಧಿಗ್ಧ ವಾತಾವರಣದಲ್ಲಿ ಕಲಾವಿದನಾಗಿ ಕಲೆಯನ್ನು ಉಳಿಸಿ ಕೊಳ್ಳಲಾರೆನೆಂದು ಪಣಿಕ್ಕರ್‌ರವರು ಆ ಸ್ಥಳವನ್ನೇ ಬಿಟ್ಟು ಹೊರಬಂದರು. ಈ ಘಟನೆ ಅವರ ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರಿತು. ಇತರ ಕಲಾವಿದರೊಂದಿಗೆ ಕೆಲಸ ಮಾಡುವುದಕ್ಕೆ ಅವರಿಗೆ ಇಷ್ಟವಿರಲಿಲ್ಲ. ಅವರು ಕಥಕಳಿ ನೃತ್ಯಕಲಾರಂಗದಿಂದ ದೂರ ವಾಗಿ ಉಳಿಯಲು ನಿರ್ಧರಿಸಿದರು. ತಮ್ಮ ಸಂಕಲ್ಪದಂತೆಯೇ ಚಂದು ತಮ್ಮ ಸ್ವಗ್ರಾಮಕ್ಕೆ ತೆರಳಿ ಸಂಘ ಸಂಸ್ಥೆಗಳ ಆಲೋಚನೆಯನ್ನು ಬಿಟ್ಟು ನೆಲಸಿದರು.

ಚಹಾ ಅಂಗಡಿ ಇಟ್ಟರು

ಹಿಂದಿನ ಈ ಕಹಿ ಅನುಭವದಿಂದಾಗಿ ಅವರ ಮನಸ್ಸು ರೋಸಿಹೋಗಿದ್ದರೂ ಕಲೆಯ ಬಗೆಗೆ ಅವರಿಗೆ ಪೂಜ್ಯ ಭಾವನೆ ಇತ್ತು. ಕಲೆ ಪರಿಶುದ್ಧ. ಆದರೆ ಕಲಾವಿದರಿಗೆ ಸಹವಾಸವು ಮುಖ್ಯ. ದುಷ್ಟ ವಾತಾವರಣದಲ್ಲಿ ಕಲೆಯು ಪ್ರಗತಿ ಕಾಣಲಾರದು. ಕಲೆಯಿಂದ ಸಾಧಿಸಬೇಕಾದದ್ದು ಆತ್ಮಶಾಂತಿ ಯನ್ನು. ಇದು ಅವರ ವಿಚಾರ ರೀತಿ. ಚಂದು ಪಣಿಕ್ಕರ್‌ರವರು ಜೀವನಕ್ಕಾಗಿ ನೃತ್ಯ ಕಲೆಯನ್ನು ಆಶ್ರಯಿಸಿದವರಲ್ಲ. ಅದಕ್ಕಾಗಿ ಇಷ್ಟು ಕಷ್ಟದ ಸಾಧನೆಯನ್ನು ಗುರುಗಳ ಆಶ್ರಯದಲ್ಲಿ ಸಂಪಾದಿಸಬೇಕಾಗಿರಲಿಲ್ಲ. ತನ್ನ ನಾಟ್ಯಕಲೆಗೆ ಬಂದೊಂದಗಿದ ವಿಪತ್ತು ಗುರುಗಳಿಗೆ ಒದಗಿದ ವಿಪತ್ತೆಂದು ಭಾವಿಸಿದರು. ಅತೀವ ಗುರುಭಕ್ತಿಯಿಟ್ಟಿದ್ದ ಪಣಿಕ್ಕರ್‌ರವರು ಜೀವನವನ್ನು ಬೇರ ಮಾರ್ಗದಲ್ಲಿ ನಡೆಸಿ ಕಲೆಯನ್ನು ಆತ್ಮ ಸಂತೋಷಕ್ಕಾಗಿ ಇಟ್ಟುಕೊಳ್ಳಬೇಕೆಂದು ಚಿಂತಿಸಿದರು. ಆದರೆ ಸಂಸಾರ ಸಾಗಬೇಕು, ಜೀವನ ನಿರ್ವಹಣೆಗೆ ಏನಾದರೊಂದು ಮಾಡಬೇಕೆನ್ನಿಸಿತು. ಆಗ ಚಹ ಅಂಗಡಿ ಇಡಬೇಕೆಂದು ತೀರ್ಮಾನಿಸಿದರು. ಪ್ರಾರಂಭವಾಯ್ತು ಚಹಾ ಅಂಗಡಿ. ಊರಿನವರೆಲ್ಲರಿಗೂ ಆಶ್ಚರ್ಯ. ಮೇಲಾಗಿ ಕನಿಕರ. ಇಂಥ ಕೀರ್ತಿಶಾಲಿ ಕಲಾವಿದ ಚಹಾ ಅಂಗಡಿ, ಇಡುವುದೆಂದರೇನು? ಸಾಧಿಸಿದ ಕಲೆ ಏನಾಗಬೇಕು? ಹೀಗಾಗಬಾರದು ಎಂದು ಅವರೆಲ್ಲ ಆಲೋಚಿಸಿದರೂ ಯಾರಿಗೂ ಇವರು ಕಲಾಜೀವನ ಮಾಡಲು ಪ್ರೋತ್ಸಾಹಿಸುವಷ್ಟು ಸಾಮರ್ಥ್ಯ ಇರಲಿಲ್ಲ. ಹೀಗಾಗಿ ಮಾತನಾಡದೆ ಮನದಲ್ಲೇ ಮರುಗಿ ಇವರ ಅಂಗಡಿಗೆ ಬರುತ್ತಿದ್ದರು. ಚಂದು ಅವರ ಯೋಚನೆ ಏನಿದೆ ಎಂದು ತಿಳಿಯಲು ಅವರಿಗೆ ಕುತೂಹಲ. ಚಂದು ಅವರನ್ನು ಪ್ರಶ್ನಿಸಿದರು. ಯಾರು ಏನೇ ಪ್ರಶ್ನಿಸಿದರೂ ಚಂದು ಪಣಿಕ್ಕರರು ಹೆಚ್ಚು ಮಾತನಾಡುತ್ತಿರಲಿಲ್ಲ. ಜನರು ಚಹಾ ಕುಡಿಯುತ್ತಾ ಏನಾದರೊಂದು ಪ್ರಶ್ನೆ ಮಾಡುವರು. ಅದಕ್ಕೆ ಪಣಿಕ್ಕರರ ಮೌನವೇ ಉತ್ತರ. ಒಮ್ಮೆ ಒಬ್ಬ ಕಲಾಪ್ರೇಮಿ ಬಹಳ ಸಾಹಸಮಾಡಿ ಇವರಿಂದ ಉತ್ತರ ಪಡೆದ. ನಿಮಗೆ ಕಲಾಜೀವನ ಏಕೆ ಬೇಸರ ಬಂತು? ಎಂದು ಮತ್ತೇ ಮತ್ತೇ ಕೇಳಿದ. ಆಗ ಪಣಿಕ್ಕರ್‌ರವರು “ದ್ವೇಷ, ಅಸೂಯೆ, ಇವನ್ನೆಲ್ಲ ನಾನು ನೃತ್ಯದಲ್ಲಿ ರಾವಣ, ದುರ್ಯೋಧನ, ಮೊದಲಾದ ಪಾತ್ರಗಳನ್ನು ಹಾಕಿದಾಗ ತೋರಿಸುತ್ತಿದ್ದೆ. ನನ್ನ ಸಹೋದ್ಯೋಗಿಗಳು ನನಗೆ ದ್ಚೇಷವಿದೆ ಹೊಟ್ಟೆಕಿಚ್ಚಿದೆ ಎಂದೆಲ್ಲ ಆರೋಪಿಸಿದಾಗ ನಾನೇನು ಮಾಡಬೇಕು? ಜನರಸೇವೆ ಮಾಡುವುದು ನನಗೆ ಮುಖ್ಯ. ಕಲಾಸೇವಕನಾಗಿ ಪಾತ್ರ ವಹಿಸುತ್ತಿದ್ದೆ, ಜನಸೇವೆಯನ್ನು ನಿಜ ಜೀವನದಲ್ಲಿ ಈ ರೀತಿ ನಡೆಸಲು ಸಿದ್ದನಾಗಿದ್ದೇನೆ ಅಷ್ಟೆ” ಎಂದು ಉತ್ತರಿಸಿದರು. “ಇನ್ನು ಮುಂದೆ ಕಲಾಜೀವನ ನಡೆಸಬಾರದೆಂದು ಸಂಕಲ್ಪಿಸಿದ್ದೀರಾ”? ಎಂದಾಗ “ದೈವಾನುಗ್ರಹಂ ವನ್ನಾಲ್ ದೈವಂತನ್ನೇ ವಳಿ ಕಾಣಿಕ್ಯುಂ” (ದೈವಾನುಗ್ರಹ ಬಂದಾಗ ದೇವರೇ ಮಾರ್ಗ ತೋರಿಸುತ್ತಾನೆ) ಎಂದು ಹೇಳಿ ಸುಮ್ಮನಾದರು.

ಚಂದು ಪಣಿಕ್ಕರರೇನೋ ತಾಳ್ಮೆಯಿಂದ ಈ ಬಗೆಯ ಜೀವನವನ್ನು ನಡೆಸುತ್ತಿದ್ದರು. ಆದರೆ ಇಂತರ ಪ್ರತಿಭಾವಂತ ಕಲಾವಿದ ಕಲಾಪ್ರಪಂಚದಿಂದ ದೂರವಾಗಿ ಉಳಿಯುವುದನ್ನು ಜನರಿಗೆ ಸಹಿಸಲು ಆಗಲಿಲ್ಲ. ಅವರಿದ್ದ ಊರಿನಲ್ಲಿ ಮಾತ್ರವಲ್ಲ, ಕೇರಳದಲ್ಲೆಲ್ಲ ಜನ ಈ ವಿಷಯವನ್ನು ಚರ್ಚಿಸಲಾರಂಭಿಸಿದರು. ಇಡೀ ಕೇರಳದ ಕಲಾಪ್ರೇಮಿಗಳಿಗೆ ಇವರು ಕಲಾಜೀವನದಿಂದ ದೂರ ಇರುವುದನ್ನು ಸಹಿಸಲು ಸಾಧ್ಯವಿರಲಿಲ್ಲ. ಆದರೆ ಕಲಾವಿದನಿಗೆ ನೆರವು ನೀಡಬಲ್ಲ ಶ್ರೀಮಂತರು ಬೇಕಲ್ಲ! ಹೀಗಾಗಿ ನೃತ್ಯಕಲೆಯ ಪ್ರೇಮಿಗಳು ಬೇರೆ ದಾರಿ ಕಾಣದೆ ಇವರು ಪುನಃ ರಂಗಪ್ರವೇಶ ಮಾಡುವ ಸುಸಂಧಿಗಾಗಿ ಕಾಯುತ್ತಿದ್ದರು.

ಮತ್ತೇ ರಂಗಪ್ರವೇಶ

೧೯೫೫ರ ವೇಳೆಗೆ ವೇಙಯಿಲ್ ಚಾತ್ತುಕುಟ್ಟಿ ನಾಯನಾರ್ ಎಂಬ ಮಹನೀಯರು ಒಂದು ಕಥಕಳಿ ಸಂಘವನ್ನು ‘ಶ್ರೀರಾಜರಾಜೇಶ್ವರಿ ವಿಲಾಸ’ ಎಂಬ ಹೆಸರಿನಿಂದ ಪ್ರಾರಂಭಿಸಿದರು. ಇವರು ಉತ್ತರ ಮಲಬಾರಿನ ಪ್ರಮುಖ ನಾಯನಾರ್ ಸಮುದಾಯದ ಕುಟುಂಬದಲ್ಲಿ ಪ್ರಖ್ಯಾತ ಕುಟ್ಟೂರು ವೇಙಯಿಲ್ ಮನೆತನದವರು. ಈ ಕುಟುಂಬದಲ್ಲಿ ಕುಞರಾಮನ್ ನಾಯನಾರ್ ‘ಕೇಸರಿ; ಎಂಬ ಹೆಸರಿನಿಂದ ಬಹು ಕೀರ್ತಿಶಾಲಿಗಳೂ. ಶ್ರೀಮಂತರೂ ಮತ್ತು ಉದಾರಿಗಳು ಆಗಿದ್ದರು. ಇವರ ಕಿರಿಯ ಸೋದರರೇ ಚಾತ್ತುಕುಟ್ಟಿ ನಾಯನಾರ್‌ರವರು, ಚಾತ್ತುಕುಟ್ಟಿ ನಾಯನಾರ್‌ರವರು ಮಲಯಾಳಿಯಲ್ಲಿ ಉದ್ದಾಮ ಪಂಡಿತರಾಗಿದ್ದರು. ಅಷ್ಟೇ ಪಾಂಡಿತ್ಯವನ್ನು ಸಂಸ್ಕೃತ ಮತ್ತು ತಮಿಳು ಭಾಷೆಗಳಲ್ಲೂ ಗಳಿಸಿದ್ದರು. ಅಲ್ಲದೆ, ಜ್ಯೋತಿಷ್ಯ, ಯಂತ್ರ, ಮಂತ್ರ, ವಿಷವೈದ್ಯ, ಗಜಚಿಕಿತ್ಸೆ, ಕಾಯಕಾಭ್ಯಾಸ, ಶಿಕಾರಿ ಇವುಗಳಲ್ಲಿಯೂ ಪ್ರಯೋಗ ಪಾಂಡಿತ್ಯವಿತ್ತು. ಕಥಕಳಿ- ಕಥಕಳಿಯ ಕಲಾವಿದರೆಂದರೆ ಇವರಿಗೆ ಅತೀವ ಮಮತೆ. ಸುಸಂಸ್ಕೃತ ದೈವೀಶಕ್ತಿ, ಉಪಾಸಕರು.

ಒಮ್ಮೆ ಚಾತ್ತುಕುಟ್ಟಿ ನಾಯನಾರ್‌ರವರನ್ನು ನೋಡಲು ಅವರ ಆಪ್ತ ಸ್ನೇಹಿತರೊಬ್ಬರು ಬಂದರು. ಆ ಸ್ನೇಹಿತರು ಲೋಕಾಭಿರಾಮವಾಗಿ ಅವರೊಡನೆ ಮಾಡನಾಡುತ್ತ, “ಚಂದು ಪಣಿಕ್ಕರ್‌ರವರು ತಮ್ಮ ನಿತ್ಯಜೀವನ ನಿರ್ವಹಣೆಯ ಸಲುವಾಗಿ ಚಹ ಅಂಗಡಿಯನ್ನು ನಡೆಸುತ್ತಿದ್ದಾರೆ” ಎಂದರು. ಚಾತ್ತುಕುಟ್ಟಿ ನಾಯನಾರ್‌ರವರಿಗೆ ಈ ಮಾತನ್ನು ಕೇಳಿ ಮನಸ್ಸಿಗೆ ಬಹು ಖೇದವುಂಟಾಯಿತು. ಸ್ನೇಹಿತರನ್ನು ಕೇಳಿದರು: “ಚಂದು ಪಣಿಕ್ಕರ್ ಕಥಕಳಿ ನೃತ್ಯಕ್ಕಾಗಿಯೇ ಹುಟ್ಟಿದವರು. ಅಂತಹವರು ಅದನ್ನು ಬಿಟ್ಟು ಈ ವೃತ್ತಿಗೆ ಏಕೆ ಬಂದರು? ಸ್ನೇಹಿತರು “ಒಳ್ಳೆಯ ಕಾರ್ಯಕ್ಕೆ ವಿಘ್ನ ಹಲವು” ಎಂದು ಸುಮ್ಮನಾದರು.

ಚಾತ್ತುಕುಟ್ಟಿ ನಾಯನಾರ್‌ರವರು ಚಹಾ ಅಂಗಡಿ ಇಡುವುದು ಕೀಳು, ಕಲೆಯೆಂದರೆ ಮೇಲು ಎಂಬ ಭಾವನೆ ಹೊಂದಿದ್ದವರಲ್ಲ. ಎಲ್ಲ ವೃತ್ತಿಗಳೂ ಅವರ ದೃಷ್ಟಿಯಲ್ಲಿ ಸಮಾನವೇ. ಲೋಕ ಕರ್ಮಗಳು ಅನೇಕ. ಜನ ತನಗೆ ಇಷ್ಟವಾದ, ಸುಲಭವಾಗಿ ನಿರ್ವಹಿಸಲು ಸಾಧ್ಯವಾಗುವ ಕರ್ಮಗಳನ್ನು ಹಂಚಿಕೊಳ್ಳುತ್ತಾರೆ ಎಂದು ತಿಳಿದ ಬುದ್ಧಿಜೀವಿ. ಚಂದು ಪಣಿಕ್ಕರ್ ಅವರ ಸ್ವಭಾವ ಮತ್ತು ಅವರ ಕಲೆಯ ಆಳ ಇವರಿಗೆ ತಿಳಿದಿತ್ತು. ಅಭ್ಯಾಸಬಲದಿಂದ ಸಾಧಿಸಿದ ಕಲಾಪಾಂಡಿತ್ಯ ಮತ್ತು ಜನ್ಮ ಸಂಸ್ಕಾರದಿಂದ ಬಂದ ಬುದ್ಧಿ- ಈ ಎರಡೂ ದೈವಾನುಗ್ರಹದಿಂದ ಒದಗಿಬಂದು ಅಷ್ಟೊಂದು ಕೀರ್ತಿ ಗೌರವಗಳಿಸಿದ ಒಬ್ಬ ಶ್ರೇಷ್ಟ ನಟ ಕಲಾರಂಗದಿಂದ ದೂರ ಸರಿಯುವುದು ಅವರಿಗೆ ಸರಿತೋರಲಿಲ್ಲ. ಅವರು ಫಣಿಕ್ಕರರನ್ನು ಪುನಃ ಕಲಾಜೀವನಕ್ಕೆ ತೊಡಗಿಸಬೇಕೆಂದು ನಿರ್ಧರಿಸಿದರು.

ಚಾತುಕುಟ್ಟಿ ನಾಯನಾರರು ಚಂದು ಪಣಿಕ್ಕರ್ ಅವರನ್ನು ಬರಮಾಡಿಕೊಂಡರು. ಅನಾನುಕೂಲಗಳು ಎಷ್ಟೇ ಬಂದರೂ ಧೈರ್ಯಗೆಡಬಾರದೆಂದು ಪ್ರೋತ್ಸಾಹಿಸಿದರು. ಶುಭ ಮುಹೂರ್ತವನ್ನು ನೋಡಿ ತಾವೇ ಕಳರಿ (ಕಥಕಳಿ ವಿದ್ಯಾಲಯ) ಯನ್ನು ಪ್ರಾರಂಭಮಾಡಿ ಚಂದು ಫಣಿಕ್ಕರ್ ಅವರಿಗೆ ವಹಿಸಿಕೊಟ್ಟರು. “ಶ್ರೀ ರಾಜರಾಜೇಶ್ವರಿ ವಿಲಾಸ’ ಎಂದು ಸಂಘದ ಹೆಸರು. ಕಳರಿಯ ವಿಶೇಷ ಜವಾಬ್ದಾರಿ ಎಲ್ಲವೂ ಚಂದು ಪಣಿಕ್ಕರ್‌ರವರದೇ ಆಯಿತು. ಅರ್ಹರಾದ ವಿದ್ಯಾರ್ಥಿಗಳನ್ನು ಆಯ್ದು ಶಿಕ್ಷಣ ಕೊಡಲುಪಕ್ರಮಿಸಿದರು. ಚಂದು ಫಣಿಕ್ಕರ್‌ರವರು ತಮ್ಮ ಸಾಮರ್ಥ್ಯವನ್ನು ತೋರಿಸಲು ಹೆಚ್ಚು ಕಾಲ ತೆಗೆದುಕೊಳ್ಳಲಿಲ್ಲ. ಕೆಲವೇ ತಿಂಗಳುಗಳಲ್ಲಿ ಶಿಷ್ಯರನ್ನು ಉತ್ತಮ ನಟರನ್ನಾಗಿ ತಯಾರು ಮಾಡಿದರು. ೧೯೩೬ರಲ್ಲಿ ತಮ್ಮ ಶಾಲೆಯಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳಿಂದ ಪ್ರಥಮ ಪ್ರದರ್ಶನ ಏರ್ಪಡಿಸಿ ತಾವೂ ಸಹ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡರು. ಪ್ರದರ್ಶನ ಬಹು ಯಶಸ್ವಿಯಾಯಿತು. ಪ್ರದರ್ಶನಕ್ಕೆ ಬೇಕಾಗಿದ್ದ ಸಕಲ ವೇಷ-ಭೂಷಣಗಳ ಖರ್ಚುಗಳೆಲ್ಲ ವನ್ನೂ ಚಾತ್ತುಕುಟ್ಟಿ ನಾಯನಾರ್ ವಹಿಸಿಕೊಂಡರು.

ಶ್ರೀ “ರಾಜರಾಜೇಶ್ವರಿ ವಿಲಾಸ’ದವರು ಪ್ರದರ್ಶಿಸುತ್ತಿದ್ದ ‘ಕಂಸವಧೆ’ ಕೇರಳದಲ್ಲೆಲ್ಲಾ ಪ್ರಸಿದ್ಧ ವಾಯಿತು.

ಎಲ್ಲಕ್ಕಿಂತಲೂ ಮಿಗಿಲಾಗಿ ಪಂಡಿತ ನಾಯನಾರ್ ರವರ ಪರಿಚಯ ಮತ್ತು ಸಹವಾಸ ಚಂದು ಪಣಿಕ್ಕರ್ ಅವರಿಗೆ ತುಂಬ ಹಿಡಿಸಿತು. ಇದು ಜೀವನದಲ್ಲಿನ ಅತ್ಯಮೂಲ್ಯ ಸಮಯವೆಂದು ಚಂದು ಅವರು ಭಾವಿಸಿದ್ದರು. ಪಂಡಿತ ನಾಯನಾರ್‌ರವರಿಗಿದ್ದ ದೈವೀ ಉಪಸನಾ ಶಕ್ತಿಯ ಅರಿವು ಚಂದು ಪಣಿಕ್ಕರ್‌ರವರಿಗೆ ಚೆನ್ನಾಗಿ ತಿಳಿದಿತ್ತು. ದೈವಶಕ್ತಿಯ ಸಂಪಾದನೆಗೆ ಕಲೆಯು ಮಾಧ್ಯಮ ಎಂಬುದನ್ನು ಅರಿತಿದ್ದ ಚಂದು ಪಣಿಕ್ಕರ್‌ರವರು ಉಪದೇಶ ಪಡೆಯುವ ಕಾಲವನ್ನು ನಿರೀಕ್ಷಿಸುತ್ತಿದ್ದರು.

ಮಂತ್ರೋಪದೇಶ

ಮಾನವರು ಕೊಡುವ ಯಾವುದೇ ಕೃತ್ರಿಮ ಬಾಧೆಗಳೂ ದೈವಶಕ್ತಿಯುಳ್ಳವರನ್ನು ತಟ್ಟಲಾರದೆಂದು ನಾಯನಾರ್ ತಿಳಿದಿದ್ದರು. ಅವರು ಬಹು ಶ್ರದ್ಧೆಯಿಂದ ಮಂತ್ರವಿದ್ಯೆ ಯನ್ನು ಪೂಜಾವಿಧಾನಗಳನ್ನೂ ಕಲಿತಿದ್ದರು. ಅವುಗಳಿಂದ ಒಳ್ಳೆಯ ಜೀವನ ನಡೆಸಿ ಸಂತೋಷ ಪಟ್ಟಿದ್ದರು. ಅವನ್ನು ಯೋಗ್ಯರಾದವರಿಗೆ ಹೇಳಿಕೊಡಬೇಕೆಂದು ಇದ್ದರು. ನಾಯನಾರ್‌ರವರಿಗೆ ಪಣಿಕ್ಕರ್ ಅವರೇ ಸರಿಯೆಂದು ತೋರಿತು. ಒಂದು ಶುಭದಿನದಲ್ಲಿ ಚಂದು ಪಣಿಕ್ಕರ್‌ರವರನ್ನು ಬರಮಾಡಿಕೊಂಡು ಶ್ರೀ ರಾಜರಾಜೇಶ್ವರೀ ಮಂತ್ರವನ್ನೂ ಶ್ರೀ ಚಕ್ರಪೂಜಾಕ್ರಮವನ್ನು ಶಾಸ್ತ್ರೋಕ್ತವಾಗಿ ಉಪದೇಶಿಸಿದರು. ನಾಯನಾರ್‌ರವರಿಂದ ವಿಧಿ ಪೂರ್ವಕವಾಗಿ ಉಪದೇಶ ಪಡೆದ ಚಂದು ಪಣಿಕ್ಕರ್‌ರವರು ಅವರ ಜೀವನಪರ‍್ಯಂತ ಗುರುವಿನ ಆದೇಶವನ್ನು ಚಾಚೂ ತಪ್ಪದೇ ಆಚರಿಸುತ್ತಿದ್ದರು. ಪ್ರತಿ ಶುಕ್ರವಾರವೂ ಉಪವಾಸದಿಂದ ಶ್ರೀ ಚಕ್ರಪೂಜೆ, ನವರಾತ್ರಿಯ ವಿಶೇಷ ಸಂದರ್ಭಗಳಲ್ಲಿ ಒಂಬತ್ತು ದಿನಗಳೂ ಅಖಂಡ ಪೂಜೆ ಮತ್ತು ಸದಾ ರಾಜರಾಜೇಶ್ವರಿ ಉಪಾಸನೆ. ಇದ್ಕಕಿಂತ ಹೆಚ್ಚಿನ ಭಾಗ್ಯ ಜೀವನದಲ್ಲಿ ಇಲ್ಲವೆಂದು ಅರಿತರು. ಸದಾ ಹಸನ್ಮುಖಿ, ಮಿತಭಾಷಿ, ವಿನಯಶೀಲ ಚಂದು ಪಣಿಕ್ಕರ್‌ರವರ ಜೀವನ ಮಾನಸಿಕ ಸಂತೋಷದಿಂದ ಕೂಡಿತ್ತು.

ಚಂದು ಪಣಿಕ್ಕರ್‌ರವರು ಸಾಧಾರಣ ಉಡುಪು, ಷರಟು ತೊಟ್ಟ ದಿನಗಳೇ ಬೆರಳುಗಳಲ್ಲೆಣಿಸುವಷ್ಟು ಎನ್ನಬಹುದು. ತ್ರಿಕಾಲಸ್ನಾನ, ಸದಾ ರಾಜರಾಜೇಶ್ವರಿ ಮಂತ್ರ ಜಪ, ಮಿತಾಹಾರ, ಸರಳ ಸ್ವಭಾವ, ಆಕರ್ಷಕ ಮೈಕಟ್ಟು, ಪ್ರಸನ್ನ ವದನ, ಗಂಭೀರ ನಿಲುವು, ಈ ಎಲ್ಲ ಗುಣಗಳೂ ಮಂತ್ರೋಪದೇಶ ಮಹಿಮೆಯಿಂದ ಶೋಭಿಸಿದವು. ಅಲ್ಲದೇ ಅಸೂಯಾಪರರಿಂದ ಉಂಟಾಗಿದ್ದ ಶಾರೀರಕ ತೊಂದರೆಯೂ ಮಾನಸಿಕ ಹಿಂಸೆಯೂ ಕೊನೆಗಂಡವು. ಇಂಥ ಸ್ವಚ್ಛ ವಾತಾವರಣದಲ್ಲಿ ಸುಮಾರು ಆರು ವರ್ಷಗಳ ಕಾಲ ಕಲಾಸೇವೆ ಮಾಡಿದರು ಚಂದು ಪಣಿಕ್ಕರ್.

ಗುರು ಇನ್ನಿಲ್ಲ

೧೯೪೧ರಲ್ಲಿ ಚಾತ್ತುಕುಟ್ಟಿ ನಾಯನಾರ್‌ರವರು ಅಕಾಲ ಮೃತ್ಯುವಿಗೀಡಾದರು. ಮಹಾ ಮಂತ್ರೋಪದೇಶ ಮಾಡಿ ತಮ್ಮ ಜೀವನ ಸಾರ್ಥಕವನ್ನಾಗಿಸಿದ ಗುರು ಪಂಡಿತ ನಾಯನಾರ್ ರವರ ಅಕಾಲ ಮರಣವು ಪಣಿಕ್ಕರ್‌ರವರ ಮನಸ್ಸಿನ ಮೇಲೆ ವಿಪರೀತ ಅಘಾತವನ್ನುಂಟುಮಾಡಿತು. ನಾಯನಾರ್‌ರವರ ಬೆಂಬಲದಲ್ಲಿ ಸ್ಥಾಪಿಸಿದ್ದ ಸಂಘಕ್ಕೂ ಸಿಡಿಲು ಬಿತ್ತು. ಮತ್ತೆ ಯಾರೂ ಸಹಾಯಕರಾಗಿ ಮುಂದೆ ಬಾರದ ಕಾರಣ ಸಂಘವನ್ನು ಮುಚ್ಚಲಾಯಿತು. ಆಗ ಚಂದು ಪಣಿಕ್ಕರರಿಗೆ ಅರವತ್ತೈದು ವರ್ಷ ವಯಸ್ಸು. ಶೋಕವು ಅವರ ಮನಸ್ಸಾನವರಿಸಿತು. ಹೃದಯ ಭಾರವಾಯಿತು. ಗುರು ನಾಯನಾರ್ ಸ್ಮರಣೆಯಲ್ಲಿ ತದೇಕಚಿತ್ತರಾಗಿ ಕುಳಿತರು.

ಕೆಲವೇ ದಿನಗಳಲ್ಲಿ ಪರಚ್ಚೀನಿಕಡವು ಕಥಕಳಿ ಸಂಘದವರಿಂದ ಕರೆ ಬಂತು. ಆ ಕರೆಯನ್ನು ಮನ್ನಿಸಿ ಸ್ವಲ್ಪಕಾಲ ಅಲ್ಲಿ ಇದ್ದು ಸೇವೆ ಸಲ್ಲಿಸಿದರು ಪಣಿಕ್ಕರ್.

ನೃತ್ಯಪಟು ರಾಮಗೋಪಾಲ್ ಸಂಘದಲ್ಲಿ

೧೯೪೪ರ ಕೊನೆಯಲ್ಲಿ ಸುಪ್ರಸಿದ್ಧ ನೃತ್ಯಪಟು ರಾಮಗೋಪಾಲ್‌ರವರ ಸಂಘಕ್ಕೆ ಶ್ರೇಷ್ಠ ಕಥಕಳಿ ಅಧ್ಯಾಪಕರೊಬ್ಬರ ಅವಶ್ಯಕತೆ ಇತ್ತು. ರಾಮಗೋಪಾಲ್ ರವರು ಬೆಂಗಳೂರಿನವರು. ದಂಡಿನ ಬೋರ್ ಬ್ಯಾಂಕ್ ರಸ್ತೆಯ ರೈಲ್ವೆ ಕ್ರಾಸಿಂಗ್ ಬಳಿ ಇದ್ದ ತಮ್ಮ ಸ್ವಂತ ಕಟ್ಟಡದಲ್ಲಿ ಅವರು ನೃತ್ಯ ಸಂಘವೊಂದನ್ನು ನಡೆಸುತ್ತಿದ್ದರು. ಅಷ್ಟು ಹೊತ್ತಿಗಾಗಲೇ ಚಂದು ಪಣಿಕ್ಕರ್‌ರವರ ಕೀರ್ತಿ ದೇಶದ ಎಲ್ಲ ಕಡೆಯೂ ಹಬ್ಬಿದಂತೆ ಕರ್ನಾಟಕದಲ್ಲೂ ಹಬ್ಬಿತ್ತು. ಇಂಥ ಶ್ರೇಷ್ಠ ಅಧ್ಯಾಪಕರನ್ನು ಕರೆಸಿ ಶಿಕ್ಷಣ ಪಡೆಯಬೇಕೆಂದು ಪಣಿಕ್ಕರ್ ಅವರನ್ನು ಬೆಂಗಳೂರಿಗೆ ಬರಮಾಡಿಕೊಂಡರು. ರಾಮ ಗೋಪಾಲರೊಬ್ಬರಿಗೇ ಅಲ್ಲದೆ ಇನ್ನೂ ಹಲವು ಕಲಾಭ್ಯಾಸಿಗಳಿಗೆ ಇವರ ಶಿಕ್ಷಣಲಾಭ ದೊರಕಿತು.

ಒಮ್ಮೆ ರಾಮಗೋಪಾಲ್‌ರವರು ಕೆಲವು ಪಾಶ್ಚಾತ್ಯ ಕಲಾಪ್ರೇಮಿಗಳನ್ನು ತಮ್ಮಸಂಘಕ್ಕೆ ಆಹ್ವಾನಿಸಿದರು. ಮಧ್ಯಾಹ್ನದ ವೇಳೆ ಸುಮಾರು ಹನ್ನೊಂದು ಗಂಟೆ. ಆಹ್ವಾನಿತರು ಬಂದು ಕುಳಿತರು. ಪಾಶ್ಚಾತ್ಯರಿಗೆ ಭಾರತೀಯ ನೃತ್ಯದಲ್ಲಿ ಶ್ರದ್ಧಾಸಕ್ತಿ  ಯನ್ನು ಹುಟ್ಟಿಸಬೇಕೆಂದು ರಾಮಗೋಪಾಲರ ಇಚ್ಛೆ. ಇದಕ್ಕೆ ಪಣಿಕ್ಕರ್ ಅವರೇ ಶಕ್ತರೆಂಬುದನ್ನು ಎಲ್ಲರೂ ಬಲ್ಲರು.

ರಾಮಗೋಪಾಲರು ಚಂದು ಪಣಿಕ್ಕರ್‌ರವರ ಕಿವಿಯಲ್ಲಿ ಏನೋ ಹೇಳಿ ಬಂದರು. ಅನಂತರ ಅಹ್ವಾನಿತರನ್ನು ಉದ್ದೇಶಿಸಿ ಅರ್ಥವಾಗುವಂತೆ ಶ್ರೀ ಕೃಷ್ಣನ ಬಾಲಲೀಲೆಯ ಕಥಾಭಾಗವನ್ನು ವಿವರಿಸಿ “ಈ ಕಾರ್ಯಕ್ರಮದಲ್ಲಿ ಬಾಲಕೃಷ್ಣನಾಗಿ ಚಂದು ಪಣಿಕ್ಕರ್‌ರವರು ಅಭಿನಯಿಸುತ್ತಾರೆ” ಎಂದು ಹೇಳಿ ಆಹ್ವಾನಿತರ ಮಧ್ಯೆ ತಾವೂ ಕುಳಿತರು.

ಆಟ ಪ್ರಾರಂಭವಾಯಿತು. ಯಾವ ವೇಷಭೂಷಣಗಳೂ ಇಲ್ಲದೆ ಸಾಧಾರಣ ಮುಂಡಿನೊಂಡಿಗೆ ಬಾಲಕೃಷ್ಣನ ಮುದ್ದಾದ ಹೆಜ್ಜೆಗಳನ್ನಿಟ್ಟು ಪಣಿಕ್ಕರ್ ಪ್ರವೇಶಿಸಿದರು. ಹದಿನೇಳು ತಿಂಗಳ ಪುಟ್ಟ ಕೃಷ್ಣನ ಪಾತ್ರದಲ್ಲಿ ಎಪ್ಪತ್ತು ವರ್ಷ ದಾಟಿದ ವೃದ್ಧನ ಪ್ರವೇಶ ಎಲ್ಲರಿಗೂ ಆಶ್ಚರ್ಯ, ಮಕ್ಕಳ ನಡಿಗೆ, ಕಳ್ಳತನದ ಭಯ, ಬೆಣ್ಣೆಯ ಪಾತ್ರೆಯನ್ನು ಕಂಡು ಸಂತೋಷ, ನೆಲುವಿನ ಮೇಲಿದ್ದ ಬೆಣ್ಣೆಯ ಪಾತ್ರೆಯು ತನ್ನ ಕೈಗೆ ಎಟುಕಲಾರದೆಂಬ ಕೃಷ್ಣನ ಆಶಾಭಂಗದ ಮುಖಭಾವ, ಅದನ್ನು ದೊರಕಿಸಿಕೊಳ್ಳಲು ಹವಣಿಸುವ ಉಪಾಯ ಇತ್ಯಾದಿ ನಾನಾ ಭಾವಗಳನ್ನು ಮನೋಜ್ಞವಾಗಿ ಅಭಿನಯಿಸಿದರು ಪಣಿಕ್ಕರ್. ಗಂಟೆ ಹನ್ನೆರಡಾಯ್ತು, ಒಂದಾಯ್ತು. ಎಲ್ಲಿದ್ದೇವೆಂಬ ಅರಿವು ಯಾರಿಗೂ ಇಲ್ಲದೇ ಹೋಯಿತು. ಅತಿಥಿಗಳ ಸಂತೋಷಕ್ಕೆ ಪಾರವೇ ಇಲ್ಲ. ಅವರೆಲ್ಲ ಬೆರಗಾದರು. ಚಂದು ಪಣಿಕ್ಕರರನ್ನು ಬಹುವಾಗಿ ಅಭಿನಂದಿಸಿ ಕಾಣಿಕೆ ನೀಡಿದರು. ಮತ್ತೊಂದು ದಿನ ಇವರ ಅಭಿನಯವನ್ನು ಡಾಕ್ಯುಮೆಂಟರಿ ಚಿತ್ರ ತೆಗೆದು ತಮ್ಮ ರಾಷ್ಟ್ರಕ್ಕೆ ಕಳುಹಿಸಿಕೊಟ್ಟರು. ವಿದೇಶಗಳಲ್ಲಿಯೂ ಇವರ ಕೀರ್ತಿ ಹೆಚ್ಚಿತು.

೧೯೪೬ರ ಅಂತ್ಯದಲ್ಲಿ ರಾಮಗೋಪಾಲರಿಗೆ ಅತ್ಯಂತ ಕಷ್ಟಕಾಲ ಒದಗಿತು. ಅವರು ತಮ್ಮ ಸಂಘವನ್ನು ಮುಚ್ಚಿದರು. ತಾವು ವಿದೇಶ ಪ್ರಯಾಣ ಬೆಳೆಸಿದರು.

ಮದರಾಸಿನ ಅಡಿಯಾರ್ ಕಲಾಕ್ಷೇತ್ರದಲ್ಲಿ ಅಧ್ಯಾಪಕರಾಗಿದ್ದ ಅಂಬು ಪಣಿಕ್ಕರ್‌ರವರ ತೆರವಾದ ಜಾಗಕ್ಕೆ ಚಂದು ಪಣಿಕ್ಕರರನ್ನು ಆಹ್ವಾನಿಸಿದರು. ಅದಕ್ಕೆ ಒಪ್ಪಿ ಅಲ್ಲಿ ಅಧ್ಯಾಪಕರಾಗಿ ಅನೇಕ ಶಿಷ್ಯರಿಗೆ ತರಬೇತಿಯಿತ್ತರು. ಅಲ್ಲಿದ್ದಾಗಲೇ ಕೇಂದ್ರ ಸರ್ಕಾರದ ಸಂಗೀತ ನಾಟಕ ಅಕಾಡೆಮಿಯ ಮೂಲಕ ಕೊಡುವ ರಾಷ್ಟ್ರಪ್ರಶಸ್ತಿಯನ್ನು ರಾಷ್ಟ್ರಾಧ್ಯಕ್ಷರು ನೀಡಿದರು. ಅದರ ನಂತರ ಕಥಕಳಿ ರಂಗದ ಹಲವಾರು ಸಂಘ ಸಂಸ್ಥೆಗಳು ಇವರನ್ನು ಆಹ್ವಾನಿಸಿ ಬಹುಮಾನಗಳನ್ನಿತ್ತು  ಗೌರವಿಸಿದವು.

ಕಡೆಯ ದಿನಗಳು

ವಯಸ್ಸು ಎಂಬತ್ತೆರಡು ದಾಟಿತು. ಆಗ ಚಂದು ಅವರಿಗೆ ಉಳಿದ ಆಯುಷ್ಯವನ್ನು ಅಧ್ಯಾತ್ಮ ವಿಚಾರದಲ್ಲಿ ಕಳೆಯಬೇಕೆನ್ನಿಸಿತು. ದೈವಧ್ಯಾನ-ಅಧ್ಯಾತ್ಮದ ಹಂಬಲ ಬಲವಾಯಿತು. ವ್ಯವಹಾರದ ಜಗತ್ತಿನಲ್ಲಿ ಕೆಲಸ ಮಾಡುವುದು ಸಾಕು ಎನ್ನಿಸಿತು. ಕರ್ಮಕ್ಕೆ ಬಲ ಕುಗ್ಗಿತು. ಜ್ಞಾನಕ್ಕೆ ಬಲ ಹೆಚ್ಚಿತು. ಕಲಾಕ್ಷೇತ್ರವನ್ನು ಬಿಟ್ಟು ಸ್ವಗ್ರಾಮಕ್ಕೆ ತೆರಳಿದರು.

ಪಣಿಕ್ಕರ್‌ರವರು ತಮ್ಮ ತುಂಬುಜೀವನದಲ್ಲಿ ಅನೇಕ ಶಿಷ್ಯರನ್ನು ಸಂಪಾದಿಸಿದ್ದರು. ಇವರ ಖ್ಯಾತ ಶಿಷ್ಯರುಗಳಲ್ಲಿ ಅನೇಕರು ಇಂದು ದೇಶದ ನಾನಾಭಾಗಗಳಲ್ಲಿ ನೆಲೆಸಿದ್ದಾರೆ. ತಿಪಟೂರಿನಲ್ಲಿರುವ ಶ್ರೀ ಕಣ್ಣನ್ ಮಾರಾರ್ ಅವರೂ ಸಹ ಚಂದು ಪಣಿಕ್ಕರ್‌ರವರ ಒಬ್ಬ ಮುಖ್ಯ ಶಿಷ್ಯರಲ್ಲೊಬ್ಬರು.

ಹೀಗೆ ಚಂದು ಪಣಿಕ್ಕರ್‌ರವರು ಉತ್ತಮ ಶಿಕ್ಷಕನಾಗಿ, ಕಲಾಜೀವಿಯಾಗಿ, ಗುರುವಾಗಿ, ದೈವಭಕ್ತನಾಗಿ, ಕೀರ್ತಿಶಾಲಿ ಯಾಗಿ, ಪೂರ್ಣಾಯುಸ್ಸಿನ ಸಾರ್ಥಕ ಜೀವನ ನಡೆಸಿದರು. ಕಡೆಯ ವರ್ಷಗಳನ್ನು ದೇವರ ಪ್ರಾರ್ಥನೆ ಚಿಂತನೆಗಳಲ್ಲಿ ಶಾಂತ ಮನಸ್ಸಿನಿಂದ ಕಳೆದರು. ಅವರು ತಮ್ಮ ತೊಂಬತ್ತರೆಡನೆಯ ವಯಸ್ಸಿನಲ್ಲಿ ಸ್ವರ್ಗಸ್ಥರಾದರು.

ಅಭಿನಯದ ರಸನಿಮಿಷಗಳು

ಚಂದು ಪಣಿಕ್ಕರರ ಅಭಿನಯವನ್ನು ರಂಗಮಂದಿರ ನೋಡಿದ ಸಾವಿರಾರು ಮಂದಿ ರಸಿಕರ ಮನಸ್ಸಿನಿಂದ ಚಂದು ಪಣಿಕ್ಕರ್ ದೂರವಾಗಿಲ್ಲ. ಅವರ ಸಹಜ ಪ್ರಕೃತಿಯು ವೀರರಸದ ಅಭಿನಯಕ್ಕೆ ಹೊಂದಿಕೊಂಡದ್ದು, ಅಪ್ರತಿಮ ವೀರರ ಪಾತ್ರಗಳನ್ನು ಅದ್ಭುತವಾಗಿ ಅಭಿನಯಿಸುತ್ತಿದ್ದರು. ರೌದ್ರ ಮತ್ತು ಹಾಸ್ಯರಸದ ಪಾತ್ರಗಳನ್ನು ಅಷ್ಟೇ ಯಶಸ್ವಿಯಾಗಿ ಅಭಿನಯಿಸು ತ್ತಿದ್ದರು. ಪಾತ್ರ ಗೌರವ, ಪಾತ್ರ ಪೋಷಣೆಗೆ ಹೆಚ್ಚು ಗಮನವಿರಿಸಿ ಆಯಾ ಪಾತ್ರಗಳಲ್ಲಿ ತನ್ಮಯರಾಗಿ ಪ್ರೇಕ್ಷಕರನ್ನು ಸೆರೆಹಿಡಿಯುತ್ತಿದ್ದರು. ವಾಲಿಯ ಬಾಲದಲ್ಲಿ ಸಿಕ್ಕಿಬಿದ್ದ ರಾವಣನಾಗಿ ಚಂದು ಪಣಿಕ್ಕರ್ ಅನುಭವಿಸುತ್ತಿದ್ದ ಸಂಕಟವನ್ನು ಅಮೋಘವಾಗಿ ಅಭಿನಯಿಸುತ್ತಿದ್ದರು. ಯಾವ ಸಮಯದಲ್ಲಿ ಹಾಸ್ಯರಸವು ಅವಶ್ಯಕವೋ ಆ ಸಮಯದಲ್ಲಿ ಅಗತ್ಯವಾದ ಮಟ್ಟಿಗೆ ಹಾಸ್ಯರಸವನ್ನು ಅಭಿನಯಿಸುವವರು ಇವರ ಸಮಾನ ಯಾರೂ ಇಲ್ಲ. ಹೀಗೆ ಮರೆಯಲಾಗದ ಅಭಿನಯ ಸಂದರ್ಭಗಳು ಅನೇಕವಾದರೂ ಕೆಲವನ್ನು ಉದಹರಿಸ ಬಹುದು.

ಪಾಂಚಾಲಿಯ ಅಪೇಕ್ಷೆಯಂತೆ ಸೌಗಂಧಿಕಾ ಪುಷ್ಪವನ್ನು ತರಲು ಹೊರಡುತ್ತಾನೆ ಭೀಮ. ದಾರಿಯಲ್ಲಿ ಆಂಜನೇಯ ಮಲಗಿದ್ದಾನೆ, ಅವನು ಆಂಜನೇಯ ಎಂದು ಭೀಮನಿಗೆ ತಿಳಿಯದು. ಭೀಮನು ವೃದ್ಧ ವಾನರನನ್ನು ನೋಡಿ.

“ಒಳಿಯಲ್‌ನಿನ್ನು ಪೋಕವೈಕಾತೆ ವಾನರಾಧಮ” (“ಮಾರ್ಗಮಧ್ಯದಿಂ ತೊಲುಗ ಶೀಘ್ರದಿಂ ವಾನರಾಧಮ’) ಎಂಬ ಕಲ್ಯಾಣ ಸೌಗಂಧಿಕದಲ್ಲಿ ಬರುವ ಸಂದರ್ಭವನ್ನು ರೌದ್ರರಸ ಪ್ರಧಾನವಾಗಿ ಅಭಿನಯಿಸುತ್ತಿದ್ದ ಚಂದು ಪಣಿಕ್ಕರ್‌ರವರನ್ನು ರಸಿಕರು ಇನ್ನೂ ಮರೆತಿಲ್ಲ.

ದುರ‍್ಯೋಧನವಧೆಯಲ್ಲಿ, ಪಣಿಕ್ಕರ್ ಭೀಮಸೇನನ ಪಾತ್ರದಲ್ಲಿ, ದುಶ್ಯಾಸನನ್ನು ಹಿಡಿದು ಗದೆಯಿಂದ ಹೊಡೆದು, ನೆಲಕ್ಕುರುಳಿಸಿ ಅವನ ಕರುಳುಗಳನ್ನು ತೆಗೆದು ನರಸಿಂಹನಂತೆ ಮೃಗೀಯವಾದ ರೀತಿಯಲ್ಲಿ ಹಲ್ಲುಗಳಿಂದ ಕಚ್ಚಿ ಎಳೆಯುವ ರೌದ್ರಾಭಿನಯ ಸನ್ನಿವೇಶದಲ್ಲಿ ಬರುವ –

ನಿಲ್ಲೆಡಾ ನಿಲ್ಲೆಡಾ ನೀಯೆಲ್ಲೊ ಪಂಡೆಂಡೆ|
ವಲ್ಲಭ ತನ್ನುಡೆ ವಸ್ತ್ರಂ ಪರಿಚ್ಚತುಂ||
ವಲ್ಲಾತ್ತನುದ್ಯತ ಮುಂಡಾಕ್ಕಿ ವೆಚ್ಚತುಂ|
ಎಲ್ಲಾಂ ನಿನಚಿನ್ನು ಕೊಲ್ಹಾತಯೆಚ್ಚಿಟ||

[ನಿಲ್ಲೆಲ್ಲೋ ನಿಲ್ಲೆಲೋ ನೀತಾನೆ ಹಿಂದೆನ್ನ|
ವಲ್ಲಭೆಯ ವಸ್ತ್ರವಂ ಸೆಳೆದು ಹಾಕಿದುದು||
ತಾಳಲಾರದ ಹಿಂಸೆ ತಂದೊಡ್ಡಿದಾಸಮಯ|
ವೆಲ್ಲವನು ನೆನೆನೆನೆದು ನಾಕೊಲ್ಲದಿರಲಾರೆ||]

ಇಂತಹ ಸಂದರ್ಭದಲ್ಲಿ ಪಣಿಕ್ಕರರ ಅಭಿನಯವು ರೋಮಾಂಚನಕಾರಿಯಾಗಿರುತ್ತಿತ್ತು.

ಪಣಿಕ್ಕರ್‌ರವರ ಆಚಿಜನೇಯನ ಪಾತ್ರ ಯಾರೂ ಅನುಕರಿಸಲಾರದ ಅಭಿನಯವಾಗಿರುತ್ತಿತ್ತು. ಅದೇ ಕಲ್ಯಾಣ ಸೌಗಂಧಿಕ ಕಥೆಯಲ್ಲಿ ಪಣಿಕ್ಕರ್‌ರವರ ಆಂಜನೇಯನ ಪಾತ್ರ ಔಚಿತ್ಯದಿಂದ ಕೂಡಿರುತ್ತಿತ್ತು. ಆಂಜನೇಯನು ಭೀಮನನ್ನು ಗೇಲಿ ಮಾಡುವಂಥ ಸನ್ನಿವೇಶವನ್ನು ಎಂದೂ ಮಾಡಿದವರಲ್ಲ, ಜಿತೇಂದ್ರಿಯನೂ. ಧ್ಯಾನನಿರತನೂ ಆದ ಆಂಜನೇಯ ಸ್ವಾಮಿಯು ಪರಿಹಾಸ್ಯ ಮಾಡುವ ವ್ಯಕ್ತಿಯಲ್ಲವೆಂಬುದು ಅವರ ಆಭಿಪ್ರಾಯವಾಗಿತ್ತು.

ಕಾಣೆನೇರಮಿನಿ ವೈಕಾತೆ ಶುಕ|
ವಾಣೆಯಾಯೆರು ನಿನ್ನುಟೆ||
ಪ್ರಾಣವಲ್ಲಭೇಟೆ ವಾಂಛಿತಂ ಜಗ
ತ್ಪ್ರಾಣ ನಂನದನ ಲಭಿಚ್ಚಾಲುಂ||

[ಕ್ಷಣಕಾಲವು ಸಹ ಮೀರದೆ ನೀ ಶುಕ
ವಾಣಿಯಾಗಿಹ ನಿನ್ನಯ
ಪ್ರಾಣವಲ್ಲಭಳ ಹೆಬ್ಬಯಕೆಯ ಜಗ
ತ್ಪ್ರಾಣನಂದನನೆ ಸಾಧಿಸಿಕೊಳ್||]

ಈ ಹಾಡಿನ ಸಂದರ್ಭದಲ್ಲಿ ಆಂಜನೇಯನ ಪಾತ್ರ ಗೌರವಕ್ಕೆ ತಕ್ಕವರು ಪಣಿಕ್ಕರ್‌ರವರೇ. ಅಲ್ಲದೆ ಪ್ರತಾಪ ಮತ್ತು ಪರಿಹಾಸ್ಯದ ಅಭಿನಯವನ್ನು ಅವರು ಸಾಧಿಸ ಬಲ್ಲವರು. ವಾಲಿ ವಿಚಯದಲ್ಲಿ ಪಣಿಕ್ಕರ್‌ರವರು ರಾವಣನ ಪಾತ್ರದಲ್ಲಿ ನಾರದರನ್ನು ಕುಳಿತುಕೊಳ್ಳಲು ಹೇಳುತ್ತಿದ್ದ ರೀತಿ ಅವರ್ಣ ನೀಯ.

ಹಾಸ್ಯರಸಾಭಿನಯಕ್ಕೆ ಇವರನ್ನು ದಕ್ಷಯಾಗದ ಕಥೆಯಲ್ಲಿ ನೋಡಬೇಕು. ಪಣಿಕ್ಕರ್‌ರವರು ದಕ್ಷನ ಪಾತ್ರದಲ್ಲಿ ಶಿವನ ಮೇಲೆ ಕೋಪಿಸಿಕೊಂಡು ಇಂದ್ರಾದಿ ದೇವತೆಗಳೊಡನೆ ಶಿವನನ್ನು ಹಾಸ್ಯ ಮಾಡುವ ಸನ್ನಿವೇಶದಲ್ಲಿ.

ವಸ್ತ ಮಿಲ್ಲಾಙ—- ಚರ್ಮಮುಡುತ್ತೀಟುನ್ನು
ಪರಿವಾರಙಳ ಭೂತ ಙಳ್ ಪಿಶಾಚಙಚಳುಂಡ ನೇಕಂ||[ವಸ್ತ್ರವಿಲ್ಲದೆಯೋ ಚರ್ಮದುಡುಪಿನ ವೇಷ
ಪರಿವಾರಗಳ ನೋಡೆ ಭೂತಪ್ರೇತಾದಿಗಳು
ಪಿಶಾಚಿಂಗಳಿರ್ಪುಮನೇಕಮಾಗಿ||]

ಎನ್ನುವಾಗ ನಗೆಯನ್ನು ಉಕ್ಕಿಸುವರು. ದುಃಖ ಮತ್ತು ಕೋಧ ಭಾವನೆಯನ್ನು ಪ್ರದರ್ಶಿಸುವಲ್ಲಿಯೂ ಯಶಸ್ವಿ.

ಇಂಥ ಅದ್ಭುತ ಅಭಿನಯ ಕೌಶಲ್ಯವನ್ನು ಪಡೆದು ರಸಿಕಲೋಕದ ರಸರತ್ನವಾಗಿ ಬಾಳಿ ಬೆಳಗಿದವರು ಚಂದು ಪಣಿಕ್ಕರ್.