ನಮ್ಮ ಮನೆಯಲ್ಲಿ ಜಾಗ ಇಲ್ಲ. ಗಿಡಕ್ಕೆಲ್ಲಿ ಜಾಗ? ಕುಡಿಯಲೇ ನೀರು ಸಿಗಲ್ಲ, ಇನ್ನು ಗಿಡಕ್ಕೆ ಎಲ್ಲಿಂದ ತರೋದು? ಮನೆ ಕೆಲಸವೇ ಮುಗಿಯಲ್ಲ, ಇನ್ನು ಗಿಡದ ಕೆಲಸ ಮಾಡೋರು ಯಾರು? ಈ ಎಲ್ಲ ನೆಪಗಳೂ, ಮಾತುಗಳು ದಿನನಿತ್ಯ ನಾವು ಕೇಳುವಂತಹವು. ಆದರೆ ಕೆಲವು ಗೃಹಿಣಿಯರಿಗೆ  ಮನೆ ಕೆಲಸದ ಜೊತೆಗೆ ಗಿಡ ಬೆಳೆಸುವುದು ಹವ್ಯಾಸ. ಕೆಲವರಿಗೆ ಆದಾಯದ ಮೂಲ. ಇನ್ನು ಕೆಲವರಿಗೆ ಮನೆಗೆ ಬೇಕಾದ್ದೆಲ್ಲ ಕೈಗೆಟಕುವ ಕೈತೋಟದಿಂದಲೇ ಬಂದರೆ ಸಾಕು. ಅದರಿಂದ ಸಿಗುವ ನೆಮ್ಮದಿ ಬೋನಸ್ ಇದ್ದ ಹಾಗೆ. . ಆಹಾರದ, ಆರೋಗ್ಯದ ಬಗ್ಗೆ ಕಾಳಜಿ ಇರುವವರಿಗೆ  ವಿಷ ಮುಕ್ತ ತರಕಾರಿ  ಮನೆಯಂಗಳದಲ್ಲೇ.

ಮನೆ ಚಿಕ್ಕದಾದರೂ ಪರವಾಗಿಲ್ಲ, ಮನೆ ಮುಂದೆ ಜಾಗ ಇರಬೇಕು ಎಂಬುದು ಬಹು ದಿನದ ಕನಸು, ಚಂದ್ರಕಲ, ಧನಂಜಯ ಮೂರ್ತಿ ದಂಪತಿಗಳದು. ಕನಸು ಕಾಣುವುದು ಸುಲಭ, ಕಾರ್ಯರೂಪಕ್ಕೆ ತರುವುದು ಕಷ್ಟ. ಆದರೆ ಈ ದಂಪತಿಗಳಿಗೆ ತಮ್ಮ ಕನಸು, ಈ ಎಲ್ಲ ಕಷ್ಟಗಳಿಗಿಂತ ಮಿಗಿಲಾದುದಾಗಿತ್ತು. ಮನೆ ಕಟ್ಟುವಾಗ ಉಳಿದ ಕಲ್ಲು, ಇಟ್ಟಿಗೆ ಚೂರುಗಳು ಮಣ್ಣಿಗೆ ಬೆರೆತು ಹೋಗಿದ್ದವು.  ಈ ಹಾಳಾದ ಮಣ್ಣಿನಲ್ಲಿ ಬೀಜಗಳು ಮೊಳಕೆಯೊಡೆಯುವುದು ದೂರದ ಮಾತೇ ಸರಿ. ತೋಟ ಮಾಡಲೆಂದು ಇಟ್ಟಿದ್ದ ಹಣ, ಕಲ್ಲು ಇಟ್ಟಿಗೆ ಸಾಗಿಸಲು ತರಿಸಿದ್ದ ಟ್ರಾಕ್ಟರ್ ನುಂಗಿ ಹಾಕಿತು. ಹಸಿರ ಕನಸು ಕನಸಾಗಿಯೇ ಉಳಿದು ಬಿಡುವುದೇ ಎಂಬ ಆತಂಕ ಚಂದ್ರಕಲ ಅವರನ್ನು ಕಾಡ ತೊಡಗಿತು.

ಕೈತೋಟದಲ್ಲಿ ಮೂಲಂಗಿ.

ಆದರೆ ಧೃತಿ ಗೆಡದ ಚಂದ್ರಕಲ ಕೆಲಸ ಪ್ರಾರಂಭಿಸಿಯೇ ಬಿಟ್ಟರು. ದಿನಕ್ಕಿಷ್ಟು ಜಾಗದಂತೆ ಅಗೆದು, ಮಣ್ಣನ್ನು ಸಡಿಲಗೊಳಿಸಿದರು. ಕೊಂಡು ತಂದ ಕಾಂಪೋಸ್ಟ್ ಬೆರೆಸಿದರು. ನೀರು ಚುಮುಕಿಸಿ ಹದ ಮಾಡಿದ ಮಣ್ಣಿಗೆ ಚೆಲ್ಲಿದ ಮೆಂತ್ಯ, ದಂಟಿನ ಬೀಜಗಳು ಮೊಳಕೆಯೊಡೆದು ತಲೆಎತ್ತಿದವು. ತಿಂಗಳೊಪ್ಪತ್ತಿನಲ್ಲಿ ಕೊಯಿಲಿಗೆ ಸಿದ್ಧವಾದವು. ಮಾಡಿದ ಸೊಪ್ಪಿನ ಬಿಸಿ ಬಿಸಿs ಹುಳಿ, ರಾಗಿ ಮುದ್ದೆಗೆ ಹೊಸ ರುಚಿಯನ್ನೇ ಕೊಟ್ಟಿತ್ತು. ‘ಪ್ರಾಯ: ಎರೆಡು ತುತ್ತು ಜಾಸ್ತಿಯೇ ತಿಂದಿರಬೇಕು’ ಎಂದು ನಕ್ಕರು ಧನಂಜಯ ಮೂರ್ತಿ. ತೋಟದ ಶುಭಾರಂಭ ಸೊಗಸಾಗಿಯೇ ಆಯಿತು.

ಈ ಬಾರಿ ಬೀಜದ ಅಂಗಡಿಗೆ ಹೋದಾಗ ಖರೀದಿ ಜೋರಾಗಿಯೇ ನಡೆಯಿತು. ಮೂಲಂಗಿ, ಗೋರಿಕಾಯಿ, ಬದನೆ, ಹುರುಳಿಕಾಯಿ ಬೀಜಗಳು ಬಂದವು. ಮೂಲಂಗಿ ಮಣ್ಣಿನ ಕೆಳಗೆ ಬೆಳೆಯುವಂತಹುದು. ಹಾಗಾಗಿ ಮಣ್ಣನ್ನು ಸರಿಪಡಿಸಿ ‘ಏರು ಮಡಿ’ ಮಾಡಿ ಬೀಜ ನೆಟ್ಟರು. ನಲವತ್ತು ದಿನಗಳೊಳಗೆ ಬೆಳ್ಳಗೆ ಉದ್ದಕ್ಕಿದ್ದ ಮೂಲಂಗಿ ದೊರೆತಾಗ ತರಕಾರಿ ಬೆಳೆಯುವ ಉತ್ಸಾಹ ಇಮ್ಮಡಿಸಿತು. ಬೆಳಗ್ಗೆ ಎದ್ದೊಡನೆ ಕಾಣಿಸಿದ ಹುರಳಿಕಾಯಿಯ ಹೂವು ತಾನು ಅರಳುವುದರೊಂದಿಗೆ ಮನಸ್ಸನ್ನೂ ಅರಳಿಸಿತ್ತು.

ಬಿಳಿ ಬದನೆ.

ಏರುಮಡಿ ಕೃಷಿ ಹೊಸತಲ್ಲದಿದ್ದರೂ ಮರೆತು ಹೋಗಿರುವ, ಕೈಬಿಟ್ಟಿರುವ ಕೃಷಿ ಪದ್ಧತಿ. ಸಾಧಾರಣವಾಗಿ ನೆಲವನ್ನು ಸಮತಟ್ಟು ಮಾಡಿ ಬೀಜ ನೆಡುವುದು ವಾಡಿಕೆಯಾಗಿ ಹೋಗಿದೆ. ಆದರೆ ಮಣ್ಣಿನ ಕೆಳಗೆ ಬೆಳೆಯುವ ಗೆಡ್ಡೆ ತರಕಾರಿಗಳಿಗೆ ಸಡಿಲವಾದ ಮಣ್ಣು, ಆಳವಾದ ಭೂಮಿ ಎರೆಡೂ ಬೇಕು. ಎತ್ತರದ ಮಡಿಗಳನ್ನು ಮಾಡಿ ಬೀಜ ಬಿತ್ತಿದರೆ ಗೆಡ್ಡೆಗಳು ಬೆಳೆಯಲು ಅನುಕೂಲ, ಅಲ್ಲದೆ ಗಾಳಿಯಾಡಲು, ಬೇರುಗಳು ಹರಡಲು ಸಹ ಅವಕಾಶ ದೊರೆತಂತೆ. ಈ ಸೂಕ್ಷ್ಮ ತಿಳಿದಿದ್ದ ಚಂದ್ರಕಲ ಮೂಲಂಗಿ ಬೆಳೆಯುವುದರಲ್ಲಿ ಯಶಸ್ವಿಯಾದರು. ಎರೆಡು ಅಡಿ ಅಗಲ, ಒಂದೂವರೆ ಅಡಿ ಎತ್ತರದ ಸಾಲುಗಳನ್ನು ಮಾಡಿ ಬೆಳೆದಾಗ, ಗೆಡ್ಡೆ ತರಕಾರಿಗಳು ಸದೃಢವಾಗಿ ಬೆಳೆಯುವುದು ಎನ್ನುವ ಅನುಭವ ಸತ್ಯವಾದದ್ದು ಮೂಲಂಗಿ ಕಿತ್ತಾಗಲೇ.

ಸಾಲು ಹುರಳಿ.

ಹೀಗೆ ಬೆಳೆದ ತರಕಾರಿಗಳು ಮನೆಗೆ ಬಳಸಿ ಮಿಕ್ಕಾಗ ಅಕ್ಕ ಪಕ್ಕದವರಿಗೆ ಸುಲಭವಾಗಿ ದೊರೆಯುವಂತಾಯಿತು. ಮನೆಯಲ್ಲಿ ಬೆಳೆದ ತಾಜ ತರಕಾರಿಯನ್ನು ಬೆಳೆದು ತೋರಿಸಿ, ತಿನ್ನಲು ಕೊಟ್ಟರೂ ಸಹ ಬೆಳೆಯುವ ಆಸಕ್ತಿ ಅವರಲ್ಲಿ ಬರದಿರುವುದು ಮಾತ್ರ ವಿಪರ‍್ಯಾಸ. ಒಂದಿಬ್ಬರು ಸೊಪ್ಪು ಬೆಳೆಯುವ ಪ್ರಯತ್ನ ಮಾಡಿದ್ದಾರೆ. ಕೆಲಸದಲ್ಲಿ ಆಸಕ್ತಿ ಕಡಿಮೆ ಇರುವುದು ಬೆಳೆದಿರುವ ಕಳೆಗಳಿಂದಲೇ ವ್ಯಕ್ತವಾಗುತ್ತಿದೆ. ತರಕಾರಿಯಲ್ಲಿ ನೀರಿನ ನಿರ್ವಹಣೆ ಸಹ ಅಷ್ಟೇ ಪ್ರಮುಖ ಎನ್ನುತ್ತಾರೆ ಚಂದ್ರಕಲ. ಕೈತೊಳೆದ ನೀರು, ಪಾತ್ರೆ ತೊಳೆದ ಪ್ರತಿ ಹನಿಯನ್ನೂ ಜಾಗ್ರತೆಯಿಂದ ಸಂಗ್ರಹಿಸಿ ಗಿಡಗಳಿಗೆ ಉಣಿಸುವುದು ಅನಿವಾರ್ಯವಷ್ಟೇ ಅಲ್ಲ, ಅವಶ್ಯಕ ಸಹ, ಎಂಬ ಮಾತನ್ನು ಪತಿ ಪತ್ನಿಯರಿಬ್ಬರೂ ಅರ್ಥಮಾಡಿಕೊಂಡಿದ್ದಾರೆ. ಮೂರು ದಿನಗಳಿಗೊಮ್ಮೆ ನೀರು ಬಂದರೂ, ಇವರ ಕೈತೋಟಕ್ಕೆ ಮಾತ್ರ ತೊಂದರೆಯಾಗದಂತೆ ನೋಡಿಕೊಂಡಿದ್ದಾರೆ.

ಇದು ನಮ್ಮದೇ ಬದನೆ.

ಚಂದ್ರಕಲಾ ಮಗಳೊಂದಿಗೆ.

ಇವರು ನೆಟ್ಟಿದ್ದ ‘ಚಪ್ಪರದ ಅವರೆ’ ಗಿಡ  ಹಬ್ಬಲು ಜಾಗ ಸಿಗದೆ ರಸ್ತೆಯ ಮರಕ್ಕೆ ಹಬ್ಬಿ ಕಾಯಿ ಬಿಟ್ಟಿದೆ. ಕಾಯಿ ಕೀಳಲು ಸಾಧ್ಯವಿಲ್ಲದಿದ್ದರೂ, ನೋಡಲು ಎಷ್ಟು ಚೆನ್ನಾಗಿದೆ ನೋಡಿ ಎಂದು ಸಂತೋಷ ಪಡುವ ಈ ದಂಪತಿಗಳನ್ನು ಕಂಡಾಗ ನೆನಪಾದದ್ದು, ‘ಎಂಟು ದಿನಗಳ ಹಿಂದೆ ಹತ್ತಾರು ಕೋತಿಗಳಿಗೆ ರಸದೌತಣವಾದ ನಮ್ಮ ಮನೆಯ, ಬಟರ್ ಫ್ರೂಟ್ ಮರಕ್ಕೆ ಹಬ್ಬಿರುವ  ಚಪ್ಪರದ ಅವರೆಕಾಯಿ’. ಹಣ್ಣು ತರಕಾರಿಗಳು ನಮಗೆ ಮಾತ್ರವಲ್ಲ, ಪಶು ಪಕ್ಷಿಗಳಿಗೂ ಬೇಕಲ್ಲವಾ? ಎಂದು ನಗೆ ಬೀರುತ್ತಾರೆ ಚಂದ್ರಕಲ.

೨೦-೩೦ರ ಜಾಗದಲ್ಲಿ ಮನೆಗೆ ಬೇಕಾದ ಎಲ್ಲ ತರಕಾರಿ, ಮೆಣಸಿನ ಕಾಯಿ, ಕೊತ್ತಂಬರಿ, ಬೆಳೆದುಕೊಳ್ಳ ಬಹುದೆಂದು ತೋರಿಸಿದ ಈ ದಂಪತಿಗಳು ಉಳಿದಿರುವ ಜಾಗದಲ್ಲಿ ಶುಂಠಿ ಹಾಗೂ ಗೆಡ್ಡೆ ತರಕಾರಿಗಳನ್ನು ಬೆಳೆಯುವುದು ಬಾಕಿ ಇದೆ. ಮುಂದಿನ ಹಂಗಾಮಿಗೆ ಅದೂ ಸಿದ್ಧವಾಗ ಬಹುದು ಎನ್ನುತ್ತಾರೆ ಚಂದ್ರಕಲ. ಇರುವ ಸಣ್ಣ ಜಾಗವನ್ನು ಸಮರ್ಥವಾಗಿ ಬಳಸಿಕೊಳ್ಳ ಬೇಕು. ಒಂದು ಪುಟ್ಟ ಕೈತೋಟ ಮನೆಯ ಅವಶ್ಯಕತೆಗಳನ್ನು ಪೂರೈಸುವುದರ ಜೊತೆಗೆ , ದೇಹದ ಆರೋಗ್ಯವನ್ನು, ಮನಸ್ಸಿನ ನೆಮ್ಮದಿಯನ್ನೂ ಕಾಪಾಡುತ್ತದೆ ಎಂಬ ವಿಷಯ ನಿರ್ವಿವಾದವಾದದ್ದು.

(ಚಿತ್ರಗಳು: ಎಆರ್‌ಎಸ್ ಶರ್ಮ)