ಮೈಸೂರಿಗೆ ಕೇವಲ ೧೮ ಮೈಲಿ ದೂರದ ತಿರುಮಕೂಡಲು ರಾಜ್ಯದ ಕಲಾ ಪರಂಪರೆಯಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ. ಅಲ್ಲಿನ ಸಂಗೀತ ವಂಶ ಒಂದರಲ್ಲಿ ಜೀವಿಸಿದ ಚಂದ್ರಕಾಂತಮ್ಮ ತಮ್ಮಕಿಶೋರಾವಸ್ಥೆಯಿಂದಲೇ ಭರತನಾಟ್ಯ ಕಲೆಗೆ ತಮ್ಮ ಜೀವನವನ್ನು ತೊಡಗಿಸಿಕೊಂಡಿದ್ದರು. ಆಗಿನ ಪ್ರಸಿದ್ಧ ನಾಟ್ಯಾಚಾರ‍್ಯ ಅರಣಿ ಶಾಮಣ್ಣನವರ ಪುತ್ರ, ಅಪ್ಪಯ್ಯನವರು ಇವರ ನೃತ್ಯ ಗುರು. ಮುಂದೆ ಚಂದ್ರಕಾಂತಮ್ಮ ಮೈಸೂರು ಆಸ್ಥಾನ ವಿದ್ವಾನ್ ಕಾಶಿ ಗುರುಗಳಿಂದ ಅಭಿನಯವನ್ನು ಬಿಡಾರಂ ಕೃಷ್ಣಪ್ಪನವರ ಶಿಷ್ಯ ಬಿ.ರಾಚಪ್ಪನವರಿಂದ ಸಂಗೀತವನ್ನು ಅಭ್ಯಾಸ ಮಾಡಿದರು. ತಾಳ ಮತ್ತು ಲಯಗಳಲ್ಲಿ ನಿಷ್ಣಾತರಾಗಿದ್ದ ತಿರುವಾಯ್ಯೂರಿನ ಸುಬ್ರಮಣ್ಯ ಅಯ್ಯರ್‌ರಿಂದ ಉನ್ನತ ಶಿಕ್ಷಣ ಪಡೆದು, ವಿಲೋಮ ಹಾಗೂ ಅವಧಾನ ಪದ್ಧತಿಗಳ ದರ್ಶನವನ್ನು ಸಾಧಿಸಿಕೊಂಡರು.

ಇವುಗಳ ಜೊತೆಗೆ ಮಹಾ ಮಹೋಪಾಧ್ಯಯರುಗಳಿಂದ ಸಾಹಿತ್ಯ ಜ್ಞಾನವನ್ನು ಬೆಳೆಸಿಕೊಂಡಿದ್ದು, ಪೂರ್ಣಜೀವನ ನಡೆಸಿದ ಚಂದ್ರಕಾಂತಮ್ಮನವರು, ನಾಲ್ವಡಿ ಕೃಷ್ಣರಾಜ ಒಡೆಯರಿಂದ ಮಾನ್ಯತೆ ಪಡೆದು ಅಂದಿನ ಆಸ್ಥಾನ ವಿದುಷಿಯಾಗಿ ಕೆಲಸ ಮಾಡಿದ್ದರು.

ಕರ್ನಾಟಕದ ನಾನಾ ಭಾಗಗಳ ಕಲಾ ರಸಿಕರು ಇವರ ಪ್ರತಿಭೆಗೆ ತಲೆದೂಗಿದ್ದಾರೆ. ಗೀತಗೋವಿಂದ ಮತ್ತು ರಾಜಶೇಖರ ವಿಲಾಸ ಕಾವ್ಯ ಭಾಗಗಳ ಇವರ ಗಮಕ ಮತ್ತು ಅಭಿನಯ ಇವರ ಕಲಾ ಶ್ರೀಮಂತಿಕೆಗೆ ಜೀವಂತ ಸಾಕ್ಷಯಗಳು, ಸಂಸ್ಕೃತ ಶ್ಲೋಕ ಹಾಗೂ ಜಾವಳಿಗಳಿವರ ಧ್ವನಿ ಮುದ್ರಣಗಳು ಜನಪ್ರಿಯವಾಗಿವೆ. ಇವರ ಅನುಯಾಯಿಗಳಲ್ಲಿ ಅನೇಕರು ಕೀರ್ತಿಶಾಲಿಗಳಾಗಿರುವ ಇವರಿಗೆ ರಾಜ್ಯ ಸಂಗೀತ-ನಾಟ್ಯ ಅಕಾಡೆಮಿ ತನ್ನ ೧೯೬೪-೬೫ನೇ ಸಾಲಿನ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.