೧. ‘ಸಾಂತಳಿಗೆ-ಸಾಯಿರ’ ನಾಡನ್ನು [ಹೊಂಬುಜ. ೧. (೮ ನಗರ ೩೫) ೧೦೭೭] ಆಳುತ್ತಿದ್ದವರು ಸಾಂತರಸರು [ಎ.ಕ.೪ ಕೊಪ್ಪ. ೩೯]. ಸಾಂತರ ಕುಲದವರ [ಎ.ಕ.೮, (೧೯೦೨) ಸಾಗರ. ೧೧೨; ಅದೇ ತೀರ್ಥಹ, ೧೯೨] ಸಾಂತರ ಬೀಡು [ಅದೇ, ಸಾಗರ. ೮೦] ಇದ್ದದ್ದು ಪೊಂಬುಚ್ಚದಲ್ಲಿ; ಇದು ಈಗಿನ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನಲ್ಲಿರುವ ಹೊಂಬುಜ ಕ್ಷೇತ್ರ. ಪೊಂಬುಚ್ಚಪುರವರಾಧೀಶರಾದ [ಇ.ಆ.೫೪೦] ಸಾಂತರರ ಅರಮನೆ [ಹೊಂಬುಜ. ೧.ಸಾಲು: ೮೪], ಕೋಟೆ [ಹೊಂಬುಜ ೨ (೮ ನಗರ ೩೬) ೧೦೭೭, ಸಾಲು: ೧೬೧-೬೨] ಮತ್ತು ಹೆಬ್ಬಾಗಿಲು [ಅದೇ, ಸಾಲು : ೧೪೬] ಎಲ್ಲ ಇದ್ದದ್ದು ಹೊಂಬುಜಪುರದಲ್ಲಿಯೇ.

೨. ಸಾಂತರರ ಮೂಲಪುರುಷನಾದ ಜಿನದತ್ತನು, ಸುಮಾರು ಕ್ರಿ.ಶ. ಏಳನೆಯ ಶತಮಾನದಲ್ಲಿ, ಉತ್ತರ ಮಧುರೆಯಿಂದ ಬಂದನು. ಪೊಂಬುಚ್ಚಪುರ ಪ್ರದೇಶದಲ್ಲಿ ಕೆಲವು ಸಾಹಸಗಳನ್ನು ಮಾಡಿದನು. ಇಲ್ಲಿದ್ದ ರಕ್ಕಸಕುಲವನ್ನು ನಾಶ ಮಾಡಿದನು. ಜಿನಶಾಸನದೇವಿಯಾದ ಪದ್ಮಾವತೀದೇವಿಯ ಅನುಗ್ರಹದಿಂದ ಸಪ್ತಾಂಗ ರಾಜ್ಯವನ್ನು ಸ್ಥಾಪಿಸಿದನು. ಹೊಂಬುಜವನ್ನು ನೆಲೆವೀಡನ್ನಾಗಿ ಮಾಡಿಕೊಂಡನು. ಅಲ್ಲಿಯೇ ಆತ ಪಟ್ಟಾಭಿಷೇಕ್ತನಾದನು. ಸಾಂತಳಿಗೆ ಸಾಯಿರ [ಎ.ಕ. ೮, ಸಾಗರ ೧೦೮.೧೦೪೨] ರಾಜ್ಯವನ್ನು ಒಂದೇ ಬೆಳ್ಗೊಡೆಯಡಿಗೆ ತಂದು ಆಳಿದನು.

೩. ಸಿಂಹಧ್ವಜ ಹಾಗೂ ಕಪಿಲಾಂಛನವನ್ನು ಹೊಂದಿದ್ದ ಸಾಂತರ ರಾಜ್ಯದ ಆರಂಭದಲ್ಲಿ ಜಿನದತ್ತನು ಮಾಡಿದ ಪರಾಕ್ರಮಗಳಲ್ಲಿ ಸ್ಥಳೀಯರ ಮೇಲೆ ಪಡೆದ ಗೆಲುವುಗಳು ಸೇರಿದ್ದವು. ಪಟ್ಟಿಪೊಂಬುರ್ಚಪುರದ ನೆರೆಹೊರೆಯ ಪರಿಸರವನ್ನು ನಡುಗಿಸುತ್ತಿದ್ದ ಅಟವಿಕರನ್ನೂ ಪಾಳೆಯಗಾರರನ್ನೂ ಜಿನದತ್ತನು ಗೆದ್ದನು. ಸುತ್ತಲಿನ ಜನರಿಗೆ ಪ್ರಿಯವಾಗುವಂತೆ, ಜಿನದತ್ತನ ಜನಪರ ಕಾಲಜಿಯ ಸಾಹಸ ಕಾರ್ಯಗಳು ಬೆಳೆದುವು.

೪. ಜಿನದತ್ತನು ಅಂಧಕಾಸುರನನ್ನು ಕೊಂದು ಅಂದಾಸುರವೆಂಬ ಕೋಟೆಯನ್ನೂ ನಗರ ನಿರ್ಮಾಣ ಮಾಡಿದನು [ಹೊಂಬುಜ.೧.೧೦೭೭. ಸಾಲು : ೧೧] ಎಂದು ಶಾಸನದಲ್ಲಿ ನಮೂದವಾಗಿದೆ. ಈ ಅಂಧಾಸುರ ಎಂಬುದು ಪುರಾಣ ಕಲ್ಪನೆಯಾಗಲಿ, ರಾಕ್ಷಸರಿಗೆ ಸೇರಿದ್ದಾಗಲಿ ಆಗಿರದೆ ವಾಸ್ತವವಾದ ಒಂದು ಮಹತ್ವದ ಕೋಟೆ ಹಾಗೂ ಸ್ಥಳವಾಗಿತ್ತೆಂಬುದನ್ನು ಕೆಲವು ಶಾಸನಗಳ ಆಧಾರದಿಂದ ಅರಿಯಬಹುದು.

೫. ಅಂಧಾಸುರವು ಏಳನೆಯ ಶತಮಾನದಿಂದ ಹದಿನಾಲ್ಕನೆಯ ಶತಮಾನದವರೆಗೆ ಆಗಿನ ಕನ್ನಡ ನಾಡಿನಲ್ಲಿ ಒಂದು ಪ್ರಸಿದ್ಧ ದುರ್ಗವಾಗಿತ್ತು. ಅದರಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ, ಪೊಂಬುಚ್ಚದ ವನದುರ್ಗವನ್ನು ಬಿಟ್ಟರೆ (ಸಾಂತಳಿಗೆ ಸಾಸಿರ ನಾಡಿನೊಳಗೆ) ಅಂಧಾಸುರ ನೆಲದುರ್ಗವು ಪ್ರಮುಖವಾಗಿತ್ತು.

೬. ಈ ಅಂಧಾಸುರವು ಹೊಂಬುಚ್ಚಕ್ಕೆ ಹತ್ತಿರವಿದ್ದ ಕೋಟೆಯೆಂದೂ ಸಾಂತಾರರಿಗೆ ಮುಖ್ಯವಾದ ಎರಡನೆಯ ಕೋಟೆಯಾಗಿತ್ತೆಂದೂ ತಿಳಿದುಬರುತ್ತದೆ. ಕದಂಬರ ಕೀರ್ತಿದೇವನು ಜಗದೇವನ ಮೇಲೆ ದಂಡೆತ್ತಿ ಬಂದಾಗ ಈ ಅಂಧಾಸುರ ಕೋಟೆಯನ್ನು ಮುತ್ತಿದನೆಂದು ಶಾಸನಗಳಿಂದ ತಿಳಿದುಬರುತ್ತದೆ [ಎ.ಕ.೮, ಸೊರಬ ೧೭೭, ೧೧೬೩; ಅದೇ, ಸೊರಬ ೫೬೭ ಇತ್ಯಾದಿ].

೭. ಕದಂಬರ ಕೀರ್ತಿದೇವನು ಅಂಧಾಸುರ ಕೋಟೆಯನ್ನು ಮುತ್ತಿಗೆ ಹಾಕಲು ಇದ್ದ ಇನ್ನೊಂದು ಕಾರಣವೆಂದರೆ, ಅದು ಸಾಂತರರ ದ್ವಿತೀಯ ಕೇಂದ್ರವಾಗಿದ್ದುದು, ಆ ವೇಳೆಗಾಗಲೇನೆ ಹೊಯ್ಸಳರ ಪ್ರಸಿದ್ಧ ವಿಷ್ಣುವರ್ಧನನು ತನ್ನ ವಶಕ್ಕೆ ತಂದು ಕೊಂಡಿದ್ದನೆಂದು ಶಾಸನಗಳಿಂದ ತಿಳಿದುಬರುತ್ತದೆ [ಎ.ಕ. ೨, (ಪ) ೧೬೨ (೧೩೨) ೧೧೫. ಪು. ೧೦೪. ಸಾಲು : ೨೭].

೮. ಈ ಅಂಧಾಸುರ ಕೋಟೆಯ ಸಮೀಪದ ಕೆಲವು ಹಳ್ಳಿಗಳನ್ನು ಸೇರಿಸಿ ‘ಅಂಧಾಸುರ ಪಂನೆರಡು’ ಎಂಬೊಂದು ಆಡಳಿತ ಘಟಕವೂ ಆ ವೇಳೆಗೆ ಹೆಸರು ಗಳಿಸಿತ್ತು [ಎ.ಕ.೮-೨(೧೯೦೨) ಸಾಗರ ೧೦೮. ೧೦೪೨. ಆಚಾಪುರ ಪು. ೩೦೬.ಸಾಲು: ೪೧-೪೨; ಅದೇ, ಸಾಗರ ೧೦೯. ೧೦೪೨. ಆಚಾಪುರ. ಪು. ೩೧೦.ಸಾಲು:೫೯].ಕ್ರಿ.ಶ. ೧೧೫೯ ರಲ್ಲಿ ಅಳಿಯಾದೇವಿಯು ಈ ಅಂಧಾಸುರ (ಖರಪುರ)ದಲ್ಲಿ ಒಂದು ಬಸದಿಯನ್ನು ಕಟ್ಟಿಸಿದಳೆಂದು ಇನ್ನೊಂದು ಶಾಸನದಿಂದ ತಿಳಿದು ಬರುತ್ತದೆ [ಅದೇ, ಸಾಗರ. ೧೫೯. ಪು. ೩೩೩].

೯. ಅಂಧಾಸುರ ಪಂನೆರಡು ವಿಭಾಗವನ್ನು ಮಹಾಮಂಡಲೇಶ್ವರನಾದ ಗೋನರಸನು ಕಾಳಾಮುಖ ಶೈವ ಬ್ರಾಹ್ಮಣರಿಗೆ ಅಗ್ರಹಾರವಾಗಿಸಿ, ‘ಗೊರವವಾಡಂ ಮಾಡಿ’, ಧಾರೆಯರೆದು ಕೊಟ್ಟನು. ಚೋೞ ಬಿಜ್ಜರಸ ಮಂಡಲೇಶ್ವರನ ಮಗನಾದ ಗೋನರಸನು ಅಂಧಾಸುರ ಕೋಟೆಯಲ್ಲಿ ಬೀಡು ಬಿಟ್ಟಿದ್ದನು. ಅಲ್ಲದೆ ಕೆಲವು ಕಾಲ ಆತನು ಈ ಅಂಧಾಸುರದಲ್ಲಿದ್ದು ಆಳುತ್ತಿದ್ದನು [ಎ.ಕ. ೮-೨. ಸಾಗರ. ೧೦೮ ಮತ್ತು ೧೦೯. ೧೦೪೨. ಪು. ೩೧೦.ಸಾಲು:೫೭].

೧೦. ಅಂಧಾಸುರ ಎಂಬುದು ಇಂದಿಗೂ ಇರುವ ಒಂದು ಅಪರೂಪದ ಹೆಸರಿನ ಹಳ್ಳಿಯಾಗಿದೆ. ಈ ಊರು ಈಗಿನ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಆನಂದಪುರಕ್ಕೆ ಸಮೀಪದಲ್ಲಿ, ಇದೇ ಅಂಧಾಸುರ ಎಂಬ ಹೆಸರಿನಿಂದ ಉಳಿದು ಬಂದಿದೆ.