ಕಳೆದ ನಲವತ್ತು ವರ್ಷಗಳಿಂದ ನಾನು ಸ್ವಯಂ ಪ್ರೇರಣೆಯಿಂದ ಪ್ರೀತಿಸಿ ವ್ಯಾಸಂಗ ಮಾಡುತ್ತ ಬಂದ ಶಾಸನಗಳನ್ನು ಕುರಿತು ಇದುವರೆಗೆ ಹೆಚ್ಚು ಬರವಣಿಗೆ ಮಾಡಿರಲಿಲ್ಲ. ಬೇರೆ ಬೇರೆ ವಿಶ್ವವಿದ್ಯಾಲಯದ ಇತಿಹಾಸ ಮತ್ತು ಶಾಸನದ ಆಸಕ್ತರು ನನ್ನ ಬಳಿ ಬಂದು ಚರ್ಚಿಸುತ್ತಿದ್ದರು, ಬೇಕಾದ ಮಾಹಿತಿಯನ್ನು ಕೇಳಿ ಪಡೆಯುತ್ತಿದ್ದರು. ಆದರಿಂದ ನನಗೆ ಖುಷಿ ಆಗುತ್ತಿತ್ತು. ಇದನ್ನು ಕಣ್ಣಾರೆ ಕಾಣುತ್ತಿದ್ದ ನನ್ನ ಸಹದ್ಯೋಗಿಗಳು, ಇತರ ವಿಶ್ವವಿದ್ಯಾಲಯದ ಅಧ್ಯಾಪಕ ಮಿತ್ರರು, ಶಾಸನಗಳು ಕುರಿತು ನಾನು ಮಾಡಿರುವ ಸಂಶೋಧನೆ, ಸಂಗ್ರಹಿಸಿರುವ ಸಾಮಾಗ್ರಿಯನ್ನು ಕೃತಿಗಳ ಮೂಲಕ ಹೊರಗೆಡಹಲೇಬೇಕೆಂದು ಆಗ್ರಹ ಪಡಿಸುತ್ತಿದ್ದರು. ಬಾ. ರಾ. ಗೋಪಾಲ್, ಕೆ.ವಿ. ರಮೇಶ್, ಎಂ. ಡಿ. ಸಮ್ಪತ್, ಎ.ವಿ. ನರಸಿಂಹಮೂರ್ತಿ, ಲಕ್ಷ್ಮಣ್ ತೆಲಗಾವಿ ಮುಂತಾದ ಶಾಸನತಜ್ಞರು ಕೂಡ ಒತ್ತಾಯಿಸುತ್ತಿದ್ದರು. ಇವರ ಪ್ರೇರಣೆಯಿಂದ ಇತ್ತೀಚಿನ ವರ್ಷಗಳಲ್ಲಿ ಸಂಪೂರ್ಣವಾಗಿ ಶಾಸನಗಳ ಅಭ್ಯಾಸದಲ್ಲಿ ತೊಡಗುವುದು ಸಾಧ್ಯವಾಯಿತು.

ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳೂ ಪ್ರಸಿದ್ಧ ಲೇಖಕರೂ ಸನ್ಮಿತ್ರರೂ ಆದ ಡಾ. ಚಂದ್ರಶೇಖರ ಕಂಬಾರರು ಆಯ್ದು ವರ್ಷಗಳಿಂದ ನನ್ನ ಸಂಶೋಧನ ಪುಸ್ತಕವೊಂದನ್ನು ಪ್ರಕಟಿಸುವ ಇರಾದೆಯಿಂದ, ಹಸ್ತಪ್ರತಿಯನ್ನು ಸಿದ್ಧಪಡಿಸಿಕೊಡಲು ಹೇಳುತ್ತಿದ್ದರು. ಕಾರಣಾಂತರಗಳಿಂದ ಕುಲಪತಿಯವರ ಸೂಚನೆಯನ್ನು ಕಾರ್ಯಗತಗೊಳಿಸಲು ಆಗಿರಲಿಲ್ಲ. ಕಡೆಗೊಮ್ಮೆ ಅವರು ‘ಇನ್ನು ನಾಲ್ಕು ತಿಂಗಳಲ್ಲಿ ನಿನ್ನ ಲೇಖನಗಳ ಹಸ್ತಪ್ರತಿಯನ್ನು ಮುದ್ರಣಕ್ಕೆ ಅಣಿಗೊಳಿಸಿ ಒಪ್ಪಿಸತಕ್ಕದ್ದು’ ಎಂದು ಅಂತಿಮಗಡುವು ಕೊಟ್ಟರು. ಅವರ ಕಳಕಳಿಗೆ, ಅಂತಃಕರಣಕ್ಕೆ ಮಣಿದು, ಲೇಖಣಿ ಹಿಡಿದು ಪಟ್ಟಾಗಿ ಕುಳಿತೆ. ಅರೆಬರೆಯಾಗಿದ್ದ ಬರೆಹಗಳನ್ನು ಸಪ್ರಾಣಿಸಿದೆ. ಅದರ ಫಲ ಈ ಸಂಕಲನ, ಇದಕ್ಕೆ ‘ಚಂದ್ರಕೊಡೆ’ ಎಂಬ ಶೀರ್ಷಿಕೆ ಕೊಟ್ಟವರೂ ಕುಲಪತಿಗಳೇನೆ. ಇದು ಈ ಪುಸ್ತಕದ ವಿಚಾರದಲ್ಲಿ ಕಂಬಾರರು ವಹಿಸಿದ ವೈಯಕ್ತಿಕ ಆಸಕ್ತಿಯ ಪ್ರತೀಕ. ಅವರಿಗೆ ನನ್ನ ನಮನಗಳನ್ನು ತಿಳಿಸಲು ಹರ್ಷವಾಗುತ್ತದೆ.

ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗದ ನಿರ್ದೇಶಕ ಪ್ರೊ. ಎ.ವಿ. ನಾವಡ, ಮುದ್ರಣ ವಿನ್ಯಾಸವನ್ನು ರಚಿಸಿದ ಪ್ರಕಟಣಾ ಸಹಾಯಕ ಕೆ. ಎಲ್. ರಾಜಶೇಖರ್, ಅಕ್ಷರಸಂಯೋಜನೆ ಮಾಡಿದ ನಾಗರಾಜ್, ಅಂದವಾಗಿ ಮುದ್ರಿಸಿಕೊಟ್ಟ ಶ್ರೀ ವೆಂಕಟೇಶ್ವರ ಪ್ರಿಂಟಿಂಗ್ ಪ್ರೆಸ್‍ನ ಸಿ.ಆರ್. ಜನಾರ್ಧನ್ ಅವರಿಗೆ, ಬಿಡುವಿಲ್ಲದ ಹಾಗೆ ದುಡಿದು ಈ ಪುಸ್ತಕ ಆಕಾರ ಪಡೆಯುವಂತೆ ಮಾಡಿದ ಮಡದಿ ಡಾ. ಕಮಲಾ ಹಂಪನಾ, ಅನುಬಂಧವನ್ನು ಅಣಿಗೊಣಿಸಿದ ಕೆಂಗೇರಿ ಚಕ್ರಾಪಾಣಿ ಇವರೆಲ್ಲ ತೋರಿದ ಮುತುವರ್ಜಿ ಮತ್ತು ಮಮತೆಯೆಂಬುದು ಮರೆಯಲಾಗದಂತಹ ಅನುಭವ, ಇವರೆಲ್ಲರ ಅಕ್ಕರೆಯನ್ನು ಮತ್ತೆ ಮತ್ತೆ ಮೆಲುಕುತ್ತೇನೆ.

ಸುಮಾರು ಮೂರು ದಶಕಗಳಿಂದ ಬರೆದ ಕೆಲವು ಸಂಶೋಧನ ಲೇಖನಗಳ ಹೊರತು, ಈ ಸಂಕಲನದಲ್ಲಿ ಸೇರಿರುವ ಬಹುಮಟ್ಟಿನ ಲೇಖನಗಳು ಹೊಚ್ಚ ಹೊಸದಾಗಿ ಬರೆದವುಗಳು. ಈ ಪುಸ್ತಕದಲ್ಲಿ ೭೫% ಕ್ಕೂ ಹೆಚ್ಚು ಭಾಗ ಅಪ್ರಕಟಿತ ಲೇಖನಗಳು, ಇವು ಇದೇ ಮೊದಲ ಬಾರಿಗೆ ಇಲ್ಲಿ ಬೆಳಕು ಕಾಣುತ್ತಿವೆ.

ಈ ಪುಸ್ತಕಗಳ ಲೇಖನಗಳ ಹರವು – ಹಾಸು ದೊಡ್ದದು. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ವಾಸ್ತು, ಶಿಲ್ಪ, ಕಲೆ, ಧರ್ಮ, ಚರಿತ್ರೆ – ಇವುಗಳಿಗೆ ಸಂಬಂಧಿಸಿದ ಮೌಲಿಕವಾದ ಮಾಹಿತಿ ಈ ಗ್ರಂಥದಲ್ಲಿ ಅಳವಡಿಸಲ್ಪಟ್ಟಿದೆ. ನಾನಾ ಪೂರಕ ಜ್ಞಾನಶಾಖೆಗಳ ತಜ್ಞರು ಪರಿಭಾವಿಸುವಂತಹ, ಇನ್ನೂ ಮುಂದುವರಿದ ವಾಗ್ವಾದ ಸಂವಾದಗಳಿಗೆ ಗ್ರಾಸವಾಗುವಂತಹ ಹೊಸ ಸಾಮಾಗ್ರಿಯನ್ನು ಮೊದಲ ಬಾರಿಗೆ ಇಲ್ಲಿ ಹೊರಗಿಟ್ಟಿದ್ದೇನೆ. ಶಾಸನಗಳನ್ನು ಹೆಚ್ಚಾಗಿ ಹಾಗೂ ಪ್ರಧಾನವಾಗಿ ಆಧರಿಸಿರುವ ಇಷ್ಟು ದೊಡ್ಡ ಪ್ರಮಾಣದ ಪುಸ್ತಕವನ್ನು ಸುಂದರವಾಗಿಯೂ ಶೀಘ್ರವಾಗಿಯೂ ಪ್ರಕಟಿಸಿದ ಕನ್ನಡ ವಿಶ್ವವಿದ್ಯಾಲಯಕ್ಕೆ ನಾನು ಋಣಿ.

ಹಂಪ ನಾಗರಾಜಯ್ಯ