ಭ್ರಾಜಿಷ್ಣುವಿಗೆ ಕಥೆ ಹೇಳುವ ಕಲೆ ಕರಗತ, ಕರತಲಾಮಲಕ. ಧಾರ್ಮಿಕ ಕಥೆಗಳನ್ನು ಹೇಳುತ್ತಿರುವುದರಿಂದ ಲೌಕಿಕರಿಗೂ ರುಚಿಸುವಂತೆ ಬೇಕಾದ ಮಸಾಲೆ ಸೇರಿಸುತ್ತಾನೆ. ಕಥೆಯ ಹೆಣಿಗೆ ಚಂದಗಾಣಲು ಉಪಕಥೆಗಳ ಬಣ್ಣ ಹಚ್ಚಿತ್ತಾನೆ. ಹಿನ್ನೆಲೆ ತಂತ್ರದ ಸಾರ್ಥಕ ಮತ್ತು ಪರಿಣಾಮಕಾರಿ ಅನ್ವಯವನ್ನು ವಿದ್ಯುಚ್ಚೋರ ರಿಸಿಯಕಥೆ, ಸನತ್ಕುಮಾರ ಚಕ್ರವರ್ತಿಯ ಕಥೆ – ಮುಂತಾದ ಕಥೆಗಳಲ್ಲಿ ನೋಡಬಹುದು. ಕಥನ ಕಲೆ ತನ್ನ ಸೂಕ್ಷ್ಮತೆ ಸಂಕೀರ್ಣತೆಗಳೊಂದಿಗೆ ಸಿದ್ದಿಸಿರುವ ಯಶಸ್ವಿ ಕಥೆಗಳೆಂದು ಸುಕುಮಾರಾಸ್ವಾಮಿ, ಸುಕೌಶಳ ಮತ್ತು ಗುರುದತ್ತ ಭಟಾರರ ಕಥೆಗಳನ್ನು ಹೆಸರಿಸಬಹುದು.

ಒಂದು ಘಟ್ಟ ಮುಟ್ಟುವವರೆಗೆ ಕಥೆಯನ್ನು ರೋಚಕವಾಗಿ ಸಾಗಿಸಿಕೊಂಡು ಹೋಗಿ, ಅದನ್ನು ಅತ್ಯಂತ ಕುತೂಹಲಕಾರಿ ಮೆಟ್ಟಿಲಲ್ಲಿ ನಿಲ್ಲಿಸಿ, ಅಲ್ಲಿಂದ ಮತ್ತೆ ಕೆಳಗಿಳಿದು ಬರುವಂತೆ ಹಿಂದಣ ಕಥೆಯ ನಿರೂಪಣೆಗೆ ತೊಡಗಿರುವ ಸ್ವಾರಸ್ಯ ಕೆಲವು ಕಥೆಗಳಲ್ಲಿ ಕೆನೆಕಟ್ಟಿದೆ. ಒಂದು ದೃಷ್ಟಾಂತದೊಂದಿಗೆ ಇದನ್ನು ಸ್ಪಷ್ಟಪಡಿಸಬಹುದು. ವಿದ್ಯುಚ್ಚೋರನ ಕಥೆಯಲ್ಲಿ ಕಳ್ಳರ ನಡುವೆ ನಡೆಯುವ ಆಕರ್ಷಕ ಪೈಪೋಟಿ ಸಂಕೀರ್ಣವಾಗಿದೆ: ಕಣ್‍ಕಟ್ಟುವಿದ್ಯೆ, ಸವಾಲು, ಪಾಟಿಸಾವಾಲು, ದೇಶಾಂತರ ಹೋಗುವುದು, ಪರೀಕ್ಷೆ, ಪ್ರತಿಭಟನೆ, ಸಹನೆ, ಸೋಲೊಪ್ಪಿಗೆ, ಸ್ನೇಹಾಧಿಕ್ಯ – ಇವೆಲ್ಲ ನಾಟಕೀಯ ನೆಲೆಯಲ್ಲಿ ಚಲಿಸುತ್ತವೆ. ಇಬ್ಬರೂ ಸೋಲುತ್ತಾರೆ, ಇಬ್ಬರೂ ಗೆಲ್ಲುತ್ತಾರೆ; ಹತ್ತಿರವಿದ್ದು ದೂರ ಸರಿದು ಮತ್ತೆ ಹತ್ತಿರ ಬರುತ್ತಾರೆ- ಕಥೆ ಕಳೆಗೊಳ್ಳುತ್ತ ಬಿಚ್ಚಿಕೊಳ್ಲುತ್ತದೆ. ಯಾವ ಹಂತದಲ್ಲೂ ಕುತೂಹಲ ಬತ್ತುವುದಿಲ್ಲ, ಅಂಕದ ಪರದೆ ಬೀಳುವತನಕ ಮೈನವಿರೇಳುತ್ತಾ ಬೆಳೆಯುತ್ತದೆ. ಭವಾವಳಿಯ ಗೊಂದಲವಿಲ್ಲ, ಗೆರೆಯೆಳೆದಂತೆ ಕಥೆ ನೇರವಾಗಿ ಸಾಗುತ್ತದೆ. ಅತ್ಯಾಧುನಿಕ ತಂತ್ರ ನಿಬಿಡವಾದ ಮೈಪುಳಕವೇಳುವ ಉತ್ತಮ ಪತ್ತೇದಾರಿ ಕಾದಂಬರಿಗೂ ಕಡಿಮೆಯಿಲ್ಲದ ಆಸಕ್ತಿಯನ್ನು ಸಾದ್ಯಂತವಾಗಿ ಮೂಡಿಸುತ್ತದೆಂಬುದು ಕಥೆಗಾರನ ನಿರೂಪಣಾ ಕೌಶಲ್ಯಕ್ಕೆ ಸಾಕ್ಷಿ. ಈ ಬಗೆಯ ಕಥೆಗಳ ಆಸ್ವಾದಕ್ಕೆ ಜಾತಿಮತ ಧರ್ಮಾದಿಗಳು ಅಡ್ಡಬರುವುದಿಲ್ಲ. ಜೀವನ ಸಿದ್ದಾಂತ ಮತ್ತು ವಿವೇಕಗಳನ್ನು, ಮನುಷ್ಯಸ್ವಭಾವದ ಸೂಕ್ಷ್ಮ ಹಾಗೂ ಸಂಕೀರ್ಣ ಪಾತಳಿಗಳನ್ನು ಇಷ್ಟು ಧ್ವನಿಪೂರ್ಣವಾಗಿ ಹಿಡಿದಿಟ್ಟ ಧಾರ್ಮಿಕ ಗ್ರಂಥಗಳು ಅಪರೂಪ.

ಕನ್ನಡ ಚಂಪೂ ಕಾವ್ಯಗಳಲ್ಲಿ ನಡನಡುವೆ ಬರುವ ನಡಗುಡ್ಡೆ ಗದ್ಯವನ್ನು ಬಿಟ್ಟರೆ, ಆದ್ಯಂತವಾಗಿ ಗದ್ಯದಲ್ಲೇ ಕೃತಿರಚನೆ ಮಾಡಿರುವುದು ಕನ್ನಡದಲ್ಲಿ ಕಡಿಮೆ. ಆರಾಧನಾ ಕರ್ಣಾತ ಟೀಕೆ, ಚಾವುಂಡರಾಯ ಪುರಾಣ, ನೋಂಪಿಯ ಕಥೆಗಳು, ಮುದ್ರಾಮಂಜೂಷ, ಕಲಾವತಿ ಪರಿಣಯ, ರಾಜಾವಳಿ ಕಥಾಸಾರ, ಚಿಕ್ಕದೇವರಾಜ ವಂಶಾವಳಿ, ಅದ್ಭುತ ರಾಮಾಯಣ, ರಾಮಾಶ್ವಮೇಧ- ರಾಜೇಂದ್ರನಾಮೆ ಮುಂತಾದ ಗದ್ಯಗ್ರಂಥಗಳಿವೆ; ಪದ್ಯಕಾವ್ಯಗಳಿಗೆ ಹೋಲಿಸಿದರೆ ಗದ್ಯಕಾವ್ಯಗಳು ಕಡಿಮೆ. ಗದ್ಯಸಾಹಿತ್ಯದ ಬೆಳವಣಿಗೆ ಕನ್ನಡದಲ್ಲಿ ಹುಲುಸಾಗಿಲ್ಲ. ಕವಿರಾಜ ಮಾರ್ಗಕಾರನ ಹೇಳಿಕೆಯ ಪ್ರಕಾರವಾಗಿ ಪೂರ್ವದ ಹಳಗನ್ನಡದಲ್ಲಿ ಗದ್ಯ ಕೃತಿಗಳೂ ಇದ್ದವು; ಅವು ಯಾವುವೂ ಉಳಿದು ಬಂದಿಲ್ಲ. ಗದ್ಯಕೃತಿಗಳ ಸುರಿಮಳೆಗೆ, ಸಿರಿಬೆಳೆಗೆ ಇಪ್ಪತ್ತೆನೆಯ ಶತಮಾನಕ್ಕೇ ಬರಬೇಕು. ಹಳಗನ್ನಡ ಸಾಹಿತ್ಯದ ಪರಿಮಿತ ಗದ್ಯಗ್ರಂಥಗಳಲ್ಲಿ ಶ್ರೇಷ್ಠವಾದದ್ದು ಭ್ರಾಜಿಷ್ಣುವಿನ ಆರಾಧನಾ ಕರ್ಣಾಟ ಟೀಕಾ.

ಭ್ರಾಜಿಷ್ಣುವಿನ ಕೃತಿಯನ್ನು ಕನ್ನಡದ ಚಿರಂತನ ಕೃತಿಯನ್ನಾಗಿಸಿರುವ ಗುಣಗಳಲ್ಲಿ ಅತ್ಯಂತ ಪ್ರಮುಖವಾದುದು ಅದರ ಅನನ್ಯ ಶೈಲಿ. ಕಥೆಗಳ ವಸ್ತು ಸಂಸ್ಕೃತ-ಪ್ರಾಕೃತಗಳಲ್ಲಿರುವಂತಹುದು; ಅದನ್ನು ಕನ್ನಡಕ್ಕೆ ತರುವಾಗ ಹೊಸ ಭಾಷೆಯಲ್ಲಿ ದಕ್ಕುವ ಸೃಜನಾತ್ಮಕ ಅಂಶಗಳು ಮಿಳಿತವಾಗಿ ಮೂಲಕ್ಕೆ ಮೆರಗು ಕೊಟ್ಟಿವೆ. ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ತಂತಿ ಕಳಿಸುವಾಗ, ಕಡಿಮೆ ಮಾತು ಬಳಸಿ ಹೆಚ್ಚು ಅರ್ಥ ಹೊರಡಿಸುವ ಹಾಗೆ, ಭ್ರಾಜಿಷ್ಣುವಿನ ಕನ್ನಡ ತನ್ನ ಹಿತಮಿತದಿಂದ ಬೆರಗು ಕವಿಸುತ್ತದೆ. ಕವಿಯ ಪ್ರಾಸಾದಿಕ ಪ್ರವಾಹದಿಂದ, ಎಲ್ಲೇ ಹೊರತೆಗೆದು ಯಾವುದೇ ವಾಕ್ಯ ನೋಡಿದರೂ ತನ್ನ ನಿರಾಭರಣ ಗುಣದಿಂದ ಓದುಗರ ನೆನಪಿನ ಉಗ್ರಾಣದಲ್ಲಿ ನಿಲ್ಲುತ್ತದೆ. [ಈ ಪಾರದರ್ಶಕ ಶೈಲಿಯನ್ನು ಉದಾಹರಣೆಯೊಂದಿಗೆ ವಿಸ್ತಾರವಾಗಿ ನನ್ನ ಮಹಾ ಪ್ರಬಂಧದಲ್ಲಿ ಚರ್ಚಿಸಿದ್ದೇನೆ; ಈಗ ಭ್ರಾಜಿಷ್ಣುವಿನ ಕಥೆಗಳೇ ಇಲ್ಲಿರುವುದರಿಂದ ಈ ಶೈಲಿಯ ಸೊಗಸನ್ನು ಕುರಿತು ಸಂಗ್ರಹವಾಗಿ ವಿವರಣೆ ಕೊಡುತ್ತಿದ್ದೇನೆ.]

ತುಂಬ ಗಂಭೀರವಾದ ಧಾರ್ಮಿಕ ತತ್ವ ಪ್ರತಿಪಾದನೆಗೆ ಕಥನ ಮಾಧ್ಯಮವನ್ನು ಅಳವಡಿಸಿರುವ ಅರಿವು ಭ್ರಾಜಿಷ್ಣುವಿಗಿದೆ. ಎಲ್ಲೂ ಮುಖ್ಯ ವಿಷಯ, ಗಾಂಭೀರ್ಯದ ಎಲ್ಲೆ ಮೀರದಂತೆ, ನಿಯಂತ್ರಿಸಿಕೊಂಡು ನಡೆಯುವ ಹೊಣೆ ಆತನಿಗಿದೆ. ಭ್ರಾಜಿಷ್ಣು ಹುಟ್ಟುಕವಿ, ಕಲಾವಿದ, ಕಥೆಗಾರ; ಆದರೆ ಆರಿಸಿಕೊಂಡಿರುವ ವಸ್ತು ಅವನ ಸೃಜನ ಸಾಮರ್ಥ್ಯದ ಪೂರ್ಣವಿಲಾಸಕ್ಕೆ ಸೀಮಾರೇಖೆ ಎಳೆದಿದೆ. ಈ ಬಗೆಯ ಸಿದ್ಧ ಚೌಕಟ್ಟಿನೊಳಗೇ ಆತ ತನ್ನ ಪ್ರತಿಭೆಯನ್ನು ತೋರಿಸಿದ್ದಾನೆ. ಭ್ರಾಜಿಷ್ಣುವಿಗೆ ಕನ್ನಡ ಗದ್ಯದ ಲಯಗಾರಿಕೆ ಸಿದ್ಧಿಸಿದೆ; ಭಾವಗೀತೆಯ ತೀವ್ರತೆ ಪಡೆದ ಆತನ ಗದ್ಯದ ನಡಿಗೆಯ ಬೆಡಗು ಇಂದ್ರಿಯಗಳನ್ನು ಮುದಗೊಳಿಸಿ ಕುಣಿಸುತ್ತದೆ. ಪ್ರತಿಯೊಂದು ಕಥೆಯ ಹೊಟ್ಟೆಯಲ್ಲಿ ಪುಟ್ಟ ಶಬ್ದ – ವಾಕ್ಯಗಳು; ಇಂಪಾದ ನುಡಿಗಳು, ತಿರುಳುಳ್ಳ ಮಾತುಗಳು. ಸಂಸ್ಕೃತದ ಆರ್ಭಟವಿಲ್ಲ. ದೀರ್ಘಸಮಾಸಗಳ ಆಡಂಬರವಿಲ್ಲ. ಪಾಂಡಿತ್ಯದ ಉರುವಿಲ್ಲ. ಭಾಷೆ ಭಾರವಾಗುವುದಿಲ್ಲ; ಅದರಲ್ಲಿ ಬೊಜ್ಜಿಲ್ಲ. ಒಳ್ಳೆಯ ಕನ್ನದ, ಸಾರವತ್ತಾದ ಕನ್ನಡ. ಮಿತವಾದ ನುಡಿತ. ಹಿತವಾದ ಮೆಲ್ನುಡಿ, ಹಿತಮಿತ ಮಾತುಗಾರಿಕೆಯಲ್ಲಿ ಕನ್ನಡ ನುಡಿಗಳಿಗೆ ಎಷ್ಟು ಮೊನಚಿದೆಯೆಂಬುದು ಇಲ್ಲಿ ಅನುಭವ ವೇದ್ಯವಾಗುತ್ತದೆ. ಕನ್ನಡವನ್ನು ಅರ್ಥಪೂರ್ಣವಾದ ಸಂಕ್ಷಿಪ್ತತೆಯಲ್ಲಿ ಅರಳಿಸುತ್ತಾ ಸಾಗುವ ಗದ್ಯ ಬಿಡಿಸುವ ಚಿತ್ತಾರಗಳು ಹೃದ್ಯವಾಗಿವೆ :

            “ಅಮ್ಮಾ ಊರ ಪೊೞಗಣ ಬಾವಿಯೊಳೊರ್ವಂ+
ಮಹಾಪುರುಷಂ ಬಂದಿರ್ದೊನ್+
ಆತನಂ ನೀಮೊಡಗೊಂಡು ಮನೆಗೆ ಬನ್ನಿಂ+
ಎಂದೊಡೆ+ ಅಂತೆಗೆಯ್ವೆನ್+ ಎಂದು+ ಆತನುಂ ಪೋಗಿ+
ಒಡಗೊಂಡು ಬಂದು+ ಆತನ ಶ್ರಮಂ ಪೋಗೆ+
ದಿವ್ಯಮಪ್ಪ+ ಆಹಾರಮನೂಡಿರ್ದನ್”

ನಿರುಕಾದ ಶಕ್ತಿಶಾಲಿಯಾದ ಸಣ್ಣಪುಟ್ಟ ವಾಕ್ಯಗಳ್ಯ್, ಅರ್ಥಸಂವಹನದಲ್ಲಿ ಗೋಜಲಿಲ್ಲ, ಕ್ಲಿಷ್ಟತೆಯಿಲ್ಲ, ಉಕ್ತಿಗಳು ಬಿಟ್ಟ ಬಾಣದಂತೆ ಗುರಿ ಮುಟ್ಟುತ್ತವೆ. ಗದ್ಯದ ಗತಿಯಲ್ಲಿ ಆಕರ್ಷಕ ಲಯ, ಗಜಗಾಂಭೀರ್ಯದ ತೂಕ, ಹಳಿ ತಪ್ಪದ ನೇರ ಓಟದಲ್ಲಿ ವೇಗ ಹೆಚ್ಚು. ಉಸಿರಾಡಲೂ ಪುರುಸೊತ್ತಿಲ್ಲದಂತೆ ಕಥೆಗಳು ಘಟನೆಗಳು ದಡದದನೆ ಹರಿದಾಡುತ್ತವೆ. ಕವಿ ಸಹಜವಾದ ದೃಷ್ಟಿ ಕಣ್ಣು ತೆರೆದು ಇರುತ್ತದೆ:

            “ಎಮಗೆ
ಸೌಭಾಗ್ಯಮಿಲ್ಲದವರ್ಗೆ
ಭರ್ತಾರನ ದೆಸೆಯಿಂದಪ್ಪ ಸೂೞುಂ ಪಾೞಿಯುಮಿಲ್ಲದೊರ್ಗೆ
ಬಸಿಱುಂ ಮಗನುಂ ಎಂತಕ್ಕುಂ
ನೀಮಾರಾನುಂ ಸೌಭಾಗ್ಯಮುಳ್ಳೊರಲ್ಲಿ
ಬಸಿಱುಂ ಮಗನುಮನ್ ಆರಯ್ಯಿಂ
ಎಮ್ಮಲ್ಲಿ ಏನನಾರಯ್ವಿರ್”

ಆಯಾ ಸಂದರ್ಭದ ಭಾವ ಪುಷ್ಟಿಗೆ ತಕ್ಕ ಹಾಗೆ ಮುತ್ತಿನಂತೆ ಸೋಸಿ ಆಯುವ ನವಿರು ಮಾತುಗಾರಿಕೆ. ಎರವಲ್ಲದ ಕನ್ನಡ ನೆಲದ ಬೆಳೆಯೆನಿಸುವ ತಾಜಾತನ. ಅಚ್ಚಗನ್ನಡದ ಸಂಸ್ಕಾರ ಪಡೆದ ಕುಯಲು. ಪ್ರತಿಭಾವಿಷ್ಟವಾದ ಉದಾತ್ತವಾಣಿ. ಬೆಳಗಿನ ಪ್ರಸನ್ನತೆಯ ಕವಿವಾಣಿ. ತನ್ನೊಳಗಿದನ್ನು ತೋರಿಸಿ ಮರಳಮೇಲೆ ತೆಳ್ಳಗೆ ನಗುನಗುತ್ತ ಹರಿಯುವ ತಿಳಿನೀರಿನ ಹೊಳೆ. ಎಲ್ಲಿಯೂ ಪಾಚಿಗಟ್ಟುವುದಿಲ್ಲ, ನಿಂತು ಹೋಗಿ ಮಲೆಯುವುದಿಲ್ಲ. ಇಂಥ ಗದ್ಯವನ್ನು ಓದುವುದು ಓದಿಸುವುದು ಕೇಳುವುದು ವಿಶಿಷ್ಟ ಸುಖಾನುಭವ. ಪುಟಪುಟದಲ್ಲೂ ಸಣ್ಣ ಸಣ್ಣ ಹಣತೆ ಹಚ್ಚಿದಂತೆ, ನಕ್ಷತ್ರ ಮಿನುಗಿದಂತೆ, ಹರಳು ಕೀಲಿಸಿದಂತೆ ಕನ್ನಡದ ಸೂಳ್ನುಡಿಗಳು ಜಾಣ್ಡುಡಿಗಳು ಲಕಲಕ ಹೊಳೆಯುತ್ತವೆ. ಒಂದೇ ಕೃತಿಯಲ್ಲಿ ಸರಳತೆ ಸಹಜತೆ ಇಷ್ಟು ನಿರಾಯಾಸ ಸಹಜವಾಗಿ ಹೀಗೆ ಸಮಾನವಾಗಿ ಹೆಣೆದುಕೊಳ್ಳುವುದು ಅಪರೂಪ.

ಕನ್ನಡ ಭಾಷೆಯ ಬಳಕೆಯಲ್ಲಿ ಕಥೆಗಾರ ತೋರಿರುವ ಎಚ್ಚರ ಸೂಕ್ಷ್ಮತೆಯಿಂದಾಗಿ ಇಲ್ಲಿನ ಕಥೆಗಳಿಗೆ ಮಾಸದ ಹೊಸತನ ಬಂದಿದೆ. ಈ ಭಾಷೆ ನಮ್ಮ ಇಂದ್ರಿಯಗಳನ್ನು ದಟ್ಟವಾಗಿ ದುಡಿಸಿಕೊಳ್ಳುವ ಮತ್ತು ಸುತ್ತು ಬಳಸು ಇಲ್ಲದೆ ಸ್ಪಷ್ಟವಾಗಿ ಮುಖಾಮುಖಿಯಾಗಿ ಮಾತಾಡಿಸುವ ರೀತಿ ಅಪರೂಪದ ಅನುಭವ. ಅದು ಅಲ್ಲಲ್ಲಿ ಆಡುಮಾತಿನ ದನಿಗಳನ್ನು ಅಭಿನಯಿಸುತ್ತದೆ :

ಅರಸರೆಂಬೊರಾರ್; ಇತ್ತಬಾ ನಾಗಶ್ರೀ; ಅರುಚಿಗಮೇಕೆ ಮರ್ದಂ
ಮಾಡಿಸಿದಿರಿಲ್ಲ
; ಈ ಪೊೞೆತ್ತ ಪೋದಪ್ಪಯ್; ಎನಗೆ ಪೆಂಡತಿಯಪ್ಪಾ;
ಎಲೆ ಕೂಸೆ ನೀರು ಕುಡಿಯಲೆೞೆಯಾ : ಎಲೆಯಣ್ಣಂಗಳಿರಾ ನೀಮೀತನಂ
ಕೊಂದಿರಿ : ಕೂಸನಾರ್ಗೆ ಕೊಟ್ಟಪಿರಿ : ನಿನಗೆ ಬೇನೆ ಮೂಡಿತ್ತೆ : ನೀನೇಕೆ
ನಕ್ಕಪ್ಪೆಯಮ್ಮಾ !

ವಿವಕ್ಷಿತ ಅರ್ಥ ಪ್ರತೀತಿಗೆ ಎಷ್ಟು ಬೇಕೋ ಅಷ್ಟನ್ನು ಅಳವಡಿಸಿ ಔಚಿತ್ಯ ಪ್ರಜ್ಞೆಯನ್ನು ಕಾಪಾಡಿರುವುದು ಭ್ರಾಜಿಷ್ಣುವಿನ ಸಾಧನೆ. ಅವನ ಶೈಲಿಯಲ್ಲಿ ಹಾಳತದಂತೆ ಹರಿತವೂ ಇದೆ. ಹದವೂ ಇದೆ, ಹತೋಟಿಯೂ ಇದೆ. ವಿನಾಕಾರನ ಲಂಭಿಸುವುದಿಲ್ಲ ಇನ್ನೂ ಬೆಳೆಸಲು ಅವಕಾಶವಿರುವಾಗ ಕೂಡ ಸಂಯಮದ ಕಡಿವಾಣವನ್ನು ಸಡಿಲಿಸುವುದಿಲ್ಲ. ಸಾರಾಗ್ರಾಹಿತ್ವದಲ್ಲಿ ಕವಿಗೆ ವಿಶ್ವಾಸ. ಖಚಿತವಾದ ಭಾಬಾಭಿವ್ಯಕ್ತಿಗೆ ಆದ್ಯತೆ ಕೊಡುತ್ತಾನೆ. ಆತನ ಮಿತವ್ಯಯಾಸಕ್ತಿಯಿಂದಾಗಿ ಶಬ್ದಗಳ ದುಂದುಗಾರಿಕೆಯಿಲ್ಲ. ನ್ಯೂನಾತಿರೇಕಗಳ ಗಂಟುಗಿಣ್ಣುಗಳನ್ನು ಕತ್ತರಿಸುತ್ತಾನೆ. ಗದ್ಯದ ಸಕಲಾಂಗಗಳನ್ನು ಹೊಂದಿಸಿ ಹೊಸೆದ ಭ್ರಾಜಿಷ್ಣುವಿನ ಮಧುರ ಕನ್ನದ, ಓದುಗನನ್ನು ಸುಲಭವಾಗಿ ಆಶ್ರಮವಾಗಿ ಸೆಳೆದು ಪರವಶಗೊಳಿಸುತ್ತದೆ. ಗಡಸು ಪೆಡಸುಗಳಿಂದ ಆಡು ನುಡಿಯ ಸೊಗಡು ಮತ್ತು ನಾಟಕೀಯ ಸಂಭಾಷಣೆಯ ಧಾಟಿಗಳಿ ಈ ಗದ್ಯದಲ್ಲಿ ಹಾಸು ಹೊಕ್ಕಾಗಿವೆ :

            “ಮಗನೆ ನಿನಗೆ ಪಟ್ಟಂಗಟ್ಟಲ್ ಬಗೆದಪ್ಪೆನ್
ಅಯ್ಯಾ ಎನಗೆ ನೀಮುಂ ಪಟ್ಟಂಗಟ್ಟಿದಪಿರೊ
ಮೋಕ್ಷ ಪಟ್ಟಂಗಟ್ಟಿದಪಿರೋ
?
ಮಗನೆ ನಿನಗೆ ಮನುಷ್ಯ ರಾಜ್ಯ ಪಟ್ಟಂಗಟ್ಟಿದಪೆನ್.
ದೇವಾ
, ರಾಜ್ಯಪಟ್ಟಬಂಧನಮುಂ ಮೋಕ್ಷಸುಖರಾಜ್ಯ ಪಟ್ಟಬಂಧನಮುಂ ಎಂತು?
ಮೋಕ್ಷ ಸುಖ ರಾಜ್ಯಪಟ್ಟಮಂ ತಪಂಗೆಯ್ವೊಂಗೆ ಕಟ್ಟುವುದು.
ಅಂತಪ್ಪೊಡೆ ಮನುಷ್ಯರಾಜ್ಯ ಪಟ್ಟಮನೊಲ್ಲೆನ್
, ಎನಗೆ ಮೋಕ್ಷರಾಜ್ಯ ಪಟ್ಟಂಗಟ್ಟಿಮ್.
ಮಗನೆ ನೀನಿನ್ನುಂ ಕೂಸನೈ. ಬಾಲವದ್ದೆಯನ್ನೆಗಂ ಬೞೆದು
, ಅರಸುಗೆಯ್ದು,
ಇಷ್ಟವಿಷಯ ಕಾಮಭೋಗಂಗಳನನುಭವಿಸುತ್ತುಂ ಬಱೆಕ್ಕೆ
ಪಶ್ಚಾತ್ಕಾಲದೊಳ್ ತಪಂ ಬಡುವುದು.
ಅನ್ನೆಗಂ ಸಾವರೊ ಬಾೞ್ವರೊ ಎಂತಱೆಯಲಕ್ಕುಂ
, ಮನುಷ್ಯರ ಬಾೞುಂ (ನಿಲ್ಲದು)
ಭೋಗಂಗಳುಂ ಕಿಂಪಾಕಫಲದೊಳೋರನ್ನವು. ರಾಜ್ಯದೊಳಪ್ಪ ಭೋಗಸುಖಂಗಳನೊಲ್ಲೆಂ

ಭ್ರಾಜಿಷ್ಣು ಕನ್ನಡ ಗದ್ಯಶಿಲ್ಪಿ. ಆತನದು ಕನ್ನಡ ಭಾಷೆಗೆ ಹೊಸ ಆಯಾಮ ತಂದುಕೊಟ್ಟ ಮಾದರಿಗದ್ಯ. ಪ್ರಾದೇಶಿಕತೆ ಮತ್ತು ದೇಸಿಯನ್ನು ಮೈಗೂಡಿಸಿಕೊಂಡ ಭ್ರಾಜಿಷ್ಣು ಅಭಿವ್ಯಕ್ತಿಯ ದಿಕ್ಕನ್ನೂ ಸಾಧ್ಯತೆಯನ್ನೂ ಬದಲಿಸಿಬಿಟ್ಟಿದ್ದಾನೆ. ಆರಾಧನಾ ಕರ್ಣಾಟ ಟೀಕಾ ಕನ್ನಡ ಗದ್ಯಲೋಕದಲ್ಲಿ ಉಜ್ವಲ ದೀಪ ಸ್ತಂಭ. ಭ್ರಾಜಿಷ್ಣುವಿನ ಗದ್ಯ ಸಾಲಂಕೃತವಾಗಿದೆ ಸಾರವತ್ತಾಗಿದೆ ಗಂಭೀರವಾಗಿದೆ ಶಕ್ತಿಯುತವಾಗಿ, ಸಮತೂಕದ ದೇಸೀ ಶೈಲಿಯಾಗಿದೆ.

ಆಕಟೀದಲ್ಲಿ ಕೆಲವು ವಾಕ್ಯಗಳು, ಪದಪುಂಜಗಳು ಪುನರುಕ್ತವಾಗುವುದುಂಟು. ಘಾಗಿದ್ದೂ ಚರ್ವಿತಚರ್ವಣದ ಪ್ರಶ್ನೆ ಬರುವುದಿಲ್ಲ. ಪ್ರತಿ ಕಥೆಯಲ್ಲೂ ಅನಿವಾರ್ಯವಾಗಿ ಪುನರಾವೃತ್ತಿಯಾಗುವ ಅಂಶಗಳು ಕ್ಷಮಾರ್ಹವಾಗುತ್ತವೆ. ಈ ಪುನರಾವೃತ್ತಿಯು ಏಕಾತಾನವಲ್ಲವೆಂಬುದನ್ನು ಮನಗಾಣಬೇಕಾದರೆ ಪ್ರತಿಯೊಂದು ಕಥೆಯನ್ನೂ ಪ್ರತ್ಯೇಕ ಘಟಕವಾಗಿಯೇ ಪರಿಶೀಲಿಸಬೇಕು. ಏಕೆಂದರೆ ಇಡೀ ಸಂಕಲನವನ್ನು ಚಂಪೂ ಷಟ್ಪದಿ ರಗಳೆ ಕಾವ್ಯಗಳಂತೆ ಅಖಂಡವಾಗಿ ಪರಾಮರ್ಶೆ ಮಾಡುವುದಕ್ಕೆ ಕೆಲವು ನಿರ್ಬಂಧಗಳಿವೆ; ಇದು ೧೯ ಭಿನ್ನ ಕಥೆಗಳ ಸಂಕಲನ, ಯಾವುದೇ ಆಧುನಿಕ ಸಂಕಲನವನ್ನು ವಿಮರ್ಶಿಸುವಾಗ ಪ್ರತಿಯೊಂದು ಕಥೆಯನ್ನು ತನಿಯಾಗಿ ವಿವೇಚಿಸುತ್ತೇವೆ; ಅಂತೆಯೇ ಒಟ್ಟಾರೆ ಲೇಖಕನ ಪ್ರೇರಣೆ, ಧೋರಣೆ ಕುರಿತು ವಿವೇಚಿಸುತ್ತೇವೆ. ಭ್ರಾಜಿಷ್ಣುವಿನ ಸಂಕಲನವನ್ನೂ ಇದರಂತೆಯೇ ಅವಲೋಕಿಸಬಹುದು. ಆದ್ದರಿಂದ ಪುನರುಕ್ತಿಯ ಆಯಾ ಕಥೆಯ ಸಂದರ್ಭದಲ್ಲಿ, ಆಯಾ ಪ್ರಕರಣಗಳಲ್ಲಿ ಬೆಲೆಯಿದೆ.

ಸುಕೌಶಳ ಸ್ವಾಮಿಯ್ ಕಥೆಯನ್ನು ಹಿನ್ನೆಲೆ ತಂತ್ರದ ಯಶಸ್ವಿ ಅಳವಡಿಕೆ ಉತ್ತಮ ಉದಾಹರಣೆಯಾಗಿ ಭ್ರಾಜಿಷ್ಣು ಕಡೆದು ನಿಲ್ಲಿಸಿದ್ದಾನೆ. ಈ ಕಥೆ ಚೆಲ್ಲುವ ಹಿಂಬೆಳಕು, ಬುವಿ ಬಾನುತಬ್ಬಿ, ಹೊಸ ಆಯಾಮಗಳತ್ತ ಹೊರಳುತ್ತ, ಹಿಂದಿನೆರಡು ಭವಗಳನ್ನು ಭವ್ಯವಾಗಿ ಬೆಳಗಿಸುತ್ತದೆ. ಮುಂದಿನ ಮೂರು ಭವಗಳ ಮೇಲೆ ಹೊನಲು ಬೆಳಕನ್ನು ಹಾಯಿಸುತ್ತದೆ. ಇಡೀ ಭಾರತದ ಪೂರ್ವ-ಪಶ್ಚಿಮ ಮತ್ತು ದಕ್ಷಿಣೋತ್ತರಗಳವರೆಗೆ ಕಥೆಯ ಕಾರ್ಯಕ್ಷೇತ್ರ ಹಿಗ್ಗಿ ಹಬ್ಬುತ್ತದೆ. ಕಥೆ ಅನಾವರಣಗೊಳ್ಳುವುದು ಅಂಗನಾಡಿಗೆ ಸೇರಿದ ಚಂಪಾನಗರದಲ್ಲಿ, ಅದು ಅಂಕುರಿಸುವುದು ತೆಂಕಣ ಕಡಲ ತಡಿಯ ಮಲಯ ಪರ್ವತದಲ್ಲಿ, ಅಲ್ಲಿಮ್ದ ಅದು ದಾಂಗುಡಿಯಿಡುವುದು ದ್ರವಿಳ ವಿಷಯದ ಉತ್ತರ ಮಧುರೆಯಲ್ಲಿ. ಮುಂದೆ ಪಲ್ಲವಿಸುವುದು ಸುರಟ ನಾಡಿನ ಗಿರಿನಗರಿಯಲ್ಲಿ, ಅದು ಫಲಿಸುವುದು ಕಥೆಯ ಕೇಂದ್ರ ಪಾತ್ರವಾದ ಸುಕೌಶಲನ ಹುಟ್ಟಿಗೆ ತೊಟ್ಟಿಲಾದ ಮಗಧೆಯ ರಾಜಗೃಹದಲ್ಲಿ. ಇದರ ಪರ್ಯವಸಾನವಾದರೊ ಮೊಗ್ಗಳಗಿರಿಯ ತುದಿಯಲ್ಲಿ. ಜತೆಗೆ ವಿದ್ಯಾಧರ ಭವನಗಳು, ವಿಜಯಾರ್ಧೆ ಪರ್ವತದ ತೆಂಕಣ ಬಡಗಣ ಶ್ರೇಣಿಗಳ ನಿವಾಸಗಳು. ಒಂದು ಜೀವಕ್ಕೆ ಜಿಗಿಲ್ಲು ಪತ್ತಿದ ಒಲವಿನಪ್ಪುಗೆ ಭವದಿಂದ ಭವಕ್ಕೆ ಹೇಗೆ ಅಂಟಿಕೊಂಡು ಬರುತ್ತದೆಂಬುದನ್ನು ಸುಕೇಶಿನಿ-ಮಲಯ ಸುಂದರನೆಂಬ ಆನೆಯ ಪಾತ್ರಗಳಲ್ಲಿ ಧ್ವನಿರಮ್ಯವಾಗಿ ಹರಳುಗೊಳಿಸಿ ಕೀಲಿಸಿದ್ದಾನೆ. ಶ್ರೇಷ್ಠ ಕಥೆಗಾರನಲ್ಲಿ ಇರಬೇಕಾದ ಕಥನ ಕೌಶಲ ಈ ಸುಕೌಶಲ ಸ್ವಾಮಿಯ ಕಥೆಯಲ್ಲಿ ಹೆಪ್ಪುಗಟ್ಟಿದೆ. ಅಗಲಿಕೆಯ ನೋವು ತಡೆಯಲಾಗದವರು, ಒಬ್ಬರೊಬ್ಬರಿಗಾಗಿ ಪ್ರಾಣ ಬಿಡುವ ಆದರ್ಶ ಪ್ರೇಮಿಗಳು ಇಲ್ಲಿ ಕಾಣಿಸಿಗುತ್ತಾರೆ.

ವಡ್ಡಾರಾಧನೆ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಉಜ್ವಲ ವಿಲಾಸವಿರುವ ಕೃತಿ. ಚರಿತ್ರೆಯ ಹಂಗು, ಆಶ್ರಯದಾತ ಮರ್ಜಿ ಇರದ ಧರ್ಮದ ಪ್ರಭೆಯೊಳಗೇ ಬೆಳಗಿದ ಕೃತಿ. ತರುಗಿರಿ ಬನಸಿರಿ ಸೂರ್ಯಚಂದ್ರ- ಈ ಬಗೆಯ ಸಂಕಲ್ಪ ಪೂರ್ವಕವಾಗಿ ಮಾಡಿದ ವರ್ಣನೆಗಳಿಲ್ಲ.

ಆರಾಧನಾ ಕರ್ಣಾಟ ಟೀಕಾ ಗ್ರಂಥವು ತಾನು ಹುಟ್ಟಿದ ಸಮಾಜದ, ತಕ್ಕಮಟ್ಟಿಗೆ ಒಳ್ಳೆಯದೆನ್ನಬಹುದಾದ, ದಾಖಲೆಯೂ ಆಗಿದೆ. ಭ್ರಾಜಿಷ್ಣುವು ತನ್ನ ಸುತ್ತಲಿನ ಪರಿಸರವನ್ನು ಮಹತ್ವ ಪೂರ್ಣವಾದ ವಿವರಗಳಿಂದ, ಸಂಯಮ ಪೂರ್ಣವಾದ ಸಂಗ್ರಾಹಕ ಶಿಸ್ತಿನಿಂದ ಗ್ರಹಿಸಿ, ಸೊಗಸಾದ ಗರಿಗರಿಯಾದ ಕನ್ನಡ ಭಾಷೆಯಲ್ಲಿ ಹಿದಿದಿಟ್ಟಿದ್ದಾನೆ; ಮತ್ತು ಅಂತಹ ಸಂಗತಿಗಳನ್ನು ನಿರ್ಲಿಪ್ತ ನೆಲೆಯಲ್ಲಿ ನಿಂತು ಸಾಕ್ಷೀಪ್ರಜ್ಞೆಯಿಂದ ಚಿತ್ರಿಸಿದ್ದಾನೆ. ಅಲ್ಲಲ್ಲಿ ಸಮಾಜದ ಅವನತಿಯ ಅಪಮೌಲೀಕರಣದ ಸುಳಿವು ಪಳೆಯುಳಿಕೆಯೂ ಇವೆ. ಮನೋಜ್ಞಾನ, ರಾಜಕೀಯ ಶಾಸ್ತ್ರ, ಸಮಾಜವಿಜ್ಞಾನ ಇತಿಹಾಸ – ಮುಂತಾದ ಜ್ಞಾನದ ಜ್ಞಾತಿಶಿಸ್ತುಗಳ ಕ್ಷೇತ್ರಗಳವರಿಗೂ ಸಂಗ್ರಹಯೋಗ್ಯ ಅಭ್ಯಸನೀಯ ಎಂದೆನಿಸುವ ಮತ್ತು ಅನ್ಯತ್ರ ದುರ್ಲಭವಾದ ಮಾಹಿತಿಗಳನ್ನು ಈ ಆಕಟೀ ತನ್ನ ಒಡಲಿಲ್ಲ ಮಡಗಿಕೊಂಡಿದೆ. ಎಷ್ಟೊಂದು ತೆರೆದ – ತೆರದ ಮನಸ್ಸುಗಳು ಇಲ್ಲಿ ಮುದಗೊಂಡು ಮಾತಾಡಿವೆ. ಮುದುಡಿ ಮುಲುಕಾಡಿವೆ! ಈ ಕೃತಿಯ ಶಬ್ದ ಶರೀರದಲ್ಲಿ ಸ್ವಯಂ ಮೈದಾಳಿರುವ, ಉಸಿರಾಡುವ ಎಷ್ಟೋ ಮೌಲಿಕ ವಿಚಾರಗಳನ್ನು ಜೀವಂತ ಕುಸುರಿ ಕೆಲಸವನ್ನು ಸೂಕ್ಷ್ಮವಾಗಿ ವಿಶ್ಲೇಷಿಸುವ ಅಗತ್ಯವಿದೆ.

ಒಬ್ಬ ಧೀರ ರಾಜನ ಚಿತ್ರವನ್ನು ಅಕ್ಷರ ಶಿಲ್ಪದಲ್ಲಿ, ಗದ್ಯದಲಯದಲ್ಲಿ ಹೀಗೆ ಸಾವಯವತೆಯಿಂದ ಬಿಡಿಸಿದ್ದಾನೆ ನೋಡಿ:

            -ಗುರುದತ್ತನೆಂಬೊನರಸನಾತನತ್ಯಂತ ರೂಪ ಲಾವಣ್ಯ ಸೌಭಾಗ್ಯ
ಕಾಂತಿದೀಪ್ತಿಧೃತಿ ಕೀರ್ತಿ ಶೌರ್ಯ ವೀರ್ಯ ಬಳಪರಾಕ್ರಮನೊಡೆಯೊಂ
ನವಯೌವನ ಸಾಕ್ಷಾತ್ ಕಾಮದೇವನೆ ಆದಮಾನುಂ ಪ್ರಚಂಡ ದೋರ್ದಂಡನುಂ
ಬಲಗರ್ವಿತನುಂ ಪರಮಂಡಲಂಗಳಂ ಪಲವುಮನಿಱೆದೊ
ಟ್ಟಯಿಸಿಕೊಂಡಾಳ್ದಪ್ಪೊನಂತಪ್ಪಾತಂ”-

ಹಲವು ವಾಕ್ಯಗಳಲ್ಲಿ ವಿಸ್ತರಿಸಿ ಹೇಳಬಹುದಾದ ಸಾಮಗ್ರಿಯನ್ನು ಒಂದೊಂದೇ ವಿಶೇಷಣಗಳಲ್ಲಿ ಇಲ್ಲಿ ಹರಳುಗೊಳಿಸಿರುವ ಭ್ರಾಜಿಷ್ಣು ಕವಿಯ ಚಿತ್ರಕ ಶಕ್ತಿಯನ್ನು ತೋರಿಸುವ ದೃಷ್ಟಾಂತಗಳು ನೂರಾರು. ಹಳೆಯ ಕಥೆಗಳಿಗೆ ಹೊಸಬಣ್ಣ, ಕಳೆ ಮುಖ ಬಂದಿದೆ. ಭ್ರಾಜಿಷ್ಣುವಿನ ವೇಳೆಗಾಗಲೆ ಪ್ರಾಕೃತದಲ್ಲಿ ಕಣ್ಣೊಡೆದಿದ್ದ ಕಲ್ಪನೆಗಳು ಕನ್ನಡ ಟೀಕಾಕಾರ ಮತ್ತು ಕಥೆಗಾರ ಭ್ರಾಜಿಷ್ಣುವಿನಲ್ಲಿ ಹಣ್ಣಾಗಿರಬಹುದು. ಆದರೆ ಈ ಕನ್ನದ ಲೇಖಕನಾದ ಭ್ರಾಜಿಷ್ಣುವಿನ ಸ್ವಂತಿಕೆಯ ಸ್ವರೂಪ – ಪ್ರಮಾಣಗಳನ್ನು ಇನ್ನಷ್ಟು ನಿರ್ದಿಷ್ಟವಾಗಿಡಲು ಅಗತ್ಯವಾಗುವ ಸ್ಪಷ್ಟ ಪೂರಕ ದಾಖಲೆಗಳ ಪರೋಕ್ಷದಲ್ಲಿ ಖಚಿತವಾದ ಬೆಲೆಕಟ್ಟುವ ಕೆಲಸದ ವಿವರಣೆಗೆ ಹಿಂಜರಿಯಬೇಕಾಗಿದೆ. ಹಾಗೆಂದು ಪರಂಪರೆಯನ್ನು ನಿರಾಕರಿಸಿದ ಆದ್ಯತನ ಜೀವನ ದೃಷ್ಟಿಯೂ, ಸೃಜನಾತ್ಮಕವಾದ ಕಾರಯತ್ರೀ ಪ್ರತಿಭೆಯೂ ಉನ್ನತ ಮಟ್ಟದಲ್ಲಿ ಇಲ್ಲಿ ವ್ಯವಹೃತವಾಗಿರುವುದನ್ನು ನಿರಾಕರಿಸುವಂತಿಲ್ಲ. ಭ್ರಾಜಿಷ್ಣು ಪರಿಣತನಾದ ಲೇಖಕ. ತ್ರಿಭಾಷಾವಿಶಾರದ. ಲೌಕಿಕವನ್ನೂ ಆಗಮಿಕವನ್ನೂ ಸಮಾನವಾಗಿ ಬೆಸೆದ ನಿಪುಣ. ಆಕಟೀ ಗ್ರಂಥದಲ್ಲಿ ಜಿನಧರ್ಮವನ್ನೂ ಕಾವ್ಯಧರ್ಮವನ್ನೂ ಅರಿಯಬಹುದು. ಭ್ರಾಜಿಷ್ಣುವಿನ ಆರಾಧನಾ ಕರ್ಣಾಟ ಟೀಕಾ ಗ್ರಂಥ ಕನ್ನಡ ಕಥಾ ಸಾಹಿತ್ಯಕ್ಕೇ ಅಲ್ಲದೆ ಒಟ್ಟು ಭಾರತೀಯ ಕಥಾ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ.

ಭ್ರಾಜಿಷ್ಣುವು ಚರಿತ್ರೆಯ ಎಳೆಗಳನ್ನು ಅಲ್ಲಲ್ಲಿ ಕಥೆಗಳ ನೆಯ್ಗೆಯಲ್ಲಿ ಪೋಣಿಸಿದ್ದಾನೆ. ಆಕಟೀಕಾದ ಅದಿರಿನಿಂದ ಚರಿತ್ರೆಯ ಲೋಹವನ್ನು ಬೇರ್ಪಡಿಸಿ ತೋರಿಸುವುದಕ್ಕೆ ಜರಡಿ ಹಿಡಿಯಬೇಕು. ಇಲ್ಲಿನ ಕಥೆಗಳಲ್ಲಿರುವ ಚಾರಿತ್ರಿಕ ಚಾರಿತ್ರಿಕ ಸಾಮಗ್ರಿಯನ್ನು ವಿಂಗಡಿಸಿ ವಿವೇಚಿಸಬಹುದು.

೧. ಚಾರಿತ್ರಿಕ ವ್ಯಕ್ತಿಗಳು; ಅಭಯಕುಮಾರ ಅಶೋಕ ಚಕ್ರವರ್ತಿ, ಒದ್ದಾಯನ ರಾಜ, ಕುಣಾಳ, ಚಂಡ ಪ್ರದ್ಯೋತ, ಚಂದ್ರಗುಪ್ತಮೌರ್ಯ, ಚಾಣಕ್ಯ, ಶ್ರೇಣಿಕ – ಇತ್ಯಾದಿ; ನವನಂದರ ವಿಚಾರವೂ ಬಂದಿದೆ.

೨. (ಚಾರಿತ್ರಿಕ) ಧಾರ್ಮಿಕ ಪುರುಷರು : ಆರ್ಯ ಸುಹಸ್ತಿ, ಭದ್ರಬಾಹು, ವರ್ಧಮಾನ, ವಿಶಾಖಾಚಾರ್ಯ, ಸುಧರ್ಮಾಚಾರ್ಯ, ಸ್ಥೂಲಭದ್ರಾ ಚಾರ್ಯ – ಇತ್ಯಾದಿ.

೩. ಚಾರಿತ್ರಿಕ ಸ್ಥಳಗಳು : ಉಜ್ಜೇನಿ, ಚಂಪಾನಗರ, ಪಾಟಳೀಪುತ್ರ, ಮಗಧ ರಾಜ್ಯ, ರಾಜಗೃಹ, ವಿಪುಲಾಚಲ, ವೈಭಾರಗಿರಿ, ಸಮ್ಮೇದಗಿರಿ, ಸುರಟ್ಟ -ಸುರಾಷ್ಟ್ರ (ಸುರಾಷ್ಟ್ರ)- ಇತ್ಯಾದಿ.

ಈ ಮೂರೂ ನೆಲೆಯಲ್ಲಿ ಚಾರಿತ್ರಿಕ ಅಂಶಗಳ ಚರ್ಚೆಯನ್ನು ನಡವಬಹುದು : ನನ್ನ ಮಹಾಪ್ರಬಂಧದಲ್ಲಿ ಅಂಥ ಚರ್ಚೆ ನಡೆದಿದೆ. ಈ ಪುಸ್ತಕದ ಪೀಠಿಕೆಗೆ ಅದರ ಸೇರ್ಪಡೆಗೆ ಔಚಿತ್ಯ ಕಾಣುವುದಿಲ್ಲವೆಂದು ಕೈಬಿಡಲಾಗಿದೆ.

ಇದೇ ರೀತಿಯಾಗಿ ಭ್ರಾಜಿಷ್ಣುವಿನ ಆ ಆರಾಧನಾ ಕರ್ಣಾಟಕೋಶದ ಪಾಠಾಂತರಗಳ ಅಧ್ಯಯನ, ಧಾರ್ಮಿಕ ಅಧ್ಯಯನ, ಉದಾಹೃತ ಪದ್ಯಗಳ ಅಧ್ಯಯನ, ತೌಲನಿಕ ಅಧ್ಯಯನ ಸಾಂಸ್ಕೃತಿಕ ಅಧ್ಯಯನ, ಭಾಷಿಕ ಅಧ್ಯಯನ, ಸಾಹಿತ್ಯಕ ಅಧ್ಯಯನ – ಮೊದಲಾದ ಅಧ್ಯಯನಗಳನ್ನು ನನ್ನ ಮಹಾಪ್ರಬಂಧದಲ್ಲಿ (ವಡ್ಡಾರಾಧನೆ : ಸಮಗ್ರ ಅಧ್ಯಯನ) ವಿಸ್ತಾರವಾಗಿ ಕೈಗೊಂಡಿದ್ದೇನೆ. ಪ್ರಸ್ತುತ ಪೀಠಿಕೆಯಲ್ಲಿ ಅದರ ಸೇರ್ಪಡೆಯಿಂದ ಪುಟಗಳ ವ್ಯಾಪ್ತಿ ಹೆಚ್ಚುತ್ತದೆಂಬ ಕಾರಣಕ್ಕಾಗಿ ಇಂಥ ಹಲವು ವಿಷಯಗಳ ವಾಗ್ವಾದಗಳನ್ನು ಸೇರಿಸಿಲ್ಲ. ಆಕಟೀ ಗ್ರಂಥವನ್ನು ಕುರಿತು ಹೇಳುವುದು ಬಹಳವಿದೆ. ಆಸಕ್ತರಾದ ಅಭ್ಯಾಸಿಗಳು ನನ್ನ ಮಹಾ ಪ್ರಬಂಧದಲ್ಲಿ ನಿರೂಪಿತವಾಗಿರುವ ವಿಪುಲ ಪೂರಕ ಸಾಮಗ್ರಿಯನ್ನು ಅವಲೋಕಿಸಬಹುದು.

ಆರಾಧನಾ ಕರ್ಣಾಟ ಟೀಕಾಗ್ರಂಥವು, ಹಲವು ಬಗೆಯ ಅಧ್ಯಯನಗಳಿಗೆ ನೆರವಾಗುವ ವಿಪುಲವಾದ, ವೈವಿಧ್ಯಪೂರ್ಣವಾದ ಮಹತ್ವದ ಸಂಗತಿಗಳನ್ನು ತನ್ನ ಒಡಲಿಲ್ಲ ಮಡಗಿಕೊಂಡಿರುವ ಅಪೂರ್ವ ಗ್ರಂಥ.