ಆರಾಧನಾ ಗ್ರಂಥವು ಸಮಸ್ತ ಭಾರತೀಯ ವಾಙ್ಮಯದಲ್ಲಿಯೇ ಒಂದು ವೈಶಿಷ್ಟ್ಯ ಪೂರ್ಣವಾದ ಮಹತ್ವದ ಕೃತಿ. ರಾಮಾಯಣ, ಮಹಾಭಾರತ, ಮಹಾಪುರಾಣ. ಹರಿವಂಶ ಮೊದಲಾದುವು ಸಂಸ್ಕೃತ ಭಾಷೆಯಲ್ಲಿ ಉದ್ಘಕೃತಿಗಳು, ಮಹಾ ಕಾವ್ಯಗಳು. ಅವಕ್ಕೆ ಸಮತುಲ್ಯವಾದ ಪ್ರಾಕೃತ ಕೃತಿಗಳೆಂದರೆ ಗುಣಾಢ್ಯನ ಬೃಹತ್ಕಥಾ ಮತ್ತು ಶಿವಕೋಟಿ ಆಚಾರ್ಯನ ಆರಾಧನಾ.

ಆರಾಧನೆಯು, ಚಾರಿತ್ರ ಪ್ರಧಾನವಾದ ಪುಸ್ತಕ. ಆರಾಧನೆಯೆಂಬುದು ತಪಸ್ಸು, ರತ್ನತ್ರಯಗಳ ಚಿಂತನೆ; ಮೋಕ್ಷದ ಚಿಂತನ ಮನನ ಧ್ಯಾನ. ಇದು ಗೃಹಸ್ಥರಾದಶ್ರಾವಕ – ಶ್ರಾವಕಿಯರಿಗೂ ಮುನಿಗಳಿಗೂ ಸಮಾನವಾಗಿ ಅನ್ವಯ ವಾಗುತ್ತದೆ. ಆದರೂ ಮುನಿಸಂಘದ ನಿಯಾಮವಳಿಗಳು, ದೀಕ್ಷೆಯ ವಿಧಿ ವಿಧಾನಗಳು, ಧರ್ಮ – ಶುಕ್ಲ ಧ್ಯಾನಗಳು, ಮೊದಲಾದುವುಗಳ ವಿಶದವಾದ ವರ್ಣನೆ ಈ ಮಹಾಕೃತಿಯಲ್ಲಿ ಅಂತರ್ಗತವಾಗಿವೆ. ಅರಾಧನಾ ಗ್ರಂಥವು ಎರಡೆರಡು ಸಾಲುಗಾ ಗಾಥಾ (ಗಾಥೆ – ಗಾಹೆ) ಗಳಿಂದ ಕೂಡಿದೆ. ಸಂಸ್ಕೃತ ಭಾಷೆಯ ಶ್ಲೋಕಗಳೂ, ಹಿಂದಿ ಭಾಷೆಯ ದೋಹೆ (ದೋಹಾ) ಗಳೂ, ತಮಿಳಿನ ತಿರುಕ್ಕಱಳ್ ಕಾವ್ಯದ ವೆಣ್ಬಾ ಪದ್ಯಗಳೂ, ಪ್ರಾಕೃತ ಭಾಷೆಯ ಗಾಥಾಗಳೂ ದ್ವಿಪದಿಗಳು. ಆರಾಧನಾ ಗ್ರಂಥದ ದ್ವಿಪದಿಗಳು ಸಾಸುವೆಯಲ್ಲಿ ಸಾಗರವನ್ನು, ಬಳ್ಳದಲ್ಲಿ ಹಳ್ಳವನ್ನು ತುಂಬಿ ಕೊಡುವ ಸಾಹಸದ ಪ್ರಯತ್ನವಾಗಿವೆ. ಒಂದು ಕಡೆ ಪಾರಂಪಾರಿಕವಾದ ಧಾರ್ಮಿಕ – ತಾತ್ವಿಕ ತಿಳಿವಳಿಕೆ – ನಂಬಿಕೆಗಳನ್ನೂ, ಇನ್ನೊಂದು ಕಡೆ ಆ ಬಗೆಯ ಗಹನವಾದ ಸಿದ್ಧಾಂತ ಮತ್ತು ಆಚರಣೆಗಳ ಪ್ರಯೋಜನಗಳನ್ನೂ ಒಂದೇ ಬೋಗಸೆಯಲ್ಲಿ ಹಿಡಿದಿಡುವ ನಿರಾಯಸವಾದ ಸಾಧನೆ – ಇದು ಈ ಹೊತ್ತಗೆಯ ಚೌಕಟ್ಟು. ಸಂಸಾರದ ಮಿತಿಗಳನ್ನು ದೃಷ್ಟಾಂತ ಹೇತುಗಳಿಂದ ಮನೋಜ್ಞವಾಗಿ ಸ್ಥಾಪಿಸಲಾಗಿದೆ. ಲೌಕಿಕ ಬಂಧನಗಳಿಂದ ಕಳಚಿಕೊಳ್ಳುವ ಅಗತ್ಯ ಹಾಗೂ ಉಪಾಯಗಳನ್ನು ಸೂಚಿಸಲಾಗಿದೆ. ಅನಂತರ ಸಲ್ಲೇಖನಾ ವ್ರತಧಾರಣೆ ಮಾಡುವುದಕ್ಕೆ ಒದಗಿಬರುವ ಕಾರಣಗಳನ್ನೂ, ಸಲ್ಲೆಕನಾವಿಧಿಯಾದ ಸಮಾಧಿಮರಣವನ್ನೂ, ಸವಿಸ್ತ್ರಾರವಾಗಿ ಸೋದಾಹರಣವಾಗಿ ವರ್ಣಿಸಲಾಗಿದೆ. ಆರಾಧನಾ ಗ್ರಂಥವು ಮರಣ ಮೀಮಾಂಸೆಯೇ ಅಗಿದೆ.

ಜೈನಾಗಮ ಗ್ರಂಥಗಳಲ್ಲಿ ‘ಜೀವನ-ಮರಣ’ ಕುರಿತ ವಿವೇಚನೆ ವಿಸ್ತಾರವಾಗಿ ಬಂದಿದೆ. ತತ್ಸಂಬಂಧವಾದ ಜಿಜ್ಞಾಸೆಯ ವೈಜ್ಞಾನಿಕ ಸಾಧುತ್ವವನ್ನು ಭಾರತೀಯ ಔತ್ತರೇಯ ಪಾಶ್ಚಿಮಾತ್ಯ ಪ್ರಾಜ್ಞರು ಚರ್ಚಿಸಿದ್ದಾರೆ. ಅವೆಲ್ಲದರ ಪರಾಮರ್ಶೆಗೆ ತೊಡಗಿದರೆ ಅದು ದೊಡ್ಡ ಗ್ರಂಥವಾಗುತ್ತದೆ. ಅದರ ವಿಸ್ತಾರವಾದ ಪರೀಶೀಲನೆಗೆ ತೊಡಗಿದರೆ ಅದು ದೊಡ್ಡ ಗ್ರಂಥವಾಗುತ್ತದೆ. ಅದರ ವಿಸ್ತಾರವಾದ ಪರೀಶೀಲನೆಗೆ ಹೋಗದೆ ಸಾರಸರ್ವಸ್ವವನ್ನು, ಕನ್ನಡಿಯೊಳಗೆ ಆನೆ ಅರಮನೆಗಳನ್ನು ತೋರಿಸುವಂತೆ, ಹರಳುಗೊಳಿಸಿ ಮಂಡಿಸಿದ್ದೇನೆ.

ಸಮ್ಯಕ್ ದರ್ಶನ-ಜ್ಞಾನ-ಚಾರಿತ್ರ (ರತ್ನತ್ರಯ)ಗಳನ್ನು ಹಾಗೂ ಅಂತಹ-ಬಾಹ್ಯ ತಪಗಳನ್ನು ಮರಣದ ಹೊತ್ತಿನಲ್ಲಿ ಮನನ ಮಾಡುವುದು ಯಥಾರ್ಥವಾದ ಆರಾಧನೆ. ಇದು ಜೀವನದ ಕಡೆಯ ಗಳಿಗೆಯಲ್ಲಿಯೂ ಜೀವನು ಪಡೆಯಬಹುದಾದ ಉತ್ಕೃಷ್ಠ ಸಾಧನೆ. ಮರಣ ಒಂದು ಅನಿವಾರ್ಯವಾದ ಘಟನೆ. ಸಾವು ಯಾರಿಗೂ ತಪ್ಪಿದಲ್ಲ. ಇಲ್ಲಿ ಹದಿನೇಳು ಬಗೆಯ ಮರಣಗಳನ್ನು ಪ್ರತಿಪಾದಿಸಲಾಗಿದೆ. ಆ ಮರಣಗಳಲ್ಲಿ ಮುಖ್ಯವಾದ ಬಗೆಗಳು ಐದು: ಇವುಗಳಲ್ಲಿ ಪಾಲಿಸಲು ಯೋಗ್ಯವಾದುವುಗಳು ಮೊದಲನೆಯ ಮತ್ತು ಎರಡನೆಯ ಕ್ರಮದ ಮರಣಗಳು; ಮೂರನೆಯ ಬಗೆಯಲ್ಲಾಗುವ ಮರಣಕ್ಕೂ ಮಾನ್ಯತೆಯಿದೆ;

೧. ಪಂಡಿತ ಪಂಡಿತ ಮರಣ : ಈ ಪಂಡಿತ ಪಂಡಿತವೆಂಬ ಮರಣವನ್ನು ಕ್ಷೀಣ ಕಷಾಯಿಗಳಾದ ಕೇವಲಿ ಭಗವಂತರು ಪಡೆಯುವರು.

೨. ಪಂಡಿತ ಮರಣ : ಈ ಪಂಡಿತ ಮರಣ ಭಾವಲಿಂಗೀ ಚಾರಿತ್ರವಂತರಾದ ಮುನಿಗಳು ಪಡೆಯುವರು. ಈ ಪಂಡಿತ ಮರಣದಲ್ಲಿ ಭಕ್ತ ಪ್ರತ್ಯಾಖ್ಯಾನ, ಇಂಗಿನಿ(ಣೀ) ಮರಣ, ಪ್ರಾಯೋಪಗಮನ ಮರಣ – ಎಂದು ಮೂರು ಬಗೆಯ ಭೇದಗಳಿವೆ. ಪ್ರಸ್ತುತ ಆರಾಧನಾ ಕರ್ಣಾಟ ಟೀಕಾದಲ್ಲಿ ಈ ಪಂಡಿತ ಮರಣ ಪ್ರಭೇದಗಳ ಪ್ರಕಾರ ಮರಣ ಹೊಂದಿದ ಮಹಾತ್ಮರ ಕಥೆಗಳು ಬಂದಿವೆ; ಮುಂದೆ ನಾನು ಈ ಕೆಲಸವನ್ನು ಮಾಡುವುದಿಲ್ಲವೆಂದು ಮನಸ್ಸಿನಲ್ಲಿ ದೃಢಸಂಕಲ್ಪವನ್ನು ಮಾಡಿಕೊಳ್ಳುವುದು ಪ್ರತ್ಯಾಖ್ಯಾನ. ಸಂಸಾರವನ್ನು ಕೊನೆಗಾಣಿಸಲು ಯೋಗ್ಯವಾದ ಸಂಹವನ ಮತ್ತು ಸಂಸ್ಥಾನಗಳ ಪ್ರಾಪ್ತಿಯ ಕಾರಣದಿಂದ ಉಂಟಾಗುವ ಮರಣ ಪ್ರಾಯೋಪಗಮನ ಮರಣ (ಪ್ರಾಯೋಗ್ಯ ಗಮನಹರಣ). ಆತ್ಮನ ಇಂಗಿತಕ್ಕೆ – ಅಭಿಪ್ರಾಯಕ್ಕೆ ಅನುಸಾರವಾಗಿ ಉಂಟಾಗುವ ಮರಣ ಇಂಗಿನೀ ಮರಣ.

೩. ಬಾಲ ಪಂಡಿತ ಮರನ : ಏಕದೇಶವಿರತ (ವಿರತಾವಿರತ) ವೆಂಬ ಐದನೆಯ ಗುಣ ಸ್ಥಾನವರ್ತಿಯಾದ ಜೀವನು ಈ ಬಾಲ ಪಂಡಿತ ಮರಣವನ್ನು ಪಡೆಯುತ್ತಾನೆ. ದ್ವಾದಶವಿಧದ ವ್ರತ ಪಾಲಕನಾದ ಶ್ರಾವಕನಿಗೆ ಆಕಸ್ಮಿಕವಾಗಿ ಮರಣ ಸಮೀಪಿಸಿದಾಗ ಒಂದು ವೇಳೆ ಜೀವಿಸಲು ಆಸೆ ಇದ್ದುದೇ ಆದರೆ; ಅಥವಾ, ಬಂಧುಗಳು ದೀಕ್ಷೆಗೆ ಅನುಮತಿ ನೀಡದಿದ್ದುದೇ ಆದರೆ; ಅಥವಾ ತತ್ಸಮಾನ ಸಂದರ್ಭ – ಸ್ಥಿತಿ ಉಂಟಾದರೆ, ಆಗ ಶರೀರ ಸಲ್ಲೇಖನ ಮತ್ತು ಕಾಷಾಯ ಸಲ್ಲೇಖನಗಳನ್ನು ಮಾಡದೆ, ಆಲೋಚನೆಯನ್ನು ಮಾಡಿ ನಿಶ್ಯಲ್ಯನಾಗಿ ಮನೆಯೊಳಗಿದ್ದೇ ಶಾಸ್ತ್ರಗಳಲ್ಲಿ ಹೇಳಿರುವ ವಿಧಿಪೂರ್ವಕ ಸಂಕಲ್ಪಿತ ಸ್ಥಾನವನ್ನು ಕೈಗೊಂಡು ಶರೀರವನ್ನು ತ್ಯಜಿಸುವ ಶ್ರಾವಕರಿಗೆ (ಗೃಹಸ್ಥರಿಗೆ / ಸಂಸಾರಿಗಳಿಗೆ) ಈ ಬಗೆಯ ಬಾಲಪಂಡಿತ ಮರಣವು ಪ್ರಾಪ್ತಿಯಾಗುತ್ತದೆ.

೪. ಬಾಲಮರಣ : ನಾಲ್ಕನೆಯ ಗುಣಸ್ಥಾನವಾದ ಅವಿರತ ಸಮ್ಯಕ್ ದೃಷ್ಟಿಯ ಜೀವನ ಮರಣವನ್ನು, ರತ್ನತ್ರಯಗಳನ್ನು ಪಡೆಯದೆ ಇಲ್ಲವೆ ಸಮಾಧಿ ಮರಣವನ್ನು ಪಡೆಯದೆ ಆಗುವ ಮರಣವನ್ನೂ ಬಾಲ ಮರಣ ವೆನ್ನುವರು. ಆತ್ಮಹತ್ಯೆಯೂ (ಅದು ಶಸ್ತ್ರಘಾತದಿಂದ ವಿಷಪಾನದಿಂದ ಬೆಂಕಿಯಿಂದ ನೀರಿನಿಂದ ಅನಾಚಾರದಿಂದ ಅಸೇವ್ಯ ಸೇವ್ಯದಿಂದ – ಹೀಗೆ ಯಾವ ರೂಪ ನಿಮಿತ್ತಗಳಿಂದ ಮಾಡಿಕೊಂಡರೂ, ಉಂಟಾದರೂ) ಬಾಲಮರಣವೆನಿಸುತ್ತದೆ.

೫. ಬಾಲಬಾಲ ಮರಣ : ಸಮ್ಯಗ್ದರ್ಶನ-ಜ್ಞಾನ- ಚಾರಿತ್ರಗಳಿಲ್ಲದೆ, ಸಮ್ಯಗ್ದರ್ಶ ನದ ಎಂಟು ವ್ರತಾಚರಣೆಗಳಿಲ್ಲದೆ ಉದ್ವೇಗಪರತೆಯಿಂದ (ಶಸ್ತ್ರಘಾತ-ವಿಷಪ್ರಾಶನ-ನೀರಿನಲ್ಲಿ ಮುಳುಗಿ -ಬೆಂಕಿಗೆ ಬಿದ್ದು ಬೆಂಕಿಯಿಂದ ಸುಟ್ಟುಕೊಂಡು)ಮಿಥಾತ್ವಪೂರ್ವಕವಾಗಿ ಪಡೆಯುವ ಮರಣವು ಬಾಲಬಾಲ ಮರಣವೆನಿಸುತ್ತದೆ.

ಮರಣವು ಈ ರೀತಿ ಮಹೋತ್ಸವವೆಂದು ಬಗೆದು, ಒಂದು ವ್ರತವಾಗಿ ಸ್ವೀಕರಿಸಿ ಶರೀರವನ್ನು ತ್ಯಜಿಸುವುದು ಸಲ್ಲೇಖನೆಯಾಗುತ್ತದೆ. ಸಲ್ಲೇಖನಾವ್ರತ ವಿಧಾನವು ಆತ್ಮಹತ್ಯೆಯಲ್ಲ, ಇದು ಮರಣ ಮಹೋತ್ಸವ. ಆತ್ಮಹತ್ಯೆಯ ಮಹಾ ಪಾಪಕರವಾದದ್ದು; ಅದರಲ್ಲಿ ಅವಿಕಲ್ಪ ನಿರ್ಮಲಚಿತ್ತ ಸ್ಥಿತಿಯಾಗಲಿ, ಧರ್ಮಚಿಂತನೆಯಾಗಲಿ, ನಿರ್ಮಮಕಾರವಾಗಲಿ, ಭಕ್ತಿಯಾಗಿಲಿ, ಭೇದ ವಿಜ್ಞಾನವಾಗಲಿ, ಅಪ್ರತೀಕಾರ ಬುದ್ಧಿಯಾಗಲಿ, ಸಂಯಮವಾಗಲಿ ಇರುವುದಿಲ್ಲ. ಸಲ್ಲೇಖನದಲ್ಲಿ ಇವೆಲ್ಲವೂ ಇರುತ್ತವೆ; ಸಮಾಧಿ ಮರಣವೆಂಬುದು ಸ್ವಯಿಚ್ಛೆಯಿಂದ ಕೈಗೊಂಡ ಶರೀರ ತ್ಯಾಗ. ಇದರಲ್ಲಿ ಸದುದ್ದೇಶ ಅಂತರ್ನಿಹತವಾಗಿರುತ್ತದೆ. ಸುದೀರ್ಘ ಇಲ್ಲವೆ ಅಲ್ಪಾಯು ಜೀವನ ಸೌಧಕ್ಕೆ ಸಲ್ಲೇಖನ (ಸಮಾಧಿ) ಮರಣವು ಸುವರ್ಣಕಳಶವೆಂಬ ಗ್ರಹಿಕೆಯ ನೆಲೆಯಲ್ಲಿ ಶಿವಕೋಟಿಯ ಆರಾಧನಾ ಗ್ರಂಥವು ವಿಷಯಗಳನ್ನು ಪ್ರತಿಪಾದನೆ ಮಾಡಿದೆ. ಸಲ್ಲೇಖನಾ ವ್ರತಧಾರಣೆಗೆ ಪ್ರಧಾನವಾದ ಕಾರಣಗಳನ್ನು ಶಿವಕೋಟಿ ಆಚಾರ್ಯರು ಮುಂದಿಟ್ಟಿದ್ದಾರೆ:

ವಾಹಿವ್ವ ದುಪ್ಪ ಸಜ್ಝಾಜರಾಯ ಸಾಮಣ್ಣ ಜೋಗ್ಗ ಹಾಣಿ ಕರೀ
ಉವ ಸಗ್ಗಾವ ದೇವಿಯ ಮಾಣುಸ ತೇರಿಚ್ಛಯಾ ಜಸ್ಸ
|| ೭೦

ಅತ್ಯಂತ ಕಷ್ಟ ಸಾಧ್ಯವಾದ ವ್ಯಾಧಿಯುಂಟಾದಲ್ಲಿ, ತಾರುಣ್ಯ ಸಂಬಂಧಕ್ಕೆ ಹಾನಿಯುಂಟಾದಲ್ಲಿ (ವಾರ್ಧಕ-ಮುಪ್ಪು ಪ್ರಾಪ್ತವಾದರೆ), ದೇವಕೃತ, ಮನುಷ್ಯಕೃತ, ತಿರ್ಯಂಚಕೃತ ಉಪಸರ್ಗಗಳು ಬಂದೊದಗಿದಲ್ಲಿ, ಅಂತಹ ವ್ಯಕ್ತಿಯು ಭಕ್ತ ಪ್ರತ್ಯಾಖ್ಯಾನವನ್ನು ಗ್ರಹಿಸಲು ಯೋಗ್ಯನಾಗುತ್ತಾನೆ. ಉವಸಗ್ಗಾವಾ (ಉಪಸರ್ಗಾವಾ) ಎಂದಿರುವುದರಿಂದ ಇಲ್ಲಿರುವ ‘ವಾ’ ಶಬ್ದವು ಸಮುಚ್ಚರ್ಯಾರ್ಥಕವಾಗುತ್ತದೆ; ಅದರಿಂದಾಗಿ ಅಚೇತನಕೃತ ಉಪಸರ್ಗ ಎಂಬರ್ಥವನ್ನೂ ಸೇರಿಸಿಕೊಳ್ಳಬೇಕು; ಆಗ ನಾಲ್ಕು ವಿಧದ ಉಪಸರ್ಗಗಳೂ ಅಳವಟ್ಟಂತಾಗುತ್ತದೆ.

ಅಣುಲೋಮೋ ವಾ ಸತ್ತೊ ಚಾರಿತ್ತ ವಿಣಾಸಯಾ ಹವೇ ಜಸ್ಸ
ದುಭ್ಭಿಕ್ಬೇ ವಾ ಗಾಢೀ ಅಡವೀ ಏ ವಿಪ್ಪಣಟ್ಠೋ ವಾ
|| ೭೧

[ಚಾರಿತ್ರವನ್ನು ನಾಶ ಮಾಡುವಂತಹವನು ಅನುಕೂಲನಿರಲಿ ಶತ್ರುವಿರಲಿ, ಚಾರಿತ್ರವನ್ನು ನಾಶಮಾಡಿಸುವಂತಹ ಮಿತ್ರರಿರಲಿ ಶತ್ರುವಿರಲಿ (ವಜ್ರಘಾತಕ್ಕೆ ಸಮಾನವಾದ ಭಯಂಕರ) ದುರ್ಭಿಕ್ಷವಿರಲಿ, (ಸರ್ಪಹಿಂಸಾದಿ ಜಂತು ಮೃಗಾದಿಗಳಿಂದ ತುಂಬಿದ) ಭಯಂಕರವಾದ ಅರಣ್ಯದಲ್ಲಿ ದಾರಿ ತಪ್ಪಿರಲಿ – ಅಂತಹ ಪರಿಸ್ಥಿತಿ ಯೊದಗಿದರೆ ಭಕ್ತ ಪ್ರತ್ಯಾಖ್ಯಾನಕ್ಕೆ ಯೋಗ್ಯನಾಗುತ್ತಾನೆ.]

ಚಕ್ಬುಂವ ದುಬ್ಬಲಂ ಜಸ್ಸ ಹೋಜ್ಜ ಸೋದಂವ ದುಬ್ಬಲಂ ಜಸ್ಸ
ಜಂಘಾಬಲ ಪರಿಹೀಣೋ ಜೋಣ ಸಮತ್ಥೋ ವಿಹರಿದುಂ ವಾ
|| ೭೨

[ಕಣ್ಣುಗಳು ದುರ್ಬಲವಾಗಿರುವವನು, ಕಿವಿಗಳು ದುರ್ಬಲವಾಗಿರುವವನು, ತೊಡೆಯ ಬಲವು ದುರ್ಬಲವಾಗಿರುವವನು, ವಿಹಾರ ಮಾಡಲು ದುರ್ಬಲನಾಗಿರು ವವನು ಭಕ್ತ ಪ್ರತ್ಯಾಖ್ಯಾನಕ್ಕೆ ಯೋಗ್ಯನಾಗಿರುತ್ತಾನೆ.]

            ಅಣ್ಣಮ್ಮಿ ಚಾವಿ ಏದಾರಿಸಂಮಿ ಆಗಾಢಕಾರಣೇ ಜಾದೇ
ಅರಿಹೋ ಭತ್ತಪ ಇಣ್ಣಾವಿ ಹೋದಿವಿರದೋ ಅವಿರದೋ ವಾ
|| ೭೨

[(ಮೇಲಿನ ಮೂರು ಗಾಥೆಗಳಲ್ಲಿ ಹೇಳಲಾದ ಕಾರಣಗಳಂತಹವುಗಳೇ ಆಗಿರುವ) ಅನ್ಯವಾದ ಪ್ರಬಲ ಕಾರಣಗಳು ಬಂದೊದಗಿದರೆ ವಿರತನಾಗಿರಲಿ (ಮುನಿ), ಅವಿರತನಾಗಿರಲಿ (ಗೃಹಸ್ಥ) ಭಕ್ತ ಪ್ರತ್ಯಾಖ್ಯಾನಕ್ಕೆ ಯೋಗ್ಯನೆನಿಸುವನು]

ಈ ಪ್ರಶಸ್ತ ಮರಣವಾದ ಭಕ್ತ ಪ್ರತ್ಯಾಖ್ಯಾನದ ಭೇದಗಳನ್ನೂ ಹೇಳಲಾಗಿದೆ. ಮೇಲ್ಕಂದ ವಿವರಣೆಯನ್ನು ಕೊಟ್ಟಿರುವ ಪ್ರಾಚೀನ ಆಚಾರ್ಯರು ಶಿವಕೋಟಿ ಮುನಿಗಳು : ಅವರ ಇದೇ ಪ್ರಾಕೃತದ ವಿವರಣೆಯನ್ನು ಆಧರಿಸಿ-ಅವಲಂಬಿಸಿ ಸಮಂತ ಭದ್ರಾಚಾರ್ಯರು ರತ್ನಕರಂಡ ಶ್ರಾವಕಾಚಾರದಲ್ಲಿ ಸಂಸ್ಕೃತದಲ್ಲಿ ಹೇಳಿದ್ದಾರೆ. ಉಪಸರ್ಗೇ ದುರ್ಭಿಕ್ಷೇ ಜರಸಿರುಜಾಯಾಂ ಚ ನಿಃಪ್ರತೀಕಾರೇ …….. ಇತ್ಯಾದಿ (ರತ್ನಕರಂಡಕ ಶ್ರಾವಕಾಚಾರ) ಮರಣ ಹೊಂದುವುದೆಂದು, ಸಮಭಾವದಿಮ್ದ ನಿಶ್ಚಯಿಸಿದ ಜೀವಿಯು, ಶರೀರವನ್ನು ಬಿಡುವುದಕ್ಕೆ ಎಲ್ಲ ರೀತಿಗಳಿಂದ ಅಣಿಯಾಗಬೇಕು. ಮರಣ ವ್ರತಸ್ವೀಕಾರ ಮಾಡಿದವರು ಆಹಾರವನ್ನು ಕ್ರಮವಾಗಿ ಬಿಡಬೇಕು. ಗಟ್ಟಿಯಾದ ಪದಾರ್ಥಗಳನ್ನು ನಿಲ್ಲಿಸಿ ಹಾಲು ಹಣ್ಣುಗಳ ರಸ ನೀರು ಸೇವಿಸಬೇಕು. ಕ್ರಮೇಣ ಒಂದೊಂದಾಗಿ ಇವನ್ನೂ ನಿಲ್ಲಿಸಬೇಕು. ಯಾವುದೇ ಬಗೆಯ ಆಹಾರ ತೆಗೆದುಕೊಳ್ಳುವುದು ಪೂರ್ತಿ ನಿಂತಮೇಲೆ, ಆಯುಷ್ಯ ಇರುವವರೆಗೆ (ಜಾವಜ್ಜೀವಂ) ನಿರಾಹಾರಿಯಾಗಿರಬೇಕು. ವ್ರತೋಪದೇಶವಾದಂದಿನಿಂದ ಒಂದೇ ಸಮನೆ ಅನುದಿನವೂ ಚಿರಂಜೀವನಾದ ಆತ್ಮ ಬೇರೆ, ನಶ್ವರವಾದ ಶರೀರ ಬೇರೆ ಎಂಬ ಭೇದ ವಿಜ್ಞಾನ ಚಿಂತನೆಯಲ್ಲಿ ತಲ್ಲೀನನಾಗಿರಬೇಕು. ಈ ಬಗೆಯ ಚಿಂತನೆಯಿಂದ ಸಮಚಿತ್ತಸ್ಥಿತಿಯಿಂದ ದೇಹವನ್ನು ಬಿಡುವುದಕ್ಕೆ ಸಲ್ಲೇಖನಾ-ಸಮಾಧಿ ಎಂದು ಹೇಳಿದೆ. ಕಲ್ಲು ಮುಳ್ಳು ಹೊಂಡ ಸರ್ಪಾದಿ ವಿಷ ಜಂತುಗಳಿಂದ, ಪ್ರಾಣಾಪಾಯಗಳಿಂದ ತಪ್ಪಿಸಿಕೊಂಡು ನಮ್ಮನ್ನು ರಕ್ಷಿಸಿಕೊಳ್ಳುವುದಕ್ಕೆ (ಕಣ್ಣು) ಚರ್ಮಚಕ್ಷು ನೆರವಾಗುತ್ತದೆ; ಅನಂತಾನಂತ ದುಃಖ ಪರಂಪರೆಗೆ ಕಾರಣಗಳಿಂದ ಜೀವನವನ್ನು ಕಾಪಾಡುವುದು ಜ್ಞಾನಚಕ್ಷು. ಜ್ಞಾನಚಕ್ಷುವಿನಿಂದ ಉನ್ಮೀಲನವಾದ ಅನಂತ ಜ್ಞಾನವುಳ್ಳ ಜ್ಞಾನಿಗಳು, ಸಲ್ಲೇಖನಾವಿಧಿಯ ಮರಣವನ್ನು ಮಹೋತ್ಸವವೆಂದು ತಿಳಿಯುವರು; ಮರಣವೇ ಮಹಾನವಮಿಯೆಂದು ತೆರಳುವರು.

೪೦ ಅಧಿಕಾರಗಳೂ, ೪೦ ಶೀರ್ಷಿಕೆಗಳೂ ಇರುವ ಆರಾಧನಾ ಗ್ರಂಥದ ೩೫ನೆಯ ಅಧಿಕಾರ ಕವಚಾಧಿಕಾರ. ಕಷಾಯ ಹಾಗೂ ಶರೀರವನ್ನು ಸಮ್ಯಕ್ ರೀತಿಯಿಂದ ಕೃಶಗೊಳಿಸುವುದು ಸಲ್ಲೇಖನಾ; ಸಮಾಧಿಮರಣವನ್ನು ಮಾಡಿಸುವುದಕ್ಕೆ ಸಮರ್ಥರಾದ ಆಚಾರ್ಯರನ್ನು ಅರಸುವುದು ಮಾರ್ಗಣ; ಸಲ್ಲೇಖನಾವ್ರತಧಾರಕರಿಗೆ ಮೋಕ್ಷ ಮಾರ್ಗದ ಉಪದೇಶಮಾಡುವವರು ‘ದಿಶಾ’ ಎನಿಸುವರು. ಸಲ್ಲೇಖನಾವ್ರತಿಯು ತಾನೂ ಇತರರನ್ನು ಕ್ಷಮಿಸಿ, ಇತರರೂ ತನ್ನನ್ನು ಕ್ಷಮಿಸುವಂತೆ ಪ್ರಾರ್ಥಿಸಿ ಕ್ಷಮಾ ಗ್ರಹಣವನ್ನು (ಖಾಮಣಾ) ಮಾದಬೇಕು; ಮೂರು ಪ್ರಕಾರದ ಆಹಾರವನ್ನು (ಸಾತ್ವಿಕ ರಾಜಸ ತಾಮಸ) ತ್ಯಾಗಮಾಡುವುದು ಪ್ರತ್ಯಾಖ್ಯಾನ (ಪಚ್ಚ ಕಾಣ್ಬ); ಬೇರೆಯವರಿಂದ ಕ್ಷಮೆ ಬೇಡುವುದು ಖಾಮಣ; ಬೇರೆಯವರಿಂದಾದ ಅಪರಾಧವನ್ನು ಕ್ಷಮಿಸುವುದು ಖಮಣ; ರಾಗ ದ್ವೇಷರಹಿತವಾಗಿರುವುದು ಸಮತೆ (ಸಾಮಣ್ಣ); ಚತುರ್ಗತಿಗಳಲ್ಲಿ ಸಂಚರಿಸುತ್ತ ಸಂಭವಿಸಿದ ದುಃಖವನ್ನು ದೂರಮಾಡುವ ಸಾಮರ್ಥ್ಯ ಹೊಂದಿರುವುದು ‘ಕವಚ’. ಸಲ್ಲೇಖನಾವ್ರತಿಗೆ ಆಚಾರ್ಯರು (ನಿರ್ಯಾಪಕಾಚಾರ್ಯರು) ಈ ರೀತಿ ’ಕವಚ’ ತೊಡಿಸುವುದು: “ಎಲೈ ವ್ರತಿಯೇ, ನೀನು ದೇವ ಮಾನುಷ ತಿರ್ಯಕ್ ನಾರಕ ಗತಿಗಳಲ್ಲಿ ಅಂಡಲೆಯುತ್ತಾ ಕಷ್ಟಕರವಾದ ದುಃಖಗಳನ್ನು ಸಹಿಸಿದ್ದೀಯೆ. ಇವನ್ನೆಲ್ಲ ನೀನು ಅನುಭವಿಸಿದ್ದು ಕರ್ಮಗಳ ಅಧೀನವಾಗಿ, ಅವುಗಳಿಂದ ನಿನಗೆ ಯಾವ ಲಾಭವೂ ಆಗಲಿಲ್ಲ. ಆದರೆ ಈ ಸಮಯದಲ್ಲಿ ನಿನ್ನ ದುಃಖ ಸಹನೆಯ ಕರ್ಮಗಳ ನಿರ್ಜರೆಗೋಸ್ಕರ ಮಾಡಲಾಗುತ್ತಿದೆ. ಈಗ ಎಲ್ಲ ದುಃಖಗಳನ್ನೂ ಕೊನೆಗಾಣಿಸುವ ಮತ್ತು ಅತೀಂದ್ರಿಯ ಅಚಲ ಅನುಪಮ ಅಭಾಧಾಸುಖವನ್ನು ಹೊಂದತಕ್ಕವನಾಗಿದ್ದೀಯೆ”. ಆಚಾರ್ಯರು ವ್ರತಿಗೆ ನೀಡುವ ಈ ಧರ್ಮೋಪದೇಶವು ವ್ರತಿಗೆ ಕವಚವಾಗಿದೆ. ಯುದ್ಧಾದಿ ಅಪಾಯಗಳಿಂದ ಶತ್ರುಗಳ ಬಾಣಗಳಿಂದ ದೂರ ಮಾಡಿ ಕವಚವು ಯೋಧನನ್ನು ರಕ್ಷಿಸುವಂತೆಯೇ ಆ ಸಾಮ್ಯತೆಯಿಂದ ಮರಣೋನ್ಮುಖಿ ವ್ರತಿಗೆ ಮಾಡುವ ಈ ಧರ್ಮೋದೇಶವನ್ನು ‘ಕವಚ’ ಶಬ್ದದಿಂದ ಹೇಳಿದ್ದಾರೆ.

ಸವ್ವೇವಿಯ ಉವಸಗ್ಗೇ ಪರಿಸಹೇಯ ತಿವಿಹೇಣ ಣಿಜ್ಜಣಹಿ ತುಮಂ
ಣಿಜ್ಜಿಣಿಯ ಸಮ್ಮಮೇದೇ ಹೋಹಿಸು ಆರಾಹ ಓ ಮರಣೇ
|| ೧೫೧೦

[ಎಲ್ಲಾ ಉಪಸರ್ಗ ಪರೀಷಹಗಳನ್ನು ತ್ರಿವಿಧಗಳಿಂದ (ಮನವಚನಕಾಯ) ನೀನು ಜಯಿಸು, ಉಪಸರ್ಗ ಪರೀಷಹಗಳನ್ನು ಗೆಲ್ಲುವುದರಿಂದ ಮರಣದ ದುಃಖಕ್ಕೆ ಹೆದರರಿರುವುದೂ ಗೆಲ್ಲುವುದೆನಿಸುತ್ತದೆ]. ಕುಲೀನನೂ ಸ್ವಾಭಿಮಾನಿಯೂ ಆದ ಶೂರನು, ‘ನಾನು ಯುದ್ಧದಲ್ಲಿ ಹಗೆಗಳನ್ನು ಸೋಲಿಸುವೆನು’ ಎಂದು ಜನರ ಎದೆ ತಟ್ಟಿ ಹೇಳಿ, ಆಮೇಲೆ ಎದುರಾದ ಶತ್ರುವಿಗೆ ಹೆದರಿ ಪಲಾಯನ ಮಾಡನು. ಅದೇ ರೀತಿ ಸ್ವಾಭಿಮಾನಿಯಾದ ಸಾಧುವು ವ್ರತ ಸ್ವೀಕರಿಸಿ ಉಪಸರ್ಗ ಪರೀಷಹಗಳಿಗೆ ಹೆದರನು. ಸಜ್ಜನ ಹಾಗೂ ಚಾರಿತ್ರವಂತರಾದ ಕ್ಷಪಕರೂ ವೀರಪುರುಷರಂತಿರುತ್ತಾರೆ, ಚಾರಿತ್ರ ಭ್ರಷ್ಟರಾಗುವುದಿಲ್ಲ. ಎಷ್ಟೋ ಸಾಧುಗಳು ಪರಿಗ್ರಹಗಳನ್ನು ತ್ಯಜಿಸಿ, ಆತ್ಮ ಚಿಂತನೆ ಮಾಡಿ, ಪ್ರತೀಕಾರ ರಹಿತರಾಗಿ, ಹುಲಿ ಮೊದಲಾದ ಕ್ರೂರ ಜಂತುಗಳಿರುವ ಭಯಾನಕ ಗಿರಿ ಶಿಖರಗಳಲ್ಲಿ ಧೈರ್ಯದಿಂದ, ಉತ್ಕೃಷ್ಟ ಚಾರಿತ್ರದಿಂದ ಶ್ರುತಜ್ಞಾನದಿಂದ, ಸಿಂಹಾದಿಗಳ ಬಾಯಿಗೆ ತುತ್ತಾಗುವ ಸಂಭವ ಬಂದಾಗಲೂ, ಪುರುಷಾರ್ಥಕವಾದ ಉತ್ತಮ ದರ್ಶನ ಜ್ಞಾನ ವಾರಿತ್ರಗಳ ಆರಾಧನೆಯನ್ನು ಹೊಂದಿದರು (ಆರಾಧನಾ ಗಾಹೆಗಳು ಸಂಖ್ಯೆ ೧೫೧೩-೧೫೩೩) ಎಂದು ನಿರೂಪಿಸಿ, ಈ ಎಲ್ಲ ನಿರೂಪಣೆಗೆ ನಿದರ್ಶನರೂಪವಾಗಿ ಇಲ್ಲಿಂದ ಮುಂದಿನ ೧೯ ಗಾಥೆಗಳಲ್ಲಿ (೧೫೩೪ ರಿಂದ ೧೫೫೨), ಚತುರ್ವಿಧ ಉಪಸರ್ಗಗಳನ್ನೂ ೨೮ ಪರೀಷಗಳನ್ನೂ ಸಹಿಸಿ ಗೆದ್ದು, ಪರಮ ಶುದ್ಧ ಸಹಜ ದರ್ಶನ ಜ್ಞಾನ ಚಾರಿತ್ರಗಳನ್ನು ಸಾಧಿಸಿದ ಮಹಾಪುರುಷರ ಕಥೆಗಳನ್ನು ಉಲ್ಲೇಖಿಸಲಾಗಿದೆ. ಈ ಕಥೆಗಳಲ್ಲಿ ಸಂಯಮನಿಷ್ಠೆ ತಪೋನಿಷ್ಠೆ ದೃಢಮನಸ್ಸು, ಘೋರವಾದ ಚತುರ್ವಿಧ ಉಪಸರ್ಗಗಳ ಸಹನೆ ಮೋಹರಾಹಿತ್ಯ ಭಯಂಕರ ಕ್ಷುದಾಸಹನೆ ಪಿಪಾಸಾಹನೆ ವೇದಾನಾ ಸಹನೆ ಕಂಡುಬರುತ್ತದೆ. ಸಲ್ಲೇಖನ ವ್ರತಿಧಾರಿಯಾದವನಿಗೆ ಈ ರೀತಿ ಚತುರ್ವಿಧೋಪಸರ್ಗಗಳನ್ನು ಸಹಿಸಿ, ಶುಭ ಪರಿಣಾಮದಿಂದ ಸದ್ಗತಿ ಪಡೆದ ಮುನಿಗಳ ವೃತ್ತಾಂತವನ್ನು ಹೇಳಿ ಆ ಮೇಲೆ ಸಲ್ಲೇಖನ ವ್ರತಿಗೆ ನಿರ್ಯಾಪಕಾಚಾರ್ಯರು ಈ ರೀತಿ ಉಪದೇಶಿಸುತ್ತಾರೆ:

ಜದಿದಾ ಏವಂ ಏದೇ ಅಣಗಾರಾ ತಿವ್ವವೇದಣಟ್ಠಾವಿ
ಏಯಾಗೀ ಅಪಡಿಯಾಮ್ಮಾ ಪಡಿವಣ್ಣಾ ಉತ್ತಮಂ ಅಟ್ಠಂ
|| ೧೫೫೩
ಕಿಂಪುಣ ಅಣಯಾರ ಸಹಾಯಗೇಣ ಕೀರಯಂತ ಪಡಿಕಮ್ಮೋ
ಸಂಘೇ ಓಲಗ್ಗಂತೇ ಆರಾಧೇದುಂ ಣ ಸಕ್ಕೇಜ್ಜ
|| ೧೫೫೪
ಜಿಣವಯಣಮಮಿದ ಭೂದಂ ಮಹುರಂ ಕಣ್ಣಾಹುದಿಂ ಸುಣಂತೇಣ
ಸಕ್ಕಾಹು ಸಂಘಮಚ್ಛೇ ಸಾಹೇದುಂ ಉತ್ತಮಂ ಅಟ್ಟಂ
|| ೧೫೫೫

[ಈ ಮುನಿಗಳು ಈ ರೀತಿಯಾಗಿ ಒಂಟಿಯಾಗಿ, ಯಾವ ಪ್ರತೀಕಾರವನ್ನೂ ಮಾಡದೆ, ತೀವ್ರ ವೇದನೆಯಿಂದ ಪೀಡಿತರಾಗಿಯೂ ಉತ್ತಮಾರ್ಥವನ್ನು ಪಡೆದರು. (ಆದರೆ) ನಿನ್ನ ಸಹಾಯಕ್ಕೆ ಮುನಿಗಳ ಸಮುದಾಯವೇ ಇದೆ. ಆ ಸಂಘವು ನಿನಗೆ ಒದಗಿರುವ ಕಷ್ಟಕ್ಕೆ ಚಿಕಿತ್ಸೆ ಮಾಡುತ್ತದೆ, ನಿನ್ನ ಉಪಾಸನೆ (ಸೇವೆ) ಯನ್ನೂ ಮಾಡುತ್ತದೆ. ನೀನು ಆರಾಧನೆಯನ್ನು ಮಾಡಲು ಏಕೆ ಸಮರ್ಥನಲ್ಲ? ಅಮೃತದ ಹಾಗೆ ಮಧುರವಾಗಿರುವ ಜಿನ ವಚನವು ನಿನ್ನ ಕಿವಿಗಳಿಗಿದೆ. ಅವನ್ನು ಆಲಿಸುತ್ತ ಸಂಘದ ಮಧ್ಯದಲ್ಲಿ ನೀನು ಆರಾಧನೆ ಮಾಡಿಕೊಳ್ಳುತ್ತ ಉತ್ತಮಾರ್ಥವನ್ನು ಹೊಂದುವುದು ಸುಲಭ ಸಾಧ್ಯ].

ಈ ಒಟ್ಟು ಚೌಕಟ್ಟು ಕವಚವೆಂಬ ಅಧಿಕಾರಕ್ಕೆ ಒಳಪಟ್ಟ ಕಥಾಂತರ್ಗತ ಭಾಗವಾಗಿರುವುದರಿಂದ, ಕಡೆಯ (ಮೇಲಿನ) ಮೂರು ಗಾಹೆಗಳು ಮೂಲ ಪಾಠದಲ್ಲಿ ಅಳವಡುವ ಔಚಿತ್ಯ ಪಡೆದಿವೆ; ಈ ನಿರ್ಣಯಕ್ಕೆ ಉಪಷ್ಟಂಬಕವಾಗಿರುವುದು ಕವಚ ವಿಶಿಷ್ಟವಾದ ಪರಿಸಮಾಪ್ತಿ ವಾಕ್ಯ.

ಆರಾಧನಾ ಗ್ರಂಥವು ಜೈನಾಗಮ ಕೃತಿ ಶ್ರೇಣಿಗೆ ಕಥೆಗಳ ಕವಚವನ್ನು ತೊಡಿಸಿರುವ ಮಾಣಿಕ್ಯ ಕೋಶ. ಇದು ಜೈನಧರ್ಮದ ಉತ್ಕೃಷ್ಟ ಕೈಪಿಡಿ, ವಸ್ತುಕೋಶ. ಇದು ಸಾವಿರಾರು ವರ್ಷಗಳ ಪರಂಪರೆಯಿಂದ ಮೌಖಿಕವಾಗಿ, ಗುರುವಿನಿಂದ ಶಿಷ್ಯ ಪರಂಪರೆಗೆ, ತಲೆಮಾರಿನಿಂದ ತಲೆಮಾರಿಗೆ ಉಳಿದುಬಂದ ಜಿನವಾಣಿ. ಸೈದ್ದಾಂತಿಕ ಸಂಗತಿಯೊಂದಿಗೆ, ಆಯಾ ತತ್ತ್ವಗಳನ್ನು ತಿಳಿಯಾಗಿ ಸುಬೋಧವಾಗುವಂತೆ, ದೃಷ್ಟಾಂತ ಕಥೆಗಳನ್ನು ನಿರೂಪಿಸಲಾಗಿದೆಯೆಂಬುದು ಈ ಆರಾಧನಾಗ್ರಂಥದ ಹಿರಿಮೆ. ಕಥೆಗಳು ಅವುಗಳ ವಿವರ ವ್ಯಾಪ್ತಿಗಳನ್ನೆಲ್ಲ ಸಂಕ್ಷೇಪಿಸಿಕೊಂಡು, ಕೇವಲ ಎರಡರೆಡು ಸಾಲುಗಳಲ್ಲಿ ಹರಳುಗೊಂಡಿವೆ. ಎರಡೇ ಎರಡು ಸಾಲಿಗೆ ಅಡಕಗೊಂಡಿರುವ ಕಥಾಸಾರವಿರುವ ಈ ಪ್ರಾಕ್ರುತ ಗಾಥೆಗಳಲ್ಲಿ ಇತಿಹಾಸವಿದೆ, ಸಾಮಾಜಿಕ ಚಿತ್ರಣವಿದೆ, ಪ್ರಾಚೀನ ಭಾರತದ ಜನಜೀವನಕ್ಕೆ ಈಣುಕು ನೋಟವಿದೆ, ಸಾಂಸ್ಕೃತಿಕ ದಾಖಲೆಯಿದೆ, ಧಾರ್ಮಿಕ ವಿವರವಿದೆ – ಬ್ರಹ್ಮಾಂಡವೇ ಇದೆ.

ಹೀಗೊಂದು ವಿಶ್ವಕೋಶದ ಸ್ವರೂಪ ಪಡೆದಿರುವ ಆರಾಧನಾ ಗ್ರಂಥದ ಗಾಹೆಗಳಿಗೆ, ಪಾರಂಪಾರಿಕ ಪರಿಸರದ ಪರಿಚಯವಿರುವ ಬುದ್ಧಿ ಭಾವಗಳು, ತಕ್ಕ ವ್ಯಾಖ್ಯಾನ ವಿಸ್ತಾರವನ್ನು ತಟ್ಟನೆ ತಗುಳಿಸಿ ಹೇಳುವ ಸಿದ್ಧತೆ ಸಾಧ್ಯದೆ ಪಡೆದಿದ್ದುವು. ಅಂದರೆ ಆರಾಧನಾದಲ್ಲಿರುವ ಗಾಹೆಗಳಲ್ಲಿ ಒಂದು ಸಂಯೋಜನೆಯಿದೆ. ಜೈನ ಪರಂಪರೆಯಲ್ಲಿ ಪ್ರಚಲಿತವಿದ್ದ ಐತಿಹ್ಯಗಳನ್ನು, ಕಥೆ ಆಖ್ಯಾನ ಉಪಾಖ್ಯಾನಗಳನ್ನು, ಅದರ ಹೊರಮೈ ವಿವರಗಳನ್ನು ವರ್ಣನೆ ವಿಸ್ತಾರಗಳನ್ನು ಎರಡು ಸಾಲಿಗಿಳಿಸಿ, ಸಂಕೇತಿಕರಣಗೊಳಿಸಲಾಗಿದೆ (encoding). ಈ ಸಂಕೇತಿಕರಣದ ಗಾಹೆಗಳ ನಿಕ್ಷಿಪ್ತದಲ್ಲಿ ಹುದುಗಿರುವ ಕಥಾಸಾಗರ ನಿಧಿಯನ್ನು ವಿಸಂಕೇತಿಸಿ (decoding) ಹೊರ ತೆಗೆಯುವುದು ಆ ಜೈನ ವಾಙ್ಮಯ ಪರಂಪರೆಯ ವಾರಸುದಾರರಿಗೆ ವ್ಯಾಖ್ಯಾನಕಾರರಿಗೆ ಕರತಲಾಮಲಕವಾಗಿತ್ತು.

ಆರಾಧನಾ ಎಂಬ ಹೆಸರಿನ ಈ ಗ್ರಂಥ ಶತಮಾನದಿಂದ ಶತಮಾನಕ್ಕೆ ಗೌರವ ಗ್ರಂಥವಾಗಿ, ಗಹನಗ್ರಂಥವಾಗಿ ಮನ್ನಣೆ ಪಡೆದು ಬೆಳೆಯಿತು. ಆರಾಧನಾ ಗ್ರಂಥವು ಜೈನ ಸಾಹಿತ್ಯದಲ್ಲಿ ಮೂಲಗ್ರಂಥವಾಗಿ ಆಕರಸ್ವರೂಪದಿಂದ ವಿರಾಜಮಾನವಾಯಿತು. ಅದರಿಂದ ತನ್ನ ಮೂಲ ಹೆಸರಾದ ಆರಾಧನಾ ಎಂಬುದನ್ನು ಮೂಲೆಗೆ ಸರಿಸಿ, ಮೂಲಾರಾಧನಾ ಎಂಬ ಹೊಸ ಹೆಸರಿಂದ ಬೆಳಗಿತು. ತೀರ್ಥಂಕರರಿಗೂ ಮಹಾ ಮಹಿಮರಾದ ಆಚಾರ್ಯರಿಗೂ ಸಲ್ಲುತ್ತಿದ್ದ ಮನ್ನಣೆ ಈ ಗ್ರಂಥಕ್ಕೂ ಸಲ್ಲತೊಡಗಿತು; ಪರಿಣಾಮವಾಗಿ ಮಹಿಮಾಪುರುಷರಿಗೆ ಪ್ರಯೋಗವಾಗುತ್ತಿದ್ದ ಭಗವಾನ್ ಎಂಬ ವಿಶೇಷಣಾರ್ಥದ ಶಬ್ದ ಈ ಕೃತಿಗೂ ಸೇರ್ಪಡೆಯಾಗಿ ‘ಭಗವತೀ ಆರಾಧನಾ’ ಎಂಬ ನೂತನಾಭಿಧಾನಕ್ಕೆ ಪಾತ್ರವಾಯಿತು; ಆರಾಧನಾ ಎಂಬ ಶಬ್ದ ಆಕಾರಾಂತ ಸ್ತೀವಾಚಿ ಯಾಗಿರುವ ಕಾರಣ ಭಗವಾನ್ ಎಂಬುದು ಭಗವತೀ ಎಂಬ ಈ ಕಾರಾಂತ ಸ್ತ್ರೀವಾಚ್ಯವಾಯಿತು. ಸಂಸ್ಕೃತ ಆಕಾರಾಂತ ರೂಪಗಳು ಕನ್ನಡದಲ್ಲಿ ಬಳಕೆಯಾಗುವಾಗ (ಉಮಾ ರಮಾ ಸೀತಾ) ಎಕಾರಾತವಾಗುವ ವಾಡಿಕೆಯಂತೆ (ಉಮೆ ರಮೆ ಸೀತೆ) ಆರಾಧನಾ ಎಂಬುದು ಆರಾಧನೆ (ಮೂಲಾರಾಧನಾ – ಮೂಲರಾಧನೆ) ಎಂದು ಪ್ರಯೋಗದಲ್ಲಿದೆ.

ಪ್ರಾಕೃತದಲ್ಲಿರುವ ಆರಾಧನಾ ಗ್ರಂಥದ ಉಪಾದೇಯತೆ ಮತ್ತು ಮಾನ್ಯತೆ ಎಷ್ಟಿದೆಯೆಂದರೆ ಇದರ ಮೇಲೆ ಸಂಸ್ಕೃತದಲ್ಲಿ ವ್ಯಾಖ್ಯಾನ (ಟೀಕಾ) ಗ್ರಂಥಗಳು ರಚಿತವಾಗಿವೆ:

೧. ವಿಜಯೋದಯಾ ವ್ಯಾಖ್ಯಾನ : ಅಪರಾಜಿತ ಸೂರಿಯು (ಕ್ರಿ.ಶ. ೮ ರಿಂದ ೧೧ ನೆಯ ಶತಮಾನ). ಸಂಸ್ಕೃತದಲ್ಲಿ ರಚಿಸಿರುವ ಈ ಟೀಕಾ ಗ್ರಂಥವೇ ಅತ್ಯಂತ ಪ್ರಾಚೀನವಾದುದು ಮತ್ತು ವಿಸ್ತಾರವಾದುದು : ಆದರೆ ಅಪರಾಜಿತ ಸೂರಿಯೇ ತನಗಿಂತಲೂ ಹಿಂದೆ ಆರಾಧನಾದ ಟೀಕೆಗಳು ಇದ್ದುವೆಂದು ಹೇಳಿದ್ದಾನೆ; ಇದರಿಂದ ಆರಾಧನಾ ಗ್ರಂಥದ ಪ್ರಸಿದ್ಧಿಯೂ ಪ್ರಾಚೀನತೆಯೂ ಸಿದ್ಧವಾಗುತ್ತದೆ.

೨. ಮೂಲಾರಾಧನಾ ದರ್ಪಣ : ಪಂಡಿತ ಆಶಾಧರಸೂರಿಯು ಈ ಟೀಕೆಯನ್ನು ರಚಿಸಿದ್ದಾನೆ. ಪಂಡಿತ ಆಶಾಧರನು ೧೩ ನೆಯ ಶತಮಾನದವನೆಂದು ಡಾ. ಹೀರಾಲಾಲ್ ಜೈನ್ ಸೂಚಿಸಿದ್ದಾರೆ.

ಇವಲ್ಲದೆ ಆರಾಧನಾ ಗ್ರಂಥ ಕುರಿತು ಒಂದು ಪಂಜಿಕಾ ಎಂಬ ಹೆಸರಿನ ಟೀಕೆಯೂ, ಭಾವಾರ್ಥ ದೀಪಿಕಾ ಎಂಬ ಹೆಸರಿನ ಟೀಕೆಯೂ ರಚಿತವಾಗಿದ್ದು ಉಪಲಬ್ಧವಾಗಿದೆ.

ಆರಾಧನಾ ಗ್ರಂಥವು ಮುನಿಗಳ ಆಚಾರ ನಿರೂಪಣೆಯಿರುವ ಸ್ವತಂತ್ರವೆನ್ನಬಹುದು ದಾದ ಪ್ರೌಢರಚನೆ. ಪ್ರಾಕೃತದಲ್ಲಿರುವ ಈ ಕೃತಿಯು ಸಂಸ್ಕೃತದಲ್ಲಿರುವ ಉಮಾಸ್ವಾತಿ(ಮಿ) ಯ ತತ್ವಾರ್ಥಸೂತ್ರದಲ್ಲಿ ಪ್ರತಿಪಾದಿತವಾಗಿರುವ ಏಳನೆಯ ಹಾಗೂ ಒಂಬತ್ತನೆಯ ಅಧ್ಯಾಯದ ಸೂತ್ರಗಳಿಗೆ ಬರೆದ ಪ್ರತಿಪಾದಿತವಾಗಿರುವ ಏಳನೆಯ ಹಾಗೂ ಒಂಬತ್ತನೆಯ ಅಧ್ಯಾಯದ ಸೂತ್ರಗಳಿಗೆ ಬರೆದ ವಿಶದವಾದ ವರ್ಣನೆ ಯೆಂಬಂತಿದೆ. ಅಂತರಂಗ ತಪಗಳ ರನ್ನಗನ್ನಡಿಯ ಹಾಗಿರುವ ಆರಾಧನಾ ಗ್ರಂಥದ ಮತ್ತು ಗ್ರಂಥಕಾರನ ವಿಚಾರವಾಗಿ ಡಾ. ಹೀರಾಲಾಲ್ ಜೈನರು ಸಾರ ಸಂಗ್ರಹ ರೂಪದಲ್ಲಿ ವಿವರಗಳನ್ನಿತ್ತಿದ್ದಾರೆ:

“ಮುನಿ ಆಚಾರದ ಮೇಲೆ ಶಿವಾರ್ಯನು ರಚಿಸಿದ ಭಗವತೀ ಆರಾಧನಾ ಎಂಬ ಗ್ರಂಥವಿದೆ. ಇವನು ಗ್ರಂಥದ ಕೊನೆಯಲ್ಲಿ ತಾನು ಆರ್ಯ ಜಿನನಂದಿಗಣಿ, ಸರ್ವ ಗುಪ್ತಗಣಿ ಮತ್ತು ಮಿತ್ರನಂದಿಯ ಸಾನ್ನಿಧ್ಯದಲ್ಲಿ ಸೂತ್ರ ಮತ್ತು ಅವುಗಳ ಅರ್ಥವನ್ನು ಚೆನ್ನಾಗಿ ಅಭ್ಯಾಸಮಾಡಿ ಜ್ಞಾನ ಸಂಪಾದಿಸಿ, ಪೂರ್ವಾಚಾರ್ಯ ನಿಬದ್ಧ ರಚನೆಯ ಆಶ್ರಯದಿಂದ ತನ್ನ ಶಕ್ತಿಗೆ ಅನುಸರಿಸಿ ಈ ಆರಾಧನೆಯನ್ನು ರಚಿಸಿದೆನು ಎಂದೂ ಹೇಳಿಕೊಂಡಿದ್ದಾನೆ. ಇದರಿಂದ ಇವನ ಎದುರಿಗೆ ಯಾವುದಾದರೊಂದು ಈ ವಿಷಯದ ಪ್ರಾಚೀನ ಗ್ರಂಥವು ಇದ್ದಿರಬೇಕೆಂದು ಗೊತ್ತಾಗುತ್ತದೆ. ಕಲ್ಪಸೂತ್ರದ ಸ್ಥವಿರಾವಲಿಯಲ್ಲಿ ಒಬ್ಬ ಶಿವಭೂತಿಯು ಉಲ್ಲೇಖವು ಬಂದಿದೆ. ಹಾಗೆಯೇ ಅವಶ್ಯಕ ಮೇಲೆ ಭಾಷ್ಯದಲ್ಲಿ ಶಿವಭೂತಿಯು ವೀರ ನಿರ್ವಾಣದ ತರುವಾಯ ೬೦೯ ವರ್ಷಗಳ ಮೇಲೆ ದಿಗಂಬರ ಸಂಘದ ಸಂಸ್ಥಾಪಕನೆಂದು ಹೇಳಲಾಗಿದೆ. ಕುಂದಕುಂದಾ ಚಾರ್ಯರು ತಮ್ಮ ಭಾವ ಪಾಹುಡದಲ್ಲಿ ಶಿವಭೂತಿಯು ಭಾವವಿಶುದ್ಧಿಯಿಂದ ಕೇವಲ ಜ್ಞಾನವನ್ನು ಸಂಪಾದಿಸಿದನೆಂದು ಹೇಳಿದ್ದಾನೆ. ಜಿನಸೇನನು ತನ್ನ ಹರಿವಂಶ ಪುರಾಣದಲ್ಲಿ ಲೋಹಾರ್ಯನ ತರುವಾಯ ಆದ ಆಚಾರ್ಯದಲ್ಲಿ ಶಿವಗುಪ್ತ ಮುನಿಯನ್ನು ಉಲ್ಲೇಖಿಸಿದ್ದಾನೆ. ಅವನು ತನ್ನ ಗುಣಗಳಿಂದ ಅರ್ಹದ್ ಬಲಿಯ ಸ್ಥಾವನನ್ನು ಪಡೆದಿದ್ದನು. ಆದಿಪುರಾಣದಲ್ಲಿ ಶಿವಕೋಟಿ ಮುನೀಶ್ವರ ಮತ್ತು ಅವನ ಚತುಷ್ಟಯ ಮೋಕ್ಷ ಮಾರ್ಗದ ಆರಾಧನಾ ರೂಪ ಹಿತಕರ ವಾಣಿಯ ಉಲ್ಲೇಖವಿದೆ. ಪ್ರಭಾಚಂದ್ರನ ಆರಾಧನಾ ಕಥಾ ಕೋಶ ಮತ್ತು ದೇವಿಚಂದ್ರನ ರಾಜಾವಳಿ ಕಥೆಗಳಲ್ಲಿ ಶಿವಕೋಟಿ ಸ್ವಾಮಿಯನ್ನು ಸಮಂತ ಭದ್ರನ ಶಿಷ್ಯನೆಂದು ಹೇಳಿದೆ. ಈ ಎಲ್ಲ ಉಲ್ಲೇಖಗಳು ಭಗವತೀ ಆರಾಧನದ ಕರ್ತೃವಾದ ಶಿವಕೋಟಿಯನ್ನೇ ಕುರಿತು ಇವೆಯೆಂದರೆ ಆಶ್ಚರ್ಯ ಪಡುವ ಕಾರಣವಿಲ್ಲ. ಈ ಗ್ರಂಥವು ಬಹುತರ ಕ್ರಿ.ಶ. ಪ್ರಾರಂಭದ ಶತಮಾನಗಳಿಗೆ ಸೇರಿದುದಾಗಿರಬೇಕು. ಈ ಗ್ರಂಥದಲ್ಲಿ ದಿಗಂಬರ ಸಂಪ್ರದಾಯದ ಅಚೇಲಕತ್ವ ಹಾಗೂ ಶ್ವೇತಾಂಬರರ ಸ್ತೀ ಮುಕ್ತಿಗಳನ್ನು ಮನ್ನಿಸುವುದರಿಂದ ಇದು ಯಾಪನೀಯ ಸಂಘದ ರಚನೆಯಾಗಿರಬೇಕೆಂದು ಕೆಲವರ ಮತವಾಗಿದೆ. ಈ ಗ್ರಂಥದಲ್ಲಿ ೨೧೬೬ ಗಾಹೆಗಳು ಇವೆ. ಇದರಲ್ಲಿ ಬಹು ವಿಸ್ತಾರವಾಗಿಯೂ ವಿಶಲವಾಗಿಯೂ ದರ್ಶನ ಜ್ಞಾನಚಾರಿತ್ರ ಮತ್ತು ತಪ- ಈ ನಾಲ್ಕು ಆರಾಧನೆಗಳ ವರ್ಣನೆಯು ಇದೆ. ಇದರ ಉಲ್ಲೇಖವು ಕುಂಕದುಂದರ ಗ್ರಂಥಗಳಲ್ಲಿ ಹಲವೆಡೆಗೆ ಬಂದಿದೆ. ಪ್ರಸಂಗಕ್ಕನುಸರಿಸಿ ಜೈನಧರ್ಮಕ್ಕೆ ಸಂಬಂಧಿಸಿದ ಎಲ್ಲ ವಿಷಯಗಳೂ ಇದರಲ್ಲಿ ಸಂಕ್ಷೇಪವಾಗಿಯೂ ವಿಸ್ತಾರವಾಗಿಯೂ ವರ್ಣಿತವಾಗಿವೆ. ದಿಗಂಬರ ಪರಂಪರೆಯ ಬೇರೆ ಗ್ರಂಥಗಳಲ್ಲಿ ನೋಡಲಿಕ್ಕೆ ದೊರೆಯದಂಥ ಮುನಿಗಳ ಸಾಧನೆ ಹಾಗೂ ವ್ರುತ್ತಿಗಳಿಗೆ ಸಂಬಂಧಿಸಿದ ವಿಷಯಗಳು ಇದರಲ್ಲಿ ಬಂದಿವೆ. ೧೬೨೧ ರಿಂದ ೧೮೯೧ ರವರೆಗಿನ ೨೭೧ ಗಾಹೆಗಳಲ್ಲಿ ಆರ್ತರೌದ್ರ ಧರ್ಮ ಮತ್ತು ಶುಕ್ಲ – ಈ ನಾಲ್ಕು ಧ್ಯಾನಗಳನ್ನು ವಿಸ್ತಾರವಾಗಿ ವರ್ಣಿಸಿದೆ. ಆವಶ್ಯಕ ನಿರ್ಯುಕ್ತಿ, ಬೃಹತ್ ಕಲ್ಪ ಭಾಷ್ಯ ಮತ್ತು ನಿಶೀಥ ಮೊದಲಾದ ಪ್ರಾಚೀನ ಗ್ರಂಥಗಳಿಂದ ಇದರಲ್ಲಿ ಅನೇಕ ಗಾಥೆಗಳೂ ವೃತ್ತಾಂತಗಳೂ ಲಭಿಸುತ್ತವೆ”. (ಡಾ. ಹೀರಾಲಾಲ್ ಜೈನ್ : ಭಾರತೀಯ ಸಂಸ್ಕೃತಿಗೆ ಜೈನಧರ್ಮದ ಕೊಡುಗೆ (೧೯೭೧) ಕನ್ನಡ ಅನುವಾದ, ಮಿರ್ಜಿ ಅಣ್ಣಾರಾಯ, ಪುಟ ೧೩೧-೧೩೨).

ಇದರ ಕೆಲವು ಆವೃತ್ತಿಗಳು

೧. ಭಗವತೀ ಆರಾಧನಾ : ಪಂಡಿತ ಸದಾಸುಖಜಿಯ ಭಾಷಾವಚನಿತಾಸಹ (ಡುಂಢೂರಿ ಭಾಷೆಯಲ್ಲಿರುವ ಟೀಕೆ), ಅನಂತಕೀರ್ತಿ ಗ್ರಂಥಮಾಲೆ, ಮುಂಬಯಿ, ೧೯೦೯ ದ್ವಿತೀಯ ಸಂಸ್ಕರಣ ೧೯೩೨. ಇದರಲ್ಲಿ ಹಿಂದಿ ಅನುವಾದವೂ, ಗಾಥಾಗಳ ಅಕಾರಾದಿ ವರ್ಣಾನುಕ್ರಮಣಿಕೆಯೂ ಇದೆ.

೨. ಭಗವತೀ ಆರಾಧನಾ (ಮೂಲಾರಾಧನಾ) : ಪಂಡಿತ ಜಿನದಾಸ ಪಾರ್ಶ್ವನಾಥ ಫಡಕುಲೇ, ಜೀವರಾಜ ಜೈನ ಗ್ರಂಥಮಾಲಾ, ಸೊಲ್ಲಾಪುರ ೧೯೩೫

ಇದರಲ್ಲಿ ಅಪರಾಜಿತಸೂರಿಯ ವಿಜಯೋದಯಾ ಟೀಕಾ, ಆಶಾಧರ ಸೂರಿಯ ಮೂಲಾರಾಧನಾದರ್ಪಣ ಟೀಕಾ, ಮತ್ತು ಆಚಾರ್ಯ ಅಮಿತಗತಿಯ ಸಂಸ್ಕೃತ ಪದ್ಯಗಳ ಆಧಾರವೂ, ಹಿಂದಿ ಅನುವಾದವೂ ಸಿಗುತ್ತದೆ

೩. ಮೂಲಾರಾಧನಾ : ಆಚಾರ್ಯ ಮಹಾವೀರಕೀರ್ತಿ ಮುನಿ, ಆಚಾರ್ಯ ಸನ್ಮತಿಸಾಗರ ಮುನಿ, ವಿದುಷಿ ಆರ್ಯಿಕಾ ಶ್ರೀ ವಿಜಯಮತಿ ಮಾತಾಜಿ; ಕಲಕತ್ತಾ ದಿಗಂಬರ ಜೈನ ಸಮಾಜ, ೧೯೬೮

೪. ಭಗವತೀ ಆರಾಧನಾ : ಸಿದ್ದಾಂತಾಚಾರ್ಯ ಶ್ರೀ ಪಂಡಿತ ಕೈಲಾಸ ಚಂದ್ರಶಾಸ್ತ್ರಿ, (ಹಿಂದಿಭಾಷೆಯಲ್ಲಿ ಗದ್ಯಾನುವಾದ ಸಹಿತ, ಅಪರಾಜಿತ ಸೂರಿಯ ವಿಜಯೋದಯಾ ಟೀಕೆಯೂ ಇದೆ), ಜೈನ ಸಂಸ್ಕೃತಿ ಸಂರಕ್ಷಕ ಸಂಘ ಸೊಲ್ಲಾಪುರ, ೧೯೮೭

೫. ಮೂಲಾರಾಧನಾ (ಭಗವತೀ ಆರಾಧನಾ): ಸ್ಚಸ್ತಿಶ್ರೀ ೧೦೮ ನಿಯಮ ಸಾಗರಮುನಿ ಮಹಾರಾಜರು, ಶ್ರೀ ಜಿನವಾಣಿ ಪ್ರಕಾಶನ ಸಮಿತಿ, ತುಮಕೂರು, ೧೯೯೦ ಇದು ಕನ್ನದ ಆವೃತ್ತಿ, ಕನ್ನಡ ಗದ್ಯಾನುವಾದವೂ ಇದೆ.

ಈ ಆರಾಧನಾ ಗ್ರಂಥಕ್ಕೆ ಜೈನ ವಾಙ್ಮಯದಲ್ಲೇ ಅಲ್ಲದೆ ಸಮಸ್ತ ಭಾರತೀಯ ಕೃತಿ ಶ್ರೇಣಿಯಲ್ಲೇ ವಿಶಿಷ್ಟಸ್ಥಾನವಿದೆ. ಇದರಲ್ಲ್ ಮತದೃಷ್ಟಿ ಯಥೇಚ್ಛವಾಗಿದೆ, ಆದರೆ ಆಳದಲ್ಲಿ ಕವಿ ಮನೋಧರ್ಮವೂ ಇದೆ. ತೆಳ್ಳಗೆ ತಿಳಿಯಾಗಿ ಹರಿಯುವ ಈ ಕಾವ್ಯಗುಣ ಕೆಲವು ಕಡೆ ಮೇಲುಗೈ ಪಡೆಯುತ್ತದೆ; ಶ್ರೀಚಂದ್ರನು ಈ ಆರಾಧನಾ ಗ್ರಂಥವನ್ನು ಕಹಕೋಸು (ಕಥಾ ಕೋಶ) ಎಂದು ಸ್ಮರಿಸಿರುವುದನ್ನು ಗುರುತಿಸಬೇಕು. ಶಿವಕೋಟಿಯ ತಾತ್ವಿಕ ವಿವರಣೆಯಲ್ಲೂ ಸಾಹಿತ್ಯ ಸ್ಪರ್ಶವಿದೆ. ಜೈನ ಶೌರಸೇನೀ ಪ್ರಾಕೃತ ಭಾಷೆಯ ವಿಲಾಸವೈಭವವನ್ನು ಆರಾಧನಾದಲ್ಲಿ ಕಾಣುತ್ತೇವೆ.

ಆರಾಧನಾಗ್ರಂಥಕ್ಕೆ ಕನ್ನಡದಲ್ಲಿ ಮೊಟ್ಟ ಮೊದಲನೆಯವನಾಗಿ, ಪ್ರಾಯಃ ಕಟ್ಟಕಡೆಯವನೂ ಆಗಿ, ಟೀಕೆಯನ್ನು ಬರೆದವನು ಭ್ರಾಜಿಷ್ಣು. ಈತನ ಹೆಸರು ಇದುವರೆಗೆ ಕನ್ನದ ಸಾಹಿತ್ಯ ಚರಿತ್ರೆಯಲ್ಲಿ ದಾಖಲಾಗದೆ ಉಳಿದಿತ್ತು. ಇನ್ನು ಮುಂದೆ ಪ್ರಕಟವಾಗುವ ಹಳೆಗನ್ನಡ ಸಾಹಿತ್ಯ ಚರಿತ್ರೆಗಳಲ್ಲಿ ಉಜ್ವಲವಾಗಿ ಮಿನುಗುವ ಭ್ರಾಜಿಷ್ಣುವನ್ನು ಕುರಿತು ಸಿಗುವ ಮಾಹಿತಿಗಳನ್ನು ಚರ್ಚಿಸಲಾಗುವುದು. ಅದಕ್ಕೆ ಮೊದಲು ಅತಿ ಸಂಕ್ಷೇಪದಲ್ಲಿ ಹೇಳಬೇಕಾದಿಷ್ಟು:

ಇದುವರೆಗೆ ಈ ೧೯ ಕಥೆಗಳ ಸಂಕಲನದ ಹೆಸರು “ವಡ್ಡಾರಾಧನೆ”; ಕರ್ತೃ ಶಿವಕೋಟ್ಯಾಚಾರ್ಯ, ಕಾಲ ೯೨೦, ಸ್ಥಳ ಕೋಗಳಿ ಎಂಬ ಅಭಿಪ್ರಾಯ ಪ್ರಚಾರದಲ್ಲಿದೆ. ಆದರೆ ಈಗ ನನ್ನ ಸಂಶೋಧನೆಯ ಫಲಿತವಾಗಿ ಈ ಕೃತಿಯ ಹೆಸರು “ಆರಾಧನಾ ಕರ್ಣಾಟ ಟೀಕಾ”, ಕರ್ತೃ ಭ್ರಾಜಿಷ್ಣು, ಕಾಲ ಸು. ಕ್ರಿ.ಶ. ೮೦೦, ಸ್ಥಳ ಹಳ್ಳಿಖೇಡ – ಎಂಬ ಸಂಗತಿ ಬೆಳಕಿಗೆ ಬಂದಿದೆ. ಶಿವಕೋಟಿ ಆಚಾರ್ಯನು ಮೂಲ ಪ್ರಾಕೃತ ಆರಾಧನಾ ಗ್ರಂಥದ ಲೇಖಕನೇ ಹೊರತು ಕನ್ನದ ಕಥೆಗಳ ಕರ್ತೃವಲ್ಲ ಎಂಬುದೂ, “ವಡ್ಡಾರಾಧನೆ” ಎಂಬುದು ಮೂಲ ಪ್ರಾಕೃತ ಬೃಹದಾರಾಧನೆಯ ಇನ್ನೊಂದು ರೂಪದ ಹೆಸರೇ ಹೊರತು ಕನ್ನದ ಕಥೆಗಳ ಕೃತಿಯ ಹೆಸರಲ್ಲ ಎಂಬುದೂ, ಸ್ಥಾಪಿತವಾದ ಸತ್ಯ. ಆದರೂ ಈಗ ವಡ್ಡಾರಾಧನೆಯೆಂಬ ಹೆಸರು ಜನಪ್ರಿಯವಾಗಿ ರೂಢಿಯಲ್ಲಿ ನಿಂತಿದೆ; ಅದರಿಂದಾಗಿ ನಾನು ಕೂಡ ಈ ಪುಸ್ತಕದ ಶೀರ್ಷಿಕೆಯನ್ನು ಹಾಗೇ ಉಳಿಸಿಕೊಂಡಿದ್ದೇನೆ.