ಕರ್ನಾಟಕದ ಬಿಜಾಪುರ ಜಿಲ್ಲೆಯ ಹುನಗುಂದ ತಾಲ್ಲೂಕಿಗೆ ಸೇರಿದ ಇಲಕಲ್ ಸಮೀಪದ ‘ಚಿನ್ನಾಪುರ ಎಸ್. ಟಿ.’ ಎಂಬ ಹಳ್ಳಿಯಲ್ಲಿ ಕಟ್ಟಡಕ್ಕಾಗಿ ಪಾಯತೋಡುತ್ತಿರುವಾಗ ಪ್ರಾಚೀನ ಶಿಲಾ ಮೂರ್ತಿ ದೊರೆತಿದೆ. ಆಳೆತ್ತರದ ಸುಂದರ ಕಲಾಕೃತಿಯಾಗಿರುವ ಈ ಕಲ್ಲಿನ ವಿಗ್ರಹವು ಪಾರ್ಶ್ವನಾಥ ತೀರ್ಥಂಕರರ ಮೂರ್ತಿಯದಾಗಿದ್ದು ಇದು ಕಾಯೋತ್ಸರ್ಗ – ಖಡ್ಗಾಸನದಲ್ಲಿದೆ. ತಪಸ್ಸಿಗೆ ನಿಂತಿರುವ ಪಾರ್ಶ್ವನಾಥ ತೀರ್ಥಂಕರರ ಧ್ಯಾನ ಮುದ್ರೆಯನ್ನು ಶಿಲ್ಪಿ ಕುಶಲತೆಯಿಂದ ಕಲ್ಲಿನಲ್ಲಿ ಬಿಡಿಸಿದ್ದಾನೆ. ಪಾದ, ಕಾಲು, ಮಣಿಕಟ್ಟು, ತೊಡೆ, ಸೊಂಟ, ಎದೆ, ಭುಜ, ತೋಳುಗಳು, ಚಾಚಿದ ನೀಳ ಕೈಬೆರಳುಗಳು, ಕುತ್ತಿಗೆ, ನೀಳವಾದ ಕಿವಿ, ಕೆನ್ನೆ, ಕಪೋಲ, ಗಲ್ಲ, ತುಟಿ, ಮೂಗು, ಕಣ್ಣು, ಹುಬ್ಬು, ಹಣೆ, ಹಿಂದಕ್ಕೆ ಬಾಚಿದ ತಲೆಗೂದಲು ಇವು ಮನಸೆಳೆಯುವಂತೆ, ಮೋಹಕವಾಗಿವೆ. ತಲೆಯ ಹಿಂಬದಿಗೆ ಕಲ್ಲಿನಲ್ಲಿಯೇ ಬಿಡಿಸಿರುವ ಪ್ರಭಾವಳಿಯಿದೆ. ಅಡಿಯಿಂದ ಮುಡಿಯವರೆಗೆ ಅಂಕುಡೊಂಕಾಗಿ ಸುರಳಿಗೊಂಡಿರುವ ಸರ್ಪವು, ತೀರ್ಥಂಕರರ ತಲೆಯ ಮೇಲೆ ತನ್ನ ಏಳು ಹೆಡೆಗಳನ್ನು ಕೊಡೆಯಾಗಿ ಹಿಡಿದ ಹಾಗೆ, ಬಿಚ್ಚಿಕೊಂಡಿದೆ. ಅದರ ಮೇಲೆ ರತ್ನತ್ರಯ ಪ್ರತೀಕವಾದ ಮುಕ್ಕೊಡೆಯಿದೆ. ಜಿನಬಿಂಬದ ಕಾಲುಗಳ ಹತ್ತಿರ ಎಡಗಡೆ ಪದ್ಮಾವತಿಯಕ್ಷಿಯ, ಬಲಗಡೆ ಧರಣೇಂದ್ರ ಯಕ್ಷನ ಮೂರ್ತಿಗಳನ್ನೂ ಪದ್ಮಾಸನದಲ್ಲಿ ತೋರಿಸಿದೆ. ಯಕ್ಷರ ಆಯುಧಗಳನ್ನೂ, ಆಭರಣ ಕಿರೀಟಗಳನ್ನು ಕಡೆದಿರುವ ನಿಪುಣತೆ ವಿಶೇಷ ಗಮನಿಕೆ ಅರ್ಹವಾಗಿದೆ. ಒಂದೇ ಶಿಲೆಯಲ್ಲಿ ನಗ್ನತೆಯ ಸೌಂದರ್ಯವನ್ನೂ, ಸರ್ಪ ಮುಕ್ಕೊಡೆ ಚವರಿ ಮತ್ತು ಯಕ್ಷರನ್ನು ಸಾವಯವತೆಯಿಂದ ಪ್ರಭಾವ ಶಾಲಿಯಾಗಿ ಮೂಡಿಸಲು ಸಾಧ್ಯವಾಗಿರುವುದು ಶಿಲ್ಪಿಯ ಕಲಾ ಚಾತುರ್ಯಕ್ಕೆ ಸಾಕ್ಷಿಯಾಗಿದೆ.

ಈ ಪಾರ್ಶ್ವನಾಥ ಜಿನಬಿಂಬದ ಪಾದಪೀಠದಲ್ಲಿ ಏಳು ಸಾಲುಗಳಲ್ಲಿ ಕೆತ್ತಿರುವ ಶಾಸನ ಪಾಠ ಹೀಗಿದೆ:

೧. ಶ್ರೀ ಮೂಲಸಂಗಸೇನಗಣ ಕೊಪಣತೀರ್ತ್ಥದೇವರ ಸಂಮಂದ

೨. ಆರ್ಯ್ಯಸೇನಭಟ್ಟಾರಕರ ಪ್ರಿಯಶಿಶ್ಯ ನಾಗಸೇನ ದೇವರಗುಡ್ಡು

೩. ಗಳು [ಗಳು[1]] ಮೂಲಿಗ ಬೊಂಮಗೌಡ ಮಾಳಗೌಡ ಹೆಗ್ಗ

೪. ಡೆ ವಿಠ್ಠಗೌಡ ಮುಖ್ಯವಾಗಿ ಮೂಲಿಗ ವಸದಿಯ ಮಾಡಿಸಿ

೫. ಪಾರಿಸ ದೇವರ ಪ್ರತಿಷ್ಟೆಯಮಾಡಿಸಿ ಯಿಂಮತ್ತರು ಕೆಯ್ಯನು

೬. ಸವಣಗಲ್ಲ ತೆಂಕಸಿ ಬಳದಿವೆ ಕೆಯ್ಯ ಬಡಗಸೆಯಲ್ಲಿ ಕೊಟ್ಟುಹೊಂಗಪಾ

೭. [ಪಾ][2] ಯ್ಯ ಬಿಟ್ತು ಧರ್ಮವನು [ನ][3] ಡಯಿಸಿದರು || ಮಿಡಿಗೊಳಗವ ಬಿಟ್ಟರು.

ಇದೊಂದು ಅಪ್ರಕಟಿತ ಶಾಸನ. ಇದರಿಂದ ತಿಳಿದುಬರುವ ಚಾರಿತ್ರಿಕ ಅಂಶಗಳು :

೧. ದೊರೆತಿರುವ ಪಾರ್ಶ್ವನಾಥ ವಿಗ್ರಹವು ‘ಮೂಲಿಗ ವಸದಿ’ ಎಂಬ ಹೆಸರಿನ ಬಸದಿಯಲ್ಲಿ ಪ್ರತಿಷ್ಠಾಪನೆಯಾಗಿದ್ದು, ಆ ಬಸದಿಯ ಮೂಲ ನಾಯಕ ಪ್ರತಿಮೆಯಾಗಿದೆ.

೨. ಈ ದೇವಾಸ್ಥನವನ್ನು (ಮೂಲಿಗ ವಚ್ಸದಿ) ಕಟ್ಟಿಸಿದವರು ಮೂಲಿಗ ಮನೆತನಕ್ಕೆ ಸೇರಿದ ಬೊಮ್ಮಗೌಡ, ಮಾಳಗೌಡ ಮತ್ತು ಹೆಗ್ಗಡೆ ವಿಠ್ಠಗೌಡ.

೩. ಈ ಮೂವರು ಮೂಲಿಗರು ನಾಗಸೇನದೇವ ಎಂಬ ಆಚಾರ್ಯರ ಶಿಷ್ಯರು.

೪. ಈ ನಾಗಸೇನದೇವ ಮುನಿಯು ಮೂಲ ಸಂಘ ಸೇನಗಣದ ಆರ್ಯ್ಯಸೇನ ಭಟ್ಟಾರಕರ ಪ್ರಿಯ ಶಿಷ್ಯರು.

೫. ಈ ಮೂಲಿಗವಸದಿಯು ಕೊಪಣತೀರ್ಥಕ್ಕೆ ಅಧೀನ (ಪ್ರತಿಬದ್ಧ) ವಾಗಿದ್ದಿತು. ಆರ್ಯಸೇನ ಭಟ್ಟಾರಕರು ಕೊಪಣ ತೀರ್ಥಕ್ಕೆ ಸಂಬಂಧಿಸಿದವರು. ಇಷ್ಟು ಸಂಗತಿಗಳು ಈ ಹೊಸ ಶಾಸನದಿಂದ ಸ್ಪಷ್ಟ ವಾಗಿವೆ. ಮೂಲಿಗ ವಸದಿಯು ಪ್ರಾಯಃ ಈಗ ಮೂರ್ತಿ ದೊರೆತಿರುವ ಸ್ಥಳದಲ್ಲಿಯೋ, ಚಿನ್ನಾಪುರದಲ್ಲಿಯೋ ಇದ್ದಿರಬೇಕು; ಚಿನ್ನಾಪುರ ಎಂಬ ಹೆಸರು ‘ಜಿನ್ನಾಪುರ’ ಎಂಬುದರ ಬೆಳವಣಿಗೆಯಾಗಿರುವುದು ಸಾಧ್ಯ. ಶಾಸನದಲ್ಲಿ ಅದು ರಚಿತವಾದ ಕಾಲದ ನಿರ್ದೇಶನವಿಲ್ಲ.

ಅಂತರಬಾಹ್ಯ ಆಧಾರಗಳಿಂದ ಮತ್ತು ಶಾಸನದ ಲಿಪಿಯ ಲಕ್ಷಣದಿಂದ ಇದು ಹನ್ನೆರಡನೆಯ ಶತಮಾನದಲ್ಲಿ ಆರಂಭದಲ್ಲಿ ರಚಿತವಾಗಿದೆಯೆಂದು ಹೇಳಬಹುದು. ವಿಗ್ರಹದ ಲಕ್ಷಣವು ಕೂದ ಕಲ್ಯಾಣಿ ಚಾಳುಕ್ಯರ ಕಾಲದ ರಚನೆಗೆ ಹೋಲಿಕೆಯಾಗಿದೆ.

ಈ ಶಾಸನೋಕ್ತರಾದ ಮೂಲಸಂಗ ಸೇನಗಣದ ನಾಗಸೇನ ದೇವರೂ, ಇದೇ ಬಿಜಾಪುರ ಜಿಲ್ಲೆ ಹುನಗುಂದ ತಾಲೂಕು ಅರಸಿಬೀಡು ಶಾಸನದಲ್ಲಿ ಉಕ್ತರಾದ ಮೂಲಸಂಗ ಸೇನಗಣದ ನಾಗಸೇನ ಪಂಡಿತರೂ ಪ್ರಾಯಃ ಒಬ್ಬರೇ ಆಗಿರುವ ಸಾಧ್ಯತೆಯಿದೆ. ಈ ಭಾವನೆಯನ್ನು ಬಲಪಡಿಸಲು ಇರುವ ಪೂರಕ ಆಧಾರಗಳು :

೧. ಇಬ್ಬರೂ ಸಮೀಪ ಸ್ಥಳದವರು

೨. ಇಬ್ಬರೂ ಸಮಾನ ಕಾಲದವರು

೩. ಇಬ್ಬರೂ ಮೂಲಸಂಘ ಸೇನಗಣದವರು

೪. ಇಬ್ಬರೂ ಒಂದೇ ಹೆಸರಿನವರು.

ನಾಮಸಾದೃಶ್ಯವೊಂದೇ ಅಲ್ಲದೆ, ಇತರ ಮುರು ಪೂರಕ ಆಧಾರಗಳು ಗಮನಾರ್ಹವಾಗಿವೆ. ಗೊಣದ ಬೆಡಂಗಿ ಎನಿಸಿದ ಅಕ್ಕಾದೇವಿಯು ಚಾಳುಕ್ಯರ ಜಗದೇಕಮಲ್ಲ ಜಯಸಿಂಹನ (೧೦೧೬-೪೨) ಸಹೋದರಿ. ಹೊಟ್ಟೂರ ಶಾಸದಿಂದ ತಿಳಿದುಬರುವಂತೆ ಅಕ್ಕಾದೇವಿಯು ಹಾನುಗಲ್ಲು ಕದಂಬರಾಜನಾದ ಮಯೂರ ವರ್ಮನ (೧೦೨೧/೨೨-೧೦೫೦) ಮಡದಿಯಾಗಿದ್ದಳು. ಚಾಳುಕ್ಯರ ತ್ರೈಳೋಕ್ಯಮಲ್ಲ ಒಂದನೆಯ ಸೋಮೇಶ್ವರ ಚಕ್ರವರ್ತಿಯು (೧೦೪೨-೬೮) ಈಕೆಯ ಸೋದರಳಿಯ. ತ್ರೈಳೋಕ್ಯಮಲ್ಲ ಸೋಮೇಶ್ವರನ ಆಳ್ವಿಕೆಯ ಅವಧಿಯಲ್ಲಿ ಗೊಣದ ಬೆಡಂಗಿ ಅಕ್ಕಾದೇವಿಯು ಒಮ್ಮೆ ಗೋಕಾಗೆಯ ಕೋಟೆಯಲ್ಲಿದ್ದಾಗ, ಮಾಲ ಸಂಘ ಸೇನಗಣ ಪೊಗರಿಗಚ್ಛದ ನಾಗಸೇನ ಪಂಡಿತನಿಗೆ, ‘ಗೊಣದ ಬೆಡಂಗಿಜಿನಾಲಯದ ರಿಸಿಯರ್ಗಳ ಅಜ್ಜಿಕೆಯ ಆಹಾರದಾನಕ್ಕಗಿ’ ದಾನ ನೀಡಿದಳು [ಇ.ಆ. ೧೮. ೨೭೦.೧೦೨೨. ಬೇಲೂರು (ಬಿಜಾಪುರ ಜಿ/ ಬದಾಮಿ ತಾ): ಎ.ಇ. ೧೫. ಕ್ರಿ.ಶ. ೧೦೫೦. ಪು. ೭೮: ಎ.ಇ. ೧೭. ೧೦. ಕ್ರಿ.ಶ. ೧೦೪೭, ಪು. ೧೨೨. ಅರಸಿಬೀಡು: ಸೌ.ಇ.ಇ. ೧೧-೧. ೮೦. ೧೦೪೭, ಅರಸಿಬೀಡು]. ಈಗಿನ ಆಂಧ್ರ ಪ್ರಾಂತದ ಅನಂತಪುರ ಜಿಲ್ಲೆಯ ಗುತ್ತಿ ತಾಲೂಕಿಗೆ ಸೇರಿದ ಕೊನಕೊಂಡ್ಲದಲ್ಲಿನ ರಸಸಿದ್ಧಾಂತ ಗುಟ್ಟದ ಮೇಲೆ ಇರುವ ಬಂಡೆಯಮೇಲೆ ‘ಶ್ರೀ ನಾಗಸೇನ ದೇವರ ನಿಸದಿ’ ಎಂದು ಲಿಖಿತವಾಗಿದೆ. [ಎಆರ್‌ಎಸ್‍ಐಇ ೧೯೪೦-೪೧, ಬಿ-೪೫. ಕೊನಕೊಂಡ್ಲ] ಈ ನಿಸದಿಯು ಸಹ ಮೇಲ್ಕಂಡ ಮೂಲಿಗ ವಸದಿಯ ಶಾಸನದಲ್ಲಿ ಉಕ್ತರಾಗಿರುವ ಆರ್ಯಸೇನ ಭಟ್ಟಾರಕರ ಶಿಷ್ಯನಾದ ನಾಗಸೇನ ದೇವರ ನಿಸದಿಯೇ ಆಗಿರುವುದು ಸಂಭಾವ್ಯ.

ತಜ್ಞರಾದ ಚರಿತ್ರಕಾರರು ಈ ವಿಚಾರದಲ್ಲಿ ಮತ್ತಷ್ಟು ಸಂವಾದಗಳಿಗೆ ತೊಡಗಿ ಹೆಚ್ಚಿನ ಬೆಳಕು ಚೆಲ್ಲಬಹುದಾಗಿದೆ. ಕರ್ನಾಟಕದ ಬಸದಿಗಳ ಚರಿತ್ರೆಯಲ್ಲಿ, ಕೊಪಣ ತೀರ್ಥದ ಸಂಬಂಧದಲ್ಲಿ, ಜೈನ ಆಚಾರ್ಯ ಪರಂಪರೆಯ ಇತಿಹಾಸದಲ್ಲಿ, ಚಾಳುಕ್ಯರಕಾಲದ ಚರಿತ್ರೆಯಲ್ಲಿ ಈ ಮೂಲಿಗಬಸದಿಯ ಪುಟ್ಟ ಶಾಸನಕ್ಕೆ ಸಾಕಷ್ಟು ಮಹತ್ವವಿದೆ.

 

[1]ಕಂಡಕರಣಿಕಾರನ ದೋಷದಿಂದ [ಗಳು] ಎಂಬುದು ಪುನರಾವರ್ತನೆಯಾಗಿದೆ.

[2]ಅದೇ ರೀತಿ [ಪಾ] ಎಂಬುದು ಪುನರಾವರ್ತನೆಯಾಗಿದೆ.

[3][ನ] ಎಂಬ ಅಕ್ಷರ ಬಿಟ್ತು ಹೋಗಿದೆ.