ಕನ್ನಡದ ಕೀರ್ತನ ಸಾಹಿತ್ಯವನ್ನು ಸತ್ವಶಾಲಿಯಾಗಿಸಿದ ಬಹುಪಾಲು ಹಿರಿಮೆ ಕನಕದಾಸರಿಗೆ ಸಲ್ಲುತ್ತದೆ. ಅವರ ಹಾಡುಗಳಲ್ಲಿ ಕಾವ್ಯವೂ, ಧರ್ಮವೂ, ನೀತಿಯೂ ಸಾಮಾಜಿಕತೆಯೂ, ಬಂಡಾಯಪ್ರಜ್ಞೆಯೂ ಹಾಸುಹೊಕ್ಕಾಗಿ ಹೆಣೆದುಕೊಂಡಿವೆ. ಕಾವ್ಯದ ಭಾವನಿರ್ಭರತೆ, ಪ್ರತಿಭೆ- ಸ್ಫೂರ್ತಿ, ಶಿಲ್ಪ, ಕಲಾವಂತಿಕೆ ಮೊದಲಾದ ಗುಣಗಳು ಅವರ ಎಷ್ಟೋ ಹಾಡುಗಳಲ್ಲಿ ಕಂಡುಬರುತ್ತವೆ. ಕನಕದಾಸರ ಉಪಲಬ್ಧ ಕೀರ್ತನೆಗಳು ಸಾಕಷ್ಟಿವೆಯೆಂಬುದು ಗಣಿತದ ಮಾತು; ಈ ಸಂಖ್ಯಾದೃಷ್ಟಿಯನ್ನು ಬಿಟ್ಟು ಕೇವಲ ಸಾಹಿತ್ಯದ ಆಧಾರದಿಂದಷ್ಟೇ ನೋಡುವಾಗಲೂ ಸಹ ಅವರ ಹಾಡುಗಳಿಗಿ ರುವ ಹಿನ್ನೆಲೆ, ಹಿರಿಮೆ ಮತ್ತು ಮಹಿಮೆ ಏನೆಂಬುದನ್ನು ಸಾಹಿತ್ಯಕಾರರು ಗುರುತಿಸಿ ದ್ದಾರೆ. ಇದುವರೆಗೆ ತಲಪದೆ ಇರುವ ಒಂದು ಮುಖ್ಯ ವಿಷಯದತ್ತ ಈ ಸಂಪ್ರಬಂಧದ ಪ್ರಯತ್ನ ಹರಳುಗೊಂಡಿದೆ.

ಕನಕದಾಸರ ಕೀರ್ತನೆಗಳನ್ನು, ಉಳಿದ ಕೀರ್ತನಕಾರರ ಕೀರ್ತನೆಗಳೊಂದಿಗೆ, ತೌಲನಿಕವಾಗಿ ನೋಡತೊಡಗಿದಾಗ ಕೆಲವು ಸಮಾನ ಹಾಡುಗಳು ಕಂಡುಬಂದಿವೆ. ಸಮಕಾಲೀನ ಹಿರಿಯ ಕೀರ್ತನಕಾರರಾದ ಕನಕದಾಸ ಮತ್ತು ಪುರಂದರದಾಸ ಇವರ ಕೀರ್ತನೆಗಳಿಗಷ್ಟೇ ಈ ತುಲನಾತ್ಮಕ ಅಧ್ಯಯನವನ್ನು ಸೀಮಿತಗೊಳಿಸಲಾಗಿದೆ. ಒಂದೇ ಪ್ರಕಾಶನದ ವತಿಯಿಂದ ಪ್ರಕಟವಾಗಿರುವ ಇವರಿಬ್ಬರ ಹಾಡುಗಳಿರುವ ಸಂಕಲನ ಪುಸ್ತಕಗಳನ್ನು ಆರಿಸಿಕೊಂಡು ಈ ತೌಲನಿಕ ಸಮೀಕ್ಷೆ ಕೈಗೊಂಡಿದ್ದೇನೆ. ನಾನು ಪ್ರಧಾನವಾಗಿ ಅವಲಂಬಿಸಿರುವ ಆ ಎರಡು ಪುಸ್ತಕಗಳ ವಿವರಗಳು :

ಅ. ಶ್ರೀ ಕನಕದಾಸರ ಹಾಡುಗಳು : ಸಂ. ಕೃಷ್ಣಶರ್ಮಾ ಬೆಟಗೇರಿ ಮತ್ತು ಹುಚ್ಚರಾವ ಬೆಂಗೇರಿ, ಸಮಾಜ ಪುಸ್ತಕಾಲಯ, ಧಾರವಾಡ, ೧೯೭೨.

ಆ. ಪುರಂದರದಾಸರ ಹಾಡುಗಳು : ಸಂ. ಕಾವ್ಯಪ್ರೇಮಿ, ಸಮಾಜ ಪುಸ್ತಕಾಲಯ, ಧಾರವಾಡ, ೧೯೭೬.

ಈ ಎರಡು ಸಂಕಲನಗಳಿಗಿಂತ ಇನ್ನೂ ಉತ್ತಮವೂ ಅಧಿಕೃತವೂ ಗಮನಾರ್ಹವೂ ಎನಿಸುವ ಅನ್ಯಾನ್ಯ ಸಂಪಾದಿತ ಕಿತಿಗಳಿರಬಹುದಾದರೂ ಪ್ರಸ್ತುತ ಪರಿಶೀಲನೆಗೆ ಈ ಆವೃತ್ತಿಗಳು ಸಾಕು.

ಈ ಇಬ್ಬರು ಪ್ರಮುಖ ದಾಸವರೇಣ್ಯರ ಕೀರ್ತನೆಗಳಲ್ಲಿ ಅನೇಕ ಸಾದೃಷ್ಯಗಳಿವೆ. ತೀರ ಆಕಸ್ಮಿಕ ಹಾಗೂ ಆನುಷಂಗಿಕವೆನಿಸುವ ಸಾದೃಶ್ಯಗಳನ್ನು ಕೈಬಿಟ್ಟು, ಕೇವಲ ಪ್ರಧಾನವಾಗಿ ಪರಿಗಣಿಸಬೇಕಾದ ಸಮಾನ ಹಾಡುಗಳನ್ನು ಪ್ರಸ್ತಾಪಿಸುವ ಔಚಿತ್ಯವಿದೆ. ಕೀರ್ತನೆಗಳ ಆರಂಭದ ಪಾದದಲ್ಲಿ, ಅಂದರೆ ಪಲ್ಲವಿ ಅನಿಪಲ್ಲವಿಗಳಲ್ಲಿ ಮಾತ್ರ ಸಾಮ್ಯವಿದ್ದು ಅನಂತರದ ಸಾಲುಗಳಲ್ಲಿ ಅಂದರೆ ಚರಣಗಳಲ್ಲಿ ಬೇರಾವ ಸಂಬಂಧವನ್ನೂ ಸ್ಥಾಪಿಸಿಕೊಳ್ಳದ ಇತರ ಕೆಲವು ಕೀರ್ತನೆಗಳನ್ನು ಈ ವಿವೇಚನೆಯ ಕಕ್ಷೆಯಿಂದ ಆಚೆಗಿರಿಸಿದ್ದೇನೆ. ಉದಾಹರಣೆಗಳು : ಅಣು ಮಹತ್ತಾಧ ದೇವ ಎಂಬ ಕನಕದಾಸರ ಹಾಡಿಗೆ (ಪು. ೭೮) ಹೊಂದಿಕೊಂಡಂತೆ, ಪುರಂದರ ಸುಳಾದಿ-ಅಣುವಾಗ ಬಲ್ಲ ಮಹತ್ತಾಗ ಬಲ್ಲ (ಪು. ೧೮೩) ಇದೆ. ಆರು ಹಿತವರು ಎಂದು ನಂಬಬೇಡ (ಪು. ೩೭) ಎಂಬುದು ತಟ್ಟನೆ ಆರು ಹಿತವರು ನಿನಗೆ ಈ ಮೂವರೊಳಗೆ (ಪು. ೧೬೩) ಎಂಬ ಹಾಡನ್ನು ನೆನಪಿಸುತ್ತದೆ; ಇದರಲ್ಲಿ ನಾರಿಧಾರುಣಿ ಬಲುಧನದ ಸಿರಿಯೆಂಬ ಮೂರು ಹಿತವಲ್ಲವೆಂಬ ಪುರಂದರ ರಚನೆಯ ಆಶಯಕ್ಕೆ ಸಂವಾದಿಯಾಗಿ ತಂದೆ ತಾಯಿ ಮಗ- ಈ ಮೂರೂ ಜನ, ಆಪತ್ತು ಬಂದಾಗ ರಕ್ಷಿಸುವುದಿರಲಿ, ಸ್ವಯಂ ತಾವೇ ಆಪತ್ತಿಗೆ ಮೂಲಕಾರಣರಾದರೆಂಬುದನ್ನು ಕನಕದಾಸರ ಪ್ರತಿಪಾದನೆ ದೃಷ್ಟಾಂತಪೂರ್ವಕ ತೋರಿಸುತ್ತದೆಂಬ ಅಂಶವೂ ಪರಿಭಾವನೀಯ.

ಈತನೀಗ ವಾಸುದೇವನು (ಪು. ೮೩) ಎಂಬ ಕನಕದಾಸರ ಬರವಣಿಗೆಗೆ ಪುರಂದರರ ‘ಕಣ್ಣಾರೆ ಕಂಡೆನಚ್ಯುತನ’ (ಪು. ೪೧) ಎಂಬುದರಲ್ಲಿರುವುದು ಭಾವ ಸಾಮ್ಯವೆ ಹೊರತು, ಕೀರ್ತನೆಯ ಶಬ್ದಶರೀರ ಉದ್ದಕ್ಕೂ ಬೇರೆ ಆಗಿದೆ. ಇದರಂತೆ ನಂಬಬೇಡಿ ಸಿರಿಯು ತನ್ನದೆಂದು (ಪು. ೧೪೦) ಮತ್ತು ನೆಚ್ಚದಿರು ಸಂಸಾರ ನೆಲೆಯಲ್ಲವೀಕಾಯ ಎಂಬ ಕನಕದಾಸರ ಹಾಡುಗಳಲ್ಲಿರುವ ಆದಿವಾಕ್ಯ ಸಾದೃಶ್ಯ, ಪುರಂದರರ ‘ನಂಬದಿರು ಈ ದೇಹ ನಿತ್ಯವಲ್ಲ’ (ಪು. ೫೦) ಎಂಬಲ್ಲಿ ಸುವ್ಯಕ್ತವಾಗಿದ್ದರೂ ಇಲ್ಲಿ ವೈದೃಶ್ಯಗಳೂ ಇವೆ. ಹೀಗೆಯೇ ಮರೆಯದಿರು ಮರುಳು ಮನುಜಾ (ಪು. ೩೯), ಸಾಲದೆ ನಿನ್ನದೊಂದು ದಿವ್ಯನಾಮ (ಪು. ೨೦೨) ಮತ್ತು ಸಾಕು ಸಾಕು ಮನುಜ ಸೇವೆಯ (ಪು. ೪೭) ಎಂಬ ಕನಕದಾಸರ ಹಾಡುಗಳು ಪುರಂದರರ ಮರೆವರೇನೋ ಹರಿಯಾ (ಪು. ೧೫೩), ಸ್ಮರಣೆ ಒಂದೇ ಸಾಲದೆ ಗೋವಿಂದನ (ಪು. ೩೦), ಸಾಕು ಸಾಕಿನ್ನು ಸಂಸಾರ ಸುಖವು (ಪು. ೫೩) – ಎಂಬುದನ್ನು ಫಕ್ಕನೆ ಜ್ಞಾಪಿಸುತ್ತವೆ. ಆದರೆ ಇವನ್ನು ಅಕ್ಕ ಪಕ್ಕ ತಕ್ಕಡಿಯ ತಟ್ಟೆಯಲ್ಲಿಟ್ಟು ತೂಗಿದರೆ ರಚನಾತ್ಮಕ ಅಂತರಗಳಿರುವುದು ವೇದ್ಯವಾಗುತ್ತದೆ.

ಆದುದರಿಂದ, ಇದುವರೆಗೆ ಹೆಸರಿಸಿ ಸಮೀಕ್ಷಿಸಿದಂಥ ಇನ್ನೂ ಹತ್ತಾರು ಹಾಡುಗಳಲ್ಲಿರುವ, ಸಾದೃಶ್ಯ – ವೈದ್ಯಶ್ಯಗಳು ನಮ್ಮನ್ನು ಯಾವ ನಿಶ್ಚಯದ ನೆಲೆಗೂ ತಲುಪಿಸುವುದಿಲ್ಲ. ಇವುಗಳನ್ನು ಹಿಡಿದು ನಡೆಸುವ ಜಿಜ್ಞಾಸೆಯಿಂದ ಕೈಗೊಳ್ಳಬಹುದಾದ ಯಾವುದೇ ತೀರ್ಮಾನ, ತೀರ ಏಕಪಕ್ಷೀಯವಾಗಿ, ಅಪಾಯಕಾರಿಯಾಗಬಹುದು. ಅದಕ್ಕಾಗಿ ಇಂಥ ಸಡಿಲ ನಿದರ್ಶನಗಳನ್ನು ತಾತ್ಕಾಲಿಕವಾಗಿ ಕೈಬಿಟ್ಟು, ಇನ್ನೂ ಗಟ್ಟಿಯಾದ ಆಧಾರಗಳನ್ನು ಹುಡುಕಬೇಕಾಗುತ್ತದೆ. ಸ್ವಾರಸ್ಯವೆಂದರೆ ಅಂಥ ಪ್ರಬಲ ಆಧಾರಗಳೂ ಪರಾಮರ್ಶೆಗೆ ದೊರೆತಿವೆ. ಆ ಬಗೆಯ ಏಕಮೂಲ ನಿಷ್ಪನ್ನ ಕೀರ್ತನೆಗಳ ವಿಶ್ಲೇಷಣೆಗೆ ತೊಡಗುವ ಮೊದಲು, ಇಲ್ಲಿಯೇ ಉಲ್ಲೇಖಿಸಿ ವಿವರಿಸಬೇಕಾದ ಇನ್ನೊಂದು ವಿಚಾರವಿದೆ. ಕನಕದಾಸರ ‘ದೇವಿ ನಮ್ಮ ದೇವರು ಬಂದರು ಬನ್ನಿರೆ’ (ಪು. ೮೫) ಎಂಬುದೂ ಪುರಂದರರ ದೇವ ಬಂದ ನಮ್ಮ ಸ್ವಾಮಿ ಬಂದನೊ (ಪು. ೮೧) ಎಂಬುದೂ ಒಂದೇ ಮೂಲದಿಂದ ಬಂದ ಕಲ್ಪನೆಯೊಂದರ ಎರಡು ಕವಲುಗಳು. ಒಂದರಲ್ಲಿ ಕನ್ನಡ ಮಾತುಗಳೊಳಗೆ ಹತ್ತು ಅವತಾರಗಳ ಕಂಡರಣೆ; ಇನ್ನೊಂದರಲ್ಲಿ ಸಂಸ್ಕೃತ ಶಬ್ದಗಳ ಬಳಕೆಯಿಂದ ದಶಾವತಾರದ ಪ್ರಸ್ತಾಪ-ಇಷ್ಟೇ ವ್ಯತ್ಯಾಸ. ಇವೆರಡೂ ಹಾಡುಗಳ ಜೀವನಾಡಿ ಹಿಡಿದು ನೋಡಿದರೆ, ಒಂದಕ್ಕೊಂದು ತೆಕ್ಕೆ ಹಾಕಿಕೊಂಡಿರುವ ರೀತಿಯನ್ನು ಪೃಥಕ್ಕರಿಸಿದರೆ, ಯಾವುದೊ ಒಂದು ಇನ್ನೊಂದಕ್ಕೆ ಆಕರವಾಗಿರುವ ಸಾಧ್ಯತೆಯನ್ನು ಸುಲಭವಾಗಿ ತಳ್ಳಿ ಹಾಕುವಂತಿಲ್ಲ. [ಪುಟಗಳ ಸಂಖ್ಯೆ ಪರಿಮಿತಿಯಲ್ಲಿರ ಲೆಂಬ ಕಾರಣಕ್ಕಾಗಿ ಈ ಎರಡು ಕೀರ್ತನೆಗಳನ್ನೂ, ಇದುವರೆಗೆ ಪ್ರಸ್ತಾಪಿಸಿಸದ ಯಾವೂಂದು ಹಾಡನ್ನು ಇಲ್ಲಿ ಉದಾಹರಿಸದೆ ಕೇವಲ ಅವು ಅಚ್ಚಾಗಿರುವ ಪುಸ್ತಕಗಳ ಪುಟ ಸಂಖ್ಯೆಯನ್ನು ನಮೂದಿಸಿದ್ದೇನೆ]. ಕನಕದಾಸರಲ್ಲಿ ಕನ್ನಡ ನುಡಿಯ ಹಾಗೂ ದೇಸಿಯ ಚೆಲುವು ಸೂಸಾಡಿದೆ : ಇದನ್ನು ಶಿಷ್ಟದ ಎರಕಕ್ಕೆ ಹಾಕಿ ತೆಗೆದ ಪರಿಷ್ಕಾರ ರೂಪ ಆಮೇಲೆ ರೂಪಗೊಂಡಿರಬಹುದೆಂಬ ಸಂಶಯಕ್ಕೆ ಎಡೆಯಿದೆ. ಕೀರ್ತನ ಸಾಹಿತ್ಯ ತಜ್ಞರು ಈ ವಿಚಾರವಾಗಿ ಇನ್ನಷ್ಟು ಕೂಲಂಕಷವಾಗಿ ಅಭ್ಯಸಿಸಬೇಕಾದ ಅಗತ್ಯವಿದೆ.

ಈಗ ತಕ್ಷಣಕ್ಕೆ ಸ್ಪಷ್ಟವಾಗಿ ಗುರುತಿಸಲು ಸಾಧ್ಯವಾದ ಕೆಲವು ಸಮಾನ ಕೀರ್ತನೆಗಳನ್ನಷ್ಟೇ ಇಲ್ಲಿ ಕೆಳಗೆ ಉದಾಹರಿಸಿದ್ದೇನೆ :

೧.         ಅ) ರಾಗ – ಮಧ್ಯಮಾವತಿ                                                   ತಾಟ-ಆಟ

ಆರು ಸಂಗಡ ಬಾಹೋರಿಲ್ಲ-ಸಿರಿ
ನಾರಾಯಣನ ಸ್ಮರಣೆ ನೆರೆ ಬಾಹೋದಲ್ಲದೆ
|| ಪ ||

ಹೊತ್ತು ನವಮಾಸ ಪರ್ಯಂತ ಗರ್ಭದೊಳು
ಅತ್ಯಂತ ನೋವು ಬೇನೆಗಳಿಂದಲಿ
ಹೆತ್ತ ತುಪ್ಪವನಿಕ್ಕಿ ಸಲಹಿದ ತಾಯ್ತಂದೆ
ಆತ್ತು ಕರೆದುಳಿವರು ಮತ್ತೆ ಬೆನ್ನಲಿ ಬಾಹರೆ                 ೧

            ಮನೆ ಮಕ್ಕಳಿವರೆನ್ನ ತನುವಿಗೊಡೆಯರೆಂದು
ಘನವಾಗಿ ಬಲು ನಂಬಿ ನೆಚ್ಚುತಿಹರು
ಅನುಮಾನವಾಗಿ ಜೀವನ ತೊಳಲಿದಾಕ್ಷಣದಿ
ಮನೆಯೊಳೊಂದರಗಳಿಗೆ ನಿಲ್ಲಿಸಿಕೊಳ್ಳರೊ                  ೨

            ಸುತ್ತ ಮುತ್ತಲು ಕುಳಿತಿದ್ದ ಬಂಧುಜನರು
ಹೊತ್ತು ಹೋಯಿತೇಳಿರೇಳೆಂಬರು
ಒತ್ತಿದ ಕಸಕಿಂತ ಕಡುಕಷ್ಟದೀ ದೇಹ
ಹೊತ್ತೊಯ್ದು ಅಗ್ನಿಯೊಳು ಬಿಸುಟಿಬಾಹರೊ                        ೩

            ಧರೆ ಮಿತ್ರ ಬುಧಜನರ ಅಗ್ನಿ ಸಾಕ್ಷಿಯ ಮಾಡಿ
ಕರವಿಡಿದು ಧಾರೆಯನೆರಸಿಕೊಂಡ
ತರುಣಿ ತನ್ನಿನಿಯನ ಮುಟ್ಟಲಂಜಿ ದೂರದಲಿ
ಪೊರೆವರು ತನಗಾರು ಹೇಳೆಂಬಳು                             ೪

            ಹರಣ ಹಿಂಗದ ಮುನ್ನ ಹರಿಯ ಸೇವೆಯ ಮಾಡು
ಪರಲೋಕ ಸಾಧನವನು ಮಾಡು
ಕರುಣಿ ಕೃಪಾಳು ಕಾಗಿನೆಲೆಯಾದಿಕೇಶವನ
ಚರಣ ಕಮಲವ ನಂಬಿ ಸುಖಿಯಾಗು ಮನವೇ ೫
(ಪು. ೧೬-೧೭)

            ಆ) ರಾಗ-ಮಧ್ಯಮಾವತಿ     ತಾಳ-ಆಟ
ಆರು ಬಾರರು ಸಂಗಡಲೊಬ್ಬರು
ನಾರಾಯಣದ ದಿವ್ಯನಾಮ ಒಂದಲ್ಲವೆ
|| ||

            ಹೊತ್ತು ನವಮಾಸ ಪರಿಯಂತ ಗರ್ಭದಲಿ
ಅತ್ಯಂತ ನೋವು ಬೇನೆಗಳ ತಿಂದು
ತುತ್ತು ಬುತ್ತಿಯ ಕೊಟ್ಟು ಸಲಹಿದ ತಾಯಿಯು
ಅತ್ತು ಕಳುಹುಳಲ್ಲದೆ ಸಂಗಡ ಬಾರಳು                      ೧

            ಮನೆ ಮಕ್ಕಳಿವರೆನ್ನ ತನುವು ಒಡನೆ ಎರಡು
ಘನವಾಗಿ ನಂಬಿದೆ ನನ್ನವೆಂದು
ಅನುಮಾನವೇತಕೆ ಜೀವಹೋದ ಬಳಿಕ
ಘನ ಹೊತ್ತು ಮನೆಯಲಿ ಇರಿಸಿಕೊಳ್ಳರೊ ದೇವ           ೨

            ಆತ್ಮ ಬಳಲಿದಾಗ ಬಂಧುಗಳು ಎಂದು
ಹೊತ್ತು ಹೊರಗೆ ಹಾಕು ಎಂತೆಂಬರು
ಹೊತ್ತುಕೊಂಡು ಹೋಗಿ ಅಗ್ನಿಯಲ್ಲಿ ಬಿಸುಟಿ
ಮತ್ತೆ ಬೆನ್ನನು ತಿರುಗದಲೆ ಬಾಹೋರಲ್ಲದೆ                ೩

            ನೆರೆದಿದ್ದ ಪುರಜನ ವಿಪ್ರರಗ್ನಿಯ ಸಾಕ್ಷಿ
ಕರವಿಡಿದು ಕೈಧಾರೆ ಎರಕೊಂಡು
ತರುಣಿ ತನ್ನಯ ಗಂಡನನ್ನು ಮುಟ್ಟಲಮ್ಮದೆ
ನೆರೆ ಏನುಗತಿ ಗತಿ ತನಗೆ ಹೇಳಲಮ್ಮಳಲ್ಲದೆ                ೪

            ಹರಣ ಹೋಗದ ಮುನ್ನ ಹರಿಯ ಸೇವೆಯ ಮಾಡಿ
ಪರಲೋಕ ಸಾಯುಜ್ಯ ಪಡೆದುಕೊಂಡು
ಕರುಣಿ ಕೃಪಾಳು ಶ್ರೀಪುರಂದರ ವಿಠಲನ
ನೆರೆನಂಬಿ ಭಜಿಸಿ ನೀ ಸುಖಿಯಾಗೊ ಮನುಜಾ ೫
(ಪು. ೮೯-೯೦)

ಇವೆರಡೂ ಹಾಡುಗಳು ಒಂದೇ ಮೂಲದ ನಕಲುಗಳು; ಒಂದು ಇನ್ನೊಂದರ ನಿಜಪ್ರತಿ. ‘ಅ’ ದಲ್ಲಿರುವ ಚರಣಗಳು ‘ಆ’ ದಲ್ಲೂ ಇವೆ, ಪಲ್ಲವಿಯೂ ಅಷ್ಟೆ, ರಾಗ ಮತ್ತು ತಾಲ ಕೂಡ ಎರಡರಲ್ಲೂ ಸಮಾನ. ‘ಅ’ದಲ್ಲಿ ಆಡುಮಾತಿನ ಗತ್ತೂ, ‘ಆ’ ದಲ್ಲಿ ಶಿಷ್ಟದ ಒತ್ತೂ ಇದೆ. ಚರಣಗಳ ಆನುಪೂರ್ವಿ ‘ಆ’ ದಲ್ಲಿ (ಸಂಖ್ಯೆ) ಅದಲು ಬದಲು ಆಗಿದೆ; ಎರಡನೆಯ ಚರಣ ಮೂರನೆಯದೂ, ನಾಲ್ಕನೆಯದು ಎರಡನೆಯದೂ ಆಗಿದೆ. ಅಲ್ಲದೆ ‘ಆ’ ದಲ್ಲಿ ಶೈಲಿಯ ಶೈಥಿಲ್ಯವೂ, ಆಧುನಿಕ ಕನ್ನಡದ ರಚನೆಯೂ ವ್ಯಕ್ತಗೊಂಡಿದ್ದು ಇದರಲ್ಲಿ ಅನ್ಯರ ಕೈವಾಡವಿರುವ ಗುಮಾನಿಗೆ ಅವಕಾಶವಾಗಿದೆ. ‘ಆ’ ದಲ್ಲಿ ಎಷ್ಟೇ ಶಿಷ್ಟಪರ ರಚನೆಗೆ ಒಲವು ತೋರಿದ್ದರೂ ‘ಅ’ ದ ಪಲ್ಲವಿ ಮತ್ತು ಮೂರನೆಯ ಚರಣಾಂತ್ಯದ ಮಾತೊಂದು ಹೇಗೋ ನುಸುಳಿಬಿಟ್ಟಿದೆ; ‘ಆ’ ದ ನಾಲ್ಕನೆಯ ಪಾದಾಂತ್ಯದ ‘ಬಾಹೋರಲ್ಲದೆ’ ಎಂಬುದು ನಿಶ್ಚಯವಾಗಿಯೂ ‘ಅ’ ದ ಎರವಲು ಮಾತಷ್ಟೇ ಅಲ್ಲ, ಇಡೀ ‘ಆ’ ದ ಶಿಲ್ಪಕ್ಕೆ ‘ಅ’ ದ ನಕಾಶೆಯೇ ಮೂಲವೆಂಬ ಸುಳಿವು ಕೊಡುವ ಮಾತೂ ಆಗಿದೆ.

೨.         ಅ) ರಾಗ-ಸೌರಾಷ್ಟ್ರ                                   ತಾಳ – ಏಕ

            ಎಲ್ಲರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ                       || ||
ನೆಲ್ಲುಗಳ ಕುಟ್ಟಿಕೊಂಡು ಬಿದುರುಗಳ ಹೊತ್ತುಕೊಂಡು
ಕೂಲಿಗಳ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ                        ೧

            ನಾಲಕು ವೇದ ಪುರಾಣ ಶಾಸ್ತ್ರ ಪಂಚಾಂಗ ಹೇಳಿಕೊಂಡು
ಕಾಲ ಕಳೆಯುವುದೆಲ್ಲ ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ              ೨

            ಬಡಿದು ಬಡಿದು ಕಬ್ಬಿಣವ ಕಾಸಿ ತುಬಾಕಿ ಮಾಡಿ
ಹೊಡೆವ ಗುಂಡು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ  ೩

            ಚಂಡಭಟರೆಲ್ಲ ಮುಂದೆ ಕತ್ತಿ ಹರಿಗೆಯ ಪಿಡಿದು
ಖಂಡ ತುಂಡ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ       ೪

            ದೊಡ್ದ ದೊಡ್ದ ಕುದುರೆಯನೇರಿ ನೇಱೆ ಹೊತ್ತು ರಾಹುತನಾಗಿ
ಹೊಡೆದಾಡಿ ಸಾಯುವುದು — — —                                       ೫

            ಕುಂಟಿ ಕೂರಿಗೆಯಿಂದ ಒಂಟೆ ಮಣ್ಣ ಹದ ಮಾಡಿ
ರಂಟೆ ಹೊಡೆದು ಬೆಳೆಸುವುದು — — —                                    ೬

            ಕೆಟ್ಟತನದಿಂದ ಕಳ್ಳತನವನ್ನೆ ಮಾಡಿ
ಕಟ್ಟಿ ಹೊಡಿಸಿಕೊಂಬುವುದು — — —                                     ೭

            ಸನ್ಯಸಿ ಜಂಗಮ ಜೋಗಿ ಜಟ್ಟಿ ಮೊಂಡ ಬೈರಾಗಿ
ನಾನಾ ವೇಷ ಕೊಂಬುವುದು — — —
ಉನ್ನತ ಕಾಗೆನೆಲೆ ಆದಿಕೇಶವನ                                             ೮
ಅನುದಿನ ನೆನೆವುದು ಭಕ್ತಿಗಾಗಿ ಪರಮ ಮುಕ್ತಿಗಾಗಿ                     ೯
            (ಪು. ೬೦-೧೬೧)

ಆ) ರಾಗ – ಹುಸೇನಿತಾಳ-                                        ತಾಳ-ಆದಿ

            ಎಲ್ಲರು ಮಾಡುವುದು ಹೊಟ್ಟೆಗಾಗಿ | ಗೇಣು ಬಟ್ಟೆಗಾಗಿ || ||
ಸಿರಿ
| ವಲ್ಲಭನ ಭಜಿಸುವದು ಮುಕ್ತಿಗಾಗಿ || ಅ.ಪ ||

            ಪಲ್ಲಕ್ಕಿಯ ಹೊರುವದು ಹೊಟ್ತೆಗಾಗಿ ದೊಡ್ಡ
ಮಲ್ಲರೊಡನಾಡುವದು — — —

            ಸುಳ್ಳಾಗಿ ಪೊಗಳುವದು — — — ಸಿರಿ
ವಲ್ಲಭನ ಧ್ಯಾನವು ಮುಕ್ತಿಗಾಗಿ

            ದೊರೆತನ ಮಾಡುವುದು -ಕರಿ
ತುರಗವೇರುವದು —
ದುರುತನ ಮಾಡುವದು –ಸಿರಿ
ಹರಿಯ ಭಜಿಸುವದು ಮುಕ್ತಿಗಾಗಿ      ೨

            ಬೆಟ್ಟ ಹೊರುವದು—-
ಗಟ್ಯಾಗಿ ಕೂಗುವುದು——
ದಿಟ್ಟವಾಗಿ ನಮ್ಮ ಶ್ರೀಪುರಂದರ
ವಿಠ್ಠಲನ್ನ ಧ್ಯಾನವು ಮುಕ್ತಿಗಾಗಿ       ೩
(ಪು. ೪೬)

ಇವರೆಡು ಹಾಡುಗಳಲ್ಲಿ ಸಾದೃಶ್ಯವೂ ಸಮನಾಗಿ ಹೆಣೆದು ತೆಕ್ಕೆಹಾಕಿಕೊಂಡಿವೆ. ‘ಅ’ ದಲ್ಲಿ ದ್ವಿಪದಿಯೂ ‘ಆ’ ದಲ್ಲಿ ಚತುಷ್ಪದಿಯೂ ಇದೆ. ರಾಗ ತಾಳಗಳೂ ಬೇರೆಯಾಗಿವೆ. ‘ಆ’ದಲ್ಲಿ ಒಂದು ಅನುಪಲ್ಲವಿ ಹೆಚ್ಚಾಗಿವೆ. ಎರಡರ ಅಂತಿಮ ಆಶಯ ಒಂದೇ ಗುರಿಯತ್ತ ಹುರಿಗೊಂಡಿದೆ; ಆದರೆ ವಿವರಣೆಯಲ್ಲಿ ಕೆಲವು ಅಂತರಗಳುಂಟಾಗಿವೆ. ‘ಅ’ ದಲ್ಲಿರುವ ವಿಸ್ತಾರವನ್ನು ‘ಅ’ ದಲ್ಲಿ ಸಂಗ್ರಹಿಸಲಾಗಿದೆ. ‘ಅ ದಲ್ಲಿ ಇಡೀ ಕೀರ್ತನೆಯ ಕಡೆಯಲ್ಲಿರುವ ‘ಪರಮ ಮುಕ್ತಿಗಾಗಿ’ ಎಂಬುದನ್ನು ‘ಆ’ ದಲ್ಲಿ ಪ್ರತಿ (ಮೂರೂ)ಚರಣದ ಅಂತ್ಯದಲ್ಲಿ ಕಳಶವಾಗಿಟ್ಟಿದೆ. ‘ಅ’ ದಲ್ಲಿರುವ ಭಾವ ತೀವ್ರತೆಯ ಮಿಂಚು ‘ಆ’ ದಲ್ಲಿಲ್ಲ; ‘ಬೆಟ್ಟ ಹೊರುವುದು’ ಎಂಬ ಮಾತು ಜಾಳು ಜಾಳಾಗಿದೆ, ಆಲೋಚನಾ ಸರಣಿಯ ಒಟ್ಟು ಬೆಳವಣಿಗೆ-ಸರಪಣಿಗತಿಯಲ್ಲಿ ಸಾಂಗತ್ಯ ಸೌಷ್ಠವ ಸಾಲದನೆಸುತ್ತದೆ.

೩.         ಅ) ರಾಗ – ನಾಂಟಿ                                     ತಾಳ –ಝಂಪೆ

            ನಂಬು ನಾರಾಯಣನ ನಂವೊ ನರಹರಿಯ
ನಂಬಿದಾ ಭಕ್ತರ ಕುಟುಂಬ ಸಾರಥಿಯ
|| ||
ಬಲಿನಂಬಿ ಪಾತಾಳ ಲೋಕಕರಸಾದನದೆ
ಕುಲದ ಪ್ರಹ್ಲಾದನು ನಿಜವ ಕಂಡ
ಕಲಿ ವಿಭೀಷಣ ನಂಬಿ ಲಂಕೆಯಲಿ ಸ್ಥಿರವಾದ
ಛಲದ ಪಾರ್ಥನು ನಂಬಿ ವಿಶ್ವರೂಪನ ಕಂಡ                 ೧

            ಅಂಬರೀಷನು ನಂಬಿ ವೈಕುಂಠವೇರಿದನು
ಹಂಬಲಿಸಿ ಶಶಿಧರನು ಉರಿಯ ಗೆದ್ದ
ಕುಂಭಿನೀ ದೇವಿ ತಾ ಬಂಧವನ ಕಳೆದಳು
ಅಂಬುಜಾಕ್ಷಿ ದ್ರೌಪದಿಯೂ ಮಾನ ಉಳುಹಿಸಿಕೊಂಡಳು   ೨

            ಅತಿಭಕುತರಿಗೆ ಮೆಚ್ಚಿ ಗತಿಮೋಕ್ಷವಿತ್ತನು
ಮತಿಭ್ರಷ್ಟ ಅಜಮಿಳನ ಉದ್ಧಾರ ಮಾಡಿದ
ಕ್ಷಿತಿಯೊಳಗೆ ಕಾಗಿನೆಲೆಯಾದಿ ಕೇಶವನಾದ
ಪತಿತಪಾವನ ಪರಮ ಪುರುಷೋತ್ತಮನನು                 ೩
(ಪು. ೫೮-೫೯)

ಆ) ರಾಗ-ಯಮುನಾ ಕಲ್ಯಾಣಿ                                              ತಾಳ – ಆಟ

            ನಂಬಿ ಕೆಟ್ಟವರುಂಟೆ ಕೃಷ್ಣಯ್ಯನ
ನಂಬಲಾರದೆ ಕೆಟ್ಟುದು
|| ||

            ಅಂಬುಜನಾಭನ ಪಾದವ ನೆನೆದರೆ
ಇಂಬುಗೊಡದ ದುಃಖ ಹರಿಸುವ ಶ್ರೀಕೃಷ್ಣ
|| ಅ. ಪ ||

            ಬಲಿಯ ಪಾತಾಳಕಳುಹಿ ಭಕ್ತ ಬಾ
ಗಿಲವ ಕಾಯುವ ನಾನೆಂದ
ಛಲದೊಳು ಅಸುರರ ಶಿರಗಳ ತರಿದು ತಾ
ನೊಲಿದು ವಿಭೀಷಣಗೆ ಪಟ್ಟಗಟ್ಟಿದ ಕೃಷ್ಣ                             ೧

            ತರಳ ಪ್ರಹ್ಲಾದಗೊಲಿದು ಉಗುರಿನಿಂದ
ಹಿರಣ್ಯನುದರ ಸೀಳಿದ
ಕರಿರಾಜಗೊಲಿದು ನೆಗಳು ನುಂಗುತಿರಲಾಗ
ಶಿರವ ತರಿದು ಕಷ್ಟ ಪರಿಹರಿಸಿದ ಕೃಷ್ಣ                                  ೨

            ಪಾಂಡವರಿಗೊಲಿದು ಕೌರವರನು
ತುಂಡು ಛಿದ್ರವ ಮಾಡಿದ
ಗಂಡರೈವರ ಮುಂದೆ ದ್ರೌಪದಿ ಕೂಗಲು
ಕಂಕಕರುಣದಿ ಕಾಯ್ದಪುರಂದರ ವಿಠಲ                                    ೩
(ಪು. ೭೯)

ಈ ಬಗೆಯ ಹಾಡುಗಳು ಕೂಡ ಕೆಲವು ಸಮಾಲುಗಳನ್ನೊಡ್ದುತ್ತವೆ. ಏಕ ಪ್ರಕಾರ ವಾದ ಭಾವದ ಬೆಳವಣಿಯಲ್ಲಿರುವ, ಸಾಮತಿಗಳ ಆಯ್ಕೆಯಲ್ಲಿರುವ ಒಟ್ಟುತಾತ್ಪರ್ಯ ಹೊಂದಾಣಿಕೆಯನ್ನು ಅರ್ಥೈಸುವ ಬಗೆ ಹೇಗೆ ಎಂಬುದು ಮುಖ್ಯ ಪ್ರಶ್ನೆ. ಎರಡರಲ್ಲೂ ಇರುವ ಮೂರು ಚರಣಗಳ ಲೆಕ್ಕದಲ್ಲಿ ಏರುಪೇರುಗಳಿಲ್ಲ; ಈ ಸರಿ ಸಮಾನತೆ ಏನೋ ತೀರ ಆಕಸ್ಮಿಕವಾಗಿರಬಹುದೆನಿಸದೆ ಪರಸ್ಪರ ಪ್ರಭಾವವನ್ನು ಸೂಚಿಸುತ್ತದೆ. ಶಬ್ದಗಳೂ, ಪ್ರಾಸಸ್ಥಾನವೂ ವ್ಯತ್ಯಾಸವಾಗಿರುವಂತೆ ತೋರುತ್ತದೆ ಯಾದರೂ, ಉದ್ದೇಶದಲ್ಲಿ ದೂರಾನ್ವಯಗಳಲ್ಲಿ. ಬಲಿ, ಪ್ರಹ್ಲಾದ, ವಿಭೀಷಣ ದ್ರೌಪದಿ- ಇವರ ದೃಷ್ಟಾಂತಗಳು ಎರಡರಲ್ಲೂ ಬಂದಿವೆ. ರಾಗ ತಾಳ ಎರಡಕ್ಕೂ ಪ್ರತ್ಯೇಕವಾಗಿ ನಮೂದಾಗಿವೆ. ‘ಆ’ ದಲ್ಲಿ ಅನುಪಲ್ಲವಿಯೊಂದು ಚಿಗುರಿದೆ.

೪.         ಅ) ರಾಗ – ಕಾಂಭೋದಿ                                           ತಾಳ – ಝಂಪೆ

            ಪೂರ್ವ ಜನ್ಮದಲಿ ನಾ ಮಾಡಿದಾ ಭವದಿಂದ
ಊರ್ವಿಯೊಳು ಜನಿಸಿದೆನೊ ಕೃಷ್ಟಾ
|| ||
ಕಾರುಣ್ಯನಿಧಿಯೆನ್ನ ಕಾಯಬೇಕಯ್ಯ ಹರಿ
ವಾರಿಜನಾಭನೇ ಮುದ್ದುಕೃಷ್ಣ
|| ಅ.ಪ ||

            ಹುಟ್ಟಿದಂದಿಂದಿಗೂ ಸುಖವಾ ನಾ ಕಾಣದೆಲೆ
ಕಷ್ಟನಾದೆನು ಕೇಳೊ ಕೃಷ್ಣಾ
ತೊಟ್ಟಿಲಿನ ಶಿಶುತಾಯ ಬಿಟ್ಟತೆರನಂತೆ ಕಂ
ಗೆಟ್ಟು ಸೊರಗಿದೆನಯ್ಯ ಕೃಷ್ಣಾ
ಮುಟ್ಟಲಮ್ಮರು ಎನ್ನ ಸತಿಸುತರು ಬಾಂಧವರು
ಅಟ್ಟಿ ಎಳೆಯುತ್ತಿಹರೊ ಕೃಷ್ಣಾ
ಕಷ್ಟದಾರಿದ್ರ್ಯವನು ಪರಿಹರಿಸದಿರೆ ದೂರು
ಮುಟ್ಟುವುದು ನಿನಗಯ್ಯ ಕೃಷ್ಣಾ    ೧

            ಕಾಶಿಯಾ ವಾಸವನು ಬಯಸಿ ಬಹುದಿನದಿಂದ
ಆಸೆಯೊಳಗಿದ್ದೆನಯ್ಯ ಕೃಷ್ಣಾ
ಗಾಸಿಯನು ಮಾಡದಲೆ ದೋಷವನು ಪರಿಹರಿಸೊ
ಸಾಸಿರದ ನಾಮದಾ ಕೃಷ್ಣಾ
ಹೇಸಿಕೆಯೊಳಿರ್ದ ಸಂಸಾರವೆಂಬುವ ಮಾಯ
ಪಾಶದಿಂದಲಿ ಬಿಗಿವರೇ ಕೃಷ್ಣಾ
ಕಂಸಮರ್ದನನೆ ನೀ ಕಾಯಬೇಕಯ್ಯ ಹರಿ
ವಾಸುದೇವನೆ ಮುದ್ದು ಕೃಷ್ಣಾ       ೨

            ಲೋಕದೊಳಗೆನ್ನನು ಪೋಲ್ವ ಪಾಪಿಗಳನ್ನು
ನೀ ಕಂಡು ಬಲ್ಲೆಯಾ ಕೃಷ್ಣಾ
ಸಾಕಿನ್ನು ಎನಗೊಂದು ಗತಿಯ ತೋರಿಸಿ ಸದ್ವಿ
ವೇಕುಯವೆ ಮಾಡಯ್ಯ ಕೃಷ್ಣಾ
ರಾಕೇಂದು ಮುಖಿಯ ದ್ರೌಪದಿಯ ಮಾನವಕಾಯ್ದೆ
ಆಕೆಗಕ್ಷೆಯವಿತ್ತೆ ಕೃಷ್ಣಾಪಿ
ನಾಕಿಸುಖನಾದಿಕೇಶವನೆ ಉಡುಪಿಯವಾಸ
ಸಾಕಿ ಸಲಹೈ ಎನ್ನ ಕೃಷ್ಣಾ             ೩
(ಪು. ೭-೮)

ಆ) ರಾಗ – ಕಾಂಭೋದಿ                                           ತಾಳ-ಝಂಪೆ

            ಪೂರ್ವಜನ್ಮದಲಿ ನಾ ಮಾಡಿದ ಪಾಪದಿಂ
ದುರ್ವಿಯೊಳು ಜನಿಸಿದೆನೊ ಕೃಷ್ಣ
|| ||

            ಕಾರುಣ್ಯ ನಿಧಿಯೆನ್ನ ಕಾಯಬೇಕಯ್ಯ ಹರಿ
ವಾರಿಜನಾಭ ಶ್ರೀ ಕೃಷ್ಣ
|| ಅ.ಪ ||
ಹುಟ್ತಿದಂದಿದಿಗೂ ಸುಖವೆಂಬುದನು ಅರಿಯೆ
ಕಷ್ಟಪಡುತಿಹೆನಯ್ಯ ಕೃಷ್ಣ
ದಟ್ಟದಾರಿದ್ರ್ಯವನು ಪರಿಹರಿಸದಿರೆ ದೂರು
ತಟ್ಟುವದು ನಿನಗಯ್ಯ ಕೃಷ್ಣ                                  ೧

            ಕಾಸಿನಾ ಆಸೆಯನು ಮಾಡಿಬಹುದಿನದಿಂದ
ಆಯಾಸದೊಳಗಿರುತಿಹೆನೊ ಕೃಷ್ಣ
ಆಸೆಯನು ಬಿಡಿಸಿ ಮಿಗೆದೋಷವನು ಪರಿಹರಿಸೊ
ಸಾಸಿರನಾಮ ಶ್ರೀಕೃಷ್ಣ                                          ೨

            ಮುಟ್ತಲಂಜುವರು ಬಂಧುಗಳು ಕಂಡರೆ ಎನ್ನ
ಅಟ್ಟಿ ಕೊಲುತಿಹರಯ್ಯ ಕೃಷ್ಣ
ತೊಟ್ಟಿಲಶಿಶು ಬಾಯಬಿಡುವ ತೆರನಂತೆ ಕಂ
ಗೆಟ್ಟು ಶೀಕಿಸುವೆನೋ ಕೃಷ್ಣ                                               ೩

            ತಂದೆ ತಾಯಿಯು ಇಲ್ಲ ಬಂಧುಬಳಗವು ಇಲ್ಲ
ಇಂದೆನಗೆ ಗತಿಯೇನೊ ಕೃಷ್ಣ
ಮಂದರಧರ ಶ್ರೀಪುರಂದರ ವಿಠಲ ನೀ
ಬಂದು ನೆಲೆಯಾಗಯ್ಯ ಕೃಷ್ಣ                                  ೪
(ಪುಟ – ೬೧)

ಈ ಸಮಾನ ಕೀರ್ತನೆಯಲ್ಲೂ ಛಂದಸ್ಸು, ರಾಗ, ಮತ್ತು ತಾಳಗಳಲ್ಲಿ ಏಕರೂಪತೆಯಿದೆ; ಪಲ್ಲವಿ ಅನುಪಲ್ಲವಿಗಳಲ್ಲೂ ವ್ಯತ್ಯಾಸಗಳಿಲ್ಲ. ಐದೈದು ಮಾತ್ರೆಗಳ ಓಟ ಎರಡೂ ಕಡೆ ಪ್ರಧಾನವಾಗಿದೆ. ಛಂದಸ್ಸಿನ ಲಕ್ಷಣದಿಂದ ಸಾಂಗತ್ಯಕ್ಕೆ ಸಂಗತವಾಗಿದೆ, ಅಲ್ಲಲ್ಲಿ ವಿಷ್ಣುಗಣದ ಬದಲು ರುದ್ರಗಣ ಕಂಡುಬರುತ್ತದೆ; ಅಂಶಗಣದ ಬದಲು ಮಾತ್ರಾಗಣ ಘಟಿತ ಸಾಂಗತ್ಯವೆಂದೂ ಹೇಳಬಹುದು. ಕನಕದಾಸರ ಹಾಡಿನಲ್ಲಿ ಮೂರು ಚರಣಗಳೆಂದು ಸಂಪಾದಕರು ಸೂಚಿಸಿದ್ದಾರೆ: ದ್ವಿತೀಯಾಕ್ಷರ ಪ್ರಾಸದ ಆಧಾರ ಬಲದಿಂದ ಅವರು ಹಾಗೆ ಗ್ರಹಿಸಿರಬಹುದು. ಆದರೆ ಅವನ್ನು ಎಂಟೆಂಟು ಸಾಲುಗಳ ಮೂರು ಚರಣಗಳೆಂದು ತಿಳಿಯುವುದಕ್ಕಿಂತ ನಾಲ್ಕು ಪಾದಗಳ ಆರು ಚರಣಗಳಿವೆ; ‘ಆ’ ದಲ್ಲಿರುವ ಎರಡನೆಯ ಸಾಲು ‘ಆಯಾಸದೊಳಗಿರು…’ ಎಂಬುದರಲ್ಲಿನ ಆರಂಭದ ದೀರ್ಘಸ್ವರಾಕ್ಷವಾದ ‘ಆ’ ವನ್ನು ಅದರ ಹಿಂದಿನ (ಅಂದರೆ ಮೊದಲನೆಯ) ಸಾಲಿನ ಕಡೆಯಲ್ಲಿಡಬೇಕು, ಹಾಗೆ ಮಾಡಿದರೆ ಆಗ ಪ್ರಾಸ ಪರಿಪಾಲನೆಯಾಗುತ್ತದೆ; ಈಗಿರುವಂತೆ ಪ್ರಾಸೋಲ್ಲಂಘನೆಯಾಗಿದೆ – ಇದು ಪ್ರಾಯಃ ಸಂಪಾದಕರ ಕಣ್ ತಪ್ಪಿನಿಂದಾಗಿರಬಹುದು. ‘ಅ’ ಮತ್ತು ‘ಆ’ ಗಳಲ್ಲಿ ಮೊದಲ ಮೂರು ಪದ್ಯ (ಚರಣ) ಗಳಲ್ಲಿ ಶೇಕಡ ತೊಂಬತ್ತರಷ್ಟು ಸಾಮ್ಯವಿದೆ: ‘ಅ’ ದಲ್ಲಿರುವ ಕಡೆಯ ಮೂರು ಪದ್ಯಗಳನ್ನು ‘ಆ’ ದಲ್ಲಿ ಸಂಗ್ರಹಿಸಿ ಒಂದೇ ಪದ್ಯಕ್ಕಿಳಿಸಲಾಗಿದೆ; ಹೀಗೆ ಸಂಕ್ಷೇಪಿಸುವಾಗ ಕಂಸಮರ್ದನ ಹಾಗೂ ದ್ರೌಪದಿಯ ಮಾನವಕಾಯ್ದ ಪ್ರಸ್ತಾಪ ಜಾರಿಹೋಗಿದೆ. ಅಥವಾ ಇದರ ತದ್ಬಿರುದ್ಧ ದಿಕ್ಕಿನಲ್ಲಿ ಈ ಕೀರ್ತನೆಯ ಪ್ರಭಾವ ಪ್ರಕ್ರಿಯೆ ಸಂಭವಿಸಿದ್ದರೆ ‘ಆ’ ದಲ್ಲಿ ಇರದಿದ್ದ ಈ ಎರಡು ಹೊಸ ಸಂಗತಿಗಳ ಸೇರ್ಪಡೆಯಿಂದ ‘ಅ’ ದಲ್ಲಿ ಇನ್ನೆರಡು ಪದ್ಯಗಳು ಹುಟ್ಟಿಕೊಂಡಿವೆ. ಹೀಗಾಗಿ ಇವೆರಡರಲ್ಲಿ ಯಾವ ಹಾಡು ಯಾವ ಹಾಡಿಗೆ ಮೂಲವಾಗಿದೆಯೆಂಬ ಪ್ರಶ್ನೆಗೆ ಆದಿಕೇಶವನ್ನೂ, ಪುರಂದರ ವಿಠಲನೂ ಉತ್ತರ ಕಂಡುಕೊಳ್ಳಲು ಬೆಳಕು ತೋರಿಸಬೇಕಾಗಿದೆ; ಆ ಬೆಳಕು ಮುಂದಿನ ಕೀರ್ತನೆಯಲ್ಲಿರುವ ತೊಡಕನ್ನು ನಿವಾರಿಸಿಕೊಳ್ಳುವುದಕಕ್ಕೂ ಬೇಕಾಗಿದೆ.

೫.         ಅ) ರಾಗ – ಸೌರಾಷ್ಟ್ರ                                             ತಾಳ-ಆಟ

            ವರಕವಿಗಳ ಮುಂದೆ ನರಕವಿಗಳ ವಿದ್ಯೆ ತೋರಬಾರದು |
ಧರಣಿಯ ಕಲ್ಲಿಗೆ ಶರಣೆಂದು ಪೂಜೆಯ ಮಾಡಬಾರದು
|| ||
ಪಾಪಿಗಳಿದ್ದಲ್ಲಿ ರೂಪುಳ್ಳ ವಸ್ತುವ ತೋರಬಾರದು
| ಬಹು
ಕೋಪಿಗಳಿದ್ದಲ್ಲಿ ಅನುಭಾವಗೋಷ್ಠಿಯ ಮಾಡಬಾರದು
||                    || ||

            ಅಡಿಸತ್ತ ಮಡಕೆಗೆ ಜೋಡಿಸಿ ಒಲೆಗುಂಡ ಹೂಡಬಾರದು | ಬಹುಬ್
ಬಡತನ ಬಂದಾಅ ನೆಂಟರ ಬಾಗಿಲ ಸೇರಬಾರದು                                  
 || ||

            ಹರಿಯ ನಿಂದಿಸಿ ಹರ ಘನನೆಂದು ನರಕಕ್ಕೆ ಬೀಳಬಾರದು | ತಾ
ಪರರನು ಬೈದು ಪಾತಕಕೆ ಮುನ್ನೊಳಗಾಗಬಾರದು                              
|| ||
ಮಡದಿ ನುಡಿಯ ಕೇಳಿ ಜಗಳಕೊಬ್ಬರ ಕೂಡೆ ಹೋಗಬಾರದು
| ಬಾ
ಯ್ಬಡುಕರು ಇದ್ದಲ್ಲಿ ವಸ್ತಿ ಬಿಡಾರವ ಮಾಡಬಾರದು                         
|| ||

            ಮುಂದೆ ಭಲೆ ಎಂದು ನಿಂದಿಪರನ್ನು ಕೂಡಬಾರದು | ನಮ್ಮ
ತಂದೆ ಬಾಡದಾದಿ ಕೇಶವನ ಸ್ಮರಣೆಯ ಬಿಡಬಾರದು                             
|| ||

(-ಜನಪ್ರಿಯ ಕನಕ್ ಸಂಪುಟ; (ಸಂ.) ದೇಜಗೌ ಮೊದಲಾದವರು, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ೧೯೮೮, ಪುಟ ೯೦)

ಆ) ರಾಗ – ಸೌರಾಷ್ಟ್ರ                                                                     ತಾಳ-ಆಟ

            ವರಕವಿಗಳಿದ್ದಲ್ಲಿ ನರಕವಿಗಳ ಕೊಂಡಾದಬಾರದು – ಇಂಥ
ಧರಣಿಯ ಕಲ್ಲಿಗೆ ಸ್ಥಿರವೆಂದು ಪೂಜೆಯ ಮಾಡಬಾರದು
|| ||

            ಅಡಿಹೋದ ಮಡಕೆಗೆ ಜೋಡಿಸಿ ಒಲೆಗುಂಡ ಹೂಡಬಾರದು
ಬಡತನ ಬಂದರೆ ನಂಟರ ಬಾಗಿಲ ಸೇರಬಾರದು                        
|| ||

            ಮಡದಿಯ ನುಡಿಕೇಳಿ ಬಡವರ ಜಗಳಕ್ಕೆ ಹೋಗಬಾರದು | ಬಹಳ
ಬಡತನ ಬಂದವಳ ಕೈಯಿಂದ ಅಡಿಗೆಯ ಉಣ್ಣಬಾರದು            
|| ||

            ಪಾಪಿಗಳಿದ್ದಲ್ಲಿ ರೂಪುಳ್ಳ ವಸ್ತುವ ತೋರಬಾರದು | ಕಡು
ಕೋಪಿಗಳಿದ್ದಲ್ಲಿ ಅನುಕೂಲ ಗೋಷ್ಠಿ ಮಾತಾಡಬಾರದು                                 
|| ||
ಪರರ ನಿಂದಿಸಿ ಪರಬ್ರಹ್ಮರೂಪೇಂದ್ರನ ಜರೆಯಬಾರದು
ವರದ ಶ್ರೀ ಪುರಂದರ ವಿಠಲನ ಸ್ಮರಣೆಯ ಮರೆಯಬಾರದು                    
 || || (ಪುಟ ೧೨೯ – ೧೩೦)

ಪ್ರಸ್ತುತ ಕೀರ್ತನೆಯ ಚರಣಗಳು ಸಮಾನವಾಗಿದ್ದರೂ, ಅಲ್ಲಲ್ಲಿ ಒಂದೆರಡು ಶಬ್ದಗಳ ಬದಲಾವಣೆಯ ಹೊರತು ಚರಣಗಳ ಸಂಖ್ಯಾನಕ್ರಮಣಿಕೆಯಲ್ಲಿ ‘ಅ’ ಮತ್ತು ‘ಆ’ ಗಳನಡುವೆ ತಲೆ ನಡುವೆ ತಲೆಕೆಳಗು ಆಗಿವೆ; ‘ಅ’ ದಲ್ಲಿ ೨,೪,೧,೩ ನೆಯ ಚರಣಗಳು ‘ಆ’ ದಲ್ಲಿ ೧,೨,೩,೪ ಎಂಬ ಕ್ರಮದಲ್ಲಿವೆ; ಅಥವಾ ಇದನ್ನೇ ವಿಲೋಮವಾಗಿಯೂ ಹೇಳಬಹುದು. ಸಾರಾಂಶದಲ್ಲೇನೂ ವ್ಯತ್ಯಾಸಗಳಿಲ್ಲ. ಛಂದಸ್ಸು, ಅರ್ಥ-ಭಾವ, ಆಶಯ, ರಾಗ-ತಾಳ, ಚರಣಗಳ ಅಳತೆ-ಒಟ್ಟಾರೆ ಎಲ್ಲದರಲ್ಲೂ ಒಂದು ಇನ್ನೊಂದರ ಪ್ರತಿರೂಪವೆಂಬಂತಿವೆ. ಮಾತುಗಳಲ್ಲಿ ಕಾಣುವ ಬದಲಾವಣೆಗಳು : ಇದ್ದಲ್ಲಿ -ಮುಂದೆ, ವಿದ್ಯೆ ತೋರಬಾರದು -ಕೊಂಡಾಡಬಾರದು, ಶರಣೆಂದು- ಸ್ಥಿರವೆಂದು, ಅಡಿಸುತ್ತ -ಅಡಿಹೋದ, ಒಬ್ಬರ ಕೊಡೆ-ಬಡವರ, ಬಾಯ್ ಬಡಕರು ಇದ್ದಲ್ಲಿ ವಸ್ತಿ ಬಿಡಾರವ ಮಾಡಬಾರದು – ಬಡತನ ಬಂದವಳ ಕೈಯಿಂದ ಅಡಿಗೆಯ ಉಣ್ಣಬಾರದು, ಅನುಭಾವಗೋಷ್ಠಿ- ಅನುಕೂಲಗೋಷ್ಟಿ- ಇವು ಎದ್ದು ಕಾಣುತ್ತವೆ : ಜತೆಗೆ ‘ಅ’ ದಲ್ಲಿರುವ ಮೂರನೆಯ ಚರಣ ‘ಆ’ ದಲ್ಲಿ ಇಲ್ಲ. ಒಂದರಲ್ಲಿ ಇರುವ ಚರಣ ಇನ್ನೊಂದರಲ್ಲಿ ಇಲ್ಲದಿರುವ ಅಥವಾ ತದ್ವಿರುದ್ಧವಾದ ಕ್ರಿಯೆ ಬೇರೆ ಕೀರ್ತನೆಗಳಲ್ಲಿಯೂ ಘಟಿಸಿರುವುದನ್ನು ಈಗಾಗಲೇ ನೋಡಿದ್ದೇವೆ. ಹೀಗೆ ಒಂದೊ ಎರಡೊ ಚರಣ ಸೇರಿಸಿದ್ದೇಕೆ ಅಥವಾ ಕೈಬಿಟ್ಟಿದ್ದೇಕೆ ಎಂಬ ಪ್ರಶ್ನೆಯೂ ಈ ಜಿಜ್ಞಾಸೆಯಲ್ಲಿ ಮೌಲಿಕವಾಗುತ್ತದೆ; ಶಬ್ದಗಳೂ ಸಾಲುಗಳೂ ಸೇರಿದ್ದರಿಂದ ಇಲ್ಲವೆ ಜಾರಿದ್ದರಿಂದ ಕೀರ್ತನೆಯ ಅರ್ಥ ಪ್ರತೀತಿಗೆ ಆಗಿರುವ ಲಾಭಾಲಾಭವನ್ನೂ ಚಿಂತಿಸಬೇಕಾಗುತ್ತದೆ – ಇದು ಈ ದಿಕ್ಕಿನಲ್ಲಿ ಆಳವಾಗಿ ಅಧ್ಯಯನ ಕೈಗೊಳ್ಳುವವರು ಅವಶ್ಯ ಪರಿಭಾವಿಸಿ, ಸ್ಫೋಟಿಸಿ ಉತ್ತರ ಕಂಡುಕೊಳ್ಳಬೇಕಾದ ಅಂಶಗಳಲ್ಲೊಂದು.

೬.         ಅ) ರಾಗ – ಶಂಕರಾಭರಣ    ತಾಳ-ಅಟ

            ಹಣ್ಣು ಕೊಂಬುವ ಬನ್ನಿರಿ – ಹರಿದಾಸರು
ಹಣ್ಣು ಕೊಂಬುವ ಬನ್ನಿರಿ
| ||
ಚೆನ್ನಬಾಲಕೃಷ್ಣನೆಂಬ
| ಕನ್ನೆಗೊನೆ ಬಾಳೆಹಣ್ಣು || ಅ. ಪ ||

            ಸುತ್ತೇಳು ಲೋಕದಿ ಸುರರು ಬಿತ್ತಿದ ಹಣ್ಣು
ಭಕ್ತರ ಬಾಯೊಳು ನೆನೆವ ಹಣ್ಣು
ಅರ್ತಿಯುಳ್ಳವರೆಲ್ಲ ಕೊಳ್ಳಿ ಬೇಕಾದರೆ
ನಿತ್ಯ ಮಾಧವನೆಂಬ ಅಚ್ಚಮಾವಿನ ಹಣ್ಣು                
| |

            ಅಜನ ಪಡೆದ ಹಣ್ಣು ಗಜವ ಕಾಯ್ದ ಹಣ್ಣು
ನಿಜ ಮುನಿಗಳಿಗೆ ತೋರಿಸಿದ ಹಣ್ಣು
ತ್ರಿಜಗ ವಂದಿತ ಪಾಲ್ಗಡಲೊಡೆಯನ ಹಣ್ಣು
ಸುಜನ ಭಕ್ತರೆಲ್ಲ ಕೊಳ್ಳ ಬನ್ನಿರಿ ಹಣ್ಣು                   
|| ||

            ತರುವ ಕಾಯ್ದ ಹಣ್ಣು ಉರುಗನ ತುಳಿದಾ ಹಣ್ಣು
ಕರೆದರೆ ಕಂಬದೊಳು ಓಯೆಂಬ ಹಣ್ಣು
ಮರುಗುವ ಧ್ರುವನಿಗೆ ಪಟ್ಟಗಟ್ಟಿದ ಹಣ್ಣು
ಕರುಣಾಳು ಕಾಗಿನೆಲೆಯಾದಿ ಕೇಶವ ಹಣ್ಣು                 
 || ||   (ಪುಟ. ೧೮೩-೧೮೪)

ಆ) ರಾಗ – ಬಿಲಹರಿ                                                           ತಾಳ-ಆಟ

            ಹಣ್ಣು ಬಂದಿದೆ ಕೊಳ್ಳಿರೊ ಹರಿದಾಸರು
ಹಣ್ಣು ಬಂದಿದೆ ಕೊಳ್ಳಿರೊ
||
ಚಿನ್ನ ಬಾಲಕೃಷ್ಣನೆಂಬ
ಚೆನ್ನಾದ ಬಾಳೆಯ
|| ಅ.ಪ ||

            ಕೊಳೆತು ಹೋಗುವದಲ್ಲ ಹುಳಿತು ನಾರುವದಲ್ಲ
ಕಳೆದು ಬೀಸಾಡಿಸಿ ಕೊಳುವದಲ್ಲ
ಅಳತೆ ಗೊಂಬುದಲ್ಲ ಗಿಳಿಕಚ್ಚಿ ತಿಂಬುದಲ್ಲ
ಒಳಿತಾದ ಶ್ರೀಹರಿ ಎಂಬ ಮಾವಿನ ಹಣ್ಣು                  
|| ||

            ಅಜನ ಪಡೆದ ಹಣ್ಣು ಗಜವ ಸಲಹಿದ ಹಣ್ಣು
ತ್ರಿಜಗದಿ ಮುನಿಗಳಿಗೆ ತೋರಿದ ಹಣ್ಣು
ತ್ರಿಜಗವಂದಿತ ಪಾದವೆಂಬ ಮಾವಿನ ಹಣ್ಣು
ಸುಜನಾನಂದಿಯರು ನೀವು ಕೊಳ್ಳಿ ಬನ್ನಿ                    
|| ||

            ತುರುವ ಕಾಯ್ವ, ಹಣ್ಣು ಉರುಗನ ತುಳಿದಾ ಹಣ್ಣು
ಕರೆದರೆ ಕಂಬದಿಂದ ಬಂದ ಹಣ್ಣು
ಮರುಗುವ ಧ್ರುವನ ಉನ್ನತನ ಮಾಡಿದ ಹಣ್ಣು
ಪುರಂದರ ವಿಠಲನೆಂಬ ಹಣ್ಣುಕೊಳ್ಳ ಬನ್ನಿ                 
 || || (ಪುಟ. ೨೭)

ಇಲ್ಲಿ ಕೆಲವು ವ್ಯತ್ಯಾಸಗಳು ಸಂಭವಿಸಿವೆ: ರಾಗ ಒಂದರಲ್ಲಿ ಶಂಕರಾಭರಣ, ಇನ್ನೊಂದರಲ್ಲಿ ಬಿಲಹರಿ ಇದ್ದರೂ ತಾಳ ಸಮಾನವಾಗಿದೆ. ಸಂಗೀತ ಶಾಸ್ತ್ರ ವಿಶಾರದರು ಈ ಕೀರ್ತನೆ ಯಾವ ರಾಗಕ್ಕೆ ಉಚುತವಾಗಿ, ಶುದ್ಧವಾಗಿ ಹೊಂದಿಕೊಳ್ಳು ತ್ತದೆಂಬುದನ್ನು ಹೇಳಬಲ್ಲರು; ಆ ಬಗ್ಗೆ ನಾನು ಏನನ್ನೂ ಹೇಳಲಾರೆ. ಆದರೆ ಸಾಹಿತ್ರ್ಯ ದೃಷ್ಟಿಯಿಂದ ಮಾತ್ರ ನೋಡಿದಾಗ, ಒಂದೇ ಓದಿಗೆ ಧಾರಳವಾಗಿ ಹೇಳಬಹುದಾದ ಮಾತೆಂದರೆ ‘ಆ’ ದ ಕೀರ್ತನ ಶಿಲ್ಪದಲ್ಲಿ ಶೈಥಿಲ್ಯಗಳಿವೆ. ಮಾವಿನಹಣ್ನು, ತ್ರಿಜಗ ಎಂಬ ಶಬ್ದ ಎರಡೆರಡು ಸಲ ಬಂದಿರುವುದಕ್ಕೆ ಔಚಿತ್ಯವಲ್ಲ; ದೈವನನ್ನು (ಕೃಷ್ಣನನ್ನು) ಒಂದು ಹೆಣ್ಣೆಂದು ರೂಪಕವಾಗಿಸಿ ಪುನರುಕ್ತಿ ಮಾಡುತ್ತಾ ಹೊರಟಿರುವುದು ಬೇರೆ – ಅದರ ಅರ್ಥ, ಔಚಿತ್ಯ, ಸ್ವಾರಸ್ಯಗಳಿವೆ; ಇಡೀ ಕೀರ್ತನೆಗಳಲ್ಲಿ ಗುರುತಿಸಿರುವ ಹಾಗೆ ಇಲ್ಲಿಯೂ ಕೆಲವು ಶಬ್ದಗಳು ಸ್ಥಳಾಂತರಗೊಂಡಿವೆ; ಈ ಬಗೆಯ ಒಂದು ಕಡೆ ಬಳಸಿರುವ ನುಡಿಗಳನ್ನು ಬೇರೊಂದು ಮಾತಿನಿಂದ ಪಲ್ಲಟಿಸಿರುವಿಕೆಯಿಂದ ನಿರೂಪಣೆಯಲ್ಲಿ ಯಾವ ಬದಲಾವಣೆಯೂ ಫಲಿಸಲಿಲ್ಲ; ಇವೆರಡೂ ಹಾಡುಗಳು ಒಂದೇ ಬುದ್ಧಿ – ಭಾವದ ಸೃಷ್ಟಿಯೆಂಬ ವಾಸ್ತವಾಂಶ ಮರೆಯಾಗಿಲ್ಲ. ಇನ್ನು ಮತ್ತೆ ಇಡೀ ಕೀರ್ತನೆಯನ್ನು ಉದಾಹರಿಸಿದೆ ಇಲ್ಲಿಯೇ ಹೇಳಿ ಚರ್ಚಿಸಬಹುದಾದ ಮತ್ತೊಂದು ಮಹತ್ವದ ಕೀರ್ತನೆ ‘ಹೂವ ತರುವರ ಮನೆಗೆ ಹುಲ್ಲ ತರುವೆ’ ಎಂಬುದು. ಇದರಲ್ಲಿ ಎರಡೂಕಡೆ ರಾಗ ನಿರ್ದೇಶನ ಕಾಂಬೋದಿಯೇ ಆಗಿದ್ದರೂ ತಾಳದಲ್ಲಿ (ಒಂದು ಕಡೆ ಆಟ, ಇನ್ನೊಂದು ಕಡೆ ಝಂಪೆ) ಮತ್ತು ಇಡೀ ಕೀರ್ತನ ಶರೀರದಲ್ಲಿ ಅಂತರ ತುಂಬ ಇದೆ; ಆದರೆ ಹಾಡಿನ ಒಟ್ಟು ಆಂತರ್ಯ ಒಂದೇ ಎನಿಸಿದೆ. ಇದೇ ರೀತಿಯಾಗಿ ‘ಈತನಿಗೆ ವಾಸುದೇವನು’ ಮತ್ತು ‘ಈತ ಮುಖ್ಯ ಪ್ರಾಣನಾಥ’ ಎಂಬ, ಕ್ರಮವಾಗಿ ಈ ಇಬ್ಬರ, ಕೀರ್ತನೆಗಳ ಆದಿಯಲ್ಲಿರುವ ಸಾಮ್ಯ ಅನಂತರದ ಚರಣಗಳಲ್ಲಿ ಕಾಣದೆ ಹೋದರೂ, ಒಟ್ಟು ಆಶಯ ಒಂದೇ ಮೂಲಕ್ಕೆ ದುಡಿಯುವಂತಿದೆ. ಹೀಗೆ, ಈ ಪಟ್ಟಿಯನ್ನು ಇನ್ನಷ್ಟು ಉದಾಹರಣೆಗಳನ್ನಿತ್ತು ಪುಷ್ಟಿಗೊಳಿಸಲು, ಸಾಕಷ್ಟು ಗ್ರಾಸ ಸಿಗುತ್ತದೆಂಬೊಂದು ಸೂಚನೆಯನ್ನು ಮುಂದಿನ ಅನ್ವೇಷಕರ ಮಡಿಲಿಗೆ ಹಾಕಬಹುದು. ಈ ನಿದರ್ಶನಗಳನ್ನು ನಿಲ್ಲಿಸಿ, ಸಮಾರೋಪ ರೂಪದ ಕೆಲವು ತೀರ್ಮಾನಗಳಿಗೆ ತೊಡಗುವುದಕ್ಕೆ ಮುಂಚೆ ಇನ್ನೊಂದು ಉದಯರಾಗವನ್ನು ಪ್ರಸ್ತಾಪಿಸಬೇಕಾಗಿದೆ: ಈ ಕಡೆಗೆ ನನ್ನದು ಗಮನ ಸೆಳೆದು ಮಾಹಿತಿಕೊಟ್ಟವರು ಡಾ. ಕಮಲಾ ಹಂಪನಾ.

ದಾ. ಕಮಲಾಹಂಪನಾ ಅವರು ತಮ್ಮ ನಿಬಂಧ “ತರಂಗ ಭಾರತ- ಒಂದು ಅಧ್ಯಯನ” ದಲ್ಲಿ ಪರಮದೇವ ಕವಿಯು ತನ್ನ ಕಾವ್ಯದಲ್ಲಿ ಅಳವಡಿಸಿಕೊಂಡಿರುವ, ಪುರಂದರದಾಸರ ಹೆಸರಿನಲ್ಲೂ ಅಚ್ಚಾಗಿರುವ, ಒಂದು ಉದಯರಾಗದ ಆಕರದತ್ತ ಗಮನ ಸೆಳೆದಿದ್ದಾರೆ: ಅದು ‘ದ್ರೌಪದೀ ಮಾನ ಸಂರಕ್ಷಣ’ ಎಂಬ ಹೆಸರಿಲ್ಲಿದೆ, ೧೫ ಷಟ್ಪದಿ ಪದ್ಯಗಳಿವೆ. ಇದು ಕೆಲವು ಹಸ್ತ ಪ್ರತಿಗಳಲ್ಲಿ ‘ಮಂಗಳಂ ಶ್ರೀಯರಸ ಪುರಂದರ ವಿಠಲಗೆ’ ಎಂದೂ, ಕೆಲವದರಲ್ಲಿ ‘ಮಂಗಳಂ ಸಿರಿಕಾಗಿ ನೆಲೆಯಾದಿ ಕೇಶವಗೆ ಎಂದೂ ಕಡೆಯ ನುಡಿಯಲ್ಲಿದ್ದು ಸಂಶೋಧಕರ ಆಖ್ಯೆರು ತೀರ್ಮಾನಕ್ಕೆ ಇನ್ನೂ ದಾರಿ ಕಾಯುತ್ತಿದೆ. ಪುರಂದರ ಹಾಉಗಳ ಸಂಕಲನದಲ್ಲಿ, ಇದು ಅವರ ರಚನೆಗೆ ಸೇರಿದ್ದೆಂಬಂತೆ, ಈ ಉದಯರಾಗ ಪದ್ಧತಿಯ ಪ್ರಕರಣವೂ ಸೇರ್ಪಡೆ ಯಾಗಿದೆ; ಹಲವು ಸಂಪಾದಕರುಗಳ ಆವೃತ್ತಿಗಳಲ್ಲಿ ಹೀಗೆ ಸೇರಿಕೊಂಡು ಇದು ಪುರಂದರರದೇ ಇರಬೇಕೆಂಬ ಪ್ರತೀತಿ ನಿಂತುಬಿಟ್ಟಿದೆ. ಪರಮದೇವ ಕವಿಯೂ ಇದನ್ನು ಪುರಂದರರಿಂದಲೇ ಎತ್ತಿ ಹಾಕಿದ್ದಾನೆಂದು ತಾವು ಮೊದಲು ಭಾವಿಸಿ ಬರೆದುದಾಗಿಯೂ, ಈಗ ಈ ಹಾಡು ಕನಕದಾಸರದೇ ಎಂದು ತಮಗೆ ಖಾತ್ರಿಯಾಗಿದ್ದು, ಹಿಂದೆ ತಳೆದ ನಿಲುಮೆಯನ್ನು ಪೂರ್ತಿ ಬದಲಾಯಿಸಿ ಕೊಂಡಿರುವುದಾಗಿಯೂ, ಡಾ. ಕಮಲಾ ಹಂಪನಾ ಸ್ಪಷ್ಟಪಡಿಸಿದ್ದಾರೆ. ಆದರೆ ಈ ವಿಚಾರದಲ್ಲಿ ಕರ್ನಾಟಕ ಸರ್ಕಾರದ ‘ಪುರಂದರ ಸಾಹಿತ್ಯ ದರ್ಶನ’ (೧೯೮೫) ಸಂಪುಟ ನಾಲ್ಕರಲ್ಲಿ (ಪುಟ. ೨೨) ‘ಇದನ್ನು ಕನಕದಾಸರದ್ದೆಂದೂ ಹೇಳುವುದಿದೆ’ ಎಂದು ಅಡ್ಡಗೋಡೆಯ ಮೇಲೆ ದೀಪವಿಡಲಾಗಿದೆ. ಆದರೆ ಬಿ. ಶಿವಮೂರ್ತಿಶಾಸ್ತ್ರಿಗಳು ಇದು ಕನಕದಾಸರು ರಚನೆಯೆಂದು ಕಡಾಕಂಡಿತವಾಗಿ ಹೇಳಿದ್ದಾರೆ.

ಈ ದಿಕ್ಕಿನಲ್ಲಿ ಚಿಂತನೆಯನ್ನು ಮಸೆದು ನಿಲ್ಲಿಸಿದ ಆದ್ಯರಲ್ಲಿ ಬೆಟಗೇರಿ ಕೃಷ್ಣಶರ್ಮರನ್ನು ಮೊದಲು ನೆನೆಯಬೇಕು. ಇದರ ಸಂಬಂಧವಾಗಿ ಅವರ ಹೇಳಿಕೆ ಹೀಗಿದೆ: “ಪುರಂದರ ದಾಸರ – ಕನಕದಾಸರ ಕೊಲವೊಂದು ಗೀತಗಳು ಪರಸ್ಪರ ಅಂಕಿತಗಳನ್ನು ಬದಲಿಸಿಕೊಂಡು ಮುದ್ರಿತವಾಗಿವೆ. ಇವುಗಳ ನಿಜವಾದ ಕರ್ತೃಗಳಾ ರೆಂಬುದನ್ನು ನಿರ್ಣಯಿಸುವುದಕ್ಕೆ ಪ್ರಾಚೀನ ಹಸ್ತ ಪ್ರತಿಗಳೇ ನಮಗೆ ಸಹಕಾರ ನೀಡಬಲ್ಲುವು. ಆ ಸಹಕಾರವನ್ನು ಉಪಯೋಗ ಮಾಡಿಕೊಂಡುದರಿಂದಲೇ ಈ ಸಂಕಲನದಲ್ಲಿ, ಪುರಂದರದಾಸರವೆಂದು ಪ್ರಚಾರದಲ್ಲಿರುವನಾಲ್ಕಾರು ಹಾಡುಗಳು, ಕನಕದಾಸರವೆಂಬ ನಂಬುಗೆಗೆ ಪಾತ್ರವಾಗಿ, ಇದರಲ್ಲಿ ಅಚ್ಚಾಗಿವೆ. ಇದಕ್ಕೆ ಮುಖ್ಯವಾದ ಉದಾಹರಣೆಯನ್ನು ಹೇಳಬೇಂಕೆಂದರೆ, ದ್ರೌಪದೀ ಮಾನಸಂರಕ್ಷಣೆಯ ಉದಯರಾಗದ ದೀರ್ಘಕವನ ಅಥವಾ ಖಂಡಕಾವ್ಯ. ಇದು ಎಲ್ಲ ಹಸ್ತಪ್ರತಿ ಗಳಲ್ಲಿಯೂ ಕನಕದಾಸರ ಅಂಕಿತದಿಂದಲೇ ಕೂಡಿರುವುದು”. (ಕನಕದಾಸರ ಭಕ್ತಿ ಗೀತೆಗಳು; ಸಮಾಜ ಪುಸ್ತಕಾಲಯ, ಧಾರವಾಡ, ೧೯೬೫, ಪುಟ. ೫) ಈ ಅಂಶವನ್ನು, ಅದೇ ಪುಸ್ತಕದಲ್ಲಿ ಮುಂದುವರಿದು, ಇನ್ನೊಂದುಕಡೆ ಮತ್ತೆ ಪ್ರಸ್ತಾಪಿಸುತ್ತ ಹೇಳಿರುವ ಮಾತುಗಳಿವು: “ಈ ಸಂಕಲನದಲ್ಲಿ ಪ್ರಕಟವಾಗಿರುವ ‘ವಾಸುದೇವಾಯ ನಮೋ’ ಎಂಬ ದ್ರೌಪದಿಯ ಮಾನರಕ್ಷಣೆಯ ಕೃತಿಯೂ ಒಂದು ಖಂಡ ಕಾವ್ಯದಂತಿದೆ. ಕುಮಾರವ್ಯಾಸಕವಿಯ ಈ ಕಥಾಭಾಗದೊಂದಿಗೆ ಕನಕದಾಸರ ಈ ಕೃತಿಯನ್ನು ಹೋಲಿಸಿ ನೋಡಿದರೆ, ಕನಕದಾಸರು ಕುಮಾರವ್ಯಾಸಕವಿಯ ಕೃತಿಯಿಂದ ಪ್ರಭಾವಿತರಾಗಿದ್ದಾರೆಂಬುದು ಕಂಡುಬಾರದಿರದು” (-ಅದೇ-; ಮುನ್ನುಡಿ, ಪುಟ ೧೭-೧೮).

ಕೆಲವು ಅಂಶಗಳು ಇಲ್ಲಿ ಸ್ಪಷ್ಟಗೊಳ್ಳಬೇಕಾಗಿವೆ, ಬೆಟಗೇರಿಯವರ ಪ್ರಾಂಜಲ ವಿವೇಚನೆ ಸ್ತುತ್ಯಾರ್ಹವಾದುದು. ಅವರು ಕನಕದಾಸರ ಹಾಡುಗಳನ್ನೂ, ಪುರಂದರದಾಸರ ಹಾಡುಗಳನ್ನೂ ಶ್ರದ್ಧೆಯಿಂದ ಸಂಪಾದಿಸಿ ಪ್ರಕಟಿಸಿದ್ದಾರೆ; ಉಪಲಬ್ಧಹಸ್ತಪ್ರತಿಗಳಲ್ಲಿ ಕೆಲವನ್ನು ಆಧರಿಸಿ ಪಾಠಪರಿಷ್ಕರಣ ಮಾಡಿದ್ದಾರೆ. ಕನಕದಾಸರದಲ್ಲವೆಂದು ಅಚ್ಚಾಗಿರುವ ಕೆಲವು ಹಾಡುಗಳು ಅವರವಲ್ಲವೆಂದು ತಿಳಿದು, ಅಂತಹ, ಅಂದರೆ ಅವರವಲ್ಲದ ಕೀರ್ತನೆಗಳನ್ನು ತಮ್ಮ ಸಂಕಲನದಲ್ಲಿ ಸೇರಿಲ್ಲವೆಂದು ಸ್ಪಷ್ಟವಾಗಿ ಅರಿಕೆಮಾಡಿದ್ದಾರೆ (-ಅದೇ-; ಪುಟ. ೪). ಅಷ್ಟೇ ಅಲ್ಲದೆ ಸಂಪಾದಕರಾಗಿ ಅವರು ಗಂಟೆ ಹೊಡೆದಂತೆ ಹೀಗೆ ಹೇಳಿದ್ದಾರೆ: “ಕನಕದಾಸರ ವಲ್ಲದ ಹಾಡುಗಳನ್ನು ಈ ಸಂಕಲನಲ್ಲಿ ಒಂದನ್ನೂ ತೆಗೆದುಕೊಂಡಿಲ್ಲ” (-ಅದೇ-; ಮುನ್ನುಡಿ ಪುಟ. xxix). ಹೀಗೆ ಹೊಣೆಯನ್ನು ಹೊತ್ತು ಅವರು ಹೊರತಂದ ಕನಕದಾಸರ ಹಾಡುಗಳ ಕಟ್ಟಿನಲ್ಲಿ ಇದುವರೆಗೆ ನಾನು ಉದಾಹರಿಸಿದ ಹಾಡುಗಳು, ವರಕವಿಗಳ ಮುಂದೆ ಎಂಬುದನ್ನು ಬಿಟ್ತು, ಸೇರ್ಪಡೆಯಾಗಿವೆ: ಅದರಿಂದ ಅ ಕೀರ್ತನೆಗಳೆಲ್ಲ ಕನಕದಾಸರ ರಚನೆಯೆಂದು ಅವರು, ಪರೀಶೀಲಿಸಿ ಕೈಗೊಂಡ ನಿರ್ಣಯವಾಗಿ, ಒಪ್ಪಿದ್ದಾರೆ. ಹೀಗಿದ್ದೂ ಇಂದಿಗೂ ಆ ಹಾಡುಗಳು ಪುರಂದರದಾಸರ ಹಾಡುಗಳೆಂದೇ ಹೊಸ ಪ್ರಕಟಣೆಗಳಲ್ಲಿ ರಾರಾಜಿಸುತ್ತ ಮುಂದುವರಿಯುತ್ತಿರುವುದೇಕೆ? ಸಂಪಾದಕರಾಗಿ ಅಷ್ಟು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಿದ ಬೆಟಗೇರಿಯವರು ಕೂಡ, ‘ಪುರಂದರದಾಸರವೆಂದು ಪ್ರಚಾರದಲ್ಲಿರುವ ನಾಲ್ಕಾರು ಹಾಡುಗೌ ಕನಕದಾಸರ ವೆಂಬ ನಂಬುಗೆಗೆ ಪಾತ್ರವಾಗಿ’ ವೆ ಯೆಂದು (-ಅದೇ-; ಪುಟ.೫) ಮೊಗಂ ಆಗಿ ಹೇಳಿದರೇ ಕೊರತು, ಆ ಒಗಟು ಬಿಡಿಸಿ ಇಂತಿಂತಹ ಹಾಡುಗಳೇ ಅವು – ಎಂದು ಡಣಾಡಂಗುರವಾಗಿ ಹೇಳಲಿಲ್ಲ. ನಾನು ಈ ಸಂಪ್ರಬಂಧದಲ್ಲಿ ಆ ಕೆಲಸ ಮಾಡಿ, ಎಲ್ಲರನ್ನೂ ಹುಡುಕಿ ತೆಗೆದು ಉದಾಹರಿಸಿದ್ದು ಇದೇ ಕಾರಣಕ್ಕಾಗಿ.

ಈಗ ಮುಖ್ಯವಾದ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಶೋಧನಕಾರ್ಯ ನಡೆಯಬೇಕಾಗಿದೆ. ಪುರಂದರದಾಸರ ಕೀರ್ತನೆಗಳನ್ನು ಕನಕದಾಸರ ಹಾಡನ್ನಾಗಿಸುವ ಅಥವಾ ಅದರ ತದ್ವಿರುದ್ಧ ಪ್ರಕ್ರಿಯೆಗಳಲ್ಲಿ ಹೆಚ್ಚು ಸಾಧ್ಯತೆ, ಸಂಭಾವ್ಯತೆ ಇರುವುದು ಯಾವುದು? ಮೂಲ ಅಥವಾ ಮೊದಲ ರಚಬೆಯಾರದು ಅಥವಾ ಯಾವುದು? ಒಬ್ಬರ ಅಂಕಿತವನ್ನು ತೆಗೆದು ಇನ್ನೊಬ್ಬರ ಅಂಕಿತವನ್ನಿಟ್ಟು ಈ ಅದಲುಬದಲು ಮಾಡುವ ಕೆಲಸ ಯಾವಾಗ ಆರಂಭವಾಯಿತು? ಯಾರಿಂದ, ಯಾಕಾಗಿ ಈ ಕರ್ತೃತ್ವ ವ್ಯತ್ಯಾಸ ತೋರಿಸುವ ಕೆಲಸ ನಡೆಯಿತು? ಈ ಬಗೆಯ ಮೂಲಭೂತವಾದ ಸಂಶಯಗಳು ಸಂಶೋಧಕರನ್ನು ಕಾಡುತ್ತವೆ. ಈ ಬಗ್ಗೆ ವಿವೇಚಿಸುವವರೆಲ್ಲ ನೆನಪಿಡುವ ಒಂದು ಸಂಗತಿಯಿದೆ; ಪುರಂದರ-ಕನಕದಾಸ ಇಬ್ಬರೂ ಶ್ರೇಷ್ಠ ಸಂತರು, ದಾಸವರೇಣ್ಯರು; ಪರಮಜ್ಞಾನಿಗಳಾದ ಪುರಂದರ ಕನಕದಾಸರಲ್ಲಿ ಕೃತಿ ಚೋರತನ ಕಲ್ಪಿಸುವುದು ನಮ್ಮ ಅಜ್ಞಾನವಾದೀತು. ಈ ಅಶ್ವಿನೀ ದೇವತೆಗಳ ವಿಚಾರವಾಗಿ ಇಂಥ ಆರೋಪ ಮಾಡುವುದಿರಲಿ, ಹಾಗೆ ಆಲೋಚಿಸುವುದು ಕೂಡ ಅಪರಾಧವಾಗಬಹುದು. ಏಕೆಂದರೆ ಅವರಿಬ್ಬರಲ್ಲೂ ಅಂಥ ಪ್ರತಿಭಾದಾರಿದ್ರ್ಯವಿರಲಿಲ್ಲ; ಕ್ಷಣದಲ್ಲಿ, ನಿಂತ ನಿಲುವಿನಲ್ಲಿ, ಹೊಸ ಕೀರ್ತನೆ ಕಟ್ಟಿ ಹಾಡುವ ಸ್ಫೂರ್ತಿ ಪ್ರತಿಭಾಶಕ್ತಿಗಳಿದ್ದುವು: ಇವರಲ್ಲಿ ಒಬ್ಬರು ಇನ್ನೊಬ್ಬರ ಕೀರ್ತನೆಗಳನ್ನು, ಕೇವಲ ಅಂಕಿತವನ್ನು ಬದಲಾಯಿಸಿಕೊಳ್ಳುವುದರ ಮೂಲಕ, ಅಲ್ಲೊಂದು ಇಲ್ಲೊಂದು ಮಾತೊ ಸಾಲನ್ನೂ ವ್ಯತ್ಯಾಸಗೊಳಿಸಿ, ತಮ್ಮದನ್ನಾಗಿಸಿಕೊಂಡರೆಂದು ತಿಳಿಯುವುದಕ್ಕೆ ಜಿಂಜರಿಕೆ ಇದೇ ಪ್ರಧಾನವಾದ ಕಾರಣ. ಎರವಲು ಸರಕಿನ ಬಂಡವಾಳದಿಂದ ಬಾಳಬೇಕಾದ ದಿವಾಳಿತನ, ಬಡತನ ಇಬ್ಬರಲ್ಲೂ ಇರಲಿಲ್ಲ.

ಸುಮಾರು ಹದಿನೇಳನೆಯ ಶತಮಾನದಲ್ಲೇ ಈ ಕೀರ್ತನೆಗಳನ್ನು ಹೀಗೆ ಕಲಸುಮೇಲೋಗರ ಮಾಡುವ ಕೆಲಸ ಆರಂಭವಾಗಿದೆಯೆಂದು ತೋರುತ್ತದೆ. ಇದನ್ನು ಇನ್ನಷ್ಟು ನಿರ್ದಿಷ್ಟಗೊಳಿಸಲು, ಈಗ ಲಭ್ಯವಿರುವ ತಾಳೆಗರಿಯ ಪ್ರಾಚೀನ ಹಸ್ತಪ್ರತಿಗಳನ್ನು ಆಧರಿಸಿದರೆ, ಸಾಧ್ಯವಿದೆ; ಮೊಟ್ಟಮೊದಲು ಯಾವ ಹಾಡನ್ನು ಹೀಗೆ ಬದಲಾಯಿಸಲಾಯಿತೆಂಬುದನ್ನೂ ಇಂಥ ಅಧಯ್ಯನದಿಂದ ಬಹಿರಂಗಗೊಳಿಸಬಹುದು. ಓಲೆಗರಿ/ಕಾಗದದ ಪ್ರಪ್ರಾಚೀನ ಹಸ್ತಪ್ರತಿಗಳ ಸಹಾಯದಿಂದಲೇ ಸೂರಿಗಳು ನಿರ್ಧರಿಸಿ ಹೇಳಬೇಕಾದ ಅಂಶಗಳು ಎರಡು. ಒಂದು, ಎಲ್ಲಿಯವರೆಗೆ ಕೀರ್ತನೆಗಳು ಸಂಕರಗೊಳ್ಳದೆ ಯಥಾಸ್ಥಿತಿ ಯಲ್ಲಿದ್ದುವು? ಎರಡು, ಯಾವಾಗ ಈ ಕೆಲಸ, ಕರ್ನಾಟಕದ ಯಾವ ಭಾಗದ ಹಸ್ತಪ್ರತಿಗಳಲ್ಲಿ ಪ್ರಾರಂಭವಾಯಿತು ಮತ್ತು ಇದಕ್ಕೆ ಬಲಿಯಾದ ಮೊದಲ ಕೀರ್ತನೆಗಳು ಯಾವುವು? ಇದು ಶುದ್ಧಾಂಗವಾಗಿ, ವಸ್ತುನಿಷ್ಠ ಪರಾಮರ್ಶೆಯಿಂದ ಪತ್ತೆಯಾಗಬೇಕಾದ ಕೆಲಸ. ಆ ದಿಕ್ಕಿನಲ್ಲಿ ಹೆಜ್ಜೆಯಿರಿಸಿದ ಆದ್ಯರು ಬೆಟಗೇರಿಯವರು; ಅದರಿಂದ, ಅವರು ಆಧರಿಸಿದ ಪ್ರತಿಗಳ ಸ್ವರೂಪ, ಕಾಲ- ಇದನ್ನೂ ಗಣನೆಗೆ ತಂದುಕೊಳ್ಳಬೇಕು.

ಈ ಸಮಸ್ಯೆಗೆ ಹಸ್ತಪ್ರತಿಗಳನ್ನು ಜಾಲಾಡಿ, ಜಾತಕ ಬಿಡಿಸಿ ನೋಡುವುದೊಂದೇ ಪರಿಹಾರವಲ್ಲ. ಇದಕ್ಕೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಧಾರ್ಮಿಕ ಮುಖಗಳೂ ಇವೆ. ಪುರಂದರರೂ ಕನಕದಾಸರೂ ಸಮಕಾಲೀನರಾದ ವಿಭೂತಿ ಪುರುಷರು. ಪುರಂದರರು-ಶೂದ್ರರು; ವೈಶ್ಯಕುಲ ಸಂಜಾತರಾಗಿದ್ದು ಆಮೇಲೆ ದಾಸರಾದ ಮಹಾಜ್ಞಾನಿ. ಕನಕದಾಸರೂ ದಲಿತರ ಅಂಚಿನಲ್ಲಿರುವ ಶೂದ್ರರು; ಕುರುಬರಾಗಿದ್ದು ದಾಸರಾದರು. ಅವರಿಬ್ಬರೂ ಹುಟ್ಟಿಬಂದ ಜಾತಿಕುಲದ ಹಿನ್ನೆಲೆಯಲ್ಲಿ ಪುರಂದರದಾಸರಿಗೆ ಅವರ ಕಾಲದ ದಾಸರ ಪರಿವಾರದೊಳಗೂ ದೇವಾಲಯಗಳಲ್ಲೂ ಸುಲಭ ಪ್ರವೇಶ ದೊರೆಯಿತು: ಕನಕದಾಸರು ಪಟ್ಟ ಬವಣೆಗೆ ಇಂದಿಗೂ ಕನಕನ ಕಿಂಡಿ ವ್ಯಥೆಯ ಕಥೆಯನ್ನು ಹೇಳುತ್ತಿದೆ. ಸಾಮಾಜಿಕವಾಗಿ ಇವರಿಬ್ಬರೂ ಶೂದ್ರರು; ಆರ್ಥಿಕವಾಗಿ ಕುರುಬರು ಹಿಂದುಳಿದವರು, ಶೈಕ್ಷಣಿಕವಾಗಿಯಂತೂ ಇಂದಿಗೂ ತುಂಬ ಕೆಳಗಿರುವ ಜನಾಂಗ. ಇವೆಲ್ಲದರ ಪರಿಣಾಮವಾಗಿ ದಾಸರ ಸಮುದಾಯದಲ್ಲಿ ಇವರಿಗಿದ್ದ ಸ್ಥಾನಮಾನಗಳ ಚಿತ್ರಣ ಮಸುಕು ಮಸುಕಾಗಿಯಾದರೂ ಕಂಡುಬರುತ್ತದೆ.

ಈ ಇಬ್ಬರು ದಾಸರಿಗೆ ಇದ್ದ ಸೃಜನಸಾಮರ್ಥ್ಯ, ಇವರು ರಚಿಸಿದ ಕೃತಿಗಳು, ಬರವಣಿಗೆಯ ಹಿನ್ನೆಲೆಗಳನ್ನು ನೋಡಿದಾಗ ಕನಕದಾಸರು ಹುಟ್ತುಕವಿಯೆಂಬುದು ನಿಶ್ಚಿತವಾಗುತ್ತದೆ. ಅವರ ಕಾವ್ಯಗಳನ್ನು ಒತ್ತಟ್ಟಿಗೆ ಸರಿಸಿ, ಕೇವಲ ಕೀರ್ತನೆಗಳನ್ನೇ ತನಿಯಾಗಿ ತೆಗೆದು ನೋಡಿದಾಗಲೂ, ಇಲ್ಲಿಯೂ ಉಳಿದ ಕೀರ್ತನಕಾರರದಕ್ಕಿಂತ, ಕನಕದಾಸರ ಹಾಡುಗಳಲ್ಲೇ ಕಾವ್ಯಾಂಶ ಅಧಿಕವೆಂಬುದು ಸಾಹಿತ್ಯ ವಿಮರ್ಶಕರು ಒಪ್ಪುವ ಮಾತು. ಹೀಗಿರುವಾಗ ಅವರು ಪುರಂದರದಾಸರ ಕೀರ್ತನೆಗಳನ್ನು ಅಲ್ಲಿ ಇಲ್ಲಿ ತಿದ್ದಿ ತಮ್ಮದನ್ನಾಗಿಸಿಕೊಳ್ಳುವುದೆಂಬುದು ಆಸಂಭಾವ್ಯ; ಮೇಲುವರ್ಗದವರ ಹಾಡುಗಳನ್ನು ಒಂದು ಸಿದ್ಧ ಮಾದರಿಯಾಗಿಟ್ಟುಕೊಂಡು ರಚಿಸುವಾಗ ಪ್ರಭಾವಗಾಢತರವಾಗಿ ಆಗಿರಬಹುದಲ್ಲವೆ ಎಂಬ ಪ್ರಶ್ನೆಯೂ ಕೇವಲ ತರ್ಕದ ಸ್ತರದಲ್ಲೇ ನಿಲ್ಲಬಹುದು.

ಈ ಇಬ್ಬರು ಯೋಗಪುರುಷರೂ ಹೀಗೆ ಒಬ್ಬರಿಂದೊಬ್ಬರು ಕೀರ್ತನೆಗಳನ್ನು ಕಳವು ಮಾಡುವ ಪ್ರವೃತ್ತಿಗೆ ದೂರವಾಗಿ, ಅತೀತರಾಗಿ ಉಳಿದರೆ ಇನ್ನು ಕದ್ದವರು ಯಾರು? ಇದು ಚಿಂತನೀಯವೆ. ನನಗೆ ತೋರುವ ಉತ್ತರವೆಂದರೆ, ಈ ಬಗೆಯಲ್ಲಿ ಕೀರ್ತನೆಗಳ ಅದಲು ಬದಲು ಕೆಲಸ ಮಾಡಿದವರು ಸಂಪ್ರತಿಕಾರರೇ ಇರಬೇಕೆಂಬುದು. ಅಂದರೆ ಹಸ್ತಪ್ರತಿಗಳನ್ನು ಸಿದ್ಧಪಡಿಸುವ, ಅಕ್ಷರವಿದ್ಯೆ ಬಲ್ಲ ಕೆಲವೇ ಕೆಲವು ಸ್ಥಾಪಿತ ಹಿತಾಸಕ್ತಿಗಳವರು, ತಾವು ತುಂಬ ಜಾಣರೆಂದು ಬುದ್ಧಿಯೋಡಿಸಿದ್ದರಿಂದ ಸಂಭವಿಸಿದ ಕೆಲಸವಿದು. ಹಾಗೆ ತಿದ್ದುವಾಗಲೂ ಒಂದು ಮಾನಸಿಕ ಪ್ರಕ್ರಿಯೆ ಸಂಭವಿಸಿದೆ: ಪುರಂದರದಾಸರ ಹಾಡುಗಳನ್ನು ತಿದ್ದುವ ಧಾರ್ಷ್ಟ್ಯ, ಮುಟ್ಟುವ ಧೈರ್ಯ ಎಲ್ಲಿಂದ ಬರಬೇಕು? ಆದರೆ ಕನಕದಾಸರ ಹಾಡುಗಳ ಅಂಕಿತವನ್ನು ತಿದ್ದಿ ಬದಲಾಯಿಸುವುದಕ್ಕೆ ಅವರಿಗೆ ಕೆಲವು ಅನುಕೂಲಗಳಿದ್ದವು : ಕನಕದಾಸರು ಹುಟ್ತಿ ಬೆಳೆದು ಬಾಳಿಬಂದ ವರ್ಗಸಮುದಾಯಕ್ಕೆ ಅಕ್ಷರದ ಬಾಗಿಲೂ, ಮೇಲು ಜಾತಿಯವರ ಮನೆ-ಮಂದಿರ-ಮಠಗಳ ಬಾಗಿಲೂ ಮುಚ್ಚಿದ್ದುವು. ಅವರ ವಿಚಾರದಲ್ಲೊಂದು ಅಸಡ್ಡೆ, ಅವರು ತಮ್ಮವರನ್ನೆಲ್ಲ ಮಿರಿ-ಮೀರಿಸಿ ಹೈಮಾಚಲೋನ್ನತವಾಗಿ ಬೆಳೆದರೆಂಬ ಅಸಹನೆ ಒಂದು ಹಿಡಮಂದಿಯಲ್ಲಿ ಹೆಡೆಯಾಡುತ್ತಿತ್ತು. ಈ ನಗ್ನಸತ್ಯವನ್ನೊಪ್ಪಿ ಕೊಳ್ಳಲು ಯಾವ ಹಿಂಜರಿಕೆಯೂ ಇರಬೇಕಾಗಿಲ್ಲ. ವಾಸ್ತವವಾಗಿ ಇಡೀ ದಾಸಸಾಹಿತ್ಯ ವೆಂದು ಯಾವ ಕೀರ್ತನಾದಿ ಸಾಹಿತ್ಯರಾಶಿಯನ್ನು ನಿರ್ದೇಶಿಸುತ್ತೇವೆಯೂ ಅದು. ಪುರಂದರ-ಕನಕರ ಹಾಡು/ಕೃತಿಗಳನ್ನು ಹೊರತುಪಡಿಸಿದರೆ ಉಳಿಯುವುದಾದರೂ ಏನು? ಬರೀ ಎಲುಬಿನ ಗೂಡು. ಅದರಲ್ಲೂ ಗಟ್ಟಿ ಕಾಳುಗಳಿರುವುದು ಹೆಚ್ಚಾಗಿ ಕನಕದಾಸರಲ್ಲಿಯೇ. ಹೀಗಾಗಿ ಅವರ ಒಂದೊಂದೇ ಹಾಡನ್ನು ಲಪಟಾಯಿಸಿ, ಅವರ ಹೊಳಪನ್ನು ತಗ್ಗಿಸುವ, ಅತ್ತ ಅವರ ಕ್ರುತಿರಾಶಿಯಿಂದ ಕದ್ದ ಕಳವಿನ ಮಾಲನ್ನು ಸೇರಿಸಿ ಇನ್ನೊಂದು ಕಡೆ ಬೆಳಕು ಹಾಯಿಸುವ ವ್ಯವಸ್ಥಿತ ಸನ್ನಾಹದಲ್ಲಿ, ಹುನ್ನಾರದಲ್ಲಿ ಒಬ್ಬರಾದರೂ ನಿರತರಾಗಿರದ ಹೊರತು ಈಗ ನಾವು ಕಾಣುವ ವ್ಯತ್ಯಾಸಗಳು ಘಟಿಸುತಿರಲಿಲ್ಲ.

ಶೈಲಿಯ ದೃಷ್ಟಿಯಿಂದಲೂ, ಕಾರ್ಯನಿರ್ವಹಣೆಯ ಆಧಾರದಿಂದಲೂ, ಪ್ರಸ್ತಾಪಿತ ವಸ್ತು – ವಿಷಯದ ಬಲದಿಂದಲೂ ಇದುವರೆಗೆ ಈ ಸಂಪ್ರಬಂಧದಲ್ಲಿ ಉದಾಹರಿಸಿ ಚರ್ಚಿಸಿದ ಹಾಡುಗಳಷ್ಟೂ ಕನಕದಾಸರದೇ ಎಂಬುದು ನನ್ನ ಖಚಿತ ಅಭಿಪ್ರಾಯವಾಗಿದೆ. ನನ್ನ ಗ್ರಹಿಕೆ ತಪ್ಪೆಂದು ವಿದ್ವಾಂಸರು ಸಾಧಾರವಾಗಿ ತೋರಿಸಿ ಸ್ಥಾಪಿಸಿದಲ್ಲಿ ಅವರ ಅಭಿಪ್ರಾಯಕ್ಕೆ ಗೌರವಾದರ ತೋರಿಸಲು ತಯಾರಿದ್ದೇನೆ.