೧. ಮಂಡ್ಯಜಿಲ್ಲೆ ನಾಗಮಂಗಲ ತಾಲ್ಲೂಕು ಕಸಲಗೆರೆಯಲ್ಲಿ ದೊರೆತಿರುವ ಆಯ್ದು ಶಾಸನಗಳಲ್ಲಿ ಎರಡು ಜೈನ ಶಾಸನಗಳಿವೆ:

ಅ. ಎ.ಕ ೬ (ಪ) ನಾಮಂ. ೧೬೯ (೪ ನಾಮಂ ೯೪) ೧೧೪೨. ಕಸಲಗೆರೆ, ಪು. ೧೬೭ – ೬೯

ಆ. ಅದೇ, ನಾಮಂ. ೧೭೦ (೪ ನಾಮಂ ೯೫) ೧೨ ಶ.ಪು. ೧೭೦

೧.೧. ಇವೆರಡೂ ಶಾಸನಗಳು ಹೊಯ್ಸಳರ ಕಾಲಕ್ಕೆ ಸೇರಿವೆ. ಹೊಯ್ಸಳ ವಿಷ್ಣುವರ್ಧನನು ಆಳುತ್ತಿರುವಾಗಿನ ರಚನೆ ನಾಗಮಂಗಲ ೧೬೯ ನೆಯ ಶಾಸನ. ಕಲುಕಣಿ ನಾಡಿಗೆ ಸೇರಿದ್ದ ಹೆಬ್ಬಿದಿರೂರ್ವಾಡಿ ಎಂಬ ಊರಲ್ಲಿ ಒಂದು ಬಸದಿಯನ್ನು ಕಟ್ಟಿಸಲಾಯಿತು. ಅದರಲ್ಲಿ ಪಾರ್ಶ್ವದೇವರ ವಿಗ್ರಹವನ್ನು ಪ್ರತಿಷ್ಠಾಪಿಸಲಾಯಿತು. ಸಾಮಂತ ಸೋಮನು ಕಲುಕಣಿನಾಡನ್ನು ಆಳುತ್ತಿದ್ದನು; ಈತನು ಪ್ರಸಿದ್ಧ ಭಾನುಕೀರ್ತಿ ಸಿದ್ಧಾಂತದೇವನ ಶ್ರಾವಕ ಶಿಷ್ಯ. ಈ ಸಾಮಂತ ಸೋಮನು ಹೆಬ್ಬಿದಿರೂರ್ವಾಡಿ ಬಸದಿಗೆ ಅರುಹಹನಳ್ಳಿಯೊಂದನ್ನು ದತ್ತಿಯಾಗಿ ಒಪ್ಪಿಸಿದನು. ಈ ದತ್ತಿಯನ್ನು ಸ್ವೀಕರಿಸಿದ್ದು ಮೂಲಸಂಗ ಸೂರಸ್ತಗಣದ ಬ್ರಹ್ಮದೇವನು.

೨. ಈ ದಾನಾಶಾಸನದಲ್ಲಿ ಸಾಮಂತ ಸೋಮನ ಮನೆತನದ ನಾಲ್ಕು ತಲೆಮಾರಿನ ಒಂದು ವಂಶವೃಕ್ಷ ಚಿತ್ರಣವಿದೆ. ಸಾಮಂತ ಸೋಮನ ಮುತ್ತಾತನಾದ ಅಯ್ಕಣನು ಸಾಹಸಿ, ಒಮ್ಮೆ ವೀರ ಗಂಗ ಪೆರ್ಮಾಡಿಯು ಚೋಳರ ಮೇಲೆ ದಂಡೆತ್ತಿ ಹೊರಟಿದ್ದಾಗ ಹೃದುವನಕೆಱೆಯಲ್ಲಿ ಬೀಡು ಬಿಟ್ಟಿದ್ದನು. ಆಗ ಅಲ್ಲಿಗೆ ಕಾಡಾನೆ ಬೀಡಿನ ಮೇಲೆ ನುಗ್ಗಿದ್ದನ್ನು ನೋಡಿ ಆಯ್ಕಣನು ಗುರಿಯಿಟ್ಟ ಬಾಣಕ್ಕೆ ಆನೆ ಅಸು ನೀಗಿತು; ಅಂದಿನಿಂದ ಅಯ್ಕಣನಿಗೆ ಕರಿಯಯ್ಕಣನೆಂದು ಹೆಸರಾಯಿತು. ಅವನ ಮಗ ನಾಗ, ನಾಗನ ಮಗ ಸುಗ್ಗಗವುಣ್ಣ ಮತ್ತು ಈತನ ಮಗನೇ ಸಾವಂತಸೋಮ.

೨.೧. ಅಯ್ಕಣನು ಆನೆಯಿಂದ ಕಾಪಾಡಿದ ವೀರರಂಗ ಪೆರ್ಮಾಡಿಯು ಯಾರೆಂಬುದು ಸರಿಯಾಗಿ ಗುರುತಿಸಲಾಗಿಲ್ಲ. ಚೋಳರ ಮೇಲೆ ದಂಡೆತ್ತಿ ಬಂದವನೆಂಬ ಕಾರಣದಿಂದ ಈತ ಚಾಳುಕ್ಯರ ವಿಕ್ರಮಾದಿತ್ಯ ೬ ಗಂಗ ಪೆರ್ಮಾಡಿಯಾಗಿರಲೂ ಬಹುದು. ಈ ಘಟನೆ ಸುಮಾರು ೧೦೭೫ – ೭೬ ರಲ್ಲಿ ನಡೆದಿರಬೇಕು. ಚಾಳುಕ್ಯ ವಿಕ್ರಮಾದಿತ್ಯ ಪೆರ್ಮಾಡಿಯನ್ನು ಬಿಟ್ಟರೆ ಇದೇ ಅವಧಿಯಲ್ಲಿ ಇದ್ದ ಇನ್ನೊಬ್ಬ ಪೆರ್ಮಾಡಿ ದೇವನೆಂದರೆ ಮಂಡಲಿ ಸಾಸಿವೆರವನ್ನು ಆಳುತ್ತಿದ್ದ ನನ್ನಿಯಗಂಗ ಪೆರ್ಮಾಡಿದೇವ [ಎ.ಕ. ೭ – ೧ (೧೯೦೨) ಶಿವಮೊ. ೫೮. ೧೦೭೧. ನಿದಿಗೆ].

೩. ಜಿನಪಾದಕಮಳ ಭೃಂಗನಾದ ಸಾವನ್ತ ಸೋಮನ ಹೆಂಡತಿ ಮಾಚಲೆಯ (ಮಾರವ್ವೆ) ಅತ್ತಿಮಬ್ಬೆಗೆ ಸದೃಶಳಾಗಿದ್ದಳೆಂಬ ಹೇಳಿಕೆ ಗಮನಾರ್ಹವಾಗಿದೆ.

೩.೧. ಕಲುಕಣಿನಾಡನಾಳ್ವ ಸಾಮಂತ ಸೋವೆಯ ನಾಯಕನು ಭಾನುಕೀರ್ತಿ ಸಿದ್ಧಾನ್ತದೇವನ ಗುಡ್ಡನಾಗಿದ್ದನು.

೩.೧.೧. ಮೂಲಸಂಘ ಕಾಣೂರುಗಣ ತಿಂತ್ರಿಣೀಗಚ್ಛದ ಮಹಾಮಂಡಳಾಚಾರ್ಯ ಭಾನುಕೀರ್ತಿ ಸಿದ್ಧಾಂತದೇವನು ದೀರ್ಗಾಯುವಾಗಿ ಸುಮಾರು ೮೫ – ೯೦ ವರ್ಷ ಜೀವಿಸಿದ್ದನು. ಈತನನ್ನು ಕುರಿತು, ಸುಮಾರು ಹದಿನೈದು ಬೇರೆ ಬೇರೆ ಶಾಸನಗಳು, ಸಾಕಷ್ಟು ಪರಿಚಯಿಸಿವೆ. ಅವುಗಳಲ್ಲಿ ಮುಖ್ಯವಾದ ಕೆಲವು ಶಾಸನಗಳಿವು.

ಎ.ಕ. ೮ ಸೊರಬ. ೨೩೩. ೧೧೩೯. ವುದ್ರಿ (ಉದ್ದರೆ) ಪು. ೯೭ – ೯೮
ಅದೇ, ಸಾಗರ. ೧೫೯. ೧೧೫೯. ಹೆರಕೆರೆ. ಪು. ೩೩೧ – ೩೩

೪. ಕಸಲಗೆರೆಯ ಈ ಶಾಸನದಲ್ಲಿ ಇನ್ನೊಂದು ಗಮನಾರ್ಹ ಸಂಗತಿ ಇದು:

‘ಹೆಬ್ಬಿದಿರೂರ್ವಾಡಿಯಲ್ಲಿ ಉತ್ತುಂಗ ಚೈತ್ಯಾಲಯವನ್ನು ಮಾಡಿದ್ದಾದ ಮೇಲೆ ಅದನ್ನು ಅಲ್ಲಿನ ಸೂರಸ್ತಗಣದ ಗುರುಗಳಾದ ಬ್ರಹ್ಮದೇವನ ಕಾಲು ತೊಳೆದು ಧಾರಾಪೂರ್ವಕಮಾಡಿ ಕೊಟ್ಟನು’ [- ಸಾಲು : ೩೮ – ೪೧].

೪.೧. ಸೂರಸ್ತಗಣವು ಯಾಪನೀಯಸಂಘಕ್ಕೆ ಸೇರಿದ ಒಂದು ಪ್ರಮುಖವಾದ, ಪ್ರಬಲವಾದ ಗಣವೆಂದು ಈ ಕೆಲವು ಶಾಸನಗಳಿಂದ ತಿಳಿದು ಬಂದಿದೆ;

ಸೌ.ಇ.ಇ. ೧೧ – ೧. ೧೧೧.೧೦೭೧. ಸೊರಟೂರು (ಧಾಜಿ. / ಗದಗ ತಾ.) ಪು. ೧೧೨
ಸೌ.ಇ.ಇ.ಇ. ೧೮. ೧೫೧.೧೧೪೮. ನೀರಲ್ಲಿ (ಧಾಜಿ. / ಹಾವೇರಿತಾ.) ಪು. ೧೯೯ – ೨೦೨
ಎ.ಕ ೮ (ಪ) ಹಾ. ೧೬೫. ೧೧ ಶ.ಶಾಂತಿಗ್ರಾಮ. ಪಿ. ೩೯೯
ಅದೇ, ಅಗೂ ೧೩೬ (೫ ಅಗೂ ೯೬). ೧೦೯೫. ಪು. ೧೮೯

೪.೧.೧. ಕಲುಕಣಿನಾಡಿನ ಹೆಬ್ಬಿದರೂರ್ವಾಡಿಯಲ್ಲಿ (ಕಸಲಗೆರೆ) ಯಾಪನೀಯ ಸಂಘದ ಕಾಣೂರ್ಗಣದ ಆಚಾರ್ಯರೂ (ಅದೇ ಯಾಪನೀಯ ಸಂಘದ) ಸೂರಸ್ತಗಣದ ಆಚಾರ್ಯರೂ ಇದ್ದರು. ಇಲ್ಲಿನ ಈ ಉತ್ತುಂಗ ಚೈತ್ಯಾಲಯವು ಯಾಪನೀಯ ಸಂಘಕ್ಕೆ ಸೇರಿತ್ತು. ಇಲ್ಲಿನ ಸಾವಂತರಾದ ಅಯ್ಕಣ, ನಾಗ, ಸುಗ್ಗಗವುಣ್ಡ, ಸೋಮ (ಹೆಂ. ಮಾರವ್ವೆ)- ಇವರು ಯಾಪನೀಯ ಸಂಘದ ಶಿಷ್ಯರಾಗಿದ್ದರು.

೫. ಯಾಪನೀಯ ಸಂಘವು ಗುಲ್ಬರ್ಗ, ಬಿಜಾಪುರ, ರಾಯಚೂರು, ಬಳ್ಳಾರಿ, ಧಾರವಾಡ, ಬೆಳಗಾವಿ – ಈಜೆಲ್ಲೆಗಳಲ್ಲಿ ಪ್ರನಲವಾಗಿತ್ತು, ಹಳೆಯ ಮೈಸೂರು ಭಾಗದಲ್ಲಿ ಅಷ್ಟಾಗಿ ಪ್ರಚಾರವಾಗಲಿಲ್ಲ. -ಎಂಬೊಂದು ಅಭಿಪ್ರಾಯವನ್ನು ಸಂಪೂರ್ಣ ಸತ್ಯವೆಂದು ಸ್ವೀಕರಿಸಲಾಗುವುದಿಲ್ಲ. ಹಾಸನ, ಶಿವಮೊಗ್ಗ, ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿಯೂ ಅಲ್ಲಲ್ಲಿ ಈ ಯಾಪನೀಯ ಸಂಘದ ಕುರುಹುಗಳಿವೆ; ಈ ಸಂಘದ ಗಣ ಗಚ್ಛಗಳ ಆಚಾರ್ಯರೂ, ಬಸದಿಗಳೂ ಶಾಸನೋಕ್ತವಾಗಿವೆ. ಪ್ರಸ್ತುತ ಈ ಕಸಲಗೆರೆ ಶಾಸನವೂ ಇದಕ್ಕೊಂದು ನಿದರ್ಶನವಾಗಿದೆ.