ಜೈನ ಮುನಿಗಳ ವಿವಿಧ ಗುಂಪುಗಳನ್ನು ಸಂಘ, ಅನ್ವಯ, ಗಣ, ಗಚ್ಛ, ಬಳಿ – ಎಂಬ ಜೈನ ಪಾರಿಭಾಷಿಕ ಶಬ್ದಗಳ ಸೇರ್ಪಡೆಯಿಂದ ನಿರ್ದೇಶಿಸುವ ಪರಿಪಾಟವಿದೆ: ದ್ರವಿಳ ಸಂಘ, ದೇವಸಂಘ, ನಂದಿ ಸಂಘ, ಪುನ್ನಾಟ ಸಂಘ, ಮೂಲ ಸಂಘ, ಸಿಂಹ ಸಂಘ; ಆರುಂಗಳಾನ್ವಯ ಕುಂದಕುಂದಾನ್ವಯ; ಕಾನೂರ್ಗಣ, ಬಲತ್ಕಾರಗಣ, ದೇಶೀ(ಯ) ಗಣ, ಸೇನಗಣ; ಪುಸ್ತಕಗಚ್ಛ, ಸರಸ್ವತೀ ಗಚ್ಛ; ಇಂಗುಳೇಶ್ವರ ಬ(ವ)ಳಿ – ಇತ್ಯಾದಿ. ಪುನ್ನಾಟ, ಇಂಗುಳೇಶ್ವರ ಮೊದಲಾದುವು ಸ್ಥಳವಾಚಕ ಶಬ್ದಗಳಾಗಿಯೂ, ಕುಂದಕುಂದ ಎಂಬುದು ವ್ಯಕ್ತಿ ವಾಚಕವಾಗಿಯೂ ಬಳಕೆಯಾಗಿವೆ. ಅಂದರೆ ಇವು ಆಯಾ ಸ್ಥಳ ಮೂಲವಾಗಿ ಮತ್ತು ವ್ಯಕ್ತಿಮೂಲವಾಗಿ ಪ್ರವರ್ತನ ಗೊಂಡಿವೆ; ಇಂತಹ ಇನ್ನೂ ಕೆಲವು ಪ್ರಯೋಗಗಳು ಶಾಸನಗಳಲ್ಲಿ ಸಿಗುತ್ತವೆ.

ಮೇಲೆ ಹೆಸರಿಸುವ ಗಣಗಳಲ್ಲಿ ಒಂದಾದ ಕಾನೂರ್ಗಣವನ್ನು ಕುರಿತು ಉಪಲಬ್ಧ ಮಾಹಿತಿಗಳನ್ನು ಸಂಕಲಿಸಿ ಪರಾಮರ್ಶಿಸುವುದು ಈ ಸಂಲೇಖನದ ಮುಖ್ಯ ಆಶಯ. ಶಾಸನ ಮತ್ತು ಕಾವ್ಯಗಳಲ್ಲಿ ಕಾನೂರು, ಕಾಣೂರು, ಕಣ್ಡೂರು, ಕಂಡೂರು, ಕಾಡೂರು, ಕಾಣಾರ್, ಕ್ರಾಣೂರ್, ಕ್ರಾನೂರ್ – ಮೊದಲಾದ ಸಂವಾದಿ ರೂಪಗಳು ಸಿಗುತ್ತವೆ. ಇವೆಲ್ಲ ಒಂದೇ ಮೂಲಕ್ಕೆ ಸೇರಿದ ಸಮಾನಾರ್ಥಕ ರೂಪಗಳು. ಇದರ ಸಂಸ್ಕೃತ ರೂಪ ಕಾಲೋಗ್ರಗಣ. ಇದು ಯಾಪನೀಯ ಶಾಖೆಗೆ ಸೇರಿದ ಒಂದು ಪ್ರಬಲವಾದ ಗಣವಾಗಿತ್ತೆಂದು ಮುಂದೆ ನಿರೂಪಿಸುವ ಆಧಾರಗಳಿಂದ ತಿಳಿದು ಬರುತ್ತದೆ. ಸಂವಾದಿ ರೂಪಗಳಲ್ಲಿ ಕಾನೂರ್ಗಣ ಎಂಬುದು. ಹೆಚ್ಚು ಪ್ರಸಾರ ಪಡೆದಂತೆ ತೋರುತ್ತದೆ; ಪೊನ್ನ ಮೊದಲಾದ ಕವಿಗಳು ಪುರಸ್ಕರಿಸಿರುವ ಶಬ್ದರೂಪವೂ ಇದೇನೆ.

ಮೊದಲಿಗೇ ಹೇಳಬೇಕಾದ ಮಹತ್ವದ ಮಾತೆಂದರೆ, ಶ್ರವಣಬೆಳುಗೊಳದ ನೂರಾರು ಶಾಸನಗಳಲ್ಲಿ ಎಲ್ಲಿಯೂ ಯಾಪನೀಯ ಹಾಗೂ ಕಾನೂರುಗಣದ ಉಲ್ಲೇಖವಿಲ್ಲ ಎಂಬುದು. ಇದು ವಿಶೇಷವಾಗಿ ಗಮನಿಸಬೇಕಾದ ವಿಷಯ. ಇದಕ್ಕೆ ಇರಬಹುದಾದ ಐತಿಹಾಸಿಕ ಕಾರಣಗಳನ್ನು ಮುಂದೆ ಸೂಚಿಸಲಾಗುವುದು. ಯಾಪನೀಯ ಶಾಖೆಯ ವಿಚಾರವಾಗಿ ಬರೆದ ತಮ್ಮ ವಿದ್ವತ್ ಪೂರ್ಣವಾದ ಸಂಶೋಧನಾತ್ಮಕ ಲೇಖನದಲ್ಲಿ ವಿದ್ವಾಂಸರಾದ ಡಾ. ಆ. ನೇ. ಉಪಾಧ್ಯೆ ಅವರು, ಪ್ರಾಸಂಗಿಕವಾಗಿಯೇ ಆದರೂ, ಬಹು ಸಮರ್ಥ ರೀತಿಯಲ್ಲಿ ಕಾನೂರು ಗಣದ ಪ್ರಸ್ತಾಪ ಮಾಡಿದ್ದಾರೆ, ಮುಂದಿನ ಅಧ್ಯಯನಕ್ಕೆ ಅಗತ್ಯವಾದ ಪೀಠಿಕೆಯನ್ನು ಹಾಕಿದ್ದಾರೆ. ಅವರ ಸೂಚನೆಗಳನ್ನು ಇನ್ನಷ್ಟುಪೂರಕ ಸಾಮಗ್ರಿಯಿಂದ ಮುಂದುವರಿಸಿ, ಖಚಿತವಾದ ನೆಲೆಬೆಲೆಗಳಿಂದ ಕಾನೂರು ಗಣದ ಸ್ವರೂಪ ಮತ್ತು ಇತಿಹಾಸವನ್ನು ತೋರಿಸುವುದುಈ ಬರವಣಿಗೆಯ ಉದ್ದೇಶ.

ನನಗೆ ತಿಳಿದ ಮಟ್ಟಿಗೆ, ಇಡೀ ಕನ್ನಡ ಸಾಹಿತ್ಯದಲ್ಲಿ, ಕಾನೂರುಗಣವನ್ನೂ ಹೆಸರಿಸಿರುವ ಮೊತ್ತಮೊದಲಿಗನೆಂದರೆ ಪೊನ್ನಕವಿ (ಕ್ರಿ.ಶ. ೯೬೫), ಆತನ ಶಾಂತಿಪುರಾಣ ದಲ್ಲಿ (೧-೧೭) ಈ ಪದ್ಯವಿದೆ:

            ಕಾನೂರ್ಗಣ ಮುನಿಪತಿ ವಿ
ದ್ಯಾನಿಧಿ ಗುಣನಿಧಿ ದಯೈಕ ನಿಧಿ ಶುದ್ಧಯಶ
ಶ್ರೀನಿಧಿ ತಪೋಂಬುನಿಧಿ ಭುವ
ನಾನತಪದ ಕನಕಮಳನಮಳಿನ ಚರಿತಂ
||

ಪೊನ್ನಕವಿ ಕೊಡುವ ಗುರುಪರಂಪರೆಯಲ್ಲಿ ಅರ್ಹದ್ಬಲಿ, ಅರ್ಹಣಂದಿ, ವೀರಣಂದಿ, ಬೆಟ್ಟದ ದಾಮನಂದಿ, ಚಂದಿನಂದಿ ಮತ್ತು ಜಿನಚಂದ್ರ – ಈ ಮುನೀಂದ್ರರು ಕಾನೂರುಗಣದ ಪರಂಪರೆಯವರೆಂದು ತಿಳಿದುಬರುತ್ತದೆ. ಕವಿ ಪೊನ್ನನೂ ಇದೇ ಕಾನೂರುಗಣಕ್ಕೆ ಸೇರಿದ ಕುರುಳುಗಳಸವಣನೆಂದು ಶಾಸನಾಧಾರಗಳಿಂದ ಸ್ಪಷ್ಟವಾಗಿ ತಿಳಿದು ಬರುತ್ತದೆ. ಹಾಸನಜಿಲ್ಲೆ ಬೇಲೂರು ತಾಲ್ಲೂಕು ಹಳೆಯಬೀಡಿನ ಒಂದು ಶಾಸನದಲ್ಲಿ ಪೊನ್ನ ಕವಿಯ ಹೆಸರನ್ನು ‘ಪುಂನಮಯ್ಯ’ ಎಂದು ಹೇಳಿ, ಈ ಪುಂನಮಯ್ಯನ ಗುರು ಇಂದ್ರನಂದಿ ಆಚಾರ್ಯರೆಂದೂ ಅವರು ಕ್ರಾಣೂರ್ಗಣಕ್ಕೆ ಸೇರಿದವರೆಂದೂ ಹೇಳಿದೆ. ಪೊನ್ನನೂ ಶಾಂತಿಪುರಾಣದ ಕಡೆಯ ಭಾಗದಲ್ಲಿ (೧೨-೮೦) ಇಂದ್ರನಂದಿಯನ್ನು ನೆನೆಸಿದ್ದಾನೆ. ಶ್ರೀಮೂಲಸಂಘ ಕೊಂಡಕುಂದಾನ್ವಯ ಕ್ರಾಣೂರ್ಗಣ ತಿಂತ್ರಿಣೀಗಚ್ಛಕ್ಕೆ ಸೇರಿದ ತ್ರೈವಿದ್ಯ ಹೇಮಚಂದ್ರ ಆಚಾರ್ಯರೂ, ಅವರ ಶ್ರಾವಕ ಶಿಷ್ಯರಾದ ಅಡಕೆಯ ತಿಪ್ಪಣನೂ, ಅಡಕೆಯ ಪಾಯ್ಯನೂ ಸಲ್ಲೇಖನವ್ರತ ಪಡೆದು ಸಮಾಧಿ ಮರಣದಿಂದ ಮುಡಿಪಿದ್ದನ್ನು ಈ ಶಾಸನದ ತಿಳಿಸಿದೆ

[ಎ.ಕ ೯ (ರ) ಬೇ ೩೮೩ ಮತ್ತು ೧೨೬೬. ಹಳೇ ಬೀಡು]. ಇದೇ ಶಾಸನದಲ್ಲಿ ಕ್ರಾಣೂರ್ಗಣಕ್ಕೆ ಸೇರಿದ ಜೈನಾಚಾರ್ಯರ ಒಂದು ದೊಡ್ದ ಗುರುಶಿಷ್ಯ ಪರಂಪರೆಯ ಪಟ್ಟಿಯೇ ಸಿಗುತ್ತದೆ:

(ಕ್ರಾಣೂರ್ಗಣ)

ಜಟಾಸಿಂಹನಂದ್ಯಾಚಾರ್ಯ
|
ಇಂದ್ರ ನಂದ್ಯಾಚಾರ್ಯ (ಪುಂನಮಯ್ಯನ ಗುರುಗಳು)
|
ಗುನನಂದ್ಯಾಚಾರ್ಯ (ಗುಣರುಚಿ ಕ್ರಿತ)
|

ಜಿನಚಂದ್ರದೇವ
|
ಮೇಘಚಂದ್ರ ಸಿದ್ಧಾಂತ ದೇವ
|
ಕನಕ ಚಂದ್ರ ಸಿದ್ಧಾಂತದೇವ
|
ಮಾಧವ ಚಂದ್ರ ಸಿದ್ಧಾಂತದೇವ |
|
ಕನಕನಂದಿ ತ್ರೈವಿದ್ಯದೇವ
|
ಸಾಗರಚಂದ್ರ ಸಿದ್ಧಾಂತದೇವ
|
ಮಾಧವ ಚಂದ್ರದೇವ ||. ಸು. ೧೦೯೦
|
ಬಾಳಚಂದ್ರಸಿದ್ಧಾಂತದೇವ ಸು. ೧೧೩೦
|
ಬಾಳಚಂದ್ರ ತ್ರೈವಿದ್ಯದೇವ. ಸು. ೧೧೫೦
|
ನೇಮಿಚಂದ್ರಸಿದ್ಧಾಂತದೇವ. ಸು. ೧೧೭೫
|
ಜಾವಳಿಗೆಯ ಮುನಿಚಂದ್ರಸಿದ್ಧಾಂತದೇವ. ಸು. ೧೨೦೦
|
ಸಕಳಚಂದ್ರ ಭಟ್ಟಾರಕ ಸು. ೧೨೧೦
|
ಮಾಧವಚಂದ್ರತ್ರೈವಿದ್ಯ |||. ಸು. ೧೨೨೦
|
ಗಂಡವಿಮುಕ್ತ ಮಾಘನಂದಿ ಭಟ್ಟಾರಕ ಸು. ೧೨೩೦
|
ಹೇಮ ಚಂದ್ರ ತ್ರೈವಿದ್ಯ. ೧೨೬೦

ಈ ಶಾಸನದಲ್ಲಿ ಜಾವಳಿಗೆ (ಯ ಮುನಿಚಂದ್ರ ದೇವ) ಎಂಬುದು ವಿಶಿಷ್ಟ ಪ್ರಯೋಗ.

ಜಾವಳಿಗೆ, ಜಾಪುಲಿ, ಆಪುಲಿ – ಎಂಬುದು ‘ಯಾಪನೀಯ’ ಎಂಬ ಶಬ್ದರೂಪದ ಜ್ಞಾತಿ ರೂಪಗಳು (Cognates). ಸುಮಾರು ೩೫೦ ವರ್ಷಗಳ ದೀರ್ಘ ಗುರುಶಿಷ್ಯ ಪರಂಪರೆಯನ್ನು ದಾಖಲಿಸಿರುವ ಈ ಶಾಸನದಲ್ಲಿ ಯಾಪನೀಯ ಸಂಘದ ಸೂಚನೆಯೂ ಸೇರಿಕೊಂಡಿದೆ. ಕನ್ನಡದ ರತ್ನತ್ರಯರೂ ಜಿನಸಮಯದೀಪಕರೂ ಆದ ಪಂಪ ಪೊನ್ನ ರನ್ನರಲ್ಲಿ ಪೊನ್ನ – ರನ್ನ ಇಬ್ಬರೂ ಯಾಪನೀಯ ಸಂಘಕ್ಕೆ ಸೇರಿದವರು; ಅತ್ತಿಮಬ್ಬೆ ಕೂಡ ಇದೇ ಯಾಪನೀಯ ಸಂಘಕ್ಕೆ ಸೇರಿದ್ದು ೧೫೦೧ ಬಸದಿಗಳನ್ನು ಮಾಡಿಸಿದಳು. ಹೀಗೆ ಕನ್ನಡ ಸಾಹಿತ್ಯಕ್ಕೂ, ಕರ್ನಾಟಕದ ವಾಸ್ತು – ಶಿಲ್ಪ ಕ್ಷೇತ್ರಕ್ಕೂ ಯಾಪನೀಯರ ಕೊಡುಗೆ ಬಹಳದೊಡ್ದದು.

ಯಾಪನೀಯಸಂಘಕ್ಕೆ ಸೇರಿದ ಕಾಣೂರುಗಣದ ವಿಚಾರದಲ್ಲಿ ಕನ್ನಡಕವಿ ಗಳಿಗಿದ್ದ ಗೌರವಾದರಗಳು ಗಮನಿಕೆಗೆ ಅರ್ಹವಾಗಿದೆ. ಪೊನ್ನನಿಂದ ಪ್ರಾರಂಭವಾದ ಈ ಸ್ಮರಣೆ ಸುಮಾರು ೩೫೦ ವರ್ಷಗಳವರೆಗೆ ಅಕುಂಟಿತವಾಗಿ ಮುನ್ನಡೆದಿದೆ ಎಂಬುದು ತೌಲನಿಕ ಅಧ್ಯಯನದಿಂದಲೂ ಶಾಸನಾಧಾರಗಳಿಂದಲೂ ದೃಢಪಡುತ್ತದೆ. ಅಲ್ಲದೆ ಕಾಣೂರುಗಣದ ಆಚಾರ್ಯರ ವಿವರಗಳನ್ನು ಕಾಪಿಟ್ಟವರು ಕನ್ನಡ ಕವಿಗಳು ಮತ್ತು ಕನ್ನಡ ಶಾಸನಗಳು. ಈ ಎರಡು ಅಧಿಕೃತ ಮತ್ತು ವಿಶ್ವಸನೀಯ ಮೂಲಗಳಿಂದ ಸಿಗುವ ಸಾಮಗ್ರಿಯನ್ನು ಅಚಲಂಬಿಸಿಯೇ ಇದರದೊಂದು ಚಿತ್ರ ಮತ್ತು ಪರಂಪರೆಯನ್ನು ರೂಪಿಸಿಕೊಳ್ಳಬೇಕಾಗಿದೆ. ಇದುವರೆಗೆ ಸಂಚಯವಾಗಿರುವ ಆಚಾರ್ಯರ ಹೆಸರುಗಳನ್ನು ಕಾಲಾನುಕ್ರಮಣಿಕೆಯಿಂದ ಮತ್ತು ಭೌಗೋಳಿಕ – ಪ್ರಾದೇಶಿಕ ರೀತಿಯಿಂದ ವಿಂಗಡಿಸುವುದು ಸಾಧ್ಯವಾಗಿದೆ.

ಪೊನ್ನಕವಿಯ ತರುವಾಯ ಅವನ ಕವಿಶಿಷ್ಯರನ್ನನೂ ತನ್ನ ಅಜಿತಪುರಾಣ ಕಾವ್ಯದಲ್ಲಿ –

            ಶ್ರೀನೇಮಿಚಂದ್ರ ಮುನಿಗಳ್
ಕಾನೂರ್ಗಣ ತಿಲಕರವರ ಶಿಷ್ಯರ್ ಸದ್ವಿ
ದ್ಯಾನಿಳಯನಯ್ಯಣಯ್ಯಂ
ತಾನೋದಿಸೆ ಕುಶಲನಾದನಣ್ಣಿಗದೇವಂ
|| (೧೨-೨೧)

ಎಂಬುದಾಗಿ ಸ್ತುತಿಸಿದ್ದಾನಲ್ಲದೆ, ಅತ್ತಿಮಬ್ಬೆಯೂ ಮತ್ತು ಆಕೆಯ ಮಗನಾದ ಅಣ್ಣಿಗದೇವನೂ ಈ ಗುರುಶಿಷ್ಯ ಪರಂಪರೆಗೆ ನಡೆದುಕೊಳ್ಳುತ್ತಿದ್ದ ಸಂಗತಿಯನ್ನು ದಾಖಲಿಸಿದ್ದಾನೆ. ಇಲ್ಲಿ ಉಲ್ಲೇಖಿಸಲಾದ ನೇಮಿಚಂದ್ರಮುನಿ ಮತ್ತು ಸೂರಸ್ತಗಣದ ಕೌರೂರುಗಚ್ಛದ ಅರ್ಹನಂದಿ ಆಚಾರ್ಯರೂ ಅತ್ತಿಮಬ್ಬೆಯ ಮನೆತನದ ಗುರು ಪರಂಪರೆಯಲ್ಲಿ ಹೇಗೆ ಮುಖ್ಯರೆಂಬುದನ್ನು ಅನ್ಯತ್ರ ಸೂಚಿಸಿದ್ದೇನೆ [ನಾಗರಾಜಯ್ಯ, ಹಂಪ: ಕವಿವರ ಕಾಮಧೇನು : ೧೯೯೬ : ೫೦-೫೧].

ಜನ್ನಕವಿ ತನ್ನ ಅನಂತನಾಥ ಪುರಾಣದಲ್ಲಿ ಇಬ್ಬರು ಪ್ರಾಚೀನರಾದ ಕಾನೂರುಗಣದ ಆಚಾರ್ಯರನ್ನು ಒಂದು ತ್ರಿಪದಿ ಪದ್ಯದಲ್ಲಿ ನುತಿಸಿದ್ದಾನೆ.

            ವಂದ್ಯರ್ ಜಟಾಸಿಂಹಣಂದ್ಯಾಚಾರ್ಯ್ಯಾದ್ರೀಂದ್ರ
ನಂದ್ಯಾಚಾರ್ಯಾದಿ ಮುನಿಪರಾ ಕಾಣೂರ್ಗ
ಣಂದ್ಮರ್ ಪೃಥ್ವಿಯೊಳಗೆಲ್ಲಂ
|| (೧-೧೭)

ಮತ್ತು ಈ ಗಣದ ಇನ್ನೊಬ್ಬ ಆಚಾರ್ಯರನ್ನು ಕೆಳಕಂಡ ಕಂದಪದ್ಯದಲ್ಲಿ ಹೆಸರಿಸಿದ್ದಾನೆ:

            ಶ್ರೀಮತ್ಕಾನೂರ್ಗಣ ಚಿಂ
ತಾಮಣಿಗಳ್ ರಾಮಚಂದ್ರದೇವ ಮುನೀಂದ್ರ
ರ್ತಾಮೆಗಣ ಗುರುಗಳೆನಿಪ ಮ
ಹಾಮಹಿಮೆಗೆ ಜನ್ನನಂತು ನೋಂತವನಾವಂ
|| (೧-೨೫)

ಮೇಲ್ಕಂಡ ಎರಡು ಪದ್ಯಗಳಿಂದ ಜಟಾಸಿಂಹನಂದಿ, ಇಂದ್ರನಂದಿ ಮತ್ತು ರಾಮಚಂದ್ರ ಮುನಿ – ಈ ಮೂವರು ಕಾನೂರುಗಣದ ಮಹಾಮಹಿಮೆಯ ಮನ್ನಣೆ ಪಡೆದವರೆಂದು ತಿಳಿದು ಬರುತ್ತದೆ. ಜಟಾಸಿಂಹನಂದಿಯು ವರಾಂಗ ಚರಿತೆ ಎಂಬ ಸಂಸ್ಕೃತ ಕಾವ್ಯವನ್ನು ರಚಿಸಿದ್ದು ಸುಮಾರು ಏಳನೆಯ ಶತಮಾನದ ಕಡೆಯಲ್ಲಿ ಎಂಬ ಅಭಿಪ್ರಾಯವಿದೆ [ಉಪಾಧ್ಯೆ ಪೇಪರ್ಸ್ : ೧೯೮೩ : ೧೬೬]; ಇಂದ್ರ ನಂದಿ ಆಚಾರ್ಯನ ಕಾಲ ಹತ್ತನೆಯ ಶತಮಾನದ ಆದಿಭಾಗ. ಹೀಗಾಗಿ ಕಾನೂರುಗಣವು ಏಳನೆಯ ಶತಮಾನದ ವೇಳೆಗೆ ಪ್ರಸಿದ್ಧಿಪಡೆದಿತ್ತೆಂದು ನಿರ್ಧರಿಸಬಹುದಾಗಿದೆ. ಮಹಾಬಲಕವಿ (೧೨೫೪) ನೇಮಿನಾಥ ಪುರಾಣದಲ್ಲಿ ಜಟಾಸಿಂಹನಂದಿ ಮುನಿಯನ್ನು ಗೃದ್ಧಪಿಂಛವನ್ನು ಹಿಡಿದ ಆಚಾರ್ಯರಂದು ವರ್ಣಿಸಿರುವುದು ಪರಿಭಾವಿಸಬಹುದಾಗಿದೆ:

            ಧೈರ್ಯಪರ ಗೃದ್ಧಪಿಂಛಾ
ಚಾರ್ಯ ಚಟಾಸಿಂಹನಂದಿ ಜಗತೀಖ್ಯಾತಾ
ಚಾರ್ಯ ಪ್ರಭಾವಮತ್ಯಾ
ಶ್ಚರ್ಯಮದಂ ಪೊಗಱ್ವಡಬ್ಜಂಗಮಸಾಧ್ಯಂ
|| (೧-೧೪)

ದಿಗಂಬರ ಪಂಥದ ಗಣಭೇದಗಳಲ್ಲಿ ದೇಸಿಗಗಣವು ಹೆಚ್ಚು ಪ್ರಸಾರ ವ್ಯಾಪ್ತಿಯನ್ನು ಪಡೆದಿರುವಂತೆಯೇ ಯಾಪನೀಯ ಪಂಥದಲ್ಲಿಯೂ ಕಾನೂರುಗಣವೂ ಜನಪ್ರಿಯತೆಗಳಿಸಿದೆ. ಈ ಕಾನೂರು ಗಣವು ಮೂಲಸಂಘ ಹಾಗೂ ಕುಂದಕುಂದ ಅನ್ವಯದಲ್ಲಿಯೇ ಅಂತರ್ಗತ ವಾಗಿತ್ತೆಂಬುದು ನೆನಪಿಡಬೇಕಾದ ಅಂಶ. ಏಕೆಂದರೆ ಇದು ಈ ಯಾಪನೀಯ ಸಂಘದ ದಿಗಂಬರ ಸಂಘ ಪರಿವಾರದೊಳಗೆ ತೆಕ್ಕೆ ಹಾಕಿಕೊಂಡಿದ್ದ ಸಂಗತಿಗೆ ಸಾಕ್ಷಿಯಾದ ಮಾತು. ಶಾಸನದಲ್ಲಿಯೇ ಇದಕ್ಕೆ ಪುರಾವೆಯಾಗಬಲ್ಲ ಹೇಳಿಕೆಗಳಿವೆ:

ಶ್ರೀಮೂಲಸಂಘ ಕುಂದಕುಂದಾನ್ವಯ ಕಾಣೂರ್ಗ್ಗಣ
ತಿಂತ್ರಿಣೀಗಚ್ಛದ ಜವಳಿಗೆಯ ಮುನಿಭದ್ರ ಸಿದ್ಧಾನ್ತದೇವರ
ಶಿಷ್ಯ ಮೇಘಚಂದ್ರ ಸಿದ್ಧಾನ್ತದೇವ …..
ದೇಶೀಯ ಗಣದ ಬಸದಿ೪ಕ್ಕಂ ಕಾಣೂರ್ಗ್ಗಣದ ಬಸದಿ
ವೊಂದಕ್ಕಂ ಅನ್ತು ಪಞ್ಚ ಬಸದಿಗೆ ಸಮಾನ ………

[ಎ.ಕ. ೭ (ಪ.) ನಾಮಂ ೬೮ (ರಿ ೧೯೪೦-೩೩). ಸು. ೧೧೩೨. ದಡಗ (ಮಂಡ್ಯ ಜಿ / ನಾಮಂ ತಾ). ಪು. ೫೨. ಸಾಲುಃ ೨೫-೨೬ ಮತ್ತು ೩೩-೩೪]. ಈ ಶಾಸನದಲ್ಲಿ ಜವಳಿಗೆಯ ಮುನಿಭದ್ರ ಸಿದ್ದಾಂತದೇವನು ಯಾಪನೀಯ ಗುರು (ಜವಳಿಗೆ) ಎಂದು ಸ್ಪಷ್ಟೋಕ್ತಿ ಬಂದಿದೆ. ಇದಕ್ಕೆ ಪೂರಕವಾದ ಸಾಮಗ್ರಿ ತಿಪ್ಪೂರು ತೀರ್ಥಕ್ಕೆ ಸೆರಿದ ಶಾಸನಗಳಲ್ಲೂ ಸಿಗುತ್ತದೆಃ ಮೂರು ಶಾಸನ ದೃಷ್ಟಾಂತಗಳನ್ನು ನೋಡಬಹುದು-

೧. ಸ್ವಸ್ತಿವುಭಯ ಭಾಷಾ ಕವಿಚಕ್ರವರ್ತಿ ಕಂದರ್ಪದೇವರ ಮದವಳಿಗೆ ಸೊಂನಾ ದೇವಿಯರಮಗ ಕಾಣೂರ್ಗ್ಗಣ ತಿಳಕನುಮಪ್ಪ ಬಾಳ ಚಂದ್ರದೇವರುಂ ತಂಮಗುರುಗಳಿಗೆ ಪರೋಕ್ಷವಾಗಿ ಮಾಡಿದ ಪ್ರತಿಷ್ಟೆ [ಎ.ಕ. ೭ (ಪ) ಮದ್ದೂರು ೫೩ (ರಿ ೧೯೪೭ ರಿಂದ ೫೬-೨೧) ಅತೇದಿ. ತಿಪ್ಪೂರು. ಪು. ೨೮೨]

೨. ತಮ್ಮ ಗುರುಗಳು ಶ್ರೀ ಮೂಲಸಂಘದ ಕಾಣೂರ್ಗ್ಗಣದ ತಿಂತ್ರಿಣಿಕ ಗಚ್ಛದ ಶ್ರೀಮನ್ಮೇಘಚಂದ್ರ ಸಿದ್ಧಾಂತ ದೇವರ ಕಾಲಂ ಕರ್ಚ್ಚಿ ಧಾರಾಪೂರ್ಬ್ಬಕಂ ಮಾಡಿ ಬಿಟ್ಟ ದತ್ತಿ ||

[ಅದೇ, ಮದ್ದೂರು ೫೪ (೧೧೧ ಮವ ೩೧). ೧೧೧೭. ತಿಪ್ಪೂರು. ಪು. ೨೪೮]

೩. ಶ್ರೀಮೂಲಸಂಗದ (ಕುಂದಕುಂದಾನ್ವಯ) ಕ್ರಾನೂರ್ಗ್ಗಣದ ತಿಂತ್ರಿಣಿಕ ಗಚ್ಛದ ಧ್ಯಾನ ಧಾರಣ ಮೌನಾನುಷ್ಟಾಣ ಜಪ ಸಮಾಧಿ ಸೀಲ ಗುಣಸಮ್ಪನ್ನನೀ ಮೇಗ ಚಂದ್ರ ಸಿದ್ಧಾನ್ತದೇವರ ಶಿಷ್ಯರು ಕುಮುದ ಪಣ್ದಿತ ದೇವರ ಸಾಧರ್ಮಿಗಳು ಶ್ರುತ ಕೀರ್ತಿಪಣ್ದಿತ ದೇವರು. [ಅದೇ, ಮದ್ದೂರು ೧೦೬ (೧೧೧ ಮವ ೪೮) ೧೬೯೮(?) ಹಾಗಲಹಳ್ಳಿ. ಪು. ೩೧೯]. ಈ ಶಾಸನದ ತೇದಿ ೧೬೯೮ ಎಂಬುದು ತಪ್ಪಾಗಿದೆ. ಅಂತರ ಬಾಹ್ಯ ಪ್ರಮಾಣಾಧರಾಗಳಿಂದ ಈ ಶಾಸನದ ಕಾಲ ೧೧೩೭-೩೮ ಎಂದು ತೀರ್ಮಾನಿಸಬಹುದು. ಇಲ್ಲಿಯೇ ಹೇಳಬೇಕಾದ ಮತ್ತೆರಡು ಮುಖ್ಯವಾದ ಮಾತೆಂದರೆ, ಮದ್ದೂರು ಮಳವಳ್ಳಿ ಮಂಡ್ಯ ನಾಗಮಂಗ – ಈ ಪರಿಸರದಲ್ಲಿ ಯಾಪನೀಯ ಸಂಘದ, ಕಾನೂರುಗಣದ ಮತ್ತು ತಿಂತ್ರಿಣಿಗಚ್ಛದ ಪ್ರಾವಲ್ಯವಿದ್ದಿತೆಂಬುದು, ಮತ್ತು ಕಾಣೂರುಗಣಕ್ಕೆ ಸೇರಿದ ಬಸದಿಗಳೂ ಇದ್ದುವೆಂಬುದು.

ಕರ್ಣಪಾರ್ಯ ಕವಿ (ಸು. ೧೧೫೦) ತನ್ನ ನೇಮಿನಾಥಪುರಾಣ ಕಾವ್ಯದಲ್ಲಿ ಕಾಣೂರ್ಗ ಣದ ನೇಮಿಚಂದ್ರ ಮುನಿಯನ್ನು ಶ್ಲಾಘಿಸಿದ್ದಾನೆ:

            ನುತ ಕಾಣೂರ್ಗಣ ಸಿಂಹಪೀಠನಮಳ ಸ್ಯಾದ್ವಾದ ವಿದ್ಯಾಂಗವಿ
ಶ್ರುತ ಖಡ್ಗಂ ಶರದಿಂದಂ ನಿರ್ಮಳ ಯಶಶ್ೞತಾತಪತ್ರಂ ವಿರಾ
ಜಿತ ಸಚ್ಚಾರು ಚರಿತ್ರ ಚಾಮರಚಯಂ ನಿಂದಂ ತಪೋರಾಜ್ಯದು
ನ್ನತಿಯೊಳ್ ನೆಟ್ತನೆ ನೇಮಿಚಂದ್ರ ಮುನಿಪಂ ರಾಧ್ದಾಂತ ಚಕ್ರೇಶ್ವರಂ
| (೧-೧೮)

ನೇಮಿಚಂದ್ರ ಮುನೀಶ್ವರರು ಸಿದ್ಧಾಂತ ಚಕ್ರವರ್ತಿಗಳು, ಪೂಜ್ಯವಾದ ಕಾಣೂರ್ಗಣವೆಂಬ ಯತಿಪರಂಪರೆಯ ಸಿಂಹಾಸನವನ್ನು ಏರಿದವರು. ನಿರ್ಮಲವಾದ ಸ್ಯಾದ್ವಾದ ವಿದ್ಯೆಯಲ್ಲಿ ಹರಿತವಾದ ಕತ್ತಿಯಂತೆ ನಿಶಿತವಾದ ಮತಿಯುಳ್ಲವರು, ಶರತ್ ಕಾಲದ ಬೆಳ್ದಿಂಗಳಂತೆ ನಿಷ್ಕಳಂಕವಾದ ಕೀರ್ತಿಯೆಂಬ ಬೆಳ್ಗೊಡೆಯನ್ನು ತಳೆದವರು, ಉಜ್ವಲವಾದ ಸದಾಚಾರವೆಂಬ ಚಾಮರಗಳ ಸಮೂಹವನ್ನು ಹೊಂದಿದವರು, ತಪಸ್ಸೆಂಬ ರಾಜ್ಯದಲ್ಲಿ ದೊಡ್ಡವರೆನಿಸಿದರು [ರಾಜ್ಯಕ್ಕೆ ಚಕ್ರವರ್ತಿ ಇದ್ದಂತೆ ತಪಸ್ಸಿಗೆ ಈ ಮುನಿಗಳು ಚಕ್ರವರ್ತಿಗಳೆಂಬುದು ಇಲ್ಲಿ ಆಶಯ; ಚಕ್ರವರ್ತಿಯ ಸಿಂಹಾಸನ ಮೊದಲಾದ ಚಿಹ್ನೆಗಳು ಈ ಯತಿಗೂ ಇವೆ.]. ಕಮಲಭವ ಕವಿಯೂ (೧೨೩೫) ಶಾಂತೀಶ್ವರ ಪುರಾಣದಲ್ಲಿ ಕಾಣೂರು ಗಣದ ಭಾನುಕೀರ್ತಿ ಮಲಧಾರಿ ಯೋಗೀಶ್ವರನ ವ್ಯಕ್ತಿತ್ವವನ್ನು ಚಿತ್ರಿಸಿದ್ದಾನೆ:

            ಭುವನಾನೀಕಮನೇಕಬಾಣಮುಖದಿಂ ಗೆಲ್ದುನ್ಮದೋಚ್ಚಿತ್ತ ಕಂ
ತುವನೆಳಟ್ಟಿದನಿಂತುಮಲ್ಲದೆಯುಮಂ ಕ್ರೋಧಾದಿ ವಿದ್ವಿಷ್ಟವ
ರ್ಗವನಾ ಶಾಂತಿಯಿನಿಂತಿದಚ್ಚರಿ ಕರಂ ಕಾರ್ಣೂರ್ಗಣಾಂಭೋಧಿ ಭಾ
ನುವೆನಿಕ್ಕುಗ್ಗದ ಭಾನುಕೀರ್ತಿ ಮಲಧಾರಿಖ್ಯಾತ ಯೋಗೀಶ್ವರಂ
|| (೧-೪೨)

ಕಾಣೂರ್ಗಣ ಸಮುದ್ರಕ್ಕೆ ಸೂರ್ಯನೆನಿಸಿದ ಶ್ರೇಷ್ಠನಾದ ಭಾನುಕೀರ್ತಿ ಎಂಬ ಲಮಧಾರಿ ಯೋಗೀಶ್ವರನು, ಸಕಲ ಲೋಕಗಳನ್ನು ತನ್ನ ಒಂದೇ ಒಂದು ಬಾಣದಿಂದ ಗೆದ್ದನು’ ಎಂದು ಉನ್ಮತ್ತನಾಗಿದ್ದ ಕಾಮನನ್ನೂ, ಕ್ರೋಧವೆ ಮೊದಲಾದ ಅರಿವರ್ಗವನ್ನು ತನ್ನ ಶಾಂತಿ ಪ್ರಾಭಾವದಿಂದಲೆ ಓಡಿಸಿಬಿಟ್ಟನು – ಇದು ಸೋಜಿಗ | ಕಾಣೂರುಗಣದ ಈ ಭಾನುಕೀರ್ತಿ ಮುನಿಯನ್ನು ಇಮ್ಮಡಿ ಮಂಗರಾಜನು (ಸು. ೧೩೬೦) ಖಗೇಂದ್ರ ಮಣಿದರ್ಪಣದಲ್ಲಿಯೂ, ಬ್ರಹ್ಮಕವಿ (ಸು. ೧೬೦೦) ವಜ್ರಕುಮಾರ ಚರಿತೆಯಲ್ಲಿಯೂ, ಶಿಶುಮಾಯಣನು ಅಂಜನಾ ಚರಿತೆಯಲ್ಲಿಯೂ ಸ್ಮರಿಸಿದ್ದಾರೆ. ಇದೇ ಕಾಣೂರುಗಣದ ದೇವಕೀರ್ತಿ ಮುನಿಯನ್ನು ಪನಸೋಗೆ ಸಿಂಹಾಸನಾಧೀಶನೆಂದು ಹೇಳಿದ್ದಾರೆ. ಕೋಟೀಶ್ವರನು ಜೀವಂಧರ ಷಟ್ಪದಿ ಕಾವ್ಯದಲ್ಲೂ, ಕವಿ ಪಾಯಣವರ್ಣಿಯು ಜ್ಞಾನ ಚಂದ್ರಚರಿತೆಯಲ್ಲೂ (೧-೩೧) ದೊಡ್ಡಯ್ಯನು (ಸು. ೧೬೨೦) ಚಂದ್ರಪ್ರಭಚರಿತೆಯಲ್ಲಿಯೂ (೧-೨೯), ಚದರ ಚಂದ್ರಮನು ಕಾರ್ಕಳದ ಗೊಮ್ಮಟೇಶ್ವರ ಚರಿತೆಯಲ್ಲಿಯೂ ದೇವಕೀರ್ತಿಯ ಗುಣಗಾನ ಮಾಡಿದ್ದಾರೆ.

ಈ ಕಾಣೂರುಗಣದ ಇನ್ನೊಬ್ಬ ಪ್ರಮುಖ ಯತಿಪತಿಯನ್ನು ಮಹಾಬಲಕವಿ ಅದ್ಭುತವಾಗಿ ಚಿತ್ರಿಸಿದ್ದಾನೆ.

ಆ ಜಗತ್ರಯ ಪವಿತ್ರಮೆನಿಪ ಕಾನೂರ್ಗಣಾಗ್ರಣಿಗಳೊಳ್ ಅಗ್ರಗಣ್ಯನುಂ ಅಗಣ್ಯಪುಣ್ಯನುಂ ರಾಜಗುರು ತಾರಾಜೀವ ನಿವಾಸಿನೀ ಕಾಂತನುಂ ಶ್ರೀಮದಘ ಪಟ್ಟಿತೀರ್ಥ ಚತುರ್ಮುಖ ಜಿನೇಂದ್ರ ಮಂದಿರಾದ್ಯನೇಕ ಜಿನಮಂದಿರರೋದ್ಧಾರಕನುಮ್ ರಟ್ಟರಾಜ್ಯ ನಿಸ್ತಾರಕನುಂ ಅಖಿಲ ತರ್ಕತಂತ್ರ ಮಂತ್ರ ವ್ಯಾಕರಣ ಭರತ ಕಾವ್ಯನಾಟಕ ಪ್ರವೀಣನುಂ ಚರಣ ಶರಣಾಯಾತ ಖ್ಯಾತ ಭೂಪಾಲ ರಾಜಾಳಂಕೃತ ತ್ರಾಣನುಮೆನಸಿ

            ಪೊಗಱಿಜಗಂ ನೆಗಱ್ತಿವಡೆದಂ ಮುನಿಚಂದ್ರನಮಾತ್ಯ ಮಂಡನಂ
ನೆಗಱಿ ಬಲಂಜಗಕ್ಕೆ ಮಿಗಿಲುನ್ನತಿ ಮೇರುವಿನಂ ಮಿಗಿಲ್ ಜಯಂ
ಮಿಗಿಲಿಭವೈರಿಗಾಸೆಗೆ ನಿಜೋಜ್ವಲ ಕೀರ್ತಿ ಮಿಗಿಲ್ ಕರಂ ಸುರ
ದ್ರುಗೆ ಮಿಗಿಲಾರ್ಪು ನೀತಿ ಮಿಗಿಲಾ ದಿವಿಜಾಧಿಪ ಮಂತ್ರಿಗೆಂಬಿನಂ
||
[ಮಹಾಬಲಿಕವಿ, ೧೨೫೪, ನೇಮಿನಾಥ ಪುರಾಣಂ, ೧-೧೯ವ, ೨೦]

ಮೂರು ಲೋಕಗಳಲ್ಲಿಯೂ ನಿರ್ಮಲವಾದದ್ದೆನಿಸಿದ ಕಾಣೂರುಗಣದಲ್ಲಿ ಅಗ್ರಗಣ್ಯರೂ, ಹೆಚ್ಚು ಪುಣ್ಯ ಶಾಲಿಯೂ, ರಾಜಗುರವೂ, ಶಾಂತನೂ, ಹಗೆಗಳಿಗೆ ಯಮಸ್ವರೂಪಿಯೂ ಆಗಿದ್ದವನು ಮುನಿಚಂದ್ರನು. ಈತನು ಅಘಪಟ್ಟಿತೀರ್ಥ (ಮೈಳಾಪತೀರ್ಥ) ಕ್ಷೇತ್ರದ ಚತುರ್ಮುಖ ಜಿನೇಂದ್ರ ಮಂದಿರವೇ ಮೊದಲಾದ ಅನೇಕ ಬಸದಿಗಳನ್ನು ಜೀರ್ಣೋದ್ಧಾರ ಮಾಡಿದನು. ಬಹುವಿದ್ಯೆಗಳಲ್ಲಿ ನಿಪುಣನಾಗಿದ್ದ ಈತನಿಗೆ ರಾಜರುಗಳೂ ನಮಸ್ಕರಿಸುತ್ತಿದ್ದರು. ಸಚಿವರಿಗೂ ಅಲಂಕಾರ ಪ್ರಾಯವೆನಿಸಿದ ಈ ಮುನಿಚಂದ್ರನನ್ನು ಜನತೆ ಕೊಂಡಾಡಿತ್ತು. ಈತನು (ಸೌದತ್ತಿಯ) ರಟ್ಟರ ರಾಜ್ಯವನ್ನು ಸಂರಕ್ಷಿಸಿದ್ದನು.

ಇದೂ ಅಲ್ಲದೆ ೧೨೨೯ ರಲ್ಲಿ ರಚಿತವಾದ ಸೌದತ್ತಿಯ ಶಾಸನದಲ್ಲಿ ಕೂಡ ಮುನಿಚಂದ್ರನ ಉನ್ನತ ಪ್ರಭಾವಿ ವ್ಯಕ್ತಿತ್ವವನ್ನು ಶ್ಲಾಘಿಸಲಾಗಿದ್ದು, ಆ ವರ್ಣನೆಯು ಮಹಾಬಲಕವಿಯ ಮಾತುಗಳಿಗೆ ಆಕರವೆನಿಸಿದೆ:

            ಆ ರಟ್ಟ ರಾಜ್ಯಮಂ ವಿ
ಸ್ತಾರಿಸಿ ನಲವಿಂದೆ ರಟ್ಟರಾಜ್ಯ ಸ್ಥಿರನಿ
ಸ್ತಾರಕನೆನಿಪಂ ಲಕ್ಷ್ಮೀ
ನಾರೀಶಂ ರಟ್ಟರಾಜಗುರು ಮುನಿಚಂದ್ರಂ
||

            ಕುಮುದಾನಂದತೆಯಿಂದವೊಂದಿ ಮುನಿಚಂದ್ರಂ ಶತ್ರು ಭೂಭೃನ್ಮುಖಾ
ಬ್ಜಮನಿರ್ಪ್ಪೋಡಿದ ತೇಜದಿಂದೆ ಮುನಿಚಂದ್ರಂ ರತ್ಟರಾಜ್ಯಾಬ್ಧಿಯಂ
ಕ್ರಮದಿಂ ದಿಕ್ತಟಮಂ ಪಳಂಚಲೆವಿನಂ ಪೆಚ್ಚೆಪ್ಪ ತನ್ನೊಂದು ವಿ
ಕ್ರಮದಿಂದಂ ಮುನಿಚಂದ್ರನಿಂತು ಮುನಿಚಂದ್ರಂ ಚಂದ್ರನಾಮಾನ್ವಿತಂ
||

            ಗುರುವಾದಂ ಕಾರ್ತ್ತವೀರ್ಯ್ಯ ಕ್ಷಿತಿಪತಿಗೆನಸುಂ ಮಂತ್ರದಿಂ ತಾನೆ ಶಿಕ್ಷಾ
ಗುರುವಾದಂ ಶಸ್ತ್ರಶಾಸ್ತ್ರ ಸ್ಥಿರ ಪರಿಣತೆಯೊಳ್ ಲಕ್ಷ್ಮೀದೇವರಿಗೆ ದೀಕ್ಷಾ
ಗುರುವಾದಂ ಪ್ರಾಜ್ಯರಾಜ್ಯಾಪಹರಣದೆ ಪರಕ್ಷೋಣಿ ಪಾಳರ್ಗ್ಗೆನಲ್ಕೇ
ಳ್ಗುರು ಶಬ್ದಂ ವಾಚ್ಯಮಾಯ್ತಲ್ಲದೆ ವರಮುನಿವಂದ್ರಂಗಿದೇಂ ದೇಸೆಗಾಯ್ತೋ
||

            ಧರಣೀಶಾಗ್ರಣಿ ಕಾರ್ತ್ತವೀರ್ಯ್ಯಸುತನಪ್ಪೀ ಲಕ್ಷ್ಮೀ ದೇವಂಗೆ ಸು
ಸ್ಥಿರವಪ್ಪನ್ತಿರೆ ಧಾತ್ರಿಯಂ ನಯದಿನೇಕಾಯತ್ತವಂ ಮಾಡಿದಂ
ವರ ಬಾಹಾಬಳದಿಂ ವಿರೋಧಿನೃಪರಂ ಬೆಂಕೊಂಡನೀ ವಾಣಸಾ
ಭರಣಂ ಶ್ರೀ ಮುನಿಚಂದ್ರ ದೇವನಸುಹೃನ್ಮಾತಂಗ ಕಂಠೀರವಂ
||

            ಆರ್ಯ್ಯಂ ಸಚಿವರೊಳತಿಚಾ
ತುರ್ಯ್ಯಂ ರಟ್ಟೋರ್ವಿಪ ಪ್ರತಿಷ್ಠಾಚಾರ್ಯ್ಯಂ
ಕಾರ್ಯ್ಯಧುರಂಧರತೆಯೊಳೌ
ದಾರ್ಯ್ಯದೊಳಾರಿಂದವಧಿಕನೀ ಮುನಿಚಂದ್ರಂ
||

            ಆ ಮುನಿಚಂದ್ರ ದೇವನಲ ಮಾತ್ಯರಿಳಾಸ್ತುತರಿಷ್ಟ ಶಿಷ್ಯಚಿ
ನ್ತಾಮಣಿ ಕಾಮರಾಜ ತನಯಂ ಕರಣಾಗ್ರಣಿ ಶಾನ್ತಿನಾಥನು
ದ್ಧಾಮ ಪರಾಕ್ರಮಂ ನೆಗಳ್ದ ಕೂಂಡಿಯ ನಾಗನುದಾರ ಚಾರುಲ
ಕ್ಷ್ಮೀಮಹಿಮಾವಳಂಬನ ಸುಖಾನುಭವಂ ಸಲೆ ಮಲ್ಲಿಕಾರ್ಜ್ಜುನಂ
||

ಎನೆ ನೆಗಳ್ದ ಮಲ್ಲಿಕಾರ್ಜುನನನುಪಮ ವಂಶಾವತಾರವೆಂತನೆ ಚತುರಾನನನ ಸಭೆಯಲ್ಲಿ ಪೂಜ್ಯಂ ಮುನಿಸ್ತಪಕಮದಱೊಳತ್ರಿ ಮುನಿವರನಧಿಕಂ || ….. ಶ್ರೀ ರಟ್ಟರಾಜ್ಯ ಪ್ರತಿಷ್ಠಾಚಾರ್ಯ್ಯನು ಅರಿಬಿರುದ ಮಂಡಳಿಕ ಜವರಾಜನುಮಪ್ಪ ಶ್ರೀಮದ್ರಾಜಗುರುಗಳ್ ಮುನಿಚಂದ್ರದೇವರನೋಲಗಿಸಿ ಕೂಂಡಿ ಮೂಱು ಸಾಸಿರದ ಬಲಿಯ ಬಾಡಂ ಶ್ರೀಮದ್ರಾಜಗುರುಗಳ್ ಮುನಿಚಂದ್ರ ದೇವರಾಳ್ಕೆವಾಡಂ ಸುಗಂಧವರ್ತಿ ಹಂನೆರಡುಮಂ ತದಾಜ್ಞಯಿಂ ಪ್ರತಿಪಾಳಿಸುತ್ತಮಿರಲ್ [Fleet, J.F., JBBRS. Vol. 10. No. 30 00(1874). Inscription No. 7. A.D. 1229-30. pp 260-67]

ಇದೇ ಮುನಿಚಂದ್ರನನ್ನು ಇಮ್ಮಡಿ ಗುಣವರ್ಮ ಕವಿಯೂ (೧೨೧೫) ತನ್ನ ಪುಷ್ಪದಂತ ಪುರಾಣದಲ್ಲಿ (೧-೩೨) ಸ್ತುತಿಸಿದ್ದಾನೆ, ಮತ್ತು ಪ್ರತಿ ಆಶ್ವಾಸಾಂತ್ಯದ ಗದ್ಯದಲ್ಲಿಯೂ ಸ್ಮರಿಸಿದ್ದಾನೆ; ‘ಮುನಿಚಂದ್ರ ಪಂಡಿತದೇವ ಸುವ್ಯಕ್ತ ಸೂಕ್ತಿಚಂದ್ರಿಕಾ ಪಾನಪರಿಪುಷ್ಪ, ಮಾನಸ ಮರಾಳ ಗುಣವರ್ಮ ನಿರ್ಮಿತಮಪ್ಪ ಪುಷ್ಪದಂತ ಪುರಾಣ’ (= ಮುನಿಚಂದ್ರ ಪಂಡಿತದೇವನು ಚೆನ್ನಾಗಿ ಹೇಳಿದ ಒಳ್ಳೆಯ ಮಾತುಗಳೆಂಬ ಬೆಳಂದಿಗಳನ್ನು ಕುಡಿದು ಮೈತುಂಬಿಕೊಂಡಿರುವ ಹಂಸಪಕ್ಷಿಯಾದ ಗುಣವರ್ಮ ಕವಿಯಿಂದ ಬರೆಯಲಾದ ಪುಷ್ಪದಂತ ಪುರಾಣ ಕಾವ್ಯ). ಅಗ್ಗಳಕವಿಯೂ ಸಹ (೧೧೮೭) ಮುನಿಚಂದ್ರ ಸಿದ್ಧಾಂತಿಯನ್ನು ಜಗದ್ವಂದ್ಯನೆಂದಿದ್ದಾನೆ ತನ್ನ ಚಂದ್ರಪ್ರಭ ಪುರಾಣಕಾವ್ಯದಲ್ಲಿ (೧-೨೭).

ಪೊನ್ನಕವಿಯು ಬೆಟ್ಟದ ದಾಮನಂದಿಮುನಿಯನ್ನು ಕಾನೂರು ಗಣದ ಗುರು ಪರಂಪರೆಗೆ ಸೇರಿದವನೆಂದು ಸೂಚಿಸಿದ್ದಾನೆ. ಬೆಟ್ಟದ ದಾಮನಂದಿ ಎಂಬ ಹೆಸರಿನ ಯತಿಗಳು ನಾಲ್ಕು ಜನರಿದ್ದಾರೆ. ಅವರುಗಳ ಕಾಲ, ಕ್ರಮವಾಗಿ ಕ್ರಿ.ಶ. ೮೮೦, ೯೯೦, ೧೦೯೦ ಮತ್ತು ೧೧೮೦. ಪೊನ್ನಕವಿಯ ಪದ್ಯಗಳನ್ನು ಉದಾಹರಿಸುವುದರ ಮೂಲಕ ಈ ಯತಿಯನ್ನು ಕುರಿತ ಮಾಹಿತಿಯನ್ನು ಮನನಮಾಡಬಹುದು:

ಅನಘರ್ ತ್ರಿಕಾಲಯೋಗಿಗ
ಳನುಪಮ ಚಾರಿತ್ರರದ್ವೀತಿಯರಮೇಯರ್
ಮುನಿ ಮುಣ್ಯರ್ ಬೆಟ್ಟದ ದಾ
ಮುನಂದಿಮುನಿ ವೀರಣಂದಿ ಮುನಿಪರ ಶಿಷ್ಯರ್
|| (೧-೨೩)

ಮುನಿ ಮುಖ್ಯರ್ ಬೆಟ್ಟದ ದಾ
ಮನಂದಿಗಳ ಶಿಷ್ಯರಿಂದು ಕುಂದೋಜ್ವಳ ನೂ
ತನ ಕೀರ್ತಿ ಮೂರ್ತಿಗಳ್ ಚಂ
ದಿನಂದಿಗಳ್ ಗಣಧರಾಗ್ರಗಣ್ಯ ಸಮಾನರ್
|| (೧-೨೪)

(ವೀರಣಂದಿಮುನಿಯ ಶಿಷ್ಯನಾದ ಬೆಟ್ಟದ ದಾಮಣಂದಿ ಮುನಿಯ ಪಾಪರಹಿತನು, ಪರಿಶುದ್ಧನು, ತ್ರಿಕಾಲಯೋಗಿಗಳಲ್ಲಿ ಶ್ರೇಷ್ಠನು, ಎಣೆಯಿಲ್ಲದ ಶೀಲಸಂಪನ್ನನು, ಅದ್ವಿತೀಯನು, ಅಳತೆಗೆ ಮೀರಿದವನು. ಈತನ ಶಿಷ್ಯನಾದ ಚಂದಿನಂದಿ ಮುನಿಯ ಇಂದು ಕುಂದ್ವೋಜಲವಾದ ಹೊಸ ಗೆಲುವಿನ ಮೂರ್ತಿ, ಗಣಧರರಲ್ಲಿ ಮೊದಲಿಗರಾದ ಗೌತಮಗಣಧರರಿಗೆ ಸಮಾನನು). ಚ್ವಂದಿನಂದಿ ಮುನಿಯ ಶಿಷ್ಯನೇ ಜಿನಚಂದ್ರಮುನಿ. ಈತನು ಪೊನ್ನಕವಿಗೆ ಆಸರೆ ನೀಡಿದ ಮಲ್ಲಪಯ್ಯ – ಪುನ್ನಮಯ್ಯ ಸೋದರರ ಕುಲಗುರು; ಈ ಮಲ್ಲಪನ ಮಗಳೇ ದಾನಚಿಂತಾಮಣಿ ಅತ್ತಿಮಬ್ಬೆ.

ಕರ್ಣಪಾರ್ಯನು ಇನ್ನೊಬ್ಬ ಬೆಟ್ಟದ ವ್ರತಿಪತಿಯನ್ನು ಪರಿಚಯಿಸಿದ್ದಾನೆ:

ಪುಲಿ ಬಂದು ಗರ್ಜಿಸುತ್ತಿರೆ
ಕೆಲದೊಳ್ ಪಾವಡರ್ದುಕೂಡೆ ಸುತ್ತಲ್ ಮೆಯ್ಯಂ
ತೊಲಗದೆ ಕೆಯ್ಯಿಕ್ಕಿರ್ದಂ
ನೆಲನೆಲ್ಲಂ ಪೊಗಱೆ ಬೆಟ್ಟದಾವ್ರತಿ ತಿಳಕಂ
|| (೧-೧೫)

            ಭುವನದೊಳೆ ನೆಗೞ್ದ ದೇವತೆ
ಭುವನಬ್ಬೆ ಮಹೋಗ್ರೆ ಬೆಟ್ಟದಾ ವ್ರತಪತಿಯೊಳ್
ಭುವನವಱೆಯಲ್ಕೆ ಕೊಂಡಳ್
ಭುವನಸ್ತುತಮಪ್ಪ ಜಿನಮತವ್ರತ ತತಿಯಂ
|| (೧-೧೬)

            ಬೆಟ್ಟದ ಮುನಿಯಂ ನೆನೆದೊಡೆ
ಮುಟ್ಟವು ರಾಕ್ಷಸ ಪಿಶಾಚ ವಿಷಮಾಹಿಗಳುಲಂ
ನೆಟ್ಟನೆನಲವರತಪದೊಂ
ದೊಟ್ಟಜೆ ಭುವನ ಪ್ರವೇಕವೆಂಬುದು ಲೋಕಂ
|| (೧-೧೭)

[ಹುಲಿಬಂದು ಪಕ್ಕದಲ್ಲಿ ಗರ್ಜಿಸುತ್ತಿದ್ದರೂ, ತನ್ನ ದೇಹದ ಮೇಲೇರಿ ಹಾವು ಸುತ್ತಿಕೊಂಡಿದ್ದರೂ, ಸ್ವಲ್ಪವೂ ಕದಲದೆ ತಪದಲ್ಲಿ ತೊಡಗಿದ್ದ ಬೆಟ್ಟದ ಮುನಿಯನ್ನು ಲೋಕವೇ ಹೊಗಳುತ್ತದೆ. ಎಲ್ಲೆಲ್ಲೂ ಹೆಸರು ವಾಸಿಯಾಗಿರುವ ದೇವತೆ ಭುವನಬ್ಬೆಯು ತುಂಬ ಹೆದರಿಕೆಯನ್ನು ತರುವಂತಹವಳು. ಅಂತಹ ಆಕೆ ಆ ಬೆಟ್ಟದ ಮುನಿಗಳ ಬಳಿಯಲ್ಲಿ ಲೋಕಪೂಜ್ಯ ಜಿನಧರ್ಮದ ವ್ರತಗಳನ್ನು ಪಡೆದಳು.]

ಇದೇ ವಿಷಯವನ್ನು ಒಂದು ಶಾಸನ ಕೂಡ ನಮೂದಿಸಿರುವುದು ಇಷ್ಟೇ ಸ್ವಾರಸ್ಯವಾಗಿದೆ:

ತಳಮಳಗನಾಗಿ ಪುಲಿಗಳ
ಗಲಗರ್ಜನೆಗಾದಮಳ್ಕಿ ಗುಹೆಯಿಂದಮಣಂ
ತಳರದೆ ನೆಲಸಿರ್ಪ ಮನೋ
ಬಳಮುರ್ಬಿಗಗರ್ಪು ಗೂಹೆಯ ಭಟ್ಟಾರಕನ್
||

            ಪಕ್ಷೋಪವಾಸಿಗಳ್ ಪಾ
ಪಕ್ಷಯಕರ ಮೂರ್ತಿಗಳ್ ಗುಹಾವಾಸಿಗಳ
ತ್ಯಕ್ಷುಂಣಚರಿತರಿವರ
ನೀಕ್ಷಿತಿ ಪೊಗೞ್ದಪುದು ಗೊಹೆಯ ಭಟ್ಟಾರಕರನ್
||

            ಪಡೆದುದು ನೊೞಂಬವಾಡಿಯು
ಮೊಡನೊಡನೀ ದಡಿಗವಾಡಿಯುಂ ಧರ್ಮ್ಮಮನೋ
ಗಡಿಸದ ತಪದಿಂ ಭುವನಮ
ನಡಿಗೆಱಗಿಸೆ ನೆಗೞ್ದ ಗೊಹೆಯ ಭಟ್ಟರಕನ್
||

[ಎ.ಕ. ೪. ನಾಮಂ ೬೭.೧೦೬೦.] ಈ ಶಾಸನ ಕೊಪ್ಪಕ್ಕೆ ಪಶ್ಚಿಮದ ಬಂಡೆಯ ಮೇಲಿದೆ. ಅಂದರೆ ಆ ನಿರ್ದಿಷ್ಟ ಸ್ಥಲವು ಈ ಮುನಿಯು ತಪಸ್ಸು ಮಾಡಿದ ಸ್ಥಳವಾಗಿದೆ. ಶೃಂಗೇರಿಗೂ ಈ ಜಾಗ ಹತ್ತಿರ; ಶೃಂಗೇರಿ ಒಮ್ಮೆ ಜೈನ ಕ್ಷೇತ್ರವಾಗಿದ್ದು ಆಮೇಲೆ ಅದು ವೈದಿಕರ ವಶವಾಯಿತೆಂಬುದು ಐತಿಹಾಸಿಕ ಸತ್ಯ ಸಂಗತಿ.

ಹನ್ನೊಂದನೆಯ ಶತಮಾನದಲ್ಲಿ ಆಗಿಹೋದ ಬೆಟ್ಟದ ವ್ರತಿಪತಿಯ ಹೆಸರು ಅರ್ಹನನ್ದಿ ಬೆಟ್ಟದ ದೇವ [ಕಲ್ಬುರ್ಗಿ ಜಿಲ್ಲೆಯ ಶಾಸನಗಳು : ೧೯೯೬ : ಹುಣಸಿಹಡಗಲಿ ೩೮ ನೆಯ ಶಾಸನ : ಕ್ರಿ.ಶ. ೧೦೯೯. ಪು. ೨೩೧], ಕನ್ನೂರು ಶಾಸನದಲ್ಲೂ [ಸೌ.ಇ.ಇ. ೧೮. ನಂ. ೧೦೯. ೧೧೧೨], ನಾಗಮಂಗಲದ ಇನ್ನೆರಡು ಶಾಸನಗಳಲ್ಲೂ [ಎ.ಕ. ೭. ನಾಮಂ. ೬೦ ಮತ್ತು ೬೪. ೧೧೪೫]. ನಯಸೇನಕವಿಯ (೧೧೧೨) ಧರ್ಮಾಮೃತ ಕಾವ್ಯದಲ್ಲೂ (೧-೧೯), ಬ್ರಹ್ಮಶಿವಕವಿಯ (ಸು. ೧೧೬೫) ಸಮಯಪರೀಕ್ಷೆ ಯಲ್ಲೂ (೧-೧೭) ಈ ಬೆಟ್ಟದ ದೇವ ಅರ್ಹನಂದಿ ಮುನಿಯ ವಿವರವಿದೆ. ಪೊನ್ನಕವಿ ಹೆಸರಿಸಿರುವ ಅರ್ಹನಂದಿ ರಿಷಿಗೂ ಈ ಬೆಟ್ಟದವ್ರತಿ ಅರ್ಹನಂದಿ ಯತಿಗೂ ಯಾವ ಸಂಬಂಧವೂ ಇಲ್ಲ.

ಈ ಕಾನೂರು ಗಣಕ್ಕೆ ಸೇರಿದ ಮುಖ್ಯವಾದ ಗಚ್ಛಗಳೆಂದರೆ ತಗರಿಗಲ್ ಗಚ್ಛ [ಎ.ಕ. ೮ (ಪ.) ಅಗೂ ೧೩೩. ೧೦೭೯-೮೦. ಪು. ೧೮೬-೮೭. ಸಾಲು : ೨೫-೨೭], ತಿಂತ್ರಿಣಿ (ಕ) ಗಚ್ಛ ಮತ್ತು ಮೇಷಪಾಷಾಣಗಚ್ಛ. ಪ್ರಾಯಃ ಚಂದ್ರಿಕಾವಾಟ ಗಚ್ಛವೂ ಇದರಲ್ಲಿಯೇ ಅಳವಟ್ಟಿದ್ದಿರಬೇಕು. ಅಲ್ಲದೆ ಮೇಷ ಪಾಷಾಣಗಚ್ಛವು ಇದೇ ಕಾಣೂರುಗಣದೊಳಗಿನ ಪ್ರಭೇದವಾಗಿದ್ದು ಈ ಗಚ್ಛದ ಕಠೋರ ತಪಸ್ವಿ ಮಲಧಾರಿ ದೇವ, ಜೈನ ಶಾಸನ ರಕ್ಷಾಮಣಿ ಮಾಧವಚಂದ್ರ, ಪರಸಮಯವಜ್ರ ಪ್ರಭಾಚಂದ್ರ, ಬೆಟ್ಟದ ದಾಮನಂದಿ, ಮುನಿಚೂಡಾಮಣಿ ನೇಮಿಚಂದ್ರ ಸಿದ್ಧಾಂತೇಶ, ಶ್ರೀಚಂದ್ರಯೋಗಿ – ಇವರನ್ನು ವರಾಂಗದ ಶಾಸನ ಪರಿಚಯಿಸಿದೆ [ರಮೇಶ್ ಕೆ.ವಿ., ಶರ್ಮ, ಎಂ. ಜೆ., ‘ತುಳುನಾಡಿನ ಶಾಸನಗಳು’ – ಸಂಪುಟ -೧; ೧೯೭೮ : ೭೫]

ಕ್ರಾಣೂರು (ಕಾನೂರು, ಕಾಣೂರು, ಕಂಡೂರು) ಗಣವು ಹಲವು ರೂಪ ಪ್ರಭೇದಗಳನ್ನು ಪಡೆದಿರುವುದು ಅದರ ಜನಾದರಣೆಯ ಪ್ರತೀಕ. ಕ್ರಾಣೂರು ಗಣವು ಅತ್ಯಂತ ಪ್ರಾಚೀನವೂ ಹೌದು. ಗಂಗ ವಂಶದ ಸ್ಥಾಪನೆಗೆ ಮೂಲ ಕಾರಣರೂ ಮಂದರಾಚಲ ವ್ಯಕ್ತಿತ್ವದವರೂ ಆದ ಸಿಂಹನಂದಿ ಆಚಾರ್ಯರು ಈ ಗಣದ ಶಿಖರ ಅವರ ಕೃಪಾಶೀರ್ವಾದ ಮಾರ್ಗದರ್ಶನದಿಂದ ಗಂಗರು ಸಮನ್ವಯ ಧೋರಣೆ ತಳೆದರು ಶಿವಮೊಗ್ಗದ ಶಾಸನವೊಂದರಲ್ಲಿ ಸಿಂಹನಂದಿ ಆಚಾರ್ಯರ ಭವ್ಯ ವ್ಯಕ್ತಿತ್ವ ಸಾಕಾರಗೊಂಡಿದೆ:

ಸಮಸ್ತ ವಿದ್ಯಾ ಪಾರಾವಾರ ಪಾರಗರಂ
ಜಿನಸಮಯ ಸುಧಾಂಬೋಧಿ ಸಂಪೂರ್ಣ ಚಂದ್ರರಂ
ಉತ್ತಮ ಕ್ಷಮಾದಿ ದಶ ಕುಶಳ ಧರ್ಮನಿರತರಂ
ಚಾರಿತ್ರ ಭದ್ರಧನರಂ ವಿನೇಯಜನಾನಂದ ಚತುಸ್ಸಮುದ್ರ
ಮುದ್ರಿತಯಶಃ ಪ್ರಕಾಶರಂ ಸಕಳ ಸಾವದ್ಯ ದೂರರಂ
ಕ್ರಾಣೂರ್ಗ್ಗಣಾಂಬರ ಸಹಸ್ರ ಕಿರಣರಂ
ದ್ವಾದಶವಿಧ ತಪೋನುಷ್ಠಾಣ ನಿಷ್ಠಿತರಂ
ಗಂಗರಾಜ್ಯ ಸಮುದ್ಧರಣರಂ ಶ್ರೀ ಸಿಂಹನಂದ್ಯಾಚಾರ್ಯ್ಯರಂ
[ಎ.ಕ. ೭, ಶಿವಮೊಗ್ಗ ೪.೧೧೨೨. ಪು. ೧೨. ಸಾಲು : ೨೬-೨೮]

ಈ ಸಿಂಹನಂದಿ ಆಚಾರ್ಯರು ಹತ್ತಾರು ಶಿಲಾಶಾಸನಗಳಲ್ಲಿ ಸ್ತುತರಾಗಿದ್ದಾರೆ, ಅಲ್ಲದೆ ಇವರನ್ನು ‘ಗಂಗರಾಜ್ಯಮಂ ಮಾಡಿದ ಸಿಂಹನಂದ್ಯಾಚಾರ್ಯ್ಯರ್’ ಎಂದು ಸ್ಪಷ್ಟವಾಗಿ ಗುರುತಿಸಲಾಗಿದೆ [ನಾಗರಾಜಯ್ಯ, ಹಂಪ. : ಸಾಂತರರು – ಒಂದು ಅಧ್ಯಯನ : ೧೯೯೭]. ಈ ಸಿಂಹ ನಂದಿ ಮುನಿಯಿಂದ ಕ್ರಾಣೂರು ಗಣದ ಅಚಾರ್ಯ ವಳಿಯನ್ನು ಪ್ರಾರಂಭಿಸುವುದುಂಟು. ಭದ್ರಬಾಹು, ಕುಂದಕುಂದಾಚಾರ್ಯ, ಜಿನಸೇನ ಆಚಾರ್ಯರಷ್ಟೇ ಒಂದು ಗುರುಪರಂಪರೆಗೆ ಆದಿಪುರುಷರಾಗಿ ನಿಂತ ಸಿಂಹನ(ಣ)ದಿ ಮುನಿಯೂ ಗಣ್ಯರಾಗಿರುವುದನ್ನು ಶಾಸನಗಳು ತೋರಿಸಿಕೊಟ್ಟಿವೆ: ಕ್ರಾಣೂರ್ಗ್ಗ ಣಾಚಾರ್ಯ್ಯವ ತಾರವೆಂತೆಂದೊಡೆ – ದಕ್ಷಿಣ ದೇಶ ನಿವಾಸೀ ಗಂಗಮಹೀಮಣ್ದಳಿಕ ಕುಳ ಸಮುದ್ಧರಣ: ಶ್ರೀ ಮೂಲ ಸಂಘನಾಥೋನಾಮ್ನಾ ಶ್ರೀಸಿಂಹನನ್ದಿ ಮುನಿ : [ಎ.ಕ. ೭ ಶಿವಮೊಗ್ಗ. ೪.೧೧೨೨]. ಅವರ ತರುವಾಯ ಬಂದವರು – ಅರ್ಹದ್ಬಲಿ ಆಚಾರ್ಯ- ಬೆಟ್ಟದ ದಾಮನಂದಿ ಭಟ್ಟಾರಕ (ಪೊನ್ನಕವಿಯ ವಿವರಣೆಗೆ ಅನುಗುಣವಾಗಿ ಈ ಶಾಸನದ ಮಾಹಿತಿಯೂ ಹೊಂದಿಕೆಯಾಗಿದೆ)- ಬಾಳಚಂದ್ರ ಭಟ್ಟರಕ|- ಮೇಘಚಂದ್ರ ತ್ರೈವಿದ್ಯದೇವ – ಗುಣಚಂದ್ರ ಪಮ್ಡಿತ ದೇವ – ಗುಣ ನಂದಿದೇವ – ಮಹಾವಾದಿ ಸಕಳ ಸಾಹಿತ್ಯ ಪ್ರವೀಣ ಪ್ರಭಾಚಂದ್ರ ಸಿದ್ದಾಂತದೇವ |- ಮಾಘನಂದಿ ಸಿದ್ಧಾಂತಿದೇವ – ಪ್ರಭಾಚಂದ್ರ ||- ಅನಮ್ತ ವೀರ್ಯ_ ಮುನಿಚಂದ್ರ – ಶ್ರುತಕೀರ್ತಿ ಬುಧ – ಕನಕನಂದಿ ತ್ರೈವಿದ್ಯ ವಿಳಾಸ- ಮಾಧವ ಚಂದ್ರ – ಬಾಳಚಂದ್ರಯತೀಂದ್ರ ||- ಬುಧಚಂದ್ರದೇವ ಮುನಿ [ಅದೇ]

ಇದೇ ರೀತಿಯಲ್ಲಿ, ಅವನೀ ಸಂಸ್ತುತ್ಯವೆನಿಪ ಕಾನೂರ್ಗಣ ಕೈರವಚಂದ್ರನೆನಿಸಿ (ಬಿಳಿಯ ನೆಯ್ದಿಲೆಗಳಿಗೆ ತಿಂಗಳನೆನಿಸಿ) ನೆಗಳ್ದಂ ವಿವೇಕಿ ಶುಭ ಚಂದ್ರವಿನುತ ಪಂಡಿತ ದೇವಂ [ಎ.ಕ. ೭ ಶಿಕಾರಿಪುರ. ೨೨೫. ೧೨೦೪. ಪು. ೩೦೨. ಸಾಲು : ೭೦], ಶುಭಚಂದ್ರದೇವ ಮುನಿಪಂ ಕಾನೂರ್ಗ್ಗಣೋದ್ಧಾರಕಂ [ಅದೇ, ಸಾಲು : ೭೬-೭೭]- ಮುಂತಾದ ಇನ್ನೂ ಹಲವಾರು ಶಾಸನ ಪ್ರಯೋಗಗಳು ಸಿಗುತ್ತವೆ. ಈ ಎಲ್ಲ ಶಾಸನ ಮತ್ತು ಕಾವ್ಯಪ್ರಯೋಗಗಳನ್ನು ಉದಾಹರಿಸುವುದು ಈ ಸಂಪ್ರಬಂಧದ ಹರಹಿಗೆ ಮೀರಿದ್ದು.

ಕಾಣೂರುಗಣ, ತಿಂತ್ರಿಣಗಚ್ಛದಲ್ಲಿ ಆಗಿಹೋದ ಇನ್ನೊಬ್ಬ ಮಹಾನ್ ಆಚಾರ್ಯರೆಂದರೆ ಭಾನುಕೀರ್ತಿ ಸಿದ್ಧಾಂತ ದೇವ. ಇವರು ದೀರ್ಘಾಯುವಾಗಿ ಬಾಳಿದ್ದು ೧೧೨೦ ರಿಂದ ೧೧೮೫ ರವರೆಗೆ ಮುನಿಸಂಘದ ಮುಖ್ಯರಾಗಿದ್ದರು. ಶ್ರೀ ಮೂಲ ಸಂಘ ಕುಂದಕುಂದಾನ್ವಯ ಕಾಣೂರುಗಣ ತಿಂತ್ರಿಣಿಗಚ್ಛದ ಮಹಾಮಂಡಳಾ ಚಾರ್ಯರಾಗಿದ್ದರು. ಈ ಮುನಿಯ ಗುರು ಶಿಷ್ಯ ಪರಂಪರೆಯನ್ನೂ ಸಹ ಕೆಲವು ಶಾಸನಗಳು ನಮೂದಿಸಿವೆ [ಎ.ಕ. ೮-೨, ಸಾಗರ. ೧೫೯.೧೧೫೯ ಹರಕೆರೆ. ಪು. ೩೩೧-೩೩; ಅದೇ, ಸೊರಬ ೨೩೩.೧೧೩೮-೩೯. ವ್ರುದ್ರಿ -(ಉದ್ಧರೆ); ಅದೇ. ೩೪೫. ೧೧೭೧; ಅದೇ ೨೮.೧೨೦೮.; ಅದೇ ಸೊರಬ ೧೪೦. ೧೧೯೮. ಇತ್ಯಾದಿ] ಈ ಶಾಸನಗಳ ಆಧಾರದಿಂದ ತಿಳಿದು ಬರುವ ಆಚಾರ್ಯವಳಿ:

04_257_CK-KUH 

ಬಂದಣಿಕೆ ತೀರ್ಥದ ಮತ್ತು ಎಲ್ಲಾ ಚೈತ್ಯಾಲಯಗಳ ಮಂಡಲಾಚಾರ್ಯರಾಗಿದ್ದ [ಎ.ಕ. ೮, ಸೊರಬ. ೨೬೨.೧೦೭೭] ಸಿದ್ಧಾಂತಿ ಚಕ್ರೇಶ್ವರ ಪದ್ಮನಂದಿಯ ತರುವಾಯ ಅವರ ಪ್ರತಿಷ್ಯರಾದ ಭಾನುಕೀರ್ತಿ ಸಿದ್ಧಾಂತಿಯೂ ಮಂದಲಾಚಾರ್ಯರಾಗಿದ್ದರು. ಬಂದಳಿಕೆಯ ತೀರ್ಥದ ಪರ್ತಿಬದ್ಧವಾಗಿದ್ದ ಕುಪ್ಪಟೂರಿನ ಬ್ರಹ್ಮಜಿನಾಲಯವೂ, ಕೇತಿಸೆಟ್ಟಿ ಉದ್ಧರೆಯಲ್ಲಿ ಮಾಡಿಸಿದ ಕನಕ ಜಿನಾಲಯವೂ ಕಾಣೂರುಗಣ ತಿಂತ್ರಿಣಿಗಚ್ಛದ ಗುರು ಪರಂಪರೆಗೆ ಸೇರಿದ ಪ್ರಸಿದ್ಧ ಬಸದಿಗಳಾಗಿದ್ದುವು. ಭುಜಬಲಗಂಗ ಪೆರ್ಮಾಡಿ ಬರ್ಮದೇವನು ಸವಣ ಮುನಿಚಂದ್ರ ಸಿದ್ಧಾಂತ ದೇವನ ಶಿಷ್ಯನಾಗಿದ್ದನು [ಎ.ಕ. ೭-೧, ಶಿವಮೊಗ್ಗ ೫೭. ೧೧೧೫. ಪು. ೨೩.; ಅದೇ, ಶಿವಮೊಗ್ಗ ೬೪.೧೧೧೨].

ಇದುವರೆಗಿನ ದೃಷ್ಟಾಂತಗಳನ್ನು ಅಂಗೈ ಮೇಲಿಟ್ಟು ಸಾಕಲ್ಯ ಸಮೀಕ್ಷೆಮಾಡಿ, ಸಾರಾಂಶರೂಪದಲ್ಲಿ ಕೆಲವು ತಾತ್ವಿಕ ನೆಲೆಗಳಿಗೆ ತಲಪಬಹುದು:

೧. ಕಾನೂರು ಗಣವು ತುಂಬ ಹಿಂದಿನಿಂದ ಇದೆ. ಇದರ ಹಳಮೆಯನ್ನು ಹೇಳುವ ಹಲವು ಬರೆಹಗಳು ಉಳಿದು ಬಂದಿವೆ.

೨. ಕಾನೂರು ಗಣದ ಹೆಸರಿನ ಹಲವು ರೂಪಗಳಿದ್ದರೂ, ಅವೆಲ್ಲವೂ ಒಂದೇ ಮೂಲ ರೂಪಕ್ಕೆ ಸೇರಿದ ವಿವಿಧ ರೂಪಗಳಾಗಿವೆ.

೩. ಈ ಗಣವು ಯಾಪನೀಯ ಸಂಘದ ಮುಖ್ಯ ಹಾಗೂ ಪ್ರತಿಷ್ಠಿತ ಪ್ರಾಚೀನ ಗಣವಾಗಿದೆ: ನುತಯಾಪನೀಯ ಸಂಘ ಪ್ರತೀತ ಕಣ್ಡೂರ್ಗ್ಗಣಾಬ್ಧಿಚಂದ್ರ ಮರೆಂದೀ ಕ್ಷಿತಿವಳಯಂ ಪೊಗಱ್ಚೆನಂ + ಉನ್ನತಿವೆತ್ತರ್ + ಮೌನಿದೇವದಿವ್ಯ ಮುನೀಂದ್ರರ್ [ಜೆಬಿಬಿಆರ್‌ಎಸ್ ೧೦.೩೦ (೧೮೭೪). ಪು. ೨೦೬. ಕ್ರಿ.ಶ. ೯೮೦. ಸೌದತ್ತಿ].

೪. ಕ್ರಿ.ಶ. ೪-೫ ನೆಯ ಶತಮಾನದ ವೇಳೆಗೆ ಈ ಗಣವು ಅಸ್ತಿತ್ವ ಪಡೆದಿತ್ತು.

೫. ಗಂಗಸಾಮ್ರಾಜ್ಯ ಸ್ಥಾಪನಾಚಾರ್ಯರಾದ ಸಿಂಹನಂದಿ ಮುನಿಯೇ ಈ ಗಣದ ಪ್ರಾಚೀನತಮ ಆಚಾರ್ಯರು. ಅವರೇ ಪ್ರಥಮಿಗರೂ ಆಗಿ ಈ ಗಣವನ್ನು ಪ್ರಾರಂಭಿಸಿರಲೂ ಬಹುದು.

೬. ತಿಂತ್ರಿಣಿಕ ಗಚ್ಛ, ತಗರಿಗಲ್ ಗಚ್ಛ, ಮೇಷ ಪಾಷಾಣಗಚ್ಛ, ಚಂದ್ರಿಕಾವಾತ ಗಚ್ಛ ಎಂಬುವು ಈ ಕಾನೂರು ಗಣಕ್ಕೆ ಸೇರಿವೆ.

೭. ಈ ಗಣಕ್ಕೆ ಸೇರಿದ ಆಚಾರ್ಯರು ನೂರಾರು ಜನರಿದ್ದಾರೆ. ಸಂಸ್ಕೃತ ಸಾಹಿತ್ಯದಲ್ಲಿ ದೊಡ್ಡ ಹೆಸರಾದ ಜಟಾಸಿಂಹನಂದಿಯೂ ಈ ಗಣದವರು.

೮. ಕನ್ನಡ ಸಾಹಿತ್ಯದಲ್ಲಿ ಮಹಾಕವಿಯಾದ ಪೊನ್ನನೂ ಈ ಗಣಕ್ಕೆ ಸೇರಿದವನು.

೯. ಕೆಲವು ಕನ್ನಡ ಕವಿಗಳೂ, ಕೆಲವು ಕನ್ನಡ ಶಾಸನಗಳೂ ಈ ಗಣದ ಆಚಾರ್ಯವಳಿ ಪಟ್ಟಿಯನ್ನು ಕೊಟ್ಟಿದ್ದಾರೆ.

೧೦. ಗಂಗರು – ರಾಷ್ಟ್ರಕೂಟರು, ಬಾದಾಮಿ ಚಾಲುಕ್ಯರು ನೀಡಿದ ಆಸರೆ, ಉತ್ತೇಜನಗಳಿಂದ ಹುರಿಗೊಂಡ ಈ ಗಣವು ಕಲ್ಯಾಣಿ ಚಾಳುಕ್ಯರ ಆಳಿಕೆಯಲ್ಲಿ ಗರಿಗೊಂಡು ಮೆರೆಯಿತೆಂದು ಶಾಸನಗಳ ಆಧಾರದಿಂದ ತಿಳಿದು ಬರುತ್ತದೆ. ಕಲ್ಯಾಣಿ ಚಾಳುಕ್ಯರ ಆರಂಭ ಕಾಲದ ಶಾಸನವೇ ಈ ಗಣದ ನಾಮಸ್ಮರಣೆಗೆ ತೊಡಗಿರುವುದೊಂದು ಯೋಗಾಯೋಗ [ಸೌ.ಇ.ಇ. ೨೦. ೧೮.೯೮೦].

೧೧. ಎ.ಎಫ್.ಆರ್. ಹೊಯೆರ್ನಲ್ ಅವರು ಇಂಡಿಯನ್ ಆಂಟಿಕ್ವೆರಿಯ ೨೧ ನೆಯ ಸಂಪುಟದಲ್ಲಿ (೧೮೯೨) ಜೈನ ಗುರುಗಳ ಪಟ್ಟಾವಳಿಯನ್ನು ಕೊಟ್ಟಿದ್ದಾರೆ. ಕಾಣೂರು ಗಣ, ಸಿಂಹಸಂಘದ ಜತೆಗೆ ಚಂದ್ರಿಕಾವಾಟಗಚ್ಛವೂ ಅದಕ್ಕೆ ಸೇರ್ಪಡೆ ಆಗಬೇಕು.

೧೨. ವೇಣೂರು, ಗೋಣೂರು ಮೊದಲಾದ ಸ್ಥಳವಾಚಿಗಳ ಹಾಗೆ ಕಾಣೂ(ನೂ)ರು ಎಂಬುದು ಒಂದು ಊರಿನ ಹೆಸರಾಗಿದ್ದು ಇದು ಕನ್ನಡ ಮೂಲದ ಹೆಸರೆಂಬುದನ್ನು ಗಮನಿಸಬೇಕು; ಕುವೆಂಪುರವರ ‘ಕಾನೂರು ಹೆಗ್ಗಡತಿ’ ಎಂಬ ಕಾದಂಬರಿಯ ತಲೆಬರಹ ನೆನಪಾಗುತ್ತದೆ.

೧೩. ಕನ್ನಡ ನಾಡಿನ ಪ್ರಾಚೀನ ಮುನಿಸಂಘಗಳಲ್ಲಿ ಯಾಪನೀಯವೂ ಅತ್ಯಂತ ಪ್ರಾಚೀನವಾಗಿದ್ದು, ಅದರಲ್ಲಿ ಕಾನೂರುಗಣವು ಪ್ರಬಲವಾಗಿದ್ದಿತೆಂದು ಐತಿಹಾಸಿಕ ದಾಖಲೆಗಳಿಂದ ಖಚಿತವಾಗುತ್ತದೆ. ಕರ್ನಾಟಕದ ನಾನಾ ಭಾಗಗಳಲ್ಲಿ ಈ ಗಣದ ಶಾಸನಗಳು ದೊರೆತಿವೆ. ಈ ಗಣಕ್ಕ ಸೇರಿದ ಬಸದಿಗಳೂ ಇದ್ದುವು.

೧೪. ಯಾಪನೀಯ ಮತ್ತು ಕಾನೂರುಗಣ ಕುರಿತು ಆಳವೂ, ವಿಸ್ತಾರವೂ, ಅಧಿಕೃತವೂ ಆದ ಅಧ್ಯಯನಕ್ಕೆ ಈಗ ದಾರಿ ತೆರೆದಿದೆ.

೧೫. ಈ ಗಣದ ಪರಂಪರೆ ಆವಿಚ್ಛಿನ್ನವಾಗಿ ಒಂದು ಸಾವಿರ ವರ್ಷ ಬೆಳೆದು ೧೬ ನೆಯ ಶತಮಾನದ ಉತ್ತರಾರ್ಧದವರೆಗೆ ಜೀವಂತ ವಾಗಿತ್ತು. ಮೊದಲಿ ನಿಂದಲೂ ದಿಗಂಬರ ಪಂಥದೊಂದಿಗೆ ಹೊಂದಿಕೊಂಡುಬಂದುದರಿಂದ ಅದರಲ್ಲಿಯೇ ಕೂಡಿಕೊಂಡಿತು.

ಸಹಾಯ ಸಾಹಿತ್ಯ ಸೂಚಿ:

1. Epigraphia Carnatica, Suoth Indian Iscription, Indian Antiquary, Epigraphia India Volumes.

2. Desai, P.B. Jainism in South India, 1957.

3. Saletore, B.A., Medieval Jainism., 1938

4. Upadhye, A.N.,

i. Yapaniya Sangha-A Jaina Sect, Journal of the University of Bombay, 1-iv.May 1993

ii ibid, Bombay, 1956

iii. Onthe Meaningof Yapaniya, Srikanatika, 1973

iv. UpadhyePapers, Mysore University, 1983

v. ಯಾಪನೀಯ ಸಂಘದ ಮೇಲೆ ವಿಶೇಷ ಬೆಳಕು, ಮಾನವಿಕ ಕರ್ನಾಟಕ, ೪-೩, ೧೯೭೪, ಅನುವಾದ : ಸೀತಾರಾಮ ಜಾಗೀರ್ ದಾರ್

vi. ಗೋಗಿ, ಹನುಮಾಕ್ಷಿ(ಸಂ), ಕಲ್ಬುರ್ಗಿ ಜಿಲ್ಲೆಯ ಶಾಸನಗಳು’, ೧೯೯೬

vii. ದೇಸಾಯಿ, ಪಿ.ಬಿ., ಚಂದ್ರಿಕಾವಾಟದ ಯತಿಗಳು, ಕನ್ನಡ ಸಾಹಿತ್ಯ ಪರಿಷತ್ ಪತ್ರಿಕೆ, ೧೯೫೧, ಪು. ೪೧-೬೦

5. ನಾಗರಾಜಯ್ಯ, ಹಂಪ. :

೧. (ಸಂ) ಪೊನ್ನಕವಿ ವಿರಚಿತ ಶಾಂತಿ ಪುರಾಣಂ, ೧೯೮೨

೨. (ಸಂ) ಕರ್ಣಪಾರ್ಯನ ನೇಮಿನಾಥಪುರಾಣಂ, ೧೯೮೧ (ಸಹಯೋಗ : ರಾಕು)

೩. ಕಾನೂ(ಣೂ)ರ್ಗಣ, ‘ಹರಿತಿಸಿರಿ’ (ಸಂ) ಲಕ್ಷ್ಮಣತೆಲಗಾವಿ, ೧೯೮೭. ಪು. ೩೪೯-೫೨

೪. ಸಾಂತರರು-ಒಂದು ಅಧ್ಯಯನ, ೧೯೯೭

೫. ಕವಿದರ ಕಾಮಧೇನು ಅತ್ತಿಮಬ್ಬೆ, ೧೯೯೬