ಸಾಹಿತ್ಯ, ಸಂಸ್ಕೃತಿ, ಧರ್ಮ ಮತ್ತು ರಾಜಕೀಯ – ಈ ನಾಲ್ಕು ಕ್ಷೇತ್ರಗಳಲ್ಲಿ ಅಗಾಧವಾದ ಸಾಧನೆ ಮತ್ತು ಕೊಡುಗೆಗಳಿಂದ ವಸುಧೈಕ ಬಾಂಧವರೇಚಣದಂಡಾಧಿನಾಥನ ಚತುರ್ಮುಖಶಕ್ತಿ ಶ್ಲಾಘಿತವಾಗಿದೆ. ರೇಚಣನ ಜೀವಿತದ ಅವಧಿಯನ್ನು ೧೧೩೫ ರಿಂದ ೧೨೨೫ ಎಂದು ನಿರ್ಧರಿಸಿದ್ದೇನೆ. ಆಚಣ್ಣನಿಂದ ವರ್ಧಮಾನ ಪುರಾಣವನ್ನು ಬರೆಸಿದ್ದು. ಲಕ್ಕುಂಡಿ ಅರಸೀಕೆರೆ ಜಿನಜಾಥಪುರಗಳಲ್ಲಿ ಜಿನಾಲಯಗಳನ್ನು ಮಾಡಿಸಿದ್ದು, ಮಾಗುಂಡಿಯ (ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿರು ಚಿಕ್ಕಮಾಗಡಿ) ರತ್ನತ್ರಯ ಬಸದಿಯ ಮೂಲ ನಾಯಕ ದೇವರಿಗೆ, ಅಭಿಷೇಕಾದಿ ಅಂಗರಂಗ ಭೋಗಕ್ಕೂ ಋಷಿಯರ ಆಹಾರದಾನಕ್ಕೂ ವಿದ್ಯಾರ್ಥಿಗಳ ವ್ಯಾಸಂಕ ಸೌಕರ್ಯ ಖಣ್ಡ ಸ್ಫುಟಿತ ಜೀರ್ಣೋದ್ಧಾರಕ್ಕೂ ಮಾಡಿದ ಏರ್ಪಾಡು, ಕಳಚುರ್ಯ ಸಾಮ್ರಾಜ್ಯದ ಉಗಮ ಸಂವರ್ಧನೆಗೆ ಕಾರಣ ಪುರುಷನಾಗಿ ಹಾಕಿದ ಸುಭದ್ರ ಬುನಾದಿ, ಹೊಯ್ಸಳ ವೀರಬಲ್ಲಾಳನಲ್ಲಿ ಮಹಾಮಂತ್ರಿ ಮತ್ತು ಶ್ರೀಕರಣಾಧಿಕಾರಿಯಾಗಿ ಆಡಳಿತ ನಡೆಸಿದ್ದು – ಇವು ರೇಚಣನ ಸಾಧನೆಯ ನಾಲ್ಕು ಮುಖಗಳು [ನಾಗರಾಜಯ್ಯ, ಹಂಪ ವಸುಧೈಕ ಬಾನ್ಧವ ರೇಚಣ ದಂಡನಾಥ, ‘ಬೆಳ್ಳಿಬಾಗಿನ’ (ಸಂ)ಡಿ. ಲಿಂಗಯ್ಯ : ೧೯೯೪, ೯೧-೯೯]

ದಂಡಾಧಿನಾಥ ರೇಚಣನನ್ನು ವರ್ಣಿಸಿರುವ ಅನೇಕ ಪದ್ಯಗಳು ಕಾವ್ಯಗಳಲ್ಲಿ, ಶಾಸನಗಳಲ್ಲಿ ಸಿಕ್ಕಿವೆ. ಜೈನ ಶಾಸನಗಳನ್ನು ಜಿನಸ್ತುತಿಯಿಂದ ಆರಂಭಮಾಡುವುದು ವಾಡಿಕೆ. ಆದರೆ ಒಂದು ಸರ್ವಾಂಗ ಜೈನ ಶಾಸನವನ್ನು, ಜಿನಸ್ತುತಿಗೆ ಮೊದಲು, ಈ ರೇಚಣನ ಶ್ಲಾಘನೆಯಿಂದ ಪ್ರಾರಂಭವಾಗಿದ್ದು ರೇಚಣನು ತನ್ನ ಸಮಕಾಲೀನ ಸಮಾಜದ ಮೇಲೆ ಬೀರಿದ್ದ ಗಾಢ ಪ್ರಭಾವವನ್ನು ಪ್ರತಿತಫಲಿಸುತ್ತದೆ; (ಚಂಪಕ ಮಾಲೆ)-

ಕವಿನಿವಹಸ್ತುತಂ ನೆಗೞ್ದ ರೇಚ ಚಮೂಪತಿಯಿಂ ಬಳಿಕ್ಕಮಾ
ಭುವನದೊಳಿಂತನಂತ ಜಿನಧರ್ಮ್ಮವನುದ್ಧರಿಪರ್ದ್ಧ ರೇಚನಂ
ಸುವಿದಿತಮಾಗೆ ಬಾಂಧವ ಪುರಾಧಿಪ ಶಾನ್ತಿಜಿನೇಶ ತೀರ್ತ್ಥಮಂ
ಕವಡೆಯ ಬೊಪ್ಪನುದ್ಧರಿಸಿದಂ ಮದುವಲ್ಲಭ ರಾಜ್ಯ ಭೂಷಣಂ
||

[ಎ.ಕ. ೭-೧, ಶಿಕಾರಿಪುರ. ೨೨೫. ೧೨೦೪. ಬಂದಳಿಕೆ. ಪು. ೨೦೧. ಸಾಲು : ೧-೯] ಕವಿಗಳ ಗುಂಪಿನಿಂದ ಹೊಗಳಲ್ಪಟ್ಟು ಹೆಸರು ಹೊಂದಿದ ರೇಚಣ ಸೇನಾಪತಿಯಾದ ಬಳಿಕ ಲೋಕದಲ್ಲಿ ಹೀಗೆ ದೊಡ್ಡ ಜೈನಧರ್ಮವನ್ನು ಬೆಳಗಿಸಿದವನೆಂದರೆ ‘ಅರ್ಧ ರೇಚ’ ಎಂಬ ಬಿರುದಾಂಕಿತನಾದ ಕವಡೆಯ ಬೊಪ್ಪನಾಗಿದ್ದಾನೆ. ಯದುವಲ್ಲಭ ರಾಜ್ಯ ಭೂಷನನಾದಂತಹ ಕವಡೆಯ ಬೊಪ್ಪನು, ಬಾಂಧವಪುರಕ್ಕೆ ಒಡೆಯನಾದಂತ ಶಾಂತಿನಾಥ ತೀರ್ಥಂಕರರ ಬಸದಿಯನ್ನು ಉದ್ಧಾರಮಾಡಿದನೆಂಬ ಸಂಗತಿಯು ಸುವಿಖ್ಯಾತವಾಗಿದೆ. ರೇಚಣನಿಗೆ ಆಪ್ತ ಮಂತ್ರಿಯಾಗಿದ್ದವನೇ ಈ ಬೊಪ್ಪ ಭೂಪ. ನಾಗರಖಂಡದ ಪರಿಸರವಷ್ಟೂ ಪ್ರಧಾನವಾಗಿ ಸವಣರ ಶಿಷ್ಯ ಸಂಪತ್ತಿನಿಂದ ಕೂಡಿತ್ತು. ನಾಳ್ಗಾವುಂಡಿ ಜಕ್ಕಿಯಬ್ಬೆ ಮೊದಲಾದವರು ಇಲ್ಲಿ ಸವಣರ ಅಹಿಂಸಾ ಸಂದೇಶದ ಕಾಳುಗಳನ್ನು ಬಿತ್ತಿ ಬೆಲೆ ತೆಗಿದಿದ್ದರು. ಗಂಗರು, ರಾಷ್ಟ್ರಕೂಟರು, ಚಾಳುಕ್ಯರು ಇದಕ್ಕೆ ಕಸಿ ಮಾಡಿದ್ದರು. ಇದರ ಕೊಂಡಿ ಹಿಡಿದು ಹೊರಟ ರೇಚಣನೂ ಬೊಪ್ಪನೂ ನಿಷ್ಠಾವಂತ ಜೈನರಾಗಿದ್ದರು. ಆಡಳಿತಾತ್ಮಕ ಗಂಟಿನೊಂದಿಗೆ ಧಾರ್ಮಿಕ ನಂಟೂ ಇತ್ತು. ಅಂಡುವರ ವಂಶದ ಬೊಪ್ಪನು ಚಿಕ್ಕಮಾಗಡಿ ಸಾಮಂತರ ಕುಟುಂಬದ ಶೃಂಗಪ್ರಭೆಯೊಂದು ಶಾಸನಗಳು ಕೀರ್ತಿಸಿವೆ. ಬಂದಳಿಕೆಯ ಶಾಂತಿಜಿನೇಶ ಬಸದಿಯು ಹತ್ತನೆಯ ಶತಮಾನದ ಆರಂಭದ ವೇಳೆಗೆ ಪ್ರಸಿದ್ಧಿ ಪಡೆದಿತ್ತು. [ಎಕ. ೭-೧ (೧೯೦೨) ಶಿಕಾರಿಪುರ ೨೧೯.೯೧೮. ಬಂದಳಿಕೆ. ಪು. ೨೯೮]. ಬಂದಳಿಕೆಯು ತೀರ್ತ್ಥಸ್ಥಾನ ಆದದ್ದೇ ಈ ಶಾಂತಿಜಿನೇಶ ಜಿನಮಂದಿರ ಸ್ಥಾಪನೆಯಿಂದ [ಅದೇ, ಸಾಲು : ೨೫]. ಬೊಪ್ಪನು ಬರುವ ವೇಳೆಗಾಗಲೇ ಆ ಚೈತ್ಯಾಲಯಕ್ಕೆ ಮುನ್ನೂರು ವರ್ಷ ಆಗಿತ್ತು. ಮುನ್ನೂರರ ಮುಪ್ಪಿನಲ್ಲಿ ಮುದುಡುತ್ತಿದ್ದ ಬಸದಿಯನ್ನು ಪುನರ್ ಭರಣಗೊಳಿಸಿ ಖಣ್ಡ – ಸ್ಫುಟಿತ ಮಾಡಿ ಮತ್ತೆ ಕಣ್‍ಗೊಳಿಸುತ್ತ “ಸುವಿದತ ಮಾಗೆ-ಉದ್ಧರಿಸಿದಂ” [ಅದೇ, ಶಿಕಾರಿಪುರ, ೨೨೫. ಪು. ೩೦೧, ಸಾಲು : ೭,೯]. ಅದೇ ಶಾಸನದ ಕಂದ ಪದ್ಯ ಕೂಡ ಬೊಪ್ಪನ ಚಿತ್ರವನ್ನೊಳಗೊಂಡಿದೆ:

            ಮಡಗಿಡಲೆಂದೇ ಧನಮಂ
ಪಡೆವನೆ ನಾಳ್ದೆಱದ ದಾನಮಂಮಾಡಲುಕೆಂ
ದೊಡಮೆಯನಜ್ಜಪನಾರಿಂ
ಕಜುಜಾಣಂ ಭಭವ್ಯರೊಳಗೆ ಕವಡೆಯ ಬೊಪ್ಪಂ
||

ಇಂತಹ ಬೊಪ್ಪನು ಅಂತಹ ‘ಆ ಬನ್ದಣಿಕೆಯ ಶಾಂತಿನಾಥ ದೇವರ ಮುಂಟಪಮಂ ಮಾಡಿಸಿ ಕವಡಿಯ ಬೊಪ್ಪಿ ಸೆಟ್ಟಿಯರು ಸರ್ವ್ವನಮಸ್ಯಂ ಮಾಡಿದಂ’ ಎಂದೂ ಅದೇ ಶಾಸನ ನಮೂದಿಸಿದೆ [ಅದೇ, ಪು. ೩೦೨, ಸಾಲು : ೪೪-೪೫].

ಈ ಕವಡೆಯ ಬೊಪ್ಪಸೆಟ್ಟಿಯು ಅಸಾಧಾರಣವಾದ ತನ್ನ ವ್ಯಕ್ತಿತ್ವದ ಮೊಹರನ್ನು ಸಮಕಾಲೀನ ಸಮಾಜದ ಮೇಲೆ ಒತ್ತಿದ್ದನ್ನು. ಈತನನ್ನು ಕುರಿತು ಇನ್ನೊಬ್ಬ ಜೈನಕವಿ ಮಲ್ಲಿಕಾರ್ಜುನನು ತನ ‘ಸೂಕ್ತಿ ಸುಧಾರ್ಣವ’ ಸಂಕಲನ ಕಾವ್ಯದಲ್ಲಿ, ಇಂದು ಅನುಪಲಬ್ಧವಾಗಿರುವ ಚಂಪೂಕಾವ್ಯವೊಂದರಿಂದ ಆರಿಸಿದ, ನಾಲ್ಕು ಪದ್ಯಗಳನ್ನು ತಗುಳ್ಚಿದ್ದಾನೆ:

(ಚಂಪಕಮಾಲೆ) ಕವಡಿಕೆ ಭಾಳದಂಡದೊಳೊಡಂಬಡೆ ದಾದಿಯರಿಕ್ಕೆಲಂಗಳೊಳ್
ಸವಡಿಸಿ ಸಾರ್ಚಿ ದಟ್ಟಜಿಯೊಳೆೞ್ತರುತಿರ್ದನನಾರ ಬೊಪ್ಪನೀ
ಕವಡೆಯ ಬೊಪ್ಪನೆಂದು ನಡೆನೋಡಿದರೞ್ಕಱೊಳಪ್ಪುಕೆಯ್ವಿನಂ
ಕವಡೆಯ ಬೊಪ್ಪನೆಂಬ ಪೆಸರಗ್ಗಳಮೊಪ್ಪಿದುದಾಕುಮಾರ ನೊಳ್
|
(ಉತ್ಪಲ) ಮಾಣದೆ ಧೂಳಿ ಮಾಳಿಗೆಗೆಗಡಂಗುವ ಸಾರ್ಚಿದ ತಾಯಜಂಘೆನಿ
ಶ್ರೇಣಿವೊಲಾಗೆ ಮೆಟ್ಟಿತೊಡೆಯೇಱುವ ಚಿತ್ರದ ಪಣ್ಫಲಂಗಳಂ
ಕಾಣಿಸಿ ದಾದಿಯಂ ಬಿಡದೆ ಬೇಡುವ ಕಂಡರ ಹಸ್ತವಾದ್ಯಕ
ಲ್ಯಾಣರವಕ್ಕೆ ನರ್ತಿಸುವ ಮುದ್ದುಗಳೊಪ್ಪಿದುದಾ ಕುಮಾರನೊಳ್ ||

ಅಪ್ಪಪ್ಪೆಂದೊಡೆ ಬಂದಮ
ರ್ದಪ್ಪುವ ಚುಂಬಿಸಿದಡೊಡನೆ ಚುಂಬಿಸುವಂತೊದ
ಳಪ್ಪ ನುಡಿಯಡಸೆ ಮಾಣದೆ
ತುಪ್ಪದ ಕಡುಮುದ್ದು ಪೆಱರ್ಗೆ ಪಡೆದುದು ಮುದಮಂ
||

(ಉತ್ಪಲ) ಮನ್ನಣೆ ವೆತ್ತ ದಾದಿಯರ ಕೈಗೆ ನೃಪಾಲನ ಕೈಗೆ ಸನ್ನೆಯಿಂ
ಸನ್ನೆಯಮಾಡೆ ನೀಱೆಯರಕೈಗೆ ತದಂತರದಿಂದ ಬರ್ಪನಂ
ಮುನ್ನಮೆನಿಪ್ಪ ಮುದ್ದುತನದಿಂ ಜಯದೇವಿಯ ಸೂನುಕಂದುಕಂ
ಕನ್ನಡಿ ಹೊನ್ನ ವೀಣೆ ಪಿಡಿದಾಡುವ ತಾವರೆಯೆಂಬ ಮಾೞ್ಕೆಯಿಂ
||

[ಮಲ್ಲಿಕಾರ್ಜುನ : ಸ್ತುತಿ ಸುಧಾರ್ಣಮ : ಕುಮಾರೋದಯವರ್ಣನಂ, ಪದ್ಯಗಳು ೬೬, ೬೭, ೬೮, ೬೯. ಪು. ೧೩೦ : (ಸಂ) ಅನಂತರಂಗಾಚಾರ್, ಎನ್, ೧೯೪೭]

ಚಿಕ್ಕಮಕ್ಕಳನ್ನು ಆಡಿಸಿದವರಿಗೆ, ಅಂತಹುದನ್ನು ಕಣ್ಣಾರೆ ಕಂಡವರಿಗೆ, ಮೇಲ್ಕಂಡ ವರ್ನನೆಯಲ್ಲಿರುವ ಸಹಜತೆ ಹೃತ್ಸಂವೇದ್ಯವಾಗುತ್ತದೆ. ಅತ್ತಿತ್ತ ತೂಗಿ ತೊನೆಯುವ, ಹಣೆಯೇ ಕವಡೆಗಳನ್ನು ಕಟ್ಟಿದ ಹಿಡಿಯಾಗಿರುವಂತೆ ಒಪ್ಪುವ ಮಗುವೊಂದು ಬರುತ್ತದೆ. ಎರಡೂ ಕಡೆಗಳಲ್ಲಿ ಎಳೆಯ ಕೂಸಿನ ಜತೆ ಜತೆಯಲ್ಲೇ ಸೇರಿಕೊಂಡು ನಿಗಾಇಟ್ಟು. ಬರುತ್ತಿದ್ದಾರೆ. ತನ್ನ ಪುಟ್ಟ ತಪ್ಪು ತಪ್ಪು ಹೆಜ್ಜೆಗಳನ್ನು ಇಡುತ್ತ ಏಳುತ್ತ ಬೀಳುತ್ತ ಮುದ್ದುಗರೆಯುತ್ತ ಬರುವ ಕಂದಯನನ್ನು ‘ಯಾರ ಬೊಪ್ಪನಪ್ಪಾ ಈ ಕವಡೆಯ ಬೊಪ್ಪ’ ಎಂದು ನಿಟ್ಟಿಸಿ ನೋಡಿದವರೆಲ್ಲ ಅಕ್ಕರೆಯಿಂದ ಕೇಳುತ್ತ ಎತ್ತಿಕೊಂಡು ಅಪ್ಪಿ ಮುದ್ದಾಡುವರು. ಹೀಗೆ ಆರವ್ವಾ ಈಗ ಚೆಲುವ, ತನ್ನಷ್ಟಕ್ಕೆ ತಾ ನಗುವಾ ಎಂಬಂತಹ ಈ ಕುಮಾರನಿಗೆ ಕವಡೆಯ ಬೊಪ್ಪ (ಕವಡೆಗಳ ತಂದೆ, ಕವಡೆ ಬ್ರಹ್ಮ) ಎಂಬ ಹೆಸರು ಹೆಚ್ಚಾಗಿ ಒಪ್ಪುತ್ತಿತ್ತು. ಆ ಮಗುವೊ ಕೂತಕಡೆ ಕೂಡದು. ನಿಂತಕಡೆ ನಿಲ್ಲದು. ಧೂಳಿದ್ದರೂ ಸರಿಯೆ, ಮಾಳಿಗೆ ಹತ್ತಿ ಬಚ್ಚಿಟ್ಟುಕೊಳ್ಳುತ್ತದೆ. ತಾಯಿ ಹತ್ತಿರ ಬಂದರೆ ಸಾಕು, ಆಕೆಯ ತೊಡೆ ನಿತಂಬಗಳನ್ನೇ ಮೆಟ್ಟಿಲು-ಏಣಿ ಮಾಡಿ ಹತ್ತಿ ತೊಡೆಯನ್ನು ಸೇರುತ್ತದೆ. ಚಿತ್ರದಲ್ಲಿರುವ ಹಣ್ಣು ಹಂಪಲು ತೋರಿಸಿದರೂ ತನಗೆ ಬೇಕೇ ಬೇಕೆಂದು ಕಾಡಿ ಬೇಡುತ್ತದೆ. ಹೊಸಬರಾದರೂ ಸರಿಯೆ, ಮಗುವನ್ನು ಕಂಡವರು ಚಪ್ಪಾಳೆ ಪರೆಗುಟ್ಟಿದರೆ ಸಾಕು, ಆ ಕೈತಾಳಕ್ಕೆ ಕುಣಿಯುತ್ತದೆ. ಇಂತಹ ಮುದ್ದುಗರೆಯುವ ಆಟಪಾಟ ವಿನೋದಗಳು ಆ ಕವಡೆಯ ಬೊಪ್ಪ ಕುಮಾರನಲ್ಲಿ ಶೋಭಿಸಿದುವು. ಅಪ್ಪಿಕೊ ಅಪ್ಪಿಕೊ ಎಂದು ಹೇಳುವುದೆ ತಡ ಓಡಿ ಬಂದು ಮುದ್ದಾಗಿ ಪಟ್ಟಾಗಿ ಆಲಂಗಿಸುತ್ತಾನೆ. ಮುತ್ತಿಟ್ಟರೆ ತಾನೂ ಚುಂಬಿಸುತ್ತಾನೆ. ತನ್ನ ತೊದಳು ಮಾತುಗಳಿಂದ ಬಡಬಡನೆ ಒಂದೇ ಸಮನೆ ನುಡಿಯುತ್ತಾನೆ. ಇಂತಹ ತುಪ್ಪದ (ಬೆಣ್ಣೆಯ-ಜೇನಿನ) ಮಾತುಗಳು ಇತರರಿಗೂ ಒಲವಿನ ಒಸಗೆಯಾಗಿ ಮುದ ನೀಡುತ್ತಿತ್ತು. ಮರ್ಯಾದೆ ಹೊಂದಿದ ದಾದಿಯರ ಕೈಗೆ, ಅವರ ಕೈಯಿಂದ ರಾಜನ ಕೈಗೆ, ಸನ್ನೆಯಿಂದ ಸನ್ನೆ ಮಾಡಿದರೆ ಸಾಕು, ರಾಜನ ಕೈಯಿಂದ ಹೆಂಗಸರ (ಕನ್ನೆಮಾಡದ ಚೆಲುವಿನರಸಿಯರ) ಕೈಗೆ- ಹೀಗೆ ಒಬ್ಬರ ಕೈಯಿಂದ ಇನ್ನೊಬ್ಬರ ಕೈಗೆ ಎತ್ತಿಕೊಳ್ಳುವ ಮೊದಲೇ ದಾಟಿ ಬರುವ ತನ್ನ ಮುಗ್ಧತ್ವದಿಂದ ಜಯ ದೇವಿ ರಾಣಿಯ ಮಗನಾದ ಈ ಬೊಪ್ಪ ಕುಮಾರನು, ಕಂದುಕ ಕನ್ನಡಿ ಚಿನ್ನ ವೀಣೆ ಹಿಡಿದಾಡುವ ತಾವರೆ ಎಂಬ ರೀತಿಯಲ್ಲಿ ಆನಂದದಾಯಕನಾದ ಬಾಲಕನಾಗಿದ್ದನು.

ಸೂಕ್ತಿಸುಧಾರ್ಣವದ ಈ ಪದ್ಯಗಳನ್ನು ಇಂದು ನಮ್ಮವರೆಗೆ ಉಳಿದು ಬಂದಿರದ ಅಜ್ಞಾತ ಕಾವ್ಯದಿಂದ ಆರಿಸಿಕೊಳ್ಳಾಗಿದೆ. ಆ ಅನುಪಲಬ್ಧ ಕಾವ್ಯ, ಅದರಿಂದ ಪದ್ಯಗಳನ್ನು ಇನ್ನೊಬ್ಬ ಕವಿ ತನ್ನ ಸಂಕಲನಕ್ಕೆ ಅತ್ತಿಕೊಳ್ಳುವಷ್ಟು ಪ್ರಾಮುಖ್ಯ ಪಡೆದಿತ್ತು; ಅಲ್ಲದೆ ಆ ಕಾವ್ಯದ ಕಥಾನಾಯಕೂ ಅಷ್ಟು ಪ್ರಸಿದ್ಧಿಯನ್ನು ಪಡೆದಿದ್ದನು. ಆ ಕಥಾನಾಯಕನು ಬೊಪ್ಪ, ಬೊಪ್ಪ ಸೆಟ್ಟಿ, ಕವಡೆಯ ಬೊಪ್ಪ ಎಂಬಹೆಸರುಗಳಿಂದಲೂ, ‘ಅರ್ಧರೇಚ’ ಎಂಬ ಬಿರುದಿನಿಂದಲೂ ಪ್ರತಿಷ್ಠಿತನಾಗಿದ್ದನು. ಅರ್ಧರೇಚನ ಆಪ್ತಮಂತ್ರಿಯಾಗಿದ್ದು, ತನ್ನ ಪ್ರಭುವಿನಂತೆಯೇ ಈತನೂ ಜೈನನಾಗಿದ್ದನು- ಎಂಬ ವಿವರಗಳೂ ಸಹ ಶಿಕಾರಿಪುರದ ಶಾಸನದಿಂದ ಸ್ಪಷ್ಟವಾಗಿದೆ. ಸೂಕ್ತಿ ಸುಧಾರ್ಣವಕೃತಿಯ್ನು ರಚನೆಯಾಗುವ ೧೨೪೫ ರ ವೇಳೆಗಾಗಲೇ ಕೀರ್ತಿಶಾಲಿಯಾಗಿದ್ದು ಆಗಿಹೋದ ಬೊಪ್ಪನನ್ನು “ಕುರಿತು ಬರೆದ ಕಾವ್ಯದ ಹೆಸರು, ಕವಿಯ ಹೆಸರು, ಕಥಾವಸ್ತು ಇನ್ನೂ ಗೊತ್ತಾಗಿಲ್ಲ. ಆದರೆ ಕವಡೆಯ ಬೊಪ್ಪನು ಜೀರ್ಣೋದ್ಧರಿಸಿದ ಶಾಂತಿನಾಥ ಬಸದಿಯ ಮಂಟಪದ ನೈಋತ್ಯ ವಾಯುವ್ಯ ಈಶಾನ್ಯ ಆಗ್ನೇಯ ಕಂಬಗಳ ಮೇಲೆ ಒಂದೊಂದು ಚಿತ್ರ ಬಂಧ ಕಂಡು ಬರುತ್ತದೆ. ಇವುಗಳಲ್ಲಿ ಒಂದು ಚಿತ್ರ ಬಂಧ (ಚಕ್ರಬಂಧ)ಕ್ಕೆ ‘ಸೂರಿ ವಿರಚಿತಾಯೆಂದು ಕವಿ ನಾಮವನೋದಿಕೊಂಬುದು’ ಎಂದು ವಿವರಣೆ ಕೊಡಲಾಗಿದ್ದು, ಶಾಸನೋಕ್ತ ಈ ‘ಸೂರಿ’ಯೇ ಕವಡೆ ಬೊಪ್ಪನನ್ನು ಕುರಿತು ಚಂಪೂ (?) ಕೃತಿಯನ್ನು ಬರೆದಿರಬಹುದೆಂದು ಊಹಿಸಲು ಅವಕಾಶವಿದೆ” [ಕಲುಬರ್ಗಿ, ಎಂ.ಎಂ.; ಮಾರ್ಗ – ೨ : ೧೯೯೫ : ೧೪೦] ಎಂಬ ಅಭಿಪ್ರಾಯ ಪರಿಭಾವನ ಯೋಗ್ಯವಾಗಿದೆ. ಅಂತೂ ಕವಡೆಯ ಬೊಪ್ಪನನ್ನು ಕುರಿತ ಈ ಚಾರಿತ್ರಿಕ ಕಾವ್ಯಕ್ಕೆ ಐತಿಹಾಸಿಕ ಮಹತ್ವವಿದೆ; ಸಿಕ್ಕಿರುವ ನಾಲ್ಕೇ ಪದ್ಯಗಳ ಅಗುಳನ್ನು ಹಿಚುಕಿ ಹೇಳುವುದಾದರೆ, ಆ ಕವಿಯೂ ಸಹ ಪ್ರೌಢನಾದ ಕವಿಯೆಂದು ತೋರುತ್ತದೆ.

ಮೇಲಿನ ಜಿಜ್ಞಾಸೆಗೆ ಸಂಬಂಧಿಸಿದಂತೆ ಇನ್ನಷ್ಟು ಪೂರಕ-ಚಾರಿತ್ರಿಕ ಶಾಸನ ಸಾಮಾಗ್ರಿ ಇತ್ತೀಚೆಗೆ ನನಗೆ ದೊರೆತಿದೆ. ಕೊಪ್ಪಳದಲ್ಲಿ ನನಗೆ ದೊರೆತ ಸುಮಾರು ಎಪ್ಪತ್ತು ಹೊಚ್ಚಹೊಸ ಶಾಸನರಾಶಿಯಲ್ಲಿ ಒಂದು ಶಾಸನ ಪೂರ್ತಿಯಾಗಿ ಪ್ರಸ್ತುತ ವಿವೇಚನೆ ಮಾಡುತ್ತಿರುವ ಕವಡೆಯ ಬೊಪ್ಪನಿಗೆ ಸಂಬಂಧಿಸಿದೆ. ನನ್ನಲ್ಲಿರುವ ಆ ಅಪ್ರಕಟಿತ ಶಾಸನ ಪಾಠವನ್ನು ಇದೇ ಮೊತ್ತ ಮೊದಲನೆಯ ಬಾರಿಗೆ ಇಲ್ಲಿ ಉದಾಹರಿಸುತ್ತಿದ್ದೇನೆ: ಈ ಶಾಸನವು ಇಷ್ಟರಲ್ಲಿಯೇ ಪ್ರಕಟವಾಗಲಿರುವ ‘ಕೊಪ್ಪಳ ಶಾಸನಗಳು’ ಪುಸ್ತಕದಲ್ಲಿ ಸೇರ್ಪಡೆಯಾಗಿದೆ; ಅದರಸಂಖ್ಯೆ ಕೊಪ್ಪಳ ೫೧., ಕಾಲ. ಕ್ರಿ.ಶ. ೧೨೦೪;

೧. ಶ್ರೀ ಮತ್ಪರಮಗಂಭೀರ ಸ್ಯಾದ್ವಾದಾಮೋಘ ಲಾಂಚ್ಛನಂ ಜೀಯಾತ್ರೈ

೨. ಳೋಕ್ಯನಾಧಸ್ಯ ಶಾಸನಂ ಜಿನಶಾಸನಂ || ಕವಡೆಯ ಬೊಪ್ಪಿ ಸೆಟ್ಟಿಯ

೩. ಪೊಗಳಲ್ಕಜನಱೆಯನೆಂದಡೆ ನೆಗಳ್ದಾಚನುತ ಚಂದ್ರನಂದಿ ಭಟಾರಕರೊಂದಗಣಿತ ತಪದುನಂತಿಯಂ

೪. ಪೊಗಳಲ್ಕಿಂನಱೆವನಾವನಿಳಾತಳದೊಳು || ತತ್ಸಿಷ್ಯರು || ಉಗ್ರತಪಶ್ಚರಣ ದೊಳಂ ವಿಗ್ರಹಮಂ

೫. ತವಿಸಿ ವಿಷಮ ವಿಷಯಂಗಳುಮಂ ನಿಗ್ರಹಿಸುವೆಡೆಗೆ ತಾನಸಮಗ್ರಂ ನೆಗಳ್ದರ್ಹನನ್ದಿ

೬. ಯತಿಪತಿ ತಿಳಕಂ || ಮಕರಾಕರ ವೇಷ್ಟಿತ ಧಾತ್ರಿ ಕರಂ ಬಂಣಿಸುತ ವಿರ್ಪ್ಪುದಬವದ್ಯಗುಣಾಧಿಕಂ

೭. ಜಿನಶಾಸನ ದೀಪಕರಂ ನೆಗಳ್ದರ್ಹನಂದಿ ಭಟ್ಟಾರಕರಂ || ಕುಷಣಂ ಜಿನ ಮಹೀತಳಂ ತವಧಿದೈವಂ

೮. ಚಂದ್ರನಾಥಂ ಜಿನಾಧಿಪನಾಪ್ತಂ ಗುರುವರ್ಹನನ್ದಿ ಮುನಿಪಂ ತಾತಂ ಚತುರ್ತ್ಥಾನ್ವಯೈಕ ಪವಿತ್ರನೆನೆ.

೯. ಗೞ್ದೂಚಣಂ ಜನನಿ ತಾಂ ಸೂತವ್ವೆ ಬಲ್ಲಾಳ ಭೂಮಿಪನಾಳ್ದಂ ತನಗೆಂದಡೇಂ ಕೃತಕೃತೆಯೇ ಭೂ

೧೦. ಪಂಧರಾಚಕ್ರದೊಳ್ ಜನನುತೆಯಪ್ಪ ರುಗ್ಮಿಣಿಯ ಸೆಜ್ಜೆಯ ಚಂದನ ಚಂದ್ರನಾಥ ದೇವನ

೧೧. ಮಹಾಕಾಳಿಯಕ್ಷಿಯುಪದೇಶದೆ ಸಾಗರದತ್ತ ಸೆಟ್ಟಿ ಸಂಜನಿತ ಮಹೋದಯ ಕುಪಣದೊಳ

೧೨. ಱೆ ಪ್ರತೀಂದ್ರವೈಭವ ಮೇಲನ್ಯ ವಿಭು ಬೊಪ್ಪ ಸೆಟ್ಟಿ ನಿಲೆ ಮಾಡಿದನಲ್ತೆ ಪ್ನಱ್ಪ್ರತಿಷ್ಟೆಯಂ || ಕೊಳತೂ

೧೩. ಱೌದ ಲೊಕ್ಕಿಗುಂಡಿ ಕುಪಣಂ ಬಂಕಾಪುರಂ ಹೂಲಿ ಕೋಗಳಿ ಮುಳ್ಗುಂದ ಶೋಕೆ ಬಟ್ಟಕೆ

೧೪. ಱೆ ಹಾನುಂಗಲ್ನವಿಲ್ಗುಂದ ಬೆಳ್ಗುಳವಾ ಬಂದಣಿಕಾಪುರಂ ಪುರಿಕರಂ ನಾನಾ

೧೫. ತೀರ್ತ್ಥಸ್ಥಳಂಗಳ ಚೈತ್ಯಾಲಯಮಂ ಸಮುದ್ಧರಿಸಿದಂ ಬೊಪ್ಪಂ ಜಗದ್ದರ್ಪ್ಪಣಂ || ಬೊಪ್ಪಗಿಪ್ಪತ್ತ

೧೬. ನಾಲ್ವರ್ಕ್ಕುಡುಗೆ ಜಿನಪರೊಲ್ದಾಯುಮಂ ಶ್ರೀಯು ಮಂ || ಬೊಪ್ಪಣಂ ಪರ್ವ್ವನುರ್ವ್ವಂಗುಣ

೧೭. ಮನೆನುತ ಮೊಗಮಂ ರಂಜಿಪ್ಪಾಗರಪಾಂಗನೊಡಂ ಮುದನೋಡೆ ಮನೌದಾರ್ಯ್ಯ

೧೮. ನುಂ ಧೈರ್ಯ್ಯಮಂ…….. ಳ್ಪಂ ಪೆಂಪಿಂ ಜಸಮನೊಸಗೆಯಂ ನೇರ್ಸಪೊದರ್ವ್ವಾ || ರೆನು

೧೯. ಗ್ಗರ್ಪ್ಪುಗೆ ….. ಕಳಚುರಿ ಕ್ಷೋಣೀಶರರ್ಪ್ಪಿಂತೆ ಮೇದಿನಿಯಂ ಪಿಡಿಪನ್ಸಿಲೋಣಕ್ಷಿತಿ

೨೦. ಪರಂ ದಿಗುಜೈತ್ರಯಾತ್ರಾಳೆ ನೋಡನದಿಂ ಖಂಡಿಸಿ ಸಾರ್ವ್ವಭೌಮಪದಮಂ ಬಲ್ಲಾಳ ದೇವಂ

೨೧. ದಯಾಂಬು ನಿಧಾನಂ ತಾಂ ತಳೆದಂ ಬಳಿಕ್ಕ ಕುಪಣಶ್ರೀ ತೀರ್ತ್ಧಮಾಯ್ತೂ ರ್ಜ್ಜಿತಂ || ಪ್ರದ್ವಸ್ತೇ

೨೨. ದುವಿ… ಶಾತ್ಕಳ ಚುರಿಕ್ಷತ್ರೇಷು ಧರ್ಮ್ಮಕ್ಷರಿತಜ್ಜತಾ ಸೇಯ್ಣಂ ಭೂಭುಜಮುದಿಗ

೨೩. ಯುಳೇಶೈರ ಶೇಷ್ಯೇ ಸ್ಸಮಂ ತಾನು. ನ ಲ್ಪೂಜೌಜ ಸೂತ್ರ ಭುವನ ತ್ರಾಣಾಯಮ

೨೪. ಗಾಯಿಣರ್ಸ್ಸಂಗೀತ ಸ್ಸಮುಪೇತ…….

(ಇಲ್ಲಿಂದ ಮುಂದೆ ಶಾಸನ ಮುರಿದಿದೆ)
(ಇನ್ನೊಂದು ಕಲ್ಲಿನಲ್ಲಿರುವ ಪಾಠ)

೧. ……….. ಗಂಗನೋ ನಿಂಬನೊ ಮಾಧವನೋ ಚಾಮುಂಡ

೨. ನೋ ರೇಚಣನೋ ಬಗೆವಡಗಂಗನಾ ನಿಂಬನಾ ಮಾಧವನಾ ಚಾಮುಂಡನಾ ರೇಚಣನಿತರರೊ

೩. ಳ್ ಗಂಗನಿಂ ನಿಂಬನಿಂ ಮಾಧವನಿಂ ಚಾಮುಂಡನಿಂ ರೇಚಣನಿನಧಿಗಮನೀ ಕಾಲದೊಳ್ಳ್ರೇಷ್ಟ ಬೊಪ್ಪಂ ||

(ಮತ್ತೊಂದು ಭಾಗ)

೧. ಈ ಪುಣ್ಯಂ ಪೆರರ್ಗ್ಗುಂಟೇ ಪುಟ್ಟಿ ಕುಪಣ ಶ್ರೀ ತೀರ್ತ್ಥದೊಳ್ಸೂನೃತಾಳಾಪಂ ಬೆಳ್ಗು

೨. ಳ ತೀರ್ತ್ಥದೊಳ್‍ಬಳೆದನರ್ಹದ್ದೇಹ ದೊಳ್ವಿಶ್ವವಿದ್ಯಾ ಪಾರಾಯಣನಾದ ನೋಲಗೆ ಸಿದ್ಧ

೩. ಸಮ್ಯಕ್ತ್ವ ಚೂಡಾಮಣಿ ಶ್ರೀಪಾದಂಗಳನೆಂದಢಾರಧಿಕಾರಾರ್ಬ್ಬೊಪ್ಪಂಬರಂ ಧಾತ್ರಿಯೊಳ್ ||

೪. ಶಕಾಬ್ಧೇ ಶತ ಸಂಯುತೇ ದಶಶತೇ ಷಡ್ವಿಂಶತಿ ಪ್ರಾಧಿಕೇ ರಕ್ತಾಕ್ಷೇಮ ಮಧು

೫. ಮಾಸೇ ಕಥ ಬಹುಳ ಪಕ್ಷೇ ದಿನೇ ದ್ವಾದಶೀ ವಾರೇ ಸೋಮಯುತೇ ಸಮಾಧಿ ವಿಧಿನಾಯಾ

ಈ ಶಾಸನದ ಕೆಲವು ಸಾಲುಗಳು ತ್ರುಟಿತವಾಗಿದ್ದರೂ ಒಟ್ಟಾರೆಯಾಗಿ ಇಡೀ ಶಾಸನಪಾಠದ ಬಹುಭಾಗ ಅನಷ್ಟ ಸ್ಥಿತಿಯಲ್ಲಿ ಲಭ್ಯವಾದಂತಾಗಿದೆ. ಈ ಹೊಸ ಶಾಸನವು ಬೊಪ್ಪಸೆಟ್ಟಿಯ ಬಾಳನ್ನು ಹೊನಲು ಬೆಳಕು ಹಾಯಿಸಿ ಬೆಳಗಿದೆ. ಶಾಸನದ ಸಾರಾಂಶ : ಬೊಪಸೆಟ್ಟಿಯ ತಂದೆ ಆಚ, ತಾಯಿ ಸೂತವ್ವೆ, ಗುರು ಅರ್ಹನಂದಿ, ಆಳುವರಾಜ ಹೊಯ್ಸಳ ಬಲ್ಲಾಳ. ಈತನ ತಂದೆಯಾದ ಆಚನ ಗುರುಗಳಾಗಿದ್ದವರು ಚಂದ್ರನಂದಿ ಭಟ್ಟಾರಕರು. ಆ ಗುರುಗಳು ಶಿಷ್ಯರಾದ ಅರ್ಹನಂದಿಯೇ ಈತನಿಗೆ ಗುರುವಾಗಿರುವ ಅರ್ಹನಂದಿ; ತಂದೆ-ಮಗನಿಗೆ ಗುರು-ಶಿಷ್ಯರು ಆಚಾರ್ಯರಾಗಿದ್ದರು. ತಮ್ಮ ಕಠಿಣವಾದ ತಪಸ್ಸಿನ ಮೂಲಕ ಅರ್ಹನಂದಿಯು ದೇಹವನ್ನು ಸವೆಸಿ, ಇಂದ್ರಿಯಗಳನ್ನು ಹತೋಟಿಯಲ್ಲಿಟ್ಟು ಗಿಡಿಗಿಡಿ ಜಂತ್ರರೂ ಮಿಳಿಮಿಳಿ ನೇತ್ರರೂ ಆಗಿದ್ದರು. ಕಡಲು ಸುತ್ತುವರಿದ ನೆಲದ ತುಂಬ ಜಿನರ ಉಪದೇಶವನ್ನು ಬೆಳಗಿದವರೆಂಬುದಾಗಿ ಈ ಅರ್ಹನಂದಿಯನ್ನು ಹೊಗಳುವರು. ಜಿನಶಾಸನದೇವಿಯರಾದ ರುಗ್ಮಿಣಿ, ಮಹಾಕಾಳಿ, ಜಿನರಾದ ಚಂದನ ಚಂದ್ರನಾಥ ದೇವನ ಉಪದೇಶದಂತೆ ಸಾಗರದತ್ತಸೆಟ್ಟಿಯು ಕುಪಣದಲ್ಲಿ ಮಾಡಿಸಿದ ಮಹತ್ ಕಾರ್ಯಗಳಿದ್ದುವು. ಬೊಪ್ಪ ಶೆಟ್ಟಿಯು ಅವುಗಳಿಗೆ ಹೊಸಹುಟ್ಟು ಕೊಟ್ಟು ಮರು ಪ್ರತಿಷ್ಠೆ ಮಾಡಿಸಿದನು.

ಜೈನ ತೀರ್ಥ ಸ್ಥಳಗಳಾದ ಕೊಳತ್ತೂರು, ಲೊಕ್ಕಿಗುಂಡಿ, ಕುಪಣ, ಬಂಕಾಪುರ, ಹೂಲಿ, ಕೋಗಳಿ, ಮುಳುಗುಂದ, ಅಶೋಕೆ, ಬಟ್ಟಕೆಱೆ, ಹಾನುಗಂಲ್ಲು, ನವಿಲ್ಗುಂದ, ಬೆಳಗುಳ, ಬಂದಣಿಕಾಪುರ, ಪುರಿಕರ- ಮುಂತಾದ ಊರುಗಳಲ್ಲಿನ ಚೈತ್ಯಾಲಯಗಳನ್ನು, ಲೋಕದ ಕನ್ನಡಿಯ ಹಾಗಿರುವ ಬೊಪ್ಪನು ಜೀರ್ಣೋದ್ಧಾರ ಮಾಡಿದನು. ಇಂತಹ ಜಿನಭಕ್ತ ಬೊಪ್ಪನಿಗೆ ೨೪ ಜನ ಜಿನರೂ ಒಲಿದು ಆಯುವನ್ನೂ ಐಸಿರಿಯನ್ನೂ ಕೊಡಲಿ. ಬೊಪ್ಪನು ಮಹಾಶೂರನು. ಕಲಚುರಿ ರಾಜರು ಇರುವಂತೆಯೇ ಭೂಮಿಯನ್ನು ಹಿಡಿದಿದ್ದ ಸೇಉಣ ಮೊದಲಾದ ರಾಜರನ್ನು ಸೋಲಿಸಿ ಚೈತ್ರಯಾತ್ರೆ ಮಾಡಿ ತನ್ನ ಪ್ರಭುವಾದ ಬಲ್ಲಾಳ ದೇವನಿಗೆ ಸಾರ್ವಭೌಮಪದವಿಯನ್ನು ತಂದು ಕೊಟ್ಟನು.

ಈ ಬಗೆಯ ಲೌಕಿಕ ಗೆಲುವನ್ನು ಗಳಿಸಿದ್ದು ಬೊಪ್ಪನು ಅಲೌಕಿಕ ವಿಜಯ ಸಂಪಾದನೆಗೆ ತೊಡಗಿದನು. ಆತನು ಕುಪಣ ಶ್ರೀತೀರ್ಥಕ್ಷೇತ್ರಕ್ಕೆ ಬಂದುದರಿಂದ ಅದು ಊರ್ಜಿತವಾಯಿತು. ಆತನು ದಾನಧರ್ಮ ಜೀರ್ಣೋದ್ಧಾರಗಳಿಂದ ದೇವಾಲಯ ನಿರ್ಮಾಣ ಕಾರ್ಯಾಗಳಿಂದ ಗಂಗನೊ ನಿಂಬನೊ ಮಾಧವನೊ ಚಾಮುಂಡರಾಯನೊ ರೇಚಣನೊ ಎಂದು ಮೊದಲು ಅನುಮಾನವಾದರೂ ಆಮೇಲೆ ಯೋಚಿಸಿದಾಗ, ಹೌದು ಗಂಗನೆ ನಿಂಬನೇ ಮಾಧವನೇ ಚಾಮುಂಡ(ರಾಯ) ನೇ ರೇಚಣನೇ ಎಂದೆನಿಸಿ, ಅನಂತರ ಈ ಕಾಲದಲ್ಲಿ ಗಂಗನಿಗಿಂತಲೂ ನಿಂಬಗಿಂತಲೂ ಮಾಧವನಿಗಿಂತಲೂ ಚಾಮುಂಡ (ರಾಯ) ನಿಗಿಂತಲೂ ರೇಚಣನಿಗಿಂತಲೂ ಶ್ರೇಷ್ಠನಾದವನು ಬೊಪ್ಪ ಎಂದೆನಿಸಿದನು.

ಇಂತಹ ಈ ಪುಣ್ಯ ಬೇರೆಯವರಿಗೆಲ್ಲಿ ? ಕುಪಣ ಶ್ರೀ ತೀರ್ಥದಲ್ಲಿ ಹುಟ್ಟಿ, ಸುಭಾಷಿತ ಸಾರದ ಮಾತುಗಳನ್ನು ಬೆಳಗೊಳದಲ್ಲಿ ಆಲಿಸಿ, ಜಿನಧರ್ಮದೊಳಗೆ ಬೆಳೆದು ವಿಶ್ವವಿದ್ಯೆಯಲ್ಲಿ ಪಾರಾಯಣನಾದ ಸಮ್ಯಕ್ತ್ವ ಚೂಡಾಮಣಿ ಎಂದ ಮೇಲೆ ಬೊಪ್ಪನಂತೆ ಈ ನೆಲದಲ್ಲಿ ಇನ್ನಾರು ಇದ್ದಾರೆ. ಇಂತಹ ಬೊಪ್ಪನು ಕ್ರಿ.ಶ. ೧೨೦೪ ರಲ್ಲಿ ಸಮಾಧಿ ವಿಧಿಯಿಂದ ಸದ್ಗತಿಗೆ ಸಂದನು.

ಈ ಹೊಸ ಶಾಸನದಿಂದ ತಿಳಿದು ಬರುವ ಸಂಗತಿಗಳು :

i. ಬೊಪ್ಪ ಸೆಟ್ಟಿಯ ತಾಯಿ, ತಂದೆ, ತಂದೆಯಗುರು, ತನ್ನಗುರು, ಧರ್ಮ.

ii. ಹುಟ್ಟಿದ ಸ್ಥಳ, ಬೆಳೆದ ಊರು, ಬಾಳಿದ ಬಗೆ

iii. ಮಾಡಿದ ಯುದ್ಧಗಳ ವಿಚಾರ, ರಾಜಕೀಯ ಸಂಬಂಧಗಳ ಸ್ವರೂಪ

iv. ಜೈನಧರ್ಮದ ಪ್ರಭಾವನೆ ಮಾಡಿದವನ ಪಟ್ಟಿ, ಅವರಲ್ಲಿ ಬೊಪ್ಪನ ಸ್ಥಾನ.

v. ಬೊಪ್ಪನು ಉದ್ಧರಿಸಿದ ಜೈನ ತೀರ್ಥಕ್ಷೇತ್ರಗಳ ಪಟ್ಟಿ.

vi. ಕೊಪ್ಪಳದಲ್ಲಿ ಹುಟ್ಟಿ ಕಡೆಗೆ ಅಲ್ಲಿಗೇ ಬಂದು ಸಮಾಧಿಮರಣ ಪಡೆದ ವಿಚಾರ.

ಈ ಶಾಸನದಲ್ಲಿ ಹೆಸರಿಸುವ ಪ್ರತಿಯೊಬ್ಬ ಪ್ರತಿಷ್ಠಿತ ವ್ಯಕ್ತಿ ಮತ್ತು ಪ್ರಮುಖ ಸ್ಥಳಗಳನ್ನು ಕುರಿತ ಪ್ರಸ್ತಾಪಗಳು ಹಲವಾರು ಶಾಸನಗಳಲ್ಲಿ ಸಿಗುತ್ತವೆ ಎಂಬುದು ಈ ಶಾಸನದ ಐತಿಹಾಸಿಕ ಮಹತ್ವವನ್ನು ಸಾರುತ್ತದೆ. ಈ ಹೊಚ್ಚಹೊಸ ಶಾಸನದ ಸಾಲು ೧೨ ರಿಂದ ೧೫ ರಲ್ಲಿ ಒಂದು ಮತ್ತೇಭ ವಿಕ್ರೀಡಿತ ವೃತ್ತವೂ, ಅಂತ್ಯದಲ್ಲಿರುವ ಮೊದಲ ಮೂರು ಸಾಲುಗಳಲ್ಲಿ (ಈ ಪುಣ್ಯಂ ಪೆಱರ್ಗ್ಗುಂಟೆ…) ಶಾರ್ದೂಲ ವಿಕ್ರೀಡಿತ ವೃತ್ತವೂ ಪ್ರಯೋಗವಾಗಿರುವುದನ್ನೂ, ಒಟ್ಟು ಶಾಸನದ ಛಂದೋಬದ್ಧಲಯ ವಿನ್ಯಾಸವನ್ನು ನೋಡಿದರೆ ಈತನನ್ನು ಕುರಿತ ಕಾವ್ಯದಲ್ಲಿಯೂ ಈ ಪದ್ಯ – ಶಾಸನ ಸೇರಿರಬೇಕೆನಿಸುತ್ತದೆ.