ಗಮ್ಗರ ಧರ್ಮಮಹಾಧಿರಾಜ ಕೊಂಗುಣಿವರ್ಮನ (ಸು. ೩೫೦ – ೪೦೦) ಮಗ ಧರ್ಮಮಹಾಧಿರಾಜ ಮಾಧವವರ್ಮ, *(ಸು. ೪೦೦ – ೪೪೦). ಅವನ ಮಗ ಮಹಾಧಿರಾಜ ಹರಿವರ್ಮ [ಸು. ೪೪೦ – ೬೦]. ಅವನ ಮಗ ಮಹಾಧಿರಾಜ ವಿಷ್ಣು ಗೋಪ (ಸು. ೪೭೫ – ೮೦). ಅವನಮಗ ಮಹಾಧಿರಾಜ ಮಾಧವವರ್ಮ (ಸು. ೪೮೦ – ೯೫). ಈತನು ನನ್ನ ಆಚಾರ್ಯ ವೀರದೇವನ ಉಪದೇಶದಂತೆ, ಮದುಕೊತ್ತೂರ ವಿಷಯಕ್ಕೆ ಸೇರಿದ ಪೆರ್ಬೊೞಲ ಗ್ರಾಮದಲ್ಲಿದ್ದ, ಮೂಲದ ಅರ್ಹದಾಯತನಕ್ಕೆ (ಬಸದಿ) ಹೊಲ, ತೋಟ ಮತ್ತು ಕುಮಾರ ಪುರಗ್ರಾಮಗಳನ್ನು ದತ್ತಿಕೊಟ್ಟನು. ಈ ದಾನಗಳನ್ನು

‘ಮಹಾತಟಾಕಸ್ಯಾಧಸ್ತಾತ್ ದ್ವಾದಶ ಖಣ್ಡುಕಾವಾಪ ಮಾತ್ರಂ ಕ್ಷೇತ್ರಂಚ
ತೋಟಕ್ಷೇತ್ರಂಚ ಪಟುಕ್ಷೇತ್ರಂಚ ಕುಮಾರಪುರ ಗ್ರಾಮಶ್ಚ
ಏತತ್ಸವ್ಟ ಸಸರ್ವ್ವ ಪರಿಹಾರ’ವಾಗಿ ಕೊಟ್ಟನು.

[IWG : ೧೯೮೪: ನಂ. ೧೦: ೫ ಶ : ೩೪ – ೩೬] ಮತ್ತು [ಎ.ಕ. ೧೦. ಮಾಲೂರು ೭೩.೫ ಶ.ಪು. ೨೦೮]

ಮಾಧವವರ್ಮ ರಾಜನು ಹನ್ನೆರಡು ಖಣ್ಡುಕ ಬೀಜವನ್ನು ಬಿತ್ತನೆ ಮಾಡುವಷ್ಟು ದೊಡ್ದಹೊಲವನ್ನು ದಾನಕೊಟ್ಟನು. ಇಲ್ಲಿ ಬರುವ ಖಣ್ಡೂಕ ಕುರಿತು ಶಬ್ದಾರ್ಥಜಿಜ್ಞಾಸೆ ಮಾಡುವುದು ಈ ಪುಟ್ಟ ಬರೆಹದ ತಿರುಳು. ಕನ್ನಡ [ಮತ್ತು ಸಂಸ್ಕೃತಿ] ಶಾಸನಗಳಲ್ಲಿ ಖಣ್ಡುಕ, ಖಣ್ಡಿಕ, ಕಣ್ಡುಕ, ಕಣ್ದುಗ, ಕಂಡಗೆ ಎಂಬ ಇತರ ಸಂವಾದಿ ಹಾಗೂ ಸಮಾನಾರ್ಥಕ ಜ್ಞಾತಿರೂಪಗಳು ಕೆಲವು ಸಿಗುತ್ತವೆ: ಈ ಶಬ್ದಗಳ ಪ್ರಸಾರವನ್ನು ಗಮನಿಸಿದಾಗ ಸ್ಥೂಲವಾಗಿ, ‘ಒಂದು ಬಗೆಯ ಅಳತೆ’ ಎಂಬ ಅರ್ಥ ಕಂಡು ಬರುತ್ತವೆ. ಭ(ಬ)ತ್ತವನ್ನು ಅಳೆಯುವ ಮಾಪನವಾಗಿ ಖಣ್ಡುಗ ಶಬ್ದ ಬಳಕೆಯಾಗಿದೆ. [ಎ.ಕ. ೪. ಹೆಗ್ಗಡ. ೪. ೭೫೦. ಸಾಲು : ೨೩]. ಸಮಾಸಗಳಲ್ಲಿ ಕಂಡುಗ ಶಬ್ದವು ಗಂಡುಗ ಎಂದಾಗುತ್ತದೆ. ಮೂಸಾಸಿರಗಂಡುಗ ಬತ್ತಮುಂ [ ಭ್ರಾಜಿಷ್ಣು : ವಡ್ಡಾರಾಧನೆ: (ಸಂ) ನಾಗರಾಜಯ್ಯ, ಹಂಪ.: ೧೯೯೩: ೧೮]. ಆದರೆ ನಯಸೇನನು ಧರ್ಮಾಮೃತ ಕಾವ್ಯದಲ್ಲಿ. ಖಂಡುಗೆಣ್ಣೆಯನಾಂತು ಬಂದುದು [೫ – ೮೨] ಎಂದು ಪ್ರಯೋಗಿಸಿದ್ದಾನೆ; ಇದರಿಂದ ಎಣ್ಣೆಯನ್ನು ಅಳೆಯುವ ಒಂದು ನಿರ್ದಿಷ್ಟ ಪ್ರಮಾಣಕ್ಕೂ ಖಂಡುಗವೆನ್ನುತ್ತಾರೆಂದು ತಿಳಿದು ಬರುತ್ತದೆ. ಆದರೆ ತುಮಕೂರು ಪ್ರಾಚೀನ ಶಾಸನ ತಟಾಕಸ್ಯಾಧಸ್ತಾನ್ ಷಟ್ಖಂಡುಕಾವಾಪಂ [ಎ.ಕ. ೧೬. ತುಮಕೂ. ೭೮. ೪೦೦. ಸಾಲು: ೭] ಎಂಬ ಪ್ರಯೋಗ ಮತ್ತು ಪ್ರಸ್ತುತ ಈ ಮಾಲೂರು ಶಾಸನದ ಪ್ರಯೋಗಗಳನ್ನು ಗಮನಿಸದರೆ ಖಂಡುಕ ಶಬ್ದಕ್ಕೆ ಇಷ್ಟು ಕಂಡುಗ ಕಾಳನ್ನು ಬಿತ್ತನೆ ಮಾಡುವ ಅಳತೆಯ ಹೊಲ’ ಎಂಬ ವಿಸ್ತೃತಾರ್ಥವೂ ಇರುವುದು ವ್ಯಕ್ತವಾಗುತ್ತದೆ. ಅಂದರೆ ಈ ಪ್ರಯೋಗಗಳಲ್ಲಿರುವುದು ‘ಖಣ್ಡುಕಬೀಜಾವಾಪ’ ಎಂಬರ್ಥ ಖಣ್ಡುಕಾವಾಪ ಶಬ್ದದ ಬಳಕೆ [ರಮೇಶ್ ಕೆ.ವಿ. : ೧೯೮೪: ೩೬ n]. ಇದನ್ನು ಶಾಸನಗಳಲ್ಲಿ ಬೀಜವರಿ ಖಂಡುಗ ಗದ್ದೆ [ಎ.ಕ. ೯. ಚನ್ನಪ. ೧೬೯. ೧೪೧೬] ಎಂದು ಹೇಳಲಾಗಿದೆ.

ಕೊಯ್ಲು, ಕಟಾವು, ವರ್ಷದ ಬೆಳೆ, ಫಸಲು ಎಂಬಿತ್ಯಾದಿ ಅರ್ಥದಲ್ಲಿ ಕಂಡಗೆ ಶಬ್ದವನ್ನು ಶಾಸನಕಾರರು ಬಳಸಿರುವುದುಂಟು [ಕ. ಇ. ೧. ೩೦. ೧೨೨೩].

ಕನ್ನಡ ಭಾಷೆಯಲ್ಲಿ ಕಂಡುಗ ಎಂಬ ಶಬ್ದವು ‘ಅಧಿಕ, ಬಹಳ, ಹೆಚ್ಚು’ ಎಂಬ ಪ್ರಮಾಣಾಧಿಕ್ಯ ಸೂಚಕವಾಗಿಯೂ ಬಳಕೆಯಾಗುತ್ತ ಜೀವಂತವಾಗಿದೆ. ಕಂಡುಗ ಹಾಲಿಗೆ ಒಂದು ತೊಟ್ಟು ಮಜ್ಜಿಗೆ.

ಕಂಡುಗ ಶಬ್ದವು ಅನ್ಯದೇಶೀಯ ರೂಪ : ಸಂಸ್ಕೃತದಿಂದ ಪ್ರಾಕೃತದ ಮೂಲಕ ಕನ್ನಡ ಸ್ವೀಕರಿಸಿದೆ. ಸ್ವೀಕರಣದಲ್ಲಿ ಕೆಲವು ಧ್ವನ್ಯಾತ್ಮಕ ಹಾಗೂ ಶಬ್ದಾರ್ಥಕ ವ್ಯತ್ಯಾಸಗಳೂ ಸಂಭವಿಸಿವೆ.

೧. ಮಹಾಪ್ರಾಣಸ್ವನವು ಸಬ್ದಾದಿಯಲ್ಲಿ ಅಲ್ಪಪ್ರಾಣ ಸ್ವನವಾಗಿದೆ.

೨. ಅಘೋಷ ಸ್ಪರ್ಶಸ್ವನವು, ಶಬ್ದ ನಡುವೆ, ಘೋಷಸ್ವನವಾಗಿದೆ.