೧.೦. ಪೀಠಿಕೆ

ಯುವ ಪತ್ರಕರ್ತ ಜಿ.ಡಿ. ಯತೀಶ್ ನೀಡಿದ ಸುಳಿವು ತಿಳಿದು ಎಂ. ಜಿ. ಮಂಜುನಾಥರೊಂದಿಗೆ ೨೬-೦೫-೯೬ ರಂದು ಗುತ್ತಲಿಗೆ ಹೋದೆ. ಈ ಗುತ್ತಲು ಗ್ರಾಮ ಮಂಡ್ಯದಿಂದ, ಕೆ.ಎಂ ದೊಡ್ಡಿ ಮಾರ್ಗದಲ್ಲಿ, ಮಂಡ್ಯಕೆ ನಾಲ್ಕು ಕಿ.ಮೀ. ಅಂತರದಲ್ಲಿದೆ. ಊರಾಚೆ ಇರುವ ಹೊಲಗಳ ಹತ್ತಿರ ಅರ್ಕೇಶ್ವರ ಸ್ವಾಮಿಯ ಮತ್ತು ಗುತ್ತಲಮ್ಮನ ಎರಡು ಗುಡಿಗಳಿವೆ. ಅರ್ಕೇಶ್ವರ ದೇವಾಲಯವು ಆಮೂಲಾಗ್ರವಾಗಿ ಜೀರ್ಣೋದ್ಧಾರವಾಗುತ್ತಿದೆ. ಹಳೆಯ ಗೋಡೆಯನ್ನು ಕೆರ್ಡವಿದಾಗ ಅಲ್ಲಿದ್ದ ಎರಡು ಕಲ್ಲುಚಪ್ಪಡಿಗಳಲ್ಲಿ ಶಾಸನವಿರುವುದನ್ನು ಗುರುತಿಸಲಾಯಿತು. ಹಾಗೆಯೇ ಮೇಲ್ಛಾವಣಿಯ ಸೂರಿನಲ್ಲಿದ್ದ ಒಂದು ಕಲ್ಲುಚಪ್ಪಡಿಯಲ್ಲಿಯೂ ಶಾಸನವಿರುವುದು ಕಂಡುಬಂದಿತು; ಮೇಲ್ಛಾವಣಿಗೆ ಚಾಚಿದಂತೆ ಹಾಸಿದ್ದ ಕಲ್ಲಿನ ಶಾಸನವನ್ನು ಈ ಹಿಂದೆಯೇ ಓದಿ ದಾಖಲಿಸಿದೆ. ಗೋಡೆಯಲ್ಲಿ ಸೇರಿಹೋಗಿದ್ದ ಎರಡು ಶಾಸನಗಳು ಹೊಸವು; ಅವುಗಳಲ್ಲಿ ಒಂದು ಶಾಸನವನ್ನು ಕುರಿತು ಈ ಸಂಟಿಪ್ಪಣಿ.

೧.೧. ಶಾಸನ ಪಾಠ

(ಮಂಡ್ಯ ಜಿಲ್ಲೆ) ಮಂಡ್ಯ ತಾಲ್ಲೂಕಿಗೆ ಸೇರಿದ ಗುತ್ತಲು ಗ್ರಾಮದ ಹೊರಗಡೆ ಇರುವ ಅರ್ಕೇಶ್ವರ ದೇವಾಲಯದ ಗೋಡೆಯೊಳಗೆ ಸೇರಿದ್ದ ಕಲ್ಲುಚಪ್ಪಡಿ ಯಲ್ಲಿರುವ ಅಪ್ರಕಟಿತ – ಹೊಸ ಶಾಸನದ ಪಾಠ : ಎಂ.ಜಿ ಮಂಜುನಾಥರ ಸಹಾಯ ದಿಂದ ಈ ಶಾಸನ ಪಾಠವನ್ನು ಓದಲಾಯಿತು.

೧. ಶ್ರೀ ಸ್ವಸ್ತಿ ಸಮಸ್ತ ಸುರಾಸುರ ಮ

೨. ಸ್ತಕ ಮಕುಟಾಂಶುಜಳ ಜಾ

೩. ಳಂ ಧೌತಪದ ಪ್ರಸ್ತುತ ಜಿ

೪. ನೇನ್ದ್ರ ಶಾಸನಮಸ್ತು ಚಿರಂ ಭ

೫. ದ್ರಮಮಳ ಭವ್ಯಜನಾನಾಂ ||

೬. ವಿಖ್ಯಾತಃ ಪಾಣ್ಡ್ಯವಂಶೋದ್ಭವ

೭. ವಿದಿಯಶೋಮೂರ್ತ್ತಿರಾರ್ಯ್ಯ

೮. ನಾಮಾ ಪಸ್ಯ . . . .ಪ್ರ

೯. ವರಕುಲವದ್ಯದಾನ ಸಂಪ

೧೦. ನ್ನ ಯೋಗಾ.. ವಿದ್ಯಾಧರ ವಿ

೧೧. ದ್ಯಾಧರ …. ಕ ಸರ್ವ್ವ

೧೨. ಪಾತ್ರಃ ಪ್ರಸಿದ್ಧಸ್ತಸ್ಯ ಶ್ರೀ ಕೀ

೧೩. ರ್ತ್ತಿ ವಿದ್ಯಾಪತಿಹಿತ ಚರಿತ್ರ

೧೪. ಲೋಕ ವಿದ್ಯಾಧರಾಖ್ಯಃ ||

೧೫. …ಮರುಲ ಭೀಮಾಜಾತಾ ವಿ

೧೬. ದ್ಯಾಧರಾಖ್ಯ ನೃಪಾಳಕ ಸ

೧೭. ರ್ವ್ವ ಲೋಕಸ್ಯ ಗಂಗಪಟ್ಟ ಪ್ರಸಿದ್ಧ

೧೮. ಯೋಃ || ಶ್ರೀ ಸ್ವಸ್ತಿ ಸಮಸ್ತಭುವನ

೧೯. ಜನ ವಿನೂತ ಜಿನಪತಿ ಚರ

೨೦. ಣ ಸರಸೀರುಹಂ ಮಧುಕರ

೨೧. ನಿಜಾನ್ವಯ ದಿನಕರಂ ಅಭಿ ಮಾ

(ಇಲ್ಲಿಂದ ಮುಂದಿನದು ಶಾಸನ ಸ್ತಂಬದ ಎಡಬದಿಯಲ್ಲಿರುವ ಬರೆಹ)

೨೨. . . . . . . . .

೨೩. . . . . . .

೨೪. ಸಖ ಳ

೨೫. ಸ್ವರ್ಗ್ಗಂ ಪಡೆ

೨೬. . . . . .

೨೭. ನಿ ಸ . .

(ಮುಂದಿನ ಸ್ವಲ್ಪ ಭಾಗ ತ್ರುಟಿತ)

ಇದು ಸಾದ್ಯಂತವಾಗಿ ಜೈನಶಾಸನ, ನಿಸಿದಿಕಲ್ಲು. ಶಾಸನದ ಆರಂಭದಲ್ಲಿರುವುದು ಸಂಸ್ಕೃತ ಶ್ಲೋಕ, ಜಿನಸ್ತುತಿ ಪದ್ಯ. ಆರಂಭದ ೨೨ ಸಾಲುಗಳಲ್ಲಿ ಸರಾರಿ ಪ್ರತಿ ಸಾಲಿಗೆ ಹತ್ತು ಅಕ್ಷರಗಳಿವೆ. ಕಡೆಯ ಆರು ಸಾಲುಗಳು ತುಂಬ ತ್ರುಟಿತವಾಗಿದ್ದು, ಸರಾಸರಿ ತೇದಿ ನಮೂದಾಗಿಲ್ಲ. ೧೦-೧೧ ನೆಯ ಪಾದಗಳಲ್ಲಿ ವಿದ್ಯಾಧರ ಎಂಬ ಹೆಸರು ಎರಡು ಸಲ ಆವರ್ತನಗೊಂಡಿದೆ.

ಶಾಸನದ ಸಾರಾಂಶ : ಆರಂಭದ ಆರು ಸಾಲುಗಳಲ್ಲಿ ಜಿನರ ಮಂಗಳಾಚರಣೆಯ ಶ್ಲೋಕವಿದೆ. ಏಳನೆಯ ಪಾದದಿಂದ ೧೨ ಬೆಯ ಪಾದದವೆರಗೆ ವಿಖ್ಯಾತನೂ, ಪಾಂಡ್ಯ ವಂಶ ಸಂಜಾತನೂ, ಪ್ರಸಿದ್ಧ ಯಶೋಮೂರ್ತಿಯೂ ಆದ ಒಬ್ಬ ವ್ಯಕ್ತಿಯ ವಿಚಾರವಿದೆ, ಆತನ ಹೆಸರು ಹೇಳಿರುವ ಭಾಗವಷ್ಟೂ ನಷ್ಟವಾಗಿದೆ. ಪಂಕ್ತಿ ೧೩ ರಿಂದ ಮುಂದಕ್ಕೆ ಲೋಕ ವಿದ್ಯಾಧರ ಎಂಬ ಹೆಸರಿನ ಪುರುಷನ ಪರಿಚಯವಿದೆ. ಮರುಳ ಭೀಮನ ಮಗನಾದ ವಿದ್ಯಾಧರ ಎಂಬ ಹೆಸರಿನ ನೃಪಾಲಕನು ಗಂಗ ಪಟ್ಟದಲ್ಲಿದ್ದು ಪ್ರಸಿದ್ಧನಾಗಿದ್ದಾನೆ. ವಿದ್ಯಾಧರನು ಜಿನರ ಅಡಿದಾವರೆಯಲ್ಲಿ ದುಂಬಿಯಂತೆಯೂ, ತನ್ನ ವಂಶಕ್ಕೆ ಸೂರ್ಯನಂತೆಯೂ ಇದ್ದಾನೆ. ಅಭಿಮಾನ (ಮೆರುವಾದ) ಆತನು ಸಮಾಧಿಯಿಂದ ಮುಡಿಪಿದನು; ಆತನ ನೆನಪಿಗೆ ನಿಲ್ಲಿಸಿದ ನಿಸಿದಿ ಶಾಸನವಿದು.

೨.೧. ಹಿನ್ನೆಲೆ

ಗುತ್ತಲು ಮತ್ತು ಸುತ್ತು ಮುತ್ತಲು ಇರುವ ಊರು ಕೇರಿ ನಗರ ಪ್ರದೇಶವಷ್ಟೂಜೈನ ಪ್ರಭಾವದ ಪ್ರದೇಶ. ಸಗರಮಣಲೆಯರೂ, ಗಂಗರೂ, ರಾಷ್ಟ್ರಕೂಟವಲ್ಲಭರ ಸಾಮಂತ – ಮಾಂಡಲಿಕರಾಗಿದ್ದು ಈ ಭಾಗದಲ್ಲಿ ಆಡಲಿತಾರೂಢ ರಾಗಿದ್ದರೆಂದು ಶಾಸನಗಳಿಂದ ತಿಳಿದು ಬರುತ್ತದೆ. ಕ್ರಿ.ಶ. ಎಂಟರಿಂದ ಹನ್ನೊಂದನೆಯ ಶತಮಾನದವರೆಗೆ ಗಂಗವಾಡಿಯಲ್ಲಿ ಅಂತರ್ಗತವಾಗಿದ್ದ ಮಂಡ್ಯ ಜಿಲ್ಲೆಯನ್ನು ಗಂಗರು ಸತತವಾಗಿ ನನ್ನೂರು ವರ್ಷ ಆಳಿದರು.

ಮಂಡ್ಯ ಜಿಲ್ಲೆಯಲ್ಲಿ ಸಿಗುವ ಗಂಗರ ಮೊಟ್ಟಮೊದಲನೆಯ ಶಾಸನ ಕ್ರಿ.ಶ. ೭೧೩ ರ ಕಱೆಗೋಡು ವಿಷಯಕ್ಕೆ ಸೇರಿದ್ದು : ಎ.ಕ ೭ (ಪ) ಮಂ ೩೫. (೧೧೧ ಮಂ ೧೧೩) ಕಿ.ಶ. ೭೧೩ ಹಳ್ಳೆಗೆರೆ : ಪು. ೨೧೯ – ೨೩. ಈ ಜಿಲ್ಲೆಯಲ್ಲಿ ದೊರೆತಿರುವ ಗಂಗರ ಕಟ್ಟ ಕಡೆಯ ಶಾಸನ ಕ್ರಿ.ಶ. ೧೦೨೪ ರಲ್ಲಿ ರಚಿತವಾಗಿದೆ. ಅದೇ, ಮಂ. ೫೪ (೧೪ ಮಂ ೧೨೬) ೧೦ – ೧೧ ಶ (೧೦೨೪) ಹಳೇಬೂದನೂರು. ಪು. ೨೩೬.

ಮಂಡ್ಯ, ಮಳವಳ್ಳಿ, ಮದ್ದೂರು ತಾಲ್ಲೂಕುಗಳ ಪ್ರದೇಶಗಳು ಸೇರಿ ಆಗಿದ್ದ ಕೆಳಲೆನಾಡು – ಕಿಳಲೆ ಸಹಸ್ರ ಪ್ರದೇಶವನ್ನು ರಾಷ್ಟ್ರಕೂಟರ ಸಾಮಂತರಾಗಿ, ಗಂಗರ ಮಿತ್ರರಾಗಿ ಸಗರಮಣಲೆಯರು ಇನ್ನೂರೈವತ್ತು ವರ್ಷ ಆಳಿದರು. ಈಗಿನ (ಅರೆ) ತಿಪ್ಪೂರು ತೀರ್ಥದಲ್ಲಿ ಗೊಮ್ಮಟಮೂರ್ತಿಯನ್ನೂ, ಆರೇಳು ಬಸದಿಗಳನ್ನೂ ಮಾಡಿಸಿದವರು ಮಣಲೆಯರೇ. ಮಂಡ್ಯ ತಾಲ್ಲೂಕು ಮತ್ತು ಮದ್ದೂರು ತಾಲ್ಲೂಕು ಒಳಗೊಂಡು ಆಗಿದ್ದ ಕುಂದೂರುನಾಡನ್ನು (ಕುಂದನಾಡು, ಕುಂದೂರ್ನಾಡು, ಕುಂದುನ್ನಾಡು) ಗಂಗರು ಆಳಿದರು : ಅದೇ, ಮಂ ೬೭ (೧೧೧ ಮಂ ೭೮) ೯೯೭. ಬೇಲೂರು ಪು. ೨೪೪ (-ಗಂಗ ಪೆರ್ಮ್ಮಾನಡಿಗಳ್ + ಕುಂದೂರ್ ನಾಡನಾಳುತ್ತಮಿರೆ). ಹೀಗೆ ಮಂಡ್ಯ ಜಿಲ್ಲೆ ಹಾಗೂ ಗುತ್ತಲಗ್ರಾಮ ಪ್ರದೇಶವನ್ನು ಗಂಗರು ಆಳುತ್ತಿದ್ದ ಈ ಹಿನ್ನೆಲೆಯಲ್ಲಿ ಈಗ ಹೊಸದಾಗಿ ಸಿಕ್ಕಿರುವ ಶಾಸನದ ಒಕ್ಕಣೆಯನ್ನು ಪರಾಮರ್ಶಿಸಬೇಕಾಗುತ್ತದೆ.

೩.೧. ಪರಿಶೀಲನೆ

ಗುತ್ತಲಿನ ಅರ್ಕೇಶ್ವರ ದೇವಾಲಯದಲ್ಲಿ ಪತ್ತೆಯಾಗಿರುವ ಪ್ರಸ್ತುತ ಹೊಸ ಶಾಸನದ ಕೇಂದ್ರ ವ್ಯಕ್ತಿ (ಲೋಕ) ವಿದ್ಯಾಧರ. ಶ್ರವಣಬೆಳುಗೊಳದ ಒಂದು ಶಾಸನದಲ್ಲಿ ಸಾವಿಯಬ್ಬೆಯ ಪತಿಯಾದ ಲೋಕ – ವಿದ್ಯಾಧರನನ್ನು ಹೆಸರಿಸಿದೆ

[ಎ.ಕ. ೨ (ಪ) ೧೭೨ (೧೩೯) ೧೦ ಶ. ಪು. ೧೧೬ – ೧೭]. ಆದರೆ ಆ ಲೋಕ ವಿದ್ಯಾಧರನಿಗೂ ಗುತ್ತಲಿನ ಹೊಸ ಶಾಸನೋಕ್ತ ಲೋಕವಿದ್ಯಾಧರನಿಗೂ, ನಾಮ ಸಾದೃಶ್ಯವೇ ಹೊರತು, ಯಾವ ಸಂಬಂಧವೂ ಇಲ್ಲ. ಶ್ರವಣಬೆಳುಗೊಳ ಶಾಸನೋಕ್ತ ಲೋಕವಿದ್ಯಾಧರನು ದೋರನ ಮಗ, ಗುತ್ತಲು ಶಾಸನೋಕ್ತ ಲೋಕವಿದ್ಯಾಧರನು ಮರುಳಭೀಮನ ಮಗ.

ಪ್ರಸ್ತುತ ಗುತ್ತಲುಶಾಸನದಲ್ಲಿ ಹೆಸರಿಸಿರುವ (ಲೋಕ) ವಿದ್ಯಾಧರನು ಗಂಗಪಟ್ಟ ಪ್ರಸಿದ್ಧನೂ, ಮರುಳಭೀಮನ ಮಗನೂ, ಜಿನಪತಿ ಚರಣ ಸರಸೀರುಹ ಮಧುಕರನೂ ಆಗಿದ್ದಾನೆ. ಗಂಗರು ಮೊದಲಿನಿಂದ ಕಡೆಯತನಕ ಜೈನರಾಗಿದ್ದುದನ್ನು ಶಾಸಗಳು ಸಾರಿವೆ; ಈ (ಲೋಕ) ವಿದ್ಯಾಧರನೂ ಜಿನಭಕ್ತನಾಗಿದ್ದುದು ಅದಕ್ಕೆ ಅನುಗುಣವಾಗಿದೆ. ಈತನು ಗಂಗ ಪಟ್ಟಕ್ಕೆ ಬಂದದ್ದು ಯಾವಾಗ, ಈತನ ತಂದೆ ಮರುಳಭೀಮ ಯಾರು, ಗುತ್ತಲಿಗೆ ಮುಡಿಪಿದ್ದು ಬಂದು ಹೀಗೆ ಎಂಬುದು ಪರಿಶೀಲನಾರ್ಹ ಅಂಶಗಳು.

ಮರುಳ ಎಂಬ ಹೆಸರು ಗಂಗರಾಜರಲ್ಲಿ ಪ್ರಸಿದ್ಧವಾದದ್ದು. [ಎಆರ್‌ಎಸ್‍ಐಇ ೧೯೩೪-೩-೨೩. ೯೬೨; ಎ.ಇ. ೩೬, ಪು. ೯೭-೧೧೦]. ಗಂಗವಂಶದಲ್ಲಿ ಪ್ರಸಿದ್ಧನಾದ ಇಮ್ಮಡಿ ಬೂತಗ ಪೆರ್ಮಾಡಿಯ ಹಿರಿಯ ಮಗನಾದ ಮರುಳನು ರಾಷ್ಟ್ರಕೂಟರ ಕೃಷ್ಣ ೩ (೯೩೫-೬೭) ಚಕ್ರವರ್ತಿಯ ಅಳಿಯನಾಗಿದ್ದನು. ಮತ್ತು ಸಾಮ್ರಾಟಿನಿಂದ ಮದನಾವತಾರವೆಂಬ ಅಪೂರ್ವ ಕೊಡೆಯ ಮರ್ಯಾದೆಗೆ ಪಾತ್ರನಾಗಿದ್ದನು. [ಮೈ.ಆ.ರಿ. ೧೯೨೧. ಪು. ೮-೧೬. ೯೬೨-೬೩; IWG : ೧೯೮೪ : ನಂ. ೧೩೮. ಪು. ೪೧೧-೩೨] ಕಲಿಯುಗ ಭೀಮ ಎಂಬ ಬಿರುದಾಂಕಿತನಾದ ಈ ಮರುಳನು ಜಿನವಚರಣಾಂಭೋ ರುಹ ಮಧುಪಾಯಮಾನ ಮಾನಸನಾಗಿದ್ದನೆಂದು ಕೂಡ್ಲೂರು ಶಾಸನದಲ್ಲಿದೆ [IWG : ೧೯೮೪ : ನಂ. ೧೩೮, ಪು. ೪೧೯, ಸಾಲು ೯೬]. ರನ್ನಕವಿಯೂ ಅಜಿತ ಪುರಾಣದಲ್ಲಿ ಈ ಮರುಳ (ಮಮಳ)ನನ್ನು ಜಿನಧರ್ಮಪ್ರಭಾವನೆ ಮಾಡಿದ ಹಿರಿಯರ ಸಾಲಿನಲ್ಲಿಟ್ಟು ಸ್ಮರಿಸಿದ್ದಾನೆ [೧೨-೯].

ಮರುಳನನ್ನು ಕುರಿತು ಇರುವ ಶಾಸನಗಳ ಚಿತ್ರಣವು ಗುತ್ತಲಿನ ಹ್ಸ ಶಾಸನೋಕ್ತ ಮರುಳನಿಗೆ ಸರಿಯಾಗಿ ಹೊಂದಿಕೊಳ್ಳುತ್ತವೆ. ಅದರಿಂದ, ಕ್ರಿ.ಶ. ೯೬೨ – ೬೩ ರಲ್ಲಿದ್ದ ಗಂಗರದೊರೆಯಾದ ಮರುಳನ ಮಗನೇ ಈ (ಲೋಕ) ವಿದ್ಯಾಧರನೆಂದು ತಿಳಿಯಲು ಅವಕಾಶವಿದೆ. ಆದರೆ ಇಂಥ ತೀರ್ಮನವನ್ನು ಕದಲಿಸುವ, ಪ್ರಶ್ನಿಸುವ ಅನ್ಯಾನ್ಯ ಆಧಾರಗಳು ಉಪಲಬ್ಧವಿವೆ.

ಗಂಗರ ಮನೆತನದಲ್ಲಿ ಇಮ್ಮಡಿ ಬೂತಗನು ಬಹು ಪ್ರಸಿದ್ಧನಾದ ಮಹಾಮಂಡಲೇಶ್ವರ [ಸೌ.ಇ.ಇ. ೧೧-೧, ೩೬, ೯೪೨. ರೋಣ: ಅದೇ, ೩೭,೯೪೬, ಕುರ್ತ್ತಕೋಟಿ: ಎ.ಇ.೪, ಸು.೯೪೦. ಪು. ೩೫೦ ಹೆಬ್ಬಾಳ; ಎ.ಇ. ೧೫, ೨೩.೧೦೭೧-೭೨೦ ಗಾವರವಾಡ; ಎ.ಕ. ೮ ನಗರ ೩೫, ೧೦೭೭, ಹೊಂಬುಜ; ಎ.ಕ ೯ ಪ ಬೇ, ೩೮೮, ೯೫೪ ಬಸ್ತಿಹಳ್ಳಿ. ಪು. ೩೫೧-೫೨ ಇತ್ಯಾದಿ], ಈತನಿಗೆ ಆರು ಜನ ಮಕ್ಕಳು; ಮರುಳ, ಕುಂದಣ ಸೋಮಿದೇವಿ (ಪತಿ. ರಾಜಾದಿತ್ಯ), ಇಮ್ಮಡಿ ಮಾರಸಿಂಹ, ರಾಜಮಲ್ಲ, ನೀತಿಮಾರ್ಗ ಗೋವಿಂದರ ಮತ್ತು ವಾಸವ. ಬೂತುಗನ ಕಡೆಯ ಮಗನಾದ ವಾಸವನಿಗೆ (ಹೆಂ. ಕಂಚಲದೇವಿ) ಇಬ್ಬರು ಮಕ್ಕಳು; ಗೋವಿನ್ದರದೇವ (ರಕ್ಕಸಗಂಗ) ಮತ್ತು ಅರು ಮುಳಿದೇವ. ವಾಸವನ ಹಿರಿಯ ಮಗನಾದ ಗೋವಿಂದರ ದೇವ (ರಕ್ಕಸ ಗಂಗ) ನಿಗೆ ಮಕ್ಕಳಿರಲಿಲ್ಲ, ಕಿರಿಯ ಮಗನಾದ ಅರುಮುಳಿದೇವನಿಗೆ (ಹೆಂ. ಗಾವಬ್ಬರಸಿ) ಮೂವರು ಮಕ್ಕಳಿದ್ದರು – ಚಟ್ಟಲದೇವಿ ಮತ್ತು ರಾಜ ವಿದ್ಯಾಧರ;

            ಸರಸತಿಯುಂ ಸಿರಿಯುಂ ದಿನ
ಕರನುಂ ಪುಟ್ಟಿರ್ದ್ದುವೆಂಬಿನಂ ಚಟ್ಟಲೆಯುಂ
ವರವಧು ಕಂಚಲೆಯುಂ ಸ
ತ್ಪುರುಷೋತ್ತಮನೆನಿಪ ರಾಜ ವಿದ್ಯಾಧರಂ
||
[ಎ.ಕ. ೮ (೧೯೦೨) ನಗರ ೩೫. ಸಾಲು ೪೮-೪೯]

ಅಪುತ್ರಕನಾದ ರಕ್ಕಸಗಂಗ (ಗೋವಿಂದರ)ನು ತನ್ನ ತಮ್ಮನಾದ ಅರುಮುಳಿ ದೇವನ ಈ ಮೂವರು ಮಕ್ಕಳನ್ನು ಸಾಕಿ ಬೆಳೆಸಿದನು. ಚಟ್ಟಲದೇವಿಯು ಕಂಚಿಪುರ ವರೇಶ್ವರ ಕಾಡುವೆಟ್ಟಿಯ ಪತ್ನಿಯಾದಳು, ಕಂಚಲದೇವಿಯೂ ಪೊಂಬುಚ್ಚಪುರವರಾ ಧೀಶ ಸಾಂತರರ ಬೀರದೇವ (ತ್ರೈಳೋಕ್ಯ ಮಲ್ಲವೀರ ಸಾಂತರದೇವ) ನಿಗ ವಲ್ಲಭೆಯಾದಳು. ತನ್ನ ತಮ್ಮ ಅರುಮುಳುದೇವನಿಗೆ ಹೀಗೆ ಮಕ್ಕಳು ಮತ್ತು ಮುಖ್ಯಾವಾಗಿ ಒಬ್ಬಮಗ-

            ಪುಟ್ಟೆ ತನಗಂದು ರಾಜ್ಯದ
ಪಟ್ಟಂ ಕೈ ಸಾರ್ದ್ದುದೆಂದು ರಕ್ಕಸಗಂಗಂ
ನಿಟ್ಟಿಸಿ ತನ್ನರಮನೆಯೊ
ಳ್ನೆಟ್ಟನೆ ತಂದಿರಿಸಿದಂ ಮಹೋತ್ಸವದಿಂದಂ
|| (ಅದೆ. ಸಾಲು : ೪೯)

ರಕ್ಕಸಗಂಗ ಗೋವಿಂದರದೇವನು ತನ್ನ ತರುವಾಯ ಗಂಗಪಟ್ಟದ ಉತ್ತರಾಧಿಕಾರಿಯಾಗಿ ರಾಜ ವಿದ್ಯಾಧರನಿಗೆ ಪಟ್ಟ ಕಟ್ಟಿದನು. ಈ ರಕ್ಕಸಗಂಗ ಸತ್ಯವಾಕ್ಯ ಗೋವಿಂದರ ದೇವನು ಮಂಡ್ಯ ಮದ್ದೂರು ಮಳವಳ್ಳಿ ತಾಲ್ಲೂಕುಗಳನ್ನು ಒಳಗೊಂಡ ಗಂಗರಾಜ್ಯವನ್ನು ಕ್ರಿ.ಶ. ೧೦೨೪ ರವರೆಗೆ ಆಳಿದನು. [ಎ.ಕ. ೭ (ಪ.) ಮಂ ೫೪ (೧೪ ಮಂ ೧೨೬) ೧೦೨೪. ಹಳೇ ಬೂದನೂರು. ಪು. ೨೩೬] ಅನಂತರ ಗಂಗರ ದಾಖಲೆಗಳು ಬೀ ಜಿಲ್ಲೆಯಲ್ಲಿ ಇರಲಿಲ್ಲ. ಈಗ ಸಿಕ್ಕಿರುವ ಹೊಸ ಶಾಸನದಿಂದ ಮಂಡ್ಯ ಜಿಲ್ಲೆಯಲ್ಲೂ ಮತ್ತು ಒಟ್ಟಾರೆ ಗಂಗರ ಆಳ್ವಿಕೆಯ ಚರ್ಚೆಗೂ ಜೀವ ಬಂದಂತೆ ಆಗಿದೆ.

೩.೨ ಸಂದೇಹಗಳು – ಪರಿಹಾರ

ಗುತ್ತಲು ಹೊಸ ಶಾಸನದಲ್ಲಿ ಬರುವ ವಿದ್ಯಾಧರನು ಮರುಳ ಭೀಮಜಾತ ನೆಂದು ಹೇಳಿದೆ, ಅದರಿಂದ ಈ ಮರುಳನು ಬೂತಗನು ಹಿರಿಯ ಮಗನೇ ಹೊರತು, ಬೂತಗನ ಮೊಮ್ಮಗನಾಗಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಮೂಡುವುದು ಸಹಜ; ಅಂದರೆ ಮರುಳನು ಹೇಗೆ ಅರುಮುಳಿದೇವನಾಗಲು ಸಾಧ್ಯ ಎಂಬ ಸಂಶಯ ಉಂಟಾ ಗುತ್ತದೆ, ಈ ಅನುಮಾನ ಪರಿಹಾರಕ್ಕಾಗಿ ಹೊಂಬುಜ ಶಾಸನವನ್ನು ಆಶ್ರಯಿಸಬೇಕು.

ಬೂತಗನ ಮಗನಾದ ಮರುಳನಿಗೆ ಕೆಲವು ಪ್ರಶಸ್ತಿಗಳಿದ್ದುವು: ಕಲಿಯುಗ ಭೀಮ [IWG : ೧೯೮೪ : ನಂ. ೧೦೨, ೧೩೯, ೧೫೯], ನೀತಿಮಾರ್ಗ, ಗಂಗ ಚಕ್ರಾಯುಧ, ಗಂಗ ಮಾರ್ತಾಂಡ, ಪುಣಸೆಯಗಂಗ. ಈ ಬಿರುದುಗಳಲ್ಲದೆ ಮರುಳನಿಗೆ ಅರಮೊಱಿದೇವ ಎಂಬ ಹೆಸರಿತ್ತು. ಬೂತಗನ ಮಗನಾದ ವಾಸವನ ಇಬ್ಬರು ಮಕ್ಕಳಾದ ಗೋವಿಂದರ ದೇವ ಮತ್ತು ಅರುಮೊಳಿದೇವ – ಇವರಿಗೂ ಕೆಲವು ಬಿರುದುಗಳಿದ್ದುವು. ಗೋವಿಂದರದೇವನ ಇತರ ಪ್ರಶಸ್ತಿ ಸಹಿತ ಹೆಸರುಗಳು: ಸತ್ಯವಾಕ್ಯ, ರಕ್ಕಸಗಂಗ, ಪೆರ್ಮಾನಡಿ, ಗಂಗನಾರಾಯಣ, ಗಂಗಚೂಡಾಮಣಿ, ವೀರ ಮಾರ್ತಣ್ಡದೇವ. ಅರುಮುಳಿದೇವನ ಪ್ರಶಸ್ತಿಗಳು: ಕೊಮರಂಕಭೀಮ, ನೀತಿಜ್ಞ, ನೀತಿಮಾರ್ಗ, ನೀತಿಮಹಾರಾಜ. ಅರುಮೊಱಿ ಮತ್ತು ಅರುಮುಳಿ ಎಂಬ ಎರಡು ಹೆಸರುಗಳೂ ಒಂದೇ ಮೂಲದ ಮತ್ತು ಒಂದೇ ಅರ್ಥದ ರೂಪಗಳು : ಇವು ಅಚ್ಛಗನ್ನಡ (ದ್ರಾವಿಡ) ಮೂಲದ ಹೆಸರುಗಳು; ಇದರ ಅರ್ಥ ಸಹ ಸತ್ಯವಾಕ್ಯ ಎಂದೇ. ಗಮ್ಗರಾಜರ ಬಿರುದುಗಳಲ್ಲಿ ಬರುವ ಸತ್ಯವಾಕ್ಯ ಎಂಬುದಕ್ಕೆ ಸಂವಾದಿಯಾದ ಕನ್ನಡ ಶಬ್ದರೂಪ ಅರುಮೊಱಿ(ಮುಳಿ). ಮರುಳನಿಗೆ (ಬೂತಗನ ಹಿರಿಯ ಮಗ) ಅರುಮೊಱಿದೇವ ಎಂಬ ಹೆಸರೂ ಇದ್ದಹಾಗೆಯೇ, ಅರುಮೊಳಿದೇವನಿಗೂ (ವಾಸನ ಮಗ) ಮರುಲ ಎಂಬ ಇನ್ನೊಂದು ಹೆಸರೂ ಇದ್ದಿತೆಂಬುದು ಗುತ್ತಲಿನಲ್ಲಿ ದೊರೆತಿರುವ ಈ ಹೊಸ ಶಾಸನದಿಂದ ಸಾಬೀತು ಆಗುತ್ತದೆ.

ಅರುಮುಳಿದೇವನ ಹಿರಿಯ ಮಗಳು ಚಟ್ಟಲದೇವಿಯು, ತನ್ನ ಗಂಡನು ಸತ್ತಮೇಲೆ ಕಂಚಿಯನ್ನು ತೊರೆದು, ಪೊಂಬುಚ್ಚದಲ್ಲಿ ಬಂದು ನೆಲಸಿದಳು. ಅದಕ್ಕೆ ಕಾರಣವೂ ಇತ್ತು. ಚಟ್ಟಲೆಯ ತಂಗಿಯಾದ ಕಂಚಲದೇವಿಯು (ಬೀರಲದೇವಿ) ನಾಲ್ಕು ಗಂಡು ಮಕ್ಕಳನ್ನು ಹಡೆದು ಮರಣಹೊಂದಿದಳು. ತನ್ನ ತಂಗಿಯ ಚಿಕ್ಕ ಪುಟ್ಟ ಬಾಲಕರನ್ನು ಸಾಕಿ ಬೆಳೆಸುವ ಹೊಣೆಯನ್ನು, ಆ ಮಕ್ಕಳ ಸ್ವಂತ ದೊಡ್ಡಮ್ಮಳಾದ ಚಟ್ಟಲೆಯು ವಹಿಸಿಕೊಂಡಳು. ಆಕೆ ಸಾಕಿ ಬೆಳೆಸಿದ ನಾಲ್ಕು ಮಕ್ಕಳು: ತೈಲ (ಭುಜಬಳ ಸಾಂತರ), ಗೊಗ್ಗಿಗ (ಗೋವಿಂದರದೇವ – ನನ್ನಿಶಾಂತರ), ಒಡ್ಡುಗ (ವಿಕ್ರಮ ಶಾಂತರ) ಮತ್ತು ಬಮ್ಮ (ಬ್ರಹ್ಮ). ಈ ನಾಲ್ವರೂ ಪ್ರಸಿದ್ಧ ಸಾಂತರ ಅರಸರೆನಿಸಿದರು.

ಚಟ್ಟಲದೇವಿಯ ತಂದೆ ಅರುಮುಳಿದೇವನೂ, ತಾಯಿ ಗಾವಬ್ಬರಸಿಯೂ, ತಂಗಿ ಕಂಚಲ (ವೀರಲ) ದೇವಿಯೂ ಮತ್ತು ಒಡಹುಟ್ತಿದ ಒಬ್ಬನೇ ತಮ್ಮ ರಾಜ ವಿದ್ಯಾಧರ (ರಾಜಾದಿತ್ಯ) ನೂ – ಒಬ್ಬರಾದ ಮೇಲೊಬ್ಬರು ಸಾಲಾಗಿ ನಿಧನರಾದರು. ಅದರಿಂದ ಅವರೆಲ್ಲರ ನೆನಪಿಗಾಗಿ, ಪರೋಕ್ಷವಿನಯಾರ್ಥವಾಗಿ ಪೊಂಬುಚ್ಚದಲ್ಲಿ ಪ್ರಾಗೇವಚಿನ್ತೇನ್ ಎಂಬ ವಾಕ್ಯಾರ್ಥಮಂ ಭಾವಿಸಿ ಅರುಮುಳಿದೇವಂಗಂ ಗಾವಬ್ಬರಸಿಗಂ ವೀರಲದೇವಿಗಂ ರಾಜಾದಿತ್ಯದೇವಂಗಂ ಪರೋಕ್ಷವಿನಯಮಮ್ಮಾಡ ಲೆಂದು ಉರ್ವ್ವೀ ತಿಳಕಮೆನಸಿದ ಪಂಚವಸದಿಯಂ (ಮಾಡಿಸಿದಳ್). [ಎ.ಕ. ೮, ನಗರ. ೩೫, ೧೦೭೭, ಹೊಂಬುಜ, ಪು. ೩೬೨, ಸಾಲು : ೬೨-೬೩]. ಇದಲ್ಲದೆ ಆ ಪಂಚಬಸದಿಯ ಪ್ರತಿಬದ್ಧವಾಗಿ ಆನಂದೂರಲು ಚತ್ಟಲದೇವಿಯುಂ ಶ್ರೀಮತ್ ತ್ರಿಭುವನಮಲ್ಲ ಶಾಂತರದೇವನುಂ ಬೀರಬ್ಬರಸಿಯರ್ಗ್ಗೆ ಪರೋಕ್ಷವಿನಯಮಾಗಿ ಬಸದಿಯಂ ಶ್ರೀಮದ್ ದ್ರವಿಳಸಂಘದ +ಅರ್ಂಗಳಾನ್ವಯದ ವಾದಿಘರಟ್ಟನೆನಿಸಿದ ಶ್ರೀಮದಜಿತಸೇನ ಪಣ್ಡಿತದೇವರ ನಾಮೋಚ್ಚಾರಣದಿಂ ಕೆಸರ್ಕ್ಕಲ್ಲಿ ಕ್ಕಿಸಿದರ್ [ಅದೇ, ತಿರ್ಥಹ. ೧೯೨, ೧೧೦೩, ದಾನಶಾಲೆ, ಪು. ೬೮೭, ಸಾಲು : ೩೪-೩೬].

ಅರುಮೊಳಿದೇವನು ಸಹ ಸನ್ಯಸನಂಗೆಯ್ದು ಮುಡಿಪಿದ್ದನ್ನು ಶಾಸನ ದಾಖಲಿಸಿದೆ [ಎ.ಕ. ೯ (ಪ). ಸಪು ೩೦ (೫ ಮುಂಬಾ ೫೫) ಅತೇದಿ. ಬಾಳ್ಳು. ಪು. ೧೫೮]. ಅರುಮುಳಿದೇವನು ಮರುಣಿಸಿದ ತೇದಿ ಶಾಸನದಲ್ಲಿಲ್ಲ. ಆದರೆ ಸಕಲೇಶಪುರ ೨೧, ೨೯, ೩೨, ೩೩, ಮತ್ತು ೫೫ ನೆಯ ಸಂಖ್ಯೆಯ ಹಾಗೂ ಬೇಲೂರು ೫೨೪ ನೆಯ ಶಾಸನಗಳ ಅಂತರ – ಬಾಹ್ಯ ಪ್ರಮಾಣಗಳಿಂದ ನೀತಿಮಹಾರಾಜ ಅರುಮುಳಿದೇವನು ಕ್ರಿ.ಶ. ೧೦೨೪ ರಿಂದ ೧೦೩೫ ರ ವರೆಗೆ ಆಳಿದನೆಂದೂ, ಕ್ರಿ.ಶ. ೧೦೩೫ ರಲ್ಲಿ ಜೈನಧರ್ಮ ಪ್ರಣೀತ ಪಂಡಿತಮರಣವನ್ನು ಪಡೆದನೆಂದೂ ತಿಳಿಯಬಹುದಾಗಿದೆ.

ಅಣ್ಣನಾದ (ನೀತಿಮಾರ್ಗ – ಪೆರ್ಮಾನಡಿ – ಗೋವಿಂದರದೇವ) ರಕ್ಕಸಗಂಗನು ಕ್ರಿ.ಶ. ೯೯೯ ರಿಂದ ೧೦೨೪ ರವರೆಗೂ, ತರುವಾಯ ತಮ್ಮನಾದ (ನೀತಿಮಹಾರಾಜ) ಅರುಮುಳಿದೇವನು ಕ್ರಿ.ಶ. ೧೦೨೪ ರಿಂದ ೧೦೩೫ ರ ವರೆಗೂ ಗಂಗರಸರಾಗಿ ಮಾಂಡಲಿಕರಾಗಿ ಆಳಿದರು. ಅರುಮುಳಿದೇವನ ಮಗನಾದ ವಿದ್ಯಾಧರನು ಸಹ, ತನ್ನ ದೊಡ್ಡಪ್ಪ ರಕ್ಕಸಗಂಗ ಪೆರ್ಮಾನಡಿಯು ಆಳುತ್ತಿದ್ದ, ಮಂಡ್ಯ ಜಿಲ್ಲೆಯ ಗುತ್ತಲನ್ನೂ ಒಳಗೊಂಡ ಗಂಗರ ಪ್ರದೇಶವನ್ನು ೧೦೨೪ ರಿಂದ (ಯುವರಾಜನಾಗಿ) ಆಳುತ್ತಿದ್ದನು.

೪.೧. ಎರಡು ಜಿಜ್ಞಾಸೆ

ವಿದ್ಯಾಧರನ ವಿಚಾರವಾಗಿ ದೊರೆತಿರುವ ಮಾಹಿತಿ, ಒಟ್ಟು ಶಾಸನಗಳ ಮೊತ್ತ ಕಡಿಮೆ. ಇದುವರೆಗೆ ಆತನನ್ನು ಕುರಿತ ಮುಖ್ಯ ಶಾಸನವೆಂದರೆ ಹೊಂಬುಜ ಪುರ್ವೋಕ್ತ ಶಾಸನವೊಂದೇ ಆಗಿತ್ತು. ಅದರಲ್ಲಿ ವಿದ್ಯಾಧರನ ಹಿರಿಯರ – ಹಿಂದಿನ ಏಳು ತಲೆಮಾರುಗಳ ವಿಸ್ತಾರವಾದ ವಿವರಣೆಯಿದೆ. ಆತನ ತಾಯಿ – ತಂದೆಯರ ಸಮಗ್ರ ಪರಿಚಯವೂ ಅಲ್ಲಿದೆ. ಆದರೂ ವಿದ್ಯಾಧರನ ಜೀವನ ಸಾಧನೆಗಳು ಸರಿಯಾಗಿ ತಿಳಿಯದು. ಆತ ಹುಟ್ಟಿದ್ದು. ಆತನನ್ನು ದೊಡ್ಡಪ್ಪ ದತ್ತು ಪಡೆದದ್ದು, ಆತ ಸತ್ತದ್ದರಿಂದ ದೊಡ್ಡ ಅಕ್ಕಳಾದ ಚಟ್ಟಲೆಯು ಪರೋಕ್ಷ ವಿನಯಕ್ಕಾಗಿ ಪಂಚ ಬಸದಿ ಕಟ್ಟಿಸಿದ್ದು ಗೊತ್ತಿತ್ತು. ಆದರೆ ವಿದ್ಯಾಧರನು ಇಲ್ಲಿ ಮತ್ತು ಹೇಗೆ ಸತ್ತನೆಂಬ ಆತನ ಬದುಕಿನ ಕಡೆಯ ದಿನಗಳ ಚಿತ್ರಣ ಅಜ್ಞಾತವಾಗಿತ್ತು. ಕತ್ತಲೆಯಲ್ಲಿದ್ದ ವಿದ್ಯಾಧರನ ಬಾಳಿನ ಉತ್ತರಾರ್ಧವನ್ನು ಗುತ್ತಲಿನ ಈ ಹೊಸ ಶಾಸನ ಒಮ್ಮೆಲೇ ಬೆಳಕಿಗೆ ತಂದಂತಾಗಿದೆ.

ಈಗ ಉದ್ಭವಿಸುವ ಪ್ರಶ್ನೆಯೆಂದರೆ ತಂದೆಯಾದ ಅರುಮುಳಿದೇವನು ಮೊದಲು ಸನ್ಯಸನದಿಂದ ಮುಡಿಪಿದನೊ, ಇಲ್ಲವೇ ಮಗನಾದ ವಿದ್ಯಾಧರನು ಮೊದಲು ಮುಡಿಪಿದನೊ ಎಂಬುದು. ತಂದೆಯೇ ಮೊದಲು ಸಾಯುವುದು ಲೋಕ ರೂಢಿ. ಅದರಲ್ಲಿ ಅತಿಶಯವೇನಿಲ್ಲ, ಕ್ರಮಲೋಪವೂ ಇಲ್ಲ. ತಂದೆ ಅರುಮುಳಿದೇವನು, ಮಗ ಇನ್ನೂ ಬದುಕಿರುವಾಗ, ನಿಧನನಾಗಿದ್ದರೆ ಆದರಿಂದ ಮಗನಿಗೆ ದುಃಖವಾದರೂ ಸಲ್ಲೇಖನ ವ್ರತ ಸ್ವೀಕರಿಸುವುದು ಸಹಜವಲ್ಲ. ಆದರೆ ಅದೇ ತಂದೆ ಇನ್ನೂ ಬದುಕಿರುವಾಗ ಬಹುಕಾಲ ಬಾಳಬೇಕಾದ ಮಗ ಮರಣಿಸಿದರೆ ಆ ನೋವು ತಂದೆಗೆ ದುರ್ಭರ; ಪುತ್ರ ಶೋಕಂ ನಿರಂತರಂ ಎಂಬ ಸೂಕ್ತಿಯಿದೆ. ಹೀಗಾಗಿ ಮಗ ವಿದ್ಯಾಧರನು ಸುಮಾರು ಕ್ರಿ.ಶ. ೧೦೩೪-೩೫ ರಲ್ಲಿ ಗುತ್ತಲಲ್ಲಿ ಸನ್ಯಸದ ವಿಧಾನದಿಂದ ಮುಡಿಪಿರದೇವನು ಕ್ರಿ.ಶ. ೧೦೩೫ ರಲ್ಲಿ ಸನ್ಯಸನದಿಂದ ಮುಡಿಪಿದನೆಂದೂ ತೀರ್ಮಾನಿಸನಹುದು.

ಗುತ್ತಲಿನಲ್ಲೇ ವಿದ್ಯಾಧರನು ಮುಡಿಪಿದ್ದಕ್ಕೆ ಪ್ರಬಲ ಕಾರಣಗಳಿದ್ದರೂ ಅದರ ಸ್ವರೂಪ ತಿಳಿಯದಾಗಿದೆ. ಆಗಲೇ ಹೇಳಿರುವಂತೆ ಗುತ್ತಲೂ ಸೇರಿಕೊಂಡು ಮಂಡ್ಯ ಜಿಲ್ಲೆಯ ಈ ಮದ್ದೂರು – ಮಳವಳ್ಳಿ ಪರಿಸರ ಗಂಗವಾಡಿ ತೊಂಬತ್ತಱು ಸಾಸಿರ ಪ್ರದೇಶವಾಗಿತ್ತು. ತಿಪ್ಪೂರು ತೀರ್ಥವಂತೂ ವಿಖ್ಯಾತವಾಗಿತ್ತು. ರಾಷ್ಟ್ರಕೂಟ ಮುಮ್ಮಡಿ ಕೃಷ್ಣನು ಚೋಳರ ಮೇಲೆ ವಿಜಯಿಯಾಗಿ, ಬೂತಗನು ಚೋಳರ ರಾಜಾದಿತ್ಯನ ಆನೆಯ ಮೇಲೇರಿ ಅದರ ಅಂಬಾರಿಯನ್ನೇ ರಣರಂಗವಾಗಿಸಿ (ಬಿಸುಗೆಯ ಕಳನಾಗಿ) ರಾಜಾದಿತ್ಯನನ್ನು ಕೊಂದದ್ದೂ, ಬೂತಗನ ಬಲಗೈ ಬಂಟ ಸಗರಮಣಲೆರನು ಚೋಳರಾಜಾದಿತ್ಯನ ಆನೆಯನ್ನು ಕೊಂದು ಕಾಳಿಯೆಂಬ ಶ್ರೇಷ್ಠ ಹೆಣ್ಣುನಾಯಿಯನ್ನು ಪಡೆದದ್ದೂ – ಇವೆಲ್ಲ ನಡೆದ ಆತುಕೂರು ಸಹ ಈ ಗುತ್ತಲೆಗೆ ಹತ್ತಿರದ ಊರು.

ಗುತ್ತಲಲ್ಲಿ ಜಿನಾಲಯಗಳಿದ್ದುವು. ಗುತ್ತಲಿನ ಒಂದು ಶಾಸನದಲ್ಲಿ ಎರಡು ಕಡೆ ‘ಬಸದಿಹಳ್ಳಿ’ ಯ ಪ್ರಸ್ತಾಪವೂ ಬಂದಿದೆ [ಎ.ಕ. ೭ (ಪ.) ಮಂ ೬೦ (೧೧೧ ಮಂ ೧೦೦) ೧೩೧೬. ಗುತ್ತಲು. ಪು. ೨೩೯-೪೦, ಸಾಲು: ೯,೧೮]. ಗುತ್ತಲಲ್ಲಿದ್ದು ಹಾಳಾದ ಬಸದಿಯ ವಿಚಾರ ಊರಿನ ಹಿರಿಯರು ಹೇಳುವ ಮಾಹಿತಿಯಿಂದ ಸಾಬೀತಾಗುತ್ತದೆ. ಗೊರೆತಿರುವ ನಿಸದಿ ಶಾಸನವೇ ಅಲ್ಲಿದ್ದ ಬಸದಿಗೆ ಪ್ರತ್ಯಕ್ಷ ಸಾಕ್ಷಿ. ಅರ್ಕೇಶ್ವರ ಗುಡಿಯ ಪಕ್ಕದಲ್ಲಿ ಇರುವ ಕುಂಟೆಯೊಳಗೆ ಸೇರಿ ಹೋಗಿರುವ ತೀರ್ಥಂಕರ ವಿಗ್ರಹದ ವಿಚಾರವಾಗಿ ಊರಿನವರು ತಿಳಿಸಿದ್ದಾರೆ. ಈ ದೇವಾಲಯದ ನೆರೆ ಹೊರೆಯ ತಮ್ಮ ಹೊಲಗದ್ದೆಗಳನ್ನು ಮಾರಿಕೊಂಡು ಇಲ್ಲಿದ್ದ ಜೈನ ಕುಟುಂಬಗಳವರು ಗುಳೆ ಹೋದದನ್ನೂ ಗುತ್ತಲು ಗ್ರಾಮದ ವೃದ್ಧರು ವಿವರಿಸಿದ್ದಾರೆ. ಈ ಎಲ್ಲ ಅಂಶಗಳು, ಸಾಕ್ಷ್ಯಾಧಾರಗಳು ಗುತ್ತಲಲ್ಲಿ, ನಿರ್ದಿಷ್ಟವಾಗಿ ಈಗಿರುವ ಮತ್ತು ನಿಷದಿಕಲ್ಲು ಸಿಕ್ಕಿರುವ ಅರ್ಕೇಶ್ವರ ದೇವಾಲಯದ ಹತ್ತಿರ ಜಿನಾಲಯವಿದ್ದು ಹಾಳಾಗಿರುವುದನ್ನು ದೃಢಪಡಿಸುತ್ತವೆ. ಪ್ರಾಯಃ ಅರ್ಕೇಶ್ವರ ಗುಡಿಯೂ ಮತಾಂತರಗೊಂಡ ಬಸದಿಯಾಗಿದ್ದಿರಬಹುದು.

೫.೧ ಮಹತ್ವದ ಅಂಶಗಳು

ಈಗ ಹೊಸದಾಗಿ ದೊರೆತಿರುವ ಗುತ್ತಲಿನ ಪುಟ್ಟ ಶಿಲಾಸಾಸನವು ಐತಿಹಾಸಿಕ ಮಹತ್ವದ್ದಾಗಿದೆ. ಈ ಶಾಸನದ ಒಕ್ಕಣೆಯಿಂದ ಕೆಳಕಂಡ ತೀರ್ಮಾನಗಳಿಗೆ ತಲುಪಬಹುದು:

೧) ಬೂತುಗನ ಮೊಮ್ಮಗನೂ, ವಾಸವನ ಮಗನೂ, ಹೊಂಬುಜ ಶಾಸನೋಕ್ತನೂ [ಎ.ಕ. ೮ (೧೯೦೨) ನಗರ ೩೫.೧೦೭೭] ಆದ ಸತ್ಯವಾಕ್ಯ ಗೋವಿಂದರದೇವ ರಕ್ಕಸಗಂಗನೂ, ಮಂಡ್ಯ ೫೪ ನೆಯ ಶಾಸನೋಕ್ತ [ಎ.ಕ. ೭(ಪ.) ಮಂ ೫೪ (೧೪ ಮಂ ೧೨೬). ೧೦೨೪. ಹಳೇ ಬೂದನೂರು. ಪು. ೨೩೬, ಸಾಲು : ೧-೭] ಸತ್ಯವಾಕ್ಯ ಗೋವಿಂದರ ರ್ತಕ್ಕಸಗಂಗ ಪೆರ್ಮಾನಡಿಯೂ ಅಭಿನ್ನರು.

೨) ಈ ಸತ್ಯವಾಕ್ಯಗೋವಿಂದರ ರಕ್ಕಸಂಗ ಪೆರ್ಮಾನಡಿಯ ದತ್ತುಪುತ್ರನೇ ವಿದ್ಯಾಧರ. ವಿದ್ಯಾಧರನು ಸತ್ಯವಾಕ್ಯಗೋವಿಂದರ ರಕ್ಕಸಗಂಗನ ತಮ್ಮನಾದ ಅರಮುಳಿದೇವನ ಮಗ. ವಿದ್ಯಾಧರನಿಗೆ ಲೋಕವಿದ್ಯಾಧರ (ಗುತ್ತಲಿನ ಹೊಸ ಶಾಸನ ಪ್ರಯೋಗ), ರಾಜ ವಿದ್ಯಾಧರ (ಹೊಂಬುಜ ಶಾಸನ ಪ್ರಯೋಗ) ಮತ್ತು ರಾಜಾದಿತ್ಯ (ಹೊಂಬುಜ ಶಾಸನ ಪ್ರಯೋಗ) ಎಂಬ ಮೂರು ಹೆಸರುಗಳಿವೆ.

೩) ವಿದ್ಯಾಧರನನ್ನು ‘ದಿನಕರಂ ಪುಟ್ಟಿರ್ದ್ದುವೆಂಬಿನಂ’ ಹುಟ್ಟಿದನೆಂದು ಹೊಂಬುಜ ಶಾಸನದಲ್ಲಿ ವರ್ಣಿಸಿದೆ, ‘ನಿಜಾನ್ವಯ ದಿನಕರ’ ನೆಂದು ಗುತ್ತಲಿನ ಹೊಸ ಶಾಸನ ಬಣ್ಣಿಸಿದೆ.

೪) ಗಂಗರಿಗೆ ವಿದ್ಯಾಧರ ಎಂಬುದು ಪ್ರಿಯವಾದ ಹೆಸರು. ಇಮ್ಮಡಿ ಮಾರಸಿಂಹನಿಗೆ ಇದ್ದ ಹಲವು ಬಿರುದುಗಳಲ್ಲಿ ‘ಗಂಗ ವಿದ್ಯಾಧರ’ ಎಂಬುದೂ ಒಂದು [ಎ.ಕ. ೨ (ಪ.) ೬೪ (೫೯) ಸು. ೯೭೫. ಪು. ೨೨. ಸಾಲು : ೧೦೩].

೫) ಮಂಡ್ಯ ಜಿಲ್ಲೆಯಲ್ಲಿ ಗಂಗರು ಹತ್ತನೆಯ ಶತಮಾನದ ಅಂತ್ಯದವರೆಗೆ ಆಳಿದರೆಂಬ ತಿಳಿವಳಿಕೆಯಿತ್ತು. ಈಗ ದೊರೆತಿರುವ ಗುತ್ತಲು ಶಾಸನದಿಂದಾಗಿ ಮಂಡ್ಯ ಜಿಲ್ಲೆಯಲ್ಲಿ ಗಂಗರ ಆಳಿಕೆಯು ಹನ್ನೊಂದನೆಯ ಶತಮಾನದ ಮದ್ಯಭಾಗದವರೆಗೂ ಮುಂದುವರೆದಿತ್ತೆಂದು ಖಾತ್ರಿಯಾಗುತ್ತದೆ.

೬) ಗುತ್ತಲು ಒಂದು ಜೈನ ಕೇಂದ್ರವಾಗಿತ್ತು. ಇಲ್ಲಿ ಒಂದೆರಡು ಬಸದಿಗಳು ಇದ್ದುದಕ್ಕೆ ಸಾಕ್ಷ್ಯಾಧಾರಗಳಿವೆ. ಹಿಂದೆ ಇನ್ನೂ ಹೆಚ್ಚು ಬಸದಿಗಳಿದ್ದಿರಬಹುದು.

೭) ಗುತ್ತಲು ಗ್ರಾಮವು ಹಿಂದೆ ಗಂಗರ ಅಂತಿಮಘಟ್ಟದ ಆಳಿಕೆಯ ನೆಲೆವೀಡುಗಳಲ್ಲಿ ಒಂದಾಗಿದ್ದಿರಬಹುದು.

೮) ಗುತ್ತಲಿನ ಈಗಿನ ಅರ್ಕೇಶ್ವರ ದೇವಾಲಯ ಮತ್ತು ಅದರ ಹತ್ತಿರವಿರುವ ಗುತ್ತಲಮ್ಮನ ಗುಡಿಗಳು ಇರುವ ಸ್ಥಳಗಳಲ್ಲಿ ಹಿಂದೆ ಜಿನಾಲಯಗಳಿದ್ದುವು.

೯) ಗಂಗರ ರಾಜಕುಮಾರನಾದ (ಲೋಕ) ವಿದ್ಯಾಧರ (- ರಾಜಾದಿತ್ಯ) ನು ಗುತ್ತಲಿನಲ್ಲಿದ್ದ ಬಸದಿಯೊಂದರಲ್ಲಿ ಸು. ೧೦೩೪-೩೫ ಸಲ್ಲೇಖನ ವ್ರತ ಸ್ವೀಕರಿಸಿ ಮುಡಿಪಿದನು.

೧೦) ವಿದ್ಯಾಧರನು ಇಲ್ಲಿಯೇ ಸನ್ಯಸನ ವಿಧಿಯಿಂದ ಮುಡಿಪಿರಬೇಕಾದರೆ ಇಲ್ಲಿನ ಬಸದಿಗಳಲ್ಲಿ ಜೈನಾಚಾರ್ಯರೂ ಇದ್ದರು; ಅವರ ವಿವರಗಳು ಗೊತ್ತಿಲ್ಲ.

೧೧) ಗುತ್ತಲಿನಲ್ಲಿ ಅಥವಾ ಅದರ ಹತ್ತಿರದಲ್ಲಿ ಇದ್ದ ಬಸದಿಹಳ್ಳಿ ಬಗ್ಗೆ ಇಲ್ಲಿನ ಶಾಸನ [ಅದೇ, ಮಂ. ೬೦.೧೩೧೬] ಉಲ್ಲೇಖಿಸಿದ್ದರೂ ಆ ಬಸದಿಗ್ರಾಮ ಯಾವುದೆಂಬುದು ಸರಿಯಾಗಿ ತಿಳಿಯುತ್ತಿಲ್ಲ.

೧೨) ಬೂತುಗನ ಹಿರಿಯ ಮಗನಾದ ಮರುಳನಿಗೆ ಅರುಮೊಱಿದೇವ ಎಂಬ ಇನ್ನೊಂದು ಹೆಸರು ಇದ್ದ ರೀತಿಯಲ್ಲಿಯೇ, ಬೂತಗನ ಮೊಮ್ಮಗನಾದ ಅರುಮುಳಿದೇವನಿಗೂ ಮರುಳ ಎಂಬ ಇನ್ನೊಂದು ಹೆಸರೂ ಇದ್ದಿತೆಂಬುದಾಗಿ ತಿಳಿದುಬರುತ್ತದೆ.

೧೩) ಗುತ್ತಲಿನ ಈ ಹೊಸ ಶಾಸನದ ಆರಂಭದಲ್ಲಿ ಇರುವುದು ಅಪರೂಪದ ಸಂಸ್ಕೃತ ಶ್ಲೋಕ. ಬಹುಮಟ್ಟಿನ ಜೈನಶಾಸನಗಳ ಪ್ರಾರಂಭದಲ್ಲಿ ಸಾಮಾನ್ಯವಾಗಿ ‘ಶ್ರೀಮತ್ಪರಮಗಂಭೀರ ಸ್ಸಾದ್ವಾದಾಮೋಘ ಲಾಂಛನಂ…’ ಎಂಬ ಶ್ಲೋಕ ವಿರುತ್ತದೆ. ಇದರ ಜತೆಗೆ ಅಥವಾ ಇದರ ಬದಲಿಗೆ ಬೇರೆ ಜಿನಸ್ತುತಿ ಶ್ಲೋಕಗಳೂ ಜೈನ ಶಾಸನಗಳಲ್ಲಿವೆ. ಗುತ್ತಲಿನ ಶಾಸನಾರಂಭದ ಶ್ಲೋಕ ಅಂತಹ ವಿರಳ ರಚನೆ. ಇದುವರೆಗೆ ಈ ಶ್ಲೋಕ ಕೆಲವು ಶಾಸನಗಳಲ್ಲಿ ಮಾತ್ರ ಪ್ರಯೋಗವಾಗದೆ : ಸೌ.ಇ.ಇ. ೯-೧. ೧೧೭. ೧೦೫೫ ಕೋಗಳಿ (ಬಳ್ಳಾರಿ ಜಿ./ ಹಡಗಲಿ ತಾ.) ಪು. ೯೨; ಅದೇ, ೧೧-೧. ೧೧೧.೧೦೭೧, ಸೊರಟೂರು (ಧಾಜಿ / ಗದಗ ತಾ)ಪು. ೧೦೮; ಎ.ಕ. ೮ ಕಲ್ಬುರ್ಗಿ ಜಿಲ್ಲೆಯ ಶಾಸನಗಳು (ಸಂ. ಹನುಮಾಕ್ಷಿ ಗೋಗಿ: ೧೯೯೬), ಹುಣಸಿ ಹಡಗಲಿ ಶಾಸನ. ೩೮,೧೦೯೯. ಪು. ೨೨೯; ಅದೇ, ಸೇಡಂ, ೧೭. ೧೧೩೭. ಪು. ೪೯೯; ಅದೇ, ಸೇಡಂ. ೧೮.೧೨ ಶ. (ಸು. ೧೧೨೪). ಪು. ೫೦೨. ಮತ್ತು ನಗರ ೪೨. ಹೊಂಬುಜ.

೧೪) ಗುತ್ತಲಿನ ಹೊಸ ಶಾಸನ ಗಂಗ ಮನೆತನಕ್ಕೆ ಮಾತ್ರ ಅಲ್ಲದೆ ಪೊಂಬುಚ್ಚ ಪುರವರಾಧೀಶರಾದ ಸಾಂತರರ ಮನೆತನಕ್ಕೂ ಬೆಳಕು ಚೆಲ್ಲುವ ಮಹತ್ವದ ಶಾಸನವಾಗಿದೆ.

೧೫) (ಲೋಕ) ವಿದ್ಯಾಧರ (ರಾಜಾದಿತ್ಯ) ನ ರಾಜಾವಳಿಯ ರೇಖಾಚಿತ್ರವನ್ನು ಈಗ ನಿರ್ಧರಿಸುವುದಕ್ಕೆ ಆಧಾರಗಳು ಉಪಲಬ್ಧವಿವೆ.

ಹೆಚ್ಚಿನ ವಿವರಗಳು

ನಾಗರಾಜಯ್ಯ, ಹಂಪ : ಸಾಂತರರು – ಒಂದು ಅಧ್ಯಯನ, ೧೯೭೭

ವಿದ್ಯಾಧರನ ವಂಶವೃಕ್ಷ ಗಂಗವಂಶದ ಬೂತುಗ   

 02_257_CK-KUH