ಇತ್ತೀಚೆಗೆ ನನಗೆ ದೊರೆತ ಕೊಪ್ಪಳದ ಹೊಸ ಶಾಸನಗುತ್ತಿಯಲ್ಲಿ ಒಂದು ಶಾಸನದ ಪಾಠವನ್ನು ಉದಾಹರಿಸುತ್ತೇನೆಃ

(ಮುಂಭಾದ)
೧ ಭದ್ರಂ ಭವತ್ವಖಿಳ ಧಾರ್ಮ್ಮಿಕ ಪುಣ್ಡರೀಕ
೨ ಷಣ್ಡಾವ ಬೋಧನ ಸುಮಿತ್ರ ದಿವಾಕರಾಯ
೩ ಸಂಸಾರ ಸಾಗರ ವಿಚಿತ್ರ ತಮಘ್ನ ಜಂತೋರ್ಹ
೪ ಸ್ತಾವಳಂಬನ ಕ್ರಿತೋ ಜಿನಶಾಸನಾಯ ||
೫ ನೆಗೞ್ದ ಪ…………..
(ಇಲ್ಲಿಂದ ಮುಂದೆ ಕಲ್ಲು ಒಡೆದಿದೆ)

(ಬಲಬದಿ)
೧ (ನೆಗೞ್ದ) ರಜಿತಸೇನ ಮುನಿ ಮುಖ್ಯ
೨ ನಾದ ಗುಡ್ಡ ಗಂಗಮಣ್ಡಳೇಶ್ವರನ [ರ್ಹ]
೩ ತ್ಪರರು ಪದಾಂ ಭೋರುಹ [ಷಟ್ಟ]
೪ ರಣಂ ಶ್ರೀ ರಾಜಮಲ್ಲದೇವ [ಗಂ] ಗ
೫ (ನೃಪಂ) || ಅರಿಯನಿಕ್ಕಿ ವಿಕ್ರಮ
೬ [ಮಂ] ಕೊಣ್ಡ ಪೆಸರ್ಪ್ಪೆಸರನ್ಯಮಣ್ಡ
೭ ಳೇಶ್ವರರನಡಿಪ್ಪಿ ಸಾಹ (ಸದಿ)
೮. ನ್ದಂ ಕೊಣ್ಡ ಧನಂ ಧನಪನ್ಯವೈರಿ
೯ ಭೂಪರನಱೆಯಟ್ಟಿ ತೋಳ್ವಲ
೧೦ …………………(ಮುಕ್ಕಾಗಿದೆ)

(ಇನ್ನೊಂದು ಕಲ್ಲಿನ ಎಡಭಾಗ)
೧ ಪಜ್ಜರ ಪೆಸರ್ನ್ನೆಹೞ್ಡೆಸೆಯೆ
೨ ಕೈಕೊಣ್ಡಂ ಚಕ್ರಮಂ ಗಂಗ
೩ ಭೂಭುಜಂ || ಆಹವದೊಳ್ನಿ
೪ ನಗೊಲ್ದುವರೆ ಹರಿಹರರು
೫ ೞೆದರಿರ್ಕ್ಕೆ ಸತ್ಯಾರ್ಣ್ನವ ಪೇಟೆ

(ಇದೇ ಎಡಭಾಗದ ಕೆಳಗಡೆ)
೧x [ಯ] ಕೈಳಾನ್ತಕರ್ಗ್ಗೆಕೈ
೨xx ಹಳಪಮಾರ ಮಲ್ಲ
೩ ಮದಕರಿ……….

(ಬೇರೆ ಕಡೆ)
೧ ಆ ನೃಪನ ಮಹಾದೇವಿ ಮಹಾನ್ವಯ
೨ ಕುಳತಿಳಕೆ ಕಞ್ಚಬ್ಬರಸಿಯರ್ಯ್ಯ
೩ ಶಂ ನಿಲೆ ಪತಿಯ ಪರೋಕ್ಷದೊಳ್
೪ ತಾನನ್ದಿರದೆ ದೀಕ್ಷೆಯಂ ಕೈ ಕೊಣ್ಡಳ್
೫ ಗುರುಗಳನಿನ್ದ್ಯರಪ್ಪಜಿತಸೇನ ಮು
೬ ನೀಶ್ವರರಾಗೆ ತತ್ವಾರ್ತ್ಥಪರಿಣತಿ
೭ ಧರ್ಮ್ಮದೊಳಾದ ಮಹೋಪಶಮ
೮ ಕ್ರಮದೊಳ್ಮನಂ ಸಂದಾಚರಣದೊಳೆ
೯ x ಪೂತ ಮುಗುನ್ದದೆ ವೊಗಿರಿಸ

(ಬೇರೆ ಮುಖ)
೧ ಸಿತ್ತೋ ಜಿನೇಂದ್ರ ಶಾ
೨ ಸನಂ || ಸ್ವಸ್ತಿ ಗಂಗಮಣ್ಡಳೇಶ್ವರ
೩ ನ ರಾಜಮಲ್ಲದೇವನರಸಿ
೪ ಕಞ್ಚಬ್ಬರಸಿಯರ್ಪ್ಪಲ ಕಾ
೫ ಲಂ ತಪಂಗೆಯ್ದು ಶಕಕಾಳ ೯೪೫
೬ ದುನ್ದುಭಿ ಸಂವತ್ಸರದ ಮಾಘ
೭ ಬಹುಳ ಪಞ್ಚಮಿ ಬೃಹಸ್ಪತಿ
೮ ವಾರದನ್ದು ಶ್ರೀಕುಪಣತೀರ್ತ್ಥದೊ
೯ ಳ್ಸಮಾಧಿ ವಿಧಿಯಿಂ ರತ್ನತ್ರ
೧೦ ಯಮಂ ಸಾಧಿಸಿ ದೇವಲೋಕ
೧೧ ಕ್ಕೆ ವೋದರ್ ಮಜ್ಞ್ಗಳಂ

ಕ್ರಿ.ಶ. ೧೦೨೩ ರಲ್ಲಿ ಕುಪಣತೀರ್ಥದಲ್ಲಿ ಸಮಾಧಿ ವಿಧಿಯಿಂದ ಮುಡಿಪಿದ ಕಂಚಬ್ಬರಸಿಯ ವಿಚಾರ ಶಾಸನಗಳಲ್ಲಿ ಇದುವರೆಗೆ ದಾಖಲಾಗಿಲ್ಲ. ಗಂಗರ ದುಗ್ಗಮಾರ ಎಱೆಯಪ್ಪೊರನ ಹೆಂಡತಿ ಕಂಚಿಯಬ್ಬೆಯ ಹೆಸರುಇ ಒಂದು ಶಾಸನದಲ್ಲಿ ದಾಖಲಾಗಿರುವುದು ದಿಟ (ಎಕ. ೧೦, ಮುಳಬಾಗಿಲು ತಾ ||); IWG : ೧೯೮೪ : ಸಂಖ್ಯೆ. ೪೬ : ಪು. ೧೭೪]. ಆದರೆ ಆ ಕಂಚಿಯಬ್ಬರಸಿಯು ಈ ಕಂಚಬ್ಬರಸಿಗಿಂತ ಭಿನ್ನಳು ಮತ್ತು ಇನ್ನೂರೈವತ್ತು ವರ್ಷ ಪ್ರಾಚೀನಳು.

ಈ ಕಂಚಬ್ಬರಸಿಯು ಗಂಗ ಮಂಡಳೇಶ್ವರ ರಾಜಮಲ್ಲದೇವನ ಅರಸಿ, ಆ ನೃಪನ ಮಹಾದೇವಿ. ಗಂಗ ಅರಸರಲ್ಲಿ ರಾಚಮಲ್ಲ ಮತ್ತು ರಾಜಮಲ್ಲ ಎಂಬುವ ಎರಡೆರಡು ರೂಪಗಳನ್ನು ಸಮಾನಾರ್ಥಕ ಅಂಕಿತನಾಮ ರೂಪವಾಗಿ ಬಳಸಲಾಗಿದೆ. ರಾಜ (ಚ) ಮಲ್ಲ ಎಂಬ ಹೆಸರಿನ ಗಂಗ ಮಾಂಡಲಿಕರು ಒಬ್ಬರಲ್ಲ, ಇಬ್ಬರಲ್ಲ ಎಂದು ಐವರಿದ್ದಾರೆ. ಇವರಲ್ಲಿ ಕಂಚಬ್ಬರಸಿಯು ಯಾವ ರಾಜಮಲ್ಲನ ಮಹಾದೇವಿ ಎಂದು ಅರಿಯಬೇಕು. ಕಂಚಬ್ಬರಸಿಯು ಮರಣಿಸಿದ್ದು ಕ್ರಿ.ಶ. ೧೦೨೩ ರಲ್ಲಿ ತಿಳಿದಿದೆ.; ಅದರಿಂದ ಆ ತೇದಿಗೆ ಹತ್ತಿರವೂ ಹೊಂದಿಕೊಳ್ಳುವಂತಹುದೂ ಆದ ಹೆಸರನ್ನು ಗುರುತಿಸಬೇಕು. ಆಯ್ದನೆಯ ರಾಜ (ಚ) ಮಲ್ಲ (ರಕ್ಕಸಗಂಗ) ನು ಕ್ರಿ.ಶ. ೯೮೬ ರಿಂದ ೯೯ ರ ವರೆಗೆ ಆಳಿದಂತೆ ತಿಳಿದು ಬರುತ್ತದೆ. ಅದರಿಂದ ಪ್ರಾಯಃ ಕಂಚಬ್ಬರಸಿಯ ಗಂಡನಾದ ರಾಜಮಲ್ಲದೇವನನ್ನು ಈ ಗಂಗ ಮಂಡಲೇಶನೊಂದಿಗೆ ಸಮೀಕರಿಸಬಹುದು. ಈ ಸಮೀಕರಣದ ಸಾಧುತ್ವವನ್ನು ಚರಿತ್ರಕಾರರು, ಗಂಗರ ಇತಿಹಾಸ ನಿಪುಣರು ಪರಿಶೀಲಿಸಬೇಕು.