ಗಂಗರ ಉಗಮ, ಆಗಮನ, ಗಮನ, ನಿರ್ಗಮನ ಕುರಿತು ಚರ್ಚೆಗಳಿವೆ. ಅವರ ಚಲನವಲನದ ಒಟ್ಟು ವ್ಯಾಪ್ತಿ-ವಿಸ್ತಾರಗಳ ಭೌಗೋಳಿಕ ನಿರ್ದೇಶನ ಇನ್ನೂ ನಿಖರವಾಗಿ ಆಗಬೇಕಾದ್ದಿದೆ. ಅದರಿಂದ ಈ ಅಂಶವನ್ನು ಕುರಿತ ಸಂವಾದದಲ್ಲಿ ತೊಡಗುವುದು ಪ್ರಸ್ತುತ ಅಧ್ಯಯನದ ಕಕ್ಷೆಗೆ ಅಷ್ಟು ಅಗತ್ಯವಾಗದು.

ಆದಿಕದಂಬರು ಆದಿಚಾಲುಕ್ಯರು ರಾಷ್ಟ್ರಕೂಟರು ತೋರಿದ ಆಸಕ್ತಿಗೂ ಸರಿಮಿಗಿಲಾದ ಮತ್ತು ದೀರ್ಘಕಾಲಿಕ ಆಸಕ್ತಿ ಅನುರಾಗ ಶ್ರದ್ಧಾಭಕ್ತಿಯನ್ನು ಜೈನಧರ್ಮದ ವಿಚಾರದಲ್ಲಿ ತೋರಿದವರು ಗಂಗರು. ಗಂಗ ಮನೆತನದಲ್ಲಿ ಈಗ ವ್ಯಾಪಕವಾಗಿ ಪ್ರಕಟವಾಗಿರುವ ಜೈನ ನಿಷ್ಠೆಯ ಬೇರು ಬಿಳಿಲುಗಳು, ಇದೀಗ ಕೊಪ್ಪಳದಲ್ಲಿ ಹೊಸದಾಗಿ ನನಗೆ ದೊರೆತಿರುವ ಅಪ್ರಕಟಿತ ಶಾಸನಗಳ ಆಧಾರಗಳು ಸಾರುವಂತೆ, ಇನ್ನೂ ಆಳಕ್ಕೆ ಆರಂಭಕ್ಕೆ ಹೋಗುತ್ತವೆ.

ಇತ್ತೀಚೆಗೆ ಕೊಪ್ಪಳದಲ್ಲಿ ೯೩ ಕಲ್ಲಿನ ತುಂಡುಗಳು, ಕಲ್ಲಿನ ಕಂಬಗಳನ್ನು ಎರಡಾಗಿ ಸೀಳಿದ ಸೀಳುಗಳು ದೊರೆತವು. ಅವುಗಳಲ್ಲಿ ಮೂರು ಚೂರುಗಳು ಜಿನ ಬಿಂಬಗಳನ್ನು ಕೂಡಿಸುವ, ನಿಲ್ಲಿಸುವ ಪಾದಪೀಠಗಳು. ಕೆಲವು ತುಂಡಾದ ಕಲ್ಲುಗಳು ಚಚ್ಚೌಕ ಕಂಬದ ಕಾಲುಗಳಂತಿದ್ದು ಅವುಗಳಲ್ಲಿ ಎರಡು ಕಡೆ, ಮೂರುಕಡೆ, ಒಂದೇ ಕಡೆ ಶಾಸನಗಳಿವೆ. ಈ ಶಾಸನಗಳಲ್ಲಿ ಕೆಲವು ಪೂರ್ತಿ ಇವೆ, ಕೆಲವು ಅರೆಪಾಲು ಇವೆ, ಕೆಲವು ತೀರ ಅಸಮಗ್ರವಾಗಿವೆ. ಸಾಮೂಹಿಕ ಮರಣಶಾಸನಗಳಂತೆ ಇವಿಷ್ಟೂಸಹ ಮರಣಶಾಸನಗಳು, ನಿಸಿದಿಶಾಸನಗಳು ಎಂಬುದು ಸ್ವಾರಸ್ಯಕರವಾಗಿದೆ. ಈ ನಿಸಿದಿಗಳ ರಾಶಿಯನ್ನು ಪರಿಶೀಲಿಸುತ್ತಿದ್ದೇನೆ. ನನ್ನ ಪರಾಮರ್ಶೆಯಲ್ಲಿ ಕಂಡುಬಂದ ಗಂಗವಂಶ ಸಂಬಂಧವಾದ ಕೆಲವು ಹೊಸ ಶಾಸನಗಳ ಮಹತ್ವವನ್ನು ಕಿರಿದರಲ್ಲಿ ಇಲ್ಲಿ ಪರಿಚಯಿಸುತ್ತೇನೆ.

ಕೊಪಣವು ಶ್ರವಣಬೆಳಗೊಳದಷ್ಟೇ ಪ್ರಾಚೀನ ಜೈನಕ್ಷೇತ್ರ. ಶ್ರವಣಬೆಳಗೊಳದ ಚಿಕ್ಕಬೆಟ್ಟವನ್ನು ಕೞ್ವಪ್ಪು ತೀರ್ಥವೆನ್ನಲಾಗಿದ್ದರೆ, ಕೊಪಣವನ್ನು ಕೊಪಣ ಮಹಾತೀರ್ಥ, ಶ್ರೀಕುಪಣತೀರ್ಥ ಎಂದೂ ಶಾಸನಗಳಲ್ಲಿ ಕರೆಯಲಾಗಿದೆ. ಆದರೆ ವಾಸ್ತವವಾಗಿ ಕೊಪ್ಪಳ ಊರಿನಲ್ಲಿ, ಬೆಟ್ಟದಲ್ಲಿ ನಿರೀಕ್ಷಿಸಿದ ಮಟ್ಟದಲ್ಲಿ ಇದುವರೆಗೆ ಜೈನ ಶಾಸನಗಳಾಗಲಿ ಬಸದಿಗಳಾಗಲಿ ಹೆಚ್ಚು ಸಿಕ್ಕಿರಲಿಲ್ಲ. ಈಗ ನನಗೆ ಲಭ್ಯವಾಗಿರುವ ಶಾಸನಗಳು ಇದುವರೆಗಿನ ಕೊರೆ, ಕೊರತೆಯನ್ನು ಹೋಗಲಾಡಿಸಿವೆ; ಕೊಪ್ಪಳವು ಹೇಗೆ ಒಂದು ಪ್ರಮುಖ ಜೈನ ಕೇಂದ್ರವಾಗಿತ್ತೆಂಬುದನ್ನು ಪ್ರಬಲವಾಗಿ ಸ್ಥಾಪಿಸುವುದಲ್ಲದೆ ಈ ಶಾಸನಗಳು ಕೊಪಣವು ಗಂಗಮನೆತನದವರಿಗೆ ಪುಣ್ಯಕ್ಷೇತ್ರವಾಗಿತ್ತೆಂಬ ಹೊಸ ವಿಚಾರವನ್ನು ಪ್ರತಿಪಾದಿಸುತ್ತವೆ. ಗಂಗರಿಗೂ ಶ್ರವಣಬೆಳಗೊಳಕ್ಕೂ, ಗಂಗರಿಗು ಹೊಂಬುಜಕ್ಕೂ [ನಾಗರಾಜಯ್ಯ, ಹಂಪ : ಸಾಂತರರು – ಒಂದು ಅಧ್ಯಯನ : ೧೯೯೭] ಗಂಗರಿಗೂ ಕೋಗಳಿಗೂ ಇದ್ದ ನಿಕಟವಾದ ಸಂಬಂಧ ಜ್ಞಾನವಾದ ವಿಚಾರ. ಆದರೆ ಈ ಕೊಪಣ ಮಹಾತೀರ್ಥವು ಗಂಗರಿಗೆ ಮುಖ್ಯ ಪವಿತ್ರ ಸ್ಥಳವಾಗಿದ್ದುದಕ್ಕೆ ಆನುಷಂಗಿಕ ಪ್ರಸ್ತಾಪಗಳ ಹೊರತು ನೇರ ಆಧಾರ-ಆಕರಗಳು ಇರಲಿಲ್ಲ.

ಗಂಗರ ಇತಿಹಾಸದ ಹಾಸಿಗೆ ಸೇರ್ಪಡೆಯಾಗುವ ಹೊಸ ಶಾಸನ ಸಾಮಗ್ರಿ ಹೀಗಿದೆ:

೧. ಇಮ್ಮಡಿ ಬೂತುಗ ಪೆರ್ಮಾಡಿಯ ಮಗಳಾದ ಕುನ್ಡಣಸಾಮಿ ಅರಸಿಯು ಆರಾಧನಾ ವಿಧಾನವಾದ ರತ್ನತ್ರಯವನ್ನು ಸಾಧಿಸಿಕೊಂಡು ಕೊಪಣದಲ್ಲಿ ಮುಡಿಪಿದಳು

೨. ಚಲದಂಕ ಗಂಗನೂ ಪರಾಕ್ರಮತುಂಗನೂ ಆದ ಗಂಗ ಮಹಿಪನ ನಂದನನಾದ ಬಾಸನು ಕುಪಣಾಚಳ ಶುಭಕೀರ್ತಿನಿಧಿಯಾಗಿದ್ದನು. ಬಾಸ ಭೂಪತಿಯ ಅರಸಿಕಾವಣಬ್ಬರಸಿ. ಈ ಗಂಗರರಾಜ ದಂಪತಿಗಳಿಗೆ ಸ್ತ್ರೀರತ್ನವೇ ಬಂದು ಮಗಳಾದಂತೆ ರಂಬಲದೇವಿ ಹುಟ್ಟಿದಳು. ಆಳಿನೀಳಾಳಕಿ, ಲೋಳಲೋಚನೆ, ಉತ್ತುಂಗ ವೃತ್ತ ಕುಚೆ, ರಂಭೋರು, ಸತ್‍ಕರ್ಣಿಕಾರ ಲತಾ ಕೋಮಳ ವರ್ಣೆ, ಹಂಸಗತಿ ರಂಭಾದೇವಿ – ಎಂದು ಆಕೆಯ ರೂಪಕಳಾಕಳಾಪ ವಿಭ್ರಮವನ್ನು ಬಣ್ನಿಸಲಾಗಿದೆ.

            ಮಿಗಿಲೆನಿಪ ಪೆಣ್ಡಿರಿಲ್ಲೀ
ಜಗದೊಳ್ ದೊರೆಯಪ್ಪೊಡಕ್ಕೆಯೇನಾನುಂ ಪ
ನ್ನಗಶಯನ ವಿಪುಳವಕ್ಷ
ಸ್ಥಗೀತ ಶ್ರೀದೇವಿ ನಿನಗೆ ರಂಭಾದೇವಿ
||

ಶ್ರೀ ಚಂದ್ರಭಟ್ಟಾರಕರ ಶಿಷ್ಯೆಯಾದ ರಂಭಾದೇವಿಯ ಗಂಡನಾದ ಬೀರಲದೇವನು ಚಳುಕ್ಯ ವಂಶಾವನಿಪನಾಗಿದ್ದನು. ಸ್ವಸ್ತಿ ಸಕವರ್ಷ ೯೦೯ನೆಯ ಸರ್ವಜಿತು ಸಂವತ್ಸರದ ಆಶ್ವಯುಜ ಬಹುಳ ಪಂಚಮಿ ಆದಿತ್ಯವಾರ ರಂಬಲದೇವಿಯು ಸುಗತಿಯನ್ನು ಸಾಧಿಸಿದಳು.

೩. ಮೂಲ ಸಂಘ ಸೂರಸ್ತಗಣದ ಪ್ರಭಾಚನ್ದ್ರದೆವನ ಶಿಷ್ಯ ರವಿಚಂದ್ರದೇವನ ವರ್ಣನೆ ಕಾದಲೂರು ದಾನ ಶಾಸನದಲ್ಲಿ ಬಂದಿದೆ. ಇದು ಇಮ್ಮಡಿ ಮಾರಸಿಂಹನು ತನ್ನ ತಾಯಿ ಕಲ್ಲಬ್ಬಾಳು ಕಾದಲೂರಿನಲ್ಲಿ ಕಟ್ಟಿಸಿದ ಜಿನಾಲಯದ ಆಚಾರ್ಯ ಏಳಾಚಾರ್ಯರಿಗೆ ಜಿನಾಭಿಷೇಕದ ಜಲಧಾರೆಯಿಂದ ಮಾರಸಿಂಹನು ದಾನವಾಗಿ ನೀಡಿದ ಶಾಸನ. ಕೊಪ್ಪಳದ ಒಂದು ಹೊಸ ಶಾಸನದಲ್ಲಿಯೂ ಗಂಗರ ಗುರುಗಳಾದ ರವಿಚಂದ್ರದೇವ ಮತ್ತು ಆತನ ಶಿಷ್ಯಪರಂಪರೆಯ ವರ್ಣನೆ ಬಂದಿದೆ.

೪. ಕೊಪ್ಪಳದ ಮತ್ತೊಂದು ಶಾಸನದಲ್ಲಿ ಗಂಗರ ಇನ್ನೊಬ್ಬ ಗುರುಗಳಾದ ಮೇಘಚಂದ್ರ-ಸಿದ್ಧಾನ್ತ- ಮುನಿಯ ವರ್ಣನೆ ಬಂದಿದೆ (ಹತ್ತನೆಯ ಶತಮಾನ): ಈಗಾಗಲೇ ಪ್ರಕಟವಾಗಿರುವ ಈಚವಾಡಿ (ತ್ರುಟಿತ) ಶಾಸನದಲ್ಲಿಯೂ (೧೦ ನೆಯ ಶ.) ಮೇಘ ಚಂದ್ರ-ತ್ರೈವಿದ್ಯದೇವ-ಮುನಿಯ ವರ್ಣನೆಯಿದೆ.

೫. ಮಗದೊಂದು ಹೊಸ ಶಾಸನದಲ್ಲಿ ನೊೞಂಬಾಂತಕ ದೇವನಾದ ಮಾರಸಿಂಹನ ಮತ್ತು ರಾಷ್ಟ್ರಕೂಟ ಚಕ್ರವರ್ತಿ ಕೃಷ್ಣರಾಜನ ಪ್ರಸ್ತಾಪವಿದೆ.

೬. ಕ್ರಿ.ಶ. ೯೭೨ ರಲ್ಲಿ ಗಂಗಗಾಂಗೇಯ ಪೆರ್ಮಾನಡಿ ಬೂತುಗನರಸಿಯೂ ಪರಮಶ್ರಾವಕಿಯೂ ಆದ ಪದ್ಮಬ್ಬರಸಿಯು ಕುಪಣಕ್ಕೆ ಬಂದು ದೀಕ್ಷೆ ಪದೆದು ಸ್ವರ್ಗಾಗ್ರವನ್ನು ಸೇರಿದ ಸಂಗತಿ ಇನ್ನೊಂದು ಹೊಸ ಶಾಸನದಲ್ಲಿ ನಮೂದಾಗಿದೆ.

೭. ಬೇರೊಂದು ಹೊಸ ಶಾಸನದಲ್ಲಿ ಬೂತುಗನ ಮಡದಿಯಾದ ರೇವಕನಿಮ್ಮಡಿಯು ಸ್ವಸ್ತಿಶಕ ೯೫೨ ರ ಪ್ರಮೋಧ ಸಂವತ್ಸರದ ಜೇಷ್ಠ ಶುದ್ಧ ಬಿದಿಯೆಯಂದು ಕುಪಣಶ್ರೀ ತೀರ್ಥದಲ್ಲಿ ಸನ್ಯಸನ ವಿಧಾನದಿಂದ ಮುಡಿಪಿ ರತ್ನತ್ರಯವನ್ನು ಸಾಧಿಸಿದ ದಾಖಲೆಯಿದೆ.

೮. ಇನ್ನೊಂದು ಹೊಸ ಶಾಸನದಲ್ಲಿ – ಅಜಿತಸೇನಮುನಿ ಮುಖ್ಯರ ಗುಡ್ಡ (ಶಿಷ್ಯ) ನಾದ ಗಂಗ ಮಂಡಳೇಶ್ವರನೂ ಅರ್ಹತ್ ಪರಮ ಪದಾಂಭೋಜ ಷಟ್ಚರಣನೂ ಆದ ರಾಜಮಲ್ಲದೇವನ ಅರಸಿಯಾದ ಕಂಚಬ್ಬರಸಿಯು “ಶಕಕಾಳ ೯೪೫ (೧೦೨೩) ರಲ್ಲಿ ತಪಂಗೆಯ್ದು ಶ್ರೀಕುಪಣ ತೀರ್ತ್ಥದೊಳ್ ಸಮಾಧಿ ವಿಧಿಯಿಂ ರತ್ನತ್ರಯವನ್ನು ಸಾಧಿಸಿ ದೇವಲೋಕಕ್ಕೆ ವೋದರ್” ಎಂಬ ಮಾಹಿತಿಯಿದೆ. ಈಕೆಯು ತನ್ನ ಪತಿಯ ಪರೋಕ್ಷದಲ್ಲಿ ಅನಿಂದಿತರಾದ ಅಜಿತ ಸೇನಮುನಿಗಳಲ್ಲಿ ಸಲ್ಲೇಖನ ದೀಕ್ಷೆಯನ್ನು ಕೈಗೊಂಡಳು. ಈ ರಾಜಮಲ್ಲನು ಇಮ್ಮಡಿ ಸೇನಮುನಿಗಳಲ್ಲಿ ಸಲ್ಲೇಖನ ದೀಕ್ಷೆಯನ್ನು ಕೈಗೊಂಡಳು. ಈ ರಾಜಮಲ್ಲನು ಇಮ್ಮಡಿ ಬೂತುಗನ ಮಗನೂ, ಇಮ್ಮಡಿ ಮಾರಸಿಂಹನ ತಮ್ಮನೂ ಆದ ರಾಜಮಲ್ಲನಿರಬಹುದು.

೯. ಗಂಗವಂಶದ ಎಱೆಗಂಗನ ಮಗಳು ಗೋನಂಬೆಯ ಗಂಡನಾದ ಅಜವರ್ಮನು ಕ್ಷತ್ರಿಯರಾಮನೆಂಬ ಮಹಿಮಾವಷ್ಟಂಭದಿಂದ ಕೂಡಿದವನು.

            ದಾನದೊಳತ್ಥಮನಮಳ
ಧ್ಯಾನದೊಳಿಂತಾತ್ಮ ಚಿತ್ತಮಂ ಕೂಡಿ ಸಮಾ
ಧಾನಮತಿಯಿಂದೆ ಮುಡಿಪಿಯ
ನೊನಸುಖಾಸ್ಪದಮನೆಯ್ದಿದಳ್‍ಗೋನಂಬೆ
||

ಗೋನಂಬೆಗೆ ‘ರುಜೆ ಬಂದ ಮೆಯ್ಯಂ ತಾಱುವಿನಂ ತೊಂದರೆ’ ಕೊಡುವಂತಾಯಿತು. ಆಗ ಗೋನಂಬೆಯು ಮನೆವುಗದೆ ತಪಕ್ಕೆ ಶಕ ೯೧೪ರಲ್ಲಿ ಸದ್ಗತಿಗೆ ಸಂದಳು.

೧೦. ಬೇರೆ ಒಂದು ಅಸಮಗ್ರ ಶಾಸನದ ಆರಂಭದಲ್ಲಿ ಮಂಡಳಿಕನಾದ ಗಂಗನಾರಾಯಣನ ಹೆಸರಿದೆ

೧೧. ಇನ್ನೊಂದು ಶಾಸನದಲ್ಲಿ ಬೂತುಗ ಪೆರ್ಮಾಡಿಯ ಮಗಳಾದ ಬಿಜ್ದಾಂಬರಸಿಯು ಶಕ ೯೩೫ ರ ಶೋಭಕ್ತು ಸಂವತ್ಸರದ ಶರದ ಕಾರ್ತಿಕ ಶುದ್ಧ ಅಷ್ಟಮಿ ಬೃಹಸ್ಪತಿವಾರ ಆರಾಧನಾ ವಿಧಾನದಿಂದ ರತ್ನತ್ರಯವನ್ನು ಸಾಧಿಸಿಕೊಂಡು ದೇವಲೋಕಕ್ಕೆ ಸಂದಳು. ಈಕೆಯ ತಾಯಿ ಮನೋಹರಿಯಾದ ಪದ್ಮಾವತಿ (ಪದ್ಮಬ್ಬರಸಿ), ಗುರು ಶ್ರೀಧರದೇವ, ಜನಕಂ ಬುಧನುತ ಶ್ರೀಬೂತುಗಂ, ಉದ್ಧುರ ತೇಜೋನಿಧಿ ಮಾರಸಿಂಹನು ತಮ್ಮ, ಮಹಾದಾನಿ ಹರಿಗನು ಆತ್ಮೇಶ (ಪತಿ)- ಎಂಬ ವಿವರಗಳೂ ಈ ಶಾಸನದಲ್ಲಿವೆ.