೧. ಪೀಠಿಕೆ

ಗಾವರ(ರಿ) ವಾಡವು, ಧಾರವಾಡ ಜಿಲ್ಲೆಯ ಗದಗು ತಾಲ್ಲೂಕಿನಲ್ಲಿರುವ ಒಂದು ಹಳ್ಳಿ. ಇಲ್ಲಿಯ ನಾರಾಯಣಗುಡಿ ಮುಂದೆ ಅರಸಿಬಾಗಲಿಗೆ ದಕ್ಷಿಣದ ಕಡೆ ಇದ್ದ ಒಂದು ಕಲ್ಲಿನ ಮೇಲಿನ ಶಾಸನ ತುಂಬ ಮಹತ್ವದ್ದು, ಈ ಕಲ್ಲು ಚಪ್ಪಡಿ ಶಾಸನದ ಮೇಲುಗಡೆ ಚಿತ್ರಗಳಿವೆ. ಈ ಚಿತ್ರಪಟ್ಟಿಕೆಯ ನಟ್ಟನಡುವೆ ಪದ್ಮಾಸನದಲ್ಲಿ ಕುಳಿತ ಆತ್ಮಧ್ಯಾನನಿರತ ಜಿನನ ಉಬ್ಬು ಶಿಲ್ಪವಿದೆ. ಬಲಕ್ಕೆ ಕತ್ತಿಯೂ ಹಸು-ಕರುವೂ ಇವೆ. ಇವೆರಡಕ್ಕೂ ಸ್ವಲ್ಪ ಮೇಲೆ ಎಡಕ್ಕೆ ಸೂರ್ಯನೂ, ಬಲಕ್ಕೆ ಚಂದ್ರನೂ ಕಾಣುತ್ತಾರೆ. ಈ ಚಿತ್ರಗಳ ಕೆಳಭಾಗದಲ್ಲಿ ಶಾಸನವನ್ನು ಕೆತ್ತಲಾಗಿದೆ.

ಶಾಸನಪಾಠದ ಒಕ್ಕಣೆಯ ಕೆತ್ತನೆಯೂ ಎರಡು ಹಂತದಲ್ಲಿ ನಡೆದಿದೆ. ೫ ಅಡಿ ೧/೨ ಅಂಗುಲ ಎತ್ತರವೂ, ೨ ಅಡಿ ೧ ೩/೪ ಅಂಗುಲ ಅಂಗುಲವೂ ಇರುವುದು ಒಂದು ಹಂತ [ಪಂಕ್ತಿ : ೧ ರಿಂದ ೯೨]; ಅಷ್ಟೇ ಅಗಲ ಮತ್ತು ಮೂರು ಅಂಗುಲ ಎತ್ತರ ಇರುವುದು ಇನ್ನೊಂದು ಹಂತ [ಪಂಕ್ತಿ : ೯೩ ರಿಂದ ೯೫]. ಒಬ್ಬನೇ ಕಂಡರಣೆಕಾರನ ಕಂಡರಣೆಯೆಂದು ಲಿಪಿ ಸ್ವರೂಪ ರಚನೆ ವಿನ್ಯಾಸದಿಂದ ಹೇಳಬಹುದು. ಶಾಸನದ ತೇದಿಯು ಶಕ ಸಂವತ್ ೯೯೩ ಮತ್ತು ೯೯೪, ಅಂದರೆ ಕ್ರಿ.ಶ. ೧೦೭೧ – ೭೨ ಕ್ಕೆ ಸೇರಿದ್ದಾಗಿದೆ.

ಆದರೆ ಇದೊಂದು ಪ್ರತಿಶಾಸನ. ಮೂಲ ಶಾಸನದ ಈ ಮರುಪ್ರತಿಯನ್ನು ಕ್ರಿ.ಶ. ಸುಮಾರು ೧೧೫೫ ರಲ್ಲಿ ಮಾಡಲಾಗಿರಬೇಕೆಂದು ಸಂಪಾದಕರು ಭಾವಿಸಿದ್ದಾರೆ. ಆದರೆ ಪ್ರಸ್ತುತ ಶಾಸನವನ್ನು ಸುಮಾರು ೧೧೬೫-೭೦ ಅವಧಿಯಲ್ಲಿ ಪ್ರತಿಯೆತ್ತರ ಬಹುದೆಂಬುದು ನನ್ನ ಅಭಿಪ್ರಾಯ; ಇದಕ್ಕೆ ತಕ್ಕ ಕಾರಣವನ್ನು ಯಥಾವಕಾಶ ಪ್ರಸ್ತಾಪಿಸಿ ವಿವರಿಸಲಾಗುವುದು. ಎಲಿಯಟ್ತರ ಸಂಗ್ರಹದಲ್ಲಿ ಮೊದಲು ರಾಯಲ್ ಏಷಿಯಾಟಿಕ್ ಸೊಸೈಟಿಯಲ್ಲಿನ ಹತ್ತನೆಯ ಸಂಪುಟ (ಪೋಲಿಯೊ ೧೩೭ಎ) ದಲ್ಲಿ ಸೇರ್ಪಡೆ ಆಗಿರುವ ಈ ಶಾಸನದ ಒಕ್ಕಣೆಯನ್ನು ಪ್ರತಿಕಾರದಿಂದ ತರಿಸಿಕೊಂಡು ಎಲ್.ಡಿ. ಬಾರ್ನೆಂಟರು ಇದರ ತಾಂತ್ರಿಕ ಮಾಹಿತಿ ಸಹಿತ ಎಪಿಗ್ರಾಫಿಯ ಇಂಡಿಕದಲ್ಲಿ ಆಂಗ್ಲಭಾಷಾಲಿಷ್ಯಂತರದೊಂದಿಗೆ ಪ್ರಕಟಿಸಿದರು [ಎ.ಇ. ೧೫. ೨೩. ೧೦೭೧-೭೨. ಪು. ೩೩೭-೪೮]

೨. ಭಾಷಿಕ ಲಕ್ಷಣಗಳು

೧೨ ನೆಯ ಶತಮಾನದ ಕನ್ನಡಲಿಪಿಯಲ್ಲಿ ಕೆತ್ತಲಾಗಿರುವ, ಆದರೆ ಮುಖ್ಯ ಶಾಸನ ಭಾಗದ ಒಕ್ಕಣೆಯ ಹನ್ನೊಂದನೆಯ ಶತಮಾನಕ್ಕೆ ಸೇರಿರುವ ಈ ಶಾಸನವೂ ಪೂರ್ತಿಯಾಗಿ ಹಳೆಗನ್ನದ ಭಾಷೆಯಲ್ಲಿದೆ. ಸಾದ್ಯಂತವಾಗಿ ಜೈನಶಾಸನವಾಗಿರುವ ಈ ಶಾಸನವು, ಕಲ್ಯಾಣ ಚಾಳುಕ್ಯರ ಚಕ್ರವರ್ತಿ ಭುವನೈಕಮಲ್ಲ ಇಮ್ಮಡಿ ಸೋಮೇಶ್ವರನ ಆಳಿಕೆಯಲ್ಲಿ ರಚಿತವಾಗಿದೆ. ಈ ಕನ್ನದ ಶಾಸನದಲ್ಲಿ (ಆರಂಭದ್ದೊಂದು ಹಾಗೂ ಕಡೆಯ ಶಾಪಾಶಯ ಭಾಗದಲ್ಲಿ ಬರುವ ಒಂದು) ಎರಡು ಸಂಸ್ಕೃತ ಪದ್ಯಾಳಿವೆ. ಶಾಸನಾರಂಭದಲ್ಲಿರುವ ಅನುಷ್ಬುಭ್ ಶ್ಲೋಕವು ಆಕಳಂಕಾಚಾರ್ಯ ವಿರಚಿತ ಸುಪ್ರಸಿದ್ಧ ಜೈನ ಪ್ರಾರ್ಥನಾ ಪದ್ಯವಾಗಿದೆ. ಶಾಸನದ ಸಾಲು ೮೯-೯೦ ರಲ್ಲಿರುವ ವರ್ಧತಾಂ ಜಿನಶಾಸನಂ ಎಂಬುದೂ ಸಂಸ್ಕೃತ ವಾಕ್ಯವೇಷ್ಟನವಾಗಿದೆ. ಇಷ್ಟರ ಹೊರತು, ಉಲಿದಂತೆ ಇಡೀ ಶಾಸನ ಹಳೆಗನ್ನಡದಲ್ಲಿದೆ.

ೞಕಾರವನ್ನು ಕೆಲವು ಕಡೆ ಸರಿಯಾಗಿ ಬಳಸಲಾಗಿದೆ:

ನೆಗೞ್ತೆ (ಸಾಲು : ೯), ಬಿೞ್ದು (೩೯). ಕೆಲವುಕಡೆ ೞಕಾರವು ಳಕಾರ ದಲ್ಲಿ ವಿಲೀನಗೊಂಡಿರುವ ರೂಪಗಳಿವೆ: ತುಳಿಲ್(೯), ಪೊಗಳ್ (೩೩), ನೆಗಳ್ (೧೩-೧೪, ೧೮, ೩೩), ಬಾಳ್ತೆ (೩೩), ಅಳಿ (೩೦, ೯೧) ಇತ್ಯಾದಿ. ಪಕಾರವು ಎರಡು ಕಡೆ ಹಕಾರವಾಗಿದೆ: ಹೆಗ್ಗಡೆ (೫೬-೫೭), ಹೆಸರ್ (೯೪). ಹೀಗೆಯೇ ಇದು ವ್ಯಕ್ತಿನಾಮದಲ್ಲೂ ಬಂದಿದೆ: ಹಬ್ಬೆಯ ದೇವಿಸೆಟ್ಟಿ. ಕೆಲವು ಕಡೆ ಆಕಾರಾದಿಯ ಶಬ್ದಗಳ ಆದಿಯಲ್ಲಿ ಯಕಾರಾಗಮ ಕಂಡು ಬರುತ್ತದೆ: ಯಲ್ಲಿಯ (೫೧) ಯಾದಿನಾಥ (೫೭) ಯಚಾರ್ಯ್ಯ (೫೮) ಯಱುವಣಮ್ (೫೯) ಯಷ್ಟವಿಧ (೮೬) ಯದು (೯೫ಏ. ಶಬ್ದಾರ್ಥಜಿಜ್ಞಾಸೆಗೆ ಗ್ರಾಸವಾಗಬಲ್ಲ ಕೆಲವು ವಿಶಿಷ್ಟ ಶಬ್ದಗಳೂ ಸೇರ್ಪಡೆಯಾಗಿವೆ.

೩. ಕಲ್ಯಾಣಿ ಚಾಲುಕ್ಯರ ಕಾಲದ ಕೆಲವು ವಿಶಿಷ್ಟ ವ್ಯಕ್ತಿಗಳ, ಸಾಧನೆಗಳು, ಧಾರ್ಮಿಕ ವರಿಷ್ಠರ, ಯುದ್ಧಗಳು, ಸಾಂಸ್ಕೃತಿಕ ಸ್ಥಿತ್ಯಂತರಗಳು ಅಂತರಂಗವನ್ನು ತೆರೆದು ಪಾರದರ್ಶಕವಾಗಿ ಬಿಚ್ಚಿಡುವ ಒಂದು ಮೌಲಿಕ ಶಾಸನವಿದು. ಇದರ ರಾಜಕೀಯ, ಸಾಮಾಜಿಕ, ಧಾರ್ಮಿಕ, ಸಾಹಿತ್ಯಕ, ಆಡಲಿತಾತ್ಮಕ ಆಯಾಮಗಳನ್ನು ವಸಿವರವಾಗಿ ಪರಾಮರ್ಶೆ ಮಾಡಲು ಅವಕಾಶಗಳಿವೆ.

ಪ್ರಧಾನವಾಗಿ ಇದೊಂದು ದತ್ತಿಶಾಸನ. ಅಷ್ಟು ಮಾತ್ರವಲ್ಲದೆ ಮತ್ತೆ ಮತ್ತೆ ಒಂದೇ ಜೈನ ದೇವಾಲಯಕ್ಕೆ ಮೇಲಿಂದ ದತ್ತಿಕೊಡಲಾಗಿದೆ. ಹೀಗೆ ಪುನರ್ದತ್ತಿಗಳ ಪರಂಪರೆಯನ್ನು, ಅದರದರ ಚಾರಿತ್ರಿಕ ಹಿನ್ನೆಲೆ ಸಹಿತ ಮಂಡಿಸಲಾಗಿದೆ. ಅನ್ನಿಗೆಱೆಯ ಗಂಗ ಪೆರ್ಮಾಡಿ ಬಸದಿಗೆ ಗಂಗರ ಇಮ್ಮಡಿ ಬೂತಕ (೨೯-೩೦), ಅವನ ಮಗ ಇಮ್ಮಡಿ ಮಾರಸಿಂಹ, ತರುವಾಯ ತ್ರೈಳೋಕ್ಯಮಲ್ಲ ಸೋಮೇಶ್ವರ, ಅನಂತರ ಅವನ ಮಗ ಭೌವನೈಕಮಲ್ಲ ಇಮ್ಮಡಿ ಸೋಮೇಶ್ವರ ಮತ್ತು ಇವನ ಆದೇಶದಿಂದ ಮಹಾಮಂಡಲೇಶ್ವರನಾದ ಲಕ್ಷ್ಮರಸ (೧೫-೧೬, ೩೨), ಈತನ ಸಾಮಂತನೂ ಮಯೂರ ಪುರವರಾಧೀಶನೂ ಆದ ಕತ್ತಲೆಕುಲದ ಕಾಟರಸ (೪೪-೪೭), ಮತ್ತೆ ಅಣ್ಣಿಗೆರೆಯ ಬಸದಿಗೆ ನಡೆದುಕೊಳ್ಳುವ ಹಳ್ಳಿಗಳ ಮೂವತ್ತು ಮಂದಿ ಶ್ರಾವಕರು [೫೭-೮೩], ಅದಾದ ಮೇಲೆ ಮಹಾಪ್ರಧಾನ ವಸುಧೈಕ ಬಾಂಧವನೆನಿಸಿದ ರೇಚಿದೇವ ದಂಡನಾಥ – ಹೀಗೆ ನಿರಂತರವಾಗಿ ಇನ್ನೂರು ವರ್ಷದ ದತ್ತಿಗಳ ದಾಖಲೆ ಈ ಶಾಸನದಲ್ಲಿದೆ.

ಈ ರೀತಿಯಲ್ಲಿ, ಇನ್ನೂ ಹಲವು ವಿಧಗಳಲ್ಲಿ ಪ್ರಾಮುಖ್ಯ ಪಡೆದಿರುವುದನ್ನು ಆಧಾರಗಳೊಂದಿಗೆ ಚರ್ಚಿಸುವುದಕ್ಕೆ ಮೊದಲು ಶಾಸನವನನ್ನು ಪೂರ್ತಿಯಾಗಿ, ಯಥಾವತ್ತಾದ ಪಾಠದೊಂದಿಗೆ ಉದಾಹರಿಸಲಾಗಿದೆ:

೪. ಶಾಸನ ಪಾಠ

೧. ಶ್ರೀಮತ್ಪರಮಗಂಭೀರ ಸ್ಯಾದ್ವಾದಾಮೋಘಲಾಂಛನಂ |
ಜೀಯಾತ್ರೈಲೋಕ್ಯನಾಥಸ್ಯ ಶಾಸನಂ ಜಿನಶಾಸನಂ ||

೨. ಸ್ವಸ್ತಿ ಸಮಸ್ತ ಭುವನಾಶ್ರಯಂ ಶ್ರೀ ಪ್ರಿಥ್ವೀವಲಭಂ ಮಹಾರಾಜಾಧಿರಾಜರಂ ಪರಮೇಶ್ವರ ಪರಮ ಭಟ್ಟಾರಕಂ ಸ

೩. ತ್ಯಾಶ್ರಯಕುಳ ತಿಳಕಂ ಚಾಳುಕ್ಯಾಭರಣಂ ಶ್ರೀಮದ್ ಭೌವನೈಕಮಲ್ಲದೇವರ ವಿಜಯರಾಜ್ಯ ಮುತ್ತರೋತ್ತರಾಭಿೞೃದ್ಧಿ ಪ್ರವರ್ದ್ಧಮಾನಮಾಚಂ

೪. ದ್ರಾರ್ಕ್ಕ ತಾರಂ ಸಲುತ್ತಮಿರೆ | ತತ್ಪಾದ ಪದ್ಮೋಪಜೀವಿ ಸಮಧಿಗತ ಪಂಚ ಮಹಾಶಬ್ಧಮಹಾಮಣ್ಣಲೇಶ್ವರನುದಾರ ಮಹೇಶ್ವರಂ ಚಲಕೆ ಬಲುಗಣ್ಡಂ [ಶೌರ್ಯ್ಯ ಮಾರ್ತಣ್ಡಂ] ಪತಿಗೇ

೫. ಕ ದಾಡಂ ಸಂಗ್ರಾಮ ಗರುಡಂ ಮನುಜ ಮಾಂಧಾತಂ ಕೀರ್ತ್ತಿ ವಿಖ್ಯಾತಂ ಗೋತ್ರ ಮಾಣಿಕ್ಯಂ ವಿವೇಕ ಚಾಣಾಕ್ಯಂ ಪರನಾರೀ ಸಹೋದರಂ ವೀರ ವ್ರಿಕೋದರಂ ಕೋ

೬. ದಣ್ಡ ಪಾರ್ತ್ಥಂ ಸೌಜನ್ಯ ತೀರ್ತ್ಥಂ ಮಂಡಳೀಕ ಕಂಠೀರವಂ ಪರಚಕ್ರಭೈರವಂ ರಾಯದಂಡ ಗೋಪಾಲಂ ಮಲೆಯ ಮಂಡಳೀಕ ಮಿಗ್ರ ಶಾರ್ದೂಲಂ ಶ್ರೀಮದ್ ಭುವ

೭. ನೈಕಮಲ್ಲದೇವ ಪಾದ ಪಂಕಜ ಭ್ರಮರಂ ಶ್ರೀಮನ್ಮಹಾಮಣ್ಡಲೇಶ್ವರಂ ಲಕ್ಷ್ಮರಸರು ಬೆಳ್ವೊಲ ಮೂನುಱುಮಂ ಪುಲಿಗೆಱೆ ಮೂನೂಱುಮಂ ತೆರೆಡಱು ನೂಱು

೮. ಮಂ ದುಷ್ಟ ನಿಗ್ರಹ ಶಿಷ್ಟ ಪ್ರತಿಪಾಲನೆಯಿಂ ಪ್ರತಿಪಾಳಿಸುತ್ತಮಿರೆ ವೃ || ಅಣುಗಾಳ್ ಕಾರ್ಯ್ಯದ ಶೌರ್ಯ್ಯದಾಳ್ ವಿಜಯದಾಳ್ ಚಾಳುಕ್ಯ ರಾಜ್ಯಕ್ಕೆ ಕಾರ

೯. ಣಮಾದಾಳ್ ತುಳಿಲಾಳ್ತನಕ್ಕೆ ನೆಱೆದಾಳ್ ಕಟ್ಟಾಯದಾಳ್ ಮಿಕ್ಕ ಮನ್ನಣೆಯಾಳ್ ಮಾನ್ತನದಾಳ್ ನೆಗಱ್ತೆ ವಡೆದಾಳ್ ವಿಕ್ರಾನ್ತದಾಳ್ ಮೇಳದಾಳ್ ರಣದಾಳ್ + ಆಳ್ದನನ

೧೦. ಚ್ಚುವಾವೆಡೆಯೊಬಳಂ ವಿಶ್ವಾಸದಾಳ್ ಲಕ್ಷ್ಮಣಂ | ಕಲಿತನಮಿಲ್ಲ ಚಾಗಿಗೆ ವದಾನ್ಯತೆ ಮೆಯ್ಗಲಿಗಿಲ್ಲ ಚಾಗಿ ಮೆಯ್ಗಲಿಯೆನಿಪಂಗೆ ಶೌಚಗುಣಮಿ

೧೧. ಲ್ಲ ಕರ ಕಲಿ ಚಾಗಿ ಶೌಚಿಗಂ ನಿಲೆ ನುಡಿವೋಜೆಯಿಲ್ಲ ಕಲಿ ಚಾಗಿ ಮಹಾಶುಚಿ ಸತ್ಯವಾದಿ ಮಂಡಲಿಕರೊಳೀತನೆನ್ದು ಪೊಗಳ್ಗುಂ ಬುಧಮಣ್ಡ

೧೨. ಳಿ ಲಕ್ಷ್ಮ ಭೂಪನ(೦)| ಕುದುರೆಯ ಮೇಲೆ ಬಿಲ್ ಪರಸು ತೀರಿಗೆ ಸೂಲಿಗೆ ಪಿಂಡಿವಾಳಮೆತ್ತಿದ ಕರವಾಳವಾರ್ದ್ದಿಡುವ ಕರ್ಕ್ಕಡೆ ಪಾೞುವ ಚಕ್ರಮೆನ್ದೊಡೆನ್ತೊ

೧೩. ದ ೞುವರೆನ್ತ್ನು ಪಾಯಿಸುವರೆನ್ತು ತೞುಂಬುವರೆನ್ತು ನಿಲ್ಪರೆನ್ತೊಡೞು ವರೆನ್ತು ಲಕ್ಷಣನೊಳ್ತಾನು ಬರ್ದ್ದುಂಕುವರನ್ಯ ಭೂಭುಜರ್ | ಎನೆನೆ

೧೪. ಗಳ್ದ ಲಕ್ಷಿ ಭೂಪತಿ| ಜನಪತಿ ಭುವನೈಕಮಲ್ಲ ದೇವಾ ದೇಶಂ | ತನಗೆ ಸೆದಿರೆ ಮಾಡಿಸಿದಂ | ಜಿನಶಾಸನ ವ್ರಿದ್ಧಿಯಂ ಪ್ರವರ್ದ್ಧನಮಾಗಲು || ಅಚೈತ್ಯಾಲ

೧೫. ಯದ ಪೂರ್ಬ್ಬಾವತಾರ ಮೆನ್ತೆನೆ | ಕಂ || ಶ್ರೀವಸುಧೇಶನ ಬಾವಂ | ರೇವಕ ನಿರ್ಮ್ಮಡಿಯ ವಲ್ಲಭಂ ಬೂತುಗ ನಾ| ತ್ಮಾವಗತ ಸಕಳಶಾಸ್ತ್ರನಿ | ಳಾ ವಿಶ್ರುತ ಕೀರ್ತ್ತಿ

೧೬. ಗಂಗಮಣ್ಡಲನಾಥ || ವ್ರಿ || ರೂಡಿಗೆ ರೂಡಿವೆತ್ತೆಸೆದ ಬೆಳ್ವಲದೇಶಮನಾಳ್ದ ಗಂಗಪೆ| ರ್ಮ್ಮಾಡಿಗಳಿಂದ ಮಣ್ಣಿಗೆಱೆ ನಾಳ್ಕೆಱೆ ವಟ್ಟೆನಿ.

೧೭. ಸಿತ್ತುನಾಡ ನಾ| ಡಾಡಿಗಳುಂಬಮೆಂಬಿನೆಗಮಾ ಪುರದೊಳು ಜಯದತ್ತ ರಂಗಪೆ | ರ್ಮ್ಮಾಡಿಯಿನಾಯ್ತು ಬೂತುಗ ನರೇನ್ದ್ರನಿನಲ್ಲಿ ಜಿ

೧೮. ನೇಂದ್ರ ಮಂದಿರ(೦) || ೞೃ || ಸಂಗತಮಾಗೆ ಮಾಡಿ ತಳವ್ರಿತ್ತಿಯನಲ್ಲಿಗೆ ಮೂಡಗೇರಿ ಗುಮ್ಮಂಗೊಳನಾದಿಯಾಗೆ ನೆಗಳ್ದಿಟ್ಟಗೆ ಗಾವರಿವಾಡಮೆಂಬ ಬಾಡಂಗಳ ಶಾಸನಂ ಬೆರಸು ಸರ್ವ್ವನಮಸ್ಯಮಿವೆಂದು ಬಿಟ್ಟುಕೊಟ್ಟಂ ಗುಣಕೀರ್ತ್ತಿ ಪಣ್ಡಿತರ್ಗ್ಗೆ ಭಕ್ತಿ

೨೦. ಯಿನುತ್ತಮ ದಾನ ಶಕ್ತಿಯಿಂ || ಕಂ || ಉದಿತೋದಿತಮೆನೆ ವಿಭವಾಸ್ಪದ ಮೆನೆ ಭುವನಯ್ಕವಂದ್ಯಯೆನೆ ಸಂಚಳಮಾಗದೆ ಗಂಗಾ

೨೧. ನ್ವಯಮುಳ್ಳಿನಮಿದು ಸರ್ವ್ವ ನಮಸ್ಯವಾಗಿ ನಡೆಯುತ್ತಮಿರಲು || ವ್ರಿ ||

೨೨. ಪರಮಶ್ರೀ ಜಿನ ಶಾಸನಕ್ಕೆ ಮೊದಲಾದೀ ಮೂಲಸಂಘಂ ನಿರನ್ತರ ಮೊಪ್ಪುತ್ತಿರೆ ನನ್ದಿ ಸಂಘವೆಸರಿಂದಾದನ್ವಯ ಪೆಂಪುವೆತ್ತಿರೆ ಸನ್ದರ್ವ್ವಳಗಾಱ ಮುಖ್ಯಗಣದೊಳು ಗಂಗಾನ್ವಯಕ್ಕಿ

೨೩. ನ್ತಿವರ್ಗ್ಗುರುಗಳ್ ತಾಮೆನೆ ವರ್ದ್ಧಮಾನ ಮುನಿನಾಥರ್ಧಾರಿಣೀ ಚಕ್ರದೊಳ್ ಶ್ರೀ ನಾಥ ರ್ಜ್ಜೈನ ಮಾಗ್ಗೊತ್ತಮ ರೆನಿಸಿ ತಪಃ ಖ್ಯಾತಿಯಂ

೨೪. ತಾಳ್ತಿದ ರ್ಸ್ಸಜ್ಞಾನಾತ್ಮರ್ವ್ವರ್ದ್ಧ ಮಾನ ಪ್ರವರರವರ ಶಿಷ್ಯರ್ಮ್ಮಹಾ ವಾದಿಗಳ್ ವಿದ್ಯಾನನ್ದ ಸ್ವಾಮಿಗಳ್ ತಮ್ಮನಿಪತಿಗನುಜರ್ತ್ತಾರ್ಕ್ಕಿಕಾ

೨೫. ರ್ಕ್ಕಾಭಿಧಾ ನಾಧೀನರ್ಮ್ಮಣಿಕ್ಯ ನನ್ದಿ ವ್ರತಿಪತಿಗಳರ್ಸ್ಸಾಸನೋದಾತ್ತ ಹಸ್ತರ್| ತದಪತ್ಯರ್ಗ್ಗುಣ ಕೀರ್ತ್ತಿ ಪಣ್ಡಿತರವರ್ತ್ತಚ್ಚಾಸ

೨೬. ನ ಖ್ಯಾತಿ ಕೋವಿದರಾ ಸೂರಿಗಳಾತ್ಮಜರ್ವ್ವಿಮಳ ಚನ್ದ್ರರ್ತ್ತಪದಾಂ ಭೋಜ ಷಟ್ಟದರುದ್ಯದ್ಗುಣ ಚನ್ದ್ರರನ್ತವರ ಶಿಷ್ಯರ್ ನೋಡಿ ಶಾಸ್ತ್ರಾ

೨೭. ರ್ತ್ಥ ದೊಳ್ವಿದಿತರಾ ಗಣ್ಡವಿಮುಕ್ತರಿನ್ನಭಯನನ್ದ್ಯಾಚಾರ್ಯ ರಾರ್ಯೋತ್ತ ಮರ್ || ವ್ರಿ || ಪೊಲೆ ಚೋಳಂ ನೆಲೆಗೆತ್ತು ತನ್ನ ಕುಳ

೨೮. ಧರ್ಮ್ಮಾಚಾರ್ ಮಂ ಬಿಟ್ಟು ಬೆಳ್ವಲ ದೇಶಕ್ಕಡಿಯಿಟ್ಟು ದೇವಗ್ರಿಹ ಸಂದೋಹಂಗಳಂ ಸುಟ್ಟು ಕಯ್ಯಲೆ ಪಾಪಂ ಬೆಳೆದತ್ತೆ

೨೯. ನಲ್ಕೆ ಧುರದೊಳು ತ್ರೈಳೋಕ್ಯ ಮಲ್ಲಂಗೆ ಪಂದಲೆಯಂ ಕೊಟ್ಟಸುವಂ ಬಿಸುಟ್ಟು ನಿಜವಂಶೋಚ್ಛತ್ತಿಯಂ ಮಾಡಿದ (೦) || ಕ || ಶ್ರೀ ಪೆರ್ಮ್ಮಾ

೩೦. ನಡಿ ಮಾಡಿಸಿದೀ ಪರಮ ಜಿನಾಲಯಂಗಳಂ ಪೊಲೆವಟ್ಟಿರ್ದ್ದಾ ಪಾಣ್ಡ್ಯ ಚೋಳನೆಂಬ ಮಹಾಪಾತಕ ತಿವುಳನಳಿದಧೋಗತಿಗಿಳಿ

೩೧. ದ(೦) || ವ್ರಿ || ಬಳಿಕೀ ಬೆಳ್ವಲ ದೇಶಮಂ ಪಡೆದ ದಂಡಾಧೀಶ ಸಾಮನ್ತ ಮಂಡಳಿಕರ್ ಧರ್ಮ್ಮದ ಬಟ್ಟೆಗೆಟ್ಟು ನಡೆಯುತ್ತಿರ್ದ್ದಲ್ಲಿ ತಜ್ಞಾನಂ ಮನಂ

೩೨. ಗೊಳೆ ಕಾಳೀಯ ಗುಣೇತರಂ ಕೃತಯುಗಾಚಾರಾನ್ವಿತಂ ಲಕ್ಷ್ಮ ಮಂಡಳಿಕಂ ನಿರ್ಮ್ಮಳ ಧರ್ಮ್ಮವತ್ತಳೆಯ ನಷ್ಟೋದ್ಧಾರಮಂ ಮಾಡಿ

೩೩. ದಂ || ವೃ || ಈ ನೆಲದೊಳು ನೆಗಳ್ತೆಯ ಪೊಗಳ್ತೆಯ ಬಾಳ್ತೆಯ ಪುಣ್ಯ ತೀರ್ತ್ಥ ಸನ್ತಾನದೊಳಿನ್ನವಿಲ್ಲೆನಿಸಿ ಸಂದುದು ದಕ್ಷಿಣ ಗಂಗೆ ತುಂಗಭ

೩೪. ದ್ರಾನದಿ ತನ್ನದೀ ತಟದೊಳೊಪ್ಪುವ ಕಕ್ಕರಗೊಣ್ಡಮೆಂನಧಿಷ್ಠಾನ ದೊಳುರ್ವ್ವರಾಧಿಪತಿ ಚಕ್ರಧರಂ ನೆಲಸಿರ್ದ್ದ ಬೀಡಿನೊಳ್ ||

೩೫. || ವ್ರಿ || ಶಕ ಕಾಳಂ ಗುಣಲಬ್ಧಿರ್ಮ್ಮಂಧರಗಣ ನಾ ವಿಖ್ಯಾತ ಮಾಗಲ್ ವಿರೋಧ ಕ್ರಿದಾಬ್ದಂ ಬರೆ ಚೈತ್ರಮಾಗೆ ವಿಶ್ವತ್ಸಂಕ್ರಾನ್ತಿಯೊಳ್ ಪು

೩೬. ಷ್ಯ ತಾರಕೆ ಪೂರ್ಣ್ಣಾಂಗಿರಮಾಗೆ ಚಕ್ರಧರ ದತ್ತಾದೇಶದಿಂ ಚೂಡಾಮಣಿ ಧರ್ಮ್ಮವತ್ತಳೆಯ ನತ್ಯುತ್ಸಾಹದಿಂ

೩೭. ಮಾಡಿದ(೦) || ಕ || ತ್ರಿಭುವನ ಚನ್ದ್ರ ಮುನೀನ್ದ್ರರನಭಿವಂದಿಸಿ ಭಕ್ತಯಿಂದೆ ಕಾಲ್ಗಚ್ಚಿ ಜಗತ್ಪ್ರಭುವಿನ ಬೆಸದಿಂ ಲಕ್ಷ್ಮಣ ವಿಭು

೩೮. ಕೊಟ್ಟಂ ಹಸ್ತಧಾರೆಯಿಂ ಶಾಸನಮ(೦) || ವೃ || ಎರಡಱುನೂಱ ಬಾಡದೊಳಗೀ ಜಿನಗೇಹವೆ ಪೂಜ್ಯಮೆಂದದಕ್ಕರಸರ ಕಾ

೩೯. ಣ್ಕೆ ಬಿೞ್ದುಬಿಯಮುಂ ಬಳಂ ಉಣ್ಬಳಿ ದಾಯಮಾದಿಯಾಗೆರಡಱುವತ್ತು ಪೊನ್ನಱುವಣಂ ಸಮಕಟ್ಟೆನೆ ಮಾಡಿ ಶಾಸನಂ

೪೦. ಬರೆಯಿಸಿ ಕೊಟ್ಟ ಧರ್ಮ್ಮ ಗುಣಮಂ ಮೆಱೆದಂ ನೃಪಮೆರು ಲಕ್ಷ್ಮಣ(೦) || ವ್ರಿ || ಜಿನನಾಥಾವಾಸಾಮಂ ವಿಶ್ವರಿತು ನಿಭಮಂ ಕಷ್ಟ

೪೧. ಕಾಲೇಯ ದುರ್ಬ್ಭಾವನೆಯಿಂ ಚಂಡಾಳ ಚೋಲಂ ಸುಡಿಸಿ ಕಿಡಿಸೆರ್ ವಿಚ್ಚಿತ್ತಿಯಾಗಿರ್ದ್ದುದೇಂ ನೆಟ್ಟನೆ ನಷ್ಟೋದ್ಧಾರಮಂ ಶಾಶ್ವತಯ

೪೨. ತಿಶಯ ಮಾಯ್ತೆಂಬಿನಂ ಮಾಡಿ ತಚ್ಚಾಸನಮಾಚಂದ್ರಾರ್ಕ್ಕತಾರಂನಿಲೆ ನಿಲಿಸಿದನೇಂ ಧನುಅನೋ ಅಕ್ಷ್ಮಭೂಪಂ || ಕ || ಅರಸರ್ಗ್ಗೆ ಸೇಸೆಯೆನ್ದ

೪೩. ರ್ತಸರ ಕಾಣಿಕೆಯನ್ನು ದಾಯಧರ್ಮ್ಮದ ತೆಱೆಯೆನ್ದಱುವಣದಿಂದಗ್ಗಳಮೆನ್ದರೆ ವೀಸ ಮನಿಕ್ಕಿ ಕೊಂಡವರ್ಚ್ಚಂಡಾಳರು ||

೪೪. ಸ್ವಸ್ತಿ ಸಮಧಿಗತ ಪಂಚಮಹಾಶಬ್ದ ಮಹಾಸಾಮನ್ತ ಭುಜ ಬಳೋಪಾರ್ಜ್ಜಿತ ವಿಜಯಲಕ್ಷ್ಮೀಕಾಂತಂ ಸಮಸ್ತಾರಿ ವಿಜಯ

೪೫. ದಕ್ಷದಕ್ಷಿಣ ದೋರ್ದಣ್ಡಂ ಕತ್ತಲೆ ಕುಲ ಕಮಳ ಮಾರ್ತ್ತಣ್ಡಂ ಮಯೂರಾವತೀ ಪುರವರಾಧೀಶ್ವರಂ ಜ್ವಾಲಿನೀಲಬ್ಧವರ ಪ್ರಸಾದ ಕ

೪೬. ರ್ಪ್ಪೂರವರ್ಷಂ ಜಿನಧರ್ಮ್ಮ ನಿರ್ಮ್ಮಳಂ ನೆಱೆ ಕಾ ಟಿಯಂ ಕಕಾಱನಾಮಾದಿ ಸಮಸ್ತ ಪ್ರಶತಿ ಸಹಿತಂ ಶ್ರೀಮನ್ಮಹಾಸಾಮನ್ತ ಬೆ

೪೭. ಳ್ವಲಾಧಿಪತಿ ಭುಜಬಳ ಕಾಟರಸರು || ಕ || ಜಗಮೆಲ್ಲಂ ದೇಸೆಗೆ ಕಮ್ಮುಗಿಗೆಮ ಕೊಟ್ಟಱೆಯನೊನ್ದು ಕಾಗಿಣಿಯುಮ

೪೮. ನಾ ಗಗನದೊಳಿರ್ಪ್ಪಾದಿತ್ಯಂ ಬಗೆದುದನಿತ್ತಪನೆ ಬೆಳ್ವಲಾದಿತ್ಯನವೊಲು || ಕ || ಇನ್ತೆನಿಸಿದ ಬೆಳ್ವಲಾದಿತ್ಯಂ ಶಕವರ್ಷ ೯೯೪ ನೆ

೪೯. ಯ ಪರಿಭಾವಿ ಸಂವತ್ಸರದ ಪುಷ್ಯ ಶುದ್ಧ ಪಂಚಮಿ ಬ್ರಿಹಸ್ಪತಿ ವಾರದಂದಣ್ಣಿಗೆಱಿಯ ಗಂಗ ಪೆರ್ಮ್ಮಾಡಿಯ ಬಸ

೫೦. ದಿಯ ದಾನಸಾಲೆಗಲ್ಲಿಗಾಳ್ವ ಗಾವರಿವಾಡದ ತಮ್ಮ ಸಿವಟದ ಮತ್ತ ರಯ್ವತ್ತುಮನಣ್ಣಿಗೆಱೆಯೊಳು ಕ್ರಯವಿಕ್ರಮ

೫೧. ದಿಂ ಯಲ್ಲಿಯಾಚಾರ್ಯ್ಯರು ತ್ರಿಭುವನ ಚಂದ್ರ ಪಂಡಿತರ ಕಾಲಂ ಕರ್ಚ್ಚಿಧಾರಾಪೂರ್ವ್ವಕಂ ಮಾಡಿಬಿಟ್ಟು ಕೊಟ್ಟರು|

೫೨. ಸ್ವಸ್ತಿ ಸಮಸ್ತ ವಿನಮದಮರ ಮಕುಟತಟ ಘನಿತ ಶೋಣ ಮಾಣಿಕ್ಯ ಮೌಕ್ತಿಕ ಮಯೂಖ ಕುಂಕುಮ ಮಳಯಜಾಭ್ಯರ್ಚ್ಚಿ

೫೩. ತ ಶ್ರೀಮದರ್ಹತ್ಪರಮೇಶ್ವರ ಪ್ರಣೀತ ಪರಮಾಗಮ ವಿಶಾರದ ಮನವರತ ಪರಮಾಗಮೋಪದೇಶ ಪ್ರಸಂಗರುಮಪ್ಪ ಶ್ರೀಮದ್ ಉ

೫೪. ದಯಚಂದ್ರ ಸೈದ್ಧಾಂತ ದೇವರ ದಿವ್ಯಶ್ರೀ ಪಾದ ಪದ್ಮಾರಾಧಕರುಂ ಶ್ರೀಮದ್ ಬಳಾತ್ಕಾರ ಗಣಾಂಬುಜ ಸರೋವರರಾಜಹಂಸರುಮಪ್ಪಶ್ರೀ

೫೫. ಮತ್ ಸಕಳ ಚಂದ್ರದೇವರು ಶ್ರೀಮದ್ರಾಜಧಾನಿ ಬಟ್ಟಣ ಮಣ್ಣಿಗೆಱೆಯ ಮಹಾಸ್ಥಾನಂ ಶ್ರೀಮದ್ ಗಂಗಪೆರ್ಮ್ಮಾಡಿಯ ಬಸ

೫೬. ದಿಗ್ವಾಳ ಗ್ರಾಮಾದಿ ಮಾಡದಲು ಯಾಚಾರ್ಯ್ಯರುಂ ಚವೂಂಡಗಾವುಂಡ ಮುಖ್ಯವಾಗಿ ಹೆಗ್ಗಡೆ ಸಹಿತ ಮೂವತ್ತು ಮನುಷ್ಯ

೫೭. ದೇವ ಪುತ್ರರ್ಗ್ಗೆ ಕೊಟ್ಟವ್ರಿತ್ರಿಯಕ್ರಮ | ಚಂಡವ್ವೆಯ ಮಗಂ ಹೆಗ್ಗಡೆ ಮಲ್ಲಯ್ಯನುಯಾದಿನಾಥ ಸ್ವಾಮಿಗೆಯಲ್ಲಿಯಾಚಾ

೫೮. ರಿಯರ್ಗ್ಗೆ ಬೆಸಕೆಯ್ದುಂಬ ವ್ರಿತ್ತಿ ಮತ್ತರ್ಪ ನ್ನೆರಡುಂ ಕೇತಗಾವುಂಡ ಯಾಚಾರ್ಯ್ಯರ್ಗ್ಗೆ ಪಾದ ಪೂಜೆಯಂ ಕೊಟ್ಟು

೫೯. ತಮ್ಮ ಸೇನಗಣದ ಬಸದಿಗೆ ಹೂಲಿಗೊಳದ ಸೀಮೆವಿಡಿದು ಕುಳುಪಳ್ಳದಿಂ ಪಡುವಲು ಮತ್ತರೆಂಟುಯಱುವಣಂ ಗದ್ಯಾಣಂ

೬೦. ನಾಲ್ಕಱೆಂದಧಿಕ ಕೊಂಡವರ್ಚ್ಚಾಂಡಾಳರು || ಎಮ್ಮೆಯ ಕೇತಿ ಸೆಟ್ಟಿಯ ಸಾಮ್ಯಕ್ಕೆ ಮತ್ತರೆಂಟು ಮನೆವೊಂದು ಭೋಗವಾಡಗೆ ಗದ್ಯಾಣಂನಾ

೬೧. ಲ್ಕು ಕಣಬಿಯ ಸೆಟ್ಟಿಯ ಬಮ್ಮಿ ಸೆಟ್ಟಿಯ ಸಾಮ್ಯಕ್ಕೆ ಮತ್ತರೆಂಟು ಮನೆವೊಂದು ಭೋಗವಾಡಗೆ ಗದ್ಯಾಣಂ ನಾಲ್ಕು ಕತ್ತೆ

೬೨. ಯ ದಾರಿ ಸೆಟ್ಟಿಯ ಸಾಮ್ಯಕ್ಕೆ ಮತ್ತರೆಂಟು ಮನೆವೊಂದು ಭೋಗವಾಡಗೆ ಗದ್ಯಾಣಂ ನಾಲ್ಕು ಹೆಬ್ಬೆಯ ದೇವಿ ಸೆಟ್ಟಿಯ

೬೩. ಯ ಸಾಮ್ಯಕ್ಕೆ ಮತ್ತರೆಂಟು ಮನೆವೊಂದು ಭೋಗವಾಡಗೆಗದ್ಯಾಣಂ ನಾಲ್ಕು ಗೂಳಿಯ ಚೌಡಿ ಸೆಟ್ಟಿಯ ಸಾಮ್ಯಕ್ಕೆ ಮತ್ತ

೬೪. ರೆಂಟು ಮನೆವೊಂದು ಬೋಗವಾಡಗೆ ಗದ್ಯಾನಂ ನಾಲ್ಕು ರುಡ್ಡಲಿಯ ಸಂಕಿ ಸೆಟ್ಟಿಯ ಸಾಮ್ಯಕ್ಕೆ ಮತ್ತರೆಂಟು ಮನೆ

೬೫. ವೊಂದು ಭೋಗ ವಾಡಗೆ ಗದ್ಯಾಣಂ ನಾಲ್ಕು ಕಂದಲ ಮಲ್ಲಿ ಸೆಟ್ಟಿಯ ಸಾಮ್ಯಕ್ಕೆ ಮತ್ತರೆಂಟು ಮನೆವೊಂದು ಭೋಗವಾಡಗೆ ಗದ್ಯಾಣಂ

೬೬. ನಾಲ್ಕು | ಮಲ್ಲವ್ವೆಯ ಪುತ್ರರು ಚಂದಿ ಸೆಟ್ಟಿಯ ಸಾಮ್ಯಕ್ಕೆ ಮತ್ತರೆಂಟು ಮನೆವೊಂದು ಭೋಗವಾಡಗೆ ಗದ್ಯಾಣಂ ನಾಲ್ಕು ಮಾಧ

೬೭. ವ ಸೆಟ್ಟಿಯ ಸಾಮ್ಯಕ್ಕೆ ಮತ್ತರೆಂಟು ಮನೆವೊಂದು ಭೋಗವಾಡಗೆ ಗದ್ಯಾಣಂ ನಾಲ್ಕು ಬಯ್ಸರ ಬೊಪ್ಪಿ ಸೆಟ್ಟಿಯ ಸಾಮ್ಯ

೬೮. ಕ್ಕೆ ಮತ್ತರೆಂಟು ಮನೆವೊಂದು ಭೋಗವಾಡಗೆ ಗದ್ಯಾಣಂ ನಾಲ್ಕು ನೇಮಿಸೆಟ್ಟಿಯ ಸಾಮ್ಯಕ್ಕೆ ಮತ್ತರೆಂಟು ಮನೆವೊಂದು

೬೯. ಭೋಗವಾಡಗೆ ಗದ್ಯಾಣಂ ನಾಲ್ಕು ಗೊರವರ ಬಮ್ಮಿ ಸೆಟ್ಟಿಯ ಸಾಮ್ಯಕ್ಕೆ ಮತ್ತರೆಂಟು ಮನೆವೊಂದು ಭೋಗವಾಡಗೆ ಗದ್ಯಾಣಂ ನಾಲ್ಕು

೭೦. ಮಯಿಲಿ ಸೆಟ್ಟಿಯ ಸಾಮ್ಯಕ್ಕೆ ಮತ್ತರೆಂಟು ಮನೆವೊಂದು ಭೋಗ ವಾಡಗೆ ಗದ್ಯಾಣಂ ನಾಲ್ಕು ಗೊರವರ ಬೋಸಿ ಸೆಟ್ಟಿಯ ಸಾಮ್ಯಕ್ಕೆ ಮತ್ತ

೭೧. ರೆಂಟು ಮನೆವೊಂದು ಭೋಗವಾಡಗೆ ಗದ್ಯಾಣ್ ನಾಲ್ಕು ಚಂದಿ ಸೆಟ್ಟಿಯ ಸಾಮ್ಯಕ್ಕೆ ಮತ್ತರೆಮ್ಟು ಮನೆವೊಂದು ಭೋಗವಾಡಗೆ ಗದ್ಯಾ

೭೨. ಣಂ ನಾಲ್ಕು ಎಮ್ಮೆಯರ ಚವುಡಿ ಸೆಟ್ತಿಯ ಸಾಮ್ಯಕ್ಕೆ ಮತ್ತರೆಂಟು ಮನೆವೊಂದು ಭೋಗವಾಡಗೆ ಗದ್ಯಾಣಂ ನಾಲ್ಕು ಹೊಯ್ಸರ ಚವು

೭೩. ಡ್ ಸೆಟ್ಟಿಯ ಸಾಮ್ಯಕ್ಕೆ ಮತ್ತರೆಂಟು ಮನೆವೊಂದು ಭೋಗವಾಡಗೆ ಗದ್ಯಾಣಂ ನಾಲ್ಕು ಕೆಲ್ಲರ ಗೊರವಿ ಸೆಟ್ಟಿಯ ಸಾಮ್ಯಕ್ಕೆ ಮ

೭೪. ತ್ತರೆಂಟು ಮನೆವೊಂದು ಭೋಗವಾಡಗೆ ಗದ್ಯಾಣಂ ನಾಲ್ಕು ತಾಳ ಬಮ್ಮಿ ಸೆಟ್ಟಿಯ ಸಾಮ್ಯಕ್ಕೆ ಮತ್ತರೆಂಟು ಮನೆವೊಂದು ಭೋಗ

೭೫. ವಾಡಗೆ ಗದ್ಯಾಣಂ ನಾಲ್ಕು ಕಡಬರ ದೇವಿ ಸೆಟ್ಟಿಯ ಸಾಮ್ಯಕ್ಕೆ ಮತ್ತರೆಂಟು ಮನೆವೊಂದು ಭೋಗವಾಡಗೆ ಗದ್ಯಾಣಂ ನಾಲ್ಕು ಮಂ

೭೬. ಚಲ ಬೋಸಿ ಸೆಟ್ಟಿಯ ಸಾಮ್ಯಕ್ಕೆಮತ್ತರೆಂಟು ಮನೆವೊಂದು ಭೋಗವಾಡಗೆ ಗದ್ಯಾಣಂ ನಾಲ್ಕು ಬಿಣಿಲ ಮಲ್ಲಿಸೆಟ್ಟಿಯ ಸಾಮ್ಯ

೭೭. ಕ್ಕೆ ಮತ್ತರೆಂಟುಮನೆವೊಂದು ಭೋಗವಾಡಗೆ ಗದ್ಯಾಣಂ ನಾಲ್ಕು ಬೆಣ್ಣೆಯ ನಾಳಿ ಸೆಟ್ಟಿಯ ಸಾಮ್ಯಕ್ಕೆ ಮತ್ತರೆಂಟು

೭೮. ಮನೆವೊಂದು ಭೋಗವಾಡಗೆ ಗದ್ಯಾಣಂ ನಾಲ್ಕು ದೊಡ್ದರ ಕೇತಿ ಸೆಟ್ಟಿಯ ಸಾಮ್ಯಕ್ಕೆ ಮತ್ತರೆಂಟು ಮನೆವೊಂದು ಭೋಗವಾ

೭೯. ಡಗೆ ಗದ್ಯಾಣಂ ನಾಲ್ಕು ಮಂಜಡಿಯ ಯೇಚಿ ಸೆಟ್ಟಿಯ ಸಾಮ್ಯಕ್ಕೆ ಮತ್ತರೆಂಟು ಮನೆವೊಂದು ಭೋಗವಾಡಗೆ ಗದ್ಯಾಣಂ

೮೦. ನಾಲ್ಕು ಗಂಡಿ ಸೆಟ್ಟಿಯ ಸಾಮ್ಯಕ್ಕೆ ಮತ್ತರೆಂಟು ಮನೆವೊಂದು ಭೊಗವಾಡಗೆ ಗದ್ಯಾಣಂ ನಾಲ್ಕು ಮುರಿಯದ ಕಲಿ ಸೆ

೮೧. ಟ್ಟಿಯ ಸಾಮ್ಯಕ್ಕೆ ಮತ್ತರೆಂಟು ಮನೆವೊಂದು ಭೋಗವಾಡಗೆ ಗದ್ಯಾಣಂ ನಾಲ್ಕು ಬಯಿಸರ ಬಸವಿ ಸೆಟ್ಟಿಯ ಸಾಮ್ಯಕ್ಕೆ ಮತ್ತ

೮೨. ರೆಂಟು ಮನೆವೊಂದು ಭೋಗವಾಡಗೆ ಗದ್ಯಾಣಂ ನಾಲ್ಕು ನೂತಿ ಸೆಟ್ಟಿಯ ಸಾಮ್ಯಕ್ಕೆ ಮತ್ತರೆಂಟು ಮನೆವೊಂದು ಭೋಗವಾಡಗೆ ಗದ್ಯಾಣಂ

೮೩. ನಾಲ್ಕು ಚಿಕ್ಕಿ ಸೆಟ್ಟಿಯ ಸಾಮ್ಯಕ್ಕೆ ಮತ್ತರೆಂಟು ಮನೆವೊಂದು ಭೋಗವಾಡಗೆ ಗದ್ಯಾಣಂ ನಾಲ್ಕು ಯಿಂತೀ ದೇವ ಪುತ್ರಿಕರೊಳಗೆ ಯಾವ

೮೪. ನಿರ್ವ್ವನ್ ಧರ್ಮ್ಮಕ್ಕಂ ಯಾಚಾರ್ಯ್ಯಾಗ್ಗಂ ವಿರೋಧಿಯಾಗಿ ರಾಜಗಾಮಿತ್ವಂ ಮಾಡಿದನಪ್ಪಡೆ ವ್ರಿತಿಚ್ಛೇದ ಸಮಯ ಬಾಹ್ಯ

೮೫. ಸ್ವಸ್ತಿ ಸಮಸ್ತ ಪ್ರಶಸ್ತಿ ಸಹಿತಂ ಶ್ರೀಮನ್ ಮಹಾಪ್ರಧಾನಂ ವಸುಧೈಕ ಬಾಧವಂ ಶ್ರೀರೇಚಿದೇವ ದಂಡನಾಥ ಬಟ್ಟಕೆಱೆ

೮೬. ಯ ಶ್ರೀ ಕಲಿದೇವ ಸ್ವಾಮಿ ಜಿನಶ್ರೀಪಾದಾರ್ಚ್ಚನೆಗೆ ಕರ್ಪ್ಪೂರ ಕುಂಕುಮ ಶ್ರೀಗಂಧ ಸಹಿತ ಯಷ್ಟವಿಧಾರ್ಚ್ಚನೆಗೆ

೮೭. ರಿಹಾರವಾಗಿ ಪ್ರತಿಪಾಲಿಪರು || ದಕ್ಷಿಣ ಐಯಾವೊಳೆಯುಮಪ್ಪ ಗ್ರಾಮಾದಿ ವಾಡಕ್ಕೆ ಶ್ರೀಗಂಗ ಪೆರ್ಮ್ಮಾಡಿ

೮೮. ಯ ಬಸದಿಯ ಪುರದ ಮರ್ಯ್ಯಾದೆಯ ಘಳೆ ಮೂವತ್ತೆಂಟು ಗೇಣು ಹಸ್ತ ಬೆಂಗೊಳ್ಲದಂಗೆ ವ್ರಿತ್ತಿ ಸಲ್ಲದು | ವರ್ದ್ದತಾಂ ಜಿನಶಾ

೮೯. ಸನ(೦) ||

೯೦. ಗಂಗಾಸಾಗರ ಯಮುನಾ ಸಂಗಮದೊಳು ಬಾಣರಾಸಿಗಯೆಯೆಂಬೀತೀರ್ತ್ಥಂಗಳೊಳಾತ್ಮ ಕುಳ ದ್ವಿಜ ಪುಂಗ ವಗೋಕುಲ ಮನಳಿದಕಿಂಕಿತದನಳಿ

೯೧. ದರ || ಸ್ಚದತ್ತಾಂ ಪರದತ್ತಾಂ ವಾಯೋಹರೇತ ವಸುಂಧರಾಂ ಷಷ್ಟಿರ್ವ್ವರ್ಷ ಸಹಸ್ರಾಣಿ ವಿಷ್ಟಾಯಾಂ ಜಾಯತೇ ಕ್ರಿಮಿ ||

೯೨. ಯಾಚಾರ್ಯ್ಯ ಯೆಕ್ಕಟಿಗನಾಗಿ ಬೆಸಕೆಯ್ದುಂಬ ೞೃತ್ತಿ ಕುಱೆಬರ ಕತೆ .. ………

೯೩. ನ್ದು || ಯಾಚಾರ್ಯ್ಯರು ಚವುಡ ಗವುಡನ ಹೆಸರಿಟ್ಟುದಕ್ಕೆ ಮೂಗವಾಡ ರನ …..

೯೪. ಳದ ಸೀಮೆಯಲ್ಉ ವ್ರಿತ್ತಿ ಮತ್ತರು ವೊಂದು ಯದು ಹೊಲಗೆಱೆ ||

೫. ಚಾರಿತ್ರಿಕ ಸಂಗತಿಗಳು ಮತ್ತು ವ್ಯಕ್ತಿಗಳು

ಈ ಶಾಸನದ ಒಡಲಲ್ಲಿ ಹಲವಾರು ರಾಜಕೀಯ ಮಹತ್ವದ ಅಂಶಗಳು ಹೆಣೆದು ಕುಳಿತಿವೆ. ಈ ಶಾಸಸ ನೆಯ್ಗೆಯಲ್ಲಿರುವ ಹಾಸು ಹೊಕ್ಕುಗಳನ್ನು ಬಿಡಿಸಿ ನೋಡಿದಾಗಲೇ ಅದರೊಳಗಿರುವ ಎಳೆಗಳು ಸರಿಯಾಗಿ ಕಾಣುವುದು. ಮೊದಲ ಓದಿಗೆ ಈ ಶಾಸನ ಕಲ್ಯಾಣಿ ಚಾಳುಕ್ಯರ ಕಾಲದ್ದು ಎಂಬುದು ನಿಚ್ಚಳವಾಗಿ ಕಾಣುತ್ತದೆ. ಶಾಸನ ಪಾಠದಲ್ಲಿರುವ ಪ್ರತಿಯೊಂದು ಸಾಲನ್ನೂ ಕೆದಕಿ-ಬೆದಕಿ ಅದರೊಳಗಿನ ಹೊರಣವನ್ನು ಹರಡಿಟ್ಟಂತೆ ಶಬ್ದಗಳ ಮರೆಯ ನಿದಾನ ಬೆಳಗುತ್ತದೆ.

ಈ ಶಾಸನ ಕವಿ ತನ್ನ ಹಲವು ಶಕ್ತಿ ಚಾತುರ್ಯಗಳನ್ನು ಇಲ್ಲಿ ತೋರಿದ್ದಾನೆ. ಶಾಸನಕವಿಯ ಸೃಷ್ಟಿಶಕ್ತಿಯನ್ನು ಇತರ ಮುಖಗಳನ್ನು ಕ್ರಮೇಣ ಪರಿಚಯಿಸಿಕೊಳ್ಲ ಬಹುದು. ಈ ಹಂತದಲ್ಲಿ ಆತನ ಚಾರಿತ್ರಿಕ ಪ್ರಜ್ಞೆಯನ್ನು ವಿಶ್ಲೇಷಿಸುವುದು ಮುಖ್ಯ ಪ್ರಯತ್ನ. ಇದರಲ್ಲಿಯೂ ಕವಿ ಹಿನ್ನೆಲೆ ಚಾರಿತ್ರಿಕ ತಂತ್ರವನ್ನು ಅಳವಡಿಸಿದ್ದಾನೆ. ಜಿನಸ್ತುತಿಯ ತರುವಾಯ ಈ ಶಾಸನದ ಮುಖ್ಯ ಭಾಗ ಅಂದರೆ ಮೂಲ ಶಾಸನ ರಚನೆಯಾದಾಗ ಆಳುತ್ತಿದ್ದ ಭುವನೈಕ ಮಲ್ಲದೇವನನ್ನು [೧೦೬೮-೭೬] ಕೇವಲ ಹೆಸರಿಸಿ, ಕೂಡಲೆ ಆತನ ಆಸರೆಯಲ್ಲಿ ಆಡಳಿತ ಮಾಡುತ್ತಿದ್ದ ಲಷ್ಮನೃಪನನ್ನು ಪ್ರಶಸ್ತಿಗಳ ಸರಮಾಲೆತೊಡಿಸಿ ಉಜ್ವಲವಾಗಿ ವರ್ನಿಸಿದೆ (೪-೧೪). ಈ ಹತ್ತು ಸಾಲುಗಳಲ್ಲಿ ಲಕ್ಷ್ಮಭೂಪತಿಯ ವ್ಯಕ್ತಿತ್ವದ ಛಾಪು ಸಜೀವವಾಗಿ ಮೂಡಿದೆ.

            ಎನೆನೆಗಳ್ದ ಲಕ್ಷ್ಮ ಭೂಪತಿ
ಜನಪತಿ ಭುವನೈಕಮಲ್ಲದೇವಾದೇಶಂ
ತನಗೆಸೆದಿರೆ ಮಾಡಿಸಿದಂ
ಜಿನಶಾಸನ ವೃದ್ಧಿಯಂ ಪ್ರವರ್ಧನಮಾಗಲು
||

ಎಂಬುದಾಗಿ, ಲಕ್ಷ್ಮಭೂಪತಿಯು ಜನಪತಿಯಾದ ಭುವನೈಕಮಲ್ಲದೇವನ ಅಪ್ಪಣೆಯಂತ ಜೈನಧರ್ಮವು ವೃದ್ಧಿಗೊಂಡು ಪ್ರವರ್ಧಮಾಸಸ್ಥಿತಿಗೆ ಬರುವಂತೆ ನೆರವಿಗೆ ನಿಂತನೆಂದು ಹೇಳಲಾಗಿದೆ. ಅಲ್ಲಿಂದ ಲಕ್ಷ್ಮರಸವನ್ನು ಕೈಬಿಟ್ಟು, ಅಣ್ಣಿಗೆರೆಯ ಬಸದಿಯ ಗತಿ ಇತಿಹಾಸವನ್ನು ಪುನರಭಿನಯಿಸಿದ ರೀತಿಯಲ್ಲಿ ನಿರೂಪಿಸ ತೊಡಗುತ್ತದೆ ಈ ಶಾಸನ.

೫.೧. ಆ ಚೈತ್ಯಾಲಯದ ಉಪ್ರ್ಬ್ಬಾವತಾರ ಮೆಂತೆಂದೊಡೆ-

ಶ್ರೀವಸುದೇಶನ ಬಾವಂ
ರೇವಕ ನಿರ್ಮ್ಮಡಿಯ ವಲ್ಲಭಂ ಬೂತುಗನಾ
ತ್ಮಾವಗತಸಕಳ ಶಾಸ್ತ್ರನಿ
ಳಾವಿಶ್ರುತ ಕೀರ್ತ್ತಿ ಗಂಗಮಣ್ಡಲನಾಥ(೦)
||

            (ಉತ್ಪಲ ಮಾಲೆ) ರೂಡಿಗೆ ರೂಡಿ ವೆತ್ತೆಸೆದ ಬೆಳ್ವಲ ದೇಶಮನಾಳ್ದ ಗಂಗಪೆ
ಮಾರ್ಡಿಗಳಿಂದ ಮಣ್ಣಿಗೆಱೆ ನಾಳ್ಕೆಱೆ ವಟ್ಟೆನಿಸಿತ್ತು ನಾಡನಾ
ಡಾಡಿ ಗಳುಂಬಮೆಂಬಿಗಮಾ ಪುರದೊಳು ಜಯದುತ್ತರಂಗ ಪೆ
ರ್ಮ್ಮಾಡಿಯಿನಾಯ್ತು ಬೂತುಗನರೇನ್ದ್ರನಿನಲ್ಲಿ ಜಿನೇಂದ್ರ ಮಂದಿರಂ
||

ಇಲ್ಲಿ ವಸುಧೇಶನೆಂದರೆ ರಾಷ್ಟ್ರಕೂಟರ ಚಕ್ರವರ್ತಿ ಕೃಷ್ಣ ೧೧೧(೯೩೯-೬೭), ಆತನ ಬಾವನೆಂದರೆ ಬೂತುಗ ೧೧(೯೩೮-೬೧) ವಾಸ್ತವವಾಗಿ ಶಾಸನದಲ್ಲಿ ಅನ್ವಯದೋಷ ಬಂದಿದೆ. ಚಾಳುಕ್ಯರ ವಿಚಾರ ಹೇಳುತ್ತ ಇದ್ದಕ್ಕಿದ್ದ ಹಾಗೆ ವಸುಧೇಶ ಎಂಬ ಶಬ್ದ ಬಳಕೆಯಾದರೆ, ಅದರ ಅರ್ಥಾನ್ವಯವು ಚಾಳುಕ್ಯ ಮಹಾರಾಜರಿಗೇ ಆಗುವುದು ಸಹಜ ಹಾಗೂ ನಿರೀಕ್ಷಿತ. ಆದರೆ ರೇವಕ ನಿರ್ಮಡಿಯ ವಲ್ಲಭನಾದ ಬೂತುಗ ಎಂದು ಮುಂದುವರಿದ ಹೇಳಿಕೆಯಿಂದಾಗಿ ವಸುಧೇಶ ಎಂಬ ಶಬ್ದದ ಅರ್ಥ ಮತ್ತು ವ್ಯಕ್ತಿ ನಿರ್ದೇಶನ ಗಮ್ಯವಾಗುತ್ತದೆ. ರೇವಕನಿಮ್ಮಡಿಯು ರಟ್ಟರ ಮುಮ್ಮಡಿ ಕೃಷ್ಣನ ಅಕ್ಕ. ಈ ಇಮ್ಮಡಿರೇವಕೆಯ ಗಂಡ ಗಂಗರ ಇಮ್ಮಡಿ ಬೂತುಗ. ಈತನು ಎಲ್ಲ ಶಾಸ್ತ್ರಗಳನ್ನು ಪರಿಣತಿಯಿಂದ ತನ್ನದನ್ನಾಗಿಸಿದ್ದನು, ಅದರಿಂದಾಗಿ ಇವನಿಗೆ ದೊಡ್ದಹೆಸರು. ಬೆಳ್ವಲದೇಶವು ಹೆಸರುವಾಸಿಯಾಗಿತ್ತು. ಅದನ್ನು ಮೊದಲಿನಿಂದಲೂ ಅಳುತ್ತ ಬಂದವರು ಗಂಗರು. ಬೆಳ್ವಲ ಮನೂಱು ಮತ್ತು ಪುಲಿಗೆಱೆ ಮೂನೂಱು ಸೇರಿ ಆದ ಎರಡಱುನೂಱು ಪ್ರದೇಶವು ನೂರಾರು ವರ್ಷಗಳ ಕಾಲ ಜೈನರಾದ ಗಂಗರ, ಸಗರ ಮಣಲೆರರು ಆಡಳಿತದಲ್ಲಿತ್ತು [ನಾಗರಾಜಯ್ಯ, ಹಂಪ : ಶಾಸನಗಳಲ್ಲಿ ಎರಡು ವಂಶಗಳು : ೧೯೯೫ : ೩೯ ರಿಂದ ೭೬]. ಬೆಳ್ವಲದೇಶವು ಗಂಗ ಪೆರ್ಮಾಡಿಗಳಿಂದ ಅಣ್ಣಿಗೆಱೆಯು ಇಡೀ ನಾಡಿಗೆ ಮೂಲಸ್ಥಾನವೆನಿಸಿತ್ತು. ಸಾಮಾನ್ಯ ಜನಕ್ಕೆ ಅಸಾಧ್ಯವಾಗಿದ್ದ ಆ ಅಣ್ಣಿಗೆರೆ ಪುರುದಲ್ಲಿ ‘ಜಯದುತ್ತರಂಗ ಪೆರ್ಮಾಡಿ’ ಬಿರುದಿನ ಬೂತುಗ ನರೇಂದ್ರನಿಂದ ಒಂದು ಜಿನಮಂದಿರ ನಿರ್ಮಾಣವಾಯಿತು. ಜಯದತ್ತ ರಂಗ ಎಂಬುದು ಪ್ರಶಸ್ತಿ [ಸೌ.ಇ.ಇ. ೨೦. ೩೫.೧೦೫೫]. ಇಂತಹ ಪ್ರಸಿದ್ಧವಾದ ಜಿನಮಂದಿರ ವನ್ನು ರಾಷ್ಟ್ರಕೂಟರ ಆಡಳಿತಾವಧಿಯಲ್ಲಿ ಈ ಅಣ್ಣಿಗೆರೆಯಲ್ಲಿ ಬೂತಗನಿಮ್ಮಡಿಯ ಮಾಡಿಸಿದನು. ಅದಕ್ಕೆ ಕೆಲವು ಗ್ರಾಮಗಳನ್ನು ದತ್ತಿಯಾಗಿ ಒಪ್ಪಿಸಿದನು:

            ಉದಿತೋದಿತಮೆನೆ ವಿಭವಾ
ಸ್ಪದಮೆನೆ ಭುವನಯ್ಕವಂದ್ಯಯೆನೆ ಸಂಚಳಮಾ
ಗದೆ ಗಂಗಾನ್ವಯಮುಳ್ಳಿನ
ಮಿದು ಸರ್ವ್ವನಮಸ್ಯವಾಗಿ ನಡಯುತ್ತಮಿರಲ್
||

ಗಂಗರು ಕೊಟ್ಟ ಕೊಡುಗೆಗಳು ಗಂಗರ ವಂಶಪರ್ಯಂತ ಅವಿಚ್ಛಿನ್ನವಾಗಿಯೇ ಮುಂದುವರಿಯಿತು ಎಂದು ಹೇಳಿದ ಮೇಲೆ (೧೯-೨೧) ಶಾಸನಕವಿ, ಅ ಅಣ್ಣಿಗೆರೆ ದೇವಾಲಯದ ಆಚಾರ್ಯರು ಬಳೆಗಾಱ ಗುಂಪಿಗೆ ಸೇರಿದವರೆಂದು ಅವರಗುರು ಪರಂಪರೆಯನ್ನು ಪರಿಚಯಿಸಿದ್ದಾನೆ (೨೨-೨೭).

೫.೨. ತರುವಾಯ ಶಾಸನಕವಿ, ರಾಷ್ಟ್ರಕೂಟ – ಗಂಗರ ವಿಚಾರವನ್ನು ಅಲ್ಲಿಗೆ ನಿಲ್ಲಿಸಿ, ಮತ್ತೆ ಕಲ್ಯಾಣಚಾಳುಕ್ಯಯ ವಿಚಾರಕ್ಕೆ ಬರುತ್ತಾನೆ. ರಾಜಕೀಯದೊಂದಿಗೆ ಧಾರ್ಮಿಕ ಕಾರಣಗಳೂ ಕೂಡಿಕೊಂಡಿದ್ದುದರಿಂದ, ಚೋಳರೂ-ಚಾಳುಕ್ಯರೂ ಹಗೆತನ ದಿಂದ ಕಾಳೆಗಕಳದಲ್ಲಿಯೇ ಸಂಧಿಸುತ್ತಿದ್ದುದು. ತ್ರೈಳೋಕ್ಯಮಲ್ಲದೇವನಿಗೂ ಚೋಳರಿಗೂ ಯುದ್ಧಗಳಾದುವು : (ಮತ್ತೇಭವಿಕ್ರೀಡಿತ ವೃತ್ತ)-

ಪೊಲೆಚೋಳಂ ನೆಲೆಗತ್ತು ತನ್ನ ಕುಳಧರ್ಮಾಚಾರಮಂ ಬಿಟ್ಟು ಬೆ
ಳ್ವಲ ದೇಶಕ್ಕಡಿಯಿಟ್ಟು ದೇವಗೃಹ ಸಂದೋಹಂಗಳಂ ಸುಟ್ಟುಕ
ಯ್ಯಲೆ ಪಾಪಂ ಬೆಳೆದತ್ತೆನಲ್ಕೆ ಧುರದೊಳು ತ್ರೈಳೋಕ್ಯಮಲ್ಲಂಗೆ ಪಂ
ದಲೆಯಂ ಕೊಟ್ಟಸುವಂ ಬಿಸುಟ್ಟು ನಿಜವಂಶೋಚ್ಛಿತ್ತಿಯಂ ಮಾಡಿದ(೦)
||

            ಶ್ರೀಪೆರ್ಮ್ಮಾನಡಿ ಮಾಡಿಸಿ
ದೀಪರಮ ಜಿನಾಲಯಂಗಳಂ ಪೊಲೆವಟ್ಟಿ
ರ್ದ್ದಾಪಾಣ್ಡ್ಯ ಚೋಳನೆಂಬ ಮ
ಹಾಪಾತಕ ತಿವುಳ ನಳಿದಧೋಗತಿಗಿಳಿದ(೦)
||

ಚೋಳರಾಜನಾದ ಕೋ-ಪರಕೇಸರಿ ರಾಜೇಂದ್ರ ಚೋಳನು ಈ ಬೆಳ್ವಲ ನಾಡಿಗೆ ಅಡಿಯಿಟ್ಟು ದೇವಾಲಯಗಳನ್ನು ಸುಟ್ಟನು. ಕೇವಲ ಜೈನಗುಡಿಗಳನ್ನಷ್ಟೇ ಅಲ್ಲ, ಹಿಂದೂ ಪೂಜಾಸ್ಥಳಗಳನ್ನೂ ಚೋಳಲು ಕೆಡವಿದರು, ಸುಟ್ಟರು ಇಲ್ಲವೇ ಅಪವಿತ್ರ ಗೊಳಿಸಿದರು. ಕೊಲ್ಲಾಪುರದ ಮಹಾಲಕ್ಷ್ಮೀ ದೇವಾಲಯವನ್ನೂ ಈ ಚೋಳರು ಸೂರೆಮಾಡಿದರು. ಕೊಲ್ಲಾಪುರದ ಬಳಿಯ ಕುಪ್ಪಗ್ರಾಮದಲ್ಲಿ ದೊಡ್ಡಯುದ್ಧ ನಡೆಯಿತು. ಈ ಕುಪ್ಪಂ ಎಂಬುದು ಕೊಪ್ಪಳವೆಂಬ ಅಭಿಪ್ರಾಯವಿದೆ. ಆದರೆ ಕೊಲ್ಲಾಪುರ ಹತ್ತಿರದ ಕುಪ್ಪ ಗ್ರಾಮದಲ್ಲಿ ಕುಪ್ಪೇಶ್ವರ ದೇವಾಲಯ ಮತ್ತು ಶಾಸನ ಸಿಕ್ಕಿರುವುದರಿಂದ ಇದೇ ಕಾಳೆಗದ ಕಣವಾಗಿದ್ದ ಕುಪ್ಪಂ ಎಂದು ತೀರ್ಮಾನಿಸಬಹುದು. ಆದರೆ ಆತನ ಈ ದಾಳಿ, ವಿಧ್ವಂಸನ ಕಾರ್ಯಗಳಿಂದ ಕೂಡಿದ ಆರಂಭದ ಗೆಲುವು ದೀರ್ಘವಾಗಿ ನಿಲ್ಲಲಿಲ್ಲ. ಅಂತಿಮವಾಗಿ ಚಾಳುಕ್ಯರ ತ್ರೈಳೋಕ್ಯಮಲನು ಚೋಳರಾಜನ ಹಸಿತಲೆಯನ್ನು ಕತ್ತರಿಸಿ ಪ್ರಾಣತೆಗೆದನು. ಪಾಪದ ಬೆಳೆಯ ಹಾಗೆ ಇದ್ದ ಹಾಗೆ ಚೋಳನ ತಲೆಯನ್ನು ಕತ್ತರಿಸಿದ್ದು ಬೆಳೆಯನ್ನು ತೆಗೆದು ಕಟಾವು ಮಾಡಿದಂತೆ ಆಯಿತು. ಏಕೆಂದರೆ ಹಿಂದೆ ಗಂಗಪೆರ್ಮಾಡಿ ಮಾಡಿಸಿದ್ದ ಈ ಶ್ರೇಷ್ಠ ಜಿನಾಲಯಗಳನ್ನು ಆ ಪಾಣ್ಡ್ಯ ಚೋಳನು ಹಾಳುಮಾಡಿದ್ದರ ಪರಿಣಾಮವಾಗಿ ತಲೆದಂಡತೆತ್ತು ಅಧೋಗಿತಿಗೆ ಇಳಿದನು (ಮತ್ತೇ ಭವಿಕ್ರೀಡಿತ ವೃತ್ತ) :-

ಬಳಿಕೀ ಬೆಳ್ವಲದೇಶಮಂ ಪಡೆದ ದಂಡಾಧೀಶ ಸಾಮನ್ತಮಂ
ಡಳಿಕರ್ದ್ಧರ್ಮ್ಮದ ಬಟ್ಟೆಗೆಟ್ಟು ನಡೆಯುತ್ತಿರ್ದ್ದಲ್ಲಿ ತಜ್ಞಾನಮನಂ
ಗೊಳೆ ಕಾಳೀಯ ಗುಣೇತರಂ ಕೃತಯುಗಾಚಾರಾನ್ವಿತಂ ಲಕ್ಷ್ಮಮಂ
ಡಳಿಕಂ ನಿರ್ಮ್ಮಳ ಧರ್ಮ್ಮವತ್ತಳೆಯ ನಷ್ಟೋದ್ಧಾರಮಂ ಮಾಡಿದಂ
||

(ಉತ್ರಲಮಾಲಾ)

ಈ ನೆಲದೊಳ್ ನೆಗಳ್ತೆಯ ಪೊಗಳ್ತೆಯ ಬಾಳ್ತೆಯ ಪುಣ್ಯ ತೀರ್ತ್ಥಸ
ನ್ತಾನದೊಳಿನ್ನ ವಿಲ್ಲೆನೆಸಿ ಸಂದುದು ದಕ್ಷಿಣಗಂಗೆ ತುಂಗಭ
ದ್ರಾನದಿ ತನ್ನದೀ ತಟದೊಳೊಪ್ಪುವ ಕಕ್ಕರ ಗೊಣ್ಡಮೆಂಬಧಿ
ಷ್ಠಾನ ದೊಳುರ್ವ್ವರಾಧಿಪತಿ ಚಕ್ರಧರಂ ನೆಲಸಿರ್ದ ಬೀಡಿನೊಳ್
||

ಚೋಳರು ಬರುವುದಕ್ಕೆ ಮೊದಲಿನಿಂದಲೂ ಯಾವ ಸುಸ್ಥಿತಿಯಲ್ಲಿ ಬೆಳ್ವಲ ದೇಶಭಾಗದ ದೇವಾಲಯಗಳು ಇದ್ದುವೊ ಅದೇ ಬಗೆಯಲ್ಲಿ ಪುನರ್ಭರಣಗೊಳಿಸ ಲಾಯಿತು. ಗಂಗರು, ರಾಷ್ಟ್ರಕೂಟರು ಕಟ್ಟಿಕಾಪಾಡಿದ ಇಲ್ಲಿನ ಗುಡಿಗೋಪುರ ಗುಂಡಾರಗಳನ್ನು ತರುವಾಯದ ದಂಡಾಧೀಶನೂ, ಸಾಮಂತರೂ, ಮಂಡಳಿಕರೂ ತಮ್ಮ ಅಭಯಹಸ್ತದಲ್ಲಿ ಇಟ್ಟರು, ದಾರಿತಪ್ಪಿ ನಡೆಯುತ್ತಿದ್ದವರನ್ನು ಮತ್ತೆ ಧರ್ಮಪಥಕ್ಕೆ ತಿದ್ದಿದರು. ನಷ್ಟವಾಗುತ್ತಿದ್ದ ಪವಿತ್ರವಾದ ಧರ್ಮಪತ್ರ, ಅಂದರೆ ದಾನಶಾಸನಗಳನ್ನು, ಉದ್ಧಾರಮಾಡಿದ ಮಾಂಡಳಿಕಲಕ್ಷ್ಮಭೂಪತಿ. ಒಳ್ಳೆಯ ಹೆಸರು, ಹೊಗಳಿಕೆ, ಬಾಳು ಇರುವ, ಪುಣ್ಯಂಬು ತೀರ್ಥಗಳಲ್ಲಿ ಇಂತಹವು ಇಲ್ಲವೆನಿಸಿದ್ದ, ದಕ್ಷಿಣದ ಗಂಗೆ ತುಂಗಾನದಿಯ ದಡದ ಊರಾದ ಕಳ್ಲಗೊಣ್ಡ ಎಂಬ ಒಂದು ನಡೆ ವೀಡಿನಲ್ಲಿ ಚಕ್ರಧರನಾದ ಭುವನೈಕ ಮಲ್ಲನು ಶಕಸಂವತ್ ೯೯೩ ರಲ್ಲಿ (ಕ್ರಿ.ಶ. ೧೦೭೧) ಉಪ್ಪಯಣ ಮಾಡಿದ್ದನು.

೫.೩. ಚಕ್ರವರ್ತಿ ಭುವನೈಕ ಮಲ್ಲನು ಇತ್ತ ಆದೇಶಕ್ಕೆ ಅನುಗುಣವಾಗಿ ಮಹಾಮಾಂಡಳಿಕ ಲಕ್ಷ್ಮನು ಧರ್ಮವತ್ತಳೆಯನ್ನು ಹೆಚ್ಚಾದಹುರುಪಿನಿಂದ ಜಾರಿಗೆ ತಂದನು-ಎಂದು ಶಾಸನಕಾರ ಹೇಳುವ ಈ ನೆಲೆಯ ನಡುವೆ ನಿಂತು, ನಾವೊಮ್ಮೆ ನಡೆದು ಬಂದ ದಾರಿಯನ್ನು ಹಕ್ಕಿ ನೋಟದಿಂದ ಕಣ್ಣಾಡಿಸಬೇಕು. ೧೦೭೧ರಲ್ಲಿ ಆರಂಭವಾದ ಶಾಸನ ಪಾಠದ ವಸ್ತು ವಿಕಾಸ ಒಮ್ಮೆ ಹತ್ತನೆಯ ಶತಮಾನಕ್ಕೆ, ಗಂಗ- ರಾಷ್ಟ್ರಕೂಟರ, ಬೂತುಗ-ಕೃಷ್ಣರ ಕಾಲಕ್ಕೆ ವಾಪಸ್ಸಾಗಿದ್ದುದು ಈಗ ಮತ್ತೆ ಅಲ್ಲಿಂದ ೧೦೭೧ ಕ್ಕೆ (ಮರಳಿ) ಹಿಂತಿರುಗಿದೆ. ಇವೆರಡರ ನಡುವಿನ ಅವಧಿಯಲ್ಲಿ, ಸುಮಾರು ೧೦೪೫ ರಲ್ಲಿ ನಡೆದ ಚೋಳ ಚಾಳುಕ್ಯರ ಕಾಳೆಗದ ಕಥನವನ್ನು ತರಲಾಗಿತ್ತು. (ಮತ್ತೇಭವಿಕ್ರೀಡಿತ)-

ಶಕ ಕಾಳಂ ಗುಣ ಲಬ್ಧಿ ರ್ಮ್ಮಂದ ರಗಣನಾವಿಖ್ಯಾತಮಾಗಲ್ ವಿರೋ
ಧಕ್ರಿ ದಾಬ್ದಂ ಬರೆ ಚೈತ್ರಮಾಗೆ ವಿಶ್ವತ್ಸಂಕ್ರಾನ್ತಿ ಯೊಳ್ ಪುಷ್ಯತಾ
ರಕೆ ಪೂರ್ಣ್ಣಾಂಗಿರಮಾಗೆ ಚಕ್ರಧರ ದತ್ತಾ ದೇಶದಿಂ ದೇಶಪಾ
ಲಕ ಚೂಡಾಮಣಿ ಧರ್ಮ್ಮವತ್ತಳೆಯ ನತ್ಯುತ್ಸಾಹದಿಂ ಮಾಡಿದ(೦)
||

            ತ್ರಿಭುವನ ಚನ್ದ್ರ ಮುನೀನ್ದ್ರರ
ನಭಿವಂದಿಸಿ ಭಕ್ತಿಯಿಂದೆ ಕಾಲ್ಗರ್ಚ್ಚಿಜಗ ತ್ಪ್ರಭುವಿನ ಬೆಸದಿಂ ಲಕ್ಷ್ಮಣ
ವಿಭು ಕೊಟ್ಟಂ ಹಸ್ತಧಾರೆಯಿಂ ಶಾಸನಮ(೦)
||

ಭುವನೈಕಮಲ್ಲ ಚಕ್ರವರ್ತಿಯಿಂದ ಬಂದ ಅಪ್ಪಣೆಯಂತೆ ನಾಡಿನ ಆಡಳಿತ ನಡೆಸುವವರಲ್ಲಿ ನೆತ್ತಿಯ ಮಣಿಯಾದ ಲಕ್ಷ್ಮಣ ವಿಭುವು, ಚಾಳುಕ್ಯ ಜಗತ್ತಿನ ಒಡೆಯನ ಆಜ್ಞೆ ಯಿಂದ ಶಕಸಂವತ್ ೯೯೩ ರಲ್ಲಿ ಅಣ್ಣಿಗೆರೆಯ ಜಿನಾಲಯಕ್ಕೆ ಬಂದನು; ಬಸದಿಯೊಡೆಯರಾಗಿದ್ದ ತ್ರಿಭುವನ ಚಂದ್ರ ಮುನಿಮುಖ್ಯರಿಗೆ ಭಕ್ತಿಯಿಂದ ನಮಸ್ಕರಿಸಿ, ಅವರ ಕಾಲ ತೊಳೆದನು, ತನ್ನ ಕೈಧಾರೆಯಿಂದ ಚಕ್ರವರ್ತಿಯು ಕಳಿಸಿದ್ದ (ದಾನ ತಾಮ್ರ) ಶಾಸನವನ್ನು ಒಪ್ಪಿಸಿಕೊಟ್ಟನು. ಅಷ್ಟೇಅಲ್ಲದೆ – (ಚಂಪಕ ಮಾಲಾವೃತ್ತ):

ಎರಡಱುನೂಱ ಬಾಡದೊಳಗೀಜಿನಗೇಹವೆ ಪೂಜ್ಯ ಮೆಂದದ
ಕ್ಕರಸರ ಕಾಣ್ಕೆ ಬಿೞ್ದು ಬಿಯಮುಂಬಳಂ ಉಣ್ಬಳಿದಾಯಮಾದಿಯಾ
ಗೆರಡಱುವತ್ತು ಪೊನ್ನಱುವಣಂ ಸಮಕಟ್ಟೆನೆ ಮಾಡಿಶಾಸನಂ
ಬರೆಯಿಸಿಕೊಟ್ಟ ಧರ್ಮ್ಮ ಗುಣಮಂ ಮೆಱಿ ದಂ ನೃಪಮೇರುಲಕ್ಷ್ಮಣಂ
||
(ಮಹಾಸ್ರಗ್ಧರೆ)

            ಜಿನನಾಥಾ ವಾಸಮಂ ವಿಶ್ವ (ಕೃತ) ನಿಭಮಂ ಕಷ್ಟ ಕಾಲೇಯ ದುರ್ಬ್ಭಾ
ಮನೆಯಿಂ ಚಂಡಾಳ ಚೋಳಂ ಸುಡಿಸಿ ಕಿಡಿಸೆ ವಿಛ್ಛಿತ್ತಿಯಾಗಿರ್ದ್ದುದೇಂನೆ
ಟ್ಟನೆ ನಷ್ಟೋದ್ಧಾರಮಂ ಶಾಸ್ವತಯತಿಶಯಮಾಯ್ತೆಂಬಿನಂ ಮಾಡಿ ತಚ್ಛಾ
ಸನಮಾಚಂದ್ರಾರ್ಕ್ಕತಾರಂ ನಿಲೆ ನಿಲಿಸಿದನೇಂಧನ್ಯನೋ ಲಕ್ಷ್ಮಭೂಪಂ
||

            ಅರಸರ್ಗ್ಗೆ ಸೇಸೆಯೆ
ನ್ದರಸರಕಾಣಿಕೆಯೆನ್ದು ದಾಯಧರ್ಮ್ಮದ ತೆಱೆಯೆ
ನ್ದಱುವಣದಿಂದಗ್ಗಳಮೆ
ನ್ದ ರೆ ವೀಸಮನಿಕ್ಕಿ ಕೊಂಡು ವರ್ಚ್ಚಂಡಾಳರ್
||

ಪ್ರಸ್ತುತ ಶಾಸನವಿಷ್ಟೂ ಒಂದು ಭಾಗ, ಮೊದಲ ಘಟ್ಟದ ಶಾಸನ. ಚಾಳುಕ್ಯರು ಚೋಳರು ಕೈಗೊಂಡ ಯುದ್ಧದ ಪ್ರಸ್ತಾಪ, ಚೋಳರು ನಾಶಮಾಡಿದ ಬಸದಿಯನ್ನು ಪುನರ್ ಪ್ರತಿಷ್ಠಾಪಿಸಿ ದಾನದತ್ತಿ ಮತ್ತು ಸುಂಕರಹಿತ ಕೊಡುಗೆಗಳಿಂದ ಚಕ್ರವರ್ತಿಯ ಆದೇಶವನ್ನು ಲಕ್ಷ್ಮಣನು ಪಾಲಿಸಿದ್ದು, ಮತ್ತು ಮಾಮೂಲಿನ ಶಾಪಾಶಯದೊಂದಿಗೆ ಈ ಶಾಸನ ಮುಗಿದಿದೆ.

ಅ. ಈ ಗಾವರವಾಡ ಶಾಸನಗುತ್ತಿಯಲ್ಲಿ ಮೂರು ಶಾಸನಗಳಿವೆ. ಇದುವರೆಗೆ ವಿವರಿಸಿದ್ದು ಒಂದನೆಯ ಶಾಸನ; ಈ ಪ್ರಥಮ ಶಾಸನವು ಸಾಲು ೧ ರಿಂದ ೪೩ ರವರೆಗೆ ಇರುವಂತಹುದು. ಸಾಲು ೪೪ ರಿಂದ ಮುಂದಕ್ಕೆ ಸಾಲು ೫೧ ರವರೆಗೆ ಇರುವುದು ಎರಡನೆಯ ಶಾಸನ. ಈ ದ್ವಿತೀಯ ಭಾಗದ ಆರಂಭದಲ್ಲಿ ಮಹಾ ಸಾಮಂತ ಕಾಟಿಯಂಕ-ಕಾಱನನ್ನು ಪರಿಚಯಿಸಿದೆ. ಈ ಕಾಟಿಯರಸನು ಕತ್ತಲೆ ಕುಲಕ್ಕೆ ಸೇರಿದವನು, ತನ್ನ ತೋಳಿನ ಕಸುವಿನಿಂದ ಗೆಲುವು ಗಳಿಸಿದವನು. ಕತ್ತಲೆವಂಶವನ್ನು ನೇಸರಿನಂತೆ ಬೆಳಗಿದ ಈತನು ಮಯೂರ ಪುರಾವರಾಧೀಶನು ಮತ್ತು ಜಿನಶಾಸನ ದೇವಿಯಾದ ಜ್ವಾಲಿನೀದೇವೀಲಬ್ಧವರ ಪ್ರಸಾದನು. ಕತ್ತಲೆ ಮನೆತನವೆಂದರೆ ಯಾವುದು, ಮಯೂರ ಪುರವೆಂದರೆ ಯಾವುದು- ಎಂಬಿತ್ಯಾದಿ ವಿಚಾರಗಳನ್ನು ಕುರಿತು ಬರೆದ ಪ್ರತ್ಯೇಕ ಸ್ವತಂತ್ರ ಸಂಪ್ರಬಂಧಗಳು ಇದೇ ‘ಚಂದ್ರಕೊಡೆ’ ಸಂಕಲನದಲ್ಲಿ ಸೇರ್ಪಡೆ ಆಗಿವೆ- ಅದರಿಂದ ಅವುಗಳನ್ನು ಕುರಿತು ಈ ಲೇಖನದಲ್ಲಿ ಪುನರುಕ್ತಿಗೆ ಹೋಗುವುದಿಲ್ಲ. ಮಹಾಸಾಮಂತಾಧಿಪತಿಯಾದ ಕಾಟರಸನು ಬೆಳ್ವಲ ವಿಷಯದ ಅಧಿಪತಿಯಾಗಿದ್ದನು:

ಜಗಮೆಲ್ಲಂ ದೇಸೆಗೆ ಕ
ಯ್ಮುಗಿಗೆಮ ಕೊಟ್ಟಱೆಯನೊನ್ದು ಕಾಗಿಣಿಯುಮನಾ
ಗಗನ ದೊಳಿರ್ಪ್ಪಾದಿತ್ಯಂ
ಬಗೆದುದನಿತ್ತಪನೆ ಬೆಳ್ವಲಾ ದಿತ್ಯನ ವೋಲ್
||

ಲೋಕದ ಜನರು ದಿಕ್ಕುದಿಕ್ಕು ತಿರುಗಿ ಸೂರ್ಯನಿಗೆ ಕೈಮುಗಿಯುತ್ತಾರಲ್ಲವೆ! ಸೂರ್ಯನಮಸ್ಕಾರ ಮಾಡಲಿ. ಆದರೆ ಆಕಾಶದಲ್ಲಿ ಇರುವ ಆ ಆದಿತ್ಯನಿಗೆ ಒಂದು ಬಿಡಿಕಾಸನ್ನು ಕೂಡ ಕೊಟ್ಟು ಗೊತ್ತಿಲ್ಲ, ಆ ಬಾನಿನೊಡೆಯ ರವಿಯು, ನಾವು ಬಯಸಿದ್ದನ್ನು ಈ (ಬೆಳ್ವಲಾಧಿಪತಿ) ಬೆಳ್ವಲದ ಸೂರ್ಯನಾದ ಕಾಟರಸನ ಹಾಗೆ ಕೊಡುತ್ತಾನೆಯೆ? ಹೀಗೆ ಹೆಸರುಗಳಿಸಿದ ಬೆಳ್ವಲದ ಆದಿತ್ಯ ಕಾಟಿಯಂ ಕಾಕಱನು ಶಕ ೯೯೪ ರಲ್ಲಿ, ಅಣ್ಣಿಗೆರೆಯ, ಗಂಗಪೆರ್ಮಾಡಿಯ ಬಸದಿಯ, ದಾನಶಾಲೆಗೆ ತನ್ನ ಆಳಿಕೆಯ ಗಾವರಿವಾಡ ಗ್ರಾಮದ ೫೦ ಮತ್ತರು ನೆಲವನ್ನು, ಅಲ್ಲಿಯ ಬಸದಿಯೊಡೆಯರಾದ ತ್ರಿಭುವನ ಚಂದ್ರ ಪಂಡಿತರಿಗೆ, ಅವರ ಕಾಲು ತೊಳೆದು ಧಾರಾಪೂರ್ವಕವಾಗಿ ಮಾಡಿಕೊಟ್ಟನು.

೭. ಇನ್ನು ಸಾಲು ೫೨ ರಿಂದ ಮುಂದಕ್ಕೆ ಇರುವುದಷ್ಟೂ ಈ ಶಾಸನದ ಮೂರನೆಯ ಭಾಗ. ಈ ಮೂರನೆಯ ಹಂತದ ಕೊಡುಗೆಗಳನ್ನು ಬರೆಯುವಾಗ ಮೊದಲಿನೆರಡನ್ನೂ ಪ್ರತಿಮಾಡಿದೆ. ತೀರ್ಥಂಕರರಿಂದ ಉಪದೇಶಿಸಲ್ಪಟ್ಟ ಶ್ರೇಷ್ಠ ಶಾಸ್ತ್ರದಲ್ಲಿ ನಿಪುಣರೂ, ಯಾವಾಗಲೂ ಈ ಉತ್ತಮ ಧರ್ಮಮಾರ್ಗವನ್ನು ಉಪದೇಶ ಮಾಡುವುದರಲ್ಲಿ ನಿರತರೂ ಆದವರು ಉದಯ ಚಂದ್ರ ಸಿದ್ಧಾಂತದೇವರು. ಅವರ ಶಿಷ್ಯರೂ, ಬಳಾತ್ಕಾರ ಗಣವೆಂಬ ತಾವರೆಗಳಿರುವ ಕೊಳದಲ್ಲಿ ರಾಜಹಂಸನ ಹಾಗೆ ಇರುವವರೂ ಆದವರು ಸಕಳ ಚಂದ್ರದೇವರು. ರಾಜಧಾನಿ ಪಟ್ಟಣವಾದ ಅಣ್ಣಿಗೆರೆ ಮಹಾಸ್ಥಾನದಲ್ಲಿನ ಗಂಗೆಪೆರ್ಮಾಡಿ ಬಸದಿಗೆ, ಅದರ ವ್ಯಾಪ್ತಿಗೆ ಬರುವ ಹಳ್ಳಿಗಳಿಂದ ಅನೇಕ ಶ್ರಾವಕ-ಶ್ರಾವಕಿಯರು ಸೇರಿ, ಬಸದಿಯ ಆಚಾರ್ಯರಿಗೆ, ಪೂಜಾಕಾರ್ಯ ವೆಸಗುವವರಿಗೆ (ದೇವಪುತ್ರರಿಗೆ) ದಾನಗಳನ್ನು ಕೊಟ್ಟರು. ಮೂವತ್ತುಜನ ದಾನಿಗಳ ತಂಡಕ್ಕೆ ಮುಂದಾಳುಗಳು ಚವುಂಡಗಾವುಂಡ ಮತ್ತು ಹೆಗ್ಗಡೆ. ದೇವಾಲಯಕ್ಕೆ ದಾನಗಳನ್ನು ಸಾಮೂಹಿಕವಾಗಿ ಕೊಟ್ಟರೂ ಅವರೆಲ್ಲರ ಹೆಸರನ್ನು ಅಡ್ಡಹೆಸರು ಸಹಿತ ಪಟ್ಟಿ ಮಾಡಿಕೊಡಲಾಗಿದೆ. ವ್ಯಕ್ತಿನಾಮ, ವೃತ್ತಿನಾಮ, ವೃತ್ತಿನಾಮ ಮತ್ತು ಅಡ್ಡಹೆಸರುಗಳ ವಿಶಿಷ್ಟತೆಯನ್ನು ವ್ಯಾಸಂಗ ಮಾಡುವವರಿಗೆ, ಸಾಮಾಜಿಕ ಅಧ್ಯಯನಕ್ಕೆ ಉಪಯುಕ್ತವಾದ ಮಾಹಿತಿಗಳು ಇದರಲಲ್ಲಿವೆ.

೭.೧. ಅಣ್ಣಿಗೆರೆಯಲ್ಲಿ ಗಂಗಪೆರ್ಮಾಡಿ ಬಸದಿ, ಆದಿನಾಥಸ್ವಾಮಿ ಬಸದಿ, ಸೇನಗಣದ ಬಸದಿ, ಮೊದಲಾದುವು ಇದ್ದುವೆಂಬುದು ಆನುಷಂಗಿಕವಾಗಿ ಈ ಶಾಸನದಿಂದ ತಿಳಿದುಬರುತ್ತದೆ. ಅಲ್ಲದೆ ಅಲ್ಲಿಯೇ ಸಮೀಪದ ಬಟ್ಟಕೆಱೆಯಲ್ಲಿ ಕಲಿದೇವ ಸ್ವಾಮಿ ಜಿನರ ಬಸದಿಯಿತ್ತು.

೭.೨. ಚಂಡವ್ವೆಯ ಮಗನಾದ ಹೆಗ್ಗಡೆ ಮಲ್ಲಯ್ಯನು ಅಣ್ಣಿಗೆರೆಯ ಜಿನಾಲಯವಾದ ಆದಿನಾಥ ಸ್ವಾಮಿ ಬಸದಿಯ ಆಚಾರುಅರಿಗೆ ಹೇಳಿದ ಕೆಲಸವನ್ನು ನಿರ್ವಹಿಸುತ್ತಾ ಸೇವೆ ಮಾಡಿಕೊಂಡಿರತಕ್ಕದ್ದು. ಕೇತಗಾವುಂಡನು ಬಸದಿಯ ಆಚಾರ್ಯರಿಗೆ ಪಾದಪೂಜೆ ಮಾಡಿ, ತಮ್ಮ ಮನೆದೇವರಾದ ಸೇಬಗಣದ ಬಸದಿಗೆ ಎಂಟು ಮತ್ತರು ಭೂಮಿಕೊಟ್ಟನು. ಮೇಲಿನ ಹೇಳಿಕೆಯಲ್ಲಿ ‘ಚಂಡವ್ವೆಯ ಮಗ’ ಎಂದು ಹೇಳಿರುವುದು ವಿಶೇಷ ಗಮನಿಕೆಗೆ ಅರ್ಹವಾಗಿದೆ. ತಂದೆಯಮಗನೆಂದು ಪಿತೃಪ್ರಧಾನ ಕುಟುಂಬ ವ್ಯವಸ್ಥೆಯಲ್ಲಿದ್ದೂ ಸಹ ಹೀಗೆ ತಾಯಿಯಮಗನೆಂದು ಮಾತ್ರ ಹೇಳಿರುವುದಕ್ಕೆ ವಿಶಿಷ್ಟ ಕಾರಣಗಳಿರಬೇಕು.

೭.೩. ಎಮ್ಮೆಯ (ಕೇತಿ ಸೆಟ್ಟಿ), ಕಣಬಿಯ (ಸೆಟ್ಟಿ) -ಎಂಬುವು ದನಗಳ ವ್ಯಾಪಾರವೃತ್ತಿಯ ವಂಶದ ಹೆಸರಿರಬೇಕು. ಕಣಬಿ ಎಂಬುದು ಕುದುರೆಗೆ ಸಂಬಂಧಿಸಿದ ಶಬ್ದ; ಅಡಿಬೆಳ್ಪಾಗೆ ಕಣಬನಕ್ಕುಂ ಎಂದು ಮಂಗರಾಜನಿಘಂಟು ತಿಳಿಸಿದೆ; ಅಂದರೆ ಬಿಳಿಯ ಪಾದಗಳನ್ನು ಉಳ್ಳಕುದುರೆ ಕಣಬ. ಅದರಂತೆ ಕತ್ತೆಯ (ದಾರಿ ಸೆಟ್ಟಿ) ಶಬ್ದವನ್ನೂ ಗಮನಿಸಬೇಕು. ಹೆಬ್ಬೆಯ ದೇವಿ ಸೆಟ್ಟಿ, ಗೂಳಿಯ ಚಾಡಿಸೆಟ್ಟಿ, ರುಡ್ಡುಲಿಯ ಸಂಕಿ ಸೆಟ್ಟಿ, ಕಂದಲ ಮಲ್ಲಿ ಸೆಟ್ಟಿ. ಬಯ್ಸರ ಬೊಪ್ಪಿ ಸೆಟ್ಟಿ, ಗೊರವರ ಬಮ್ಮಿ ಸೆಟ್ಟಿ, ಕೆಲ್ಲರ ಗೊರವಿ ಸೆಟ್ಟಿ, ತಾಳಬಮ್ಮಿಸೆಟ್ಟಿ, ಕಡಬರ ದೇವಿ ಸೆಟ್ಟಿ, ಮಂಚಲ ಬೋಸಿ ಸೆಟ್ಟಿ, ಬೆಣಿಲ ಮಲ್ಲಿಸೆಟ್ಟಿ, ಬೆಣ್ಣೆಯ ನಾಳಿ ಸೆಟ್ಟಿ, ದೊಡ್ಡರ ಕೇತಿಸೆಟ್ಟಿ, ಮಂಜಡಿಯ ಏಚಿ ಸೆಟ್ಟಿ, ಮರಿಯರ ಕಲಿಸೆಟ್ಟಿ,- ಮುಂತಾದವು ಪರಿಶೀಲನಯೋಗ್ಯ ರೂಪಗಳು. ಬಯ್ಸರ – ಬಯಿಸರ ಎಂಬುದು ವೈಶ್ಯರಿಗೆ ಸಂಬಂಧಿಸಿದ್ದು; ರನ್ನಕವಿ, ಬಂಧುವರ್ಮಕವಿ ಜೈನ ವೈಶ್ಯಕುಲಜರು. ಕೆಲ್ಲ ಎಂಬುದೊಂದು ಪ್ರಾಚೀನ ಜೈನ ಮನೆತನ; ಈ ಕೆಲ್ಲ ಕುಲವನ್ನು ಕುರಿತು ಬರೆದಿರುವ ಒಂದು ಲೇಖನ ಈ ಸಂಕಲನದಲ್ಲಿದೆ. ಇವರೆಲ್ಲ ದಾನಿಗಳೂ ಸೆಟ್ಟರು, ವಣಿಜರು, ಬಣಜಿಗರು.

೮. ಈ ಶಾಸನಗಳ ಶ್ರೇಣಿಯಲ್ಲಿ ಸೇರಿಕೊಂಡಿರುವ ಇನ್ನೊಂದು ಭಾಗವೆಂದರೆ ಮಹಾಪ್ರಧಾನನಾದ ರೇಚಿದೇವ ದಂದನಾಥನಿಗೆ ಸಂಬಧಿಸಿದ್ದು (೮೫-೮೮). ವಸುಧೈಕ ಬಾಂಧವ ಎಂಬುದು ಈತನ ಒಂದು ಪ್ರಶಸ್ತಿ ರೇಚಣ ಎಂಬ ಹೆಸರೂ ಈತನಿಗೆ ಇದೆ. ಈ ರೇಚಿದಂಡ ನಾಥನು ಬಟ್ಟಕೆಱೆಯ (ಬಟ್ಗೆರೆ : ಎ.ಇ. ೧೩. ಪು. ೧೮೬, Fleet, J.F.) ಶ್ರೀಕಲಿದೇವಸ್ವಾಮಿ ಜಿನಶ್ರೀಪಾದಾರ್ಚನೆಗೆ ಹಾಗೂ ಕರ್ಪೂರ ಕುಂಕುಮ ಶ್ರೀಗಂಧ ಸಹಿತ ಅಷ್ಟವಿಧಾರ್ಚನೆಗೆಂದು ಗದ್ದೆಯನ್ನು ಬಿಟ್ಟುಕೊಟ್ಟನು. ಅ ಗದ್ದೆಯು ಅರಕೆಱೆ (ಅರಸುಕೆಱೆ) ಯಿಂದ ಮೂಡಲು ಕಡೆಗೆ ಇತ್ತು ಮುತ್ತು ಅದು ಹನ್ನೆರಡು ಮತ್ತರು ಪ್ರಮಾಣದ್ದಾಗಿತ್ತು. ಈ ದತ್ತಿಯನ್ನು ಬಸದಿಯ ಒಡೆಯರಾದ ಆಚಾರ್ಯರೂ ಹಾಗೂ ದೇವಸ್ಥಾನದ ಮೇಲ್ವಿಚಾರಕನೂ ಯಾವ ಸುಂಕಾದಿಗಳೂ ಇಲ್ಲದೆ ಪ್ರತಿಪಾಲಿಸುವರೆಂದು ಆಶಿಸಲಾಗಿದೆ [ಸಾಲು : ೮೫-೮೮].

೮.೧. ಮಹಾಪ್ರಧಾನನಾದ ವಸುಧೈಕ ಬಾಂಧವ ರೇಚಿ (ರೇಚಣ) ದಂಡನಾಥನು ದಾನಚಿಂತಾಮಣಿ ಅತ್ತಿಮಬ್ಬೆಯ ಮನೆತನವಾದ ವಾಜವಂಶದ ಕುಡಿ, ಆಕೆಯ ಅನಂತರದ ಆರನೆಯ ತಲೆಮಾರಿಗೆ ಸೇರಿದವನು. ಈತನು ಲಕ್ಕುಂಡಿಯಲ್ಲಿ ಭೌವನೈಕ ಬಾಂಧವ ಜಿನಾಲಯವನ್ನು ಮಾಡಿಸಿದ್ದನು. ಮಂತ್ರಿಯೂ ದಂಡಾಧೀಶನೂ ಸಾಹಿತ್ಯ ವಿಧ್ಯಾದರನೂ ಆಗಿದ್ದ ರೇಚಣನು ತನ್ನ ಆಶ್ರಯಕೊಟ್ತು ಆಚಣ್ಣಕವಿಯಿಂದ ವರ್ಧಮಾನ ಪುರಾಣವನ್ನು ಬರೆಸಿದನು, ಅರಸೀಕೆರೆ ಜಿನನಾಥಪುರ ಮತ್ತು ಮೇಲೆ ಹೇಳಿದಂತೆ ಲಕ್ಕುಂಡಿ ಸ್ಥಳಗಳಲ್ಲಿ ಜಿನಾಲಯಗಳನ್ನು ಮಾಡಿಸಿದನು, ಬಾಂಧವಪುರ (ಬಂದಳಿಕೆ) ಮತ್ತು ಅಣ್ಣಿಗೆರೆಯ ಬಸದಿಗಳಿಗೆ ಒಸೆದು ದಾನಗಳನ್ನು ನೀಡಿದನು. ಕಲಚುರಿ ಬಿಜ್ಜಳನಿಗೆ ಸಪ್ತಾಂಗ ಸಂಪತ್ತಿಯನ್ನು, ಚಕ್ರವರ್ತಿತ್ವವನ್ನೂ ತಂದುಕೊಟ್ಟನು. ರೇಚಣ ದಂಡಾಧಿನಾಥನ ತೋಳುಗಳೆಂಬ ಕೊಂಬೆ ರೆಂಬೆಗಳ ಮೂಲಕ ಕಳಚುರ್ಯ ರಾಜ್ಯಲತೆ ಹಬ್ಬಿತೆಂದು ಶಾಸನ ಕೂಗಿ ಹೇಳುತ್ತದೆ. ರೇಚಣನು ಬಿಜ್ಜಳ ವಜ್ರದೇವ ಸೋವಿದೇವ ಮೈಲುಗಿ ದೇವ-ಮಲ್ಲಿಕಾರ್ಜುನ ಸಂಕಮ ಆಹವಮಲ್ಲ ಮತ್ತು ಸಿಂಘಣರಿಗೆ ಮಂತ್ರಿ ಪ್ರಧಾನಿ ಸೇನಾನಿ ಬಾಹತ್ತರ ನಿಯೋಗಾಧಿಪತಿ ಆಗಿದ್ದು ಕಲಚುರಿಗಳು ಕೆಲವು ಕಾಲ ಚಕ್ರಧರರಾಗಿ ಆಳಲು ನೆರವಾದನು. ಅಲ್ಲಿಂದ ಮುಂದೆ ಹೊಯ್ಸಳ ವೀರಬಲ್ಲಾಳನಲ್ಲಿ ಮಂತ್ರಿಯಾಗಿದ್ದನು [ನಾಗರಾಜಯ್ಯ, ಹಂಪ; ವಸುಧೈಕ ಬಾಂಧವ ರೇಚಣ ದಂಡಾಧಿನಾಥ; ‘ಬೆಳ್ಳಿ ಬಾಗಿನ’ (೧೯೯೪) ಸಂ. ಡಿ. ಲಿಂಗಯ್ಯ, ಪು. ೯೧-೯೯].

೮.೨. ವಸುಧೈಕ ಬಾಂಧವ ಬಿರುದಾಂಕಿತನಾದ ಈ ರೇಚಣ ದಂಡಾಧಿನಾಥನ ಒಟ್ಟು ಜೀವಿತಾವಧಿಯು ಒಂದು ಶತಮಾನದಷ್ಟು ದೀರ್ಘವಾದದ್ದೆಂದು ಶಾಸನಗಳಿಂದ ತಿಳಿದು ಬರುತ್ತದೆ. ಅತನ ೧೧೬೪ರ ವೇಳೆಗೆ, ತನ್ನ ಏರುಂಜವ್ವನ ದಲ್ಲಿರುವಾಗಲೇ, ಕಲಚುರಿ ಬಿಜ್ಜಳನ ವರಿಷ್ಠ ಅಧಿಕಾರಿಯಾಗಿದ್ದನು. ೧೧೬೪ ರಿಂದ ೧೨೨೦ ರವರೆಗೆ ಆತನ ವಿವಿಧ ಅಧಿಕಾರ ಹುದ್ದೆಗಳ, ಅಶ್ರಯ ದಾತರ ಮಾಹಿತಿಗಳಿವೆ. ಈ ಪ್ರಸ್ತುತ ಗಾವರವಾಡ ಶಾಸನದ ೧೦೭೧-೭೨ ರ ಅವಧಿಯ ಪೂರ್ವಾರ್ಧ ಘಟ್ಟಕ್ಕೆ ರೇಚಣ ಸೇರಿದವನಲ್ಲ. ಮಹಾಸಾಮಂತ ಕಾಟಿಯಂಕ ಕಾಱನವರೆಗಿನ ಶಾಸನದ ಒಕ್ಕಣೆ ಚಾಳುಕ್ಯರ ಆಳ್ವಿಕೆಗೆ ಸೇರಿದ್ದಾಗಿದೆ; ಸಾಲು ೮೫ ರಿಂದ ಬರುವ ಭಾಅ ರೇಚಣನಿಗೆ ಸೇರಿದ್ದು. ಇದು ಚಾಳುಕ್ಯರ ಆಳ್ವಿಕೆಯ ಭಾಗ ಹೌದೆ ಅಲ್ಲವೆ ಎಂಬುದು ಚರ್ಚಿಸಬೇಕಾದ ವಿಷಯ ಏಕೆಂದರೆ ರೇಚಣನು ಚಾಳುಕ್ಯರಲ್ಲಿಯೂ ಅಧಿಕಾರಿಯಾಗಿದ್ದನೆಂಬುದಕ್ಕೆ ಬೇರೆ ಆಧಾರಗಳಿಲ್ಲ. ಅಲ್ಲದೆ ಪ್ರಸ್ತುತ ಶಾಸನದಲ್ಲಿ, ಎಲ್ಲ ಪ್ರಶಸ್ತಿಗಳೊಂದಿಗೆ ರೇಚಣನು ಮಹಾಪ್ರಧಾನನೆಂದು ಹೇಳಿದೆಯೇ ಹೊರತು, ಆತ ಯಾರಲ್ಲಿ ಮಹಾಪ್ರಧಾನ ಆಗಿದ್ದನೆಂದು ಖಚಿತವಾಗಿ ಹೇಳಲ್ಲದಿರುವುದು ಸಂಶಯಕ್ಕೆಡೆಯಾಗಿದೆ. ಚಾಳುಕ್ಯರಲ್ಲಿಯೇ ಆತನು ಪ್ರಧಾನನಾಗಿದ್ದರೆ, ಆ ಅವಧಿಯಲ್ಲಿ ಚಾಳುಕ್ಯರ ರಾಜನಾಗಿದ್ದ ತ್ರೈಲೋಕ್ಯಮಲ್ಲ ತೈಲಪ ೪ (೧೧೪೯-೧೧೬೨) ಅಥವಾ ಜಗದೇಕ ಮಲ್ಲ (೧೧೬೩-೧೧೮೩) ಇವರಲ್ಲಿ ಅಧಿಕಾರಿಯಾಗಿರಬೇಕು; ಕಲಚುರಿ ರಾಜರಲ್ಲಿ ಮಹಾಪ್ರಧಾನನಾಗಿದ್ದರೆ ಬಿಜ್ಜಳ ೧೧(೧೧೬೨-೬೭) ಅಥವಾ ಸೋವಿದೇವನಲ್ಲಿ (೧೧೬೭-೭೬) ಅಧಿಕಾರಿಯಾಗಿದ್ದಿರಬೇಕು. ಆದರೆ ಈ ಶಾಸನ ಅತ್ತಚಾಳುಕ್ಯರ ಮತ್ತು ಇತ್ತ ಕಲಚುರಿಗಳ ಪ್ರಸ್ತಾಪ ಇಲ್ಲದೆಯೇ ನೇರವಾಗಿ ಮಹಾಪ್ರಧಾನ ರೇಚಿದೇವನೆಂದು ಹೇಳಿರುವುದು ಸಮಸ್ಯೆಯನ್ನು ಒಡ್ದಿದಂತಾಗಿದೆ. ಅಂದಿನ ಶಾಸನಕಾರನಿಗೆ ಗೊಂದಲಗಳಿಲ್ಲದಿರಬಹುದು. ಆದರೆ ಇಂದಿನ ಓದುಗನಿಗೆ ಇದು ಅಸ್ಪಷ್ಟವಾಗಿದೆ. ಸಂದೇಹ ಲಾಭ (Benifit of the doubt) ವನ್ನು ಚಾಳುಕ್ಯರಿಗೇ ಕೊಡಬೇಕಾಗಲೂ ಬಹುದು, ಏಕೆಂದರೆ ಇಡೀ ಶಾಸನದ ಬಹುಭಾಗ ಕಲ್ಯಾಣಿ ಚಾಳುಕ್ಯರ ಆಳ್ವಿಕೆಯದೇ ಆಗಿದೆ. ಈ ಅನುಮಾನ ಫಾಯಿದೆಯನ್ನು ಚಾಳುಕ್ಯರ ಪರವಾಗಿಸಿದಾಗ, ವಸುಧೈಕ ಬಾಂಧವರೇಚಣನು ಮಹಾಪ್ರಧಾನನಾಗಿ ಚಾಳುಕ್ಯರಲ್ಲೂ ಇದ್ದು ಅನಂತರ ತನ್ನ ನಿಷ್ಠೆಯನ್ನು ಕಲಚುರಿ ಬಿಜ್ಜಳನಿಗೆ ಪಕ್ಷಾಂತರ ಗೊಳಿಸಿದನೆಂದು ತಿಳಿಯಬೇಕಾಗುತ್ತದೆ.

೯. ಈ ಶಾಸನವನ್ನು ಕಡೆಯ ಭಾಗವನ್ನು ಬಿಟ್ಟು, ಬರೆದವನು ಪ್ರಸಿದ್ಧ ಕವಿ ಮತ್ತು ಶಾಸನಕಾರನಾದ ಶಾಂತಿನಾಥನೆಂದು ಧಾರಳವಾಗಿ ಮತ್ತು ಖಚಿತವಾಗಿ ಹೇಳಬಹುದು. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕು (ತಾಳಗುಂದ ಹೋಬಳಿ) ಬಳ್ಳಿಗಾವೆ (ಬೆಳಗಾಮಿ, ಬಳ್ಳಿಗಾವಿ, ಬಳಿನಗರ, ಬಳಿಗ್ರಾಮ) ೧೩೬ ನೆಯ ಶಾಸನವನ್ನು ಶಾಂತಿನಾಥ ಕವಿ ರಚಿಸಿದ್ದಾನೆ [ಎ.ಕ. ೭-೧ ಶಿಕಾರಿಪುರ. ೧೩೬.೧೦೬೮]. ಜತೆಗೆ, ಆ ಶಾಸನವನ್ನು, ಶಕ ೯೯೦ ರಲ್ಲಿ ಬರೆಯುವುದಕ್ಕೂ ಮೊದಲು, ೧೦೬೨ ರಲ್ಲಿ ‘ಸುಕುಮಾರಚರಿತೆ’ ಎಂಬ ಚಂಪೂಕಾವ್ಯವನ್ನು ರಚಿಸಿದ್ದಾನೆ [(ಸಂ) ನರಸಿಂಹಾಚಾರ್, ಡಿ. ಎಲ್, ಶಾಮರಾಯ, ತ.ಸು (೧೯೫೪)]. ಶಿಕಾರಿಪುರ ಶಾಸನವನ್ನು ಬರೆದಾದ ಮೂರುವರ್ಷದ ಮೇಲೆ ಶಕ ೯೯೩ ರಲ್ಲಿ ಒಂದು, ಶಕ. ೯೯೪ ರಲ್ಲಿ ಒಂದು – ಹೀಗೆ ಎರಡೂ ಸೇರಿ ಇರುವ ಈ ಗಾವರವಾಡ ಶಾಸನದ ಮೊದಲೆರಡು ಭಾಗವನ್ನು ಶಾಂತಿನಾಥನು ಬರೆದಿದ್ದಾನೆ.

೯.೧. ಗಾವರವಾದ ಶಾಸನಕ್ಕೂ (ಬ), ಶಿಕಾರಿಪುರ ೧೩೬ ನೆಯ ಶಾಸನಕ್ಕೂ (= ಅ) ಇರುವ ಸಾಮ್ಯ ವೈಷಮ್ಯ ಗಳನು ತೌಲನಿಕವಾಗಿ ಪರಿಶೀಲಿಸಿಕೂಡ ಅ-ಬ ಶಾಸನಗಳು ಒಬ್ಬನೇ ಶಾಸನಕವಿಯ ರಚನೆಯೆಂದು ತೀರ್ಮಾನಿಸಬಹುದು. ಅ-ಬ ಶಾಸನಗಳೆರಡೂ ಜೈನ ಶಾಸನಗಳೆಂಬುದೊಂದೇ ಈ ತೀರ್ಮಾನಕ್ಕಿರುವ ಮುಖ್ಯ ಆಧಾರವಲ್ಲವಾದರೂ ಒಟ್ಟು ಹೋಲಿಕೆಯ ಚೌಕಟ್ಟಿನಲ್ಲೂ ಅದೂ ಬರುತ್ತದೆ:

i. ಎರಡೂ ಜೈನಶಾಸನಗಳು ii. ಎರಡರ ಆರಂಭದಲ್ಲೂ ಸಮಾನ ಅನುಷ್ಬಬ್ ಸಂಸ್ಕೃತ ಶ್ಲೋಕವಿದೆ iii. ಎರಡರ ಪ್ರಾರಂಭದಲ್ಲಿ ಕಲ್ಯಾಣಿ ಚಾಳುಕ್ಯರ ರಾಕಪ್ರಶಸ್ತಿ ಸಮಾನವಾಗಿದೆ – ಆದರೆ ‘ಅ’ ದಲ್ಲಿ ತ್ರೈಳೋಕ್ಯಮಲ್ಲನ ಹಾಗೂ ‘ಬ’ ದಲ್ಲಿ ಭುವನೈಕ ಮಲ್ಲನ ಸ್ತುತಿಯಿದೆ. iv. ‘ಅ’ ದ ಸಾಲು ೧೪ ರ ಕಡೆಯ ಭಾಗದಿಂದ ಕೆಲವು ಪದ್ಯಗಳು ಔಚಿತ್ಯವರಿತು ’ಬ’ ದಲ್ಲೂ ಬಂದಿವೆ. v. ತ್ರೈಳೋಕ್ಯಮಲ್ಲನು ಕುರವತ್ತಿಯಲ್ಲಿ ಜಲಸಮಧಿಯಾದ ೧೪ ದಿನಗಳಾದ ಮೇಲೆ ಮತ್ತು ಭುವ ನೈಕಮಲ್ಲನು ಪಟ್ಟಾಭಿಷಿಕ್ತನಾದಾಗ ಬರೆದದ್ದು ‘ಅ’ ಶಾಸನ; ಭುವನೈಕಮಲ್ಲನು ಪಟ್ಟವೇರಿ ಮೂರು ವರ್ಷಗಳಾದ ಮೇಲೆ ಬರೆದದ್ದು ‘ಬ’ ಶಾಸನ. vi. ಲಕ್ಷ್ಮನೃಪನಿಗೆ ಬನವಾಸಿಯ ಮಹಾಮಂಡಲೇಶ್ವರ ಪ್ರತಿಪತ್ತಿಯನ್ನು ಒಪ್ಪಿಸಲಾದದ್ದು ’ಅ’ ಶಾಸನ, ಮಹಾಮಂಡಲೇಶನಾಗಿ ಆಳುತ್ತಿರುವುದು ‘ಬ’ ದಲ್ಲಿದೆ. ಶಾಂತಿನಾಥಕವಿ ಲಕ್ಷ್ಮರಸನಲ್ಲಿ ಅರ್ಥಾಧಿಕಾರಿ-ಮಂತ್ರಿ-ದಂಡನಾಥನಾಗಿದ್ದನು; ಶಾಂತಿನಾಥನು ಜೈನಕವಿ ಯೆಂಬುದೂ ಇಲ್ಲಿ ಪ್ರಸ್ತುತವಾಗಿದೆ.

೯.೨. ಶಾಸನ ‘ಅ’ ಸಾಲುಗಳು ೧-೨, ೧೪-೧೬, ೧೯-೨೦, ೨೮-೨೯, ೩೨-೩೩ ಇವು ಕ್ರಮವಾಗಿ ‘ಬ’ ದ ಸಾಲುಗಳು ೧-೨, ೪-೬, ೮-೧೦, ೧೨-೧೩ ಮತ್ತು ೧೦-೧೧ ಕ್ಕೆ ಹೊಂದಿಕೊಂಡಿವೆ, ಅಷ್ಟೇ ಅಲ್ಲ ಅದೇ ಪುನರುಕ್ತವಾಗಿದೆ. ಇವೆರಡೂ ಶಾಸನಗಳು ಒಬ್ಬ ಶ್ರೇಷ್ಠ ಚಂಪೂಕವಿಯ ಖಂಡಕಾವ್ಯವೆಂಬಂತಿವೆ. ಲಕ್ಷ್ಮನೃಪನ ಪರಾಕ್ರಮದ ಪರಾಕು ಹೇಳುವ ಪದ್ಯವಿದು ಎರಡೂ ಕಡೆ ಇದೆ –

            ಅಣುಗಾಳ್ ಕಾರ್ಯದ ಶೌರ್ಯದಾಳ್ ಚಾಳುಕ್ಯರಾಜ್ಯಕ್ಕೆ ಕಾರನ
ಮಾದಾಳ್ ತುಱೆ ಲಾಳ್ತನಕ್ಕೆ ನೆಱೆದಾಳ್ ಕಟ್ಟಾಯದಾಳ್ ಮಿಕ್ಕಮ
ನ್ನಣೆಯಾಳ್ ಮಾಂತನದಾಳ್ ನೆಗಱ್ತೆ ವಡೆದಾಳ್ ವಿಕ್ರಾಂತದಾಳ್ ಮೇಳದಾಳ್
ರಣದಾಳಾಳ್ದನ ನಚ್ಚುವಾವೆಡೆಯೊಳಂ ವಿಶ್ಚಾಸದೊಳ್ ಲಕ್ಷ್ಮಣಂ
||

ಕವಿಯೂ ಕಲಿಯೂ ಆಡಳಿತಗಾರನೂ ಆದ ಥಾಂತಿನಾಥನ ಶೈಲಿಯ ವರ್ಣನೆಯ ಸಿಕ್ಕ ಎರಡೂ ಶಾಸನಗಳಲ್ಲಿ ಒಡಮೂಡಿದೆ. ಇಷ್ಟು ತನ್ಮಯವಾಗಿ ಲಕ್ಷ್ಮರಸನನ್ನು ಚಿತ್ರಿಸುವುದಕ್ಕೆ ಶಾಂತಿನಾಥನಿಗೆ, ಅದು ತನ್ನ ಧಣಿಯನ್ನು ಕುರಿತದ್ದು ಎಂಬ ಕೃತಜ್ಞತಾಭಾವವೊಂದೇ ಕಾರಣವಲ್ಲ. ಲಕ್ಷ್ಮನೃಪನು ತ್ರೈಳೋಕ್ಯಮಲ್ಲ ಮತ್ತು ಅವನ ಹಿರಿಯ ಮಗ ಭುವನೈಕಮಲ್ಲ – ಈ ಇಬ್ಬರು ಚಕ್ರವರ್ತಿಗಳ ವಾತ್ಸಲ್ಯದಕರು. ಈ ಚಕ್ರೇಶರಿಬ್ಬರೂ ಓರಂದದ ಕೂರ್ಮೆಯಿಂದ ಬನವಾಸಿ ವಿಷಯವನ್ನು ಶಾಸನ ಬರೆದುಕುದುರೆ ಆನೆ ಪಟ್ಟಸಾಧನ ಸಮೇತ ಮಂಡಳಿಕ ತ್ರಿಣೇತ್ರ ಲಕ್ಷ್ಮರಸನಿಗೆ ಕೊಟ್ಟರು.

೯.೩. ಶಿಕಾರಿಪುರ ೧೩೬ ಮತ್ತು ಗಾವರವಾಡ ಶಾಸನಗಳು ಭಿನ್ನಕರ್ತೃಕ ರಚನೆಗಳಾಗಿರದೆ ಏಕಕವಿಕೃತವೆಂದು ಸಾರಲು ಸಹಾಯವಾಗುವ ಇನ್ನೆರಡು ಸಮಾನ ವೃತ್ತ ಪದ್ಯಗಳನ್ನು ನೋಡಬಹುದು; ಇವು ಚಾರಿತ್ರಿಕವಾಗಿಯೂ ಗಮನಿಸತಕ್ಕ ಪದ್ಯಗಳು-

i. ಕುದುರೆಯಮೇಲೆ ಬಿಲ್ಪರಸುಸೂಲಿಗೆ ತೀರಿಕೆ ಭಿಣ್ಡಿವಾಳಮೆ
ತ್ತಿದ ಕರವಾಳು ಮಾಟಿಡುವ ಕರ್ಕಡೆ ಪಾಱುವಚಕ್ರಮೆಂದೊಡೆಂ
ತೊದರುವರೆಂತು ಪಾಯಿಸುವರೆಂತು ತಱುಂಬುವರೆನ್ತು ನಿಲ್ವರೆಂ
ತೊದವುವರೆಂತು ಲಕ್ಷ್ಮಣನೊಳಾಂತು ಬರ್ದುಂಕುವರನ್ಯ ಭೂಭುಜರ್ ||

            ii. ಕಲಿತನ ಮಿಲ್ಲಚಾಗಿಗೆ ವದ್ಯಾನತೆ ಮೆಯ್ಗಲಿಗಿಲ್ಲ ಚಾಗಿ ಮೆ
ಯ್ಗಲಿಯೆನಿಪಂಗೆ ಶೌಚಗುಣಮಿಲ್ಲ ಕರಂ ಕಲಿಚಾಗಿ ಸೌಚಿಗಂ
ನಿಲೆ ನುಡಿವೋಜೆಯಿಲ್ಲ ಕಲಿಚಾಗಿ ಮಹಾಶುಚಿ ಸತ್ಯವಾದಿಮ
ಣ್ಡಳಿಕರೋಳೀತನೆಂದು ಪೊಗಳ್ಗುಂ ಬುಧಮಣ್ಡಳಿ ಲಕ್ಷ್ಮಭೂಪನಂ ||

ಈ ರೀತಿಯಾಗಿ ಶಾಂತಿನಾಥ ಕವಿ ತನ್ನ ಹಿಂದಿನ ಮತ್ತು ಅನಂತರದ ಕೆಲವು ಜೈನ ಕವಿಗಳ ಮಾದರಿಗೆ ಸೇರಿದವನಾಗಿದ್ದಾನೆ. ಪಂಪಬು ಕವಿ-ಕಲಿ, ಪ್ರಾಯಃ ಶಾಸನ ಕವಿ; ಪೊನ್ನನು ಕವಿ ಮತ್ತು ಶಾಸನ ಕವಿ [ನಾಗರಾಜಯ್ಯ, ಹಂಪ; ಶಾಸನಗಳಲ್ಲಿ ಎರಡುವಂಶಗಳು : ೧೯೯೪ : ೪೯]; ರನ್ನನು ಕವಿ, ಕಲಿ, ಶಾಸನ ಕವಿ; ಜನ್ನನೂ ರನ್ನನಂತೆಯೇ; ಪಾರ್ಶ್ವ ಪಂಡಿತನೂ, ಶಾಂತಿನಾಥನೂ ಇದೇ ಬಗೆಯವರು.

೧೦. ಈ ಶಾಸನವು ಭೌಗೋಳಿಕ ವಿವರಗಳನ್ನು, ಕೆಲವು ಊರು ಕೇರಿಹೊಲ ಮನೆಗಳನ್ನೂ ತುಂಗಭದ್ರಾತೊರೆಯನ್ನೂ ಪರಿಚಯಿಸಿದೆ. ಭುವನೈಕಮಲ್ಲನು ತುಂಗಭದ್ರೆಯ (೩೩-೩೪) ದಡದ ಊರು ಕಕ್ಕರ ಗೊಣ್ಡದಲ್ಲಿ ಬೀಡು ಬಿಟ್ಟನು (೩೪). ಅಣ್ಣಿಗೆರೆ (ಧಾಜಿ / ನವಲ್ಗುಂದ ತಾ ||; ೧೬,೫೦,೫೫), ಅರಕೆರೆ (೮೭), ಅಯವೊಳೆ (೮೮), ಇಟ್ಟಗೆ (೧೮-೧೯) ಕಕ್ಕರಗೊಣ್ಡ (೩೪), ಕುಳುಪಳ್ಳ (೫೯ಏ, ಗುಮ್ಮಂಗೊಳ (೧೯ : ಗುಂಗೊಲ) ಗಾವರಿವಾಡ (೧೯, ೫೦), ಪುಲಿಗೆರೆ -೩೦೦ (೭), ಬಟ್ಟಕೆರೆ (೮೫), ಮಯೂರಾವತಿ (೪೫), ಮೂಡಗೇರಿ (೧೮), ಹೂಲಿಗೊಳ (೫೯), ಹೊಲಗೆಱೆ(೯೫) ಮೊದಲಾದ ಸ್ಥಳನಾಮಗಳು ಶಾಸನೋಕ್ತವಾಗಿವೆ. ಇವೆಲ್ಲ ಊರುಗಳೂ ಬೆಳ್ವೊಲ – ೩೦೦(೭, ೧೬, ೨೮, ೩೧) ಮತ್ತು ಪುಲಿಗೆಱೆ-೩೦೦ (೭) ಸೇರಿ ಆದ ಎರಡಱುನೂಱು (೭-೮) ಪ್ರದೇಶದ ಹರಹಿನಲ್ಲಿರುವಂತಹವು, ಮತ್ತು ಲಕ್ಷ್ಮರಸ ಮಹಾಮಾಂಡಲಿಕ ಆಡಳಿತ ಭಾಗಗಳು. ಇಷ್ಟು ಸ್ಥಳಗಳನ್ನು ಇಲ್ಲಿ ಹೆಸರಿಸಿದ್ದರೂ ಶಾಸನದ ಕೇಂದ್ರ ವಿಷಯದ ದೃಷ್ಟಿಯಿಂದ ಅಣ್ಣಿಗೆರೆಯೇ ಮುಖ್ಯ.

೧೧. ಧಾರ್ಮಿಕ ಅಧ್ಯಯನದ ನಿಟ್ಟಿನಿಂದ, ಈ ಶಾಸನ ಜೈನ ಧರಮ್ದ ಉತ್ಕೃಷವನ್ನು ಸಾರುವ ನಿರೂಪಣೆಯಿದೆ. ಬಸದಿಗಳೂ, ಬಸದಿಯ ಆಚಾರ್ಯರೂ ಇಲ್ಲಿ ಕೀರ್ತಿತರಾಗಿದ್ದಾರೆ. ಗಂಗರ ಗುರುಗಳಾದ ವರ್ಧಮಾನರ ವಿಚಾರ. ಬಂದಿದೆ. ವಿದ್ಯಾನಂದ ಸ್ವಾಮಿ, ತಾರ್ಕಿಕರಲ್ಲಿ ಅರ್ಕ (ಸೂರ್ಯ) ವೆನಿಸಿದ ಮಾಣಿಕ್ಯ ನಂದಿ, ಗುಣ ಕೀರ್ತಿ – ಮೊದಲಾದ ಮುನಿಗಳನ್ನು ಕುರಿತ ಮಾಹಿತಿಯನ್ನು ಈ ಶಾಸನ ಒದಗಿಸುವಾಗ ತೋರಿದ ಗೌರವಾದರ ತನ್ಮಯತೆ ಎಂತಹ ಪ್ರೌಢವಾದ ಶಯ್ಯೆ- ಶೈಲಿಯಲ್ಲಿ ಒಡಮೂಡಿದೆ ನೋಡಿ:

            ಪರಮಶ್ರೀಜಿನಶಾಸನಕ್ಕೆ ಮೊದಲಾದೀ ಮೂಲಸಂಘಂ ನಿರ
ನ್ತರ ಮೊಪ್ಪುತ್ತಿರೆ ನಂದಿಸಂಘವೆಸರಿಂದಾದನ್ವಯಂ ಪೆಂಪುವೆ
ತ್ತಿರೆ ಸನ್ದರ್ವ್ವಳಗಾ ಱ ಮುಖ್ಯಗಣದೊಳು ಗಂಗಾನ್ವಯಕ್ಕಿನ್ತಿವ
ರ್ಗ್ಗುರುಗಳ್ ತಾಮೆನೆ ವರ್ದ್ಧಮಾನ ಮುನಿನಾಥರ್ಧಾರಿಣೀ ಚಕ್ರದೊಳ್
||
[ಮತ್ತೇಭವಿಕ್ರೀಡಿತ ವೃತ್ತ ಪದ್ಯ, ಸಾಲು : ೨೨-೨೩]

ಶ್ರೀನಾಥ ರ್ಜ್ಜೈನ ಮಾರ್ಗ್ಗೋತ್ತರಮರೆನಿಸಿ ತಪ ಖ್ಯಾತಿಯಂ ತಾಳ್ತಿದರ್ಸ್ಸ
ಜ್ಞಾನಾತ್ಮರ್ವ್ವರ್ದ್ಧಮಾನ ಪ್ರವರರವರ ಶಿಷ್ಯರ್ಮ್ಮಹಾವಾದಿಗಳ್ ವಿ
ದ್ಯಾನನ್ದ ಸ್ವಾಮುಗಳ್ ತಮ್ಮನಿಪತಿಗನುಜರ್ತ್ತಾರ್ಕ್ಕಿಕಾರ್ಕ್ಕಾಭಿ
ಧಾ ನಾಧೀನರ್ಮ್ಮಾಣಿಕನನ್ದಿ ಪತಿಗನುಜರ್ತ್ತಾರ್ಕ್ಕಿಕಾರ್ಕ್ಕಾಭಿ
ಧಾನಾಧೀನರ್ಮ್ಮಾಣಿಕನನ್ದಿ ವ್ರತಿಪತಿಗಳ ವರ್ಸ್ಸಾಸನೋದಾತ್ತಹಸ್ತರ್
||
[ಸ್ತಗ್ಧರಾವೃತ್ತ ಪದ್ಯ, ಸಾಲು : ೨೩-೨೫]

            ತದಪತ್ಯರ್ಗ್ಗುಣು ಕೀರ್ತ್ತಿ ಪನ್ಡಿತರವರ್ತ್ತಚ್ಚಾ ಸನ ಖ್ಯಾತಿ ಕೋ
ವಿದರಾ ಸೂರಿಗಳಾತ್ಮ ಜರ್ವ್ವಿಮಳ ಚನ್ದ್ರರ್ತ್ತಾಪದಾಂಭೋಜ ಷ
ಟ್ಟದರುದ್ಯದ್ಗುಣ ಚನ್ದ್ರರನ್ತವರ ಶಿಷ್ಯರ್ ನೋಡಿ ಶಾಸ್ತ್ರಾತ ದೊಳ್
ವಿದಿತರಾಗಣ್ಡ ವಿಮುಕ್ತ ರಿನ್ನ ಭಯನನ್ದ್ಯಾ ಚಾರ್ಯ್ಯ ರಾರೋತ್ತಮರ್
||
[ಮತ್ತೇಭ ವಿಕ್ರೀಡಿತ ವೃತ್ತ, ಸಾಲು : ೨೫ – ೨೭]

೧೧.೧. ಮೇಲ್ಕಂಡ ಮೂರು ವೃತ್ತಗಳಲ್ಲಿ ಪರಿಚಯಿಸಿರುವ ಗುರ್ವಾವಳಿಯ ಮೂಲ ಸಂಘಕ್ಕೆ ಸೇರಿ ಹಿರಿಮೆಹೊಂದಿದ ನಂದಿ ಸಂಘದ ಅನ್ವಯದಲ್ಲಿ ಮುಖ್ಯವಾದ ವ(ಬ)ಳಗಾ ಱ ಎಂಬ ಗಣವಿತ್ತು. ಈ ಬಳಗಾಱಗಣದ ಪ್ರಾಚೀನ ಆಚಾರ್ಯರಾದ ವರ್ಧಮಾನ ಮುನಿನಾಥರು ಗಂಗವಂಶಕ್ಕೆ ಮುಖ್ಯ ಗುರುಗಳೆಂದು ಜನಮನ್ನಣೆ ಗಳಿಸಿದ್ದರು; ಮುಕ್ತಿಯೆಂಬ ಲಕ್ಷ್ಮಿಗೆ ಒಡೆಯರೂ, ಜಿನಮಾರ್ಗದಲ್ಲಿ ಮೇಲಾದವರೂ ಎನಿಸಿ ತಪಸ್ಸಿನಿಂದ ಕೀರ್ತಿ ಗಳಿಸಿದ್ದರು ಅಂತಹ ಹೆಸರಾಂತ ರಿಷಿ ವರ್ಧಮಾನರ ಶಿಷ್ಯರು ಮಹಾವಾದಿಯಾಗಿದ್ದ ವಿದ್ಯಾನಂದಸ್ವಾಮಿ, ಅವರ ಜತೆಯವರು ಮಾಣಿಕನನ್ದಿವ್ರತಿಪತಿ, ಅವರ ಶಿಷ್ಯರು ಗುಣಕೀರ್ತಿ ಪಣ್ಡಿತರು, ಅವರ ಶಿಷ್ಯರು ವಿಮಳಚನ್ದ್ರರು, ಇವರ ಶಿಷ್ಯರು ಗುಣಚನ್ದ್ರರು, ಇವರ ಶಿಷ್ಯರು ಗಣ್ಡ ವಿಮುಕ್ತರು ಮತ್ತು ಅಭಯನನ್ದಿ ಆಚಾರ್ಯರು.

೧೧.೨. ಇಲ್ಲಿ ಉಲ್ಲೇಖಿಸಿರುವ ಬಾಳಗಾಱ ಗಣದ ಗುರುಶಿಷ್ಯ ಪರಂಪರೆ ಪ್ರಖ್ಯಾತವಾದದ್ದು. ಈ ರಿಷಿಗಳಿಗೆ ಸಂಬಂಧಿಸಿದ ಇನ್ನೂ ಕೆಲವು ಮಾಹಿತಿಗಳು ಅನ್ಯಾನ್ಯ ಶಾಸನಗಳಲ್ಲಿ ಸಿಗುತ್ತವೆ. ಬಳಗಾಱಗಣದ ಮಾಹಿತಿ ೧ಎ.೪.೧೮೦.೧೦೪೮; ೫೧೧.೨೦.೪೭.೧೦೭೪; ಜೆಬಿಆರ್‌ಎ‍ಎಸ್ ಸಂ. ೧೦. ನಂ. ೩೦. ಶಾಸನ ನಂ. ೮.೧೦೮೭.೮೮ ಮತ್ತು ೧೧೨೧-೨೨. ಕೊಣೂರು (ಬೆಳಗಾವಿ ಜಿ / ಗೋಕಾಕ ತಾ). ಪು. ೨೮೭-೯೧. ಸಾಲು : ೯೧; ರನ್ನ, ಅಜಿತಪುರಾನಂ (೧೨-೪೪), ೯೯೩; ಸೌ.ಇ.ಇ. ೯-೧. ೬೦.೯೩೧; ಸೌ.ಇ.ಇ. ೯-೨.೪೨೪.೧೪೦೧- ಇತ್ಯಾದಿ. ಈ ಬಳಗಾಱಗಣದ ಪ್ರಾಚೀನರೂ ಮುಖ್ಯರೂ ಆಗಿದ್ದ ವರ್ಧಮಾನ ಮುನಿನಾಥರು ಗಂಗಾನ್ವಯಕ್ಕೆ ಗುರುಗಳೆಂಬುದು ನೆನಪಿಡತಕ್ಕ ಮಾತು. ಗಂಗವಂಶದ ಮೂಲಗುರುಗಳು ಹಾಗೂ ಗಂಗರಾಜ್ಯ ಸ್ಥಾಪನಾಚಾರ್ಯರು ಯಾಪನೀಯ ಸಂಘದ ಕ್ರಾಣೂರ್ಗ್ಗಣದ ಸಿಂಹಣಂದಿ ಆಚಾರ್ಯರೆಂದು ಹಲವಾರು ಶಾಸನಗಳಲ್ಲಿದೆ [ಇ.ಆ.೭.ಪು. ೧೦೭; ಎ.ಕ. ೭-೧ ಶಿವಮೊಗ್ಗ ೪. ೧೧೨೨. ಪು. ೧೦-೧೫; ಅದೇ, ಶಿವಮೊಗ್ಗ. ೬.೧೦೬೦; ಅದೇ, ಶಿವಮೊಗ್ಗ ೫೭,೧೧೧೫-೧೬. ನಿದಿಗೆ ಪು. ೫೭-೬೧; ಹೊಂಬುಜ. ೧ ಮತ್ತು ೨, ೧೦೭೭ ದ ನಾಗರಾಜಯ್ಯ, ಹಂಪ : ಸಾಂತರರು – ಒಂದು ಅಧ್ಯಯನ : ೧೯೭೭].

ಸಿಂಹಣಂದಿ ಮುನಿಯ ತರುವಾಯದವರಲ್ಲಿ ವರ್ಧ ಮಾನ ಮುನಿನಾಥರು ಗಂಗರ ಹಿರಿಯ ಗುರುಗಳಾಗಿ ಮಾನ್ಯರಾದರೆಂಬುದನ್ನು ಈ ಶಾಸನ ಸ್ಪಷ್ಟವಾಗಿ ಸಾರಿದೆ. ಅವರ ಶಿಷ್ಯರು ಮಹಾವಾದಿ ವಿದ್ಯಾನಂದ ಸ್ವಾಮಿಗಳು ಮತ್ತು ಅನಂತರದವರು ತಾರ್ಕಿಕ ನೈಪುಣ್ಯದಿಂದ ಪ್ರಸಿದ್ಧರು. ಗಣ್ಡವಿಮುಕ್ತಮುನಿಯು ಕ್ರಿ.ಶ. ೧೦೩೧ ರಲ್ಲಿ ಕೊಪ್ಪಳ ಮಹಾತೀರ್ತ್ಥದಲ್ಲಿ ಸಲ್ಲೇಖನವ್ರತಧಾರಿಯಾಗಿ ಮುಡಿಪಿ ಪಂಡಿತ ಮರಣವನ್ನು ಪಡೆದರು. ಇವರೆಲ್ಲರೂ ಕಲ್ಯಾಣ ಚಾಳುಕ್ಯರ ಆಳ್ವಿಕೆಯಲ್ಲಿ ಖ್ಯಾತ ನಾಮರಾಗಿದ್ದರೆಂಬುದನ್ನು ಪ್ರತ್ಯೇಕವಾಗಿ ಎತ್ತಿ ಹೇಳಬೇಕು.

೧೨. ಈ ಶಾಸನದ ಮೊದಲು, ತುದಿ, ನಡುವೆ, ಉದ್ದ, ಅಗಲ-ಎಲ್ಲವೂ ಆವರಿಸಿಕೊಂಡಿರುವುದು ಅಣ್ಣಿಗೆರೆಯ ಅರ್ಹದಾಯತನ. ಅಣ್ಣಿಗೆರೆ ವಿಶೇಷತೆ ಹಲವಾರಿವೆ: ೧). ಅದು ಕರ್ನಾಟಕದ ಪ್ರಾಚೀನ ಜಿನಾಲಯಗಳಲ್ಲೊಂದು. ೨) ಅದುಂಗಗರು ಕಟ್ಟಿಸಿದ್ದು; ಗಂಗ ಪೆರ್ಮಾನಡಿ, ಜಯದುತ್ತರಂಗ, ಇಮ್ಮಡಿ ಬೂತುಗ ಮಾಡಿಸಿದ್ದು ೩) ಈ ಬಸದಿಯನ್ನು ಗಂಗರು ಕಟ್ಟಿಸಿದ್ದು, ಗಂಗರೊಂದಿಗೆ ಅವರ ಎರೆಯರಾದ ರಾಷ್ಟ್ರಕೂಟರೂ ಪೊರೆದರು ೪) ಗಂಗ-ರಟ್ಟರ ತರುವಾಯ ಚಾಳುಕ್ಯರು ಪೋಷಿಸಿದರು. ೫). ಚಾಳುಕ್ಯರ ಕಾಲದಲ್ಲಿ ಹಗೆಗಳಾದ ಚೋಳರು ಈ ಬಸದಿಯನ್ನು ಮುಕ್ಕಾಗಿಸಿದರು. ೬). ಖಣ್ಡಗೊಣ್ಡ ಬಸದಿಯನ್ನು ಮತ್ತೆ ಚಾಳುಕ್ಯರು ಸ್ಫುಟಿತ -ಜೀರ್ಣೋದ್ಧಾರ ಮಾಡಿದರು. ೭) ಅನಂತರ ಮಯೂರಪುರವರಧೀಶರಾದ ಕತ್ತಲೆಕುಲದ ಮಹಾಸಾಮಂತರು ಆರಾಧಿಸಿದರು ೮) ತರುವಾಯ ಅಣ್ಣಿಗೆರೆ ಧರ್ಮಾಡಳಿತ ಪ್ರದೇಶಕ್ಕೆ (diocese) ಒಳಪಟ್ಟು ಊರುಗಳ ಜೈನ ಶ್ರಾವಕ ಸೆಟ್ಟಿಮನೆ ತನಗಳವರು ಸಾಮೂಹಿಕವಾಗಿ ಕೊಡುಗೆಗಳಿಂದ ಬಸದಿಯನ್ನು ಊರ್ಜಿತಗೊಳಿಸಿದರು ೯) ಆಮೇಲೆ ವಾಜಿಕುಲದ ರೇಚಣ ದಂಡಾಧಿಪನು ಈ ದೇವಾಲಯಕ್ಕೆ ಪ್ರತಿಬುದ್ಧ ವಾದ ಜಿನರಿಗೆ ದತ್ತಿಯಿತ್ತನು. ೧೦) ಹೀಗೆ ಚಕ್ರವರ್ತಿಗಳಿಂದ, ಮಹಾಮಂಡಲೇಶರಿಂದ, ಮಹಾಸಾಮಂತರಿಂದ, ಮಹಾಪ್ರಧಾನರಿಂದ, ಮಹಾಪ್ರಜೆಗಳಿಂದ ಒಂದೇ ಸಮನೆ ಪೂಜೆಗೊಳ್ಳುತ್ತ ಸಂತತವಾಗಿ ಬೆಳೆದು ಇಂದಿಗೂ ಉಳಿದು ಬಂದಿರುವ ಭವ್ಯ ಪರಂಪರೆಯ ಜಿನಾಲಯವಿದು. ಏಳು ಬೀಳುಗಳಿರುವ ನಿರಂತರ ಚರಿತ್ರೆಯನ್ನು ಗರ್ಭೀಕರಿಸಿರುವ ಈ ಬಸದಿಯ ವಾಸ್ತು-ಶಿಲ್ಪ ಇಂದಿಗೂ ಮನನೀಯವಾಗಿದೆ. ಬಸದಿಗಳ ವಿನಾಶದ ಸಂದರ್ಭಗಳ ಜತೆಗೇ ಅವುಗಳ ಪುನರ್ ಭರಣ ಪ್ರಕ್ರಿಯೆಯೂ ನಡೆಯುತ್ತಿದ್ದ ಎರಡೂ ರೀತಿಗೆ ಈ ಬಸದಿಯ ರೋಚಕ ಇತಿಹಾಸವೇ ಒಂದು ಜ್ವಲಂತ-ಜೀವಂತ ನಿದರ್ಶನ. ಗಂಗರು, ರಾಷ್ಟ್ರಕೂಟರು ತೋರಿದ ಜೈನನಿಷ್ಠೆಯನ್ನು ಚಾಳುಕ್ಯರೂ ಹೇಗೆ ಮುಂದುವರಿಸಿದರೆಂಬುದನ್ನೂ ಈ ದೇವಾಲಯದ ಕಥೆ ಹೇಳುತ್ತಿದೆ.

೧೩. ಈ ಶಾಸನದಲ್ಲಿ ದೇವಾಲಯಕ್ಕೆ ಒಪ್ಪಿಸಿದ ಹೊಲಮನೆಮತ್ತಿತರ ಕೊಡುಗೆಗಳು ಆಕರ (ಸುಂಕರಹಿತ – ಸರ್ವನಮಸ್ಯ) ವಾಗಿದ್ದುವು- ಎಂದು ಹೇಳುವಾಗ ಕೆಲವು ರೂಢಿಯ ಶಾಸನ ಪರಿಭಾಷೆಯನ್ನು ಬಳಸಿದೆ. ಅರಸರ ಕಾಣಿಕೆ-ಕಾಣ್ಕೆ ಎಂಬುದು ರಾಜರಿಗೆ ಒಪ್ಪಿಸಬೇಕಾದ ನಜರು, ನಜರಾಣಿ [ಎ.ಇ. ೩೭, ೧೫.೧೧೧೪. ಸಾಲು : ೧೯; ಸೌ.ಇ.ಇ. ೯-೧, ಕಂದಾಯ ಕೊಡದೆಯೋ ಅನುಭವಿಸಬಹುದಾದ ಜಹಗೀರು [ಸೌ.ಇ.ಇ.೧೧-೧, ೪೫.೯೮೦. ಸಾಲು : ೩೬ ]- ಇದು ಸಂಸ್ಕೃತದ ಉದ್ಬಲಿ ಎಂಬ ಶಬ್ದ ಪ್ರಾಕೃತದಲ್ಲಿ ಉಬ್ಬಲಿ ಎಂದಾಗಿ ಕನ್ನಡಕ್ಕೆ ಬಂದಿದೆ. ಬಿೞ್ದು-ಬಿರ್ದು ಎಂಬುದು ರಾಜಬೊಕ್ಕಸಕ್ಕೆ ಒಪ್ಪಿಸಬೇಕಾದ ತೆರಿಗೆ, ಇದು ಅತಿಥಿ ಸತ್ಕಾರ ಮಾಡುವವರು ತೆರಬೇಕಾದ ತೆರೆ [ಹೊಂಬುಜ.೨. ೧೦೭೭. ಸಾಲು : ೧೫೫; ಹೊಂಬುಜ ೬-ಬಿ. ೧೦೮೭; ಬಿೞ್ಮಣ್ಣ ಎಂಬುದನ್ನೂ ಹೋಲಿಸಿ ಸಂಸ್ಕೃತದ ವ್ಯಯಶಬ್ಧವು ಪ್ರಾಕೃತದಲ್ಲಿ ‘ವಿಅ’ ಎಂದಾಗಿ ಕನ್ನಡದಲ್ಲಿ ಬಿಯ ಎಂದಾಗಿದೆ; ಇದು ದವಸಧಾನ್ಯ ರೂಪದಲ್ಲಿ ಕೊಡುವ ತೆರಿಗೆ. ಕೆಲವು ಶಾಸನಗಳಲ್ಲಿ ಇದಕ್ಕೆ ‘ಬೀಯ’ ಎಂಬ ರೂಪವೂ ಬಳಕೆಯಾಗಿದೆ [ಹೊಂಬುಜ. ೨. ೧೦೭೭. ಸಾಲು: ೧೫೫; ಹೊಂಬುಜ ೬-ಬಿ. ೧೦೮೭. ಸಾಲು: ೨೩]. ಸಮಕಟ್ಟು ಎಂಬುದು ಸಮಾನವಾದ ಭಾಗ. ಭೋಗವಾಡಗೆ ಎಂಬುದು ಅನುಭವಿಸಲು ಕೊಡಬೇಕಾದ ಬಾಡಿಗೆ. ಇಂದಿನ ಬಾಡಿಗೆ ಎಂಬ ಶಬ್ದಕ್ಕೆ ಮೂಲ ಈ ಬಾಡಗೆ ಎಂಬುದು (ಭೋಗ + ಬಾಡಗೆ = ಭೋಗವಾಡಗೆ) ಮತ್ತರು ಎಂಬುದು ನೆಲದಳತೆಯ ಒಂದು ಪ್ರಮಾಣ. ಮತ್ತರ್, ಮತ್ತಲ್, ಮತ್ತ., ಮ-ಎಂಬುದಾಗಿಯೂ ಶಾಸನಗಳಲ್ಲಿ ಮತ್ತರನು ಸೂಚಿಸಲಾಗಿದೆ. ಒಂದು ಎಕರೆಯಿಂದ ಎಂಟು ಎಕರೆಯವರೆಗೂ ಇದರ ಪ್ರಮಾಣ ಇದೆ [ಇ.ಆ. ೧೧, ೭೦.೫೬೭; ಎ.ಕ. ೮, ಸೊರಬ ೮೫.೮೭೬; ಸೌ.ಇ.ಇ.೨೦, ೧೩.೮೭೫. ಸೌದತ್ತಿ; ಹೊಂಬುಜ. ೨೭. ೧೨೮೭. ಸಾಲು : ೧೭-೧೮]. ಗದ್ಯಾಣವು ೩೨ ರಿಂದ ೬೪ ಗುಂಜಿ ತೂಕದ, ಅಥವಾ ಹತ್ತು ಹಣ (ಪಣ) ಬೆಲೆಯ ನಾಣ್ಯ. ಶಾಸನಗಳಲ್ಲಿ ಗದ್ಯಾಣ ಎಂಬುದಕ್ಕೆ ಕೆಲವೊಮ್ಮೆಗ ಎಂದಷ್ಟೇ ಸಣ್ಣಿಸಿ ಹೇಳುವುದುಂಟು (ಹೊಂಬುಜ. ೩೧. ೧೩೯೦ – ಸಾಲು : ೨೦) . ಈ ಎಲ್ಲ ಶಬ್ಧಗಳ ಹೆಚ್ಚಿನ ವಿವರಗಳು ೧ಸಾಂತರರು : ಒಂದು ಅಧ್ಯಯನ’ ಎಂಬ ಪುಸ್ತಕದಲ್ಲಿದೆ [ನಾಗರಾಜಯ್ಯ, ಹಂಪ : ೧೯೯೭ : ೨೮೪ ರಿಂದ ೯೦].

೧೪. ಸಾರಾಂಶ : ಗಾವರವಾಡದ ಶಾಸನವು ಕಲ್ಯಾಣ ಚಾಳುಕ್ಯರ ಕಾಲದ ಒಂದು ಮಹತ್ವದ ಶಾಸನ. ಆ ಕಾಲದ ರಾಜಕೀಯ ಜೀವನ, ಸಾಧನೆ ಮತ್ತು ಧಾರ್ಮಿಕ ಸ್ವರೂಪದ ಒಂದು ಸೊಗಸಾದ ಪ್ರತಿಬಿಂಬ ಇದರಲ್ಲಿ ಪ್ರತಿಫಲನವಾಗಿದೆ.