ವಡ್ಡಾರಾಧನೆಯಲ್ಲಿನ ಚಾಣಾಕ್ಯರಿಸಿಯ ಕಥೆ, ಭದ್ರ ಬಾಹು ಭಟ್ತಾರಕ ಕಥೆ ಮುಂತಾದ ಕೆಲವು ಕಥೆಗಳು ವರಿತ್ರಕಾರರಿಗೆ ಉತ್ತಮ ಸಾಮಗ್ರಿ ದೊರಕಿಸುವಂತೆ ಸಮಸ್ಯೆಯನ್ನೂ ಒಡ್ಡುತ್ತವೆ. ಈ ಕಥೆಗಳು ಸಂಶೋಧಕರಿಗಂತೂ ಆಡುಂಬೊಲ. ಕರ್ನಾಟಕದ ಜೈನ ಇತಿಹಾಸ ಕಲ್ಪವನ್ನು ಪುನಾರಚಿಸುವಲ್ಲಿ ಭದ್ರ ಬಾಹುಭಟ್ಟಾರರ ಕಥೆಯ ಪಾತ್ರ ಮಹತ್ವದ್ದು. ಭಾರತದ ಇತಿಹಾಸವನ್ನು, ಜೈನ ಚರಿತ್ರೆಯನ್ನು ಪುನಾರಚಿಸುವಲ್ಲೂ, ಭದ್ರಬಾಹುಭಟ್ಟಾರರ ಕಥೆಯಷ್ಟೇ, ಚಾಣಾಕ್ಯರಿಸಿಯ ಕಥೆಯೂ ಪ್ರಮುಖ ದಾಖಲೆಗಳನ್ನು ನೀಡುತ್ತದೆ. ಸಂಶೋಧನ ಸಲಿಕೆ ಇದುವರೆಗೆ ಕನ್ನಡದಲ್ಲಿ ಈ ವಿಚಾರದಲ್ಲಿ ಕಾರ್ಯ ಪ್ರವೃತ್ತವಾಗಿಲ್ಲ. ಆ ದಿಕ್ಕಿನಲ್ಲಿ ‘ಗುದ್ದಲಿ ಪೂಜೆ’ ಯೆಂದು ಈ ಪ್ರಬಂಧ ರಚನೆಗೆ ತೊಡಗಿದ್ದೇನೆ. ಮುಂದಾನೊಂದು ಕಾಲದಲ್ಲಿ ಸಂಶೋಧಕರು ನನ್ನ ಪ್ರಯತ್ನವನ್ನು ವಿಚಿಕಿತ್ಸೆಗೊಳಗುಮಾಡಿ ಲಬ್ಧಾಧಾರಗಳ ಬೆಳಕಿನಲ್ಲಿ ಪುನರ್ ಪರಿಶೀಲಿಸಬಹುದು.

೧. ಚಾಣಕ್ಯ, ಕೌಟಿಲ್ಯ, ವಿಷ್ಣುಗುಪ್ತ ಎಂಬ ಹೆಸರುಗಳಿಂದ ಖ್ಯಾತ ರಾಜ ನೀತಿಜ್ಞನಾದ ಚಾಣಕ್ಯನನ್ನು ಕುರಿತು ದೊರೆತ ವಿವರಗಳ ತುಲನೆ ಈ ಲೇಖನದ ಪ್ರಧಾನ ಉದ್ದೇಶ. ಆನುಷಂಗಿಕವಾಗಿ ಉಳಿದ ವಿವರಗಳೂ ಉದ್ದೇಶ ಸಮರ್ಥನೆಗಾಗಿ ಬಂದಿವೆ. ಈಗ ಒಂದು ವರ್ಗದ ವಿದ್ವಜ್ಜನ ಪ್ರತೀತಿಯಂತೆ ಚಾಣಕ್ಯ ತಕ್ಷಶಿಲೆಯವನು. ಬ್ರಾಹ್ಮಣ ಜಾತಿಯವನು (?). ಈತನಿಗೆ ತಾಯಿ ತಂದೆ ಇಟ್ಟ ಹೆಸರು ವಿಷ್ಣುಗುಪ್ತನೆಂದು. ಕುಟಿಲ ಎಂಬ ಗೋತ್ರ ಪ್ರವರ್ತಕನ ವಂಶದಲ್ಲಿ ಜನಿಸಿದವನಾದುದರಿಂದ ಕೌಟಿಲ್ಯ; ಚಣಕ ದೇಶದಲ್ಲಿ ಹುಟ್ಟಿದವನಾದುದರಿಂದ ಚಾಣಕ್ಯ ಎಂಬ ಹೆಸರುಗಳಿಗೆ ಕಾರಣವಾಯಿತು. ಚಾಣಕ್ಯ ನಂದ ವಂಶದ ರಾಜರಲ್ಲಿ ಕಡೆಯ ನಂದನ ಕಾಲದಲ್ಲಿದ್ದವನು. ಆ ಅಂತಿಮ ನಂದನನ್ನು ಈತ ಸಿಂಹಾಸನ ಚ್ಯುತನನ್ನಾಗಿಸಿದ. ಚಂದ್ರಗುಪ್ತಮೌರ್ಯನಿಗೆ ಸಿಂಹಾಸನ ದೊರಕಿಸಿಕೊಟ್ಟು ತಾನೇ ಪ್ರಧಾನಿಯಾಗಿದ್ದ. ಚಂದ್ರಗುಪ್ತನ ನಂತರ ಬಂದ ದೊರೆ ಬಿಂಬಸಾರ. ಈತನ ರಾಜ್ಯಾಡಳಿತದ ಅವಧಿಯಲ್ಲೂ ಚಾಣಕ್ಯ ಕೆಲವು ಕಾಲ ಪ್ರಧಾನಿಯಾಗಿದ್ದನೆಂಬ ನಂಬಿಕೆ (ಈ ವಿಚಾರದಲ್ಲಿ ಚರ್ಚೆ) ಯೂ ಇದೆ.

ಚಾಣಕ್ಯನನ್ನು ಇಟಲಿಯ ಮ್ಯಾಕಿಯವೆಲಿಗೂ, ಗ್ರೀಸಿನ ಅರಿಸ್ಟಾಟಲನಿಗೂ ಹೋಲಿಸುವುದು ವಾಡಿಕೆ. ಚಾಣಕ್ಯನ ಕೃತಿ ಹದಿನೈದು ಅಧಿಕರಣಗಳ ಅರ್ಥಶಾಸ್ತ್ರ. ಕ್ರಿ.ಪೂ. ೩೨೫-೨೯೬ ರ ಅವಧಿಯಲ್ಲಿ ರಚಿತವಾದ ಈ ಕೃತಿಯ ಮೇಲೆ ವ್ಯಾಖ್ಯಾನಗಳಿವೆ. ಅರ್ಥಶಾಸ್ತ್ರ ಇಂಗ್ಲಿಷ್ ಜರ್ಮನ್ ಫ್ರೆಂಚ್ ಭಾಷೆಗಳಿಗೂ ಅನುವಾದವಾಗಿದೆ.

೨. ಚಾಣಕ್ಯನ ಜೀವನವನ್ನು ಕುರಿತು ಸಿಗುವ ವಿವರ ಇಷ್ಟು; ಜೈನೇತರ ಆಧಾರಗಳಿಂದ. ಜೈನ ವಾಙ್ಗಯದಲ್ಲಿ ಈ ವಿವರವನ್ನೂ ಒಳಗೊಂಡು ಇನ್ನೂ ಸಮಗ್ರವೂ ವ್ಯಾಪಕವೂ ಆದ ಸಂಗತಿಗಳು ಸಿಗುತ್ತವೆ. ಅವುಗಳನ್ನು ಒಂದೊಂದಾಗಿ ಅವಲೋಕಿಸಬಹುದು. ಕನ್ನದದ ಮೊದಲ ಗದ್ಯ ಗ್ರಂಥವೆಂದು (?) ಸದ್ಯಕ್ಕೆ ಮಾನ್ಯವಾಗಿರುವ ವಡ್ಡಾರಾಧನೆಯಲ್ಲಿ ಬರುವ ಹದಿನೆಂಟನೆಯ ಕಥೆ ಚಾಣಕ್ಯರಿಸಿಯ ಕಥೆ. ಅದರ ಸಾರಾಂಶ :

ಭರತಕ್ಷೇತ್ರದ ಮಗಧೆ ನಾಡಿನಲ್ಲಿನ ಪಾಟಲೀ ಪುತ್ರ ಪಟ್ಟಣವನ್ನು ನಂದ ವಂಶದ ಪದ್ಮರಾಜ ಆಳುತ್ತಿದ್ದ. ಪದ್ಮನ ರಾಣಿ ಸುಂದರಿ. ಮಗ ಮಹಾಪದ್ಮ. ಮಂತ್ರಿ ಕಾಪಿ. ಕಾಪಿಗೆ ವಿಶ್ವಸೇನನೆಂಬ ಹೆಸರು ಇತ್ತು. ಕಾಪಿಯು, ರಾಣಿ ಸುಂದರಿಯನ್ನು ಮೋಹಿಸಿದ. ರಾಜನನ್ನು ಕೊಂದು ರಾಣಿಯೊಂದಿಗೆ ಬಾಳ ಬಯಸಿದ. ಹಗೆಗಳನ್ನು ಅರಸನ ಮೇಲೆ ಎತ್ತಿ ಕಟ್ಟಿದ. ಹಗೆಗಳನ್ನು ಕಾಳಗದಲ್ಲಿ ಎದುರಿಸುವ ಮುನ್ನ ಭಂಡಾರವನ್ನು ಬಚ್ಚಿಡಲು ತಕ್ಕ ತಾಣ ತೋರಿಸುವುದಾಗಿ ತಿಳಿಸಿ, ರಾಜನೊಡನೆ ಹೊರಟ. ಬೆಳಗಿನ ಜಾವದ ಮುಸುಕಿನಲ್ಲಿ ಹಾಳು ಬಾವಿಯ ಬಳಿ ಅರಸನನ್ನು ಕಾಪಿ ಇರಿದು ಕೊಂದು, ಕೆಸರು ಬಾವಿಗೆ ತಳ್ಳಿದ. ಇದನ್ನು ಮರದ ಮೇಲೆ ಹೂ ಬಿಡಿಸುತ್ತಿದ್ದ ಮಾಲೆಗಾರ ವಸಂತಕನೆಂಬಾತ ನೋಡಿದ. ಆತ ಭಯ ಭೀತನಾಗಿ ಓಡುವಾಗ ಮರ ಅಲುಗಾಡಿತು; ಕಾಪಿಗೂ ಗಾಬರಿ ಆಯಿತು. ಅರಮನೆಗೆ ಹಿಂತಿರುಗಿದ. ಮರುದಿನ ಏನೂ ತಿಳಿಯದವನಂತೆ ಅರಮನೆಯಲ್ಲಿ ಅರಸನನ್ನು ಅರಸುವ ಹಾಗೆ ಮಾಡಿ ದುಃಖ ತೋರಿದ. ಮಹಾ ಪದ್ಮನಿಗೆ ರಾಜ್ಯಪಟ್ಟ ಕಟ್ಟಿದ. ಆಮೇಲೆ ಕಾಪಿ ಸುಂದರಿಯೊಂದಿಗೆ ಕಳ್ಳ ಬಾಳು ನಡೆಸುತ್ತಿದ್ದ.

ಮಹಾ ಪದ್ಮನಿಗೆ ತನ್ನ ತಂದೆಯ ಮರಣದ ರಹಸ್ಯ ಮತ್ತೆ ಮಾಡುವ ತವಕ. ಇರುಳಲ್ಲಿ ಮನೆ ಮನೆಗೂ ಸುತ್ತು ಹಾಕಿದ. ಜನರು ಆಡುವ ಮಾತನ್ನು ಆಲಿಸುತ್ತಿದ್ದ. ಒಮ್ಮೆ ವಸಂತಕನು ಮಾಲೆಗಾರನ ಮನೆಯ ಬಳಿ ಬಂದ. ವಸಂತಕ ತನ್ನ ಮಡದಿಯ ಅಗಲಿಕೆಯಿಂದ ‘ನೀಲೋತ್ಪಲದಳದ ಹಾಗೆ ಶ್ಯಾಮಲ ಬಣ್ಣದವಳಾದ ಬಾಲೆಯೇ ನಿನ್ನ ಸದ್ಗುಣಗಳು ನನ್ನನ್ನು ಸುಡುತ್ತಿವೆ, ವಿಶ್ವ ಮರದ ಕೊಂಬೆಯಿಂದ ನಡುಗುವ ಹಾಗೆ’ ಎಂದು ಗೌಪ್ಯಾರ್ಥದಿಂದ ನುಡಿದುಕೊಳ್ಳುತ್ತಿದ್ದ. ಮರುದಿನ ಮಹಾಪದ್ಮ ವಸಂತಕನನ್ನು ಸಭೆಗೆ ಕರೆಸಿದ. ‘ದೊರೆ ಸತ್ತ ಸಂಗತಿ ನಿನಗೆ ಗೊತ್ತಿದೆ. ಹೆದರಿಕೆಯಿಲ್ಲದೆ ಹೇಳು ಇಲ್ಲವಾದಲ್ಲಿ ನಿನ್ನನ್ನು ಕೊಲ್ಲಿಸುವೆ’ ಎಂದು ಹೆದರಿಸಿದ. ವಸಂತಕ “ದೇವಾ, ಬಯ್ಗಿರುಳಿನ ಜಾವದಲ್ಲಿ ವಿಶ್ವಸೇನ ಮಂತ್ರಿಯು ದೊರೆಯನ್ನು ಉದ್ಯಾನವನದ ಬಾವಿಯ ದಡದಲ್ಲಿ ಇರಿದು ಕೊಂದು, ಬಾವಿಗೆ ತಳ್ಳಿದ್ದನ್ನು ಮರದ ಮೇಲೆ ಹೂ ಬಿಡಿಸುತ್ತಿದ್ದ ನಾನು ನೋಡಿದೆ. ನನ್ನನ್ನು ಕೊಂದಾನೆಂದು ಹೆದರಿ ಓಡಿದೆ” ಎಂದು ನನ್ನಿ ನುಡಿದ. ಅವನನ್ನು ಉಡುಗರೆಯಿತ್ತು ಮಹಾಪದ್ಮ ಕಳಿಸಿದ. ಮಂತ್ರಿ ಮಾಡಿದ ಕೆಟ್ಟ ಕೆಲಸ ತಿಳಿಸಿ ಮಂತ್ರಿಯನ್ನು ಅವನ ಮಡದೀ – ಮಕ್ಕಳನ್ನೂ ಕೊಲ್ಲಿಸಲು ಆಜ್ಞಾಪಿಸಿದ. ಉಳಿದ ಮಂತ್ರಿಗಳು ಅಡ್ಡ ಬಂದು ತಡೆದು ಬೇರೆ ಸೂಚನೆಕೊಟ್ಟರು. ಅದರಂತೆ ಎಲ್ಲರನ್ನೂ ನೆಲಮಾಳಿಗೆಗೆ ಹಾಕಿ, ಮಣ್ಣಿನ ಪಾತ್ರೆ ಹಿಡಿಸುವಷ್ಟು ಮಾತ್ರ ಜಾಗ ಪಾತ್ರೆ ಬಾಗಿಲನ್ನು ಭದ್ರಪಡಿಸಿದ. ಆ ಕಿಂಡಿಯಿಂದ ಮಣ್ಣಿನ ಪಾತ್ರೆಯಲ್ಲಿ ದಿನವೂ ಒಂದು ಪಾತ್ರೆ ಅನ್ನ ಒಂದು ಕುಡಿಕೆ ನೀರು ಒದಗಿಸುತ್ತಿದ್ದರು. ಅದಕ್ಕೆ ಕಾಪಿ ‘ಹಗೆಯನ್ನು ನಾಶಮಾಡಿ ನಂದ ವಂಶ ನಿರ್ಮೂಲಿಸುವ ಕಸುವನ್ನೂ ಜಾಣ್ಮೆಯನ್ನೂ ನಮ್ಮಲ್ಲಿ ಯಾರು ಹೊಂದಿದ್ದಾನೋ ಆತ ಈ ಅನ್ನ ತಿಂದು ಬದುಕಲಿ’ ಎಂದು ನುಡಿದ. ಅಗ ಕಾಪಿಯು ಮಗ ಸುಬಂಧು ಮುಂದೆ ಬಂದು ಪೂಣ್ಕೆಗೈದ. ಅವನಿಗೆ ಅನ್ನ ಬಿಟ್ಟುಕೊಟ್ಟು ಉಳಿದವರು ಮಡಿದರು.

ಮೂರು ವರ್ಷಗಳು ಆದಮೇಲೆ ಗಡಿಯ ಅರಸರು ಮಹಾಪದ್ಮನ ರಾಜ್ಯವನ್ನು ಮುತ್ತಿದರು. ದೊರೆಗೆ ನೆಲಮಾಳಿಗೆಯವರ ನೆನಪಾಯಿತು. ಸುಬಂಧು ಒಬ್ಬ ಬದುಕಿರುವುದು ತಿಳಿಯಿತು. ಅವನನ್ನು ಬಿಡಿಸಿ ಸನ್ಮಾನಿಸಿ ಮಂತ್ರಿ ಪದವಿಯತ್ತ. ಸುಬಂಧು ಪುಂಡೆದ್ದ ಪ್ರತ್ಯಂತಪ ರಾಜರನ್ನು ನಿಗ್ರಹಿಸಿದ. ಮಹಾಪದ್ಮನಿಗೆ ಒಸಗೆ ಹೆಚ್ಚಿ ಸುಬಂಧುವಿಗೆ ಅವನ ತಂದೆ ಕಾಪಿಗಿಂತ ಮೇಲೆನ ಸ್ಥಾನಮಾನವಿತ್ತ. ಎರಡನೆಯ ಸಚಿವ ಶಕಟಾಳ. ಅವನ ಮಗಳು ನಂದವತಿ. ಸುಬಂಧು ನಂದವತಿಯರ ಮದುವೆ ಆಯಿತು. ಸುಬಂಧು ಪ್ರಧಾನಿಯಾದ.

ಮಗಧೆ ನಾಡಿನ ಶಾಲ್ಮಲಿ ಅಗ್ರಹಾರದಲ್ಲಿ ಸೋಮಶರ್ಮ – ಕಪಿಳೆಯರಿಗೆ ನಾಲ್ಕು ಹಲ್ಲಿನ ಗಂಡು ಮಗು ಹುಟ್ಟಿತು. ಮಗನಿಗೆ ಚಾಣಕ್ಯನೆಂದು ಹೆಸರಿಟ್ಟರು. ‘ನಾಲ್ಕು ಹಲ್ಲುಗಳಿಂದ ಹುಟ್ಟಿದ ಮಗನಿಂದ ನಂದವಂಶ ನಾಶವಾಗುತ್ತದೆ’ ಎಂಬ ಭವಿಷ್ಯ ಕೇಳಿ ಸೋಮಶರ್ಮ ಕೈಸಾಣೆಯಿಂದ ಹಲ್ಲುಗಳನ್ನು ಉಜ್ಜಿಸಿ ಕೀಳಿಸಿ ಸಮಮಾಡಿದ, ಚಾಣಕ್ಯ ನಾಲ್ಕು ವೇದ, ಆರು ಅಂಗ, ಹದಿನೆಂಟು ಧರ್ಮಶಾಸ್ತ್ರ, ಮೀಮಾಂಸೆ, ವ್ಯಾಕರಣ, ಪ್ರಮಾಣ, ಛಂದಸ್ಸು, ಅಲಂಕಾರ, ನಿಘಂಟು, ಶಾಲಿಹೋತ್ರ ವೈದ್ಯ, ಸಾಮುದ್ರಿಕ, ನೀತಿಶಾಸ್ತ್ರ ಮುಂತಾದ ವಿದ್ಯೆ ಕಲಿತ. ಋಷಿಗಳ ಹತ್ತಿರ, ಹರ್ಮ ತಿಳಿದು ಶ್ರಾವಕ ವ್ರತ ಸ್ವೀಕರಿಸಿ ಸಮ್ಯಗ್ ದೃಷ್ಟಿಯುಳ್ಳವನಾದ. ಪಾಟಿಲೀ ಪುತ್ರದಲ್ಲಿ ಅವನ ಪಂಡಿತಿಕೆ, ದೇಹಾಕಾರ, ಸಮ್ಯಕ್ತ್ವ ಕಂಡು ಶಕಟಾಳ ತನ್ನ ಇನ್ನೊಬ್ಬ ಮಗಳು ಯಶೋಮತಿಯನ್ನು ಇತ್ತು ಮದುವೆ ಗೈದ.

ಒಮ್ಮೆ ಶೋಣಾ ನದಿಯ ತೀರದಲ್ಲಿ ಚಾಣಕ್ಯನ ಕಾಲಿಗೆ ದರ್ಭೆ ಕುಡಿ ಚುಚ್ಚಿ ರಕ್ತ ಬಂತು. ಅದರ ಮೇಲೆ ಮುಳಿಸುಕ್ಕಿ ಅದನ್ನು ಅಗೆದು ಸುಡತೊದಗಿದ. ಸುಬಂಧು ನೋಡಿದ. ಚಾಣಕ್ಯನಿಂದ ತನ್ನ ವೃತ್ತಾಂತವನ್ನೆಲ್ಲ ಅರಿಪಿದರೆ ವೈರಿ ವಿಧ್ವಂಸನ ಸುಲಭ ಸಾಧ್ಯವಾಗುವುದೆಂದು ಭಾವಿಸಿದ ಸುಬಂಧು ಚಾಣಕ್ಯನ ಬುದ್ಧಿಯನ್ನು ಪರೀಕ್ಷಿಸಲು ‘ಭಟ್ಟಮಂಟಪ’ ದಲ್ಲಿ-

“ರಾಜನೀತಿ ಶಾಸ್ತ್ರದಲ್ಲಿ ಪಾರಂಗತರಾದವರು ಸಾವಿರಾರು ಶಕ್ತಿ ಸಮನ್ವಿತರು ಉದ್ಯಮವನ್ನು ಎರಡನೆಯದಾಗುಳ್ಳವರು ಗೆಲ್ಲಲು ಶಕ್ತರು’ ಎಂದು ಶ್ಲೋಕ ಬರೆದು ಹೋದ. ಚಾಣಕ್ಯ ಅದನ್ನು ಅಳಿಸಿ ‘ರಾಜನೀತಿಶಾಸ್ತ್ರ ಪಾರಂಗತನಾದವನು ಉದ್ಯಮಶೀಲನಾದವನು, ತನ್ನ ಒಂದೇ ಶರೀರದಿಂದ ಭೂಮಂಡಲ ಗೆಲ್ಲಲೂ ಶಕ್ತ’ ಎಂದು ಬರೆದು ಹೋದ. ಸುಬಂಧವು ಚಾಣಕ್ಯ ಸಾಮರ್ಥ್ಯಕ್ಕನುಗುಣವಾಗಿ ಬುದ್ಧಿಯನ್ನು ಪಡೆದಿರುವುದನ್ನು ಮನದಟ್ಟುಮಾಡಿಕೊಂಡ. ತನ್ನ ಮಗಳ ಚೋಳಂಗಿಯಂದು ನಂಟರಿಷ್ಟರನ್ನು ಕರೆಸಿ, ದಿವ್ಯಾಹಾರ ಉಣಬಡಿಸಿದ. ಚಾಣಕ್ಯ ದಂಪತಿಗಳಿಗೆ ತುಸು ಅನ್ನದ ಗಂಜಿ ಕಳಿಸಿದ. ಚಾಣಕ್ಯ ‘ದಾರಿದ್ರ್ಯಕ್ಕಿಂತ ಬೇರೆ ಕಷ್ಟವಿಲ್ಲ. ದಾರಿದ್ರ್ಯವೇ ಮಹಾಪಾತಕ. ಬಡವನ ಸಂಗವನ್ನು ಬಂಧುಗಳು ಬೆಳಸರು. ಮಾತೂ ಅಡಿಸರು. ಸಮಾರಂಭಗಳಲ್ಲಿ ಬೆಲೆ ಬಾಳುವ ಬಟ್ಟೆ ಹಾಕಿರದ ಬಡವನನ್ನು ಕಳಪೆಯಾಗಿ ಕಾಣುವರು. ಬಡತನವನ್ನು ತೋರಿಸುವುದು ಕಷ್ಟ’ ಎಂದು ಚಿಂತಿಸಿ ಧನ ಸಂಪಾದನೆಗೆ ತೀರ್ಮಾನಿಸಿದ. ಸುಬಂಧುಗೆ ಇದು ತಿಳಿಯಿತು. ಚಾಣಕ್ಯನನ್ನು ಕಂಡು “ಬಡತನ ಹರಿಯುತ್ತೆ, ದೊರೆಯನ್ನು ಆರು ಹಳ್ಳಿಯ ವರಮಾನವಿರುವ ಅಗ್ರಾಸನ ಬೇಡಿಕೊಳ್ಳಿ” ಎಂದ. ಚಾಣಕ್ಯ ಮಹಾಪದ್ಮನನ್ನು ಸ್ತುತಿಸಿ ಅಗ್ರಾಸನ ಮನ್ನಣೆ ಪಡೆದ.

ಸುಬಂಧುಗೆ ಮಹಾಪದ್ಮನನ್ನು ನಾಶಮಾಡುವುದೇ ಚಿಂತೆ. ಅದನ್ನು ಈಗ ಕಾರ್ಯಕ್ಕಿಳಿಸತೊಡಗಿದ. ಬ್ರಾಹ್ಮಣರು ನಂದ ಮಹಾರಾಜನ ಕಾಲದಿಂದಲೂ ಕ್ರಮಾಗತವಾಗಿ ಅಗ್ರಾಸನ ಅನುಭವಿಸುತ್ತಿದ್ದರು. ಸುಬಂಧು ಅವರನ್ನು ಕರೆದು “ನಿಮ್ಮ ಈ ಪದವಿ ನಂದ ಮಹಾರಾಜ, ವಿಜಯ, ನಂದನ, ಸುನಂದನ, ನಂದಿ ವರ್ಧನ, ನಂದನ, ಶ್ರೀನಂದನ, ಪದ್ಮ, ಮಹಾಪದ್ಮ – ಎಂಬ ಒಂಬತ್ತು ತಲೆಮೊರೆಯಿಂದ ಬಂದಿದೆ. ಈ ಅಗ್ರಹಾರ ಅಗ್ರಾಸನವನ್ನು ಬೇರೆಯವರು ಅನುಭವಿಸಲು ನೀವು ಸುಮ್ಮನೆ ನೋಡುತ್ತಿರುವುದು ಇದಾವ ರೀತಿ? ಎಂದನು. ಅವರುಗಳು ಇಂತೆಂದರು ‘ನಿಮ್ಮ ಬಲದಿಂದ ನಾವು ಎಮ್ಮ ಪದವಿಯನ್ನು ಪಡೆಯುತ್ತೇವೆ.’ ಹಾಗೇ ಮಾಡಿರೆಂದ. ಅವರು ಅರಸನಿಗೆ ಹೀಗೆಂದು ಬಿನ್ನವಿಸಿದರು – “ಮಹಾರಾಜ! ನಾವು ಕುಲ ಕ್ರಮಾಗತರು, ನಿಮ್ಮ ಪ್ರಸಾದದಿಂದ ಬಾಳುತ್ತಿರುವವರು. ಕ್ರಮದಿಂದ ಬಂದ ನಮ್ಮ ಪದವಿಯನ್ನು ತಾವು ಕೆಡಿಸಲಾಗದು”. ಸುಬಂಧುವು ಹೀಗೆಂದ -ಕ್ಷತ್ರಿಯರಿಗೆ ಧರ್ಮವೆಂದರೆ ಪೂರ್ವಕ್ರಮಾಗತವಾದುದನ್ನು ಕೆಡಿಸದೆ ಸಲಿಸುವುದು’. ಅರಸ- “ಅಗ್ರಾಸನದಿಂದ ಚಾಣಕ್ಯನನ್ನು ತೆಗೆಯಿರಿ’ ಎಂದನು. ಸುಬಂಧು ಹಾಗೇ ಮಾಡುವೆನೆಂದು ಹೋಗಿ ಅಗ್ರಾಸನದಲ್ಲಿ ಉಣಲೆಂದು ಬಂದು ಮಣೆಯೊಳಿದ್ದವನನ್ನು “ನಿಮಗೆ ತುಂಬ ಕೋಪಿಸಿಕೊಂಡು ದೊರೆ ಹೇಳಿದ – ಮದ ವಿಹ್ವಲೆಯರಾದ, ವೇಶ್ಯೆಯರಲ್ಲಿ ಅಸಕ್ತ ವಿಟಜನನಿವಾಸಿ ನನ್ನ ಅಗ್ರಾಸನದಲ್ಲಿ ಉಣಲು ಯೋಗ್ಯನಲ್ಲ. ಅದರಿಂದ ಅವನನ್ನು ಅಟ್ಟಿ ಕಳೆಯಿರಿ”. – ಎಂದು ಹೀಗೆ ಹೇಳಿ, ಬಾಗಿಲು ಕಾಯ್ವನಿಂದ ಎಳಸಿ ಹೆಡ ತಲೆಯನ್ನು ಹಿಡಿದು ನೂಕುತ್ತ, ಅರಮನೆಯಿಂದ ಹೊರವಡಿಸಿ ಆಚೆಗೆ ಅಟ್ಟಿಬಿಟ್ಟ. ಚಾಣಕ್ಯ ಆದಮಾನ ಮುಳಿದು ಹೀಗೆಂದ – ‘ನಂದನನ್ನು ಆನಂದನಾಗಿ ಸುಬಂಧುವನ್ನು ಅಬಂಧುವಾಗಿ ಮಾಡುತ್ತೇನೆ”. ಈ ರೀತಿ ಪ್ರತಿಜ್ಞೆ ಮಾಡಿ ಪಟ್ಟಣದಿಂದ ಹೊರಟುಹೋದ. ’೧೨ ವರ್ಷಗಳಲ್ಲಿ ಮಹಾಪದ್ಮನನ್ನು ನಾಶಮಾಡಿದ ಹೊರತು ಕಾಸೆಗಳನ್ನು ಕಳಿಯೆ’ ನೆಂದು ಕಾವಿಬಟ್ಟೆ ತೊಟ್ಟು ಸನ್ಯಾಸಿ ವೇಷ ಕೈಕೊಂಡು ಮಹೋದಕ ಪಟ್ಟಣ ಸೇರಿದ.

ಮಹೋದಕವನ್ನು ಆಳುತ್ತಿದ್ದ ದೊರೆ ಮಯೂರ ವಂಶದ ಕುಮುದ, ಅವನ ರಾಣಿ ಮಂದೆ. ಅವಳು ಗರ್ಭವತಿಯಾದಾಗ ಚಂದ್ರನನ್ನು ನುಂಗುವ ಬಯಕೆಯಾಯಿತು. ಈ ಹಂಬಲದಲ್ಲಿ ಬಡವಾದಳು. ಅವಳ ಇಷ್ಟ ಪೂರೈಸುವ ಬಗೆ ಹೇಗೆಂದು ತಿಳಿಯದೆ ದೊರೆ ದುಃಖಿಯಾದ. ಆಗ ಆಕೆಯ ಬಸಿರಲ್ಲಿ ಹುಟ್ಟಿದ ಮಗುವನ್ನು ತನಗೆ ಕೊಡುವುದಾದರೆ ತಾನು ಬಯಕೆ ಈಡೇರಿಸುವುದಾಗಿ ಚಾಣಕ್ಯ ತಿಳಿಸದ. ದೊರೆ ಒಪ್ಪಿದ. ಚಾಣಕ್ಯ ಗುಟ್ಟಾಗಿ ಅರಮನೆ ಉಪ್ಪರಿಗೆಯ ಚಾವಣಿಯಲ್ಲಿ ಒಂದು ತೂತು ಮಾಡಿಸಿದ. (ಅದರ ಮೂಲಕ) ನೀರು ತುಂಬಿದ ಪಾತ್ರೆಯೊಳಗೆ ಚಂದನ ಪ್ರತಿಬಿಂಬ ಬೀಳುವ ಹಾಗೆ ಏರ್ಪಾಡು ಮಾಡಿದ. ಒಂದು ದಿನ ರಾಣಿಗೆ ಬಾಯಾರಿಕೆಯಾಗುವಂತಹ ಆಹಾರಗಳನ್ನು ಚೆನ್ನಾಗಿ ತಿನ್ನಿಸಿದ. ಆಕೆಗೆ ಬಾಯಾರಿತು. ಆಗ ‘ಮಂತ್ರದಿಂದ ಚಂದ್ರನನ್ನು ತಂದಿದೆ, ನುಂಗುವಿಯಂತೆ ಬಾ’ ಎಂದು ತಿಳಿಸಿ ಕಣ್ಣು ಕಟ್ಟಿ ಅಲ್ಲಿಗೆ ಕರೆತಂದು ಅಲ್ಲಿ ದೊಡ್ಡ ಗಾಜಿಅನ ಪಾತ್ರೆಯಲ್ಲಿ ಮಧುರವಾದ ಸುವಾಸನೆ ಚೆಲ್ಲುವ ನೀರಿನಲ್ಲಿ, ತಳ ತಳನೆ ಹೊಳೆಯುತ್ತಿದ್ದ ಚಂದ್ರಬಿಂಬ ತೋರಿಸಿದ. ಆಕೆಗೆ ಸಂತೋಷವಾಗಿ ಆ ನೀರನ್ನು ಕುಡಿದು, ಚಂದ್ರನನ್ನು ನುಂಗಿದ ತೃಪ್ತಿ ಹೊಂದಿದಳು. ಮುಂದೆ ಒಂದು ಗಂಡು ಮಗು ಹಡೆದಳು. ದಾದಿ ಆ ಮಗುವನ್ನು ಚಾಣಕ್ಯನಿಗೆ ತಲಪಿಸಿದಳು. ಮಗುವಿಗೆ ಚಂದ್ರಭುಕ್ತ ಎಂಬ ಹೆಸರಿಟ್ಟ. ಮಗುವಿಗೆ ಎಳವೆಯಿಂದಲೇ ಬೆಣ್ಣೆ ತಿನ್ನಿಸುವಾಗ ಅದರ ಜೊತೆಯಲ್ಲಿ ತುಸು ವಿಷವನ್ನು ತಿನ್ನಿಸತೊಡಗಿದ. ಚಂದ್ರಭುಕ್ತ ಹದಿನಾರರ ಹರೆಯದವನಾದ. ಚಾಣಕ್ಯ ಚಂದ್ರಭುಕ್ತನಿಗೆ ನೆಲವನ್ನು ಆಳುವ ಲಕ್ಷಣಗಳಿವೆ. ಇವನನ್ನು ರಾಜನನ್ನಾಗಿ ಮಾಡುವೆ. ನಿಮಗೆಲ್ಲ ಈಗಿರುವುದಕ್ಕಿಂತಲೂ ಹಲವು ಪಟ್ಟು ಪದವಿ ಸೊತ್ತು ಕೊಡಿಸುವೆ’, ಎಂದು ಮಂತ್ರಿ, ಸಾಮಂತ, ರಾಜಗುವರ, ತಳವಾರರಿಗೆ ಆಮಿಷ ಒಡ್ಡಿದ. ಎಲ್ಲರನ್ನು ಶ್ರೀ ಪರ್ವತದಲ್ಲಿ ಕಲೆ ಹಾಕಿದ. ಹೊನ್ನು ತಯಾರಿಸುವ ಆಸೆಯಿಂದ ಔಷಧಿ ಹುಡುಕುವವನಂತೆ, ಆ ಪರ್ವತ ತಪ್ಪಲಲ್ಲಿ ಅಲೆದಾಡುತ್ತಿರುವಾಗ ಗುಂಡಗಿರುವ ರಸದ ಬಾವಿ ನೋಡಿದ. ಒಳಗೆ ಒಬ್ಬ ಪುರುಷನಿದ್ದ. ‘ನೀನೇಕೆ ಇಲ್ಲಿದ್ದೀಯೆ’ ಎಂದು ಚಾಣಕ್ಯ ಕೇಳಿದ್ದಕ್ಕೆ ‘ನಾನು ರಸವಾದಕ ಸನ್ಯಾಸಿ. ನನ್ನನ್ನು ನಂಬಿಸಿ ಒಬ್ಬ ಈ ಬಾವಿಯಲ್ಲಿ ಇಳಿಸಿ ಮೋಸ ಮಾಡಿದ್ದಾನೆ’ ಎಂದನು. ಚಾಣಕ್ಯ ಒಂದು ಸೋರೆ ಬುರುಡೆಯಲ್ಲಿ ರಸವನ್ನು ತುಂಬಿಸಿಕೊಂಡು ಆ ವ್ಯಕ್ತಿಯನ್ನು ಮೇಲಕ್ಕೆತ್ತಿ ಬದುಕಿಸಿ ಕಳಿಸಿದ. ಆ ರಸದಿಂದ ಚಾಣಕ್ಯ ವಿಪುಲ ಪ್ರಮಾಣದ ಚಿನ್ನ ಮಾಡಿದ. ಆಮೇಲೆ ‘ಶ್ರೀ ಪರ್ವತದ ಮೇಲಕ್ಕೆ ಯಾರು ಒಂದು ಹೇರು ಮಣ್ಣು ತಂದು ಒಟ್ಟುವರೋ ಅವರಿಗೆ ಹೇರು ಹೊನ್ನು ಕೊಡುವೆ’ ಎಂದು ಸಾರಿದ. ಒಬ್ಬ ಒಕ್ಕಲಿಗ ಒಂದು ಹೇರು ಮಣ್ಣು ತಂದು ಹಾಕಿದ. ಚಾಣಕ್ಯ ಮಾತಿನಂತೆ ಹೇರು ಹೊನ್ನು ಕೊಟ್ಟ. ಸುದ್ದಿ ಹಬ್ಬಿತು. ನಾಡ ಒಕ್ಕಲಿನವರು ಹಿಂಡಾಗಿ ಹೇರು ಮಣ್ನು ತಂದು ರಾಶಿ ಒಟ್ಟಿದರು. ಚಾಣಕ್ಯ ‘ನಾನೇನೂ ನಿಮ್ಮನ್ನು ಮಣ್ಣು ಬೇಕೆಂದು ಕೇಳಲಿಲ್ಲವಲ್ಲಾ! ಒಂದು ಹೇರು ಮಣ್ಣು ಬೇಕಿತ್ತು ತರಿಸಿಕೊಂಡೆ. ನಿಮ್ಮ ಮಣ್ಣು ನೀವು ತೆಗೆದುಕೊಂಡು ಹೋಗಬಹುದು’ ಎಂದ. ಬಂದವರು ಪೆಚ್ಚಾಗಿ ಮಣ್ಣು ಅಲ್ಲೇ ಬಿಟ್ಟು ಹೋದರು.

ಚಾಣಕ್ಯ ರಾಶಿಯೊಟ್ಟಿದ ಮಣ್ಣಿನಿಂದ ಕೋಟೆ, ಪಟ್ಟಣ ಕಟ್ಟಿದ. ಚಿನ್ನ ಕೊಟ್ಟು ಕುದುರೆಗಳನ್ನು ತರಿಸಿದ. ಹೀಗೆ ಒಂದು ಸೈನ್ಯವನ್ನೆ ಕಟ್ಟಿದ. ಆಮೇಲೆ ಶಕ್ತಿಯುತ ಸೈನ್ಯ ಸಮೇತ ಚಂದ್ರಭಕ್ತನನ್ನು ಕರೆದುಕೊಂಡು ಹೋಗಿ ಮಹಾಪದ್ಮನ ಮೇಲೆ ಯುದ್ಧಿಸಿದ. ಆದರೆ ಕಾಳಗದಲ್ಲಿ ಸೋತು ಓಡಿ ಬದುಕಿದ. ಹಲವು ವರ್ಷ ಹೀಗೆ, ಯುದ್ಧ ಮಾಡುವುದು – ಸೋಲುವುದು ನಡೆಯಿತು. ಒಂದುಸಲ ಯುದ್ಧಭೂಮಿಯಿಂದ ಓಡಿಬರಲು ದಾರಿಯಲ್ಲದೆ – ತಾವರೆಕೆರೆಯಲಿ ಹಗಲು ತಲೆ ಮರೆಸಿಕೊಂಡಿದ್ದು ಇರುಳು ಹೊರಬಂದು ಪಾಟಲಿಪುತ್ರ ಹೊಕ್ಕ. ಹಸಿವಾಯಿತು. ಒಬ್ಬ ನೇಕಾರನ ಮನೆಗೆ ಹೋದ. ಅಲ್ಲಿದ್ದ ಮುದುಕಿಯನ್ನು ಏನಾದರೂ ತಿನ್ನಲು ಕೇಳಿದ. ಅವಳು ಮಣೆ ಹಾಕಿ ತಟ್ಟೆಯಿಟ್ಟು ಬಿಸಿ ಅಂಬಲಿ ಬಡಿಸಿದಳು.

ಚಾಣಕ್ಯ ಹಸಿವಿನಿಂದ ಅಂಬಲಿಯನ್ನು ಬಾಯಿಗಿಟ್ಟ. ಬಿಸಿ ಕೈ ಬಾಯಿಗೆ ತಟ್ಟಿ ಸುಟ್ಟಿತು. ಕೈ ಒದರುತ್ತಾ ಒದ್ದಾಡಿದ. ಮುದುಕಿ ನೋಡಿ ನಕ್ಕು “ಈ ಲೋಕದಲ್ಲಿ ಮೂವರು ಮೂರ್ಖರನ್ನು ಕಂಡೆ” ಎಂದಳು; ಚಾಣಕ್ಯ ಯಾರ್ಯಾರೆಂದು ಕೇಳಿದ. ‘ನೀನು ನಂದ ಚಾಣಕ್ಯ’ ಎಂದಳು. ಹೇಗೆ ಎಂಬುದಕ್ಕೆ ಹೀಗೆ ಉತ್ತರಿಸಿದಳು. ಬುದ್ಧಿಯಿರುವಾತ ಬಿಸಿ ಅಂಬಲಿಯನ್ನು ಕಂಚಿನ ಅಂಚಿನಿಂದ ಕಿರಿ ಕಿರಿದಾಗಿ ಆರಿಸುತ್ತಾ ಉಣ್ಣುತ್ತಾನೆ. ನೀನು ಅದು ತಿಳಿಯದ ದಡ್ಡ. ನಂದ ಮಹಾ ಪದ್ಮ ತಾನು ಕೊಟ್ಟ ದಾನವನ್ನೂ ಸಲ್ಲಿಸಲಿಲ್ಲ. ಸಿಟ್ಟಿಗೆದ್ದು ಹೋದ ಚಾಣಕ್ಯನನ್ನು ಅಂದೇ ಕೊಲ್ಲದೆ ಬಿಟ್ಟ. ಆದರಿಂದ ಮೂರ್ಖ. ಚಾಣಕ್ಯನಿಗೆ ತನ್ನ ಕೋಪವೊಂದೇ ಗೊತ್ತು. ಕೆಲಸದ ಕ್ರಮ ಅರಿಯ. ಮೂಲ ತಂತ್ರ ಬಲ್ಲ ಕ್ಷತ್ರಿಯನಲ್ಲ. ಕ್ಷತ್ರಿಯರ ಜೊತೆ ಯುದ್ಧ ಮಾಡುವುದು ಗೊತ್ತಿದೆ, ಬುದ್ಧಿಯಿಲ್ಲ. ಬುದ್ಧಿಯಿದ್ದರೆ ತನ್ನ ಹಗೆಯ ನಾಡನ್ನು ಕೆಡಿಸಿ ಪ್ರತಿ ಪಕ್ಷಗಳನ್ನು ತನ್ನ ಪಕ್ಷಕ್ಕೆ ತಂದುಕೊಂಡು, ಸಾಮಂತರನ್ನು ಹಣದಿಂದ ಭೇದಿಸು ವುದು- ಮಾಡುತ್ತಿದ್ದ. ಇಷ್ಟು ಮಾಡಿದರೆ ಮಹಾಪದ್ಮ ಒಬ್ಬನೇ ಉಳಿಯುತ್ತಾನೆ. ಆಗ ಅವನನ್ನು ಸೋಲಿಸುವುದು ಸುಲಭ.” ಚಾಣಕ್ಯ ಸಂತಸಗೊಂಡು ಶ್ರೀಪರ್ವತಕ್ಕೆ ಹಿಂತಿರುಗಿದ. ಮುಂದಿನ ಸಲ ಮುದುಕಿ ಹೇಳಿದ ಮಾದರಿಯ ಮಾರ್ಗವನ್ನೇ ಮುಂದುಮಾಡಿದ. ಮಹಾಪದ್ಮ ಸೋತು ಓಡಿದ. ಸುಬಂಧು ಸೆರೆಯಾದ. ಚಾಣಕ್ಯ ಗೆಲುವಿನಿಂದ ಪಾಟಲಿಪುತ್ರ ಪ್ರವೇಶಿಸಿದ. ಕನ್ನೆಮಾಡಕ್ಕೂ ಭಂಡಾರಕ್ಕೂ ಕಾವಲಿಟ್ಟ. ಪ್ರಜೆಗಳನ್ನು ಸಮಾಧಾನಿಸಿ ಚಂದ್ರ ಭುಕ್ತನಿಗೆ ಪಟ್ಟ ಕಟ್ಟಿದ. ಮಹಾಪದ್ಮನ ರಾಣಿ ಚಂದ್ರಮತಿ ಮಹಾದೇವಿಯನ್ನೇ ಪಟ್ಟದ ರಾಣಿಯನ್ನಾಗಿ ಮಾಡಿದ. ತಮ್ಮ ಭಂಡಾರದಲ್ಲೂ ನಂದರಾಜನ ಭಂಡಾರದಲ್ಲೂ ಹಣವಿರಲಿಲ್ಲ. ಪಟ್ಟಣದ ಜನರನ್ನು ಊಟಕ್ಕೆ ಕರೆದ. ಮತ್ತು ಬರುವ ಆಹಾರ ಬಡಿಸಿದ. ಅವರು ತಿಂದು ಮೈ ಮರೆತಿರುವಾಗ ‘ನಿಮ್ಮ ಹಣ ಎಲ್ಲಿಟ್ಟಿದ್ದೀರಿ’ ಎಂಬುದಕ್ಕೆ ಇಂತಿಂತಹ ಕಡೆ ಇರುವುದಾಗಿ ಹೇಳಿದರು. ಚಾಣಕ್ಯ ಅದನ್ನು ಸಂಗ್ರಹಿಸಿ ರಾಜ ಭಂಡಾರ ತುಂಬಿದ.

ಚಾಣಕ್ಯ ಅರಮನೆ ಅಂಗಳದಲ್ಲಿ ನಿಂತು ‘ಹನ್ನೆರಡು ವರ್ಷಗಳಿಂದ ನಂದನ ವಂಶ ನಿರ್ಮೂಲಿಸುವ ಪ್ರತಿಜ್ಞೆ ಪೂರೈಸಿತು. ನನ್ನ ಬಳಿಯಿರುವುದು ಕಾವಿಯ ಈ ಎರಡು ಬಟ್ಟೆ, ಚಿನ್ನದ ಕಮಂಡಲ, ತ್ರಿದಂಡ ಮಾತ್ರ. ಮಗಧ ನಾಡಿನ ದ್ರವ್ಯವೆಲ್ಲ ತಂದು ಭಂಡಾರ ತುಂಬಿದೆ. ಗುನ ಅರಿಯುವ ಅರಸನೂ ನನ್ನ ವಶ. ಹೊಡೆ ತಮಟೆಯನ್ನು’ ಎಂದು ತಮಟೆ ಹೊಡೆಸಿ, ಸಂತೋಷ ಪಟ್ಟು ಕುಣಿದಾಡಿದ. ಶ್ರೀ ಪರ್ವತದಲ್ಲಿದ್ದ ತನ್ನ ಮಡದಿ ಯಶೋಮತಿಯನ್ನು ಕರೆಸಿಕೊಂಡು ಸುಖವಾಗಿದ್ದ.

ಚಂದ್ರಭಕ್ತನ ಹೆಂಡತಿ ಚಂದ್ರಮತಿ ಮಹಾದೇವಿ ಗರ್ಭ ಧರಿಸಿದಳು. ಒಮ್ಮೆ ಅವಳು ರಥ ಹತ್ತಿದಾಅ ರಥ ಚಕ್ರದ ಹತ್ತು ಅರೆಕಾಲು ನೆಲದಲ್ಲಿ ಹೂತುವು. ಈ ನೆಲವನ್ನು ಮುಂದೆ ಹತ್ತು ಜನ ಮೌರ್ಯರು ಆಳುವರೆಂದು ಚಾಣಕ್ಯ ತಿಳಿದ. ನವ ಮಾಸ ತುಂಬಿದ ಚಂದ್ರಮತಿ ಒಂದು ದಿನ, ಊಟದ ಸಮಯದಲ್ಲಿ ಚಂದ್ರಭುಕ್ತ ರಾಜನ ಪಕ್ಕದಲ್ಲಿ ಕುಳಿತಿದ್ದಳು. ಯಥಾ ಪ್ರಕಾರ ವಿಷಬೆರೆತ ಆಹಾರ ತಿನ್ನುತ್ತಾ, ತನ್ನ ರಾಣಿಗೂ ತನ್ನೊಡನೆ ತಿನ್ನುವ ಬಯಕೆಯುಂಟಾದುದನ್ನು ತಿಳಿದು, ತನ್ನ ಕೈಯಿಂದಲೇ ತುತ್ತನ್ನು ಅವಳಿಗಿಟ್ಟ. ಬಳಿಯಲ್ಲೇ ಹಿರಿದ ಕತ್ತಿಯೊಂದಿಗೆ ನಿಂತಿದ್ದ ಚಾಣಕ್ಯ ಮಿಂಚಾಗಿ ಅವಳ ತಲೆಯನ್ನು ಕತ್ತರಿಸಿದ. ಕೂಡಲೇ ರಾಣಿಯ ಬಸಿರನ್ನು ಸೀಳಿ ಮೊದಲು ಕೂಸನ್ನು ಹೊರತೆಗೆದ. ಚಂದ್ರಭುಕ್ತ ಸತ್ತ ರಾಣಿಗಾಗಿ ಅತ್ತು ಕಡೆಗೆ ಸತ್ತೇ ಹೋದ. ಮಗು ಬದುಕಿತು. ಅದರ ತಲೆಯ ಮೇಲೆ ಒಂದೇ ತೊಟ್ಟು ವಿಷ ಬಿದ್ದಿತ್ತು. ಚಾಣಕ್ಯ ‘ಬಿಂದು ಸಾಗರ’ ಎಂದು ಹೆಸರಿಟ್ಟ. ಅದಕ್ಕೆ ಪಟ್ಟ ಕಟ್ಟಿದ. ಅದನ್ನೇ ಮುಂದಿಟ್ಟು ರಾಜ್ಯವಾಳಿದ. ಯೌವನ ಪ್ರಾಪ್ತ ಬಿಂದು ಸಾಗರನಿಗೆ ಪಟ್ಟಗಟ್ಟಿದ. ಸುಬಂಧುವನ್ನು ಸೆರೆಗಳಚಿ ಸನ್ಮಾನಿಸಿ ಬಿಂದುಸಾಗರನಿಗೆ ಮಂತ್ರಿಮಾಡಿದ. ಸಂಸಾರ ಬಂಧನವನ್ನೆಲ್ಲಾ ತೊರೆದು ದೀಕ್ಷೆ ಪಡೆದ. ತಪಸ್ಸಿಗೆ ನಿಂತ. ಜೈನಾಗಮ ಕಲಿತು ಆಚಾರ್ಯನಾದ. ಧರ್ಮವಿಹಾರ ಮಾಡಿ ಕೆಲವು ಕಾಲಾನಂತರ ಇದೇ ಪಾಟಲೀ ಪುತ್ರದ ಬಳಿ ಶೋಣೆ ನದಿಯ ದಡದ ತುರುಪಟ್ಟಿಯಲ್ಲಿ ಬಂದು ನಿಂತ. ಸುಬಂಧುವಿಗೆ ಇದು ತಿಳಿಯಿತು. ಹಳೆಯ ರೊಚ್ಚಿನಿಂದ ಚಾಣಕ್ಯ ರಿಸಿಯ ಬಳಿ ಬಂದ. ನಮಸ್ಕರಿಸುವ ನೆಪದಿಂದ ಅರ್ಚನೆಗಳಿಂದ ಅರ್ಚಿಸಿ, ತನ್ನ ಜನರಿಗೆ ‘ಇದು ಮಾಗಿಕಾಲ. ರಿಸಿಯರಿಗೆ ಶೀತಹಿಂಸೆ. ಅದರಿಂದ ಸುತ್ತ ಗೊಬ್ಬರ ಒಟ್ಟಿ’ ಎಂದು ಗೊಬ್ಬರ ರಾಶಿ ಒಟ್ಟಿಸಿದ. ತಾನು ಹೋಗುವಾಗ ಅದಕ್ಕೆ ಬೆಂಕಿಯಿಡಿ ಎಂದು ಬೇರೆ ಹೇಳಿ ಹೋದ. ಅವರು ಅದರಂತೆ ಮಾಡಿದರು. ಚಾಣಕ್ಯ ಮತ್ತು ಇತರ ರಿಸಿಯರು ಕ್ಷಮೆಯನ್ನೇ ಭಾವಿಸಿ ಆಹಾರ ಶರೀರ ನಿವೃತ್ತಿಗೈದು ಇಂಗಿಣೀ ಮರಣದಿಂದ ಸಜೀವವಾಗಿ ಸತ್ತು ಹೋದರು.

೩. ವಡ್ದಾರಾಧನೆಯ ಕಥೆಯಿಂದ ಕೆಲವು ಅಂಶಗಳು ವ್ಯಕ್ತವಾಗುತ್ತವೆ. ಚಾಣಕ್ಯ ಜೈನನೆಂಬುದು ಅವುಗಳಲ್ಲೊಂದು. ಚಾಣಕ್ಯ ಬ್ರಾಹ್ಮಣನೆಂಬ ರೂಢಿಯ ಹೇಳಿಕೆಯಿರುವಾಗ ಇಲ್ಲಿನ ವಿವರಣೆಯನ್ನು ಹೇಗೆ ಒಪ್ಪಿಕೊಳ್ಳಬೇಕೆಂಬ ಸಂದೇಹ ಸಹಜವಾಗಿ ಅಂಕುರಿಸುತ್ತದೆ. ಚರಿತ್ರೆ ಮತ್ತು ಸಾಹಿತ್ಯ ದೃಷ್ಟಿಯಿಂದ ಈ ಕಥೆಗೆ ವಿಶೇಷಮಹತ್ವವಿರುವಂತೆ, ಈ ಅಂಶದಿಂದಲೂ ಈ ಕಥೆ ಜಿಜ್ಞಾಸೆಗೆ ಅವಕಾಶಮಾಡಿ ಕೊಟ್ಟಿದೆ. ಚಾಣಕ್ಯ ಜೈನನೆಂಬ ಇಲ್ಲಿನ ಹೇಳಿಕೆ ಒಂಟಿ ದನಿಯಲ್ಲ. ಇದನ್ನು ಪೋಷಿಸುವ ಸಾಹಿತ್ಯಿಕಾಧಾರಗಳು ಸಾಕಷ್ಟಿವೆ. ವಡ್ದಾರಾಧನೆಯ ಕಾಲ ವಿಚಾರದಲ್ಲಿ ಚರ್ಚೆಯಿದ್ದರೂ ತಾತ್ಕಾಲಿಕವಾಗಿ ಅದನ್ನು ಹತ್ತನೆಯ ಶತಮಾನದ ಕೃತಿಯೆಂದು ಪರಿಗಣಿಸಬಹುದು. ತತ್ಪೂರ್ವ ರಚಿತ ಸಂಸ್ಕೃತ ಪ್ರಾಕೃತ ಕೃತಿಗಳಲ್ಲಿ ಇದೇ ಚಾಣಕ್ಯನ ಕಥೆ ಅಲ್ಪ ಸ್ವಲ್ಪ ವ್ಯತ್ಯಾಸಗಳೊಡನೆ ಕಂಡುಬರುತ್ತದೆ. ಅವುಗಳಲ್ಲಿ ಕೆಲವು ಕೃತಿಗಳ ಸಮೀಕ್ಷೆಯನ್ನು ಮುಂದೆ ಕೊಟ್ಟಿದೆ.

೪. ವಿಶೇಷಾವಶ್ಯಕ ವಾಕ್ಯ, ಅವಶ್ಯಕ ಚೂರ್ಣಿ – ಇವುಗಳ ಆಧಾರದಿಂದ ಚಾಣಕ್ಯ ಹುಟ್ಟಿನಿಂದ ಜೈನನೆಂದೂ ಸಂತೃಪ್ತ ಶ್ರಾವಕನೆಂದೂ, ಜೈನ ಶಾಸ್ತ್ರಾಗಮ ವಿಶಾರದನೆಂದೂ ತಿಳಿದುಬರುತ್ತದೆ.

ಗೊಲ್‍ನಲ್ಲಿ ಚಣಕವೆಂಬ ಹಳ್ಳಿ. ಅಲ್ಲಿ ಚಣಿ ಎಂಬ (ಜೈನ)ಬ್ರಾಹ್ಮಣ. ಆತ ಶ್ರದ್ಧಾವಂತ ಶ್ರಾವಕ. ಒಮ್ಮೆ ಕೆಲವು ಜೈನ ಮುನಿಗಳು ಅವನ ಮನೆಯಲ್ಲಿ ಇಳಿದಿದ್ದರು. ಆ ಕಾಲದಲ್ಲಿ ಚಣಿಗೆ ಒಬ್ಬ ಮಗ ಹುಟ್ಟಿದ. ಅದು ಅಪರೂಪದ ಮಗು. ಹುಟ್ಟುವಾಗಲೇ ಹಲ್ಲುಗಳೆಲ್ಲಾ ಹುಟ್ಟಿದ್ದುವು. ಚಣಿ ಮುನಿಗಳ ಪಾದಗಳ ಬಳಿ ಮಗುವನ್ನಿಟ್ಟ : ‘ಹುಟ್ಟುವಾಗಲೇ ಹಲ್ಲುಗಳಿದ್ದ ಈ ಮಗುವಿಗೆ ಎಂಥ ಭವಿಷ್ಯ ಕಾದಿದೆ?’ ಎಂದು ಕೇಳಿದ. ಮಗು ಮುಂದೆ ರಾಜನಾಗುವನೆಂದರು. ಚಣಿ ಚಿಂತಿಸಿದ : ರಾಜ್ಯಪಾಲನೆಗಾಗಿ ರಾಜ ಕೆಲವೊಮ್ಮೆ ಪಾಪಕಾರ್ಯಗಳಿಗೂ ತೊಡಗಬೇಕು. ಆಧ್ಯಾತ್ಮದ ದೃಷ್ಟಿಯಿಂದ ಇದು ಪಾಪ ಸಂಘಟನೆಗೆ ಹೇತು. ಮಗು ಅಂಥ ವ್ಯಸನದಿಂದ ನೋಯುವುದು ಬೇಡ – ಹೀಗೆಂದು ತೀರ್ಮಾನಿಸಿದ ಚಣಿ ಮಗುವಿನ ದಂತಗಳನ್ನು ಚಾಣ(ಉಳಿ) ತೆಗೆದುಕೊಂಡು ಕಿತ್ತು ಹಾಕಿದ. ಆ ಮೇಲೆ ಮಗುವನ್ನು ಮತ್ತೆ ಮುನಿಗಳ ಹತ್ತಿರ ತಂದು ‘ಮುಂದೇನು?’ ಎಂದು ಕೇಳಿದ. ಅವರು ’ಈ ಮಗು ರಾಜ ಲಾಂಛನವಿಲ್ಲದೆ ರಾಜನಾಗುವುದು’ ಎಂದರು.

ಮಗುವಿಗೆ ಚಾಣಕ್ಯನೆಂದು ಹೆಸರಾಯಿತು. ಚಿಕ್ಕಂದಿನಲ್ಲಿ ಹದಿನಾಲ್ಕು ಕಲೆ ಕಲಿತ. ತತ್ವಜ್ಞನೂ ಆದ ಶ್ರಾವಕಾನ. ತೃಪ್ತನಾಗಿ ಬಾಳತೊಡಗಿದ. ಮದುವೆ ಆಯಿತು. ಗೃಹಸ್ಥನಾದ. ಚಾಣಕ್ಯನ ಹೆಂಡತಿಗೆ ಅವಳ ತಂದೆ ಮನೆಯಲ್ಲಿ ಅಪಮಾನ ಮಾಡಿದರು. ಚಾಣಕ್ಯ ನಂದ ದೊರೆಯ ಆಸ್ಥಾನದತ್ತ ಹೊರಟ. ಅಲ್ಲಿ ದಾಸಿಯೊಬ್ಬಳು ಅಪಮಾನಿಸಿದಳು. ಚಾಣಕ್ಯ ನಂದ ವಂಶ ನಿರ್ಮೂಲನಕ್ಕೆ ಪ್ರತಿಜ್ಞೆ ಮಾಡಿದ. ಚಂದ್ರಗುಪ್ತ ಅಧಿಕಾರಾರೂಢನಾದ. ಪರ್ವತ ರಾಜನೊಡನೆ ಸ್ನೇಹವಾಯಿತು. ನಂದ ದೊರೆಯೊಡನೆ ಕಾಳಗವಾಯಿತು. ನಂದರ ಪತನ. ನಂದ ದೊರೆಯ ಮಗಳನ್ನು ಚಂದ್ರುಗುಪ್ತನಿಗಿತ್ತು ಮದುವೆ. ಈ ಎಲ್ಲ ಘಟನೆಗಳ ಹಿಂದೆ ಚಾಣಕ್ಯನ ದೂರ ದೃಷ್ಟಿಯ ರಾಜ ತಂತ್ರಜ್ಞತೆ ಪ್ರಕಟ. ಚರಣಿ ಮನೆಯಲ್ಲಿ ಜಿನ ಮುನಿಗಳು ಧರ್ಮ ವಿಹಾರ ಕಾಲದಲ್ಲಿ ತಂಗಿದ್ದರೆಂಬುದರಿಂದ, ಆತ ಜೈನ ಶ್ರಾವಕನೆಂಬುದು ವಿದಿತವಾಗುತ್ತೆ. ಹೀಗೆ ಜೈನಯತಿಗಳು ನಿಂತ ಶ್ರಾವಕನ ಮನೆಗೆ ‘ಸಯ್ಯಾಂತರ’ ಎಂದು ಕರೆಯುತ್ತಾರೆ. ಈ ಸಯ್ಯಾತರ ಒಂದು ಅಪರೂಪ ಅವಕಾಶ. ಈ ಪುಣ್ಯ ಪ್ರಸಂಗ ಶ್ರದ್ಧಾವಂತ ಶ್ರಾವಕನಿಗೆ ಲಭ್ಯ. ಚಣಿ ಆ ಹಳ್ಳಿಯಲ್ಲಿ ಅಂಥ ಶ್ರಾವಕನಾಗಿದ್ದ.

೫. ಅವಶ್ಯಕ ಮಲಯಗಿರಿ ವೃತ್ತಿ ಕೂಡ, ಅವಶ್ಯಕ ಚೂರ್ಣಿಯಿಂದ ತಿಳಿದು ಬರುವ ಸಂಗತಿಗಳನ್ನು ಪುಷ್ಟೀಕರಿಸುತ್ತದೆ. ಘಟನೆಗಳು ಸಮಾನಾಂತರವಾಗಿವೆ. ನವ ಪದಾರ್ಥಗಳ ವಿಚಾರದಲ್ಲಿ ಶ್ರಾವಕ ಚಣಿ ನಿಷ್ಣಾತನಾಗಿದ್ದನೆಂದೂ ಇಲ್ಲಿ ಹೇಳಿದೆ. ಉಪದೇಶ ಪದದಲ್ಲಿ ಚಾಣಕ್ಯನ ಜೀವನ ಇನ್ನೂ ಅಚ್ಚುಕಟ್ಟಾಗಿ ಪೂರ್ಣ ರೂಪದಲ್ಲಿ ಬಂದಿದೆ. ಅದರ ಕರ್ತೃ ಆಚಾರ್ಯ ಹರಿಭದ್ರಸೂರಿ ಹೇಳಿರುವಂತೆ ಚಣಿ ಒಬ್ಬ ಶ್ರಾವಕ. ಮನುಷ್ಯರಲ್ಲಿ ಅಂಗಗಳಲ್ಲಿನ ಅಸಾಮಾನ್ಯತೆ ವಿಚಾರದಲ್ಲಿ ವಿವರಣೆ ನೀಡಬಲ್ಲ ತಜ್ಞ ಜಿನ ಮುನಿಗಳು ಅವನ ಮನೆಗೆ ಬಂದಿದ್ದರು. ಅವಶ್ಯಕ ಚೂರ್ಣಿ, ಆವಶ್ಯಕ ಮಲಯಗಿರಿ ವೃತ್ತಿಗಳಲ್ಲಿ ನಿರೂಪಿತವಾಗಿರುವುದನ್ನು ಅನುಮೋದಿಸುವ ಉಪದೇಶ ಪದ – ‘ಚಾಣಕ್ಯ ಬಾಲಕನಾಗಿ ಬೆಳೆದು ವಿದ್ಯಾವಂತನಾಗಿ ಶ್ರಾವಕನಾಗಿ ಲೌಕಿಕ ಅಂಟಿಕೊಳ್ಳದ ಜೀವನ ನಡೆಸಿದನು. ಆತ ತೃಪ್ತ, ಸಂತೋಷಿ. ಕಠಿಣವೂ ನಿಂದಾರ್ಹವೂ ಆದವುಗಳನ್ನು ಆತ ಮಾಡುತ್ತಿರಲಿಲ್ಲ’- ಎಂದು ನುಡಿದಿದೆ. ಆವಶ್ಯಕ ವೂರ್ಣಿಯಲ್ಲಿ ಚಂದ್ರಗುಪ್ತ ಚಕ್ರವರ್ತಿಯಾದ ವಿಧಾನದ ಮತ್ತು ಆತ ಚಾಣಕ್ಯನ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ನಡೆಸಿದ ಆಡಳಿತದ ವಿವರವಿದೆ. ಚಾಣಕ್ಯನ ಬಾಲ್ಯದ ಬಾಳು ಬಿಟ್ಟರೆ, ಉಳಿದ ಜೀವನ ಚಿತ್ರ ಇಲ್ಲಿ ಸಾಲದು. ಆಚಾರ್ಯ ಹರಿಭದ್ರಸೂರಿ ಈ ಕೊರತೆಯನ್ನು ನಿವಾರಿಸಿದ್ದಾರೆ. ಚಾಣಕ್ಯನ ಜೀವನದ ಎಲ್ಲ ಮುಖಗಳ ಪರಿಚಯ ಇಲ್ಲಿದೆ.

ಆಚಾರ್ಯ ಸಂಭೂತ ವಿಜಯರ ಕಾಲದಲ್ಲಿ ಭೀಕರ ಕ್ಷಾಮ ಬಂತು. ಆಹಾರ ಪಡೆಯಲು ಮುನಿಗಳಿಗೆ ಕಷ್ಟವಾಯಿತು. ಆವಾರ್ಯ ಸಂಭೂತ ವಿಜಯರು ವೃದ್ಧರು. ಅವರಿಗೆ ದೂರ ಸಂಚಾರ ಸಾಧ್ಯವಿರಲಿಲ್ಲ. ಅವರು ತಮ್ಮ ಶಿಷ್ಯರನ್ನು ಕ್ಷಾಮವಿರದಿದ್ದ ಸಮುದ್ರತೀರ ಪ್ರದೇಶಕ್ಕೆ ಕಳಿಸಿದರು. ತಮ್ಮ ದೀಕ್ಷಾ ಗುರುವಿನ ಮೇಲಣ ಭಕ್ತಿಯಿಂದ ಇಬ್ಬರು ಶಿಷ್ಯರು ಆಮೇಲೆ ಹಿಂತಿರುಗಿದರು. ಒಂದು ಸಲ ಆಚಾರ್ಯ ಸಂಭೂತ ವಿಜಯರು, ಮಂದೆ ಆಚಾರ್ಯರಾಗಲಿದವರಿಗೆ ಮಂತ್ರ ತಂತ್ರಗಳ ರಹಸ್ಯ ತಿಳಿಸುತ್ತಿದ್ದರು. ಈ ಇಬ್ಬರು ಮುನಿಗಳೂ ಅನತಿ ದೂರದಲ್ಲಿ ಕುಳಿತು ಅವನ್ನು ಅಭ್ಯಸಿಸಿ ಆಚರಿಸತೊಡಗಿದರು. ಈ ಮಧ್ಯೆ ಕ್ಷಾಮ ಹೆಚ್ಚಿತು, ಸಂಗ್ರಹಿಸಿ ತರುತ್ತಿದ್ದ ಆಹಾರವನ್ನೂ ಆಚಾರ್ಯರು ಮೊದಲು ತರುಣ ಮುನಿಗಳಿಗೆ ಕೊಡುತ್ತಿದ್ದರು. ಅನಂತರ ಏನಾದರೂ ಉಳಿದರೆ ಅಭಾವದಿಂದಾಗಿ ಆಚಾರ್ಯರ ಸರೀರ ಕೃಶವಾಯಿತು. ಯುವಯತಿಗಳು ವ್ಯಥಿತರಾದರು. ಆಗ ಅವರು ಆಹಾರ ಪಡೆಯುವ ಬೇರೊಂದು ದಾರಿ ಹುಡುಕಿದರು. ಮಂತ್ರಗಳ ಬಲದಿಂದ ವರು ಚಂದ್ರಗುಪ್ತನ ಅರಮನೆ ಪ್ರವೇಶಿಸಿ ಚಕ್ರವರ್ತಿಗೆಂದು ಮೀಸಲಿಟ್ಟ ಆಹಾರವನ್ನು ಗೋಪ್ಯವಾಗಿ ತರತೊಡಗಿದರು. ಮುನಿಗಳ ಹಸಿವು ನಿವಾರಣೆಯಾಯಿತು. ಚಂದ್ರಗುಪ್ತ ಚಕ್ರವರ್ತಿಗೆ ಎಂದಿನ ಆಹಾರವಿಲ್ಲದಂತಾಯಿತು. ದಿನದಿಂದ ದಿನಕ್ಕೆ ದೊರೆಯ ದೇಹ ದುರ್ಬಲವಾಯಿತು. ದಿನದಿಂದ ದಿನಕ್ಕೆ ದೊರೆಯ ದೇಹ ದುರ್ಬಲವಾಯಿತು. ಒಂದು ದಿನ ಚಂದ್ರಗುಪ್ತನನ್ನು ಚಾಣಕ್ಯ ಪ್ರಶ್ನಿಸಿದ. ಮಹಾರಾಜನಿಗೆ ಮುಡಿಪಿಟ್ಟ ಉತ್ತರ ಅಗೋಚರರಿಂದ ಅದೃಶ್ಯವಾಗಿ ತನಗೆ ಹಸಿವು ಅನಿವಾರಿತವಾದುದರಿಂದ ಹೀಗಾಯಿತೆಂದು ಉತ್ತರ ಬಂದಿತು. ಚಾಣಕ್ಯ ಸಂದರ್ಭ ವನ್ನು ಜಾಣ್ಮೆಯಿಂದ ನಿಭಾಯಿಸಿದ. ಮುನಿಗಳ ಚಾತುರ್ಯವನ್ನು ಪತ್ತೆ ಮಾಡಿದ. ಆಚಾರ್ಯ ಸಂಭೂತ ವಿಜಯರ ವಸತಿಗೆ ಹೋಗಿ ಮುನಿಗಳ ಮೇಲೆ ಚೌರ್ಯದ ಆರೋಪ ಮಾಡಿದ. ಪ್ರತಿಭಟಿಸಿದ ಆಚಾರ್ಯರೆಂದರು: “ನೀನು ಸಂಘದ ಪಾಲಕ. ಹಸಿವಿನಿಂದ ಯತಿಪಥ ಬಿಡಬೇಕಾದ ಅನಿವಾರ್ಯತೆ ಮುನಿಗಳಿಗೆ ಒದಗಿ ಬಂತು. ಇದರ ತಪ್ಪು ಪೂರ್ಣವಾಗಿ ನಿಂದಲ್ಲದೆ ಮತ್ತಾರದು?”. ಕೈಜೋಡಿಸಿ ಚಾಣಕ್ಯ ಆಚಾರ್ಯರಡಿಗಳಿ ಗೆರಗಿದ. ತಪ್ಪು ಒಪ್ಪಿಕೊಂಡ : ‘ಮನ್ನಿಸಿ. ಇನ್ನು ಮುಂದೆ ಸಂಘದ ಸಂಕಷ್ಟಗಳ ನಿವಾರಣೆಯ ಹೊಣೆ ನನ್ನದು.’

೬. ಈ ಕತೆಯ ಹಿಂದುಮುಂದು ಇನ್ನೂ ಹರಹಿನಿಂದ ಆಚಾರ್ಯ ಹರಿಭದ್ರರಲ್ಲಿ ಬಂದಿದೆ. ಇದರಲ್ಲಿ ಸ್ವಾರಸ್ಯವಾದ ಭಾಗಗಳಲ್ಲೊಂದು, ಚಾಣಕ್ಯನ ಕಡೆಯ ದಿನಗಳಿಗೆ ಸಂಬಂಧಿಸಿದೆ. ರಾಣಿ ತಾಯಿಯ ಕೊಲೆಯ ಕೊಲೆಯ ಸುಳ್ಳು ಆರೋಪದ ಮೇಲೆ, ಅಶೋಕನ ತಂದೆ, ದೊರೆ ಬಿಂದುಸಾರನ ಮನಸ್ಸನ್ನು ಚಾಣಕ್ಯನ ವಿರುದ್ಧವಾಗಿ ಭಟ್ಟಂಗಿಗಳೂ ಚಾಡಿಕೋರರೂ ಸೇರಿ ತಿರುಗಿಬಿಟ್ಟರು. ಆ ವೇಳೆಗೆ ಚಾಣಕ್ಯ ತುಂಬ ಮುದುಕನೂ ಆಗಿದ್ದ. ತಿರಸ್ಕೃತ ಹಾಗೂ ನಿರ್ಲಜ್ಜಾ ಬದುಕು ನಡಸುವುದು ಚಾಣಕ್ಯನ ಸ್ವಭಾವಕ್ಕೆ ವಿರುದ್ಧ. ಅದರಿಂದ ಆತ ತನ್ನ ನಟ್ಟರಿಷ್ಟರ ಕ್ಷಮೆ ಕೋರಿದ. ಮನೆ ತೊರೆದ. ಕಾಡಿನಂಚಿನಲ್ಲಿದ್ದ ಒಂದು ಗೋಕುಲದಲ್ಲಿ ಜೀವಿಸತೊಡಗಿದೆ. ಅಲ್ಲಿ ಇಂಗಿನೀಮರಣಕ್ಕೆ ಅಣಿಯಾದ (ನಿರ್ಧಾರಿತ ಸ್ಥಳದಲ್ಲಿ ಸಾಯುವತನಕ ಉಪವಾಸವಿರುವುದು). ಚಾಣಕ್ಯನಿಗೆ ಸಂಬಂಧಿಸಿದ ಸತ್ಯ ಸಂಗತಿಗಳು, ತನ್ನ ಮಲತಾಯಿಯ ಮೂಲಕ ಬಿಂದುಸಾರ ದೊರೆಗೂ ತಿಳಿಯಿತು. ದೊರೆ ಬಹುವಾಗಿ ಮರುಗಿದ. ಆತ ಗೋಕುಲಕ್ಕೆ ಬಂದ, ಚಾಣಕ್ಯನನ್ನು ಮತ್ತೆ ರಾಜಧಾನಿಗೆ ಕರೆದು ಕೊಂಡುಹೋಗಿ ಹಿಂದಿನ ಸ್ಥಾನದಲ್ಲಿ ನಿಲ್ಲಿಸಲು. ಚಾಣಕ್ಯ ಉತ್ತರಿಸಿದ – ‘ಎಲ್ಲ ಲೌಕಿಕ ಸಂಬಂಧಗಳನ್ನು ಬಿಟ್ಟುಕೊಟ್ಟು ಮರಣದವರೆಗೆ ಉಪವಾಸ ನಡಸಲು ಪ್ರಾರಂಭಿಸಿ ದ್ದಾಗಿದೆ. ನಿಮ್ಮ ಸಾಮ್ರಾಜ್ಯದಲ್ಲಿ ನನಗೀಗ ಯಾವ ಆಸಕ್ತಿ ಇದೆ?’. ಚಾನಕ್ಯನಿಗೂ ಇದೆಲ್ಲಾ ತನ್ನ ವಿರುದ್ಧವಾಗಿ ಮಂತ್ರಿ ಸುಬಂಧು ನಡೆಸಿದ ಕುತಂತ್ರಗಳೆಂದು ತಿಳಿದಿತ್ತಾದರೂ ಬಿಂದುಸಾರನಿಗೆ ಆ ಬಗ್ಗೆ ಏನೊಂದನ್ನೂ ಹೇಳಲಿಲ್ಲ.

ನಿರಾಶನಾದ ಬಿಂದುಸಾರ ಅರಮನೆಗೆ ಹಿಂತಿರುಗಿದ. ಮಾನಸಿಕ ವೇದನೆಯಿಂದ ತಪ್ತನಾದ. ಚಾಣಕ್ಯನತ್ತ ದೊರೆ ಹೆಚ್ಚು ಆಕರ್ಷಿತನಾಗುತ್ತಿದ್ದಾನೆಂದು ಸುಬಂಧು ಸಚಿವನಿಗೆ ಮನದಟ್ಟಾಯಿತು. ತನ್ನ ಒಳಸಂಚುಗಳು ಬಯಲಾದ ಬಗೆಗೂ ಗಾಬರಿಯಾಯಿತು. ಈ ಸಂದರ್ಭದ ಉಪಯೋಗಕ್ಕೆ ಮಸಲತ್ತು ಮಾಡಿದ. ದೊರೆಯ ಬಳಿ ಹೊರಟ. ತಾನು ಪ್ರಧಾನಿ ಚಾಣಕ್ಯರ ಬಳಿ ಹೋಗಿ ರಾಜಧಾನಿಗೆ ಹಿಂತಿರುಗುವಂತೆ ವಿನಂತಿಸಿ ಒಪ್ಪಿಸುವುದಕ್ಕೆ ಅಪ್ಪಣೆ ಬೇಡಿದ. ಒಮ್ಮೆಲೆ ದೊರೆ ಬಿಂದುಸಾಗರ ಅಪ್ಪಣೆಕೊಟ್ಟ. ಸುಬಂಧು ಚಾಣಕ್ಯನನ್ನು ಗೌರವಿಸುವವನಂತೆ ಹಾಲುಮಡ್ಡಿ ಸಾಂಬ್ರಾಣಿಗಳಿಂದಾದ ಸುಗಂಧದ್ರವ್ಯಗಳನ್ನು ಸಮರ್ಪಿಸಿ, ಚಾಣಕ್ಯನ ಸುತ್ತ ಇದ್ದ ಬೆರಣಿಯ ಮೇಲೆಲ್ಲ ಸಿಂಪಡಿಸಿದ. ಬೆರಣಿ ಇವುಗಳಿಂದಾಗಿ ಹತ್ತಿಕೊಂಡು ಉರಿಯತೊಡಗಿದವು. ಚಾಣಕ್ಯನ ದೇಹ ಹುರಿದಂತೆ ಉರಿದುಹೋಯಿತು. “ಆ ಸಮಯದಲ್ಲಿ ಚಾಣಕ್ಯ ಶುದ್ಧ ಮನಸ್ಕನಾಗಿದ್ದ. ಧರ್ಮ ಚಿಂತನೆಯಲ್ಲಿ ಆತ ತನ್ಮಯನಾಗಿದ್ದ. ಶರೀರ ಅಕಂಪನವಾಗಿತ್ತು. ಜ್ವಾಲೆಗಳಲ್ಲಿದ್ದರೂ ಭಾವನೆಗಳಿವು”. “ಮುಕ್ತರಾದವರು, ಅನುಗ್ರಹಕ್ಕೆ ಪಾತ್ರರಾದವರು, ಜೀವಿಸುವ ಜಂತುವನ್ನು ನೋಯಿಸರು. ಪ್ರಾಪಂಚಿಕ ವ್ಯವಹಾರದಲ್ಲಿ ನಿರತರಾದ ನನ್ನಂಥವರು ಅಧಾರ್ಮಿಕ ಕಾರ್ಯಗಳಲ್ಲಿ ತಮ್ಮ ಸಮಯ ಪೋಲು ಮಾಡುತ್ತಾರೆ. ನನಗೆ ದೇವರ ಧರ್ಮಬೋಧೆ ತಿಳಿದಿದ್ದರೂ ಭ್ರಾಂತಿ ಮತ್ತು ಅಜ್ಞಾನ ಶೃಂಖಲೆಯಲ್ಲಿ ಬಂಧಿತನಾಗಿಬಿಟ್ಟೆ, ನಾನು ಹೇಗೆ ಕಾಲ ಕಳೆದು ಬಿಟ್ಟೆ? ಈ ಭವದಲ್ಲಿ ಮತ್ತು ಹಿಂದಿನ ಭವಗಳಲ್ಲಿ, ಯಾವುದೇ ಜೀವಿಗಳಿಗೆ ನಾನು ಘಾಸಿಗೊಳಿಸಿದ್ದರೆ ಅವುಗಳಿಂದ ಕ್ಷಮೆ ಬೇಡುತ್ತೇನೆ. ನಾನು ಅವನ್ನು ಕ್ಷಮಿಸುತ್ತೇನೆ. ರಾಜ್ಯಾಡಳಿತದಲ್ಲಿ ನನ್ನ ಪಾಪ ಕಾರ್ಯಗಳಿಂದ ಸಂಪಾದಿಸಿದ ಯಾವುದೇ ಬಂಧವನನ್ನು, ಮೂರು ಕರಣಗಳಿಂದ ಮೂರು ಯೋಗಗಳಿಂದ, ಈಗ ವರ್ಜಿಸುತ್ತೇನೆ”. ಬೆಂಕಿ ಚಾಣಕ್ಯನ ತನುವನ್ನು ಸ್ವಾಹಾ ಮಾಡತೊಡಗಿದಂತೆ, ಆತನ ಕ್ರೂರ ಕಾರ್ಯಗಳೂ ದಗ್ಧವಾದುವು. ಪರಮೇಷ್ಠಿ ಪಂಚಕದಲ್ಲಿ ಮಗ್ನನಾಗಿ ಶುದ್ಧ ಭಾವನೆಗಳಿಂದ ಬಂಧನಗಳಿಲ್ಲದೆ, ಪ್ರಕ್ಷುಬ್ಧತೆಗಳಿಲ್ಲದೆ ಮೃತ್ಯುವನ್ನು ಅಪ್ಪಿದ. ಸತ್ತು ಸ್ವರ್ಗಾಗ್ರವನ್ನೇರಿದ.

೭. ಮೇಲಿನ ಈ ಘಟನೆಯನ್ನು ಭಟ್ಟ ಪಇಣ್ಣಾ, ಸಂತಾರಗ ಪಇಣ್ಣಾ, ಮರನವಿಹಿ ಪಇಣ್ಣಾ ಗ್ರಂಥಗಳೂ ಸಬಲವಾಗಿ ಸಮರ್ಥಿಸುತ್ತವೆ. ಇವುಗಳಲ್ಲಿ ಚಾಣಕ್ಯ ಸಂಸಾರದಲ್ಲಿ ವೈರಾಗ್ಯಪರನಾದದ್ದೂ ಗೋಕುಲಕ್ಕೆ ಹೋದದ್ದೂ ಅಮರ ಣಾಂತ ಉಪವಾಸ ಮಾಡಿದ್ದೂ ಮಂತ್ರಿ ಸುಬಂಧುವಿನ (-ಸುಬುದ್ಧಿಯ) ತಂತ್ರದಿಂದ ಆತನ ಮೈ ಬೆಂದು ಬೂದಿಯಾದದ್ದು – ಇವುಗಳ ಸುದೀರ್ಘ ನಿರೂಪಣೆಯಿದೆ.

(ಬೃ)ವೃಹತ್ ಕಥಾ ಕೋಷದಲ್ಲಿ ಆಚಾರ್ಯ ಹರಿಷೇಣನು ಚಾಣಕ್ಯನ ಜೀವನ ಕಥೆಯನ್ನು, ೧೪೩ ನೆಯ ಸಂಖ್ಯೆಯ ಅಖ್ಯಾಯಿಕೆಯಲ್ಲಿ ವಿಸ್ತಾರವಾಗಿ ಪ್ರಸ್ತಾಪಿಸಿ ದ್ದಾನೆ. ಆಚಾರ್ಯ ಹರಿಷೇಣನ ಅಭಿಪ್ರಾಯದಂತೆ ಚಾಣಕ್ಯ ತನ್ನ ಕಡೆಯ ದಿನಗಳಲ್ಲಿ ಜೈನ ಮುನಿಜೀವನಕ್ಕೆ ದೀಕ್ಷಿತನಾದ, ಇನ್ನೂ ೫೦೦ ಇತರ ಮುನಿಗಳ ಸಮೇತ ಶುದ್ಧ ಪರಿಭಾವನೆಯ ತಪಗೈದ. ಅವಿಚಲವಾಗಿಟ್ಟು ಆಮರಣಾಂತ ಉಪವಾಸದಿಂದ ತನ್ನ ಮರ್ತ್ಯ ದೇಹವನ್ನು ಸೋಲಿಸಿ ಚಂದ್ರಗುಪ್ತ ಚಾಣಕ್ಯರು ಪಡೆದರು. ಆಡಳಿತವನ್ನು ದೀರ್ಘಕಾಲ ನಡೆಸಿದಮೇಲೆ ಚಾಣಕ್ಯ ಎಲ್ಲ ಸಂಪರ್ಕಗಳಿಂದ ದೂರನಾದ. ಜೈನ ಧರ್ಮದ ಸಿದ್ಧಾಂತಗಳನ್ನು ಆಲಿಸಿ ಪ್ರಾಪಂಚಿಕ ಸ್ವತ್ತುಗಳನ್ನು ತ್ಯಜಿಸಿದ. ಜೀವಿತದ ಕಡೆಗೆ ಜೈನಮತಿಯೇ ಆದ. ೫೦೦ ಮುನಿಗಳ ಸಂಘದೊಡನೆ ದಕ್ಷಿಣದಲ್ಲಿ ಒಮ್ಮೆ ಸಂಚರಿಸುತ್ತಿರುವಾಗ, ಒಂದು ಕಾಡಿನ ಬಳಿ ಬಂದ. ಗೋಕುಲದಲ್ಲಿ ತಂಗಿದ್ದು ತಪಸ್ಸಿನಲ್ಲಿ ತನ್ಮಯನಾದ. ಗೋಕುಲದಲ್ಲಿ ಮುನಿ ಚಾಣಕ್ಯರು ಆಗಮಿಸಿರುವರೆಂದು ತಿಳಿದು ಆತ ಹರ್ಷಿಸಿದ. ತನ್ನ ಭಕ್ತಿ ಸಮರ್ಪಣೆಗೆ ಅಲ್ಲಿಗೆ ಹೊರಟ. ದೊರೆ ದರ್ಶನ ಪಡೆದು ಬಂದ ಮೇಲೆ ಚಾಣಕ್ಯ ಮುನಿ ಅಮರಣಾಂತ ಪ್ರಾಯೋಪಗಮನ ಉಪವಾಸವನ್ನು ಸ್ವೀಕರಿಸಿದ. ನಂದ ದೊರೆಗಳ ಮಾಜಿ ಮಂತ್ರಿ ಸುಬಂಧುವೂ, ಚಾಣಕ್ಯ ಯತಿ ದರ್ಶನಕ್ಕೆ ಆಗಮಿಸಿದ್ದ ಸುಮಿತ್ರ ದೊರೆಯ ಜೊತೆಯಲ್ಲಿ, ಬಂದಿದ್ದ. ಚಾಣಕ್ಯನ ಸುತ್ತ ಸುಬಂಧುವೂ ಸಿಕ್ಕಿ ಬಿದ್ದು ಸತ್ತುಹೋದ. ಚಾಣಕ್ಯನೂ ಅಯ್ನೂರ್ವರ ಮುನಿ ಸಂಘವೂ ಅಗ್ನಿ ಬಾಧೆಯನ್ನೆಲ್ಲ ತಾಳಿ ತಪಸ್ಸಿನಲ್ಲೇ ಮನವಿಟ್ಟು ಮುಡಿಸಿದರು”.

೮. ಪರಿಶಿಷ್ಟ ಪರ್ವನ್ ಕೃತಿಯ ಅಷ್ಟಮ ಅಧ್ಯಾಯದಲ್ಲಿ, ಆಚಾರ್ಯ ಹೇಮಚಂದ್ರರು ಚಾಣಕ್ಯ ಚಂದ್ರಗುಪ್ತರ ಜೀವಿತದ ಮೇಲೆ ಸಾಕಷ್ಟು ಬೆಳಕು ಚೆಲ್ಲಿದ್ದಾರೆ. ಆಚಾರ್ಯ ಹರಿ ಭದ್ರ ಸೂರಿಯ ಉಪದೇಶ ಪದದ ಆಧಾರದಿಂದ ಆಚಾರ್ಯ ಹೇಮಚಂದ್ರ ಕೃತ ಪರಿಶಿಷ್ಟ ಪರ್ವನ್ ನಿಂತಂತೆ ತೋರುತ್ತದೆ. ಏಕೈಕ ವ್ಯತ್ಯಾಸವೆಂದರೆ ಉಪದೇಶಪದ ಪ್ರಾಕೃತ ಉಪಭಾಷೆಯಲ್ಲಿ ರಚಿತವಾಗಿದೆ. ಚಾಣಕ್ಯನನ್ನು ಆಚಾರ್ಯ ಹೇಮಚಂದ್ರ ಶ್ರಾವಕನನ್ನಾಗಿ ಚಿತ್ರಿಸುತ್ತಾ ‘ಸಂಘ ಪುರುಷ ಪ್ರವಚನೋಪಹಾಸಭೀರು, ನಿರ್ಜರೋದ್ಯತ’ ಮುಂತಾಗಿ ವಿಶೇಷಣ ಗಳಿಂದ ಸಂಭೋಧಿಸಿರುವುದನ್ನು ಗಮನಿಸಬೇಕು. ಚಂದ್ರ ಗುಪ್ತನಿಗೆ ಕೊಟ್ಟ ಭೋಜನ ಪಾತ್ರೆಗಳಿಂದ ಆಹಾರವನ್ನು, ಚರಿಗೆಯ ಆಹಾರದಾನದ ಆಹಾರವೆಂದು ತೆಗೆದು ಕೊಂಡು ಹೋಗುವುದನ್ನೂ ಹನ್ನೆರಡನೆಯ ಪ್ರತಿಜ್ಞೆಯಾದ ಅತಿಥಿ ಸತ್ಕಾರವನ್ನು ಸೂಚಿಸುತ್ತದೆಂದು ನಿರೂಪಿಸಲಾಗಿದೆ. ತನ್ನ ಮನೆಯಿಂದ ಅನ್ನ ಆಹಾರ ನೀರು ಅಥವಾ ಯಾವುದೇ ವಸ್ತುವನ್ನು ಮುನಿಗಳು ಅಗತ್ಯ. ಬಿದ್ದಾಗ ತೆಗೆದುಕೊಂಡರೆ ತಾನು ಬಹು ಮನ್ನಣೆ ಪಡೆದಂತೆ ಸಂತೋಷಿಸುವುದಾಗೂ ಚಾಣಕ್ಯ ತಿಳಿಸುತ್ತಾನೆ. ಆಚಾರ್ಯ ಹೇಮಚಂದ್ರನ ಪ್ರಕಾರ ಚಂದ್ರಗುಪ್ತನನ್ನು ಜೈನನನ್ನಾಗಿ ಪರಿವರ್ತಿಸುವಲ್ಲಿ ಚಾಣಕ್ಯ ಬಹು ಪ್ರಮುಖ ಪಾತ್ರವಹಿಸಿದ್ದಾನೆ. ಚಂದ್ರಗುಪ್ತನಿಗೆ ಚಾಣಕ್ಯ ರಾಜಕೀಯ ಕ್ಷೇತ್ರದಲ್ಲೇ ಅಲ್ಲದೆ ಆಧ್ಯಾತ್ಮಿಕ ವಲಯದಲ್ಲೂ ಸಲಹೆಗಾರನಾಗಿ ವರ್ತಿಸಿ ಅವನನ್ನು ಉದ್ಧರಿಸಿದ. ಧರ್ಮ ಪರಿವರ್ತನೆಗೆ ಚಂದ್ರಗುಪ್ತ ತಕ್ಷಣ ಒಪ್ಪಲಿಲ್ಲ. ಚಂದ್ರಗುಪ್ತನಿಗೆ ಸಂಪೂರ್ಣವಾದ ವಿಶ್ವಾಸ ಮೂಡಿದಮೇಲೆ ತನ್ನ ಹಿಂದಿನ ಮತ ಬಿಟ್ಟು ಜೈನ ಧರ್ಮಕ್ಕೆ ಮತಾಂತರಗೊಂಡ.

೯. ಸಮೀಕ್ಷೆ : ಅವಶ್ಯಕಚೂರ್ಣಿ, ಆವಶ್ಯಕ ಮಲಯಗಿರಿ ವೃತ್ತಿ, ಉಪದೇಸ ಪದ, ಭಟ್ಟಪಇಣ್ಣಾ, ಸಂತಾರಗ (ಸಂಠಾರಕ) ಪಇಣ್ಣಾ, ಮರಣವಿಹಿ ಪ‍ಇಣ್ಣಾ, ಬೃಹತ್ ಕಥಾಕೋಷ, ಪರಿಶಿಷ್ಟ ಪರ್ವನ್ ಇವು ಚಾಣಕ್ಯ ಜೈನನೆಂಬುದನ್ನು ಅವಿರೋಧವಾಗಿ ಒಪ್ಪಿಕೊಂಡಿವೆ.

ಚಾಣಕ್ಯನ ಜೀವನ ಕಥೆ ತಿಳಿಸುವಾಗ ಆತ ಮುನಿಯಾಗಿ ವಿಹಾರ ಮಾಡಿದ್ದು ಪವಿತ್ರ ಸೂತ್ರ, ಕಮಂಡ (ಡು) ಲು, ಬ್ರಾಹ್ಮಣನಾಗಿದ್ದುದು ಕೆಲವರು ಇವಿಷ್ಟನ್ನೇ ಪರಿಗಣಿಸಿದ್ದಾರೆ. ಇದುವರೆಗಿನ ತಿಳುವಲಿಕೆ ಏಕ ಮುಖವಿರಬಹುದೆಂಬ ಭಾವನೆಗೆ ಅವಕಾಶವಿದೆ. ಬ್ರಾಹ್ಮಣನಾಗಿರುವುದು, ಪವಿತ್ರ ಸೂತ್ರ ಹಾಕುವುದು, ಮುನಿಯಾಗಿ ಸಂಚರಿಸುವುದು – ಇವು ಜೈನ ಸಂಸ್ಕೃತಿಗೆ ಅವಿರೋಧವಾಗಿವೆ. ಮಗಧ ರಾಜ್ಯದಲ್ಲಿ ನಂದ ವಂಶ ಅಧಿಕಾರಕ್ಕೆ ಬಂದಾಗ, ಮೊದಲ ನಂದನಿಗೆ ಒಬ್ಬ ಸಮರ್ಥ ಪ್ರಧಾನಿಯ ಅಗತ್ಯವಿತ್ತು. ಆತನ ಗಮನ ಕಲ್ಪಕನ ಮೇಲೆ ಕೇಂದ್ರೀಕೃತವಾಯಿತು. ಕಲ್ಪಕನನ್ನು ಈ ಗೌರಾವಾರ್ಹ ಪದವಿಗೆ ಒಪ್ಪುವಂತೆ ನಂದ ಒತ್ತಾಯಿಸಿದ. ಕಲ್ಪಕ ಧಾರ್ಮಿಕ ಪ್ರವೃತ್ತಿಯವನಾದುದರಿಂದ ಈ ಪ್ರಧಾನಿ ಪದವನ್ನು ನಿರಾಕರಿಸಿದ. ಅದರಿಂದ ನಂದ ನಿರಾಶನಾಗಲಿಲ್ಲ. ತನ್ನ ಪ್ರಯತ್ನ ಬಿಟ್ಟು ಕೊಡಲಿಲ್ಲ. ಈ ಮಧ್ಯೆ ಸಂಭವಿಸಿದ ಒಂದು ಅಸಾಧಾರಣ ಘಟನೆಯ ಪರಿಣಾಮವಾಗಿ ಕಲ್ಪಕ ಪ್ರಧಾನಿಯಾಗಲು ಅಂತೂ ಒಪ್ಪಿದ, ಕಲ್ಪಕನೂ ಅವನ ತಂದೆಯೂ ಜೈನ ಶ್ರಾವಕರಾಗಿದ್ದರೆಂಬುದನ್ನು ಆಚಾರ್ಯ ಹೇಮಚಂದ್ರ ಮತ್ತು ಆಚಾರ್ಯ ಹರಿಭದ್ರರು ತಿಳಿಸಿದ್ದಾರೆ. ನಂದ ವಂಶದಲ್ಲಿ ಏಳುಜನ ನಂದರು (ಅಥವಾ ಒಂಬತ್ತು ಜನ) ಕ್ರಮವಾಗಿ ಆಗಿಹೋದರು. ಕಲ್ಪಕನ ಮನೆತನದಲ್ಲೂ ಕೆಲವು ಪ್ರಾಜ್ಞರು ಆಗಿ ಹೋದರು. ಅವರೆಲ್ಲಾ ಪ್ರಧಾನಿಗಳಾಗಿದ್ದರು. ನಂದರಲ್ಲಿ ಏಳನೆಯವನ ಕಾಲದಲ್ಲಿ ‘ಸಕದಲ’ ಪ್ರಧಾನಿಯಾಗಿದ್ದ. ಆತ ಕೂಡ ಕಲ್ಪಕನ ಧಾರ್ಮಿಕ ಸಂಪ್ರದಾಯವನ್ನೇ ಪಾಲಿಸಿದ.

ಈ ಕಲ್ಪಕನ ಮನೆತನದಲ್ಲಿ ಹುಟ್ಟಿದವನಲ್ಲವಾದರೂ ಚಾಣಕ್ಯ ಶ್ರಾವಕ ಸಂಪ್ರದಾಯ ಮಸುಳದಂತೆ ನಿಲ್ಲಿಸಿದ. ಭವಿಷ್ಯ ದೃಷ್ಟಿಯಿಂದ ಸಾಮ್ರಾಜ್ಯದ ಆಡಳಿತ ವನ್ನು ಯಶಸ್ವಿಯಾಗಿ ನಡಸಿದ. ಜೈನ ಪುರಾಣಗಳ ಪ್ರಕಾರ ಪವಿತ್ರ ಸೂತ್ರ ಧರಿಸುವ ಪದ್ಧತಿ ಮೊದಲು ಋಷಭದೇವರ ಕಾಲದಲ್ಲಿ ರೂಢಿಗೆ ಬಂತು. ಪ್ರಥಮ ಚಕ್ರಿ ಭರತನಿಂದ ಪ್ರಾರಂಭವಾಯಿತು. ಅಂದು ಹಾಗೂ ಅಂದಿನಿಂದ ಮುತ್ಸದ್ದಿ ಶ್ರಾವಕರು ಅದನ್ನು ಧರಿಸಿದರು. ಇಂದಿಗೂ ಬಹುತೇಕ ಜೈನರು ಜನಿವಾರ ಹಾಕುತ್ತಾರೆ.

೧೦. ಚಾಣಕ್ಯ ಪ್ರಧಾನಿಯಾಗಿದ್ದರೂ ತೃಪ್ತ ಸ್ವಭಾವದವನಾಗಿದ್ದ. ಆಚಾರ್ಯ ಹೇಮಚಂದ್ರ, ಅವಶ್ಯಕ ವೂರ್ಣಿ ಕರ್ತೃ, ಹಾಗೂ ಆಚಾರ್ಯ ಹರಿಭದ್ರ ಮೂವರು ಚಾಣಕ್ಯ ಶ್ರಾವಕನಾಗಿ ಹೊಂದಿದ್ದ ಶ್ರೇಷ್ಠ ಗುಣಗಳ ಜೊತೆಗೆ ಈ ತೃಪ್ತ ಮನೋಭಾವವನ್ನೂ ಪ್ರಸ್ತಾಪಿಸಿದ್ದಾರೆ. ಈ ತೃಪ್ತಿ ಆತನ ಜೀವಿತದ ಅಂತ್ಯದವರೆಗೂ ಕಂಡು ಬರುತ್ತದೆ. ಮುದ್ರಾರಾಕ್ಷಸ ನಾಟಕದಲ್ಲಿ ಕೂಡ ಪ್ರಧಾನಿ ಚಾಣಕ್ಯನಲ್ಲಿದ್ದ ತೃಪ್ತಿಯನ್ನು ಸ್ತುತಿಸಿದೆ.

            ಉಪಲ ಸಕಲ ಮೇತದ್ ಭೇದಕಮ್ ಗೋಮಯಾನಾಮ್
ವಟುಭಿರುಪಧೃತಾನಾಮ್ ಬರ್ಹಿಷಾಮ್ ಸ್ತೋಮ ಏಷಾ
|
ಶರಣಮಪಿ ಸಮಿದ್ಭಿಃ ಶುಶ್ಯಮಾಣಾಮಿರಾಭೀರ್
ವಿನಮಿತ ಪಠಲಾಂತರಮ್ ದೃಶ್ಯತೇ ಜೀರ್ಣಮ್ ಕುಡ್ಯಮ್
||

(ಒಂಉ ಸಣ್ಣ ಕಲ್ಲು ಚೂರು, ಹಸು ಸಗಣಿ ಬೆರಣಿ ಪುಡಿ ಮಾಡಲು; ಶಿಷ್ಯರು ಕಿತ್ತು ತಂದ ಹುಲ್ಲು, ಆಯ್ದು ತಂದ ಕಟ್ಟಿಗೆ-ಇಷ್ಟೇ, ಮತ್ತು ಒಂದು ಬಾಗಿದ ಗುಡಿಸಲು ಹಾಗೂ ಜೀರ್ಣವಾದ ಗೋಡೆಗಳು). ಚಾಣಕ್ಯ ಅಜೈನನೆಂದು ಹೇಳಲು ಮುಂದಿಡುವ ಒಂದು ವಾದವೆಂದರೆ, ಆತನ ಅರ್ಥಶಾಸ್ತ್ರದಲ್ಲಿ ಆತ ವರ್ಣಾಶ್ರಮ ವ್ಯವಸ್ಥೆಗೆ ಹೆಚ್ಚು ಒತ್ತು ಕೊಟ್ಟಿದ್ದಾನೆ – ಎಂಬುದು. ಇದಕ್ಕೆ ಬೇರೆ ವಿವರವೂ ಇದೆ. ಆ ಕಾಲದ ಸಾಮಾಜಿಕ ರಚನೆಯಲ್ಲಿ ವರ್ಣಾಶ್ರಮ ವ್ಯವಸ್ಥೆ ರಕ್ಷಣೆಗಾಗಿ ಇತ್ತು. ಆ ವ್ಯವಸ್ಥೆಯಲ್ಲಿ ವ್ಯತ್ಯಾಸಗಳೂ ಬೆಳವಣಿಗೆಯೂ ಕಾಲಕ್ಕೆ ಸರಿಹೊಂದುವಂತೆ ನಡೆದಿವೆ. ತನ್ನ ಕಾಲಕ್ಕೆ ಆ ವ್ಯವಸ್ಥೆ ಉಪಯುಕ್ತವೆಂದು ಚಾಣಕ್ಯ ಪರಿಗಣಿಸಿದ. ಕಾಲ ಕಾಲಕ್ಕೆ ಇತರ ಸಾಮಾಜಿಕ ಪರಿವರ್ತನಕಾರರೂ ಅದನ್ನು ಅಳವಡಿಸಿದ್ದಾರೆ. ಜೈನರಲ್ಲೂ ಋಷಭ ದೇವನ ಕಾಲದಲ್ಲಿ ಈ ವರ್ಣ ವ್ಯವಸ್ಥೆಯ ಉಗಮವಾಯಿತು. ಪಂಪನ ಆದಿ ಪುರಾಣದಲ್ಲೂ ಇದಕ್ಕೆ ಆಧಾರ ಉಂಟು.

ಚಾಣಕ್ಯ – ಅಜೈನನೆಂಬವರ ಅನ್ನಿಸಿಕೆಯಲ್ಲಿನ ಇನ್ನೊಂದು ವಾದವೆಂದರೆ ಚಾಣಕ್ಯ ’ಶಿಖಾ’ (ಜುಟ್ಟು) ಬಿಟ್ಟಿದ್ದನೆಂಬುದು. ಶಿಖೆಯನ್ನು ಬಿಡುವ ಪದ್ಧತಿ ಎಲ್ಲ ಜನಾಂಗದಲ್ಲೂ ಇತ್ತು. ಇಂದಿಗೂ ಕೆಲವು ಜೈನರಲ್ಲಿದೆ. ನನ್ನ ತಂದೆ ಜುಟ್ಟು ಬಿಟ್ಟಿದ್ದರು. ನನ್ನ ಚಿಕ್ಕಪ್ಪ ಮತ್ತು ಇತರ ಕೆಲವು ಬಂಧುಗಳು ಈಗಲೂ ಶಿಖೆ ಬಿಟ್ಟಿದ್ದಾರೆ. ಪುರುದೇವ ದೀಕ್ಷಾ ಕಾಲದಲ್ಲಿ ಪಂಚ ಮುಷ್ಟಿಗಳಿಂದ ಕೂದಲು ಕೀಳುತ್ತಿದ್ದಾಗ, ಇಂದ್ರನ ಕೋರಿಕೆಯಂತೆ ಶಿಖೆಯನ್ನು ಕೀಳಲಿಲ್ಲವೆಂಬ ‘ಹೇಳಿಕೆಯೂ ಉಂಟು. ಅನೇಕ ಶಿಲಾಮೂರ್ತಿಗಳೂ ಇದನ್ನು ಅನುಮೋದಿಸುತ್ತವೆ.

ವ್ಯವಹಾರ ಚಾತುರ್ಯದಲ್ಲಿ ಚಾಣಕ್ಯ ಪ್ರಸಿದ್ಧ ಪುರುಷ. ವಂಚನೆ ದಗಲ ಬಾಜಿತನ ಮುಂತಾದವು ಈ ತಂತ್ರದ ಜ್ಞಾತಿಗಳು. ಈ ಕಾರಣಗಳಿಗಾಗಿ ಕೆಲವು ವಿದ್ವಾಂಸರು ಚಾಣಕ್ಯನನ್ನು ಜೈನನೆಂದು ಒಪ್ಪಲು ಹಿಂಜರಿಯುತ್ತಾರೆ. ಅಹಿಂಸೆಯ ವ್ರತಗಳನ್ನು ತೆಗೆದುಕೊಂಡಾತ ಹೇಗೆ ತಾನೆ ಸಾಮೋಪಾಯ ತಂತ್ರಗಳಿಗೆ ಒಪ್ಪುತ್ತಾನೆ? ರಾಜತಂತ್ರ ಕೌಶಲವನ್ನು ಅನುಸರಿಸುವಾತ ಹೇಗೆ ತಾನೆ ಜೈನ ಆಗಬಲ್ಲ? ಎಂಬುವು ಅವರ ಅನುಮಾನಗಳು. ಈ ಹಿಂಜರಿಕೆ ಹಾಗೂ ವಾದ ತೀರ ದುರ್ಬಲ. ವೈದಿಕ ಧರ್ಮ ತಾನೆ ಇಂಥ ತಂತ್ರಕ್ಕೆ ಸಮ್ಮತಿಸಿದೆಯೆ? ಮೋಸ ವಂಚನೆಯನ್ನು ಯಾವ ಧರ್ಮವೂ ಮಾನ್ಯ ಮಡದು. ವೀರಶೈವ ಧರ್ಮದಲ್ಲೂ ಕಳಬೇಡ – ಇತ್ಯಾದಿ ಇದೆ.

ಹಿಂದೆ ಆಗಿ ಹೋದ ದೊಡ್ದ ದೊರೆಗಳು ಸಾಮಂತರು ಪ್ರಧಾನಿಗಳು ಮುಂತಾದವರು ಜೈನಬೌದ್ಧ ವೈದಿಕ – ಹೀಗೆ ಒಂದಿಲ್ಲೊಂದು ಧರ್ಮೀಯರು. ಅವರು ಘೋರ ಯುದ್ಧಗಳನ್ನು ಮಾಡಿದರು. ದಾಳಿ ಪ್ರತಿದಾಳಿಯೆಸಗಿದರು. ಅವರು ಹಿಂದೂಗಳು ಇಲ್ಲವೇ ಬೌದ್ಧರಾಗಿದ್ದರೂ ಏನೊಂದು ಹೇಳಿಲ್ಲ. ಹೀಗಿರುವಾಗ ಚಾಣಕ್ಯನ ರಾಜ ತಂತ್ರ, ಆತನು ಜೈನನಾಗಿರುವುದಕ್ಕೆ ಅಡ್ಡಿಯಾಗವು. ಹಲವುವಾದಗಳ ಅಡ್ಡಿಯನ್ನೊಡ್ದಿ ಚಾರಿತ್ರಿಕ ಸತ್ಯ ಸಂಗತಿಗೆ ಜಾತಿಯ ತೆರೆಯೆಳೆಯದೆ ವಸ್ತು ಸ್ಥಿತಿಯನ್ನು ಯಥಾವತ್ತಾಗಿ ಪರಿಭಾವಿಸುವ ಪರಿಶೀಲಿಸುವ ಅಗತ್ಯವಿದೆ.

ಸಾರಾಂಶ : ೧. ಆ ಕಾಲದಲ್ಲಿ ಜೈನ ಬ್ರಾಹ್ಮಣರು ಇದ್ದರೆಂಬುದು ಗಣನೀಯ ಆಧಾರ. ಮಹಾವೀರರ ಗಣಧರರು ಮೊದಲು ಬ್ರಾಹ್ಮಣರಾಗಿದ್ದರು. ಭದ್ರಬಾಹುಭಟಾರರು ಕೂಡ ಬ್ರಾಹ್ಮಣ ತಾಯಿ ತಂದೆಯರ ಮಗ.

೨. ಚಾಣಕ್ಯನ ತಂದೆಯ ಮನೆಯ ಹೆಸರನ್ನು ‘ಸಯ್ಯಾಂತರ’ ಎಂದು ಕರೆದಿದೆ.

೩. ಚಾಣಕ್ಯನನ್ನು ‘ಸಂಘ’ ದ ಸಂರಕ್ಷಕನೆನ್ನಲಾಗಿದೆ.

೪. ಚಾಣಕ್ಯ ಜೈನ ಧರ್ಮದಲ್ಲಿ ನಿರೂಪಿಸಲಾದ ಇಂಗಿನೀಮರಣ ಪಡೆದನೆಂದು ತಿಳಿದು ಬರುತ್ತದೆ.

೫. ಚಾಣಕ್ಯನ (ಚಾಣಾಕ್ಯ) ತಂದೆ ತಾಯಿ ಮತ್ತು ಹುಟ್ಟಿದ ಸ್ಥಳದ ಹೆಸರುಗಳಲ್ಲಿ ವ್ಯತ್ಯಾಸಗಳಿವೆ.

೬. ಚಾಣಕ್ಯನ ಹಲ್ಲಿನ ಬಗ್ಗೆ ಒಂದಿಲ್ಲೊಂದು ಬಗೆಯ ಪ್ರಸ್ತಾಪ ಹೆಚ್ಚಿನ ಕಥೆಗಳಲ್ಲಿದೆ.

೭. ಚಾಣಕ್ಯ ಬಾಲ್ಯದಿಂದಲೂ ಬುದ್ಧಿವಂತನೆಂಬ ಅಂಶ ಎಲ್ಲ ಕಥೆಗಳಲ್ಲೂ ವ್ಯಕ್ತವಾಗದೆ.

೮. ಚಂದ್ರಗುಪ್ತ, ಬಿಂದುಸಾರ, ಮಗಧರಾಜ್ಯ, ಪಾಟಲೀಪುತ್ರ, ನಂದ ವಂಶ, ಮಹಾಪದ್ಮ – ಹೀಗೆ ಚಾರಿತ್ರಿಕ ಸಂಗತಿಗಳಿವೆ, ಚಾಣಕ್ಯನನ್ನೂ ಸೇರಿಸಿಕೊಂಡು. ಹೀಗಿರುವಾಗ ಚರಿತ್ರೆಯ ಸತ್ಯವನ್ನು ವಿಪರೀತಗೊಳಿಸಿ ಅಜೈನ ಚಾಣಕ್ಯನನ್ನು ಜೈನ ಚಾಣಕ್ಯ ಮಾಡುವುದು ಬಹುಶಃ ಅಸಂಭವನೀಯ, ಅದೂ ಕ್ರಿ.ಶ. 4-5 ನೆಯ ಶತಮಾನದ ವೇಳೆಗೆ.

೯. ಚಾಣಕ್ಯನ ಬದುಕಿಗೆ ಬಗ್ಗೆ ಜೈನ ವಾಙ್ಮಯದಲ್ಲೇ ಇಷ್ಟು ವಿಸ್ತಾರವಾದ ವಿವರ ಸಿಗುವುದು.

೧೦. ಅಂತೂ ಈ ಕಥೆ ಅನೇಕ ನಿಟ್ಟಿನಿಂದ ಅಭ್ಯಾಸ ಯೋಗ್ಯವಾಗಿದೆ. ಮತ್ತು ಪರಿಭಾವನೀಯವಾಗಿದೆ.

ಆಧಾರ ಗ್ರಂಥಗಳು :

Muni Mahendra Kumar `Pratham’ :

“Canakya – Was he a Jaina?” (Jain Journal Vol. VIII – 3)

ಅರ್ಥಶಾಸ್ತ್ರ – ಚಾಣಕ್ಯ

ಆವಶ್ಯಕ ಚೂರ್ಣಿ

ಆವಶ್ಯಕ ಮಲಯಗಿರಿ ವೃತ್ತಿ

ಉಪದೇಶಪದ – ಆಚಾರ್ಯ ಹರಿಭದ್ರಸೂರಿ, ೮ನೆಯ ಶತ್ಮಾನ

ಪರಿಶಿಷ್ಟ ಪರ್ವನ್ – ಆಚಾರ್ಯ ಹೇಮಚಂದ್ರ ೧೨ ನೆಯ ಶತಮಾನ.

ಬೃಹತ್ ಕಥಾ ಕೋಶ – ಹರಿಷೇಣ, ಸಂ: ಡಾ || ಆ. ನೇ. ಉಪಾಧ್ಯೆ

ಭಗವತೀ ಆರಾಧನಾ

ಭಟ್ಟ ಪ‍ಇಣ್ಣಾ (-= ಪ್ರಕೀರ್ಣಕಾ)

ಮರಣ ವಿಹಿ ಪ‍ಇಣ್ಣಾ (ಮರನ ಸಮಾಹಿ)

ವಿಶೇಷಾವಶ್ಯಕವಾಶ್ಯ (ಭಾಷ್ಯ) – ಜಿನಭದ್ರ, ೬ ನೆಯ ಶತಮಾನ

ಸಂತಾ (ಠಾ) ರಗ ಪ ಇಣ್ಣಾ – ಇಂಗ್ಲೀಷ್ ಅನು : Erther A. Solomon, Gujarat Vidyasabha, ೧೯೬೬]

ವಡ್ಡಾರಾಧನೆ :- ಸಂ: ಡಾ || ದೊ.ಲ. ನರಸಿಂಹಾಚಾರ್

ವಡ್ಡಾರಾಧನೆ : ಹಂಪ, ನಾಗರಾಜಯ್ಯ ೧೯೬೮