ಪ್ರಾಚೀನ ಭಾರತ ಕಥಾವಾಙ್ಮಯದ ತೌಲನಿಕ ಅಭ್ಯಾಸಿಗಳಿಗೆ ಚಾರುದತ್ತನ ಕಥೆ ಚಿರಪರಿಚಿತವಿರುವಂತೆ ಕುತೂಕಲಕಾರಿಯೂ ಆಗಿದೆ. ಈ ಪ್ರಾಂಜಲ ಪ್ರಣಯ ಕಥೆ, ಹಲವು ಕಾರಣಗಳಿಗಾಗಿ ಆಕರ್ಷಕವೂ ಮಹತ್ವದ್ದೂ ಆಗಿದೆ. ಇಷ್ಟಾಗಿಯೂ ಈ ವಸ್ತುವಿನ ಸಾಂಕೇತಿಕತೆಯಾಗಲಿ ವ್ಯಾಪ್ತಿಯಾಗಲಿ ಇನ್ನೂತನಕ ಸೂರಿಗಳಿಂದ ಸರಿಯಾಗಿ ಪರಿಶೀಲನೆಯಾಗಿಲ್ಲ. ಅ ದಿಕ್ಕಿನಲ್ಲಿ ನಾನು ಈಗಾಗಲೇ ಕೆಲವು ಟಿಪ್ಪಣಿಗಳನ್ನೂ ಸಂಪ್ರಬಂಧಗಳನ್ನೂ ಮಂಡಿಸಿದ್ದುಂಟು.[1]ಈ ದಿಕ್ಕಿನಲ್ಲಿ ನಡೆಸಿದ ನನ್ನ ಮುಂದುವರಿದ ಸಂಶೋಧನೆಯಿಂದ ಪರಿಷ್ಕೃತಗೊಂಡ ಅಧಿಕೃತ ಮಾಹಿತಿಗಳನ್ನೆಲ್ಲ ಗರ್ಭೀಕರಿಸಿಕೊಂಡು ಸಿದ್ಧಪಡಿಸಿದ ಸಂಪ್ರಬಂಧವಿದು.[2]

ಭಾರತೀಯ ಸಂಸ್ಕೃತ ಮತ್ತು ಪ್ರಾಕ್ರುತ ಕಥಾಸಾಹಿತ್ಯದಲ್ಲೂ ಇತರ ಕೆಲವು ಭಾಷೆಗಳಲ್ಲಿಯೂ ಗಣ್ಯಸ್ಥಾನಗಳಿಸಿರುವ ಜನಪ್ರಿಯ ಚಾರುದತ್ತನ ಕಥೆಗೆ ಹಲವು ಆಯಾಮಗಳಿವೆ; ಮುಖ್ಯವಾಗಿ ಸಾಹಿತ್ಯಕ, ಚಾರಿತ್ರಿಕ, ಸಾಮಾಜಿಕ ಮತ್ತು ಧಾರ್ಮಿಕ ಮುಖಗಳಿವೆ. ಈ ಕಥೆಯ ಉಗಮ – ವಿಕಾಸಗಳನ್ನು ಅನ್ವೇಷಿಸಿದರೆ ಅದರ ಬೇರುಗಳು ಕ್ರಿಸ್ತಪೂರ್ವದ ನೆಲದಲ್ಲಿ ಇಳಿದಿರುವುದು ಕಾಣುತ್ತದೆ. ಪ್ರಶ್ನಾತೀತವಾದ ನಿರ್ದಿಷ್ಟ ಪ್ರಾಚೀನತೆಯಿರುವ ಈ ಕಥೆ ಕ್ರಿಸ್ತಪೂರ್ವದ ಕಡೆಯ ಶತಮಾನಗಳ ವೇಳೆಗಾಗಲೇ ಮಹತ್ವದ ಕವಿಗಳ ಮೆಚ್ಚುಗೆ ಗಳಿಸಿತ್ತು.

ಅ. ಭಾರತದ ಎರಡು ಬೃಹತ್ ಮಹಾಕಾವ್ಯಗಳಾದ ರಾಮಾಯಣದಲ್ಲಾಗಲಿ, ಮಹಾಭಾರತದಲ್ಲಾಗಲಿ ಚಾರುದತ್ತನ ಕಥೆ ಬರುವುದಿಲ್ಲವೆಂಬುದು ಮೊದಲು ನೆನಪಿಡಬೇಕಾದ ಮಾತು.

ಆ. ಎರಡನೆಯದಾಗಿ ಎದ್ದು ಕಾಣುವ ಅಂಶ : ಈ ಕಥೆ ಬೌದ್ಧಸಾಹಿತ್ಯ ಪರಂಪರೆಯಲ್ಲಿ ಜನಾನುರಾಗ ಸಂಪಾದಿಸಲಿಲ್ಲ; ಅಶ್ವಘೋಷನ ಅನುಪಲಬ್ಧ ನಾಟಕ ಅಪವಾದದಂತಿದೆ.[3]

ಇ. ಮೂರನೆಯ ಅಂಶ : ಈ ಕಥೆಗೆ ಎರಡು ಪ್ರಧಾನ ಪ್ರಭೆದಗಳಿವೆ; ಒಂದು ಜೈನ, ಇನ್ನೊಂದು ಅಜೈನ. ಇವೆರಡರಲ್ಲೂ ಒಳಪ್ರಭೇದಗಳೂ ಕಾಣುತ್ತವೆ.

ಈ. ನಾಲ್ಕನೆಯ ಅಂಶ : ಕ್ರಿಸ್ತಶಕ ಆರಂಭದ ವೇಳೆಗಾಗಲೇ ಚಾರುದತ್ತನ ಕಥೆ ಜೈನ – ಅಜೈನಗಳೆಂಬ ಕವಲೊಡೆದಿತ್ತು; ಈ ಎರಡು ಸಮಾನಾಂತರ ನೆಲೆಗಳಲ್ಲಿ ಕಥೆ ವ್ಯತ್ಯಾಸಗಳನ್ನು ಒಳಗೊಳ್ಳುತ್ತಾ, ವಿಸ್ತಾರವನ್ನು ಪಡೆಯುತ್ತಾ ಬೆಳೆದುಬಂದಿದೆ. ಜೈನೇತರ ಸಾಹಿತ್ಯದಲ್ಲಿ ಈ ಕಥಾವಸ್ತು : ಒಂದು ಹಂತಕ್ಕೆ ಬಂದು ನಿಂತುಬಿಟ್ಟಿತು : ಆರೇಳನೆಯ ಶತಮಾನದಿಂದೀಚೆಗೆ ಈ ಕಥೆಗೆ ದೋಹದ ಕ್ರಿಯೆ ಎಸಗಬಲ್ಲ ಕವಿವಾತ್ಸಲ್ಯದ ಸಿಂಚನವಾಗಲಿಲ್ಲ.

ಉ. ಐದನೆಯ ಅಂಶ : ಜೈನ ಕಥಾಸಾಹಿತ್ಯ ಸಂಪ್ರದಾಯದಲ್ಲಿ ಚಾರುದತ್ತನ ಕಥಾವಲ್ಲರಿ ಶತಮಾನದಿಂದ ಶತಮಾನಕ್ಕೆ ಭಾಷೆಯಿಂದ ಭಾಷೆಗೆ, ಕವಿಯಿಂದ ಕವಿಗೆ ಮರುಹುಟ್ಟು ಪಡೆಯುತ್ತ ನವನವೋಲ್ಲೇಖಶಾಲಿನಿಯಾಗಿ ಚಿರಂಜೀವ ಕಳೆಯಿಂದ ದಾಂಗುಡಿಯಿಟ್ಟಿದೆ.

ಊ. ಆರನೆಯ ಅಂಶ : ಜೈನಕವಿಗಳು ಈ ಕಥೆಯನ್ನು ಅದೆಷ್ಟು ಪೋಷಿಸಿ ಜನಪ್ರಿಯಗೊಳಿಸಿ ಸಂರಕ್ಷಿಸಿದರೆಂದರೆ, ಜೈನೇತರ ಕವಿಗಳು ಕೂಡ ಇದರಿಂದ ಪ್ರಭಾವಿತರಾದರು.

ಪ್ರಬಲ ಸಾಕ್ಷ್ಯಾಧಾರಗಳಿಂದ ಪುಷ್ಟವಾಗುವ ಈ ತೀರ್ಮಾನಗಳಿಗೆ ತಲಪಲು ಬೇಕಾದ ತೌಲನಿಕ ಅಧ್ಯಯನದ ಸಾಮಗ್ರಿಕ್ಷೇತ್ರಕ್ಕೆ ಲಗ್ಗೆ ಹಾಕುವ ಮೊದಲು ಜೈನ-ಅಜೈನ ಕಥಾ ಪರಂಪರೆಯ ಪರಿಚಯವಿರಬೇಕಾಗುತ್ತದೆ. ಈ ಸಂಪ್ರಂಬಂಧದ ಕಡೆಯಲ್ಲಿರುವ ಅನುಬಂಧ ೧೦೨ರಲ್ಲಿ ಚಾರುದತ್ತನ ಕಥೆಯನ್ನು ಅತಿ ಸಂಕ್ಷೇಪಿಸಿ ಕೊಡಲಾಗಿದೆ; ಇಲ್ಲಿನ ವಿಸ್ತೃತ ವಿಶ್ಲೇಷಣಾತ್ಮಕ ಅಧ್ಯಯನಕ್ಕೆ ಆಕರವಾಗಿರುವ ಭಿನ್ನ ಸಂಪ್ರದಾಯದ ಚಾರುದತ್ತ ಕಥಾಪ್ರಭೇದವನ್ನು, ಆಸಕ್ತರಾದ ಸಂಶೋಧಕರು, ಆಯಾ ಮೂಲಕೃತಿಗಳಲ್ಲಿರುವ ವಿಸ್ತಾರವಾದ ವಿವರವಾದ ಕಥೆಯನ್ನು ಗಮನಿಸಲು ಅವಕಾಶವಿದೆಯೆಂಬ ಗ್ರಹಿಕೆಯಿಂದ ಹೀಗೆ ತುಂಬ ಸಂಗ್ರಹವಾದ ಕಥಾಸಾರ ಕೊಟ್ಟಿದೆ.

ಆ ಜೈನ ಪರಂಪರೆಯಲ್ಲಿ ಹರಿದುಬಂದಿರುವ ಈ ಕಥೆಯು ಹೆಚ್ಚು ಜನಪ್ರಸಿದ್ಧಿ ಪಡೆದಿರುವುದು ಭಾಸ ಮತ್ತು ಶೂದ್ರಕರ ನಾಟಕಗಳಲ್ಲಿ. ಚಾರುದತ್ತನು ದೃಗ್ಗೋಚರನಾಗುವುದು ಈ ನಾಟಕಗಳ ರಂಗಸ್ಥಳದಲ್ಲಿಯೇ; ಆದರೂ, ಇದರ ಅಂಕದ ಪರದೆ ಇನ್ನೂ ಮೊದಲೇ ಅನಾವೃತವಾಗಿತ್ತೆಂಬುದು ಅಷ್ಟಾಗಿ ವಿದ್ವಲ್ಲೋಕ ಪರಿಗಣಿಸಿಲ್ಲ.

ಮಹಾಯಾನ ಬೌದ್ಧನಾದ ಅಶ್ವಘೋಷನ ಮೂರು ರೂಪಕಗಳ ಚೂರು ಪಾರು ಸಿಕ್ಕಿವೆ. ಕುಷಾನ ರಾಜರ ಕಾಲಕ್ಕೆ ಅಂದರೆ, ಕ್ರಿ.ಶ. ೨-೩ನೆಯ ಶತಮಾನಕ್ಕೆ ಸೇರಿದ ಲಿಪಿಯಲ್ಲಿ, ಮಸಿಯಲ್ಲಿ ಬರೆದ ತಾಳೆಗರಿಗಳಲ್ಲಿ, ಸಂಸ್ಕೃತ ಪ್ರಾಕ್ರುತಭಾಷೆಗಳ ನಾಟಕ ತುಣುಕುಗಳಿವೆ. ಇವುಗಳಲ್ಲಿ ಭಾಸ – ಶೂದ್ರಕರ ನಾಟಕಗಳನ್ನು ನೆನಪಿಸುವ ಒಂದು ನಾಟಕವಿದೆ: “ಇದರಲ್ಲಿ ಮಗಧವತಿ (ವೇಶ್ಯೆ), ಕೋಮುದಗಂಧ (ವಿದೂಷಕ), ಸೋಮದತ್ತ (ನಾಯಕ?), ಧಾನಂಜಯ (ರಾಜ ಪುತ್ರ?), ಗೋಬಂ(?) ಮುಂತಾದ ವರು ಬರುತ್ತಾರೆ. ಮೃಚ್ಛಕಟಿಕದಂತೆ ಇದರಲ್ಲಿಯೂ ಒಂದು ಜೀರ್ಣೋದ್ಯಾನ, ವೇಶ್ಯಾಗೃಹಗಳು ಬರುತ್ತವೆ. ಪಾತ್ರಗಳು ‘ಪ್ರವಹಣ’ (ಗಾಡಿ) ಗಳಲ್ಲಿ ಪ್ರವೇಶಿಸುತ್ತಾರೆ. ಆದರೆ ಇದು ಮಿಕ್ಕ ನಾಟಕಚಕ್ರಗಳಲ್ಲಿ ಒಂದಾದ ‘ಚಾರುದತ್ತ’ ನಾಟಕವು ’ದರಿದ್ರ ಚಾರುದತ್ತ’ ಎಂದೇ ವಿಖ್ಯಾತಿ ಪಡೆದಿದೆ. ಈ ಅಪೂರ್ಣ ನಾಟಕದ ನಾಲ್ಕು ಅಂಕಗಳು ಮಾತ್ರ ಉಪಲಬ್ದವಾಗಿದ್ದು ಕಥೆಯ ಓಟ ವೇಗವಾಗಿದೆ, ಘಟನಾವಳಿಗಳಿಂದ ನಿಬಿಡವಾಗಿದೆ. ಭಾಸನಲ್ಲಿ ಸಾಮಾಜಿಕ ವೃತ್ತಾಂತಕ್ಕೆ ಆದ್ಯತೆ, ಶೂದ್ರಕನಲ್ಲಿ ರಾಜಕೀಯ ವೃತ್ತಾಂತಕ್ಕೂ ಸಮಾನ ಸ್ಥಾನ. ಭಾಸನ (ದರಿದ್ರ) ಚಾರುದತ್ತ ಮತ್ತು ಶೂದ್ರಕನ ಮೃಚ್ಛಕಟಿಕ ನಾಟಕಗಳ ತೌಲನಿಕ ವಿಮರ್ಶೆ ನಡೆದಿದೆ.[4] ಭಾಸನ ನಾಟಕ ಪೂರ್ತಿಯಾಗಿ ದೊರೆತಿದ್ದರೆ, ಅದರ ಉತ್ತರಾರ್ಧದ ಬೆಳವಣಿಗೆ ಮುಗಿತಾಯ ಹೇಗೆ ಇರುತ್ತಿತ್ತೆಂಬುದು ತಿಳಿಯುತ್ತಿತ್ತು. ಚಾರುದತ್ತ – ವಸಂತಸೇನೆಯರ ಗಂಭೀರವಾದ ಪ್ರಣಯ ಪಲ್ಲವಿಸುವ ವಿವರ, ಈಗ ಸಿಕ್ಕಿರುವ ನಾಟಕ ಭಾಗದಲ್ಲಿದೆ. ಚಾರುದತ್ತನ ದಾನಗುಣ ಉಜ್ವಲವಾಗಿ ಪ್ರಕಾಶಿತವಾಗಿದೆ. ಭಾಸನ ಕಾಲ ಕೂಡ ಪ್ರಶ್ನಾತೀತ ರೀತಿಯಲ್ಲಿ ಖಚಿತಗೊಂಡಿಲ್ಲವಾದರೂ ಸುಮಾರು ೩೦೦ ಎಂದು ಭಾವಿಸಲಾಗಿದೆ.[5]

ಕಲ್ಪಿತವಾದ ಸಾಮಾಜಿಕ ಕಥೆಯುಳ್ಳ ರೂಪಕ (ಪ್ರಕರಣ)ವೇ ಶೂದ್ರಕನ ಮೃಚ್ಛಕಟಿಕ; ಇದು ಹತ್ತು ಅಂಕಗಳ ನಾಟಕ.[6]ಸ್ವಾರಸ್ಯವೆಂದರೆ, ಇದರಲ್ಲಿ ಚಾರುದತ್ತ – ವಸಂತಸೇನೆಯರ ಪ್ರಣಯದಂತೆ ಆರ್ಯಕ-ಪಾಲಕರಿಗೆ ಸಂಬಂಧಪಟ್ಟ ರಾಜಕೀಯ ವೃತ್ತಾಂತವೂ ಆಧಿಕಾರಕ ವಸ್ತುವಿಗೆ ಬಾಧಕವಾದ ಹಾಗೆ ನವಿರಾಗಿ ಬೆಳವಣಿಗೆ ಪಡೆಯುತ್ತದೆ.[7] ಮೃಚ್ಛಕಟಿಕದ ಚಾರುದತ್ತನು ಧೀರಶಾಂತನಂತೆಯೂ ವಸಂತಸೇನೆಯು ಪ್ರಣಯಪ್ರೇರಿತಳಾಗಿ ಹೆಚ್ಚು ಕ್ರಿಯಾಶೀಲಳಂತೆಯೂ ಚಿತ್ರಿತವಾಗಿ ದ್ದಾರೆ. ಶೂದ್ರಕನ ನಾಟಕ ಸಂವಿಧಾನ ಮೂಸೆಯಲ್ಲಿ ಶಕಾರನ ಪಾತ್ರ ಅಪೂರ್ವ ಸೃಷ್ಟಿಯಾಗಿದೆ. ಚಾರುದತ್ತನ ಚಿಕ್ಕಮಗ ರೋಹಸೇನನು ತನಗೆ ಆಟಕ್ಕೆ ಮಣ್ಣಿನ ಗಾಡಿ – ಮೃಚ್ಛಕಟಿಕ – ಬೇಡವೆಂದೂ ಚಿನ್ನದ ಬಂಡಿಯೇ ಬೇಕೆಂದೂ ಹಟ ಹಿಡಿದ ಸಂದರ್ಭ (ಆರನೆಯ ಅಂಕ)ವೇ ಈ ನಾಟಕದ ಹೆಸರಿಗೆ ಔಚಿತ್ಯ ತಂದ ಘಟನೆ. ಹೃದಯ ಡವಗಟ್ಟುವಂಥ ನಾಟಕೀಯ ಘಟನಾವಳಿ ಮತ್ತು ಅನಿರೀಕ್ಷಿತ ತಿರುವುಗಳಿವೆ.

ಶೂದ್ರಕನ ಈ ನಾಟಕ ಭಾಸನ ನಾಟಕದಿಂದ ಸ್ಫೂರ್ತಿಗೊಂಡು ಹುಟ್ಟಿದ್ದೆಂದು ಬಲ್ಲಿದರು ಭಾವಿಸಿದ್ದಾರೆ.[8] ಭಾಸಶೂದ್ರಕರ ನಾಟಕ ನಡೆಯುವ ನಗರ ಉಜ್ಜಯಿನಿ. ಈ ನಾಟಕಗಳ ನಾಯಕಿ ವೇಶ್ಯೆ ವಸಂತಸೇನೆ: “ವೇಶ್ಯೆಯಾದರೂ ಅವಳು ಸಂಪನ್ನೆ, ಘನವಂತೆ, ಗುಣಗೌರವ ಪಕ್ಷಪಾತಿನಿ; ಆದ್ದರಿಂದ ತನ್ನ ವೃತ್ತಿಗೆ ವಿರುದ್ಧವಾಗಿ ಒಬ್ಬ ಗುಣವಂತನಾದ ಬಡವನನ್ನು ಮೆಚ್ಚಿ ಅವನನ್ನು ಹುಡುಕಿಕೊಂಡು ಹೋಗುವಳು. ಪ್ರಣಯ ಚರಿತ್ರೆಯಲ್ಲಿ ಇದು ಅಪರೂಪ. ಸ್ತ್ರೀ ಮೋಹದಲ್ಲಿ ಸಿಕ್ಕಿ ನರಳಿ ಬೀಳಾಗುವ ಪುರುಷರ ಚರಿತ್ರೆಯೇ ಕಥೆಗಳಲ್ಲಿ ಸಾಮಾನ್ಯವಾಗಿ ಪ್ರತಿಪಾದಿತವಾಗಿರುವುದು.

ರತ್ನಾವಳಿ ಮುಂತಾದ ನಾಟಕಗಳಲ್ಲಿರುವಂತೆ ಇದರ ನಾಯಕನು ಹೆಂಡತಿಗೆ ಹೆದರಿಕೊಂಡು ನಡೆಯಬೇಕಾದದ್ದಿಲ್ಲ. ಕೈ ಹಿಡಿದ ಹೆಂಡತಿಯೂ ಮೆಚ್ಚಿಬಂದ ಉಪಪತ್ನಿಯೂ ಇಬ್ಬರೂ ಅಕ್ಕತಂಗಿಯರಂತಿರುವರು …..”.[9] ಭಾಸ ಮತ್ತು ಶೂದ್ರಕರ ನಾಟಕಗಳು ಅಧಿಕಾಂಶ ಪ್ರಾಕೃತ ಭಾಷೆಯಲ್ಲಿವೆ. ಈ ನಾಟಕಕಾರರ ಕಾಲ ವಿಚಾರ ಚರ್ಚೆಯ ಕಕ್ಷೆಯಲ್ಲಿ, ಪ್ರಾಕೃತ ಭಾಷೆಯ ಸ್ವರೂಪ ಕೂಡ ಒಂದು ಗಟ್ಟಿ ಆಧಾರ : ಶೂದ್ರಕ ಯಾವ ಕಾಲದವನೆಂಬುದೂ ವಿವಾದದಲ್ಲಿದ್ದರೂ ಸುಮಾರು ೪೦೦ ಎಂಬುದು ಸ್ವೀಕೃತವಾಗಿ ಮಾನ್ಯವಾಗಿದೆ.[10]

ಭಾಸ – ಶೂದ್ರಕರ ಈ ಪ್ರಸ್ತಾಪಿತ ನಾಟಕಗಳ ವಸ್ತು ಯಾವ ಮೂಲದಿಂದ ಬಂದದ್ದು ಎಂದು ವಿದ್ವಾಂಸರು ವಿವೇಚಿಸಿದ್ದಾರೆ. “ಈ ನಾಟಕದ (ಮೃಚ್ಛಕಟಿಕ) ವಸ್ತುವಿಗೆ ಬೃಹತ್ಕಥೆಯೇ ಮೂಲವಿರಬಹುದು.ಚಾರುದತ್ತ- ವಸತತಿಲಕೆಯರ ಕಥೆಯೂ ಪಾಲಕರಾಜನ ವೃತ್ತಾಂತವೂ ಜೈನರ ಹರಿವಂಶ (ನೇಮಿನಾಥಪುರಾಣ) ದಲ್ಲಿಯೂ ಬರುತ್ತದೆ. ಆದರೆ ಅದು ಮೂಲವಾಗಿರಲಾರದು” ಎಂದು ಎ.ಆರ್. ಕೃ. ಸಣ್ಣ ಆಡಿಟಿಪ್ಪಣಿಯಲ್ಲಿ ಇತ್ತ ಬೊಟ್ಟು ಮಾಡಿದ್ದಾರೆ.[11] ವಾಸ್ತವವಾಗಿ ಗುಣಾಢ್ಯನ ಬೃಹ್ಹತ್ಕಥೆ ಕುರಿತು, ಅದರಲ್ಲಿನ ಚಾರುದತ್ತಕಥೆಯ ಸ್ವರೂಪ ಕುರಿತು ಕೆಲವು ವಿದ್ವಾಂಸರು ಅಧ್ಯಯನ ಕೈಗೊಂಡಿದ್ದುಂಟು. ಭಾರತ ರಾಮಯಣಗಳಷ್ಟೇ ಮಹಾಪುರಾಣವೂ ಬೃಹತ್ಕಥಾವೂ ಮಹತ್ವದ ಕೃತಿಗಳು. ಪೈಶಾಚೀ (ಪೈಶಾಚಿಕ, ಪೈಶಾಚಿಕೀ) ಭಾಷೆಯಲ್ಲಿ ರಚಿಸಲಾದ ಗುಣಾಧ್ಯಕವಿಯ ಕೃತಿ ಅನುಪಲಬ್ಧ. ಆತನ ಬೃಹತ್ಕಥೆಯನ್ನು ದುರ್ವಿನೀತನೆಂಬ ಗಂಗರಾಜನು ಆರನೆಯ ಶತಮಾನದಲ್ಲಿ ಪೈಶಾಚೀ ಭಾಷೆಯಿಂದ ಸಂಸ್ಕೃತಕ್ಕೆ ಪರಿವರ್ತಿಸಿದನೆಂದು ತಿಳಿದುಬರುತ್ತದೆ.[12] ದುರ್ವಿನೀತನ ‘ವಡ್ಡ ಕಥೆ’ ಯನ್ನು ಆಧರಿಸಿ ತಮಿಳಿನಲ್ಲಿ ಕೊಂಗುವೇಳಿರ್ ಎಂಬ ಜೈನ ಲೇಖಕನು ‘ಪೆರುಂಗತೈ’ ರಚಿಸಿದ್ದಾನೆ; ಅದರಲ್ಲಿ ನರವಾಹನದತ್ತ, ಉದಯನರ ಕಥೆಗೇ ಪ್ರಾಮುಖ್ಯವಿದೆ.[13]

ಭಾಸ, ದಂಡಿ, ಬಾಣ, ಸುಬಂಧು, ಹರ್ಷ, ಉದ್ಯೋತನ ಸೂರಿ, ಜಿನಸೇನ, ಸೋಮದೇವ ಸೂರಿ, ಧನಪಾಲ, ಹೇಮಚಂದ್ರ – ಮುಂತಾದ ಪ್ರಾಚೀನ ಲೇಖಕರು ಗುಣಾಢ್ಯನಿಗೂ ಬೃಹತ್ಕಥೆಯೂ ಗೌರವ ತೋರಿದ್ದಾರೆ. ಅವರ ಕಾಲಕ್ಕೆ ಗುಣಾಢ್ಯನ ಕೃತಿ ಕಣ್ಣ ಮುಂದಿತ್ತು. ಬುಧಸ್ವಾಮಿಯ ಬೃಹತ್ಕಥಾಶ್ಲೋಕಸಂಗ್ರಹ (ಸು. ೮ನೆಯ ಶತಮಾನ), ಕ್ಷೇಮೇಂದ್ರನ ಬೃಹತ್ಕಥಾ – ಮಂಜರೀ (೧೦೨೯ – ೧೦೬೪) ಮತ್ತು ಸೋಮದೇವನ ಕಥಾಸರಿತ್ಸಾಗರ (೧೦೬೩ – ೧೦೮೧) ಈ ಮೂರು ಸಂಸ್ಕೃತ ಕೃತಿಗಳು ಗುಣಾಢ್ಯನ ಬೃಹತ್ಕಥೆಯ ಸಂಸ್ಕೃತ ಅನುವಾದಗಳೆಂದು ಗೃಹೀತವಾಗಿವೆ.[14]ಇವು ಮೂರೂ ಕಾವ್ಯಗಳು ಬೇರೆ ಬೇರೆಯಾಗಿ ತನಿಯಾಗಿ ನಿಲ್ಲುತ್ತವೆಯಾದರೂ ಇವಕ್ಕೆ ಮೂಲಗ್ರಂಥ ಮಾತ್ರ ಗುಣಾಢ್ಯನ ಬೃಹತ್ಕಥೆಯೇ ಆಗಿದೆ. ವಾಲ್ಮೀಕಿ ವ್ಯಾಸ ಜಿನಸೇನ ಗುಣಭದ್ರ ಮೊದಲಾದವರಂತೆ ದೊಡ್ಡ ಕವಿಯಾದ ಗುಣಾಢ್ಯನ ಕಾಲವಿಚಾರ ಚರ್ಚಾತೀತವಲ್ಲ; ೧ ರಿಂದ ೬ ನೆಯ ಶತಮಾನದವರೆಗೆ ತೂಗಾಡುತ್ತಿದೆ.[15]ಅಶ್ವಘೋಷ (?), ಭಾಸ, ಶೂದ್ರಕಾದಿಗಳಿಗೆ ಆಕರ ಸ್ವರೂಪಿಯಾಗಿದ್ದು ಸ್ಪೂರ್ತಿ ಕೊಟ್ಟಿರಬಹುದಾದ ಬೃಹತ್ಕಥಾದ ಗುಣಾಢ್ಯನು ೧-೨ ನೆಯ ಶತಮಾನಗಳಿಗೆ ಸೇರಿದವನೆಂದು ಪ್ರಾಜ್ಞರು ಭಾವಿಸಿದ್ದಾರೆ.[16]

ಗುಣಾಢ್ಯನ ಬೃಹತ್ಕಥೆಯ ಪ್ರಾಕೃತ ಪಾಠಪರಂಪರೆಯೆಂದು, ಮೂಲವನ್ನು ಬಹುವಾಗಿ ಹೋಲುತ್ತದೆಂದು ಪರಿಗಣಿತವಾಗಿರುವ ಇನ್ನೊಂದು ಅತ್ಯಂತ ಮಹತ್ವದ ಕಾವ್ಯ ‘ವಸುದೇವಹಿಂಡಿ’. ಜರ್ಮನಿಯ ಕೀಲ್ ವಿಶ್ವವಿದ್ಯಾಲಯದಲ್ಲಿ ಸಂಶೋಧಕ ಪ್ರಾಧ್ಯಾಪಕರಾಗಿದ್ದ, ಜಗದೀಶಚಂದ್ರ (ಜೆ.ಸಿ.) ಜೈನ್ ಅವರ ಹಲವು ವರ್ಷಗಳ ಸಂಶೋಧನ ಪರಿಶ್ರಮದಿಂದ, ಬೃಹತ್ಕಥಾಮಂಜರಿ ಮತ್ತು ಕೆಲವು ಪ್ರಾಕೃತ (ಅ) ಪ್ರಕಟಿತ ಕೃತಿಗಳ ಸಂವಾದಿ ಕಥಾಭಾಗಗಳೊಂದಿಗೆ ತುಲನಾತ್ಮಕ ಸಾಮಗ್ರಿಯನ್ನು ತಕ್ಕೆಡೆಗಳಲ್ಲಿ ಹೋಲಿಸುತ್ತ ಸಿದ್ಧಪಡಿಸಿರುವ ಡಾ || ಜೈನರ ‘ದಿ ವಸುದೇವ ಹಿಂಡಿ’ ಯು ಪ್ರಸ್ತುತ ಚಾರುದತ್ತನ ಕಥೆಯ ಸಂಶೋಧಕರಿಗೆ ವಿಶೇಷ ನೆರವು ನೀಡುತ್ತದೆ.

‘ವಸುದೇವಹಿಂಡಿ’ ಎಂಬ ಕೃತಿ ಮಹಾರಾಷ್ಟ್ರೀ ಪ್ರಾಕೃತ ಭಾಷೆಯಲ್ಲಿ ರಚಿತವಾಗಿದೆ: ಇದರ ಲೇಖಕನು ಸಂಘದಾಸಗಣಿವಾಚಕ.[17] ಹನ್ನೆರಡು, ಕೆಲವು ತಾಳೆಯೋಲೆಯೂ ಸೇರಿ, ಹಸ್ತಪ್ರತಿಗಳ ಸಹಾಯದಿಂದ ಸಿದ್ಧಪಡಿಸಿ ಪ್ರಕಟಿಸಿದ್ದರೂ ೨೯ ಲಂಬಕಗಳಿರುವ ವಸುದೇವಹಿಂಡಿಯಲ್ಲಿ (ಖಂಡ I) ೧೧,೦೦೦ ಶ್ಲೋಕಗಳಲ್ಲಿ ಸುಮಾರು ೫೦ರಷ್ಟು ದೊರೆತಿಲ್ಲ; ನಮ್ಮ ಈ ಸಂಪ್ರಬಂಧ ವಿವೇಚನೆಯಾದ ಚಾರುದತ್ತಕಥೆಗೆ ಸಂಬಂಧಿಸಿದ ಕೆಲವು ಸಾಲುಗಳು ಕೂಡ ಕಳೆದು ಹೋಗಿವೆ.[18] ವಸುದೇವಹಿಂಡಿಯ ಎರಡನೆಯ ಖಂಡದಲ್ಲಿ ೭೧ ಲಂಬಕಗಳೂ ೧೭,೦೦೦ ಶ್ಲೋಕಗಳೂ ಇದ್ದು ಅದನ್ನು ಧರ್ಮಸೇನಗಣಿ ರಚಿಸಿದ್ದಾನೆ.[19] ಅಂದರೆ ವಸುದೇವಹಿಂಡಿಯು ೨೮ ಸಾವಿರ ಶ್ಲೋಕ ಪ್ರಮಾಣದ ಬೃಹತ್ ಕಾವ್ಯ.

ವಸುದೇವಹಿಂಡಿಯ ಪ್ರಭಾವ ಜೈನ ಕಥಾಸಾಹಿತ್ಯದ ಮೇಲೆ ಗಾಢವಾಗಿ ಆಗಿದೆ. ವಸುದೇವಹಿಂಡಿಯನ್ನು ಮೊತ್ತ ಮೊದಲ ಬಾರಿಗೆ ಹೆಸರಿಸಿರುವುದು ಜಿನಭದ್ರಗಣಿ ಕ್ಷಮಾಶ್ರಮಣನ ಷಣ್ಣವತೀ ಕೃತಿಯಲ್ಲಿ : ಇದರ ಕಾಲ ಕ್ರಿ.ಶ. ೬೧೦. ಆದ್ದರಿಂದ ಸ್ಟೆನ್ ಕೊನೊ ಅವರು ಹೇಳಿರುವ ‘ವಸುದೇವಹಿಂಡಿ ೭೦೦ ರ ತರುವಾಯ ರಚಿತವಾಗಿರ ಬೇಕು’ ಎಂಬ ಅಭಿಪ್ರಾಯ ನಿಲ್ಲುವುದಿಲ್ಲ.[20] ಲುಡ್‍ವಿಂಗ್ ಆಲ್ಸ್‌ಡೊರ್ಫ್, ಜೆ, ಸಿ. ಜೈನ್, ಹೀರಾಲಾಲ್ ಜೈನ್ ಮೊದಲಾದವರು ಅಂತರ ಬಾಹ್ಯ ಪ್ರಾಮಣ್ಯಗಳಿಂದ ಸಂಘದಾಸಗಣಿವಾಚಕನ ‘ವಸುದೇವಹಿಂಡಿ’ ಪ್ರಾಕೃತ ಕೃತಿಯ ಕಾಲ ಪ್ರಚೀನತೆವೆಂದು ಅಭಿಪ್ರಾಯಪಟ್ಟಿದ್ದಾರೆ. ಜೈನ ರಾಮಾಯಣದ ಪ್ರಾಚೀನತರ ರೂಪಾಂತರವನ್ನು ಒಳಗೊಂಡಿರುವುದರಿಂದಲೂ ಮಹಾರಾಷ್ಟ್ರೀ ಪ್ರಾಕೃತದ ಮೂಲ ಸ್ವರೂಪವಿರುವುದರಿಂದಲೂ ವಸುದೇವಹಿಂಡಿ, ಮೂರನೆಯ ಶತಮಾನಕ್ಕಿಂತ ಹಿಂದೆ, ಪ್ರಾಯಃ ಒಂದು ಅಥವಾ ಎರಡನೆಯ ಶತಮಾನದಲ್ಲಿ ರಚಿತವಾಗಿರಬೇಕೆಂದು ಜೆ.ಸಿ.ಜೈನ್ ದೃಢಪಡಿಸಿದ್ದಾರೆ.[21]

ಸಂಘದಾಸಗಣಿವಾಚಕನ ವಸುದೇವಹಿಂಡಿ ಪ್ರಾಕೃತ ಗದ್ಯಕಾವ್ಯದಲ್ಲಿ, ೧೨೬ ರಿಂದ ೧೫೫ ನೆಯ ಭಾಗಗಳವರೆಗೆ, ನೂರಾರು ಶ್ಲೋಕ ಪ್ರಮಾಣದಲ್ಲಿ ಚಾರುದತ್ತನ ಕಥೆ ಹರಡಿಕೊಂಡಿದೆ. ವಸುದೇವನು ವಿವಾಹಮಂಟಪ ಹೊಕ್ಕು ಸ್ವಯಂವರ ಪರೀಕ್ಷೆಯಲ್ಲಿ ತನ್ನ ವೀಣಾವಾದನ ನೈಪುಣ್ಯದಿಂದ ಗಂಧರ್ವದತ್ತಾಳನ್ನು ಗೆಲ್ಲುವ ಪ್ರಸಂಗದಲ್ಲಿ ಪ್ರಾರಂಭವಾಗುವ ಚಾರುದತ್ತನ ಆಖ್ಯಾನ ತಾನೇ ಒಂದು ಸ್ವತಂತ್ರ ಕಾವ್ಯವಾಗಿ ನಿಲ್ಲುವ ವಿಸ್ತಾರ ವೈಭವ ಸ್ವಂತ ಕಾಂತಿಯಿಂದ ಹಬ್ಬಿದೆ. ಜೆ.ಸಿ. ಜೈನ್ ಅವರ ಇಂಗ್ಲಿಷ್ ಅನುವಾದದಲ್ಲಿ ಸುಮಾರು ೭೫ ಪುಟದಷ್ಟು ಈ ಕಥೆ ಆವರಿಸಿಕೊಂಡಿದೆ.[22] ಬೃಹತ್ ಕಥಾಶ್ಲೋಕ ಸಂಗ್ರಹ (ಬುಧಸ್ವಾಮಿ)ದಲ್ಲಿ ಸ್ವಾನುದಾಸ, ನರವಾಹನದತ್ತ ಎಂಬುದಕ್ಕೆ ಪ್ರತಿಯಾಗಿ ವಸುದೇವ ಹಿಂಡಿಯಲ್ಲಿ ಚಾರುದತ್ತ, ವಸುದೇವ ಎಂಬ ಹೆಸರುಗಳು ಬಂದಿವೆಯೇ ಹೊರತಾಗಿ ಉಳಿದ ಕಥಾವಿವರಗಳು ಹಸಿಹಸಿಯಾಗಿ ಹಾಗೆ ಹಾಗೇ ಇವೆ.[23] ಪುನ್ನಾಟಸಂಘದ ಜಿನಸೇನರ ಹರಿವಂಶಪುರಾಣಕ್ಕೂ ದೇವೇಂದ್ರಸೂರಿಯ ಕೃಷ್ಣಚರಿತ್ರ ಮುಂತಾದ ಹಲವು ಸಂಸ್ಕೃತ ಪ್ರಾಕೃತಕಾವ್ಯಗಳಿಗೂ ವಸುದೇವಹಿಂಡಿ ಸ್ಫೂರ್ತಿ ಕೊಟ್ಟಿದೆ; ಪ್ರಧಾನವಾಗಿ ಚಾರುದತ್ತನ ಕಥೆಗಳಿಗೆ ಮೂಲಮಾತೃಕೆಯೆನಿಸಿದೆ.[24]

ಚಾರುದತ್ತ – ವಸಂತಸೇನಾರ ಪ್ರಣಯ ಪ್ರಸಂಗ, ಪರಸ್ಪರ ಪ್ರಾಮಾಣಿಕ ಸಂವೇದನೆ, ಅದರಲ್ಲಿಯೂ ಸೂಳೆಯೊಬ್ಬಳು ಆದರ್ಶ ಗರತಿ ಗೃಹಿಣಿಯಾಗಿ ಪರಿವರ್ತಿತಳಾಗುವ ಅಪೂರ್ವ ನಿದರ್ಶನ – ಸಾಮಾನ್ಯರನ್ನೂ ಕವಿಗಳನ್ನೂ ಉದ್ದೀಪಿಸಿ ಜನಪ್ರಿಯವಾಗಿರಬೇಕು : ಈ ಜನಾದರಣೆಯಿಂದಾಗಿ ಜನಪದರು ಕಥೆಗಳನ್ನೂ ಹಾಡು ಗಳನ್ನೂ ಕಟ್ಟಿರಬೇಕು: ಇಂಥದೊಂದು ಜನಪದಸಾಹಿತ್ಯ ಪರಂಪರೆ ಗುಣಾಢ್ಯನಿಗೂ ಹಿಂದಿನಿಂದ ಪ್ರಚಲಿತವಾಗಿರಬೇಕು: ಈ ಕಥೆ ಜನಪದಸಾಹಿತ್ಯದಿಂದ ಒಂದು ಕಡೆ ಬೃಹತ್ಕಥೆ ಮೂಲಕವೂ, ಇನ್ನೊಂದು ಕಡೆ ಅಶ್ವಘೋಷ ಭಾಸ ಶೂದ್ರಕರ ಮೂಲಕವೂ, ಮತ್ತೊಂದು ಕಡೆ ಜೈನಕೃತಿಗಳ ಮೂಲಕವೂ ಪ್ರಕೃತ ಸಂಸ್ಕೃತ ಕಾವ್ಯಕ್ಷೇತ್ರವನ್ನು ಪ್ರವೇಶಿಸಿ ವಿರಾಜಮಾನವಾಗಿರಬೇಕು – ಹೀಗೆ ಈ ದಿಕ್ಕಿನಲ್ಲಿ ಪರಿಭಾವಿಸಲು ಅವಕಾಶವಿದೆ.

ಚಾರುದತ್ತನ ಪಾತ್ರಚಿತ್ರಣ, ಒಟ್ಟು ವ್ಯಕ್ತಿತ್ವವನ್ನು ಸಮೀಕ್ಷಿಸುವಾಗ ಎರಡು ತುದಿಗಳು ಕಾಣುತ್ತವೆ. ಅಶ್ವಘೋಷ ಭಾಸ ಶೂದ್ರಕರು ಉತ್ತರ ಧ್ರುವದಲ್ಲಿ; ಬೃಹತ್ಕಥಾ ಪರಂಪರೆಯ ಲೇಖಕರು ದಕ್ಷಿಣ ದ್ರುವದಲ್ಲಿ, ಜೈನ ಪರಂಪರೆ ಪೂರ್ತಿ ಬೃಹತ್ಕಥಾ ಪರಂಪರೆಯಿಂದ ಮುಂದುವರಿದಿದೆ : ನೆನಪಿಡಬೇಕಾದ, ಒಂದು ಸಮಾನ ಭಾಷೆಗೆ ಸಂಬಂಧಿಸಿದ, ವಿಷಯ; ಮೇಲಿನ ನಾಟಕಗಳು ಮತ್ತು ಬೃಹತ್ಕಥಾ ಪರಂಪರೆಯ ಪ್ರಾಕೃತಕ್ಕೆ ಪಟ್ಟ ಕಟ್ಟಿವೆ. ಚಾರುದತ್ತನ ಜೀವನ ವಿವರಗಳನ್ನೂ ಗೆಳೆಯರ ಬಳಗವನ್ನೂ ವಸಂತಸೇನಾ ಪ್ರಕರಣವನ್ನೂ ದೇಶವಿದೇಶಗಳ ಪ್ರವಾಸ ಕಥನವನ್ನೂ ಸರಿಯಾಗಿ – ಕ್ರಮವಾಗಿ ಗುರುತಿಸಲು ಜೈನ – ಅಜೈನ ಎರಡೂ ಪರಂಪರೆಯ ನಿರೂಪಣೆಯನ್ನು ಅವಶ್ಯ ಅನುಲಕ್ಷಿಸಬೇಕಾಗುತ್ತದೆ.[25]

ಈ ಸಂಪ್ರಬಂಧದ ಆರಂಭದಲ್ಲಿಯೇ ಹೇಳಿದೆ : ಚಾರುದತ್ತನು ಕಥೆಯಲ್ಲಿ ಜೈನ – ಅಜೈನ ಎಂಬ ಎರಡು ಸ್ಪಷ್ಟ ಪಾಠ ಸಂಪ್ರದಾಯಗಳಿವೆ; ಮತ್ತು ಇವೆರಡೂ ಪರಂಪರೆಗಳಿಂದ ಸಿಗುವ ವಿಪುಲ ಸಾಮಗ್ರಿಯ ತುಲನಾತ್ಮಕ ಅಧ್ಯಯನ ಉಪಯುಕ್ತ, ಮೂಲಕಥೆಯ ಸ್ವರೂಪವನ್ನು ಪುನಾರಚಿಸುವ ಪ್ರಯತ್ನಕ್ಕೆ. ಇವೆರಡು ಕಥಾರೂಪಗಳಲ್ಲಿ ಸಮಾನ – ಅಸಮಾನ ಅಂಶಗಳಿವೆಯಾದರೂ ಅವುಗಳ ಅಭ್ಯಾಸದಿಂದ ತಿಳಿದುಬರುವ ಸಂಗತಿಗಳು ಕುತೂಹಲಕಾರಿಯಾಗಿವೆ.

ಜೈನ ಪರಂಪರೆಯಲ್ಲಿ ಚಾರುದತ್ತ ಚರಿತೆಯ ಕಾಳುಗಳ ಬಿತ್ತನೆ, ಮೊಳಕೆ. ಚಿಗುರುವಿಕೆ, ಹದವಾಇ ಆಳವಾಇ ಬೇರುಬಿಟ್ಟು ಮೈತಳೆದದ್ದು – ಇದರ ವ್ಯಾಸಂಗಕ್ಕೆ ಬೇಕಾಗುವ ಆಧಾರಗಳು ಉಪಲಬ್ಧವಾಗಿವೆ : ಅವನ್ನು ಕಾಲ ಕ್ರಮಾಧಾರದಿಂದ ಪರಾಮರ್ಶಿಸಬಹುದು. ಜೈನ ವಾಙ್ಮಯದಲ್ಲಿ ‘ಆರಾಧನಾ’ ಗ್ರಂಥ ವೈಶಿಷ್ಟ್ಯ ಪೂರ್ಣವೆನಿಸಿದೆ.[26] ಈ ಗ್ರಂಥಕ್ಕೆ ಆರಾಧನಾ, ಮೂಲಾರಾಧನಾ, ಭಗವತೀ ಆರಾಧನಾ, ಬೃಹದಾರಾಧನಾ ಎಂಬ ಇತರ ರೂಢಿಯ ಹೆಸರುಗಳಿವೆ.[27]ಇದರ ಲೇಖಕನೂ ಸಹ ಶಿವಾರ್ಯ, ಶಿವಗುಪ್ತ, ಶಿವಕೋಟಿ, ಶಿವಭೂತಿ, ಶಿವಕೋಟ್ಯಾಚಾರ್ಯ, ಸಿವಜ್ಜ, ಶಿವಕೋಟಿ ಮುನಿ-ಎಂಬ ಹೆಸರುಗಳಿಂದ ಮಾನ್ಯನಾಗಿದ್ದಾನೆ[28]: ‘ಈ ಗ್ರಂಥವು ಬಹುತರ ಕ್ರಿ.ಶ. ಪ್ರಾರಂಭದ ಶತಮಾನಗಳಿಂದ ಸೇರಿದುದಾಗಿರಬೇಕು’[29]ಎಂದು ಹೀರಾಲಾಲ್ ಜೈನ್, ‘ಕುಂದಕುಂದರಿಗಿಂದ ಶಿವಾರ್ಯನೇ ಹಿರಿಯನಾಗಿರುವುದೂ ಸಂಭಾವ್ಯ’ ಎಂದು ಆ. ನೇ. ಉಪಾಧ್ಯೆ[30] ಸೂಚಿಸಿದ್ದಾರೆ. ಪ್ರಾಯಃ ಒಂದನೆಯ ಶತಮಾನದವನಾದ ಈ ಶಿವಕೋಟ್ಯಾಚಾರ್ಯನು ತನ್ನೊಂದು ಗಾಹೆಯಲ್ಲಿ ಇಡೀ ಚಾರುದತ್ತನ ಜೀವನ ವೃತ್ತಾಂತ ಸಾರವನ್ನು ಭಟ್ಟೆಯಿಳಿಸಿ ಕೊಟ್ಟಿದ್ದಾನೆ:

            ಜಾದೋ ಹು ಚಾರುದತ್ತೋ ಗೋಟ್ಠೀ ದೋಸೇಣ ತಹ ವಿಣೀದೋ ವಿ
ಗಣಿಯಾಸತ್ತೋ ಮಜ್ಜೇಸತ್ತೋ ಕುಲದೂಸಓ ಯ ತಹಾ
||[31]

ಗಾಥಾರ್ಥ : ಚಾರುದತ್ತ ಶ್ರೇಷ್ಟಿಯು ವಿನಯವುಳ್ಳವನಾಗಿದ್ದರೂ ಕೂದ ಸಂಗತಿಯ ದೋಷದಿಂದ ವೇಶ್ಯೆಯಲ್ಲಿ ಅಸಕ್ತನಾದನು, ಮಧ್ಯಪಾನದಲ್ಲಿ ಅಸಕ್ತನಾದನು, ಮತ್ತು ತನ್ನ ಕುಲದವರ ದೂಷಣೆಗೆ ಪಾತ್ರನಾದನು.

ಮೂಲಾರಾಧನಾ ಕಾಲಕ್ಕಾಗಲೆ, ಕ್ರಿ.ಶ. ಒಂದನೆಯ ಶತಮಾನದ ವೇಳೆಗೆ ಚಾರುದತ್ತವ ಕತೆ ಜೈನ ಪರಂಪರೆಯ ಪ್ರವಾಹದಲ್ಲಿ ವಿಲೀನವಾಗಿತ್ತೆಂಬುದಕ್ಕೆ ಈ ಗಾಹೆ ಸಾಕ್ಷಿ : ಇದರೊಂದಿಗೆ ಸು. ೩-೪ ನೆಯ ಶತಮಾನದ ಸಂಘದಾಸಗಣಿ ವಾಚಕನ ವಸುದೇವಹಿಂಡಿ ಇನ್ನೊಂದು ದೃಷ್ಟಾಂತ. ಇವುಗಳೊಂದಿಗೇನೆ ಸಮೀಕರಿಸಿ ಹೇಳಬೇಕಾದ ಪೂರಕ ಪುರಾವೆಗಳೆಂದರೆ ಪ್ರಾಚೀನ ಜೈನಾಗಮ ಗ್ರಂಥಗಳಲ್ಲೂ ಸಿಗುವ ಸಂವಾದಿ ಕಥೆಯಿರುವ ಅನ್ಯಾನ್ಯ ಆಕರಗಳು : i) ಆಚಾರಾಂಗ ಚೂರ್ಣಿ[32]; ii) ಶ್ರೀಲಾಂಕನ ಸೂರ್ತ್ರ ಕೃತಾಂಗ ವೃತ್ತಿ[33]; iii) ಸೂತ್ರ ಕೃತಾಂಗ ಚೂರ್ಣಿ.[34]

ಇವುಗಳಲ್ಲಿ ಚಾರುದತ್ತ ವರ್ತಕಶ್ರೇಷ್ಠನು ವೇಶ್ಯೆಯಿಂದ ಆಸ್ತಿ ಕಳೆದುಕೊಂಡು, ತನ್ನ ಸೋದರಮಾವನೊಂದಿಗೆ ಸುವರ್ಣಭೂಮಿಯ ತನಕ ಸಂಚಾರ ಕೈಗೊಂಡಿದ್ದು – ಈ ವಿವರಗಳು ಮೇಲಿನ ಆಗಮಗ್ರಂಥಗಳಲ್ಲಿ ದಾಖಲಾಗಿವೆ. ಈ ಧಾರ್ಮಿಕ ಹಿನ್ನೆಲೆಯಿಂದ ಮೂಲಾರಾಧನೆಯ ಗಾಹೆಯಲ್ಲಿ ಕೆನೆಕಟ್ಟಿದಂತೆ ಹರಳುಗೊಂಡಿರುವ ಚಾರುದತ್ತನ ಕಥೆಯು ಆಗಮಕಾರರ ಅಂಗೀಕಾರದ ಮುದ್ರೆ ಹೊತ್ತಿರುವುದಕ್ಕೆ ತಕ್ಕ ನಿದರ್ಶನವಾಗಿದೆ. ಈ ಉದಾಹರಣೆಗಳಿಗೆ ಸ್ಪಷ್ಟ ಪುಷ್ಟಿ ವಸುನಂದಿಯ ಶ್ರಾವಕಾಚಾರದಲ್ಲಿ ಸಿಗುತ್ತದೆ: ಆ ಕೃತಿಯ ಏಳು ಗಾಹೆಗಲಲ್ಲಿ ಸಪ್ರವ್ಯಸನ ದೋಷಗಳನ್ನೂ, ಆ ವ್ಯಸನಗಳಿಗೆ ಒಳಗಾಗಿ ಕಷ್ಟ ನಷ್ಟಗಳನ್ನು ಅನುಭವಿಸಿದವರ ಹೆಸರುಗಳನ್ನೂ ವರ್ಣಿಸಿದೆ. ಅವುಗಳಲ್ಲಿ, ವೇಶ್ಯಾಸಂಗ ಮಾಡಿದ್ದರಿಂದ, ಸರ್ವತ್ರ ನಿಪುಣನಾಗಿದ್ದ ಚಾರುದತ್ತನು ಹಣ ಕಳೆದುಕೊಂಡು, ದುಃಖ ಹೊಂದಿ, ಪರದೇಶಿಯಾದನು – ಎಂದು ಒಂದು ಗಾಹೆ ತಿಳಿಸುತ್ತದೆ:

ಸವ್ವತ್ಥ ಣಿವುಣ ಬುದ್ಧೀ ವೇಸಾಸಂಗೇಣ ಚಾರುದತ್ತೋ ವಿ
ಖ‍ಇ‍ಊಣ ಧಣಂ ಪತ್ತೋ ದುಕ್ಖಂ ಪರದೇಶ ಗಮಣಂ ಚ
||[35]

ಮೂಲಾರಾಧನಾ, ಶ್ರಾವಕಾಚಾರ[36]ಮತ್ತು ಇತರ ಆಗಮಕೃತಿಗಳಲ್ಲಿ ಸೂತ್ರ ಪ್ರಾಯರಾಗಿ ಕೆಲವು ಸಾಲುಗಳಲ್ಲಿ ಇಡೀ ಕಥೆಯನ್ನು ಸಂಕ್ಷೇಪಿಸಿ, ಅದರಿಂದ ಪ್ರತೀತವಾಗುವ ಧಾರ್ಮಿಕಪರವಾದ ನೀತಿಯೊಂದನ್ನು ಉಪದೇಶಿಸುವ ರೀತಿಯ ವರ್ಣನೆಯಿದೆ. ಆದರೆ ಸಂಘದಾಸಗಣಿವಾಚಕನ ‘ವಸುದೇವಹಿಂಡಿ’ ಯಲ್ಲಿ ಮಾತ್ರ ಚಾರುದತ್ತನ ಕಥೆ ಮಳೆಗಾಲದ ನದಿಯಾಗಿ ತುಂಬಿ ಹರಿದಿದೆ.

ಚಾರುದತ್ತನ ಕಥೆಯನ್ನು, ಅನ್ಯ ಕಥೆ/ವಸ್ತುಗಪ್ರಧಾನವಾದ ಕೃತಿಯ ನಡುವೆ, ಉದಾಹರಿಸುವ ಪದ್ಧತಿ ಕೂಡ ಸಾವಿರ ವರ್ಷಗಳಿಂದಲೂ ಬೆಳೆದು ಬಂದಿದೆಯೆಂಬ ವಿಶೇಷ ಅಂಶವನ್ನೂ ಇಲ್ಲಿಯೇ ಹೇಳಬಹುದು. ಅಶ್ವಗೋಷ, ಭಾಸ, ಶೂದ್ರಕರಲ್ಲಿ ಹಾಗಲ್ಲ; ಅವರ ವಸ್ತುವೇ ಚಾರುದತ್ತನನ್ನು ಕುರಿತದ್ದು. ಆದರೆ ಗುಣಾಢ್ಯನ ಬೃಹತ್ಕಥಾ, ಅದರ ಆಧಾರದಿಂದ ಹುಟ್ಟಿದ ಕೃತಿಗಳು, ವಸುದೇವಹಿಂಡಿ- ಇಲ್ಲೆಲ್ಲ ಚಾರುದತ್ತನ ಕಥೆಯೂ ಆನುಷಂಗಿಕವಾಗಿಯೂ ಈ ಬಗೆಯಲ್ಲಿ, ಚಾರುದತ್ತಕಥೆಯೂ ಆನುಷಂಗಿಕವಾಗಿ, ಆದರೆ ಅಗೌಣವಾಗಿ ನಿರೂಪಿತವಾಗಿದೆ. ವಿಷ್ಣುಶರ್ಮನ ಪಂಚ ತಂತ್ರದಲ್ಲಿಯೂ ಈ ಬಗೆಯಲ್ಲಿ, ಚಾರುದತ್ತಕಥೆಯ ಆಂಶಿಕ ವಿವರ ಸೇರಿಕೊಂಡಿದೆ; ಇನ್ನೂ ಸ್ವಾರಸ್ಯವೆಂದರೆ ಪಂಚತಂತ್ರದಲ್ಲಿರುವ ಚಾರುದತ್ತನ ಕಥಾಭಾಗ, ಶೂದ್ರಕನ ಮೃಚ್ಛಕಟಿಕ ನಾಟಕದ ಮೂರನೆಯ ಹಾಗೂ ನಾಲ್ಕನೆಯ ಅಂಕದಿಂದ ಎತ್ತಿ ಕೊಂಡಿರುವ ವರ್ಣನೆಯಾಗಿದೆ.[37] ಸ್ವಾರಸ್ಯವೆಂದರೆ ಜೈನ ಪರಂಪರೆಗೇ ಸೇರಿದ ವಸುಭಾಗಭಟ್ಟನ ಪಂಚತಂತ್ರದ ಕನ್ನಡ ಆವೃತ್ತಿಯಾದ ದುರ್ಗಸಿಂಹನ ಪಂಚತಂತ್ರದಲ್ಲಿ ಚಾರುದತ್ತನ ಕಥೆ ಬಂದಿಲ್ಲ.

ಪ್ರಾಕ್ರುತ ಜೈನಸಾಹಿತ್ಯದಲ್ಲಿ ತೋರವಾಗಿ ಹಬ್ಬಿದ ಚಾರುದತ್ತನ ಕಥೆಗೆ, ಸಂಸ್ಕೃತ ಜೈನ ಸಾಹಿತ್ಯಕ್ಷೇತ್ರದಲ್ಲಿ ಅತ್ಯುನ್ನತವೆನ್ನಬಹುದಾದ ಸ್ಥಾನ ಮತ್ತು ಪ್ರವೇಶವನ್ನು ದೊರಕಿಸಿಕೊಟ್ಟವನು, ಪುನ್ನಾಟಸಂಘದ ಜಿನಸೇನ ಮಹಾಕವಿ : ಜಿನಸೇನನ ‘ಹರಿವಂಶಪುರಾಣ’ ಹಲವು ದೃಷ್ಟಿಗಳಿಂದ ಮತ್ತು ಚಾರುದತ್ತ ಕಥೆಯ ಕಾರಣದಿಂದ ಗಮನಾರ್ಹ ಕಾವ್ಯ.[38] ಜಿನಸೇನನ ಈ ಕಾವ್ಯ ರಚನೆಯಾದದ್ದು ೭೮೩ ರಲ್ಲಿ. ಚಿರಂಜೀವ ಮಹಾಕಾವ್ಯವೆನಿಸಿದ ಹರಿವಂಶಪುರಾಣದಲ್ಲಿ ಜಿನಸೇನನು ಚಾರುದತ್ತನ ಕಥೆಗೆ ಕದಲಿಸಲಾಗದ ಶಿಷ್ಟರೂಪ ಕೊಟ್ಟಿದ್ದಾನೆ. ಪ್ರಾಯಃ ಜಿನಸೇನನು ಚಾರುದತ್ತನ ಕಥೆಗೆ ಕದಲಿಸಿಲಾಗದ ಶಿಷ್ಟರೂಪ ಕೊಟ್ಟಿದ್ದಾನೆ. ಪ್ರಾಯಃ ಜಿನಸೇನನು ವಸುದೇವ ಹಿಂಡಿಯನ್ನು ಆರ್ದ್ರವಾಗಿ ಅಭ್ಯಾಸ ಮಾಡಿ ಅಲ್ಲಿಯ ಚಾರುದತ್ತ ಪಾತ್ರದ ರಮಣೀಯತೆಯಿಂದ ಪರವಶಗೊಂಡಿರಬೇಕು : ಅಂತೂ ಚಸುದೇವಹಿಂಡಿಯ ಪ್ರಭಾವವನ್ನು ಜೀರ್ಣಿಸಿಕೊಂಡು, ಒಂದು ಸುಂದರ ಪ್ರಣಯಕಾವ್ಯವಾಗಿ ಚಾರುದತ್ತನ ಆಖ್ಯಾನವನ್ನು ಮೂರ್ತಗೊಳಿಸಿರುವುದು ಜಿನಸೇನನ ಕವಿಪ್ರತಿಭೆಯ ಕಾಣಿಕೆ. ಜಿನಸೇನನ ಹರಿವಂಶ ಪುರಾಣಂತರ್ಗತವಾಗಿರುವ ಚಾರುದತ್ತನ ಕಥಾವಿವರಗಳ ಚೌಕಟ್ಟು, ಅನಂತರ ಬಂದ, ಈ ವಸ್ತುವನ್ನು ಸ್ವೀಕರಿಸಿದ, ಕವಿಗಳಿಗೆಲ್ಲ ಒಂದು ಸಿದ್ಧಮಾದರಿಯಾಯಿತು. ಇಲ್ಲಿರುವ ಕಥೆಯನ್ನಾಹಲಿ ಅದರ ಒಡಲೊಳಗಿನ ಆಶಯ ಗಳಾದಿಯನ್ನಾಗಲಿ ಮಾರ್ಪಡಿಸುವುದಕ್ಕೆ ತರುವಾಯದ ಜೈನಕವಿಗಳು ಹಿಂಜರಿಕೆ ತೋರಿದಂತೆ ಕಾಣುತ್ತದೆ.[39]

ಹರಿಷೇಣನ ಬೃಹತ್ಕಥಾಕೋಶ ನೂರಾರು ಕಥೆಗಳ ಗಣಿ.[40]ಅದರಲ್ಲಿ ೯೦ ನೆಯ ಕಥೆ ಚಾರುದತ್ತ ವೃತ್ತಾಂಥ. ೯೩೧ರಲ್ಲಿ ರಚಿತವಾದ ಹರಿಷೇಣನ ಸಂಸ್ಕೃತ ಬೃಹತ್ಕಥಾಕೋಶಕ್ಕೆ, ಅನಂತರದ ಹಲವು ಕಥಾಕೋಶಗಳಿಗೆ ಮೂಲ ತಲಕಾವೇರಿ ಶಿವಕೋಟೆಯ ಭಗವತೀ ಆರಾಧನಾ. ಮುನಿ ಶ್ರೀಚಂದ್ರನ (೧೦೭೬) ಕಥಾಕೋಶ ಪ್ರಾಕೃತದಲ್ಲಿದೆ: ಇದರಲ್ಲಿಯ ಸಂಧಿ ೩೫.೯ ನೆಯ ಕಥೆ ಚಾರುದತ್ತನ ವೃತ್ತಾಂತವಾಗಿದೆ:[41] ವಣಿಜಪುತ್ರನಾದ ಚಾರುದತ್ತನು ಗಣಿಕಾಸಕ್ತನಾಗಿ, ವೇಶ್ಯೆಯನ್ನು ಲಗ್ನವಾಗಿ, ಮದ್ಯಾಸಕ್ತನಾದ್ದರಿಂದ ಕುಲನಾಶ ಮತ್ತು ಗೋತ್ರವಿನಾಶ ಹೊಂದಿದನು; ಗೋಷ್ಠೀದೋಷದಿಂದಲೂ ದುಷ್ಟಸಂಸರ್ಗದಿಂದಲೂ ಅವನಿಗೆ ಗೋತ್ರವಿನಾಶ ಹೊಂದಿದನು; ಗೋಷ್ಠೀದೋಷದಿಂದಲೂ ದುಷ್ಟಸಂಸರ್ಗದಿಂದಲೂ ಅವನಿಗೆ ಹೀಗಾಯಿತೆಂದು ೧೨೩ನೆಯ ಕಥೆಯಾಗಿ ಚಾರುದತ್ತ ಸೇಠನ ಕಥೆಯನ್ನು ಶ್ರೀ ಚಂದ್ರನು ಅಪಭ್ರಂಶ ಪ್ರಾಕೃತದಲ್ಲಿ ನಿರೂಪಿಸಿದ್ದಾನೆ.

ಹರಿಷೇಣನ ಬೃಹತ್ಕಥಾಕೋಶ ಮಾದರಿಯ, ಪ್ರಭಾಚಂದ್ರನ (೧೧ ಶ.) ಸಂಸ್ಕೃತ ಗದ್ಯಕಥಾಕೋಶದಲ್ಲಿ ೩೭ನೆಯ ಕಥೆಯಾಗಿ ಚಾರುದತ್ತನ ಕಥಾವೃತ್ತಾಂತ ೨ ೧/೪ ಪುಟಗಳಷ್ಟು ನಿರೂಪಿತವಾಗಿದೆ.[42]ರಾಮಚಂದ್ರ ಮುಮುಕ್ಷುವಿನ (೧೦ ಶ.) ಸಂಸ್ಕೃತ ಪುಣ್ಯಾಶ್ರವ ಕಥಾಕೋಶ,[43]ದೇವೇಂದ್ರಗಣಿ ನೇಮಿಚಂದ್ರನ (೧೧೭೦) ಪ್ರಸಿದ್ಧ ಸಂಸ್ಕೃತ ಕಾವ್ಯ ತ್ರಿಪಷ್ಟಿಶಲಾಕಾಪುರುಷಚರಿತ[44] – ಮುಂತಾದ ಇನ್ನೂ ಕೆಲವು ಸಂಸ್ಕೃತ – ಪ್ರಾಕೃತ ಪದ್ಯ ಹಾಗೂ ಗದ್ಯ ಕೃತಿಗಳಲ್ಲಿ ಚಾರುದತ್ತನ ಕಥೆಯಿದೆ.[45] ಸಂಸ್ಕೃತದಲ್ಲಿರುವ ಮಹಾಕಾವ್ಯವಾದ ಮಹಾಪುರಣದಲ್ಲಿಯೂ[46] ಪ್ರಾಕೃತ ಮಹಾಕಾವ್ಯವಾದ ಪುಷ್ಪದಂತನ ಮಹಾಪುರಣದಲ್ಲಿಯೂ[47] ಕೇವಲ ಚಾರುದತ್ತನ ಹೆಸರಿನ ಪ್ರಸ್ತಾಪವಿದೆಯೇ ಹೊರತು ಕಥೆಯಿಲ್ಲ.

ಕನ್ನಡ ಸಾಹಿತ್ಯದಲ್ಲಿ ಚಾರುದತ್ತನ ಉಲ್ಲೇಖ ಎಂದು ಪ್ರಾರಂಭವಾಯಿತೆಂಬ ಪ್ರಶ್ನೆ ಕುತೂಹಲಕಾರಿಯಾಗಿದ್ದರೂ ಅದಕ್ಕೆ ಖಚಿತ ಉತ್ತರ ಹೆಳುವುದಕ್ಕೆ ತೊಡಕುಗಳಿವೆ. ಪಂಪಪೂರ್ವಯುಗದಲ್ಲಿ ರಚಿತವಾಗಿದ್ದ ಕನ್ನಡ ಕೃತಿರಾಶಿಯಲ್ಲಿ ಶೇಕಡ ೮೫ ರಷ್ಟು ಕೂಡ ನಮಗೆ ದೊರೆತಿಲ್ಲ. ಅನುಪಲಬ್ಧ ಕನ್ನಡ ಗ್ರಂಥಗಳಲ್ಲಿ ಎರಡು ಕಡೆ ಚಾರುದತ್ತನ ಕಥೆ ವಿಸ್ತಾರವಾಗಿಯೇ ಮೈತುಂಬಿಕೊಂಡು ಸೇರಿದ್ದಿರ ಬೇಕೆಂದು ನನ್ನ ತುಲನಾತ್ಮಕ ಸಂಶೋಧನೆಯ ಬಲದಿಂದ ಹೇಳಬಲ್ಲೆ: i) ಭ್ರಾಜಿಷ್ಣು: ಆರಾಧನಾ ಕರ್ಣಾಟಕ ಟೀಕಾ; ಗದ್ಯಕೃತಿ, ಸು. ೮೭೦[48]; ii) (ಒಂದನೆಯ) ಗುಣವರ್ಮ : ಹರಿವಂಶ; ಚಂಪೂಕಾವ್ಯ, ಸು. ೯೦೦.[49]

ಹೀಗಾಗಿ ಉಪಲಬ್ಧ ಕನ್ನಡ ಸಾಹಿತ್ಯ ಕುರಿತು ಮಾತ್ರ ನಾವು ವಿವೇಚಿಸಬಹುದು. ಈಗ ದೊರೆತಿರುವ ಕನ್ನಡ ಕೃತಿಗಳಲ್ಲಿ ಚಾರುದತ್ತನ ಹೆಸರು ಮೊಟ್ಟಮೊದಲು ಕಾಣಿಸುವುದು ಚಾವುಂಡರಾಯಪುರಾಣದಲ್ಲಿ (೯೭೮)[50]; ಆದರೆ ಇಲ್ಲಿರುವುದು ಅವನ ನಾಮೋಲ್ಲೇಖ ಮಾತ್ರ, ಕಥೆ ಬಂದಿಲ್ಲ. ಇದೇ ರೀತಿ ನೇಮಿಚಂದ್ರನ (ಸು. ೧೧೯೦) ಅರ್ಧ ನೇಮಿಪುರಾಣ,[51] ವಿಜಯಣ್ಣಕವಿಯ (೧೪೪೮) ದ್ವಾದಶಾನು ಪ್ರೇಕ್ಷೆ,[52] ಬಾಹುಬಲಿಕವಿಯ (೧೫೯೩) ನಾಗಕುಮಾರ ಚರಿತೆ,[53] ಬೊಮ್ಮಣ್ಣ ಕವಿಯ ನಾಗಕುಮಾರ ಷಟ್ಪದಿ[54] – ಮುಂತಾದ ಕನ್ನಡಕಾವ್ಯಗಳಲ್ಲಿ ಚಾರುದತ್ತನ ಹೆಸರಿದೆ, ಕಥೆಯಿಲ್ಲ. ಅದರೆ ಚಾರುದತ್ತನ ಕಥೆ ಕನ್ನಡದಲ್ಲಿ ಜನಪ್ರಿಯವಾಗಿತ್ತು. ಒಂದನೆಯ ಗುಣವರ್ಮ ಕವಿ ಆ ಕೆಲಸವನ್ನು ಯಶಸ್ವಿಯಾಗಿ ನಿರ್ವಹಿಸಿರಬೇಕು. ಚಂದ್ರರಾಜಕವಿಯ (ಸು. ೧೦೨೫) ಮದನತಿಲಕವೆಂಬ ಕಾಮಶಾಸ್ತ್ರ ಕೃತಿಯಲ್ಲಿ ಚಾರುದತ್ತನನ್ನು ಒಂದು ಪದ್ಯದಲ್ಲಿ (೧೪೪) ಉಲ್ಲೇಖಿಸಿದ್ದಾನೆ.[55] ಪ್ರಕಟವಾಗಿರುವ ಕನ್ನಡಕಾವ್ಯಗಳಲ್ಲಿ ಚಾರುದತ್ತನ ಕಥೆ ಪ್ರಪ್ರಥಮವಾಗಿ ಕಂಡುಬರುವುದು ಕವಿಕರ್ಣಪಾರ್ಯನ (ಸು. ೧೧೫೦) ನೇಮಿನಾಥಪುರಾಣಂ ಎಂಬ ಚಂಪೂಕಾವ್ಯದಲ್ಲಿ.[56]ಇದರ ಗದ್ಯಾನುವಾದ ಸಹಿತ ಸಂಪಾದಿಸಿ ಪ್ರಕಟಿಸಿರುವ ಕೃತಿಯ ಪೀಠಿಕೆಯಲ್ಲಿ ನಾನು ಚಾರುದತ್ತ ಕಥೆಯ ಆಕರಗಳನ್ನೂ, ಹುಟ್ಟು ಬೆಳವಣಿಗೆ ಹಿರಿಮೆಯನ್ನೂ ಸಮೀಕ್ಷಿಸಿ ಪರಿಶೀಲಿಸಿದ್ದೇನೆ.[57]

ಕರ್ಣಪಾರ್ಯನ ಬೆನ್ನಹಿಂದೆಯೇ ಬಂದ ಕವಿ ಬಂಧುವರ್ಮ (ಸು. ೧೧೬೫). ಆತನ ಹರಿವಂಶಾಭ್ಯುದಯ ಒಂದು ಸುಂದರ ಚಂಪೂಕಾವ್ಯ.[58] ಇದರಲ್ಲಿ ಮೂರು, ನಾಲ್ಕು ಮತ್ತು ಐದನೆಯ ಅಧ್ಯಾಯಗಳಲ್ಲಿ ಚಾರುದತ್ತನ ವೃತ್ತಾಂತವನ್ನು ವಿಸ್ತಾರವಾದ ನಿರೂಪಿಸಿದ್ದಾನೆ.[59] ಬಂಧುವರ್ಮನಾದ ಅರ್ಧ ಶತಮಾನದ ಅಂತರ ದಲ್ಲಿ ರಚಿತವಾದ ಮಹಾಬಲಿಕವಿಯು (೧೨೫೪) ರಚಿಸಿರುವ ನೇಮಿನಾಥಪುರಾಣಂ ಎಂಬ ದೊಡ್ಡ ಚಂಪೂ ಕಾವ್ಯದಲ್ಲಿಯೂ ಈ ಕಥೆ ಸ್ವಲ್ಪ ಸಂಕ್ಷೇಪವಾಗಿ ಹರಡಿಕೊಂಡಿದೆ;[60] ಘಟನೆಗಳೆಲ್ಲ ಇವೆಯಾದರೂ ಕಥೆಯ ಓಟ ವೇಗವಾಗಿ ಸಾಗಿದೆ. ಕರ್ಣಪಾರ್ಯ, ಬಂಧುವರ್ಮ ಮತ್ತು ಮಹಾಬಲ – ಇವರದು ಮಾರ ಸಂಪ್ರದಾಯದ ಚಂಪೂಕಾವ್ಯಗಳು. ಬಂಧುವರ್ಮ ಕರ್ಣಪಾರ್ಯನನ್ನು ಬಹುವಾಗಿ ಅನುಸರಿಸಿದ್ದಾನೆ; ಮಹಾಬಲ – ಇವರಿಬ್ಬರನ್ನೂ ಹಿಂಬಾಲಿಸಿದ್ದಾನೆ. ಬಹುಶಃ ಕರ್ಣಪಾರ್ಯನು, ಇಂದು ನಮಗೆ ದೊರೆಯದಿರುವ ಒಂದನೆಯ ಗುಣವರ್ಮನ, ಕನ್ನಡ ಹರಿವಂಶಕಾವ್ಯದ ನಿರೂಪಣೆಯನ್ನು ಆಶ್ರಯಿಸಿರಬೇಕು.

ಮಹಾಬಲನ ತರುವಾಯ ಚಂಪುಕಾವ್ಯ ರೂಪದಲ್ಲಿ ಚಾರುದತ್ತ ವೃತ್ತಾಂತ ನಿರೂಪಿತವಾಗಿರುವುದು ನಾಗರಾಜ ಕವಿಯ (೧೩೩೧) ಪುಣ್ಯಾಸ್ರವದಲ್ಲಿ.[61] ನಾಗರಾಜನಿಗೆ ನೇರ ಆಕರ ಸಂಸ್ಕೃತದಲ್ಲಿ ರಾಮಚಂದ್ರ ಮುಮುಕ್ಷು ರಚಿಸಿರುವ ಪುಣ್ಯಾಸ್ರವ ಕಥಾಕೋಶ. ನಾಗರಾಜನೂ ಸುಮಾರು ೧೪ ಪುಟಗಳಷ್ಟು ಈ ಕಥೆಯನ್ನು ಅಳವಡಿಸಿದ್ದಾನೆ.

ನಾಗರಾಜ ಕವಿಯಿಂದೀಚೆಗೆ ಕನ್ನಡದಲ್ಲಿ ದೇಸಿಕಾವ್ಯಗಳು, ವರ್ಣಕಕಾವ್ಯಗಳು ಜನಪ್ರಿಯವಾಗಿರುವುದನ್ನು ಕಾಣುತ್ತೇವೆ. ಚಾರುದತ್ತನ ವೃತ್ತಾಂತ ಕೂಡ ವರ್ಣಕಕಾವ್ಯಗಳಿಗೆ ಹೇಳಿಮಾಡಿಸಿದಂತೆ ಸಹಜವಾಗಿ ಹೊಂದಿಕೊಳ್ಳುವ ಕಥೆ. ಹೀಗಾಗಿ ಷಟ್ಪದಿ ಮತ್ತಿತರ ಸಾಂಗತ್ಯ ಕಾವ್ಯಗಳಲ್ಲಿ ಚಾರುದತ್ತನ ಆಖ್ಯಾನ ಹೊಸರೂಪ ಪಡೆಯುವಂತಾಯಿತು. ಸಾಳ್ವನೆಂಬ ಕವಿ (೧೪೯೫) ಸಾಳ್ವಭಾರತವೆಂದು ಪ್ರಸಿದ್ಧ ವಾಗಿರುವ ನೇಮಿನಾಥಚರಿತೆಯಲ್ಲಿ ಈ ಕಥೆಯನ್ನು ಹೊಸ ಎರಕಕ್ಕೆ ಹಾಕಿ ತೆಗೆದಿದ್ದಾನೆ:[62] ನೆಯ ಸಂಧಿ ಪೂರ್ತಿ, ೯೯ ಪದ್ಯಗಳಲ್ಲಿ ಈ ಕಥೆಯನ್ನು ಹಿಡಿದಿಟ್ಟಿದ್ದಾನೆ.

ಸಾಳ್ವಕವಿಯ ಮಾದರಿಯನ್ನು ಮುಂದುವರಿಸಿ, ಈ ಕಥೆಯನ್ನು ಷಟ್ಪದಿಯ ಕೊಳಗದಿಂದ ಸಾಂಗತ್ಯದ ಬಳ್ಳಕ್ಕೆ ಸುರಿದವನು ಮಂಗರಸಕವಿ (೧೫೦೮), ತನ್ನ ನೇಮಿಜಿನೇಶಕಾವ್ಯದಲ್ಲಿ.[63] ಕರ್ನಪಾರ್ಯನಿಂದ ಮಂಗರಸನವರೆಗೆ ಮೂರು ನೂರು ವರ್ಷಗಳವರೆಗೆ ಬತ್ತದ ತೊರೆಯಾಗಿ ಹರಿದು ಬಂದಿರುವ ಚಾರುದತ್ತನ ಕಥಾಸಲಿಲದ ಒಟ್ಟು ಚೌಕಟ್ಟು ಸ್ಥೂಲವಾಗಿ ಏಕಪ್ರ್ತಕಾರವಾಗಿರುವುದು ಗಮನಾರ್ಹ : ಅಥೆಯ ವಿಸ್ತಾರದಲ್ಲೂ ಒಳವಿವರಗಳಲ್ಲೂ ಅಲ್ಲೂಂದು ಇಲ್ಲೂಂದು ಏರು ಪೇರೂ ಉಂಟು. ಕರ್ಣಪಾರ್ಯ, ಬಂಧುವರ್ಮ, ಮಹಾಬಲ, ನಾಗರಾಜ, ಸಾಳ್ವ, ಮಂಗರಸ -ಈ ಕವಿಗಳ ಕಾವ್ಯಗಳಲ್ಲಿ ಚಾರುದತ್ತನ ಕಥೆ ಸ್ವತಂತ್ರ ಖಂಡಕಾವ್ಯದಂತೆ ಮೈತುಂಬಿಕೊಂಡು ಬಂದಿದೆ. ಪ್ರಾಕೃತ ಸಂಸ್ಕೃತ ಸಾಹಿತ್ಯದಲ್ಲಷ್ಟೇ ಅಲ್ಲದೆ ಕನ್ನಡ ಸಾಹಿತ್ಯದಲ್ಲೂ ಚಾರುದತ್ತ ಕಥಾಪರಂಪರೆ ಬಲು ಹುಲುಸಾಗಿದೆ. ಜೈನೆತರ ಹಾಗೂ ಜೈನ ಸಂಪ್ರದಾಯಗಳಲ್ಲಿ ಹಾದು ಬಂದಿರುವ ಈ ಕಥೆಯಲ್ಲಿ ಮುಖ್ಯ ವ್ಯತ್ಯಾಸಗಳನ್ನು ವಿಂಗಡಿಸಿ ತೋರಿಸಬಹುದು:

೧. ಅಜೈನ ಪರಂಪರೆಯಲ್ಲಿರುವ ಚಾರುದತ್ತ ವೃತ್ತಾಂತ ವಿಶೇಷಗಳು:

ಅ. ನಾಟಕಗಳಷ್ಟೇ ಚಾರುದತ್ತನ ಕಥೆಯನ್ನೊಳಗೊಂಡಿವೆ; ಬೃಹತ್ಕಥಾ ಇದಕ್ಕೆ ಅಪವಾದ

ಆ. ಈ ಕಥೆ ಹೆಳುವ ಸ್ವತಂತ್ರ ಕಾವ್ಯಗಳಿಲ್ಲ

ಇ. ಜೈನ ಪರಂಪರೆಯಲ್ಲಿರುವಂತೆ ಈ ಕಥೆ ಇಲ್ಲಿ ಜನಪ್ರಿಯವಾಗಿಲ್ಲ

ಈ. ಈ ಕಥೆಯ ಘಟನೆಗಳು ನಡೆಯುವುದು ಮುಖ್ಯವಾಗಿ ಉಜ್ಜಯಿನಿಯಲ್ಲಿ

ಉ. ಚಾರಿತ್ರಿಕ ಅಂಶವೂ ಸಾಮಾಜಿಕದಷ್ಟೇ ಪ್ರಾಧಾನ್ಯ ಪಡೆದಿದೆ; ಮೃಚ್ಛಕಟಿಕವನ್ನು ದೃಷ್ಟಿಯಲ್ಲಿರಿಸಿ ಹೀಗೆ ಹೇಳಿದೆ; ಮೂಲ ಗುಣಾಢ್ಯನಲ್ಲಿ ಹೀಗಿರಲಾರದು

ಊ. ಈ ಕಥೆ ಯಾವುದೇ ಒಂದು ಧಾರ್ಮಿಕ ಉದ್ದೇಶವನ್ನು ಗರ್ಭೀಕರಿಸಿಲ್ಲ

ಎ. ಗುಣಾಢ್ಯನ ಜಾತಿಮತಾದಿಗಳು ತಿಳಿಯದು; ಅವನ ಬೃಹತ್ಕಥಾಕಾವ್ಯದಲ್ಲಿ ಈ ಕಥೆ ಸುದೀರ್ಘವಾಗಿದೆ.[64] ಗುಣಾಢ್ಯನ ಪ್ರಭಾವವೂ ಜೈನ ಪರಂಪರೆಗೆ ಸ್ಫೂರ್ತಿ ತುಂಬಿರಬೇಕೆನ್ನುತ್ತಾರೆ ಜೆ.ಸಿ. ಜೈನ್[65]

೨. ಜೈನ ಪರಂಪರೆಯಲ್ಲಿ ಚಾರುದತ್ತ ವೃತ್ತಾಂತ ವಿಶೇಷಗಳು :

ಅ. ಚಾರುದತ್ತ ಕಥೆಯಿರುವ ನಾಟಕಗಳಿಲ್ಲ

ಆ. ಸುಮಾರು ೩೦ಕ್ಕೂ ಹೆಚ್ಚು ಕಾವ್ಯಗಳಲ್ಲಿ ಈ ಕತೆಯಿದೆ / ಪ್ರಸ್ತಾಪವಿದೆ

ಇ. ಈ ಕಥೆ ಇಲ್ಲಿ ತುಂಬ ಜನಪ್ರಿಯ. ಧೀರ ಲಲಿತ ನಾಯಕನಂತೆ ವರ್ತಕನಾದ ಚಾರುದತ್ತನ ಪಾತ್ರ ಚಿತ್ರಣವಿದೆ. ಜೈನ ಕಥಾಸಾಹಿತ್ಯದಲ್ಲಿ ಜನಪ್ರಿಯ ನಾಯಕರಾದ ವಸುದೇವ, ನಾಗಕುಮಾರ,[66] ಧನ್ಯ ಕುಮಾರ[67] ಇವರ ಶ್ರೇಣಿಯಲ್ಲಿ ಚಾರುದತ್ತ ಕೂಡ ನಿಲ್ಲುತ್ತಾನೆ. ೬೩ ಜನ ಮಹಾಪುರುಷರ ಪಟ್ಟಿಯಲ್ಲಿ ಇರದಿದ್ದರೂ ಚಾರುದತ್ತನು ಒಬ್ಬ ಮಹಿಮಾ ಪುರುಷನಾಗಿ ಮಾನ್ಯನಾಗಿರುವುದನ್ನು ವಿಶೇಷವಾಗಿ ಗುರುತಿಸಬೇಕು.

ಈ. ಇಲ್ಲಿ ಕಥೆಯ ಘಟನೆಗಳು ನಡೆಯುವುದು ಮುಖ್ಯವಾಗಿ ಚಂಪಾನಗರದಲ್ಲಿ

ಉ. ಚಾರಿತ್ರಿಕ ಸಂಗತಿಗಳು ಹಿನ್ನೆಲೆಗೆ ಸರಿದು, ಸಾಮಾಜಿಕ ಪ್ರಾಮುಖ್ಯ ಪಡೆದಿವೆ

ಊ. ಈ ಕಥೆ ಧಾರ್ಮಿಕ ಉದ್ದೇಶ ಪ್ರತಿಪಾದನೆಗೆ ಬಂದಿದೆ; ಜೈನಧರ್ಮದ ಹಿರಿಮೆ ತೋರಿಸಲೂ ಸಪ್ತವ್ಯಸನಗಳಿಗೆ ಒಳಗಾದವರು ಅನುಭವಿಸುವ ದುಃಖ ಪರಂಪರೆಯನ್ನು ನಿದರ್ಶನವಾಗಿಸಲೂ ಈ ಕಥೆ ಬಳಕೆಯಾಗಿದೆ[68]

ಅಜೈನ ಪರಂಪರೆಯಲ್ಲಿ ಈ ಕಥೆ ಹೆಚ್ಚು ಪ್ರಚಾರ ಪಡೆದುಕೊಳ್ಳದಿರಲೂ ಜೈನ ಪರಂಪರೆಯಲ್ಲಿ ಹೆಚ್ಚು ಪ್ರಚಾರ ಪಡೆಯಲೂ ಈ ಅಂಶವೂ ಕಾರಣವಾಗಿರುವಂತೆ ಕಾಣುತ್ತದೆ.

ಇದುವರೆಗಿನ ಈ ತೌಲನಿಕ ಅಧ್ಯಯನದಿಂದ ಹೊರಡುವ ತೀರ್ಮಾನಗಳನ್ನು ಚರ್ಚಿಸಬಹುದು. ಚಾರುದತ್ತನ ಕಥೆ ಮೂಲತಃ ಒಂದು ಜನಪದ ಕಥೆ. ಗುಣಾಢ್ಯನಿಗಿಂತ ಮೊದಲು ಚಾರುದತ್ತನ ಸದ್ಗುಣಗಳನ್ನೂ, ಚಾರುದತ್ತ – ವಸಂತಸೇನಾರ ಸಂಬಂಧವನ್ನೂ, ಆಕೆಯ ರೂಪಾತಿಶಯವನ್ನೂ, ಚಾರುದತ್ತನಲ್ಲಿ ಆಕೆ ತಳೆದ ಅನುರಾಗದ ಆಳ-ಅಕುಟಿಲತೆಯನ್ನೂ ಕುರಿತ ಜನಪದಗೀತೆ ಕತೆ ಲಾವಣಿಗಳು ಪ್ರಾಕೃತ ಜನಭಾಷೆಗಳಲ್ಲಿ ಪ್ರಚಾರದಲ್ಲಿರಬೇಕು; ಅದಕ್ಕೆ ಗುಣಾಢ್ಯನೂ ಶಿವಕೋಟಿ, ಸಂಘದಾಸಗಣಿವಾಚಕ ಮೊದಲಾದವರೂ ಒಂದು ಮೌಲಿಕವೂ ಸ್ಥಾಯಿತೂ ಆದ ಸ್ವರೂಪ – ಸ್ಥಾನ ನೀಡಿರಬೇಕು. ಸಾಮಾನ್ಯ ತೋಂಡಿ ಪರಂಪರೆಯಿಂದ ಇಂಥ ಒಂದು ಕಥೆ ಪ್ರೌಢ / ಶಿಷ್ಟ ಪರಂಪರೆಗೆ ಪ್ರವೇಶ ಪಡೆದುಕೊಂಡ ವಿಧಾನಕ್ಕೆ ಜಾನಪದ ಅಧ್ಯಯನದಲ್ಲಿ ವಿಶೇಷ ಪ್ರಾಮುಖ್ಯವಿದೆ. ಪರಿಮಿತ ಆಶಯವೊಂದನ್ನು ಪೂರೈಸಲು ಹುಟ್ಟಿಕೊಂಡ ಈ ಕಥೆ ಶಿಷ್ಟಪದ ಸಾಹಿತ್ಯಲೋಕ ಹೊಕ್ಕಮೇಲೆ, ಹಲವು ಲೇಖಕರ ಮುದ್ರೆಗಳನ್ನು ಹೊತ್ತುಕೊಂಡು ವಿಸ್ತಾರ ವೈವಿಧ್ಯಗಳಿಂದ ಮೈತುಂಬಿಕೊಂಡಿದೆ; ಇದರಲ್ಲಿ ಈಗ ವಿಭಿನ್ನ ಪರಂಪರೆಗಳನ್ನೂ ಪಾಠ ಪ್ರಭೇದಗಳನ್ನೂ ಗುರುತಿಸುವುದು ಅವಶ್ಯವೆನಿಸುವಷ್ಟು ವಿಸ್ತಾರ ಕಂಡುಬರುತ್ತದೆ.[69]

ಚಾರುದತ್ತನ ಕಥೆ ಈಗ ಗೊತ್ತಾಗಿರುವಂತೆ ಗುಣಾಢ್ಯನ ಬೃಹತ್ಕಥೆಯ ಕಾಲದಲ್ಲಿ ಮೊದಲು ಸಾಹಿತ್ಯರಂಗ ಪ್ರವೇಶಿಸಿರಬಹುದು. ಪೈಶಾಚಿ ಭಾಷೆಯ ಬೃಹತ್ಕಥೆಯನ್ನು ಪುನಾರಚಿಸುವ ವಿದ್ವತ್ಕಾರ ನಡೆದಿದೆ. ಅಲೌಕಿಕ ಪಾತ್ರಗಳಿಗಿಂತ ಮಣ್ಣಿನ ಮಹತ್ವ ಕೊಡುವ, ಪತಿತ ಪಾತ್ರಗಳನ್ನೂ ಪುನರುಜ್ಜೀವಿಸ ಅನುಕಂಪೆ ಸಿಂಪಡಿಸುವ ಗುಣಾಢ್ಯನ ಮನೋಧರ್ಮವನ್ನು ಗಮನಿಸಿದವರಿಗೆ ಈ ಕಥೆ ಅವನ ಕಲ್ಪನೆಯ ಮೂಸೆಯಲ್ಲಿ ಹೊಸ ಆಕಾರ ತಳೆಯಿತೆಂಬ ನಂಬಿಕೆ ಹುರುಗೊಳ್ಳುತ್ತದೆ. ಇದಕ್ಕೆ ಉಪಷ್ಟಂಬಕವಾಗಿ ಗುಣಾಢ್ಯನ ಬೃಹತ್ಕಥೆಯ ನೆರಳಾಗಿ ಅರಳಿರುವ ಅನಂತರದ ಕೆಲವು ಕೃತಿಗಳಲ್ಲಿ ಚಾರುದತ್ತನ ಕಥೆ ಚೆಲ್ಲವರಿದಿದೆ.

ಲಭ್ಯವಾಙ್ಮಯದಲ್ಲಿ ಚಾರುದತ್ತನ ಚಟುವಟಿಕೆ ಕಾಣುವುದು ಭಾಸನ (ದರಿದ್ರ) ಚಾರುದತ್ತದಲ್ಲಿ : ನಾಲ್ಕಂಕದ ಈ ಕಿರುನಾಟಕ ಅರೆಮುಗಿದ ರೀತಿಯಲ್ಲಿ ನಿಂತರೂ ತನ್ನ ಸರಳತನದಿಂದ ಸೆಳೆಯುತ್ತದೆ; ಈ ಅಪೂರ್ಣ ನಾಟಕ ಚಾರುದತ್ತನೂ ಅಪೂರ್ಣನಾಗಿಯೇ ಉಳಿಯುತ್ತಾನೆ. ಇದಕ್ಕೆ ಪೂರ್ಣತೆಯನ್ನು ತಂದುಕೊಟ್ಟವನು ಶೂದ್ರಕ; ಇಂದಿಗೂ ಅರ್ವಾಚೀನವೆನಿಸುವ ಮೃಚ್ಛಕಟಿಕಕ್ಕೆ ಚಾರುದತ್ತನ ಪಾತ್ರ ಪರಿಕಲ್ಪನೆಯ ಇತಿಹಾಸದಲ್ಲಿ ವಿಶಿಷ್ಟ ಸ್ಥಾನವಿದೆ. ಇಲ್ಲಿ ವಾಸ್ತವವಾಗಿ ಸಂಭವಿಸಿದ ಐತಿಹಾಸಿಕ ಘಟನೆಯೊಂದರ ಆಧಾರದಿಂದ ಈ ನಾಟಕ ರೂಪಗೊಂಡಿರಬಹುದೇನೋ ಎಂಬ ಸಂಭಾವ್ಯತೆಯ ಗುಂಗಿನಲ್ಲಿ ನಿಲ್ಲುತ್ತೇವೆ. ಇಲ್ಲಿಂದ ಮುಂದಕ್ಕೆ ಸಿಗುವ ಕಥೆಯ ನಡಿಗೆ ನೆಲದ ಮೇಲಿಂದ ಜಿಗಿಯುತ್ತಾ, ಮಣ್ಣಿನ ಸಂಪರ್ಕದಿಂದ ಬಿಡಿಸಿಕೊಳ್ಳುತ್ತ, ನೆಲಬಾನುಗಳನ್ನು ತಬ್ಬಿಕೊಳ್ಳುತ್ತಾ ತ್ರಿವಿಕ್ರಮವಾಗಿ ಬೆಳೆದಿದೆ.[70]

ಜೈನ ಕಥಾಸಾಹಿತ್ಯ ಪರ್ವತಪಂಕ್ತಿಯ ಶಿಖರಗಳಲ್ಲಿ ಚಾರುದತ್ತನ ಕಥೆಯೂ ಗಣ್ಯ. ಗುಣಾಢ್ಯನೂ ಜೈನ ಆಗಮಗಳಲ್ಲಿ ಚನ ಕಾಲಕ್ಕಾಗಲೇ ಸಮಾನಾಂತರವಾಗಿ ಪ್ರಚಲಿತವಿದ್ದ ಈ ಕಥಾ ಪರಂಪರೆಯ ಪರಿಚಯವನ್ನು ಪಡೆದಿದ್ದಿರಬಹುದು : ಶಿವಕೋಟ್ಯಚಾರ್ಯನ ಮೂಲಾರಾಧನೆಯಂಥ ಒಂದನೆಯ ಶತಮಾನದ ಕೃತಿಯಲ್ಲೇ ಚಾರುದತ್ತನ ಜೀವನಚರಿತ್ರೆಯಷ್ಟೂ ಭಟ್ಟಿಯಿಳಿದ ಗಾಹೆಯಿರುವುದನ್ನು ಇಲ್ಲಿ ನಾವೆಲ್ಲ ಸ್ಮರಿಸಬಹುದು. ಆದರೆ ವಸುದೇವಹಿಂಡಿಯಲ್ಲಿ ಮಾತ್ರ ಬೃಹತ್ಕಥೆಯ ಹೆಜ್ಜೆ ಗುರುತುಗಳಿರುವುದನ್ನು ಒಪ್ಪಿಕೊಳ್ಳಬೇಕು. ಈ ಪರಂಪರೆ ಹೀಗೆಯೇ ಚಾಚಿಕೊಂಡು ಹರಿಷೇಣ, ಪ್ರಭಾಚಂದ್ರ, ಶ್ರೀಚಂದ್ರ ಮೊದಲಾದವರಲ್ಲಿ ಮುಂದುವರಿದಿದೆ. ಬೃಹತ್ಕಥೆಯ, ವಸುದೇವ ಹಿಂಡಿಯ, ಮೂಲಾರಾಧನೆಯ ಮುಪ್ಪುರಿಗೊಂಡ ಈ ಸಂಪ್ರದಾಯವನ್ನು ಬೇರೊಂದು ಪದ್ಧತಿಗೆ ತಿದ್ದಿದವನು ಜಿನಸೇನ ಕವಿ.

ಪುನ್ನಾಟಸಂಘದ ಜಿನಸೇನನು ತನ್ನ ಹರಿವಂಶಪುರಾಣ ಮಾಲೆಯಲ್ಲಿ ಚಾರುದತ್ತ ವೃತ್ತಾಂತ ಪುಷ್ಪವನ್ನು ಪೋಣಿಸುವವರೆಗೆ ಆ ಕಥೆ ತನಿಯಾಗಿ ತೇಲುತ್ತಿತ್ತು. ಬೃಹತ್ಕಥೆಯ ಸಂಪ್ರದಾಯದ ಜೈನ ವಸುದೇವಹಿಂಡಿಯಲ್ಲಿ ಕೂಡ ಉದಯನ, ನರವಾಹನದತ್ತರ ಪ್ರಾಧಾನ್ಯವಿದೆ, ಚಾರುದತ್ತನ ಕಥೆಗೆ ಗೌಣಸ್ಥಾನವಿದೆ; ಅದು ನೇಮಿನಾಥ ತೀರ್ಥಂಕರನ ಚರಿತೆಯ ಭಾಗವಾಗಿಲ್ಲ. ಆದರೆ ನೇಮಿನಾಥಚರಿತೆಯೊಳಗೆ ಈ ಚಾರುದತ್ತನ ಕತೆಯನ್ನು ಬೆಸುಗೆಹಾಕಿ ವಜ್ರದ ಲೇಪಹಚ್ಚಿ, ಬೇರ್ಪಡಿಸಲಾಗದ ಸಾವಯತೆಯಿಂದ ಮರು ಎರಕ ಹಾಕಿ ತೆಗೆದ ಮಹಾಕವಿ ಜಿನಸೇನ. ಅದುವರೆಗೆ ತೆಳ್ಳಗೆ ತೇಲಿ, ಕೈಕಾಲು ಪಡೆದು, ತೋರವಾಗಿ ಬೆಳೆದು ನಿಂತ ಈ ಕಥೆ ಮಹಕವಿಯನ್ನೂ ಮಾತನಾಡಿಸಿ ಸ್ನೇಹ ಸಂಪಾದಿಸಿದ್ದು ಕಥೆಯೊಳಗಿರುವ ಸೊಗಸುಗಾರಿಕೆ.[71]

ಚಾರುದತ್ತ ಶ್ರೀಮಂತ, ವರ್ತಕ, ಸುಂದರಾಂಗ, ತರುನ, ಶೀಲಸಂಪನ್ನ, ತುಂಬು ಗಾಂಭೀರ್ಯದಿಂದ ಕೂಡಿದ ಸ್ವಭಾವದವ. ಸಂಗೀತ ಸಾಹಿತ್ಯಗಳಲ್ಲಿ ಒಲವು. ಸ್ನೇಹವಂತಿಕೆ, ಕಲಾಪ್ರಜ್ಞೆ ಅವನ ವ್ಯಕ್ತಿತ್ವವನ್ನು ಪ್ರಕಾಶಗೊಳಿಸಿದ್ದುವು. ಇಂಥವನನ್ನು ಗಣಿಕೆಯೊಬ್ಬಳು ಮನಸಾ ಮೆಚ್ಚಿ ಸ್ವೀಕರಿಸಿದಳು. ಅವನ ಹಣಕ್ಕಿಂತ ಅನುರಾಗ ದೊಡ್ಡದೆಂದು ಆರಾಧಿಸಿದಳು. ಪ್ರಾರಂಭದಲ್ಲಿ ಪ್ರಣಯ ವ್ಯವಹಾರದಿಂದ ನೂರುಮಾರು ದೂರ ಸರಿದಿದ್ದ ಚಾರುದತ್ತ ವಸಂತಸೇನೆಯ ರತಿಸುಖಕ್ಕಿಂತ ಬೇರೆ ಪ್ರಪಂಚ ಕಾಣದಾದ. ವೇಶ್ಯಾಗೃಹದಿಂದ ಅರೆಪ್ರಜ್ಞಾವಸ್ಥೆಯಲ್ಲಿ ಹೊರಹಾಕಲ್ಪಟ್ಟ ಮೇಲೆ ಅವನ ಬಾಳು ಬೇರೆ ದಿಕ್ಕಿನಲ್ಲಿ ಬೆಳೆಯಿತು. ಏಳುಬೀಳುಗಳಲ್ಲಿ ಜೀವನಜೋಕಾಲಿ ತೂಗಾಡುವುದನ್ನು ಜೈನಕಾವ್ಯಗಳು ರಂಜಕತೆಯಲ್ಲಿ ಮುಳುಗಿಸಿವೆ. ವರ್ಗತಾರತಮ್ಯ, ರಾಜಕೀಯ ಪರಿಸ್ಥಿತಿ, ಸಾಮಾಜಿಕ ಮೌಲ್ಯ, ಮನುಷ್ಯ ಸ್ವಭಾವ – ಮುಂತಾದ ಸಂಕೀರ್ಣ ಗ್ರಹಿಕೆಯಿಂದ ಈ ಕಥೆ ದೇಶ ಜನಾಂಗ ಗಡಿಗಳನ್ನು ಅಳಿಸಿ ಸಾರ್ವತ್ರಿಕತೆ ಪಡೆಯಿತು.[72]

ಕನ್ನಡದ ಜೈನಕವಿಗಳೂ ಈ ಕಥೆಯನ್ನು ಜನಪ್ರಿಯಗೊಳಿಸುವ ಸಾಹಿತ್ಯ ಕಾರ್ಯದಲ್ಲಿ ಹಿಂದೆ ಬೀಳಲಿಲ್ಲ. ಒಂದನೆಯ ಗುಣವರ್ಮನ ಹರಿವಂಶ, ಕರ್ಣಪಾರ್ಯನ ನೇಮಿನಾಥಪುರಾಣ, ಬಂಧುವರ್ಮನ ಹರಿವಂಶಾಭ್ಯುದಯಗಳನ್ನು ಓದಿದ ಹರಿಹರ ಮಹಾಕವಿಯಂಥಹವನು ಕೂಡ ಆ ಕಾವ್ಯಗಳಿಂದ ಚಾರುದತ್ತನ ಕಥೆಯೆನ್ನಿತ್ತಿಕೊಂಡು ಮಲುಹಣನನ್ನಾಗಿಸಿದ್ದಾನೆ. ಚಾರುದತ್ತ – ವಸಂತಸೇನೆಯರು ಮಲುಹಣ ಮಲುಹಣಿ ಯಾಗಿದ್ದಾರೆ; ಜೈನಪರ ಕಥೆ ಶಿವಪರವಾಗಿ ಪರಿವರ್ತನೆ ಪಡೆದಿದೆ. ಜನಪದಕಥೆ ಯೊಂದು ಶಿಷ್ಟಪದ ಸಾಹಿತ್ಯಲೋಕ ಹೊಕ್ಕು ಜೈನ-ಶೈವ-ವೈಷ್ಣವ ಕ್ಷೇತ್ರಗಳಲ್ಲಿ ಸಂಚರಿಸಿದ ರೀತಿ ರೋಚಕವಾಗಿದೆ.[73]

ರಾಮಾಯಣ ಮಹಾಭಾರತಗಳಲ್ಲಿರುವ ದೇವತೆಗಳು ವಿಷ್ಣು, ಶಿವ, ಗುಣಾಢ್ಯನ ಬೃಹತ್ಕಥೆಯಲ್ಲಿ ಮುಖ್ಯದೇವತೆ ಕುಬೇರ-ಧನದ. ಜೈನಪುರಾಣ ಮತ್ತು ಕಥಾ ಸಾಹಿತ್ಯದ ಹೆಚ್ಚು ಪಾತ್ರಗಳು ವಣಿಜರು. ವರ್ತಕರ ಆರಾಧ್ಯದೈವ ನಿಧಿಗಳೊಡಯ ಕುಬೇರ. ಜೈನರ ೨೦ನೆಯ ತೀರ್ಥಂಕರ ಮುನಿಸುವ್ರತನ ಯಕ್ಷನ ಹೆಸರು ಕುಬೇರ.[74] ಚಾರುದತ್ತ ವರ್ತಕಶ್ರೇಷ್ಠ!

ಚಾರುದತ್ತನ ಕಥೆ ಕ್ರಿಸ್ತಪೂರ್ವ ಕಾಲದಿಂದ ಕ್ರಿಸ್ತಶಕದವರೆಗೆ ದೇಶವಿದೇಶ ಗಳನ್ನು ಸಂಚರಿಸಿ ಇಂದಿಗೂ ವೇಷಾಂತರಗಳಿಂದ ಪ್ರಚಲಿತವಾಗಿದೆ. ಅರೇಬಿಯನ್ ನೈಟ್ಸ್ ಕಥೆಯಲ್ಲಿ ಬರುವ ಸಿಂದಾಬಾದಿನ ನಾವಿಕನ ಕಥೆಗೆ ಮೂಲ ಈ ಚಾರುದತ್ತನ ಕಥೆ. ಇದರ ನವೀಕೃತ ರೂಪವೇ ದೇವದಾಸಿನಾಟಕ : ಚಾರುದತ್ತ ಇಲ್ಲಿ ಸಖಾರಾಮ, ವಸಂತಸೇನೆ ತಂಗಿ, ಚಾರುದತ್ತನ ಗೆಳೆಯ ಇಲ್ಲಿ ನಾಜೂಕಯ್ಯ, ವಸಂತಸೇನೆಯ ತಾಯಿಯ ಬದಲು ಇಲ್ಲಿ ಅಕ್ಕನ ಪಾತ್ರ ಬಂದಿದೆ. ಮೂಲ ಆಶಯ ಸತ್ವ ಉಳಿಸಿಕೊಂಡು ಅದಕ್ಕೆ, ವರ್ತಮಾನಕ್ಕೆ ಪ್ರಸ್ತುತವಾಗುವ ತಿದ್ದುಪಡಿಗಳನ್ನು ಅಳವಡಿಸಲಾಗಿದೆ.

ಚಾರುದತ್ತನ ಕಥೆ ಎರಡುಸಾವಿರ ವರ್ಷಗಳ ಕಾಲಮಾನದ ಚೌಕಟ್ಟಿನಲ್ಲಿ ಮುಪ್ಪಿಲ್ಲದೆ ಬೆಳೆದು ಬಂದಿದೆ. ಇದರ ವಿಕಾಸದ ಇತಿಹಾಸವನ್ನೂ ಸಾಹಿತ್ಯಕ – ಸಾಮಾಜಿಕ ಆಯಾಮಗಳನ್ನೂ ತುಲನಾತ್ಮಕವಾಗಿ, ವ್ಯಾಪಕವಾಗಿ ನಡೆದರೆ ಇನ್ನಷ್ಟು ಹೊಸ ವಿಷಯಗಳು ಬೆಳಕಿಗೆ ಬಂದಾವು. ಈ ಕಥೆಯ ಮೂಲ ಚೂಲಗಳ ವಿನ್ಯಾಸವನ್ನು ವಿಶ್ಲೇಷಿಸುವುದಕ್ಕೆ ಬೇಕಾದ ಮೂಲ ಆಕರಗಳಲ್ಲಿ ಕೆಲವನ್ನು ಡಾ || ಜಗದೀಶಚಂದ್ರ ಜೈನ್ ಅವರು ತಮ್ಮ ಇತ್ತೀಚಿನ ಉತ್ತಮ ಸಂಶೋಧನ ಗ್ರಂಥ ‘ವಸುದೇವಹಿಂಡಿ’ (೧೯೭೭) ಯಲ್ಲಿ ಕೊಟ್ಟಿದ್ದಾರೆ. ಅದಕ್ಕೆ ಪೂರಕವಾಗಿ ಸೇರಿಸಿ ಅಭ್ಯಸಿಸಬೇಕಾದ ಮತ್ತಷ್ಟು ಆಕರ ಆಧಾರಗಳನ್ನು ಈ ಸಂಪ್ರಬಂಧದಲ್ಲಿ ಒದಗಿಸಿದ್ದೇನೆ. ಅಲ್ಲದೆ ಜೆ.ಸಿ. ಜೈನರ ಕೃತಿಯ ವಿವೇಚನೆಯಲ್ಲಿ ಕನ್ನಡದ ಮಾಹಿತಿಗಳೆಲ್ಲ ಕೈಬಿಟ್ಟು ಹೋಗಿವೆ.[75]

ಕನ್ನಡದಲ್ಲಿರುವ ವಿಪುಲ ಸಾಮಗ್ರಿ ಹಿಂದಿಯಲ್ಲಿ, ಇಂಗ್ಲೀಷಿನಲ್ಲಿ ಬರೆಯುವ ವಿದ್ವಾಂಸರಿಗೆ ಸುಲಭವಾಗಿ ಸಿಗುತ್ತಿಲ್ಲ. ಕನ್ನಡಸಾಹಿತ್ಯದ ಸರಿಯಾದ ಪರಿಚಯ ಕನ್ನಡೇತರ ಭಾಷೆಗಳಿಗೆ ಆಗಿಲ್ಲದಿರುವುದರಿಂದ ಅಲ್ಲಿನ ಸಂಶೋಧನೆ ಇಮ್ಮೊಗನಾದ ನ್ಯೂನತೆಗಳಿಂದ ಕೂಡಿದೆ : ೧. ಸಮಾನ ವಸ್ತುವನ್ನು ಬೇರೆ ಬೇರೆ ಕವಿಗಳು ಹೇಗೆ ಉಪಯೋಗಿಸಿಕೊಂಡಿದ್ದಾರೆ, ದುಡಿಸಿಕೊಂಡಿದ್ದಾರೆ ಎಂಬ ವಿವೇಚನೆಯ ಕಕ್ಷೆಯಲ್ಲಿ ಕನ್ನಡ ವಿವರಗಳನ್ನು ಹೊರತುಪಡಿಸಿದ್ದರಿಂದ ಅವರ ವಿವರಣೆ ಅನಿವಾರ್ಯವಾಗಿ ಅಸಮರ್ಪಕವಾಗುತ್ತದೆ; ೨. ಕನ್ನಡ ಸಾಹಿತ್ಯಕ್ಕೆ ಸಲ್ಲಬೇಕಾದ ನ್ಯಾಯವಾದ ಸ್ಥಾನ – ಪುರಸ್ಕಾರ ಪ್ರಚಾರ ಮರೆಯಾಗುತ್ತದೆ. ಈ ಬಗೆಯ ಕೊರತೆಯನ್ನು ನಿವಾರಿಸುವಲ್ಲಿ ಕನ್ನಡೇತರ ಭಾಷೆ ಬಲ್ಲ ಕನ್ನಡದ ವಿದ್ವಾಂಸರು ಪ್ರಯತ್ನಶೀಲರಾಗಬೇಕಾಗಿದೆ.

ಅನುಬಂಧಗಳು

೧. ಜೈನ ಪರಂಪರೆಯಲ್ಲಿ ಚಾರುದತ್ತನ ಕಥೆ

ಚಂಪಾನಗರದ ವರ್ತಕಶ್ರೇಷ್ಟನಾದ ಚಾರುದತ್ತನು ತನ್ನ ಹೆಂಡತಿಯನ್ನೂ ಮರೆತು ಓದಿನಲ್ಲಿ ತಲ್ಲೀನನಾಗಿದ್ದ. ಅವನ ತಾಯಿ ತನ್ನ ಕಡೆಯವರಿಂದ ಮಗ ಪ್ರಣಯಾಸಕ್ತನಾಗುವಂತೆ ಪ್ರೇರೇಪಿಸಲು ಪ್ರಯತ್ನಿಸುವಳು. ಅದರ ಫಲವಾಗಿ, ಚಾರುದತ್ತನನ್ನು ವೇಷ್ಯಾವಾಟಿಕೆಗೆ ಕರೆದೊಯ್ದು ಪ್ರಸಿದ್ಧಳಾದ ವಸಂತಸೇನೆಯೊಂದಿಗೆ ಸೇರಿಸುವರು. ಚಾರುದತ್ತ – ವಸಂತಸೇನೆಯವರು ರತಿಕೇಳಿಯಲ್ಲಿ ಲೋಕವನ್ನೇ ಮರೆತರು. ವಸಂತಸೇನೆಯ ತಾಯಿ ಚಾರುದತ್ತನ ಸಮಸ್ತ ಆಸ್ತಿಯನ್ನೂ ಸುಲಿಗೆ ಮಾಡುವಳು. ಚಾರುದತ್ತನ ತಂದೆ ಸತ್ತು, ತಾಯಿ – ಹೆಂಡತಿ ಬೀದಿಪಾಲಾಗುವರು. ಚಾರುದತ್ತ ನಿರ್ಗತಿನಾದದ್ದು ತಿಳಿದ ಕೂಡಲೆ ವಸಂತಸೇನೆಯ ತಾಯಿ ಅವನನ್ನು ತಿಪ್ಪೆಗೆಸೆಯುವಳು.

ಚಾರುದತ್ತನಿಗೆ ತನ್ನ ಅವಸ್ಥೆ ಅರಿವಾಯಿತು. ತಾಯಿಯನ್ನೂ ಹೆಂಡತಿಯನ್ನೂ ಕಂಡು ಪಶ್ಚಾತ್ತಾಪವಾಯಿತು. ಕಳೆದುಹೋದ ಆಸ್ತಿಗಿಂತ ಹೆಚ್ಚು ಸಂಪಾದಿಸಲು ವ್ಯಾಪಾರಕ್ಕಾಗಿ ದೇಶಾಂತರ ಸಂಚಾರ ಕೈಗೊಳ್ಳುತ್ತಾನೆ. ದಾರಿಯುದ್ದಕ್ಕೂ ಸಂಭವಿಸುವ ಆಶ್ಚರ್ಯಕರ ಘಟನೆಗಳು ಹತ್ತಾರು. ಅವನ ದಾನಗುಣ, ಸಾಹಸ, ದೈವನಿಷ್ಠೆಗಳನ್ನು ಪ್ರಕಟಿಸುವ ಪ್ರಸಂಗಗಳು ನಡೆಯುತ್ತವೆ. ರಸದ ಬಾವಿಗೆಬಿದ್ದು ಅಲ್ಲಿಂದ ಪಾರಾಗುತ್ತಾನೆ. ಕಡಿದಾದ ಪರ್ವತವೇರಿ ಸುವರ್ಣಭೂಮಿಗೆ, ರತ್ನದ್ವೀಪಗಳಿಗೆ ಪ್ರಯಾಸದಿಂದ ಹೋಗುತ್ತಾನೆ. ಸಮುದ್ರಯಾನ ಕೈಗೊಳ್ಳುತ್ತಾನೆ. ಕಡೆಗೆ ಎಲ್ಲ ಗಂಡಾಂತರಗಳನ್ನೂ ಗೆದ್ದು ದೊಡ್ಡ ಐಶ್ವರ್ಯವಂತನಾಗಿ ಚಂಪಾನಗರಕ್ಕೆ ಹಿಂತಿರುಗಿ ತನ್ನ ಹೆಂಡತಿಯನ್ನೂ ಬಳಗವನ್ನೂ ಕಾಪಾಡುತ್ತಾನೆ. ಅಲ್ಲದೆ ತನ್ನ ಬರುವಿಕೆಗಾಗಿ ಅನ್ನಾಹಾರ ನಿದ್ರೆ ಸುಖಗಳನ್ನು ಕಡೆಗಣಿಸಿ ಹಾದಿಕಾಯುತ್ತಿದ್ದ ವೇಶ್ಯೆ ವಸಂತಸೇನೆಯನ್ನೂ ಕೈಹಿಡಿಯುತ್ತಾನೆ. ವೇಶ್ಯೆ ಸಾಧ್ವಿಯಾಗುತ್ತಾಳೆ.

೨. ಅಜೈನ ಪರಂಪರೆಯಲ್ಲಿ ಚಾರುದತ್ತನ ಕಥೆ

ಅ. ಭಾಸ : ನಾಲ್ಕು ಅಂಕಗಳು ಮಾತ್ರ ಇರುವ (ದರಿದ್ರ) ಚಾರುದತ್ತ ನಾಟಕದ ಸಾರಾಂಶ : ಉಜ್ಜಯಿನಿಯ ವೇಶ್ಯೆ ವಸಂತಸೇನೆ ರಾಜಶ್ಯಾಲಕ ಸಂಸ್ಥಾನಿಕನಿಂದ ಪೀಡಿತಳಾಗಿ ಮಾರ್ಗದಲ್ಲಿದ್ದ ಚಾರುದತ್ತನ ಮನೆಗೆ ಹೋಗಿ ತನ್ನ ಆಭರಣಗಳನ್ನು ನ್ಯಾಸವಾಗಿಡುವಳು. ಸಜ್ಜಲಕನು ಅವುಗಳನ್ನು ಕದ್ದು, ವಸಂತಸೇನೆಯ ದಾಸಿ ಮದನಿಕೆಗೆ ಕೊಡುವನು. ವಸಂತಸೇನೆ ಮದನಿಕೆಯನ್ನು ದಾಸಿತ್ವದಿಂದ ಬಿಟ್ಟು ಸಜ್ಜಲಕನಿಗೆ ಒಪ್ಪಿಸುವಳು. ಒಡವೆ ಕಳುವು ಬಂದಿದೆಯೆಂದು ಹೇಳಿ ವಸಂತಸೇನೆ ಚಾರುದತ್ತನನ್ನು ನೋಡಲು ಹೊರಡುವಳು. (ಇಲ್ಲಿಗೆ ಇದ್ದಕ್ಕಿದ್ದ ಹಾಗೆ ನಾಟಕ ನಿಂತು ಬಿಡುತ್ತದೆ).

ಆ. ಶೂದ್ರಕ : ಉಜ್ಜಯಿನಿಯ ವರ್ತಕ ಚಾರುದತ್ತನು ಪರೋಪಕಾರಿ, ಬಡವನಾದರೂ ಗುಣಶಾಲಿ. ವೇಶ್ಯೆ ವಸಂತಸೇನೆ ಒಮ್ಮೆ ಶಕಾರ ವಿಟ ಚೇಟರ ಕಾಟ ತಪ್ಪಲೆಂದು ಚಾರುದತ್ತನ ಮನೆಯಲ್ಲಿ ಆಶ್ರಯ ಪಡೆದು ಆಭರಣಗಳನ್ನು ನ್ಯಾಸವಾಗಿಡುವಳು. ವಸಂತಸೇನೆಯ ದಾಸಿ ಮದನಿಕೆಯ ಅನುರಾಗಿ ಶರ್ಮಿಳಕನು ಚಾರುದತ್ತನ ಮನೆಗೆ ಕನ್ನಹಾಕಿ ಒಡವೆ ಕದ್ದು ಮದನಿಕೆಗೆ ಕೊಡುವನು. ದಾಸ ದಾಸಿಯರ ಪ್ರೇಮ ನೋಡಿ ವಸಂತಸೇನೆ ಮದನಿಕೆಯನ್ನು ಬಿಡುಗಡೆ ಮಾಡುವಳು. ಒಡವೆಗಳ ನಿಜಸ್ಥಿತಿ, ಚಾರುದತ್ತ – ವಸಂತಸೇನೆ ಅರಿತು ಪರಸ್ಪರ ಅನುರಕ್ತರಾಗುವರು. ಚಾರುದತ್ತನ ಮಗ ತನಗೆ ಮಣ್ಣಿನಗಾಡಿ (ಮೃಚ್ಛಕಟಿಕ) ಬೇಡ, ಚಿನ್ನದ ಗಾಡಿಯೇ ಬೇಕೆಂಬುದಕ್ಕೆ ವಸಂತಸೇನೆ ತನ್ನ ಒಡವೆಗಳನ್ನು ಕೊಡುವಳು. ಚಾರುದತ್ತನು ಕಳಿಸಿದ ಗಾಡಿಯೇ ಇರಬೇಕೆಂದು ಭ್ರಮಿಸಿ ಶಕಾರನ ಬಂಡಿ ಹತ್ತಿದ ವಸಂತಸೇನ ಕಷ್ಟಕ್ಕೊಳಗಾದಳು. ಶಕಾರನು ಅವಳ ಕತ್ತು ಕಿವುಚಿ, ತರಗಲೆಯಲ್ಲಿ ಮುಚ್ಚುವನು. ಆದರೆ ಅಲ್ಲಿದ್ದ ಭಿಕ್ಷುವು ಆಕೆಯನ್ನು ಉಳಿಸುವನು. ಚಾರುದತ್ತನೇ ವಸಂತಸೇನೆಯನ್ನು ಕೊಂದನೆಂದು ಶಕಾರನು ದೂರಿದನು; ರಾಜನು ಚಾರುದತ್ತನನ್ನು ಶೂಲಕ್ಕೇರಿಸಲು ಅಪ್ಪಣೆ ಮಾಡಿದನು. ವಧ್ಯಸ್ಥಾನಕ್ಕೆ ಹೋಗುವಾಗ ಭಿಕ್ಷುವೂ ವಸಂತಸೇನೆಯೂ ಬರುವರು. ಈ ಮಧ್ಯೆ ಪಾಲಕರಾಜನ ಕೊಲೆಯಾಗುತ್ತದೆ. ವೇಶ್ಯೆಯಾಗಿದ್ದ ವಸಂತಸೇನೆಯೂ ಚಾರುದತ್ತನ ವಧುವಾದಳು.*

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)

 

[1] i. ಹಂಪನಾ, ರಾಕು (ಸಂ.) : ನೇಮಿನಾಥಪುರಾಣ (ಕರ್ಣಪಾರ್ಯ), ಗದ್ಯಾನುವಾದ ಸಹಿತ, ೧೯೮೧ ; ಇದರ ಪೀಠಿಕೆಯಲ್ಲಿ ಈ ಬಗ್ಗೆ ಪುಟಗಳಷ್ಟು ಚರ್ಚಿಸಿದ್ದೇನೆ. ಪು. ೩೮ – ೪೨.

ii. Hampa. Nagarajaiah : The Story of Carudatta in Jain Literature, Endowment Lecture delivered at Jainology Department, Madras University, 1989

[2] Hampa. Nagarajaiah : The Story of Carudatta in Jain Literature, with special reference to Jain Literature, Abstracts, Toronto, Canada, July 31, 1990. p. 69., Column 1 and 2

[3]ಜರ್ಮನರಾದ ಲೂಡರ್ಸ್ (Luders) ಅವರು ೧೯೧೧ ರಿಂದ ೧೯೦೩ ರವರೆಗೆ ಮಾಡಿದ ಸಂಶೋಧನ ಪರಿಶ್ರಮದಿಂದ ಅಶ್ವಘೋಷನ ನಾಟಕ ತುಣುಕುಗಳನ್ನು ಪುನಾರಚಿಸಲು ಸಾದ್ಯವಾಗಿದೆ. ಸೆಂಟ್ರಲ್ ಏಷಿಯಾದ ತುರ್ಫಾನ್ ಎಂಬಲ್ಲಿ ದೊರೆತ ರೂಪಕ ಖಂಡಗಳಲ್ಲಿ ಒಂದು ಚಾರುದತ್ತನ ಕಥೆಯನ್ನು ಹೋಲುವಂತಿದೆ.

[4] S.K.Belvalkar : The Relation of Sudraka’s Mrichakatika to Charudatta of Bhasa’, Proceedings of the Oriental Conference, Vol. I. 51 f

[5] i. Mahadeva Sarma : `The Age of Bhasa’, The Hindu Literary Supplements, Feb. 1927

ii. ಎ. ಆರ್. ಕೃಷ್ಣಶಾಸ್ತ್ರಿ : ಭಾಸಕವಿ, ಬೆಂಗಳೂರು, ೧೯೩೩

[6]ಭಾಸನ (ದರಿದ್ರ) ಚಾರುದತ್ತ ನಾಟಕ ಕನ್ನಡ ಜನಕ್ಕೆ ಒಗ್ಗಲಿಲ್ಲವೇನೋ! ಆದರೆ ಶೂದ್ರಕನ ನಾಟಕ ಹಿಂದಿನಿಂದ ಕನ್ನಡದಲ್ಲಿ ಭಾಷಾಂತರಗೊಳ್ಳುತ್ತಲೇ ಇದೆ :

i. ಧೋಂಡೋ ನರಸಿಂಹ ಮುಳಬಾಗಿಲು : ಮೃಚ್ಛಕಟಿಕಂ, ಧಾರವಾಡ, ೧೮೮೯

ii. ಗರಣಿ ವೈ. ಕೃಷ್ಣಾಚಾರ್ಯ : ಮೃಚ್ಛಕಟಿಕಂ ಪ್ರಕರಣಂ, ಮದರಾಸು, ೧೮೯೦

iii. ನಂಜನಗೂಡು ಸುಬ್ಬಾಶಾಸ್ತ್ರೀ : ಕರ್ಣಾಟಕ ಮೃಚ್ಛಕಟಿಕ, ಪ್ರಕರಣಂ, ೧೯೨೯

iv. ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ : ಮೃಚ್ಛಕಟಿಕ, ಪಿ.ಯು.ಸಿ. ಮಂಡಳಿ, ೧೯೭೮

[7] M. Winternitz : History of Indian Literature, Vol. III, Delhi, 1963, pp. 208-209

[8] V.S. Sukthankar, Journal of the American Oriental Society, Vol. 42, pp. 59-74

[9] i. ಸಂಸ್ಕೃತ ನಾಟಕ, ಪು. ೧೦೬

ii. Pandit Hiran, Mulraj Sharma and Kashinath Pandurang Parab (Ed.) : Mrcchakatika (Sudraka), Bombay, 1902

[10] J.C. Ghatak : ‘Date of Mrichchakatika’, Indian Historical Quarterly, Vol. V, 137 f

[11]ಸಂಸ್ಕೃತ ನಾಟಕ, ಪು. ೧೦೪ : ಅಡಿಟಿಪ್ಪಣಿ

[12]ಹಂಪನಾ : ‘ದೇವನಂದಿ ಪೂಜ್ಯಪಾದ’, ಆಚಾರ್ಯ (ಸ್ಮರಣ ಸಂಪುಟ), ೧೯೮೩

[13] i. ಡಾ || ವಿಜಯಲಕ್ಷ್ಮೀ ಎಂಬುವವರು ಈ ‘ಪೆರುಂಗತೈ’ ಕುರಿತು ಪಿಎಚ್. ಡಿ. ನಿಬಂಧ ಬರೆದಿರುವುದಾಗಿ ನನ್ನ ಮಿತ್ರರಾದ ಡಾ || ಕಾರ್ಲೋಸ್ ತಿಳಿಸಿದ್ದಾರೆ. ನಾನು ಅದನ್ನು ನೋಡಿಲ್ಲ.

ii. ಉ.ವೇ. ಸ್ವಾಮಿನಾಥ ಐಯ್ಯರ್ (ಸಂ.): ಪೆರುಂಗತೈ, ೧೯೨೪

iii. ಮು. ವರದರಾಜನ್ : ತಮಿಳು ಸಾಹಿತ್ಯ ಚರಿತ್ರೆ, ನವದೆಹಲಿ, ೧೯೮೦

[14]ಎ.ಆರ್. ಕೃಷ್ಣಶಾಸ್ತ್ರೀ : ಕಥಾಮೃತ, ೧೯೫೦; ಇದರ ೮೪ ಪುಟಗಳ ಪೀಠಿಕೆಯಲ್ಲಿ ಈ ಸಂಬಂಧವಾದ ಮಾಹಿತಿ ಸಮೃದ್ಧವಾಗಿದೆ. ಇದಕ್ಕೆ ಪೂರಕವಾಗಿ ಅವಶ್ಯ ನೋಡಬೇಕಾದ ಕೃತಿಗಳು :

i. Pt. DurgaPrasad & K.P. Parab(Ed.) : Kathasaritsagara (Somadeva)

ii. Pandit Shivadatta & Kashinath Panduranga Parab (Ed.) : Brahat Kathmanjari (Kesemendra), Bombay, 1889

iii. Felix Lacote & L. Renou (Ed. & Trains.): Brhatkathasilokasagraha (Budhasvamin), Paris, 1908-1928

[15] i. C.H. Tawney (Trans.) : Kathakosa, London, 1895

ii. ಶ್ರೀ ರಾಮಾಯಣ ಭಾರತ ಬೃಹತ್ಕಥಾನಾಂ ಕವೀನ್ ನಮಸ್ಕುರ್ಮಃ

ತ್ರಿಸ್ರೋತಾ ಇವ ಸರಸಾ ಸರಸ್ವತೀ ಸ್ಫುರತಿಯ್ಕೆರ್ಭಿನ್ನಾ || – ಗೋವರ್ಧನ ಸಪ್ತಶತೀ

iii. ಕಥಾ ಹಿ ಸರ್ವಭಾಷಾಭಿಃ ಸಂಸ್ಕೃತೇನ ಚ ಬಧ್ಯತೇ

ಭೂತ ಭಾಷಾಮಯೀಂ ಪ್ರಾಹುರದ್ಬುತಾರ್ಥಾಂ ಬೃಹತ್ಕಥಾಂ || – ದಂಡಿನ್, ಕಾವ್ಯಾದರ್ಶ (೧-೩೮)

iv. History of Indian Literature, Vol. III, part I, pp. 353-4

v. S.N. Dasgupta & S.K. Dey : ‘Classical Period’, A History of Sanskrit Literature, p. 96

[16] Alsdorf ಅವರು (ರೋಮ್, ೧೯೩೮, ಪು. ೩೪೪-೩೪೯) ಜರ್ಮನ್ ಭಾಷೆಯಲ್ಲಿ ಬರೆದಿರುವ’ ಗುಣಾಢ್ಯನ ಅನುಪಲಬ್ಧ ಬೃಹತ್ಕಥಾದ ಒಂದು ಹೊಸ ಆವೃತ್ತಿ’ ಎಂಬ ಲೇಖನದ ಕಡೆಯಲ್ಲಿ ವಸುದೇವಹಿಂಡಿಯನ್ನು ಲಕ್ಷ್ಯದಲ್ಲಿಟ್ಟು “the Jain version forces us to push the date of the Brhatkatha several centuries back’ ಎಂದಿದ್ದಾರೆ.

[17] Ludwig Alsdorf : ‘The Vasudevahindi, a Specimen of Archaic Jain Maharashtri’, Bulletin of the School of Oriental Studies (London), Vol. 8 (1935-1937), 1936, pp. 319-333

[18] i. Muni Caturvijaya & Muni PUnyavijaya (Ed.) : Vasudevahindi, Bhavnagar, 1930-31

ii. Muni Caturvijaya & Muni Punyavijaya (Ed.) : Ghammillahindi – Majjhimakhanda, Bhavanagar, 1931

[19]ಹೀರಾಲಾಲ್ ಜೈನ್ : ಭಾರತೀಯ ಸಂಸ್ಕೃತಿಗೆ ಜೈನಧರ್ಮದ ಕೊಡುಗೆ (ಹಿಂದಿ), (ಅನು. : ಮಿರ್ಜಿ ಅಣ್ಣಾರಾಯ), ಸೊಲ್ಲಾಪುರ, ೧೯೩೧, ಪು. ೧೭೮-೧೭೯

[20] Sten Konow : ‘Remarks on the Brhatkatha’, Acta Orientalia, Vol. XIX, Parts II-III, 1943, pp. 140 ff

[21] The Vasudevahindl, (op. cit), pp. 27-28, and also the footnotes of p. 27

[22] lbid., pp. 225-314

[23] lbid., pp. 44-45 : Introduction; ಬೃಹತ್‍ಕಥಾಶ್ಲೋಕ ಸಂಗ್ರಹದಲ್ಲೂ ಸಾನು ಎಂಬಾತ ದಿಗಂಬರ ಜೈನಮುನಿ. ಹಲವು ಸಾದೃಶ್ಯ ವೈದೃಶ್ಯಗಳ ಪರಿಶೋಧನೆಯ ಜರಡಿ ಹಿಡಿದು ಡಾ || ಜೆ.ಸಿ. ಜೈನ್ ಆಳವಾದ ಅಧ್ಯಯನ ನಡೆಸಿದ್ದಾರೆ, ಗುಣಾಢ್ಯನ ಬೃಹತ್ಕಥೆಯ ಪುನಾರಚನೆಗೆ ಬೆಲೆಯುಳ್ಳ ಆಕರ ಸಾಮಗ್ರಿ ಪೂರೈಸಿದ್ದಾರೆ.

[24]ಭಾರತೀಯ ಸಂಸ್ಕೃತಿಗೆ ಜೈನಧರ್ಮದ ಕೊಡುಗೆ, ಪು. ೧೭೭

[25] A.N. Upadhye : “The details about the life of Carudatta…. deserve to be studied criticallywith the help of Jaina and non -Jaina Sources”, Introduction to Brhat – Kathakosa, 1943. Also included in Upadhye : Papers, Mysore, 1983, p-75.

[26]ಶಿವಾರ್ಯ : ಭಗವತೀ ಆರಾಧನಾ, ಮುಂಬಯಿ, ೧೯೮೯ ; ಗಾಥಾಗಳಿವೆ.

[27]ಮೂಲಾರಾಧನಾ (ಶಿವಕೋಟ್ಯಾಚಾರ್ಯ) : ಅಪರಾಜಿತ ಸೂರಿ ಮತ್ತು ಆಶಾಧರ ಸೂರಿ ಇವರ ಟೀಕೆಗಳು (ಹಿಂದಿ ಅನುವಾದ ಸಹಿತ), ಸೊಲ್ಲಾಪುರ, ೧೯೩೫ ; ಇದರಲ್ಲಿ ೨೧೭೦ ಗಾಥಾಗಳಿವೆ.

[28] i. ಹಂಪನಾ : ವಡ್ಡಾರಾಧನೆ : ಸಮಗ್ರ ಅಧ್ಯಯನ (ಪಿ.ಎಚ್.ಡಿ. ನಿಬಂಧ ಹಸ್ತಪ್ರತಿ, ೧೯೮೮)

ii. Upadhye : Papers, pp. 41-45

iii. ಕಮಲಾ ಹಂಪನಾ (ಸಂ.) : ಡಿ.ಎಲ್.ಎನ್. ಅವರ ಆಯ ಲೇಖನಗಳು, ಬೆಂಗಳೂರು, ೧೯೮೩, ಪು. ೬೪-೭೨

[29]ಭಾರತೀಯ ಸಂಸ್ಕೃತಿಗೆ ಜೈನಧರ್ಮದ ಕೊಡುಗೆ, ಪು. ೧೩೧

[30] Upadhye : Paers, p. 45

[31]ಸ್ವಸ್ತಿಶ್ರೀ ೧೦೮ ನಿಯಮಸಾಗರ ಮುನಿ ಮಹಾರಾಜರು (ಸಂ. ಮತ್ತು ಅನು.) : ಮೂಲಾರಾಧನಾ (ಶಿವಕೋಟಿ ಆಚಾರ್ಯ), ತುಮಕೂರು, ೧೯೯೦, ಗಾಥಾ ೧೦೭೬, ಪು. ೫೩೩; ಬೇರೆ ಆವೃತ್ತಿಯಲ್ಲಿ ಗಾಥಾಸಂಖ್ಯೆ ೧೧೮೨ ಎಂದಿದೆ; ಕೆಲವು ಶಬ್ದಗಳಿಗೆ ಬೇರೆ ಪಾಠಾಂತರಗಳೂ ಇವೆ.

[32]ಋಷಭದೇವ್ ಕೇಸರಿಮಲ್ : ಆಚಾರಾಂಗ ಚೂರ್ಣಿ, ರತ್ಲಮ್, ೧೯೪೦, ಪು. ೫೦

[33]ಆಗಮೋದಯ ಸಮಿತಿಯ ಪ್ರಕಟಣೆ, ಬಾಂಬೆ, ೧೯೧೭, ಪು. ೧೯೬

[34]ಋಷಭದೇವ್ ಕೇಸರಿಮಲ್ : ಸೂತ್ರ ಕೃತಾಂತಗ ಚೂರ್ಣಿ, ಬಾಂಬೆ, ೧೯೪೦, ಪು. ೨೩೯-೨೪೦

[35]ಶ್ರಾವಕಾಚಾರ, ಕಾಶೀ, ೧೯೪೨; ಗಾಥಾಗಳ ಸಂಖ್ಯೆ ೧೨೫ ರಿಂದ ೧೩೧; ಗಾಹೆ ೧೨೮ ರಲ್ಲಿ ಚಾರುದತ್ತನ ದೃಷ್ಟಾಂತವಿದ್ದು ಅದನ್ನು ಮಾತ್ರ ಉದಾಹರಿಸಿದ್ದೇನೆ.

[36]ವಸುನಂದಿಯ ಶ್ರಾವಕಾಚಾರದಲ್ಲಿ ಚಾರುದತ್ತಕಥೆಯ ಉಲ್ಲೇಖವಿದೆಯೇ ಹೊರತು ಸಮಂತಭದ್ರಕೃತವೆಂದು ಭಾವಿಸಲಾಗಿರುವ ರತ್ನಕರಂಡಕ ಶ್ರಾವಕಾಚಾರದಲ್ಲಿ ಇಲ್ಲ.

[37] i, A.B. Keith : History of Sanskrit Literature p. 248

ii. History of Indian Literature, Vol. III, p.281

[38] Harivamsapurana, Kashi, 1962

[39]”It is Jinasena Acharya of Punnata Sangha, who in his immortal epic Harivamsa standardised the story of Cjaridatta/ Poet Jinasena has superbly handled this theme in all its poetic excellence. Thus the story of Carudatta, as narrated by Jinasena, served as a model as a model for several centuries for all the writers who adopted this story. It should be said be said to the credit of JInasena that his successors took too little liberty in altering the total format or the Main motiff of this story” – Hampana : ‘The Story of Carudatta in Indian Literature, with special reference to Jaina Literature’ p.4.

[40] i. A.N. Upadhye (Ed.) : Brhatkathakosa, Bombay, 1943

ii. ಡಿ.ಎಲ್.ಎನ್. ಆಯ್ದ ಲೇಖನಗಳು, ಪು. ೨೩-೪೩

[41] i. Hiralal Jain (Ed.) : Kaha-Kosu (Katha-Kosa), Ahmedbad, 1969, pp, 353-354

ii. ಹಂಪನಾ : ‘ಶ್ರೀಚಂದ್ರ – ಕವಿ ಕಾವ್ಯ ಪರಿಚಯ’, ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ, ೬೮ – ೨, ಡಿಸೆಂಬರ್ ೧೯೮೩

[42]ಆ.ನೇ. ಉಪಾಧ್ಯೆ (ಸಂ.) : ಕಥಾಕೋಶ, ದೆಹಲಿ, ೧೯೭೪, ಪು. ೫೬-೫೮

[43]ಪುಣ್ಯಾಸ್ರವ ಕಥಾಕೋಶ, ಸೊಲ್ಲಾಪುರ, ೧೯೬೪

[44]ಮುನಿ ಚತುರ್ವಿಜಯ (ಸಂ.) : ತ್ರಿಷಷ್ಟಿಶಲಾಕಾಪುರುಷವರಿತ, ಪರ್ವ ೧, ಭಾವನಗರ, ೧೯೩೬, ಪರ್ವ ೧೧ (ಸಂ. ಮುನಿ ಪುಣ್ಯ ವಿಜಯ), ೧೯೫೬

[45]ಹೆಚ್ಚಿನ ವಿವಗಳೂ ಹರಿವಂಶಪುರಾಣಗಳಿಗೂ ನೋಡಿ : ಭಾರತೀಯ ಸಂಸ್ಕೃತಿಗೆ ಜೈನಧರ್ಮದ ಕೊಡುಗೆ

[46] i. ಉತ್ತರ ಪುರಾಣಂ (ಗುಣ ಭದ್ರ), ಕಾಶಿ, ೧೯೬೮

ii. ಎ. ಶಾಂತಿರಾಜಶಾಸ್ತ್ರೀ (ಸಂ.), ಕನ್ನಡ ಅನುವಾದ ಸಹಿತ (೧೯೩೩), ಬೆಂಗಳೂರು, ೧೯೮೧

iii. ಮಹಾಪುರಣ (ಗದ್ಯಾನುವಾದ : ಜಿ. ಬ್ರಹ್ಮಪ್ಪ), ಹೊಂಬುಜ, ೧೯೮೫

[47]ಪಿ.ಎಲ್. ವೈದ್ಯ (ಸಂ.) : ಮಹಾಪುರಾಣ, ಸಂಪುಟ ೧-೩, ಬಾಂಬೆ, ೧೯೪೧ : ಸಂಧಿ ೮೮. ೧೩.೧೦

[48]ಹಂಪನಾ :          ವಡ್ಡಾರಾಧನೆ-ಹೊಸಬೆಳಕು’ (೧೯೯೧ ಫೆಬ್ರವರಿಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಬೆಳಗಾವಿ ಸ್ನಾತಕೋತ್ತರ ಕೇಂದ್ರದಲ್ಲಿ ಕೊಟ್ಟ ೩ ವಿಶೇಷ ಉಪನ್ಯಾಸಗಳಲ್ಲಿ ಒಂದು) ; ೨೮-೨-೧೯೯೧ ರ ಕನ್ನಡಪ್ರಭದಲ್ಲಿ ಪತ್ರಿಕಾ ಗೋಷ್ಠಿಯ ಪೂರ್ತಿಪಾಠ ವರದಿಯಾಗಿದೆ. ಈಗ ಅಚ್ಚಾಗಿರುವ ೧೯ ಕಥೆಗಳ ವಡ್ಡಾರಾಧನೆಯಲ್ಲಿ ಚಾರುದತ್ತನ ಕಥೆ ಬಂದಿಲ್ಲ.

[49]ರಾ. ನರಸಿಂಹಾಚಾರ್. ಕರ್ಣಾಟಕ ಕವಿಚರಿತೆ, ಸಂಪುಟ ೧, ೧೯೬೧, ಪು. ೨೪-೨೭

[50]ಕಮಲಾ ಹಂಪನಾ, ಕೆ.ಆರ್. ಶೇಷಗಿರಿ (ಸಂ.) : ಚಾವುಂಡರಾಯಪುರಾಣಂ, ಬೆಂಗಳೂರು, ೧೯೮೩, ಪು. ೩೧೭

[51]ಬಿ.ಎಸ್. ಸಣ್ಣಯ್ಯ (ಸಂ): (ಅರ್ಥ) ನೇಮಿನಾಥ ಪುರಾಣಂ, ಮೈಸೂರು, ೧೯೬೧, ೬-೧೭ ವ, ವ, ಪು. ೧೪೩

[52]ಕೆ.ಆರ್. ಶೇಷಗಿರಿ (ಸಂ.) : ದ್ವಾದಶಾನುಪ್ರೇಕ್ಷೆ, ಮೈಸೂರು, ೧೯೭೫, ಪು. ೧೨೫, ಪದ್ಯ ೮೧

[53]ಎ. ಶಾಂತಿರಾಜಶಾಸ್ತ್ರಿ (ಸಂ.) : ನಾಗಕುಮಾರಚರಿತೆ, ೧೯೩೩

[54]ಹಂಪ. ನಾಗರಾಜಯ್ಯ (ಸಂ.) : ನಾಗಕುಮಾರ ಷಟ್ಪದಿ, ಬೆಂಗಳೂರು, ೧೯೭೭

[55]ರಾ.ಸ್ವಾ. ಪಂಚಮುಖಿ (ಸಂ.) : ಮದನತಿಲಕಂ, ೧೯೫೩; ಆದರೆ ನಾನಿಲ್ಲಿ ಉದಾಹರಿಸಿರುವ ಪದ್ಯದ ಆಯ್ಕೆ : ಕರ್ಣಾಟಕ ಕವಿಚರಿತೆ, ಸಂಪುಟ ೧, ಪು. ೮೬

[56]ಹಂಪ, ನಾಗರಾಜಯ್ಯ, ಆರ್.ವಿ. ಕುಲಕರ್ಣಿ (ಸಂ. ಮತ್ತು ಗದ್ಯಾನುವಾದ) : ನೇಮಿನಾಥಪುರಾಣಂ, ಬೆಂಗಳೂರು, ೧೯೮೧; ೪-೧೭ ರಿಂದ ೫-೧೭ ರಿಂದ ೫-32 ರವರೆಗೆ ; ಪು. ೧೭೫ – ೨೩೮

[57]ಅದೇ, ಪ್ರಸ್ತಾವನೆ, ಪು. ೩೮-೪೨

[58]ಬಿ.ಎಸ್. ಸಣ್ಣಯ್ಯ (ಸಂ.) : ಹರಿವಂಶಾಭ್ಯುದಯಂ, ಮೈಸೂರು, ೧೯೭೪

[59]ಅದೇ, ೩-೧ ವ.ದಿಂದ ೫-೫ ವ. ವರೆಗೆ; ಪು. ೪೦-೮೫

[60]ಬಿ.ಎಸ್. ಸಣ್ಣಯ್ಯ (ಸಂ.) : ನೇಮಿನಾಥಪುರಾಣಂ, ಮೈಸೂರು ೧೯೭೭, ೪ – ೧೦೧ ರಿಂದ ೫ – ೨೫ ವ. ; ಪು. ೯೮ – ೧೧೪

[61]ದೇ. ಜವರೇಗೌಡ (ಸಂ.) : ಪುಣ್ಯಾಸ್ರವ ಚಂಪೂ, ಮೈಸೂರು, ೧೯೭೭, ೪-೧೦ ರಿಂದ ೪-೩೩ ವ. ; ಪು. ೧೨೫-೧೩೮

[62]ಹಂಪ. ನಾಗರಾಜಯ್ಯ (ಸಂ.) : ಸಾಳ್ವಭಾರತ, ಬೆಂಗಳೂರು, ೧೯೭೬, ಪು. ೧೪೩-೧೫೯

[63] i. ಎ. ಶಾಂತಿ ರಾಜಶಾಸ್ತ್ರಿ (ಸಂ.) : ನೇಮಿಜಿನೇಶ ಸಂಗತಿ (ಹರಿವಂಶ)

ii. ಹಂಪ. ನಾಗರಾಜಯ್ಯ : ಮಂಗರಸ, ಮೈಸೂರು, ೧೯೬೬

[64] The Vasudevahindi, pp. 44-49

[65] i. ‘Some Old Tales and Episodes in the Vasudeva Hindi’, Annals of Bhandrkar Oriental Research Institute, Vol. LX, Poona, 1979, pp. 167-168, 173

ii. ‘The Adaptation of Visnu-Bali Legend by Jain Writers, paper Printed in the Journal of the Oriental Institute, Vol. XXIX, Nos. 3-4, March-June 1980, p. 214

[66]ಹಂಪ ನಾಗರಾಜಯ್ಯ : ಫಣಿಕುಮಾರ ಕಥಾಸಾಹಿತ್ಯ, ಬೆಂಗಳೂರು, ೧೯೭೭, ಪು. ೨-೧೦

[67]ಹಂಪನಾ (ಸಂ.) : ಧನ್ಯಕುಮಾರಚರಿತೆ (ಆದಿಯಪ್ಪಕವಿ), ಗದ್ಯಾನುವಾದ ಸಹಿತ, ಬೆಂಗಳೂರು, ೧೯೭೩, ಪ್ರಸ್ತಾವನೆ i-xi

[68]ಶ್ರಾವಕಾಚಾರ (ವಸುನಂದಿ), ಗಾಹೆ ೧೨೫-೧೩೧

[69]ಕರ್ಣಪಾರ್ಯನ ನೇಮಿನಾಥಪುರಾಣಂ, ಪು. ೪೦, ಪ್ರಸ್ತಾವನೆ

[70]ಅದೇ, ಪು. ೪೧

[71]ಅದೇ, ಪು. ೩೯

[72]ಅದೇ, ಪು. ೪೧

[73]ಅದೇ, ಪು. ೪೨

[74]ಹಂಪ. ನಾಗರಾಜಯ್ಯ : ಯಕ್ಷ – ಯಕ್ಷಿಯರು, ಬೆಂಗಳೂರು, ೧೯೭೬

[75] The Vasudevahindi, pp. 1-49

*(೧೯೯೦ ಆಗಸ್ಟ್ ೧೯ ರಿಂದ ೨೫ ರ ವರೆಗೆ ಕೆನಡಾದೇಶದ ಟೊರೆಂಟೊ ಮಹಾ ನಗರದಲ್ಲಿ, ಟೊರೆಂಟೊ ವಿಶ್ವವಿದ್ಯಾಲಯದ ಆಶ್ರಯದಲ್ಲಿ ನಡೆದ ‘ಏಷಿಯಾ ಮತ್ತು ಉತ್ತರ ಆಫ್ರಿಕನ್ ಅಧ್ಯಯನಗಳು’ ಎಂಬ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಆಹ್ವಾನಿತನಾಗಿ ಭಾಗವಹಿಸಿ ಮಂಡಿಸಿದ ನನ್ನ ಇಂಗ್ಲೀಷ್ ಸಂಪ್ರಬಂಧದ ಮುಕ್ತ ಭಾಷಾಂತರವಾಗಿ ಈ ಸಂಪ್ರಬಂಧವನ್ನು ಸಿದ್ಧಪಡಿಸಿದ್ದೇನೆ. ವಿದೇಶಕ್ಕೆ ಹೋಗಿಬರುವ ಪ್ರಯಾಣ ವೆಚ್ಚವನ್ನು ವಹಿಸಿಕೊಂಡು, ಅನ್ಯಕಾರ್ಯ ನಿಮಿತ್ತ ರಜ ಸೌಲಭ್ಯವನ್ನು ನೀಡಿ ಈ ಅವಕಾಶವನ್ನು ನನಗೆ ಕಲ್ಪಿಸಿಕೊಟ್ಟ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ನಾನು ಋಣಿ.)