೧. ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ನಾಗವರ್ಮರು ಎಷ್ಟುಮಂದಿ, ಯಾವ ಕೃತಿಯನ್ನು ಯಾವ ನಾಗವರ್ಮ ಬರೆದಿದ್ದಾನೆ – ಎಂಬ ವಾದವಿವಾದಗಳು ಸಾಕಷ್ಟು ನಡೆದಿವೆ. ಅದೇ ಚರ್ಚೆ, ಅದೇ ವಿಚಾರ ಬಿಟ್ಟು ಆ ವಾಗ್ವಾದಗಳಿಗೆ ಹೊಸದಿಕ್ಕಿನ ಆಲೋಚನೆ ಸರಣಿಯನ್ನು ಪೋಣಿಸುವುದು ಈ ಹಂಟಿಪ್ಪಣದ ತಿರುಳು. ಇದರಲ್ಲಿ ನಾಗವರ್ಮರು ಎಷ್ಟು ಎಂಬ ಚರ್ಚೆಯಿಲ್ಲ. ಕೇವಲ ಛಂದೋಂಬುಧಿಯ ಕರ್ತೃ ನಾಗವರ್ಮನ ಇತಿವೃತ್ತ ಕುರಿತ ಒಂದು ಜಿಜ್ಞಾಸೆ ಕೈಗೊಳ್ಳಲಾಗಿದೆ.

೨. ಕರ್ನಾಟಕದ ರಾಜಕೀಯ, ಧಾರ್ಮಿಕ, ಸಾಹಿತ್ಯಕ, ಸಾಂಸ್ಕೃತಿಕ ಇತಿಹಾಸದಲ್ಲಿ ವೆಂಗಿವಿಷಯ (-ಮಂಡಲ)ದ ಪಾತ್ರ ದೊಡ್ಡದು. ಇಲ್ಲಿ ರಾಜಕೀಯ ಚರಿತ್ರೆಯನ್ನು ಕೈಬಿಡಬಹುದು, ದಾರ್ಮಿಕ – ಸಾಹಿತ್ಯಕ ಸಮೀಕ್ಷೆಗೆ ದೃಷ್ಟಿ ಹಾಯಿಸ ಬಹುದು. ಪಂಪ, ಪೊನ್ನ, ನಾಗವರ್ಮ ಮೊದಲಾದ ಕವಿಗಳು ವೆಂಗಿಮಂಡಲದ ಕಡೆಯವರು. ಇವರಲ್ಲದೆ ಅತ್ತಿಮಬ್ಬೆಯ ಮನೆತನದ ಬೇರುಗಳು ವೆಂಗಿನಾಡಿಗೂ ಚಾಚಿಕೊಂಡಿವೆ. ವೆಂಗಿ ವಿಷಯವು ಜೈನಧರ್ಮದ ಪ್ರಮುಖ ಕೇಂದ್ರವಾಗಿತ್ತು. ಅಲ್ಲದೆ ರಾಷ್ಟ್ರಕೂಟರ ಆಳಿಕೆಯಲ್ಲಿ, ವಿಶೇಷವಾಗಿ ಒಂಬತ್ತನೆಯ ಶತಮಾನದಲ್ಲಿ ಕೆಲವು ಪ್ರತಿಷ್ಠಿತ ಬ್ರಾಹ್ಮಣ ಕುಟುಂಬಗಳು ಜೈನರಾಗಿ ಮತಾಂತರ ಮಾಡಿದ್ದು ಹೆಚ್ಚಾಗಿ ವೆಂಗಿ ವಿಷಯದ ಪ್ರದೇಶ ಪರಿಸರದಲ್ಲಿ.

೩. ಛಂದೋಂಬುಧಿಯನ್ನು ಬರೆದ ನಾಗವರ್ಮನೂ ಕೂಡ ವೆಂಗಿಯ ಪ್ರತಿಭೆ:

ಜಗದೊಳಗಿದೊಂದು ಮಿಗಿಲೆನೆ
ನೆಗೆಱ್ದಪುದು ವೆಂಗಿವಿಷಯಮಾ ವಿಷಯದೊಳೊ
ಳಗಣಿತಮೆನೆ ಸಪ್ತಗ್ರಾ
ಮಗಳೊಳಮಾ ವೆಂಗಿಪೞು ಕರಂ ಸೊಗಯಿಸುಗುಂ ||      ೧೨

ಆ ವೆಂಗಿಪೞುವಿನೊಳ್ ವಿಭು
ದೇವಸಮಾನಂ ವಿದಗ್ಧನಂಬುಜ ಭವನಂ
ತಾವಗಮೊಳ್ಗುಣ ನಿಧಿಯೆಂ
ದೀ ವಸುಧೆಯೊಳೆನಿಸಿ ವೆಣ್ಣಮಯ್ಯಂ ನೆಗೞ್ದಂ ||          ೧೩

ವೇದದೊಳನುಗತರೆನಿಸುವ
ವೇದಿಗಳೊಳ್ ನಿಪುಣನಾಗಿ ನೆಗೞ್ದಂ ಗಂಭೀ
ರೋದನ್ವತ್ವಾರಿವೇಷ್ಟಿತ
ಮೇದಿನಿಯೊಳ್ ವಣ್ಣಮಯ್ಯನಕಲಂಕ ಗುಣಂ ||           ೧೪

೪. ವೆಂಗಿವಿಷಯದ ಏಳು ಗ್ರಾಮಗಳಲ್ಲಿ ಒಂದಾದ ವೆಂಗಿಪಳುವಿನಲ್ಲಿ ಸಾಕ್ಷಾತ್ ಬ್ರಹ್ಮನ ಹಾಗೆ ಬಲ್ಲಿದನಾದ ಒಂದನೆಯ ವೆಣ್ಣಮಯ್ಯನು ಹೆಸರಾಗಿದ್ದನು. ವೇದ ಪಾರಂಗತನೂ ನಿರ್ಮಲಗುಣಿಯೂ ಆದ ದೊಡ್ಡ ವೆಣ್ಣಮಯ್ಯನು ಕೌಂಡಿನ್ಯ ಗೋತ್ರಜನಾಗಿದ್ದನು (ಹೆಂ ಕೌಂಡಿಕಬ್ಬೆ). ಈತನ ಮಗನಾದ ದಾಮಮಯ್ಯನ (ಹೆಂ. ಕುಂದಕಬ್ಬೆ) ಹಿರಿಯ ಮಗ ಎರಡನೆಯ ವೆಣ್ಣಮಯ್ಯ (ಹೆಂ. ಪೋಳಕಬ್ಬೆ). ಈ ಇಮ್ಮಡಿ ವೆಣ್ಣಮಯ್ಯನ ಹಿರಿಯ ಮಗನೇ ಪ್ರಸ್ತುತ ಚರ್ಚೆಯ ಕೇಂದ್ರವ್ಯಕ್ತಿಯಾದ ನಾಗವರ್ಮ. ಕವಿ ಮತ್ತು ಶಾಸ್ತ್ರಕಾರನಾದ ಈ ನಾಗವರ್ಮನ ಗುಣಾವಳಿಯನ್ನು ಕುರಿತು ನಾಲ್ಕು ವೃತ್ತ ಪದ್ಯಗಳಿವೆ [೨೩ – ೨೬].

೫. ನಾಗವರ್ಮನು ತನ್ನ ಇತಿವೃತ್ತ ಸಂಬಂಧವಾಗಿ ಇನ್ನೆರಡು ಕಂದಪದ್ಯಗಳನ್ನು ಬರೆದಿದ್ದಾನೆ:

ರಸಂ ರಕ್ಕಸಗಂಗಂ
ರುಗಳ್ ನೆಗಳ್ದಜಿತಸೇನ ಪಂಡಿತ ದೇವರ್
ರೆದ ನೃಪನಣ್ಣ ನೆನೆ ಮ
ರಿಸುವರಾರ್ ನಾಕಿಯಿರುಳೊಳೇ ಪುಟ್ಟಿದನೇ ||  ೨೭

ಡರ ಮೂಗುತಿಯೆನಿಸಿದ
ಡಳಿಕರ ಮಂತ್ರಿ ಸಂಧಿ ವಿಗ್ರಹ ರಾಯಂ
ಡಾಡಿ ಪೊರೆದನೆನೆ ಧರೆ
ಡಾಡದೆ ಕೊಂಡು ಕೊನೆಯದೇ ನಾಕಿಗನಂ ||      ೨೮

೫.೧. ಈ ಎರಡು ಪದ್ಯಗಳಲ್ಲಿ ಹೆಸರಿಸುವ ವ್ಯಕ್ತಿಗಳನ್ನು, ಅಂದಿನ ಸಮಕಾಲೀನ ಚಾರಿತ್ರಿಕ ವ್ಯಕ್ತಿಗಳೊಂದಿಗೆ ಸಮೀಕರಿಸಿ, ಗುರುತಿಸುವ ವಿದ್ವತ್ ಪ್ರಯತ್ನಗಳು ನಡೆದಿವೆ. ಈ ಪದ್ಯೋಕ್ತ ವ್ಯಕ್ತಿಗಳನ್ನು ಶಾಸನೋಕ್ತ ವ್ಯಕ್ತಿಗಳೊಂದಿಗೆ ಹೊಂದಿಸಲು ಮುಖ್ಯವಾಗಿ ಹೋಂಬುಜದ ಶಾಸನಗಳನ್ನು ಆಶ್ರಯಿಸಬೇಕೆಂಬುದು ನನ್ನ ಸೂಚನೆ; ಅದರಲ್ಲಿಯೂ ಹೊಂಬುಜ ೧ (೮ ನಗರ ೩೫) ೧೦೭೭ – ಈ ಶಾಸನ ವಿಶ್ವಸನೀಯ ಆಕರಗಳ ಮಡು.

೫.೧.೧. ರಕ್ಕಸಗಂಗ ಎಂಬ ಬಿರುದಾಂಕಿತ ರಾಜರು ಗಂಗವಂಶದಲ್ಲಿ ಇಬ್ಬರು ಇದ್ದಾರೆ; ಇಬ್ಬರಲ್ಲಿ ಒಬ್ಬನು ಗಂಗರ ಇಮ್ಮಡಿ ಬೂತುಗನ ಮಗನಾದ ರಾಚ(ಜ)ಮಲ್ಲ. ಇನ್ನೊಬ್ಬ ರಕ್ಕಸಗಂಗನು ಬೂತುಗನ ಮೊಮ್ಮಗ, ಅಂದರೆ ಮಗ (ವಾಸವ)ನಮಗ.

ವಾಸವನಿಗೆ (ಹೆಂ. ಕಂಚಲದೇವಿ) ಇಬ್ಬರು ಮಗಂದಿರು – ಗೋವಿಂದರ ದೇವ ಮತ್ತು ಅರುಮುಳಿದೇವ. ಈ ಗೋವಿಂದರದೇವನೇ ಗಂಡರಮೂಕುತಿ, ವೀರ ಮಾರ್ತಾಂಡ, ಸತ್ಯವಾಕ್ಯ, ಗಂಗಚೂಡಾಮಣಿ, ಪೆರ್ಮಾನಡಿ – ಮುಂತಾದ ಪ್ರಶಸ್ತಿಗಳಿದ್ದ ರಕ್ಕಸಗಂಗ. ಈ ರಕ್ಕಸಗಂಗನ ಆಡಳಿತ ಕಾಲ ಕ್ರಿ.ಶ. ೯೯೬ ರಿಂದ ೧೦೨೪ ಎಂದು ನಾನು ಅನ್ಯತ್ರ, ಶಾಸನಗಳ ಆಧಾರದಿಂದ ಸೂಚಿಸಿದ್ದೇನೆ. [ನಾಗರಾಜಯ್ಯ, ಹಂಪ:; ಗಂಗರ ಒಂದು ಹೊಸಶಾಸನ, ಸಾಧನೆ, ೧೯೯೬]. ಈ ಲೇಖನವು ಪ್ರಸ್ತುತ ‘ಚಂದ್ರಕೊಡೆ’ ಸಂಕಲನದಲ್ಲಿಯೂ ಸೇರ್ಪಡೆ ಆಗಿದೆ.

೫.೧.೨. ಛಂದೋಂಬುಧಿಯ ನಾಗವರ್ಮನಿಗೆ ಆಸರೆ ಇತ್ತವನು, ಗಂಡರ ಮೂಗುತಿ ಎಂದೆನಿಸಿದ ಈ ರಕ್ಕಸ ಗಂಗ ಅರಸನೆಂದು ಖಚಿತವಾಗಿಯೇ ಹೇಳಬಹುದು.

೬. ನಾಗವರ್ಮನು ಹೇಳುವ ‘ಗುರುಗಳ್ ನೆಗಳ್ದಜಿತಸೇನ ಪಂಡಿತ ದೇವರ್’ ಯಾರೆಂಬ ವಿಚಾರದಲ್ಲಿಯೂ ಚರ್ಚೆಗಳು ನಡೆದಿವೆ. ಈ ಅಜಿತಸೇನ ಪಂಡಿತ ದೇವನನ್ನು ಸರಿಯಾಗಿ ಗುರುತಿಸುವ ಪರಿಶ್ರಮದ ಜಾಡನ್ನು ತಪ್ಪಿಸಿದ್ದು, ನಾಗವರ್ಮನ ಇದೇ ಪದ್ಯದಲ್ಲಿ ಇರುವ ‘ಪೊರೆದ ನೃಪನಣ್ಣನೆನೆ’ ಎಂಬ ಮಾತು. ಅಣ್ಣ, ರಾಯ ಎಂಬುದು ಚಾಮುಣ್ಡರಾಯನನ್ನು ಸೂಚಿಸುತ್ತವೆಂದೂ, ಅದರಿಂದ ಚಾಮುಣ್ಡರಾಯನ ಗುರುಗಳಾದ ಅಜಿತ ಸೇನಾಚಾರ್ಯರೇ ಈ ನಾಗವರ್ಮನ ಗುರುಗಳಾದ ಅಜಿತಸೇನಪಂಡಿತದೇವ ಎಂದೂ ವಿದ್ವಾಂಸರು ನಂಬಿಕೆ ಪಟ್ಟಿದ್ದಾರೆ.

೬.೧. ಮೇಲೆ ೫.೧. ರಲ್ಲಿ ಉಲ್ಲೇಖಿಸಿದ ಹೊಂಬುಜ ಒಂದನೆಯ ಶಾಸನದಲ್ಲಿ ಸಿಗುವ ಈ ಗುರುವಿಗೆ ಸಂಬಂಧಿಸಿದ ಮಾಹಿತಿಯನ್ನು ಪರಿಶೀಲಿಸಬೇಕು. ರಕ್ಕಸಗಂಗನ ಗುರುಗಳು ಶ್ರೀವಿಜಯ ಭಟ್ಟಾರಕರು (ಒಡೆಯದೇವ, ವಾದೀಭಸಿಂಹ), ಈತನು ಕ್ಷತ್ರಚೂಡಾಮಣಿ, ಗದ್ಯಚಿಂತಾಮಣಿ – ಮುಂತಾದ ಕಾವ್ಯಗಳ ಕರ್ತೃ. [ನೋಡಿ : ಇದೇ ‘ಚಂದ್ರಕೊಡೆ’ ಸಂಕಲನದಲ್ಲಿ ಇರುವ ‘ಹೊಂಬುಜಶಾಸನ – ಕ್ಷತ್ರಚೂಡಾಮಣಿ’ ಎಂಬ ಸಂಪ್ರಬಂಧ]

೨. ಈ ವಿಷಯವಾಗಿ ಇದೇ ‘ಚಂದ್ರಕೊಡೆ’ ಸಂಕಲನದಲ್ಲಿರುವ ‘ಗಂಗರ ಒಂದು ಹೊಸಶಾಸನ’ ಲೇಖನವನ್ನು ನೋಡಿ.

ಈ ಸೊಡೆಯದೇವ – ವಾದೀಭಸಿಂಹ – ಶ್ರೀವಿಜಯ ಭಟ್ಟಾರಕನ ಶಿಷ್ಯರುಗಳು ಗುಣಸೇನದೇವ, ದಯಾಪಾಳದೇವ, ಕಮಳಭದ್ರ ದೇವ, ಅಜಿತಸೇನಪಣ್ಡಿತ ದೇವ ಮತ್ತು ಶ್ರೇಯಾಂಸ ಪಣ್ಡಿತ – ಎಂಬುವರು. ಇವರಲ್ಲಿ ಅಜಿತಸೇನಪಂಡಿತ ದೇವನಿಗೆ ವಾದೀಭಸಿಂಹ ಎಂಬ ಪ್ರಶಸ್ತಿಯೂ ಇದ್ದಿತು.

೬.೧.೧. ನಾಗವರ್ಮನ ಅರಸನು ರಕ್ಕಸಗಂಗನಾದರೆ, ಅವನ ಗುರುಗಳೂ ಈ ಹೊಂಬುಜ ಶಾಸನೋಕ್ತರಾದ ಅಜಿತಸೇನಪಂಡಿತದೇವನೇ ಎಂಬುದಾಗಿ ಅಸ್ಖಲಿತವಾಗಿ ಹೇಳಬಹುದು.

೭. ನಾಗವರ್ಮನು ಹೇಳುವ ‘ಪೊರೆದ ನೃಪನಣ್ಣನೆನೆ’ [ಪಾಠಾಂತರ – ಪೊರೆದ ನೃಪನಣುಗನೆನೆ] ಎಂಬಲ್ಲಿಯ ನೃಪನಣ್ಣನು ಯಾರೆಂಬುದು ಅಸ್ಪಷ್ಟವಾಗಿದೆ. ಅಲ್ಲದೆ ರಕ್ಕಸಗಂಗ ನೃಪನಿಗೆ ಒಬ್ಬ ತಮ್ಮ ಅರುಮುಳಿದೇವ ಎಂಬಾತನು ಇದ್ದನೇ ಹೊರತು ಅಣ್ಣನಿರಲಿಲ್ಲ. ಇಲ್ಲಿರುವ ಪಾಠಾಂತರವನ್ನು ಒಪ್ಪಿಕೊಂಡು, ‘ಪೊರೆದ ನೃಪನಣುಗನೆನೆ’ ಎಂದು ಪದ್ಯಪಾಠವನ್ನು ಇಟ್ಟಿಕೊಂಡು, ಇದನ್ನು ಅರ್ಥೈಸಲು ಅವಕಾಶವಿದೆ.

೭.೧. ರಕ್ಕಸ ಗಂಗನಿಗೆ ಮಕ್ಕಳು ಇರಲಿಲ್ಲ. ಅದರಿಂದ ತನ್ನ ತಮ್ಮ ಅರುಮುಳಿ – ದೇವನಿಗೆ ಇದ್ದ ಮಕ್ಕಳನ್ನು ತನ್ನ ಅರಮನೆಯಲ್ಲಿಟ್ಟು ಸಾಕಿಬೆಳೆಸಿದನು; ಚಟ್ಟಲದೇವಿ, ಕಂಚಲದೇವಿ ಮತ್ತು ರಾಜವಿದ್ಯಾಧರ – ಎಂಬ ಮೂವರು ಆ ರೀತಿ ರಕ್ಕಸಗಂಗನು ಬೆಳೆಸಿದ ಮಕ್ಕಳು.

೭.೧.೧. ರಕ್ಕಸಗಂಗನು ಚಾಳುಕ್ಯರ ಅಧೀನದಲ್ಲಿದ್ದು ಗಂಗವಾಡಿ ಪ್ರದೇಶದಲ್ಲಿ ಆಳುತ್ತಿದ್ದನು. ಅನಂತರ ರಾಜವಿದ್ಯಾಧರ (ರಾಜಾದಿತ್ಯ) ನು ಪ್ರಭುವಾದನು. ರಾಜ ವಿದ್ಯಾಧರನು ಕ್ರಿ.ಶ. ಸುಮಾರು ೧೦೩೪ ರಲ್ಲಿ ಸಲ್ಲೇಖನ ವ್ರತ ಪಡೆದು, ಮಂಡ್ಯ ಜಿಲ್ಲೆಯ ಗುತ್ತಲು ಗ್ರಾಮದ ಬಸದಿಯಲ್ಲಿ ಮುಡಿಪಿದನು.

೭.೧.೨. ಒಂದುವೇಳೆ ನಾಗವರ್ಮನನ್ನು ‘ಪೊರೆದನೃಪನಣುಗನು’ ಈ ಕಿರಿಯ ರಾಜ ವಿದ್ಯಾಧರನಾಗಿದ್ದ ಪಕ್ಷದಲ್ಲಿ ಆಗ ಈ ವಿವರಣೆ ಇನ್ನೂ ಸಮರ್ಪಕತೆಯನ್ನು ಪಡೆಯುತ್ತದೆ. ಆದರೆ ಈ ವಿಚಾರವನ್ನು ತೆರೆದ ವಿಷಯವಾಗಿ ಬಿಡುವುದು ಸೂಕ್ತವಾದೀತು.

೮. ನಾಗವರ್ಮನು ಹೇಳುವ ಇನ್ನೊಂದು ಹೆಸರು, ಗಂಡರ ಮೂಗುತಿಯೆನಿಸಿದ ಮಂಡಳಿಕನಾದ ರಕ್ಕಸ ಗಂಗನ, ಮಂತ್ರಿ – ಸಂಧಿಬಿಗ್ರಹಿ ‘ರಾಯ’ ನದು; ಈ ರಾಯನು ನಾಗವರ್ಮನನ್ನು ಕೊಂಡಾಡಿ ಪೊರೆದನಂತೆ (ಛಂದೋಂಬುಧಿ, ಪಧ್ಯ ೨೮).

೮.೧ ‘ರಾಯ’ ಎಂಬ ಹೆಸರು ಬಂದೊಡನೆ ಚಾಮುಣ್ಡರಾಯನು ನೆನಪಿಗೆ ಬರುತ್ತದೆ; ಅದರಿಂದ ಈ ಚರ್ಚೆಯಲ್ಲಿ ಪಾಲುಗೊಂಡ ವಿದ್ವಾಂಸರು ಅಂತಹುದೇ ತೀರ್ಮಾನಕ್ಕೆ ಬಂದಿದ್ದಾರೆ. ನಾಗವರ್ಮನನ್ನು ಗಂಗರ ಅರಸ ರಾಚಮಲ್ಲ – ರಕ್ಕಸ – ಗಂಗನು ಆಸರೆ ಕೊಟ್ಟನೆಂದೂ, ಮಂತ್ರಿ ಚಾಮುಣ್ಡರಾಯನು ಪೊರೆದನೆಂದೂ ಅಭಿಪ್ರಾಯ ಪಟ್ಟಿದ್ದಾರೆ. ಈ ಎರಡೂ ಅಭಿಪ್ರಾಯಗಳು ಅಸಮಂಜಸವಾಗಿವೆ.

೮.೧.೧. ಮೊದಲನೆಯದಾಗಿ ನಾಗವರ್ಮನು ಹೇಳುವ ರಕ್ಕಸಗಂಗನು ಈ ರಾಚಮಲ್ಲ ರಕ್ಕಸಗಂಗನಲ್ಲ. ನಾಗವರ್ಮನು ಹೇಳುವ ಮಾಂಡಲಿಕ ಅರಸ ರಕಸ-ಗಂಗನು ಹೊಂಬುಜ ಶಾಸನೋಕ್ತನಾದ ಮತ್ತು ಗೋವಿಂದರದೇವನಾದ ರಕ್ಕಸ-ಗಂಗ. ರಾಚಮಲ್ಲನಿಗೆ ‘ಗಂಡರ ಮೂಗುತಿ’ ಎಂಬ ಪ್ರಶಸ್ತಿ ಇರಲಿಲ್ಲ, ಗೋವಿಂದರ ದೇವನಿಗೆ ಇತ್ತು.

೮.೧.೨. ಎರಡನೆಯದಾಗಿ ನಾಗವರ್ಮನ ವೇಳೆಗಾಗಲೇನೆ ಚಾಮುಣ್ಡರಾಯನು ಸತ್ತು ಸ್ವರ್ಗಸ್ಥನಾಗಿದ್ದನು; ಕ್ರಿ.ಶ. ೯೮೩ -೮೪ ರ ವೇಳೆಗೆ ಆತನು ದಿವಂಗತನಾಗಿದ್ದನು.

೮.೨. ಗೋವಿಂದರದೇವ – ಗಂಡರ ಮೂಗುತಿ – ಅರಸ – ರಕ್ಕಸಗಂಗನ ಕಾಲ ಸುಮಾರು ಕ್ರಿ.ಶ. ೯೯೦ – ೧೦೨೪.

೮.೨.೧. ನಾಗವರ್ಮನ ಗುರುಗಳಾದ ಅಜಿತಸೇನ ಪಣ್ಡಿತದೇವನ ಕಾಲ ಕೂಡ ಸುಮಾರು ೧೦೨೦ – ೧೦೬೫.

೮.೩. ಹೀಗಾಗಿ ನಾಗವರ್ಮನನ್ನು ಪೊರೆದ ನೃಪನ ವಿಚಾರವೂ, ಕೊಂಡಾಡಿ ಪೊರೆದ ರಾಯನ ವಿಚಾರವೂ ಇನ್ನೂ ತೀರ್ಮಾನವಾಗಬೇಕಾದರೆ; ಅವರಿಬ್ಬರ ವಿಚಾರ ಖಚಿತವಾಗಿ ತಿಳಿಯದು.

೯. ನಾಗವರ್ಮನು ತನ್ನ ಹಿರಿಯರ ಮತ್ತು ಮನೆತನದ ವಿಚಾರವಾಗಿ ವಿವರಗಳನ್ನು ತಿಳಿಸುವ ಪದ್ಯಗಳನ್ನು ಓದುವಾಗ ಪೊನ್ನನ ಶಾಂತಿಪುರಾಣ ಹಾಗೂ ರನ್ನನ ಅಜಿತಪುರಾಣದಲ್ಲಿ, ಅತ್ತಿಮಬ್ಬೆಯ ಪೂರ್ವಿಕರನ್ನು ಪರಿಚಯ ಮಾಡುವ ಪದ್ಯಗಳು ನೆನಪಿಗೆ ಬರುತ್ತವೆ.

೯.೧. ವೆಂಗಿವಿಷಯ, ವೆಂಗಿಪಳು ಹಾಗೂ ಕೌಂಡಿನ್ಯ ಗೋತ್ರ ಎಲ್ಲವೂ ಅಕ್ಷರಶಃ ಸಮಾನವಾಗಿವೆ. ಅಲ್ಲಿ ನಾಗಮಯ್ಯನು ವೇದ ವೇದಾಂಗಗಳಲ್ಲಿ ಪಾರಾಂಗತನಾದ ದ್ವಿಜೋನ್ನತ ಹಾಗೂ ಭೂಮಿ ದೇವೋತ್ತಮನಾಗಿದ್ದರೆ, ಇಲ್ಲಿ ಅದೇ ಬಗೆಯ ವೆಣ್ಣಮಯ್ಯನಿದ್ದಾನೆ.

೯.೧.೧. ದೇಶಕಾಲ ಪರಿಸರವೆಲ್ಲ ಸಮಂಜಸವಾಗಿ ಹೊಂದಾಣಿಕೆಯಿರುವುದಿಲ್ಲ ನಾಗವರ್ಮನ ಮುತ್ತಾತ ವೆಣ್ಣಮಯ್ಯನೂ, ಅತ್ತಿಮಬ್ಬೆಯ ತಾತ ನಾಗಮಯ್ಯನೂ ವೆಂಗಿವಿಷಯದ ಕೌಂಡಿನ್ಯಗೋತ್ರದವರಾಗಿದ್ದು ದಾಯಾದಿಗಳೊ ಹತ್ತಿರದ ನಂಟರೋ ಆಗಿರುವ ಸಾಧ್ಯತೆಯಿದೆ. ಅತ್ತಿಮಬ್ಬೆಯ ಹಿರಿಯರಂತೆಯೇ ನಾಗವರ್ಮನ ಹಿರಿಯರೂ ಬ್ರಾಹ್ಮಣತ್ವದಿಂದ ಜೈನತ್ವಕ್ಕೆ ಮತಾಂತರಗೊಂಡು ಬಂದವರು. ಇವರೆಲ್ಲ ಮೂಲತಃ ವಾಜಿವಂಶದ ಕೌಂಡಿನ್ಯ ಗೋತ್ರದವರು. ಇದೇ ಸ್ಥಳ, ದೇಶ, ಪರಿಸರ, ವಂಶ ಮೂಲಕ್ಕೆ ಸೇರಿದ ಪಂಪನ ಹಿರಿಯರೂ ಸಹ ಹೀಗೆಯೇ ತಜ್ಞಾತಿಯನುತ್ತರೋತ್ತರಮ್‍ಮಾಡಿ ನೆಗಳ್ಚಿದವರೆಂಬುದನ್ನು ಮರೆಯಲಾಗದು. ಇವರೆಲ್ಲ ಇದ್ದದ್ದು ಮತಾಂತರದ ಪರಿಸರದಲ್ಲಿ, ಮತಾಂತರದ ಯುಗದಲ್ಲಿ.

೧೦. ಇನ್ನು ಕಡೆಯದಾಗಿ ಗುರುತಿಸಬೇಕಾದ್ದು ನಾಗವರ್ಮನ ಕಾಲ. ಈಗಾಗಲೇ ಸೂಚಿಸಿ ಗ್ರಹಿಸಿರುವಂತೆ, ನಾಗವರ್ಮನಿಗೆ ಆಸರೆಯಾದ ಅರಸ ರಕ್ಕಸ – ಗಂಗನ ಕಾಲ ೯೯೦ ರಿಂದ ೧೦೨೪. ಆತನ ಗುರುಗಳಾದ ಅಜಿತಸೇನ ಪಂಡಿತದೆವರ ಕಾಲ ೧೦೨೦ ರಿಂದ ೧೦೬೫. ಅದರಿಂದ ನಾಗ ವರ್ಮನು ಛಂದೋಂಬುಧಿಯನ್ನು ಬರೆದ ಅವಧಿ ಸುಮಾರು ಕ್ರಿ.ಶ. ೧೦೨೫ ಎಂದು ತಿಳಿಯಬಹುದು.