ಜೈನತ್ವ ಉದ್ಘಾಟಿತವಾದ ನೆಲೆಯಲ್ಲಿ ಮೂಲತಃ ಜಾತಿಗಳೆ ಇರಲಿಲ್ಲ. ಹಾಗಾದರೆ ಜಾತಿಗಳು ಆಮೇಲೆ ಹೇಗೆ ಬಂದುವು ಎಂಬ ಪ್ರಶ್ನೆಗೆ ಉತ್ತರಿಸ ಬೇಕಾಗುತ್ತದೆ. ತನ್ನ ಪ್ರಾರಂಭದ ಹಂತಗಳಲ್ಲಿ ಜಾತಿಮತಗಳ ಸೂತಕವಿರಲಿಲ್ಲ ವೆಂಬುದನ್ನು ದೃಢಪಡಿಸಿದ ಪ್ರಾಚೀನ ಆಚಾರ್ಯರೇ ಇದನ್ನೂ ವಿಶದಪಡಿಸಿದ್ದಾರೆ. ಜಿನಸೇನಾಚಾರ್ಯರು (೯ ನೆಯ ಶತಮಾನ) ಬರೆದ ಸಂಸ್ಕೃತ ಆದಿಪುರಾಣದಲ್ಲಿ ಪ್ರತಿಮೆಗಳ ಮೂಲಕ ಈ ಅಂಶವನ್ನು ಧ್ವನಿಸಿದ್ದಾರೆ:

ಮನುಷ್ಯಜಾತಿರೇಕ್ಕೆವ ಜಾತಿನಾಮೋದಯೋದ್ಭವಾ
ವೃತ್ತಿ ಭೇದಾಹಿತದ್ಭೇದಾಚ್ಚಾತುರ್ವಿಧ್ಯಮಿಹಾಶ್ನು ತೇ
||
– ಜಿನಸೇನ, ಆದಿಪುರಾಣ, ೩೮ – ೪೫

ಇರುವುದೊಂದೇ ಜಾತಿ, ಅದು ಮನುಷ್ಯ ಜಾತಿ, ಅವರವರ ಭಿನ್ನವೃತ್ತಿಗಳ ಕಾರಣದಿಂದ ವ್ಯತ್ಯಾಸಗಳುಂಟಾಗಿವೆ. ಋಷಭನು ಆಯುಧಧಾರಿಯಾಗಿ ರಾಜಧರ್ಮ ವನ್ನು ಪಾಲಿಸಿದಾಗ ಕ್ಷತ್ರಿಯರು ಬಂದರು. ಕ್ರಮೇಣ ನಾನಾ ಜೀವನೋಪಾಯಗಳನ್ನು ಕಂಡುಹಿಡಿದಾಗ ವೈಶ್ಯ ಜಾತಿ ಹುಟ್ಟಿತು, ನಾನಾ ಕಸುಬುಗಳನ್ನು ಪ್ರಾರಂಭಿಸಿದ್ದರಿಂದ ಶೂದ್ರ ಜಾತಿ ಹುಟ್ಟಿತು, ಇಲ್ಲಿ ಶೂದ್ರಕ್ಕೆ ಇಂದಿನ ಪರಿಮಿತ ಅರ್ಥವಿರಲಿಲ್ಲ. ಋಷಭರ ಅನುಯಾಯಿ ಶ್ರಾವಕ ಸಂಘ ಜೈನಸಮಾಜವನ್ನು ಸ್ಥಾಪಿಸಿದ ಮೇಲೆ, ಚಕ್ರವರ್ತಿ ಭರತನ ಕಾಲದಲ್ಲಿ ಅಣುವ್ರತಧಾರಿಗಳಾದ ದ್ವಿಜರು ಬಂದರು. ಭರತನು ತನ್ನ ಸಿರಿಯನ್ನು ದಾನಮಾಡಿದಾಗ ಅವನ ತಮ್ಮಂದಿರಾಗಲಿ, ಜೈನಮುನಿಗಳಾಗಲಿ (ಉದ್ದಿಷ್ಟ ಆಹಾರ ತ್ಯಾಗ ಮನೋಭಾವದವರಾದುದರಿಂದ) ದಾನ ಸ್ವೀಕರಿಸಲಿಲ್ಲ. ಆಗ ಇಂದ್ರನು ದಾನ ಪಡೆಯಲು ಅರ್ಹರಾದ ಅಣುವ್ರತಧಾರಿ ಗ್ರಹಸ್ಥರನ್ನು ಭರತನಿಗೆ ತೋರಿಸಿದನು. ಅವರು ದಾನ ಸ್ವೀಕರಿಸಲು ಒಪ್ಪಿಬಂದರು. ಅವರೇ ಬ್ರಾಹ್ಮಣರು. ಆಗಮ ಸ್ವಾಧ್ಯಾಯ, ಬೋಧನೆ, ಜಿನಪೂಜೆ – ಇವುಗಳಲ್ಲಿ ನಿರತರಾದ ಇವರು ಹೊಸ ವರ್ಣದ ಲಾಭ ಪಡೆದು ಯಜ್ಞೋಪವೀತ ಧರಿಸಿದ ದ್ವಿಜರು, ದೇವ ಬ್ರಾಹ್ಮಣರು.

ಆದಿಮಾನವರಿಗೆ ಮೊದಲಿಗೆ ದುಡಿದು ತಿನ್ನುವ ಕಾಯಕವಿರಲಿಲ್ಲ. ಬೇಡಿದ್ದನ್ನು ನೀಡುವ ಕಲ್ಪವೃಕ್ಷ ಸುವರ್ಣಯುಗದ ಭೋಗಭೂಮಿಜರಾಗಿದ್ದರು. ಆ ದಿನಗಳು ಮುಗಿದವು. ಮೈಮುರಿದು ದುಡಿದು ತಿನ್ನುವ ಕಾಲ ಬಂದಿತು. ಆಗ ಋಷಭನು ವಿವಿಧ ವೃತ್ತಿ ಗಳವರನ್ನು ವಿಂಗಡಿಸಿದನು. ಕ್ಷತ್ರಿಯ ವೈಶ್ಯ ಶೂದ್ರ – ಮೂರು ಜಾತಿ – ವರ್ಣಗಳನ್ನು ಚಾಲ್ತಿಗೆ ತಂದನು. ಮುಂದೆ ಭರತನು ಬ್ರಾಹ್ಮಣ ಜಾತಿಯನ್ನು ನಾಲ್ಕನೆಯದಾಗಿ ಕಲ್ಪಿಸಿದನು.

ಈ ಹೇಳಿಕೆಯಲ್ಲಿರುವ ಸಾಂಕೇತಿಕೆಯನ್ನು ಅರ್ಥೈಸ ಬಹುದು. ಆದಿಮ ಸಮಾಜದವರು ನಿಸರ್ಗದ ಮಕ್ಕಳಾಗಿದ್ದರು. ಕಲ್ಪವೃಕ್ಷಗಳ ಸುವರ್ಣಯುಗವೆಂದರೆ, ಗಿಡಮರಗಳು ಬಿಡುತ್ತಿದ್ದ ಹಣ್ಣುಗಳೆ ಆಹಾರವಾಗಿ ಕಡಿಮೆ ಸಂಖ್ಯೆಯಲ್ಲಿದ್ದ ಆದಿಮ ಸಮಾಜಕ್ಕೆ ಸಾಕಾಗುತ್ತಿತ್ತು; ಅದು ಆರೋಗ್ಯಕರವಾಗಿಯೂ ಇದ್ದಿತು. ಇದು ಪ್ರಾಥಮಿಕ ನೆಲೆಯ ಆಹಾರ ಪದ್ಧತಿ. ಅನಂತರ ಜನರೂ ಹೆಚ್ಚಿದರು. ವನ್ಯಜೀವನ ದಾಟಿದರು. ಬೇಟೆ, ಕೃಷಿ ವೃತ್ತಿಗಳಿಗೆ ತೊಡಗಿದರು. ಈ ಎರಡನೆಯ ಹಂತದಲ್ಲಿ ವೃತ್ತಿ ಆಧರಿಸಿ ಗುಂಪುಗಳಾದುವು. ಇದಿಷ್ಟೂ ಜೈನ ಪುರಾಣಗಳು ಜಾತಿ-ವರ್ಣ-ವೃತ್ತಿಗೆ ಕೊಟ್ಟ ವಿವರಣೆ. ಜೈನತ್ವದ ಈ ಪ್ರತಿ ಸಂಸ್ಕೃತಿ ನಿರ್ಮಾಣಕ್ಕಿದ್ದ ತುರ್ತುಗಳೇನೆಂಬುದರ ಹಿನ್ನೆಲೆಯನ್ನೂ ಅರಿಯ ಬೇಕಾಗುತ್ತದೆ. ಭಾರತೀಯ ಎಂಬುದಕ್ಕೆ ಸಂವಾದಿಯೆನಿಸಿರುವ ಹಿಂದೂ ಇರುವ ವಿವರಣೆಯನ್ನು ಪರಿಶೀಲಿಸಿದರೆ ಜೈನತ್ವದ ಮತ್ತು ಹಿಂದೂತ್ವದ ನಡುವಣ ಅಂತರ ಬಯಲಾಗುತ್ತದೆ.

ಪಿರಮಿಡ್ ರಚನೆಯ ಶ್ರೇಣೀಕೃತ ಹಿಂದೂ ಸಮಾಜದ ಜಾತಿ ವ್ಯವಸ್ಥೆಯಲ್ಲಿ ಎಲ್ಲ ಮನುಷ್ಯರೂ ಸಮಾನರಾಗಿ ಪರಿಗಣಿತರಾಗಿರಲಿಲ್ಲ. ಹಿಂದೂ ಸಮಾಜ ಪರಿ ಕಲ್ಪನೆಯಲ್ಲಿ ಮಾನವರು ಜನ್ಮತಃ ಅಸಮಾನರು. ಹಿಂದೂ ಜಾತಿ ವ್ಯವಸ್ಥೆಯಲ್ಲಿ ತರತಮ ಭಾವದ ಆರೋಹಣ – ಅವರೋಹಣ ರಚನೆಯಿದೆ. ಇದು ಅಸಮಾನತೆಯನ್ನು ಆಧರಿಸಿ ನಿಂತ ವ್ಯವಸ್ಥೆ. ಈ ಚೌಕಟ್ಟಿನೊಳಗೆ ಬಾಳುವ ವ್ಯಕ್ತಿಯ ಸ್ಥಾನಮಾನ ಅಂತಸ್ತುಗಳನ್ನು, ಮೇಲು-ಕೀಳು ಎಂಬುದನ್ನು ನಿರ್ಧರಿಸುವ ಮಾನದಂಡ ಹೇಗೊ, ಹಾಗೆಯೇ ಶೂದ್ರ ಹುಟ್ಟಿನಿಂದಲೇ ಕಡೆಯವನೂ ಕೀಳಾದವನೊ ಆಗಿದ್ದಾನೆ. “

[ಜವರಯ್ಯ ಮ.ನ. : ೧೯೯೦ : ೯೩] ಇವರಿಗೆ ವೇದೊಪಿನಷತ್ತುಗಳು ಮಾರ್ಗದರ್ಶಿಗಳು; ಇವೆಲ್ಲಾ ಆರ್ಯರ ವಿಷಬೀಜಗಳು. ಭಾರತದ ಆದಿವಾಸಿ ಮತ್ತು ಮೂಲ ನಿವಾಸಿ – ಬುಡಕಟ್ಟುಗಳನ್ನು ಅಪಮಾನಿಸಿಸ ತಾರತಮ್ಯದ ತಂತ್ರಗಳು.

ಹಿಂದೂ ಸಮಾಜ ಹಲವು ಶಾಸ್ವತ ಪ್ರತ್ಯೇಕ ಜಾತಿಗಳಾಗಿ ಒಡೆದಿದೆ, ಜಾತಿಗಳಲ್ಲಿ ಸಹಪಂಕ್ತಿ ಭೋಜನ ಇಲ್ಲ. ದೇಹ ಸಂಬಂಧ ಮಾತಂತಿರಲಿ, ಒಬ್ಬರನ್ನೊಬ್ಬರು ಮುಟ್ಟುವಂತೆಯೂ ಇಲ್ಲ, ಮುಟ್ಟಿಸಿಕೊಳ್ಳುವಂತೆಯೂ ಇಲ್ಲ; A Brahman is to be revered even though he curses and beat you and use harsh words – so say the saints. A Brahman must be revered, though he be devoid of goodness or virtue. But a Sudra never, however virtuous and learned. [Zaehner R.C. : ೧೯೭೫ : ೧೪೨] ಪವಿತ್ರ – ಶುದ್ಧರಾದ ಮೇಲು ಜಾತಿ-ವರ್ಣ ದವರು ಇರುವ ಹಾಗೆ ಅಪವಿತ್ರ-ಅಶುದ್ಧರಾದ ಕೆಳಜಾತಿ ವರ್ಣದವರುಂಟು, ಈ ಜಾತಿ ಅಂತರಗಳು ದೈವ ಸೃಷ್ಟಿ. ಋಗ್‍ವೇದದ ಪುರುಷ ಸೂಕ್ತದ ಪ್ರಕಾರ ಆದಿಪುರಷನ ತಲೆಯಿಂದ ಬ್ರಾಹ್ಮಣನೂ, ಭುಜದಿಂದ ಕ್ಷತ್ರಿಯನ್ನೂ, ತೊಡೆಯಿಂದ ವೈಶ್ಯನೂ. ಕಾಲಿನಿಂದ ಶೂದ್ರನೂ ಹುಟ್ಟಿದರು. (Ambedkar B.R. 1970 : 140) ಇವರೆಲ್ಲ ಸತ್ವ-ರಜ-ತಮಸ್ ಪ್ರಕೃತಿ ಗುಣಾಧಾರಿತವಾಗಿ ತಮ್ಮ ಸ್ವಧರ್ಮ ವೃತ್ತಿಯನ್ನು ಪಾಲಿಸಬೇಕು. ಸ್ವಧರ್ಮವನ್ನು ಮೀರಿದರೆ, ವೇದ ಪಾರಮ್ಯವನ್ನು ನಿರಾಕರಿಸಿದರೆ, ಜಾತಿ ತಿರಸ್ಕರಿಸಿದರೆ ಆತ/ಆಕೆ ಹಿಂದೂ ಧರ್ಮದಿಂದ ಬಹಿಷ್ಕೃತರು. (ರಿಚರ್ಡ್ ಲೆನಾಯ್ : ೧೯೭೫ : ೧೫೧). ಅಲ್ಪಸಂಖ್ಯಾತ ಬ್ರಾಹ್ಮಣನಿಗೆ ಅನುವಂಶಿಕ ಶ್ರೇಷ್ಥತೆಯಿದ್ದುದರಿಂದ ಬಹುಸಂಖ್ಯಾತರಾದ ಇತರರು ಬ್ರಾಹ್ಮಣನ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕು. ಹೊರಗಿನಿಂದ ಭಾರತಕ್ಕೆ ಬಂದು ಸ್ಥಳೀಯ ಮೂಲ ನಿವಾಸಿಗಳನ್ನು ಗೆದ್ದು ಆರ್ಯರು ತುತ್ತ ತುದಿಯಲ್ಲಿ ಕುಳಿತರು, ಸೋತ ದ್ರಾವಿಡಾದಿಗಳು ಕೆಳಗಿನ ಕಟ್ಟಕಡೆಯ ಊರಾಚೆ ನಿಂತರು : A caste system is one whereby a society is divided up into a number of self contained and completely segregated units; the mutual relations between which are ritually determined in a graded scale. (Hutton J.H : 1963 : 50).

ಶುದ್ಧ ಅಶುದ್ದವೆಂಬ ತಾರತಮ್ಯಾಧಾರಿತ ಈ ಜಾತಿ ವ್ಯವಸ್ಥೆಯಲ್ಲಿ ಕೆಳಜಾತಿಯವರು ತಮ್ಮ ಕೆಲಸಗಳನ್ನು ಇನ್ನೊಂದು ಜಾತಿಯವರಿಗೆ ವಹಿಸುವಂತಿರ ಲಿಲ್ಲ. ಸ್ವಂತ ವ್ಯಕ್ತಿತ್ವದ ಅಭಾವ ಮತ್ತು ಅಸ್ವಾತಂತ್ರ್ಯ. ಇದು ಹಿಂದೂ ಸಮಾಜದ ಸದಸ್ಯನ ಹಣೆ ಬರೆಹ. ಮೊದಲನೆಯ ಮೂರುಜಾತಿಗಳಿಗೆ ಇರುವಷ್ಟು ಸ್ವಾತಂತ್ರ್ಯವೂ ಶೂದ್ರ-ಅಸ್ಪೃಶ್ಯರಿಗೆ ಇರಲಿಲ. ಸತ್ವಗುಣ ಸ್ವಭಾವ ಪ್ರಕೃತಿಯ ಬ್ರಾಹ್ಮಣರ ಕೆಳಗಿದ್ದ ರಜೋಗುಣದ ಕ್ಷತ್ರಿಯ, ತಮೋಗುಣದ ಶೂದ್ರ, ಸನ್ಯಾಸಿಯಾಗಲೂ ಸಾಧ್ಯವಾಗದ ಸ್ತ್ರೀ-ಇವರಲ್ಲಿ ಕ್ರಮೇಣ ಅರಿವಿನ ಸ್ಪೋಟವಾಗ ತೊಡಗಿತು. ಆಗ, ಸ್ವಧರ್ಮವನ್ನು ಬಿಡಬೇಡಿ, ಸ್ವದರ್ಮ ಪಾಲಿಸುತ್ತಿರುವಾಗ ಸತ್ತರೂ ನಿಮಗೆ ಶ್ರೇಯವಿದೆ- ಎಂಬ ಬೋಧನೆಯ ಬೇಲಿ ಹಾಕಲಾಯಿತು: ಭಗವದ್ಗೀತೆಯ ತಾತ್ಪರ್ಯವೇ ಇದು. ಅರ್ಜುನನು ತನ್ನ ಬಂಧುಗಳನ್ನು ಕೊಲ್ಲಲಾರೆ, ಯುದ್ಧ ಮಾಡಲಾರೆ ಎಂದು ಗೋಗರೆದನು. ಕೃಷ್ಣನು ಅರ್ಜುನನಿಗೆ ಯುದ್ಧ ಮಾಡುವ ಕ್ಷತ್ರಿಯರ ಸ್ವಧರ್ಮವನ್ನು ಮೀರದಂತೆ ಬೋಧಿಸಿದನು.

ಮೇಲಿನ ತುದಿಯಲ್ಲಿ ತಾವು ಎಂದೆಂದಿಗೂ ಕುಳಿತುಕೊಳ್ಳುವಂತೆಯೇ ಇಲ್ಲವೆಂಬ ನಿರಾಶೆ-ಹತಾಶೆ ಕೆಳಸ್ತರದ ಜಾತಿಗಳಲ್ಲಿ ಮಡಗಟ್ಟಿತು. ಈ ಜಾತಿ-ವರ್ಣ ವರ್ಗೀಕರಣ ಅಸಹಜವೆಂದು ಕ್ಷತ್ರಿಯರು, ವೈಶ್ಯರು ಭಾವಿಸಿದರು. ಅವರೆಲ್ಲರಲ್ಲೂ ತಮಗೆ ಅನ್ಯಾಯವಾಗಿದೆಯೆಂಬ ತಿಳಿವಳಿಕೆ ಮೂಡಿತು : “ಜಾತಿಯು ಶ್ರಮ ಅಥವಾ ದುಡಿಮೆಯ ವಿಭಜನೆಯನ್ನು ಆಧರಿಸಿಲ್ಲ; ಅದು ಶ್ರಮಿಕರ ಅಥವಾ ಕಾರ್ಮಿಕರ ವಿಭಜನೆಯಾಗಿದೆ; ಅದರಿಂದ ಅವರು ಅಂತರ್ಜಾತೀಯ ವಿವಾಹ. ಸಹಪಂಕ್ತಿ ಭೋಜನ ಮತ್ತು ಸಮಾನತೆಗಾಗಿ ಕರೆಕೊಟ್ಟರು” [ಅಂಬೇಡ್ಕರ್ ಬಿ.ಆರ್. : ೧೯೯೦ : ೧೬ -೧೭] ಹೀಗೆ ದುಮುಗುಟ್ಟುತ್ತಿದ್ದ ಆದಿವಾಸಿಗಳಿಗೆ, ಅಸ್ಪೃಶ್ಯರಿಗೆ ಜೈನ, ಬೌದ್ಧ ಮತ್ತು ಅಜೀವಕ ಶ್ರವಣ ಪರಂಪರೆ ಬಿಡುಗಡೆಯಾಗಿ ಬಂದಿತು. ಮನುಷ್ಯ ಜಾತಿಯೆಲ್ಲ ಒಂದೆ, ಜಾತಿವರ್ಣಗಳು ದೈವ ನಿರ್ಮಿತವಲ್ಲ, ಅವತಾರವೆಂಬುದಿಲ್ಲ, ಸ್ತ್ರೀಗೂ ಸ್ವಾತಂತ್ರ್ಯವಿದೆ, ಸ್ವಧರ್ಮವನ್ನು ದಾಟಬಹುದು, ಪ್ರತಿಯೊಬ್ಬನೂ ತನ್ನ ಭವಿಷ್ಯವನ್ನು ರೂಪಿಸಿಕೊಳ್ಳಲು ತಾನೇ ಸಮರ್ಥನು- ಎಂಬಿತ್ಯಾದಿ ಹೊಸಮತಗಳ ಪ್ರಣಾಲಿ ಪದದಲಿತ ಜನಮನಕ್ಕೆ ಆಪ್ಯಾಯಮಾನವಾಯಿತು. ಅಸ್ಪೃಶ್ಯರು, ಶೂದ್ರರು, ಕ್ಷತ್ರಿಯರು, ಸ್ತ್ರೀಯರು ಈ ಪ್ರತಿಸಂಸ್ಕೃತಿಯ ಜೈನ-ಬೌದ್ಧ ಮತಗಳಿಗೆ ನುಗ್ಗಿದ ಆದ್ಯರಾದರು. ಕನ್ನಡ ನಾಡಿನಲ್ಲಿ ೧೨ ನೆಯ ಶತಮಾನದಲ್ಲಿ ನಡೆದ ಘಟನೆಗಳು ಇನ್ನೂ ವ್ಯಾಪಕವಾಗಿ ಇಡೀ ಭಾರತದಲ್ಲಿ ಒಂದೂವರೆ ಸಾವಿರ ವರ್ಷಗಳ ಹಿಂದೆಯೇ ನಡೆಯಿತು.

ಶೂದ್ರರೂ ವೈಶ್ಯರೂ ಅಸ್ಪೃಶ್ಯರೂ ಹೀಗೆ ಹೆಚ್ಚಿನ ಸಂಖ್ಯೆಯಲ್ಲಿ ನೂತನ ಶ್ರವಣ ಮತಗಳಿಗೆ ಧಾವಿಸಲು ಮೇಲೆ ಹೇಳಲಾದ ಸಾಮಾಜಿಕ ಕಾರಣಗಳಿದ್ದುವು. ಸಂಸ್ಕಾರವೂ, ಆಸ್ತಿ ಪಾಲೂ, ಸಾಮಾಜಿಕ ಮನ್ನಣೆಯೂ ಇಲ್ಲದೆ ಸ್ತ್ರೀಯರನ್ನು ಶೂದ್ರರ ರೀತಿಯಲ್ಲೇ ಇಟ್ಟಿದ್ದರಿಂದ ಮಹಿಳೆಯರು ಸ್ವತಂತ್ರರಾಗಲು ಹವಣಿಸುತ್ತಿದ್ದರು. ಪ್ರತಿ ಸಂಸ್ಕೃತಿ ನಿರ್ಮಾಣದ ಘಟ್ಟದಲ್ಲಿ ತಮಗೆ ಸುವರ್ಣ ಅವಕಾಶದ ಹೆಬ್ಬಾಗಿಲು ತೆರೆಯಿತೆಂದು ಹೆಂಗಸರು ಅಧಿಕವಾಗಿ ಮತಾಂತರಿಸಿದರು. ಜೈನ ಸಮಾಜದಲ್ಲಿ ಅವಕಾಶದ ಹೆಬ್ಬಾಗಿಲು ತೆರೆಯಿತೆಂದು ಹೆಂಗಸರು ಅಧಿಕವಾಗಿ ಮತಾಂತರಿಸಿದರು. ಜೈನ ಸಮಾಜದಲ್ಲಿ ಸನ್ಯಾಸಿಯರ ಮತ್ತು ಶ್ರಾವಕಿ (ಗೃಹಿಣಿ) ಯರ ಸಂಖ್ಯೆ ಪುರುಷರದಕ್ಕಿಂತ ಒಂದೂವರೆ ಪಟ್ಟಾಗಲು ಇದೂ ಒಂದು ಕಾರಣ.

ಆದಿಪುರುಷನ ಸೃಷ್ಟಿ, ಸೃಷ್ಟಿಕರ್ತನ, ಸ್ಥಿತಿ ಮತ್ತು ಲಯಕರ್ತನ ಕಲ್ಪನೆ, ಅವತಾರಗಳ ಪರಿಕಲ್ಪನೆ, ಸತ್ವ ರಜಸ್‍ತಮೋಗುಣಗಳ ಪರಿಗಣನೆ, ಸ್ವಧರ್ಮ ಪರಿ ಪಾಲನೆ – ಇವೆಲ್ಲವನ್ನೂ ಪ್ರತಿ ಸಂಸ್ಕೃತಿಯಾದ ಬೌದ್ದ – ಜೈನತ್ವಗಳು ನಿರಾಕರಿಸಿದುವು. ಸಾಂಪ್ರದಾಯಿಕ ಜಾತಿ ವ್ಯತ್ಯಾಸಗಳನ್ನು ಇವರೂ ಒಪ್ಪಿಕೊಂಡರೂ, ಅದು ಚಿರಂತನ ಅಥವಾ ಬದಲಾಯಿಸಲಾಗದ ವ್ಯವಸ್ಥೆಯಲ್ಲ; ಯಾರೇ ಇಚ್ಛಿಸಿದರೂ ಇದನ್ನು ಕಿತ್ತೊಗೆಯಬಹುದಿತ್ತು. ಜಾತಿ ವ್ಯವಸ್ಥೆಯೊಳಗೆ ಅವಕಾಶವಿದ್ದು ಆಯ್ಕೆಯ ಸ್ವಾತಂತ್ರ್ಯವಿತ್ತು. ಹಿಂದೂ ಚೌಕಟ್ಟಿನಲ್ಲಿ ಜಾತಿಗಳೊಗಿನ ಅದಲು ಬದಲುಗಳಿಂದ ವರ್ಣಸಂಕರದ ಹೆದರಿಕೆಯಿತ್ತು. ಈ ಬಗೆಯ ಬೆದರಿಕೆ ಪ್ರತಿ ಸಂಸ್ಕೃತಿಯಲ್ಲಿ ಇರಲಿಲ್ಲ. ಹೊಸ ಶ್ರವಣ ಪರಂಪರೆಯಲ್ಲಿ ಜಾತಿ ಶ್ರೇಣಿಗೆ ವ್ಯಕ್ತಿಯ ನಡೆವಳಿಕೆಯನ್ನು ನೋಡಬೇಕೇ ಹೊರತು ಅವನ ಹುಟ್ಟನ್ನು ಅಲ್ಲ : ಮಾಂ ಜಾತಿಂ ಪುಚ್ಛ. ಚರ್ಣಂ ಪುಚ್ಛ. ವ್ಯಕ್ತಿಯ ಚಾರಿತ್ರ್ಯ ಶುದ್ದಿಗೆ ಅವರವರ ಲಿಂಗ / ಮನೆತನದ ಸಂಬಂಧಗಳು ಅಮುಖ್ಯ.

ಪ್ರತಿ ಸಂಸ್ಕೃತಿ ನಿರ್ಮಾಣದಲ್ಲಿ ಸಮಾಜದ ಎಲ್ಲ ಜಾತಿಯ ಸದಸ್ಯರಿಗೂ ರಾಜರಿಗೂ ಪ್ರಜೆಗಳಿಗೂ, ಅವಕಾಶ ವಿಹೀನ ಪದದಲಿತ ಅಸ್ಪೃಶ್ಯರಿಗೂ, ಶೂದ್ರ ಮತ್ತು ಸ್ತ್ರೀಯರಿಗೂ ಸನ್ಯಾಸತ್ವವನ್ನು ನೀಡಲು ಸಹ ಒಪ್ಪಿದರು; ಇಂಥ ಧಾರ್ಮಿಕ ಸಮಾನ ಹಕ್ಕು ಬಾಧ್ಯತೆಗಳು ಅಂತ್ಯಜರಿಗೆ ಹೊಸದಾಗಿತ್ತು. ಗೃಹಸ್ಥಾಶ್ರಮ ಮಾನಪ್ರಸ್ತಾಶ್ರಮ ಸನ್ಯಾಸಾಶ್ರಮ ಎಂಬ, ಕ್ರಮೇಣ ಹಂತಹಂತವಾಗಿ, ಪ್ರವೃತ್ತಿ ಮಾರ್ಗದಿಂದ ಬಿಡಿಸಿಕೊಂಡು ನಿವೃತ್ತಿ ಮಾರ್ಗಕ್ಕೆ ಸಿದ್ಧವಾಗುವ ಹಿಂದೂ ಸನ್ಯಾಸ ಮತ್ತು ಗೃಹತ್ಯಾಗದ ಕಲ್ಪನೆಯನ್ನೂ ಜೈನತ್ವದಲ್ಲಿ ಕೈಬಿಡಲಾಯಿತು. ಯಾರು ಬೇಕಾದರೂ, ಯಾವಾಗ ಬೇಕಾದರೂ ಏಕ್‍ದಂ, ಪ್ರಾಯದಲ್ಲಿಯೂ ಸಹ, ವೈರಾಗ್ಯ ಪ್ರೇರಣೆ ಬಂದಾಗ ಸನ್ಯಾಸ ಸ್ವೀಕರಿಸಬಹುದು, ತಪಸ್ಸಿಗೆ ತೆರಳಬಹುದೆಂದರು. ಬುದ್ಧ – ಮಹಾವೀರರೇ ಅಲ್ಲದೆ ಸಾವಿರಾರು ಜನ ಹಿರಿಯ-ಕಿರಿಯರು, ಸ್ತ್ರೀಯರು, ತಲೆಕೂದಲು ಬಿಳಿದಾಗುವ ಮೊದಲೇ ಸನ್ಯಾಸಕ್ಕೆ ಹೊರಳಿದರು.

ಇದಿಷ್ಟೂ ಹಿಂದೂ ಪರಿಕಲ್ಪನೆಯಾದ ಸ್ವರ್ಧಮದ ನಿರಾಕರಣೆ. ಸ್ವಧರ್ಮದ ಹೆಸರಿನಲ್ಲಿ ಬ್ರಾಹ್ಮಣರು ಯಜ್ಞಯಾಗದಿಗಳನ್ನು ಆಚರಿಸಿ ಪ್ರಾಣಿ ಬಲಿಕೊಡುವುದು, ರಾಜರು ಭೇಟೆಯಾಡುವುದು (ಮೃಗಯಾ), ವೈಶ್ಯರು ಅಸ್ತ್ರ ಶಸ್ತ್ರ ಮಧ್ಯ ಅಫೀಮು ಗಾಂಜಾಗಳನ್ನು ಸರಬರಾಜು ಮಾಡುವುದು- ಇದನ್ನು ಪ್ರತಿ ಸಂಸ್ಕೃತಿಯಲ್ಲಿ ಖಂಡಿಸಲಾಯಿತು. ಸಂಪ್ರದಾಯ ವಿರುದ್ಧವಾಗಿ ಬುದ್ಧ ಮಹಾವೀರರು ಪ್ರತಿಪಾದಿಸಿದ ಪ್ರತಿ ಸಂಸ್ಕೃತಿಯ ಬುನಾದಿ ಸ್ವಧರ್ಮ ಪಾಲನೆಯಲ್ಲ. ಅಹಿಂಸೆಯೇ ಈ ಪ್ರತಿಸಂಸ್ಕೃತಿಯ ತಳಪಾಯ. ಇದರಿಂದ ಆಕರ್ಷಿತರಾದ ರಾಜಮನೆತನಗಳು, ಸಾಮಾಜಿಕರು, ವಿವಿಧ ಜಾತಿ ವರ್ಣಗಳವರು ಜೈನರಾಗಿ ಮತಾಂತರಗೊಂಡರು. ಹಿಂದೂ ಧರ್ಮಿಯಾಗಿ ಸ್ವಧರ್ಮ ಪಾಲಿಸುತ್ತ ಕಳಿಂಗ ಮಹಾಯುದ್ಧವೆಸಗಿ, ಕ್ರೂರಿಯೆನಿಸಿದ್ದ ಅಶೋಕ ಚಕ್ರವರ್ತಿ ಸ್ವಧರ್ಮವನ್ನು ತ್ಯಜಿಸಿ, ಪಶ್ಚಾತ್ತಾಪಗೊಂಡು ಬೌದ್ಧ ಧರ್ಮ ಪಾಲನೆಗಿಂತ ನಿಜವಾದ ವಿಜಯ ಆತ್ಮವಿಜಯ, ಅದು ಧರ್ಮದ ಮೂಲಕ ಸಾಧ್ಯ-ಎಂದು ಅಶೋಕನು ಹಿಂದೂ ಸಂಸ್ಕೃತಿಗೆ ವಿರುದ್ಧವೆನ್ನಬಹುದಾದ ಪ್ರತಿ ಸಂಸ್ಕೃತಿಯ ಸಂದೇಶವನ್ನು ಸಾರಿದನು.

ಪ್ರತಿ ಸಂಸ್ಕೃತಿಯ ನಿರ್ಮಾಪಕರಾದ ಶ್ರಮಣರು ಜಾತಿಮರದ ಬುಡಕ್ಕೆ ಕೊಡಲಿಪೆಟ್ಟು ಕೊಟ್ಟರು. ಹಾಗೆಯೇ ಭಾಷಾಮದವನ್ನೂ ಚೂರು ಮಾಡಿದರು. ಬುದ್ಧನು ಜನಭಾಷೆ ಪಾಲಿಗೆ ಒಲಿದನು, ಮಹಾವೀರನು ಜನ ಭಾಷೆಯಾದ ಅರ್ಧ ಮಾಗಧಿಗೆ ಒಲಿದನು. ಒಟ್ಟಾರೆಯಾಗಿ ಈ ಬಗೆಯ ಮನುಷ್ಯಪರ ಕಾಳಜಿಗಳಿಂದ ಪ್ರೇರಣೆ ಪಡೆದ ಪ್ರತಿ ಸಂಸ್ಕೃತಿಯಲ್ಲಿ, ವೇದಾದಿ ಶಾಸ್ತ್ರಗಳನ್ನು ತಿರಸ್ಕರಿಸಿದ್ದು, ದೈವತ್ವ-ಅವತಾರಗಳನ್ನು ನಿರಾಕರಿಸಿದ್ದು ಪ್ರಗತಿಪರ ಚಿಂತನೆಯಾಗಿತ್ತು; ಬಾಬಾ ಸಾಹೇಬ್ ಅಂಬೇಡ್ಕರರ ಮಾತುಗಳನ್ನು ನೆನಪಿಗೆ ತಂದುಕೊಳ್ಳಬಹುದು: Caste has a divine basis. You must therefore destroy the sacredness and divinity with which caste has become invested. In the last analysis, this means you must destroy the authority of shastras and the Vedas – [ಅಂಬೇಡ್ಕರ್ ಬಿ.ಆರ್.; ೮೭]; ಪ್ರತಿ ಸಂಸ್ಕೃತಿ ಈ ಕೆಲಸವನ್ನು ೧೫೦೦ ವರ್ಷಗಳ ಹಿಂದೆಯೇ ಮಾಡಿದೆ.

ಋಷಭದತ್ತನ ಬ್ರಾಹ್ಮಣ ಮಡದಿ ದೇವನಂದಾಳ ಗರ್ಭದಿಂದ, ಶಿಶು ಮಹಾವೀರನನ್ನು, ಕ್ಷತ್ರಿಯ ಸಿದ್ಧಾರ್ಥನ ರಾಣಿ ತ್ರಿಶಲಾಳ ಗರ್ಭಕ್ಕೆ ಇಂದ್ರನ ಅಜ್ಞಾನುವರ್ತಿಯಾಗಿ ಸಾಮಾನಿಕ ದೇವ ಹರಿನೇಗಮೇಶಿಯ ವರ್ಗಾಯಿಸಿದನು; ಇದು – ’ಅರ್ಹಂತನು ಚಕ್ರವರ್ತಿಗಳು ಭೂತ ಭವಿಷ್ಯದ್ ವರ್ತಮಾನಗಳಲ್ಲಿ ಬ್ರಾಹ್ಮಣ, ನೀಚ, ಭಿಕ್ಷುಕ, ದರಿದ್ರ ಕನಿಷ್ಠ ಕುಲಗಳಲ್ಲಿ ಹುಟ್ಟುವುದಿಲ್ಲ; ತೀರ್ಥಂಕರರು ಯಾವಾಗಲೂ ಶ್ರೇಷ್ಠ ಕ್ಷತ್ರಿಯ ಕುಲದಲ್ಲಿಯಷ್ಟೇ ಜನಿಸುವುದು (ಕಲ್ಪಸೂತ್ರ)’- ಎಂಬ ನಂಬಿಕೆಗೆ ಅನುಗುಣವಾಗಿದೆ. ಇದು ಸ್ಪಷ್ಟವಾಗಿ ಬ್ರಾಹ್ಮನ ಶ್ರೇಷ್ಠತೆಯನ್ನು ನಿರಾಕರಿಸಿ ಕ್ಷತ್ರಿಯೊನ್ನತಿಯನ್ನು ಸ್ಥಾಪಿಸಿದ ಪ್ರಯತ್ನ. ಬ್ರಾಹ್ಮಣನಾಗಿ ಹುಟ್ಟುವ ಅವಕಾಶವನ್ನು ಮಹಾವೀರ ಭ್ರೂಣಕ್ಕೆ ನಿರಾಕರಿಸಿದ್ದನ್ನೂ, ಉಳಿದೆಲ್ಲ ತೀರ್ಥಂಕರರೂ ಕ್ಷತ್ರಿಯ ಕುಲೋತ್ಪನ್ನ ರೆಂಬುದನ್ನೂ ಗಮನಿಸಬೇಕು; ಅಷ್ಟೇಕೆ ತ್ರಿಷಷ್ಟಿಶಲಾಕಾ ಪುರುಷರೆಲ್ಲ ಕ್ಷತ್ರಿಯರು. ಭಾರತದ ಚರಿತ್ರೆಯಲ್ಲಿ ಮತ್ತು ಕರ್ನಾಟಕದ ರಾಜರಲ್ಲಿ ಬಹುಜನರು ಜೈನ ಮೂಲರಾಗಿರುವುದೂ, ಜೈನ ಪಕ್ಷಪಾತಿಗಳಾಗಿರುವುದೂ ಈ ಕ್ಷತ್ರಿಯ ಮೂಲ ಜನ್ಯವಾದದ್ದು. ಈ ಕೆಲಸ ಕ್ರಿ.ಪೂ. ೩-೨ನೆಯ ಶತಮಾನದ ವೇಳೆಗೆ ವ್ಯಾಪಕವಾಗಿ ನಡೆದಿತ್ತು. ಕ್ರಿ.ಪೂ. ಒಂದನೆಯ ಶತಮಾನದ ಮಥುರಾದ ಜೈನ ಶಿಲ್ಪಗಳಲ್ಲಿ, ಈ ಜಿನ ಶಿಶುವಿನ ಸಂಬಂಧವಾದ ಗರ್ಭಾಪಹರಣದ ಚಿತ್ರಗಳಿವೆ.

ಬೌದ್ದೀಯ ಪರಂಪರೆಯೂ ಬ್ರಾಹ್ಮಣ ಶ್ರೇಷ್ಠತೆಯನ್ನು ಅಲ್ಲಗಳೆಯಿತು. ಆದರೆ -‘ಬುದ್ದನು ಕ್ಷತ್ರಿಯ ಅಥವಾ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟುವನೇ ಹೊರತು ವೈಶ್ಯ ಅಥವಾ ಶೂದ್ರ ಜಾತಿಯಲ್ಲಿ ಅಲ್ಲ’ – ಎಂಬ ಬೌದ್ಧ ಗ್ರಂಥಗಳ ಹೇಳಿಕೆಯೂ ಇದೆ, ಅಂದರೆ ಅವೈದಿಕ ಪ್ರತಿ ಸಂಸ್ಕೃತಿ ಶ್ರವಣ ಪರಂಪರೆಗಳಾದ ಜೈನ-ಬೌದ್ಧ ಮತಗಳಲ್ಲೂ ಸಹ ಒಮ್ಮೊಮ್ಮೆ ವೈಶ್ಯ -ಶೂದ್ರರು ಗೌಣರಾದರೆನಿಸು ತ್ತದೆ. ವರ್ತಮಾನ ಕಾಲದ ೨೫ ಜನ ಬುದ್ಧರಲ್ಲಿ ೨೨ ಜನ ಕ್ಷತ್ರಿಯ ವಂಶಜರು, ಮೂವರು ಬ್ರಾಹ್ಮಣ ಕುಲಜರು (ಜಯ ವಿಕ್ರಮ, ಎನ್.ಎ. : ೧೯೭೪). ಹಿಂದೂ ಶ್ರೇಣಿಯಲ್ಲಿ ಬ್ರಾಹ್ಮಣ ಶಿಖರವಾಗಿ ಕ್ಷತ್ರಿಯ, ವೈಶ್ಯ, ಶೂದ್ರ, ಅಸ್ಪೃಶ್ಯರು ಅನುಕ್ರಮವಾಗಿ ಕೆಳಗಿನ ತಳಕ್ಕೆ ಇಳಿಯುತ್ತಾರೆ. ಹಿಂದೂ ವರ್ಣ ವ್ಯವಸ್ಥೆಯಲ್ಲಿ ಬ್ರಾಹ್ಮಣ -ಅಸ್ಪೃಶ್ಯ ಎರಡು ಧ್ರುವಗಳು [ಲೂಯಿ ಡುಮೊಂಟ್ : ೧೯೭೦] ಬೌದ್ಧ ಪರಂಪರೆಯಲ್ಲಿ ಕ್ಷತ್ರಿಯ, ಬ್ರಾಹ್ಮಣ, ವೈಶ್ಯ, ಶೂದ್ರ- ಇದು ವರ್ಗೀಕರಣ ಕ್ರಮ.

ಜೈನರಲ್ಲಿ ಕ್ಷತ್ರಿಯರಷ್ಟೇ ಒಂದು ವರ್ಗ, ಮತ್ತು ಉಳಿದವರೆಲ್ಲ ಅಕ್ಷತ್ರಿಯರು ಎಂಬ ವಿಂಗಡಣೆ ಪ್ರಥಮ ಹಂತದ್ದು. ಋಷಭನು ತೀರ್ಥಂಕರನಾಗುವ ಮೊದಲು ಇನ್ನೂ ರಾಜನಾಗಿದ್ದಾಗ ಕ್ಷತ್ರಿಯ, ವೈಶ್ಯ, ಶೂದ್ರ ಎಂದು ವೃತ್ತಿಯಾಧಾರಿತ ವರ್ಗೀಕರಣ ವ್ಯವಸ್ಥೆ ಮಾಡಿದನು – ಇದು ಎರಡನೆಯ ಹಂತ. ಭರತನು, ಕ್ಷತ್ರಿಯ ಗುಂಪನ್ನು ಹಾಗೇ ಇಟ್ಟು ಅಕ್ಷತ್ರಿಯರಲ್ಲಿ ವೈಶ್ಯ, ಶೂದ್ರ, ಬ್ರಾಹ್ಮಣ ಎಂದು ವ್ಯವಸ್ಥೆ ಮಡಿದನು – ಇದು ಮೂರನೆಯ ಹಂತ. ಇಂದಿಗೂ ಉತ್ತರ ಭಾರತದ ಜೈನ ಸಮಾಜದಲ್ಲಿ ಶ್ವೇತಾಂಬರ-ದಿಗಂಬರವೆಂಬ ಎರಡೂ ಪಂಥ ಗಳಲ್ಲಿಯೂ, ಅವುಗಳ ಉಪಶಾಖೆಗಳಲ್ಲಿಯೂ ಬ್ರಾಹ್ಮಣವೆಂಬ (ಅರ್ಧ ಮಾಗಧಿ ಪ್ರಾಕೃತ ಭಾಷೆಯಲ್ಲಿ ಮಾಹಣ) ಒಳಜಾತಿಯಿಲ್ಲ. ಜಿನಾಲಯಗಳಲ್ಲಿ ಶ್ರಾವಕರೇ ತಮಗೆ ಮನ ಬಂದಂತೆ ಪೂಜಿಸಿಕೊಂಡು ಹೋಗಬಹುದು. ಜಿನಗೃಹಗಳನ್ನು ತೊಳೆದು ಶುಚಿಯಾಗಿಡಲು ಯಾವುದೇ ಜಾತಿಯವರನ್ನು ನೇಮಿಸುತ್ತಾರೆ.

ಜೈನರಲ್ಲಿ ಮೂಲತಃ ಕ್ರಿ.ಪೂ. ದಿಂದ ಕ್ರಿ.ಶ.ದ ವರೆಗೆ ವರ್ಣ ವ್ಯವಸ್ಥೆ ಇರಲಿಲ್ಲ. ಕ್ರಿ.ಶ. ೫-೬ ನೆಯ ಶ.ದ. ವೇಳೆಗೆ ಬ್ರಾಹ್ಮಣವೂ ಸೇರಿಕೊಂಡಿತು. ಇದು ಯಾವ ತುರ್ತು – ಜರೂರಿನಿಂದ ಸೇರಬೇಕಾಯಿತೆಂಬುದಕ್ಕೆ ಸಾಕ್ಷಿ ಚರಿತ್ರೆಯ ಗರ್ಭದಲ್ಲಿದೆ. ಜೈನರೂ ಸಹ ಬ್ರಾಹ್ಮಣರೊಂದಿಗೆ ಮತಾಂತರ ವಿವಾಹಾದಿಗಳಿಂದ ಸಂಕರಗೊಂಡುದರ ಪರಿಣಾಮವಿದು. ಇದು ಹುನ್ನಾರವಲ್ಲ, ಹೊಂದಾಣಿಕೆ.

ಕರ್ನಾಟಕದಲ್ಲಿ, ಅದರಲ್ಲಿಯೂ ದಿಗಂಬರರಲ್ಲಿ ಜೈನ ಬ್ರಾಹ್ಮಣರೆಂಬ ಒಂದು ಗುಂಪಿದೆ : ಜೈನ ಮತಕ್ಕೆ ಮತಾಂತರವಾದ ಬ್ರಾಹ್ಮಣ ಪರಂಪರೆಯವರು ಮತ್ತು ಗೃಹಸ್ಥರಲ್ಲೇ ಹಿಂದಿನಿಂದ ಧಾರ್ಮಿಕ ಆಚರಣೆಗೆ ನೆರವಾಗಲು ನಿಉಂತ ವರ್ಗದವರು. ಇವರಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ‘ಇಂದ್ರ’ ರು ಎನ್ನುತ್ತಾರೆ, ಉತ್ತರ ಕರ್ನಾಟಕದ ಕಡೆ, ವಿಶೇಷವಾಗಿ ಬೆಳಗಾವಿ ಜಿಲ್ಲೆಯಲ್ಲಿ ‘ಉಪಾಧ್ಯೆ’/ ಉಪಾದ್ರಿ ಎನ್ನುತ್ತಾರೆ. ಹಳೆಯ ಮೈಸೂರು ಭಾಗದಲ್ಲಿ ಪುರೀಹಿತರು / ಅರ್ಚಕರು ಎನ್ನುವರು. ಮದುವೆ ಮುಂಜಿ ವ್ರತ ಪೂಜಾದಿಗಳನ್ನು ಮಾಡುವವರಾದುದರಿಂದ ಇವರು ’ಪುರೋಹಿತ’ ರು; ದೇವಾಲಯದಲ್ಲಿ ಅರ್ಚನಾದಿಗಳನ್ನು ಮಾಡುವುದರಿಂದ ‘ಅರ್ಚಕ’ ರು – ಇವೆರಡೂ ಹಿಂದೂ ಸಂಸ್ಕೃತಿಯ ಮುಂದುವರಿಕೆ ಶಬ್ದಗಳು. ಜೈನಾಗಮ ಶಾಸ್ತ್ರಾದಿಗಳಲ್ಲಿ ಅಲ್ಪ ಸ್ವಲ್ಪ ಪರಿಶ್ರಮವೂ ಉಳ್ಳವರಾದ ಕಾರಣ ಇವರನ್ನು ‘ಪಂಡಿತ’ ರು ಎಂದೂ ಸಂಬೋಧಿಸುತ್ತಾರೆ. ಸಂಗ್ರಹವಾಗಿ ಹೇಳುವುದಾದರೆ, ಹಿಂದೂ ಸಮಾಜದ ಸಾಂಪ್ರದಾಯಿಕ ಬ್ರಾಹ್ಮಣರಂತೆಯೇ ಜೈನ ಸಮಾಜದೊಳಗೆ ಅರ್ಚಕ, ಪುರೋಹಿತ, ಇಂದ್ರ, ಉಪಾಧ್ಯೆ, ಪಂಡಿತ – ಇದ್ದಾರೆ. ತಾವು ಶುದ್ಧ ಮಡಿವಂತ ಜೈನ ಬ್ರಾಹ್ಮಣರೆಂದು ಪ್ರತಿಷ್ಠೆಯನ್ನು ಪ್ರಕಟಿಸಿದರೂ ಅವರ ಸ್ಥಾನ ಜೈನ ಸಮಾಜದಲ್ಲಿ ದ್ವಿತೀಯ ಸ್ತರವಾಗಿದೆ. ವ್ರತ ಸ್ವೀಕರಿಸಿದ ಶ್ರಾವಕರು ಈ ಇಂದ್ರ ವರ್ಗದವರಿಂದ ಆಹಾರ ಸಹ ತೆಗೆದುಕೊಳ್ಳುವುದಿಲ್ಲ. ಆದರೆ ಇಂದ್ರರು ಶ್ರಾವಕರಿಂದ ಆಹಾರ-ದಕ್ಷಿಣೆ ಪಡೆಯುತ್ತಾರೆ. ದೇವಸ್ಥಾನಗಳಲ್ಲಿ (ಬಸದಿ) ಶ್ರಾವಕರಿಂದ ಪೂಜೆಗೋಸ್ಕರ ಇಡುವ ದವಸಧಾನ್ಯ ಫಲಾದಿಗಳನ್ನು ‘ದೇವದ್ರವ್ಯ’ ವೆಂದು ಈ ಪುರೋಹಿತರು ತಮ್ಮ ಮನೆಗೊಯ್ದು ಅನುಭೋಗಿಸುತ್ತಾರೆ. ಆದರೆ ದೇವರಿಗೆ ಅರ್ಪಿಸಿದ್ದನ್ನು ಜೈನ ಶ್ರಾವಕರು ‘ನಿರ್ಮಾಲ್ಯ’ ವೆನ್ನುವರು, ಮತ್ತು ಅದನ್ನು ವಾಪಸ್ಸು ಪಡೆಯುವುದಿಲ್ಲ.

ಜೈನ ದೇವಾಲಯವು ಕರ್ನಾತಕದಲ್ಲಿ ‘ಬಸದಿ’ ಎಂಬ ಹೆಸರಿನಿಂದ ಸೂಚಿತವಾಗುತ್ತದೆ. ಸಂಸ್ಕೃತದ ‘ವಸತಿ’ ಎಂಬ ಶಬ್ದದ ತದ್ಬವ ರೂಪವಾದ ‘ಬಸದಿ’ ಎಂಬುದು ತನ್ನ ಮೂಲ ಶಬ್ದಾರ್ಥವನ್ನು ವಿಸ್ತರಿಸಿ ಉನ್ನತೀಕರಿಸಿಕೊಂಡು ಜಿನಾಲಯ / ಚೈತ್ಯಾಲಯ ಎಂಬರ್ಥದಲ್ಲಿ ಪ್ರಯೋಗವಾಗುತ್ತಿದೆ. ಬಸ್ತಿ, ಬಸ್ದಿ ಎಂಬ ಸಣ್ಣಿಸಿದ ರೂಪಗಳೂ ಚಾಲ್ತಿಯಲ್ಲಿವೆ. ಉತ್ತರ ಭಾರತದಲ್ಲಿ ‘ಬಸ್ತಿ’ ಎಂದರೆ ವಾಸದ ಮನೆಗಳಿರುವ ಹಟ್ಟಿ, ಹಳ್ಳಿ, ಊರು ಎಂಬರ್ಥವೇ ಹೊರತು ‘ಜೈನ ಮಂದಿರ’ ಎಂಬರ್ಥವಿಲ್ಲ. ಕರ್ನಾಟಕದ ಸಂದರ್ಭದಲ್ಲಿ ಮಾತ್ರ ಬಸದಿ ಎಂಬ ಶಬ್ದ ‘ಜಿನಗೃಹ’ ಎಂಬ ವಿಶಿಷ್ಟಾರ್ಥ ಪಡೆದು ೭-೮ ನೆಯ ಶತಮಾನಗಳಿಂದ ಬಳಕೆಯಾಗುತ್ತಿದೆ: ಬಸ್ತಿ, ಗ್ರಾಮ, ಬಸ್ತಿಹಳ್ಳಿ, ಬಸ್ತಿಪುರ, ಬಸ್ತಿ ಉಳ್ಳಾಲ- ಹೀಗೆ ಸ್ಥಳವಾಚಿಯಾಗಿಯೂ ಕನ್ನಡ ಭಾಷೆಯಲ್ಲಿ ಪ್ರಚಾರ ಪಡೆದಿದೆ, ಇದು ಜೈನ ಧರ್ಮ ಮತ್ತು ಜೈನ ಸಮಾಜ ಕರ್ನಾಟಕದ ಮುಖ್ಯ ಧಾರೆಯಲ್ಲಿ ಹಾಸುಹೊಕ್ಕಾಗಿ ಬೆರೆತು ಬಾಳಿದ ರೀತಿಗೊಂದು ಸಾಕ್ಷಿಯಾಗಿ ನಿಂತಿದೆ. ವೈದಿಕ ಸಂಸ್ಕೃತಿ ಪ್ರತಿಪಾದಿಸಿದ ‘ಅವತಾರ ಕಲ್ಪನೆ, ಜಾತಿವರ್ಣಗಳು ದೈವ ನಿರ್ಮಿತ, ಈ ಲೋಕ ದೈವಸೃಷ್ಟಿ’ ಎಂಬಷ್ಟನ್ನೂ ನಿರಾಕರಿಸಿದ ಪ್ರತಿ ಸಂಸ್ಕೃತಿ ಜೈನ ಪರಂಪರೆಯಲ್ಲಿ ದೇವಾಲಯ ಎಂಬುದು ದೇವರಿಲ್ಲದ ಗುಡಿ. ಬಸದಿಗಳು ದೇವರುಗಳ ಆಲಯವಲ್ಲ. ಅದು ಜಿನಾಲಯ, ಜಿನಗೃಹ. ಜಿನನು ದೇವರ ಅವತಾರವಲ್ಲ; ಅವನು ಸಾಧನೆಯಿಂದ ಜಿನನಾದ ಸಾಮಾನ್ಯ ಮನುಷ್ಯ. ಅವನಿಗೆ ಎರಡಕ್ಕಿಂತ ಹೆಚ್ಚು ಕೈಕಾಲು ಭುಜಗಳಿಲ್ಲ. ಆಯುಧ-ಆಭರಣಗಳಿಲ್ಲ. ಹಿಂದೂ ದೇವರುಗಳಂತೆ ವರಪ್ರದಾಯಕನೂ ಅಲ್ಲ, ಶಾಪ ಕೊಡುವವನೂ ಅಲ್ಲ.

ಜಿನನನ್ನು ಪೂಜಿಸುವುದು ಆತ ತನ್ನ ಕಾಲದಲ್ಲಿ ಮಾಡಿದ ಮಹತ್ ಸಾಧನೆಗೆ, ಏರಿದ ಎತ್ತರಕ್ಕೆ; ಆತ ತೋರಿದ ಹಾದಿಯಲ್ಲಿ ಹೋಗಲು ಸ್ಪೂರ್ತಿ ಪ್ರೇರಣೆ ಬರಲಿ ಎಂದು ಔರವ ತೋರಿಸಲಾಗುತ್ತದೆ. ಈ ಸ್ಫೂರ್ತಿ-ಪ್ರೇರಣೆಗಳನ್ನೂ ಸಹ ಆತ ಕರುಣಿಸುವುದಿಲ್ಲ. ಆತ ಏನನ್ನೂ ಅನುಗ್ರಹಿಸುವುದಿಲ್ಲ. ಜೈನರು ಜಿನ ಭಕ್ತರು ಎಂಬುದಕ್ಕಿಂತ ಜಿನನ ಹಿಂಬಾಲಕರು ಎಂಬುದು ಸಮರ್ಪಕವಾಗಿದೆ. ಈ ಅರ್ಥದಲ್ಲಿ ಬಸದಿ ಎಂಬುದು ಸಮವಸರಣದ ಅನುಕರಣ. ಬಸದಿಯೊಳಗೆ ಪೂಜಾ ಸಾಮಗ್ರಿ ಇಡುವುದು, ಅವನ್ನು ಸ್ವೀಕರಿಸಿ ಜಿನನು ಪ್ರಸನ್ನನಾಗುತ್ತಾನೆ ಎಂದಲ್ಲ; ರಿಕ್ತ ಹಸ್ತರಾಗಿ ಗೌರವ ತೋರುವುದು ಸರಿಯಲ್ಲವೆಂಬ ಲೌಕಿಕ ಕಾರಣಕ್ಕಾಗಿ. ಮತ್ತು ಈ ಪೂಜಾದಿ ವಿಧಾನ ಕೂಡ ಅಜೈನರ ಪ್ರಭಾವದಿಂದ ಬಂದದ್ದು. ಜೈನ ತತ್ವದಲ್ಲಿ ಮೂಲತಃ ಫಲಪುಷ್ಟಾದಿಗಳನ್ನು ಇಡದೆಯೇ ಭಾವಪೂಜೆ ಮಾಡುವುದು ಸಾಕೆಂದು ಶಾಸ್ತ್ರಗ್ರಂಥಗಳು ಸ್ಪಷ್ಟಪಡಿಸಿವೆ. ಜಿನಗೃಹದಲ್ಲಿ ಹಿಂದೂ ಗುಡಿಗಳಂತೆ ಚಿರುಪು ಪ್ರಸಾದ ಪುಳಿಯೋಗರೆ ವಿತರಣೆ ಪರಿಪಾಟಿಯಿಲ್ಲ. ಜೈನರ ಮೂಲ ಆಗಮ ನಿಯಮದಂತೆ ಮೂರ್ತಿ ಪೂಜೆಯೇ ಮಾಡುವಂತಿಲ್ಲ. ಈ ಬಸದಿಗಳನ್ನು ಕಟ್ಟುವ, ಜಿನಬಿಂಬ ಮಾಡಿಸುವ ಪದ್ಧತಿ ಕ್ರಿ.ಪೂ. ಮೂರು ಎರಡನೆಯ ಶತಮಾನದಿಂದ ಈಚೆಗೆ ರೂಢಿಗೆ ಬಂದಿದೆ. ಕ್ರಿ.ಶ. ಮೂರನೆಯ ಶತಮಾನದ ತರುವಾಯ ಯಕ್ಷ-ಯಕ್ಷಿಯರನ್ನು ಪೂಜಿಸುವ ಪರಂಪರೆ ಪ್ರಾರಂಭವಾಗಿದೆ. [ಹಂಪನಾ : ೧೯೭೬] ಇಂದಿಗೂ ಸ್ಥಾನಕವಾಸಿ ಜೈನಪರಂಪರೆಯವರು ಮೂರ್ತಿ ಪೂಜಾ ಪದ್ಧತಿಯು ಮಿಥಾತ್ವವೆಂದು ತಿಳಿದು ಜಿನಬಿಂಬಗಳನ್ನು ನಿರ್ಮಿಸುವುದಿಲ್ಲ, ಬಸದಿಗಳನ್ನು ಕಟ್ಟಿಸುವುದಿಲ್ಲ, ಪೂಜಾದಿಗಳನ್ನು ಮಾಡುವುದಿಲ್ಲ; ಅವರು ಕೇವಲ ಸ್ವಾಧ್ಯಾಯ, ಪ್ರಾರ್ಥನೆಗಳಿಗೆ ಪ್ರಾಧಾನ್ಯ ಕೊಟ್ಟಿದ್ದಾರೆ. ಗುಜರಾತಿನ ಶ್ರಾವಕ ಶ್ರೇಷ್ಠ ಲೋಂಕಾ ಶಾಹ (ಕ್ರಿ. ಶ. ೧೪೫೧) ದೇವಾಲಯ ಪೂಜೆಯನ್ನು ಮಿಥ್ಯಾತ್ವವೆಂಬುದನ್ನು ಆಗಮಾಧಾರಗಳನ್ನಿತ್ತು ಪ್ರತಿಪಾದಿಸಿದನು.

ಪಂಚಮಹಾಭೂತಗಳ ವಿಚಾರವಾಗಿಯೂ ಹಿಂದೂ ಸಂಸ್ಕೃತಿಗಿಂತ ಭಿನ್ನವಾದ ನಿಲುಮೆ ಪ್ರತಿ ಸಂಸ್ಕೃತಿ ಶ್ರಮಣ ಪರಂಪರೆಯಲ್ಲಿ ಪ್ರತಿಪಾದಿತವಾಗಿದೆ. ಅಗ್ನಿಚಂದ್ರ ಸೂರ್ಯರಿಗೆ ಜೈನರಲ್ಲಿರುವ ಮಾನ್ಯತೆ ಅವು ದೈವದ ಪ್ರತೀಕವೆಂಬ ಅರ್ಥದಲ್ಲಿ ಅಲ್ಲ. ವೈದಿಕರಂತೆ ಜೈನರೂ ಸುಡುವರು – ಅಗ್ನಿಸಂಸ್ಕಾರ ಸಮಾನ. ಆದರೆ ಪವಿತ್ರಾಗ್ನಿಯ ಪೂಜೆಯ ಕ್ರಮ ಇಲ್ಲಿ ಇಲ್ಲ; ಅಗ್ರಿಹೋತ್ರಿಗಳು ಇಲ್ಲಿಲ್ಲ. ನೀರು ನೆಲ ಗಾಳಿ ಇವುಗಳನ್ನು ದೈವವೆಂದು ತಿಳಿದಿಲ್ಲ; ಜಲಾನಿಲಗಳನ್ನು ಕುರಿತು ಸ್ತೋತ್ರ ಕೃತಿಗಳಿಲ್ಲ. ಗಂಗಾಸ್ನಾನ ಎಂಬಿತ್ಯಾದಿ ಪವಿತ್ರ ನದಿಗಳಲ್ಲಿ ದೈವತ್ವದ ಭಾವನೆಯಿಂದ ಸ್ನಾನ ಮಾಡುವುದನ್ನು ಖಂಡಿಸಿದ್ದಾರೆ. ನೀರು ಕೂಡ ಏಕೇಂದ್ರಿಯ ಜೀವವುಳ್ಳದ್ದಾದ ಕಾರಣ, ಜೈನ ಮುನಿಗಳಿಗೆ, ತಣ್ಣೀರು ಮುಟ್ಟುವುದು ನಿಷಿದ್ದ. ವ್ರತ ಸ್ವೀಕರಿಸಿದ ಶ್ರಾವಕರು ಕೂಡ ಕಾಸಿದ ನೀರನ್ನು ಉಪಯೋಗಿಸುವರು; ವನಸ್ಪತಿ ಪೂಜೆಯೂ ಇಲ್ಲ. ತುಳಸಿ ಪೂಜೆ, ನೆಲ್ಲಿಗಿಡದ ಪೂಜೆ ಮತ್ತು ಕೆಲವು ನಿರ್ದಿಷ್ಟ ಗಿಡ ಮರ ಎಲೆಗಳು ಹಿಂದೂ ದೇವತೆಗಳ ಪ್ರತೀಕವೆಂದು ಪೂಜಿಸುವರು. ಆದರೆ ಜೈನರು ನಿಸರ್ಗದ ತುಂಬ ಜೀವವಿದೆ ಎಂದವರು. ನಿಗೋದ ಜೀವಿಗಳಾದ ವನಸಿರಿಯನ್ನು, ಗಿಡಮರಗಳನ್ನು ನಾಶಮಾಡಬಾರದೆಂದಿದ್ದಾರೆ. ಸುಮಾರು ೩೨ ಬಗೆಯ ತರಕಾರಿ ಗಡ್ಡೆಗೆಣಸು, ಪಡವಲಕಾಯಿ, ಈರುಳ್ಳಿ, ಬೆಳ್ಳುಳ್ಳಿ, ಫಲಗಳನ್ನು, ಮಕಾರ ತ್ರಯಗಳನ್ನು ವ್ರತ ಸ್ವೀಕರಿಸಿದ ಶ್ರಾವಕರು ಸಹ ತಿನ್ನರು [ವಿಲಿಯಮ್ಸ್ ಆರ್ .: ೧೧೦-೧೧೬]. ಜೈನರಲ್ಲಿ ಗೋಪೂಜೆ ಮಾಡುವುದು- ಇತ್ಯಾದಿ ಪದ್ಧತಿಗಳಿಲ್ಲ. ಆದರೆ ಹಿಂದೂ ಧರ್ಮದ ಪ್ರಭಾವದಿಂದ ಗಂಗಮ್ಮನ ಪೂಜೆ, ಲಕ್ಕೀಗಿಡ ಪೂಜೆ, ನಾಗರ ಪೂಜೆ ಮೊದಲಾದ ಸಂಪ್ರದಾಯಗಳು ಜೈನ ಸಮಾಜದಲ್ಲಿ ಕ್ರಿ.ಶ.ದ ಕಾಲದಿಂದ ಈಚೆಗೆ ಬಂದಿವೆ.

ಹಾಗಾದರೆ ಹಿಂದೂ ಸಂಸ್ಕೃತಿಯ ಪ್ರಭಾವ ಈ ಪ್ರತಿ ಸಂಸ್ಕೃತಿಯ ಸಮಾಜದ ಮೇಲೆ ಯಾವ ಕಾಲಘಟ್ತದಲ್ಲಿ ಆಯಿತು ಎಂಬ ಪ್ರಶ್ನೆ ಉಧ್ಬವಿಸುತ್ತದೆ. ಭಾರತ ದೇಶದ ಚರಿತ್ರೆಯ ಅಧ್ಯಯನದಿಂದ ಇದಕ್ಕೆ ಉತ್ತರಗಳನ್ನು ಕಂಡುಕೊಳ್ಳು ಬೇಕಾಗುತ್ತದೆ. ಕ್ರಿ.ಪೂ. ಆರನೆಯ ಕ್ರಿ.ಶ. ದವರೆಗೆ ಒಂದನೆಯ ಘಟ್ಟವೂ, ಕ್ರಿ.ಶ.ದ ಆರಂಭದಿಂದ ೪ ನೆಯವರೆಗೆ ಎರಡನೆಯ ಪ್ರಮುಖ ಘಟ್ಟ ಜೈನ ಸಮಾಜದಲ್ಲಿ ಕಂಡುಬರುತ್ತದೆ; ಕ್ರಿ.ಶ. ೫ ರಿಂದ ೯ ನೆಯ ಶತಮಾನದವರೆಗೆ ಮೂರನೆಯ ಘಟ್ಟವಿದೆ. ಇವುಗಳಲ್ಲಿ ಮೊದಲನೆಯ ಘಟ್ಟ ಜೈನ ಶರಣ ಪರಂಪರೆಯ ಪ್ರತಿ ಸಂಸ್ಕೃತಿಯ ಅನ್ಯಪ್ರಭಾವಗಳಿಗೆ ಅಷ್ಟಾಗಿ ಒಳಗಾಗದೆ ತನ್ನ ಮೂಲ ಸ್ವರೂಪದಿಂದ ಬೆಳೆದು ಬಾಳಿದ ಕಾಲ. ಎರಡನೆಯ ಘಟ್ಟದಲ್ಲಿ ಈ ಜೈನತ್ವದೊಳಗೆ ಅನ್ಯಪ್ರಭಾವಗಳು ಸೇರ್ಪಡೆಯಾಗಲು ಪ್ರಾರಂಭವಾದ ಅವಧಿ. ಮೂರನೆಯ ಘಟ್ಟವು ಬೌದ್ಧ ಹಿಂದೂ ಮೊದಲಾದ ಮತಧರ್ಮಗಳ ಪ್ರಭಾವವು ಜೈನ ಪ್ರತಿ ಸಂಸ್ಕೃತಿಯ ರಚನೆಯಲ್ಲಿ ಸ್ಥಿರ ಸ್ವರೂಪದಿಂದ ಅವಿಭಾಜ್ಯ ಅಂಗವೆಂಬಂತೆ ಮಾನ್ಯತೆ ಪಡೆದ ಕಾಲ. ಮುಖ್ಯವಾಗಿ ಗುಪ್ತರ ಕಾಲದಲ್ಲಿ, ಅದರಲ್ಲಿಯೂ ಸಮುದ್ರಗುಪ್ತರ ಕಾಲದಲ್ಲಿ ಜೈನ ಸಮಾಜ ಹೊರಗಿನ ಕೆಲವು ಪ್ರಭಾವಗಳನ್ನು ತನ್ನ ಜೀವನ ವ್ಯವಸ್ಥೆಯಲ್ಲಿ ಸಮಾವೇಶ ಗೊಳಿಸಿಕೊಂಡಿತು.

ಜಿನಸೇನಾಚಾರ್ಯರು (ಮಹಾ ಪುರಾಣ) ಆದಿಪುರಾಣ ಬರೆಯುವ ವೇಳೆಗೆ ಈ ಪ್ರತಿ ಸಂಸ್ಕೃತಿಯಾದ ಶ್ರಮಣ ಪರಂಪರೆ ಸು. ೧೫೦೦ ವರ್ಷಗಳಷ್ಟು ದಾರಿ ಕ್ರಮಿಸಿತ್ತು. ಅದು ಪ್ರಾರಂಭವಾದ ಉಗಮ ಸ್ವರೂಪಕ್ಕೂ, ಜಿನಸೇನರ ಸಮಕಾಲೀನ ಸ್ವರೂಪಕ್ಕೂ ಸಾಕಷ್ಟು ಮಾರ್ಪಾಟುಗಳು ನಡೆದಿದ್ದುವು; ಈ ವ್ಯಾತ್ಯಾಸಗಳನ್ನು ಸಮರ್ಪಕವಾಗಿ ಅರ್ಥೈಸುತ್ತ ಒಂದು ವ್ಯಾಪಕವಾದ ಸಮಾಜೊ – ಧಾರ್ಮಿಕ ಚೌಕಟ್ಟನ್ನು ಕಟ್ಟಿ ಅದರೊಳಗೆ ಜೈನ ಸಮಾಜವನ್ನಿಟ್ಟು ಉಳಿದ ದರ್ಶನಗಳ ಸಂದರ್ಭದಲ್ಲಿಟ್ಟು ತೋರಿಸುವ ಮಹತ್ವದ ಹೊಣೆಯನ್ನು ನಿರ್ವಹಿಸಿದವರು ಜಿನಸೇನರು, ಭಾರತೀಯ ಸಂಸ್ಕೃತಿ, ಷಡ್ದರ್ಶನಗಳು, ಜೈನ ಪರಂಪರೆ, ಪುರಾಣಗಳ ಸಂಪ್ರಾದಯ – ಜೈನ ಪರಂಪರೆಯನ್ನು ಕುರಿತ ಯಾವುದೇ ಬಗೆಯ ವಿವರಣೆ – ವಿಶ್ಲೇಷಣೆಗೆ ತೊದಗುವವರಿಗೆ ಪ್ರಧಾನ ಆಧಾರ ವಾಗಿರುವುದು ಮಹಾಪುರಾಣ. ಮಹಾಪುರಾಣ ಪೂರ್ವದ ಯುಗ, ಮಹಾಪುರಾಣದ ಅನಂತರದ ಯುಗ-ಹೀಗೆ ವಿಭಜಿತ ಅಧ್ಯಯನಕ್ಕೆ ಇದು ಕೇಂದ್ರ ಬಿಂದು.

ಅಸ್ಪೃಶ್ಯತೆಯನ್ನು ಕುರಿತು ಕೈಗೊಳ್ಳುವ ಚರ್ಚೆಗೂ ಈ ಮಹಾಪುರಾಣದ ಸಾಮಗ್ರಿಯನ್ನು ಪರಿಶೀಲಿಸಬೇಕಾಗುತ್ತದೆ. ಜೈನರಲ್ಲಿ, ಭರತ ಚಕ್ರವರ್ತಿಯು ಪ್ರತಿಪಾದಿಸಿದಂತೆ, ಗೃಹಸ್ಥನು ದ್ವಿಜತ್ವ ಪ್ರಾಪ್ತಿಗೆ ೮ ಮೂಲಗುಣಗಳನ್ನಾದರೂ ಕೈಗೊಂಡಿರಬೇಕು; ಉಪನಯನಾದಿ ಧಾರ್ಮಿಕ ಸಂಸ್ಕಾರಕ್ಕೆ ದ್ವಿಜರನ್ನು ಬಿಟ್ಟರೆ ಕ್ಷತ್ರಿಯ – ವೈಶ್ಯರ ಪುರುಷರಷ್ಟೇ ಅರ್ಹರು – ಎಂಬ ವಿವರಣೆಯನ್ನು ಗಮನಿಸಿದಾಗ ಜಿನಸೇನರು ಶೂದ್ರರು ವಿಚಾರವಾಗಿ ಇನ್ನಷ್ಟು ಉದಾರವಾಗಿರಬೇಕಿತ್ತೆನಿಸುತ್ತದೆ. ಶೂದ್ರ ವರ್ಗದ ಬಗೆಗೆ ಜಿನಸೇನರು ಹಿಂದೂಗಳ ಮನೋಧರ್ಮಕ್ಕೆ ಹತ್ತಿರವಾಗು ವಂಥ ನಿಲುಮೆ ತಳೆದದ್ದು ಪ್ರಶ್ನಾರ್ಹವಾಗಿದೆ. ಏಕೆಂದರೆ ಶೂದ್ರನಿಗೆ ಜನಿವಾರ ಧರಿಸುವುದನ್ನೂ ಮುನಿಧರ್ಮ ಸ್ವೀಕಾರವನ್ನೂ ನಿರಾಕರಿಸಿದ್ದು ಮೂಲಭೂತವಾಗಿ ಜೈನ ಧರ್ಮಕ್ಕೆ ಅನುಗುಣವಾದದ್ದಲ್ಲ. ಜಿನಸೇನರಿಗಿಂತ ಹಿಂದಿನ ಜೈನಾಚಾರ್ಯರೂ ಮಹಾವೀರರೂ ಈ ರೀತಿ ಅನುದಾರರಾಗಿರಲಿಲ್ಲ; ಶೂದ್ರ – ಅಸ್ಪೃಶ್ಯರಿಗೆ ಹಕ್ಕು ಬಾಧ್ಯತೆ ಸಮಾನವೆಂಬುದೇ ಜೈನಾಗಮಗಳ ಪ್ರತಿಪಾದನೆ.

ಇದೇ ರೀತಿಯಾಗಿ ಜಾತಿವರ್ಣ ವ್ಯವಸ್ಥೆಯೂ ಮೂಲತಃ ಜೈನ ಚೌಕಟ್ಟಿನದಲ್ಲ. ಋಷಭ-ಭರತರು ಈ ಜಾತಿ ವಿಂಗಡಣೆ ಮಾಡಿದ್ದು ಅವರಿನ್ನೂ ತ್ಯಾಗಿಗಳಾಗಿರದೆ ಲೌಕಿಕ ರಾಜರಾಗಿದ್ದ ಸಂಸಾರಿ ಸ್ಥಿತಿಯಲ್ಲಿ. ಅದರಿಂದ ಪ್ರಾಚೀನ ಜೈನಾಚಾರ್ಯರ ವಿವೇಚನೆಯ ಕ್ರಕಾರ ಇರುವ ನಿರೂಪಣೆಗಷ್ಟೇ ಬೆಲೆ.

ಕ್ರಿ.ಪೂ. ಆರನೆಯ ಶತಮಾನದಲ್ಲಿ. ೨೫೦೦ ವರ್ಷಗಳ ಹಿಂದೆ, ಎಲ್ಲಜಾತಿ ವರ್ಣಗಳವರು ಜೈನ ಮತಕ್ಕೆ ಸೇರತೊಡಗಿದರು : ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ, ಅಂತ್ಯಜರು ಈ ಪ್ರತಿ ಸಂಸ್ಕೃತಿಯೊಲಗೆ ಮಿಲನವಾಅತೊಡಗಿದ ಹಂತದಲ್ಲಿ ಅಂದಿನ ಸಾಮಾಜಿಕ ಪ್ರತಿಕ್ರಿಯೆಗಳು ಹೇಗಿದ್ದುವು ಎಂಬುದನ್ನು ಪ್ರಾಚೀನ ಕೃತಿಗಳು ದಾಖಲಿಸಿವೆ. ಪ್ರಸ್ತುತ ಸಂಪ್ರಬಂಧದ ಪುಟ ಮಿತಿಗೆ ಒಳಪಟ್ಟು, ಕೇವಲ ಎರಡು ಪ್ರತಿನಿಧಿ ಸ್ವರೂಪದ ದೃಷ್ಟಾಂತಗಳಿಂದ ಈ ಚರ್ಚೆಗೆ ಪೂರಕ ಸಾಮಗ್ರಿಯನ್ನು ಒದಗಿಸುತ್ತೇನೆ:

೧. ಹೊಸದಾಗಿ ಜೈನತ್ವ ಸ್ವೀಕರಿಸಿ ಮತಾಂತರವಾದ ಬ್ರಾಹ್ಮಣರನ್ನು ಅವರ ಮೂಲ ಸಮಾಜದವರು ಹೇಗೆ ಒರಟಾಗಿ, ನಿಕೃಷ್ಟವಾಗಿ ಕಾಣುತ್ತಿದ್ದರೆಂಬುದುರ ವರ್ಣನೆಗೆ ಜಯಘೋಷನ ಪ್ರಸಂಗ ಸೂಕ್ತವಾಗಿದೆ. ಪ್ರಾಚೀನ ಆಗಮ ಗ್ರಂಥವಾದ ಉತ್ತರಾಧ್ಯಯನದಲ್ಲಿ ಈ ಉದಾಹರಣೆಯಿದೆ (೨೫ ಯಜ್ಞೀಯ) : ಬ್ರಾಹ್ಮಣನಾಗಿದ್ದ ಜಯಘೋಷನು ಜೈನನಾದನು, ಒಮ್ಮೆಕಾಶಿಯ ಬಹಿರುದ್ಯಾನದಲ್ಲಿ ತಂಗಿದ್ದನು, ಮಾಸೋಪವಾಸಾನಂತರ ಚರಿಗೆಗೆ ಹೊರಟನು. ವಿಜಯಘೋಷನೆಂಬ ಬ್ರಾಹ್ಮಣನ ಮನೆಯ ಮುಂದೆ ಬಂದನು, ಆತ ಯಾಗ ನಿರತನಾಗಿದ್ದನು. ಯಾಗ್ಯಾಂತದಲ್ಲಿ ಭೋಜನದ ಏರ್ಪಾಟು ನಡೆದಿತ್ತು. ಉಟ ನಿರತ ಬ್ರಾಹ್ಮಣರು ಜಯಘೋಷನಿಗೆ ಆಹಾರದಾನ ನಿರಾಕರಿಸಿದರು; ಎಲೈ ಸವಣನೇ, ಮುಂದೆ ಹೋಗು. ಈ ಊಟದ ಏರ್ಪಾಟು ನಿನಗಲ್ಲ. ಇದು ಯಜ್ಞಶಾಸ್ತ್ರ ತಜ್ಞರಾದ ವೇದಪಾರಂಗತ ಬ್ರಾಹ್ಮಣರಿಗೆ ಮಾಡಿರುವ ವ್ಯವಸ್ಥೆ’ (-ಅದೇ – : ೨೫, ೫-೮). ಜೈನರಾಗಿ ಮತಾಂತರ ಮಾಡಿದ್ದ ಜಯಘೋಷನು ಕುಪಿತನಾಗಲಿಲ್ಲ. ಬದಲು ‘ನಿಜವಾದ ಬ್ರಾಹ್ಮಣ’ ಯಾರೆಂಬುದನ್ನು ವ್ಯಾಖ್ಯಾನಿಸುವನು; ‘ಪ್ರೀತಿ ದ್ವೇಷ ಭಯಾದಿಗಳಿಂದ ವರ್ಜಿತನು ಬ್ರಾಹ್ಮಣನು. ತನಗೆಂದು ಇನ್ನೊಬ್ಬರು ನೀಡದ ಆಹಾರವನ್ನು ತೆಗೆದುಕೊಳ್ಳದಿರುವವನು ಬ್ರಾಹ್ಮಣನು; ಕಾಮಾದಿಗಳಿಗೆ, ನೀರಿನಲ್ಲಿರುವ ತಾವರೆಯ ಹಾಗೆ, ಅಂಟದಿರುವವನು ಬ್ರಾಹ್ಮಣನು” (ಅದೇ; ೨೫. ೨೨-೨೮). (ಜಾತಿಯ) ಹುಟ್ಟಿನ ಬದಲು ಚಾರಿತ್ರ್ಯವನ್ನು ಆಧರಿಸಿ ವ್ಯಕ್ತಿಯ ಹಿರಿಮೆ ಸ್ಥಾಪಿತವಾಗುತ್ತದೆಂಬುದು ಈ ಜೈನರ ಪ್ರತಿಪಾದನೆ. ಕ್ಷತ್ರಿಯನಾದರೂ ಮಹಾವೀರನನ್ನು ಬ್ರಾಹ್ಮಣ (ಮಾಹಣ) ಎಂದಿರುವುದು ಈ ಅರ್ಥದಲ್ಲಿ (ಅದೇ : ೨೫.೩೩-೩೪) ತಮ್ಮ ಜಾತಿಯನ್ನು ಬಿಟ್ಟು ಹೊರಗೆ ಹೋದವನು ತಮ್ಮ ಜಾತಿಯವರ ಅನ್ನಕ್ಕಾಗಿ ಬಂದ ಸಂದರ್ಭದಲ್ಲಿ ಹೇಗೆ ನಡೆದು ಕೊಂದರೆಂಬುದನ್ನು ಇಲ್ಲಿ ಕಾಣುತ್ತೇವೆ.

೨. ಕೆಳಜಾತಿಯವನಾಗಿದ್ದ (ಶ್ವಪಾಕ). ಹರಿಕೇಶೀಯನು ಜೈನನಾದನು (ಅದೇ; ೧೨) ಎಂಬುದು ಉಲ್ಲೇಖನೀಯ ಉದಾಹರಣೆ. ಶ್ರೇಣೀಕೃತ ಭಾರತೀಯ ಜಾತಿ ವ್ಯವಸ್ಥೆಯಲ್ಲಿ ಚಂಡಾಲನೂ ಶ್ವಪಾಕರೂ ಅತ್ಯಂತ ಕೆಳಗಿನ ಪಾತಳಿಯಲ್ಲಿ ಇರುವವರು. ಅವರನ್ನು ಅಸ್ಪೃಶ್ಯರೆನ್ನಲಾಗಿದೆ. ಅವರು ಮೇಲುಜಾತಿ-ವರ್ಣಗಳವರನ್ನು ಮುಟ್ಟುವುದಿರಲಿ, ಅವರ ನೆರಳೂ ಬೀಳುವಂತಿರಲಿಲ್ಲ. ಅವರನ್ನು ಮುಟ್ಟಿದರೆ ಮೈಲಿಗೆ – ಅಶುಚಿ ಆಗುವುದೆಂಬ ತಿಳಿವಳಿಕೆ. ಅಂಥ ಅಸ್ಪೃಶ್ಯ ಜಾತಿಯ ಹರಿಕೇಶಿಯು ಕ್ರಿ.ಪೂ. ಆರನೆಯ ಶತಮಾನದಲ್ಲಿ ಜೈನನಾಗಿದ್ದುದಷ್ಟೇ ಅಲ್ಲದೆ ಇನ್ನೂ ತುಂಬ ಮುಂದುವರಿದು ಜೈನಮುನಿಯೇ ಆಗಿದ್ದನು. ಒಮ್ಮೆ ಈ ಹರಿ ಕೇಶಿಯು ಆಹಾರಕ್ಕಾಗಿ ಬ್ರಾಹ್ಮಣರ ಯಾಗದ ಜಾಗಕ್ಕೆ ಬಂದನು. ಈಗ ಜೈನನಾಗಿದ್ದರೂ ಅವನು ವ್ರತ ಸ್ವೀಕಾರಕ್ಕೆ ಮೊದಲು ಅಸ್ಪೃಶ್ಯನಾಗಿದ್ದವನೆಂದು ಅರಿತ ಬ್ರಹ್ಮಣರು (= ‘ಪ್ರಾಣಿ ವಧೆ ಮಾಡುವವರು, ಜಾತಿಜನ್ಮದ ಗರ್ವದಿಂದ ಕಠಿಣರಾದವರು’) – “ನಿನಗೆ ಈ ಆಹಾರ ಹಾಗೇ ಕೊಳೆತು ಹಾಳಾಗುವುದು ಮೇಲು” ಎಂದು ದೂಷಿಸಿದುರು (ಅದೇ: ೧೨-೫,೬).

ಹರಿಕೇಶಿಯು ಬ್ರಾಹ್ಮಣರ ನಿಂದನೆಗೆ ಹಿಂದೆಗೆಯಲಿಲ್ಲ. ಶಾಂತಚಿತ್ತನಾಗಿ ಧೃತಿಗೆಡದೆ ನುಡಿದನು : ‘ನಿಮ್ಮ ನಡತೆ ಸರಿಯಿಲ್ಲ’. ಬ್ರಾಹ್ಮಣರು, ಅವನು ಹಾಗೆ ಅಂದದ್ದೇ ತಡ ಹರಿಕೇಶಿಯ ಮೇಲೆ ಹರಿಹಾಯ್ದು ಕೋಲು, ಬಡಿಗೆ, ಚಮ್ಮಟಿಗೆಗಳಿಂದ ಬಡಿದು ಚಚ್ಚಿದರು (ಅದೇ: ೧೨. ೧೯). ಯಕ್ಷನು ಪ್ರತ್ಯಕ್ಷನಾಗಿ ಹರಿಕೇಶಿಯ ಪರವಾಗಿ ನಿಂತು ರಕ್ತಪಾತವನ್ನು ತಪ್ಪಿಸಿದನು. ಇದರಿಂದ ಭೀತರಾದ ಬ್ರಾಹ್ಮಣರು ಹರಿಕೇಶಿಯ ಕ್ಷಮೆ ಯಾಚಿಸಿದರು. ಮಹಾನುಭಾವನಾದ ಹರಿಕೇಶಿಯು ವೈರಭಾವಕ್ಕೆ ಎಡೆಗೊಡದೆ ಬ್ರಾಹ್ಮಣರನ್ನು ಮನ್ನಿಸಿದನು: ‘ಯಜ್ಞವೆಂದರೆ ಪವಿತ್ರ ಜಲದಲ್ಲಿ ಮೀಯುವುದಿಲ್ಲ. ಅಗ್ನಿ ಬೆಳಗಿಸುವುದಿಲ್ಲ, ದೇವರಿಗೆ ಪ್ರಾಣಿ ಬಲಿ ಕೊಡುವುದಲ್ಲ, ಸಂಯಮಪೂರ್ವಕವಾಗಿ ಜೈನಮುನಿಗಳಂತೆ ಕರ್ಮ ಬಂಧಗಳಿಂದ ಬಿಡುಗಡೆ ಪಡೆಯುವುದೇ ಯಾಗ’ ಎಂದೂ ಬೋಧಿಸಿದನು (ಅದೇ; ೧೧. ೪೨). ಅಸ್ಪೃಶ್ಯ ಹರಿಕೇಶಿಯ ಪ್ರಕರಣ ಅರ್ಥಗರ್ಭಿತವಾಗಿವೆ:

೧. ಇದು ಹಿಂದೂ ಧರ್ಮದ ‘ಜಾತಿವರ್ಣ – ಸ್ವಧರ್ಮ’ ಸಿದ್ದಾಂತದ ಬುಡವನ್ನೇ ಕತ್ತರಿಸಿದೆ.

೨. ಜೈನಧರ್ಮಕ್ಕೆ ಮತಾಂತರಗೊಂಡವರು ಸಮಾಜದ ಎಲ್ಲ ಜಾತಿ ವರ್ಣ ಗಳವರೂ ಇದ್ದರೆಂಬುದು ತಿಳಿದದ್ದೇ. ಆದರೆ ಅದರಲ್ಲಿ ಅಸ್ಪೃಶ್ಯರೂ ಇದ್ದಾರೆಂಬುದು ಜೈನ ಪ್ರತಿ ಸಂಸ್ಕೃತಿ ತಳೆದ ಉದಾರ ನೀತಿಯ ಉದಾಹರಣೆ ಯಾಗಿದೆ.

೩. ಜೈನರು ಅಂತ್ಯಜರನ್ನು ಸ್ವೀಕರಿಸಿದ ಮೇಲೆ ಅವರಿಗೆ ತೋರಿದ ಸಮಾನತೆಯು ಧಾರ್ಮಿಕ ಕ್ಷೇತ್ರದಲ್ಲೂ ಪ್ರಕಟವಾಗಿದೆ. ಅಸ್ಪೃಶ್ಯರಿಗೆ ಜೈನ ಮುನಿಯಾಗಲೂ ಅವಕಾಶ ಮಾಡಿಕೊಟ್ಟಿರುವುದು ಹಿಂದೂ ಪರಿಕಲ್ಪನೆಯ ಜಾತಿವರ್ಣ-ಸ್ಚಧರ್ಮ ತತ್ವವನ್ನು ಸಂಪೂರ್ಣವಾಗಿ ಬುಡಮೇಲಾಗಿದೆ. ವೈದಿಕ ವ್ಯವಸ್ಥೆಯಲ್ಲಿ ಸ್ತ್ರೀಗೆ, ಶೂದ್ರನಿಗೆ ಮುನಿಯಾಗುವುದಕ್ಕೆ ಅವಕಾಶವೇ ಇಲ್ಲ. ಅವನಿಗೆ ಅದು ನಿಷಿದ್ಧ.

೪. ಹರಿಕೇಶಿಯ ಬ್ರಹ್ಮಣರ ನಿಂಬೆ ಗರ್ಹಣೆಗೂ, ಚಾಟಿ ಏಟುಗಳಿಗೂ ಗುರಿಯಾದದ್ದು ಧ್ವನಿಪೂರ್ಣ ದಾಖಲೆ. ಸಾಮಾಜಿಕವಾಗಿ ಅಸ್ಪೃಶ್ಯರಿಗೆ ಪ್ರತಿಸಂಸ್ಕೃತಿ ಯಲ್ಲಿ ದೊರೆತ ಈ ಹೊಸ ಅಂತಸ್ತು, ಹಿಂದೂಗಳಲ್ಲಿ ಉಂಟು ಮಾಡಿದ್ದ ಅಸಹನೆಯ ಭಾವನೆಗಳ ಸ್ಪೋಟವನ್ನು ಈ ಘಟನೆ ಕನ್ನಡಿಸಿದೆ. ಇಂದಿನ ದಿನಗಳ ದೃಷ್ಟಾಂತದಿಂದ ಈ ಪ್ರಸಂಗಕ್ಕೆ ಪುಷ್ಟಿ ಕೊಡಬಹುದು. ಅಸ್ಪೃಶ್ಯರನ್ನು ಊರಾಚೆ, ಮನೆಯಾಚೆ. ಗುಡಿಯಾಚೆ ನಿಲ್ಲಿಸುತ್ತಾರೆ. ಅಸ್ಪೃಶ್ಯರು ಹಿಂದೂ ಧರ್ಮವನ್ನು ತ್ಯಜಿಸಿ ಕ್ರೈಸ್ತರಾದೊಡನೆ ಅವರಿಗೆ ಮೊದಲು ನಿಷೇಧಿಸಲಾಗಿದ್ದ ಸ್ಥಳಗಳಲ್ಲಿ ಪ್ರವೇಶ ಸುಲಭವಾಗುತ್ತದೆ.

೫. ಹರಿಕೇಶಿಯು ಬ್ರಾಹ್ಮಣರಿಗೇ ಧರ್ಮಬೋಧೆ ಮಾಡಿದ್ದು ಜಾತಿ ವ್ಯವಸ್ಥೆಯ ವಿಡಂಬನೆಗೆ ಕಿರೀಟ ತೊಡಿಸಿದಂತೆ ಆಗಿದೆ. ಜಾತಿ ಚಕ್ರದ ಅರಗಳು ಕೆಳಗಿದ್ದುದು ಮೇಲೆ ಹೋಗಿ, ಮೇಲಿನದು ಕೆಳಗೆ ಇಳಿದಂತಾದುದನ್ನು ಇದಕ್ಕಿಂತ ಧ್ವನಿಮಯವಾಗಿ ತೋರಿಸುವುದು ಸಾಧ್ಯವೆ ಎಂಬಂತಿದೆ.

ಜೈನ ಸಾಹಿತ್ಯದಲ್ಲಿ ಇಂತಹ ನೂರಾರು ದೃಷ್ಟಾಂತಗಳಿವೆ. ಜೈನತ್ವದ ಪ್ರತಿ ಸಂಸ್ಕೃತಿ ನಿರ್ಮಾಣ ಹಂತದಲ್ಲಿ ಅದು ಮುಖಾಮುಖಾಯಾದ ಮತ್ತು ಸವಾಲುಗಳನ್ನು ಜೀರ್ಣಿಸಿಕೊಂಡ ದಾಖಲೆಗಳನ್ನು, ಅಸ್ಪೃಶ್ಯತೆಯ ಸಂಬಂಧವಾಗಿಯೂ, ಪರಿಶೀಲಿಸ ಬಹುದಾಗಿದೆ.

ಪ್ರಾಕೃತ – ಸಂಸ್ಕೃತಗಳಲ್ಲಿ ಹೇರಲವಾಗಿರುವ ಸಾಮಗ್ರಿಗೆ ದಿಕ್ಸೂಚಿಯಾಗಿ ಈ ನಿದರ್ಶನಗಳನ್ನಿಲ್ಲಿ ಪ್ರಸ್ತಾಪಿಸಲಾಯಿತು. ಕನ್ನಡ ಸಾಹಿತ್ಯದ ಸಂದರ್ಭದಲ್ಲಿ ಈ ನಗೆಯ ಸಂವಾದಗಳು ಒದಗಿಸುವ ಮಾಹಿತಿಯನ್ನು ಪರಾಮರ್ಶಿಸಬಹುದು. ಕನ್ನಡದಲ್ಲಿ ಸಿಗುವ ಮೊಟ್ಟಮೊದಲನೆಯ ಕೃತಿ ಭ್ರಾಜಿಷ್ಣುವಿನ ವಡ್ಡಾರಾಧನೆ [ಹಂಪನಾ : ೧೯೯೩ : ೩೮-೪೬] ಕವಿರಾಜಮಾರ್ಗಕ್ಕಿಂತ ಅರ್ಧಶತಮಾನ ಹಿಂದಿನ ರಚನೆಯಾದ ವಡ್ಡಾರಾಧನೆಯಲ್ಲಿ ಜೈನತ್ವದ ಪ್ರತಿ ಸಂಸ್ಕೃತಿಯಲ್ಲಿ ಅಸ್ಪೃಶ್ಯರಿಗೆ ಸಿಕ್ಕ ಮಾನವೀಯ ಸಾನುಕಂಪದ ವರ್ತನೆ ಮತ್ತು ಧೋರಣೆ ಕೆನೆಗಟ್ಟಿದೆ. ಸುಕುಮಾರ ಸ್ವಾಮಿಯ ಕಥೆಯಲ್ಲಿ ‘ಮಾದೆಗರ್ಗ್ಗೆ ಪ್ರಧಾನನಪ್ಪ ನೀಳನೆಂಬ ಮಾದೆಗಂಗಂ ಕೇಶಿಯೆಂಬ ಮಾದೆಗಿಗಂ ಮಗಳು’ ಪುಟ್ಟಂಗುರುಡಿ ಪೊಲತಿಯಾಗಿ ಪುಟ್ಟಿದ್ದನ್ನೂ, ಆ ‘ಪೊಲತಿಯ ಕೊಸಂ ಕಂಡತ್ಯಂತ ಸ್ನೇಹಮಾಗಿ ಪರವಸದಿಂ ಕಣ್ಣನೀರ್ಗ್ಗಳಂ ಸೂಸಿ ಎಯ್ತಂದು ಮನ್ಯುಮಿಕ್ಕು ಕರುಣದಿಂದಂ ಕುಂಚದ ಕೋಲೊಳ್ ಪರೆದಿರ್ದ್ದ ಪಣ್ಗಳಂ ಕೂಸಿನ ಮುನ್ತೆ ಸಾಚ್ಚುರ್ತ್ತುಂ ನೀಡುಂಬೇಗಮಿರ್ದ್ದು’ ದನ್ನು ತನ್ಮಯತೆಯಿಮ್ದ ನಿರೂಪಿಸಲಾಗಿದೆ [ಅದೇ : ೭]: ಅಷ್ಟೇ ಅಲ್ಲದೆ ಆ ಪೊಲತಿಯ ಕೂಸಿಗೆ ‘ಅಣುವ್ರತ ಮೊದಲಾಗಿ ಶ್ರಾವಕ ವ್ರತಗಳನ್ನು ’ ಕೊಡಲಾಯಿತು [ಅದೇ : ೯]. ಇದು ಅಸ್ಪೃಶ್ಯರಿಗೆ ಕೊಟ್ಟ ಮನ್ನಣೆ. ಭದ್ರಬಾಹುಭಟಾರರ ಕಥೆಯಲ್ಲಿ ಬೋಳ ತಲೆಯ ದೇಸಿಗ ನಂದಿಮಿತ್ರನನ್ನು, ಆತ ಜೈನ ಮುನಿಯ ಜತೆಯಲ್ಲಿ ಬಂದವನಾದ್ದರಿಂದ ಆ ಮುನಿಗೆ ಸಂದ ಮರ್ಯಾದೆ – ಅತಿಥ್ಯಗಳನ್ನು ರಾಜರಾಣಿಯರೆಲ್ಲ ತೋರಿಸಿ ಸತ್ಕರಿಸುತ್ತಾರೆ [ಅದೇ: ೬೮- ೬೯]. ಆತ ಯಾವ ಜಾತಿಯವನೆಂದು ಜಾತಿವರ್ಣಗಳ ಗೊಡವೆಗೇ ಹೋಗುವು ದಿಲ್ಲ. ಅಸ್ಪೃಶ್ಯರದ ತೋಟಿ – ತಳವಾರರೆಲ್ಲ ಜೈನರಾಗಿ, ವ್ರತ ಸ್ವೀಕರಿಸಿ, ತಪಸ್ಸು ಮಾಡಿ ಸ್ವರ್ಗಾಪವರ್ಗ ಸದ್ಗತಿಗೆ ಸಂದ ಸಂಗತಿಗಳನ್ನು ಇಲ್ಲಿನ (ಅದೇ : ೧೦೮-೧೧೯) ಕಥೆಗಳೇ ಅಲ್ಲದೆ ಜೈನ ಸಾಹಿತ್ಯದ ಅನ್ಯಕೃತಿಗಳೂ ಸಾದರಪಡಿಸಿವೆ. ಆರಾಧನಾ ಕರ್ಣಾಟ ಟೀಕಾವನ್ನು ರಚಿಸಿದ ಭ್ರಾಜಿಷ್ಣುವಿಗೆ ಮೂಲ ಆಕರವಾದ ಆರಾಧನಾ ಗ್ರಂಥವನ್ನು ಪ್ರಾಕೃತದಲ್ಲಿ ಬರೆದ ಶಿವಕೋಟಿ ಆಚಾರ್ಯನ ಕಾಲ ಕ್ರಿ.ಶ. ೧-೨ ನೆಯ ಶತಮಾನ. ಆ ವೇಳೆಗಾಗಲೇ ಅಸ್ಪೃಶ್ಯರು ಪ್ರಮುಖ ಪಾತ್ರಗಳಾಗಿ ಜೈನತ್ವದ ಭಾಗವಾಗಿ ಬೆರೆತು ಬಾಳಿದ ಸಾಹಿತ್ಯ ಸೃಷ್ಟಿಯಾಗಿತ್ತೆಂಬುದು ಪರಿಭಾವನೀಯವಾಗಿದೆ.

ಭ್ರಾಜಿಷ್ಣುವನ್ನು ದಾಟಿ ಕನ್ನಡ ಸಾಹಿತ್ಯದಲ್ಲಿ ಹೆಜ್ಜೆಗಳನ್ನು ಮುಂದಿಟ್ಟರೆ, ಪೊನ್ನನ ಶಾಂತಿಪುರಾಣದಲ್ಲಿ : ಒಂದು ಅಪೂರ್ವ ಘಟನೆ ನಿರೂಪಿತವಾಗಿದೆ. ಪೊನ್ನನು ಕಪಿಲನ ಪ್ರಸಂಗವನ್ನು ನಾಟಕೀಯ ದೃಶ್ಯವಾಗಿ ವಿಸ್ತರಿಸಿದ್ದೇಕೆ ಎಂಬ ಪ್ರಶ್ನೆಯಿಂದ ಹೆಕ್ಕಿ ನೋಡಿದರೆ ಅದರ ನಿಜ ಧ್ವನಿ ಕೇಳುತ್ತದೆ [ಹಂಪನಾ : ೧೯೮೨ : ೧೯೮-೨೦೦]. ಬ್ರಾಹ್ಮಣರ ಮಗಳಾದ ಸತ್ಯಭಾಮೆಯು ತನ್ನ ಪತಿ ಕಪಿಲನು ಅಬ್ರಾಹ್ಮಣನೆಂದೂ, ದಾಸೀ ಪುತ್ರನೆಂದೂ ತಿಳಿದು ರಾಜನಲ್ಲಿಗೆ ಹೋಗಿ ‘ರಕ್ಷ ರಕ್ಷ’ ಎಂದು ಹುಯ್ಯಲಿಟ್ಟಳು; ನೃಪನಿಗೆ “ನೀನುಂ ವರ್ಣಾಶ್ರಮ ಗುರುವಯ್ ಎನ್ನಂ ಕಾವುದು” [ಅದೇ : ೬-೬೫ ವ] ಎಂದು ಮೊರೆಯಿಟ್ಟಳು. (ರಾಜನು) ಬ್ರಾಹ್ಮಣ ಸ್ತ್ರೀಯನ್ನು ಮದುವೆಯಾಗಿ ಅನುಭವಿಸುತ್ತಿದ್ದ ಅಸ್ಪೃಶ್ಯ ಕಪಿಲನನ್ನು ಅಪಮಾನಗೊಳಿಸಿ ಪಟ್ಟಣದಿಂದ ಓಡಿಸಿದನು, ಅನಂತರ ಆ ಬ್ರಾಹ್ಮಣ ಸ್ತ್ರೀ ಸತ್ಯಭಾಮೆಯನ್ನು ತನ್ನ ಅಂತಃಪುರಕ್ಕೆ ಸೇರಿಸಿಕೊಂಡನು. ಮುಂದೊಂದು ದಿನ ಆ ರಾಜನು ಸತ್ತಾಗ ಅವನ ಮೇಲಿನ ಮೋಹದಿಂದ ಬ್ರಾಹ್ಮಣಿಯೂ ವಿಷಪುಷ್ಪವನ್ನು ಮೂಸಿ ತೀರಿಕೊಂಡಳು [ಅದೇ : ೬-೯೫] ಕಪಿಲ – ಸತ್ಯಭಾಮೆಯರ ಕಥೆಯೇ ಕನ್ನದ ಸಾಹಿತ್ಯದಲ್ಲಿ ಮಾರಮ್ಮನ ಕಥೆಯ ಮೊಟ್ತಮೊದಲನೆಯ ಪ್ರಾಚೀನತಮ ದಾಖಲೆ; ಪೊನ್ನ ಕವಿಗೇ ಇದರ ಶ್ರೇಯಸ್ಸು.

ಕಪಿಲನ ಕಥೆಯಲ್ಲಿರುವ ಇನ್ನೊಂದು ಸೂಕ್ಷ್ಮವೆಂದರೆ ಅಂತ್ಯಜನಾದ ಕಪಿಲನಿಗೆ ವಿದ್ಯೆ ಕಲಿಯಲು ಅವಕಾಶವಿಲ್ಲದ್ದರಿಂದ, ಬ್ರಾಹ್ಮಣರಿಗೆ ಪಾಠ ಹೇಳಿ ಕೊಡುವುದನ್ನು ಕೇಳಿಸಿಕೊಂಡು ಕಪಿಲನು ಬ್ರಾಹ್ಮಣರಿಗಿಂತ ಬುದ್ಧಿವಂತನಾದ ನೆಂಬುದು [ಅದೇ : ೬-೬೪ ವ.]; ತನ್ನ ದಾಸಿಯ ಪುತ್ರನಾದ ಕಪಿಲನು ಏಕಪಾಠಿ ಯಾಗಿದ್ದನೆಂದು ಅವನ ತಂದೆ ಹೇಳುವ ಮಾತುಗಳು ಗಮನಿಕೆ ತಕ್ಕದ್ದು. ಇದು ಜೈನರ ಪುರಾಣದಲ್ಲಿ ಬರುವ ಒಂದು ಉಪಾಖ್ಯಾನ.

ಕನ್ನಡ ಸಾಹಿತ್ಯದಲ್ಲಿಯೇ ಸರ್ವಸಮಾನತೆಯ ಅಂತಃಕರಣದಿಂದ, ಜನಪರವಾದ ಮಾನವೀಯ ಭಾವನೆಗಳಿಂದ ಸ್ಪಂದಿಸಿದ ಏಕಮೇವಾದ್ವಿತೀಯನಾದ ಕವಿ ಬ್ರಹ್ಮಶಿವ. ಜಿನಸೇನ ಆಚಾರ್ಯನು ಮನುಷ್ಯ ಜಾತಿರೇಕೈವ ಎಂದೂ, ಪಂಪನು ಮನುಷ್ಯ ಜಾತಿ ತಾನೊಂದೆ ವಲಂ ಎಂದೂ ಹೇಳಿದ್ದನ್ನು ಬದುಕಿಗೆ ಅಳವಡಿಸಿ ಗುಡುಗಿದವನು ಬ್ರಹ್ಮಶಿವ. ಬ್ರಹ್ಮಶಿವನವಾಣಿ ಕವಿವಾಣಿಯಷ್ಟೇ ಆಗದೆ ಜನವಾಣಿಯೂ ಆಗಿದೆ. ಕೆಲವರಿಗೆ ಸಿಂಹವಾಣಿಯೂ ಆಗಿದೆ. ಹೃದಯ ದಾರಿದ್ರ್ಯದ ಜೀವ ವಿರೋಧಿ ಕಾವ್ಯಗಳ ಮರುಳಗಾಡಿನಲ್ಲಿ ಬ್ರಹ್ಮಶಿವಕವಿಯ ಸಮಯ ಪರೀಕ್ಷೆ ಕಾವ್ಯ ಒಂದು ನೀರ್ದಾಣ, ನಲ್‍ದಾಣ. ಅವನ ನಿಲುಮೆಯಲ್ಲಿರುವ ಧೈರ್ಯ ಮತ್ತು ಔದಾರ್ಯ ಇಡೀ ಕನ್ನದ ಸಾಹಿತ್ಯದಲ್ಲಿ ಅನನ್ಯವೆನಿಸುವಂತಹುದು. ಸಮಾಜೊ – ಧಾರ್ಮಿಕ – ಚಾರಿತ್ರಿಕ ಅಧ್ಯಯನದ ನೆಲೆಯಲ್ಲಿ ಸಮಯ ಪರೀಕ್ಷೆ ಕುರಿತು ವಿಪುಲವಾದ ಚರ್ಚೆಗಳಿಗೆಬ್ ಅವಕಾಶವಿದೆ. ಬ್ರಹ್ಮಶಿವಕವಿ ಎತ್ತುವ ಅಸ್ಪೃಶ್ಯರ ಸಂಬಂಧದ ತಾತ್ವಿಕ ವಾಗ್ವಾದದ ನೆಲೆಗಳು ಇಂದಿನ ಸಂದರ್ಭದಲ್ಲಿ ಹೆಚ್ಚು ಮೌಲಿಕವಾಗಿವೆ.

ಕ್ಷತ್ರಿಯ ವೈಶ್ಯ ಶೂದ್ರ ಅಂತ್ಯಜ ಅಸ್ಪೃಶ್ಯ ಅಥವಾ ಮತ್ತಾವುದೇ ಜಾತಿಯಲ್ಲಿ ಹುಟ್ಟಿದರೂ, ಜೈನಮತದ ವ್ರತಗಳನ್ನು ಕೈಗೊಂಡ ಮೇಲೆ ಅವರು ಹಿಂದಿದ್ದ ಜಾತಿಗಳನ್ನೆತ್ತಿ ಮಾತನಾಡುವುದು ಸರಿಯಲ್ಲವೆಂಬ ಮಾನಸಿಕ ದೃಷ್ಟಿಯೊಂದು ಜಾಗೃತವಾಗಿತ್ತು. ಒಮ್ಮೆ ಜೈನನಾದ ಮೇಲೆ ಅವರು ಯಾರೇ ಆದರೂ ಗೌರವಾರ್ಹರಾಗುವರೆಂದು ಬ್ರಹ್ಮಶಿವನು ಘೋಷಿಸಿದ್ದಾನೆ. ಬ್ರಹ್ಮಶಿವ ಕವಿಯ ಪದ್ಯಗಳು ವ್ಯಾಖ್ಯಾನ ನಿರಪೇಕ್ಷಿಯಾಗಿವೆ, ಹೃದಯ ಸ್ಪರ್ಶಿಯಾಗಿವೆ, ಅಸ್ಪೃಶ್ಯರ ಪರವಾಗಿವೆ. ಇಡೀ ಕನ್ನಡ ಸಾಹಿತ್ಯದ ಕವಿ-ಕಾವ್ಯ ಪರಂಪರೆಯಲ್ಲಿಯೇ ಏನು, ಒಟ್ಟಾರೆಯಾಗಿ ಭಾರತೀಯ ವಾಙ್ಮಯದಲ್ಲಿಯೇ ಅಸ್ಪೃಶ್ಯರ ವಕೀಲ – ವಕ್ತಾರನಾಗಿ ಬ್ರಹ್ಮಶಿವಕವಿಯ ಹಾಗೆ, ಅವನಿಗಿಂತಲೂ ಹಿಂದೆ ಮತ್ತು ಅವನ ತರುವಾಯ, ಮಾತನಾಡಿದ ಮಹಾ ಮಾನತಾವಾದಿ ಧೈರ್ಯಶಾಲಿ ಇನ್ನೊಬ್ಬನಿಲ್ಲ; ಬ್ರಹ್ಮಶಿವನ ಚಿಂತನಲಹರಿಗೆ ಮತ್ತಷ್ಟು ಜೀವಧ್ವನಿ – ಜೀವಕಳೆ ಬಂದದ್ದು ಇಪ್ಪತ್ತನೆಯ ಶತಮಾನದ ಮಧ್ಯಭಾಗದಲ್ಲಿ, ಡಾ. ಬಿ.ಆರ್. ಅಂಬೇಡ್ಕರರ ಎರಡು ಮುಖ್ಯ ಕೃತಿಗಳಲ್ಲಿ; ಭಾರತದಲ್ಲಿ ಹಾತಿ, ಮತ್ತು ಜಾತಿ ನಿರ್ಮೂಲನೆ. [ಕಮಲಾಹಂಪನಾ : ೧೯೮೫ ಮತ್ತು ೧೯೯೦]

ಕ್ರಿ.ಪೂ.ದ ಕಡೆಯ ಹಾಗೂ ಕ್ರಿ.ಶ.ದ ಆರಂಭದ ಶತಮಾನಗಳಲ್ಲಿ ನಡೆಯುತ್ತಿದ್ದ ವೈಯಕ್ತಿಕ ಹಾಗೂ ಸಾಮುದಾಯಿಕ ಮತ ಪರಿವರ್ತನೆಗಳನ್ನೂ, ತತ್ಸಂಬಂಧವಾದ ಸಂಘರ್ಷಗಳನ್ನೂ ಸವಾಲುಗಳನ್ನೂ ಸಮಾಜ ಸ್ಚೀಕರಿಸಿ ಜೀರ್ಣಿಸಿ ಕೊಂಡದ್ದನ್ನೂ, ಜೈನ ಸಾಹಿತ್ಯ ಕಥಾಂತರ್ಗತ ವಸ್ತು ಪಾತ್ರಗಳನ್ನಾಗಿ ಅಳವಡಿಸಿದ್ದಾರೆ. ಈ ಸಾಮಾಜಿಕ ದೃಷ್ಟಿಕೋನದಿಂದ ಪ್ರಾಚಿನ ಸಾಹಿತ್ಯ ವಸ್ತುವನ್ನು ವಿಶ್ಲೇಷಿಸಿದಾಗ ಅನೇಕ ಸಮಾಜೊ-ಧಾರ್ಮಿಕ ಐತಿಹಾಸಿಕ ಮಾಹಿತಿಗಳು ಹೊರಬೀಳುತ್ತವೆ.

ಕರ್ನಾಟಕದಲ್ಲಿ ಯಾಪನೀಯ ಪಂಥ ಹುಟ್ಟಿದ್ದು ಇಂಥ ಒಂದು ಐತಿಹಾಸಿಕ ಅಗತ್ಯವನ್ನು ಪೂರೈಸುವ ಸಲುವಾಗಿ. ವೈದಿಕ – ಅವೈದಿಕಗಳ ಮುಖಾಮುಖಿಯ ತಾತ್ವಿಕ ಸಂಘರ್ಷದ ನೆಲೆಯಲ್ಲಿ ಜೈನತ್ವವು ಹೇಗೆ ತನ್ನ ಸೈದ್ಧಾಂತಿಕ ಚೌಕಟ್ಟಿನೊಳಗೆ ಎಲ್ಲರಿಗೂ, ಮುಖ್ಯವಾಗಿ ಅಸ್ಪೃಶ್ಯರಿಗೂ ಮಾನ್ಯತೆಯನ್ನು ಕೊಟ್ಟಿದೆ ಎಂಬುದನ್ನು ನಿರ್ದಿಷ್ಟವಾಗಿ ಇನ್ನೊಮ್ಮೆ ಹೇಳಬೇಕಾದ ಜರೂರು ಒದಗಿಬಂದಿತ್ತು. ಹೆಂಗಸರೂ ಅನ್ಯಧರ್ಮಗಳವರೂ (ಪರಶಾಸನಗಳವರು) ಹೆಚ್ಚಿನ ಸಂಖ್ಯೆಯಲ್ಲಿ ಜೈನಮತಕ್ಕೆ ಹರಿದುಬಂದರು. ಜೈನರಾದವರೆಲ್ಲ ದಿಗಂಬರರೇ ಆಗಿರಬೇಕೆ, ಅಜೈನ ಪಂಥಗಳಿಂದ ಬಂದವರಿಗೆ ಮೋಕ್ಷವಿದೆಯೆ, ಸ್ತ್ರೀಯರಿಗೆ ಅದೇ ಭವದಲ್ಲಿ ಮೋಕ್ಷವಿದೆಯೆ – ಎಂಬಂಥ ಸಾಮಾನ್ಯ ಸಂಶಯಗಳು ಸಾಮಾನ್ಯ ಜನರನ್ನು ಕಾಡುತ್ತಿದ್ದುವು. ಅವರೆಲ್ಲರನ್ನೂ ಶಾಸ್ತ್ರ ಸಮ್ಮತವಾದ ರೀತಿಯಲ್ಲಿ ಸಮಾಧಾನಪಡಿಸುವಂಥ ಧಾರ್ಮಿಕ ನಿರೂಪಣೆಯೊಂದು ಆಚಾರ್ಯ ಸಮುದಾಯದಿಂದ ವಿಧ್ಯುಕ್ತವಾಗಿ ಹೊರಬೀಳುವುದು ಅನಿವಾರ್ಯವೆನಿಸಿತ್ತು. ಶ್ವೇತಾಂಬರ ಮತ್ತು ಅದರ ಉಪ-ಶಾಖೆಗಳು ಉತ್ತರಭಾರತದಲ್ಲಿ ಈ ಕೆಲಸ ಮಾಡಿದ್ದುವು. ಅದಕ್ಕೆ ದಿಗಂಬರ ಪಂಥ ದಕ್ಷಿಣದಲ್ಲಿ ತುರ್ತಾಗಿ ಸ್ಪಂದಿಸಲು ಮೀನ ಮೇಷ ಎಣಿಸುತ್ತಿದ್ದಾಗ, ಸಂದರ್ಭಕ್ಕೆ ತಕ್ಕ ಹಾಗೆ ಯಾಪನೀಯ ಶಾಖೆ ದಿಗಂಬರ ಪಂಥದ ಒಡಲಿನಿಂದಲೇ ಹುಟ್ಟಿಕೊಂಡಿತು. ಯಾಪನೀಯವು ಜೈನ ಧರ್ಮದಲ್ಲಿ ಸುಧಾರಣೆಗಾಗಿ ಬಂದ ಸಂಘ [ದೇಸಾಯಿ ಪಿ.ಬಿ.: ೧೯೫೭ : ೧೬೭-೧೬೮] ಅಸ್ಪೃಶ್ಯರಾದಿಯಾಗಿ ಹೊಸ ಜೈನರಿಗಾಗಿ ಹುಟ್ತಿದ ಯಾಪನೀಯದ ರತ್ನತ್ರಯ ಸೂತ್ರಗಳು:

* ಜೈನೇತರ ಪಥಗಳನ್ನು ಅನುಸರಿಸುವವರಿಗೂ ಮೋಕ್ಷವಿದೆ : ಪರಶಾಸನೇ ಮೋಕ್ಷಃ
* ಬಟ್ಟೆ ತೊಟ್ಟಿರುವ ಗೃಹಸ್ಥರಿಗೂ ಮೋಕ್ಷ ಇದೆ : ಸಗ್ರಂಥಾನಂ ಮೋಕ್ಷಃ
* ಹೆಂಗಸರಿಗೆ ಈ ಜನ್ಮದಲ್ಲೇ ಮೋಕ್ಷ ಸಾಧ್ಯವಿದೆ : ಸ್ತ್ರೀಣಾಂ ತದ್ಭವೇ ಮೋಕ್ಷಃ

ಡಾ. ಆ.ನೇ. ಉಪಾಧ್ಯೆಯವರು ಯಾಪನೀಯ ಪಂಥದ ಉಗಮ ವಿಕಾಸಗಳನ್ನು ವಿಸ್ತಾರವಾಗಿ ಚರ್ಚಿಸಿದ್ದಾರೆ [ಉಪಾಧ್ಯೆ : ೧೯೮೩ : ೧೯೨-೨೦೧].

ಕರ್ನಾಟಕದ ಭೌಗೋಳಿಕ ಸೀಮೆಯಲ್ಲಿ ಜೈನ ಸಮಾಜದೊಳಗೆ ಸಮಾವೇಶ ಗೊಂಡ ಅಸ್ಪೃಶ್ಯರಾದಿಯಾಗಿ ಮತಾಂತರಿಗಳಿಗಾಗಿ ಹುಟ್ತಿದ ಪಂಥ ಯಾಪನೀಯ. ಯಾಪನೀಯದ ತಳಪಾಯ ಮುಕ್ಕಾಲು ಮಣೆಯೆಂದು ತಿಳಿಸಿದ್ದೇನೆ; ಅದರಲ್ಲಿರುವ ಮೂರು ಮಂತ್ರಗಳೇ ಈ ಮುಕ್ಕಾಲು ಮಣೆ ಸೂತ್ರಗಳು.

ಯಕ್ಷಾರಾಧನೆಯ ಪರಂಪರೆ ಜೈನ ಸಮಾಜದಲ್ಲಿ ಹೊಸದಾಗಿ ಬಂದು ಸೇರಿದ ಸಮಾಜದವರಿಗೊಂದು ಮಾನಸಿಕ ನೆಮ್ಮದಿಯಾಗಿ ಕಲ್ಪಿತವಾದ ನವೀನ ಸೃಷ್ಟಿ. ಈ ನೂತನ ಯಕ್ಷಾರಾಧನೆಯ ಪದ್ಧತಿಯನ್ನು ಉದ್ಘಾಟಿಸಿದವರೂ ಯಾಪನೀಯರೇ. ಜೈನತ್ವಕ್ಕೆ ಹೊಸದಾಗಿ ಮತಾಂತರವಾದವರೆಲ್ಲ ಹಿಂದು ಮತದವರು. ಇಲ್ಲಿಗೆ ವಲಸೆ ಬರುವ ಮೊದಲು ಅವರು ಅಲ್ಲಿ ವಿಷ್ಣು ಉಪಾಸಕರು ಇಲ್ಲವೆ ಶಿವಪೂಜಕರು. ವಿಷ್ಣುವಿಗೆ ಲಕ್ಷ್ಮಿ ಇದ್ದಳು, ಶಿವನಿಗೆ ಪಾರ್ವತಿ ಇದ್ದಳು. ಗಂಗೆ ಗೌರಿ ಅಂಬಿಕಾ ಚಾಮುಂಡಾ ಎಂಬಿತ್ಯಾದಿ ಹೆಸರುಗಳಿಂದ ಸ್ತ್ರೀ ದೇವತೆಗಳು ಹಿಂದು ಮತದಲ್ಲಿ ಪೂಜಿತರಾಗಿದ್ದರು [ಹಂಪನಾ : ೧೯೭೬].

ಜೈನ ಮತದೊಳಗೆ ಅವತಾರಗಳೂ ಇಲ್ಲ. ದೇವರುಗಳೂ ಇಲ್ಲ. ಅನುಗ್ರಹವೂ ಇಲ್ಲ. ಇರುವ ಜಿನರಿಗೂ ಆಭರಣವಿಲ್ಲ, ಅಲಂಕಾರವಿಲ್ಲ, ಕಿರೀಟವಿಲ್ಲ, ಆಯುಧಗಳಿಲ್ಲ. ಬೆತ್ತಲೆ ದೇವರು. ತಾನೇ ದಿಗಂಬರ, ಇನ್ನು ನಮಗೇನು ಕೊಡಬಲ್ಲ, ನಮ್ಮ ಗತಿ ಏನು, ಸ್ತ್ರೀ ಶಸ್ತಿ ದೇವಿಯರೂ ಇಲ್ಲಿ ಇಲ್ಲ – ಇಂಥ ಪ್ರಶ್ನೆಗಳು ಹೊಸ ಆಗಂತುಹರಲ್ಲಿ ಉದ್ಭವಿಸಿದುವು. ಅವರ ಆತಂಕಗಳನ್ನು ದೂರ ಮಾಡುವಂಥ ಬದಲಿ ವ್ಯವಸ್ಥೆಯೊಂದು, ಮರು ಹೊಂದಾಣಿಕೆ ಜರೂರು ಆಗಬೇಕಾಯಿತು. ಆಗ ದಿಢೀರಾಗಿ ಹುಟ್ಟಿದ ಸಮನ್ವಯ ಸಿದ್ಧಾಂತವೇ ಈ ಯಾಪನೀಯ.

ತೀರ್ಥಂಕರರು ಎಲ್ಲವನ್ನು ತೊರೆದವರು ಜಿನ. ಜಿನರು ವರ ಶಾಪ ಏನನ್ನೂ ಕೊಡದ ತಾಟಸ್ಥ್ಯ ಭಾವದವರು ಎಂಬುದೂ ಸರಿ. ಆದರೆ ಅವರದು ಅಸಾಮಾನ್ಯ ಮಹಿಮೆ. ಜಿನರ ಶಕ್ತಿ ಎಷ್ಟೆಂದರೆ ಅವರ ಭಕ್ತ ಸೇವಕರಾದ ಯಕ್ಷ ಯಕ್ಷಿಯರೇ ನಿಮ್ಮ ಕನಸುಗಳನ್ನು ನನಸಾಗಿಸಬಲ್ಲರು. ಲೌಕಿಕದ ಸುಖಾದಿಗಳ ಪೂರೈಕೆಗೆ ಇವರೇ ಸಾಕು. ಇವರಲ್ಲಿ ೨೪ ಜನ ದೇವರೂ, ೨೪ ಜನ ದೇವಿಯರೂ ಇದ್ದಾರೆ. ಇವರಲ್ಲದೆ ವಿದ್ಯಾದೇವಿಯರೂ ಯಾಪನೀಯದ ಸಮನ್ವಯ ಸೂತ್ರ, ಜನಪರ ಧೋರಣೆ. ಜಿನಮತವನ್ನು ಜನಪ್ರಿಯತೆಗಾಗಿ ಹಗ್ಗಿದರು, ಸ್ವಲ್ಪ ಶ್ವೇತಾಂಬರದಿಂದ, ತುಸು ದಿಗಂಬರರಿಂದ ಸೂತ್ರಗಳನ್ನು ಸ್ವೀಕರಿಸಿ ಒಂದು ಮಧ್ಯ ಮಾರ್ಗವನ್ನು ತೆರೆದರು. ಜನಮನದ ಬೇಡಿಕೆಗಳಿಗೆ ಧರ್ಮವು ಬಾಗಬೇಕಾಗುತ್ತದೆಂಬುದನ್ನು ಅರಿತ ಮುನ್ನೋಟದ ಮತಾಚಾರ್ಯರು ಸಮನ್ವಯ ಸೂತ್ರದ ಮಶಾಲು ಹಿಡಿದು ಹೊರಬಂದರು. ಹೊಲೆಯರು ಮಾದಿಗರು ಚಂಡಾಲರು ಆದಿಯಾಗಿ ಅಂತ್ಯಜರು ಸೇರಿದರು; ಒಕ್ಕಲಿಗರು ಶೂದ್ರರು, ಎಲ್ಲ ವರ್ಗದ ಸ್ತ್ರೀಯರು ಸೇರಿದರು. ಬ್ರಹ್ಮಶಿವ ಕವಿ ತನ್ನ ಸಮಯ ಪರೀಕ್ಷೆಯಲ್ಲಿ ಈ ಎಲ್ಲ ಸಂವೇದನೆಗಳ ಸೂಕ್ಷ್ಮ ಗಳನ್ನೂ ಸಂಕೀರ್ಣತೆಯನ್ನೂ, ಮತಗಳ ಮೇಲಾಟದ ಸ್ವರೂಪವನ್ನೂ ಸೂಕ್ಷ್ಮಗಳನ್ನೂ ಸಂಕೀರ್ಣತೆಯನ್ನೂ, ಮತಗಳ ಮೆಲಾಟದ ಸ್ವರೂಪವನ್ನೂ ಅದ್ಭುತವಾಗಿ ಹಿಡಿದಿಟ್ಟು, ಅಪೂರ್ವಕಾವ್ಯದ ಕ್ರಾಂತಿಕಾರಿ ಕವಿ ಎನಿಸಿದ್ದಾನೆ.

ತಪಮಂ ಕೈಕೊಳಲೊಡನೆಂ
ತು ಪಾರ್ವ್ವರುಂ ಭೂಪ ವೈಶ್ಯ ಶೂದ್ರರುಮೆಲ್ಲಂ
ತಪಸಿಗಳಪ್ಪವೊಲಾರ್ಹತ
ರೆ ಪಾರ್ವ್ವರೆನೆ ಸಂದರಾವ ಜಾತಿಯೊಳೊಗೆದುಂ ||                                 ೨-೩೩
ಪೊಲೆಯಂ ಶ್ರಾವಕನಾದೊಡೆ
ಪಲರೊಳವಂ ಮಾನ್ಯನಪ್ಪೊನೆಂದಡೆ ಮತ್ತಿಂ
ಕುಲಜಂ ಗಡ ಜೈನಂ ಗಡ
ಬೆಲೆಯುಂಟೆ ಪೊಂಗೆ ಕಂಪು ದೊರೆಕೊಂಡ ತೆಱಂ|                                    ೨-೪೧

ಸಲೆ ಪಸುವನೆ ಸೇವಿಸುವಂ
ಹೊಲೆಯಂ ಮೊದಲಾಗಿ ಜೈನನಾದಡೆ ಕುಡಿಯಂ
ಕುಲಹೀನನಾಗಿಯುಂ ತೋ
ಗಲ(ದೊಳ್)ಕೊಳೆ ನೀರನೆಂದೊಡಕ್ಕುಮೆ ಕುಡಿಯಲ್ ||                          ೨-೨೧

ಒಕ್ಕಲಿಂಗನಕ್ಕೆ ಪಂಚಮ
ನಕ್ಕೆಮ ಸದ್ರುಷ್ಟಿಯಾಗಿ ಕಾಲಂ ಕರ್ಚ್ಚ
ಲ್ತಕ್ಕುದು ಜೈನಂಗೇಕೆನೆ
ಚಿಕ್ಕಯ್ಯಂ ಶೂದ್ರನೆಂದು ಕರ್ಚ್ಚರೆ ಕುಲಜರ್ ||                                     ೫-೧೪೧

ಒಕ್ಕಲಿಗಂ ಋಷಿಯಾದೊಡೆ
ಚಿಕ್ಕಯ್ಯನ ಕಾಲನೆಂತು ಕರ್ಚ್ಚುವರದಱೆಂ
ಒಕ್ಕಲಿಗಂ ಬ್ರತಿಯಾದಂ
ದಕ್ಕುಂ ಕರ್ಚ್ಚಲ್ಕೆ ಮದಮನುಳಿಗೆ ಕುಲಜ್ಞಂ ||                                       ೫-೧೪೨

ಬ್ರತಮಂ ಶುಚಿತ್ವಮುಂ ಸುಚ
ರಿತಮುಂ ಪೊಲೆಯಂಗೆ ಜೈನನಾದೊಡೆ ಸಲ್ಲುಂ
ಯತಿಪತಿಗಂ ಭೂಪತಿಗಂ
ವ್ರತಾದಿಗಳ್ ಸಲ್ಲ ಕಾಳಸಮಯಿಗಳೆಂತುಂ ||                                        ೧೪-೧೦೩
ಕುಲಹೀನಂ ತೊನ್ನಂ ಕಿಸು
ಗುಳಿಗಂ ಪರದೇಶಿ ವಿತ್ತಹೀನಂ ಕುತ್ತಂ
ಗುಳಿಯಕ್ಕೆ ಜೈನನೆನೆ ಜಿನ
ನಿಳಯಕ್ಕೊಯ್ದೋವಿ ಲೇಸು ಮಾಳ್ಪನೆ ಜೈನಂ ||                                  ೪-೩೧

ವ್ರತ ಸಚ್ಚರಿತ್ರ ಹೀನರ
ಕ್ಷಿತಪತಿಯಕ್ಕವನ ತನುಜನಪ್ಪುದಱೆಂದಂ
ಬ್ರತನಿರತನಪ್ಪ ಪೊಲೆಯನ
ಸುತನಪ್ಪುದು ಪುಣ್ಯಮುಭಯ ಭವಮುಂ ಸಫಲಂ ||                              ೧೪-೧೦೫

ಸ್ವಪಚಂ ಮೊದಲಾಗಿರೆ ಮಿ
ಕ್ಕಪಾಪದೊಳ್ ಪೊರೆಯದಾವ ಧರ್ಮ್ಮದೊಳೆಸಗಿ
ರ್ದ್ದು ಪವಿತ್ರಮೆನಿಕುಮದೆ ತಾ
ನಪವರ್ಗ್ಗೋಚಿತಮೆನಿಪ್ಪ ಧರ್ಮಂ ಧರೆಯೊಳ್ ||                                 ೧೫-೫

ಉತ್ತರಮರೆವೆಂದು ಬೆಸವರ
ವಿತ್ತಂತವೆ ಮಾಳ್ಪ ಮಾಟಮಂ ಕೇಳಲೊಡಂ
ತುತ್ತನಿದಂ ಪೊಲೆಯನುಮೆನಿ
ಪುತ್ತಮ ಚಾರಿತ್ರಮೆಲ್ಲಿತಲ್ಲಿಯೆ ಧರ್ಮ್ಮಂ ||                                      ೧೫-೬

ಉತ್ತಮರೊಳ್ಪಾರ್ವಂಗಂ
ಮತ್ತತ್ತಲು ಕೀಲಿಗಂಗಮೊಂದಂದಂ ತಾ
ನುತ್ತಮ ಚರಿತ್ರಮಾದೊಡೆ
ಮತ್ತಂ ಮೋಕ್ಷಕ್ಕೆ ಮಾರ್ಗ್ಗಮದೆಯೆಂಗಱೆವಂ|                                     ೧೫-೭

ಕುಲಹೀನಂಗೊಂದಂದಂ
ಕುಲಜಂಗೊಂದಂದಮಕ್ಕುಮಾಚಾರಮದೆಂ
ದೊಲವರಮಂ ಪೇಳ್ವುದು ನಿ
ರ್ಮ್ಮಲ ಧರ್ಮ್ಮಮದಲ್ಲ ಠಕ್ಕಮತಮೆಂಗಱೆವಂ ||                              ೧೫-೮

ಪೊನ್ನುಂ ದಯೆಯೊಳ್ಕೊಡಿ ಜ
ಗನ್ನುತಮೆನಿಸಿರ್ದ್ದ ಧರ್ಮಮುಂ ಸಕಳ ಜಗ
ಕ್ಕುಂ ನಿರುತಂ ಸಲೆವೇಳ್ಪುದು
ಪೊನ್ನಱನೆಂಬೆರಡಱಲ್ಲಿ ವೊಲವರಮುಂಟೇ ||                                     ೧೫-೯

ಪೊಲೆಯಂ ಪಡೆದ ಸುವರ್ನ್ನಂ
ಕಲುಂಬುಗೊಂಡಿರ್ದ್ದು ತಾಂಬ್ರಮಕ್ಕುಮೆ ಧರ್ಮ್ಮಂ
ಕುಲಜಂಗಮಕುಲಜಂಗಂ
ಸಲವೇಳ್ಪುದು ಕುಲಮದೇವುದಱೆತಮೆ ಮುಖ್ಯಂ ||                              ೧೫-೧೦

ಕ್ಷತ್ರಿಯನಾದಿಯಾಗಿ ಕಡೆಯೊಳ್ಪೊಲೆಯಂಬರವೆಲ್ಲ ಜಾತಿಗಂ
ಧಾತ್ರಿಯೊಳೆಲ್ಲಿ ನೋಡುವಡಮೇತೆಱದಿಂ ಕಱೆಯಿಲ್ಲ ಶುದ್ಧ ಚಾ
ರಿತ್ರಮದೊಂದೆ ಮಾರ್ಗಮದಱೆಂ ಜಿನಧರ್ಮಮೆ ಧರ್ಮ್ಮಮೈಹಿಕಾ
ಮಂತ್ರಿಕ ಸೌಖ್ಯ ಹೇಯು ಭುವನತ್ರಯಸಾರಮದೆಂತುಮೆಲ್ಲಿಯುಂ ||         ೧೫-೧೧

ಹಿಮಕರನ ಹಿಮಾಂಶುಗಳು
ತ್ತಮಜಾತಿಗಮಂತ್ಯಜಾತಿಗಂ ತಣ್ಣಿಂದಂ
ಸಮನಪ್ಪತೆಱದಿನಱನುಂ
ಸಮನಾಗಲೆವೇಳ್ಕುಮಾವಜಾತಿಗಮೆಂತುಂ ||                            ೧೫-೧೨

ಪಾಲುತ್ತಮಂಗಮಾ ಚಾಂ
ಡಾಲಂಗಂ ಸೀಯನಪ್ಪ ತೆಱನಿಂದಱನುಂ
ಮೇಲಪ್ಪ ಜಾತಿಗಂ ಚಾಂ
ಡಾಲಂಗಮದೊಂದೆಯಂದಮಾಗಲೆ ವೇಳ್ಕುಂ ||                                    ೧೫-೧೩

ಸಲೆಮುಂ ಕಳ್ಗುಡಿವಂ ನಿ
ರ್ಮ್ಮಳವೆನಿಸಿದ ಜೈನ ಧರ್ಮ್ಮಮಂ ಮಱೆಗೊಳೆ ಭೂ
ತಳವಂದ್ಯನಕ್ಕುಮೆನೆ ಮ
ತ್ತೆ ಲೇಸು ಜಿನಧರ್ಮ್ಮಮಲ್ಲದೊಳವೇ ಧರ್ಮಂ ||                                ೧೫-೩೩

ಬ್ರಹ್ಮಶಿವ ಕವಿಯ ಪ್ರಕಾರ ಜೈನತ್ವದಲ್ಲಿ ಮೇಲರಿಮೆ ಕೀಳರಿಮೆಗಳನ್ನು ಕಿತ್ತೊಗೆಯುವಂಥ ನೆಲೆಯ ಗುಣಾತ್ಮಕ ಸ್ವೀಕರಣವಿದೆ. ಜಾತಿಯಿಂದ ಬಹಿಷ್ಕೃತರು ಎಂದೆನೆಸಿದವರನ್ನು, ಅಸ್ಪೃಶ್ಯರನ್ನು, ಇನ್ನಾವುದೇ ಜಾತಿಯವರನ್ನು, ತನ್ನ ಸಮಾಜದೊಳಗೆ ಸೇರಿಸಿಕೊಳ್ಲಲು ಹಿಂಜರಿಯಲಿಲ್ಲ, ಮುಜುಗರ ಪಡಲಿಲ್ಲ; ಇದರ ಬದಲಿಗೆ ಅವರು ಅಸ್ಪೃಶ್ಯರಾದಿಯಾಗಿ ಕೆಳಗಿನವರನ್ನು ಸೇರಿಸಿಕೊಂಡು ಹೆಮ್ಮೆ ಪಟ್ಟರು. ಗುಡ್ದಗಾಡು ಜನಾಂಗಗಳವರೂ ಆದಿವಾಸಿಗಳೂ ಜೈನತ್ವದ ತೆಕ್ಕೆಯೊಳಗೆ ಕೂಡಿದರು. ಇವರೆಲ್ಲರ ನಡುವೆ ಅಂತರ್ಜಾತಿಯ ವಿವಾಹಗಳೂ ಏರ್ಪಟ್ಟುವು.

ಇಂದಿನ ಯುಗಮಾನದ ಚಿಂತನೆಗಳಿಗೆ ತಾಳೆಯಾಗುವ ಬ್ರಹ್ಮಶಿವಕವಿಯ ವೈಚಾರಿಕ ಪ್ರಖರತೆ, ಖಚಿತತೆ ಇಲ್ಲಿನ ಪದ್ಯಗಳಲ್ಲಿ ಹರಳುಗೊಂಡಿದೆ. ಎಂಟನೂರು ವರ್ಷಗಳ ಹಿಂದೆ, ಧಾರ್ಮಿಕ ವಲಯದಲ್ಲಿ ನಿಂತು, ಜೀವಪರವಾಗಿ ಹೀಗೆ ವೈಚಾರಿಕ ಪ್ರಜ್ಞೆಯಿಂದ, ವೈಜ್ಞಾನಿಕ ದೃಷ್ಟಿಯಿಂದ ಮುಕ್ತ ಸಂವಾದಕ್ಕಿಳಿದ ಬ್ರಹ್ಮಶಿವ ಕವಿ ಆಧುನಿಕ ಸಂವೇದನೆಗಳಿಗೆ ಮಿಡಿಯುತ್ತಾನೆ; ಪ್ರಸ್ತುತನಾಗುತ್ತಾನೆ.

ಬ್ರಹ್ಮಶಿವ ಕವಿಯು ಈ ಯಾಪನೀಯದ ಕಡೆಯ ಕಾಲದ ಘಟ್ಟದಲ್ಲಿ ನಿಂತು ಕೃತಿರಚನೆ ಮಾಡಿದವನು. ಪರಶಾಸನೇ ಮೋಕ್ಷಃ ಎಂಬುದನ್ನು ಕುರಿತೇ ಸಮಯಪರೀಕ್ಷೆ ಸಮರ್ಥನೆ ನೀಡಿದೆ : ಸಮಾಜದ ಕೆಳವರ್ಗದವರಿಗಾಗಿ ಹುಟ್ಟಿದ ಸೂತ್ರವಿದು. ಯಾಪನೀಯ ಪಂಥ ೧೨ ನೆಯ ಶತಮಾನದಿಂದ ಆಚೆಗೆ ಅದೃಶ್ಯವಾಗಲು ಕಾರಣ ಈ ಮಂಥನದಿಂದ ಹೊರಬರುತ್ತದೆ. ಸಮಾಜದಲ್ಲಿ ದಲಿತವರ್ಗದವರನ್ನೂ ಸಹ ಸೇರಿಸಿಕೊಳ್ಳುತ್ತಿದ್ದ ಯಾಪನೀಯ ಪಂಥದ ಜಿನಾಲಯಗಳನ್ನು ನಾಶಮಾಡಿ, ಯಾಪನೀಯ ಜೈನಾಚಾರ್ಯರನ್ನು ಕೊಂದವರು ಏಕಾಂತದ ರಾಮಯ್ಯ, ಆದಯ್ಯ, ಗೊಗ್ಗಯ್ಯ, ವಿರುಪರಸಾದಿಗಳು. ೧೨ ನೆಯ ಶತಮಾನದ ಉತ್ತರಾರ್ಧದಲ್ಲಿ, ಉತ್ತರ ಕರ್ನಾತಕದ ಪರಿಸರದಲ್ಲಿ, ಈ ಸಂಹಾರ ಕಾರ್ಯ ನಡೆಯಿತು. ಅಲ್ಲಿಂದಾಚೆಗೆ ಯಾಪನೀಯ ಪಂಥ ಮತ್ತೆ ಉನಶ್ಚೇತನಗೊಳ್ಳಲಿಲ್ಲ.

ಇದಾದ ಮತ್ತು ಈ ಹಿಂಸಾಕಾಂದ ನಡೆಯುತ್ತಿದ್ದ ಅವಧಿಯಲ್ಲಿ ಕರ್ನಾಟಕದಲ್ಲಿ ಎಲ್ಲ ವರ್ಗದವರಿಗೂ, ಶೂದ್ರ ಅಸ್ಪೃಶ್ಯರಿಗೂ ವೀರಶೈವಧರ್ಮ ಅವಕಾಶವನ್ನು ಮುಂದುವರಿಸಿದ ಸಂಗತಿ ಸರ್ವ ಶ್ರುತವಾಗಿದೆ. ಕ್ರಿ.ಪೂ. ಆರು-ಐದನೆಯ ಮತಾಂತರ ಗೊಂಡು ಜೈನ, ಬೌದ್ಧ ಮತ್ತು ಇತರ ಅಜೀವಕರ ಶ್ರಮಣತ್ವದಲ್ಲಿ ವಿಲೀನರಾಗಿದ್ದರು; ಅದಾದ ಒಂದೂವರೆ ಸಾವ್ರ ವರ್ಷಗಳ ಮೇಲೆ ಮತ್ತೆ ಕರ್ನಾಟಕದಲ್ಲಿ ಮಾತ್ರ ಅಸ್ಪೃಶ್ಯರು – ಶೂದ್ರರು ವೀರಶೈವಕ್ಕೆ ಮತಾಂತರಗೊಂಡರು. ಅನಂತರ ಕಾಲಘಟ್ಟದಲ್ಲಿ ಅಸ್ಪೃಶ್ಯರು ಇಸ್ಲಾಂ ಮತಕ್ಕೆ ಸೇರಿ ಮುಸಲ್ಮಾನರಾದದ್ದೂ, ಈ ಶತಮಾನದಲ್ಲಿ ಡಾ. ಬಿ.ಆರ್. ಅಂಬೇಡ್ಕರರ ನೇತೃತ್ವದಲ್ಲಿ ಬೌದ್ಧರಾದದ್ದೂ ಈಗ ಚರಿತ್ರೆಯ ಭಾಗವಾಗಿದೆ. ಅವೆಲ್ಲದರ ಹಿನ್ನೆಲೆ ಮತ್ತು ಚರ್ಚೆ ಈ ಸಂಪ್ರಬಂಧದ ವ್ಯಾಪ್ತಿಗೆ ಬರುವುದಿಲ್ಲ.

ಅಸ್ಪೃಶ್ಯರಿಗೆ ಜೈನತ್ವದ ಪ್ರತಿ ಸಂಸ್ಕೃತಿಯಲ್ಲಿ ವಿಶೇಷವಾದ ಮಮತೆ ಮುಂದುವರೆದು ಈ ೨೦ ನೆಯ ಶತಮಾನದಲ್ಲೂ ಹೇಗೆ ಜೀವಂತವಾಗಿದೆ ಎಂಬುದಕ್ಕೊಂದು ದೃಷ್ಟಾಂತ ಕೊಡುತ್ತೇನೆ. ಭಾರತದ ಪಶ್ಚಿಮೋತ್ತರ ಭಾಗದಲ್ಲಿ, ಮುಖ್ಯವಾಗಿ ರಾಜಾಸ್ತಾನ – ಮಧ್ಯಪ್ರದೇಶದ ಗಡಿಯಲ್ಲಿ ೧೫-೨೦ ವರ್ಷಗಳ ಹಿಂದೆ ಐತಿಹಾಸಿಕ ಮಹತ್ವದ ಘಟನೆ ನಡೆಯಿತು. ರತ್ಲಮ್, ಚಿತ್ತೋಡ್, ನೀಮಚ್ ಪ್ರದೇಶ ಪರಿಸರದ ‘ಖಟಕ್’ (ಕಸಾಯಿ : ಕಟುಕ) ಜನಾಂಗದ ಹದಿನೇಳು ಸಾವಿರ ಜನ ಜೈನರಾಗಿ ಮತಾಂತರಗೊಂಡರು. ಸುಮಾರು ೭೦೦ ಜನ ಸ್ಥಾನಕವಾಸಿ ಜೈನ ಮುನಿಸಂಘದ ಆಚಾರ್ಯ ಶ್ರೀ ನಾನಾಲಾಲ್ ಜೈನ್ ಅವರ ಉಪದೇಶಗಳಿಂದ ಖಟಿಕರು ಪ್ರಭಾವಿತರಾಗಿ ‘ವೀರವಾಲ್ ಜೈನ’ ರೆಂದು ಈ ಹೊಸ ಜೈವ ಸಮಾಜಮಾನ್ಯತೆ ಪಡೆದಿದೆ; ಓಸ್ವಾಲ್, ಅಗರವಾಲ್, ಖಂಡೇಲವಾಲ್, ಶ್ರೀಮಾಲ್, ವೀರಲಾಲ್ ಇವರು ರಾಜಸ್ತಾನ – ಗುಜರಾತಿನ ಜೈನರು. ಜನ್ನನ ಯಶೋಧರ ಚರಿತೆಯಲ್ಲಿ, ಹಿಂಸಾರಭಸ ಮತಿಯಾದ ಮಾರಿದತ್ತನು ಪ್ರಾಣಿವಧೆ ನಿಲ್ಲಿಸಿ ಅಹಿಂಸಾ ಸರಸ ಮತಿಯಾದ ಪುರಾಣ ಕಥೆಗೆ ಕಟುಕರು ಜೈನರಾಗಿ ಮತಾಂತರಿಸಿ ವಾಸ್ತವ ಸ್ಪರ್ಶ ಕೊಟ್ಟಿದ್ದಾರೆ.

ಬೌದ್ಧರು – ಜೈನರು ಪ್ರಾರಂಭಿಸಿದ ಈ ಹೊಸ ಜನಾಂದೋಲನಕ್ಕೆ, ವೈಚಾರಿಕ ನೆಲೆಯ ಹಾಸು ಮತ್ತು ಜನಪರ ಕಾಳಜಿಯ ತುಡಿತ ಇದ್ದುದರಿಂದ ಅದು ವ್ಯಾಪಕ ಪ್ರಮಾಣದ ಸಾಮಾಜಿಕ ಕ್ರಾಂತಿಯನ್ನು ನಡೆಸಲು ಸಾಧ್ಯವಾಯಿತು. ಭಾರತೀಯ ಚರಿತ್ರೆಯಲ್ಲಿ ಸಂಭವಿಸಿದ ಮೊತ್ತ ಮೊದಲನೆಯ ಹಾಗೂ ಪ್ರಾಚೀನತಮ ಸಾಮಾಜಿಕ ಕ್ರಾಂತಿ ಇದೇನೆ.ಇದು ಜನ ಭಾಷಾತ್ಮಾಕ ಚಳುವಳಿಯೂ ಆಗಿತ್ತು. ಏಕ ಕಾಲದಲ್ಲಿ ಜಾತಿ ಮದ ಮತ್ತು ಭಾಷಾ ಮದಗಳನ್ನು ಪ್ರತಿಭಟಿಸಲಾಯಿತು. ಜಾತೀಯ ದಬ್ಬಾಳಿಕೆಯ ಸರ್ವಾಧಿಕಾರಿ ಧೋರಣೆಯನ್ನು ಹುಡಿಗಟ್ಟಲು ಸಂಘಟಿತವಾದ ಮನ್ವಂತರದ ಹೋರಾಟಕ್ಕೆ, ಕ್ರಿ.ಪೂ. ಆರನೆಯ ಶತಮಾನದಲ್ಲಿ ಮುನ್ನುಡಿ ಬರೆಯಲಾಯಿತು. ಮಾನವ ಜನಾಂಗದ ಬೌದ್ಧಿಕ – ವೈಚಾರಿಕ ವಿಕಾಸದ ಇತಿಹಾಸದಲ್ಲಿ ಕ್ರಿ.ಪೂ. ಆರನೆಯ ಶತಮಾನ ಮಹತ್ವರು ಎನಿಸಿದೆ. ಪ್ಯಾಲಸ್ತೈನಿನಲ್ಲಿ ಇಸಯ್ಯನೂ, ಅಯೋನಿಯಾದಲ್ಲಿ ಹೆರಕ್ಲಿಟಸನೂ, ಪರ್ಷಿಯಾದಲ್ಲಿ ಜೊರಾಸ್ಟರನೂ, ಚೀನಾದಲ್ಲಿ ಕನ್‍ಫ್ಯೂಸಿಯಸನೂ ಲಾವೊ-ತ್ಸೂವೂ, ಗ್ರೀಸಿನಲ್ಲಿ ಪೈಥಾಗೊರಸನೂ- ತತ್ವಜ್ಞಾನಿ ಸೆಲೋಲನೂ ಭಾರತದಲ್ಲಿ ಬುದ್ಧನೂ-ಮಹಾವೀರನೂ -ಹೀಗೆ ಅವರವರ ದೇಶಗಳಲ್ಲಿ ಹೊಸ ಜನಪರ ಸಿದ್ಧಾಂತಗಳನ್ನು ಪ್ರತಿಪಾದಿಸಿದರು. ಸಮಸ್ತ ಜೀವರಾಶಿಗೆಲ್ಲ ಅವಕಾಶಗಳ ಸಮಾನತೆ ಮತ್ತು ವಿಶ್ವ ಭ್ರಾತೃತ್ವದ ವಿಚಾರ ಪ್ರಜ್ಞೆಯೊಂದಿಗೇನೆ ಸುಧಾರಣೆಯ ಕಾರ್ಯವನ್ನೂ ಕೈಗೆತ್ತಿಕೊಂಡರು.

ಜೀವೋ ಜೀವಸ್ಯ ಜೀವಿತಮ್ (live and let live) ಎಂಬ ಜೀವಪರ ನಿಲುಮೆಯಿಂದ, ಪರಿವರ್ತನೆಯ ಆಂದೋಲನದ ಮುಂಚೂಣಿಯಲ್ಲಿ ನಿಂತ ನೇತಾರ ಮಹಾವೀರನು ಸಾಮಾನ್ಯ ಜನರ ಹೃದಯ ಸೂರೆಗೊಂಡ ಕ್ರಾಂತಿಕಾರಿಯಾದನು. ಆತನದು ಪ್ರಾಂತೀಯ – ಪ್ರಾದೇಶಿಕ ಚಳವಳಿಯಾಗದೆ ಆದೇಶ ವ್ಯಾಪ್ತಿಯಾಗಿ ಆಸೇತು ಹಿಮಾಚಲ ಹಬ್ಬಿದ ರಾಷ್ಟ್ರೀಯ ಚಳವಳಿ. ಹಿಂದು ಆಲೋಚನೆಯ ಸರಣಿಯಲ್ಲಿ ಮಹಾವೀರನು ಕ್ರಮೇಣ ಸ್ಥಿತ್ಯಂತರದ ಮಾರ್ಪಾಟುಗಳನ್ನು ತರಲು ಸಾಧ್ಯವಾದುದಕ್ಕೆ ಒಂದು ಬಲವಾದ ಕಾರಣವೆಂದರೆ, ಮಹಾವೀರನ ಹೋರಾಟಕ್ಕೆ ಇದ್ದ ನೈತಿಕ ಅಹಿಂಸಾತ್ಮಕ ಬೆನ್ನು. ದೃಢ ವ್ಯವಸ್ಥೆಯ ಹಿಂದು ಬೆಟ್ಟವನ್ನು ಕದಲಿಸಲು ನವಜಾಗೃತಿಯ ಮತ್ತು ಜನ ಸ್ವಾತಂತ್ರ್ಯದ ಆಂದೋಲನಕ್ಕಾಗಿ, ಆಕ್ರೋಶದಿಂದ ಎದುರಾಳಿಗಳ ಮೇಲೆ ಎರಗುವುದನ್ನಾಗಲಿ, ಅಸ್ತ್ರ-ಶಸ್ತ್ರ ಸನ್ನದ್ಧ ಆಕ್ರಮಣದ ರಕ್ತಪಿಪಾಸು ಹಿಂಸಾಪಥವನ್ನಾಗಲಿ, ಹಿಂದೂ ಗುಡಿಗಳ ಮೂರ್ತಿಗಳನ್ನು ನಾಶಮಾಡುವುದನ್ನಾಗಲಿ, ಹಿಂದೂ ಗುರುಗಳ ಮತ್ತು ಸ್ತ್ರೀಯರ ಮೇಲೆ ಅತ್ಯಾಚಾರ ಮಾಡುವುದನ್ನಾಗಲಿ ಪ್ರತಿಪಾದಿಸಲಿಲ್ಲ ಎಂಬುದು ಭಾರತದ ಚರಿತ್ರೆಯಲ್ಲಿ ಗಮನಿಸಬೇಕಾದ ದೊಡ್ದ ಪಾಠ.

ತಾಳ್ಮೆಯಿಂದ ಆದರೆ ಆತ್ಮವಿಶ್ವಾಸದಿಂದ, ಹಿಂದೂ ಧರ್ಮ ವ್ಯವಸ್ಥೆಯ ವಿರುದ್ಧ ತಮ್ಮ ಆಲೋಚನೆಗಳನ್ನು ನಿರಾಯುಧರಾಗಿಯೇ ಮಹಾವೀರನ ಶ್ರಮಣ ಪರಂಪರೆ ಸ್ಥಾಪಿಸಿತು. ಅಹಿಂಸೆಯ ಕವಚತೊಟ್ಟು, ವೈಚಾರಿಕ ವಾಗ್ವಾದಗಳ ಮೂಲಕ ಹಿಂದುತ್ವದ ಓರೆಕೋರೆಗಳನ್ನು ತೋರಿಸುತ್ತ, ಜನಬಲದಿಂದ ತಮ್ಮ ಪ್ರಾಬಲ್ಯವನ್ನು ಊರ್ಜಿತಗೊಳಿಸಿದ ಜೈನತ್ವದ ಪ್ರತಿಸಂಸ್ಕೃತಿ ಮನೋಧರ್ಮವನ್ನು ವಿಜಯಗಳಿಸಿದವರು ಮಹಾತ್ಮಾಗಾಂಧೀಜಿ. ಭಾರತದ ಇತಿಹಾಸವನ್ನು ಸೂಕ್ಷ್ಮವಾಗಿ ಗಮನಿಸಿದರೆ ಒಂದಂಶ ಸ್ಪಷ್ಟವಾಗುತ್ತದೆ. ಸಿಥಿಯನರು, ಹೂಣರು, ಯವನರು, ಗ್ರೀಕರು, ಮುಸಲ್ಮಾನರು, ಬ್ರಿಟಿಷರು – ಇವೆರಲ್ಲರ ವಿರುದ್ಧ ಹಿಂದೂ ರಾಜರು ಸೋಲಲು ಮುಖ್ಯ ಕಾರಣ ಹಿಂದುತ್ವದಲ್ಲಿರುವ ಕ್ರೂರ ಜಾತಿ ವರ್ಣ ಯುದ್ಧ ಮಾಡುವುದು ಸಾಧ್ಯವಾಗಲಿಲ್ಲ. ಭಾರತೀಯ ಸೈನಿಕ ಶಕ್ತಿ ದುರ್ಬಲವಾಗಲು ಇದ್ದ ಕಾರಣಗಳಲ್ಲಿ, ಹಿಂದು ಮೂಲದ ಸಿದ್ಧಾಂತವಾದ ಸ್ವಧರ್ಮ ಪಾಲನೆಯನ್ನು ಬಲತ್ಕಾರವಾಗಿ ಹೇರಿದ್ದರಿಂದ ಯುದ್ಧ ಮಾಡಬೇಕಾಗಿದ್ದ ಕ್ಷತ್ರಿಯರು, ಯುದ್ಧಗಳಿ ಗಾಗಿ ಆರ್ಥಿಕ ನೆರವು ನೀಡಬೇಕಾಗಿದ್ದ ವೈಶ್ಯರು, ಸಮಾಜದ ಇತರ ಜಾತಿಗಳವರಿಗೆಲ್ಲ ತಮ್ಮ ಚಾಕರಿ ಸೇವೆ ಸಲ್ಲಿಸಬೇಕಾಗಿದ್ದ ಶೂದ್ರ ಅಸ್ಪೃಶ್ಯರು – ಇವರು, ಇವರ ಮೇಲೆ ಹೇರಲಾಗಿದ್ದ ‘ಸ್ವಧರ್ಮ’ ವನ್ನು ಸಂತೋಷದಿಂದಾಗಲಿ, ಸಹಜ ಸ್ಫೂರ್ತಿಯಿಂದಾಗಲಿ ಪಾಲಿಸಲಿಲ್ಲ. ಇಲ್ಲಿ ಎದ್ದು ಕಾಣುವ ಸ್ವಾರಸ್ಯವಾದ ವೈರುಧ್ಯವೆಂದರೆ, ಇದಕ್ಕೆ ತದ್ವಿರುದ್ಧವಾಗಿ ಅಹಿಂಸಾಧಾರಿತ ಚಳುವಳಿಗೆ ದೊರೆತ ಸ್ವಾತಂತ್ರ್ಯದ ವಿಜಯ.

ನಮ್ಮ ಕಾಲದಲ್ಲಿ ಸಂಭವಿಸಿದ ಅದ್ಭುತ ಜಯವಾದ ಸ್ವಾತಂತ್ರ್ಯ ಪ್ರಾಪ್ತಿಯ ಹೋರಾಟದ ಹಂತಗಳನ್ನು ವಸ್ತುನಿಷ್ಠವಾಗಿ ಪರಿಭಾವಿಸಬೇಕು. ಅಹಿಂಸಾ ಸಿದ್ಧಾಂತವನ್ನೇ ಪಟ್ಟಾಗಿ ಹಿಡಿದು, ಮಹಾತ್ಮಾಗಾಂಧೀಜಿಯವರು ಹಿಂಸಾಧಾರಿತ ಯುದ್ಧಗಳಿಂದ ಅಸಾಧ್ಯವಾಗಿದ್ದ ಗೆಲುವನ್ನು ಗಳಿಸಿದರು. ಇನ್ನೂ ಸ್ವಾರಸ್ಯವೆಂದರೆ ಬಾಪೂಜಿಯವರು ಕೈಗೆತ್ತಿಕೊಂಡ ಈ ಅಹಿಂಸಾತ್ಮಕ ರಾಷ್ಟ್ರೀಯ ಚಳುವಳಿಯಲ್ಲಿ ಹಿಂದೂಧರ್ಮ ಪ್ರತಿಪಾದಿಸಿದ ಜಾತಿ-ಲಿಂಗ ಆಧಾರಿತ ಸ್ಚಧರ್ಮ ಪಾಲನೆಗೆ ತಿಲಾಂಜಲಿ ಕೊಡಲಾಯಿತಿ. ಈ ಅಪೂರ್ವ ಅಹಿಂಸಾತ್ಮಕ ಆಂದೋಲನದಲ್ಲಿ ಎಲ್ಲ ಜಾತಿ ವರ್ಣವರ್ಗಗಳವರಲ್ಲೂ ಭ್ರಾತೃತ್ವ ಶಾಂತಿ ಸೌಹಾರ್ದಗಳು ಸಾಧ್ಯವಾಯಿತು. ಅಹಿಂಸೆಯ ಮಹಾಸತ್ವದ ವಿರಾಡ್ ರೂಪವು ಅಂತಿಮ ಜಯ ಪಡೆದದ್ದು ಮಾತ್ರವಲ್ಲದೆ ಇಡೀ ಜಗತ್ತಿನ ಪ್ರಶಂಸೆಗೂ ಪಾತ್ರವಾಯಿತು. ಜಗತ್ತಿನಲ್ಲಿ ಅತ್ಯಂತ ಪ್ರಬಲವಾದದ್ದು ಮಾರಕಾಶಾಸ್ತ್ರಗಳಿಗಿಂತ ಶಕ್ತಿಶಾಲಿಯಾದದ್ದು ಅಹಿಂಸೆಯೇ ಎಂಬ ಸಾರ್ವಕಾಲಿಕ ಸತ್ಯವೊಂದು ಸ್ಥಾಪಿತವಾಯಿತು.

ಆರ್ಯರ ಅಗಮನಕ್ಕು ಮೊದಲಿನಿಂದ ಇದ್ದು, ಇಂದಿಗೂ ಉಳಿದು ಬಂದಿರುವ ಭಾರತದ ಮೂಲ ಧರ್ಮ ಮತ್ತು ಮೂಲ ಸಮಾಜ ಜೈನರದು. ಅಹಿಂಸೆ ಮತ್ತು ಶಾಂತ ಸ್ವಭಾವದ ಶ್ರಮಣ ಧರ್ಮೋಪಾಸಕರು ಅಜೀವಕರು, ಬೌದ್ಧರು ಮತ್ತು ಜೈನರು. ಆರ್ಯರು ಯುದ್ಧ ಸ್ವಭಾವದವರು, ಗೋವು ಅವರ ಸಾಕು ಪ್ರಾಣಿ, ಬೌದ್ಧರು-ಜೈನರು ಮತ್ತು ಅಸ್ಪೃಶ್ಯರು ದ್ರಾವಿಡರು, ಎಮ್ಮೆ ಇವರ ಸಾಕು ಪ್ರಾಣಿ. ಆರ್ಯರು ಅಸ್ಪೃಶ್ಯರು ಕೀಳಾಗಿ ಕಾಣಲು, ಜೈನತ್ವದಲ್ಲಿ ಅಸ್ಪೃಶ್ಯರನ್ನು ಆಲಿಂಗಿಸಿ ಕೊಳ್ಳಲು ಈ ಬಗೆಯ ಹಿನ್ನೆಲೆಗಳೂ ಕಾರಣವಾಗಿದ್ದಿರಬಹುದು. ಇಂಥ ಒಳನೋಟ ಗಳಿಂದ ಅಧ್ಯಯನವನ್ನು ಇನ್ನೂ ಆಳಕ್ಕೆ ಕೊಂಡೊಯ್ಯಲು ಅವಕಾಶಗಳಿವೆ.

ಮಹಾವೀರ, ಬುದ್ಧ, ಬಸವಣ್ಣ ಮೊದಲಾದ ಮಾನವತಾವಾದಿಗಳು ತೋರಿದ ಬೆಳಕಿನ ಹಾದಿಯಲ್ಲಿ ಮಹಾತ್ಮರುಗಳಾದ ಗುರುನಾನಕ್ರು, ಸಂತಕಬೀರರು, (ಮಹಾನುಭಾವ ಪಂಥ ಮತ್ತು ಅದರ ಚಾಲಕ ಶಕ್ತಿ) ಚಕ್ರಧರರು, ಸಂತ ಶ್ರೇಷ್ಠರಾದ ಜ್ಞಾನೇಶ್ವರರು, ಮಹಾಜ್ಞಾನಿ ನಾಮದೇವರು, ಭಕ್ತ ಗೋರಾ, ಸಂತ ತುಕಾರಾಮರು, ಆತ್ಮಜ್ಞಾನ ಶಿಶುನಾಳ ಷರೀಫರು, ಸ್ವಾಮಿ ವಿವೇಕಾನಂದರು, ಸಂತ ನಾರಾಯಣ ಗುರೂಜಿಯವರು – ಹೀಗೆ ಒಂದು ಸಾಧು – ಸಂತರ ಪರಂಪರೆಯೇ ಅಸ್ಪೃಶ್ಯರಿಗೆ ಸಮಾನ ಅವಕಾಶಗಳಿಗಾಗಿ ಶ್ರಮಿಸಿದೆ. ಇಂತಹವರ ಹೃದಯವಂತಿಕೆಯಿಂದ ಬ್ರಿಟಿಷರ ಕಾಲದಿಂದೀಚೆಗೆ ದೊರೆತ ಶಿಕ್ಷಣ ಸೌಲಭ್ಯದಿಮ್ದ ಅಸ್ಪೃಶ್ಯರನ್ನು ಕುರಿತು ೨೦ ನೆಯ ಶತಮಾನದವರೆಗೆ ಇದ್ದ ಧೋರಣೆಯಲ್ಲಿ ಬದಲಾವಣೆಗಳಾಗಿವೆ. ಜ್ಯೋತಿಬಾಪುಲೆ, ಡಾ. ಬಿ. ಆರ್. ಅಂಬೇಡ್ಕರ್ ಅಂತಹವರ ನಿರಂತರ ಪ್ರಯತ್ನಗಳು ಈ ದಿಕ್ಕಿನಲ್ಲಿ ಸಂಘಟನೆಗೆ ಶಕ್ತಿವರ್ಧಕಗಳು.

ಹಿಂದೂ ಸಂಘಟನೆಗಳೇ ಆದ ಆರ್. ಎಸ್.ಎಸ್., ಬಿ.ಜೆ.ಪಿ., ಮತ್ತು ವಿ.ಹೆಚ್.ಪಿ. – ಮೊದಲಾದ ಪಕ್ಷಗಳಲ್ಲೂ, ಹೊಸಕಾಲದ ಅಪೇಕ್ಷೆ ಅಗತ್ಯಗಳಿಗೆ ಅನುಗುಣವಾಗಿ, ಹಿಂದೂ ಧರ್ಮವನ್ನು ಪುನರಿಜ್ಜೀವಿಸಿ ಪುನರುತ್ಥಾನಿಸುವ ಪ್ರೇರಣೆಅಳು ಹುರಿಗೊಳ್ಳುತ್ತಿವೆ. ಇದು ಆರೋಗ್ಯಕರವಾದ ಹೊಸ ಸಮಾಜ ರಚನೆಗೆ ನಾಂದಿಯಾಗಲೂಬಹುದು. ಇತ್ತೀಚೆಗೆ ಬಿ.ಜೆ.ಪಿ. ಪಕ್ಷದಲ್ಲಿ ಮುಸಲ್ಮಾನರೂ ಅಸ್ಪೃಶ್ಯರೂ ಅಧಿಕ ಸಂಖ್ಯೆಯಲ್ಲಿ ಸೇರುತ್ತಿರುವುದನ್ನೂ ಇಲ್ಲಿ ಉಲ್ಲೇಖಿಸಬಹುದು. “ಹಿಂದೂಗಳು, ಸತ್ತುಹೋದ ಒಂದು ಜಗತ್ತು ಮತ್ತು ಜನ್ಮ ತಳೆಯಲು ಶಕ್ತಿಯಿಲ್ಲದ ಇನ್ನೊಂದು ಜಗತ್ತು – ಇವೆರಡರ ನಡುವೆ ಎಡತಾಕುತ್ತಿದ್ದಾರೆ” ಎಂಬ ಮ್ಯಾಥ್ಯೂ ಆರ್ನಾಲ್ಡನ ಮಾತನ್ನು ಹುಸಿಗೊಳಿಸುವುದರ ಮೂಲಕವೇ ಹಿಂದೂತ್ವಕ್ಕೆ ಅಮೃತತ್ವವನ್ನು ಕೊಡಲು ಸಾಧ್ಯ. ಈ ದಿಕ್ಕಿನ ಪ್ರಯತ್ನಗಳು ಹುರಿಗೊಳ್ಳಲು ಜೈನತ್ವದ ಪ್ರತಿ ಸಂಸ್ಕೃತಿಯ ನಿರ್ಮಾಣದಲ್ಲಿ ಅಸ್ಪೃಶ್ಯರು ಪಡೆದುಕೊಂಡ ಉನ್ನತಿಕೆಯ ಉತ್ಥಾನಪಾದವನ್ನು ಒಂದು ಅನುಕರಣ ಯೋಗ್ಯ ಮಾದರಿಯಾಗಿ ಅಳವಡಿಸಿಕೊಳ್ಳಬೇಕು; ಅದಕ್ಕಾಗಿ ಮೊದಲು ಮಾಡಬೇಕಾದ ತ್ಯಾಗ ಜಾತಿಯ ಮದವನ್ನು ತ್ಯಜಿಸುವುದು: Pride of Cast has never made any man Holy, but the untouchables have crossed the ocean of life by devotion to God [R.C. Zaehner 1975 : 144].

ಈ ಸಂಪ್ರವಂಧವನ್ನು ಬರೆದು ಮುಗಿಸುವಾಗ ಈ ವಾರದ ‘ಸುಧಾ’ ಪತ್ರಿಕೆಯಲ್ಲಿ ಶ್ರೀ ಕಲ್ಲಿನಾಥ ಮಾಧವನವರು (ಬಿಜಾಪುರ) ಬರೆದಿರುವ ಲೇಖನದ ಕೆಲವು ವಾಕ್ಯಗಳು ಈ ಸಂಪ್ರಬಂಧದ ಅಭಿಪ್ರಾಯಕ್ಕೆ ಅನುಗುಣವಾಗಿರುವುದು ಕಂಡು ಬಂದಿದೆ : “ಹಿಂದೂ ಸಮಾಜದಲ್ಲಿ ಐಕ್ಯಮತ್ಯ ಅಥವಾ ಸಹಬಾಳ್ವೆಯಿಂದ ಕೂಡಿದ ಒಗ್ಗಟ್ಟು ಇದ್ದಿದ್ದರೆ ಹೂಣರು ಕುಶಾನರು ಮುಸಲ್ಮಾನರು ಫ್ರೆಂಚರು ಬ್ರಿಟಿಷರು ಭಾರತವನ್ನು ಗುಲಾಮಗಿರಿಗೊಳಪಡಿಸಿ ಆಳಲು ಸಾಧ್ಯವಾಗುತ್ತಿರಲಿಲ್ಲ. ಸಾವಿರಾರು ವರ್ಷಗಳಿಂದ ದಲಿತರು ಶೋಷಣೆಗೆ ಒಳಗಾಗಿರುವುದರಲ್ಲಿ ಹಿಂದೂ ಸಂಸ್ಕೃತಿ ಮತ್ತು ಧರ್ಮದ ಪಾಲು ಕಡಿಮೆಯದಲ್ಲ. ಜಾತಿ ಪದ್ಧತಿ ಎಲ್ಲಾ ಮತಗಳಲ್ಲಿಯೂ ಇಲ್ಲ. ಈ ಜಾತಿ ಪದ್ಧತಿ ಶೋಷಣೆಗಾಗಿ ಹುಟ್ಟಿದೆಯೇ ಹೊರತು ಆಂತರಿಕ ಭಿನ್ನಾಭಿಪ್ರಾಯಗಳಿಂದ ಅಲ್ಲ. ಕರ್ಣ ಏಕಲವ್ಯರಂಥವರು ಜಾತಿ ಕಾರಣದಿಂದ ಘೋರ ಅನ್ಯಾಯಕ್ಕೊಳಗಾಗಿದ್ದಾರೆ. ಇಂದಿನ ದಿನಗಲಲ್ಲಿ ಸಹ ಶೃಂಗೇರಿ ಸ್ವಾಮೀಜಿಯವರು ದಲಿತರಿಗೆ ವೇದಾಧ್ಯಯನ ಮಾಡಲು ಶಾಸ್ತ್ರಗಳ ವಿರೋಧವಿದೆ ಎಂದು ಹೇಳಿದ್ದಾರೆ” [ಸುಧಾ : ೨೪-೧೦-೯೩, ಪುಟ. ೯].

ಜಾತಿ ಪದ್ಧತಿಯು ಹಿಂದುತ್ವದ ಕೇಂದ್ರ ಪ್ರಜ್ಞೆಯಾಗಿರುವುದರಿಂದ, ಜಾತಿ ವಿನಾಶವಾದರೆ ಹಿಂದೂ ಧರ್ಮವೂ ಕಣ್ಮರೆಯಾಗುತ್ತದೆಂಬುದು ಪ್ರಸಿದ್ಧ ಸಮಾಜ ವಿಜ್ಞಾನಿ ಎಂ. ಎನ್. ಶ್ರೀನಿವಾಸರ ಅಭಿಪ್ರಾಯ [೧೯೫೬ : ೪೯೫]. ಬಾಲ್ಷೆವಿಷ್ಟರು, ಕಮ್ಯೂನಿಷ್ಟರು ಮೊದಲಾದ ಎಲ್ಲ ತೀವ್ರಗಾಮಿ ಚಳವಳಿಗಾರರನ್ನು ವಿರೋಧಿಸಲು ಇಟಲಿಯಲ್ಲಿ, ಮಹಾಯುದ್ಧಕಾಲದಲ್ಲಿ (೧೯೧೯) ಏರ್ಪಟ್ಟು, ಸಿನ್ಸಾರ್ ಮುಸಲೋನಿಯಾ ನೇತೃತ್ವದಲ್ಲಿ ಬೆಳೆದ ಸರ್ವಾಧಿಕಾರ ತತ್ವವಾದ ಫ್ಯಾಸಿಸಮ್ ಸಿದ್ಧಾಂತಕ್ಕೆ ಆರ್ಯರು ಪ್ರತಿಪಾದಿಸಿದ ಈ ಜಾತಿ ಪದ್ಧತಿಯೇ ಸ್ಫೂರ್ತಿಯೆಂದು ಮಹಾನ್ ಚಿಂತಕರಾದ ಎಂ. ಎನ್. ರಾಯ್ ಪ್ರತಿಪಾದಿಸಿದ್ದಾರೆ [ಫ್ಯಾಸಿಸಮ್ : ೪೦]. ಈ ಬಗೆಯ ಮತ್ತು ಇದಕ್ಕೆ ಪೂರಕವಾದ ನೂರಾರು ಅಭಿಪ್ರಾಯಗಳು ಪ್ರಚಲಿತವಾಗಿವೆ. ಇವೆಲ್ಲದರ ಸಾರಾಂಶವೂ, ಹಿಂದುತ್ವದ ಒಂದು ದುರ್ಬಲ ಭಾಗವನ್ನು ಸರಿಪಡಿಸಿಕೊಳ್ಳುವುದರ ಅಗತ್ಯವಿದೆಯೆಂಬುದು. ಬುದ್ಧ – ಮಹಾವೀರರಿಂದ ಹಿಡಿದು ಇಂದಿನ ಅಂಬೇಡ್ಕರರವರೆಗೆ ಇದೇ ದಿಕ್ಕಿನ ಕೊಡಬೇಕಾದ ಅಂಶವನ್ನು ಪ್ರತಿಪಾದಿಸಲಾಗಿದೆ.

ಆಕರಗಳು
Ambedkar Dr.B.R. 1. Caste in India.XLI, (೧೯೭೧)

2. Annhilatione of Cast (1975)

3. Who were the Shudras (1970)

Hutton J.H. Caste in India, Oxford (1963)
Lannoy, Richard Speaking Tree, Oxford (1975)
Louis Dumont HomoHierarchicus, Chicago (1970)
Jaini P.S. The Jaina Path of Purification California, Berkeley (1979)
Jayawickrama N.A. ed. BuddhavamsaanoCariyapitaka, PaliTextSociety (1974)
Kamala Hampana Attimabbe and Chaukyas (1995)
Roy M.N. Facism
Srinivasa M.N. A Note on Sanskritisation and Westernisation, Far East Qtly, 15(1956)
Upadhye Papers MysoreUniversity, Mysore (1983)
Williams R. Jaina Yoga, A Survey of the Medieaval Sravakacaras, London (1963)
Xaehner R.C. Hinuism, Oxford (1975)
ಡಾ. ಬಾಬಾಸಾಹೇಬ್ ಅಂಬೇಡ್ಕರ್ ಬರಹಗಳು ಮತ್ತು ಭಾಷಣಗಳು : ಕರ್ನಾಟಕ ಸರ್ಕಾರ, ಬೆಂಗಳೂರು (೧೯೯೦)
ಡಾ. ಕಮಲಾ ಹಂಪನಾ i. ಜಾತಿ ನಿರ್ಮೂಲನೆ (ಅನುವಾದ) ಮೂಲ, ಡಾ. ಅಂಬೇಡ್ಕರ್ (೧೯೮೫)

ii. ಭಾರತದಲ್ಲಿ ಜಾತಿಗಳು (ಅನುವಾದ) (೧೯೯೦)

ಡಾ. ಮ. ನ. ಜವರಯ್ಯ ಅಂಬೇಡ್ಕರ್ ವಿಚಾರ ಸಾಹಿತ್ಯ ಮೈಸೂರು (೧೯೯೧)

ದಲಿತ ವರ್ಗದ ಶರಣರು : ಒಂದು ಅಧ್ಯಯನ (೧೯೯೦)

ಡಾ. ಬಿ. ಎಸ್. ಕುಲಕರ್ಣಿ (ಸಂ) ಸಮಯ ಪರೀಕ್ಷೆ, ಧಾರವಾಡ, ೧೯೫೭
ಡಾ. ಹಂಪ. ನಾಗರಾಜಯ್ಯ (ಸಂ) ವಡ್ದಾರಾಧನೆ, ಬೆಂಗಳೂರು ವಿಶ್ವವಿದ್ಯಾಲಯ (೧೯೯೩)

ಯಕ್ಷಯಕ್ಷಿಯರು, ಬೆಂಗಳೂರು (೧೯೭೬)

ವೀರಜಿನೇಂದ್ರ ಚರಿತೆ, ಬೆಂಗಳೂರು (೧೯೭೫)

(ಸಂ) ಪೊನ್ನನ ಶಾಂತಿ ಪುರಾಣಂ, (೧೯೮೧)

ಬೆಂಗಳೂರು