ಸಾಮಾನ್ಯವಾಗಿ, ಶೈವಶಾಸನಗಳು ಶಿವನ ಸ್ತುತಿಯಿಂದಲೂ, ವೈಷ್ಣವ ಶಾಸನಗಳು ವಿಷ್ಣುವಿನ ಪರವಾದ ಸ್ತುತಿಯಿಂದಲೂ, ಜೈನಶಾಸನಗಳು ಜಿನನಸ್ತುತಿಯಿಂದಲೂ ಪ್ರಾರಂಭವಾಗುತ್ತವೆ.. ಅವುಗಳಲ್ಲಿ ಜೈನಶಾಸನಗಳ ಪ್ರಾರಂಭದ ಪ್ರಾರ್ಥನಾ ಪದ್ಯಗಳನ್ನು ಪರಿಶೀಲಿಸುವುದು ಈ ಸಂಪ್ರಬಂಧದ ಉದ್ದೇಶ.

೧. ನೂರಾರು ಜೈನ ಶಾಸನಗಳ ಆರಂಭದಲ್ಲಿ ಕಂಡು ಬರುವ ಬಹು ರೂಢಿಯ ಪ್ರಾರ್ಥನಾ ಪದ್ಯವಿದು:

            ಶ್ರೀಮತ್ಪರಪಮ ಗಂಭೀರ ಸ್ಯಾದ್ವಾದಾಮೋಘಲಾಂಚ್ಛನಂ
ಜೀಯಾತ್ರೈಲೋಕ್ಯ ನಾಥಸ್ಯ ಶಾಸನಂ ಜಿನಶಾಸನಂ
||
                                                [ಎ.ಕ.೨ (ಪ.) ೧೭೬ (೧೪೩) ೧೧೩೧. ಶ್ರವಣ ಬೆಳಗೊಳ]

ಈ ಸಂಸ್ಕೃತ ಶ್ಲೋಕವನ್ನು ಪ್ರಸಿದ್ಧ ಜೈನಾಚಾರ್ಯರಾದ ಅಕಳಂಕರ (೭ಶ.) ಪ್ರಮಾಣ ಸಂಗ್ರಹದಿಂದ ತೆಗೆದುಕೊಳ್ಳಲಾಗಿದೆ. ಮೂರುಲೋಕಗಳಿಗೂ ಒಡೆಯನಾದ ತೀರ್ಥಂಕರ ಸ್ವಾಮಿಯಿಂದ ಪ್ರಣೀತವಾದ, ಪರಮ ಗಂಭೀರ ಸ್ವಾದ್ಯಾದದ ಅಮೋಘ ಲಾಂಛನವನ್ನು ಹೊಂದಿರುವ ಜಿನಶಾಸನವು ಗೆಲುವನ್ನು ಪಡೆಯಲಿ- ಎಂಬುದು ಈ ಶ್ಲೋಕದ ಸಾರಾಂಶ.

೨. ಕೆಲವು ಜೈನ ಶಾಸನಗಳ ಮೊದಲಲ್ಲಿ, ಉದಾಹರಣೆಗೆ, ಪಂಪಕವಿಯ ತಮ್ಮನಾದ ಜಿನವಲ್ಲಭನು ಸುಮಾರು ೯೫೦ ರಲ್ಲಿ ಬರೆಸಿದ ಗಂಗಾಧರಂ ಶಾಸನದ ಆರಂಭದಲ್ಲಿ, ಓಂ ನಮಃ ಸಿದ್ಧೇಭ್ಯಃ – ಎಂದು ಇದೆ. ಪಂಚ ಪರಮೇಷ್ಠಿಗಳಲ್ಲಿ ಒಬ್ಬರಾದ ಸಿದ್ಧಪರಮೇಷ್ಠಿಯು ಕರ್ಮಗಳನ್ನು ಪೂರ್ಣವಾಗಿ ನಾಶಗೊಳಿಸಿದವರು. ಅರ್ಹಂತ (ಜಿನ-ತೀರ್ಥಂಕರ)ರಿಗಿಂತಲೂ ಮೊದಲು ಮುಕ್ತಿ ಪಡೆದವರು. ಅಂತಹ ಸಿದ್ಧರಿಗೆ ನಮಸ್ಕಾರಗಳು ಎಂಬುದಾಗಿ ಶಾಸನಾರಂಭದಲ್ಲಿ ಭಕ್ತಿಯಿಂದ ನಮನಗಳನ್ನು ನಿವೇದಿಸಲಾಗಿದೆ. ಅಲ್ಲದೆ ಇನ್ನೂ ಕೆಲವು ಶಾಸನಗಳ ಆರಂಭದಲ್ಲಿ, ಶುಭ ಸೂಚಕ ಮಂಗಳಶಬ್ಧವಾಗಿ, ಕೇವಲ ‘ಸಿದ್ಧಂ’ ಎಂದಷ್ಟೇ ಹೇಳುವುದುಂಟು: ಸಿದ್ಧಂ ನೆಱೆದಾದ ವ್ರತಶೀಲ ನೋನ್ಪಿಗುಣದಿಂ … ನೋನ್ತು [ಎ.ಕ. ೩(ಪ.) ೮೬.೭ ಶ.] ಬನವಾಸಿಯ ಆದಿಕದಂಬರ ಮೃಗೇಶ ವರ್ಮನ (೪೫೫ಔ೮೦) ದೇವಗಿರಿ ತಾಮ್ರ ಶಾಸನದ ಆರಂಭದಲ್ಲಿಯೂ ‘ಸಿದ್ಧಮ್’ ಎಂದಿದೆ; ಇದು ಕ್ರಿ.ಶ. ೪೫೮ ರ ಅತ್ಯಂತ ಪ್ರಾಚೀನವಾದ ಶಾಸವೆಂಬುದು ಗಮನಾರ್ಹ [ಜೆಬಿಬಿಆರ್‌ಎಸ್ ೧೨.; ೧. ಎ. ೭.; ಬನವಾಸಿಯ ಕದಂಬರು (೧೯೮೩). ೮ ಕ್ರಿ. ಶ. ೪೫೮. ಪು. ೧೬-೧೭ : ಸಿಕೆಐ (೧೯೮೫). ೯ ಪು. ೩೪-೩೮]. ಇದೇ ಆದಿ ಕದಂಬರ ಹರಿವರ್ಮನ (೫೧೯-೩೦) ಹಲಸಿ ಶಾಸನವೂ ಸಿದ್ಧಮ್ ಎಂದು ಪ್ರಾರಂಭವಾಗಿದೆ [ಸಿ.ಕೆ.ಐ. (೧೯೮೫). ೨೯. ಕ್ರಿ.ಶ. ೫೨೩. ಪು. ೧೦೭; ಜೆಬಿಬಿಆರ್‌ಎಎಸ್ ೯.; ಇ.ಆ.೬]. ಆದರೆ ಈ ಉದಾಹರಣೆಗಳ ಆಧಾರದಿಂದ ಸಿದ್ಧಂ- ಸಿದ್ಧಮ್ ಎಂದು ಆರಂಭವಾಗುವ ಶಾಸನಗಳೆಲ್ಲ ಜೈನಶಾಸನಗಳೆಂದು ತೀರ್ಮಾನಿಸು ವುದು ತಪ್ಪಾಗುತ್ತದೆ. ಏಕೆಂದರೆ ಹಿಂದೂ, ಮತ್ತು ಬೌದ್ಧ ಶಾಸನಗಳಲ್ಲಿಯೂ ಈ ಬಗೆಯ ಆರಂಭ ಬಳಕೆಯಾಗಿದೆ. ಶಿವಸ್ಕಂದವರ್ಮನ (೪ ಶ.) ಮಳವಳ್ಳಿ ಶಾಸನದ ಮೊದಲಲ್ಲಿ ಸಿದ್ಧಮ್ ಎಂದಿದೆ [ಸಿಕೆಐ(೧೯೮೫).೧.೪ ಶ. ಪು. ೩; ಎ.ಕ.೭, ಎಸ್‍ಕೆ. ೨೮೪]. ಬೌದ್ಧ ಧರ್ಮಸಂಬಂಧವಿರುವ ತಾಮ್ರಪಟ ವಾದ, ಕದಂಬರ ರವಿವರ್ಮನ ದಾವಣಗೆರೆ ಶಾಸನವೂ ಸಿದ್ಧಮ್ ಎಂದೇ ಮೊದಲಾಗಿದೆ [ಸಿಕೈ (೧೯೮೫).೨೦.೫೨೪. ಪು. ೭೦; ಮೈಆರಿ ೧೯೩೩; ಎ.ಇ.೩೩, ಪು. ೮೭]. ಸಿದ್ಧಂ ಶಬ್ದದ ಪಕ್ಕದಲ್ಲಿ ಸ್ವಸ್ತಿಕ, ಕಮಲ, ಪಾದ, ಶಂಖಮೊದಲಾದ ಚಿಹ್ನೆಗಳನ್ನು ಶಾಸನಗಳಲ್ಲಿ ಕೆತ್ತಲಾಗಿದೆ. ಹೀಗಾಗಿ ಸಿದ್ಧಂ- ಎಂಬುದನ್ನು ಜಾತ್ಯಾತೀತವಾದ ಮಂಗಳವಾಚಕವೆಂದು ಪರಿಗಣಿಸಬೇಕು. ಆದರೆ ಓಂ ನಮಃ ಸಿದ್ಧೇಭ್ಯ :- ಎಂಬುದು ಜೈನಪರವಾದ ಮಾತಾಗಿದೆ.

3. ಮೇಲಿನ ಮಾದರಿಗೆ ಸೇರಿದ ಮತ್ತೆ ಕೆಲವು ಶಾಸನಗಳಲ್ಲಿ ‘ಓಂ’ ಶಬ್ದವನ್ನು ಉಪಯೋಗಿಸದೆ ಕೇವಲ ‘ನಮಃ ಸಿದ್ಧೇಭ್ಯಃ’ ಎಂದಷ್ಟೇ, ಪುಂಜ ವಿಡುವಂತೆ, ಶಾಸನಾರಂಭದಲ್ಲಿ ಬಳಸಲಾಗಿದೆ [ಸೌ.ಇ.ಇ. ೯-೧, ೩೪೬ ಮತ್ತು ೩೪೭. ೧೨೭೫-೭೬. ಕೋಗಳಿ (ಬಳ್ಳಾರಿಜಿ / ಹಡಗಲಿತಾ) ಪು. ೩೬೯-೭೦]. ಕೆಲವು ಶಾಸನಗಳಲ್ಲಿ ‘ನಮಃ ಸಿದ್ಧೇಭ್ಯಃ ಭದ್ರಂ ಭೂಯತಾ’ ಎಂಬ ಆರಂಭ ಕಂಡುಬಂದಿದೆ [ಸೌ.ಇ.ಇ. ೨೦, ೪೬.೧೦೭೨. ಗುಡಿಗೇರಿ(ಧಾ ಜಿ / ಶಿರಹಟ್ಟಿ ತಾ)]. ಇದರ ಉತ್ತರಾರ್ಧ ಭಾಗವಾದ ಭದ್ರಂ ಭೂಯತಾ ಎಂಬುದು ಒಂದು ವಾಕ್ಯವೇಷ್ಟನವಾಗಿದೆ. ಏಕೆಂದರೆ ಇದು ಇನ್ನೊಂದು ಸಂಸ್ಕೃತ ಜಿನಸ್ತುತಿ ಶ್ಲೋಕದ ಆರಂಭವಾಗಿದೆ.

4. ಕೆಲವು ಶಾಸನಗಳಲ್ಲಿ ‘ಭದ್ರಮಸ್ತು ಜಿನಸಾಸನಾಯ’ ಎಂದಷ್ಟೇ ಇದೆ [ಎ.ಕ.೬, ಚಿಕ್ಕಮ. ೭೫. ಕಡವಂತಿ. ಪು, ೧೮೫; ಸೌ.ಇ.ಇ. ೧೧-೧. ೯೪.೧೦೫೯. ದಂಬಳ (ಧಾಜಿ / ಮುಂಡರಗಿ ತಾ) ಪು. ೮೯]. ಕೂಡ ಒಂದು ಪೂರ್ತಿ ಸಂಸ್ಕೃತ ಶ್ಲೋಕದ ತುಣುಕಾಗಿದ್ದು, ಕೆಲವು ಶಾಸನಗಳಲ್ಲಿ ಆ ಪೂರ್ತಿಶ್ಲೋಕವನ್ನೇ ಬಳಸಲಾಗಿದೆ: ಭದ್ರಮಸ್ತು ಜಿನಶಾಸನಾಯ ಸಂಪದ್ಯತಾ ಪ್ರತಿವಿಧಾನ ಹೇತವೇ

ಅನ್ಯವಾದಿಮದಹಸ್ತಿ ಮಸ್ತಕ ಸ್ಫ(ಸ್ಪೋ)ಟನಾಯಘಟನೇ ಪಠಿ(ಟೀ)ಯಸೇ |

[ಎ.ಕ.೭(ಪ.) ಮದ್ದೂರು ೫೪ (೧೧೧ ಮವ ೩೧). ೧೧೧೭ ತಿಪ್ಪೂರು (ಮಂಡ್ಯ ಜಿ/ ಮದ್ದೂರು ತಾ) ಪು. ೨೮೨ ಎ.ಕ.೨(ಪ.) ೭೯ ೧೨ ಶ. ಪು. ೫೫; ಅದೇ ೮೨ (೭೩) ೧೧೧೮. ಪು ೬೪. ಇತ್ಯಾದಿ]. ಈ ರಥೋದ್ಧತ ಶ್ಲೋಕದ ಸಾರಾಂಶ : ಯಾವ ಜಿನ ಶಾಸನವು ಅದರ ಪಾಲಕರ ಸ್ವರಕ್ಷಣೆಗೆ ಮೂಲವಾಗಿದೆಯೊ ಮತ್ತು ಪರಮತಗಳೆಂಬ ಮದಿಸಿದ ಆನೆಗಳ ತಲೆಗಳನ್ನು ಪುಡಿಗುಟ್ಟಲು ಸಮರ್ಥವಾಗಿದೆಯೊ ಅಂತಹ ಜಿನ ಶಾಸನಕ್ಕೆ ಜಯವಾಗಲಿ. ಈ ಪದ್ಯಕ್ಕೆ ಒಂದು ಶಾಸನದಲ್ಲಿ ‘ಸಂಪದ್ಯತಾಂ’ ಎಂಬ ಶಬ್ಧದ ಬದಲಿಗೆ ‘ಸಂಭದ್ರತಾಂ’ ಎಂಬ ಪಾಠಭೇದವಿದೆ [ಸೌ.ಇ.ಇ. ೯-೧, ೨೨೧.೧೧-೧೨ ಶ. ತೊಗರ ಕುಂಟ (ಆಂಧ್ರ ಅನಂತ ಪುರಜಿ / ಧರ್ಮವರಂ ತಾ) ಪುಯ್. ೨೨೪. ಸಾಲು : ೫-೬]

೫. ಭದ್ರಮಸ್ತು ಜಿನಶಾಸನಾಯ ಎಂಬುದರ ಬದಲು ಭದ್ರಮಸ್ತು ಜಿನಶಾಸನಸ್ಯ ಎಂದೂ ಶಾಸನಗಳಲ್ಲುಂಟು [ಎ.ಕ ೨(ಪ.) ೧೫೫(೧೨೬)೧೧೧೩. ಪು. ೯೦].

೬.         ಭದ್ರಂ ಭೂಯಾಜ್ಜಿನೇನ್ದ್ರಾಣಾಂ ಶಾಸನಾಯಾಘನಶಿನೇ
ಕುತೀರ್ತ್ಥಧಾನ್ತ ಸಂಘಾತ ಪ್ರಭಿನ್ನ ಘನ ಭಾನವೇ
||
            ಎಂಬೀ ಶ್ಲೋಕವೂ ಹಲವಾರು ಶಾಸನಗಳಿಗೆ ಮುಡಿಯ ಮಾನಿಕ್ಯವಾಗಿದೆ

[ಸೌ.ಇ.ಇ.೨೦, ೩೨.೧೦೪೫. ಕುಯಿದಾಳ್ (ಧಾಜಿ/ಕುಂದಗೋಳತಾ); ಎ.ಕ.೨(ಪ.) ೭೧ (೬೪) ೧೧೬೩. ಪು. ೨೬-೨೭; ಅದೇ. ೧೫೬(೧೨೭)೧೧೧೫. ಪು. ೯೩.; Inscriptions from Nanded Disrict, ನಂ. ೮. ಪು. ೧೮. ಇತ್ಯಾದಿ]. ಪಾಪಗಳನ್ನು ಹೋಗಲಾಡಿಸುವಂತಹುದೂ, ಅನ್ಯಸಿದ್ಧಾಂತಗಳೆಂಬ ಕತ್ತಲೆಯ ಮೊತ್ತವನ್ನು ಓಡಿಸು ವಂತಹ ಬೆಳಗುವ ನೇಸರನಂತೆ ಇರುವಂತಹುದೂ ಆದ ಜೀನೇಂದ್ರರ ಸಿದ್ಧಾಂತಕ್ಕೆ ಮಂಗಳವಿರಲಿ ಎಂಬುದು ಈ ಶ್ಲೋಕದ ತಾತ್ಪರ್ಯ.

೭.         ಭದ್ರಂ ಭವತ್ವಖಿಳ ಧಾರ್ಮ್ಮಿಕ ಪುಂಡರೀಕ ಷಂಡಾವಭೋಧನ ಸುಮಿತ್ರದಿ ವಾಕರಾಯ ಸಂಸಾರ ಸಾಗರ             ವಿಚಿತ್ರತಮಘ್ನಜಂತೋರ್ಹಸ್ತಾವವಳಂಬನ ಕ್ರಿತೋ ಜಿನ ಶಾಸನಾಯ ||

[ಸೌ.ಇ.ಇ. ೯-೧, ೩೮೭-೧೨೯೭. ಮನ್ನೆರ ಮಸಲವಾಡ (ಬಳ್ಳಾರಿಜಿ/ಹರಪನಹಳ್ಳಿ ತಾ)] ಎಲ್ಲಧಾರ್ಮಿಕರೆಂಬ ಬಿಳಿಯ ತಾವರೆಗಳ ಗುಂಪನ್ನು ಬೆಳಗಿಸುವ ಸೂರ್ಯನಂತೆಯೂ ಸಂಸಾರವೆಂಬ ಕಡಲನ್ನು ದಾಟಿ ಪಾರಾಗಲು ಸಹಾಯಕವಾಗಿರುವಂತಹುದೂ ಆದ ಜಿನ ಶಾಸನವು ವಿಜೃಂಭಿಸಲಿ ಎಂಬುದು ಈ ಪದ್ಯದ ಭಾವಾರ್ಥ.

೮.         ಮೇಲಿನ ಮಾದರಿಯನ್ನು ಮುಂದುವರಿಸಿರುವ ಮತ್ತೊಂದು ಪದ್ಯ ಪ್ರಾರ್ಥನೆ ಹೀಗಿದೆ:
            ಧಾರ್ಮಿಕ ಪುಣ್ದರೀಕಷಣ್ದ ಮೋದನ ಕರಾಯ ಗುಣೋತ್ತರಾಯ
ಸಂಸಾರ ಸಾಗರ ನಿಮಂ… ಹಸ್ತಾವಳಂಬನವತೇ ಜಿನಶಾಸನಾಯ
||
            [ಎ.ಕ. ೭-೧, ಶಿಕಾ.೮. ಸು. ೧೦೮೦. ಪು.೧೨೪. ಈಸೂರು (ಶಿಜಿ/ಶಿಕಾರಿಪುರ ತಾ)]

ಧಾರ್ಮಿಕರೆಂಬ ಬಿಳಿಯ ತಾವರೆ ಕೊಳಕ್ಕೆ ನಲಿವು ತರುವ ಗುಣವೂ ಸಂಸಾರವೆಂಬ ಕಡಲಿನೊಳಗೆ ಮುಳುಗಿ ಹೋಗಿರುವವರನ್ನು ಪಾರುಮಾಡುವ ಕೈಯೂ ಆಗಿರುವ ಜಿನರ ಬೋಧೆಯು ಬೆಳಗಲಿ ಎಂಬುದು ಈ ಪದ್ಯದಸಾರ.

೯.         ಭದ್ರಂ ಸಮನ್ತ ಭದ್ರಸ್ಯ ಪಾದಸ್ಯ ಸನ್ಮತೇ:
ಅಕಳಂಕ ಗುರೋರ್ಬ್ಭೂಯಾತ್ಸಾಸನಾಯ ಜಿನೇಶಿನಃ
||

[ಎ.ಕ. ೭-೧, ಶಿಕಾರಿ. ೨೨೧.೧೦೭೫. ಬಂದಳಿಕೆ (ಶಿಜಿ/ಶಿಕಾರಿ ತಾ) ಪು. ೨೯೯; ಎ.ಕ. ೮-೨, ಸೊರಬ. ೨೩೩.    ೦೧೧೩೮-೩೯. ವ್ರುದಿ-ಉದ್ಧರೆ. ಪು.೯೬]

ಸಮಂತಭದ್ರರ, ಬಲ್ಲಿದ ಪೂಜ್ಯಪಾದರ, ಅಕಳಂಕ ಗುರುಗಳ ಶಾಸನವೂ (ಬೋಧೆಯೂ) ಆಗಿರುವ ಜಿನಶಾಸನಕ್ಕೆ ಲೇಸು ಇರಲಿ – ಎಂಬುದು ಈ ಶಾಸನ ಪದ್ಯದ ತಿರುಳು. ಸ್ವಾರಸ್ಯಗಳು ಕೆಲವು ಈ ಶಾಸನದಲ್ಲಿ ಅಡಗಿವೆ. ಈ ಶಾಸನದಲ್ಲಿ ಈ ಶ್ಲೋಕವನ್ನು ಮೊದಲು ಬರೆದು, ಆಮೇಲೆ ವಿಖ್ಯಾತವಾದ ಬಹುರೂಢಿಯ ಶ್ರೀಮತ್ ಪರಮಗಂಭೀರ ಸ್ಯಾದ್ವಾದಾಮೋಘ- ಎಂದು ಆರಂಭವಾಗುವ ಅಕಳಂಕರ ಪದ್ಯವನ್ನು ಬಳಸಿದೆ. ಅಳವಡಿಕೆಯಲ್ಲಿ ವ್ಯವಸ್ಥಿತವಾದ ಲೆಕ್ಕಾಚಾರವೂ ಇದೆ. ಸಮಂತಭದ್ರ ಪೂಜ್ಯಪಾದ ಅಕಳಂಕ ಎಂಬೀ ರತ್ನತ್ರಯ ಆಚಾರ್ಯತ್ರಯರ ವಿಚಾರದಲ್ಲಿರುವ ಗೌರವಾದರದ ದ್ಯೋತಕವಾಗಿ ಅವರ ಸ್ತುತಿ ಪದ್ಯ ಮೊದಲು ಬಂದಿದೆ; ಎರಡನೆಯ ದಾಗಿ ಈ ಮೂವರು ಪ್ರಾಚೀನ ಆಚಾರ್ಯರು ಮಾಡಿರುವ ಬರವಣಿಗೆಯ ಸಾರವೇನಿದ್ದರೂ ಜಿನರಿಂದ ಪ್ರಣೀತವಾದ ಸಿದ್ಧಾಂತದ ಮುಂದುವರಿಕೆಯೇ ಆಗಿದೆ ಎಂಬ ಸೂಚನೆ ಇಲ್ಲಿದೆ. ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಕೂಡ ಈ ಪ್ರಾರ್ಥನಾ ಪದ್ಯಕ್ಕೆ ಪ್ರಾಮುಖ್ಯವಿದೆ. ಆದಿಪಂಪ, ಪೊನ್ನ ನಾಗಚಂದ್ರ, ನಯಸೇನ, ಅಗ್ಗಳ ಮೊದಲಾದ ಕವಿಗಳು ಸಮಂತಭದ್ರ ಮತ್ತು ಪೂಜ್ಯಪಾದ ಆಚಾರ್ಯರನ್ನು ವಿಶೇಷವಾಗಿ ಸ್ತುತಿಸಿದ್ದಾರೆ.

೧೦.       ಜಗತ್ರಿತಯನಾಥಾಯ ನಮೋಜನ್ಮ ಪ್ರಮಾಥಿನೇ
ನಯ ಪ್ರಮಾಣ ವಾಗ್ರಸ್ಮಿ ಧ್ವಸ್ತ ಧ್ವಾನ್ತಾಯ ಶಾನ್ತಯೇ
||
[ಎ.ಕ. ೨(ಪ). ೨೦೯ (೧೬೦)೧೨ ಶ.ಪು. ೧೪೪]

ಸಾಧಾರಪೂರ್ವಕವಾದ ವಾದಗಳೆಂಬ ಕಿರಣಗಳ ಮೂಲಕ ಅಜ್ಞಾನವೆಂಬ ಕತ್ತಲೆಯನ್ನು ಓಡಿಸುವವನೂ, ಮೂರು ಲೋಕಗಳಿಗೆ ಒಡೆಯನೂ, ಮತೆ ಮತ್ತೆ ಹುಟ್ಟುವುದನ್ನು ನಿಲ್ಲಿಸುವವನೂ, ಆದ ಶಾಂತಿಜಿನರಿಗೆ ನಮನಗಳು- ಎಂದು ಪ್ರಣಾಮ ತಿಳಿಸಿರುವ ಈ ಶಾಸನ ಪದ್ಯದ ಬಳಕೆ ಅನ್ಯತ್ರ ಕಂಡು ಬಂದಿಲ್ಲ.

೧೧. ಜಯತಿ ಜಗದೇಕ ಭಾನುಃ ಸ್ಯಾದ್ವಾದ ಗಭಸ್ತಿ ದೀಪಿತಂ ಯೇನ
ಪರಸಮಯ ತಿಮಿರ ಪಟಲ ಸಾಕ್ಷಾತ್ಕೃತ ಸಕಲ ಭುವನೇನ
||

[ಮೈ.ಆ.ರಿ. ೧೯೨೦. ಪು.೨೩. ಕ್ರಿ.ಶ. ೮ ಶ. ನರಸಿಂಹರಾಜಪುರ; IWG ೧೯೮೪: ಎನ್‍ಪಿ. ೭೧: ಪು. ೨೫೩] ಈ ಪ್ರಾಚೀನ ಶಾಸನವು ಗಂಗರ ಶಾಸನಗಳಲ್ಲೊಂದು, ಸ್ಯಾದ್ವಾದ ಸಿದ್ಧಾಂತವೆಂಬ ಅಂಬರವನ್ನು ಬೆಳಗುವ ಯಾವ ಒಬ್ಬನೇ ಸೂರ್ಯನು ಅನ್ಯಧರ್ಮಗಳೆಂಬ ಕತ್ತಲೆಯ ತೆರೆಯನ್ನು ಸರಿಸಿರುವನೋ ಆತನಿಗೆ ಜಯವಾಗಲಿ ಎಂದು ಹೇಳುವುದರ ಮೂಲಕ ಜೈನ ಸಿದ್ಧಾಂತವನ್ನು ಎತ್ತಿ ಹಿಡಿಯಲಾಗಿದೆ.

೧೨.       ಜಯತ್ಯನೇಕಧಾ ವಿಶ್ವಮ್ ವಿವೃಣ್ವನ್ನಂಶುಮಾನಿವ
ಶ್ರೀವರ್ಧಮಾನ ದೇವೋ ನಿತ್ಯಂ ಪದ್ಮ ಪ್ರಬೋಧನಃ
||
[ಕ.ಇ.೧,೩.೭೫೦. ಆಡೂರು (ಧಾಜಿ / ಹಾನಗಲ್ ತಾ)

ವಿಶಾಲವಾದ ವಿಶ್ವವನ್ನು ಒಬ್ಬನೇ ಸೂರ್ಯನು ಹೇಗೆ ತನ್ನ ಕಿರಣರಾಜಿಯಿಂದ ಬೆಳಗಿಸುತ್ತಾನೆಯೋ ಮತ್ತು ನಿತ್ಯವೂ ತಾವರೆಗಳನ್ನು ಅರಳಿಸುತ್ತಾನೆಯೋ ಹಾಗೆ ತನ್ನ ಉಪದೇಶದಿಂದ ಭವ್ಯ ಶ್ರಾವಕ ವೃಂದವನ್ನು ತಿಳಿವಳಿಕೆಯಿಂದ ಸಂತೋಷಗೊಳಿಸುವ ವರ್ಧಮಾನ (ಮಹಾವೀರ)ನಿಗೆ ಮಂಗಳವಾಗಲಿ. ವರ್ಧಮಾನನನ್ನು ಸೂರ್ಯನಿಗೂ, ಆತನ ಬೋಧನೆಯನ್ನು ಆಲಿಸುವ ಸಮುದಾಯವನ್ನು ತಾವರೆಗಳಿಗೂ ಹೋಲಿಸ ಲಾಗಿದೆ. ಈ ಬಗೆಯ ಸಮೀಕರಣ ಇನ್ನೂ ಕೆಲವು ಪದ್ಯಗಳಲ್ಲಿದೆ.

೧೩.       ಜಯತು ದುರಿತ ದೂರಃ ಕ್ಶೀರ ಕೂಪಾರ ಹಾರಃ
ಪ್ರಥಿತ ಪ್ರಿಥುಳ ಕೀರ್ತಿ ಶ್ರೀ ಸುಭೇಂದು ರತೀಶಃ
ಗುಣಮಣಿಗಣಸಿನ್ದುಃ ಶಿಷ್ಟ ಲೋಕಯ್ಯ ಬನ್ಧುಃ
ವಿಬುಧ ಮಧು ಪ್ರಪುಲ್ಲಃ ಪುಲ್ಲ ಬಾಣಾದಿಸಲ್ಲಃ
||

[ಎ.ಕ೨(ಪ.) ೧೫೫ (೧೨೯)೧೧೨೦.೦ ಪು. ೯೦; ಅದೇ, ೧೫೭ (೧೨೮) ೧೧೨೨.ಪು. ೯೮; ಅದೇ, ೧೫೮(೧೨೯)೧೧೨೦. ಪು.೯೯.ಇತ್ಯಾದಿ]. ಪ್ರಾರ್ಥನಾ ಪದ್ಯಗಳು ಬಹುವಾಗಿ ಶ್ಲೋಕಮಯವಾಗಿರುವಾಗ, ಈ ವೃತ್ತ ಪದ್ಯವು ಮಾಲಿನೀ ವೃತ್ತಜಾತಿಗೆ ಸೇರಿದ್ದು ನೋಡತಕ್ಕುದಾಗಿದೆ. ಪಾಪಗಳಿಂದ ದೂರ ಇರುವವನೂ, ಹಾಲುಗಡಲು ಬಿಳುಪಿಗೂ ಮುತ್ತಿನ ಹಾರಕ್ಕೂ ಹೋಲಿಕೆಯಾಗಿರುವ ಹಬ್ಬಿದ ಕೀರ್ತಿ ಇರುವವನೂ, ಒಳ್ಳೆಯ ಗುಣಗಳೆಂಬ ರತ್ನಗಳಿಗೆ ಹೂವಿನ ಇರುವವನೂ, ಸಜ್ಜನರಿಗೆ ಒಬ್ಬನೇ ಬಂಧುವೂ, ಬಲ್ಲಿದರೆಂಬ ದುಂಬಿಗಳಿಗೆ ಹೂವಿನ ಹಾಗೆ ಇರುವವನೂ, ಹೂಬಾಣವಿರುವ ಮನ್ಮಥನಿಗೆ ಈಟಿಯಂತಿರುವವನೂ, ಮುನಿಗಳಿಗೆ ಒಡೆಯನೂ ಆದ ಶುಭೇಂದು (ಶುಭಚಂದ್ರ) ಮುನಿಯು ವಿಜಯಿಯಾಗಲಿ. ಈ ಪದ್ಯವು, ತೀರ್ಥಂಕರ ವಂದನಾ ಭಕ್ತಿಯ ಪದ್ಯವಾಗಿರದೆ, ಒಬ್ಬ ಜಿನಮುನಿಯನ್ನೂ ಆತನ ವ್ಯಕ್ತಿತ್ವದ ಎತ್ತರವನ್ನೂ ಕೊಂಡಾಡುವ ಪದ್ಯವಾಗಿದೆ.

೧೪.       ಜಯತ್ಯತಿಶಯ ಜಿನೈರ್ಭಾಸುರಸ್ಸುರ ವನ್ದಿತಃ
ಶ್ರೀಮಾನ್ಚಿನಪತಿಃ ಸೃಷ್ಟೇರಾದೇಃ ಕರ್ತಾದಯೋದಯಃ

[ಸೌ.ಇ.ಇ.೨೦,೩. ಸು.ಕ್ರಿ.ಶ. ೬೩೦. ಲಕ್ಷ್ಮೇಶ್ವರ (ಧಾಜಿ/ಶಿರಹಟ್ಟಿ ತಾ)]

ಮಿರುಗುವ ದೇವಾನುದೇವತೆಗಳಿಂದ ನಮಸ್ಕರಿಸಲ್ಪಟ್ಟು ಸೃಷ್ಟಿಯ ಮೊದಲಿನಿಂದಲು ಇರುವ ಜಿನಸ್ವಾಮಿಗೆ ಮಂಗಳವಾಗಲಿ.

೧೫.       ನಿರ್ಗ್ರಂಥ ವ್ರತ ಚಾರಿ ಸೂರಿ ವಚನಾನ್ನಿ ಸ್ತ್ರಿಂಶಯಷ್ಟಯಾಕೃತೀ
ಯೋದುಶ್ಫೇದಮಖಣ್ದಯತ್ ಪೃಥು ಶಿಲಾ ಸ್ತಂಭಂಜಯಾಭ್ಯುದ್ಯತಃ
||
[ಮೈ.ಆ.ರಿ. ೧೯೨೦.೮. ಶ. ಪು. ೨೩. ನರಸಿಂಹರಾಜಪುರ]

೧೬.       ಯಸ್ಯ ಸದ್ಧರ್ಮ ಮಹಾತ್ಮ್ಯಾಖ್ಯಂ ಜಗ್ಗುರ್ಮ್ಮುನೀಶ್ವರಾಃ
ತಸ್ಯ ಶ್ರೀಪಾರ್ಶ್ವನಾಥಸ್ಯ ಶಾಸನಂ ವರ್ದ್ದತಾಂ ಚಿರಮ್
||

[ಎ.ಕ೭(ಪ.) ೬೪ (೪ ನಾಮಂ ೭೬). ೧೧೪೫. ಯಲ್ಲಾದಹಳ್ಳಿ (ಮಂಡ್ಯಜಿ/ನಾಮಂತಾ)] ಯಾರ ಒಳ್ಳೆಯ ಧರಮದಿಂದಾಗಿ ಹಿರಿಯ ರಿಷಿಮುನಿಗಳು ಆನಂದವನ್ನು (ಮುಕ್ತಿ) ಹೊಂದುವರೋ ಅಂತಹ ಪಾರ್ಶ್ವನಾಥರು ಪ್ರತಿ ಪಾದಿಸಿದ ಬೋಧೆಯು ಎಂದೆಂದೂ ಹೆಚ್ಚುತ್ತಿರಲಿ.

೧೭.       ಶ್ರಿಯಂ ಕ್ರಿಯಾಸುರ್ಜ್ಜಗತಾಮಧೀಶ್ವರಾಸ್ಸಮನ್ತಭದ್ರಾಮಕಳಂಕ ನಿಶ್ಚಳಾಂ
ತಮೋಪ. ಯಜಿನೇನ್ದ್ರ ಭಾನವಃ ಸ್ಫುರನ್ತಿವೋಯನ್ನಯಮಾನ ಭಾನವಃ
||

[ಸೌ.ಇ.ಇ.೨೦,೫೨.೧೦೭೭-೭೮. ಲಕ್ಷ್ಮೇಶ್ವರ. ಪು. ೬೪] ಈ ಪದ್ಯವನ್ನು ಈ ಸಂಪ್ರಬಂಧದ ಒಂಬತ್ತನೆಯ ಸಂಖ್ಯೆಯಲ್ಲಿ ಉದಾಹರಿಸಿರುವ ಪದ್ಯದೊಂದಿಗೆ ಹೋಲಿಸಿ ನೋಡಬೇಕು. ಸಮಂತಭದ್ರ ಮತ್ತು ಅಕಳಂಕರು ಸೂರ್ಯನಂತೆ ಹೊಳೆಯುತ್ತಿರುವುದನ್ನು ಈ ಪದ್ಯ ಪ್ರಸ್ತಾಪಿಸಿದೆ.

೧೮.       ಶ್ರೀ ಪ್ರಭಾಚಂದ್ರ ಸಿದ್ಧಾನ್ತ ದೇವೋ ಜೀಯಾಂಚ್ಚಿರಂ ಭುವಿ
ವಿಖ್ಯಾತೋಭಯಸಿದ್ಧಾನ್ತ ರತ್ನಾಕರ ಇತಿಸ್ಮೃತಃ
||

[ಎ.ಕ.೮(ಪ.) ಆಗೂ ೧೩೩ (೫ ಅಗೂ ೯೯). ೧೦೭೯-೮೦ ಸುಳಗೋಡು ಸೋಮವಾರ (ಹಾಜಿ/) ಪು. ೧೮೬]

‘ಉಭಯ ಸಿದ್ಧಾಂತ ರತ್ನಾಕರ’ (ಎರಡೂ ಸಿದ್ಧಾಂತಗಳಲ್ಲಿ ಸಾಗರದ ಹಾಗೆ ಸಮೃದ್ಧರು) ಎಂಬ ಪ್ರಶಸ್ತಿಯಿಂದ ಭೂಮಂಡಲದೊಳಗೆ ಹೆಸರು ಗಳಿಸಿರುವ ಪ್ರಭಾ ಚಂದ್ರಸಿದ್ಧಾಂತದೇವನು ಬಹುಕಾಲ ಬಾಳಲಿ- ಎಂಬ ಈ ಪ್ರಾರ್ಥನಾ ಪದ್ಯವು ಹನ್ನೊಂದನೆಯ ಶತಮಾನದ ಉತ್ತರಾರ್ಧದಲ್ಲಿ ಬದುಕಿದ ಜೈನವ್ರತಿಯನ್ನು ನುತಿಸಿದೆ.

೧೯.       ಶ್ರೀನಾಭೇಯೋಜಿತಃ ಶುಭವ ನಮಿ ವಿಮಾಲಾಃ ಸುವ್ರತಾನಂತಧರ್ಮ್ಮ
ಶ್ಚಂದ್ರಾಂಕಃಶಾಂತಿ ಕುಂಥೂ ಸಸುಮತಿ ಸುವಿಧಿಃ ಶೀತಳೋ ವಾಸು ಪೂಜ್ಯಃ
ಮಲ್ಲಿಃ ಶ್ರೇಯಃ ಸುಪಾರ್ಶ್ವೌಜಲಜ ರುಚಿರರೋ ನಂದನಃ ಪಾರ್ಶ್ವನೇಮಿ
ಶ್ರೀವೀರಶ್ಚೇತಿ ದೇವಾ ಭುವಿದದತು ಚತುರ್ವ್ವಿಂಶತಿರ್ಮ್ಮಂಗಳಾನಿ
||

[ಎ.ಕ.೨(ಪ.) ೩೬೦(೨೫೪) ೧೩೯೮. ಪು. ೨೧೫] ಇದೊಂದು ವೈಶಿಷ್ಟ್ಯ ಪೂರ್ಣವಾದ ಪ್ರಾರ್ಥನಾ ಪದ್ಯ ಮೊದಲನೆಯದಾಗಿ, ಛಂದಸ್ಸಿನ ದೃಷ್ಟಿಯಿಂದ ಇದು ಸ್ರಗ್ಧರಾವೃತ್ತವಾಗಿದ್ದು, ಗಣ್ಯತೆ ಪಡೆದಿದೆ. ಎರಡನೆಯದಾಗಿ ವಸ್ತುವಿನ ದೃಷ್ಟಿಯಿಂದ ಇದು ಎಲ್ಲ ೨೪ ಜನತೀರ್ಥಂಕರರ ಸ್ತುತಿ ಇರುವ ಏಕೈಕ ಪದ್ಯವಾಗಿದೆ. ಮೂರನೆಯ ದಾಗಿ, ಈ ಪದ್ಯದಲ್ಲಿರುವ ಪ್ರಾರ್ಥನೆಯಲ್ಲಿ, ೨೪ ತೀರ್ಥಂಕರರು ಲೋಕದಲ್ಲಿ ಒಳ್ಳೆಯದನ್ನು ನೀಡಲಿ ಎಂಬ ಸದಾಶಯ ಒಲಗೊಂಡಿರುವ ಜಾತ್ಯಾತೀತ ವಾದ ಉದಾತ್ತಭಾವನೆ. ನಾಭೇಯ ಎಂದರೆ ಆದಿತೀರ್ಥಂಕರನಾದ ಪುರುದೇವ (ಋಷಭನಾಥ), ಚಂದ್ರಾಂಕನೆಂದರೆ ಚಂದ್ರಪ್ರಭ ತೀರ್ಥಂಕರ, ಸುವಿಧಿ ಎಂದರೆ ಪುಷ್ಪದಂತ, ಶ್ರೇಯ ಎಂದರೆ ಶ್ರೇಯಾಂಸ, ಜಲಜರುಚಿ ಎಂದರೆ ಪದ್ಮಪ್ರಭ ಎಂದರ್ಥ.

೨೦.       ವೀರೋವಿಶಿಷ್ಟಾಂ ವಿನತಾಯರಾತಿಮಿತಿ ತ್ರಿಳೋಕಿಅರಭಿರ್ಣ್ನ್ಯತೇಯಃ ನಿರಸ್ತ |
ಕರ್ಮ್ಮಾನಿಖಿಲಾರ್ತ್ಥವೇದೀ ಪಾಯಾದಸೌ ಪಶ್ಚಿಮ ತೀರ್ತ್ಥನಾಥಃ ||

[ಎ.ಕ.೨(ಪ.) ೩೬೦ (೨೫೪) ೧೩೯೮.ಪು. ೨೧೫-೨೧೬]. ಇ ಪದ್ಯದ ಛಂದಸ್ಸಿನ ಹೆಸರು ಉಪಜಾತಿ. ಕರ್ಮಗಳನ್ನು ನಾಶಮಾಡಿದವನೂ, ಎಲ್ಲವನ್ನೂ ಬಲ್ಲವನ್ನೂ, ತನ್ನಭಕ್ತರಿಗೆ ಉತ್ತಮ ಕೊಡುಗೆಯಾಗಿರುವವನೂ ಎಲ್ಲವನ್ನೂ ಬಲ್ಲವನ್ನೂ, ತನ್ನ ಭಕ್ತರಿಗೆ ಉತ್ತಮ ಕೊದುಗೆಯಾಗಿರುವವನೂ, ಕಟ್ಟ ಕಡೆಯ ತೀರ್ಥಂಕರನೂ ಆದ ವೀರ (ವರ್ಧಮಾನ ಮಾಹಾವೀರ) ಜಿನನು ನಮ್ಮನ್ನು ಕಾಪಾಡಲಿ.

೨೧.       ಶ್ರೀಮತ್ಪವಿತ್ರಮಕಳಂಕಮನನ್ತಕಲ್ಪಂ
ಸ್ವಾಯಂಭುವಂ ಸಕಳಮಂಗಳಮಾದಿ ತೀರ್ತ್ಥಂ
ನಿತ್ಯೋತ್ಸವಂ ಮಣಿಮಯಂ ನಿಳಯಂ ಜಿನಾನಾಂ
ತ್ರೈಳೋಕ್ಯ ಭೂಷಣ ಮಹಂಶರಣಂ ಪ್ರಪದ್ಯೇ
||

[ಎ.ಕ. ೮-೨, ಸಾಗರ. ೧೫೯.೧೧೫೯. ಹೆರಕೆರೆ (ಶಿಜಿ/ ಸಾಗರ ತಾ) ಪು. ೩೩೧-೩೩; ಅದೇ, ಸಾಗರ ೧೬೨. ಪು. ೩೩೪]. ಇದೊಂದು ಜಿನಾಲಯದ ಸ್ತೋತ್ರ ಪದ್ಯವಾಗಿದ್ದು ಅಪರೂಪವೆನಿಸಿದೆ. ಪವಿತ್ರವೂ, ದೋಷರಹಿತವೂ, ತುದಿಯಿಲ್ಲದ್ದೂ, ತನಗೆ ತಾನೆ ಹುಟ್ಟಿದ್ದೂ, ಎಲ್ಲ ಮಂಗಳವನ್ನುಂಟುಮಾಡುವುದೂ, ಆದಿತೀರ್ಥವೂ, ದಿನನಿತ್ಯವೂ ಉತ್ಸವದಿಂದ ಕೂಡಿದ್ದೂ, ರತ್ನಖಚಿತವೂ ಆದ ಜಿನನಿಲಯಗಳೂ, ಮೂರು ಲೋಕಗಳಿಗೂ ಆಭರಣ ಪ್ರಾಯವಾದುದಕ್ಕೆ ನಾನು ಶರಣು ಹೋಗುವೆನು.

೨೨.       ಶ್ರೀಮಜ್ಜಯತ್ತ್ಯನೇಕಾನ್ತವಾದ ಸಂಪಾದಿತೋದಯಂ
ನಿಱ್ಪ್ರತ್ಯೂಹನಮತ್ಪಾಕ ಶಾಸನಂ ಜಿನಶಾಸನಂ
||
[ಎ.ಕ. ೮-೨, ಸೊರಬ. ೨೬೨, ೧೦೭೫. ಕುಪ್ಪಟೂರು. ಪು. ೧೦೯]

ಅನೇಕಾಂತ (ಸ್ಯಾದ್ವಾದ, ಸಪ್ತಭಂಗಿ ನ್ಯಾಯ) ವಾದದಿಂದ ಸಂಪಾದಿಸಿದ ನಿರಾತಂಕಮಯವಾದ ಸಿದ್ಧಾಂತನಾದ ಜಿನಶಾಸನವು ಗೆಲ್ಲಲಿ.

೨೩.       ಶ್ರೀಮಜ್ಜೈನವಚೋಬ್ಧಿವರ್ದ್ಧನ ವಿಧುಃ ಸಾಹಿತ್ಯವಿದ್ಯಾನಿಧಿ
ಸ್ಸರ್ಪ್ಪದರ್ಪ್ಪಕ ಹಸ್ತಿಮಸ್ತಕಲುಠತ್ ಪ್ರೋತ್ಕಕಂಠ ಕಂಠೀರವಃ
ಶ್ರೀಮಾನ್ಗುಣಚಂದ್ರದೇವತನಯ ಸ್ಸೌಜನ್ಯಜನ್ಯಾವನಿ
ಸ್ಥೇಯತು ಶ್ರೀನಯಕೀರ್ತ್ತಿದೇವ ಮುನಿಪಸ್ಸಿದ್ಧಾನ್ತ ಚಕ್ರೇಶ್ವರಃ
||
[ಎ.ಕ. ೨(ಪ.). ೫೬೪. ಅತೇದಿ. ಬೆಕ್ಕ (ಹಾಜಿ/ಚ.ಪ.ತಾ.) ಪು. ೩೪೫]

ಜಿನರ ಬೋಧೆಯೆಂಬ ಕಡಲನ್ನುಕ್ಕಿಸುವ ಚಂದ್ರನೂ, ಸಾಹಿತ್ಯವಿದ್ಯೆಗೆ ಗಣಿಯೂ, ಜಂಬದಿಂದಿರುವ ಮದನನೆಂಬ ಮದ್ದಾನೆಯನ್ನು ಮೆಟ್ಟುವ ಗರ್ಜನೆಯ ಸಿಂಹವೂ, ಸಜ್ಜನಿಕೆಯ ತೌರುಮನೆಯೂ, ತತ್ವಬೋಧನೆಯ ಸಾಮ್ರಾಟರೂ, ಗುಣಚಂದ್ರ ದೇವಮುನಿಯ ಶಿಷ್ಯರೂ ಆಗಿರುವ ನಯಕೀರ್ತಿದೇವ ಮುನಿಪನು, ನಮ್ಮನ್ನು ಮುನ್ನಡೆಸಲು, ಬಹುಕಾಲ ಬಾಳಲಿ ಎಂಬುದು ಈ ಪದ್ಯದ ಹೃದಯ. ಈ ಪ್ರಾರ್ಥನಾ ಆಶಯ ಪದ್ಯದ ಛಂದಸ್ಸು ಶಾರ್ದೂಲ ವಿಕ್ರೀಡಿತವಾಗಿದ್ದು, ಇದು ಅಪರೂಪದ ವೃತ್ತ ಪದ್ಯವಾಗಿದೆ. ಜಿನರನ್ನು ಸ್ತುತಿಸುವ ಧಾಟಿಯಲ್ಲಿಯೇ ಜಿನಮುನಿಗಳನ್ನೂ ಸ್ತೋತ್ರಮಾಡುವ ಕೆಲವು ಪದ್ಯಗಳು ಶಾಸನಗಳ ಆರಂಭದಲ್ಲಿವೆ.

೨೪. ಜೈನಧರ್ಮದ ತಿರುಳಿನ ತಿರುಳು ಸ್ಯಾದ್ವಾದ ಸಿದ್ಧಾಂತ. ಸ್ಯಾದ್ವಾದವೇ ಜಿನ ಧರ್ಮದ ಅಮೋಘ ಲಾಂಛನ, ಸ್ಯಾದ್ವಾದವೇ ಜಿನಶಾಸನ, ಅಕಳಂಕ ಅಚಾರ್ಯನು ಇದನ್ನು ಅಳವಡಿಸಿ ಹೇಳಿದ ಶ್ರೀಮತ್ ಪರಮಗಂಭೀರ ಸ್ಯಾದ್ವಾ ಮೋಘಲಾಂಛನಂ …. ಎಂಬ ಶ್ಲೋಕವು ಪ್ರಖ್ಯಾತವಾಗಿದೆ. ಅದೇ ಬಗೆಯ ಭಾವನೆಯನ್ನು ಹೊಳಲುಗೊಡುವ ಮತ್ತೊಂದು ಪ್ರಾರ್ಥನಾ ಪದ್ಯವನ್ನು ಶಾಸನ ಕವಿ ಪ್ರಯೋಗಿಸಿದ್ದಾನೆ:

ಶ್ರೀಮತ್ಸ್ಯಾದ್ವಾದ ಮುದ್ರಾಂಕಿತಮಮಳ ಮಹೀನೇಂದ್ರ ಚಕ್ರೇಶ್ವರೇಡ್ಯಂ ಜೈನೀ
ಯಂಶಾಸನಂ ವಿಶ್ರುತಮಖಿಳಹಿತಂ ದೋಷದೂರಂ ಗಭೀರಂ
ಜೀಯಾತ್ಕಾರುಣ್ಯ ಜನ್ಮಾವನಿರಮಿತ ಗುಣೈವ್ವರ್ಣ್ನ್ಯನೀಕ ಪ್ರವೇಕೈಃ
ಸಂಸೇವ್ಯಂ ಮುಕ್ತಿ ಕನ್ಯಾ ಪರಿಚಯಕರಣ ಪ್ರೌಢಮೇತತ್ತ್ರಿಳೋಕ್ಯಾಂ
||

[ಎ.ಕ.೨(ಪ.) ೭೨(೬೫). ೧೩೧೩. ಪು. ೩೦]. ಜಿನರ ಸಿದ್ದಾಂತವು ನಿರ್ಮಲ ವಾದದ್ದು, ಪ್ರಸಿದ್ಧವಾದದ್ದು, ಪ್ರಯೋಜನಕರವಾದದ್ದು, ಕುಂದು ಇಲ್ಲದ್ದು, ಗಂಭೀರವಾದದ್ದು. ಇದಕ್ಕೆ ಶ್ರೇಷ್ಠವಾದ ಸ್ಯಾದ್ವಾದದ ನೆಹರೂ ಇದೆ. ನಾಗರೂ ಇಂದ್ರರೂ ಚಕ್ರವರ್ತಿಗಳೂ ಇದನ್ನು ಶ್ಲಾಘಿಸಿದ್ದಾರೆ. ಇದು ಕರುಣೆಯ ಕಾರಂಜಿ. ಅನೇಕಾನೇಕ ಸಚ್ಚರಿತರೂ ವಿವೇಕಿಗಳೂ ಇದನ್ನು ಪಾಲಿಸಿದ್ದಾರೆ. ಇದರಿಂದ ಮೋಕ್ಷವನ್ನು ಪಡೆಯುವುದು ಸಾಧ್ಯವಾಗಿದೆ. ಇಂತಹ ಮಹತ್ವದ ಸ್ರಗ್ದರಾ ಛಂದಸ್ಸಿನಲ್ಲಿದೆ.

೨೫.       ಶ್ರೀಮನ್ನಾಭೇಯನಾಥಾದ್ಯಮಳಜಿನವರಾನೀಕ ಸೌಧೋರುವಾರ್ದ್ದಿಃ
ಪ್ರಧ್ವಸ್ತಾಘ ಪ್ರಮೇಯ ಪ್ರಚಯ ವಿಷಯ ಕೈವಲ್ಯ ಬೋಧೋರುವೇದಿಃ
ಶಸ್ತ ಸ್ಯಾತ್ಕಾರ ಮುದ್ರಾಶಬಳಿತ ಜನತಾನನ್ದನಾದೋರು ಘೋಷಃ
ಸ್ಥೇಯಾದಾಚಂದ್ರತಾರಂ ಪರಮ ಸುಖ ಮಹಾವೀರ್ಯ್ಯ ವೀಚೀನಿಕಾಯಃ
||

[ಎ.ಕ.೨(ಪ.) ೭೧(೬೪). ೧೧೬೩. ಪು. ೨೭. ಸಾಲು : ೩ ರಿಂದ ೯]. ಇದೂ ಸಹ ಮೇಲಿನ ವೃತ್ತ ಪದ್ಯಜಾತಿಗೆ ಸೇರಿದ ಸ್ರಗ್ಧರೆ ಪದ್ಯ. ಜಿನೇಂದ್ರರ ತತ್ವಬೋಧೆಯು ಪಾಪಗಳನ್ನು ನಿವಾರಿಸುವಂತಹುದು. ಅನ್ಯಮತಗಳೆಂಬ ಕತ್ತಲೆಯನ್ನು ಹೋಗಲಾಡಿ ಸುವ ತೀಕ್ಷ್ಣತೆ ಇರುವ ಸೂರ್ಯನ ಹಾಗೆ ಈ ಸಿದ್ಧಾಂತವಿದೆ. ಇದು ಅಮೃತೋಪಮ ವಾದ ದೊಡ್ಡ ಕಡಲು. ನಾಭೇಯನಾಥನಾದ ಋಷಭದೇವನೂ ಇತರ ಶ್ರೇಷ್ಠ ಜಿನರೂ ಈ ಸಿದ್ಧಾಂತವನ್ನು ಸಾರಿದವರು. ದೋಷರಹಿತ ವಸ್ತುಗಳ ತಿಳಿವಳಿಕೆಯುಳ್ಳ ಉನ್ನತವಾದ ಜ್ಞಾನಸಾಗರವೇ ಈ ಸಿದ್ಧಾಂತ ಸ್ಯಾದ್ವಾದ (ಸ್ಯಾತ್ಕಾರ) ವೆಂಬ ಉತ್ತಮ ಸಿದ್ಧಾಂತದಿಂದ ಕೂಡಿದ ಜನರಿಂದ ಆನಂದದ ಉದ್ಗಾರಗಳಿರುತ್ತದೆ. ಈ ಸಿದ್ಧಾಂತ ಸಾಗರದ ಅಲೆಗಳು ಪರಮಸುಖವನ್ನೂ ಹೆಚ್ಚಿನ ಶಕ್ತಿಯನ್ನೂ ನೀಡುತ್ತವೆ. ಇಂತಹ ಸ್ಯಾದ್ವಾದ ಸಿದ್ಧಾಂತವು ಚಂದ್ರ ನಕ್ಷತ್ರಗಳು ಇರುವತನಕ ಮುನ್ನಡೆಯಲಿ. ಈ ಸ್ರಗ್ಧರೆ ವೃತ್ತ ಪದ್ಯವು ಏಳು ಶಾಸನಗಳಲ್ಲಿ ಬಳಕೆಯಾಗಿದೆ.

೨೬.       ಶ್ರೀಮನ್ನಾಥ ಕುಲೇನ್ದುರಿಂದ್ರ ಪರಿಷದ್ವಂದ್ಯ ಶ್ಯ್ರುತ ಶ್ರೀಸುಧಾ
ಧಾರಾಧೌತಜಗತ್ತಮೋಪಹಮಹಃ ಪಿಣ್ಡಪ್ರಕಾಣ್ಡಂ ಮಹತ್
ಉಅಸ್ಮಾನ್ನಿರ್ಮ್ಮಳಧರ್ಮ್ಮವಾರ್ದ್ಧಿವಿಪುಳ ಶ್ರೀರ್ವ್ವರ್ದ್ಧಮಾನಾ ಸತಾಂ
ರ್ಭತ್ತುಬ್ಭವ್ಯಚಕೋರ ಚಕ್ರಮವತ್ತು ಶ್ರೀವರ್ದ್ಧಮಾನೋ ಜಿನಃ
||
            [ಎ.ಕ. ೨(ಪ.) ೭೭ (೬೭). ೧೧೨೯. ಪು. ೪೨]

ಈ ಲೋಕ ಕುಟುಂಬಗಳೆಂಬ ಕಾಡಿನ ನಡುವೆ ಯಮ ಎಂಬ ಬಡಗಿ ಇದ್ದಾನೆ. ಈ ಯಮನೆಂಬ ಸ್ಥಪತಿಯು (ತಕ್ಷಕ) ಉತ್ತಮ ಮರಗಳನ್ನು (ಯೋಗ್ಯ ವೃತ್ತರಾದ ಜನರನ್ನು) ನೋಡಿ ನೋಡಿ ಕತ್ತರಿಸಿ ಹಾಕುತ್ತಾನೆ. ಈ ಶ್ಲೋಕವು ಒಂದು ಐತಿಹಾಸಿಕ ಮಹತ್ವದ ಶಾಸನದ ಹಿನ್ನೆಲೆಯನ್ನು ಹೊಂದಿದೆ. ರಾಷ್ಟ್ರಕೂಟ ಸಾಮ್ರಾಜ್ಯ ಅಸ್ತಂಗತವಾಗುವ ಹಂತದಲ್ಲಿ, ಅದರ ಕಟ್ಟ ಕಡೆಯ ಸಾಮ್ರಾಟನಾದ ನಾಲ್ಕನೆಯ ಇಂದ್ರನು, ಶ್ರವಣಬೆಳಗೊಳ ಚಿಕ್ಕಬೆಟ್ಟದಲ್ಲಿ, ಸಲ್ಲೇಖನ ವಿಧಿಯಿಂದ ಮುಡಿಪಿದ ನೆನಪಿಗೆ ನಿಲ್ಲಿಸಿದ ಶಾಸನವಿದು. ಯಮಸ್ಯ ಕರುಣಂ ನಾಸ್ತಿ – ಎಂಬಂತೆ, ಆಬಾಲ ಗೋಪಾಲವೃದ್ಧರೆನ್ನದೆ, ಬಡವಬಲ್ಲಿದ ಚಕ್ರವರ್ತಿ ಎನ್ನದೆ ಎಲ್ಲರನ್ನೂ ಪ್ರಾಣವನ್ನೂ ಕೊಂಡೊಯ್ಯುವ ‘ಯಮಧರ್ಮರಾಯ’ ನನ್ನು, ಆತನ ಕಾರ್ಯವಿಧಾನವನ್ನೂ ಈ ಶ್ಲೋಕ ಪ್ರಸ್ತಾಪಿಸಿದೆ. ಈ ಶ್ಲೋಕ ಮತ್ತಾವುದೇ ಶಾಸನಗಳಲ್ಲಿ ಬಳಕೆಯಾಗಿಲ್ಲ.

೨೮.       ಸ್ವಸ್ತಿ ಶ್ರೀಜನ್ಮಗೇಹಂ ನಿಭೃತ ನಿರುಪಮೌರ್ವ್ವಾನಳೋದ್ಧಾಮ ತೇಜಂ
ವಿಸ್ತಾರಾನ್ತಃ ಕೃತೋರ್ವ್ವೀತಳಮಮಳಯಶಶ್ಚಣ್ದ್ರ ಸಂಭೂತಿ ಧಾಮಂ

            ವಸ್ತುಭ್ರಾತೋದ್ಭ ವಸ್ಥಾನಕಮತಿಶಯ ಸತ್ವಾವಳಂಬಗಬೀರಂ
ಪ್ರಸ್ತುತ್ಯಂ ನಿತ್ಯಮಂಭೋನಿಧಿ ನಿಭಮೆಸಗುಂ ಹೊಯ್ಸಳೋರ್ವ್ವೀಶವಂಶಂ
||

[ಎ.ಕ. ೨(ಪ.) ೪೭೬ (೩೪೫) ೧೧೫೯.೦ ಪು. ೨೮೭]. ಹೊಯ್ಸಳ ರಾಜರ ಮನೆತನವು ಕಡಲಿನಂತೆ ಅತಿಶಯತೆಯಿಂದ ಶೋಭಾಯಮಾನವಾಗಿದೆ. ಅದು ಲಕ್ಷ್ಮೀಯ ಹುಟ್ಟಿದಸ್ಥಳ, ಬಡಬಾಗ್ನಿಯ ಹಾಗೆ ಅದಕ್ಕೆ ಎಣೆಯಿಲ್ಲದ ಹೊಳಪಿದೆ. ಹರಹಾದ ನೆಲದ ಉದ್ದಗಲವನ್ನು ಅದು ಆವರಿಸಿದೆ. ಒಳ್ಳೆಯ ಹೆಸರು ಪಡೆದಿರುವ ಚಂದ್ರನಿಗೆ ತವರುಮನೆ. ಉತ್ತಮ ಪದಾರ್ಥಗಳು ಹುಟ್ಟಿದ ಜಾಗ. ಹೆಚ್ಚಿನ ಕಸುವು ಇರುವಂತಹುದು, ಗಂಭೀರವಾದದ್ದು ಹಾಗೂ ಪ್ರಶಂಸಾರ್ಹವಾದದ್ದು ಈ ಹೊಯ್ಸಳ ವಂಶ. ಇದು ಸ್ರಗ್ಧರೆ ವೃತ್ತ. ಈ ಪದ್ಯದ ಇನ್ನೊಂದು ಸ್ವಾರಸ್ಯವಾದ ಸಂಗತಿಯಿದೆ: ಇದು ಸಂಸ್ಕೃತದಲ್ಲಿ ಆರಂಭವಾಗಿ ಕನ್ನಡದಲ್ಲಿ ಮುಕ್ತಾಯವಾಗಿದೆ. ಇಡೀ ವೃತ್ತದಲ್ಲಿ ಇರುವುದು ಎರಡೇ ಎರಡು ಕನ್ನಡ ಮಾತುಗಳು- ಎಸೆಗುಂ ಮತ್ತು ಹೊಯ್ಸಳ. ಇನ್ನುಳಿದ ಶೇಕಡ ತೊಂಬತ್ತು ಭಾಗ ಸಂಸ್ಕೃತಮಯ. ಶಾಸನಗಳಲ್ಲಿ ಕನ್ನಡ ಪ್ರಾರ್ಥನಾ ಪದ್ಯಗಳು ಕಡಿಮೆ; ಅಂತಹ ಕೆಲವು ವಿರಳ ಕನ್ನಡ ಪದ್ಯಗಳನ್ನು ಮುಂದೆ ಉದಾಹರಿಸಲಾಗುವುದು.

೨೯. ಸ್ವಸ್ತಿ ಶ್ರೀಜಯಾಭ್ಯುದಯಶ್ಚ ಶ್ರೀ ಸುದತೀ ವಿಭು ವಿಭವ ನಿವಾಸ …. ವಿನುತಂ ನಾತಾಳ ಸೌಖ್ಯೋದ್ಭಾಸಿ ಪರಿ ಪಾಳಿಕೀ ಜಿನಶಾಸನಮಂ ಪಾರ್ಶ್ವನಾಥನಾ….

[ಕ.ಇ. ೫, ೬೮.೧೨೦೩. ಮನಗುಂದಿ (ಮಣಿ ಗುಂದಗೆ) (ಧಾಜಿ / ತಾ)]

ಈ ತ್ರುಟಿತ ಶಾಸನ ಪದ್ಯವು ಸಂಸ್ಕೃತ ಕನ್ನಡ ಮಿಶ್ರಿತವಾದ ಮಣಿಪ್ರವಾಳ ಮಾದರಿಯಾಲ್ಲಿದೆ. ಇದು ಪ್ರಾಯಃ ಪದ್ಮಾವತೀ ದೇವಿಯ ಸ್ತೋತ್ರ ಪದ್ಯವಿರಬೇಕು. ಇದರ ಖಚಿತ ಸ್ವರೂಪ ಅಸ್ಪಷ್ಟವಾಗಿದೆ.

೩೦. ಕೆಲವು ಶಾಸನಗಳ ಆರಂಭದಲ್ಲಿ ಪ್ರಾರ್ಥನಾ ಪದ್ಯವಿರುವುದಿಲ್ಲ, ಅದರ ಬದಲಿಗೆ ಪ್ರಾರ್ಥನಾರೂಪದ ಒಂದೊಂದೇ ಸ್ತುತಿ ಹಾಗೂ ಪ್ರಣಾಮ ಶಬ್ದವಿರುತ್ತದೆ. ಕೆಲವು ನಿದರ್ಶನಗಳು: ಶ್ರೀ ವರ್ಧಮಾನಾಯ ನಮ: [ಎ.ಕ. ೨(ಪ.) ೪೯೩(೪೮೦) ಪು. ೩೧೨], ಶ್ರೀ ಚನ್ದ್ರನಾಥಾಯ ನಮಃ [ಅದೇ, ೪೯೪(೪೮೧). ಪು. ೩೧೩], ಶ್ರೀ ನೇಮಿನಾಥಾಯನಮಃ [ಅದೇ, ೪೯೫(೪೮೨) ಪು. ೩೧೪] ಶ್ರೀವೀತರಾಗಾಯನಮಃ [ಕ.ಇ.೧. ೫೧.೧೪೩೨. ಕಾಯಿ ಕಿಣಿ (ಉ.ಕ.ಜಿ/ಭಟ್ಕಳ ತಾ)] ಶ್ರೀ ಗೋಮಟೇಶಾಯ ನಮಃ [ಎ.ಕ. ೨(ಪ.) ೪೮೭ (೩೫೬). ಪು. ೩೦೮] ಇತ್ಯಾದಿ.

೩೧.       ತಾರಾಸ್ಫಾರಾಲಕೌಘೇ ಸುರಕೃತ ಸುಮನೋವೃಷ್ಟಿ ಪುಷ್ಪಾಶಯಾಲಿ
ಸ್ತೋಮಾಃ ಕ್ರಾಮಂತಿಡೃಹ ಜಧರ ಪಟಲೀಢಂಭತೋಯಸ್ಯ
ಮೂರ್ಧ್ನಿಸೋಯಶ್ರೀಗುಂಮಟೇಶ ಸ್ತ್ರಿಭುವನಸರಸೀರಂಜನೇರಾಜ
ಹಂಸೋಭವ್ಯ .. ಬಭಾನುರ್ಬೆಳುಗುಳ ನಗರೀ ಸಾಧು ಜೇಜೀಯತೀರ್ದಂ
||

[ಎ.ಕ. ೨(ಪ.) ೪೭೩ (೩೪೨) ೧೫ ಶ.ಪು. ೨೮೫] ಇದು ಸ್ಖಾಲಿತ್ಯದಿಂದ ಅಶುದ್ಧ ರೂಪದ ಸ್ರಗ್ಧರೆ ವೃತ್ತ ಪದ್ಯ. ಬೆಳಗುಳ ನಗರದಲ್ಲಿ ಗುಮ್ಮಟೇಶನು ಮೂರೂ ಲೋಕಗಳೆಂಬ ಸರೋವರದಲ್ಲಿನ ರಾಜಹಂಸವಾಗಿ ಕಂಗೊಳಿಸುತ್ತಿರುವನು. ಭವ್ಯ ರೆಂಬ ತಾವರೆಗಳಿಗೆ ಸೂರ್ಯನಂತಿದ್ದಾನೆ. ಈತನ ಚೆಲುವಾದ ಹೊಳೆಯುವ ತಲೆಯ ಮೇಲಿನ ಗುಂಗುರು ಕೂದಲಿನ ಮೇಲೆ, ಮೇಲಿಂದ ದೇವತೆಗಳು ಸುರಿದಿರುವ ಹೂಗಳಿಗೆ ಆಸೆಪಟ್ಟು ಬರುವ ದುಂಬಿಗಳ ಸಮೂಹವು ಮೋಡಗಳಂತೆ ಮುತ್ತಿಕೊಂಡಿವೆ.

೩೨. ಪ್ರಾರ್ಥನಾ ಪದ್ಯಗಳಲ್ಲಿ ಸಂಸ್ಕೃತಕ್ಕೆ ಸಿಂಹಪಾಲು. ಇಡೀ ಶಾಸನದ ಒಕ್ಕಣೆ ಕನ್ನಡದಲ್ಲಿರುವಾಗಲೂ ಶಾಸನದ ಮುಡಿಗೆ ಇಡುವುದು ಸಂಸ್ಕೃತ ಕುಸುಮವನ್ನೆ. ಆದರೆ ಈ ನಿಯಮವನ್ನು ಸಾರ್ವತ್ರಿಕವೆಂದು ಸಾರಾಸಗಟು ತೀರ್ಮಾನಿಸುವಂತಿಲ್ಲ. ಅಲ್ಲಲ್ಲಿ ಕನ್ನಡದ ದವನ, ಮರುಗ, ಪತ್ರೆಯನ್ನು ಸಂಸ್ಕೃತ ಸ್ತುತಿ ಮಾಲೆಯಲ್ಲಿ ಸೇರಿಸಲಾಗಿದೆ. ಅಪರೂಪವಾಗಿ ಬಳಕೆ ಆಗಿರುವ ಕೆಲವು ಕನ್ನಡ ಪದ್ಯಗಳನ್ನು ಉದಾಹರಿಸುತ್ತೇನೆ.

ಸ್ವಸ್ತಿ ಸಮಸ್ತ ಲಸದ್ಗುಣ
ವಸ್ತು ವಿರಾಜಿತರಪಾರ ಭವವಾರ್ದ್ಧಿತಡಿ
ನಿಸ್ತರಣ ಕಾರಣ್.
ಸ್ತುತ್ಯನೆಗಱ್ದ ಕೊಂಡ ಕುಂದಾಚಾರ್ರ್ಯರ್
||

ಚತುರ ಕುಳವಾರಣನೆನಿ
ಪತಿಶಯಮಂ ತಳೆದ ಕೊಂಡಕುಂದಾಚಾರ್ಯ್ಯ
ವ್ರತಿಪರ ಶಿಷ್ಯರನೇಕ
ರ್ಪ್ರತಿ ಶಿಷ್ಯರ್ಪ್ಪಲಬರಾದರವರನ್ವಯದೊಳೆ
||

ಎಣಿಕೆಗೆ ಮಿಗಿಲೆನಿಸಿದ ಗುಣ
ಗಣನಿಧಿಗಳ್ನೆಗೞ್ದಗೃದ್ಧ ಪಿಞ್ಛಾಚಾರ್ಯ
ರ್ಗ್ಗಣಧರ ಸದೃಶರ್ದ್ದೇಸಿಗ
ಗಣಧರರನದ್ಯದರೆಸೆದರಖಿಳಾವನಿಯೊಳ್
||
ಕಲ್ಬುರ್ಗಿ ಜಿಲ್ಲೆಯ ಶಾಸನಗಳಿ(೧೯೯೬): ಕುಳಗೇರಿ ೨೨: ೧೧೩೮. ಸಾಲು : ೧-೫]

ಶ್ರೀಗೊಂಮಟ ಜಿನನಂ ನರ
ನಾಗಾಮರ ದಿತಿಜ ಖಚರ ಪತಿ ಪೂಜಿತನಂ
ಯೋಗಾಗ್ನಿ ಹತಸ್ಮರನಂ
ಯೋಗಿಧ್ಯೇಯನನಮೇಯನಂ ಸ್ತುತಿಯಿಸುವೆಂ
||
[ಎ.ಕ.೨ (ಪ.) ೩೩೬ (೨೩೪) ೧೨ ಶ.ಪು. ೧೮೬. ಬೊಪ್ಪಣ ಪಂಡಿತ]

ಶ್ರೀದೇವೇಂದ್ರನತಶ್ರೀ
ಪಾದಂ ಶ್ರೀಪದ ವಿನಮ್ನ ಭವ್ಯಜನಂಗ
ಳ್ಗಾದರದಿಂ ದಯೆಗೆಯ್ಗೆಶು
ಭೋದಯಮಂ ಮುಕ್ತಿ ವಲ್ಲಭಂ ಮಲ್ಲಿಜಿನಂ
||
[ಎ.ಕ ೯(ಪ.) ಬೇ೪೦೩ (೧೫ ಬೇ ೩೩೫). ೧೨-೧೩ ಶ. ಬಸ್ತಿಹಳ್ಳಿ (ಹಾಜಿ / ಬೇತಾ) ಪು. ೩೬೯]

ಭಯ ಲೋಭದ್ವಯದೂರನಂ ಮದನಘೋರಧ್ವಾಂತ ತೀಬ್ರಾಂಶುವಂ
ನಯನಿಕ್ಷೇಪಯುತ ಪ್ರಮಾಣ ಪರಿನಿರ್ಣ್ನೀತಾರ್ತ್ಥ ಸಂದೋಹನಂ
ನಯನಾನನ್ದನ ಶಾಂತಕಾಂತ ತನುವಂ ಸಿದ್ಧಾಂತ ಚಕ್ರೇಶನಂ
ನಯಕೀರ್ತ್ತಿ ಬ್ರತಿ ರಾಜನಂ ನೆನೆದೊಡಂ ಪಾಪೋತ್ಕರಂ ಪಿಂಗುಗಂ
||

[ಎ.ಕ. ೨(ಪ.) ೪೫೫ (೩೩೩) ೧೩೦ ಶ. ದ ಆರಂಭಕಾಲ. ಪು. ೨೭೬]. ಇದು ಮತ್ತೇಭ ವಿಕ್ರೀಡಿತ ವೃತ್ತ ಪದ್ಯ. ಹೆದರಿಕೆ ಹಾಗೂ ದುರಾಶೆ ಎಂಬ ಎರಡೂ ಇಲ್ಲದವನೂ, ಮನ್ಮಥನೆಂಬ ದೊಡ್ಡ ಕತ್ತಲೆಗೆ ಸೂರ್ಯನೂ, ಚರ್ಚೆ (ವಾದ) ಹಾಗೂ ಅಧಿಕಾರದಿಂದ ತೀರ್ಮಾನಿಸಿದ ಜ್ಞಾನಿಯೂ, ಕಣ್ಣಿಗೆ ಹಬ್ಬವಾಗುವಂತಹ ಪ್ರಶಾಂತವೂ ಕಾಂತಿಮಯವೂ ಆದ ದೇಹವುಳ್ಳವನೂ, ಸ್ಯಾದ್ವಾದ ಸಿದ್ಧಾಂತದಲ್ಲಿ ಪೂರ್ಣ ಪ್ರಭುತ್ವವುಳ್ಳವನೂ, ಮುನಿಗಳಿಗೆ ರಾಜನೂ, ಹೆಸರು ಹೇಳಿದೊಡನೆ ಪಾಪಗಳೆಲ್ಲ ಹಿಂಗಿಹೋಗುವಂತಹವನೂ ಆದವನು ನಯಕೀರ್ತಿ ಮುನಿರಾಜನು.

            ಕವಿನಿವಹಸ್ತುತಂ ನೆಗಳ್ದ ರೇಚ ಚಮೂಪತಿಯಿಂ ಬಳಿಕ್ಕಮಾ
ಭುವನದೊಳಿಂತನಂತ ಜಿನಧರ್ಮ್ಮವನುದ್ಧರಿಪರ್ದ್ಧ ರೇಚನಂ
ಸುವಿದಿತಮಾಗೆ ಬಾಂಧವಪುರಾಧಿಪಶಾನ್ತಿ ಜಿನೇಶ ತೀರ್ತ್ಥಮಂ
ಕವಡೆಯ ಬೊಪ್ಪನುದ್ಧರಿಸಿದಂ ಮದುವಲ್ಲಭ ರಾಜ್ಯ ಭೂಷಣಂ
||

[ಎ.ಕ. ೭-೧, ಶಿಕಾರಿ. ೨೨೫. ೧೨೦೩-೦೪. ಬಂದಳಿಕೆ. ಪು.೩೦೧. ಸಾಲು : ೧-೯]. ಈ ಚಂಪಕಮಾಲಾವೃತ್ತವು ಕವಡೆಯ ಬೊಪ್ಪನೊಬ ಸಾಮಂತನನ್ನು ಸ್ತುತಿಸಿರುವ ಪದ್ಯ.

ಮೇಲಿನ ಪದ್ಯದ ಮಾದರಿಯಲ್ಲಿ, ಶಾರ್ದೂಲ ವಿಕ್ರೀಡಿತ ಛಂದಸ್ಸಿನಲಿ, ಒಬ್ಬ ಹೆಂಗಸನ್ನು ಹೊಗಳಿ ವರ್ಣಿಸಿರುವ ಒಂದು ಶಾಸನ ಪದ್ಯವಿದು-

ಶ್ರೀಮಜೈನ ಪದಾಂಬುಜಾತ ಜನಿತೆ ಶ್ರೀಕಾಂತ ಯಂಬಂದದಿಂ
ಭೂಮಿ ಪ್ರಸ್ತುತೆ ದಾನಧರ್ಮ್ಮ ……………
ಕಾಮಾಸ್ತ್ರ ಪ್ರವಿಭಾಸಿ ರೂಪಿನಲೆವಾಸತಿಯ ……………
……………………………..ಕ್ಕಂಜಗ
ಕ್ಕೇಮಾತಂದಿನ ಸೀತೆಯಿಂ. ವಾಗ್ಧೇವಿ …..ಯಿಂದಗ್ಗಳಂ
||

[ಎ.ಕ. ೭-೧, ಶಿಕಾರಿ. ೨೦೦.೧೧೯೦. ಬಳ್ಳಿಗಾವೆ. ಪು. ೨೯೨] ಅಲ್ಲಲ್ಲಿ ತುಂಬ ಮುಕ್ಕಾಗಿರುವ ಈ ಶಾಸನದಲ್ಲಿ ಸ್ತುತೆಯಾದ ಸ್ತ್ರೀ ಯಾರೆಂಬುದು ಈ ವೃತ್ತ ಪದ್ಯದಿಂದ ತಿಳಿಯದಾದರೂ, ಇದರ ಮುಂದಿನ ಪದ್ಯಭಾಗದಿಂದ ಆಕೆಯ ಹೆಸರು ಶಾಂತಲೆ (ಸಾಂತವ್ವೆ) ಯೆಂದೂ, ಆಕೆ ಸಂಕಯನಾಯಕ -ಮುದ್ದವ್ವೆಯರ ಮಗಳೆಂದೂ, ಬಳ್ಳಿಗಾವೆಯ ಸುಪ್ರಸಿದ್ಧ ಶಾಂತೀಶ್ವರ ಜಿನರ ಭಕ್ತವೆಂದೂ, ನಯಕೀರ್ತಿದೇವ ಮುನಿಯ ಶಿಷ್ಯಳೆಂದೂ ತಿಳಿದು ಬರುತ್ತದೆ.

            ಶ್ರೀಮತ್ಸುಪಾರ್ಶ್ವದೇವಂ
ಭೂಮಹಿತಂ ಮಂತ್ರಿ ಹುಳ್ಳರಾಜಂಗಂ ತ
ದ್ಫಾಮಿನಿ ಪದ್ಮಾವತಿಗಂ
ಕ್ಷೇಮಾಯುರ್ವ್ವಿಭವವೃದ್ಧಿಯಂ ಮಾಳ್ಕಭವಂ
||
[ಎ.ಕ. ೨(ಪ.) ೪೭೭ (೩೪೬). ೧೧೫೯. ಪು. ೨೯೧] ಸಚಿವ, ಮಹಾಭಂಡಾರಿ ಹುಳ್ಳರಾಜ ಮತ್ತು ಪದ್ಮಾವತಿ ದಂಪತಿಗಳನ್ನು, ಆಯುಸ್ಸು ವೈಭವಗಳನ್ನು ಹೆಚ್ಚಿಸಲಿ ಎಂದು ಸುಪಾರ್ಶ್ವದೇವನನ್ನು ಪ್ರಾರ್ಥಿಸಿದೆ; ಸುಪಾರ್ಶ್ವನನ್ನು ಕುರಿತ ಪದ್ಯಗಳೂ, ಬಸದಿಗಳೂ ತುಂಬ ಕಡಿಮೆಯೆಂಬ ಹಿನ್ನೆಲೆಯಲ್ಲಿ ಈ ಕಂದ ಪದ್ಯಕ್ಕೆ ಪ್ರಾಮುಖ್ಯವಿದೆ.

ವಿದ್ಯಾನಂದ ಸ್ವಾಮಿಯ
ಹೃದ್ಯೋಪನ್ಯಾಸವಾಣಿ ಧರೆಯೊಳಗೆಂದುಂ
ಮಾದ್ಯದ್ವಾರಿಗಜೇಂದ್ರರ
ಭೇದ್ಯೋದ್ಧುರ ಸಿಂಹ ವಿರುತಿಯಂತೆವೋಲೆಸೆಗುಂ
||

            ಸ್ಥಿತಿಯೊಳ್ವಿದ್ಯಾನಂದ
ವ್ರತಿಪತಿ ಮುಖಜಾತವಾಣಿ ವಿಬುಧರ ಮನದೊ
ಳ್ಸತತಂ ರಂಜಿಸುತಿರ್ಕ್ಕುಂ
ಬ್ರತಿವಿರಹಿತ ಕಾಂತರಚಿತ ಭಾಷ್ಯದ ತೆರಿದಿಂ
||

            ವಿದ್ಯಾನಂದ ಸ್ವಾಮ್ಯನ
ವದ್ಯೋಪನ್ಯಾಸ ಮುದ್ರೆ ಕವಿಗಳ ಮನದೊಳ್
ಸದ್ಯಂ ಸುಖಕರಬಾಣನ
ಗದ್ಯಾತ್ಮಕಾವ್ಯದಂತೆ ರಂಜಿಸಿ ತೋರ್ಕುಂ
||

[ಹೊಂಬುಜ ಶಾಸನಗಳು (೧೯೯೭). ೧೨ (೮ ನಗರ ೪೬). ೧೫೨೬, ಪು. ೯೨]. ಈ ಮೂರು ಪದ್ಯಗಳು ಕಾವ್ಯಶಕ್ತಿ, ವ್ಯಾಖ್ಯಾನ ಸಾಮರ್ಥ್ಯ, ವಾದಚಾತುರ್ಯ ಸಿದ್ಧಿಸಿದ ವಾದಿವಿದ್ಯಾನಂದ ಮುನಿಯ ಸ್ತುತಿಪರವಾಗಿವೆ: ‘೧೬ನೆಯ ಶತಮಾನದಲ್ಲಿನ ಕರ್ನಾಟಕದ ರಾಜ್ಯದಲ್ಲಿ ವಿದ್ಯಾನಂದರ ಗಾಢವಾದ ಪ್ರಭಾವ, ಉನ್ನತವಾದ ಸರ್ವಂಕಷ ವ್ಯಕ್ತಿತ್ವ ಪಡೆನುಡಿಯಾಗಿ ಕೇಳುತ್ತಿತ್ತು, ಕಾಣುತ್ತಿತ್ತು. ಅವರ ಬಹುಮುಖಿ ಸಾಧನೆಗಳು ದೀರ್ಘ ಪರಿಣಾಮವನ್ನು ಹೊಂದಿದ್ದುವು. ಧಾರ್ಮಿಕ ಕ್ಷೇತ್ರದಲ್ಲಂತೂ ವಾದಿ ವಿದ್ಯಾನಂದರು ಸೀಮಾಪುರುಷರಾಗಿದ್ದರು’ [ನಾಗರಾಜಯ್ಯ, ಹಂಪ. : ಸಾಂತರರು- ಒಂದು ಅಧ್ಯಯನ, ೧೯೭೭, ೧೬೬]

ಇದುವರೆಗೆ ಕರ್ನಾಟಕದ ಜೈನ ಶಾಸನಗಳ ಆರಂಭದಲ್ಲಿ ಬರುವ ಪ್ರಾರ್ಥನಾ ರೂಪದ ಮಂಗಳ ಪದ್ಯಗಳ ಒಂದು ಸ್ಥೂಲ ಸಮೀಕ್ಷೆ ಮಾಡಿ, ಈ ಮಾಹಿತಿಗಳನ್ನು ಒದಗಿಸಿದ್ದೇನೆ; ಇವಲ್ಲದೆ ಇನ್ನೂ ಹತ್ತಾರು ಪದ್ಯಗಳಿವೆ. ಅಲ್ಲದೆ ಜೈನ ಶಾಸನಗಳ ಆರಂಭದಲ್ಲಿ ಜಿನಸ್ತುತಿಗಳಿಲ್ಲದ ಶಾಸನಗಳೆಲ್ಲ ಅಜೈನ ಶಾಸನಗಳೆಂದು ಸಾರಾಸಗಟಾಗಿ ಐತೀರ್ಪು ಕೊಡುವಂತಿಲ್ಲ. ಆರಂಭದಲ್ಲಿ ಜಿನಸ್ತುತಿಯೇ ಇರದ ಅನೇಕ ಜೈನಪರವಾದ ಶಾಸನಗಳೂ ಇವೆಯೆಂಬುದನ್ನು ಅತ್ತಿ ತೋರಿಸುವುದಕ್ಕೆಂದು ಕೆಲವು ಶಾಸನ ಸಂಖ್ಯೆಗಳನ್ನಷ್ಟೆ ಉದಾಹರಿಸುತ್ತೇನೆ:

೧. ಸೌ.ಇ.ಇ. ೧೮, ೭೯.೧೦೭೪.

೨. ಸೌ.ಇ.ಇ. ೧೧-೧, ೫. ೭೫೨. ಅಣ್ಣಿಗೇರಿ.

೩. ಅದೇ, ೩೪. ೯೨೫. ಅಸುಂಡಿ. ೪. ಅದೇ. ೩೮.೯೫೦. ನರೇಗಲ್

೪. ಸೌ.ಇ.ಇ.೨೦, ೪. ೬೮೩. ಲಕ್ಷ್ಮೇಶ್ವರ.

ಈ ಶಾಸನಗಳ ಸಮೀಕ್ಷೆತ ಫಲವಾಗಿ ಕೆಲವು ನಿರ್ಣಯರೂಪದ ನಿಲುಮೆಗೆ ಅವಕಾಶವಿದೆ:

೧. ಶಾಸನಗಳ ಆರಂಭದಲ್ಲಿ ದೊರೆಯುವ ಪ್ರಾರ್ಥನಾ ಪದ್ಯಗಳು ಅಭ್ಯಾಸಯೋಗ್ಯ ಸಾಮಗ್ರಿಯನ್ನು ಒಳಗೊಂಡಿವೆ; ಆ ಪದ್ಯಗಳಿಗೆ ಹಲವು ಆಯಾಮಗಳಿವೆ.

೨. ಕರ್ನಾಟಕದಲ್ಲಿರುವ, ಸುಮಾರು ಎರಡು ಸಾವಿರ ಜೈನಶಾಸನಗಳಲ್ಲಿ ಸಿಗುವ, ಪ್ರಾರ್ಥನಾ ಪದ್ಯಗಳಲ್ಲಿ ಪುನರುಕ್ತಿಯಿರುವಂತೆ ವೈವಿಧ್ಯವೂ ಇದೆ.

೩. ಕೆಲವು ನಿರ್ದಿಷ್ಟ ತೀರ್ಥಂಕರರಿಗೆ (ಮಹಾವೀರ, ಪಾರ್ಶ್ವನಾಥ, ಮಲ್ಲಿನಾಥ) ಅನ್ವಯಿಸಿವೆ.

೪. ಕೆಲವು ಎಲ್ಲ ತೀರ್ಥಂಕರರಿಗೂ ಅನ್ವಯಿಸುವ ಹಾಗೆ ಸಾಧಾರಣೀಕರಿಸಿವೆ.

೫. ಜಿನರಿಗೆ ಅಲ್ಲದೆ ಜೈನ ಆಚಾರ್ಯರನ್ನು ಸ್ತುತಿಸಿದ ಪದ್ಯಗಳಿವೆ.

೬. ಪುರಾಣ ಪುರುಷರಿಗೇ ಅಲ್ಲದೆ ಐತಿಹಾಸಿಕವಾಗಿ ಆಗಿಹೋದ ವಿಶಿಷ್ಟ ವ್ಯಕ್ಯಿಗಳನ್ನು ಸ್ತುತಿಮಾಡಿದ ಪದ್ಯಗಳೂ ಇವೆ.

೭. ಜಿನರ ಸ್ತುತಿಯಾಗಲಿ, ಜೈನ ಆಚಾರ್ಯರ ಸ್ತುತಿಯಾಗಲಿ ಆಗಿರದೆ ಬೇರೆ ರಾಜ, ಸಾಮಂತ ಮೊದಲಾದ ವ್ಯಕ್ತಿಗಳ ಸ್ತುತಿ ಇರುವ ಪದ್ಯಗಳೂ ಇವೆ

೮. ಕರ್ನಾಟಕದ ಶಾಸನಗಳಲ್ಲಿ ಪ್ರಾಕೃತ ಪ್ರಾರ್ಥನಾ ಪದ್ಯಗಳು ಬಳಕೆಯಾಗಿಲ್ಲ; ಜೈನರ ಮೂಲ ಆಗಮಗಳು ಪ್ರಾಕೃತದಲ್ಲಿದ್ದು, ಇಲ್ಲಿನ ಶಾಸನಗಳಲ್ಲಿ ಪ್ರಾಕೃತವನ್ನು ಕೈಬಿಟ್ಟಿರುವುದು ಗಮನಾರ್ಹವಾಗಿದೆ. ಶಾಸನ ರಚಿಸಿದವರಿಗೆ ಪ್ರಾಕೃತದಲ್ಲಿ ಪ್ರವೇಶವಿಲ್ಲದಿರುವುದೇ ಇದಕ್ಕೆ ಮುಖ್ಯಕಾರಣ.

೯. ಇಡೀ ಶಾಸನ ಸಂಸ್ಕೃತದಲ್ಲಿರುವುದು, ಕಡಿಮೆ ಸಂಖ್ಯೆಯಲ್ಲಿವೆ. ಕನ್ನಡ ಶಾಸನಗಳೇ ಅಧಿಕ ಪ್ರಮಾಣದಲ್ಲಿರುವುದು ಜೈನರು ಜನಭಾಷೆಗೆ ತೋರಿದ ತೋರಿದ ಮನ್ನಣೆಗೆ ಸಾಕ್ಷಿ. ಸಾದ್ಯಂತವಾಗಿ ಕನ್ನಡದಲ್ಲಿರುವ ಶಾಸನಗಳಲ್ಲೂ ಒಮ್ಮೊಮ್ಮೆ ಪ್ರಾರ್ಥನಾ ಪದ್ಯವೇ ಅಲ್ಲದೆ ನಡುವೆಯೂ ಸಂಸ್ಕೃತ ಪದ್ಯಗಳನ್ನು ಬಳಸುವುದುಂಟು.

೧೦. ತೀರ್ಥಂಕರರ, ಜೈನಾಚಾರ್ಯರ, ಅಥವಾ ಯಾವುದೇ ಜೈನಪರವಾದ ಪದ್ಯಗಳು ಇರದ ಜೈನ ಶಾಸನಗಳೂ ಇವೆ.

೧೧. ಸಂಸ್ಕೃತ ಲಿಪಿಯಲ್ಲಿರುವ ಶಾಸನಗಳು ಕಡಿಮೆ; ಸಂಸ್ಕೃತ ಶಾಸನಗಳನ್ನು ಸಹ ಕನ್ನಡ ಅಕ್ಷರಗಳಲ್ಲಿ ಬರೆದಿರುವುದು ಹೆಚ್ಚು.

೧೨. ಅತ್ಯಂತ ಪ್ರಸಾರಾಧಿಕ್ಯವಿರುವ ಶ್ರೀಮತ್ + ಪರಮಗಂಭೀರಸ್ಯಾದ್ವಾದಾ ಮೋಘ ಎಂಬ ಶ್ಲೋಕವನ್ನು ಶಾಸನದ ಆರಂಭದಲ್ಲಿಯೇ ಅಲ್ಲದೆ ಕೆಲವು ಶಾಸನಗಳಲ್ಲಿ ಎರಡನೆಯ ಅಥವಾ ಮೂರನೆಯ ಅಥವಾ ಶಾಸನದ ನಡುವೆ ಉಪಯೋಗಿಸಿರುವುದೂ ಉಂಟು.

೧೩. ಸಂಸ್ಕೃತ ಪ್ರಾರ್ಥನಾ ಪದ್ಯಗಳ ಸ್ರಸಾರಾಧಿಕ್ಯವಿದ್ದರೂ ಕನ್ನಡ ಪ್ರಾರ್ಥನಾ ಪದ್ಯಗಳನ್ನೂ ಬಳಸಲಾಗಿದೆ.

೧೪. ಸಾಮಾನ್ಯವಾಗಿ ಒಂದೇ ಪ್ರಾರ್ಥನಾ ಪದ್ಯವನ್ನು ಸೇರಿಸುವುದು ರೂಢಿಯಾದರೂ ಕೆಲವೊಮ್ಮೆ ಎರಡು, ಮೂರು, ನಾಲ್ಕು ಪ್ರಾರ್ಥನಾ ಪದ್ಯಗಳನ್ನು ಅಳವಡಿಸುವುದುಂಟು.

೧೫. ಪುನರುಕ್ತಿಯಾಗಿರುವ ಕೆಲವು ಪದ್ಯಗಳಲ್ಲಿ ಪಾಠಾಂತರಗಳೂ ಇವೆ.

೧೬. ಇಡೀ ಪದ್ಯವನ್ನು ಬಳಸದೆ ಒಮ್ಮೊಮ್ಮೆ ಶ್ಲೋಕಾರ್ಧವನ್ನಷ್ಟೇ ಇಡಲಾಗಿದೆ.

೧೭. ಸ್ಖಾಲಿತ್ಯಗಳಿರುವ ಪದ್ಯಗಳೂ ಕಂಡುಬಂದಿವೆ. ಪೂರ್ಣತ್ರುಟಿತ, ಅರೆಮುಕ್ಕಾದ, ಸ್ವಲ್ಪ ಮಾತ್ರ ನಷ್ಟವಾದ ಪದ್ಯಗಳೂ ಇವೆ.

೧೮. ಛಂದಸ್ಸಿನ ದೃಷ್ಟಿಯಿಂದ ಶ್ಲೋಕಗಳ ಪ್ರಸಾರ ಅಧಿಕತರವಾಗಿದ್ದರೂ ವೈವಿಧ್ಯವೂ ಇದೆ. ಸ್ರಗ್ಧರೆ, ಶಾರ್ದೂಲ ವಿಕ್ರೀಡಿತ, ಮಾಲಿನಿ, ರಥೋದ್ಧತ, ಇಂದ್ರವಜ್ರ, ಚಂಪಕಮಾಲೆ ಜಾತಿಗೆ ಸೇರಿದ ವೃತ್ತಗಳಿವೆ.

೧೯. ಐತಿಹಾಸಿಕ ಮಹತ್ವದ ಪದ್ಯಗಳ ಹಾಗೆಯೇ ಧಾರ್ಮಿಕ, ಸಾಂಸ್ಕೃತಿಕ ಪ್ರಾಮುಖ್ಯದ ಪದ್ಯಗಳೂ ಇವೆ.

೨೦. ಆಕರ ತಿಳಿದಿರುವ ಪದ್ಯಗಳಿಗಿಂತಲೂ ಆಕರ ಗೊತ್ತಿಲ್ಲದ ಪದ್ಯಗಳು ಅಧಿಕ, ಕೆಲವು ಪದ್ಯಗಳನ್ನು ಆಯಾ ಶಾಸನ ಕವಿಯೇ ರಚಿಸಿರುವುದುಂಟು; ಕನ್ನಡ ಪದ್ಯಗಳ ವಿಚಾರದಲ್ಲಿ ಈ ಮಾತು ದಿಟ.

೨೧. ಪರಮತ, ಅನ್ಯಧರ್ಮ ಪ್ರತಿಭಟನೆಯನ್ನು ಧಿಕ್ಕರಿಸುವ ಧೃತಿಯ ಧ್ವನಿಯೂ ಕೆಲವು ಪದ್ಯಗಳಲ್ಲಿ ಅನುರಣನಗೊಂಡಿದೆ.

೨೨. ಸ್ವಧರ್ಮಪರಾಕು, ಸ್ವಮತ ನಿಷ್ಠೆ ಹೆಪ್ಪುಗಟ್ಟಿರುವ ಪದ್ಯಗಳಲ್ಲಿ ಕೂಡ ಅನ್ಯಮತಧರ್ಮಗಳ ನಿಂದನೆ ಇಲ್ಲ.

೨೩. ಕನ್ನಡ ಪದ್ಯಗಳಲ್ಲಿ ಕಂದ ಪದ್ಯಗಳು ಹೆಚ್ಚು ಬಳಕೆಯಾಗಿರುವಂತೆ ತೋರುತ್ತದೆ.