೧. ನೆಲಹೊಲ ನಿವೇಶಣಗಳನ್ನು ಅಳೆಯಲು ನಾನಾ ಅಳತೆಗೋಲನ್ನು ಶಾಸನಗಳು ಹೆಸರಿಸುತ್ತ ಬಂದಿವೆ. ಅಂತಹ ನೂರಾರು ಪ್ರಯೋಗಗಳನ್ನು ಅನುಲಕ್ಷಿಸಿ, ಅವನ್ನು ಅಧ್ಯಯನದ ಸೌಕರ್ಯಕ್ಕಾಗಿ ಮೂರು ತೆರನಾಗಿ ವರ್ಗಿಕರಿಸಬಹುದು.

            ಅ. ಪ್ರಮಾಣವಾಚಿಯಾದ ಅಳತೆಕೋಲುಗಳು.
ವತ್ತುಗೇಣ ಘಳೆಯ ಕೋಲಲು ಮೇರೆಯಾಗಿ

[ಸೌ.ಇ.ಇ. ೧೫, ೫೭.೧೧೮೪. ದಂಬಳ (ಧಾಜಿ / ಮುಂಡರಗಿ ತಾ) ಪು. ೭೮ ಸಾಲು: ೮೨]

            ವತ್ತೆರಡು ಗೇಣ ಕೋಲು ಕೊಟ್ಟ
[ಅದೇ, ೩೯.೧೧೪೮. ಶಿರೂರ (ಬಿಜಾಪುರಜಿ / ಬಾಗಲಕೋಟೆ ತಾ) ಪು. ೫೧]
ರಾಜಹಸ್ತದಲೆಕ್ಕಯ್ಯಗಲ ಇಪ್ಪತ್ತೊಂದುಕೈ ನೀಳ [ಸೌ.ಇ.ಇ. ೨೦, ೨೪೮, ೧೨೨೮, ಸೌಂದತ್ತಿ. ಪು. ೩೦೮. ಸಾಲು ೬೮]

ಆ. ಸ್ಥಳವಾಚಿಯಾದ ಅಳತೆ ಕೋಲುಗಳು.
ಅಂತು ಅಂಣ್ನಿಗೆಱೆಯ ಕೋಲೊಳು ಬಿಟ್ಟು
            [ಅದೇ, ೫೪, ಸು. ೧೧೫೭. ಮಲ್ಲಸಮುದ್ರ (ಧಾಜಿ / ಗದಗತಾ) ಪು. ೭೧. ಸಾಲು : ೧೪]

            ನವಿಲ್ಗುಂದಗೋಲಿನಳೆದು ಸರ್ವನಮಸ್ಯವಾಗಿ ಕೊಟ್ಟ
[ಸೌ.ಇ.ಇ. ೨೦, ೨೪೮. ೧೨೨೮. ಸೌಂದತ್ತಿ (ಬೆಳಗಾವಿ ಜಿ. /) ಪು. ೩೦೮. ಸಾಲು : ೭೭]

ಇ. ವ್ಯಕ್ತಿವಾಚಿಯಾದ ಕೋಳುಗಳು.
ಧಾರಾಪೂರ್ವ್ವಕಮ್ಮಾಡಿ ದೇವರ ಪೊಲದಿಂ ಮೂ
ಣಂಗಳೇಳು ದಾನಚಿನ್ತಾಮಣಿಯ ಘಳೆಯ

[ಸೌ.ಇ.ಇ. ೧೫, ೫೯೬.೧೨ ಶ ಕುಂಟೋಜಿ (ಬಿಜಾಪುರಜಿ / ಮುದ್ದೇಬಿಹಾಳತಾ) ಪು. ೩೯೦. ಸಾಲು : ೭ – ೮]

            ಮೂವತ್ತು ಗೇಣು ಬಾಚಿ ವಿಡಿಯಲು
ದಾನಚಿಂತಾಮಣಿಯ ಗಳೆಯೆನಿಸುವ
ಆ ಘಳೆಯಲು

            [ಸೌ. ಇ.ಇ.೧೮, ೩೮೧.೧೨೭೮. ಬಿಜಾಪುರ ಮ್ಯೂಸಿಯಂ. ಪು. ೪೬೨. ಸಾಲು : ೪೯ – ೫೧]
            ಒಱಂಟರ ಮಲ್ಲನ ಘಳೆಯೊಳ್ ಅಳೆದು ಬಿಟ್ಟ ಕರಿಯ ನೆಲಂ

[ಎ.ಇ. ೧೨. ೩೨ – ಬಿ. ೧೦೭೭. ಪು. ೨೮೩ : ಸಾಲು : ೯]

            ಬಿಟ್ಟಕೆಯಿ ವೊಱಂಟನ ಮಲ್ಲನ ಕೋಲ ಮತ್ತರು
            [ಅದೇ, ೩೭ – ಎಫ್. ೧೧೨೫. ಪು. ೩೩೫ – ೩೬, ಸಾಲು : ೯]

ಕೋಲು ಎಂಬುದು ಭೂಮಿಯ ಅಳತೆಗಾಗಿ ಬಳಸುವ (ಬಿದಿರ) ಕಡ್ಡಿ. ಇದು ಅಚ್ಚಕನ್ನಡದ ಮಾತು. ಇದರ ಸಮಾರ್ಥಾಕ ಶಬ್ದವಾಗಿ ಗೞೆ – ಗಳೆ ಎಂಬ ಶಬ್ದವನ್ನೂ ಬಳಸುವರು, ಅಚ್ಚಕನ್ನಡ ಮಾತಾದ ಇದು ಕೂಡ ಭೂಮಿಯನ್ನು ಅಳೆಯುವ ಒಂದು ಅಳತೆಗೋಲು.

ಮೇಲಿನ ಅಳತೆಗೋಲುಗಳಲ್ಲಿ ವ್ಯಕ್ತಿಯ ಬಿರುದನ್ನೇ ಹೊತ್ತಿರುವ ಕಡೆಯ ಎರಡು ಅಳತೆ ಕಡ್ಡಿಗಳು, ಕನ್ನಡ (ಶಾಸನ) ಸಾಹಿತ್ಯ ಮತ್ತು ಸಂಸ್ಕೃತಿಯ ಸಂದರ್ಭದಲ್ಲಿ ಐತಿಹಾಸಿಕ ಮಹತ್ವವನ್ನು ಪಡೆದಿವೆ. ಚಾಳುಕ್ಯ ಸಾಮ್ರಾಜ್ಯವನ್ನು ಸ್ಥಾಪಿಸಿದ, ಇನ್ನೂರು ವರ್ಷಗಳ ಹಿಂದೆ ವೈಭವದಿಂದ ಆಳಿ ನರೆಗೆ ಸರಿದಿದ್ದ, ಬಾದಾಮಿ ಚಾಳುಕ್ಯ ಮನೆತನಕ್ಕೆ ಮರುಹುಟ್ಟು ಕರುಣಿಸಿದ ಸಾಮ್ರಾಟ ಇಮ್ಮಡಿ ತೈಲಪನಿಗೂ, ಈತನ ಮಗ ಇೞೆವ ಬೆಡಂಗ ಸತ್ಯಾಶ್ರಯನಿಗೂ, ಬಲಗೈ ಬಂಟರಾಗಿ ಜೀವ ತೆತ್ತ ಸಾಹಸಿಗರ ಕುಟುಂಬ ದಾನ ಚಿಂತಾಮಣಿ ಅತ್ತಿಮಬ್ಬೆಯದು. ಚಿಕ್ಕಪ್ಪ ಪುನ್ನಮಯ್ಯನು ಚಾಳುಕ್ಯ ಚಕ್ರಾಧಿಪತ್ಯದ ಪರವಾಗಿ ಕಾವೇರಿ ಸರಿತ್ತಿನ ತೀರದಲ್ಲಿ ಹೋರಾಡುತ್ತ ಮಡಿದನು. ಅತ್ತಿಮಬ್ಬೆಯ ಗಂಡ ನಾಗದೇವನೂ ರಣರಂಗದಲ್ಲಿ ವೀರಮರಣ ಪಡೆದನು. ಅತ್ತಿಮಬ್ಬೆಯ ತಂದೆ ಮಲ್ಲಪ, ಮಾವ ದಲ್ಲಪ, ಒಡಹುಟ್ಟಿದ ಗುಂಡಮಯ್ಯ ಎಳಮಯ್ಯ ಆಹವಮಲ್ಲ ಪುನ್ನಮಯ್ಯ, ವಲ್ಲ ಎಂಬ ಅಯ್ವರು, ಮಗ ಅಣ್ನಿಗ ದೇವ – ಎಲ್ಲರೂ ಚಾಳುಕ್ಯ ಸಾಮ್ರಾಜ್ಯದ ಸೇನೆಯಲ್ಲಿ ಮಿಂಚಿದವರು. ಈ ವಂಶದ ಸಾಹಸ ತ್ಯಾಗ ಹೋರಾಟ ದಾನಾದಿಗಳನ್ನು ಪೊನ್ನನು ಶಾಂತಿಪುರಾಣದಲ್ಲಿ, ರನ್ನನು ಅಜಿತಪುರಾಣದಲ್ಲಿ, ಬ್ರಹ್ಮಶಿವನು ಸಮಯ ಪರೀಕ್ಷೆಯಲ್ಲಿ ದಾಖಲಿಸಿದ್ದಾರೆ [ಕಮಲಾಹಂಪನಾ : ಗುಣದಂಕಕಾರ್ತಿ ಅತ್ತಿಮಬ್ಬೆ. ೧೯೯೩].

ಚಾಳುಕ್ಯ ಚಕ್ರಾಧಿಪತ್ಯದ ಅಭ್ಯುದಯಕ್ಕೆ ಸುಭದ್ರ ಬುನಾದಿಯನ್ನು ಹಾಕಿದ್ದಲ್ಲದೆ ಸಾಮ್ರಾಜ್ಯದಲ್ಲಿ ಧಾರ್ಮಿಕ, ಸಾಹಿತ್ಯಕ, ಸಾಂಸ್ಕೃತಿಕ ವಾತಾವರಣವನ್ನು ನಿರ್ಮಿಸಿದ ದಾನಚಿಂತಾಮಣಿ ಅತ್ತಿಮಬ್ಬೆಯ ಗುಣ ಶೀಲ ಪರಾಕ್ರಮ ದಾನಗಳನ್ನು ಮೆಚ್ಚಿ ‘ದಾನಚಿಂತಾಮಣಿ’ ಎಂಬ ಬಿರುದನ್ನು ನೀಡಲಾಯಿತು. ಆಕೆಯ ಯಶೋಗೀತೆಯನ್ನು ಸುಮಾರು ನಲವತ್ತು ಶಾಸನಗಳು ಸ್ಮರಿಸಿವೆ [ಕಮಲಾಹಂಪನಾ : ಅಭಿಲಾಷಿತಾರ್ಥ ಚಿಂತಾಮಣಿ ಅತ್ತಿಮಬ್ಬೆ – ‘ಸಮದರ್ಶಿ’ : ೧೯೯೬ : ೭೩ – ೮೪]

ಇಷ್ಟಲ್ಲದೆ ಈ ಅತ್ತಿಮಬ್ಬೆ ಮನೆತನದ ಉಪಕಾರ ಮತ್ತು ಋಣವನ್ನು ತೀರಿಸುವ ಸಲುವಾಗಿ ಚಾಳುಕ್ಯ ಚಕ್ರವರ್ತಿಗಳು ನಾನಾರೂಪದಲ್ಲಿ ತಮ್ಮ ಕೃತಜ್ಞತೆಯನ್ನು ತೋರಿದ್ದಾರೆ. ಅವುಗಳಲ್ಲಿ ಒಂದು ಎಂದರೆ ಈ ಪುಟ್ಟ ಸಂಟಿಪ್ಪಣಿದಲ್ಲಿ ಉಲ್ಲೇಖಿಸಿ ತೋರಿಸಿರುವಂತೆ, ಅಳತೆಗೋಲುಗಳಿಗೆ ಅತ್ತಿಮಬ್ಬೆ ಮತ್ತು ನಾಗದೇವ ಹೆಸರನ್ನು ಇಟ್ಟಿರುವುದು. ಹೀಗೆ ಅಳತೆಗೋಲುಗಳಿಗೆ ನಾಮಕರಣ ಮಾಡುವಾಗ ಕೂಡ ಈ ದಂಪತಿಗಳ ಪ್ರಶಸ್ತಿರೂಪದ ಹೆಸರುಗಳನ್ನು ಅನ್ವಯಿಸಿರುವುದು ಗಮನಿಸಬೇಕಾದ ಮತ್ತೊಂದು ವಿಷೇಷತೆ. ಅತ್ತಿಮಬ್ಬೆಗೆ ಹಲವು ಬಿರುದುಗಳಿದ್ದರೂ ಪ್ರಸಿದ್ಧವಾದದ್ದು ‘ದಾನಚಿಂತಾಮಣಿ’ ಎಂಬುದು ನಾಗದೇವನಿಗೂ ಹಲವು ಪ್ರಶಸ್ತಿಗಳಿದ್ದರೂ ಪ್ರಸಿದ್ದವಾದದ್ದು ಒಂಱಂಟರ ಮಲ್ಲ ಎಂಬುದು. ಹೀಗೆ ದಂಪತಿಗಳ (ಪ್ರಶಸ್ತಿ) ಹೆಸರನ್ನು ಚಾಳುಕ್ಯ ಸಾಮ್ರಾಜ್ಯದ ಭೂಮಿಯ ಅಳತೆಗಾಗಿ ಬಲಸುವ ಅಳತೆಯ ಕೋಲುಗಳಿಗೆ ಇಡುವುದರ ಮೂಲಕ ಗಂಡ ಹೆಂಡತಿಯರ ಸೇವೆಯನ್ನು ಸ್ಮರಿಸಲಾಗಿದೆ; ಇಂತಹ ದಾಖಲೆ ಇನ್ನೊಂದು ಇಲ್ಲ ಎಂಬುದು ಇದರ ಅನನ್ಯತೆಯನ್ನು ಪ್ರಕಟಿಸುತ್ತದೆ.