೧. ಮಡ್ಯಜಿಲ್ಲೆ ನಾಗಮಂಗಲ ತಾಲ್ಲೂಕಿನಲ್ಲಿರುವ ದಡಗ ಗ್ರಾಮದಲ್ಲಿ ಆರು ಶಾಸನಗಳು ಉಪಲ್ಭವಾಗಿವೆ. ಈ ಆರೂ ಚಿಕ್ಕಶಾಸನಗಳಾಗಿವೆ. ಮತ್ತು ಅಲ್ಲಲ್ಲಿ ಮುಕ್ಕಾಗಿವೆ. ಆರರಲ್ಲಿ ದೊಡ್ದದು ಹಾಗೂ ಹೆಚ್ಚು ತ್ರುಟಿತವಾಗದೆ ಇರುವ ಒಂದು ಶಾಸನದ ವ್ಯಾಪ್ತಿ ಮತ್ತು ಮಹತ್ವವನ್ನು ಕುರಿತು ಈ ಪುಟ್ಟ ಟಿಪ್ಪಣಿಯಲ್ಲಿ ವಿಶ್ಲೇಷಿಸುವ ಪ್ರಯತ್ನವಿದೆ. [ಎ.ಕ. ೭(ಪ) ನಾಮಂ. ೬೮ (ರಿ ೧೯೪೦ -೩೩) ದಡಗ, ಪು. ೫೧ – ೫೨]ಚಂದ್ರಕೊಡೆ

೨. ಒಟ್ಟು ೩೭ ಸಾಲುಗಳಿರುವ ಈ ಶಾಸನದಲ್ಲಿ ೪ ಮತ್ತು ೬ನೆಯ ಪಾದಗಳು ಮಾತ್ರ ಸ್ವಲ್ಪ ಮುಕ್ಕಾಗಿದ್ದು ಉಳಿದಂತೆ ಇಡೀ ಶಾಸನ ಪೂರ್ಣವಾಗಿದೆ ಯೆನ್ನಬಹುದು.

೨.೧. ಇದೊಂದು ಜೈನಶಾಸನ. ಪ್ರಾರಂಭದಲ್ಲಿ ಜೈನಶಾಸನಗಳಲ್ಲಿ ಸಾಮಾನ್ಯವಾಗಿ ಬಲಕೆಯಾಗುವ ಶ್ರೀಮತ್ಪ್ ರಮ ಗಂಭೀರ ಸ್ಯಾದ್ವಾದಾ……….ಶ್ಲೋಕವಿದೆ.

೨.೨. ಇದೊಂದು ಅತೇದಿ ಶಾಸನ. ಅಂತರ-ಬಾಹ್ಯ ಪ್ರಾಮಾಣಾಧಾರಗಳಿಂದ ಇದರ ತೇದಿಯನ್ನು ಸು. ೧೧೩೨ ಎಂದು ತಿಳಿಯಬಹುದು.

೨.೨.೧. ಪ್ರಾರ್ಥನಾ ರೂಪದ ಜಿನಸುತ್ತಿಯ ಸಂಸ್ಕೃತ ಶ್ಲೋಕವಾದ ಮೇಲೆ, ಹೊಯ್ಸಳ ವಂಶದ ಉಗಮ ಸಂಬಂಧವಾಗಿ ಪ್ರತೀತಿಯಾಗಿರುವ ಐತಿಹ್ಯವನ್ನು ಹೇಳಿದೆ [ಸಾಲು : ೩ ರಿಂದ ೭]. ಅನಂತರ ಬಲ್ಲಾಳ, ಬಿಟ್ಟಿದೇವ, ಉದಯಾದಿತ್ಯರನ್ನೂ ಅವರಲ್ಲಿ ಮಧ್ಯಮನಾದ ಬಿಟ್ಟಿದೇವ – ವಿಷ್ಣುವರ್ಧನನ ಹಿರಿಮೆಯನ್ನೂ ನಿರೂಪಿಸಿದೆ [ಸಾಲು : ೧೦ ರಿಂದ ೧೮]. ತತ್ಪಾದ – ಪದ್ಮೋಪ – ಜೀವಿಗಳು ಮಹಾ ಪ್ರಧಾನರೂ ದಂಡನಾಯಕರೂ ಒಡಹುಟ್ಟಿದವರೂ ಆದ ಮಱೆಯಾನೆ ಮತ್ತು ಭರತಿಮಯ್ಯ.

೩. ಈ ಸಹೋದರರ ಅನ್ಯೋನ್ಯತೆ ಆದರ್ಶಮಯವಾಗಿತ್ತು :

ಭೀಮಾರ್ಜುನ ಲವಕುಶ (ರಿಂ)
(ತೀ) ಮಾಳ್ಕೆಯೆನಲಂತೆ ಪುಟ್ಟಿಯೆ ಮೆಱೆದರು
ಶ್ರೀ ಮನ್ಮಱೆಯಾನೆಯುಮು
ದ್ದಾಮಗುಣ(ರ್) ಭರತ ರಾಜದಣ್ಣಾಧಿಪರು(೦)
||

೩.೧. ತರುವಾಯ ಒಂದು ವೃತ್ತ (ಚಂಪಕಮಾಲೆ) ಮತ್ತು ಒಂದು ಕಂದ ಪದ್ಯಗಳಲ್ಲಿ ಕ್ರಮವಾಗಿ ಜಕ್ಕಿಯಕ್ಕ ಮತ್ತು ಹರಿಯಬ್ಬೆಯರನ್ನು ವರ್ಣಿಸಿದೆ.

೪. ಈ ಟಿಪ್ಪಣಿಯು ವಿಶ್ಲೇಷಿಸ – ಬೇಕೆಂದಿರುವ ವಿಷಯ ನಿರೂಪಣೆ ೨೫ ನೆಯ ಸಾಲಿನಿಂದ ೩೫ ನೆಯ ಪಂಕ್ತಿಯವರೆಗೆ, ಹನ್ನೊಂದು ಸಾಲುಗಳಲ್ಲಿ ಮಾತ್ರ ಅಡಕವಾಗಿದೆ.

ಆ ಹನ್ನೊಂದು ಸಾಲುಗಳು ಇಂತಿವೆ:
ಶ್ರೀ ಮೂಲಸಂಘ ಕುಂದ ಕುಂದಾನ್ವ
ಯಕಾಣೂರ್ಗ್ಗಣ ತಿಂತ್ರಿಣಿಗಚ್ಛದ ಜವಳಿಗೆಯ ಮುನಿಭದ್ರ ಸಿದ್ಧಾನ್ತದೇವರ ಶಿಷ್ಯ
ಮೇಘಚಂದ್ರ ಸಿದ್ಧಾನ್ತ ದೇವರ್ಗ್ಗೆ ಶ್ರೀಮನ್ಮಹಾಪ್ರಧಾನ ದಣ್ಡನಾಯಕ ಮಱೆಯಾ
ನೆಯುಂ ಶ್ರೀಮನ್ಮ ಹಾಪ್ರಧಾನ ದಣ್ಡನಾಯಕ ಭರತಿಮಯ್ಯಗಳುಂ ದಡಿಗ
ನ ಕೆಱೆಯ ಪಞ್ಚ ಬಸದಿಯೊಳಗೆ ಬಾಹುಬಲಿ ಕೂಟಮ[೦] ಧಾರಾಪೂರ್ವ್ವ
ಕಂ ಮಾಡಿಕೊಟ್ಟರು
| ಮಱೆಯಾನೆ ಸಮುದ್ರದ ಬಯಲುಮಂ
ಮಳೆ ಹಳ್ಳಿಯ ಮುಂದಣ ಕಿಱಕೆಱುಯಂ ಅಲ್ಲಿಯ ಹೊಲಗುತ್ತ
ಗೆಯುಂ ಕೋಡಿ ಹಳ್ಳಿಯ ಮುಂದಣ ಕಿಱುಕೆಱೆಯಂ ಆ ಬೆದಲೆಯ
ಹಿರಿಯ ಕೆಱೆಯ ಕೆಳಗಣ ಅಡಕೆಯ ತೋಟಮುಂ
|| ಅನ್ತು ಸರ್ವ್ವಾಯ ಸುದ್ಧವಾಗಿ
ದೇಶೀಯಗಣದ ಬಸದಿ ೪ಕ್ಕಂ ಕಾಣೂರ್ಗ್ಗಣದ ಬಸ
ದಿವೊಂದಕ್ಕಂ ಅನ್ತು ಪಞ್ಚ ಬಸದಿಗೆ ಸಮಾನಬಾಗೆ ಇಲ್ಲಿ ಹುಟ್ಟಿ
ದ ಮಾಚಿಗೌಡನು ಕಸವಗೌಡನು
|| [ಅದೇ, ಪು. ೫೨. ಸಾಲು : ೨೫ – ೩೫]

೫. ದಡಿಗನೆಂಬಾತ ಕಟ್ಟಿಸಿದ ಕೆರೆ ಇರುವ ಈ ಊರಿಗೆ ಆತನ ಹೆಸರು ಬಂದಿದೆ; ಈ ದಡಗದಲ್ಲಿ ಕ್ರಿ.ಶ. ೧೧೩೨ ರ ವೇಳೆಗಾಗಲೇನೆ ಆಯ್ದು ಬಸದಿಗಳಿದ್ದುವು. ಪಂಚ ಬಸದಿಗಳ ದಡಗವು ಒಂದು ಜೈನ ಕೇಂದ್ರವಾಗಿತ್ತು. ದಡಗವು ಶ್ರವಣಬೆಳುಗೊಳಕ್ಕೆ ಸುಮಾರು ಇಪ್ಪತ್ತು ಕಿಮೀ ಅಂತರದಲ್ಲಿರುವ ಗ್ರಾಮ. ಇದು ಗಂಗವಾಡಿ ೯೬,೦೦೦ ದೊಳಗೆ ಸೇರಿತ್ತು. ಇಲ್ಲಿರುವ ಪಂಚ ಬಸದಿಗಳನ್ನು ಯಾರು, ಯಾವಾಗ ಕಟ್ಟಿಸಿದರೆಂಬ ವಿವರಗಳು ನಮೂದಾಗಿಲ್ಲ.

೫.೧. ದಡಗದಲ್ಲಿ ಮೂಲಸಂಘ ಕುಂದದುಂದಾನ್ವಯಕ್ಕೆ ಸೇರಿದ ಗಣ ಮತ್ತು ಗಚ್ಛಗಳಿದ್ದುವು. ಈ ಶಾಸನದಲ್ಲಿ ಕಾಣೂರ್ಗಣ ಮತ್ತು ತಿಂತ್ರಣಿಗಚ್ಛವನ್ನು ಹೆಸರಿಸಿದೆ. ಕಾಣೂರ್ಗಣವು ಯಾಪನೀಯ ಸಂಘಕ್ಕೆ ಸೇರಿದ ಬಹು ಪ್ರಸಿದ್ಧವಾದ ಒಂದು ಗಣ [Upadhye, A.N., Upadhye papers : 1983: 195-98, 200 -01]. ಇದು ಸಾಕಷ್ಟು ಪ್ರಚೀನವಾದ ಗಣ; ಕಾಲೋಗ್ರ, -ಕಂಡೂರ-, ಕಾಣೂರು, ಕಾಡೂರು- ಮುಂತಾದ ಗಣರೂಪ ಪ್ರಭೇದಗಳ ಮೂಲಕ ಕಾಣೂರುಗಣ ಪ್ರಸಾರ ಪಡೆದಿದೆ. ಕನ್ನಡ ಕಾವ್ಯಗಳಲ್ಲಿಯೂ ಶಾಸನಗಳಲ್ಲಿಯೂ ಇದರ ವ್ಯಾಪಕ ಬಳಕೆ ಕಮ್ಡು ಬರುತ್ತದೆ [ನಾಗರಾಜಯ್ಯ, ಹಂಪ.; ಕಾ(ನೂ)ಣೂರ್ಗಣ: ಹರಿತಿಸಿರಿ, (ಸಂ) ಪ್ರೊ. ಲಕ್ಷ್ಮಣ ತೆಲಗಾವಿ : ೧೯೮೭ : ೩೪೯ – ೫೨]

೫.೧.೧. ಕಾಣೂರುಗಣವು ಹತ್ತನೆಯ ಶತಮಾನದ ವೇಳೆಗಾಗಲೇನೆ ಹಲವು ಘನ ಆಚಾರ್ಯರ ಮಹಿಮೆಯಿಂದಾಗಿ ಪ್ರಸಿದ್ಧಿ ಪಡೆದಿತ್ತು. ಬಾಳಚಂದ್ರ ಭಟ್ಟಾರಕ, ಮೇಘಚಂದ್ರ ತ್ರೈವಿದ್ಯದೇವ, ಗುಣನಂದಿದೇವ, ಪ್ರಭಾಚಂದ್ರ ಸಿದ್ಧಾಂತದೇವ, ಮಾಘನಂದಿ ಸಿದ್ಧಾಂತದೇವ, ಮುನಿಚಂದ್ರ ಸಿದ್ಧಾಂತದೇವ – ಎಂಬ ಕಾಣೂರ್ಗಣ ಆಚಾರ್ಯರು ಒಂಬತ್ತು ಮತ್ತು ಹತ್ತನೆಯ ಶತಮಾನದಲ್ಲಿ ಗಂಗರ ಗೌರವಕ್ಕೆ, ಕೊಡುಗೆಗಳಿಗೆ ಪಾತ್ರರಾಗಿದ್ದರು [ಮೈ.ಅ.ರಿ. ೧೯೨೩. ೧೧೩. ೧೨ ಶ. ಪು. ೧೧೪-೧೫.; IWG: ೧೯೮೪ : ನಂ. ೧೫೦.೧೦ ಶ : ೪೬೮ -೭೦]. ರಾಷ್ಟ್ರಕೂಟರ ಕಾಲದಲ್ಲಿಯೂ ಈ ಗಣ ಪ್ರಬಲವಾಗಿತ್ತು[ಸೌ.ಇ.ಇ.೮. ೧೮.೯೮೦. ಸೌದತ್ತಿ.ಪು.೧೭], ಚಾಳುಕ್ಯರ ಅವಧಿಯಲ್ಲೂ ಈ ಗಣದ ಪ್ರತಿಷ್ಠೆ ಕುಂದಿರಲಿಲ್ಲ [ಎ.ಕ.೭ – ೧. ಶಿವಮೊ. ೧೦.೧೦೭೯. ತಟ್ಟೆಕೆರೆ. ಪು. ೨೧. ಸಾಲು: ೫೩]. ಶ್ರವಣಬೆಳುಗೊಳದ ಶಾಸನಗಳಲ್ಲಿ ಕಾಣೂರುಗಣದ ಉಲ್ಲೇಖವಿಲ್ಲ.

೫.೨. ಕಾಣೂರುಗಣಕ್ಕೆ ಹೊಂದಿಕೊಂಡು ಜಂಟಿಯಾಗಿಯೇ ಬರುವ ಗಚ್ಛ ತಿಂತ್ರಿಣ ಗಚ್ಛ. ಅಲ್ಲದೆ ತಿಂತ್ರಿಣೀಗಚ್ಛವೆಂದೂ ಇದರ ಇನ್ನೊಂದು ರೂಪವುಂಟು [ಎ.ಕ. ೮ ಸೊರಬ. ೨೬೨. ೧೦೭೯]. ತಿಂತ್ರಿಣಿಗಚ್ಛವು ಚಾಳುಕ್ಯರ ಹೊಯ್ಸಳರ ಆಳಿಕೆಯಲ್ಲೂ ಜೀವಂತವಾಗಿತ್ತು. [ಸೌ.ಇ.ಇ. ೧೫. ೫೬೮.೧೨ ಶ. ಕಲಕೇರಿ (ಹಾಜಿ. / ಬೇತಾ.)]. ಈ ದಡಗ ಶಾಸನೋಕ್ತ ತಿಂತ್ರಿಣಿಗಚ್ಛವು ಸಹ ಯಾಪನೀಯ ಸಂಘದ ಗಚ್ಛಗಳಲ್ಲೊಂದು. ಶ್ರವಣಬೆಳಗೊಳದ ಶಾಸನಗಳಲ್ಲಿ ತಿಂತ್ರಿಣಿಗಚ್ಛದ ಉಲ್ಲೇಖವಿಲ್ಲ.

೫.೩. ದಡಗ ಶಾಸನದಲ್ಲಿ ಕಾಣೂರುಗಣ ತಿಂತ್ರಿಣಿಗಚ್ಛದ ತರುವಾಯ ಹೇಳಿರುವ ಹೆಸರು ‘ಜವಳಿಗೆಯ’ ಎಂಬುದು. ಇದು ವಾಸ್ತವವಾಗಿ ‘ಜಾವಳಿಗೆ’ ಎಂದಿರಲೂಬಹುದು.. ಇದು ‘ಯಾಪನೀಯ’ ಶಬ್ದದ ಸಂಬಂಧ ಹೊಂದಿರುವ ರೂಪ, ಶಾಸನಗಳಲ್ಲಿ ಯಾಪನೀಯ, ಯಾಪಿಲೀ ಯ, ಯಾಪನೀ, ಜಾಪನೀಯ, ಜಾವು(ವಿ)ಲಿಯ, ಜಾಮಳಿಗೆಯ, ಜಾಮಳಿಯ, ಜಾಪುಲಿ, ಆಪುಲೀ ಯ, ಆಪನೀಯ ಎಂಬ ನಾನಾ ರೂಪಗಳಿವೆ [Upadhye, A.N. : More light on Yapaniya, a Jain sect: Upadhye Papers : 1983 : 192 – 201].

೫.೩.೧. ಬನವಾಸಿಯ ಆದಿಕದಂಬರ ಮೃಗೇಶವರ್ಮನ (ಕ್ರಿ.ಶ.೫ ಶ.) ಕಾಲದಿಂದಲೂ ಯಾಪನೀಯ ಸಂಘದ ಪ್ರಸ್ತಾಪಗಳು ಶಾಸನೋಕ್ತವಾಗಿವೆ. ಯಾಪನೀಯದ ಸಂವಾದಗಲಲ್ಲಿ ಬಲ್ಲಿದರು ನೋಡದಿರುವ, ಹೆಸರಿಸದಿರುವ ಇನ್ನೊಂದು ಪ್ರಾಚೀನ ಪ್ರಯೋಗವು ಗಂಗರ ಇಮ್ಮಡಿ ಮಾಧವನ ಮಗ ಕೊಂಗಣ್ಯಾಧಿ ರಾಜನು ಬಸದಿಗೆ ಕೊಟ್ಟ ದಾನಶಾಸನದಲ್ಲಿದೆ; [ಮೈ.ಆ.ರಿ. ೧೯೩೮. ಪು. ೮೦ -೯೦. ೫ – ೬ ಶ. ಹೊಸಕೋಟೆ (ಬೆಂಜಿ/); IWG೧೯೮೪: ನಂ.೧೪ : ೪೮ – ೫೧]; ಆರ್ಹದಾಯ ತನವು ‘ಯವನಿಕ ಸಂಘ’ (ಯಾಪನೀಯ) ದ ಶಿಷ್ಯರದೆಂದು ಹೇಳಿದೆ.

೫.೩.೨. ಗಂಗರು ಯಾಪನೀಯಸಂಘದ ಶಿಷ್ಯರು: ‘ಗಂಗರಾಜ್ಯಮಂ ಮಾಡಿದ ಸಿಂಹಣಂದ್ಯಾಚಾರ್ಯರ್’ [ಹೊಂಬುಜ೧. (೮ ನಗರ ೩೫) ೧೦೭೭ ಸಾಲು : ೭೧].

ಕ್ರಾಣೂರ್ಗ್ಗಣಾಂಬರ ಸಹಸ್ರಕಿರಣರೂ ಗಂಗರಾಜ್ಯದ ಸಮುದ್ಧರಣರೂ [ಎ.ಕ. ೭ – ೧ (೧೯೦೨) ಶಿವಮೊ. ೪,೧೧೨೨. ಪು. ೧೨. ಸಾಲು : ೨೭ – ೨೮] ಆಗಿದ್ದರು. ಹೀಗಾಗಿ ಸಿಂಹನಂದಿ ಆಚಾರ್ಯರು ಯಾಪನೀಯ ಸಂಘದ ಕಾಣೂರು ಗಣದ ವರಿಷ್ಠರಾಗಿದ್ದು ಗಂಗರಿಗೆ ರಾಜ್ಯದೀಕ್ಷೆ ಕೊಟ್ಟರು. ಪದ್ಮಾವತೀದೇವಿಯ ಅನುಗ್ರಹ ದೊರಕಿಸಿದರು, ಯಾಪನೀಯ ಪರಂಪರೆಯ ಶಿಷ್ಯತ್ವವನ್ನೂ ಕಲ್ಪಿಸಿದರು. ಅಂದಿನಿಂದ ಗಂಗರು ಯಾಪನೀಯ ಗುರುಗಳನ್ನೂ ಬಸದಿಗಳನ್ನೂ ಪುರಸ್ಕರಿಸ ತೊಡಗಿದರು. ದಡಗದ ಶಾಸನದಲ್ಲಿ ಹೇಳಿರುವ ಜವಳಿಗೆಯ (ಯಾಪನೀಯ) ದ ಎಂಬುದು ಈ ಹಿನ್ನೆಲೆಯಿಂದ ಪರಿಭಾವ ನೀಯವಾಗಿದೆ.

೫.೩.೩.೧. ಜವಳಿಗೆಯ ಎಂಬ ಮಾತಾಗಲಿ, ಯಾಪನೀಯ ಎಂಬ ಶಬ್ದ ಅಥವಾ ಅದರ ಇತರ ಪ್ರಭೇದರೂಪಗಳಾಗಲಿ, ಶ್ರವಣಬೆಳಗೊಳದ ಶಾಸನಗಳಲ್ಲಿ ಪ್ರಯೋಗವಾಗಿಲ್ಲ. ಹೊಸ ಪರಿಷ್ಕೃತ ಆವೃತ್ತಿಯಾದ ಎಪಿಗ್ರಾಫಿಯ ಇಂಡಿಕದ (ಎರಡನೆಯ) ಸಂಪುಟದಲ್ಲಿ ಸೇರ್ಪಡೆಯಾಗಿರುವ ೫೨೩ ಶಾಸನಗಳಲ್ಲಿ, ಶ್ರವಣಬೆಳಗೊಳದ ಸುತ್ತಲಿನ ಊರುಗಳ ಇನ್ನಿತರ ೫೦ ಶಾಸನಗಳೂ ಸೇರಿ ಆಗುವ ಒಟ್ಟು ೫೭೩ ಶಾಸನಗಳಲ್ಲಿ ಒಂದು ಕಡೆಯೂ ಕಾಣೂರು ಗಣದ (ಅದರ ಇತರ ಯಾವುದೇ) ರೂಪವಾಗಲಿ, ತಿಂತ್ರಿಣಿಗಚ್ಛದ ಹೆಸರಾಗಲಿ, ಯಾಪನೀಯ ಸಂಘದ ಹೆಸರಾಗಲಿ ಬಳಕೆಯಾಗಿಲ್ಲ. ಆದರೆ ಶ್ರವಣ ಬೆಳಗೊಳಕ್ಕೆ ಸು. ಇಪ್ಪತ್ತು ಕಿಮೀ ಹತ್ತಿರದ ದಡಗ ಗ್ರಾಮದ ಶಾಸನದಲ್ಲಿ ಯಾಪನೀಯಸಂಘ, ಅದರ ಗಣ – ಗಚ್ಛ ಸಹಿತ, ಉಲ್ಲೇಖವಾಗಿರುವುದು ವಿಶೇಷ ಗಮನಿಕೆಗೆ ಅರ್ಹವಾಗಿದೆ.

೬. ಹೊಯ್ಸಳ ಬಿಟ್ಟಿದೇವನ ಮಹಾಪ್ರಧಾನ ದಂಡನಾಯಕ ಸೋದರರಾದ ಮಱೆಯಾನೆ ಮತ್ತು ಭರತಿಮಯ್ಯ (ಭರತೇಶ್ವರ) ಇಬ್ಬರೂ ಸೇರಿ ದಡಿಗನ ಕೆಱೆಯ (ದಡಗದ) ಪಂಚಬಸದಿಯೊಳಗೆ ಬಾಹುಬಲಿಕೂಟವನ್ನು ಮಾಡಿಸಿದರು. ಕೂಟವೆಂದರೆ ‘ಶೃಂಗಂ ಶಿಖರಂ ಕೂಟಂ -ಈ ಮೂಱುಂ ಕೋಡುಂಗಲ್’ ಎಂಬ ಅರ್ಥವಿದೆ [ನಾಗವರ್ಮ : ಅಭಿಧಾನರತ್ನಮಾಲಾ : ೨೭ – ೧೨]. ಈ ರೀತಿಯಾಗಿ ಶಿಖರವಾಗಲು ಬಸದಿಯ ಮಹಡಿಯಮೇಲೆ ಈ ಬಾಹುಬಲಿ ಕೂಟವನ್ನು ಕಟ್ಟಿಸ ಬೇಕಾಗುತ್ತದೆ. ಆದರೆ ಶಾಸನದಲ್ಲಿ ‘ಪಂಚಬಸದಿಯೊಳಗೆ’ ಎಂದಿರುವುದರಿಂದ, ಆಯ್ದು ಬಸದಿಗಳಲ್ಲಿಯೂ ಹೊಂದಿಕೆಯಾಗುವ ರೀತಿಯಲ್ಲಿ, ಬಸದಿಯ ಆವರಣದೊಳಗೆ ಒಂದು ಗರ್ಭಗುಡಿ ಮಾಡಿಸಿ ಅದರಲ್ಲಿ ಬಾಹುಬಲಿಯ ಮೂರ್ತಿಯನ್ನು ನಿಲ್ಲಿಸಿರಬೇಕು.

೬.೧. ಈ ಬಾಹುಬಲಿಕೂಟವನ್ನು ಮಾಡಿಸಿದ ಅಣ್ಣ – ತಮ್ಮಂದಿರು ಇದನ್ನು, ದಡಗದಲ್ಲಿದ್ದ ಕಾಣೂರ್ಗಣ ತಿಂತ್ರಿಣಿಗಚ್ಛದ ಜವಳಿಗೆಯ (ಯಾಪನೀಯ ಸಂಘದ) ಮುನಿಭದ್ರಸಿದ್ಧಾನ್ತ ದೇವರ ಶಿಷ್ಯನಾದ ಮೇಘಚಂದ್ರ ಸಿದ್ಧಾನ್ತ ದೇವನಿಗೆ ಧಾರಾಮೂರ್ವಕವಾಗಿ ಒಪ್ಪಿಸಿದರು.

೬.೧.೧. ಅದರ ಜತೆಗೆ ಮಾಱೆಯಾನೆ ಸಮುದ್ರದ ಬಯಲು, ಎರಡು ಚಿಕ್ಕಕೆಱೆ, ಒಂದು ಅಡಕೆತೋಟ – ಇವನ್ನೂ, ಎಲ್ಲ ಬಗೆಯ ಆದಾಯಗಳನ್ನೂ ಅನುಭೋಗಿಸಿಸುವ ಹಕ್ಕಿನೊಂದಿಗೆ ಕೊಟ್ಟರು (ಸರ್ವ್ವಾಯ ಸುದ್ಧವಾಗಿ). ಸಾಮಾನ್ಯವಾಗಿ ಕೆರೆಯ ಕೆಳಗಿನ ಫಲವತ್ತಾದ ಜಮೀನು, ತೋಟ ಕೊಡುವುದು ವಾಡಿಕೆ; ಇಲ್ಲಿ ಎರಡು ಇಡೀ ಕೆರೆಗಳನ್ನೇ ಕೊಟ್ಟಿದ್ದಾರೆ.

೭. ದಡಗದ ಆಯ್ದು (ಪಂಚ) ಬಸದಿಗಳಲ್ಲಿ ನಾಲ್ಕು ಬಸದಿಗಳು ದೇಶೀಯಗಣಕ್ಕೆ ಸೇರಿದ್ದವು, ಒಂದು ಬಸದಿ ಕಾಣೂರುಗಣಕ್ಕೆ ಸೇರಿತ್ತು – ಎಂಬ ಹೇಳಿಕೆಯೂ ಪರಿಶೀಲನಾರ್ಹವಾದದ್ದು. ದೇಶೀಯಗಣದ ಬಸದಿಯು ದಿಗಂಬರ ಜೈನ ಅಮ್ನಾಯಕ್ಕೆ ಸೇರಿದ್ದು; ಕಾಣೂರುಗಣದ ಬಸದಿಯ ಯಾಪನೀಯ ಸಂಘಕ್ಕೆ ಸೇರಿದ್ದು.

೭.೧. ಕಾಣೂರುಗಣದ ಬಸದಿಗಳು ಶಾಸನೋಕ್ತವಾಗಿವೆ [ಎ.ಕ. ೭-೧ ಶಿವಮೊ. ೬.೮.೧೧೧೨. ಪುರಲೆಗ್ರಾಮ. ಪು. ೪\ ೬೪ – ೬೫]. ಸಂಘ ಮತ್ತು ಗಣಗಳಿಗೆ ಸೇರಿದ ಬಸದಿಗಳಿರುವಂತೆ ಗಚ್ಛಗಳಿಗೆ ಸೇರಿದ ಬಸದಿಗಳೂ ಉಂಟು. ಉದಾಹರಣೆಗೆ ಪುಸ್ತಕ ಗಚ್ಛದ ಬಸದಿಗಳಿದ್ದುವು [ಎ.ಕ. ೭(ಪ) ನಾಮಂ. ೩೧. ೧೩ ಶ. ಕಂಬದಹಳ್ಳಿ (ಹಾಜಿ./ಬೇತಾ.)].

ಈ ಸಂಗತಿಯು ಆಯಾ ಗಣ ಹಾಗೂ ಗಚ್ಛಗಳ(ವರ) ಪ್ರಾಮುಖ್ಯತೆಕ್ಕಿಂತ ಪ್ರಾಬಲ್ಯವನ್ನು ಪ್ರಕಟಿಸುತ್ತದೆ.

೮. ಮಱೆಯಾನ ದಂಡನಾಯಕನ ತಮ್ಮನಾದ ಭರತೇಶ್ವರ (ಭರತಿಮಯ್ಯ) ದಂಡನಾಯಕನು ಎಂಬತ್ತು ಹೊಸ ಬಸದಿಗಳಳನ್ನು ಕಟ್ಟಿಸಿ, ಇನ್ನೂರು ಬಸದಿಗಳನ್ನು ಪುನರ್ಭರಣಿಸಿದ್ದನು :

ಪ್ರಕಟಯಶೋವಿಭುವೆಣ್ಬ
ತ್ತು ಕನ್ನೆವಸದಿಗಳನೊಸೆದು ಜೀರ್ಣ್ನೋದ್ಧಾರ
ಪರಕರಮನಿನ್ನೂೞನಲೌ
ಕಿಕಧೃತಿ ಮಾಡಿಸಿದನೆಸೆಯೆ ಭರತ ಚಮೂಪಂ
||
[ಎ.ಕ. > ೨(ಪ.) ೩೭೩ (೨೬೭) ೧೨ ಶ. ಪು. ೨೪೦. ಸಾಲು : ೧೧ – ೧೪].

ಅತ್ತಿಮಬ್ಬೆ ೧೫೦೧ ಬಸದಿಗಳನ್ನು ಮಾಡಿಸಿದ್ದು ಬಿಟ್ಟರೆ ಭರತ ಚಮೂಪನದೇ ದೊಡ್ಡ ಸಂಖ್ಯೆ.

೮.೧.೧. ಅಲ್ಲದೆ ಈ ಭರತ ಚಮೂಪನು ಶ್ರವಣಬೆಳಗೊಳ ದೊಡ್ಡಬೆಟ್ಟದಲ್ಲಿ ಅಖಂಡ ಬಾಗಿಲ ಬಳಿ, ಎಡಬಲಗಳಲ್ಲಿರುವ ಭರತ – ಬಾಹುಬಲಿಯರ ವಿಗ್ರಹಗಳನ್ನೂ ಮಾಡಿಸಿದನು [ಅದೇ, ೩೭೧ (೨೬೫), ಪು. ೨೩೯; ಅದೇ ೩೭೨ (೨೬೬) ೧೨ ಶ. ಪು. ೨೩೯ – ೪೦]. ಹೀಗೆ ಅಣ್ಣತಮ್ಮಂದಿರ ಮೂರ್ತಿಗಳನ್ನು ಮಾಡಿಸಿ, ತಾನೂ ತನ್ನ ಅಣ್ಣನೂ ಆದರ್ಶ ಅಣ್ಣತಮ್ಮಂದಿರೆಂದು ‘ಪ್ರತಿಮಾ ವಿಧಾನ’ ದಿಂದ ಪ್ರಕಟಿಸಿದನು.

೮.೧.೨. ಶ್ರವಣಬೆಳಗೊಳದಲ್ಲಿ ಭರತ – ಬಾಹುಬಲಿ ಪ್ರತಿಮೆಗಳನ್ನು ತಮ್ಮನಾದ ಭರತೇಶ ಚಮೂಪ ಒಬ್ಬನೇ ಮಾಡಿಸಿದ್ದರೆ ದಡಗದಲ್ಲಿ ಅಣ್ಣತಮ್ಮ ಸೇರಿ ಬಾಹುಬಲಿ ಕೂಟವನ್ನು ಮಾಡಿಸಿ ಕೊಟ್ಟಿದ್ದಾರೆ.

೯. ಪಂಚಬಸದಿ ಎಂಬ ಮಾತು ಕುರಿತು ಎರಡು ಮಾತು. ಇದು ಹೊಂಬುಜ ಕ್ಷೇತ್ರದ ಹಾಗೆ ಒಂದೇ ಕಟ್ಟಡದೊಳಗಿನ ಪಂಚಕೂಟ ಬಸದಿ [ಹೊಂಬುಜ. ೧. (೮ ನಗರ ೩೫). ೧೦೭೭] ಆಗಿರಲಾರದು. ಏಕೆಂದರೆ ಕಾಣೂರುಗಣದ ಬಸದಿ, ದೇಶಿಯಗಣದ ಬಸದಿ ಎಂದು ಹೇಳಿದೆ; ಅಲ್ಲದೆ, ನಾಲ್ಕು ಬಸದಿಗಂ ಎಂದು ಬಿಡಿಸಿಯೂ ಹೇಳಿದೆ. ಕಂಬದ ಹಳ್ಳಿಯಲ್ಲಿ ಇರುವ ರೀತಿಯಲ್ಲಿ, ಬಸದಿಗಳ ಗುಂಪು ಒಂದೇ ಕಡೆ ಸೇರಿದ್ದಿರಬೇಕು.

೯.೧. ಕಾಣೂರುಗಣದ ಬಸದಿ ಹಾಗೂ ದೇಶೀಯಗಣದ ಬಸದಿಗಳು ಒಂದೇ ಎಡೆಯಲ್ಲಿ ಇದ್ದುವೆಂಬುದು, ಅವೆರಡಕ್ಕೂ ಸಮಾನವಾದ ದತ್ತಿಗಳನ್ನು ಕೊಡ ಲಾಯಿತೆಂಬುದು ಜೈನ ಸಂಘಗಳ ಅಧ್ಯಯನದಲ್ಲಿ ಪ್ರಾಮುಖ್ಯ ಪಡೆಯುತ್ತದೆ. ದಿಗಂಬರದಲ್ಲಿ ಯಾಪನೀಯವು ವಿಲೀನವಾಗಿರುದನ್ನು ತೋರಿಸುತ್ತದೆ.

೯.೧.೧. ಯಾಪನೀಯಸಂಘವು ದಿಗಂಬರ ಸಂಘದೊಂದಿಗೆ ಮಧುರತರವಾದ ಸಂಬಂಧವನ್ನು ಸ್ಥಾಪಿಸಿಕೊಂಡಿತ್ತು. ಮುನಿಗಳ ಹೆಸರುಗಳಲ್ಲಿ, ಗಣ-ಗಚ್ಛ- ಅನ್ವಯಗಳ ಹೆಸರುಗಳಲ್ಲಿ, ದೇವಾಲಯ ಮತ್ತು ಮೂರ್ತಿ ನಿರ್ಮಾಣದಲ್ಲಿ ಸಮಾನತೆಯಿತ್ತು.

೧೦. ದಡಗದಲ್ಲಿ ಇಂದು ಈ ಪಂಚಬಸದಿ ಸಂಪೂರ್ಣವಾಗಿ ನಾಶವಾಗಿದೆ.