ವಡ್ಡಾರಾಧನೆಯಲ್ಲಿ ಅನ್ಯಾನ್ಯಮೂಲಗಳಿಂದ ಉದಾಹೃತವಾಗಿರುವ ಕನ್ನಡೇತರ ಪದ್ಯಗಳಿಗೆ ಇದುವರೆಗೆ ಸಂಶೋಧಿತವಾಗದ ಮೂಲಗಳತ್ತ ಬೆಳಕು ಚೆಲ್ಲುವ ಹಲವು ಲೇಖನಗಳನ್ನು ಪ್ರಕಟಿಸಿದ್ದೇನೆ. ಆ ಮಾಲೆಗೆ ಈಗ ಇನ್ನೊಂದು ಹೂ ಪೋಣಿಸುತ್ತಿದ್ದೇನೆ.

ವಡ್ಡಾರಾಧನೆಯ ೧೩ ನೆಯ ಕಥೆಯಾದ ‘ವಿದ್ಯುಚ್ಚೋರನೆಂಬ ರಿಸಿಯ ಕಥೆ’ ಯಲ್ಲೂ (ಪುಟ ೧೨೬) ಮತ್ತು ೧೬ ನೆಯ ‘ದಂಡಕನೆಂಬ ರಿಸಿಯ ಕಥೆ’ಯಲ್ಲೂ (ಪುಟ ೧೭೦) ಬಳಕೆಯಾಗಿರುವ ಒಂದು ಸಮಾನ ಪ್ರಾಕೃತ ಗಾಹೆ ಹೀಗಿದೆ:

            ಅಚ್ಚಿಣಿಮೀಳಣ ಮೇತ್ತಂ ಣತ್ಥಿ ಸುಹಂ ದುಖ್ಖಮೇವ ಅಣುಬದ್ಧಂ
ಣಿರಯೇ ಣಿರಯೇ ಯಾಣಂ ಅಹಣ್ಣಿಸಂ ಪಚ್ಚಮಾಣಾ ಣಂ
||

ಇದು ಎರಡೂ ಕಥೆಗಳಲ್ಲಿ ಬಂದಿರುವ ಸಮಾನ ಗಾಹೆಯಷ್ಟೇ ಅಲ್ಲದೆ ಸಮಾನವಾದ ಸಂದರ್ಭದಲ್ಲಿಯೇ ಉದಾಹೃತವಾಗಿದೆ. ಈ ಗಾಹೆ ನಾರಕರು ನರಕದಲ್ಲಿ ಹಗಲಿರುಳೂ ಎಡೆಬಿಡದೆ ಕಷ್ಟಪಡುವುದನ್ನು ಪ್ರಸ್ತಾಪಿಸುತ್ತದೆ. ಮೇಲೆ ಹೇಳಿದ ಎರಡು ಕಥೆಗಳಲ್ಲೂ ನರಕಶಿಕ್ಷೆ ಕುರಿತು ತಿಳಿಸುವ ಸಂದರ್ಭದಲ್ಲಿ ಈ ಗಾಹೆಯನ್ನು ಉಲ್ಲೇಖಿಸಲಾಗಿದೆ. ಅನ್ಯಮೂಲದಿಂದ ಹೆಚ್ಚಿದ ಈ ಗಾಹೆ ವಾಸ್ತವವಾಗಿ ನೇಮಿಚಂದ್ರ ಸಿದ್ಧಾಂತ ಚಕ್ರವರ್ತಿಯ ಪ್ರಾಕೃತ ಕೃತಿ ತಿಲೋಯಸಾರಕ್ಕೆ ಸೇರಿದ್ದು (ಗಾಹೆ ೨೦೭). ಚಾವುಂಡರಾಯನ ಗುರುಗಳೂ ಅನೇಕ ಗ್ರಂಥಗಳ ಕರ್ತೃವೂ ಆದ ನೇಮಿಚಂದ್ರಚಾರ್ಯನ ಕಾಲ ೧೦ನೆಯ ಶತಮಾನದ ಉತ್ತರಾರ್ಧ.

ಈ ಗಾಹೆಯ ಸಂಬಂಧವಾಗಿ ಇದುವರೆಗೆ ಬೇರೆ ಯಾರೂ ಹೇಳದಿರುವ ಒಂದು ಹೊಸ ಮಾಹಿತಿಯನ್ನು ಮೊತ್ತ ಮೊದಲಬಾರಿಗೆ ಬಹಿರಂಗಪಡಿಸುವುದು ಈ ಪುಟ್ಟ ಟಿಪ್ಪಣಿಯ ಮುಖ್ಯ ಉದ್ದೇಶ. ಒಂದೆರಡು ಪಾಠಾಂತರಗಳ ಹೊರತು, ಬೇರೆ ಯಾವ ಬದಲಾವಣೆಯೂ ಇಲ್ಲದೆ, ಈ ಗಾಹೆ ಯಥಾಸ್ಥಿತಿಯಲ್ಲಿ ದಿವಾಕರಣಂದಿಯ ‘ತತ್ವಾರ್ಥ ಸೂತ್ರಾನುಗತ ಕರ್ಣಾಟಕ ಲಗುವೃತ್ತಿಯಲ್ಲಿ’ ಯಲ್ಲಿ ಉದಾಹೃತವಾಗಿದೆ; ಹೆಚ್ಚಿನ ಸಂಗತಿಯೇನೆಂದರೆ ಪ್ರಾಕೃತ ಗಾಹೆಗೆ ದಿವಾಕರಣಂದಿಯ ಕನ್ನಡ ವೃತ್ತಿಯನ್ನು ಕೊಟ್ಟಿದ್ದಾನೆ:

ಅಚ್ಚಿಣಿಮೀಳಣಮೆತ್ತ = ಕಣ್ಣಮೆ ಇಕ್ಕುವನಿತುವಂ ಬೇಗಮಾದೊಡಂ, ಣತ್ಥಿ ಸುಹಂ = ಸುಖವಿಲ್ಲ, ದುಕ್ಖಮೇವ ಅಣುಬದ್ಧಂ = ದುಃಖಮನೆ ಬಳಿ ಸಂಧಿಪ್ಪರು, ಣಿರಯೇ = ನರಕದಲ್ಲಿ, ಣಿರಯೀ ಯಾಣಂ = ನಾರಕರು, ಅಹಣ್ಣಿಸಂ = ಅಹರ್ನಿಶಂ, ಪಚ್ಚಮಾಣಾಣಂ = ದುಃಖಾಗ್ನಿಯಿಂ ಸುಡೆಪಡುತ್ತಿಪ್ಪವರ್ಗಳುಂ ||

ಉಮಾಸ್ವಾತಿ(ಮಿ) ಇಲ್ಲವೇ ಗೃಧ್ರಪಿಂಛಾಚಾರ್ಯಕೃತ ಸಂಸ್ಕೃತ ‘ತತ್ವಾರ್ಥ ಸೂತ್ರ’ ಶಾಸ್ತ್ರಗ್ರಂಥಕ್ಕೆ ಕನ್ನಡದಲ್ಲಿ ಬರೆಯಲಾದ ಮೊದಲ ವ್ಯಾಖ್ಯಾನ ಗ್ರಂಥವೇ ದಿವಾಕರಣಂದಿ ರಚಿಸಿರುವ ತತ್ವಾರ್ಥಸೂತ್ರ ವೃತ್ತಿ. ದಿವಾಕರಣಂದಿಯ ವಿಚಾರವಾಗಿ ನಗರ ೫೭ನೆಯ ಶಾಸನ ಮತ್ತು ಸೊರಬ ೫೮ನೆಯ ಶಾಸನದಿಂದ ಕೆಲವು ವಿಚಾರಗಳು ತಿಳಿದುಬರುತ್ತವೆ. ಅದರ ಪ್ರಕಾರ ದಿವಾಕರಣಂದಿಯ ಕಾಲ ೧೦೬೨ (ಶಕ ೯೮೪) ಎಂದು ಖಚಿತವಾಗಿ ಗೊತ್ತಾಗುತ್ತದೆ. ಹಾಗಾದರೆ ವಡ್ಡಾರಾಧನೆಯ ಕಾಲ ನಿರ್ಧಾರಕ್ಕೆ ಇದನ್ನೇ ಒಂದು ಪ್ರಬಲ ಆಧಾರವೆಂದು ಅಂಗೀಕರಿಸಬಹುದೇ ಎಂಬುದು ನಮ್ಮ ಮುಂದಿನ ಸಮಸ್ಯೆ. ಇದನ್ನು ಮುಖ್ಯ ಆಕರವಾಗಿ ಸ್ವೀಕರಿಸಲು ಮೂರು ತೊಡಕುಗಳಿವೆ. ೧. ಈ ಕನ್ನಡ ವೃತ್ತಿಯಲ್ಲಿ ವೃತ್ತಿಕಾರನಾದ ದಿವಾಕರಣಂದಿಯು ಮೂಲದಲ್ಲಿಲ್ಲದ ಎಷ್ಟೋ ಸಂಸ್ಕೃತ ಪ್ರಾಕೃತ ಪದ್ಯಗಳನ್ನು ಯಥೋಚಿತವಾಗಿ ಅನ್ಯಮೂಲಗಳಿಂದ ತಂದು ಸೇರಿಸಿದ್ದಾನೆ. ೨. ಈ ಗಾಹೆಯು ದಿವಾಕರಣಂದಿಯ ವೃತ್ತಿಯ ಉಪಲಬ್ದ ತಾಡೆಯೋಲೆ ಹಸ್ತ ಪ್ರತಿಗಳಲ್ಲಿ ಒಂದರಲ್ಲಿ ಮಾತ್ರ ಇದ್ದು, ಇನ್ನೆರಡು ಪ್ರತಿಗಳಲ್ಲಿ ದೊರೆಯುವುದಿಲ್ಲ. ೩. ಈಗಾಗಲೇ ತಿಳಿದಿರುವಂತೆ ಈ ಗಾಹೆಯು ದಿವಾಕರಣಂದಿಗಿಂತಲೂ ಹಿಂದಿನದು, ನೇಮಿಚಂದ್ರರ ತ್ರಿಲೋಕಸಾರಕ್ಕೆ ಸೇರಿದ್ದು. ಈ ಮೂರು ಕಾರಣಗಳಿಗಾಗಿ ವಡ್ಡಾರಾಧನೆಯ ಕಾಲವಿಚಾರ ಚರ್ಚೆಇನ್ನೂ ಶೋಧನೆಗೆ ತೆರೆದ ವಿಷಯವಾಗಿಯೇ ಉಳಿದುಕೊಳ್ಳುತ್ತದೆ.