ಹನ್ನೊಂದನೆಯ ಶತಮಾನದ ಕನ್ನಡ ಸಾಹಿತ್ಯದಲ್ಲಿ ದುರ್ಗಸಿಂಹನ ಪಂಚತಂತ್ರ ಒಂದು ಗಣ್ಯ ಕೃತಿ. ಅದುವರೆಗೆ ಶ್ರೀವಿಜಯ, ಗುಣವರ್ಮ, ಪಂಪ, ಪೊನ್ನ, ರನ್ನಾದಿಗಳು ಕನ್ನಡ ಕಾವ್ಯಪದ್ಧತಿಗೆ ಒಂದು ಸಿದ್ಧ ಸ್ವರೂಪವನ್ನು ದೊರಕಿಸಿಕೊಟ್ಟಿದ್ದರು. ಚಂಪೂರೂಪ ತನ್ನ ಪೂರ್ಣರೂಪದಲ್ಲಿ ಮೈದೋರಿತ್ತು. ಈ ಕವಿಗಳ ಪರಂಪರೆಯನ್ನು, ಪ್ರಭಾವವನ್ನು ಒಪ್ಪಿಕೊಂಡರೂ ದುರ್ಗಸಿಂಹ ತನ್ನ ಸ್ವಂತಿಕೆಯನ್ನು ಬೇರೊಂದು ರೀತಿಯಲ್ಲಿ ತೋರಿಸಿದ್ದಾನೆ. ತನ್ನ ಕಾವ್ಯದ ವಸ್ತುವಿಗಾಗಿ, ಪಂಪಾದಿಗಳಂತೆ ಆತ ರಾಮಾಯಣ ಮಹಾಭಾರತಗಳಿಗೆ ಮೊರೆ ಹೋಗಲಿಲ್ಲ. ಮತೀಯ ಪುರಾಣಗಳನ್ನು ಆಶ್ರಯಿಸಲಿಲ್ಲ. ಹುಟ್ಟಿನಿಂದ ಆತ ವೈದಿಕ. ಸ್ವಮತಾಭಿ ನಿವೇಶವಿದೆ. ವಂಶ, ಕುಲಗೌರವಗಳಲ್ಲಿ ಅಭಿಮಾನವಿದೆ. ಇವಕ್ಕೆ ೧-೨೮ ರಿಂದ ೧-೬೦ ರ ವರೆಗೆ ಬರುವ ಪದ್ಯಗಳೇ ಸಾಕ್ಷಿ. ಹೀಗಿದ್ದೂ ಆತ ಭಾರತ ಭಾಗವತಗಳ ವಸ್ತುವನ್ನು ಎತ್ತಿ ಹಿಡಿದಿಲ್ಲ. ಒಂದು ಸಿದ್ಧ ಪರಂಪರೆಯಿಂದ ಕಳಚಿಕೊಂಡು, ಸ್ವತಂತ್ರ ದೃಷ್ಟಿಕೋನದಿಂದ ಭಾರತೀಯ ಕಥನ ವಾಙ್ಮಯವನ್ನು ಅನುಸಂಧಾನಿಸಿದ್ದಾನೆ. ಅಲ್ಲಿ ಆತನ ಮನೋಧರ್ಮಕ್ಕೆ ಹಿಡಿಸಿದ್ದು ಪಂಚತಂತ್ರ, ಅದರಲ್ಲಿಯೂ ತನ್ನ ಅಹಿಂಸಾ ಧೋರಣೆಗೆ ಅನುಗುಣವಾದ ವಸುಭಾಗಭಟ್ಟ ಸಂಪ್ರದಾಯದ ಪಂಚತಂತ್ರವನ್ನು ಒಪ್ಪಿಕೊಂಡಿದ್ದಾನೆ. ಇದು ಔದಾರ್ಯದಿಂದ ಕೂಡಿದ ಮುಕ್ತ ಹಾಗೂ ಸ್ವತಂತ್ರ ಮನಸ್ಸಿಗೆ ಮಾತ್ರ ಸಾಧ್ಯ ಎಂಬುದನ್ನು ನೆನೆದಾಗ ಕವಿಯ ಹಿರಿಮೆ ಮನವರಿಕೆಯಾಗುತ್ತದೆ. ಅದರಂತೆ ಕವಿಗೆ ಧರ್ಮ ಪ್ರಸಾರ ಮಾಡುವ ಉದ್ದೇಶವಿಲ್ಲವೆಂಬುದೂ ಸ್ಪಷ್ಟವಾಗುತ್ತದೆ.

ಪಂಚತಂತ್ರ ಜಾನಪದ ಅಧಿಗಮದಿಂದ ಕುಡಿಯೊಡದ ಕಥಾಗುಚ್ಚ. ಕವಿ ಈ ಜಾನಪದ ಸತ್ವವನ್ನು ಒಪ್ಪಿ ಮಾನ್ಯ ಮಾಡಿದ್ದಾನೆ. ಶಿಷ್ಟ ಸಾಹಿತ್ಯದ ಸಮೆದ ಜಾಡನ್ನು ಹಿದಿದಂತೆ ಮೇಲುನೋಟಕ್ಕೆ ತೋರಿದರೂ, ಬಾತ ಜನಸಾಮಾನ್ಯರ ರೂಢಿಗತೆಗಳನ್ನು ಗೌರವಿಸಿದ್ದಾನೆಂದು ಪರಿಶೀಲನೆಯಿಂದ ವೇದ್ಯವಾಗುತ್ತಾದೆ. ಜನಪದ ಕಥಾ ಸಾಹಿತ್ಯ ಎಲ್ಲ ದೇಶಗಳಲ್ಲೂ ಇರುತ್ತದೆ. ಭಾರತದಲ್ಲೂ ಬಹಳ ಹಿಂದಿನಿಂದ ಇದೆ. ಕಥೆ ಹೇಳುವುದು ಹಾಗೂ ಕೇಳುವುದು ಮಾನವನಷ್ಟೇ ಹಳೆಯದು. ದೇಶದಿಂದ ದೇಶಕ್ಕೆ ಕಥೆಗಳು ಪ್ರಯಾಣಿಸಿದಾಗಲೂ ಅವು ಅಲ್ಲಲ್ಲಿನ ಬಣ್ಣ ತಳೆದು, ಆಯಾ ಮಣ್ಣಿನ ಗುಣವನ್ನು ಮೈದುಂಬಿಕೊಂಡು ಆಯಾ ಜನರ ಬಾಳಿನಲ್ಲಿ ಹಾಸು ಹೊಕ್ಕಾಗುತ್ತವೆ. ತತ್ಕಾಲದಲ್ಲಿ ಪ್ರಚಲಿತವಿರುವ ಧರ್ಮದವರೂ ಅಂತ ಕಥೆಗಳನ್ನು ತಮ್ಮ ಧರ್ಮಪ್ರಚಾರಕ್ಕೆ ಅಳವಡಿಸಿಕೊಳ್ಳುವುದು ಅಪರಿಚಿತವಲ್ಲ. ಇಂತಹವುಗಳಲ್ಲಿ ಪಂಚತಂತ್ರ ಕಥೆಗಳೂ ಬರುತ್ತವೆ. ವಿಷ್ಣುಶರ್ಮನದು ಹಿಂದೂ ಪರಂಪರೆಯಾದರೆ, ವಸುಭಾಗ ಭಟ್ಟನದು ಜೈನ ಪರಂಪರೆ. ದುರ್ಗಸಿಂಹ ಈ ಎರಡನೆಯ ಸಂಪ್ರದಾಯ ಹಿಡಿದಿದ್ದಾನೆ.

ಕನ್ನಡಕಾವ್ಯ ಅನುವಾದವಾದರೂ ತನ್ನತನವನ್ನು ಕಾಯ್ದುಕೊಂಡಿದೆ. ಇಲ್ಲಿನ ಕತೆಗಳು ಪ್ರೌಢ ಗಂಭೀರ ಹಿನ್ನೆಲೆಯಲ್ಲಿ ನಿಲ್ಲಬಲ್ಲುವಾದರೂ ಅವು ಸಾಮಾನ್ಯರನ್ನು ಮುಟ್ತುವುದು ಅದರ ಜಾನಪದ ಶಿಲಿಯ ಮೋಹಕತೆಯಿಂದ, ಅದರ ಕಥಾರಂಭ ಅರಮನೆಯಲ್ಲಿ, ಅದರ ಸುರಳಿಗಳು ಉರುಳುವುದು ಅರಣ್ಯದಲ್ಲಿ, ಪ್ರಾಣಿ ಪ್ರಪಂಚದಲ್ಲಿ. ಪ್ರಾಣಿಗಳಿಗೇ ಮನುಶ್ಯತ್ವದ ಆರೋಪ, ಅನ್ಯೋಕ್ತಿಯೇ ಇಲ್ಲಿನ ಮಾಧ್ಯಮ ಒಂದೊಂದು ಭಾವಕ್ಕೆ ಒಂದೊಂದು ಪ್ರಾಣಿ ಪ್ರತೀಕವಾಗಿ ನಿಲ್ಲುತ್ತದೆ. ಇಂತ ಒಂದು ಕಲ್ಪನೆಯೇ ಪರಿಭಾವ್ಯವಾಗಿದೆ. ದಾರಿತಪ್ಪಿದ ದಡ್ಡ ರಾಜಕುಮಾರರಿಗೆ ಅಡ್ಡದಾರಿಯಿಂದ ಅರಸುದಾರಿಗೆ ತಿದ್ದಲು ಇದಕ್ಕಿಂತ ಶಕ್ತಿಯುತವಾಸ ಮಾಧ್ಯಮ ಇನ್ನೊಂದಿಲ್ಲ. ಹೀಗಾಗಿ ಪಂಚತಂತ್ರದಲ್ಲಿ ಹಿಗ್ಗಿಸಿದ, ಒಮ್ಮೊಮ್ಮೆ ಕುಗ್ಗಿಸಿದ, ತಿದ್ದಿದ, ಜನಪದ ಕಥೆಗಳು ಸಮಾವೇಶವಾಗಿವೆ. ಕವಿ ದುರ್ಗಸಿಂಹ ಜಾನಪದದಿಂದ ಸ್ಪೂರ್ತಿಗೊಂಡವನು; ಜಾನಪದದಲ್ಲಿ ಆಳವಾಗಿ ಬೇರಿಬಿಟ್ಟವನು.

ಪಂಚತಂತ್ರದ ಕಥಾಮುಖ ಮೇಲಿನ ನಿಲುವನ್ನು ಸಮರ್ಥಿಸುತ್ತದೆ. ಈ ಕಥಾರಂಭ ಮುಂದೆ ಹರಿಹರನಂತ ಹಿರಿಯ ಸಂಪ್ರದಾಯ ಕವಿಗೆ ಮೇಲ್ಪಂಕ್ತಿ ಹಾಕಿ ಕೊಟ್ಟಂತೆ ತೋರುತ್ತದೆ : “ಹರಂ ದರಹಸಿತ ವದನಾರವಿಂದನಾಗಿ ಪಾರ್ವತಿಗಪೂರ್ವ ಮಪ್ಪ ಕಥೆಗಳಂ ಪೇೞುತ್ತಿರಲಾ ಕಥಾಗೋಷ್ಠಿಯೋಳ್ ಪುಷ್ಪದಂತನೆಂಬಂಗಣ ಪ್ರಧಾನ ನಿರ್ದೆಲ್ಲಮಂ ಕೇಳ್ದಾ ತನೇನಾನುಮೊಂದು ಕಾರಣದಿಂ ಮಾನವಲೋಕದೊಳ್ ಪುಟ್ಟಿ ಗುಣಾಢ್ಯನೆಂಬ ಸತ್ಕವಿಯಾಗಿ ಶಾಲಿವಾಹನನೆಂಬ ಚಕ್ರವರ್ತಿಯ ಕವಿಯಾಗಿರ್ದು ಹರಂ ಗಿರಿಸುತೆಗೆ ಪೇೞ್ದಾ ಕಥೆಗಳಂ ಪೈಶಾಚಿಕ ಭಾಷೆಯೊಳ್ ಬೃಹತ್ಕಥೆಗಳಂ ಮಾಡಿ ಪೇೞ್ದೂಡವಂ ವಸುಭಾಗ ಭಟ್ಟಂ ಕೇಳ್ದಾ ಕಥಾಸಮುದ್ರದೊಳ್ ಪಂಚರತ್ನಮಪ್ಪೈದು ಕಥೆಗಳನಾಯ್ದು ಕೊಂಡು ಪಂಚತಂತ್ರಮೆಂದು ಪೆಸರಿಟ್ಟು ಸಮಸ್ತ ಜಗಜ್ಜನೋಪ ಕಾರಾರ್ಥಂ ಪೇೞ್ದನದಱೆಂ

ವಸುಭಾಗ ಭಟ್ಟ ಕೃತಿಯಂ
ವಸುಧಾಧಿಪಹಿಮನಖಿಲ ವಿಭುದ ಸ್ತುತಮಂ
|
ಪೊಸತಾಗಿರೆ ವಿರಚಿಸುವೆಂ
ವಸುಮತಿಯೊಳ್ ಪಂಚತಂತ್ರಮಂ ಕನ್ನಡಿದಿಂ
|| ೧-೬೨”

ದುರ್ಗಸಿಂಹನ ಕೃತಿಯಲ್ಲಿ,ತೋರಿಕೆಗೆ ಚಂಪೂರೂಪದಲ್ಲಿದ್ದರೂ, ಪದ್ಯಕ್ಕಿಂತ ಗದ್ಯಭಾಗವೇ ಹೆಚ್ಚು. ಪದ್ಯಗಳಲ್ಲೂ ೪೫೮ ಕನ್ನಡ, ೨೩೦ ಸಂಸ್ಕೃತ; ಕನ್ನಡದ ಪದ್ಯಗಳಲ್ಲೂ ಸಮವೃತ್ತಗಳಿಗಿಂತ ಕಂದಪದ್ಯಗಳೇ (೩೦೪) ಹೆಚ್ಚಿವೆ. ದುರ್ಗಸಿಂಹ ಅನುಸರಿಸದಿರುವ ವಿಷ್ಣುಶರ್ಮನ ಪಂಚತಂತ್ರದ ವಿಭಾಗಗಳಿವು.

ಮಿತ್ರಭೇಧಃ ಸುಹೃಲ್ಲಾಭಃ ಸಂದಿರ್ವಿಗ್ರಹ ಏವ ಚ
ಲಬ್ದನಾಶಮಸಂಪ್ರೇಕ್ಷ ಕಾರಿತಾ ಪಂಚತಂತ್ರಕಂ

ಅಂದರೆ ಮಿತ್ರಭೇದ, ಮಿತ್ರ ಸಂಪ್ರಾಪ್ತಿ, ಕಾಕೋಲೂಕೀಯಂ, ಲಬ್ಧಪ್ರಣಾಶಮ್, ಅಪರೀಕ್ಷಿತ ಕಾರಕಂ ಎಂಬ ಆಯ್ದು ತಂತ್ರಗಳಿವೆ. ದುರ್ಗಸಿಂಹ ಅನುಸರಿಸುವ ವಸುಭಾಗ ಸಂಪ್ರದಾಯದ ಪಂಚತಂತ್ರದಲ್ಲಿರುವ ಭಾಗಗಳು:

ಭೇದಃ ಪರೀಕ್ಷಾ ವಿಶ್ವಾಸಃ ಚತುರ್ಥಂ ವಂಚನಂ ತಥಾ |
ಮಿತ್ರ ಕಾರ್ಯಂ ಚ ಪಂಚೈತೆ ತಥಾಸ್ತಂತ್ರಾರ್ಥ ಸಂಜ್ಞಕಾಃ
||

ಅಂದರೆ ಭೇದ, ಪರೀಕ್ಷಾ, ವಿಶ್ವಾಸ, ವಂಚನಾ, ಮಿತ್ರಕಾಯ ಎಂಬ ಆಯ್ದು ತಂತ್ರ ಪ್ರಕರಣಗಳಿವೆ.

ವಿಷ್ಣುಕರ್ಮ ಹಾಗೂ ವಸುಭಾಗರ ಸಂಪ್ರದಾಯಗಳಲ್ಲಿ ವ್ಯತ್ಯಾಸಗಳಿದ್ದರೂ ಸಾದೃಶ್ಯಗಳೇ ಹೆಚ್ಚಿವೆ. ಪ್ರಧಾನವಾಗಿ ಎದ್ದು ಕಾಣುವ ಒಂದು ಅಂತರವೆಂದರೆ ವಸುಭಾಗ ಪರಂಪರೆಯಲ್ಲಿ ಜೈನಧರ್ಮದ ನಿರೂಪಣೆಗೆ ಪ್ರಾಶಸ್ತ್ಯ ಕೊಟ್ಟಿರುವುದು. ಈ ಮಾತು ಹೇಳುವಾಗ ಒಂದು ಸಂಶಯವೂ ಎದುರಾಗುತ್ತದೆ. ವಸುಭಾಗನ ಜಾತಿ, ಕುಲ, ದೇಶ ಸರಿಯಾಗಿ ತಿಳಿಯದು; ಆತನ ವಿಚಾರವಾಗಿ ವಿಶೇಷವಾಗಿ ಬೆಳಕು ಚಿಲ್ಲಿರುವ ಕೃತಿ ಕೂಡ ಈ ಕನ್ನಡದ ಪಂಚತಂತ್ರ, ಕನ್ನಡ ಪಂಚತಂತ್ರದಲ್ಲಿ ಕಂಡುಬರುವ ಜೈನ ಪ್ರಭಾವವನ್ನು ಎಷ್ಟರ ಮಟ್ಟಿಗೆ ಅನುಪಲಬ್ಧ ಮೂಲಕೃತಿಗೆ ಆರೋಪಿಸಬಹುದೆಂಬುದನ್ನೂ ಆಲೋಚಿಸಬೇಕಾಗುತ್ತದೆ. ದುರ್ಗಸಿಂಹ ಕೂಡ, ಜಾತಿಯಲ್ಲಿ ದ್ವಿಜನಾದರೂ, ಬೆಳೆದ ಪರಿಸರ ಜೈನಮಯವಾಗಿದ್ದುದರಿಂದಲೋ ಏನೋ ವಸುಭಾಗ ಸಂಪ್ರದಾಯವನ್ನೇ ಮಾನ್ಯಮಾಡಿದ್ದಾನೆಂದು ಹೇಳುವುದು ಒಂದು ಊಹೆ. ಇದಕ್ಕೆ ಇನ್ನೊಂದು ಮುಖವೂ ಇದೆ.

ನಾಗವರ್ಮಾದಿಗಳಿದ್ದ ಸಯ್ಯಡಿಯ ಪ್ರದೇಶ ಹಾಗೂ ಅದುವರೆಗೆ ಕನ್ನಡದಲ್ಲಿ ರಚಿತವಾಗಿದ್ದ ಸಾಹಿತ್ಯ ಜೈನಮಯವಾಗಿತ್ತು. ಈ ಭೌಗೋಳಿಕ, ರಾಜಕೀಯ ಹಾಗೂ ಸಾಹಿತ್ಯದ ಸಂದರ್ಭದಲ್ಲಿ ಬೆಳೆದು ಬಂದ ದುರ್ಗಸಿಂಹ ಜೈನತ್ವವನ್ನು ಪುರಸ್ಕರಿಸಿದ ವಸುಭಾಗ ಸಂಪ್ರದಾಯದ ಪಂಚತಂತ್ರವನ್ನು ಸ್ವೀಕರಿಸಿದ್ದಲ್ಲಿ ಆಕಸ್ಮಿಕತೆಗಿಂತ ಉದ್ದೇಶಪೂರಿತ ಲೆಕ್ಕಾಚಾರ ಕಂಡುಬರುತ್ತದೆ. ದುರ್ಗಸಿಂಹ ಸ್ಮರಿಸುವ ಕವಿಗಳ ಪಟ್ಟಿ ಕೂಡ ಇದನ್ನು ಪುಷ್ಟೀಕರಿಸುತ್ತದೆ. ಜತೆಗೆ ಕಾವ್ಯದಲ್ಲಿ ಅಲ್ಲಲ್ಲಿ ಕಂಡುಬರುವ ಜೈನಪರವಾದ ವಿವರಣೆಯನ್ನೂ ಈ ಹಿನ್ನೆಲೆಯಲ್ಲಿ ಗಮನಿಸಬಹುದು. ಅಹಿಂಸಾ ಪ್ರತಿಪಾದನೆ, ಭಾವಾವಳಿ ನಿರೂಪಣೆ, ಕೇವಲಜ್ಞಾನ ರೌದ್ರಧ್ಯಾನ ಜನ್ಮಾಂತರ ವಾಸನ, ದಿಗಂಬರ ಸವಣ, ಚರಿಗೆ ಪಂಚಾಶ್ಚರ್ಯ ಆರ್ತಧ್ಯಾನ, ಕರ್ಮ ಪ್ರಾಧಾನ್ಯ- ಇವೆಲ್ಲ ದುರ್ಗಸಿಂಹನಲ್ಲಿ ಪ್ರಯೋಗವಾಗಿವೆ. ಸಮಕಾಲೀನ ಜೈನ ಧರ್ಮೋತ್ಕರ್ಷದ ವಾತಾವರಣದ ಶಿಶುವಾದ ಈ ಕವಿ ತನ್ನ ಕಾವ್ಯದಲ್ಲೂ ಜೈನಪರವಾದ ವಿವರಣೆಗೆ ಅವಕಾಶ ಕಲ್ಪಿಸಿ ಹೀಗಿದ್ದಲ್ಲಿ ಇದನ್ನು ದುರ್ಗಸಿಂಹನ ಸ್ವಂತ ಸೇರ್ಪಡೆಯೆಂದಷ್ಟೇ ತಿಳಿಯಬೇಕಾಗುತ್ತದೆ, ಮೂಲಕೃತಿಗೆ ಆರೋಪಿಸುವ ಅಗತ್ಯ ಬೀಳುವುದಿಲ್ಲ.

ಈ ಸಂಗತಿಗಳೇನೇ ಇರಲಿ, ಪಂಚತಂತ್ರ ಕಾವ್ಯದ ಮಹತ್ವ ನಿಂತಿರುವುದು ಈ ಅಂಶಗಳಲ್ಲಲ್ಲ. ಪಂಚತಂತ್ರ ಕೃತಿ ನೀತಿಗೆ ಹೇಗೆ ಹೆಸರಾಗಿದೆಯೋ ಹಾಗೆಯೇ ವ್ಯಂಗ್ಯ ವಿಡಂಬನೆಗಳಿಗೂ ಪ್ರಸಿದ್ಧವಾಗಿದೆ. ಮೂಲತಃ ಇದರ ಕಥಾನಕದಲ್ಲೇ ಇಂಥ ವಿಡಂಬನಾವ್ಯಕ್ತಿಗೆ ಸಹಾಯಕವಾಗುವ ಸಾಮಗ್ರಿ ವಿಪುಲವಾಗಿರುವುದನ್ನು ಕವಿ ಬಳಸಿಕೊಳ್ಳುವುದರ ಜತೆಗೆ ಅದರಲ್ಲಿ ಔಚಿತ್ಯವನ್ನೂ ಸೇರಿಸಿದ್ದಾನೆ. ಈ ಔಚಿತ್ಯವೆಂದರೆ, ನೀತಿ ಸಾಮಾನ್ಯವಾಗಿ ಅತಿಯಾದರೆ ಬೇಸರ ಹುಟ್ಟಿಸುವಂಥಾದ್ದು; ಇದರ ಏಕತಾನವನ್ನು ಒಡೆದು, ಕಾವ್ಯದಲ್ಲಿ ರಂಜನೆ ಹಾಗೂ ಧ್ವನಿ ಪುಷ್ಟಿಯನ್ನು ತರುವಲ್ಲಿ ಈ ವಿಡಂಬನೆ ಅತ್ಯಂತ ಸಮಂಜಸವಾದ ತಂತ್ರವಾಗಿದೆ.

ಪಂಚತಂತ್ರದಲ್ಲಿ ಬರುವ ಎಲ್ಲ ಪಾತ್ರಗಳೂ ಪ್ರಾಣಿ ಪ್ರಪಂಚದಿಂದಲೇ ಆಯ್ದಂತಹವು – ಸಂಜೀವಕ, ಕರಟಕ, ದಮನಕ, ಪಿಂಗಳಿಕ ಇತ್ಯಾದಿ. ಅವುಗಳ ಹೆಸರುಗಳೂ ಅದರದರ ಸ್ವಭಾವವನ್ನು ವ್ಯಾಖ್ಯಾನ ಬಯಸದೆ ವಿವರಿಸುವಂತಿವೆ. ಈ ಪ್ರಾಣಿಗಳು ಪ್ರಾಣಿಗಳಿಗೆ ಸಹಜವಾದ ರೀತಿಯಲ್ಲಿ ನೈಸರ್ಗಿಕವಾಗಿ ವರ್ತಿಸಿದೆ, ಅದಕ್ಕಿಂತ ಭಿನ್ನವಾಗಿ ಮಾನವ ರೀತಿಯಲ್ಲಿ ಅಸಹಜವಾಗಿ ವರ್ತಿಸುತ್ತವೆ. ಅಂದರೆ ಈ ಪ್ರಾಣಿಗಳು ಮಾನುಷಿಕವಾದ ಎಲ್ಲ ಕ್ರಿಯಾ ವ್ಯಾಪಾರಗಳನ್ನೂ ನಡೆಸುತ್ತವೆ. ಹಾಗಯೇ ಮನುಷ್ಯನ ಒಳ್ಳೆಯ ಹಾಗೂ ಕೆಟ್ಟ ಗುಣಗಳೆರಡನ್ನೂ ಪ್ರತಿನಿಧಿಸುತ್ತವೆ. ಈ ಪಾತ್ರಗಳ ಪರಿಚಯವಾಗುವಾಗ ಪ್ರಾಣಿಗಳು ಹೀಗೆ ವ್ಯವಹರಿಸುವುದು ಸಾಧ್ಯವೇ ಎಂಬ ಸಂಶಯ ತಲೆದೋರುವುದು ಸಹಜ. ಅದನ್ನು ತಾರ್ತಿಕವಾಗಿ ಸರಿಗಾಣುವಂತೆ ಚಿತ್ರಿಸುವುದು.

ವಿಡಂಬನೆ ಮತ್ತು ಹಾಸ್ಯದಲ್ಲಿ ತರ್ಕಕ್ಕೆ ಸ್ಥಾನವಿದ್ದರೂ ಅದು ಗೌಣ. ತರ್ಕಕ್ಕಿಂತ ಇಲ್ಲಿ ಅಸಂಗತತೆ ಅಥವಾ ಅತಿ ಮಗ್ಧತೆ ಇರುವುದನ್ನು ಗಮನಿಸುತ್ತೇವೆ. ಸಾಮಾನ್ಯವಾಗಿ ಎಲ್ಲ ಜನಪದ ಕತೆಗಳೂ ಈ ಅಸಂಗತ ಸಂಗತಿಗಳನ್ನು ಒಳಗೊಂಡೂ ಅವನ್ನು ದಾಟಿದ ಸತ್ಯವೊಂದನ್ನು ಪ್ರತಿಪಾದಿಸುವ ಸಲುವಾಗಿ ಕ್ರಿಯಾಮುಖವಾಗಿರು ತ್ತವೆ ಎಂಬುದನ್ನು ಗುರುತಿಸಬಹುದಾಗಿದೆ. ರೂಪಕ ಇಲ್ಲವೇ ಅನ್ಯೋಕ್ತಿಗಳು ಇಂಥ ವಿಡಂಬನೆಯಲ್ಲಿ ಹೇರಳವಾಗಿ ಬಳಕೆಯಾಗುವುದುಂಟು. ಇಲ್ಲಿ ಲೌಕಿಕವಾದ ತರ್ಕಕ್ಕೆ ದ್ವಿತೀಯ ಸ್ಥಾನ. ಈ ಅನ್ಯೋಕ್ತಿ ವಿಡಂಬಿಸುವ ಸಂಗತಿ ಮಾತ್ರ ವ್ಯವಹಾರಾದಿಗಳಿಗೆ ತುಂಬ ಮೌಲಿಕವಾದದ್ದಾಗಿರುತ್ತದೆಂಬುದನ್ನೂ ಮರೆಯುವಂತಿಲ್ಲ.

ಮೇಲಿನ ಈ ಸಂಗತಿಯನ್ನು ಒಪ್ಪಿಕೊಂಡು ದುರ್ಗಸಿಂಹನ ಪಂಚತಂತ್ರವನ್ನು ಪರಿಶೀಲಿಸಿದರೆ ಇಡಿಯ ಕಾವ್ಯವೇ ವಿಡಂಬನೆಯಲ್ಲಿ ಆಚ್ಛಾದಿತವಗಿದೆಯೆಂಬ ಸಂಗತಿ ತನಗೆ ತಾನೇ ನಿರ್ವಚನಗೊಳ್ಳುತ್ತದೆ. ಮನುಷ್ಯನ ನಿಗೂಢವಾದ ಸಂವೃತ ಸ್ವಭಾವಾದಿಗಳು ಇಲ್ಲಿ ಪ್ರಾಣಿಮಾಧ್ಯಮದ ಮೂಲಕವಾಗಿ ನಿವೃತಗೊಳ್ಳುವ ವಿಧಾನ ಕಲಾತ್ಮಕವಾಗಿದೆ. ತನ್ನ ಸಮಕಾಲೀನ ಜೀನವಕ್ಕೆ ಕವಿ ತೋರುವ ಪ್ರತಿಕ್ರಿಯೆಗಳು ಕೂಡಾ ಪೃಥಕ್ಕರಿಸಲಾಗದಷ್ಟು ಮೂಲಧಾತುವಿನೊಡನೆ ಬೆಸೆದುಕೊಂಡಿವೆ.

ಈ ಕೃತಿಯಲ್ಲಿ ಭೇದ ಪ್ರಕರಣದ ಮೊದಲನೆಯ ಚೌಕಟ್ಟಿನೊಳಗೆ ಬರುವ ಕಥೆಯನ್ನೇ ಪರಿಶೀಲಿಸಿದರೂ ವಿಡಂಬನೆ ಎಷ್ಟು ಗಂಭೀರವಾಗಿ ಕಾವ್ಯದಲ್ಲಿ ಬರುತ್ತದೆಂಬುದು ಗೊತ್ತಾಗುತ್ತದೆ. ಒಟ್ಟು ಕತೆಯಲ್ಲಿ ದಮನಕನೆಂಬ ನರಿಯದೇ ಕಾರುಬಾರು. ಅದು ತನ್ನ ಬದುಕನ್ನು ಪ್ರಮುಖವೆಂದು ತಿಳಿದ ಅಸ್ತಿತ್ವವಾದಿಯಾದ ಪ್ರಾಣಿ. ಅದರಿಂದ ಸಂಜೀವಕ ವೃಷಭ ಮತ್ತು ಪಿಂಗಳಕ ಸಿಂಹ ಇವುಗಳ ನಡುವೆ ಸ್ನೇಹೋದಯಕ್ಕೂ ವಿಸಂಧಿಗೂ ಅನುಕೂಲಕರ ಪ್ರಸಂಗಗಳನ್ನು ತನ್ನ ವೈಯಕ್ತಿಕ ಶ್ರೇಯಸ್ಸಿಗೆ ಮೆಟ್ಟಿಲಾಗುವಂತೆ ನಿರ್ಮಿಸುತ್ತಾ ಹೋಗುವ ಸಂಗತಿ ಸ್ವಾರಸ್ಯವಾಗಿ ವರ್ಣಿತವಾಗಿದೆ. ಈ ಕಥಾಂಗ ಬಹಳ ಕಿರಿದು. ಅದರಿಂದಾಗಿ ಇಲ್ಲಿರುವ ಅನುಷಂಗಿಕವಾಗಿ ಬರುವ ಉಪಕತೆಗಳು ಸಾಕಷ್ಟಿವೆ.

ಉಪಕತೆಗಳಲ್ಲಿಯೂ ನೀತಿಯೇ ಮೈದುಂಬಿ ಪ್ರಾಣಿಪ್ರಪಂಚದ ನಾಗರಿಕರನ್ನೇ ಒಳಗೊಂಡು ಬರುವುದನ್ನು ಗಮನಿಸಬೇಕು. ಪ್ರಾಣೀಗಳೇ ಪ್ರಧಾನವಾಗಿರುವ ಪಂಚತಂತ್ರದ ೬೫ ಚಿಕ್ಕಚಿಕ್ಕ ಕತೆಗಳಲ್ಲಿ ಮನುಷ್ಯರಿಗೆ ಪ್ರವೇಶ ನಿಷಿದ್ಧವೇನೂ ಅಲ್ಲ. ಅಲ್ಲಲ್ಲಿ ಮಾನವ ಸಂಬಂಧವಾದ ಕತೆಗಳೂ ಸೇರಿಕೊಂಡಿವೆ. ಮಾನವರ ಕತೆಗಳನ್ನೂ ಪ್ರಾಣಿಗಳೇ ಹೇಳುತ್ತವತೆ. ಅಲ್ಲದೆ ಇಲ್ಲಿ ಮಾನವ ಪಾತ್ರಗಳು ಬರುವುದೇನಿದ್ದರೂ ಪ್ರಾಣಿಗಳೊಡನೆ ಆತನಿಗಿರುವ ವ್ಯತ್ಯಾಸ ವೈದೃಶ್ಯಗಳನ್ನು ತೋರಿಸುವ ಸಲುವಾಗಷ್ಟೇ. ವೈದೃಶ್ಯದ ನಿಕಷದಲ್ಲಿ ಮಾನವೀಯ ಮೌಲ್ಯಗಳು ಪ್ರಕಾಶಿತವಾಗುತ್ತವೆ. ಮುಖ್ಯ ಶ್ರೋತೃಗಳಾದ ರಾಜಕುಮಾರರನ್ನು ಲೋಕಜ್ಞಾನುಗಳನ್ನಾಗಿಸುವುದು ಇವುಗಳ ಉದ್ದೇಶ. ಹಾಗೆಂದು, ಕೇಳು ಜನಮೇಜಯರಾಯ ಇಲ್ಲವೇ ಆಲಿಸು ಶ್ರೇಣಿಕ ನೃಪನೇ ಎಂಬಂಥ ಮಾದರಿಯನ್ನು ಹಿಡಿದು ’ಕೇಳು ರಾಜಕುಮಾರಾ’ ಎಂದು ಬರುವುದಿಲ್ಲ.

ಇಷ್ಟೇ ಅಲ್ಲದೆ ಪಂಚತಂತ್ರದ ಮಧ್ಯೆ ಬರುವ ಉದ್ಧೃತಗಳು, ವಾಕ್ಯೋದ್ಧರಣಗಳು ಪ್ರಸಿದ್ಧ ಪುರಾಣ ಇಲ್ಲವೇ ಕಾವ್ಯಗಳಿಂದ ಹೆಕ್ಕಿದವುಗಳೇ ಆಗಿರುತ್ತವೆ; ವಡ್ಡಾರಾಧನೆಯ ಮಾದರಿಯನ್ನು ಚಂಪೂ ರೂಪಕ್ಕೆ ವಿಸ್ತರಿಸಿದರೆ ಪಂಚತಂತ್ರವಾಗುತ್ತದೆನ್ನುವಂತಿದೆ. ಒಂದು ಕತೆಬ್ ಅಹಿಂಸೆಯ ಮಹತ್ವವನ್ನು ಸಾರಲು ಬಂದಿದ್ದರೆ. ಅದರ ಉಪಕತೆಗಳು ಬೇರೆ ಬೇರೆ ಸಂಗತಿಗಳ ಸಮರ್ಥನೆಗೆ ತಲೆಹಾಕುತ್ತವೆ. ಸರ್ಪ ಮತ್ತು ಕಾಗೆಯ ಕತೆ, ವಿರೋಧಿ ಬಲಿಷ್ಠನಾದರೂ ಕಾರ್ಯಸಾಧನೆಯ ಪಥವನ್ನು ತೋರಿಸಿ, ಯಶಸ್ಸನ್ನು ಪಟ್ಟಿ ಹಿಡಿದು ಸಾಧಿಸಿ ಆಚರಿಸಿಕೊಳ್ಳಬೇಕೆಂಬ ಧ್ವನಿಯನ್ನು ತಿಳಿಸುತ್ತದೆ. ಶಿವಭೂತಿಯ ಕಥೆಯಲ್ಲಿ ಕೃತಜ್ಞತೆ-ಕೃತಘ್ನತೆಗಳ ತಾರತಮ್ಯ ಮಡುಗಟ್ಟಿದೆ ಹೀಗೆಯೇ ಒಂದೊಂದು ಕಥಾನಕದ ಗಂತವ್ಯವೂ ಒಂದೊಂದು ಮೌಲ್ಯದ ಸಂಗತಿಯ ಸಮರ್ಥನೆಗೆಂದೇ ಹೆಣೆದುಕೊಂಡಿರು ತ್ತದೆ. ಇಲ್ಲಿ ಬರುವ ನೀತಿ ಸಾರ್ವಕಾಲಿಕ ಸ್ವರೂಪದ್ದೇ ಆಗಿರಬೇಕೆಂಬ ನಿರ್ಬಂಧವೇನೂ ಇಲ್ಲ. ಹಾಗೆ ನೋಡುವುದಾದರೆ ಇಂಥ ನೇತ್ಯಾತ್ಮಕ ದೃಷ್ಟಿಯೇ ವ್ಯಕ್ತಿಯಿಂದ ವ್ಯಕ್ತಿಗೆ ಮತ್ತು ಕಾಲ ಕಾಲಕ್ಕೆ ಬದಲಾಗುತ್ತಾ ಹೋಗುತ್ತದೆಂಬ ಅಂಶವನ್ನು ಮರೆಯಬಾರದು. ಹರಿಕಥೆಯ ಮಾದರಿಯಲ್ಲಿ ಪಂಚತಂತ್ರದ ಕಥೆಗಳು ಬಿಚ್ಚಿಕೊಂಡರೂ ಇವು ಲಾಘವ ಪರ್ಯವಸಾನ ಪಡೆಯುವುದಿಲ್ಲ.

‘ಈ ಕಥೆ, ಇಂಥದೊಂದು ನೀತಿಗಾಗಿ’ ಎಂದು ಗೆರೆಹಾಕಿಕೊಂಡು ಕಥೆ ಹೇಳ ಹೊರಟಿದ್ದರೆ ಅದರಲ್ಲಿ ಅಷ್ಟೊಂದು ಸೊಗಸು ಇರುತ್ತಿರಲಿಲ್ಲ. ಆದ್ದರಿಂದಲೇ ಕಥೆಯಲ್ಲಿ allergoric ಆದ ಪಾತ್ರಗಳನ್ನು ತಂದು, ಸೂಕ್ತ ಸಂದರ್ಭಗಳನ್ನು ನಿರ್ಮಿಸಿ ಆಯಾ ಘಟನೆಗಳನ್ನು ವಿವರಿಸುವ ಚಮತ್ಕಾರದಿಂದ ಕೂಡಿದ ತಂತ್ರವೊಂದು ಈ ಕಾವ್ಯದಲ್ಲಿ ಅಳವಟ್ಟಿದೆ. ಇದರಲ್ಲಿ ಬರುವ ಕೆಲವು ವರ್ಣನೆಗಳು ಕಥಾಂಗಕ್ಕೆ ನೇರವಾಗಿ ಹೊಂದುವುದಿಲ್ಲವೆಂಬುದು ನಿಜ. ಆದರೂ ಅವು ತಮಗೆ ತಾವೇ ನಿಲ್ಲಬಲ್ಲ ಭಾಗಗಳಾಗಿರುತ್ತವೆ. ಅದರಂತೆ ಅಲ್ಲಲ್ಲಿ ಬರುವ ಅರಣ್ಯದ, ಪ್ರಾಣಗಳ ಕೆಲವು ಚಿತ್ರಗಳು, ಸಂಸ್ಕೃತ ಭೂಯಿಷ್ಯವಾಗಿದ್ದರೂ, ಹೃದಯಂಗಮ ವಾಗಿವೆ. ಸಂಜೀವಕ ವೃಷಭನ ಹಾಗೂ ಪಿಂಗಳಕ ಮೃಗರಾಜನ ಚಿತ್ರಗಳು :

ಸ್ಫುರದಕ್ಷೂಣ ವಿಷಾಣ ಕೋಟಿ ದಳಿತ ಪ್ರೋತ್ತುಂಗ ವಲ್ಮೀಕನು
ದ್ಧುರ ಗಂಭೀರ ಪಯೋದನಾದನತಿ ಪುಷ್ಟಾಂಗಂ ಭೃಹತ್ಕಂಧರಾಂ
ತರನುದ್ದಾಮಬಳಂ ಮಹಾಗಹನದೊಳ್ ಸಂಜೀವಕಂ ಕೂಡೆ ಸಂ
ಚರಿಸುತ್ತಿರ್ದುದನೂನಪೀನ ಕಕುದಂ ತನ್ನಿಚ್ಛೆಯಿಂ ನಿಚ್ಚಲುಂ
|| ೮೦ ||

            ಪ್ರಾವೃಡದಭ್ರಮೇಘ ಪಟಲಾಂತರಿತೇಂದು ವಿಭಾಸಿಯಂ ಸುರಾ
ಜೀವರಜಃ ಕದಂಬವನ ಕೈರವ ಚಾರು ಕಳಿಂದ ಕನ್ಯಕಾ
ಜೀವನವರ್ಧಿತಾಯತ ತಮಾಲವನಾಂತರದಲ್ಲಿ ನಿಂದ ಸಂ
ಜೀವನಕಂ ಮೃಗೇಂದ್ರ ಸಚಿವಾಗ್ರಣಿ ಕಂಡನಖಂಡ ಸತ್ವನಂ
|| ೯೭ ||

            ಭಂಗುರ ಭೀಷಣಭ್ರು ಕುಟಿದಂಷ್ಟನುದಗ್ರದವಾನಲ ಪ್ರಭಾ
ಭಂಗ ಪಿಶಂಗ ಕೇಸರ ಸಟಾವೃತ ರೌದ್ರಮುಖಂ ಮದಾಂಧಮಾ
ತಂಗ ಘಟಾವಿಘಟ್ಟನ ಪಟಿಷ್ಠಕಠೋರ ನಖಾಳಿ ನಾಮದಿಂ
ಪಿಂಗಳಕಂ ಮೃಗೇಂದ್ರನೊಸೆದಿರ್ಪುದತರ್ಕ್ಯ ಪರಾಕ್ರಮ ಕ್ರಮಮಂ
|| ೮೧ ||

ಈ ಪಿಂಗಳಕ ಸಂಜೀವಕರ ಪ್ರಥಮ ಸಂದರ್ಶನ ಕಾಲದ ಉಭಯ ಕುಶಲೋಪರಿಯ ಸಾಂಪ್ರತ ಸಂಭಾಷಣೆಯನ್ನು ಸೆರೆಹಿಡಿದು ಕೊಡುವ ಪ್ರಯತ್ನ :

ಉದಿತಸ್ಮೇರನಿಭೇಂದ್ರವೈರಿ ನಯದಿಂ ಕೈನೀಡಿ ಗೋಮುಖ್ಯಬ
ಲ್ಲಿದರೇ ಸಂತಸಮೇ ಕರಂ ಕುಶಲಮೇ ಕ್ಷೇಮಾಂಗಮೇ ದೇವ ಸ
ಮ್ಪದಮುಂ ಬಲ್ಲಿದೆವಾಂ ಕರಂ ಕುಶಲಮುಂ ಕ್ಷೇಮಾಂಗಮೀಗಳ್ ಭವ
ತ್ಪದಪಂಕೇಜ ವಿಳೋಕ ಜಾತ ಧಯೆಯಿಂದಾದೆಂ ಮೃಗಾಧೀಶ್ವರಾ
|| ೧೦೯ ||

ಇದರಂತೆ ಪಂಚತಂತ್ರದಲ್ಲಿ ಅಪೂರ್ವವಾದ ಸುಭಾಷಿತ ರತ್ನಗಳು ಸೂರೆ ಹೋಗಿವೆ. ಮಾದರಿಗೆಂದು ಒಂದು ಆರ್ಯೋಕ್ತಿಯನ್ನು ಉದಾಹರಿಸಬಹುದು :

            ಶ್ರೂಯತಾಂ ಧರ್ಮಸರ್ವಸ್ವಂ ಶ್ರುತ್ವಾಚೈವಾವಧಾರ್ಯ ತಾಂ
ಆತ್ಮನಃ ಪ್ರತಿಕೂಲಾನಿ ಪರೇಷಾಂ ನ ಸಮಾಚರೇತ್
||

ಸಂಸ್ಕೃತ ಸುಭಾಷಿತಗಳಿಗೆ ಬರೆದ, ನಡುಗನ್ನಡ ಭಾಷೆಯಲ್ಲಿರುವ ವಿವರಣೆಯೂ ಭಾಷಾಶಾಸ್ತ್ರ ದೃಷ್ಟಿಯಿಂದ ಅಭ್ಯಾಸಾರ್ಹವಾಗಿದೆ.

ಹೀಗೆ ಕಾವ್ಯಾತ್ಮಕವಾಗಿ, ಗದ್ಯಪದ್ಯ ಮಿಶ್ರಿತ ಸಂಗತಿಯನ್ನು ರೂಪಕನಿಷ್ಠ ಹಾದಿಯಲ್ಲಿ ಹೇಳಿದರೂ, ಕಥೆಯ ಹಿಂದಿನ ತಾತ್ವಿಕ ಸಂಗತಿಯಿಂದಾಗಿ ಅದಕ್ಕೆ ವಿಶೇಷ ಮಹತ್ವ ಬಂದುಬಿಡುತ್ತದೆ. ಸಾಧಾರಣ ಕಥಾ ಗುಚ್ಛವಾಗಬಹುದಾದ ಕೃತಿಗೆ ವಿಡಂಬನೆ ಬೆಲೆ ತಂದುಕೊಟ್ಟಿದೆ; ಪಂಚತಂತ್ರವನ್ನು ನೋಡುವ ದೃಷ್ಟಿ ಮತ್ತು ವಿಮರ್ಶಿಸುವ ವಿಧಾನಗಳಿಗೇ ಒಂದು ಹೊಸ ಸೀಮಾರೇಖೆಯನ್ನು ನಿರ್ಮಿಸಿಕೊಟ್ಟಿದೆ.

ಪಂಚತಂತ್ರ ಸಂಕ್ಷಿಪ್ತ ಮಾನವ ಜಗತ್ತು. ಅದು ಮನುಷ್ಯ ಪ್ರಪಂಚಕ್ಕೆ ಹಿಡಿದ ಕನ್ನಡಿ. ಇದರಿಂದಾಗಿ ಇಲ್ಲಿನ ಕಥೆಗಳು ಮಾಮೂಲಿನ ಕಥಾಸಾಹಿತ್ಯಕ್ಕಿಂತ ಭಿನ್ನವೂ ವಿಶಿಷ್ಟವೂ ಆಗಿವೆ. ರಾಮಾಯಣ ಮಹಾಭಾರತಗಳಿಗೆ ಹೋಲಿಸಿದಾಗ ಈ ಅಂಶ ಸ್ಪಷ್ಟವಾಗುತ್ತದೆ. ಅಲ್ಲಿನ ಕಥೆಗಳಿಗಿಂತ ಇಲ್ಲಿನವು ಪ್ರತ್ಯೇಕವಾಗಿರುವುದು, ಇಲ್ಲಿ ಪ್ರಾಣಿಲೋಕದ ವಿಸ್ಮಯವಿದೆಯೆಂಬ ಕಾರಣದಿಂದಲ್ಲ. ಇಲ್ಲಿನ ಉದ್ದೇಶ ಕೂಡ ಕೇವಲ ಧರ್ಮ ಇಲ್ಲವೇ ನೈತಿಕ ಯಶಸ್ಸಿಗೆ ಬೇಕಾದ ತಿಳಿವಳಿಕೆಯ ಸಂಗ್ರಹಭಂಡಾರ, ಬಾಳಿನಲ್ಲಿ ಎದುರಾಗುವ ಎಡರುತೊಡರುಗಳನ್ನು ನಿವಾರಿಸಿಕೊಂಡು ನಿರಾಂತಕವಾಗಿ ಜೀವಿಸುವ ರಾಜಮಾರ್ಗ ರಹಸ್ಯದ ಪ್ರತಿಪಾದನೆ, ಹಗೆಗಳನ್ನು ಗೆಳೆಯರನ್ನಾಗಿಸಿಕೊಳ್ಳುವ ಜಾಣ್ಮೆ, ಮನುಷ್ಯಜೀವನದ ಡಾಂಭಿಕತೆ, ಡೌಲು, ದಬ್ಬಾಳಿಕೆ, ವಂಚಕತನ ಮೊದಲಾದ ನೀಚಗುಣಗಳ ಅಣಕ.

ಅನ್ಯೋಕ್ತಿ ಮಾರ್ಗವನ್ನು ಅವಲಂಬಿಸಿ ಪಂಚತಂತ್ರ ಕಾವ್ಯ ಸಾಧಿಸಿರುವ ಯಶಸ್ಸು ಚಿಂತನೀಯ. ತಮಗೆ ತಾವು ಸ್ವತಂತ್ರವಾಗಿ ನಿಲ್ಲುವ ಬಿಡಿಗತೆಗಳನ್ನು ಒಟ್ಟು ಒಂದು ಅಖಂಡ ಕಾವ್ಯ ಬಂಧದಲ್ಲಿ ಸೂತ್ರೀಕರಿಸಿ ತೀವ್ರ ಪರಿಣಾಮವನ್ನು ಸಾಧಿಸಿದೆ. ಸಿಂಹ, ವೃಷಭ, ನರಿ ಮೊದಲಾದ ಪಾತ್ರಗಳು ಪ್ರತೀಕಗಳಾಗಿ ಕಥಾ ಸಂಕಲನದಲ್ಲಿ ಕಾಣಿಸಿಕೊಳ್ಳುತ್ತವೆ. ಸಿಂಹ ಬಲಶಾಲಿ ನಾಯಕನಾದರೂ, ಮಂದಮತಿ; ಕಾರ್ಯ ಕಾರನ ಸಂಬಂಧಗಳ ಹಿನ್ನೆಲೆ ಮುನ್ನೆಲೆಯನ್ನು ಪರಿಶೀಲಿಸಿ ಅರಿಯದವ. ದೊರೆಯಾದವನು ಬಲಿಷ್ಠನಾದರಷ್ಟೇ ಸಾಲದು. ಆತ ಆಲೋಚನಾಪರನೂ ಆಗಿರಬೇಕು. ಆತ್ಮರಕ್ಷಣೆಗೆ ಅಗತ್ಯವಾದುದನ್ನು ಸ್ವಯಂವೇದ್ಯವನ್ನಾಗಿಸಿಕೊಳ್ಳುವ ವಿವೇಚನಾಶಕ್ತಿಯನ್ನೂ ಗಳಿಸಿಕೊಂಡಿರಬೇಕು. ತನ್ನ ಸುತ್ತ ಇರುವ ಪರಿವಾರದವರಲ್ಲಿ ಯಾರು ಹಿತೈಷಿಗಳು, ಯಾರು ಹಗೆಗಳು, ಯಾರು ಪ್ರಚ್ಛನ್ನರು ಎಂಬುದನ್ನು ಪೃಥಕ್ಕರಿಸುವ ಪ್ರಜ್ಞಾವಂತ ನಾಗಿರಬೇಕು. ಬೆರೆಯವರಿಗೆ, ಅವರ ಸಕ್ಕರೆ ನುಡಿಗೆ ಮರುಳಾಗಿ ನಮ್ಮ ಬುದ್ಧಿಯನ್ನೊಪ್ಪಿಸಿದರೆ ವಿಪತ್ಪರಂಪರೆ ತಪ್ಪಿದ್ದಲ್ಲ. ಇತರರು ಹೇಳಿದ್ದನ್ನೇ, ಯಾವ ಸ್ವಂತ ಪರಿಶೀಲನೆಯನ್ನೂ ಬಯಸದೆ ಅನಾಮತ್ತಾಗಿ ಕುರುಡಾಗಿ ನಂಬಿ ನಡೆದರೆ ಆಗುವ ಅನಾಹುತ ಅನಿವಾರ್ಯ. ಬೆಳ್ಳಗಿರುವುದೆಲ್ಲ ಹಾಲಲ್ಲ. ಗಾಳಿ ಬಂದಾಗ ತೂರಿಕೊಳ್ಳುವ ಸಮಯ ಸಾಧಕರು ಸುತ್ತ ಹೊಂಚು ಹಾಕುತ್ತಿರುತ್ತಾರೆ. ಈ ಸಂಗತಿಗಳನ್ನು ಪಿಂಗಳಕನ ಪರಿಸ್ಥಿತಿ ವಿಶದಪಡಿಸುತ್ತದೆ.

ವೃಷಭ ಸಂಜೀವಕನ ಪಾತ್ರ ಅಮಾಯಕನ ಅಸಹಾಯಕತೆಗೆ, ಮುಗ್ಧರನ್ನು ಸ್ವಾರ್ಥಿಗಳು ಹೇಗೆ ಸ್ವಪ್ರಯೋಜನಕ್ಕಾಗಿ ಬಳಸಿಕೊಂಡು ಬಲಿಕೊಡುತ್ತಾರೆಂಬುದಕ್ಕೆ ಸಂಕೇತ. ಪಂಚತಂತ್ರದ ಪಾತ್ರಗಳಲ್ಲೇ ಮಹಾಚತುರ, ಸ್ವಾರ್ಥಿ, ಗೋಸುಂಬೆ (ಓತಿಕ್ಯಾತ, ತೊಣ್ಣೆಗೊದ್ದ) ಎಂದರೆ ನರಿ ದಮನಕ. ಈ ಪಾತ್ರದಲ್ಲಿ ಕ್ರಿಯಾಶೀಲತೆ ತುಂಬಿ ತುಳುಕುತ್ತದೆ. ಓಥೆಲೊ ನಾಟಕದೆ ಅ (ಇ) ಯಾಗೊ ಪಾತ್ರವನ್ನು ನೆನಪಿಸುತ್ತದೆ. ಅದರ ಕಿಲಾಡಿತನ, ಕಪಿಮುಷ್ಟಿ. ಕಾರ್ಯಶ್ರದ್ಧೆಯಂತೆ ಕಾರ್ಯದಕ್ಷತೆ ಲೋಕಪ್ರಸಿದ್ಧಿ ಪಡೆದಿದೆ. ತನಗಿಂತ ಮೇಲಿರುವ ಅಧಿಕಾರಗಳನ್ನು ಹೊಗಳಿಕೆಯ ಹಾರ ಹಾಕಿ ಪ್ರಸನ್ನಗೊಳಿಸುವ ಕಲೆ ಇದಕ್ಕೆ ಅಂಗೈ ಮೇಲಿನ ನೆಲ್ಲಿಕಾಯಿ.

ಪಂಚತಂತ್ರದಲ್ಲಿ ವಿಡಂಬನೆಯ ಮೊನಚು ಯಥೇಚ್ಛವಾಗಿದೆ. ಸಮಾಜದಲ್ಲಿ ನಡೆಯುವ ಎಷ್ಟೋ ಮರೆಮೋಸ ಕುತ್ಸಿತಗಳನ್ನು, ವ್ಯಕ್ತಿಗಳ ಸಹಜ ದೌರ್ಬಲ್ಯಗಳನ್ನು ತೀಕ್ಷ್ಣವಾದ ವಿಡಂಬನೆಗೆ ಗುರಿ ಮಾಡಿದೆ. ಸಹಜ ಮೋಸಗಾರರು. ಕುಟೀಲ ನೀತಿಜ್ಞರು, ಪೊಳ್ಳು ಧಾರ್ಮಿಕತೆಯ ಬ್ರಾಹ್ಮಣರು, ಹೇಡಿಗಳಾದ ಕ್ಷತ್ರಿಯರು, ಜಿಪುಣರಾದ ವೈಶ್ಯರು, ಮೌಢ್ಯದಿಂದ ಕೂಡಿದ ಶೂದ್ರರು – ಇವರನ್ನೆಲ್ಲ ಇಲ್ಲಿ ಬರುವ ಮನುಷ್ಯ ಪಾತ್ರಗಳ ಮೂಲಕ ನೇರವಾಗಿಯೂ, ಪ್ರಾಣಿಗಳ ಮೂಲಕ ಪರ್ಯಾಯವಾಗಯೂ ಪ್ರತಿಬಿಂಬಿಸಲಾಗಿದೆ. ಯಾವ ಮತಪಂಥಗಳಿಗೂ ಅಂಟಿಕೊಳ್ಳದೆ ಸ್ಥಿತಪ್ರಜ್ಞನಂತೆ ನಿಂತ ಕವಿಯ ಜೀವನಶ್ರದ್ಧೆ ಮಾತ್ರ ಉದ್ದಕ್ಕೂ ಮಿಂಚುತ್ತದೆ.

ಮನುಷ್ಯ ಜೀವನದ ಲಾಭಕೋರ ಡಾಂಭಿಕತೆಯನ್ನು ಪಂಚತಂತ್ರದಂತೆ ತೀವ್ರವಾದ ವ್ಯಂಗಕ್ಕೆ ಗುರಿಪಡಿಸಿದ ಕಾವ್ಯಗಳು ವಿರಳ. ಮಾನವ ಮೂಲಕ ನೇರವಾಗಿ ಹೇಳಲು ಸಂಕೋಚವಾಗುವ ಎಷ್ಟೋ ಶಾಶ್ವತ ಸತ್ಯಗಳು ಇಲ್ಲಿ ಮಾರ್ಮಿಕವಾಗಿ ಒಡಮೂಡಿವೆ. ಕನ್ನಡ ಸಾಹಿತ್ಯದಲ್ಲಿ ಪಂಚತಂತ್ರಕ್ಕೆ ಒಂದು ವಿಶಿಷ್ಟವಾದ ಸ್ಥಾನವಿರುವುದು ಈ ದೃಷ್ಟಿಯಿಂದ; ಕಾವ್ಯವಾಗಿ ಅದಕ್ಕಿರುವ ಸ್ಥಾನ ಅಷ್ಟೇನೂ ಗಣ್ಯವಾದುದಲ್ಲ.

ತಾಜಾಕಲಮು : ನಾಗವರ್ಮನೂ ದುರ್ಗಸಿಂಹನೂ ಸಮಕಾಲೀನರು, ಸಮಾನ ರಾಜಾಶ್ರಯಿಸಿಗಳು, ಸಮಾನಜೈನ ಆಚಾರ್ಯರಿಂದ ಕೃತಿಗಳನ್ನು ತಿದ್ದಿಸಿಕೊಂಡವರು. ಇಬ್ಬರೂ ಕವಿಗಳು, ದಂಡಾಧೀಶರು. ದುರ್ಗಸಿಂಹನು ಸಂಧಿ ವಿಗ್ರಹಿ, ನಾಗವರ್ಮ ಕಟಕೋಪಾಧ್ಯಾಯ ಜೈನಾಚಾರ್ಯ ವಾದಿರಾಜರಿಂದ ಮಾರ್ಗದರ್ಶನವನ್ನು ಪಡೆದುದೇ ಅಲ್ಲದೆ, ಸ್ವಯಂ ವಾದಿರಾಜರಿಂದಲೇ ತಮ್ಮ ಕಾವ್ಯಗಳನ್ನು ತಿದ್ದಿಸಿಕೊಂಡು ಬಿಡುಗಡೆಗೆ ಒಪ್ಪಿಗೆ ಪಡೆದರು. ವಾದಿರಾಜರು ನೋಡಿದ್ದಾರೆಂದು ಬೆನ್ನು ತಟ್ಟಿಕೊಂಡು ಧನ್ಯತಾ ಭಾವದಿಂದ ತೃಪ್ತಿ ಪಟ್ಟು ಅದನ್ನು ಹೇಳಿಕೊಂಡರು :

i. ದುರ್ಗಸಿಂಹ (೧೦೩೧), ಪಂಚತಂತ್ರ, ೧-೨೮
ಕವಿಗಮಕಿ ವಾದಿ ವಾಗ್ಮಿ
ಪ್ರವರರ್ ಶ್ರೀವಾದಿರಾಜ ಮುನಿಪುಂಗವರು
ತ್ಸವದಿಂ ತಿರ್ದಿದರೆನೆ ಭೂ
ಭುವನದೊಳದನೇೞ್ದು ಕೊಂಡು ಕೊನೆಯದರೊಳರೆ
||

ii. ನಾಗವರ್ಮ (೧೦೪೨ – ೬೮), ಕಾವ್ಯಾದ ಲೋಕನ, ಸೂತ್ರ ೪೨, ಪದ್ಯ -೧೮೮ :
            ಅದ್ವೈತವಾದಿ ನಿವಹ ಮ
ದದ್ವಿರದ ಘಟಾವಿಪಾಟನೈಕಪಟಿಷ್ಠಂ
ಸ್ಯಾದ್ವಾದಾಚಲ ಪೊಗಱೆ ವಾದಿರಾಜಂ ನೆಗೞ್ದಂ
||

iii. ನಾಗವರ್ಮ (೧೦೪೨), ವರ್ಧಮಾನ ಪುರಾಣ, ೧-೨೧ : (ಚಂಪಕಮಾಲೆ)-
            ಕಥೆಗಣಭೃತ್ಪ್ರಣೀತ ಮಿತಿಹಾಸ ಸಮುದ್ಭವಮಾನತೇಂದ್ರನೀ
ಕೃತಿಗಧಿನಾಯಕಂ ನೆಗೞ್ದ ವೀರಜಿನಂ ಮನವೊಲ್ದು ಪೇೞ್ದನ
ನ್ವಿತಮತಿ ನಾಗವರ್ಮ ಕವಿ ಶೋಧಿಸೊದರ್ ಸಲೆ ವಾದಿರಾಜ ಪಂ
ಡಿತರೆನೆ ಮೆಚ್ಚದಿಪ್ಪ ಖಳನುಂ ದೊರೆ ಕೊಳ್ಫ
ುಮೆ ಕೇಳ್ದೊಡಿಂತಿದಂ ||

ಈ ಬಗೆಯ ಕವಿಜನಸ್ತುತಿ ಪಾತ್ರರಾದ ವಾದಿರಾಜ ಪಂಡಿತರು ಮಹಾ ಪ್ರತಿಭಾಶಾಲಿಯೂ, ಪ್ರಭಾವ ಶಾಲಿಯೂ, ಧಾರ್ಮಿಕ – ರಾಜಕೀಯ ಪ್ರತಿಷ್ಟಿತರೂ ಆಗಿದ್ದರು. ಯಶೋಧರಚರಿತೆ, ಪಾರ್ಶ್ವನಾಥ ಚರಿತೆ ಮೊದಲಾದ ಹಲವು ಸಂಸ್ಕೃತ ಕಾವ್ಯಗಲ ಕರ್ತೃವಾದ ಈ ವಾದಿರಾಜರು ಪಶ್ಚಿಮ ಕಲ್ಯಾಣ ಚಾಳುಕ್ಯರ ಜಗದೇಕ ಮಲ್ಲ ಜಯಸಿಂಹನಿಗೆ (೧೦೧೮ – ೪೨) ರಾಜಗುರುವಾಗಿದ್ದರು. ಅದರಿಂದಾಗಿ ’ಜಗದೇಕಮಲ್ಲ ವಾದಿರಾಜ’ ಎಂಬ ಇನ್ನೊಂದು ಅಡ್ಡ ಹೆಸರೂ ಇವರಿಗಿತ್ತು; ಅರಸೀಕೆರೆ ೧೪೧, ಬೇಲೂರು ೧೦೬, ಶ್ರವಣಬೆಳ್ಗೊಳ ೭೭ (೬೭) ಮೊದಲಾದ ಶಾಸನಗಳಲ್ಲಿ ಈ ಉಲ್ಲೇಖಗಳಿವೆ. ಇಂತಹ ಕವಿ, ಗಮಕಿ, ವಾದಿ, ವಾಗ್ಮಿಪ್ರವರ, ರಾಜಗುರು ವಾದಿರಾಜರು ಜಗದೇಕಮಲ್ಲ ಜಯಸಿಂಹರಾಜನ ಆಸ್ಥಾನ ವಿದ್ವಾಂಸ ರಾಗಿ ಚಾಳುಕ್ಯ ಒಡ್ಡೋಲಗದ ಕೀರ್ತಿಕಳಶವೆನಿಸಿದ್ದರು. ಸಂಸ್ಕೃತ, ಪ್ರಾಕೃತ, ಕನ್ನಡ – ಈ ಮೂರು ಭಾಷೆಗಳಲ್ಲಿ ಪ್ರಕಾಂಡ ಪಂಡಿತರಾಗಿ ತ್ರಿಭಾಷಾವಿಶಾರದರೆನಿಸಿದ್ದರು. ಜಗದೇಕಮಲ್ಲ ವಾದಿನ್, ತರ್ಕಷಣ್ಮುಖ, ಸ್ಯಾದ್ವಾದ ವಿದ್ಯಾಪತಿ – ಎಂಬಿತ್ಯಾದಿ ಬಿರುದಾಂಕಿತರಾಗಿದ್ದರು. ಹೀಗಾಗಿ ಎಲ್ಲ ವಿಧದಿಂದಲೂ ಅವರ ವರ್ಚಸ್ಸಿನಿಂದ ನಾಗವರ್ಮ – ದುರ್ಗಸಿಂಹ ಆಕರ್ಷಿತರಾಗಿದ್ದರು. ಇವರು ಮೂವರೂ ಸಮಕಾಲೀನ ಮಹಾರಥರು, ಆತ್ಮೀಯ ಬಳಗದವರು. ವಯೋಮಾನದಲ್ಲಿಯೂ ವಾದಿರಾಜರು ಹಿರಿಯರು; ದುರ್ಗಸಿಂಹನಿಗಿಂತಲೂ ನಾಗವರ್ಮನು ೧೫-೨೦ ವರ್ಷ ಕಿರಿಯವನು. ದುರ್ಗಸಿಂಹನು ೧೦೩೧ ರಲ್ಲಿ ಪಂಚತಂತ್ರವನ್ನು ಬರೆದನು ಮತ್ತು ಅದೊಂದೇ ಅವನಕಾವ್ಯ. ನಾಗವರ್ಮನು ಛಂದೋವಿಚಿತ (೧೦೪೦), ವರ್ಧಮಾನ ಪುರಾಣ (೧೦೪೨), ಕಾವ್ಯಾವಲೋಕನ (೧೦೫೦), ಕರ್ಣಾಟಕ ಭಾಷಾಭೂಷಣ (೧೦೫೫), ಅಭಿಧಾನವಸ್ತು ಕೋಶ (೧೦೬೦), ಮತ್ತು ವಸ್ತು ಕೋಶ (೧೦೬೮-೭೦) -ಎಂಬ ಕೃತಿಗಳನ್ನು ರಚಿಸಿದ್ದಾನೆ.

ಕಲ್ಯಾಣ ಚಾಳುಕ್ಯರ ಕಾಲದ ಶ್ರೇಷ್ಠ ಕವಿಗಳಲ್ಲಿ ದುರ್ಗಸಿಂಹನೂ ಒಬ್ಬ, ವಾಕ್ ಶ್ರೀಯುತನಾದ ದುರ್ಗಸಿಂಹನ ಅಮತ್ಸರತೆಯು ಪ್ರಶಂಸನೀಯ. ಆರಂಭದಲ್ಲಿ ಆಗಲೇ ಹೇಳಿರುವಂತೆ, ತಾನು ವೈದಿಕನಾದರೂ ಅವೈದಿಕವಾದ ಜೈನಧರ್ಮವನ್ನೂ ಜೈನಕವಿಗಳನ್ನೂ ಜೈನಯತಿವೃಂದವನ್ನೂ ಜೈನ ಗುರು ಮತ್ತು ಕವಿಪರಂಪರೆಯನ್ನೂ ಗೌರವದಿಂದ ಸ್ವೀಕರಿಸಿ ಮಾನ್ಯ ಮಾಡುವುದರ ಮೂಲಕ ಉದಾರಚರಿತೆಗೆ ಆದರ್ಶ ತೋರಿಸಿದ್ದಾನೆ. ವೈದಿಕರು ಜೈನ ಸಾಹಿತ್ಯ ರಚಿಸುವುದು ಸಾದ್ಗ್ಯವೆಂಬುದನ್ನು ಲಕ್ಷಸಹಿತ ಪ್ರಕಟಿಸಿದ ಪ್ರಥಮಿಗನು ದುರ್ಗಸಿಂಹ. ಶ್ರೀವಿಜಯ ಕನ್ನಮಯ್ಯ ಅಸಗ ಮಸಸಿಜ ಚಂದ್ರಭಟ್ಟ (ಇದು ವಸುಭಾಗ ಭಟ್ಟನನ್ನು ನೆನಪಿಸುವ ಹೆಸರು), ಪೊನ್ನ ಪಂಪ ಗಜಾಂಕುಶ ಕವಿತಾವಿಳಾಸ ವಾದಿರಾಜ – ಈ ಎಲ್ಲ ಜೈನ ಕವಿಗಳನ್ನು ನೆನೆದು ಕೈಮುಗಿದು ತಲೆಬಾಗಿದ ವಿಪ್ರೋತ್ತಮ ದುರ್ಗಸಿಂಹನ ಮೇಲಾದ ಜೈನ ಪ್ರಭಾವದ ಗಾಢತೆ ಸ್ಪಷ್ಟವೇ ಇದೆ. ದುರ್ಗಸಿಂಹನಿಗೆ ಕಾವ್ಯ ರಚನೆಯಲ್ಲಿಯೂ ಜೈನ ಕವಿಗಳ ಹೆದ್ದಾರಿಯೇ ದಾರಿ – ಮಾದರಿ; ವಸ್ತು ಜೈನ ಪರಂಪರೆಯ ವಸುಭಾಗ ಭಟ್ಟ ಪ್ರಣೀತ ಪಂಚತಂತ್ರ; ತನ್ನ ಕಾವ್ಯಕ್ಕೆ ಪ್ರೇರಣೆ ಮತ್ತು ಪರಿಕಲ್ಪನೆಗಳನ್ನು ಜೈನಮಾರ್ಗ – ದೇಸಿಮಿಶ್ರಿತ ಕಾವ್ಯಗಳಿಂದ ಪಡೆದು ಸಿದ್ಧ ಪಡಿಸಿದ್ದು ಆದಮೇಲೂ ಸಹ ಜೈನಮುನಿ – ಕವಿ ವಾದಿರಾಜರಿಂದ ಇನ್ನೊಮ್ಮೆ ತಿದ್ದಿಸಿ ನೊರ್ಪುಗೊಳಿಸಿಕೊಂಡಿರುವುದು – ಗಮನಾರ್ಹ ಹೆಜ್ಜೆಗಳು.

ಈ ಪಂಚತಂತ್ರ ಒಟ್ಟು ಕಥಾಸಂಯೋಜನೆಯಲ್ಲಿಯೇ ಇಡೀ ಜೈನ ಪುರಾಣದ ಚೌಕಟ್ಟು ಸೇರಿದೆ. ಈ ಕಥಾ ಪ್ರಧಾನ ಕಾವ್ಯದಲ್ಲಿ ಬರುವುದು ವೃಷಭ ಮತ್ತು ಸಿಂಹ. ವೃಷಭವು ಜೈನರ ಆದಿತೀರ್ಥಂಕರನ ಹೆಸರೂ ಹೌದು, ಲಾಂಛನವೂ ಹೌದು; ಸಿಂಹವು ಅಂತಿಮ ತೀರ್ಥಂಕರರಾದ ಮಹಾವೀರ ಒಂದು ಭವವೂ ಹೌದು, ಲಾಂಛನವೂ ಹೌದು. ಹೀಗೆ ಆದಿತೀರ್ಥಂಕರರಿಂದ ಅಂತ್ಯ ತೀರ್ಥಂಕರರವರೆಗೆ ಪ್ರಣೀತವಾದದ್ದು ಅಹಿಂಸಾಧರ್ಮ. ಎಲ್ಲ ಧರ್ಮಗಳೊಂದಿಗೆ ಮಧುರ ಮೈತ್ರಿಯಿಂದ ಬಾಳುತ್ತಿದ್ದ ಸ್ನೇಹದ ವಾತಾವರಣವನ್ನು ಕೆಲವು ಕುಹಕಿಗಳು ಹೊಂಚುಹಾಕಿ ಕೆಡಿಸಿದರು. ಅಂತಹವರನ್ನು ಕರಟಕ – ದಮನಕರನ್ನಾಗಿ, ಜಿನೊಧರ್ಮಭಂಜಕರ ಪ್ರತೀಕವಾಗಿ ಕಲ್ಪಿಸಲಾಗಿದೆ. ಇದಿಷ್ಟೂ ಸೂಚ್ಯವಾದ ಕಾವ್ಯಧ್ವನಿಯಿದೆ. ಈ ಬಗೆಯ ಹೊಸನೋಟ ಮತ್ತು ಒಳನೋತಗಳಿಂದಲೇ ದುರ್ಗಸಿಂಹನ ಪಂಚತಂತ್ರ ಕಾವ್ಯದ ಆಯಾಯಗಳನ್ನು ಗುರುತಿಸಿ ಅದರ ಸ್ವಾರಸ್ಯಗಳನ್ನು ಪರಿಭಾವಿಸಬೇಕು.