ಯಶದ್ವಿಗ್ವಿಜಯದೊಳಮಳಿನ
ಯಶಮೆಸೆವಿನಮತ್ತಿಮಬ್ಬೆ ಜಿನಧರ್ಮ ದಯಾ
ವಶವರ್ತಿ ನಿದಾನಂ ಪೂ
ಜೆ ಶೀಲಮುಪವಾಸಮೆಂಬಿನಂ ಪ್ರಕಟಿಸಿದಳ್
||

            ಬುಧಜನವಂದಿತೆ ಧರ್ಮ
ಪ್ರಧಾನ ದರ್ಶನ ವಿಶುದ್ಧೆ ದಾನಗುಣೈಕಾಂ
ಬುಧಿಯೆನಿಸಿದ ಕವಿವರಕಾ
ಮಧೇನುವೆಂಬುದತ್ತಿಮಬ್ಬೆಯನೆ ಜಗಂ
||

            ಜಿನಪದ ಭಕ್ತೆ ಜಗತ್ರಯ
ಜನವಂದಿತೆ ಚಕ್ರವರ್ತಿ ಪೂಜಿತೆ ಜಿನಶಾ
ಸನರುಚಿ ಪಡೆವಳ ತೈಲನ
ಜನಜಿಯೆ ತೀರ್ಥಂಕರ ಜನನಿಯೆನ್ನದರೊಳರೇ
||

            ಉತ್ತಮ ಗೋತ್ರೋದ್ಭವೆ ಸ
ದ್ವೃತ್ತೆ ಮಹಾಸತಿ ವಿನೇಯ ಚೂಡಾಮಣಿ ತಾ
ನೆತ್ತುಱಿದರೆತ್ತ ಪಿಕ್ಕುವೊ
ಡತ್ತಿಯ ಪಣ್ನತ್ತಿಮಬ್ಬೆಯಲ್ಲದರ ಗುಣಂ
||
ರನ್ನಕವಿ, ಅಜಿತಪುರಾಣ ಕಾವ್ಯ

ಸಮಾಜೋ – ಸಾಂಸ್ಕೃತಿಕ ಅಧ್ಯಯನಕ್ಕೆ ಹೇಗೊ ಹಾಗೆ ಸಮಾಜೋ – ಚಾರಿತ್ರಿಕ ಅಧ್ಯಯನಕ್ಕೂ ಅತ್ತಿಮಬ್ಬೆಯ ಬದುಕು ಆಕರವಾಗಿದೆ. ಆಕೆಯ ವೈಯಕ್ತಿಕ ಹಾಗೂ ಕೌಟುಂಬಿಕ ವಲಯದಲ್ಲಿ ರಾಜಶಕ್ತಿಯ ಪ್ರಭಾವ ಗಾಢವಾಗಿ ವ್ಯಕ್ತವಾಗಿದೆ. ಅದರಂತೆ ಅತ್ತಿಮಬ್ಬೆಯ ಮತ್ತು ಆಕೆಯ ಮನೆತನದವರ ಪ್ರಭಾವ ಅಂದಿನ ರಾಜಸತ್ತೆಯ ಮೇಲೆ ವಿಪುಲವಾಗಿ ಕಂಡುಬರುತ್ತದೆ. ಸ್ತ್ರೀಯಾದ ಅತ್ತಿಮಬ್ಬೆಯೂ ಅಂದಿನ ಪುರುಷರೊಂದಿಗೆ ಸರಿಸಮವಾಗಿ ರಾಜಕೀಯ ಪ್ರಭುತ್ವದ ಅಧಿಕಾರ ವಲಯದಲ್ಲೂ, ಸಾಂಸ್ಕೃತಿಕ ಕ್ಷೇತ್ರದಲ್ಲೂ ಗಣ್ಯ ಶಕ್ತಿಯಾಗಿ ಗೌರವಾರ್ಹವಾಗಿದ್ದುದು ಅಭ್ಯಾಸ ಯೋಗ್ಯವಾಗಿದೆ. ಅತ್ತಿಮಬ್ಬೆಯ ಇಡೀ ಕುಟುಂಬ ಸ್ತ್ರೀವಾದದ ಸಂವಾದಗಳಿಗೆ ಗಟ್ಟಿಯಾದ ಜೀವಂತ ದೃಷ್ಟಾಂತ ಒದಗಿಸುವ ಒಂದು ಆದರ್ಶದ ಸ್ಥಿತಿಯಲ್ಲಿ ಕಾಣುತ್ತದೆ. ಅತ್ತಿಮಬ್ಬೆಯು ಹುಟ್ಟಿ ಬೆಳೆದ ಹಾಗೂ ಸೇರಿ ಬಾಳಿದ ಮನೆಗಳ ಗಂಡಸರು ಸ್ತ್ರೀಯು ವಿಚಾರವಾಗಿ ನಡೆದುಕೊಂಡ ರೀತಿಯನ್ನು ನೋಡಬೇಕು. ಅತ್ತಿಮಬ್ಬೆಯ ತಾತ ನಾಗಮಯ್ಯ, ತಂದೆ ಮಲ್ಲಪಯ್ಯ, ಚಿಕ್ಕಪ್ಪ ಪುನ್ನಮಯ್ಯ, ಅಣ್ಣ ಗುಂಡಮಯ್ಯ, ತಮ್ಮಂದಿರಾದ ವಲ್ಲ, ಎಳಮಯ್ಯ, ಪುನ್ನಿಗ ಮತ್ತು ಅಹವಮಲ್ಲ, ಗಂಡನಾದ ನಾಗದೇವ, ಮಾವನಾದ ದಲ್ಲಪಯ್ಯ ಮತ್ತು ಮಗನಾದ ಅಣ್ನಿಗದೇವ- ಇವರೆಲ್ಲರೂ ಕುಟುಂಬದ ಸ್ತ್ರೀಯರ ವಿಚಾರದಲ್ಲಿ ಸಂಭಾವಿತರಾಗಿ, ಹೃದಯವಂತರಾಗಿ, ಸುಸಂಸ್ಕೃತರಾಗಿ ವರ್ತಿಸಿದರು; ಮಹಿಳೆಯು ತಮ್ಮ ಹಿಡಿತದೊಳಗೆ ಹದ್ದು ಬಸ್ತಿಯಲ್ಲಿ ಇರಬೇಕೆಂದು ನಿಯಂತ್ರಿಸಲಿಲ್ಲ.

ಗಂಡಸರು ಬರೆದಿರುವ ಸಾಹಿತ್ಯದಲ್ಲೂ ಶಾಸನಗಳಲ್ಲೂ ಚರಿತ್ರೆಯಲ್ಲೂ ಮಹಿಳೆಯಾದ ಅತ್ತಿಮಬ್ಬೆ ಗಳಿಸಿರುವ ಉನ್ನತೋನ್ನತ ಸ್ಥಾನವನ್ನು ಸ್ತ್ರೀವಾದಿ ಚಿಂತಕರು ಪರಿಗಣಿಸಬೇಕು. ಏಕೆಂದರೆ ಚರಿತ್ರೆಯ ಪುತಗಳಲ್ಲಿ ಸ್ತ್ರೀ ಕಾಣಿಸುವುದೇ ಇಲ್ಲವೆಂಬ (ಆರೋಪವಲ್ಲದ) ವಾಸ್ತವ ಮಾತಿದೆ, ಈ ಮಾತು ಬಹಳ ಮಟ್ಟಿಗೆ ದಿಟವೂ ಹೌದು. ಅಬ್ಬಕ್ಕರಾಣಿಯರು ಝಾನ್ಸಿ ಲಕ್ಶ್ಮೀಬಾಯಿ, ಕಿತ್ತೂರು ಚೆನ್ನಮ್ಮ, ರಾಣಿ ಎಲಿಜಬೆತ್ ಮುಂತಾದವರಿಗಿಂತ, ಹಲವು ನೂರು ವರ್ಷಗಳ ಹಿಂದೆ, ಇತಿಹಾಸದಲ್ಲಿ ಗೋಚರಿಸುವ ಧೀಮಂತ ಮಹಿಳೆ ಅತ್ತಿಮಬ್ಬೆಯು ಸ್ತ್ರೀವಾದಿ ಅಧ್ಯಯನಕ್ಕೆ ಆಕರ ಸ್ವರೂಪಿಯಾಗಿದ್ದಾಳೆ .

ಈಗಿನ ಆಂಧ್ರಪ್ರದೇಶಕ್ಕೆ ಸೇರಿರುವ ವೆಂಗಿ ಮಂಡಲದ ಕಮ್ಮೆನಾಡಿನ ಪುಂಗನೂರು ಅತ್ತಿಮಬ್ಬೆಯ ತೌರೂರು. ಪುಂಗನೂರಿನ ಗಣ್ಯ ಪೌರನೆಂದರೆ ಕೌಂಡಿನ್ಯಕುಲದ ನಾಗಮಯ್ಯ. ಆತನು ಶಾಸ್ತ್ರಪಾರಂಗತ, ಮಹಾದಾನಿ, ಜನಹಿತ ಕಾರ್ಯನಿರತ. ಗುಣಲಕ್ಷಣ ಕೀರ್ತಿವಂತನಾದ ನಾಗಮಯ್ಯನ ಮಗಂದಿರು ಇಬ್ಬರು. ವಿದ್ಯಾನಿಧಿಯಾದ ಮಲ್ಲಪನು ಹಿರಿಯಮಗ, ಅಣ್ಣನ ಪರಮ ಭಕ್ತನಾದ ಪುನ್ನಮಯ್ಯನು ಕಿರಿಯಮಗ. ಮಲ್ಲಪನು ರಾಜಶಾಸ್ತ್ರ ನಿಪುಣ, ಮಹಾಶೂರ, ಕೊಡುಗೈವೀರ. ಆಚಾರವಂತ ತಮ್ಮನಾದ ಪುನ್ನಮಯ್ಯ ಕೂಡ ಅಣ್ಣನ ಮಾದರಿ ಯನ್ನು ಮುಂದುವರಿಸಿದನು. ಅಣ್ಣತಮ್ಮಂದಿರ ಮನೆ ಪಂಡಿತಮಂಡಳಿಗೆ ಚಾವಡಿ, ಕವಿಸಮುದಾಯಕ್ಕೆ ತವರುಮನೆ, ಶಾಸ್ತ್ರಜಿಜ್ಞಾಸುಗಳಿಗೆ ಇಕ್ಕೆದಾಣ. ಜ್ಞಾನದಲ್ಲಿ, ಔದಾರ್ಯದಲ್ಲಿ, ಸಾಹಸದಲ್ಲಿ, ಸಾಹಿತ್ಯ ಪೋಷಣೆಯಲ್ಲಿ ಅಣ್ಣತಮ್ಮಂದಿರು ಆದರ್ಶಪ್ರಾಯರು. ಇವರ ಮನೆತನದ ಗುರುಗಳಾದ ಜಿನಚಂದ್ರಾಚಾರ್ಯರ ಸ್ಮರಣೆಗಾಗಿ ಈ ಸೋದರರು ಮಹಾಕವಿ ಪೊನ್ನಿನಿಂದ ’ಶಾಂತಿಪುರಾಣ’ ಕಾವ್ಯವನ್ನು ಬರೆಸಿ ಹಂಚಿದರು.

ಪುನ್ನಮಯ್ಯನು ಯುದ್ಧವೀರ ಸೇನಾಧಿಪತಿ, ಚಾಳುಕ್ಯರ ಪರವಾಗಿ ಕಾವೇರಿ ನದಿಯ ತೀರದಲ್ಲಿ ಹೋರಾಡುತ್ತಿರುವಾಗ ಹಗೆಗಳಿಂದ ಕೊಲ್ಲಲ್ಪಟ್ಟನು; ಒಡಹುಟ್ಟಿದ ತಮ್ಮನ ಕೊಲೆಯಾಯಿತು. ಆದರೂ ಮಲ್ಲಪನ ಕುಟುಂಬದಲ್ಲಿ ರಾಷ್ಟ್ರಪ್ರೇಮದ ನಂದಾದೀವಿಗೆ ಆರಲಿಲ್ಲ. ಮಲ್ಲಪನ ಮಕ್ಕಳಾದ ಗುಂಡಮಯ್ಯ, ಎಳಮಯ್ಯ, ಪುನ್ನಮಯ್ಯ. ಅಹವಮಲ್ಲ ಮತ್ತು ವಲ್ಲ ಎಂಬ ಐದು ಜನರೂ ದೇಶಪ್ರೇಮಕ್ಕೆ ಕಂಕಣ ಕಟ್ಟಿದರು. ಮಲ್ಲಪಯ್ಯನಿಗೆ ಐದುಜನ ಗಂಡುಮಕ್ಕಳಲ್ಲದೆ ಅತ್ತಿಮಬ್ಬೆ ಗುಂಡಮಬ್ಬೆ, ನಾಗಿಯಬ್ಬೆ ಎಂಬ ಮೂವರು ಮಗಳುದಿರೂ ಇದ್ದರು.

ಮಲ್ಲಪಯ್ಯನಂತೆಯೇ ಚಾಳುಕ್ಯ ಚಕ್ರವರ್ತಿ ತೈಲಪನ ಬಳಿಯಿದ್ದ ಇನ್ನೊಬ್ಬ ಪ್ರತಿಷ್ಠಿತ ಅಧಿಕಾರಿ ದಲ್ಲಪಯ್ಯ, ವಾಜಿಕುಲ ಶ್ರೇಷ್ಠನಾದ ದಲ್ಲಪಯ್ಯನು ತೈಲಪಮಹಾರಾಜನ ಭುಜಾದಂಡವಾಗಿದ್ದನು. ದಲ್ಲಪಯ್ಯನ ಮಗನೇ ಮಹಾಪರಾಕ್ರಮಿ ನಾಗದೇವ. ನೂರಾರು ಸಮರಗಳ ವಿಜಯಿಯಾದ ನಾಗದೇವನಿಗೆ ಮಲ್ಲಪಯ್ಯನ ಇಬ್ಬರು ಮಗಳುದಿರಾದ ಅತ್ತಿಮಬ್ಬೆ – ಗುಂಡಮಬ್ಬೆ ಮಡದಿಯಾದರು.

ವಾಜಿಕುಳ ತಿಳಕ, ತೇಜೋಭಾಸ್ಕರ, ವೀರ ತ್ರಿಣೇತ್ರ, ನನ್ನಿ ಮಹಾರ್ಣವ. ಕಂದುಕ ಪುರಂದರ – ಎಂದು ಮುಂತಾಗಿ ನಾಗದೇವನಿಗೆ ಹಲವು ಪ್ರಶಸ್ತಿಮಾಲೆ. ರಾಮಲಕ್ಷ್ಮಣರಿಗಿಂತ, ಪಂಚ ಪಾಂಡವರಿಗಿಂತ ಮೀರಿದ ಸಾಹಸ ನಾಗದೇನವದು- ಸ್ತುತಿ ಪಾತ್ರನಾಗಿದ್ದನು. ಆಂಧ್ರ ಮಗಧ ಲಾಳ ಖಸ ಪಾಂಡ್ಯ ದೇಶಾಧೀಶರನ್ನು ಸೋಲಿಸಿದ ಶೌರ್ಯೋನ್ನತಿ ನಾಗದೇವನದು. ನಾಗದೇವ – ಅತ್ತಿಮಬ್ಬೆಯರ ಹಿರಿಯ ಮಗ ಅನ್ನಿಗದೇವ. ‘ಪಡೆವಳತೈಲ’- ಎಂಬುದು ಅಣ್ನಿಗದೇವನ ಬಿರುದು. ಈತನೂ ತನ್ನ ತಂದೆ ತಾತರ ಹಾಗೆ ಮಹಾಪರಾಕ್ರಮಿ, ಹಲವು ಸಮರಗಳ ವೀರ. ಅಣ್ನಿಗನೂ ಚಾಳುಕ್ಯ ಸಾಮ್ರಾಜ್ಯದ ಮಹಾಸೇನಾನಿ.

ಅತ್ತಿಮಬ್ಬೆಯ ಬಾಳು ಸುಗಮವಾಗಿ ಸಾಗುತ್ತಿದ್ದುದು ಒಮ್ಮೆಲೇ ಸಾವಿನ ಬಿರುಗಾಳಿಗೆ ಸಿಲುಕಿ ತತ್ತರಿಸಿ ಹೋಯಿತು. ಆಕೆಯಪತಿ ನಾಗದೇವನು ರಾಷ್ಟ್ರಕ್ಕಾಗಿ ಹೋರಾಡುತ್ತಿರುವಾಗ ರಣರಂಗದಲ್ಲಿ ಹಗೆಗಳಿಂದ ಹತನಾದನು. ನಾಗದೇವನೊಂದಿಗೆ ಕಿರಿಯ ಮಡದಿ ಗುಂಡಮಬ್ಬೆ ಸಹಗಮನ ಮಾಡಿದಳು. ಅತ್ತಿಮಬ್ಬೆಯು ಪತಿ ನಾಗದೇವನನ್ನೂ, ಒಡಹುಟ್ಟಿದ ತಂಗಿಯೂ ಸವತಿಯೂ ಆದ ಗುಂಡಮಬ್ಬೆಯನ್ನೂ ಕಳೆದುಕೊಂಡಳು, ನಡುಪ್ರಾಯದಲ್ಲಿ ವಿಧವೆಯಾದಳು. ವಿಧವೆಯಾದರೂ ಆಕೆ ಧೃತಿಗೆಡಲಿಲ್ಲ.ವೈಧವ್ಯದ ದಿನಗಳನ್ನು ಸಮಾಜ ಸೇವೆಯಲ್ಲಿ ಸಾರ್ಥಕ ಪಡೆಸಿದಳು. ಅನಂತರದ ದಿನಗಳ ತನ್ನ ಉದಾತ್ತ ಬದುಕಿನ ಸಿದ್ಧಿ ಸಾಧನೆಗಳ ಸಮೃದ್ಧಿಯಿಂದ ಆಕೆ ಚರಿತ್ರಾರ್ಹಳಾದಳು.

ಅತ್ತಿಮಬ್ಬೆ ಹುಟ್ಟಿದ್ದು ಆಗರ್ಭ ಶ್ರೀಮಂತ ಕುಟುಂಬದಲ್ಲಿ ಆಕೆಯ ತೌರುಮನೆ ತಲೆ ತಲಾಂತರಗಳಿಂದ ಖ್ಯಾತಿ ಪಡೆದಿತ್ತು. ಸಾಹಿತ್ಯ ಸಂಸ್ಕೃತಿ ಕಲೆಗಳಿಗೆ ಅವರ ಮನೆ ಆವಾಸ ಸ್ಥಾನ. ಆಗಮಾದಿ ಶಾಸ್ತ್ರ-ಕೃತಿಪಠಣ ಪಾರಾಯಣ ಮನೆಯೊಳಗೆ ಅನುಕರಣವಾಗುತ್ತಿತ್ತು. ಧಾರ್ಮಿಕ ಗುರುಗಳ ಆಗಮನ ನಿರ್ಗಮನವು ಆ ಗೃಹದ ಉಚ್ವಾಸ ನಿಶ್ವಾಸವಾಗಿತ್ತು. ವಿಚಾರಗಳ ವಾದ ಸಂವಾದಗಳಿಗೆ ಅವರ ಮನೆಯ ಜಗಲಿಯ ವೇದಿಕೆಯಾಗಿತ್ತು. ಧಾರ್ಮಿಕ ಸಮನ್ವಯ ವಂಶದ ಹಿರಿಮೆಗಳಲ್ಲೊಂದು; ಅವರ ಕುಟುಂಬದಲ್ಲಿ ವೈದಿಕ-ಜೈನ ಪರಂಪರೆಗಳು ಮಿಳಿತಗೊಂಡಿದ್ದುವು. ದೇಶ ಭಕ್ತರಿಗೆ ಜನ್ಮಕೊಟ್ಟ ಪ್ರತಿಷ್ಠಿತ ಕುಟುಂಬ. ಆ ಮನೆಯೊಳಗೆ ಒಂದು ಕಡೆ ಸಾಮು ಮಾಡುವ ಗರಡಿ ಮನೆ. ಇನ್ನೊಂದು ಕಡೆ ಆಯುಧಾಗಾರ. ಮತ್ತೊಂದೆಡೆ ಆನೆ ಕುದುರೆಗಳ ಲಾಯ. ಮಗದೊಂದೆಡೆ ಸದಾ ಅಸ್ತ್ರ ಶಸ್ತ್ರ ತರಬೇತಿ. ಅತ್ತಿಮಬ್ಬೆಯ ತಂದೆ ಚಿಕ್ಕಪ್ಪ ಅಣ್ಣ ತಮ್ಮಂದಿರು – ಎಲ್ಲರೂ ಚಾಳುಕ್ಯ ಸೇನೆಯ ವೀರಭಟರು ಮತ್ತು ದಂಡ ನಾಯಕರು. ಅತ್ತಿಮಬ್ಬೆಯ ಬೆಳೆದದ್ದು ಇಂಥ ವೈರುಧ್ಯ, ವೈದ್ಯಶ್ಯಗಳ ಕಲರವಗಳ ನಡುವೆ.

ಅತ್ತಿಮಬ್ಬೆ ತನ್ನ ಸಹೋದರರೊಂದಿಗೆ ಅವರಿಗೆ ಸರಿಸಮನಾಗಿ ಕಲಿತು ಬೆಳೆದಳು. ಗಂಡು ಮಕ್ಕಳಂತೆಯೇ ಧಾರ್ಮಿಕ ಲೌಕಿಕ ಶಿಕ್ಷಣ ಪಡೆದಳು. ಕುದುರೆ ಸವಾರಿ ಕಸರತ್ತು ನಾನಾ ಆಯುಧಗಳ ಬಳಕೆ ಕತ್ತಿವರಸೆ ಬಿಲ್ವಿದ್ಯೆಗಳಲ್ಲಿ ಪಳಗಿ ಪರಿಣತಳಾದಳು. ಯುದ್ಧದ ಪೋಷಾಕು ಹಾಕಿದಳು. ರಕ್ಷಾಕವಚ, ಉಕ್ಕಿನ ಶಿರಸ್ತ್ರಾಣ ತೊಟ್ತಳು. ಕಾಳಗಗಳಲ್ಲಿ ಭಾಗವಹಿಸಿದಳು. ಗಜಬಲ, ಅಶ್ವಬಲ, ರಥ, ಪದಾತಿ (ಚತುರಂಗ) ಬಲದಲ್ಲಿ ಹೊಕ್ಕು ಬಳಕೆಗಳಿಂದ ಯುದ್ಧ ಕಲೆಯಲ್ಲಿ ನೈಪುಣ್ಯಗಳಿಸಿದಳು. ಗಾಯಾಳುಗಳಿಗೆ ಔಷಧವಿತ್ತು ಉಪಚರಿಸಿದಳು. ಭಟರಿಗೆ ಉತ್ತೇಜನ ನೀಡಿದಳು. ಹೆಣ್ಣೆಂದರೆ ಪುಕ್ಕಲು ಸ್ವಭಾವದ ಅಂಜಿಬುರುಕಿಯಲ್ಲ ಎಂಬುದನ್ನು ಪ್ರತ್ಯಕ್ಷವಾಗಿ ತೋರಿಸಿದಳು. ಸ್ತ್ರೀಪಡೆಗೆ, ಪುರುಷ ಪದಾತಿಗೆ ತಾನೇ ಸ್ವಯಮಾಚಾರ್ಯಳಾಗಿ ಆಯುಧಪಾಣಿಯಾಗಿ ಮುಂಚೂಣೆಯಲ್ಲಿ ನಿಂತಳು. ಸೈನ್ಯದಲ್ಲಿ ಓಡಾಡುವುದು, ಸಿಪಾಯಿಗಳೊಂದಿಗೆ ಚರ್ಚಿಸುವುದು, ಅಶ್ವಾರೋಹನ ಇವು ಅತ್ತಿಮಬ್ಬೆಗಾಗಲಿ, ಆಕೆಯ ಮನೆಮಂದಿಗಾಗಲಿ ಮುಜುಗರವೆನೆಸಲಿಲ್ಲ; ‘ಏನಿದು ಗಂಡು ಬೀರಿಯಂತೆ ಕತ್ತಿ ಕಠಾರಿ ಈಟಿ ಬಿಲ್ಲು ಬಾಣ ಹಿಡಿದು ಯುದ್ಧರಂಗಕ್ಕೆ ಹೋಗುತ್ತೀಯೇ ಎಂದು ಮೂಗು ಮುರಿಯಲಿಲ್ಲ.

ಅತ್ತಿಮಬ್ಬೆ ಹುಟ್ಟೂರಿನ ಅನುಕೂಲ ಪರಿಸರದಲ್ಲಿ, ಅಡೆತಡೆಗಳಿಲ್ಲದೆ ಹೀಗೆ ಬೆಳೆದು ದೊಡ್ಡವಳಾದಳು. ಅವಳಲ್ಲಿದ್ದ್ಅ ವಿವಿಧ ಪೂರಕ ಜೀವನ ಕ್ಷೇತ್ರಗಳ ಪರಿಶ್ರಮ ಆಸಕ್ತಿಗಳು ಆಕೆಯ ಮದುವೆಯಲ್ಲಿ ಮುಕ್ತಾಯವಾಗಲಿಲ್ಲ ಎಂಬುದು ಅವಶ್ಯ ಪರಿಭಾವಿಸಬೇಕಾದ ವಿಚಾರ. ವೀರಪುರುಷನಂತೆ ಕಲಿಯಾಗಿ ಬೆಳೆದ ಹೆಣ್ಣನ್ನು ಮದುವೆಯಾಗಲು ಹಿಂಜರಿಕೆ ಕಾಣಲಿಲ್ಲ. ಅತ್ತಿಮಬ್ಬೆಯನ್ನು ಸೊಸೆಯಾಗಿ ಮನೆ ತುಂಬಿಸಿಕೊಂಡ ಕುಟುಂಬವೂ ಇಂತಹುದೇ ಆಗಿತ್ತು. ಅಲ್ಲಿ ಸಿರಿತನದೊಂದಿಗೆ ಉದಾರ ದೃಷ್ಟಿಯೂ ಜೀವಂತವಾಗಿತ್ತು. ಅದೊಂದು ಸುಸಂಸ್ಕೃತ ಕುಟುಂಬ. ಆಕೆಯ ಮಾವ ದಲ್ಲಪಯ್ಯ ಅದ್ವಿತೀಯ ಸಮರವೀರ, ಚಾಳುಕ್ಯ ಕಟಕಾಚಾರ್ಯ, ರಾಜಕೀಯ ಮುತ್ಸದ್ಧಿ. ರಾಜಮಂತ್ರ ಪ್ರವೀಣ.

ಅತ್ತಿಮಬ್ಬೆ ಬಾಲ್ಯದಿಂದ ಅಮ್ಮನ ಮನೆಯಲ್ಲಿ ಕಲಿತ ವಿದ್ಯೆಗಳಿಗೆ ಅತ್ತೆಯ ಮನೆಯಲ್ಲಿ ಮತ್ತೆ ಹೊಸ ಹರಿತ – ಮಸೆತ ಸಾಧ್ಯವಾಯಿತು. ಅಲ್ಲಿ ತಾಯಿ ತಂದೆ ಆಕೆಯ ಸರ್ವಂಕಷ ವಿಕಾಸಕ್ಕೆ ಇಂಬಾಗಿದ್ದರು. ಇಲ್ಲಿ ಅತ್ತೆ ಮಾವಂದಿರೂ, ಕೈ ಹಿಡಿದ ನಲ್ಲನೂ, ಅತ್ತಿಮಬ್ಬೆಯ ಕ್ಷಾತ್ರ ಹಾಗೂ ಧಾರ್ಮಿಕ ಸ್ವಭಾವಗಳ ಉತ್ಕರ್ಷಕ್ಕೆ ಅನುವಾದರು. ಗಂಡ ನಾಗದೇವ, ಹೆಂಡತಿ ಅತ್ತಿಮಬ್ಬೆ ಕಲಿಗಳಾಗಿ ಕವಿಗಳಾಗಿ ಸವ್ಯಸಾಚಿಗಳಾಗಿ ಹೆಣೆದುಕೊಂಡರು. ಪರಸ್ಪರ ಅರಿತರು, ಅನ್ಯೋನ್ಯ ದಾಂಪತ್ಯಕ್ಕೆ ಮಾದರಿಯಾದರು. ಸತಿಪತಿಯರೊಂದಾಗಿ ರಣರಂಗದಲ್ಲಿ ಭಾಗವಹಿಸಿದರು. ಅತಿರಥರೊಂದಿಗೆ ರಥದಲ್ಲಿ ಕುಳಿತು ಅವರವರ ಪತ್ನಿಯರು ಪ್ರೋತ್ಸಾಹಿಸುತ್ತಿದ್ದರೆಂದು ಒಮ್ಮೊಮ್ಮೆ ಪುರಾಣದಲ್ಲಿ ಬರುವ ವರ್ಣನೆ ಕಲ್ಪನಾಲೋಕದ ಮುಗಿಲ ಮಲ್ಲಿಗೆಯ ಮಾತಾಗಿತ್ತು. ಆದರೆ ನಾಗದೇವ – ಅತ್ತಿಮಬ್ಬೆ ಜೋಡಿಯಲ್ಲಿ ಪುರಾಣವೂ ಪ್ರತ್ಯಕ್ಷವಾಗಿ ಸಂಭವಿಸಿತ್ತು.

ಒಮ್ಮೆ ಉದ್ವೃತ್ತನಾಗಿ ಸೈನ್ಯ ಸಮೇತ ಶತ್ರುವೊಬ್ಬನು ದಾಳಿ ಮಾಡಿದನು. ನಾಗದೇವನು ಬೇರೆ ಸ್ಥಳದಲ್ಲಿ ಯುದ್ಧ ನಿರತನಾಗಿದ್ದನು. ಅತ್ತಿಮಬ್ಬೆ ಚಲಿತಳಾಗಲಿಲ್ಲ. ಸೈನ್ಯದೊಂದಿಗೆ ತಾನೇ ಸೇನಾನಿಯಾಗಿ ಮುನ್ನುಗ್ಗಿ ಹೋರಾಡಿದಳು. ಶತ್ರುವನ್ನು ಸಂಪೂರ್ಣವಾಗಿ ಸೋಲಿಸಿದಳು. ಶತ್ರು ಸೈನ್ಯವನ್ನು ಧೂಳೀಪಟ ಮಾಡಿದಳು. ತನ್ನ ಪಡೆಯ ಸೈನಿಕರನ್ನು ಸೋಲಿಸಿಂದಲೂ ಸಾವಿನಿಂದಲೂ ಕಾಪಾಡಿ ದಳು. ಇಂಥ ಸಾಹಸಗಳಿಂದಾಗಿ ಚಾಳುಕ್ಯ ಚಕ್ರವರ್ತಿಗಳಿಂದ ‘ಕಟಕ ಪವಿತ್ರ’ ಎಂದು ಬಿರುದಾಂಕಿತಳಾದಳು. ರನ್ನ ಕವಿಯಂತೂ, ಮೊಲೆವೆತ್ತ ಅತ್ತಿಮಬ್ಬೆಯ ಪಕ್ಕದಲ್ಲಿ ಮೀಸೆಹೊತ್ತ ಪುರುಷರು ಶೋಭಿಸಬಲ್ಲರೆ ಎಂದು ನಿಸ್ಸಂಕೋಚವಾಗಿ ಪ್ರಶ್ನಿಸಿದ್ದಾನೆ. ಅತ್ತಿಮಬ್ಬೆ ಮನಿಯೊಳಗೆ ದಾನಕಲಿಯಾಗಿ, ಮೊನೆಯೊಳಗೆ (ರಣರಂಗದಲ್ಲಿ) ವೀರ ಕಲಿಯಾಗಿ ಅಸದೃಶ್ಯವಾದ ಕೀರ್ತಿ ಗಳಿಸಿದ್ದಳೆಂದು ಕವಿಗಳು ಚಿತ್ರಿಸಿದ್ದಾರೆ.

ಜೀವನವೆಂಬುದು ಸುಖದ ಸರಳ ರೇಖೆಯೂ ಅಲ್ಲ, ದುಃಖಗಳ ವಕ್ರ ರೇಖೆಯೂ ಅಲ್ಲ. ಬದುಕು ನೋವು ನಲಿವುಗಳ ಕಲಸುಮೇಲೋಗರ. ಅತ್ತಿಮಬ್ಬೆಯ ಬಾಳೂ ಈ ನಿಯಮಕ್ಕೆ ಹೊರತಾಗಿರಲಿಲ್ಲ. ಆಕೆ ತನ್ನ ಯೌವನ ದಿನಗಳಲ್ಲಿ ಗಂಡನನ್ನು ಕಳೆದುಕೊಂಡಳು. ಮಗ ಅಣ್ಣಿಗದೇವನೂ ಚಿಕ್ಕವನು. ಇಂಥ ಪ್ರತಿಕೂಲ ಪರಿಸರ ನೀಡುವ ಹರಿತವಾದ ನೋವಿನ ಮುಖಾಮುಖಿಯಲ್ಲಿ ಅತ್ತಿಮಬ್ಬೆ ಎದೆಗುಂದಲಿಲ್ಲ. ದೌರ್ಭಾಗ್ಯವೇ ಮೇಲೇರಿ ಬಂದ ಈ ದುರ್ಭರ ಪ್ರಸಂಗದಲ್ಲಿ ಆಕೆ ಬದುಕಿನ ಸವಾಲುಗಳನ್ನು ಎದುರಿಸಿ ನಿಭಾಯಿಸಿದ ರೀತಿ ಅನನ್ಯ. ಅತ್ತಿಮಬ್ಬೆಯ ಜೀವನದ ಉತ್ತರಾರ್ಧವಂತೂ ಕರ್ನಾಟಕದ ಸಮಗ್ರ ಸಾಂಸ್ಕೃತಿಕ ಚರಿತ್ರೆಯಲ್ಲಿ ಅಪೂರ್ವ ದಾಖಲೆ. ಸಂಸಾರವನ್ನು ತ್ಯಜಿಸಲಿಲ್ಲ. ವೈರಾಗ್ಯ ಹೊಂದಿ ಸನ್ಯಾಸಿನಿ ಆಗಲಿಲ್ಲ. ಪಲಾಯನವಾದಕ್ಕೆ ಶರಣಾಗಲಿಲ್ಲ. ಸಂಸಾರ ಯೀಗದ ನೊಗಕ್ಕೆ ಹೆಗಲು ಕೊಟ್ಟಳು. ತನ್ನ ಹೊಣೆಗಳನ್ನು ಒಪ್ಪಿಕೊಂಡಳು. ಬದುಕಿನ ವಾಸ್ತವಗಳಿಗೆ ಸೂಕ್ತ ರೀತಿ ಯಲ್ಲಿ ಸ್ಪಂದಿಸಿದಳು, ಈಸಿದಳು, ಈಸಿ ಜೈಸಿದಳು. ಚರಿತ್ರೆಯಲ್ಲಿ ಇಂಥ ನಿದರ್ಶನ ಇನ್ನೊಂದಿಲ್ಲ.

ಅತ್ತಿಮಬ್ಬೆ ಪಂಚಾಣುವ್ರತಗಳನ್ನು ಸ್ವೀಕರಿಸಿ ಆದರ್ಶ ಗೃಹಣಿ (ಶ್ರಾವಕಿ) ಎನಿಸಿದಳು. ಸತ್ಯ ಅಹಿಂಸೆ ಅಸ್ತೇಯ ಅಪರಿಗ್ರಹ ಬ್ರಹ್ಮಚರ್ಯ ಎಂಬ ಗೃಹಸ್ಥ ನಿಯಮಗಳನ್ನು ಧರಿಸಿದಳು, ಆಹಾರದಾನ ಅಭಯದಾನ ಔಷಧದಾನ ಶಾಸ್ತ್ರದಾನ – ಎಂಬ ನಾಲ್ಕು ರೀತಿಯ (ಚತುರ್ವಿಧ) ದಾನಗಳನ್ನು ಧಾರಾಳವಾಗಿ ನೀಡಿದಳು. ಧರ್ಮ ಗ್ರಂಥಗಳನ್ನು ನಿತ್ಯವಾಚನ ಮಾಡಿದಳು (ಸ್ವಾಧ್ಯಯ). ಎಲ್ಲ ಪರ್ವ ನೋಂಪಿಗಳಲ್ಲೀ ಉಪವಾಸವನ್ನು ಆಚರಿಸಿದಳು. ಪಂಚಣಮೋಕಾರ ಮಂತ್ರ ಪಠಣ ನಿರತಳಾದಳು (ತಪ). ಗುರುವಂದನೆ, ಜಿನವಂದನೆ, ತೀರ್ಥಕ್ಷೇತ್ರ ದರ್ಶನಗಳಲ್ಲಿ ದಿನಗಳನ್ನು ಕಳೆದಳು. ಸಾಮಾಯಿಕವನ್ನು ಆಚರಿಸಿದಳು. ಸೂರ್ಯೋದಯಾನಂತರ ಮತ್ತು ಸೂರ್ಯಸ್ತದೊಳಗೆ ಹಗಲಿನಲ್ಲಿ ಮಾತ್ರ ಆಹಾರ ಸ್ವೀಕರಿಸುವ ನಿಯಮ ಪಾಲಿಸಿದಳು. ಸಂಯಮದ ಜೀವನ, ಶಿಸ್ತುಬದ್ಧ ಬದುಕು. ಇದರಿಂದ ಅತ್ತಿಮಬ್ಬೆ ತಪಸ್ವಿನಿ ಎನಿಸಿದಳು. ಚಕ್ರವರ್ತಿಯಿಂದ ಸಾಮಾನ್ಯ ಪ್ರಜೆಯವರಿಗೆ ಎಲ್ಲರೂ ಆಕೆಗೆ ತಲೆ ಬಾಗಿದರು, ಕೈ ಮುಗಿದರು.

ಈ ರೀತಿ ಧಾರ್ಮಿಕ ಚೌಕಟ್ಟಿಗೆ ಒಳಪಟ್ಟು ಕಠಿಣ ಜೀವನ ನಡೆಸಿದರೂ, ಅತ್ತಿಮಬ್ಬೆ ಲೌಕಿಕದ ರೀತಿ ರಿವಾಜುಗಳಿಗೆ ವಿಮುಖಳಾಗಲಿಲ್ಲ. ತನ್ನ ಮನೆತನದ ಹಿರಿಯರು, ನಲವತ್ತು ವರ್ಷಗಳ ಹಿಂದೆ ಪೊನ್ನಕವಿಯಿಂದ ‘ಶಾಂತಿಪುರಾಣಂ’ ಕಾವ್ಯವನ್ನು ಬರೆಸಿದ್ದರು; ಕವಿಗಳಿಗೆ ಮುನಿಗಳಿಗೆ ಪಂಡಿತ ಮಂಡಳಿಗೆ ಗೌರವ ತೋರಿದ್ದರು. ಅಶ್ರಯ ನೀಡಿದ್ದರು. ಪ್ರೋತ್ಸಾಹ ಕೊಟ್ಟಿದ್ದರು. ಅತ್ತಿಮಬ್ಬೆ ಇದನ್ನು ಇತೋಪ್ಯತಿಶಯವಾಗಿಸಿದಳು, ಪೊನ್ನನ ಶಾಂತಿಪುರಾಣ ಕಾವ್ಯದ ಒಂದು ಸಾವಿರ ಓಲೆಗರಿ ಪ್ರತಿಗಳನ್ನು ಮಾಡಿಸಿದಳು. ನೂರಾರು ಜನ ಹಸ್ತಪ್ರತಿಕಾರರಿಗೆ ಕೆಲಸ ಕಲ್ಪಿಸಿಕೊಟ್ಟಳು. ಶಾಂತಿಪುರಾಣದ ಸಾವಿರ ಓಲೆಗರಿ ಗ್ರಂಥದ ಪ್ರತಿಗಳನ್ನು ಸಾಹಿತ್ಯಾಸಕ್ತ ಕುಟುಂಬಗಳಿಗೆ ಉಚಿತವಾಗಿ ಹಂಚಿದಳು. ಶಾಸ್ತ್ರದಾನದ ಪರಂಪರೆಗೆ ಮರುಹುಟ್ಟು ಕೊಟ್ಟಳು. ರನ್ನಕವಿಗೆ ಆಶ್ರಯ ನೀಡಿ ‘ಅಜಿತಪುರಾಣ’ ವನ್ನು ಬರೆಸಿದಳು. ರನ್ನ ಕವಿ ಆಕೆಯ ಬಾಳಿನ ಎತ್ತರ ಬಿತ್ತರಗಳನ್ನು ಹತ್ತಿರದಿಂದ ಕಂಡವನು. ಅತ್ತಿಮಬ್ಬೆಯ ವ್ಯಕ್ತಿತ್ವದ ಭವ್ಯ ಸ್ವರೂಪವನ್ನು ಕಾವ್ಯವಾಗಿ ಬಿಂಬಿಸಿದವನು. ರನ್ನನು ತನ್ನ ಮಗಳಿಗೆ ಅತ್ತಿಮಬ್ಬೆಯ ಹೆಸರಿಟ್ಟು ಗೌರವವನ್ನು ಜೀವಂತಗೊಳಿಸಿದನು.

ಅತ್ತಿಮಬ್ಬೆಯು ಕಾಮಧೇನುವೊ ಕಲ್ಪವೃಕ್ಷವೊ ಚಿಂತಾಮಣಿಯೊ ಎಂದು ಜನತೆ ಹುಬ್ಬೇರಿಸುವಂತೆ ದಾನಧರ್ಮಗಳನ್ನು ರಾಶಿರಾಶಿಯಾಗಿ ಮಾಡಿದಳು. ೧೫೦೦ ಜಿನಬಿಂಬಗಳನ್ನು ಮಾಡಿಸಿ ಹಂಚಿದಳು. ದೇವತಾಮೂರ್ತಿಗಳನ್ನು ಇಡಲು ಮರದ ಮಂದಾಸನ ಪೀಠಗಳನ್ನು ಮಾಡಿಸಿಕೊಟ್ಟಳು. ಪೂಜೆಯ ಕಾಲದಲ್ಲಿ ನುಡಿಸಲು ಜಯಗಂಟೆಗಳನ್ನು ವಿತರಿಸಿದಳು. ಪೂಜಾಮಂಟಪಗಳನ್ನು ಅಲಂಕರಿಸಲು ಬೆಳ್ಳಿಯ ತೋರಣ, ಬೆಳ್ಳಿಕಟ್ಟುಗಳನ್ನು ದಾನವಿತ್ತಳು.

ಅತ್ತಿಮಬ್ಬೆಯ ಸಾಧನೆಗಳಲ್ಲಿ ಶಿಖರಪ್ರಾಯವಾಗಿರುವುದು ಆಕೆ ನಿರ್ಮಿಸಿದ ೧೫೦೧ ಬಸದಿಗಳು. ಇದು ಊಹಾತೀತ ಅದ್ಭುತ ಸಾಧನೆ. ಒಬ್ಬ ವ್ಯಕ್ತಿಯ ಜೀವಿತ ಕಾಲದಲ್ಲಿ ಇಷ್ಟೊಂದು ಬೃಹತ್ ಪ್ರಮಾಣದ ವಾಸ್ತು ಶಿಲ್ಪ ನಿರ್ಮಾಣ ಕಾರ್ಯ ಜಗತ್ತಿನ ಅಚ್ಚರಿಗಳ ಸಾಲಿಗೆ ಸೇರುವಂತಹುದು; ಪ್ರಪಂಚದ ಚರಿತ್ರೆಯಲ್ಲಿಯೇ ಯಾವ ರಾಜ ರಾಣಿಯೂ ಮಾಡಿರದ ವಿಕ್ರಮ. ಇಂಥ ಮುರಿಯಲಾಗದ ದಾಖಲೆ ಯನ್ನು ಕರ್ನಾಟಕದ ಒಬ್ಬ ಸ್ತ್ರೀ ಸಾಧಿಸಿದಳೆಂಬುದು ನಾಡು ಹೆಮ್ಮೆಪಡುವ ಸಂಗತಿ.

ಅತ್ತಿಮಬ್ಬೆ ಕಟ್ಟಿಸಿದ ೧೫೦೧ ದೇವಸ್ಥಾನಗಳಲ್ಲಿ ೧೫೦೦ ಹಾಳಾಗಿವೆ. ಆಕೆ ಕ್ರಿ.ಶ. ೧೦೦೭ ರಲ್ಲಿ ಕಟ್ಟಿಸಿದ ಕಟ್ಟ ಕಡೆಯದಾದ ದೇವಸ್ಥಾನ ಮಾತ್ರ ಲಕ್ಕುಂಡಿಯಲ್ಲಿ ಇಂದಿಗೂ ಕಂಗೊಳಿಸುತ್ತಿದೆ. ತನ್ನ ಕುಲದ ಕುಲಗುರುವಾದ ಅರ್ಹಣಂದಿ – ಪಂಡಿತ – ದೇವ ಆಚಾರ್ಯರಿಗೆ ಈ ದೇವಸ್ಥಾನವನ್ನು ಸಮರ್ಪಿಸಿದ್ದಾಳೆ, ದೇಗುಲದ ಪೂಜಾದಿಗಳು ಸಾರೋದ್ಧಾರವಾಗಿ ನಡೆಯಲೆಂದು ‘ಸುರುಕಿ’ ಎಂಬ ಗ್ರಾಮವನ್ನು. ಅದರ ಸಮಸ್ತ ಆದಾಯವನ್ನು ಲಕ್ಕುಂಡಿಯ ಬ್ರಹ್ಮಜಿನಾಲಯಕ್ಕೆ ದಾನಕೊಟ್ಟಳು. ಚಾಳುಕ್ಯ ಚಕ್ರವರ್ತಿಯಾದ ಸತ್ಯಾಶ್ರಯ ಇರಿವ ಬೆಡಂಗನು, ಅತ್ತಿಮಬ್ಬೆಯನ್ನು ತನ್ನ ಹೆತ್ತ ತಾಯಿಯಂತೆ ಭಕ್ತಿ ಗೌರವ ತೋರುತ್ತ ಬೆಳೆದವನು. ಅತನು ಲಕ್ಕುಂಡಿಯ ಬಸದಿಗೆ ಚಕ್ರವರ್ತಿ ದತ್ತಿಯಿತ್ತನು. ಅಲ್ಲದೆ ಈ ದೇವಾಲಯಕ್ಕೆ ಸುವರ್ಣ ಕಳಶವನ್ನು ತಾನೇ ಮಾಡಿಸಿದನು. ಪ್ರಸಿದ್ಧ ತಾಮ್ರಶಾಸನವನ್ನು ಅತ್ತಿಮಬ್ಬೆಯ ಹೆಸರಿಗೆ ಹಾಕಿಸಿಕೊಟ್ಟನು.

ಅತ್ತಿಮಬ್ಬೆ ಕವಿವರ ಕಾಮಧೇನುವಾಗಿದ್ದಳು. ಧರ್ಮಕ್ಕೂ ಸಾಹಿತ್ಯಕ್ಕೂ ಪುರೆಅಸ್ಕಾರ ನೀಡಿದಂತೆ ಅನ್ಯಜ್ಞಾನ ಶಾಖೆಗಳಿಗೂ ನೆರಳು ನೀಡಿದಳು. ಕಥಕರಿಗೆ (ಕಥೆ ಹೇಳುವವರಿಗೆ) ಗಾಯಕರಿಗೆ (Vocalists) ನಾದಕರಿಗೆ (Instrumentslists) ನಗ್ನರಿಗೆ ಭಗ್ಮರಿಗೆ ನಟರಿಗೆ ಭಟರಿಗೆ ಅನಾಥರಿಗೆ ಶಿಷ್ಟರಿಗೆ ಇಷ್ಟರಿಗೆ- ಹೀಗೆ ಎಲ್ಲ ವರ್ಗದ ಪ್ರತಿಭೆಗಳಿಗೂ ಪತಿತರಿಗೂ ಪದದಲಿತರಿಗೂ ಬೇಡಿದುದನ್ನು ಸಮನಾಗಿ ದಾನವಿತ್ತು ಸಂತೋಷ ಪಡಿಸಿದಳೆಂದು ಶಾಸನ ನಿರೂಪಿಸಿದೆ. ಬಯಸಿದ ಜನರಿಗೆ ಬಯಸಿದುದನ್ನು ದಾನಕೊಡುವುದರಲ್ಲಿ ಆಕೆ ಹರ್ಷಿಸುತ್ತಿದ್ದಳು. ಆ ಕಾರಣದಿಂದ ಅತ್ತಿಮಬ್ಬೆಯನ್ನು ಸಮಕಾಲಿನ ಶಾಸನವು ‘ಸಮಭಿಲಷಿತಾರ್ಥ ದಾನವಿನೋದೆ’ ಎಂದು ಗೌರವಿಸಿದೆ.

ಅತ್ತಿಮಬ್ಬೆ ಚಕ್ರವರ್ತಿನಿಯಲ್ಲವಾದರೂ ಚಕ್ರವರ್ತಿ ಪೂಜಿತೆಯಾಗಿದ್ದಳು, ಕಲ್ಯಾಣಿ ಚಾಳುಕ್ಯ ಸಾಮ್ರಾಜ್ಯದ ಪ್ರಥಮ ಚಕ್ರವರ್ತಿಯಾದ ತೈಲಪನು ಆಕೆಯನ್ನು ಪೂಜ್ಯಳೆಂದು ಸಂಮಾನಿಸಿದನು. ತೈಲಪನ ಮಗನಾದ ಸತ್ಯಾಶ್ರಯ ಇರಿವಬೆಡಂಗನೂ ತನ್ನ ತಂದೆಯು ತೋರಿದ ರಾಜ ಮರ್ಯಾದೆಯನ್ನು ದ್ವಿಗುಣಿಸಿದನು. ಅವಾ ಅನಂತರ ಚಕ್ರವರ್ತಿಗಳಾದ ಆಯ್ದನೆಯ ವಿಕ್ರಮಾದಿತ್ಯ, ಅಯ್ಯಣದೇವ, ಹಾಗೂ ಜಗದೇಕ – ಮಲ್ಲ ಜಯಸಿಂಹ – ಇವರೆಲ್ಲರೂ ಅತ್ತಿಮಬ್ಬೆಯನ್ನು ಹೆತ್ತ ಸರಿಮಿಗಿಲೆಂದು ತಲೆ ಬಾಗಿದರು. ಹೀಗೆ ಐದು ಜನ ವಕ್ರವರ್ತಿಗಳಿಂದ ಪೂಜೆ ಪುರಸ್ಕಾರ ಪ್ರಶಸ್ತಿಗಳನ್ನು ಪಡೆದ ಏಕಮೇವ ಅದ್ವಿತೀಯಸ್ತ್ರೀ, ಜಗದಿತ್ತ ಚರಿತ್ರೆಯಲ್ಲಿ, ಅತ್ತಿಮಬ್ಬೆ ಒಬ್ಬಳೇ! ಆ ವೀರ ಮಹಿಳೆ ಕನ್ನಡಿತಿ ಎಂಬುದು ಅಭಿಮಾನವನ್ನು ಉಕ್ಕಿಸುವ ಸಂಗತಿ.

ಅತ್ತಿಮಬ್ಬೆ ಜೀವಿತ ಕಾಲದಲ್ಲಿಯೇ ಮಹಾಮಹಿಮಾನ್ವಿತ ಸಾಧನೆಗಳಿಂದಾಗಿ ಪವಾಡಸ್ತ್ರೀ ಎಂದೆನಿಸಿದಳು. ಅವಳ ಒಂದೊಂದು ಸಾಧನೆಯೂ ಅಂದಿನ ಜನತೆಗೆ ಅಚ್ಚರಿಯಾಗಿತ್ತು. ಇಂದಿನ ಕಾಲಕ್ಕೂ ಆಕೆಯ ಸಾಕಲ್ಯ ವ್ಯಕ್ತಿತ್ವ ಬೆರಗು ಮೂಡಿಸು ತ್ತದೆ. ಮಹಾವ್ಯಕ್ತಿಗಳ ಹಿರಿಮೆ ಸಾರಲು ಅವರಿಗೆ ಪವಾಡಗಳನ್ನು ಆರೋಪಿಸುವುದು ಲೋಕ ರೂಢಿ. ಆದರೆ ಅತ್ತಿಮಬ್ಬೆಯು ಇನ್ನೂ ಬದುಕಿರುವಾಗಲೇ ಏಳು ಮಹಿಮೆಗಳನ್ನು ಆಕೆ ಪ್ರದರ್ಶಿಸಿದಳೆಂಬ ಪ್ರತೀತಿ ಶಾಸನಗಳಲ್ಲಿ ಪ್ರಚಾರ ಪಡೆದಿವೆ:

೧. ಉನ್ನತ ಕುಕ್ಕುಟೇಶ್ವರನಾದ ಗೊಮ್ಮಟ ಸ್ವಾಮಿಯನ್ನು ಕಾಣುವವರೆಗೂ ಅನ್ನವನ್ನು ತೊರೆದಳು. ನಿರಾಹಾರಿಯಾಗಿ ಬೆಟ್ಟವನ್ನು ಹತ್ತುವಾಗ, ಆಕೆಯ ಬಳಲಿಕೆಯನ್ನು ಹೋಗಲಾಡಿಸಲು, ಅಕಾಲದಲ್ಲಿಯೂ ಮಳೆಬಿದ್ದಿತು.

೨. ತೈಲಪ ಚಕ್ರವರ್ತಿಯ ಸೈನ್ಯ ಹೊರಟಾಗ, ಗೋದಾವರಿ ನದಿಯಲ್ಲಿ ಪ್ರವಾಹದಿಂದ. ನದಿದಾಟುವುದು ಅಸಾಧ್ಯವಾಯಿತು. ಆಗ ಚಕ್ರವರ್ತಿಯು ಅತ್ತಿಮಬ್ಬೆಯನ್ನು ಸಹಾಯಕ್ಕಾಗಿ ಬೇಡಿದನು. ಆಕೆ ಜಿನಬಿಂಬವನ್ನು ತಲೆಯಲ್ಲಿ ಹೊತ್ತು ತುಂಬಿ ಹರಿಯುತ್ತಿದ್ದ ನದಿಗೆ ಇಳಿದಳು. ಒಡನೆಯೇ ಪ್ರವಾಹ ತಗ್ಗಿತು.

೩. ಮದಿಸಿದ ಆನೆಯು ತನ್ನನ್ನು ಕಟ್ಟಿಹಾಕಿದ್ದ ಹಗ್ಗಸರಪಳಿಯನ್ನು ಹರಿದು ಮುರಿದು ಮುನಿಸಿನಿಂದ ಜನರ ಮೇಲೆ ಮುನ್ನುಗ್ಗಿತು. ಆದರೆ ಅತ್ತಿಮಬ್ಬೆಯನ್ನು ಕಂಡೊಡನೆಯೇ ಭಕ್ತಿಯಿಂದ ಕಾಲಿಗೆ ನಮಸ್ಕರಿಸಿತು.

೪. ಅತ್ತಿಮಬ್ಬೆ ನಿತ್ಯ ಪೂಜಿಸುತ್ತಿದ್ದ ದೇವರ ಬಿಂಬವು ಕೈಜಾರಿ ನದಿಯೊಳಗೆ ಬಿದ್ದು ಹೋಯಿತು. ಆ ಜಿನಬಿಂಬ ಮತ್ತೆ ಕೈಗೆ ಬರುವವರೆಗೆ ಆಹಾರ ಬಿಟ್ಟಳು. ಎಂಟನೆಯ ದಿನಕ್ಕೆ ಆ ದೇವತಾ ಮೂರ್ತಿ ಮತ್ತೆ ಕೈಗೆ ಬಂದಿತು.

೫. ಪ್ರಳಯಾಗ್ನಿಯಂತೆ ಸೈನ್ಯವನ್ನು ಆವರಿಸುತ್ತಿದ್ದ ಬೆಂಕಿಯು, ಅತ್ತಿಮಬ್ಬೆ ನಿರ್ಮಲವಾದ ಜಿನಗಂಧೋದಕವನ್ನು ಚಿಮುಕಿಸಿದ ಕೂಡಲೆ ನಂದಿತು.

೬. ಅತ್ತಿಮಬ್ಬೆಯ ಸವತಿಯ ದೋಣಿಯಿಂದ ಅತ್ತಿಮಬ್ಬೆಯನ್ನು ನಂದಿಗೆ ನೂಕಲು ಪ್ರಯತ್ನಿಸಿದಳು. ದೋಣಿ ಗಿರ್ರನೆ ಸುತ್ತಲಾರಂಭಿಸಿತು. ಹೆದರಿದ ಸವತಿಯು ಅತ್ತಿಮಬ್ಬೆಯ ಅಡಿಗೆರಗಿ ಮನ್ನಿಸಲ್ಪಟ್ಟಳು.

೭. ನರ್ಮದಾ ನದಿಯ ದಡದ ದೇವಾಲಯದಲ್ಲಿ ದೇವರ ಬಿಂಬವನ್ನು ದರ್ಶನ ಮಾಡುವವರೆಗೂ ಆಹಾರ ಮುಟ್ಟಲಿಲ್ಲ. ಈ ಉಪವಾಸ ಆಕೆಯ ಜೀವಿತದವರೆಗೂ ಪ್ರಸಿದ್ಧವಾಯಿತು.

ಈ ಏಳು ಮಹಿಮೆಗಳು ಆ ಕಾಲದ ಜನತೆ ಪಟ್ಟ ವಿಸ್ಮಯ ಭಾವದ ಪ್ರತಿಧ್ವನಿ. ಸಮಕಾಲೀನ ಚಾಳುಕ್ಯ ಸಾಮ್ರಾಜ್ಯದ ಪ್ರಜಾಕೋಟಿ, ಅತ್ತಿಮಬ್ಬೆಯ ವಿಚಾರದಲ್ಲಿ ಅತ್ಯಂತ ಪೂಜ್ಯ ಭಾವನೆ ತಳೆಯಲು, ಇಂತಹ ಸಂಗತಿಗಳು ಬಾಯ್ದೆರೆಯಲ್ಲಿ ಪಡೆದ ಉತ್ಪ್ರೇಕ್ಷೆಯೂ ಕಾರಣ. ಇವೆಲ್ಲದರ ಪರಿಣಾಮವಾಗಿ ಅತ್ತಿಮಬ್ಬೆ ಜೀವಂತವಾಗಿರುವಾಗಲೇ ದೈವತ್ವದ ನೆಲೆಗೇರಿದ್ದಳು. ಜಾತಿಮತ ವರ್ಣಲಿಂಗ ವಯೋಭೇದಗಳಿಲ್ಲದೆ, ಮಹಾರಾಜ ಮಹಾರಾಣಿಯರಿಂದ ಮೊದಲು ಮಾಡಿ ಸಾಮಾನ್ಯ ಪ್ರಜೆಗಳವರೆಗೆ, ಎಲ್ಲರ ಮಂಡೆ ಬಾಗಿದುವು. ಇದು ಆಕೆಯ ಪ್ರಖರ ವ್ಯಕ್ತಿತ್ವದ ಪ್ರಭಾವಳಿ. ಅತ್ತಿಮಬ್ಬೆಯಂತಹ ಅಸಾಧಾರಣ ಸ್ತ್ರೀಯೊಬ್ಬಳು ವಾಸ್ತವವಾಗಿ ಜೀವಿಸಿದ್ಧ ಳೆಂಬುದನ್ನು ನಾವಿಂದು ಯೋಚಿಸುವುದೇ ಕಷ್ಟವೆಂಬಂಥ ವ್ಯಕ್ತಿತ್ವ ಆಕೆಯದಾಗಿತ್ತು.

ಅತ್ತಿಮಬ್ಬೆ ತನ್ನ ಜೀವಿತ ಕಾಲದಲ್ಲಿ ಮಾಡಿದ ಈ ಏಳು ಪವಾಡಗಳನ್ನು ವಿಶಿಷ್ಟವೆನ್ನಲು ಕಾರಣಗಳಿವೆ. ಬುದ್ಧ ಮಹಾವೀರ ಏಸುಕ್ರಿಸ್ತ ಬಸವಣ್ಣ ಮೊದಲಾದ ಮಹಾಪುರುಷರ ಚರಿತ್ರೆಯಲ್ಲಿ, ಅವರು ತೋರಿದ ಹಲವು ಮಹಿಮೆಗಳನ್ನು ಹೇಳಲಾಗಿದೆ. ಆದರೆ ಒಬ್ಬ ಸ್ತ್ರೀಯ ಜೀವನದಲ್ಲಿ ಸಂಭವಿಸಿದ ಪವಾಡಗಳು ಹೀಗೆ ನಿರೂಪಿತವಾಗಿರುವುದು ಅದ್ವಿತೀಯವಾದುದು. ಈ ಪವಾಡಗಳ ಹಿಂದಿರುವ ಧಾರ್ಮಿಕತೆ ವೈಚಾರಿಕತೆ ಉಪ್ತ್ರೇಕ್ಷೆ ವಾಸ್ತವತೆ ಕುರಿತು ಪ್ರತ್ಯೇಕ ಜಿಜ್ಞಾಸೆಯನ್ನು ನಾವು ನಡಸಬಹುದು. ಅದು ಬೇರೆಯ ಮಾತು ಆದರೆ ಒಬ್ಬ ಮಹಿಳೆಯನ್ನೂ ಆಕೆಯ ಅಸಾಧಾರಣ ಶೃಂಗ ವ್ಯಕ್ತಿತ್ವದ ಮಹಿಮೆಯನ್ನೂ, ಉಳಿದ ಮಹಾ ಪುರುಷರ ಪವಾಡ ಪುರುಷರ ಸಾಲಿನಲ್ಲಿ ನಿಲ್ಲಿಸಿ, ವರ್ಣಿಸಿರುವುದು ಗಮನಿಸಬೇಕಾದ ಸಂಗತಿ. ಜಗತ್ತಿನ ಸ್ತ್ರೀಯರ ಚರಿತ್ರೆಯಲ್ಲಿ ಇಂಥ ನಿರೂಪಣೆ ಅತಿ ವಿರಳ.

ಅತ್ತಿಮಬ್ಬೆಯ ಪಾತ್ರ ಸ್ತ್ರೀವಾದ ಸಿದ್ಧಾಂತಗಳಿಗೆ ಸಮೃದ್ಧ ಭಂಡಾರವಾಗುವಂಥ ಪಾತ್ರವಾಗಿರುವುದರಿಂದ, ಆಕೆಯ ಎಲ್ಲ ಸಾಧನೆಗಳ ಶಿಖರಗಳನ್ನು ವಿವರವಾಗಿ ಅರಿಯುವ ಅಗತ್ಯವಿದೆ. ಕರ್ನಾಟಕದಲ್ಲಿ ಮಾತ್ರವಲ್ಲದೆ ಸಮಗ್ರ ಭಾರತದಲ್ಲಿ ಪ್ರಾಚೀನ ಮಹಿಳೆಯ ಮತ್ತು ಮಧ್ಯಕಾಲಿನ ಮಹಿಳೆಯ ಸಾಮಾಜಿಕ ಸ್ಥಾನಮಾನಗಳ ವಿಶ್ಲೇಷಣೆಗೆ ತೊಡಗಲು ಅತ್ತಿಮಬ್ಬೆ ಮುಖ್ಯ ಮಾದರಿಯಾಗಿ ಕಾಣುತ್ತಾಳೆ. ಮಹಿಳೆಯ ಸಪಿಣತಿ, ಪ್ರತಿಭೆ, ದೃಷ್ಟಿಕೋನ, ಸಾಮರ್ಥ್ಯ, ವೈಚಾರಿಕತೆ, ಅನುಭಾವಿಯ ಬಿಲವು, ನಿಶ್ಯಬ್ದ ಹೋರಾಟ, ಆಧ್ಯಾತ್ಮಿಕ ಜೀವನ, ಲೌಕಿಕ ಜೀವನ ಮೊದಲಾದ ಆಯಾಮಗಳನ್ನು ಆವರಿಸಿದ ತನ್ನ ಜೀವನದ ಮೂಲಕ ಸ್ತ್ರೀಯನ್ನು ಸಮಾಜ ಗಂಭೀರವಾಗಿ ಸ್ವೀಕರಿಸಬೇಕೆಂಬ ಎಚ್ಚರವನ್ನು ತೋರಿಸಿ ಕೊಟ್ಟಾಕೆ ಅತ್ತಿಮಬ್ಬೆ.

ಆಧುನಿಕ ವಿಮರ್ಶೆಯ ಪರಿಭಾಷೆಯಲ್ಲಿ, ಸ್ತ್ರೀವಾದಕ್ಕೆ ಚೈತನ್ಯ ತುಂಬಿ ಚಾಲನೆ ಕೊಡುವ ಕುತೂಹಲಕರ ಸಂಗತಿಗಳು ಅತ್ತಿಮಬ್ಬೆಯ ಬದುಕಿನಲ್ಲಿ ವಾಸ್ತವವಾಗಿ ಘಟಿಸಿವೆ. ಅತ್ತಿಮಬ್ಬೆಯ ಒಟ್ಟು ಜೀವಿತಕಾಲ ಕ್ರಿ.ಶ. ೯೫೦ ರಿಂದ ೧೦೧೮. ಸಾವಿರ ವರ್ಷದ ಹಿಂದೆ, ಅಂದಿನ ಪುರುಷ ಪ್ರಧಾನತೆಯ ಸಾಂಸ್ಕೃತಿಕ ಗ್ರಹಿಕೆಗಳಲ್ಲಿ, ಅತ್ತಿಮಬ್ಬೆಗೆ ಆದ್ಯತೆಯ ಅಗ್ರಪಟ್ಟ ಕಟ್ಟಿರುವುದು ವಿಶೇಷ ಗಮನಿಕೆಗೆ ತಕ್ಕ ವಿಷಯ.

ಸ್ತ್ರೀವಾದಿ ಆಲೋಚಕರ ವ್ಯಾಖ್ಯಾನ ವಿಮರ್ಶೆಗಳಿಗೆ ಅತ್ತಿಮಬ್ಬೆಯ ಜೀವನ ಮತ್ತು ಸಾಧನೆ ಪ್ರಧಾನ ವಸ್ತುವಾಗಿ, ಅಧ್ಯಯನ ಯೋಗ್ಯವಾಗಿ ಕಾಣುತ್ತದೆ. ಆಕೆಯ ಬದುಕಿನಲ್ಲಿ ಸ್ತ್ರೀಪುರುಷತ್ವದ ಲಿಂಗ ಭೇದವು ಗೌಣ. ಆಕೆ ಬಾಳಿದ ಕುಟುಂಬವನ್ನು ಹೆಣ್ಣು ಗಂಡೆಂಬ ತಾರತಮ್ಯ ಇಬ್ಭಾಗಿಸದೆ, ಒಂದು ಸರಿಸಮಾನ ದೃಷ್ಟಿ ಕ್ರಿಯಾ ಶೀಲವಾಗಿದೆ. ಸ್ತ್ರಿಪುರುಷ ಪ್ರತ್ಯೇಕೀಕರಣದ ಭಿನ್ನತೆಯಾಗಲಿ, ಲಿಂಗ ಭೇದದ ಕೀಳರಿಮೆಯಾಗಲಿ ನಿರ್ಮಾಣವಾಗದ ಸಮಾನತೆಯ ನೆಲೆಯಲ್ಲಿ ಮಹಿಳೆಯೊಬ್ಬಳು ಹೀಗೆ ಮಾನ್ಯಳಾದ ದೃಷ್ಟಾಂತಗಳು ಚರಿತ್ರೆಯಲ್ಲಿ ವಿರಳ.

ಕಾವ್ಯ ಪ್ರಪಂಚ, ಪುರಾಣ ಪ್ರಪಂಚ, ಮತ್ತು ಕಥೆ ಕಾದಂಬರಿಗಳ ಸಾಹಿತ್ಯ ಲೋಕದಲ್ಲಿ ಮರ್ಯಾದಿತ ಸ್ಥಾನವನ್ನು ಪ್ರತಿಪಾದಿಸಿ, ಸಮಗದ್ದುಗೆಯಲ್ಲಿ ನಿಲ್ಲಿಸಿದ ಕಾಲ್ಪನಿಕ ವರ್ಣನೆಗಳವೆ. ಅವು ಅತಿರಂಜಿತ ಸಾಪೇಕ್ಷ ವರ್ಣನೆಗಳು. ಆದರೆ ವಾಸ್ತವ ಪ್ರಪಂಚದ ಸ್ಥಿತಿಗತಿಗಳು ಹೀಗಿಲ್ಲ. ದೈನಂದಿನ ವ್ಯವಹಾರಗಳಲ್ಲಿ ಸ್ತ್ರೀಯು ಗೌಣಳು, ಅಲಕ್ಷಿತಳು, ವರ್ಜ್ಯಳು, ಪುರುಷನ ಗೃಹೀತ ಸಂರಚನೆಯಲ್ಲಿ ಸ್ತ್ರೀ ನಿರ್ಲಕ್ಷಿತಳು. ಆಕೆಗೆ ಸ್ವಾತಂತ್ರ್ಯವೆಂಬುದು ಕನಸು. ನಸ್ತ್ರೀ ಸ್ವಾತಂತ್ರ್ಯಮರ್ಹತಿ ಎಂಬ ಮಂತ್ರ ಪಠಣ ಸಮಾಜದ ಉದ್ದಗಲಗಳಲ್ಲಿ ಅನುರಣವ. ಅಪುತ್ರೋ ಗತಿರ್ನಾಸ್ತಿ ಎಂಬ ನಂಬಿಕೆ ಜೀವಂತವಾಗಿದ್ದು, ಹೆಣ್ಣು ಗಂಡುಮಗುವನ್ನು ಹೆಸರು ಮಾನಸಿಕ ಒತ್ತಡಗಳಲ್ಲಿ ನರಳಬೇಕಿತ್ತು. ಪುರುಷ ಪ್ರಾಧಾನ್ಯದ ದಬ್ಬಾಳಿಕೆ ಎಷ್ಟೆಂದರೆ ಮಹಿಳೆ ಪುರುಷನ ಅಂಕೆ ಅಧೀನದಲ್ಲಿರಬೇಕು.

ಕುಟುಂಬ ಪರಿಕಲ್ಪನೆಯಲ್ಲೂ ಗಂಡಸು ಯಜಮಾನ, ಹೆಣ್ಣು ತಾನೇ ತೀರ್ಮಾನ ತೆಗೆದುಕೊಳ್ಳುವಂತಿಲ್ಲ, ಸಂಸಾರದಲ್ಲಿ ಹಣದ ವಹಿವಾಟಿಕೆಗೆ ಹೆಣ್ಣು ವಾರಸುದಾರಳಲ್ಲ. ತನಗೆ ತಿಳಿದಂತೆ ಖರ್ಚು ವೆಚ್ಚಮಾಡಲು, ಕೊಳ್ಳಲು ಮಾರಲು ಆಕೆಗೆ ಹಕ್ಕಿಲ್ಲ. ದಾನದತ್ತಿಗಳನ್ನು ಪುರುಷರು ಇಷ್ಟಬಂದಂತೆ ಮಾಡಬಹುದು. ಹೆಣ್ಣು ಮೂಕಪ್ರೇಕ್ಷಕಳೇ ಹೊರತು ಪಾಲುದಾರಳಲ್ಲ. ಕಾಸುಕಾಸಿಗೂ ಆಕೆ ಕೈಚಾಚಬೇಕು. ಮನೆಯವರ ಅಣತಿಯಿರದ ಹೊರತು ಹೊಸ್ತಿಲುದಾಟಲಾಗದು. ಸ್ತ್ರೀ ಮತ್ತು ಸಾರ್ವಜನಿಕ ಸಂಪರ್ಕ ಎಂಬ ಪರಿಕಲ್ಪನೆ ಎರಡು ಧ್ರುವಗಳು! ಗಂಡಸರೊಂದಿಗೆ, ಅದೂ ಸಾರ್ವಜನಿಕವಾಗಿ ಮಾತನಾಡುವುದು ನಿಷಿದ್ಧ, ನಾಟಕದವರೊಂದಿಗೆ ಸಂಗೀತ ಗಾರರೊಂದಿಗೆ ಪರಿಚಯ ಹೊಂದಿರುವುದು ಕೂಡ ಸ್ತ್ರೀಯ ವಿಚಾರವಾಗಿ ಗುಮಾನಿಗೆ ಎಡೆಕೊಡುವ ಸೂಕ್ಷ್ಮ ವಿಚಾರ. ಸೈನಿಕರನ್ನು ನೋಡುವುದೇ ಕಷ್ಟ; ಅವರೊಂದಿಗೆ ಮಾತನಾಡುವುದು ಒಡಾಡುವುದು ಸಾಹಸವೇ ಸರಿ. ಸ್ತ್ರೀ ಹಾಗೇನಾದರೂ ಮಾಡಿದರೆ ಆಕೆಯ ಶೀಲ ಶಂಕಿಸುವುದು ಮೊದಲನೆಯ ಪ್ರತಿಕ್ರಿಯೆ. ರಣರಂಗವು ವನಿತೆಯರ ಕನಸಿನಲ್ಲಿಯೂ ಬರುವಂತಿಲ್ಲ. ಯುದ್ಧವೆಂಬುದು ಪುರುಷರ ಕ್ಷೇತ್ರ, ಸ್ತ್ರೀಗೆ ಅದು ನಿಷಿದ್ಧವಲಯ (prohibited area). ಉನ್ನತಸ್ತರದ ಶಿಕ್ಷಣವನ್ನೂ ಸಹ ಸ್ತ್ರೀಗೆ ಅನಗತ್ಯವೆಂಬ ಭಾವನೆ. ಸ್ತ್ರೀಯ ಆಚಾರ ವಿಚಾರಗಳಲ್ಲಿ ಇಂಥ ಪೂರ್ವಗ್ರಹಿಕೆಗಳಿಗೆ ಕೊರತೆಯಿಲ್ಲ.

ಮಹಿಳೆಯರ ಪಾಲಿಗೆ ಇತಿಹಾಸದ ಬಾಗಿಲು ಮುಚ್ಚಿರುವುದೇ ಹೆಚ್ಚು. ಸ್ತ್ರೀಯರ ವಂಶಾವಳಿಯನ್ನು ಹೇಳುವುದು ಅಪರೂಪ. ಪುರುಷನಿಗೆ ಇರುವಂತೆ ಸ್ತ್ರೀಗೂ ಒಂದು ಪರಂಪರೆಯಿದೆ ಎಂಬುದನ್ನು ಬಹುತೇಕ ಕಡೆಗಣಿಸಲಾಗಿದೆ. ಭಾರತೀಯ ಸಂಸ್ಕೃತಿಯಲ್ಲಿ ಸ್ತ್ರೀಗತ ಚಿಂತನೆ ಭೂಗತವಾಗಿದೆ. ಸಾಹಿತ್ಯದಲ್ಲೂ ಸ್ತ್ರೀ ಪರವಾದ ನಿರೂಪಣೆಯು ಕಡಿಮೆ, ಕರ್ನಾಟಕ ಸಂಸ್ಕೃತಿ ಎಂಬುದೂ ಭಾರತೀಯ ಸಂಸ್ಕೃತಿಯ ನೀಲಿನಕಾಶೆ, ಇದರ ಸಾಮಾಜಿಕ ವ್ಯವಸ್ಥೆಯಲ್ಲಿ ಹೆಣ್ಣಿಗೆ ಎರಡನೆಯ ಸ್ಥಾನ, ಬಂಜೆಯಾದರಂತೂ ಆಕೆಯ ತಲೆಯಮೇಲೆ ಕಷ್ಟದಹೊರೆ; ಮಕ್ಕಳಾದರೂ ಗಂಡು ಮಗು ವನ್ನು ಹಡೆದರೆ ಸಮಾಧಾನ. ಇನ್ನು ಅಕಸ್ಮಾತ್ ಆಕೆ ವಿಧವೆಯಾದರಂತೂ ಅಲ್ಲಿಗೆ ಮುಗಿಯಿತು ಆಕೆಯ ಇಹಜೀವನ; ಬಾಳಿನುದ್ದಕ್ಕೂ ದಾರುಣ ಬವಣೆ ತಪ್ಪಿದ್ದಲ್ಲ.

ಗಂಡನಿಲ್ಲದ ದಿನಗಳನ್ನು ದೂಡುವುದು ಯಮಯಾತನೆ. ಅದು ನಿತ್ಯ ನರಕ ಹೊಕ್ಕುಬಂದ ಹಾಗೆ. ಮದುವೆಗೆ ಮುನ್ನ ತಂದೆಯ, ಸೋದರರ ಅಧೀನ, ವಿವಾಹನಂತರ ಅತ್ತೆಮಾವಂದಿರ, ಮೈದುನ ಭಾವಂದಿರಲ್ಲಿ ಊಳಿಗತನ, ಪತಿಯ ನೆರಳಾಗಿದ್ದು, ಆದರ್ಶಸ್ತ್ರೀಯ ಪಟ್ಟ ಕಟ್ಟಿಸಿಕೊಳ್ಳಲು ಅವಕಾಶ ಯಥೇಚ್ಛ. ಉಸಿರು ಇರುವ ತನಕ ಪುರುಷ ಪರಧಿಯ ಬೇಲಿಯೊಳಗೆ ಸುತ್ತಬೇಕು. ಅಹಲ್ಯೆ ತಾರಾ ಮಂಡೋದರಿ ಸೀತೆ ಪಾರ್ವತಿ ದ್ರೌಪದಿ ಅರುಂಧತಿ ಮುಂತಾದ ಪುರಾಣದ ಕಾಲ್ಪನಿಕ ಸ್ತ್ರೀಯರೇ ನಾರಿಯರಿಗೆ ದೃಷ್ಟಾಂತ. ಇದಿಷ್ಟೂ ಸಾವಿರಾರು ವರ್ಷಗಳಿಂದ ಸ್ತ್ರೀಗೆ ಇರುವ ಆದರ್ಶ ಪಾಠಗಳು.

ಈ ನಿರ್ಬಂಧಗಳ ಹಿನ್ನೆಲೆಯಲ್ಲಿ ಅತ್ತಿಮಬ್ಬೆ ಜೀವಿಸಿದ ರೀತಿಯನ್ನಿಟ್ಟು ತೂಗಿ ನೋಡಬೇಕು. ಆಕೆ ಈ ನೆಲದ ಮಣ್ಣಿನ ಮಗಳು. ಚಾರಿತ್ರಿಕವಾಗಿಯೇ ಆಗಿಹೋದ ಪಂಚೇದ್ರಿಯಗಳಿದ್ದ ವ್ಯಕ್ತಿ. ಪುರಾಣ ಪ್ರಪಂಚದ ಆದರ್ಶೀಕೃತ ಸತಿ ಸಾಧ್ವಿಯರನ್ನು ಮಸುಳಿಸಿದ, ಚರಿತ್ರೆಯಲ್ಲಿ ಹೊಸ ಅಧ್ಯಾಯ ತೆರೆದ ಸಾಹಸಿ, ತನ್ನ ಕಾಲದ ಮತ್ತು ಅನಂತರದ ತಲೆಮಾರಿನ ಸ್ತ್ರೀಯರಿಗೆ ಅತ್ತಿಮಬ್ಬೆಯು ತನ್ನ ತಿಳಿವಲಿಕೆ ನಡೆವಳಿಕೆಗಳಿಂದ ಮೇಲ್ಪಂಕ್ತಿಯಾದಳು. ಇತಿಹಾಸದ ಮತ್ತು ಸ್ತ್ರೀವಾದಿ ಪರಂಪರೆಯ ಧ್ವನಿ ದಾಟಿ ದಿಕ್ಕುಗಳನ್ನು ಬದಲಿಸಿದ ಧೀರೆ ಅತ್ತಿಮಬ್ಬೆ. ಆಕೆ ಪುರುಷರೊಂದಿಗೆ ಪೈಪೋಟಿಗೆ ಇಳಿಯಲಿಲ್ಲ. ಪುರುಷವರ್ಗವನ್ನು ಸ್ತ್ರೀಯರ ಶತ್ರುಗಳೆಂದು ಪ್ರತಿಪಾದಿಸಲಿಲ್ಲ. ಪುರುಷರು ಸ್ತ್ರೀಯರ ಮಿತ್ರರು, ಸಮಾನರು, ಸಹಾಯಕರು ಎಂಬ ಆರೋಗ್ಯ ಮನೋಧರ್ಮದಿಂದ ವರ್ತಿಸಿದಳು.

ಅತ್ತಿಮಬ್ಬೆಗೆ ವಿದ್ಯಾಭ್ಯಾಸದ ಕೊರತೆಯಾಗಲಿಲ್ಲ. ಸಾರ್ವಜನಿಕ ರಂಗದ ಸಂಪರ್ಕಕ್ಕೆ ತಡೆಗಳಿರಲಿಲ್ಲ. ಅಡುಗೆ ಮನೆಗೆ ಸೀಮಿತಳಾಗಿ ಮನೆಯ ನಾಲ್ಕು ಗೋಡೆಗಳ ನಡುವೆಯೇ ಇರಬೇಕೆಂಬ ಕಟ್ಟುಪಾಡುಗಳು ಇರಲಿಲ್ಲ. ಬಡತನದ ಅಡಚಣೆ ಇರಲಿಲ್ಲವದ್ದರಿಂದ ಉಳಿದ ಸ್ವಾತಂತ್ರ್ಯ ಸಾಧ್ಯವಾಯಿತೆಂದು ಅರ್ಥೈಸಬಾರದು. ಸಹಸ್ರಾರು ಸಿರಿವಂತ ಕುಟುಂಬಗಳಲ್ಲಿ ಮಹಿಳೆಗೆ ಮಿತಿಗಳ ಸರಪಳಿ ತೊಡಿಸಿರುತ್ತಾರೆ. ಶ್ರೀಮಂತ ಸಂಸಾರಗಳಲ್ಲಿಯೇ ಸ್ತ್ರೀಗೆ ಶೃಂಖಲೆ ಅಧಿಕ. ಹೇರಳವಾದ ಸಂಪತ್ತು ಇರುವ ಮನೆಗಳಲ್ಲಿ ಪುರುಷನ ಅಧಿಕಾರದ ಪೈಪೋಟಿ; ಇಡೀ ಆಸ್ತಿಯ ಮೇಲೆ ತನ್ನದೇ ಒಡೆತನವಿರಬೇಕೆಂಬ ಪ್ರತಿಷ್ಠೆ. ಅವಿಭಕ್ತ ಕುಟುಂಬಗಳಲ್ಲಿ ಇನ್ನೂ ಅಪಾಯಗಳಿರುತ್ತವೆ.

ಆದರೆ ಅತ್ತಿಮಬ್ಬೆ ತನ್ನ ಸಮತೋಲನದ ನಡೆ-ನುಡಿಗಳ ಮೂಲಕ ಸಮಕಾಲೀನ ಸಮಾಜವನ್ನೂ ಸ್ರಾಮ್ರಾಜ್ಯವನ್ನೂ ಗೆದ್ದಳು. ತನ್ನ ಸ್ವಾಭಿಮಾನವನ್ನು ಉಳಿಸಿಕೊಂಡು ಬಾಳಿದಳು. ತನ್ನ ಆತ್ಮ ಪ್ರತ್ಯಯವನ್ನು ಯಾವ ಹಂತದಲ್ಲೂ ಕಳೆದು ಕೊಳ್ಳಲಿಲ್ಲ. ನಾಗರಿಕ ಸ್ತ್ರೀ ಆದೊಡನೆ ತನ್ನತನವನ್ನು (identity) ಕಳೆದುಕೊಳ್ಳುವುದು ಎಂಬುದಲ್ಲ ಎಂದು ತನ್ನ ನಡೆವಳಿಕೆಯಿಂದಲೂ ಪ್ರತ್ಯಕ್ಷವಾಗಿ ತೋರಿಸಿಕೊಟ್ಟಳು. ಆಧ್ಯಾತ್ಮಿಕಳಾಗಿಯೂ ಲೌಕಿಕಕ್ಕೆ ವಿಮುಖಳಾಗದೆ ಸಮನ್ವಯವನ್ನು ಸಾಧಿಸಿದಳು. ಮಾತೃಭಾಷಾಪ್ರೇಮ, ಸಾಹಿತ್ಯಾಸಕ್ತಿ, ಸಾಹಿತ್ಯದ ಸಂರಕ್ಷಣೆ, ಪಾಂಡಿತ್ಯ ಪೋಷಣೆ, ರಾಷ್ಟ್ರ ಪ್ರೇಮ, ಧರ್ಮಪರತೆ, ದಾನಗುಣ, ಅನಾಥರಿಗೆ ಆಶ್ರಯ – ಇವು ಆಕೆ ಕಂಡುಕೊಂಡ ವಿಮೋಚನೆಯ ಹೆದ್ದಾರಿ. ಜನಪರವೂ ಜನಮುಖಿಯೂ ಆದ ಪ್ರಗತಿಪರ ಧೋರಣೆಯಿಂದ ಅತ್ತಿಮಬ್ಬೆ ಮಿಂಚಿದಳು.

ಸ್ತ್ರೀ ಮತ್ತು ಧರ್ಮ – ಈ ಸಂಬಂಧ ನಿಕಟವಾದದ್ದು. ಎಲ್ಲ ಧರ್ಮಗಳಲ್ಲೂ ಧಾರ್ಮಿಕ ಪ್ರವೃತ್ತಿಯು ಸ್ತ್ರೀಯರಲ್ಲೇ ಅಧಿಕವಾಗಿ ಕಂಡುಬರುತ್ತದೆ. ಅತ್ತಿಮಬ್ಬೆಯೂ ಇದಕ್ಕೆ ಹೊರತಾಗಿಲ್ಲ. ಭೌತಿಕ ಜಗತ್ತು ಮತ್ತು ಆಧ್ಯಾತ್ಮಿಕ ವಲಯ – ಇವೆರಡು ಭೂಮಿಕೆಯಲ್ಲೂ ಆಕೆಯ ಸಾಧನೆಗಳು ಗಣ್ಯವಾಗಿ ಕಾಣುತ್ತವೆ. ಸ್ವಧರ್ಮದಲ್ಲಿ ನಿಷ್ಠೆ, ಪರಧರ್ಮದಲ್ಲಿ ಸಹನೆ – ಇವು ಆಕೆಯ ಮನೋಧರ್ಮ. ೧೫೦೧ ದೇವಾಲಯಗಳನ್ನು ಕಟ್ಟಿಸಿದಳು. ವ್ರತನೋಂಪಿಗಳನ್ನು ಆಚರಿಸಿದಳು. ಆದರೆ ಆಕೆ ದೇವರು ಧರ್ಮ ದೇವಾಲಯ ಎಂದು ಸದಾ ಗುಡಿಯೊಳಗೇ ಸೇರಿಕೊಳ್ಳಲಿಲ್ಲ. ಲೌಕಿಕ ಹಾಗೂ ಪಾರಮಾರ್ಥಿಕ ಎರಡರ ಸಮನ್ವಯಕ್ಕೆ ಆಕೆ ಅರ್ಪಿತಳಾದಳು. ಅತ್ತಿಮಬ್ಬೆ ಸಮನ್ವಯ ವಾದಿ. ಸ್ವಧರ್ಮ-ಅನ್ಯಧರ್ಮ, ಲೌಕಿಕ-ಆಗಮಿಕ, ಪುರುಷ-ಸ್ತ್ರೀ, ರಾಜಕೀಯ-ಧರ್ಮ, ಯುದ್ಧ-ಶಾಂತಿ-ಇವುಗಳಲ್ಲಿ ಸಮನ್ವಯದ ಸುವರ್ಣ ಮಾಧ್ಯಮವನ್ನು ಪಾಲಿಸಿದಳು. ಲೋಕದ ವಿಚಾರದಲ್ಲಿ ಪುರುಷನ ದೃಷ್ಟಿಕೋನ ಮೌಲ್ಯಗಳಲ್ಲಿ ಕೆಲವನ್ನು ಸ್ವೀಕರಿಸಿದಳು. ಯುದ್ಧ ಆಯುಧ ಸೈನ್ಯ ಆನೆ ಕುದುರೆ ಸವಾರಿ – ಇವು ಹೆಂಗಸಿನ ಕ್ಷೇತ್ರವಲ್ಲ ಎಂಬ ಸ್ಥಾಪಿತ ಗ್ರಹಿಕೆಯನ್ನು ಪಲ್ಲಟಗೊಳಿಸಿದಳು. ಸೈನ್ಯದಲ್ಲಿ, ಸವಾರಿಯಲ್ಲಿ ದಾನದಲ್ಲಿ, ದೇವಾಲಯ ನಿರ್ಮಾಣದಲ್ಲಿ, ಕಲೆ ಸಾಹಿತ್ಯ ಪೋಷಣೆಯಲ್ಲಿ ಎಲ್ಲೆಲ್ಲೂ ಅತ್ತಿಮಬ್ಬೆಯೇ ರಾರಾಜಿಸಿದಳು.

ಸ್ತ್ರೀ ಸ್ವಭಾವಕ್ಕೆ ಅಡಿಗೆ ಮನೆಯ ಕಾಯಕ, ಮಕ್ಕಳ ಪಾಲನೆ ದೇವರ ಭಜನೆ ಇವು ಹೇಳಿ ಮಾಡಿಸಿದ ಆಯ್ಕೆಯ ಕ್ಷೇತ್ರಗಳೆಂಬ ಸಾಂಪ್ರದಾಯಿಕ ನಡೆವಳಿಕೆಗೆ ಆಕೆ ಅಪವಾದಗಳನ್ನು ತೋರಿಸಿದಳು. ಹೆಣ್ಣು ಸ್ವಾಭಿಮಾನ ಶೂನ್ಯತೆಯ ಮಾಂಸದ ಮುದ್ದೆ ಅಲ್ಲ ಎಂಬುದಕ್ಕೆ ಮತ್ತು ಮುಜುಗರ ಮಡಿವಂತಿಕೆ ಇಲ್ಲದಿರುವಿಕೆಗೆ ಅತ್ತಿಮಬ್ಬೆ ನಿದರ್ಶನವಾದಳು. ಚಾಳುಕ್ಯ ಸಾಮ್ರಾಜ್ಯದ ಚರಿತ್ರೆಯ ಗತಿಯಲ್ಲಿ ಸ್ತ್ರೀಯ ಪಾತ್ರಕ್ಕೆ ಎಷ್ಟು ಪ್ರಾಮುಖ್ಯವಿದೆ ಎಂಬುದನ್ನು ತಿಳಿಸಿಕೊಟ್ಟಳು. ಲಿಂಅ ಆಧಾರಿತ ಕಾರ್ಯ ವಿಭಜನೆಯಲ್ಲು, ಅಧಿಕಾರ ನಿಯೋಜನೆಯಲ್ಲಿ ಅರ್ಥವಿಲ್ಲವೆಂಬುದಕ್ಕೆ ಆಕೆ ದೃಷ್ಟಾಂತವಾದಳು. ಸಾಕ್ಷಾತ್ ಸಾಮ್ರಾಟನೇ ಆಕೆಯ ಸಹಾಯವನ್ನು ಯಾಚಿಸಿದನು. ಚಕ್ರವರ್ತಿಗಳು ಆಕೆಯಮೇಲೆ ಪ್ರಶಸ್ತಿಗಳ ಮಳೆಗರೆದರು. ಇಷ್ಟಾಗಿಯೂ ಅಧಿಕಾರ ಮತ್ತು ಇತರ ಯಜಮಾನ್ಯ (ಹೆಜೆಮೊನಿ) ಇವುಗಳುಗೆ ಒಲಿಯಲಿಲ್ಲ. ಸಮಾಜೊ – ರಾಜಕೀಯ ಆಯಾಮ ಆಕೆಯ ಜೀವ್ಚನ ಸಾಧನೆಯಲ್ಲಿ ಪ್ರಧಾನವಾದ ಅಂಶ. ಆಕೆಯ ಸಾಮಾಜಿಕ ಕಾಳಜಿಗಳಲ್ಲಿ ಸಂಘರ್ಷಕ್ಕೆ ಇಳಿಯುವ ಧೋರಣೆಯಿಲ್ಲ. ಆಕೆಯದು ಸ್ವಂತಿಕೆಯನ್ನು ಬಿಟ್ಟು ಕೊಡದೆ ಸಮನ್ವಯವನ್ನು ಸಾಧಿಸುವ ದಾರಿ. ಸ್ತ್ರೀ ಮತ್ತು ಶಿಕ್ಷಣ ದೃಷ್ಟಿಯಿಂದಲೂ ಅತ್ತಿಮಬ್ಬೆ ಆದರ್ಶಪ್ರಾಯಳಾಗಿದ್ದಾಳೆ. ಆಕೆಯ ಸಾಂಸ್ಕೃತಿಕ ಅಭಿರುಚಿಗಳಲ್ಲಿ ಪಕ್ವತೆ ಕಾಣುತ್ತದೆ. ಕಲೆ, ವಾಸ್ತು, ಶಿಲ್ಪ, ಸಂಗೀತ, ನಾಟ್ಯ, ನಟನೆ, ಕಥನಗಾರಿಕೆ, ವಾದನ ಗಾಯನ – ಎಲ್ಲದಕ್ಕೂ, ಎಲ್ಲರಿಗೂ ಸಮನಾದ ಪ್ರೋತ್ಸಾಹ ಧನಸಹಾಯನದಿಂದ ಆಕೆ ಬಹುದೊಡ್ದ ಕಲಾಪೋಷಕಿ. ಸಾಹಿತ್ಯ ಸಂರಕ್ಷಕಿಯಾಗಿ ಅತ್ತಿಮಬ್ಬೆ ಮಾತೃಭಾಷೆಯ ಆಯ್ಕೆಯನ್ನು ಪ್ರತಿಪಾದಿಸಿದಳು. ಮಾತೃಭಾಷೆಯ ಅಭಿಮಾನದ ಜತೆಗೆ ಓದುವ ವರ್ಗವನ್ನೂ ಬೆಳಸಿದಳು. ಓದುವ ಸಾಮಗ್ರಿಯನ್ನು ಉಚಿತವಾಗಿ ಒದಗಿಸಿದಳು, ದಿಕ್ಕಿಲ್ಲದ, ತುತ್ತು ಕೂಳಿಲ್ಲದ ಆಸ್ತಿರಹಿತರಿಗೆ ಅನ್ನ ಆಸರೆ ಅಭಯವಿತ್ತಳು, ಅನಾಥರ ಮೇಲೆ ಅನುಕಂಪವನ್ನು ವರ್ಷಿಸಿದಳು.

ಅತ್ತಿಮಬ್ಬೆಯ ಸಾಧನೆಗಳು ಹಲವು ಮತ್ತು ಎಲ್ಲವೂ ದೊಡ್ಡವು. ಆಕೆಗೆ ಧಾರ್ಮಿಕ-ಲೌಕಿಕ ಎರಡೂ ಶಿಕ್ಷಣದೊಂದಿಗೆ, ಸಾಹಿತ್ಯಕ-ಸೈನಿಕ ತರಬೇತು ಆಗಿತ್ತೆಂದು ಮೇಲೆ ಆಗಲೇ ವಿವರಿಸಿದೆ. ಅವರ ಮನೆತನದ ನಾಲ್ಕು ತಲೆಮಾರಿನ ಚರಿತ್ರೆಯಲ್ಲಿ ಸ್ತ್ರೀಗೆ ಸಮಾನ ಶಿಕ್ಷಣ, ಅಧಿಕಾರ, ವ್ಯವಹಾರ ಸ್ವಾತಂತ್ರ್ಯಗಳಿದ್ದು ವೆಂಬುದೂ ಗಮನಾರ್ಹ. ಸಾಮಾನ್ಯವಾಗಿ ಆರ್ಥಿಕ ಸಂರಚನೆಯಲ್ಲಿ, ಸ್ತ್ರೀಯ ಸ್ಥಾನ ನಿರ್ದೇಶನ ಗೌಣ ನೆಲೆಯದು. ಆದರೆ ಅತ್ತಿಮಬ್ಬೆಯು ಈ ವಿಚಾರದಲ್ಲಿ ಗಣ್ಯ ಸ್ಥಾನಹೊಂದಿದ್ದಳು. ಸಾಂಪ್ರದಾಯಿಕ ಭಾರತೀಯ ಸಮಾಜದಲ್ಲಿ. ಸ್ತ್ರೀಯ ಸ್ಥಾನಮಾನದ ರಾಚನಿಕ ಅಧ್ಯಯನದಲ್ಲಿ ಕೈಗೊಳ್ಳಲು, ಅತ್ತಿಮಬ್ಬೆಯು ಒಳ್ಳೆಯ ಆಕರ ಹಾಗೂ ಪ್ರಮಾಣವಾಗಿ ಗಮನ ಸೆಳೆದಿರುವುದು ಯಾಕೆಂಬುದಕ್ಕೆ ಇದುವರೆಗಿನ ವಿವರಣೆ ಸಮರ್ಥನೆ ಒದಗಿಸಿದೆ. ಆಕೆಯ ಕುಟುಂಬದ ನಾಲ್ಕು ತಲೆಮಾರಿನ ಮಾಹಿತಿಗಳು ಸಿಗುವುದರಿಂದ ಒಂದು ಸಂಸಾರದ ನೂರು ವರ್ಷಗಳ ಚರಿತ್ರೆ ಲಭ್ಯವಗಿದೆ. ಈ ಮನೆತನದ ಅಧ್ಯಯನದಿಂದ ಅತ್ತಿಮಬ್ಬೆಯ ಕುಟುಂಬದಲ್ಲಿ ಉದ್ದಕ್ಕೂ ಪುರುಷ ಅಥವಾ ಪಿತೃ ಪ್ರಧಾನ ವ್ಯವಸ್ಥೆಯ ಸಂಸಾರವೆನಿಸುವುದಿಲ್ಲ. ಪರಸ್ಪರ ಅರಿವು ಮತ್ತು ಗೌರವ ಸಮಾನವಾಗಿ ಇದ್ದುದು ಕಾಣುತ್ತದೆ.

ಅತ್ತಿಮಬ್ಬೆಯ ಹಾಗೆ ಒಬ್ಬ ಸ್ತ್ರೀ, ಶ್ರೇಷ್ಠವಾದ ಪುರುಷ ಕವಿಗಳಿಗೆ ಆಶ್ರಯ ಕೊಟ್ಟು, ಮಹತ್ವದ ಸಾಹಿತ್ಯ ಕೃತಿಗಳನ್ನು ಬರೆಸಿದ್ದು ಸಾಹಿತ್ಯ ಚರಿತ್ರೆಯಲ್ಲಿಯೇ ವಿರಳ. ೧೫೦೧ ದೇವಸ್ಥಾನಗಳನ್ನು ಕಟ್ಟಿಸಿ ಸಹಸ್ರಾರು ಜನ ಶಿಲ್ಪಿಗಳಿಗೆ ಬಡಗಿ ಒಡ್ಡರಿಗೆ ಕೈತುಂಬ ಕೆಲಸ, ಹೊಟ್ಟೆ ತುಂಬ ಅನ್ನ, ಮೈ ತುಂಬ ಬಟ್ಟೆ ಸಿಗುವ ಹಾಗೆ ಉದ್ಯೋಗದ ಹೆಬ್ಬಾಗಿಲನ್ನು ತೆರೆದ ದಾನಚಿಂತಾಮಣಿ ಅತ್ತಿಮಬ್ಬೆಯು ಒಬ್ಬ ಸುಧಾರಣಾವಾದಿಯಾಗಿಯೂ ಅನ್ಯಾದೃಶ್ಯಳು. ಇಂಥ ಪ್ರಗತಿಪರವಾದ ಜನಪರ ಚಿಂತನೆ ಮತ್ತು ಕಾರ್ಯಕ್ರಮಗಳ ಮೂಲಕ ಆಕೆ ಮಹಿಳೆಯ ದೃಷ್ಟಿಕೋನವೊಂದನ್ನು ಸ್ಥಾಪಿಸಿದಳು. ಲಿಂಗಾಧಾರಿತ ಜೀವ ಪ್ರಭೇದವನ್ನು ಇಕ್ಕಿ ಮೆಟ್ಟಿ ನಿಂತ ನಿಲವು ಆಕೆಯದು. ಜೈವಿಕ ವಾಸ್ತವವಾಗಿರುವ ಸ್ತ್ರೀ ಪುರುಷ ಪ್ರತ್ಯೇಕೀರಣವನ್ನು ಕೊರತೆಯೆಂದೆಣಿಸದೆ, ಪುರುಷ ಸಮಾಜದಲ್ಲಿ ತನ್ನನ್ನು ಸಂಘಟಿಸಿಕೊಂಡಳು. ಸಾಂಸ್ಕೃತಿಕವಾಗಿ ಬೆಳೆಯುತ್ತ ಹೋದಳು. ಅಂದಿನ ಆಳುವ ವರ್ಗದ ರಾಜಸತ್ತೆಯೂ ಅತ್ತಿಮಬ್ಬೆಯನ್ನು ಅಪಾರವಾಗಿ ಗೌರವಿಸಿದ್ದು ಉಚಿತ ಉಪಕ್ರಮ. ಚಾಳುಕ್ಯ ಚಕ್ರವರ್ತಿಗಳು ಸ್ತ್ರೀವಾದ ಪುರಸ್ಕರ್ತರು. ಇವೆಲ್ಲವನ್ನೂ ಪ್ರತ್ಯಕ್ಷದರ್ಶಿಯಾಗಿ ಕಂಡು ಕಾವ್ಯಬಂಧದಲ್ಲಿ ದಾಖಲು ಮಾಡಿದ ಪ್ರಪ್ರಥಮ ಮೌಲಿಖ ಸ್ತ್ರೀವಾದಿ ಲೇಖಕ ಮತ್ತು ರನ್ನಕವಿ ವಿಮರ್ಶಕ; ಎಂಬ ಅಂಶವನ್ನು ಮತ್ತೆ ಚರ್ಚಿಸಲಾಗುವುದು.

ಅತ್ತಿಮಬ್ಬೆಯ ಎರಡೂ ಕಡೆಯ ಕುಟುಂಬಗಳವರು ಶ್ಲಾಘ್ಯರು. ಅವರು ತಮ್ಮ ಸ್ತ್ರೀಯರನ್ನು ಯೋಗ್ಯವಾಗಿ ನಡೆಸಿಕೊಂಡರು. ತಮ್ಮಂತೆಯೇ ಮಹಿಳೆಯರಿಗೂ ವಿದ್ಯಾಭ್ಯಾಸ ನೀಡಿದರು. ಆಚಾರ ವ್ಯವಹಾರದಲ್ಲಿ ಸ್ತ್ರೀಗೂ ಸಮಾನ ಹಕ್ಕು ಕೊಟ್ಟರು. ತಮಗಿರುವ ಎಲ್ಲ ಸ್ವಾತಂತ್ರ್ಯ ಮತ್ತು ಅವಕಾಶ ಅಧಿಕಾರಗಳನ್ನು ಆಕೆಗೂ ಇತ್ತರು. ಹೆಣ್ನಿನ ಆಯ್ಕೆ ಮತ್ತು ತೀರ್ಮಾನಗಳಿಗೆ ತಲೆ ಹಾಕಲಿಲ್ಲ, ತಡೆ ಒಡ್ಡಲಿಲ್ಲ. ವಿಧವೆ ಎಂದು ಹೀಯಾಳಿಸಲಿಲ್ಲ. ಮೂಲೆಗೆ ತಳ್ಳಲಿಲ್ಲ. ವಿಧವೆಯಾದ್ದರಿಂದ ಅತ್ತಿಮಬ್ಬೆ ಮುದುಡಿಕೊಂಡು, ಗಂಡಸರ ನೆರಳಿಗೆ ಹೆದರಿ ಬಾಳ ಬೇಕೆಂದು ಕಟ್ಟಪ್ಪಣೆ ಮಾಡಲಿಲ್ಲ. ಸಾಮಾಜಿಕ ಧಾರ್ಮಿಕ ರಾಜಕೀಯ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮುಕ್ತವಾಗಿ ಭಾಗವಹಿಸಲು ಅನುವು ಮಾಡಿದರು. ಉತ್ತೇಜಿಸಿದರು. ಫಲವಾಗಿ ಅತ್ತಿಮಬ್ಬೆಗೆ ಉಸಿರು ಕಟ್ಟಿಸುವ ಆರ್ಥಿಕ ಪಾರತಂತ್ರ್ಯ ಪ್ರಾಪ್ತವಾಗಲಿಲ್ಲ. ಆಶ್ರಿತ ಸ್ಥಿತಿ ತಪ್ಪಿ ಸ್ವಾಯತ್ತ ನಿರಾಳ ಸ್ಥಿತಿಯಲ್ಲಿ ಬಾಳುವುದು ಸಾಧ್ಯವಾಯಿತು.

ಅತ್ತಿಮಬ್ಬೆಗೆ ಸೋದರ ವಾತ್ಸಲ್ಯವಿತ್ತು. ತೌರಿನ ಬಾಂಧವ್ಯವಿತ್ತು ಗಂಡನ ಮನೆಯ ಪ್ರೀತಿಯ ವಾತಾವರಣವಿತ್ತು. ಮಗನ ಮಾತೃಭಕ್ತಿಯಿತ್ತು. ಅಣ್ನಿಗ ದೇವನೂ ತನ್ನ ತಂದೆ ಸತ್ತ ಮೇಲೆ ಅಪ್ಪನ ಆಸ್ತಿಯ ಅಧಿಕಾರದ ದಾಸನಾಗಲಿಲ್ಲ. ತನ್ನ ತಾಯಿಯ ಬೇಕು ಬೇಡಗಳನ್ನು ನಿಯಂತ್ರಿಸಲು ಹೋಗಲಿಲ್ಲ. ಇಡೀ ಬೆಟ್ಟದಷ್ಟು ಆಸ್ತಿಯನ್ನು ದಾನಧರ್ಮಗಳೆಂದು ವಿಧವೆಯಾದ ತನ್ನ ತನ್ನ ತಾಯಿ ವಿನೊಯೋಗಿಸಿದ್ದಕ್ಕೆ ಪ್ರತಿಭಟಿಸಲಿಲ್ಲ. ತಾಯಿಯ ತೀರ್ಮಾನಗಳನ್ನು ಬೆಂಬಲಿಸಿದನು ಗೌರವಿಸಿದನು.

ಪ್ರಾಚೀನ ಕಾಲಕ್ಕಿಂತ ಹೆಚ್ಚಾಗಿ ಅತ್ತಿಮಬ್ಬೆ ಇದ್ದ ಮಧ್ಯಯುಗದ ಸಮಾಜದಲ್ಲಿ ಸತಿ ಪದ್ಧತಿ ಪ್ರಚಲಿತವಾಗಿತ್ತು. ಬ್ರಾಹ್ಮಣರಲ್ಲೂ, ಅಬ್ರಾಹ್ಮಣರಲ್ಲೂ, ಭಾರತದ ಎಲ್ಲ ರಾಜ್ಯಗಳಲ್ಲೂ ಇದು ರೂಢಿಯಲ್ಲಿತ್ತು. ಸ್ಮೃತಿಕಾರರಾದ ಮನು ಯಾಜ್ಞ್ಯವಲ್ಕ್ಯರು ಸಹಗಮನಕ್ಕೆ ಅನುಮತಿಸಿಲ್ಲ. ಬಾಣಕವಿಯೂ, ತನ್ನ ಕಾದಂಬರಿ ಕಾವ್ಯದ ಒಂದು ಸಂದರ್ಭದಲ್ಲಿ, ಸತಿಪದ್ಧತಿಯನ್ನು ತಿರಸ್ಕರಿಸಿ, ಮಹಾಶ್ವೇತೆಯು ಸತಿ ಹೋಗಲೂ, ಚಿತೆ ಹತ್ತಲೂ ಪ್ರಯತ್ನಿಸಿದ್ದನ್ನು ತಪ್ಪಿಸಿದ್ದಾನೆ. ಸತಿ ಹೋದವರು ಮಹಾಸತಿಯರೆನಿಸಿ, ಗ್ರಾಮದೇವತೆಗಳೆನಿಸಿ ಪೂಜೆಗೊಳ್ಳುತ್ತ ಜನಪದ ಸಾಹಿತ್ಯದಲ್ಲಿ ಸೇರಿಹೋಗಿದ್ದಾರೆ. ಕರ್ನಾಟಕದಲ್ಲಿ ಮಾರಮ್ಮ, ಆಂಧ್ರದಲ್ಲಿ ನಾರಾಯಣಮ್ಮ ನಲರಾಜಮ್ಮರ ಅಗ್ನಿ ಪ್ರವೇಶವು ಜನಪದ ಸಾಹಿತ್ಯದಲ್ಲಿ ವೈಭವೀಕರಿಸಲ್ಪಟ್ಟಿದೆ. ಯುದ್ಧದಲ್ಲಿ ಹತರಾದ ಯೋಧರ ಪತ್ನಿಯರು ಸತಿ ಹೋದದ್ದುಂಟು. ರಾಜನ ಮರಣಗಳಿಂದಾಗಿ ರಾಣಿಯರ ಸಹಗಮನ ಚರಿತ್ರೆಯಲ್ಲಿ ದಾಖಲಾಗಿದೆ. ಸತಿ ಹೋಗಲು, ವಿಧವೆಯಾದ ಸ್ತ್ರೀಯನ್ನು, ಬ್ರಾಹ್ಮಣರು ಪುಸಲಾಯಿಸುತ್ತಿದ್ದರು. ಸತಿ ಆಚರಿಸುವ ಸ್ತ್ರೀಯು ಅಡಿಯಿಂದ ಮುಡಿಯವರೆಗೆ ಎಲ್ಲ ಆಭರಣಗಳನ್ನು ತೊಟ್ಟು ಚಿತೆಗೆ ಬೀಳುತ್ತಿದ್ದಳು. ಅನಂತರ ಆ ಆಭರಣಗಳೆಲ್ಲ ಬ್ರಾಹ್ಮಣರಿಗೆ ಸೇರುತ್ತಿತ್ತು; At first the poor girl, herself goaded on by the Brahmin priests, was prepared to undergo this act, but when flamems actually reached her, she struggled to get up and escape from the torture “[V. Lalitha, Sati in the Deccan, `Proceedings of the Indain History Congress.’ 51 st session Calcutta, 1990-91.p.510]. ಚಿತೆಯಿಂದ ಎದ್ದು ಬರಲು ಬ್ರಾಹ್ಮಣರು ಆಕೆಗೆ ಅವಕಾಶ ಕೊಡುತ್ತಿರಲಿಲ್ಲ. ಬಿದಿರು ಗಳ ಹಿಡಿದು ಆಕೆಯನ್ನು ಚಿತೆಯೊಳಕ್ಕೆ ದೂಡುತ್ತಿದ್ದರು. ಸತಿ ಹೋಗುವುದು ವೇದ ವೇದಾಂಗಗಳಂತೆ, ಗಂಗೆಯಂತೆ ಪವಿತ್ರವೆಂದು ಪುಸಲಾಯಿಸುತ್ತಿದ್ದರು.

ಅತ್ತಿಮಬ್ಬೆಯು, ಗಂಡ ಸತ್ತ ಮೇಲೆ ಮುಂದೇನು ಎಂಬ ನಿರ್ಣಾಯಕ ಚಾರಿತ್ರಿಕ ಕ್ಷಣಗಳಲ್ಲಿ, ತನ್ನ ಪ್ರಗತಿ ಪಥದ ಹೆಜ್ಜೆ ದಿಕ್ಕುಗಳನ್ನು ನಿರ್ಧರಿಸಿದ ರೀತಿ ಸಹ ವಿಶಿಷ್ಟವಾದದ್ದು; ಗೋಳುಗರೆಯುತ್ತಾ ಬಾಳನ್ನು ಕಣ್ಣೀರಲ್ಲಿ ತೋಯಿಸುವ ಉನ್ಮಾದಗಳಿಲ್ಲದ ಇಂಥ ಒಂದು ಹದ ಮಾಗಿದ ಆ ಪಕ್ಕ ಚೇತನಕ್ಕೆ ಸಹಜವಾದದ್ದು. ಆಕೆ ಸತಿ ಪದ್ಧತಿಗೆ ವಿದಾಯ ಹೇಳಿದಳು. ಸಾವಿಗೆ ಬೆನ್ನು ತೋರಿಸಿದಳು. ಬದುಕಿಗೆ ಮುಖ ಮಾಡಿದಳು. ಅತಿಭಾವುಕ ಗೀಳುಗಳಿಂದ ತನ್ನನ್ನು ಬಿಡಿಸಿಕೊಂಡಳು. ಸನ್ನಿಗಳಿಲ್ಲದ ಸಮತೋಲನ ಚಿತ್ತಸ್ವಾಸ್ಥ್ಯದಿಂದ ಹೀಗೆ ಕ್ರಿಯಾಶೀಲವಾದದ್ದು ಆಕೆಯ ಆತ್ಮಸ್ಥೈರ್ಯದ ಕುರುಹು, ಬಾಳುವ ಛಲ, ಪರಂಪರೆಯ ಸ್ತ್ರೀ ವಿರೋಧಿ ಆಚರಣೆಯನ್ನು ನಿರಾಕರಿಸಿ ಅತ್ತಿಮಬ್ಬೆ ಚರಿತ್ರಾರ್ಹಳಾದಳು. ಇದು ದುಷ್ಟ ಪದ್ಧತಿಗೆ ಅತ್ತಿಮಬ್ಬೆ ತೋರಿದ ಗಂಭೀರ ಕ್ರಾಂತಿಕಾರಿ ಮೌನ ಪ್ರತಿಭಟನೆ, ಸಮಾಜಿಕ ಕರ್ಮಠತೆಯ ನಿರಾಕರಣೆ.

ಛಿದ್ರಕಾರಿ ಬಿಕ್ಕಟ್ಟುಗಳಿಗೆ ಮುಖಾಮುಖಿಯಾದಾಗ ಅತ್ತಿಮಬ್ಬೆ ಕುಸಿಯಲಿಲ್ಲ. ತನ್ನ ಗಂಡನನ್ನು ಶತ್ರುಗಳು ಕೊಲೆಮಾಡಿದರೆಂದು ಚಿತ್ತೋದ್ರೇಕದಿಂದ ಮತಿ ಭ್ರಮಣೆಗೊಳ್ಳಲಿಲ್ಲ. ‘ನಮ್ಮ ಚಿಕ್ಕಪ್ಪ ಪುನ್ನಮಯ್ಯನನ್ನು ಕೊಂದರು, ನನ್ನ ಪತಿಯನ್ನು ಕೊಂದರು, ರಾಕ್ಷಸರು ಚಂಡಾಲರು’ – ಎಂದು ಚಿತ್ತಕ್ಷೋಭೆಯ ಸುಳಿಯಲ್ಲಿ ಬಡಬಡಿಸುತ್ತಾ ಕೊಡಲಿಲ್ಲ. ಅತ್ತಿಮಬ್ಬೆಗೆ ದುಃಖ ಇದೆ. ಬೆಚ್ಚನೆಯ ಭಾವನೆಗಳಿವೆ. ಆದರೆ ಹಾಗೆಂದು ಅತಿಭಾವುಕತೆಯ ಗಾಣಕ್ಕೆ ತನ್ನ ಬುದ್ಧಿ ಭಾವಗಳನ್ನು ಒಪ್ಪಿಸಲಿಲ್ಲ. ಆಕೆ ವಾಸ್ತವವಾದಿ, ಸ್ಥಿತಪ್ರಜ್ಞೆ, ವೈಚಾರಿಕ ಮೊನಚಿದೆ. ಹೆಂಡತಿಯನ್ನು ಕಳೆದುಕೊಂಡು ಒಬ್ಬ ಸುಸಂಕೃತ ಧೀಮಂತ ಹೇಗೆ ಬಾಳಬಹುದೂ ಹಾಗೆ, ಗಂಡನನ್ನು ಕಳೆದುಕೊಂಡ ಅತ್ತಿಮಬ್ಬೆ ಬಾಳಿದ್ದಾಳೆ.

ಹೆಣ್ಣು ಚಂಚಲೆ, ವಿಧವೆಯು ಮೂರ್ತಿವೆತ್ತ ಅಪಶಕುನ ಎಂಬಿತ್ಯಾದಿ ಪೂರ್ವ ಗ್ರಹ ಪೀಡಿತರಿಗೆ ಅತ್ತಿಮಬ್ಬೆ ದಿಗ್ಭ್ರಮೆ ಹುಟ್ಟಿಸಿದಳು. ವೈಧವ್ಯವು ವಿಧಿಕೊಟ್ಟ ಶಾಪವೆಂಬ ಕೀಳರಿಮೆಯಿಂದ ಪಾರಾಗಿ, ಆತ್ಮ ಸ್ಥೈರ್ಯದಿಂದ, ವಿಶ್ವಾಸದಿಂದ ಬದುಕನ್ನು ಸ್ವೀಕರಿಸಿದಳು. ಮಾನಸಿಕವಾಗಿ ಗಟ್ಟಿಯಾದ ಮೇಲೆ ಉಳಿದ ಸವಾಲುಗಳನ್ನು ಎದುರಿಸಲು ಧ್ರುತಿ ಬರುತ್ತವೆ. ಸ್ತ್ರೀವಾದದ ಮಾನದಂಡದಿಂದ ಅಳೆದಾಗ, ಯಾವ ನಿಟ್ಟಿನಿಂದ ನೋಡಿದರೂ, ಅತ್ತಿಮಬ್ಬೆಯ ಕ್ರಿಯಾಮಾದರಿಯಲ್ಲಿ ಸ್ತ್ರೀವಾದ ಸಂಬಂಧಿ ವಾಗ್ವಾದಳಿಗೆ, ಚಾರಿತ್ರಿಕ ಹಾಗೂ ಪ್ರತ್ಯಕ್ಷ ಆಧಾರಗಳಿವೆ; ಇಂದಿಗೂ ಪ್ರಸ್ತುತವೆನಿಸುವ ನಾಯಕತ್ವದ ಮಾದರಿಗಳಿವೆ. ಮನೆಯ ನಾಲ್ಕು ಗೋಡೆಗಳ ನಡುವೆ ನಿರ್ಬಂಧಿತ ಜೀವನವನ್ನು ನಡಸಬೇಕೆಂಬ ವಿನಾಶಕಾರಿ ಮೌಲ್ಯವನ್ನು ಆಕೆ ಆರಾಧಿಸಲಿಲ್ಲ, ಧಿಕ್ಕರಿಸಿದಳು. ಸಾಮಾಜಿಕ ಘಟಕವಾದ ಕುಟುಂಬ ಎಂಬ ಸಂಸ್ಥೆಯೊಳಗೆ ಗೌಣನೆಲೆಗೆ ಸರಿದು ಕರಗಿಹೋಗಲಿಲ್ಲ. ಆಂತರಿಕ ಬಲದೊಂದಿಗೆ ತನ್ನ ವಿಚಾರದಲ್ಲಿ ತಳೆದ ಅಚಲ ವಿಶ್ವಾಸ (Self-Confidence) ಆಕೆಗೊಂದು ಧೀಮಂತ ವ್ಯಕ್ತಿತ್ವವನ್ನು ತಂದುಕೊಟ್ಟಿತು. ಯಾವ ಅಬ್ಬರ ಆಡಂಬರಗಳಿಲ್ಲದ ಸರಳ ನಿರಾಡಂಬರ ಮೌನಕ್ರಾತಿ ಎಸಗಿದ ಸಾಂಸ್ಕೃತಿಕ ನಾಯಕಿ ಅತ್ತಿಮಬ್ಬೆ. ಅಂತರ್ಮುಖತೆ ಇದ್ದೂ ಸಹ ಸಂಪೂರ್ಣ ಲೋಕ ವಿಮುಖತೆ ತೋರದೆ ಲೋಕೋಪಯೋಗಿ ಚಟುವಟಿಕೆಗಳಿಗೆ ಸ್ಪಂದಿಸಿ ತನ್ನ ವ್ಯಕ್ತಿತ್ವಕ್ಕೆ ಇರುವ ಬಹು ಮುಖತೆಯನ್ನು ಪ್ರಕಟಿಸಿದ್ದಾಳೆ ಕನ್ನಡ ಸಾಹಿತ್ಯ ಪರಂಪರೆಯನ್ನೂ, ಶಿಷ್ಟ ಕಾವ್ಯ ಪದ್ಧತಿಯನ್ನೂ, ಜೈನ ಧಾರ್ಮಿಕ ತಾತ್ವಿಕ ನಿಲವುಗಳನ್ನೂ ಮೀರಿ ನಿಂತು, ಸ್ತ್ರೀಪರವಾದ ಮಾನವೀಯ ನೆಲೆಯಲ್ಲಿ ಅತ್ತಿಮಬ್ಬೆಯ ಪಾತ್ರವನ್ನು ಚಿತ್ರಿಸಿ ರನ್ನ ಕವಿ ಹೊಸ ಹಾದಿಯನ್ನು ತುಳಿದಿದ್ದಾನೆ.

ಒಬ್ಬ ಧೀಮಂತ ಪ್ರತಿಭಾಶಾಲಿ ಸ್ತ್ರೀಯ ಅನುಭವ ಲೋಕವನ್ನು ಹೀಗೆ ವಿಸ್ತಾರವಾದ ಭಿತ್ತಿಯಲ್ಲಿ ಸಮರ್ಥವಾಗಿ ಹಿಡಿದಿಟ್ಟಿರುವ ರನ್ನಕವಿಯ ಪ್ರಯತ್ನ ಪರಿಭಾವನಾರ್ಹವಾಗಿದೆ. ಅತ್ತಿಮಬ್ಬೆಯ ಜೀವನ, ಸಾಧನೆ, ಬೌದ್ಧಿಕ ಎತ್ತರ ಮತ್ತು ಅನುಭವದ ವ್ಯಾಖ್ಯಾನ ಮಾಡಿರುವುದು ಸಾವಿರ ವರ್ಷವಾದ ಮೇಲೂ ಅನನ್ಯವಾಗಿಯೇ ಉಳಿದಿದೆ, ಅನುಕರಣೀಯ ಯೋಗ್ಯವಾಗಿ ಮುಂದುವರಿದಿದೆ. ಅತ್ತಿಮಬ್ಬೆಯ ಕಥನದಲ್ಲಿ ರನ್ನನು ಒಡಮೂಡಿಸಿರುವ ಆಕೆಯ ಸ್ತ್ರೀತ್ವದ ನಿರ್ಮಾಣದ ಆಯಾಮಗಳು ಯಾವುವೆಂಬುದನ್ನು ಮನಗಾಣಬೇಕು. ಕೇವಲ ನಖಶಿಖಮುಖಾದಿ ಅಂಗಾಂಗಗಳ ವಿನ್ಯಾಸ, ಮೈಮಾಟಗಳ ವಿನ್ಯಾಸ, ಮೈಮಾಟಗಳ ವೈಭವೀಕೃತ ವರ್ಣನೆಗೆ ಹೆಣ್ಣನ್ನು ತರುವ ಚಾಳಿಗೀಳು ತುಂಬಿ ತುಳುಕುವ ಸಾಹಿತ್ಯ ಪರಂಪರೆಯ ಪರಿಸರದಲ್ಲಿ ಇದ್ದವನು ರನ್ನ. ಆದರೆ ರನ್ನನು ಅಂಥ ಸಮೆದ ಜಾಡಿನಿಂದ ಸಿಡಿದಿದ್ದಾನೆ. ರನ್ನನದು ಸ್ತ್ರೀಯನ್ನು ರೊಮ್ಯಾಂಟಿಕ್ ಆಗಿ ನೋಡುವ ಸವಕಳಿ ಪ್ರತಿಭೆಯಲ್ಲ. ವಾಸ್ತವದ ವೇದಿಕೆಯ ಮೇಲೆ ನಿಂತ, ಅತ್ತಿಮಬ್ಬೆಯ ದೇಹ ವಿವರಗಳಿಗೆ ತೊಡಗದೆ, ಆಕೆಯ ಗುಣ – ಮಹತ್ ಸಾಧನೆಗಳನ್ನು ಅದ್ಭುತವಾಗಿ ಮಂಡಿಸಿದ್ದಾನೆ. ಸಮಕಾಲೀನ ಚರಿತ್ರೆಯ ನಡುವೆ ಅತ್ತಿಮಬ್ಬೆಯದು ಸ್ವತಂತ್ರವಾದ, ಆದರೆ ಅಪೂರ್ವವಾದ ಮಹತ್ವದ ದೀಪಸ್ತಂಭ ಎಂಬಂತೆ ನಿಲ್ಲಿಸಿದ್ದಾನೆ. ಅತ್ತಿಮಬ್ಬೆ ಒಂದು ಪಾತ್ರ ಮಾತ್ರವಾಗಿ ಮುಗಿಯದೆ ಮೌಲ್ಯಗಳ ಪ್ರತೀಕವಾಗಿ ಉಳಿಯುತ್ತಾಳೆ.

ಇಡೀ ಅಜಿತ ಪುರಾಣ ಕಾವ್ಯವನ್ನು ನಿಯಂತ್ರಿಸುವ ಕೇಂದ್ರ ಬಿಂದುವಾಗಿ, ಆಳುವ ಕೇಂದ್ರ ಪ್ರಜ್ಞೆಯಾಗಿ ಅತ್ತಿಮಬ್ಬೆಯನ್ನು ಸ್ಥಾಪಿಸಿರುವುದು ರನ್ನನ ಸಾಧನೆ, ತಾನು ಬರೆಯುತ್ತಿರುವುದು ತೀರ್ಥಂಕರನ ಚರಿತೆಯಾದರೂ, ಆ ಪುರಾಣದ ಕಥಾ ಭಿತ್ತಿಯಲ್ಲಿ ಅತ್ತಿಮಬ್ಬೆಯ ಜೀವನ ಸಾಧನೆಯ ಚಿತ್ರಗಳನ್ನು ಕೆತ್ತುತ್ತ, ಕಡೆಕಡೆಗೆ ಕಥಾ ಕೇಂದ್ರಕ್ಕೇನೆ ಜಗ್ಗುತ್ತಾನೆ. ತೀರ್ಥಂಕರನ ಮತ್ತು ಚಕ್ರವರ್ತಿಯ ತಾಯಿಯ ಸ್ಥಾನಕ್ಕೆ ಅತ್ತಿಮಬ್ಬೆಯನ್ನು ತಂದು ನಿಲ್ಲಿಸಿದ ರನ್ನನ ಸಾಧನೆ ದೊಡ್ದದು. ಸ್ತ್ರೀಯನ್ನು ವ್ಯಾಖ್ಯಾನಿಸುವ ಸವಕಳಿಯಾದ ಸಿದ್ಧಮಾದರಿಗಳಿಗಿಂದ (ಸ್ಟೀರಿಯೊಟೈಪ್) ರನ್ನನು ತನ್ನ ಕಾವ್ಯಶಕ್ತಿಯ್ನ ಬಿಡಿಸಿದ್ದಾನೆ. ಪರಂಪರೆಯ ಕ್ಲೀಷೆಯ ಚೌಕಟ್ಟಿನಿಂದ ತಾನೂ ಬಿಡಿಸಿಕೊಂಡುದಲ್ಲದೆ ಸ್ತ್ರೀಯನ್ನೂ ಪಾರುಮಾಡಿದ್ದಾನೆ. ಸ್ತ್ರೀವಾದಿ ಪರಂಪರೆಯ ಚರಿತ್ರೆಯನ್ನು ಅತ್ತಿಮಬ್ಬೆಯ ಪಾತ್ರ ಚಿತ್ರಣದ ಮೂಲಕ ರನ್ನನು ಸಮರ್ಥವಾಗಿ ಸ್ತ್ರೀ ಶಕ್ತಿಯ ಆತ್ಯಂತಿಕ ವೈಭವವನ್ನು ರನ್ನಕವಿ ಅತ್ತಿಮಬ್ಬೆಯಲ್ಲಿ ಕಂಡಿದ್ದಾನೆ, ಕಂಡರಿಸಿದ್ದಾನೆ.

ಸಹಜ ಕವಿಯಾದ ರನ್ನನು ಕಲ್ಪನಾವಾದಿಯಾಗಿರುತ್ತ (idealist) ಏಕಕಾಲದಲ್ಲಿ ಅನುಭವವಾದಿಯೂ (empiricst) ಆಗಿರುವುದು ರನ್ನನ ದೊಡ್ಡ ಸಾಧನೆ. ಆದರ್ಶ ಮತ್ತು ವಾಸ್ತವಗಳ ಸಮನ್ವಯವಾದಿಯಾಗಿದ್ದ ರನ್ನನು, ಅತ್ತಿಮಬ್ಬೆಯ ನಿಡುಬಾಳಿನ ಸ್ವೋಪಜ್ಞತೆಯನ್ನು ಮನಗಂಡನು; ಅತ್ತಿಮಬ್ಬೆಗೇ ವಿಶಿಷ್ಟವಾದ ಅಸಾಧಾರಣ ಲಕ್ಷಣಗಳನ್ನು ಗುರುತಿಸಿದನು. ಈ ಅರಿವಿನ ಫಲವಾಗಿ ರನ್ನನಿಗೆ ಅತ್ತಿಮಬ್ಬೆಯ ಜೀವನ ಸಾರವನ್ನು ವಿಶಿಷ್ಟವಾಗಿ ಅಭಿವ್ಯಕ್ತಿಸುವುದು ಸಾಧ್ಯವಾಯಿತು. ಲಿಂಗಭೇದವನ್ನು ಹಿನ್ನೆಲೆಗೆ ಸರಿಸಿ, ಒಬ್ಬ ವ್ಯಕ್ತಿಯ ಬಹುರೂಪಿ ಅವಿಷ್ಕಾರದ ಸಂಕೀರ್ಣತೆಯನ್ನು ಸೂಕ್ಷ್ಮವಾಗಿ ಬಿಂಬಿಸಿದ್ದಾನೆ. ಈ ಕಥನದ ಉದ್ದಕ್ಕೂ ನಿರ್ಮಮಕಾರದ ನೆಲೆಯಲ್ಲೇ ರನ್ನ ಹೆಜ್ಜೆ ಹಾಕಿದ್ದಾನೆಂದೇನೊ ಅಲ್ಲ; ಆದರೆ, ಆತ ಮಮಕಾರ ತೋರಿರುವ ಸಂದರ್ಭಗಳೂ ಸಹ ಅರ್ಥವಾಗುವಂಥವು. ಉದಾಹರಣೆಗೆ, ರನ್ನನು ಅತ್ತಿಮಬ್ಬೆಯಲ್ಲಿ ತಾಯ್ತನದ ಅಸೀಮ ಔದಾರ್ಯ ಗುರುತಿಸಿದ್ದಾನೆ. ಜಿನಜನನಿ, ಚಕ್ರವರ್ತಿಯ ತಾಯಿ, ಅಣ್ನಿಗನ ಅಬ್ಬೆ – ಎಂದು ಕರೆದಿರುವ ಸಂದರ್ಭವನ್ನು ಗಮನಿಸಬೇಕು. ಕ್ಲಾಸಿಕಲ್ ಪಿತೃರೂಪೀ ಕೌಟುಂಬಿಕ ವ್ಯವಸ್ಥೆಯೊಳಗೆ ಇದ್ದೂ ರ‍್ಯಾಡಿಕಲ್ ಮನೋಧರ್ಮದ ಅತ್ತಿಮಬ್ಬೆಯು, ಮಾತ್ರೂರೂಪಿ ಗುಣಗಳನ್ನು ಹೊಂದಿದ್ದು ಸಮಾಜದ ಗೌರವ ಗಳಿಸಿದಳು. ಪುರುಷರಿಗೆ ಸ್ತ್ರೀಯಲ್ಲಿ ಶೀಲಗುಣಸಮೃದ್ಧಿಯ ಅಬ್ಷೆಷನ್ ಇರುತ್ತದೆ. ರನ್ನನು ಅತ್ತಿಮಬ್ಬೆಯಲ್ಲಿ ಮಾತೃತ್ವ ಮತ್ತು ಶೀಲಗುಣಾರಾಧನೆಗಷ್ಟೇ ವಿರಮಿಸಲಿಲ್ಲ. ಆಕೆಯ ಪ್ರವೃತ್ತಿಶೀಲ ಚಲನೆಗಳನ್ನು ಗಮನಿಸಿದ್ದಾನೆ, ವ್ಯಕ್ತಿತ್ವಸಾಧನೆಯ ಬಹುಮುಖತೆಯನ್ನು ಗುರುತಿಸಿದ್ದಾನೆ. ರನ್ನನು ತೋರುವ ಈ ಕಾಳಜಿಗಳಲ್ಲಿ ದೋಷ ಗ್ರಹಿಕೆಗಳಿಲ್ಲ. ಪುರುಷಸಹಜ ಪೂರ್ವಗ್ರಹಿಕೆಗಳು (prejudices) ಇಲ್ಲದ ನೆಲೆಯಲ್ಲಿ, ಅತ್ತಿಮಬ್ಬೆಯ ಸಾಂಸ್ಕೃತಿಕ ಕಾರ್ಯಕ್ಷೇತ್ರದ ಅಸಾಧಾರಣ ಸಾಧನೆಗಳ ಪಾತಳಿಗಳನ್ನು ಪರಿಚಯಿಸಿದ್ದಾನೆ.

ಇದರ ಫಲವಾಗಿ, ಕಾಲ್ಪನಿಕ ಲೋಕದಲ್ಲಿ ಕಡೆದು ಮೂಡಿಸುತ್ತಿದ್ದ ಸ್ತ್ರೀಯ ಭಿತ್ತಿಚಿತ್ರಕ್ಕೆ, ಅತ್ತಿಮಬ್ಬೆಯ ಮೂಲಕ ಮೊಟ್ತಮೊದಲಾಗಿ ಕಾಯಕಲ್ಪವಾಯಿತು, ಪ್ರಾಣಸಂಚಾರವಾಯಿತು. ಸ್ವಾವಲಂಬಿ ದೇಶಿಯ ಸ್ತ್ರೀವಾದವೊಂದರ ಸಮರ್ಥ ಉದ್ಘಾಟಕಳು ಅತ್ತಿಮಬ್ಬೆಯೇ ಎಂದು ಇದುವರೆಗೆ ಭೇಳಿರುವುದು ಈ ಹಿನ್ನೆಲೆಯಿಂದ:

* ಸ್ತ್ರೀಗೂ ಒಂದು ಸ್ವತಂತ್ರ ಅಸ್ತಿತ್ವವಿದೆ, ವ್ಯಕ್ತಿತ್ವವಿದೆ.
* ಮಹತ್ತರವಾದ ಘನಕಾರ್ಯಗಳನ್ನು ಆಕೆ ಮಾಡಬಲ್ಲಳು.
*ಲೋಕ ಸೈ ಎನ್ನುವಂತೆ ಹೆಣ್ಣು ಸ್ವತಂತ್ರವಾಗಿ ಬದುಕಬಲ್ಲಳು.
* ಪಿತ್ರಾರ್ಜಿತ ಆಸ್ತಿಯನ್ನು ಆಕೆ ಸೂಕ್ತಕಂಡಂತೆ ವಿನಿಯೋಗಿಸಬಲ್ಲಳು.

– ಈ ಬಗೆಯ ಲಕ್ಷಣಗಳಿಗೆ ಅತ್ತಿಮಬ್ಬೆ ಅರ್ಹ – ಜೀವಂತ ಲಕ್ಷ್ಯವಾದಳು. ಆಚರಣೆಯಲ್ಲಿ ಸಧೃಡವಾಗಿ ಈ ಆಶಯಗಳನ್ನು ಮೈಗೂಡಿಸಿರುವ ಅತ್ತಿಮಬ್ಬೆಯು ಸ್ತ್ರೀಪರವಾದಿಗಳ ಆತ್ಮಬಲವನ್ನು ಹೆಚ್ಚಿಸಿದ್ದಾಳೆ, ಮತ್ತು ನೈತಿಕ ಧೀಮಂತಿಕೆಯು ಪ್ರಭಾವಿನಿಯಾಗಿದ್ದಾಳೆ. ಪರಾಧೀನತೆಯ ನರಳಿಕೆ ಬಿಕ್ಕುಗಳಲ್ಲಿ ಮುದುಡಿಹೋಗದೆ ಸ್ತ್ರೀವಾದ ವಾಗ್ವಾದಗಳಿಗೆ ಸಮೃದ್ಧ ಮಾದರಿಗಳನ್ನು ಒದಗಿಸಿದ್ದಾಳೆ.