ಬಿಜಾಪುರ ಜಿಲ್ಲೆಯ ಹುನಗುಂದ ತಾಲ್ಲೂಕಿಗೆ ಸೇರಿದ ನಂದವಾಡಿಗೆ ಗ್ರಾಮದ ಶಿವಾಲೌಅದೆದುರು ನಿಲ್ಲಿಸಿರುವ ಕಲ್ಲಿನ ಕಂಬದ ಮೇಲಿರುವ ಶಾಸನವು (ಅಲ್ಲಲ್ಲಿ ಮುಕ್ಕಾಗಿದ್ದು ಕೆಲವು ಶಬ್ದಗಳು ಮತ್ತು ಸಾಲುಗಳು ಅಳಿಸಿ ಹೋಗಿದ್ದರೂ ಉಳಿದಂತೆ ಒಟ್ಟಾರೆ ಸುಸ್ಥಿತಿಯಲ್ಲಿದ್ದು) ಕೆಲವು ಚಾರಿತ್ರಿಕ ಮಹತ್ವದ ವಿಚಾರಗಳನ್ನು ಒಳಗೊಂಡಿದೆ. ಪಶ್ಚಿಮ (ಕಲ್ಯಾಣ) ಚಾಳುಕ್ಯರ ತ್ರೈಳೋಕ್ಯಮಲ್ಲದೇವ (ಸೋಮೇಶ್ವರ) ರಾಜನ ಆಡಳಿತವನ್ನು (೧೦೪೨-೧೦೬೮) ಈ ಶಾಸನ ಉಲ್ಲೇಖಿಸಿದೆ. ಅನಂತರ ಆತನ ಪಿರಿಯರಸಿ ಮೈಳಲ ಮಹಾದೇವಿಯನ್ನು ಸ್ತುತಿಸಿದೆ. ತರುವಾಯ ಒಬ್ಬ ಮಹಾಮಂಡಲೇಶ್ವರನನ್ನು ಪರಿಚಯಿಸಿದೆ. ಆಮೇಲೆ ‘ಭಾವನಗಂಧವಾರಣ’ ಬಿರುದಾಂಕಿತನಾದ ಒಬ್ಬ ಪ್ರಮುಖನನ್ನು ಹೆಸರಿಸಿದೆ. ಈ ಭಾವನ ಗಂಧವಾರಣನು ಚಾಳುಕ್ಯ ಚಕ್ರವರ್ತಿಯ ರಾಜಧಾನಿ ಅಣ್ನಿಗೆಱೆ, ಮುಳುಗುಂದ, ಕೊಳ್ವುಗೆ, ನಂದಾಪುರ, ಕೋಹಳ್ಳಿ, ಮಂಡಲಿಗೆಱೆ, ಬೆಳ್ಗಲ್ಲಿ, ರಾಜಧಾನಿ ಬನವಾಸೆಪುರ, ಕರಿವಿಡಿ, ನವಿಲೆ, ನಂದವಾಡಿಗೆ, ಪೇರೂರು – ಈ ಸ್ಥಳಗಳಲ್ಲಿ ದೇವಾಲಯಗಳನ್ನೂ ಮಟಗಳನ್ನೂ ಕೆಱೆ ಮುಂತಾದುವನ್ನು ಕಟ್ಟಿಸಿದ್ದನ್ನು; ಪೊನ್ನುಗುಂಗಗ ತ್ರಿಭುವನ ತಿಲಕ ಜಿನಾಲಯ, ಮಹಾಶ್ರೀಮಂತ ಬಸದಿ ಮುಂತಾದವನ್ನೂ, ಪುಱಗೂರಿನ (ಹಲಗೂರಿನ) ವೀರ ಜಿನಾಲಯವನ್ನೂ, ಕುಂದರಗೆಯ ಜಿನಾಲಯವನ್ನೂ, ಪೊಸತಾಗೆ ಪಡಿಸಲಿಸಿ (ದುರಸ್ತುಮಾಡಿ)ದ್ದನ್ನೂ ನಂದವಾಡಿಗೆ ಶಾಸನ ನಿರೂಪಿಸಿದೆ. ಕಡೆಯಲ್ಲಿ ಈ ಭಾವನಗಂಧವಾರಣನು ನೀಡಿದ ಭೂದಾನಾದಿಗಳನ್ನು ತಿಳಿಸಿದೆ. ಪುಷ್ಯ ಮಾಸದ ಉತ್ತರಾಯಣ ಸಂಕ್ರಾಂತಿಯ ಸಂದರ್ಭದಲ್ಲಿ ಈ ದಾನ ನೀಡಲಾಗಿದೆ; ಶಾಸನದ ತೇದಿ ತೇದುಹೋಗಿರುವುದರಿಂದ ತಿಳಿಯಲು ಸಾಧ್ಯವಾಗಿಲ್ಲ : (The details of the date are lost ಸೌ.ಇ.ಇ. ೧೧-೧, ನಂ. ೧೦೩., ಪು. ೧೦೦)

ಇಸವಿ ತಾರೀಕು ತಿಳಿಯದ ಈ ಶಾಸನದಲ್ಲಿ ಚರ್ಚಿಸಬೇಕಾದ ಚಾರಿತ್ರಿಕ ಮಹತ್ವದ ವಿಷಯಗಳು ಸಾಕಷ್ಟಿವೆ: ಅದಕ್ಕೆ ಮೊದಲು ಶಾಸನದ ಪಾಠವನ್ನು ಯಥಾರೂಪದಲ್ಲಿ ಇಲ್ಲಿ ಕೊಡಲಾಗಿದೆ :

ಶಾಸನದ ಮೊದಲ ಮುಖ

೧ ಸ್ವಸ್ತಿಶ್ರೀ ವನಿತಾಸ್ಯರತ್ನ ಮುಕರಂ ದಿಗುದನ್ತಿದನ್ತಾವಳೀ

೨ ನ್ಯಸ್ತೋತ್ತುಂಗ ವಿಸುದ್ಧ ಕೀರ್ತಿ ನಿಳಯಂ ಚಾಳು

೩ ಕ್ಯ ರಾಜಾನ್ವಯಂ ಪ್ರಸ್ತುತ್ಯೋದಯ ಸುಪ್ರಚಣ್ಡ ಕಿರಣಂ

೪ ತ್ರೈಳೋಕ್ಯಮಲ್ಲಂ ನಮ [ದ್ಧ್ವ] ಸ್ತಾರಾತಿ ಕಿರೀಟ ಪದಂವಿಸ್ವಾ

೫ ವನೀ ವಲ್ಲಭ || ಮಳಯಾಧೀಶ ಮಹೀಧರೇಂದ್ರ ಕು

೬ ಳಿಶಂ ಮಾಳವ್ಯ ಚೇತೋ ಮುದ ಸ್ಖಳನಂ ಪಲ್ಲವ ಪಲ್ಲವೇಂದ್ರ

೭ ದಹನಂ ಪಾಂಡ್ಯಾವನೀ ಸೇಂದು ಮಾಗಧ ವಿಕ್ಷೋಭಿತರಾಹುಗೊ

೮ ಜ್ಝರ ಚರದ್ವೇದಂಡ ಕುಂಭಸ್ತಳೀದಳನ ಪ್ರೌಢಮ್ರಿಗಾಧಿರಾಜನಭ

೯ ಯಂ ಚಾಳುಕ್ಯ ಚಕ್ರೇಶ್ವರಂ ||

೧೦ ಸ್ವಸ್ತಿ ಸಮಸ್ತ ಭುವನಾಸ್ರಯಂ ಶ್ರೀ ಪ್ರಿಥ್ವೀ [ವ] ಲ್ಲಭ ಮಹಾರಾಜಾಧಿರಾಜ

೧೧ ಪರಮೇಶ್ವರಂ ಪರಮಭಟ್ಟಾರಕಂ ಸತ್ಯಾಶ್ರಯ . . . ಳಕಂ ಚಾಳು

೧೨ ಕ್ಯಾಭರಣಂ ಶ್ರೀ [ಮ] ತ್ರೈಳೋಕ್ಯ ಮಲ್ಲದೇವರ ವಿಜಯರಾಜ್ಯ

೧೩ ಮುತ್ತರೋತ್ತರಾಭಿವ್ರಿದ್ಧಿ ಪ್ರವರ್ದ್ಧಮಾನಮಾ ಚಂದ್ರಾರ್ಕ್ಕತಾರಂಸ

೧೪ ಲುತ್ತಮಿರೆ || ತತು ಪ್ರಿಯಾಂಗನೆ [ ||] ಸ್ವಸ್ತ್ಯನವರತ ಪರಮ ಕ

೧೫ ಲ್ಯಾಣಾಭ್ಯುದಯ ಸಹಸ್ರಫಳ ಭೋಗ ಭಾಗಿನಿ ದ್ವಿತೀಯ ಲಕ್ಷ್ಮೀವಿ

೧೬ ಳಾಸ ವಿದ್ಯಾಧರಿ ದಾನಾಚಿನ್ತಾಮಣಿ ಸವತಿಮದ ಭಂಜಿನಿ ಸಮಸ್ತಾ

೧೭ ನ್ತೞ್ವುರ ಮುಖ ಮಂಡನಿ ಶ್ರೀಮತ್ತ್ರೈಳೋಕ್ಯಮಲ್ಲದೇ [ವ ವಿಶಾ] ಳ ವಕ್ಷ

೧೮ ಸ್ಥಳ ನಿವಾಸಿನಿಯರಪ್ಪ ಶ್ರೀಮತ್ಪಿರಿಯರಸಿ ಮೈಳಲ ಮಹಾದೇವಿ

೧೯ ಯ [ರು] ಮಂ. | ಸ್ವಸ್ತಿ ಸಮಧಿಗತ [ಪಂಚ] ಮಹಾಸಬ್ಧ ಮಹಾ ಮಂಡ

೨೦ ಳೇ ಸ್ವರ ….. ವತ್ಸ [ರಾಜಂ] ವನಿತಾ ಮನೋಜಂ ಶೌ

೨೧ …………..ದಾನರ್ಕ್ಕ ಜಾತಂ

೨೨ ……………..ಮಲ್ಲ ನಾಳೆ

ಮುಂದೆ ತ್ರುಟಿತಗೊಂಡಿದೆ

ಶಾಸನದ ಎರಡನೆಯ ಮುಖ

೧ ಪದಹತಿಯಿಂ ನೆಲುನ್ನಡುಗೆ ಕರ್ಣಚಳಾಚಳದಿಂದ

೨ ಮಬ್ಧಿಗ [ದ್ಗ] ದಗೆ ಕರಾಭಿ ಘಾತದೆ ವಿಗುರ್ವ್ವಣೆಯಿ [೦]

೩ ಭಗಣಂ ಧರಾತಳಕ್ಕುದಿರೆ ನಿಶಾದನ್ತಘನ ಘ

೪ ಟ್ಟಣೆಗಳ್ಕಿ ದಿಶಾಗಜ ವ್ರಜಂ ಬೆದಱೆ ವಿರೋಧಿ

೫ ಯಂ ತುಳಿದು ಕೊಲ್ವುದು ಭಾವನ ಗಂಧವಾರಣಂ |

೬ ಪರನರಪಾಳ ಸೈನ್ಯ ರಕ್ತ ಸರೋವರಮಂ ಕಲಂ

೭ ಕಿ ಭೀಕಂ ಸುಭಟಾಂತ್ರ ಜಾಳ ಮ್ರಿದು ಪಂಕಜ ನಾಳಮನುೞ್ಚೆ

೮ ಮಸ್ತಕಾಂಬುರುಹಮನೊಂದುಗುಂದದೆ [ಕಿ] ಮುಚ್ಚಿ ಜಿಯತ

೯ ಸ್ರಮದಿಂ ತಗುಳ್ಡು ಸಂಗರ ಜಲ ಕೇಳಿಯಂ ಮೆಱಿ

೧೦ ಯುತಿರ್ಪುದು ಭಾವನಗಂಧವಾರಣಂ || ವಚನ ||

೧೧ ಶ್ರಿಮಚ್ಚಾಳುಕ್ಯ ಚಕ್ರಿಯ ರಾಜಧಾನಿ ಕ

೧೨ ಲ್ಯಾಣದೊಳ್ ತುಂಬೇಶ್ವರಮುಂ ಮತಮುಂ

೧೩ ದೀಪಮಾಲೆಯುಂ ಕೆಱೆಯುಮಂ ರಾಜಧಾನಿಯಣ್ನಿ

೧೪ ಗೆೞಿಯೊಳ್ ಚೋಳಂಗೊಂಡ ಶ್ರೀಮತ್ತ್ರೈಪುರುಷ

೧೫ ದೇವರ ಸಾಲೆಯುಂ ಭೋಗಾದಿತ್ಯ ನಿಕೇತನಮುಂ ಪೆ

೧೬ ಮ್ಮಾಡಿಯ ಬಸದಿಯ ಪುರದ ಕೇರಿಯುಂ ಪೆ

೧೭ ರ್ಗ್ಗೆೞಿಯುಮ [೦] | ಮುಳ್ಗುಂದದ ಶ್ರೀಪಾಳೇಶ್ವರ

೧೮ ದ ಮಟಮುದು [೦] | [ಕೊಳ್ವು] ಸಿವಾಲಯಮಂ

೧೯ ಲೋಕಪಾಳ ಸಮೇತಂ ಜಲಶಯನ ದೇವರ ತೀ

೨೦ ರ್ತ್ಥಮುಮ[೦] ನನ್ದಾಪುರದೊಳ್ ಕೇತೇಶ್ವರಮುಮಂ ಕೋಹಳ್ಳಿ

೨೧ ಯೊಳ್ ದಾನವಿನೋದ ತ್ತ್ರೈ ಪುರುಷ ದೇವರ ಸಾಲೆಯು

೨೨ ಮಣ್ಡಲಿಗೆಱೆಯೊಳ್ ಸಂಬುನಾರಾಯಣ ನಿಕೇ

೨೩ ತನಮುಮಂ ಬೆಳ್ಗಲ್ಲಿಯ ಕಪಿಲ ತೀರ್ಥದೊಳ್ ಕೇತೇಶ್ವ

೨೪ [ರಮುಂ] | ರಾಜಧಾನಿ ಬನವಾಸೆ ಪುರದ ಜಯಂತೀ ಮಧು

೨೫ ಕೇಶ್ವರದ ಮೊಗಸಾಲೆಯುಮಂ ಕರಿವಿಡಿಯೊಳ್ ಕೇತೇಶ್ವ

೨೬ [ರ ಮುಂ] ನವಿಲೆಯ [ಜಟೆ] ಯ ಸಂಕರ ದೇವಾಲಯಮು

೨೭ ಮಂ ನನ್ದವಾಡಿಗೆಯೊಳ್ ಶ್ರೀನಾಗೇಶ್ವರಮು[೦] ನಲ್ಲಿಯ

೨೮ ಮಟಮುಮಂ ಪೇರೂರೊಳ್ ಕೇತೇಶ್ವರಮುಮಂ ಮತ್ತ …..

೨೯ ವು ಮೊದಲಾಗೆ ಪಲವು ದೇವಾಯತನಂಗಳಂ ಸಿಂ …

೩೦ ರ್ಮ್ಮ ನಿರ್ಮ್ಮಿತಂಗಳುಂ ……ಧವಳಿತೋತ್ತುಂಗ [ತಳ]

೩೧ ತರಂಗಳುಮಾಗೆ ಮಾಡಿಸಿ ಪೊನಗುಂದದ ತ್ರಿಭುವ

೩೨ ನ ತಿಳಕ ಜಿನಾಲಯಮುಂ ಮಹಾ ಶ್ರೀಮನ್ತ

೩೩ ಬಸದಿಯುಮಂ ಪುಱಗೊರ ವೀರಜಿನಾಲಯಮು

೩೪ ಮಂ ಕುಂದರಗೆಯ ಜಿನಮಂದಿರಮುಮಂ ಪೊಸ

೩೫ ತಾಗೆ ಪೊಸೆತಾಗೆ ಪಡಿ [ಸಲಿಸಿ] ಸಂಗವದ ಸಂಗವೇ

೩೫ ಶ್ವರ …. ಯ ಪೊಳೆಗೆ ನೂಱು ಮತ್ತ

[೩೭-೪೯ ರ ವರೆಗೆ ತ್ರುಟಿತಗೊಂಡಿದೆ]

ಈ ಶಾಸನದ ಮೂರನೆಯ ಮುಖದಲ್ಲಿ ಇರುವುದು ಅತ್ರುಟಿತವಾದರೂ, ಅದು ಸಾಮಾನ್ಯವಾಗಿ ಎಲ್ಲ ಶಾಸನಗಳೂ ಅಂತ್ಯವಾಗುವ ಮಾಮಾಲಿನ ಮಾತುಗಳನ್ನು ಒಳಗೊಂಡಿದೆ : ಈ ಸಂಪ್ರಬಂಧದ ವಾಗ್ವಾದಕ್ಕೆ ಅದು ಅಪ್ರಸ್ತುತ.

ಈ ಶಾಸನದ ಪಾಠ ಸೌ.ಇ.ಇ. ೧೧-೧, ನಂ. ೧೦೩, ಪು. ೯೯-೧೦೨ ಮತ್ತು ಬಾ.ಕ.ಇ. ೧-೧, ೧೦೩ (ಬಾ.ಕ. ನಂ. ೧೭೧ of ೧೯೨೬ -೨೭)- ಇವುಗಳಲ್ಲಿದೆ. ದಕ್ಷಿಣಭಾರತದ ಪ್ರಸ್ತುತ ಶಾಸನ ಸಂಪುಟದ ಸಂಪಾದಕರು ’ತುಂಬ ತ್ರುಟಿತವಾದ ಈ ಶಾಸನವು ಒಬ್ಬ ಮಹಾಮಂಡಲೇಶ್ವರನನ್ನು ಪರಿಚಯಿಸಿದೆ ಮತ್ತು ಆತನ ಹೆಸರು ಕಾಣೆಯಾಗಿದೆ’ ಎಂದಿದ್ದಾರೆ. [The much damaged inscription ……… introduces a Mahamandalesvara (whose name is lost) ಸೌ.ಇ.ಇ. ೧೧-೧. pp. ೯೯-೧೦೦] ಈ ಶಾಸನದ ಐತಿಹಾಸಿಕ ವಿಶೇಷಗಳನ್ನು ಸಂಕ್ಷೆಪವಾಗಿ ಮತ್ತು ಜೈನಧರ್ಮ ಬಸದಿಯ ಸಂಬಂಧವಾಗಿ ಪ್ರಸ್ತಾಪಿಸಿರುವ ಡಾ.ಪಿ.ಬಿ. ದೇಸಾಯಿಯವರು, ಇಲ್ಲಿ ಉಲ್ಲೇಖ ಗೊಂಡಿರುವ ಮಹಾಮಂಡಲೇಶ್ವರನು ಯಾರೆಂಬುದು ತಿಳಿಯದೆ ಹೋಗಿರುವುದಕ್ಕಾಗಿ ತಮ್ಮ ಕೊರಗನ್ನು ವ್ಯಕ್ತಪಡಿಸಿದ್ದಾರೆ : “ಮಹಾ ಸಾಹಸಿಯಾಗಿದ್ದ ಈ ಉದಾರ ಪುರುಷನ ಹೆಸರು ಇರುವ ಭಾಗ ಮುಕ್ಕಾಗಿರುವುದು ದುರ್ದೈವ” : [“The name of this great anad adventurous philonthropist is unfortunately lost in the damaged part of the epigraph”] -b Desai P.B. ‘Jainism in south India’ (1957) p. 107].

ಈ ಶಾಸನದಲ್ಲಿ ಪ್ರಸ್ತಾಪಿತವಾಗಿರುವ ಮುಖ್ಯ ವ್ಯಕ್ತಿ ‘ಭಾವನಗಂಧವಾರಣ’ ನು : ಈತನ ಉದಾರ ಚರಿತೆಯು ಶಾಸನೋಕ್ತವಾಗಿದೆ. ಮಹಾಮಂಡಲೇಶ್ವರನ ಹೆಸರು ತಿಳಿಸುವ ಭಾಗ ನಷ್ಟವಾಗಿದೆಯೆಂದು ಸೂಚಿಸಿರುವ ಚರಿತ್ರಕಾರರು ಮತ್ತು ಪ್ರಸ್ತುತ ಶಾಸನಸಂಪುಟಕಾರರು’ ಭಾವನಗಂಧವಾರಣ ಎಂಬ ಈತ ಯಾರೆಂಬುದೂ ತಿಳಿಯದು’ ಎಂದು ಅಭಿಪ್ರಾಯಿಸಿದ್ದಾರೆ. [” It is not known who this ‘Bhavanagandvarana’ was” – ಸೌ.ಇ.ಇ. ೧೧-೧. ನಂ. ೧೧೩, ಪು. ೧೦೦]. ಚರಿತ್ರಕಾರರಾದ ಡಾ.ಪಿ.ಬಿ. ದೇಸಾಯಿಯವರು ಈ ಬಗ್ಗೆ ಬರೆದಿರುವುದಿಷ್ಟು : “ನಂದವಾಡಿಗೆ ಶಾಸನವು ಸರ್ವಧರ್ಮ ಸಮನ್ವಯದ ಧಾರ್ಮಿಕ ದೃಷ್ಟಿಯಿಂದ ಒಬ್ಬ ಸಾಮಂತ ಪ್ರಮುಖನನ್ನು ಪರಿಚಯಿಸಿದೆ. ಆತನಿಗೆ ಭಾವನಗಂಧವಾರಣ ಎಂಬ ಹೆಸರಿದ್ದಂತೆ ತೋರುತ್ತದೆ” [” An Inscription from Nandavadige in the Hungund Taluk, belonging to the region of Somesvara | (A.D. 1046-68), introduces a distinguished feudafory chief whose relidious fervour was remarkably Catholic. He seems to have borne the surname bhavanagandavarana” [P.B. Desai, JainisminSouthIndia (1957) p.106]

ನಮ್ದವಾಡಿಗೆ ಶಾಸನದಲ್ಲಿ ಈಗ ಪತ್ತೆಯಾಗಬೇಕಾಗಿರುವುದು:

ಅ. ಇಲ್ಲಿ ಹೇಳಲಾಗಿರುವ ಮಹಾಮಂಡಲೇಶ್ವರನು ಯಾರು?

ಆ. ಇಲ್ಲಿ ವರ್ಣಿತನಾದ ಭಾವನಗಂಧವಾರಣನು ಯಾರು?

ಇ. ಇವರಿಬ್ಬರ ಸಂಬಂಧ ಯಾವ ಸ್ವರೂಪದ್ದು?

ಈ. ಈ ಶಾಸನದ ಇನ್ನಿತರ ಚಾರಿತ್ರಿಕ – ಸಾಂಸ್ಕೃತಿಕ ಮಹತ್ವಗಳೇನು? – ಎಂಬುದು.

ಈ ಶಾಸನದ ತೇದಿ ಇರಬೇಕಾದ ಭಾಅ ಹಾಳಾಗಿದ್ದರೂ ಬೇರೆ ಆಧಾರಗಳಿಂದ ಅದನ್ನು ಕಂಡುಕೊಳ್ಳಬಹುದಾಗಿದೆ. ಈ ಶಾಸನ ದೊರೆತ ಪ್ರದೇಶವು ಕಲ್ಯಾಣ ಚಾಳುಕ್ಯರ ಆಡಳಿತಕ್ಕೆ ಸೇರಿದ್ದಾಗಿದೆ; ಈ ಶಾಸನದ ಆರಂಭದಲ್ಲಿಯೇ ಚಾಳುಕ್ಯ ರಾಜನಾದ ತ್ರೈಳೋಕ್ಯಮಲ್ಲದೇವ ಮತ್ತು ಆತನ ಹಿರಿಯ ರಾಣಿ ಮೈಳಲದೇವಿ ಯವರ ಆಳ್ವಿಕೆಯನ್ನು ಹೇಳಿದೆ. ಇವೆರಡೂ ಅಂಶಗಳು ಈ ಶಾಸನರಚನೆಯ ಕಾಲವನ್ನು ನಿಗದಿಪಡಿಸಲು ನೆರವಾಗುತ್ತವೆ. ತ್ರೈಳೋಕ್ಯಮಲ್ಲನ ಆಳ್ವಿಕೆ ೧೦೪೨ ರಿಂದ ೧೦೬೮ ರ ವರೆಗೆ ಎಂಬುದು ಖಚಿತಪಟ್ಟಿದೆ. ಇದೆಲ್ಲವನ್ನು ಗಮನಿಸಿದ ತಜ್ಞ ಇತಿಹಾಸಕಾರರು ಈ ಶಾಸನದ ಕಾಲ ಕ್ರಿ.ಶ. ೧೦೭೦ ಎಂದು ಸೂಚಿಸಿದ್ದಾರೆ.

ಈ ಶಾಸನದ ಪ್ರಾರಂಭದಲ್ಲಿ ತ್ರೈಲೋಕ್ಯಮಲ್ಲ – ಮೈಳಲ ಮಹಾದೇವಿಯನ್ನು ಪರಿಚಯಿಸಿದ್ದು ಮುಗಿದ ಕೂಡಲೆ ಒಬ್ಬ ಮಹಾಮಂಡಲೇಶ್ವರನನ್ನು ಪ್ರಸ್ತಾಪಿಸಿದೆ. ಈತ ಯಾರಿರಬಹುದೆಂದು ನಿರ್ಧರಿಸಲು ಈ ಶಾಸನದ ತೇದಿಯಾದ ಕ್ರಿ.ಶ. ೧೦೭೦ ರ ಸುಮಾರಿನಲ್ಲಿ, ಚಾಳುಕ್ಯರ ಪ್ರಭುತ್ವದ ಪರಿಸರದಲ್ಲಿ ಬೇರೆ ಯಾರು ಮಹಾಮಂಡಲೇಶ್ವರರು ಇದ್ದರೆಂಬುದನ್ನು ಹೆಕ್ಕಿ ನೋಡುವುದು ನಮ್ಮ ಅನ್ವೇಷಣೆಗೆ ಉಪಯುಕ್ತ ಉಪಕ್ರಮವಾಗುತ್ತದೆ. ಶಾಸನಗಳ ಅಧ್ಯಯನ ಕಾಲದಲ್ಲಿ ನನ್ನ ಗಮನಕ್ಕೆ ಬಂದ, ಈ ಅವಧಿ – ಆಳ್ವಿಕೆಗೆ ಸೇರಿದ, ಪ್ರಮುಖ ಮಹಾಮಂಡಲೇಶ್ವರರು:

೧. ಚಾಳುಕ್ಯರ ಅಧೀನದಲ್ಲಿದ್ದ ಬೆಳ್ವಲ ೩೦೦, ಪುಲಿಗೆಱೆ ೩೦೦ ಪ್ರದೇಶವನ್ನು ರಾಜ್ಯಪಾಲನಾಗಿ ಆಳುತ್ತಿದ್ದ ಲಕ್ಷ್ಮಭೂಪನು ಮಹಾಮಂಡಲೇಶ್ವರನಾಗಿದ್ದನು. ಈ ಲಕ್ಷ್ಮನೃಪನನ್ನು ಕುರಿತ ಶಾಸನಗಳು ಕ್ರಿ.ಶ. ೧೦೬೦ ರಿಂದ ೧೦೭೫ ರ ಅವಧಿಯವಾಗಿದೆ. [ಬಾ.ಕ.ಇ. ೧-೧, ೧೧೩ ಹುನಗುಂದ ೧೦೭೪ ಕ್ರಿ.ಶ. : ಎ.ಕ. ೭ (೧೯೦೨) ಶಿಕಾರಿಪುರ ೧೩೬, ಕ್ರಿ.ಶ. ೧೦೬೮; ಎಆರ್‌ಎಸ್‍ಐಇ ೧೯೩೩ – ೧೯೩೪, ನಂ ೧೦೯, ಕ್ರಿ.ಶ. ೧೦೭೦]

೨. ಬನವಾಸೆ ನಾಡಿಗೆ ಅಧಿಪತಿಯಾಗಿದ್ದು ಮಹಾಮಂಡಲೇಶ್ವರ ಚಾವುಂಡ ರಾಯನು ಬಳ್ಳಿಗಾವೆಯಿಂದ ೧೦೬೨ – ೧೦೬೩ ರಲ್ಲಿ ಆಳುತ್ತಿದ್ದನು [Fleet J.F., ‘The Dyna – sties of the Kanarese Districts, BombayGazetteer 1-2, p. 439]

೩. ಧಾರವಾಡ ಜಿಲ್ಲೆಯ ಮುಗದದ ಶಾಸನದಲ್ಲಿ ಚಟ್ಟಯ್ಯದೇವನೆಂಬ ಒಬ್ಬ ಮಹಾ ಮಂಡಲೇಶ್ವರನು ೧೦೪೫ ರಲ್ಲಿ ಆಳುತ್ತಿದ್ದ ವಿವರ ದೊರೆಯುತ್ತದೆ:

ಶ್ರೀಮತ್ತ್ರೈಳೋಕ್ಯಮಲ್ಲಾಹವ ಮಲ್ಲದೇವರ ವಿಜಯಾರಾಜ್ಯಮುತ್ತರೋತ್ತ
ರಾಭಿವ್ರಿದ್ಧಿ ಪ್ರವರ್ಧಮಾನಮಾಚನ್ದ್ರಾರ್ಕ್ಕ ತಾರಂ ಸಲ್ಲುತ್ತಮಿರೆ
|
ತತ್ಪಾದ ಪದ್ಮೋಪಜೀವಿ ಸಮಧಿಗತ ಪಞ್ಚ ಮಹಾಶಬ್ದ
ಮಹಾಮಣ್ಡಳೆಶ್ವರಂ
| ಬನವಾಸೀ ಪುರವರಾಧೀಶ್ವರಂ
ತ್ರಿಳೋಚನ ಕದಂಬಕುಳಕಮಳಿನೀ ವಿಕಾಸ ಭಾಸ್ಕರ
ನನೇಕ ಸಮರ ವಿಜಯ (…ಇತ್ಯಾದಿ) ಮೂರ್ತ್ತಿನಾರಾಯಣಂ
ಕೀರ್ತ್ತಿ ಮಾರ್ತಣ್ಡ ಮಣ್ಡಳಿಕ ಲಲಾಟ ಪಟ್ಟಂ
ಶ್ರೀಮಚ್ಚಟ್ಟಯ್ಯ ದೇವರ್ ಪಲಸಿಗೆ ಪನ್ನಿರ್ಚ್ಛಾಸಿರಮುಂ
ಕೊಂಕಣಮೊಂಬಯ್ಮೂ ಱುಮಂ ದುಷ್ಟ ನಿಗ್ರಹ ಶಿಷ್ಟ
ಪ್ರತಿಪಾಳನೆಯಿಂ ಸುಖ ಸಂಕಥಾವಿನೋದದಿಂದಾಳುತ್ತಮಿರೆ
||
[ಎಆರ್ ನಂ. ೪೫೯, ೧೯೨೬ : ಸೌ.ಇ.ಇ. ೧೫. (೧೯೮೬) ನಂ. ೭೮. ಕ್ರಿ.ಶ. ೧೦೪೫. ಮುಗದ (ಧಾರವಾಡಜಿ) ಪು. ೭೦]

೪. ನೊಳಂಬ ಮಹಾಮಂಡಲೇಶ್ವರನಾದ ಇಱೆವ ನೊಳಂವಾಧಿರಾಜ || ಘಟೆ ಯಂಕಕಾಱನು ನೊಳಂಬವಾಡಿ ಮತ್ತು ಕರಿವಿಡಿ -೩೦ ಪ್ರದೇಶಗಳನ್ನು ೧೦೨೪ ರಲ್ಲಿ ಆಳುತ್ತಿದ್ದನು [ಬಾ.ಕ.ಇ. ೧-೧. ೬೧, ಕ್ರಿ.ಶ. ೧೦೨೪] ಚಾಳುಕ್ಯ ರಾಜನಾದ ಸತ್ಯಾಶ್ರಯ (ಸತ್ತಿಗ) ಇಱೆವ ಬೆಡಂಗನ ಮಗಳು ಮಹಾದೇವಿಯನ್ನು ಈತನು ಮದುವೆಯಾಗಿದ್ದನು. ನಂದವಾಡಿಗೆ ಶಾಸನದಲ್ಲಿ ಕರಿವಿಡಿ ವಿಷಯವೂ (ಸಾಲು ೨೫ ರಲ್ಲಿ) ಬಂದಿದೆ: ಭಾವನ ಗಂಧವಾರಣನು ಕರಿವಿಡಿಯಲ್ಲಿ ಕೇತೇಶ್ವರ ದೇವಾಲಯವನ್ನು ಧವಳಿತೋತ್ತುಂಗವಾಗಿ ಮಾಡಿಸಿದನೆಂದಿದೆ.

೫. ಹಾನಗಲ್ಲು ಕದಂಬರ ಮಹಾಮಂಡಲೇಶ್ವರ ಹಾಕಿ ಬಲ್ಲದೇವನು (ಹರಿಕೇಸರಿ) ಚಾಲುಕ್ಯರ ಅಧೀನದಲ್ಲಿದ್ದು ೧೦೨೫ ರಲ್ಲಿ ಆಳುತ್ತಿದ್ದನು [ಎಆರ್‌ಎಸ್‍ಐಇ ೧೯೬೫-೬೬, ನಂ. ೪೦೭ ಮತ್ತು ೪೧೧]

೬ ಚಾಳುಕ್ಯರ ರಾಜನಾಗಿ ಭುವನೈಕಮಲ್ಲ ಸೋಮೇಶ್ವರ ಅಧಿಕೃತವಾಗಿ ೧೦೬೮ ರಲ್ಲಿ ಪಟ್ಟಾಭಿಷಿಕ್ತನಾದನು. ಅದಕ್ಕೆ ಮುನ್ನ ಆತ ಯುವರಾಜನಾಗಿದ್ದಾಗ ಮಹಾಮಂಡಲೇಶ್ವರನಾಗಿ ೧೦೬೮ ರಲ್ಲಿ ಬೆಳ್ವಲ ಮುನ್ನೂಱು ಮತ್ತು ಪುಲಿಗೆಱೆ ಮುನ್ನೂಱು ಸೇರಿ ಆದ ಎರಡುಱುನೂಱನ್ನೂ ಮತ್ತು ವೇಂಗೀಪುರ ಪ್ರದೇಶಗಳನ್ನೂ ಆಳುತ್ತಿದ್ದನು.

ಸೌ.ಇ.ಇ ೧೧., ೯೭.೧೦೬೨. ಮುಳ್ಗುಂದ (ಧಾಜಿ./ ಗದಗ ತಾ.) ಇದರಲ್ಲಿಯೂ ಮೈಳಲದೇವಿ ಯಂಕಕಾಱಂ ಭಾವನಗನ್ಧವಾರಣಂ ಚಾಳುಕ್ಯಸನ್ತಾರಣಂ ತ್ರೈಳೋಕ್ಯ ಮಲ್ಲದೇವರ ಚಟ್ಟಂ ಮಹಾಮಂಡಳಿಕಂ ಆದ ಶ್ರೀಮತ್ಪೆರ್ಮ್ಮಳಮಾದರಸರ್ ಬೆಳ್ವಲ ಮೂನೂಱುಂ ಪುರೆಗೆಱೆ ಮೂನೂಱುಮಂ ಆಳುತ್ತಿದ್ದ ನೆನ್ನಲಾಗಿದೆ.

ಆದರೆ ಈ ಪೆರ್ಮಾಳ ಮಾದರಸನು ತ್ರೈಳೋಕ್ಯಮಲ್ಲನ ಚಟ್ಟನೇ ಹೊರತು ಮಗನಲ್ಲ.

ತ್ರೈಳೋಕ್ಯಮಲ್ಲ ಸೋಮೇಶ್ವರ | ಚಕ್ರವರ್ತಿಯ ಆಳ್ವಿಕೆಯಲ್ಲಿ

ಸಮಧಿಗತ ಪಂಚಮಹಾಶಬ್ದ ಮಹಾಮಣ್ಡಳೇಶ್ವರಂ ಭಾವನಗನ್ಧವಾರಣಂ ಮೈಳಲದೇವಿಯಂಕಕಾಱಂ ಶ್ರೀಮನ್ಮಹಾಮಂಡಳೇಶ್ವರಂ ಮಾದರಸ ಎರಡಱುನೂ ಱುಮಂ ಸುಖಸಂಕಥಾ ವಿನೋದದಿನಾಳುತ್ತಮಿರೆ [ಸೌ.ಇ.ಇ. ೧೮, ನಂ. ೬೮. (ಧಾಜಿ./ಹುಬ್ಬಳ್ಳಿ ತಾ.) ಯರಗುಪ್ಪ, ಕ್ರಿ.ಶ. ೧೦೬೨, ಪು. ೫೯]

೧ ಭಾವನಗನ್ಧವಾರಣಂ : ಸ್ವಸ್ತಿಸಮಧಿಗತ ಪಂಚಮಹಾಶಬ್ದಮಹಾಸಾಮಂತಂ ವಿಜಯಲಕ್ಷ್ಮೀಕಾಂತಂ ಸಮಸ್ತ ವಸುಮತೀ ತಳಖ್ಯಾತಂ ಜೀಮೂತವಾಹ ನಾನ್ವಯ ಪ್ರಸೂತಂ ಬುಧುಜನಕಮಳಿನೀ ರಾಜಹಂಸಂ ಖಚರವಂಶೋತ್ತಂಸಂ ಪದ್ಮಾವತೀ ದೇವಿಯ ಲಬ್ಧವರ ಪ್ರಸಾದಂ ತ್ಯಾಗವಿನೋದಂ ಬಿರುದಮನ್ನೆ ಮಮದ ನಿವಾರಣಂ ಭಾವನ ಗಂಧವಾರಣಂ ನಾಮಾದಿಸಮಸ್ತ ಪ್ರಶಸ್ತಿ ಸಹಿತಂ ಶ್ರೀಮತ್ ಮಾಚಿದೇವರಸಂ ಬಾಸವೂರ ನೂಱನಾಲ್ವತ್ತುಮಂ ಸುಖದಿನಾಳುತ್ತಮಿರೆ – ಸೌ.ಇ.ಇ. ೧೮, ೧೭೭.೧೧೬೦ ಪು. ೨೩೮:

೨ ಅದೇ : ೩೪೭. ಕ್ರಿ.ಶ. ೧೧೬೧.

೩ ಮಾವನಗಂಧವಾರಣಂ : ಅದೇ : ೧೭೯. ಕ್ರಿ.ಶ. ೧೧೬೭. ಪು. ೨೪೨

ಈ ಕಾಲ ಘಟ್ಟದಲ್ಲಿ ಪ್ರಧಾನ ಮಂಡಲೇಶ್ವರರಾಗಿದ್ದವರು ಇವರಿಷ್ಟು ಜನ. ಕದಂಬರ ಹಾಕಿಬಲ್ಲದೇವನ ಆಳ್ವಿಕೆಯ ಕಾಲ ೧೦೭೦ ಕ್ಕಿಂತ ಅರ್ಧಶತಮಾನದಷ್ಟು ಮುಂದೆ ಬಿಳುತ್ತದೆಯಾಗಿ ಅದನ್ನು ಕೈಬಿಡಬಹುದು. ಉಳಿದ ನಾಲ್ವರು ಮಹಾ ಮಂಡಲೇಶ್ವರರಲ್ಲಿ ಒಬ್ಬನು ನಂದವಾಡಿಗೆ ಶಾಸನೋಕ್ತನಾಗಿರಬಹುದು. ಈ ಶಾಸನದ ಸಾಲುಗಳು ೨೦ ರಿಂದ ಮುಂದಿನ ಎರಡು ಸಾಲುಗಳಲ್ಲದೆ ಇನ್ನೂ ಕೆಲವು ಸಾಲುಗಳು ಪೂರ್ತಿ ಹಾಳಾಗಿವೆ. ‘Some more lines are completely damaged after this’ (ಅದೇ – ಪುಟ ೧೦೦). ಆದರೆ ಸಾಲು ೨೦-೨೧ ಮತ್ತು ಶಾಸನದ ಎರಡನೆಯ ಮುಖದಲ್ಲಿ ಒಂದನೆಯ ಸಾಲಿನಿಂದ ಪೂರ್ತಿ ಮುಂದಕ್ಕೆ ಇರುವ ವರ್ಣನೆಯಷ್ಟೂ ಒಬ್ಬನೇ ವ್ಯಕ್ತಿಯ ಶಕ್ತಿ ಪರಾಕ್ರಮಗಳೊಂದಿಗೆ ದಾನಾದಿ ಇತರ ಸದ್ಗುಣ ಸಚ್ಚಾರಿತ್ರ್ಯವನ್ನು ಹೇಳುತ್ತಿದೆಯೆಂದು ಭಾಸವಾಗುತ್ತದೆ. ಶಾಸನವನ್ನು ಎಚ್ಚರಿಕೆಯಿಂದ ಓದುವ ಓದಿಗೆ ಒಂದೇ ಭಾವದ ಬೆಳವಣಿಗೆಯೂ, ಒಬ್ಬನೇ ವ್ಯಕ್ತಿಯ ಚಿತ್ರಣದ ಸಾತತ್ಯವಿರುವುದೂ ಸಂವೇದ್ಯವಾಗುತ್ತದೆ.

ಈ ಹಂತದಲ್ಲಿ ಪ್ರಶ್ನೆಯೊಂದು ತಟಕ್ಕನೆ ಎದುರಾಗುತ್ತದೆ. ಸಾಲು ೧೯ ರಿಂದ ೨೨ ರವರೆಗೆ ಮಹಾಮಂಡಲೇಶ್ವರನನ್ನು ಕುರಿತ ವರ್ಣನೆಯಿದೆ. ಎರಡನೆಯ ಮುಖದಲ್ಲಿ ಸಾಲು ೧ ರಿಂದ ೧೦ ರವರೆಗೆ ಎರಡು ವೃತ್ತ ಪದ್ಯಗಳಲ್ಲಿ ಭಾವನಗಂಧ ವಾರಣನ ವ್ಯಕ್ತಿ ಚಿತ್ರಣವಿದೆ. ಮೊದಲನೆಯದಾಗಿ ಈ ಮಹಾಮಂಡಲೇಶ್ವರನಾರೊ ಗೊತ್ತಿಲ್ಲ, ಎರಡನೆಯದಾಗಿ ಈ ಭಾವನಗಂಧವಾರಣನು ಯಾರೊ ತಿಳಿಯದು : ಹೀಗಿರುವಾಗ ಮಹಾಮಂಡಲೇಶ್ವರ ಮತ್ತು ಭಾವನಗಂಧವಾರಣ – ಇಬ್ಬರೂ ಒಬ್ಬನೇ ವ್ಯಕ್ತಿಯೆಂದು ಹೇಗೆ ಹೇಳುವುದು. ಹೀಗೊಂದು ವೇಳೆ ಇದು ಇಬ್ಬರು ವ್ಯಕ್ತಿಗಳ ವರ್ಣನೆಯಾಗದೆ ಒಬ್ಬನ ಚಿತ್ರಣವೇ ಎಂದು ತೀರ್ಮಾನಿಸಲು ಅನ್ಯ ಆಧಾರಗಳೇನು? ಆ ಒಬ್ಬನೇ ವ್ಯಕ್ತಿ ಯಾರೆಂದು ನಿರ್ಧರಿಸಲು ಚಾರಿತ್ರಿಕ ಪುರಾವೆಗಳಿವೆಯೆ? ಈ ರೀತಿಯಾಗಿ ಏಳುವ ಪುಂಖ ಪ್ರಶ್ನೆಗಳಿಗೆ ಸಮಾಧಾನ ಹೇಳಬೇಕಾದ ಹೊಣೆಯಿದೆ.

ಭಾವನ ಗಂಧವಾರಣ ಎಂಬ ಶಬ್ದ ಕಿವಿಗೆ ಬಿದ್ದೊಡೆನೆಯ ಕನ್ನಡ ಸಾಹಿತ್ಯದ ವಿದ್ಯಾರ್ಥಿಗಳಿಗೆ ಪಂಪಭಾರತದ ‘ಅಮ್ಮನಗಂಧವಾರಣಂ ಪಡೆ ಮೆಚ್ಚೆ ಗಂಡಂ ಗುಣಾರ್ಣವಂ’ (೧-೧೩೮ ವ) ಮತ್ತು ರನ್ನಕವಿಯ ಸಾಹಸ ಭೀಮ ವಿಜಯದ ‘ವರದನಕ್ಕೆಮಗೆ ಅಮ್ಮನ ಗಂಧವಾರಣಂ, (೧-೧೦) ಎಂಬ ಪ್ರಯೋಗಗಳು ತಟ್ಟನೆ ತಗುಳುತ್ತವೆ. ಶಾಸನಾಭ್ಯಾಸಿಗಳಿಗೆ ಆತುಕೂರು ಶಾಸನ ಪ್ರಯೋಗ ನೆನಪಾಗುತ್ತದೆ. ಈ ಪ್ರಯೋಗದ ಜಾಡು ಹಿಡಿದು ಹೊರಟಾಗ ಧಾರವಾಡ ಜಿಲ್ಲೆಯ ಗದಗ ತಾಲ್ಲೂಕಿನಯಲಿ – ಸಿರೂರ ಶಾಸನಮಣಿಯು ಚಿಂತಾಮಣಿಯಾಗಿ ಪರಿಣಮಿಸಿತು. ಅದು ಒಮ್ಮೆಲೆ ಸಿಕ್ಕುಗಳನ್ನು ಬಿಡಿಸುವ, ರಹಸ್ಯ ಸ್ಪೋಟಿಸುವ ಶಕ್ತಿಕರಂಡವಾಯಿತು. ಸ್ವಾರಸ್ಯವೆಂದರೆ ಯಲಿ – ಸಿರೂರಿನ ಭೋಗೇಶ್ವರ ಗುಡಿಯ ಮೈದಾನದಲ್ಲಿರುವ ಕಂಬದ ಮೇಲೆ ಮೂರು ಮುಖಗಳಲ್ಲಿ ಈ ಶಾಸನವಿರುವುದು: ನಂದವಾಡಿಗೆ ಶಾಸನವೂ ಇದೇ ರೀತಿಯದು. ಇದು ಆಕಸ್ಮಿಕ ಸಾದೃಶ್ಯವಾಗಿರದೆ ವಾಸ್ತವವಾಗಿಯೂ ಇವೆರಡೂ ಶಾಸನಗಳು ಒಂದೇ ಶಾಸನ ನಾಣ್ಯದ ಎರಡು ಮುಖಗಳಾಗಿವೆ:

ಮೊದಲ ಮುಖ

೧ ನಮಸ್ತಸ್ಮೈವರಾಹಾಯ ಲೀಳಾಯ ಚರತೇ ಮಹೀಂ

೨ ಖುರಾ(೦) ನ್ತರಗತೋ ಯಸ್ಯ ಮೇರೋಖಣ ಕಣಾ

೩ ಯತೇ | ಸ್ವಸ್ತಿ ಸಮಸ್ತ ಭುವನಾಶ್ರಯ ಶ್ರೀ ಪ್ರಿ

೪ ಥ್ವೀವಲ್ಲಭ ಮಹಾರಾಜಾಧಿರಾಜ ಪರಮೇಶ್ವರ ಪರ

೫ ಮ ಭಟ್ಟಾರಕಂ ಸತ್ಯಾಶ್ರಯ ಕುಳತಿಳಕಂ

೬ ಚಾಳುಕ್ಯಾಭರಣಂ ಶ್ರೀ ಮತ್ತ್ರೈಳೋಕ್ಯಮ

ಎರಡನೆಯ ಮುಖ

೭ ಲ್ಲ ದೇವರ ವಿಜಯರಾಜ್ಯ ಮುತ್ತರೋತ್ತರಾಭಿವ್ರಿ [ದ್ಧಿ]

೮ ವರ್ದ್ಧ ಮಾನಮಾ ಚಂದ್ರಾರ್ಕ್ಕತಾರಂಬರಂ ಸಲುತ್ತು [ಮಿ]

೯ ರೆ ತತ್ತನೆಯಂ | ಸ್ವಸ್ತಿ ಸಮಧಿಗತ ಪಞ್ಚ ಮಹಾ.

೧೦ ಮಹಾ ಮಣ್ಡಳೇಶ್ವರಂ ವೇಂಗೀ ಪುರವರೇಶ್ವರಂ ಸಮರ.

೧೧ ಚಣ್ಡಂ ಕುಮರ ಮಾರ್ತಣ್ಡ. ಪರಕರಿ ಮದನಿ.

೧೨ ರಣ(೦) ನಮ್ಮನಗನ್ಧವಾರಣಂ ಪರಿವಾರ ನಿಧಾ . . . .

ಮೂರನೆಯ ಮುಖ

೧೩ ಕಾನೀನಂ ಹಯವತ್ಸರಾಜಂ ರೂಪಮನೋಜ . . ..

೧೪ ಪುನೃಪತಿ ಹೃದಯ ಸೆಲ್ಲಂ ಭುವನೈಕಮಲ್ಲಂ . . ..

೧೫ ಳಿ [The inscription stops here abrutly-Foot Notes : ಸೌ.ಇ.ಇ, ೧೧-೧. ನಂ. ೧೦೨, p. ೯೯ ಅತೇದಿಶಾಸನ ಬ.ಕಾ.ಇ. ೧-೧. ೧೦೨]

ಈ ಶಾಸನವು ಸಮಸ್ಯೆಯ ಕತ್ತಲೆಯಲ್ಲಿ ಹಚ್ಚಿದ ಪರಿಹಾರದ ಹಣತೆ. ಯಲಿ-ಸಿರೂರಿನ ಈ ಶಾಸನವು ನಂದವಾಡಿಗೆ ಶಾಸನದ ಹದಿನೈದು ಸಾಲುಗಳನ್ನು ಯಥಾವತ್ತಾಗಿ ತೆಗೆದ ನೀಲಿ ಪ್ರತಿ: ಈ ಪುನರಾವೃತ್ತಿಯಿಂದ ಚರಿತ್ರಕಾರರಿಗೆ ಮಹದುಪಕಾರವಾಗಿದೆ. ಈ ಶಾಸನದಿಂದ ಹೊರ ಪಡುವ ಮುಖ್ಯ ಸಂಗತಿಗಳು:

೧ ಮಹಾಮಂಡಲೇಶ್ವರನು ಮತ್ತಾರೊ ಆಗಿರದೆ ಸಾಕ್ಷಾತ್ ರಾಜನಾದ ತ್ರೈಲೋಕ್ಯಮಲ್ಲನ ಮಗನೆ ಆದ ಭುವನೈಕ ಮಲ್ಲನೇ ಆಗಿದ್ದಾನೆ.

೨ ಅವನು ವೇಂಗೀಪುರವರೇಶ್ವರನೂ ಆಗಿದ್ದಾನೆ

೩ ಅವನು ಯುದ್ಧವೀರನೂ ಹಗೆಗಳ ಆನೆಗಳ ಸೊಕ್ಕನ್ನು ಅಡಗಿಸುವವನೂ ಆಗಿದ್ದಾನೆ.

೪ ಅವನಿಗೆ ಅಮ್ಮನ ಗಂಧವಾರಣಂ ಎಂಬ ಬಾವಲಿಯೂ ಇದೆ

೫ ಅವನಿಗೆ ಪಂಚಮಹಾಶಬ್ದ ಗೌರವವೂ ಇದೆ

ಇದ್ದಕ್ಕಿದ್ದ ಹಾಗೆ ಅಪೂರ್ಣವಾಗಿ ನಿಂತಿರುವ ಯಲಿ – ಸಿರೂರ ಶಾಸನದ ಉಳಿದ ಭಾಗವನ್ನೂ, ಅದರಲ್ಲಿ ಏನಿದ್ದಿರಬಹುದೆಂಬುದನ್ನೂ ಊಹಿಸುವುದು ಕಷ್ಟ ಕೆಲಸ ವೆಂಬುದನ್ನು ಮೊದಲು ಒಪ್ಪಿಕೊಳ್ಳಬೇಕು. ಆದರೂ ಪರಸ್ಪರ ಪೂರಕವಾಗಿರುವ, ಸದ್ಯದಲ್ಲಿ ಅಂಗೈಮೇಲಿರುವ ಆಧಾರವನ್ನು ಇಟ್ಟುಕೊಂಡು ಹೇಳಬಹುದಾದರೆ, ಅದರಲ್ಲಿ ಇದೇ ಮಹಾಮಂಡಲೇಶ್ವರ ಭುವನೈಕ ಮಲ್ಲನ ಜನಪರವಾದ ಕಾರ್ಯಗಳ ಮಾಹಿತಿಯಿದ್ದಿರಬೇಕು. ತೇದಿಯಿರದ ಯಲಿ – ಸಿರೂರಿನ ಶಾಸನದ ಕಾಲವೂ ಸ್ಥೂಲವಾಗಿ ನಂದವಾಡಿಗಿ ಶಾಸನದ ತೇದಿಗೆ ಹತ್ತಿರವಾದದ್ದೆಂದು ತಿಳಿಯಬಹುದು.

ಯಲಿ-ಸಿರೂರ ಶಾಸನದಿಂದ ಹೊರ ಹೊಮ್ಮಿರುವ ಐದು ವಿಚಾರಗಳಲ್ಲಿ ಅತ್ಯಂತ ಪ್ರಮುಖವಾಗಿರುವುದು ಎರಡು: ಆ. ಮಹಾಮಂಡಲೇಶ್ವರನು ತ್ರೈಳೋಕ್ಯ ಮಲ್ಲನ ಹಿರಿಯ ಮಗನಾದ ಭುವನೈಕಮಲ್ಲನೇ, ಆ. ಇಮ್ಮಡಿ ಸೋಮೇಶ್ವರನೇ ಅಮ್ಮನಗಂಧವಾರಣನೂ ಆಗಿದ್ದಾನೆ. ಈ ತೀರ್ಮಾನವನ್ನು ನಿಸ್ಸಂದೇಹವಾಗಿಸಿ ಖಚಿತಪಡಿಸುವ ಇನ್ನೊಂದು ಶಾಸನವೂ ಇದೆ. ಮುಳುಗುಂದದ ಆ ಶಾಸನ ನೆನಪಾಗಿ ತೆಗೆದು ನೋಡಿದೆ. ಪರಮ ಅಚ್ಚರಿಯೆಂದರೆ ಮುಳುಗುಂದದ ಆ ಶಾಸನವು ಈ ಯಲಿ ಸಿರೂರ ಮತ್ತು ನಂದವಾಡಿಗೆ ಶಾಸನಗಳ ಮೇಲೆ ಹೊನಲು ಬೆಳಕು ಹಾಯಿಸುತ್ತದೆ. ೩೪ ಸಾಲುಗಳ ಆ ದೊಡ್ಡ ಶಾಸನದಿಂದ ಪ್ರಸ್ತುತಕ್ಕೆ ತುಂಬ ಪ್ರಯೋಜನಕಾರಿಯಾದ (ದೀರ್ಘವಾದ ಏಳೂವರೆ ಸಾಲುಗಳನ್ನು ಮಾತ್ರ (ಸಾಲು ಮೂರರಿಂದ ಹತ್ತರ ವರೆಗೆ) ಇಲ್ಲಿ ಉದಾಹರಿಸುತ್ತೇನೆ: [ಎ.ಇ.೧೬, ಪುಟ ೫೩-೫೭, ಮುಳ್ಗುಂದ ಜೈನ ಬಸದಿಯ ಶಾಸನ, ಕ್ರಿ.ಶ. ೧೦೫೩];

೩ ಸ್ವಸ್ತಿ ಸಮಸ್ತ ಭುವನಾಶ್ರಯ ಶ್ರೀ ಪ್ರಿಥ್ವೀ ವಲ್ಲಭ ಮಹಾರಾಜಾಧಿರಾಜ ಪರಮೇಶ್ವರ ಪರಮಭಟ್ಟಾರಕಂ ಸತ್ಯಾ

೪ ಶ್ರಯ ಕುಳತಿಳಕಂ ಚಾಳುಕ್ಯಾಭರಣಂ ಶ್ರೀಮತ್ ತ್ರೈಳೋಕ್ಯಮಲ್ಲದೇವರ ವಿಜಯ ರಾಜ್ಯಮುತ್ತರೋತ್ತರಾಭಿವ್ರಿದ್ಧಿ ಪ್ರವ

೫ ರ್ಧಮಾನಮಾ ಚಂದ್ರಾರ್ಕ್ಕತಾರಂ ಸಲುತ್ತಮಿರೆ ತತ್ತನಯಂ ಸಮಧಿಗತ ಪಞ್ಚ ಮಹಾಶಬ್ದ ಮಹಾಮಣ್ಡಳೇಶ್ವರಂ ವೇಂಗೀ

೬ ಪುರವರೇಶ್ವರಂ ಸಮರ ಪ್ರಚಣ್ಡಂ ಕುಮಾರ ಮಾರ್ತಣ್ಡಂ ಪರಿಕರಿಮದ ನಿವಾರಣ ನಮ್ಮ ನಗಂಧವಾರಣಂ ಪರಿವಾರ ನಿಧಾನಂ

೭ ದಾನ ಕಾನೀನಂ ಹಯವತ್ಸರಾಜಂ ರೂಪಮನೋಜಂ ರಿಪುನೃಹದಯ ಸೆಲ್ಲಂ ಭುವನೈಕ ಮಲ್ಲಂ ಮಣ್ಡಲಿಕ ಶಿರೋ

೮ ಮಣಿ ಚಾಳುಕ್ಯ ಚೂಡಾಮಣಿ ವಿದ್ವಿಷ್ಟ ಸಂಹಾರಣಂ ಕಟಕ ಪ್ರಾಕಾರಂ ಶ್ರೀಮತ್ತ್ರೈಳೋಕ್ಯಮಲ್ಲದೇವ ಪಾದ ಪಂಕಜಭ್ರ

೯ ಮರಂ ಶ್ರೀಸೋಮೇಶ್ವರಂದೇವಂ ಬೆಳ್ವೊಲ ಮುನ್ನೂಱುಂ ಪುಲಿಗೆರೆ ಮುನ್ನೂಱುಂ ಸುಖಸಂಕಥಾ ವಿನೋದದುನಾಳುತ್ತಮಿ

೧೦ ರೆ ತತ್ಪಾದ ಪದ್ಮೋಪಜೀವಿ || [ಹೀಗೆ ಈ ಶಾಸನ ಇನ್ನೂ ಮುಂದುವರಿದು ಸಂಧಿ ವಿಗ್ರಹಾಧಿಕಾರಿಯಾದ ಪರಮ ಜಿನಭಕ್ತ ಬೆಳ್ದೇವನನ್ನು ಪರಿಚಯಿಸುತ್ತದೆ]

ಪ್ರಸ್ತುತ ಸಮಸ್ಯೆಯ ಸಿಕ್ಕುಗಳನ್ನು ಬಿಡಿಸಿ, ನಿರ್ಣಾಯಕವಾಗಿ ತೀರ್ಮಾನ ಮಾಡುವ ಉಕ್ತಿಗಳನ್ನು ಈ ಮುಳುಗುಂದದ ಶಾಸನದ ಉದ್ದಕ್ಕೂ ಕಾಣುತ್ತೇವೆ. ತ್ರೈಲೋಕ್ಯ ಮಲ್ಲದೇವನ ಮಗನಾದ ಭುವನೈಕ ಮಲ್ಲನೇ ಅಮ್ಮನಗಂಧವಾರಣನೂ, ಪಂಚಮಹಾಶಬ್ದನಾದ ಮಹಾಮಂದಲೇಶ್ವರನೂ ಆಗಿದ್ದಾನೆ; ಈ ಅಂಶವು ಯಲಿ-ಸಿರೂರ ಮತ್ತು ನಂದವಾಡಿಗೆ ಶಾಸನಗಳನ್ನು ಸೂಚಿಸುತ್ತವೆ. ಆದರೆ ಇದನ್ನು, ಕಡ್ಡಿ ಎರಡು ತುಂಡು ಮಾಡಿದಂತೆ, ನಿರ್ಧಾರಕ ರೀತಿಯಲ್ಲಿ ಇತ್ಯರ್ಥಗೊಳಿಸುತ್ತದೆ ಮುಳುಗುಂದದ ಶಾಸನ. ಈ ಶಾಸನದ ತೇದಿ ಕ್ರಿ.ಶ. ೧೦೫೩ ಎಂದಿರುವುದರಿಂದ ಯಾಲಿ-ಸಿರೂರ ಶಾಸನದ ತೇದಿಯೂ ಇದರ ಸಮೀಪಕ್ಕೆ ನಿಲ್ಲುತ್ತದೆ.

ಈ ಹಂತದಲ್ಲಿ ಚಿಂತನೆಗಳು ಹರಳುಗೊಳ್ಳುತ್ತಿರುವಂತೆಯೇ ಇಂತಹುದೇ ಇನ್ನೊಂದು ಶಾಸನ ನೆನಪಾಯಿತು! ಅದು ಧಾರವಾಡ ಜಿಲ್ಲೆಯ ಗದಗ ತಾಲ್ಲೂಕಿನ ಹೊಂಬಳದ ಶಾಸನ [ಸೌ.ಇ.ಇ. ೧೧ (೧೯೮೬) ನಂ. ೮೪. ಪು. ೭೭, ಕ್ರಿ.ಶ. ೧೦೪೯]: ಸೌ.ಇ.ಇ. ೧೧, ೯೦. ೧೦೫೪. ಬಳಗಾನೂರು (ಧಾಜಿ/ಗದಗತಾ) ಈ ಬಹುತ್ರುಟಿತ ಶಾಸನೋಕ್ತ ಬೇಂಗೀಪುರವರೇಶ್ವರನು ಯಾರೋ ಗೊತ್ತಿಲ್ಲವೆಂದು ಆ ಶಾಸನ ಸಂಪುಟದ ಸಂಪಾದಕರ ಟಿಪ್ಪಣಿಯಲ್ಲಿದೆ [ಅದೇ: ಪುಟ. ೮೬]. ಆದರೆ ಅಂತರ ಬಾಹ್ಯ ಪ್ರಮಾಣ ಗಳಿಂದ ಈ ಶಾಸನೋಕ್ತನಾದ ಬೇಂಗೀ ಪುರವರೇಶ್ವರನೂ ಕುಮರಮಾರ್ತ್ತಣ್ಡನೂ ಸಹತ್ರೈಳೋಕ್ಯಮಲ್ಲ ಸೋಮೇಶ್ವರ | ಚಕ್ರಿಯ ಹಿರಿಯ ಮಗನಾದ ಭುವನೈಕ ಮಲ್ಲ ಇಮ್ಮಡಿಸೋಮೇಶ್ವರನೆಂದು ತಿಳಿಯಬೇಕು; ನನ್ನ ಈ ಸೂಚನೆಯ ಸೂಕ್ತತೆಯನ್ನು ಚರಿತ್ರಕಾರರು ದಯವಿಟ್ಟು ಪರಿಶೀಲಿಸಬೇಕೆಂದು ಕೋರುತ್ತೇನೆ.

ವೇಂಗೀಪುರವರೇಶ್ವರಂ ಎಂದು ನಮೂದಿಸಿರುವ ಇನ್ನಿತರ ಶಾಸನಗಳು :

ಸೌ.ಇ.ಇ. ೧೧-೧, ೧೦೨೦ ಅತೇದಿ ಶಾಸನ, ಯಲಿ ಸಿರೂರು (ಧಾಜಿ. / ಗದಗ ತಾ.) ಪು.೯೯

ಸೌ.ಇ.ಇ. ೧೧-೧, ೮೪. ೧೦೪೯. ಹೊಂಬಳ (ಧಾಜಿ./ಗದಗ ತಾ)

ಯಲಿ ಸಿರೂರಿನ ಅತೇದಿ ಶಾಸನವು ಕ್ರಿ.ಶ. ೧೦೫೦ ರಿಂದ ೧೦೫೫ ರ ನಡುವಣ ಅವಧಿಯಲ್ಲಿ ರಚಿತವಾಗಿದೆಯೆಂದು ಖಚಿತಪಡಿಸಬಹುದು.

೨ ಸ್ವಸ್ತಿ ಸಮಸ್ತ ಭುವನಾಶ್ರಯ ಶ್ರೀ ಪ್ರಿಥ್ವೀವಲ್ಲಭ ಮಹಾರಾಜಾಧಿರಾಜ ಪರಮೇಶ್ವರ ಪರಮಭಟ್ಟಾರಕಂ ಸತ್ಯಾ

೩ ಶ್ರಯಕುಳತಿಳಕಂ ಚಾಳುಕ್ಯಾಭರಣಂ ಶ್ರೀಮತ್ರೈಳೋಕ್ಯಮಲ್ಲದೇವರ ವಿಜಯರಾಜ್ಯಮುತ್ತರೋತ್ತರಾಭಿವ್ರಿದ್ಧಿ

೪ ಪ್ರವರ್ಧಮಾನಮಾಚನ್ದ್ರಾರ್ಕ್ಕತಾರಂ ಸಲುತ್ತಮಿರೆ ತದೀಯ ಪ್ರಿಯ ನನ್ದನನಖಿಳ ಜನಮನೋ ನನ್ದನಂ | [ಸಮಧಿ] ಗತ

೫ ಪಞ್ಚ ಮಹಾಶಬ್ದ ಮಹಾಮಣ್ಡಳೇಶ್ವರಂ | ವೇಂಗೀಪುರವರೇಶ್ವರಂ ಸಮರ ಪ್ರಚಣ್ಡಂ ಕುಮರ ಮಾರ್ತ್ತಣ್ಡಂ ಪರಕರಿಮದನಿ

೬ ವಾರಣ | ನಮ್ಮನ ಗನ್ಧವಾರಣಂ | [ಪರಿವಾರ ನಿಧಾ೦] ನಂ | ದಾನಕಾನೀನಂ ಹಯ ವತ್ಸರಾಜ | ರೂಪಮನೋಜಂ ರಿಪುನೃಪತಿಹೃದಯ

೭ ಸೆಲ್ಲಂ ಭುವನೈಕಮಲ್ಲಂ | ಮಣ್ಡಳಿಕ ಶಿಖಾಮಣಿ ಭೂ [ಳೋ] ಕ ಚೂಡಾಮಣಿ [ವಿದ್ವಿಷ್ಟ ಸಂಹಾರಣಂ] ಕಟಕ ಪ್ರಾಕಾರಂ | ಶ್ರೀಮನ್ಮಹಾ

೮ ಮಣ್ಡಳೇಶ್ವರಂ | ಸೋಮೇಶ್ವರದೇವರ್ಬ್ಬೆಳ್ವೊಲ ಮೂನೂಱುಮಂ ಪುರಿಗೆಱೆ ಮೂನೂಱುಮಂ ಬೀಳಾನುವೃತ್ತಿಯಿನಾಳುತಂ ಸುಖದಿನಿರೆ ||

ರಾಜರ ದಾನದತ್ತಿಗಳನ್ನು ತಿಳಿಸುವ ಶಾಸನಗಳೆಲ್ಲ ಒಂದು ಸಿದ್ಧಮಾದರಿಯಿಂದ ಕೂಡಿರುತ್ತವೆಂಬುದೂ, ಅವುಗಳಲ್ಲಿ ಸಮಾನ ಅಂಶಗಳು ಇರುತ್ತವೆಂಬುದೂ ನಿಜ, ಆದರೆ ಈ ನಾಲ್ಕು ಶಾಸನಗಳಲ್ಲಿರುವ ಸಾದೃಶ್ಯಲಕ್ಷ್ಮಿ ಆ ಬಗೆಯ ಸ್ಥೂಲ ಹೊಂದಾ ಣಿಕೆಯದಲ್ಲ. ಇವುಗಳಲ್ಲಿ, ಕಾಲದ ದೃಷ್ಟಿಯಿಂದ ಹೊಂಬಳ ಶಾಸನ ಮೊದಲನೆಯ ದಾಗಿದ್ದು, ಆಗಿನ್ನೂ ಪ್ರಸ್ತುತ ಭುವನೈಕಮಲ್ಲನು ಹೊಸದಾಗಿ ಮಹಾಮಂಡಲೇಶ್ವರ ನಾಗಿದ್ದನು. ಮುಳುಗಂದ, ಸಿರೂರ ಮತ್ತು ನಂದವಾಡಿಗೆ ಶಾಸನಗಳು ಅನಂತರದ ಶಾಸನಗಳಾಗಿದ್ದು ಭುವನೈಕಮಲ್ಲನ ನಿರ್ದಿಷ್ಟ ಸಾಧನೆಗಳನ್ನು ತೋರಿಸುವತ್ತ ಬೊಟ್ಟು ಮಾಡಿವೆ. ಭುವನೈಕಮಲ್ಲ ಸೋಮೇಶ್ವರ [ರಾಜನಿಗೆ ಸಂಬಂಧಿಸಿದ ಶಾಸನಗಳಲ್ಲಿ ಈ ಹೊಂಬಳದ ಶಾಸನ ಮೊದಲನೆಯದು.

ಕ್ರಿ.ಶ. ೧೦೪೯ ರ ವೇಳೆಗೆ ಈತನು ಮಹಾಮಂಡಳೇಶ್ವರ ಆಗಿದ್ದನು, ವೆಂಗೀಪುರ ವರೇಶ್ವರ ನೆನಿಸಿದ್ದನು. ಬೆಳ್ವಲ ಮೂನೂಱುಂ ಪುರಿಗೆಱೆ ಮೂನೂಱುಮಂ ಬೀಳಾನು ವೃತ್ತಿಯಿಂದ ಆಳುತ್ತಿದ್ದನು. ತ್ರೈಳೋಕ್ಯಮಲ್ಲ ಸೋಮೇಶ್ವರ | ಚಕ್ರಿಯ ಪ್ರಿಯನನ್ದನ ಎನಿಸಿದ್ದನು.

ನಂದವಾಡಿಗೆಯ ಶಾಸನದ ಎರಡನೆಯ ಮುಖದಲ್ಲಿ ಸಾಲು ೧ ರಿಂದ ೧೦ ರವರೆಗೆ ಎರಡು ವೃತ್ತ ಪದ್ಯಗಳಲ್ಲಿ ಭಾವನಗಂಧವಾರಣನ ಪರಾಕ್ರಮವನ್ನು ಉಗ್ಫಡಿಸಿದೆ;

ಚಂಪಕಮಾಲೆ ||    ಪದಹತಿಯಿಂ ನೆಲಂನ್ನಡುಗೆ ಕರ್ಣ ಚಳಾಚಳದಿಂದಮಬ್ಧಿಗ
ದ್ಗದಗೆ ಕರಾಭಿಘಾತದಗುರ್ವ್ವಣೆಯಿಂ ಭಗಣಂ ಧರಾತಳ
ಕ್ಕುದಿರೆ ನಿಶಾತದನ್ತಘನ ಘಟ್ಟಣೆಗಳ್ಕಿದಿಶಾಗಜ ವ್ರಜಂ
ಬೆದಱೆ ವಿರೋಧಿಯಂ ತುಳಿದು ಕೊಲ್ವುದು ಭಾವನಗನ್ದವಾರಣಂ
|

ಚಂಪಕಮಾಲೆ ||    ಪರನರಪಾಳ ಸೈನ್ಯನವರಕ್ತ ಸರೋವರಮಂ ಕಲಂಕಿ ಭೀ
ಕರ ಸುಭಟಾಂತ್ರಜಾಳ ಮ್ರಿದು ಪಂಕಜನಾಳಮನುಱ್ಚೆ ಮಸ್ತಕಾಂ
ಬುರುಹಮನೊಂದುಗುಂದದ [ಕಿ] ಮುಱ್ಚಿ ಜಿತಸ್ರಮದಿಂ ತಗುಳ್ದು ಸಂ
ಗರಜಕೇಳಿಯಂ ಮೆಱೆಯುತಿರ್ಪುದು ಭಾವನಗನ್ಧವಾರಣಂ
||

ಈ ಎರಡೂ ವೃತ್ತಗಳು, ಇಂದ್ರಿಯಾ ಗ್ರಾಹ್ಯವಾಗುವಂತೆ ವರ್ಣಿಸಿರುವ ಧೀರ ಪರಾಕ್ರಮದ ಭಾವನಗಂಧವಾರಣನು ಬೇರೆ ಯಾರೊ ಆಗಿರದೆ ಈ ಮಹಾಮಂದಲೇಶ್ವರನೇ ಆಗಿದ್ದಾನೆಂದು ಧಾರಾಳವಾಗಿ ಹೇಳಬಹುದು. ಅಂದರೆ ಹೊಂಬಳ, ಯಲಿ-ಸಿರೂರ ಮತ್ತು ಮುಳುಗುಂದದ ಶಾಸನಗಳ ಮಹಾಮಂಡಲೇಶ್ವರನೂ, ನಂದ ವಾಡಿಗೆಯ ಶಾಸನದ ಮಹಾಮಂಡಲೇಶ್ವರನೂ ಒಬ್ಬನೆ ಆಗಿದ್ದಾನೆ; ಅದರಂತೆಯೇ ಅಮ್ಮನ ಗಂಧವಾರಣನೂ ಭಾವನಗಂಧವಾರಣನೂ ಮಹಾ ಮಂಡಲೇಶ್ವರನೂ ಭುವನೈಕಮಲ್ಲನೂ ಇಮ್ಮಡಿ ಸೋಮೇಶ್ವರನೂ ಒಬ್ಬನೇ ಆಗಿದ್ದಾನೆ. ಹಾಗೆಯೇ ಈ ನಾಲ್ಕೂ ಶಾಸನಗಳಲ್ಲಿ ಬರುವ ಸಮರ ಪ್ರಚಣ್ಡಂ, ಪರಕರಿ ಮದನಿವಾರಣಂ, ರಿಪು ಹೃದಯಸೆಲ್ಲಂ, ಕುಮಾರ ಮಾರ್ತಂಡಂ – ಎಂಬ ವಿಶೇಷಣಗಳು ಭುವನೈಕಮಲ್ಲನ ಯುದ್ಧ ಸಾಹಸಗಳಿಗೆ ಎತ್ತಿ ಹಿಡಿದ ಶಬ್ದಪಳಯಿಗೆಗಳು. ಈತನ ಇನ್ನಿತರ ಶಾಸನಗಳೂ ಇದೇ ಭಾವವನ್ನು ಅನುಸರಣಿಸುತ್ತವೆ : ಒಂದು ನಿದರ್ಶನ; “ಧರೆಯಂ ತ್ರೈಳೋಕ್ಯಮಲ್ಲ ಕ್ಷಿತಿಪತಿ ಕುಡೆ ಕಯ್ಗೊಂಡು ಮತ್ತತ್ತ ರತ್ನಾಕರ ಮಧ್ಯದ್ವೀಪ ನಾನಾ ವಿಷಯ ತತಿಗೆ ತನ್ನಾಣೆ ತನ್ನಚ್ಚು ತನ್ನಿಟ್ಟರಸರ್ ತನ್ನೋಲೆ ತನ್ನುಂಡಿಗೆ ಯೆನೆ ವಿದಿತಾಜ್ಞಾನ್ವಿತಂ ಮಾಡಿದಂ ಬಾಪ್ಪುರೆ ಪದ್ಮಾನಂದ ತೇಜಂ ನೃಗನಳ ಚರಿತಂ ಮೂರ್ತಿ ಮಾರ್ತ್ತಂಡ ತೇಜಮ್” (ಬಾ.ಕ.ಇ. ೧-೧. ೧೧೬, ಕ್ರಿ.ಶ. ೧೦೭೫)

ಸೌ.ಇ.ಇ. ೧೧-೧, ೧೧೧.೧೦೭೧.ಸೊರಟೂರು (ಧಾ ಜಿ./ ಗದಗ ತಾ.) ಅಂಗವರಾಳ ಸಿಂಗಳಿಕ ಗೂರ್ಜ್ಜರ ಮಾಳವ ಚೇರಪಾಣ್ಡ್ಯಕಳಿಂಗ ಝಸಾನ್ದ್ರಯಾದವ ಮಹೀಭುಜವತಾಳಿ ಮಣಿಬ್ರಜಪ್ರಭಾ ಲಿಂಗಿತ ಪಾದಪೀಠನಮರೇನ್ದ್ರ ವಿಳಾಸನವಾರ್ಯ್ಯ ವೀರ್ಯ್ಯ ನುತ್ತುಂಗ ಋಶಂ ಸಮಸ್ತಭುವನಾಶ್ರಯನಾಹಮಲ್ಲನನ್ದನ(೦)

ಜನನಾಥಂ ಭುವನೈಕಮಲ್ಲಮಹಿಮಂ ಚಾಳುಕ್ಯ ಮಾರ್ತ್ತಣ್ಡನಾಗಿ ದಿನರೇನ್ದ್ರ ಪ್ರತಿಮಂ ಸ್ವಭಾಹುಬಳದಿಂಪೂರ್ವ್ವಾಪರಾದ್ರೀ ನ್ದ್ರಹಿ

ರ್ಮ್ಯನಗಾಧೀಶ್ವರ ಸೇತುಸೀಮೆಯೆನಿಸಿದ್ದೀ ಧಾತ್ರಿಯಂ ಕೊಡೆವುರಿನೃ ಪಾಳರ್ಕ್ಕಳನಿಕ್ಕಿ ರ್ಸರ್ಯ್ಯಧನನೇಕ ಚ್ಛತ್ರಮಂಮಾಡಿದು

ನಂದವಾಡಿಗೆ, ಹೊಂಬಳ, ಯಲಿ-ಸಿರೂರ ಮತ್ತು ಮುಳುಗುಂದ ಶಾಸನಗಳಲ್ಲಿ ಕೆಲವು ಸಮಾನತೆಗಳಿವೆ:

೧ ಈ ನಾಲ್ಕೂ ಶಾಸನಗಳು ಸಮಕಾಲೀನವಾಗಿವೆ.

೨ ಇವು ಒಂದೊಂದೂ ಸಮೀಪ ಸ್ಥಳದ ಶಾಸನಗಳು.

೩ ಇವು ಸಮಾನ ರಾಜ್ಯಾಡಳಿತಕ್ಕೆ, ಕಲ್ಯಾಣ ಚಾಳುಕ್ಯರ ಪ್ರಭುತ್ವಕ್ಕೆ ಒಳ ಪಟ್ಟಿವೆ.

೪ ಸಮಾನರಾದರಾಜರಾದ ತ್ರೈಳೋಕ್ಯಮಲ್ಲ – ಭುವನೈಕಮಲ್ಲರ ಆಳ್ವಿಕೆ ಯಲ್ಲಿವೆ.

೫ ಬಹುಮಟ್ಟಿಗೆ ಸಮಾನ ವಿಷಯವನ್ನು ಒಳಗೊಂಡಿವೆ.

೬ ಸಮಾನ ವ್ಯಕ್ತಿಯಾದ ಮಹಾ ಮಂಡಲೇಶ್ವರನನ್ನು ಪ್ರಸ್ತಾಪಿಸಿವೆ.

೭ ನಾಲ್ಕೂ ಶಾಸನಗಳ ಭಾಷಾ ಶೈಲಿಯು, ರಚನೆ ನಿರೂಪಣೆಯೂ ಎಷ್ಟು ಸಮಾನ ವಾಗಿದೆಯೆಂದರೆ ಇವನ್ನು ಒಬ್ಬನೇ ಸ್ಜಾಸನಕವಿಯ ರಚನೆಯೆನ್ನಬಹುದು.

೮ ಆಕಸ್ಮಿಕವಲ್ಲದ ವಿಶಿಷ್ಟವೂ ವಿಶೇಷವೂ ಆದ ಸಮಾನ ಅಂಶಗಳು : ಮಹಾಮಂಡಳೇಶ್ವರಂ (ಅಧಿಕಾರ – ವೃತ್ತಿ ಸೂಚಕ)- ಹಯ ವತ್ಸರಾಜಂ (ಕುದುರೆ ನಡೆಸುವುದರಲ್ಲಿನ ನೈಪುಣ್ಯ), ರೂಪ (ವನಿತಾ) ಮನೋಜಂ (ಶರೀರ ಸೌಷ್ಠವ), ಪರಿವಾರ ನಿಧಾನನ್ (ಆಪ್ತ ಬಳಗವನ್ನು ಕಾಪಾಡುವ ಸ್ವಭಾವ -ನಂಬಿದವರ್ಗೆಱೆವಟ್ಟಾಗಿರುವುದು), ಅರ್ಕತೇಜಂ (ರವಿಯಂತೆ ತೊಳಗುವ ತೇಜಸ್ವಿ ರಾಜಕುಮಾರ), ಕಾನೀನಂ (ಕರ್ಣನಂತೆ ದಾನಗುಣ), ರಿಪು ನೃಪತಿ ಹೃದಯ ಸೆಲ್ಲಂ (ಶತ್ರು ರಾಜರ ಎದೆಗೆ ಈಟಿ) ಭುವನೈಕ ಮಲ್ಲಂ (ನಿರ್ದಿಷ್ಟ ವ್ಯಕ್ತಿ – ಒಂದನೆಯ ಸೋಮೇಶ್ವರ).

-ಹೀಗೆ ಈ ನಾಲ್ಕೂ ಶಾಸನಗಳ ಒಕ್ಕಣೆ ಏಕಪ್ರಕಾರವಾಗಿದ್ದು, ಒಂದರ ನಕಲು ಇನ್ನೊಂದು ಎಂಬಂತೆ ಇರುವುದು, ಯಲಿ-ಸಿರೂರ ಶಾಸನದ ಮತ್ತು ನಂದವಾಡಿಗೆ ಶಾಸನದ ತ್ರುಟಿತ ಭಾಗಗಳನ್ನು ಮೊದಲಿನ ಯಥಾಸ್ಥಿತಿಗೆ ಹೊಂದುವ ಹಾಗೆ ಪುನಾರಚಿಸುದಕ್ಕೆ ನರವಾಗುತ್ತದೆ.

ಭುವನೈಕಮಲ್ಲ ಸೋಮೇಶ್ವರನು ೧೦೪೯ ರ ವೇಳೆಗೇನೆ ಮಹಾಮಂಡಲೇಶ್ವರನಾಗಿದ್ದನು [ಮುಳುಗುಂದ ಶಾಸನ : ಪೂರ್ವೊಕ್ತ]. ನಂದವಾಡಿಗೆ ಶಾಸನದ ಕಾಲ ಕ್ರಿ.ಶ. ೧೦೭೦ ಎಂದು ಚರಿತ್ರಕಾರರು ಹೇಳಿದ್ದಾರೆ; ಅಂದರೆ ಆತನು ೨೧ ವರ್ಷಕಾಲ ಅಖಂಡವಾಗಿ ಮಹಾಮಂಡಲೆಶ್ವರನಾಗಿದ್ದನು. ಆದರೆ ಈ ಹಂತದಲ್ಲಿ ಕೆಲವು ಸಮಸ್ಯೆಗಳು ಎದುರಾಗುತ್ತವೆ.

೧. ೧೦೭೮ ರ ವೇಳೆಗೆ ಸಾಮಂತನಾದ ಲಕ್ಷ್ಮನೃಪನು ಬನವಸೆ ಪನ್ನಿರ್ಛಾಸಿರ ಪ್ರಭುವಾಗಿದ್ದನು, ಎರಡಱುನೂಱರ ರಾಜ್ಯಪಾಲನಾಗಿದ್ದನು [ಎಕ ೭ (೧೯೦೨) ಶಿಕಾರಿಪುರ ೧೯, ೧೦೬೬ : ಎ.ಇ. ೧೬. ಪು. ೩೩೯; ಎಆರ್‌ಎಸ್‍ಐಇ ೧೯೩೩-೩೪. ನಂ. ೧೦೯. ಕ್ರಿ.ಶ. ೧೦೭೦] ಲಕ್ಷ್ಮನೃಪನು ಮಹಾಮಂದಲೇಶ್ವರನಾಗಿದ್ದುದೂ ಇದೇ ಕಾಲಾವಧಿಯಲ್ಲಿ [ಎ.ಕ. ೭ ಶಿಕಾರಿಪುರ ೧೩೬, ೧೦೬೮: ಬಾ.ಕ.ಇ. ೧-೧. ನಂ. ೧೧೩. ಪೊನ್ನಗುಂದ (ಹುನುಗುಂದ) ಶಾಸನ. ೧೦೭೪ ಕ್ರಿ.ಶ.]

೨ ಚಾಲುಕ್ಯ ಚಕ್ರವರ್ತಿ ಜಯಸಿಂಹನ ಸೋದರಿ ಅಕ್ಕಾದೇವಿಯ ಮಗನಾದ ತೋಯಿಮದೇವನು ೧೦೬೪ ರಲ್ಲಿ ಬನವಾಸಿಗೆ ಒಡೆಯನಾಗಿದ್ದನು (ಎಚ್‍ಐಎಸ್‍ಐ ಪು. ೭೮).

೩ ಹಾನುಗಲ್ಲು ಕದಂಬರಾಜ ಇನ್ನಡಿ ಕೀರ್ತಿವರ್ಮನು ೧೦೬೮-೬೯ ರಲ್ಲಿ ಬನವಸೆ ಪನ್ನಿರ್ಛಾಸಿರಕ್ಕೆ ಅಧಿಪತಿಯಾಗಿದ್ದನು.

೪ ಇದೇ ಅವಧಿಯಲ್ಲಿ ಭುವನೈಕಮಲ್ಲನೂ ಎರಡಱುನೂಱರ ಮಹಾಮಂಡಲೇಶ್ವರನಾಗಿದ್ದನು.

ಹಾಗಾದರೆ ಒಂದೇ ಪ್ರದೇಶವನ್ನು ಒಂದೇ ಕಾಲದಲ್ಲಿ ಒಬ್ಬರಿಗಿಂತ ಹೆಚ್ಚು ಅಧಿಕಾರಿಗಳು ಆಳುತ್ತಿದ್ದರೆ ಎಂಬ ಪ್ರಶ್ನೆಯೇಳುತ್ತದೆ. ಅಲ್ಲದೆ ಲಕ್ಷ್ಮನೃಪ ಮತ್ತು ಭುವನೈಕಮಲ್ಲ – ಇವರಿಬ್ಬರೂ ೧೦೭೦ ರಲ್ಲಿ ಎರಡಱುನೂಱರ ನಾಡಿಗೆ ಮಹಾಮಂಡಲೇಶ್ವರರಾಗಿದ್ದರೆಂಬುದು ಸಂಶಯಕ್ಕೆ ಎಡೆಕೊಡುತ್ತದೆ. ಈ ಅನುಮಾನಗಳ ಪರಿಹಾರಕ್ಕೆ ಶಿಕಾರಿಪುರ ೧೩೬ ನೆಯ ಶಾಸನವು ನೆರವಾಗುವ ಅಪೂರ್ವ ಮಾಹಿತಿಗಳನ್ನು ಒಳಗೊಂಡಿದೆ [ಎಕ ೭ (೧೯೦೨) ಸೌ.ಕ. ೧೩೬, ಕ್ರಿ.ಶ. ೧೦೬೮].

ಲಕ್ಷ್ಮನೃಪನು ತ್ರೈಲೋಕ್ಯಮಲ್ಲನಲ್ಲೂ ಮತ್ತು ಭುವನೈಕಮಲ್ಲನಲ್ಲೂ ಮರ್ಯಾದಿತನಾಗಿದ್ದನು. ಹೀಗೆ ಇಬ್ಬರು ಚಾಲುಕ್ಯ ಚಕ್ರೇಶ್ವರ, ತಂದೆ-ಮಗನ ಪ್ರೀತಿಗೆ ಲಕ್ಷ್ಮರಸನು ಪಾತ್ರನಾಗಿದ್ದುದು ತನ್ನ ಪರಾಕ್ರಮ, ನಿಷ್ಠೆ, ಪ್ರಾಮಾಣಿಕತೆಯಿಂದ. ಈ ಲಕ್ಷ್ಮನೃಪನ ವ್ಯಕ್ತಿತ್ವದ ಔನ್ನತ್ಯವನ್ನು ಷಿಕಾರಿಪುರದ ಶಾಸನ ಕಡೆದು ನಿಲ್ಲಿಸಿದೆ. ಈ ಶಾಸನವನ್ನು ಬರೆದವನು ಶಾಂತಿನಾಥನೆಂಬ ಪ್ರೌಢ ಚಂಪೂ ಕವಿ [ಡಾ. ಕಮಲಾ ಹಂಪನಾ : ‘ಶಾಂತಿನಾಥ’ (೧೯೭೨) ಬೆಂಗಳೂರು ವಿಶ್ವವಿದ್ಯಾಲಯ]. ಈತನು ರಚಿಸಿರುವ ಸುಕುಮಾರ ಚರಿತೆಯೆಂಬ ಕಾವ್ಯ ಪ್ರಸಿದ್ಧವಾಗಿದೆ [ಡಾ.ಡಿ. ಎಲ್. ನರಸಿಂಹಾಚಾರ್ ಮತ್ತು ತ.ಸು. ಶಾಮರಾಯ (ಸಂ) ಶಾಂತಿನಾಥ ಕವಿಯ ಸುಕುಮಾರ ಚರಿತಂ (೧೯೫೭) ಶಿವಮೊಗ್ಗ; ಪ್ರೊ. ಕಮಲಾಹಂಪನಾ (ಸಂ) ‘ಸುಕುಮಾರ ಚರಿತೆಯ’ ಸಂಗ್ರಹ (೧೯೬೫) ಬೆಂಗಳೂರು]. ಶಾಸನ ಕವಿಯೂ ಆದ ಶಾಂತಿನಾಥನು ಬರೆದಿರುವ (ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ೧೩೬ ನೆಯ ) ಶಾಸನವು ಚಾಳುಕ್ಯರ ಭುವನೈಕಮಲ್ಲ ಎರಡನೆಯ ಸೋಮೇಶ್ವರ ರಾಜನ ಆಳ್ವಿಕೆಯ ಕಾಲದ್ದುಮಾತ್ರವಲ್ಲದೆ ಈ ಉಭಯ ಮಹಾಮಂಡಲೇಶ್ವರರ ವಿಚಾರವಾಗಿ ಅನೇಕ ಮಹತ್ವದ ಐತಿಹಾಸಿಕ ವಿವರಗಳನ್ನು ಒದಗಿಸುತ್ತದೆ.

ಭುವನೈಕಮಲ್ಲನ ಪಾದಪದ್ಮೋಪಜೀವಿ,ಮ್ ವಿಶ್ವಾಸದ ಆಳು ಲಕ್ಷ್ಮನೃಪನದು ಘನ ವ್ಯಕ್ತಿತ್ವ. ಲಕ್ಷ್ಮನೃಪನು, ಪಟ್ಟಣಂಗಳ ತವರ್ಮನೆ ಶ್ರೀಮಾದನಾದಿ ಪಟ್ಟಣವೆನಿಸಿದ ಬಳ್ಳಿಗಾಮೆ (ಬಳಿಗ್ರಾಮ, ಬಳ್ಳಿಗಾವೆ) ಯಲ್ಲಿ ಮಲ್ಲಿಕಾಮೋದ ಶಾಂತಿನಾಥ ತೀರ್ಥಂಕರ ಬಸದಿಯನ್ನು ಕಟ್ಟಿಸಿದನು. ವರ್ಧಮಾನ ಮುನಿ, ದಿವಾಕರಣಂದಿ ಸೈದ್ಧಾಂತಿಕ ಮುನಿಚಂದ್ರ, ಮಾಘಣಂದಿ-ಇಂಥ ಆ ಕಾಲದ ಮಹಾ ಮಹಿಮರಾದ ಜಿನ ಮುನಿಗಳಿಗೆ ಲಕ್ಷ್ಮನೃಪನು ದತ್ತಿಕೊಟ್ಟನು. ಲಕ್ಷ್ಮನೃಪನ ಗುರು ಪರಂಪರೆ ಶ್ರೀಮಂತವಾದದ್ದು; ಕವಿನಾಗಚಂದ್ರ ಮುಂತಾದ ಕೆಲವರಿಗೇ ದೊರೆತಂಥ ಭಾಗ್ಯ ಪಡೆದವನಾಗಿದ್ದನು. ಈ ಲಕ್ಷ್ಮನೃಪ ಭೂಪನಲ್ಲಿ ಅರ್ಥಾಧಿಕಾರಿಯೂ ತದ್ರಾಜ್ಯ ಸಮುದ್ಧರಣನೂ ಚತುರ ಕವಿಯೂ ಸರಸ್ವತೀ ಮುಖ ಮುಕುರನೂ ಕಾರ್ಯಧುರಂಧನೂ ಮಂತ್ರ ನಿಧಾನನೂ ಜಿನ ಮತಾಂಭೋಜಿನೀ ರಾಜ ಹಂಸನೂ ಆಗಿದ್ದವನು ಈ ಶಿಕಾರಿಪುರ ಶಾಸನ ಕರ್ತೃವಾದ ಶಾಂತಿನಾಥ ಕವಿ.

ತನ್ನ ಆಶ್ರಯದಾತನದಾ ಲಕ್ಷ್ಮ ಭೂಪನು ಕಟ್ಟಿಸಿದ ಶಾಂತಿನಾಥ ಬಸದಿಗೆ ಈ ಶಾಂತಿನಾಥ ಕವಿಯೂ, ಆಶ್ರಯದಾತನ ಅನುಮತಿಯಿಂದ ಅನೇಕ ದಾನದತ್ತಿಗಳನ್ನು ಬಿಟ್ಟುಕೊಟ್ಟನು. ಹೀಗೆ ಕವಿಗಳಿಗೆ ಆಶ್ರಯದಾತನೂ ಆಗಿದ್ದ ಮಹಾವೀರ ಲಕ್ಷ್ಮನೃಪನು ‘ಚಾಳುಕ್ಯರಾಜ್ಯಕ್ಕೆ ಕಾರಣಮಾದ ಆಳು’ ಎಂಬುದು ಗಮನಾರ್ಹ. ಈತನಿಗೆ ೧೦೬೬ರಲ್ಲಿಯೇ ವ (ಬ) ನವಾಸಿ ದೇಶವನ್ನು ಶಾಸನ ಬರೆದು ಕೊಡಲಾಯಿತು. ಮಹಾಮಂಡಲೇಶ್ವರ ಭುವನೈಕ ಮಲ್ಲನು, ತನ್ನ ತಂದೆ ತ್ರೈಲೋಕ್ಯಮಲ್ಲನು ಜಲಸಮಾಧಿಯಾಗಿ ಮರಣ ಹೊಂದಿದ್ದರಿಂದ, ಅಚ್ಚುಮೆಚ್ಚಿನ ‘ಅಣುಗಾಳ್’ (ಪ್ರೀತಿಯ ಮನುಷ್ಯ-ಬಂಟ) ಲಕ್ಷ್ಮನೃಪನಿಗೆ, ಅಣುಗವೃತ್ತಿಯಾಗಿಯೂ ಸೇರಿ. ತನ್ನ ಮಹಾ ಮಂಡಲೇಶ್ವರವೃತ್ತಿಪದವನ್ನು ಹೀಗೆ ವಿಧ್ಯುಕ್ತವಾಗಿ ಬಿಟ್ಟುಕೊಟ್ಟು ಗೌರವಿಸಿದುದನ್ನು ಪ್ರತ್ಯಕ್ಷ ಸಾಕ್ಷಿಯಾಗಿ ವೀಕ್ಷಿಸಿದ ಶಾಂತಿನಾಥ ಕವಿ ಅದನ್ನು ಶಿಕಾರಿಪುರದ ಶಾಸನದಲ್ಲಿ ದಾಖಲಿಸಿದ್ದಾನೆ. ಪ್ರಸ್ತುತ ಪರಾಮರ್ಶೆಗೆ ಉಚಿತವಾಗುವ ಮತ್ತು ಐತಿಹಾಸಿಕತೆ ತುಂಬಿ ತುಳುಕುವ ಒಂದು ವೃತ್ತ ಪದ್ಯವನ್ನು ಆ ಶಾಸನದಿಂದ ಉದಾಹರಿಸುತ್ತೇನೆ;

ಕಿಱೆಯಂ ವಿಕ್ರಮಗಂಗ ಭೂಪನೆನಗಾ ಪೆರ್ಮ್ಮಾಡಿ ದೇವಂಗೆ ನೇ
ರ್ಗ್ಗಿಱೆಯಂ ವೀರನೊಳಂಬ ದೇವನೆನಗಂ ಪೆರ್ಮ್ಮಾಡಿಗಂ ಸಿಂಗಿಗಂ
ಕಿಱೆಯೈನೀಂ ನಿನಗೆಲ್ಲರುಮ್ ಕಿಱೆಯರೆನ್ಡಗ್ಗಯ್ಸಿ ಕಾರುಣ್ಯದಿಂ
ನೆಱೆಕೊಟ್ಟಂ ಪ್ರತಿಪತ್ತಿ ವೃತ್ತಿಪದಮಂ ಲಕ್ಷ್ಮಂಗೆ ಸೋಮೇಶ್ವರಂ
|

ಈ ಪದ್ಯದ ಪ್ರಾಮುಖ್ಯವೆಂದರೆ ಭುವನೈಕಮಲ್ಲನ ಕೌಟುಂಬಿಕ ವಿವರಗಳನ್ನೊಳಗೊಂಡಿರುವುದು ಅಣ್ಣ, ತಮ್ಮ, ನಡುವಣ ತಮ್ಮ (ಮಧ್ಯಮ) ಯಾರೆಂಬುದು ಒಂದೊಂದು ವಿಶೇಷಣದೊಂದಿಗೆ ಬಂದಿದೆ. ತನ್ನ ತಮ್ಮಂದಿರು ಯಾರು, ಹೇಗೆ ಎಂಬುದನ್ನು (ಅರ) ಮನೆಯ ಹಿರಿಯಣ್ಣನಾದ ಭುವನೈಕ ಮಲ್ಲನು (ಉತ್ತಮ ಪುರುಷದಲ್ಲಿ) ಹೀಗೆ ನಿರೂಪಿಸಿದ್ದಾನೆ: ನನಗಿಂತ (ಎನಗೆ) ಚಿಕ್ಕವನು (ಕಿಱೆಯಂ) ವಿಕ್ರಮಗಂಗ ಭೂಪ (ವಿಕ್ರಮಾದಿತ್ಯ ೬) ಅಪೆರ್ಮಾಡಿದೇವನಿಗೆ (ವಿಕ್ರಮಂಗಗಭೂಪ ವಿಕ್ರಮಾದಿತ್ಯ ೬) ಸ್ವಲ್ಪ ಚಿಕ್ಕವನು (ನೇರ್ಗ್ಗಿಱೆಯಂ) ವೀರನೊಳಂಬ ದೇವನು : ನನಗೂ (ಎನಗಂ) ವಿಕ್ರಮಂಗಗನಿಗೂ (ಪೆರ್ಮಾಡಿಗಂ) ಜಯಸಿಂಹನಿಗೂ (ಸಿಂಗಿಗಂ) ಲಕ್ಷ್ಮನೃಪನಾದ ನೀನು (ನೀಂ) ಚಿಕ್ಕವನಾಗಿದ್ದೀಯೆ (ಕಿಱೆಯೈ); ನೀನು ನಮಗೆಲ್ಲರಿಗೂ ಚಿಕ್ಕವನಾಗಿದ್ದರೂ ನಿನಗೆ ಎಲ್ಲರೂ ಚಿಕ್ಕವರೇ ಎಂದು ಅತಿಶಯ ಗೊಂಡು ನಿನಗೆ ವಾತ್ಸಲ್ಯ ತೋರಿರುವರು – ಎಂಬುದಾಗಿ ಕಾರುಣ್ಯ ಭಾವದಿಂದ ಸೋಮೇಶ್ವರನು ಲಕ್ಷ್ಮನಿಗೆ ಸಮಗ್ರ ಗೌರವದ (ಪ್ರತಿ ಪತ್ತಿ) ಮಹಾಮಂಡಲೇಶ್ವರ ವೃತ್ತಿಪದವನ್ನು ಕೊಟ್ಟನು. ಈ ವೃತ್ತಿಪದದ ಪ್ರದಾನವಾದದ್ದು ೧೦೬೮ರಲ್ಲಿ.

ಅದರಿಂದ ನಂದವಾಡಿಗೆ ಶಾಸನದ ಕಾಲವನ್ನು ೧೦೭೦ ಎಂದು ನಿರ್ದೇಶಿಸಿರುವುದು ಸರಿಯಿಲ್ಲ. ಅದು ಪ್ರಾಯಃ ೧೦೬೭ ರಲ್ಲಿ ಅಥವಾ ತತ್ಪೂರ್ವದಲ್ಲಿ ರಚಿತ ವಾಗಿದೆಯೆಂದು ಪರಿಗ್ರಹಿಸಬೇಕು. ಇಮ್ಮಡಿ ಸೋಮೇಶ್ವರನು ಲಕ್ಷ್ಮನೃಪನಿಗೆ ಹೀಗೆ ನೀಡಿದ ವೃತ್ತಿಪದವೇ ಬೆಳ್ವಲ ಮನ್ನೂಱು ಹಾಗೂ ಪುಲಿಗೆಱೆ ಮುನ್ನೂಱರ ಮಹಾಮಂಡಲೇಶ್ವರ ವೃತ್ತಿಪದ, ರಾಜ್ಯಪಾಲನಾಗಿ ಈ ಭಾಗಗಳನ್ನು ಆಳುವ ಮಹಾ ಮನ್ನಣೆ. ಇಮ್ಮಡಿ ಸೋಮೇಶ್ವರನು ಇನ್ನೂ ಯುವರಾಜನಾಗಿರುವ ಕಾಲಕ್ಕೆ ೧೦೪೯ ರಿಂದಲೂ ವೇಂಗೀ ಪುರವನ್ನೂ ಬೆಳ್ವಲ-ಪುಲಿಗೆರೆ ಆರು ನೂರನ್ನೂ ಆಳುವ ಮಹಾಮಂಡಲೇಶ್ವರನಾಗಿದ್ದನು.

ತನ್ನ ತಂದೆ ಆಹವಮಲ್ಲ ತ್ರೈಳೋಕ್ಯಮಲ್ಲನು, ಚೋಳ ಕೊಂಕಣ ಲಾಟ ಕಳಿಂಗ ಪರಮಾರರ ವಿರುದ್ಧ ನಡೆಸಿದ ದೊಡ್ಡ ಹೋರಾಟಗಲಲ್ಲಿ ಅವನ ಮಗನಾದ ಈ ಭುವನೈಕಮಲ್ಲನೂ ಭಾಗವಹಿಸಿ ಅಯ್ಯನ (ತಂದೆಯ) ಆನೆಯೆನಿಸಿದ್ದನು (ಅಮ್ಮನ ಗಂಧವಾರಣಂ). ಭುವನೈಕಮಲ್ಲನಿಗೆ ಕಿರಿಯವನಾದ ವಿಕ್ರಮಾದಿತ್ಯ – ತ್ರಿಭುವನಮಲ್ಲ ದೇವನಿಗೆ ವಿಕ್ರಮ, ವಿಕ್ರಮಾಂಕ ವಿಕ್ರಮಾಂಕದೇವ, ವಿಕ್ರಮಾದಿತ್ಯ – ಮೊದಲಾದ ಹೆಸರುಗಳಿವೆ. ಈ ಶಿಕಾರಿಪುರ ಶಾಸನವನ್ನು ಶಾಂತಿನಾಥಕವಿ ೧೦೬೮ ರಲ್ಲಿ, ಅಣ್ಣನ ಗಂಧವಾರಣನಾಗಿದ್ದನು. ಅಣ್ಣತಮ್ಮಂದಿರ ನಡುವೆ ಅಕ್ಕರೆ ಬತ್ತಿರಲಿಲ್ಲ. ಆಗಷ್ಟೇ ಅಪ್ಪ ಸತ್ತು ಅಪ್ಪ (ಅಯ್ಯ/ಅಮ್ಮ)ನ ಸ್ಥಾನದಲ್ಲಿ ಅಣ್ಣನು ಪಟ್ಟಕ್ಕೆ ಬಂದಿದ್ದನು.

ಮೇಲಿನ ಶಾಸನದ ಪದ್ಯದಲ್ಲಿ ವಿಕ್ರಮನನ್ನು ವಿಕ್ರಮಗಂಗ ಎಂದೂ ‘ಪೆರ್ಮಾಡಿದೇವ’ ಎಂದೂ ಕರೆದಿರುವುದನ್ನು ಗಮನಿಸಬೇಕು. ಈ ವಿಕ್ರಮನು ಗಂಗವಾಡಿ ಪ್ರದೇಶವನ್ನು ಆಳುತ್ತಿದ್ದದರಿಂದ ಈ ಎರಡೂ ವಿಶೇಷಣಗಳ ಬಳಕೆಗೆ ಕಾರಣವಾಯಿತು. ಕನ್ನಡ ನಾಡಿನ ಶಾಸನಗಳ ಅಭ್ಯಾಸಿಗಳಿಗೆ ಹಲವಾರು ಶಾಸನಗಳಲ್ಲಿ ಎದುರಾಗುವ ಹೆಸರು ‘ಪೆರ್ಮಾಡಿದೇವ’, ಈ ರಾಜಬಿರುದನ್ನು ಹೆಸರಾಗಿ ಹೊತ್ತಿರುವ ಹತ್ತಾರು ರಾಜರು ಸಾಮಂತರು ನಾೞ್ಟ್ರಭುಗಳು ಶಾಸನ ಲೋಕದಲ್ಲಿದ್ದಾರೆ : ಕೇವಲ ಕೆಲವು ನಿದರ್ಶನಗಳು;

೧ ಹೊಯ್ಸಳ ನೃಪಕಾಮನಿಗೆ (೧೦೦೬) ಪೆರ್ಮಾನಡಿ – ಪೆರ್ಮಾಡಿ ಎಂದು ಹೆಸರಿತ್ತು.

೨ ಕಲಚೂರ್ಯ ಜೋಗಮನ ಮಗ ಪೆರ್ಮಾಡಿ ದೇವರಸ (೧೧೨೦-೧೧೪೬) ಈ (ಪೆ) ಹೆಮ್ಮಾಡಿಯರಸನ ಮಗನೇ ಬಿಜ್ಜಳರಾಯ

೩ ಚಟ್ಟಯದೇವನ ಮಗ ಜಯಕೇಶಿದೇವನ ಅಳಿಯ ಪೆರ್ಮಾಡಿದೇವ [ಎ.ಕ. ೮. ಪು. ೩೦೧.ಕ್ರಿ.ಸ್ಝ. ೧೧೨೫]

೪ ಗೋವೆಯ ಕದಂಬ ದೊರೆ ಜಯಕೇಶಿಯ ಒಬ್ಬ ಮಗ ಪೆಮ್ಮಾಡಿ ರಾಜ (೧೧೪೭)

೫ ಅಹವಮಲ್ಲ ಸೋಮೇಶ್ವರನ ಕಾಲದಲ್ಲಿ ಹೊಟ್ಟೂರ ನಾೞ್ಪ್ರಭುವಾಗಿ ಪೆರ್ಮಾಡಿ ಕೇಸಿಗಾವುಂಡನಿದ್ದನು

೬ ಗಂಗರದೊರೆ ಸತ್ಯವಾಕ್ಯ ಪೆರ್ಮಾನಡಿ [ಎ.ಕ.೨ ಶ್ರಬೆ ೫೪೪, ಕ್ರಿ.ಶ. ೮೮೪]

೭ ಗಂಗರ ನೀತಿಮಾರ್ಗ್ಗ ಪೆರ್ಮ್ಮಾನಡಿ [ಎಕ ೭ (೧೯೭೯) ಮಳವಳ್ಳಿ (ರಾವಂಗೂರು) ೧೫, ಪುಟ ೩೫೬, ಕ್ರಿ.ಶ. ೮-೯ನೆಯ ಶತಮಾನ]

೮ ಗಂಗಪೆರ್ಮ್ಮಾನಡಿ ಇಮ್ಮಡಿ ಬೂತಗ : [ಎ.ಇ. ೧೫. ಪುಟ ೩೩೭]

೯ ಪೆರ್ಮಾನಡಿ ಎಂಬ ರಾಜನು ಪಟ್ಟಾಭಿಷೇಕ್ತನಾದನು [ಎಕ. ೧೧ ಚಳ್ಳಕೆರೆ ೮, ಸು. ಕ್ರಿ.ಶ. ೮೧೦]

೧೦ ಪೆರ್ಮ್ಮಾಡಿ ಮಾರಸಿಂಗದೇವನಿಗೆ ಪಟ್ಟಂಗಟ್ಟಿದ ಪ್ರಥಮವರ್ಷದ ಶಾಸನವಿದೆ [ಎಕ ೭, ನಾಗಮಂಗಲ ೧೨, ಕ್ರ.ಶ. ೯೬೩]

೧೧ ಶ್ರೀ ಮಚ್ಚಾಳುಕ್ಯ ಪೆರ್ಮ್ಮಾನಡಿದೇವ, ಈತನ ಮಗಳು ಪಂಪಾದೇವಿ [ಎಕ ೪, ಹುಣಸೂರು ೫೦, ಕ್ರಿ.ಶ. ೯೯೭]

ಗಂಗರ ಭೂಮಿಪನಾದ ಶ್ರೀಪುರುಷನು (೭೨೬-೭೮೯) ಪಲ್ಲವರ ವೀರ ಕಾಡುವೆಟ್ಟಿಯನ್ನು ಕೊಂದು ಆತನಿಗಿದ್ದ ‘ಪೆರ್ಮ್ಮಾನಡಿ’ ಹಾಗೂ ‘ಭೀಮಕೋಪ’ ಗಳೆಂಬೆರಡು ಪ್ರಶಸ್ತಿಗಳನ್ನು ಕಿತ್ತುಕೊಂಡು ತನ್ನದಾಗಿಸಿಕೊಂಡನು, ಸು. ಕ್ರಿ.ಶ. ೭೫೮ ರಲ್ಲಿ.

೧೨ ಕಾದಂಬರ ಕಾಮಭೂಪ -ಚಟ್ತಲದೇವಿಯರ ಮಗ ಕದಂಬ ನರೇಂದ್ರ ವೀರ ಪೆಮ್ಮಾಡಿದೇವ [ಜೆ.ಬಿ.ಬಿ.ಆರ್.ಎ.ಎಸ್. ೯. ಪು. ೩೧೦]

೧೩ ಗಂಗರಾಜ ಶ್ರೀಮತ್ ಪೆರ್ಮ್ಮಾನಡಿಯ ಜೆಹಲ ಎಱೆಯಂಗ ಗಾವುಂಡನ ಮಗನಿಗೆ ಪೆಮ್ಮಾಡಿಪಟ್ಟಂಗಟ್ಟಲಾಗಿತ್ತು [ಇ.ಆ.೪, ಪು. ೧೦೩. ಕ್ರಿ.ಶ. ೮೯೦]

ಇತ್ಯಾದಿಯಾಗಿ ಇನ್ನೂ ಒಂಬತ್ತು ಮಾಹಿತಿಗಳು ಪೆರ್ಮಾಡಿದೇವ, ಪೆರ್ಮಾಡಿರಾಯ ಪೆರ್ಮಾನಡಿ ಎಂಬ ಹೆಸರು (ಬಿರುದು) ಇರುವವರನ್ನು ಪರಿಚಯಿಸಿದೆ. ಮುಖ್ಯವಾದ ಮಾತೆಂದರೆ ಈ ಪೆರ್ಮಾಡಿ (ರಾಯ – ದೇವ – ಪೆರ್ಮಾನಡಿ) ಹೆಸರು ಮೊಟ್ಟಮೊದಲಿಗೆ ಬಳಕೆಯಾದದ್ದು ಜೈನರಾಜ ಗಂಗ ದೊರೆಗಳಿಗೆ ಎಂದು ತೋರಿಸುವುದಕ್ಕೆ ಮೇಲಿನ ಕೆಲವು ನಿದರ್ಶನಗಳನ್ನು ಕೊಡಬೇಕಾಯಿತು. ಈಗ ತಿಳಿದುಬರುವಂತೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ರಾವಂದೂರು ಗ್ರಾಮದ ನಡುವೆ ನೆಟ್ಟಿರುವ ಕಲ್ಲಿನ ಮೇಲಿರುವ ತುಂಬು ತ್ರುಟಿತವಾದ ಕಾನನದ ‘ಶ್ರೀಮತು ನೀತಿಮಾರ್ಗ್ಗ ಪೆರ್ಮ್ಮಾಡಿ’ ಎಂದು ಪ್ರಾರಂಭವಾಗುವ ವಾಕ್ಯವೂ ಒಂದು ಪ್ರಾಚೀನವಾದ ಪ್ರಯೋಗ : ಇದರ ಕಾಲ ನಿರ್ದೇಶನ ಭಾಗವು ಶಾಸನದಲ್ಲಿ ಇಲ್ಲ, ಇದರ ಲಿಪಿ ನರೆಹದ ಆಧಾರದಿಂದ ಈ ಶಾಸನವು ಕ್ರಿ.ಶ. ೮-೯ ನೆಯ ಶತಮಾನಕ್ಕೆ ಸೇರಿದ್ದೆಂದು ಇತಿಹಾಸತಜ್ಞರು ಅಭಿಪ್ರಾಯ ಪಟ್ಟಿದ್ದಾರೆ; ಇದರಲ್ಲಿ ಉಲ್ಲೇಖಿತ ನೀತಿ ಮಾರ್ಗ್ಗ ಪೆರ್ಮ್ಮಾನಡಿಯು ರಾಚಮಲ್ಲನ ತಂದೆಯಾದ ನೀತಿಮಾರ್ಗ್ಗ ಎಱೆಗಂಗನೆಂದು (೮೪೩-೮೧೦) ಗುರುತಿಸಲಾಗಿದೆ.

ಹೀಗೆ, ‘ಘನತೆವ್ಯಕ್ತಿ’ (ಶ್ರೀಪಾದಂಗಳು) ಎಂಬ ಗೌರವಾರ್ಥಕವಾಗಿ ರಾಜನಿಗೆ ಉನ್ನತ ಸ್ಥಾನಾಧಿಪತಿಗೆ ಅನ್ವಯವಾಗುವ ಈ ಪೆರ್ಮ್ಮಾಡಿ-ಪೆರ್ಮ್ಮಾನಡಿ ಹೆಸರು ಅಚ್ಚಗನ್ನಡದ್ದು. ಗಂಗರು ಎಱೆಯಪ್ಪ (ಎಱಿ ಅಪ್ಪೋರ್ = ಪ್ರಭು, ಒಡೆಯ) ಎಱಿಗಂಗೆ – ಎಂಬಂಥ ಅಚ್ಚ ಕನ್ನಡದ ಮೂಲ ರೂಪಗಳನ್ನು ಅಂಕಿತ ನಾಮವಾಗಿ ಬಳಸಿದವರು, ಈ ಪೆರ್ಮ್ಮನಡಿ ಎಂಬ ರೂಪವನ್ನು ಗಂಗ ವಂಶದ ದೊರೆಗಳಿಗೆ ಅನ್ವಯಿಸಿದ್ದು ಆದಮೇಲೆ, ಗಂಗರನ್ನು ಆದರ್ಶವಾಗಿ ಇಟ್ಟುಕೊಂಡ ಅನಂತರಾ ಅಧಿಕಾರಿಗಳೂ ಪಟ್ಟಾಭಿಷಿಕ್ತರೂ ಇದನ್ನು ತಮ್ಮ ಹೆಸರಿನೊಂದಿಗೆ ಸೇರಿಸಿ ಬಳಸಿದರು. ಇಂಥದೊಂದು ಪರಂಪರೆಯನ್ನೂ, ಗಂಗರ ರಾಜಾದರ್ಶನಗಳನ್ನೂ ಸ್ವೀಕರಿಸದ ಮೊದಲಿಗರು ಪಶ್ಚಿಮ ಚಾಳುಕ್ಯರು. ಗಂಗರ ರಾಜಕೀಯ ಮತ್ತು ಧಾರ್ಮಿಕ ಆದರ್ಶಗಳನ್ನು ತಮ್ಮ ಧ್ಯೇಯವಾಗಿ ಅನಾಮತ್ತಾಗಿ ಅಳವಡಿಸಿಕೊಂಡ ಚಾಳುಕ್ಯರ, ಗಂಗ ಸಾಮ್ರಾಜ್ಯ ಅಸ್ತಂಗತವಾದಾಗ ಗಂಗರಲ್ಲಿದ್ದ ಜೈನ ಮುನಿಗಳನ್ನೂ ಜೈಅನ್ ಅಧಿಕಾರಿಗಳನ್ನೂ ಜೈನ ಕವಿಗಳನ್ನೂ ತಮ್ಮ ಚಾಳುಕ್ಯ ಆಳ್ವಿಕೆ ಆಸ್ಥಾನಗಳಿಗೆ ಬಳುವಳಿಯಾಗಿ ಸೇರಿಸಲಾಯಿತು : ಅಜಿತಸೇನಾಚಾರ್ಯರು, ರನ್ನ ಕವಿ ಮೊದಲಾದವರನ್ನು ಸ್ಮರಿಸಬಹುದು.

ಪೆರ್ಮಾಡಿ-ಪೆರ್ಮಾನಡಿ ಎಂಬ ಹೆಸರಿನ ನಾನಾ ವ್ಯಕ್ತಿಗಳನ್ನು ನಿದರ್ಶನಗಳೊಂದಿಗೆ ದೀರ್ಘವಾಗಿ ಇಲ್ಲಿ ಉಲ್ಲೇಖಿಸಿ ಇಷ್ಟು ಚರ್ಚಿಸಿದ್ದಕ್ಕೆ ಕಾರಣಗಳಿವೆ. ನಂದವಾಡಿಗೆ ಶಾಸನದಲ್ಲಿ ‘ರಾಜಧಾನಿ + ಅಣ್ನಿಗೆಱೆಯೊಳ್ …. ಪೆರ್ಮ್ಮಾಡಿಯ ಬಸದಿಯಪುರದ ಕೇರಿಯಂ …… ಪೊಸತಾಗೆ ಪಡಿಸಲಿಸಿ” – ಎಂದಿದೆ [ಬಾ.ಕ.ಇ. ೧-೧. ೧೦೩. ಪು. ೧೦೧]. ಈ ವಿಕ್ರಮಗಂಗ ಭೂಪಪೆರ್ಮ್ಮಾಡಿಯಲ್ಲ. ಶಿಕಾರಿಪುರ ೧೩೬ನೆಯ ಶಾಸನದಲ್ಲಿ ವಿಕ್ರಮಾದಿತ್ಯನಿಗೆ ವಿಕ್ರಮಗಂಗ ಮತ್ತು ಪೆರ್ಮ್ಮಾಡಿದೇವ ಎಂಬ ಹೆಸರುಗಳು ರೂಡಿಗೆ ಬರಲು ಇಷ್ಟು ಚಾರಿತ್ರಿಕ ಹಿನ್ನೆಲೆಯಿದೆ. ಅಂದರೆ ಮೊದಲನೆಯದಾಗಿ ಆತ ಗಂಗವಾಡಿ ೯೬೦೦ ವನ್ನು ಆಳುತ್ತಿದ್ದನು. ಎರಡನೆಯದಾಗಿ ಆತ ಗಂಗರ ದೊರೆಗಳಂತೆ ಧಾರ್ಮಿಕ ಆದರ್ಶವನ್ನು ಮುನ್ನಡೆಸಿದನು.

ಶಾಂತಿನಾಥಕವಿಯ ರಚನೆಯಿಂದ ಉದಾಹೃತ ಶಾಸನಪದ್ಯದಲ್ಲಿ ಭುವನೈಕ ಮಲ್ಲ ಸೋಮೇಶ್ವರ, ವಿಕ್ರಮಾದಿತ್ಯ, ಜಯಸಿಂಹ – ಈ ಮೂವರು ಒಡಹುಟ್ಟಿದ ಅಣ್ಣತಮ್ಮಂದಿರೊಂದಿಗೆ ಇದರ ಭ್ರಾತೃವಾತ್ಸಲ್ಯ ಪಾತ್ರರಾದ ಇನ್ನಿಬ್ಬರು ವ್ಯಕ್ತಿಗಳಿದ್ದು ಅವರಲ್ಲಿ ಒಬ್ಬನಾದ ಲಕ್ಷ್ಮನಾದ ಲಕ್ಷ್ಮನೃಪನ ಪ್ರಸಾಪ ಆಗಲೇ ಬಂದಿದೆ. ಉಳಿದ ಆ ಇನ್ನೊಬ್ಬ ವ್ಯಕ್ತಿಯಾದ ವೀರನೊಳಂಬದೇವನು ಯಾರೆಂಬ ಪರಿಶೀಲನೆಯೂ ಅಗತ್ಯ. ಈಗಿನ ಬಿಜಾಪುರಜಿಲ್ಲೆ (ಪೊನ್ನುಗುಂದ) ಹುನಗಂದ ತಾಲ್ಲೂಕು ಮರೋಳ (ಮರವೊಳಲ) ಶಾಸನವು ನೊಳಂಬವಾಡಿ ಮತ್ತು ಕರಿವಿಡಿ – ೩೦ ಪ್ರದೇಶಗಳನ್ನುಆಳುತ್ತಿದ್ದ ನೊಳಂಬ ಮಹಾಮಂಡಲೇಶ್ವರನನ್ನು ಕುರಿತು ಈ ಸಂಪ್ರಬಂಧದಲ್ಲಿ ಪ್ರಸ್ತಾಪಿಸಿದ್ದಾಗಿದೆ. [ಬಾ.ಕ.ಇ. ೧-೧, ೬೧]. ಕೋಲಾರ ತುಮಕೂರು, ಚಿತ್ರದುರ್ಗ [ಮತ್ತು ಇವುಗಳಿಗೆ ಅಂಚಿನಲ್ಲಿರುವ ಬೆಂಗಳೂರು ಹಾಸನ ಬಳ್ಳಾರಿ ಜಿಲ್ಲೆಗಳ ಕೆಲವು ಭಾಗಗಳು ಆಂಧ್ರದ ಅನಂತಪುರ ಮತ್ತು ಚಿತ್ತೂರು ಜಿಲ್ಲೆಯ ಕೆಲವು ಭಾಗ ಹಾಗೂ ತಮಿಳು ನಾಡಿನ ಧರ್ಮಪುರಿ ಜಿಲ್ಲೆಯ ಕೆಲವು ಭಾಗ]- ಈ ಪ್ರದೇಶದ ಸೇರಿ ಆದದ್ದು ನೊಳಂಬವಾಡಿ – ೩೨೦೦೦. ಈಗ ಮಡಕಶಿರಾ ತಾಲ್ಲುಕಿನಲ್ಲಿರುವ ಹೇಮಾವತಿಯೂ (ಹೆಂಜೇರು) ಅನಂತರ ಬಳ್ಳಾರಿ ಜಿಲ್ಲೆಯ ತುಂಗಭದ್ರಾ ನದಿ ತೀರದ ಕಂಪಿಲೆಯೂ ನೊಳಂಬರ ರಾಜಧಾನಿಗಳು. ಮೊದಲಿಗ ಗಂಗರ ಸಾಮಂತರಾಗಿದ್ದು ಆಮೇಲೆ ರಾಷ್ಟ್ರಕೂಟರ ಅಧೀನದಲ್ಲಿದ್ದ ನೊಳಂಬರು ಕಲ್ಯಾಣ ಚಾಳುಕ್ಯರ ಸಾಮಂತರಾದರು. ತೈಲಪ, ಇರಿವಬೆಡಂಗ, ತ್ರೈಳೋಕ್ಯಮಲ್ಲ ಮತ್ತು ಭುವನೈಕಮಲ್ಲರಾಜರ ವೇಳೆಗಾಗಲೇ ನೊಳಂಬರು ಸಂಪೂರ್ಣವಾಗಿ ಚಾಳುಕ್ಯರ ಆಜ್ಞಾನುವರ್ತಿಗಳಾಗಿ ಅಚ್ಚುಮೆಚ್ಚಿನವ ರಾಗಿದ್ದರು.

ಹುನಗುಂದ ಶಾಸನೋಕ್ತನಾದ ನೊಳಂಬ ಮಹಾಮಂಡಲೇಶ್ವರನು ಚಾಳುಕ್ಯರ ಇಱೆವಬೆಡಂಗ ಸತ್ಯಾಶ್ರಯನ (ಸತ್ತಿಗ) ಮಗಳು ಮಹಾದೇವಿಯನ್ನು ಮದುವೆ ಯಾಗಿದ್ದನು. [ಸೌ.ಇ.ಇ. ೧೧-೧, ೬೧. ಕ್ರಿ.ಶ. ೧೦೨೪] ಈ ಅಳಿಯತನಕ್ಕಾಗಿ ಮಾವದಾನ ಇಱೆವ ಬೆಡಂಗನು ತನ್ನ ಹೆಸರಿನ ಆದಿಭಾಗವಾದ ‘ಇಱೆವ’ ಎಂಬುದನ್ನು ಶಬ್ದಕಿರೀಟವಾಗಿಟ್ಟು ಪ್ರೀತಿ ಗೌರವ ತೋರಿಸಿದನು. ತಮ್ಮ ಹೆಸರು ಹಾಗೂ ಹೆಸರಿನ ಭಾಗವನ್ನು ತಮಗೆ ನಿಷ್ಠರಾದವರಿಗೆ ಅನ್ವಯಿಸುವ ಪದ್ಧತಿಗೆ ಅನುಗುಣವಾಗಿ, ವಾರಿಗೆಯಲ್ಲಿ ಈ ಇಱೆವ ನೊಳಂಬಾಧಿರಾಜ ಘಟೆಯಂಕಕಾರನೂ (೧೦೧೦-೧೦೨೪) ಈ ಭುವನೈಕಮಲ್ಲನೂ ಭಾವ-ಭಾವಮೈದ ಆಗಿದ್ದರು. ಇವರಿಬ್ಬರ ಸಖ್ಯದಿಂದ ಭುವನೈಕಮಲ್ಲನಿಗೆ ಭಾವಗಂಧವಾರಣ ಎಂಬ ಹೆಸರು ಬರಲು ಕಾರಣವಾಗಿರಬಹುದೆಂಬುದು ನನ್ನ ಊಹೆ. ನೊೞಂಬ ಪಲ್ಲವ ಪ್ರಮುಖನಾದ ಈ ಇಮ್ಮಡಿ ಇಱೆವನೊಳಂಬಾಧಿರಾಜನು ಮರೋಳದಲ್ಲಿನ ಜಿನಾಲಯಕ್ಕೆ ಮತ್ತು ಜೈನ ಯತಿಗಳಿಗೆ ಭೂದಾನವನ್ನು ನೀಡಿದ್ದನು [Desai Dr. P.B; JSI (1957) p. 195]

ಶಾಂತಿನಾಥಕವಿ ವಿರಚಿತ ಶಿಕಾರಿಪುರ ಶಾಸನ ಪದ್ಯದಲ್ಲಿ ಹೇಳಿರುವ ವೀರ ನೊಳಂಬದೇವನು ಈ ಇಮ್ಮಡಿ ಇಱೆವ ನೊಳಂಬಾಧಿರಾಜ ಘಟೆಯಂಕಕಾಱನೇ ಆಗಿರಬಹುದೆಂಬ ಭಾವನೆ ಬರುವುದು ಸಹಜ.ಆದರೆ ಇದನ್ನು ಅಂಗೀಕರಿಸಲು ಕಾಲದ ತೊಡಕೂ ಇದೆ. ಶಾಂತಿನಾಥ ಕವಿಯ ಪದ್ಯದ ಪ್ರಕಾರ ವೀರ ನೊಳಂಬ ದೇವನು ಭುವನೈಕಮಲ್ಲ ಮತ್ತು ವಿಕ್ರಮಾದಿತ್ಯ ಪೆರ್ಮ್ಮಾಡಿದೇವನಿಗಿಂತ ಸ್ವಲ್ಪ ಚಿಕ್ಕವನು (ನೇರ್ಗಿಱೆಯಂ). ಶಿಕಾರಿಪುರ ಶಾಸನದ ಕಾಲ ೧೦೬೮, ಮರೋಳ ಶಾಸನದ ಕಾಲ ೧೦೨೪. ಅಂದರೆ ೪೪ ವರ್ಷಗಳಷ್ಟು ಇಱೆವ ನೊಳಂಬಾಧಿರಾಜನು ದೊಡ್ಡವನೆಂದಾಯಿತು. ಆದ್ದರಿಂದ ಶಾಂತಿನಾಥ ಕವಿ ಸೂಚಿಸಿರುವ ವೀರ ನೊಳಂಬ ದೇವನು ಈ ಇಱೆವ ನೊಳಂಬನಲ್ಲ ಎಂಬುದು ನಿಶ್ಚಯ. ಇದೇ ಭುವನೈಕಮಲ್ಲ ವಿಕ್ರಮಾದಿತ್ಯರ ಸಮಕಾಲಿಕನಾಗಿದ್ದು ಚಾಳುಕ್ಯರ ಆಶ್ರಯದಲ್ಲಿ ನಾಡುಗಳನ್ನು ಆಳುತ್ತಿದ್ದ ಇನ್ನೊಬ್ಬ ನೊಳಂಬದೇವನಿದ್ದಾನೆ. ಭುವನೈಕಮಲ್ಲನ ತಂದೆಯಾದ ಅಹವಮಲ್ಲ ತ್ರೈಳೋಕ್ಯಮಲ್ಲ ಸೋಮೇಶ್ವರ | ರಾಜನು ಚಕ್ರವರ್ತಿಯಾಗಿ ಆಳುತ್ತಿವರು ಅವಧಿಯಲ್ಲಿ ‘ತ್ರೈಲೋಕ್ಯಮಲ್ಲ ನನ್ನಿ ನೊಳಂಬಿ ಇಮ್ಮಡಿ ಪಲ್ಲವ ಪೆರ್ಮಾನಡಿ’ ಯು (೧೦೪೪-೧೦೫೪) ಕೋಗಳಿ-೫೦೦. ಕಣೆಯಕಲ್ಲು -೩೦೦, ಕದಂಬಳಿಗೆ- ೧೦೦೦, ಬಲ್ಲಕುಂದೆ-೩೦೦, ಕುಡಿಹರವಿ-೭೦ ಎಂಬ ಈ ನಾಡುಗಳನ್ನು ಆಳುತ್ತಿದ್ದನು. [ಸೌ.ಇ.ಇ. ೯-೧, ೧೧೮, ಕ್ರಿ.ಶ. ೧೦೫೭] ತನ್ನ ಪ್ರಭುನಿಷ್ಠೆಯಿಂದ ಈತನು ಚಕ್ರವರ್ತಿಯ ವಾತ್ಯಲ್ಯ ಪಾತ್ರನಾಗಿದ್ದನು. ಜಗದೇಕಮಲ್ಲ ಇರ್ಮಡಿ ನೊಳಂಬ ಪಲ್ಲವ ಪೆರ್ಮಾನಡಿಯ (೧೦೩೭-೧೦೪೪) ತರುವಾಯ ನೊಳಂಬವಾಡಿ -೩೨೦೦೦ ಕ್ಕೆ ಈ ನನ್ನಿ ನೊಳಂಬನನ್ನು ಅಧಿಪತಿಯಾಗಿ ಸಿಂಹಾಸನ ಹತ್ತಿಸಿದವನೇ ತ್ರೈಲೋಕ್ಯಮಲ್ಲ [ಸೌ.ಇ.ಇ. ೯-೧, ನಂ. ೯೮, ಕ್ರಿ.ಶ. ೧೦೪೪] ತ್ರೈಲೋಕ್ಯಮಲ್ಲನು ತನ್ನ ಮೂವರು ಮಕ್ಕಳ ಜತೆಗೆ ಈ ನನ್ನಿನೊಳಂಬನನ್ನೂ ಇನ್ನೊಬ್ಬ ಮಗನೆಂದು ಪರಿಗ್ರಹಿಸಿದ್ದನು. ಆ ಪುತ್ರವಾತ್ಸಲ್ಯದ ಎರಕವಾಗಿ ತನ್ನ ಹೆಸರಿನ ಆದಿಭಾಗವನ್ನು ಇವನ ಹೆಸರಿಗೆ ಸೇರಿಸಲು ಅನುಮತಿಯಿತ್ತನು. ಅದರ ದ್ಯೋತಕವಾಗಿ ನನ್ನಿನೊಳಂಬದೇವನು ತ್ರೈಲೋಕ್ಯಮಲ್ಲ ನನ್ನಿನೊಳಂಬ || ಪಲ್ಲವ ಪೆರ್ಮಾಡಿ’ ಎಂಬ ಹೆಸರು ಪಡೆದನು.

ಚಾಳುಕ್ಯರಿಗೂ ಚೋಳರಿಗೂ ನೂರಾರು ವರ್ಷಗಳಿಂದ ಬದ್ದ ವೈರಬೆಳೆದು ಬಂದಿತ್ತು : ಇದು ಗಂಗರ ಆದರ್ಶವನ್ನು ಮುಂದುವರಿಕೆಯೇ ಚಾಳುಕ್ಯರು. ಚಾಳುಕ್ಯರ ನೈರಂತರ್ಯವೇ ಹೊಯ್ಸಳರು. ರಾಜರು- ರಾಜ್ಯ ಬೇರೆಯಾದರೂ ದಾರಿ ಗುರಿ ಆದರ್ಶಗಳು ನಿರಂತರವಾಗಿ ಜಿನಧರ್ಮರಕ್ಷಣೆಯನ್ನು ಹೊತ್ತು ಸಾಗಿತ್ತು. ತ್ರೈಲೋಕ್ಯಮಲ್ಲನ ಕಾಲದಲ್ಲೂ ಉದ್ದಕ್ಕೂ ಯುದ್ಧಗಳು ನಡೆದೇ ಇದ್ದುವು. ೧೦೫೩ ರಲ್ಲಿ ೫೪ ಕೊಪ್ಪಳ (ಕೊಪಣ-ಕೊಪ್ಪಂ) ದಲ್ಲಿ ನಡೆದ ಯುದ್ಧದಲ್ಲಿ ಚಾಳುಕ್ಯರು ಅಂತಿಮವಾಗಿ ಗೆದ್ದರೂ ಈ ವಿಜಯದ ರೂವಾರಿಯಾಗಿ ಹೋರಾಡಿದ ಈ ತ್ರೈಲೋಕ್ಯಮಲ್ಲ ನನ್ನಿನೊಳಂಬ ಇಮ್ಮಡಿ ಪಲ್ಲವ ಪೆರ್ಮಾನಡಿಯು ಹತನಾದನು. ವೀರ ಮರಣದಿಂದ. ವೀರ ನೊಳಂಅಬನೆನಿಸಿದನು [ಸೌ.ಇ.ಇ. ೩-೧, ಮಣಿಮಂಗಲಂ ಶಾಸನ ನಂ. ೨೯. ಕ್ರಿ.ಶ. ೧೦೫೪] ತ್ರೈಲೋಕ್ಯಮಲ್ಲ ಚಕ್ರಿಗೆ ಒಡಹುಟ್ಟಿದ ಪ್ರೀತಿಯ ತಮ್ಮನಾದ (ತತ್ ಪ್ರಿಯಾನುಜಂ) ಕುಮಾರ ಜಯಸಿಂಗ(ಹ) ದೇವನೂ (ಜಗದೇಕಮಲ್ಲ ||) ಸಹ ತನ್ನ ಅಣ್ಣನಿಗೆ ಇಂಥ ಯುದ್ಧಗಳಲ್ಲಿ ಇದೇ ನನ್ನಿನೊಳಂಬ ಮತ್ತು ಭುವನೈಕಮಲ್ಲರ ರೀತಿಯಲ್ಲಿ ನೆರವಾಗಿದ್ದನು [ಸೌ.ಇ.ಇ. ೯-೧, ೧೦೧] ಸಮರೈ ಕಮಲ್ಲ ದೇವನಾದ ಈ ಕುಮಾರ ಜಯಸಿಂಗ ದೇವನು ಬನ್ನಿಗೋಳದ ರಾಜ್ಯಪಾಲನಾಗಿದ್ದನು. (ಎ.ಇ. ೩೫, ಪು. ೩೭-೩೯. ಕ್ರಿ.ಶ. ೧೦೪೬) ಆದರೆ ಕೊಪ್ಪಳ (ಕೊಪ್ಪಂ) ದಲ್ಲಿ ೧೦೫೩-೧೦೫೪ರಲ್ಲಿ ಚೋಳರೊಂದಿಗೆ ನಡೆದ ಕಾಳಗದಲ್ಲಿ, ನನ್ನಿನೊಳಂಬನಂತೆ, ಈ ಕುಮಾರ ಜಯಸಿಂಹನೂ ಕೊಲ್ಲಲ್ಪಟ್ಟನು [ಸೌ.ಇ.ಇ. ೩, ೬೦].

ಈ ಎಲ್ಲ ಕಾರಣಗಳಿಂದ, ಪ್ರಸ್ತುತ ಚರ್ಚೆಗೆ ಕಾರಣನಾಗಿರುವ ಶಾಂತಿನಾಥ ಕವಿಯ ಶಿಕಾರಿಪುರ ಶಾಸನೋಕ್ತವಾದ ವೀರನೊಳಂಬ ದೇವನು ಈ ನನ್ನಿನೊಳಂಬ ದೇವನೆಂದು ತೀರ್ಮಾನಿಸಬಹುದೆ(?) ಈ ವೀರ ನನ್ನಿನೊಳಂಬದೇವನನ್ನು ತ್ರೈಲೋಕ್ಯ ಮಲ್ಲ ಚಕ್ರಿಯ ಮಕ್ಕಳಾದ ಭುವನೈಕಮಲ್ಲ ವಿಕ್ರಮಾಂಕಗಂಗ ಪೆರ್ಮಾಡಿ ಮತ್ತು ಜಯಸಿಂಹರು ತಮ್ಮ ಸೋದರನಂತೆಯೇ ಕಾಣುತ್ತಿದ್ದರೆಂದು ಶಾಂತಿನಾಥ ಕವಿಯ ಶಾಸನ ಪದ್ಯದಿಂದ ಖಚಿತಗೊಳ್ಳುತ್ತದೆಯೆ (?) – ಇದು ವಿಚಾರಣೀಯ. ಶಾಂತಿ ನಾಥನು ಈ ಶಾಸನವನ್ನು ಬರೆದಾಗ ವೀರನೊಳಂಬ ದೇವನು ವೀರ ಮರಣವನ್ನಪ್ಪಿ ಆಗಲೇ ೧೪ ವರ್ಷಗಳಾಗಿದ್ದುವು. ಅಲ್ಲದೆ ಇಲ್ಲಿ ಇನ್ನೊಂದು ಸಮಸ್ಯೆಯೂ ಉದ್ಭವಿಸುತ್ತದೆ. ಶಾಂತಿನಾಥನ ಪದ್ಯೋಕ್ತರಾದವರೆಲ್ಲ ಆ ಶಾಸನ ಬರೆದ ೧೦೬೮ ರಲ್ಲಿ ಜೀವತರಾಗಿದ್ದವರೇ ಎಂದು ಸ್ಪಷ್ಟವಾಗಿರುವಾಗ, ಜೀವಂತರ ನಡುವೆ ಈ ದಿವಂಗತ ನನ್ನಿನೊಳಂಬನನ್ನು ಸೇರಿಸಲಾಗಿಯೊ ಅಥವಾ ಇನ್ನೊಬ್ಬ ವೀರನೊಳಂಬ ದೇವನನ್ನು ಇಲ್ಲಿ ಪ್ರಸ್ತಾಪಿಸಲಾಗಿಯೊ ಎಂಬ ಸಂಶಯ ಕಾಡುತ್ತದೆ.

ತ್ರೈಲೋಕ್ಯಮಲ್ಲ ಚಕ್ರವರ್ತಿಗೆ ನೊಳಂಬ ಕುಲದ ರಾಣಿಯೊಬ್ಬಳಿದ್ದು ಆಕೆಯಿಂದ ಹುಟ್ಟಿದ ಮಗನೇ ‘ತ್ರೈಲೋಕ್ಯಮಲ್ಲ ನೊಳಂಬ ಪಲ್ಲವ ಪೆರ್ಮಾನಡಿ ಜಯಸಿಂಹ ದೇವ’ (ಜಯಸಿಂಹ ೪) ಎಂದು ತಿಳಿದು ಬರುತ್ತದೆ [B.L. Rice: Mysore and coorg from inscriptions (1969), p 58]. ಈ ತ್ರೈಲೋಕ್ಯಮಲ್ಲನೊಳಂಬ ಪೆರ್ಮಾನಡಿ ಜಯಸಿಂಹ ದೇವನು ಭುವನೈಕಮಲ್ಲ, ವಿಕ್ರಮಾದಿತ್ಯ – ಇವರಿಬ್ಬರಿಗಿಂತ ಚಿಕ್ಕವನಾಗಿದ್ದನೆಂದೂ ಸಹ ತಿಳಿದು ಬರುತ್ತದೆಯಲ್ಲದೆ ಈತನನ್ನು ಕ್ರಿ.ಶ. ೧೦೮೨ ರ ವರೆಗೆ ಜೀವಿಸಿದ್ದನೆಂಬುದಕ್ಕೆ ಆಧಾರಗಳಿವೆ. ತ್ರೈಳೋಕ್ಯಮಲ್ಲನೊಳಂಬ – ಪಲ್ಲವ ಪೆರ್ಮ್ಮಾಡಿ ಜಯಸಿಂಗ ದೇವನು [ಬೆಳ್ವಲ -೨೦೦ ಪುಲಿಗೆಱೆ-೨೦೦] ಎರಡಱು ನೂಱುಮಂ ಆಳುತ್ತಿದ್ದನು [ಎ.ಇ. ೧೬.ನಂ. ೨೪. ಪು. ೩೩೨] ನೊಳಂಬಾಧೀಶ್ವರ ಸಿಂಗಿದೇವ [ಸೌ.ಇ.ಇ. ೯-೨, ೨೦. ಪು. ೧೩-೧೮] ತ್ರೈಳೋಕ್ಯಮಲ್ಲವೀರ ನೊಳಂಬ ಪಲ್ಲವ ಪೆರ್ಮ್ಮಾನಡಿ ಜಯಸಿಂಹ ದೇವನು ಎರಡಱುನೂಱನ್ನು ೧೦೮೧ ರಲ್ಲೂ [ಎ.ಇ.೧೬, ನಂ. ೯ ಬಿ. ಲಕ್ಷೇಶ್ವರ ಕ್ರಿ.ಶ. ೧೦೮೧] ೧೦೮೨ ರಲ್ಲೂ [ಸೌ.ಇ.ಇ. ೨೦, ೫೫. ೧೦೮೨. ಲಕ್ಷ್ಮೇಶ್ವರ (ಧಾಜಿ./ಶಿರಹಟ್ಟಿತಾ.) ಪು. ೬೭] ಆಳುತ್ತಿದ್ದನು. ಈ ತ್ರೈಳೋಕ್ಯಮಲ್ಲ ನನ್ನಿನೊೞಂಬಾಧಿರಾಜನಿಗೆ ಪಟ್ಟಬದ್ಧವಾದದ್ದು ಶಕ ೯೬೬ ನೆಯ ತಾರಣ ಸಂವತ್ಸರದ ವೈಶಾಖ ಶುದ್ಧ ಪಂಚಮಿ ಬೃಹಸ್ಪತಿವಾರ [೫-೪-೧೦೪೪] : ಅಂದರೆ ೧೦೪೪ ರಿಂದ ೧೦೮೧ ರವರೆಗೆ ೩೭ ವರ್ಷ. ಆದ್ದರಿಂದ, ಶಾಂತಿನಾಥ ಕವಿಯ ಪದ್ಯದಲ್ಲಿ ಲಕ್ಷ್ಮನೃಪನನ್ನು ಬಿಟ್ಟರೆ, ಉಳಿದವರೆಲ್ಲ ಒಡಹುಟ್ಟಿದವರೇ ಆಗಿರುವ ಕಾರಣದಿಂದಲೂ ವೀರನೊಳಂಬದೇವನೆಂದು ಹೇಳಿರು ವುದು ತ್ರೈಲೋಕ್ಯಮಲ್ಲದೇವ ಚಕ್ರಿಯ ಸ್ವಂತ ಮಗನೇ ಆದ ತ್ರೈಲೋಕ್ಯ ಮಲ್ಲನೊಳಂಬ – ಪಲ್ಲವ – ಪೆರ್ಮಾನಡಿ – ಜಯಸಿಂಹದೇವನೇಂದೇ ಸ್ವೀಕರಿಸಬಹುದು ದಾಗಿದೆ. ಈ ರೀತಿಯಾಗಿ ಅಂಗೀಕರಿಸಿದಾಗ ಶಾಂತಿನಾಥ ಕವಿಯ ಪದ್ಯಕ್ಕೆ ಎರಡನೆಯ ಪಾದದಲ್ಲಿ ಅರ್ಥ ವಿವರಣೆಯಲ್ಲಿ ಸೂಕ್ತ ಬದಲಾವಣೆಯೂ ಆಗ ಬೇಕಾಗುತ್ತದೆ; ಭೌವನೈಕಮಲ್ಲನಾದ ನನಗೆ ಚಿಕ್ಕವನು ವಿಕ್ರಮಗಂಗನು, ಅವನಿಗಿಂತ ಸ್ವಲ್ಪ ಚಿಕ್ಕವನು ವೀರನೊಳಂಬ ದೇವನು; ನನಗಿಂತಲೂ ವಿಕ್ರಮಗಂಗ ಪೆರ್ಮಾಡಿಗಿಂತಲೂ, ವೀರನೊಳಂಬ ಜಯಸಿಂಹನಿಗಿಂತಲೂ (ಸಿಂಗಿಗಂ) ನೀನು ಲಕ್ಷ್ಮನೃಪನು ಚಿಕ್ಕವನಾಗಿ ದ್ದಿಯೇ- ಎಂಬ ತಾತ್ಪರ್ಯ ಮಾನ್ಯವಾಗುತ್ತದೆ. ಅಂದರೆ ಇಲ್ಲಿ ಸಿಂಗಿಗಂ ಎಂಬುದು ‘ವೀರನೊಳಂಬದೇವ ಜಯಸಿಂಹನಿಗೆ’ ಎಂಬರ್ಥದಲ್ಲಿಯೇ ನಿಲ್ಲುತ್ತದೆ.

ಶಿಕಾರಿಪುರ ಶಾಸನದಲ್ಲಿರುವ ಇನ್ನೆರಡು ಅಪೂರ್ವ ಐತಿಹಾಸಿಕ ಮಹತ್ವ ಗಳನ್ನೂ ನಾವು ಗಮನಿಸಬೇಕು: |. ಪ್ರೌಢಕವಿಯಾದ ಶಾಂತಿನಾಥರು ಚಮತ್ಕಾರವನ್ನು ಅಡಗಿಸಿದ್ದಾನೆ. ಈ ಪದ್ಯದಲ್ಲಿ ಹೆಸರಿಸಲಾದ ಭುವನೈಕಮಲ್ಲ, ವಿಕ್ರಮಾದಿತ್ಯ ಲಕ್ಷ್ಮನೃಪರು ವಿವಿಧ ವೃತ್ತಿಗಳಿಂದ ಆಳುತ್ತಿದ್ದರೆಂಬುದು ಇಲ್ಲಿನ ಧ್ವನ್ಯಾರ್ಥವಾಗಿದೆ. ಭವನೈಕಮಲ್ಲ ಮಹಾಮಂಡಲೇಶ್ವರನು ಬೀಳಾನುವ್ತಿತ್ತಿ ಬೀಳವೃತ್ತಿಯಿಂದ ಆಳುತ್ತಿದ್ದನು[ಬಾ.ಕ.ಇ.೧-೧.೪೮. ಕ್ರಿ.ಶ. ೧೦೪೯]. ವಿಕ್ರಮಾದಿತ್ಯನು ಕುಮಾರ ವೃತ್ತಿಯಿಂದ ಆಳುತ್ತಿದ್ದನು. [ಶಿಕಾರಿಪುರ ಶಾಸನ : ಪುರ್ವೋಕ್ತ]. ವೀರನೊಳಂಬ ಸಿಂಗಿಗನೂ ಕುಮಾರವೃತ್ತಿಯಿಂದ ತರ್ದವಾಡಿ ನಾಡನ್ನು ಮಾಂಡಲಿಕನಾಗಿಯೂ ನೊಳಂಬ ಸಿಂದವಾಡಿಯ ಪ್ರಭುವಾಗಿಯೂ ಆಳುತ್ತಿದ್ದನು. ಇವರಲ್ಲಿ ಎಲ್ಲರಿಗಿಂತ ಚಿಕ್ಕವನು ಲಕ್ಷ್ಮನೃಪನು. ಮಹಾಮಂಡಲೇಶ್ವರನಾಗಿದ್ದ ಭುವನೈಕಮಲ್ಲ ಸೋಮೇಶ್ವರನು ೧೦೬೮ ರಲ್ಲಿ ತಾನು ಪಟ್ಟಾಭಿಷಿಕ್ತನಾದಾಗ ತನ್ನ ಈ ವೃತ್ತಿ ಪದವನ್ನು ಹಸ್ತಾಂತರಗೊಳಿಸಿದನು.

ನೆತ್ತರನ್ನು ಹಂಚಿಕೊಂಡು ತನ್ನ ಒಡ ಹುಟ್ಟಿದವರ ರೀತಿಯಲ್ಲಿ, ಇನ್ನೊಬ್ಬ ಚಿಕ್ಕ ತಮ್ಮನೊ ಎಂಬಂತೆ ಇದ್ದ, ಅಣುಗಾಳು ಲಕ್ಷ್ಮನೃಪನಿಗೆ ತಾನು ಸುಮಾರು ಎರಡು ದಶಕ ಕಾಲ ಹೊಂದಿದ್ದ ಮಹಾಮಂಡಲೇಶ್ವರ ಪ್ರತಿವೃತ್ತಿ ಪದವನ್ನು ಸಮಗ್ರವಾಗಿ ಧಾರೆಯೆರೆದು ಕೊಟ್ಟನು. ತನ್ನ ತಂದೆ ತ್ರೈಳೋಕ್ಯಮಲ್ಲನು ಲಕ್ಷ್ಮನಿಗೆ ತೋರಿದ್ದ ರಾಜ ಕೃಪೆಯನ್ನು ಇತೋಸ್ಯತಿಶಯವಾಗಿ ಭುವನೈಕಮಲ್ಲನೂ ಮುಂದು ವರಿಸಿದನು. ಈ ಎಲ್ಲ ಕಾರಣಗಳಿಂದ ನಂದವಾಡಿಗೆ ಶಾಸನದ ಕಾಲವನ್ನು ಪುನರ್ ಪರಿಶೀಲಿಸಬೇಕಾಗುತ್ತದೆ. ಮಹಾಮಂಡಲೇಶ್ವರ ವೃತ್ತಿಪದವನ್ನು ೧೦೬೮ರಲ್ಲಿ ಬಿಟ್ಟು ಕೊಟ್ಟಿರುವ ಕಾರಣದಿಂದಾಗಿ ನಂದವಾಡಿಗೆ ಶಾಸನವು ಮುಂಚಿತವಾಗಿ, ಎಷ್ಟೇ ಗರಿಷ್ಠ ಅವಧಿಯೆನಿಸಿದರೂ ೧೦೬೭ ಕ್ಕಿಂತ ಹಿಂದೆ ರಚಿತವಾಗಿರಬೇಕು. ೨. ತ್ರೈಳೋಕ್ಯಮಲ್ಲ ಸೋಮೇಶ್ವರನಿಗೆ ಒಟ್ಟು ನಾಲ್ವರು ಮಕ್ಕಳು: ಭುವನೈಕಮಲ್ಲ ಸೋಮೇಶ್ವರ ೨, ವಿಕ್ರಮಾದಿತ್ಯ ೬, ನೊಳಂಬಾಧೀಶ್ವರ ಸಿಂಗಿದೇವ (ಜಯಸಿಂಹ ೪) ಮತ್ತು ಕೀರ್ತಿವರ್ಮ [೧.ಎ.ಇ.೩೫. ಪು. ೨೫೩. ಕ್ರಿ.ಶ. ೧೦೫೧ : ಸೌ.ಇ.ಇ. ೯.೨, ನಂ. ೨೨೦ Pp. ೧೩-೧೮] ಗೋವೈದ್ಯವೆಂಬ ತನ್ನ ವೈದ್ಯಶಾಸ್ತ್ರ ಗ್ರಂಥದಲ್ಲಿ ಕೀರ್ತಿವರ್ಮನು ತಾನು ಚಾಳುಕ್ಯ ಸೋಮೇಶ್ವರನ ಮಗನೆಂದೂ ವಿಕ್ರಮಾದಿತ್ಯನ ತಮ್ಮನೆಂದೂ ಹೇಳಿಕೊಂಡಿದ್ದಾನೆ: ಬ್ರಹ್ಮಶಿವ ಕವಿಯೂ ಸಮಯ ಪರೀಕ್ಷೆಯಲ್ಲಿ ಇದನ್ನು ಅನುಮೋದಿಸಿದ್ದಾನೆ; ಶಾಸನಗಳೂ ಈ ವಿಷಯವನ್ನು ಪುಷ್ಟೀಕರಿಸಿವೆ. [ಎನ್. ಲಕ್ಷ್ಮೀನಾರಾಯಣರಾವ್, ಕವಿಕೀರ್ತಿವರ್ಮ, ‘ಕ.ಸಾ.ಪ.ಪ.’ ೨೯-೧]. ವಸ್ತುಸ್ಥಿತಿ ಹೀಗಿದ್ದೂ ಶಾಂತಿನಾಥ ಕವಿಯ ಶಿಕಾರಿಪುರ ಶಾಸನದಲ್ಲಿ, ಒಂದು ರಾಜಕುಟುಂಬದ ಅಣ್ನತಮ್ಮಂದಿರನ್ನು ಹೇಳುವಾಗ, ಒಡಹುಟ್ಟಿದ ಒಬ್ಬ ತಮ್ಮನನ್ನೇ ಕೈಬಿಟ್ಟಿದ್ದೇಕೆ ಎಂಬುದು ಚಿಂತನೀಯ. ಚರಿತ್ರೆಯ ಈ ಮೌನವನ್ನು ಸ್ಪೋಟಿಸಲು ತಕ್ಕ ಆಧಾರಗಳು ದೊರೆತಾವು. [ನಾಗರಾಜಯ್ಯ, ಹಂಪ. : ವಿಷ್ಣುವರ್ಧನ – ವಿಜಯಾದಿತ್ಯ- ಕೀತಿವರ್ಮ : ೧೯೯೭].

ನಂದವಾಡಿಗೆ ಶಾಸನದ ಇನ್ನೆರಡು ಚಾರಿತ್ರಿಕವಾಗಿ ಗಮನಿಗೆ ಅರ್ಹವಾದ ಅಂಶಗಳನ್ನು ಕುರಿತು ಕೆಲವು ವಿವರಗಳನ್ನು ನೋಡಬಹುದು. ಅ) ಈ ಶಾಸನದಲ್ಲಿ ‘ರಾಜಧಾನಿಯಣ್ನಿಗೆಱೆಯೊಳ್ ಚೋಳಂಗೊಡ ಶ್ರೀಮತ್ತ್ರೈ ಪುರುಷದೇವ ಸಾಲೆಯಂ’ (ಸಾಲು ೧೩ ರಿಂದ ೧೫) ಧವಳಿತೋತ್ತುಂಗಮಾಂಗೆ ಮಾಡಿಸಿದ. ಉಲ್ಲೇಖವಿದೆ. ಇದು ಚಾಳುಕ್ಯರ ಸೈನ್ಯವು ತಮ್ಮ ಹಗೆಗಳಾದ ಚೋಳರನ್ನು ೧೦೫೪ರಲ್ಲಿ ಕೊಪ್ಪಳ (ಕೊಪ್ಪಂ) ಮಹಾ ಕಾಳಗದಲ್ಲಿ ಸೋಲಿಸಿ ಚೋಳರ ರಾಜಾಧಿರಾಜನನ್ನು ಕೊಂದು ಪಡೆದ ವಿಜಯದ ಸ್ಮರಣೆಗಾಗಿ ತ್ರೈಳೋಕ್ಯಮಲ್ಲನು ಅಣ್ಣಿಗೆರೆಯಲ್ಲಿ ಕಟ್ಟಿಸಿದ ತ್ರೈಪುರುಷ ದೇವಾಲಯವನ್ನು ಕಟ್ಟಿಸಿದ್ದು ೧೦೫೪ರಲ್ಲಿ. ತನ್ನ ತಂದೆ ಕಟ್ಟಿಸಿದ ದೇವಾಲಯಕ್ಕೆ ಮಗ ಮಹಾಮಂಡಲೇಶ್ವರ ಭುವನೈಕ ಮಲ್ಲನು ಮತ್ತೆ ಸುಣ್ಣ ಬಣ್ಣ ಸಾರಣೆ ಕಾರಣೆಗಳಿಂದ ಬೆಳ್ಳಗೆ ಹೊಳೆಯುವಂತೆ ಮಾಡಿಸಿದ್ದು ಕೆಲವು ವರ್ಷಗಳಾದಮೇಲೆಯೇ. ಆದ್ದರಿಂದ ನಂದವಾಡಿಗೆ ಶಾಸನವು ಮುಳುಗುಂದ, ಯಲಿಸಿರೂರ ಶಾಸನಗಳು ರಚಿತವಾದ ಮೇಲೆ ಬರೆಯಲಾಗಿರುವ ಶಾಸನವೆಂದು ಆಕರ ಪ್ರಮಾಣಗಳಿಂದ ದೃಢಪಡುತ್ತದೆ. ಹೀಗಾಗಿ ನಂದವಾಡಿಗೆ ಶಾಸನಕ್ಕೆ ಈಗ ಹೇಳುತ್ತ ಬಂದಿರುವ ೧೦೭೦ ಎಂಬ ಕಾಲ ನಿರ್ದೇಶನವನ್ನು ಬದಲಾಯಿಸಿ ಕೊಳ್ಳಬೇಕು: ಅದರ ಕಾಲ ೧೦೫೪ ರ ಅನಂತರ ಮತ್ತು ೧೦೬೮ ಕ್ಕಿಂತ ಮೊದಲು ಎಂದು ನಿಶ್ಚೈಸಬಹುದು; ಪ್ರಾಯಃ ನಂದವಾಡಿಗೆಯ ಶಾಸನವು ಕ್ರಿ.ಶ. ೧೦೬೫ರ ಸುಮಾರಿನಲ್ಲಿ ರಚಿತವಾಗಿರಬಹುದು.

ಆ) ನಂದವಾಡಿಗೆ ಶಾಸನದಲ್ಲಿ ತ್ರೈಳೋಕ್ಯಮಲನ ಮಡದಿ (ತತು ಪ್ರಿಯಾಂಗನೆ) ಪಿರಿಯರಸಿ ಮೈಳಲ ಮಹಾದೇವಿಯನ್ನು ‘ದಾನಚಿನ್ತಾಮಣಿ’ (ಸಾಲು ೧೬) ಅತ್ತಿಮಬ್ಬೆಗೆ ಹೋಲಿಸಿರುವುದು ಅರ್ಥಗರ್ಭಿತವಾಗಿದೆ. ಮೈಳಲ ದೇವಿಯು ಮಹಾರಾಣಿ, ಅತ್ತಿಮಬ್ಬೆ ಪ್ರಜೆ. ನಾಡನ್ನು ಆಳುವ ರಾಣಿಯನ್ನು ಪ್ರಜೆ ಅತ್ತಿಮಬ್ಬೆಗೆ ಹೋಲಿಸಿರುವುದರಲ್ಲಿ ಔಚಿತ್ಯವಿದೆ;

೧. ತ್ರೈಳೋಕ್ಯಮಲ್ಲನ ತಂದೆ ತಾತಂದಿರಾದ ತೈಲಪ || ಮತ್ತು ಸತ್ಯಾಶ್ರಯ (ಸತ್ತಿಗ) ರಿಂದ ದಾನಚಿಂತಾಮಣಿಯು ಪೂಜಿತಳಾಗಿದ್ದಳು [ಬಾ.ಕ.ಇ. ೧-೧, ನಂ. ೫೨; ಸೌ.ಇ.ಇ. ೧೧-೧, ಪು. ೩೯-೪೩]

೨. ಅತ್ತಿಮಬ್ಬೆಯ ತಂದೆ, ದೊಡ್ದಪ್ಪ, ತಾತ, ಮಾವ ಮೊದಲಾದ ಹಿರಿಯರೂ, ಗಂಡ ಮತ್ತು ಮಗನೂ ಈ ಚಾಳುಕ್ಯರಾಜ್ಯ ಸಂರಕ್ಷಣೆ ಸಂವರ್ಧನೆಗಾಗಿ, ಶ್ರಮಿಸಿ ಜೀವ ತೆತ್ತಿದ್ದರು. [ಪೊನ್ನ : ಶಾಂತಿ ಪುರಾಣಂ ಮತ್ತು ರನ್ನ : ಅಜಿತ ಪುರಾಣಂ]

೩. ತೈಲಪ || ಚಕ್ರಿಯೆ ದಾನಚಿಂತಾಮಣಿ ಅತ್ತಿಮಬ್ಬೆಯ ಮನೆಬಾಗಿಲಿಗೆ ಬಂದು ರಾಜಗೌರವಾದಿಗಳನ್ನು ಸಮರ್ಪಿಸಿ ಕೃತಕೃತ್ಯನಾಗಿದ್ದನು. [ಪೂರ್ವೋಕ್ತ ಶಾಸನಗಳು ಮತ್ತು ಕಾವ್ಯಗಳು]

೪. ಸ್ವತಃ ಅತ್ತಿಮಬ್ಬೆಯೇ ಚಾಲುಕ್ಯ ಸಾಮ್ರಜ್ಯದ ಕಷ್ಟಕಾಲದಲ್ಲಿ ನೆರವಿಗೆ ನಿಂತು ಧೈರ್ಯದಿಂದ ಮಾರ್ಗದರ್ಶನ ಮಾಡಿದ್ದಳು.

೫. ಅತ್ತಿಮಬ್ಬೆಯ ಮತ್ತು ಆಕೆಯ ಇದೀ ಮನೆತನದ ಋಣಭಾರದಿಂದ ಚಾಳುಕ್ಯ ಸಾಮ್ರಾಜ್ಯ ಜಗ್ಗುತ್ತಿತ್ತು [ಹಂಪ. ನಾಗರಾಜಯ್ಯ, ಪೀಠಿಕೆ, ಪೊನ್ನನ ಶಾಂತಿ ಪುರಾಣಂ (೧೯೮೧) ಪುಟ ೩೯ ರಿಂದ ೫೯]

ಅಂಥ ಅಸಾಮಾನ್ಯ ಮನೆತನದ ಸಾಧ್ವಿಮಣಿ ದಾನಚಿಂತಾಮಣಿಗೆ ಕೃತಜ್ಞತೆ ತೋರಿಸುವುದಕ್ಕಾಗಿ ಆಕೆಯೊಂದಿಗೆ ಪಟ್ಟಮಹಿಷಿ ಮೈಳಲದೇವಿಯನ್ನು ತುಲನೆ ಮಾಡಲಾಗಿದೆ. ಸ್ವಾರಸ್ಯವೆಂದರೆ ದಾನ ಮತ್ತು ಚಾರಿತ್ರ್ಯಶುದ್ಧಿಯುಳ್ಳ ಉನ್ನತ ಸ್ತ್ರೀಯರನ್ನು ದಾನಚಿಂತಾಮಣಿ ಅತ್ತಿಮಬ್ಬೆಯೊಂದಿಗೆ ಹೋಲಿಸುವ ಪರಂಪರೆ ಯೊಂದರ ಉದ್ಘಾಟನೆಯಾಗಿರುವುದೇ ಈ ನಂದವಾಡಿಗೆ ಶಾಸನದಿಂದ : ಕೆಲವು ನಿದರ್ಶನಗಳು : ೧. ನಂದವಾಡಿಗೆ ಶಾಸನ, ಕ್ರಿ.ಶ. ೧೦೬೫. ೨. ಎ.ಇ. ೧೫, ಪು. ೧೦೧. ಕ್ರಿ.ಶ. ೧೦೮೪ ೩. ಜೆ‍ಎಸ್‍ಐ, ಪು. ೨೨೯, ಕ್ರಿ.ಶ. ೧೦೯೪ ೪. ಎ.ಕ. ೨, ಶ್ರಬೆ ೧೩೨-೧೧೨೩ ಕ್ರಿ.ಶ. ೫. ಎ.ಕ. ೨, ಶಬೆ. ೩೮೪, ೧೧೩೫ ಕ್ರಿ.ಶ. ೬. ಎ.ಕ. ೪, ೯೪. ಕ್ರಿ.ಶ. ೧೧೪೨ ೭. ಎ.ಕ. ೮, ೩೭. ಕ್ರಿ.ಶ. ೧೧೪೭ ೮. ಎ.ಕ. ೨, ಶ್ರಬೆ. ೭೩. ಕ್ರಿ.ಶ. ೧೧೧೮ ೯. ಎ.ಕ. ೨, ಶ್ರಬೆ. ೧೨೪. ಕ್ರಿ.ಶ. ೧೧೮೨. ೧೦. ಎ.ಕ. ೮, ಸಾಗರ ೧೫೯, ಸೊರಬ ೧೪೦, ಸೊರಬ ೩೪೫ – ಇತ್ಯಾದಿ.

ಈ ಸಂಪ್ರಬಂಧದಿಂದ ಸ್ಥಾಪಿತವಾಗುವ ಅಂಶಗಳು :

೧. ನಂದವಾಡಿಗೆ, ಹೊಂಬಳ, ಯಲಿ-ಸಿರೂರ, ಮುಳುಗುಂದ – ಈ ಶಾಸನಗಳು ಸಮಾನ ವಸ್ತುವನ್ನು ಒಳಗೊಂಡಿವೆಯಾದ್ದರಿಂದ ಇವುಗಳು ತ್ರುಟಿತ ಭಾಗಗಳನ್ನು ಪುನಾರಚಿಸಬಹುದು.

೨. ನಂದವಾಡಿಗೆ ಶಾಸನೋಕ್ತನಾದ ಮಹಾಮಂಡಲೇಶ್ವರನು ಕಲ್ಯಾಣ ಚಾಳುಕ್ಯರ ಭುವನೈಕಮಲ್ಲ ಇಮ್ಮಡಿ ಸೋಮೇಶ್ವರನೇ ಎಂದು ಈ ಮೂರು ಶಾಸನಗಳ ಮತ್ತು ಇತರ ಅಂತರ-ಬಾಹ್ಯ ಪ್ರಾಮಾಣ್ಯಗಳ ತೌಲನಿಕ ಅಧ್ಯಯನದಿಂದ ಸ್ಥಿರಪಡುತ್ತದೆ.

೩. ಅಮ್ಮನ ಗಂಧವಾರಣಂ, ಭಾವನ ಗಂಧವಾರಣಂ, ಮಹಾ ಮಂಡಲೇಶ್ವರ – ಇವಿಷ್ಟು ಪಶ್ಚಿಮ ಚಾಳುಕ್ಯರ ಭುವನೈಕ ಮಲ್ಲನ ಹೆಸರು / ಬಿರುದು ಆಗಿವೆ; ಇದು ಚಾಲುಕ್ಯರ ಚರಿತ್ರೆಗೆ ನೆರವಾಗುವ ಹೊಸ ಮಾಹಿತಿ.

೪. ಅಮ್ಮನ ಗಂಧವಾರಣನೆಂಬ ಬಿರುದು ಇಮ್ಮಡಿ ತೈಲಪನ ಮಗನಾದ ಸತ್ಯಾಶ್ರಯ ಇಱೆವ ಬೆಡಂಗನಿಗೇ ಅಲ್ಲದೆ ತ್ರೈಳೋಕ್ಯಮಲ್ಲನ ಮಗ ಭುವನೈಕಮಲ್ಲನಿಗೂ ಇದೆ.

೫. ನಮ್ದವಾಡಿಗೆ ಶಾಸನೋಕ್ತವಾದ ಮಹಾಮಂಡಲೇಶ್ವರನೂ ಭಾವನಗಂಧ ವಾರಣನೂ ಅಜ್ಞಾತರಾಗಿ ಉಳಿಯದೆ ಈಗ ಜ್ಞಾತವಾಗಿ ಭುವನೈಕ ಮಲ್ಲನೇ ಆ ವ್ಯಕ್ತಿಯೆಂದು ತಿಳಿದುಬಂದಿರುವುದರಿಂದ ಆಗುವ ಪ್ರಯೋಜನಗಳು:

ಅ. ಆತನ ಬಹುಮುಖ ವ್ಯಕ್ತಿತ್ವದ ಪರಿಚಯ

ಆ. ಆತನ ಧರ್ಮ ಸಮನ್ವಯ ದೃಷ್ಟಿ

ಇ. ತಂದೆಯಲ್ಲಿಟ್ಟಿದ್ದ ಭಕ್ತಿ ನಿಷ್ಠೆ.

ಈ. ಆತನ ಪರಾಕ್ರಮದ ಅದ್ಭುತ ವರ್ಣನೆ

ಉ. ಆತ ಅಸಮರ್ಥನಾಗಿದ್ದನೆಂಬ ತಪ್ಪು ಕಲ್ಪನೆಯ ನಿವಾರಣೆ

೬. ನಂದವಾಡಿಗೆ ಶಾಸನದ ಕಾಲವನ್ನು ನಿರ್ಧರಿಸಲು ಮತ್ತು ಭುವನೈಕ ಮಲ್ಲನ ತಮ್ಮಂದಿರ ವ್ಯಕ್ತಿತ್ವವನ್ನು ತಿಳಿಯಲು ಷಿಕಾರಿಪುರದ ಶಾಸನವೂ ನೆರವಾಗಿದೆ.

೭. ದಾನಚಿಂತಾಮಣಿ ಅತ್ತಿಮಬ್ಬೆಯ ಬಿರುದನ್ನು ಚಾಳುಕ್ಯ ಚಕ್ರವರ್ತಿ ತ್ರೈಳೋಕ್ಯಮಲ್ಲನ ಪಿರಿಯರಸಿ ಮೈಳುದೇವಿಗೆ ಅನವ್ಯಿಸಿ ಹೇಳಿರುವುದು ಗಮನಾರ್ಹ: ಈ ಬಗೆಯ ಹೋಲಿಕೆಗಳ ಮುಂದಿನ ಶಾಸನ ಶ್ರೇಣಿಯಲ್ಲಿ ನಂದವಾಡಿಗೆ ಶಾಸನವೇ ಮೊಟ್ಟಮೊದಲನೆಯದು – ಕಾಲದ ದೃಷ್ಟಿಯಿಂದ

೮. ಈ ಬಗೆಯ ಹಲವು ಚಾರಿತ್ರಿಕ ಕಾರನಗಳಿಂದ ನಂದವಾಡಿಗೆ ಶಾಸನವು ವಿಶಿಷ್ಟವಾಗಿ ತೋರುತ್ತದೆ.

ಇದರ ಆಚೆಗೂ ನಿಂತು ಹೇಳಬಹುದಾದ ಮಾತು ಭುವನೈಕಮಲ್ಲ ಇಮ್ಮಡಿ ಸೋಮೇಶ್ವರ ಚಕ್ರಿಯ ಒಟ್ಟು ಜೀವಿತಾವಧಿಯ ಸ್ಥೂಲ ನಿದೇಶನಕ್ಕೆ ಸಂಬಂಧಿಸಿದ್ದು; ಪ್ರಾಯಃ ಈತನು ಕ್ರಿ.ಶ. ೧೦೨೫ ರಲ್ಲಿ ಜನಿಸಿ ೧೦೭೬-೭೮ ರ ಅವಧಿಯಲ್ಲಿ ಮರಣಿಸಿರಬಹುದು. ತ್ರೈಳೋಕ್ಯಮಲ್ಲ ಸೋಮೇಶ್ವರ | ಚಕ್ರಿಯ ಪಟ್ಟದ ಮೊದಲಿಗ ನಾಗಿ ಹುಟ್ಟಿದ ಈ ಭುವನೈಕಮಲ್ಲ ಸೋಮೇಶ್ವರ || ಚಕ್ರಿಯ ಪಟ್ಟದ ಬಿತ್ತರಿಯನ್ನೇರಿದ್ದು ಖಚಿತವಾಗಿರುವಂತೆ ಹುಟ್ಟಿದತೇದಿ, ಮರಣಿಸಿದ ತೇದಿ ಅಸ್ಖಲಿತವಾಗಿ ತಿಳಿಯದು.

[ಸೇರ್ಪಡೆ ಮಾತು : ಈ ಸಂಪ್ರಬಂಧದ ಮುಂದುವರಿಕೆ ರೂಪದಲ್ಲಿ ಡಾ. ಚನ್ನಬಸವ ಹಿರೇಮಠ ಅವರು – ‘ನಂದವಾಡಿಗೆ ಶಾಸನದ ಭಾವನಗಂಧವಾರಣ, ಒಂದು ಸ್ಪಷ್ಟನೆ’ – ಎಂಬ ಲೇಖನವನ್ನು ಬರೆದಿದ್ದಾರೆ: ಇತಿಹಾಸ ದರ್ಶನ, ಸಂಪುಟ, ೧೦ (೧೯೯೫) ಮತ್ತು ಸಾಧನೆ ೨೩-೩, ೪ (೧೯೯೪). ಇದರಲ್ಲಿ ಅವರು ನಂದವಾಡಿಗೆ ಶಾಸನದಲ್ಲಿ ಪ್ರಸ್ತಾಪಿತನಾದ ಭಾವನಗಂಧವಾರಣನು ಚಾಳುಕ್ಯರ ನಿಷ್ಠಾವಂತ ಸಾಮಂತನಾದ ಪೆರ್ಮಾಳ ಮಾದರಸನೆಂದು ಆಧಾರಗಳೊಂದಿಗೆ ತೋರಿಸಿದ್ದಾರೆ. ಅವರ ಸೂಚನೆ ಸಮರ್ಪಕವಾಗಿದ್ದು ಸ್ವೀಕಾರಯೋಗ್ಯವಾಗಿದೆ].