ಕರ್ನಾಟಕದ ಇತಿಹಾಸವನ್ನು ಅಭ್ಯಾಸ ಮಾಡುವವರು, ಕನ್ನಡ ಸಾಹಿತ್ಯವನ್ನು ವ್ಯಾಸಂಗ ಮಾಡುವವರು ಜೈನಧರ್ಮದ ಪರಿಚಯವಿಲ್ಲದೆ ಮುಂದೆ ಹೋಗು ವಂತಿಲ್ಲ. ಕನ್ನಡನಾಡಿನ ಮೇಲೆ ಜೈನಧರ್ಮದ ಪ್ರಭಾವ ಅಷ್ಟು ವ್ಯಾಪಕವಾಗಿದೆ. ಜೈನಧರ್ಮವು ಕ್ರಿಸ್ತಶಕದ ಆರಂಭದ ವೇಳೆಗಾಗಲೆ ಕರ್ನಾಟಕವನ್ನು ಪ್ರವೇಶಿಸಿದ್ದಿತು. ಅತ್ತ ಪುನ್ನಾಡು, ಇತ್ತ ಕಳ್ಬಪ್ಪು – ಇವೆರಡೂ ಕನ್ನಡನಾಡಿನಲ್ಲಿ ಜಿನಧರ್ಮದ ಪ್ರಾರಂಭದ ಕೇಂದ್ರಗಳಾಗಿದ್ದಂತೆ ತಿಳಿದು ಬರುತ್ತದೆ.

ಜೈನ ಮುನಿಗಳ ಪ್ರಸ್ತಾಪ ಮಾಡುವಾಗ, ಪರಿಚಯ ಹೇಳುವಾಗ ಅವರು ಯಾವ ಸಂಘಕ್ಕೆ ಸೇರಿದವರೆಂದು ಹೇಳುವುದು ವಾಡಿಕೆಯಾಗಿದೆ. ಕನ್ನಡನಾಡಿನ ದಿಗಂಬರ ಜೈನಾಚಾರ್ಯ ಪರಂಪರೆಯಲ್ಲಿ ಅತ್ಯಂತ ಪ್ರಾಚೀನವೂ ಮೂಲವೂ ಆದ ಸಂಘವನ್ನು ‘ಮೂಲಸಂಘ’ ವೆಂದೇ ನಿರ್ದೇಶಿಸಲಾಗಿದೆ. ಪುಷ್ಪದಂತ-ಭೂತಬಲಿ ಎಂಬ ಶಿಷ್ಯರು ಎಂಬ ಇಬ್ಬರು ಶಿಷ್ಯಾಗ್ರಣಿಗಳ ಗುರುವಾದ ಆಚಾರ್ಯ ಅರ್ಹದ್ಬಲಿಯು ಈ ಮೂಲ ಸಂಘವನ್ನು ಸೇನ, ನಂದಿ ದೇವ, ಸಿಂಹ – ಎಂಬುದಾಗಿ ನಾಲ್ಕು ಶಾಖೆ ಮಾಡಿದನೆಂದು ಶ್ರವಣಬೆಳಗೊಳದ ಶಾಸನವೊಂದರ ಹೇಳಿಕೆ. ಮೂಲಸಂಘವಲ್ಲದೆ ದ್ರಾವಿಡಸಂಘ, ನಂದಿಸಂಘ, ಯಾಪನೀಯಸಂಘ ಮುಂತಾದ ಇನ್ನಿತರ ಸಂಘಗಳೂ ಇವೆ. ಕಾಣೂರುಗಣ, ದೇಶೀಯಗಣ ಮುಂತಾದ ಹತ್ತಾರು ಗಣಗಳಿವೆ. ಇಂತಹ ಗಣಗಳ ಒಳಗುಂಪು ಗುಚ್ಛಗಳು. ಚಿತ್ರಕೂಟಗಚ್ಛ, ಪುಸ್ತಕ (ಸರಸ್ವತಿ) ಗಚ್ಛ ಎಂಬ ಕೆಲವು ಗಚ್ಛಗಳು ಕಂಡುಬರುತ್ತವೆ. ಇಂತಹ ಗಚ್ಛದ ಶಾಖೆಯಾಗಿ ‘ಅನ್ವಯ’ ಗಳಿರುತ್ತವೆ: ಅರುಗಂಳಾನ್ವಯ, ಕೊಂಡಕುಂದಾನ್ವಯ, ಇತ್ಯಾದಿ. ಇದಕ್ಕೆ ಹೊಂದಿ ಕೊಂಡದ್ದು ‘ಬಳಿ’ ಇಂಗುಳೇಶ್ವರಬಳಿ, ಪಸಸೋಗೆ ಬಳಿ.

ಈ ಸಂಘ, ಗಣ, ಗಚ್ಛ, ಅನ್ವಯ ಮತ್ತು ಬಳಿ – ಇವುಗಳ ಹೆಸರುಗಳನ್ನು ವಿಶ್ಲೇಷಿಸಿ ಅಭ್ಯಸಿದಾಗ ಕಂಡುಬರುವ ವಿಶೇಷಗಳನ್ನು ವಿವರಿಸಹುದು. ಇವುಗಳಲ್ಲಿ ಕೆಲವು ಹೆಸರುಗಳು ವ್ಯಕ್ತಿಯ ಹೆಸರಿನಿಂದ ಕೂಡಿವೆ: ಕೊಂಡಕುಂದ. ಕೀರ್ತಾಚಾರ್ಯ. ಇನ್ನು ಕೆಲವು ಹೆಸರುಗಳು ಊರುಗಳ ಹೆಸರುಗಳನ್ನು ಸೂಚಿಸುತ್ತವೆ: ಕಿತ್ತೂರುಸಂಘ, ಕಾಣೂರುಗಣ ಪ(ಹ)ನಸೋಗೆಬಳಿ. ಜೈನಧರ್ಮದ ಒಟ್ಟು ಹಿನ್ನೆಲೆಯಲ್ಲಿ ಹೇಗೊ ಹಾಎ, ಕರ್ನಾಟಕದ ಸಂದರ್ಭದಲ್ಲಿ ಈ ಗಣ ಗಚ್ಛ ಅನ್ವಯಗಳ ಅರ್ಥ ವ್ಯಾಪ್ತಿ ಮತ್ತು ವಿಶೇಷ ಮಹತ್ವ ಕುರಿತು ಇನ್ನೂ ಸಂಶೋಧನೆಗೆ ಬಾಗಿಲು ತೆರೆದಿದೆ. ಈ ಶಬ್ದಗಳ ಸ್ಪಷ್ಟ ಹಾಗೂ ಖಚಿತ ವಿವೇಚನೆಗೆ ತೌಲನಿಕ ಅಧ್ಯಯನಕ್ಕೆ ಸಾಕಷ್ಟು ಸಾಮಗ್ರಿಯು ಸಾಹಿತ್ಯದಲ್ಲೂ ಶಾಸನಗಳಲ್ಲೂ ಸಿಗುತ್ತದೆ.

ಜೈನಸಂಘಗಳನ್ನು ಹೇಳುವಾಗ ಸಾಮಾನ್ಯವಾಗಿ ಮೂಲಸಂಘ, ಕಿತ್ತೂರು ಸಂಘ, ದ್ರಾವಿಡಸಂಘ, ನಂದಿಸಂಘ, ಯಾಪನೀಯಸಂಘ, ಶ್ರೀ ಸಂಘ ಇವನ್ನು ಹೆಸರಿಸುತ್ತಾರೆ; ಈ ಸಂಘಗಳಂತೆ ಪ್ರಸಿದ್ಧವಾದ ಇನ್ನೊಂದು ಸಂಘದ ಕೈಬಿಡುತ್ತಾರೆ. ಆ ಇನ್ನೊಂದು ಸಂಘವೇ ‘ನವಲೂರುಸಂಘ’, ಈ ಲೇಖನದಲ್ಲಿ ಮುಖ್ಯವಾಗಿ ನವಲೂರು ಸಂಘವನ್ನು ಕುರಿತು ದೊರೆಯುವಷ್ಟು ಮಾಹಿತಿಯನ್ನು ಮಂಡಿಸಲಾಗಿದೆ. ನವಿಲೂರು ಸಂಘದ ಪ್ರಪ್ರಥಮ ಉಲ್ಲೇಖ ಏಳನೆಯ ಶತಮಾನದ ಶಾಸನದಲ್ಲಿ ಸಿಗುತ್ತದೆ. ಶ್ರವಣಬೆಳ್ಗೊಳದ ಚಂದ್ರಗಿರಿಯಲ್ಲಿರುವ ಚಾವುಂಡರಾಯ ಬಸದಿಯ ಬಲಗಡೆ ಇರುವ ಬಂಡೆಯ ಮೇಲೆ ಈ ಶಾಸನವನ್ನು ಕೆತ್ತಲಾಗಿದೆ. ಇದು ನಾಲ್ಕು ಸಾಲಿನ ಶಾಸನ : [ಎ.ಕ. ೨ (ಪ). ೧೧೨ (೯೭). ೭ ಶ. ಪು. ೭೩].

            ನವುಲೂರಾ ಸಿರಿಸಂಘದಾಜಿಗಣದಾ ರಾಜ್ಞೀಮತೀಗನ್ತಿಯಾರ್
ಅಮಲಂ ನಲ್ತಪ ಶೀಲದಿಂ ಗುನದಿನಾಮಿಕ್ಕೋತ್ತಮರ್ಮ್ಮೀಳೆದೋರ್
ನಮಗಿನ್ದೊಱೆದು ಯೆನ್ದು ಏಱೆ ಗಿರಿಯಾನ್ಸನ್ಯಾಸನಂ ಯೋಗದೊಳ್
ನಮೊಚಿತ್ತಯುಂ ಶೆಮನ್ತ್ರಮಣ್ಮಱಿ. ಎ ಸ್ವರ್ಗ್ಗಾಲಯಂ ಏಱೆದಾರ್
|[1]

ಈ ಮತ್ತೇಭವಿಕ್ರೀಡಿತ ವೃತ್ತದಲ್ಲಿ ರಾಜ್ಞೀಮತಿಕಂತಿಯರು ನವಿಲೂರು ಸಂಘದವರೆಂದು ಹೇಳಿರುವುದು ಗಮನಿಸಬೇಕು. ನಮಿಲೂರು ಎಂಬುದು ದ್ವಿತೀಯಾಕ್ಷರ ಪ್ರಾಸ ಸೌಕರ್ಯಕ್ಕಾಗಿ ಕವಿಯು ಮಾಡಿಕೊಂಡಿರುವ ಮಾರ್ಪಾಟು; ವಕಾರವು ಮಕಾರ ಆಗಿದೆ. ಇಲ್ಲಿ ಉಲ್ಲೇಖಿಸಿರುವುದು ನವಿಲೂರುಸಂಘ ಎಂಬುದನ್ನು. ಇದೇ ಏಳನೆಯ ಶತಮಾನಕ್ಕೆ ಸೇರಿದ ಇನ್ನೊಂದು ಶಾಸನದ ಪ್ರಸ್ತಾಪವು ಸ್ಪಷ್ಟಪಡಿಸುತ್ತದೆ. ಈ ಎರಡೂ ಶಾಸನಗಳು ಶ್ರವಣಬೆಳಗೊಳದ ಚಿಕ್ಕಬೆಟ್ಟದ ಮೇಲಿರುವ ಚಾಮುಂಡರಾಯ ಬಸದಿಯ ಬಲಗಡೆ ಬಂಡೆಯ ಮೇಲಿವೆ ಎಂಬುದೂ ಮುಖ್ಯವಾಗುತ್ತದೆ. ಮೇಲೆ ಉದಾಹರಿಸಿರುವ ಶಾಸನವು ರಾಜ್ಞೀಮತಿ ಕಂತಿಯರು ಸನ್ಯಸನ ವಿಧಿಯಿಂದ ಪಡೆದ ಸಮಾಧಿ ಮರಣವನ್ನು ತಿಳಿಸಿದೆ. ಇದರಂತೆ, ಮುಂದಿನ ಶಾಸನವು ಅನಂತಮತಿ ಕಂತಿಯರು ನೋಂತು ಪಡೆದ ಮಹಾಮರಣವನ್ನು ತಿಳಿಸುತ್ತದೆ. ಈ ಬಗೆಯಲ್ಲಿರುವ ವಸ್ತುಸಮಾನತೆಯನ್ನು ಕೂಡ ಸಂಶೋಧಕರು ನೆನಪಿಡಬೇಕಾಗುತ್ತದೆ : [ಅದೇ, ೧೧೩ (೯೮). ೭ ಶ. ಪು. ೭೩].

            ತಪಮಾನ್ದ್ವಾದಶದಾ ವಿಧಾನಮುಖದಿನ್ಕೆಯ್ದೊನ್ದುತಾ ಧಾತ್ರಿ ಮೇಲೆ
ಚಪಲಿಲ್ಲಾ ನವಿಲೂರ ಸಂಘದ ಮಹಾನನ್ತಾಮತೀಗನ್ತಿಯಾರ್
ವಿಪುಲಶ್ರೀಕಟವಪ್ರನಲ್ಗಿರಿಯ ಮೇಲ್ನೋನ್ತೊಂದು ಸನ್ಮಾರ್ಗ್ಗದಿನ್
ಉಪಮೀಲ್ಯಾ ಸುರಲೋಕಸೌಖ್ಯದೆಡೆಯಾನ್ತಾಮೆಯ್ದಿ ಇೞ್ದಾಳ್ ಮನಮ್ [2]

ಶ್ರವಣಬೆಳುಗೊಳದ ಮಜ್ಜಿಗಣ್ಣನ ಬಸದಿಯ ಹಿಂದೆ ಬಂಡೆಯ ಮೇಲೆ, ಈಶಾನ್ಯಕ್ಕೊಂದು ಹಾಗೂ ಪೂರ್ವ ದಿಕ್ಕಿಗೊಂದು – ಹೀಗೆ ಇನ್ನೆರಡು ಶಾಸನಗಳಲ್ಲಿ,[3] ನವಿಲೂರುಸಂಘವನ್ನು ಹೆಸರಿಸಲಾಗಿದೆ. ಎಕ. ೨(ಪ.). ೧೧೮ (೧೦೩) ನೆಯ ಶಾಸನ ದಲ್ಲಂತೂ ಈ ಸಂಘವನ್ನು “ಸ್ವಸ್ತಿ ಶ್ರೀಮತ್ ನವಿಲೂರ್ಸಂಘ” ಎಂದು ಗೌರವಾದರಗಳಿಂದ ನಮೂದಿಸಲಾಗಿದೆ. ಶಾಸನ ಸಂಖ್ಯೆ ಅದೇ, ೧೨೧(೧೦೬) ರಲ್ಲೂ ‘ಸ್ಚಸ್ತೀಶ್ರೀ ನವಿಲೂರಾ ಶ್ರೀ ಸಂಘ’ ಎಂದು ತಿಳಿಸಿ, ಈ ಸಂಘದ ಗುರುವಾದ ಮೌನಿಯಾಚಾರ್ಯರನ್ನೂ ಅವರ ಶಿಷ್ಯ ಅನಿಂದಿತಗುಣಗಳ್ಳನಾದ ವೃಷಭನಂದಿ ಮುನಿಯನ್ನೂ ಹೆಸರಿಸಿದೆ. (ಮತ್ತೇಭವಿಕ್ರೀಡಿತ ವೃತ್ತ – ಕೆಲವು ದೋಷಗಳಿವೆ):- ನವಿಲೂರಾಶ್ರೀಸಂಘದುಳ್ಳೆ, ಗುರವಂ ನಮ್ಮೌನಿಯಾಚಾರಿಯರ್ ಅವರಾಶಿಷ್ಯರನಿನ್ದಿ ತಾರ್ಗ್ಗುಣಮಿ…. ವೃಷಭನನ್ದೀಮುನೀ ಭವವಿಜ್ಜೈನ ಸುಮಾರ್ಗ್ಗದುಳ್ಳೆ ನಡದೊಂದಾ ರಾಧನಾ ಯೋಗದಿನ್ ಅವರುಂ ಸಾಧಿಸಿ ಸ್ವರ್ಗಲೋಕ ಸುಖಚಿತ್ತಂ… ಮಾಧಿಗಳ್ [ಎ.ಕ. ೨(ಪ) ೧೨೧ (೧೦೬) ಸು. ೭-೮ ಶ. ಪು. ೭೫. ಸಾಲು : ೨-೫] ಶಾಸನ ೧೨೨ (೧೦೭) ರಲ್ಲಿ ಎರಡನೆಯ ಪಂಕ್ತಿ ‘ನವಿಲ್ವರಸಂ…..’ ಎಂದು ತ್ರುಟಿತವಾಗಿದೆ. ಇದು ಪ್ರಾಯಃ ‘ನವಿಲ್ವರ ಸಂಘದುಳ್ಳೆ’ ಎಂದಿರಬಹುದು. ಇದೇ ಮಜ್ಜಿಗಣ್ಣನ ಬಸದಿಯ ಹಿಂದೆ ಬಂಡೆಯ ಮೇಲ್ಗಡೆ ಆಗ್ನೇಯಕ್ಕಿರುವ ಎರಡೇ ಎರಡು ಸಾಲಿನ ಪುಟ್ಟ ಶಾಸನ ಇಂತಿದೆ:

            ಶ್ರೀ ಮೇಘನನ್ದಿಮುನಿ ತಾತ್ನ ಮಿಲೂರ್ವ್ವರಸಂಘದಾ-
…. ತೀರ್ತ್ಥದಿ ಸಿದ್ಧಿಯಾನ್ [4]

[ಅದೇ, ೧೨೪ (೧೦೯) ಸು. ೮ ಶ. ಪು. ೭೬]

ಇಲ್ಲಿ ಎರಡನೆಯ ಪಾದದಲ್ಲಿ ಕಾಣೆಯಾಗಿರುವ ಮೂರು ಅಕ್ಷರಗಳು ಮೂರು ಅಕ್ಷರಗಳು [ಕೞ್ವಪ್ಪು] ಎಂಬುದಾಗಿ ಪರಿಗ್ರಹಿಸಬಹುದು. ಏಕೆಂದರೆ ಅನ್ಯತ್ರ ಕೞ್ವಪ್ಪುತೀರ್ಥ ವೆಂಬ ಸೂಚನೆಗಳು ಶಾಸನದಲ್ಲಿವೆ ಸಿಗುತ್ತವೆ.

ಎರಡುಕಟ್ಟೆ ಬಸದಿಯ ಹಿಂದೆ ಬಂಡೆಯ ಮೇಲೆ ಪಶ್ಚಿಮಕ್ಕೆ ಕೆತ್ತಿರುವ ಒಂದೇ ಒಂದು ಸಾಲು ಹೀಗಿದೆ: “ಶ್ರೀನವಿಲೂಎಸಂಘದಾ ಗುಣಮತಿಅವ್ವೆಗಳಾ ನಿಸಿಧಿಗೆ.”[5] [ಅದೇ. ೧೨೯ (೧೧೨)] ಇದು ಏಳನೆಯ ಶತಮಾನದ ಬರವಣಿಗೆಯಾಗಿದ್ದು, ಈ ಲೇಖನದ ಮೊದಲಲ್ಲಿ ಉದಾಹರಿಸಿದ ಎರಡು ಶಾಸನಗಳಂತೆ. ನವಿಲೂರು ಸಂಘದ ಪ್ರಾಚೀನತೆಯನ್ನು ಎತ್ತಿ ಹಿಡಿಯುತ್ತದೆ. ಇದಕ್ಕೆ ಪುಷ್ಟಿಕೊಡಲೆಂಬಂತೆ ೧೩೨ (೧೧೪) ನೆಯ ಶಾಸನವೂ ಏಳನೆಯ ಶತಮಾನದ್ದಾಗಿದೆ. ಆದರೆ ಈ ಶಾಸನದಲ್ಲಿ ನವಿಲೂರು ಎಂಬ ಕನ್ನಡದ ಹೆಸರನ್ನು (ಅಂಕಿತನಾಮವನ್ನು) ಸಂಸ್ಕೃತೀಕರಣಗೊಳಿಸಿ ‘ಮಯೂರ ಗ್ರಾಮ’ ಎಂದೂ ಕರೆಯಲಾಗಿದೆ:

            ಶ್ರೀ ಶುಭಾನ್ವಿತ ಶ್ರೀನಮಿಲೂರಸಂಘದಾ ಪ್ರಭಾವತೀ…….
ಪ್ರಭಾಖ್ಯಮೀಪರ್ವ್ವತದುಳ್ಳೆ ನೋನ್ತು ತಾಮ್
ಸ್ವಭಾವಸೌನ್ದರ್ಯ್ಯಕರಾಙ್ಗರಾದ್ಗಿಪರ್
ಗ್ರಾಮೇ ಮಯೂರಸಂಘೇಸ್ಯ ಆರ್ಯಕಾದಮಿತಮತೀ
ಕಟ್ಟಪ್ರಗಿರಿಮಧ್ಯಸಾ ಸಾಧಿತಾ ಚ ಸಮಾಧಿತಾ
||[6]

ಶಾಸನದ ಆರಂಭದ ಸಾಲಿನ ಕಡೆಯ ಒಂಬತ್ತು ಅಕ್ಷರಗಳು ಇಲ್ಲವಾಗಿವೆ. ಹೊರಟು ಹೋಗಿರುವ ಅಕ್ಷರಗಳನ್ನು ಊಹಿಸಬಹುದೆಂದು ನನಗೆ ತೋರುತ್ತದೆ. ಅದರಂತೆ

“ಪ್ರಭಾವತೀ [ಗನ್ತಯಾರ್ ಶ್ರೀ ಕಟವಪ್ರ]” ಎಂದಿರಬಹುದೆನಿಸುತ್ತದೆ. ಇದೇನೇ ಇರಲಿ, ಈ ಶಾಸನದ ಪೂರ್ವಾರ್ಧ ಕನ್ನಡವಾಗಿದ್ದು ನವಿಲೂರು ಎಂದಿದೆ; ಉತ್ತರಾರ್ಧವು ಸಂಸ್ಕೃತ ಶ್ಲೋಕವಾದ್ದರಿಂದ, ಮಯೂರಸಂಘ ಎಂಬುದಾಗಿ ಭಾಷಾಂತರಗೊಂಡಿದೆ.

ವಾಸ್ತವವಾಗಿ, ಇದೇ ರೀತಿಯಾದ ಇನ್ನೊಂದು ಶಾಸನವಿದ್ದು, ಕನ್ನಡ-ಸಂಸ್ಕೃತ ಮಿಶ್ರಣ ರಚನೆಯನ್ನು ಅಲ್ಲಿ ಕಾಣಬಹುದಾಗಿದೆ: ಅದು ೧೨೩ (೧೦೮) ನೆಯ ಶಾಸನ. ಅದರಲ್ಲಿ ಸ್ಪಷ್ಟವಾಗಿ ‘ಅಯೂರ-ಗ್ರಾಮ – ಸಂಘಸ್ಯ’ ಎಂದು ಬರೆಯಲಾಗಿದೆ. ಇದರಿಂದಾಗಿ ನವಿಲೂರುಸಂಘವು ‘ನವಿಲೂರು’ ಎಂಬ ಊರಿನಿಂದ ಮಹತ್ವ ಪಡೆದುಕೊಂಡಿದೆಯೆಂದು ಅಭಿಪ್ರಾಯ ಹೊರಬೀಳುತ್ತದೆ. ಈ ಊರು ಯಾವುದು ಎಂಬುದು ನಮ್ಮ ಮುಂದಿನ ಪ್ರಶ್ನೆಯಾಗುತ್ತದೆ. ನವಿ(ವ)ಲೂರು ಎಂಬ ಹೆಸರಿನ ಊರುಗಳ ಉಲ್ಲೇಖವು ಶಾಸನಗಳಲ್ಲಿದೆ. ಎ.ಕ. ೩, ಪುಟ ೨೯೯, ೩೦೫ ರಲ್ಲೂ ಎ.ಕ ೪, ಪುಟ ೧೦, ೧೪೭ ರಲ್ಲೂ ಎ.ಕ. ೫, ಪುಟ ೩೪೧, ೩೪೪, ೩೪೫, ೩೯೬ ರಲ್ಲೂ ನವಿಲೂರು ಎಂಬ ಊರಿನ ನಿರ್ದೇಶನವಿದೆ. ಅಷ್ಟೇಕೆ, ಎ.ಕ. ೨, ಪುಟ ೧೫ ರಲ್ಲೇ ನವಿಲೂರು ಪ್ರಸ್ತಾಪ ಸಿಗುತ್ತದೆ: ‘….ನವಿಲೂರ ನಾೞ್ಗಾಮುಣ್ಡರುಂ’ [ಶಾಸನ ೩೮(೩೫)]. ಎ.ಕ. ೩ ರಲ್ಲಿ ನವಲೆ ನಾಡು ಎಂಬೊಂದು ನಾಡಿನ ಉಲ್ಲೇಖವನ್ನು ಇಲ್ಲೇ ಗಮನಿಸಬದುಗಿದೆ:

            …… ದೋರ್ದ್ದಣ್ಡ ಸಕಳವಿದ್ಯಾನಿಧಿ ಶ್ರೀಮದೆಱೆಪ್ಪೆರಸರ್ ನುಗು
ನಾಡು ನವಲೆನಾಡುಮಾನಾಳುತ್ತಮಿರ[7]

ಇದೇ ಶಾಸನ ಸಂಪುಟದಲ್ಲಿ (೩) ಪುಟ ೪೫೦, ೪೬೬, ೪೬೭ ರಲ್ಲೂ ಈ ನವಲೆನಾಡು ಪ್ರಸ್ತಾಪವಿದೆ. ನವಿಲೂರು-ನವಲೆನಾಡು ಸಂಬಂಧ ಪಡೆದಿದೆಯೆ, ಇಲ್ಲವೆ ಎಂಬುದನ್ನೂ ಸಂಶೋಧಿಸಬಹುದಾಗಿದೆ.

ಇದುವರೆಗಿನ ಸಮೀಕ್ಷೆಯಿಂದ ಹೊರಪಡುಅ ಸಂಗತಿಗಳನ್ನು ಅನುಲಕ್ಷಿಸಿ ಸಂಶೋಧಕರು ಕೆಲವು ತೀರ್ಮಾನಗಳನ್ನು ತಳೆಯಬಹುದು:

೧. ನವಿಲೂರುಸಂಘ ಒಂದು ಪ್ರಾಚೀನವಾದ ಜೈನ ಸಂಘ. ಇದು ಕರ್ನಾತಕಕ್ಕೆ ಮಾತ್ರ ಸೀಮಿತವಾಗಿದ್ದಂತೆ ಕಾಣುತ್ತದೆ.

೨. ನವಿಲೂರುಸಂಘದ ಸಂಬಂಧವು ಶ್ರವಣಬೆಳುಗೊಳಕ್ಕೇ ವಿಶಿಷ್ಟವಾಗಿ ಹೊಂದಿಕೊಂಡಿದೆ.

೩. ನವಿಲೂರುಸಂಘದ ಪ್ರಸ್ತಾಪ ಶ್ರವಣಬೆಳುಗೊಳದ ಶಾಸನಗಳಲ್ಲಿ ಏಳನೆಯ ಶತಮಾನದಿಂದಲೇ ಕಂಡುಬರುತ್ತದೆ.

೪. ಎ.ಕ. ೨ ರಲ್ಲಿ ಹೇಳಿರುವಂತೆ, ಈ ಸಂಘದ ಹೆಸರು ಶ್ರವಣಬೆಳುಗೊಳದ ಶಾಸನಗಳಲ್ಲಿ ಮಾತ್ರ ಉಲ್ಲೇಖವಾಗಿರುವುದನ್ನೂ ಅನ್ಯತ್ರ ಎಲ್ಲಿಯೂ ಕಂಡುಬಂದ ಹಾಗೆ ಇಲ್ಲವೆಂಬುದನ್ನೂ ವಿಶೇಷವಾಗಿ ಗಮನಿಸಬೇಕಾಗಿದೆ. ಜತೆಗೆ ಕಾವ್ಯಗಳಲ್ಲೂ ಇದರ ಪ್ರಸ್ತಾಪ ಬಂದಂತಿಲ್ಲ.

೫. ಏಳನೆಯ ಶತಮಾನದಲ್ಲಿ ಆರಂಭವಾದ ನವಿಲೂರುಸಂಘದ ಉಲ್ಲೇಖವು ಮತ್ತೆ ಅನಂತರದ ಅವಧಿಯಲ್ಲಿ ಅನ್ಯತ್ರ ಪ್ರಸ್ತಾಪಗೊಳ್ಳದೆ ಒಮ್ಮೆಲೇ ನಿಂತುಹೋಗಿದೆ. ಎಷ್ಟು ಬೇಗ ಕಾಣಿಸಿಕೊಂಡಿತೋ ಅಷ್ಟೇ ಬೇಗ ಇದು ಕಣ್ಮರೆಯಾದುದರ ರಹಸ್ಯ ತಿಳಿಯದಾಗಿದೆ.

೬. ರಾಜ್ಞೀಮತಿಗಂತಿ, ಅನಂತಮತಿಗಂತಿ, ಪುಷ್ಪಸೇನಾಚಾರ್ಯ, ಮೌನಿ ಆಚಾರ್ಯ ಮೇಘನಂದಿ ಮುನಿ- ಮುಂತಾದ ಕಂತಿಯರ ಮತ್ತು ಮುನಿಗಳ ಆಚಾರ್ಯರ ಸಮಾಧಿ ಮರಣ ಮತ್ತು ನಿಸಿದಿಗೆ ಬಿಟ್ಟು ಬೇರೆ ಸಂಗತಿಗಳು, ನವಿಲೂರು ಸಂಘದ ಸಂಬಂಧವಾಗಿ ತಿಳಿಯದಾಗಿದೆ.

೭. ನವಿಲೂರುಸಂಘ ಎಂಬುದು ಕನ್ನಡನಾಡಿನ ಒಂದು ಸ್ಥಳದಿಂದ ಆರಂಭಗೊಂಡ ಶಾಖೆಯೆಂದು ತೋರುತ್ತದೆ. ಈ ಸಂಗತಿಯನ್ನು ಎ.ಕ. ೨ ರ ೧೨೩ (೧೦೮)ನೆಯ ಶಾಸನ ಸ್ಪಷ್ಟಿಕರಿಸುತ್ತದೆ. ನವಿಲು + ಊರು = ನವಿಲೂರು ಎಂಬುದು ಅಚ್ಚಕನ್ನಡದ ಮಾತು.

೮. ನವಿಲೂರು ಎಂಬ ಹೆಸರಿನ ಊರುಗಳು ಕರ್ನಾಟಕದಲ್ಲಿ ಕೆಲವು ಇದ್ದರೂ ಅವುಗಳಲ್ಲಿ ಈ ನವಿಲೂರು ಯಾವುದೆಂಬುದು ತಿಳಿಯದು.

೯. ನವಿಲೂರುಸಂಘವನ್ನು ಸಂಸ್ಕೃತೀಕರಿಸಿ ಮಯೂರಸಂಘ ಎಂದು ಭಾಷಾಂತರ ಗೊಳಿಸಲಾಗಿದೆ..

[ಹೆಚ್ಚಿನ ಮಾತು : ಈ ಲೇಖನದಲ್ಲಿ ಎತ್ತಲಾಗಿರುವ ಸಂದೇಹಗಳಿಗೆ ಸೂಕ್ತವಾದ ಉತ್ತರಗಳನ್ನು, ಇದೇ ಚಂದ್ರಕೊಡೆ ಸಂಕಲನದಲ್ಲಿ ಸೇರ್ಪಡೆ ಆಗಿರುವ ‘ಶಾಸನಗಳಲ್ಲಿ ಕತ್ತಲೆವ ಕುಲ’ ಎಂಬ ಸಂಪ್ರಬಂಧದಲ್ಲಿ ಕಾಣಬಹುದು.]

 

[1]ಎ.ಕ. ೨ (ಪ.), ಶ್ರವಣ ಬೆಳಗೊಳ ೧೧೨, ೧೯೭೩, (ಚಿಕ್ಕಬೆಟ್ಟ ೯೭)

[2]ಅದೇ, ೧೧೨ (೯೭)

[3]ಅದೇ, ೧೧೭ (೧೦೨); ೧೧೮ (೧೦೩)

[4]ಅದೇ, ೧೨೪ (೧೦೯)

[5]ಅದೇ, ೧೨೯ (೧೧೨)

[6]ಅದೇ, ೧೩೨ (೧೧೪)

[7]ಎ.ಕ. ೩, (ಪ.), ಹೆಗ್ಗಡದೇವನ ಕೋಟೆ ೫ (೧೦೩), ಸು. ೯ನೆಯ ಶತಮಾನ