ಧಾರವಾಡ ಜಿಲ್ಲೆ, ಹಾವೇರಿ ತಾಲ್ಲೂಕು ನೀರಲಗಿ ಎಂಬ ಗ್ರಾಮದಲ್ಲಿ ದೊರೆತ ಶಿಲಾಶಾಸನ ಪಶ್ಚಿಮ (ಕಲ್ಯಾಣ) ಚಾಳುಕ್ಯರ ಕಾಲದ್ದು

[ಸೌ.ಇ.ಇ. ೧೮. ೧೫೧. ಕ್ರಿ.ಶ. ೧೧೪೮]. ಇದು ಪ್ರಧಾನವಾಗಿ ಆ ಕಾಲದ ಒಂದು ಪ್ರತಿಷ್ಠಿತ ಮನೆತನದ ಹಿರಿಮೆಯನ್ನು ಸಾರುತ್ತದೆ. ಅದರ ಜತೆಗೆ ಈ ಶಾಸನಕ್ಕೆ ಸಾಂಸ್ಕೃತಿಕ, ಸಾಹಿತ್ಯಕ, ಚಾರಿತ್ರಿಕ, ಧಾರ್ಮಿಕ ಆಯಾಮಗಳ ಮಹತ್ವವೂ ಇದೆ ಎಂಬುದನ್ನು ಗುರುತಿಸುವುದು ಈ ಟಿಪ್ಪಣಿಯ ಆಶಯ. ಶಾಸನದಲ್ಲಿ ಈಗಿನ ನೀರಲಗೆ ಎಂದು ನಿರ್ದೇಶಿಸಲಾಗಿದೆ.

ಈ ಶಾಸನದ ಪ್ರಾರಂಭದ ಕೆಲವು ಸಾಲುಗಳು ತ್ರುಟಿತವಾಗಿವೆ. ಇದು ಆದ್ಯಂತವಾಗಿ ಜೈನ ಶಾಸನ; ಅದರಿಂದ ತ್ರುಟಿತಪಂಕ್ತಿಗಳಲ್ಲಿ, ಉಳಿದ ಜೈನ ಶಾಸನಗಳಲ್ಲಿರುವ ಕ್ರಮದಲ್ಲಿ ಜಿನಸ್ತುತಿಯ ಸಂಸ್ಕೃತ ಶ್ಲೋಕ (ಶ್ರೀಮತ್ಪರಮ ಗಂಭೀರ ಸ್ಯಾದ್ವಾದಾಮೋಘ ಲಾಂಛನಂ….) ಇದ್ದಿರಬೇಕು. ಇದು ನಷ್ಟಭಾಗವಾಗಿರುವ ಶಾಸನಾರಂಭದ ವಿಚಾರ. ಅನಂತರವೂ ಒಂಬತ್ತನೆಯ ಸಾಲಿನವರೆಗೆ ಶಾಸನ ಅಲ್ಲಲ್ಲಿ ಮುಕ್ಕಾಗಿದೆ. ಅರೆಬರೆಯಾದ ಗದ್ಯಪದ್ಯ ಪಾದಗಳ ಅರ್ಥ ಅಸ್ಪಷ್ಟವಾಗಿದೆ. ಒಂಬತ್ತನೆಯ ಪಂಕ್ತಿಯಲ್ಲಿ ಮುಂದಕ್ಕೆ, ಹೆಚ್ಚು ಕಡಿಮೆ ಕಡೆಯವರೆಗೂ ಚೆನ್ನಾಗಿದೆ. ಇದು ಸಾಕಷ್ಟು ದೊಡ್ಡ ಶಾಸನವೂ ಹೌದು. ಒಟ್ಟು ದೀರ್ಘವಾದ ೪೯ ಪಂಕ್ತಿಗಳಿವೆ. ಅನೇಕ ಜೈನ ಶಾಸನಗಳು ಜಿನಶಾಸನ ದೇವತೆಗಳಾಗಿ ಇತಿಹಾಸ ಪುಟಗಳಲ್ಲಿ ಕಂಗೊಳಿಸುತ್ತಿವೆ. ಅವುಗಳಲ್ಲಿ ಶ್ರವಣಬೆಳಗೊಳವನ್ನು ಬಿಟ್ಟರೆ, ನೂರಾರು ಶಾಸನಗಳು ಧಾರವಾಡ ಜಿಲ್ಲೆಯೊಂದರಲ್ಲಿಯೇ ಉಪಲಬ್ಧವಾಗಿವೆ. ಭೂಗತವಾದ ಜಿನಮಂದಿರ ಮತ್ತು ಜೈನ ಇತಿಹಾಸದತ್ತ ದೀಪನಿಧಿಯಾಗಿ ಬೆಳಕು ಚೆಲ್ಲುವುದರೊಂದಿಗೆ ಅಲ್ಲಲ್ಲಿ ಹರಿದು ಹಂಚಿ ಹೋಗಿರುವ ಕರ್ನಾಟಕಚರಿತ್ರೆಯ ನಿರಂತರೆಯನ್ನು ಕೂಡಿಸುವ ಚಿನ್ನದ ಕೊಂಡಿಗಳಾಗಿರುವ ಶಾಸನಗಳೂ ಈ ಜೈನ ಶಾಸನ ಸಮುದಾಯದಲ್ಲಿವೆ. ಹೀಗೆ ಪ್ರಭಾವಳಿಯಾಗಿ ಪ್ರಜ್ವಲಿಸುವ ಒಂದು ಜೈನ ಶಾಸನದ ಈ ಸಂಪ್ರಂಬಂಧದ ಮುಖ್ಯವಿಷಯ.

ನೇರಿಲಗೆಯ ಶಾಸನ ಒಂದು ಮನೆತನದ ಐದು ತಲೆಮಾರಿನ ಪರಿಚಯ ಕೊಡುತ್ತದೆಯಾಗಿ ಇದೊಂದು ವಾಂಶಿಕ ದಾಖಲೆಯೂ ಆಗಿದೆ. ಆಯಾ ತಲೆಮೊರೆಯ ಗಂಡ-ಹೆಂಡತಿ ಮತ್ತು ಮಕ್ಕಳ ಮಾಹಿತಿಯನ್ನು ಶಾಸನ ಪೂರೈಸಿದೆ; ಸತಿ-ಪತಿಯರ ವಿವರಗಳನ್ನು ಗರ್ಭೀಕರಿಸುವ ರೀತಿ ಸಹ ವೈಶಿಷ್ಟ್ಯ ಪೂರ್ಣವಾಗಿದೆ :

05_257_CK-KUH

ಕಲ್ಯಾಣ ಚಾಳುಕ್ಯ ಆಹವಮಲ್ಲ ತ್ರೈಳೋಕ್ಯಮಲ್ಲ ಸೋಮೇಶ್ವರ ೧ ಚಕ್ರವರ್ತಿಯಿಂದ ಸಂಮಾನಿತನಾದನು, ಚತುರ್ಥಕುಲಮಂಡಳನಾದ ಮಹಾಪ್ರಭು ದಡಿಗ. ಮೊದಲನೆಯವನಾದ ದಡಿಗ, ಒಂದನೆಯ ಎಱಕ, ಚಟ್ಟಗಾವುಂಡ – ಈ ಮೂವರೂ ಶಾಸನ ರಚನೆಯಾದ ೧೧೪೮ರ ಅವಧಿಯ ವೇಳೆಗೆ ನಿಧನರಾಗಿದ್ದರು. ಶಾಸನದ ಕೇಂದ್ರ ಬಿಂದುವಾದ ಮಲ್ಲಗಾವುಂಡನೂ ಆತನ ಒಡಹುಟ್ಟಿದ ಇನ್ನು ಮೂವರು ತಮ್ಮಂದಿರೂ ಜೀವಿಸಿದ್ದರು. ಮಲ್ಲನ ಮಗ ಜೋಮನುಪ್ರಾಯಕ್ಕೆ ಬಂದವನಾಗಿದ್ದರೂ ಇನ್ನೂ ಅವಿವಾಹಿತನಾಗಿದ್ದಂತೆ ತೋರುತ್ತದೆ.

ಒಂದು ಕೀರ್ತಿವಂತ ಮನೆತನದ ಯಶೋಗಾಥೆಯೇ ಈ ಶಾಸನವೆಂದು ಹೇಳಿದ್ದಾಗಿದೆ. ವಾಸ್ತವವಾಗಿ ಈ ಕುಟುಂಬದ ಕುಲಾವಿಗೆ ಗೌರವದ ಗರಿಯಿಟ್ಟವನು ಈ ಮನೆತನದ ಮೂಲಪುರುಷನಾದ ದಡಿಗ. ಈ ಮಹಾಪುರುಷನ ಮಹಿಮೆಗೆ ಮಾರುಹೋದ ಅಂದಿನ ಚಾಳುಕ್ಯ ಚಕ್ರವರ್ತಿ, ಆಹಮವಲ್ಲ ತ್ರೈಳೋಕ್ಯಮಲ್ಲ ಒಂದನೆಯ ಸೋಮೇಶ್ವರನು, ಹಲವು ಬಗೆಯ ರಾಜಮನ್ನಣೆಯಿಂದ ದಡಿಗನನ್ನು ಗೌರವಿಸಿದ್ದನು. ದಡಿಗನಿಗೆ ಚಕ್ರವರ್ತಿ ನಿಡಿದ ಕೊಡುಗೆಗಳನ್ನು ಸ್ಮರಣೆಯೋಗ್ಯವೆನಿಸಿ ನಿರೂಪಿಸಲಾಗಿದೆ:

|| ಆ ಮಹಾನುಭಾವನ್ವಯ ಪ್ರಭಾವಮೆಂತೆಂದೊಡೆ
ವಿನುತ ಜಿನಧರ್ಮ್ಮವಾರ್ಮ್ಮಂ
| ಜಿನಮುನಿಗಳ್ ತನಗೆ ಪರಮಗುರುಗಳೆನಲ್ ಸ|
ಜ್ಜನನುತಚತುರ್ತ್ಥಕುಳ ಮ
| ಣ್ಡನನಾದಂ ವಿನಯನಿಧಿ ಮಹಾಪ್ರಭು ದಡಿಗಂ ||

            ಮತ್ತೇಭವಿಕ್ರಿಡಿತಂ ||
ನುಡಿಕಲ್ಲೊಳ್ ಕಡೆದಕ್ಕರಕ್ಕೆ ಮಱುವಕ್ಕಂ ವಿಕ್ರಮಂ ಸಿಂಹಮಂ
ಜಡಿಗುಂ ತನ್ನಯ ದಾನಶಕ್ತಿ ಸುರಭೂಜಾನೀಕದೊಳ್ ಪೂಣ್ದು ಕೋ
ಡಿಡುಗುಂ ಕಂತುಗೆ ಕಿಂತುವಂ ಜನಿಯಿಕುಂ ಸೌಂದರ್ಯ್ಯಮೆಂದಂದು ಪೇಳ್
ದಡಿಗಂಗಾರ್ಪ್ಪಡಿ ಪಾಟಿ ಪಾಸಟಿ ಸಮಂ ಪಟ್ಟಾನ್ತರಂ ಮಾನವರ್
||
ಬಲ್ಲಹನೆನೆ ನೆಗರ್ದ್ದಾಹವ
| ಮಲ್ಲಂ ಕೊಡೆಯಡಪ್ಪ ಮಂದಳಂ ಸೀ(ಗು)ರಿಯೆಂ |
ಬೆಲ್ಲಾ ಚಿಹ್ನಮನದಟರ
| ಮಲ್ಲಂ ದಡಿಗಂಗೆ ಕೊಟ್ಟನನ್ದಾದರದಿಂ ||
ಆ ಪ್ರಭುವಿನ ಕುಲವಧು ಶೀ
| ಲಪ್ರಭೆಯಿಂದತ್ತಿಮಬ್ಬೆಗಂ ರೇವಗಂ |
ಭೂಪ್ರಣುತೆ ಸಮನೆನಿಪ್ಪ ಯ
| ಶಃ ಪ್ರಕಟಿತೆ ರೇವಕಬ್ಬೆಯಾರ್ಸ್ಸತಿಯರ್ ||

ಮಹಾಪ್ರಭು ದಡಿಗನಿಗೆ ಆಹವಮಲ್ಲ ತ್ರೈಳೋಕ್ಯಮಲ್ಲ ಚಕ್ರಿಯಿತ್ತ ರಾಜ ಮರ್ಯಾದೆಯ ರಾಜವಿಶ್ವಾಸದ ವಸ್ತುಗಳು ಕೊಡೆ, ಅಡಪ, ಮಂದಳ, ಸೀಗುರಿ, ಗಾಳಿ ಮಳೆ ಬಿಸಿಲುಗಳಿಗೆ ಮರೆಯಾಗಿ ಹಿಡಿಯುವ ಸಾಧನ ಮಾತ್ರವಾಗದೆ ಕೊಡೆ ಮರ್ಯಾದೆಯನ್ನು ತೋರುವ ವಸ್ತುವೂ ಹೌದು. ‘ವಡ್ಡರಾಧನೆ’ ಯಲ್ಲಿ ‘ಸೀಗುರಿಗಳುಮಂ ಕೊಡೆಗಳುಮಂ ಪಿಡಿಯಸಿ’ ಎಂಬ ಮಾತಿದೆ (ಪುಟ. ೭೪) ಪಂಪನ ‘ಆದಿಪುರಾಣ’ ದಲ್ಲಿ ‘ಪಂಚರತ್ನದ ಕೊಡೆಯಂ ಪಿಡಿದಂ’ (೭-೫) ಎಂಬ ಪ್ರಯೋಗವಿದೆ. ‘ಏಱಲ್ ಕುದುರೆ ಕೊಡೆ ಆಳಪಣ್ಟುವಕೆ … ರಾಜ ಚಿನ್ನವ ಕೊಟ್ಟು’ ದನ್ನು ಶಾಸನ ದಾಖಲಿಸಿದೆ (ಸೌ.ಇ.ಇ. ೯-೧. ೪೧. C.IIC.). ದೇವಸ್ಥಾನದಲ್ಲಿ ದೇವರಿಗೆ ಸಹ ‘ಕೊಡೆಯ ಭೋಗ’ ಎಂಬೊಂದು ಮರ್ಯಾದೆಯ ಸೇವೆಯಿಂದ (ಸೌ.ಇ.ಎ ೧೯೩೪, ೧೫೭, ೧೪೨೬, ಪುಂಗನೂರು). ಆನೆ ಕುದುರೆಗಳನ್ನೂ ಕೊಡೆ ಸೀಗುರಿಗಳನ್ನೂ ಬಿಡುದಾಸಿಯರನ್ನೂ ಗೌರವದ ಸಂಕೇತವಾಗಿ ಕೊಡುವುದು ವಾಡಿಕೆ. ಅರಿಕೇಸರಿ ರಾಜನು ಪಂಪಕವಿಗೆ “ಕೊಡುವ ಬಿಡುವಣ್ಗಂ ಲೆಕ್ಕ ಮಿಲ್ಲೆನಿಸಿ” ತ್ತೆಂದು (೧೪-೫೫) ಪಂಪಭಾರತದಲ್ಲಿದೆ. ಇದರ ಹಾಗೆಯೇ ಅಡಪ (= ಅಡಕೆ ಎಲೆಯ ಚೀಲ) ವನ್ನು ಕೂಡ ಕೊಡುವುದು ಗೌರಾಸ್ಪದವಾಗಿತ್ತು; ಇದನ್ನು ಶಾಸನಗಳೂ ಕಾವ್ಯಗಳೂ ದಾಖಲಿಸಿವೆ. ಒಂದು ಶಾಸನ ಪ್ರಯೋಗ; “ಪಟ್ಟಂಗಟ್ಟಿ ಏಱಲ್ ಕುದುರೆ ಕೊಡೆ ಅಡಪಡವಂಕೆ ಕುಂಚಂ ತಳಿಗೆ ಕೀಱ್ವಟ್ಟಲಡ್ಡಣಿಗೆ ಗದ್ದಿಗೆ ರಾಜಚಿನ್ನಮಮ್ ಕೊಟ್ಟು” (ಬಂಧುವರ್ಮನ ‘ಹರಿವಂಶಾಭ್ಯುದಯಂ’, ೧೪-೨). ಈ ನಾನಾಪ್ರಯೋಗಗಳ ಹಿನ್ನೆಲೆಯಲ್ಲಿಟ್ಟು ನೋಡಿದಾಗ, ೧೦-೧೧ ನೆಯ ಶತಮಾನದ ಸಾಮಾಜಿಕ ಶಿಷ್ಟಾಚಾರವಾಗಿ ಈ ವಸ್ತುಗಳನ್ನು ಕೊಡುವುದು ಒಪ್ಪಿತ ವ್ಯವಸ್ಥೆಯಾಗಿತ್ತು. ಅದರಂತೆ ಚಕ್ರವರ್ತಿಯ ಅರಮನೆಯಿಂದ ಬಂದ ಈ ಬಗೆಯ ಮನ್ನಣೆಗೆ ದಡಿಗನು ನೇಱೆಲಗೆ ಎಂಬ ಹೆಸರು ಸಲುವಳಿಯಾಯಿತು.

ಈ ದಡಿಗನ ಮಗ (ತತ್ಪುತ್ರಂ) ಶಾಸನದ ಮುಂದಿನ ಭಾಗದಲ್ಲಿ ಕೀರ್ತಿತನಾಗಿದ್ದಾನೆ:

ಉತ್ಪಲಮಾಲೆ ||
ಪುಟ್ತಿದನಂತವರ್ಗ್ಗೆಱಕನೆಂಬ ಮಹಾಪ್ರಭು ವಂಶವರ್ದ್ಧನಂ
ಜೆಟ್ಟಿಗನರ್ಹದಂಘಿ ನಳಿನಾನತಭೃಂಗನುದಾರಿ ಬಿಣ್ಪು ಮಾ
ರ್ಕಟ್ಟಳೆಯಾಯ್ತು ಮಂದರನಗಕ್ಕೆ ಬಣಂಜಕುಳಕ್ಕೆ ನಾಳ್ಕೆ ತ
ನ್ನಿಟ್ಟುದೆ ಬೊಟ್ಟು ಕಟ್ಟಿದುದೆ ಕಣ್ಠಿಕೆ ಬಿಟ್ಟುದೆ ತಾಂಬ್ರಶಾಸನಂ
||
ಅ ವಿಭುಗೆ ದೇವಲಬ್ಬೆ ಗು
| ಣಾವಳಿಯಂ ಪುರುಷಭಕ್ತಿಯಿಂ ಶೀಳದೊಳಂ |
ತೀವಿ ಜಿನಮತಕೆ ಶಾಸನ
| ದೇವಿಯೆನಲು ಪೆಂಪುವೆತ್ತ ಕುಲವಧುವಾದಳ್ ||

ಅಣುಗ, ಕಂದ-ಎಂದು ಬಳಸುವಂತೆ ಪ್ರೀತ್ಯರ್ಥಕ ‘ಎಱಕ’ ಎಂಬ ಅಚ್ಚಗನ್ನಡ ಶಬ್ದವನ್ನು ಇಲ್ಲಿ ಅಂಕಿತನಾಮವಾಗಿಡಲಾಗಿದೆ. ದಡಿಗನ ಮಗ ಎಱಕನಿಗೆ; ಗಂಗ ವಂಶದ ಎಱೆಯಪ್ಪ ಎಂಬ ಹೆಸರಿನ ರಾಜರು ಇಲ್ಲಿ ಎಱಕ ಮಹಾಪ್ರಭುಬು ವಂಶವರ್ಧನನೂ ಬಣಂಜು ಕುಲಕ್ಕೆ ನೇತಾರನೂ ಆಗಿದ್ದನೆಂಬುದನ್ನು ಗಮನಿಸಬೇಕು. ಬಣಂಜು ಕುಲವೆಂದರೆ ಬಣಜಿಗರು. ಜೈನರಲ್ಲಿ ಇದ್ದ ಈ ಬಣಜಿಗರು (= ವಾಣಿಜ್ಯ ಮಾಡುವವರು) ೧೨ ನೆಯ ಶತಮಾನವಾದ ಮೇಲೆ ಜೈನತ್ವದಿಂದ ವೀರಶೈವರಾಗಿ ಮತಾಂತರಗೊಂಡರು, ‘ಜೈನ ಕೆಟ್ಟು ಬಣಜಿಗನಾದ’ ಎಂಬ ಗಾದೆ ಹುಟ್ಟಿತು.

ಜಿನರ ಪಾದಕಮಲಗಳಿಗೆ ದುಂಬಿಯಂತಿದ್ದ ಎಱಕನ ಮಡದಿ ದೇವಲಬ್ಬೆ ಜಿನಮತಕ್ಕೆ ಶಾಸನದೇವಿ (ಯಕ್ಷಿ) ಯಂತೆ ಇದ್ದಳು. ಎಱಕನ ತಾಯಿ ರೇವಕಬ್ಬೆಯನ್ನು ದಾನಚಿಂತಾಮಣಿ ಅತ್ತಿಮಬ್ಬೆಗೆ ಹೋಲಿಸಿದ ಕವಿ ಇಲ್ಲಿ ಎಱಕನ ಕುಲವಧುವನ್ನು ಯಕ್ಷಿಗೆ ಹೋಲಿಸಿದ್ದಾನೆ. ಈ ಎಱಕ- ದೇವಕಬ್ಬೆಯರ ಮಗ (ತತ್ಪತ್ರಂ) ನನ್ನು ಕುರಿತು, ಸೊಸೆಯನ್ನು ಕುರಿತು, ಮುಂದಣ ಮೂರು ಪದ್ಯಗಳಲ್ಲಿ ಬಿಡಿಸಿದ್ದಾನೆ:

ಉತ್ಪಲಮಾಲೆ ||
            ಬೆಟ್ಟದ ನುಣ್ಪಿನಂತೆ ಕಡುದೂರದೊಳ್ಳಿದರೆಯ್ದೆಚೋಗೆ ಕಲು(ಮ)
ಗಟ್ಟಿನಿಪನ್ಯರೇನೂ ಮಹಿಮೋನ್ನತಿಯಿಂದಿಳಿಕೆಯ್ವನೆಯ್ದೆ ಪೊಂ
ಬೆಟ್ಟಮನಾ ಗಭೀರತೆಯಿನಂಬುಧಿಯಂ ಗೆಲೆವಂದನೆಂಬುದಾ
ಚಟ್ಟನನನ್ಯ ಸೈನಿಕ ಘರಟ್ಟನನನ್ವಯರತ್ನ ಪಟ್ಟನಂ
||

            ಎನೆ ನೆಗರ್ದ್ದ ಚಟ್ಟ ಗಾವು | ಣ್ಡನ ಮಾನಿನಿ ಚಾಯಿಕವೆ ಗಾವುಂಡಿ ಜಗ |
ಜ್ಜನಕ ಬುಧಜನಕೆ ಜಿನಜನ
| ಕನುಪಮ ನಿಜಜನಕೆ ಕಲ್ಪಲತೆಯವೊಲೆಸೆದಳ್ ||

ಚಂಪಕಮಾಲೆ ||
            ವಿನಯದ ಪೆಂಪಿನುನ್ನತಿಯ ಮಾನ್ತನದೊಳ್ಪಿನ ಸಚ್ಚರಿತ್ರದಾ
ರ್ಪ್ಪಿನ ನಿಜಗೋತ್ರರಕ್ಷಣೆಯ ಧರ್ಮದ ಪೆರ್ಮ್ಮಯವೊಂದನೊನ್ದು ನೆ
ಟ್ಟನೆ ಮಿಗೆ ಸಚ್ಚತುರ್ಥಕುಳದೀಪಿಕೆ ತಾತೆನಿಸಿರ್ದ್ದ ಚಾಮಿಯ
ಕ್ಕನೊಳೆಣೆಯಾರ್ಮ್ಮಹಾಪ್ರಭು ಶಿಖಾಮಣಿ ಚಟ್ಟನ ಪುಣ್ಯಕಾನ್ತೆಯೊಳ್
||

ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬಂತೆ ಹಲವರುಂಟು. ಚಟ್ಟಗಾವುಂಡನು ಅದಕ್ಕೆ ಅಪವಾದ. ತನ್ನ ಮಹಿಮೋನ್ನತಿಯಿಂದ ಚಿನ್ನದ ಬೆಟ್ಟವನ್ನೂ ಗಾಂಭೀರ್ಯದಿಂದ ಕಡಲನ್ನೂ ಮೀರಿ ಬೆಳೆದ ಚಟ್ಟಗಾವುಂಡನು ತನ್ನ ವಂಶಕ್ಕೆ ರತ್ನಪಟ್ಟವಾಗಿದ್ದನು. ಅವನಗಾವುಂಡಿ ಚಾಯಿಕವೆ ಬಲ್ಲಿದರಿಗೂ ಬಂಧುಗಳಿಗೂ ಕಲ್ಪವೃಕ್ಷವಾಗಿದ್ದಳು. ಚಟ್ಟಗಾವುಂಡನ ಪುಣ್ಯಕಾಂತೆಯೂ ಆದ ಆಕೆ ಚತುರ್ಥಕುಲವನ್ನು ಬೆಳಗಿದಳು. ಈ ಚತುರ್ಥಕುಲವೆಂಬ ಪ್ರಯೋಗ ಚಿಂತನೀಯ. ಕನ್ನಡ ಶಾಸನಗಳಲ್ಲಿ ಇದು ಅಪರೂಪ ವಿಶಿಷ್ಟ ಪ್ರಾಚೀನತಮಪ್ರಯೋಗ. ಜೈನರಲ್ಲಿ ಚತುರ್ಥ, ಬೋಗಾರ, ಸಾದ, ಪಂಚಮ, ವೈಶ್ಯ ಕುಲಗಳಿವೆ. ಉತ್ತರ ಕರ್ನಾಟಕದಲ್ಲಿ ಇಂದಿಗೂ ಈ ಪಂಗಡಗಳು ಚಾಲ್ತಿಯಲ್ಲಿವೆ; ಧಾರವಾಡ-ಬೆಳಗಾವಿ ಜಿಲ್ಲೆಗಳಲ್ಲಿ ಇವು ಪ್ರಬಲವಾಗಿ ಕಂಡು ಬರುತ್ತದೆ. ನಿಘಂಟಿನ ಶಬ್ದಾರ್ಥದ ಪ್ರಕಾರ ‘ಚತುರ್ಥ’ ಎಂದರೆ ನಾಲ್ಕನೆಯ ಜಾತಿ, ಶೂದ್ರ ಎಂಬರ್ಥವಿದೆ; ಆದರೆ ಅದರೊಂದಿಗೇ ಜೈನರಲ್ಲಿ ಒಂದು ಪಂಗಡ ಎಂಬರ್ಥವನ್ನೂ ಈ ಶಾಸನ ಪ್ರಯೋಗವನ್ನೂ ಅವಶ್ಯ ಸೇರಿಸಬೇಕು. ಪಾತ್ರೆವ್ಯಾಪಾರ ಪ್ರಧಾನವಾಗಿರುವವರು ಬೋಗಾರ ಕುಲದವರು. ಕೃಷಿಕರೂ ಆಗಿರುವವರು ಚತುರ್ಥಕುಲ; ವರ್ತಕರಷ್ಟೇ ಆಗಿರುವವರು ಪಂಚಮರು; ಈ ಮೂರು ಮುಖ್ಯ ಪಂಗಡಗಳು ಜೈನಸಮಾಜದ ಒಲಜಾತಿಗಳು. ಕೊಡುವುದು, ತೆಗೆದು ಕೊಳ್ಳುವುದು, ಮದುವೆ ಭೋಜನಾದಿ ವ್ಯವಹಾರ ಕೂಡ ಈ ಒಳಪಂಗಡಗಳಲ್ಲಿ ಕಡಿಮೆ.

ಜೈನರಲ್ಲೇ ಇರುವ ‘ಸಾದಕುಲ’ ಕುರಿತ ಪ್ರಾಚೀನ ಶಾಸನ ಪ್ರಯೋಗ ಧಾರವಾಡಜಿಲ್ಲೆ ರಾಣಿಬೆನ್ನೂರ ತಾಲ್ಲೂಕು ನದಿಹರಳಹಳ್ಳಿ ಶಾಸನದಲ್ಲಿದೆ (ಸೌ.ಇ.ಇ. ೧೮, ೧೮೦. ಕ್ರಿ.ಶ. ೧೧೬೮). ಬೋಗಾರ ಕುಲವನ್ನು ಕುರಿತು ಸಹ ಶಾಸನ ಪ್ರಯೋಗವಿದೆ: ಹಿರಿಯ ಗಬ್ಬೂರ ಊರೊಳಗಣ ಬ್ರಹ್ಮಜಿನಾಲಯಕ್ಕೆ ಸರ್ಚ್ಚಬಿಟ್ಟೆ ಯಾಗಿ ಬೋಗಾರ ಮಹಾನಖರಂಗಳು ಕಂಚಿನ ಭಂಡವ ಕೊಂಡಲ್ಲಿ ಕೊಟ್ಟಲ್ಲಿ ಬಿಟ್ಟ ಹೊಂಗೆ ಕಾಣಿ (ಹಳೆಯ ಹೈದರಾಬಾದು ರಾಜ್ಯ ಶಾಸನ ನಂ. ೮: ರಾಯಚೂರು ಜಿಲ್ಲೆ ದೇವದುರ್ಗದ ಬಳಿಯ ಗಬ್ಬೂರು : ಕ್ರಿ.ಶ. ೧೧೦೯). ಅದರಂತೆ ಚತುರ್ಥಕುಲವನ್ನು ಕುರಿತ ಮಹತ್ವದ ಉಲ್ಲೇಖ ಈ ನೇರಿಲಗೆಯ ಶಾಸನದಲ್ಲಿ ಸೇರಿಕೊಂಡಿದೆ. ಅಂದರೆ ಸುಮಾರು ೮೦೦-೯೦೦ ವರ್ಷಗಳಿಗೂ ಹಿಂದಿನಿಂದ ಈ ಸಾಮಾಜಿಕ ವರ್ಗ ಪ್ರಭೇದಗಳು ಜೈನ ಸಮಾಜದಲ್ಲಿ ಅಸ್ತಿತ್ವದಲ್ಲಿದ್ದು ಸಮಾಜೊ-ಧಾರ್ಮಿಕ ಅಧ್ಯಯನಕ್ಕೆ ಆಕರವಾಗಿದೆ.

ಚಟ್ಟಗಾವುಂಡ-ಚಾಮಿಯಕ್ಕನನ್ನು ವರ್ಣಿಸಿದ ಶಾಸನಕವಿ, ಅನಂತರ ಇವರ ಮಕ್ಕಳನ್ನು ಕುರಿತು ವಿಸ್ತಾರವಾಗಿ ಮನದುಂಬಿ ಕಂಡರಿಸಿದ್ದಾನೆ:

            ಆ ದಂಪತಿಗಳ್ಗಾದರ | ದಾದರ್ಸ್ಸತ್ಪುತ್ರಮರ ಗಜ ರದನಂ ನಾ |
ಲ್ಕಾದಂತೆ ಮಲ್ಲನೆಱಕಂ
| ಉದಾರಯುತ ಬಾಚ ಮೂಕನೆಂಬೀ ಪ್ರಭುಗಳ್ ||

            ಚಲದ ಭುಜಬಲದ ಕಲಿತನ | ದಲಘುನಕ್ಕಾಗಿದೆಯೆನಿಸಿದೀ ಪ್ರಭು ಮಲ್ಲಂ |
ಕುಲದೀಪಕನಾದಂ ನಿ
| ರ್ಮ್ಮಳವರಿತಂ ಪಿರಿಯ ಮಹಿಮೆಯಿಂ ಪಿರಿಯಣ್ಣಂ ||

ಮಲ್ಲ, ಎಱಕ, ಬಾಚಣ, ಮೂಕ-ಎಂಬ ನಾಲ್ಕು ಜನ ಮಗಂದಿರಲ್ಲಿ ಕಡೆಯ ಮೂವರನ್ನು ಎರಡು ವೃತ್ತಗಳಲ್ಲಿ ಪರಿಚಯಿಸಿದೆ:

ಮತ್ತೇಭವಿಕ್ರೀಡಿತ ||
            ಜಿನಪಾದಾಂಬುಜಚಂಚರೀಕನೆಱಕಂ ವೀರಾರಿನಿರ್ದ್ಧಾರಣಂ
ವಿನಯಾಂಭೋನಿಧಿ ಬಾಚಣಂ ನಿಜಕುಳಪ್ರಖ್ಯಾತಕಂ ಮೂಕನೆಂ
ಬನುಜರ್ಮ್ಮಲ್ಲನ ದಕ್ಷದಕ್ಷಿಣಭುಜಾದಣ್ಡಂಗಳಿರ್ಪ್ಪಂತೆ ಮೇ
ದಿನಿಯೊಳ್ ರಾಜಿಸುತಿರ್ದ್ದರಪ್ರತಿಮರತ್ಯೌದಾರ್ಯದಿಂ ಶೌರ್ಯದಿಂ
||

ಚಂಪಕಮಾಲೆ ||
ಒದವಿದ ಕೋಪದಿಂದಮಿದಿರಾನ್ತ ನರಂಗೆ ಕೃತಾಂತರೂಪನೆಂ
ಬುದು ಕುಳಿಶಾಗ್ನಿಯೆಂಬುದು ದವಾನಳನೆಂಬುದು ಸಿಂಹಿಕೇಯನಮ್
ಬುದು ದಶಕಣ್ಯನೆಂಬುದು ಭಯಂಕರಮಾರಿಯ ಮೂರಿಯೆಂಬುದ
ಲ್ಲದೆ ಪೆಱದೆಂಬುದೇನ್ನೆಗರ್ದ್ದ ಬಾಚಣನಂ ರಣರಂಗಧೀರನಂ
|

ಎಱಕ ಮೂಕರು ಜಿನಭಕ್ತರಾಗಿ ಪ್ರಖ್ಯಾತರಾದರೆ, ಬಾಚಣನು ಯುದ್ಧವೀರನೂ ಆಗಿ ವಿಖ್ಯಾತನಾಗಿದ್ದನು. ಈ ಮೂವರೂ ಒಡಹುಟ್ಟುಗರು ಅಣ್ಣನಾದ ಮಲ್ಲನಿಗೆ ಭುಜಾದಂಡವನೆಸಿದರು. ಮುಂದೆ ಅನೇಕ ವೃತ್ತಾಂತವನ್ನು ನಿರೂಪಿಸಲಾಗಿದೆ. ಈ ನಿರೂಪಣೆಯಲ್ಲೂ ಒಂದು ಚಮತ್ಕಾರವಿದೆ. ಮೊದಲು ಎರಡು ಕಂದಗಳಲ್ಲಿ ಮಲ್ಲಗಾವುಂದ-ಮಲ್ಲಿಯಕ್ಕ ದಂಪತಿಗಳನ್ನು ಪರಿಚಯಿಸಿ, ಅದರ ಮುಂದಿನ ಕಂದದಲ್ಲಿ ಅವರ ಕಂದನನ್ನು; ಅನಂತರ ಮತ್ತೆ ಮಲ್ಲನನ್ನು ಹಲವಾರು ಪದ್ಯಚಿತ್ರಗಳಲ್ಲಿ ರೇಖಿಸಿದೆ:

ಕೊಂಡಾಡಿದ ಪರವಧುಗಳ | ತಂಡದ ಮೊಲೆಯುಂಡ ಮೊಲೆ ಬಸಿರ್ಪ್ಪೆತ್ತ ಬಸಿ |
ರ್ಮ್ಮಂಡವಱೆಯಲು ತನಗಿದ
| ಖಂಡಿತಸಚ್ಚರಿತವೆನಿಪನೀ ಪ್ರಭು ಮಲ್ಲಂ ||
ಆ ವಿಭುವಿನ ಸತಿ ನೆಗರ್ದ್ದಾ
| ರೇವಕಿಗೆ ಸುಳೋಚನಾ ಮಹಾದೇವಿಗೆ ಸಂ |
ದೀ ವಧು ಜಿನಪತಿ ಪದಯುಗ
| ಸೇವೆಗೆ ಸಮನೆನಿಸಿ ಮಲ್ಲಿಯಕ್ಕಂ ನೆಗರ್ದ್ದಳ್ ||

ತತ್ಪುತ್ರಂ
ಜೋಮಂ ವರವನಿತಾ ಜನ | ಕಾಮಂ ನಿಜಕುಳಲಲಾಮನುದ್ಧತಭಯಕೃ |
ದ್ಭೀಮಂ ವಿನೂತ ವಿಬುಧ
| ಪ್ರೇಮಂ ನಿಜಗೋತ್ರಭೂಷಣಂ ಧರೆಗೆಸೆದಂ ||

ಜೈನ ಚತುರ್ಥಕುಲಗೋತ್ರ ಭೂಷಣನೂ ವಿಬುಧನಿಗೆ ಪ್ರೀತಿಪಾತ್ರನೂ ಆದ ಜೋಮನು ಮಲ್ಲಗಾವುಂಡನ ಕುಲಪುತ್ರ, ಕುಲದೀಪಕ. ಜೈನರು ಗಂಗರ-ರಟ್ಟರ ಕಾಲಕ್ಕಾಗಲೆ ಗಾವುಂಡಿಕೆ ಗೆಯ್ಯತೊಡಗಿದ್ದರು; ಅವರ ಗಾವುಂಡತನದ ಪ್ರಸ್ತಾಪಗಳು ಕನ್ನಡ ಸಾಹಿತ್ಯದಲ್ಲಿ ಹೇರಳ. ಭ್ರಾಜಿಷ್ಣು (ಸು. ೮೦೦) ‘ವಡ್ಡಾರಾಧನೆ’ ಯಲ್ಲಿ ಇದಕ್ಕೆ ನೆರವಾಗುವ ವಾಕ್ಯಗಳನ್ನು ಬಳ್ಸಿದ್ದಾನೆ: ಆವೂರ ಗಾವುಣ್ಡಂ ಜಿನವಾದಿಕನೆಂಬೊ ನಾತನ ಗಾವುಂಡಿ ಜಿನಮತಿಯೊಂಬಳ್. ‘ಚಾವುಂಡರಾಯ ಪುರಾಣ’ (೯೭೮) ‘ಜೀವ ಸಂಭೋಧನೆ’ (ಸು. ೧೧೬೦) ಕೃತಿಗಳಲ್ಲಿ ಜೈನ ಗಾವುಂಡ-ಗಾವುಂಡಿಯರು ಗ್ರಾಮಾಧಿ ಪತ್ಯ ನಡೆಸಿದ ವಿವರಗಳಿವೆ. ಶಾಸನಧಾರಗಳು : ನಾಗಾರ್ಜುನನು ನಾೞ್ಗಾವುಂಡ ನಾಗಿದ್ದು ತನ್ನ ದೊರೆ ಕಲಿವಿಟ್ಟರಸನ ಬೆಸನನ್ನು ಪಾಲಿಸುವ ಅವಸರದಲ್ಲಿ ಅತೀತನಾದನು. ಆಗ ಗಾವುಂಡಿಕೆಗೆ ಅರಸನು ಉತ್ತರಾಧಿಕಾರಿಯನ್ನಾಗಿ ನಾಗಾರ್ಜುನನ ಮಡದಿ ಜಕ್ಕಿಯಬ್ಬೆಯನ್ನು ನಿಯೋಜಿಸಿ, ಆಕೆಗೆ ನಾೞ್ಗಾವುಂಡ ಪಂತವನ್ನು (ಗೌಡಿಕೆಯ ಅಧಿಕಾರ : ವೃತ್ತಿಪದ) ಇತ್ತನು [ಎ.ಕ. ೭-೧, ಶಿಕಾರಿಪುರ. ೨೧೯. ೯೧೮]. ಶ್ರಾವಕಿ ಚನ್ದಿಯಬ್ಬೆ ಗಾವುಣ್ಡಿಯ ಉಲ್ಲೇಖ ಇನ್ನೊಂದು ಶಾಸನದಲ್ಲಿದೆ. (ಎಕ. ೭, ಶಿಕಾರಿಪುರ. ೨೧೯, ಕ್ರಿ.ಶ. ೧೦೫೦). ಗಾವುಂಡವೃತ್ತಿಯವರು ಕಟ್ಟಿಸಿದ ’ಗಾವುಂಡ ಬಸದಿ’ ಯನ್ನು ಶಾಸನ ಹೆಸರಿಸಿದೆ (ಸೌ.ಇ.ಇ. ೨೦, ೫೫, ೧೦೮೨ ಲಕ್ಷ್ಮೇಶ್ವರ).

ಮಲ್ಲಗಾವುಂಡನು ಜೈನಗಾವುಂಡ ಮತ್ತು ನಾೞ್ಟ್ರಭು ಪರಂಪರೆಯವನು: ನಾಳ್ಟ್ರಭು, ನಾಳಪ್ರಭು, ನಾಡಿನ ಪ್ರಭು ಎಂಬ ರೂಪಗಳೂ ಇವೆ: ಎಡೆದೊಱೆಯೆಪ್ಪತ್ತು ಮಂಡಲಿ ಸಾಯಿರದ ನಾಳಪ್ರಭು ನೇಮವೆಗ್ಗಡೆಯಾತನ ಮಗಂ ಚಣ್ನಗವುಡ ಮಾಹಾ ಪ್ರಭು (ಎಕ. ೭, ಶಿವಮೊಗ್ಗ ೪೩. ಕ್ರಿ.ಶ. ೧೧೭೨). ಇಮ್ಮಡಿ ಗುಣವರ್ಮ ಕವಿ (೧೨೩೫) ಪುಷ್ಪದಂತ ಪುರಾಣದಲ್ಲಿ ನಾೞ್ಟ್ರುಭು ಶಾಂತಿವರ್ಮನೆಂಬಾತನನ್ನು ಪರಿಚಯಿಸಿದ್ದಾನೆ (೧-೭೬). ಮಲ್ಲಗಾವುಂಡನು ತನ್ನ ಕಾಲದ ಸಮಾಜದಲ್ಲಿ ಪ್ರಭಾವಶಾಲಿಯಾದ ವ್ಯಕ್ತಿತ್ವವನ್ನು ಹೊಂದಿದ್ದನೆಂಬುದನ್ನು ಪ್ರಕೃತ ಶಾಸನ ತೊದಳಿಲ್ಲದ ನುಡಿಗಡಣದಲ್ಲಿ ನಿಲ್ಲಿಸಿದೆ:

ಚಂಪಕಮಾಲೆ ||
ಜನನಿ(ಗೆ)ಜಗಜ್ಜನೋದ್ಭಹಿತಮಾಗಿರೆ ಕಲ್ಪಮಹೀಜದೊಂದು ಪ
ಣ್ಣನೆ ಸವಿದಾ ಫಳಂ ಸಫಳಮಾಗಿರೆ ಪೆತ್ತಳೊ ನಿನ್ನನಲ್ಲದಂ
ದನಿಮಿಷಧೇನುದುಗ್ಧ ಪರಿಸೇವೆಯೋಳಿ ವಪುವರ್ದ್ಧನಪ್ರಚೋ
ದನೆಗಡೆಯಾಯ್ತೊ ಪೇಳೆನಿಪುದಾರ್ಪ್ಪು ಮಹಾಪ್ರಭು ಮಲ್ಲಿನಾಥನಂ
||

ಮಹಾಸ್ರಗ್ಧರಾ ||
ಸಿಡಿಲೊಂದೇಳೆಂಟು ಕಾಳಾಂತಕನ ಮಸಕವೇಳೆಂಟು ರಾಹುಪ್ರಕೋಪಂ
ಪಡಿಯೇಳೆಂಟಪ್ಪಡಕ್ಕುಂ ನಿನಗೆ ಸಮರದೊಳ್ ಮಲ್ಲ ತಾಂಗಲ್ ತಱುಂಬಲ್
ಕಡುಕೆಯ್ಯಲು ಕೆಯ್ದು ಕೆಯ್ಯಲು ಮರೆಯಲುಲಿಯಲುರ್ವ್ವಳಲೊಟ್ಟಯ್ಸಲೆಯ್ತಂ
(ದಡೆ)ಯಿಂ ಮುಂದಣ್ಗೆ ಮತ್ತೊಂದಡಿಯನಿಡುವ ಮಲ್ಲಯ್ಯ ಕೆಲ್ಲಯ್ವನಾವೊಂ
||

ಉತ್ಪಲಮಾಲೆ ||
            ಏ ದೊರೆಯಂ ಗ (ಡಿ)ತ್ತು ಜಸವಂ ಪಡೆವರ್ಗ್ಗೆ ಚಾಗವುದ್ಧತಂ
ಗೇ ದೊರೆಯಂಗವಳುಕದ ಪರಾಕ್ರಮಮಳಕಿ ಶರಣ್ಯಮೆಂದು ಬಂ
ದೇ ದೊರೆಯಂಗವಜ್ರಕವಚಂ ಬಗೆದಾಗಳೆ ಬೇಡು ಕೊಟ್ಟಪಂ
ಕಾದಿದಪಂ ಶರಣ್ಗೆ ವರೆ ಕಾದಪನೀ ಪ್ರಭು ಮಲ್ಲನುರ್ವ್ವಿಯೊಳ್
||

ಮತ್ತೇಭವಿಕ್ರೀಡಿತಂ ||
            ಕಲಿಯೇ ಸೂದ್ರಕನೀವನೇ ಸುರಕಜಂ ಗಂಭೀರನೇ ವಾರ್ದ್ಧಿನಿ
ರ್ಮ್ಮಳಚಾರಿತ್ರನೆ ಜಾಹ್ನವೀ ಪ್ರಿಯಸುತಂ ಸತ್ಯವ್ರತಖ್ಯಾತನೇ
ಗೆಲೆವನ್ದಂ ನೆಗರ್ದ್ದರ್ಕ್ಕಪುತ್ರನುಮನೆನ್ದಾನಂದದಿಂ ವಿಶ್ವಭೂ
ತಳಮೆಲ್ಲಂ ಪೊಗಳ್ಗುಂ ವಚಃಕಬರಿಕಾಪ್ರೋತ್ಫುಲ್ಲನಂ ಮಲ್ಲನಂ
||

ಉತ್ಪಲಮಾಲೆ ||
            ಸಿಂಗದ ಕೇಸರಂ ಹುಲಿಯ ಮೆಯ್ದೊವಲುಗ್ರವಿಷೋರಗೇನ್ದ್ರನು
ತ್ತುಂಗ ಫಣಾಳಿರತ್ನಮೆನಿಸಿರ್ಪ್ಪುವು ಮತ್ತಿನವನ್ದಿರರ್ತ್ಥವೇ
ಸಂಗತವೆಮ್ಮ ಮಲ್ಲನ ಧನಂ ಜಿನಯೋಗಿಗೆ ಜೈನಗೇಹದು
ತ್ತುಂಗತೆಗಾ(ಶ್ರಿ) ತಂಗೆ ಸಮಸಂದುದು ಸಿದ್ಧರಸಂ ಸುಧಾರಸಂ
||

ನೇಱೆಲಗೆಯ ನಾೞ್ಟ್ರಭು, ಪ್ರಾಂತಾಧಿಕಾರಿ ಮಲ್ಲಗಾವುಂಡನ ಪ್ರಭಾವ ವೆಂತೆಂದೊಡೆ ಎಂದು ಪ್ರಶ್ನಿಸುತ್ತ ಅದಕ್ಕೆ ಉತ್ತರರೂಪದಲ್ಲಿ ಆತನ ಮೂರ್ತಿಯನ್ನು ಸುವರ್ಣರೇಖೆಯಾಗಿ ದಾಖಲಿಸಲಾಗಿದೆ. ದೇಶಭಾಗದ ಒಡೆಯನಾದ ಆತನು ಉದಾರಿ, ಮಹಾ ಪರಾಕ್ರಮಿ, ಶೀಲವಂತ ಎಂಬಿತ್ಯಾದಿ ಸದ್ಗುಣಗಳನ್ನು ಓದುಗರ ಚಿತ್ತಕ್ಕೆ ಅಚ್ಚೊತ್ತುವಂತೆ ಬಣ್ಣಿಸಲಾಗಿದೆ. ಈ ಭಾಗದಲ್ಲಿ ಪೊನ್ನನು ಮಲ್ಲಪ – ಪುನ್ನಮಯ್ಯರನ್ನು ‘ಶಾಂತಿಪುರಾಣ’ ದಲ್ಲಿಯೂ, ರನ್ನನು ಅದೇ ವಂಶದ ದಲ್ಲಪ ಮತ್ತು ನಾಗದೇವಾದಿಗಳನ್ನೂಚಿತ್ರಿಸಿರುವ ಕಾವ್ಯ ಶೈಲಿಯ ಮಾದರಿಯನ್ನು ಮುಂದುವರಿಸಿರುವುದು ಗಮನಿಕೆಗೆ ತಕ್ಕುದಾಗಿದೆ. ಈ ಮಲ್ಲನದು ಯಾವ ಬಗೆಯ ಯೋಗ್ಯತೆಯೆಂಬುದನ್ನು ಪರಿಪರಿಯಾಗಿ ಅರಳಿಸಿರುವುದು ಮತ್ತೇಭವಿಕ್ರೀಡಿತ ವೃತ್ತದಲ್ಲಿ ತನ್ನ ಪರಾಕಾಷ್ಠಸ್ಥಿತಿ ಮುಟ್ಟಿದೆ. ಮಲ್ಲನ ಸಂಪತ್ತು ಜೈನಯತಿಗಳಿಗೂ ಬಸದಿಗೂ ಆಶ್ರಿತರಿಗೂ ಸದ್ವಿನಿಯೋಗವಾಗಿತ್ತು:

ದಡಿಗನ ನೇಱೆಲಗೆಯೊಳೊಳು| ಪೊಡರಿಸಲುತ್ತುಂಗಮಂ ಶಿಲಾಮಯಮಂ ನೇ|
ರ್ಪ್ಪಡೆ ಮಲ್ಲಿಜಿನಾಶ್ರಯಮಂ
| ಪಡಿಯಿಲ್ದೆನೆ ಮಲ್ಲಿನಾಥವಿಭು ಮಾಡಿಸಿದಂ ||

ಆ ಪ್ರಸಿದ್ಧ ಚೈತ್ಯಾಳಯಾವಾಚಾರ್ಯ್ಯರ್
ಶ್ರೀ ಮೂಲಸಂಘದ ಸೂರ | ಸ್ಥಾಮಳಗಣ ಚಿತ್ರಕೂಟಗಚ್ಛದ ಯೋಗಿ |
ಸ್ತೋಮವಿದು ಪೂಜ್ಯಪಾದ
| ಸ್ವಾಮಿಗಲನ್ವಯವಿವರ್ದ್ಧನರ್ದ್ಧರೆಗೆಸೆದರ್  ||

ಮತ್ತೇಭವಿಕ್ರೀಡಿತಂ ||
            ಸ್ಮರಮತ್ತೇಭ ಕಿಶೋರ ಕೇಸರಿ ಮನೋಜೋರ್ವ್ವೀಧ್ರವಜ್ರಂ ರತೀ
ಶ್ವರ ನೀಳೋತ್ಪಳಷಂಡಕರನಾಶಾ ಯೋಷಿದುತ್ತಂಸ ಬಂ
ಧುರ ಮುಕ್ತಾಫಳ ರಶ್ಮಿ ನಿರ್ಮ್ಮಳಯಶಃಶ್ರೀರೋಚಿಯಾಗಲು ದಿಗಂ
ಬರಪೂಜ್ಯಂ ಹರಿಣಂದಿ ದೇವನೆಸೆದಂ ಚಾರಿತ್ರ ಚಕ್ರೇಶ್ವರಂ
||

ಚಂಪಕಮಾಲೆ ||
            ಸರಸತಿ ಕುಂಚಮಂ ಧರಿಯಿರ್ದ್ದಳೊ ಶಾನ್ತರಸಂ ತಪಸ್ವಿನೀ
ಚರಿತಮನಾನ್ತುದೊ ಸಕಳ ಭವ್ಯಜನಂಗಳ ಪುಣ್ಯವೃದ್ಧಿ ಪೆ
ಣ್ಪರಿಜಿನೊಳಾರ್ಯ್ಯಿಕಾಕೃತಿಯನಾನ್ತುದೊ ಪೇಳಿಮಿದಿಂದೊಱಲ್ದು ಬಿ
ತ್ತರಿಪುದು ಧಾತ್ರಿ ಚಂದ್ರಮತಿಯವ್ವೆಗದಂ ವಸುಧಾ . . . .
||

(ಇಲ್ಲಿ ಮೊದಲನೆಯ ಪಾದದಲ್ಲಿ, ಎರಡನೆಯ ಶಬ್ದ ‘ಕುಂಚಮಂ’ ಎಂಬುದು ‘ಪಿಂಚಮಂ’ ಎಂದಿರಬೇಕೆನಿಸುತ್ತದೆ; ಶಾಸನಪಾಠವನ್ನು ಮೂಲದೊಂದಿಗೆ ಮತ್ತೆ ಪರಿಶೀಲಿಸಬೇಕು).

ನಾಳ್ಟ್ರಭುವಾದ ಮಲ್ಲಗಾವುಂಡನು ಮಲ್ಲಿನಾಥ ಜಿನಾಲಯವನ್ನು ಕಟ್ಟಿಸಿದನು ಮತ್ತು ಅದಕ್ಕೆ ದಾನದತ್ತಿಗಳ ಕೊಡುಗೆಯೂ ನಡೆಯಿತು. ಈ ಶಾಸನ ರಚನೆಯಾದದ್ದು ೧೧೪೮ರಲ್ಲಿ. ಆದರೆ ಬಸದಿಯನ್ನು ಕಟ್ಟಿಸಿದ್ದು ಇದಕ್ಕೂ ಇಪ್ಪತ್ತು ವರ್ಷಗಳಷ್ಟು ಹಿಂದೆಯೇ. ಏಕೆಂದರೆ ಹಿಂದೆತಾನು ಮಾಡಿಸಿದ ಮಲ್ಲಿನಾಥಜಿನಾಶ್ರಯಕ್ಕೆ ಹೊಸದಾಗಿ ಇನ್ನಷ್ಟು ದತ್ತಿಗಳನ್ನಿತ್ತು ಈ ಹೊಸ ಕೊಡುಗೆಯ ನಾಲ್ಕೂ ದಿಕ್ಕಿನ ಮೇರೆಗಳನ್ನು ಇಲ್ಲಿ ನಿರೂಪಿಸಿದೆ: ದಡಿಗನ ನೇಱೆಲಗೆ (ನೇರಿಲ್ಗೆ-ನೀರಲ್ಗೆ-ನೀರಲ್ಲಿ), ಅಂಕೊಲಗೆ, ತೊರೆಯಿಗುಳೆ, ಬೆಳುಹುಗೆ (ಬೆಳ್ಹುಗೆ), ಕಲುಹೊಳೆ ಆಕರವಾಗಿವೆ. ಈ ನಾಡಿನ ಮುಖಂಡ ಮಲ್ಲಗಾವುಂಡನ ‘ಮುತ್ತ ಮೂದಲೆಯರೊಳ್’ (= ಹಿರಿಯ ಮೂರು ತಲೆಮಾರಿನ) ಪ್ರಮುಖರನ್ನೂ ಮಲ್ಲಗಾವುಂಡನನ್ನೂ ಅವನ ಕುವರ ಜೋಮನನ್ನೂ ಸಾಲಂಕೃತ ಕಾವ್ಯಶೈಲಿಯಲ್ಲಿ ಮುಂದಿಡಲಾಗಿದೆ.

ಮತ್ತೇಭ
            ಕೊಳದೊಳ್ ಸಸ್ಮಿತಪಂಕಜಂ ಜಳಧಿಯೊಳ್ ಲಕ್ಷ್ಮೀಶನುದ್ಯಂನಭ
ಸ್ಥಳಿಯೊಳ್ ಚಂಡಮರೀಚಿ ಪೂರ್ವ್ವ(ದಿಶೆಯೊಳ್)ಶಕ್ರೇಭಮಿರ್ಪ್ಪನ್ತೆ ಬ
(ಳ್ವ)ಳಿಸುತ್ತಂ ನಿಜಗೋತ್ರ ಪುತ್ರ ಸಹಿತಂ-ವಿಕ್ರಾಂತ ಲಕ್ಷ್ಮೀವಧೂ
ತಿಳಕಂ ಶ್ರೀ ಪ್ರಭುಮಲ್ಲನೊ(ಳ್ಪ)ನೊಳಕೊಂಡಿರ್ದ್ದಂ ಧರಾಮಂಡನಂ
||

ಮಹಾಸ್ರಗ್ಥರೆ ||
            ಕರಣೀಯಂ ಸತ್ಯಶೌಚ್ಯಂ ತನಗೆ (ಸಲುವ ವಿ) ಕ್ರಾಂತಮುಂ ಧೈರ್ಯಮುಂ ಮೆ(ಯ್)
ಸಿರಿ ಧರ್ಮಂ ತನ್ನೊಳಾರ್ಮ್ಮಂ ಚಲಮದು ಕುಲವಿದ್ಯಾನ್ವಿತಂ ತನ್ನೊಳೆಂಬೀ
ಬಿರುದಂ ಕೈಕೊಣ್ಡು ತದ್ವಂಶಜರೊಳಧಿಕನಾರಿಂದಮೆಂಬೊ(ಳ್ಬು)ವೆತ್ತಂ
ಪರಾಮಾರ್ತ್ಥಂ ಮಲ್ಲಗಾವುಣ್ಡನ ಮಹಿಮೆಯನನ್ತಿಂತೆನಲು ಬಲ್ಲನಾವೊಂ
||

            ಚಿತ್ತಂ ಜಿನಪತಿ ಪದದೊಳ್  | ವಿತ್ತಂ ಚತುರುದಿತದಾನದೊಳ್ ಕೀರ್ತಿ ದಿಶಾ |
ಭಿತ್ತಿಗಳೊಳ್ ಸಂದಿರ ಲೋ
| ಕೋತ್ತಮನಾದಂ ಬಬಾಪ್ಪು ನಾಳ್ಪ್ರಭು ಮಲ್ಲಂ ||
ಮಲ್ಲಂ ಪರವಧುವೆಳಸಿದೊ
| ಡೊಲ್ಲಂ ಮಿಥ್ಯಾಮತಕ್ಕೆ ಸಲ್ಲಂ ರಿಪುಹೃ |
ಚ್ಛೆಲ್ಲಂ ಪರಹಿತಗುನದೊಳ್  
| ಪಲ್ಲವಿಪ ಜಸಕ್ಕೆ ತಾನೆ ತಾಯ್ಗರುವಾದಂ ||

ಮತ್ತೇಭವಿಕ್ರೀಡಿತಂ ||
            ಸ್ವಭುಜೋಪಾರ್ಜ್ಜಿತಮಾಗುಪಾರ್ಜ್ಜಿಸಿದನಿನ್ತೀ ವೃತ್ತಿಯಂ ನೋಡ ನಾ
ಳ್ಪ್ರಭುವೀ ಬೆಳ್ಹುಗೆ ಸಂದ ನೇಱೆ ಲಗೆ ವಿಖ್ಯಾತಾಕರಂ ಕೊಳ್ಳನೂ
ರ್ವ್ವಿಭವಾಳಂಕೃತವೆಮ್ಮವಳ್ಳಿ ವಸುಧಾಶೋಭಾಕರಂ ಶ್ರೀಕರ
ಪ್ರಭವಂ ಕಲ್ಹೊಳೆ ಗುಲ್ಗುವಳ್ಳಿಯುಮನೀ ಮಲ್ಲಂ ಯಶೋವಲ್ಲಭಂ
||

ಚಂಪಕ ||
            ಕುಲದ ಮದಂ ವಿವೇಕದ ಮದಂ ಪ್ರಭುಶಕ್ತಿಮದಂ ಸಮಗ್ರ ದೋ
ರ್ವ್ವಳದ ಮದಂ ಮದಂಗಳಂ ಮನದೆಗೊಳ್ಳದೆ ಬಾಪುರೆ ತನ್ನ ಮುಕ್ತ ಮೂ
ದಲೆಯರೊಳಿನ್ನಾರಾರುಮಣಮಿಲ್ಲೆನೆ ಪೆಂಪಿನಗುಂ(ತಿ) ವೆತ್ತ ನೀ
ಱೆಲಗೆಯ ಮಲ್ಲನಲ್ಲದರಿಹಂ ಪರಿವಿಲ್ಲದರೊಳ್ಪನೊಲ್ಲದರ್
||

ಈ ಶಾಸನದ ಒಂದು ಪುಟ್ಟ ಚಂಪೂಕ್ಯಾವ್ಯ. ಇದನ್ನು ಬರೆದವನು ಒಬ್ಬ ಅಜ್ಞಾತ ಜೈನಕ್ವಿ. ಆತ ಜಿನಾಗಮತಜ್ಞ, ಮೇಲ್ಮಟ್ಟದ ಪ್ರತಿಭಾಶಾಲಿ. ಲೀಲಾಜಾಲವಾಗಿ ಜೈನ ಪರಿಭಾಷೆಯ ಬಳಕೆಯಿದ್ದು, ಆತನ ಭಾಷಾಪ್ರಭುತ್ವ, ಛಂದಸ್ಸಿನ ನೈಪುಣ್ಯ, ಅಲಂಕಾರ ಶಾಸ್ತ್ರಪರಿಣತಿ ಈ ಶಾಸನದಲ್ಲಿ ಪ್ರಕಟವಾಗಿದೆ. ಆರಂಭದಲ್ಲಿ ನಷ್ಟವಾಗಿರುವಷ್ಟನ್ನು ಬಿಟ್ಟರೂ, ಈಗ ಇರುವ ಸ್ಥಿತಿಯಲ್ಲಿಯೇ ನೋಡಿದರೂ, ಇದರಲ್ಲಿ ಒಟ್ಟು ೩೨ ಪದ್ಮಗಳಿವೆ; ಇನ್ನಷ್ಟು ಗದ್ಯವೂ ಇದೆ.

ಉಪಲಬ್ಧ ಪದ್ಯಗಳ ವರ್ಗೀಕರಣ: ಕಂದ ೧೬, ಮಹಾಸ್ರಗ್ಧರೆ ೨, ಚಂಪಕಮಾಲೆ ೪, ಉತ್ಪಲಮಾಲೆ ೪, ಮತ್ತೇಭ ವಿಕ್ರೀಡಿತಗಳನ್ನೂ ೨೧ನೆಯ ಪ್ರಕೃತಿಯಲ್ಲಿ ಬರುವ ಚಂಪಕಮಾಲೆಯನ್ನೂ ೨೨ನೆಯ ಆಕೃತಿಯಲ್ಲಿ ಬರುವ ಮಹಾಸ್ರಗ್ಧರೆಯನ್ನೂ ಈ ಶಾಸನ ಕವಿ ಯಶಸ್ವಿಯಾಗಿ ಪ್ರಯೋಗಿಸಿ, ತನ್ನ ಸೃಜನ ಸಾಮರ್ಥ್ಯವನ್ನೂ ಛಂದಸ್ಸಿನ ಜ್ಞಾನವನ್ನೂ ಪ್ರಭುತ್ವವನ್ನೂ ಪ್ರಕಟಿಸಿದ್ದಾನೆ. ವರ್ಣ (ಸಮ) ವೃತ್ತಗಳೆಲ್ಲ ಹಳಗನ್ನಡ ಚಂಪೂಕವಿಗಳು ಉಪಯೋಗಿಸಿರುವ ಹಳೆಯ ಸರಕೇ. ಆದರೂ ಇದು ಶಾಸನ ರಚನೆಯೆಂಬುದನ್ನು ಮರೆಯಲಾಗದು; ಅಲ್ಲದೆ ಹಳಗನ್ನಡ ಸಾಹಿತ್ಯ ಕೃತಿಗಳಲ್ಲಿ ಸಿಗುವ ಮಹಾಸ್ರಗ್ಧರೆಗಳ ಸಂಖ್ಯೆ, ಪ್ರಸಾರ ಪರಿಮಿತ. ಇಲ್ಲಿನ ಕಂದ ಪದ್ಯಗಳ ಸಲಿಲತೆ ಸುಭಗತೆ ಮುದಗೊಳಿಸುತ್ತದೆ. ಒಟ್ಟಾರೆಯಾಗಿ ಹೇಳುವುದಾದರೆ ಇದೊಂದು ಪುಟ್ಟ ಚಂಪೂ ಖಂಡಕಾವ್ಯ. ಇಲ್ಲಿನ ಪದ್ಯಗಳ ಛಂದಸ್ಸು ಲಯ ಶಯ್ಯೆ ಕುರಿತು ಇನ್ನೂ ವಿವರವಾಗಿ, ತೌಲನಿಕವಾಗಿ ಚರ್ಚಿಸುವುದಕ್ಕೆ ಅವಕಾಶವಿದೆ. ಈ ಅಂಶವೂ ಪ್ರಸ್ತುತ ಶಾಸನ ಕವಿಯ ಮೇಲ್ಮಟ್ಟದ ಪ್ರತಿಭೆಗೆ ಸಾಕ್ಷಿಯಾಗಿದೆ; ಕನ್ನಡ -ಸಂಸ್ಕೃತ ಭಾಷೆಗಳ ಹದವರಿತ ಮಿಶ್ರಣವಿದೆ. ಈ ಶಾಸನದಲ್ಲಿ ಈಗ ಅಚ್ಚಾಗಿರುವ ರೀತಿಯಲ್ಲಿ, ಕೆಲವು ಸ್ಖಾಲಿತ್ಯಗಳು ಸೇರಿಕೊಂಡಿವೆ:

ಸಾಲು

ಇರುವುದು

ಇರಬೇಕಾದದ್ದು
೧೦ ಒಳುಪನೊಳಕೊಣ್ಡಿರ್ದ್ದ ಒ(ಳ್ಪ)ನೊಳಕೊಣ್ಡಿರ್ದ್ದ(೦)
೧೧ ಮೆಯಿ ಸಿರಿ ಎಂಬೊಳುಪುವೆತ್ತಂ ಮೆಯ್ ಸಿರಿ ಎಂಬೊ(ಳ್ಪು)ವೆತ್ತಂ
೧೨ ಚತುರದಿತ ಚತುರ್ವಿಧ
೧೩ ಬೆಳುಹುಗೆ ಬೆ(ಳ್ಹು)ಗೆ
೧೪ ಕಲುಹೊಳೆ ಕ(ಲ್ಹೊ)ಳೆ
೧೬ ಪೆಂಪಿನಗುಂಪುವೆತ್ತ ಪೆಂಪಿನಗುಂ(ತಿ)ವೆತ್ತ
೨೯ ಪ್ರಭುಮಲ್ಲ ಪ್ರಭು ಮಲ್ಲ(೦)
೩೨ ಮಲ್ಲಿನಾಥನ ಮಲ್ಲಿನಾಥನ(೦)
೩೩ ತಾಂಗಲು ತಱುಂಬಲು ತಾಂಗ(ಲ್) ತಱುಂಬ(ಲ್)

ಮೇಲಿನ ಸೂಚನೆಯಲ್ಲಿ ೧೩-೧೪ನೆಯ ಸಾಲುಗಳ ಸ್ಥಳವಾಚಿ ರೂಪಗಳಲ್ಲಿ ಈಹ ಇರುವಂತೆಯೇ ಶಬ್ದರೂಪವನ್ನು (u u u u ) ಒಪ್ಪಿಕೊಂಡರೆ, ಛಂದಸ್ಸಿಗೆ ಭಂಗ ಬರುತ್ತದೆ: ನಾಲ್ಕು ಮಾತ್ರೆಯ ಗಣವಿನ್ಯಾಸದಲ್ಲಿ (u u) ಆರಂಭದ ಗುರುವಿಗೆ ಎರಡು ಲಘುಗಳನ್ನು ಸ್ಥಳಾಂತರಿಸಿರುವುದು ಕವಿಯ ಪ್ರಜ್ಞಾಪೂರ್ವಕ ಪ್ರಯತ್ನವೋ ಶಾಸನಾಕ್ಷರಗಳನ್ನು ಬರೆದ / ಕೆತ್ತಿದ ವ್ಯಕ್ತಿಯ ಕೈವಾಡವೋ ತಿಳಿಯದು. ಅದರಿಂದ ರೂಪಸಿದ್ಧಿಯನ್ನು ಗಮನದಲ್ಲಿ ಇರಿಸಿ, ಛಂದಸ್ಸಿನ ನಿಯಮಕ್ಕೆ ಅನುಗುಣವಾಗಿ ಇರುವಂತೆ ಸಂಯೋಜಿಸುವ ಸ್ವಾತಂತ್ರ್ಯ ವಹಿಸಿದ್ದೇನೆ.

ಮೊದಲ ಓದಿಗೇ ಆಕರ್ಷಿಸುವ ಈ ಶಾಸನ ಮರುಓದಿಗೆ ಅನೇಕ ವೈಶಿಷ್ಟ್ಯಗಳನ್ನು ಬಿಟ್ಟುಕೊಡುತ್ತದೆ. ಱೞದ ಬಳಕೆ ಇಳಿಕೆವಡೆದಿದ್ದರಿಂದ ಈ ಶಾಸನಕವಿ ನೆಗರ್ದ್ದ, ಪೊಗಳ್ಗುಂ ಎಂಬ ರೂಪಗಳನ್ನು ಬಳಸಿದ್ದಾನೆ. ನೆಗಱ್ ರೂಪದ ಭೂತಕೃದಂತವಾಗಿ ನೆಗರ್ದ ಎಂಬುದನ್ನು ಈ ಶಾಸನದ ಸಮಾಕಾಲೀನವಾದ ಇತರ ಶಾಸನಗಳಲ್ಲೂ ಬಳಸಲಾಗಿದೆ (ಎ.ಕ. ೭, ಶಿವಮೊಗ್ಗ ೬೪, ೧೧೧೨); ಅಲ್ಲದೆ ಇಲ್ಲಿ ಅದು ಶಿಥಿಲದ್ವಿತ್ವವಾಗಿದೆಯೆಂಬುದನ್ನೂ ಗಮನಿಸಬೇಕು. ಪೊಗಱ್ ರೂಪವನ್ನು ಪೊಗಳ್ಗುಂ ಎಂದಿಲ್ಲಿ ಬಳಸಿರುವುದು ಕವಿಯ ಪ್ರಯೋಗವಾಗಿರದೆ ಶಾಸನ ಬರೆದವರ ಕೈವಾಡವೂ ಇದ್ದಿರಬಹುದು. ‘ದಡಿಗಂಗಾರ್ ಪಡಿ ಪಾಟಿ ಪಾಸಟಿ ಸಮಂ ಪಟ್ಟಾನ್ತರಂ ಮಾನವರ್’- ಎಂಬಲ್ಲಿ ಸಮಾನಾರ್ಥಕ ಶಬ್ದರೂಪಗಳನ್ನು ಒಂದೆಡೆ ಪೋಂಛಾವಡಿ ಮಾಡಿದ ಚಮತ್ಕಾರವಿದೆ: ಕರ್ಣಾಟಕ ಶಬ್ದ, ಸಾರದಲ್ಲಿ (ಸು. ೧೪೦೦) ಸರಿ ದೊರೆ ಪಡಿ ಗೆಡೆ ಪಾಟಿ ಪಾಸಟಿ… ಈ ೧೮ ಸಮಾನಕ್ಕೆ ಪೆಸರ್ (೫೯-೨೯) ಎಂದಿದೆ (ಕರ್ಣಾಟಕ ಕಾವ್ಯಮಂಜರಿ, ಮೈಸೂರು (೧೮೯೭). ಶೀಲಪ್ರಭೆ ಎಂಬ ಪ್ರಯೋಗ ಆಹ್ಲಾದಕರವಾಗಿದೆ.

ಶಾಸನದುದ್ದಕ್ಕೂ ಚಂಪೂಕಾವ್ಯಗಳ ಅಭ್ಯಾಸದಿಂದ ಹದಗೊಂಡ ಶೈಲಿಯ ಪ್ರಸನ್ನತೆ ಪ್ರಿಯವಾಗುತ್ತದೆ; ಕವಿ ಪ್ರೌಢಕಾವ್ಯಗಳ ಪದ್ಧತಿಗೆ ಒಲಿದವನು. ಪಂಪ ಪೊನ್ನ ರನ್ನರ ಕಾವ್ಯಾಸ್ವಾದದತ್ತವಾದ ರುಚಿ ಈ ಪುಟ್ಟ ಕಾವ್ಯದರ್ಪಣದಲ್ಲಿ ಪ್ರತಿಫಲನವಾಗಿದೆ. ಪೊನ್ನನ ‘ಶಾಂತಿ ಪುರಾಣ’ ದ ಮಲ್ಲಪ – ಪುನ್ನಮಯ್ಯರ ಪಾತ್ರಚಿತ್ರಣ ಇಲ್ಲಿನ ಸೃಜನಕ್ರಿಯೆಗೆ ಮಾದರಿ; ಪಂಪನು ಕರ್ಣನನ್ನು ಕುರಿತು ಮಾಡಿರುವ ಸಾಹಸ – ತ್ಯಾಗಗುಣ ಸಮನ್ವಯ ಚಿತ್ರಣವೂ ಇಲ್ಲಿ ಅನುರಣಿತವಾಗಿದೆ. ಅದರೊಂದಿಗೆ ತನ್ನವರೆಗಿನ ಶಾಸನಗಳ ಶಿಷ್ಟಕಾವ್ಯ ಪದ್ಧತಿ, ವ್ಯಾಕರಣನಿಯಮ – ಇದರ ನಿಕಟ ಪರಿಚಯವೂ ಇಲ್ಲಿ ಬಿಂಬಿತವಾಗಿದೆ ದೃಷ್ಟಾಂತಗಳು;

೧. ಜಸಕೆ ತಾಯ್ಗರುವಾದಂ : ಪುರುಷಾಕಾರದ ತಾಯ್ಗರು – ಕ.ಇ.೪, ೧೦ ಕ್ರಿ.ಶ. ೧೧೨೧.

೨. ಒಳ್ಪು (ಒಳ್ಳಿತ್ತು-: ಒಳ್ -+- ಪು): ಶಾಸನ ಪ್ರಯೋಗ – ಎಕ. ೮. ಸೊರಬ ೪೭೭. ಕ್ರಿ.ಶ. ೯೯೧; ಎ.ಇ.೧೮, ೫. ಕ್ರಿ.ಶ. ೧೦೮೨. ಇದನ್ನು ವಿರಳಾಕ್ಷಗೊಳಿಸಿ ‘ಒಳುಪು’ ಎಂದೂ ಇಲ್ಲಿದ್ದು, ಇದಕ್ಕೂ ಶಾಸನ ಪ್ರಯೋಗಗಳ ಬೆಂಬಲವಿದೆ: ಎಕ ೬. ಕಡೂರು ೫೧, ಕ್ರಿ.ಶ. ೧೧೬೯: ಎಕ ೭. ಶಿಕಾರಿಪುರ ೧೨೫. ಕ್ರಿ.ಶ. ೧೦೧೯.

೩. ಶೌರ್ಯ – ಸಾಹಸಗಳನ್ನು ಕುರಿತು ಅಭಿನಂದನೆ. ಆನಂದ, ಪ್ರಶಂಸಾದಿಗಳ ಸೂಚನೆಗೆ ಬಳಸುವ ಅವ್ಯಯಶಬ್ದ ‘ಬಾಪ್ಪು’ : ಇಂಥ ಇನ್ನಿತರ ಸಂವಾದಿಶಬ್ದಗಳು ಭಾಪ್ಪು, ಭಲೇ. ಬಾಪ್ಪು ಎಂಬ ಅವ್ಯಯದ ದ್ವಿರುಕ್ತಿ ಬಾಪ್ಪು ಬಾಪ್ಪು (ಎಕ. ೮, ಸಾಗರ ೧೦೯. ಕ್ರಿ.ಶ. ೧೦೭೯). ಬಾಪ್ಪು ಬಾಪ್ಪು ಎಂಬ ದ್ವಿರುಕ್ತಿಯನ್ನು ಕೆಲವು ಶಾಸನ ಕವಿಗಳು ‘ಒಬಾಪ್ಪು’ ಎಂಬಂತೆ ಪ್ರಯೋಗಿಸಿದ್ದಾರೆ: (ಸೌ.ಇ.ಇ. ೯-೧, ಕ್ರಿ.ಶ. ೧೧೩೨: ಎ.ಇ.೧೫. ೩೨೦. ೧೧೭೨). ಈ ಶಾಸನ ಕವಿಯೂ ಬಬಾಪ್ಪು ಎಂದು ಪ್ರಯೋಗಿಸಿದ್ದಾನೆ.

೪. ಈ ಶಾಸನದಲ್ಲಿರುವ ‘ಕಲಿಯೇ ಸೂದ್ರಕನ್…’ ಎಂಬ ಪದ್ಯವನ್ನು ಬೊಪ್ಪಣ ಪಂಡಿತನ ಗೊಮ್ಮಟ ಜಿನಸ್ತುತಿಯ ಪದ್ಯದೊಂದಿಗೆ ಹೋಲಿಸಬಹುದು.

೫. ಮಲ್ಲನನ್ನು ಪ್ರಭುಮಲ್ಲ, ಮಹಾಪ್ರಭು ಮಲ್ಲಿನಾಥ, ಮಲ್ಲಗಾವುಂಡ, ನಾಳ್ಟ್ರಭು ಮಲ್ಲಂ- ಎಂದು ಮುಂತಾಗಿ ಸಂಬೋಧಿಸಿದ್ದಾನೆ. ಆತನ ಶೀಲಸಂಪನ್ನತೆ (ಪರವಧುವೆಳಸಿಡೊಲ್ಲಂ), ಯುದ್ಧಪಪರಾಕ್ರಮ (ಸಮರಮುಖಷಣ್ಮುಖ), ವಿಶೇಷಜ್ಞಾನ (ಭಾರತೀ ಕರ್ಣಾವತಸಂ), ಸೌಭಾಗ್ಯೋನ್ನತಿ (ಅಗಣ್ಯಪುಣ್ಯೋಪಾರ್ಜಿತ), ಗುಣೋನ್ನತಿ (ಸತ್ಯ ಶೌಚಂ) -ಇವನ್ನು ಚಿತ್ತಭಿತ್ತಿಯಲ್ಲಿ ಅಚ್ಚೊತ್ತಿದ್ದಾನೆ. ಚೆನ್ನಾಗಿ ಅರಳಿದ ಮಾತುಗಳೆಂಬ ಹೆರಳುಕಟ್ಟನ್ನು ಪಡೆದ ಮಲ್ಲನನ್ನು -ಕಲಿತನದಲ್ಲಿ ಶೂದ್ರಕನೂ, ಈವ ಗುಣದಲ್ಲಿ ಕಲ್ಪವೃಕ್ಷವೂ, ಸುಖದುಂಖಗಳಲ್ಲಿ ವಿಕಾರಹೊಂದದ ಚಿತ್ತವೃತ್ತಿಯನ್ನು ಹೊಂದಿರುವುದರಲ್ಲಿ ಸಾಗರವೂ, ಮಲಿನತೆಯಿಲ್ಲದ ಪರಿಶುದ್ಧ ಚಾರಿತ್ರ್ಯದಲ್ಲಿ ಸುರಂಗಗೆಯ ಅಕ್ಕರೆಯ ಮಗ ಭೀಷ್ಮನೂ ಆದವನೆಂದು, ನೋಂಪಿಯ ಸತ್ಯಸಂಧತೆಯಲ್ಲಿ ಸೂರ್ಯಪುತ್ರ ಕರ್ಣನನ್ನೂ ಮೀರಿಸುವವನೆಂದು, ಆನಂದವಾದ ವಿಶ್ವಭೂತಳವೆಲ್ಲ ಹೊಗಳುತ್ತಲಿದೆ – ಎಂಬುದಾಗಿ ಕವಿಯಾಗಿ ವರ್ಣಿಸಿ, ಶಿಲ್ಪಿಯಾಗಿ ಕಡೆದು ಮೂಡಿಸಿ, ತನ್ನ ಸೃಜನ ಶಕ್ತಿಯನ್ನು ಮೆರೆದಿದ್ದಾನೆ.

೬. ತೈಲಪ, ಇಱೆವಬೆಡಂಗ ಸತ್ಯಾಶ್ರಯ ಚಕ್ರವರ್ತಿಗಳಿಗೇ ಅಲ್ಲದೆ ತ್ರೈಳೋಕ್ಯಮಲ್ಲ ಸೋಮೇಶ್ವರನಿಗೂ ‘ಆಹವಮಲ್ಲ’ ಪ್ರಶಸ್ತಿ ಯಿತ್ತೆಂಬುದಕ್ಕೆ ತಕ್ಕ ಪುರಾವೆ ಈ ಶಾಸನದಲ್ಲಿದೆ.

೭. ದಾನಚಿಂತಾಮಣಿ ಅತ್ತಿಮಬ್ಬೆಗೆ ಪ್ರಸಿದ್ಧ (ಜೈನ) ಮಹಿಳೆಯರನ್ನು ಹೋಲಿಸುವ ಪರಿಪಾಟಿಯೊಂದು ಕಾವ್ಯ – ಶಾಸನದಲ್ಲೂ ನಿರಂತರವಾಗಿ ಮುಂದುವರಿದಿದೆ.

೮. ಅತ್ತಿಮಬ್ಬೆಯಂತೆಯೇ ಗಂಗರ ಇಮ್ಮಡಿ ಬೂತಗನ ಮಡದಿ ರೇಬಕಳಿಗೂ (ರೇವಕಿ, ರೇವಕಿ, ರೇವಕಬ್ಬರಿಸಿ) ಶ್ರೇಷ್ಠಮಹಿಳೆಯರನ್ನು ಹೋಲಿಸುತ್ತಿದ್ದ ರೆಂಬುದಕ್ಕೂ ಈ ಶಾಸನದಲ್ಲಿ ಪ್ರಯೋಗವಿದೆ.

೯. ಅಪರೂಪವಾದ ಹಾಗೂ ಆರಿಸಿದ ಶಬ್ದಗಳೂ ಈ ಶಾಸನದಲ್ಲಿವೆ. ಉದಾಹರಣೆ: ತಾಯಿಯ ಮೊಲೆ ಹಾಲು ಕುಡಿದು ಮಲ್ಲನ ಮೈಗಟ್ಟಿ ಆಯಿತೆಂದು ಹೇಳುವಾಗ, ಅನಿಮಿಷಧೇನುದುಗ್ಧ ಪರಿಸೇವೆಯೋಳಿ ವಪುವರ್ಧನ ಪ್ರಚೋದನವಾಯಿತು ಎಂದಿದ್ದಾನೆ. ಇಲ್ಲಿ ಕಾಮಧೇನು, ದೇವತೆಗಳ ಹಸು ಎಂಬರ್ಥಕ್ಕೆ ‘ಅನಿಮಿಷಧೇನು’ ಎಂದು ಹೇಳಿರುವುದು ಇಡೀ ಕನ್ನಡ ಸಾಹಿತ್ಯದಲ್ಲಿ ಏಕೈಕ ಪ್ರಯೋಗ; ಈ ಶಬ್ದ ಮತ್ತು ಪ್ರಯೋಗ ಸಾಹಿತ್ಯ ಪರಿಷತ್ತಿನ ದೊಡ್ಡ ನಿಘಂಟಿನಲ್ಲೂ ದಾಖಲಾಗಿಲ್ಲ.

ಹೀಗೆ ನಾನಾಕಾರಣಗಳಿಂದ ನೇರಿಲಗೆಯ ಶಾಸನ ಕರ್ನಾಟಕದ ಸಾಂಸ್ಕೃತಿಕ ಚರಿತ್ರೆಯಲ್ಲಿ ವಿಶಿಷ್ಟವೆನಿಸಿದೆ.