೧. ಕನ್ನಡದ ಆದಿಕವಿಯಾದ ಪಂಪನು ಸ್ವವಿಷಯವನ್ನು ಕ್ವಚಿತ್ತಾಗಿ ಹೇಳಿ ಕೊಂಡಿದ್ದಾನೆ. ಪಂಪನ ಪೂರ್ವಿಕರು ವೆಂಗಿಪೞುವಿನ ವತ್ಸ ಗೋತ್ರದ ಬ್ರಾಹ್ಮಣರೆಂದು ಹೇಳಲಾಗಿದೆ [ಪಂಪಭಾರತ, ೧೪ – ೪೦ ರಿಂದ ೪೩]. ಸಕಲ ಶಾಸ್ತ್ರಾರ್ಥಗಳಲ್ಲಿ ಪಾಂಡಿತ್ಯವಿದ್ದ ಮಾಧವ ಸೋಮಯಾಜಿಯು ಸರ್ವಕ್ರತು ಎಂಬ ಯಜ್ಞವನ್ನು ಮಾಡಿದನು:

ವರದಿಗ್ವನಿತೆಗೆ ಮಾಟದ
ಕುರುಳಾ ತ್ರೃಭವನ ಕಾಂತಿಗಂ ದಲ್ ಕಂಠಾ
ಭರಣಮೆನೆ ಪರೆದ ತನ್ನ
ಧ್ವರ ಧೂಮದೆ ಕರಿದು ಮಾಡಿದಂ ನಿಜಯಶಮಂ
||       .೧೪ – ೪೪

ಶ್ರೇಷ್ಠವಾದ ದಿಕ್ಕೆಂಬ ಹೆಣ್ಣಿಗೆ ಅಲಂಕಾರವೆನಿಸಿ ಹಬ್ಬಿದ್ದ ಯಜ್ಞದ ಹೊಗೆಯಿಂದ ಸೋಮಾಯಾಕಿಯು ತನ್ನ ಯಶಸ್ಸನ್ನೂ ಕಪ್ಪಾಗಿಸಿದನು. ಆತನ ಮಗ ಅಭಿಮಾನಚಂದ್ರನು ಮಹದಾನಿಯಾಗಿದ್ದನು [೧೪-೪೫]. ಅಭಿಮಾನಚಂದ್ರನಿಗೆ ಮಗನಾದ ಕೊಮರಯ್ಯನು ವೇದ ವೇದಾಂಗಗಳಿಗೆ ಬೆಳಗಿದ ಬುದ್ಧಿಯುಳ್ಳವನಾಗಿದ್ದುದಲ್ಲದೆ ಪ್ರಾಚೀನ ಆಚಾರ ಸಂಪನ್ನನಾಗಿದ್ದನು [೧೪-೪೬]. ಆ ಕೊಮರಯ್ಯನ ಮಗನೇ ಭೀಮಪಯ್ಯ. ಗುಣಶಾಲಿಯೂ ಮಹಾಜ್ಞಾನಿಯೂ ಆದ ಭೀಮಪಯ್ಯನು ಬ್ರಾಹ್ಮಣ ಜಾತಿಯನ್ನು ತೊರೆದು ಜೈನಧರ್ಮಕ್ಕೆ ಮತಾಂತರ ಮಾಡಿದನು (ಉತ್ಸಲ ಮಾಲಾವೃತ್ತ)

ಜಾತಿಯೊಳೆಲ್ಲಮುತ್ತಮದ ಜಾತಿಯ ವಿಪ್ರಕುಲಂಗೆ ನಂಬಲೇ
ಮಾತೊ ಜಿನೇಂದ್ರ ಧರ್ಮಮೆವಲಂ ನೆಗೞ್ಚುದನಿಂತಿರಾತ್ಮ ವಿ
ಖ್ಯಾತಿಯನಾತನಾತನ ಮಗಂ ನೆಗೞ್ದ ಕವಿತಾಗುಣಾರ್ಣವಂ
||೧೪-೪೮

ಜಾತಿಯಲ್ಲೆಲ್ಲ ಉತ್ತಮಜಾತಿಯ ಬ್ರಾಹ್ಮನಕುಲಜನಿಗೆ, ಧರ್ಮಗಳಲೆಲ್ಲ ರಾಜಧರ್ಮವೇ ನಿಶ್ಚಯವಾಗಿಯೂ ಯೋಗ್ಯವಾದದ್ದೆಂದು ನಂಬಿ ಭೀಮಪಯ್ಯನು ತನ್ನ ಬ್ರಾಹ್ಮಣ ಜಾತಿಯನ್ನು ಅಭಿವೃದ್ಧಿ ಮಾಡಿ, ಜೈನಧರ್ಮವನ್ನು ಸ್ವೀಕರಿಸಿದನು. ಹೀಗೆ ಮತಾಂತರದಿಂದ ತನ್ನ ಹೆಸರನ್ನು ಹೆಚ್ಚಿಸಿಕೊಂಡ ಭೀಮಪ್ಪಯ್ಯನ ಮಗನೇ ಕವಿತಾ ಗುಣಾರ್ಣವನೆಂದು ಕೀರ್ತಿಶಾಲಿಯಾದ ಪಂಪ.

೨. ಗಂಗಾಧರಂ ಶಾಸನದಲ್ಲಿ ಇದೇ ವಿಷಯ ಇನ್ನಷ್ಟು ನಿರುಕಾಗಿ ಬಂದಿದೆ. ವಂಗಿಪಱ್ಹ ನಿಡುಗೊಣ್ಡೆಯ – ಅಭಿಮಾನಚನ್ದ್ರನ ಮರ್ಮ್ಮಂ ಭೀಮಪಯ್ಯನ ಬೆಳ್ವೊಲದ – ಅಣ್ನಿಗೆಱೆಯ ಜೋಯಿಸ ಸಿಂಘನ ಮರ್ಮ್ಮಳ್ – ಅಬ್ಬಣಬ್ಬೆಯ ಮಗಂ [ಐ.ಎ.ಪಿ. ಕರೀಂನಗರ. ೩. ಸು. ೯೫೦].

೩. ಮೇಲಿನ ಮಾಹಿತಿಗಳಿಂದ ತಿಳಿದು ಬರುವಂತೆ, ಪಂಪನ ಪೂರ್ವಿಕರು ಕಮ್ಮೆ ಬ್ರಾಹ್ಮಣರು, ಜಮದಗ್ನಿ ಪಂಚಾರ್ಷೇಯರು, ಶ್ರೀವತ್ಸಗೋತ್ರಜರು. ಪ್ರಸ್ತುತ ಸಂಲೇಖನದಲ್ಲಿ ಚರ್ಚಿಸಬೇಕೆಂದಿರುವುದು ಈ ವತ್ಸಗೋತ್ರದವರು ಯಾರು ಮತ್ತು ಇವರು ಯಾವ ದೈವೋಪಾಸಕರು ಎಂಬುದನ್ನು.

೩.೧. ಈ ವಾಗ್ವಾದಕ್ಕೆ ತಾರ್ಕಣೆ ಆಗುವಂತೆ, ಇನ್ನೊಂದು ಪೂರಕನೆಲೆಯ ಅಭಿಪ್ರಾಯವನ್ನು ಅನ್ಯತ್ರ ವ್ಯಕ್ತಪಡಿಸಿದ್ದೇನೆ: ಪಂಪನ ತಂದೆ ಭೀಮಪಯ್ಯನು ಜೈನನಾಗುವ ಮೊದಲು ಶೈವ ಸ್ಮಾರ್ತನಾಗಿದ್ದನು; ಪಂಪನ ಮೂಲ ಹೆಸರು ಪಂಪಯ್ಯ ಎಂದಿದ್ದಿರಬಹುದು. ಪಂಪನ ವತ್ಸ ಗೋತ್ರವೂ ಇದೇ ವಾಜಿ ವಂಶದ ಕುಡಿ ಇದ್ದಿರಬಹುದು. ಪಂಪನ (ತಾಯಿ ಅಬ್ಬಣಬ್ಬೆಯ ತಂದೆ) ತಾತ ಜೋಯಿಸ ಸಿಂಘನೂ ವಾಜಿ ವಂಶಜನೇ ಇರಬೇಕು [ನಾಗರಾಜಯ್ಯ, ಹಂಪ : ಶಾಸನಗಳಲ್ಲಿ ಎರಡು ವಂಶಗಳು : ೧೯೯೫ : ೨೯]

೩.೧.೧. ಪಂಪನ ಪೂರ್ವಜರು ಶೈವ ಬ್ರಾಹ್ಮಣರೆಂದು ನಾನು ಹೀಗೆ ಅಭೀಪ್ರಾಯವನ್ನು ವ್ಯಕ್ತಪಡಿಸುವಾಗ ಅದನ್ನು ಸಮರ್ಥಿಸಬೇಕಾದ ಸಾಕ್ಷಾಧಾರಗಳನ್ನು ಒದಗಿಸಬೇಕಾದ ನೈತಿಕ ಹೊಣೆಗಾರಿಗೆಯೂ ಇದೆಯೆಂಬ ಅರಿವಿದೆ.

೪. ವೆಂಗಿವಿಷಯ (ವೆಂಗಿ ಮಂಡಲ)ದ ಹಾಗೂ ರೋಣ, ಗದಗ, ಲಕ್ಕುಂಡಿ, ಅಣ್ಣಿಗೆರೆ ನೆರೆಹೊರೆಯಲ್ಲಿದ್ದ ಶಿವೋಪಾಸಕ ವಾಜಿ ಬ್ರಾಹ್ಮಣರಲ್ಲಿನ ಮುಖ್ಯ ಮನೆತನಗಳು ಬಹುವಾಗಿ ಜೈನರಾದರು. ನಾಗಮಯ್ಯವು ಪುಂಗನೂರಿನಲ್ಲಿ ಜೈನನಾದನು. ಭೀಮಪಯ್ಯನು ವೆಂಗಿಪೞುವಿನಲ್ಲಿ ಜೈನನಾದನು. ಜೋಯಿಸ ಸಿಂಘನು ಅಣ್ಣಿಗೆರೆಯಲ್ಲಿ ಜೈನನಾದನು. ರೋಣದ ಪಂಪಯ್ಯನೂ [ಸೌ.ಇ.ಇ. ೧೦ -೧, ೩೬.೯೪೨. ಪು. ೨೨] ಇವರ ಜ್ಞಾತಿಯಾಗಿದ್ದನು. ಕಾಶ್ಯಪ, ಕೌಂಡಿನ್ಯ, ಭಾರದ್ವಾರ, ಮಾಂಧಾತ, ವತ್ಸ, ಸಾಂಖ್ಯಾಯನ ಮತ್ತು ಹಾರೀತ ಎಂಬ ಏಳುಗೋತ್ರಗಳು ವಾಜಿ ವಂಶದಲ್ಲಿದ್ದುವು [ನಾಗರಾಜಯ್ಯ, ಹಂಪ.; ಶಾಸನಗಳಲ್ಲಿ ಎರಡು ಕಡೆಯವರು, ವಾಜಿಕುಲದ ಶೈವ ಬ್ರಾಹ್ಮಣರು. ಮಹಾಕವಿ ಪಂಪ ಮತ್ತು ಮಹಾದಾನಿ. ಅತ್ತಿಮಬ್ಬೆಯ ಪೂರ್ವಜರು ಒಂಬತ್ತನೆಯ ಶತಮಾನದಲ್ಲಿ ಬ್ರಾಹ್ಮಣ್ಯದಿಂದ ಜೈನತ್ವಕ್ಕೆ ಮತಾಂತರಗೊಂದ ಪ್ರತಿಷ್ಠಿತ ಮನೆತನಗಳು. ಇತ್ತ ಅಣ್ಣಿಗೆರೆರೋಣ, ಅತ್ತ ವೆಂಗಿವಿಷಯ, ಉತ್ತ ಭೋಧನ ಪರಿಸರ – ಇವು ರಟ್ಟವಾಡಿಯ ಪರಿಧಿಯಲ್ಲಿದ್ದುವು.

೫. ಪಂಪನು ಶೈವ ಬ್ರಾಹ್ಮನ ಮೂಲದವನಾದುದರಿಂದ, ವಿಕ್ರಮಾರ್ಜುನ ವಿಜಯದಲ್ಲಿ ಶಿವನನ್ನು ತನ್ಮಯತೆಯಿಂದ ವರ್ಣಿಸಿರುವುದುಂಟು. ಇದಕ್ಕೆ ದೃಷ್ಟಾಂತವಾಗಿ, ದುರ್ಯೋಧನನು ಭೀಷ್ಮನನ್ನು ಕಾಣಲು ಬಂದಾಗಣ ಸಂದರ್ಭವನ್ನು ಪರಿಶೀಲಿಸಬಹುದು. ಭೀಷ್ಮನ ಮೈತುಂಬ ಬಾಣಗಳು ನಟ್ಟಿದ್ದುವು. ಭೀಷ್ಮನ ಮನಸ್ಸು ಶಿವನಲ್ಲಿ ತೊಡಗಿಕೊಂಡಿತ್ತು; ಶರಶಯ್ಯೆಯಲ್ಲಿ ಮಲಗಿದ್ದನು, ಆದರೆ ಹರನನ್ನು ನೆನೆಯುತ್ತಿರುವ ಭೀಷ್ಮನ ಈ ಚಿತ್ರ ಪಂಪನಿಗೇ ವಿಶಿಷ್ಟವಾದದ್ದು:

ಇಡಿದಿರೆ ರೋಮಕೂಪದೊಳಗುರ್ಚ್ಛಿದ ಸಾಲಸರಳ್ಗಳುಂ ತೆರಂ
ಬಿಡದಿರೆ ಬೆಟ್ಟುವೋರ್ಗುಡಿಸಿದಂತೆ ನೆರಲ್ಡಿರೆ ಸುಯ್ಯ ಪುಣ್ಗಳಿಂ
ಬಡನಡುವಂ ಶರಾಳಿ ಭಯದಿಂ ನಡುಪಂತಿರೆ ಚಿತ್ತದೊಳ್ ಮೃಡಂ
ತೊಡರ್ದಿರೆ ಬಳ್ದದೇನೆಸೆದನೋ ಶರಶಯ್ಯೆಯೊಳಂದು ಸಿಂಧುಜಂ
||           ೧೩-೬೨

ಹರನೊಳೆ ಪತ್ತಿ ತೆತ್ತಿಸಿದ ಚಿತ್ತಮನಿರ್ಬಗೆಯಾಗಿ ಮೋಹಮೊ
ತ್ತರಿಸೆ ಸುಯೋಧನಂಗೆ ರಣ ಭೂಮಿಯೊಳೆಂತುಟವಸ್ಥೆಯೋ ಕನ
ಲ್ಡುರಿದಪುದೆನ್ನ ಮೈಯ್ಯನಿತುಮುತ್ತಣ ಪಂಬಲ ಬಂಬಲೊಳ್ ತೞ್ತಂ
ದಿರಿದುದು ಚಿತ್ತಮಾದೊರೆಯ ಯೋಗಿಗಮಿಂತುಟೆ ಮೋಹಮಾಗದೇ
||       ೧೩-೬೩

ಚಿತ್ತದೊಳ್ ಮೃಡಂ ತೊಡರ್ದಿರೆ, ಹರನೊಳಂ ಪತ್ತಿ ತೆತ್ತಿಸಿದ ಚಿತ್ತಮನ್, ಎಂಬ ಮಾತುಗಳು ಪಂಪಕವಿಯ ಒಲವು ಯಾವ ದೈವದತ್ತ ಎಂಬುದನ್ನು ಬೊಟ್ಟುಮಾಡಿ ತೋರಿಸುತ್ತವೆ. ಮೂಲ ವ್ಯಾಸಭಾರತದಲ್ಲಿ ಭೀಷ್ಮನು ಕೃಷ್ಣ- ವಿಷ್ಣುಭಕ್ತನಾಗಿ ಚಿತ್ರಗೊಂಡಿದ್ದಾನೆ: ವಾಸುದೇವಾ, ಪಾಂಡವರನ್ನು ಕಾಪಾಡಿಕೋ, ಅವರಿಗೆ ನೀನೇ ಗತಿ. ನೀನು ಪುರಾತನ ಋಷಿಯಾದ ನಾರಾಯಣನ ಅವತಾರವೆಂದು ನನಗೆ ವ್ಯಾಸನೂ ನಾರದನೂ ಹೇಳಿದ್ದಾರೆ. ನನಗೆ ‘ದೇಹ ಬಿಡಲು ಅಪ್ಪಣೆ ಕೊಡು. ನೀನು ಅನುಜ್ಞೆ ಕೊಟ್ಟರೆ ನನಗೆ ಸದ್ಗತಿ ಲಭಿಸುತ್ತದೆ’ ಎಂದನು. ಕೃಷ್ಣನು ಅನುಜ್ಞೆ ಕೊಟ್ಟನು [ಎ.ಆರ್. ಕೃಷ್ಣಶಾಸ್ತ್ರಿ: ವಚನಭಾರತ: ಪು. ೩೫೮]

೬. ವ್ಯಾಸರು ಸಹ ಹೆಚ್ಚಾಗಿ ಕೃಷ್ಣನ ಭಕ್ತರು. ವ್ಯಾಸಮುನೀಂದ್ರರುಂದ್ರ ವಚನಾಮೃತವಾರ್ಧಿಯನ್ನು ಈಸಿದ, ಪಂಪನು ಹೆಚ್ಚಾಗಿ ಶಿವಭಕ್ತನಾದದ್ದಕ್ಕೆ ಕಾರಣ ಆತನ ಪೂರ್ವಜರು ಶೈವ ಬ್ರಾಹ್ಮಣರಾಗಿದ್ದುದು.

೬.೧. ಪಂಪನ ಶಿಷ್ಯನಾದ ರನ್ನನು, ತನ್ನ್ನ ಗುರುವಾದ ಪಂಪನನ್ನು ಅನುಸರಿಸದೆ, ವ್ಯಾಸರನ್ನು ಹಿಂಬಾಲಿಸಿದ್ದಾನೆಂಬುದು ಇಲ್ಲಿ ಗಮನಿಸಬೇಕಾದ ಮತ್ತೊಂದು ಸ್ವಾರಸ್ಯ. ಇದೇ ಪ್ರಸ್ತುತ ಪ್ರಸಂಗದಲ್ಲಿ, ಭೀಷ್ಮನು ಹರ (ಮೃಡ)ನನ್ನು ನೆನೆಯು ತ್ತಿದ್ದನೆಂದು ಪಂಪನು ನಿರೂಪಿಸಿದ್ದರೆ, ರನ್ನನಲ್ಲಿ ಭೀಷ್ಮನು ಮುಕುಂದ (ಕೃಷ್ಣ) ನನ್ನು ಏಕಚಿತ್ತದಿಂದ ನೆನೆಯುತ್ತಿದ್ದನೆಂದಿದೆ:

ನರಶರಕೋಟಿ ಜರ್ಜರಿಸೆ ತನ್ನ ಶರೀರಮನಸ್ತ್ರ ವೇದನಾ
ಪರವಶನಾಗಿಯುಂ ಮೞೆದನಿಲ್ಲ ಮುಕುಂದನನೇಕಚಿತ್ತದಿಂ
ಸ್ಮರಿಯಿಸುತಿರ್ದುಮತ್ತಲರಿ ಭೂಪರಿನೆಂತು ಟವಸ್ಥೆಯಾದುದೋ
ಕುರುಪತಿಗೆಂದನಾ ಪರಮಯೋಗಿಗಮಿಂತುಂಟು ಮೋಹಮಾಗದೇ
||          ೫-೩೮

ಈ ಪದ್ಯದ ನಡಿಗೆ ಭಾವ ಛಂದಸ್ಸು ಸಂದರ್ಭ ಎಲ್ಲವೂ ಪಂಪನ ಪ್ರತಿರೂಪವಾಗಿದೆ. ಆದರೆ ಈ ಪದ್ಯದಲ್ಲಿ ಆಗಿರುವ ಒಂದೇ ವ್ಯತ್ಯಾಸ ಹರನ ಬದಲು ಮುಕುಂದ ಬಂದಿರುವುದು.

೬.೧.೧. ಇದರಿಂದ ಎರಡು ಸಂಗತಿಗಳು ಸಾಬೀತಾಗುತ್ತವೆ: ಪಂಪನು ಶೈವೋಪಾಸಕ ಪರಂಪರೆಯನ್ನು ಪ್ರತಿನಿಧಿಸುತ್ತಾನೆ, ಮತ್ತು ರನ್ನನು ಕೇವಲ ಪಂಪನ ನೀಲಿ ನಕಾಶೆಯಲ್ಲ. ರನ್ನನು ತನ್ನದೇ ಆದ ಸ್ವತಂತ್ರ ನಿರ್ಧಾರಗಳನ್ನು ಕೈಗೊಳ್ಳಬಲ್ಲ.