ಪೀಠಿಕೆ

ಮಹಾಪುರಾಣ ಜೈನವಾಙ್ಮಯದಲ್ಲಿ ಮೇರುಕೃತಿ.[1]ಅದು ಕನ್ನಡದ ಜೈನ ಕವಿಗಳಿಗೆ ತಾಯಿಬೇರು. ಕನ್ನಡ ಜೈನಪುರಾಣಗಳಿಗೆ ಸಂಸ್ಕೃತ ಮಹಾಪುರಾಣ ತಲಕಾವೇರಿ. [2]ಪಂಪ ಪೊನ್ನ ರನ್ನ ಜನ್ನರಾದಿಯಾಗಿ ಹಲವಾರು ಕನ್ನಡ ಕವಿಗಳು ಮಹಾಪುರಾಣದಲ್ಲಿ, ಮನತಣಿಯುವಂತೆ ಕ್ರೀಡಿಸಿದ್ದಾರೆ. ಕನ್ನಡ ಕವಿಗಳ ಋಣಭಾರದಿಂದ ಮಹಾಪುರಾಣ ಜಗ್ಗಿಲ್ಲ. ಪೂರ್ಣ ಸೂರೆಯಾಗಿಲ್ಲ. ಅದು ಮೊಗೆ ಮೊಗೆದಷ್ಟೂ ಮುಗಿಯದೆ ಒಸರುವ ಅಕ್ಷಯಕಾವ್ಯ – ಪುರಾಣ. ಮಹಾಪುರಾಣ ಕಾವ್ಯಕ್ಕೆ ಕಾವ್ಯ, ಪುರಾಣಕ್ಕೆ ಪುರಾಣ. [3] ಅದರ ಉದ್ದಕ್ಕೂ, ಧರ್ಮ ಪ್ರಧಾನವಾದರೂ, ಕಾವ್ಯ ಆನುಷಂಗಿಕವಾಗಿ ಬರುತ್ತದೆ. ಅಲ್ಲಲ್ಲಿ ಕಾವ್ಯವೇ ಪ್ರಮುಖವಾಗಿ, ಧರ್ಮ ಗೌಣವಾದ ರಸಾರ್ದ್ರಭಾಗಗಳೂ ಮಹಾಪುರಾಣದಲ್ಲಿವೆ.[4] ಒಂದರ್ಥದಲ್ಲಿ ಮಹಾಪುರಣವೂ ರಾಮಾಯನ ಮಹಾಭಾರತಗಳಿಗೆ ಹೊಯ್‍ಕಯ್ ಆಗಿ ಅವುಗಳ ಹತ್ತಿರ ನಿಲ್ಲುವ ಕೃತಿ.[5]

ಮಹಾಪುರಾಣದ ಮೇಲೆ ಸಮಗ್ರ ವಿಮರ್ಶೆ ಇನ್ನೂ ನಡೆಯಬೇಕಾಗಿದೆ.[6] ಕನ್ನಡದ ಸಂದರ್ಭದಲ್ಲಂತೂ ಇದರ ಅಧ್ಯಯನ ಮಹತ್ವದ್ದಾಗಿರುತ್ತದೆ. ಮಹಾಪುರಾಣದ ಕೊಂಬೆ ರೆಂಬೆಗಳಾಗಿ ಕವಲೊಡೆದು ಹುಟ್ಟಿಕೊಂಡಿರುವ, ಕನ್ನಡ ಕಾವ್ಯಗಳ ನಿಜಬಣ್ಣ ಬಯಲಾಗಬೇಕಾದರೆ ತೌಲನಿಕ ಅಭ್ಯಾಸ ನಡೆಯಬೇಕು. ಅಂಥ ತುಲನಾತ್ಮಕ ವ್ಯಾಸಂಗದಿಂದ ಮಾತ್ರ ಕನ್ನಡ ಜೈನ ಕವಿಗಳ ಸ್ವಂತ ಕಾತಿಯ ಮೌಲಿಕತೆ ಎಷ್ಟೆಂಬುದು ನಿರ್ಧಾರಗೊಳ್ಳಲು ಸಾಧ್ಯ. ಇದು ಹತ್ತಾರು ಪಿ.ಎಚ್.ಡಿ., ಮಹಾಪ್ರಬಂಧಗಳ ವಸ್ತುವಾಗುತ್ತದೆ. ಪಂಪನ ಆದಿಪುರಾಣ ಮತ್ತು ಪೂರ್ವ ಪುರಾಣ, ಜನ್ನನ ಅನಂತನಾಥಪುರಾಣ ಮತ್ತು ಉತ್ತರ ಪುರಾಣ, ಪೊನ್ನನ ಶಾಂತಿ ಪುರಾಣ ಮತ್ತು ಉತ್ತರ ಪುರಾಣ, ನಾಗಚಂದ್ರನ ಮಲ್ಲಿನಾಥ ಪುರಾಣ ಮತ್ತು ಉತ್ತರ ಪುರಾಣ – ಹೀಗೆ ಸಮಷ್ಟಿಯಾಗಿ, ವ್ಯಷ್ಟಿಯಾಗಿ ತೆಗೆದುಕೊಂಡು ಹೋಲಿಸಿ ತೂಗಿ ನೋಡುವ ತೌಲನಿಕ ಕಾರ್ಯವನ್ನೂ ನಡಸಬಹುದು. ಹಳಗನ್ನಡ ಸಾಹಿತ್ಯದ ವಿದ್ಯಾರ್ಥಿಗಳಿಗೆ ಇದರ ಉಪಯುಕ್ತತೆಯನ್ನು ಉತ್ಪ್ರೇಕ್ಷಿಸಬೇಕಾಗಿಲ್ಲ. ಪ್ರಸ್ತುತ ಲೇಖನದಲ್ಲಿ ಪಂಪನ ಆದಿಪುರಾಣ ಮತ್ತು ಪೂರ್ವ ಪುರಾಣ ಕುರಿತ ಒಂದು ತುಲನಾತ್ಮಕ ಸಮೀಕ್ಷೆಯ ಸ್ಥೂಲ ಪ್ರಯತ್ನವಿದೆ.[7]

ಮಹಾಪುರಾಣ ಸಂಸ್ಕೃತ ಭಾಷೆಯಲ್ಲಿದೆ. ಅದರಲ್ಲಿ ಎರಡು ಭಾಗಗಳಿವೆ. ಮೊದಲನೆಯ ಭಾಗವನ್ನು ಪೂರ್ವ ಪುರಾಣವೆಂದೂ, ಎರಡನೆಯ ಭಾಗವನ್ನು ಉತ್ತರ ಪುರಾಣವೆಂದೂ ಹೆಸರಿಸಲಾಗಿದೆ.[8] ಪೂರ್ವಪುರಾಣದಲ್ಲಿ ೧೨ ಸಾವಿರ ಶ್ಲೋಕಗಳಿವೆ. ಉತ್ತರ ಪುರಾಣದಲ್ಲಿ ೮ ಸಾವಿರ ಶ್ಲೋಕಗಳಿವೆ. ಮಹಾಪುರಾಣ ಒಟ್ಟು ೨೦ ಸಾವಿರ ಶ್ಲೋಕಗಳ ೭೭ ಪರ್ವಗಳ ಬೃಹದ್ ಗ್ರಂಥ.[9] ಪೂರ್ವಪುರಾಣದ ೧೨ ಸಾವಿರ ಶ್ಲೋಕಗಳಲ್ಲಿ ೧೦,೩೮೦ ಶ್ಲೋಕಗಳನ್ನು ಜಿನ ಸೇನಾಚಾರ್ಯರು ರಚಿಸಿದ್ದಾರೆ. ಜಿನಸೇನಾಚಾರ್ಯರ ಶಿಷ್ಯರಾದ ಗುಣಭದ್ರಾಚಾರ್ಯರು, ಪೂರ್ವಪುರಾಣದಲ್ಲಿ ೧೬೨೦ ಶ್ಲೋಕಗಳನ್ನೂ, ಉತ್ತರ ಪುರಾಣದ ೮ ಸಾವಿರ ಶ್ಲೋಕಗಳನ್ನೂ ಬರೆದು ಮಹಾಪುರಾಣದ ರಚನೆಯನ್ನು ಪೂರ್ಣಗೊಳಿಸಿದ್ದಾರೆ. ಹೀಗೆ ಮಹಾಪುರಾಣ ಗುರು-ಶಿಷ್ಯರ ಸಂಯುಕ್ತ ರಚನೆಯಾಗಿದೆ. ಆದರೂ ರೂಢಿಯಲ್ಲಿ ಪೂರ್ವಪುರಾಣವನ್ನು ಜಿನಸೇನರೂ, ಉತ್ತರ ಪುರಾಣವನ್ನು ಗುಣಭದ್ರರೂ ರಚಿಸಿದರೆಂದು ಹೇಳುವುದು ವಾಡಿಕೆ. ಪೂರ್ವಪುರಾಣಕ್ಕೆ ‘ಆದಿಪುರಾಣ’ ವೆಂದೂ ಮಹಾಪುರಾಣಕ್ಕೆ ‘ತ್ರಿಷಷ್ಟಿ (ಶಲಾಕಾ) ಪುರುಷ ಚರಿತೆ’ ಎಂದೂ ರೂಢಿಯ ಬೇರೆ ಬೇರೆ ಹೆಸರುಗಳು ಚಾಲ್ತಿಯಲ್ಲಿವೆ.[10]

ಜಿನಸೇನರೆಂಬ ಹೆಸರಿನ ಜೈನಾಚಾರ್ಯರು ಹಲವರಿದ್ದಾರೆ. ಅವರಲ್ಲಿ ಇಬ್ಬರು ತುಂಬ ಪ್ರಸಿದ್ಧರು. ಒಬ್ಬರು ಪುನ್ನಾಟ ಸಂಘದ ಜಿನಸೇನರು.[11] ಅವರು ‘ಹರಿವಂಶಪುರಾಣ’ ಎಂಬ ಪುರಾಣಾಕಾವ್ಯವನ್ನು ಸಂಸ್ಕೃತದಲ್ಲಿ ರಚಿಸಿದ್ದಾರೆ.[12] ೬೬ ಸರ್ಗ ಮತ್ತು ೧೨ ಸಾವಿರ ಶ್ಲೋಕ ಪ್ರಮಾಣದ ಹರಿವಂಶ ಪುರಾಣದ ರಚನೆ ಪೂರೈಸಿದ್ದು ೭೮೩ ರಲ್ಲಿ. ಅವರಿಗಿಂತ ಭಿನ್ನರಾದ ಇನ್ನೊಬ್ಬ ಜಿನಸೇನರೇ ಈ ಪೂರ್ವ ಪುರಾಣದ ಲೇಖಕರು. ಈ ಜಿನಸೇನರು ಸೇನ ಸಂಘದವರು.[13] ಇವರ ಜೀವಿತ ಕಾಲ ಒಂಬತ್ತನೆಯ ಶತಮಾನ.[14] ಪ್ರಸ್ತುತ ವಿವೇಚನೆಗೆ ಒಳಪಡುವ ಪೂರ್ವಪುರಾಣ (ಆದಿಪುರಾಣ) ರಚಿಸಿದ ಈ ಜಿನಸೇನಾಚಾರ್ಯರು ಕರ್ನಾತಕದವರು. ಅವರ ಪೂರ್ವಾಶ್ರಮದ ಜೀವನ ವಿವರಗಳು ತಿಳಿಯದು. ಮುನಿಗಳಾದ ಮೇಲೆ ರಚಿಸಿದ ಕೃತಿಗಳು ಮತ್ತು ಅವರ ಗುರುಗಳ ವಿಚಾರ ತಿಳಿದಿದೆ. ಚಂದ್ರಸೇನರ ಶಿಷ್ಯರು ಆರ್ಯನಂದಿ, ಆರ್ಯನಂದಿಯ ಶಿಷ್ಯರು ವೀರಸೇನರು. ಈ ವೀರಸೇನರ ಶಿಷ್ಯರೇ ಜಿನಸೇನರು.[15] ಇವರ ದೀಕ್ಷಾಗುರು ಜಯಸೇನರು. ಜಿನಸೇನರ ಪಟ್ಟ ಶಿಷ್ಯರು ಗುಣಭದ್ರರು. ೧೬ ಇದು ಕ್ರಮವಾಗಿ ಬೆಳೆದು ಬಂದ ಗುರುಶಿಷ್ಯ ಪರಂಪರೆ.

ಕರ್ನಾಟಕವನ್ನು ಆಳಿದ ಸುಪ್ರಸಿದ್ಧ ರಾಜಮನೆತನಗಳಲ್ಲಿ ರಾಷ್ಟ್ರಕೂಟರು ಗಣ್ಯರು. ರಾಷ್ಟ್ರಕೂಟ ಚಕ್ರವರ್ತಿ ಅಮೋಘವರ್ಷ ನೃಪತುಂಗನ ರಾಜ ಗುರುಗಳಾಗಿದ್ದವರು ಈ ಜಿನಸೇನಾಚಾರ್ಯರು.[16] ಇವರು ಸಂಸ್ಕೃತ-ಪ್ರಾಕೃತ (ಕನ್ನಡ) ಭಾಷೆಗಳಲ್ಲಿ ನಿಷ್ಣಾತರು. ಇವರು ರಚಿಸಿದ ಹಲವು ಕೃತಿಗಳಲ್ಲಿ ಜಿನಗುಣ ಸ್ತೋತ್ರ (-ಸ್ತುತಿ) ಮತ್ತು ವರ್ಧಮಾನ ಪುರಾಣ ದೊರೆತಿಲ್ಲ. ಈಗ ಉಪಲಬ್ಧವಿದ್ದು ಪ್ರಕಟವಾಗಿರುವ ಕೃತಿಗಳ ವಿವರ:

೧. ಜಯಧವಲಾ ಟೀಕೆ : ಜೈನ ಆಗಮಗಳಲ್ಲಿ ಒಂದಾದ ‘ಜಯಧವಲಾ’ ಗ್ರಂಥದಲ್ಲಿ ಕಷಾಯ ಪ್ರಾಭೃತ ಭಾಗವಿದೆ. ಇದರ ಮೇಲೆ ವೀರಸೇನರು ೨೦ ಸಾವಿರ ಶ್ಲೋಕಗಳ ಟೀಕೆ ರಚಿಸಿದ್ದರು. ಅಪೂರ್ಣವಾಗಿ ಉಳಿದ ಈ ಕೆಲಸವನ್ನು ಜಿನಸೇನರು ೮೩೭ ರಲ್ಲಿ ಪೂರೈಸಿದರು. ಇದರಲ್ಲಿ ೬೦ ಸಾವಿರ ಶ್ಲೋಕಗಳಿವೆ; ಅಂದರೆ ಜಿನಸೇನಾ ಚಾರ್ಯರು ೪೦ ಸಾವಿರ ಶ್ಲೋಕಗಳನ್ನು ರಚಿಸಿದಂತಾಯಿತು.[17]

೨. ಪಾರ್ಶ್ವಾಭ್ಯುದಯ : ಇದೂ ಸಂಸ್ಕೃತದಲ್ಲಿದೆ. ಇದರಲ್ಲಿ ೪ ಸರ್ಗಗಳಿವೆ. ಇದು ಮಂದಾಕ್ರಾಂತ ವೃತ್ತದಲ್ಲಿ ರಚಿಸಲಾದ ಒಂದು ಖಡಕಾವ್ಯ.[18]ಈ ಕಾವ್ಯ ಕಾಲಿದಾಸ ಕವಿಯ ‘ಮೇಘದೂತ’ ಕಾವ್ಯದ ಮೇಲೆ ಸಮಸ್ಯಾಪೂರ್ತಿ ರೂಪವಾಗಿ ರೂಪಗೊಂಡಿದೆ. ಮೇಘದೂತ ಕಾವ್ಯದ ೩೬೪ ಮಂದಾಕ್ರಾಂತ ಪದ್ಯಗಳನ್ನು ತೆಗೆದುಕೊಂಡು, ಆಯಾ ಪದ್ಯದ ಮೊದಲೆರಡು ಸಾಲುಗಳನ್ನು ಹಾಗೇ ಉಳಿಸಿಕೊಂಡು ಉಳಿದ ಚರಣಗಳನ್ನು ಬೇರೆ ರಚಿಸಲಾಗಿದೆ. ಅದರಿಂದ ಪಾರ್ಶ್ಚನಾಥ ತೀರ್ಥಂಕರರ ಚರಿತ್ರೆಯೂ ತಿಳಿದು ಬರುವಂತೆ ಚಮತ್ಕಾರ ಮಾಡಲಾಗಿದೆ. ಈ ಮಾದರಿಯನ್ನು ಮುಂದುವರಿಸಿದ ಅನಂತರದವರು ನೇಮಿದೂತ, ಹಂಸದೂತ, ಶೀಲದೂತ ಮೊದಲಾದ ಕೃತಿಗಳನ್ನು ಬರೆದಿದ್ದಾರೆ.

೩. ಪೂರ್ವಪುರಾಣ (ಆದಿಪುರಾಣ) : ಜಿನಸೇನರು ಸಮಗ್ರ ಮಹಾಪುರಾಣ ಬರೆಯಲು ತೊಡಗಿದ್ದರು. ಆದರೆ ೧೦, ೩೮೦ ಶ್ಲೋಕಗಳನ್ನು ಬರೆದು ಪರಂಧಾಮವನ್ನೈದಿದರು.[19]

ಜಿನಸೇನರ ಶಿಷ್ಯರಾದ ಗುಣಭದ್ರರು ಮಹಾಪುರಾಣದ ಶೇಷ ಭಾಗವನ್ನು[20] ಬರೆದು ಪೂರೈಸಿದ್ದು ಧಾರವಾಡ ಜಿಲ್ಲೆ ಶಿಗ್ಗಾವಿ ತಾಲ್ಲೂಕಿನ ಬಂಕಾಪುರದಲ್ಲಿ.[21] ಗುಣಭದ್ರಾಚಾರ್ಯರು ತಮ್ಮ ಗುರು ಜಿನಸೇನಾಚಾರ್ಯರಂತೆ ಜೈನ ಸಿದ್ಧಾಂತ ಮತ್ತು ವಿವಿಧ ಶಾಸ್ತ್ರಗಳಲ್ಲಿ ನಿಷ್ಣಾತರು; “ಆಚಾರ್ಯ ಜಿನಸೇನರ ಮತ್ತು ದಶರಥ ಗುರುಗಳ ಶಿಷ್ಯನಾದ, ಸುಪ್ರಸಿದ್ಧ ಗುಣಭದ್ರಸೂರಿಯಾದ ನಾನು, ಸಂಪೂರ್ಣ ವ್ಯಾಕರಣ ಶಾಸ್ತ್ರದಲ್ಲಿ ಪಾರಂಗತನಾಗಿದ್ದೇನೆ. ಅಗಾಧವಾದ (ಜೈನ) ಸಿದ್ಧಾಂತ ಸಾಗರವನ್ನು ದಾಟಿರುವುದರಿಂದ, ನನ್ನ ಬುದ್ಧಿ ಹಾಗೂ ಪ್ರತಿಭೆ ಸೂರ್ಯಪ್ರಕಾಶದಂತೆ ಹೊಳೆಯುತ್ತಿದೆ. ವಿದ್ಯೆ ಹಾಗೂ ಉಪವಿದ್ಯೆಗಳಲ್ಲಿ ನಿಷ್ಣಾತನಾದ ನಾನು ಪ್ರಮಾಣ ಹಾಗೂ ನಯಗಳ ಸ್ವರೂಪವನ್ನು ಚೆನ್ನಾಗಿ ಬಲ್ಲೆ’ ಎಂದು ಹೇಳಿಕೊಂಡಿದ್ದಾರೆ.[22] ಗುಣಭದ್ರಚಾರ್ಯರ ಮೂರು ಕೃತಿಗಳು ಉಪಲಬ್ಧವಿವೆ :

೧. ಆತ್ಮಾನುಶಾಸನ : ಇದು ಸಂಸ್ಕೃತ ಭಾಷೆಯದಲ್ಲಿದೆ.[23] ಇದರಲ್ಲಿ ಭರ್ತೃಹರಿಯ ವೈರಾಗ್ಯ ಶತಕದ ಶೈಲಿಯಲ್ಲಿ ರಚಿಸಿರುವ ೨೬೨ ಪದ್ಯಗಳಿವ್. ಆಚಾರ್ಯ ಪ್ರಭಾಚಂದ್ರರು ಈ ಕಾವ್ಯಕ್ಕೆ ಸಂಸ್ಕೃತದಲ್ಲೊಂದು ಟೀಕೆಯನ್ನು ಬರೆದಿದ್ದಾರೆ. ಹಿಂದಿ ಮತ್ತು ಕನ್ನಡದಲ್ಲಿಯೂ ಟೀಕೆಗಳಿವೆ.

೨. ಜಿನದತ್ತ ಚರಿತೆ : ಗಂಭೀರವಾದ ಸಂಸ್ಕೃತ ಶೈಲಿಯಲ್ಲಿರುವ ಈ ಕಾವ್ಯ ಅನು ಷ್ಟುಬ್ ಛಂದಸ್ಸಿನಲ್ಲಿದೆ. ಇದರಲ್ಲಿ ೯ ಸರ್ಗಗಳಿವೆ; ಹಿಂದಿಗೂ ಅನುವಾದವಾಗಿದೆ.[24]

೩. ಉತ್ತರ ಪುರಾಣ (ಮಹಾಪುರಾಣ) : ಪೂರ್ವಪುರಾಣದ ಕಡೆ ನಾಲ್ಕೂವರೆ ಪರ್ವಗಳನ್ನೂ[25] ಮತ್ತು ಪೂರ್ತಿಯಾಗಿ ಉತ್ತರ ಪುರಾಣವನ್ನೂ ಹೀಗೆ ಒಟ್ಟು ೯೬೨೦ ಶ್ಲೋಕಗಳನ್ನು ರಚಿಸಿದ್ದಾರೆ. ಇದೊಂದು ಮಹತ್ಕಾವ್ಯ.[26]

ಹಿನ್ನೆಲೆ :

ಮಹಾವೀರ ಮೊದಲಾದ ತೀರ್ಥಂಕರರ ಉಪದೇಶಸಾರವು ಅವರ ಅನಂತರದ ಶ್ರುತಕೇವಲಿಗಳಿಂದ ಪ್ರಣೀತವಾಗುತ್ತ ಬೆಳೆದು ಬಂದು ಕ್ರಿ.ಪೂ. ಅಂತ್ಯದ ವೇಳೆಗೆ ಲಿಪಿಬದ್ಧವಾಯಿತು.28ಎ ತದನಂತರ ಬಂದ ಆಚಾರ್ಯರು ಶ್ರುತಸ್ಕಂದ (ಅನುಯೋಗ ಚತುಷ್ಟಯ)ದಲ್ಲಿ, ಮೊದಲನೆಯದಾದ ಪ್ರಥಮಾನುಯೋಗದಲ್ಲಿ ಬರುವ ೬೩ ಜನ ಮಹಾ ಪುರುಷರ ಚರಿತೆಯನ್ನು ನಿರೂಪಿಸುತ್ತಾ ಬಂದರು. ಮಹಾಪುರಾಣ ಈ ಬಗೆಯ ನಿರೂಪಣೆಗೆ ಸೇರಿದ್ದಾಗಿದೆ. ಮಹಾಪುರಾಣಕ್ಕೊಂದು ದೀರ್ಘ ಪರಂಪರೆಯಿದೆ;

ವಿರಚಿಸಿದರ್ ಮುನ್ನೆ ಮಹಾ
ಪುರಾಣಮಂ ನೆಗಱ ಕೊಚಿಭಟ್ಟಾರಕರುಂ
ಪರಮಶ್ರೀನಂದಿ ಮುನೀ
ಶ್ವರರುಂ ತದನಂತರಂ ಜಿನಾಗಮ್ ತಿಲಕರ್
||  ೨೪

            ಕವಿಪರಮೇಶ್ವರರ್ ಬರೆದುದಂ ಜಿನಸೇನ ಮಹಾಮುನಿಶರೀ
ಯವನಿಗೆ ಪೇಱ್ದು ಮಾಣೆ ಗುಣಭದ್ರ ಮುನೀಶ್ವರರೆಯ್ದೆ ಪೇಱ್ದು ಪ
ಲ್ಲವಿಸಿದುಂದಂ ತ್ರಿಷಷ್ಟಿ ಪುರುಷ ಪ್ರತಿಬದ್ಧ ಪುರಾಣಮಂ ಮಹೋ
ತ್ಸವದೊಳೆ ಭವ್ಯಕೋಟಿಗಱೆಯಲ್ ಬರೆದಂ ಗುಣರತ್ನ ಭೂಷಣಂ
||        ೨೫

ಈ ಉದಾಹೃತ ಪದ್ಯಗಳೆರಡೂ ಚಾವುಂಡರಾಯ ಪುರಾಣದ್ದು (ತ್ರಿಷಷ್ಟಿ ಲಕ್ಷಣ ಮಹಾಪುರಾಣ).[27] ಚಾವುಂಡರಾಯ ಹೇಳುವ ಪ್ರಕಾರ ಕೊಚಿಭಟ್ಟಾರ ಕರೂ[28] ನಂದಿಮುನೀಶ್ವರರೂ31ಎ ಕವಿಪರಮೇಶ್ವರರೂ[29] ಬರೆದು ಪಲ್ಲವಿಸುತ್ತಾ ಬಂದ (೬೩ ಜನ) ತ್ರಿಷಷ್ಟಿ ಪುರುಷ ಪುರಾಣ (ಮಹಾಪುರಾಣ) ವನ್ನು ಜಿನಸೇನ-ಗುಣಭದ್ರರೂ ಹೇಳಿದರು. ಅದನ್ನು ಚಾವುಂಡರಾಯ ಕನ್ನಡದಲ್ಲಿ ಮುಂದುವರೆಸಿ ದ್ದಾನೆ. ಪುಷ್ಪದಂತೆ ಮೊದಲಾದವರು ಪ್ರಾಕೃತ ಮೊದಲಾದ ಭಾಷೆಗಳಲ್ಲಿ ಮುಂದುವರಿಸಿದ್ದಾರೆ.[30] ವಾಸ್ತವವಾಗಿ ಜಿನಸೇನರೇ ಈ ಪೂರ್ವ ಪರಂಪರೆ ಕುರಿತು ಪ್ರಸ್ತಾಪಿಸಿದ್ದಾರೆ :

ಅ. ಜಿನವಾಣಿಯಾದ ಪುರಾಣವನ್ನು ಸಂಕ್ಷೇಪಿಸಿ ಹೇಳುವೆನು[31]

ಆ. ಪ್ರಾಚೀನ ಕವಿಗಳನ್ನೇ ಹಸ್ತಾವಲಂಬನವನ್ನಾಗಿ ತಿಳಿದು ಈ ಪುರಾಣವೆಂಬ ಮಹಾಸಮುದ್ರವನ್ನು ದಾಂಟುವುದಕ್ಕೆ ಉದ್ಯತನಾಗಿದ್ದೇನೆ.[32]

ಇ. ಯಾರು ಶಬ್ದಾರ್ಥ ಸಂಗ್ರಹವುಳ್ಳ ಪುರಾಣವನ್ನು ಸಂಕ್ಷೇಪವಾಗಿ ರಚಿಸಿದರೋ ಅಂತಹ ಕವಿಶ್ರೇಷ್ಠರಾದ ಕವಿಪರಮೇಶ್ವರರು ಲೋಕದಲ್ಲಿ ಕವಿಪೂಜೆಗೆ ಹೋಗ್ಯರು.[33]

ಜೈನ ಪುರಾಣಗಳ ಪ್ರಧಾನ ಆಶಯೋದ್ದೇಶವೆಂದರೆ, ಗಹನವಾದ ಧಾರ್ಮಿಕ ತತ್ವಗಳನ್ನು ಜನತೆಗೆ ತಲುಪಿಸುವುದು. ಪುರಾಣಗಳೂ ಸೀಮಿತಾರ್ಥದಲ್ಲಿ ಕಾವ್ಯಗಳೇ. ಆದರೆ ವ್ಯಕ್ತಿನಿಷ್ಟ ಕಾವ್ಯಗಳಿಗಿಂತ, ರಾಮಾಯಣ ಮಹಾಭಾರತಗಳಂತಹ ಲೌಕಿಕ ಕಾವ್ಯಗಳಿಗಿಂತ, ಜೈನ ಪುರಾಣಗಳು ಭಿನ್ನವಾಗಿವೆ.[34] ಜೈನಪುರಾಣಗಳು ಧಾರ್ಮಿಕ ಕಾವ್ಯಗಳು. ರುದ್ರಭಟ್ಟನ ಜಗನ್ನಾಥ ವಿಜಯ, ಜಗನ್ನಾಥ ದಾಸರ ಹರಿಕಥಾಮೃತಸಾರ, ವೀರಶೈವ ಪುರಾಣಗಳು, ಹರಿಹರನ ರಗಳೆಗಳು ಇತ್ಯಾದಿಯಾದ ಕೃತಿಗಳೂ ಜೈನ ಪುರಾಣಗಳಂತೆ ಧಾರ್ಮಿಕ ಸ್ವರೂಪದ್ದಾಗಿವೆ.[35] ಈ ಬಗೆಯ ಧಾರ್ಮಿಕ ಕಾವ್ಯಗಳು ಕೆಲವು ನಿರ್ದಿಷ್ಟ ಕಟ್ಟು ಕಟ್ಟಲೆಗಳಿಗೆ ಒಳಪಟ್ಟಿರುತ್ತವೆ. ತಮ್ಮ ಕಾವ್ಯ ಸ್ಪೂರ್ತಿಯ ಭಾವಲಹರಿಯನ್ನು ಮುಕ್ತನಾಗಿ ಹರಿಸಲು ಕವಿಗಳಿಗೆ ಇಲ್ಲಿ ಅವಕಾಶಗಳು ಕಡಿಮೆ ಹಾಗೂ ಇರುವ ಅವಕಾಶಗಳು ಕೂಡ ಕೆಲವು ನಿರ್ಬಂಧಗಳಿಗೆ ಒಳಗಾಗಿರುತ್ತವೆ. ಸೌಂದರ್ಯ ವರ್ಣನೆಗೆ ಎಲ್ಲೆಯೂ ನಿರ್ದಿಷ್ಟ ಗುರಿಯೂ ಇರುತ್ತದೆ. ಒಟ್ಟಿನಲ್ಲಿ ಕಾವ್ಯಶಕ್ತಿ ಗರಿಗೆದರಿ, ಲೌಕಿಕ ಕಾವ್ಯಗಳಲ್ಲಿರುವಂತೆ, ಇಲ್ಲಿ ಸ್ವಚ್ಛಂದವಾಗಿ ಉಡ್ಡೀನಿಸುವಂತಿಲ್ಲ.

ಜೈನ ಪುರಾಣಗಳಲ್ಲಿನ ಸಾಮಾನ್ಯ ಚೌಕಟ್ಟು ಇಂತಿರುತ್ತದೆ: ತೀರ್ಥಂಕರನಾಗುವ ಜೀವದ ಹುಟ್ಟು ಬೆಳವಣಿಗೆ ನೆರವಾಗುವ ವ್ಯಕ್ತಿಗಳ (ತಂದೆ ತಾಯಿ ಪತ್ನಿ ಸೋದರರು ಸ್ನೇಹಿತರು ಮೊದಲಾದವರು) ಹಿಂದಿನ ಭವಗಳ ವಿವರಣೆ ಅವರ ಏರೇರಿಕೆಯ ವಿಕಾಸಕ್ಕೊದಗುವ ಪರೀಷಹ-ಉಪಸರ್ಗಗಳು, ಹೀಗೆ ಒಡ್ಡಿ ಬರುವ ಅಡ್ಡಿ ಆತಂಕಗಳನ್ನು ಅಪ್ರತೀಕಾರ ಭಾವನೆಯಿಂದ ತಾಳಿಕೊಂಡು ಮೆಟ್ಟಿನಿಂತ ಬಗೆ ಕರ್ಮತತ್ವ, ಕರ್ಮಕ್ಕೆ ಕಾರಣವಾಗುವ ಕಾರ್ಯಗಳು, ಕರ್ಮಕ್ಷಯ, ರತ್ನತ್ರಯ, ದೀಕ್ಷೆ ತಪಸ್ಸು ಪಂಚಕಲ್ಯಾಣ ಆದಿಯಾದ ಧಾರ್ಮಿಕ ಪ್ರಕ್ರಿಯೆಗಳು – ಇವಿಷ್ಟೂ ಸವಿವರವಾಗಿ ಬರುತ್ತವೆ.[36] ಒಂದು ಪುರಾಣವೆಂದರೆ ಅದೊಂದು ಜೀವದ ಊರ್ಧ್ವ ಯಾತ್ರೆಯ ಚಿತ್ರಣ. ಜೀವ ಈ ಬಿಡುಗಡೆಯಿಂದ ಪಡೆಯುವ ಅಂತಿಮ ಪರಮ ಸುಖದ ಸ್ವರೂಪವನ್ನು ಪುರಾಣದ ಉತ್ತರಾರ್ಧ ಭಾಗದಲ್ಲಿ ಚಿತ್ರಿತವಾಗಿರುತ್ತದೆ.

ಜೈನಪುರಾಣ ಲಕ್ಷಣಗಳನ್ನು ಗರ್ಭೀಕರಿಸಿಕೊಂಡು ಉದಾತ್ತ ಮಾದರಿಯಾಗಿ ನಿಂತಿರುವ ಬೃಹತ್ ಗ್ರಂಥ ಮಹಾಪುರಾಣ. ಮಹಾಪುರಾಣದಲ್ಲಿ ನಿರೂಪಿತವಾಗಿರುವುದು ೬೩ ಜನ ಮಹಾ ಪುರುಷರ ಚರಿತೆ, ತತ್ಸಂಬಂಧಿಯಾದ ಕಥೆ. ಜೈನಧರ್ಮದ ಪರಿಗ್ರಹಿಕೆಯಂತೆ ವರ್ತಮಾನಕಾಲದ ೨೪ ಜನ ತೀರ್ಥಂಕರರು, ೧೨ ಜನ ಚಕ್ರವರ್ತಿಗಳು, ೯ ಜನ ನಾರಾಯಣ (ವಾಸುಧೇವ)ರು, ೯ ಜನ ಪ್ರತಿನಾರಾಯಣ (ವಾಸುದೇವ) ರು, ೯ ಜನ ಬಲಭದ್ರರು – ಹೀಗೆ ಒಟ್ಟು ೬೩ ಜನ ಮಹಾಪುರುಷರ ಜೀವನ ವಿವರ, ಸಾಧನೆ ಸಿದ್ಧಿಯ ನಿರೂಪಣೆ ಮಹಾಪುರಾಣಸಾರ.[37] ಮಹಾಪುರಾಣದ ಮೊದಲನೆಯ ಭಾಗವಾದ ಪೂರ್ವ ಪುರಾಣದಲ್ಲಿ ಸುದೀರ್ಘವಾದ ಪೀಠಿಕೆ, ಕುಲಂಕರರ ಚರಿತೆ, ಅನಂತರ ೨೪ ಜನ ತೀರ್ಥಂಕರರಲ್ಲಿ ಪ್ರಥಮನಾದ ಚಕ್ರವರ್ತಿಯಾದ ಭರತನ ಮತ್ತು ಆತನ ತಮ್ಮನಾದ ಬಾಹುಬಲಿ (ಭುಜಬಲಿ)ಯ ಚರಿತೆ ಸವಿವರವಾಗಿ ಬಂದಿದೆ. ಇನ್ನುಳಿದ ೨೩ ಜನ ತೀರ್ಥಂಕರರ ಹಾಗೂ ಇತರ ಮಹಾಪುರುಷರ ಚರಿತೆಯಷ್ಟೂ ಉತ್ತರ ಪುರಾಣದಲ್ಲಿದೆ.[38]

ಪಂಪನಿಗೆ ಸ್ವಧರ್ಮ ಸಂಬಂಧವಾದ ಶಾಸ್ತ್ರ ಸಾಹಿತ್ಯ ಪರಂಪರೆಯ ನಿಕಟ ಪರಿಚಯವಿತ್ತು.[39] ಹಾಗೆ ನೋಡುವುದಾದರೆ ಜಿನಸೇನ – ಗುಣಭದ್ರರ ರಚನೆಗಿಂತ ಮೊದಲಿನ ಆಗಮ ಕೃತಿಗಳನ್ನೂ ಪಂಪ ಬಲ್ಲವನಾಗಿದ್ದ :

            ಪುರದೇವಾದಿ ಜಿನೇಂದ್ರಮಾಲೆ ಗಣಭೃತ್ಸಂತಾನಮೆಂದೀ ಪರಂ
ಪರೆಯಿಂ ವಿಶ್ರುತ ವೀರಸೇನ ಜಿನಸೇನಾಚಾರ್ಯ ಪರ್ಯಂತಮಾ
ಗಿರೆ ಬಂದೀಕಥೆಗುಣ್ಪುವೆತ್ತುದವರುಂ ಜ್ಞಾನರ್ಧಿ ಸಂಪನ್ನರೆಂ
ದಿರದಾಂ ಧೃಷ್ಟನೆನೀ ಕಥಾಬ್ಧಿಯುಮನೇನೀಸಲ್ ಮನಂದೆಂನೋ
||[40]

ಸಮಗ್ರ ಮಹಾಪುರಾಣವೇ ಪಂಪನ ಮುಂದೆ ಹರಡಿಕೊಂಡು ಮೈ ಚಾಚಿತ್ತು. ಪಂಪ ಆ ಇಡೀ ಮಹಾಪುರಾಣವನ್ನು ಕನ್ನಡಕ್ಕೆ ತರಬಹುದಿತ್ತು. ಆತ ಹಾಗೇಕೆ ಮಾಡಲಿಲ್ಲವೆಂಬ ಪ್ರಶ್ನೆ ತೌಲನಿಕ ವಿದ್ಯಾರ್ಥಿಗೆ ಅಪ್ರಸ್ತುತವಲ್ಲ. ಅಂತಹ ಕೆಲಸ ಪಂಪನಿಗೆ ಅಗಾಧವಾಗಲಿ ಅಸಾಧ್ಯವಾಗಲಿ ಅಲ್ಲ. ಅದು ಬಹು ಸಮಯ ಹಿಡಿಯುವ, ಒಂದು ಆಯುರವಧಿಗೆ ಸೇರಿದ ಬೃಹತ್ ಕಾರ್ಯವೆಂಬುಬು ನಿಜ. ವ್ಯಾಸಭಾರತವನ್ನು ಕನ್ನಡದಲ್ಲಿ ಲೀಲಾಜಾಲವಾಗಿ ಬರೆಯುವ ಈ ಕವಿಗೆ, ಮಹಾಪುರಾಣವನ್ನು ಕನ್ನಡಿಸುವುದು ಅಳವಿಗೆ ಎಟಕುವ ಕಾರ್ಯವಾಗಿತ್ತು.[41] ಆದರೆ ಪಂಪ ತನ್ನ ವಿಮರ್ಶನ ಪ್ರಜ್ಞೆಯನ್ನೂ, ಸೃಜನ ಕ್ರಿಯೆ ಜಾಗೃತವಾಗಿರುವ ಕ್ಷಣಗಳಲ್ಲೂ, ಎಚ್ಚರವಾಗಿರಿಸಿಕೊಂಡಿರುವ ಅಪರೂಪದ ಕವಿ. ೧೮ ಪರ್ವಗಳ ವ್ಯಾಸಭಾರತದಲ್ಲಿ ಕಡೆಯ ಕೆಲವು ಪರ್ವಗಳನ್ನು ಕೈಬಿಟ್ಟಿರುವ ಪಂಪ[42] ಮಹಾಪುರಾಣದಲ್ಲೂ ಕಡೆಯ ಅರ್ಧವನ್ನು (ಉತ್ತರಾರ್ಧ) ಬಿಟ್ಟು ಮೊದಲಧರ್ಮವನ್ನು (ಪೂರ್ವ ಪುರಾಣ) ಮಾತ್ರ ಆರಿಸಿಕೊಂಡಿದ್ದಾನೆ. ೨೪ ಜನ ತೀರ್ಥಂಕರರಲ್ಲಿ ಯಾವ ತೀರ್ಥಂಕರ ಚರಿತೆಯನ್ನು ಆರಿಸಿಕೊಳ್ಳುವುದು ಎಂಬುದು ಪಂಪನಿಗಿರುವ ಮುಂದಿನ ಸವಾಲಾಗಿತ್ತು. ವಸ್ತುವಿನ ಆಯ್ಕೆಯಲ್ಲಿ ಔಚಿತ್ಯಪ್ರಜ್ಞೆಯೂ ಪ್ರತಿಭೆಯೂ ಅಡಗಿರುತ್ತದೆ. ಸರಿಯಾದ ವಸ್ತುವನ್ನು ಆರಿಕೊಳ್ಲದಿದ್ದಲ್ಲಿ ಆರಂಭದಲ್ಲೇ ಎಡವಿ ಮುಗ್ಗರಿಸಿದಂತೆ ಆಗುತ್ತದೆ. ಬೃಹತ್ ಭಾವಗಳನ್ನು ವಸ್ತುಗೈದು ಮಹತ್ ಕೃತಿಗಳನ್ನು ಎಡವಿ ರಚಿಸುವುದರಿಂದ ಜಗತ್ ಕವಿಗಳಾಗುತ್ತಾರೆಂಬುದು ಕುವೆಂಪು ವಾಣಿ.[43] ಆ ನಗೆಯ ವಸ್ತು ಪರಿಭಾವನೆಯ ಕ್ಷಣಗಳಲ್ಲಿ ಪಂಪನನ್ನು ಸೆಳೆದದ್ದು ಪೂರ್ವ ಪುರಾಣ, ಅದಕ್ಕೆ ತನ್ನದೇ ಆದ ಶೋಭೆ ಔನ್ನತ್ಯ ಗಾಂಭೀರ್ಯ ಮತ್ತು ಮಾಸದ ಚೆಲುವು ಇದೆ.[44] ಅದು ಮುಂದಿನ ಎಲ್ಲ ತೀರ್ಥಂಕರರ ಪುರಾಣಗಳಿಗೆ ಬುನಾದಿ. ಅದರಿಂದ ಪಂಪ ಪ್ರತಿಜ್ಞೆ ಮಾಡುವಾಗಲೇ ಮುಂಜಾಗರೂಕತೆ ವಹಿಸಿದ್ದಾನೆ; ಇಡೀ ಮಹಾ ಪುರಾಣವನ್ನು ಕನ್ನಡಕ್ಕೆ ಕೊಡುವುದಾಗಿ ಹೇಳಲಿಲ್ಲ. ಆತ ಪೂಣ್ದುದು ಆದಿಪುರಾಣವನ್ನು ಮೂರು ತಿಂಗಳಲ್ಲಿ ಬಎರೆದು ಮುಗಿಸುತ್ತೇನೆಂಬುದಾಗಿ : ‘ಆದಿಪುರಾಣಮುಮ್ ….ಪೂಣ್ದ ತೆಱದಿಂ…. ಮೂಱು ತಿಂಗಳೊಳೆ ಸಮಾಪ್ತಿಯಾದುದೆನೆ”.[45]

ಪಂಪ ತನ್ನ ಕಾವ್ಯಕ್ಕೆ ವಸ್ತು ಆಯ್ಕೆಯ ಪರೀಕ್ಷೆಯಲ್ಲಿ ಪಾರಾದಂತೆ, ಕಾವ್ಯ ಮಾಧ್ಯಮದ ಆಯ್ಕೆಯಲ್ಲೂ ಉತ್ತೀರ್ಣನಾಗಿದ್ದಾನೆ. ಇದು ಕಾವ್ಯರೂಪಕ್ಕೆ (Form) ಸೇರಿದ ವಿಷಯ. ಪಂಪ ಕಾವ್ಯ ವೇದಿಕೆಯನ್ನು ಹತ್ತುವ ವೇಳೆಗೆ ಕನ್ನಡದಲ್ಲಿ ಮಹಾಕಾವ್ಯಗಳು ರಚಿತವಾಗಿದ್ದುವು.[46] ಗದ್ಯ ಕಾವ್ಯಗಳೂ ಪದ್ಯ ಕಾವ್ಯಗಳೂ ಗದ್ಯ-ಪದ್ಯ ಸಮ್ಮಿಶ್ರ ಕಾವ್ಯಗಳೂ, ಬೆದಂಡೆ-ಚತ್ತಾಣ-ಓವನಿಗೆ-ಒನಕೆವಾಡು ಎಂದು ಮಾರ್ಗಪದ್ಧತಿಯೂ ದೇಸಿ ಕಾವ್ಯಪದ್ಧತಿಯೂ ಸಿದ್ಧವಾಗಿತ್ತು. ಅವುಗಳಲ್ಲಿ ಚಂಪೂ ಕಾವ್ಯಪದ್ಧತಿ ಹೆಚ್ಚು ಪ್ರತಿಷ್ಠಿತವಾಗತೊಡಗಿತ್ತು. ಇವುಗಳಲ್ಲಿ ಒಂದರ ಆಯ್ಕೆ ಪ್ರಶ್ನೆ ಬಂದಾಗ ಪಂಪ ಚಂಪೂ ರೂಪವನ್ನೇ ಆರಿಸಿಕೊಂಡಿದ್ದು ಅವನ ಯೋಗ್ಯತೆಗೂ ಯೋಗ್ಯವಾಗಿದೆ. ಆದಿಪುರಾಣದ ವಸ್ತುವಿಗೆ ಚಂಪೂರೂಪ ಹೇಳಿ ಮಾಡಿಸಿದಂತೆ ಹೊಂದಿಕೊಂಡಿದೆ. ಜತೆಗೆ ಮಹಾಪುರಾಣ ಪೂರ್ತಿ ಶ್ಲೋಕ ರೂಪದಲ್ಲಿದ್ದು ಒಂದೇ ಬಗೆಯ ರಚನೆಯಿಂದ ಏಕತಾನತೆಯಿದೆ. ಅದನ್ನು ತಪ್ಪಿಸಿ ಪಂಪ ಗದ್ಯ-ಪದ್ಯಗಳ, ಪದ್ಯಗಳಲ್ಲಿ ವೃತ್ತ ಕಂದ ರಗಳೆ ಅಕ್ಕರ ತ್ರಿಪದಿ ಎಂದು ವೈವಿಧ್ಯ ತುಂಬಿದ್ದಾನೆ.

ಒಂದು ದೊಡ್ಡ ಕಾವ್ಯದ ವಸ್ತು ಮತ್ತು ರೂಪ ಯಾವುದಿರಬೇಕೆಂಬುದರೊಂದಿಗೇ ನಿರ್ಧರಿಸಿಕೊಳ್ಳಬೇಕಾದ, ಕಾವ್ಯ ರಚನೆಗೆ ಸಂಬಂಧಿಸಿದ ಇನ್ನೊಂದು ವಿಷಯ ಭಾಷೆಗೆ ಸೇರಿದ್ದು. ಇದು ಅಭಿವ್ಯಕ್ತಿ ಮಾಧ್ಯಮದ, ಭಾಷಾ ಶರೀರದ ಪ್ರಶ್ನೆ. ಪಂಪ ಉಭಯ ಭಾಷೆಗಳಲ್ಲೂ ಸಮಾನ ಶಕ್ತಿಯಿರುವ ಪ್ರತಿಭಾಶಾಲಿ, ಸಂಸ್ಕೃತದಲ್ಲೇ ಆದಿಪುರಾಣವನ್ನು ಪುನರ್ ರಚಿಸುವ ಸಾಮರ್ಥ್ಯವೂ ಆತನಿಗಿತ್ತು.[47] ಒಂದುವೇಳೆ ಪಂಪ ಸಂಸ್ಕೃತದಲ್ಲೇ ಬರೆದಿದ್ದರೆ ಏನಾಗುತ್ತಿತ್ತು? ಸಂಸ್ಕೃತಕ್ಕೆ ಮಹದ್ ಲಾಭವೂ ಕನ್ನಡಕ್ಕೆ ದೊಡ್ಡ ನಷ್ಟವೂ ಆಗುತ್ತಿತ್ತು. ಆದರೆ ಪಂಪ ಸಂಸ್ಕೃತ ಅಥವಾ ಪ್ರಾಕೃತ ಭಾಷೆಯನ್ನು ಪಕ್ಕಕ್ಕೆ ಸರಿಸಿ ಕನ್ನಡ ಭಾಷೆಯನ್ನೇ ಆರಿಸಿಕೊಂಡು ಅಲ್ಲಿಯೂ, ಆ ಕಾಲದ ಸಂದರ್ಭದಲ್ಲಿಯೂ, ಔಚಿತ್ಯ ಪ್ರಜ್ಞೆಯನ್ನು ಪ್ರಕಟಿಸಿದ್ದಾನೆ. ಕನ್ನಡ ಭಾಷೆ ಮಹಾಕಾವ್ಯಗಳ ಭಾಷೆಯಾಗಿತ್ತು, ಪಂಪನಂಥ ಮಹಿಮಾನ್ವಿತನ ಬರುವಿಕೆಗಾಗಿ ನಡೆಮಡಿ ಹಾಸಿ ಸಿದ್ಧವಾಗಿತ್ತು. ಕಾವ್ಯ ಸೂಕ್ಷ್ಮಗಳನ್ನೂ, ಭಾಷಾ ಸೂಕ್ಷ್ಮಗಳನ್ನೂ ನಾಡಿ ಹಿಡಿದು ನೋಡುವ ನಿಪುಣ ಕವಿಯಾದ ಪಂಪನ ಸಾಧನೆ ಕನ್ನಡದ ಸಾಧನೆಯೂ ಹೌದು. ಕನ್ನಡ ಭಾಷೆಯ ಸಾಧ್ಯತೆಗಳನ್ನೂ, ಚಂಪೂ ರೂಪದ ಸಾಮರ್ಥ್ಯ ಸಮಸ್ತವನ್ನೂ, ಹಾಗೆಯೇ ಆದಿಪುರಾಣ ವಸ್ತುಗರ್ಭದಲ್ಲಡಗಿದ ಸೂಕ್ಷ್ಮಶ್ರೀಯನ್ನೂ ಸರಿಸಮನಾಗಿ ಸೂರೆಗೈದ ಮಹಾ ಸಾಹಸಿ ಪಂಪ.[48]

ಈ ಕನ್ನಡ ಆದಿಪುರಾಣವು ಆ ಸಂಸ್ಕೃತ ಪೂರ್ವಕಾರಣಕ್ಕೆ ಋಣಿ. ಇದರ ವಸ್ತು, ವಿಷಯದ ದೃಷ್ಟಿಯಿಂದ, ಪುರಾತನವಾದುದು, ಜಿನಸೇನರದು, ಪರಂಪರೆಯಿಂದ ಬಂದದ್ದು. ಆದರೆ ಅದನ್ನು ಮಹಾಕಾವ್ಯದ ಸೌಷ್ಠವದಲ್ಲಿ ಪ್ರತಿಪಾದಿಸಿರುವ ಕೌಶಲ, ಉದ್ದಕ್ಕೂ ಮಿಂಚಿರುವ ಕವಿ ಪ್ರತಿಭೆ, ಪಂಪನ ಸ್ವಯಾರ್ಜಿತ ಕೊಡುಗೆ. ಮೂಲ ಶಿಲ್ಪ ಆ ಜಿನಸೇನರದೇ : ಅದರ ಅವಯವ, ಆಭರಣ, ಮಾಟದ ತಿದ್ದಾಣಿಕೆ, ಸೂಕ್ಷ್ಮ ಕುಸುರಿ ಕೆಲಸ – ಇವು ಪಂಪನದು. ಸಂಸ್ಕೃತ ಪೂರ್ವಪು. ದ ಹಳೆಯ ಕಥೆ ಕನ್ನಡದ ಜಾಯಮಾನಕ್ಕೆ ತಕ್ಕಹಾಗೆ ಸೃಜನಾತ್ಮಕವಾಗಿ ಮರುಹುಟ್ಟು ಪಡೆದುಕೊಳ್ಳುವಲ್ಲಿ ಪಂಪನ ಸೃಜನ ಸಾಮರ್ಥ್ಯ ಹೇಗೆ ಪ್ರಕಟವಾಗಿದೆಯೆಂಬುದನ್ನು ವಿವೇಚಿಸುವುದು ತೌಲನಿಕ ಸಾಹಿತ್ಯಕ್ಕೆ ಸೇರಿದ್ದು. ಏಕೆಂದರೆ ಸಂಸ್ಕೃತ ಪೂರ್ವಪು. ಪಂಪನಿಗೆ ವಸ್ತು ಆಕರವೇ ಹೊರತು ಸಮಸ್ತವಲ್ಲ; ವಿಮಾನ ಮೇಲೇರಲು ನೆಲಬೇಕು, ಹಾರುವುದು ಆಕಾಶದಲ್ಲಿ. ಪಂಪ ಪೂರ್ವಪು. ದ ಕಥಾ ಭಾಗವನ್ನು ಆಧರಿಸಿದ್ದಾನೆಂಬುದು ನಿಜ. ಆದರೆ ಅದನ್ನು ಉದ್ದಕ್ಕೂ ಯಥಾವತ್ತಾಗಿ ಶಬ್ದಕ್ಕೆ ಶಬ್ದವಿಟ್ಟು ಭಾಷಾಂತರಿಸಿಲ್ಲ[49] ಕನ್ನಡ ಆದಿಪು. ಒಂದು ಸ್ವಚ್ಛಂದ ಪರಿವರ್ತನ (Freerendering). ಕವಿಯ ಕಾವ್ಯ ಶಕ್ತಿ ಪ್ರಕಟನೆಗೆ ಇದ್ದ ಅವಕಾಶವನ್ನು ಉಪಯೋಗಿಸಿಕೊಂಡಿದ್ದಾನೆ. ಜತೆಗೆ ಇದು ಪಂಪನ ಸಂಗ್ರಹ ಶಕ್ತಿಗೂ ನಿಕಷ; ಕತೆಯ ಮೆಯ್ ಕಿಡಲೀಯದೆ ಮಾಡಿರುವ ಈ ಸಂಗ್ರಹ ‘ಅದ್ಭುತ’ ಎನಿಸುವ ಹಾಗಿದೆಯೆಂದು ವಿಮರ್ಶಕರ ಮುಕ್ತ ಪ್ರಶಂಸೆಯನ್ನು ಪರಿಶೀಲಿಸ ಬೇಕಾಗುತ್ತದೆ.

ಈ ಹಿನ್ನೆಲೆಯನ್ನು ಅರಿತ ಮೇಲೆ ತೌಲನಿಕ ಅಧ್ಯಯನಕಾರರು ಗುರುತಿಸಬೇಕಾದುದು- ಪಂಪ ಮೂಲವನ್ನು ಎಲ್ಲಿ ಸಂಗ್ರಹಿಸುತ್ತಾನೆ, ವಿಸ್ತರಿಸುತ್ತಾನೆ, ಹಾಗೇಕೆ ಮಾಡಬೇಕಾಯಿತು, ಅದರ ಮಹತ್ವವೇನು, ಸಂಗ್ರಹಿಸಿದ್ದರಿಂದ ಅಥವಾ ಕೈಬಿಟ್ಟಿದ್ದರಿಂದ ಅಥವಾ ಪರಿವರ್ತಿಸಿದ್ದರಿಂದ ಆಗಿರುವ ಪರಿಣಾಮ ಯಾವ ಸ್ವರೂಪದ್ದು- ಇವನು ಧಾರ್ಮಿಕ ಪರಿಕಲ್ಪನೆಗಳಿಂದ ಕೂಡಿದ ಆದಿಪು. ದ ವಸ್ತುವಿನೊಳಗೇ ಕುಳಿತ ಚೆಲುವಿನ ತಾಣಗಳನ್ನು ಪಂಪ ಮೊದಲು ಪತ್ತೆಹಿಡಿದ. ಅಂಥ ಸೊಗದ ತಾಣಗಳು ಕಾವ್ಯಪ್ರೇಮಿಗಳ ಆಸ್ವಾದನೆಯ ನಲ್‍ದಾಣ ಹಾಗೂ ನಿಲ್‍ದಾಣವಾಗುವಂತೆ ಮಾಡಿದ. ಜತೆಗೆ ಅದನ್ನು ಕನ್ನಡ ಕವ್ಯ ಪರಂಪರೆಗೆ ಕಸಿಗೊಳಿಸಿ, ಆ ಮೂಲಕ ಕಥಾ ನಿರೂಪಣೆಗೆ ಒಟ್ಟಂದದ ಸೊಗಸು ತಂದ.

ಮಹಾಪು. ಮತ್ತು ಕನ್ನಡ ಜೈನಪು. ಗಳನ್ನು ತೌಲನಿಕವಾಗಿ ತೂಗಿ ನೋಡುವ ಪ್ರಯತ್ನಗಳು ಪರಿಮಿತ ಪ್ರಮಾಣದಲ್ಲಷ್ಟೇ ನಡೆದಿವೆ. ಜಿನಸೇನರ ಪೂರ್ವಪು. ದೊಂದಿಗೇ ಪಂಪನ ಆದಿಪು. ವನ್ನು ಹೋಲಿಕೆ ಮಾಡಿರುವ ಕೆಲವು ಲೇಖನಗಳಿವೆ.[50] ನೀಲಾಂಜನೆಯ ನಾಟ್ಯ ಪ್ರಕರಣ ಪಂಪನ ನಿರ್ಮಾಪಕ ಗುಣ ಪ್ರದರ್ಶನಕ್ಕೆ ದಿವ್ಯ ಸಾಕ್ಷಿಯೆಂಬುದರಲ್ಲಿ ಎರಡು ಅಭಿಪ್ರಾಯಗಳಿಲ್ಲ. ಸಹಜವಾಗಿಯೇ ಇದುವರೆಗಿನ ತೌಲನಿಕ ಲೇಖನಗಳೆಲ್ಲ ಬಹುಪಾಲು ನೀಲಾಂಜನೆ ನೃತ್ಯ ಪ್ರಕರಣವನ್ನು ಕೇಂದ್ರವಾಗಿ ರಿಸಿಕೊಂಡು ಪಮ್ಪನ ಹಿರಿಮೆಯನ್ನು ಕೊಂಡಾದುವುದರಲ್ಲಿ ಆಸಕ್ತವಾಗಿವೆ.[51] ಇದು ಬಿಟ್ಟರೆ ಭರತ-ಬಾಹುಬಲಿ ಹೋರಾಟ ಪ್ರಸಂಗಕ್ಕೆ ಕೆಲವರು ಗಮನ ಕೊಟ್ಟಿದ್ದಾರೆ;[52] ಜನ್ಮಾಭಿಷೇಕ, ಸ್ವಯಂಬುದ್ಧೋಪದೇಶ, ಲಲಿತಾಂಗ-ಸ್ವಯಂಪ್ರಭೆ ಮತ್ತು ಶ್ರೀಮತಿ-ವಜ್ರಜಂಘರ ಪ್ರಣಯ ಕಥೆ – ಇವನ್ನು ಪ್ರಾಸಂಗಿಕವಾಗಿ ಹೆಸರಿಸಿದ್ದಾರೆ.[53] ಪಂಪನ ಸ್ವೋಪಜ್ಞವೂ ವಿಲಕ್ಷಣವೂ ಅಸಾಧರಾಣವೂ ಆದ ಕಾವ್ಯ ಶಕ್ತಿಯನ್ನು ಪ್ರಕಟಿಸುವ ಇನ್ನೂ ಹತ್ತಾರು ಪ್ರಸಂಗಗಲಿವೆ. ಅವುಗಳಲ್ಲಿ ಒಂದೆರಡನ್ನು ಈ ತೌಲನಿಕ ಲೇಖನದಲ್ಲಿ ಪ್ರಸ್ತಾಪಿಸಲಾಗುವುದು.

ಪ್ರವೇಶ

‘ಸಂಸಾರ ಸಾರೋದಯ’ ನಾದ ಪಂಪ ‘ಕವಿತಾಗುಣಾರ್ಣವ’ ನೂ ಆಗಿದ್ದಾನೆ. ಕವಿಯ ಈ ಎರಡೂ ಬಗೆಯ ಸ್ವಭಾವ ಆದಿಪು. ದ ಆರಂಭದಲ್ಲಿಯೇ ಉತ್ಕಟವಾಗಿ ಪ್ರಕಟವಾಗಿದೆ. ಮೋಕ್ಷದೊಂದಿಗೆ ಅರ್ಹತ್ ಪದವಿಯನ್ನೂ ಪಡೆಯುವ ಅರ್ಹತೆಯನ್ನು ಸಂಪಾದಿಸಿಕೊಂಡ ಜೀವದ ವಿಕಾಸವನ್ನು ಹಲವು ಮಜಲುಗಳಲ್ಲಿ ಚಿತ್ರಿಸಲಾಗಿದೆ. ಆ ಬೆಳವಣಿಗೆಯ ರೂಪ ರೇಖೆಗಳೆಲ್ಲ ಜಿನಸೇನರ ಪೂರ್ವಪು. ದಲ್ಲಿವೆ. ಜಿನಸೇನರ ಸುವರ್ಣರೇಖೆಗಳಿಗೆ ಮತ್ತಷ್ಟು ಹೂ-ಬಳ್ಳಿ ಬಿಡಿಸಿ ಚಿತ್ತಾರದಿಂದ ಸಾಲಂಕೃತವನ್ನಾಗಿಸಿ, ಅಲ್ಲಲ್ಲಿ ಉತ್ಕೃಷ್ಟ ಹರಳುಗಳನ್ನು ಕೀಲಿಸುವ ಕುಸುರಿ ಕೆಲಸದ ಕಲಾನೈಪುಣ್ಯ ಪಂಪನದು. ಪೂರ್ವಪು.ಕ್ಕೆ ಸಂವಾದಿಯಾಗಷ್ಟೇ ಸ್ಪಂದಿಸುವುದಕ್ಕೆ ಆದಿಪು. ಸೀಮಿತವಾಗಿಲ್ಲ. ಮೂಲಕ್ಕೆ ನಿಷ್ಠನಾಗಿ ಜಿನಸೇನರೊಡನೆ ಹೆಜ್ಜೆ ಹಾಕುತ್ತಾ ಕಾವ್ಯ ಪಥದಲ್ಲಿ ಪಂಪ ಇನ್ನೂ ಮುಂದೆ ಸಾಗುತ್ತಾನೆ. ಅನೇಕ ಕಡೆ ಸ್ಫೂರ್ತಿಯ ಕ್ಷಣಗಳಲ್ಲಿ ಪಮ್ಪ ಜಿನಸೇನರ ಭುಜವೇರಿ ಕುಳಿತುಬಿಡುತ್ತಾನೆ. ಹೀಗೆ ಜಿನಸೇನರ ಹೆಗಲು ಹತ್ತಿರುವ ಕಡೆಗಳಲ್ಲಿ ಪಂಪ ಜಿನಸೇನರಿಗಿಂತ ದೂರದವರೆಗೆ ಕಾಣಬಲ್ಲ ಅನುಕೂಲ್ಯ ಪಡೆದಿರುವುದರೊಂದಿಗೆ ಅವರಿಗಿಂತ ಎತ್ತರವಾಗಿಯೂ ಕಾಣಿಸುತ್ತಾನೆ. ಇಂಥ ಎಡೆಗಳೆಲ್ಲಲ್ಲಾ ಧರ್ಮ ಹಿಂದೆ ಸರಿದು ಕಾವ್ಯದ ತೇರು ಮುಂದೆ ಹೋಗುತ್ತದೆ.

ಕಾವ್ಯಾರಂಭದಲ್ಲಿಯೇ ಪಂಪ ತಂದುಕೊಂಡಿರುವ ಸೌಷ್ಠವವೆಂದರೆ ಆದಿತೀರ್ಥಂಕರನ ಭವಾವಳಿಗೆ ಸಾಣೆ ಹಿಡಿದದ್ದು. ಪುರುದೇವನ ಹಿಂದಿನ ಹತ್ತು ಭವಗಳು ಪಂಪನ ಕಲ್ಪನೆಯ ಅಮೃತ ಸ್ಪರ್ಶದಿಂದ ಪರಿಷ್ಕೃತಗೊಂಡು ನವೋಜ್ವಲ ವಾಗಿವೆ. ಆರಂಭದ ಭವಗಳಲ್ಲಿ ಪ್ರಣಯ ಅಂಕುರಿಸಿ, ಪಲ್ಲವಿಸಿ ಪರಾಕಾಷ್ಠ ಸ್ಥಿತಿಗೇರಿ, ಅನಂತರದ ಭವಗಳಲ್ಲಿ ಭೋಗತೃಷ್ಣೆ ಶಿಖರ ಸ್ಥಿತಿಯಿಂದ ಇಳಿಮುಖವಾಗುತ್ತ ಬಯಲಾಗುವುದನ್ನು ಸ್ವಾರಸ್ಯ ಪೂರ್ಣವಾಗಿ ಪಂಪ ಪುನರ್ ಸಂಯೋಜಿಸಿದ್ದಾನೆ. ಆ ಆರೋಹಣ ಮತ್ತು ಅವರೋಹಣ ಚಿತ್ರಣ ಅತ್ಯಂತ ಸಹಜವಾಗಿ ಸಂಭವಿಸಿದಂತಿರುವುದು ಪಂಪನ ಸ್ವಾಭಾವಿಕ ಸಾಮರ್ಥ್ಯಕ್ಕೆ ಸಾಕ್ಷಿ. ಆದಿದೇವನ ಮೊತ್ತಮೊದಲಿನ ಭವದಿಂದಲೇ ಪಂಪನ ಈ ಕಾಣ್ಕ್ತೆ ಅಡಿಯಿಡತೊಡಗಿದೆ. ಜಯವರ್ಮನಾಗಿದ್ದ ಭವದ ವರ್ಣನೆ ಪೂರ್ವಪು. ದಲ್ಲಿ ಅನಿಶ್ಚಿತ ರೀತಿಯಲ್ಲಿ ಬಂದು ಹಾದುಹೋಗುತ್ತದೆ.[54] ಪಂಪ ಅದರ ಜೀವನಾಡಿ ಹಿಡಿದು ಒಳಹೊಕ್ಕು ಅದಕ್ಕೊಂದು ಮರು ಹುಟ್ಟನ್ನು ಕರುಣಿಸಿದ್ದಾನೆ.

“ಶ್ರೀಷೇಣನೆಂಬ ರಾಜನು ಹಿರಿಯಮಗ ಜಯವರ್ಮನನ್ನು ಕೈಬಿಟ್ಟು ಕಿರಿಯ ಮಗನಿಗೆ ಪಟ್ಟ ಕಟ್ಟಿದನು. ಆಮೇಲೆ ಜಯವರ್ಮನು ತನ್ನ ಪಾಪವನ್ನು ನಿಂದಿಸುತ್ತ ಪರಮವೈರಾಗ್ಯ ಹೊಂದಿ ದೀಕ್ಷೆ ಪಡೆದನು. ನವೀನನಾಗಿ ಮಹಾವ್ರತವನ್ನು ತೆಗೆದುಕೊಂಡ ಈ ಜಯವರ್ಮ ಮುನಿಯು, ಆಕಾಶದಲ್ಲಿ ವೈಭವದಿಂದ ಹೋಗುತ್ತಿದ್ದ ಮಹೀಧರನೆಂಬ ವಿದ್ಯಾಧರ ರಾಜನನ್ನು ಕಣ್ಣೆತ್ತಿನೋಡಿ ನಿದಾನವುಳ್ಳವ ನಾದನು. ಇನ್ನೊಂದು ಜನ್ಮದಲ್ಲಿ ಮಹಾವಿದ್ಯಾಧರನ ಆ ಭೋಗಗಳೆಲ್ಲ ತನಗುಂಟಾದಲೆಂದು ಧ್ಯಾನಿಸಿದ ಈ ಜಯವರ್ಮಮುನಿಗೆ, ಹುತ್ತದಿಂದ ಹೊರಟ ಒಂದು ಭಯಂಕರವಾದ ಸರ್ಪವು ಕಚ್ಚಿತು. ಅವನು ಭೋಗಗಳನ್ನಿಚ್ಛಿಸಿ ಪ್ರಾಣ ಬಿಟ್ಟು ಮಹಾಬಲನಾಗಿ ಹುಟ್ಟಿ ಈಗ ಭೋಗಗಳನ್ನು ಅನುಭವಿಸುತ್ತಿದ್ದಾನೆ” ಎಂದು ಜಿನ ಸೇನರ ವಿವರಣೆಯಿದೆ.[55] ಜಿನಸೇನರು ಸ್ಥಿತಪ್ರಜ್ಞೆನೆಲೆಯಲ್ಲಿ ಚಲಿಸುತ್ತಾರೆ. ರಾಗಭಾವ ಜರ್ಝರಿತ ಮಾನವನ ಭಾವಕೋಶವನ್ನು ನಿರ್ಲಿಪ್ತ ನಡಿಗೆಯಲ್ಲಿ ದಾಟಿಸುವುದು ಪಂಪನಿಗೆ ಸರಿಕಾಣಿಸುವುದಿಲ್ಲ. ತನ್ನನ್ನು ಬಿಟ್ಟು ತಮ್ಮನಿಗೆ ಕ್ರಮಪ್ರಾಪ್ತ ರಾಜ್ಯ ಪದವಿಯನ್ನು ಒಪ್ಪಿಸಿದಾಗ ಅಣ್ನನಲ್ಲುಂಟಾಗಿರಬಹುದಾದ ಪ್ರತಿಕ್ರಿಯೆಯನ್ನು ಸಮರ್ಥ ಮನೋವಿಜ್ಞಾನಿಯಂತೆ ಪಂಪ ಮೆರಗಿನಿಂದ ದಾಖಲಿಸಿದ್ದಾನೆ :

            ವ || ಆ ಜಯವರ್ಮನುಮವಮಾನ ಪವಮಾನಾಧೂತನಾಗಿ ಪೋಗಿ
ಪ್ರಭು ಕಿಱಿಯಾತನಂ ನಿಱಿಸಿ ರಾಜ್ಯದೊಳೆನ್ನನವಸ್ತು ಮಾಡಿ ಪೂ
ಣ್ದಭಿಭವಮೀಗಳೀ ಭವದೊಳಿಂತಿದು ನೀಗದು ರಾಜ್ಯಲಕ್ಷ್ಮಿಗ
ನ್ಯಭವದೊಳಪ್ಪೊಡಂ ನೆಱೆಯ ನೋಂಪೆನೆನುತ್ತೆ ಜಗನ್ನುತ ಸ್ವಯಂ
ಪ್ರಭು ಗುರುಪಾದ ಮೂಲದೊಳೆ ಕೊಂಡನಖಂಡಿತ ಜೈನದೀಕ್ಷೆಯಂ
||[56]

ಇದು ಪಂಪನ ಸ್ವಯಾರ್ಜಿತ ಸ್ವತ್ತು. ಇಲ್ಲಿಂದ ಮುಂದಿನ ಭಾಗದಲ್ಲಿ ಕೂಡ ಮೂಲಕ್ಕಿಂತ ಪಂಪ ಹೇಗೆ ಮಿಂಚಿದ್ದಾನೆಂಬುದನ್ನು ನೋಡಬಹುದು. ಜಯವರ್ಮನಿಗೆ ಹುತ್ತದಿಂದ ಹೊರಟ ಹಾವು ಕಚ್ಚಿದ್ದೇಕೆಂಬುದು ಪೂರ್ವಪು. ದಲ್ಲಿ ಸಕಾರಣವಾಗಿ ನಿರೂಪಿತವಾಗಿಲ್ಲ. ಹುತ್ತದ ಹತ್ತಿರ ಆತ ಹೋದದ್ದೇಕೆ, ಹಾವು ಕಚ್ಚಿದ್ದೇಕೆ ಎಂಬ ಪ್ರಶ್ನೆಗಳಿಗೆ ಅಲ್ಲಿ ಸಮಾಧಾನ ಸಿಗುವುದಿಲ್ಲ.[57] ಈ ಸೂಕ್ಷ್ಮವನ್ನು ಮನಗಂಡ ಪಂಪ, ಇಲ್ಲಿರುವ ಅಸ್ಪೃಷ್ಟತೆಯನ್ನು ನಿವಾರಿಸಿ, ಸಂಶಯಗಳಿಗೆ ತೃಪ್ತಿಕರವಾದ ಉತ್ತರವಿತ್ತಿದ್ದಾನೆ. ಅಲ್ಲದೆ ಆಕಾಶದಲ್ಲಿ ಹಾರಿಬಂದು ಚೆಲುವಿನ ವಿಮಾನ ನೋಡಿ ಆಸೆಪಟ್ಟಾದ ಮೇಲೆ ಹಾವು ಕಚ್ಚಿತೆಂದು ಸಂಸ್ಕೃತದಲ್ಲಿರುವುದನ್ನು ಪಂಪ ಸ್ಥಳಾಂತರಿಸಿದ್ದಾನೆ.[58] ಹಾವು ಕಚ್ಚಿದ್ದಾದ ಮೇಲೆ ನೋವಿನ ನಡುವೆ, ಕಣ್ಗಸದಳವಾದ ಲೀಲೆಯಿಂದ ತೇಲುವ ವಿಮಾನ ನೋಡಿ ಹಂಬಲಿಸುತ್ತಾನೆಂಬ ಬದಲಾವಣೆ ಅರ್ಥಗರ್ಭಿತವಾಗಿದೆ; ಹಾವು ಕಚ್ಚಿ ಸಾಯುತ್ತಿರುವಾಗಲೂ ಇಂದ್ರಿಯಗಳು ಸುಖವನ್ನೇ ಇಚ್ಚಿಸುತ್ತವೆಂಬ ಧ್ವನಿ ಪರಿಭಾವ್ಯವಾಗುತ್ತದೆ :

[ಜಯವರ್ಮಂ] ಅಂತು ಜಾತರೂಪಧರನಾಗಿ ತನ್ನ ಪಱಿದು ಬಿಸುಟ ಸಹಸ್ರ ಕುಂತಳಂಗಳಂ ತೆಮಳ್ದಿಕೊಂಡೊಯ್ದು ಮಡಗಿಡಲೆಂದು ಪುತ್ತಿನೊಳಗೆ ಕುತ್ತಿದ ಕಯ್ಯನಾಗಳೆ ಭೋಂಕೆನೊಗೆತರ್ಪ ಮಹೋರಗಂ ಪಲ್ಗಳಱ್ವೊಡೆಕೊಂಡುದು ಆ ಪ್ರಸ್ತಾವದೊಳ್

            ಎಸೆವವಿಮಾನ ಘಂಟೆಗಳ ಮೆಲ್ಲುಲಿ ಕಿನ್ನರಗೇಯದೊಳ್ ಪೊದ
ಱ್ದಿಸೆಯ ವಿಚಿತ್ರಪಾತ್ರ ಪರಿನರ್ತನಮುಣ್ಮುವ ತೂರ್ಯನಾದದೊಳ್
ಪೊಸಯಿಸೆ ಸೋಂಕಿನೊಳ್ ನಲಿವ ನಲ್ಲಳಲಂಪನೊಡರ್ಚೆ ಲೀಲೆ ಕ
ಣ್ಗಸದಳಮಾಗೆ ಪಾಱುವ ಮಹೀಧರನೆಂಬ ವಿಯಚ್ಚರೇಂದ್ರನಂ
||

ಭೋಂಕೆನೆ ಕಂಡು ವಿಷಮ ವಿಷಧರ ವಿಷಪೂರಿತ ಶರೀರಮನೊಯ್ಯ ನೊಯ್ಯನೆ ಅಱಿಸಿ ಬಂದು ಕಿವಿಯೊಳ್ ಪಳಂಚಲೀದೆಯಂ ಪಿಡಿದಲುಗುವ ಸೀಯನಪ್ಪ ಗೀತಾತೋದ್ಯ ನಾದಕ್ಕಮಿದಿರೊಳೆ ಕಣ್ಗೆವಂದು ಬಗೆಯನುಱಿ ಸೆಱೆವಿಡಿದ ವಿದ್ಯಾಧರ ವಿಳಾಸಕ್ಕಂ ಬೆಕ್ಕಸಂಬಟ್ಟೀಗಳೆನ್ನ ತಪಂಬಟ್ಟ ಫಲಮುಂಟಕ್ಕುಮಪ್ಪೊಡೆ ವಿದ್ಯಾಧರನಪ್ಪೆನಕ್ಕೆಂದಾ ವಿದ್ಯಾಧರ ವಿಮಾನಮಂ ನೋಡಿ

ಅಲ್ಲಿಯೆ ಕಣ್ ಪಳಂಚೆ ಮನಮಲ್ಲಿಯೆ ಕೀಲಿಸೆ ನೆಚ್ಚುಮೆಚ್ಚು ತ
ಳ್ತಲಿಯೆ ಸೋಲ್ತು ಪತ್ತೆ ಗತಜೀವಿತನಾಗವಿವೇಕದಿಂ ತಪೋ
ವಲ್ಲಿ ಯೊಳಪ್ಪನಲ್ಲ ಸುಖಮೆಲ್ಲ ಮನಲ್ಪಸುಖಕ್ಕೆ ಮಾಱಿ ಬಂ
ದಿಲ್ಲಿ ನಿದಾನದಿಂದತಿಬಳಂಗೆ ಮಹಾಬಳನಾಗಿ ಪುಟ್ಟಿದಂ
||[59]

ಪಂಪನ ಅದ್ಭುತ ಚಿತ್ರಕ ಶಕ್ತಿ ಕೆತ್ತಿದ ಪ್ರತಿಮೆಗಳಂತಿರುವ ಈ ಎರಡು ವೃತ್ತಪದ್ಯಗಳೂ, ಮೂಲದ ಅನುಕರಣ ಅಥವಾ ಅನುವಾದವಾಗಿರದೆ, ಕನ್ನಡಕವಿ ಹೊಸ ಭಾವನೆ ಕಲ್ಪನೆಗಳಿಗೆ ಜನ್ಮ ಕೊಡುವ ತಾಯಿ ಆಗುತ್ತಾನೆಂಬುದನ್ನು ಸಾರುತ್ತವೆ.

ಜಯವರ್ಮನ ಅಂತರಾಳದೊಳಕ್ಕೆ ಭೋಗ ಜೀವನದ ಪ್ರಬಲವಾದ ಕಾಂಕ್ಷೆ ಬೇರುಬಿಟ್ಟು ಇಳಿಯುವುದನ್ನು ಪಂಪ ಚಿತ್ರಿಸಿರುವ ರೀತಿ ಅನನ್ಯವಾಗಿದೆ. ಆ ಭವ್ಯಜೀವ ಹೀಗೆ ಜಯವರ್ಮ ಭವದಲ್ಲಿ ಸೆರಗಿಗೆ ಕಟ್ಟಿಕೊಂಡ ಭೋಗದ ಬಯಕೆ ಮತ್ತೆ ಬಿಡಿಸಿಕೊಂಡು ಆರಿ ಆವಿಯಾಗಲು ಆರೇಳು ಜನ್ಮ ಬೇಕಾಯಿತೆಂಬುದು ಮುಂದಿನ ರಮ್ಯ ಕಥಾನಿರೂಪಣೆಯಲ್ಲಿದೆ. ಈ ಎರಡು ವೃತ್ತಗಳ ಲಯ, ಬಂಧ, ಶಯ್ಯೆ, ಸುಭಗತೆ ಮತ್ತೆ ಮತ್ತೆ ಮೆಲುಕು ಹಾಕಿ ಚಪ್ಪರಿಸುವಂತಿದೆ.

ಜಯವರ್ಮ ಭವದ ಅನಂತರದ ಜನ್ಮವೇ ಮಹಾಬಲಖೇಚರೇಂದ್ರಭವ. ಜಿನಸೇನರ ಪೂರ್ವಪು.ದಂತೆ ಪಂಪನ ಆದಿಪು.ವೂ ಅನಾವರಣಗೊಳ್ಳುವುದು ಈ ಮಹಾಬಲಭವದಿಂದ.[60]ಮಹಾಬಲನ ತಂದೆ ಅತಿಬಲರಾಜನು ವೈರಾಗ್ಯಪರನಾದುದನ್ನು ಮೂಲದಲ್ಲಿ ಸಕಾರಣವಾಗಿ ಸ್ಥಾಪಿಸಿಲ್ಲ. ಪಂಪ ಅದನ್ನು ಸರಿಪಡಿಸಿದ್ದಾನೆ. ಇದರಿಂದ ಇಡೀ ಸಂದರ್ಭ ಮೊನಚುಗೊಂಡಿದೆ.[61] ಮಹಾಬಲನ ಆಸ್ಥಾನದಲ್ಲಿ ನಡೆಯುವ ಧಾರ್ಮಿಕ ಚರ್ಚೆ ಕೂಡ ಹೆಚ್ಚು ಮಾರ್ಮಿಕವಾಗಿದೆ. ಪೂರ್ವಪು.ದಲ್ಲಿ ೭೫ ಶ್ಲೋಕಗಳಷ್ಟಿರುವ[62] ಈ ಜೀವಜ್ಞಾಸೆಯನ್ನು ಪಂಪ ಆರು ಪದ್ಯಗಳಲ್ಲಿ[63] ಮತ್ತು ಒಂದು ಪುಟದ ಗದ್ಯದಲ್ಲಿ ಸಂಗ್ರಹಿಸಿದ್ದಲ್ಲದೆ ಸಪ್ಪೆಯಾದುದೆಲ್ಲ ಸ್ವಾರಸ್ಯವಾಗುವಂತೆ ಕಾಯಕಲ್ಪವೆಸಗಿ ತನ್ನ ಮುದ್ರೆ ಒತ್ತಿದ್ದಾನೆ : ಸ್ವಯಂ ಬುದ್ಧನ ಉಪದೇಶ ಕೆನೆಗಟ್ಟಿರುವ ಪದ್ಯ;

            ಭವವಾರಾಶಿ ನಿಮಗ್ನರಂ ದಯೆದಮಂ ದಾನಂ ತಪಂ ಶೀಲಮೆಂ
ಬಿವೆ ಮೆಯ್ಯಾಗಿರೆ ಸಂದ ಧರ್ಮಮೆವಲಂ ಪೊತ್ತೆತ್ತುಗುಂ ಮುಕ್ತಿಪ
ರ್ಯವಸಾನಂಬರಮಾನುಷಂಗಿಕ ಫಲಂ ಭೂಪೇಂದ್ರ ದೇವೇಂದ್ರ ರಾ
ಜ್ಯವಿಳಾಸಂ ಪೆಱತಲ್ತು ನಂಬು ಖಚರಕ್ಷ್ಮಾಪಾಲ ಚೂಡಾಮಣೀ
|

ಸದ್ಧರ್ಮೋಪದೇಶ ಪ್ರಸಂಗದಲ್ಲೂ ಪಮ್ಪನ ಕವಿತ್ವ ಬತ್ತುವುದಿಲ್ಲ, ವಿಜೃಂಭಿಸುತ್ತದೆ. ದಯೆ, ದಮ, ತಪ, ದಾನ, ಶೀಲ – ಈ ಗುಣಾವಳಿಯನ್ನು ಜಿನಸೇನರು ಹೇಳಿರುವ ರೀತಿಗೂ[64] ಪಂಪನ ಪ್ರತಿಪಾದನೆಗೂ ಅಜಗಜಾಂತರವಿದೆ. ಪಮ್ಪನ ಅಕ್ಷಯ ಪ್ರತಿಭಾ ಸ್ಪರ್ಶದಿಂದ ನಿರೂಪಣೆ ಹೃದಯಸ್ಪರ್ಶಿಯಾಗಿರುವುದರ ಜತೆಗೆ ಧರ್ಮದ ವ್ಯಾಖ್ಯೆಗೆ ವ್ಯಾಪ್ತಿಯೂ ಬಂದಿದೆ. ಇದು ಜಿನಧರ್ಮದ ಸಾರ ಮಾತ್ರವಲ್ಲ, ಇಡೀ ಮಾನವ ಧರ್ಮಕ್ಕೆ ಹೊಂದುವ ಹಿತನುಡಿಯಾಗಿದೆ. ವಿತಂಡವಾದಗಳನ್ನು ಮಂಡಿಸುವವರ ಪರವಾಗಿ ಕವಿಯೇ ಮುಖಂಡತ್ವ ವಹಿಸಿ ನಿಂತಷ್ಟು ಹೊಸಜೀವಕಳೆ ತಂದಿದ್ದಾನೆ:

            ಒಡಲೊಳೆ ಜೀವಮಿರ್ದುಗಡ ಸಂಚಿಸುತಿರ್ಪುದು ಪುಣ್ಯಪಾಪಮಂ
ಗಡ ಬಱಿಕತ್ತ ಬೀಱೆ ಪೆಱತೊಂದೊಡಲೊಳ್ಗಡ ತಾನೆ ನಿಂದೊಡಂ
ಬಡುವುದು ಧರ್ಮ ಕರ್ಮ ಫಲಮಂ ಗಡ ಸತ್ತನೆ ಮತ್ತೆ ಪುಟ್ಟುವಂ
ಗದೆ ಪುಸಿ ಕಾಣ ಡಂಬವಿದು ಖೇಚರ ನೀನಿದನೆಂತು ನಂಬಿದೋ
|

            ತಲೆವಱಿದುಟ್ಟುದಿಕ್ಕಿ ಸುರಲೋಕ ಸುಖಂಗಳನುಣ್ಪೆವೆಂಬ ಬ
ತ್ತಲೆಗರ ಮಾತುಗೇಳದಿರು ಬಾಱ್ವಿನಮಿಂದ್ರಿಯವರ್ಗದಿಚ್ಚೆಯಂ
ಸಲಿಸಿ ಬಸಂತದೊಳ್ ಕಳಿಕೆಗಱಿದ ಕೋಗಿಲೆಯಂತೆ ಬಿಚ್ಚಿತಂ
ನಲಿವುದು ಕಂಡರಾರ್ ಮಱುಭವಂಗಳನಿಲ್ಲಿ ವಿಯಚ್ಛರೇಶ್ವರಾ
[65]

ಜಿನಸೇನರಲ್ಲಿ ವರದಿರೂಪದಲ್ಲಿ ನೀರಸವಾಗಿ ಸಾಗುವ ಲೋಕಯತಿಕ, ಯೋಗಾಚಾರ ಮತ್ತು ಮಾಧ್ಯಮಿಕ ಮತಗಳ ವಾದಗಳನ್ನು ಇಲ್ಲಿ ಸರಸಗೊಳಿಸಲು ಸಾಧ್ಯವಾಗಿರುವುದು, ಪಂಪ ಈ ಸಂನಿವೇಶಕ್ಕೆ ದೇಸಿಯ ಕಸಿ ಮಾಡಿರುವುದರಿಂದೆ. ನಾಟಕೀಯತೆಯ ಜತೆಗೆ ಆತ್ಮೀಯತೆಯೂ ಬೆರೆತು ಇಡೀ ಸಂದರ್ಭ ಸಾವಯವತೆ ಯಿಂದ ಹಿತವಾಗಿದೆ. ಧಾರ್ಮಿಕ ಸಾಹಿತ್ಯದ ಮರಳುಗಾಡಿನಲ್ಲಿ ಇಂಥ ಕೆಲವು ನೀರ್ಮನೆಗಳೂ ಸಿಗುತ್ತವೆ.

ಮಹಾಬಲ ಖೇಚರನು ಅನಲ್ಪಸುಖಸನ್ನಿಧಿಯಾದ ಈಶಾನ ಕಲ್ಪದಲ್ಲಿ ಲಲಿತಾಂಗ ದೇವನಾಗಿ ಹುಟ್ಟಿದ್ದನ್ನು ಜಿನಸೇನರು ವಿಸ್ತಾರವಾಗಿಯೇ ಸೂಚಿಸಿದ್ದಾರೆ :

            ದೇಹಭಾರಮಥೋತ್ಸೃಜ್ಯ ಲಘೂಭೂತ ಇವಕ್ಷಣಾತ್
ಪ್ರಾಪತ್ಸ ಕಲ್ಪಮೈಶಾನ ಮನಲ್ಪ ಸುಖ ಸನ್ನಿಧಿಂ
||[66]
ನವಯೌವನ ಪೂರ್ಣೋನಾ ಸರ್ವಲಕ್ಷಣಸಂಭೃತಃ
ಸುಪೋತ್ಥಿತೊ ಯಥಾಭಾತಿ ತಥಾ ಸೋಂತರ್ಮುಹೂರ್ತತಃ ||[67]

            ಪುಷ್ಪವೃಷ್ಟಿಸ್ತದಾಸಪ್ತಹ್ಮುಕ್ತಾ ಕಲ್ಪದ್ರುಮೈ : ಸ್ವಯಂ
ದುಂದುಭಿಸ್ತನಿತಂ ಮಂದ್ರಂ ಜಜೃಂಭೇರುದ್ಧದಿಕ್ತಟಂ
||[68]

ಇದನ್ನು ಪಂಪಯಥೋಚಿತವಾಗಿ ಅಳವಡಿಸಿಟ್ಟಿದ್ದಾನೆ :

ಆತ್ಮೀಯ ಶರೀರಭಾರಮನಿಱಿಪಿ ತತ್ಸಮಯದೊಳನಲ್ಪ ಸುಖನಿವಾಸಮೆ ನಿಸಿದೀಶಾಸನ ಕಲ್ಪದೊಳ್…. ದಿವ್ಯತಳ್ಪದ ಪೊರೆಯೊಳಗೆ…. ಚೌವನಂ ನೆಱೆದಿರೆ ದಿವ್ಯಮೂರ್ತಿ ಸಹಜಾಂಬರ ಭೂಷಣ ದಿವ್ಯಮಾಲೆಗಳೊಡವುಟ್ಟೆ ಮುನ್ನೆ ಮಱಲುಂದಿದ ನೆಱ್ಚಱುವಂತೆ ಪುಟ್ಟಿದಂ. [69]

            ಇದು ಸುಖದೊಮ್ದು ತುತ್ತತುದಿ ರಾಗದ ಮೊತ್ತಮೊದಲ್ ನಿರಂತರಾ
ಭ್ಯುದಯದ ಸಾಗರಂ ವಿಭವದಾಗರಮೀ ದಿವಿಜೇಂದ್ರರುಂದ್ರಲೋ
ಕದೊಳಮಿದೊಂದೆ ಸಾರಮಿದು ಜೈನ ಪದಾಬ್ಜವರ ಪ್ರಸಾದದಾ
ದುದು ನಿನಗಪ್ಪ ಕಾರಣದಿನೀಗಳೆ ಪೂಜಿಸು ಚೈತ್ಯರಾಜಿಯಂ
||[70]

ಈ ಮದ್ಯದಲ್ಲಿ ಕಡೆಯ ಒಂದು ಪಾದ ಮಾತ್ರ ಮೂಲದ ಅನುವಾದದಂತಿದ್ದರೂ,[71]ಉಳಿದ ಮೂರು ಸಾಲು ಪಂಪನ ಸ್ವಂತ ಸೃಷ್ಟಿ, ಇದರಿಂದ ಪದ್ಯದ ಭಾವ ಪುಷ್ಟಗೊಂಡಿದೆ. ಭೋಗ ಭೂಮಿಜರಂತೆ ಪ್ರಣಯ ಕೇಳಿರತರಾದ ‘ಲಲಿತಾಂಗ-ಸ್ವಯಂಪ್ರಭೆ’ ಯರ ಈ ಪ್ರಕರಣವನ್ನು ಈ ಇಬ್ಬರು ಕವಿಗಳು ನಿರೂಪಿಸಿರುವ ರೀತಿಯಿಂದ ಸಂಸ್ಕೃತ ಕನ್ನಡ ಕಾವ್ಯಗಳಲ್ಲಿರುವ ಅಂತರದ ತರತಮವನ್ನೂ ಆಸ್ವಾದಿಸಬಹುದು. ಪಂಪನಲ್ಲಿ ಪ್ರಣಯದ ಕಥೆ ಮತ್ತಷ್ಟು ಮನೋಜ್ಞವಾಗಿದೆ, ಇಲ್ಲಿರುವುದು ರಮ್ಯಾತಿಶಯದ ಉಜ್ವಲರಾಗಸಂಪನ್ನ ಚಿತ್ರಣ.[72]

ಈ ಲಲಿತಾಂಗನ ಪ್ರಣಯದೇವತೆಯಾಗಿ ಮೆರೆವ ಸ್ವಯಂಪ್ರಭೆಯ ವಿಚಾರವಾಗಿ ಪೂರ್ವಪುದಲ್ಲಿ ಇರುವುದು ಬೆರಳ ರೇಖೆಗಳು; “ಇವನ ಪುಣ್ಯೋದಯದಿಂದ ಸ್ಚಯಂ ಪ್ರಭಾದೇವಿಯು ಹುಟ್ಟಿ ಪ್ರಾಣವಲ್ಲಭೆಯಾದಳು. ಆ ಮೇಲೆ ಕಾಂತಿಯಿಂದ ಚಲಿಸುತ್ತಿರುವ ಶರೀರವುಳ್ಳ ಆ ಸ್ವಯಂ ಪ್ರಭಾದೇವಿಯು ಅಲಂಕಾರಮಾಡಿಕೊಂಡು ಪತಿಯ ತೊಡೆಯಮೇಲೆ ಕುಳಿತು, ಸ್ತ್ರೀರೂಪವನ್ನು ಧರಿಸಿದ ಈಶಾನ ಕಲ್ಪದ ಲಕ್ಷ್ಮೀದೇವಿಯೋ ಎಂಬಂತೆ ಶೋಭಿಸಿದಳು. ನೂತನವಾದ ಮಾವಿನ ಹೂವಿನ ಗೊಂಚಲು ಭ್ರಮರಕ್ಕೆ ಪ್ರಿಯವಾಗಿರುವಂತೆ, ಈ ಸ್ವಯಂ ಪ್ರಭಾದೇವಿಯು ಲಲಿತಾಂಗ ದೇವನಿಗೆ ಬಹುಕಾಲದವರೆಗೆ ಬಹಳ ಪ್ರೀತಿಪಾತ್ರಳಾಗಿದ್ದಳು. ಇವನು ಅವಳ ಮುಖವನ್ನು ನೋಡುವುದರಿಂದಲೂ, ಶರೀರ ಸ್ಪರ್ಶದಿಂದಲೂ ಆನಂದಪಡುತ್ತ, ಹೆಣ್ಣಾನೆಯಲ್ಲಿ ಆಸಕ್ತವಾದ ಗಂಡಾನೆಯಂತೆ ಬಹುಕಾಲದವರೆಗೆ ಸ್ತ್ರೀ ವಿಷಯ ಸುಖವನ್ನಭವಿಸಿದನು. ಭ್ರಮರಗಳೂ, ಕೋಗಿಲೆಗಳೂ ಧ್ವನಿ ಮಾಡುತ್ತಿರುವ ನಂದನವನಗಳಿಂದ ಕೂಡಿರುವುದೂ, ಮನೋಹರವಾದ ಚಂದ್ರಕಾಂತ ಶಿಲೆಗಳುಳ್ಳುದೂ ಆದ ದೊಡ್ದಪರ್ವತಗಳಲ್ಲಿಯೂ, ತಪ್ಪಲು ಪ್ರದೇಶಗಳಲ್ಲಿಯೂ ದ್ವೀಪಗಳಳಲ್ಲಿಯೂ ಸಮುದ್ರಗಳಲ್ಲಿಯೂ ಭೋಗಭೂಮಿ ಮೊದಲಾದ ಪ್ರದೇಶ ಗಳಲ್ಲಿಯೂ ಕ್ರೀಡಿಸುವವನಾಗಿ ಸುಖವಾಗಿದ್ದನು.[73]

ಪೂರ್ವಪು. ದ ಈ ಶಾಬ್ಧಿಕ ವಿವರಣೆಯಲ್ಲಿರದ ಜೀವಂತಿಕೆಯ ಬೆಳಗಿನ ಹೊಸ ಕಳೆಯನ್ನು ಪಂಪ ತನ್ನ ಕಾವ್ಯದಲ್ಲಿ ಸೃಷ್ಟಿಸಿದ್ದಾನೆ. ಮೊದಲೇ ರತಿಸುಖಾಸಕ್ತ ನಾದ ಲಲಿತಾಂಗ ದೇವನನ್ನು ಭೋಗ ಸುಭಗೆಯೂ ಸಖ್ಯಶೀಲಳೂ ಆದ ಸ್ವಯಂ ಪ್ರಭೆ ರತಿಕ್ರೀಡೆಗೆ ಹುರಿದುಂಬಿಸುವ ಮಾಟದ ಬೊಂಬೆಯಾದಳೆಂಬುದನ್ನು ಪಂಪ ಪ್ರತಿಭಾತಿಶಯತೆಯಿಂದ ನವೀಕರಿಸಿ ಪೊಚ್ಚ ಪೊಸವೆನಿಸುವಂತೆ ಸಂಯೋಜಿಸಿದ್ದಾನೆ. ಕಲ್ಪನೆಯ ವೈಭವಕ್ಕೂ ಶೈಲಿಯ ಪ್ರಪುಲ್ಲತೆಗೂ ವಿಖ್ಯಾತವಾಗಿರುವ ಪದ್ಯಗಳಿವು :

            ಅಭಿನವ ಪಾರಿಜಾತ ಕುಸುಮಾಸವಮೊರ್ಮೊದಲುಣ್ಮೆ ದೇವದುಂ
ದುಭಿ ನಭದೊಳ್ ಪೂದಱ್ದೆಸೆಯ ಕಣ್ಗೆಸೆದಿರ್ಪ ಜಿನಾಂಗ ಸಂಗತ
ಪ್ರಭೆ ಸುರಲೋಕಮಂ ಬೆಳಗೆ ವಿಸ್ಮಯಮಪ್ಪಿನಮಾಗಳಾ ಸ್ವಯಂ
ಪ್ರಭೆ ಲಲಿತಾಂಗನಳ್ಳೆರ್ದೆಗೆ ತೊಟ್ಟನೆ ಬೇಂಟಮೆ ಪುಟ್ಟೆ ಪುಟ್ಟಿದಳ್
|

            ಅದು ಸುಖದೊಂದು ಪಿಂಡಮದು ಪುಣ್ಯದ ಪುಂಜಮದಂಗಜಂಗೆ ಬಾ
ಱ್ಮೊದಲಯ ಚಿತ್ತಜಂಗೆ ಕುಲದೈವಮದಂಗಜ ಚಕ್ರವರ್ತಿಗೆ
ತ್ತಿದ ಪೊಸವಅಮಂತದು ಮನೋಜಜ ಕೈಪಿಡಿಯೆಂದು ಮಾಣ್ದೆನಾ
ಸುದತಿಯ ರೂಪನಿಂ ಪೆಱತನೆಂದೊಡೆ ಚಿಃಕರಮೆಗ್ಗನಾಗೆನೇ
|

            ನೆಗಱ್ದಮರಾಂಗನಾಜನದ ರೂಪುಗಳೆಲ್ಲ ಮದೀಕೆಯೊಂದು ದೇ
ಸೆಗೆ ನಿಮಿರ್ವೊಂದು ಪುರ್ವಿನ ಮಯಕ್ಕಮದೊಂದುದಗುಂತಿಗೊಂದು ಭಂ
ಗಿಗೆ ನೆಗಱ್ವೊಂದು ಮೆಲ್ಪಿನ ತೊದಳ್ನುಡಿಗಪ್ಪೊಡಮೆಯ್ದೆವಾರವೇ
ನೊಗಸುಗಮೆಂದು ತಳ್ತಗಲನಾಕೆಯನಾ ಲಲಿತಾಂಗ ವಲ್ಲಭಂ
|

            ವ್ರತದಿಂದಂ ಪಡೆದಿಂದ್ರಲೋಕ ವಿಭವಂ ಮುನ್ನಾದ ದೇವಾಂಗ ನಾ
ತತಿಯಿಂದಿನಿತಿಂಪನೀಯದು ಮನಕ್ಕಾಹ್ಲಾದಮಂ ಮಾಱ್ಪ ತ
ತ್ಸತಿಯಿಂ ನೆಟ್ಟನೆ ಸಾರಮಾದುದು ಗಡಂ ತತ್ಕಲ್ಪಜಂಗೆಂದೊಡಾ
ಜಿತ ವಿದ್ಯುತ್ಪ್ರಚೆಯಂ ಸ್ವಯಂಪ್ರಭೆಯನಿನ್ನೇವಣ್ಣಿಪಂ ಬಣ್ಣಿಪಂ
|[74]

ಇದಿಷ್ಟೂ ಮೂಲವನ್ನು ಅವಲಂಬಿಸಿಲ್ಲದ ಹೊಸಬೆಳೆ, ಉದಾಹೃತ ಪದ್ಯಗಳೆಲ್ಲ ಪಂಪನ ನವನಿರ್ಮಾಣ. ಇಂಥ ಚೆಲುವಿನ ಪುತ್ಥಳಿ ಲಲಿತಾಂಗನ ಒಲವಿನರಸಿಯಾಗಿ ವಿಜೃಂಭಿಸಿದ್ದು ಅತಿಶಯವಲ್ಲವೆಂದು ಓದುಗರ ಬುದ್ಧಿ ಭಾವಗಳಿಗೆ ಹೃದ್ಯವಾಗುವಂತೆ ತನ್ನ ಸಹಜಶಕ್ತಿಯಿಂದ ಪಂಪ ರಸಪೂರ್ಣವಾಗಿ ನಿರೂಪಿಸಿದ್ದಾನೆ. ಸ್ವಯಂ ಪ್ರಭಾ ಲಲಿತಾಂಗರು ಸನ್ಮನಃಪ್ರಣಯ ಮಾನಸರಾಗಿ ಪ್ರತಿಕ್ಷಣವೂ ಸಂತತವಾಗಿ ದಿವ್ಯಸುಖದಲ್ಲಿ ತಣಿದರೆಂದು ತಲ್ಲೀನತೆಯಿಂದ ವರ್ಣಿಸಿದ್ದಾರೆ. ಪಂಪನ ಮನೋಧರ್ಮವೂ ಈ ಭಾವಪೂರದಲ್ಲಿ ಬೆರೆತದ್ದರಿಂದ ಈ ಭಾಗದಲ್ಲಿ ಆರ್ದ್ರತೆಯೂ ತಾಜಾತನವೂ ಮೊನಚೂ ಪ್ರಕಟವಾಗಿದೆ.

ದೇವಲೋಕದ ವೈಭೋಗವೂ ಆಧ್ರುವವಾದದ್ದೆ. ಲಲಿತಾಂಗನ ಅನಂತ ಆಯುರವಧಿಗೂ ಒಂದು ಅಂತವಿದೆ. ಅವನೂ ಅಂತಕನ ಅತಿಥಿಯಾಗುವ ಕಾಲ ಸಮೀಪಿಸಿತು. ಸಾವಿನ ಮನೆಗೆ ಸಾಗುವ ಸಿದ್ಧತೆ ಮಾಡಿಕೊಳ್ಲಲು ಸೂಕ್ತ ಸೂಚನೆಗಳು ವ್ಯಕ್ತವಾದುವು :

            ಸೂಡಿದ ಪಾರಿಜಾತದ ನಮೇರುವ ಬಾಸಿಗಮೊಯ್ಯನೊಯ್ಯನಿ
ರ್ಪೋಡಿಸುದಂದಿನಂಗರುಚಿ ಕಣ್ಣಿಱಿದಾಯ್ತು ವಿಭೂಷಣಂಗಳೊಳ್
ತೀಡುವ ರಶ್ಮಿಗಳ್ ಮಸುಳ್ದುವಾಗುಳಿಯಾಯ್ತಿನಿತುಬ್ಬೆಗಂ ಮೊಗಂ
ಬಾಡೆ ತಗಳ್ದು ಸೂಚಿಸಿದುವಾ ದಿವಿಜಂಗವಸಾನ ಕಾಲಮಂ
|[75]

ಇದು ಪೂರ್ವಪು.ದ ಭಾವಾನುವಾದವಾದರೂ[76] ಅಲ್ಲಿಗಿಂತ ಇಲ್ಲಿ ಭಾವಪೂರ್ಣವಾಗಿದೆ, ಯಮನ ನೆರಳಲ್ಲಿ ನಿಂತಂತೆ ದುಃಖಭಾವದ ಅಂಕುರ ಅನುಭವವಾಗುತ್ತದೆ. ಇದರ ಮುಂದಿನ ಪದ್ಯಗಳು ಪಂಪನ ಪ್ರತಿಭಾಮೂಸೆಯಲ್ಲಿ ಮಿಂದುಬಂದವು. ಇದರ ಮುಂದಿನ ಪದ್ಯಗಳು ಪಂಪನ ಪ್ರತಿಭಾಮೂಸೆಯಲ್ಲಿ ಮಿಂದುಬಂದವು. ಪ್ರೇರಣೆ ಜಿನಸೇನಾಚಾರ್ಯರದು, ನಿಜ. ಆದರೆ ಜಿನಸೇನರ ಪ್ರಭಾವ ವನ್ನು ಜೀರ್ಣಿಸಿಕೊಂಡು, ಮೂಲವನ್ನು ಮೀರಿಸಿ ತೋರಿಸಿರುವ ಸ್ವಂತಿಕೆಯಲ್ಲಿದೆ ಪಂಪನ ಮಹತ್ವ. ಇಂದ್ರಿಯೋಪಭೋಗದ ವಿಷಯ ಲಾಲಸೆಯನ್ನು ಬೆಚ್ಚಗಿರುವ ಉತ್ಸಾಹಕರ ಜೀವನನ್ನಾಗಿಸಿದ ಸ್ವಯಂ ಪ್ರಭಾಬಾಹುಬಂಧನ, ಸುತ್ತಲ ಪ್ರೋತ್ಸಾಹಕರ ಹಿತದ ಪರಿಸರ, ಸಮುದಾಯ ಶೋಭೆಯ ಭೋಗಶಯ್ಯೆಯಿಂದ ಕೆಳಗಿಳಿಯುವ ಆಲೋಚನೆಯನ್ನು ಕೂಡ ಮಾಡಲಾರದ ಸ್ಥಿತಿಯಲ್ಲಿರುವ ಲಲಿತಾಂಗನಲ್ಲಾಗುವ ಅಲ್ಲೋಲಕಲ್ಲೋಲವನ್ನು ಪ್ರತಿಭೆಯ ಹೊನಲು ಬೆಳಕು ಹಾಯಿಸಿ ಪಂಪ ಬಿಂಬಿಸಿದ್ದಾನೆ;

            ಸುರತರುನಂದನಂಗಳಿರ ರತ್ನಪಿನದ್ಧವಿಮಾನ ಕುಟ್ಟಿಮಾಂ
ತರ ಸುರತಾಲಯಗಳಿರ ಚಾರುವಿಲೋಲಕಟಾಕ್ಷಪಾತ ಸೌಂ
ದರ ಪರಿವಾರದೇವಿಯರಿರಾ ಕಡುಕೆಯ್ದು ಕೃತಾಂತನಿಂತು ನಿ
ರ್ನೆರಮೆಱಿದುಯ್ಯೆ ಬಾರಿಸದೆ ಕೆಮ್ಮನುಪೇಕ್ಷಿಸಿ ನೋಡುತಿರ್ಪಿರೇ
|[77]

ಎಂದು ಸೈರಿಸದೆ ಕಾಮಸಾಮ್ರಾಜ್ಯ ಸರ್ವಸ್ವ ಭೂತೆಯಪ್ಪ ತನ್ನ ನಲ್ಲಳ ಮೊಗಮಂ ನೋಡಿ

            ಸಂತಸದಂತನೆಯ್ದಿ ಸುರತಾಮೃತದೊಳ್ ತಣಿದಱ್ಕಱಿಂ ಜಿಗಿ
ಲ್ತಂತಿರೆ ಪತ್ತಿ ಮೆಯ್ಗಳೆರಡಾದೊಡಮೇನಸುವೊಂದೆ ನೋಱ್ಪೊಡೆಂ
ಬಂತಿರೆ ಕೂಡಿ ನಿನ್ನೊಡನೆ ಭೋಗಿಸಲೀಯದೆ ಕೆಮ್ಮನೆನ್ನನು
ಯ್ವಂತಕನೆಂಬ ಬೂತನೆಲೆ ಮಾಣಿಸಲಾಗದೆ ಪೇಱ್ ಸ್ವಯಂಪ್ರಭೇ
|

ಇಲ್ಲಿನ ಉತ್ಕಟತೆ, ತೀವ್ರತೆ ಪಂಪನಿಗೇ ಸಾಕ್ಷಾತ್ತಾಗಿ ಬಂದಷ್ಟು ಸಹಜವಾಗಿದೆ. ಮನುಷ್ಯನನ್ನು ಕಾಡುವ ಎರಡು ಪ್ರಧಾನ ಭಾವಗಳೆಂದರೆ ಪ್ರೀತಿ ಮತ್ತು ಮೃತ್ಯು. ಒಂದು ಗಾಳಿಯಲ್ಲಿ ತೇಲಿಸಿದರೆ, ಇನ್ನೊಂದು ಪಾತಾಳಕ್ಕೊಯ್ಯುತ್ತದೆ. ಮರಣ ಭೀತಿಯಿಂದ ಒಂದು ಜೀವ ಹೇಗೆ ತಲ್ಲಣಿಸುತ್ತದೆಂಬುದರ ಪ್ರತೀಕ ಲಲಿತಾಂಗನ ಈಗಿನ ಸ್ಥಿತಿ. ಸಾವು ಬಂದು ಬಾಗಿಲು ಬಡಿಯುತ್ತಿರುವಾಗಿನ ಅವನ ಹಳವಂಡ, ಹುಯಿಲು ಅರ್ಥಪೂರ್ಣವಾಗಿದೆ. ಮೇಲಿನ ಎರಡೂ ಪದ್ಯಗಳು ಸ್ವತಂತ್ರವಾಗಿ ಆಲೋಚಿಸುವ ಪಂಪನ ಸ್ರಷ್ಟಾರಗುಣಕ್ಕೆ ರನ್ನಗನ್ನಡಿಯಾಗಿವೆ. ಲಲಿತಾಂಗನ ಪ್ರಲಾಪದಲ್ಲಿ ಕಾವ್ಯಧ್ವನಿಯೂ ಬೆರೆತಿದೆ. ತನ್ನಿಂದ ತಡೆಯಲಾಗದ ಅಂತಕನ ಧಾಳಿಯನ್ನು ತನಗಾಗಿ ಇತರರಾದರೂ ಪ್ರತಿಭಟಿಸಬೇಕೆಂದು ಅಂಗಲಾಚುತ್ತಾನೆ. ಆಗ ಅವನಿಗೆ ಋಜುಮಾರ್ಗ ತೋರಿಸಿ ವಿವೇಕ ನುಡಿಯುವ ಮುಂದಿನ ಎರಡು ಪದ್ಯಗಳು ಜಿನಸೇನರ ಪೂರ್ವ ಪುರಾಣದ ಗುಹಾಧ್ವನಿ.

            ನಿನಗೊರ್ವಂಗಲ್ಲ ವಸ್ಥಾಂತರಮಮರಜನಕ್ಕೆಲ್ಲ ಮೀಪಾಂಗೆ ಕಾರು
ಣ್ಯನಿನಾದಂ ನಿನ್ನನಾದಂ ನಗಿಸುಗುಮಱೆದುಯ್ವಂತಕಂಗಿಲ್ಲ ದೇವಾಂ
ಗೆನೆಯರ್ ಮಾಱೂಂಪರೇ ಪೇಟ್ ಜನನಮ್ರುತಿಜರಾಂತಕಶೋಕಗ್ನಿಯಿಂದಾ
ವನುಮೀ ಸಂಸಾರದೊಳ್ ಬೇಯದನೊಳನೆ ಶರಣ್ಧರ್ಮದಿಂದೊಂದುಮುಂಟೇ
|

            ಜಿನಚೈತ್ಯವ್ರಾತಮಂ ಬಂಧಿಸು ಜಿನಪದಪದ್ಮಂಗಳಂ ದಿವ್ಯಮಪ್ಪ
ರ್ಚನೆಯಿಂದಂ ಭಕ್ತಿಯಿಂದರ್ಚಿಸು ಜಿನನ ನಮಸ್ಕಾರಮಂತ್ರಗಳೊಳ್ ಭಾ
ವನೆಯಂ ತಾಳ್ದಱ್ತೆಯಿಂದಂ ಜಿನಮಹಿಮೆಗಳಂ ಮಾಡು ನೀಂ ಭವ್ಯನೈ ಮ
ತ್ತಿನೆ ಮಿಥ್ಯಾಜ್ಞಾನಿವೋಲ್ ನೀಂ ತರಳತೆವೆರಸಿಂತೇಕೆ ವಿಭ್ರಾಂತನಪ್ಪೈ
||

ಈಶಾನಕಲ್ಪದ ಸಾಮಾನಿಕ ದೇವತೆಗಳು ಲಲಿತಾಂಗನನ್ನು ಸಾಂತ್ವನಗೊಳಿಸುತ್ತಾರೆ. ಸಮಾಧಾನಪಡಿಸುವುದರೊಂದಿಗೆ ವಿವೇಕ ಹೇಳಿ, ಧೈರ್ಯತುಂಬಿ ಮುಂದಿನ ಹೆಜ್ಜೆಗಳನ್ನಿಡಬೇಕಾದ ದಾರಿ ತೋರಿಸುತ್ತಾರೆ. ತನ್ನೊಂದು ಐಂದ್ರಿಯ ಲಾಲಸೆಗೆ ವಶವಾದ ಭೋಗ ಪ್ರವೃತ್ತಿಯಿಂದ ನಾಲ್ಕು ಜನರೆದುರು ನಗೆಗೆ ಈಡಾಗ ಬೇಕಾಯಿತೆಂಬ ಅರಿವು ಮರುಕಳಿಸುತ್ತದೆ. ಸಿಗ್ಗಾಳಿಯಾದ ಲಲಿತಾಂಗ ವಿಷಯಾಭಿ ಮುಖತೆಯಿಂದ ವಿಮುಖನಾಗಿ ಧರ್ಮದತ್ತ ಹೆಜ್ಜೆಹಾಕುತ್ತಾನೆ. ಯಥಾ ಪ್ರಕಾರ ಪೂರ್ವಪುರಾಣಕ್ಕಿಂತ ಪಂಪನ ವಿವರಣೆ ಉಜ್ವಲತರವಾಗಿದೆ. ಮೂಲದಲ್ಲಿ ಇರುವ ಪ್ರಮಾಣಕ್ಕೂ ಮೀರಿ ಭೋಗದ ಬಾಳು ಇನ್ನಷ್ಟು ನಿರ್ಭರವಾಗಿ ಢಿಕಾವಾಗಿ ಕಾಣುವಂತೆ ಪಂಪ ವೈಭವೀಕರಿಸಿರುವುದು ಅಂತಿಮ ಪರಿಣಾಮ ತೀವ್ರತೆಗಾಗಿ. ವೈದೃಶ್ಯಗಳ ಬೆಳಕಿಗೆ ಹಿಡಿದು ನಿಜಬಣ್ಣಗಳು ಬಿಡುವಂತೆ ಮಾಡಿದ್ದಾನೆ. ಭೋಗವೇ ಪರಮವೆಂದು ಅದರಲ್ಲಿ ಮುಳುಗಿ ಓಲಾಡುತ್ತಿರುವಾಗಲೇ, ಅದರ ಅಂಚಿನಲ್ಲೇ ಹೊಂಚುಹಾಕಿ ಕುಳಿತ ವಿವೇಕ, ಭೋಗದ ಅಧ್ರುವತೆ-ಅಸಾರತೆಯನ್ನು ದರ್ಶನ ಮಾಡಿಸುತ್ತದೆ; ಇದು ಮುಂದಿನ ಭವದಲ್ಲಿ ಈ ಜೀವಕ್ಕೆ ಇನ್ನೂ ಗಾಢತರವಾಗಿ ನಾಟುವಂತೆ ಕವಿ ನಾಟಕೀಯವಾಗಿ ಸಂಯೋಜಿಸಿದ್ದಾನೆ. ಲಲಿತಾಂಗಜೀವ ಬಂದು ವಜ್ರಜಂಘನಾಗಿ ಬೆಳೆದು ಯೌವನ ತುಂಬಿದಾಗಲೂ ಹಿಂದಿನ ಸ್ವಯಂಪ್ರಭಾ ದೇವಿಯಲ್ಲಿದ್ದ ಅನುರಾಗದಿಂದಲೋ ಎಂಬಂತೆ ಬೇರೆ ಸ್ತ್ರೀಯರಲ್ಲಿ ನಿಸ್ಪೃಹನಾಗಿ ದ್ದನು, ಎಂದು ಜಿನಸೇನರಲ್ಲಿದೆ. ಈ ಸೂಚನೆಯನ್ನು ಸ್ವೀಕರಿಸಿ ಪರಿಭಾವಿಸಿದ ಪಂಪ ಇದನ್ನು ತನ್ನ ಪ್ರತಿಭೆಯ ಮೂಸೆಯಲ್ಲಿ ಕರಗಿಸಿ ಕಾವ್ಯದ ಕಮಾನು ಕಟ್ಟಿದ್ದಾನೆ:

            ಕಡುಮಿಂಚಂ ಮಸೆದನ್ನರೆಪ್ಪ ಪಲರೊಳ್ವೆಂಡಿರ್ ಮನಂಗೊಂಡು ಬಂ
ದೂಡಮಾ ರಾಜಕುಮಾರನೊಲ್ಲನೆ ದಳ್ಮನಂದಾರಿಕಾ ಮಾಲೆಯೊಳ್
ಕಡುಗಂಪಂ ಸವಿದೊಂದು ತುಂಬಿ ಪಸಿವಿಂ ಮೆಳ್ಪಟ್ಟು ಬಂಡುಣ್ಣದಿ
ರ್ಪೊಡಮಿರ್ಕುಂ ಬಱಿಕೆಂತುಮನ್ಯ ಕುಸುಮಾಮೋದಕ್ಕೆ ಮೆಯ್ದರ್ಕುಮೇ
|

ಲಲಿತಾಂಗನ ಪರೋಕ್ಷ ಜೀವನ ಸ್ವಯಂಪ್ರಭೆಗೆ ನೀರಿನಿಂದ ಹೊರಗೆಸದ ಮೀನಿನಂತಾಯಿತು. ಇದನ್ನು ಜಿನಸೇನಾಚಾರ್ಯರು ಚಿತ್ರಿಸಿರುವುದು ಹೀಗೆ : ‘ಅವನ ವಿಯೋಗದಿಂದ, ಪತಿಯಿಲ್ಲದ ಹೆಣ್ಣು ಚಕ್ರವಾಕ ಪಕ್ಷಿಯಂತೆ, ಬಹುಕಾಲದವರೆಗೆ ದುಃಖಿತಳಾಗಿದ್ದಳು. ಗ್ರೀಷ್ಮ ಋತುವಿನಲ್ಲಿ ಕಾದು ತೇಜೋರಹಿತವಾಗಿರುವಂತೆ ಈ ಸ್ವಯಂಪ್ರಭಾದೇವಿಯು ಶೋಕದಿಂದ ಸಂತಾಪವುಳ್ಳವಳಾಗಿ ಕಾಂತಿರಹಿತಳಾದಳು. ವರ್ಷಾಕಾಲದಲ್ಲಿ ಹೆಣ್ಣು ಕೋಗಿಲೆಯು ಮಧುರವಾದ ಆಲಾಪವನ್ನು ಬಿಟ್ಟುಬಿಡು ವಂತೆ ಮಧುರಭಾಷಣವನ್ನು ಬಿಟ್ಟಳು. ಉತ್ತಮವಾದ ಔಷಧವಿಲ್ಲದಿದ್ದರೆ ಸಹಿಸಲಕಶ್ಯವಾದ ರೋಗಗಳು ಪೀಡಿಸುವಂತೆ ಸಹಿಸಲು ಅಶಕ್ಯ ಮನೋವ್ಯಥೆಗಳು ಬಹಳವಾಗಿ ಪೀಡಿಸಿದುವು”. ಜಿನಸೇನರ ಅಭಿವ್ಯಕ್ತಿ ಸಾರವನ್ನು ಹೀರಿ ಪುಷ್ಟಿ ಪಡೆದ ಪಂಪ, ಅಸ್ಥಿಪಂಜರಕ್ಕೆ ಕಾವ್ಯದ ಹಂದರ ಹಬ್ಬಿಸಿ, ಮೂಳೆಗಳು ಸಪ್ರಾಣಗೊಂಡು ಕಳಕಳಿಸುವಂತೆ ಮಾಡಿದ ಶ್ರೇಯಸ್ಸು ಕನ್ನಡ ಕವಿಯದು:

            ಆಲಕಂ ಮಂದಾರ ಶೂನ್ಯಂ ಕದಪು ಮಕರಿಕಾಪತ್ರ ಶೂನ್ಯಂ ಲಲಾಟಂ
ತಿಲಕಾಲಂಕಾರಶೂನ್ಯಂ ಘನಕುಚಯುಗಳಂ ಹಾರಶೂನ್ಯಂ ನಿತಂಬಂ
ಕಲಕಾಂಚೀದಾಮಶೂನ್ಯಂ ಚರಣಯುಗಳಮುಂ ನೂಪುರಾಳಾಪಶೂನ್ಯಂ
ಲಲಿತಾಂಗಂ ಪೋದೊಡಾಯ್ತಾಕೆಗೆ ದಿವಮನಿತುಂ ನಿರ್ಜರಾರಣ್ಯಶೂನ್ಯಂ
|
ಮುರಿದೆಱಿದುಯ್ಯೆ ನಿನ್ನಿನಿರದಂತಕನಾಂ ನಡೆ ನೋಡೆ ನೀಂ
ಕರಗಿದೆಯೆಂತುಮೆನ್ನ ಸುಶರೀರದೊಳಿರ್ದುದು ಜೀವಮೀಯೊಡಲ್
ಕರಗಿದುದಿಲ್ಲದೆನ್ನ ಬಸಮಲ್ತೊಡಲಿಂದವೆ ಶೋಕದೊಳ್ ಮನಂ
ಕರಗಿದುದೆಯ್ದೆ ವಾರದಿರೆಯಿರ್ದೆದೆಯಿಂ ಲಲಿತಾಂಗ ವಲ್ಲಭಾ |

ಮದನನ ಕೈದುವೆಲ್ಲಿ ದನನಂಗನ ಕೈಪೊಡೆಯೆಲ್ಲಿದಂ ವಿಳಾ
ಸದ ಕಣಿಯೆಲ್ಲಿದಂ ಚದುರಂ ಪುಟ್ಟಿದನೆಲ್ಲಿದಂ ವಿನೋ
ದದ ಮೊದಲೆಲ್ಲಿದಂ ಸೊಬಗಿನಾಗರಮೆಲ್ಲಿದನಿಚ್ಚೆಯಾಣ್ಮನೆ
ಲ್ಲಿದನೆರ್ದೆಯಾಘ್ಮ ನೆನ್ನರಸನೆಲ್ಲಿದನೋ ಲಲಿತಾಂಗ ವಲ್ಲಭಂ
|

ಪಂಪನ ಚಿತ್ರಕ ಶಕ್ತಿ ಪಾರಮ್ಯಕ್ಕೆ ಈ ಪದ್ಯಗಳು ಕನ್ನಡಿ ಹಿಡಿಯುತ್ತವೆ ಯಲ್ಲದೆ ಪ್ರತ್ಯೇಕ ವ್ಯಾಖ್ಯಾನ ನಿರಪೇಕ್ಷಕವಾಗಿವೆ. ‘ಶೂನ್ಯ’ ವೆಂಬುದರ ಪರಿಣಾಮ ತೀವ್ರತೆ ಶಿಲಾಲೇಖನವಾಗಿ ನಿಲ್ಲುತ್ತದೆ. ಛಂದಸ್ಸಿನಲ್ಲೂ ಭಾಷೆಯಲ್ಲೂ ಅಧ್ರುವತೆ ಯನ್ನು ಪಂಪಕವಿ ಸ್ಥಾಪಿಸಿರುವುದು ಗಮನಾರ್ಹವಾಗಿದೆ. ‘ಶೂನ್ಯ’ ಶಬ್ದವನ್ನು ಒಂದೇ ಪದ್ಯ ದೊಲಗೆ ಏಳಸಲ ಬಳಸಿ, ಪುನರಾವೃತ್ತಿಯ ಪರಿಣಾಮವನ್ನು ದುಡಿಸಿ ಕೊಂಡಿದ್ದಾನೆ.

ಪಂಪ ಹೇಗೆ ಚಿತ್ರಗಳನ್ನು ಬಿಡಿಸುತ್ತಾನೆ, ಪಾತ್ರಗಳನ್ನು ಕೆತ್ತುತ್ತಾನೆ, ಹಾಗೂ ಸಂನಿವೇಶಗಳನ್ನು ಕಂಡರಿಸುತ್ತಾನೆಂಬುದಕ್ಕೆ ಇದರ ಮುಂದಿನ ಶ್ರೀಮತಿ ಮತ್ತು ವಜ್ರಜಂಘರ ಕಥಾಪ್ರಸಂಗ ದಿವ್ಯಸಾಕ್ಷಿಯಾಗಿದೆ. ಕಲ್ಲಿನಿಂದ ಬೇರ್ಪಟ್ಟ ತನಿ ಹೊನ್ನು, ಸಮರ್ಥನಾದ ಸುವರ್ಣಕಾರನ ನೈಪುಣ್ಯ ಕಲೆಗಾರಿಕೆಯಲ್ಲಿ ಹಾದು ಮಾಟದ ಆಭರಣವಾಗಿ ಅಲಂಕಾರಗೊಂಡು ಮಿರಿ ಮಿಂಚುವಂತೆ ಇಲ್ಲಿಯೂ ಪಂಪ ಪೂರ್ವ ಪುರಾಣದ ಗಣಿಯಿಂದ ಹೆಕ್ಕಿ ತೆಗೆದ ಪ್ರಸಂಗವನ್ನು ಪಮ್ಪ ಕುಶಲ ಕಲೆಗಾರಿಕೆಯಿಂದ ರಂಗೇರಿಸಿದ್ದಾನೆ. ಶ್ರೀಮತಿ – ವಜ್ರಜಂಘರ ಮದುವೆಯ ಒಸಗೆ ಮುಗಿದು ಮಗಳನ್ನು ಗಂಡನ ಮನೆಗೆ ಕಳಿಸುವಾಗ ತಂದೆ ಹೇಳುವ ಬುದ್ದಿವಾದ ರೂಪದ ಪದ್ಯಗಳು ಬಹುಕಾಲ ಚಿತ್ತದಲ್ಲಿ ಅಚ್ಚೊತ್ತಿ ನಿಲ್ಲುತ್ತವೆ. ಇದರಲ್ಲಿ ಕಾಲಿದಾಸನ ಪ್ರಭಾವವಿದ್ದರೂ ಅದನ್ನು ಅರಗಿಸಿ ತನ್ನದನ್ನಾಗಿಸಿ, ಇಡೀ ಪ್ರಸಂಗ ಮಾರ್ದವ ಗುಣದಿಂದ ಮಿಡಿಯುವಂತೆ ರಸಾರ್ದ್ರಗೊಳಿಸಿದ್ದಾನೆ. ಪಂಪನ ಟಂಕಸಾಲೆಯಲ್ಲಿ ತಯಾರಾದ

            ಪೊಡೆವಡುವಪ್ಪಿಕೊಳ್ವ ನೆನೆಯುತ್ತಿರಿಮೆಂಬ ಸಮಸ್ತ ವಸ್ತುವಂ
ಕುಡುವ ಪಲರ್ಮೆಯಿಂ ಪರಸಿ ಸೇಸೆಯನಿಕ್ಕುವ ಬುದ್ದಿವೇೞ್ವ ಕೈ
ಯೆಡೆ ನಿಮಗೆಂದೊಡಂಬಡಿಪ ನಲ್ಲರಗಲೈಕೆ ಕಣ್ಣನೀರ್ಗಳಂ
ಮಿಡಿವ ಬಹು ಪ್ರಕಾರಜನಸಂಕಟಮೊಪ್ಪಿದುದಾ ಪ್ರಯಾಣದೊಳ್
|

ಎಂಬ ಪದ್ಯ ಹೊಸ ಸೂಚಿಕಲ್ಲಿನಂತಿದೆ; ಸಂಸಾರ ಸಾರೋದಯನೆಂಬ ತನ್ನ ಬಿರುದನ್ನು ಪಂಪ ಇಂಥ ಕಡೆಗಳಲ್ಲಿ ನೆನಪಿಸಿಕೊಟ್ಟು ಸಾರ್ಥಕಪಡಿಸುತ್ತಿರುತ್ತಾನೆ. ಇದರ ಬೆನ್ನಿಗೇ ಬರುವ ಇನ್ನೊಂದು ಮಾರ್ಮಿಕ ಪ್ರಸಂಗ ಶ್ರೀಮತಿ – ವಜ್ರಜಂಘರ ಸಹ ಮರಣದ ಅಪೂರ್ವ ಚಿತ್ರಣ. ಇಲ್ಲಿ ಕಥೆ ಘಟನೆ ಎಲ್ಲ ನಿಷ್ಠವಾಗಿ ಸಾಗಿದೆಯಾದರೂ, ಅಲ್ಲಿನ ಬೋಳು ಬೋಳಾದ ಬಯಲು ಇಲ್ಲಿ ವಸಂತೋದ್ಯಾನ ವಾಗಿ ಪರಿವರ್ತಿತವಾಗಿದೆ. ಪೂರ್ವಾಪುರಾಣದಲ್ಲಿಯೂ ಇದು ವಿಸ್ತಾರವಾದ ಭೂಮಿಕೆಯ ಮೇಲೆ ಗಟ್ಟಿಯಾದ ನಿಂತಿದೆ ಜಿನಸೇನರದು ಗೊಮ್ಮಟ ಶಿಲ್ಪ ಪಂಪನದು ಶಿಲಾ ಬಾಲಿಕೆಯನ್ನು ಬಿಡಿಸುವ ಸೂಕ್ಷ್ಮ ಕೆತ್ತನೆ. ಪಂಪನಲ್ಲಿ ಭವ್ಯತೆಯೊಂದಿಗೆ ಲಾಲಿತ್ಯವೂ ವ್ಯಕ್ತವಾಗಿದೆ.

ಇದುವರೆಗಿನ ತೌಲನಿಕ ಸಮೀಕ್ಷೆಯಿಂದ ತಿಳಿದು ಬರುವಂತೆ ಜಿನಸೇನರ ಪೂರ್ವಪುದಲ್ಲಿ ಉದ್ದಕ್ಕೂ ಸುವರ್ಣ ರೇಖೆಯಾಗಿ ವಿಸ್ಮಯಾದ್ಭುತಗಳನ್ನು ಉಳಿಸಿಕೊಂಡಿರುವ ಪಂಪ, ಒಂದು ಕೈಮಿಗಿಲಾಗುವಂತೆ ಅದಕ್ಕೆ ನಯ ನುಣುಪು ಕೊಟ್ಟಿದ್ದಾನೆ. ಪಂಪ ಕನ್ನಡಕ್ಕೆ ಒಂದು ಯುಗದ ಕವಿಯೂ ಆದದ್ದರಿಂದ ಅಲ್ಲಲ್ಲಿ ಮೌಲ್ಯಗಳನ್ನೂ ಧ್ವನಿಸಿದ್ದಾನೆ. ಸಂಸ್ಕೃತದಿಂದ ಪೂರ್ವಪು. ವನ್ನು ಕನ್ನಡಕ್ಕೆ ತರುವಲ್ಲಿ, ಸ್ಥೂಲನೋಟಕ್ಕೆ ಮೂಲವನ್ನು ಸಾಕಷ್ಟು ನಿಷ್ಠೆಯಿಂದ ಅನುಸರಿಸಿರುವ ಹಾಗೆ ತೋರುತ್ತದೆ. ಕೇವಲ ತೌಲನಿಕ ಸ್ವರೂಪದ ಸೂಕ್ಷ್ಮಾವಲೋಕನದಿಂದ ಪಂಪ ಹಲವಾರು ಮಾರ್ಪಾಟು ಮಾಡಿಕೊಂಡಿರುವುದು ಸ್ಪಷ್ಟವಾಗುತ್ತದೆ :

೧. ಕೆಲವು ಸಲ ಮೂಲವನ್ನು ಬಿಡುತ್ತಾನೆ.

೨. ಒಮ್ಮೊಮ್ಮೆ ಪೂರ್ತಿ ಹೊಸದನ್ನು ಸೇರಿಸುತ್ತಾನೆ : ಭರತನ ರಾಣಿಯರ ಪುಷ್ಪಾಪಚಯ.

೩. ಮೂಲದಲ್ಲಿರುವುದನ್ನು ಅಲ್ಲಲ್ಲಿ ಸಂಗ್ರಹಿಸುತ್ತಾನೆ.

೪. ಅಪರೂಪಕ್ಕೆ ಮೂಲದಲ್ಲಿರುವುದನ್ನು ಲಂಬಿಸುತ್ತಾನೆ.

೫. ಮೂಲದಲ್ಲಿರುವ ಸಂಸ್ಕೃತ ಶಬ್ದಗಳನ್ನು ಹಾಗೇ ಉಳಿಸಿಕೊಂಡು ಕನ್ನಡಕ್ಕೆ ಅಳವಡಿಸುವುದುಂಟು.

೬. ಮೂಲದ ಸಂಸ್ಕೃತಕ್ಕೆ ಪರ್ಯಾಯವಾಗಿ ಕನ್ನಡ ಮಾತುಗಳನ್ನು ಬಳಸುವುದುಂಟು.

೭. ಇಡೀ ಪದ್ಯ / ಗದ್ಯ ಮೂಲದ ಮಾರ್ದನಿಯಾಗಿರುವಾಗಲೂ, ಒಮ್ಮೊಮ್ಮೆ ಪದ್ಯದ ಒಡಲಲ್ಲೊಂದು ಹೊಸ ಅಭಿಪ್ರಾಯದ ಪುಟ್ಟ ಮಾತು ಸೇರುವುದುಂಟು.

ವಾಸ್ತವವಾಗಿ ಈ ಅಂಶಗಳಲ್ಲಿ ಕೆಲವು ಒಂದಕ್ಕೊಂದು ಹೊಂದಿಕೊಂಡಿರುತ್ತವೆ; ಸಂಕ್ಷೇಪಿಸುವಾಗ ಕೆಲವನ್ನು ಬಿಡಬೇಕಾಗುತ್ತದೆ, ವಿಸ್ತರಿಸುವಾಗ ಹೊಸದನ್ನು ಸೇರಿಸಬೇಕಾಗುತ್ತದೆ. ಪಂಪನ ಸಂಕ್ಷೇಪಿಸುವಿಕೆಯ ಸ್ವರೂಪ ಎಂತಹುದೆಂಬುದನ್ನು ಆದಿಪುರಣದ ಆರಂಭದಲ್ಲಿಯೇ ಕಾಣಬಹುದು. ಜಿನಸೇನರ ಪೂರ್ವ ಪುರಾಣದಂತೆ ಪಂಪನ ಆದಿಪುರಾಣವೂ ಆದಿದೇವನ ಎರಡನೆಯ ಭವವಾದ ಮಹಾಬಲನಿಂದ ಪ್ರಾರಂಭವಾಗುತ್ತದೆ, ಇದರಲ್ಲಿ ವ್ಯತ್ಯಾಸವಿಲ್ಲ. ವ್ಯತ್ಯಾಸವೆಲ್ಲ ಅದುವರೆಗಿನ ಆರಂಭದ ನಿರೂಪಣೆಯನ್ನು ಪಂಪ ಮೊಟಕುಗೊಳಿಸಿದ್ದರಲ್ಲಿದೆ. ಪೂರ್ವಪುರಾಣದಲ್ಲಿ ಜಿನಸೇನರು ಮಹಾಬಲನ ಕಥೆಗೆ ತೊಡಗುವುದು ನಾಲ್ಕನೆಯ ಪರ್ವದ ಉತ್ತರಾರ್ಧದಲ್ಲಿ. ಆ ವೇಳೆಗೆ ೩ ೧/೨ ಪರ್ವಗಳೂ ೭೪೩ ಶ್ಲೋಕಗಳೂ ಮುಗಿದಿರುತ್ತವೆ. ಪಂಪ ತನ್ನ ಕಾವ್ಯಾರಂಭದಲ್ಲಿಯೇ ಮಹಾಬಲನ ಚರಿತೆಗೆ ತೊಡಗುತ್ತಾನೆ.ಸಂಸ್ಕೃತ ಪೂರ್ವ ಪುರಾಣಕ್ಕೆ ಆ ಬಗೆಯ ವಿಸ್ತಾರವಾದ ಪೂರ್ವ ಪೀಠಿಕೆಯ ಅಗತ್ಯವಿತ್ತು. ಏಕೆಂದರೆ ಅದು ತ್ರಿಷಷ್ಟಿ ಶಲಾಕಾ ಪುರುಷರ ಇಡೀ ಮಹಾಪುರಾಣಕ್ಕೆ ಪ್ರಾರಂಭವಾಗಿ ನಿಲ್ಲುವಂತಹುದು. ಕನ್ನಡದಲ್ಲಿ ಈ ಸುದೀರ್ಘ ಕಥನದ ಅವಶ್ಯಕತೆ ಯಿಲ್ಲ. ಕನ್ನಡ ಆದಿಪು. ಕೇವಲ ಒಬ್ಬ ತೀರ್ಥಂಕರನ ಚರಿತೆ. ಇಲ್ಲಿಗೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ಇಟ್ಟುಕೊಂಡು, ಉಳಿದ ದೊಡ್ದ ಹೊರೆಯನ್ನು ತಗ್ಗಿಸುವಲ್ಲಿ ಪಮ್ಪನ ಸಂಗ್ರಹಗುಣ ಸಾಮರ್ಥ್ಯದ ಜತೆಗೆ ಔಚಿತ್ಯಜ್ಞಾನವೂ ಪ್ರಕಟವಾಗಿದೆ. ಇದರೊಂದಿಗೇ ತೌಲನಿಕ ವಿಮರ್ಶಕರು ಮುಖ್ಯವಾಗಿ ಗಮನಿಸಬೇಕಾದುದು, ಪಂಪನಿಗೆ ಕಾವ್ಯವಸ್ತುವಿನ ಮೇಲಿರುವ ಪ್ರಚಂಡ ಹಿಡಿತ. ಜಿನಸೇನಾಚಾರ್ಯ ವಿರಚಿತ ಹತ್ತು ಸಾವಿರ ಶ್ಲೋಕ ಪ್ರಮಾಣದ ಪೂರ್ವ ಪುರಾಣದ ಬೃಹತ್ತನ್ನು ಪಂಪ ೧೬೩೦ ಪದ್ಯಗಳಿಗೆ ಮತ್ತು ಗದ್ಯಕ್ಕೆ ಅಳವಡಿಸಿದ್ದಾನೆ. ಪೂರ್ವ ಪುರಾಣದ ಸಾರ ಮತ್ತು ಸ್ವಾರಸ್ಯ ಕೆಡದಂತೆ ಈ ಕಾರ್ಯವನ್ನು ನಿರ್ವಹಿಸಬೇಕಾಗುತ್ತದೆ. ಸಮಗ್ರ ಕಥೆಯ ಕಲ್ಪನೆ ಮತ್ತು ಪ್ರಭುತ್ವ ಇದ್ದಾಗ ಈ ಕೆಲಸ ಸುಗಮವಾಗುತ್ತದೆ; ಇದರಲ್ಲಿ ಪಂಪನ ಪ್ರತಿಭೆಯೊಂದಿಗೆ ಪಾಂಡಿತ್ಯದ ಸಾಹಚರ್ಯವೂ ಸಪ್ತಪದಿ ಹಾಕಿದೆ.

ಪಂಪ ಮೂಲ ಕಥೆಯನ್ನು ಹೇಗೆ ಲಂಬಿಸುತ್ತಾನೆಂಬುದಕ್ಕೆ ನೀಲಾಂಜನೆಯ ನೃತ್ಯಪ್ರಸಂಗ ತಕ್ಕ ನಿದರ್ಶನವಾಗಿದೆ. ಪೂರ್ವ ಪು.ದಲ್ಲಿ “ಒಂದು ದಿನ ಮಹಾಸಭಾ ಮಧ್ಯದಲ್ಲಿ ಅನೇಕ ರಾಜರಿಂದ ಸುತ್ತುವರಿದ ಆದಿನಾಥನು ಸೂರ್ಯನು ನಿಷಧ ಪರ್ವತದ ತಪ್ಪಲನ್ನು ಹೊಂದುವಂತೆ ಸಿಂಹಾಸನದಲ್ಲಿ ಕುಳಿತನು ಎಂದು ಒಂದೇ ಒಂದು ಶ್ಲೋಕದಲ್ಲಿ ಹೇಳಿರುವುದನ್ನು ಪಂಪ ಎಂಟು ಪದ್ಯಎಂಟು ಪದ್ಯಗಳಿಗೆ ವಿಸ್ತರಿಸಿ ಸುಂದರವಾದ ಭೂಮಿಕೆ ನಿರ್ಮಿಸಿದ್ದಾನೆ” ಇದರಲ್ಲಿ ಸಮಕಾಲೀನ ರಾಜಾಸ್ಥಾನದ ಕಟ್ಟು ಪಾಡುಗಳನ್ನು ಕೂಡ ಕೊಟ್ಟಿದ್ದಾನೆ.ಪೂರ್ವ ಪುರಾಣದಲ್ಲಿ ಆದಿದೇವನ ಒಡ್ಡೋಲಗಕ್ಕೆ ಬಂದ ದೇವೇಂದ್ರನು ಸ್ವಯಿಚ್ಛೆಯಿಂದ ಮೊದಲು ಅಪ್ಸರ ಸ್ತ್ರೀಯರ ನೃತ್ಯವನ್ನು ಪ್ರಯೋಗಿಸಿ, ಸ್ವಾಮಿಯ ಮನಸ್ಸಂತೋಷಪಡಿಸುತ್ತಾನೆ; ಅನಂತರ ಸ್ತ್ರೀಯರ ಆದಿದೇವನಿಗೆ ವೈರಾಗ್ಯವನ್ನುಂಟುಮಾಡಲು ‘ಸ್ವಲ್ಪ ಆಯುಷ್ಯವುಳ್ಳ ಸ್ತ್ರೀಪಾತ್ರವನ್ನು ನರ್ತನಕ್ಕೆ ಪ್ರಯೋಗಿಸಿದನು’ ಎಂದು ತೀರ ವಾಚ್ಯವಾಗಿಸಿದ ನಿರೂಪಣೆಯಿದೆ.ಅತಿ ವ್ಯಕ್ತವಾದ, ವರದಿ ರೂಪದ ತಿರುಳನ್ನು ತಿದ್ದಿ ತೀಡಿ ಪ್ರಬಲವಾದ ಅಭಿವ್ಯಕ್ತಿಯಾಗುವಂತೆ ಚೂಪುಗೊಳಿಸಿದ್ದಾನೆ; ಜತೆಗೆ ವೈರಾಗ್ಯಕ್ಕೆ ಅವಧಾರಣೆ ಕೊಟ್ಟು ಇಡೀ ಸಂನಿವೇಶಕ್ಕೆ ನಾಟಕದ ಕಳೆ ಕಟ್ಟಿದ್ದಾನೆ. ಎರಡು ಸಲ ನೃತ್ಯ ನಡೆಯುವುದನ್ನು ತಪ್ಪಿಸಿ, ಒಂದೇ ಸಲ ನೃತ್ಯ ಕಾರ್ಯಕ್ರಮ ನಡೆದಂತೆ ಪಂಪ ಬದಲಾಯಿಸಿದ್ದಾನೆ; ಈ ನಾಟ್ಯವನ್ನು ಏರ್ಪಡಿಸುವ ಮೊದಲು ಇಂದ್ರನು ಆದಿದೇವನಲ್ಲಿ ಅಪ್ಪಣೆ ಬೇಡಿ ಒಪ್ಪಿಗೆ ಪಡೆಯುತ್ತಾನೆ.ಪಂಪ ಕೊಟ್ಟಿರುವ ಈ ತಿರುವು ಕೂಡ ಉಚಿತವಾಗಿದೆ. ಇದಕ್ಕಿಂತ ಇನ್ನೂ ಮಹತ್ತರವಾದ ಪಂಪನ ಮಾರ್ಪಟೆಂದರೆ, ನೀಲಾಂಹನ ಅಲ್ಪಾಯುವಾಗಿದ್ದಳೆಂಬುದನ್ನು ಪೂರ್ವ ಪುರಾಣದಲ್ಲಿ ಆಕೆಯ ಪ್ರವೇಶಕ್ಕೂ ಮೊದಲೇ ಹೇಳಿರುವುದನ್ನು ತಪ್ಪಿಸಿ, ನೃತ್ಯಾವಸರದ ಆಯತ ವೇಳೆಯಲ್ಲಷ್ಟೇ ಸೂಚಿಸಿರುವುದು. ಕರ್ಮಯೋಗಿಯಾದ ಜಿನಸೇನರಿಗೂ, ಕಾವ್ಯಯೋಗಿಯಾದ ಪಂಪನಿಗೂ ಇರುವ ಸೃಜನ ಶಕ್ತಿಯ ಅಂತರವನ್ನು ಈ ಮಾರ್ಪಾಟು ಹರಳು ಗೊಳಿಸಿದೆ. ಪೂರ್ವಪು. ದಲ್ಲಿ ಆರು ಶ್ಲೋಕಗಳಲ್ಲಿರುವ ಈ ನೃತ್ಯ ವರ್ಣನೆಯನ್ನು ಪಂಪ ಮೂವತ್ತು ಪದ್ಯಗಳಲ್ಲಿ ರಸಭಟ್ಟಿಯಿಳಿಸಿದ್ದಾನೆ.ಪಂಪ ಹಲವು ಕಲೆಗಳಲ್ಲಿ ಅಭಿಜ್ಞ, ಲಲಿತ ಕಲೆಗಳಲ್ಲಿ ಪರಿಶ್ರಮವುಳ್ಳಾತ. ನೃತ್ಯ ಸಂಗೀತ ಶಿಲ್ಪಾದಿ ವಿದ್ಯೆಗಳಲ್ಲಿ ಆತನಿಗಿದ್ದ ಪ್ರವೇಶ ಎಷ್ಟು ಸೂಕ್ಷ್ಮ ಹಾಗೂ ತಲಸ್ಪರ್ಶಿಯಾಗಿತ್ತೆಂಬುದು ಇಲ್ಲಿ ನಿಚ್ಚಳವಾಗಿದೆ.

ಯಾವುದೇ ಭಾಷೆಯ ಯಾವ ಮಹಾಕವಿಗೂ ಇರುವ ಏಕೈಕ ಅಭಿವ್ಯಕ್ತಿ ಮಾಧ್ಯಮ ಭಾಷೆ. ಕವಿಯ ಎಲ್ಲ ಸೃಜನ ಸಾಮರ್ಥ್ಯವೂ ಆಯಾ ಭಾಷೆಯಲ್ಲೇ ಸಂಭವಿಸಬೇಕು. ಈ ಹಿನ್ನೆಲೆಯಲ್ಲಿ ಕನ್ನಡ ಭಾಷೆಯ ಬಿಗಿ ಬಿಬ್ಬೋಕ ಮೊನಚು ಮತ್ತು ಬಾಗು ಬಳುಕುಗಳನ್ನು ಪಂಪ ದುಡಿಸಿಕೊಂಡು ಸೂರೆ ಮಾಡಿರುವ ರೀತಿ ಅನನ್ಯವೆನಿಸುವಂತಹುದು. ಹಿತಮಿತವಾದ ಪ್ರಸನ್ನ ಮಾತುಗಾರಿಕೆಯ ಮೂಲಕ ಕನ್ನಡ ನುಡಿ ಜಾಣ ಪಂಪ ದೊಡ್ಡದನ್ನು ಸಾಧಿಸಿರುವುದು ಕನ್ನಡದ ಭಾಗ್ಯ. ಸಂಸ್ಕೃತ ಪೂರ್ವ ಪುರಾಣ ಕನ್ನಡ ಆದಿಪುರಾಣವಾಗಿ ಅವತರಿಸುವಂತೆ ತನ್ನ ಸೃಜನ ಶಕ್ತಿಯನ್ನು ಅದಕ್ಕೆ ಪಂಪ ಒಡ್ಡಿದ ರೀತಿ ಪರಿಭಾವ್ಯವಾದುದು. ಪೂರ್ವಪು. ದ ವಿಸ್ತೃತವಾದ ಕಥೆಯನ್ನು ಸಂಸ್ಕೃತದಿಂದ ಕನ್ನಡಕ್ಕೆ ಹೊರಳಿಸುವಾಗ, ಪಂಪಕವಿ ಸ್ವಾರಸ್ಯದೊಂದಿಗೆ ಸೊಗಸನ್ನೂ ಹೊಳೆಯಿಸಿರುವ ಭಾಗಗಳಲ್ಲಿ ಬಾಹುಬಲಿಯ ವೈರ್ಯಾಗ್ಯ ಪ್ರಸಂಗ ಪ್ರಮುಖವಾದುದು. ಹೊಳಪಿನೊಂದಿಗೆ ಹೊಸತನವನ್ನೂ ಪ್ರಕಟಿಸಿರುವ ಪದ್ಯಗಳನ್ನು ಮಾತ್ರ ಗಮನಿಸಿದರೆ ಸಾಕು. ಈ ಅಂಶಕ್ಕೆ ಪಂಜು ಹಿಡಿದಂತಾಗುತ್ತದೆ.

‘ರೆಪ್ಪೆ ಹೊಡೆಯದಿರುವುದೂ ಶಾಂತವೂ ಗಂಭೀರವೂ ಆದ ದೃಷ್ಟಿಯನ್ನು ಹೊಂದಿರುವ ಭುಜಬಲಿಯು ದೃಷ್ಟಿಯುದ್ಧದಲ್ಲಿ ಶೀಘ್ರವಾಗಿ ಜಯವನ್ನು ಹೊಂದಿದನು’ ಎಂದು ಪೂರ್ವಪು. ದ ವಿವರಣೆ (೩೬-೫೧). ಈ ಭಾವವನ್ನು ಪಂಪ ಪ್ರತಿಬಿಂಬಿಸಿರುವುದು ಹೀಗೆ :

            ಲಲಿತಮುಖಸರಸಿಜಂ ನಿ
ಶ್ಚಳಪಕ್ಷ್ಮಂ ಸ್ತಿಮಿತ ತಾರಕಂ ಭುಜಬಲಿ ಕ
ಣ್ಣೊಳೆ ತವೆ ಪೀರ್ವವೊಲೇ ನಿ
ಶ್ಚಳತನು ನಡೆ ನೋಡೆ ಭರತರಾಜಂ ಸೋಲ್ತಂ
||           ೧೪-೧೦೫

ನಿರ್ನಿಮೇಷಾಂ ಎಂಬುದಕ್ಕೆ ನಿಶ್ಚಳ ಪಕ್ಷ್ಮಂ ಎಂಬ ಸಮಾನಾರ್ಥಕ ಸಂಸ್ಕೃತ ಪರ್ಯಾಯ ಶಬ್ದ ಬಳಕೆಯಾಗಿರುವುದನ್ನು ಬಿಟ್ಟರೆ ಇಡೀ ಪದ್ಯ ಬೇರೆ ಆಕಾರ ತಳೆದಿದೆ. ‘ಬಾಹುಬಲಿ ಜಯ ಪಡೆದನು’ (ಜಯಂ ಪ್ರಾಪ) ಎಂಬ ವಿಜಯೋಕ್ತಿಗೆ ಬದಲಾಗಿ ಪಂಪ ಇಲ್ಲಿ ‘ಭರತರಾಜ ಸೋತನು’ ಎನ್ನುತ್ತಾನೆ. ಇಡೀ ಪದ್ಯಕ್ಕೆ ಹಣತೆ ಹಚ್ಚಿಟ್ಟಂತಿ ರುವ ‘ಕಣ್ಣೊಳೆ ತವೆ ಪೀರ್ವವೊಲ್’ ಎಂಬ ನುಡಿ ನಾಣ್ಯ ಪಂಪನ ಟಂಕಸಾಲೆಯಿಂದ ಬಂದದ್ದು.

ಪೂರ್ವಪು : ಜಲಯುದ್ಧದಲ್ಲಿ ಗರ್ವಿಷ್ಠರಾಗಿ ಸರೋವರ ಹೊಕ್ಕು ದಿಗ್ಗಜ ಗಳಂತೆ ಉದ್ದತೋಳುಗಳಿಂದ ಜಲಸೇಚನೆ ಮಾಡಿಕೊಂಡರು (೩೬-೫೩)

ಆದಿಪು.: ಸಲಗಗಳೆರಡು ಸರೋವರದ ನೀರನ್ನು ವಿಲಾಸದಿಂದ ಹೊಗುವಂತೆ ಆದರದಿಂದ ಹೊಕ್ಕು, ಕಮಲಕೇಸರ ರಜದಿಂದ ಹೊಂಬಣ್ಣವಾದ ತಿಳಿನೀರನ್ನು ಎರಚಾಡಿದರು (೧೪-೧೦೬)

ಮೂಲದಲ್ಲಿಲ್ಲದಿದ್ದರೂ ಪಂಪ ತನ್ನ ಪ್ರತಿಭಾಕಮ್ಮಟದಲ್ಲಿ ಸೃಷ್ಟಿಸಿದ್ದು ಇಲ್ಲಿದೆ : ‘ಭರತನ ಮುಖದಲ್ಲಿ ಹಬ್ಬಿದ ಉಗ್ರವಾದ ಕೋಪಾತ್ನಿಯನ್ನು ನಂದಿಸಲೋ ಎಂಬಂತೆ ಮರಕತಮಣಿ ವರ್ಣದ ಬಾಹುಬಲಿ ಆನೆಯ ಸೊಂಡಿಲಂತಿದ್ದ ಕೈಗಳಿಂದ ತಿಳಿನೀರನ್ನು ಒಡನೊಡನೆ ತುಳುಕಾಡಿದನು’ (೧೪-೧೦೭); ಭರತೇಶ್ವರನು ೫೦೦ ಬಿಲ್ಲು ಗಳಷ್ಟು ಎತ್ತರವುಳ್ಳವನು, ಬಾಹುಬಲಿ ೫೨೫ ಬಿಲ್ಲುಗಳೆತ್ತರದವನು(೧೪-೧೦೭ ವ).

ಪೂರ್ವಪು.: ಭರತೇಶ್ವರನು ಎರಚಿತ ನೀರು ಉನ್ನತವಾದ ಬಾಹುಬಲಿಯ ಮುಖವು ದೂರವಾಗಿದ್ದುದರಿಂದ ಅದನ್ನು ಹೊಂದದೆ ಸಮೀಪದಲ್ಲಿ ಬಿದ್ದಿತು (೩೬-೫೫).

ಆದಿ ಪು. : (ಭರತನು) ವೇಗದಿಂದ ತುಳಿಕಿದ ನೀರು ಬಾಹುಬಲಿಯ ಎದೆಯಮೇಲೆ ಮುತ್ತಿನ ಹಾರದ ಕಿರಣಗಳ ಕಾಂತಿಯನ್ನು ವಹಿಸಿತು. ದುರ್ಧರವಾದ ಜಲಯುದ್ಧವೂ ಭರತ ಚಕ್ರವರ್ತಿಗೆ ವಿಶೇಷವಾಗಿ ಪರಿಭವವನ್ನೂ ತಂದಿತು. (೧೪-೧೦೮)

ರಾಜ್ಯಮೋಹಾವಿಷ್ಟನಾಗಿ ಒಡಹುಟ್ಟಿದವನ ಮೇಲೂ ಚಕ್ರರತ್ನವನ್ನು ಭರತ ಪ್ರಯೋಗಿಸಿದಮೇಲೆ ಬಾಹುಬಲಿ ಅಂತರ್ಮುಖಿಯಾಗಿ ಚಿಂತಿಸುತ್ತಾನೆ. ಈ ಸ್ವಗತ ಲಹರಿಯಲ್ಲಿ ಪಂಪ ಮೂಲದ ಚಿನ್ನದ ಒಡವೆಗೆ ಕೆಲವು ವಜ್ರದ ಹರಳುಗಳನ್ನು ಕೂಡಿಸಿದ್ದಾನೆ. ಅವುಗಳಲ್ಲಿ ೧೪-೧೨೧, ೧೨೨, ೧೩೨, ೧೩೩ ಮೊದಲಾದ ಪದ್ಯಗಳು ವಿಶಿಷ್ಟವಾಗಿದ್ದು ಪಂಪನಿಗೆ ಮಹಾಕವಿ ಪಟ್ಟವನ್ನು ಗಟ್ಟಿಯಾಗಿಸುತ್ತವೆ, ಇಲ್ಲಿರುವ ವಿನೂತನ ಸ್ವೋಪಜ್ಞ ಕಲ್ಪನೆಯ ಶ್ರೀಮಂತಿಕೆ ಪಂಪನ ಪ್ರತಿಭೆಯ ಅತ್ಯುನ್ನತಿಯನ್ನು ಸಾರುವಂತಹುದಾಗಿದೆ.

            ನಿಜಪಾದಾಂಬುರುಹಕ್ಕೆ ಪಾದ್ಯವಿಧಿಯಂ ನೇತ್ರಾಂಬುವಿಂ ಮಾಡುವ
ಗ್ರಜನತ್ಯುನ್ನತಮಪ್ಪ ಮಸ್ತಕದ ಮೇಗೋರಂತೆ ಪಾಯ್ವಾತ್ಮಬಾ
ಶ್ಪಜಳೌಘಂಗಳಿನಂದು ಬಾಹುಬಲಿ ತನ್ನಿಂದಂ ವಿಧೀಶಂಗೆ ವಂ
ಶಜ ರಾಜ್ಯಾಭಿಷವೋತ್ಸವಂ ನೆಗೞ್ದುದೆಂಬಾಶಂಕೆಯಂ ಮಾಡಿದಂ
|

ಈ ಪದ್ಯ ಗರ್ಭೀಕರಿಸಿಕೊಂಡಿರುವ, ಪರಿಭಾವಿಸಿದಷ್ಟೂ ಮಾಸದ ಚೆಲುವಿನ ಚಿತ್ರ ಯಾವುದೇ ಕವಿಗೆ ಗೌರವ ತರುವಂತಹುದಾಗಿದೆ.

ಆದಿಪು. ದಲ್ಲಿ ತುಂಬ ಜನಪ್ರಿಯವಾಗಿರುವ ಪದ್ಯಗಳಲ್ಲೊಂದು ೧೪-೧೩೦ ನೆಯ ಪದ್ಯ. ಇದಕ್ಕೆ ಪೂರ್ವಪು. ದ ೩೬-೯೭ ನೆಯ ಪದ್ಯ (ಶ್ಲೋಕ) ಸ್ಫೂರ್ತಿ ಕೊಟ್ಟಿದ್ದರೂ, ಪಂಪ ಅದಕ್ಕೆ ಬಾಣವಾಣಿಯ ಬಣ್ಣಕಟ್ಟಿ, ಇಡೀ ಪದ್ಯ ಹೊಸ ಅರ್ಥಕೋಶದಿಂದ ತುಂಬಿಕೊಳ್ಳುವಂತೆ, ಚಿಂತಿಸಿದಂತೆಲ್ಲಾ ಅರ್ಥ ಸುರುಳಿ ಬಿಚ್ಚಿಕೊಳ್ಳುತ್ತಾ ಹೋಗುವಂತೆ ಕಾಯಕಲ್ಪವೆಸಗಿದ್ದಾನೆ.

ಸಮಾರೋಪ :

ಈಗಾಗಲೇ ಹೇಳಿರುವಂತೆ ಪೂರ್ವಪು. ವೂ ಉನ್ನತವಾದ ಕಾವ್ಯವೇ. ಅಷ್ಟಾದಶ ವರ್ಣನೆಗಳು, ಅಲಂಕಾರ, ಛಂದಸ್ಸು, ರೀತಿ, ಪಾತ್ರಚಿತ್ರಣ – ಸುವ್ಯವಸ್ಥಿತವಾಗಿದೆ. ಜಿನಸೇನರಿಗೆ ಕಾವ್ಯದ ಪರಿಕಲ್ಪನೆಯೂ ಸ್ಪಷ್ಟವಾಗಿದೆ; ಇದಕ್ಕೆ ಅವರ ಹೇಳಿಕೆಗಳು ದಿಕ್‍ಸೂಚಿಯಾಗಿವೆ. ಪೂರ್ವಪು.ದ ಮೊದಲನೆಯ ಪರ್ವದಲ್ಲಿ ಶ್ಲೋಕ ೬೧ ರಿಂದ ೧೦೬ ರವರೆಗೆ ಬರುವ ೪೫ ಶ್ಲೋಕಗಳು ಕವಿ – ಕಾವ್ಯ ಜಿಜ್ಞಾಸೆಗೆ ಮೀಸಲು. ಪೂರ್ವಪುರಾಣದ ಇನ್ನೂ ಅನೇಕ ಶ್ಲೋಕಗಳಲ್ಲಿ ಇಂಥ ಅಭಿಪ್ರಾಯ ಹೊಳಲುಗೊಟ್ಟಿದೆ. ಒಟ್ಟಾರೆ ಜಿನಸೇನರು ಪೂರ್ವಪುರಾಣವನ್ನು ಕಾವ್ಯವನ್ನಾಗಿಸುವಲ್ಲಿ ಸಾಕಷ್ಟು ಯಶಸ್ವಿಯಾಗಿದ್ದಾರೆ. ಆದರೆ ಜಿನಸೇನರ ದಾರಿ ಗುರಿ ಧೋರಣೆ ಮನೋಧರ್ಮ ಬೇರೆ ನೆಲೆಗೆ ಸೇರಿದ್ದು. ಅವರ ಕೇಂದ್ರ ಪ್ರಜ್ಞೆ ಕ್ರಿಯಾಶೀಲವಾಗುವುದು ಕಾವ್ಯೇತರ ಕಾರಣದ ಭಿನ್ನಭೂಮಿಕೆಯಲ್ಲಿ. ಅವರ ಕಣ್ಮುಂದೆ ಇರುವುದು ವ್ಯಾಸ, ವಾಲ್ಮೀಕಿ, ಕಾಲಿದಾಸರಂಥವರ ಕಾವ್ಯಗಳಲ್ಲ. ಜಿನ ಸೇನರು ಕೃತಿರಚನೆ ಮಾಡುತ್ತಿರುವುದು ಜಿನಾಗಮಪ್ರೇಮಿಗಳಾದ ಭವ್ಯಜನ ಸ್ತೋಮಕ್ಕೆ. ಅದರಿಂದಾಗಿ ಪೂರ್ವಪು.ದಲ್ಲಿ ಕಾವ್ಯವಿದ್ದರೂ ಅದು ಎರಡನೆಯ ಪಾತಳಿಯಲಿ ಚಲಿಸುತ್ತದೆ. ಆದರೆ ತೌಲನಿಕ ವಿಮರ್ಶಕರು ಪಂಪನನ್ನು ಮೇಲೆತ್ತುವ ಭರದಲ್ಲಿ ಜಿನಸೇನರನ್ನು ಕೆಳಕ್ಕೆತ್ತಿ ಹಾಕುವ ಅಪಾಯವಿರುತ್ತದೆ. ಸಂಸ್ಕೃತ ಪ್ರಾಕೃತಗಳಲ್ಲಿ ನಿಷ್ಣಾತರಾದ ಜಿನಸೇನರು ರಸ ಋಷಿ; ಅವರು ಪ್ರಾಯಃ ಕನ್ನಡವನ್ನೂ ಬಲ್ಲವರಾಗಿದ್ದರು. ಅಂಥ ಪ್ರತಿಷ್ಠಿತರಿಂದ ರಚಿತವಾದ ಕೃತಿಯನ್ನು ಆರಿಸಿಕೊಂಡಿದ್ದರಿಂದ ಪಂಪನಿಗೆ ಸಿಂಹ ಅರಣ್ಯ ಹೊಕ್ಕಂತಾಗಿದೆ.

ಆದರೂ ಜೀನಸೇನರ ಶ್ಲೋಕಗಳ ಬೆಳಕಿನೆದುರು ಒಮ್ಮೊಮ್ಮೆ ಪಂಪನ ಪದ್ಯಗಳು ಮ್ಲಾನವಾಗುವುದುಂಟು. ಪಂಪನ ಕಾವ್ಯ ಪೂರ್ವಪುರಾಣದ ಎದರು ಮಸುಳಿಸಿರುವ ಕೆಲವು ಭಾಗಗಳುಂಟು. ಆ ಅಂಶವನ್ನೂ ಇಂಥ ಸಂಪ್ರಬಂಧದಲ್ಲಿ ಹೇಳಬೇಕಾದುದು ಯೋಗ್ಯವೆಂಬ ಪರಿಗ್ರಹಿಕೆಯಿಂದ ಮೂರು ನಿದರ್ಶನಗಳನ್ನು ಹೆಸರಿಸುತ್ತೇನೆ :

೧. ಭರತ – ಬಾಹುಬಲಿ ಒಡಹುಟ್ಟಿದವರು, ಇಬ್ಬರೂ ಸಮಶಕ್ತಿಯ ಯುದ್ಧವೀರರು. ಅವರಿಬ್ಬರ ಪರಾಕ್ರಮದಿ ಬಲ ಪ್ರದರ್ಶನವನ್ನು ಜಿನಸೇನರು ತಟಸ್ಥ ಭೂಮಿಕೆಯಲ್ಲಿ ನಿಂತು ವಿವರಣೆ ಕೊಟ್ಟಿದ್ದಾರೆ; ಅವರ ತಾಟಸ್ಥ್ಯವನ್ನು ೩೬-೫೭, ೫೮ ಮೊದಲಾದ ಶ್ಲೋಕಗಳು ಬಿಂಬಿಸಿವೆ. ಸೋದರರಿಬ್ಬರ ಗುಣಾವಗುಣಗಳನ್ನು ಮಿರ್ಮಮಕಾರದಿಂದ ನಿರೂಪಿಸಿದ್ದಾರೆ. ಬಾಹುಬಲಿ ಭರತನನ್ನು ಗೆದ್ದ ಉರುಬಿನಲ್ಲಿ ಅನೇಕ ಸ್ತುತಿ ನಿಂದೆಯ ಮಾತುಗಳನ್ನು ಆಡಿದನೆಂದು ಪೂರ್ವಪು.ದಲ್ಲಿದೆ (೩೬-೯೧ ರಿಂದ ೯೮). ಮನುಷ್ಯ ಸ್ವಭಾವದ ಪಾತಳಿಗಳನ್ನೂ ಸಂಕೀರ್ಣತೆ ಯನ್ನೂ ಬಲ್ಲ ಮಹಾ ಕವಿಗಳು ಮಹಾತ್ಮರ ಪಾತ್ರಗಳಲ್ಲಿರುವ ಕಪ್ಪು-ಬಿಳುಪನ್ನು ಹೀಗೆ ವಸ್ತುನಿಷ್ಟದೃಷ್ಟಿಯಿಂದ ವಿವರಿಸುತ್ತಾನೆ.

ಪಂಪನಿಗೆ ಈ ಪ್ರಸಂಗದಲ್ಲಿ ನಿರ್ಲಿಪ್ತ ನಿರೂಪಣೆ ಸಾಧ್ಯವಾಗಿಲ್ಲ. ಸೋದರರಿಬ್ಬರನ್ನೂ ಸಮಾನವಾಗಿ ಕಂಡಿಲ್ಲ. ಆದಿಪು.ದ ಈ ಭಾಗದಲ್ಲಿ ಮಲಿನತೆಯ ಚುಕ್ಕಿಗಳು ಕಾಣುತ್ತವೆ. ಚಕ್ರವರ್ತಿ ಭರತನ ಪಾತ್ರವನ್ನು ಕಳಂಕಿತಗೊಳಿಸಿ, ಬಾಹುಬಲಿಯ ಪಾತ್ರವನ್ನು ವೈಭವೀಕರಿಸಿದ್ದಾನೆ. ಪೂರ್ವಗ್ರಹ ಪೀಡಿತನಾದ ಪಂಪ, ಬಾಹುಬಲಿಯನ್ನು ಉದಾತ್ತೀಕರಿಸಲು ಬೇಕಾದ, ಪೋಷಕ ಭಾವಪುಷ್ಟಿಗೆ ಮುತುವರ್ಜಿ ತೋರಿದ್ದಾನೆ; ಭರತನ ಮೇಲ್ಮೆಯನ್ನೂ ಸಾರುವ ಪೂರ್ವಪು.ದ ಶ್ಲೋಕಗಳನ್ನು ತೇಲಿಸಿದ್ದಾನೆ. ಬಹುಶಃ ಪಂಪನ ಈ ಅಪಚಾರಕ್ಕೆ ಉತ್ತರವೊ ಎಂಬಂತೆ ರತ್ನಾಕರ ವರ್ಣಿ ‘ಭರತೇಶ ವೈಭವ’ ವನ್ನು ರಚಿಸಿ ಬಾಹು ಬಲಿಯನ್ನು ಕೆಳಕ್ಕಿಸಿದ್ದಾನೆ.

ಈ ಬಗೆಯ ಪಕ್ಷಪಾತ ಧೋರಣೆಯಿಂದ ಪಂಪ ವರ್ತಿಸುವುದರಲ್ಲಿ ಏನಾದರೂ ಚಾರಿತ್ರಿಕ ಧ್ವನಿಯಿದೆಯೆ? ಚಕ್ರವರ್ತಿಯನ್ನು ಬೀಳುಗಳೆದು ಸಾಮಂತವನ್ನು ಮೇಲೆಳೆದಿರುವುದರ ಹಿಂದೆ ಪ್ರವರ್ತಿಸಿರುವ ಆಶಯ ಯಾವುದು? ಪಂಪನ ಎದೆಯಾಳದಲ್ಲಿ ಅಂದಿನ ರಾಷ್ಟ್ರಕೂಟ ಚಕ್ರಚರ್ತಿಯ ಆಸ್ಥಾನದಲ್ಲಿ ಎಡೆ ಸಿಗಲಿಲ್ಲವೆಂಬ ಭಾವನೆ ಹೆಡೆಯುತ್ತಿದೆಯೆ?

೨. ಪೂರ್ವಪು.ದಲ್ಲಿ ಭರತನ ೩೬-೬೪ ನೆಯ ಶ್ಲೋಕದ ಚಿತ್ರ ಪಂಪನಲ್ಲಿ ಇಲ್ಲ. ೩೬-೫೪ ರಲ್ಲಿರುವ ಭರತನ ಮಹಿಮೆಯನ್ನು ಪಂಪ ಅನಾಮತ್ತಾಗಿ ಮತ್ತು ನಿರ್ದಯನಾಗಿ ಬಾಹುಬಲಿಗೆ ವರ್ಗಾಯಿಸಿದ್ದಾನೆ (೧೪-೧೦೮). ಅದೇ ರೀತಿ ೩೬-೫೯ ರ ಚಿತ್ರ ಪಂಪನಲ್ಲಿ ಸಪ್ಪೆಯಾಗಿದೆ.

೩. ಜಿನಶಿಶುವಿನ ಸ್ನಾನ ತೀರ್ಥದಲ್ಲಿ ರವಿ ಚಂದ್ರ ತಾರೆಗಳು ತೇಲುತ್ತಿದ್ದ ಚಿತ್ರ ಮುಂತಾದ ಮನೋಜ್ಞವಾದ ವಿವರಗಳು ಪೂರ್ವಪುರಾಣದಲ್ಲಿ ಹೃದ್ಯವಾಗಿವೆ; ೧೩-೧೨೩ ರಿಂದ ೧೬೯ ರವರೆಗೆ ಶ್ಲೋಕಗಳಲ್ಲಿ ಜಿನಸೆನರು ತಲ್ಲೀನತೆಯಿಂದ ಈ ವರ್ಣನೆ ಕೊಟ್ಟಿದ್ದಾರೆ. ಪಂಪ ಇದರ ಚೆಲುವನ್ನು ಗ್ರಹಿಸಿಲ್ಲ, ತೀರ ಕಿರಿದಾಗಿ ಹಾರಿಸಿಬಿಟ್ಟಿದ್ದಾನೆ.

ಈ ಬಗೆಯ ಇನ್ನೂ ಕೆಲವು ದೃಷ್ಟಾಂತಗಳೊಂದಿಗೆ ಜಿನಸೇನರು ಮೇಲುಗೈ ಪಡೆದಿರುವುದನ್ನೂ ತೋರಿಸಬಹುದು. ಮನುಷ್ಯ ಜಾತಿ ತಾನೊಂದೆ ವಲಂ ಪಂಪನ ಪ್ರಸಿದ್ಧೋಕ್ತಿಯೂ ಜಿನಸೇನರ ಪ್ರತಿಧ್ವನಿಯೇ ಆಗಿದೆ. ಜಿನಸೇನರ ಹೆಗಲಿನಿಂದ ಕೆಳಗಿಳಿಸಿ ನೆಲದಮೇಲೆ ನಿಲ್ಲಿಸಿದಾಗ ಪಂಪ ಗಿಡ್ಡನಾಗಿ ಕಾಣುತ್ತಾನೆ; ಆದರೆ ಪಂಪ ಕೆಳಗಿಳಿಯುವುದು. ಕಡಿಮೆ. ಜಿನಸೇನರ ಪೂರ್ವಪು. ಸೊಗಸಾದ, ಗಂಭೀರವಾದ ಸಂಸ್ಕೃತ ಶೈಲಿಯಲ್ಲಿ ರಚಿತವಾಗಿದೆ. ಕಿರಿದರಲ್ಲಿ ಹಿರಿದನ್ನು ಕಾಣಿಸುವ ಆ ಪಾರದರ್ಶಕ ಶೈಲಿಯನ್ನು ಮೆಚ್ಚದಿರಲು ಸಾಧ್ಯವಿಲ್ಲ. ಪೂರ್ವಪು.ದಲ್ಲಿ ಕಾವ್ಯ ಶಕ್ತಿಯೇ ಅಲ್ಲದೆ, ಅಗಾಧವಾದ ಶಾಸ್ತ್ರಜ್ಞಾನ, ಲೋಕಜ್ಞಾನ ಇತಿಹಾಸ ಪ್ರಜ್ಞೆ ಮಾನವೀಯ ಮೌಲ್ಯ ಪ್ರತಿಪಾದಿತವಾಗಿದೆ. ಹೀಗಾಗಿ ಅದು ಧಾರ್ಮಿಕ ಹಿರಿಮೆಯೊಂದಿಗೆ ಸಾಂಸ್ಕೃತಿಕ ಮಹತ್ವವನ್ನೂ ಪಡೆದಿದೆ. ಪ್ರಾಚೀನ ಪರಂಪರೆಯ ಭವ್ಯ ಪ್ರತೀಕವಾಗಿರಿವ ಇಂಥ ಮಹಾಕೃತಿಗಳನ್ನು, ತನ್ನ ದೇಶ ಕಾಲ ಆವರಣಗಳಿಗೆ ಇಳಿಸಿಕೊಳ್ಳುವ ಹೊಣೆಗಾರಿಕೆಯ ಕಾರ್ಯವನ್ನು ಯಶಸ್ವಿಯಾಗಿ ವಿರ್ವಹಿಸಲು ಮಹಾಸಾಮರ್ಥ್ಯ ಬೇಕಾಗುತ್ತದೆ. ಈ ಬಗೆಯ ಪ್ರಾಕ್ ಪರಂಪರೆಯನ್ನು ವಿಜಯಿಯಾಗಿ ರೂಢಿಸುವ ಅಲಭ್ಯ ಭಾಗ್ಯ ಪಂಪನಿಗೆ ದೊರೆಯಿತು. ಜಿನಸೇನ ಪ್ರಣೀತವಾದ ವಿಸ್ತಾರವಾದ ಮೂಲ ಕಥೆಯನ್ನು ಉತ್ತಮ ರೀತಿಯಲ್ಲಿ ಸಂಗ್ರಹಿಸುತ್ತಾ ಪುನರ್ ಸೃಜಿಸಿದ ಮೊತ್ತ ಮೊದಲಿಗನೆಂಬುದು ಪಂಪನಿಗೆ ದೊರೆತ ಮನ್ನಣೆ. ಸಂಸ್ಕೃತದಲ್ಲಿರುವಮೂಲ ಮಹಾಪ್ರತಿಭೆ ಮತ್ತೆ ಜನ್ಮಗೊಂಡುದಲ್ಲದೆ, ಕನ್ನಡದ ಚೈತ್ಯನ್ಯವನ್ನೂ ಅದು ಧಾರಣ ಮಾಡಿಕೊಂಡು ಮತ್ತಷ್ಟು ಪುಷ್ಟಿಯಾಗಿದೆ. ಮೂಲಕಥೆ ಬದಲಾವಣೆಗೊಂಡಿಲ್ಲ, ಪರಿಣಾಮಗೊಂಡಿದೆ, ಸಾಣೆಗೊಂಡು ಪುನರ್ಭವಿಸಿದೆ, ಜಿನಸೇನರಲ್ಲಿ ಅಂತರ್ಗತವಾಗಿದ್ದ ಜೀವಸ್ವರೂಪ ದರ್ಶನ ಪಂಪನ ಪ್ರತಿಭಾ ಮೂಸೆಯಲ್ಲಿ ಇನ್ನೂ ಹರಳುಗೊಂಡು ಕನ್ನಡಕ್ಕೆ ಅವತರಿಸಿದೆ. ಪಂಪನಲ್ಲಿ ಅದು ಪಡೆದ ಮರುಹುಟ್ಟು, ಹರಿತ, ಹೊಳಪು ಯಾವ ಸ್ವರೂಪದ್ದೆಂದು ತೋರಿಸುವುದು ಈ ತೌಲನಿಕ ಪ್ರಬಂಧದ ಪ್ರೇರಣೆ.

ಪಂಪನ ಆದಿಪು.ದಲ್ಲಿ ಶಾಸ್ತ್ರಧರ್ಮ ಇಲ್ಲವೆಂದಲ್ಲ; ಅದರ ವಸ್ತುವೇ ಹಾಗಿರುವುದರಿಂದ ಧಾರ್ಮಿಕ ಪ್ರಕ್ರಿಯೆ ಸಮೃದ್ಧವಾಗಿದೆ. ಆದರೆ ಜಾಣ ಕವಿ ಪಂಪನ ನಿರ್ವಹಣೆಯ ಸೊಗಸಿನಿಂದಾಗಿ ಇಲ್ಲಿ ಶಾಸ್ತ್ರದ ಸ್ಥಾನ ಗೌಣವಾಗಿ ಕಾವ್ಯ ಪ್ರಧಾನವಾಗಿದೆ. ಧರ್ಮ ಮತ್ತು ಕಾವ್ಯಗಳ ನಡುವಣ ಅಂತರದ ಸ್ಪಷ್ಟ ತಿಳಿವಳಿಕೆ ಪಂಪನಿಗಿತ್ತು. ಇವೆರಡು ದ್ರುವಗಳನ್ನೂ ಕೂಡಿಸುವ, ಸೇತುವೆ ಕಟ್ತುವ ಕೆಲಸದ ಅಗತ್ಯ ಮತ್ತು ಮಹತ್ವವನ್ನು ಪಂಪ ಮನಗಂಡಿದ್ದಾನೆಂಬುದು ಕನ್ನಡ ಸಾಹಿತ್ಯದ ಸಂದರ್ಭದಲ್ಲಿ ಮುಖ್ಯವಾಗುತ್ತದೆ. ಕವಿಯ ಈ ಅರಿವಿನ ಫಲವಾಗಿ ಕನ್ನಡಕ್ಕೊಂದು ಉತ್ಕೃಷ್ಟ ಕಾವ್ಯ ದೊರೆಯಿತು :

            ಬೆಳಗುವೆನಿಲ್ಲಿ ಲೌಕಿಕಮನಲ್ಲಿ ಜಿನಾಗಮಮಂ ಸಮಸ್ತ ಭೂ
ತಳಕೆ ಸಮಸ್ತ ಭಾರತಮುಮಾದಿ ಪುರಾಣಮುಮೆಂದು ಮೆಯ್ಯಸುಂ
ಗೊಳುತಿರೆ ಪೂಣ್ದು ಪೂಣ್ದ ತೆಱದೂಂದಱುದಿಂಗಳೊಳೊಂದು ಮೂಱು ತಿಂ
ಗಳೊಳೆ ಸಮಾಪ್ತಿಯಾದುದೆನೆ ಬಣ್ಣಿಸಿದಂ ಕವಿತಾಗುಣಾರ್ಣವಂ
|

ಈ ಅಂಡಬೇರುಂಡ ಪ್ರಜ್ಞೆ ವಿಶಿಷ್ಟವಾದುದು. ಪಂಪನ ಎದರು ಜಿನವಾಣಿ ಆಲಿಸುವವರೇ ಅಲ್ಲದೆ ಕವಿವಾಣೀ ಕೇಳುವವರೂ ಕುಳಿತಿದ್ದಾರೆ. ಅತ್ತ ಜಿನನ ಉಪಾಸಕರನ್ನೂ ಇತ್ತ ಕಾವ್ಯೋಪಾಸಕರನ್ನೂ ಏಕಕಾಲದಲ್ಲಿ ತಣಿಸುವ ಹೊಣೆ ಪಂಪನದು. ಅದರಿಂದ ತನ್ನ ಕಾವ್ಯವನ್ನು ಉದ್ಘಾಟಿಸುವಾಗಲೇ ಈ ಅಂಶವನ್ನು ನಿಚ್ಚಳವಾಗಿ ಸಾರಿದ್ದಾನೆ:

            ಇದುವೆ ಸುಕವಿ ಪ್ರಮೋದ
ಪ್ರದಮಿದುವೆ ಸಮಸ್ತ ಭವ್ಯಲೋಕ ಪ್ರಮದ
ಪ್ರದಮೆನೆ ನೆಗೞ್ದೂ ದಿ ಪುರಾ
ಳದೊಳಱೆವುದು ಕಾವ್ಯಧರ್ಮಮಂ ಧರ್ಮಮುಮಂ
|

ಪಂಪನ ಈ ಆಶಯ ಬಹುಮಟ್ಟಿಗೆ ಈಡೇರಿದೆ. ಓದುಗರಿಗೆ ತೀರ್ಥಯಾತ್ರೆಯೊಂದಿಗೆ ಕಾವ್ಯಲೋಕ ಪರ್ಯಟನದ ಅನುಭವವೂ ಒಮ್ಮೆಗೇ ವೇದ್ಯವಾಗುತ್ತದೆ. ಆದಿಪು. ವನ್ನು ಅಭ್ಯಸಿಸಿದ ಶ್ರದ್ಧಾಳುವಿಗೆ ಹೃದಯದಲ್ಲಿ ಕಾವ್ಯ ಅಚ್ಚೊತ್ತಿತ ನಿಲ್ಲುವಂತೆ ಜೈನಪುರಾಣ ಲಕ್ಷಣಗಳು ಮತ್ತು ಪರಿಭಾಷೆ ಅಂಗೈ ಮೇಲಿನ ನೆಲ್ಲಿಕಾಯಿ ಆಗಿರುತ್ತದೆ. ಧರ್ಮ ಘನತೆಗೆ ತಿಲಾಂಜಲಿ ಕೊಡದೆ ಕಾವ್ಯದ ಮೇಲ್ಮೆ ಸ್ಥಾಪಿಸಿದ್ದಾನೆ. ಧರ್ಮ-ಕಾವಧರ್ಮ ಪರಸ್ಪರ ವಿರುದ್ಧವೆನಿಸದೆ ಅವು ಒಂದಕ್ಕೊಂದು ಪೂರಕ – ಪ್ರೇರಕ ಪೋಷಕನಾಗಿ ಹೊಂದಿಕೆಯಿಂದ ಪುದುವಾಳುವುದು ಸಾಧ್ಯ ಎಂಬುದನ್ನು ಪಂಪ ತೋರಿಸಿಕೊಟ್ತಿದ್ದಾನೆ. ಧರ್ಮ ಸಾಹಿತ್ಯಕ್ಕೆ ಒಡ್ಡುವ ಮಿತಿಗಳನ್ನು ಮಹಾ ಕವಿಗಳು ಹೇಗೆ ಜೀಣೀಸಿಕೊಂಡು ದಾಟಬಲ್ಲರೆಂಬುದಕ್ಕೊಂದು ದಿವ್ಯ ಸಾಕ್ಷಿ ಆದಿಪು. ಈ ಲಘಿಮಾ ಕೌಶಲ, ನಿಮಜ್ಜನ ಚಾತುರ್ಯ ಪಂಪ-ಕುಮಾರವ್ಯಾಸರಂಥವರಿಗೆ ಅನಾಯಾಸವಾಗಿ ಸಿದ್ಧಿಸುತ್ತದೆ. ಜಿನದರ್ಮದೊಂದಿಗೆ ಕಾವ್ಯಧರ್ಮವನ್ನು ಮೇಳೈಸಿ ಒಂದು ಅಪೂರ್ವ ಸಮನ್ವಯ ಸಾಧಿಸಿದ ಅಗ್ಗಳಿಕೆ ಕವಿತಾಗುಣಾರ್ಣವನದು. ಪ್ರೇರಣೆ ಪುಷ್ಟಿ ಪಡೆದದ್ದು ಜಿನಸೇನರ ಸಮ್ಯಗ್ ದೃಷ್ಟಿಯ ಕೃಷಿರತ್ನದಿಂದ ಎಂಬುದೂ ನಿಜ. ಜಿನಸೇನಾಚಾರ್ಯರೂ ಧರ್ಮಗುರು, ಪಂಪ ಕಾವ್ಯಗುರು, ಒತ್ತು ಬೀಳುವಿಕೆಯ ಸ್ಥಳ ಅದಲು ಬದಲಾಗಿದೆ; ಅಲ್ಲಿ ಧಾರ್ಮಿಕದತ್ತ ಒಲವು, ಇಲ್ಲಿ ಅದೆಲ್ಲ ಕಾವ್ಯದತ್ತ ಹುರಿಗೊಳ್ಳುತ್ತದೆ; ಇಲ್ಲಿಯದು ನೇರ ಹೃದಯ ಸಂವಾದ. ಜಿನಸೇನರ ಸೌಭಾಗ್ಯಶ್ರೀಯನ್ನು ಹೀರಿ ಸೂರೆಮಾಡಿದ ತ್ರಿವಿಕ್ರಮ ಪಂಪ.

ಮಹಾಕವಿಯಾದವನು ಮಹಾಕಾವ್ಯಕ್ಕೆ ತಕ್ಕುದಾದ ವಸ್ತುವಿಗೆ ತೆಕ್ಕೆ ಬೀಳುತ್ತಾನೆ. ಪಂಪ ತಾನು ರಚಿಸಿದ ಎರಡು ಕಾವ್ಯಗಳ ವಸ್ತುವನ್ನು ಎರಡು ಮಹಾಕೃತಿಗಳಿಂದ ಆರಿಕೊಂಡಿದ್ದಾನೆ. ಒಂದು ಕಡೆ ವ್ಯಾಸರ ಮಾನಸ ಪುತ್ರನಾಗಿ ವಿಕ್ರಮಾರ್ಜುನ ವಿಜಯನನ್ನು ಪುನರ್ ಸೃಷ್ಟಿಸಿದ್ದಾನೆ. ಇನ್ನೊಂದು ಕಡೆ ಜಿನಸೇನರ ಔರಸ ಪುತ್ರನಾಗಿ ಆದಿಪುರಾಣವನ್ನು, ಪ್ರಾಕ್ ಕಥಾಶರೀರವನ್ನು ಪುನರ್ ಸೃಜಿಸಿದ್ದಾನೆ. ಆದಿಪು. ಕೇವಲ ಸನಾತನವಾಗಿರದೆ ವಿನೂತನವೂ ಆಗಿದೆ. ಪಂಪನ ಪ್ರತಿಭಾಸ್ಪರ್ಶದಿಂದ ಮರುಹುಟ್ಟು ಪಡೆದು ಹೊಸ ಮೆಯ್ಯಾಂತು ಬಂದ-ಆದಿಪು. ಅಜೈನರಿಗೂ ಪ್ರಿಯವಾಗಿರುವುದು ಅದರ ಹಿರಿಮೆಗಳನ್ನು ಸಾರುತ್ತದೆ. ಜಿನಸೇನರವರೆಗೆ ಹರಿದು ಬಂದ ಒಂದು ಸಿದ್ಧ ಶ್ರಮಣ ಸಂಪ್ರದಾಯದ ಕಥಾವಸ್ತುವನ್ನು ಸಾತತ್ಯವನ್ನು ಆದ್ಯತನಕ್ಕೆ ಒಗ್ಗಿಸಿ ಬಗ್ಗಿಸಿ ಬಳಸಿಕೊಳ್ಳುವಲ್ಲಿ ಪಂಪನ ವೈಶಿಷ್ಟ್ಯ ಮತ್ತು ಸ್ವೋಪಜ್ಞತೆ ಎಲ್ಲೆಲ್ಲಿ ಕಾಣಿಸಿಕೊಂಡಿದೆಯೆಂಬುದನ್ನು ತಕ್ಕ ಮಟ್ಟಿಗೆ ಈ ಸಂಪ್ರಬಂಧದಲ್ಲಿ ಗುರಿತಿಸಲಾಗಿದೆ. ಪೂರ್ವಪು. ದಲ್ಲಿರುವ ಮಹತ್ವವನ್ನೂ ಸೋದಾಹರಣವಾಗಿ ಮನಗಾಣಿಸಲಾಗಿದೆ. ಒಟ್ಟಾರೆ ಇಂಥ ತೌಲನಿಕ ವಿಮರ್ಶೆಯನ್ನು ಇನ್ನೂ ಸಮಗ್ರವಾಗಿ ಮುಂದುವರಿಸುವುದರ ಅಗತ್ಯವನ್ನು ತೋರಿಸಲಾಗಿದೆ.

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)

 

[1] i. ಮಹಾಪುರಾಣ : ಜಿನಸೇನ – ಗುಣಭದ್ರ; ಸ್ಯಾದ್ವಾದ ಗ್ರಂಥಮಾಲಾ, ಇಂದೂರ್, ೧೯೭೩-೭೫

ii. ಮಹಾಪುರಾಣ : ಹಿಂದಿ ಅನುವಾದ ಸಹಿತ, ಭಾರತೀಯ ಜ್ಞಾನಪೀಠ, ಕಾಶಿ, ಭಾಗ ೧-೩, ೧೯೫೧-೫೪

iii. ಮಹಾಪುರಾಣ : ಕನ್ನಡ ಅನುವಾದ ಸಹಿತ; (ಅನು.) ಆಸ್ಥಾನ ವಿದ್ವಾನ್. ಎ. ಶಾಂತಿರಾಜ ಶಾಸ್ತ್ರಿ, (ಪ್ರ.ಮು.೧೯೩೩), (ದ್ವಿ.ಮು) ಕ ಸಾ ಪ ೧೯೮೦-೧೯೮೧, ೪ ಸಂಪುಟಗಳಲ್ಲಿ; ಇನ್ನು ಮುಂದೆ ಈ ಸಂಪ್ರಬಂಧ ದುದ್ದಕ್ಕೂ ಕೊಡುವ ಉಲ್ಲೇಖಗಳೆಲ್ಲ ಈ ಆವೃತ್ತಿಗೆ ಸಂಬಂಧಿಸಿರುತ್ತದೆ.

[2]ಈ ಹೇಳಿಕೆಯ ವಾಸ್ತವತೆ ಮತ್ತು ಮಹತ್ವವನ್ನು ಮನಗಾಣಲು ಒಂದೊಂದೇ ಜೈನ ಪುರಾಣವನ್ನು ತನಿಯಾಗಿ ತೆಗೆದುಕೊಂಡು ಸಂತುಲನ ಕಾರ್ಯ ನಡಸಬೇಕಾಗುತ್ತದೆ.

[3]ಮಹಾಪುರಾಣ; ಪೂರ್ವೋಕ್ತ; (ದ್ವಿ. ಮು.) ಮುನ್ನುಡಿ, ಪುಟ ೧೮

[4]ಈ ಅಂಶಕ್ಕೆ ಇದುವರೆಗಿನ ವಿಮರ್ಶಕರು ಗಮನ ಹರಿಸುವುದು ಕಡಿಮೆ.

[5]ಗುಣದಲ್ಲೂ – ಗಾತ್ರದಲ್ಲೂ ಈ ಮಹಾಪುರಾಣ ಆ ಮಹಾಕಾವ್ಯಗಳ ಸಮಕ್ಕೆ ಬರುತ್ತದೆ.

[6]ಹಿಂದಿ, ಇಂಗ್ರಿಷ್, ಮತ್ತು ಕನ್ನಡ ಭಾಷೆಗಳಲ್ಲಿ ಇದುವರೆಗೆ ಮಹಾಪುರಾಣ ಕುರಿತ ವಿಮರ್ಶೆ ಅಣನಾರ್ಹವಾಗಿಲ್ಲ. ಪ್ರಕಟಿತ ಲೇಕನಗಳಲ್ಲು ಚರ್ವಿತ ಚರ್ವಣ ಹೇಳಿಕೆಗಳಿವೆ. ಸಮಗ್ರ ಭಾರತೀಯ ಹಾಗೂ ಜಾಗತಿಕ ಸಾಹಿತ್ಯದ ಹಿನ್ನೆಲೆಯಲ್ಲಿ ಮಹಾಪುರಾಣವನ್ನು ವಿವೇಚಿಸುವ ಬರವಣಿಗೆ ಇನ್ನೂ ಆಗಬೇಕಾಗಿದೆ.

[7]ವಾಸ್ತವವಾಗಿ ಇದು ಒಂದು ಪಿಎಚ್.ಡಿ. ಮಹಾಪ್ರಬಂಧಕ್ಕೆ ವಸ್ತುವಾಗುವ ವ್ಯಾಪಕತೆ ಪಡೆದಿರುವ ವಿಷಯವೆಂಬ ಸ್ಪಷ್ಟ ಪರಿಗ್ರಹಿಕೆ ನನಗಿದೆ; ಅದರಿಂದ ಆಯ್ದ ಕೆಲವು ಭಾಗಗಳನ್ನು ಲಕ್ಷ್ಯದಲ್ಲಿರಿಸಿಕೊಂಡು ಸಂತುಲನ ಕಾರ್ಯ ಕೈಗೊಳ್ಳಲಾಗಿದೆ. ಆದರೆ ಇದುವರೆಗೆ ಈ ಪ್ರಮಾಣದ ತೌಲನಿಕ ಲೇಖನ ಪ್ರಕಟವಾಗುತ್ತಿರುವುದು ಇದೇ ಮೊದಲೆಂದು ವಿನಮ್ರವಾಗಿ ನಿವೇದಿಸುತ್ತಿದ್ದೇನೆ.

[8]ಮಹಾಪುರಾಣ; ಪೂರ್ವೋಕ್ತ; ಪೂರ್ವ ಪುರಾಣ (ಸಂಪುತ ೧,೨), ಉತ್ತರ ಪುರಾಣ ಸಂಪುಣ ೩,೪)

[9]ಜಿನಸೇನರು – ಗುಣಭದ್ರರು ಮಹಾಪುರಾಣದಲ್ಲಿ ಆದಿಯಿಂದ ಅಂತ್ಯದವರೆಗೆ, ೧ ರಿಂದ ೭೭ ರ ವರೆಗೆ ಪರ್ವಗಳ ಸಂಖ್ಯೆ ಕೊಟ್ಟಿದ್ದಾರೆ; ಪರ್ವಗಳೊಘಲೆ (ಮಹಾ ಭಾರತ್ದಲ್ಲಿರುವ ಹಾಗೆ) ಅಧ್ಯಾಯ ಅಥವಾ ಸಂಧಿಗಳಿಲ್ಲ.

[10]ಮಹಾಪುರಾಣ; ಪೂರ್ವೋಕ್ತ; ಪ್ರತಿಪರ್ವಾಂತ್ಯದಲ್ಲೂ ಇದನ್ನು ಜಿನಸೇನರು ಸ್ಪಷ್ಟಪಡಿಸಿದ್ದಾರೆ-’ ತ್ರಿಷಷ್ಟಿ ಲಕ್ಷಣ ಮಹಾಪುರಾಣ ಸಂಗ್ರಹೇ’- ಎಂದಿದ್ದಾರೆ.

[11] i) ಸಂಸ್ಕೃತ ವಾಙ್ಮಯಕ್ಕೆ ಜೈನಕವಿಗಳ ಕಾಣಿಕೆ; ಪಂ.ಕೆ. ಭುಜಬಲಿಶಾಸ್ತ್ರಿ, ೧೯೭೧, ಪುಟ ೫.

ii) ಭಾರತೀಯ ಸಂಸ್ಕೃತಿಗೆ ಜೈನ ಧರ್ಮದ ಕೊಡುಗೆ; ೧೯೭೧, ಪುಟ ೨೦೬ – ೨೦೭; ಡಾ. ಹೀರಾಲಾಲ್ ಜೈನ್

[12]ಹರಿವಂಶ ಪುರಾಣ :

i) ಜಿನಸೇನ ಲ್ ಭಾಅ I-II ಮಾಣಿಕಚಂದ್ ದಿಗಂಬರ ಜೈನ ಗ್ರಂಥಮಾಲೆ, ಮುಂಬಯಿ;

೨) ಹಿಂದಿ ಅನುವಾದ ಸಹಿತ, ಭಾರತೀಯ ಜ್ಞಾನ ಪೀಠ, ಕಾಶಿ, ೧೯೬೨

೩) ಕನ್ನಡ ಗದ್ಯಾನುವಾದ ಮಾತ್ರ, ಡಾ. ಟಿ. ವಿ. ವೆಂಕಟಾಚಲಶಾಸ್ತ್ರೀ; ಶ್ರೀ ಜೈನ ಮಠ, ಹೊಂಬುಜ, ೧೯೮೭

[13]ಮಹಾಪುರಾಣ; ಪೂರ್ವೋಕ್ತ, ೭೭ – ೨,೩

[14]ಸಂಸ್ಕೃತ ವಾಙ್ಮಯಕ್ಕೆ ಜೈನ ಕವಿಗಳ ಕಾಣಿಕೆ; ಪಂ.ಕೆ. ಭುಜಬಲಿಶಾಸ್ತ್ರಿ, ಪೂರ್ವೋಕ್ತ; ಪುಟ ೭೬-೮೫;

[15]ಅದೇ; ಪುಟ ೬೪-೬೫

[16]೧) ಕರ್ನಾಟಕ ಪರಂಪರೆ : ಸಂಪುಟ|, ೧೯೭೦, ಪುಟ ೨೭೯-೩೧೮

೨) Rashtrakutas and their Times A.D. Altekar

೩) ಭಾರತೀಯ ಸಂಸ್ಕೃತಿಗೆ ಜೈನ ಧರ್ಮದ ಕೊಡಗೆ; ೧೯೭೧ (ಡಾ. ಹೀರಾಲಾಲ ಜೈನ್), ಪುಟ ೪೮-೪೯

[17]ಅದೇ; ಪುಟ ೮೩-೮೪; ” ಈ ಟೀಕೆಯು ಸಂಸ್ಕೃತ ಪ್ರಾಕೃತ ಮಿಶ್ರವಾಗಿದ್ದು ಪದಾರ್ಥಗಳ ಸೂಕ್ಷ್ಮಾತಿ ಸೂಕ್ಷ್ಮವಾದ ವಿವೇಚನೆಯೊನ್ನೊಳಗೊಂಡಿದೆ. ಟೀಕೆಯ ಶೈಲಿ ಅತ್ಯಂತ ಸುಂದರವಾಗಿರುವುದರಿಂದ ವಾಚಕರಿಗೆ ಬೇಸರವನ್ನುಂಟು ಮಾಡುವುದಿಲ್ಲ” ಪಂ (ಡಿತ). ಕೆ. ಭುಜಬಲಶಾಸ್ತ್ರಿ. ಪು. ೮೪

[18]ಪಾರ್ಶ್ವಾಭ್ಯುದಯ;

೧. ಯೋಗಿರಾಜ ಟೀಕಾ ಸಹಿತ, ಮುಂಬಯಿ ೧೯೦೯,

೨. ಪಾಠಕ್ ಕೃತ ಇಂಗ್ಲಿಷ್ ಅನುವಾದ ಸಹಿತ, ಪುಣೆ ೧೯೧೬

[19]೧) ಮಹಾಪುರಾಣ : ಪೂರ್ವೋಕ್ತ : ಸಂಪುಟ ೧-೨

೨) ಸಂಸ್ಕೃತ ವಾಙ್ಮಯಕ್ಕೆ ಜೈನಕವಿಗಳ ಕಾಣಿಕೆ; ಪೂರ್ವೋಕ್ತ ಪುಟ ೭೯-೮೦

[20]ಮಹಾಪುರಾಣ; ಪೂರ್ವೋಕ್ತ; ೪೩-೧೦,೧೧

[21]ಅದೇ

[22]ಅದೇ; ೭೭-೧೪

[23]ಆತ್ಮಾನು ಶಾಸನ;

೧) ಪ್ರಭಾ ಚಂದ್ರ ಟೀಕಾ, ಇಂಗ್ಲಿಷ್- ಹಿಂದಿ ಪ್ರಸ್ತಾವನೆ ಮತ್ತು ಹಿಂದಿ ಅನುವಾದ ಸಹಿತ : ಅಜಿತಾಶ್ರಮ, ಲಖೌನ, ೧೯೨೮.

೨) ವಂಶೀಧರ ಕೃತ ಹಿಂದಿ ಟೀಕಾ ಸಹಿತ; ಜೈನ ಗ್ರಂಥಾಮಾಲಾ, ರತ್ನಾಕರ ಕಾರ್ಯಾಲಯ, ಮುಂಬಯಿ, ೧೯೧೯

೩) ಕನ್ನಡ ಅನುವಾದ : ಶ್ರೀ ಅತಿಬಲ ಗ್ರಂಥಮಾಲೆ ಗ್ರಂಥ – ೮; (ಸಂ) ಎಸ್. ಚಂದ್ರರಾಜಶಾಸ್ತ್ರ ಮೂಡಬಿದ್ರಿ, ೧೯೫೧

[24]ಸಂಸ್ಕೃತ ವಾಙ್ಮಯಕ್ಕೆ ಜೈನ ಕವಿಗಳ ಕಾಣಿಕೆ; ಪೂರ್ವೋಕ್ತ; ಪುಟ ೯೦-೯೧

[25]ಭಾರತೀಯ ಸಂಸ್ಕೃತಿಗೆ ಜೈನ ಧರ್ಮದ ಕೊಡುಗೆ; (ಮೂಲ) ಡಾ. ಹೀರಾಲಾಲ ಜೈನ್ (ಕನ್ನಡ ಅನು.) ಮಿರ್ಜಿ ಅಣ್ಣಾರಾಯ; ಜೀವರಾಜ ಜೈನ್ ಗ್ರಂಥಮಾಲಾ, ಸೊಲ್ಲಾಪುರ ೧೯೭೧. ಪುಟ. ೨೦೮

[26]ಅದೇ; ಪುಟ ೨೦೮ – ೨೦೯

28ಎಎ) ಅದೇ; ಪುಟ ೫೩

[27]ಚಾವುಂಡರಾಯ ಪುರಾಣಂ; (ಸಂ) ಕಮಲಾ ಹಂಪನಾ, ಕೆ. ಆರ್. ಶೇಷಗಿರಿ, ಕಸಾಪ, ಬೆಂಗಳೂರು, ೧೯೮೩, ಪುಟ. ೭

[28]ಅದೇ; ಪದ್ಯ ೨೪

31ಎಅದೇ;

[29]ಅದೇ; ಪದ್ಯ ೨

[30]ತಿಸಟ್ಠಿ ಮಹಾಪುರಿಸ ಗುಣಾಲಂಕಾರು (ತ್ರಿಪಷ್ಟಿ ಮಹಾಪುರುಷ ಗುಣಾಲಂಕಾರ); ಪುಷ್ಪದಂತ; (ಸಂ) ಡಾ.ಪಿ.ಎಲ್. ವೈದ್ಯ; ಮಾಣಿಕಚಂದ್ ದಿಗಂಬರ ಜೈನ ಗ್ರಂಥಮಾಲಾ, ಬಾಂಬೆ, ೧೯೩೭

[31]ಮಹಾಪುರಾಣ : ಪೂರ್ವೋಕ್ತ; ೧-೧೯, ಪುಟ ೬

[32]ಅದೇ; ೧-೩೫, ಪುಟ ೯

[33]ಅದೇ; ೧-೬೦, ಪುಟ ೧೩; ಇಲ್ಲಿ ಶ್ಲೇಷೆಯಿದೆ – ಕವಿಶ್ರೇಷ್ಠರು, ಕವಿಪರಮೋಷ್ಠಿ

[34]ಕನ್ನಡ ವಿಶ್ವಕೋಶ ಸಂಪುಟ ೮; ಮೈಸೂರು ವಿಶ್ವವಿದ್ಯಾಲಯ, ೧೯೭೫ ಜೈನ ಪುರಾಣಗಳು, ಹಂಪನಾ, ಪುಟ ೩೫೩ – ೩೫೫

[35]ಪ್ರಾಚೀನ ಸಾಹಿತ್ಯದ ಬಹುಪಾಲು ಧರ್ಮಸಂಬಂಧಿಯಾದ ರಚನೆಯಾಗಿದೆ.

[36]ಜೈನಧರ್ಮ; ಮಿರ್ಜಿ ಅಣ್ಣಾರಾಯ

[37]ಮಹಾಪುರಾಣ; ಪೂರ್ವೋಕ್ತ; ಶ್ಲೋಕ ೧-೨೦

[38]ಅದೇ; ಸಂಪುಟ ೩ ಮತ್ತು ೪

[39]ಪಂಪ ತನ್ನ ಧರ್ಮಗುರು ದೇವೇಂದ್ರ ಮುನೀಂದ್ರರ ಮೂಲಕವೇ ಅಲ್ಲದೆ ಸ್ವಾಧ್ಯಾಯದಿಂದಲೂ ಸಂಪಾದಿಸಿಕೊಂಡ ಧಾರ್ಮಿಕ ಸಿದ್ಧತೆಯ ಸ್ವರೂಪವನ್ನು ಆದಿಪುರಾಣದಲ್ಲಿ ಕಾಣುತ್ತೇವೆ.

[40]ಆದಿಪುರಾಣ;

i. (ಸಂ) ಎಸ್.ಜಿ. ನರಸಿಂಹಾಚಾರ್, ೧೯೦೦

ii. (ಸಂ) ಕೆ. ಜಿ. ಕುಂದಣಗಾರ್, ಎ.ಪಿ. ಚೌಗಲೆ, ೧೯೫೩

iii. ಗದ್ಯಾನುವಾದ ಸಹಿತ, ಕೆ. ಎಲ್. ನರಸಿಂಹಶಾಸ್ತ್ರಿ, ಕಸಾಪ, ೧೯೮೦ ಈ ಸಂಪ್ರಬಂಧದಲ್ಲಿನ ಉಲ್ಲೇಖಗಳು ಕಸಾಪ ಆವೃತ್ತಿಯನ್ನು ಅವಲಂಬಿಸಿವೆ. ಪ್ರಸ್ತುತ ಉದ್ಧೃತ ಪದ್ಯ ೧-೩೫, ಪುಟ ೬೯

[41]ವಿಕ್ರಮಾರ್ಜುನ ವಿಜಯಂ; (ಪಂಪ ಭಾರತ); ಗದ್ಯಾನುವಾದ ಸಹಿತ, (ಸಂ) ಎನ್. ಅನಂತರಂಗಾಚಾರ್, ಕಸಾಪ ೧೯೭೭; ೧೪-೬೦

[42]ಅದೇ; ಅನುಶಾಸನಪರ್ವ, ಸ್ವರ್ಗಾರೋಹಣಪರ್ವ ಇತ್ಯಾದಿ.

[43] i. ತಪೋನಂದನ, ಕುವೆಂಪು; ಪಂಪನಲ್ಲಿ ಭವ್ಯತೆ ಲೇಖನ;

ii. All depends upon the subject; choose a fitting action, penetrate Yourself with the feeling of its situations, this done everything else, will follow” – Aristotle.

[44]ಪರಂಪರೆ; ಸುಜನಾ; ಮೈತ್ರಿ ಪ್ರಕಾಶನ, ಮೈಸೂರು, ೧೯೮೨, ಪುಟ ೮೭-೮೮

[45]ವಿಕ್ರಮಾರ್ಜುನ ವಿಜಯಂ; ಪೂರ್ವೋಕ್ತ, ೧೪-೬೦

[46]ಅನುಪಲಬ್ಧ ಶೂದ್ರಕ, ಹರಿವಂಶಗಳನ್ನು ಹೆಸರಿಸಬಹುದು; ಕವಿರಾಜಮಾರ್ಗ ಹೇಳುವ ಗದ್ಯ ಪದ್ಯ ಕವಿಗಳನ್ನು ನೆನೆಯಬಹುದು.

[47]ಸಂಸ್ಕೃತ ಭಾಷೆಯಲ್ಲಿ ಪಂಪನಿಗಿರುವ ಪ್ರಗಲ್ಭ ಪಾಂಡಿತ್ಯವನ್ನು ಆದಿಪು. ದಲ್ಲೇ ಅಲ್ಲದೆ ವಿ. ವಿ. ದಲ್ಲೂ ಕಾಣಬಹುದು.

[48] What is a classic; T. S. Eliot

[49]ಬಾಣನ ಕಾದಂಬರಿಯನ್ನು ಕನ್ನಡಿಸಿದ ನಾಗವರ್ಮನಿಗಿಂತ ಪಂಪ ಹೆಚ್ಚು ಸ್ವಾತಂತ್ರ್ಯವಹಿಸಿದ್ದಾನೆ. ಹಾಗೆ ನೋಡುವುದಾದರೆ ಜೈನರಾಮಾಯಣ ರಚಿಸಿದ ಕನ್ನಡ ಕವಿಗಳೆಲ್ಲ ಈ ಬಗೆಯ ಕಾರ್ಯನಿರ್ವಹಿಸಿದ್ದಾರೆ.

[50]ಪಂಪ ಒಂದು ಅಧ್ಯಯನ; ಕನ್ನಡ ಅಧ್ಯಯನ ಕೇಂದ್ರ ಮಾಲೆ ೪೧,ಬೆಂ.ವಿ.ವಿ ೧೯೭೪, ಆದಿಪುರಾಣದ ವಸ್ತು ವಿನ್ಯಾಸ ಲೇಖನ, ಎಂ. ವಿ. ಶ್ರೀನಿವಾಸಮೂರ್ತಿ, ಪುಟ ೧೮೧-೧೯೮.

[51]ನೀಲಾಂಜನೆಯ ನೃತ್ಯ ಪ್ರಕರಣವನ್ನು ತನಿಯಾಗಿ ತೆಗೆದುಕೊಂಡು ವಿವೇಚಿಸಿರುವ ಆರೇಳು ಲೇಖನಗಳು ಪ್ರಕಟವಾಗಿವೆಯಲ್ಲದೆ ಆದಿಪು. ವನ್ನು ಕುರಿತು ಬರೆದ ಇತರ ಬರವಣಿಗೆಯಲ್ಲೂ ಈ ಅಂಕದ ಪ್ರಶಂಸೆ ಕಂಡು ಬರುತ್ತದೆ.

[52] i. ಭರತೇಶನ ನಾಲ್ಕು ಚಿತ್ರಗಳು; ಮಿರ್ಜಿ ಅಣ್ಣಾರಾಯ, ೧೯೫೪

ii. ಪಂಪನ ಭರತ-ಬಾಹುಬಲಿ; (ಸಂ) ಜಿ. ಬ್ರಹ್ಮಪ್ಪ, ಕೆ. ಎಂ. ಕೃಷ್ಣರಾವ್ ೧೯೫೨.

[53]ಪಂಪನು ಜಿನಸೇನಾಚಾರ್ಯರನ್ನು ಅನುಸರಿಸಿದ್ದಾನೆ; ಲೇಖನ; ಪ್ರೊ. ಕೆ.ಜಿ. ಕುಂದಣಗಾರ್, ವಿವೇಕಾಭ್ಯುದಯ (ಮಾಸ ಪತ್ರಿಕೆ) ೧೬-೪

[54]ಪೂರ್ವಪು; ಪೂರ್ವೋಕ್ತ; ೫-೨೦೫, ೨೦೬; ಪುಟ ೧೮೨ (ಸಂಪುಟ ೧)

[55]ಅದೇ; ಸಂಪುಟ ೧; ೫-೨೦೭ ರಿಂದ ೨೧೧ (ಐದು ಶ್ಲೋಕಗಳು) , ಪುಟ ೧೮೩

[56]ಆದಿಪುರಾಣ; ಪೂರ್ವೋಕ್ತ; ೨-೩೮ ವ, ೩೯; ಪುಟ ೧೦೯

[57]ಪೂರ್ವಪುರಾಣ; ಪೂರ್ವೋಕ್ತ; ೫-೨೧೦, ಪುಟ ೧೮೩

[58]ಪಮ್ಪ ಹೀಗೆ ಘಟನೆಗಳ ವಿವರಗಳಲ್ಲಿ ಕೆಲವನ್ನು ಸ್ಥಳಾಂತರಿಸುವುದುಂಟು. ಬಾಹು ಬಲಿಯ ಮೇಲೆ ಭರತ ಚಕ್ರ ಪ್ರಯೋಗಿಸಿದ್ದು ಯಾವಾಗ ಎಂಬುದನ್ನು ಸ್ಥಳಾಂತರಿಸಿದ್ದಾನೆ ಪಂಪ.

[59]ಆದಿಪು.; ಪೂರ್ವೋಕ್ತ ೨-೪೦ವ ೪೧, ೪೨

[60]ಪೂರ್ವಪು.; ಪೂರ್ವೋಕ್ತ; ೪-೧೩೩, ಪುಟ ೧೩೪; ಆದಿಪು; ಪೂರ್ವೋಕ್ತ ೧-೭೪ ಪುಟ ೮೨

[61]ಆದಿಪು.; ಪೂರ್ವೋಕ್ತ; ೧-೭೯, ಪುಟ ೮೪

[62]ಪೂರ್ವಪು.; ಪೂರ್ವೋಕ್ತ; ೫-೧೩ ರಿಂದ ೫-೮೮, ಪುಟ ೧೪೮ -೧೬೩

[63]ಆದಿಪು.; ಪೂರ್ವೋಕ್ತ; ೨-೬ ರಿಂದ ೨-೧೧; ಪುಟ ೮೯-೯೬

[64]ಪೂರ್ವಪು.; ಪೂರ್ವೋಕ್ತ ೫-೨೧, ೨೨; ಪುಟ ೧೪೯

[65]ಆದಿಪು.; ಪೂರ್ವೋಕ್ತ ೨-೮, ೯; ಪುಟ ೮೯-೯೦

[66]ಪೂರ್ವಪು.; ಪೂರ್ವೋಕ್ತ ೫-೨೫೩, ಪುಟ ೧೯೦

[67]ಅದೇ-; ೫-೨೫೬, ಪುಟ ೧೯೧

[68]ಅದೇ-; ೫-೨೬೧, ಪುಟ ೧೯೨

[69]ಆದಿಪು.; ಪೂರ್ವೋಕ್ತ; ೨-೬೧ವ, ೬೨; ಪುಟ ೧೧೮-೧೧೯

[70]ಅದೇ-; ೨-೬೯, ಪುಟ ೧೨೧

[71]ಪೂರ್ವಪು.; ಪೂರ್ವೋಕ್ತ; ೫-೨೭೩, ಪುಟ ೧೯೪; ‘ಪೂಜಾಂ ನಿನೇಂದ್ರಾಣಾಂ ಕುರು’

[72]ಆದಿಪು. ವಿರಲಿ, ವಿ.ವಿ. ವಿರಲಿ ಪಂಪ ಇಂಥ ವರ್ಣನೆ ಬಂದಾಗ ‘ಸಂಸಾರ ಸಾರೋದಯನಾಗಿ ವಿಜೃಂಭಿಸುತ್ತಾನೆ; ಅತ್ತ ಜಿನಸೇನರನ್ನೂ ಇತ್ತ ವ್ಯಾಸರನ್ನೂ ಮೀರಿಸುತ್ತಾನೆ

[73]ಪೂರ್ವಪು; ಪೂರ್ವೋಕ್ತ; ೫-೨೮೬ ರಿಂದ ೫-೨೯೨; ಪುಟ ೧೯೬-೧೯೭

[74]ಆದಿಪು.; ಪೂರ್ವೋಕ್ತ; ೨-೭೩ ರಿಂದ ೨-೭೬; ಪುಟ ೧೨೩ – ೧೨೪

[75]ಅದೇ-; ೩-೩, ಪುಟ ೧೨೭

[76]ಪೂರ್ವಪು; ಪೂರ್ವೋಕ್ತ; ೬-೧ ರಿಂದ ೬-೫, ಪುಟ ೧೯೯-೨೦೦

[77]ಆರ್ದೀಪು; ಪೂರ್ವೋಕ್ತ; ೩-೪, ಪುಟ ೧೨೮