ನಮಃ ಶ್ರೀ ಪೂಜ್ಯಾ ಪಾದಾಯ ಲಕ್ಷಣಂ ಯದುಪಕ್ರಮಮ್
ಯದೇವಾತ್ರ ತದನ್ಯತ್ರಯನ್ನಾತ್ರಾಸ್ತಿ ನ ತತ್ ಕ್ವಚಿತ್
– ಆಚಾರ್ಯ ಗುಣನಂದಿ, ಜೈನೇಂದ್ರಪಕ್ರಿಯಾ

ಕನ್ನಡ ಕವಿಗಳೂ, ಕನ್ನಡೇತರ ಜೈನ ಕವಿಗಳೂ ತಮ್ಮ ಕೃತಿಗಳಲ್ಲಿ (ಸಾಹಿತ್ಯ ಮತ್ತು ಶಾಸ್ತ್ರ ಕೃತಿಗಳಲ್ಲಿ, ಶಾಸನಗಳಲ್ಲಿ) ಅನೇಕ ಪ್ರಾಚೀನ ಜೈನಾಚಾರ್ಯರನ್ನು ಸ್ತುತಿಸಿದ್ದಾರೆ. ಹೀಗೆ ನೆನಕೆಗೆ ಪಾತ್ರರಾದ ಆಚಾರ್ಯ ಪರಂಪರೆ ದೊಡ್ದದು. ಇವರಲ್ಲಿ ಅನೇಕರು ತುಂಬಾ ಹೆಸರುವಾಸಿಯಾದವರು. ಅಂಥ ಪ್ರಾತಃಸ್ಮರಣೀಯ ಪೂಜ್ಯ ಆಚಾರ್ಯ ಶ್ರೇಣಿಯಲ್ಲಿ ಎದ್ದುಕಾಣುವ ಶಿಖರ ಪೂಜ್ಯಪಾದರದು (ಪೂ. ಪಾ.). ಪೂಜ್ಯಪಾದರ ವಿಚಾರವಾಗಿ ಕಳೆದ ಒಂದು ಶತಮಾನದಲ್ಲಿ ವಿಪುಲವಾದ ಚರ್ಚೆ ನಡೆದಿದೆ. ಅವರನ್ನು ಕುರಿತು ಒಂದು ಮಹಾ ಪ್ರಬಂಧ ಬರೆದು ಪ್ರಶಸ್ತಿಗೆ ವಿಶ್ವ ವಿದ್ಯಾಲಯಕ್ಕೆ ಸಾದರಪಡಿಸಲು ಬೇಕಾಗುವಷ್ಟು ಮಾಹಿತಿಗಳಿವೆ.

ಜೈನರ ೨೪ ಜನ ತೀರ್ಥಂಕರರೇ ಅಲ್ಲದೆ ಒಟ್ಟು ತ್ರಿವಷ್ಟಿ (೬೩) ಶಲಾಕಾ ಪುರುಷರೆಲ್ಲ ಉತ್ತರ ಭಾರತದಲ್ಲಿ ಹುಟ್ಟಿ ಬೆಳೆದವರು. ಅವರ ಬಹುಪಾಲು ಬದುಕೆಲ್ಲ ಉತ್ತರಕ್ಕೇ ಸೀಮಿತ. ತೀರ್ಥಂಕರ ಉಪದೇಶವನ್ನೂ, ಜೈನ ಸಿದ್ಧಾಂತಗಳನ್ನೂ ಸಮರ್ಥವಾಗಿಯೂ ಯಶಸ್ವಿಯಾಗಿಯೂ ಕೃತಿಗಳ ಮೂಲಕ ಶಾಶ್ವತಗೊಳಿಸಿ ಲೋಕಕ್ಕೆ ಬಿತ್ತಿರಿಸಿದ ಶ್ರೇಷ್ಠ ಆಚಾರ್ಯರಲ್ಲಿ ಬಹುಪಾಲು ಜನ ದಕ್ಷಿಣದವರು, ಅದರಲ್ಲಿಯೂ ಕರ್ನಾಟಕದವರು. ಕುಂದಕುಂದ, ಸಮಂತಭದ್ರ, ಕವಿಪರಮೇಷ್ಠಿ, ಪೂಜ್ಯಪಾದ, ನೇಮಿಚಂದ್ರ (ಸಿದ್ಧಾಂತ ಚಕ್ರವರ್ತಿ) ಮೊದಲಾದ ಆಚಾರ್ಯರನ್ನು ಹೆಸರಿಸಬಹುದು. ಇವರಲ್ಲಿ ಒಬ್ಬರಾದ ಪೂಜ್ಯಪಾದರ ಬದುಕು ಬರೆಹ ಕುರಿತು ಕಿರಿದರಲ್ಲಿ ಇಲ್ಲಿ ಪರಿಚಯಿಸಲಾಗುವುದು.

ದಕ್ಷಿಣ ಭಾರತದ ಮಹಾನ್ ಆಚಾರ್ಯರೂ ಕರ್ನಾಟಕದ ಹೆಮ್ಮೆಯ ಸುಪುತ್ರರೂ ಆದ ಪೂಜ್ಯ ಪಾದರ ಇತಿವೃತ್ತ ಸಂಬಂಧವಾದ ಉಪಲಬ್ಧ ಸಾಹಿತ್ಯ ವಿಸ್ತಾರವಾಗಿದೆ. ಪೂಜ್ಯಪಾದರ ಜೀವನ ವಿವರವನ್ನು ದೇವಚಂದ್ರಕವಿ (೧೭೭೦-೧೮೪೨) ತನ್ನ ರಾಜಾವಳೀ ಕಥೆಯಲ್ಲಿ (೧೮೩೮) ಕೊಟ್ಟಿದ್ದಾನೆ. ಪೂಜ್ಯಪಾದರು ಕೂಡ, ಅನೇಕ ಜೈನಾಚಾರ್ಯರ ಹಾಗೆ ತಮ್ಮ ವಿಚಾರವಾಗಿ ಹೇಳಿಕೊಂಡಿಲ್ಲ. ಅವರು ಸ್ವವಿಷಯದಲ್ಲಿ ದಿವ್ಯ ಮೌನವಹಿಸಿರುವುದರಿಂದ ಸಂಶೋಧಕರು ದೇವಚಂದ್ರನಿಗೇ ಶರಣು ಹೋಗಬೇಕಾಗಿದೆ. ದೇವಚಂದ್ರ ತುಂಬಾ ಅರ್ವಾಚೀನವಾದವನು. ಪರಂಪರೆಯಿಂದ ಬಂದ ಐತಿಹ್ಯ, ಸ್ಥಳ ಪುರಾಣ ಮುಂತಾದ ಎಲ್ಲ ಕಿಂವದಂತಿಗಳನ್ನೂ, ಜೈನ ಜಾನಪದ ಸಾಹಿತ್ಯವನ್ನು, ಆತ ಹಿಂದು ಮುಂದು ನೋಡದೆ ದಾಖಲಿಸುತ್ತಾನೆ. ಚಾರಿತ್ರಿಕ ಪ್ರಜ್ಞೆ ಕಡಿಮೆ, ಉಚಿತಾನುಚಿತ ವಿವೇಕವೂ ಸಾಧಾರಣ, ಪೂರ್ವಗ್ರಹ ಮುಕ್ತನೂ ಅಲ್ಲ. ಅವನಿಗಿರುವ ಮಿತಿಗಳಿಂದಾಗಿ ಅವನ ಹೇಳಿಕೆಗಳನ್ನು ಅಧಿಕೃತವೆಂದು ಸ್ವೀಕರಿಸುವಾಗ ಎಚ್ಚರವಾಗಬೇಕು. ದೇವಚಂದ್ರ ಹೇಳುವುದೆಲ್ಲ ಅಬದ್ಧವೆಂದಲ್ಲ; ಆತ ವಿಶ್ವಾಸರ್ಹನೇ ಅಲ್ಲ ಮಾಹಿತಿಗಳೂ ಇವೆ ಎಂಬುದನ್ನು ಮರೆಯುವಂತಿಲ್ಲ. ಕಲ್ಲೆಹಶಾ ಶಾಸನ ಪಾಠವನ್ನು ಸಾ ಕೃತಿಯಲ್ಲಿ ದಾಖಲಿಸಿದ ಆದ್ಯಲೇಖಕ ಅವನ ಅಭಿಪ್ರಾಯಗಳನ್ನು ಅನುಮೋದಿಸುವ ಅಂತರಬಾಹ್ಯ ಆಧಾರಗಳು ಅನೇಕವೇಳೆ ದೊರೆತು ದೇವಚಂದ್ರನ ಮರ್ಯಾದೆಯನ್ನು ಕಾಪಾಡಿದೆ. ದೇವಚಂದ್ರನ ನಿರೂಪಣೆಯನ್ನು ಪುಷ್ಟೀಕರಿಸುವ ಅಥವಾ ವಿರೋಧಿಸುವ ಯಾವುದೇ ಪ್ರಮಾಣಗಳು ಸಿಗದಿರುವ ಸಂದರ್ಭಗಳೂ ಇವೆ. ತಾತ್ಕಾಲಿಕವಾಗಿ ಪರಿಶೀಲಿಸಬೇಕಾಗುತ್ತದೆ. ಪೂ.ಪಾ.ರ ವಿಚಾರವಾಗಿ ಆತ ಹೇಳಿರುವುದು ಮಿಶ್ರ ಮಾದರಿಯದು. ಅದರಲ್ಲಿ ಕೈಬಿಡ ಬೇಕಾದುದೂ ಇದೆ. ಕೈಹಿಡಿಯಬೇಕಾದದೂ ಇದೆ.

ತನ್ನ ರಾಜಾವಳೀ ಕಥೆಯಲ್ಲಿ (೧೮೩೮) ದೇವಚಂದ್ರ ಕವಿ ಪೂಜ್ಯಪಾದರ ಬಗೆಗೆ ಕೊಟ್ಟಿರುವ ಸಾಮಗ್ರಿ : (ಕವಿ ಚರಿತ್ರೆಯಲ್ಲಿ ಉದಾಹೃತ ಭಾಗ)

“ಶಕವರ್ಷ ೩೦೦ ಸಂವಂದು ಕರ್ಣಾಟಕದೊಳು ಕೊಳ್ಳಾಗಾಲಮೆಂಬ ಪುರದೊಳು ಮಾಧವ ಭಟ್ಟನೆಂಬ ಬ್ರಾಹ್ಮಣನ ಹೆಂಡತಿ ಶ್ರೀದೇವಿಯೆಂಬವಳ್ಗೆ ಗರ್ಭಂ ಬೆಳೆದು ನವಮಾಸಂ ನೆಱೆಯ ಶ್ರವಣ ನಕ್ಷತ್ರದೊಳ್ ಪುತ್ರೋತ್ಪತ್ತಿ ಯಪ್ಪುದುಂ ಜಾತನಾಮ ಕರ್ಮಾದಿಗಳಂ ಮಾಡಿ ಪೂಜ್ಯ ಪಾದನೆಂದು ಪೆಸರಿಟ್ಟು ಸಲಹಿದೊಡನೆ ಜೈನಶಾಸ್ತ್ರಂಗಳೊಲ್ ಬಲ್ಲಿದನಾಗಿ ಬಾಲಕಾಲದೊಳ್ ಜಿನದೀಕ್ಷೆಯಂ ತಾಳಿ ದಕ್ಷಿಣ ದಿಗ್ಭಾಗದ ಸೋದರದ ಮಾವನಾದ ಪಾಣಿನ್ಯಾಚಾರ್ಯನಿಗೆ ವ್ಯಾಕರಣಮಂ ಪೂರ್ತಿ ಮಾಡುವುದಱೊಳಗೆ ಅವಸಾನ ಕಾಲಂ ಬರೆ ಆತನು ಪೂರ್ತಿಮಾಡೆಂದು ಕೇಳಿ ಕೊಳ್ಲಲು ಪೂಜ್ಯಪಾದಂ ಪೂರ್ತಿ ಮಾಡಿದಂ ಜೈನೇಂದ್ರ ವ್ಯಾಕರಣ ಸೂತ್ರಮಂ ರಚಿಸಿದಂ ಬಱೆಕಂ ಪಾಣಿನಿ ಸೂತ್ರ ವೃತ್ತಿಯಂ ರಚಿಸಿದಂ….. ಪೂಜ್ಯಪಾದ ಯತೀಂದ್ರ ಪದಿನಾಡೊಳು ತಪಂಗೈಯ್ಯುತೆ ತೀರ್ಥಂವಂದನೆಯಂ ಮಾಡಲೆಂದು ಆಂಧ್ರ ಕರ್ಣಾಟ ಚೋಳ ಪಾಂಡ್ಯ ಮೊದಲಾದ ಎಲ್ಲಾ ದೇಶಗಳಂ ವಿಹಾರಿಸಿ ಕೌಂಗೆಲೆಯ ಶೈಲಕ್ಕಂ ಬಂದು ಜಿನಾಗಮಂ ಕೆಲವು ನೋಡಿ ತಿಳಿದುಪದೇಶಂ ಮಾೞ್ಫವರಿಲ್ಲದೆ ಕೆಲವು ಸಿದ್ಧಾಂತ ಮಱೆಗರೆದಿರ್ದುದಱೆಂ ಸಂದೇಹ ಗ್ರಸ್ತಮಾಗೆ ಪೂರ್ವವಿದೇಹಕ್ಕೆ ಪಾದಲೇಪೌಷಧಿ ಸಾಮರ್ಥ್ಯದಿಂ ಪೋಗಿ ಸಮವಸರಣದೊಳಿರ್ದ ಶ್ರೀಜಿನಪತಿಗಳಂ ವಂದಿಸಿ ತತ್ತ್ವಮಂ ನಿಸ್ಸಂದೇಹಮಾಗಱೆದಲ್ಲಿಯೇ ಪುಸ್ತಕದೊಳ್ ಬರೆದುಕೊಂಡು ದೈವಾಯತ್ತದಿಂ ಭರತಕ್ಷೇತಮನೆಯ್ದುವಲ್ಲಿ ಸೂರ್ಯಕಿರಣೋಷ್ಣದಿನ್ ದೃಷ್ಟಿಪೋಗೆ ಬಂಕಾಪುರವೆಂಬುದಱೊಳ್ ಶಾಂತೀಶ್ವರಮಂ ವಂದಿಸಿ ಶಾಂತ್ಯಷ್ಟಕಮಂ ಪೇಱೆ ದೃಷ್ಟಿಯಂ ಪಡೆದು ಬಂದು ಸಿದ್ಧಾಂತಮಂ ಶಿಷ್ಯಪ್ರತಿಷ್ಯರ್ಗಮುಪದೇಶಗಂಗೆಯು ಲೌಕಿಕ ಪರಾಮರ್ಥಂಗಳಂ ರಚಿಸಿ ಸದ್ಗತಿ ಪ್ರಾಪ್ತರಾನರ್” [ದೇವಚಂದ್ರ ರಾಜವಳೀ ಕಥಾಸಾರ, (೧೯೮೮) ಮೈ ವಿವಿ ಸಂ ಬಿ. ಎಸ್ ಸಣ್ಣಯ್ಯ]

ದೇವಚಂದ್ರನ ಗದ್ಯ ಅಕ್ಲಿಷ್ಟ, ನೇರ, ವಸ್ತುನಿಷ್ಠ, ಅನಲಂಕೃತ. ತಾನು ಹೇಳ ಬೇಕಾದುದನ್ನು, ತನಗೆ ತಿಳಿದುದನ್ನು ಮುಚ್ಚುಮರೆ ಮುಲಾಜುಗಳಿಲ್ಲದೆ ನಿರ್ಭಿಡತೆಯಿಂದ ನಿರೂಪಿಸುವುದು ಅವನ ಸ್ವಭಾವ. ಅದರಂತೆ ಪೂ. ಪಾ. ರನ್ನು ರನ್ನು ಕುರಿತು ಬರೆದಿರುವ ಭಾಗವೂ ನಿಸ್ಸಂಕೋಚ ನಿರೂಪಣೆಯಾಗಿದೆ. ದೇವಚಂದ್ರನು ಕೊಟ್ತಿರುವ ಪೂ.ಪಾರ ಜೀವನ ಚರಿತ್ರೆಯಲ್ಲಿ ಅಂಗೀಕಾರಾರ್ಹವಾದುದೆಷ್ಟು ಎಂಬುದನ್ನು ಪರಾಮರ್ಶಿಸುವುದಕ್ಕಿಂತ ಇದರಲ್ಲಿ ನಿರಾಕರಿಸಬೇಕಾದ ಅಂಶಗಳನ್ನು ಪರಿಶೀಲಿಸಿ ಬಹುದು. ಪೂ.ಪಾ ರ ತಂದೆ ತಾಯಿ ಹುಟ್ಟೂರು ಹುಟ್ತಿದ ತೇದಿ ನಕ್ಷತ್ರ ತಿಥಿ ಇದು ಈಗ ಕದಲಿಸುವುದು ಕ್ಷೇಮವಲ್ಲ; ಸುಲಭವೂ ಅಲ್ಲ. ಆತನಿಗೆ ಹುಟ್ಟಿದಾಗಲೇ ಪೂ.ಪಾ ರೆಂದು ನಾಮಕರಣ ಮಾಡಿದರೆಂಬ ಅಭಿಪ್ರಾಯ ಸರಿಯಲ್ಲ. ಅನ್ಯತ್ರ ದೊರೆಯುವ ಆಧಾರಗಳಿಂದ ತಿಳಿದುಬರುವಂತೆ ಆತನಿಗೆ ದೇವನಂದಿ ಎಂಬುದು ಮೊದಲಿದ್ದ ಹೆಸರು. ಬಾಲ್ಯದಲ್ಲಿಯೇ ಜೀನದೀಕ್ಷೆ ಪಡೆದನೆಂಬುದರ ಬಗೆಗೂ ನಾವು ತಟಸ್ಥರಾಗಿರುವುದು ಒಳ್ಳೆಯದು.

ಅಷ್ಟಾಧ್ಯಾಯೀ ಪ್ರಖ್ಯಾತಿಯ ಪಾಣಿನಿಗೂ (ಕ್ರಿ. ಪೂ. ಮೂರನೆಯ ಶತಮಾನ) ಪೂಜ್ಯಪಾದನಿಗೂ ಕಲ್ಪಿಸಿರುವ ಬಂಧುತ್ವ ಶುದ್ಧ ಕಾಲ್ಪನಿಕ ಹಾಗೂ ಸತ್ಯ ದೂರ. ಇವರಿಬ್ಬರ ನಡುವೆ ಶತಮಾನಗಳ ಅಂತರ. ಏಳುನೂರು ವರ್ಷಗಳ ಕಾಲ ದೂರ ಇರುವಾಗ ಜನ್ಮಾಂತರಗಳ ಕಥೆಯಲ್ಲಿ ಯಾರಾದರೂ ಚಾರಣರು ಈ ನಂಟನ್ನು ದಿವ್ಯದೃಷ್ಟಿ ಹಾಯಿಸಿ ಮನಗಾಣಿಸಬೇಕಷ್ಟೆ. ಪಾಣಿನಿಯಂತೆ ಪೂ.ಪಾ. ನೂ ಪ್ರಸಿದ್ಧ ವ್ಯಾಕರಣಜ್ಞನಾದುದರಿಂದ ಈ ಬಗೆಯ ಬಾಂಧವ್ಯ ಆರೋಪಿತವಾಗಿರಬೇಕು. ಪಾಣಿನಿಯ ಅಸಮಗ್ರ ವ್ಯಾಕರಣವನ್ನೇ (ಸೋದರಳಿಯನಾದ) ಪೂಜ್ಯಪಾದರು೮ ಪೂರೈಸಿಕೊಟ್ಟಿರಬೇಕಾದರೆ ಇನ್ನು ಆತನ ಶಬ್ದಶಾಸ್ತ್ರಜ್ಞಾನ ಎಷ್ಟು ಅದ್ಭುತವಾಗಿರಬೇಕು ನೋಡಿ ಎಂಬ ಸದಭಿಪ್ರಾಯ ಮೂಡಿಸಲು ಅಂಕುರಿಸಿದ ಈ ಕಟ್ಟುಕಥೆ ಕೈ ಕಾಲು ಮುಖಪಡೆದು ಮುಂದೆ ಕೆಲವು ಕನ್ನಡ ಕವಿಗಳಲ್ಲಿ ಪಲ್ಲವಿಸಿದ್ದೂ ಉಂಟು. ಆದರೆ ವಾಸ್ತವಾಂಶ ಮಾತ್ರ ಬೇರೆಯೇ ಆಗಿದೆ ಎಂಬುದಷ್ಟು ನಮಗೆ ನೆನಪಿನಲ್ಲಿದ್ದರೆ ಸಾಕು. ಪ್ರಸಿದ್ಧ ವಿದ್ವಾಂಸನಾದ ಕೆ. ಭುಜಬಲಶಾಸ್ತ್ರಿ ಹೇಳುವುದು ಸಮಂಜಸವಾಗಿದೆ. “ಪಾಣಿ ನಿಗೆ ಸಂಬಂಧಪಟ್ಟ ಮಾತು ನಂಬುಗೆಗೆ ಯೋಗ್ಯವಾಗಿ ಕಾಣುವುದಿಲ್ಲ. ಏಕೆಂದರೆ ಪಾಣಿನಿಯು ಕ್ರಿಸ್ತಪೂರ್ವದ ವಿದ್ವಾಂಸನು. ಪೂಜ್ಯಪಾದರು ಕ್ರಿ.ಶ. ಐದನೆಯ ಶತ ಮಾನದವರು. ಹೀಗಿರುತ್ತಾ ಇವರಿಬ್ಬರಲ್ಲಿ ಸಮಕಾಲೀನತೆಯು ಸಿದ್ಧವಾಗುವುದಿಲ್ಲ. ” (ಕೆ.ಭು. ಶಾಸ್ತ್ರಿ ಸಂಸ್ಕೃತ ವಾಙ್ಞ್ಮಯಕ್ಕೆ ಜೈನ ಕವಿಗಳ ಕಾಣಿಕೆ, ೧೯೭೧ ಪುಟ ೩೮)

ದೇವಚಂದ್ರನ ಇನ್ನೊಂದು ಅಂಬೋಣವೆಂದರೆ ಪೂಜ್ಯಪಾದರು ಎಲ್ಲಾ ದೇಶಗಳನ್ನು ವಿಹಾರಿಸಿದ್ದು, ಪೂರ್ವ ವಿದೇಹಕ್ಕೂ ಈಗಿನ ಬಿಹಾರು ರಾಜ್ಯ ಹೋಗಿ ಬಂದದ್ದು, ಬರುವಾಗ ದಾರಿಯಲ್ಲಿ ರವಿಕಿರಣಶಾಖದಿಂದ ದೃಷ್ಟಿಕಳೆದುಕೊಂಡದ್ದು, ಬಂಕಾಪುರದಲ್ಲಿ ಶಾಂತಿ ತೀರ್ಥಂಕರನ್ನು ಸ್ತುತಿಸಿ ಹೋದ ಕಣ್ಣನ್ನು ಮತ್ತೆ ಪಡೆದದ್ದು ಪೂ. ಪಾ.ರ ದೀರ್ಘ ಸಂಚಾರವನ್ನು ಅದರಲ್ಲಿಯೂ ವಿದೇಹ ಗಮನವನ್ನು ಇನ್ನೂ ಹಲವು ಲೇಖಕರು ಉಲ್ಲೇಖಿಸಿ ಸಮರ್ಥಿಸಿದ್ದಾರೆ. ತೀರ್ಥವಂದನೆಗಾಗಿ, ಸಿದ್ಧಾಂತ ಸಂದೇಹ ನಿವಾರಣೆಗಾಗಿ ವಿದೇಹ ಕ್ಷೇತ್ರಕ್ಕೆ ಒಂದೂವರೆ ಸಾವಿರ ವರ್ಷದ ಹಿಂದೆ ಹೋಗಿಬಂದದ್ದು ಸಾಹಸದ ಕಾರ್ಯ. ಹೋಟೆಲುಗಳು ಪ್ರವಾಸಿಮಂದಿರಗಳು ಕಾರು ಬ್ಸ್ಸು ರೈಲು ವಿಮಾನಗಳು ಇರುವ ಈ ಕಾಲದಲ್ಲಿ ಪೂಜ್ಯಪಾದನ ಪ್ರವಾಸದ ಅಗಾಧತೆ ದೊಡ್ಡದೆನಿಸುವುದಿಲ್ಲ. ವಿದೇಹ ಕ್ಷೇತ್ರವೆಂದರೆ ಈಗಿನ ಬಿಹಾರ ಪ್ರಾಂತ್ಯದಲ್ಲಿ ಜೈನ ಪ್ರಭಾವದ ಪ್ರದೇಶ; “ವಿದೇಹ ರಾಜ್ಯದ ಸೀಮಾರೇಖೆಯ ಬಗ್ಗೆ ಯಾವ ವಿವಾದವೂ ಇಲ್ಲ. ಪ್ರಾಚೀನ ಕಾಲದಿಂದಲೂ ಬಿಹಾರ ರಾಜ್ಯದ ಗಂಗಾನದಿಯ ಉತ್ತರ ಭಾಗ ವಿದೇಹವೆಂಬುದಾಗಿ, ದಕ್ಷಿಣ ಭಾಗ ಮಾಗಧವೆಂಬುದಾಗಿ ಪ್ರಸಿದ್ಧವಾಗಿದೆ. ಇದೇ ವಿದೇಹ ಪ್ರದೇಶವನ್ನು ತೀರಭುಕ್ತಿ ಹೆಸರಿನಿಂದಲೂ ಕರೆಯುತ್ತಾರೆ. ಇದರ ಗಡೀರೇಖೆಗಳು : ಉತ್ತರದಲ್ಲಿ ಹಿಮಾಲಯ, ದಕ್ಷಿಣದಲ್ಲಿ ಗಂಗಾನದಿ, ಪೂರ್ವದಲ್ಲಿ ಕೌಶಿಕೀ ಪಶ್ಚಿಮದಲ್ಲಿ ಗಂಡಕೀನದಿ”- (ಹಂಪನಾ. ವೀರ ಜಿನೇಂದ್ರ ಚರಿತ್ರೆ, ಪುಟ ೧೭, ೧೯೭೫). ಈ ರೀತಿ ಕೊಳ್ಳೇಗಾಲದಿಂದ ವಿದೇಹ ಕ್ಷೇತ್ರಕ್ಕೆ ಸುಮಾರು ಎರಡು ಸಾವಿರ ಕಿಲೋಮೀಟರ್ ದೂರ. ಕಾಡುಮೇಡು ಬೆಟ್ಟ ನದಿ ಕಳ್ಳಕಾಕರು ಹಿಂಸ ಮೃಗಗಳು, ಪ್ರಕೃತಿ ವಿಕೋಪಗಳು– ಮೊದಲಾದ ಅಡೆತಡೆಗಳನ್ನು ಹಾದು ಅಷ್ಟು ದೂರ ಒಂದು ಸಲ ಹೋಗಿಬರುವುದು ಎರಡು ವರ್ಷಗಳ ಮಹಾ ಸಾಹಸದ ಯಾತ್ರೆ. ಆ ಕಾಲದಲ್ಲಿ ನಾಲ್ಕು ಸಾವಿರ ಕಿ.ಮೀ. ದೂರ (ಹೋಗುತ್ತಾ ಬರುತ್ತಾ ಎರಡೂ ಸೇರಿ) ಹೋಗಿ ಬಂದವನು ಅಂದಿನ ಜನರ ಕಣ್ಣಲ್ಲಿ ಇಂದು ಚಂದ್ರಲೋಕಕ್ಕೆ ಹೋಗಿ ಬಂದವನು ಇದ್ದಂತೆ ಅಷ್ಟು ಕಷ್ಟದ ದೂರದ ದಾರಿ ಶ್ರಮಿಸಿದವನಿಗೆ ಗಗನ ಗಮನ ಸಾಮರ್ಥ್ಯವೇ ಇರಬೇಕೆಂಬ ಭಾವನೆಗಳು ಬಲಿತು ಗರಿಗೆದರಿದ್ದರಿಂದ ಪೂಜ್ಯ ಪಾದನಿಗೆ ಪವಾಡ ಪುರುಷನ ಪಟ್ಟ ಕಟ್ಟಲಾಯಿತು. ಅವನ ಕಾಲುಗಳಿಗೆ ನೆಲಬಿಟ್ಟು ನಡೆಯುವ ಲೇಪೌಷಧಿಯನ್ನು ಬಳಿಯಲಾಯಿತು. ಘಟನೆ ಕಥೆಯಾಯಿತು, ನಿಜಕ್ಕೆ ಬಣ್ಣ ಸವರಲಾಯಿತು. ಚಾವುಂಡರಾಯ ’….. ಗಗನ ಗಮನ ಸಾಮರ್ಥ್ಯರ್… ಎಂದು ಪೊಗಱ್ವುದು ಸಕಲಜನಂ ಪೂಜ್ಯಪಾದ ಭಟ್ಟಾರಕರಂ’ ಎಂದು ಹೇಳಿದರೆ ಶ್ರ.ಬೆ.ಶಾ ೧೫೮ ರಲ್ಲಿ ‘ಶ್ರೀ ಪೂಜ್ಯಪಾದ ಮುನಿರಪ್ರತಿಮೌಷಧರ್ದಿಜಿಯಾದ್ವಿ ದೇಹ ಜಿನದರ್ಶನ ಪೂತ ಗಾತ್ರಃ” ಎಂದು ಉಪ್ಪ್ರೇಕ್ಷಿಸಿದೆ. ಬ್ರಹ್ಮಶಿವನೂ ಸಮಯ ಪರೀಕ್ಷೆಯಲ್ಲಿ

            ಪದದನುರಾಗದಿಂ ನೆಗೞ್ದಿ ಶಾಸನದೇವತೆ ಪೂಸೆ ಪಾದ ಲೆ
ಪದ ಗುಣದಿಂದೆ ಯೋಜನ ಸಹಸ್ರಮನೊರ್ಮೊದಲೆಯ್ದುವೊಂದು ಸಂ
ಪದಮನಪೂರ್ವವಾಗೆ ತಳದೀ ಧರೆಯೊಳ್ಸಲೆ ಪೂಜ್ಯಪಾದ ನಾ
ಮದಿನೆಸೆದಾ ಮುನೀಂದ್ರನ ತಂದ್ರನನರ್ತಿಯೊಳಾರು ಬಣ್ಣಸರ್
||

ಎಂಬುದಾಗಿ ಕೊಂಡಾಡಿ ಶಾಸನ ದೇವತೆಗಳನ್ನು ಪೂಪಾ. ರ ಸೇವೆಗೆ ಕೂಡಿಸಿ ಪೂಪಾರನ್ನು ತೀರ್ಥಂಕರರೊಡನೆ ಸಮೀಕರಿಸಿದ್ದಾನೆ. ಪೂಪಾ.ರಿಗೂ ತತ್ಪ್ರಾಚೀನರಾದ ಕುಂದಕುಂದರಿಗೂ ಈ ವಿಚಾರದಲ್ಲಿ ಸಮಾನಶಕ್ತಿ, ವ್ಯಕ್ತಿತ್ವ ಆರೋಪಿತವಾಗಿದೆ ಮೂರು ಅಪರನಾಮಧೇಯದ ಜೊತೆಗೆ ಚತುರಂಗುಲ ಚಾರಣ ಋದ್ನಿ ಕುಂದಕುಂದರಿಗಿತ್ತು.

ಹೀಗೆ ರೋಚಕವಾಗಿ ಮೈತಳೆದ ಕವಿ ಕಲ್ಪನೆ ಹಲವು ಕವಿಗಳಲ್ಲಿ ಅನುರಣನವಾಗಿ ಸ್ಥಾಯಿಯಾಗಿ ನಿಂತೇಬಿಟ್ಟಿತು. ಪೂಪಾ. ರು ಕಳೆದುಕೊಂಡು ಕಣ್ಣುಗಳನ್ನು ಬಂಕಾಪುರದಲ್ಲಿ ಮರಳಿ ಗಳಿಸಿಕೊಂಡರೆಂಬುದು ಎಷ್ಟು ನಿಜ ತಿಳಿಯದು. ಧಾರವಾಡ ಜಿಲ್ಲಿ ಶಿಗ್ಗಾಂವಿ ತಾಲ್ಲೂಕು ಬಂಕಾಪುರ ಹನ್ನೊಂದನೆಯ ಶತಮಾನದವರೆಗೂ ಜೈನರ ಪ್ರಮುಖ ಧಾರ್ಮಿಕ ಸಾಂಸ್ಕೃತಿಕ ಕೇಂದ್ರವಾಗಿದ್ದುದು ನಿಜ. ಗುಣಭದ್ರಾಚಾರ್ಯರು ಉತ್ತರ ಪುರಾಣ ರಚನೆ ಸಮಾಪ್ತಿಗೊಳಿಸಿದ್ದು ಇಲ್ಲೆ. ಪೂಪಾ.ರಿಗೆ, ಅವರು ಭಟ್ಕಾರಕರೂ ಆಗಿದ್ದುದರಿಂದ, ಶಿಷ್ಯ ಪ್ರತಿಷ್ಯರೂ ಇದ್ದರೆಂಬುದು ಶಿಷ್ಯ ಸಮುದಾಯಕ್ಕೆ ಉಪದೇಶ ಮಾಡಿದರೆಂಬುದೂ ನಿಜಾಂಶ.

ಪೂಪಾ.ರು ಕೊಳ್ಳೆಗಾಲದವರೆಂಬುದರಲ್ಲೂ ಸತ್ಯವಿರಬಹುದು. ಅವರ ಸಮಾಧಿ ಮೈಸೂರು ಜಿಲ್ಲೆಯ ಮಲೆಯೂರಿನಲ್ಲಿ (ಕನಕಗಿರಿ) ಆಯಿತೆನ್ನುತ್ತಾರೆ. ದೇವಚಂದ್ರನೂ ಹೆಚ್ಚುಕಡಿಮೆ ಅದೇ ಪ್ರದೇಶವನಾದುದರಿಂದ ಅವನಿಗೆ ಪೂಜ್ಯಪಾದ ಕುಂದ ಕುಂದ, ಘೋಷಣಂದಿ, ಉಮಾಸ್ವಾಮಿ, ಬಲಾಕಪಿಂಛ, ಸಮಂತಭದ್ರ ಸಿಂಹಣಂದಿ, ಕವಿಪರಮೇಶ್ವರ, ಪೂಜ್ಯಪಾದರಲ್ಲಿ ವಿಶೇಷ ಮಮತೆ. ಅಲ್ಲದೆ ಆತ ತನ್ನ (ಒಡಹುಟ್ಟುಗನಾದ ಪದ್ಮರಾಜನ ಜತೆ ಗೂಡಿ ಬರೆದನೆಂಬುದಿ ಪ್ರಾಯಃ ಸರಿಯಿರಲಾರದು) ಪೂಜ್ಯರಾದ ಚರಿತೆಯೆಂಬ (೧೫ ಸಂಧಿ ೧೯೩೨ ಪದ್ಯ) ಸಾಂಗತ್ಯ ಕಾವ್ಯವನ್ನು (೧೭೯೨) ಬರೆದಿರುವುದನ್ನೂ ಇಲ್ಲಿ ನೆನೆಯಬಹುದು. ಮುಂದಾನೊಂದು ಕಾಲದಲ್ಲಿ ಹೆಚ್ಚಿನ ಮಾಹಿತಿಗಳು ದೊರೆತು ದೇವಚಂದ್ರ ಕೊಡುವ ಪೂಜ್ಯಪಾದರ ಜನ್ಮಸ್ಥಳ ತಂದೆತಾಯಿ– ಇವನ್ನು ಕದಲಿಸುವ ತನಕ ರಾಜಾವಳೀ ಹೇಳಿಕೆಯೇ ನಿಂತಿರುತ್ತದೆಂದು ತೋರುತ್ತದೆ. ಅನೇಕ ಜನ ವಿದ್ವನ್ಮಣಿಗಳು ಒಂದು ನೂರು ವರ್ಷದಿಂದ ದೇವಚಂದ್ರನ ಉಲ್ಲೇಖವನ್ನೇ ಒಪ್ಪಿಕೊಂಡು ಹೊರಟಿದ್ದಾರೆ. ಆದರೆ ಚಾಲುಕ್ಯ ದಾಖಲೆಯಾದ ಲಕ್ಷ್ಮೇಶ್ವರ ಶಾಸನದಲ್ಲಿ (೭೨೯) ಪೂಪಾ.ರು ಅಲಕ್ತಕನಗರದವರೆನ್ನಲಾಗಿದೆ. ಪೂಜ್ಯಪಾದದ ಶಿಷ್ಯ ದೇವಗಣ ಮೂಲಸಂಘದ ಉದಯದೇವ ಪಂಡಿತನಿಗೆ ದೊರೆ ವಿಜಯಾದಿತ್ಯ ಸತ್ಯಾಶ್ರಯ ಚಾಲುಕ್ಯನು ಶಂಖಜಿನೇಂದ್ರ ಬಸದಿಗಾಗಿ ೭೦೦ ರಲ್ಲಿ ಕರ್ದಮ ಗ್ರಾಮವನ್ನು ದತ್ತಿಯಿತ್ತುದಾಗಿ ಹೇಳಿದೆ. ದಿಗಂಬರ ಪಟ್ಟಾವಲಿಯೊಂದು ಇವರ ಕಾಲ ೨೦೧-೨೫೧ ಎಂದಿದೆ.

ಪೂಪಾ.ರ ಕಾಲ ವಿಚಾರದಲ್ಲಿ ಭಿನ್ನಭಿಪ್ರಾಯವಿದೆ. ಮೂರರಿಂದ ಏಳನೆಯ ಶತಮಾನದವರೆಗೆ ಇವರ ಜೀವಿತ ಸಮಯವನ್ನು ನಿಗದಿಕೊಳಿಸಲು ಪ್ರಯತ್ನ ಗಳಾಗಿವೆ: ಒಮ್ಮತವಿಲ್ಲ. ಒಂದು ಅಭಿಪ್ರಾಯದಂತೆ ಇವರ ಜನ್ಲಮ ವಿಕ್ರಮ ಸಂವತ್ ೨೮೧, ಆಚಾರ್ಯ ಪದಾಸೀನರಾದದ್ದು ವಿಸಂ ೩೦೮, ಆಯುರವಧಿ ೭೧ ವರ್ಷ; ಅದರಿಂದ ಇವರ ಸಮಯ ವಿಸಂ ೨೮೧-೩೫೨ ಅಂದರೆ ಕ್ರಿ.ಶ. ೨೨೩-೨೯೪. ಮತ್ತೆ ಕೆಲವು ವಿದ್ವಾಂಸರು ೫ ಶ. (ಬೂಲರ್, ಲೂಯಿರೈಸ್, ಹೀರಾಲಾಲ್ ಜೈನ್, ಆ.ನೆ ಉಪಾಧ್ಯೆ) ಹೇಳಿದ್ದಾರೆ. ಜೆ.ಪಿ. ಜೈನ್ ೪೬೪-೫೨೪ ಎಂದಿದ್ದಾರೆ. ಎ.ಎನ್. ಉಪಾಧ್ಯ ಅಭಿಪ್ರಾಯ: “Kundakunda belonged to c. to the beginning of the christian era, and Pujya pada lived a bit earlier than the last quarter of the 6th century A.D.” (ಮುನ್ನುಡಿ, ಪರಮಾತ್ಮ ಪ್ರಕಾಶ, ಪುಟ ೬೭) ಕೆಲವರು ೬ನೆಯ ಶ. (ಕೆ.ಬಿ ಪಾಠಕ್ ಜೋತಿಷಾಚಾರ್ಯ ನೇಮಿಚಂದ್ರ ಶಾಸ್ತ್ರಿ ಮತ್ತು ಡಾ || ಬಿ. ಶೇಕ್ ಅಲಿ) ಕೆಲವರು ೭ನೇ ಶ (ಡಿ.ಸಿ. ಸರ್ಕಾರ್) ಹೀಗೆ ವಿವಿಧ ಪ್ರತಿಪಾದನೆಗಳಿವೆ. ಏಳನೆಯ ಶ.ದ ವೇಳೆಗೆ ಪೂ. ಪಾ. ರು. ಖ್ಯಾತನಾಮರಾಗಿದ್ದುದರಿಂದ ಅದಕ್ಕಿಂತ ಹಿಂದೆ ಇದ್ದಿರಬೇಕು.

ಈ ವಿವಿಧ ಸೂಚನೆಗಳ ಹಿನ್ನೆಲೆಯಿಟ್ಟು ನೋಡಿದಾಗ ರಾಜಾವಳೀ ಕಥೆಯ ಕಾಲ ನಿರ್ದೇಶನ ನಂಬುಗೆ ಪಡೆಯುತ್ತದೆ. ದೇವಚಂದ್ರನು ಪೂಜ್ಯಪಾದರು ಶಕ ವರ್ಶ ೩೦೦ ರಲ್ಲಿ (೩೭೮) ಹುಟ್ಟಿದರೆಂದು ಹೇಳಿದ್ದಾರೆ. ಇದನ್ನು ಒಪ್ಪಿಕೊಳ್ಳಲು ಬಾಧಕಗಳು ಹೆಚ್ಚಿಲ್ಲ. ನಂದಿಸಂಘದ ಪಟ್ಟಾವಳಿ ಪ್ರಕಾರ ಪೂಜ್ಯಪಾದ, ಜಯನಂದಿ, ಪೂಜ್ಯಪಾದರು ಯೋಗಿ, ಅನುಭಾವಿ, ವೈಯಾಕರಣಿ, ಘನಪಂಡಿತರು ಕಂಸಪ್ರಾಭಿಷಾ ವಿದರು, ಕವಿ ಶ್ರೇಷ್ಠ ಅಷ್ಟವೈಯಾಕರಣದಲ್ಲಿ ಒಬ್ಬರು; ಇಂದ್ರ ಚಂದ್ರ ಕಾಶಕೃತ್ಸ್ನ ಪಾಣಿನಿ ಶಾಕಟಾಯನ ಅಮರ ಆಪಿಶಲಿ (ಧಾತಪಾಠ) ಪೂಜ್ಯಪಾದ ಗುಣನಂದಿ ವಜ್ರನಂದಿ- ಕ್ರಮವಿದ್ದು ಪೂಜ್ಯಾಪಾದರು ನಿಧನರಾದ ೫೮ ವರ್ಷಗಳಾದ ಮೇಲೆ ವಜ್ರನಂದಿ ಬಂದುದಾಗಿ ಹೇಳಿದೆ (ಸಂಸ್ಕೃತ, ಪ್ರಾಕೃತ -ಎರಡು ಗುರ್ವಾವಲಿ ಗಳಿವೆ. ಪ್ರಾಕೃತದ್ದು ಉಪಾದೇಯ) ಪೂಜ್ಯಪಾದರ ಶಿಷ್ಯನಾದ ವಜ್ರನಂದಿಯು ದಕ್ಷಿಣ ಮಧುರೆಯಲ್ಲಿ ದ್ರಾವಿಡ ಸಂಘವನ್ನು ೪೬೯ ರಲ್ಲಿ ಪ್ರಾರಂಭಿಸಿಸದನೆಂದು ಉಜ್ಜೈನಿಯ ದೇವಸೇನ ಕೃತ (೯೯೩) ದರ್ಶನಸಾರದ ಪ್ರಕಾರ ತಿಳಿದುಬರುತ್ತದೆ. ದೇವಸೇನನೂ ಕನ್ನಡದ ದೇವಚಂದ್ರನಂತೆ, ಅಷ್ಟೇನೂ ವಿಶ್ವಾಸಾರ್ಹನಲ್ಲವೆಂಬ. ಅಭಿಪ್ರಾಯವಿದೆ. ಪೂ.ಪಾ.ರು. ಗಂಗರ ಕಾಲದ ಪ್ರಸಿದ್ಧ ಆಚಾರ್ಯರು. ಅದರಿಂದ ಪೂ. ಪಾ. ರ ಜೀವಿತ ಕಾಲವನ್ನು ೩೯೮ ರಿಂದ ೪೭೮ ಎಂದು ಸ್ಥೂಲವಾಗಿ ಸ್ವೀಕರಿಸಸಬಹುದು. ಆದರೆ ಗಂಗರ ದೊರೆ ದುರ್ವಿನೀತನು ಪೂ. ಪಾ. ರ ಶಿಷ್ಯನೆಂದು ತಿಳಿಯಲಾಗಿದೆ. ಆಳ್ವಿಕೆಯ ಕಾರ ಸು. ೪೮೨-೫೨೨-೫೧೭ ಎಂದು ಅಭಿಪ್ರಾಯವಿದೆ. ಪೂಜ್ಯಪಾದರ ಕಾಲವನ್ನು ೫ ಶ. ವೆಂದು ಭಾವಿಸುವುದರಲ್ಲಿ ಔಚಿತ್ಯವಿದೆ. ಸು. ೪೫೦ ಎಸ್ ಶ್ರೀಕಂಠಶಾಸ್ತ್ರಿಗಳು ದಿರ್ವಿನೀತನಿಗೆ ಪೂಜ್ಯಪಾದರು ಗುರುವಾಗಿದ್ದರೆಂಬುದನ್ನು ನಿರಾಕರಿಸಿದ್ದಾರೆ (QJMS, XL p. 68). ರಾ ನರಸಿಂಹಾಚಾರ್ಯರೂ ದುರ್ವಿನೀತ ಪೂಜ್ಯಪಾದಶಿಷ್ಯಗುರು ಸಂಬಂಧವನ್ನು ಅಲ್ಲಗಳೆದಿದ್ದಾರೆ (ಮೈ.ಆ.ರಿ. ೧೯೧೨, ಪು.೩೫ ಆದರೆ ಪೂಪಾರು, ಗಂಗದೊರೆ ದುರ್ವಿನೀತನ ಗುರುವೆಂಬುದು ವಾಸ್ತವವಾದ ವಿಚಾರವಾಗಿದ್ದು ಇದನ್ನ ಒಪ್ಪಿಕೊಳ್ಳಬೇಕಾಗುತ್ತದೆ. ಡಾ || ಬಿ. ಷೇಕ್ ಅಲಿಯವರು ಇಬ್ಬರೂ ಸಮಕಾಲೀನರೆಂದು ಹೇಳಿ ಪೂ. ಪಾ. ರ ಬಗೆಗೆ ಸುದೀರ್ಘವಾಗಿ ಪ್ರಸ್ತಾಪಿಸಿ ಪರಿಚಯಿಸಿದ್ದಾರೆ. ಅ.ಟಿ. (Dr.B. Sheik Ali, HistoryoftheWesternGangas 1976, Pp-66-68 71, 171, 284, 286, 289 – 293, 295, 298, 1 – 324)

ಆಚಾರ್ಯ ಅಲಕಂಕರು ಪೂ. ಪಾ. ರ ಕೆಲವು ವ್ಯಾಕರಣ ಸೂತ್ರಗಳನ್ನು ತತ್ತ್ವಾರ್ಥರಾಜವಾರ್ತಿಕದಲ್ಲಿ ಉದಾಹರಿಸಿದ್ದಾರೆ. ಅಕಲಂಕ (ಭಟ್ಟಾಕಳಂಕ) ರು ರಾಷ್ಟ್ರಕೂಟ ದೊರೆ ಸಾಹಸತುಂಗದಂತಿದುರ್ಗನ (ಸು. ೭೫೦) ಸಮಕಾಲೀನರು ಜಯಾದಿತ್ಯ ವಾಮನರು (೭೦೦) ಕಾಶಿಕಾವೃತ್ತಿಯಲ್ಲಿ ಉದಾಹರಿಸಿದ್ದಾರೆ. ಈ ವೇಳೆಗೆ ಪೂ. ಪಾ. ರು. ಆಚಾರ್ಯ ಪರಂಪರೆಯಲ್ಲಿ ಮಾನ್ಯರಾಗಿ ಸೇರಿಹೋಗಿದ್ದುದು ಸ್ಥಾಪಿತವಾಗುತ್ತದೆ. ಇದರಿಂದಲೂ ದೇವಚಂದ್ರನ ಹೇಳಿಕೆ ಬಲಗೊಳ್ಳಬಹುದು. ವಿಜಯಾದಿತ್ಯ ಚಾಲುಕ್ಯನಿಗೆ ದಾರ್ಮಿಕ ಗುರುವಾಗಿದ್ದ ನಿರವದ್ಯ ಪಂಡಿತನೂ ಶ್ರೇಷ್ಠ ವೈಯಾಕರಣನಾಗಿದ್ದು ೬೭೮ ರಲ್ಲಿ ಇದ್ದನೆನ್ನಲಾಗಿದೆ. ಈತನೂ ಪೂ. ಪಾ. ರ. ಶಿಷ್ಯನೇ. ನೇರ ಶಿಷ್ಯನೇ ಆದರೆ ಪೂ. ಪಾ. ರ ಕಾಲವನ್ನು ೭ನೆಯ ಶ. ಕ್ಕೆ ತರಬೇಕಾದೀತು. ಇದನ್ನು ಪರಿಶೀಲಿಸಬೇಕು. ೮ನೆಯ ಶ.ದ ಆರಂಭದಿಂದ ಇಂದಿನವರೆಗೂ ಪೂ.ಪಾ.ರ ಪ್ರಸ್ತಾಪವಿರುವ ಕೃತಿಗಳು ಹೇರಳವಾಗಿದೆ. ಪುನ್ನಾಟ ಸಂಘದ ಜಿನ ಸೇನರು (೭೮೩) ಹರಿವಂಶ ಪುರಾಣದಲ್ಲಿ ಪೂಜ್ಯಪಾದರಿಗೆ ತಲೆಬಾಗಿ ನೆನೆದಿದ್ದಾರೆ.

೩೮೯-೪೭೮ : ೮೦ ವರ್ಷ ಜೀವಿತಾವಧಿ ದುರ್ವಿನೀತನಿಗೆ ಬಾಲ್ಯದಲ್ಲಿ ಗುರುವಾಗಿದ್ದರೆಂಬುದು ಸಮಂಜಸ “ನುಪಟ್ಟಾಭಿಷಿಕ್ತವಾದದ್ದು ೪೮೨ ರಲ್ಲಿ; ಆ ವೇಳೆಗೆ ಆತನಿಗೆ ಸು. ೨೫ ವರ್ಷ ದುರ್ವಿನೀತನು ರಾಜ್ಯವಾಳಿದ್ದು ೪೦ ವರ್ಷ ಅದರಿಂದ ೪೫೮ ಸುಮಾರಿನಲ್ಲಿ ದುರ್ವಿನೀತನು ಜನಿಸಿರಬಹುದು. ೪೭೦-೪೭೮ ರ ಅವಧಿಯಲ್ಲಿ ಪೂ ಪಾ ರ ಶಿಷ್ಯತ್ವಾಲಭಿಸಿರಬೇಕೆಂದು ನಿರೀಕ್ಷಿಸಬಹುದು.

ಇಂದ್ರ ಚಂದ್ರಾರ್ಕ ಜೈನೇಂದ್ರ ವ್ಯಾಡಿವ್ಯಾಕರಣೇಕ್ಷಿಣಃ
ದೇವಸ್ಯದೇವ ವಂದ್ಯಸ್ಯನವಂದ್ಯತೇಗಿರಃ ಕಥಮ್
||

ಪೂರ್ವಪುರಾಣ ಖ್ಯಾತಿಯ ಜಿನಸೇನಾಚಾರ್ಯರು (೮೩೭) ಧವಲಾಟೀಕೆಯಲ್ಲಿ ಗೌರವಸ್ಮರಣೆ ಮಾಡಿದ್ದಾರೆ.

            ಕವೀನಾಂ ತೀರ್ಥಕೃದ್ದೇವಃ ಕಿತಾರಂ ವರ್ಣ್ಯತೇ
ವಿದುಷಾಂ ವಾಙ್ಮಲಧ್ವಾಂಸಿ ತೀರ್ಥ ಯಸ್ಯವಚೋಮಯಮ್
||
            ಆದಿಪುರಾಣ ೧-೫೨

ಕುಂದಕುಂದಾನ್ವಯದ ಮೂಲಸಂಘಕ್ಕೆ ಸೇರಿದ ಜೈನ ದಿಗಂಬರಚಾರ್ಯರಾದ ನಂದಿಸಂಘದ ಪೂ. ಪಾ.ರಿಗೆ ಮೊದಲಿನ ಹೆಸರು ದೇವನಂದಿ. ಕುಂದಕುಂದ, ಉಮಾಸ್ವಾತಿ (ಸ್ವಾಮಿ) ಸಮಂತಭದ್ರ, ಆಚಾರ್ಯರುಗಳಾದ ಮೇಲೆ ಬಂದವರು ಪೂಜ್ಯಪಾದರು ಎಂಬುದನ್ನು ಗಮನಿಸಬೇಕು. ಜೀನಸೇನ, ವಾಮನ (ಕಾಶಿಕಾಕರ್ತೃ) ಗುಣನಂದಿ, ಅಕಳಂಕ, ಧನಂಜಯ ವೀರಸೇನ — ಇವರೆಲ್ಲ ಪೂಜ್ಯಪಾದರ ಅನಂತರದವರು.

ಜೈನಾಚಾರ್ಯರನ್ನು ಕುರಿತು ನಡೆಸುವ ಅಧ್ಯಯನಕ್ಕೆ ಧಾರ್ಮಿಕ ಚಾರಿತ್ರಿಕ, ಸಾಮಾಜಿಕ ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಮಹತ್ವವಿದೆ. ಈ ಆಚಾರ್ಯ ಪರಂಪರೆಯಿಂದ ಹರುದುಬಂದ ಜೈನಾಗಮ ಸಿದ್ಧಾಂತ ಸಂಬಂಧಿಯಾದ ಜ್ಞಾನದ ಹರಿಕಾರರು, ಮುಂದಿನ ತಲೆಮಾರಿಗೆ ಧಾಟಿಸಿದರು. Further the jaina acaryas rendered an invaluable service to literature (B.S. Ali, p 284). ಆದರೆ ಜೈನಾಚಾರ್ಯರಲ್ಲಿ ಒಂದೇ ಹೆಸರಿನವರು ಹಲವರು ಇರುವುದರಿಂದ ಅವರನ್ನು ಪ್ರತ್ಯೇಕಿಸಿ, ಕಾಲವನ್ನು ನಿರ್ದೇಶಿಸುವುದರಲ್ಲಿ ಸಮಸ್ಯೆಗಳಿವೆ. ಹೆಸರುಗುಳ ಸಮಾನತೆಯೇ ಬೇರೆ, ವ್ಯಕ್ತಿಗಳ ಸಮೀಕರಣವೇ ಬೇರೆ. ಸಮಾನ ಹೆಸರಿನ ಜೈನಾಚಾರ್ಯರಲ್ಲಿ ಯಾರು ಯಾರು, ಯಾವ ಯಾವ ಕಾಲದವರು? ಎಂಬುದರ ನಿರ್ಧಾರ ತೊಡಕಿನದಾಗಿದ್ದು ಈ ಸುಕ್ಕುಗಳನ್ನು ಬಿಡಿಸುವಲ್ಲಿ ಪೂರ್ವಗ್ರಹವಿರದ ಬಹಳ ಎಚ್ಚರದ ಜತೆಗೆ ಜೈನಾಚಾರ್ಯ ಪರಂಪರೆಯ ತಿಳಿವಳಿಕೆ, ಪಟ್ಟಾವಲಿಗಳ ಪರಿಚಯ, ಚಾರಿತ್ರಿಕ ಪ್ರಜ್ಞೆ, ಕವಿಗಳ ಶಾಸನಗಳ ಮತ್ತಿತರ ದಾಖಲೆಗಳ ಅವಲೋಕನ – ಇವಿಷ್ಟು ಒಳಗೊಂಡ ಸಮಗ್ರ ಸಮ್ಯಕ್ ಹಾಗೂ ನಿರ್ಮಮಕಾರದ ಪರಿಶೀಲನೆ ಅಗತ್ಯ. ಪೂಪಾ. ರ ವಿಚಾರದಲ್ಲಿಯೂ ಈನ್ ಸಮಸ್ಯೆ ತಲೆದೋರಿದೆ. ವಿವಿಧ ಕಾಲದ ಕೃತಿಗಳಲ್ಲಿ ಶಾಸನಗಳಲ್ಲಿ, ಮತ್ತಿತರ ಲಿಖಿತ ದಾಖಲೆಗಳಲ್ಲಿ ಪೂಪಾ. ರ. ಹೆಸರು ಉಲ್ಲೇಖವಾಗಿದೆ. ಈ ಎಲ್ಲ ಉಲ್ಲೇಖಗಳೂ ಒಬ್ಬರೇ ಪೂಪಾ. ರನ್ನು ಕುರಿತದ್ದು ಎಂಬ ಒಂದು ಸಾಮಾನ್ಯ ಹೇಳಿಕೆ. ತಿಳಿವಳಿಕೆ ಪ್ರಚಲಿತದಲ್ಲಿದೆ. ಅದರ ಜತೆಗೆ ಪೂಜ್ಯಪಾದರು ಒಬ್ಬರಲ್ಲ, ಹಲವರಿದ್ದಾರೆ, ಎಂಬ ಗಂಭೀರ ಪ್ರತಿಪಾದನೆರ್ಯೂ ಇದೆ. ಈ ಚರ್ಚೆಯಲ್ಲಿ ಇಲ್ಲಿ ಪ್ರಸ್ತಾಪಿಸುವುದು ಅಪ್ರಸ್ತುತ. ತತ್ಸಂಬಂಧವಾದ ವಿಪುಲವಾದ ಚರ್ಚೆಯಲ್ಲಿ ಅಸಕ್ತರು ಜ್ಯೋತಿ ಪ್ರಸಾದ ಜೈನರ ಸುಧೀರ್ಘ ಲೇಖನವನ್ನು ಅವಲೋಕಿಸಬಹುದು (Jyoti Prasad Jain, Jaina Gurus of the Pujyapada, Jaina Antiquary XVI – 1, 2, 17,1)

ಇದೇ ಸಂದರ್ಭದಲ್ಲಿ ಇಲ್ಲಿಯೇ ಪರಾಮರ್ಶಿಸಬೇಕಾದ ವಿಚಾರವೆಂದರೆ ಪೂ. ಪಾದ ಎಂಬುದು ವ್ಯಕ್ತಿಯ ಹೆಸರೇ ಅಥವಾ ಪ್ರಶಸ್ತಿಯೇ ಎಂಬುದು. ಡಾ || ಎಫ್. ಕೀಲ್‌ಹಾರ್ನ ಅವರು ಕಳೆದ ಶಾತ್ಮಾನದಲ್ಲಿ ಇಂಥ ಚಿಂತನೆಗೆ ಚಾಲನೆ ಕೊಟ್ಟರು. ಸ್ವಲ್ಪ ತಪ್ಪಿನಿಂದಾಗಿ ಟೀಕೆಗೂ ಗುರಿಯಾದರು. ಪುಣೆಯ ಡೆಕ್ಕನ್ ಕಾಲೇಜಿನ ಗ್ರಂಥ ಭಂಡಾರದಲ್ಲಿರುವ ಸರಕಾರಿ ಸಂಗ್ರಹವಾದ ಸಂಸ್ಕೃತ ಹಸ್ತಪ್ರತಿಗಳಲ್ಲಿ ‘ಜೈನೇಂದ್ರ ವ್ಯಾಕರಣ’ ಎಂಬ (= ಜೈವ್ಯಾ) ಹೆಸರಿನ ಆಯ್ದು ಹಸ್ತಪ್ರತಿಗಳನ್ನು ಉಲ್ಲೇಖಿಸಿ ಕೀಲ್‌ಹಾರ್ನ ಮಹಾಶಯರು ಆಯ್ದು ಪುಟಗಳ ಆಂಗ್ಲಲೇಖನ ಬರೆದರು. (OntheJainendra Vyakarana, Dr. F.Kielhorn, IndianAntiquary. 10 March 1881, pp. 75-79) ಅದರಲ್ಲಿ ಅವರು ತಿಳಿಸಿರುವುದು “ಪೂಜ್ಯಪಾದ (ಜಿನೇಂದ್ರ) ಎಂಬುದು ಸಾಮಾನ್ಯವಾಗಿ ತೀರ್ತ್ಜಂಕರರಿಗೆ ವಿಶೇಷವಾಗಿ ಅನ್ವಯಿಸುತ್ತದೆ. ಅದರಿಂದ ಪೂಪಾ. ರೆಂದರೆ ಒಬ್ಬ ವ್ಯಕ್ತಿಯಲ್ಲ, ಅದು ವರ್ಧಮಾನ ತೀರ್ಥಂಕರರಿಗೇ ಅನ್ವಯಿಸುತ್ತದೆ. ಅದರಿಂದ ಪೂಪಾ. ರೆಂದರೆ ಒಬ್ಬ ವ್ಯಕ್ತಿಯಲ್ಲ, ಅದು ವರ್ಧಮಾನ ತೀರ್ಥಂಕರರೀಗೆ ಅನ್ವಯಿಸುತ್ತದೆ. ಎಲ್ಲವೂ ದೇವರಿಂದಲೇ ಬಂದುದೆಂದು (ಜಿನಸ್ಯ ವಿನಿರ್ಮಿತಮ್) ಹೇಳುವುದು ಭಾರತೀಯ ಪದ್ಧತಿ. ಅದರಂತೆ ’ಪೂಜ್ಯಪಾದ ಜಿನೇಂದ್ರ’ ರಿಂದಲೇ ವ್ಯಾಕರಣವೂ ಬಂತೆಂಬ ಅಭಿಪ್ರಾಯದಲ್ಲಿ ಈ ಶಬ್ಧರೂಪಗಳು ಬಳಕೆಯಾಗಿವೆ. ಅದರಿಂದ, ಪೂಜ್ಯಪಾದ ಎಂಬುದು ಲೌಕಿಕ ವ್ಯಕ್ತಿಯಲ್ಲ ಪೂ.ಪಾ ರಾದ ಜಿನೀಂದ್ರ ವರ್ಧಮಾನರ ಮುಖದಿಂದ ಬಂದ ಜೈನೇಂದ್ರ ವ್ಯಾಕರಣವನ್ನು ಬರೆದವನು ಸೋಮದೇವ ಮತ್ತು ಶ್ರುತಕೀರ್ತಿ ಹೇಳುವ ದೇವನಂದಿ ಎಂಬುವನು” ಇದಿಷ್ಟೂ ಅವರ ಹೇಳಿಕೆಯ ಸಾರಾಂಶ.

ಕೆ.ಬಿ. ಪಾಠಕರು ಕೀಲ್‍ಹಾರ್ನರ ಈ ಅಭಿಪ್ರಾಯದ ಕೀಲನ್ನೇ ಮುರಿದು ಪೂಜ್ಯಪಾದ ಎಂಬುದು ವರ್ಧಮಾನ ತೀರ್ಥಂಕರರಿಗೆ ಅನ್ವಯಿಸಿದ್ದಲ್ಲ, ಜೈನೇಂದ್ರ ವ್ಯಾಕರಣವನ್ನು ಬರೆದ ಕರ್ತೃವಿಗೇ ಸೇರಿದ್ದೆಂಬುದನ್ನು ಕನ್ನಡ ಸಂಸ್ಕೃತ ಗ್ರಂಥಕಾರರ ಹೇಳಿಕೆಗಳನ್ನಿತ್ತು ತೋರಿಸಿಕೊಟ್ಟರು. ಜೈನೇಂದ್ರಿಯ ವ್ಯಾಕರಣಕಾರನಿಗೆ ಪೂಜ್ಯಪಾದ ಮತ್ತು ದೇವನಂದಿ ಎಂಬು ಹೆಸರುಗಳಿದ್ದುದನ್ನೂ ಆಧಾರಗಳಿಂದ ನಿರೂಪಿಸಿದರು. [Pujyapada and the authorship of the Jainendra Vyakarana, K.B. Psthak, i.A., 12.1883. pp ೧೯-೨೧).

ಪಾಠಕರ ಹೇಳಿಕೆಯ ತಿರುಳಿಷ್ಟು :- “Having thus shown, by sastisfactory proofs, that Pujyapada was the author or Jainendran, and that he was also called Devanandi, I would add, in conclusion, that many of the works of this illustrious author have survived the ways and wear anad tear of twelve centuries, and are still to be found in the great basis of Southern India” (ಅದೆ, ಪುಟ ೨೧) ಕೀಲ್ ಹಾರ್ನರು ಜೈ.ವ್ಯಾ.ವು. ಪೂಪಾ. ರಿಂದ ರಚಿತವಾದುದಲ್ಲ. ದೇವನಂದಿಯಿಂದ ರಚಿತವಾದದ್ದು ಎಂದು ಬರೆದ ಲೇಖನ ಟೀಕೆಗೆ ಒಳಗಾದುದಕ್ಕೆ ನೊಂದ ಡಾ || ಬೂಲರ್ ಕೆಳಕಂಡತೆ ವಿವರಣೆ ಕೊಟ್ಟಿದ್ದಾರೆ.

“ಕೀಲ್‌ಹಾರ್ನರು ಪೂಪಾ. ರನ್ನು ತೀರ್ಥಂಕರ ವರ್ಧಮಾನರಿಗೆ ಸಮೀಕರಿಸಿದ್ದು ತಪ್ಪು ನಿಜ. ಆದರೆ ಅವರು ತಮಗೆ ಲಭ್ಯವಿದ್ದ ಅಲ್ಲ ಸಾಮಗ್ರಿಯ ಆಧಾರದಿಂದ ಬರೆದುದರಿಂದ ಹಾಗೆ ತಪ್ಪು ನಿರ್ಧಾರಕ್ಕೆ ಕಾರಣವಾಯಿತೆಂಬುದನ್ನು ಮರೆಯ ಬಾರದು. ಪೂಪಾ. ರ ವ್ಯಕ್ತಿತ್ವವನ್ನು ಗುರುತುಪಡಿಸಿ ಸ್ಥಾಪಿಸುವುದು ಮತ್ತು ಕಾಲನಿಗದಿಪಡಿಸುವುದು- ಇವು ಸಂದಿಗ್ಧವಾಗಿದೆ. ನಾನೀಗ ಅವುಗಳ ವಿಚಾರವಾಗಿ ನನ್ನ ಖಚಿತ ಅಭಿಪ್ರಾಯ ಕೊಡುವ ಆಲೋಚನೆಯಲಿಲ್ಲ. ಆದರೆ ಒಂದು ವಿಷಯದತ್ತ ಗಮನ ಹರಿಸಬೇಕು. ‘ಪೂಜ್ಯಪಾದ’ — ಎಂಬುದು ಒಂದು ಬಿರುದು ಇಲ್ಲವೇ ಗೌರವ ಪ್ರಶಸ್ತಿಯೇ ಹೊರತು ಆ ಯತಿಯ ನಿಜವಾದ ಹೆಸರಲ್ಲ. Though it may have been customary to designate Devanandin or Gunanandin by this term, just as it is usualnto call Kumarilabhatta Bhattapadah, yet there must have been many Jaina Pujyapadas, jus as there are many Bhattas. Hence the utmost caution is necessary in using inscriptions or passages from books which mention a Pujyapada for fixing the date of the Pujyapada”. (Dr. G. Buhle. Book Notice of Prif P. Peterson’s S Second Report of Operations in search of Sanskrit MSS in the Bombaycircle, JBBRAS, 1884, I.A 14, p. 355).

ಪೂಜ್ಯಪಾದ ಎಂಬುದು ಪ್ರಶಸ್ತಿಯಾಗಿ ಬಂದ ಹೆಸರಾದರೂ ತುಂಬಾ ಪ್ರಚಲಿತವಾಗಿರುವುದು ಅದೇಯೇ; ಅವರಿಗೆ ದೇವನಂದಿ (ದೇವೇಂದ್ರ) ಕೀರ್ತಿ? ಎಂಬುದು ಮೂಲ ಹೆಸರು, ಜತೆಗೆ ಜಿನೇಂದ್ರಿ ಬುದ್ಧಿ ಎಂಬ ಮತ್ತೊಂದು ಹೆಸರು ಇದೆ- ಎಂಬುದಕ್ಕೆ ಅನೇಕ ಆಧಾರಗಳಿವೆ. (ನಂದಿ ಸಂಘದ ಪಟ್ಟಾವಲೀಯಲ್ಲಿ ಹೇಳಿರುವ ದೇವನಂದೀ ಎಂಬುವರು ಇವರೇ). ಶ್ರವಣಬೆಳಗೊಳದ ಶಾಸನದಲ್ಲೂ ಇದು ತುಂಬಾ ಸ್ಪಷ್ಟವಾಗಿ ಉಕ್ತಕವಾಗಿದೆ. ಹೊಯ್ಸಳ ಒಂದನೆಯ ನರಸಿಂಹನ ಮಹಾಪ್ರಧಾನನೂ ಹಿರಿಯ ಭಂಡಾರಿಯೂ ಆದ ಹುಳ್ಳರಾಜನು ತನ್ನ ಗುರುದೇವಕೀರ್ತಿ ಪಂಡಿತರ ನೆನಪಿಗಾಗಿ ನಿಲ್ಲಿಸಿದ ನಿಸದಿಗೆ ಕಲ್ಲಿನ ಮೇಲೆ ಜೂನ್ ೧೨, ೧೧೬೩ ರಲ್ಲಿ ಬರೆಸಿದ ಶಾಸನದಲ್ಲಿ (ಶ್ರಬೆ ೭೧ (೬೪) ಒಂದು ಕಡೆ ಹೀಗಿದೆ : (ಸಾಲುಗಳು ೨೬ ರಿಂದ ೩೪)):

ಯೋ ದೇವನನ್ದಿ ಪ್ರಥಮಭಿದಾನೋ ಬುದ್ಧ್ಯಾಮಹತ್ಯಾಸ ಜಿನೇಂದ್ರ ಬುದ್ಧಿಃ
ಶ್ರೀಪೂಜ್ಯಪಾದೋ ಜನಿದೇವತಾಭಿರ್ಯ್ಯತ್ಪೂಜಿತಂ ಪಾದಾಯುಗಂ ಯದೀಯ್ಯಃ
||

ಮೊದಲ ಹೆಸರು ದೇವನಂದಿ ಎಂದಿದ್ದರೂ ಅವರ ಅಸಾಧಾರಣ ಬುದ್ಧಿ ಮತ್ತೆಯಿಂದಾಗಿ ಅವರಿಗೆ ಜಿನೇಂದ್ರಬುದ್ಧಿ ಎಂದೂ, ಅವರ ಪಾದಾಯುಗಳನವನ್ನು ದೇವತೆಗಳು ಕೂಡ ಪೂಜೆಮಾಡಿ ಗೌರವಿಸಿದ ಕಾರಣ ಪೂಜ್ಯಪಾದ ಎಂದು ಹೆಸರುಗಳಾದುವು. (ಇವರಿಗೆ ಔಷಧಿಋದ್ಧಿಯಿತ್ತೆಂದು ಮತ್ತಷ್ಟು ಸಾಕ್ಷಿಗಳು ಪುಷ್ಟಿ ಕೊಟ್ಟಿವೆ) ಯಾವುದೇ ಅನುಮಾನವನ್ನು ಚೂರು ಮಾಡುವ ಇಂಥ ದಾಖಲೆ ಸಿಗುವುದು ಅಪರೂಪ ಎಂಬಷ್ಟು ಅಸಂದಿಗ್ಧವಾದ ಆಧಾರವನ್ನು ಇದು ಒದಗಿಸಿದೆ. ಇದನ್ನೇ ಶ್ರಬೆ ೩೬೦ (೨೫೪) ಶಾಸನವೂ ಪುಷ್ಟೀಕರಿಸಿದೆ (ಸಾಲುಗಳು ೩೫-೩೭):

            ಪ್ರಾಗ್ಯಭ್ಯಿಧಾಯಿ ಗುರುಣಾ ಕಿಲ ದೇವಾನಂದೀ ಬುದ್ಧ್ಯಾ ಪುನರ್ವಿಪುಳೆಯಾ ಸಜಿನೇಂದ್ರಬುದ್ಧಿಃ
ಶ್ರೀ ಪೂಜ್ಯಪಾದ ಇತಿಜಚೈಷ ಬುದ್ಧೈಃ ಪ್ರಚಖ್ಯೇ ಯತ್ಪೂಜಿತಃ ಪದಯುಗೇ ವನದೇವತಾಭಿಃ
||

ಜೈನಾಚಾರ್ಯರ ನಿಡಿದಾದ ಸಾಲಿನಲ್ಲಿ ಕೆಲವರು ಕೃತಿ ರಚನೆ ಮಾಡಿರದ ಶ್ರೇಷ್ಠ ಪ್ರಭಾವಶಾಲಿ ಆಚಾರ್ಯರು ಮಾತ್ರ ಆಗಿದ್ದರೆ, ಮತ್ತೆ ಕೆಲವರು ಕೃತಿಗಳನ್ನೂ ರಚಿಸಿದ್ದಾರೆ. ಈ ಗ್ರಂಥ ರಚನೆಯಲ್ಲಿ ಮೂರು ವಿಧ : ಕೇವಲ ಧಾರ್ಮಿಕ ಗ್ರಂಥಗಳ ರಚನೆಕಾರರು, ಶಾಸ್ತ್ರ ಕೃತಿಕಾರರು ಮತ್ತು ಸಾಹಿತ್ಯ ಕರ್ತೃಗಳು.

ಅ. ಧಾರ್ಮಿಕ ಕೃತಿಕಾರರು : ಭೂತಬಲಿ ಪುಷ್ಪದಂತ ಮಾಘಣಂದಿ ಉಮಾಸ್ವಾತಿ

ಆ. ಶಾಸ್ತ್ರ ಕೃತಿಕಾರರು : ಶಾಕಟಾನುನಾಚಾರ್ಯರು

ಇ. ಸಾಹಿತ್ಯಕಾರರು ಕವಿಗಳು : ಜಿನಸೇನರು, ಗುಣಭದ್ರರು.

ಪೂಪಾರು. ಧಾರ್ಮಿಕ ಶಾಸ್ತ್ರ ಮತ್ತು ಸಾಹಿತ್ಯ ಈ ಮೂರು ರಂಗಗಳಲ್ಲಿ ಕೃತಿ ರಚನೆ ಮಾಡಿದ ಮೇಧಾವಿಗಳು :

            ಜೈನೇಂದ್ರ ನಿಜಶಬ್ದಭೋಗಮತುಳಂ ಸರ್ವಾರ್ಥಸಿದ್ಧಿಃ ಪರಾ
ಸಿದ್ಧಾನ್ತೇ ನಿಪುಣತ್ವಮುದ್ಘಕವಿತಾಂ ಜೈನಾಭಿಷೇಕಃ ಸ್ವಕಃ
ಛನ್ದಸ್ಸೂಕ್ಷ್ಮಧಿಯಂ ಸಮಾಧಿಶತಕ ಸ್ವಾಸ್ಥ್ಯಂ ಯದೀಯಂ ವಿದಾಮಾ
ಖ್ಯಾತೀಹಸ ಪೂಜ್ಯಪಾದ ಮುನಿಪಃ ಪೂಜ್ಯೋ ಮುನೀನಾಂ ಗಣೈಃ
||

ಎಂಬುದಾಗಿ ಶ್ರಬೆ ೭೧ (೬೪) ಶಾಸನದಲ್ಲಿ ಬರೆದಿದೆ. ‘ಜೈನೇಂದ್ರ’ ಕೃತಿಯು ಅವರ ಅನನ್ಯ ವ್ಯಾಕರಣ ಜ್ಞಾನವನ್ನು ಪ್ರಾಜ್ಞರಿಗೆ ಸಾರುತ್ತದೆ. ತತ್ವಜ್ಞಾನದಲ್ಲಿ ಅವರಿಗಿದ್ದ ಪರಿಣತಿಯನ್ನು ‘ಸರ್ವಾರ್ಥಸಿದ್ಧಿ’ ಗ್ರಂಥ ತೋರಿಸುತ್ತದೆ. ‘ಜೈನಾಭಿಷೇಕ’ ಗ್ರಂಥವೂ ಅವರ ಕಾವ್ಯ ಪ್ರತಿಭೆ ಮತ್ತು ಸೂಕ್ಷ್ಮ ಛಂದಸ್ಸಿನ ಜ್ಞಾನವನ್ನೂ ಪ್ರತಿಬಿಂಬಿಸಿದರೆ ‘ಸಮಾಧಿಶತಕ’ ವೂ ಚಿತ್ತ ಸ್ವಾಸ್ಥ್ಯವನ್ನು ಸಂಕೇತಿಸುತ್ತದೆ – ಹೀಗೆ ಮುನಿಜನ ವರ್ಗದಿಂದ ಗೌರವಿಸಿಕೊಂಡ ಪೂಪಾ. ಮುನಿಪರ ಕೀರ್ತಿ ಗುಣಾವಳಿ ನೆಗಳ್ದಿದೆ.

ಪೂಪಾರ ಹೆಸರಿಗೆ ಹಲವಾರು ಗ್ರಂಥಗಳನ್ನು ಆರೋಪಿಸಲಾಗಿದೆ.

೧. ಜಿನೇಂದ್ರ ವ್ಯಾಕರಣ (ಶಬ್ದಾವತಾರ) ೨. ನ್ಯಾಯಕುಮುದ ಚಂದ್ರೋದಯ (ನಗರ ಶಾಸನ, ಎಕ ೮) ೩. ಮುಗ್ಧಬೋಧ ವ್ಯಾಕರಣ ೪. ಶಬ್ಧಾವತಾರಟೀಕೆ (ನ್ಯಾಸ) ೫. ಛಂದಶಾಸ್ತ್ರ (?) ೬. ಸರ್ವಾರ್ಥಸಿದ್ಧಿ (ಜೈನ ಧರ್ಮವನ್ನು ಸಂಗ್ರಾತಿಸಂಗ್ರಹ ರೂಪದಲ್ಲಿಳಿಸಿರುವ ತತ್ವಾರ್ಥಸೂತ್ರದ ಮೇಲೆ ಬರೆದ ಮೊದಲ ವ್ಯಾಖ್ಯಾನ) ೭. ವೈದ್ಯಾಸಾರ (ಕಲ್ಯಾಣಕಾರಕ) ೮. ಇಷ್ಟೋಪದೇಶ ೯. ಸಮಾಧಿ ಶತಕ (ಸಮಾಧಿ ತಂತ್ರ) ೧೦. ಬ್ಸಾರಸಂಗ್ರಹ ೧೧. ಜೈನಾಭಿಷೇಕ ೧೨ ಜ್ಞಾನಚಂದ್ರ ಚರಿತೆ (ಪ್ರಾಕೃತದಲ್ಲಿ ವಾಸವಚಂದ್ರ ಬರೆದುದನ್ನು ಕನ್ನಡಕ್ಕೆ ಪರಿವರ್ತಿಸಿದರೆಂದು ಪಾಯಣವರ್ಣಿಯ ಹೇಳಿಕೆ) ೧೩. ಸಿದ್ಧಭಕ್ತಿ, (ಆಚಾರ್ಯಭಕ್ತಿ) ೧೪. ಶಾಂತಾಷ್ಟಕ ೧೫. ಪಂಚವಸ್ತುಕ (ವೃತ್ತಿ) ೧೬. ಸ್ವಪ್ನಾವಲಿ (?)

ಇತ್ಯಾದಿ ಇನ್ನೂ ಕೆಲವರು ಪೂಪಾ. ರ ಹೆಸರಿಗೆ ಜಮಾ ಮಾಡಿರುವುದುಂಟು. ಇವುಗಳಲ್ಲಿ ಕೆಲವು ಇದವರೆಗೂ ದೊರೆತಿಲ್ಲ. ಇನ್ನು ದೊರೆಯುವುದೂ ದುರ್ಲಭವೇ. ಸಂಸ್ಕೃತ ಪ್ರಾಕೃತ ಕನ್ನಡ ಈ ಕೃತಿಗಳಲ್ಲಿ ಲೇಖಕ ಪೂಜ್ಯಪಾದರ ಸ್ವವಿಚಾರ ಬಂದಿಲ್ಲದಿರುವುದೂ ಬಲ್ಲಿದರಿಗೆ ಬೆರಗುಂಟುಮಾಡಿದೆ, ತಿಣುಕುವಂತೆ ಮಾಡಿದೆ. ಪೂಜ್ಯಪಾದರನ್ನು ಸ್ತುತಿಸಿರುವ ಕನ್ನಡದ ಕವಿಗಳು ಮೂರು ತೆರನಾಗಿದ್ದಾರೆ.

ಅ. ಮಾಮೂಲಿನಂತೆ ಜೈನಾಚಾರ್ಯರನ್ನು ಸ್ತುತಿಗಾಗಿ ಸ್ತುತಿಸಿರುವ ಸಂಪ್ರದಾಯವಾದಿಗಳು.

ಆ. ತಾವು ಸ್ತೋತ್ರ ಮಾಡಿರುವ ಜೈನಾಚಾರ್ಯರ ಕೆಲವು ವಿಶೇಷತೆಯನ್ನು ನಿರೂಪಿಸಿರುವವರು.

ಇ. ಕೆಲವು ಕೃತಿಗಳನ್ನೂ ಹೆಸರಿಸಿರುವವರು.

ಪಾರ್ಶ್ವಪಂಡಿತನ (೧೨೨೨) ಪಾರ್ಶ್ವನಾಥ ಪುರಾಣದ ಪದ್ಯ ಪೂಪಾ. ರ ಪುಸ್ತಕಗಳನ್ನೂ ತಿಳಿಸಿದೆ.

            ಸಕಳೋರ್ವಿಸುತ ಪೂಜ್ಯಪಾದ ಮುನಿಪಂ ತಾಂ ಪೇಱ್ದ ಕಲ್ಯಾಣ ಕಾ
ರಕದಿಂ ದೇಹನ ದೋಷಮಂ ವಿತತ ವಾಚಾ ದೋಷಮಂ ಶಬ್ದ ಸಾ
ಧಕ ಜೈನೇಂದ್ರ ದಿನಾ ಜಗಜ್ಜನದ ಮಿಥ್ಯಾದೋಷಮಂ ತತ್ವಬೋ
ಧಕ ತತ್ತ್ವಾರ್ಥದ ವೃತ್ತಿಯಿಂದೆ ಕಳೆದಂ ಕಾರುಣ್ಯದುಗ್ಧಾರ್ಣವಂ ೧-೧೮

ವೃತ್ತವಿಕಾಸ ಕವಿ (೧೩೬೦) ತನ್ನ ಧರ್ಮಪರೀಕ್ಷೆಯಲ್ಲಿ ಇವರ ಕೆಲವು ಕೃತಿಗಳನ್ನು ಹೇಳಿದ್ದಾನೆ.

            ಭರದಿಂ ಜೈನೇಂದ್ರಮಂ ಭಾಸುರಮೆನಲೊರೆದಂ ಪಾಣಿನೀಯಕ್ಕೆ ಟೀಕಂ
ಬರೆದಂ ತತ್ತ್ವಾವಾರ್ಥಮಂಟಿಪ್ಪಣದಿಱೆಪಿದಂ ಯಂತ್ರ ಮಂತ್ರಾದಿಶಾಸ್ತ್ರೋವನ್ನು
ಕ್ಕರಮಂ ಭೂರಕ್ಷಣಾರ್ಥವಾಗಿ ಪದಕಮಳಂ ಪೂಜ್ಯಪಾದ ವ್ರತೀಂದ್ರ
||

ಭೂರಕ್ಷಣಾರ್ಥವಾಗಿ ಪೂಪಾರು ‘ಯಂತ್ರಾಮಂತ್ರಾದಿ ಶಾಸ್ತ್ರೋತ್ಕರ’ ವನ್ನು ವಿರಚಿಸಿ ಯಶಸ್ಸು ತಳೆದರೆಂದು ವೃತ್ತವಿಲಾಸ ಕವಿ ಹೇಳುವುದನ್ನು ಗಮನಿಸಬಹುದು.

ಬಹಳ ಜನ ಹೆಸರಿಸಿ, ಬಹಳವಾಗಿ ಚರ್ಚಿಸಿ ಪಡೆದಿರುವ ಜೈನೇಂದ್ರ ವ್ಯಾಕರಣವನ್ನು ಒಂದು ಪರಂಪರೆ ಮಾಡಿದ ಮಹಾಶಾಸ್ತ್ರ ಕೃತಿಯೆಂದು ಮಾನ್ಯಿಸಿದ್ದಾರೆಂಬುದು ನಿಜ. ಆದರೆ ಈ ವಿಚಾರದಲ್ಲಿ ಭಿನ್ನಾಭಿಪ್ರಾಯವೂ ಇದೆಯಂಬುದನ್ನು ವಸ್ತುನಿಷ್ಠವಾಗಿ ನೋಡುವ ಸಂಶೋಧಕರು ಪರಿಗಣಿಸಬೇಕು. ಕೀಲ್‌ಹಾರ್ನ್‍ರ ಅಭಿಪ್ರಾಯದಂತೆ ಜೈನೇಂದ್ರ ವ್ಯಾಕರಣವು ಪಾಣಿನಿ, ಕಾತ್ಯಾಯನ, ಪತಂಜಲಿ ಮಟ್ಟಕ್ಕೆ ಏರದಿರುವ ಮಧ್ಯಮ ವರ್ಗದ ಕೃತಿ ಪ್ರತಿಕೃತಿಯನ್ನುತ್ತಾರೆ; ಗಂಡುಮಗು ಹುಟ್ಟಿದಾಗ ಆಗುವ ಒಸಗೆಗೆ ಸಮನಾದ ಸಂತೋಷ, ವ್ಯಾಕರಣಕಾರನಿಗೆ ಅರ್ಧಸ್ವರ ಉಳಿದರೆ ಆಗುತ್ತದೆಂಬ ಏಕೈಕ ತತ್ವದ ಮೇಲೆ ಈ ವ್ಯಾಕರಣ ರಚಿತವಾಗಿದೆ. ಪಾಣಿನಿ ವೈದಿಕ ನುಡಿಕಟ್ಟು ಕುರಿತು ವಿವೇಚಿಸುವ ಸೂತ್ರವನ್ನು ಜೈವ್ಯಾ ವು ಕೈ ಬಿಟ್ಟಿದೆ. ಉದಾತ್ತ ಅನುದಾತ್ತ ಸ್ವರಿತ ಶಬ್ದಗಳನ್ನು ವಿವರಿಸುವ ಸಾಮಾನ್ಯ ಸ್ವರಾಘಾತ ನಿಯಮಗಳನ್ನು ಉಳಿಸಿಕೊಂಡಿದೆ. ಇಷ್ಟಾದರೂ ಜೈನೇಂದ್ರ ವ್ಯಾಕರಣಕಾರನ ಕಲ್ಪನಾಚಾತುರ್ಯ ಒಂದೊ ಹಲವೊ ಅಕ್ಷರಗಳನ್ನು ಮಿತಗೊಳಿಸುವುದರಲ್ಲಿ ವಿಶೇಷವಾಗಿ ವ್ಯಕ್ತವಾಗಿದೆ. “But the most effective means which he employs to attain his object is the formation or, in some cases, the adoption of a large number of short technical terms” (ಹಿಂದೆ ಉದಾಹೃತ, ಪುಟ ೭೬-೭೭) ಪಾಣಿನಿ ಅಷ್ಟಾಧ್ಯಾಯಿಯಲ್ಲಿ ಹೇಳುವ ಹತ್ತು ಜನ ತತ್ಪೂರ್ವ ವೈಯಾಕರಣರಾದ ಆಪಿಶಲಿ, ಭಾರದ್ವಾಜ ಚಾಕ್ರವರ್ಮಣ, ಗಾಲವ ಗಾರ್ಗ್ಯ ಕಾಶ್ಯಪ, ಶಾಕಟಾಯನ, ಶಾಕಲ್ಯ, ಸೇನಕ, ಸ್ಪೋಟಾಯನ ಎಂಬುವರನ್ನು ಜೈವ್ಯಾ ಹೇಳುವುದಿಲ್ಲ. ಅಜೈನರೂ ಕೆಲವರು ಆ ಪಟ್ಟಿಯಲ್ಲಿರುವುದರಿಂದ ಆ ಪಟ್ಟಿಯನ್ನೇ ಕೈ ಬಿಟ್ಟು ಜೈನೇಂದ್ರ ವ್ಯಾಕರಣವು ಶ್ರೀದತ್ತ, ಯಶೋಭದ್ರ, ಭೂತಬಲಿ, ಪ್ರಭಾಚಂದ್ರ, ಸಿದ್ಧಸೇನ, ಸಮಂತಭದ್ರರನ್ನು ಪೂರ್ವಸೂರಿಗಳನ್ನಾಗಿ ಹೆಸರಿಸಿದೆ. ಮುಂದೆ ಬಂದ ಪಾಲ್ಯಕೀರ್ತಿ ಶಾಕಟಾಯನನು ತನ್ನ ಶಾಕಟಾಯನ ವ್ಯಾಕರಣ (ಶಬ್ದಾನುಶಾನಸ) ದಲ್ಲಿ ಆರ್ಯವಜ್ರ, ಇಂದ್ರ ಮತ್ತು ಸಿದ್ಧ ನಂದಿನ ಎಂಬುದರನ್ನು ಉಲ್ಲೇಖಿಸಿದ್ದಾನೆ. ಈ ವಿಚಾರವಾಗಿ ಬೆಳ್ವಳ್ಕರ್ ಅವರು ಕಟುಟೀಕೆಯನ್ನೇ ಮಾಡಿದ್ದಾರೆ :

“Devanandi alias Pujyapada…. now here quoted by name or acknowledged his obligations to authors and works not be longing to his own religion… that the names so put in were simply added pujarthan and were of no value for the history of grammer and that probably they were merely well known jain authors who used particular grammatical forms and not necessarily old grammarians” (Belvalkar, Systems of Sanskritgrammer, Poona, 1915).

ಜೈವ್ಯಾದಲ್ಲಿ ಪೂಪಾ ರು ಹೇಳುವ ಹೆಸರುಗಳು ಕೇವಲ ನಾಮಧಾರಿಗಳಲ್ಲ. ಅವರೆಲ್ಲ ಖ್ಯಾತನಾಮರು. ಅಲ್ಲಿ ಬರುವ ಸಿದ್ಧಸೇನರ ಒಂದು ಪ್ರಯೋಗವನ್ನು ಕೂಡ ಗಮನಿಸಬೇಕು; ಈ ಪ್ರಯೋಗವನ್ನು ಸಿದ್ಧಸೇನನ ದ್ವಾತ್ರಿಂಶಿಕಾದ (೯-೨೨) ತೆಗೆದು ಕೊಳ್ಳಲಾಗಿದೆ. ಅಲ್ಲದೆ ಪೂಜ್ಯಪಾದರು ಇದೇ ದ್ವಾತ್ರಿಂಶಿಕಾದಿಂದ ಪದ್ಯಭಾಗವನ್ನೂ ಸರ್ವಾರ್ಥಸಿದ್ಧಿಯಲ್ಲಿ (೭.೧೩) ಉದ್ಧರಿಸಿದ್ದಾರೆ. ಅಭಯನಂದಿಯೂ ತನ್ನ ಮಹಾವೃತ್ತಿಯಲ್ಲಿ (೧.೪.೧೬) ವೈಯಾಕರಣಿ ಸಿದ್ಧಸೇನರನ್ನು ಹೇಳಿದ್ದಾರೆ. ಜಿನಸೇನರಲ್ಲೂ ಇದೆ. ಪ್ರಭಾಚಂದ್ರರ ಕೃತಿ ಚಂದ್ರೋದಯ. ಈ ಪ್ರಭಾಚಂದ್ರರನ್ನು ಜಿನಸೇನರೂ ಸ್ಮರಿಸಿದ್ದಾರೆ. ವಿದ್ಯಾನಂದರು ಒಬ್ಬ ಶ್ರೀದತ್ತನ ‘ಜಲ್ಪನಿ ನಿರ್ಣಯ’ ವನ್ನು ಪ್ರಸ್ತಾಪಿಸಿರುತ್ತಾರೆ. ಯಶೋಭದ್ರರೂ ಕೂಡ ಶ್ರೀದತ್ತರಂತೆ ಪ್ರಭಾವಿವಾದಿಗಳೆಂದು ಜಿನಸೇನರ ಉವಾಚ. ಇನ್ನು ಸಮಂತಭದ್ರರಂತೂ ವಿಖ್ಯಾತರು (ಅಮರಕೋಶದಲ್ಲಿ ಹೇಳಿರುವಂತೆ ಬುದ್ಧನಿಗೂ ಸಮಂತ್ರಭದ್ರ ಎಂಬ ಹೆಸರಿದ್ದುದರಿಂದ ಈ ಸಮಂತಭದ್ರನಿಗೂ ಬುದ್ಧನಿಗೂ ನಾಮಸಾದೃಶ್ಯದಿಂದ ಸಮೀಕರಿಸುವುದು ಅಭಾಸಕ್ಕೆ ಕೊಟ್ಟ ಉದಾಹರಣೆಯಾದೀತು. ಇಂದ್ರ, ಸಿದ್ದನಂದಿನ್ ಮತ್ತು ಆರ್ಯವಜ್ರ ಕುರಿತು ಪಂಡಿತ ನಾಥರೂಮ ಪ್ರೇಮಿಯವರು ವಿವರಿಸಿದ್ದಾರೆ.) ಅದರಿಂದ ಪೂಜ್ಯಪಾದರು ಕೊಡುವ ಜೈನಾಚಾರ್ಯರ ಹೆಸರನ್ನು ಗಂಭೀರವಾಗಿ ಪರಿಗಣಿಸಬೇಕೆಂಬುದು ನಿಜ: ಆದರೂ ಪೂಪಾ.ರು ಮತ್ತು ಶಾಕಟಾಯನರು ಹೇಳುವ ಈ ಪೂರ್ವಾಚಾರ್ಯರೆಲ್ಲ ವ್ಯಾಕರಣಕಾರರೇ ಅಲ್ಲವೇ ಎಂಬುದು ಇನ್ನೂ ತೆರೆದಪ್ರಶ್ನೆಯಾಗಿಯೇ ಉಳಿಯುತ್ತದೆ ಡಾ || ಅ.ನೇ. ಉಪಾಧ್ಯೆಯವರು ಹೇಳುವಂತೆ ‘But one thing is beyond doubt that they are the names of Jain teachers who were held in great respect by the respective grammraians” (ಶಾಕಟಾಯನ ವ್ಯಾಕರಣ, ಸಂಪಾದಕೀಯ, ಪುಟ ೯ ಭಾರತೀಯ ಜ್ಞಾನಪೀಠ ಪ್ರಕಟಣೆ, ೧೯೭೧) ಐದು ಅಧ್ಯಾಯಗಳ (ಕಿರಿಯ ಆವೃತ್ತಿಯಲ್ಲಿ) ೩೦೦ ಸೂತ್ರಗಳ (ಹಿರಿಯ ಆವೃತ್ತಿಯಲ್ಲಿ ೭೦೦ ಸೂತ್ರಗಳ) ಇದುವರೆಗೆ ದೊರೆತಿರುವ ಸಂಸ್ಕೃತ ಜೈನ ವ್ಯಾಕರಣಗಳಲ್ಲಿ ಪ್ರಾಚೀನವೂ ಪ್ರಥಮವೂ ಆದ ಜೈವ್ಯಾ ವು ಭಾರತೀಯ ವ್ಯಾಕರಣ ಪರಂಪರೆಯ ಎರಡು ಪದ್ಧತಿಗಳಲ್ಲೊಂದು:

ಇಂದ್ರಶ್ಚಂದ್ರಃ ಕಾಶಕೃತ್ಸ್ನಾ ಪಿಸ್ಜಲೀ ಶಾಕಟಾಯನಃ
ಪಾಣಿನ್ಯಮರ ಜೈನೇಂದ್ರಾ ಜಯನ್ಯಷ್ಟಾದಿ ಶಾಬ್ದಿಕಾಃ
||
ಬೊಪ್ಪದೇವ, ಧಾತುಪಾಠ

ಅಷ್ಟ ಶಾಬ್ದಿಕ ವರ್ಗದಲ್ಲಿ ಇಷ್ಟು ಉನ್ನತ ಸ್ಥಾನ ಪಡೆದ ಜೈವ್ಯಾದ ಕಾಣಿಕೆ ಸಾಧರಣವೇ ಹೊರತು ಉನ್ನತವಾದುದಲ್ಲ ಎಂದು Dr. R. Birwe ರವರು ಭಾವಿಸಿದ್ದಾರೆ. ಡಾ || ಆ.ನೇ. ಉಪಾಧ್ಯೆಯವರು “ಪೂಜ್ಯ ಪಾದ ದೇವನಂದಿಯ ವ್ಯಾಕರಣವು ಪಾಣಿನಿ ಮತ್ತು ಇತರ ಪೂರ್ವಾಚಾರ್ಯರಿಂದ ಸಾಕಷ್ಟು ಸಾಮಗ್ರಿಯನ್ನು ಪಡೆದುಕೊಮ್ಡು ಸಪ್ರಮಾಣವಾಗಿಯಲ್ಲದೆ ಶಾಕಟಾಯನನಿಗೂ ಮತ್ತು ಅವನ ಮೂಲಕ ಹೇಮಚಂದ್ರನಿಗೂ ದೃಢವಾದ ಸಹಾಯ ಸಲ್ಲಿಸಿದೆ” ಎಂಬುದಾಗಿ ಹೇಳಿದ್ದಾರೆ (ಪೂರ್ವೋಕ್ತ, ಸಂಪಾದಕೀಯ ಪುಟ ೧೨) ಪೂಜ್ಯಪಾದರು ಈ ಜೈನೇಂದ್ರ ವ್ಯಾಕರಣಕ್ಕೆ ಪಂಚವಸ್ತುಕವೆಂಬ ವ್ಯಾಖ್ಯಾನ ಕೂಡ ಬರೆದಂತೆ ತಿಳಿದುಬರುತ್ತದೆ. ಡಾ || ಪೀಟರ್‌ಸನ್ ಡಾ || ಷೆಕ್‍ಆಲಿ ಇದನ್ನು ಒಪ್ಪಿಕೊಂಡಿದ್ದಾರೆ.

ಪೂಜ್ಯಪಾದರು ಜೈನೇಂದ್ರ ವ್ಯಾಕರಣವಲ್ಲದೆ ಪಾಣಿನಿಯ ವ್ಯಾಕರಣಕ್ಕೆ ‘ಶಬ್ದಾವತಾರ’ ವೆಂಬ ನ್ಯಾಸವೊಂದವನ್ನು ಬರೆದರೆಂದು ಹೇಳಲಾಗುತ್ತಿದೆ. ಇದನ್ನು ಶಾಸನ ಹೇಳಿಕೆ ಅನುಮೋದಿಸಿದೆ:

ನ್ಯಾಸಂ ಜೈನೇಂದ್ರಸಂಜ್ಞಂ ಸಕಲಬುಧನುತಂ ಪಾಣಿನೀಯಸ್ಯ ಭೂಯೋ
ನ್ಯಾಸಂ ಶಬ್ದಾವತಾರಂ ಮನುಜತತಿಹಿತಂ ವೈದ್ಯಶಾಸ್ತ್ರಂ ಚ ಕೃತ್ವಾ
||
ಎ.ಕ. ೮ನಗರ ಶಾಸನ ೪೬

ಅಲ್ಲದೆ “ಶಬ್ದಾವತಾರಕಾರೇಣ ದೇವಭಾರತಿ ನಿಬದ್ಧ ವಡ್ಡ ಕಥೇನ ಕೀರಾತಾರ್ಜುನೀಯ ಪಂಚದಶಸರ್ಗ ಟೀಕಾಕಾರೇಣ ದುರ್ವಿನೀತಿ ನಾಮಧೇಯೇನ” (ಮೈ.ಆ.ರಿ. ೧೯೧೨) ಎಂಬಲ್ಲಿ ಬರುವ ಶಬ್ದಾವತಾರ ಟೀಕೆ ಪೂಜ್ಯಪಾದರ ಕೃತಿಗೇ ಬರೆದದ್ದೆಂದೂ ತಿಳಿಯಲಾಗಿದೆ. ಇದನ್ನು ಒಪ್ಪದ ರಾನ.ರವರು ಇದು ಪಾಣಿನಿಯ ಅಷ್ಟಾಧ್ಯಾಯಿಗೆ ಟೀಕೆಯೆಂದಿದ್ದಾರೆ. (ಹಿಸ್ಟರಿ ಆಫ್ ಕನ್ನಡ ಲಿಟರೇಚರ್ ಮೈಸೂರು (೧೯೪೦) ಪುಟ ೩-೪).

ವೃತ್ತವಿಲಾಸಕವಿಯೂ (೧೩೬೦), ಧರ್ಮಪರೀಕ್ಷೆಯಲ್ಲಿ ಈ ಅಭಿಪ್ರಾಯವನ್ನು ಸಮರ್ಥಿಸಿದ್ದಾನೆ, ಒರೆದಂ ಪಾಣಿನೀಯಕ್ಕೆ ಟೀಕಂ (೧-೧೪) ಎಂದು. ಪಂಡಿತ ಕೆ. ಭುಜಬಲಶಾಸ್ತ್ರಿಯವರೂ ಇದನ್ನು ಮಾನ್ಯ ಮಾಡಿದ್ದಾರೆ (ಆದರ್ಶ ಜೈನ ಸಾಹಿತಿಗಳು, ಪುಟ ೯ ಭಾಗ ೧) ದೇವಚಂದ್ರನ ‘ಪಾಣನಿಸೂತ್ರ ವೃತ್ತಿಯಂ ರಚಿಸಿದಂ, ಎಂಬ ಮಾತೂ ಇದನ್ನೇ ಅಂಗೀಕರಿಸುತ್ತದೆ ಖ್ಯಾತ ಇತಿಹಾಸಜ್ಞ ಡಾ || ಬಿ. ಷೇಕ್‍ಆಲಿ ಯವರೂ ಇದನ್ನು ಮನ್ನಿಸಿದ್ದಾರೆ. ‘Besides he (Durvinita) translated into Sanskrit, GunadyasBrihatKathas and it could have been as quite possible that he put into Kannada the original sabdavatara of Pujyapada in order t express his regard for his guru” (ಪೋರ್ವೋಕ್ತ ಪುಟ ೬೮) ಬಿ.ಎ. ಸಾಲೆತೊರೆಯವರೂ ಸುಮಾರು ಅರ್ಧ ಶತಮಾನದ ಹಿಂದೆ ಇದಕ್ಕೆ ಸಮ್ಮತಿಯಿತ್ತಿದ್ದರು) (MediaevalJainism, p. 23, 1938)

ಪೂಪಾ. ರ ಈ ವ್ಯಾಕರನ ಗ್ರಂಥಕ್ಕೆ ಸಂಬಂಧಿಸಿದಂತೆ ಟೀಕಾಗ್ರಂಥಗಳು ರಚಿತವಾಗಿವೆ:

ಅ. ಅಭಯನಂದಿಯ ಮಹಾವೃತ್ತಿ ಸು. ೧೧ ಶತಮಾನ (= ಶ.)

ಆ. ಪ್ರಭಾಚಂದ್ರರ ಶಬ್ದಾಂಭೋಜ ಭಾಸ್ಕರನ್ಯಾಸ

ಇ. ಕನ್ನಡಕವಿ ಅಗ್ಗಳನ ಗುರುವಾದ ಆರ್ಯ ಶ್ರುತಕೀರ್ತಿಗಳ ಪಂಚವಸ್ತು ಪ್ರಕ್ರಿಯಾ

ಈ. ಪಂಡಿತ ಮಹಾಚಂದ್ರನ ಲಘುಜೈನೇಂದ್ರ, ೧೯ ಶ.

ಇವುಗಳಲ್ಲದೆ ಕ್ರಿ.ಶ. ೯೦೦ ರಲ್ಲಿ ಗುಣನಂದಿಗಳಿಂದ ರಚಿತವಾದ ಶಬ್ದಾರ್ಣವ ಎಂಬೊಂದು ವ್ಯಾಕರಣ ಗ್ರಂಥವೂ ಇದೆ. ಇದು ಜೈನೇಂದ್ರ ವ್ಯಾಕರಣದ ಸೂತ್ರಗಳ ಸಂಶೋಧಿತ ಹಾಗೂ ಪರಿವರ್ಧಿತ ಸಂಸ್ಕರಣ. ಇದಕ್ಕೂ ಕ್ರಿ.ಶ. ೧೧೭೦ ರಲ್ಲಿ ಸೋಮದೇವರು ಶಬ್ದಾವರ್ಣದ ಚಂದ್ರಿಕಾ ಎಂಬ ಟೀಕೆಯನ್ನೂ ಕ್ರಿ.ಶ.ಸು. ೧೧೫೦ ರಲ್ಲಿ ಪ್ರಾಯಶಃ ಶ್ರವಣಬೆಳಗೊಳದ ಚಾರುಕೀರ್ತಿ ಪಂಡಿತಾಚಾರ್ಯರು ಶಬ್ದಾರ್ಣವ ಪ್ರಕ್ರಿಯಾ ಎಂಬೊಂದು ಟೀಕೆಯನ್ನೂ ರಚಿಸಿರುವುದುಂಟು” (ಕೆ. ಭುಜಬಲಶಾಸ್ತ್ರಿ, ಪೂರ್ವೋಕ್ತ ಪುಟ ೩೧).

ಪೂಜ್ಯಪಾದರ ಕಲ್ಯಾಣಕಾರಕ ಪ್ರಸಿದ್ಧ ವೈದ್ಯಗ್ರಂಥವಾಗಿತ್ತೆಂದು ತಿಳಿದು ಬರುತ್ತದೆ. ಎ. ಶಾಂತಿರಾಜಶಾಸ್ತ್ರೀ ಅವರು ‘ವೈದ್ಯಪ್ರಪಂಚದಲ್ಲಿ ಪೂಜ್ಯ ಪಾದಾಚಾರ್ಯರ ಹೆಸರು ಸರ್ವ ಶಿರೋಧಾರ್ಯವಾಗಿರುತ್ತದೆ’ ಎಂದು ಬರೆದಿದ್ದಾರೆ (ಎ. ಶಾಂತಿರಾಜ ಶಾಸ್ತ್ರಿ, ಸಂ: ದಶಭಕ್ತಿ ಪೀಠಿಕೆ ಪು. ೧೪, ೧೯೩೪) ಬ್ರಹ್ಮಶಿವಕವಿ (೧೧೯೦) ಸಮಯ ಪರೀಕ್ಷೆ ಕಾವ್ಯದಲ್ಲಿ ಪೂಜ್ಯಪಾದರು ವೈದ್ಯಶಾಸ್ತ್ರ ರಚನೆ ವಿಚಾರವಾಗಿ ಹೇಳಿರುವ ಪದ್ಯ:

            ಸಕಳಪ್ರಾಣಿ ಹಿತಾರ್ಥವಾಗೆ ರುಜೆಗಳ್ಪಿಂಗಲ್ಕೆ ಕಲ್ಯಾಣ ಕಾ
ರಕಮಂ ವಾಹ್ಮಳಮಂ ತೆರಳಿ ಕಗಳೆಯಲ್ + ಜೈನೇಂದ್ರಮಂ ಚಿತ್ತದೊಂ
ದುಕಳಂಕಂ ಕಿಡಿಸಲ್ + ಸಮಾಧಿಶತಯೋಗ ಗ್ರಂಥಮಂ ಪೇಳ್ದು ಸ
ರ್ವಕವೀಂದ್ರಸ್ತುತ ಶುದ್ಧ ಚಿತ್ತನೆಸೆದಂ ಶ್ರೀ ಪೂಜ್ಯ ಪಾದೋತ್ತಮಂ
||        ೧-೭

ಪಾರ್ಶ್ವಪಂಡಿತನೂ (೧೨೨೨) ಪಾರ್ಶ್ವನಾಥ ಪುರಾಣದಲ್ಲಿ ‘ಪೂಜ್ಯಪಾದ ಮುನಿಪಂತಾಂ ಪೇಱ್ದ ಕಲ್ಯಾಣಕಾರದಿಂ’ (೧-೧೮) ಎಂದು ಹೇಳಿರುವುದನ್ನು ಈ ಲೇಖನದಲ್ಲಿ ಆಗಲೇ ಉದಾಹರಿಸಿದ್ದೇನೆ. ಪೂಪಾ. ರ ಈ ವೈದ್ಯ ಗ್ರಂಥವನ್ನು ಸಂಸ್ಕೃತದಿಂದ ಕನ್ನಡಕ್ಕೆ ಜಗದ್ಧಳ ಸೋಮನಾಥನೆಂಬ ಜೈನ ಕವಿ (೧೧೭೫) ಭಾಷಾಂತರಿಸಿದ್ದಾನೆ.

            ಸುಕರಂ ತಾನನೆ ಪೂಜ್ಯಪಾದ ಮುನಿಗಳ್ ಮುಂ ಪೇಱ್ದ ಕಲ್ಯಾಣ ಕಾ
ರಕಮಂ ಬಾಹಟ ಸಿದ್ಧಸಾರಚರಕಾದ್ಯುತ್ಕೃಷ್ಟಮಂ ಸದ್ಗುಣಾ
ಧಿಕಮಂ ಚಿತ್ರಮದಾಗೆ ಚಿತ್ರಕವಿ ಸೋಮಂ ಪೆಱ್ದ ನಿಂತಱ್ತಿಯಿಂ
||

ಮದ್ಯಮಾಂಸಮಧುವೆಂಬ ಮಕಾರತ್ರಯ ವರ್ಜಿತ ಔಷಧೋಪಚಾರವನ್ನು ಪ್ರತಿಪಾದಿಸಿರುವುದು ಪೂಜ್ಯಪಾದರು ಅಹಿಂಸಾ ಧರ್ಮಬೋಧೆಯನ್ನು ಎತ್ತಿಹಿಡಿದಿ ರುವ ರೀತಿಗೆ ಉದಾಹರಣೆ. “ಪೂಪಾ. ರ ವೈದ್ಯಗ್ರಂಥವನ್ನು ಜೈನರು ಮಾತ್ರವಲ್ಲ, ಜೈನೇತರರೂ ಬಹಳ ಮುತುವರ್ಜಿಯಿಂದ ನೋಡಲು ಬಯಸುವುದನ್ನು ನಾನು ಚೆನ್ನಾಗಿ ಬಲ್ಲೆ. ‘ಪೂಜ್ಯಪಾದೋದಿತಂ’, ‘ಪೂಜ್ಯಪಾದಭಿಷತಂ’ ಮೊದಲಾದ ಅವರ ಹೆಸರನ್ನೊಳಗೊಂಡ ಹಾಗೂ ಪ್ರಾಯಶಃ ಅವರ ಮೂಲಗ್ರಂಥದ ಆಧಾರದಿಂದಲೇ ರಚಿಸಲ್ಪಟ್ಟ ಅನೇಕ ಪದ್ಯಗಳು ನಮಗೆ ಅಲ್ಲಲ್ಲಿ ಸಿಗುತ್ತವೆ. ಅಂತಹ ಪದ್ಯಗಳನ್ನು ಸಂಗ್ರಹಿಸಿ, ‘ವೈದ್ಯಸಾರ’ ಎಂಬ ಹೆಸರಿನಲ್ಲಿ ಆರಾದ ಜೈನ ಸಿದ್ಧಾಂತ ಭವನದ ಕಡೆಯಿಂದ ನಾನೂ ಒಂದು ಸಂಗ್ರಹವನ್ನು ಬೆಳಕಿಗೆ ತಂದಿರುವುದುಂಟು. ಅದರಲ್ಲಿ ಕೇವಲ ರಸಗಳು ಮಾತ್ರ ಹೇಳಲ್ಪಟ್ಟಿವೆ. ಆ ರಸಗಳನ್ನು ಬೇರೆ ಬೇರೆ ರೋಗಗಳಿಗೆ ಪ್ರಯೋಗಿಸಿ ವಿಶೇಷ ಲಾಭವನ್ನು ಪಡೆದಿರುವ ಹಲವು ವೈದ್ಯರು ಆ ರಸಗಳನ್ನು ಮುಕ್ತಕಂಠದಿಂದ ಹೊಗಳಿರುವುದು ನನಗೆ ಗೊತ್ತು” ಎಂಬುದಾಗಿ ಸ್ವಾನುಭವ ಜನ್ಯ ಅಭಿಪ್ರಾಯವನ್ನು ವಿದ್ಯಾಭೂಷಣ ಸಿದ್ಧಾಂತಾಚಾರ್ಯ ಕೆ. ಭುಜಬಲಿಶಾಸ್ತ್ರಿ ಹೇಳಿರುವುದು ಇಲ್ಲಿ ಉಲ್ಲೇಖನೀಯ (ಸಂಸ್ಕೃತ ವಾಙ್ಮಯಕ್ಕೆ ಜೈನ ಕವಿಗಳ ಕಾಣಿಕೆ, ಪುಟ ೩೮-೩೯)

ಪೂಜ್ಯ ಪಾದ ಕೃತ ‘ಇಷ್ಟೋಪದೇಶ ೫೦ (೫೧) ಪದ್ಯಗಳ ಸಂಸ್ಕೃತಿ ಕೃತಿ ಇದೊಂದು ನೀತಿಬೋಧ ಕೃತಿ, ಜೈನ ಧರ್ಮದ ತಿರುಳಾಅ ಭೇದ ವಿಜ್ಞಾನ ಬೋಧೆಯಿರುವ ಸರಳ ಗ್ರಂಥ

ತ್ಯಾಗಾಯ ಶ್ರೆಯಸೇ ವಿತ್ತಮವಿತ್ತಃ ಸಂಚಿನೋತಿಯಃ
ಸ್ವಶರೀರಂ ಸ ಪಂಕೇನ ಸ್ನಾಸ್ಯಾಮೀತಿವಿಲಿಂಪತಿ          
            ೧-೧೬

(-ಪುಣ್ಯಗಳಿಕೆಗಾಗಿ ದಾಅ ಮಾಡಬೇಕಾಗುತ್ತದೆಂದು ಹಣವಿಲ್ಲದವನು ಹಣವನ್ನು ಸಂಪಾದಿಸುತ್ತೇನೆನ್ನುವನು ಸ್ನಾನಮಾಡುವೆನೆಂದು ಹೇಳಿ ತನ್ನ ದೇಹವನ್ನೂ ಕೆಸರಿನಿಂದ ಬಳಿದುಕೊಂಡಂತೆ ಆಗುತ್ತದೆ) ೪, ೫, ೯, ೪೦, ೪೮ ಮೊದಲಾದ ಪದ್ಯಗಳು ಪರಿಭಾವಿಸುವಂತಿವೆ. ಇಷ್ಟೋಪದೇಶ ಕೃತಿ ಹಲವು ಬೇರೆ ಭಾಷೆಗಳಿಗೆ ಅನುವಾದವಾಗಿದೆ. ಸಮಾಧಿಶತಕ ೧೦೫ ಸಂಸ್ಕೃತ ಪದ್ಯಗಳಿರುವ ಆಧ್ಯಾತ್ಮಿಕ ಕೃತಿ. ಸರಳ ಹೃದ್ಯ ಭಾಷಾಶೈಲಿಯ ಸಮಾಧಿ ಶತಕದಲ್ಲಿ ಆತ್ಮನ ರಹಸ್ಯವನ್ನು ಸೂಕ್ಷ್ಮವಾಗಿ ತಿಳಿಸಲಾಗಿದೆ. ಈ ಗ್ರಂಥಕ್ಕೆ ಟೀಕೆಗಳೂ ರಚಿತವಾಗಿದ್ದು ಹಲವು ಭಾಷೆಗಳಲ್ಲಿ, ವಿವಿಧ ಸಂಸ್ಥೆಗಳಿಂದ ಪ್ರಕಟವಾಗಿದೆ. ‘ಇದರ ಅಧ್ಯಯನದಿಂದ ಮನಸ್ಸಿಗೆ ಅಪೂರ್ವ ಹಾಗೂ ಅಲೌಕಿಕ ಶಾಂತಿಯು ಸಿಗುವುದು. ಆಚಾರ್ಯರು ಆಧ್ಯಾತ್ಮ ವಾಣಿಯನ್ನು ಚೆನ್ನಾಗಿ ಮಥಿಸಿ ಅದರ ರಸದಿಂದಲೇ ಇದನ್ನು ತುಂಬಿಸಿರುವಂತೆ ಕಾಣುತ್ತದೆ. ಆತ್ಮಸಂಭೋಧನ ಹಾಗೂ ದುಃಖ ಪರಂಪರೆಯಿಂದ ಬಿಡುಗಡೆಯನ್ನು ಹೊಂದಲು ಈ ಗ್ರಂಥದ ನಿಸ್ಸಂದೇಹವಾಗಿ ಮಹೌಷಧಿಯ ಕಾರ್ಯವನ್ನು ಮಾಡುವುದು’ (ಕೆ. ಭುಜಬಲಿಶಾಸ್ತ್ರಿ, ಪೂರ್ವೋಕ್ತ್ರ ಪು. ೪೨-೪೩).

ಪೂಪಾ. ರು ಕೆಲವು ಭಕ್ತಿಪರವಾದ, ಧಾರ್ಮಿಕಾಚಾರಣೆ ಸಂಬಂಧವಾದ ಹಾಗೂ ಸ್ತೋತ್ರರೂಪಿಯಾದ ಕಿರು ಕೃತಿಗಳನ್ನು ಬರೆದಿದ್ದಾರೆ. ಅವನ್ನು ಭಕ್ತಿಮಾಲಿಕೆಯೆನ್ನ ಬಹುದು. ಎಂಟುಪದ್ಯಗಳ ಶಾಂತ್ಯಷ್ಟಕ ಮತ್ತು ಒಂಬತ್ತು ಪದ್ಯಗಳ ಸಿದ್ಧಬಕ್ತಿಯಿಂದ ಹಿಡಿದು ಹೆಚ್ಚಿನ ಪದ್ಯಗಳಿರುವ ನಂದೀಶ್ವರ ಭಕ್ತಿಯವರಿಗೆ ಈ ಕಿರು ಕೃತಿಗಳಿವೆ: ಆಚಾರ್ಯ ಭಕ್ತಿ, ಚಾರಿತ್ರ ಭಕ್ತಿ, ನಂದೀಶ್ವರ ಭಕ್ತಿ, ನಿರ್ವಾಣಭಕ್ತಿ, ಯೋಗಿಭಕ್ತಿ, ಶ್ರುತಭಕ್ತಿ, ಪಂಚಗುರುಭಕ್ತಿ, (ತೀರ್ಥಂಕರ ಭಕ್ತಿ) ಚೈತ್ಯಭಕ್ತಿ, ಸಿದ್ಧಭಕ್ತಿ, (ಸಮಾಧಿ ಭಕ್ತಿ) ಶಾಂತಿಭಕ್ತಿ ಈ ಎಲ್ಲಾ ಭಕ್ತಿಗಳಲ್ಲಿ ಆತ್ಮಸಿದ್ಧಿಯ ಹಾದಿಯನ್ನೂ ಕಾಣಬಹುದು. ಇವುಗಳಲ್ಲಿ ಕಾವ್ಯಾಂಶ ತುಂಬ ಗೌಣ.

            ಸಂಸ್ಕೃತಾಃ ಸರ್ವಾ ಭಕ್ತಯಃ ಪೂಜ್ಯಪಾದ ಸ್ವಾಮಿ ಕೃತಾಃ
ಪ್ರಾಕೃತಾಸ್ತು ಕುಂದಕುಂದಾಚಾರ್ಯ ಕೃತಾಃ

ಎಂಬುದಾಗಿ ಹೇಳಿರುವುದರಿಂದ ಸಂಸ್ಕೃತ ದಶಬಖ್ತಿಗಳು ಪೂಜಪಾದ ಕೃತವೆನ್ನಬಹುದು ಪ್ರಾಕೃತದಲ್ಲಿ ಕುಂದಕುಂದಾಚಾರ್ಯರು ಬರೆದಿರುವ ಈ ದಶಭಕ್ತಿಗಳಿಗೆ ಪ್ರಭಾಚಂದ್ರಾಚಾರ್ಯರ ಸಂಸ್ಕೃತ ಟೀಕೆಯೂ ಇದೆ. ಪೂಜ್ಯಪಾದರು ಸಾರಸಂಗ್ರಹ ಎಂಬೊಂದು ಗ್ರಂಥ ಬರೆದಿರುವ ವಿಚಾರವನ್ನು ಜೀನಸೇನಾಚಾರ್ಯರು ತಮ್ಮ ಧವಾಲಾಟೀಕೆಯಲ್ಲಿ ಹೇಳಿದ್ದಾರೆ. ಜಯಕೀರ್ತಿಯ ಛಂಧೋನುಶಾಸನ ಆಧಾರದಿಂದ ಪೂಪಾ. ರು ಛಂದ ಶ್ಯಾಸ್ತ್ರ ಕೃತಿಯನ್ನೂ ರಚಿಸಿರಿಬೇಕೆಂದು ಊಹೆಯಿದೆ. ಸ್ವಪ್ನಾವಲೀ ಕಿರುಕೃತಿಯನ್ನೂ ಇವರು ರಚಿಸಿಸಬೇಕೆಂದು ಭಾವಿಸಲಾಗಿದೆ.

“ಸಂಖ್ಯಾಪೇಕ್ಷೆಯಿಂದ [ಈ ಭಕ್ತಿಗಳು] ಹನ್ನೆರಡಾದರೂ ಧಾರ್ಮಿಕ ಕ್ರಿಯಾಕಲಾಪಗಳಲ್ಲಿ ಹೆಚ್ಚಾಗಿ ಉಪಯೋಗಿಸಲ್ಪಡತಕ್ಕವುಗಳು. ತೀರ್ಥಕರಭಕ್ತಿ, ಸಮಾಧಿ ಭಕ್ತಿಗಳ ಹೊರತಾಗಿ ಉಳಿದ ಹತ್ತು ಭಕ್ತಿಗಳಾಗಿರುವುದರಿಂದ ರೂಢಿಯಲ್ಲಿ ‘ದಶಭಕ್ತಿ’ ಯೆಂದು ಹೆಸರು ಬಂದಿದೆ. ೧ ಸಿದ್ಧಬಕ್ತಿಯಲ್ಲಿ ಸಿದ್ಧಪರಮೇಷ್ಠಿಗಳ ಸ್ವರೂಪವುಬಲುಚೆನ್ನಾಗಿವರ್ಣಿಸಲ್ಪಟ್ಟಿದೆ. ೨. ಶ್ರುತ ಭಕ್ತಿಯಲ್ಲಿ ಮತಿಶ್ರುತ ಅವಧಿ ಪುನಃ ಪರ್ಮಯ ಕೇವಲ ಗಳೆಂಬ ಐದು ಜ್ಞಾನಗಳ ವರ್ಣನೆಯೂ ಮೊದಲ ನಾಲ್ಕು ಜ್ಞಾನಗಳ ಭೇದಪ್ರಭೇದಗಳೂ ದ್ವಾದಶಾಂಗ ಚತುರ್ದಶಪೂರ್ವ ಶಾಸ್ತ್ರಗಳೂ ವರ್ಣಿಸಲ್ಪಟ್ಟಿವೆ. ೩. ಚಾರಿತ್ರ ಭಕ್ತಿಯಲ್ಲಿ ಮೋಕ್ಷಪ್ರಾಪ್ತಿಗೆ ಸಾಧನಗಳಾದ ಸಾಮಾಯಿಕ ಛೇದೋಪಾಸ್ಥಾಪನಾ ಪರಿಹಾರ ವಿಶುದ್ಧಿ ಸೂಕ್ಷ್ಮ ಸಾಂಪರಾಯ ಯಥಾಖ್ಯಾತಗಳೆಂಬ ಐದು ಚಾರಿತ್ರಗಳು ವರ್ಣಿಸಲ್ಪಟ್ಟಿವೆ. ೪. ಯೋಗಿಭಕ್ತಿಯಲ್ಲ ಮುನಿಗಲ ಸ್ವರೂಪವೂ ಅವರ ಸಮ್ಯಗ್ದರ್ಶನಾದಿ ಗುಣಗಳೂ ಖ್ರುದ್ದುಗಳೂ ವರ್ಣಿಸಲ್ಪಟ್ಟಿವೆ. ೫. ಆಚಾರ್ಯಭಕ್ತಿಯಲ್ಲಿ ಮುನಿಸಂಘಾಧಿಪತಿಗಳಾದ ಆಚಾರ್ಯರ ಸ್ವರೂಪಗುಣ ಮೊದಲಾದವುಗಳ ವರ್ಣಿಸಲ್ಪಟ್ಟಿವೆ. ೬. ನಿರ್ವಾಣಭಕ್ತಿಯಲ್ಲಿ ತೀರ್ಥಂಕರು ಮೊದಲಾದ ಮುಕ್ತಾತ್ಮರ ಕೈಲಾಸ ಸಮ್ಮೇದಶಿಖರ ಮೊದಲಾದ ನಿರ್ವಾಣಸ್ಥಾಗಳೂ ಮಹಾವೀರ ಸ್ವಾಮೀಯ ಪಂಚಕಲ್ಯಾಣಗಳೂ ವರ್ಣಿಸಲ್ಪಟ್ಟಿವೆ. ೭. ನಂದೀಶ್ವರ ಭಕ್ತಿಯಲ್ಲಿ ಎಂಟನೆಯದಾದ ನಂದೀಶ್ವರ ದ್ವೀಪದಲ್ಲಿ ಐವತ್ತೆರಡು ಅಕೃತಿಯ ಚೈತ್ಯಾಲಯಗಳೂ ಜಿನಬಿಂಬಗಳೂ ಆಷಾಢಕಾರ್ತ್ತಿಕ ಫಾಲ್ಗುಣ ಮಾಸಗಳಲ್ಲಿ ಭವನ ವ್ಯಂತರ ಜೋತಿಷ್ಯ ಕಲ್ಪವಾಸಿಕರೆಂಬ ದೇವತೆಗಳು ಆ ದ್ವೀಪಕ್ಕೆ ಹೋಗಿ ಮಾಡುವ ಪೂಜಾವೈಭವವೂ ಎಂಟು ಮಹಾ ಪ್ರಾತಿಹಾರ್ಯಗಳೂ ಮೂವತ್ತು ನಾಲ್ಕು ಅತಿಶಯ ಮೊದಲಾದವುಗಳೂ ವರ್ಣಿಸಲ್ಪಟ್ಟಿವೆ. ೮. ಚೈತ್ಯಭಕ್ತಿ ಯಲ್ಲಿ ಕೃತಿಮಾಕೃತಿಯ ಚೈತ್ಯಾಲಯಗಳೂ ಬಿಂಬಗಳೂ ಅರ್ಹತ್ಪರಮೇಶ್ವರರ ರಾಗದ್ವೇಷ ರಾಹಿತ್ಯವೂ ವರ್ಣಿಸಲ್ಪಟ್ಟಿವೆ. ೯. ಶಾಂತಿಭಕ್ತಿಯಲ್ಲಿ ಶಾಂತಿ ತೀರ್ಥಂಕರರ ಸ್ತೋತ್ರವೂ ಇದರ ಪಠನದಿಂದ ನಾನಾ ಪ್ರಕಾರವಾದ ವಿಘ್ನವ್ಯಾಧಿಗಳು ನಾಶವಾಗುತ್ತವೆಂಬ ವಿಷಯವೂ ವರ್ಣಿಸಲ್ಪಟ್ಟಿದೆ. ೧೦. ಪಂಚ ಗುರುಭಕ್ತಿಯಲ್ಲಿ ಅರಹಂತ ಸಿದ್ಧ ಆಚಾರ್ಯ ಉಪಾಧ್ಯಾಯ ಸಾಧುಗಳೆಂಬ ಪಂಚ ಪರಮೇಷ್ಠಿಗಳ ಸ್ವರೂಪವೂ ವರ್ಣಿಸಲ್ಪಟ್ಟಿದೆ. ೧೧. ತೀರ್ಥಂಕರ ಭಕ್ತಿಯಲ್ಲಿ ಶುಭ ಭಾವನೆಯೂ ಮುಕ್ತಿಪ್ರಾಪ್ತಿಯವರೆಗೆ ಜೀನೇಶ್ವರದಲ್ಲಿ ನಿಶ್ಚಲವಾದ ಭಕ್ತಿಯಿಂದಲೆಂಬುದೂ ಸಮಾಧಿ ಮರಣವಾಗಬೇಕೆಂಬ ಭಾವನೆಯೂ ಚರ್ಣಿಸಲ್ಪಟ್ಟಿದೆ. (ಎ. ಶಾಂತಿರಾಜಶಾಸ್ತ್ರಿ, ಪೂರ್ವೌಕ್ತ, ಪುಟ ೪, ೫, ೬,) ಈ ದಶಭಕ್ತಿಗಳಿಗೆ ವಿಶಿಷ್ಟವಾದ ಪಠನ ಸಂದರ್ಭಗಳೂ ಇವೆ.

ಪೂಜ್ಯಪಾದರ ಕೃತಿಶ್ರೇಣಿಯಲ್ಲಿ ಮುಡಿಯ ಮಾಣಿಕ್ಯ ಸರ್ವಾಸಿದ್ದಿ. ೫,೫೦೦ ಶ್ಲೋಕಪ್ರಮಾಣದ ಈ ಟೀಕಾಗ್ರಂಥ ಸಂಸ್ಕೃತಿದಲ್ಲಿದೆ. ಆಚಾರ್ಯ ಉಮಾಸ್ವಾತಿಗಳ ತತ್ವಾರ್ಥಸೂತ್ರ ಜೈನ ಭಗವದ್ಗೀತೆ, ಬೈಬಲ್ ಇದರ ಮೇಲೆ ಪ್ರಾಯಃ ಬರುಮಟ್ಟಿನ ಹಿರಿಯ ಜೈನಾಚಾರ್ಯರು ವ್ಯಾಖ್ಯಾನ ಟೀಕೆ ಟಿಪ್ಪಣಿ ವೃತ್ತಿ ಏನಾದರೂ ಬರೆದಿದ್ದಾರೆ. ಪೂಪಾ. ರು ಕೂಡ ಸರ್ವಾರ್ಥಸಿದ್ಧಿಟೀಕೆ ಬರೆದಿದ್ದಾರೆ. ಮತ್ತು ತತ್ವಾರ್ಥಸೂತ್ರಕ್ಕೆ ದಿಗಂಬರಾಚಾರ್ಯರೂ ಬರೆದ ಟೀಕೆಗಳಲ್ಲಿ ಇದೆ ಮೊದಲನೆಯ ಹಾಗೂ ಮೇಲು ಮಟ್ಟದ ಟೀಕೆಯೆಂದು ಮನ್ನಣೆ ಪಡೆದಿದೆ. ಜೈನೇಂದ್ರ ವ್ಯಾಕರಣದಂತೆ ಸರ್ವಾರ್ಥಸಿದ್ಧಿಯ ಶೈಲಿಯೂ ಸಂಕ್ಷಿಪ್ತ ಸ್ವರೂಪದ್ದು ಇದರ ಪ್ರಭಾವ ದಿಗಂಬರಾಮಾಚಾರ್ಯರ ಮೇಲೆ ಅಲ್ಲದೆ ಶ್ವೇತಾಂಬರ ಆಚಾರ್ಯರ ಮೇಲೂ ಆಗಿದೆ. ಪೂಜ್ಯಪಾದರ ತರುವಾಯ ಬಂದ ಟೀಕಾಕಾರರೂ ಸರ್ವಾರ್ಥಸಿದ್ಧಿಯನ್ನು ಪ್ರಮಾಣವೆಂದು ಮಾದರಿಯಾಗಿರಿಸಿಕೊಂಡು ಗೌರವಿಸಿದ್ದಾರೆ. ಅಕಲಂಕರೂ ವಿದ್ಯಾನಂದರೂ ಇದರ ಶಬ್ದ ಇಲ್ಲವೇ ವಾಕ್ಯಗಳನ್ನೂ ಅಳವಡಿಸಿಕೊಂಡಿದ್ದಾರೆ. ಸರ್ವಾರ್ಥಸಿದ್ಧಿ ಹಿಂದಿ, ಮರಾಠಿ ಮೊದಲಾದ ಭಾಷೆಗಳಿಗೆ ಅನುವಾದವಾಗಿದೆ. ಕನ್ನಡದಲ್ಲೂ ಈ ಪ್ರಯತ್ನ ನಡೆದಿದೆ. ತನ್ನ ಪುಷ್ಪದಂತ ಪುರಾಣದಲ್ಲಿ ಇಮ್ಮಡಿ ಗುಣಾವರ್ಮಕವಿ (೧೨೧೪) ಸ್ತುತಿಸಿರುವುದು.

            ನಿಸದಂ ತನ್ನ ನಿರಾಮಯಂ ಕೃತಿ ಜಗದ್ವಿಖ್ಯಾತಮಾದತ್ತು ಭಾ
ವಿಸೆ ಸರ್ವಾರ್ಥದ ಸಿದ್ಧಿಯೊಳ್ ತೊಡರ್ದು ಭೋದಂ ಭವ್ಯಸಂಸೇವ್ಯಮಾ
ಯ್ತುಸುಹೃತ್ಪದ್ಮ ದೊಳಿಂಬುವೆತ್ತುದು ಪದನ್ಯಾಸಂ ಗಡಾರಣ್ಣ ಬ
ಣ್ಣಿ ಸರೋರಂತೆ ಜೀನೇಂದ್ಪ ಬುದ್ಧಿವಸರಂ ಶ್ರೀ ಪೂಜ್ಯಪಾದೇಶನಾ
|        ೧-೨೪

ಪಾರ್ಶ್ಚಪಂಡಿತಕವಿ (೧೨೨೨) ಪಾರ್ಶ್ವನಾಥ ಪುರಾಣದಲ್ಲಿ ಆ ಜಗಜ್ಜನದ ಮಿಥ್ಯಾದೋಷಮಂ ಶಬ್ದ ಸಾಧಕ ತತ್ತ್ವಾರ್ಥದ ಕಲೆದಂ ಕಾರುಣ್ಯ ದುಗ್ಧಾರ್ಣವಂ (೧-೧೮) ಎಂದು ಕೊಂಡಾಡಿದ್ದಾನೆ. ಹತ್ತು ಅಧ್ಯಾಯಗಳೂ. ೫೫೦೦ ಶ್ಲೋಕಗಳೂ ಇರುವ, ಸಂಸ್ಕೃತದ ರಚಿತವಾಗಿರುವ ವಿಸ್ತೃತ ವ್ಯಾಖ್ಯಾನವಾದ ಸರ್ವಾರ್ಥಸಿದ್ಧಿಯನ್ನು ಭಾರತೀಯರೂ ಪಾಶ್ಚಾತ್ಯರೂ ಉದ್ಗ್ರಂಥವೆಂದು ಕೀರ್ತಿಸಿದ್ದಾರೆ.

“Philosophy is another branch in which Pujyapada evinced great interest, Sarvarthasiddhi is the famous work relating to this field. This work exhibits the deep learning Pujyapada together with his ability to express his ideas in a lucid manner. He has offered his interpretation and this work is composed in dignified Sanskrit and this work is composed in degnified Sanskrit Style. It is a valuable contribution to the Jaina School of Thought.”

ಇದರಲ್ಲಿ ನಯ, ಸಾಂಖ್ಯ ಸೌಗತ ಮುಂತಾದ ಅಜೈವ ಸಿದ್ಧಾಂತಗಳ ಪ್ರಸ್ತಾಪ ಬಂದಿದ್ದರೂ ವೇದಾಂತಿಗಳ ಅಥವಾ ಪೂರ್ವ ಮೀಮಾಂಸಕರ ಉಲ್ಲೇಖವಿಲ್ಲದಿರುವುದನ್ನು ವಿಶೇಷವಾಗಿ ಗಮನಿಸಬೇಕು. ಈ ಜಗತ್ತು ಸೃಷ್ಟಿ ಎಂಬುದನ್ನು ಜೈನಧರ್ಮ ನಿರಾಕರಿಸಿದೆ. ವೇದಾಂತ ತತ್ವದೊಡನೆ ಸರ್ವಾರ್ಥಸಿದ್ಧಿಯ ಪ್ರತಿಪಾದನೆಯನ್ನು ಹೋಲಿಸಿ ವಿವೇಚಿಸುವುದು ಉಪಯುಕ್ತವಾಗಿರುತ್ತದೆಂಬ ಅಭಿಪ್ರಾಯವಿದೆ. ಜೀವ, ಅಜೀವ ಆತ್ಮ, ಜ್ಞಾನ, ಧರ್ಮ ಅಧರ್ಮ, ಅಸ್ತವ ಸಂವರ, ನಿರ್ಜರ, ಮೋಕ್ಷ ಇವನ್ನು ವಿಪುಲವಾಗಿ ಚರ್ಚಿಸಲಾಗಿದೆ.

            ನ ದುಃಖಂ ನಸುಖಂ ಯದ್ವದ್ ಹೇತುರ್ದೈಷ್ಟಶ್ಚಿಕಿತ್ಸಿತೇ |
ಚಿಕಿತ್ಸಾಯಾಂತು ಯುಕ್ತಸ್ಯ ಸ್ಯಾದುಃಖಮಥವಾ ಸುಖಂ ||
ನ ದುಃಖಂ ನ ಸುಖಂ ತದ್ವದ್ ಹೇತುಮೋಕ್ಷ ಸಾಧನೇ |
ಮೋಕ್ಷೋಪಾಯೋ ತು ಯುಕ್ತಸ್ಯ ಸ್ಯಾದ್ಧುಃ ಖಮಥವಾ ಸುಖಂ ||

ಎಂದು ಸರ್ವಾರ್ಥಸಿದ್ದಿಯಲ್ಲಿದೆ. (ರೋಗದಿಂದ ಮುಕ್ತನಾಗುವುದಕ್ಕೆ ದುಃಖವೂ ಕಾರಣವಿಲ್ಲ ಸುಖವೂ ಕಾರಣವಲ್ಲ. ಚಿಕಿತ್ಸೆಯಲ್ಲಿ ತೊಡಗಿದಾಗ ದುಃಖವಾಗಲಿ ಸುಖವಾಗಲಿ ಮುಖ್ಯವಲ್ಲ. ರೋಗ ದೂರವಾಗುವುದೇ ಮುಖ್ಯ. ಹಾಗೆಯೇ ಮುಕ್ತಿಸ್ಥಾನವನ್ನು ಪಡೆಯಲು ಪ್ರಯತ್ನಿಸುವಾಗ ದುಃಖವಾಗಲೀ ಸುಖವಾಗಲಿ ಮುಖ್ಯವಲ್ಲ)

ನೂರಾರು ಜನ ಕನ್ನಡ ಕವಿಗಳು ಪಂಪನಿಂದ ಹಿಡಿದು ಇಂದಿನವರೆಗೆ ಪೂಪಾರ ಮುಡಿಗೊಂದು ನುಡಿಮಲ್ಲಿಗೆಯಿಟ್ಟು ಅಡಿಗೆ ಪೊಡಮಟ್ಟು ಹಾಡಿದ್ದಾರೆ. ಇವರನ್ನು ಕೊಂಡಾಡಿದ ದೊಡ್ಡ ಕವಿಗಡಣದಲ್ಲಿ ಆಧುನಿಕರನ್ನು ಬಿಟ್ಟು ಪ್ರಾಚೀನರಲ್ಲಿ ಕೆಲವರನ್ನು ಹೆಸರಿಸಿದ್ದೇನೆ. ಅವರೆಲ್ಲರ ಪದ್ಯಗಳನ್ನು ಉದಾಹರಿಸಿಲ್ಲ.

೧. ಪಂಪ ೯೪೧, ಆದಿಪುರಾಣ ೧-೧೧

೨. ಪೊನ್ನ, ೯೬೦ ಶಾಂತಿಪುರಾಣ (ಪರೋಕ್ಷ ಪ್ರಸ್ತಾಪ) ೧-೨೯

೩. ಚಾವುಂಡರಾಯ, ೯೭೮ ೧-೭ (ಈ ಪದ್ಯ ಕೆಲವು ಹಸ್ತಪ್ರತಿಗಳಲಿಲ್ಲ ವೆನ್ನುತ್ತಾರೆ)

೪. ಶಾಂತಿನಾಥ, ೧೦೬೮, ಸುಕುಮಾರಚರಿತೆ ೧-೧೬

೫. ನಾಗಚಂದ್ರ, ೧೧೦ ಅ. ಮಲ್ಲಿನಾಥ ಪುರಾಣ ೧-೧೪ ಪಂಪರಾಮಯಣ ೧-೧೧ (ಅದೇ ಪದ್ಯ ಪುನರುಕ್ತ)

೬. ನಯಸೇನ, ೧೧೧೨, ಧರ್ಮಪರೀಕ್ಷೆ ೧-೧೪. ೧-೨೪

೭. ಮೇಘಚಂದ್ರ, ೧೧೪೮, ಸಮಾಧಿಶತಕ ವ್ಯಾಖ್ಯಾನ (ಗದ್ಯಗ್ರಂಥ)

೮. ಕರ್ಣಪಾರ್ಯ ೧೧೬೦ ನೇಮಿನಾಥ ಪುರಾಣ ೧-೧೦

೯. ಜಗದ್ಧಳ ಸೋಮನಾಥ, ಕರ್ಣಾಟಕ ಕಲ್ಯಾಣಕಾರಕ, ಕವಿಚರಿತೆ ಉದಾಹೃತ ಪದ್ಯ, ಪುಟ ೩೦೩

೧೦. ನೇಮಿಚಂದ್ರ. ೧೧೮೦ (ಅರ್ಧ) ನೇಮಿನಾಥಪುರಾಣ ೧-೨೪ ಲೀಲಾವತಿ ೧-೬

೧೧. ಅಗ್ಗಳ, ೧೧೮೯, ಚಂದ್ರಪ್ರಭ ಪುರಾಣ ೧-೨೦

೧೨. ಬ್ರಹ್ಮಶಿವ, ೧೧೮೦ ಸಮಯಪರೀಕ್ಷೆ ೧-೬, ೭-೮

೧೩. ಆಚಣ್ಣ, ೧೧೯೦ ವರ್ಧಮಾನ ಪುರಾಣ, ೧-೧೩

೧೪. ಜನ್ನ,. ೧೨೦೯ ಯಶೋಧರ ಚರಿತೆ ೧,೪ ಅನಂತನಾಥ ಪುರಾಣ ೧-೧೫ (ಅದೇ ಪದ್ಯ ಪುನರುಕ್ತ)

೧೫. ಗುಣವರ್ಮ ೨, ೧೨೧೫, ಪುಷ್ಪದಂತ ಪುರಾಣ ೧-೨೪

೧೬. ಪಾರ್ಶ್ವಪಂಡಿತ. ೧೨೨೨, ಪಾರ್ಶ್ವನಾಥ ಪುರಾಣ ೧-೧೮, ೧-೨೦

೧೭. ಕಮಲಭವ, ೧೨೩೫, ಶಾಂತಿಶ್ವರ ಪುರಾಣ ೧-೨೦

೧೮. ಮಹಾಬಲ, ೧೨೫೪ ನೇಮಿನಾಥ ಪುರಾಣ ೧-೧೩

೧೯. ಕೇಶಿರಾಜ, ೧೨೬೦, ಪರೋಕ್ಷ ಪ್ರಸ್ತಾಪ, ಪ್ರಯೋಗದಲ್ಲಿ ಬಂದಿದೆ ೧೧೨ ಸೂತ್ರ -೧

೨೦. ಕುಮುದೇಂದು, ೧೨೭೫, ಕುಮುದೇಂದು ರಾಮಾಯಣ ೧-೧೫

೨೧. ನಾಗರಾಜ, ೧೩೩೧ ಪುಣ್ಯಾಸ್ರವ ಚಂಪು, ೧-೧೦

೨೨. ಮಂಗರಾಜ, ೧,೧೩೫೦, ಖಗೇಂದ್ರಮಣಿ ದರ್ಪಣ ೨-೨೧೬

೨೩. ಬಾಹುಬಲಿ ಪಂಡಿತ, ೧೩೫೨ ಧರ್ಮನಾಥ ಪುರಾಣ ೧-೧೮

೨೪. ವೃತ್ತವಿಲಾಸ, ೧೩೭೦ ಧರ್ಮಪರೀಕ್ಷೆ ೧-೧೪

೨೫. ಮಧುರ, ೧೩೮೫ ಧರ್ಮನಾಥ ಪುರಾಣ, ೧-೨೧

೨೬. ಪಂಚಬಾಣ, ೧೬೧೪ ಭುಜಬಲಿಚರಿತೆ

೨೭. ದೇವಪ್ಪ ಕವಿ, ೧೫೨೫, ರಾಮವಿಜಯ ಚರಿತ್ರೆ

೨೮. ತೆರಕಣಾಂಬಿ ಬೊಮ್ಮರಸ, ೧೪೮೫ ಸನತ್ಕುಮಾರ ಚರಿತೆ ೧-೧೫

೨೯. ಸಾಳ್ವ, ಸಾಳ್ವಭಾರತ (ನೇಮಿನಾಥ ಚರಿತೆ) ೧-೧೬

೩೦. ಮಂಗರಸ ೩, ೧೫೦೮, ಜಯನೃಪಕಾವ್ಯ ೧-೮ ನೇಮಿಜಿನೇಶ ಸಂಗತಿ ೧-೧೬ ಶ್ರೀಪಾಲಚರಿತೆ ೧-೧೨

೩೧. ದೊಡ್ಡಯ್ಯ, ೧೫೫೦ ಚಂದ್ರಪ್ರಭಚರಿತೆ, ೧-೨೪

೩೨. ಬಾಹುಬಲಿ, ೧೫೬೦ ನಾಗಕುಮಾರ ಚರಿತೆ, ೧-೧೪

೩೩. ಪಾಯಣವರ್ಣಿ, ೧೬೫೯, ಜ್ಞಾನಚಂದ್ರ ಚರಿತೆ ೧-೨೧

೩೪. ಶ್ರುತಕೀರ್ತಿ, ೧೫೬೭, ವಿಜಯಕುಮಾರ ಚರಿತೆ ೧-೧೪

೩೫. ಚಿಕ್ಕಪದ್ದಣ್ಣ ಶೆಟ್ಟಿ, ೧೫೮೧ ಅನಂತನಾಥ ಚರಿತೆ ೧-೨೦

೩೬. ದೇವರಸಪಂಡಿತ, ೧೬೫೦ ಗುರುದತ್ತ ಚರಿತೆ (ಹಸ್ತಪ್ರತಿ)

೩೭. ಧರಣಿ ಪಂಡಿತ, ೧೬೫೦ ವರಾಂಗನೃಪಚರಿತೆ

ಪೂಜ್ಯಪಾದರಿಗೆ ಮಣಿಗವೆಸಗಿದ ಹಳೆಯ ಕನ್ನಡ ಕಬ್ಬಿಗರೋಳಿ ನಿಡಿದಾಗಿದೆ. ಆದರೆ ರನ್ನ, ಬಂಧುವರ್ಮ, ನೇಮಿಚಂದ್ರ ಮೊದಲಾದ ಕೆಲವು ಕವಿಗಳು ಪೂಪಾರ ಹೆಸರೇ ಎತ್ತುವುದಿಲ್ಲವೆಂಬುದನ್ನು ನಾವು ನೋಡಬೇಕು. ಪೊನ್ನ ಕೂಡ ಪ್ರಾಸಂಗಿಕವಾಗಿ ತನ್ನ ಗುರು ಜಿನಚಂದ್ರರಿಗೆ ಮಾಡುವ ಸ್ತುತಿ ಪದ್ಯದಲ್ಲಿ ಪೂಜ್ಯಪಾದರ ನೆನಪನ್ನು ಹೊಳೆಯುವಂತೆ ಮಾಡಿದ್ದಾನೆಯೇ ಹೊರತು ಅದು ನೇರ ನೆನಕೆಯಲ್ಲ. ಇನ್ನು, ಪಂಪನನ್ನೂ ಸೇರಿಸಿದಂತೆ ಹಲವು ಕವಿಗಳು ಜೈನ ಪೂರ್ವಾಚಾರ್ಯರನ್ನು ಗೌರವದಿಂದ ಸ್ಮರಿಸಬೇಕೆಂಬ ಸಂಪ್ರದಾಯಕ್ಕೆ ಕಟ್ಟುಬಿದ್ದು ಪೂಜ್ಯಪಾದರನ್ನು ಹೆಸರಿಸಿದ್ದಾರೆಯೇ ಹೊರತು ಅವರ ನೆನಪಿನಲ್ಲಿ ಮತ್ತಾವ ಹೆಚ್ಚಳವೂ ನನಗೆ ಕಂಡುಬರಲಿಲ್ಲ. ಹಾಜರಾತಿ ತೆಗೆದುಕೊಂಡಂತೆ ಕೆಲವರು ಆಚಾರ್ಯರ ಪಟ್ಟಿ ಕೊಟ್ತಿರುವುದು ಸಪ್ಪೆಯಾಗಿದೆ. ಕೆಲವರು ತಾವು ಬರೆದ ಒಂದೇ ಕಾವ್ಯದಲ್ಲಿ ಎರಡು ಮೂರು ಪದ್ಯಗಳಲ್ಲಿ, ಕೆಲವರು ತಾವು ಬರೆದ ಎರಡು ಮೂರು ಕಾವ್ಯಗಳಲ್ಲಿಯೂ ಪೂಜ್ಯಪಾದರನ್ನು ಜ್ಞಾಪಿಸಿಕೊಂಡಿದ್ದಾರೆ. ಇದೇ ರೀತಿ ಸಂಸ್ಕೃತ ಕವಿಗಳೂ ಸ್ಮರಣೆ ಮಾಡಿದ್ದಾರೆ. ನನ್ನ ಗಮನಕ್ಕೆ ಬಂದಿರುವ ಹೆಸರುಗಳು:

೧. ಪುನ್ನಾತ ಸಂಘದ ಜಿನಸೇನರು, ೭೮೩ ಹರಿವಂಶ ೧-೩

೨. ಜಿನಸೇನಾಚಾರ್ಯರು, ೮೩೭ ಧನಲಾಟೀಕೆ

೩. ಆಚಾರ್ಯವಾದಿರಾಜ ಸೂರಿ, ೧೧ ಶ.ದ ಪೂರ್ವಾರ್ಧ, ಪಾರ್ಶ್ವನಾಥ ಸರ್ಗ ೧

೪. ಮಹಾಕವಿ ಧನಂಜಯ

೫. ಆಚಾರ್ಯ ಜಯಕೀರ್ತಿ, ೧೧ ಶತಮಾನ, ಛಂದೋನುಶಾಸನ

೬. ಆಚಾರ್ಯ ಶುಭಚಂದ್ರ, ೧೫೫೧ ಪಾಂಡವ ಪುರಾಣ

೭. ಅರ್ಹದ್ಧಾಸ, ೧೩ ಶತಮಾನ, ಮುನಿಸುವ್ರತ ಕಾವ್ಯ ೧-೧೦

೮. ಇಂದ್ರಭೂತಿ, ಸಮಯಭೂಷಣ

೯. ಸೋಮದೇವ ಸೂರಿ, ಯಶಸ್ತಿಲಕ ಚಂಪೂ

೧೦. ದೇವಸೇನ, ದರ್ಶನಸಾರ

೧೧. ಆಚಾರ್ಯ ಶುಭಚಂದ್ರ, ಜ್ಞಾನಾರ್ಣವ ೧-೧೫

ಕೆಲವು ಕನ್ನಡ ಕವಿಗಳಂತೆ ಕೆಲವು ಸಂಸ್ಕೃತ ಕವಿಗಳು ಪೂಜ್ಯಪಾದರನ್ನು ನೆನೆದಿರುವುದರಲ್ಲಿ ಔಚಿತ್ಯವಿದ್ದರೂ ಸಾರ್ಥಕತೆಯಿಲ್ಲ. ನಮಗೆ ಬೇಕಾದ ಮಾಹಿತಿಗಳನ್ನು ಒದಗಿಸುವುದಿಲ್ಲ. ಇವಲ್ಲದೆ ಶ್ರವಣಬೆಳ್ಗೊಳ ಮೊದಲಾದ ಕೆಲವು ಶಾಸನಗಳಲ್ಲೂ ಪೂಪಾರನ್ನು ತುಂಬಾ ಭಕ್ತಿಗೌರವ ಪೂಜ್ಯತೆಯಿಂದ ಸ್ಮರಿಸಿದ್ದರೂ ಪೂಪ. ರ ಇತಿ ವೃತ್ತ ಕಟ್ಟುಕಥೆಗಳ ಕಟ್ಟಡದಲ್ಲಿ ಕದಲಿಸಲಾಗದಂತೆ ಕುಳಿತುಬಿಟ್ಟಿದೆ. ವಸ್ತುಸ್ಥಿತಿಗಿಂತ ಹೇಳಿಕೆ ಪ್ರಹೇಳಿಕೆಗಳು ಬಾಯಿಂದ ಬಾಯಿಗೆ, ಕಿವಿಯಿಂದ ಕಿವಿಗೆ ಕೈಕಾಲು ಮುಖ ಮೈ ಪಡೆದುಕೊಂಡು ಹಿಗ್ಗಿವೆ. ಜತೆಗೆ ಪೂಪಾ. ರಿಗೆ ಅಥವಾ ಅವರ ಗುಣಗಳಿಗೆ ಇತರ ಶ್ರೇಷ್ಠ ಆಚಾರ್ಯರನ್ನು ಹೋಲಿಸಿರುವುದುಂಟು. ಕುಂದಕುಂದಾನ್ವಯ ಮೂಲಸಂಘ ಪುಸ್ತಕ ಗಚ್ಛ ದೇಶಿಯಗಣದ ಮುಖಂಡನ್ರಾದ ಮೇಘಚಂದ್ರ ತ್ರೈವಿದ್ಯರನ್ನು ‘ತತ್ವಜ್ಞಾನದಲ್ಲಿ ಜಿನಸೇನ ವೀರಸೇನರಿಗೆ ಸಮಾನರು, ತರ್ಕದಲ್ಲಿ ಸಮಾನರು. ತರ್ಕದಲ್ಲಿ ಅಕಲಂಕ ದೇವರಿಗೆ ಸಮಾನರು, ವ್ಯಾಕರಣದಲ್ಲಿ ಪೂಜ್ಯಪಾದರಂತೆ ನಿಷ್ಣಾತರು’ ಎಂದು ಶ್ರಬೆ ೧೨೩ ನೆಯ ಶಾಸನದಲ್ಲಿ (೧೧೧೫) ಉಲ್ಲೇಖಿಸಿದೆ.

ಸಾರಾಂಶ : ಪೂಜ್ಯಪಾದರನ್ನು ಕುರಿತು ಇದುವರೆಗಿನ ವಿವೇಚನೆಯ ತಿರುಳು:

೧. ಪೂಜ್ಯಪಾದರು ಕುಂದಕುಂದ ಸಮಂತಭದ್ರರ ತರುವಾಯದವರು. ಪ್ರಾಯಃ ಕವಿಪರಮೇಷ್ಟಿಗಳು ಇವರ ಸಮಕಾಲೀನರಿರಬಹುದು. ಇವರ ಕಾಲ ನಿರ್ಧಾರ ಕ್ಲಿಷ್ಟ ವಾಗಿದೆ. ಸುಮಾರು ೫ನೆಯ ಶತಮಾನದ ಉತ್ತರಾರ್ಧದವರು. ಕನ್ನಡನಾಡಿನವರು, ಮೈಸೂರು ಜಿಲ್ಲೆಯವರು. ಕನ್ನಡದಲ್ಲಿ ಏನೂ ಬರೆದಂತಿಲ್ಲ. ದೇವನಂದಿ, ಜಿನೇಂದ್ರಬುದ್ಧಿ, ಪೂಪಾ– ಹೀಗೆ ವಿವಿಧ ಹೆಸರುಗಳಿವೆ. ಈ ಹೆಸರುಗಳಿಂದಾಗಿಯೂ ಇವರ ಸಂಬಂಧವಾಗಿ ಅನೇಕ ಚಮತ್ಕಾರಿಕ ದಂತಕಥೆಗಳು ಪ್ರಚಲಿತದಲ್ಲಿವೆ.

೨. ತಮ್ಮ ಸಮಕಾಲೀನ ಕರ್ನಾಟಕ, ತಮಿಳುನಾಡು, ತೆಲಗುದೇಶ ಮತ್ತು ಉತ್ತರ ಭಾರತವನೃನು (ಕಾಲುನಡಿಗೆಯಲ್ಲಿ) ಪ್ರವಾಸಿಸಿದ್ದಾರೆ. ಕೊಳ್ಳೇಗಾಲದಿಂದ ವಿದೇಹವರೆಗಿನ ಪಾದಯಾತ್ರೆಯಿಂದ ಅವರ ಪಾದಮಹಿಮೆ ಪವಾಡವಾಗಿ ರಂಗೇರಿತು. ಮನುಷ್ಯರು ಮಹಾತ್ಮರಾದರು. ಪಂಪ, ನಯಸೇನ, ಅಗ್ಗಳ, ಕಮಲಭವ, ನಾಗರಾಜ – ಇವರಿಗೆಲ್ಲಾ ಪೂಪಾ. ರ ಪಾದಗಳ ಮೇಲೆ ಕಣ್ಣು -‘ಪೂಪಾ. ರ ಪಾದಗಳು ಶಾಶ್ವತ ಪದವನ್ನೀಯಲಿ’ ಎಂದು ಬೇಡುತ್ತಾರೆ. ಈ ಭಾವನೆ ಬೆಳೆದು ಬಲಿತು ಪೂಪಾ. ರು ಗಗನಗಮನ ಮಹಾತ್ಮ್ಯ ಪಡೆದು ವಿದೇಹ ಕ್ಷೇತ್ರಕ್ಕೆ ವಿಹಾರ ಹೋಗಿ ಬಂದ ಕಾಲ್ಪನಿಕ ವಿಚಾರವನ್ನು ಚಾವುಂಡರಾಯನಿಂತ ಪಾಯಣವರ್ಣಿವರೆಗೆ ಹಬ್ಬಿಸಿದ್ದಾರೆ.

೩. (ಅ) ಪೂಜ್ಯಪಾದರ ಬದುಕಿನ ಸುತ್ತ ಇಂಥ ಆವಾಸ್ತವ ಕಾಲ್ಪನಿಕ ಪರಿವೇಷವೊಂದು ಪ್ರಭಾವಳಿಯಂತೆ ಗೂಡು ಕಟ್ಟಿಕೊಂಡಿತು. ಇದರೊಳಗೆ ಮತ್ತಷ್ಟು ಮರಿಗಳು ಹುಟ್ಟಿಕೊಂಡುವು. ಪಾಪೂ. ರಿಗೆ ಪಾಣಿನಿಯೊಡನೆ ಬಂಧುತನವನ್ನು ಆರೋಪಿಸಿದ್ದು ಹೀಗೆ. ಪೂಜ್ಯಪಾದರು ಶಬ್ದಪಾರಗರು. ಅದರಿಂದ ಮಹಾ ವೈಯಾಕರಣಿ ಪಾಣಿನಿಯೊಡನೆ ಇಂಥ ಸಂಬಂಧಕಟ್ಟಿ ಪೂಜ್ಯಪಾದ ಮೇಲ್ಮೈಯನ್ನು ಸ್ಥಾಪಿಸಲೆತ್ನಿಸಿದರು. ವೃತ್ತವಿಲಾಸ ಮೊದಲಾದ ಕವಿಗಳು ಇದನ್ನು ನಿಜವೆಂದೇ ಸ್ವೀಕರಿಸುವುದು ಅಭಾಸವಾಗಿದೆ.

(ಆ) ಪಾಣಿನಿಯೊಡನೆ ಸಂಬಂಧ ಕಲ್ಪಿಸಿದಂತೆ, ನಾಗಾರ್ಜುನನ ಜತೆಗೂ ನಂಟಸ್ತಿಕೆಯನ್ನು ಸೃಷ್ಟಿಸಿದ್ದಾರೆ. ಪೂಜ್ಯಪಾದರು ಕಲ್ಯಾಣಕಾರಕವನ್ನು ರಚಿಸಿದ್ದರಿಂದ, ಅವರ ವೈದ್ಯಜ್ಞಾನಾಧಿಕ್ಯವನ್ನು ಲೋಕಕ್ಕೆ ಸಾರಲು ನಾಗಾರ್ಜುನನೊಡನೆ ನಿಜದೂರವಾದ ನಂಟನ್ನು ಗಂಟುಹಾಕಿದ್ದಾರೆ. ಬಾಹುಬಲಿ ಇದು ನಿಜವೆಂದು ನಂಬಿ ಮೋಸ ಹೋಗಿದ್ದಾರೆ.

(ಇ) ಇವರ ಕಾಲುತೊಳೆದು ನೀರು ಚಿಮುಕಿಸಿದರೆ ಲೋಕ ಚಿನ್ನವಾಗುತ್ತದೆಂಬುದು ಅವೈಜ್ಞಾನಿಕ ಉತ್ಪ್ರೇಕ್ಷಾಲಂಕಾರಕ್ಕೆ ಅತ್ಯುತ್ತಮ ಉದಾಹರಣೆ.

೪. ಪೂಜ್ಯಪಾದರು ಮಹಾಮೇಧಾವಿಗಳೆಂಬುದು ಪ್ರಶ್ನಾತೀತ ವಿಚಾರ. ಅವರ ಅಗಾಧ ಬುದ್ಧಿಶಕ್ತಿಯನ್ನು ಬಹುಶ್ರುತತ್ವವನ್ನು, ಹಲವು ಕ್ಷೇತ್ರಗಳಲ್ಲಿ ಅವರಿಗಿದ್ದ ಪ್ರವೇಶ ಮತ್ತು ಪರಿಶ್ರಮಗಳನ್ನು ಕನ್ನಡ ಸಂಸ್ಕೃತ ಪ್ರಾಕೃತ ಲೇಖಕರು ನಮಸ್ಕಾರ ಪೂರ್ವಕವಾಗಿ ನೆನೆದಿದ್ದಾರೆ. ಕವಿಗಮಕಿವಾದಿ (ಶಾಂತಿನಾಥಕವಿ) ವಾಣೀವಿಲಾಸ ಪದವಾಕ್ಯಕೋವಿದ (ನೇಮಿಚಂದ್ರ) ಅನೂನಗುಣಾಂಬುಧಿ (ಆಚಣ್ಣ) ಅಚಿಂತ್ಯ ಮಹಿಮಾ (ಆಚಾರ್ಯಾ ವಾದಿರಾಜ) ಪೂಜ್ಯಪಾದಃ ಸದಾ ಪೂಜ್ಯಪಾದಃ (ಶುಭ ಚಂದ್ರ) ಎಂಬ ನೆಗಳ್ತೆಯ ಗುಣಾವಳಿ ಲೋಕಕಾರುಣ್ಯಬುದ್ಧಿಯಿಂದ ಅಹಿಂಸಾ ಔಷಧಿಗಳಿಂದ ಮಾಡಿದ ಚಿಕಿತ್ಸಕ ವಿಧಾನ ಅನನ್ಯವಾದುದು.

೫. ಪೂಜ್ಯಪಾದರು ಸೃಜನಶೀಲ ಶಕ್ತಿಯ ಮಹಾನ್ ಲೇಖಕರು. ಇಂದ್ರಭೂತಿ ತನ್ನ ಸಮಯಭೂಷಣಗಳಲ್ಲಿ ಏಲಾಚಾರ್ಯಃ ಪೂಜ್ಯಪಾದೋ ಸಿಂಗನಂದೀ ಮಹಾ ಕವಿ: ಎಂದು ಹೇಳಿದ್ದಾನೆ. ಅಂದರೆ ಮಹಾಕವಿಗಳು. ಪೂಜ್ಯಪಾದರು ಜಟಾಸಿಂಹನಂದಿ ಆಚಾರ್ಯರು ಇವರು ಮೂವರೂ ಮಹಾಕವಿಗಳು. ಬ್ರಹ್ಮಶಿವ, ಪಾರ್ಶ್ವಪಂಡಿತ, ಗುಣವರ್ಮ, ವೃತ್ತವಿಲಾಸ ಮೊದಲಾದ ಕವಿಗಳೂ ಪೂಜ್ಯಪಾದರು ರಚನಾ ಸಾಮರ್ಥ್ಯವನ್ನು ಸ್ತುತಿಸಿದ್ದಾರೆ. ಅವರ ಕೃತಿರಚನೆಯ ವೈಶಿಷ್ಟ್ಯವೆಂದರೆ ಒಂದಕ್ಕೊಂದು ಸಂಬಂಧಪಡೆದ ಕ್ಷೇತ್ರಗಳಲ್ಲಿ ತೋರಿಸುವ ಪರಿಣತಿ. ವ್ಯಾಕರಣ ಪಂಡಿತರು. ವೈದ್ಯವಿದ್ಯೆಯಲ್ಲಿ ನಿಪುಣರು. ಶಬ್ದಮಾಡಿ ಹಿಡಿದು ನೋಡುವುದು ಉತ್ತರಧ್ರುವ ಜನನಾಡಿ ಹಿಡಿದು ನೋಡುವುದು ಪಡುವಣ ಧ್ರುವ. ಸ್ವತಂತ್ರ ಕೃತಿಗಳಲ್ಲದೆ ಟೀಕೆ, ವ್ಯಾಖ್ಯಾನ ಬರೆದಿದ್ದಾರೆ. ಉಪಲಬ್ದ ಕೃತಿಗಳಲ್ಲದೆ ಅನುಪಲಬ್ದ ಕೃತಿಗಳನ್ನೂ ದೃಷ್ಟಿಯಲ್ಲಿರಿಸಿ ಹೇಳುವುದಾದರೆ, ಛಂದಸ್ಸಿನ ವಿಚಾರದಲ್ಲೂ ಕುಶಲತೆ ತೋರಿದ್ದಾರೆ. (ಮುಂಗರಸ ೩, ನೇಮಿಜಿನೇಶ ಸಂಗತಿ)

೬. (ಅ) ಪೂಜ್ಯಪಾದರ ಮತ್ತು ಅವರ ಕೃತಿಗಳ ಸಂಬಂಧವಾದ ವಿಪುಲ ವಾಙ್ಮಯವಿದೆ. ಪೊನ್ನನ್ನು ತನ್ನ ಗುರು ಜಿನಚಂದ್ರರ ವಿಚಾರವಾಗಿ ಸ್ತುತಿಸುತ್ತಾ ಹೇಳಿದ ‘ಪೂಜ್ಯವಾದ ಚರಿತ್ರೆ’ (೧-೨೯) ಎಂಬುದನ್ನು ಉಲ್ಲೇಖಿಸಿ ಜಿನಚಂದ್ರರು ’ಪೂಜ್ಯಪಾದ ಚರಿತ್ರೆ’ ಎಂಬ ಕೃತಿಯನ್ನೂ ರಚಿಸಿದ್ದರೆಂಬ ಅಭಿಪ್ರಾಯವಿದೆ. ನಾನು ಇದನ್ನು ಒಪ್ಪುವುದಿಲ್ಲ. ಅದು ವ್ಯಕ್ತಿ ಚಾರಿತ್ರ್ಯ ಕುರಿತ ವಿಶೇಷಣವೇ ಹೊರತು ಕೃತಿನಿರ್ದೇಶನವಲ್ಲ. ದೇವಚಂದ್ರ ಕವಿ ‘ಪೂಜ್ಯಪಾದ ಚರಿತೆ’ ರಚಿಸಿದ್ದಾನೆಂಬುದು ಗಮನಿಸತಕ್ಕ ವಿಚಾರ.

(ಆ) ಪೂಜ್ಯಪಾದರ ಕೃತಿಗಳಿಗೆ ವೃತ್ತಿ ವ್ಯಾಖ್ಯಾನಗಳಿವೆ. ಅಭಯನಂದಿ (ಸು ೧೦ ಶ) ಮಹಾವೃತ್ತಿ ಪ್ರಭಾಚಂದ್ರ ಶಬ್ಧಾಂಭೋಜಭಾಸ್ಕರನ್ಯಾಸ, ಆರ್ಯಶ್ರುತ ಕೀರ್ತಿ, (೧೨ ಶ) ಪಂಚವಸ್ತು ಪ್ರಕ್ರಿಯಾ, ಮೇಘಚಂದ್ರ (೧೧೪೮) ಸಮಾಧಿಶತಕ ವ್ಯಾಖ್ಯಾನ ಚಾರುಕೀರ್ತಿ ಪಂಡಿತಾಚಾರ್ಯ (ಸು. ೧೧೫೦)

ಶಬ್ದಾರ್ಣವ ಪ್ರಕ್ರಿಯಾ, ಸೋಮದೇವ (೧೧೭೦) ಶಬ್ದಾವರ್ಣವ ಚಂದ್ರಿಕಾ, ಜಗದ್ದಳ ಸೋಮನಾಥ (೧೧೭೫) ಕರ್ನಾಟಕ ಕಲ್ಯಾಣಕಾರಕ ಇತ್ಯಾದಿ

೭. ಪೂಜ್ಯಪಾದ ಎಂಬ ಹೆಸರಿನ ಆಚಾರ್ಯರು ಒಬ್ಬರಿಗಿಂತ ಹೆಚ್ಚಾಗಿರಬಹುದೆಂಬ ಸೂಚನೆಯಲ್ಲಿ ಸತ್ಯಾಂಶ ವಿದೆಯೆಂದು ತೋರುತ್ತದೆ.

೮. ಪೂಜ್ಯಪಾದರನ್ನು ಕುರಿತು ಇದುವರೆಗೆ ವಿಫುಲವಾದ ಬರವಣೆಗೆ ಬಂದಿದೆ ಯಾದರೂ ಅದು ಚದರಿಹೋಗಿದೆ. ಕನ್ನಡ ಇಂಗ್ಲೀಷ್ ಹಿಂದಿ ಭಾಷೆಗಳಲ್ಲಿರುವ ಸಾಮಗ್ರಿಯನ್ನು ಪೃಥಕ್ಕರಿಸಿ ಐತಿಹಾಸಿಕ ಪ್ರಜ್ಞೆಯಿಂದ ವಸ್ತುನಿಷ್ಠವಾಗಿ ವಿವೇಚಿಸಿವುದಕ್ಕೆ ವೇದಿಕೆ ಸಿದ್ಧವಾಗಿದೆ.

ಪೂಜ್ಯಪಾದರ ಸಂಬಂಧವಾಗಿ ಸಂಶೋಧನೆಗೆ ಸಹಾಯಕ ಗ್ರಂಥಸೂಚಿ : ೧.

೧. Dr. F. Kiclhorn, on the Jainendra – Vyakarana, Indian Antiquary X, pp 75-79, March 1881

೨. K.B. Pathak, Pujyapada and the authorship of Jainendra Vyakarna, Indian Antiquary XII, PP 19-21 January 1883

J.P. Jain : 1 `The Jaina Sources of the History of Ancient India, p. 161

M.V. Krishna Rao : The Gangas of Talkad (1936)

೩. Dr. B. Sheik Ali, History of the Western Ganges. 1976

೪. S. Srikanta Sastry.

A) Quarterly Journal of Mythic Society XL P 68

B) Jain Traditions in Rajavali Kathe Antiquary 7-1

೫. Jyoti Prasad Jain, Jaina Gurus of the name Pujyapada, Jaina Antiquary, 16-1, II June 1950 PP 1-6 December 1950 PP 46-53, 17-1 June 1951

೬. ಜಿನೇಂದ್ರವರ್ಣಿ, ಜೈನೇಂದ್ರ ಸಿದ್ದಾಂತಕೋಶ, ಭಾರತೀಯ ಜ್ಞಾನಪೀಠ ಪ್ರಕಾಶನ ಸಂಪುಟ ೨.

೭. ಎ. ಶಾಂತಿರಾಜಶಾಸ್ತ್ರಿ (ಕರ್ನಾಟಕ ಟೀಕಾಕಾರರು ಮತ್ತು ಸಂಪಾದಕರು) ದಶಭಕ್ತಿ ೧೯೩೪

೮. ಕೆ. ಭುಜಬಲಶಾಸ್ತ್ರಿ, ಸಂಸ್ಕೃತ ವಾಙ್ಮಯಕ್ಕೆ ಜೈನಕವಿಗಳ ಕಾಣಿಕೆ, ಪುಟ ೩೬-೪೩, ೧೯೭೧

೯. ಪೂಲಚಂದ್ರ ಶಾಸ್ತ್ರಿ. (ಸಂ) ಸರ್ವಾರ್ಥಸಿದ್ಧಿ, ವಾರಣಾಸಿ, ಪುಟ ೮೪, ೧೯೫೫

೧೦. ಪಂಡಿತ ನಾಥೂರಾಮ ಪ್ರೇಮಿ, ಜೈನ ಸಾಹಿತ್ಯ ಔರ್ ಇತಿಹಾಸ್ (ಹಿಂದಿ) ಪುಟ ೨೨, ಎರಡನೆಯ ಮುದ್ರಣ, ಮುಂಬಯಿ ೧೯೫೬

೧೧. ಡಾ. ಹಿರಾಲಾಲ್ ಜೈನ್, ಭಾರತೀಯ ಸಂಸ್ಕೃತಿಗೆ ಜೈನಧರ್ಮದ ಕೊಡುಗೆ (ಹಿಂದಿ) ಕನ್ನಡ ಅನುವಾದ, ಮಿರ್ಜಿ ಅಣ್ಣಾರಾಯ, ೧೯೭೧

೧೨. ಡಾ. ಆ.ನೇ. ಉಪಾಧ್ಯೆ Chamundarya and Literary Predecessors, Journal of Karnataka University 4-2, June 1960

೧೩. B. A. Saletore, Medeival Jainism P ೨೩, ೧೯೩೮

೧೪. R. P. B. Desai, Jainism in South India and some Jain Epigraphs 1957.

೧೫. D. C. Sarkar Successors of Satvahanas, P-300

೧೬. EpigraphiaCarnatica, II

೧೭. ದೇವಚಂದ್ರ (೧೭೭೦-೧೮೪೨) : ರಾಜಾವಳೀ ಕಥೆ, (ಹಸ್ತಪ್ರತಿ)

೧೮. ರಾ. ನರಸಿಂಹಾಚಾರ್, ಕರ್ನಾಟಕ ಕವಿಚರಿತೆ, ಪ್ರಥಮ ಸಂಪುಟ, ಪರಿಶೋಧಿತ ಮುದ್ರಣ ೧೯೬೧ ಪುಟ ೫, ೬, ೭

೧೯. DR. G. Buhler : Book Notice (of Prof. P. Peterson’s A Second Report of Operations in Search of Sanskrit MSS in the Bombay Circle JBBRAS 1884) #.q.14, 1885 P-355

೨೦. ಆದಿಪುರಾಣ, ಶಾಂತಿಪುರಾಣ, ಚಾವುಂಡರಾಯಪುರಾಣ ಮೊದಲಾದ ಹಲವಾರು ಕನ್ನಡ ಜೈನ ಪುರಾಣ ಕಾವ್ಯಗಳು.

೨೧. ಶಾಕಟಾಯನ ವ್ಯಾಕರಣಮ್ ಸಂ : ಪಂಡಿತ ಶಂಭುನಾಥತ್ರಿಪಾಠಿ ಭಾರತೀಯ ಜ್ಞಾನಪೀಠನ್, ೧೯೭೧.