೧. ರನ್ನಮಹಾಕವಿ ತನ್ನ ಅಜಿತ ತೀರ್ಥಕರ ಪುರಾಣದಲ್ಲಿ ಅತ್ತಿಮಬ್ಬೆಯ ಹಿರಿಮೆ ಮತ್ತು ಜಿನಧರ್ಮ ಪ್ರಭಾವನೆ, (ಆಕೆಯ ಸಮಕಾಲಿಕರೊಂದಿಗೆ ಹೋಲಿಸುತ್ತ) ಎಷ್ಟು ಉನ್ನತೋನ್ನತವಾದದ್ದು ಎಂದು ನಿರೂಪಿಸುತ್ತ ಈ ವೃತ್ತಪದ್ಮವನ್ನು ರಚಿಸಿದ್ದಾನೆ (೧೨-೯):

            ಪಿರಿಯಂ ಬೂತುಗನಾತನಿಂ ಮಮಳನಾತಂಗಂ ನೊಳಂ ಬಾಂತಕಂ
ಪಿರಿಯಂ ನೆಟ್ಟನೆ ದಾನಧರ್ಮದೆಡೆಯೊಳ್ ಚಾವುಂಡರಾಯಂ ಕರಂ
ಪಿರಿಯಂ ಶಂಕರಗಂಡನಲ್ತೆ ಪಿರಿಯಂ ತದ್ಭಾರಮಂ ಪೊತ್ತು ನಿ
ತ್ತರಿಸುತ್ತಿರ್ಪುದರಿಂದೆ ನೀನೆ ಪಿರಿಯೈ ಶ್ರೀದಾನಚಿಂತಾಮಣೀ
||

ಹೀಗೆ ಹಿರಿಯನೆನಿಸಿದ ಬೂತುಗನು (೯೩೮-೬೧) ಗಂಗ ಮಾಂಡಲಿಕರಲ್ಲಿ ಮೂರ್ಧನ್ಯ ಪ್ರಾಯನೆನಿಸಿದ್ದಾನೆ. ಬೂತುಗ, ಬೂತಾರ್ಯ್ಯ, ಭೂತುಗ, ಬುತಯ್ಯ ಎಂಬ ಬೇರೆ ಬೇರೆ ರೂಪಗಳು ಬಳಕೆಯಾಗಿವೆ. ಈತನಿಗಿಂತಲೂ ಮೊದಲು ಇನ್ನೊಬ್ಬ ಬೂತುಗ – ಬೂತಗೇಂದ್ರನು ಆಗಿಹೋಗಿದ್ದನು. ಆತನು ರಾಜಮಲ್ಲನ ತಮ್ಮ. ಆತ್ರನಿಗೆ ಎರಡನೆಯ ಲಕ್ಷ್ಮೀಯ ರೂಪದಲ್ಲಿ, ವಿಶಾಲ ವಕ್ಷಸ್ಥಳದಲ್ಲಿ ನೆಲೆಸಲು ಅಬ್ಬಲಬ್ಬಾಳು ಬಂದಳು. ಆಕೆ ರಾಷ್ಟ್ರ ಕೂಟ ಚಕ್ರವರ್ತಿ ಅಮೋಘವರ್ಷ ವಲ್ಲಭನ ಮಗಳು (ಎಂ. ಎ. ಆರ್. ೧೯೧೯, ಪು. ೨೧-೨೪. ೯ನೆಯ ಶ.) ಆಕೆಗೆ ಅಬ್ಬಲಬ್ಬಾ ಎಂಬುದರೊಂದಿಗೆ ಚಂದ್ರೋಬಳಬ್ಬಾ ಎಂಬ ಹೆಸರೂ ಇತ್ತು [IWG ಸಂಖ್ಯೆ. ೧೨೦: ಕ್ರಿ.ಶ. 906). ಅದರಿಂದ ಆತನನ್ನು ಒಂದನೆಯ ಬೂತುಗ ಎಂದು ಗುರುತಿಸುತ್ತಾರೆ; ಆತನ ಮಗನೇ ಎಱೆಗಾಂಗ (ಎಱೆಯಪ್ಪ).

ರನ್ನನು ಹೆಸರಿಸಿರುವ ಬೂತುಗನು ಇಮ್ಮಡಿ ಬೂತುಗ. ಈತನಿಗೆ ನನ್ನಿಯ ಗಂಗ, ಜಯದತ್ತರಂಗ, ಕೋಣೆಯಗಂಗ, ಗಂಗಪೆರ್ಮ್ಮಾಡಿ, ಗಂಗನಾರಾಯಣ, ಗಂಗಗಾಂಗೇಯ, ಸತ್ಯವಾಕ್ಯ- ಮುಂತಾದ ಪ್ರಶಸ್ತಿಗಳಿವೆ [ಎಕ. ೯ (ಪ.) ಬೇ. ೩೮೮ (೫ ಬೇ ೧೨೩) ಕ್ರಿ.ಶ. ೯೫೪. ಬಸ್ತಿಹಳ್ಳಿ (ಹಾಸನ ಜಿ/ ಬೇಲೂರು ತಾ),; ಎಕ ೮ ನಗರ ೩೫. ೧೦೭೭; ಎಕ. ೨. ೧೭೧. ೧೦. ಶ. ಇತ್ಯಾದಿ]. ಆತಕೂರು ಕಾಳಗದಲ್ಲಿ ಚೋಳರಾಜರಾಜಾದಿತ್ಯನನ್ನು ಕೊಂದ ಸಾಹಸಕ್ಕಾಗಿ ರಾಷ್ಟ್ರಕೂಟ ಚಕ್ರವರ್ತಿ ಮೂರನೇ ಕೃಷ್ಣನು ಬೆಳ್ವಲ ಮುನ್ನೂರು ಪುರಿಗೆರೆ ಮುನ್ನೂರನ್ನು ಕ್ರಿ.ಶ ೯೪೯-೫೦ ರಲ್ಲಿ ಕೊಟ್ಟನು [ಎ.ಇಂ. ೬ ಪು. ೫೦]. ಕನ್ನರದೇವನ ಭಾವಂ ಮಹಾಮಾಣ್ಡಲಿಕ ಪೆರ್ಮಾಡಿ ಬೂತಾರ್ಯ್ಯ ಎಂದೂ ಹೇಳಿದೆ [ಸೌ.ಇ.ಇ. ೧೧, ೩೬. ೯೪೨. ರೋಣ (ಧಾರವಾಡ ಜಿಲ್ಲೆ)]

ಇಮ್ಮಡಿ ಬೂತುಗನಿಗೆ ಪದ್ಮಬ್ಬೆ ಅರಸಿಯು ಹೆಂಡತಿಯಾಗಿದ್ದಳೆಂದು ನರೇಗಲ್ ಶಾಸನ ಸಮೂದಿಸಿದೆ [ಸೌ.ಇ.ಇ. ೧೧, ೩೮. ೯೫೦. ಪು. ೨೩-೨೪] ಆತನ ಮನೋನಯನ ವಲ್ಲಭೆ ಪ್ರತ್ಯಕ್ಷ ಕಲಿಕಾಲಗೌರಿಲಕ್ಷ್ಮೀ ಸಮನ್ವುತ ಶ್ರೀಮತ್ಪದ್ಮಬ್ಬಬರಸಿಯರ್ತ್ತಮ್ಮ ಬಸದಿಗೆ ದಾನಸಾಲಗೆ…….. ಎಂದಿದೆ. ರಾಷ್ಟ್ರಕೂಟ ಮೂರನೆಯ ಕೃಷ್ಣ, ಸೋದರಿಯಾದ ರೇವಕ ನಿಮ್ಮಡಿಯು ಬೂತುಗನ ಎರಡನೆಯ ಹೆಂಡತಿಯಾಗಿದ್ದುದನ್ನು ಗಾವರವಾಡ ಮತ್ತು ಹೊಂಬುಜ ಶಾಸನಗಳು ಹೇಳಿವೆ [ಎಇ. ೧೫, ೨೩. ೧೦೭೧-೭೨.; ಎಕ. ೮, ನಗರ. ೩೫. ೧೦೭೭ ಹೊಂಬುಜ]. ಈ ಅಂಶವನ್ನು ಇತರ ಶಾಸನಗಳೂ ಪುಷ್ಟೀಕರಿಸಿವೆ [ಎಇ. ೪. ಪು. ೩೫೨; ಎಇ. ೬. ಪು. ೭೧.; ಫ್ಲೀಟ್, ಡಿಕೆಡಿ, ಪು. ೩೦೪]. ಪದ್ಮಬ್ಬೆ (ಪದ್ಮಬ್ಬರಸಿ, ಪದ್ಮಾವತಿ), ರೇವಕನಿಮ್ಮಡಿ ಎಂಬ ಇಬ್ಬರು ಹೆಂಡತಿಯರಲ್ಲದೆ ಇನ್ನೂ ಇಬ್ಬರು ಹೆಂಡತಿಯರಿದ್ದರೆಂದು ಶಾಸನಗಳಿಂದಲೇ ತಿಳಿದುಬರುತ್ತದೆ: ಕಲ್ಲಬ್ಬಾ ಎಂಬ ಮಡದಿಯು ವಿಚಾರ ಕಾದಲೂರು ಶಾಸನದಲ್ಲಿದೆ [ಕಾದಲೂರು ಶಾಸನ, ಕ್ರಿ.ಶ. ೯೬೨; IWG : ಪು. ೪೪೬-೪೭]: ಈಕೆಯೇ ಮಾರಸಿಂಹನ ತಾಯಿ. ಮಾರಸಿಂಹನು ತನ್ನ ತಾಯಿ ಕೊಂಗಲ ದೇಶದಲ್ಲಿನ ಕಾದಲೂರು ಎಂಬ ಹಳ್ಳಿಯಲ್ಲಿ ಕಟ್ಟಿಸಿದ ಬಸದಿಯ ಗುರು ಏಳಾಚಾರ್ಯರಿಗೆ, ರಿಷಿಮುನಿಕಂತಿಯರಿಗೆ ಚತುರ್ವಿಧ ದಾನವಾಗಿ, ಆ ಊರನ್ನು ಜಿನಾಭಿಷೇಕ ಜಲವನ್ನು ಧಾರೆಯೆರೆದು, ಬಿಟ್ಟುಕೊಟ್ಟನು; ಕಲ್ಲಬಾಳು ಕಟ್ಟಿಸಿದ ಕಾದಲೂರು ಜಿನಾಲಯದಲ್ಲಿ ಭಿತ್ತಿಯ ವರ್ಣಚಿತ್ರಗಳು ರೇಖಾಚಿತ್ರಗಳು ಪ್ರಖ್ಯಾತವಾಗಿದ್ದುವು.

ಬೂತುಗನ ಮತ್ತೊಬ್ಬ ಮಡದಿಯಾದ ಸರಮಬ್ಬೆಯು ಕುರ್ಗಲ್ಲನ್ನು ಆಳುತ್ತಿದ್ದಳು [ಎಕ. ೪ (ಪ.) ಹುಣಸೂರು ೯೨. ಪು. ೨೮. ಸಾಲು : ೫-೭.; IWG. ಸಂಖ್ಯೆ. ೧೨೩. ಕೂರಗಲ್ಲು (ಮೈಸೂರುಜಿ / ಪೆರಿಯಾ ಪಟ್ಟತಾ)]. ಹೀಗೆ ಬೂತುಗನಿಗೆ ಒಟ್ಟು ನಾಲ್ವರು ಹೆಂಡತಿಯರು. ಕೊಪ್ಪಳದಲ್ಲಿ ಇತ್ತೀಚೆಗೆ ಪತ್ತೆಯಾಗಿ ನನಗೆ ಲಭ್ಯವಾದ ಶಾಸನ ಸಂಪತ್ತಿನಲ್ಲಿ ಈ ಬೂತುಗನ ಮತ್ತು ಈತನ ಮಡದಿ ಹಾಗೂ ಮಕ್ಕಳಿಗೆ ಸಂಬಂಧಿಸಿದ ಸಂಗತಿಗಳಿವೆ. ಹೊಸ ಶಾಸನಗಳಲ್ಲಿರುವ ಕೆಲವು ಹೊಚ್ಚ ಹೊಸ ಮಾಹಿತಿಗಳನ್ನು ಹೊರಗೆಡವಲು ಇಲ್ಲಿ ಪ್ರಯತ್ನಿಸಿದ್ದೇನೆ.

೧. ಶ್ರೀ ಬೂತುಗ ಪೆರ್ಮ್ಮಾಡಿಯ ಮಗಳ್
ಕುನ್ದಣರಸಿಯರಾರಾಧನಾ ವಿಧಾನದಿಂ ರ
ತ್ನತ್ರಯಮಂ ಸಾಧಿಸಿಕೊಣ್ಡು ದೇವಲೋಕಕ್ಕೆ ಪೋ
ದಳ್ ಚಲದಂಕ ಕಾರ್ತಿ

ಎಂಬುದಾಗಿ ಹತ್ತನೆಯ ಶತಮಾನದ ಶಾಸನಲಿಪಿಯಿಂದ ಕೂಡಿದ ಅತೇದಿ ಹಾಗೂ ಅಸಮಗ್ರ ತ್ರುಟಿತ ಶಾಸನದಲ್ಲಿದೆ.

೨. ಕ್ರಿ.ಶ. ೧೦೦೭ ರಲ್ಲಿ ಚಂಗಂಬೆ (ಚಂಗಲದೇವಿ) ಯು ಸುಗತಿಯನ್ನು ಸಾಧಿಸಿದಳೆಂದು ಹೇಳುವ ಇನ್ನೊಂದು ಶಾಸನದಲ್ಲಿ, ಮೇಲಿನ ಶಾಸನದ ಮಾತಿಗೆ ಸೇರುವ ಇನ್ನಷ್ಟು ಸಾಮಗ್ರಿಯಿದೆ:

            ಆಗಸೆಯರ್ಕ್ಕಳೊಳ್
ನೆಗೞ್ದ ಪೆಂಪಿನ ಕು
ನ್ದಣ ಸೋಮಿ ದೇವಿಯುಂ
ಚಂಗಲದೇವಿಯುಂ ಕೞೆ
ಯೆ ದಾನದ ಧರ್ಮ್ಮದ
ಮಾತೇ ಪೋಯ್ತುಂ ಮತ್ತಂಗ

ಇದರಿಂದಾಗಿ, ಈಗಾಗಲೇ ಉಪಲಬ್ಧವಾಗಿರುವ ಅನ್ಯಶಾಸನಗಳಲ್ಲಿರುವ ಕುನ್ದಣ ಸಾಮಿದೇವಿಯನ್ನು ಕುರಿತ ವಿಸ್ತಾರವಾದ ಮಾಹಿತಿಯೊಂದಿಗೆ [ಎಕ. ೯ (ಪ.) ಸಕಲೇಶಪುರ. ೩೧. ೧೦ ಶ. ಬಾಳ್ಲು.; IWG ೧೯೮೪ : ಸಂಖ್ಯೆ. ೧೫೯. ಕ್ರಿ.ಶ. ೯೬೮-೬೯: ಪು. ೫೦೪-೫೦೯] ಈ ಹೊಸ ಮಾಹಿತಿಯೂ ಸೇರಿಕೊಂಡು ಆಕೆಯ ಸಮಷ್ಟಿ ಚಿತ್ರಸಂಪುಟ ಸಿದ್ಧವಾದಂತಾಗಿದೆ. ಹುಂದಣಸಾಮಿದೇವಿಯು ಕೊಪ್ಪಳ (ಕುಪಣ ಶ್ರೀ ತೀರ್ಥ) ದಲ್ಲಿ ಮುಡಿಪಿದಳೆಂಬುದು ಹೊಸ ವಿಚಾರ.

೩. ಬೂತುಗನಿಮ್ಮಡಿಗೆ ಮರುಳದೇವ, ಕುಂದಣಸಾಮಿ, ಇಮ್ಮಡಿ ಮಾರಸಿಂಹದೇವ, ರಾಜಮಲ್ಲ, ನೀತಿಮಾರ್ಗ ಗೋಯಿಂದರ, ಮತ್ತು ವಾಸವ (ಹೆಂ. ಕಂಚಲದೇವಿ)- ಎಂಬ ಮಕ್ಕಳಿದ್ದುದಾಗಿ ಶಾಸನಗಳಿಂದ ತಿಳಿದುಬಂದಿದೆ. ಈಗ ಹೊಸದಾಗಿ ದೊರೆತಿರುವ ಶಾಸನಗಳಲ್ಲಿ ಇನ್ನಿಬ್ಬರು ಮಕ್ಕಳಿದ್ದ ವಿಚಾರ ಬೆಳಕಿಗೆ ಬಂದಂತಾಗಿದೆ:

i. ಈ ಚಲದಂಕ ಗಂಗನ ಪರಾಕ್ರಮ ತುಂಗನ ನನ್ದನಂ ಬಾಸನೆಂಬಾನತ ವಿಚಾರ ವಿವರವಾಗಿ ಉಲ್ಲೇಖವಾಗಿದೆ. ಕುಪನಾಚಳಶುಭ್ರಕೀರ್ತ್ತಿನಿಧಿ ಬಾಸಭೂಪತಿಗೆ ಕಾವಣಬ್ಬರಸಿ ಮಡದಿ. ಇವರಿಗೆ ರಂಬಲದೇವಿ ಎಂಬ ಮಗಳು (ಬೂತುಗನ ಮೊಮ್ಮಗಳು) ಇದ್ದು ಆಕೆಯ ಪತಿ ಬೀರಲದೇವನು ಚಾಳುಕ್ಯ ವಂಶಾವನಿಪನಾಗಿದ್ದನು. ರಂಬಲದೇವಿಯು ಕ್ರಿ.ಶ. ೯೮೭ರಲ್ಲಿ ಸನ್ಯಸನ ವಿಧಾನದಿಂದ ಸುಗತಿಯನ್ನು ಸಾಧಿಸಿದಳು, ಈಕೆ ಶ್ರೀಚಂದ್ರ ಭಟ್ಟಾರಕರ ಗುಡ್ಡಿಯಾಗಿದ್ದಳು.

ii. ಈ ಬೂತುಗನಿಮ್ಮಡಿಗೆ ಬಿಜ್ಜಾಮ್ಬಾದೇವಿ ಎಂಬ ಇನ್ನೊಬ್ಬ ಮಗಳು ಇದ್ದುದನ್ನು ಬೇರೊಂದು ಶಾಸನ ನಮೂದಿಸಿದೆ:

            ಗುರುಗಳ್ ಶ್ರೀಧರದೇವರಾತ್ಮಜನಕಂ ಶ್ರೀಬೂ
ತುಗಂ ತಾಯ್ಮನೋಹರಿ ಪದ್ಮಾವತಿ ಸೋದರರ್ಜ್ಜಿತ
ರಿಪುಕ್ಷ್ಮಾಪಾಳಕ ಪ್ರಾಪ್ತ ಸಚ್ಚಿರತರ್ಬ್ಬಸಿಱೆ
ಗಂಗಜ್ಜ್ಯಾಪತಿಗಳಾತ್ಮಾಧೀಶ್ವರರ್ಮ್ಮಲ್ಲಪನ್ಧ
ರಣೀ ವಿಶ್ರುತನೆನ್ದಡಾರ್ಪ್ಪೊಗೞರೀ ಬಿಜ್ಜಾ
ಮ್ಬಾದೇವಿಯರಂ
||
(ತಂದೆ… ಬುಧನುತ)

ಶ್ರೀ ಬೂತುಗಂ ನಮ್ಮನುದ್ಧುರ ತೇಜೋನಿಧಿ ಮಾರ
ಸಿಂಹನೃಪನಾತ್ಮೇಶಂ ಮಹಾದಾನಲೋಲ ಹರಿಗಂ
ತಾನೆನೆ ಬಣ್ನಿಸಲ್ನೆಱೆವರಾರ್ಬ್ಬಿಜ್ಜಾಂಬಿಕಾದೇವಿ
ಯಂ ||

ಈ ಬಿಜ್ಜಾಂಬಿಕೆಯು ಬೂತುಗ – ಪದ್ಮಾವತಿ (ಪದ್ಮಬ್ಬೆ) ಯರ ಮಗಳು ಹಾಗೂ ಇಮ್ಮಡಿ ಮಾರಸಿಂಹನ ಅಕ್ಕ; ಕುಂದಣಸಾಮಿಗಿಂತ ಹಿರಿಯಳೊ ಕಿರಿಯಳೊ ತಿಳಿಯದು. ಬಿಜ್ಜಾಂಬಿಕೆಯು ಕ್ರಿ.ಶ. ೧೦೧೩ ರಲ್ಲಿ ಆರಾಧನಾವಿಧಾನದಿಂದ ರತ್ನತ್ರಯವನ್ನು ಸಾಧಿಸಿ ಕುಪಣದಲ್ಲಿ ಮುಡಿಪಿದಳು.

೪. ಇಮ್ಮಡಿ ಬೂತುಗನ ಅರಸಿ ಪದ್ಮಬ್ಬರಸಿಯು ಪರಮಶ್ರಾವಕಿ (ಗೃಹಣಿ) ಯಾಗಿದ್ದು ಬಂದು ಕ್ರಿ.ಶ. ೯೭೨ ರಲ್ಲಿ, ಕರಂ ಪರಿಣಾಮ ಶುದ್ಧಿಯಿಂದ, ಮಳಧಾರಿದೇವ ಮುನಿಯ ಬಳಿ ಕೊಪ್ಪಳದಲ್ಲಿ ದೀಕ್ಷೆ ಕೈಗೊಂಡು, ಸುಗತಿಯನ್ನು ಪಡೆದಳು- ಎಂಬ ವಿವರ ಮತ್ತೊಂದು ಶಾಸನದಲ್ಲಿದೆ.

೫. ಜಿನಶಾಸನಕ್ಕೆ ನೆಲೆಯಾದ ರೇವಕನಿಮ್ಮಡಿಯು ‘ನೆಗೞ್ದಳ್ ಜಗಂ ಪೊಗಳೆ’ ಎಂದು ಇನ್ನೊಂದು ಶಾಸನ ಶ್ಲಾಘಿಸಿ, ಆಕೆಯ ವಿಚಾರವಾಗಿ ಹೊಸ ಮಾಹಿತಿಗಳನ್ನು ಒದಗಿಸಿದೆ:

            ಜಿನಪತಿ ಬೂತುಗಂ ನೆಗೞ್ದ ಸಂಕರಗಂಡನ ಮಾರಸಿಂಹದೇ
ವನ ಮಹಿಮಾಸ್ಪದಂ ಮರುಳದೇವನ ರಾಯನ ರಾಜಮಲ್ಲದೇ
ವನ ಗುಣದಂಕ ಕಾರ್ತ್ತಿಯ ಪರೋಕ್ಷದೊಳೀ ಜಿನಧರ್ಮ್ಮಮಯತಾ
ನನುದಿನಮಾನ್ತು ನಿತ್ತರಿಪ ರೇವಕನಿಮ್ಮಡಿಯೇಂ ಕೃತಾರ್ತ್ಥೆಯೋ
||

            ನೆಲೆ ಜಿನ ಶಾಸನಕ್ಕೆ…………………………………
ೞ್ದಲಿಸಿದ ಕೀರ್ತ್ತಿ ಮಾಸುಗುಮದಂ ಪರಿರಕ್ಷಪೆನೆನೆನ್ದನಾಕುಳಂ
ಚಲವನೆ ಪೂಣ್ದು ರಕ್ಷಿಸಿದ ರೇವಕನಿಮ್ಮಡಿಗಿನ್ತು ಕೀರ್ತ್ತಿ
ನಿಲೆ ಚಲದಂಕಕಾರ್ತ್ತಿವೆಸರಾದುದಲ್ಲದಡೆ ಸಿಗಾದು ಳೆ
||

            ಸ್ವಸ್ತಿ ಶಕಕಾಳಾ ೯೫೨ ನೆಯ ಪ್ರಮೋದ ಸಂವತ್ಸ
ರದ ಜೇಷ್ಠ ಶುದ್ಧ ಬಿದಿಯೆಯೊಳ್ ಶ್ರೀ ರೇವಕ
ನಿಮ್ಮಡಿಗಳ್ ಸನ್ಯಸನ ವಿಧಾನದಿಂ ರತ್ನತ್ರಯಂಗಳಂ
ಸಾಧಿಸಿದರ್
||

ರೇವಕ ನಿಮ್ಮಡಿಯು ಮೂರನೆಯ ಅಮೋಘವರ್ಷ ಬದ್ದೆಗನ (೯೩೬-೩೯) ಮಗಳು [IWG ಸಂಖ್ಯೆ ೧೩೮ : ಕ್ರಿ.ಶ. ೯೬೨-೬೭; ಪು. ೪೧೯). ಈಕೆಗೆ ಚಾಗವೆಡಂಗಿ ಎಂಬ ಪ್ರಶಸ್ತಿಯಿತ್ತು : ಜಯದತ್ತರಂಗನೃಪಃ || ತಸ್ಸ ಕವಿ ನಿಕಷ ಭೂರ್ಮೇರ್ಬ್ಬದ್ದೆಗ ದೇವಸ್ಯ ಗುಣ ನಿಧೇಃ ಪುತ್ರ್ಯಾಃ ರೇವಕ ನಿಮ್ಮಡಿ ನಾಮ್ನ್ಯಾಃ ಚಾಗವೆಡೆಂಗೀತಿ ನಾಮ ಸಂಜ್ಞಾಯಾಃ | [-ಅದೆ-]. ಈಕೆಯ ಸೋದರರು ಮುಮ್ಮಡಿಕೃಷ್ಣ (೯೩೯-೬೭), ಖೊಟ್ಟಿಗ (೯೬೭-೭೨) ಮತ್ತು ನಿರುಪಮ ಎಂಬುವರು. ಶಾಸನಗಳು ಮೂರನೇ ಕೃಷ್ಣ ಮತ್ತು ಎರಡನೇ ಬೂತುಗ ಇವರನ್ನು ಭಾವ-ಭಾವ ಮೈದುನ (ಮೈದ) ಎಂದು ವರ್ಣಿಸಿವೆ.

ಕೊಪ್ಪಳದ ಹೊಸ ನಿಸಿದಿ ಶಾಸನಗಳ ಆಧಾರದಿಂದ ಈಗ ತಿಳಿದುಬರುವ ಹೊಸ ಮಾಹಿತಿಗಳೆಂದರೆ ಗಂಗರ ಬೂತುಗನ ಹೆಂಡತಿಯರಾದ ಪದ್ಮಬ್ಬರಸಿ ಮತ್ತು ರೇವಕ ಇಮ್ಮಡಿ – ಇಬ್ಬರೂ ಕುಪಣ ಶ್ರೀತೀರ್ತ್ಥದಲ್ಲಿ ಮಾಡಿಪಿದರು. ಅಲ್ಲದೆ ಹಿರಿಯ ಹೆಂಡತಿಯಾದ ಪದ್ಮಾವತಿಗೆ ಬಿಜ್ಜಾಂಬಳೆಂಬ ಒಬ್ಬ ಮಗಳಿದ್ದು ಆ ಮಗಳೂ ಸಹ ಕುಪಣ ತೀರ್ತ್ಥದಲ್ಲಿ ಮಾಡಿಪಿದಳು. ಬೂತುಗನಿಗೆ ಬಾಸನೆಂಬ ಹೆಸರಿನ ಇನ್ನೊಬ್ಬ ಮಗನೂ, ರಂಬಲದೇವಿ ಎಂಬ ಮೊಮ್ಮಗಳೂ ಇದ್ದ ಸಂಗತಿಯೂ ಹೊಸದು. ಬೂತುಗನ ಹಿರಿಯಮಗಳು ಕುಂದಣಸಾಮಿಯೂ ಇಲ್ಲಿಯೇ ಮುಡಿಪಿದಳು. ಹೀಗಾಗಿ ಬೂತುಗನ ವಂಶದ ಆಯ್ದು ಜನ ಪ್ರಮುಖ ಸ್ತ್ರೀ-ಪುರುಷರು ಕುಪಫಶ್ರೀ ತೀರ್ಥದಲ್ಲಿ ಮುಡಿಪಿದರೆಂಬ ಹೊಸ ಮಾಹಿತಿಯು, ಬೂತುಗನ ಕುಟುಂಬಕ್ಕೆ ಕುಪಣತೀರ್ಥದೊಂದಿಗೆ ಇದ್ದ ವಿಶೇಷ ಆದರವನ್ನು ಒತ್ತಿಹೇಳುತ್ತದೆ.