ಶಾಂತಮೂರ್ತಿಗಳುಗ್ರ ಕರ್ಮಹರರ್ದಿವಾಕರಣಂದಿ ಸಿ
ದ್ಧಾಂತ ದೇವರುದಗ್ರ ಮನ್ಮಥ ವೈರಿಗಳ್ ಶುಭಚಂದ್ರ ಸಿ
ದ್ಧಾಂತದೇವರುದಾತ್ತ ಚಾರುಚರಿತ್ರರೀ ಧರೆಯೊಳ್ ಮನೋ
ಜಾಂತಕರ್ಮುನಿವಂದಿತರ್ಗುಣವಾರ್ಧಿಗಳ್ ಮದವರ್ಜಿತರ್
(ಕವಿ ನಯಸೇನಮುನಿ, ಧರ್ಮಾಮೃತ, ೧-೨೨, ೧೧೧೨)

ಧರ್ಮಾಮೃತವೆಂಬ ಚಂಪೂಕಾವ್ಯದ ಕವಿ ನಯಸೇನನು ಸ್ತುತಿಸಿರುವ ದಿವಾಕರಣಂದಿ ಸಿದ್ಧಾಂತದೇವನನ್ನು ಪರಿಚಯಿಸಿಕೊಳ್ಳಲು ಕೆಲವು ಶಾಸನಾಧಾರಗಳೂ ಕಾವ್ಯಾಧಾರಗಳೂ ದೊರೆಯುತ್ತವೆ. ಅವುಗಳನ್ನು ಆಧರಿಸಿ ದಿವಾಕರಣಂದಿಯ ಒಂದು ಸ್ಪಷ್ಟ ವ್ಯಕ್ತಿ ಚಿತ್ರವನ್ನು ಕಲ್ಪಿಸಿಕೊಳ್ಳುವುದು ಸಾಧ್ಯವಿದೆ. ಹನ್ನೊಂದನೆಯ ಶತಮಾನದಲ್ಲಿ ಆಗಿಹೋದ ಒಬ್ಬ ಮಹಾನ್ ಜೈನಾಚಾರ್ಯನಾದ ದಿವಾಕರಣನಂದಿಯನ್ನು ಕುರಿತು ಉಪಲಬ್ಧವಿರುವ ಸಾಮಗ್ರಿಯನ್ನು ಸಮೀಕ್ಷಿಸುವುದು ಈ ಲೇಖನದ ಉದ್ದೇಶ.

ದಿವಾಕರಣಂದಿಯನ್ನು ಕುರಿತ ಒಂದು ವ್ಯವಸ್ಥಿತ ಶಾಸನೋಲ್ಲೇಖವನ್ನು ಶ್ರವಣಬೆಳಗೊಳದ ಶಾಸನಗಳಲ್ಲಿ ಕಾಣುತ್ತೇವೆ. ಅಲ್ಲಿನ ಹೇಳಿಕೆಯನ್ನು, ವಿವರಗಳನ್ನು ಪುಷ್ಟೀಕರಿಸುವ ಮಾಹಿತಿ ಬೇರೆ ಬೇರೆ ಶಾಸನ ಸಂಪುಟಗಳಲ್ಲಿಯೂ ಸಿಗುತ್ತದೆ. ಮೊದಲು ಶ್ರವಣಬೆಳಗೊಳದ ಶಾಸನಗಳಲ್ಲಿ ಇರುವ ಉಲ್ಲೇಖನಗಳನ್ನು ವಿವೇಚಿಸಬಹುದು. ಶ್ರವಣಬೆಳಗೊಳದ ಚಿಕ್ಕಬೆಟ್ಟದ ಮೇಲಿನ ಚಾಮುಂಡರಾಯ ಬಸದಿಯ ದಕ್ಷಿಣ ಭಾಗದ ಮಂಟಪದಲ್ಲಿ ಒಂದನೆಯ ಕಂಬದ ಮೇಲಿರುವ ಶಾಸನವು ದಂಡನಾಯಕ ಗಂಗರಾಜನ ಗುರು ಶುಭಚಂದ್ರದೇವರ ನಿಸಧಿಗೆ. ಶುಭಚಂದ್ರ ದೇವರು ೩-೮-೧೧೨೩ ರಂದು ಶುಕ್ರವಾರ ಮುಕ್ತಿಗೆ ಸಂದರು. ಅವರ ನೆನಪಿನಲ್ಲಿ ನಿಲ್ಲಿಸಿರುವ ನಿಸಧಿಗೆಯನ್ನು ಗಂಗರಾಜನೇ ನಿರ್ಮಿಸಿದನೆಂಬುದು ಉಲ್ಲೇಖನೀಯ. ಈ ಶಾಸನವನ್ನು ಬರೆದವನು ಹೆಗ್ಗಡೆ ಮರ್ದ್ದಿಮ್ಮಯ್ಯ; ಈತ ಶ್ರೀಮತ್ ಪ್ರಭಾಚಂದ್ರ ಸಿದ್ಧಾಂತದೇವರ ಗುಡ್ಡ (ಶಿಷ್ಯ). ಈ ಶಾಸನವನ್ನು ಕಂಡರಿಸಿದ ರೂವಾರಿ ವರ್ಧಮಾನಚಾರಿ; ಈತ ‘ಬಿರುದ ರೂವಾರಿ ಮುಖತಿಳಕ’ ಬಿರುದಾಂಕಿತ

[ಎ.ಕ. ೨, ೧೩೫ (೧೧೭)].

೧೨ನೆಯ ಶತಮಾನದ ಈ ಶಿಲಾಶಾಸನ ಸಾಕಷ್ಟು ಸುದೀರ್ಘವಾಗಿದೆ. ಪೂರ್ವ ಮುಖದಲ್ಲಿ ೩೫ ಸಾಲು, ದಕ್ಷಿಣಮುಖದಲ್ಲಿ ೩೬ ಸಾಲು, ಪಶ್ಚಿಮಮುಖದಲ್ಲಿ ೩೯ ಸಾಲು, ಉತ್ತರಮುಖದಲ್ಲಿ ೪೬ ಸಾಲು – ಹೀಗೆ ಒಟ್ಟು ೧೫೬ ಸಾಲುಗಳಿವೆ. ಶಾಸನ ಸಂಸ್ಕೃತ – ಕನ್ನಡ ಎರಡೂ ಭಾಷೆಗಳಲ್ಲಿದೆ. ಪ್ರಾರಂಭದಲ್ಲಿ ಸಂಸ್ಕೃತ ಪದ್ಯಗಳಿವೆ. ತೀರ್ಥಂಕರ ಸ್ತುತಿ, ಸ್ಯಾದ್ವಾದ ಸಿದ್ಧಾಂತ ಸ್ತೋತ್ರ, ಪದ್ಮನಂದಿ (ಕೊಂಡಕುಂದಾಚಾರ್ಯ, ಉಮಾಸ್ವಾತಿ, ಗ್ರಿದ್ಧ್ರ ಪಿಂಚ್ಛಮುನಿ), ಬಲಾಕಪಿಂಛ, ಗುಣನಂದಿ ಪಂಡಿತ, ದೇವೇಂದ್ರ ಸೈದ್ಧಾಂತಿಕ, ಕಳಧೌತ ನಂದಿಮುನಿ, ರವಿಚಂದ್ರ (ಸಂಪೂರ್ಣಚಂದ್ರ ಸಿದ್ಧಾಂತ ಮುನಿ), ದಾಮನಂದಿ ಮುನಿ, ಶ್ರೀಧರದೇವ, ಮಲಧಾರಿದೇವ, ಶ್ರೀಧರದೇವ (೨), ಚಂದ್ರಕೀರ್ತಿ ಭಟ್ಟಾರಕ – ಈ ಮುನಿ ಪರಂಪರೆಯ ವಿವರವಾದ ಪರಿಚಯವಿದೆ. ರವಿಚಂದ್ರ ಮುನಿಯ ಪ್ರಸ್ತಾಪದಿಂದ ಕನ್ನದ ನಿರೂಪಣೆ ಬರುತ್ತದೆ. ಈ ಗುರುಶಿಷ್ಯ ಪರಂಪರೆಯಲ್ಲಿ ಚಂದ್ರಕೀರ್ತಿ ಭಟ್ಟಾರಕರ ತರುವಾಯ ಅವರ ಶಿಷ್ಯರಾದ ದಿವಾಕರಣಂದಿಯ ಪರಿಚಯ ಸಿಗುತ್ತದೆ; ಆ ಭಾಗವನ್ನು ಮಾತ್ರ ಉದ್ಧರಿಸಲಾಗುವುದು : ಐದು ಪದ್ಯಗಳು –

ಮತ್ತೇಭ ವಿಕ್ರೀಡಿತ ||

            ಪರಮಾಪ್ತಾಖಿಳ ಸಾಸ್ತ್ರ ತತ್ವನಿಳಯಂ ಸಿದ್ಧಾಂತ ಚೂಡಾಮಣಿ
ಸ್ಫುರಿತಾಚಾರಪರಂ ವಿನೇಯಜನತಾನಂದಂ ಗುಣಾನೀಕ ಸುಂ
ದರನೆಂಬುನ್ನತಿಯಿಂ ಸಮಸ್ತ ಭುವನ ಪ್ರಸ್ತುತ್ಯನಾದಂ ದಿವಾ
ಕರಣಂದಿ ಬ್ರತಿನಾಥನುಜ್ಜಳ ಯಶೋ ವಿಭ್ರಾಜಿತಾಶಾತಟಂ
|| ||

            ವಿದಿತ ವ್ಯಾಕರಣದ ತ
ರ್ಕ್ಕದ ಸಿದ್ಧಾಂತದ ವಿಶೇಷದಿಂ ತ್ರೈವಿದ್ಯಾ
ಸ್ಪದರೆಂದೀ ಧರೆ ಬಣ್ಣಿಪು
ದು ದಿವಾಂಕರಣದಿದೇವ ಸಿದ್ಧಾಂತಿಗರಂ

ಮತ್ತೇಭ ವಿಕ್ರೀಡಿತ ||

            ವರರಾದ್ಧಾಂತಿಕ ಚಕ್ರವರ್ತ್ತಿ ದುರಿತ ಪ್ರಧ್ವಂಸಿ ಕಂದರ್ಪ ಸಿಂ
ಧುರ ಸಿಂಹಂ ಪರಶೀಳ ಸದ್ಗುಣ ಮಹಾಂಭೋರಾಶಿ ಪಂಕೇಜ ಪು
ಷ್ಕರದೇವೇಭ ಶಷಾಂಕ ಸನ್ನಿಭಯಶಶೀ ರೂಪನೋಹೋ ದಿವಾ
ಕರಣಂದಿಬ್ರತಿ ನಿರ್ಮ್ಮದಂ ನಿರುಪಮಂ ಭೂಪೇಂದ್ರಬ್ರಿಂದಾರ್ಚ್ಚಿತಂ
|| ||

ಮತ್ತೇಭ ವಿಕ್ರೀಡಿತ ||

            ವರಭವ್ಯಾನನ ಪದ್ಮಮುಳ್ಳಲರಲಜ್ಞಾನೀಕ ನೇತ್ರೋತ್ಪಳಂ
ಕೊರಗಲ್ಪಾಪತಮಸ್ತಮಂ ಪರೆಯಲೆತ್ತಂ ಜೈನಮಾರ್ಗಾಮಳಾಂ
ಬರಮತ್ಯುಜ್ವಳಮಾಗಲೇಂ ಬೆಳಗಿತಾ ಭೂಭಾಗಮಂ ಶ್ರೀದಿವಾ
ಕರಣಂದಿಬ್ರತಿವಾಕ್ ದಿವಾಕರಕರಾಕಾರಬೊಲಿರ್ಬ್ಬೀನುತಂ
|| ||

ವಸಂತ ತಿಲಕ ||

          ಯದ್ವಕ್ರ ಚಂದ್ರವಿಳಸದ್ವಚನಾಮೃತಾಂಭ:
ಪಾನೇನ ತುಷ್ಯತಿ ವಿನೇಯಚಕೋರಬ್ರಿಂದ
|| ||
ಜೈನೇಂದ್ರಶಾಸನ ಸರೋವರ ರಾಜಹಂಸೋ
ಜೀಯಾದಸೌಭುವಿದಿವಾಕರಣಂದಿ ದೇವ :
||

ಇಲ್ಲಿಂದ ಮುಂದೆ ಈ ದಿವಾಕರಣಂದಿಮುನಿಯ ಶಿಷ್ಯರಾದ ಗಂಡವಿಮುಕ್ತಮಳ ಧಾರಿ ಮುನೀಂದ್ರರ, ತರುವಾಯ ಕಡೆಯಲ್ಲಿ ಈ ಚಾರಿತ್ರ ಚಕ್ರವರ್ತಿಗಳ ಶಿಷ್ಯರಾದ ಶುಭಚಂದ್ರದೇವಮುನಿಯ ವಿಸ್ತಾರವಾದ ವರ್ಣನೆಯಿದೆ (ಎಪಿಗ್ರಾಫಿಯ ಕರ್ನಾಟಕ ೨, ಕ‍ಅಸಂ, ಮೈ. ವಿಶ್ವವಿದ್ಯಾಲಯ, ೧೯೭೩, ಪು. ೭೮-೮೩). ಮೂಲ ಸಂಘದ ದೇಸಿಯಗಣದ ಪುಸ್ತಕಗಚ್ಛದ ಶುಭಚಂದ್ರ ಸಿದ್ಧಾಂತದೇವರ ಪರೋಕ್ಷ ವಿನಯಕ್ಕೆ ಅವರ ಶಿಷ್ಯ ಸಮ್ವ್ಯಕ್ತ್ವ ರತ್ನಾಕರ ಮಹಾಪ್ರಧಾನ ದಂಡನಾಯಕ ಗಂಗರಾಜನು ‘ನಿಲಿಸಿದ ನಿಶಿಧಿಗೆ’ ಯಲ್ಲಿ ಬರುವ ಮೇಲಿನ ಆಯ್ದು ಪದ್ಯಗಳ ಸಾರಾಂಶ:

೧. ದಿವಾಕರಣಂದಿಯವರ ಹಿರಿಮೆಯನ್ನರಿತು ಇಡೀ ಜಗತ್ತು ಕೊಂಡಾಡುತ್ತಿದೆ. ಜಿನಧರ್ಮ ಸಂಬಂಧಿಯಾದ ಮೂಲಶಾಸ್ತ್ರಗಳಲ್ಲಿ ಅವರು ನಿಷ್ಣಾತರು. ಜೈನಸಿದ್ಧಾಂತಕ್ಕೆ ಅವರು ನೆತ್ತಿಯ ಮಣಿಯಂತಿದ್ದಾರೆ. ಉತ್ತಮ ನಡೆಯತೆಯವರು. ಹಿಂಬಾಲಕರಿಗೆ ಸಂತೋಷವನ್ನುಂಟು ಮಾಡುವವರು. ಹಲವು ಗುಣಗಳ ಸೌಂದರ್ಯ ಅವರಲ್ಲಿದೆ. ಅವರ ಪರಿಶುದ್ಧ ಕೀರ್ತಿಯ ಪ್ರಕಾಶ ಲೋಕವನ್ನು ಬೆಳಗಿದೆ. ಅವರು ಅನೇಕ ಮುನಿಗಳ ಮುಖ್ಯರು.

೨. ದಿವಾಕರಣಂದಿದೇವರು ಜೈನಧರ್ಮ ತತ್ವ – ಸಿದ್ಧಾಂತ ಪಾರಂಗತರು, ವ್ಯಾಕರಣಶಾಸ್ತ್ರದಲ್ಲಿ ತರ್ಕದಲ್ಲಿ ಸಿದ್ಧಾಂತದಲ್ಲಿ ನಿಪುಣರು. ಮೂರುವಿದ್ಯೆಗಳಿಗೆ ಆಗರವಾಗಿರುವವರು.

೩. ಶ್ರೇಷ್ಠ ತತ್ವಜ್ಞಾನಿಗಳಿಗೆ ಅವರು ಸಿಂಹವಿದ್ದಂತೆ. ಒಳ್ಳೆಯ ನಡತೆ ಶೀಲ ಗುಣಗಳಿಗೆ ಸಮುದ್ರ. ಇಂಥ ದಿವಾಕರಣಂದಿ ಮುನಿ ತಾವರೆಯಂತೆ, ಹಂಸದಂತೆ, ಐರಾವತದಂತೆ, ಚಂದ್ರನಂತೆ ಧವಳಕೀರ್ತಿ ರೂಪರಾಗಿದ್ದಾರೆ. ಓಹೋ, ದಿವಾಕರಣಂದಿವ್ರತಿಯು ನಿರಹಂಕಾರಿ, ಎಣೆಯಿಲ್ಲದವರು, ಅನೇಕ ರಾಜರುಗಳಿಂದ ಪೂಜಿತರಾದವರು.

೪. ಶ್ರೀ ದಿವಾಕರಣಂದಿವ್ರತಿಯ ಮಾತು ಸೂರ್ಯನ ಕಿರಣದಂತೆ ಲೋಕವನ್ನು ಬೆಳಗಿತು, ಅಜ್ಞಾನಿಗಳ ಕಣ್ಣುಗಳೆಂಬ ಕನ್ನೈದಿಲೆಗಳು ಮುಚ್ಚಿಕೊಂಡವು. ಭವ್ಯಜೀವಿಗಳ ಮುಖಕಮಲಗಳು ವಿಕಸಿತವಾದುವು, ಪಾಪವೆಂಬ ಮುತ್ತಿದ ಕತ್ತಲು ಸುತ್ತಲೂ ಕರಗಿಹೋಯಿತು, ಎಲ್ಲೆಲ್ಲೂ ಜೈನಮಾರ್ಗವೆಂಬ ಆಕಾಶಪಥವು ಅತ್ಯುಜ್ವಲವಾಗಿ ಬೆಳಗಿತು.

೫. ದಿವಾಕರಣಂದಿಯು ಜಿನಶಾಸನವೆಂಬ ಸರೋವರದಲ್ಲಿ ವಿಹರಿಸುವ ರಾಜಹಂಸ. ಚಂದ್ರನಿಂದ ಬಂದ ಅಮೃತವನ್ನು ಜಾತಕಪಕ್ಷಿ ಕುಡಿದು ತಣಿಯುವಂತೆ, ಆ ಮುನಿಯ ಮುಖಚಂದ್ರದಿಂದ ಬಂದ ವಿಳಸತ್ ವಚನಾಮೃತವನ್ನು ವಿನೇಯಜನರಾದ ಶಿಷ್ಯರು ಅಮೃತವೆಂದು ಸ್ವೀಕರಿಸುತ್ತಾರೆ. ಭೂಮಿಯಲ್ಲಿ ಈ ದಿವಾಕರಣಂದಿ ದೇವರಿಗೆ ಜಯವಾಗಲಿ.

ಇದೇ ಶ್ರವಣಬೆಳಗೊಳ ಶಾಸನ ಸಂಪುತದಲ್ಲಿರುವ ಶಾಸನ ೪೮೪ (೩೫೧) (ಪು. ೩೦೩-೩೦೫) ಕೂಡ ದಿವಾಕರಣಂದಿ ಮುನಿ ಸಂಬಂಧವಾಗಿ ಕೆಲವು ಮಾಹಿತಿಗಳನ್ನು ಒದಗಿಸುತ್ತದೆ. ಈ ಶಾಸನ ಜೈನಮಠದ ಉತ್ತರಕ್ಕಿರುವ ಕೊಟ್ಟಿಗೆಯಲ್ಲಿದೆ. ಇದು ಕೋಡ ಒಂದು ನಿಸಧಿಕಲ್ಲು. ದಿವಾಕರಣಂದಿಯು ಶಿಷ್ಯೆ ಶ್ರೀಮತಿ ಗಂತಿಯ ನೆನಪಿಗೆ, ಆಕೆಯ ಶಿಷ್ಯೆ ಮಾಂಕಬ್ಬೆಗಂತಿಯವರು ನಿಲ್ಲಿಸಿದ ನಿಸಧಿಗೆಯು ೧೬-೨-೧೧೧೯ರಲ್ಲಿ ರಚಿತವಾಗಿದೆ. ಆರಂಭದಲ್ಲಿ ಕೊಂಡಕುಂದರು, ಅವರ ಪರಂಪರೆಯ ದೇಶಿಕಗಣದ ದೇವೇಂದ್ರ ಸಿದ್ಧಾಂತದೇವ ಮುನಿಯನ್ನು ಹೆಸರಿಸಿ ಅವರ ಸಂತಾನದೊಳಗೆ ಆಗಿ ಹೋದ ದಿವಾಕರಣಂದಿ ಮುನಿಯ ವರ್ಣನೆ ಮಾಡಿದೆ:

ಮುತ್ತೇಭ ವಿಕ್ರೀಡಿತ ||

            ಪರವಾದಿಕ್ಷಿತಭ್ರಿಂನಿಶಾತ ಕುಳಿಶಂ ಶ್ರೀಮೂಲ ಸಂಘಾಬ್ಜ ಷ
ಟ್ಚರಣಂ ಪುಸ್ತಕಗಚ್ಛ ಪ್ರಖ್ಯಾತಯೋಗೀಶ್ವರಾ
ಭರಣಂ ಮನ್ಮಥಭಂಜನಂ ಜಗದೊಳಾದಂ ಖ್ಯಾತನಾದಂ ದಿವಾ
ಕರಣಂದಿಬ್ರತಿಪಂ ಜಿನಾಗಮಸುಧಾಂಭೋರಾಶಿ ತಾರಾಧಿಪಂ
||

ಉತ್ಪಲ ಮಾಲೆ ||

            ಅಂತೆನಲಿಂತೆನಲ್ಕಱೆಯೆನೆಯ್ದೆ ಜಗತ್ತ್ರಯವಂದ್ಯರಪ್ಪ ಪೆಂ
ಪಂತಳೆದಿಱ್ದರೆಂಬುದನೆ ಬಲ್ಲೆನದಲ್ಲದೆ ಸಂಯಮಂ ಚರಿ
ತ್ರಂ ತಪಮೆಂಬಿವತ್ತಳಗಮಿಂತು ದಿವಾಕರನಂದಿದೇವ ಸಿ
ದ್ಧಾಂತಿಗರ್ಗ್ಗೆಂದಡೊಂದು ರಸನೋಕ್ತಿಯೊಳಾನದನೆಂತು ಬಣ್ನಿಪೆಂ
||

ಇದರ ಮುಂದಿನ ಪದ್ಯದಲ್ಲಿ ದಿವಾಕರಣಂದಿ ಮುನಿಯ ಶಿಷ್ಯರಾದ ಮಳಧಾರಿದೇವರ ಮಹಿಮೆಯನ್ನು ನಿರೂಪಿಸಲಾಗಿದೆ (ಶಾಸನ ರಚನೆಯ ಶೈಲಿ ಗುಣ ವಿಶೇಷವನ್ನು ನೋಡಿದರೆ ಈ ಎರಡೂ ಶಾಸನಗಳನ್ನು ಬರೆದ ಕವಿ ಒಬ್ಬನೇ ಎಂದು ತೋರುತ್ತದೆ). ಈ ಶಾಸನದ ಕಡೆಯಯಲ್ಲಿ ಬರುವ ಮತ್ತೊಂದು ಮತ್ತೇಭ ವಿಕ್ರೀಡಿತ ಪದ್ಯದಲ್ಲಿ ಇನ್ನೊಮ್ಮೆ ದಿವಾಕರಣಂದಿ ಮುನಿಯನ್ನು ಪ್ರಶಂಸಿಸಲಾಗಿದೆ:

            ಕರುಣಂ ಪ್ರಾಣಿಗಣಂಗಳೊಳ್ ಚತುರತಾ ಸಂಪತ್ತಿ ಸಿದ್ಧಾನ್ತದೊಳ್
ಪರಿತೋಷಂ ಗುಣಸೇವ್ಯಭವ್ಯ ಜನದೊಳ್ ನಿರ್ಮತ್ಸರತ್ವಂ ಮುನೀ
ಶ್ವರರೊಳ್ ಧೀರತೆ ಘೋರವೀರ ತಪದೊಳ್ ಕಯ್ಗಣ್ಮೆ ಪೊಣ್ಮಲ್ ದಿವಾ
ಕರಣಂದಿವ್ರತಿ ಪೆಂಪನೇಂ ತಳೆದನೋ ಯೋಗೀಂದ್ರಬ್ರಿಂದಂಗಳೊಳ್
||

ದಿವಾಕರಣಂದಿಯನ್ನು ಕುರಿತ ಮತ್ತಷ್ಟು ಹೆಚ್ಚಿನ ಮಾಹಿತಿಗಳನ್ನು ಕೊಡುವ ಇನ್ನೂ ಕೆಲವು ಶಾಸನಗಳಿವೆಯೆಂಬುದು ಹನನಾರ್ಹವಾಗಿದೆ. ಅವುಗಳಲ್ಲಿ ಎ.ಕ. ೫ (೧೯೭೬), ೨೨ (೪ಯೆ ೨೩) ಸು.೧೧ ಶತಮಾನದ ಶಾಸನ ಮುಖ್ಯವಾದುದು. ಇದು ಗದ್ಯದಲ್ಲಿದೆ. ಮೈಸೂರು ಜಿಲ್ಲೆಯ ಕೃಷ್ಣರಾಜನಗರ (ಎಡತೊರೆ) ತಾಲ್ಲೂಕಿನ ಚಿಕ್ಕಹನಸೋಗೆ ಅಬ್ಬೆಯ ಬಸದಿ (ಅಬ್ಬೆಯ ಜಿನಾಲಯ) ಯಲ್ಲಿರುವ ನವರಂಗದ ಬಾಗಿಲ ಮೇಲಿನ ಪಟ್ಟಿಯಲ್ಲಿ ಇರುವ ಆರು ಸಾಲಿನ ಈ ಶಾಸನದ ಪೂರ್ಣ ಪಾಠ ಹೀಗಿದೆ:

            ಶ್ರೀ ಕೊಂಡಕುನ್ದಾನ್ವಯ ದೇಸಿಯಗಣ ಪುಸ್ತಕಗಚ್ಛದ ಶ್ರೀದಿವಾ
ಕರಣನ್ದಿ ಸಿದ್ಧಾನ್ತದೇವರ ಜೇಷ್ಠ ಗುರುಗಳಪ್ಪ
ಭಟ್ಟರ ದಾಮನನ್ದಿ ಭಟ್ಟರ ಸಂಬನ್ದಿ ಈ ಪನಸೋಗೆಯ
ಚಂಗಾಳ್ವರ ತೀರ್ತ್ಥದೆಲ್ಲಾ ಬಸದಿಗಳುಂಮಬ್ಬೆಯ ಬಸ
ದಿಯುಂ ತೊಱೆನಾಡ ಬೆಳವನೆಯುಂ [ಬ] ಸದಿಯುಂ ತತ್ಸಮು
ದಾಯ ಮುಖ್ಯಂ

ಈ ಶಾಸನದಿಂದ ದಿವಾಕರಣಂದಿ ಸಿದ್ಧಾಂತದೇವರು ಕೊಂಡಕುಂದ ಅನ್ವಯದದೇಸಿಯಗಣ ಪುಸ್ತಕ ಗಚ್ಚದವರೆಂದು ಸ್ಪಷ್ಟವಾಗಿ ತಿಳಿದುಬರುತ್ತದೆ. ಇತರ ಶಾಸನಗಳಲ್ಲಿಯೂ ಇದಕ್ಕೆ ಪುಷ್ಟಿಕೊಡುವ ಮಾತುಗಳಿವೆ. ಎರಡನೆಯದಾಗಿ ಮತ್ತು ಹೊಸದಾಗಿ ತಿಳಿದುಬರುವ ಇನ್ನೊಂದು ಅಮ್ಶವೆಂದರೆ ದಿವಾಕರಣಂದಿಯು ಭಟ್ಟರ (?) ದಾಮನಂದಿ ಭಟ್ಟರ ಶಿಷ್ಯರೆಂಬುದು. ಇದು ಶ್ರವಣಬೆಳಗೊಳದ ೧೩೫ (೧೧೭) ರ ಮತ್ತು ಅನ್ಯೋಲ್ಲೇಖಗಳ ಪ್ರಕಾರ ಚಂದ್ರಕೀರ್ತಿ ಭಟ್ಟಾರಕರು ದಿವಾಕರಣಂದಿಯ ನೇರ ಗುರುಗಳು. ಅವರಿಗಿಂತ ಹಿಂದಿನ ಗುರುಗಳಲ್ಲಿ ನಾಲ್ಕನೆಯವರು ದಾಮ ನಂದಿಮುನಿ. ಅದರಿಂದ ಇಲ್ಲಿ ಜೇಷ್ಠ ಶಬ್ದಕ್ಕೆ ‘ಪೂರ್ವ, ಪ್ರಾಚೀನ, ಪರಂಪರೆಯ, ಹಿರಿಯ’ ಎಂಬರ್ಥವನ್ನು ಸ್ವೀಕರಿಸಬೇಕಾಗಬಹುದೆಂಬ ಸಂಶಯ ಎದುರಾಗುತ್ತದೆ.

(ಮೇಲಿನ ಚಿಕ್ಕಹನಸೋಗೆ ೨೨ರ ಶಾಸನದ ಪಾದದಲ್ಲಿರುವ ಭಟ್ಟರ ದಾಮನನ್ದಿಭಟ್ತರ ಎನ್ನುವಾಗ ಎರಡನೆಯ ಭಟ್ತರ ಎಂಬುದು ಭಟ್ಟಾರಕರ ಎಂಬುದರ ಸಂಕ್ಷಿಪ್ತ ರೂಪವಾಗಿದೆ. ಮೊದಲನೆಯ ಭಟ್ಟರ ಎಂಬುದರಲ್ಲಿ ಏನೋ ದೋಷವಿರುವಂತೆ ತೋರುತ್ತದೆ. ಅದು ವಾಸ್ತವವಾಗಿ ಬೆಟ್ಟದ ಎಂದಿರಬಹುದು. ಎರಡನೆಯ ಸಲದ ಭಟ್ಟರ ಎಂಬ ಬಳಕೆಯ ನಿರೀಕ್ಷೆಯಲ್ಲಿ ಮೊದಲನೆಯ ಬೆಟ್ತದ ಎಂಬುದು ಭಟ್ತರ ಎಂದಾಗಿರಬಹುದು. ಇಂತಹ ಸಾಧ್ಯತೆಯನ್ನು ಅಲ್ಲಗಳೆಯದೆ ಗಂಭೀರವಾಗಿ ಪರಿಭಾವಿಸಲು ಬೇಕಾದ ಅನ್ಯ ಸಾಕ್ಷ್ಯಾಧಾರಗಳಿವೆ; ಔಚಿತ್ಯವನ್ನು ಗಮನಿಸಿ ಆ ಸಂಗತಿಯ ಚರ್ಚೆಯನ್ನು ಇಲ್ಲಿ ಪ್ರಸ್ತಾಪಿಸುತ್ತಿಲ್ಲ).

ಇದೇ ಶಾಸನದ ಪಾಠ, ಒಂದೆರಡು ಸಣ್ಣ ಬದಲಾವಣೆಯೊಂದಿಗೆ, ಚಿಕ್ಕ ಹನಸೋಗೆ ಆದೀಶ್ವರಸ್ವಾಮಿಯ ಬಸದಿಯ ಬಲಬಾಗಿಲಿನ ತೊಲೆಯ ಮೇಲಿದೆ [೨೬ (೪ಯೆ೨೭) ಅದರಲ್ಲಿ ಬೆಟ್ಟದ ಎಂಬ ಶಬ್ದ ಬಳಕೆಯಾಗಿಲ್ಲ. ಇದೇ ಚಿಕ್ಕ ಹಸಸೋಗೆಯ ನೇಮೀಶ್ವರಸ್ವಾಮಿ ಬಸದಿಯ ತೊಲೆಯ ಮೇಲೆ ಇರುವ ೧೧-೧೨ ನೆಯ ಶತಮಾನದ ಶಾಸನದಲ್ಲಿ ಆರು ಅತಿ ಉದ್ದನೆಯ ಸಾಲುಗಳು ಶಾಸನವಿದೆ. ಇದರಲ್ಲಿ ದಾಮನಂದಿ ಭಟ್ಟಾರಕರೂ ಚಂದ್ರಕೀರ್ತಿ ಭಟ್ಟಾರಕರೂ ಸಧರ್ಮಿಗಳೆಂದು ಹೇಳಿರುವುದರಿಂದ, ೨೬ (೪) ಯೆ ೨೭) ನೆಯ ಶಾಸನದಲ್ಲಿ ಹೇಳಿರುವ ಜೇಷ್ಠಶಬ್ದಕ್ಕೆ ಏನು ಅರ್ಥವೆಂಬುದು ಹೆಚ್ಚು ನಿಚ್ಚಳವಾಗುತ್ತದೆ; ಶಾಸನದ ಪಾಠ ಇಂತಿದೆ : ಶ್ರೀಮದ್ದೆಸಿಗಗಣ ಪುಸ್ತಕಗಚ್ಛದ ಶ್ರೀಧರದೇವರ ಶಿಷ್ಯ ರೇಳಾಚಾರ್ಯರವರ ಶಿಷ್ಯರ್ದ್ದಾಮನನ್ದಿ ಭಟ್ಟಾರಕರವರ ಸಾಧರ್ಮಿಗಳ್ಚಂದ್ರಕೀರ್ತಿ ಭಟ್ಟಾರಕರವರ ಶಿಷ್ಯರ್ದಿ ವಾಕರಣನ್ದಿ ಸಿದ್ಧಾನ್ತದೇವರವರ ಶಿಷ್ಯರ್ಚ್ಚಾಂದ್ರಾಯಣಿ ದೇವಾಪರ ನಾಮಧೇಯರಪ್ಪ ಶ್ರೀಮಜ್ಜಯಕೀರ್ತಿ ದೇವರ್ (ಇತ್ಯಾದಿ). ಈ ಶಾಸನದಲ್ಲಿ ಹೇಳಿರುವ ಏಳಾಚಾರ್ಯ್ಯ ಮುನೀಂದ್ರರು ಸಮಾಧಿ ಮರಣ ಪಡೆದುದನ್ನೂ ಅವರಿಗೆ ಅವರ ಶಿಷ್ಯ ಜಂಗಮರ್ತೀರ್ಥನಾದ ಕಲ್ನೆಲೆದೇವನು ನಿಸಿಧಿಗೆ ನಿಲ್ಲಿಸಿದುದನ್ನು ಇದೇ ಚಿಕ್ಕಹನುಸೋಗೆಯ (೩೬(೧೪) ಯೆ ೮೪). ಶಾಸನವಿವರಿಸಿದೆ. ಇದು ೧೭-೨-೧೧೦೦ ರಲ್ಲಿ ರಚಿತವಾದ ಶಾಸನ. ಇದರಲ್ಲಿ ಪನಸೋಗೆ ನಿವಾಸಿ ದಾಮನಂದಿ, ಅವರ ಶಿಷ್ಯ ಶ್ರೀಧರಾಚಾರ್ಯ, ಅವರ ಶಿಷ್ಯ ಮಲಧಾರಿದೇವ, ಅವರ ಶಿಷ್ಯ ಚಂದ್ರಕೀರ್ತಿಬ್ರತಿ ಪ್ರಮುಖರ್;

            “ತತ್ತನುಜಾತರಾತತಯಸ ಸಿದ್ಧಾನ್ತ ರತ್ನಾಕರರ್ ಸ್ವಸ್ತಿ ಯಮನಿಯಮ
ಸ್ವಾಧ್ಯಾಯಧ್ಯಾನ ಮೌನ ಅ [ನು] ಷ್ಯಾಣ ಪರಾಯಣರಪ್ಪ ಶ್ರೀಮೂಳಸಂಘದ
ದೇಸಿಗಣದ ಪೊಸ್ತಕಗಚ್ಛದ ಶ್ರೀ ದಿವಾಕರಣಂದಿ ಸಿದ್ಧಾನ್ತಿದೇವರ
ಶಿಷಿನ್ತಿ ಬಸವವೆಗನ್ತಿಯರ್ ಸಕಚರಿಷ ಸಾಯಿರದಿ ಇ ೧೦೨೧ನೆಯ
ಪ್ರಮಾಥಿ ಸಂವಚ್ಛರ ಫಾಲ್ಗುಣ ಸುದ್ಧ ಪಞ್ಚಮಿ ಆದಿವಾರದಂದು
ಚಾಂದ್ರಾಯಣ”
(ಪು. ೧೫-೧೬).

ಈ ನಿಸಿಧಿಗೆಯನ್ನು ಬಸವವೆಗನ್ತಿಯರ ಶಿಷ್ಯನಾದ ದಂಡನಾಯಕ ನಾಕಿಮಯ್ಯನು ಪರೋಕ್ಷ ವಿನಯದಿಂದ ಮಾಡಿಸಿದ್ದಾನೆಂದು ಶಾಸನದ ಕಡೆಯಲ್ಲಿ ಬರೆಯಲಾಗಿದೆ. ಈ ಪುಟ್ತ ಶಾಸನದಿಂದ ತಿಳಿದು ಬರುವ ಹೊಸ ವಿಷಯವೆಂದರೆ, ದಿವಾಕರಣಂದಿಯ ಇನ್ನೊಬ್ಬ ಶಿಷ್ಯೆಯರಾದ ಬಸವವೆಗಂತಿಯರ ವಿಚಾರ.

ಗುಲ್ಬರ್ಗ ಜಿಲ್ಲೆಗೆ ಸೇರಿದ ಹುಣಸಿ ಹಡಗಲಿ ದೇವಸ್ಥಾನವೊಂದರಲ್ಲಿ ದೊರೆತ ಶಾಅಸನವೊಂದರ ವಿಶ್ಲೇಷಣೆಯನ್ನು ಸಹ ಪಿ.ಬಿ. ದೇಸಾಯಿಯವರು ನಡೆಸಿರುತ್ತಾರೆ. ಆ ಶಾಸನದಲ್ಲಿಯೂ ದಾಮನಂದಿ, ಶ್ರೀಧರದೇವ, ಮಲಧಾರಿದೇವ, ಚಂದ್ರಕೀರ್ತಿ, ನಯನಂದಿ, ವರ್ಧಮಾನ (ಪಿರಿಯಶ್ರೀ), ದಿವಾಕರನಂದಿ ತ್ರೈವಿದ್ಯ ಸಿದ್ದಾಂತದೇವ, ಜಿನಚಂದ್ರ ಮಹಾಮಂತ್ರ ವಾದಿ, ಸರ್ವಣಂದಿ, ಬಾಳಚಂದ್ರ ಬ್ರತಿಪತಿ, ಮಲಧಾರಿ, ಕಲ್ಯಾಣಕೀರ್ತಿ, ಅರ್ಹನಂದಿ (ಬೆಟ್ಟದ ದೇವ) ಮತ್ತು ಬಾಳಚಂದ್ರ ಸಿದ್ಧಾಂತಿದೇವ – ಈ ಗುರುಪರಂಪರೆ ಸ್ಪಷ್ಟವಾಗಿ ಉಲ್ಲೇಖವಾಗಿದೆ (ಜೈನಿಸಂ ಇನ್ ಸೌತ್ ಇಂಡಿಯಾ, ಇಂಗ್ಲಿಷ್ ಪುಸ್ತಕ, ಪು. ೨೪೭). ಇದರಲ್ಲಿ ವರುವ ಪ್ರಸ್ತುತಕ್ಕೆ ಸಂಬಂಧಪಟ್ಟ ಸಾಲು ಹೀಗಿದೆ : ” ತ್ರೈವಿದ್ಯರಪ್ಪ ಪಿರಿಯ ಶ್ರೀ ದಿವಾಕರನಂದಿ ಸಿದ್ಧಾಂತದೇವರು” (ಶಾಸನದಲ್ಲಿ ಸಾಲು ೨೫-೨೬). ನಗರ ೫೭ನೆಯ ಸುದೀರ್ಘ ಶಾಸನದಿಂದ (೧೦೭೭) ತಿಳಿದುಬರುವ ವಿವರಗಳನ್ನು ಪರಿಶೀಲಿಸಬಹುದು. ವೀರಶಾಂತರನ ಹಿರಿಯ ಮಗನಾದ ತೈಲಹ ದೇವನು (ಭುಜಬಳ ಶಾಂತರನ) ಪಟ್ಟಣಸ್ವಾಮಿ ನೊಕ್ಕಯ್ಯ ಸೆಟ್ಟಿಯರು ಮಾಡಿಸಿದ ತೀರ್ಥದ ಬಸದಿಗೆ ದತ್ತಿ ಬಿಟ್ಟುಕೊಟ್ಟ ವಿಚಾರವನ್ನು ಶಾಸನದ ಆರಂಭದಲ್ಲಿ ತಿಳಿಸಿದೆ. ಅನಂತರ ಶ್ರೀಮತ್ ಪಟ್ಟಣ ಸ್ವಾಮಿ ನೊಕ್ಕಯ್ಯ ಸೆಟ್ಟಿಯರು ಹೇಗೆ ಆ ಕಾಲದಲ್ಲಿ “ಪುರುಷರತ್ನಂ, ಶಾಂತಳಿದೇಶಕಾಂತಾರಾಂತರ ಜಂಗಮ ತೀರ್ಥಂ, ಕಲಿಯುಗ ಪಾರ್ಥಂ, ಪೊಂಬುರ್ಚ್ಚ ಕುಳೋದ್ಬವ ದಿವಾಕರಂ” ಆಗಿ ಬೆಳಗಿದರೆಂಬುದನ್ನು ಹಲವಾರು ಪದ್ಯಗಳಲ್ಲಿ ಕೊಂಡಾಡಲಾಗಿದೆ. ಇಷ್ಟು ಪ್ರಖ್ಯಾತನಾದ ಪಟ್ಟಣಸ್ವಾಮಿ ನೊಕ್ಕಯ್ಯನ ಗುರುಗಳು ಉಭಯಸಿದ್ದಾಂತರತ್ನಾಕರೂ ವಿಖ್ಯಾತರೂ ಆದ ದಿವಾಕರಣಂದಿ : “ಅರ್ಹತ್ಪರಮೇಶ್ವರ ಪರಮಭಟ್ಟಾರಕಮುಖ ಕಮಳವಿನಿರ್ಗತ ಸದಸದಾದಿ ವಸ್ತುಸ್ವರೂಪ ನಿರೂಪಣ ಪ್ರವೀಣರುಂ ಸಿದ್ಧಾನ್ತರತ್ನಾಕರರಪ್ಪ ಶ್ರೀಮದ್ದಿ ವಾಕರಣನ್ದಿ ಸಿದ್ಧಾನ್ತದೇವರ ಗುಡ್ಡ ” (ಮುಂದೆ ಪಟ್ಟಣಸ್ವಾಮಿಯ ವರ್ಣನೆಯಿದೆ).

ಸೂಳೇಬಸ್ತಿಯ ಎದುರಿಗೆ ಇರುವ ಮಾನಸ್ತಂಭದ ಪಶ್ಚಿಮ, ಪೂರ್ವ, ಉತ್ತರ ಮತ್ತು ದಕ್ಷಿಣ ಮುಖಗಳಲ್ಲಿ ಬರವಣಿಗೆಯಿಂದ ಪ್ರಸ್ತುತಕ್ಕೆ ತಕ್ಕಷ್ಟು ತೆಗೆದುಕೊಳ್ಳಲಾಗಿದೆ. ಉತ್ತರಮುಖದಿಂದ ಒಂದು ಪದ್ಯವನ್ನು ಆರಿಸಿ ಕೊಳ್ಳಬಹುದು:

            ಗುಣಿಗಳ್ ಸಿದ್ಧಾನ್ತರತ್ನಾಕರರಮಳ್ ಚರಿತ್ರರ್ಮ್ಮಹಾಯೋಗಿ ಬೃನ್ದಾ
ಗ್ರಣಿಗಳ್ ಶ್ರೀಶಾನ್ತಿನಾಥಕ್ರಮಕಳಯುಗಾರಾಧಕರ್ಭಾರತೀ ಭೂ
ಷಣಬುದ್ಧರ್ಜ್ಞಾನಿಗಳ್ ದೇಸಿಕಗಣ ತಿಳಕ ರ್ಜ್ಜ್ಯೆನಸಿದ್ಧಾನ್ತ ಚೂಡಾ
ಮಣಿಗಳ್ ಶ್ರೀಪಟ್ಟಣಸ್ವಾಮಿಗೆ ಗುರುಗಳೆನಲ್ ನೊಕ್ಕನನ್ತಾರು ಕೃತಾರ್ಥರ್
||

ಇದೇ ಮಾನಸ್ತಂಭದ ಪೂರ್ವ ಮುಖದಲ್ಲಿರುವ ಬರವಣಿಗೆಯ ಆರಂಭದಲ್ಲಿ ಮತ್ತೆ ದಿವಾಕರಣಂದಿಯ ಪ್ರಸ್ತಾಪವಿದೆ. ಈ ಉಲ್ಲೇಖವಂತೂ ಬಹುಮುಖ್ಯ ವಾದದ್ದು. ಏಕೆಂದರೆ ಇದರಲ್ಲಿ ದಿವಾಕರಣಂದಿಯು ರಚಿಸಿರುವ ತತ್ಪಾರ್ಥಸೂತ್ರದ ಕನ್ನಡ ವೃತ್ತಿಯ ವಿಚಾರವನ್ನು ತಿಳಿಸಿದೆ. ಅಂದರೆ ಈ ಶಾಸನ ರಚನೆಯ ೧೦೭೭ರ ವೇಳೆಗೆ ದಿವಾಕರಣಂದಿ ಮುನಿ ಕನ್ನಡವೃತ್ತಿಯ ಗ್ರಂಥವನ್ನು ಬರೆದು ಪೂರೈಸಿದ್ದು, ಅದು ಜನಪ್ರಸಿದ್ದಿಯನ್ನು ಪಡೆದಿತ್ತು ಎಂಬ ಸಂಗತಿ ಸ್ಪಷ್ಟವಾಗುತ್ತದೆ. ಕೆಲವು ಕಡೆ (ಕವಿಚರತೆ) ಈ ಶಾಸನರಚನೆ ಕಾಲವನ್ನು ೧೦೬೨ ಎಂದೂ ನಮೂದಿಸಲಾಗಿದೆ :

            ಜಡರುಂ ಬಾಳಕರುಂ ಬುಧಪ್ರಕರಮುಂ ತತ್ವಾರ್ಥಮಂ ಕಲ್ತಘಂ
ಕಿಡೆ ಸಮ್ಯಕ್ತ್ವ ಮಕ್ತ್ವಮನೆಯ್ದಿ ಸಪ್ತಪರಮಸ್ಥಾನಾಪ್ತಿಯಂ ನಿಶ್ವಯಂ
|
ಪಡೆಯಲ್ ಮಾಡಿದರೊಪ್ಪೆ [ಯಾ ದಿವಾಕರರ್] ತತ್ವಾರ್ಥಸೂತ್ರಕ್ಕೆ ಕ
ನ್ನಡದಿಂ ವೃತ್ತಿಯನೆಲ್ಲೆಗಂ ನೆಗೞ್ವೆನಂ ಸಿದ್ಧಾಂತ ರತ್ನಾಕರರ್
||

ಜಡರು ಬಾಲಕರು ವಿದ್ವಾಂಸರು ಈ ಜೈನ ತತ್ವಾರ್ಥವನ್ನು ಕಲಿತು ಮತ್ತು ಪಾಪವನ್ನು ನೀಗಿಕೊಂಡು ಸಮ್ಯಕ್ತ್ವವನ್ನು ಸಂಪಾದಿಸಲಿ ಎಂಬ ಸದ್ಭಾವನೆಯಿಂದ ದಿವಾಕರಣಂದಿ ಮುನಿ ಸಂಸ್ಕೃತ ಭಾಷೆಯಲ್ಲಿರುವ ತತ್ವಾರ್ಥಸೂತ್ರಕ್ಕೆ ಕನ್ನಡ ಭಾಷೆಯಲ್ಲಿ ವೃತ್ತಿಯನ್ನು ಬರೆದರೆಂಬುದಾಗಿ ಇಂತು ಸ್ಪಷ್ಟೀಕರಿಸಿರುವುದು ಉಲ್ಲೇಖನೀಯವಾಗಿದೆ. ಇದರ ಮುಂದಿನ ಪದ್ಯ ಹೀಗಿದೆ :

            ಕನ್ತುದರ್ಪ್ಪಹರಂ ಜಿನಂ ತನಗಾಪ್ತನಾಳ್ದನವಾರ್ಯ್ಯ ವಿ
ಕ್ರಾನ್ತನೊಳ್ಗಲಿ ವೀರಶಾನ್ತರನಮ್ಮಣಂ ಗುಣಿ ತನ್ದೆ ದಿ
ಗ್ದನ್ತಿವರ್ತ್ತಿತಕೀರ್ತ್ತಿಗಳ್ ಗುರುಗಳ್ ದಿವಾಕರಣನ್ದಿ ಸಿ
ದ್ಧಾನ್ತದೇವರೆನಲ್ಕೆ ಪಟ್ಟಣಸ್ವಾಮಿನೊಕ್ಕನೆ ಸನ್ನುತಂ
||

ಮಾನಸ್ತಂಭದ ದಕ್ಷಿಣಮುಖದ ಒಂದು ಪದ್ಯವನ್ನು ಮಾತ್ರ ಪ್ರಸ್ತುತಕ್ಕೆ ಸಂಬಂಧಿಸಿದ್ದರಿಂದ, ಉದಾಹರಿಸಬಹುದು:

            ಚಾರುಚರಿತ್ರರೀದೊರೆಯರಾರೆನಿಪಿಳ್ಪಿನ ಚಂದ್ರಕೀರ್ತಿ ಭ
ಟ್ಟಾರಕರಗ್ರಶಿಷ್ಯರಘಹಾರಿಗಳಾರ್ಹತತತ್ವವಸ್ತು ವಿ
ಸ್ತಾರಕರಂಗಜಾರಿಗಳಶೇಷವಿಶೇಷಗುಣಾವಳೀಮನೋ
ಹಾರಿಗಳೆಂಬಿನಂ ನೆಗೞ್ದರಲ್ತೆ ದಿವಾಕರಣಂದಿ ಸೂರಿಗಳ್
||

ವಚನ || ಉಭಯ ಸಿದ್ಧಾನ್ತ ಚೂಡಾಮಣಿಗಳುಂ ತ್ರೈವಿದ್ಯದೇವರುಮೆನಿಸಿದ ಶ್ರೀದಿವಾಕರಣನ್ದಿ ಸಿದ್ಧಾನ್ತ ರತ್ನಾಕರ ದೇವರ ಶಿಷ್ಯರ್ ||

            ಸಕಳ ಚನ್ದ್ರಮುನಿನಾಥರುರ್ವರಾ
ಸಕಳದೊಳ್ಪುರಮಯೋಗ್ಯರೆಂಬುದಂ
ಕಕುಭದನ್ತಿಗಳ ದನ್ತದೊಳಕರಂ
ಪ್ರಕಟಮಾಗೆ ಬರೆದಂ ಪಿತಾಮಹಂ
||

ಈ ಶಾಸನವನ್ನು ರಚಿಸಿದವನು ಸಮ್ಯಕ್ತ್ವವಾರಾಸಿಯೆನಿಸಿದ ಪಟ್ಟಣಸ್ವಾಮಿಯ ಮಗನಾದ ಮಲ್ಲಿನಾಥ ಕವಿ. ನಗರ ೫೭-೫೮ ಎರಡೂ ಶಾಸನಗಳು ಮಲ್ಲಿನಾಥನ ಉತ್ಕೃಷ್ಟ ರಚನೆಗಳಾಗಿವೆ. ಐತಿಹಾಸಿಕ ಮಹತ್ವವನ್ನು ಪಡೆದಿವೆ. ಈ ಮಲ್ಲಿನಾಥ ಶಾಸನ ಕವಿಯ ಮೇಲೆ ಸುಕುಮಾರಚರಿತೆ ಕಾವ್ಯ ಬರೆದ ಶಾಂತಿನಾಥ ಕವಿಯ ಪ್ರಭಾವನ್ನು ಕೂಡ ಗುರುತಿಸಬಹುದಾಗಿದೆ. ನಗರ ೫೮ ನೆಯ ಶಾಸನ (ಎ.ಕ. ೮, ಪು. ೩೮೭) ಕೊಡುವ ವಿವರಗಳಲ್ಲಿ ಪ್ರಸ್ತುತಕ್ಕೆ ಸಂಬಂಧಪಡುವ ಸಾಲು ಕೇವಲ ಎರಡು ಪಂಕ್ತಿಯಿದೆ. ಸೂಳೇ ಬಸದಿಯ ಎದುರಿಗೆ ನಿಂತಿರುವ ಕಲ್ಲಿನ ಮೇಲುಗಡೆ ಕೆತ್ತಿರುವ ಸಾಲುಗಳಲ್ಲಿ ದಿವಾಕರಣಂದಿಗೆ ಸಂಬಂಧಿಸಿದ ಉಲ್ಲೇಖವನ್ನು ಕಾಣಬಹುದು. ಈ ಶಾಸನ ಎಂಟೂವರೆ ಅಡಿ ಎತ್ತರ ಹಾಗೂ ಮೂರೂಮುಕ್ಕಾಲು ಅಡಿ ಅಗಲವಿದೆ. ಪ್ರಸ್ತುತಕ್ಕೆ ಅವಶ್ಯವಾದ ಪಂಕ್ತಿ ಹೀಗಿದೆ : “ಶ್ರೀಪಟ್ಟಣಸ್ವಾಮಿಯ ಗುರುಗಳ್ ಶ್ರೀಮದ್ದಿವಾಕರಣನ್ದಿ ಸಿದ್ಧಾನ್ತ ರತ್ನಾಕರದೇವರು ಶ್ರೀ ಬಿರುದ ಸರ್ಬ್ಬಜ್ಞಂ ಬೀರ ಶಾಂತರದೇವಂ.”

ನಗರ ೫೭ ಮತ್ತು ೫೮ ನೆಯ ಎರಡೂ ಶಾಸನಗಳನ್ನು ಸೇರಿಸಿದರೆ ಆಗುವಷ್ಟು ಪ್ರಮಾಣಕ್ಕಿಂತ ದೊಡ್ಡ ಶಾಸನ ಶಿಕಾರಿಪುರದ ೧೩೬ ನೆಯ ಶಾಸನ. ಈ ಶಾಸನದ ಕಡೆಯ ಭಾಗ ಸಾಕಷ್ಟು ತ್ರುಟಿತವಾಗಿದೆ. ಈ ಶಾಸನವನ್ನು ಪ್ರಾಯಃ ಶಾಂತಿನಾಥ ಕವಿಯೇ ಬರೆದಿರಬೇಕೆಂದು ಊಹಿಸಬಹುದು. ಅಂತರಬಾಹ್ಯ ಪ್ರಮಾಣಗಳು ಈ ಊಹೆಯನ್ನು ಬೆಂಬಲಿಸುತ್ತವೆ. ಈ ಶಾಸನದಲ್ಲಿ ಬನವಾಸಿ ಹನ್ನೆರಡು ಸಾವಿರಕ್ಕೆ ಮಹಾಮಂಡಲೇಶ್ವರನಾಗಿದ್ದ ಲಕ್ಷ್ಮಣನನ್ನು ವಿಸ್ತಾರವಾಗಿ ವರ್ಣಿಸಲಾಗಿದೆ. ಅನಂತರದಲ್ಲಿ ವರ್ಧಮಾನ ಮುನಿಯ ಸ್ತುತಿಯಿದೆ. ತರುವಾಯ ಬರುವ ಒಂದು ವೃತ್ತಪದ್ಯದಲ್ಲಿ ದಿವಾಕರದೇವರ ಸ್ತೋತ್ರ ಕಂಡುಬರುತ್ತದೆ :

            ಸಂತತಮೊಂದಿ ನಿಂದ ತಪದೊಳ್ ಶ್ರುತದೊಳ್ ಗುಣದೊಳ್ ವಿಶೇಷರಿ
ನ್ನಿಂತಿವರೆಲ್ಲರಿಂ ಪಿರಿಯರಿಂತಿವರಗ್ಗಳದಗ್ರಗಣ್ಯರೋ
ರಂತಿವರೆಂದು ಕೀರ್ತಿಪುದು ಕೂರ್ತು [ದಿವಾಕರ] ದೇವಸಿ
ದ್ದಾಂತ ಮುನೀಂದ್ರರಂ ನತನರೇಂದ್ರರನಬ್ಧಿ ಪರೀತಭೂತಳಂ
||

ಈ ಶಾಸನ ರಚನೆಯ ಕಾಲ ಕ್ರಿ.ಶ. ೧೦೬೮. ‘ಸುಕುಮಾರಚರಿತೆ’ ಯೆಂಬ ಚಂಪೂ ಕಾವ್ಯವನ್ನೂ ಶಿಕಾರಿಪುರ ಶಾಸನವನ್ನೂ ರಚಿಸಿರುವ ಶಾಂತಿನಾಥ ಕವಿಯೂ ದಿವಾಕರಣಂದಿ ಮುನಿಯೂ ಸಮಾಕಾಲೀನ ಲೇಖಕರೆಂಬುದನ್ನು ವಿಶೇಷವಾಗಿ ಗಮನಿಸಬಹುದು. ದಿವಾಕರಣಂದಿಯು ಗುರುವಾದ ಚಂದ್ರಕೀರ್ತಿ ಮುನಿಯನ್ನು ಕೂಡ ಶಾಂತಿನಾಥ ಕವಿ ಸ್ಮರಿಸಿದ್ದಾನೆ (೧-೨೨). ಅದರಲ್ಲಿಯೂ

            ವಿದಿತ ವ್ಯಾಕರಣದ ತ
ರ್ಕದ ಸಿದ್ಧಾಂತದ ವಿಶೇಷದಿಂ ತ್ರೈವಿದ್ಯಾ
ಸ್ಪದರೆಂದೀ ಧರೆ ಬಣ್ಣಿಪು
ದು ದಿವಾಕರಣಂದಿದೇವ ಸೈದ್ಧಾಂತಿಗಳಂ
|| (೧-೨೮)

ಎಂಬ ಕಂದಪದ್ಯ ಸುಪ್ರಸಿದ್ಧವಾಗಿದೆ. ಶಾಂತಿನಾಥ ಕವಿಯ ಈ ಪದ್ಯವನ್ನು ಶಾಸನ ಕವಿ ಕೂಡ ಉದಾಹರಿಸಿದ್ದುದನ್ನು ಪರಿಶೀಲಿಸಿ ವಿವರಿಸಿದ್ದೇವೆ (ಶ್ರ ಬೆ. ೧೧೭).

ಇನ್ನೊಂದು ಪ್ರಮುಖವಾದ ಶಾಸನ -ಎ. ಕ. ೬ (೧೯೭೭), ೩ (೪ ಕೃಪೇ. ೩), ೨೪-೧೨-೧೧೧೮. ಇದು ಮಂದ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿಗೆ ಸೇರಿದ ಹೊಸಹೊಳಲು ಗ್ರಾಮದ ಪಾರ್ಶ್ವನಾಥ ಬಸದಿಗೆ ದಕ್ಷಿಣಕ್ಕಿರುವ ಕಲ್ಲಿನ ಕೆತ್ತಿರುವ ೪೬ ಪಂಕ್ತಿಗಳ ಶಾಸನ. ಗಂಗವಾಡಿ ೯೬ ಸಾವಿರವನ್ನು ಪೊಯ್ಸಳದೇವನು ಆಳುತ್ತಿದ್ದುದನ್ನು ಇದರಲ್ಲಿ ನಮೂದಿಸಿದೆ. ದೋರಸಮುದ್ರದ ಪಟ್ಟಣ ಶೆಟ್ಟಿಯಾದ ನೊಣ(ಳ) ಬಿಸೆಟ್ಟಿಯ (ಚವುಂಡಾಂದಿ ದ್ವಿತೀಯ ನಾಮಧೇಯ ಹೆಂಡತಿಯಾದ ದೇಮಿಕಬ್ಬೆ (ದೇಮಾಂಬಿಕೆ)ಯ ಕತ್ತರಿಘಟ್ಟದಲ್ಲಿ ತ್ರಿಕೂಟಜಿನಾಲಯವನ್ನು ಕಟ್ಟಿಸಿದಳೆಂಬ ಸಂಗತಿ ಈ ಶಾಸನದ ಮುಖ್ಯ ವಿಚಾರ; ಅರಹನ ಹಳ್ಳಿಯನ್ನೂ ಭೂಮಿಕಾಣಿಯನ್ನೂ ಎರಡು ಗಾಣಗಳನ್ನೂ ಎರಡು ಕೆರೆಗಳನ್ನೂ ಎರಡು ತೋಟಗಳನ್ನೂ ಮನೆಯನ್ನೂ ಆಕೆ ಬಸದಿಗೆ ೨೪-೧೨-೧೧೧೮ ರಂದು (ಶಕ. ೧೦೪೦ ವಿಳಂಬಿ ಪುಷ್ಯ ಶು. ೧೦ ಗುರುವಾರ ಉತ್ತರಾಯಣ ಸಂಕ್ರಾಂತಿ) ಪೂಜಾಕಾರ್ಯಕ್ಕೆ ದಾನವಿತ್ತಳು. ಶ್ರೀ ಮೂಲಸಂಘದ ದೇಸಿಗಗಣದ ಪೊಸ್ತಕಗಚ್ಛದ ಶ್ರೀ ಶುಭಚಂದ್ರ ಸಿದ್ಧಾಂತದೇವರು ಈ ದಾನವನ್ನು ಧಾರಾಪೂರ್ವಕ ಪಡೆದರು; ನೊಳಂಬಿಸೆಟ್ಟಿಯು ಅವರ ಗುಡ್ಡ (ಶಿಷ್ಯ). ಶುಭಚಂದ್ರರಗುರು ಪುತ್ತದಮೆಯ್ಯ ಮಲಧಾರಿ ದೇವರು. ಈ ಮಲಧಾರಿ ದೇವರು ದಿವಾಕರಣಂದಿಯ ಶಿಷ್ಯರು ಎಂದು ತಿಳಿಸಿದೆ. ದಿವಾಕರಣಂದಿಯನ್ನು ಕುರಿತು ಒಂದು (ಅಶುದ್ಧ) ಕಂದ ಪದ್ಮವನ್ನು ಈ ಶಾಸನ ಒದಗಿಸಿದೆ (ಸಾಲು ೩೯-೪೦):

            ವಿದಿತ ವ್ಯಾಕರಣದ ತ
ರ್ಕ್ಕದ ಸಿದ್ಧಾನ್ತದ ವಿಶೇಷದಿಂ ತೈವಿದ್ಯಾ
ಸ್ಪದದಿಂದಿರೆ ಬಣ್ನಿಪು
ದು ದಿವಾಕರಣಂದಿದೇವ ಸಿದ್ದಾನ್ತಿಗರಂ
||

ಈ ಕಂದ ಪದ್ಯದ ಮೂರನೆಯ ಪಾದದಲ್ಲಿ ೧೨ ಮಾತ್ರೆಗಳ ಬದಲು ೧೦ ಮಾತ್ರೆಗಳಿದ್ದು, ಇನ್ನೆರಡು ಮಾತ್ರೆಗಳ ಕೊರತೆಯಿದೆ. ವಾಸ್ತವಾಗಿ ದಿವಾಕರಣಂದಿಯನ್ನು ಸ್ತುತಿಸುವ ಈ ಪದ್ಯ ವಿಖ್ಯಾತವಾದದು. ಇದನ್ನು ಮೊದಲು ಬರೆದವನು ಶಾಂತಿನಾಥ ಕವಿ. ಆತನ ಸುಕುಮಾರಚರಿತೆ ಕಾವ್ಯದಲ್ಲಿ ಈ ಕಂದ ಪದ್ಯದ ಶುದ್ಧ ಪಾಠ ದೊರೆಯುತ್ತದೆ. ಅಲ್ಲದೆ ಇದೇ ಕಂದ ಪದ್ಯ ಶ್ರವನಬೆಳ್ಗೊಳ ೧೩೫(೧೧೭) ನೆಯ ಶಾಸನದಲ್ಲೂ ಸಿಗುತ್ತದೆ. ಅಂದರೆ ಶಾಂತಿನಾಥ ಕವಿಯ ಪದ್ಯವನ್ನು ಎರಡೂ ಶಾಸನಕಾರರು ಉದ್ಧರಿಸಿದ್ಧಾರೆಂಬುದು ಗಮನಾರ್ಹವಾಗುತ್ತದೆ. ಕವಿಗಳು ತಮ್ಮ ಕಾವ್ಯದಲ್ಲಿ ತಮಗಿಂತ ಹಿಂದಣ ಕವಿಗಳ ಕಾವ್ಯಗಳಿಂದ ಪದ್ಯಗಳನ್ನು ಉದಾಹರಿಸುತ್ತಿದ್ದಂತೆ ಶಾಸನಕವಿಗಳೂ ಕವಿಕೃತಿಗಳಿಂದ ಹೀಗೆ ಪದ್ಯಗಳನ್ನು ಉದಾಹರಿಸುವ ವಾಡಿಕೆಯಿದೆ.

ದಿವಾಕರಣಂದಿಯ ಗುರುಪರಂಪರೆಯನ್ನು ಹೀಗೆ ಗುರುತಿಸಬಹುದು:

 03_257_CK-KUH

ದಿವಾಕರಣಂದಿ ಮುನಿಯ ಆಚಾರ್ಯ ಪರಂಪರೆ ಶ್ರೀಮಂತವಾದದ್ದು. ಅದರಂತೆ ಅವರ ಶಷ್ಯರಪಂಪರೆಯೂ ವಿಪುಲವಾಗಿದೆ, ಭವ್ಯವಾಗಿದೆ/ ಉದಾಹರಣೆಗೆ, ಗಂಡವಿಮುಕ್ತ ಮಲಾಧಾರಿದೇವ, ಸಕಲಚಂದ್ರ, ಪಟ್ಟಾಣಸ್ವಾಮಿನೊಕ್ಕ, ಮಾಘಣಂದಿ – ಇವರುಗಳೇ ಅಲ್ಲದೆ ಶ್ರೀಮತಿ ಗಂತಿ (ಚಂದ್ರಾಯಣದೇವ), ಜಯಕೀರ್ತಿದೇವ, ಸವರ್ಣಂದಿ ಭಟ್ಟಾರಕ, ಮುನಿಚಂದ್ರದೇವ ಮೊದಲಾದವರು ಕೂಡ ದಿವಾಕರಣಂದಿ ಯತಿಯ ಶಿಷ್ಯರಾಗಿದ್ದಿರಬೇಕೆಂದು ಊಹಿಸಲು ಅವಕಾಶಗಳಿವೆ. ಇದರಿಂದ ಹನ್ನೊಂದನೆಯ ಶತಮಾನದುದ್ದಕ್ಕೂ ಈ ದಿವಾಕರಣಂದಿಯ ಹಿಂದಿನ, ಸಮಾಕಾಲೀನ ಮತ್ತು ಅನಂತರದ ಗುರುಪರಂಪರೆಯ ಒಂದು ಸ್ಪಷ್ಟ ಚಿತ್ರಚ್ವನ್ನು ಕಲ್ಪಿಸಿಕೊಳ್ಳುವುದು ಸಾಧ್ಯವಾಗಿದೆ. ದಿವಾಕರಣಂದಿಯ ವ್ಯಾಖ್ಯಾನ ಕೃತಿಯಿಂದಲೂ ಕೆಲವು ಪೂರಕಾಂಶಗಳನ್ನು ಪಡೆಯಬಹುದು. ದಿವಾಕರಣಂದಿಯು ಹನಸೋಗೆಮಠ ಮತ್ತು ಭಟ್ಟಾರಕ ಪರಂಪರೆಗೂ ಹೊಂಬುಜ ಗುರು ಪೀಳಿಗೆಗೂ ಸಂಬಂಧ ಹೊಂದಿದ್ದರೆಂದು ಉಪಲಬ್ಧ ಶಾಸನಧಾರಗಳು ಸಾಬೀತುಪಡಿಸುತ್ತವೆ.

ದಿವಾಕರಣಂದಿಯನ್ನು ಕುರಿತು ಉಪಲಬ್ಧವಾಗಿರುವ ಒಟ್ಟು ಶಾಸನಗಳು:

೧. ಎಕ. ೨,೧೩೫ (೧೧೭), ೧೧೨೩

೨. ಎಕ. ೨,೪೮೫ (೩೫೧) ೧೧೧೯

೩. ಎಕ. ೬,೩ (೪ ಕೃಪೇ ೩), ೧೧೧೮

೪. ಎಕ. ೫,೨೨ (೪ ಯೆ ೨೩), ಸು. ೧೧ ಶ.

೫. ಎಕ. ೫,೨೬ (೪ ಯೆ ೨೭), ಸು. ೧೧-೧೨ ಶ.

೬. ಎಕ. ೫,೨೩ (೪ ಯೆ ೨೪), ೧೧೦೦

೭. ಎಕ. ೭ (೧೯೦೨), ಶಿಕಾರಿಪುರ ೧೩೬,೧೦೬೮

೮. ಎಕ. ೮, ನಗರ ೫೭, ೫೮, ಸು. ೧೦೭೭

ಕಾವ್ಯಗಳಲ್ಲಿ ಸಿಗುವ ಉಲ್ಲೇಖಗಳು :

೧. ಶಾಂತಿನಾಥ ಕವಿ, ಸುಕುಮಾರಚರಿತೆ, ೧-೨೮, ೧೦೬೦

೨. ನಯನಸೇನ ಕವಿ, ಧರ್ಮಾಮೃತ, ೧-೨೨, ೧೧೧೨

ಈ ಎಲ್ಲಾ ಆಧಾರಗಳನ್ನು ಗಮನಿಸಿ ದಿವಾಕರಣಂದಿಯ ಜೀವಿತದ ಕಾಲಮಾನವನ್ನು ಸ್ಥೂಲವಾಗಿ ಸು. ೧೦೨೦ ರಿಂದ ೧೦೮೫ರ ವರೆಗೆ ಜೀವಿಸಿದ್ದರೆಂದು ತಿಳಿಯಬಹುದು; ಅಂತೂ ಹನ್ನೊಂದನೆಯ ಶತಮಾನದ ಆದಿಯಿಂದ ಅಂತ್ಯದವರೆಗೆ ಇವರ ಜೀವಿತ ಕಾಲವೆಂದು ನಿಸ್ಸಂದೇಹವಾಗಿ ಗ್ರಹಿಸಬಹುದು. ಜೈನ ಗುರು ಪರಂಪರೆಯಲ್ಲಿ, ಅದರಲ್ಲಿಯೂ ಕರ್ನಾಟಕದಲ್ಲಿ ಆಗಿಹೋದವರಲ್ಲಿ, ದಿವಾಕರಣಂದಿಗೆ ವಿಶಿಷ್ಟವೂ ಆದ ಹಿರಿಯ ಸ್ಥಾನವಿದೆ. ಆ ಕಾರಣದಿಂದಾಗಿ ಅವರ ಪರವಾದ ಉಲ್ಲೇಖಗಳು ವಿಪುಲವಾಗಿ ಉಪಲಬ್ದವಾಗಿವೆ. ಅವರ ಹಿಂದಿನ, ಸಮಕಾಲೀನ ಹಾಗೂ ಅನಂತರ ಕಾಲದ ಜೈನಗುರುಗಳ ಮಾಹಿತಿ ಸಮೃದ್ಧವಾಗಿದೆ. ಅಚ್ಚಕನ್ನಡಿಗರೂ ಹಿಂದೂ ಇಂದೂ ಅಚ್ಚಕನ್ನಡದ ಪ್ರದೇಶವಾಗಿರುವ ಪ(ಹ) ನಸೋಗೆಯವರೂ ಆಗಿದ್ದ ದಿವಾಕರಣಂದಿಯನರು ತ್ರಿಭಾಷಾ ವಿಶಾರದರು; ಪ್ರಾಕೃತ, ಸಂಸ್ಕೃತ, ಕನ್ನಡ ಭಾಷೆಗಳಲ್ಲಿ ಪ್ರಗಬ್ಭರು. ಸಮಸ್ತ ಜೈನವಾಞ್ಮಯದಲ್ಲಿ ಹೃದಯ ಸ್ಥಾನದಲ್ಲಿರುವ ಉಮಾಸ್ವಾಮಿ(ತಿ)ಯ ತತ್ವಾರ್ಥಸೂತ್ರವನ್ನು ಕನ್ನಡಕ್ಕೆ ಕನ್ನಡ್ಸಿಕೊಟ್ಟ ಆದ್ಯರು. ಅವರು ತಮ್ಮ ಜೀವಿತ ಕಾಲದಲ್ಲಿ ಪ್ರಸಿದ್ಧಿ ಪಡೆದಿದ್ದವರು, ಶಿಷ್ಯಸಂಪತ್ತು ಹೊಂದಿದ್ದವರು.

ಇಷ್ಟು ಪ್ರಸಿದ್ಧರಾದ ದಿವಾಕರಣಂದಿ ಮುನಿ ಕನ್ನಡದಲ್ಲಿ ಮೊತ್ತಮೊದಲ ಬಾರಿಗೆ ಬರೆದಿರುವ ತತ್ವಾರ್ಥ ಸೂತ್ರವೃತ್ತಿ ಇದುವರೆಗೂ ಪ್ರಕಟವಾಗಿಲ್ಲ. ಈ ಕನ್ನಡ ವೃತ್ತಿಗೆ ಧಾರ್ಮಿಕ ಮಹತ್ವವೇ ಅಲ್ಲದೆ ಚಾರಿತ್ರಿಕ ಹಾಗೂ ಭಾಷಿಕ ಮಹತ್ವವೂ ಉಂಟು.

ಆಧಾರಗಳು

೧. ಎಕ. ೨,೧೯೭೩

(ಅ) ೧೩೫ (೧೧೭), ೧೧೨೩

(ಆ) ೪೮೪ (೩೫೧), ೧೧೦೯

೨. ಎಕ. ೭, ೧೯೦೨, ೧೩೬, ೧೦೬೮ ಶಿಕಾರಿಪುರ

೩. ಎಕ. ೮, ನಗರ ೫೭/೫೮, ಸು. ೧೦೭೭, ಶಾಸನ ಬರೆದ ಕವಿ ಮಲ್ಲಿನಾಥ

೪. ಎಕ. ೬, ೧೯೭೭, ೩ (೪ ಕೃಪೇ ೩), ೧೧೧೮

೫. ಎಕ. V, ೧೯೭೬, ೨೨ (೪ ಯೆ ೨೩), ೨೩ (೪ ಯೆ ೨೪), ೨೬ (೪ ಯೆ ೨೩)

೬. ಕರ್ಣಾಟಕ ಕವಿಚರಿತೆ, ೧೯೬೧, ಪು. ೯೬, ೯೭-೯೮

೭. ಕನ್ನಡ ಸಾಹಿತ್ಯ ಚರಿತ್ರೆ – ಸಂಪುಟ ಮೂರು, (ಮೈ.ವಿ.ವಿ. – ಕ.ಅ.ಸಂ) ೧೯೭೬, ಪು ೭೪೫ – ೭೪೮

೮. ದೊಲನ ಮತ್ತು ತ.ಸು. ಶಾಮರಾಯ (ಸಂ.) : ಶಾಂತಿನಾಥ ಕವಿಯ ಸುಕುಮಾರ ಚರಿತೆ ಕಾವ್ಯ, ಶಿವಮೊಗ್ಗ, ೧೯೫೪

೯. ದಿವಾಕರಣಂದಿಯ ‘ತತ್ತ್ವಾರ್ಥ. ಸೂತ್ರಾನುಗತ ಕಣಾಟಕ ಲಘವೃತ್ತಿ’ (ಸಂ) ನಾಗರಾಜಯ್ಯ, ಹಂಪ. (೧೯೯೫)

೧೦. ನಯಸೇನ ಕವಿಯ ಧರ್ಮಾಮೃತ ಕಾವ್ಯ

೧೧. ಮಿರ್ಜಿ ಅಣ್ಣಾರಾಯ : ಜೈನಧರ್ಮ

೧೨. ಎ. ಶಾಂತಿ ರಾಜಶಾಸ್ತ್ರಿ (ಸಂ) : ಬಾಲಚಂದ್ರದೇವ ವಿರಚಿತ ತತ್ತ್ವರತ್ನ ಪ್ರದೀಪಿಕೆ, ೧೯೫೫

೧೩. ಹಂಪನಾ : ದಿವಾಕರಣಂದಿ ಮತ್ತು ವಡ್ಡಾರಾಧನೆ, ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ, ೬೯-೨, ಡಿಸೆಂ. ೮೪, ಪು. ೨೮-೨೯

೧೪. ಪಿ.ಬಿ. ದೇಸಾಯಿ : ಜೈನಿಸಮ್ ಇನ್ ಸೌತ್ ಇಂಡಿಯಾ (ಇಂಗ್ಲಿಷ್), ೧೯೫೭

೧೫. ನಾಗರಾಜಯ್ಯ, ಹಂಪ., ‘ಸಾಂತರರು : ಒಂದು ಅಧ್ಯಯನ’ (೧೯೯೭)