ಕನ್ನಡದ ಪ್ರಾಚೀನ ಗದ್ಯಗ್ರಂಥವಾದ ವಡ್ದಾರಾಧನೆಯಲ್ಲಿರುವ ದೊಡ್ಡ ಕಥೆಗಳಲ್ಲಿ, ಇಪ್ಪತ್ತೆರಡು ಪುಟಗಳ ಭದ್ರಬಾಹು ಭಟಾರರ ಕಥೆಯೂ ಸೇರಿದೆ. ಈ ಕಥೆ ವಿಮರ್ಶಕರ ಮತ್ತು ಇತಿಹಾಸಕಾರರ ಗಮನ ಸೆಳೆಯುವ ಕಥೆಯೂ ಆಗಿದೆ, ಇದು ತನ್ನಲ್ಲಿ ಐತಿಹಾಸಿಕ ಭಿತ್ತಿಯನ್ನೂ ಅಡಗಿಕೊಂಡಿಡದೆ. ಧಾರ್ಮಿಕ ಉದ್ದೇಶಕ್ಕಾಗಿ ಚಾರಿತ್ರಿಕ ವಸ್ತುವನ್ನು ಬಳಸಿಕೊಂಡಾಗ ಮಹತ್ವ ಬರುವುದು ಚಾರಿತ್ರಿಕ ವಸ್ತುವಿಗೊ, ಅಥವಾ ಧಾರ್ಮಿಕ ದೃಷ್ಟಿಗೊ ಎಂಬ ಪ್ರಶ್ನೆ ಬರುವುದು ಸಹಜ. ವಾಸ್ತವವಾಗಿ ನೋಡಿದರೆ. ಇಂಥ ಸಂದರ್ಭಗಳಲ್ಲಿ ಧಾರ್ಮಿಕತೆಯೇ ಪ್ರಧಾನವಾಗಿ, ಚರಿತ್ರೆ ಅದಕ್ಕೆ ಅಧೀನವಾಗುವ, ಒಮ್ಮೊಮ್ಮೆ ಮುಸುಕಾಗುವ ಸಾಧ್ಯತೆ ಇದೆ. ಇದರಿಂದಾಗಿ ಭಾರತೇತಿಹಾಸದ ಕೆಲವು ಕೂಟಪ್ರಶ್ನೆಗಳನ್ನು ಲೀಲಾಜಾಲವಾಗಿ ಬಿಡಿಸಿ – ಬಿಚ್ಚಿ ಹೇಳಲು ಬರುವಂತಿಲ್ಲ. ಸ್ವಮತಾಭಿನಿವೇಶವನ್ನು ಬದಿಗಿರಿಸಿ, ಸಮಗ್ರ ಭಾರತದ ದೃಷ್ಟಿಯಿಂದ ಇತಿಹಾಸದ ಆಲೋಕವನ್ನು ನಿರ್ವಿಕಾರ ವಿಚಾರವಾದಿಯಾಗಿ ಮಾಡಬೇಕಾದುದು ಅಗತ್ಯ.

ವರ್ಧಮಾನ ಮಹಾವೀರ ಜೈನರ ೨೪ ನೆಯ ತೀರ್ಥಂಕರನೂ ಹೌದು. ಚಾರಿತ್ರಿಕವಾಗಿ ಆಗಿಹೋದ ಮಹಾಪುರುಷನೂ ಹೌದು. ಈ ಭದ್ರಬಾಹುಭತಾರರ (ಭ.ಬಾ.) ಕಥೆ ಆತನಿಗೂ ಸಂಬಂಧಿಸಿರುವುದಲ್ಲದೆ, ಆತನ ಅನಂತರ ಜೈನಧರ್ಮದಲ್ಲಾದ ಮಹತ್ತರ ಪರಿವರ್ತನೆಯನ್ನೂ ತಿಳಿಸುತ್ತದೆ. ವರ್ಧಮಾನನು ನಿರ್ವಾಣ ಪಡೆದದ್ದು ಕ್ರಿ.ಪೂ. ೫೨೭ ರಲ್ಲಿ. ಭ. ಬಾ. ಕಥೆಯಲ್ಲಿ ಬರುವ “ವರ್ಧಮಾನ ಭಟ್ಟಾರರ್ ಮೋಕ್ಷಕ್ಕೆ ವೋದಿಂಬೞೆಕ್ಕೆ ಚತುರ್ದಶ ಪೂರ್ವಧಾರಿಗಳಪ್ಪ ಶ್ರುತ ಕೇವಳಿಗಳ್ ನಾಲ್ಕನೆಯವರ್ ಗೋವರ್ಧನರೆಂಬ ಭಟಾರರುಜ್ಜಯಂತಮಂ ವಂದಿಸಲೆಂದು ವಿಹಾರಿಸುತ್ತುಂ ಬರ್ಪೊರ್” (೭೩) ಎಂಬ ವಾಕ್ಯ ಚಾರಿತ್ರಿಕ ಸಮೀಕ್ಷೆಗೆ ಅವಕಾಶ ಮಾಡಿಕೊಟ್ಟಿದೆ. ಅದರಂತೆ ಈ ಭ.ಬಾ. ಕಥೆಯಲ್ಲಿ ವರ್ಧಮಾನ, ಗೋವರ್ಧನ, ಭದ್ರಬಾಹು ನಂದ(ರು), ಚಾಣಕ್ಯ, ಚಂದ್ರಗುಪ್ತ, ಬಿಂದುಸಾರ, ಅಶೋಕ, ಕುಣಾಳ, ಸಂಪ್ರತಿ ಚಂದ್ರಗುಪ್ತ, ಸಮಾಧಿಗುಪ್ತ, ಸಿಂಹಸೇನ, ರಾಮಿಲಾಚಾರ್ಯ, ಸ್ಥೂಲಾಚಾರ್ಯ, ಸ್ಥೂಲಭದ್ರಾಚಾರ್ಯ- ಮೊದಲಾದ ಹಲವು ಚಾರಿತ್ರಿಕ ಪುರುಷರ ಸರಮಾಲೆಯೇ ಬರುತ್ತದೆ; ಕೞ್ವಪ್ಪು, ಉಜ್ಜಯಂತಗಿರಿ, ಪಾಟಲೀಪುತ್ರ, ಪುಂಡ್ರವರ್ಧನ, ವಲಭಿ, ದ್ರವಿಡದೇಶ, ಸಿಂಧುದೇಶ, ಮಗಧೆ- ಮೊದಲಾದ ಚಾರಿತ್ರಿಕವಾಗಿ ಗುರುತಿಸಮಾಗಿರುವ ಪ್ರಾಚೀನಸ್ಥಳ ಹಾಗೂ ದೇಶಗಳ ಪ್ರಸ್ತಾಪವೂ ಇದೆ. ಜತೆಗೆ ನಂದವಂಶ ಹಾಗೂ ಮೌರ್ಯಮನೆತನಗಳ ಉಲ್ಲೇಖವಿದೆ. ಚಂದ್ರ ಗುಪ್ತನಿಗೆ ಚಕ್ರವರ್ತಿತ್ವವನ್ನು ದೊರಕಿಸುವಲ್ಲಿ ಚಾಣಕ್ಯನು ಜೈನ ಶ್ರಮಣನೊಬ್ಬನ ನೆರವು ಪಡೆದನೆಂಬ ಸಂಗತಿ ಸುಮಾರು ಅಯ್ದನೆಯ ಶತಮಾನದ ವಿಶಾಖದತ್ತನ ‘ಮುದ್ರಾರಾಕ್ಷಸ’ ಕೃತಿಯಲ್ಲೂ ಬರುತ್ತದೆ; ಆ ಶ್ರಮಣ (ಕ್ಷಪಣಕ) ಯಾರು, ಭದ್ರಬಾಹುವೆ ಎಂಬ ಅನುಮಾನಗಳಿಗೂ ಅವಕಾಶವಿದೆ. ಹೀಗೆ ನಾನಾ ನಿಟ್ಟಿನಿಂದ ಭ.ಬಾ. ಕಥೆ ಸಂಶೋಧಕರಿಗೆ ಸಾಮಾಗ್ರಿಯಾಗಿದೆ. ಭ.ಬಾ. ಕಥೆಯನ್ನು ಪರಿಶೀಲಿಸುವುದಕ್ಕೂ ಮೊದಲು ಅದರ ಸಾರಾಂಶ ಕೊಟ್ಟಿದೆ.

ಭದ್ರಬಾಹು ಭಟಾರರ ಕಥೆಯ ಸಾರ

ಪುಠ (ಪುಂಡ್ರ) ವರ್ಧನ ನಾಡಿನ ಕೌಂಡಿನೀ ನಗರ (ಕೋಟಕಪುರ) ವನ್ನು ಪದ್ಮರಥ ಪದ್ಮಶ್ರೀ ಆಳುತ್ತಿದ್ದರು. ಪುರೋಹಿತ ಸೋಮಶರ್ಮ – ಸೋಮಶ್ರೀ ದಂಪತಿಗಳ ಮಗ ಭದ್ರಬಾಹು. ಆತ ಒಮ್ಮೆ ತನ್ನ ಓರಗೆಯವರೊಡನೆ ಒಂದು ಬಟ್ಟಿನ ಮೇಲೊಂದರಂತೆ ೧೪ ಬಟ್ಟುಗಳನ್ನಿಟ್ಟು ಆಡುತ್ತಿದ್ದನು. ಆಗ (ವರ್ಧಮಾನ ಭಟಾರರು ಮೋಕ್ಷಕ್ಕೆ ಸಂದಮೇಲೆ, ೧೪ ಪೂರ್ವಗಳು ಬಲ್ಲ ನಾಲ್ಕನೆಯವರಾದ) ಗೋವರ್ಧನರು ಉಜ್ಜಯಂತ ಪರ್ವತವನ್ನು ವಂದಿಸಲೆಂದು ಸಂಚರಿಸುತ್ತಾ ಅಲ್ಲಿಗೆ ಬಂದರು. ಅವರು ಭದ್ರಬಾಹುವನ್ನು ಕಂಡು ಈತ ತಮ್ಮ ತರುವಾಯ ಶ್ರುತ ಕೇವಲಿಯಾಗುವನೆಂದು ತಿಳಿದರು. ಅವನ ತಂದೆ ತಾಯಿಗೆ ‘ಈತನನ್ನು ನಮಗೊಪ್ಪಿಸಿ; ಎಲ್ಲಾ ಶಾಸ್ತ್ರಗಳನ್ನು ಕಲಿಸಿ ಪಂಡಿತನನ್ನಾಗಿ ಮಾಡಿ ಹಿಂದಕ್ಕೆ ಕಳುಹಿಸುತ್ತೇವೆ’ ಎಂದರು. ಪೋಷಕರು ಒಪ್ಪಿದರು. ಗೋವರ್ಧನರು ಭದ್ರಬಾಹುವನ್ನು ಬೋಧನೆಯಿಂದ ಅಧಿಗಮ ಸಮ್ಯಗ್‍ದೃಷ್ಟಿಯನ್ನಾಗಿಸಿದರು. ಆಗ ಭೋಗದಲ್ಲಿ ವೈರಾಗ್ಯ ತಾಳಿ ಭದ್ರಬಾಹು ತಪೋದೀಕ್ಷೆ ಬೇಡಿದ. ಗೋವರ್ಧನರು ‘ನೀನು ಪಟ್ಟಣಕ್ಕೆ ಹೋಗಿ, ಕಲಿತ ವಿದ್ಯೆ ಪಾಂಡಿತ್ಯಗಳಿಂದ ಪಂಡಿತರನ್ನು ಗೆದ್ದು ಹತ್ತು ದಿಕ್ಕುಗಳಲ್ಲೂ ಕೀರ್ತಿಗಳಿಸಿ ತಂದೆ-ತಾಯಿಗೆ ಸಂತೋಷಿಸಿ ಬಾ, ದೀಕ್ಷೆ ಕೊಡಬಹುದು’ ಎಂದರು. ಅದರಂತೆ ವಿಜಯಿಯಾಇ ಬಂದ ಭದ್ರಬಾಹುವಿಗೆ ಗೋವರ್ಧನರು ದೀಕ್ಷೆಯಿತ್ತರು. ಗೋವರ್ಧ ನರು ಸಮಾಧಿ ಮರಣದಿಂದ ಮುಡಿಪಿದ ಮೇಲೆ ಭದ್ರಬಾಹು ಋಷಿಸಮುದಾಯಕ್ಕೆ ಮುಖಂಡರಾದರು.

ಮಗಧ ನಾಡಿನ ಪಾಟಲೀಪುತ್ರವನ್ನಾಳುತ್ತಿದ್ದ ನಂದನೆಂಬರಸ ಒಮ್ಮೆ ಚಾಣಕ್ಯನನ್ನು ಅಪಮಾನ ಮಡಿದ. ಆತ ಪ್ರತಿಜ್ಞೆ ಮಾಡಿ ನಂದನನ್ನು ನಾಶಮಾಡಿ ಚಂದ್ರಗುಪ್ತನಿಗೆ ಪಟ್ಟ ಕಟ್ಟಿದ. ಚಂದ್ರಗುಪ್ತನ ಮಗ ಬಿಂದುಸಾರನಾದ ಮೇಲೆ ಅಶೋಕ ರಾಜ್ಯವಾಳಿದ. ಅಶೋಕನ ಮಗ ಕುಣಾಳ. ಅಶೋಕ ಹಗೆಗಳನ್ನು ಹತೋಟಿಯಲ್ಲಿಡಲು ಹೋಗಿದ್ದ. ಅಲ್ಲಿಂದ ‘ಉಪಾಧ್ಯಾಯನಿಗೆ ಅಕ್ಕಿಯ ಅನ್ನ ತುಪ್ಪತೊವ್ವೆ ಉಣಲಿಟ್ಟು ಕುಮಾರನನ್ನು ಅವನ ಬಳಿ ಓದಿಸಲಿ’ ಎಂದು ಪತ್ರ ಬರೆದ ಅದನ್ನು ಓದಿದಾತ ‘ಕುಮಾರನನ್ನು ಅಂಧನನ್ನಾಗಿ ಮಾಡಿಲಿ’ ಎಂದು ತಪ್ಪು ಅರ್ಥ ಬರುವಂತೆ ಓದಿದ. ಅಪ್ರತಿಹತವಾದ ರಾಜಾಜ್ಞೆಯನ್ನು ಪಾಲಿಸಿ ಕುಣಾಲನನ್ನು ಕುರುಡು ಮಾಡಿದರು. ಹಿಂತಿರುಗಿ ಬಂದ ಅಶೋಕ ಕುಮಾರನ ಸ್ಥಿತಿ ಕಂಡು ನೊಂದುಕೊಂಡ. ಕುಮಾರ ಕುಣಾಲನ ಮಡದಿ ಚಂದ್ರಾನನೆ. ಇವರಿಗೆ ಹುಟ್ಟಿದ ಮಗ ಸಂಪ್ರತಿ ಚಂದ್ರಗುಪ್ತ. ಅಶೋಕ ತನ್ನ ಮೊಮ್ಮಗ ಸಂಪ್ರತಿಗೆ ರಾಜ್ಯಾಭಿಷೇಕ ಮಾಡಿದ. ಮಗ ಕುಣಾಲನಿಗೆ ‘ಏನನ್ನಾದರೂ ಕೇಳು’ ಎಂದ. ಕುಣಾಲ ಕಾಕಿಣೀರತ್ನ ಕೇಳಿದ್ದಕ್ಕೆ ‘ಅದು ಚಕ್ರವರ್ತಿಗಲ್ಲದೆ ಬೇರೆಯವರಿಗೆ ಸಲ್ಲದು’ ಎಂದು ಹೇಳಿ ವೈರಾಗ್ಯ ತಾಳಿ, ಸುವ್ರತ ಭಟ್ಟಾರರ ಬಳಿ ಜಿನದೀಕ್ಷೆ ಹೊಂದಿದ.

ಸಂಪ್ರತಿ ಚಂದ್ರಗುಪ್ತ ರಾಜ್ಯವಾಳುತ್ತಿದ್ದಾಗ ಸಮಾಧಿಗುಪ್ತಾಚಾರ್ಯರು ಪಾಟಲೀ ಪುತ್ರದ ಹೊರವಲಯದಲ್ಲಿ ಬೀಡಿಬಿಟ್ಟರು. ಸಂಪ್ರತಿ ಚಂದ್ರಗುಪ್ತ ಅವರನ್ನು ಕಂಡು ವಂದಿಸಿ ಕುಳಿತ. ಅವರು ಅವನ ಜನ್ಮಾಂತರಗಳ ಸಂಗತಿ ತಿಳಿಸಿದರು (ಇದು ಹತ್ತು ಪುಟಗಳಷ್ಟಿದೆ). ನಂದಿಮಿತ್ರನಾಗಿ, ಕನಕಧ್ವಜನಾಗಿ ಕಳೆದ ಭವಗಳ ಭವಾವಳಿ ಕೇಳಿ ಸಂತೋಷಿಸಿ ಅವನು ಅರಮನೆಗೆ ಹಿಂತಿರುಗಿದ. ಏಕಚ್ಛತ್ರ ಚ್ಛಾಯೆಯಿಂದ ಅಳುತ್ತಾ ಉಜ್ಜಯಿನಿಯಲ್ಲಿ (?) ಸುಖದಿಂದಿದ್ದ. ಆಗೊಮ್ಮೆ ಭದ್ರಬಾಹು ಭಟಾರರು ಋಷಿಸಮುದಾಯದಿಂದ ಆಗಮಿಸಿ ಉಜ್ಜಯಿನಿ ಹೊರಗಿನ ಉದ್ಯಾನವನದಲ್ಲಿ ತಂಗಿದರು. ದೊರೆ ಅವರಿಗೆ ವಂದಿಸಿ ಶ್ರಾವಕ ವ್ರತ ಸ್ವೀಕರಿಸಿದ.

ಭದ್ರಬಾಹು ಒಂದು ದಿನ ಚರಿಗೆಗೆಂದು ಒಂದು ಮನೆ ಹೊಕ್ಕಾಗ ತೊಟ್ಟಿಲ ಚಿಕ್ಕಕೂಸು ‘ಹೋಗಿ ಹೋಗಿ ಭಟಾರರೆ’ ಎಂದಿತು. ಅವಧಿ ಎಷ್ಟು ಎಂದು ಕೇಳಲು ಹನ್ನೆರಡು ವರ್ಷವೆಂದಿತು. ಕಾಲದೋಷದಿಂದ ಮುಂದೆ ಪ್ರಜಾಪೀಡೆಯಾಗುತ್ತದೆಂದು ತಿಳಿದು ಅಂದು ಅಲಾಭ ಮಾಡಿ ಬಸದಿಗೆ ಹಿಂತಿರುಗಿದರು. ಎಲ್ಲಾ ರಿಸಿಯರನ್ನೂ ಕರೆಸಿದರು. ‘ಈ ನಾಡಿನಲ್ಲಿ ೧೨ ವರ್ಷ ಮಳೆಯಿಲ್ಲದೆ ಕ್ಷಾಮವಿರುತ್ತದೆ. ಎಲ್ಲರೂ ದಕ್ಷಿಣಾಪಥಕ್ಕೆ ಹೋಗೋಣ’ ಎಂದರು. ದೊರೆಯೂ ಅಂದು ೧೬ ಕೆಟ್ಟ ಕನಸು ಕಂಡ. ಭದ್ರಬಾಹು ಭಟಾರರು ಅವುಗಳನ್ನು ವಿವರಿಸಿ ಫಲ ಹೇಳಿದರು- (ಎರಡು ಪುಟಗಳು). ಕಡೆಗೆ ಈ ಕಲಿಯುಗದಲ್ಲಿ ಕಾಡಿಗೆ ಹೋಗಿ ನಿಂತರವೇ ಧನ್ಯರೆಂದು ತಿಳಿಸಿದರು. ಚಂದ್ರಗುಪ್ತ ಕೂಡಲೇ ಕಾರ್ಯೋನ್ಮುಖನಾದನು. ತನ್ನ ಹಿರಿಯ ಮಗ ಸಿಂಹಸೇನನಿಗೆ ಪಟ್ಟ ಕಟ್ಟಿದ. ಭದ್ರಬಾಹುಗಳ ಬಳಿ ದೀಕ್ಷೆ ಪಡೆದ.

ಭದ್ರಬಾಹು ಒಂದು ದಿನ ಚರಿಗೆಗೆಂದು ಒಂದು ಮನೆ ಹೊಕ್ಕಾಗ ತೊಟ್ಟಿಲ ಚಿಕ್ಕಕೂಸು ‘ಹೋಗಿ ಹೋಗಿ ಭಟಾರರೆ’ ಎಂದಿತು. ಅವಧಿ ಎಷ್ಟು ಎಂದು ಕೇಳಲು ಹನ್ನೆರಡು ವರ್ಷವೆಂದಿತು. ಕಾಲದೋಷದಿಂದ ಮುಂದೆ ಪ್ರಜಾಪೀಡೆಯಾಗುತ್ತದೆಂದು ತಿಳಿದು ಅಂದು ಅಲಾಭ ಮಾಡಿ ಬಸದಿಗೆ ಹಿಂತಿರುಗಿದರು. ಎಲ್ಲಾ ರಿಸಿಯರನ್ನೂ ಕರೆಸಿದರು. ‘ಈ ನಾಡಿನಲ್ಲಿ ೧೨ ವರ್ಷ ಮಳೆಯಿಲ್ಲದೆ ಕ್ಷಾಮವಿರುತ್ತದೆ. ಎಲ್ಲರೂ ದಕ್ಷಿಣಾಪಥಕ್ಕೆ ಹೋಗೋಣ’ ಎಂದರು. ದೊರೆಯೂ ಅಂದು ೧೬ ಕೆಟ್ಟ ಕನಸು ಕಂಡ. ಭದ್ರಬಾಹು ಭಟಾರರು ಅವುಗಳನ್ನು ವಿವರಿಸಿ ಫಲ ಹೇಳಿದರು- (ಎರಡು ಪುಟಗಳು). ಕಡೆಗೆ ಈ ಕಲಿಯುಗದಲ್ಲಿ ಕಾಡಿಗೆ ಹೋಗಿ ನಿಂತವರೇ ಧನ್ಯರೆಂದು ತಿಳಿಸಿದರು. ಚಂದ್ರಗುಪ್ತ ಕೂಡಲೇ ಕಾರ್ಯೋನ್ಮುಖನಾದನು. ತನ್ನ ಹಿರಿಯ ಮಗ ಸಿಂಹಸೇನನಿಗೆ ಪಟ್ಟ ಕಟ್ಟಿದ. ಭದ್ರಬಾಹುಗಳ ಬಳಿ ದೀಕ್ಷೆ ಪಡೆದ.

ಭದ್ರಬಾಹು ಮಧ್ಯಪ್ರದೇಶದಲ್ಲಿದ್ದ ರಿಸಿಯರನ್ನೆಲ್ಲ ಕರೆಸಿ, ‘೧೨ ವರ್ಷ ಅನಾವೃಷ್ಟಿಯಾಗಿ ಮಹಾ ಭಯಂಕರ ಕ್ಷಾಮ ಬಂದು ಮಧ್ಯಪ್ರದೇಶ ಹಾಳಾಗುತ್ತೆ. ಈ ನಾಡಿನಲ್ಲಿರುವ ರಿಸಿಗಳಿಗೆ ವ್ರತಭಂಗವಾಗುತ್ತೆ. ದಕ್ಷಿಣಾಪಥಕ್ಕೆ ಹೊರಡೋಣ’ ಎಂದರು. ಹೀಗೆ ಹೇಳಿ ಸಂಪ್ರತಿ ಚಂದ್ರಗುಪ್ತನನ್ನೂ, ಎರಡು ಸಾವಿರ ಋಷಿಗಳನ್ನೂ ಕರೆದುಕೊಂಡು ತೆಂಕಣಕ್ಕೆ ಬಂದರು. ಆದರೆ ರಾಮಿಲಾಚಾರ್ಯರು, ಸ್ಥೂಲಾಚಾರ್ಯರು. ಸ್ಥೂಲಭದ್ರಾಚಾರ್ಯರು ಮಾತ್ರ ಅವರೊಂದಿಗೆ ಹೋಗದೆ ಸಿಂಧುದೇಶಕ್ಕೆ ಹೋದರು. ಭದ್ರಬಾಹು ಭಟಾರರು ಋಷಿಸಮುದಾಯದೊಂದಿಗೆ ಸಂಚರಿಸುತ್ತಾ ಕೞ್ವಪ್ಪು (ಶ್ರವಣಬೆಳ್ಗೊಳ) ಪ್ರದೇಶಕ್ಕೆಬಂದರು. ಅವಸಾನಕಾಲ ತಮಗೆ ಬಂತೆಂದು ತಿಳಿದು ‘ನಾವು ಇಲ್ಲಿ ಸನ್ಯಸನ ಮಾಡುತ್ತೇವೆ, ನೀವೆಲ್ಲ ಹೋಗಿರಿ’ ಎಂದರು. ದಶಪೂರ್ವಧಾರಿಗಳಾದ ವಿಶಾಖಾಚಾರ್ಯರನ್ನೂ ಸುಹಸ್ತಿ, ಅಮರಭದ್ರ, ಸುಭದ್ರಮಿತ್ರ, ಮಹಾಗಿರಿ, ಸುಮತಿ, ಮಹಾಮತಿ, ವಿಶಾಖನಂದಿ ಎಂಬುವರನ್ನು ಆವಾರ್ಯರನ್ನಾಗಿ ಮಾಡಿ ಅನೇಕ ಮುನಿಗಳೊಡನೆ ಕಳಿಸಿದರು. ಚಂದ್ರಗುಪ್ತಮುನಿ ಭದ್ರಬಾಹುಗಳ ಬಳಿಯೇ ಉಳಿದರು.

ಭದ್ರಬಾಹು ಕೞ್ವಪ್ಪು ನಾಡಿನ ಅಡವಿಯ ಬೆಟ್ಟದ ಮೇಲಿನೊಂದು ಕಲ್ಲಿನ ಮೇಲೆ ಆಹಾರ ಬಿಟ್ಟು ಕುಳಿತರು. ಚಂದ್ರಗುಪ್ತಮುನಿಗೆ ಭಿಕ್ಷೆಗೆ ಹೋಗಲು ಹೇಳಿದರು. ಊರಿಲ್ಲ, ಕೇರಿಯಿಲ್ಲ, ಕಾಡಿನಲ್ಲೆಲ್ಲಿ ಹೋಗುವುದೆಂಬ ಮಾತಿಗೆ ಕಾಂತಾರ ಭೈಕ್ಷಕ್ಕೆ ಹೋಗಿ ಬರಲು ತಿಳಿಸಿದರು. ಅದರಂತೆ ಹೋದಾಗ ಮರದ ಪೊಟರೆಯಿಂದ ಬಂದ ಮುತ್ತಿನ ಕಂಕಣಾಲಂಕೃತ ಕೈನೀಡಿದ ಭಿಕ್ಷೆಯನ್ನು ಬಿಟ್ಟು ಬಂದರು. ಮರುದಿನ ದಿವ್ಯ ಸ್ತ್ರೀಯೊಬ್ಬಳು ನೀಡಲು ಬಂದುವನ್ನೂ ನಿರಾಕರಿಸಿದರು. ಹೀಗೆ ಹತ್ತು ದಿನ ಅಲಾಭವಾಯಿತು. ಹನ್ನೊಂದನೆ ದಿನ ಅಡವಿಯ ನಡುವೆ ಪಟ್ಟಣ ಕಾಣಿಸಿಕೊಂಡಿತು. ದಿವ್ಯಸ್ತ್ರೀ ಪರಿವಾರದೊಡನೆ ಬಂದು ಕರೆದೊಯ್ದು ಆಹಾರ ನೀಡಿದಳು. ಹೀಗೇ ನಿತ್ಯ ನಡೆಯುತ್ತಿತ್ತು. ಭದ್ರಬಾಹುಗಳು ಹಸಿವು ನೀರಡಿಕೆ ಬಾಧೆ ಸಹಿಸಿ ದೇಹತ್ಯಾಗ ಮಾಡಿದರು. ಅಮಿತಕಾಂತಿ ಎಂಬ ದೇವನಾದರು.

ಚಂದ್ರಗುಪ್ತಮುನಿ ಕೞ್ವಪ್ಪಿನಲ್ಲೇ ಭದ್ರಬಾಹು ನಿಸದಿಗೆಯನ್ನು ವಂದಿಸುತ್ತಾ ೧೨ ವರ್ಷ ಉಳಿದರು. ತಮಿಳು ನಾಡಿಗೆ ಹೋಗಿದ್ದ ವಿಶಾಕಾಚಾರ್ಯರೇ ಮೊದಲಾದವರ ಋಷಿಗುಂಪು ಬಂತು. ಚಂದ್ರಗುಪ್ತಾಚಾರ್ಯರು ಇದಿರುಗೊಂಡು ವಂದಿಸಿದರು. ಋಷಿಗಳು ‘ಈ ಅಡವಿಯಲ್ಲಿ ಗೆಡ್ಡೆ ಗೆಣಸು ತಿಂದು ತೊರೆ ಹಳ್ಳದ ನೀರು ಕುಡಿದು ೧೨ ವರ್ಷ ಹೇಗೆ ಬದುಕಿದ್ದಾರೆ’ ಎಂದು ಅಂದುಕೊಂಡರು. ತಲೆಗೂದಲು ಬೆಳೆದಿತ್ತು. ಇದರಿಂದ ಚಂದ್ರಗುಪ್ತರಿಗೆ ಪ್ರತಿವಂದನೆ ಸಲ್ಲಿಸಲಿಲ್ಲ. ಭದ್ರಬಾಹುಗಳ ನಿಸದಿಗೆಯನ್ನು ವಂದಿಸಿ ಅಂದು ಉಪವಾಸ ಮಾಡಿ ಮರುದಿನ ಹೊರಟು ನಿಂತರು. ಚಂದ್ರಗುಪ್ತಮುನಿ’ ಬಹುದೂರ ನಡೆದು ಆಯಾಸ ಪಟ್ಟಿದ್ದೀರಿ ಈದಿನ ಇಲ್ಲೇ ಇದ್ದು ಆಹಾರ ಮಾಡಿ ಬಳಲಿಕೆ ಪರಿಹರಿಸಿಕೊಂಡು ಹೋಗಿ’ ಎಂದರು. ‘ಇಲ್ಲೇನು ಊರಿಲ್ಲ, ಕೇರಿಯಿಲ್ಲ, ಎಲ್ಲಿ ಚರಿಗೆವುಗುವುದು?’ ಎಂದು ಕೇಳಿದ್ದಕ್ಕೆ ‘ಹಿರಿದೊಂದು ನಗರವಿದೆ’, ಎಂದು ಉತ್ತರಿಸಿದರು. ಮಧ್ಯಾಹ್ನ ಚಂದ್ರಗುಪ್ತರೊಂದಿಗೆ ಹೊರಟರು. ಎಲ್ಲರಿಗೂ ಆಹಾರ ದೊರೆಯಿತು. ಹಿಂತಿರುಗಿದರು.

ಹಿಂತಿರುಗಿದ ಮೇಲೆ ವಿಶಾಖಾಚಾರ್ಯರು ತಮ್ಮ ಶಿಷ್ಯನಿಗೆ ‘ಕಾಲು ತೊಳೆದು ಕೊಳ್ಳಬೇಕು, ಕಮಂಡಲು ತಂದುಕೊಂಡು’ ಎಂದರು. ಅದನ್ನು ಅವರು ಊಟಮಾಡಿ ಬಂದ ಮನೆಯಲ್ಲೇ ಮರೆತು ಬಂದಿದ್ದರು. ಶಿಷ್ಯ ಹೋಗಿ ಅಡವಿಯಲ್ಲಿ ಎಲ್ಲೆಲ್ಲಿ ತಿರುಗಿದರೂ ಪಟ್ಟಣ ಮನೆ ಇರಲಿಲ್ಲ. ಅತ್ತ ಇತ್ತ ಸುತ್ತಾಡುವಾಗ ಕಮಂಡಲು ಮರದ ತುತ್ತ ತುದಿಯಲ್ಲಿ ನೇತಾಡುತ್ತಿರುವುದು ಕಂಡುಬತು. ಋಷಿಗಳಿಗೆ ಅಚ್ಚರಿ. ಚಂದ್ರಗುಪ್ತಮುನಿಗಳಿಗೆ ಅವರು ‘ನೀವು ಇಷ್ಟುಕಾಲ ಅಡವಿಯಲ್ಲಿ ಕಂದಮೂಲ ತಿಂದು, ತೊರೆಯ ನೀರು ಕುಡಿದು ಬದುಕಿದ್ದೀರೆಂದು ತಿಳಿದ ನಾವು ನಮಸ್ಕರಿಸಲಿಲ್ಲ. ಮನ್ನಿಸಿ. ನೀವು ದೇವತಾಧಿಷ್ಠಿತರು. ದೇವತೆಗಳು ಮಾಡಿದ ಆಹಾರವನ್ನು ಇನ್ನು ತಿನ್ನಬೇಡಿ, ಋಷಿಗಳು ಅದನ್ನು ಚರಿಗೆ ಮಾಡಲಾಗ’ ಎಂದು ನುಡಿದರು. ಲೋಚು ನಡೆಸಿ ವ್ರತ ಕೊಟ್ಟು ಪ್ರತ್ಯಾಖ್ಯಾನ ಹೇಳಿ ಅವರನ್ನು ಕರೆದುಕೊಂಡು ಎಲ್ಲ ಮಧ್ಯದೇಶಕ್ಕೆ ಹೋದರು.

ಸಿಂಧುದೇಶಕ್ಕೆ ಹೋಗಿದ್ದ ರಾಮಿಲಾಚಾರ್ಯ. ಸ್ಥೂಲಾಚಾರ್ಯ ಮತ್ತು ಸ್ಥೂಲಭದ್ರಾಚಾರ್ಯರಿಗೆ ತೊಂದರೆ ತಲೆದೋರಿತ್ತು. ಮನುಷ್ಯರನ್ನೇ ತಿನ್ನುವ ಕ್ಷಾಮ ಬಂದಿತ್ತು. ಹಗಲು ಅಡುಗೆ ನಿಂತು, ರಾತ್ರಿ ಅಡುಗೆ ಪ್ರಾರಂಭವಾಗಿತ್ತು. ಆಗ ಶ್ರಾವಕರು ಋಷಿಗಳಿಗೆ ‘ನೀವು ರಾತ್ರಿ ಭಿಕ್ಷೆ ಪಡೆದು ಹಗಲು ಉಣ್ಣಿ’ ಎಂದು ಕೇಳಿಕೊಳ್ಳಲು, ಅದರಂತೆ ಯತಿಗಳು ನಡೆಯತೊಡಗಿದರು. ಒಂದು ದಿನ ರಾತ್ರಿ ನಿರ್ಗ್ರಂಥಯತಿ, ಇರುಳು ಭಿಕ್ಷಾಪಾತ್ರೆ ಹಿಡಿದು ಒಂದು ಮನೆ ಹೊಕ್ಕಾಗ ಅಲ್ಲಿದ್ದ ಬಸುರಿ ಹೆಂಗಸು ಭಯಪಟ್ಟು ಗರ್ಭಸ್ರಾವವಾಯಿತು. ಇದನ್ನು ನೋಡಿ ಮತ್ತೆ ಶ್ರಾವಕರು ಮುನಿಗಳಿಗೆ ‘ಕಾಲ ಕೆಟ್ಟಿದೆ. ಒಳ್ಳೆಯ ಕಾಲ ಬಂದಾಗ ಪ್ರಾಯಶ್ಚಿತ ಮಾಡಿಕೊಂಡು ತಪಸ್ಸು ನಿಲ್ಲುವಿರಂತೆ. ಈಗ ಕ್ಷಾಮನಿವಾರಣೆಯಾಗುವತನಕ ಎಡಗೈ ಕೆಳಗೆ ಬಿಟ್ಟು ಅರೆವಸ್ತ್ರವನ್ನು ಎಡಭುಜದ ಮೇಲೆ ಹಾಕಿಕೊಂಡು, ಒಳಗೆ ದಿಗಂಬರರಾಗೇ ಇದ್ದುಕೊಂಡು ಬಲಗೈಯಲ್ಲಿ ಭಿಕ್ಷಾಪಾತ್ರೆ ಹಿಡಿದು, ಭಿಕ್ಷೆಗೆ ಬನ್ನಿ’ ಎಂದರು. ಅದರಂತೆ ಕಾಲ ಕಳೆಯಿತು. ರಾಮಿಲುಚಾರ್ಯ- ಸ್ಥೂಲ ಭದ್ರಾಚಾರ್ಯರು ತಮ್ಮ ಋಷಿಸಮುದಾಯದೊಡನೆ ಮಧ್ಯದೇಶಕ್ಕೆ ಹಿಂತಿರುಗಿದರು. ಅವರಿಗೆ ವಿಶಾಖಾ ಚಾರ್ಯರು ಮೊದಲಾದವರು ‘ನೀವು ಅರ್ಧವಸ್ತ್ರ ಬಿಡಿ, ನಿರ್ಗ್ರಂಥರಾಗಿ, ಪ್ರಾಯಶ್ಚಿತ್ತ ಮಾಡಿಕೊಳ್ಳಿ’ ಎಂದರು. ರಾಮಿಲಾಚಾರ್ಯ, ಸ್ಥೂಲಾಚಾರ್ಯರು ಒಪ್ಪಿದರು. ಅರ್ಧಗಪ್ಪಡ ಬಿಟ್ಟು ವ್ರತಧಾರಿಗಳಾಗಿ ತಪಕ್ಕೆ ತೊಡಗಿದರು. ಸ್ಥೂಲ ಭದ್ರಾಚಾರ್ಯರು ಮತ್ತು ಕ್ಲವರು ಒಪ್ಪಲಿಲ್ಲ. ಜಿನಕಲ್ಪ ಮತ್ತು ಸ್ಥವಿರಕಲ್ಪ ಎಂದು ಇಬ್ಭಾಗವಾಯಿತು. ಅರ್ಧವಸ್ತ್ರಧಾರಣೆಯ ಸಂಪ್ರದಾಯವನ್ನು ಸ್ಥೂಲಭದ್ರರು ಹಾಕಿಕೊಟ್ಟರು.

ಅರೆವಸ್ತ್ರಾಧಾರಣೆಯ ಪಂಥ ಸುರಥವೆಂಬ ನಾಡಿನ ವಲಭಿ ಎಂಬ ಪಟ್ಟಣದವರೆಗೂ ಹಬ್ಬಿತು. ಆ ನಗರದ ದೊರೆ ವಜ್ರಪಾಳ ಮಿಥ್ಯಾದೃಷ್ಟಿ. ಪಟ್ಟದರಸಿ ಸ್ವಾಮಿನಿ ಎನ್ನುವವಳು ಅರ್ಧವಸ್ತ್ರಧಾರಣೆಯ ಸಂಪ್ರದಾಯದ ಭಕ್ತೆ. ಒಂದು ದಿನ ದೊರೆ ‘ದೇವಿ, ನಿನ್ನ ಈ ಅರ್ಧಗಪ್ಪದದ ಯತಿಗಳ ಧರ್ಮ ಒಳ್ಳೆಯದಲ್ಲ. ಅವರು ಉಟ್ಟಂತೆಯೂ ಅಲ್ಲ, ಉಡದಂತೆಯೂ ಅಲ್ಲ’ ಎಂದನು. ಮತ್ತೊಂದು ದಿನ ಋಷಿಗಳನ್ನು ಕರೆಸಿ ಅರೆವಸ್ತ್ರ ಬಿಟ್ಟು ದಿಗಂಬರರಾಗಿ ಬರಲು ಹೇಳಿದ. ಋಷಿಗಳು ಒಪ್ಪಲಿಲ್ಲ. ‘ಹಾಗಾದರೆ ಪೂರ್ತಿ ವಸ್ತ್ರವನ್ನಾದರೂ ಉಟ್ಟುಕೊಳ್ಳಿ’ ಎಂದ. ಅದಕ್ಕೆ ಒಪ್ಪಿದರು. ಒಂದು ಬಟ್ಟೆಯನ್ನು ಕಚ್ಚೆಯಿಲ್ಲದೆ ಹಾಗೇ ಸುತ್ತಿ ಉಟ್ಟುಕೊಂಡರು. ಮತ್ತೊಂದು ಕಿರುವಸ್ತ್ರವನ್ನು ಹೊದೆದುಕೊಂಡರು. ಅವರಿಗೆ ಶ್ವೇತಪಟರೆಂದು ಹೆಸರಾಯಿತು. ದಕ್ಷಿಣಾಪಥದಲ್ಲಿ ಸಾಮಳಿಪುತ್ರನೆಂಬ ಅರಸನು ಅದೇ ಸಂತತಿಯವನು. ಇವನು ಶ್ವೇತಭಿಕ್ಷು ಜಾಪುಲಿ ಸಂಘಕ್ಕೆ ಮೊದಲಿಗನಾದನು. ಅತ್ತ ಚಂದ್ರಗುಪ್ತಮುನಿಯೂ ಸನ್ಯಸನ ವಿಧಾನದಿಂದ ದೇಹತ್ಯಾಗ ಮಾಡಿ ಬ್ರಹ್ಮಕಲ್ಪದಲ್ಲಿ ಶ್ರೀಧರದೇವನಾಗಿ ಹುಟ್ಟಿದ.

ಇದು ಭದ್ರಬಾಹು ಭಟಾರರ ಕಥೆ. ಇದರಲ್ಲಿ ಆಧುನಿಕ ಕಥೆಗಳಲ್ಲಿ ಕಾಣುವ ಹಿನ್ನೆಲೆ ಬೆಳಕುತಂತ್ರವನ್ನು ಬಳಸಿರುವುದು, ಕಥಾ ನಿರೂಪಣೆಗೆ ಕಲೆಯ ಕವಚ ತೊಡಿಸಿದಂತಾಗಿದೆ. ಮಹಾವೀರನು ಕೇವಲಜ್ಞಾನವನ್ನು ಪಡೆದ ಮೇಲೆ ಮೂವತ್ತು ವರ್ಷಗಳು. ಅಖಂಡವಾಗಿ ಸರ್ವೋದಯ ಧರ್ಮವನ್ನು ಜನತೆಗೆ ಬೋಧಿಸಿದನು. ತನ್ನ ಧರ್ಮದಲ್ಲಿ ಸಮತೆಗೆ ವಿಶೇಷ ಪ್ರಾಧಾನ್ಯ ನೀಡಿದನು. ಅಲ್ಲಿ ಮೇಲು ಕೀಳು, ಬಡವ ಬಲ್ಲಿದ, ಬ್ರಾಹ್ಮಣ ಶೂದ್ರ, ಹೆಣ್ಣುಗಂಡು ಭೇದವಿರಲಿಲ್ಲ. ಆತನ ಶ್ರವಣ ಸಂಘದ ಬಾಗಿಲು ಮುಕ್ತವಾಗಿತ್ತು. ಗೌತಮನಂತಹ ಮಹಾಬ್ರಾಹ್ಮಣ ಆತನ ಸಂಘಾಧಿಪತಿಯಾಗಿದ್ದನು. ಹರಿಕೇಶಿಯಂಥ ಅಂತ್ಯಜ ಮುನಿದೀಕ್ಷೆ ಪಡೆದಿದ್ದನು. ಈ ರೀತಿ ಮಹಾವೀರ ಪ್ರಣೀತ ಸಮತಾಧರ್ಮಗಂಗೆ ಅಂಗ ವಂಗ ಕಾಶೀ ಕೋಶಳ ವೈಶಾಲಿ ಮಗಧಾದಿ ದೇಶಗಳಲ್ಲಿ ಹರಿಯಿತು. ಅಸಮತೆಯ ಕೊಳೆ ಕಿಲ್ಬಿಷಗಳನ್ನು ಹೃದಯದಿಂದ ತೊಳೆಯಿತು. ಮಗಧದೇಶ ಮಹಾವೀರನ ಕೇಂದ್ರವಾಗಿತ್ತು. ಶ್ರೇಣಿಕ- ಬಿಂಬಸಾರ, ಚೇಟಕ, ಅಜಾತಶತ್ರು, ಉದಾಯಿಭದ್ರ ಮೊದಲಾದವರ ಉದಾರಾಶ್ರಯದಿಂದ ಮಹಾವೀರ ಬೋಧಿಸಿದ ಧರ್ಮ ಹೆಮ್ಮರವಾಗಿ ಬೆಳೆಯಿತು. ಉದಾಯಿಭದ್ರನ ಜತೆಗೆ ಮಗಧ ರಾಜ್ಯವನ್ನು ಬೆಳಗಿದ ಶಿಶುನಾಗವಂಶವೂ ಅಸ್ತಂಗತವಾಯಿತು. ಅದರೊಡನೆ ನಂದವಂಶ ಉದಯವಾಯಿತು.

ನಂದರು ಮಗಧದಲ್ಲಿ ಅಭಿಷಿಕ್ತರಾದುದು ಭಾರತೀಯ ಚರಿತ್ರೆಯಲ್ಲಿ ದೊಡ್ಡ ಘಟನೆ. ಅಲ್ಲಿಯ ತನಕ ಬ್ರಾಹ್ಮಣರು ಇಲ್ಲವೇ ಕ್ಷತ್ರಿಯರು ಮಾತ್ರ ರಾಜ್ಯಪಾಲನೆ ಮಾಡುತ್ತಿದ್ದರು. ಅಂತ್ಯಜವರ್ಗ ಅತ್ಯಂತ ಉಪೇಕ್ಷಿತವಾಗಿತ್ತು, ಶೋಷಣೆಗೂ ಒಳಗಾಗಿತ್ತು. ಇಂಥ ಸಂಕುಚಿತ ಪ್ರತಿಕೂಲ ವಾತಾವರಣದಲ್ಲಿ ಬುದ್ಧ – ಮಹಾವೀರರಿಬ್ಬರೂ ಹಿಂದುಳಿದ ವರ್ಗಗಳನ್ನು ಮೇಲಕ್ಕೆತ್ತಿದರು. ಈ ಇಬ್ಬರು ಮಹಾ ಪುರುಷರ ಪುರಸ್ಕಾರ ಪ್ರೋತ್ಸಾಹಗಳಿಂದ ನಿಮ್ನವರ್ಗಗಳಿಗೂ ಉಚ್ಚಸ್ಥಾನವನ್ನು ಅಲಂಕರಿಸಲು ಅವಕಾಶ ದೊರಕಿದಂತಾಯಿತು. ಮಹಾವಿರನ ನಿರ್ವಾಣದಿಂದ ೬೧ ವರ್ಷಗಳ ತರುವಾಯ, ಮೊಟ್ಟಮೊದಲ ಸಲ ಭಾರತದಲ್ಲಿ ಶೂದ್ರರ ಆಡಳಿತ ಆರಂಭ ವಾಯಿತು. ಶೂದ್ರ ನಂದರಾಜನ ಆಡಳಿತಾವಧಿಯಲ್ಲಿ ಮಗಧ ರಾಜ್ಯ ಬಹು ಪ್ರಭಾವಶಾಲಿಯಾದ ವಿಶಾಲ ರಾಜ್ಯವಾಗಿ ಪ್ರಸಿದ್ಧವಾಯಿತು. ಈ ನಂದ ರಾಜನು ನೆರೆನಾಡಾದ ಕಳಿಂಗರಾಜ್ಯವನ್ನು ಗೆದ್ದು, ಅಲ್ಲಿದ್ದ ತೀರ್ಥಂಕರರ ಕನಕ ಪ್ರತಿಮೆಯನ್ನು ತನ್ನ ರಾಜ್ಯಕ್ಕೆ ತಂದಿರಿಸಿಕೊಂಡನು. ಇವನಾದ ಮೇಲೆ ಮಹಾ ನಂದನು ತನಗೆ ಸಾಮಂತರಾಗಿರಲು ಒಪ್ಪದಿದ್ದ ಇನ್ನಿತರ ರಾಜರನ್ನು ಜಯಿಸಿ, ಉತ್ತರ ಭಾರತದ ಭಾಗವನ್ನು ಏಕಚಕ್ರಾಧಿಪತ್ಯಕ್ಕೊಳಪಡಿಸಿದನು. ಇವನು ಶೂದ್ರಕುಲಕ್ಕೆ ಸೇರಿದವನೆಂಬ ಕಾರಣದಿಂದ ಕ್ಷತ್ರಿಯ ಮನೆತನಗಳು ವಿರೋಧಿಗಳಾದುವು. ಆದರೆ ಈತ ಮಾತ್ರ ಎದೆಗುಂದದೆ ಸಾಧ್ಯವಾದಷ್ಟೂ ವಿರೋಧವನ್ನು ಅಡಗಿಸಿದನು.

ವರ್ಧಮಾನ ಭಟಾರನು ಜೈನರ ವರ್ತಮಾನಕಾಲದ ತೀರ್ಥಂಕರರಲ್ಲಿ ಕಡೆಯವನು. ವೈಶಾಲಿಯ ಕುಂದಪುರದಲ್ಲಿ ಸಿದ್ಧಾರ್ಥ ಪ್ರಿಯಕಾರಿಣಿ (ತ್ರಿಶಲೆ) ಯರಿಗೆ ಮಗನಾಗಿ ಕ್ರಿ.ಪೂ. ೫೯೯ ರಲ್ಲಿ ಜನಿಸಿದ ವರ್ಧಮಾನನು ಕ್ರಿ.ಪೂ. ೫೨೭ ರಲ್ಲಿ ಪಾವಾ ಪುರಿಯಲ್ಲಿ (ಬಿಹಾರ್) ನಿರ್ವಾಣ ಹೊಂದಿದನು. ಅರ್ಥಾತ್ ಮೋಕ್ಷಕ್ಕೆ ಹೋದನು. ಇನ್ನು ವರ್ಧಮಾನ ಭಟಾರರ್ ಮೋಕ್ಷಕ್ಕೆವೋದಿಂಬೞಿಕ್ಕೆ ಚತುರ್ದಶ ಪೂರ್ವಧಾರಿ ಗಳಪ್ಪ ಶ್ರುತಕೇವಲಿಗಳ್’ ಎಂಬುದರ ಉರ್ರರಾರ್ಧದ ವಿವರಣೆಗೆ ತೊಡಗಬಹುದು.

ವರ್ಧಮಾನ ಭಟಾರನ ಉಪದೇಶಸಾರ ತಿಳಿದವರು (ದಿಗಂಬರ ಆಮ್ನಾಯದ ಅಭಿಪ್ರಾಯದಂತೆ) ಮೂವರು (ಶ್ವೇತಾಂ, ಇಬ್ಬರು) ಕೇವಲಿಗಳು. ಅನಂತರ ಜೈನಾಗಮನದ ಹದಿನಾಲ್ಕು ಪೂರ್ವಗಳನ್ನು ಅರಿತವರು (ಚತುರ್ದಶ ಪೂರ್ವ ಧಾರಿಗಳು) ಆಯ್ದು ಜನ ಕೇವಲಿಗಳು.

ಚತುರ್ದಶ ಪೂರ್ವಗಳು : ಉತ್ಪಾದ ಪೂರ್ವ, ಅಗ್ರಾಯಣೀ ಪೂರ್ವ, ವೀರ್ಯಾನುವಾದ ಪೂರ್ವ, ಆಸ್ತಿನಾಸ್ತಿ ಪ್ರವಾದ ಪೂರ್ವ, ಜ್ಞಾನಪ್ರವಾದ ಪೂರ್ವ, ಸತ್ಯಪ್ರವಾದಪೂರ್ವ, ಆತ್ಮಪ್ರವಾದಪೂರ್ವ, ಕರ್ಮಪ್ರವಾದಪೂರ್ವ, ಪ್ರತ್ಯಾಖ್ಯಾನು ವಾದಪೂರ್ವ, ವಿದ್ಯಾನುವಾದಪೂರ್ವ, ಕಲ್ಯಾಣವಾದ (ಅವಂಧ್ಯ) ಪೂರ್ವ, ಪ್ರಾಣ ವಾದ ಪೂರ್ವ, ಕ್ರಿಯಾವಿಶಾಲಪೂರ್ವ, (ತ್ರಿ) ಲೋಕ ಬಿಂದುಸಾರ ಪೂರ್ವ. ಈ ಹದಿ ನಾಲ್ಕು ಪೂರ್ವಗಳ ಜ್ಞಾನವನ್ನು ಗ್ರಹಿಸಿದ್ದವರು ಚತುರ್ದಶ ಪೂರ್ವಧಾರಿಗಳು. ಇಲ್ಲಿ ‘ಪೂರ್ವ’ ಶಬ್ದದ ಅರ್ಥ ಪ್ರಾಚೀನ ಎಂಬುದು. ಮಹಾವೀರನಿಗಿಂತಲೂ ಪೂರ್ವದ ಮತ್ತು ಆತನ ಕಾಲದ ಸಂಗತಿಗಳ ವರ್ಣನೆಯನ್ನೊಳಗೊಂಡಿರುವುದು “ಪೂರ್ವ”.

ವರ್ಧಮಾನನು ಮೋಕ್ಷಕ್ಕೆ ಹೋದ ಬಳಿಕ ಚತುರ್ದಶ ಪೂರ್ವಧಾರಿಗಳಾದ ಶ್ರುತಕೇವಲಿಗಳು ಅಯ್ವರಿದ್ದಾರೆ. ಕೇವಲಿಗಳಾದ ಮೇಲೆ ಬಂದವರು ಶ್ರುತ ಕೇವಲಿಗಳು. ಅವರ ವಿವರ ಹೀಗಿದೆ:

  ದಿಗಂಬರ ಸಂಪ್ರದಾಯ ಶ್ವೇತಾಂಬರ ಸಂಪ್ರದಾಯ
ಕೇವಲಿಗಳು ಕೇವಲಿಗೌತಮ ಸುಧರ್ಮಾ
ಸುಧರ್ಮಾಚಾರ್ಯ ಜಂಬೂ
ಜಂಬೂ ಸ್ವಾಮಿ  
ಶ್ರುತ ಕೇವಲಿಗಳು ವಿಷ್ಣು ಪ್ರಭವ
ನಂದಿಮಿತ್ರ ಶಯ್ಯಂಭವ
ಅಪರಾಜಿತ ಯಶೋಭದ್ರ
ಗೋವರ್ಧನ ಸಂಭೂತಿ ವಿಜಯ
ಭದ್ರಬಾಹು ಭದ್ರಬಾಹು

ಇವರಲ್ಲಿ ಇಬ್ಬರ ಹೆಸರುಗಳನ್ನು ಭ.ಬಾ. ಕಥೆ ಹೆಸರಿಸಿದೆ. ಈ ಕಥೆಯಲ್ಲಿ ಬರುವ ಕೆಲವು ವಿಶಿಷ್ಟ ಶಬ್ದಗಳನ್ನು ಒಂದೊಂದಾಗಿ ಪರಿಶೀಲಿಸಬಹುದು. ಅವುಗಳಲ್ಲಿ ಕೞ್ವಪ್ಪು, ತಿಮುೞನಾೞ್ಗಿ, ದ್ರವಿೞ ವಿಷಯ. ಜಾಪುಲಿ ಸಂಘ (ಯಾಪನೀಯ ಶಾಖೆ), ಜಿನಕಲ್ಪ (ಜಿಣಕಪ್ಪ) ಸ್ಥವಿರ ಕಲ್ಪ (ಥೇರಕಪ್ಪ)- ಇವುಗಳ ಪ್ರಸ್ತಾಪ ಗಮ ನಾರ್ಹವಾದುದು. ಯಾಪನೀಯದ ಪ್ರಾಚೀನತೆ ಬಗ್ಗೆ ಚರ್ಚೆಗಳಿವೆ. ವಡ್ದಾರಾಧನೆ ಯಲ್ಲಿ ಉಲ್ಲೇಖವಾಗಿರುವಂತೆ, ಇದು ದಕ್ಷಿಣಾಪಥದೊಳಗೆ ಮೊದಲಾಯಿತೆಂಬುದು ಸತ್ಯ ಸಂಗತಿಯೆಂದೂ ತೋರುತ್ತದೆ.

ರಟ್ಟರ ದೊರೆ ಪ್ರಬೂತವರ್ಷನ (ಶಕಸಂವತ್ ೭೩೫) ದಾನಪತ್ರವೊಂದರಲ್ಲಿ, ಮಾನ್ಯಪುರದ ಶಿಲಾಗ್ರಾಮವೆಂಬ ಜಿನಮಂದಿರದ ಉಪಯೋಗಕ್ಕಾಗಿ ಜಾಲಮಂಗಲ ಗ್ರಾಮವನ್ನು ವಿಜಯಕೀರ್ತಿ ಎಂಬ ಮುನಿಗಳಿಗೆ ದಾನ ಕೊಟ್ತ ವಿವರವಿದೆ. ಅದರಲ್ಲೇ “ಶ್ರೀ ಯಾಪನೀಯ ನಂದಿಸಂಘ ಪುನ್ನಾಗ ವೃಕ್ಷ ಮೂಲಗಣೇ” ಎಂಬ ಮಾತು ಬರುತ್ತದೆ.

[ಎ.ಕ. ೧೨. ಗುಬ್ಬಿ. ೬೧. ೮೧೩].

“ಪುನ್ನಾಗ” ಎಂಬ ಹೆಸರು ಶ್ರುತಾವತಾರದಲ್ಲಿ ಬರುವ ‘ನಾಗಕೇಸರ ವೃಕ್ಷ’ ವಿರಬೇಕೆಂದು ಊಹಿಸಬಹುದಾದರೂ ತೊಡಕುಗಳಿವೆ. ಕನ್ನಡ ವಡ್ದಾರಾಧನೆ ರಚಿತ ವಾದ ಕಾಲದಲ್ಲಿ (?) ಯಾಪನೀಯ ಸಂಘ ಪ್ರಚಾರದಲ್ಲಿತ್ತೆಂದು ಸ್ಪಷ್ಟವಾಗಿ ತಿಳಿಯ ಬಹುದು; ಅದಕ್ಕೂ ಪೂರ್ವದಲ್ಲೇ ಯಾಪನೀಯ ಸಂಘ ಪ್ರಾರಂಭವಾಗಿತ್ತೆಂಬುದನ್ನು ಬಾಹ್ಯ ಆಧಾರಗಳು ತಿಳಿಸುತ್ತವೆ. ಅಂತೂ ಸ್ಥೂಲವಾಗಿ ಕ್ರಿ.ಶ. ದ ಆರಂಭದಲ್ಲಿ ೧೨ ನೆಯ ಶತಮಾನದ ವರೆಗೆ ಈ ಜೈನ ಶಾಖೆ ಅಸ್ತಿತ್ವದಲ್ಲಿತ್ತೆಂದು ಹೇಳಬಹುದು. ಕನ್ನಡನಾಡಿನ ಈಗಿನ ಕಲ್ಬುರ್ಗಿ, ಬೆಳಗಾವಿ ಮತ್ತು ಧಾರವಾಡ ಜಿಲ್ಲೆಯ ಭೂಪ್ರದೇಶ ಈ ಶಾಖೆಗೆ ಕಾರ್ಯಕ್ಷೇತ್ರವಾಗಿತ್ತು. ದಿಗಂಬರ – ಶ್ವೇತಾಂಬರ ಆಮ್ನಾಯಗಳನ್ನು ಜೈನ ಧರ್ಮದ ಎರಡು ತುದಿಗಳೆಂದೂ, ಯಾಪನೀಯವು ಅವೆರಡರ ನಡುವಣ ಸುಧಾರಣಾಬಿಂದುವೆಂದೂ ಭಾವಿಸಬಹುದು. ದಿಗಂಬರರ ನಗ್ನತ್ವವನ್ನೂ, ಶ್ವೇತಾಂಬರರ ‘ಸ್ತ್ರೀಯರಿಗೂ ಅದೇ ಭವದಲ್ಲಿ ಮೋಕ್ಷವುಂಟೆ’ ಬುದನ್ನೂ ಯಾಪನೀಯರೂ ಮಾನ್ಯ ಮಾಡಿದ್ದಾರೆ. ಧಾರವಾಡಕ್ಕೆ ವಾಯವ್ಯ ದಿಕ್ಕಿನಲ್ಲಿ ಹದಿನಾರು ಕಿಲೋಮೀಟರ್ ದೂರದಲ್ಲಿರುವ ಗರಗ ಎಂಬ ಗ್ರಾಮದ ಎರಡು ಶಾಸನಗಳಲ್ಲಿ (ಕೆರೆಯ ದಂಡೆಯ ಮೇಲಿನ ಶಾಸನಗಳಲ್ಲಿ) ಯಾಪನೀಯ ಸಂಘದ ‘ಕುಮ್ಮಡಿಗಣದ ಆಚಾರ್ಯ ಶಾಂತವೀರ ದೇವರು’ ಸಮಾಧಿ ಮರಣವನ್ನು ೧೨೯೦ ರ ಜುಲೈ ೨೭ ರಂದು ಗುರುವಾರ ಪಡೆದರೆಂಬ ಸಂಗತಿಯ ಉಲ್ಲೇಖವಿದೆ. ಭದ್ರ ಬಾಹು ಕಥೆಯಲ್ಲಿ ಉಲ್ಲೇಖವಾಗಿರುವ ಜಿನಕಲ್ಪ ಎಂಬುದು ದಿಗಂಬರ ಪರಂಪರೆಯನ್ನೂ, ಸ್ಥವಿರಕಲ್ಪ ಶ್ವೇತಾಂಬರ ಪರಂಪರೆಯನ್ನೂ ಸೂಚಿಸುತ್ತದೆ. ಶ್ವೇತಾಂಬರ ಗುರುಪರಂಪರೆಯನ್ನು ನಿರೂಪಿಸುವ ಪಟ್ಟಾವಲಿಗೆ ‘ಸ್ಥವಿರ ಪಟ್ಟಾವಲಿ’ ಎಂದು ಹೇಳಿದೆ; ಆ ಸ್ಥವಿರ ಪಟ್ಟಾವಲಿಯಲ್ಲಿ ಸ್ಥವಿರ ಸಂಭೂತಿ ವಿಜಯನಿಂದ ಪಟ್ಟಿ ಮುಂದುವರಿಯುತ್ತದೆ. ಸಂಭೂತಿವಿಜಯ ಆಚಾರ್ಯನೂ ಭದ್ರಬಾಹುವಿನ ಸಮಕಾಲೀನ, ಶ್ವೇತಾಂಬರರೂ ಭದ್ರಬಾಹುವನ್ನು ತಮ್ಮ ಆಚಾರ್ಯನೆಂದು ಗೌರವಿಸುತ್ತಾರೆ.

ಈಗಿನ ಶ್ರವಣಬೆಳಗೊಳಪ್ರದೇಶ ಸಾವಿರ ವರ್ಷಗಲ ಹಿಂದೆ ಒಂದು ಅಡವಿಯಾಗಿತ್ತು. ಅದನ್ನು ಕೞ್ವಪ್ಪು ನಾಡು ಎಂದು ಕರೆಯುತ್ತಿದ್ದರು. ಆಗ ಚಿಕ್ಕ ಬೆಟ್ಟವಷ್ಟೇ, (ಚಂದ್ರಗಿರಿ) ಪ್ರಸಿದ್ಧಿ ಪಡೆದಿತ್ತು. ಭ.ಬಾ. ಕಥೆಯಲ್ಲಿ ಒಂದೆಡೆ ಹೇಳಿರುವ ‘ಅಡವಿಯ ಬೆಟ್ಟ’ ಎಂಬುದು ಈ ಚಂದ್ರಗಿರಿಯೇ. ದಾರಿಗರು ಈ ಅಡವಿ ಯಲ್ಲಿ ಬೀಡುಬಿಡುತ್ತಿದ್ದರು. ಈ ಕಥೆಯಲ್ಲಿ ಬರುವ ಕಾಂತಾರ ಭೈಕ್ಷವೆಂಬುದೂ ಈ ಪ್ರದೇಶ ಅರಣ್ಯವಾಗಿತ್ತೆಂಬುದನ್ನು ಪುಷ್ಟೀಕರಿಸುತ್ತದೆ. ಬಹುಶಃ ಈಗಿನ ದೊಡ್ಡ ಬೆಟ್ಟಕ್ಕೆ ಪ್ರಾಶಸ್ತ್ಯ ಬಂದಾಗಿನಿಂದ, ಗೊಮ್ಮಟ ವಿಗ್ರಹದ ಪ್ರತಿಷ್ಠಾಪನ ಕಾಲದ ವೇಳೆಗೆ ಅರಣ್ಯ ಕಡಿಮೆಯಾಗಿರಬೇಕೆಂದು ಊಹಿಸಲವಕಾಶವಿದೆ. ವಡ್ಡಾರಾಧನಕಾರ ಮೂಲದಲ್ಲಿ ಇಲ್ಲದುದನ್ನು ಹೊಸದಾಗಿ ಸೇರಿರುವ ಸ್ವಾತಂತ್ರ್ಯ ಅಲ್ಲಲ್ಲಿ ವಹಿಸುತ್ತಾನೆ. ಉದಾ: ಕಾರ್ತಿಕ ಋಷಿಯ ಕಥೆಯಲ್ಲಿ ನೂತನವಾಗಿ ‘ಕೋಗಳಿ’ ಗ್ರಾಮವನ್ನು ಕಥೆಗೆ ಕೊಂಡಿ ಹಾಕಿರುವುದು. ಈ ರೀತಿ ನವೀನ ಕಲ್ಪನೆ ಕೂಡಿಸುವಲ್ಲಿ ಔಚಿತ್ಯ ಮೀರುವುದಿಲ್ಲ. ಕನ್ನಡ ನಾಡಿನ ಈ ಲೇಖಕ ಗೊಮ್ಮಟ ವಿಗ್ರಹ ಪ್ರತಿಷ್ಠಾಪನೆಯ ತರುವಾಯ ಈ ಕಥೆ ಬರೆದಿದ್ದರೆ ಸಹಜವಾಗಿಯೇ ಕೞ್ವಪ್ಪು ನಾಡಿನ ದೊಡ್ಡ ಬೆಟ್ಟವನ್ನೂ ಗೊಮ್ಮಟನನ್ನೂ ಪ್ರಸ್ತಾಪಿಸುತ್ತಿದ್ದನೆಂದು ಊಹಿಸಲು ಅವಕಾಶವಿದೆ. ಆದರೆ ಇದು ತೀರ ತೆಳುವಾದ ಊಹೆಯಾಗಿದೆ. ಏಕೆಂದರೆ ಕಥೆಯ ಘಟನೆ ನಡೆದಿರುವುದು ಕ್ರಿಸ್ತಪೂರ್ವದಲ್ಲಿ. ಆಗಿನ್ನೂ ಇದು ಕೇವಲ ಕಾಂತಾರ ಪ್ರದೇಶ. ಕೞ್ವಪ್ಪು ಎಂಬ ಹೆಸರಷ್ಟೇ ಇದ್ದ, ಬೆಳ್ಗೊಳ ಎಂಬ ಹೆಸರು ರೂಢಿಗೆ ಅಡಿ ಯಿಡದಿದ್ದ, ಎರಡು ಸಾವಿರ ವರ್ಷಗಳ ಹಿಂದಿನ ಕಾಲ. ಈ ಕಾಲಪ್ರಜ್ಞೆಗೆ ಕಟ್ಟುಬಿದ್ದು ಗೊಮ್ಮಟವನ್ನು ಇದರಲ್ಲಿ ಉಲ್ಲೇಖಿಸಲಿಲ್ಲವೆಂದು ಸಹ ತಿಳಿಯಬಹುದು.

ಕೞ್ವಪ್ಪಿಗೆ ವ್ಭದ್ರಬಾಹುವಿನೊಡನೆ ಬಂದು ದೊರೆ ಸಂಪ್ರತಿ ಚಂದ್ರಗುಪ್ತ ನೆಂಬುದು ಗಮನಾರ್ಹ. ಚರಿತ್ರಕಾರರಿಗೆ ಇದೊಂದು ಸುಳಿವು ಆಗಿರುವಂತೆ, ಈ ಸೂಚನೆಯನ್ನು ಅನಾಮತ್ತಾಗಿ ಅಂಗೀಕರಿಸಲು ಸಾಧಕಬಾಧಕಗಳು ಇರಬಹುದಾದ್ದ ರಿಂದ, ಇದೊಂದು ಸಮಸ್ಯೆಯೂ ಆಗಿದೆ. ಏನೇ ಇದ್ದರೂ ಇದಕ್ಕಿರುವ ಮಹತ್ವ ವನ್ನೂ ಅಲ್ಲಗಳೆಯುವಂತಿಲ್ಲ. ಮೌರ್ಯರಿಗೂ ಕರ್ನಾಟಕ್ಕೂ ಸಂಬಂಧ ಏರ್ಪಟ್ಟ ಸಂಗತಿಯನ್ನು ಇದು ಸ್ಪಷ್ಟವಾಗಿ ಸಾರುತ್ತದೆ. ಅಖಿಲ ಭಾರತ ವ್ಯಾಪ್ತಿಗೆ ಕರ್ನಾಟಕ ಸೇರಿದ ಚಾರಿತ್ರಿಕ ಹಿನ್ನೆಲೆಯನ್ನು ಇದು ಒದಗಿಸುತ್ತದೆ.

ತಿಮುಳ್ಚನಾೞ್ಗೆ ಎಂಬ ಪ್ರಯೋಗವೂ ದ್ರಾವಿಡ ಭಾಷಾ ವಿಜ್ಞಾನದ ದೃಷ್ಟಿ ಯಿಂದ ಪರಿಶೀಲನಾರ್ಹವಾಗಿದೆ. ತಮಿೞ್ – ದಮಿೞ್ – ದ್ರಾ(ದ್ರ) ವಿಡ ಎಂಬ ಶಬ್ದ ರೂಪಗಳ ಆದಿಯಲ್ಲಿನ ಘೋಷ – ಅಘೋಷ ಧ್ವನಿಯ ಬಗ್ಗೆ ಚರ್ಚೆ ಇದೆ. ಹತ್ತನೆಯ ಶತಮಾನದ ಈ ಪ್ರಯೋಗ ಶಬ್ದಾದಿಯಲ್ಲಿ ಅಘೋಷ ಸ್ಪರ್ಶ ಧ್ವನಿಯನ್ನು ತೋರಿಸುತ್ತದೆ. ಇದೇ ಕೃತಿಯಲ್ಲಿ ಸಂಸ್ಕೃತ ಸಮಾಸ ರೂಪದಲ್ಲಿ ‘ದ್ರವಿೞ ವಿಷಯಕ್ಕೆ’ ಎಂಬ ಪ್ರಯೋಗವಿದೆ. ಈಗಿನ ‘ತಮಿಳು ನಾಡು’ ಎಂಬ ಅರ್ಥ ವನ್ನೇ ಇದು ಹೊಂದಿರುವುದು ಸ್ವಾರಸ್ಯವಾಗಿದೆ. ಇಲ್ಲಿನ ’ತಿಮೞ್ / ದ್ರವಿಡ’ ಎಂಬುದು ಭಾಷಾವಾಚಕಕ್ಕಿಂತ ಪ್ರದೇಶ ಸೂಚಕವಾಗಿದೆಯೆಂದು ತೋರುತ್ತದೆ. [ನಾಗರಾಜಯ್ಯ, ಹಂಪ. : ದ್ರಾವಿಡಭಾಷಾ ವಿಜ್ಞಾನ : (೪ ಮುದ್ರಣ) ೧೯೯೪] ಇದರಂತೆ ‘ಮಗಧ’ದ ಪ್ರಸ್ತಾಪವೂ ಪರಿಶೀಲನಾರ್ಹವಾಗಿದೆ. ‘ಮಗಧ’ದ ಮಹತ್ವ ನಾಲ್ಕು ರಾಜವಂಶದವರ ಆಳ್ವಿಕೆಯುದ್ಧಕ್ಕೂ ಕಾಣಬಹುದು. ಕ್ರಿ.ಪೂ. ಏಳನೆಯ ಶತಮಾನ ದಿಂದ ಇಂದಿನ ಪಾಟನಾ ಮತ್ತು ಗಯಾ ಜಿಲ್ಲೆಗಳ ಪ್ರದೇಶ; ಇದಕ್ಕೆ ರಾಜಗೃಹ (ಅಥವಾ ಗಿರವ್ರಜ) ರಾಜಧಾನಿಯಾಗಿತ್ತು; ಇದು ಇಂದಿನ ಪಾತನಾದ ರಾಜಗಿರ್.

ಮಗಧವನ್ನು ಮೊದಲು ಆಳಿದವರು ಹರ್ಯಾಂಕವಂಶ. ಅದಕ್ಕೂ ಹಿಂದೆ ವಸು, ಆತನ ಮಗ ಬೃಹದ್ರಥ ಮತ್ತು ಮಗ ಜರಾಸಂಧ – ಇವರು ಇಲ್ಲಿ ಬಾಳಿದಂತೆ ಹೇಳಿಕೆಗಳಿವೆ. ಬಿಂಬಸಾರ (ಕ್ರಿ.ಪೂ. ೫೮೮ – ೫೦೦), ಅವನ ಮಗ ಅಜಾತ ಶತ್ರು (ಕ್ರಿ.ಪೂ. ೫೦೦-೪೭೫). ಅಜಾತಶತ್ರುವು ವೈಶಾಲಿ, ಅವಂತಿ ರಾಜರನ್ನು ಸೋಲಿಸಿದ. ಹರ್ಯಾಂಕವಂಶದವರಾದ ಮೇಲೆ ಶಿಶುನಾಗವಂಶದವರ ರಾಜ್ಯಭಾರ ಪ್ರಾರಂಭ ವಾಯಿತು. ಇವರು ಸುಮಾರು 350 ವರ್ಷ ಆಳಿದರು. ಪ್ರಥಮ ರಾಜನಾದ ಶಿಶುನಾಗನಿಗೆ ವೈಶಾಲಿ ರಾಜಧಾನಿ. ಅನಂತರದ ಕಲಾಕೋಸಲನಿಗೆ ಪಾಟಲೀ ಪುತ್ರ ರಾಜಧಾನಿ. ಇವನಿಗೆ ಹತ್ತು ಜನ ಮಕ್ಕಳಿದ್ದು ಅವರು ಚಿಕ್ಕವರೂ ಶಕ್ತಿಹೀನರೂ ಆಗಿ ರಾಜ್ಯಭ್ರಷ್ಟರಾದರು. ಶಿಶುನಾಗವಂಶ ಮುಗಿದು ನಂದರ ಆಳ್ವಿಕೆ ಪ್ರಾರಂಭವಾಯಿತು. ಇವರಲ್ಲಿ ಮಹಾಪದ್ಮನಂದನು ೨೮ ವರ್ಷ ರಾಜನಾಗಿದ್ದನು. ಇವನಿಗೆ ಎಂಟು ಜನ ಮಕ್ಕಳು. ಅವರಲ್ಲಿ ಕಡೆಯವನು ಧನನಂದ. ಇವನು ಜನಪ್ರಿಯನಾಗಿರಲಿಲ್ಲ. ಇವನನ್ನು ಕೊಂದು ಚಂದ್ರಗುಪ್ತಮೌರ್ಯನು ಕ್ರಿ.ಪೂ. ೩೨೨ ರಲ್ಲಿ ಪಟ್ಟ ಹತ್ತಿ ಮೌರ್ಯಸಾಮ್ರಾಜ್ಯ ಸ್ಥಾಪಕನಾದ. ಮೆಗಾಸ್ತನೀಸ್ (ಮೆಗಸ್ತಾನೀಸ) ನೆಂಬ ರಾಯಭಾರಿ ಇವನ ಕಾಲಕ್ಕೆ ಸಂಬಂಧಿಸಿದವನು. ಚಂದ್ರಗುಪ್ತನ (ಕ್ರಿ.ಪೂ. ೩೨೨-೩೦೦) ತರುವಾಯ ಅವನ ಮಗ ಬಿಂದುಸಾರ (ಕ್ರಿ.ಪೂ.೩೦೦-೨೭೩) ಪಟ್ಟಾಭಿಷೇಕ್ತನಾದ. ಇವನಿಗೆ ಗಂಡು ಮಕ್ಕಳೂ (ಸುಸೀಮ) ಹೆಣ್ಣುಮಕ್ಕಳೂ ಹಲವರಿದ್ದರು. ಚಾಣಕ್ಯನು ಚಂದ್ರಗುಪ್ತನ ಕಾಲದಲ್ಲಿಯೂ ಬಿಂದುಸಾರನ ಕಾಲದಲ್ಲೂ ಮಂತ್ರಿಯಾಗಿದ್ದನು. ಬಿಂದುಸಾರನ ಮಕ್ಕಳಲ್ಲಿ ಉಳಿದವರನ್ನು ಹತ್ತಿಕ್ಕಿ ಅಶೋಕನು (ಕ್ರಿ.ಪೂ. ೨೭೩-೨೨೩) ಪಟ್ಟವೇರಿದ. ಮೌರ್ಯರಾದ ಮೇಲೆ ಸುಂಗ, ಕಣ್ವ, ಕುಶಾನ, ಶಾತವಾಹನ ಮೊದಲಾದ ರಾಜವಂಶ ದವರು ಕಾಣಿಸಿಕೊಂಡರು. ಈ ಎಲ್ಲ ದೊರೆಗಳ ಕಾಲದಲ್ಲೂ ಮಗಧದ ಔನ್ಯತ್ಯ ಮಾಸಿರಲಿಲ್ಲವೆನ್ನಬಹುದು. ಇದಿಷ್ಟೂ ಕ್ರಿಸ್ತಪೂರ್ವದಿಂದ ಕ್ರಿಸ್ತಶಕದ ಆರಂಭದ ಶತಮಾನದ ವರೆಗಿನ ರಾಜಮನೆತನಗಳ ಸ್ಥೂಲ ಹಾಗೂ ಸಂಕ್ಷಿಪ್ತ ಚರಿತ್ರೆ. ಬೌದ್ಧ ಮತ್ತು ಜೈನ ಧಾರ್ಮಿಕ ಪರಂಪರೆಯೂ ಇದನ್ನು ಬಹುವಾಗಿ ಅನುಮೋದಿಸುತ್ತದೆ. ಆರೇಳು ಶತಮಾನಗಳ ಈ ಅವಧಿಯಲ್ಲಿ ವಿದೇಶ ಆಕ್ರಮಣಗಳೂ ಆಗಿವೆ ಪಾರಸಿಯ ಮೊದಲನೆಯ ದೊರೆ ಡೇರಿಯಸ್ (ಕ್ರಿ.ಪೂ. ೫೨೨-೪೬೮), ಗ್ರೀಕರ ಅಲೆಗ್ಸಾಂಡರ್ (ಕ್ರಿ.ಪೂ.೩೨೬)- ಇವರನ್ನು ಇಲ್ಲಿ ಉಲ್ಲೇಖಿಸಬಹುದು ಅಂಭಿ (ತಕ್ಷಶಿಲೆ), ಪೌರಸ್ ಮೊದಲಾದ ಪರಾಕ್ರಮಿ ರಾಜರೂ ಉತ್ತರದಲ್ಲಿದ್ದರು. ಆದರೆ ಜೈನ-ಬೌದ್ಧ ಸಾಹಿತ್ಯ ಇವುಗಳ ಬಗ್ಗೆ ಮಾಹಿತಿಗಳನ್ನೊದಗಿಸುವುದಿಲ್ಲ. ವಡ್ಡಾರಾಧನೆಯ ಭದ್ರಬಾಹು ಸಾಹಿತ್ಯ ಇವುಗಳ ಬಗ್ಗೆ ಮಾಹಿತಿಗಳನ್ನೊದಗಿಸುವುದಿಲ್ಲ. ವಡ್ಡಾರಾಧನೆಯ ಭ.ಬಾ. ಕಥೆಯಲ್ಲೇ ಅಲ್ಲದೆ ಇನ್ನಿತರ ಕೆಲವು ಕಥೆಗಳಲ್ಲಿಯೂ ಮಗಧೆ ಮತ್ತು ಅದರ ಸುತ್ತಮುತ್ತಲ ಪ್ರದೇಶವಾಗಿರುವುದು ಕಂಡುಬರುತ್ತದೆ.

ವಡ್ಡಾರಾಧನಕಾರ ಕೆಲವು ಒಂದೆಡೆ ಹೇಳದೆ ಬಿಟ್ತುದನ್ನು ಅದೇ ಕಥೆಯಲ್ಲಿ ಇನ್ನೊಂದೆಡೆ ಹೇಳುವುದುಂಟು. ಇದಕ್ಕೆ ಭದ್ರಬಾಹು ಕಥೆಯಲ್ಲಿಯೇ ಎರಡು ಉದಾಹರಣೆಗಳಿವೆ. (೧) ಪಾಟಳೀಪುತ್ರದ ಬಹಿರುದ್ಯಾನವನಕ್ಕೆ ಸಮಾಧಿಗುಪ್ತ ಆಚಾರ್ಯರು ಬಂದಿಳಿದರೆಂದು ಹೇಳಿದೆ. (ಪು.೩೦) ಅವರು ಚಂದ್ರಗುಪ್ತನಿಗೆ ಅವನ ಹಿಂದಿನ ಎರಡು ಭವಗಳ ಕಥೆಯನ್ನು ವಿಸ್ತಾರವಾಗಿ ಹತ್ತು ಪುಟಗಳಲ್ಲಿ ತಿಳಿಸುತ್ತಾರೆ. ಆ ನಿರೂಪಣೆ ಮುಗಿದ ಕೂಡಲೆ (ಪು.೭೭) ಚಂದ್ರಗುಪ್ತನು ಉಜ್ಜಯಿನಿಯನ್ನು ಆಳುತ್ತಾ ಸುಖವಾಗಿದ್ದನು ಎಂದಿದೆ. ಅಂದರೆ ಚಂದ್ರಗುಪ್ತ ರಾಜಧಾನಿಯನ್ನು ಪಾಟಲೀಪುತ್ರದಿಂದ ಉಜ್ಜಯಿನಿಗೆ ಬದಲಾಯಿಸಿದನೆ? ಅಥವಾ ಅವೆರಡೂ ಒಂದೇ ಪಟ್ಟಣದ ಹೆಸರುಗಳೆ? ಎಂಬ ಸಂಶಯಕ್ಕೆಡೆಯಿದೆ. (೨) ಭದ್ರಬಾಹು ಭಟಾರರು ಉಜ್ಜಯಿನಿಗೆ ಬಂದು ಪಟ್ಟಣದ ಹೊರಗಿನ ಉದ್ಯಾನವನದಲ್ಲಿ ತಂಗಿದರು ಎಂದು ಹೇಳಿದೆ. (ಪು. ೮೫) ಆದರೆ ಅವರು ಒಂದು ದಿನ ಚರಿಗೆಗೆ ಹೋಗಿ ಅಲಾಭವಾಗಿ ಬಸದಿಗೆ ಹಿಂತಿರುಗಿದರು ಎಂದು ಅದೇ ಪುಟದಲ್ಲಿ ತಿಳಿಸಿದೆ. ಅಂದರೆ ಬಹಿರುದ್ಯಾನದಲ್ಲಿ ಬಸದಿಯಿತ್ತೆಂದು ಊಹಿಸಿಕೊಳ್ಳಬೇಕಾಗುತ್ತದೆ. ಆದರೂ ಈ ಸಂಗತಿಗಳು ಕಥೆಯ ಸಾವಯವ ಶಿಲ್ಪದಲ್ಲಿ ವಿಸಂಗತಿಗಳಾಗಿ ಸಿಡಿಯುವುದಿಲ್ಲ. ಕಥೆಗಳ ಒಟ್ಟಂದದಲ್ಲಿ ಎಲ್ಲೋ ಮರೆಗೆ ಸರಿದುಬಿಡುತ್ತವೆ.

ಭದ್ರಬಾಹು ಭಟಾರರ ಕಥೆಯಲಿ ಬರುವ ೧೨ ವರ್ಷಗಳ ದುರ್ಭಿಕ್ಷದ (ಪನ್ನೆರಡು ವರುಷಂಬರೆಗಮನಾವ್ರುಷ್ಟಿಯಾಗಿ ದುರ್ಭಿಕ್ಷಮಾದಪ್ಪುದೀ ನಾಡೊಳ್) ಮಾತು ನಿಜವಾದರೆ ಚಾರಿತ್ರಿಕ ಸತ್ಯವಾದರೆ ೨,೫೦೦ ವರ್ಷಾಳ ಹಿಂದೆ ಉತ್ತರ ಭಾರತದ ಮಗಧ ರಾಜ್ಯದಲ್ಲಿ ಸಂಭವಿಸಿದ ಕ್ಷಾಮದ ಒಂದು ಐತಿಹಾಸಿಕ ದಾಖಲೆ ಇಲ್ಲಿ ದೊರೆತಂತೆ ಆಗುತ್ತದೆ. ಭದ್ರಬಾಹು ಕಥೆಯ ಪರಿಸರದಲ್ಲಿ ಈ ಕ್ಷಾಮದ ಮಹತ್ವವೆಂದರೆ ಅದು ಜೈನಧರ್ಮದಲ್ಲಿ ಕವಲುಗಳುಂಟಾಗಲು ಒಂದು ಮುಖ್ಯ ಕಾರಣವಾಯಿತೆಂಬುದು. ಕ್ಷಾಮಡಾಮರಗಳು ಮನುಶ್ಯನ ನಿಷ್ಠೆ ನಂಬಿಕೆ ನಿಲುವುಗಳನ್ನು ಹೇಗೆ ಸಡಿಲಿಸಬಲ್ಲುವೆಂಬುದಕ್ಕೆ ಇದೊಂದು ಜ್ವಲಂತ ನಿದರ್ಶನವಾಗಿದೆ. ಇಲ್ಲಿ ಕ್ಷಾಮ ಕೇವಲ ಅಚೇತನೊಪಸರ್ಗವಾಗಿ ಪರ್ಯವಸಾನವಾಗದೆ, ಒಂದು ಧರ್ಮದ ದಾರಿಯಲ್ಲಿ ಅಡ್ಡಲಾಗಿ, ಧರ್ಮ ಎರಡು ಸೀಳಾಗಿ ಸಾಗುವಂತೆ ಮಾಡಿದೆ. ನಿಸರ್ಗದ ಮಡಿಲಲ್ಲಿ ಮಾನವ ಮಗುವಿದ್ದಂತೆ.

ಭದ್ರಬಾಹುಗಳು ಋಷಿಸಮುದಾಯದ ಮುಖಂಡರು. ಮುಖಂದನ ಮಾತು ಪಾಲಿಸುವುದು ಲೋಕರೂಢಿಗಿಂತ ಹೆಚ್ಚು ಮುಖ್ಯ ನಿಯಮ ಮುನಿಧರ್ಮದಲ್ಲಿ. ಹೀಗಿದ್ದೂ ಭದ್ರಬಾಹುಗಳು ‘ರಿಸಿ’ ಗಳಿಗೆ ಕ್ಷಾಮನಿಮಿತ್ತವಾಗಿ ಮಧ್ಯದೇಶವನ್ನು ಬಿಟ್ಟು ತೆಂಕಣದೆಡೆಗೆ ತೆರಳಲು ಅಜ್ಞಾಪಿಸಿದರೂ, ಮೂವರು ಋಷಿಗಳು ಒಪ್ಪಲಿಲ್ಲ. ಅಂದರೆ ಭದ್ರಬಾಹುಗಳ ಕಾಲಕ್ಕೆ ಸ್ಪಷ್ಟವಾಗಿ, ಬಹಿರಂಗವಾಗಿ ಅಜ್ಞೋಲಂಘನೆ ಕಂಡುಬರುತ್ತದೆ. ಯತಿಸಂಘದ ಶೈಥಿಲ್ಯಕ್ಕೆ, ಅದಕ್ಕೂ ಮೊದಲೇ, ವಿಶಾಖಾಚಾರ್ಯರ ಕಾಲಕ್ಕೇ ಇದರ ಅಂಕುರಾರ್ಪಣೆಯಾಗಿರಬೇಕು. ಏಕೆಂದರೆ ಆ ಮೂವರನ್ನು ಅನುಸರಿ ಸುವ ಹಿಂಬಾಲಕ ಮುನಿಗಳೂ ಇದ್ದರು ಮತ್ತು ಅವರೆಲ್ಲ ಸಿಂಧೂದೇಶಕ್ಕೆ ಹೋದರು. ವ್ಯಕ್ತಿಗಳಲ್ಲಿರುವಂತೆ ಯತಿಗಳಲ್ಲೂ ತಮಗೆ ತೋಚಿದ, ತಿಳಿದ, ಸರಿಕಂಡ ದಾರಿಯನ್ನು ತಾವು ಹಿಡಿಯುವ ಸ್ವಚ್ಛಂದಪ್ರವೃತ್ತಿ ಕಾಣುತ್ತದೆ. ಹಾಗಾದರೆ ಈ ಋಷಿಸಮುದಾಯ ದಲ್ಲಿ ಬಿರುಕು ತೋರಿದ್ದು ಯಾವಾಗ ಎಂಬ ಪ್ರಶ್ನೆ ಏಳುತ್ತದೆ. ಮಹಾವೀರರ ನಿರ್ವಾಣದ ಅನತಿಕಾಲದಲ್ಲೇ., ಜೈನ ಯತಿಸಂಘದಲ್ಲಿ ವಿರಸ ಹೊಗೆಯಾಡಿತೆಂದು ಅನ್ಯ ಆಧಾರಗಳಿಂದ ತಿಳಿದುಬರುತ್ತದೆ. ಬೌದ್ಧ ಧಾರ್ಮಿಕ ಸಾಹಿತ್ಯದಲ್ಲಿ ಇದಕ್ಕೊಂದು ನಿದರ್ಶನವಿದೆ.

ಭದ್ರಬಾಹುವಿನ ಹೆಸರು. ಈ ಕಥೆಗೆ ಕೊಟ್ಟಿದ್ದರೂ ಅದು ಎಷ್ಟರಮಟ್ಟಿಗೆ ಒಪ್ಪುತ್ತದೆಂಬುದು ಪ್ರಶ್ನಾರ್ಹವಾಗಿ ನಿಲ್ಲುತ್ತದೆ. ಶ್ರುತಕೇವಲಿಗಳಲೊಬ್ಬನೆಂಬ ಕಾರನದಿಂದ ಕಥೆಗೆ ಆತನ ಹೆಸರಿಟ್ತಿರಬಹುದು. ಕಥೆಯ ಆರಂಭ ಮತ್ತು ಮುಕ್ತಾಯ ಭದ್ರಬಾಹುವಿನ ಪ್ರಸ್ತಾಪದಿಂದ ಕೂಡಿದೆಯೆಂಬುದೂ ಸರಿಯೆ. ಆದರೆ ಭದ್ರಬಾಹು ಈ ಕಥೆಯ ಮೈಯಲ್ಲಿ ಉದ್ದಕ್ಕೂ ಸಮಪ್ರಮಾಣದಲ್ಲಿ ಚಾಚಿಕೊಳ್ಳುವುದಿಲ್ಲ. ಸುಕುಮಾರಸ್ವಾಮಿ ಕಥೆಯಲ್ಲಿ ಆ ಪಾತ್ರ, ಆ ಹೆಸರಿನಿಂದ ನೇರವಾಗಿ ಪ್ರತ್ಯಕ್ಷ ವಾಗುವುದು, ಕಥಾಂತ್ಯದ ಭಾಗದಲ್ಲಿಯಾದರೂ, ಕಥೆಗೆ ಆತನ ಹೆಸರು ಉಚಿತವಾಗಿ ನಿಲ್ಲುತ್ತದೆ. ಒಟ್ಟು ಕಥೆಯು ಆ ಜೀವನದ ಹಿಂದಿನ ಭವಗಳ ಕಥಾನಕವನ್ನು ಅವಿಚ್ಛಿನ್ನವಾಗಿ ಒಳಗೊಂಡಿರುವುದರಿಂದ. ಭದ್ರಬಾಹು ಕಥೆಯಲ್ಲಿ ಭದ್ರ ಬಾಹುವಿನ ಈ ಭವದ ಬದುಕು ಬಿಟ್ಟರೆ ಭವಾವಳಿಗಳು (ಹಿಂದಿನವು) ಬರುವುದಿಲ್ಲ. (ಸಂಪ್ರತಿ) ಚಂದ್ರಗುಪ್ತ ಭಟಾರರ ಕಥೆ ಎಂಬ ಹೆಸರನ್ನು ಕಥೆಗೆ ಕೊಡಬಹುದಿತ್ತು. ಎರಡು ಪ್ರಮುಖ ಕಾರಣಗಳು ಈ ಸೂಚನೆಯನ್ನು ಬೆಂಬಲಿಸುತ್ತವೆ. ೧. ಚಕ್ರವರ್ತಿ ಯಾಗಿದ್ದವನು, ಸಿಂಹಾಸನ ಬಿಟ್ಟು ಸನ್ಯಾಸ ಸ್ವೀಕರಿಸಿದನು. ೨. ಅವನ ಸುದೀರ್ಘ ಭವಾವಳಿ ಈ ಕಥೆಯಲ್ಲಿದೆ.

ಚಕ್ರವರ್ತಿಯಾಗಿದ್ದವನು ಸಿಂಹಾಸನವನ್ನು ತೊರೆದು ಸನ್ಯಾಸ ಸ್ವೀಕರಿಸಿ ಮುನಿಸಂಘದೊಡನೆ ಉತ್ತರದಿಂದ ದಕ್ಷಿಣಕ್ಕೆ ಬರುತ್ತಾನೆ. ಮತ್ತೆ ದಕ್ಷಿಣದಿಂದ ಉತ್ತರಕ್ಕೆ ಹೋಗುತ್ತಾನೆ. ಕೞ್ವಪ್ಪಿನ ನಾಡಿನಲ್ಲಿ (ಕಾಡಿನಲ್ಲಿ) ಕಷ್ಟದ ಕಾಲ, ಅದೂ ೧೨ ವರ್ಷ ಕಳೆಯುತ್ತಾನೆ. ಗುರುಸೇವೆ ಅನ್ಯಾದೃಶವೆಂಬಂತೆ ಮಾಡುತ್ತಾನೆ. ಹಲವಾರು ಜನರಿಂದ ಸೇವೆ ಸ್ವೀಕರಿಸುತ್ತಿದ್ದ ಸಾಮ್ರಾಟನೆಲ್ಲಿ? ಸಾಮಾನ್ಯನಂತೆ ಶ್ರದ್ಧೆ ನಿಷ್ಠೆಗಳಿಂದ ಋಷಿಸೇವೆಯಲ್ಲಿ ನಿಂತ ಚಂದ್ರಗುಪ್ತನೆಲ್ಲಿ? ಈ ಎರಡು ಧ್ರುವಗಳ ಅಂತರ ಆನ ನಿಡುಬಾಳಿನಲ್ಲಿ ನಿಚ್ಚಳವಾಗಿ ಮಡುಗಟ್ಟಿದೆ. ಹೀಗೆ ಪರಿವರ್ತನೆಗಳ ಪರೀಕ್ಷೆಯಲ್ಲಿ ಹಾದು, ಕಾಳಿಕೆಗಳೆದ ಅಪರಂಜಿಯಾಗಿ ಬೆಳಗುತ್ತಾನೆ. ಅವನನ್ನು ಸರಿಯಾಗಿ ಅರಿಯದೆ ವಿಶಾಖಾಚಾರ್ಯರಾದಿಯಾಗಿ ಮುನಿಗಳು ಅಸಡ್ಡೆಯಿಂದ ಕಡೆಗಣಿಸಿದರೂ, ಉನ್ನತ ವ್ಯಕ್ತಿತ್ವವನ್ನು ಮನಗಂಡ ಮೇಲೆ ಮರುಗಿ ಎರಗಿದರು. ರಾಗ – ದ್ವೇಷಗಳನ್ನು ಗೆದ್ದು ನಿಂತಿದ್ದ ಚಂದ್ರಗುಪ್ತಮುನಿ ಅವರ ಅಸಡ್ಡೆಗೂ – ಸಡ್ಡೆಗೂ ಸಮನಾಗೇ ವರ್ತಿಸಿದ. ಲೋಕದ ಹೊರಗಿನ ಹಗೆಗಳನ್ನು ಹಿಂದೆ ನಿಜವಾದ ತಪಸ್ವಿಯಾಗಿದ್ದ.

ತನ್ನನ್ನು ತಾನು ಗೆಲ್ಲುವುದೇ ದೊಡ್ಡ ಗೆಲುವು ಎಂದು ಅವನಿಗೂ ಅನ್ನಿಸಿರಬೇಕು. ಆತನ ಕಳೆದ ಎರಡು ಭವಗಳು, ಈ ಭವ ಮತ್ತು ಮುಂದೆ ಶ್ರೀಧರ ದೇವನಾಗಿ ಹುಟ್ಟಿದ್ದು – ಹೀಗೆ ಒಟ್ಟು ನಾಲ್ಕು ಭವಗಳ ಉಲ್ಲೇಖವಿದೆ. ಇವುಗಳಲ್ಲಿ ಚಂದ್ರಗುಪ್ತನಾಗಿರುವ ಈ ಭವ ಬಿಟ್ಟರೆ ಅವನ ಮೊದಲನೆಯ ಭವ, ನಂದಿಮಿತ್ರನಾಗಿದ್ದಂದಿನದು, ಬಹು ಮೋಹಕವಾಗಿದೆ. ವಾಸ್ತವಿಲತೆಯಲ್ಲಿ ಅದ್ದಿ ತೆಗೆದ ಪಾತ್ರವದು. ಭದ್ರಬಾಹು ಕಥೆಯಲ್ಲಿ ಬರುವ ನಂದಿಮಿತ್ರನ ಕಥಾಸಾರ ಹೀಗಿದೆ:

ಅವಂತಿ ನಾಡಿನ ವೈದಿಶ ಪಟ್ಟಣವನ್ನು ಜಯವರ್ಮ – ಧಾರಿಣಿ ಆಳುತ್ತಿದ್ದರು. ಸಮೀಪದ ಪರಾಳಕೂಟವೆಂಬ ಊರಿನಲ್ಲಿ ದೇವಿಲ -ಪೃಥ್ವಿಶ್ರೀ ಎಂಬ ವರ್ತಕ ದಂಪತಿಗಳಿದ್ದರು. ಪೃಥ್ವಿಶ್ರೀ ಗರ್ಭವತಿಯಾಗುತ್ತಿದ್ದಂತೆ ಧನಕನಕ ಹಾಳಾಯಿತು. ಬಂಡಿಗಳಲ್ಲಿ ಸರಕು ಹೇರಿಕೊಂಡು ಮಾರಾಟಕ್ಕೆ ಹೊರಟರು. ದಾರಿಯಲ್ಲಿ ಕಳ್ಳರು ಎದುರಾಗಿ ದೇವಿಲನನ್ನು ಕೊಂದು ಲೂಟಿ ಮಾಡಿದರು. ಪೃಥ್ವಶ್ರೀ ಬೆಸಲೆಯಾದಳು. ಮಗುವಿಗೆ ನಂದಿಮಿತ್ರನೆಂದು ಹೆಸರಿಟ್ಟರು. ಮೂರು ತಿಂಗಳಲ್ಲಿ ತಾಯಿ ಸತ್ತಳು. ಮಗುವನ್ನು ಸಾಕಿದ ನೆಂಟರಿಷ್ಟರನ್ನೂ ಸಾವು ಬೇಟೆಯಾಡಿತು. ಊರಿನವರು ಸೇರಿ ತಬ್ಬಲಿಯನ್ನು ಊರಾಚೆ ಅಟ್ಟಿದರು. ನಂದಿಮಿತ್ರ ಊರೂರು ತಿರಿದು ತಿರುಪೆಯಿಂದ ಬೆಳೆದು ದೊಡ್ಡವನಾಗಿ ವಿದಿಶ ಪಟ್ಟಣಕ್ಕೆ ಬಂದ. ಕಾಷ್ಠಕೂಟನೆಂಬ ಕತ್ಟಿಗೆಯವನು ಹೊರೆ ಹೊತ್ತು ಬರುತ್ತಾ ನಂದಿಮಿತ್ರನನ್ನು ಕಂಡ. ಇಬ್ಬರೂ ಒಂದೆಡೆ ನಿಂತರು. ಕಾಷ್ಠಕೂಟ ವಿಶ್ರಮಿಸಲು ಕಟ್ಟಿಗೆ ಹೊರೆಯನ್ನು ತಲೆಗೆ ಇಂಬಾಗಿರಿಸಿಕೊಂಡು. ನಂದಿಮಿತ್ರ ದೊಡ್ಡ ಬಂಡೆಯನ್ನು ಎತ್ತಿ ತಂದು ತಲೆಯಡಿಯಲ್ಲಿರಿಸಿ ಮಲಗಿದ. ಅವನ ಅದ್ಭುತ ಶಕ್ತಿಯಿಂದ ಅಚ್ಚರಿಗೊಂಡು ಕಾಷ್ಠಕೂಟ ಅವನನ್ನು ವಿಶ್ವಾಸದಿಂದ ವಿಚಾರಿಸಿದ. ಅವನು ನಿರ್ಗತಿಕನೆಂದು ತಿಳಿಯಿತು. ತನ್ನ ಮನೆಯಲ್ಲೇ ಕೆಲಸಕ್ಕಿರಿಸಿದ. ಕಾಷ್ಠಕೂಟ ಹೆಂಡತಿಗೆ ‘ಇವನಿಗೆ ಎಂದಿಗೂ ಹೊಟ್ಟೆತುಂಬ ಬಡಿಸಬೇಡ. ಎಣ್ಣೆ ಹಾಕಬೇಡ ನೀರೆರೆಯಬೇಡ’ ಎಂದು ಕಟ್ಟಪ್ಪಣೆ ಮಾಡಿದ. ಅದೇ ರೀತಿ ನಡೆಯಿತು. ನಿತ್ಯ ನಂದಿಮಿತ್ರ ಹತ್ತು ಜನರ ಹೊರೆ ಹೊತ್ತು ಬರುತ್ತಿದ್ದ. ಅದನ್ನು ಮಾರಿ ಕಾಷ್ಠಕೂಟ ಹಣವಂತನಾದ.

ಒಮ್ಮೆ ಕಾಷ್ಠಕೂಟನ ಹೆಂಡತಿ ಕರುಣೆಯಿಂದ ನಂದಿಮಿತ್ರನಿಗೆ ಹೊಟ್ಟೆತುಂಬ ಊಟ ಬಡಿಸಿದಳು. ಮರುದಿನ ಆತ ಕಾಷ್ಠಕೂಟನಿಗೆ ‘ಅಯ್ಯಾ ನನಗೆ ಉಟ್ಟುಕೊಳ್ಳಲು ಬಟ್ಟೆ ತೆಗೆದುಕೊಡಿ’ ಎಂದು ಕೇಳಿದ. ಕಾಷ್ಠಕೂಟ ಮನೆಗೆ ಬಂದು ಕೇಳಿದಾಅ, ಹೊಟ್ಟೆ ತುಂಬ ಊಟ ಬಡಿಸಿದ್ದು ತಿಳಿಯಿತು. ಕೋಪಿಸಿ ಅವಳಿಗೆ ಸಾಯಬಡಿದು ಮನೆಯಿಂದ ಅಟ್ಟಿದ. ನಂದಿಮಿತ್ರ ಅವಳ ಬಳಿ ಹೋಗಿ ಹೊಡಿದದ್ದು ಏಕೆಂದು ಕೇಳಿದ. ‘ನಿನ್ನೆ ನಿನಗೆ ಹೊಟ್ಟೆ ತುಂಬ ಬಡಿಸಿದ್ದಕ್ಕೆ’ ಎಂದಳು. ‘ಹಾಗಾದರೆ ಇಂತಹ ಪರಮ ನೀಚರ ಮನೆಯಲ್ಲಿ ಮಾರಿ ಇರಲಿ’ ಎಂದು ಹೇಳಿ ನಂದಿಮಿತ್ರ ಹೊರಟುಹೋದ. ತಾನೇ ಕಟ್ಟಿಗೆ ತಂದು ಮಾರಲು ಹೊರಟರೆ ಒಂದು ಹಣವೂ ಬರಲಿಲ್ಲ. ಅಂಬಲಿಗೂ ಎಣ್ಣೆಗೂ ಹಿಟ್ಟಿಗೂ ಕಟ್ಟಿಗೆ ಹಾಕಿ ಕಾಲ ನೂಕುತ್ತಿದ್ದ. ಒಮ್ಮೆ ಹೊರೆ ತರುತ್ತಿದ್ದ. ದಾರಿಯಲ್ಲಿ ಶಿವಗುಪ್ತಾಚಾರ್ಯರು ಪಾರಣೆಗಾಗಿ ಹೊರಟಿದ್ದರು. ನಂದಿಮಿತ್ರನಿಗೆ ಕುತೂಹಲವಾಯಿತು. ಕಟ್ಟಿಗೆ ಹೊರೆ ಬಿಟ್ಟು ಅವರ ಹಿಂದೆ ಹೊರಟ. ರಾಜನು ಅರಮನೆಯಲ್ಲಿ ಆ ಜೈನ ಮುನಿಗೆ ಆಹಾರ ಕೊಡಲು ಪ್ರಾರ್ಥಿಸಿದ. ಅವರ ಕಾಲಿಗೆ ನೀರು ಹಾಕಿದಳು. ರಾಜನೇ ಇವನ ಕಾಲು ತೊಳೆದ. ಚಿನ್ನದ ತಟ್ಟೆಯಲ್ಲಿ ಭಕ್ಷ್ಯಭೋಜ್ಯ ಬಡಿಸಿದರು. ತಾಂಬೂಲ ಕೊಟ್ಟರು. ಭಟಾರರು ಪಾಣಿಪಾತ್ರೆಯಲ್ಲಿ ಉಂಡು ಹೊರಟರು. ಇವನೂ ಹೊರಟ. ಬಸದಿಗೆ ಬಂದರು.

ನಂದಿಮಿತ್ರ ‘ನಾನೂ ಇವರಂತೆ ಆದರೆ ನಿತ್ಯ ಊಟಕ್ಕೆ ಯೋಚನೆಯಿಲ್ಲ’ ಎಂದು ಆಲೋಚಿಸಿದ. ಗುರುಗಳ ಅಳಿ ಬಂದಿ ‘ನನ್ನನ್ನು ನಿಮ್ಮಂತೆ ಮಾಡಿ’ ಎಂದು ಬೇಡಿದ. ಜೈನಗುರುಗಳು ದೀಕ್ಷೆ ಕೊಟ್ಟರು. ಈ ಸುದ್ದಿನಗರಕ್ಕೆ ತಲಪಿತು. ಹೊಸ ಬ್ರಹ್ಮಚಾರಿ ಸ್ವಾಮಿಗಳಿಗೆ ರಾಜನು ತಾನು ಮೊದಲನೆಯ ಆಹಾರ ಕೊಡಬೇಕೆಂದು ಹೋಗಿ ಬೇಡಿದ. ನಂದಿಮಿತ್ರನು ‘ಸಾಮಂತ ಮಹಾ ಸಾಮಂತರಿಗೆ ಸ್ವಾಮಿಯಾದ ಈ ಮಹಾರಾಜನು ನನಗೆ ನಮಸ್ಕಾರ ಮಾಡುತ್ತಿದ್ದಾನೆ. ಇದೆಲ್ಲ ತಪಸ್ಸಿನ ಧರ್ಮದ ಫಲ. ಒಂದು ದಿನದ ತಪಕ್ಕೇ ಇಷ್ಟು ಫಲ ಪ್ರತ್ಯಕ್ಷವಾಗಿದೆ. ಇರಲಿ. ಇನ್ನೂ ಮುಂದೆ ನೋಡೋಣ ಎಂದು ಪರಿಭಾವಿಸಿ ‘ನಾವು ಇಂದು ಉಪವಾಸ ಮಾಡಿದ್ದೇವೆ’ ಎಂದು ರಾಜನಿಗೆ ತಿಳಿಸಿದ. ಮರುದಿನ ಮಹಾರಾಣಿ ಅಂತಃಪುರದ ಪರಿವಾರದೊಡನೆ ಬಂದು ಪ್ರಾರ್ಥಿಸಿದಳು. ನಂದಿಮಿತ್ರ ಅಂದೂ ‘ಇದೆಲ್ಲಾ ತಪಸ್ಸಿನ ಫಲ. ಮುಂದೆ ಇನ್ನೂ ದೊಡ್ದದಾಗಬಹುದು’ ಎಂದು ಮನದಲ್ಲಿ ಅಂದುಕೊಂಡು ‘ಅವ್ವಾ, ನಾವು ಇಂದೂ ಉಪವಾಸ ಮಾಡುತ್ತಿದ್ದೇವೆ’ ಎಂಬುದಾಗಿ ಉತ್ತರವಿತ್ತು ರಾಣಿಯನ್ನೂ ಕಳಿಸಿಬಿಟ್ಟನು, ಮರುದಿನ ಬಂದ ಮಂತ್ರಿಗಳೂ, ಅದರ ಮಾರನೆಯ ದಿನ ಬಂದ ರಾಜಶ್ರೇಷ್ಠಿಗೂ ಆಯ್ದನೆಯ ದಿನ ಬಂದ ಯುವರಾಜನಿಗೂ ಇದೇ ಉತ್ತರ. ಹೀಗೆ ಆರು ದಿನ ಪಂಚನಮಸ್ಕಾರ ಧ್ಯಾನದಲ್ಲಿಯೇ ಕಳೆಯಿತು.

ಏಳನೆಯ ದಿನ ನಂದಿಮಿತ್ರನು ‘ಭಟಾರ, ಇಷ್ಟು ಕಾಲ ಉಂಡದ್ದು ಸಾಕು. ಇನ್ನು ನನಗೆ ಯಾವಜ್ಜೀವವೂ ಉಪವಾಸ ದೀಕ್ಷೆ ಕೊಡಿ’ ಎಂದು ಬೇಡಿದನು. ಭಟಾರರು ‘ನೀವು ನಿಜವಾಗಿಯೂ ಮಹಾಪುರುಷರು. ನಿಮ್ಮಂತಹ ದೈರ್ಯವಂತರು, ಸತ್ಯವಂತರು ಇಲ್ಲ, ಇಷ್ಟು ಕಾಲದವರೆಗೆ ತಪಸ್ಸು ಮಾಡಿರುವ ಮನಗೂ ಈ ಧೈರ್ಯ ಸತ್ವ ಇಲ್ಲ’ ಎಂದರು, ಮುಂದುವರಿದು ‘ನಿಮಗೆ ಇದೊಂದು ದಿನ ಆಯುಷ್ಯವಿದೆ’ ಎಂದು ಹೇಳಿ ಆಹಾರ ಶರೀರ ನಿವೃತ್ತಿ ದೀಕ್ಷೆ ಕೊಟ್ಟರು. ಬಸದಿಯಲ್ಲೊಂದು ಕೋಣೆ ತೋರಿಸಿ ‘ಇಲ್ಲಿ ಒಂದು ಪಕ್ಕಕ್ಕೆ ಮಲಗಿ ಅಲುಗಾಡದೆ ಕೈಕಾಲು ಚಲಿಸದೆ ಜೀವವಿರುವವರೆಗೆ ಪಂಚನಮಸ್ಕಾರವನ್ನು ಮನಸ್ಸಿನಲ್ಲಿ ಹೇಳುತ್ತಾ ಇರಿ’ ಎಂದು ಉಪದೇಶಿಸಿದರು. ನಂದಿಮಿತ್ರನು ಹಾಗೇ ಮಲಗಿದ. ಭಟಾರರು ಆರಾಧನೆಯನ್ನು ವ್ಯಾಖ್ಯಾನಿಸತೊಡಗಿದರು. ಸುದ್ದಿ ತಿಳಿದು ರಾಜಧಾನಿ ಸಮಸ್ತರೂ ಬಂದು ಸೇರಿದರು. ಸಂಜೆ ನಂದಿಮಿತ್ರ ದೇಹತ್ಯಾದ ಮಾಡಿದ. ಸೌಧರ್ಮಕಲ್ಪದಲ್ಲಿ ಕನಕಧ್ವಜದೇವನಾಗಿ ಹುಟ್ಟಿದ. ಇತ್ತ ಪೃಥ್ವಿಯಲ್ಲಿ ರಾಜ ರಾಣಿ ಮಂತ್ರಿಯರಾದಿಯಾಗಿ ಅವನ ಭೌತಿಕ ಶರೀರಕ್ಕೆ ಪೂಜೆ ಮಾಡುತ್ತಿದ್ದರು. ಕನಕಧ್ವಜದೇವನು ದೇವಲೋಕದ ಮಹಾವೈಭವ ಪರಿವಾರದೊಡನೆ ವಿಮಾನವೇರಿ ಅಲ್ಲಿಗೆ ಬಂದು ಅವರೊಡನೆ ತಾನೂ ತನ್ನ ದೇಹವನ್ನು ದೇವಪುಷ್ಪಗಳಿಂದ ಪೂಜಿಸಿದನು. ದೊರೆಗೆ ಅಚ್ಚರಿಯಾಗಿ ನೀವು ಯಾರು? ಎಂದು ಕೇಳಿದ. ಅದಕ್ಕೆ ‘ನಾನೇ ನಂದಿಮಿತ್ರ. ಗುರುಗಳ ಪ್ರಸಾದದಿಂದ ಉಪವಾಸ ಮಹಿಮೆಯಿಂದ ಈ ದೇವತ್ವ ಪ್ರಾಪ್ತವಾಯಿತು’, ಎಂದು ಹೇಳಿ ಭಟಾರರನ್ನೂ ಪೂಜಿಸಿ ಹೋದನು. ಆ ಕನಕಧ್ವಜದೇವನೇ ಮತ್ತೆ ಈಗ ಸಂಪ್ರತಿ ಚಂದ್ರಗುಪ್ತನಾಗಿ ಹುಟ್ಟಿದ್ದಾನೆ.

ಈ ಕಿರಿದಾದ ಕಥೆ ತುಂಬ ಸಂಕೀರ್ಣವಾಗಿದೆ. ಇದರಲ್ಲಿ ಪುರಾಣ ಚರಿತ್ರೆಗಳು ಗುರುತು ಸಿಗದಂತೆ ಹೆಣೆದುಕೊಂಡಿವೆ. ಸಂಪ್ರತಿ ಚಂದ್ರಗುಪ್ತನ ಭವದ ಕಥೆಯಷ್ಟೇ ಚರಿತ್ರೆ, ಉಳಿದುದಷ್ಟೂ ಭವಾವಳಿಯ ಪುರಾಣ ಪ್ರಪಂಚ. ಆದರೆ ಅದರಲ್ಲಿನ ತಿರುಳು ಮನೋವೈಜ್ಞಾನಿಕವಾಗಿ ಪರಿಭಾವನಾರ್ಹವಾಗಿದೆ. ನಂದಿಮಿತ್ರನ ಪಾತ್ರವಂತೂ ವಾಸ್ತವ್ಯದ ಉಸಿರಿನಂತೆ ಜೀವಂತವಾಗಿದೆ. ನಂದಿಮಿತ್ರ ನಷ್ಟ ಚಾತಕಿ, ನತದೃಷ್ಟ. ಯಾರು ಅವನನ್ನು ಪ್ರೀತಿಯಿಂದ ಕಾಣುತ್ತಾರೋ ಅವರ ಪಾಲಿಗೆ ನಷ್ಟಕಷ್ಟಗಳು ಕಟ್ಟಿಟ್ಟ ಬುತ್ತಿ. ಯಾರು ಅವನನ್ನು ಕಾಠಿಣ್ಯದಿಂದ ಕ್ರೂರವಾಗಿ ಕಾಣುತ್ತಾರೋ ಅವರಿಗೆ ಅದೃಷ್ಟ ಕೂಡಿ ಬರುತ್ತದೆ. ನಂದಿಮಿತ್ರನ ಮೈದುಡಿತದಿಂದ ಕಾಷ್ಠಕೂಟನಿಗೆ ಕಷ್ಟದ ದಿನಗಳು ಕರಗಿದವು, ದಿನಗಳೆದಂತೆ ಹಣಕೂಡಿತು. ಊರಿನ ಇದ್ದುಳ್ಳವರಲ್ಲಿ ಒಬ್ಬನಾಗಿ ಆತನು ಗಣ್ಯಮನುಷ್ಯನಾದ. ಕಾಷ್ಠಕೂಟ ಉಪಜೀವಿ ಯಾದುದರಿಂದ ನಂದಿಮಿತ್ರನ ಕಾರ್ಪಣ್ಯದ ಬದುಕನ್ನು ತನ್ನ ಸ್ವಲಾಭಕ್ಕೆ ಬಳಸಿ ಕೊಂದ. ಅದಕ್ಕೆ ಕೊಟ್ಟ ಪ್ರತಿಫಲ ಮಾತ್ರ ಕಿಂಚಿತ್, ಅದು ದುಡಿಮೆಗೆ ತಕ್ಕ ಫಲವಲ್ಲ. ಕಾಷ್ಠಕೂಟ ಲೆಕ್ಕಾಚಾರದ ಮನುಷ್ಯ. ಆತ ತನ್ನ ಹೆಸರಿಗೆ ಅನುಗುಣ ವಾಗಿದ್ದ; ಕಟ್ಟಿಗೆಯಂತೆ ಜಡ, ನಿರ್ಜೀವಿ, ನಿಷ್ಪಂದ, ನಿಷ್ಠುರ, ನಿರ್ದಯಿ, ತನ್ನ ಬದುಕಿನ ಬೇರಿಗೆ ನಿರ್ವಂಚನೆಯಿಂದ ನೀರೆರೆಯುತ್ತಿದ್ದ ನಂದಿಮಿತ್ರನಿಗೆ, ತನ್ನ ಹೆಂಡತಿ ಒಂದು ದಿನ ಹೊಟ್ಟೆ ತುಂಬ ಊಟ ಹಾಕಿದ್ದಕ್ಕೆ, ಸಿಕ್ಕಾಪಟ್ಟೆ ರೇಗಿ ಕೂಗಾಡಿ ಹೊಡೆದು ಬಡಿದು ಕಡೆಗೆ ಮನೆಯಿಂದಲೇ ಓಡಿಸಿದ. ಕೈಹಿಡಿದ ಹೆಂಡತಿಯನ್ನು ಗೃಹಲಕ್ಷ್ಮಿಯನ್ನು ಹೊಡೆದುದೂ ಸಾಲದೆ ಮನೆಯಿಂದ ಅಟ್ಟಿದ್ದನ್ನು ಕಂಡು ನಂದಿ ಮಿತ್ರ ಕೂಡ ‘ನಿನ್ನ ಮನೆಯಲ್ಲಿ ಮಾರಿಯಿರಲಿ’ ಎಂದು ಶಪಿಸಿ ಹೊರಟ. ಕಾಷ್ಠಕೂಟ ಕೊಂಚ ಕೊಟ್ಟರೂ ನಂದಿಮಿತ್ರ ಅಷ್ಟರಲ್ಲೆ ತೃಪ್ತನಾಗಿದ್ದ. ತನ್ನ ಬಾಳಿನಲ್ಲಿ ಅದುತನಕ, ಕೇವಲ ಸಾವು ನೋವು ಕಷ್ಟನಷ್ಟಗಳೇ ಮೇಲಿಂದ ಮೇಲೆ ಅಪ್ರತಿಹತವಾಗಿ ಬೀಳುತ್ತಿದ್ದರೂ, ಆತ ಅವನ್ನೆಲ್ಲ ಸಹಿಸಿ ನಿಂತಿದ್ದ. ಇನ್ನೇನು ಈ ಕಾರ್ಪಣ್ಯಕ್ಕೊಂದು ನಿಲುಗಡೆ ಬಂತೆಂದು ಭಾವಿಸಿ ನೆಮ್ಮದಿಯಾಗಿದ್ದ. ಅವನೂ ಸಹ ಈ ಪ್ರಸಂಗದಲ್ಲಿ ಸಿಡಿದೆದ್ದುದರಲ್ಲಿ ಸ್ವಾರಸ್ಯವಿದೆ. ಜಯಘಂಟೆಯಲ್ಲಿ ತನ ತಾಯನ್ನು ಕಂಡು ಹಾಯಾಗಿದ್ದ. ನಿತ್ಯ ಮನೆಯಲ್ಲಿ ತಾಯಂತೆ ಊಟ ಬಡಿಸುತ್ತಿದ್ದಳು. ಇವಳಿಗೆ ಬಿದ್ದ ಬರೆ ತನಗೆಂದು ಆತ ತಿಳಿದಿ ಉರಿದುಬಿದ್ದ.

ಕಾಷ್ಠಕೂಟ ಸಣ್ಣ ಕಾರಣಕ್ಕಾಗಿ ಹೆಂಡತಿಯನ್ನು ಭಯಂಕರವಾಗಿ ಶಿಕ್ಷಿಸಿದ ರೀತಿ ಸರಿಯಿಲ್ಲವೆಂಬುದನ್ನು ಒಪ್ಪಬೇಕಾದುದೇ. ಆದರೂ ಆತನ ರೋಷಕ್ಕೆ ಇರುವ ಕಾರಣವನ್ನು ಮರೆಯಬಾರದು. ಹೆಂಡತಿ ನಂದಿಮಿತ್ರನಿಗೆ ಹೊಟ್ಟೆ ತುಂಬ ಬಡಿಸಿದ್ದರಿಂದ ಕೆಲಸ ಕೆಟ್ಟಿತು, ನಂದಿಮಿತ್ರ ಹೊಟ್ಟೆ ತುಂಬ ತುಂಬಿದ ದಿನವೇ ದಣಿಯ ವಿರುದ್ಧ ತಿರುಗಿಬಿದ್ದುದು ಅರ್ಥಪೂರ್ಣವಾಗಿದೆ. ಹೊಟ್ಟೆ ತುಂಬುವವರೆಗೂ ಮನುಷ್ಯ ದುಡಿತದಲ್ಲಿ ನಿರತ. ಒಮ್ಮೆ ಅದಕ್ಕೆ ತೃಪ್ತಿ ಪೂರ್ಣವಾಗಿ ದೊರೆಯಿತೆಂದರೆ ಸಾಕು ಮಾನವ, ಅದುವರೆಗೂ ಅಷ್ಟಕ್ಕೇ ಆಲೋಚನೆಗಳನ್ನು ಸೀಮಿತಗೊಳಿಸಿದ್ದವನು, ಈಗ ಅದರ ಆಚೆಗೂ ಬುದ್ದಿ ಓಡಿಸುತ್ತಾನೆ. ಮನುಷ್ಯನ ವಿಕಾಸ ಚರಿತ್ರೆ ಇದನ್ನೇ ಸಾರುತ್ತದೆ. ಭೋಗ, ಕಲೆ, ನಾಗರಿಕತೆ – ಇವೆಲ್ಲಾ ಹೊಟ್ಟೆ ಬಟ್ಟೆ ಆದಮೇಲೆ ಬರುವಂತಹವು. ಮೊದಲು ಹೊಟ್ಟೆ, ಆಮೇಲೆ ಬಟ್ಟೆ. ಎಲ್ಲರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ. ಆಮೇಲೆ ಉಳಿದ ಭೋಗಸಾಮಗ್ರಿಗಳು. ಇಂದಿಗೂ ಹೊಟ್ಟೆಪಾಡಿಗಾಗಿ ದುಡಿಯುವುದರಲ್ಲೇ ಜೀವನವನ್ನೆಲ್ಲಾ ಕಳೆಯಬೇಕಾಗಿರುವ ಅಲೆಮಾರಿಗಳೂ, ಆದಿವಾಸಿಗಳೂ, ಕೂಲಿನಾಲಿಗಳು ಬಟ್ಟೆ ಹೆಚ್ಚು ಹಾಕಿಕೊಳ್ಳದಿರು ವುದು ಮನುಷ್ಯಜೀವನದ ರೀತಿಯೇ ಆಗಿದೆ. ನಂದಿಮಿತ್ರ ಆಹಾರ ಇಲ್ಲದಾಗ ಆಹಾರ ಕ್ಕಾಗಿ ಹಾತೊರೆದ. ಅದು ಆಕಂಠ ಪ್ರಮಾಣದವರೆಗೆ ಕೈಗೆಟುಕುವ ಅನುಕೂಲದ ಕಾಲ ಬಂದಾಗ ಅದನ್ನು ಅವಜ್ಞೆಯಿಂದ ಉಪೇಕ್ಷಿಸಿದ. ಈ ಅಪೇಕ್ಷೆ ಉಪೇಕ್ಷೆಗಳ ಅಂತರದಲ್ಲಿಯೇ ನಂದಿಮಿತ್ರನ ವ್ಯಕ್ತಿತ್ವ ಬಿಚ್ಚಿಕೊಂಡಿರುವುದರ ಹಿರಿಮೆ ಅಡಗಿದೆ.

ಹಳಬನಿಗಿಂತ ಹೊಸಬನಲ್ಲಿ ಉತ್ಸಾಹ ಅಧಿಕ; ಎಲ್ಲದರಲ್ಲೂ ಅಷ್ಟೇ; ಗಾದೆ ಅಗಸ (- ಅಸಗ) ಹೊಸದರಲ್ಲಿ ಗೋಣಿ ತಟ್ಟನ್ನೂ (- ಚೀಲವನ್ನು) ಸೆಣೆದ. ವಂಶಪಾರಂಪರ್ಯವಾಗಿ ಬಂದ ಒಂದು ಮತದಲ್ಲಿ ಹುಟ್ಟಿದವನಿಗಿಂತ ಆ ಮತಕ್ಕೆ ಹೊಸದಾಗಿ ಮತಾಂತರಗೊಂಡವನಲ್ಲಿ ನಿಷ್ಠೆ ನೇಮ (-ನಿಯಮ) ಹೆಚ್ಚು. ಕಿತ್ತಯ್ಯ (ನಂದಿ ಮಿತ್ರ) ನಲ್ಲೂ ಈ ನವೋತ್ಸಾಹವನ್ನೂ ನಾವು ನೋಡುತ್ತೇವೆ. ಕಸಿ ಮಾಡಿದ. ಬೇರೆ ಬೇರೆ ಜಾತಿ ಬೆರಸಿ ಮಿಶ್ರತಳಿ ಏರ್ಪದಿಸಿದ ಪರಿಣಾಮವೆಂದರೆ ಬೆಳೆ, ಬೆಳವಣಿಗೆ ಹಲವುಪಟ್ಟು ಹೆಚ್ಚುವುದು. ಸೂರ್ಯಮಿತ್ರ ಜೈನತ್ವಕೆ ಪರಿವರ್ತನೆಗೊಂಡಾಗ, ಭದ್ರಬಾಹು ಮತ್ತು ಗಣಧರರು ಮತಾಂತರಗೊಂಡಾಗ ಹೀಗೆ ಹಲವು ಹತ್ತು ಜನ ಪ್ರತಿಭಾವಂತರು ಧರ್ಮಾಂತರಗೊಂಡಾಗ ಅವರು ಅದುವರೆಗಿನ ಮಾಮೂಲೀ ಜೈನರಿಗಿಂತ ಎತ್ತರಬಿತ್ತರರಾಗಿ, ಮೇರು ಮಂದರವಾಗಿ ಬೆಳೆದು ನಿಲ್ಲುವುದು ಕಂಡು ಬರುತ್ತದೆ. ಇದಕ್ಕೆ ಮನಸ್‍ಶಾಸ್ತ್ರ ಹಾಗೂ ವಿಜ್ಞಾನಗಳ ಬೆಂಬಲವೂ ಇದೆ. ಈ ಅಂಶದಿಂದ ಕೂಡ ನಂದಿಮಿತ್ರನ ಪಾತ್ರವನ್ನು ವಿಚಿಕಿತ್ಸೆಗೆ ಒಳಗುಮಾಡಬಹುದು.

ಭದ್ರಬಾಹು ಕಥೆಯಲ್ಲಿ ವಡ್ಡಾರಾಧನೆಯ ಉಳಿದ ಕಥೆಗಳಲ್ಲಿ ಬರುವಂತೆ ಉಪಸರ್ಗದ ವಿವರ ದಟ್ಟವಾಗಿ ಮೈ ಚಾಚಿಕೊಳ್ಳುವುದಿಲ್ಲ. ಇಲ್ಲಿ ಉಪಸರ್ಗ ಗೌಣವಾಗಿದೆ. ಕೇವಲ ಪರೀಷಹ ಜಯದ ವಿವರವಿದೆ. ಈ ಕಥೆಯನ್ನು ‘ಉಪಸರ್ಗ ಕೇವಲಿಗಳ ಕಥೆ’ ಎಂಬುದಕ್ಕಿಂತ ‘ಪಾತ್ರಪ್ರಧಾನ ಚಾರಿತ್ರಿಕ ಕಥೆ’ ಎಂದು ಕರೆಯಬಹುದು. ಭದ್ರಬಾಹು ಚಂದ್ರಗುಪ್ತ; ನಂದಿಮಿತ್ರ, ಕಾಷ್ಟಕೂಟ – ಈ ಪಾತ್ರಗಳಂತೆ ಇಲ್ಲಿನ ಅಶೋಕ, ಕುಣಾಲ, ಸ್ಥೂಲಭದ್ರ ಪಾತ್ರಗಳನ್ನು ಜೈನ ಹಾಗೂ ಜೈನೇತರ ಕಥಾ ಸಾಹಿತ್ಯದಲ್ಲಿ ಸಿಗುವ ವಿವರಗಳ ಬೆಳಕಿನಲ್ಲಿ ಪರಿಶೀಲಿಸಬಹುದು.

ಅಶೋಕನ ಪಾತ್ರ ಅರ್ಥಪೂರ್ಣ ವ್ಯಕ್ತಿತ್ವದಿಂದ ಕೂಡಿದೆ. ಹೊಟ್ಟೆಯಲ್ಲಿ ಹುಟ್ಟಿದ ಮಗನಿಗೆ ತನ್ನ ಪತ್ರದ ಅಪವಾಚನದಿಂದ ಉಂಟಾದ ದುರ್ದೆಶೆಗೆ ಬಹುವಾಗಿ ಮರುಗುತ್ತಾನೆ. ಅಸಹಾಯಕ ಸ್ಥಿತಿ ಬೇರೆ, ಚಕ್ರವರ್ತಿಯಾಗಿದ್ದೂ ಮಗನಿಗೆ ಕಣ್ಣು ಬರಿಸುವಂತಿಲ್ಲ. ಅದರಿಂದ ತಂದೆಯಾದ ದೊರೆ ಕಣ್ಣಿದ್ದೂ ಕುರುಡುನಾದಂತೆ ಭಾವಿಸುವ ನೋವಿಗೆ ಬೀಳುತ್ತಾನೆ. ಅವನ ಹಳವಂಡ ನುಡಿಗಳಿಗೆ ಎಟುಕದ್ದು. ಮಗನ ಬಾಳು ಕತ್ತಲೆಯಾಗಿದ್ದು ಅದರ ನೆರಳು ತನ್ನ ಬಳಿಗೇ ಚಾಚಿದೆ, ತನ್ನ ಮೇಲೇ ಬಿದ್ದಿದೆ. ಮಹಾರಾಜನ ಮೂಕವೇದನೆ ಎಲ್ಲ ಮನುಷ್ಯರಿಗೆ ಬರುವಂತಹುದು. ಮಗ ನದುಕಿದ್ದರೂ ಆ ಬದುಕು ಮುರಿದ ಬಾಳು. ಅದಕ್ಕೆ ಪರ್ಯಾಯವಾಗಿ ತಾನೂ ಕಾರಣನೆಂಬ ಅಳುಕು ಇದೆ. ಅಂಗವಿಕಲ ಸಿಂಹಾಸನಕ್ಕೆ ಅನರ್ಹ. ಕಣ್ಣಿಲ್ಲದವನಿಗಂತೂ ನಿಶ್ಚಯವಾಗಿ ಸಿಂಹಾಸನದ ನಂಟಿಲ್ಲ. ಇನ್ನು ತನ್ನ ಮಗ ಕುಣಾಲನ ಜೀವನ ಧೃತರಾಷ್ಟ್ರ ಜೀವನ. ಅವನ ಅರಸಿ ಚಂದ್ರಾನನೆಯದು ಗಾಂಧಾರಿ ಬಾಳು. ಅಶೋಕ ಮಹಾ ಪುತ್ರವಾತ್ಸಲ್ಯಿ. ಕುಣಾಲನ ಕರುಣಾಜನಕ ಬದುಕಿಗೆ ಅವನ ಎದೆ ಬಿರಿದಿದೆ. ಕುಣಾಲನ ಕುಸಿದ ಮರೀಚಿಕೆ ಕಣ್ಣಾಗಬೇಕಾದ ಮಗನಿಗೆ ತಾನೇ ಕಣ್ಣಾಗಿ ನಿಲ್ಲುತ್ತಾನೆ. ಏನಾದರೂ ತಾನೆ ಏನು? ಕಣ್ಣಿಗೆ ಬದಲು ಏನು ಕೊಡಬಲ್ಲ? ಆದರೂ, ಆದಮ್ಯ, ಕರುಳ ಕರೆಗೆ ಓಗೊಟ್ಟು, ಮಗನಿಗೆ ಕೇಳಿದ;ಮಗನೆ, ಬೇಡ ನೀನು’ ಎಂದು. ಕುಣಾಲನಾದರೋ ತಂದೆಯಂತೆ ಚಕ್ರವರ್ತಿಯಾಗಬೇಕಾಗಿದ್ದವನು. ರಾಜಪುತ್ರ ಕೇಳಬೇಕಾದ್ದನ್ನೇ ಕೇಳಿದ, ‘ಕಾಣಿಕೀ ರತ್ನ ಬೇಕೆಂದು. ಈ ಬೇಡಿಕೆ ಕೇಳಿ ತಂದೆ ಜೀವಚ್ಛವವಾದ. ಮಗನಿಗೆ ತಾನಾಗಿ ಒತ್ತಾಯದಿಂದ ಒಲವರದಿಂದ ಏನಾದರೂ ಕೆಲಿಕೊ ಮಗೂ ಎಂದು ಕೇಳಿದ್ದಾಗಿದೆ. ಕೇಳಿದ್ದನ್ನು ಕೊಡಬೇಕೆಂಬ ಅಪೇಕ್ಷೆ ಅಶೋಕನದು. ಅನಿರೀಕ್ಷಿತ ಯಾಚನೆ ಬಂದು ತಂದೆಗೆ ಯೋಚನೆಗಿಟ್ಟುಕೊಂಡಿತು. ಯಾತನೆಗೆ ಕಾರಣವಾಯಿತು. ಒಳಗೊಲಗೆ ಕರುಳು ನುಲಿದು ಹಿಪ್ಪೆಯಾಯಿತು.

ಚೇಳು ಕುಟುಕಿದಂತಾಯಿತು. ಆಗ ಮಾತು ಕೊಟ್ಟು ಈಗ ಮರುಮಾತು ಕೊಡಬೇಕಾಗಿದೆ. ಕಾಕಿಣೀ ರತ್ನ ಕೊಡುವುದು ಸಾಧ್ಯವಿಲ್ಲ ಎಂದು ಈಗ ಯಾವ ಬಾಯಿಂದ ಹೇಗೆ ಹೇಳುವುದು? ಗಾಯದ ಮೇಲೆ ಬರೆ? ಈ ಮೂಕ ಹಿಂಸೆಗೆ ಬೇಗ ಮುಗಿತಾಯ ಹಾಡಬೇಕೆನ್ನಿಸಿತು. ಕೂಡಲೇ ಕುಣಾಲನಿಗೆ ನೋವು ನುಂಗಿದ ಸೋತ ದನಿಯಲ್ಲಿ ಹೇಗೊ ಹೇಳಿದ ‘ಅದು ಚಕ್ರವರ್ತಿಗಲ್ಲದೆ ಬೇರೆಯವರಿಗೆ ಇಲ್ಲ’ ಎಂದು. ಆನಂದಗಳೆಲ್ಲ ಬತ್ತಿದಾಗ ಸನ್ಯಾಸ ಸಹಜ. ಸಂಸಾರ ವೈರಾಗ್ಯಕ್ಕೆ ದಾರಿ ತೆರೆಯಿತು. ಯಾರೂ ವಿರಾಗಿಯಾಗುವುದು ಇಂಥ ಪ್ರಸಂಗಗಳಲ್ಲೇ. ಅನಿವಾರ್ಯವಾಗಿ, ವಾಸ್ತವ ಎಂಬಂತೆ, ಅಶೋಕನು ಸುವ್ರತ ಭಟಾರನ ಬಳಿ ಜಿನದೀಕ್ಷೆ ಕೈಗೊಂಡು ಪರತ್ರೆ ಸಾಧಿಸಿದ.

ಕುಣಾಲನ ಪ್ರತಿಕ್ರಿಯೆ ಎಂತಹದು? ಕುಣಾಲ ಚಂದ್ರಾನನೆ ಏನೆಂದರು? ಏನಾದರು? ನೊಂದ ದಂಪತಿಗಳೂ ಯತಿಪತಿಗಳಾದರೆ? ಆತ್ಮಹತ್ಯೆ ಮಾಡಿಕೊಂಡರೆ? (…….) ಈ ವಿಷಯಗಳ ಬಗ್ಗೆ ವಡ್ದಾರಾಧನೆಯಲ್ಲಿ ಉತ್ತರಗಳಿಲ್ಲ. ಕೃತಿಕಾರನ ಈ ಅಸೀಮ ನಿರ್ಲಕ್ಷ್ಯ ಅಕ್ಷಮ್ಯವಾಗುತ್ತದೆ. ಪಾತ್ರರಚನೆಯಲ್ಲಿ ದೋಷ ಬಂದಿದೆಯೆನ್ನಿಸುತ್ತದೆ. ಕುಣಾಲನ ಬದುಕು ದುರಂತ ಮಡುವಿನ ನಟ್ಟನಡುವೆ ತತ್ತರಿಸುತ್ತಿರುವಾಗಲೇ ಕಥೆಗಾರ ಕೈತೊಳೆದುಕೊಂಡುಬಿಡುತ್ತಾನೆ. ಕುಣಾಲನನ್ನು ಮರೆತುಬಿಟ್ಟನೆ ಅಥವಾ ಅವನ ಕಾರುಣ್ಯ ಸಿಂಚಿತ ಜೀವನವನ್ನು ಓದುಗರೇ ಊಹಿಸುತ್ತಾರೆಂದು ಉದ್ದೇಶ ಪೂರ್ವಕವಾಗಿ ಪ್ರಸ್ತಾಪಿಸದೆ ಬಿಟ್ಟನೆ? ವಡ್ಡಾರಾಧನಕಾರ ಕುಣಾಲನ ಮಗನಾದ ಸಂಪ್ರತಿ ಚಂದ್ರಗುಪ್ತನ ಮೂಲಕ ಕೂಡ, ಅವನ ತಂದೆ ತಾಯಿಯರ ಬಗ್ಗೆ ಏನನ್ನೂ ಹೇಳಿಸುವುದಿಲ್ಲ. ಈ ಆನಾದರವೇಕೆ? ಕುಣಾಲನನ್ನು ಕುರುಡನನ್ನಾಗಿ ಮಾಡಿ ಅವನ ಜೀವಿತದ ಉತ್ತರಾರ್ಧಕ್ಕೆ ಲೇಖಕ ಕುರುಡಾಗಿದ್ದೇಕೆಂದು ನಿಶ್ಚಯವಾಗದು. ಕುಣಾಲನ ಪಾತ್ರ ಜೈನೇತರ ಸಾಹಿತ್ಯದಲ್ಲೂ ಪ್ರವೇಶ ಪಡೆದಿದೆ. ಬೌದ್ಧ ಕಥಾಸಾಹಿತ್ಯದಲ್ಲಂತೂ ಕುಣಾಲನ ಬಗ್ಗೆ ಬೇರೊಂದು ಕಥೆಯೇ ಇದೆ. ಅದು ಸ್ಥೂಲ ರೂಪದಲ್ಲಿ ಇಲ್ಲಿನ ಇನ್ನೊಂದು ಮುಖ. ಜೈನ ಬೌದ್ಧ ಸಾಹಿತ್ಯದಲ್ಲಿನ ಸದೃಶ ಕಥೆ, ವಸ್ತುಗಳಸಾಮ್ಯಭೇದಗಳನ್ನು ಸಮೀಕರಿಸಿ ನಡೆಸುವ ಅಭ್ಯಾಸದ ಅಗತ್ಯವಿದೆ. ಜೈನ ಸಾಹಿತ್ಯದಲ್ಲಿ ಶ್ರೇಣಿಕನ ಬಗ್ಗೆ ಅಪಾರ ವಾಙ್ಮಯವಿದೆ. ಬೌದ್ಧ ಸಾಹಿತ್ಯದಲ್ಲಿ ಅಶೋಕನ ಬಗ್ಗೆ ಹಾಗಿದೆ. ಇದು ಸಹಜವೇ. ಏಕೆಂದರೆ ಇವರಿಬ್ಬರೂ ಆ ಎರಡು ಧರ್ಮಗಳ ಪುರೋಭಿವೃದ್ಧಿಗೆ ಆಧಾರಸ್ತಂಭವಾಗಿ ನಿಂತವರು. ಬೌದ್ಧಸಾಹಿತ್ಯದಲ್ಲೂ ಕುಣಾಲನ ಸಂಬಂಧವಾಗಿ ಕಥೆಯಿದೆ. ಅಲ್ಲಿಯೂ ಕುಣಾಲನ ಕಣ್ಣುಗಳನ್ನು ಕೀಳಿಸಿದ ಸಂಗತಿಯಿದೆ. ಜೈನ-ಬೌದ್ಧ ಕಥೆಗಳೆರಡೂ ಈ ಅಂಶದಲ್ಲಿ ಹೊಂದಾಣಿಕೆಯನ್ನು ತೋರಿಸುವುದರಿಂದ, ಇದೊಂದು ಚಾರಿತ್ರಿಕ ಘಟನೆಯೆಂದು ತಿಳಿಯಲು ಅವಕಾಶ ವಿದೆ. ಕುಣಾಲ ಸಂಬಂಧಿಯಾದ ಬೌದ್ಧಕಥೆಯನ್ನು ಇಲ್ಲಿ ಸಂಗ್ರಹವಾಗಿ ಕೊಟ್ಟಿದೆ;

ಅಶೋಕನು ಬುದ್ಧನ ನೆನಪಿಗಾಗಿ ೮೪ ಸಾವಿರ ಸ್ತೂಪಗಳನ್ನು ನಿರ್ಮಾಣಮಾಡಿಸಿದ. ಅಶೋಕನ ರಾಣಿ ಪದ್ಮಾವತಿ ಒಬ್ಬ ಮಗನನ್ನು ಹಡೆದಳು. ಮುದ್ದಾದ ಮಗುವಿನ ಕಣ್ಣುಗಳಂತೂ ಚೆಲುವಿನ ಬಟ್ಟಲಾಗಿದ್ದುವು. ಮಗುವಿಗೆ ಧರ್ಮವರ್ಧನನೆಂದು ಹೆಸರಿಟ್ಟರು. ಮಗುವಿನ ಮುಖ ಹುಣ್ಣಿಮೆಯ ತಿಂಗಳಿನಂತೆ, ಕಣ್ಣುಗಳು ಬಿರಿದ ನೀಲೋತ್ಪಲದಂತೆ ಕಂಗೊಳಿಸುತ್ತಿದ್ದುವು. ಅಶೋಕ ತನ್ನ ಆಪ್ತ ಪರಿವಾರಕ್ಕೆ ಕೇಳಿದ ‘ಈ ಬಗೆಯ ಕಣ್ಣುಗಳನ್ನು ಯಾರಾದರೂ ಬೇರೆಲ್ಲಾದರೂ ನೋಡಿದ್ದೀರಾ?’ ಎಂದು ಸಚಿವರಿಂದ ಉತ್ತರ ಬಂತು: ‘ಇಂಥ ಕಣ್ಣುಗಳನ್ನು ಮಕ್ಕಳಲ್ಲಿ ಕಂಡಿಲ್ಲ. ಹಿಮಾಲಯದಲ್ಲಿರುವ ಕುಣಾಲ ಹಕ್ಕಿಯ ಕಣ್ಣುಗಳನ್ನು ನೋಡಿದ್ದೇವೆ. ಅವು ಕುಮಾರನ ಕಣ್ಣುಗಳಂತೇ ಇವೆ.’ ಅಶೋಕನ ಅಪ್ಪಣೆಯಂತೆ ಬೇಟೆಗಾರರು ಕುಣಾಲಪಕ್ಷಿ ಹಿಡಿದು ತಂದರು. ಹಕ್ಕಿಯ ಕಣ್ಣಿಗೂ ಕುಮಾರನ ಕಣ್ಣಿಗೂ ವ್ಯತ್ಯಾಸವಿರಲಿಲ್ಲ. ಸರಿ, ಅಂದಿನಿಂದ ಕುಮಾರನಿಗೂ ಕುಣಾಲ ಎಂಬ ಇನ್ನೊಂದು ಹೆಸರಾಯಿತು.

ಕುಮಾರ ಕುಣಾಲ ಕೌಮಾರ್ಯ ಕಳೆದು ಯೌವನಕ್ಕೆ ಬಂದ. ಚತುಷ್ಷಷ್ಟಿ ಕಲೆಗಳಲ್ಲಿ ನಿಪುಣನಾದ. ಸಂಗೀತವಿಶಾರದನಾದ. ಕಾಂಚನಮಾಲೆ ಎಂಬಾಕೆ ಮಡದಿಯಾದಳು. ಅಶೋಕ ಒಂದು ಸಲ ಕುಕ್ಕುಟಾರಾಮದ ಭಿಕ್ಷುಗಳ ಬಳಿ ‘ಹೊರಟಾಗ ಕುಣಾಲನನ್ನೂ ಕರೆದೊಯ್ದ. ಕುಕ್ಕಟಾರಾಮದ ಮಹಾಸ್ಥವಿರ ಯಶಸ್ಸು ಎಂಬಾತ. ಆತ ಕುಣಾಲವನ್ನು ಕಂಡು ‘ಇವನು ಇಷ್ಟರಲ್ಲಿಯೇ ಕಣ್ಣು ಕಳೆದುಕೊಳ್ಳುವನು’ ಎಂದು ಮುಂದಾಗುವುದನ್ನು ಹೇಳಿದ. ಕುಣಾಲ ಯಶಸ್ಸುವಿನ ಅಡಿ ಹಿದಿದ. ಭಿಕ್ಷು ನುಡಿದ ‘ಕುಮಾರನೇ, ದುಃಖಗಳಿಗೆ ಕಣ್ಣು ಮೂಲ. ಕಣ್ಣುಗಳು ಚಂಚಲ ಸ್ವಭಾವದವು. ಮಿತ್ರರೂಪಿ ಶತೃಗಳು. ಈ ಸಂಗತಿ ತಿಳಿಯದೆ ಕಣ್ಣುಗಳ ವಶರಾಗಿ ಪಾಪಕೂಪಕ್ಕಿಳಿಯುವರು. ಕಣ್ಣುಗಳ ಜಾಗ್ರತೆ ಇರಲಿ’. ಕುಣಾಲನ ಎದೆಯಲ್ಲಿ ಉಪದೇಶ ಬೇರೂರಿತು.

ಒಮ್ಮೆ ಕುಣಾಲ ಏಕಾಂತದಲ್ಲಿದ್ದ. ಅಲ್ಲಿಗೆ ಅಶೋಕನ ರಾಣಿಯರಲ್ಲೊಬ್ಬಳಾದ ಶಿಷ್ಯರಕ್ಷಿತೆ ಬಂದಳು. ಕಾಮಾಧಿಕ್ಯದಿಂದ ಕುಣಾಲನನ್ನು ಅಲಂಗಿಸಿದಳು. ಕುಣಾಲನ ಕಣ್ಣುಗಳನ್ನು ನೋಡುತ್ತಾ ‘ಯುವರಾಜಾ, ಈ ಕಣ್ಣುಗಳ ಚೆಲುವಿಗೆ ನಾನು ಸೋತಿದ್ದೇನೆ’ ಎಂದಳು. ಕುಣಾಲ ‘ತಾಯಿ, ಇಂಥ ಪಾಪದ ನುಡಿಗಳನ್ನು ಆಡದಿರಿ. ನಾನೂ ನಿನ್ನ ಮಗನಂತಲ್ಲವೇ, ಎಚ್ಚೆತ್ತುಕೋ.’ ತನ್ನನ್ನು ನಿರಾಕರಿಸಿದ್ದರಿಂದ ತಿಷ್ಯರಕ್ಷಿತೆ ನಾಗಿಣಿಯಾದಳು: ‘ಕುಮಾರಾ, ನನಗೇ ಬುದ್ಧಿ ಹೇಳುವೆಯಾ? ನನ್ನನ್ನು ಎದುರಿಸಿದವರಿಗೆ ಏನು ಗತಿ ಬರುವುದೆಂದು ಮುಂದೆ ತಿಳಿಯುವೆ.’ ‘ಅಮ್ಮಾ, ನನಗೆ ಮೃತ್ಯು ಬಂದರೂ ಸರಿ, ಅಧರ್ಮಕ್ಕೆ ತೊಡಗುವುದಿಲ್ಲ.’ ತಿಷ್ಯರಕ್ಷಿತೆ ಕ್ರೋಧಕಾರಿ ದಳು. ಪ್ರತೀಕಾರಕ್ಕೆ ಅವಕಾಶ ಕಾಯುತ್ತಿದ್ದಳು. ಹೀಗಿರುವಾಗ ಒಮ್ಮೆ ತಕ್ಷಶಿಲೆಯವರು ಸರಕಾರದ ಮೇಲೆ ತಿರುಗಿ ಬಿದ್ದರು. ದಂಗೆ ಅಡಗಿಸಲು ಅಶೋಕ ಅಣಿಯಾದ. ಸಚಿವರು ಯುವರಾಜ ಕುಣಾಲನಿರುವಾಗ ಅವನನ್ನೇ ಕಳಿಸಬಹು ದೆಂದರು. ಕುಣಾಲನೂ ಒಪ್ಪಿ ಹೊರಟ. ತಕ್ಷಶಿಲೆಯಲ್ಲಿ ಪ್ರತಿಭಟನೆಯ ಬದಲು ಸ್ವಾಗತ ದೊರೆಯಿತು. ಪಟ್ಟಣವನ್ನು ಅಲಂಕರಿಸಿದ್ದ ಜನತೆ ಕುಣಾಲನನ್ನು ಬರಮಾಡಿ ಕೊಂಡರು. ‘ರಾಜಾ, ಕೆಟ್ಟ ಅಧಿಕಾರಿಗಳಿಗೆ ಎದುರಾಗಿ ನಾವು ದಂಗೆ ಎದ್ದಿದ್ದೇವೆ. ಪ್ರಭುಗಳಿಗೆ ಅವಿಧೇಯರಾಗಿಲ್ಲ.’ ತಕ್ಷಶಿಲೆ ಶರಣಾಯಿತು. ಸೆಣಸಾಟವಿಲ್ಲದೆ ಕುಣಾಲನಿಗೆ ಸುಲಭ ವಿಜಯ ದೊರೆಯಿತು.

ಕುಣಾಲ ತಕ್ಷಶಿಲೆಗೆ ಹೊರಟಮೆಲೆ ಅಶೋಕನಿಗೆ ಅರೋಗ್ಯ ಕೆಟ್ಟಿತು. ಮೈಯಿಂದ ಕೆಟ್ಟ ವಾಸನೆಯ ಕೀವು ಬಸಿಯುತ್ತಿತ್ತು. ವಾಂತಿ ಬೇರೆ. ರಾಜವೈದ್ಯರು ಗುಣಪಡಿಸಲಾಗಲಿಲ್ಲ. ಅಶೋಕನಿಗೆ ತನ್ನ ಮಗ ಕುಣಾಲನಿಗೆ ಪಟ್ಟ ಕಟ್ಟಿ ಸಾಯುವ ಆಸೆ. ತಿಷ್ಯರಿಕ್ಷಿತೆಗೆ ಗಾಬರಿ. ದೊರೆಗೆ ನಿರಾಶೆಯಾಗದಿರುವಂತೆ ಸಮಾಧಾನಿಸಿದಳು. ತನ್ನ ಸ್ವಬುದ್ದಿಯನ್ನು ಚುರುಕುಗೊಳಿಸಿದಳು. ಅರಮನೆ ಪಂಡಿತರನ್ನೆಲ್ಲ ಕರೆಸಿದಳು. ದೊರೆಗೆ ಬಂದಿರುವಂತಹ ಕಾಯಿಲೆ ರಾಜ್ಯದಲ್ಲಿ ಯಾರಿಗಾದರೂ ಬಂದಿದ್ದರೆ ಕರೆದು ತರಲು ತಿಳಿಸಿದಳು. ಅಂಥವನನ್ನು ತರಲಾಯಿತು. ಅವನನ್ನು ಕೊಲ್ಲಿಸಿ ಹೊಟ್ಟೆ ಸೀಳಿಸಿದಳು. ಅಲ್ಲೊಂದು ಹುಳುವಿತ್ತು. ಅದರ ಮೇಲೆ ಮೆಣಸಿನ ಪುಡಿ ಉದುರಿಸಿದಳು. ಮೆಣಸು ಶುಂಠಿಪುಡಿ ಹಾಕಿದಳು. ಹುಳು ಸಾಯಲಿಲ್ಲ. ಈರುಳ್ಳಿ ರಸ ಹಿಂಡಿದಳು. ಹುಳು ಸತ್ತಿತು.

ತಿಷ್ಯರಕ್ಷಿತೆ ಅಶೋಕನಿಗೆ ಈರುಳ್ಳಿ ತಿನ್ನಿಸಿದಳು. ಸತ್ತ ಹುಳು ಮೈಯಿಂದ ಹೊರಗೆ ಬಿತ್ತು. ಗುಣಮುಖಿಯಾದ ಅಶೋಕ ‘ಬೇಕಾದ ವರ ಕೇಳಿಕೋ’ ಎಂದ. ಅವಳು ‘ನನಗೆ ಒಂದು ವಾರದ ಮಟ್ಟಿಗೆ ರಾಜ್ಯವಾಳಲು ಅವಕಾಶ ಬೇಕು’ ಎಂದಳು. ದೊರೆ ಒಪ್ಪಿದ. ರಾಜ್ಯಾಧಿಕಾರ ಬಂತು. ಕುಣಾಲನ ಮೇಲಿನ ಸೇಡು ಈಡೇರಿಸಿಕೊಳ್ಳಲು ಸಿದ್ಧವಾದಳು. ರಾಜನ ಹೆಸರಿನಲ್ಲಿ ಆಜ್ಞಾಪತ್ರ ತಕ್ಷಶಿಲೆಗೆ ಕಳಿಸಲು ಸಿದ್ದಪಡಿಸಿದಳು. ‘ಸಕಲ ಜಂಬೂದ್ವೀಪ ಸಾರ್ವಭೌಮ ಅಶೋಕನು ತಕ್ಷಶಿಲೆಯ ಮಹಾಜನಗಳಿಗೆ ಹೀಗೆ ಆಜ್ಞಾಪಿಸುತ್ತಾನೆ: ಈ ಆಜ್ಞೆಯನ್ನು ನೋಡಿದೊಡನೆ ನಮ್ಮ ವಂಶಕ್ಕೆ ಕಳಂಕವಾಗಿರುವ ಕುಮಾರ ಕುಣಾಲನ ಕಣ್ಣುಗಳೆರಡನ್ನೂ ಕೀಳಿಸತಕ್ಕದ್ದು ಮತ್ತು ತಕ್ಷಶಿಲೆಯ ಸರಹದ್ದಿನಿಂದ ಓಡಿಸತಕ್ಕದ್ದು, ಆಜ್ಞಾಪತ್ರಕ್ಕೆ ರಾಜಮುದ್ರೆ ಬೇಕು. ಅದು ಅಶೋಕನ ತಲೆದಿಂಬಿನಡಿ ಇತ್ತು, ಅದನ್ನೆತ್ತಿಕೊಳ್ಳಲು ಹೋದಳು. ದೊರೆಗೆ ಎಚ್ಚರವಾಯಿತು. ರಾಣಿಯನ್ನು ಕಂಡು ‘ತಿಷ್ಯಾ, ಹದ್ದುಗಳೆರಡು ಕುಮಾರನ ಕಣ್ಣುಗಳನ್ನು ಕಿತ್ತುಹಾಕಿದಂತೆ ನಾನೊಂದು ಕನಸು ಕಂಡೆ,’ ಅವಳು ಕೆಟ್ಟದ್ದು ನಿವಾರಿತವಾಗಲೆಂದು ನಟಿಸಿದಳು. ಅಶೋಕ ಮತ್ತೆ ಮಲಗಿದ. ಮತ್ತೆ ಬೆಚ್ಚಿಬಿದ್ದು ಎದ್ದು ಕುಳಿತ. ‘ಪ್ರಿಯೆ ಕುಮಾರನು ಕುರುಡನಾಗಿ ಪಾಟಲೀಪುತ್ರಕ್ಕೆ ಬಂದಂತೆಯೂ, ಅವನ ತಲೆಯೂ ಗಡ್ಡವೂ ಜಡೆಕಟ್ಟಿ ಬಟ್ಟೆಗಳು ಹರಿದು ಚಿಂದಿಯಾಗಿದ್ದಂತೆಯೂ ಕಂಡೆ.’ ಅಮಂಗಳ ಪರಿಹಾರವಾಗಲೆಂದಳು. ಅಶೋಕ ಮಲಗಿದ. ಚೆನ್ನಾಗಿ ನಿದ್ರೆ ಬಂತು. ಅವನ ತಲೆಯ ದೆಸೆಯಲ್ಲಿದ್ದ ರಾಜಮುದ್ರೆಯಿಂದ ಪತ್ರಕ್ಕೆ ಅಂಕಿತ ಮಾಡಿ ಹೊರಟಳು. ಅಶೋಕನ ರಾಜಮುದ್ರೆ ಅವನ ದಂತಗಳ ಆಕಾರದಲ್ಲಿತ್ತು. ಆಮೇಲೆ ಅವನಿಗೆ ಮೂರನೆ ಸಲ ಕನಸು ಬಿತ್ತು. ಅದರಲ್ಲಿ ಅವನ ಹಲ್ಲುಗಳು ಮುರಿದು ಹೋದಂತೆ ಕಂಡಿತು. ದೈವಜ್ಞರನ್ನು ಬರಮಾಡಿಕೊಂಡ. ಕನಸುಗಳನ್ನು ತಿಳಿಸಿ ಅರ್ಥ ಕೇಳಿದ. ‘ನಿನ್ನ ಮಗ ಕಣ್ಣು ಕಳೆದುಕೊಳ್ಳುತ್ತಾನೆಂದು ಇದರ ಸೂಚನೆ’ ಎಂದರು.

ತಕ್ಷಶಿಲೆ ಅಶೋಕನ ಅಜ್ಞಾಪತ್ರದಿಂದ ಕಳವಳಿಸಿತು. ಅಧಿಕಾರಗಳು ಅನಿವಾರ್ಯವಾಗಿ ರಾಜಾಜ್ಞೆಯನ್ನು ಕುಣಾಲನಿಗೆ ತೋರಿಸಿದರು. ಕುಮಾರ ಪ್ರಶಾಂತನಾಗಿ ಆಜ್ಞೆಗೆ ತಲೆ ಬಾಗಿದ. ಆಜ್ಞೆ ಕಾರ್ಯಗತಗೊಳಿಸಲು ಕಡೆಗೆ ಲೋಭಿಯೊಬ್ಬ ಮುಂದಾದ. ಆತ ಕುಮಾರನ ಸೂಚನೆಯಂತೆ ಎರಡು ಕಣ್ಣುಗಳನ್ನು ಒಂದಾದ ಮೇಲೊಂದರಂತೆ ಕಿತ್ತು ಕುಣಾಲನ ಕೈಗಳಿಗಿತ್ತ. ಆ ವೇಳೆಗೆ ‘ಈ ರಾಜಾಜ್ಞೆ ಅಶೋಕರದಲ್ಲ, ರಾಣಿ ತಿಷ್ಯರಕ್ಷಿತೆಯ ಮೋಸ’ ಎಂದು ರಾಜಧಾನಿಯಿಂದ ಧಾವಿಸಿದ ದೂತ ನಿವೇದಿಸಿದ. ಅನಾಹುತ ಆಗಿಹೋಗಿತ್ತು. ಸುದ್ದಿ ತಿಳಿದು ಕುಣಾಲನ ಮಡದಿ ಕಾಂಚನಮಾಲೆ ಓಡೋಡಿ ಬಂದಳು. ಕಣ್ಣು ರಕ್ತದ ದೊನ್ನೆಯಾಗಿದ್ದ ಗಂಡನನ್ನು ಕಂಡು ಮೂರ್ಛೆಹೋದಳು. ಕುಣಾಲ ಉಪಚರಿಸಿದ. ಸಮಾಧಾನಪಡಿಸಿದ. ಧೈರ್ಯ ಹೇಳಿದ.

ಗಂಡ ಹೆಂಡತಿ ತಕ್ಷಶಿಲೆ ಬಿಟ್ಟು ಹೊರಟರು. ಹಾಡುಗಳಿಂದ ಭಿಕ್ಷೆ ಬೇಡಿ ಹೊಟ್ಟೆ ತುಂಬಿಸಿಕೊಂಡು ಪಾಟಲೀಪುತ್ರ ತಲುಪಿದರು. ಅರಮನೆ ಬಾಗಿಲು ಕಾಯುವವರಿಗೆ ಪರಿಚಯ ತಿಳಿಯಲಿಲ್ಲ. ಒಳಗೆ ಬಿಡಲಿಲ್ಲ. ರಥಗಳನ್ನು ಬಿಡುತ್ತಿದ್ದ ಲಾಯದಲ್ಲಿ ನೆರಳಾಯಿತು. ಬೆಳಗಿನ ಜಾವದಲ್ಲಿ ಕುಮಾರ ಹಾಡಿದ. ಅಶೋಕನ ಕರುಳು ಗುರುತಿಸಿತು. ಕರೆಸಿದ. ಹರಕಲು ಬಟ್ಟೆ, ಮೀಯದ ಕೊಳಕು ಮೈ, ಕುರುಚಲು ಮುಖದ ಕುಣಾಲ ತಟ್ಟನೆ ಗುರುತು ಸಿಗಲಿಲ್ಲ. ಸೊಸೆಯೂ ಅಷ್ಟೆ. ಕುಮಾರನೆ? ‘ಹೌದು’. ವಜ್ರಾಘಾತದಿಂದ ದೊರೆ ಕುಸಿದುಬಿದ್ದ. ಮಗನೇ ತಂದೆಗೆ ಶೈತ್ಯೋಪಚಾರ ಮಾಡಿದ. ತಂದೆ ಗೋಳಾಡಿದ. ಮಗ ಸಮಾಧಾನ ಹೇಳಿದ.

ಇದೆಲ್ಲ ರಾಣಿ ತಿಷ್ಯೆಯ ಮೋಸವೆಂದು ಅಶೋಕನಿಗೆ ತಿಳಿಯಿತು. ಶೋಕ ರೋಷಗಳು ಉಕ್ಕಿ ಹರಿದುವು. ಕುಣಾಲ ಅಶೋಕನ ಕಾಲು ಹಿಡಿದು ಬೇಡಿದ ‘ತಾಯಿಯನ್ನು ಕ್ಷಮಿಸು ತಂದೆ, ಶಾಂತಿಯಿಂದಿರು. ವೈರ್ಯದಿಂದ ವೈರ ಉಪಶಮನವಾಗದು. ಕ್ರೋಧವಿಲ್ಲದ ಪ್ರೇಮನಿರ್ಭರ ಹೃದಯದಲ್ಲಿ ಶಾಂತಿ ಆನಂದ ತುಂಬಿರುತ್ತವೆ. ಪ್ರಭು ಇದನ್ನು ನಂಬಿ ನಡೆದರೆ ಪ್ರಜೆಗಳೂ ಪಾಲಿಸುತ್ತಾರೆ’ ಎಂದೆಲ್ಲ ಶಾಂತವಾಗಿ ಹೇಳಿದ: ‘ನನ್ನ ಹೃದಯದಲ್ಲಿನ ಕಲ್ಮಷಗಳೆಲ್ಲ ಕರುಣೆಯ ಕಣ್ಣೀರಿಂದ ಕಳೆದುಹೋಗಿದ್ದಲ್ಲಿ ನನ್ನ ಕಣ್ಣುಗಳು ಮೊದಲಿನಂತೆಯೇ ಆಗಲಿ’ ಎಂದ. ಹಾಗೆ ಅವನು ಅನ್ನುತ್ತಿದ್ದಂತೆಯೇ ಕುಣಾಲನ ಕಣ್ಣುಗಳು ಮೊದಲಿನಂತೆಯೇ ಆದುವು.

ಬೌದ್ಧಕಥೆಯಲ್ಲಿ ತಿಷ್ಯೆಯ ಪಾತ್ರ ಹೊಸದಾಗಿ ಸೇರಿದೆ, ಜೈನಕಥೆಯಲ್ಲಿ ಆಕೆಯ ಪಾತ್ರ ಮರೆಯಾಗಿದೆ. ಬೌದ್ಧ ಪರಂಪರೆಯಕಥೆಯಂತೆ ಕುಣಾಲನಿಗೆ ಕಣ್ಣು ಬಂದ ಪವಾಡವಿದೆ. ಇದು ಕಾರುಣ್ಯ ಸಿಂಚನದ ಪರಿಣಾಮವಿರಬಹುದು. ತಿಷ್ಯೆ – ಕುಣಾಲರ ಪ್ರಸಂಗ, ಕನ್ನಡ ಕಾವ್ಯ ಪರಂಪರೆಯಲ್ಲಿ ಕಾಣುವ ಕುಮಾರ ರಾಮ – ರತ್ನಾಜಿಯವರ ಪ್ರಸಂಗವನ್ನು ನೆನಪಿಸುತ್ತದೆ. ಅರ್ಜುನ – ಊರ್ವಶಿ ಪ್ರಸಂಗವೂ ಇಂತಹುದೇ ತಾನೆ? ಇಂಥ ಇನ್ನೂ ಕೆಲವು ಕಥೆಗಳು ಜಗತ್ತಿನ ಸಾಹಿತ್ಯದಲ್ಲಿ ಕಂಡುಬರುತ್ತವೆ. ಯೂರಿಪಿಡೀಸನ ಹಿಪ್ಪೊಲೈಟಸ್ ನಾಟಕದಲ್ಲೂ ಇಂತಹುದೇ ಅಧಾರ್ಮಿಕ ಪ್ರಣಯದ ದುರಂತ ಕಥೆಯಿದೆ; ಅಲ್ಲಿಯೂ ಕುಮಾರ ರಾಮ, ಕುಣಾಲನಿಗೆ ಆದಂತೆ ಹಿಪ್ಪೂಲೈಟಸ್ ರಾಜಕುಮಾರನಿಗೆ ಮಾತೃಗಮನದ ಆರೋಪ ಹೊರಿಸಿ ತಂದೆ ಥೀಸಿಯಸ್ ಗಡೀಪಾರು ಆಜ್ಞೆ ಮಡುತ್ತಾನೆ. ಚಂಡ ಶಾಸನ- ಸುನಂದೆ, ಅಮೃತಮತಿ – ಅಷ್ಟಾವಂಕ, ಕೀಚಕ – ದ್ರೌಪದಿ. ಅರ್ಜುನ – ಊರ್ವಶಿ – ಇವು ಇನ್ನೊಂದು ಬಗೆಯ ವಿಷಮ ಪ್ರಣಯ ಪ್ರಸಂಗಗಳು. ವಡ್ಡಾರಾಧನೆಯಲ್ಲೇ ಬರುವ ಕಾರ್ತಿಕೇಯ ಸ್ವಾಮಿಯ ಕಥೆಯಲ್ಲಿನ ಅಗ್ನಿಮಿತ್ರ – ಕೃತ್ತಿಕೆಯರ ಈ ಪ್ರಸಂಗ ಕುಣಾಲನ ಕಥೆಗೆ ತದ್ವಿರುದ್ಧವಾದ ಭೀಕರ ಸಂದರ್ಭವಾಗಿದೆ. ಮಾನವ ಸಂಬಧಗಳು ಹೇಗೆ ಜಟಿಲಕುಟಿಲ ಗತಿಯಲ್ಲಿ ಸಾಗುತ್ತವೆಂಬುದನ್ನು ಇವು ಧ್ವನಿಸುತ್ತವೆ.

ಭದ್ರಬಾಹು ಕಥೆಯಲ್ಲಿ ಬರುವ ಸ್ಥೂಲಭದ್ರನ ಬಗ್ಗೆ ಜೈನಕಥಾಸಾಹಿತ್ಯದಲ್ಲಿ ಸಿಗುವ ಕಥೆಯ ಸಾರಾಂಶ : ನಂದ ದೊರೆಗಳಲ್ಲಿ ಮಹಾಪ್ರತಾಪಿಯಾಗಿದ್ದ ಮಹಾನಂದನನಮಂತ್ರಿಯ ಹೆಸರು ಶಕಟಾಲ ಎಂದು. ಅತ್ಯಂತ ದಕ್ಷನಾದ ಮಂತ್ರಿಯಾಗಿದ್ದನು. ಇವನು ಅತ್ಯಂತ ದಕ್ಷನಾದ ಮಂತ್ರಿಯಾಗಿದ್ದನು. ಶಕಟಾಲನಿಗೆ ಸ್ಥೂಲಭದ್ರ, ಶ್ರೀಯಕ ಎಂಬ ಗಂಡು ಮಕ್ಕಳಿದ್ದರು. ಹಿರಿಯವನು ಸ್ಥೂಲಭದ್ರ. ಆತ ತುಸು ತುಂಟ, ತುಂಬ ರಸಿಕ, ಮತ್ತು ಸ್ವಚ್ಛಂದ ಜೀವಿ. ಕಿರಿಯವನಾದ ಶ್ರೀಯಕನು ಧರ್ಮಿಷ್ಠ. ಸಂಯಮಿ ಮತ್ತು ಮೃದು ಸ್ವಭಾವದವನು. ಹಿರಿಯ ಮಗನ ಬಗ್ಗೆ ಶಕಟಾಲನಿಗೂ ಚಿಂತೆಯಾಯಿತು. ಸ್ಥೂಲಭದ್ರನಾದರೋ ತನ್ನ ಕಾಲವೆನ್ನೆಲ್ಲ ಕೋಶಳ ಮನೆಯಲ್ಲೇ ಕಳೆಯುತ್ತಿದ್ದ. ಕೋಶಳು ಪಾಟಲೀಪುತ್ರದ ಪ್ರಸಿದ್ಧ ವೇಶ್ಯೆ. ವೈಶಾಲಿ ಯಂತೆ ಪಾಟಲೀಪುತ್ರದ ಜನರೂ ಅತ್ಯಂತ ಸುಂದರಿಯಾದ ಹೆಣ್ಣನ್ನು ವೇಶ್ಯೆಯಾಗಿ ಇಡುವ ಪರಿಪಾಟವನ್ನು ಬೆಳೆಸಿಕೊಂಡಿದ್ದರು. ವೈಶಾಲಿಯ, ಅಂಬಾಪಾಲಿಯ ಸಹವಾಸಕ್ಕಾಗಿ ರಾಜಮಹಾರಾಜರು ಹಾತೊರೆಯುತ್ತಿದ್ದರಂತೆ, ಪಾಟಲೀಪುತ್ರದ ಕೋಶಳ ಕೂಡ ಕಾಲ ಕಳೆಯಲಿಕ್ಕಾಗಿ ಹಣದ ಹೊಳೆ ಹರಿಸಲು ರಸಿಕ ಶ್ರೀಮಂತ ಮಂದಿ ಸಿದ್ಧವಾಗಿದ್ದರು. ಸ್ಥೂಲಭದ್ರ ಇಂಥ ವೇಶ್ಯೆಯ ಕೈವಶವಾಗಿದ್ದ. ಅವನಿಗೆ ವೇಶ್ಯಾಭವನವೇ ಸ್ವರ್ಗ. ಎಲ್ಲವೂ ಅಲ್ಲಿಯೇ ಆಗುತ್ತಿತ್ತು. ಕೋಶಳೂ ಸಹ ಅವನಲ್ಲಿ ಅಪಾರವಾದ ಅಕ್ಕರೆಯಿಂದ ತೋರುತ್ತಿದ್ದಳು. ಇತರರನ್ನು ಹಣಕ್ಕಾಗಿ, ಅಧಿಕಾರಕ್ಕಾಗಿ ಪ್ರೀತಿಸಿದರೆ ಸ್ಥೂಲಭದ್ರನನ್ನು ಮಾತ್ರ ಅಂತಃಕರಣಪೂರ್ವಕವಾಗಿ ಪ್ರೀತಿಸುತ್ತಿದ್ದಳು.

ಶಕಟಾಲನು ರಾಜನ ಸೇವೆಯನ್ನು ಅತ್ಯಂತ ನಿಷ್ಠೆಯಿಂದ ಮಾಡುತ್ತಿದ್ದನು. ಆದರೂ ಒಮ್ಮೆ ಅವನು ರಾಜನ ಕೋಪಕ್ಕೆ ತುತ್ತಾಗಬೆಕಾಯಿತು. ರಾಜರು ಎಂದು ಹೇಗೆ ಇರುತ್ತಾರೆಂಬುದನ್ನು ಹೇಳಲು ಕಷ್ಟವಾಗುತ್ತದೆ. ಇಂಥ ಚಂಚಲ ಸ್ವಭಾವದ ರಾಜನ ಸೇವೆ ಕಷ್ಟಕರವಾದುದೇ ಸರಿ.

ಮಹಾನಂದನನ ಕೋಪಕ್ಕೆ ಗುರಿಯಾದ ಶಕಟಾಲ ಆತ್ಮಹತ್ಯೆ ಮಡಿಕೊಂಡನು. ಪದ್ಧತಿಯಂತೆ ಶಕಟಾಲನ ಹಿರಿಯ ಮಗನಿಗೆ ಈ ಮಂತ್ರಿಪದವಿ ಹೋಗಬೇಕಾಗಿತ್ತು. ಆದರೆ ಸ್ಥೂಲಭದ್ರನ ನಡತೆ, ಶೀಲ ಮತ್ತು ಗುಣಗಳು ಚೆನ್ನಾಗಿರಲಿಲ್ಲವಾಗಿ ಅವನ ತಮ್ಮ ಶ್ರೀಯಕನನ್ನು ಕರೆಸಿ ತಂದೆಯ ಸ್ಥಾನವನ್ನು ಅಲಂಕರಿಸುವಂತೆ ಕೇಳಿದರು. ಶ್ರೀಯಕ ಅತ್ಯಂತ ವಿಧೇಯನಾದುದರಿಂದ, ತನ್ನ ಅಣ್ಣನಿರುವಾಅ ತಾನು ಆ ಪದವಿ ಸ್ವೀಕರಿಸುವುದಿಲ್ಲವೆಂದನು. ರಾಜನ ಸಲಹೆಗಾರರು ಅವನ ವಿವೇಕಕ್ಕೆ ಮೆಚ್ಚಿಕೊಂಡರು. ಅವನ ಸಲಹೆಯಂತೆ ಅವರು ಸ್ಥೂಲಭದ್ರನ ಸಮೀಪಕ್ಕೆ ಹೋಗಿ ಮಂತ್ರಿಪದವಿ ಸ್ವೀಕರಿಸುವಂತೆ ಕೇಳಿಕೊಂಡರು. ಇಲ್ಲಿಯವರೆಗೆ ಸ್ವಚ್ಛಂದ ಜೀವನ ನಡೆಸಿದ ಅವನಿಗೆ ಮಂತ್ರಿಪದವಿಯ ಪರತಂತ್ರ ಜೀವನ ಹಿಡಿಸಲಿಲ್ಲ. ಅವರ ಒತ್ತಾಯದ ಮೇಲೆ, ಯೋಚಿಸಿ ಉತ್ತರ ನೀಡುವುದಾಗಿ ತಿಳಿಸಿ, ಸ್ಥೂಲಭದ್ರ ನಗರವನ್ನು ಬಿಟ್ಟು ಪ್ರಶಾಂತವಾದ ಉದ್ಯಾನವನಕ್ಕೆ ಹೋದ. ಅಲ್ಲಿ ಅಶ್ವತ್ಥ ವೃಕ್ಷದ ಕೆಳಗೆ ಏಕಾಂಗಿಯಾಗಿ ಕುಳಿತು ಯೋಚಿಸತೊಡಗಿದ. ಮಂತ್ರಿ ಪದವಿಯ ಪ್ರಲೋಭನೆ ಅವನನ್ನು ಸದಾ ಕಾಡುತ್ತಿತ್ತು. ಆದರೆ ಆ ಪರತಂತ್ರ ಜೀವನದಿಂದ ತನ್ನ ಮಾನಸಿಕ ಶಾಂತಿ, ವಿವೇಕ ಮತ್ತು ಅನುಕಂಪಗಳು ನಷ್ಟವಾಗುತ್ತದೆ ಮತ್ತು ಆತ್ಮನಿಗೆ ಕಲ್ಯಾಣವಾಗುವುದಿಲ್ಲವೆಂದು ಚಿಂತಿಸಿತೊಡಗಿದ. ಅವನ ಆತ್ಮ ಒಮ್ಮಲೇ ಜಾಗೃತವಾಯಿತು. ಶಮ, ದಮ, ಮಾರ್ದವತೆ ಮತ್ತು ಶುಭ ವಿಚಾರಗಳು ಅವನ ಮನದಲ್ಲಿ ಮೂಡಿದವು. ತಾನು ನಿಜಕ್ಕೂ ಭಾಗ್ಯವಂತನೆಂದು ಭಾವಿಸಿದ. ಕೂಡಲೇ ಅವನಿಗೆ ವೈರಾಗ್ಯೋದಯ ವಾಯಿತು. ಸಾಧುವೇಷ ಧರಿಸಿ ರಾಜಸಭೆಯಲ್ಲಿ ಉಪಸ್ಥಿತನಾದ. ಅಲ್ಲಿ ದೊಡ್ಡ ಧರ್ಮೋಪದೇಶವನ್ನೇ ನೀಡಿದ. ಜನರೆಲ್ಲ ಚಕಿತರಾದರು. ಯಾವಗಲೂ ವೇಶ್ಯೆ ಮನೆಯ ಭೋಗವಿಲಾಸದಲ್ಲಿ ಮಗ್ನನಾದ ರಸಿಕ ಸ್ಥೂಲಭದ್ರನೆಲ್ಲಿ, ಮಹಾವೇದಾಂತಿ ಯಂತೆ ಶಾಸ್ತ್ರಾರ್ಥ ಮಾಡುವ ಈ ಸಾಧು ಸ್ಥೂಲಭದ್ರನೆಲ್ಲಿ ಎಂದು ಮೂಗಿನ ಮೇಲೆ ಬೆರಳಿಟ್ಟುಕೊಂಡರು. ಆಗ ಅವರು ಸ್ಥೂಲಭದ್ರನಿಗೆ ಮುನಿಯಾಗಲು ಅವಕಾಶ ನೀಡಿ ಶ್ರೀಯಕನಿಗೆ ಮಂತ್ರಿಪದವಿ ಕೊಟ್ಟರು. ಸ್ಥೂಲಭದ್ರ ಶ್ರುತ ಕೇವಲಿ ಸಂಭೂತವಿಜಯರಲ್ಲಿ ದೀಕ್ಷಿತನಾದನು.

ಸ್ಥೂಲಭದ್ರ ದೀಕ್ಷಿತನಾದ ಹೊಸ ವರ್ಷ, ಒಂದು ಸ್ಥಳದಲ್ಲಿ ತಂಗಿ ಚಾತುರ್ಮಾಸ ಮಾಡಬೇಕಾಗಿ ಬಂತು, ಮಳೆಗಾಲದಲ್ಲಿ ಸಂಚಾರಮಾರ್ಗಗಳೆಲ್ಲ ಮುಚ್ಚಿ, ನದಿಗಳಲ್ಲಿ ನೀರು ತುಂಬಿ ಹರಿಯುತ್ತಿರುತ್ತದೆ. ಗಿಡ ಮರ ಬಳ್ಳಿಗಳೆಲ್ಲ ಹಸಿರಾಗಿರುತ್ತವೆ. ಹಸಿರು ಹುಲ್ಲು ಯಥೇಚ್ಛವಾಗಿ ಬೆಳೆದಿರುತ್ತದೆ. ಭೂಮಿ ತನುವಿನಿಂದ ಕೂಡಿರುವುದರಿಂದ ಜೀವಜಂತುಗಳು ಉತ್ಪತ್ತಿಯಾಗುತ್ತಿರುತ್ತವೆ. ಆದ್ದರಿಂದ ಜೀವರಕ್ಷಣೆಗೆ ಆದ್ಯಗಮನ ಕೊಡುವ ಮಹಾವ್ರತಿಯಾದ ಮುನಿ ತನ್ನ ಸಂಚಾರವನ್ನು ನಿಲ್ಲಿಸಿ ಒಂದೇ ಜಾಗದಲ್ಲಿ ನಾಲ್ಕು ತಿಂಗಳು ಕಳೆಯುತ್ತಾನೆ. ಅದರಂತೆ ಚಾತುರ್ಮಾಸ ಸ್ಥಳಗಳನ್ನು ನಿಗದಿ ಮಾಡಲು ಸಂಭೂತವಿಜಯರು ಎಲ್ಲ ಶಿಷ್ಯರನ್ನೂ ಕರೆದು ಅವರ ಸಲಹೆ ಕೇಳಿದರು. ಸಿಂಹಕೀರ್ತಿ ಎಂಬ ಮುನಿ ತಾನು ಸಿಂಹದ ಗುಹೆಯಲ್ಲಿ ಉಪವಾಸವಿದ್ದು, ಕಾರ್ಯೋತ್ಸರ್ಗದ ನಿಲುವಿನದಲ್ಲಿ ನಿಂತು ಚಾತುರ್ಮಾಸ ಮಾಡುತ್ತೇನೆಂದರೆ, ರತ್ನಶೇಖರ ತಾನು ಸರ್ಪದ ನೆರಳಿನಲ್ಲಿ ನಿಂತ ನಾಲ್ಕು ತಿಂಗಳು ಉಪವಾಸವಿರುತ್ತೇನೆಂದ. ಹಾಗೆಯೇ ವಜ್ರಸೇನನೆಂಬ ಸಾಧು ತಾನು ಬಾವಿಯ ಮೇಲ್ಛಾವಣಿಯ ಮೇಲೆ ನಿಂತು ವರ್ಷಾಯೋಗವನ್ನು ಕಳೆಯುತ್ತೇನೆಂದ. ಅವರವರ ಇಷ್ಟದಂತೆ ಚಾತುರ್ಮಾಸ ಕಳೆಯಲು ಸಂಭೂತಿವಿಜಯರ ಅನುಮತಿ ನೀಡಿದರು. ಸ್ಥೂಲಭದ್ರನ ಸರಿದಿ ಬಂತು. ತಾನು ಮಾತ್ರ ಕೋಶಳ ಚಿತ್ರ ಶಾಲೆಯಲ್ಲಿ ಚಾತುರ್ಮಾಸ ಮಾಡುತ್ತೇನೆಂದು ಗುರುಗಳಲ್ಲಿ ಬಿನ್ನವಿಸಿಕೊಂಡ. ವಿಕಾರದಿಂದ ದೂರವಿದ್ದು ವಿಕಾರಗಳನ್ನು ಜಯಿಸುವುದು ದೊಡ್ಡದಲ್ಲ. ಆದರೆ ಅವುಗಳ ಮಧ್ಯೆ ಇದ್ದು ಅವುಗಳನ್ನು ಜಯಿಸುವುದು ದೊಡ್ಡದು. ಸಂಸಾರದಲ್ಲಿ ಮದೋನ್ಮತ್ತ ಆನೆಗಳ ಕುಂಭಸ್ಥಳಗಳನ್ನು ಭೇದಿಸುವ ವೀರಪುರುಷರು ಸಿಗುತ್ತಾರೆ. ಸಿಂಹಗಳನ್ನು ವಧಿಸುವ ನಿಪುಣರು ಸಿಗುತ್ತಾರೆ, ಆದರೆ ಮನ್ಮಥನ ದರ್ಪವನ್ನು ಮುರಿಯುವ ಮನುಷ್ಯರು ಸಿಗುವುದು ಕಷ್ಟ ಎಂದು ಸಂಭೂತವಿಜಯರು ತಿಳಿಸಿ, ಸ್ಥೂಲಭದ್ರನನ್ನು ಹರಸಿ ಕೋಶಾ ವೇಶ್ಯೆಯ ಮನೆಯಲ್ಲಿ ಚಾತುರ್ಮಾಸ ಮಾಡಲು ಕಳುಹಿಸಿದರು.

ಸ್ಥೂಲಭದ್ರ ಕೋಶಗಳ ಮನೆಗೆ ಬಂದನು. ಕೋಶಗಳಿಗೆ ಆಶ್ಚರ್ಯವಾಯಿತು. ಬಹಳ ಕಾಲ ತನ್ನನ್ನು ಬಿಟ್ಟು ಬವನು ಇರುವುದಿಲ್ಲವೆಂದು ತಿಳಿದಿದ್ದಳು. ಅವನು ಬಂದ ಕೂಡಲೇ ಹಾರ್ದಿಕ ಸ್ವಾಗತ ಕೋರಿದಳು. ಆರತಿ ಎತ್ತಿದಳು. ಉನ್ನತಾಸನ ನೀಡಿದಳು. ತಾನು ಚಾತುರ್ಮಾಸ ಕಳೆಯಲು ಇಲ್ಲಿಗೆ ಬಂದಿರುವುದಾಗಿಯೂ ಅದಕ್ಕಾಗಿ ಎಲ್ಲ ವ್ಯವಸ್ಥೆಯನ್ನೂ ತನ್ನ ಚಿತ್ರಶಾಲೆಯಲ್ಲಿ ಮಾಡಬೇಕೆಂದೂ ಸ್ಥೂಲಭದ್ರ ಕೇಳಿಕೊಂಡ. ಕೋಶಳ ಚಿತ್ರಶಾಲೆ ಮದನನ ಮಂದಿರವಾಗಿತ್ತು. ಕಾಮೋದ್ದೀಪಕ ಚಿತ್ರಗಳು ಅಲ್ಲಿ ಕಂಗೊಳಿಸುತ್ತಿದ್ದವು. ಇಂಥ ವಾತಾವರಣದಲ್ಲಿ ಚಾತುರ್ಮಾಸ ಕಳೆಯಲು ಬಂದಿರುವ ಸ್ಥೂಲಭದ್ರ ಮುನಿಯನ್ನು ನೋಡಿ ಕೋಶಗಳಿಗೆ ನಗು ಬಂತು. ಮುನಿಯಾದರೂ ವಿಲಾಸೀ ಜೀವನವನ್ನು ಬಿಡಲಾರದೆ ಸ್ಥೂಲಭದ್ರ ಇಲ್ಲಿಗೆ ಬಂದಿದ್ದಾನೆಂದು ಅವಳು ಕಲ್ಪಿಸಿಕೊಂಡಳು. ನೃತ್ಯ, ಸಂಗೀತ, ಮಧ್ಯ, ಹೂವು, ಹಣ್ಣು, ಹೆಣ್ಣುಗಳ ಮಧ್ಯೆ ಇರುವ ಯಾವನಾದರೂ ಭೋಗದಿಂದ ವಿಮುಕ್ತನಾಗಲು ಸಾಧ್ಯವೇ ಎಂದು ಆಲೋಚಿಸಿ, ವಸ್ತ್ರಾಲಂಕಾರ ಮಾಡಿಕೊಂಡು ಗೆಜ್ಜೆಯ ನಾದ ಮಾಡುತ್ತಾ ಅವನ ಹತ್ತಿರ ಬಂದಳು.

ಕೋಶ : ಈ ಯೌವನವನ್ನು ಏಕೆ ವೃಥಾ ನಷ್ಟಮಾಡಿಕೊಳ್ಳುತ್ತೀರಾ; ನನ್ನ ಕೂಡ ಆನಂದದಿಂದ ವಿಲಾಸದಿಂದ ಬಾಳಿರಿ. ಯೌವನದ ಮಕರಂದವನ್ನು ಕುಡಿಯಿರಿ. ಭೋಗವೇ ಯೌವನ. ತಪಸ್ಸಿನ ಜೀವನವೇ ಮುಪ್ಪು.

ಸ್ಥೂಲಭದ್ರ : ಕೋಶಾ! ಯೌವನದಲ್ಲಿ ಭೋಗಜೀವನವನ್ನು ಬಿಟ್ಟು ಬೇರೆ ಇನ್ನೇನೂ ಇಲ್ಲವೆನ್ನುವ ನಿನ್ನ ಭ್ರಮೆಯನ್ನು ಬಿಡು. ಧರ್ಮಾಚರಣೆಗೆ ಅದೇ ಒಳ್ಳೆಯ ಕಾಲ. ನಾನು ಆತ್ಮಕಲ್ಯಾಣದ ಸುವರ್ಣ ಮಾರ್ಗವನ್ನು ಹಿಡಿದಿ ದ್ದೇನೆ. ಯೌವನ ಅಪಾರಶಕ್ತಿಯಿಂದ ಕೂಡಿದುದಾಗಿದೆ. ಈ ಶಕ್ತಿಯ ಸದುಪಯೋಗಪಡಿಸಿಕೊಳ್ಳಬೇಕು ಕೋಶಾ, ಅದನ್ನು ವ್ಯರ್ಥ ಮಾಡಬಾರದು.

ಕೋಶ : ನಿಮ್ಮ ಒಣವೇದಾಂತವನ್ನೆಲ್ಲಾ ಬಿಟ್ಟು ಕೆಲವು ಕಾಲ ಮುನಿ ವ್ರತವನ್ನು ತ್ಯಜಿಸಿ ನನ್ನ ಕೂಡ ಸಂತೋಷದಿಂದಿರಿ.

ಸ್ಥೂಲಭದ್ರ : ಕೋಶಾ! ನಿನ್ನ ಮನಸ್ಸು ಇನ್ನೊ ಭೋಗದ ಚಕ್ರದಲ್ಲಿಯೇ ಸುತ್ತಿತ್ತಿದೆ. ‘ಭೋಗೇ ರೋಗ ಭಯಮ್’, ಭೋಗದಲ್ಲಿ ರೋಗದ ಭಯ ಅಡಗಿದೆ. ಆದ್ದರಿಂದ ಯೌವನದಲ್ಲಿ ಧರ್ಮವನ್ನು ಆಚರಿಸದೆ ವೃದ್ಧಾಪ್ಯದಲ್ಲಿ ಆಚರಿಸಲು ಸಾಧ್ಯವಿಲ್ಲ. ಮುಪ್ಪಿನಲ್ಲಿ ದೇಹ ಕಟ್ಟಿಗೆಯಂತಾಗುತ್ತದೆ. ಸದಾ ರೋಗದಿಂದ ಕೂಡಿರುತ್ತದೆ. ಅಂಥ ದೇಹದಿಂದ ಧರ್ಮವನ್ನು ಆಚರಿಸಲು ಸಾಧ್ಯವೇ? ಕೋಶಾ, ಯೋಚಿಸು ನೋಡು.

ಕೋಶ : ನೀವು ಹಟವಾದಿಯಾಗುತ್ತಿದ್ದೀರಿ.

ಸ್ಥೂಲಭದ್ರ : ಸನ್ಮಾರ್ಗದಲ್ಲಿ ಹೋಗುವುದು ಹಟವಾದವಲ್ಲ ಕೋಶಾ. ವಿಚಾರಮಾಡಿ ಈ ಮಾರ್ಗವನ್ನು ಆರಿಸಿಕೊಂಡಿದ್ದೇನೆ. ರೋಗಿಗೆ ಕಹಿ ಔಷಧಿ ಮೊದಲು ಬೇಸರ ತರಬಹುದು. ಆದರೆ ಅದು ದೇಹಕ್ಕೆ ಒಳ್ಳೆಯದು ಕೋಶಾ.

ಕೋಶಳ ವಿವಿಧ ಹಾವ ಭಾವ ವಿಲಾಸ ವಿಭ್ರಮಗಳು ಸ್ಥೂಲಭದ್ರನ ಮೇಲೆ ಏನೂ ಪ್ರಯೋಜನ ಬೀರಲಿಲ್ಲ. ಅವಳ ಸಾವಿರ ಚೇಷ್ಟೆಗಳು ನಿಷ್ಪಲವಾದವು. ಅವಳಲ್ಲಿ ವಿಕಾರ ಹೆಚ್ಚಿದಂತೆ ಸ್ಥೂಲಭದ್ರರದಲ್ಲಿ ಅನಂತವೀರ್ಯ ಹೆಚ್ಚಾಗಿತೊಡಗಿತು. ದೇಹದಲ್ಲಿ ಬ್ರಹ್ಮಚರ್ಯದ ದೀಪ್ತಿ ಬೆಳಗತೊಡಗಿತು. ಸ್ಥೂಲಭದ್ರರ ತಪೋನಿಷ್ಠವಾದ ತೇಜಸ್ಸಿನಿಂದ ಕೋಶಳ ಮನಸ್ಸು ಪರಿವರ್ತಿತವಾಯಿತು. ತನಗೂ ಸನ್ಮಾರ್ಗ ತೋರಿಸಿಕೊಡುವಂತೆ ಅವರನ್ನು ಬೇಡಿಕೊಂಡಳು. ಆಗ ಅಚರು ಅವಳಿಗೆ ಈ ರೀತಿ ದೀರ್ಘವಾದ ಧರ್ಮೋಪದೇಶವಿತ್ತರು.

ಎಲ್ಲ ಉತ್ತಮ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಲುವುದೇ ಧರ್ಮವಾಗಿದೆಯೆಂದು ಕೋಶಗಳಿಗೆ ತಿಳಿಸಿದರು. ಈ ಧರ್ಮತೀರ್ಥದಲ್ಲಿ ಮಿಂದು ಕೋಶ ಪರಿಶುದ್ಧಳಾದಳು. ತಾನೂ ಸಂಸಾರವನ್ನು ತೊರೆಯಬೇಕೆಂದು ನಿಶ್ಚಯಿಸಿದಳು. ಸ್ಥೂಲಭದ್ರರು ಮಹಾವ್ರತಗಳನ್ನು ಒಮ್ಮೆಲೇ ಗ್ರಹಿಸುವುದು ಕಷ್ಟವೆಂದು ತಿಳಿಸಿ, ಅವಳಿಗೆ ಶ್ರಾವಕ ವ್ರತಗಳನ್ನು ಕೊಟ್ಟರು. ಅವಳು ಅಹಿಂಸೆ, ಸತ್ಯ, ಅಚೌರ್ಯ, ಬ್ರಹ್ಮಚರ್ಯ ಮತ್ತು ಅಪರಿಗ್ರಹಳನ್ನು ಗ್ರಹಿಸಿ ಮಧು ಮದ್ಯ ಮಾಂಸಗಳನ್ನು ತ್ಯಜಿಸಿ ಮುಂದಿನ ಮುನಿಜೀವನಕ್ಕೆ ಬೆರುಗಳಂತಿರುವ ಈ ಅಷ್ಟಮೂಲಗಳನ್ನು ಹೊಂದಿದಳು.

ಚಾತುರ್ಮಾಸ ಕಳೆದಮೇಲೆ ಎಲ್ಲರೂ ಸಂಭೂತವಿಜಯರಲ್ಲಿಗೆ ಬಂದರು. ಆಚಾರ್ಯರು ಎಲ್ಲರ ಕುಶಲ ಸಮಾಚಾರವನ್ನು ಕೇಳಿ ತಿಳಿದುಕೊಂಡರು. ಎಲ್ಲರನ್ನೂ ಸಾಮಾನ್ಯ ರೀತಿಯಲ್ಲಿ ಪ್ರಶಂಸಿದರು. ಆದರೆ ಸಿಂಹಕೀರ್ತಿ, ರತ್ನಶೇಖರ ಮತ್ತು ವಜ್ರಸೇನರಿಗೆ ಈ ಸಾಮಾನ್ಯ ಹೊಗಳಿಕೆ ಹಿಡಿಸಲಿಲ್ಲ. ಇದೇ ಸಮಯಕ್ಕೆ ಸ್ಥೂಲಭದ್ರರೂ ಆಗಮಿಸಿದರು. ಅವರಿಗೆ ವೀರೋಚಿತವಾದ ಸ್ವಾಗತವನ್ನು ಗುರುಗಳು ನೀಡಿದರು. ಮುಕ್ತಕಂಠದಿಂದ ಅವನ ಮೇಲೆ ಪ್ರಶಸ್ತಿಯ ಹೂವಿನ ಮಳೆಗರೆದರು. ಇದು ಇತರೆ ಮೂವರು ಮುನಿಗಳಿಗೆ ಹಿಡಿಸಲಿಲ್ಲ. ಅವರಿಗೆ ಸಂಭೂತವಿಜಯರ ಮೇಲೆ ಕೋಪ ಬಂತು; ಸ್ಥೂಲಭದ್ರರ ಮೇಲೆ ದ್ವೇಷ ಕಾರಿದರು.

ಎರಡನೆಯ ಚಾತುರ್ಮಾಸ ಬಂತು. ಮೊದಲನೆಯ ವರ್ಷಾಯೋಗದಲ್ಲಿ ಸಿಂಹಗುಹೆಯಲ್ಲಿ ತಪಸ್ಸು ಮಾಡಿದ ಸಿಂಹಕೀರ್ತಿ, ಸ್ಥೂಲಭದ್ರರನ್ನು ಮೀರಿಸ ಬೇಕೆಂದು, ಈ ಸಾರಿ ತಾನೂ ಕೋಶಳ ಚಿತ್ರಶಾಲೆಯಲ್ಲಿ ಚಾತುರ್ಮಾಸ ಮಾಡುವು ದಾಗಿ ಗುರುಗಳಿಗೆ ತಿಳಿಸಿದ; ಅವರ ಅಪ್ಪಣೆ ಕೇಳಿದ. ಅದಕ್ಕೆ ಸಂಭೂತವಿಜಯರು. ಈ ರೀತಿಯ ಮತ್ಸರ ಬಿಡಬೇಕೆಂದೂ, ಈರ್ಷೆಯಿಂದ ಮಾಡುವ ಯಾವ ಕೆಲಸವೂ ಸುಖದಾಯಕವಾಗುವುದಿಲ್ಲವೆಂದೂ ಮತ್ತು ಈ ವ್ರತ ಅವನಿಂದ ಸಾಧ್ಯವಿಲ್ಲವೆಂದೂ ಸಿಂಹಕೀರ್ತಿಗೆ ತಿಳಿಸಿದರು. ಆದರೂ ಹಠದಿಂದ ಪ್ರೇರಿತನಾದ ಸಿಂಹಕೀರ್ತಿ ವೇಶ್ಯೆಯ ಮನೆಯಲ್ಲಿಯೇ ಚಾತುರ್ಮಾಸ ಮಾಡಬೇಕೆಂದು ನಿರ್ಣಯಿಸಿದ.

ಸಿಂಹಕೀರ್ತಿ ಮೃಗರಾಜನ ದರ್ಪವನ್ನು ಧರಿಸಿ ಕೋಶಳ ಮನೆಗೆ ಬಂದನು. ಕೋಶ ಅವನನ್ನು ಸ್ವಾಗತಿಸಿದಳು. ಗಂಭೀರ ಪ್ರವೃತ್ತಿಯ ಸಿಂಹಕೀರ್ತಿ ನಾಲ್ಕಾರು ದಿನಗಳು ಸಂಯಮದಿಂದಲೇ ಕಾಲ ಕಳೆದ. ಆದರೆ ಕಾಮೋದ್ದೀಪನದ ವಾತಾವರಣ ಅವನ ಸಂಯಮದ ಕಟ್ಟೆಯನ್ನು ಸಡಿಲಗೊಳಿಸಿತು. ಕೋಶ ಇದನ್ನು ಅರಿತಳು. ಮುನಿಗಳಿಗೆ ಪಾಠ ಕಲಿಸಬೇಕೆಂದು ಆಲೋಚಿಸಿ, ಹಣ ಕೊಟ್ಟರೆ ಮಾತ್ರ ತಾನು ವಶವಾಗುವುದೆಂದು ತಿಳಿಸಿದಳು. ಮುನಿಯಾದ ತನ್ನಲ್ಲಿ ಹಣ ಎಲ್ಲಿಂದ ಬರಬೇಕೆಂದು ಸಿಂಹಕೀರ್ತಿ ವಾದಿಸಿದ. ನೇಪಾಳದಲ್ಲಿ ರಾಜ ಮುನಿಗಳಿಗೆ ರತ್ನಕಂಬಳಿಯನ್ನು ದಾನ ಮಾಡುತ್ತಾನೆ. ಆದ್ದರಿಂದ ಅಲ್ಲಿಗೆ ಹೋಗಿ ಅದನ್ನು ತನ್ನಿ. ಅನಂತರ ನಾನು ನಿಮ್ಮ ವಶವಾಗುತ್ತೇನೆಂದಳು ಕೋಶ. ಅದರಂತೆ ಸಿಂಹಕೀರ್ತಿ ಕಾಡುಮೇಡುಗಳನ್ನು ದಾಟಿ, ಮುಳ್ಳುಕಲ್ಲುಗಳನ್ನು ತುಳಿದು, ಧಾರಾಳವಾಗಿ ಸುರಿಯುತ್ತಿದ್ದ ಮಳೆಯನ್ನು ಲೆಕ್ಕಿಸದೆ ನೇಪಾಳಕ್ಕೆ ಬಂದನು. ಇಂದ್ರಿಯಗಳಿಗೆ ವಶನಾದ ಮನುಷ್ಯ ಅಭಕ್ಷ್ಯ ಭಕ್ಷನ, ಅಪೇಯಪಾನ ಮತ್ತು ಅಗಮ್ಯ ಪ್ರದೇಶಗಳ ಗಮನ – ಈ ರೀತಿ ಏನುಬೇಕಾದರೂ ಮಾಡುತ್ತಾನೆ. ಅದರಂತೆ ಸಿಂಹಕೀರ್ತಿ ಕೋಶಳನ್ನು ವಶಪಡಿಸಿಕೊಳ್ಳಲು ಇಷ್ಟುದೂರ ಕಷ್ಟಪಟ್ಟು ನಡೆದು ಬಂದ.

ರತ್ನಗಂಬಳಿ ರಾಜನಿಂದ ಬಹುಮಾನವಾಗಿ ದೊರಕಿತು. ಅದನ್ನು ತೆಗೆದುಕೊಂಡು ಕೋಶ ಇನ್ನೇನು ತನ್ನ ವಶಳಾದಳೆಂದು ಮನಸ್ಸಿನಲ್ಲಿ ಮಂಡಿಗೆ ತಿನ್ನುತ್ತಾ ಬರುತ್ತಿದ್ದಾಗ, ರಸ್ತೆಯಲ್ಲಿ ಕಳ್ಳರ ಗುಂಪೊಂದಕ್ಕೆ ಸಿಕ್ಕಿಬಿದ್ದ. ಅವರು ಇವನಿಗೆ ಹೊಡೆದು ಬಡಿದು ರತ್ನಗಂಬಳಿಯನ್ನು ಕಿತ್ತು ಕೊಂಡರು. ಅಷ್ಟರಲ್ಲಿ ಆ ಕಳ್ಳರ ಗುಂಪಿನ ನಾಯಕ ಬಂದ. ಅವನು ಇವನ ಮೇಲೆ ಕರುಣೆ ತೋರಿಸಿ ಆ ರತ್ನಗಂಬಳಿಯನ್ನು ಅವನೀಗೆ ಹಿಂತಿರುಗಿಸಿಕೊಡಿಸಿದ. ಅದನ್ನು ಈಗ ಯಾರಿಗೂ ತೋರಿಸದಂತೆ ಮುಚ್ಚಿಕೊಂಡು ಕೋಶಳ ಮನೆಗೆ ಬಂದ. ಕೋಶಳ ಪಾದಮೂಲದಲ್ಲಿ ಅದನ್ನು ಇಟ್ಟು ತನ್ನ ಮೇಲೆ ಕರುಣೆ ತೋರಿಸಬೇಕೆಂದು ದೀನತೆಯಿಂದ ಕೇಳಿಕೊಂಡ. ಆದರೆ ಕೋಶ ಅದನ್ನು ಉಪೇಕ್ಷೆಯಿಂದ ಹೊರಗೆ ಬಿಸಾಡಿದಳು. ಅದು ಕೊಚ್ಚೆಯ ಗುಂಡಿಗೆ ಹೋಗಿ ಬಿತ್ತು. ಮುನಿಮಹಾರಾಜ ಹೌಹಾರಿದ. ತಾನು ಎಷ್ಟು ಕಷ್ಟಪಟ್ಟು ಇದನ್ನು ತಂದಿದ್ದೇನೆ! ಮಳೆ ಗಾಳಿಯೆನ್ನದೆ, ಕಳ್ಳಕಾಕರ ಭೀತಿಯಿಂದ ಪಾರಾಗಿ ತಂದಿರುವ ಈ ಅಪೂರ್ವ ಅನರ್ಘ್ಯ ರತ್ನಗಂಬಳಿಯನ್ನು ಈ ಮೂರ್ಖಸ್ತ್ರೀ ಇಷ್ಟು ಹಗುರವಾಗಿ ಕೊಚ್ಚೆಯ ಗುಂಡಿಗೆ ಬಿಸಾಡಿದಳಲ್ಲ ಎಂದು ವ್ಯಥೆಪಟ್ಟನು. ಅದಕ್ಕೆ ಕೋಶ, “ಹೇ ಸಾಧು ಮಹಾರಾಜರೇ! ನಾನಲ್ಲ ಮೂರ್ಖೆ. ಕೊಚ್ಚೆಯೆ ಗುಂಡಿಗಿಂತ ನೂರಾರು ಪಾಲು ಅಧಿಕ ದುರ್ಗಂಧದಿಂದ ಕೂಡಿದ ನನ್ನ ದೇಹಕ್ಕೆ ಮೀಹಿತನಾಗಿ ನಿನ್ನ ಪವಿತ್ರ ಚಾರಿತ್ರ್ಯವನ್ನು ಕಳೆದುಕೊಳ್ಳಲು ಸಿದ್ಧನಾದ ನೀನು ಶತಮೂರ್ಖ” ಎಂದಳು. ಸಿಂಹಕೀರ್ತಿ ಎಚ್ಚೆತ್ತ. “ಪಾಪಕೂಪಕ್ಕೆ ಬಿದ್ದು ಸರ್ವನಾಶವಗುತ್ತಿದ್ದ ತನ್ನನ್ನು ಉದ್ದರಿಸಿದ ಮಹಾತಾಯಿ ನೀನು” ಎಂದು ಕೋಶಳ ಉಪಕಾರವನ್ನು ಸ್ಮರಿಸಿಕೊಂಡ. ಅವಳಿಗೆ ಸಾಷ್ಟಾಂಗ ನಮಸ್ಕಾರ ಮಾಡಿದ.

ಚಾತುರ್ಮಾಸ ಮುಗಿಯುವ ಮುಂಚೆಯೇ ಅವನು ಸಂಭೂತವಿಜಯರ ಹತ್ತಿರ ಬಂದ. ಕೋಶಳ ಮನೆಯಲ್ಲಿ ನಡೆದದ್ದನ್ನೆಲ್ಲಾ ಹೇಳಿದ. ತನ್ನ ತಪ್ಪನ್ನು ಒಪ್ಪಿಕೊಂಡ. ಸ್ಥೂಲಭದ್ರರನ್ನು ಮನಸಾರೆ ಹೊಗಳಿದ.

ಸ್ಥೂಲಭದ್ರರು ಸಂಭೂತವಿಜಯರ ಹತ್ತಿರ ದೀಕ್ಷಿತರಾದರೂ ತಮ್ಮ ದಶಪೂರ್ವಗಳ ಅಧ್ಯಯನವನ್ನು ಶ್ರುತಕೇವಲಿ ಭದ್ರಬಾಹುಗಳಲ್ಲಿ ಮಾಡಿದರು. ಭದ್ರಬಾಹುಗಳು ದ್ವಾದಶಾಂಗ ಚತುರ್ದಶ ಪಾರಾಗಾಮಿಗಳಾಗಿದ್ದರು. ಒಮ್ಮೆ ಅವರು ಸ್ಥೂಲಭದ್ರರ ಸಂಗಡ ಪಾತಲೀಪುತ್ರಕ್ಕೆ ಆಗಮಿಸಿ, ಊರಿನ ಬಹಿರುದ್ಯಾನದಲ್ಲಿ ತಂಗಿದ್ದರು. ಅಲ್ಲಿಗೆ ಭಗವತೀದೀಕ್ಷೆಯನ್ನು ತೆಗೆದುಕೊಂಡಿದ್ದ ಸ್ಥೂಲಭದ್ರರ ಏಳುಜನ ಸಹೋದರಿಯರು ಬಂದರು. ಭದ್ರಬಾಹು ಸ್ವಾಮಿಗಳಿಗೆ ವಂದಿಸಿ, ಸ್ಥೂಲಭದ್ರರು ಎಲ್ಲಿ ಎಂದು ವಿಚಾರಿಸಿದರು. ಅವರು ನೆರೆಯ ಗುಹೆಯಲ್ಲಿ ಸೂತ್ರ ಪಠಣ ಮಾಡುತ್ತಿದ್ದರೆಂದು ತಿಳಿಸಿದರು. ಆ ಸಹೋದರಿಯರು ಅಲ್ಲಿಗೆ ಹೋದರು. ಸ್ಥೂಲಭದ್ರರಿಗೆ ತಮ್ಮ ತಂಗಿಯರು ಅಲ್ಲಿಗೆ ಬರುತ್ತಿರುವುದು ತಿಳಿಯಿತು. ತಮ್ಮ ಜ್ಞಾನದ ಚಮತ್ಕಾರವನ್ನು ತೋರಿಸಲು ಅವರು ಸಿಂಹದ ರೂಪಧಾರಣೆ ಮಾಡಿಕೊಂಡರು. ಆ ಸಹೋದರಿಯರು ತಮ್ಮ ಅಣ್ಣ ಸ್ಥೂಲಭದ್ರರನ್ನು ಕಾಣುವ ಬದಲು ಭಯಂಕರವಾದ ಸಿಂಹವನ್ನು ಕಂಡರು. ಆ ಸಿಂಹ ಸ್ಥೂಲಭದ್ರರನ್ನು ನುಂಗಿರಬೇಕೆಂದು ತಿಳಿದರು. ಅವರು ಹೆದರಿ ಭದ್ರಬಾಹುಗಳ ಹತ್ತಿರ ಓಡಿಬಂದು ನಡೆದುದೆಲ್ಲವನ್ನು ತಿಳಿಸಿದಳು. ಗುರುದೇವರು ಇದು ಸ್ಥೂಲಭದ್ರರ ಶಕ್ತಿಯಿಂದಾದುದೆಂದು ಅರಿತರು. ಈಗ ಹೋಗಿ ನೋಡಿ, ಸ್ಥೂಲಭದ್ರರನ್ನು ಕಾಣಬಹುದೆಂದರು. ಅದರಂತೆ ಆ ಸಹೋದರಿಯರು ಹೋಗಿ ಸ್ಥೂಲಭದ್ರರನ್ನು ನೋಡಿ ಆನಂದಿಸಿದರು. ಅವರಿಗೆ ನಮಸ್ಕರಿಸಿದರು ಅವರು ಅತ್ತ ಹೋದಮೇಲೆ ಸ್ಥೂಲಭದ್ರರು ಇತ್ತ ಭದ್ರಬಾಹುಗಳ ಹತ್ತಿರ ವಾಚನ ತೆಗೆದುಕೊಳ್ಳಲು ಬಂದರು. ಆದರೆ ಗುರುಗಳು ಅವರು ಕಲಿತ ವಿದ್ಯಾಬಲದಿಂದ ಅತಿಮಾನುಷ ಶಕ್ತಿಯನ್ನು ಪಡೆದು ಅದನ್ನು ದುರುಪಯೋಗಪಡಿಸಿಕೊಂಡರೆಂದು ತಿಳಿದು, ಉಳಿದ ನಾಲ್ಕು ಪೂರ್ವಗಳ ಜ್ಞಾನ ಅವರಿಗೆ ಬೋಧಿಸಲ್ಲ. ಸಂಘ ಸ್ಥೂಲಭದ್ರರಿಗೆ ಪೂರ್ಣ ಪಾಠ ಹೇಳಿಕೊಡುವಂತೆ ಭದ್ರಬಾಹುಗಳನ್ನು ಒತ್ತಾಯಿಸಿತು. ಅದರಂತೆ ಉಳಿದ ನಾಲ್ಕು ಪೂರ್ವಗಳ ಮುಲಪಾಠವನ್ನು ಹೇಳಿದರೇ ಹೊರತು ಅರ್ಥವನ್ನು ಅವರಿಗೆ ಹೇಳಲಿಲ್ಲ.

ಇದೇ ಸಮಯದಲ್ಲಿ ಪಾಟಲೀಪುತ್ರದಲ್ಲಿ ೧೨ ವರ್ಷಗಳ ಕಾಲ ಭೀಕರ ಬರಗಾಲ ಪ್ರಾಪ್ರವಾಯಿತು. ಶ್ರುತಕೇವಲಿ ಭದ್ರಬಾಹುಗಳು ೧೨,೦೦೦ ಶಿಷ್ಯ ಸಮುದಾಯ ಸಮೇತವಾಗಿ ದಕ್ಷಿಣದ ಕೞ್ವಪ್ಪು ನಾಡಿಗೆ (ಇಂದಿನ ಶ್ರವಣಬೆಳ್ಗೊಳ) ಆಗಮಿಸಿ, ಅಲ್ಲಿ ಸಲ್ಲೇಖನ ವಿಧಿಯಿಂದ ವೀರಸಂವತ್ ೧೬೨ ರಲ್ಲಿ ಸ್ವರ್ಗಸ್ಥರಾದರು. ಆಗ ಅಧ್ಯಕ್ಷತೆಯಲ್ಲಿ ಪಾಟಲೀಪುತ್ರದಲ್ಲಿ ದೊಡ್ಡ ಜೈನ ಸಭೆ ಸೇರಿತು. ಅಳಿದುಳಿದ ಅಂಗಸೂತ್ರಗಳನ್ನೆಲ್ಲ ಸಂಗ್ರಹಿಸಿದರು. ಮೊದಲ ಬಾರಿಗೆ ಜೈನ ಸೂತ್ರಗಳನ್ನೆಲ್ಲ ಒಂದೆಡೆ ಕ್ರೋಡೀಕರಿಸಿದ ಶ್ರೇಯಸ್ಸು ಸ್ಥೂಲಭದ್ರರಿಗೆ ಸಲ್ಲುತ್ತದೆ. ಆದ್ದರಿಂದಲೇ ಅವರನ್ನು ಸ್ತುತಿಸುವ “ಮಂಗಲಂ ಭಗವಾನ್ ವೀರೋ ಮಂಗಲಂ ಗೌತಮೋ ಗಣೇ ಮಂಗಲಂ ಸ್ಥೂಲಭದ್ರಾದ್ಯೋ ಜೈನಧರ್ಮೋಸ್ತು ಮಂಗಲಂ” ಎಂಬ ಮಂಗಲ ಪಾಠ ಹುಟ್ಟಿಕೊಂಡಿತು.

ಈ ಕಥೆ ಶ್ವೇತಾಂಬರ ವಾಙ್ಮಯದಲ್ಲಿ ಸಿಗುತ್ತದೆಂಬ ಕಾರಣದಿಂದಲೋ, ಪ್ರಕೃತ ಕಥೆಯಲ್ಲಿ ಬಂದಿಲ್ಲವೆಂದೋ – ಅಂತೂ ಕನ್ನಡ ವಡ್ಡಾರಾಧನಕಾರ ಭ.ಬಾ. ಕಥೆಯಲ್ಲಿ ಇದನ್ನು ಕೈಬಿಟ್ಟಿದ್ದಾನೆ. ಹಾಗಾದರೆ ಕನ್ನಡ ವಡ್ಡಾರಾಧನೆಗೆ ಮೂಲ ಆಕರ, ಯಾವುದು ಎಂಬ ಪ್ರಶ್ನೆ ವಡ್ಡಾರಾಧನೆಗೆ ಆಕರವಾಗಿರಬೇಕೆಂಬ ಸೂಚನೆ ಯೊಂದಿದೆ. ಆದರೆ ಈ ಸೂಚನೆಯನ್ನು ಒಪ್ಪುವುದಕ್ಕೆ ಆತಂಕಗಳು ಹಲವಾರಿವೆ.

ವಡ್ಡಾರಾಧನಕಾರ ಹರಿಷೇಣನ ಬೃಹತ್ ಕಥಾಕೋಶವನ್ನು ಅನುಸರಿಸಿಲ್ಲ ವೆಂಬುದಕ್ಕೆ ಭದ್ರಬಾಹುಕಥೆಯು ಉತ್ತಮ ಉದಾಹರಣೆಯಾಗಿದೆ. ಬೃಹತ್ ಕಥಾಕೋಶದಲ್ಲಿ

(i) ಚಂದ್ರಗುಪ್ತನೇ, ದೀಕ್ಷಾನಂತರ ವಿಶಾಖಾಚಾರ್ಯನಾಗುತ್ತಾನೆ.

(ii) ಭದ್ರಬಾಹುಮನಿ ದಕ್ಷಿಣಾಪಥಕ್ಕೆ ಬರುವುದಿಲ್ಲ.

(iii) ಚಂದ್ರಗುಪ್ತನು (ವಿಶಾಖಾಚಾರ್ಯ) ದಕ್ಷಿಣಾಪಥದ ‘ಪುನ್ನಾಟ’ ವಿಷಯಕ್ಕೆ ಪ್ರಯಾಣ ಮಾಡಿದನು.

(iv) ಚಂದ್ರಗುಪ್ತನ ರಾಣಿ ಸುಪ್ರಭೆ.

ಇವೇ ಮುಂತಾದ ವಿಷಯಗಳಿವೆ. ಇವು ವಡ್ಡಾರಾಧನೆಯಲ್ಲಿ ವ್ಯತ್ಯಾಸ ಪಡೆದಿವೆ:

(i) ಚಂದ್ರಗುಪ್ತವೇ ಬೇರೆ, ವಿಶಾಖಾಚಾರ್ಯನೆ ಬೇರೆ.

(ii) ಭದ್ರಬಾಹುಮುನಿ ದಕ್ಷಿಣಾಪಥಕ್ಕೆ, ಕೞ್ವಪ್ಪಿಗೆ ಬಂದು ಇಲ್ಲಿಯೇ ಮುಡಿಸಿದನು.

(iii) ಚಂದ್ರಗುಪ್ತನು ದಕ್ಷಿಣಾಪಥಕ್ಕೆ ಬಂದ ವಿಷಯವಿದ್ದರೂ ‘ಪುನ್ನಾಟ’ ದ ಪ್ರಸ್ತಾಪವೇ ಇಲ್ಲ.

(iv) ಚಂದ್ರಗುಪ್ತನ ರಾಣಿಯ ಹೆಸರು ಹೇಳಿಲ್ಲ.

ಇವುಗಳಲ್ಲಿ ಮೊದಲಿನ ಮೂರು ಅಂಶಗಳು ಧಾರ್ಮಿಕ – ಚಾರಿತ್ರಿಕ ದೃಷ್ಟಿಗಳಿಂದ ಮಹತ್ತರವಾದುವು. ಇವನ್ನು ಒಬ್ಬ ಲೇಖಕ ತಾನು ನೋಡಿದ ಮೂಲ ಗ್ರಂಥದಲ್ಲಿರುವುದಕ್ಕಿಂತ ಬೇರೆ ರೀತಿಯಲ್ಲಿ ಹೇಳುವುದು ಬಹುವಾಗಿ ಆಸಂಭವ. ಬೃಹತ್ ಕಥಾಕೋಶದಲ್ಲಿನ ಪುನ್ನಾಟದ ನದಲು, ವಡ್ಡಾರಾಧನೆಯಲ್ಲಿ ಕೞ್ವಪ್ಪು ಪ್ರಧಾನವಾಗಿದೆ. ಕ್ರಿ.ಶ. ಆಯ್ದನೆಯ ಶತಮಾನದವರೆಗೂ ಪುನ್ನಾಟ ಜೈನರ ಕೇಂದ್ರವಾಗಿತ್ತಲ್ಲದೆ, ಕನ್ನಡ ಹೆಗ್ಗಡದೇವನಕೋಟೆಯ ಪ್ರದೇಶವೂ ಆಗಿತ್ತು. ಈಗಿನ ಕಪಿನಿ ನದಿಯ ದಂಡೆಯಲ್ಲಿರುವ ಹೆಗ್ಗಡದೇವನಕೋಟೆಯ ಪ್ರದೇಶವೇ ‘ಪುನ್ನಾಟ ೬೦೦೦’ ಎಂಬುದು. ಇದಕ್ಕೆ ಕೀರ್ತಿಪುರ (ಈಗಿನ ಕಿತ್ತೂರು, ಹೆಗ್ಗದದೇವನಕೋಟೆ ತಾಲೂಕು) ರಾಜಧಾನಿಯಾಗಿತ್ತು. ಈ ಪುನ್ನಾಟ ಪುಷ್ಯರಾಗ ದೊರೆಯುವ ಪ್ರದೇಶವೆಂದು ಪಾಶ್ಚಾತ್ಯ ಪ್ರವಾಸಿಯೂ, ಭೂಗೋಳ ಶಾಸ್ತ್ರಜ್ಞನೂ ಆದ ಟಾಲೆಮಿ (೧೫೦) ಹೇಳಿದ್ದಾನೆ. ಈ ಪುನ್ನಾತ ಕನ್ನಡ ಶಬ್ದವಿರಬಹುದು. ಪುನಲನಾಟ್ (= ನದಿಗಳ ನಾಡು) ಎಂಬುದು ಪುನ್ನಾತ ಆಗಿರಬಹುದು. ಆಯ್ದನೆಯ ಶತಮಾನದ ಮೇಲೆ ಪುನ್ನಾಡು ಗಂಗ ರಾಜ್ಯದಲ್ಲಿ ಸಂಗಮವಾಯಿತು. ಪುನ್ನಾಡು ಶಬ್ದದ ಮುಂದುವರಿದ ರೂಪ ಹದಿನಾಡು.

ಹೀಗೆ ಭದ್ರಬಾಹು ಭಟಾರರ ಕಥೆ ವಡ್ಡಾರಾಧನೆಯ ಸಂಕಲನದಲ್ಲಿ ವಿಶಿಷ್ಟವಾದ ಕಥೆಯಾಗಿರುವಂತೆ ಜೈನ ಧರ್ಮದ ಸಂಕ್ಷಿಪ್ತ ಇತಿಹಾಸ ಕೈಗನ್ನಡಿಯೂ ಆಗಿದೆ.

ಕ್ರಿ.ಪೂ. ೩೨ ರಲ್ಲಿ ಪುಂಡ್ರವರ್ಧನ ನಗರದಲ್ಲಿ ಮುನಿಸಂಘಾಧಿಪತಿಗಳಾಗಿದ್ದ ಅರ್ಹದ್ಬಲ್ಯಾಚಾರ್ಯರಿಗೆ ಗುಪ್ತಿಗುಪ್ತರೆಂದೂ ವಿಶಾಖಾಚಾರ್ಯರೆಂದೂ ಇನ್ನೆರಡು ಹೆಸರಿಗಳಿದ್ದುವೆಂದು ಒಂದು ಹೇಳಿಕೆಯಿದೆ. ಅರ್ಹದ್ಬಲಿಗಳು ಅಷ್ಟಾಂಗನಿಮಿತ್ತ ಜ್ಞಾನಿಗಳಾಗಿದ್ದು ನಿಗ್ರಹಾನುಗ್ರಹ ಪೂರ್ವಕವಾಗಿ ಮುನಿಸಂಘವನ್ನು ಅಂಕೆಯಲ್ಲಿಟ್ಟಿದ್ದರು. ಜೈನಗುರುಗಳಲ್ಲಿ ಸಂಘ ಭೇಧ ತಲೆದೊರಿದ್ದು, ಇವರ ಕಾಲದಲ್ಲೇ ನೂರು ಯೋಜನೆ ಗಳಲ್ಲಿರುವ ಮುನಿಗಳನ್ನು ಆಯ್ದುವರ್ಷಕ್ಕೊಮ್ಮೆ ತಮ್ಮಲಿಗೆ ಬರಮಾಡಿ ಕೊಳ್ಳುತ್ತಿದ್ದರು, ಆಚಾರವಿಚಾರಗಳನ್ನು ವಿಚಾರಿಸಿ ಪ್ರಾಯಶ್ಚಿತ್ತ ನಿಯಮಾದಿಗಳನ್ನು ವಿಧಿಸುತ್ತಿದ್ದರು.