ಭ್ರಾಜಿಷ್ಣುವನ್ನಾಗಲಿ, ಅವನ ಆರಾಧನಾ ಕರ್ಣಾಟ ಟೀಕೆಯನ್ನಾಗಲಿ, ಸಂಸ್ಕೃತದ ರಾಮಚಂದ್ರ ಮುಮುಕ್ಷು ಹೊರತಾಗಿ ಕನ್ನಡದ ಯಾವ ಲೇಖಕನೂ ಹೆಸರಿಲ್ಲ. ಇಷ್ಟು ಒಳ್ಳೆಯ ಕೃತಿಯನ್ನು ಅದೇಕೆ ಅನಂತರದ ಬರೆಹಗಾರರು ಹೆಸರಿಸಿಲ್ಲವೆಂದು ಕೇಳಿದರೆ ಸರಿಯಾದ ಉತ್ತರಗಳಿಲ್ಲ. ಆರಾಧನಾ ಕರ್ಣಾಟಟೀಕಾದಿಂದ ಸಾಲುಗಳನ್ನು ಅನಾಮತ್ತಾಗಿ, ಹಸಿಹಸಿಯಾಗಿ ಬಳಸಿರುವ ದೇವಚಂದ್ರನು ಕೂಡ ಭ್ರಾಜಿಷ್ಣುವನ್ನು ಹೆಸರಿಸಿಲ್ಲ.

ಭ್ರಾಜಿಷ್ಣುವನ್ನು ಅವನ ತರುವಾಯದವರು ಹೆಸರಿದಿದ್ದರೂ, ಅವನ ಕೃತಿ ಒಂದು ಚಿರಂಜೀವಿ ಕೃತಿಯಾಗಿ ಉಳಿದಿದೆ. ಹಿಂಡನಗಲಿದ ಒಂಟಿ ಸಲಗನಂತೆ ಭ್ರಾಜಿಷ್ಣು ತಾನೇ ತಾನಾಗಿ ಎಲ್ಲರ ನಡುವೆ ಎದ್ದು ಕಾಣುತ್ತಾನೆ. ಜಿನಮುನಿಗಳನ್ನು ಪರಿಚಯಿಸುವಾಗ, ಉಪಸರ್ಗ ಹಾಗೂ ಪರೀಷಹಗಳ ಸಹಿಸಿಕೊಳ್ಳುವಿಕೆಯನ್ನು ವರ್ಣಿಸುವಾಗ ತೋರುವ ತನ್ಮತೆಯಿಂದ ಆತನ ಒಲವು ಯಾವ ಕಡೆಗೆ ಎಂಬುದು ಕಂಡು ಬರುತ್ತದೆ. ತಾತ್ವಿಕ ವಿವರಗಳನ್ನು ಕೊಡುವಾಗ ಯಾವ ಅಡೆತಡೆಯೂ ಇರದ ಸಲೀಸು ನಡಿಗೆಯೂ, ಕರತಲಾಮಲಕವಾಗಿದ್ದ ಧಾರ್ಮಿಕ ಗ್ರಂಥಗಳ ಮೇಲಿನ ಪ್ರಭುತ್ವವೂ ಈ ಪ್ರವೃತ್ತಿಯ ಫಲ. ಆಕಟೀ. ಗ್ರಂಥವು ಆರಾಧನಾದ ಕನ್ನಡ ವ್ಯಾಖ್ಯಾನವಾದರೂ ಕನ್ನಡ ಅವರತಣಿಕೆಯಲ್ಲ. ಅಜ್ಞಾತವಾಗಿಯೇ ಉಳಿದಿರುವ ಪ್ರಾಕೃತ ವ್ಯಾಖ್ಯಾನ ಗ್ರಂಥವೊಂದರ ಮಾದರಿಯನ್ನು ಅನುಸರಿಸಿರುವುದು ಒಂದು ವೇಳೆ ನಿಜವಾಗಿದ್ದ ಪಕ್ಷದಲ್ಲಿ, ಭ್ರಾಜಿಷ್ಣುವಿನದು ಮಕ್ಕಿಕಾ ಮಕ್ಕಿ ಅನುವಾದವಲ್ಲ. ಆಕಟೀದಲ್ಲಿರುವುದು ಸ್ವತಂತ್ರಕೃತಿಯ ತೇಜಸ್ಸು.

ಭ್ರಾಜಿಷ್ಣು ರಚಿಸಿರುವ ಆರಾಧನಾ ಕರ್ಣಾಟ ಟೀಕಾ ಗ್ರಂಥವು ದೀರ್ಘವಾದ ಆರಾಧನಾ ಕಥಾ ಪರಂಪರೆಗೆ ಸೇರಿದ ದೊಡ್ಡ ಪ್ರಮಾಣದ ಬೃಹದ್ಗ್ರಂಥ. ಅದು ಈಗ ನಮಗೆ ದೊರೆತಿರುವಂತೆ ೧೯ ಕಥೆಅಳ ಪರಿಮಿತಿಯಲ್ಲ. ಈಗ ಲಭ್ಯವಿರುವುದರ ಹಿಂದೂ ಮುಂದೂ ಇದ್ದ ಬಹು ಭಾಗ ನಷ್ಟವಾಗಿದೆ. ತಲೆ ಬಾಲ ಎರಡೂ ಇಲ್ಲದೆ ಭವ್ಯ ಬೃಹದ್ದೇಹದ ಒಂದು ಭಾಗವಷ್ಟೇ ಉಳಿದು ಬಂದಿರುವ ಆಕಟೀದ ಒಟ್ಟು ಗಾತ್ರದ ಪರಿಭಾವನೆಗೆ ಕೆಲವು ಪೂರಕ ಆಧಾರಗಳು ಸಿಗುತ್ತವೆ. ವಡ್ಡಾರಾಧನೆಯ ಕವಚವೆಂಬ ಅಧಿಕಾರ ಮಾತ್ರ ಬೇರ್ಪಟ್ಟು – ಪ್ರತ್ಯೇಕಗೊಂಡುದೇಕೆ, ಅದರ ಹಿಂದಣ – ಮುಂದಣ ಅಧಿಕಾರಗಳ ಗಾತ್ರ – ಸ್ವರೂಪಗಳೇನು ಎಂಬುದು ಚಿಂತನೀಯ. ಆಕಟೀಕೆಯು ಯಾವ ಸ್ವರೂಪದಲ್ಲಿ ಕನ್ನಡದಲ್ಲಿ ಮೈತಾಳಿರಬಹುದೆಂಬ ಊಹೆಯನ್ನು ಬಲಗೊಳಿಸಲು ಅನ್ಯಾನ್ಯ ಆಧಾರಗಳನ್ನು ಅವಲಂಬಿಸಬೇಕು. ಅವುಗಳಲ್ಲಿ ೧೭೦ ಕಥೆಗಳಿರುವ ಶ್ರೀಚಂದ್ರನ ಕಥಾಕೋಶ ಅಗ್ರಗಣ್ಯವಾಗಿ ನಿಲ್ಲುತ್ತದೆ. ವಿಸ್ತಾರವಾಗಿದ್ದ ಆಕಟೀ ಗ್ರಂಥದ ನಷ್ಟ ಭಾಗವನ್ನು ಶ್ರೀಚಂದ್ರನ ಅಪಭ್ರಂಶ ಭಾಷೆಯ ಕಹ ಕೋಸು (ಕಥಾಕೋಶ) ವನ್ನು ಆಶ್ರಯಿಸಿ, ಇವೆರಡರ ತುಲನಾತ್ಮಕ ಅಧ್ಯಯನದಿಂದ ಐದಂಶದ ಸಮಾನತೆಯನ್ನು ಡಾ || ಎಂ. ಎಂ. ಕಲಬುರ್ಗಿ (೧೯೭೩) ಸೂಚಿಸಿದ್ದಾರೆ;

೧. ಪ್ರತಿಯೊಂದು ಕಥೆಯ ತಲೆಯ ಮೇಲೆ ಇರುವ ಸಮಾನ ಗಾಹೆ.

೨. ವಡ್ಡಾರಾಧನೆಯಲ್ಲಿ ಗಾಹೆಗಳಿಗೆ ಇರುವುದು ಕನ್ನದ ಟೀಕೆ – ವಿವರಣೆ; ಶ್ರೀಚಂದ್ರನಲ್ಲಿರುವುದು ಸಂಸ್ಕೃತ ಟೀಕೆ.

೩. ಕನ್ನಡ ಕಥೆಗಳ ಒಡಲಲ್ಲಿ ಸಂಸ್ಕೃತ – ಪ್ರಾಕೃತ – ಕನ್ನಡ ಪದ್ಯಗಳ ಉದ್ಧರಣೆಗಳಿದ್ದರೆ ಶ್ರೀಚಂದ್ರನಲ್ಲಿ ಸಂಸ್ಕೃತ ಪ್ರಾಕೃತ ಉದ್ಧರಣೆಗಳಿವೆ.

೪. ಕನ್ನಡ ಕೃತಿಯ ಕಡೆಯಲ್ಲಿ ‘ಕವಚವೆಂಬಧಿಕಾರ’ ಎಂದಿದ್ದರೆ, ಶ್ರೀಚಂದ್ರನಲ್ಲಿ ‘ಕವಚಾಹಿಯಾರೋಯಂ’ ಎಂದಿದೆ.

೫. ಮೂಲ ಆರಾಧನಾ ಗ್ರಂಥದಲ್ಲಿನ ಕವಚಾಧಿಕಾರದ ೧೬೩೩, ೧೬೪೩, ೧೬೪೯, ೧೬೫೦ ಸಂಖ್ಯೆಯ ಗಾಹೆಗಳಿಗೆ ಹರಿಷೇಣನು ಸಂಸ್ಕೃತ ಬೃಹತ್ಕಥಾ ಕೋಶದಲ್ಲಿ ಶ್ರೀಪಾಲ, ನಾಮವಾದಿ, ಶಾಲಿಸಿಕ್ಥ, ಸುಭೌಮ (ಸುಭೂಮ) ಚಕ್ರವರ್ತಿಗಳ ಕಥೆಗಳನ್ನು ಹೇಳಿದ್ದಾನೆ. ಆದರೆ ಕನ್ನದ ಲೇಖಕನೂ ಶ್ರೀ ಚಂದ್ರನೂ ೧೫೫೭ ನೆಯ ಗಾಹೆಗೆ ವೃಷಭಸೇನಮುನಿ (ರಿಸಿಯರ) ಕಥೆ ಬರೆದಿದ್ದಾರೆ.

ಈ ಬಗೆಯ ಹೋಲಿಕೆ ಮತ್ತು ಸೂಚನೆಗಳ ಸುಳಿವು ಕೊಟ್ಟ ಆದ್ಯ ವಕ್ತಾರರು ಡಾ || ಆ.ನೇ. ಉಪಾಧ್ಯೆ. ಇದರೊಂದಿಗೆ ಆಕಟೀಕಾದ ಲುಪ್ತ ಭಾಗಗಳನ್ನೂ ಲಭ್ಯ ಭಾಗದೊಂದಿಗೆ ಕೂಡಿಸುವ ಕೊಂಡಿಯಾಗಿ ೧೫೭ ಕಥೆಗಳಿರುವ ಹರಿಷೇಣನ ಬೃಹತ್ಕಥಾ ಕೋಶವನ್ನೂ ಕೂಡಿಸಿಯೇ ತೌಲನಿಕ ಅಧ್ಯಯನವನ್ನು ಕೈಗೊಳ್ಳಬೇಕು. ೧೨೨ ಕಥೆಗಳಿರುವ ಪ್ರಭಾಚಂದ್ರನ ಕಥಾಕೋಶ ಹಾಗೂ ೧೪೪ ಕಥೆಗಳಿರುವ ನೇಮಿದತ್ತನ ಕಥಾ ಕೋಶಗಳು, ಹರಿಷೇಣ – ಶ್ರೀಚಂದ್ರರ ಕಥಾಕೋಶಗಳ ವ್ಯಾಪ್ತಿ ಮತ್ತು ವೈಭವವನ್ನು ಪಡೆದಿಲ್ಲದಿದ್ದರೂ ಸವಿವರವಾದ ಪರಸ್ಪರ ಹೋಲಿಕೆಗೆ ನೆರವಾಗುತ್ತವೆ. ಅಲ್ಲದೆ ಹರಿಷೇಣ ಶ್ರೀ ಚಂದ್ರ ಪ್ರಭಾಚಂದ್ರ ನೇಮಿದತ್ತ ನಯನಂದಿ ಸಿಂಹಣಂದಿ ಛತ್ರಸೇನ ಬ್ರಹ್ಮದೇವ ರತ್ನಕೀರ್ತಿ ರಾಮಚಂದ್ರಮುನಿ ನಾಗರಾಜ ಭ್ರಾಜಿಷ್ಣು – ಮೊದಲಾದವರೆಲ್ಲ ಆರಾಧನಾ ಗ್ರಂಥಕ್ಕೆ ಕಥಾರೂಪವನ್ನು ತೊಡಿಸಿದ ಬಿಚ್ಚಳಿಸಿ ಟೀಕಾಕಾರರು. ಆರಾಧನಾ ಕರ್ಣಾತ ಟೀಕಾವೂ ಇದೇ ಪಾಳಿಯಲ್ಲಿ ನಿಲ್ಲುವ ಉದ್ಘ ಕೃತಿ.

ಈಗ ಇದರಲ್ಲಿ ಲಭ್ಯವಾಗಿರುವುದು ೧೯ ಕಥೆಗಳು, ಇನ್ನುಳಿದಿರುವ ಸುಮಾರು ೧೫೦ ಕಥೆಗಳಷ್ಟು ಪ್ರಮಾಣದ ಗ್ರಂಥ ನಮಗೆ ಅಲಬ್ಯವಾಗಿದೆ. ಅಂದರೆ ಇನ್ನೂ ಈಗಿರುವುದರ ಏಳರಷ್ಟು ಗಾತ್ರದ ಕೃತಿಭಾಗ ಕಳೆದು ಹೋಗಿದೆ. ಗ್ರಂಥದ ಗಾತ್ರ ಮಾತ್ರವಲ್ಲದೆ ಅದರ ಗುಣಾಂಶದ ಲಾಭ ಕನ್ನಡ ಸಾಹಿತ್ಯಕ್ಕೆ ಇಲ್ಲವಾದದ್ದು ದೊಡ್ಡ ಕೊರತೆಯೆನಿಸಿದೆ.

ಭ್ರಾಜಿಷ್ಣುವು ಈಗ ದೊರೆತು ಪ್ರಸಾರದಲ್ಲಿರುವ ೧೯ ಕಥೆಗಳಷ್ಟೇ ಬರೆದಿದ್ದನೆ ಎಂಬ ಸಂದೇಹಕ್ಕೆ ಅವಕಾಶವಿಲ್ಲದಂತೆ ಸಂಶಯಗಳನ್ನು ಛಿದ್ರಗೊಳಿಸಿದ ಶ್ರೇಯಸ್ಸು ರಾಮಚಂದ್ರ ಮುಮುಕ್ಷುವಿಗೆ ಸಲ್ಲುತ್ತದೆ. ಒಂದು ವೇಳೆ ಪುಣ್ಯಾಸ್ರವ ಕಥಾಕೋಶ ಅನುಪಲಬ್ಧವಾಗಿದ್ದರೆ, ಅಥವಾ ಅದು ಉಪಲಬ್ಧವಾಗಿಯೂ ರಾಮಚಂದ್ರ ಮುಮುಕ್ಷುವು ತಾನು ಈ ‘ಆರಾಧನಾ ಕರ್ಣಾಟ ಟೀಕಾ’ ಗ್ರಂಥದ ಆಧಾರದಿಂದ ಶ್ರೇಣಿಕನ ಕಥೆಯನ್ನು ಹೇಳುತ್ತಿರುವುದಾಗಿ ನಮೂದಿಸಿದೆ ಹೋಗಿದ್ದರೆ ಆಗ ಭ್ರಾಜಿಷ್ಣುವು ಅನಾಮಧೇಯನಾಗಿ ಇನ್ನೂ ಬಹುಕಾಲ ಅಜ್ಞಾತವಾಸನವನ್ನು ಅನುಭವಿಸ ಬೇಕಾಗುತ್ತಿತ್ತು. ಅಹಿಂಸಾಪಾಲಕನಾದ ರಾಮಚಂದ್ರಮುನಿ ಭ್ರಾಜಿಷ್ಣುವಿಗೆ ಒದಗ ಬಹುದಾದ ಆ ಬಗೆಯ ಹಿಂಸೆಯನ್ನು ತಪ್ಪಿಸಿದ್ದಾನೆ. ಇಷ್ಟಾಗಿಯೂ ಭ್ರಾಜಿಷ್ಣುವಿನ ಅಸ್ತಿತ್ವವನ್ನು ಒಪ್ಪಿಕೊಳ್ಲಲು ಆ.ನೇ. ಉಪಾಧ್ಯೆ ಹಿಂಜರಿದರು. ವಡ್ಡಾರಾಧನೆ ಸಂಪಾದಕರು, ಅರಸುವ ಬಳ್ಳಿ ಕಾಲಿಗೆ ತೊಡರಿ ಭುಜವಲ್ಲರಿಯಾಗಿ ಅಡರಿ ಕುಳಿತಿದ್ದರೂ ಬಿಡಿಸಿ ಕೊಡವಿದ್ದು ವಿದ್ವತ್ ಪ್ರಪಂಚದ ಅಚ್ಚರಿಗಳ ಸಾಲಿಗೆ ಸೇರಿಹೋಗಿದೆ.

ಡಿ.ಎಲ್. ನರಸಿಂಹಾಚಾರ್ಯರಲ್ಲಿ, ಭ್ರಾಜಿಷ್ಣುವಿನ – ಕರ್ತೃತ್ವದ ವಿಚಾರವಾಗಿ ಗೊಂದಲವಿದೆ. ಅವರಲ್ಲಿ ದ್ವಂದ್ವವಿರುವುದು ಕೆಲವು ಕಡೆ ಒಡೆದು ಕೇಳುತ್ತದೆ: ಸಂಸ್ಕೃತದಲ್ಲಿರುವ ರಾಮಚಂದ್ರ ಮುಮುಕ್ಷುವಿನ ಪುಣ್ಯಾಸ್ರವ ಕಥಾಕೋಶದ ಬಗ್ಗೆ ಬರೆಯುತ್ತಾ, ಅದರಲ್ಲಿನ ಶ್ರೇಣಿಕ ರಾಜನ ಹಾಗೂ ಭದ್ರ ಬಾಹು ಮುನಿಯ – “ಕಥೆಗಳಿಗೆ ಕನ್ನಡದ ವಡ್ಡಾರಾಧನೆ ಆಕರವೆಂದು ತೋರುತ್ತದೆ” ಎಂದು ಒಂದು ಕಡೆ ಸ್ಪಷ್ಟವಾಗಿ ಹೇಳಿದ್ದಾರೆ. [ಶಾಂತಿನಾಥ ಕವಿಯ ಸುಕುಮಾರ ಚರಿತ್ರಂ, ಪೀಠಿಕೆ, ಪುಟ, ೨೯, ಎ ೧೯೫೪]. ಇನ್ನೊಂದು ಕಡೆ “ಪುಣ್ಯಾಸ್ರವ ಕಥಾಕೋಶವೆಂಬ ಗ್ರಂಥವನ್ನು ಸಂಸ್ಕೃತದಲ್ಲಿ ಬರೆದಿರುವ ರಾಮಚಂದ್ರ ಮುಮುಕ್ಷು, ಆ ಗ್ರಂಥ ಶ್ರೇಣಿಕನ ಕಥೆಯ ಅಂತ್ಯದಲ್ಲಿ ‘ಭ್ರಾಜಿಷ್ಣೋರಾ ರಾಧನಾ ಶಾಸ್ತ್ರೇ ಕರ್ಣಾಟ ಟೀಕಾ ಕಥಿತ ಕ್ರಮೇಣೋಲ್ಲೇಖ ಮಾತ್ರಂ ಕಥಿತೇಯಂ ಕಥಾ’ ಎಂದು ಹೇಳಿದ್ದಾನೆ. ಈ ಕರ್ಣಾಟ ಟೀಕಾ ಪ್ರಕೃತ ಕನ್ನಡ ಗ್ರಂಥವೇ; ಏಕೆಂದರೆ ಇಂಥ ಗ್ರಂಥ ಕನ್ನಡದಲ್ಲಿ ಬೇರೊಂದಿಲ್ಲ. ಆದ್ದರಿಂದ ಈ ಗ್ರಂಥವನ್ನು ‘ಆರಾಧನಾ ಶಾಸ್ತ್ರ ಕರ್ನಾಟ ಟೀಕಾ’ ಎಂದು ಬೇಕಾದರೂ ಕರೆಯಬಹುದು. ಈ ವಿಷಯ ಹಾಗಿರಲಿ…’ ಎಂದೂ ಅಸಂದಿಗ್ಧವಾಗಿ ಬರೆದಿದ್ದಾರೆ.

[ವಡ್ಡಾರಾಧನೆ, ಪೀಠಿಕೆ, ಪುಟ. ೧೪ (೧೯೭೦)]. ಹೀಗಿದ್ದೂ ಸತ್ಯವಾಕ್ಯ ಪೆರ್ಮಾನಡಿ ಆಚಾರ್ಯರು ಕೈಹಿಡಿದಿದ್ದ ಆರಾಧನಾ ಕರ್ಣಾಟ ಟೀಕಾಕಾರನಾದ ಭ್ರಾಜಿಷ್ಣುವನ್ನು ಮರೆತು, ನಡುನೀರಿನಲ್ಲಿ ಕೈಬಿಟ್ಟು, ಶೌರಸೇನಿ ಪ್ರಾಕೃತ ಆರಾಧನಕಾರನಾದ ಶಿವಕೋಟ್ಯಾಚಾರ್ಯನ ಬೆನ್ನುಹತ್ತಿದರು; ತುಪ್ಪಕ್ಕೆಂದು ಅರಸುತ್ತಿದ್ದ ಬೆಣ್ಣೆಯನ್ನು ತಮ್ಮ ಅಂಗೈ ಮೇಲಿಟ್ಟುಕೊಂಡಿದ್ದರೂ ಊರೆಲ್ಲ ಹುಡುಕಲು ಹೊರಟು ಹೊಲಬು ತಪ್ಪಿದರು. ಭ್ರಾಜಿಷ್ಣುವು ಕನ್ನಡ ಸಂಸ್ಕೃತ ಪ್ರಾಕೃತಗಳಲ್ಲಿ ಘನ ಪಂಡಿತನೆಂಬುದಕ್ಕೆ ಆಕಟೀ ಗ್ರಂಥದುದ್ದಕ್ಕೂ ಸಾದ್ಯಂತವಾಗಿ ಪುರಾವೆಗಳಿವೆ. ವಡ್ಡಾರಾಧನೆ ಎಂಬ ಹೆಸರನ್ನು ಈಗ ನಮಗೆ ಸಿಕ್ಕಿರುವ ೧೯ ಕಥೆಗಳ ಕವಚಾಧಿಕಾರವನ್ನು ಮೂಲದಿಂದ ಕತ್ತರಿಸಿ ತೆಗೆದು, ಅದಕ್ಕೆ ಕಸಿಮಾಡುತ್ತ ಬಂದ ಅನಂತರದ ಸಂಪಾದನೆಕಾರರು ಕೊಟ್ಟ ಹೆಸರೊ, ಅಥವಾ ಮೂಲ ಭ್ರಾಜಿಷ್ಣುವೇ ಇಟ್ಟ ಹೆಸರೊ – ಸರಿಯಾಗಿ ತಿಳಿಯದು. ತಾತ್ಕಾಲಿಕ ಗ್ರಹಿಕೆಯಾಗಿ ಇದು ಆಕಟೀ. ದ ಭ್ರಾಜಿಷ್ಣುವೇ ಮಾಡಿದ ನಾಮಕರಣವೆಂದು ಸ್ವೀಕರಿಸುವುದಕ್ಕೆ ಬಾಧಕವಿಲ್ಲ. ‘ಭಗವತೀ ಆರಾಧನಾ’, ‘ಬೃಹದಾರಾಧನಾ’ ಎಂಬ ಸಂಸ್ಕೃತ ಶಬ್ದಾರ್ಥ ರೂಪಕ್ಕೆ ಎಲ್ಲ ವಿಧದಲ್ಲೂ ಸಂವಾದಿಯಾಗಿರುವ ಸಮಾನಾರ್ಥಕ ಆಕೃತಿ ‘ವಡ್ಡಾರಾಧನಾ’ ಎಂಬುದು. ಇದುವರೆಗೆ [ಸಾನೂ ಸೇರಿ : ವಡ್ಡಾರಾಧನೆ: ಮೈ.ವಿ.ವಿ. ಪ್ರಚಾರೋಪನ್ಯಾಸ ಮಾಲೆ (೧೯೬೮)] ಹಲವಾರು ಸಲ ಹೇಳಿದ್ದೆ ಹೇಳುತ ಬಂದಿರುವ – ‘ವರ್ಧಮಾನ, ವೃಧ್‍ವರ್ದ್‍, ವೃದ್ಧ – ಎಂಬಿತ್ಯಾದಿ ಸಂಸ್ಕೃತ ರೂಪಗಳು ಪ್ರಾಕೃತಗೊಂಡು ಈ ವಡ್ಡಾರಾಧನೆ, ರೂಪ ಸಿದ್ಧಿಸಿದೆ’ ಎಂಬ ವಿವರಣೆಯನ್ನು ಕೈ ಬಿಡುವುದು ಮೇಲು.

‘ವಡ್ಡಾರಾಧನೆ’ ಎಂಬ ಶಬ್ದರೂಪ ನಿಷ್ಪತ್ತಿ ಕೊಂಚ ಕ್ಲೇಶದಾಯಕನೆಂಬ ನಿಜ; ಪ್ರಾಕೃತ ವಿದ್ವಾಂಸರು ಅದನ್ನು ದೇಶೀಶಬ್ದಗಳಲ್ಲಿಟ್ಟಿದ್ದಾರೆ. ಅಂತೂ ಸಂಸ್ಕೃತದ ಬೃಹತ್ಕಥಾ ಎಂಬುದು ಅನಾಮತ್ತಾಗಿ ಪ್ರಾಕೃತೀಕರಣಗೊಂಡು ವಡ್ಡಕಥಾ ಎಂದಾಗಿರುವುದು ಹೆಚ್ಚು ಸಂಭಾವ್ಯ. ಅಚ್ಚಗನ್ನಡ ಅರಸರಾದ ಗಂಗರ ರಾಜನಾದ ದುರ್ವಿನೀತನು, ಗುಣಾಢ್ಯನ ಬೃಹತ್ಕಥೆಯನ್ನು ಪೈಶಾಚೀ ಪ್ರಾಕ್ರುತದಿಂದ ಸಂಸ್ಕೃತಕ್ಕೆ ವಡ್ಡಕಥೆ (ದೇವಭಾರತೀನಿಬದ್ಧ ವಡ್ಡಕಥೇನ) ಎಂಬ ಹೆಸರಿನಿಂದ ಪರಿವರ್ತಿಸಿದ್ದನು (Uttanurplates : M.A.R., ೧೯೧೬-೧೯೧೭, ೬೫-೬೬); ಈ ಆಧಾರವು ಕೂಡ ‘ವಡ್ಡಾರಾಧನೆ’ ಯ ಆದಿಭಾಗವಾದ ‘ವಡ್ಡ’ ವು ದೊಡ್ಡ ಎಂಬರ್ಥಕ್ಕೆ ಬೊಟ್ಟು ಮಾಡುತ್ತದೆಂಬುದಕ್ಕೆ ಒದೆಗಲ್ಲಾಗಿ ನಿಲ್ಲುತ್ತದೆ. ಪ್ರಾಕೃತ ಕೃತಿಯಾದ ‘ಕುವಲಯ ಮಾಲಾ’ ದಲ್ಲಿ ಅದರ ಕರ್ತೃವಾದ ಉದ್ಯೋತನ ಸೂರಿಯು (ಕ್ರಿ.ಶ. ೭೭೯) ಗುಣಾಢ್ಯನ ಬೃಹತ್ಕಥಾವನ್ನು ವಡ್ಡಕಹಾ ಎಂದು ಹೆಸರಿಸಿದ್ದಾನೆ.

ಆಕಟೀ. ಕಾರನು ತನ್ನ ಕನ್ನಡ ಟೀಕೆಗೆ ಮೂಲವಾಗಿ ಶಿವಕೋಟಿಮುನಿಯ ಆರಾಧನಾ ಗ್ರಂಥವನ್ನಷ್ಟೇ ಅವಲಂಬಿಸಿಲ್ಲ. ಭ್ರಾಜಿಷ್ಣುವಿನ ಪ್ರಾಕ್ರುತ ಪಾಂಡಿತ್ಯದ ವಿಸ್ತಾರವನ್ನೂ, ಅಂತರ ಬಾಹ್ಯ ಪ್ರಮಾಣಾಧಾರಗಳನ್ನೂ ನೋಡಿದರೆ ಈತನಿಗೆ ಪ್ರಾಕೃತ ವ್ಯಾಖ್ಯಾನವೊಂದು ಕಣ್ಣೆದುರು ಇರುವಂತೆ ತೋರುತ್ತದೆ. ಸಂಸ್ಕೃತ – ಪ್ರಾಕೃತಗಳೆರಡರಲ್ಲೂ, ಉಭಯಭಾಷಾ ಪ್ರಾವೀಣ್ಯವಿದ್ದರೂ ಆಕಟೀದ ಆರಂಭದಿಂದ ಕಡೆಯ ತನಕ ತಲತಸ್ಪರ್ಶಿಯಾದ ಪ್ರಾಕೃತ ವಿದ್ವತ್ ಜಿನುಗುತ್ತದೆ. ಜೈನಶೌರಸೇನೀ ಪ್ರಾಕೃತದಲ್ಲಿ ಇರುವ ಆರಾಧನಾದ ಪ್ರಭುತ್ವವೇ ಅಲ್ಲದೆ ಅರ್ಧಮಾಗಧೀ, ಅಪಭ್ರಂಶ ಪ್ರಾಕೃತ ಪ್ರಭಾವವೂ ಆಕಟೀದಲ್ಲಿದೆ. ಆಕಟೀಕಾರನಾದ ಭ್ರಾಜಿಷ್ಣುವೂ, ಕಹಕೋಸು ಕಥಾಕೋಶಕಾರನಾದ ಶ್ರೀಚಂದ್ರನೂ ಹಲವು ವಿಷಯಗಳಲ್ಲಿ ಸಾಮ್ಯರಾಗಿರುವುದ ರಿಂದ ಇವರಿಬ್ಬರೂ ಒಂದು ಮೂಲದ, ಒಂದು ಸಂಪ್ರದಾಯದ ಆರಾಧನಾ ಟೀಕಾವನ್ನು ಅವಲಂಬಿಸಿರುವ ಸಾಧ್ಯತೆಯಿದೆ. ಏಕೆಂದರೆ ಹರಿಷೇಣಾದಿ ಸಂಸ್ಕೃತ ಕಥಾ ಕೋಶಕಾರರು ಅನುಸರಿಸಿರುವುದು ಈ ಕನ್ನಡ – ಪ್ರಾಕೃತ ಟೀಕಾಕಾರರಿಂದ ಬೇರೆಯಾದ ಪರಂಪರೆಗೆ ಸೇರಿದ ವ್ಯಾಖ್ಯಾನ ಪಾಠವಾಗಿದೆ. ಅಲ್ಲದೆ ಇಲ್ಲಿಯೇ ಹೇಳ ಬೇಕಾದ ಇನ್ನೊಂದು ಹೇಳಿಕೆಯೂ ಇದೆ; ಆಕಟೀ. ಕಾರನಾದ ಭ್ರಾಜಿಷ್ಣುವು ಶ್ರೀಚಂದ್ರ ಹರಿಷೇಣ, ರಾಮಚಂದ್ರ ಮುಮುಕ್ಷು, ಆಶಾಧರ ಸೂರಿ- ಮೊದಲಾದವರಿಗಿಂತ ಪ್ರಾಚೀನನು. ಅಷ್ಟೇಕೆ, ಇದುವರೆಗೆ ತಿಳಿದು ಬಂದಿರುವ ಆರಾಧನಾ ಟೀಕಾಕಾರದಲ್ಲಿ ಅಪರಾಜಿತ ಸೂರಿ ಮತ್ತು ಭ್ರಾಜಿಷ್ಣುವೇ ಪ್ರಾಚೀನರು. ಅಪರಾಜಿತ ಸೂರಿಯ ವಿಜಯೋದಯಾ ವ್ಯಾಖ್ಯಾನವೂ, ಆಕಟೀ,ವೂ ಪರಸ್ಪರ ಯಾವ ನೆಲೆಯಲ್ಲಿ ಪ್ರಭಾವ ತೋರುತ್ತವೆ. ಭಿನ್ನವಾಗಿ ನಿಲ್ಲುತ್ತವೆ, ಯಾವುದು ಪ್ರಾಚೀನ – ಎಂಬ ಅಧ್ಯಯನ ಇನ್ನೂ ಆಗಿಲ್ಲ; ಇದು ಇನ್ನೂ ಸಂಶೋಧನೆಗೆ ಮುಕ್ತನಾಗಿ ತೆರೆದ ವಿಷಯ.

ಭ್ರಾಜಿಷ್ಣುವಿನ ಇತಿವೃತ್ತ

ಭ್ರಾಜಿಷ್ಣು ಯಾರು? ಈತ -ಎಲ್ಲಿಯವನು, ಯಾವ ಕಾಲದವನು, ಈತನ ಇತಿ ವೃತ್ತವೇನು – ಇವಿಷ್ಟೂ ಅಯೋಮಯವಾಗಿದೆ. ಈ ಹೆಸರಿನ ವ್ಯಕ್ತಿಯೊಬ್ಬ ಇರುವನೆ ಎಂಬ ಶಂಕೆ ವ್ಯಕ್ತಪಟ್ಟಿದ್ದೂ ಉಂಟು. ಜೈನರ ಆದಿತೀರ್ಥಂಕರನಾದ ವೃಷಭನಾಥ (ಆದಿದೇವ / ಪುರುದೇವ / ಋಷಭದೇವ) ನಿಗೆ ಇರುವ ನೂರಾರು ಹೆಸರುಗಳಲ್ಲಿ ಭ್ರಾಜಿಷ್ಣು ಎಂಬುದೂ ಒಂದು ಎಂಬುದು ಮೊದಲು ನೆನಪಿಡಬೇಕಾದ ವಿಶಯ. ಎರಡನೆಯದಾಗಿ ಭ್ರಾಜಿಷ್ಣುವನ್ನು, ಅದರಲ್ಲಿಯೂ ಆತನ ಈ ಕೃತಿಯ ಹೆಸರಿನೊಂದಿಗೆ ಪ್ರಸ್ತಾಪಿಸಿರುವ ಅನ್ಯಾನ್ಯ ಉಲ್ಲೇಖಗಳೂ ಇವೆ. ಈ ಒಳ – ಹೊರಗಿನ ಸಮರ್ಥನೆ ಮಾಡುವ ಪ್ರಮಾಣಗಳ ತಳಹದಿಯಿಂದ ನಾವು ಭ್ರಾಜಿಷ್ಣುವಿನ ಅಸ್ತಿತ್ವವನ್ನು ಪ್ರಶ್ನಿಸುವ ಸಂಶಯಕ್ಕೆ ಪೂರ್ಣವಿರಾಮವಿಡಬೇಕು.

ಭ್ರಾಜಿಷ್ಣುವನ್ನು ಮೊಟ್ಟಮೊದಲನೆಯ ಬಾರಿಗೆ ನಮ್ಮ ಕಣ್ಣ ಮುಂದೆ ತಂದು ನಿಲ್ಲಿಸಿದ್ದು ರಾಮಚಂದ್ರಮುನಿ. ಸಂಸ್ಕೃತದಲ್ಲಿರುವ ಪ್ರಸಿದ್ಧ ಕಥಾಕೋಶಗಳಲ್ಲಿ ರಾಮಚಂದ್ರ ಮುಮುಕ್ಷುವಿನ ಪುಣ್ಯಾಶ್ರವ ಕಥಾಕೋಶವೂ ಒಂದು. ಕುಂದ ಕುಂದಾನ್ವಯದ ಕೇಶವನಂದಿದೇವ ಎಂಬ ಜೈನ ಯತಿಪತಿಯ ಶಿಷ್ಯನಾದ ರಾಮಚಂದ್ರ ಯತಿಯ (ರಾಮಚಂದ್ರಮುನಿ / ರಾಮಚಂದ್ರ ಮುಮುಕ್ಷು). ಕಾಲ ವಿಚಾರದಲ್ಲಿ ಸಹಮತವಿಲ್ಲ. ಈತನು ರಚಿಸಿರುವ ಪುಣ್ಯಾಸ್ರವ ಕಥಾಕೋಶವನ್ನು ಆಧರಿಸಿ ಕನ್ನಡ ಕವಿಯಾದ ನಾಗರಾಜನು ೧೩೩೧ ರಲ್ಲಿ ‘ಪುಣ್ಯಾಸ್ರವ ಚಂಪೂ’ ಕಾವ್ಯವನ್ನು ರಚಿಸಿದ್ದಾನೆ. ಹನ್ನೊಂದನೆಯ ಶತಮಾನದವನಿರಬಹುದೆನ್ನಲಾದ ರಾಮಚಂದ್ರ ಮುನಿಯ ಈ ಕಥಾಕೋಶದಲ್ಲಿ ೫೨ ಕಥೆಗಳಿವೆ. ಭ್ರಾಜಿಷ್ಣು ಎಂದು ಕೃತಿಕಾರನ ಹೆಸರನ್ನೂ, ಆರಾಧನಾ ಕರ್ಣಾಟ ಟೀಕಾ ಎಂದು ಕೃತಿಯ ಹೆಸರನ್ನೂ ಈ ರಾಮಚಂದ್ರ ಮುಮುಕ್ಷುವು ತನ್ನ ಪುಣ್ಯಾಸ್ರವ ಕಥಾಕೋಶದಲ್ಲಿ, ಶ್ರೇಣಿಕರಾಜನ ಕಥಾ ಪ್ರಸಂಗ ಬಂದಾಗ ಈ ರೀತಿ ಪ್ರಸ್ತಾಪಿಸಿ ಉಪಕರಿಸಿದ್ದಾನೆ:

ಭ್ರಾಜಿಷ್ಣೋರಾರಾಧನಾ ಕರ್ಣಾಟ ಟೀಕಾ ಕಥಿತ ಕ್ರಮೇಣೋಲ್ಲೇಖ
ಮಾತ್ರಂ ಕಥಿತೇಯಂ ಕಥಾ ಇತಿ
||

(ಭ್ರಾಜಿಷ್ಣು ಬರೆದಿರುವ ಆರಾಧನಾ ಕರ್ಣಾಟ ಟೀಕಾದಲ್ಲಿ ಹೇಳಲಾಗಿರುವ ರೀತಿಯಲ್ಲಿ ಮಾತ್ರವೇ ಕ್ರಮವಾಗಿ ಕಥಾನಿರೂಪಣೆ ಮಾಡುತ್ತೇನೆ). ಇಲ್ಲಿ ಮೂರು ಸ್ವಾರಸ್ಯಕರ ಸಂಗತಿಗಳಿವೆ : ೧) ರಾಮಚಂದ್ರ ಮುನಿಯ ಕಾಲಕ್ಕಾಗಲೆ ಆ ಕವಿಯ ಖ್ಯಾತಿ ಅಖಿಲ ಭಾರತ ಮನ್ನಣೆ ಗಳಿಸಿತ್ತು. ೨) ಸಂಸ್ಕೃತ – ಪ್ರಾಕೃತಗಳಿಂದ ಕವಿಗಳು ಕನ್ನಡಕ್ಕೆ ಕೃತಿಗಳನ್ನು ಅಳವಡಿಸುವುದು ವಾಡಿಕೆ – ಸತ್ಸಂಪ್ರದಾಯ; ಆದರೆ ಕನ್ನದ ಟೀಕಾ ಗ್ರಂಥವನ್ನು ಆಧರಿಸಿ, ಸಂಸ್ಕೃತ ಕಥಾ ಕೋಶಕಾರನು ತನ್ನ ಕೃತಿರಚನೆಗೆ ತೊಡಗಿದ್ದಾನೆ; ಇದಿರಿಂದ ಭ್ರಾಜಿಷ್ಣುವಿನ ಹಿರಿಮೆಯೊಂದಿಗೆ ಕನ್ನಡದ ಗರಿಮೆಯೂ ಪ್ರಕಾಶಿತವಾಗಿದೆ.

೩) ಆಕಟೀ. ಗ್ರಂಥವು ಕಥಾಕೋಶರೂಪದ ಕೃತಿಯಾಗಿತ್ತು.

ಭ್ರಾಜಿಷ್ಣು ಟೀಕಾಕಾರನಾದರೂ ವಿದುಷ. ಆತನ ವೈದುಷ್ಯವನ್ನು ಆಕಟೀ. ದ ಪ್ರತಿ ಪುಟವೂ ಸಾರುತ್ತದೆ. ಆತನ ಕಲ್ಮೆಯಲ್ಲಿ ಲೌಕಿಕ, ಧಾರ್ಮಿಕ, ಸಾಮಾಜಿಕ, ಭಾಷಿಕ, ಐತಿಹಾಸಿಕ ಅರಿವುಗಳೆಲ್ಲ ಮಿಳಿತವಾಗಿವೆ. ಸಂಪ್ರದಾಯ ತತ್ವಗಳಲ್ಲಿ ಪರಂಪರೆಯಿಂದ ಹಲವು ತಲೆ ಮೊರೆಗಳ ಮೂಲಕ ಕಾಪಿಟ್ಟು ಬಂದ ಸಾಂಪ್ರಾದಾಯಿಕ ವ್ಯಾಖ್ಯಾನ ಮಾರ್ಗದಲ್ಲಿ ಹೆಜ್ಜೆ ಹಾಕಿದ್ದರೂ ಅಂಧಶ್ರದ್ಧೆಯಿಂದ ಮುಂದುವರಿದಿಲ್ಲ. ಬಹುಸೂಕ್ಷ್ಮವಾದ ಜೈನಾಗಮೋಕ್ತ ದೇವತಾ ಶಾಸ್ತ್ರವನ್ನು, ತಾರ್ತಿಕ ಪ್ರವೃತ್ತಿಯ ಆಧುನಿಕ ದೇವತಾ ಶಾಸ್ತ್ರಜ್ಞನಂತೆ ಭ್ರಾಜಿಷ್ಣು ಅನುಸಂಧಾನಿಸಿರುವುದು ಶ್ಲಾಘ್ಯವಾಗಿದೆ. ಭ್ರಾಜಿಷ್ಣುವು ಬಹುಶ್ರತನೂ ಬಹು ಪಾರಗನೂ ಆಗಿದ್ದರೂ ಆತನದು ಶುಷ್ಕ ವಿದ್ವತ್ತಲ್ಲ. ತನಗಿರುವ ವಿಮರ್ಶನ ಪ್ರಜ್ಞೆ, ಸಮತೋಲನ, ಕವಿಹೃದಯ, ಔಚಿತ್ಯ ಜ್ಞಾನ – ಈ ಬಹುಮುಖಿ ಪ್ರತಿಭೆಯಿಂದಾಗಿ ಭ್ರಾಜಿಷ್ಣುವು ವ್ಯಾಖ್ಯಾನಕಾರರಲ್ಲಿ ಮೂರ್ಧನ್ಯನಾಗಿದ್ದಾನೆ. ಭ್ರಾಜಿಷ್ಣುವಿನ ಮನೋಧರ್ಮ ಅನುದ್ವಿಗ್ನವಾದದ್ದು ಪ್ರಶಾಂತವಾದದ್ದು.

ಟೀಕಾಗ್ರಂಥಗಳು ಕೇವಲ ಸಂಸ್ಕೃತ – ಪ್ರಾಕೃತ ಮೂಲದ ಆಗಮಾದಿ ಕೃತಿಗಳಿಗೆ ಬರೆದ ಕನ್ನಡ ಶಬ್ದಾರ್ಥ ವಿವರಣೆಯಷ್ಟೇ ಆಗಿರಬೇಕಾಗಿಲ್ಲ. ಟೀಕಾಕಾರರಾಗಿ ಘನ ವಿದ್ವಾಂಸರೂ, ದೊಡ್ಡ ಆಚಾರ್ಯರೂ ಆಗಿಹೋಗಿದ್ದಾರೆ. ಮೂಲ ಆಚಾರ್ಯ ಕೃತಿ ಕಾರರೂ ಬೆಳೆದು ಬಂದು ಬರೆದಿರುವ ಪರಂಪರೆ ಪರಿಸರದಲ್ಲಿ ಕೆಲವು ಟೀಕಾಕಾರರೂ ಬೆಳೆದಿರುವುದರಿಂದ ಪಾರಂಪಾರಿಕ ಪರಿಜ್ಞಾನವುಳ್ಳವರಾಗಿದ್ದಾರೆ. ಒಂದು ಕೃತಿಯ ಧಾರ್ಮಿಕ ಸಾಮಾಜಿಕ ಸಾಂಸ್ಕೃತಿಕ ಆಯಾಮ – ಹಿನ್ನೆಲೆಯನ್ನೂ ಅರಿತವರಾದ ವ್ಯಾಖ್ಯಾನಕಾರರಿದ್ದಾರೆ. ಹೀಗೆ ಸ್ವಯಮಾಚಾರ್ಯರಾದ ಕೆಲವು ಮಹಾನ್ ಟೀಕಾಕಾರರು ಸಂಸ್ಕೃತ ಶ್ಲೋಕ, ಪ್ರಾಕೃತ ಗಾಹೆ – ಇವುಗಳಲ್ಲಿ ಅಡಗಿರುವ ತಾತ್ಪರ್ಯದೊಂದಿಗೆ ತತ್ಸಂಬಂಧವಾದ ಕಥಾಕೋಶ ಭಾವಕೋಶ ಮತ್ತು ಇತರ ಜ್ಞಾತಿ ಮಾಹಿತಿಯ ಮೂಲಗಳಲ್ಲಿ ಸಮಾನ ತಿಳಿವಳಿಕೆಯುಳ್ಲವರೂ ಆಗಿದ್ದರು. ಇಂಥವರ ಸಾಲಿಗೆ ಸೇರಿದ ಮಹಾನ್ ಲೇಖಕ ಈ ಭ್ರಾಜಿಷ್ಣು, ಭ್ರಾಜಿಷ್ಣುವಿನ ಆಕಟೀ, ಗ್ರಂಥವು ವಾಖ್ಯಾನ ಪರಂಪರೆಗೆ ಸೇರಿದ ಕೃತಿಯೆಂದು ತಿಳಿಯುವುದಕ್ಕೆ ಗ್ರಂಥಗರ್ಭದಲ್ಲಿಯೇ ಸಾಕ್ಷ್ಯಗಳಿವೆ;

ನಮಃ ಶ್ರೀ ವರ್ಧಮಾನಾಯ . . . .. ಎಂದಿಂತು (೧)
ಗಮ್ಮ ಇ ಧಮ್ಮೇಣ ದೇವಳೋಯಂತು ಎಂಬುದು [೮೪]
ದೊಣ್ಹಂಪಿ ಖಯೇಣ ಣಿವ್ವಾಣಂ ಎಂದು [೮೫]
ಮಿಸ್ಸೇಣ ಮಾಣುಸತ್ತಮೆಂಬುದು [೮೫]

ವಡ್ಡಾರಾಧನೆಯ ಮೂಲ ಮತ್ತು ಕರ್ತೃ ಕುರಿತು ವಿವರವಾಗಿ ಚರ್ಚಿಸುತ್ತಾ ಡಾ.ಎಂ ಎಂ. ಕಲಬುರ್ಗಿಯವರೂ ಆ.ನೆ. ಉಪಾಧ್ಯೆ ಮತ್ತು ಡಿ. ಎಲ್. ಎನ್. ಅವರುಗಳೂ ಸೂಕ್ಷ್ಮವಾಗಿ ಪ್ರಸ್ತಾಪಿಸಿ, ದಿಕ್ಕು ತಪ್ಪಿದ ಇಂಥ ಎಳೆಗಳನ್ನು ಹಿಡಿದು ಕೂಡಿಸಿದ್ದಾರೆ. ಆರಾಧನಾ, ಮೂಲಾರಾಧನಾ, ಭಗವತೀ ಆರಾಧನಾ ಹಾಗೂ ಶಿವಕೋಟಿ- ಶಿವಕೋಟ್ಯಾಚಾರ್ಯ – ಈ ಮೂಲ ಕೃತಿಯನ್ನು ಮೂಲ ಕೃತಿಕಾರರನ್ನು ಗುರುತಿಸುವಾಗ ಪೂರ್ತಿ ಎಡವಿ ತಪ್ಪು ನಿರ್ಧಾರ ಕೈಗೊಂಡಿದ್ದರೂ ಈ ಕನ್ನಡ ಕಥಾಕೋಶದ ಹೆಸರನ್ನೂ, ಕಥಾಕೋಶಕಾರನ ಹೆಸರನ್ನೂ ಹೇಳುವ ಘಟ್ಟದಲ್ಲಿ ಹಿಂದಿನವರಂತೆ ಹಿಡಿದು – ಬಿಟ್ಟು ಕಣ್ಣ ಮುಚ್ಚಾಲೆ ಮಾಡದೆ, ಗಟ್ಟಿಯಾಗಿ ಸರಿಯಾದ ನಿರ್ಣಯವನ್ನೇ ಹಿಡಿದಿದ್ದಾರೆ: “ಇನ್ನು ಮುಂದೆ ಕನ್ನಡ ಕೃತಿಯ ಹೆಸರು ವಡ್ದಾ ರಾಧನೆಯಲ್ಲ, ‘ಆರಾಧನಾ ಕರ್ಣಾತ ಟೀಕೆ’ ಎಂದೂ, ಕರ್ತೃವಿನ ಹೆಸರು ಶಿವಕೋಟ್ಯಾ ಚಾರ್ಯನಲ್ಲ, ‘ಭ್ರಾಜಿಷ್ಣು’ ಎಂದೂ ಕರೆಯಬೇಕೆನಿಸುತ್ತದೆ” – [ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ (೧೯೭೩) ಪುಟ. ೨೩೪]: ‘ಕರೆಯಬೇಕೆನಿಸುತ್ತದೆ’ ಎಂಬಲ್ಲಿ ಅನುಮಾನದೆಳೆಯುವುದರಿಂದ ಅದನ್ನು ‘ಕರೆಯಬೇಕು’ ಎಂದು ಸಂಶಯರಹಿತ ದೃಢ, ಸೂಚಕ ಧ್ವನಿಯಿಂದ ಸ್ಥಿರೀಕರಿಸಬೇಕು.

ಈ ಹಂತದಲ್ಲಿ ಎದುರಾಗುವ ಇನ್ನೊಂದು ಸವಾಲಿಗೂ ಉತ್ತರವನ್ನು ಹುಡುಕಬೇಕಾಗಿದೆ. ಆರಾಧನಾ ಕರ್ಣಾತ ಟೀಕಾ ಎಂಬುದು, ಈಗ ದೊರೆಕಿರುವ ಗ್ರಂಥದ ಏಳುಪಟ್ಟು ದೊಡ್ಡದಾಗಿರಬೇಕಾದರೆ, ಇನ್ನುಳಿದ ಸಾವಿರಾರು ಪುಟ ಪ್ರಮಾಣದಷ್ಟು ನಷ್ಟವಾಗಿ ಅದರ ಆ ಬಹುಭಾಗದಿಂದ ಈ ೧೯ ಕಥೆಗಳನ್ನಷ್ಟೇ ಪೃಥಕ್ಕರಿಸಿ ಕೊಡಲು ಕಾರಣವೇನು? ಇದಕ್ಕೆ ವಡ್ಡಾರಾಧನೆ ಎಂದು ಹೆಸರಿಟ್ಟವರು ಯಾರು? ಎಂಬಂಥ ಪ್ರಶ್ನೆಗಳೇಳುತ್ತವೆ. ಅಲ್ಲದೆ ಈಗ ೧೯ ಕಥೆಗಳಲ್ಲಿ ೯ನೆಯ ಶತಮಾನದ ವರೆಗಿನ ಪ್ರಾಚಿನ ಕೃತಿಗಳಿಂದಲ್ಲದೆ ಅನಂತರದ ಕಾಲಕ್ಕೆ, ೧೦-೧೧ನೆಯ ಶತಮಾನಕ್ಕೆ ಸೇರಿದ ಕೃತಿಗಳಿಂದಲೂ ಆಯ್ದು ಪೋಣಿಸಿದ ಗಾಹೆ-ಶ್ಲೋಕ ಪದ್ಯಗಳಿವೆ : ಇದರಿಂದಾಗಿ ಭ್ರಾಜಿಷ್ಣುವಿನ ಕಾಲವನ್ನು ಯಾವುದೆಂದು ಗೊತ್ತುಪಡಿಸಬೇಕೆಂಬ ಪ್ರಶ್ನೆಯೂ ಉದ್ಭವಿಸುತ್ತದೆ.

ವಡ್ಡಾರಾಧನೆಯಲ್ಲಿರುವ ಉದ್ಧೃತ ಪದ್ಯಗಳಿಗೆ ಡಾ. ಆ.ನೇ. ಉಪಾಧ್ಯೆಯವರು ಪತ್ತೆಹಚ್ಚಿರುವ ಮೂಲ ಆಕರಗಳಲ್ಲಿ ೮೯೮ ರ ಗುಣಭದ್ರಾಚಾರ್ಯರ ಉತ್ತರ ಪುರಾಣದ ‘ಆದೌ ಜನ್ಮಜರಾರೋಗ’ ಎಂಬ ಶ್ಲೋಕವೂ ಒಂದು: ಈ ಪದ್ಯವೇಷ್ಟನದ ಆಧಾರದಿಂದಲೂ ಮತ್ತು ಇನ್ನಿತರ ಪೂರಕಾಧಾರಗಳಿಂದಲೂ ಈ ಕೃತಿ ೧೧ನೆಯ ಶತಮಾನಕ್ಕೆ ಸೇರುತ್ತದೆಂದು ಉಪಾಧ್ಯೆಯವರು ಸೂಚಿಸಿದ್ದಾರೆ. ಆದರೆ ಡಿ. ಎಲ್.ಎನ್. ರವರು ಆಂತರಿಕ ಆಧಾರಗಳನ್ನು ಸಮಷ್ಟಿ ದೃಷ್ಟಿಯಿಂದ ನೋಡಿ, ಇದು ಪಂಪ ಭಾರತಕ್ಕಿಂತ ಹಿಂದಿನ ರಚನೆಯೆಂದೂ, ಕ್ರಿ.ಶ. ೯೨೦ರಲ್ಲಿ ರಚಿತವಾಗಿರ ಬಹುದೆಂದೂ ಭಾವಿಸಿದ್ದಾರೆ. [ನಾನು ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಒಪ್ಪಿಸಿದ “ವಡ್ಡಾರಾಧನೆ : ಸಮಗ್ರ ಅಧ್ಯಯನ” ಎಂಬ ನಿಬಂಧದಲ್ಲಿ ಈ ಎಲ್ಲ ವಿಚಾರಗಳ ಪೂರ್ವಾಪದಗಳನ್ನು ಪ್ರಬಲ ಸಾಕ್ಷಾಧಾರಗಳಿಂದ ಚರ್ಚಿಸಿ ತಲಪಿದ ತೀರ್ಮಾನಗಳ ಸಾರಾಂಶವನ್ನು ಇಲ್ಲಿ ಪ್ರತಿಪಾದಿಸುತ್ತೇನೆ ]

ಆರಾಧನಾ ಕರ್ಣಾತ ಟೀಕಾ (ಇದಕ್ಕೆ ಆರಾಧನಾ ಶಾಸ್ತ್ರ ಕರ್ಣಾಟ ಟೀಕಾ ಎಂಬ ರೂಪದ ಹೆಸರೂ ಇದ್ದಿರಬಹುದು) ಎಂಬುದಷ್ಟೇ ಕನ್ನಡ ಟೀಕಾ ಗ್ರಂಥದ ಹೆಸರು. ಇದರ ಕರ್ತೃ ಭ್ರಾಜಿಷ್ಣು. ಈತನ ಇತಿವೃತ್ತದತ್ತ ಬೆಳಕು ಚೆಲ್ಲುವ ಸುಳಿವು ಸೂಚನೆಗಳಿಗೆ ನಾವೀಗ ಮುಗಿ ಬೀಳಬೇಕಾಗಿದೆ. ಶಿವಕೋಟ್ಯಾಚಾರ್ಯನ (ಸು. ಕ್ರಿ.ಶ. ೧ ನೆಯ ಶ.) ಆರಾಧನಾ (ಮೂಲಾರಾಧನಾ. ಭಗವತೀ ಆರಾಧನಾ, ಬೃಹದಾರಾಧನಾ) ಗ್ರಂಥವೇ ಕಥಾ ಕೋಶಗಳಿಗೂ, ಟೀಕಾ (ವ್ಯಾಖ್ಯಾನ) ಗ್ರಂಥಗಳಿಗೂ ಮೂಲ ತಲಕಾವೇರಿ. ಕನ್ನಡ ಕೃತಿ ಆಕಟೀ ಕೂಡ ಈ ಆರಾಧನಾ ಮತ್ತು ತತ್ಸಂಬಂಧಿಯಾದ ಮೌಖಿಕ ವ್ಯಾಖ್ಯಾನ ಪರಂಪರೆಗೆ ಸೇರಿದ್ದು.

ಪ್ರಾಕೃತ ಆರಾಧನಾ ಗ್ರಂಥಕ್ಕೆ ಪ್ರಥಮ ಬಾರಿಗೆ ವ್ಯಾಖ್ಯಾನವನ್ನು ಬರೆದವನು ಯಾರೆಂಬುದು ಖಚಿತವಾಗಿಲ್ಲ. ಉಪಲಬ್ಧ ವ್ಯಾಖ್ಯಾನಗಳಲ್ಲಿ, ಸಂಸ್ಕೃತದಲ್ಲಿರುವ ವಿಜಯಯೋದಯಾ ಎಂಬುದು ಮೊದಲನೆಯದು; ಇದರ ಕರ್ತೃವಾದ ಅಪರಾಜಿತ ಸೂರಿಯೂ ತನಗಿಂತ ಹಿಂದಣ ವ್ಯಾಖ್ಯಾನಕಾರರ ಅಭಿಪ್ರಾಯಗಳನ್ನು ಹಲವಾರು ಕಡೆ ಚರ್ಚಿಸಿದ್ದಾನೆ; ಆ ಪ್ರಾಚೀನ ವ್ಯಾಖ್ಯಾನಗಳೊಂದೂ ದೊರೆತಿಲ್ಲ. ಅಪರಾಜಿತ ಸೂರಿಗೆ ಶ್ರೀವಿಜಯ ಎಂಬ ಹೆಸರೂ ಇದೆ : ಇವೆರಡೂ ನಾಮವಾಚಕಗಳ ಅರ್ಥ ಒಂದೇ. ಶ್ರೀವಿಜಯ – ಅಪರಾಜಿತನು ಕರ್ನಾಟಕದವನೆಂದೂ ಆತನು ೧೧ ನೆಯ ಶತಮಾನ ಆರಂಭದವನೆಂದೂ ಒಂದು ಸೂಚನೆಯನ್ನು ಶಾಸನಗಳ ಆಧಾರದಿಂದ ಡಾ. ಆ. ನೇ. ಉಪಾಧ್ಯೆ ಕೊಟ್ಟಿದ್ದಾರೆ. (ಬೃಹತ್ಕಥಾಕೋಶದ ಪೀಠಿಕೆ; ಉಪಾಧ್ಯೆ ಪೇಪರ್ಸ್ : ಮೈಸೂರು ವಿಶ್ವವಿದ್ಯಾಲಯ (೧೯೮೩) ಪುಟ. ೪೬]. ಅಪರಾಜಿತ (ಶ್ರೀವಿಜಯ) ಸೂರಿಯು [ಕೞ್ವಪ್ಪು ಪ್ರಸ್ತಾಪಿತವಾಗಿದೆ; ಬಾಹುಬಲಿ ಮೂರ್ತಿಯ ಉಲ್ಲೇಖವಿಲ್ಲ. ೯೮೧ ಕ್ಕೂ ಹಿಂದಿನ ರಚನೆ.] ಭ್ರಾಜಿಷ್ಣುವನ್ನು ಹೆಸರಿಸಿಲ್ಲ. ಅಲ್ಲದೆ ವಿಜಯೋದಯ ವ್ಯಾಖ್ಯಾನದಲ್ಲಿ ಅಲ್ಲಲ್ಲಿ ಚರ್ಚಿಸಿರುವ ಪೂರ್ವ ಸೂರಿಕೃತ ವ್ಯಾಖ್ಯಾನಗಳಲ್ಲಿ ಆರಾಧನಾ ಕರ್ಣಾಟ ಟೀಕಾದ ಚರ್ಚೆ – ಪ್ರಸ್ತಾಪ ಇದೆಯೇ ಎಂದು ತೌಲನಿಕವಾಗಿ ಪರಾಮರ್ಶಿಸಲು ಆಕಟೀ ಪೂರ್ತಿಯಾಗಿ ದೊರೆತಿಲ್ಲ. ಅಥವಾ ಭ್ರಾಜಿಷ್ಣು ಏನಾದರೂ ಅಪರಾಜಿತ ಸೂರಿಯನ್ನು ಸ್ಮರಿಸಿದ್ದಾನೆಯೊ, ವಿಜಯೋದಯಾ ವ್ಯಾಖ್ಯಾನವನ್ನು ಅನುಸರಿಸಿದ್ದಾನೆಯೊ- ಎಂಬ ಪರಿಶೀಲನೆಯೂ ಅಸಾಧ್ಯವೆನಿಸಿದೆ.

ಭ್ರಾಜಿಷ್ಣುವಿನ ದೇಶ ಕಾಲ ಕೃತಿ ಕುರಿತ ಜಿಜ್ಞಾಸೆಗೆ ಈಷತ್ ಗ್ರಾಸವಂತೂ ಈಗ ಲಭ್ಯವಿದೆ. ಭ್ರಾಜಿಷ್ಣುವಿನ ಆಕಟೀ ಗ್ರಂಥವು ಪೂರ್ಣ ಪ್ರಮಾಣದಲ್ಲಿ ಅಲ್ಲವಾದರೂ ಅದರ ೧/೭ ಭಾಗದಷ್ಟಾದರೂ ಲಭ್ಯವಾಗಿದೆ. ಆಕಟೀದ ೧೯ (ಮತ್ತು ಇತರ) ಕಥೆಗಳು ಭಿನ್ನಕರ್ತೃಕಗಳಲ್ಲಿ, ಅವು ಏಕ ಕರ್ತೃಕ ಕಥೆಗಳು. ಆ ಕಥೆಗಾರ – ಟೀಕಾಕಾರನಾದ ಭ್ರಾಜಿಷ್ಣುವಿನ ಸ್ವಕೀಯ ಸಂಗತಿಗಳು ತಿಳಿಯುತ್ತಿಲ್ಲ. ಅದರ ಕಾಲ ನಿರ್ಧಾರಕ್ಕೆ ನೆರವಾಗುವ ಅಂಶವೆಂದರೆ ಆಂತರಿಕ ಆಧಾರ. ಅದರ ಭಾಷೆಯ ಸ್ವರೂಪವನ್ನು ಪೂರ್ಣವಾಗಿ ಅವಲಂಬಿಸುವಂತಿಲ್ಲವೆಂದು ಉಪಾಧ್ಯೆಯವರು ಭಾವಿಸಿದ್ದಾರೆ; ಆದರೆ ಈಗ ಇದು ಪ್ರಾಚೀನ ಲೇಖಕನಾದ ಭ್ರಾಜಿಷ್ಣುವಿನ ಕೃತಿಯೆಂದು ನಿಸ್ಸಂದೇಹವಾಗಿ ಸ್ಥಾಪಿತವಾಗಿರುವುದರಿಂದ, ಆಕಟೀದ ಭಾಷೆಯನ್ನೂ ಅನುಲಕ್ಷಿಸುವುದರಲ್ಲಿ ಔಚಿತ್ಯವಿದೆ. ‘ಕಾಲ ವಿಷಯದ ಚರ್ಚೆಯಲ್ಲಿ ವಡ್ಡಾರಾಧನೆಯ ಭಾಷೆ ಎಂಬ ವಿದ್ವತ್ ಪೂರ್ಣವಾದ ಲೇಖನದಲ್ಲಿ (ಸಾಧನೆ ೯-೨, ಏಪ್ರಿಲ್-ಜೂನ್ ೧೯೮೦ ಪುಟ ೩೩-೪೪) ಡಾ. ಎಂ. ಬಿ. ಭೋಯಿಯವರು (ಡಾ. ಎಂ.ಬಿ. ನೇಗಿನಹಾಳ ಅವರು) ಭಾಷಿಕ ಆಧಾರಗಳನ್ನು ಶಾಸನಗಳಿಂದಲೂ ಕಾವ್ಯಗಳಿಂದಲೂ ಉದಾಹರಿಸಿ. ವಡ್ಡಾರಾಧನೆಯ ಕಾಲವನ್ನು ಭಾಷಿಕ ಸಾಮಗ್ರಿಯ ಬಲದಿಂದ ಚರ್ಚಿಸಿದ್ದಾರೆ. ಡಾ. ಎಂ.ಬಿ. ನೇಗಿನಹಾಳ ಅವರು ಈ ಕೃತಿಯ ಕಾಲವನ್ನು ಕ್ರಿ.ಶ. ೮೦೦ ಎಂದು ಗೊತ್ತುಪಡಿಸಿ. ತಮ್ಮ ತೀರ್ಮಾನಕ್ಕೆ ಪೂರಕವಾಗುವ ಪ್ರಬಲವಾದ ಆಧಾರ- ಪ್ರಯೋಗಗಳನ್ನು ಮೌಲಿಕವಾದ ಸಂಪ್ರಬಂಧದಲ್ಲಿ ವಿಸ್ತಾರವಾಗಿ ಕೊಟ್ತಿದ್ದಾರೆ; ಡಾ. ಎಂ. ಬಿ. ನೇಗಿನಹಾಳ ಅವರ ತೀರ್ಮಾನವನ್ನು ಒಪ್ಪಿಕೊಳ್ಳಲು ಈಗ ಹೆಚ್ಚು ಪ್ರತಿಕೂಲ ಸಾಕ್ಷ್ಯಾಧಾರಗಳು ಕಾಣುತ್ತಿಲ್ಲ. ಅಲ್ಲದೆ ಸುಮಾರು ಹತ್ತನೆಯ ಶತಮಾನದವನಾದ ರಾಮಚಂದ್ರ ಮುಮುಕ್ಷುವು ಭ್ರಾಜಿಷ್ಣುವನ್ನೂ ಅವನ ಕೃತಿಯನ್ನೂ ಹೆಸರಿಸುವುದರ ಮೂಲಕ ಆ ಕೃತಿಯ ಉತ್ತರ ಕಾಲದ ಗಡಿಕಲ್ಲನ್ನು ನೆಟ್ಟಿದ್ದಾನೆ. ಡಾ. ಎಂ. ಬಿ. ನೇಗಿನಹಾಳ ಅವರು ಕ್ರಿ.ಶ. ೮೦೦ ಎಂದು ಪೂರ್ವ (ಕಾಲ) ದ ಗಡಿಕಲ್ಲು ನಿಲ್ಲಿಸಿದ್ದಾರೆ.

ಭ್ರಾಜಿಷ್ಣುವಿನ ಊರು ಪ್ರದೇಶ ಯಾವುದಿರಬಹುದೆಂಬ ವಿಚಾರವಾಗಿಯೂ ಜಿಜ್ಞಾಸೆ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯವನಿರಬಹುದೆಂದು ಕೆ.ಜಿ. ಕುಂದಣಗಾರರೂ, ಕೋಗಳಿ ಯವನಿರಬಹುದೆಂದು ಡಿ.ಎಲ್.ಎನ್.ರವರೂ ಸೂಚಿಸಿದ್ದಾರೆ. ಭ್ರಾಜಿಷ್ಣುವು ಇವೆರಡು ಪ್ರದೇಶಗಳ ಪರಿಚಯವಿದ್ದವನಾದರೂ ಈಗಿನ ಗುಲಬರ್ಗಾ – ಬೀದರ ಜಿಲ್ಲೆಯ ಕಡೆಯವನೆಮ್ದು ದೃಢವಾಗಿ ಹೇಳಲು ಅಂತರಿಕ ಅಧಾರಗಳು ಸಿಗುತ್ತವೆ:

ಅ ೧. ಭ್ರಾಜಿಷ್ಣುವು ಯಾಪನೀಯ ಸಂಘದ ಒಲವಿನವನು. ಯಾಪನೀಯ ಶಾಖೆ ಅತ್ಯಂತ ಕ್ರಿಯಾಶೀಲವಾಗಿದ್ದ ಭಾಗ ರಾಷ್ಟ್ರಕೂಟರ (ಉ.ಕ. ಜಿಲ್ಲೆಯಲ್ಲಿ, ಅದರಲ್ಲೂ ಗುಲ್ಬರ್ಗ ಜಿಲ್ಲೆಯ ಪರಿಸರದಲ್ಲಿ ಕ್ರಿ.ಶ. ೧೪೮ ರಲ್ಲಿ ಕಲಶ ಆಚಾರ್ಯನು ಸ್ಥಾಪಿಸಿದ ಯಾಪನೀಯ ಸಂಘ (ಜಾಪುಲಿ ಸಂಘ) ಕುರಿತು ಇಲ್ಲಿಯ ಭದ್ರ ಬಾಹು ಭಟಾರ ಕಥೆಯಲ್ಲಿ ಪ್ರಸ್ತಾಪಿಸಿರುವಂತೆ ಪ್ರಾಕ್ರುತ – ಸಂಸ್ಕೃತಗಳಲ್ಲಿರವ ಸಂವಾದಿಕಥೆಗಳಲ್ಲಿ ಇಲ್ಲ.

೨. ಗುರುದತ್ತ ಭಟಾರರ ಕಥೆಯಲ್ಲಿ ಹೇಳಿರುವ ಪಳ್ಳಿಖೇಡ ಎಂಬುದು ಈಗಿನ ಹಳ್ಳಿಖೇಡವಾಗಿದೆ. ಗುಲಬರ್ಗದಿಂದ ಬೀದರದ ಕಡೆಗೆ ಹೋಗುವ ಹೆದ್ದಾರಿಯಲ್ಲಿಯೇ ಇಂದಿಗೂ, ಒಂದಲ್ಲ ಎಂದು ಎರಡು ಹಳ್ಳಿಖೇಡಗಳಿವೆ. ಈ ಹೆಸರು ಇದೇ ಗುರುದತ್ತ ಭಟಾರರ ಕಥೆ ಇರುವ ಪ್ರಾಕೃತ – ಸಂಸ್ಕೃತ ಕೃತಿಗಳಲ್ಲಿ ಬಂದಿಲ್ಲದಿರುವುದನ್ನು ಗಮನಿಸಬಹುದು. ಅದರಿಂದ ಭ್ರಾಜಿಷ್ಣುವು, ಇಂದಿನ ಎರಡು ಹಳ್ಳಿ ಖೇಡಗಳಲ್ಲಿ ಒಂದು ಊರಿಗೆ ಸೇರಿದವನಿರಬೇಕು. ಕೋಗಳಿ ಎಂಬ ಹೆಸರು ಕೂಡ ಕನ್ನಡ ಕೃತಿಯಲ್ಲಿ ಮಾತ್ರ ಪ್ರಸ್ತಾಪಗೊಂಡಿದ್ದು ಅದರ ಸಂವಾದಿ ಕಥೆಗಳಲ್ಲಿ, ಸಂಸ್ಕೃತ – ಪ್ರಾಕೃತ ಕಥೆಗಳಲ್ಲಿ ಇಲ್ಲ; ಅದರಿಂದ ಭ್ರಾಜಿಷ್ಣು ಕೋಗಳಿ ಯವನೇ ಏಕಾಗಿರಬಾರದು ಎಂಬ ಪ್ರಶ್ನೆಗೂ ಉತ್ತರಿಸಬೇಕಾಗುತ್ತದೆ. ಭ್ರಾಜಿಷ್ಣುವು ಗುಲ್ಬರ್ಗದ ಕಡೆಯವನೇ ಆಗಿದ್ದಾನೆಂಬುದನ್ನು ತೋರಿ ಸಲು ಬೇರೆ ಆಧಾರಗಳಿರುವುದನ್ನು ಮುಂದೆ ಹೇಳಿದೆ.

ಆ. ದಂಡಕರಿಸಿಯ ಕಥೆಯಲ್ಲಿ ಮಳಯಖೇಡದ ಪ್ರಸ್ತಾಪ (ಪಾಠಾಂತರದಲ್ಲಿ) ಇದೆ. ಇದು ರಾಷ್ಟ್ರಕೂಟರ ರಾಜಧಾನಿಯಾದ ಮಳಖೇಡ – ಮಾನ್ಯ ಖೇಟವೇ ಆಗಿದೆ. ಮಳಖೇಡವು ಪೊನ್ನಕವಿಯ (ಸು. ೯೬೦) ಸಮಕಾಲೀನನಾದ ಪ್ರಾಕ್ರುತ ಪುಷ್ಪದಂತನ ಕಾಲದಲ್ಲಿ ಸುಟ್ಟು ಬೂದಿಯಾದುದನ್ನು ಕಣ್ಣಾರೆ ನೋಡಿ ಪುಷ್ಪದಂತನು ವರ್ಣಿಸಿದ್ದಾನೆ. ಅದರಿಂದ ಭ್ರಾಜಿಷ್ಣುವು ಈ ಅಕಟೀಕಾವನ್ನು ಮಳಯಖೇಡವಿನ್ನೂ ರಾಷ್ಟ್ರಕೂಟರ ರಾಜಧಾನಿಯಾ ವೈಭವದಿಂದ ಕೂಡಿದ್ದ ಕಾಲದಲ್ಲಿಯೇ, ಕ್ರಿ.ಶ. ೯೬೦ ಕ್ಕಿಂತ ಮುಂಚೆಯೇ ರಚಿಸಿರುವುದು ಸ್ಪಷ್ಟ. ಇ. ವಿದ್ಯುಚ್ಚೋರ ರಿಸಿಯ ಕಥೆಯಲ್ಲಿ ವೆಂಣಾನದಿ ಮತ್ತು ವೇಣಾತಟಾಕದ ಪ್ರಸ್ತಾಪವಿದೆ; ಇದು ಮೂಲ ಸಂವಾದಿ ಕಥೆಗಳಲ್ಲಿ, ಅನ್ಯಭಾಷೆಗಳಲ್ಲಿ ಇರದೆ ಭ್ರಾಜಿಷ್ಣುವಿನಲ್ಲಿ ಮಾತ್ರ ಬಂದಿದೆ. ವೆಂಣಾನದಿ ಕೂಡ ರಾಷ್ಟ್ರಕೂಟರ ಮತ್ತು ಮಳಖೇಡ ಪ್ರದೇಶದ ತೊರೆಯೆಂಬುದನ್ನು ಮರೆಯುವಂತಿಲ್ಲ. ಉದಾಹರಣೆಯಾಗಿ ಶಾಸನ ಪ್ರಯೋಗ :

ಕನ್ನಪುರಿ ವಿಷಯೇ ಸಿರ್ಮ್ಮಲಗೆ ಪೂರ್ವ್ವದಿಗ್ಭಾಗೇ ಕೃಷ್ಣಬೆರ್ಣ್ಣೋತ್ತರ ಪಥೇ ಬಾಸುರಿಕೋಡು ಇಂಗಳೀಸರ ಬಾಗೆವಾಡಿ ಸಾಮಳವಾಡಿಗೆ ಒಡ್ಡವೊಡಿಗೆ ಮಧ್ಯವರ್ತ್ತಿ ಪಿಪ್ಪರಗೆ ನಾಮಗ್ರಾಮೋ : ಕ್ರಿ.ಶ. ೮೬೨. ಇದು ಅಮೋಘ ವರ್ಷನ ಶಾಸನ. ಈ ಕಾರಣಗಳಿಂದ ಭ್ರಾಜಿಷ್ಣುವು ಗುಲಬರ್ಗಾ – ಬೀದರ ಜಿಲ್ಲೆಗಳ ಪ್ರದೇಶದವನೆಂದೂ, ರಾಷ್ಟ್ರಕೂಟ ಸಾಮ್ರಾಜ್ಯದ ಆಳ್ವಿಕೆಯಲ್ಲಿ ಇದ್ದವನೆಂದೂ, ಸುಮಾರು ಕ್ರಿ.ಶ. ೮೦೦ ರಿಂದ ೮೭೦ ರ ಅಚಧಿಯಲ್ಲಿ ಆರಾಧನಾ ಶಾಸ್ತ್ರ ಕರ್ಣಾಟಟೀಕಾವನ್ನು ರಚಿಸಿದನೆಂದೂ ಬಹುಮಟ್ಟಿಗೆ ನಿರ್ಧರಿಸಬಹುದು. ಇದರಿಂದ ಇನ್ನೂ ಒಂದು ವಿಶೇಷ ಮಹತ್ವವು ಈ ಕೃತಿಯ ಹಿರಿಮೆಗೆ ಕೂಡುಕೊಂಡಂತಾಗುತ್ತದೆ. ಆರಾಧನಾ ಗ್ರಂಥಕ್ಕೆ ರಚಿತವಾಗಿದ್ದು, ಇದುವರೆಗೆ ದೊರೆತಿರುವ ಟೀಕಾ ಗ್ರಂಥಗಳಲ್ಲಿ ಪ್ರಾಚೀನವೆಂದು ತಿಳಿಯಲಾದ ಅಪರಾಜಿತಸೂರಿಯ ವಿಜಯೋ ದಯಾದ ಕಾಲ ಸುಮಾರು ೯-೧೦ ನೆಯ ಶತಮಾನದ ಪೂರ್ವಾರ್ಧವೆಂದು ಇರುವುದರಿಂದ, ಕ್ರಿ.ಶ. ೯ನೆಯ ಶತಮಾನದ ಭ್ರಾಜಿಷ್ಣುವಿನ ಕನ್ನಡ ಟೀಕೆಯೇ ಪ್ರಾಚೀನತಮವಾಗುತ್ತದೆ.

ಈ ನೆಲೆಯಲ್ಲಿ ಎದುರಾಗುವ ಸಂಶಯವೆಂದರೆ ೧) ಬೃಹತ್ ಪ್ರಮಾಣದಲ್ಲಿದ್ದ ಆಕಟೀ ಗ್ರಂಥದಿಂದ ಈಗಿರುವ ಈ ೧೯ ಕಥೆಗಳನ್ನಷ್ಟೇ ಎಕೆ ಸುಲಿದಿಟ್ಟರೆಂಬುದು ೨) ಮೂಲದಿಂದ ಇದನ್ನು ಹೀಗೆ ಬಿಡಿಸಿಟ್ಟವರು ಯಾರು ಎಂಬುದು, ಮತ್ತು ೩) ಮೂಲದಿಂದ ಹೊಕ್ಕಲ ಬಳ್ಳಿಯನ್ನು ಕತ್ತರಿಸಿ ಈ ೧೯ ಕಥೆಗಳನ್ನು ಬೇರ್ಪಡಿಸಿದ್ದು ಯಾವ ಕಾಲ ಘಟ್ಟದಲ್ಲಿ ಎಂಬುದು. ಇಂಥ ಪ್ರಎಹ್ನೆಗಳನ್ನು ಇದೇ ಮೊದಲ ಬಾರಿಗೆ ಕೇಳಲಾಗಿದ್ದು ಅವಕ್ಕೆ ಉತ್ತರವನ್ನೂ ಇದೇ ಪ್ರಥಮವಾಗಿ ಇಲ್ಲಿ ನಿರೂಪಿಸುತ್ತಿದ್ದೇನೆ.

ಕನ್ನಡ ನಾಡಿನ ಪರಿಸರದ ಮಟ್ಟಿಗೆ ಹೇಳುವುದಾದರೆ, ಕ್ರಿ.ಪೂ. ದಿಂದ ಜೈನ ಧರ್ಮದ ಗಟ್ಟಿಯಾಗಿದ್ದ ನೆಲಗಟ್ಟು, ೧೧ನೆಯ ಶತಮಾನದ ಉತ್ತ್ತರಾರ್ಧದ ಕಡೆ ಕಡೆಗೆ ಮತ್ತು ೧೨ ನೆಯ ಶತಮಾನದಲ್ಲಿ ಸಡಿಲಗೊಂಡು ಕಳಚತೊಡಗಿತ್ತು. ಅತ್ತ ಗಂಗ ಸಾಮ್ರಾಜ್ಯದ ಪತನ, ಇತ್ತ ರಾಷ್ಟ್ರಕೂಟರ ಕುಸಿತ, ಉತ್ತಶೈವರ ಏರುಂಜವ್ವನ, ಮತ್ತು ಇತರೆ ಸಮಯಗಳ ಪ್ರಾಬಲ್ಯ – ಇವೆಲ್ಲಾ ಹುರಿಗೊಂಡ ಪರಿಣಾಮವಾಗಿ, ಅದುವರೆಗೆ ಗಟ್ಟಿಯಾಗಿ ತೋರವಾಗಿ ಬೆಳೆದು ನಿಂತಿದ್ದ ಜೈನ ಮಾನಸ್ತಂಭಗಳು ಅಲುಗಾಡತೊಡಗಿದುವು. ಅಗತ್ಯಕ್ಕಿಂತ ಹೆಚ್ಚಾಗಿದ್ದ ಸನಾತನ ಬಸದಿಗಳು ಒಂದೊಂದಾಗಿ ಅನಾಥವಾಗತೊಡಗಿದುವು. ಜೈನಯತಿಗಳಿಗೆ, ಹೋದ ಬಂದ ಎಡೆಗಳಲ್ಲಿ, ಅಬಾಧಿತವಾಗಿ ಸಲ್ಲುತ್ತಿದ್ದ ರಾಜಾ – ಪ್ರಜಾ ಮರ್ಯಾದೆಯಲ್ಲಿ ಬಿರುಕುಗಳು ಕಾಭಿಸಿದುವು. ಜೈನಶ್ರಾವಕರಿಗೂ ಬ್ಕನ್ನಡ ನಾಡಿನ ಉದ್ದಗಲದಲ್ಲಿ ದೊರೆಯುತ್ತಿದ್ದ ಮನ್ನಣೆಯ ನೆರೆ ಇಳಿಯತೊಡಗಿತ್ತು. ಜೈನ ಗೃಹಸ್ಥರಿಗೇ ಏನು, ಜೈನ ಮುನಿಗಳಿಗೂ, ಅವರು ಪುರಾಣ ಕಾವ್ಯಗಳಲ್ಲಿ ವರ್ಣಿಸುವ ನರಕ ಹಿಂಸೆ ಅಟ್ಟುಳಿ ಉಪಸರ್ಗಗಳು ಈ ಭವದಲ್ಲಿಯೇ ಅನುಭವದ ವಿಷಯಗಳಾಗುವು. ಜೈನ ಮುನಿ ಗಳನ್ನು ಕೊಂದರು, ಗಾಣಕ್ಕೆ ಹಾಕಿ ಹಿಂಡಿದರು. ಅರೆದರು, ನೆಲಮಾಳಿಗೆಯಲ್ಲಿ ಮುಚ್ಚಿ ನೆಲಸಮಾಧಿ ಮಾಡಿದರು, ಅವರ ವಿರುದ್ಧ ವ್ಯವಸ್ಥಿತ ಅಪಪ್ರಚಾರ ಮಾಡಿದರು.

ಇತಿಹಾಸದ ಕಾಲಚಕ್ರದ ಚಲನೆಯಲ್ಲಿ, ಮೇಲಿದ್ದ ಅರಗಳು ಕೆಳಕ್ಕಿಳಿಯಹತ್ತಿದುವು. ಘನಸ್ಥಿತಿ ಕರಗಿ ದ್ರವಸ್ಥಿತಿಗೆ ಎಡೆಮಾಡಿತ್ತು. ಒಂದು ಕಡೆ ರಾಜಪರಿವಾರ, ಇನ್ನೊಂದೆಡೆ ಪ್ರಜಾಕೋಟಿ – ಈ ಎರಡೂ ಪ್ರಬಲ ಶಕ್ತಿ ರಕ್ಷಣೆಯಿಂದ ಜೈನಮತ ಎರವಾಗತೊಡಗಿತು. ಹೀಗೆ ಜೈನಧರ್ಮದ ಮೇಲೆ, ಮೇಲಿಂದ ಮೇಲೆ, ಆದ ಅ ಆಘಾತ ಪ್ರತ್ಯಾಘಾತಗಳು ಮುಂಬಲಿರುವ ದೊಡ್ದ ಪತನದ ಕಣ್ ಸನ್ನೆಗಳಾದುವು. ಸೂರ್ಯಾಸ್ತವಾದ ಮೇಲೆ ರಾತ್ರಿಯಲ್ಲಿ ಊಟ ಮಾಡುವುದಿರಲಿ ಲೋಟ ನೀರನ್ನೂ ಕುಡಿಯದೆ ಕಟ್ಟುನಿಟ್ಟಾಗಿದ್ದವರು ಜೈನರು. ಈಗ ಜೈನ ಧರ್ಮದ ಪ್ರಾಚುರ್ಯ ಪ್ರಸಾರಗಳ ಮೂಲಕ್ಕೇ ಧಕ್ಕೆ ಉಂಟಾಗಿತ್ತು. ಜೈನರು ಇರುಳಿನ ಜತೆಗೆ ಹಗಲೂ ಹೋಸ ವ್ರತವನ್ನು ಆಚರಿಸಬೇಕಾದ ಶೋಚನೀಯ ಪರಿಸ್ಥಿತಿಯೊದಗಿತು. ಸ್ಥಳೀಯರೇ ಆದ ಏಕಾಂತದ ರಾಮಯ್ಯ, ಜೈನಕುಠಾರ, ಗೊಗ್ಗಿದೇವ, ವಿರುಪರಸ, ಮೊದಲಾದವರ ಮತ್ತು ಹೊರಗಡೆಯ ಚೋಳರ ಆಕ್ರಮಣಗಳನ್ನು ಎದುರಿಸುವುದರಲ್ಲಿ ಪಡಬಾರದ ನೋವನ್ನು ಅನುಭವಿಸಿದರು. ಅನೇಕ ಜೈನ ವರ್ತಕರು ವೀರಶೈವರಾದರು; ಜೈನ ಕೆಟ್ಟು ಬಣಜಿಗನಾದ ಎಂಬ ಗಾದೆ ಹುಟ್ಟಿತು.; ಒಂದು ಕಡೆ ಸೆಟ್ಟರೂ (ವೈಶ್ಯ) ಇನ್ನೊಂದು ಕಡೆ ಸಾದರೂ ಮತ್ತೊಂದು ಕಡೆ ಬಂಟರೂ -ಹೀಗೆ ಕ್ರಮೇಣ ಜೈನ ವೃಕ್ಷದಿಂದ ಕೊಂಬೆಗಳೊಡೆದು ಬೇರೆಯಾದವು. ಗುರುವೃಂದಕ್ಕೂ ಗೃಹಸ್ಥರಿಗೂ ಧಾರ್ಮಿಕ ಆಧಾರಗಳನ್ನಿತ್ತು ಆತ್ಮಸ್ಥೈರ್ಯ ತುಂಬುವುದು ಅನಿವಾರ್ಯವಾಗಿತ್ತು. ಘನ ಘೋರ ಕಷ್ಟಗಳಲ್ಲೂ ಧರ್ಮವನ್ನು ಬಿಡದೆ ಪಾಲಿಸಿದ ಮಹಾಮಹಿಮೆಯರ ಅನೇಕ ದೃಷ್ಟಾಂತಗಳನ್ನಿತ್ತು ಜೈನ ಸಮಾಜವನ್ನು ಸಾಂತ್ವನಗೊಳಿಸಬೇಕಾಗಿತ್ತು.

ಪುನರುಜ್ಜೀವನ ಅನಿವಾರ್ಯವಾಗಿದ್ದ ಇಂತಹ ನಡು ಬೇಸಗೆಯ ಕಡು ಸಂಕಟದ ಕಾಲದಲ್ಲಿ ಕಾಣಿಸುವ ತಂಪುದಾಣಗಳಂತೆ ಸಾಹಿತ್ಯ ಕೃತಿಗಳು ಸೃಷ್ಟಿಯಾದುವು : ಧರ್ಮಾಮೃತ (ನಯಸೇನ : ೧೧೧೨). ಧರ್ಮಪರೀಕ್ಷೆ (ವೃತ್ತವಿಲಾಸ : ೧೩೬೦), ಸಮಯ ಪರೀಕ್ಷೆ (ಬ್ರಹ್ಮಸಿವ : ೧೧೭೫). ಭ್ರಾಜಿಷ್ಣುವಿನ ಆರಾಧನಾ ಕರ್ಣಾಟ ಟೀಕಾದಿಂದ ಕವಚಾಧಿಕಾರದ ೧೯ ಕಥೆಗಲ ಒಂದು ಕಂತೆಯನ್ನು ಮೂಲದ ದೊಡ್ಡ ಕಟ್ಟಿನಿಂದ ಹೊರತೆಗೆದಿರಿಸಿದ್ದು ಈ ಅವಧಿಯಲ್ಲಿ ಈ ಬಗೆಯಲ್ಲಿ, ಈ ಕಾರಣಕ್ಕಾಗಿ ಆದ ಪ್ರಯತ್ನ. ಇವೆಲ್ಲವ್ಚೂ ಜೈನಧರ್ಮ ಮಂದಿರ ಕುಸಿಯದೆ ತಡೆಯಲು ಕೊಟ್ಟ ಒದೆಗಲ್ಲು, ಊರೆಗೋಲು. ಅಂತಿಮವಾಗಿ ಜೈನಧರ್ಮ ಅಜೇಯವಾಗಿ ಉಳಿಯದಿದ್ದರೂ, ಜೈನ ಕಾವ್ಯಗಳು ಚಿರ ವಿಯಯವನ್ನು ಸಂಪಾದಿಸಿದುವೆಂಬುದು ಸಾಹಿತ್ಯದ ಸೃಜನ ಸಾಮರ್ಥ್ಯಕ್ಕೆ ಸಂದ ಗೌರವ.

ಲಾಗಾಯಿತಿನಿಂದ ಬಂದ ಜೈನ ಧರ್ಮ – ಸಂಸ್ಕೃತಿಯೊಂದಿಗೆ ಹೊಸದಾದ ದೇಶೀಯವಾಗಿ ಕವಲೊಡೆದು ಕುದುರಿ ಗರಿಗೊಂಡ ಧರ್ಮ ಸಂಸ್ಕೃತಿಯೊಂದಿಗೆ ಸಂಘರ್ಷವನ್ನು ಜೀರ್ಣಿಸಿ ಕೊಳ್ಳುವುದು ಅಗತ್ಯವಾಗಿತ್ತು. ಪ್ರತಿಕೂಲ ಸನ್ನಿವೇಶವನ್ನು ಹೇಗೆ ಮುಖಾಮುಖಿಯಾಗಿ ಎದುರಿಸಿದರೆಂಬುದರ ದ್ವಂದ್ವ ಸಂಕಟಗಳನ್ನು ಕುರಿತ ಅಪೂರ್ವ ಒಳನೋಟಗಳು ಈ ಕಾಲದ ಕೃತಿಗಳಲ್ಲಿವೆ.

ಈ ಬಗೆಯ ಐತಿಹಾಸಿಕವಾದ ಅನಿವಾರ್ಯವಾದ ನಿಮಿತ್ತದಿಂದ ಭ್ರಾಜಿಷ್ಣುವಿನ ಆರಾಧನಾ (ಶಾಸ್ತ್ರ) ಕರ್ಣಾತ ಟೀಕಾವನ್ನು ಚೆನ್ನಾಗಿ ಕರತಲಾಮಲಕ ಮಾಡಿಕೊಂಡಿದ್ದ ಜೈನ ಮುನಿಯೊಬ್ಬರು ಈ ೧೯ ಕಥೆಗಳನ್ನು ಬೇರೆಯಾಗಿ ತೆಗೆದಿರಿಸಿದರು. ಅನಂತರ ಅದು ಜೈನ ಮನೆ ಮಠ ಮಂದಿರಗಳಲ್ಲಿ ಮಾನ್ಯತೆ ಪಡೆದು ಕರ್ನಾಟಕದ ನಾನಾ ಭಾಗಗಳಲ್ಲಿ ಪ್ರಸಾರ ಪಡೆಯಿತು. ಆರಾಧನಾ ಪರಂಪರೆಯ ಶಾಸ್ತ್ರ ಕೃತಿಗಳಿಂದಲೂ ಕಥಾಕೋಶಗಳಿಂದಲೂ, ಬೇರೆ ಬೇರೆ ಭಾಗದ ಪ್ರತಿಕಾರರು, ಆಯಾ ಪ್ರದೇಶ ಪರಿಸರದ ಮುನಿಗಳ ಸೂಚನೆಯಂತೆ, ಕೆಲವು ಸಂಸ್ಕೃತ – ಪ್ರಾಕೃತ ಪದ್ಯಗಳನ್ನು ಸೇರಿಸುತ್ತಾ ಹೋದರು. ಆದರೆ ಇವರು ಯಾರೂ ಮೂಲದ ಕಥೆಗಳನ್ನು ಮತ್ತು ಭಾಷೆಯಲ್ಲಿ ಹೆಚ್ಚು ಬದಲಾಯಿಸುವ ಸ್ವಾತಂತ್ರ್ಯ ವಹಿಸಲಿಲ್ಲವೆನಿಸುತ್ತದೆ. ಹೀಗಾಗಿ ಭ್ರಾಜಿಷ್ಣುವಿನ ಪಾಠ ಪರಂಪರೆಗೆ ಬಾಧಕವಾಗದೆ ಮುಂದುವರಿಯಿತು. ಅದಕ್ಕಾಗಿಯೇ ‘ಭ್ರಾಜಿಷ್ಣುವಿನ ಅಭಿಪ್ರಾಯದಲ್ಲಿಯೇ ಈ ಕಥೆಯನ್ನು ಹೇಳುತ್ತೇನೆ’ ಎಂಬ ಮಾತು ಬಂದಿರುವುದು. ಭ್ರಾಜಿಷ್ಣುವಿನ ಆಕಟೀ ಗ್ರಂಥದಿಂದ ಈಗಿನ ೧೯ ಕಥೆಗಳನ್ನು ತನಿಯಾಗಿ ತೆನೆಯಾಗಿ ತೆಗೆದಿರಿಸುವ ಕೆಲಸ ೧೨ ನೆಯ ಶತಮಾನದ ಆರಂಭದಲ್ಲಿ ನಡೆದಿದೆಯೆಂದು ತೋರುತ್ತದೆ. ಹೀಗೆ ನಿರ್ದಿಷ್ಟ ಕಾಲವನ್ನು ಸೂಚಿಸಲು ಎರಡು ಪ್ರಬಲವಾದ ಕಾರಣಗಳಿವೆ.

೧. ಈಗ ದೊರೆತಿರುವ ಆಕಟೀ ಗ್ರಂಥದ ಹಸ್ತ ಪ್ರತಿಗಳಲ್ಲಿ ಪ್ರಾಚೀನತಮವಾದ ಹಸ್ತಪ್ರತಿ ಲಿಖಿತವಾಗಿರುವುದು ೧೪೦೩ ರಲ್ಲಿ.

೨. ಈಗ ದೊರೆತಿರುವ ಎಲ್ಲ ಹಸ್ತ ಪ್ರತಿಗಳಲ್ಲೂ ಸಿಗುವ ಕೆಲವು ಸಂಸ್ಕೃತ ಶ್ಲೋಕಗಳನ್ನು ಮತ್ತು ಪ್ರಾಕೃತ ಗಾಹೆಯನ್ನು ಶ್ರೀಚಂದ್ರನ ಕಥಾ ಕೋಶದಿಂದ ತೆಗೆದುಕೊಳ್ಳಲಾಗಿದೆ.

ಅ. ಗುರುದತ್ತ ಭಟಾರರ ಕಥೆಯಲ್ಲಿ ಬರುವ – ‘ಯತ್ರಯತ್ರೋಪ ಪದ್ಯಂತೇ….’ ಎಂಬ ಶ್ಲೋಕ

ಆ. ಚಾಣಾಕ್ಯರಿಸಿಯ ಕಥೆಯಲ್ಲಿ ಬರುವ – ‘ಶಕ್ಯಮೇಕ ಸಹಸ್ರೇಣ …..’

ಇ. ಆಕಟೀಯ ಚಿಲಾತ ಪುತ್ರನ ಕಥೆಯಲ್ಲಿ ಬರುವ – “ಜಂ ಇಚ್ಚಸಿ ತಂ ಣಂ ತಂ…..’ ಎಂಬ ಗಾಹೆ.

– ಈ ಮೂರು ಪದ್ಯಗಳ ಮೂಲ ಶ್ರೀ ಚಂದ್ರನ ಕಥಾಕೋಶದ್ದು. ಈ ಶ್ರೀಚಂದ್ರನ ಕಾಲ ಕ್ರಿ.ಶ. ೧೦೭೦.

ಆದ್ದರಿಂದ ಈಗ ಉಪಲಬ್ಧವಿರುವ ೧೮ ಕಥೆಗಳ ಕವಚಾಧಿಕಾರದ ಕಥಾಗುಚ್ಚವನ್ನು, ಭ್ರಾಜಿಷ್ಣುವಿನ ಆಕಟೀ ದಿಂದ ೧೦೭೦ ರ ಅನಂತರ ಮತ್ತು ೧೪೦೩ ಕ್ಕಿಂತ ಮೊದಲು, ಇವೆರಡರ ನಡುವಣ ಅವಧಿಯಲ್ಲಿ ಬೇರೆಯಾಗಿ ತೆಗೆದು ರೂಢಿಗೆ ತರಲಾಗಿದೆ. ಈ ನಡುವಣ ಅವಧಿಯು ೧೨ ನೆಯ ಶತಮಾನದ ಕಡೆಯಲ್ಲಿ ಮತ್ತು ೧೩ ನೆಯ ಶತಮಾನದಲ್ಲಿ ಆರಂಭದಲ್ಲಿರಬೇಕೆಂದು ಊಹಿಸಿದ್ದಕ್ಕೆ ಕಾರಣಗಳನ್ನು ಕೊಟ್ಟಿದ್ದೇನೆ. ಈ ವಿಚಾರದಲ್ಲಿ ಇನ್ನಷ್ಟು ಸಂವಾದಕ್ಕೆ ಅವಕಾಶವಿದೆ. ಈತ ಅನುಸರಿಸಿರರುವ ಕಥಾ ಸಂಪ್ರದಾಯ ಇದುವರೆಗಿನ ಸಂಸ್ಕೃತ ಪ್ರಾಕೃತ ಕಥಾ ಕೋಶಗಳಿಂದ ಭಿನ್ನ. ಭ್ರಾಜಿಷ್ಣುವಿನದು ದಾಕ್ಷಿಣಾತ್ಯ ಪಾಠ, ಉಳಿದವರದು ಔತ್ತರೇಯ ಸಂಪ್ರದಾಯ : ಈ ಎಲ್ಲ ಕಥಾ ಕೋಶಕಾರರಿಗೂ ಮುಲಾರಾಧನೆಯೇ ಮೂಲ ಆಕರ. ಏಕಮೂಲಾಶ್ರಯಿಗಳಾದರೂ ಪ್ರತಿಯೊಬ್ಬರೂ ತಮಗೆ ಸರಿಕಂಡ ತೆರದಲ್ಲಿ ಕಥೆಗಳನ್ನು ಹಿಗ್ಗಿಸಿ ಕುಗ್ಗಿಸಿ ಬದಲಾಯಿಸಿದ್ದಾರೆ. ಆದರೆ ಯಾರೂ ಕಥೆಗಳ ಮೈಯನ್ನು, ಒಟ್ಟಂದವನ್ನು ಕೆಡಿಸಿಲ್ಲ. ಇವೆಲ್ಲ ಕವಿರರಾಜಮಾರ್ಗೋಕ್ತ ಗದ್ಯಕಥಾ ಪರಂಪರೆಗೆ ಸೇರಿದ ಕೃತಿ. ಆಕಟೀಕಾದಲ್ಲಿ ಭ್ರಾಜಿಷ್ಣುವು ಪ್ರಾಕೃತ ಕಥಾ ನಿರೂಪಣ ಪರಂಪರೆಯ ಮೂಲವನ್ನು ಅನುಸರಿಸಿದ್ದಾನೆ.