ರಾಮಾಯಣ, ಮಹಾಭಾರತ, ಬೃಹತ್ಕಥಾ, ಮಹಾಪುರಾಣ- ಈ ನಾಲ್ಕು ಮಹಾಕೃತಿಗಳು ಭಾರತೀಯ ವಾಙ್ಮಯಕ್ಕೆ ಮೂಲ ಆಕರ. ವಾಲ್ಮೀಕಿ ರಾಮಾಯಣ, ವ್ಯಾಸ ಭಾರತ, ಗುಣಾಢ್ಯನ ಬೃಹತ್ಕಥೆ ಇವುಗಳಿಗೆ ಸಮತುಲ್ಯವಾದ ಸ್ಥಾನಮಾನ, ಹಿನ್ನೆಲೆ, ಪರಂಪರೆ ಇರುವ ಉದ್ಘಕೃತಿ ಮಹಾಪುರಾಣ ಸಮಸ್ತ ಜೈನ ಗ್ರಂಥ ರಾಶಿಯಲ್ಲಿ ಮಹಾಪುರಾಣ ಮಹಡಿಯ ಮಾಣಿಕ್ಯ. ಕರ್ನಾಟಕ ಮತ್ತು ಕನ್ನಡ ಸಾಹಿತ್ಯದೊಂದಿಗೆ ಅದಕ್ಕೊಂದು ಅವಿಭಾಜ್ಯ ಸಂಬಂಧವಿದೆ. ಹತ್ತನೆಯ ಶತಮಾನದ ಅನಂತರ ರಚಿಸಿದ ಭಾರತೀಯ ಭಾಷೆಗಳಲ್ಲಿರುವ ಜೈನ ಪುರಾಣಗಳಿಗೆ ಮಹಾಪುರಾಣ ಮೂಲ ಮಾತೃಕೆ. ಕನ್ನಡ ಜೈನ ಕವಿಗಳಿಗೆ ಅದು ತಾಯಿಬೇರು, ತಲಕಾವೇರಿ, ಪಂಪ ಪೊನ್ನ ರನ್ನ ಜನ್ನ ನಾಗಚಂದ್ರ ನೇಮಿಚಂದ್ರರಾದಿಯಾಗಿ ಅನೇಕ ಕನ್ನಡ ಕವಿಗಳು ಇದರಲ್ಲಿ ಈಸಾಡಿ ಕ್ರೀಡಿಸಿದ್ದಾರೆ. ಜೈನ ಪುರಾಣಗಳ ಪ್ರೇರಣೆ ಪರಿಕಲ್ಪನೆಗಳಿಗೆ ಮಹಾಪುರಾಣವೇ ಮೇಲ್ಪಂಕ್ತಿ, ಸ್ಫೂರ್ತಿ; ಅಲ್ಲಿಯ ಪ್ರಮೇಯ ಪ್ರಕ್ರಿಯೆಗಳು ಇಲ್ಲಿ ಅನುರಣಿತವಾಗಿವೆ. ಅಲ್ಲಿಯ ಶೈಲಿ, ಅಲಂಕಾರ ಪರಿಭಾಷೆ, ಒಟ್ಟು ಚೌಕಟ್ಟು ಕನ್ನಡ ಕವಿಗಳಿಗೆ ಮೇಲ್ಪಂಕ್ತಿಯಾಯಿತು. ಮಹಾಪುರಾಣದ ಋಣಭಾರದಿಂದ ಕನ್ನಡ ಜೈನ ಪುರಾಣಗಳು ಜೈನ ಪುರಾಣಗಳು ಜಗ್ಗಿಹೋಗಿವೆ. ಇಷ್ಟಾಗಿಯೂ ಮಹಾಪುರಾಣವನ್ನು ಪೂರ್ತಿಯಾಗಿ ಸೂರೆಮಾಡಿಲ್ಲ. ಮಹಾಪುರಾಣದ ಮಹಿಮೆ ದೊಡ್ಡದು; ಅದು ಕಾವ್ಯಕ್ಕೆ ಕಾವ್ಯ, ಪುರಾಣಕ್ಕೆ ಪುರಾಣ, ಮೊಮೊಗೆದಷ್ಟೂ ಮುಗಿಯದ ಅಕ್ಷಯಕಾವ್ಯ ಅದರ ಉದ್ದಕ್ಕೂ ಧರ್ಮ ಪ್ರಧಾನ, ಕಾವ್ಯ ಅನುಷಂಗಿಕ. ಅಲ್ಲಲ್ಲಿ ಕಥೆ – ಕಾವ್ಯ ಪ್ರಮುಖವಾಗಿ, ಧರ್ಮ ಗೌಣ ನೆಲೆ ಸುರಿದ ರಸಾರ್ದ್ರ ಭಾಗಗಳೂ ಇವೆ.

ಒಂಬತ್ತನೆಯ ಶತಮಾನದ ಮೇರು ಕೃತಿಯಾದ ಮಹಾಪುರಾಣ ಸಂಸ್ಕೃತದಲ್ಲಿದೆ. ಮಹಾಪುರಣವೆಂಬುದು ಅದರ ಗಾತ್ರದಿಂದಾಗಿ ರೂಢಿಗೆ ಬಂದ ಜನಪ್ರಿಯ ಹೆಸರು. ತ್ರಿಷಷ್ಟಿ ಶಲಾಕಾಪುರುಷ ಚರಿತೆ ಎಂಬುದು ಅದರ ನಿಜ ನಾಮಧೇಯ. ಜಿನಸೇನ ಗುಣಭದ್ರರೇ ಅಲ್ಲದೆ ಪುಷ್ಪದಂತ ಚಾವುಂಡರಾಯ ಮೊದಲಾದವರೂ ಆ ಹೆಸರನ್ನು ಬಳಸಿರುತ್ತಾರೆ. ಜೈನರಿಗೆ ಆದರಣೀಯವಾಗಿರುವ ಮಹಾಪುರಾಣದಲ್ಲಿ ಎರಡು ಭಾಗಗಳಿವೆ, ಒಟ್ಟು ಇಪ್ಪತ್ತು ಸಾವಿರ ಶ್ಲೋಕಗಳಿವೆ. ಮೊದಲನೆಯ ಭಾಗಕ್ಕೆ ಪೂರ್ವ ಪುರಾಣವೆಂದೂ, ಎರಡನೆಯ ಭಾಗಕ್ಕೆ ಉತ್ತರ ಪುರಾಣವೆಂದೂ ಅಡ್ಡ ಹೆಸರು. ಪೂರ್ವಪುರಾಣದಲ್ಲಿ ೧೨ ಸಾವಿರ, ಉತ್ತರ ಪುರಾಣದಲ್ಲಿ ೮ ಸಾವಿರ ಶ್ಲೋಕಗಳಿವೆ. ಬೃಹತ್ ಕೃತಿಯಾದ ಇಡೀ ಮಹಾ ಪುರಾಣವನ್ನು ಜಿನಸೇನಾಚಾರ್ಯನು ಬರೆಯಲು ತೊಡಗಿ ೧೦, ೩೮೧ ಶ್ಲೋಕಗಳನ್ನು ರಚಿಸಿ ವಿಧಿವಶನಾದನು. ಅನಂತರ ಜಿನಸೇನಾಚಾರ್ಯನ ಪ್ರಿಯಾಗ್ಯ ಶಿಷ್ಯ ಗುಣಭದ್ರಾಚಾರ್ಯನು ಪೂರ್ವಪುರಾಣದಲ್ಲಿ ಉಳಿದ ಶೇಷಭಾಗದ ೧೬೨೦ ಶ್ಲೋಕಗಳನ್ನೂ, ಉತ್ತರಪುರಾಣದ ಎಂಟುಸಾವಿರ ಶ್ಲೋಕಗಳನ್ನೂ ಅಂದರೆ ತಾನು ಒಟ್ಟು ೯೬೨೦ ಶ್ಲೋಕಗಳನ್ನು ಬರೆದು ಪೂರೈಸಿದನು. ಪೂರ್ವ ಪುರಾಣವನ್ನು ಆದಿಪುರಾಣವೆಂದೂ ಕರೆಯುತ್ತಾರೆ. ಪೂರ್ವಪುರಾಣ (ಆದಿಪುರಾಣ) ಜಿನಸೇನನ ಅಗಾಧ ಶಾಸ್ತ್ರಜ್ಞಾನ ಲೋಕಜ್ಞಾನದೊಂದಿಗೆ ಕಾವ್ಯ ಶಕ್ತಿಯನ್ನೂ ಪ್ರತಿಬಿಂಬಿಸುತ್ತದೆ. ಮಹಾಪುರಾಣ ಭಾರತೀಯ ಜೀನವದ ಒಂದು ವಿಶ್ವಕೋಶ. ಆ ಕಾಲದ ರಾಜಕೀಯ ಆರ್ಥಿಕ ಸಮಾಜಿಕ ವಿಷಯಗಳಿಗೆ ಮಹಾಪುರಾಣ ದಿಕ್ಸೂಚಿಯಾಗಿದೆ.

ನಿರಂತರವೂ ದೀರ್ಘವೂ ವ್ಯಾಪಕವೂ ಆದ ಚಾರಿತ್ರಿಕ – ಸಾಂಸ್ಕೃತಿಕ ಮಹತ್ವವಿರುವ ಮಹಾಪುರಾಣ ಕೂಡ ಶೂನ್ಯದಿಂದ ಒಮ್ಮೆಲೇ ರೂಪುಗೊಳ್ಳಲಿಲ್ಲ. ಅದು ತನಗಿಂತ ಹಿಂದೆ ರಚಿತವಾಗಿದ್ದ ಸಮಾನ ವಸ್ತುವನ್ನೊಳಗೊಂಡ ಗ್ರಂಥಗಳ ಮುಂದುವರಿಕೆಯಾಗಿದೆ. ಶ್ರಮಣ ಸಂಸ್ಕೃತಿಯ ಕೆನೆಯಂತಿರುವ ಮಹಾಪುರಾಣ ಪರಂಪರೆಯ ಸಿದ್ಧತೆಯನ್ನು ಚಾವುಂಡರಾಯ ದಾಖಲಿಸಿದ್ದಾನೆ:

            ವಿರಚಿಸಿದರ್ ಮುನ್ನೆ ಮಹಾ
ಪುರಾಣಮಂ ನೆಗೞ್ದ ಕೂಚಿಭಟ್ಟಾರಕರುಂ
ಪರಮಶ್ರೀ ನಂದಿ ಮುನೀ
ಶ್ವರರುಂ ತದನಂತರಂ ಜಿನಾಗಮತಿಲಕರ್
|

ಇಲ್ಲಿ ಚಾವುಂಡರಾಯ ಕೊಟ್ಟಿರುವ ಮಾಹಿತಿ ಉಪಾದೇಯ, ಪರಿಭಾವನಾರ್ಹ. ಮಹಾಪುರಾಣಕ್ಕೊಂದು ಕ್ರಮಪ್ರಾಪ್ತ ಪರಂಪರೆಯಿದೆ. ಕೂಚಿ ಭಟ್ಟಾರಕರು, ನಂದಿ ಮುನೀಶ್ವರರು, ಕವಿಪರಮೇಶ್ವರರು, ಜಿನಸೇನ – ಗುಣಭದ್ರರು, ಪ್ರಾಕೃತ ಪುಷ್ಪದಂತ ಕವಿ, ಚಾವುಂಡರಾಯ – ಹೀಗೆ ಕ್ರಮವಾಗಿ ಅದನ್ನು ಬರೆಯುತ್ತಾ ಬಂದಿದ್ದಾರೆ. ಇವರಲ್ಲಿ ಕೂಚಿಭಟ್ಟಾರಕ, ನಂದಿಮುನೀಶ್ವರ ಮತ್ತು ಕವಿಪರಮೇಷ್ಠಿ ಎಂಬ ಮೊದಲ ಮೂವರು ಬರೆದ ಮಹಾಪುರಾಣ ಗ್ರಂಥ ಇಂದಿನವರೆಗೂ ದೊರೆತಿಲ್ಲ. ಉಪಲಬ್ಧವಾಗಿರುವ ಪ್ರಥಮ ಮಹಾಪುರಾಣವೆಂದರೆ ಮಹರ್ಷಿಗಳಾದ ಜಿನಸೇನ – ಗುಣಭದ್ರರದೇ. ತ್ರಿಷಷ್ಟಿ ಶಲಾಕಾಪುರುಷ ಸಂಬಂಧವಾದ ಕಥೆ ಕಲ್ಪನೆಗಳನ್ನು ಒಂದು ಬೃಹತ್ ಕಾವ್ಯದ ಬಂಧಕ್ಕೆ ಅಳವಡಿಸಿದ ಹಿರಿಮೆ ಮಹಾಪುರಾಣಕಾರರದು. ಶ್ರಮಣ ಪರಂಪರೆಯ ಹರಿಕಾರನಾಗಿ ಮಹಾಪುರಾಣ ಮಾಡಿರುವ ಧಾರ್ಮಿಕ – ಸಾಹಿತ್ಯದ ಪರಿಣಾಮ ಅವಿಸ್ಮರಣೀಯವಾದುದು.

ಮಹಾಪುರಾಣ ಸಂಬಂಧವಾದ ಇಡೀ ಕಲ್ಪನೆ – ಕೊಡುಗೆ ಕರ್ನಾಟಕದ್ದು. ಅದರ ಬೇರುಗಳೆಲ್ಲೊ ಪ್ರಾಚೀನ ಪ್ರಾಕೃತ ಆಗಮಸಾಹಿತ್ಯ ಕೃತಿಗಳಲ್ಲಿವೆ. ಅದರ ಕಾಂದ ಕೊಂಬೆಗಳು ಕರ್ನಾಟಕದಲ್ಲಿ ಕೊನರಿವೆ. ಮಹಾಪುರಾಣದ ರಚನೆ ಅಂಕುರಿಸಿದ್ದು ಮಳಖೇಡ (ಮಾನ್ಯಖೇಟ) ದಲ್ಲಿ, ಅದು ಪಲ್ಲವಿಸಿದ್ದು ಬಂಕಾಪುರದಲ್ಲಿ ಜಿನಸೇನ ಗುಣಭದ್ರರು ರಾಷ್ಟ್ರಕೂಟ ಚಕ್ರವರ್ತಿಯಾದ ಅಮೋಘವರ್ಷ ನೃಪತುಂಗನ ರಾಜಗುರುಗಳು; ಅಚ್ಚಕನ್ನಡಿಗ ದೊರೆ, ಅವನ ಭಾಷೆ ಸಾಹಿತ್ಯ ಪ್ರೇಮವನ್ನು ಉದ್ದೀಪಿಸಿ ಮಾರ್ಗದರ್ಶನ ಮಾಡಿದವರು. ಜಿನಸೇನ – ಗುಣಭದ್ರರೂ, ಕನ್ನಡದಲ್ಲಿ ಕೃತಿ ರಚಿಸಿಲ್ಲವೇ ಹೊರತು, ಅಚ್ಚಕನ್ನಡಿಗರು, ಗುಣಭದ್ರರಂತೂ ಕನ್ನಡ ಕವಿಗಳಿಗೆ ಬೆನ್ನುತಟ್ಟಿ, ಕನ್ನಡ ಕಾವ್ಯವನ್ನು ತಿದ್ದಿ ಪ್ರಕಟನ ಯೋಗ್ಯವಾಗಿ ಮಾಡಿದವರು. ಇವರ ಸಂಬಂಧವಾಗಿ ಇದುವರೆಗೆ ಯಾರೂ ಹೇಳಿರದ ಒಂದು ಹೊಸ ವಿಷಯವನ್ನು ಇಲ್ಲಿ ಮೊದಲ ಬಾರಿ ಪ್ರಕಟಿಸಬಯಸುತ್ತೇನೆ. ಕೇಶಿರಾಜನ ಶಬ್ದಮಣಿದರ್ಪಣದ ಹೆಚ್ಚಿನ ಪಾಠಾಂತರಗಳಲ್ಲಿ ಸಿಗುವ ಈ ಪದ್ಯವನ್ನು ಈಗಾಗಲೇ ವಿದ್ವಾಂಸರ ಗಮನಕ್ಕೆ ತರಲಾಗಿದೆ.

ಬರ್ದುದು ಬಳ್ಳವಾಡಿ ಬೆರೆನಂಬಿರ್ದುದಾರ್ಹತಮಂ ಜಿನೇಂದ್ರನಂ
ತಿರ್ದ ಮಹಾಪುರಾಣ ಕವಿಗಳ್ ಗುರುಗಳ್ ಗುಣಭದ್ರದೇವರುಂ
ತಿರ್ದಿದರೆನ್ನ ಪೇೞ್ದ ಕೃತಿಯಂ ಕೃತಿ ಬಂಧವನಾವ ದೋಷಮಂ
ಪೊರ್ದದು ಪೊರ್ದದಂತಣಮೆ ಪಾಪದ ಸಂತತಿ ವಾರಣಾಸಿಯಂ
|

ಸಾಹಿತ್ಯಕ ಪರಿಸರದಲ್ಲಿ ಬದುಕಿ, ಅರ್ಹತ ಧರ್ಮವನ್ನು ಪೂರ್ತಿ ನಂಬಿದ ಹಾಗೂ ಸಾಕ್ಷಾತ್ ಜಿನನಂತೆಯೇ ಇದ್ದ, ಮಹಾಪುರಾಣದ ಕವಿಗಳೂ ಆದ ಗುಣಭದ್ರದೇವರು ತನ್ನ ಈ ಕನ್ನಡ ಕಾವ್ಯವನ್ನು ತಿದ್ದಿಕೊಟ್ಟಮೇಲೆ ಈ ಕೃತಿ ಬಂದದಲ್ಲಿ ಮತ್ತಾವ ದೋಷವೂ ಸೇರುವುದಿಲ್ಲ : ಪಾಪಸಮೂಹ ಎಂದಾದರೂ ವಾರಣಾಸಿಯನ್ನು ಮುಟ್ಟುವುದು ಸಾಧ್ಯವೆ!- ಎಂಬ ಗುಣಭದ್ರಸ್ತುತಿಯು, ಕೃತಜ್ಞತೆ ಸ್ಮರಣೆಯ ಈ ಅಪೂರ್ವ ವೃತ್ತಪದ್ಯ ಒಂದನೆಯ ಗುಣವರ್ಮನ ಶೂದ್ರಕ ಅಥವಾ ಹರಿವಂಶಕ್ಕೆ ಸೇರಿದ್ದೆಂದು ನನಗೆ ತೋರುತ್ತದೆ. ಆದಿ ಗುಣವರ್ಮನು ಗಂಗರ ದೊರೆಯಾದ ಎರೆಯಪ್ಪನನ್ನು ಕಥಾನಾಯಕನ್ನಾಗಿಸಿ ಶೂದ್ರಕ ಬರೆದವನು. ಎರೆಯಪ್ಪನಾದರೂ ರಾಷ್ಟ್ರಕೂಟ ಅಮೋಘವರ್ಷನ ಮಗಳಾದ ಚಂದ್ರೊಬ್ಬಲಬ್ಬೆಯ (-ಗಂಗರಬೂತುಗನ) ಮಗ. ನೃಪತುಂಗ (ಜಿನಸೇನ) ಗುಣಭದ್ರರ ಶಿಷ್ಯ. ಗುಣವರ್ಮ ಮತ್ತು ಗುಣಭದ್ರರು ಸಮಕಾಲೀನರು. ಇನ್ನೂ ಆಗ ತಾನೆ ಹಸಿಹಸಿಯಾಗಿ ಮಹಾಪುರಾಣ ಬರೆದು ಮುಗಿಸಿದ ಕಾಲ. ವಕ್ರವರ್ತಿಯ ಮಗಳೂ, ಚಕ್ರವರ್ತಿಯ ಪತ್ನಿಯೂ ಆದ ಚಂದ್ರೊಬ್ಬಲಬ್ಬೆಯೇ ತನ್ನ ತಂದೆಯ ರಾಜ ಗುರುಗಳೂ ಮಹರ್ಷಿಗಳೂ ಮಹಾಪುರಾಣಕಾರರೂ ಆದ ಗುಣಭದ್ರರನ್ನು ತಿದ್ದಿಸಿರಬೇಕು. ಗುಲ್ಬರ್ಗ ಜಿಲ್ಲೆಯ ಸೇಡಂ ತಾಲ್ಲೂಕಿನಲ್ಲಿರುವ ಮಳಖೇಡವೂ, ಧಾರವಾಡ ಜಿಲ್ಲೆಯ ಶಿಗ್ಗಾಂವಿ ತಾಲ್ಲೂಕಿನಲ್ಲಿರುವ ಬಂಕಾಪುರವೂ ಇಂದು ಜೈನ ಕುರುಹುಗಳನ್ನು ಬಹುವಾಗಿ ಕಳೆದುಕೊಂಡಡಿವೆ. ಆದರೆ ಈ ಎರಡೂ ಹುಟ್ಟಿದ ಮಹಾಪುರಾಣ ಗ್ರಂಥ ಚೈತ್ಯಾಲಯ ಅಳಿಯದೆ ಉಳಿದು ಬಂದಿದೆ. ಸ್ಥಾವರಕ್ಕುಳಿವುಂಟು ಜಂಗಮಕ್ಕಳಿವಿಲ್ಲ ಎಂಬ ಲಕ್ಷಣಕ್ಕೆ ಇದೊಂದು ಲಕ್ಶ್ಯವಾಗಿದೆ. ಮಹಾಪುರಣದ ಪ್ರಭಾವ ಕಾವ್ಯಗಳಲ್ಲಿ ಶಾಸನಗಳಲ್ಲಿ ಶಿಲ್ಪಚಿತ್ರಕಲೆಯಲ್ಲಿ ಆಚಾರ್ಯ ಪರಂಪರೆಯಲ್ಲಿ ಕೆನೆಕಟ್ಟಿದೆ. ಚಾವುಂಡರಾಯ ಪುರಾಣ, ವಡ್ಡಾರಾಧನೆ ಮತ್ತು ಕೆಲವು ಟೀಕು ವೃತ್ತಿ ವ್ಯಾಖ್ಯಾನಗಳಲ್ಲಿ ಮಹಾಪುರಾಣದ ಶ್ಲೋಕಗಳು ಉದಾಹೃತವಾಗಿವೆ. ಮಹಾಪುರಾಣ ಪವಿತ್ರಗ್ರಂಥವೆಂದೂ ಮಾನ್ಯವಾಗಿದೆ. ಮನೆಗಳಲ್ಲಿ ಕಷ್ಟಸುಖಾದಿಗಳಿಗೆ ನಿಮಿತ್ತ ನೋಡಲು ಮಹಾಪುರಾಣವನ್ನು ಬಳಸುತ್ತಿದ್ದ ವಿಧಾನವನ್ನು ಕುರಿತು ಜಿನಸೇನಾ ಚಾರ್ಯನ ವಿವರಣೆಯಲ್ಲಿ ಕಾಣಬಹುದು : “ಈ ಪುರಾಣವನ್ನು ಋಷಿಗಳು ಹೇಳಿರುವುದರಿಂದ ಇದು ಪ್ರಮಾಣವೂ, ಸಂಪೂರ್ಣವಾಗಿ ಸತ್ಯವೂ ಆಗಿರುತ್ತದೆ. ಆದುದರಿಂದ ಆತ್ಮಕಲ್ಯಾಣವನ್ನು ಇಚ್ಛಿಸುವವರು ಇದನ್ನು ನಂಬಬೇಕು, ಅಧ್ಯಯನ ಮಾಡಬೇಕು, ಧ್ಯಾನಿಸಬೇಕು. ಈ ಪುರಾಣವು ಪುಣ್ಯದಾಯಕವೂ ಪವಿತ್ರವೂ ಉತ್ತಮವಾದ ಮಂಗಲಸ್ವರೂಪವೂ ಆಯುಷ್ಯವರ್ಧಕವೂ ಕೀರ್ತಿಯನ್ನುಂಟುಮಾಡುವುದೂ ಸ್ವರ್ಗ ದಾಯಕವೂ ಆಗಿರುತ್ತದೆ. ಈ ಪುರಾಣವನ್ನು ಪೂಜಿಸುವವರಿಗೆ ದುಃಖಶಾಂತಿಯೂ, ಸಂದೇಹನಿವಾರಣೆಗೋಸುಗ ಪ್ರಶ್ನೆಮಾಡುವವರಿಗೆ ಆನಂದವೂ ಪುಷ್ಟಿಜ್ಞಾನವೃದ್ಧಿಯೂ ಓದುವವರಿಗೆ ಕ್ಷೇಮವೂ ಆರೋಗ್ಯವೂ ಕೇಳುವವರಿಗೆ ಕರ್ಮನಿರ್ಜರೆಯೂ ಆಗುವುವು. ಈ ಪುರಾಣ ಪೂಜನ, ಪೃಚ್ಛನಾ, ಪಠನ, ಶ್ರವಣಾದಿಗಳಿಂದ ದುಃಸ್ವಪ್ನಗಳ ನಾಶವೂ ಸುಸ್ವಪ್ನಗಳ ವೃದ್ಧಿಯೂ ನಿಮಿತ್ತ ಶಕುನವನ್ನು ನೋಡುವವರಿಗೆ ಇಷ್ಟಫಲ (ಶುಭಾಶುಭ ಶಕುನಫಲ) ಪ್ರಾಪ್ತಿಯೂ ಉಂಟಾಗುವುವು. ಇಂತಹ ಪವಿತ್ರ ಗ್ರಂಥವು ಮನೆಯಲ್ಲಿರುವುದು ಮಂಗಲಕರವೆಂದು ಭಾವಿಸಿ ಅನೇಕರು ಇದನ್ನು ತಮ್ಮ ಮನೆಗಳಲ್ಲಿಟ್ಟುಕೊಂಡು ಪೂಜಿಸುತ್ತಿರುವರು” (ಅನು. ಶಾಂತಿರಾಜ ಶಾಸ್ತ್ರಿಗಳು). ಈ ವಿವರಣೆಯಲ್ಲಿ ಮಹಾಪುರಾಣಕ್ಕೆ ಅತೀಂದ್ರಿಯ ಮಹಿಮೆಯಿದೆಯೆಂದು ತೋರಿಸು ವುದಕ್ಕಾಗಿ ವಸ್ತುಸ್ಥಿತಿಯನ್ನು ಬಹುವಾಗಿ ಉತ್ಪ್ರೇಕ್ಷಿಸಲಾಗಿದೆ.

ರಾಮಾಯಣ-ಮಹಾಭಾರತಗಳಿಗೆ ಹೊಯ್-ಕಯ್ ಆಗಿ ಹತ್ತಿರ ಬರುವ ಮಹಾಪುರಾಣ ಕುರಿತ ಸಮಗ್ರ ವಿಮರ್ಶೆ ಕನ್ನಡದಲ್ಲಿ ಇನ್ನೂ ತನಕ ಆಗಿಲ್ಲ. ಸಾಹಿತ್ಯಿಕ, ಸಾಂಸ್ಕೃತಿಕ, ಚಾರಿತ್ರಿಕ, ಮಾನವಿಕ, ಸೈದ್ಧಾಂತಿಕ ಅಧ್ಯಯನ ನಿರತ ಸಂಶೋಧಕರಿಗೆ ಇದು ಒಳ್ಳೆಯ ಕನ್ನೆನೆಲ; ವಿಮರ್ಶಕರಿಗೆ ಹಸಿರು ನಿಶಾನೆ ಬೀಸುತ್ತಿದೆ. ಆ ದಿಕ್ಕಿನಲ್ಲಿ ಇಡುವ ವಿದ್ವಾಂಸರ ಒಂದೊಂದು ಹೆಜ್ಜೆಯೂ ಜನೇಚಿಹ್ನೆಯಾಗಿ ಉಳಿಯುತ್ತದೆ. ಶಾಲಾ – ಕಾಲೇಜು ವಿಶ್ವವಿದ್ಯಾಲಯಗಳಲ್ಲಿ ಮಹಾಪುರಾಣಕ್ಕೆ ದಿವ್ಯ ನಿರ್ಲಕ್ಷ್ಯವನ್ನು ತೋರಲಾಗುತ್ತಿದೆ. ಇನ್ನಾದರೂ ಸಂಸ್ಕೃತ ಹಿಂದಿ ಮತ್ತು ತತ್ವಶಾಸ್ತ್ರ ವಿಭಾಗ – ಇಲಾಖೆಗಳಲ್ಲಿ ಮಹಾಪುರಾಣವನ್ನು ಕಲಿಸುವ ಅಗತ್ಯವಿದೆ. ಪಠ್ಯವಾಗಿಯೂ, ಪರಾಮರ್ಶನ ಸಾಹಿತ್ಯ ಕೃತಿಯಾಗಿಯೂ ಅದನ್ನು ಗೊತ್ತುಪಡಿಸುವುದು ಉಪಯುಕ್ತ ಪ್ರಾಕೃತ ಭಾಷಾ ಸಾಹಿತ್ಯ ಕಲಿಕೆಯನ್ನು ಅದರಲ್ಲಿಯೂ ಅರ್ಧಮಾಗಧಿ ಗ್ರಂಥಬೋಧನೆಯನ್ನು, ಕಳೆದ ೩೫ ವರ್ಷಗಳಲ್ಲಿ ಮೂಲೆಗೆ ತಳ್ಳಿದ್ದು ದುರ್ದೈವ. ಅದರೊಂದಿಗೆ ಸಂಸ್ಕೃತದಲ್ಲಿರುವ ಜೈನ ಸಾಹಿತ್ಯ ಕೃತಿಗಳನ್ನೂ ವ್ಯವಸ್ಥಿತವಾಗಿ ಪಾಠ್ಯದ ಚೌಕಟ್ಟಿನಿಂದಾಚೆಗೇ ನಿರ್ಲಕ್ಷಿಸುವಂತಿಲ್ಲ.

ಈ ಎಲ್ಲ ಹಿನ್ನೆಲೆಯಲ್ಲಿ ಎರ್ತೂರು ಶಾಂತಿರಾಜ ಶಾಸ್ತ್ರಿಗಳ ಸೇವೆಯನ್ನು ತೂಕ ಹಾಕಬೇಕು. ಕನ್ನಡ ಜೈನಪುರಾಣಗಳಿಗೂ, ಪ್ರಾಕೃತ ಪುಷ್ಪದಂತಹ ಮಹಾಕಾವ್ಯಕ್ಕೂ ಈ ಮಹಾಪುರಾಣವೇ ಪ್ರೇರಕ ಪೂರಕ ಮಹಾಪೋಷಕ ಎಂಬುದು ಶಾಸ್ತ್ರಿಗಳಿಗೆ ಚೆನ್ನಾಗಿ ಮನವರಿಕೆಯಾಗಿತ್ತು. ಪಂಪನಿಂದ ಹಂಪನಾವರೆಗೆ ಮಹಾಪುರಾಣದ ಹೆಜ್ಜೆಗುರುತುಗಳನ್ನು ನೋಡಿದರೆ, ಮಹಾಪುರಾಣದ ಜ್ಞಾನ ಪರಿಶ್ರಮಗಳು ಜೈನ ಸಾಹಿತ್ಯದ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಎಷ್ಟೊಂದು ಮಹತ್ವದ್ದೆಂದು ಅರಿವಾದೀತು. ಸಂಸ್ಕೃತ ಭಾಷಾ ಜ್ಞಾನದ ಕೊರತೆಯಿದ್ದು ಕೇವಲ ಕನ್ನಡ ಬಲವರಿಗೆ ಮಹಾಪುರಾಣವನ್ನು ಕನ್ನಡಿಸಿಕೊಡಬೇಕೆಂಬ ವಿಚಾರವಾಗಿ ಈ ಮೊದಲು ಯೋಚಿಸಿದ ಆದ್ಯರು ಚಾಮರಾಜನಗರದ ಬ್ರಹ್ಮಸೂರಿ ಪದ್ಮರಾಜ ಪಂಡಿತರು. ಸ್ವಂತ ಮುದ್ರನಾಲಯ ಮತ್ತು ಪ್ರಕಾಶನ ಸಂಸ್ಥೆಯನ್ನು ಬೆಂಗಳೂರಲ್ಲಿ ಪ್ರಾರಂಭಿಸಿದ ೧೯ ನೆಯ ಶತಮಾನದ ಮಹಾಸಾಹಸಿ ಈ. ಬಿ. ಪದ್ಮರಾಜ ಪಂಡಿರು; ಸುಮಾರು ೨೬ ಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸಿ ಪ್ರಕಟಿಸಿದ್ದಾರೆ. ಗ್ರಂಥ ಸಂಪಾದನೆ ಮತ್ತು ಶತಮಾನದ ಅಂತ್ಯದಲ್ಲಿ ಜಿನಸೇನನ ಪೂರ್ವ ಪುರಾಣದ ಅರ್ಧದಷ್ಟನ್ನು ಮಾತ್ರ ಎರಡು ಭಾಗಗಳಲ್ಲಿ; ಭಾಗ – ೧ (೧೮೯೬) ಭಾಗ -೨ (೧೮೯೭) ಪಾರ್ಶ್ವನಾಥಸ್ವಾಮಿ ಚರಿತೆ – ಉತ್ತರ ಪುರಾಣದಿಂದ (೧೮೯೩)- ಇಷ್ಟನ್ನೂ ಕನ್ನಡ ಭಾಷಾಂತರದೊಂದಿಗೆ ಹೊರತಂದರು. ಸಂಸ್ಕೃತದಲ್ಲಿ ಘನವಿದ್ವಾಂಸರೂ, ಜೈನ ಸಿದ್ಧಾಂತದಲ್ಲಿ ನಿಷ್ಣಾತರೂ, ಕನ್ನಡದಲ್ಲಿ ಪ್ರಕಾಂಡ ಪಂಡಿತರೂ ಆಗಿದ್ದ ಪದ್ಮರಾಜ ಪಂಡಿತರಿಂದ ಸಮಗ್ರ ಮಹಾಪುರಾಣದ ಕನ್ನಡ ಅನುವಾದ ಕಾರ್ಯಯೋಜನೆ ಕೈಗೂಡದೆ ಅರ್ಧಕ್ಕೇ ನಿಂತು ಹೋಯಿತು. ಕೆಲಸ ತುದಿ ಮುಟ್ಟದ ಹೋದರೂ, ಮಹಾಪುರಾಣವನ್ನು ಕನ್ನಡಕ್ಕೆ ಪರಿವರ್ತಿಸಿ ಮೂಲದೊಂದಿಗೆ ಪ್ರಕಟಿಸುವ ಮಹಾಸಾಹಸ ಕಾರ್ಯಕ್ಕೆ ಮೊದಲ ಗುದ್ದಲಿ ಪೂಜೆ ಆದದ್ದು ಬಿ. ಪದ್ಮರಾಜ ಪಂಡಿತರಿಂದ ಎಂಬ ಐತಿಹಾಸಿಕ ಮಹತ್ವದ ಸಂಗತಿಯನ್ನು ನೆನಪಿಡಬೇಕಾದ್ದು; ಅಲ್ಲದೆ ಆ ಕಾಲಕ್ಕೆ ಚೆನ್ನಾಗಿ ಇಂಗ್ಲೀಷ್ ಕಲಿತು ಇಂಗ್ಲೀಷಿನಲ್ಲೂ ಒಂದು ಪುಸ್ತಕವನ್ನು ಬಿ. ಪದ್ಮರಾಜ ಅಂಡಿತರು ರಚಿಸಿರುತ್ತಾರೆ.

ಹೀಗೆ ಬಿ. ಪದ್ಮರಾಜ ಪಂಡಿತರು ಪ್ರಯತ್ನಿಸಿ, ಮೇಲ್ಪಂಕ್ತಿ ಹಾಕಿ ನಿಲ್ಲಿಸಿದ ಕಾರ್ಯವನ್ನು ಅವರಾದ ೪೦ ವರ್ಷಗಳ ತರುವಾಯ ಕೈಗೆತ್ತಿಕೊಂಡು ಆರಂಭದಿಂದ ಅಂತ್ಯದವರೆಗೆ ಪರಿಷ್ಕಾರವಾಗಿ ಯಶಸ್ವಿಯಾಗಿ ಕೈಗೂಡಿಸಿದವರು ಎರ್ತೂರು ಶಾಂತಿರಾಜ ಶಾಸ್ತ್ರಿಗಳು. ಪ್ರೊ. ಕೆ.ಜಿ. ಕುಂದಾಗಾರರಿಗೂ ಇಂಥದೊಂದು ಹೊಳಹು ಇತ್ತೆಂದು ಡಾ. ಆ. ನೇ. ಉಪಾಧ್ಯೆ ತಿಳಿಸಿದ್ದಾರೆ. ಪಂಪನ ಆದಿಪುರಾಣವನ್ನೂ, ಹಸ್ತಿಮಲ್ಲನ ಪೂರ್ವಪುರಾಣವನ್ನೂ ಸಂಪಾದಿಸಿಕೊಟ್ಟ ಪ್ರೊ. ಕೆ. ಜಿ. ಕುಂದಣಗಾರರ ವಿದ್ವತ್ತಿಗೆ ಇದೇನೂ ಅಸಾಧ್ಯವಾಗಿರಲಿಲ್ಲ. ಅದೇಕೊ ಕುಂದಣಗಾರರು ಈ ಭಾಷಾಂತರಕ್ಕೆ ತೊಡಗಲಿಲ್ಲ. ಈ ನಡುವೆ ಡಿ.ಎ. ಬೋಗಾರ ಮತ್ತು ಮಿರ್ಜಿ ಅಣ್ಣಾರಾಯ ಸೇರಿ ಮಹಾಪುರಾಣ (ಕಥಾ) ಸಾರವನ್ನು ವಿಸ್ತೃತ ಪೀಠಿಕೆ ಪರಿಶಿಷ್ಟಗಳ ಸಹಿತ ಸಿದ್ಧಪಡಿಸಿ ಪ್ರಕಟಿಸಿದವರು (೧೯೬೨); ಇದರಲ್ಲಿ ಮೂಲ ಶ್ಲೋಕಗಳನ್ನು ಕೊಟ್ಟಿಲ್ಲ. ಕೇವಲ ತಿಳಿಗನ್ನಡದಲ್ಲಿ ವಿಸ್ತಾರವಾಗಿಯೇ ಮೂಲ ಕಥೆಯನ್ನು ಅನುವಾದಿಸಿ ಕೊಡಲಾಗಿದೆ. ತೀರ ಇತ್ತೀಚೆಗಷ್ಟೇ ಹುಂಚದ ಸ್ವಸ್ತಿಶ್ರೀ ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಯಾಚಾರ್ಯ ಸ್ವಾಮಿಗಳವರ ಉದಾರ ಕೃಪಾಶ್ರಯದಿಂದ ಪ್ರೊ. ಜಿ. ಬ್ರಹ್ಮಪ್ಪನವರು ಮಹಾಪುರಾಣದ ಗದ್ಯಾನುವಾದವನು ಅಮೂಲಾಗ್ರವಾಗಿ, ಸಮಗ್ರವಾಗಿ ಹೊರತಂದಿದ್ದಾರೆ (೧೯೮೬). ಹಾಗೆ ನೋಡುವುದಾದರೆ ಇಡೀ ಭಾರತೀಯ ಭಾಷೆಗಳಲ್ಲಿಯೇ ಮಹಾಪುರಾಣವನ್ನು ಅನುವಾದಿಸುವ ಪ್ರಪ್ರಥಮ ಪ್ರಯತ್ನ ನಡೆದದ್ದು ಕನ್ನಡದಲ್ಲಿ, ಚಾವುಂಡರಾಯನೇ ಅದರ ಮೊದಲ ಅನುವಾದಕ ಅವನದು ಮುಕ್ತನುವಾದ. ಚಾವುಂಡರಾಯನ ತರುವಾಯ ಇಡೀ ಕನ್ನಡ ಸಾಹಿತ್ಯದಲ್ಲಿ ಮಹಾಪುರಾಣವನ್ನು ಪೂರ್ತಿಯಾಗಿ ಕನ್ನಡಕ್ಕೆ ಪರಿವರ್ತಿಸಿದ ಭಗೀರಥ ಎರ್ತೂರು ಶಾಂತಿರಾಜ ಶಾಸ್ತ್ರಿಗಳು (೧೯೩೩ – ೧೯೪೦). ಆದಿ ಪಂಪನೂ, ಪಂಪ ಪೂರ್ವದಲ್ಲಿ ಗುಣವರ್ಮಾದಿಗಳೂ ಮಹಾಪುರಾಣದ ಭಾಗಗಳಿಗೆ ಲಗ್ಗೆ ಹತ್ತಿದರೇ ಹೊರತು ಸಮಗ್ರ ಕೃತಿಗಲ್ಲ. ಆದರೆ ಚಾವುಂಡರಾಯನು, ಪ್ರಾಯಃ ಮಹಾಕವಿ ರನ್ನನ ಮಾರ್ಗ ದರ್ಶನದಲ್ಲಿ, ಸಾವಿರ ವರ್ಷಗಳ ಹಿಂದೆ, ಅಂದಿನ ಕನ್ನಡ ಭಾಷೆಗೆ ಬದಲಾಯಿಸುವ ಸಾಹಸ ಮಾಡಿದನು. ಚಾವುಂಡರಾಯ ಅದೃಷ್ಟವೆಂದರೆ ಅಂದು ಆತನ ಕಣ್ಮುಂದೆ ಕೂಚಿ ಭಟ್ಟಾರಕ, ಶ್ರೀನಂದಿ ಮುನೀಶ್ವರ, ಕವಿಪರಮೇಷ್ಠಿ, ಮತ್ತು ವಿನಸೇನ – ಗುಣಭದ್ರರ ಕೃತಿಯನ್ನು ಕೇಂದ್ರವಾಗಿರಿಸಿ ಒಂದು ಮುಕ್ತ ಗದ್ಯಾನುವಾದ ಕೃತಿಯನ್ನು ಕನ್ನಡದಲ್ಲಿ ಬರೆದ ಕೀರ್ತಿ, ಅಗ್ರತಾಂಬೂಲ ಚಾವುಂಡರಾಯನದು.

ಶಾಂತಿರಾಜ ಶಾಸ್ತ್ರಿಗಳದು ಇನ್ನೂ ಒಂದು ಹೆಜ್ಜೆ ಮುಂದುವರಿದ ಕೆಲಸ. ಇವರು ಮೂಲ ಶ್ಲೋಕಗಳೊಂದಿಗೆ ‘ಕರ್ನಾಟಕ ಭಾವದೀಪಿಕಾ ವ್ಯಾಖ್ಯಾ’ ರಚಿಸಿದ್ದಾರೆ. ಶಾಸ್ತ್ರಿಗಳ ಅನುವಾದ ಸಂಸ್ಕೃತ ಶಬ್ದಕ್ಕೆ ಕನ್ನಡ ಶಬ್ದ ಇಟ್ಟ ಮಕ್ಕಿಕಾ ಮಕ್ಕಿಯಲ್ಲ. ಅವರು ಮೂಲಗ್ರಂಥದ ಮಹತ್ವ ಪರಂಪರೆಯನ್ನೂ, ಜೈನ ಧರ್ಮ – ಸಾಹಿತ್ಯದಲ್ಲಿ ಅದಕ್ಕಿರುವ ಅದ್ವಿತೀಯವಾದ ಸ್ಥಾನವನ್ನೂ, ಐತಿಹಾಸಿಕ ಹಿನ್ನೆಲೆಯನ್ನೂ ಬಲ್ಲ ಜ್ಞಾನಿ. ಸ್ವಯಂ ಆ ಮುಖ್ಯ ಧಾರ್ಮಿಕ ಪ್ರವಾಹದಲ್ಲಿ ಬೆಳೆದು ಬಂದವರು. ಅವರಿಗಿದ್ದ ವಿದ್ವತ್ತು ಪ್ರೌಢತಮವಾದದ್ದು. ಸಂಸ್ಕೃತ, ಕನ್ನಡ ಈ ತ್ರಿಭಾಷಾ ಪ್ರಾವೀಣ್ಯ ಮತ್ತು ಶಾಸ್ತ್ರ ಶುದ್ದಿ ಅವರಿಗಿದ್ದ ಬಲ. ತಾವು ವ್ಯಾಖ್ಯಾನಿಸಲೆಂದು ಕೈಗೆತ್ತಿಕೊಂಡ ಗ್ರಂಥ ಎಷ್ಟು ಗಹನ ಹಾಗೂ ಕಷ್ಟಸಾಧ್ಯ, ಸವಾಲುಗಳನ್ನು ಒಡ್ದುವಂತಹುದು ಎಂಬ ಅರಿವಿದೆ. “ಕನ್ನಡದಲ್ಲಿ ಭಾವಾರ್ಥವನ್ನು ಬರೆಯಿಸಿ, ಕನ್ನಡ ನಾಡಿನ ಎಲ್ಲಾ ಜೈನ ಬಂಧುಗಳಿಗೂ ಇದು ಸುಲಭ ಲಭ್ಯವಾಗುವಂತೆ ಮಾಡಬೇಕೆಂದು …. ಪರ್ಯಾಲೋಚಿಸಿ, ಈ ಮಹಾತ್ಕಾರ್ಯವನ್ನು ನಮಗೆ ವಹಿಸಿದರು. ಇದು ನಮ್ಮ ಅಲ್ಪ ಬುದ್ಧಿಗೆ ಬಹು ಶ್ರಮಸಾಧ್ಯವಾದ ಕಾರ್ಯ. ಇದನ್ನು ನಮಗಿಂತ ಹೆಚ್ಚಿನ ವಿದ್ವಾಂಸರಿಗೆ ವಹಿಸಿದ್ದರೆ ಬಹಳ ಚೆನ್ನಾಗಿ ಆಗುತ್ತಿದ್ದಿತು. ನಮ್ಮ ಮುಂದ ಬುದ್ಧ್ಯನುಸಾರವಾಗಿ ಈ ಗ್ರಂಥಕ್ಕೆ ಕರ್ಣಾಟಕ ಭಾವ ದೀಪಿಕೆಯೆಂಬ ಚಿಕ್ಕದಾದ ವ್ಯಾಖ್ಯೆಯಿಂದ ಬರೆದು ….. ಪೂರ್ಣಗ್ರಂಥವನ್ನು ಸಮಾಜದ ಮುಂದಿಟ್ಟಿರುವೆವು. ಈ ಗ್ರಂಥವೂ ಸಮಾಜಕ್ಕೆ ಉಪಕಾರವೂ ಬಹುಕಾಲದವರೆಗೆ ಇರತಕ್ಕದೂ ಆಗಿರುವುದರಿಂದ ನಮ್ಮ ಜೀವನಯಾತ್ರೆಯಲ್ಲಿ ನಮ್ಮ ಶಕ್ತಿಗೆ ಇದೊಂದು ದೊಡ್ಡ ಕೆಲಸವೆಂದು ಭಾವಿಸಿ ಶ್ರಮವಹಿಸಿರುತ್ತೇವೆ. ಶಾಸ್ತ್ರಿಗಳು ಕೇವಲ ನೀರಸ ಅನುವಾದಕರಲ್ಲ. ಅವರದು ಪಂಡಿತ ಪ್ರಿಯವಾದ ಪಂಡಿತಪ್ರಚುರ ಶೈಲಿ. ದೀರ್ಘವಾಕ್ಯಗಳನ್ನು ಬಳಸುತ್ತಾರೆ. ಅವರದು ಪಂಡಿತ ಪ್ರಿಯವಾದ ಪಂಡಿತಪ್ರಚುರ ಶೈಲಿ. ದೀರ್ಘವಾಕ್ಯಗಳನು ಬಳಸುತ್ತಾರೆ. ಈ ಹೊತ್ತಿನ ೧೯೮೯ ರ ಘಟ್ಟದಲ್ಲಿ ನಿಂತ ಕನ್ನಡ ಭಾಷೆಯ ನಡಿಗೆಗೆ ಹೊಂದಿಕೆಯಾಗಿದೆ ಬಿಡುವ ರಚನೆಯೂ ಅಲ್ಲಲ್ಲಿ ಉಂಟು; ಶೈಲಿ ವಿಜ್ಞಾನದ ದೃಷ್ಟಿಯಿಂದಲೂ. ಈ ಶತಮಾನದ ಉತ್ತರಾರ್ಧದಲ್ಲಿರುವ ನಾವು ಬಳಸುತ್ತಿರುವ ಭಾಷಾಶೈಲಿಯೂ ಪೂರ್ವಾರ್ಧದಲ್ಲಿದ್ದ ಶೈಲಿಗಿಂತ ಹೇಗೆ ಭಿನ್ನತೆ ಪಡೆದುಕೊಂಡಿದೆಯೆಂಬುದರ ಅಧ್ಯಯನದ ದೃಷ್ಟಿಯಿಂದಲೂ ಮಹಾಪುರಾಣದ ಅನುವಾದ ಅಧ್ಯಸಕ್ಕೆ ಅರ್ಹವಾಗಿದೆ. ಶಾಸ್ತ್ರಿಗಳ ಹೊಸಗನ್ನಡ ಶೈಲಿ ಅದೆತಡೆಗಳಿಲ್ಲದೆ ಸಮತಲದಲ್ಲಿ ಹರಿಯುವ ನಂದಿಯಂತೆ ಸಲಿಲವಾಗಿಯೇ ಮುಂದುವರಿಯುತ್ತದೆ. ಎಲ್ಲೂ ಅದು ಲಾಘವ ಗೊಳ್ಳುವುದಿಲ್ಲ, ಹ್ರಸ್ವವಾಗುವದಿಲ್ಲ ಗಾಂಭೀರ್ಯ ಬಿಟ್ಟು ಕೊಡುವುದಿಲ್ಲ. ಮೂಲಭಾವನೆಯ ಪ್ರತಿಪಾದನೆಗೆ ಅನುಕೂಲವಾಗಿ ಒಮ್ಮೊಮ್ಮೆ ಮೂರು ನಾಲ್ಕು ಸಂಸ್ಕೃತ ಶ್ಲೋಕವನ್ನು ಒಟ್ಟಿಗೆ ತೆಗೆದುಕೊಂಡು ಒಟ್ಟು ಸಾರಾಂಶವನ್ನು ಕೊಡುವುದುಂಟು. ಶಾಸ್ತ್ರಿಗಳು ಅನುವಾದದೊಂದಿಗೆ ಗ್ರಂಥ ಸಂಪಾದನೆ ಕಾರ್ಯವನ್ನೂ ಏಕ ಕಾಲದಲ್ಲಿ ಸಮರ್ಥವಾಗಿ ನಿರ್ವಹಿಸಿದ್ದಾರೆ. ಗ್ರಂಥ ಸಂಪಾದಕನ ಗುರುತರ ಹೊಣೆಯರಿತು, ಓಲೆಗರಿ ಗ್ರಂಥಗಳನ್ನೂ ಮುದ್ರಿತ ಮರಾಠಿ ಭಾಷೆಯ ಪ್ರತಿಯನ್ನೂ ತುಲನಾತ್ಮಕ ದೃಷ್ಟಿಯಿಂದ ಪಠನ ಮಾಡಿ, ಪಾಠಾಂತರಗಳನ್ನೂ ಟಿಪ್ಪಣಿಗಳನ್ನೂ ಕೊಟ್ಟಿರುತ್ತಾರೆ. ಜತೆಗೆ ಪೂರ್ವ ಪುರಾಣಕ್ಕೂ ಉತ್ತರ ಪುರಾಣಕ್ಕೂ ಬೆಲೆಯುಳ್ಳ ಮುನ್ನಡಿಕೂಡ ಬರಿದಿದ್ದಾರೆ. ಈ ಎಲ್ಲ ಕಾರಣಗಳಿಗಾಗಿ ಮಹಾಪುರಾಣಕ್ಕೂ ಬೆಲೆಯುಳ್ಳ ಮುನ್ನಡಿಕೂಡ ಬರೆದಿದ್ದಾರೆ. ಐತಿಹಾಸಿಕ ಮಹತ್ವವಿದೆ, ಕನ್ನಡದಲ್ಲಿ ಪಾರಂಪರಿಕ ಜ್ಞಾನ ಪಡೆದ ಶಾಸ್ತ್ರಿಗಳ ಸಂಪ್ರದಾಯವೂ, ಶಾಸ್ತ್ರಸಾಹಿತ್ಯದ ನೈರಂತರ್ಯವು ಕಡಿದು ಹೋಗದಂತೆ ಕಾಪಾಡಿದವರು ಎರ್ತೂರು ಶಾಂತಿರಾಜ ಶಾಸ್ತ್ರಿಗಳು, ಅವರಿಗಿಂತ ಹಿಂದೆ ಬ್ರಹ್ಮಸೂರಿ ಪದ್ಮರಾಜ ಪಂಡಿತರು.

ಕನ್ನಡದಲ್ಲಿಯೂ ನೇಮಿಜಿನೇಶ ಸಂಗತಿ (ಹರಿವಂಶ), ನಾಗಕುಮಾರ ಚರಿತೆ ನೋಂಪಿಯ ಕಥೆಗಳು = ಮೊದಲಾದ ಹಳೆಗನ್ನಡ ಕಾವ್ಯಗಳನ್ನು ಶಾಸ್ತ್ರೋಕ್ತವಾಗಿ ಸಂಪಾದಿಸಿಕೊಟ್ಟಿರುವ ಎ. ಶಾಂತಿರಾಜ ಶಾಸ್ತ್ರಿಗಳವರ ಸೇವೆಯನ್ನು ಗುರುತಿಸಿ ದಾಖಲಿಸಬೇಕಾದ ಸಂದರ್ಭ ಬಂದಾಗಲೂ ಹಾಗೆ ಮಾಡದೆ ದುರುದ್ದೇಶದಿಂದ ಕೈಬಿಟ್ಟಿರುವುದನ್ನು ಮಣಿಹವೆಂಬೊಂದು ಗ್ರಂಥದಲ್ಲಿ ಕಾಣಬಹುದು. ಕನ್ನಡಕ್ಕೆ ಸೇವೆ ಸಲ್ಲಿಸಿದ ಗ್ರಂಥ ಸಂಪಾದನಕಾರರನ್ನು ಪರಿಚಯಿಸುವ ವಿಭಾಗದಲ್ಲಿ ಈ ಮಣಿಹವನ್ನು ಅಣಿಗೊಳಿಸಿದ ಜಾಣರು ಬಿ. ಪದ್ಮರಾಜ ಪಂಡಿತರನ್ನೂ, ತೋವಿನಕೆರೆ ರಾಯಂಣ ವಾಗ್ಮಿಯನ್ನೂ, ಎರ್ತೂರು ಶಾಂತಿರಾಜ ಶಾಸ್ತ್ರಿಗಳನ್ನೂ, ಎಸ್. ಬೊಮ್ಮರಸ ಪಂಡಿತರನೂ – ಕೇವಲ ಜೈನರೆಂಬ ಜಾತಿ ಕಾರಣಕ್ಕಾಗಿ ಕೈಬಿಟ್ಟು ಅನ್ಯಾಯವೆಸಗಿರುತ್ತಾರೆಂಬ ಗುಮಾನಿಗೆ ಬಲವಾದ ಕಾರಣಗಳಿವೆ. ಇಲ್ಲವಾದರೆ ಇವರಿಗಿಂತ ಕಡಿಮೆ ಕೆಲಸ ಮಾಡಿದ ಒಬ್ಬಿಬ್ಬರನ್ನು ಪರಿಚಯಿಸಿ ಇಷ್ಟು ಅಗಾಧವಾದ ಕೆಲಸ ಮಾಡಿದ ಗ್ರಂಥ ಸಂಪಾದನ ಪ್ರಾಜ್ಞರನ್ನು ಉಪೇಕ್ಷಿಸಿದ್ದಕ್ಕೆ ಕಾರಣವೇ ಇಲ್ಲ. ಈ ಬಗೆಯ ನಿರ್ಲಕ್ಷವನ್ನು ಅಹಿಂಸಾವಾದಿಗಳಾದ ಜೈನರು ಹೇಗೋ ಸಹಿಸಿಕೊಳ್ಳುತ್ತಾರೆಂಬ ತಾತ್ಸಾರ ಬುದ್ಧಿ ಒಳ್ಳೆಯದಲ್ಲ. ಜಾಣರಾದ ಸಣ್ಣಜನರು ಹೆಸರಿಸದೆ ಹೋದ ಮಾತ್ರಕ್ಕೆ ಶಾಸ್ತ್ರಿಗಳ ಸೇವೆಯ ಮಹತ್ವವೇನೂ ತಗ್ಗುವುದಿಲ್ಲ.

ಮಹಾಪುರಾಣ ಇರುವವರೆಗೂ ಅದರ ಅನುವಾದಕರ ಸೇವೆಯೂ ನಂದಾದೀವಿಗೆಯಾಗಿ ಬೆಳಗುತ್ತಿರುತ್ತದೆ.