ತುಮಕೂರು ಜಿಲ್ಲೆಯ, ಅದೇ ತಾಲ್ಲೂಕಿನ, ಗೂಳೂರು ಹೋಬಳಿಯ ಕೈದಾಳವು ಪ್ರಸಿದ್ಧವಾದ ಐತಿಹಾಸಿಕ ಮಹತ್ವದ ಸ್ಥಳ. ಜಿಲ್ಲಾ ಕೇಂದ್ರವಾದ ತುಮಕೂರಿನಿಂದ ತೆಂಕಣಕ್ಕೆ ಏಳು ಕಿಮೀ ದೂರದಲ್ಲಿರುವ ಕೈದಾಳವು, ಹನ್ನೆರಡನೆಯ ಶತಮಾನದಲ್ಲಿ, ಒಬ್ಬ ಆದರ್ಶ ಜೈನ ಶ್ರಾವಕ ಮಹಾಸಾಮಂತನಿಂದ ಪ್ರಸಿದ್ಧ ಪಡೆಯಿತು.

ಕ್ರಿ.ಶ. ಹನ್ನೆರಡನೆಯ ಶತಮಾನದಲ್ಲಿ ಈಗಿನ ಕೈದಾಳ ಮತ್ತು ಅದರ ಸುತ್ತ ಮುತ್ತಲಿನ ಪ್ರದೇಶಕ್ಕೆ ‘ಮರುಗರೆ ನಾಡು; ಎಂಬ ಹೆಸರಿತ್ತು. ಈ ಮರುಗರೆ ನಾಡಿಗೆ ಕೈದಾಳವು ಮುಖ್ಯ ಪಟ್ಟಣವಾಗಿತ್ತು. ಈ ಮರುಗರೆ ನಾಡನ್ನು, ಅದಕ್ಕೆ ನೆಲೆ ವೀಡಾದ ಕೈದಾಳದಿಂದ, ಮಹಾಸಾಮಂತನೂ ಸಾಹಸಿಯೂ ಜಿನಭಕ್ತನೂ ಆದ ಗೂಳಿಯ ಬಾಚಿದೇವ ಎಂಬಾತನು ಆಳುತ್ತಿದ್ದನು. ಆತನ ಒಲವಿನ ಮಡದಿ ಭೀಮವೆನಾಯಕಿತಿ ಎಂಬಾಕೆ-

ಜಿನಪತಿ ದೆಯ್ವಂ ತಂದೆ ಕಲಿಯಾದ್ಧರೆ ನಾಕನೊಳ್ಪನಾಂತ ತ
ಜ್ಜನನಿ ವಿನೂತೆ ಚಿಂಬಲೆ ಮಹಾಸತಿ ಗೂಳಿಯ ಬಾಚಿದೇವ ಸ
ಜ್ಜನ ನುತ ವೀರ ತನ್ನ ಪತಿಯಂದೊಡೆ ಪೋಲ್ವರಾರ ಧಾತ್ರಿಯೊಳ್
ವನಿತೆಯಣ ಭೀಮಲೆಯೊಳೊರ್ಜ್ಜಿತ ಪುಣ್ಯ ಹುಣಾಭಿರಾಮೆಯೊಳ್
||

ಈ ಚಂಪಕ ಮಾಲೆ ವೃತ್ತ ಪದ್ಯವು ಭೀಮಲೆ (ಭೀಮವ) ನಾಯಕಿತಿಯ ಮನೆತವನನ್ನು ಪರಿಚಯಿಸುತ್ತದೆ. ಭೀಮಲೆಯು ಪೂಜಿಸುವ ಮನೆದೇವರು ಜಿನಪತಿ (ಅರ್ಹಂತ-ತೀರ್ಥಂಕರ), ಈಕೆಯ ತಂದೆ ಕಲಿಯಾದ ನಾಕನು (ನಾಗದೇವ – ನಾಗಮಯ್ಯ), ಈಕೆಯ ಪತಿ ಸಜ್ಜನರಿಂದ ಹೊಗಳಿಕೊಂಡಿರುವ ವೀರನಾದ ಬಾಚಿ ದೇವ – ಎಂದ ಮೇಲೆ, ತನ್ನ ಗುಣಗಳಿಂದಲೇ ಸುಂದರಳಾದ ಪುಣ್ಯವಂತೆ, ಭೀಮಲೆ ಯನ್ನು ಈ ಭೂಮಿಯಲ್ಲಿ ಹೋಲುವಂತಹವರು ಬೇರೆಯಾರಿದ್ದಾರೆ? ಇಂತಹ ಊರ್ಜಿತ ಪುಣ್ಯ ಗುಣಾಭಿರಾಮೆಯಾದ ಭೀಮಲೆಯು, ಮಹಾಸಾಮಂತನಾದ ಗೂಳಿಯ ಬಾಚಿದೇವನ ಹೆಂಡತಿಯಾದ ಮೇಲೆ ಈ ದಂಪತಿಗಳು ಕೈದಾಳದಲ್ಲೂ, ತಮ್ಮ ನಾಡಾದ ಮರುಗರೆಯಲ್ಲೂ ದಾನ ಧರ್ಮಗಳಿಂದ ಸತ್ಕಾರ್ಯ ನಿರತರಾದರು. ಎಪಿಗ್ರಾಫಿಯ ಕರ್ನಾಟಕದ ಹನ್ನೆರಡನೆಯ ಸಂಪುಟದಲ್ಲಿ, ತುಮಕೂರು ಒಂಬತ್ತನೆಯ ಸಂಖ್ಯೆಯ ಶಾಸನ ಈ ಬಾಚಿದೇವನ ಜನಮುಖಿ ಚಿಂತನೆ, ಜನೋಪ ಯೋಗಿ ಕಾರ್ಯ ಚಟುವಟಿಕೆಗಳನ್ನು ಪ್ರತಿಬಿಂಬಿಸಿದೆ; ಈ ಶಾಸನದ ತೇದಿ ಕ್ರಿ.ಶ. ೧೧೫೧ [ಎ.ಕ. ೧೨. ತು. ೯.೧೧೫೧. ಪು. ೧೩-೧೫. ಕೈದಾಳ (ತುಜಿ/ತಾ)].

ಗೂಳಿಯ ಬಾಚಿದೇವನು ತನ್ನ ಕಾಲದ ಎಲ್ಲ ಮತ ಧರ್ಮಗಳನ್ನೂ ಸ್ವಧರ್ಮನಿಷ್ಠೆಯಿಂದ, ಸಮಭಾವದಿಂದ ಗೌರವಿಸಿ ಉಳಿದ ಪ್ರಜೆಗಳಿಗೆ ಮೇಲ್ಪಂಕ್ತಿ ಹಾಕಿದ್ದನು:

ಧರೆಗೆಸೆವ ನಾಲ್ಕು ಸಮೆಯದ
ಸಿರಿ ಕಳ್ಪಾವನಿರುಹಂ ಬುಧಜನ (ನಿವಹ) ಕೇ
ದೊರೆವೆತ್ತ ಪೆಂಪಿನಿಂದಂ
ಪಿರಿಯಂ ಧರ್ಮ್ಮಾವತಾರ ಗಂಗನ ಪುತ್ರಂ
||

ಬಲ್ಲಿದರ ಪಾಲಿಗೆ ಬೇಡಿದುದನ್ನು ನೀಡುವ ಕಲ್ಪವೃಕ್ಷವಾಗಿದ್ದ ಈ ಬಾಚಿದೇವನು ನಾಲ್ಕೂ ಧರ್ಮಗಳಿಗೆ ಲಕ್ಷ್ಮಿಯಾಗಿದ್ದನು, ತನ್ನ ಹಿರಿಮೆಯಿಂದಾಗಿ ಧರ್ಮವೇ ಮನುಷ್ಯರೂಪಿನಿಂದ ಬಂದ ಹಾಗಿದ್ದನು; ನಾಲ್ಕೂ ಸಮಯವೆಂದರೆ ಮತಧರ್ಮ ಕುಲ ಸಮಾಜಗಳು. ಅಯಾ ಕುಲದವರ ನಂಬಿಕೆ ನಿಷ್ಠೆ ಪೂಜೆಗಳಿಗೆ ತಕ್ಕ ದೇಗುಲಗಳನ್ನೂ ತಾನೇ ಕಟ್ಟಿಸಿಕೊಟ್ಟನು:

            ಉದ್ಧರಿಸಿ ಜೈನ ಭವನಮ
ನುದ್ಧರಿಸಿ ಶಿವಾಲಂಗಳಂ ಮುದದಿಂದ
ನ್ತುದ್ಧರಿಸಿ ವಿಷ್ಣುಗೇಹಮ
ನುದ್ಧರಿಸಿದ ನಲ್ತೆ ಬಾಚಿ ಜಸದುಂನತಿಯಂ
||

            ಸೊಗಯಿಪ ಕಾಮಧೇನು ಜಿನಶಾಸನಲಕ್ಷ್ಮಿಗೆ ಕಳ್ಪ ಭೂರುಹಂ
ಮೃಗಧರ ಭೂಷಣಾಗಮ ತಪಸ್ವಿಗೆ ಸಿದ್ಧರಸ ಪ್ರವಾಹಮೇಂ
ನೆಗೆದುದು ಬುದ್ಧ ಕೋಟಿಗೆನೆ ಚಿನ್ತಿಸದೀವ ಮಹಾಂಶುರತ್ನದಾ
ನಗಧರನಾಗಮಜ್ಞರಿಗವೆಂದೊಡೆ ಬಾಚಿಯದೇಂ ಕೃತಾರ್ತ್ಥನೋ
||

ತನ್ನ ಅಳ್ವಿಕೆಯ ನೆಲದಲ್ಲಿ ಜಿನಭವನ, ಶಿವಾಲಯ, ವಿಷ್ಣು ಮಂದಿರಗಳನ್ನು ಮಾಡಿಸಿ ತನ್ನ ಯಶಸ್ಸನ್ನು ಹೆಚ್ಚಿಸಿದನು ಜಿನ ಶಾಸನಲಕ್ಷ್ಮಿಗೆ (ಜೈನಧರ್ಮ ಪ್ರಸಾರಕ್ಕೆ) ಚೆಲುವಾದ ಕಾಮಧೇನು. ಚಂದ್ರಶೇಕರ ಸ್ವಾಮಿಯ ಆಗಮ ತಪಸ್ವಿಗಳ (ಶೈವಾಗಮ ಪಾಲಕರ) ಪಾಲಿಗೆ ಕಲ್ಪವೃಕ್ಷ, ಬೌದ್ಧ ಧರ್ಮವನ್ನು ಅನುಸರಿಸುವವರಿಗೆ ಸಿದ್ಧರಸದ ಹೊನಲು, ಗೋವರ್ಧನಗಿರಿಧಾರಿಯಾದ ಕೃಷ್ಣನ ಭಕ್ತರಾದ ವೈಷ್ಣವರಿಗೆ ಸಂತೋಷದಿಂದ ಇಷ್ಟಾರ್ಥಗಳನ್ನು ಕೊಡುವ ಚಿಂತಾಮಣಿ – ಎಂದೆನಿಸಿ ಬಾಚಿದೇವನು ಧನ್ಯನಾಗಿದ್ದನು. ಅದರಿಂದ ಆ ಎಲ್ಲ ಮತಧರ್ಮಗಳ ಮೂಲ ದೈವಗಳು ಚೆಲುವನಾದ ಬಾಚಿಗೆ ಚಂದ್ರನೂ ಕುಲಪರ್ವತಗಳೂ ಇರುವವರೆಗೂ ಜಯಪರಂಪರೆಯನ್ನು ಕರುಣಿಸಲೆಂದು ಪ್ರಾರ್ಥಿಸಲಾಗಿದೆ.

            ಜಿನಪತಿ ಕೂರ್ತ್ತು ಬೇಳ್ಪ ಸುಖಸಂಪದಮಂ ಹರನೊಲ್ದು ಕೀರ್ತ್ತಿಯಂ
ಕನಕ ಸರೋದ್ಭವ ವರಚಿರಾಯುವನಿಂಬಿನಲೀಗಳಚ್ಯುತಂ
ಮನಮೊಸೆದೊಪ್ಪು ತಿರ್ಪ್ಪಸಿರಿಯಂ ವರಬುದ್ಧ ಜಯಾಭಿವೃದ್ಧಿಯಂ
ಮನಸಿಜರೂಪ ಬಾಚಿ ನಿನಗೀಗೆ ಶಶಾಂಕ ಕುಳಾದ್ರಿಯುಳ್ಳಿನಂ
||

ಜಿನಪತಿ, ಹರ, ಬ್ರಹ್ಮ, ಅಚ್ಯುತ, ವರಬುದ್ಧ – ಈ ಐವರನ್ನೂ ನುತಿಸುತ್ತಲೇ ಅವರು ಬಾಚಿಗೂ ಬೇಡುವ ಸುಖಸಂಪತ್ತು ಕೀರ್ತಿ ಆಯುಸ್ಸು ಐಶ್ವರ್ಯ ಗೆಲುವು – ಇವನ್ನು ಕೊಡಲಿ ಎಂದು ಆಶಿಸಿರುವುದು ಈ ಪದ್ಯದ ವೈಶಿಷ್ಟ್ಯ. ಹೀಗೆ ನಾಲ್ಕೂ ಮತಧರ್ಮಗಳವರನ್ನು ಉದ್ಧರಿಸುವ ಹೊಣೆಗಾರಿಯನ್ನು ಹೊತ್ತು ನಿತ್ತರಿಸಿದ ಗುಣದೊಡೆಯನಾದ ಶ್ರೀಮಾನ್ ಮಹಾಸಾಮಂತ – ಗೂಳಿ – ಬಾಚಿದೇವನು ಮರುಗರೆನಾಡಿನಲ್ಲಿ ಅನೇಕ ದೇವಾಲಯ ಬಸದಿ ವಿಷ್ಣು ಗೃಹಗಳನ್ನಷ್ಟೇ ಅಲ್ಲದೆ ದೊಡ್ದ ಕೆರೆಗಳನ್ನೂ ಕಟ್ಟಿಸಿದನು. ತನ್ನ ಒಲವಿನರಸಿ ಮಡಿದಿ ಭೀಮವೆ ನಾಯಕಿತಿ ಸತ್ತ ನಿಮಿತ್ತವಾಗಿ, ಪರೋಕ್ಷ ವಿನಯವೆಂದು ಆಕೆಯ ಹೆಸರಿನಲ್ಲಿ, ‘ಭೀಮಜಿನಾಲಯ’ ಎಂಬ ಬಸದಿಯನ್ನು ಮಾಡಿಸಿದನು, ಭೀಮಸಮುದ್ರ’ ವೆಂದು ಒಂದು ಕೆರೆಯನ್ನು ಕಟ್ಟಿಸಿದನು, ಅನೇಕ ದಾನದತ್ತಿ ಇತ್ತನು.

ಮರುಗರೆ ನಾಡಿನ ಆಧಾರವಾದ ಊರುಗಳಾದ ಕೈದಾಳ ಗೂಳೂರುಗಳಲ್ಲಿ ಈಗ ಜೈನ-ಬೌದ್ಧ ದೇವಾಲಯಗಳು ಉಳಿದು ಬಂದಿಲ್ಲ. ಗುಳೂರು ಎಂಬ ಹೆಸರು ಬಂದಿರುವುದು ಈ ಗೂಳಿಯ – ಕೈದಾಳ ಎರಡೂ ಸೇರಿ ಅಂದು ಒಂದೇ ದೊಡ್ದ ಪಟ್ಟಣ ವಾಗಿದ್ದು ರಾಜಧಾನಿ ಆಗಿತ್ತು. ಕೈದಾಳ ಎಂಬ ಕನ್ನಡ ಹೆಸರನ್ನು ಸಂಸ್ಕೃತಕ್ಕೆ ಪರಿವರ್ತಿಸಿ ‘ಕ್ರೀಡಾಪುರ’ ಎಂದೂ ಮಾಡಿದ್ದಾರೆ. ಕೈದಾಳದಲ್ಲಿ ಇಂದಿಗೂ ಇರುವ ಶ್ರೀ ಚನ್ನಕೇಶವ ದೇವಾಲಯವು ದ್ರಾವಿಡಶೈಲಿಯದಾಗಿದ್ದು ಇದು ಗೂಳಿಯ ಬಾಚಿ ದೇವನು ಮಾಡಿಸಿದ್ದಾಗಿದೆ. ಎರಡೂವರೆ ಅಡಿ ಎತ್ತರದ ಪೀಠದ ಮೇಲೆ ನಿಂತಿರುವ ಐದೂವರೆ ಅಡಿ ಆಳೆತ್ತರದ ಶ್ರೀ ಚನ್ನಕೇಶವ ದೇವರ ಪ್ರಭಾವಳಿಯಲ್ಲಿ ಹತ್ತು ಅವತಾರಗಳ ಶಿಲ್ಪವಿದೆ. ಈ ದೇಗುಲದ ಮಹಾದ್ವಾರದ ಬಲಗಡೆಯ ಒಂದು ಕಂಬದ ಮೇಲೆ ಒಂದೂಕಾಲು ಅಡಿ ಎತ್ತರದ ವಿಗ್ರಹವು ನೋಡತಕ್ಕದ್ದು. ಕೈಗಳನ್ನು ಮುಗಿಯುತ್ತಿರುವ ಹಾಗೆ ಜೋಡಿಸಿ, ಹೆಗಲ ಮೇಲೆ ಉತ್ತರೀಯ ಹೊದ್ದು, ಸೊಂಟದಲ್ಲಿ ಬಾಕು ಇರುಕಿಸಿ ನಿಂತಿರುವ ಈ ಉಬ್ಬು ಶಿಲ್ಪದ ವ್ಯಕ್ತಿಯೇ ಗೂಳಿಯ ಬಾಚಿದೇವ. ಇದನ್ನು ಮುಕ್ಕಾಗದಂತೆ, ಚೊಕ್ಕವಾಗಿ ಉಳಿಯುವಂತೆ ಕಾಪಾಡಬೇಕಾಗಿದೆ, ಇದೊಂದು ಸಾಮಂತ ಐತಿಹಾಸಿಕ ಮಹತ್ವದ ವ್ಯಕ್ತಿಯೊಬ್ಬನ ಪ್ರತಿರೂಪ ಎಂಬ ಕಾರಣಕ್ಕಾಗಿ.

ಗೂಳಿಯ ಬಾಚಿದೇವ ಎಂಬ ಹೆಸರಿನ ಆದಿಯಲ್ಲಿ ಇರುವ ರೂಪವಾದ ’ಗೂಳಿ’ ಎಂಬುದು ಅರ್ಥ ಮನನೀಯ. ಸಾಮಾನ್ಯವಾಗಿ ಶ್ರೇಷ್ಠ ಎಂಬರ್ಥಸೂಚಕವಾಗಿ ವೃಷಭವನ್ನು ಹೇಳುವುದುಂಟು; ಪರಾಕ್ರಮಿ ಎಂಬರ್ಥದಲ್ಲಿ ಬಳಸಲಾಗಿರಲೂ ಬಹುದು. ಆದರೆ ಕೈದಾಳದ ಆಸುಪಾಸಿನಲ್ಲಿ ಆಗಿಹೋದ ಸಗರಮಣಲೆಯರ ಮನೆತನದಲ್ಲಿ ಬರುವ ‘ಪರಮಗೂಳ’ ಎಂಬ ನಾಮರೂಪವನ್ನು ಗಮನಿಸಬೇಕು. ಪಲ್ಲವಾಧಿರಾಜನ ಮಗಳಾದ ಕುಂದಾಚ್ಚಿಯ ಗಂಡ, ನಿರ್ಗುಂದದ ರಾಜ, ಪರಮಗೋಳ [ಎ.ಕ. ೪. ನಾಮಂ. ೮೫. ಪು. ೧೩೫.; ರೈಸ್, ಬಿ.ಎಲ್., ಮೈಸೂರ್ ಅಂಡ್ ಕೂರ್ಗ್, ಪು. ೩೯]. ಆ ಪರಮಗೂಳನೂ ಜೈನನಾಗಿದ್ದನು, ಆತನ ವಂಶಕ್ಕೆ ಸೇರಿದ ಜ್ಞಾತಿಗಳಾಗಿ ಇದ್ದ ಮನೆತನವಾಗಿ ಗೂಳಿಯ ಬಾಚಿ ದೇವನು ಬಾಳಿದನೆ ಎಂಬುದು ಪರಿಭಾವನೀಯ.

ಆದರೆ ಗೂಳಿಯ ಬಾಚಿದೇವನದು ಅದಳ ವಂಶ; ಈತನನ್ನು ಅದಳಕುಳ ಕಮಳಹಂಸ ಎಂದೂ, ಅದಳವಂಶ ಕುಳಾಂಬರ ಬಾನು ಎಂದೂ ಶಾಸನ ನಮೂದಿಸಿದೆ [ಎ.ಕ. ೧೨. ತು. ೯. ಪು. ೧೩. ಸಾಲು : ೧೫-೧೬ ಮತ್ತು ೧೮]. ಇಲ್ಲಿಯೇ ಹೇಳಬೇಕಾದ ಮತ್ತು ಈ ಆದಳವಂಶಕ್ಕೆ ಸಂಬಂಧಿಸಿದ ಬಹುಮುಖ್ಯವಾದ ಪೂರಕ ವಿಚಾರವೂ ಇದೆ. ಅದಳ ವಂಶದವರಿಗೆ ಈಗಿನ ಶಿವಗಂಗೆಯೂ ಸೇರಿತ್ತು. ಶಿವಗಂಗೆಯಲ್ಲಿ ಆದಳವಂಶದವರು ಕಟ್ಟಿಸಿಕೊಟ್ತ ಅದಳಜಿನಾಲಯಗಳು ಇದ್ದುವೆಂದು ಶಾಸನದಲ್ಲಿ ದಾಖಲೆಯಿದೆ [ಎ.ಕ. ೯. ನೆಮಂ. ೮೪ ೧೧೪೦. ಸಿವಗಂಗೆ]. ಅದಳವಂಶ ಶಿಖಾಮಣಿಯಾಗಿದ್ದ ವಿಷ್ಣುವ್ವರ್ಧನನು ಇದನ್ನು ಮಾಡಿಸಿದನು. ಪಟ್ಟಮಹಿಷಿಯಾದ ಶಾಂತಲಾದೇವಿಯು ಶಿವಗಂಗೆಯಲ್ಲಿ ಜೈನ ಸಲ್ಲೇಖನ ವ್ರತಧಾರಿಯಾಗಿ ಮುಡಿಪಿದಳೆಂದು ಶಾಸನಗಳು ಹೆಳಿವೆ [ಎ.ಕ. ೨(ಪ.) ೧೭೬ (೧೪೩) ೧೧೩೧. ಪು. ೧೩೧. ಸಾಲು : ೮೭-೯೬]. ಈ ರೀತಿ ವಾಂಶಿಕ ಸಂಬಂಧಗಳ ಹಿನ್ನೆಲೆಯಲ್ಲಿ ಚಾರಿತ್ರಿಕ ಸಂಗತಿಗಳನ್ನು ಅನ್ವೇಷಿಸಿ ಸತ್ಯವನ್ನು ಸ್ಫೋಟಿಸುವ ಕೆಲಸ ಇನ್ನಷ್ಟು ಆಗಬೇಕಾಗಿದೆ. ಅತ್ತಕಡೆಗೆ ತೋರು ಬೆರಳು ಮಾಡಿರುವುದು ಈ ಸಂಪ್ರಬಂಧದ ಪ್ರಯತ್ನ.