ಇಂದಿನ ಬೆಳಗಾವಿಗೆ ಪ್ರಾಚೀನ ಹೆಸರು ವೇ(ಳು)ಣು ಗ್ರಾಮ. ಈ ಜಿಲ್ಲೆಯ ಸವದತ್ತಿ (ಸೌಂದತ್ತಿ, ಸೌದತ್ತಿ, ಸಾವನ್ದತ್ತಿ) ಎಂಬುದರ ಸಂಸ್ಕೃತಿಕರಣಗೊಳಿಸಿದ ರೂಪವೆ ಸುಗಂಧವರ್ತಿ. ಸೌದತ್ತಿಗೆ ಹತ್ತೊಂಬತ್ತನೆಯ ಶತಮಾನದವರೆಗೆ ಪರಸಗಡ ತಾಲ್ಲೂಕಾ ಎಂದು ಕರೆಯಲಾಗಿದೆ. ಬೆಳಗಾವಿ – ಸವದತ್ತಿಯ ಸುತ್ತಣ ಪ್ರದೇಶವನ್ನು ಹಿಂದೆ ಪ್ರಸಿದ್ಧ ರಟ್ಟಿಕುಲ ಪ್ರಧಾನರು ಆಳಿದರು. ಸುಮಾರು ೩೫೦ ವರ್ಷಗಳಷ್ಟು ದೀರ್ಘಕಾಲ ಈ ರಟ್ಟದ ಆಳ್ವಿಕೆಯಿತ್ತು. ಅವರ ಕಾಲದ ಸಂಸ್ಕೃತ ಮತ್ತು ಕನ್ನಡ ಶಾಸನಗಳನ್ನು ಜೆ.ಎಫ್. ಫ್ಲೀಟ್ ಪ್ರಕಟಿಸಿದ್ದಾರೆ (೧೮೭೪).

ಸೌಂದತ್ತಿ – ಸೌದತ್ತಿ ಎಂಬ ಶಬ್ದರೂಪದ ನಿಷ್ಪತ್ತಿ ಮತ್ತು ವಿಕಾಸ ಕುರಿತ ಚರ್ಚೆ ತೃಪ್ತಿಕರವಾಗಿ ನಡೆದಿಲ್ಲ. ಈಗ ಜನರೂಢಿಯಲ್ಲಿ ವಾಡಿಕೆಯಾಗಿರುವಂತೆ ಸೌಂದತ್ತಿ – ಸೌದತ್ತಿ – ಸವದತ್ತಿ ಎಂಬುದು ಸಂಸ್ಕೃತ ಸುಗಂಧವರ್ತಿಯಿಂದ ಬಮ್ದ ತದ್ಭವ ರೂಪಗಳಲ್ಲ. ವಾಸ್ತವವು ಇದರ ತದ್ವಿರುದ್ಧವಾಗಿ ನಡೆದಿರುವ ಭಾಷಿಕ ಪ್ರಕ್ರಿಯೆಯಾಗಿದೆ. ಇವಲ್ಲೆದಕ್ಕೂ ಮೂಲಶಬ್ದ ‘ಸವಣದತ್ತಿ’ ಎಂಬುದು. ಜೈನ ಮುನಿಗಳಾದ ಶ್ರಮಣರಿಗೆ ದತ್ತಿಯಾಗಿ ಕೊಟ್ಟದೇಗುಲ – ಹೊಲ – ನೆಲ ಇದ್ದ ಪ್ರದೇಶವೇ ಸವಣದತ್ತಿ. ಸಂಸ್ಕೃತದ ಶ್ರವಣವು ಪ್ರಾಕೃತದಲ್ಲಿ ಸಮಣ – ಸವಣ ಎಂದಾಗುತ್ತದೆ; ಜೈನ ಸನ್ಯಾಸಿ ಎಂದು ಅದರ ಅರ್ಥ, ಶ್ರಮನ -ಶ್ರವಣ ಎಂಬ ಸಂಸ್ಕೃತ ಯುಗ್ಮ ರೂಪಗಳಿಗೆ ಸಂವಾದಿಯಾಗಿ ಪ್ರಾಕೃತದಲ್ಲಿ ಸಮಣ -ಸವಣ ಎಂಬ ಸಮಾನರೂಪ ಗಳಿವೆ. ಕನ್ನಡದಲ್ಲಿಯೂ ಇವೇ ಪ್ರಾಕೃತ ರೂಪಗಳು ೧೨೦೦ ವರ್ಷಗಳಿಂದ ಬಳಕೆಯಾಗುತ್ತಿವೆ.

ಸೌದತ್ತಿಯ ಎಲ್ಲಮ್ಮನಗುಡಿಯು ಆ ಪ್ರದೇಶವನ್ನು ಆಳಿದ ಅಪ್ಪಟ ಜೈನರಾದ ರಟ್ಟರ ಪಟ್ಟಜಿನಾಲಯವಾಗಿತ್ತು ಎಂಬುದು ಈಗ ಸ್ಥಾಪಿತವಾಗಿರುವ ಸತ್ಯ. ರಟ್ಟರ ಕಾಲದಲ್ಲಿ ಈ ಭಾಗವೆಲ್ಲವೂ ಜೈನರ ನೆಲೆವೀಡಾಗಿತ್ತು. ಅನೇಕ ಜೈನ ಮುನಿ ಸಂಘಗಳೂ, ಅನ್ವಯಗಳೂ, ಗಣಗಳೂ, ಗಚ್ಛಗಳೂ ಇಲ್ಲಿ ಜೀವಂತವಾಗಿದ್ದುವು. ಅವುಗಳಲ್ಲಿ ಚಂದ್ರಿಕಾವಾಟ ಎಂಬ ಅನ್ವಯವು ಪ್ರಬಲವಾಗಿದ್ದಿತು. ಚಂದ್ರಪ್ರಭ ತೀರ್ಥಂಕರರ ದೇವಾಲಯವೇ ಪ್ರಮುಖವಾಗಿದ್ದುದರಿಂದ ಚಂದ್ರಿಕಾವಾಟವೆಂಬ ಹೆಸರೂ, ಮುನಿಸಂಘವೂ ರೂಪಿತವಾಯಿತೆಂಬ ಅಭಿಪ್ರಾಯವಿದೆ; ಚಂದ್ರಿಕಾವಾಟ ಎಂಬುದು ಸ್ಥಳವಾಚಿ ಮೂಲದಿಂದ ಬಮ್ದ ಅಭಿಧಾನವೆಂಬ ಗ್ರಹಿಕೆಯೂ ಇದೆ.

ಈ ಚಂದ್ರಿಕಾವಾಟ ಅನ್ವಯದಲ್ಲಿಯೇ ಕಾರೇಯಗಣವೂ, ಸೇನಾನ್ವಯವೂ, ತಿಂತ್ರಣೀ ಗಚ್ಛವೂ ಸೇರಿವೆ. ಸೌದತ್ತಿ -೧೨ ಕ್ಕೆ ಸಂಬಮ್ಧಿಯಾದ ಮುಳುಗುಂದ ಹೆಸರಿನ ಹಳ್ಳಿಯ ಜಿನ ಮಂದಿರಕ್ಕೆ ಕನ್ನ ಭೂಭುಜನು ತನ್ನ ಸೀವಟದಿಂದ ಎರಡು ಹುಣಸೆಯ ಮರಗಳ ನಡುವಣದ ಆರು ನಿವರ್ತನ ಭೂಮಿಯನ್ನು ಇತ್ತನು: ತಿಂತ್ರಿಣೀ ವೃಕ್ಷಯೋರ್ದ್ವಯೋರ್ ಮಧ್ಯೇ ಯಾ ಸ್ಥಿತಾ ಭೂಮಿರ್ದ್ದತ್ತಾ ಶ್ರೀಕನ್ನ ಭೂಭಜಾ [ಫ್ಲೀಟ್ : ೧೮೭೪: ೧೯೪] ತಿಂತ್ರಿಣೀ ವೃಕ್ಷದ ಸಂಬಂಧದಿಂದಾಗಿ ತಿಂತ್ರಿಣಿಗಚ್ಛವೆಂದು ಹೆಸರಾಯಿತು. ಹುಣಸಿಹಡಗಲಿಯು ಈ ತಿಂತ್ರಿಣೀಗಚ್ಛದ ಉಗಮಸ್ಥಳ.

ಮೈಳಾಪ ತೀರ್ಥವು ಮೊದಲಿನಿಂದಲೂ ಮುಳುಗುಂದದ ಸಂಬಂಧ ಹೊಂದಿತ್ತು. ಮೈಳಾಪತೀರ್ಥವು ಮಳಹಾರೀ ಎಂಬ ನದಿಯ ಸೀಮಾ ಪ್ರದೇಶದಲ್ಲಿ ಪ್ರಭಾವಶಾಲಿ ಜೈನಯಾತ್ರಾಸ್ಥಳ [ಫ್ಲೀಟ್: ೧೮೭೪ : ೧೯೮]. ಮೈಳಾಪ ತೀರ್ಥವು ಕೇಂದ್ರಬಿಂದು ವಾಗಿದ್ದ ಜೈನ ಸನ್ಯಾಸಿಗಳೂ ಶಿಷ್ಯರೂ ಒಂಬತ್ತು – ಹತ್ತನೆಯ ಶತಮಾನಗಳಲ್ಲಿಯೇ ಕಂಡುಬರುತ್ತಾರೆ. ಮೈಳಾಪತೀರ್ಥ ಪರಂಪರೆಗೆ ಸೇರಿದ ಜಿನಮಂದಿರಗಳ ಸವಣರಿಗೆ ರಾಷ್ಟ್ರಕೂಟ ರಾಜರಿಂದ ದಾನದತ್ತಿಯಾಗಿ ಪರಂಪರೆಗೆ ಸೇರಿದ ಜಿನಮಂದಿರಗಳ ಸವಣರಿಗೆ ರಾಷ್ಟ್ರಕೂಟ ರಾಜರಿಂದ ದಾನದತ್ತಿಯಾಗಿ ಕೊಡಲ್ಪಟ್ಟ ಸ್ಥಳವೇ ಸವಣದತ್ತಿ. ಮೈಳಾಪತೀರ್ಥ ಸವಣರಿಗೆ ರಟ್ಟರಾಜರು ದತ್ತಿ ಕೊಟ್ಟ ಕಾರಣ ‘ಸವಣದತ್ತಿ’ ಎಂಬ ಹೆಸರು ಚಾಲ್ತಿ ಪಡೆಯಿತು. ಸವಣದತ್ತಿ ಎಂಬ ಶಬ್ದರೂಪ ಕ್ರಮೇಣ ಜನರ ಉಚ್ಚಾರಣಾನುಕೂಲಕ್ಕೆ ಅನುಗುಣವಾಗಿ ಶಬ್ದಗಳ ಹೊರಳುತ್ತ ಸವಣದತ್ತಿ – ಸವಂದತ್ತಿ – ಸೌದತ್ತಿ – ಸವದತ್ತಿ – ಸೌದತ್ತಿ ಎಂಬ ವ್ಯತ್ಯಾಸಗಳನ್ನು ಪಡೆದು ಕೊಂಡಿದೆ.

ಶಾಸನಗಳಲ್ಲಿ ನಮೂದಾಗಿರುವ ಪ್ರಕಾರ ಮುಳ್ಗುಂದದ ‘ವರ ವೈಶ್ಯಜಾತಿಜಾತ:’ ಶ್ರೇಷ್ಠಿಭಿ: [೧೮೭೪ : ೧೯೦ – ೯೧], ಅಂದರೆ ವೈಶ್ಯಕುಲದವರು (ಬಯಿಸಕುಲ) ಮೈಳಾಪತೀರ್ಥಕ್ಕೆ ದಾನದತ್ತಿಗಳನ್ನಿತ್ತು ಶಿಷ್ಯರಾಗಿದ್ದರು. ಸೌದತ್ತಿಯ ರಟ್ಟರೆನಿಸಿದ ರಾಜಮನೆತನದ ಅರಂಭದ ದೊರೆಗಳಾದ ಮೆರಡ, ಪ್ರೀಥ್ವೀರಾಮ, ಪಿಟ್ಟುಗ, ಕನ್ನರ – ಎಂಬೀ ಆದ್ಯರು ಸಹ ಸವಣದತ್ತಿಯಾದ ಮೈಳಾಪತೀರ್ಥದ ಆಡಳಿತ ನೋಡಿ ಕೊಳ್ಳುತ್ತ ನಿರ್ವಹಣೆಯ ಭಾಗವಾಗಿದ್ದರು. ಪ್ರೀಥ್ವೀರಾಮನು ಮೈಳಾಪತೀರ್ಥದ ಗುರುಕುಲದಲ್ಲಿ ಛಾತ್ರ (ಚಟ್ಟ – ಶಿಷ್ಯ) ನಾಗಿದ್ದು ಅಲ್ಲಿ ಕಲಿಯುತ್ತಿದ್ದನೆಂದು ಶಾಸನದಲ್ಲಿ ಅಸ್ಖಲಿತವಾಗಿ ದಾಖಲಾಗಿದೆ.

ಸೌದತ್ತಿಯಲ್ಲಿರುವ ಈಗಿನ ಎಲ್ಲಮ್ಮನ ಇಡೀ ಗುಡ್ಡವೇ ಆ ಮೈಳಾಪ ತೀರ್ಥವಾಗಿತ್ತು; ಎಲ್ಲಮ್ಮನ ಗುಡಿ ರಟ್ಟರ ಪಟ್ಟಜಿನಾಲಯವೆಂದು ಈ ಲೇಖನದ ಆರಂಭದಲ್ಲಿ ಹೇಳಿದ್ದಾಗಿದೆ. ಈ ಸವಣದತ್ತಿ (ಸೌದತ್ತಿ) ಯು ಕುಹೂಂಡಿ (ಕೂಂಡಿ) ಮುನ್ನೂರಕ್ಕೆ ರಾಜಧಾನಿಯಾಗಿತ್ತು. ಈ ನೆಲೆವೀಡು ೧೨ ನೆಯ ಶತಮಾನದಲ್ಲಿ ಸೌದತ್ತಿಯಿಂದ ವೇಣುಗ್ರಾಮಕ್ಕೆ (ಬೆಳಗಾವಿ) – ೭೦ ಕ್ಕೆ ವರ್ಗಾಯಿಸಲ್ಪಟ್ಟಿತು. ಹೀಗೆ ಸ್ಥಳಾಂತರಿಸಲ್ಪಟ್ಟ, ಆ ವೇಣುಗ್ರಾಮ – ೭೦ ಕ್ಕೆ ರಾಜಧಾನಿಯಾಗಿದ್ದ ರಟ್ಟರಾಜ್ಯವನ್ನು ಹದಿಮೂರನೆಯ ಶತಮಾನದಲ್ಲಿ ಪರಾಜಯಗೊಳಿಸಿ ಸಚಿವ ಬೀಚಣನು ತನ್ನ ಯಾದವ ನೃಪತಿಯಾದ ಕನ್ನರದೇವ (ಕೃಷ್ಣರಾಜ) ನಿಗೆ ಒಪ್ಪಿಸಿದನು.

ಸವದತ್ತಿ, ಮುಳ್ಗುಂದ – ಇವು ಧವಳ ವಿಷಯದಲ್ಲಿ ಇದ್ದುವೆಂದು ಶಾಸನೋಕ್ತವಾಗಿದೆ [೧೮೭೪ : ೧೯೦]. ಧವಳ ವಿಶಯವೆಂದರೆ ಶಾಸನಗಳಲ್ಲಿ ನೂರಾರು ಬಾರಿ ಬರುವ ಬೆಳ್ವೊಲ ಮುನ್ನೂರರ ಪ್ರದೇಶ. ಈ ಧವಳ ವಿಷಯದಲ್ಲಿನ ವರ- ವೈಶ್ಯಜಾತಿಯಲ್ಲಿ ಹುಟ್ಟಿದ ಚಂದ್ರಾರ್ಯನ ಮಗನಾದ ಚೀಕಾರ್ಯನು ಮುಳ್ಗುಂದದಲ್ಲಿ ಉನ್ನತಜಿನಾಲಯವನ್ನು ಕ್ರಿ.ಶ. ೮೫೦ ರಲ್ಲಿ ಕಟ್ಟಿಸಿದನು. ವೀಕಾರ್ಯನ ಮಗಂದಿರು ನಾಗಾರ್ಯ ಮತ್ತು ಅರಸಾರ್ಯ. ಚಿಕ್ಕಮಗನಾದ ಅರಸಾರ್ಯನು ಜೈನ ನಯಶಾಸ್ತ್ರದಲ್ಲೂ ಕುಶಲನೂ, ಸಮೃಕ್ತ್ವ ಚಿತ್ತನೂ ಆಗಿದ್ದನೆಂದು ಕ್ರಿ.ಶ. ೯೦೨ ರ ಶಾಸನ ಹೇಳುತ್ತದೆ. [ಫ್ಲೀಟ್ : ೧೮೭೪: ೧೯೧ : ಸಾಲು ೫ – ೭]

ಅರಸಾರ್ಯನ (ಪಿತೃಕಾರಿತ) ತಂದೆಯಿಂದ ನಿರ್ಮಿಸಲಾದ ಜಿನಾಲಯವು ಧವಳ ವಿಷಯದ ಮುಳ್ಗಂದ ಎಂಬ ಹೆಸರಿನ ನಗರದಲ್ಲಿದ್ದು, ಅದು ಚಂದ್ರಿಕಾವಾಟದ ಸೇನಾನ್ವಯಕ್ಕೆ ಸೇರಿತ್ತು. ಚಂದ್ರಪ್ರಭ ತೀರ್ಥಂಕರ ದೇವಾಲಯದ ಮೂಲದ ಪರಂಪರೆಗೆ ಸೇರಿದ ಮುನಿಗಳು ಚಂದ್ರಿಕಾವಾಟದ ಅನ್ವಯದವರೆಂದು ತಿಳಿಯಲು ಯಾವುದೇ ಬಾಧಕಗಳಿಲ್ಲವೆಂದು ಆಗಲೇ ಸೂಚಿಸಿದ್ದಾಗಿದೆ. ಸೌದತ್ತಿಯ ಶಾಸನದ ಆರಂಭದಲ್ಲಿಯೂ ಚಂದ್ರಪ್ರಭ ತೀರ್ಥಂಕರ ಸ್ತುತಿಯಿದೆ- ಚಂದ್ರಪ್ರಭ ಆಖ್ಯಾಯ ಜೈನಶಾಸನವೃದ್ಧಯೇ [೧೮೭೪ : ೧೯೦: ಸಾಲು ೨೦]. ಚಂದ್ರಪ್ರಭಾ ಎಂಬುದಕ್ಕೆ ಸಂಸ್ಕೃತ ಸಂವಾದಿ ಶಬ್ದವೇ ಚಂದ್ರಿಕಾ; ಚಂದ್ರಪ್ರಭು ತೀರ್ಥಂಕರ ಜಿನಾಲಯದ ಸ್ಥಳವೇ ಚಂದ್ರಿಕಾವಾಟ. ಚಂದ್ರಪ್ರಭರ ಶಾಸನವನ್ನು (ಜಿನೋಪದಿಷ್ಟ ಉಪದೇಶ ಸಾರ) ವೃದ್ದಿಸಿ ಪ್ರಚಾರ ಮಾಡುವುದರಲ್ಲಿ ನಿರತರಾದ ಮುನಿಗಳು ಚಂದ್ರಿಕಾವಾಟ ಅನ್ವಯದವರು. ಆದ್ದರಿಂದ ಇದರ ಪೂರ್ವಾಪರ ಹಾಗೂ ಅಂತರ ಬಾಹ್ಯ ಪ್ರಮಾಣಾಧಾರಗಳೆಲ್ಲ ಬೊಟ್ಟುಮಾಡಿತೋರಿಸುವಂತೆ ಈ ಚಂದ್ರಿಕಾವಾಟ ಅನ್ವಯದ ಜೈನಯತಿ ಸಮುದಾಯದ ಉಗಮಸ್ಥಳ ಮುಳ್ಗುಂದದ ಚಂದ್ರಪ್ರಭ ಜಿನಾಲಯ. ಇದು ಒಂಬತ್ತನೆಯ ಶತಮಾನದ ನಡುಗಾಲದಲ್ಲಿ ಆರಂಭವಾಯಿತು. ಆಮೇಲೆ ಈ ಜೈನ ಗುರು ಪರಂಪರೆಗೆ ಸೇರಿದ ಹಲವಾರು ಮುನಿ – ಭಟ್ಟಾರಕರ ಉಲ್ಲೇಖಗಳು ಸಿಗುತ್ತವೆ [ ಎ.ಇ.೮, ೧೯೩. ಕ್ರಿ.ಶ. ೯೦೨: ಎ.ಆ.೧೬, ೫೫.೧೦೫೩: ೫೧೧. ೧೮. ೭೧.೧೦೬೬ – ಇತ್ಯಾದಿ] ಹಲವಾರು ಶಾಸನ ಪ್ರಯೋಗಗಳಿವೆ.

ಮೈಳಾತೀರ್ಥಕ್ಷೇತ್ರವು ಮುಳ್ಗುಂದ, ಸವದತ್ತಿ, ವೇಣುಗ್ರಾಮ, ಐಹೊಳೆ, ಪಟ್ಟದಕಲ್ಲು, ಬಾದಾಮಿ, ಸೊರಟೂರು, ಬಂಕಾಪುರ ಮೊದಲಾದ ಜೈನಕೇಂದ್ರ ಸ್ಥಳಗಳಿಗೆಲ್ಲ ಮುಖ್ಯ ಉಪಾಸನಾ ಸ್ಥಳವಾಗಿತ್ತು. ಅದರ ಮೂಲ ಸೆಲೆ ಎಲ್ಲಿತ್ತೆಂಬ ಪ್ರಶ್ನೆಯನ್ನೂ ಪರಿಶೀಲಿಸಬಹುದು. ಇದಕ್ಕೆ ಉತ್ತರವನ್ನು ಶಾಸನದಲ್ಲಿಯೇ ಅವಿತು ಕುಳಿತಿರುವ ‘ಮಳಹಾರೀ ನದೀ ಸೀಮಾ’ ಎಂಬ ಬೆರಳುಸನ್ನೆಯ ಸೂಚನೆಯ ಒಡಲಲ್ಲಿ ಹುಡುಕಬೇಕು. ಮೈಳಾಪ ತೀರ್ಥವು ಮಳಹಾರೀ (ಮಲಪ್ರಭಾ) ತೊರೆಯ ದಂಡೆಯ ಮೇಲಿದ್ದ ಒಂದು ಊರೆಂಬುದೊಂದು ಸ್ಪಷ್ಟ ಸೂಚನೆ. ಮೈಳಾಪ ತೀರ್ಥದ ಕಾರೇಯ ಗಣದಲ್ಲಿ ಆಗಿಹೋದ ಜಿನಮುನಿಗಳಲ್ಲಿ ಪ್ರಾಚೀನರು ಮುಳ್ಳಭಟ್ಟಾರಕರು. ಇವರ ಕಾಲ ಸು. ಕ್ರಿ.ಶ. ೮೦೦. ಮುಳ್ಳಭಟ್ಟಾರಕರ ಶಿಷ್ಯರು ಗುಣತೀರ್ಥ ಮುನೀಶ್ವರರು. ಗುಣವಂತರೂ, ಸೂರಿಗಳೂ ಆದ ಗುಣತೀರ್ಥ ಮುನಿಯಕಾಲ ಕ್ರಿ.ಶ. ೮೩೫. ಇವರ ಶಿಷ್ಯರು ಇಂದ್ರಕೀರ್ತಿಸ್ವಾಮಿ; ಇವರ ಕಾಲ ಕ್ರಿ.ಶ. ೮೭೦ ಸವದತ್ತಿಯರಟ್ಟರ ಮೂಲ ಪುರುಷನಾದ ಮೇರಡನ ಹಿರಿಯ ಮಗನಾದ (ಅಗ್ರನನ್ದನ) ಪೃಥ್ವೀರಾಮನು ಈ ಇಂದ್ರಕೀರ್ತಿಸ್ವಾಮಿಯ ಶಿಷ್ಯನೂ ಮತ್ತು ರಾಷ್ಟ್ರಕೂಟರ ಇಮ್ಮಡಿ ಕೃಷ್ಣರಾಜನ ಮಹಾಸಾಮಂತನೂ ಆಗಿದ್ದನು [೧೮೭೪ : ೧೯೫ : ಸಾಲು ೧೮]

ಕ್ರಿ.ಶ. ೮೭೦ ರ ಆಜೂಬಾಜಿನಲ್ಲಿ ಪೃಥ್ವೀರಾಮನಿಂದ (ತೇನ ಭೂಪೇನ) ಮೈಳಾಪತೀರ್ಥಕ್ಕೆ ಸೇರಿದ ಒಂದು ಜಿನಗೃಹವು ಕಟ್ಟಲ್ಪಟ್ಟಿತು (ಕಾರಿತೇನ ಜಿನೇನ್ದ್ರ ಭವನ: ಅದೇ: ೧೯೫: ಸಾಲು ೧೩ – ೧೪]. ಈ ಜಿನಭವನಕ್ಕೆ ರಾಜನು ಆರು ನಿರ್ವತನದಷ್ಟು ಭೂಮಿದಾನ ಮಾಡಿದನು. ಅದಾದ ನೂರು ವರ್ಷಗಳ ತರುವಾಯ ಮುಂದೆ ಇದೇ ಬಸದಿಗೆ ಇಮ್ಮಡಿ ಕಾರ್ತವೀರ್ಯ (ಕತ್ತಭೂಪ) ಮತ್ತು ಆತನ ಹಿರಿಯ ಹೆಂಡತಿ (ಅಗ್ರಕಾಂತೆ) ಭಾಗಲಾಂಬಿಕೆ (ಬಾಗಲಾದೇವಿ) ಕಾಲದಲ್ಲಿ ಮತ್ತೆ ೧೮ ನಿವರ್ತನ (ಅಷ್ಟಾದಶ ನಿವರ್ತನ) ಭೂಮಿಯನ್ನು ಸರ್ವಬಾಧಾನಿವರ್ಜಿತವಾಗಿಸಿ ದಾನ ಕೊಡಲಾಗಿದೆ. ಈ ಒಂದು ಶತಮಾನದ ಅಂತರದಲ್ಲಿ ಸವದತ್ತಿ ರಟ್ಟಕುಲವು ಕಲ್ಯಾಣ ಚಾಳುಕ್ಯರ ಚಕ್ರಾಧಿಪತ್ಯದ ಅಧೀನತೆಗೆ ಸರಿದಿದ್ದರೂ. ಕಾರ್ತವೀರ್ಯ ನೃಪನು ಮಹಾಮಂಡಳೇಶ್ವರನಾಗಿದ್ದನು. ಪ್ರಸಿದ್ಧ ಮೈಳಾಪತೀರ್ಥವನ್ನು ಕೆಲವು ಶಾಸನಗಳು ಪ್ರಸ್ತಾಪಿಸಿವೆ:

೧. ಶ್ರೀಮನ್ + ಮೈಳಾಪತೀರ್ತ್ಥಸ್ಯ ಗಣೇ ಕಾರೇಯನಾಮನಿ ೧ ಬಭೂವ + ಉಗ್ರತಪೋಯುಕ್ತ : ಮುಳ್ಳಭಟ್ಟಾರಕೋ ಗಣೀ || [ಫ್ಲೀಟ್; ಜೆಬಿಬಿಆರ‍್ಎಎಸ್, ೪೦ -೨, ಕ್ರಿ.ಶ. ೮೭೬, ಪು. ೧೯೪, ಸಾಲು ೬]

2. ಶ್ರೀಯಾಪನೀಯಾಂಬುಧಿ ಪೂರ್ಣ್ನಚಂದ್ರೋ ಮೈಳಾಪತೀರ್ತ್ಥಾಭರಣೋ ಗಣೋಭೂತ್ ಕಾರೇಯಗಣಮಾ ಪ್ರತಿಬದ್ಧ ತತ್ವೈರಾಚಾರ್ಯವರ್ಯ್ಯೈ ಱ್ಪ್ರಥಿತಱ್ಪೃಥಿವ್ಯಾಂ ||

[ಎ.ಇ.೧೫, ೫೩೦.೧೦೫೯. ಮೊರಬ (ಧಾರವಾಡ ಜಿ. / ನವಲ್ಗುಂದ ತಾ.) ಪು. ೩೫೯. ಸಾಲು : ೩ – ೪]

೨.ಎ. ಕಲಭಾವಿ (ಬೆಳಗಾವಿ ಜಿ./ ಸಂಪಗಾಂವತಾ) ರಾಮಲಿಂಗ ಗುಡಿ ಎದುರಿನ ಕಲ್ಲು ಶಾಸನ.

೩.         ನವಿಲೂರ ಬಳಿಯ ಬಾ. . . ಹಳ್ಳಿಯ ಘ. . .
(ಬ)ಸದಿ ಮೈಳಾಪಾನ್ವಯ ಕಾರೇಯಗಣದ ಗುಡ್ಡ
ಕೇಮಣ ರೇಚಣ ಜೀರ್ನ್ನೋದ್ಧಾರಂ ಮಾಡಿಸಿದ
ಬಸದಿ ಚಂದ್ರನಾಥ ಸ್ವಾಮಿಗಳ ಅಷ್ಟವಿಧಾರ್ಚನೆಗೆ
ರಿಷಿಯರಜ್ಜಿಯರಾಹಾರ ದಾನಕ್ಕೆ ಆ ಸ್ಥಳದ ಅಱುವತ್ತೊಕ್ಕಲು
ಸಾಸಿರ್ವ್ವರುಂ ಶ್ರೀರಾಜಧಾನಿ ನರೇಂದ್ರ. ದ ಕುಳಿಯ
ಬಸದಿಯಾಚಾರ್ಯ ಬಾಹುಬಲಿದೇವರ ಶಿಷ್ಯತಿ
ರಾಜಮತಿ ಕನ್ತಿಯರ ಕಾಲಂ ಕರ್ಚ್ಚಿ ಆಚಂದ್ರಾರ್ಕ್ಕ
ತಾರಂಬರಂ ಧಾರಾ ಪೂರ್ವ್ವಕಂಮಾಗೆ ಬಿಟ್ಟರು
||
[ಧಾರವಾಡ ತಾಲ್ಲೂಕು ಶಾಸನಗಳು, ೪೫. ಸು. ೧೨ ಶ. ನುಗ್ಗಿಕೇರಿ. ಪು. ೮೩]

೪.         ಶ್ರೇಯಶ್ರೀ ಯಾಪನೀಯಾನ್ವಯ ಮುಖ ಮುಕುರಂ
ಚಾರುಮೈಳಾಪ ತೀರ್ತ್ಥಾಮ್ನಾಯ ಶ್ರೀ ಕಂಠಿಕಾ
ಕಾರೆಯಗಣ ತಿಳಕಂ ಧರ್ಮ್ಮ ಸಂರಕ್ಷಣಾಭಿಪ್ರಾಯಂ
ಶ್ರೀ ರಾಮಚಂದ್ರ ಬ್ರತಿಪತಿ ತನಯಂ ಬಾಪ್ಪು
ಸಾಮಾನ್ಯನೇ ವಿದ್ಯಾಯೋಷಿನ್ಮಂಡನಂ ಬಾಹುಬಲಿ
ಮುನಿವರಂ ಸಿದ್ಧ ಸೈದ್ಧಾನ್ತ ಕಾನ್ತಂ

[ಕ.ಇ. ೬, ೬೮.೧೨೦೩. ಸಾಲು : ೩೭ – ೩೯. ಮಣಿಗುಂದಗೆ (ಮನಗುಂಡಿ : ಧಾರವಾಡ ಜಿ.)]

೫. ಕನ್ನಡ ಕವಿಗಳಲ್ಲಿಯೇ ವಿಶಿಷ್ಟನಾದ ಬ್ರಹ್ಮಶಿವ ಕವಿಯೂ (೧೧೭೫) ತನ್ನ ಸಮಯ ಪರೀಕ್ಷೆ ಎಂಬ ಕಾವ್ಯದಲ್ಲಿ

ಧರೆಯೊಳ್ ಮುಟ್ಟದೆ ನೆಗೆದಂ
ತರಿಕ್ಷದೊಳ್ನೆಲಸಿನಿಂದ ಮೈಳಾಪ ಜಿನೇ
ಶ್ವರತೀರ್ಥದಶಿಯಮನಾ
ಧರಣೀಂದ್ರಂ ಪೊಗೞಲಱೆಯನುಳಿದವರಳವೇ
||          (೨-೪೭)

ಎಂಬುದಾಗಿ ಮೈಳಾಪ ತೀರ್ಥಮಂದಿರದ ಮಹಿಮೆಯನ್ನು ಕೊಂಡಾಡಿದ್ದಾನೆ.

ಮೈಳಾಪ ತೀರ್ಥದ ಕಾರೆಯಗಣ ಎಂಬ ಹೆಸರು ವೃಕ್ಷಮೂಲ ನಾಮ ಪ್ರಕೃತಿ. ಕಾರೆ ಎಂಬುದು ಒಂದು ಬಗೆಯ ಹಣ್ಣು ಬಿಡುವ ಮುಳ್ಳುಗಿಡ. ಕಾರೆಯ (ಕಾರೇ)ಹಣ್ಣು, ಬೋರೆಯ(ಬೋರೇ) ಹಣ್ಣು ಎಂಬುದು ರೂಢಿಯ, ಹಳ್ಳಿಯ ಕಡ ಮಾತುಗಳು. ತಿಕ್ತತಿಯೆನಲ್ ಕಾರೆಯಕ್ಕು ಎಂಬುದಾಗಿ ಮಂಗಾರಾಜ ನಿಘಂಟಿನ ಹೇಳಿಕೆಯಿದೆ (೭೨ – ೩೭). ಕಾರೆ ಎಂಬುದು ಅಚ್ಚಗನ್ನಡದ (ದ್ರಾವಿಡ) ಶಬ್ದ. ತಮಿಳಿನಲ್ಲಿ ಕಾರೈ ಎಂದು, ಮನೆಯಾಳದಲ್ಲಿ ಕಾರ, ತುಳುವಿನಲ್ಲಿ ಕಾರೆ. ಕೊಡಗು ಭಾಷೆಯಲ್ಲಿ ಕಾರೆಮಣಿ ಎಂದೂ ಇದಕ್ಕೆ ಹೆಸರಿದೆ. ಕಾರೆಗಿಡಗಳು ಇದ್ದ ಜೈನಮಠ ಮುಂದಿರಗಳಿಂದ ಬಳಕೆಗೆ ಬಂದಗಣಿವೆ ಕಾರೆಯ ಗಣ. ಕಾರೆಯ ಎಂಬುದು ಪಷ್ಟ್ಯಂತರೂಪ. ಕಾರೆಯ ಗಿಡದ ಮುಳ್ಳನ್ನು ಕಾರೆಮುಳ್ಳು ಎಂದು ಕರೆಯುತ್ತಾರೆ. ಈ ಗಣಕ್ಕೆ ಸೇರಿದ ಮೊದಲನೆಯ ಜೈನ ಗುರುವಿನ ಹೆಸರು ಮುಳ್ಳಭಟ್ಟಾರಕರು. ಮುಳ್ಳು ಎಂಬುದು ನಾಮಪ್ರಕೃತಿ, ಮುಳ್ಳ ಎಂಬುದಗು ಪಷ್ಟ್ಯಂತರೂಪ ಕಾರೆ ಎಂಬ ಮುಳ್ಳಿನ ಗಿಡಗಳಿಂದ ಮಟಕ್ಕೆ ಸಂಬಂಧಿಸಿದ ಗಣದ ಗುರುಗಳು ಮುಳ್ಲಭಟಾರರು – ಎಂಬುದಷ್ಟೇ ಇದರರ್ಥ.

ಕಾರೆಯಗಣದ ಜೈನಯತಿಗಳ ಪಂಗಡವು ೧೦ – ೧೩ ನೆಯ ಶತಮಾನದವರೆಗೂ, ಚಾಳುಕ್ಯ ರಾಜ್ಯ ಇರುವವರೆಗೂ, ಪ್ರಚಲಿತವಾಗಿತ್ತು. [ಕ.ಎ. ೫, ೬೮.೧೨೦] ಕಾರೆಯನಾಳ್ವ ಜಯಸೇನ ಭಟಾರರನ್ನು ಶಾಸನ ಸ್ಮರಿಸಿದೆ [ಎ.ಕ. ೩, ನಂಜನಗೂಡು ೧೯೨. ಕ್ರಿ.ಶ. ೯೬೮]. ಮೈಳಾಪಾನ್ವಯಮೆನಿಸಿದ ಕಾರೆಯಗಣಗಗನ ಪ್ರಸಿದ್ಧ ರುಂ ಮಹಾಪ್ರಬುದ್ಧ ಶಾಸನೋಕ್ತರು [ಎ.ಇ. ೧೮, ೩೧೧.೧೧ ಶ.] ಅನ್ತಾ ಕಾರೆಯಗಣದೊಳತಿ ಪ್ರಸಿದ್ಧ ರುಂ ಮಹಾಪ್ರಬುದ್ಧ ಶಾಸನರುಂ ಆದವರು ಆಗಿಹೋಗಿದ್ದಾರೆ [ಕ.ಇ. ೧, ೩೨.೧೨೧೯].

ಮೈಳಾಪತೀರ್ಥಕ್ಕೂ ಮೈಲಾರ (ಖಂಡೋಬಾ) ದೇವರಿಗೂ, ನಾಮ ಸಾದೃಶ್ಯದ ಹೊರತು, ಏನೇನೂ ಸಂಬಂಧವಿಲ್ಲ. ಮೈಳಾಪತೀರ್ಥವು ಯಾಪನೀಯ ಸಂಘದಲ್ಲಿ ಅಂತರ್ಗವಾಗಿತ್ತು [ಕ.ಇ. ೬೮,೧೨೦೩]. ಮೈಳಾಪತೀರ್ಥಕ್ಕೆ ನಡೆದುಕೊಳ್ಳುವ ಶ್ರಾವಕಿಯರಿಗೆ ಮೈಳಲಾದೇವಿಯೆಂಬ ಹೆಸರಿಡುತ್ತಿದ್ದರು. ಸವಣದತ್ತಿಯ ರಟ್ಟರ ಮತ್ತು ಚಾಳುಕ್ಯ ರಾಜರ ಕೆಲವು ರಾಣಿಯರಿಗೂ, ರಾಜಕುಮಾರಿಯರಿಗೂ ಮೈಳಲಾದೇವಿ ಹೆಸರಿದೆ; ಅವರು ಈ ಮೈಳಾಪತೀರ್ಥದ ಭಕ್ತರು. ಮೈಳಾಪತೀರ್ಥಮ್ನಾಯವೂ ಮೈಳಾಪಾನ್ವಯವೂ. ಶಾಸನೋಕ್ತವಾಗಿದ್ದು, ಐತಿಹಾಸಿಕ ಮಹತ್ವ ಪಡೆದು ಮೂರು ನಾಲ್ಕು ಶತಮಾನದವರೆಗೆ ಪ್ರಭಾವಶಾಲಿಯಾಗಿ ಬೆಳಗಾವಿಜಿಲ್ಲೆಯಲ್ಲಿ ಗಣ್ಯವಾಗಿದ್ದಿತು. ರಟ್ಟವಂಶಜನೃಪರೂ, ರಾಣಿಯರೂ ಮೈಳಾಪತೀರ್ಥ ಪರಂಪರೆಯ ಗುರುಗಳಿಗೆ, ದೈವಕ್ಕೆ ನಿಷ್ಠೆಯಿಂದ ನಡೆದುಕೊಂಡರು. [ಸೌ.ಇ.ಇ. ೨೦, ೫೦.೧೦೭೦. ಪು. ೬೧; ಅದೇ, ೬೨. ೧೦೯೮. ಸೌದತ್ತಿ. ಪು.೭೬; ಅದೇ, ೧೩.೮೭೫ – ೭೬. ಪು. ೧೨]