೧. ಕ್ರಿ.ಶ. ೮೬೭-೬೮ ರಲ್ಲಿ ರಚಿತವಾದ ಒಂದು ಶಾಸನದ ಒಕ್ಕಣೆಯಲ್ಲಿ ಬರುವ ಕೆಲವು ಮಾತುಗಳು:

ಸ್ವಸ್ತಿ [ಪ್ರಚಣ್ಡ] ಮಣ್ಡ

[ಳಾ]ಗ್ರ ಖಣ್ಡಿತಾರಾತಿಮಣ್ಡಳ ಪ್ರತಾಪ ಸಂಪನ್ನ ಯಾದವವಂಶೋದ್ಭವ ರಣ (ಮೂರ್ಖ) ಧವಳ ಷಟ್ಗುಣಾಳಂಕಾರ ಆಹವಾದಿತ್ಯ ಶ್ರೀಮತ್ಕುಪ್ಪೆಯರಸರ್ಪ್ಪುರಿಗೆಱೆ ನಾಡನಾಳುತ್ತಿರೆ ಸರಟಪುರದ ಅಮ್ವದಿಮ್ಬರ್‌…

[ಸೌ.ಇ.ಇ. ೧೧-೧, ೧೨.೮೬೭-೬೮. ಸೊರಟೂರು (ಧಾಜಿ./ಗದಗ ತಾ.)ಪು. ೮]

೨. ಕ್ರಿ.ಶ. ೮೯೭ ರ ಅವಧಿಗೆ ಸೇರಿದ ಇನ್ನೊಂದು ಶಾಸನದ ಸಾಲುಗಳಿವು:

ಸ್ವಸ್ತಿ ಸಮಧಿಗತ
ಪಂಚಮಹಾಶಬ್ದ ಮಹಾಸಾಮನ್ತಂ ಯಾದವ ವಂಶೋದ್ಭವಂ
ಪ್ರಚಣ್ಡತಾರಾತಿಮಣ್ಡಳಂ ಪ್ರತಾಪ ಸಂಪನ್ನಂ ರಿಪುಬುಳ
ಜಳಧಿ ಸಮುತ್ಪನ್ನಂ ಶ್ರೀಕಾ
ನ್ತಾ ಕಾನ್ತಂ ರಣಮೂರ್ಖ್ಖಧವಳಂ ರಣಮೂರ್ಖ್ಖ ಕೇಸರಿ ಕದನಾದಿತ್ಯಂ

[ಅದೇ. ೨೨.೮೯೭. ಮೇವುಣ್ಡಿ (ಧಾಜಿ./ಮುಂಡರಗಿ ತಾ.) ಪು. ೧೩]

೩. ಕ್ರಿ.ಶ. ಹತ್ತನೆಯ ಶತಮಾನದ (ಸು. ೯೮೦) ರ ಮತ್ತೊಂದು ಶಾಸನದ ಪಂಕ್ತಿಗಳಿವು:

ಶ್ರೀ ಯುವತಿಗೆ ನಿಜವಿಜಯ
ಶ್ರೀ ಯುವತಿಯೆ ಸವತಿಯೆನಿಸೆ ರಣಮೂರ್ಖ್ಖನೃಪಾ
ಮ್ನಾಯದೊಳಾಯದ ಮೆಯ್ಗಲಿ
ಬಾಯಿಕನೆಂಬಂ ನೆಗೞ್ತೆಯಂ ಪ್ರಕಟಿಸಿದನ್,
[ಎ.ಕ. ೨ (ಪ) ೧೭೨ (೧೩೯) ಪು. ೧೧೬]

4. ಹನ್ನೊಂದನೆಯ ಶತಮಾನದ ಮಗದೊಂದು ಶಾಸನೋಕ್ತಿಗಳು:
ಸಮಧಿಗತ ಪಂ ಞ್ಚ ಮಹಾ ಶಬ್ದ ಮಾಹಾಸಾಮನ್ತಂ
ರಿಪು ಬಳಕ್ರಿತಾನ್ತಂ ರಣಮೂರ್ಖ್ಖ ವಂಶೋದ್ಭವಂ
ಸಿಂಗನ ಬಂಟಂ ಶ್ರೀಮದಾಯ್ತು ವರ್ಮರಸಂ
[ಸೌ.ಇ.ಇ. ೧೧-೧, ೬೨ ೧೯೮೪. (ಬೀಳಗಿತಾ) ಪು. ೫೨]

೫. ಹನ್ನೊಂದನೆಯ ಶತಮಾನದ್ದೇ ಆದ ಬೇರೊಂದು ಶಾಸನದಿಂದ:

ಹರಿಹರ ಹಿರಣ್ಯ ಗರ್ಭ್ಭ
ರ್ದ್ದೊಣಿಯೆನಿಪರ್ಮ್ಮೂವರರ್ತ್ತಿಯಱಗಂ ನಾಕಂ
ಹರಿಸುತನನ್ನಂ ದೇವಂ
ಮೊರಕಾಮ್ನಾಯಕ್ಕೆ ತಿಳಕರಾಯ್ಚನ ಪುತ್ರರ್ ||

[ಅದೇ, ೬೫. ೧೦೨೯. ಹೊಸೂರು (ಧಾಜಿ/ ಗದಗತಾ) ಪು. ೫೬. ಸಾಲು ೪೦-೪೨]

ಇನ್ನೂ ಇತರ ಕೆಲವು ಪ್ರಯೋಗಗಳು ಹೀಗಿವೆ:-

೬. ಮೊರಕ ಕುಳತಿಳಕನೆಱಕನ
ವರ ಪುತ್ರಂ ಪೊಲೆಗ ನೀ ಮಹೀಮಣ್ಡಳದೊಳ್
ಸ್ಥಿರಮಾಗಿರೆ ಸಾಸನಮಂ
ಬರೆಯಿಸಿದಂ ನೆಲನುಮರ್ಕ್ಕನುಂ ನಿಲ್ವಿನೆಗಂ ||
[ಅದೇ, ಪು. ೫೭. ಸಾಲು ೫೬-೫೭]

೭. ಇನ್ತವಾರ್ಯ್ಯ ಭುಜವಿಕ್ರಮನುಂ ಪರಬಳ ಪ್ರಳಯಭೈರವ
ನುವರಾತಿದಾವ ಪಾವಕನುಂ ಮೊರಕಕುಳ ಸರೋಜಿನೀ
ರಾಜಹಂಸನುಂ . . . ಎನಿಸಿ ತನ್ನ ಪೆಸರೆ ಪೆಸರಾಗಿ
ಪೊಸವೂರನೇಕೆ ಭೋಗದಿನಾಱ್ದ (ನಾಕಿ ಗಾವುಣ್ಡಂ) ಸುಖ
ಸಂಕಥಾವಿನೋದದಿನಿಳ್ದ (೦).
[ಅದೇ, ೧೫೨. ೧೧೦೩. ಹೊಸೂರು. ಪು. ೧೯೦. ಸಾಲು ೨೩ – ೨೫]

೮. ದ್ವಾರಾವತೀ ಪುರವರೇಶ್ವರಂ | ಯಾದವವಂಶೋದ್ಭವಂ | ಸುವರ್ಣ್ನಗರುಡ
ಧ್ವಜಂ | ರಣಮೂರ್ಖ್ಖ ಪಾರ್ತ್ಥಂ | ಶ್ರೀಮನ್ಮಾಧವಾರರಸರ್ |
[ಅದೇ, ೯೨.೧೦೫೯. ತಾಂಬ್ರಗುಂಡಿ (ಧಾಜಿ/ಮುಂಡರಗಿ ತಾ)ಪು. ೮೮]

೯. ಮೋರಿಯಾನ್ವಯರ್ಕ್ಕೇವಳಮೇ | ಮೋರಿಯಕುಲತಿಳಕರ್. . .
[ಅದೇ. ೧೩೨. ೧೦೮೭. ಕುರ್ತ್ತಕೋಟಿ (ಧಾಜಿ./ಗದಗತಾ.) ಪು. ೧೫೬]

೧೦. ಹರಚರಣನಖಕಿರಣ ಕುಸುಮ ಮಂಜರೀ ಪರಿರಂಜಿತೋ
ತ್ತಮಾಂಗನುಂ ಶಿವಕಥಾ ಪ್ರಸಂಗನುಂ ಮೋರಕಕುಳನಭಸ್ತಳೀಗಭಸ್ತಿ ಮಾಲಿಯುಂ
ದುರ್ದಮಪ್ರತಾಪ ಶಾಲಿಯುಮಪ್ಪ ಹೊಸವೂರ ಮಹಾ ಪ್ರಭು ಹೊಲ್ಲಗಾವುಣ್ಡಂ
ಮೋರಕೇಶ್ವರ ದೇವರಾಚಾರ್ಯ್ಯರಪ್ಪಜ್ಞಾನ ಶಕ್ತಿ ದೇವರ ಕಾಲು ಕರ್ಚ್ಚಿಕೈಧಾರೆಯೆಱೆದು
ತಮೋಧನರಾಹಾರದಾನಕ್ಕೆ ಬಿಟ್ಟು ಮತ್ತರೊನ್ದು [ಸೌ.ಇ.ಇ.೧೫, ೫೨. ೧೧೫೫. ಹೊಸನೂರು ಪು. ೬೯ ನೋಡಿ, ಅದೇ, ೫೧, ೧೧೫೫. ಹೊಸೂರು]

೧೧. ಶ್ರೀಮೋರಕೇಸ್ವರ ದೇವರಾಚಾರ್ಯ್ಯಜ್ಞಾನ ಶಕ್ತಿ ಪಂಡಿತದೇವ
[ಸೌ.ಇ.ಇ.೧೮, ೧೪೫.೧೧೪೧. ಕಣವಿ (ಧಾಜಿ./ಗದಗತಾ.) ಪು. ೧೮೮]

೧೨. ಮೋರಕಕುಳ ಹೊಲ್ಲ ಗಾವುಣ್ಡ ಹೊಸವೂರ ಮಹಾ ಪ್ರಭು ಕೊಟ್ಟದಾನಶಾಸನ
[ಸೌ.ಇ.ಇ. ೧೫, ೫೧.೧೧೫೫ ಹೊಸೂರು; ನೋಡಿ : ಅದೇ, ೫೨, ೧೧೫೫. ಹೊಸೂರು]

ಎಂಬಿತ್ಯಾದಿ ಪ್ರಯೋಗಗಳನ್ನು ಗಮನಿಸಿದಮೇಲೆ ಒಟ್ಟಾರೆ ಕಂಡು ಬರುವಂತೆ ರಣಮೂರ್ಖ – ರನಮೋರಕ ಎಂಬ ಪ್ರಯೋಗಕ್ಕೂ ಮೋರಕ ಕುಳಕ್ಕೂ ಸಂಬಂಧ ಇರುವುದು ಸ್ಪಷ್ಟವಾಗುತ್ತದೆ. ರಣಸಾಹಸಿಗಲ ಮೋರಕಕುಲವೇ ‘ರಣಮೋರಕ – ರಣಮೂರ್ಖ’ ಎಂದು ಶಬ್ದರೂಪ ಪರಿವರ್ತನೆ ಪಡೆದುಕೊಂಡಿದೆ. ಈ ಬಗೆಯ ತೀರ್ಮಾನಕ್ಕೆ ತಲುಪಲು ಮೇಲಿನ ಶಾಸನ ಪ್ರಯೋಗಗಳು ನೆರವಾಗಿವೆ. ಅಲ್ಲದೆ ಇವೇ ಶಾಸನಗಳಲ್ಲಿಯೂ ಇನ್ನಷ್ಟು ಉಪಷ್ಟಂಬಕ ಹೇಳಿಕೆಗಳಿವೆ. ಮೋರಕಕುಳ ನಾಯಕರನ್ನು ವರ್ಣಿಸುವಾಗ ಶಾಸನಗಳಲ್ಲಿ ಬಂದಿರುವ ಪೂರಕ ವಿಶೇಷಣೆಗಳು ಇಂತಿವೆ:

೧. ಸಂಗ್ರಾಮಜಯ ಕೆಂಚನೆಂನೋನ್ ಇಳಾಮಹಿತಂ ವೀರಂ

೨. ಭುಜ ಬಲದೊರೆಗೆವರಲ್ನೆ ೞೆಯರೇಂ ಪ್ರತಾಪಿಯೋ ಮುದ್ದಂ

೩. ಅಹವಶೌಣ್ಡಂ ತೊಣ್ಡಂ ತದನ್ವವಾಯನಜೇಯಂ

೪. ಅಹೇಯಂ ಕಾಳಿಧುರಂಧರಂ

– ಇವಿಷ್ಟೂ ಮಾತುಗಳು [ಸೌ.ಇ.ಇ.೧೧-೧, ೪೫.೯೮೦] ಪ್ರಾಚೀನ ಶಾಸನದಲ್ಲಿಯು ಬಂದಿವೆ. ರಣಮೂರ್ಖಧವಳ ಎಂದರೆ ಯುದ್ಧವೀರರಾದ ಮೋರಕ ಕುಲದವರಲ್ಲಿ ಶ್ರೇಷ್ಠನಾದನೆಂದೂ, ರಣಮೂರ್ಖ ಕೇಸರಿಯೆಂದರೆ ಯುದ್ಧ ವೀರರಾದ ಮೋರಕ ಕುಲದವರಲ್ಲಿ ಸಿಂಹನಂತೆ ಇರುವವನೆಂದೂ ಅರ್ಥ. ಇದರ ಸಮಾನಾರ್ಥಕ ಶಬ್ದವೇ ‘ಮೋರಕಕುಳ ತಿಳಕ’ ಎಂಬುದು.

ಮೋರಕಕುಲ ಯಾವುದೆಂಬುದು ಚಿಂತನೀಯವಾಗಿದೆ. ಇದರ ಮೂಲ ‘ಮಯೂರ ಕುಲ’ ವೆಂದು ಕಾಣುತ್ತದೆ. ‘ಮೋರ’ ಎಂಬುದು ಮಯೂರ ಎಂಬುದರ ಇನ್ನೊಂದು ರೂಪ: ಮೋರಮೆಂದುಂ ಸೋಗೆಯೆಂದುಂ ನವಿಲ್- ಎಂಬುದಾಗಿ ಕರ್ಣಾಟಕ ಶಬ್ದಸಾರವೆಂಬ ನಿಘಂಟಿನ ವಿವರಣೆ [೫೧-೯೬]. ಸಂಸ್ಕೃತ ಮಯೂರ ಶಬ್ದವು ಪ್ರಾಕೃತದಲ್ಲಿ ಮೋರ್ ಎಂದಾಗಿ, ಕನ್ನಡದಲ್ಲಿ ಮೋರ ಎಂದಾಗಿದೆ. ವಾಸ್ತವವಾಗಿ ಇವೆಲ್ಲದಕ್ಕೂ ವೊಲದಲ್ಲಿದ್ದ ಹೆಸರು ಕನ್ನಡದ ನವಿಲ್ಗುಂದ ಕುಲ. ಅಚ್ಚ ಕನ್ನಡದ ‘ನವಿಲ್ಗುಂದಕುಲ’ ಎಂಬುದನ್ನು ಸಂಸ್ಕೃತೀಕರಿಸಿದ್ದರ ಫಲ ‘ಮೋರಕ ಕುಲ’. ಇದು ಸ್ಥಳವಾಚಿ ಶಬ್ದ. ಧಾರವಾಡ ಜಿಲ್ಲೆಯ ನವಿಲ್ಗುಂದವೇ ಮೋರಕಕುಲದವರ ಮೊದಲ ನೆಲೆವೀಡೆಯ ಶಾಸನ ದಾಖಲಿಸಿದೆ [ಸೌ.ಇ.ಇ.೧೧-೧, ೪೫.೯೮೦] ಕ್ರಿ.ಶ. ೮೨೫ ರ ವೇಳೆಗಾಗಲೇನೆ ಕೆಂಚನೆಂಬ ವೀರನು ಬೆಳ್ವಲ ನಾಡಿನಲ್ಲಿ ನವಿಲ್ಗುಂದವನ್ನು ತನ್ನರಾಜಧಾನಿ ಮಾಡಿಕೊಂಡಿದ್ದನೆಂಬ ವಿವರ ಕುರಹಟ್ಟಿಯ ಶಾಸನದಲ್ಲಿದೆ [ಅದೇ, ಪು. ೩೦-೩೨].

ಕುರಹಟ್ಟಿಯ ಶಾಸನದಲ್ಲಿ ಕತ್ತಲೆ (ಕೞ್ತಲೆ-ಕರ್ತ್ತಲೆ) ಕುಲದ ವರಿಷ್ಠ ಮೇಲಾಳುಗಳ ಹೆಸರುಗಳಿವೆ: ರೇವನ್ತ, ಕೆಂಚ, ಸಿರಿಮುದ್ಧ, ಪಿರಿಯಕೋಟಿಗಾವುಣ್ಡ, ಪಿರಿಆಯ್ಚ, ತೊಣ್ಡ, ಕಾಳಿಧುರಂಧರ- ಇವರೆಲ್ಲ ಬೆಳ್ವಲ ನಾಡಿನ ನಾಯಕರು. ಇವರ ಆದಿಪುರುಷನಾದ ಕೆಂಚನೆಂಬೋನ್ (ಪೂರ್ವದ ಹಳೆಗನ್ನಡದ ಈ ಶಬ್ದರೂಪ ಇದರ ಪ್ರಾಚೀನತೆಯ ಪಳೆಯುಳಿಕೆಯ ಕುರುಹು), ಕಾದಾಡಿ ಬೆಳ್ವಲವನ್ನು ಪಡೆದನು, ಅಲ್ಲಿ ‘ಬಳಿಕ್ಕೆ ನವಿಲ್ಗುಂದಪುರ’ವನ್ನು ಕೞ್ತಲೆ ಕುಲದವರ ವಿಜಯ ಸ್ಕಂಧಾವಾರವಾಗಿಸಿದನು [ಅದೇ, ಸಾಲು : ೨-೪]. ಇದೇ ಮಯೂರ (ಮೋರಕ) ವಂಶದಲ್ಲಿ ಪಿರಿಯ ಆಯ್ಚನು ಕ್ಷತ್ರಿಯರಿಗೂ, ಸಕಳ ಸಮಯಿಗಳಿಗೂ, ಬುಧಜನರಿಗೂ ಆಶ್ರಯದಾತನಾದನು [ಅದೇ, ಸಾಲು ೧೦-೧೨]. ಈ ಪಿರಿಯ ಆಯ್ಚನ ಕಾಲ.ಸು. ೯೨೫.

ಪಿರಿಯ ಆಯ್ಚ ಎಂಬ ಪೆಸರಿನ ಈ ಒಬ್ಬ ವ್ಯಕ್ತಿಯು ಇರಬೇಕಾದರೆ, ಸಹಜವಾಗಿಯೇ ಇದೇ ಸಮಕಾಲಿಕವಾಗಿ; ಕಿಱಿಯ ಆಯ್ಚನೂ ಇರಬೇಕು; ಆ ಕಿಱಿಯ ಆಯ್ಚನೇ ಪೊಸವೂರ (ಹೊಸೂರ) ಆಯ್ಚಗಾವುಣ್ಡ [ಸೌ.ಇ.ಇ.೧೧-೧, ೪೭.೯೯೫. ಫು. ೩೩-೩೪]. ಕ್ರಿ.ಶ. ೯೯೫ ರಲ್ಲಿ ರಚಿತವಾದ ಈ ಹೊಸೂರ (ಧಾಜಿ / ಗದಗತಾ) ಶಾಸನವು ಕಿಱಿಯ ಆಯ್ಚಗಾಮುಣ್ಡನನ್ನು ಹೆಸರಿಸಿದೆ; ಅಲ್ಲದೆ ಇದೇ ಹೊಸೂರಿನ ಇನ್ನೊಂದು ಶಾಸನದಲ್ಲಿ [ಅದೇ, ೬೫. ೧೦೨೯. ಪಿ. ೫೫-೫೭] ಪೊಸವೂರ ಆಯ್ಚಗಾವುಣ್ಡನ [ಹೆಂ. ಕಂಚಿಕಬ್ಬೆ – ಸೂಣ್ಡಿಯ ಮದನಾಗಸೆಟ್ಟಿಯ ಮಗಳು] ಮಕ್ಕಳು, ಮೊಮ್ಮಕ್ಕಳು ಕುರಿತ ಮಾಹಿತಿಗಳಿವೆ.

ಕೞ್ತಲೆ ಕುಲವೂ, ಮೋರಕ ಕುಳವೂ ಒಂದೇ (ಸ್ಥಳ) ಮೂಲಕ್ಕೆ ಸೇರಿದ ಕುಲಗಳು. ಈ ಕುಲತಿಳಕರು ಧಾರವಾಡ ಜಿಲ್ಲೆಗೆ, ನೆರೆಹೊರೆಗೆ, ಅದರಲ್ಲಿಯೂ ಗದಗ – ನವಿಲ್ಗುಂದ ತಾಲ್ಲೂಕಿನ ಪರಿಸರಕ್ಕೆ ಸೀಮಿತರು. ಪೊಸವೂರ (ಹೊಸೂರ), ಸರಟವುರ (ಸೊರಟೂರ), ನವಿಲ್ಗುಂದ, ಕಣವಿ, ಮೇೞೆವೀಡು (ಮೇವುಂಡಿ), ಹೆಗ್ಗೂರು (ಬಿಜಾಪುರಜಿ / ಬೀಳಗಿತಾ) – ಇವು ಇವರ ಮುಖ್ಯ ಸ್ಥಳಗಳು; ಅದರಲ್ಲಿಯೂ ಹೊಸೂರ – ನವಿಲ್ಗುಂದ ಕೇಂದ್ರವಾಗಿದ್ದುವು.

ಶೈವಬ್ರಾಹ್ಮಣರು ಹಾಗೂ ಜೈನರು ಈ ವಂಶದಲ್ಲಿ ಇದ್ದಾರೆ. ವೈದಿಕ ಬ್ರಾಹ್ಮಣರು ಜೈನರಾಗಿದ್ದು (ಮೇವುಂಡಿ ಮತ್ತು ಹೊಸೂರ ೬೫ ನೆಯ ಶಾಸನ) ಮತ್ತೆ ಶೈವರಾಗಿ ಮತಾಂತರಿಸಿದರೆಂದು ಶಾಸನ ಆಧಾರಗಳು ಸೂಚಿಸುತ್ತವೆ. [ಹೊಸೂರ ೫೨ ನೆಯ ಶಾಸನ, ಪೂರ್ವೋಕ್ತ]. ಕೞ್ತಲೆ ಕುಲದಲ್ಲಿ ಸು. ಕ್ರಿ.ಶ. ೯೦೦ ರಲ್ಲಿದ್ದ ಪಿರಿಯ ಕೋಟಿಗಾವುಣ್ಡನ ಶಿವಾಲಯವನ್ನೂ ಜೈನಶಾಲಾವನ್ನೂ ಮಾಡಿಸಿದನು [ಸೌ.ಇ.ಇ.೧೧-೧, ೪೫]. ಪೊಸವೂರ ಆಯ್ದಗಾವುಣ್ಡನು ಶೈವನಾಗಿದ್ದನು [ಅದೇ, ೪೭. ೯೯೫]. ಪೊಸವೂರ ಆಯ್ಜಿಗಾವುಣ್ಡನು ಕ್ರಿ.ಶ. ೧೦೨೮ ರ ವೇಳೆಗಾಗಲೇನೆ ಬಸದಿಯನ್ನು ಮಾಡಿಸಿದ್ದನು. ನಿಷ್ಠಾವಂತ ಜೈನನಾಗಿದ್ದನು, ಯಾಪನೀಯ ಸಂಘದ ಶಿಷ್ಯನಾಗಿದ್ದನು [ಹೊಸೂರು. ೬೫. ೧೦೨೮].

ಆದರೆ ಅದೇ ಪೊಸವೂರ ಮಹಾಪ್ರಭು ಮೋರಕಕುಳ ಹೊಲ್ಲಗಾವುಣ್ಡನು ಕ್ರಿ.ಶ. ೧೧೫೫ ರಲ್ಲಿ ಶೈವಪರವಾಗಿದ್ದು ಮೋರಕೇಶ್ವರ ದೇವಾಲಯಕ್ಕೆ ದತ್ತಿಯಿತ್ತನು [ಹೊಸೂರ. ೫೨.] ಗಾಮುಣ್ಡ ಸಾಮಿ ಕೞ್ತೆಯಮ್ಮನು ಸರಟಪುರ ದೇವಾಲಯಕ್ಕೂ ಮಠಕ್ಕೂ ವಿದ್ಯಾದಾನಕ್ಕಾಗಿ ಭೂಮಿ ಹೊನ್ನು ಕೊಟ್ಟನು [ಸೌ.ಇ.ಇ.೧೧-೧, ೩೯.೯೫೧. ಪು. ೨೪.; ಇ.ಆ.೧೨, ಪು. ೨೫೭]; ಈ ಗಾಮಣ್ಣಸಾಮಿ ಕೞ್ತೆಯಮ್ಮನು ಕೞ್ತಲೆ (ಕತ್ತಲೆ) ಕುಲದವನಿರಬೇಕು. ಆಯಾ ಸಮಕಾಲಿಕ ಶಾಸನಗಳ ಮಾಹಿತಿಗಳನ್ನು ತೌಲನಿಕವಾಗಿ ನೋದುವುದರಿಂದ ಈ ರಣಮೂರ್ಖಕುಲ -ಕೞ್ತಲೆಕುಲ-ಮೋರಕ ಕುಳ ಇವುಗಳ ಜ್ಞಾತಿ ಸಂಬಂಧದ ಸುಳಿವು ಸಿಗುತ್ತದೆ. ರಣಸಾಹಸಿಗಳ ಈ ರಣಮೂರ್ಖಾಮ್ನಾಯ ದಲ್ಲಿ ಹುಟ್ಟಿದ ಸಾವಿಯನ್ನೆಯು ಕುದುರೆ ಹತ್ತಿ, ಆಯುಧ ಹಿಡಿದು ಹಗೆಯೊಂದಿಗೆ ಹೋರಾಡಿದ್ದು ಬಸದಿಯೊಂದನ್ನು ಆಕೆಯ ಪರೋಕ್ಷವಿನಯಾರ್ಥವಾಗಿ ಕಟ್ಟಿಸಿರಬೇಕು. [ನಾಗರಾಜಯ್ಯ, ಹಂಪ.: ಕವಿವರ ಕಾಮಧೇನು : ಅತ್ತಿಮಬ್ಬೆ, ೧೯೯೬]