೧. ಧಾರವಾಡ ಜಿಲ್ಲೆಯ ಹಿರೇಕೆರೂರು ತಾಲ್ಲೂಕು ಯಮ್ಮಿಗನೂರಿನ ಒಂದು ಶಾಸನಪದ್ಯದ ಪೌರಾಣಿಕ ಆಯಾಮಗಳ ಸ್ವರೂಪವನ್ನು ಗುರುತಿಸುವುದು ಈ ಪುಟ್ಟ ಹಂಟಿಪ್ಪಣದ ಉದ್ದೇಶ.

೨. ಆ ಕಂದ ಪದ್ಯ ಹೀಗಿದೆ:
ಪರಹಿತ ಚರಿತಂ ಸತ್ಯಾ
ಭರಣಂ ಧನದತ್ತ ಚಾರುದತ್ತ ಸಮಾನಂ
ನಿರವದ್ಯಂ ನೆರೆ ಬಣ್ನಿಸೆ
ಧರೆ ಮಾಣಿಕಕೇತಿ ಸೆಟ್ಟಿಯೊಗೆದಂ ಜಗದೊಳು
||
[ಕ.ಇ. ೪, ೩೪.೧೧೪೯. ೧೧೬೮. ಯಮ್ಮಿಗನೂರು]

೨.೧. ಈ ಕಂದ ಪದ್ಯದ ಕೇಂದ್ರ ವ್ಯಕ್ತಿ, ಕರ್ತೃಪದ, ಕೇತಿಸೆಟ್ಟಿ, ಇದೇ ಹೆಸರಿನ ಬೇರೆಯವರೂ ಇದ್ದಾರೆ [ಕ.ಇ. ೧, ೧೭.೧೦೫೫. ಸಾಲು ೨೭]. ಅದರಿಂದ ಇತರ ಕೇತಿಸೆಟ್ಟಿ ಹೆಸರಿನ ವ್ಯಕ್ತಿಗಳಿಗಿಂತ ಭಿನ್ನನಾದವನೆಂದು ಈತನಿಗೆ ಇರುವ ವಿಶೇಷಣ ‘ಮಾಣಿಕ’ ಎಂಬುದು ಹೇಳುತ್ತದೆ; ಅಂದರೆ, ಈತ ಕೇತಿಸೆಟ್ಟಿ ಎಂಬ ಹೆಸರಿರುವವರಲ್ಲಿ ಮಾಣಿಕ್ಯದಂಥವನು ಎಂಬ ಧ್ವನಿಯಿದೆ.

೨.೧.೧. ಕೇತಿ, ಕೇತ- ಎಂಬ ನಾಮಪದಗಳು ಸಾಮಾನ್ಯ ಗ್ರಾಮದೇವತೆಗಳ ಹೆಸರು ಗಳು. ಈ ಹೆಸರುಗಳನ್ನು ವ್ಯಕ್ತಿಗಳಿಗೂ ಇಡುತ್ತಿದ್ದರೆಂದು ಶಾಸನಗಳಿಂದ ತಿಳಿದು ಬರುತ್ತದೆ: ಸೌ.ಇ.ಇ.೧೧-೧, ೫೧.೧೦೦೬, ಮೈ.ಆ.ರಿ. ೧೯೪೩. ೧೧.೧೧ಶ., ಎ.ಕ. ೪. ಗುಂಡ್ಲಪೇ. ೮೩.ಸು, ೯೯೫, ಎ.ಕ.೭-೧ ಶಿಕಾರಿ. ೯. ೧೦೨೧ ಇತ್ಯಾದಿ. ಸಂಸ್ಕೃತದ ‘ಕ್ಷೇತ್ರ’ ಶಬ್ದದ ತದ್ಭವರೂಪವಾಗಿ ಕೇತ ಶಬ್ದ ಬಳಕೆಗೆ ಬಂದಿದೆ.

೩. ಮಾಣಿಕ ಕೇತಿಸೆಟ್ಟಿಯು ಲೋಕ ವಿಖ್ಯಾತನಾಗಿದ್ದುದಕ್ಕೆ ಆತನ ವ್ಯಕ್ತಿತ್ವದಲ್ಲಿದ್ದ ಕೆಲವು ವಿಶೇಷ ಗುಣಗಳು ಕಾರಣ. ಇನ್ನೊಬ್ಬರಿಗೆ ಒಳ್ಳೆಯದನ್ನು ಮಾಡುವ ನಡತೆ ಆತನದು -ಪರಹಿತಚರಿತಂ : ಆತನಿಗೆ ನನ್ನಿಯನ್ನು ಆಡುವುದೇ ಒಂದು ಒಡವೆಯಾಗಿತ್ತು (ಸತ್ಯಾಭರಣಂ); ಆತನು ಯಾವುದೇ ಕಳಂಕ ಇಲ್ಲದ ಶ್ರೇಷ್ಠಪುರುಷನಾಗಿದ್ದನು (ನಿರವದ್ಯಂ). ‘ನಿರವದ್ಯ’ ಎಂಬುದಕ್ಕೆ ದೋಷರಹಿತ ಎಂಬರ್ಥವಲ್ಲದೆ ‘ಶ್ರೇಷ್ಠ’ ಎಂಬರ್ಥವೂ ಇದೆ [ಎ.ಕ. ೧೧, ೯೪ (೮೪). ೭೦೦. ಪು. ೬೯. ಸಾಲು : ೪]; ನಿರವದ್ಯಚರಿತ ನೆಂದರೆ ಶ್ರೇಷ್ಠ ನಡುವಳಿಕೆಯವನು, ಸನ್ನಡತೆಯವನು ಎಂದು ಅರ್ಥೈಸಬಹುದು.

೩.೧. ಮಾಣಿಕ್ಯ ಕೇತಿಸೆಟ್ಟಿಯನ್ನು ಈ ಎಲ್ಲಗುಣಗಳ ಜತೆಗೆ ಇಬ್ಬರು ಪ್ರಸಿದ್ಧ ಪುರುಷರೊಂದಿಗೆ ಹೋಲಿಸಲಾಗಿದೆ. ಈತನನ್ನು ‘ಧನದತ್ತ’ ನಿಗೂ, ಚಾರುದತ್ತನಿಗೂ ಸಮಾನ’ ನೆಂದು ಕರೆಯಲಾಗಿದೆ. ಈ ಧನದತ್ತ ಮತ್ತು ಚಾರುದತ್ತ ಯಾರೆಂಬುದು ಪರಿಶೀಲನಾರ್ಹವಾಗಿದೆ.

೩.೧.೧. ಧನದತ್ತ ಶಬ್ದವನ್ನು ಕುಬೇರ, ಲಕ್ಷ್ಮೀಪತಿ ಎಂಬ ಸಾಮಾನ್ಯಾರ್ಥದಲ್ಲಿ ಅನ್ವಯಿಸಿ, ಅರ್ಥೈಸಿ ಈ ಪದ್ಯದಲ್ಲಿ ಬಳಸಿಲ್ಲ. ಅದೇ ರೀತಿ ಚಾರುದತ್ತ ಶಬ್ದವೂ ಸಹ. ಮಾಣಿಕ ಕೇತಿಸೆಟ್ಟಿಯು ವೈಶ್ಯನಾದುದರಿಂದ ಹೋಲಿಕೆಗೆ ಆರಿಸಿದ ಧನದತ್ತ, ಮತ್ತು ಚಾರುದತ್ತ ಎಂಬ ಪುರಾಣ ಪುರುಷರೂ ವೈಶ್ಯರೆಂಬುದು ಸಹಜವಾದ ನಿರೀಕ್ಷೆಯೆ.

೩.೨. ಧನದತ್ತನೆಂದು ಇಲ್ಲಿ ಶಾಸನ ಕವಿ ನಿರ್ದೇಶಿಸಿರುವ ವ್ಯಕ್ತಿ ಜೈನಪುರಾಣಗಳಲ್ಲಿ ಬರುವ ಧನ್ಯಕುಮಾರನಾಗಿದ್ದಾನೆ. ಧನ್ಯಕುಮಾರನನ್ನು ಧನ್ಯ, ಧಣ, ಧಣ್ಣ ಮೊದಲಾದ ಹೆಸರುಗಳಿಂದ ನಿರ್ದೇಶಿಸಲಾಗಿದೆ. ಹಣವಂತ ಮತ್ತು ವೈಶ್ಯ ಎಂಬ ಸಂಕೇತದಿಂದಾಗಿ ಧನದತ್ತ ಧನಂಜಯ ಧನಗಿರಿ ಧನಗುಪ್ತ ಧನಗೋಪ ಧನದೇವ ಧನಪತಿ ಧನಪಾಲ ಧನಮಿತ್ರ ಧನವಹ ಧನ್ಯ ಧನ್ಯ ಕುಮಾರ – ಎಂಬ ಹೆಸರುಗಳನ್ನು ಜೈನಕಥಾ ಸಾಹಿತ್ಯದಲ್ಲಿ ಬಳಸಲಾಗಿದೆ [ ನಾಗರಾಜಯ್ಯ ಹಂಪ : ಕವಿ ಬಂಧುವರ್ಮ – ಜಿಜ್ಞಾಸೆ: ೧೯೯೩ : ೭೫]. ಧನದತ್ತ – ಧನಕುಮಾರನು ಶ್ರೇಷ್ಠ ಗುಣಗಳ ವೈಶ್ಯೋತ್ತಮನಾಗಿದ್ದನು.

೩.೨.೧. ಇದೇ ರೀತಿ ಚಾರುದತ್ತನೂ ಸಹ ಪ್ರಸಿದ್ಧ ಕಥಾ ಪುರುಷ. ಭಾಸ, ಶೂದ್ರಕಾದಿಗಳ ನಾಟಕಗಳಲ್ಲಿ ಬರುವ (ದರಿದ್ರ) ಚಾರುದತ್ತನಿಗಿಂತ ಬೇರೆಯಾದ, ಅನೇಕ ಸಾಹಸ ಸದ್ಗುಣಗಳ ಆಗರವಾದ ಚಾರುದತ್ತನನ್ನು ಜೈನ ಕಥಾ ಸಾಹಿತ್ಯದಲ್ಲಿ ಕಾಣುತ್ತೇವೆ [ನಾಗರಾಜಯ್ಯ, ಹಂಪ: ಚಾರುದತ್ತನ ಕಥೆ: ಮೂಲ – ಚೂಲ; ‘ಸಂಶೋಧನ’ (ಸಂ) ಲಕ್ಷ್ಮಣ್ತೆಲಗಾವಿ, ೧೯೯೨, ೪೮೧ – ೯೮]

೪. ಈ ಕಥಾ ಸಾಹಿತ್ಯದ ಹಿನ್ನೆಲೆಯಿಂದ ಮೇಲಿನ ಶಾಸನ ಕವಿ ಮಾಣಿಕಕೇತಿ ಸೆಟ್ಟಿಯ ಪಾತ್ರ – ವ್ಯಕ್ತಿತ್ವವನ್ನು ಬಿಂಬಿಸಿರುವಂತೆ ತೋರುತ್ತದೆ.