೧. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಈಗಿನ ಯಲ್ಲಾದ ಹಳ್ಳಿಗೆ ಹಿಂದೆ ಇದ್ದ ಹೆಸರು ಪಾರ್ಶ್ವ (ನಾಥ) ಪುರ ಎಂದ್ಯ್. ಇಲ್ಲೊಂದು ಪಾರ್ಶ್ವನಾಥ ಬಸದಿಯಿತ್ತು, ಅದು ಈಗ ಹಾಳು ಬಿದ್ದು ಹೋಗಿದೆ. ಈ ಹಳ್ಳಿಗೆ, ಇಲ್ಲಿನ ಬಸದಿಗೆ ಸಂಬಂಧಿಸಿದ ಕೆಲವು ಮಾಹಿತಿಗಳು ಅಲ್ಲಿನ ಶಾಸನದಲ್ಲಿವೆ: ಎ.ಕ.೭(ಪ) ನಾಮಂ ೬೪ (೪ ನಾಮಂ ೭೬) ೧೧೪೫. ಪು. ೪೫ – ೪೯.

೨. ಹೊಯ್ಸಳ ಒಂದನೆಯ ನರಸಿಂಹನ ಆಳಿಕೆಯಲ್ಲಿ ನಡೆದ ಘಟನೆ ಹೀಗಿದೆ: ಸೂರನ ಹಳ್ಳಿಯಲ್ಲಿ ಪಾರ್ಶ್ವಜಿನಭವನವನ್ನು ಕಟ್ಟಿಸಲಾಯಿತು; ಅದಕ್ಕೆ ಸಮ್ಯಕ್ತ್ವ ರತ್ನಾಕರ ಮಹಾಪ್ರಧಾನ ದೇವರಾಜನು ಹಲವು ದಾನ ದತ್ತಿಗಳನ್ನು ನೀಡಿದನು [ಅದೇ, ಸಾಲು: ೬೯-೭೨].

೩. ಈ ಶಾಸನದಲ್ಲಿ ೭೫ ದೊಡ್ಡ ಸಾಲುಗಳಿವೆ ಶಾಸನದ ಅರ್ಧಭಾಅ ಪೂರ್ತಿ ಹೊಯ್ಸಳ ನರಸಿಂಹ, ರಾಜನ ವರ್ಣನೆಗೆ ಮೀಸಲಾಗಿದೆ. ಇನ್ನರ್ಧ (ದ್ವಿತೀಯಾರ್ಥ) ಭಾಗದಲ್ಲಿ ಈ ಶಾಸನದ ಕೇಂದ್ರವ್ಯಕ್ತಿಯಾದ ದೇವರಾಜನ ವರ್ಣನೆ ಬಂದಿದೆ. ಅದರಲ್ಲಿ, ಈ ಶಾಸನದಲ್ಲಿರುವ ಕೇಂದ್ರ ಕ್ರಿಯೆಯಾದ, ಪಾರ್ಶ್ವಜಿನರಿಗೆ ನಿರ್ಮಿಸಿದ ಉತ್ತುಂಗಕೂಟವೆನಿಸಿದ ತ್ರಿಕೂಟ ಜಿನಗೇಹದ ವಿಚಾರವೂ ಪ್ರತಿಪಾದಿತವಾಗಿದೆ.

೪. ದೇವರಾಜನು ಅಮರೇಂದ್ರ ಭವನಮೆನಿಪ ಪಾರ್ಶ್ವನಾಥರ ಜಿನಭವನವನ್ನು ರಾಜ – ರಾಷ್ಟ್ರ – ಯಶೋಧನವೃಧ್ಯರ್ತ್ಥವಾಗಿ ಮಾಡಿಸಿದನು. ಹೊಯ್ಸಳೇಶ್ವರ ನರಸಿಂಹನು ತನ್ನ ಈ ಪ್ರಧಾನಿ ದೇವರಾಜನಿಗೆ ಸೂರನ ಹಳ್ಳಿಯನ್ನು ಬಿಟ್ಟು ಕೊಟ್ಟನು.

೪.೧. ದೇವರಾಜನು ಸೂರನಹಳ್ಳಿಗೆ ಪಾರ್ಶ್ವಪುರವೆಂದು ಹೆಸರಿಟ್ಟನು.

೪.೧.೧. ದೇವರಾಜನು ಕೌಶಿಕ ಕುಳಾಂಬರ ದಿವಾಕರನಾಗಿದ್ದನು [ಸಾಲು : ೩೭].

ಕೌಶಿಕಮುನೀಶ್ವರನ ತರುವಾಯ ಅನೇಕ ಅನುಪಮರು ಆ ಕುಲದಲ್ಲಿ ಆಗಿ ಹೋದರು, ಆಮೇಲೆ ಈ ದೇವರಾಜನು ಕೌಶಿಕಕುಲದಲ್ಲಿ ಬೆಳಗಿದನು; ಭವ್ಯಚೂಡಾಮಣಿಯಾದ ಈತನ ಮನೋರಮೆ ಕಾಮಲದೇವಿ.

೫. ದೇವರಾಜನು ಕೌಶಿಕಕುಳದವನೆಂಬ ಹೇಳಿಕೆ ಗಮನಾರ್ಹವಾಗಿದೆ. ಕೌಶಿಕಕುಲವೆಂಬುದು ಸಾಮಾನ್ಯವಾಗಿ ವೈದಿಕ ಮೂಲಕ್ಕೆ ಅನ್ವಯವಾಗುವ ವಂಶ – ಗೋತ್ರ ಹೀಗಿರುವಾಗ ಅಪ್ಪಟಜೈನನಾದ ದೇವರಾಜನಿಗೆ ಕೌಶಿಕವಂಶದ ಸಂಬಂಧ ಹೇಗೆ ಕಲ್ಪಿತವಾಯಿತೆಂಬ ಪ್ರಶ್ನೆ ಉದ್ಭವಿಸುತ್ತದೆ.

೬. ಕೆಲವು ಗೋತ್ರ – ವಂಶಗಲು ಜೈನ – ವೈದಿಕ ಮತಧರ್ಮಗಳಲ್ಲಿ ಸಮಾನವಾದ ಹೆಸರುಗಳನ್ನು ಪಡೆದಿವೆ.

೬.೧. ಮಹಾವೀರ ಜಿನನ ತಾಯಿ ತ್ರಿಶಲಾ ಪ್ರಿಯಕಾರಿಣಿಯು ವಾಸಿಷ್ಠಗೋತ್ರದವಳು; ಮಹಾವೀರನ ತಂದೆ ಸಿದ್ಧಾರ್ಥನು ಕಶ್ಯಪ ಗೋತ್ರೀಯನು. ಪ್ರಯಾಗ ಮತ್ತು ಕೌಶಾಂಬಿ ಸಮೀಪದ ಪಭೋಸಾ ಎಂಬಲ್ಲಿನ ಎರಡು ಗುಹೆಗಳಲ್ಲಿ ಕ್ರಿ. ಪೂ. ಎರಡನೆಯ ಶತಮಾನದ ಲಿಪಿಯ ಲೇಖವಿದೆ; ಈ ಶಾಸನದಲ್ಲಿ “ಅಹಿಚ್ಛತ್ರದ ಆಷಾಢ ಸೇನನು ಕಾಶ್ಯಪೀಯ ಅರ್ಹಂತನಿಗಾಗಿ ಈ ಗುಹೆಗಳನ್ನು ದಾನಮಾಡಿದನು – ಎಂದಿದೆ. ವರ್ಧಮಾನ ಮಹಾವೀರನು ಕಾಶ್ಯಪಗೋತ್ರದವ ನಾಗಿದ್ದನು. ಮಹಾವೀರನ ಶಿಷ್ಯ ಪರಂಪರೆಯ ಮುನಿಗಳು ಕಾಶ್ಯಪೀಯ ಅರ್ಹಂತರು” [ಹೀರಾಲಾಲ್ ಜೈನ್, ಭಾರತೀಯ ಸಂಸ್ಕೃತಿಗೆ ಜೈನಧರ್ಮದ ಕೊಡುಗೆ, ಕನ್ನಡ ಅನುವಾದ – ಮಿರ್ಜಿ ಅಣ್ಣಾರಾಯ : ೧೯೭೧, ೩೮೨]

೬.೨. ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕು ಅಳೀಸಂದ್ರದ ಜೈನ ಶಾಸನದಲ್ಲಿ ಕೌಂಡಿಲ್ಯಗೋತ್ರವನ್ನು ಹೇಳಿದೆ [ಎ.ಕ. ೭(ಪ) ನಾಮಂ ೭.೨, ೧೧೪೩] – ಇಂತು ಪೊಗಳ್ತೆಗೆ ನೆಲೆಯಾದ ಕೌಂಡಿಲ್ಯ ಗೋತ್ರದ ಡಾಕರಸದಂಡನಾಯಕ.

೭. ಆದ್ದರಿಂದ ಜೈನನಾದ ‘ದೇವರಾಜನು ಕೌಶಿಕ ವಂಶವೆಂಬ ಆಕಾಶವನ್ನು ಬೆಳಗುವವನಾಗಿದ್ದನು’ – ಎಂಬ ಮಾತಿಗೆ ಜೈನ ಆಗಮ – ಪುರಾಣಗಳ ಹಿನ್ನೆಲೆಯೂ ಇದೆ.