ಹತ್ತನೆಯ ಶತಮಾನದಲ್ಲಿ, ಕರ್ನಾಟಕದ ಸಾಂಸ್ಕೃತಿಕ ರಂಗದಲ್ಲಿ, ಉಜ್ವಲವಾಗಿ ಬೆಳಗಿದ ಬಹುಮುಖ ಪ್ರತಿಭೆಯ ದಾನಚಿಂತಾಮಣಿ ಅತ್ತಿಮಬ್ಬೆಯನ್ನು ಕುರಿತು, ಒಂದು ಸಾವಿರ ವರ್ಷದ ಚರಿತ್ರೆ ಯುದ್ಧಕ್ಕೂ, ಮಾಹಿತಿಗಳು ಉಪಲಬ್ಧವಾಗಿವೆ. ಕರ್ನಾಟಕವನ್ನು ಆಳಿದ ಕಲ್ಯಾಣಿ ಚಾಳುಕ್ಯ ಸಾಮ್ರಾಜ್ಯಕ್ಕಾಗಿ ಒಂದು ಇಡೀ ಕುಟುಂಬ ಬಲಿದಾನವಾಯಿತು; ಅದೇ ಅತ್ತಿಮಬ್ಬೆಯ ಮನೆತನ. ಆಕೆಯ ತಂದೆ ಮಲ್ಲಪ್ಪಯ್ಯ, ಚಿಕ್ಕಪ್ಪ ಪುನ್ನಮಯ್ಯ, ಸೋದರರಾದ ಗುಂಡಮಯ್ಯ ಎಳಮಯ್ಯ ಪೊನ್ನಮಯ್ಯ ಆಹವಮಲ್ಲ ವಲ್ಲ ಎಂಬ ಐವರು, ಮಾವನಾದ ದಲ್ಲಪ್ಪಯ್ಯ, ಗಂಡನಾದ ನಾಗದೇವ, ಮಗನಾದ ಅಣ್ನಿಗದೇವ – ಇವರೆಲ್ಲರೂ ಚಾಳುಕ್ಯ ಸೈನ್ಯದ ಚಮೂಪತಿಗಳಾಗಿ ಹೋರಾಡಿದರು.

ಅತ್ತಿಮಬ್ಬೆಯ ಚಿಕ್ಕಪ್ಪ ಪುನ್ನಮಯ್ಯನು ಕಾವೇರಿ ನದಿಯ ತೀರದಲ್ಲಿ ಶತ್ರುಗಳಿಂದ ಹತನಾದನು. ಮಣ್ಮಳಿಗೊಂಡನು. ಅತ್ತಿಮಬ್ಬೆಯ ಗಂಡನಾದ ನಾಗದೇವನೂ ಹಗೆಗಳ ಕೊಲೆಗೆ ಈಡಾಗಿ ರಣರಂಗದಲ್ಲೇ ಮುಮ್ಮಳಿಗೊಂಡನು. ಇಷ್ಟಾಗಿಯೂ ಅವರ ಸಂಸಾರ ರಾಷ್ಟ್ರ ಪ್ರೇಮವನ್ನು ಜೀವಂತವಾಗಿ ಇರಿಸಿತ್ತು. ದೇಶಕ್ಕಾಗಿ ಹೋರಾಡುವ ರಾಷ್ಟ್ರಕಾಯಕ ಆ ಕುಟುಂಬದ ನೋಂಪಿಯಾಗಿತ್ತು. ಸ್ವಯಂ ಅತ್ತಿಮಬ್ಬೆಯೇ ರಣದಲ್ಲಿ ಎದುರಾದ ಉದ್ವೃತ್ತ ಶತ್ರುವನ್ನು ಸೈನ್ಯದೊಂದಿಗೆ ತಡೆದು ತನ್ನ ತಾಯ್ನಾಡಿನ ಗೌರವವನ್ನು ಕಾಪಾಡಿದಳು. ಹೀಗೆ ಯುದ್ಧಭೂಮಿಯಲ್ಲಿ ಶತ್ರು ಸೈನ್ಯವನ್ನು ಎದುರಿಸಿ ಗೆದ್ದ ಪ್ರಥಮ ಮಹಿಳೆ ಅತ್ತಿಮಬ್ಬೆ ಎಂಬುದು ಕನ್ನಡಿಗರು ಹೆಮ್ಮೆ ಪಡುವಂಥ ವಿಚಾರ. ಅದರೊಂದಿಗೇನೆ ಅತ್ತಿಮಬ್ಬೆಯು ಕನ್ನಡ ಭಾಷೆ ಸಾಹಿತ್ಯವನ್ನೂ ಪೋಷಿಸಿ, ಮಾತೃಭಿಕ್ಷೆಯನ್ನು ರಕ್ಷಿಸಿದ ರಕ್ಷಾಮಣಿಯೂ ಆಗಿದ್ದಾಳೆ.

ಅತ್ತಿಮಬ್ಬೆಯ ತರುವಾಯ ಅವರ ವಂಶದವರು ಯಾರು ಬಂದರು, ಏನಾದರು ಎಂಬ ಪ್ರಶ್ನೆಗಳಿಗೆ ಅವಕಾಶವಿದೆ:ಆ ದಿಕ್ಕಿನಲ್ಲಿ ಉತ್ತರಿಸುವ ಪ್ರಯತ್ನದ ಫಲ ಈ ಸಂಪ್ರಬಂಧ.

ಅತ್ತಿಮಬ್ಬೆಯ ತೌರುಮನೆ ಮತ್ತು ಮಾವನ ಮನೆಯವರ ವಿವರಗಳು ವಿಪುಲವಾಗಿ ದೊರೆತಿವೆ. ಆಕೆಯದು ಕೌಂಡಿನ್ಯ ಗೋತ್ರದ ವಾಜಿವಂಶ. ಈ ವಾಜಿ ವಂಶದಲ್ಲಿ ಹಲವು ಮಹಾಪುರುಷರು ಆಗಿಹೋಗಿದ್ದಾರೆ. ವಾಜಿಕುಲದ ಜೈನ ಶಾಖೆಯವರಲ್ಲಿ ದಲ್ಲಪ್ಪಯ್ಯ, ಅವನ ಮಗ ನಾಗದೇವ (ಅತ್ತಿಮಬ್ಬೆಯ ಗಂಡ), ಅವನ ಮಗನಾದ ಅಣ್ನಿಗದೇವ (ಅತ್ತಿಮಬ್ಬೆಯ ಮಗ)- ಮೊದಲಾದವರು ಪ್ರಸಿದ್ಧರಿದ್ದಾರೆ. ಅತ್ತಿಮಬ್ಬೆ ನಾಗದೇವ ದಂಪತಿಗಳ ಹಿರಿಯ ಮಗ ಅಣ್ನಿಗದೇವ. ಈತನ ವೈವಾಹಿಕ ವಿವರಗಳು ತಿಳಿಯವು. ಅಣ್ನಿಗದೇವನ ಜೀವಿತ ವಿವರಗಳು ಇರುವ ರನ್ನನ ಅಜಿತಪುರಾಣ ಮತ್ತು ಲಕ್ಕುಂಡಿಯ ಶಾಸನಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ, ಅಣ್ನಿಗದೇವನು ಅಪುತ್ರಕ ಅಗಿದ್ದಂತೆ ತೋರುತ್ತದೆ.

ನಾಗದೇವನ ಕಿರಿಯ ಮಕ್ಕಳ ವಿಚಾರವಾಗಿ ಕಾವ್ಯ ಮತ್ತು ಶಾಸನಗಳು ವಹಿಸಿರುವ ಮೌನವನ್ನು ಸ್ಪೋಟಿಸಲು ಸಾಧ್ಯವಾಗಿಲ್ಲ. ಹಾಗೆಯೇ ನಾಗದೇವನ ತಮ್ಮಂದಿರ ವಿಚಾರಗಳೂ ದಾಖಲಾದಂತಿಲ್ಲ. ಲಕ್ಕುಂಡಿಯ ಶಾಸನದಲ್ಲಿ ನಾಗದೇವನನ್ನು ದಲ್ಲಪನ ಹಿರಿಯ ಮಗನೆಂದು ಸ್ಪಷ್ಟವಾಗಿ ಹೇಳಿದೆ. ಅಂದಮೇಲೆ ಕಿರಿಯ ಮಕ್ಕಳು ಇರಲೇಬೇಕು. ದಲ್ಲಪ, ನಾಗದೇವ, ಅಣ್ನಿಗದೇವ ಲಕ್ಕುಂಡಿಯ ಮೂಲ ನಿವಾಸಿಗಳು. ಅಣ್ನಿಗದೇವನಂತೂ ಲಕ್ಕುಂಡಿಯಲ್ಲೇ ನೆಲಸಿದ್ದು, ಲಕ್ಕುಂಡಿಯನ್ನು ಒಳಗೊಂಡ ಮಾಸವಾಡಿ – ೧೪೦ ಕಂಪಣ ಪ್ರದೇಶಕ್ಕೆ ಒಡೆಯನಾಗಿ ಬೀಳವೃತ್ತಿಯಿಂದ ಆಳುತ್ತಿದ್ದನು [ಸೌ.ಇ.ಇ. ೧೧-೧೧ ೫೨. ೧೦೦೭ : ಬಾ.ಕ.ಇ. ೨೮, ೧೯೨೬ – ೨೭].

ಅತ್ತಿಮಬ್ಬೆ ರನ್ನಕವಿಗೆ ಆಶ್ರಯನೀಡಿ ಅಜಿತ ಪುರಾಣ ಕಾವ್ಯವನ್ನು ಬರೆಸಿದ್ದೂ, ೧೫೦೧ ನೆಯ ಮತ್ತು ಕಟ್ಟಕಡೆಯ ಬಸದಿಯನ್ನು ಕಟ್ಟಿಸಿದ್ದೂ ಲಕ್ಕುಂಡಿಯಲ್ಲಿಯೇ. ಅತ್ತಿಮಬ್ಬೆಯು ಸಮಾಧಿ ವಿಧಿಯಿಂದ ಲಕ್ಕುಂಡಿಯಲ್ಲಿಯೇ ಮುಡಿಪಿರಬಹುದು. ಮತ್ತು ಕ್ರಿ.ಶ. ೧೦೧೮ – ೨೦ ರ ಸುಮಾರಿನಲ್ಲಿ ಅತ್ತಿಮಬ್ಬೆ ಮುಡಿಪಿದ ಒಂದೆರಡು ವರ್ಷಗಳಲ್ಲಿ, ಪ್ರಾಯ : ೧೦೨೨ ರ ವೇಳೆಗೆ ಅಣ್ನಿಗದೇವನೂ ಮುಡಿಪಿದಂತೆ ತೋರುತ್ತದೆ. ಏಕೆಂದರೆ ಚಾಳುಕ್ಯರ ಜಗದೇಕಮಲ್ಲ ಇಮ್ಮಡಿ ಜಯಸಿಂಹನ ಮಹಾಸಾಮಂತನಾದ ದಸರಸನು ಕ್ರಿ.ಶ. ೧೦೨೨ ರಿಂದ ಮಾಸವಾಡಿ ಯನ್ನು ಆಳುತ್ತಿದ್ದುದಕ್ಕೆ ಶಾಸನಗಳ ಆಧಾರವಿದೆ. [ಸೌ.ಇ.ಇ. ೧೧-೧. ೫೮.೧೦೨೨. ನಾಗರಹಳ್ಳಿ (ಧಾಜಿ./ಮುಂಡರಗಿತಾ.)].

ಅಣ್ನಿಗದೇವನ ತರುವಾಯ ಆತನ ಚಿಕ್ಕಪ್ಪ ಮತ್ತು ಆತನ ತಮ್ಮಂದಿರ ಪರಂಪರೆ ಮುಂದುವರಿಯಿತು. ಆ ಪರಂಪರೆಯಲ್ಲಿ ಬಂದವರು ಹುಳ್ಳಮಯ್ಯ ಮತ್ತು ರೇಚಣ ದಂಡಾಧೀಶರು ಚಾಳುಕ್ಯರ ಆಸರೆಯಲ್ಲಿಯೇ ಬೆಳೆದುಬಂದು ಈ ಕುಟುಂಬಗಳು ಲಕ್ಕುಂಡಿಯನ್ನು ಬಿಟ್ಟು, ಚಾಳುಕ್ಯರನ್ನು ತೊರೆದು, ದೂರದ ಊರುಗಳಿಗೆ ಬೇರೆ ಕಡೆಗೆ ಹೋಗಬೇಕಾದ ಅನಿವಾರ್ಯ ಬರಲು ಚರಿತ್ರೆಯಲ್ಲಿ ಸಂಭವಿಸಿದ ಘಟನಾವಳಿಯೇ ಕಾರಣ. ಆರನೆಯ ವಿಕ್ರಮಾದಿತ್ಯ ಚಕ್ರವರ್ತಿಯ ತರುವಾಯ ಬಂದ ಚಾಳುಕ್ಯ ಮಹಾರಾಜರು ಜೈನಪರವಾದ ಧೋರಣೆಯಿಂದ ಸರಿದು ಶೈವಪರವಾದ ನಿಲುಮೆಗೆ ಒಲವು ತೊರಿದರು. ಇದರ ಸೂಕ್ಷ್ಮ ಪರಿಣಾಮಗಳನ್ನು ಗ್ರಹಿಸಿದ ಯಕ್ಷರಾಜನು ಲಕ್ಕುಂಡಿಗೆ ವಿದಾಯ ಹೇಳಿದ ಮೊದಲಿಗನು [ಎ.ಕ. ೨, ೭೧ (೬೪). ೧೧೬೩. ಪು. ೩೦: ಅದೇ, ೪೭೬ (೩೪೫)] ವಾಜಿ ವಂಶದ ಯಕ್ಷರಾಜನು ಪ್ರಾಯಃ ದಲ್ಲಪನ ಕಿರಿಯ ಮಗನ, ಅಂದರೆ ನಾಗದೇವನ ತಮ್ಮನ ಸಂತಾನಕ್ಕೆ ಸೇರಿದವನು. ಯಕ್ಷರಾಜನು ವಿಕ್ರಮಾದಿತ್ಯನ ಆಳ್ವಿಕೆಯ ಅಂತ್ಯದ ಅವಧಿಯಲ್ಲಿ ಲಕ್ಕುಂಡಿಯನ್ನು ಬಿಟ್ಟು ಹೊಯ್ಸಳರನ್ನೂ ದ್ವಾರಸಮುದ್ರವನ್ನೂ ಸೇರಿದನು. ಅವನ ಮಗನೆ ಹುಳ್ಳಭಂಡಾರಿ [ಎ.ಕ. ೭ (೧೯೭೯) ೬೩ (೪ ನಾಮಂ ೩೦) ೧೧೬೫. ಲಾಲನಕೆರೆ (ಮಂಡ್ಯ ೩-ಜಿ/ ನಾಮಂ. ತಾ) ಪು. ೪೩. ಸಾಲು : ೩೦-೩೧]

ಯಕ್ಷರಾಜನೂ ಅವನ ಕುಟುಂಬವೂ ಲಕ್ಕುಂಡಿಯನ್ನು ತೊರೆದ ಮೇಲೂ, ಆತನ ದಾಯಾದಿ ಕುಟುಂಬದವರಾದ ಅಣ್ನಿಗದೇವನ ತಮ್ಮನ ಮನೆಯವರು ಲಕ್ಕುಂಡಿಯನ್ನು ಬಿಡಲಿಲ್ಲ. ಆ ಮನೆಯ ಮಗನಾಗಿ ಚಿಗುರಿದವನು ರೇಚಣ ದಂದಾಧಿಪತಿ. ಅಣ್ನಿಗದೇವನು ಆದಮೇಲೂ ವಾಜಿವಂಶದ ಬೇರುಗಳು ಲಕ್ಕುಂಡಿಯಲ್ಲಿದ್ದುವು. ತನ್ನ ಕುಲದವರ ಜಿನಧರ್ಮನಿಷ್ಠೆಯನ್ನು ಯಶಸ್ವಿಯಾಗಿ ಮುಂದುವರಿಸಿದವನು ‘ವಸುಧೈವ ಬಾಂಧವನಾದ ರೇಚಣನು. ಈತನು ಲಕ್ಕುಂಡಿಯಲ್ಲಿ ‘ವಸುಧೈಕ ಬಾನ್ಧವ ಜಿನಾಲಯ’ವನ್ನು ಸುಮಾರು ಕ್ರಿ.ಶ. ೧೧೭೫ ರಲ್ಲಿ ಕಟ್ಟಿಸಿದನು. ಆ ವಸುಧೈಕ ಬಾನ್ದವ ಜಿನಾಲಯದಲ್ಲಿ ತ್ರಿಭುವನ ತಿಲಕ ಶಾನ್ತಿನಾಥ ತೀರ್ಥಂಕರ ಸ್ವಾಮಿಯ ಬಿಂಬವು ಮೂಲನಾಯಕ ಪ್ರತಿಮೆಯಾಗಿತ್ತೆಂದು ಶಾಸನದಿಂದ ತಿಳಿದುಬರುತ್ತದೆ. ರೇಚಣನ ವಿಚಾರವಾಗಿ ಕೆಲವು ಮಾಹಿತಿಗಳು ಶಾಸನೋಕ್ತವಾಗಿವೆ. [ಎ.ಕ. ೭-೧, ೧೯೭, ೧೧೮೦, ಚಿಕ್ಕಮಾಗಡಿ (ಶಿವಮೊಗ್ಗ ಜಿಲ್ಲೆ/ಶಿಕಾರಿ ಪುರ ತಾ) ಪು. ೨೮೫-೯೧]

ಶ್ರೀವಚ್ಛಂ ಸಿರಿಯಿಂ ಸಮೃದ್ಧನೆಸೆವಾ ನಾಗಾಂಬಿಕಾ ಸೂನು ಬೋ
ಗಾವಾಸಂ ವಸುಧೈಕ ಬಾನ್ಧವನುದಾರಂ ಸ್ತುತ್ಯಗೌರೀ ಸುಖ
ಶ್ರೀ ವಿಷ್ಟಂ ವೃಷಭಧ್ವಜ ಪ್ರಿಯತಮಂ ನಾರಾತಣಾತ್ಮೋದ್ಭವಂ
ಭಾವಂ ಬೆತ್ತಿರೆ ಚೆಲ್ವನೆಂದೆನಿಸಿದಂ ಶ್ರೀರೇಚಿದಣ್ಡಾಧಿಪಂ
||          [ಸಾಲು ೩೬-೩೮]

ನಡೆದನೆಲಂ ರಣೋರ್ವ್ವರೆಯೊಳಂತನಿತುಂ ತನಗಜ್ಜಪಜ್ಜರಿಂ
ಪಡೆದ ನೆಲಂ ದಲೆಂಬನಸಿಗನ್ಯ ನೃಪಾಳರನಿಕ್ಕುದುಂತೆ ಕಿ
ೞ್ತಡೆ ಕಡುದೋಸವೆಂಬನ ಸಹಂ ಮಿಗೆ ದೇಗುಡ ಪತ್ತೆ ತಾನೆಬೆಂ
ಗುಡುವ ವೊಲೆಂಬನೇನದಟನೋ ಕಲಿ ರೇಚಣ ದಣ್ಡನಾಯಕಂ
|| [ಸಾಲು ೩೨-೩೩]

ರೇಚಣನು ನಾಗಾಂಬಿಕೆಯ ಮಗ, ತಂದೆಯ ಹೆಸರು ನಾರಾಯನ, ಮದದಿಯ ಹೆಸರುಗೌರಿ. ಹಗೆಗಳನ್ನು ಲೆಕ್ಕಿಸದೆ ಹೋರಾಡುವ ಯುದ್ಧೋತ್ಸಾಹ ಮತ್ತು ಯುದ್ಧ ಕಲೆಯನ್ನು ತನ್ನ ಅಜ್ಜ ಪಜ್ಜರ ಪರಂಪರೆಯಿಂದ ಪಡೆದಿದ್ದನು. ಅದರಿಂದ ರೇಚಣನು ತನ್ನತಾತ ಮುತ್ತಾತರ ಮನೆಯನ್ನು ಬಿಟ್ಟು ಹೋಗದೆ ವಾಜಿ ವಂಶದ ವಾಂಛೆಯಿಂದ ಲಕ್ಕುಂಡಿಯಲ್ಲಿ ನೆಲಸಿದ್ದನು. ಆದರೆ ಮಾರ್ಪಾಟಾಗುತ್ತಿರುವ ರಾಜಕೀಯ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡನು. ರೇಚಣನು ವಾಜಿ ವಂಶೋದ್ದ್ಭವನೆಂಬುದು ಶಾಸನ ಬದ್ಧವಾಗಿದೆ: [ಎ.ಕ. ೫, ಅರಸೀಕೆರೆ ೬೯.೧೧೭೪]

ಕುಲಮಂ ಪೇೞ್ವೊಡೆ ವಾಜಿ ವಂಶ ತಿಲಕಂ ಸನ್ಮಂತ್ರ ಮಂತ್ರಿತ್ವದೊಳ್
ಪಲರುಂ ಜೀಯೆನೆ ದೇವಮಂತ್ರಿಯೊಲವಂ ಸಲ್ಲೀಲೆಯಿಂ ತೋೞುವಂ
ಚಲದಿಂದಾಂತರನಿಕ್ಕಿಮೆಟ್ಟಿ ಪಡೆವಂ ಸತ್ಕೀರ್ತಿಯಂ ಧಾತ್ರಿಯೊಳ್
ನಲವಿಂ ರೇಚಣ ಮಂತ್ರಿಯಾರ್ಗ್ಗಮಧಿಕಂ ಸಾಹಿತ್ಯ ವಿಧ್ಯಾಧರಂ
||

ತನ್ನ ವಾಜಿವಂಶದ ಅಜ್ಜ ಮುತ್ತಜ್ಜರು ನೆತ್ತರು ಹರಿಸಿ ತಳಪಾಯವಾಗಿ ನಿಂತು ಕಟ್ಟಿದ ಚಾಳುಕ್ಯ ಸಾಮ್ರಾಜ್ಯವು ಸ್ವಧರ್ಮವಾದ ಜಿನಧರ್ಮಕ್ಕೆ ಮೊದಲಿನ ಅಕ್ಕರೆ, ಆದ್ಯತೆ, ಪ್ರಭು ಶಕ್ತಿಯನ್ನು ಧಾರೆಯೆರೆಯುತ್ತಿಲ್ಲವೆಂಬುದನ್ನು ರೇಚಣನು ಸೂಕ್ಷ್ಮವಾಗಿ ಗ್ರಹಿಸಿದನು.

ರೇಚಣನು ಯಕ್ಷರಾಜನಂತೆ ತೌರೂರಿನ ಸೀಮೆಯನ್ನು ತೊರೆಯಲಿಲ್ಲ. ಅದರ ಬದಲಿಗೆ ತನ್ನ ಹಿರಿಯರು ದಲ್ಲಪಾದಿಗಳು ಉಪಯೋಗಿಸಿದ ರಾಜಕೀಯ ಕೌಶಲವನ್ನು ಬತ್ತಳಿಕೆಯಿಂದ ಹೊರತೆಗೆದನು. ದಲ್ಲಪನು ತೈಲಪನಿಗೆ ಹುರುದುಂಬಿಸಿ ರಾಷ್ಟ್ರಕೂಟರಿಗೆ ಪ್ರತಿಸ್ಪರ್ಧಿಯಾಗಿ ನಿಲ್ಲಿಸಿ ಗೆಲ್ಲಿಸಿದನು. ಹೊಯ್ಸಳ ಸಾಮ್ರಾಜ್ಯದ ಉದಯಕ್ಕೆ ಕಾರಣನಾದನು. ಅದೇ ತೆರನಾಗಿ ಈಗ ದಲ್ಲಪನ ಅನಂತರ ಆರನೆಯ ತಲೆಮಾರಿಗೆ ಸೇರಿದ ರೇಚಣನು ರಾಜಕೀಯದ ದಾಳಗಳನ್ನು ಉರುಳಿಸಿದನು. ಮಹಾತ್ವಾಕಾಂಖ್ಶೆಯಾಗಿದ್ದು ಚಾಳುಕ್ಯ ಸಿಂಹಾಸನದ ಮೇಲೆ ಹದ್ದುಗಣ್ಣು ಬೀರುತ್ತಿದ್ದ ಬಿಜ್ಜಣನನ್ನು ಹುರಿದುಂಬಿಸಿದನು. ರೇಚಣ್ಣನ ಸಾಮರ್ಥ್ಯ ತನ್ನ ಬೆಂಬಲಕ್ಕೆ ದಕ್ಕಿದೊಡನೆ ಬಿಜ್ಜಳನು ಕಾರ್ಯೋನ್ಮುಖನಾಗಿ ರಾಜ ಗದ್ದುಗೆ ಹತ್ತಿ ಕುಳಿತನು: [ಎ.ಕ. ೭-೧, ಶಿಕಾರಿಪುರ ೧೮೭, ೧೧೮೦, ಚಿಕ್ಕಮಾಗಡಿ]

ಕ್ರಮದಿಂದಾ ಬಿಜ್ಜಲೋರ್ವ್ವೀ ಪತಿಗೆ ಪಡೆದು ಸಪ್ತಾಂಗ ಸಂಪತ್ತಿಯಂ ಮ
ತ್ತಮದಂ ತಚ್ಛಕ್ರಿಯಿಂದತ್ತಲುಮೊದವಿದ ರಾಜಾವಳೀ ಲೀಲೆಗಂ ತಂ
ದುಮಿದೇ ಸಪ್ತಾಂಗಮಂ ಕಾಣಿಸಿದನೆನೆ ಜಗಂ ಮಂತ್ರದಿಂ ತಂತ್ರದಿಂ ವಿ
ಕ್ರಮದಿಂ ಶ್ರೀಯಿಂ ಸದಾಚಾರದಿನೊಸೆದಂ ರೇಚೆದಣ್ಣಾಧಿನಾಥಂ
||

            ಕಳಚುರ್ಯ್ಯ ಕ್ಷಿತಿಪಾಳ ರಾಜ್ಯಲತೆ ಪರ್ವ್ವಲ್ತನ್ನ ದೋ: ಶಾಖೆಯಂ
ವಿಳಸನ್ಮಂದರ ಸಾನುಗಂ ವಿಬುಧ ಸೇವ್ಯಂ ವಿಸ್ತ್ರಿತ ಚ್ಛಾಯನ
ಸ್ಖಳಿತೌದಾರ್ಯ್ಯ ವಿಳಾಸಭಾಸಿ ಸುಮನ ಸ್ಸಂಪೂರ್ಣ್ನನುದ್ಯದ್ಯಶ:
ಫಳದಿಂ ರೇಚಣ ದಣ್ಡನಾಥನೆಸೆದಂ ಲೋಕೈಕ ಕಳ್ಪದ್ರುಮಂ
||

ರೇಚಣನು (ರೇಚರಸ, ರೇಚವಿಭು, ರೇಚಿದಂಡನಾಥ) ಕಳಚುರ್ಯ್ಯರ ಆಹವಮಲ್ಲನ (೧೧೮೦-೮೩) ಮಹಾಪ್ರಧಾನನೂ, ಬಾಹತ್ತರ ನಿಯೋಗಾಧಿಪತಿಯೂ, ದಂಡಾಧಿನಾಥನೂ ಆಗಿದ್ದನೆಂಬುದನ್ನು ಮಾತ್ರ ವಿದ್ವಾಂಸರು ಗಮನಿಸಿದ್ದಾರೆ. ಆದರೆ ರೇಚನು ಅದಕ್ಕೂ ಎರಡು ದಶಕಗಳಷ್ಟು ಮುಂಚಿನಿಂದಲೂ ಕಲಚುರಿ ಕುಲದ ಸಂವರ್ಧನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದನು. ಇಮ್ಮಡಿ ಬಿಜ್ಜಳನಿಗೆ (೧೧೬೨-೬೭) ಸಪ್ತಾಂಗ (ಸ್ವಾಮಿ, ಅಮಾತ್ಯ, ಜನಪದ, ದುರ್ಗ, ಕೋಶ, ಸೈನ್ಯ, ಮಿತ್ರ) ಸಂಪತ್ತಿಯನ್ನು (ಪರಾ) ಕ್ರಮದಿಂದ ಪಡೆದುಕೊಟ್ಟವನೇ ರೇಚಣ ದಂಡನಾಯಕ.

ರೇಚಣನು ಬಿಜ್ಜಳನನ್ನು ಕಲಚುರಿವಂಶ ಚಕ್ರವರ್ತಿಯೆನಿಸಿ ಸಿಂಹಾಸನದಲ್ಲಿ ಕೂಡಿಸಿದನು; ದಲ್ಲಪನು ತೈಲಪನನ್ನು ಕುಳ್ಳಿರಿಸಿದಂತೆ. ಚಾಳುಕ್ಯರ ರಾಜಧಾನಿಯಾದ ಕಲ್ಯಾಣವನ್ನೇ ತಮ್ಮ ರಾಜಧಾನಿಯಾಗಿ ಮುಂದುವರಿಸಲು ಬಿಜ್ಜಳನಿಗೆ ರೇಚಣನು ಸೂಚಿಸಿದನು; ತೈಲಪನಿಗೆ ರಾಷ್ಟ್ರಕೂಟರ ರಾಜಧಾನಿಯಾದ ಮಳಖೇಡವನ್ನೇ ಮುಂದುವರಿಸಲು ವಿವೇಕ ಬೃಹಸ್ಪತಿ ದಲ್ಲಪನು ಸೂಚಿಸಿದಂತೆ. ಬಿಜ್ಜಳನಾದಮೇಲೂ ಆ ಕಲಚುರ್ಯ ರಾಜ್ಯವನ್ನು (ಮತ್ತಂ ಅದಂತತ್ ಚಕ್ರಿಯಿಂದತ್ತಲುಂ) ಅನಂತರ ಬಂದ ರಾಜರುಗಳ ಆಡಳಿತ ನಿರ್ವಹಣೆಗೂ (ಒದವಿದ ರಾಜಾವಳೀ ಲೀಲೆಗಂ) ರಾಜಾಡಳಿತದ ಏಳು ಅಂಗಗಳನ್ನು ದೊರೆಯುವಂತೆ (ಸಪ್ತಾಂಗಮಂ ಕಾಣಿಸಿದನೆನೆ) ರೇಚಣನು ಶ್ರಮಿಸಿದನು; ಮತ್ತು ರಾಜರಿಗೆ ಇರಬೇಕಾದ ರಹಸ್ಯಾಲೋಚನೆ, ಉಪಾಯ, ಮತ್ತು ಪರಾಕ್ರಮ ಎಂಬ ಮೂರು ಬಗೆಯ ಶಕ್ತಿಗಳಿಂದ, ಸಂಪತ್ತು ಮತ್ತು ಸನ್ನಡತೆಯಿಂದ ರೇಚಣನೂ ಶೋಭಿಸಿದನು.

ಕಳಚುರ್ಯಕುಲದ ರಾಜರ ರಾಜ್ಯವೆಂಬ ಬಳ್ಳಿಯು (ಕ್ಷಿತಿಪಾಳ ರಾಜ್ಯ ಲತೆ) ಹಬ್ಬುವುದಕ್ಕೆ. ರೇಚರಸನು ತನ್ನ ತೋಳುಗಳೆಂಬ ಕೊಂಬೆಗಳನ್ನು ಚಾಚಿದನು (ದೋಃ ಶಾಖೆಯಂ) ಎಂಬ ಮಹತ್ವದ ಹೇಳಿಕೆಯನ್ನು ಶಾಸನ ಸುಂದರವಾಗಿ ದಾಖಲಿಸಿದೆ.

ಬಿಜ್ಜಳ ರಾಜನ ಮಗಂದಿರಾದ ವಜ್ರದೇವ, ಸೋವಿ(ಯಿ)ದೇವ (೧೧೬೭-೭೬), ಮೈಲುಗಿ – ದೇವ – ಮಲ್ಲಿಕಾರ್ಜುನ (೧೧೭೬), ಸಂಕ(ಗ)ಮ (೧೧೭೬-೮೦), ಮತ್ತು ಆಹವಮಲ್ಲ (೧೧ಣ-೮೩), ಸಿಂಘಣ (೧೧೮೪) – ಇವರೆಲ್ಲರ ರಾಜ್ಯಾಡಳಿತಕ್ಕೆ ರೇಚಣನು ಸಹಾಯಕ ಸೇನಾಪತಿಯಾಗಿದ್ದನು. ರೇಚ ವಿಭುವೇ ಪರೋಕ್ಷ ಪ್ರಭು ವೆಂಬಂತೆ ಪ್ರಮುಖನಾಗಿದ್ದು ಕಳಚುರ್ಯ ಕ್ಷಿತಿಪಾಳರ ರಾಜ್ಯಲತೆ ದಾಂಗುಡಿಯಿಟ್ಟು ಪರ್ವಲು ಪ್ರೇರಕ ಶಕ್ತಿಯಾದನು. ಬಿಜ್ಜಳನ ಕಡೆಯ ಮಗನಾದ ಸಿಂಘಣನ ಕಾಲ ಮುಗುದೊಡನೆ (೧೧೮೪) ರೇಚಣನು ಕಲಚುರಿಗಳ ಆಸ್ಥಾನ ತೊರೆಯಬೇಕಾಯಿತು.

ಕಳಚುರ್ಯರನ್ನು ಹೊಯ್ಸಳ ವೀರಬಲ್ಲಾಳನು (೧೧೭೩-೧೨೨೦) ಕ್ರಿ.ಶ. ೧೧೮೪ ರ ವೇಳೆಗೆ ಸಂಪೂರ್ಣವಾಗಿ ಸೋಲಿಸಿದನು. ರೇಚಣನು ಕೆಲವು ವರ್ಷಗಳವರೆಗೆ ಲೌಕಿಕ ಅಧಿಕಾರ ರಹಿತನಾಗಿದ್ದನು. ರಣರಂಗ ದರ್ಶನ ಬಿಟ್ಟು ಧರ್ಮ ಕ್ಷೇತ್ರಕ್ಕೆ ಅಭಿಮುಖನಾದನು. ಆದರೆ ರೇಚಣನು ಅನುಭವದ ಭಂಡಾರದ ಸದುಪಯೋಗ ಆಗಬೇಕೆಂಬ ಕಾಂಕ್ಷೆಯಿಂದ, ಪ್ರಾಯ: ಈತನ ಬಂಧುವಾದ ಹುಳ್ಳ ಭಂಡಾರಿಯ ಸೂಚನೆಯನ್ನು ಅನುಸರಿಸಿ, ರೇಚಣನನ್ನು ಹೊಯ್ಸಳ ಸಾಮ್ರಾಜ್ಯದಲ್ಲಿ ಮಂತ್ರಿಯಾಗಿ ಶ್ರೀಕರಣಾಧಿಕಾಯಾಗಿ ನೇಮಿಸಲಾಯಿತು. ಯಾವ ಹೊಯ್ಸಳರೊಡನೆ ಐದಾರು ವರ್ಷದ ಹಿಂದೆಯಷ್ಟೇ ಎದುರಾಳಿಯ ಪಡೆಯನಾಯಕನಾಗಿ ನಿಂತು ಹೋರಾಟ ಮಾಡಿದ್ದನೊ ಅದೇ ಹೊಯ್ಸಳರಲ್ಲಿಯೇ ಓಲಗಿಸಿ ಬಾಳುವಂತಾಯಿತು; ಇದರಿಂದ ರೇಚಣನಿಗೆ ತೇಜೋವಧೆಯೇನೂ ಆಗಲಿಲ್ಲ, ತಕ್ಕ ಸ್ಥಾನಮಾನಗಳು ಲಭ್ಯವಾದುವು. ಹೊಯ್ಸಳ ವೀರಬಲ್ಲಾಳನಲ್ಲಿ, ರೇಚಣನು ತನ್ನ ಆಯಸ್ಸಿಗೆ ಉತ್ತರಾರ್ಧವನ್ನು ಕಳೆದನು. ಸು. ೧೧೮೮ ರಿಂದ ೧೨೨೦ ರವರೆಗೆ, ವೀರ ಬಲ್ಲಾಳನ ಆಳ್ವಿಕೆ ಮುಗಿಯುವವರೆಗೆ ಹೊಯ್ಸಳ ರಾಜ್ಯಕ್ಕೆ ದುಡಿದಂತೆ ತೋರುತ್ತದೆ.

ಕಳಚುರ್ಯರು ಸು. ೧೧೫೮ ರಿಂದ ೧೧೮೪ ರವರೆಗೆ, ಸುಮಾರು ೨೬ ವರ್ಷ ಆಳಿದರು. ಇಷ್ಟೂ ವರ್ಷ ಸಾದ್ಯಂತವಾಗಿ ಅದರ ಭಾಗವಾಗಿದ್ದವನು ರೇಚಣದಂಡಾಧಿಪತಿ. ಈ ಸಂಗತಿಯು ಅನುಮಾನಕ್ಕೆ ಎಡೆಯಿಲ್ಲದಷ್ಟು ಸುಸ್ಪಷ್ಟವಾಗಿ ಶಾಸನದಲ್ಲಿದೆ. ರೇಚಣನು ಕಳಚುರ್ಯರ, ಕಡೆಯ ಬಲಿಷ್ಠ ರಾಜನಾದ ಆಹವಮಲ್ಲನ ಕಾಲದಲ್ಲಿ ಮೂರು ಅಧಿಕಾರಗಳನ್ನು ಹೊಂದಿದ್ದನು. ಆಹವಮಲ್ಲನ ಮಹಾಪ್ರಧಾನನೂ, ಬಾಹತ್ತರ ನಿಯೋಗಾಧಿಪತಿಯೂ, ದಂಡಾಧಿನಾಥನೂ ಆಗಿದ್ದ ರೇಚಣನು ಅದೇ ಅವಧಿಯಲ್ಲಿ ನಾಗರಖಂಡಕ್ಕೆ ಅಧಿಪತಿಯಾಗಿ ಆಳುತ್ತಿದ್ದನು: [ಎ.ಕ. ೭-೧, ೧೯೭, ೧೧೮೦]

ತರದಿಂ ದೇಶಂಗಳುಂ ಶ್ರೀ ಕಳಚುರಿಕುಳ ಚಕ್ರೇಶರಿಂ ಪೆತ್ತುದೀ ನಾ
ಗರ ಖಣ್ಡಕ್ಕರ್ತ್ಥಿವಟ್ಟಾ ನೃಪರೊಲ್ಪಡೆದಿಂಬಿಂದಾವಾಳ್ದಿರ್ಪ್ಪನಾ ರೇ
ಚರಸಂ ತಾನೆಂದೊಡೇ ವಣ್ನಿಪುದೊ ನಿಸದವೀದೇಶದೊಂದೊಳ್ಮೆಯಂ ಬಿ
ತ್ತರದಿಂ ಪಂಕೇಜ ರೂಪಂ ಬನವಸೆಯದಱೊಳ್ ಶ್ರೀಯವೋಲಿರ್ಪ್ಪುದೆಂಬೆಂ
||

ಬನವಾಸಿ ದೇಶವು ವಿಸ್ತಾರವಾದ ತಾವರೆ ಹೂವಿನಂತಿದ್ದರೆ, ಅದರೊಳಗೆ ನಾಗರಖಂಡವು ಲಕ್ಷ್ಮಿಯ ಹಾಗಿದ್ದಿತು. ಈ ನಾಗರ ಖಂಡವನ್ನು ಕಳಚುರಿಕುಳದ ಚಕ್ರೇಶರು ವಶ ಪಡಿಸಿಕೊಂಡಿದ್ದ ಅವಧಿಯಲ್ಲಿ ಆ ಪ್ರದೇಶದ ಮೆಲ್ವಿಚಾರಣೆಯ ಹೊಣೆಯನ್ನು ಕಲಿ ರೇಚಣ ದಂಡನಾಯಕನಿಗೆ ವಹಿಸಲಾಗಿತ್ತು. ವಸುಧೈಕ ಬಾಂಧವ ಎಂಬ ಬಿರುದನ್ನು ರೇಚಣನಿಗೆ ಇತ್ತವರು ಕಳಚುರಿ ಚಕ್ರವರ್ತಿಗಳು; ಕಳಚುರ್ಯ ಸಾಮ್ರಾಜ್ಯವೆಂಬ ವಸುಧೆಗೆ ಒಬ್ಬನೇ ಮಹಾವೀರನಾದ ಬಾಂಧವನೆನಸಿ ನೆಗಳುತ್ತಿದ್ದುದರಿಂದಾಗಿ ಸಹಜವಾಗಿಯೇ ಈ ಪ್ರಶಸ್ತಿ ಪ್ರಾಪ್ತವಾಗಿದೆ. ‘ವಸುಧೈಕ ಬಾಂಧವ’ ಬಿರುದಾಂಕಿತನಾದ ರೇಚಣ ದಂಡಾಧೀಶ್ವರನಿಗೆ ನಾಗರ ಅದು ಆತನ ಜನ್ಮ ಸ್ಥಳವಾದ ಲಕ್ಕುಂಡಿಗೆ ಸಮೀಪದಲ್ಲಿ ಇದ್ದುದು.

ರೇಚಣನಿಗೆ ಆಪ್ತಮಂತ್ರಿಯಾಗಿದ್ದವನು ಬೊಪ್ಪ ಭೂಪ. ನಾಗರ ಖಂಡದ ಪರಿಸರವಷ್ಟೂ ಪ್ರಧಾನವಾಗಿ ಸವಣರ ಶಿಷ್ಯ ಸಂಪತ್ತಿನಿಂದ ಕೂಡಿತ್ತು. ನಾಳ್ಗಾವುಂಡ ನಾಗಾರ್ಜುನ, ನಾಳ್ಗಾವುಂಡಿ ಜಕ್ಕಿಯಬ್ಬೆ ಮೊದಲಾದವರು ಇಲ್ಲಿ ಸವಣರ ಅಹಿಂಸಾ ಸಂದೇಶದ ಕಾಳುಗಳನ್ನು ಬಿತ್ತಿ ಬೆಳೆ ತೆಗೆದಿದ್ದರು [ಎ.ಕ. ೮, ಸೊರಬ ೨೩೪, ೧೦೦೦, ಹಿರೇಚವುಟ (ರಾಜಿ . ಸೊರಬ ತಾ.)]

ಅದರ ಕೂಂಡಿ ಹಿಡಿದು ಹೊರಟ ರೇಚಣನೂ ಬೊಪ್ಪನೂ ನಿಷ್ಠಾವಂತ ಜೈನರಾಗಿದ್ದರು. ಆಡಳಿತಾತ್ಮಕ ಗಂಟಿನೊಂದಿಗೆ ಧಾರ್ಮಿಕ ನಂಟೂ ಇತ್ತು. ಅಂಡುವರ ವಂಶದ ಬೊಪ್ಪನು ಚಿಕ್ಕಮಾಗಡಿ ಸಾಮಂತರ ಕುಟುಂಬದವನು; ಶಾಸನೋಕ್ತ ಆಧಾರಗಳಿವೆ.

ರೇಚಣನ ಆಪ್ತ ಮಂತ್ರಿಯಾದ ಬೊಪ್ಪನು ದಾನಿ, ವೀರ ಮತ್ತು ಉದಾತ್ತ ಜಿನಭಕ್ತ. ಬೊಪ್ಪನ ರಾಜಧಾನಿ ಬಾಂಧವಪುರ: ಅಲ್ಲಿ ಶಾಂತಿನಾಥ ಚೈತ್ಯಾಳಯವಿತ್ತು. ಅದರ ಸ್ಥಾನಾಚಾರ್ಯರು ಭಾನುಕೀರ್ತಿ ಸಿದ್ಧಾಂತರು ಮತ್ತು ಅವರ ಶಿಷ್ಯರಾದ ನಯಕೀರ್ತಿ ಬ್ರತಿನಾಯಕರು. ಸಾಮಂತ ಶಂಕರನು ಕ್ರಿ.ಶ. ೧೧೭೮ ರಲ್ಲಿ ಮಾಗುಡಿಯಲ್ಲೊಂದು ಜಿನಗೃಹವನ್ನು ಮಾಡಿಸಿದನು. ಭುವನೈಕ ಮಂಡನವೆನಿಸಿದ ಆ ಜಿನಾಲಯಕ್ಕೆ ಮುನಿವರನಾದ ಪ್ರಸಿದ್ಧ ಭಾನುಕೀರ್ತಿಸಿದ್ಧಾಂತಿಯು ಉತ್ತಮ ತಳವೃತ್ತಿಯನ್ನಿತ್ತನು. ಅದೇ ವೇಳೆಗೆ ಸರಿಯಾಗಿ ಕಳಚುರ್ಯ ಚಕ್ರವರ್ತಿಯಾದ ಸಂಕಮದೇವ ಚಕ್ರಿಯು (೧೧೭೬-೮೦), ಹೊಯ್ಸಳರ ಬಲ್ಲಾಳ ಭೂಪಾಳನನ್ನು ತನ್ನ ಪದಾಬ್ಜ ಸೇವೆಗೆ ತರಬೇಕೆಂದು ಶೌರ್ಯಾವಷ್ಟಂಬದಿಂದ ತನ್ನ ಸೈನ್ಯ ಮತ್ತು ದಂಡನಾಯಕರ ಸಮೇತ ನಡೆತಂದು ತಾಳಗುಂದ ನಡೆವೀಡಿನಲ್ಲಿ ಹಲವು ದಿವಸಗಳ ವರೆಗೆ ಬೀಡು ಬಿಟ್ಟಿದ್ದನು.

ಕಳಚುರ್ಯರ ಸಂಕಮದೇವನ ದಂಡಾಧಿಪತಿಗಳಲ್ಲಿಯೇ ಪ್ರಧಾನನಾದ ರೇಚಣ ದಂದಾಧೀಶ್ವರನು ಸಹ ತನ್ನ ಚಕ್ರವರ್ತಿಯೊಂದಿಗೆ ತಾಳಗುಂದದಲ್ಲಿದ್ದನು. ಆ ಸಮಯದಲ್ಲಿ ಚಿಕ್ಕಮಾಗಡಿಯಲ್ಲಿ ಕಟ್ಟಿಸಲಾದ ಹೊಸಬಸದಿಯ ಜಿನೇಶ್ವರನ ಪದಾಭಿವಂದನೆಗೆಂದು ತಾಳಗುಂದದಿಂದ ರೇಚಣನೂ ಆಗಮಿಸಿದನುಃ

ಬನ್ದುಜಿನೇಶ್ವರ ಪದಮಂ
ಬನ್ದಿಸಿ ಜಿನಮುನಿ ಪದಾಂಬುಜಕ್ಕೆಱಗಿ ಜಿನೋ
ನ್ಮನ್ದಿರಮಂ ನೋಡಿ ದೃಢಾ
ನನ್ದಂ ವಸುಧೈಕ ಬಾನ್ಧವಂ ಬಣ್ನಿಸಿದಂ
||      [ಅದೇ : ಸಾಲು ೯೪]

ಅಂತು ಪೊಗಳ್ದು ತ್ರಿಭೋಗಾ
ಭ್ಯಂತರವಾಗಿರ್ದ್ದ ತಳವೆಯಂ ಸರ್ವ್ವನಮ
ಶ್ಯಂ ತೇಜೋ ಸಾಮ್ಯ ಸಮೇ
ತಂ ತಜ್ಜಿನ ಪೂಜೆಗೆನ್ದು ಪರಿಕಲ್ಪಿಸಿದಂ
||

ರೇಚಣನೊಂದಿಗೆ ಬೊಪ್ಪ ಭೂಪನೂ, ಶಂಕರ ಸಾಮಂತನೂ ಬಮ್ದರು ಮಾಗುಡಿಯ ಬಸದಿಯಲ್ಲಿ ರೇಚಣನು ಪೂಜೆ, ಮುನಿವಂದನೆ ಮಾಡಿ, ನೂತನ ಜಿನಗೃಹವನ್ನು ಶ್ಲಾಘಿಸಿ, ಹೊನ್ನು ಮನೆ ಸಹಿತ ತೆರಿಗೆಗಳನ್ನು ಬಿಟ್ಟುಕೊಟ್ಟನು.

ಮುಂದೆ ಮತ್ತೆ ಕ್ರಿ.ಶ. ೧೧೮೦ ರಲ್ಲಿ, ಆಗ ಕಳಚುರ್ಯ ಮಹಾರಾಜನಾಗಿದ್ದ ಆಹವಮಲ್ಲನು ದಕ್ಷಿಣಕ್ಕೆ ಬಂದು, ಮೊದೆಗನೂರು ನೆಲೆವೀಡಿನಲ್ಲಿ ಬೀಡು ಬಿಟ್ಟಿದ್ದನು. ಆಹವಮಲ್ಲನಿಗೆ ಲಕ್ಷ್ಮಣ ಚಂದಣ ರೇಚಣ ಸೋವಣ ಚಾವಣ ಎಂಬ ಐವರ ಸಚಿವ ಸಂಪುತವಿದ್ದಿತು. ಇವರಲ್ಲಿ ರೇಚಣನು ಮಹಾಪ್ರಧಾನನೂ ಬಾಹತ್ತರ ನಿಯೋಗಾಧಿಪತಿಯೂ ಆಗಿದ್ದನು [ಸಂಸ್ಕೃತ : ದ್ವಿಸಪ್ತತಿ, ಪ್ರಾಕೃತ : ಬಾಹತ್ತರ] ಬಾಹತ್ತರ ನಿಯೋಗವೆಂದರೆ ಅರಮನೆಯ ರಾಜರಾಣಿಯರಿಗೆ ಎಪ್ಪತ್ತೆರಡು ಬಗೆಯ ಸೇವೆ ಮಾಡುವವರ ಸಮೂಹ; ಈ ಸೇನಾ ಸಮೂಹಕ್ಕೆ ಮುಖ್ಯಸ್ಥನಾಗಿ ನಿಯಮಿತನಾದ ಅಧಿಕಾರಿಯನ್ನು ‘ಬಾಹತ್ತರ ನಿಯೋಗಾಧಿಪತಿ’ ಎಂದು ಕರೆಯುತ್ತಾರೆ [ಎ.ಇ. ೧೫, ೮೦.೧೦೬೦ : ಸೌ.ಇ.ಇ. ೯-೧, ೩೧೭.೧೨೨೩. ಕೋಗಳಿ (ಬಳ್ಳಾರಿ ಜಿ./ಹಡಗಲಿ) ಪು. ೩೩೨] ಮಹಾ ಪ್ರಚಣ್ಡ ದಣ್ಡ ನಾಯಕನಾದ ಈ ರೇಚಿದೇವರಸನು ಮಾಗುಂಡಿಯಲ್ಲಿನ ರತ್ನತ್ರಯ ಬಸದಿಯ ಆಚಾರ್ಯರಾದ ಭಾನುಕೀರ್ತಿ ಸಿದ್ಧಾಂತಿ ದೇವರನ್ನು ಮೊದೆಗನೂರಿಗೆ ಬರಮಾಡಿಕೊಂಡನು. ಸಮಧಿಗತ ಪಂಚಮಹಾಶಬ್ದನೂ, ಮಹಾಮಂಡಳೇಶ್ವರನೂ, ಬನವಾಸಿ ಪುರ ವರಾಧೀಶ್ವರನೂ, ಪದ್ಮಾವತೀ ದೇವೀ ಲುಬ್ಧವರ ಪ್ರಸಾದನೂ ಆದ ಬೊಪ್ಪದೇವನು ತ್ರಿಭೋಗಾಭ್ಯಂತರ ವಿಶುದ್ಧಿಯಿಂದ ಸರ್ವಬಾಧಾ ಪರಿಹಾರವಾಗಿ ಸರ್ವನಮಶ್ಯವಾಗಿ ಹಳ್ಳಿಯನ್ನೂ ತಳವೃತ್ತಿಯನ್ನೂ (ಬಾಡಂ ತಳವೆಯಂ) ಈ ಮೊದಲೇ ಏರ್ಪಾಟು ಮಾಡಿದ್ದನು. ಅದನ್ನು ರೇಚಣನು ಕ್ರಿ.ಶ. ೧೧೮೦ ರಲ್ಲಿ ಶುದ್ಧ ಪಂಚಮಿ ಬುಧವಾರದ ದಿವಸ, ರತ್ನತ್ರಯದೇವರ ಅಭಿಷೇಕಾದಿ ಅಂಗರಂಗ ಭೋಗಕ್ಕೂ, ಋಷಿಯರ ಆಹಾರ ದಾನಕ್ಕೂ, ವಿದ್ಯಾರ್ಥಿಗಳ ಸುಅಕರ್ಯಕ್ಕೂ, ಖಣ್ಡ ಸ್ಫುಟಿತ ಜೀರ್ಣೋದ್ಧಾರಕ್ಕೂ ಕೊಟ್ಟನು.

ಮೂಲಸಂಘ ಕ್ರಾನೂರ್ಗಣದ ತಿಂತ್ರಿಕ ಗಚ್ಛದ, ನುನ್ನವಂಶದ ಭಾನುಕೀರ್ತಿ ಸಿದ್ಧಾಂತದೇವರ ಪಾದ ತೊಳೆದು ರೇಚಣ ಮಹಾಪ್ರಧಾನನು ದಾನವನ್ನು ಪ್ರದಾನ ಮಾಡಿದನು ಮತ್ತು ಕಾವ್ಯ ಕಳಾಧರ ಎನಿಪ ಮುರಾರಿ ಕೇಶವದೇವನಿಗೆ ಈ ಧರ್ಮ ಪ್ರತಿ ಪಾಲನೆಯ ಹೊಣೆಯನ್ನು ವಹಿಸಿದನು. ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನಲ್ಲಿ ಇರುವ ಚಿಕ್ಕಮಾಗಡಿ ಗ್ರಾಮದ ಚನ್ನಬಸವಣ್ಣನ ಗುಡಿಯು ಹಿಂದೆ ಜೈನರ ಬಸದಿಯಾಗಿತ್ತು. ಈ ದೇವಸ್ಥಾನದ ಮುಂದೆ ನೆಟ್ಟಿರುವ ದೊಡ್ಡ ಕಲ್ಲಿನ ಮೇಲೆ ಕೆತ್ತಲಾಗಿರುವ ಸುದೀರ್ಘವಾದ ಶಾಸನವು ಚಾರಿತ್ರಿಕ ಮಹತ್ವದ ಸಂಗತಿಗಲನ್ನು ಒಳಗೊಂಡಿದೆ. ಈ ಶಾಸನದ ಕೆಲವು ಮಹತ್ವಾಂಶಗಳನ್ನು ಹೀಗೆ ಕ್ರೋಢೀಕರಿಸಬಹುದು:

೧. ರೇಚಣನ ಬಗೆಗೆ ಸಿಗುವ ಅಪರೂಪದ ವಿವರಗಳು

೨. ಚಾಳುಕ್ಯಚಕ್ರವರ್ತಿಗಳ ರಾಜಾವಳಿ

೩. ಕಳಚುರ್ಯ ಚಕ್ರಿಗಳ ರಾಜಾವಳಿ; ಬಿಜ್ಜಳನ ತಮ್ಮ ಮೈಳುಗಿ ದೇವನ ವಿಚಾರ

೪. ಕಳಚುರ್ಯಕುಲ ಸ್ಥಾಪನೆಯಲ್ಲಿ ರೇಚಣ ದಂಡಾಧೀಶನ ವಿಶಿಷ್ಟ ಪಾತ್ರ

೫. ಸಂಕಮದೇವನು ಹೊಯ್ಸಳ ಬಲ್ಲಾಳನ ಮೇಲೆ ದಂಡೆತ್ತಿ ಬಂದು ತಾಳಗುಂದದಲ್ಲಿ ಹಲವು ಕಾಲ ತಂಗಿದ್ದುದು

೬. ಕಲಚುರಿ ಕುಲದ ಸಂಕದೇವ ಚಕ್ರಿಯ ದಂಡಾಧೀಶ್ವರನಾದ ರೇಚಣನು ಮಾಗುಂಡಿ (ಮಾಗುಡಿ – ಮಾಗಡಿ – ಚಿಕ್ಕ ಮಾಗಡಿ) ಗೆ ಬಂದುದು

೭. ಚಿಕ್ಕ ಮಾಗಡಿ ಸಾಮಂತರ ವಂಶಾವಳಿ

೮. ಮಹಾಮಂಡಲೇಶ್ವರ ಬನವಾಸಿ ಪುರವರಾಧೀಶ್ವರ ಬೊಪ್ಪದೇವನ ವಿಚಾರ

೯. ಶಾನ್ತಿನಾಥ ಬಸದಿ ಮತ್ತು ರತ್ನತ್ರಯ ಜಿನಾಲಯ

೧೦. ಭಾನು ಕೀರ್ತಿ ಸಿದ್ಧಾಂತದೇವನ ಪರಿಚಯ; ನುನ್ನ ವಂಶದ ಉಲ್ಲೇಖ.

೧೧. ಕ್ರಾನೂರ್ಗಣ ಗುರುಗಳು

೧೨. ವೃತ್ತ, ಕಂದ, ಗದ್ಯ ಮಿಶ್ರಿತ ಪುಟ್ಟ ಚಂಪೂ ಕಾವ್ಯವಾದ ಈ ಶಾಸನ ಕವಿಯ ಸೃಜನಶಕ್ತಿ ಮತ್ತು ಭಾಷಾಪ್ರೌಢಿಮೆಯ ಪರಿಚಯ. ಕನ್ನಡ ನಿಘಂಟಿನಲ್ಲಿ ಮುಖ್ಯ ಉಲ್ಲೇಖವಾಗಿ ಇನ್ನು ಮುಂದೆ ಹೊಸದಾಗಿ ಸೇರ್ಪಡೆಯಾಗಬೇಕಾದ ಅಪೂರ್ವ ಶಬ್ದಗಳ ಬಳಕೆಯಿದೆ. ನಡೆವೀಡು (ಪು. ೨೯೦. ಸಾಲು ೯೩) ತೇಜೋಸಾಮ್ಯ (ಸಾಲು ೯೫) ತಳವೆ (ಸಾಲು ೧೦೨) ಎಂಬ ಶಬ್ದಗಳು ಈಗ ಅಚ್ಚಾಗಿರುವ ನಿಘಂಟಿನಲ್ಲಿ ಇಲ್ಲ. ಈ ಮೂರೂ ಶಬ್ದಗಳಿಗೆ ಕ್ರಮವಾಗಿ ಅರ್ಥ : ನಡೆವೀಡು = ರಾಜ ಸೈನ್ಯದ ಪ್ರಯಾನ ಕಾಲದಲ್ಲಿ ಬಿಟ್ಟ ಬಿಡಾರ, ತೇಜೋಸಾಮ್ಯ = ಹೊನ್ನು ಮತ್ತು ಮನೆ ಸಹಿತರವಾಗಿ ಕೊಟ್ಟದಾನ. ತಳವೆ = ತಳವೃತ್ತಿ

ಮೇಲ್ಕಂಡ ಶಾಸನದಲ್ಲಿ ಎರಡು ಭಾಗಗಳಿವೆ ಎಂಬುದನ್ನೂ ಚರಿತ್ರಕಾರರು ಗಮನಿಸಿಲ್ಲ. ರೇಚಣನು ಕಳಚುರ್ಯರ ಆಹವಮಲ್ಲನಿಗೆ ಮಹಾಪ್ರಧಾನನೂ, ಬಾಹತ್ತರ ನಿಯೋಗಾಧಿಪತಿಯೂ ಆಗಿದ್ದನೆಂಬುದು ಶಾಸನದ ಉತ್ತರಾರ್ಧ. ರೇಚಣನು ಸಹ ತನ್ನ ಪೂರ್ವಜರಂತೆ ಮಹಾಸಾಹಸಿ, ಯುದ್ಧವೀರ ಮತ್ತು ನಿಷ್ಠಾವಂತನಾದ ಜಿನಭಕ್ತ. ಅವನ ರಣಶೌರ್ಯವನ್ನೂ ಔದರ್ಯ್ಯದ ಆಧಿಕ್ಯವನ್ನೂ ಶಾಸನಗಳು ಕೊಂಡಾಡಿವೆ:

ಅನುಪಮದಾನ ಶೌರ್ಯ ರಣ ಶೌರ್ಯ್ಯಮನೇವೊಗಳ್ದಪ್ಪೆನಾಂ ದ್ವಿಷ
ಜ್ಜನಪರೊಳೊಂದುವಚ್ಚರಸಿಯರ್ಗ್ಗೆ ಸಯಂಬರವಾಗೆ ಸಗ್ಗದೊಳ್
ಜನಿಯಿಸಿತಿಂದ್ರ ಭೂರುಹಕ್ಕೆ ತೋರಣದಿಂ ತವಿಲ್ಗೆಂಬುದೆಯ್ದೆ ಮೇ
ದಿನಿ ವಸುಧೈಕಬಾಂಧವಚಮೂಪತಿ ರೇಚಣನೇಂ ಕೃತಾರ್ತ್ಥನೋ
||           [ಸಾಲು ೩೩-೩೫]

            ಪೆಡೆವಣಿ ಶೇಷನಿಳ್ಸರಸಿಜೋದರನಂಬುಧಿಯೊಳ್ ಮೃಗಾಂಕವಂ
ದುಡುಪನೊಳದ್ರಿ ಜಾರ್ದ್ಧವಭವಾಂಗದೊಳಾ ಮದಲುಬ್ಧ ಭೃಂಗ ವಿ
ರ್ಪ್ಪಡೆ ದಿಗಿಭಂಗಳೊಲು ಕುಱುಪು ದೋರ್ಪ್ಪಿನೆಗಂ ಜಗಮಂ ಮುಸುಂಕಿತಿಂ
ಗಡಲೆನೆ ಕೀರ್ತ್ತಿ ರೇಚನೆಸೆದಂ ಜಸದಿಂ ವಸುಧೈಕ ಬಾಂಧವಂ
||       [ಸಾಲು ೩೫-೩೬]

ಕ್ರಿ.ಶ. ೧೧೮೦ ರ ವೇಳೆಗೆ ಆಗಲೇ ರೇಚಣನ ಧರ್ಮ ಪ್ರಾಯಣತೆ, ಸಾಹಿತ್ಯಾ ಸಕ್ತಿ, ಲೇಖಕರನ್ನು ಪ್ರೋತ್ಸಾಹಿಸುವ ಗುಣ – ಇವು ಕೀರ್ತಿಸಲ್ಪಟ್ಟಿದ್ದುವು:

ಜಿನನಂ ತಂನ ಮನಂ ಮನಃ ಪ್ರಕೃತಿಯಂ ಸದ್ವಿದ್ಯೆಯಾ ವಿದ್ಯೆಯಂ
ತನುವಂತಾತನುವಂ ವಿಳಾಸವದನುದ್ಯಲ್ಲಕ್ಷ್ಮಿಯಾ ಲಕ್ಷ್ಮಿಯಂ
ವಿನುತೌದಾರ್ಯವದಂ ಜಗಂ ಜಗಮನಿಂಬೀ ಕೀರ್ತ್ತಿಯಾಲಿಂಗಿಸ
ಲ್ಜನ ವಂದ್ಯಂ ವಿಭುರೇಚಿರಾಜನೆಸೆದಂ ಚಾರಿತ್ರ ರತ್ನಾಕರಂ
||                   [ಸಾಲು ೩೦-೩೧]

ಕವಿಸತಿ ಬಲ್ಮೆಗೋಲಗಿಸೆ ಕಾಮಿನಿಯರ್ಸ್ಸೊಬಗಿಂಗೆ ಸೋಲೆ ಬೇ
ಳ್ಪವರ್ಗ್ಗಳದಾರ ವೃತ್ತಿಗೊಲವಿಂ ನರಶಾಸನವಾಗೆ ರಾಜ್ಯಮು
ದ್ಭವದಿನಿಡರ್ಚ್ಚಿ ಜೈನ ಸಮಯಾಂಬುಧಿ ಕೀರ್ತ್ತಿ ಸುಧಾಂಶುವಿಂ ಪೊದ
ಳ್ಕೆವದೆಯೆ ರೇಚಿರಾಜನೆಸೆದಂ ಜಸದಿಂ ವಸುಧೈಕ ಬಾನ್ಧವಂ
||     [ಸಾಲು ೩೧-೩೧]

ಜೈನಶಾಸನಗಳನ್ನು ಜಿನಸ್ತುತಿಯಿಂದ ಆರಂಭ ಮಾಡುವುದು ವಾಡಿಕೆ. ಆದರೆ ಒಂದು ಸರ್ವಾಂಗ ಜೈನ ಶಾಸನವನ್ನು ಆರಂಭಿಸುವುದಕ್ಕೆ ಮೊದಲು, ರೇಚಣನನ್ನು ಒಂದು ವೃತ್ತ ಪದ್ಯದಲ್ಲಿ ಸ್ತುತಿ ಮಾಡಿ ಅನಂತರ ‘ಶ್ರೀ ಮತ್ ಪರಮಗಂಭೀರ ….’ ಎಂಬ ವಾಡಿಕೆಯ ಶ್ಲೋಕದಿಂದ ಮುಂದುವರಿಸಲಾಗಿದೆ. ಇದು ರೇಚಣನು ತನ ಸಮಕಾಲೀನ ಸಮಾಜದ ಮೇಲೆ ಬೀರಿದ್ದ ಗಾಢವಾದ ಪ್ರಭಾವವನ್ನು ಪ್ರತಿಫಲಿಸುತ್ತದೆ. ಆ ಚಂಪಕಮಾಲೆಯ ವೃತ್ತ ಪದ್ಯ ಹೀಗಿದೆ : [ಎ.ಕ. ೭-೧, ಶಿಕಾರಿಪುರ ೨೨೫, ೧೨೦೩ – ೦೪, ಚಿಕ್ಕಮಾಗಡಿ, ಪು. ೩೦೧]

ಕವಿನಿಹಸ್ತುತಂ ನೆಗಳ್ದ ರೇಚ ಚಮೂಪತಿಯಿಂ ಬಳಿಕ್ಕಮಾ
ಭುವನದೊಳಿಂತನಂತ ಜಿನಧರ್ಮ್ಮವನುದ್ಧರಿಪರ್ದ್ಧರೇಚನಂ
ಸುವಿದಿತಮಾಗೆ ಬಾಂಧವ ಪುರಾದಿಪ ಶಾನ್ತಿ ಜಿನೇಶ ತೀರ್ತ್ಥಮಂ
ಕವಡೆಯಬೊಪ್ಪನುದ್ಧರಿಸಿದಂ ಯದುವಲ್ಲಭ ರಾಜ್ಯಭೂಷಮಂ
||                      [ಸಾಲು ೧-೧೪]

ಈ ಪದ್ಯದಲ್ಲಿರುವ ಮತ್ತೊಂದು ಸ್ವಾರಸ್ಯವೆಂದರೆ, ರೇಚಣ ಚಮೂಪತಿಯ ತರುವಾಯ ಜಿನಧರ್ಮವನ್ನು ಉದ್ಧರಿಸಿದ ಕವಡೆಯ ಬೊಪ್ಪನನ್ನು ‘ಅರ್ಧರೇಚ’ ನೆಂದು ಕರೆಯಲಾಗಿದೆ. ರನ್ನಕವಿ, ಅಜಿತಪುರಾಣದಲ್ಲಿ ಒಂದು ಪದ್ಯದಲ್ಲಿ, ತನ್ನ ಕಾಲದವರೆಗೆ ಜಿನಧರ್ಮವನ್ನು ಪ್ರಭಾವಶಾಲಿಯನ್ನಾಗಿ ಮಾಡಿದ ಬೂತುಗ, ಮರುಳ, ಮಾರಸಿಂಹ, ಶಂಕರಗಂಡ, ಚಾವುಂಡರಾಯ ಮತ್ತು ಎಲ್ಲರಿಗೂ ಮಿಗಿಲಾಗಿ ಅತ್ತಿ ಮಬ್ಬೆ – ಇವರನ್ನು ಸ್ಮರಿಸಿದ್ದಾನೆ. ಅದೇ ಮಾದರಿಯಲ್ಲಿ ಅತ್ತಿಮಬ್ಬೆಯ ಮನೆತನದ ಕುಡಿಯಾದ ರೇಚಣನೂ ಕೂಡ ಧರ್ಮ ಪರಾಯಣನಾಗಿದ್ದು ಅನ್ಯರಿಗೆ ಆದರ್ಶ ಪ್ರಾಯನಾಗಿದ್ದನು.

ತನ್ನ ಮನೆತನವು ದೇವಾಲಯಗಳ್ ನಿರ್ಮಾಣಕ್ಕೆ ಸಹಾಯಮಾಡಿದಂತೆ ಸಾಹಿತ್ಯ ಸೃಷ್ಟಿಗೂ ನೆರವಾಗಿತ್ತೆಂಬುದನ್ನು ಅರಿತ ರೇಚಣನು, ಈ ಎರಡೂ ಕ್ಷೇತ್ರಗಲಲ್ಲಿ ತಾನೂ ಕ್ರಿಯಾಶೀಲನಾದನು. ಆಚಣ್ಣನೆಂಬ ಕವಿಗೆ ಆಶ್ರಯ ನೀಡಿದನು. ಆ ವೇಳೆಗಾಗಲೆ ಇಬ್ಬರು ಪ್ರಯತ್ನಿಸಿದರೂ ಮುಗಿಯದೆ, ಮುಂದುವರಿಯದೆ, ಅರೆಬರೆಯಾಗಿಯೇ ಉಳಿದಿದ್ದ ವರ್ಧಮಾನಪುರಾಣವನ್ನು ಸಮಗ್ರವಾಗಿ ಪುನರ್ ರಚಿಸಿ ವೂರೈಸುವಂತೆ ಆಚಣ್ಣ ಕವಿಗೆ ರೇಚಣನು ಆದೇಶಿಸಿದನು. ತನ್ನ ಆಶ್ರಯದಾತನ ಅಪೇಕ್ಷೆಯಂತೆ ರೇಚಣನು ವರ್ಧಮಾನ ಪುರಾಣವನ್ನು ಬರೆದು ಪೂರೈಸಿದನು. ಹದಿನಾರು ಆಶ್ವಾಸಗಳ ಈ ಚಂಪೂ ಕಾವ್ಯದಲ್ಲಿ ಆಚಣ್ಣ ಕವಿಯು ರೇಚಣನನ್ನು, ಕಾವ್ಯದ ಆರಂಭ ಹಾಗೂ ಅಂತ್ಯದ ಆಶ್ವಾಸಗಳಲ್ಲಿ, ಮುಕ್ತ ಕಂಠದಿಂದ ಶ್ಲಾಘಿಸಿದ್ದಾನೆ.ಅಲ್ಲದೆ ವರ್ಧಮಾನ ಜಿನರನ್ನೂ ರೇಚರಸನನ್ನೂ ಅಭೇದಗೊಳಿಸಿಸ್ತುತಿಸಿದ್ದಾನೆ; ಪ್ರತಿ ಆಶ್ವಾಸಾಂತ ಗದ್ಯದಲ್ಲಿಯೂ ಈ ಸೂಚನೆ ಸ್ಪಷ್ಟವಾಗಿ ವ್ಯಕ್ತ ಪಟ್ಟಿದೆ. ಕಾವ್ಯವನ್ನು – “ವಸುಧೈಕ ಬಾಂಧವ ಶ್ರೀ ವರ್ಧಮಾನ ಪುರಾಣ” ಎಂದು ಆಚಣ್ಣಕವಿ ನಾಮಕರಣ ಮಾಡಿದ್ದಾನೆ.

ಆಚಣ್ಣ ಕವಿ ರೇಚಣ – ದಂಡೇಶನನ್ನು ಪರಿಚಯಿಸಿದ್ದರೂ, ರೇಚಣನು ಈ ಕಾವ್ಯರಚನೆಯ ಅವಧಿಯಲ್ಲಿ ಯಾವ ರಾಜನ ಆಸರೆಯಲ್ಲಿ ಇದ್ದನೆಂಬುದನ್ನು ಸ್ಪಷ್ಟವಾಗಿ ನಮೂದಿಸಿಲ್ಲ. ವಸುಧೈಕ ಬಾಂಧವನಾದ ದಂಡನಾಥ ರೇಚರಸನ ಬಂಧುರ ಭಕ್ತಿಗೆ ಮೆಚ್ಚಿ. ಈ ಹಿಂದೆ ತನ್ನ (ಆಚಣ್ಣಕವಿಯ) ತಂದೆ ಕೇಶಿರಾಜನೂ (ಕೇಶಿಮಯ್ಯ ದಂಡ ನಾಯಕ) ಮತ್ತು ತೆಕ್ಕಣ – ಚಾಮಣರೂ ಸೇರಿ ಆರಂಭಿಸಿದ್ದ, ವರ್ಧಮಾನ ಪುರಾಣವನ್ನು ತಾನು (ಆಚಿವಿಭು) ಪೂರೈಸಿದುದಾಗಿ ಆಚಣ್ಣನು ನಿವೇದಿಸಿಕೊಂಡಿದ್ದಾನೆ. ಕಾವ್ಯದ ಒಳಹೊರಗಿನ ಸುಳಿವು ಈಗಾಗಲೇ ಎಳೆಗಳನ್ನು ಹಿಡಿದು ಕೂಡಿಸುವುದರ ಮೂಲಕ, ಇದರ ರಚನೆಯ ಕಾಲವನ್ನು ಈಗಾಗಲೇ ವಿದ್ವಾಂಸರು ಸರಿಯಾಗಿಯೇ ಗುರುತಿಸಿರುತ್ತಾರೆ; ಆಚಣ್ಣನು ಕ್ರಿ.ಶ. ೧೧೯೦ ರಲ್ಲಿ ವರ್ಧಮಾನ ಪುರಾಣವನ್ನು ಬರೆದು ಪೂರೈಸಿದ ಎಂಬುದನ್ನು ಅನುಮೋದಿಸಲು ಆತನು ರೇಚಣನನ್ನು ಪರಿಚಯಿಸಿರುವ ಕೆಳಕಂಡ ಪದ್ಯ ಸಹಾಯಕವಾಗಿದೆ:

ಶ್ರೀಕರಣಾಗ್ರಗಣ್ಯನಭಿಮಾನಿ ಜಿನೇಂದ್ರ ಮತಾಬ್ಜ ಭಾನು ಪು
ಣ್ಯಾಕರನರ್ಥಿ ಕಲ್ಪತರು ಭೋಗ ಪುರಂದರನಂಗಜೋಪಾಮಂ
ಭೀಕರ ವೈರಿ ವಾರಣ ವಿದಾರಣ ಕೇಸರಿ ಸತ್ಕಳಾಢ್ಯನ
ಸ್ತೋಕ ಯಶೋರ್ಥಿ ರೇಚವಿಭು ರಂಜಿಸಿದಂ ವಸುಧೈಕ ಬಾಂಧವಂ
||          (೧-೨೨)

ಕಳಚುರಿ ಚಕ್ರವರ್ತಿಗಳಲ್ಲಿ ರೇಚಣನು ಸೇನಾನಿ, ಮಹಾಪ್ರಧಾನಿ, ಬಾಹತ್ತರ ನಿಯೋಗಿ ಆಗಿದ್ದನು. ಕಳಚುರಿಗಳ ಅಳ್ವಿಕೆಯು ೧೧೮೪-೮೫ ರಲ್ಲಿ ಅಂತ್ಯವಾಯಿತು. ಅದಾದ ಕೆಲವು ವರ್ಷ ರೇಚಣನು ನಿರಧಿಕಾರಿಯಾಗಿದ್ದನು. ಕ್ರಿ.ಶ. ೧೧೮೮ ರ ವೇಳೆಗೆ ರೇಚಣನು ಹೊಯ್ಸಳ ಬಲ್ಲಾಳನಲ್ಲಿ ಶ್ರೀಕರಣನಾಗಿಯೂ ಮಂತ್ರಿಯಾಗಿಯೂ ಸೇರಿ ದ್ದನು. ಅದರಿಂದ ಈ ಕಾವ್ಯರಚನೆಯ ಕಾಲವು ೧೧೯೦ ಎಂಬುದು ಸಮಂಜಸವಾಗಿದೆ.

ವರ್ಧಮಾನಪುರಾಣವನ್ನೇ ಬರೆಸಲು ಒಂದು ವಿಶಿಷ್ಟವಾದ ಐತಿಹಾಸಿಕ ಕಾರಣವಿದೆ. ಈ ಕಾವ್ಯ ರಚನೆ ಆರಂಭವಾದದ್ದು ಕೇಶಿಮಯ್ಯನಿಂದ. ಕೇಶಿಮಯ್ಯನು ರೇಚಣನ ಆಪ್ತನೂ, ಧರ್ಮಬಂಧುವೂ ಆಗಿದ್ದುದಲ್ಲದೆ, ರೇಚಣ ನೊಂದಿಗೆ ಕಳಚುರ್ಯ್ಯ ಆಹವಮಲ್ಲನಲ್ಲಿ ದಂಡನಾಯಕನಾಗಿದ್ದನು, ಬನವಸೆನಾಡಿನ ಒಡೆಯ ನಾಗಿದ್ದನು. [ಎ.ಕ. ೭-೧. ಶಿಕಾರಿಪುರ ೧೧೯] ಕೇಶವರಾಜ (ಕೇಶಿಮಯ್ಯ)ನ ಹಿರಿಯ ಮಗನೇ ಕವಿ ಆಚಣ; ಕಿರಿಉಅಮಗನಾದ ಶಂಖನು ಪುಲಿಗೆಱೆಗೆ ಒಡೆಯಲಾಗಿದ್ದನು. ಕೇಶಿಮಯ್ಯ (ಕೇಶಿರಾಜ)ನು ಬನವಾಸಿಯನ್ನು ಆಳುತ್ತಿದ್ದಾಗ ನರಸಿಂಹ ನಾಯಕ, ತಿಕ್ಕರಾಜ, ಚಾಮಯ್ಯ, ಬಾಚಯ್ಯ, ಸೋವಿದೇವ, ದಾಸಿರಾಜ ಎಂಬುವರು ಸಚಿವರಾಗಿದ್ದರು. ಕೇಶವರಾಜನು (ಕೇಶಿಮಯ್ಯ) ತನ್ನ ಸಚಿವರಲ್ಲಿ ಇಬ್ಬರಾದ ತಿಕ್ಕಣ (ತಿಕ್ಕರಾಜ), ಚಾವಣ (ಚಾಮಯ್ಯ) ಇವರ ಸಾಹಾಯದಿಂದ ವರ್ಧಮಾನ ಪುರಾಣವನ್ನು ಅರಂಭಿಸಿದ್ದನು. ತನ್ನ ಸಹೋದ್ಯೋಗಿ ಕೇಶವರಾಜನು ಆರಂಭಿಸಿ, ನಿಂತು ಹೋಗಿದ್ದ ಕಾವ್ಯವನ್ನು ಆತನ ಮಗನಿಂದಲೇ ಪೂರೈಸಿಸಿದ ರೇಚಣನ ಮುನ್ನೋಟ ಮತ್ತು ಔಚಿತ್ಯ ಪ್ರಜ್ಞೆ ಶ್ಲಾಘ್ಯವಾದದ್ದು. [ಅದೇ : ಶಿಕಾರಿಪುರ.೧೨೩].

ಹೊಯ್ಸಳ ವೀರಬಲ್ಲಾಳನಲ್ಲಿ ಮಹಾಮಂತ್ರಿಯಾಗಿ, ರಾಜ್ಯದ ಆಯವ್ಯಯ ವನ್ನು ನೋಡಿಕೊಳ್ಳುವ ಶ್ರೀಕರಣಾಧಿಕಾರಿಯಾಗಿ ಸೇರಿದ ರೇಚಣನು ಅರಸೀಕೆರೆಯಲ್ಲಿ ಸಹಸ್ರಕೂಟ ಜಿನಾಲಯವನ್ನು ಕಟ್ಟಿಸಿದನು [ಎ.ಕ. ೫. ೬೯. ಅರಸೀಕೆರೆ (ಹಾಸನ ಜಿ/)]. ಆ ಬಸದಿಗೆ ಬಲ್ಲಳ ರಾಯನ ಅನುಮತಿಯ ಮೇರೆಗೆ ದಾನಗಳನ್ನು ನೀಡಿದನು. ಈ ಸಹಸ್ರಕೂಟ ಗೃಹ ನಿರ್ಮಾಣ ಹನ್ನೆರಡು ವರ್ಷಗಳ ವರೆಗೆ ನಡೆಯಿತು. ಕೊಲ್ಲಾಪುರದ ಮಾಘಣಂದಿ ಸಿದ್ಧಾಂತಿಯ ಶಿಷ್ಯ ಶುಭಚಂದ್ರ ತ್ರೈವಿದ್ಯರ ಶಿಷ್ಯರಾದ ಸಾಗರಣಂದಿ ಸಿದ್ಧಾಂತಿ ದೇವರು ರೇಚಣನ ಗುರುಗಳು. ಅವರು ಸಹಸ್ರಕೂಟ ಜಿನಾಲಯ ನಿರ್ಮಾಣ ಕಾರ್ಯವು ಪೂರೈಸುವವರೆಗೆ ಜೋಳದಕೂಳು ಮತ್ತು ಎಣ್ನೆಯ ಹೊರತಾಗಿ ಬೇರೆ ಆಹಾರವನ್ನು ತೆಗೆದುಕೊಳ್ಳಲಿಲ್ಲ. ಸಾಗರಣಂದಿ ಸಿದ್ಧಾಂತಿಯು ಆಸ್ಥೆಯಿಂದ ಮುಂದೆ ನಿಂತು ರೇಚಣದಂಡೇಶನಿಂದ ಸಹಸ್ರಕೂಟ ಜಿನಾಲಯವನ್ನು ಮಾಡಿಸಿದರು, ಪರಿಪೂರ್ಣ ವ್ರತರಾದರು. [ಅದೇ : ಸಾಲು ೧-೪]. ವಸುಧೈಕ ಬಾಂಧವ ರೇಚಣನೂ, ಆತನ ಮಡದಿ ಗೌರಾದೇವಿಯೂ ತಮ್ಮ ನೋಂಪಿಯ ಉದ್ಯಾಪನೆ ನಿಮಿತ್ತವಾಗಿ ಸಹಸ್ರಕೂಟ ಜಿನಾಲಯದ ಪ್ರತಿಷ್ಠಾಪನೆ ಕಾರ್ಯವನ್ನು ಧಾರಾ ಪೂರ್ವ ಕವಾಗಿ ಮಾಡಿಸಿಕೊಟ್ಟರು. [ಎ.ಕ. ೧೫. ಅರಸೀಕೆರೆ ೧೯೭. ಆತೇದಿ. ಶಾಸನ. ಪು. ೨೨]

ಕೊಲ್ಲಾಪುರದ ಮಾಘಣಂದಿ ಸಿದ್ದಾಂತಿಯ ಕಾಲ ತಿಳಿದಿದೆ. ಅವರು ಇದ್ದ ಕಾಲದ ನಡುಗಾಲ ಕ್ರಿ.ಶ. ೧೧೦೦ [ಎ.ಕ. ೨. ೭೧ (೬೪) ೧೧೬೩. ಪು. ೨೬-೨೮]. ಅವರು ತೇರದಾಳದ ಗೊಂಕ- ಜಿನಾಲಯದ ಪ್ರತಿಷ್ಠಾಪನೆಗೆ ೧೧೨೫ ರಲ್ಲಿ ಆಗಮಿಸಿದ್ದರು. [ಇ.ಆ. ೧೪. ಪು. ೧೪. ೧೧೨೫ ತೇರದಾಳ (ಬಿಜಾಪುರ ಜಿ./ ಜಮಖಂಡಿ ತಾ.) : ಎ.ಇ. ೧೯. pp ೩off. ೧೧೩೫] ಮಾಘಣಂದಿ ಸಿದ್ಧಾಂತಿಯ ಶಿಷ್ಯ ಶುಭಚಂದ್ರ ತ್ರೈವಿದ್ಯರ ಕಾಲಪೂ ೧೧೨೫ ರಿಂದ ೧೧೫೦ ಎಂದು ಗೊತ್ತಿದೆ. [ಎ.ಕ. ೨. ಆರೇಳು ಶಾಸನಗಳಲ್ಲಿ ಇದರ ಪರಿಚಯವಿದೆ] ಶುಭಚಂದ್ರ ತ್ರೈವಿದ್ಯರ ಶಿಷ್ಯರಾದ ಈ ಸಾಗರಣಂದಿ ಸಿದ್ಧಾಂತಿ ದೇವರ ಕಾಲವನ್ನು ಕ್ರಿ.ಶ. ೧೧೮೦ ಎಂದು ಪರಿಗಣಿಸಬಹುದು. ಇವರನ್ನು ಇಮ್ಮಡಿ ಸಾಗರಣಂದಿ, ಸಿದ್ಧಾಂತಿ ಮುನಿಯೆನ್ನ ಬೇಕಾಗುತ್ತದೆ. ಏಕೆಂದರೆ ಇವರಿಗಿಂತ ನೂರು ವರ್ಷದ ಹಿಂದೆ ಇನ್ನೊಬ್ಬ ಸಾಗರನಂದಿ ಸಿದ್ಧಾಂತಿ ಮುನಿಯೂ ಶಾಸನೋಕ್ತರಾಗಿದ್ದಾರೆ [ಎ.ಕ. ೭. (೧೯೭೯) ನಾಮಂ ೬೪. ೧೧೪೫. ಯಲ್ಲಾದಹಳ್ಳಿ (ಮಂಡ್ಯ ಜಿ./ ನಾಮಂ. ತಾ.)] ವಸುಧೈಕಬಾಂಧವ ರೇಚಣನು ಶ್ರವನಬೆಳಗೊಳ ಚಿಕ್ಕಬೆಟ್ಟದ ಪಕ್ಕದಲ್ಲಿರುವ ಜಿನನಾಥ ಪುರದಲ್ಲಿಯೂ ಜಿನಾಗಾರವನ್ನು ಮಾಡಿಸಿದ ವಿಚಾರವನ್ನು ಒಂದು ಶಾಸನ ದಾಖಲಿಸಿದೆ: ಶ್ರೀ ರೇಚಣಾ ಧಂಣಾಯಕಾ ಮಾಡಿಸಿದಾ ಭಸದಿ [ಎ.ಕ.೨, ೫೨೮.೧೨ ಶ. ಕು. ೩೨೫]. ಆ ಬಸದಿಯು ಕೊಲ್ಲಾಪುರದ ಸಾವನ್ತನ ಬಸದಿಯ ಪ್ರತಿಬದ್ಧವಾಗಿದ್ದಿತು. ಇಲ್ಲಿ ಶಾಂತಿನಾಥ ದೇವರ ಪ್ರತಿಷ್ಠೆಯನ್ನು ಮಾಡಿ, ಶ್ರೀಕರಣದ ರೇಚಿಮಯ್ಯ ದಣ್ಡ ನಾಯಕನು, ಅದನ್ನು ಸಾಗರಣಂದಿ ಸಿದ್ಧಾಂತಿ ದೇವರಿಗೆ ಕೊಟ್ಟನು. [ಎ.ಕ.೨, ೫೨೬(೩೮೦) ೧೩ ಶ. ಜಿನನಾಥಪುರ. ಪು. ೩೨೫]

ರೇಚಣನ ಜೀವಿತದ ಅವಧಿಯನ್ನು ಸ್ಥೂಲವಾಗಿ ಹೀಗೆ ಸೂಚಿಸಬಹುದು: ಜನನ ಕ್ರಿ.ಶ. ೧೧೩೫; ಬಿಜ್ಜಳನ ಸೈನ್ಯಕ್ಕೆ ಸೇರ್ಪಡೆ ೧೧೫೭; ರಾಯಮುರಾರಿ ಸೋವಿ ದೇವನ ದಂಡಾಧೀಶ ೧೧೬೮; ಮೈಲುಗಿದೇವ ಮಲ್ಲಿಕಾರ್ಜುನನ ದಂಡಾಧಿಪತಿ ೧೧೭೬; ಸಂಕಮನ ಸೇನಾಪತಿ ೧೧೭೭-೮೦; ಅಹವಮ್ಮಲನ ಮಹಾಪ್ರಧಾನಿ- ಚಮೂಪತಿ- ಬಾಹತ್ತರ ನಿಯೋಗಾಧಿಪತಿ ೧೧೮೦-೮೩; ಸಿಂಘಣನಲ್ಲಿ ಇದ್ದುದು ಖಚಿತವಾಗಿ ತಿಳಿಯದು; ಹೊಯ್ಸಳರ ಬಲ್ಲಾಳನಲ್ಲಿ ೧೧೮೮-೧೨೧೮; ದೀರ್ಘಕಾಲ ಬದುಕಿದ ರೇಚಮನು ಸುಮಾರು ೧೧೨೫ ರಲ್ಲಿ ನಿಧನನಾದಂತೆ ತೋರುತ್ತದೆ. ರೇಚಣನಿಗೆ ಇದ್ದ ಪ್ರಶಸ್ತಿಗಳು : ಅಂಗಜೋಪಮ, ಆರ್ಥಿಕ ಕಲ್ಪತರು. ಜಿನಮತಾಬ್ಜಭಾನು ಭೀಕರ ವೈರಿ ವಿದಾರಣ ಕೇಸರಿ, ಚಾರಿತ್ರ ರತ್ನಾಕರ. ಲೋಕೈಕ ಕಳ್ಪದ್ರುಮ, ಭೋಗ ಪುರಂದರ, ಮಿಕ್ಕಸುದಾನಿ, ವಸುಧೈಕ ಬಾಂಧವ, ಸತ್ಕಳಾಢ್ಯ ಮುಂತಾದ ಬಿರುದು ಬಾವಲಿಗಳಿಂದ ಪುರಸ್ಕೃತನಾಗಿದ್ದನು.

ರೇಚಣನ ಜೀವನದ ಸಾಧನೆಯಿರುವುದು ಹನ್ನೆರಡನೆಯ ಶತಮಾನದ ಉತ್ತರಾರ್ಧ ಮತ್ತು ಹದಿಮೂರನೆಯ ಶತಮಾನದ ಆರಂಭದ ಎರಡು ದಶಕಗಳಲ್ಲಿ. ಲಕ್ಕುಂಡಿ ಮತ್ತು ಅರಸೀಕೆರೆಯಲ್ಲಿ ದೇವಾಲಯಗಳನ್ನು ಕಟ್ಟಿಸಿದ್ದು, ಆಚಣ್ಣಕವಿಗೆ ಆಸರೆಯಾಗಿ ನಿಂತು ಚಂಪೂಕಾವ್ಯವನ್ನು ಬರೆಸಿದ್ದು – ಇವು ರೇಚಣನು ಎಸಗಿದ ಮುಖ್ಯ ಸಾಂಸ್ಕೃತಿಕ ಸಾಧನೆಗಳು. ಇವು ಆತನ ಧಾರ್ಮಿಕ ಪ್ರವೃತ್ತಿ ಮತ್ತು ಸಾಹಿತ್ಯದಲ್ಲಿ ಇದ್ದ ಆಸಕ್ತಿಯನ್ನು ಬಿಂಬಿಸುತ್ತವೆ. ಆದರೆ ರೇಚಣನು ಕಳಚುರ್ಯ ಸಾಮ್ರಾಜ್ಯದ ಉಗಮ – ಸಂವರ್ಧನೆಗೂ ಕಾರಣ ಪುರುಷನೆಂಬುದು ಚರಿತ್ರಕಾರರಿಗೆ ಮಹತ್ವದ ಸಾಧನೆ. ತನ್ನ ವಂಶ ಪಾರಂಪರ್ಯವಾಗಿ ದಲ್ಲಪನ ಕಾಲದಿಂದಲೂ ಸಂಚಿತವಾಗಿ ಬಂದಿದ್ದ ರಾಜ್ಯ ಶಾಸ್ತ್ರ ಪ್ರವೀಣತೆ, ಯುದ್ಧ ನೈಪುಣ್ಯಗಳನ್ನು ಧಾರೆಯೆರೆದು ಕಳಚುರ್ಯ ರಾಜ್ಯಲಕ್ಷ್ಮಿಯನ್ನು ಎರಡು ದಶಕಗಳ ವರೆಗೆ ಪೊರೆದನು. ಹೀಗಾಗಿ ಕರ್ನಾಟಕದ ರಾಜಕೀಯ, ಸಾಹಿತ್ಯಕ ಮತ್ತು ಸಾಂಸ್ಕೃತಿಕ ಇತಿಹಾಸದಲ್ಲಿ ರೇಚಣ ಚಮೂಪನು ಘನತರವಾದ ವ್ಯಕ್ತಿತ್ವದಿಂದ ಎದು ಕಾಣುತ್ತಾನೆ.