ಸಂಸ್ಕೃತದಲ್ಲಿ ರಚಿಸಲಾಗಿರುವ ಕ್ಷತ್ರಚೂಡಾಮಣಿ (ಜೀವಂಧರಚರಿತೆ), ಗದ್ಯ ಚಿಂತಾಮಣಿ (ಜೀವಂಧರ ಚರಿತೆ), ಸ್ಯಾದ್ವಾದ ಸಿದ್ಧಿ (ದರ್ಶನ ಗ್ರಂಥ) ಮೊದಲಾದ ಕೃತಿಗಳು ಸಾಕಷ್ಟು ಪ್ರಚಾರ ಪಡೆದಿವೆ. ಈ ಕಾವ್ಯ ಹಾಗೂ ಶಾಸ್ತ್ರ ಗ್ರಂಥಗಳನ್ನು ಕುರಿತು ವಿಮರ್ಶಿಸುವುದು ಈ ಸಂಪ್ರಬಂಧದ ಉದ್ದೇಶವಲ್ಲ. ಕೃತಿಕಾರ ಮತ್ತು ಕೃತಿಕಾರನ ಕಾಲ ಕುರಿತ ಪರಾಮರ್ಶೆಯಷ್ಟೇ ಈ ಸಂಪ್ರಬಂಧದ ಆಶಯ.

ಬಹಳ ಹಿಂದೆಯೇ ಈ ಕ್ಷತ್ರಚೂಡಾಮಣಿಯನ್ನು ಸಂಪಾದಿಸಿ ಪ್ರಕಟಿಸಿದ ಶಾಂತರಾಜೈಯ್ಯನವರು ಪೀಠಿಕೆಯಲ್ಲಿ ಬರೆದಿರುವುದಿಷ್ಟು: ಶ್ರೀಮದ್ವಾದೀಭ ಸಿಂಹ ಸೂರಿ ಮಹಾಕವಿಯಿಂದ ವಿರಚಿತವಾದ ಜೀವಂಧರ ಚರಿತಾ ರೂಪವಾಗಿರುವ ಕ್ಷತ್ರ ಚೂಡಾಮಣಿ ಎಂಬೀ ಮಹದ್ಗ್ರಂಥವು ಸಂಸ್ಕೃತ ಭಾಷೆಯಲ್ಲಿರುವುದನ್ನು ಕೆಲವರಾದ ಮತಾಭಿಮಾನಿಗಳಿಂದ ಪ್ರೇರಿತನಾಗಿ ಗೀರ್ವಾಣಿ ಭಾಷಾ ಪರಿಚಯವಿಲ್ಲದವರಿಗೂ ಬಾಲಕರಿಗೂ ಸಹಾ ಸುಲಭವಾಗಿ ತಿಳಿಯುವಂತೆ ಮೂಲ ಟೀಕು ತಾತ್ಪರ್ಯ ಮತ್ತು ವಿಶೇಷ ವಿಷಯಗಳೊಂದಿಗೆ ಬಹಳ ದ್ರವ್ಯವ್ರಯದಿಂದಲೂ, ಪಂಡಿತ ಸಹಾಯ ದಿಂದಲೂ, ಒಳ್ಳೇ ಕಾಗದದಿಂದಲೂ ಮುದ್ರಾಪಿಸಿ ಪ್ರಚುರ ಮಾಡಲ್ಪಟ್ಟಿದೇನಾದುದ ರಿಂದ ತಾವು ತಮ್ಮ ಮಿತ್ರ ಮಂಡಲಿಗೆ ಪ್ರೋತ್ಸಾಹಿಸಿ ಪುಸ್ತಕಗಳನ್ನು ತರೆಸಿ ನೋಡಿ, ಆನಂದಿಸುವಿರಿ ಎಂದು ನಂಬಿ ಇಧೇನೆ [ಶಾಂತರಾಜೈಯ್ಯಃ ೧೯೦೦ : ಪೀಠಿಕೆ]. ೧೯೦೦ ರಲ್ಲಿ ಪೀಠಿಕೆಯನ್ನು ಹೇಗೆ ಬರೆಯುತ್ತಿದ್ದರೆಂಬ ಭಾಷಾಶೈಲಿ ನಿರೂಪಣೆಗೊಂದು ಮಾದರಿಯಾಗುವುದರ ಹೊರತು ಇದರಲ್ಲಿ ಪ್ರಸ್ತುತ ಸಂಪ್ರಬಂಧನದಲ್ಲಿನ ಕವಿಯ ಇತಿವೃತ್ತ ಚರ್ಚೆಗೆ ನೆರವಾಗುವ ಯಾವೊಂದು ಅಂಶವೂ ಇಲ್ಲ.

ಇನ್ನೊಬ್ಬ ಸಂಪಾದಕರು ಇದೇ ಕ್ಷತ್ರ ಚೂಡಾಮಣಿಯ ಹೊಸ ಆವೃತ್ತಿಯನ್ನು ಹೊರತಂದರು [ಶ್ರೀ ಕಾಂತ ಭುಜಬಲಿ ಶಾಸ್ತ್ರಿ : ೧೯೭೪]. ಅದರಲ್ಲಿ ಕೆಲವು ಮಾಹಿತಿಗಳಿವೆ: ಕವಿಯ ಜನ್ಮ ಹೆಸರು ಔಡೇಯ ದೇವ, ದೀಕ್ಷಾ ಹೆಸರು ಅಜಿತಸೇನ, ಮತ್ತು ಪಾಂಡಿತ್ಯದಿಂದ ಉಂಟಾದ ಉಪಾಧಿಯೆ ವಾಧೀಭಸಿಂಹ ಸೂರಿ; ಈ ಕವಿಯು ಪುಷ್ಪ ಸೇನ ಮುನಿಯ ಶಿಷ್ಯ, ಜನ್ಮ ಸ್ಥಾನ ಸ್ಪಷ್ಟವಿಲ್ಲ, ತಮಿಳು ಪೋಲೂರು ತಾಲೂಕಿನ ತಿರುಮಲೈ ಇರಬೇಕು; ಹೊಂಬುಜ ಕ್ಷೇತ್ರವು ಇವರ ಧರ್ಮ – ಸಾಹಿತ್ಯ ಪ್ರಚಾರದ ಪ್ರಧಾನ ಕೇಂದ್ರ; ತರ್ಕ ವ್ಯಾಕರಣ ಛಂದಕಾವ್ಯ ಅಲಂಕಾರಕೋಶ ಶಾಸ್ತ್ರಗಳಲ್ಲಿ ಪಾಂಡಿತ್ಯವಿದ್ದು ವಾದಿತ್ವಗುಣದಿಂದ ‘ವಾಧೀಭಸಿಂಹ’ ಪ್ರಶಸ್ತಿಪ್ರಾಪ್ತ ವಾಗಿತ್ತು; ರಾಜಗುರುಗಳು ಇವರ ಪರಮ ಭಕ್ತರು. ಶ್ರವಣಬೆಳಗೊಳದ ಮಲ್ಲಿಷೋಣ ಪ್ರಶಸ್ತಿ ಶಾಸನದಿಂದ ಇವರಿಗೆ ಶಾಂತಿನಾಥ ಪದ್ಮನಾಭ ಎಂಬ ಶಿಷ್ಯರಿದ್ದಂತೆ ತಿಳಿದು ಬರುತ್ತದೆ. ಪೊಂಬುಜದ ಕ್ರಿ.ಶ. ೧೧೪೭ ರ ಸ್ತಂಭ ಲೇಖದಿಂದ, ಇವರಿಗೆ ತೈಲ ಸಾಂತರನ ಸುಪುತ್ರಿ, ಮಹಾ ವಿದುಷೀಮಣಿ ಪಂಪಾದೇವಿಯ ಶಿಷ್ಯಳಾಗಿದ್ದಳು [ಶ್ರೀಕಾಂತ ಭುಜಬಲಿಶಾಸ್ತ್ರೀ : ೧೯೭೪:೧]

ಕ್ಷತ್ರ ಚೂಡಾಮಣಿ, ಗದ್ಯ ಚಿಂತಾಮಣಿ, ಸ್ಯಾದ್ವಾದ ಸಿದ್ಧಿ ಮೊದಲಾದ ಕೃತಿಗಳ ಕರ್ತೃ ಹಾಗೂ ರಿಷಿ ವಾಧೀಭಸಿಂಹನ ಇತಿ ವೃತ್ತ ಕುರಿತ ವಾಗ್ವಾದಕ್ಕೆ ಜೀವ ಕೊಟ್ಟವರು ಸಿದ್ದಾಂತಚಾರ್ಯ ವಿದ್ಯಾಭೂಷಣ ಪಂಡಿತ ಕೆ. ಭುಜಬಲಿ ಶಾಸ್ತ್ರೀ ಯವರು. ಅವರು ವಾದೀಭಸಿಂಹನ ಕೃತಿಗಳು ಹಾಗೂ ಕಾಲದ ಚರ್ಚೆಗೆ ಒದಗುವ ಮೂಲ ಆಕರಗಳತ್ತ ಬೆರಳಿಟ್ಟರು ಮತ್ತು ಪ್ರೌಢ ಸಂಶೋಧನ ಲೇಖನವನ್ನು ಬರೆದರು [ಭುಜಬಲಿ ಶಾಸ್ತ್ರಿ, ಕೆ: ೧೯೭೧ – ಬಿ]. ಆ ವೇಳೆಗಾಗಲೆ ತಮಿಳಿನಲ್ಲಿ ಟಿ.ಎಸ್. ಕುಪ್ಪಸ್ವಾಮಿ ಶಾಸ್ತ್ರಿಯವರು ಈ ಕವಿಯ ವಿಚಾರವಾಗಿ ಕೆಲವು ಮಾಹಿತಿಗಳನ್ನು ಹೊರಗಡೆವಿದ್ದರು [ಕುಪ್ಪಸ್ವಾಮಿಶಾಸ್ತ್ರಿ, ಟಿ.ಎಸ್.: ೧೯೦೨] ಜತೆಗೆ ಹಿಂದಿಯಲ್ಲಿ ದರಬಾರಿಲಾಲ ಕೋಠಿಯವರೂ ಕೆಲವು ಸಹಾಯಕ ಸಾಮಗ್ರಿಯನ್ನು ತೆರೆದಿಟ್ಟರು [ಕೋಠಿ, ದರಬಾರಿ ಲಾಲ : ೧೯೫೫ (?)]. ಹಿಂದಿಯಲ್ಲಿ ಬರೆದಿರುವ ಮೌಲಿಕ ಸಂಶೋಧನ ಗ್ರಂಥದಲ್ಲಿ ನಾಥೂರಾಮ ಪ್ರೇಮಿಯವರು ಕೂಡ ವಾದೀಭಸಿಂಹ, ಅವನ ಕೃತಿಗಳು, ಕರ್ತೃತ್ವ, ಕಾಲ ಕುರಿತು ಚರ್ಚಿಸಿದ್ದಾರೆ [ನಾಥರಾಮ ಪ್ರೇಮೀ : ೧೯೫೬]. ತಮ್ಮ ಮತ್ತು ಇತರರ ಚರ್ಚೆಗಳೆಲ್ಲದರ ಸಾರವನ್ನು ಅಳವಡಿಸಿಕೊಂಡು ಭುಜಬಲಿ ಶಾಸ್ತ್ರಿಗಳು ವಾದೀಭಸಿಂಹರ ಜೀವನ – ಸಾಧನೆಯನ್ನು ಅವಲೋಕಿಸಿದ್ದಾರೆ [ಭುಜಬಲಿಶಾಸ್ತ್ರಿ, ಕೆ: ೧೯೭೧-ಎ : ೧೧೭ – ೭೩].

ಇಷ್ಟೆಲ್ಲಾ ಚಿಂತನ – ಮಂಥನ ನಡೆದಿದ್ದರೂ, ವಾದೀಭಸಿಂಹನು ಇವರೆಲ್ಲ ಬಲ್ಲಿದರ ಬಲೆಯಿಂದ ನುಣುಚಿಕೊಂಡಿದ್ದಾನೆ; ಇತಿವೃತ್ತ ರಚನೆಯಲ್ಲಿ ಕೆಲವು ಸೂಕ್ಷ್ಮಗಳ ಸ್ಪೋಟವಾಗದೆ ರಹಸ್ಯವಾಗಿಯೇ ಉಳಿದಿವೆ. ಶಾಸನಗಳ ಬೆಳಕಿನಲ್ಲಿ ವಾದೀಭ ಸಿಂಹನನ್ನು ನಿಲ್ಲಿಸುವ ಪ್ರಯತ್ನ ನನ್ನದು. ಹಾಲಿ, ವಾದೀಭಸಿಂಹನ ವಿಚಾರದಲ್ಲಿ ಇರುವ ಸಿಕ್ಕುಗಳು ಮೂರು:

೧. ವಾದೀಭಸಿಂಹನ ಹೆಸರುಗಳಲ್ಲಿರುವ ಗೊಂದಲ

೨. ಕಾಲವಿಚಾರದ ಸಮಸ್ಯೆ

೩. ಸ್ಥಳ ಯಾವುದೆಂಬ ಚರ್ಚೆ.

ಈ ಮೂರು ಗಂಟುಗಳನ್ನು ಒಂದೊಂದಾಗಿ ಪರಿಶೀಲಿಸಿ, ಸಮಂಜಸವಾದ ಪರಿಹಾರವನ್ನು ಕಾಣಲು ಶಾಸನಗಳನ್ನು ಅವಲಂಬಿಸಬೇಕು, ವಾದೀಭ ಸಿಂಹ ಎಂಬ ಹೆಸರು ಬಹಳ ಜನ ಜೈನಾಚಾರ್ಯರಿಗೆ ಅನ್ವಯವಾಗಿದೆಯೆಂಬುದು ಶ್ರವಣಬೆಳಗೊಳ ಮತ್ತು ಹೊಂಬುಜ ಶಾಸನಗಳನ್ನು ನೋಡಿದರೆ ಸ್ಪಷ್ಟವಾಗುತ್ತದೆ. ಅಲ್ಲದೆ ವಾದೀಭಸಿಂಹ ಎಂಬುದು ಯಾರೊಬ್ಬರ ಇಟ್ಟ ಹೆಸರೂ ಅಲ್ಲ, ಅದು ಬೇರೆ ಬೇರೆ ಮುನಿಗಳಿಗೆ ಕೊಟ್ಟ ಒಂದು ಬಿರಿದು:

೧. ಸಮಂತಭದ್ರದೇವರಿಗೂ ವಾದೀಭಸಿಂಹ ಎಂಬ ಪ್ರಶಸ್ತಿಯಿತ್ತೆಂಬುದನ್ನು ಶಾಸನಗಳು ತಿಳಿಸಿವೆ : ಎ.ಕ.೨, (ಪ) ೭೧ (೬೪) ೧೬೩ ಪು. ೨೭

೨. ಅಭಯಸೂರಿಮುನಿಗೂ ಈ ಪ್ರಶಸ್ತಿಯಿತ್ತು : ಅದೇ, ೩೬೦ (೨೫೪). ೧೩೯೮. ಪು. ೨೧೯.

೩. ಅಜಿತಸೇನಮುನಿಗೂ ಈ ಪ್ರಶಸ್ತಿಯಿತ್ತು : ಅದೇ, ೭೭ (೬೭) ೧೧೨೯. ಪು. ೪೭

೪. ಅಕಳಂಕದೇವನಿಗೂ ಈ ಬಿರುದು ಇತ್ತು; ಅದೇ, ೫೬೯, ೧೧೨೪. ಪು. ೩೫೩

ಇದೇ ರೀತಿಯಾಗಿ ವಾದೀಭಸಿಂಹ ಎಂಬ ಪ್ರಶಸ್ತಿಯು ಅಜಿತ ಸೇನಮುನಿಗೂ, ಒಡೆಯ ದೇವನೆಂಬ ಮುನಿಗೂ ಇದ್ದುದನ್ನು ಹೊಂಬುಜದ ಶಾಸನಗಲು ದಾಖಲಿಸಿವೆ. ವಾದಗಳಲ್ಲಿ ನಿಷ್ಣಾತರಾದ ಕೆಲವು ಮುನಿಗಳಿಗೆ ವಾದೀಭಸಿಂಹ, ವಾದಿಘರಟ್ಟ ಎಂಬ ಪ್ರಶಸ್ತಿಗಳಿದ್ದುವು. ಇದೇ ರೀತಿ ಒಡೆಯದೇವ ಮುನಿಗೂ, ಅಜಿತಸೇನ ಮುನಿಗೂ ‘ವಾದೀಭಸಿಂಹ’ ಎಂಬ ಪ್ರಶಸ್ತಿ ಇದ್ದುದನ್ನು ಹೊಂಬುಜದ ಶಾಸನಗಳು ದಾಖಲಿಸಿವೆ. ಪ್ರಸ್ತುತ ಜಿಜ್ಞಾಸೆಗೆ ಈ ಹೊಂಬುಜ ಶಾಸನಗಳು ಸಹಾಯಕ ಸಾಮಗ್ರಿಯನ್ನು ಪೂರೈಸುತ್ತವೆ. ಗದ್ಯ ಚಿಂತಾಮಣಿ, ಕ್ಷತ್ರ ಚೂಡಾಮಣಿ ಮೊದಲಾದ ಗ್ರಂಥಗಳ ಕರ್ತೃವಾದ ವಾದೀಭಸಿಂಹನೂ, ಒಡೆಯದೇವನೂ, ಅಜಿತಸೇನ ಮುನಿಯೂ ಒಬ್ಬನೇ ಆಗಿದ್ದಾನೆಂದು ನಾಥೂರಾಮಪ್ರೇಮಿಯವರೂ [೧೯೫೬], ಪಂಡಿತಕೆ. ಭುಜಬಲಿ ಶಾಸ್ತ್ರಿಗಳೂ [೧೯೭೧ – ಎ ಮತ್ತು ೧೯೭೧ – ಬಿ] ಶ್ರೀಕಾಂತ ಭುಜಬಲಿ ಶಾಸ್ತ್ರಿಯವರೂ [೧೯೭೪] ಅಭಿಪ್ರಾಯ ಪಟ್ಟಿದ್ದಾರೆ. ಆದರೆ ಬಿ.ಎ. ಸಾಲೆತೊರೆಯವರು ಗದ್ಯ ಚಿಂತಾಮಣಿಯ ಕರ್ತೃವಾದ ಅಜಿತಸೇನನೂ ಚಾವುಂಡರಾಯನ [ಕ್ರಿ.ಶ. ೯೭೮] ಗುರುವಾದ ಅಜಿತಸೇನ ಮುನಿಯೂ ಅಭಿನ್ನರೆಂದಿದ್ದಾರೆ [ಸಾಲತೊರೆ, ಬಿ.ಎ.: ೧೯೩೮ : ೫೦]. ಈ ಎಲ್ಲ ಸೂರಿಗಳೂ ಚರಿತ್ರಕಾರರೂ ಒಡೆಯದೇವ ವಾದೀಭಸಿಂಹನನ್ನು ಸರಿಯಾಗಿ ಗುರುತಿಸಲು ಹೇಗೆ ವಿಫಲರಾಗಿದ್ದಾರೆಂಬುದನ್ನು ಹೊಂಬುಜದ ಶಾಸನಗಳ ಅಧ್ಯಯನ ತೋರಿಸುತ್ತದೆ.

ಒಡೆಯದೇವ ಎಂಬುದು ವಾದೀಭಸಿಂಹನ ಮೂಲ ಹೆಸರು. ಈತನಿಗೆ ಒಡೆಯದೇವ, ವಾದೀಭಸಿಂಹ ಎಂಬೆರಡು ಹೆಸರುಗಳ ಜತೆಗೆ ಶ್ರೀವಿಜಯದೇವ, ಹೇಮಸೇನಮುನಿ ಎಂಬ ಇನ್ನೆರಡು ಹೆಸರುಗಳೂ ಇದ್ದುವು. ಒಡೆಯದೇವನು ಹೀಗೆ ಬಹುನಾಮರೂಪಿಯಾಗಿ ಶಾಸನಗಲಲ್ಲಿ ಕಾಣಿಸಿಕೊಂಡಿರುವುದರಿಂದ ಇವೆಲ್ಲವೂ ಒಬ್ಬನೇ ಯತಿಯ ಹೆಸರುಗಳೆಂದು ಗುರುತಿಸುವುದರಲ್ಲಿ ವಿದ್ವಾಂಸರಿಗೆ ತೊಡಕಾಗಿದೆ.

ಗಂಗರ ಅರುಮುಳಿದೇವನ (ಹೆಂ. ಗಾವಬ್ಬರಸಿ) ಹಿರಿಯ ಮಗಳು ಚಟ್ಟಲದೇವಿ; ರಕ್ಕಸಗಂಗ (ಗೋವಿಂದರದೇವ) ನು ಈಕೆಯ ದೊಡ್ಡಪ್ಪ ಹಾಕು ಸಾಕಿ ಬೆಳೆಸಿದವನು. ಛಂದೋಂಬುಧಿಯನ್ನು ರಚಿಸಿದ ನಾಗವರ್ಮನು ಈತನ ಆಶ್ರಯ ದಲ್ಲಿದ್ದವನು. ತನ್ನ ಗಂಡನಾದ ಕಾಡುವೆಟ್ಟಿಯ ಮರಣಾನಂತರ ಚಟ್ಟಲದೇವಿಯು ಪೊಂಬುಚ್ಚಪುರದಲ್ಲಿ ನೆಲಸಿದಳು. ಆಕೆಯ ತಂಗಿ ಕಂಚಲದೇವಿಯು ನಾಲ್ಕುಜನ ಮಗಂದಿರನ್ನು ಹೆತ್ತು ಸತ್ತುಹೋಗಿದ್ದಳು. ಅದರಿಂದ ತನ್ನ ತಂಗಿಯ ಮಕ್ಕಳನ್ನು ಈ ದೊಡ್ಡಮ್ಮ ಚಟ್ಟಲ ದೇವಿಯು ಸಾಕಿ ಬೆಳೆಸಿದಳು. ಚಟ್ಟಲದೇವಿಗೆ, ಸಾಕಿ ಬೆಳೆಸಿದ ನಾಲ್ವರು ಮಕ್ಕಳಿಗೆ ರಾಜಗುರುಗಳು ಈ ಒಡೆಯದೇವ:

ಚಟ್ಟಲದೇವಿಯುಂ ಭುಜಬಳ ಶಾನ್ತರ ದೇವನುಂ ನನ್ನಿಶಾನ್ತರ
ದೇವನುಂ ವಿಕ್ರಮಶಾನ್ತರದೇವನುಂ ಬರ್ಮದೇವನುಂ
ತಾಮೆಲ್ಲರುಂ ಒಡೆಯದೇವರ ಗುಡ್ಡುಗಳಪ್ಪ ಕಾರಣದಿಂದಂ
ದ್ರವಿಳ ಸಂಘದ ನಂದಿಗಣದರುಂಗಳಾನ್ವಯದ
ಶ್ರೀವಿಜಯದೇವರ ನಾಮೋಚ್ಚಾರಣಂಗೆಯ್ಡವರ
ಶಿಷ್ಯರು ಶ್ರೇಯಾಸಂ ಪಂಡಿತರಿಂದುರ್ವ್ವೀ
ತಿಳಕಮೆನಿಸಿದ ಪಂಚವಸದಿಗೆ
ಸುಭಮುಹೂರ್ತ್ತದೊಳಾಚಂದ್ರಾರ್ಕ್ಕ
ಸ್ಥಾಯಿಯಪ್ಪಂತುನ್ನುತಮಪ್ಪೆಡೆಯೊಳ್
ಕೆಸರ್ಕ್ಕಲಿಕ್ಕಿಸಿದರು
||

ವಿಜಯದೇವನೆಂಬ [ಹೊಂಬುಜ ೨ (೮ ನಗರ ೩೬) ೧೦೭೭. ಸಾಲು : ೯೩-೧೦೨] ಹೆಸರಿನ ಒಡೆಯದೇವನು ದ್ರವಿಳ ಸಂಘದ ನಂದಿಗಣದ ಆರುಂಗಳ ಅನ್ವಯಕ್ಕೆ ಸೇರಿದವನು; ಈ ಸಂಗತಿಯನ್ನು ಹೊಂಬುಜದ ಒಂದನೆಯ ಶಾಸನವೂ ಪುಷ್ಪೀಕರಿಸಿದೆ:

ಅನ್ತು ಪೊಗರ್ತ್ತೆಗಂ ನೆಗರ್ತೆಗಂ ನೆಲೆಯಿನಿಸಿದ ಚಟ್ಟಲ ದೇವಿಯುಂ ನನ್ನಿ ಶಾನ್ತರರು ವೊಡೆಯದೇವರ ಗುಡ್ಡುಗಳಪ್ಪ ಕಾರಣದಿಂಶ್ರೀ ಮತ್ತಿಯಂಗುಡಿಯ ನಿಡುಂಬಱೆ ತೀರ್ತ್ಥದ ರುಂಗಾಳಾನ್ವಯದ ಸಂಬಂಧದ ನನ್ದಿಗಣಾಧೀಶ್ವರರೆನಿಸಿದ ಶ್ರೀವಿಜಯಭಟ್ಟಾರಕರ ನಾಮೋಚ್ಚಾರಣದಿಂ ಶುಭಕರಣ ತಿಥಿ ಮುಹೂರ್ತ್ತದಲವರ ಶಿಷ್ಯರ್ ಶ್ರೇಯಾಂಸ ಪಣ್ಡೀತರುರ್ವ್ವೀ ತಿಳಕಮೆನಿಸಿದ ಪಂಚವಸದಿಗುನ್ನತಮಪ್ಪೆದೇ ಯಲ್ಕರುವೆನಿಸೆ ಕೆಸಕ್ಕಲ್ಲಿಕ್ಕಿದರ್ || [ಹೊಂಬುಜ. ೧(೮ ನಗರ ೩೫) ೧೦೭೭ ಸಾಲು : ೬೭ – ೬೮]

ಶ್ರೀಮದ್ರವಿಳಸಂಘದ ಆರುಂಗಳಾನ್ವಯದ ಪ್ರಸ್ತಾಪ ಶಾಸನಗಳಲ್ಲಿ ಅನ್ಯತ್ರವೂ ಇದೆ [ಎ.ಕ.೬, ಕಡೂರು. ೬೯.೧೧೬೦. ಸಾಲು : ೨೬; ಎ.ಕ. ೨, (ಪ) ೫೬೯ (೫ ಚ.ಪ. ೧೪೯) ೧೧೨೪. ಚಲ್ಯ (ಶಲ್ಯ) ಪು, ೩೫೨. ಸಾಲು : ೧೬]. ಶ್ರವಣ ಬೆಳಗೊಳದ ಶಾಸನಕ್ಕೂ ಹೊಂಬುಜದ ಒಂದನೆಯ ಶಾಸನಕ್ಕೂ ಒಡೆಯದೇವನ ಮತ್ತು ಆರುಂಗಳಾನ್ವಯದ ಆಚಾರ್ಯಾವಳಿ (ಗುರ್ವಾವಳಿ) ಗೂ ಹೊಂದಾಣಿಕೆಯಿದೆ. ಒಡೆಯದೇವನ ಗುರುಪರಂಪರೆ, ಶಾಸನದಲ್ಲಿ ನಮೂದಾಗಿರುವ ಪ್ರಕಾರ, ಹೀಗಿದೆ:

            ಕನಕಸೇನ (ವಾದಿರಾಜ 1) ಭಟ್ಟಾರಕ
ದಯಾಪಾಳದೇವ
|
ಪುಷ್ಪಷೇಣ ಸಿದ್ಧಾನ್ತದೇವ ದೇವ
||
ಜಗದೇಕಮಲ್ಲವಾದಿರಾಜ ದೇವ
||
ಶ್ರೀವಿಜಯ ಭಟ್ಟಾರಕ

(ಒಡೆಯದೇವ – ವಾದೀಭಸಿಂಹ)

ರಾಚಮಲ್ಲದೇವಂಗೆ ಗುರುಗಳೆನಿಸಿದ ಕನಕಸೇನಭಟ್ಟಾರಕರವರ ಶಿಷ್ಯರ್ ಶಬ್ದಾನುಶಾಸನಕ್ಕೆ ಪ್ರತಿಕ್ರಿಯೆಯೆಂದು ರೂಪಸಿದ್ಧಿಯಂಮ್ಮಾಡಿದ ದಯಾ ಪಾಳದೇವರುಂ ಪುಷ್ಪಷೇಣ ಸಿದ್ಧಾನ್ತದೇವರುಂ ……… ಜಗದೇಕ ಮಲ್ಲವಾದಿಯು ಮೆನಿಸಿದ ವಾದಿರಾಜದೇವರುಂ ರಕ್ಕಸಗಂಗ ಪೆರ್ಮ್ಮನಡಿಗಳ ಚಟ್ಟಲದೇವಿಯ ಬೀರದೇವನ ನನ್ನಿಶಾನ್ತರನ ಗುರುಗಳೆನಿಸಿದ ……… ಶ್ರೀವಿಜಯ ಭಟ್ಟಾರಕರುಮವರ ಶಿಷ್ಯರ್ …….. ಗುಣಸೇನದೇವರ್ ದಯಾಪಾಳ್ ದೇವರ್ ಕಮಳಭದ್ರರಜಿತಸೇನ ಪಣ್ಡಿತದೇವರ್ ಶ್ರೇಯಾಂಸ ಪಣ್ಡಿತರ್ [ಹೊಂಬುಜ. ೧. ಸಾಲು : ೭೫ – ೭೬, ೭೯ – ೮೦].

ಶ್ರೀವಿಜಯಭಟ್ತಾರಕರೆನಿಸಿದ ಒಡೆಯದೇವನಿಗೆ ಶ್ರಾವಕ ಶಿಷ್ಯಸಂಪತ್ತು ಹೀಗಿತ್ತು: ರಕ್ಕಸಗಂಗ ಪೆರ್ಮಾನಡಿ, ಚಟ್ಟಲ ದೇವಿ, ಬೀರದೇವ (ತೈಳೋಕ್ಯ ಮಲ್ಲ ವೀರಸಾಂತರದೇವ), ನನ್ನಿಸಾಂತರ ದೇವ, ತೈಲಪ ಭುಜಬಳಸಾಂತರ ದೇವ, ಒಡ್ಡುಗ ವಿಕ್ರಮ ಸಾಂತರದೇವ ಮತ್ತು ಬರ್ಮದೇವ. ಒಡೆಯ ದೇವ, (ಶ್ರೀವಿಜಯ ಭಟ್ಟಾರಕ ) ನಿಗೆ ಇದ್ದ ಮುನಿಶಿಷ್ಯವೃಂದ: ಗುಣಸೇನದೇವ, ದಯಾಪಾಳ ||, ಕಮಳಭದ್ರದೇವ, ಅಜಿತಸೇನ ಪಂಡಿತದೇವ ಮತ್ತು ಶ್ರೇಯಾಂಸ ಪಂಡಿತ.

ವಿನುತಶ್ರೀವಿಜಯರ್ (ಹೊಂಬುಜ ೧.ಸಾಲು : ೬೪) ಗುರುಗಳಾಗಿರುವ ಶಿಷ್ಯರು ಹೆಮ್ಮೆ ಪಟ್ಟಿದ್ದಾರೆಂದು ಇದೇ ಶಾಸನ (ಸಾಲು : ೬೩) ಹೇಳಿದೆ:

ಶ್ರೀ ವಿಜಯ ದೇವರುಗ್ರ ತ
ಪೋವಿಭವರ್ಗ್ಗುರುಗಳಖಿಳ ಶಾಸ್ತ್ರಾಗಮಸಂ
ಭಾವಿತರೆನಿಸಲ್ ಚಟ್ಟಲ
ದೇವಿಯೆ ಕ್ರಿತ ಪುಣ್ಯವನ್ತೆ ವಿಶ್ವಂಭರೆಯೊಳ್
||

ಶ್ರೀವಿಜಯದೇವ (ಒಡೆಯದೇವ) ನಿಗೆ ಹಿರಿಯ ಗುರುಗಳು ಕನಕಸೇನ – ವಾದಿ ರಾಜರೆಂದು ಶಾಸನಗಳು ಸ್ಪಷ್ಟಪಡಿಸಿವೆ:

೧. ಶ್ರೀವಾದಿರಾಜಾಪುರ ನಾಮಧೇಯ ಶ್ರೀಮತ್ಕನಕಸೇನಪಣ್ಡಿತದೇವರ ಶಿಷ್ಯರೊಡೆಯ ದೇವರೆನಿಸಿದ ಶ್ರೀವಿಜಯ ಪಣ್ಡಿತದೇವರ್

[ಹೊಂಬುಜ .೬ (೮ ನಗರ ೪೦) ೧೦೭೭. ಸಾಲು : ೪೩-೪೫]

೨. ವಾದಿರಾಜದೇವನ ಶಿಷ್ಯ ಶ್ರೀವಿಜಯದೇವ [ಹೊಂಬುಜ1 ಸಾಲು : ೭೭೭೮]

೩. [ಅದೇ. ೨. ಸಾಲು : ೧೧೨-೧೩]

೪. [ಅದೇ. ೩. ಸಾಲು : ೧೪೮-೪೯]

ಶ್ರೀವಿಜಯದೇವ ಒಡೆಯದೇವನಿಗೆ ನೇರ ಗುರುಗಳು ಪುಷ್ಪಸೇನ – ಸಿದ್ಧಾಂತ ದೇವನೆಂದು ಶಾಸನದಲ್ಲಿ ಅಸ್ಖಲಿತವಾಗಿ ದಾಖಲಾಗಿದೆ:

            ಶ್ರೀಪುಷ್ಪಸೇನ ಸಿದ್ಧಾದೇವ ವಕ್ತ್ರೇನ್ದು ಸಂಗಮಾತ್
ಜಾತಾವಭಾತಿ ಜೈನೀಯಂ ಸರ್ವ್ವಶುಕ್ಲಾಸರಸ್ವತೀ
|
ನಮ್ರಾವನೀಶ ಮೌಳೀದ್ಧಮಾಳಾಮಣಿಗಣಾರ್ಚ್ಚಿತಂ
ಯಸ್ಯ ಪಾದಾಂಬುಜಂ ಭಾತಂ ಭಾತಃ ಶ್ರೀವಿಜಯೋಗುರುಃ
||
[ಹೊಂಬುಜ . ೫ (೮ ನಗರ ೩೯) ೧೦೭೭. ಸಾಲು : ೩೭ – ೪೦]

ತನ್ನ ಗುರುವು ಪುಷ್ಪಸೇನಮುನಿಯೆಂದು ಗದ್ಯಚಿಂತಾಮಣಿಯಲ್ಲಿಯೂ ವಾದೀಭಸಿಂಹ ಒಡೆಯದೇವ – ಶ್ರೀವಿಜಯದೇವನು ನಿವೇದಿಸಿಯೂ ಇದ್ದಾನೆ:

            ಶ್ರೀ ಪುಷ್ಪಸೇನ ಮುನಿನಾಥ ಇತಿಪ್ರತೀತೋದಿವ್ಯೋ
ಮನುಹೃದಿ ಸದಾಮಮ ಸಂವಿದಧ್ಯಾತ್
|
ಯಚ್ಛಕ್ತಿತ : ಪ್ರಕೃತಿ ಮೂಢ ಮತಿರ್ಜನೋಪಿ
ವಾದೀಭಸಿಂಹ ಮುನಿ ಪುಂಗವತಾಮುಪೈತಿ
||
[ಗದ್ಯಚಿಂತಾಮಣಿ (ಜೀವಂಧರ ಚರಿತೆ -ಗದ್ಯ ಕಾವ್ಯ) ಪೂರ್ವ ಪೀಠಿಕೆ]

[ಸಾರಾಂಶ : ಸ್ವಭಾವದಿಂದ ಮೂರ್ಖನಾದ ನಾನು ವಾದೀಭಸಿಂಹ ಹಾಗೂ ಶ್ರೇಷ್ಠವಾದ ಮುನಿಸ್ಥಾನವನ್ನು ಪಡೆದದ್ದು ಗುರುಗಳಾದ ಶ್ರೀಪುಷ್ಪಸೇನ ಮುನಿನಾಥರ ಶಕ್ತಿಯಿಂದ].

ಹೇಮಸೇನ ಮುನಿ ಎಂಬ ಹೆಸರೂ ಸಹ ಇದ್ದಿತೆಂಬುದನ್ನು ಇನ್ನೊಂದು ಶಾಸನ ನಿರೂಪಿಸಿದೆ; ಇದರ ಕೆಲವು ಅಕ್ಷರಗಳು ತ್ರುಟಿತವಾಗಿದೆ-

ಯದ್ವಿದ್ಯಾತಪಸೋ ಱ್ಪ್ರಶಸ್ತ್ರ ಮುಭಯಂ ಶ್ರೀಹೇಮಸೇನೇ ಮುನೌ
ಪ್ರಾಗಾಶೀ. ಚಿರಾಭಿಯೋಗ ವಿಧಿನಾನೀತಮ್ಪರಾಮುನ್ನತಿಂ ಪ್ರಾಯಃ
ಶ್ರೀ ವಿಜಯದೇಶ ದೇವ ಸಕಲಂ ತತ್ವಾಧಿಕಾಯಾಂ ಸ್ಥಿತೇ ಸಂಕ್ರಾನ್ತೇ
ಕಥಮನ್ಯಥಾ. ತಿಚಿರಾದೃದಿ . . . ದೃಕ್ತಪಃ
||
ಶಾಸ್ತ್ರಾಂಬುಧಾನಾಮುಪಸೇವಿ . . . ಯಂದಾತುಕಾಮಂ ಯತಏವದಾತಾ
ತತೋಪಿಹಿ ಶ್ರೀ ವಿಜಯೇತಿ ನಾಮ್ನಾಪರೇಣ ವಾಪಣ್ಡಿತ ಪಾರಿಜಾತಃ
||
ಎನಿಸಿದ ಶ್ರೀವಿಜಯ ಭಟ್ಟಾರಕ
[ಹೊಂಬುಜ. ೧. ಸಾಲು : ೭೮-೭೯]

ಒಡೆಯದೇವನ ವಿಚಾರವಾಗಿ ಸಂಗತಿಗಳು ಇಷ್ಟು ನಿಚ್ಚಳ ನಿರಾಳವಾಗಿ ಶಾಸನಗಳಲ್ಲಿ ನಿರೂಪಿತವಾಗಿದ್ದರೂ ಒಡೆಯದೇವನನ್ನು ಆತನ ಶಿಷ್ಯನಾಅದ ಅಜಿತಸೇನನೊಂದಿಗೆ ಸಮೀಕರಿಸಿ ಅಭಿನ್ನತೆಯನ್ನು ವಿದ್ವಾಂಸರು ಕಲ್ಪಿಸಿದ್ದಕ್ಕೆ ಮುಖ್ಯ ಕಾರಣವಿದೆ; ಅದೆಮ್ದರೆ ಅಜಿತ ಸೇನನಿಗೂ ವಾದೀಭಸಿಂಹ ಎಂಬ ಪ್ರಶಸ್ತಿಯಿತ್ತು – ವಾದೀಭಸಿಂಹ ನೆನಿಸಿದ ಅಜಿತಸೇನ ಪಂಡಿತದೇವ ಎಂಬ ಹೇಳಿಕೆ ಶಾಸನದಲ್ಲಿದೆ [ಹೊಂಬುಜ. ೨. ಸಾಲು : ೧೨೨-೨೩; ಅದೇ. ೩. ಸಾಲು : ೧೫೬-೫೭].

ಆದ್ದರಿಂದ ಗುರುಶಿಷ್ಯರಾದ ಒಡೆಯದೇವ ಮತ್ತು ಅಜಿತಸೇನರಿಗೆ (ಇಬ್ಬರಿಗೂ) ವಾದೀಭಸಿಂಹ ಎಂಬ ಪ್ರಸ್ತುತ ಇದ್ದರೂ ಕ್ಷತ್ರ ಚುಡಾಮಣಿ ಮೊದಲಾದ ಕೃತಿಗಳ ಕರ್ತೃವು ವಾದೀಭಸಿಂಹ ಒಡೆಯದೇವನೇ ಹೊರತು ವಾದೀಭಸಿಂಹ ಅಜಿತಸೇನ ಅಲ್ಲ.

ಒಡೆಯದೇವನೂ ದಯಾಪಾಲ – ಮುನಿಯೂ ಅಭಿನ್ನರೆಂಬುದು ಸಹ ಸಾಲೆ ತೊರೆಯವರು ಮಾಡಿರುವ ತಪ್ಪು ಸಮೀಕರಣ [ಸಾಲೊತ್ತೊರೆ ಬಿ.ಎ.: ೧೯೩೮, ೫೧]. ದಯಾಪಾಲ ಮುನಿಯು ಒಡೆಯದೇವನ ಶಿಷ್ಯರಲ್ಲಿ ಒಬ್ಬನು; ಈ ದಯಾಪಾಲ- ದೇವನು ಶಬ್ದಾನುಶಾಸನಕ್ಕೆ ಪ್ರಕ್ರಿಯೆಯೆಂದು ರೂಪಸಿದ್ದಿಯನ್ನು ರಚನೆ ಮಾಡಿದ್ದನೆ [ಹೊಂಬುಜ. ೧. ಸಾಲು : ೭೫-೭೬].

ಇನ್ನು ಒಡೆಯದೇವ – ವಾದೀಭಸಿಂಹನು ಯಾವ ಸ್ಥಳದಿಂದ ಬಂದವನು ಎಂಬ ವಿಚಾರ. ಇವರ ಒಡೆಯದೇವ ಎಂಬ ಹೆಸರಿನಿಂದ ಇವರು ತಮಿಳು ನಾಡಿನವರೆಂದು ಊಹಿಸಲು ಸಾಧ್ಯವಿದೆ [ಭುಜಬಲಿಶಾಸ್ತ್ರಿ. ಕೆ. ೧೯೭೧: ೧೧೯]; ತೆಲುಗುದೇಶದ ಗಂಜಾಂ ಜಿಲ್ಲೆಯ ನೆರೆಯ ಪ್ರದೇಶದಲ್ಲಿ ವಾದೀಭಸಿಂಹನು ಬಾಳಿರಬೇಕೆಂಬ ಇನ್ನೊಂದು ಅಭಿಪ್ರಾಯವೂ ವ್ಯಕ್ತಪಟ್ಟಿದೆ [ಮಿರ್ಜಿ ಅಣ್ಣಾರಾಯ : ೧೯೬೯ : ೬೨೪]. ತಮಿಳುನಾಡಿನ ಪೋಲೂರು ತಾಲ್ಲೂಕಿನ ತಿರುಮಲೈ ಎಂಬ ಊರಿನವನೆಂದೂ ಹೇಳಿದ್ದಾರೆ [ಶ್ರೀಕಾಂತಭುಜಬಲಿ ಶಾಸ್ತ್ರಿ : ೧೯೭೪:೧]

ಒಡೆಯದೇವನು ದ್ರವಿಳ ಸಂಘದ ಆರುಂಗಳ ಅನ್ವಯಕ್ಕೆ ಸೇರಿದವನೆಂಬುದರಿಂದ ಈತನು ತಮಿಳು ನಾಡಿನ ಕಡೆಯಿಂದ ಬಮ್ದವನೆಂದು ತಿಳಿಯಲಡ್ಡಿಯಿಲ್ಲ. ಅಲ್ಲದೆ ಶ್ರೀಮತ್ ತಿಯಂಗುಡಿಯ ನಿಡುಂಬಱೆ ತೀರ್ತ್ಥದ ಆರುಂಗಳ ಅನ್ವಯಕ್ಕೆ ಸೇರಿದವರೆಂಬ ನಿರ್ದಿಷ್ಟ ಸೂಚನೆಯು [ಹೊಂಬುಜ. ೧. ೧. ಸಾಲು : ೬೭]

ತಮಿಳುನಾಡಿನ ಮೂಲವನ್ನು ನಿಕರವಾಗಿಸುತ್ತದೆ; ಶ್ರೀನೆಡುಬೊಱೆಯ ಪಾನದಭಟಾರರ್ನ್ನೋನ್ತು ಮುಡಿಪ್ಪಿದಾರ್ [ಎ.ಕ. ೧೧ (೯) ೧೦ನೆಯ ಶ. ೭] ಎಂಬ ಇನ್ನೊಂದು ಶಾಸನ ಪ್ರಯೋಗದಲ್ಲಿರುವ ನೆಡುಬೊೞೆ ಮತ್ತು ಹೊಂಬುಜ ಶಾಸನೋಕ್ತ ನಿಡುಂಬಱೆ ಒಂದೇ ಇರಬಹುದು.

ತಮಿಳುನಾಡಿನಿಂದ ಒಡೆಯ ದೇವನು ಹೊಂಬುಜಕ್ಕೆ, ಬರಲು ಕಾರಣವೂ ಇದೆ. ತನ್ನ ಗಂಡನು ಸತ್ತಮೇಲೆ ಚಟ್ತಲದೇವಿಯು ತಮಿಳು ನಾಡಿನ ಕಂಚಿಯಿಂದ ಹೊಂಬುಜಕ್ಕೆ ಬಂದ ಸಂಗತಿಯನ್ನು ನೆನೆಯಬೇಕು. ತಮಿಳು ನಾಡಿನಲ್ಲಿ ಕೆಲವು ಕಾಲ ಚಟ್ಟಲದೇವಿಯು ಇದ್ದಾಗ ಅಲ್ಲಿ ಪರಿಚಯವಾಗಿದ್ದ ಜೈನ ಮುನಿಗಳು ಕೆಲವರು ಆಕೆಯ ಅರಿಕೆಯಂತೆ ಸಾಂತರ ನೆಲೆವೀಡಾದ ಪೊಂಬುಚ್ಚಪುರಕ್ಕೂ ಬಂದರು. ಹಾಗೆ ಬಂದ ಗಣ್ಯರಲ್ಲಿ ಒಡೆಯದೇವನೂ ಒಬ್ಬನೆಂಬುದು ಸಕಾರಣವಾಗಿದೆ.

ಒಡೆಯದೇವನ ಕಾಲ ಹತ್ತನೆಯ ಶತಮಾನವೆಂದೂ [ಕುಪ್ಪಸ್ವಾಮಿ ಶಾಸ್ತ್ರಿ ಟಿ.ಸಿ., ಶ್ರೀಕಂಠಶಾಸ್ತ್ರಿ, ಎಸ್., ಪಂಡಿತನಾಥು ರಾಮಪ್ರೇಮೀ] ಹನ್ನೊಂದನೆಯ ಶತಮಾನವೆಂದೂ [ಭುಜಬಲಿಶಾಸ್ತ್ರಿ, ಕೆ., ಪಂಡಿತ ದರಬಾರಿಲಾಲ ಕೋಠಿಯಾ] ಭಿನ್ನ ಸೂಚನೆಗಳಿವೆ. ಹೊಂಬುಜದ ಶಾಸನಗಳ ಆಧಾರದಿಂದ ಈತನ ಕಾಲವನ್ನು ಖಚಿತವಾಗಿಯೇ ಹೇಳಲು ಸಾಧ್ಯವಿದೆ. ಒಡೆಯದೇವನು ಜಗದೇಕಮಲ್ಲ ವಾದಿರಾಜ ದೇವನ ಶಿಷ್ಯನು. ಪಾರ್ಶ್ವನಾಥ ಚರಿತೆ, ಯಶೋಧರ ಚರಿತೆ ಮೊದಲಾದ ಕಾವ್ಯಗಳ ಕರ್ತೃವೂ, ನಾಗವರ್ಮ. ದುರ್ಗಸಿಂಹ – ಶಾಂತಿನಾಥ ಮೊದಲಾದ ಕವಿಗಳ ಗುರುವೂ, ಚಾಳುಕ್ಯ ಚಕ್ರಿ ಜಗದೇಕಮಲ್ಲ ಜಯಸಿಂಹನಿಗೆ [೧೦೧೬ – ೪೨] ರಾಹಗುರುವೂ ಆದ ವಾದಿರಾಜರಕಾಲ ಕ್ರಿ.ಶ. ೧೦೦೦-ದಿಂದ ೧೦೪೦. ಅದರಿಂದ ಅವರ ಶಿಷ್ಯನಾದ ಒಡೆಯದೇವ (ಶ್ರೀವಿಜಯ ಭಟ್ಟಾರಕ -ವಾದೀಭಸಿಂಹ) ನೂ ಚಟ್ಟಲದೇವಿಯೂ ಮತ್ತು ಆಕೆಯ ತಂಗಿ ಕಂಚಲದೇವಿ (ಬೀರಲದೇವಿ) ಯ ನಾಲ್ವರು ಮಕ್ಕಳೂ ಈ ಮುನಿಗೆ ಶಿಷ್ಯರಾಗಿದ್ದರು. ಚಟ್ಟಲದೇವಿ ಹೊಂಬುಜದಲ್ಲಿ ಪಂಚಕೂಟ ಬಸದಿಯನ್ನು ಮಾಡಿಸಿದ್ದು ಈ ಮುನಿಯ ಆದೇಶದಿಂದ. ಪಂಚಕೂಟಬಸದಿಯ ಪ್ರತಿಷ್ಠಾಪನೆ ಆದದ್ದು ಕ್ರಿ.ಶ. ೧೦೭೭ರಲ್ಲಿ. ಆದರೆ ಆ ವೇಳೆಗೆ ಒಡೆಯದೇವ ಶ್ರೀವಿಜಯಭಟ್ಟಾರಕನು ನಿಧನನಾಗಿದ್ದುದರಿಂದ ಈತನ ಶಿಷ್ಯರಾದ ಶ್ರೇಯಾಂಸ ಪಂಡಿತನಿಂದ ಕೆಸರು ಕಲ್ಲು ಇಡಿಸಿದರು; ‘ಒಡೆಯದೇವರೆನಿಸಿದ ಶ್ರೀವಿಜಯಪಣ್ಡಿತ ದೇವ್ಚರ ಅನ್ತೇವಾಸಿಗಳಪ್ಪ ಶ್ರೀಮತ್ಕಳಭದ್ರ ಪಣ್ಡಿತ’ [ಹೊಂಬುಜ. ೬ (೮ ನಗರ ೪೦) ಸಾಲು. ೪೩-೪೫] ನ ಕಾಲಂ ಕರ್ಚ್ಚಿ ಧಾರಾಪೂರ್ಬ್ಬಕಮಾ ಸಮ್ಮನ್ದಿಯ ಸಮುದಾಯ ಮುಖ್ಯವಾಗೆ ಮಾಡಿಕೊಟ್ಟ ಗ್ರಾಮಂಗಳನ್ನೂ ಶಾಸನ ಹೇಳಿದೆ [ಹೊಂಬುಜ ೧. ಸಾಲು : ೮೨] ಅದರಿಂದ ಒಡೆಯದೇವ (ಶ್ರೀವಿಜಯಪಂಡಿತದೇವ – ವಾದೀಭಸಿಂಹ) ನು ಕ್ರಿ.ಶ. ೧೦೭೭ರ ವೇಳೆಗೆ ನಿಧನನಾಗಿದ್ದನೆಂದು ತಿಳಿದುಬರುತ್ತದೆ. ಈತನು ಹೊಂಬುಜದಲ್ಲಿದ್ದು ಕೃತಿಗಳನ್ನು ರಚಿಸಿದ ಕಾಲಾವಧಿಯನ್ನು ಕ್ರಿ.ಶ. ೧೦೨೦ ರಿಂದ ೧೦೭೦ ಎಂದು ಖಚಿತವಾಗಿ ಹೇಳಬಹುದು.

ಶಾಸನಗಳ ಸಹಾಯದಿಂದ ತಳೆಯಬಹುದಾದ ತೀರ್ಮಾನಗಳಿವು:

೧. ಕ್ಷತ್ರಚೂಡಾಮಣಿ, ಗದ್ಯಚಿಂತಾಮಣಿ, ಸ್ಯಾದ್ವಾದಸಿದ್ಧಿ ಮೊದಲಾದ ಕೃತಿಗಳ ಕರ್ತೃವಾದ ಒಡೆಯದೇವ ವಾದೀಭಸಿಂಹನು ಹೊಂಬುಜದಲ್ಲಿದ್ದು ಕೃತಿಗಳನ್ನು ರಚಿಸಿದನು

೨. ಈತನು ತಮಿಳುನಾಡಿನ ತಿಯಂಗುಡಿಯ ನಿಡುಂಬೞೆತೀರ್ಥದ ಪರಂಪರೆಗೆ ಸೇರಿದವನು, ದ್ರವಿಳ ಸಂಘದ ಅರುಂಗಳ ಅನ್ವಯದವನು.

೩. ಈತನಿಗೆ ಒಡೆಯದೇವ, ಶ್ರೀವಿಜಯ, ಪಂಡಿತದೇವ, ಶ್ರೀವಿಜಯ ಭಟ್ಟಾರಕ, ವಾದೀಭಸಿಂಹ ಎಂಬ ಹೆಸರುಗಳಿವೆ.

೪. ಗಂಗರ ರಕ್ಕಸಗಂಗ ಪೆರ್ಮಾನಡಿ, ಚಟ್ಟಲದೇವಿ, ಸಾಂತರರ ಬೀರದೇವ (ತ್ರೈಳೋಕ್ಯಮಲ್ಲ ವೀರಸಾಂತರ) ಮತ್ತು ಬೀರದೇವನ (ಹೆಂ. ಬೀರಲದೇವಿ) ಮಕ್ಕಳಾದ ತೈಲಪಭುಜಬುಳ ಸಾಂತರ, (ಗೊಗ್ಗಿ – ಗೊಗ್ಗಿಗ- ಗೋವಿಂದರದೇವ-) ನನ್ನಿಸಾಂತರ, ಒಡ್ಡುಗ ವಿಕ್ರಮಸಾಮ್ತಾರ, ಮತ್ತು ಬರ್ಮದೇವ – ಇವರುಗಳೆಲ್ಲ ಒಡೆಯದೇವನ ಗುಡ್ಡುಗಳು.

೫. ಮುನಿಗಳಾದ ಗುಣಸೇನದೇವ, ದಯಾಪಾಳದೇವ ||, ಕಮಳಭದ್ರ ಪಂದಿತದೇವ, ಅಜಿತಸೇನ ಪಂಡಿತದೆವ, ವಾದೀಭಸಿಂಹ ಶ್ರೇಯಾಂಸ ಪಂಡಿತ – ಇವರುಗಳು ಒಡೆಯದೇವನ ಶಿಷ್ಯವೃಂದ.

೬. ತಮಿಳುನಾಡಿನಿಂದ ಹೊಂಬುಜಕ್ಕೆ ಈತನು ಬರಲು ಕಾರಣ ಶ್ರಾವಕ ಶಿಷ್ಯೆಯಾದ ಚಟ್ಟಲದೇವಿ.

೭. ಈತನ ಒಟ್ಟು ಜೀವಿತ ಕಾಲಾವಧಿ ಕ್ರಿ.ಶ. ೧೦೦೦ ರಿಂದ ೧೦೭೦.