ಕನ್ನಡ ಶಾಸನಗಳಲ್ಲಿ ಕೆಲ್ಲ (ಕೆಲ್ಲಿ) ಮತ್ತು ಚೆಲ್ಲ (ಚಲ್ಲ) ಎಂಬೆರಡು ಶಬ್ದಗಳು ಮತ್ತು ಅವುಗಳ ವ್ಯತ್ಯಾಸದ ರೂಪಗಳು ಮನೆತನದ ಹೆಸರುಗಲಾಗಿಯೂ ವ್ಯಕ್ತಿಗಳ ಹೆಸರುಗಳೊಂದಿಗೂ ಪ್ರಯೋಗವಾಗಿವೆ.

೧. ಕನ್ನಡದ ಮೊತ್ತಮೊದಲನೆಯ ಶಾಸನವೆಂಬ ಹಿರಿಮೆಯನ್ನು ಹೊತ್ತಿರುವ ಹಲ್ಮಿಡಿಯ ಶಾಸನದಲ್ಲಿ- ಪಶುಪತಿ ನಾಮಧೇಯನಾ ಸರಕ್ಕೆಲ್ಲ ಭಟರಿಯಾ ಪ್ರೇಮಾಲಯ ಸುತನ್ಗೆ ಸೇನ್ದ್ರಕ ಬಣೋಭಯ ದೇಶದಾ ವೀರಾಪುರುಷ ಸಮಕ್ಷದೆ ಕೇಕಯ ಪಲ್ಲವರಂ ಕಾದೆಱೆದು ಪೆತ್ತಜಯನ್ ಆ ವಿಜ ಅರಸನ್ಗೆ- ಎಂಬ ಪ್ರಯೋಗವಿದೆ [ಮೈ.ಆ.ರಿ. ೧೯೩೬.೧೬. ೪೫೦.ಪು. ೭೨-೨೩. ಸಾಲು : ೧೧; ಪ್ರ.ಕ. ೨೦-೩, ಪು.೩೮]. ಈ ಪ್ರಯೋಗದಲ್ಲಿ ಬರುವ ‘ಸರಕ್ಕೆಲ್ಲಭಟರಿಯಾ’ ಎಂಬ ಘಟಕವನ್ನು ಎತ್ತಿಕೊಂಡು ಜಿಜ್ಞಾಸೆ ನಡೆದಿದೆ.

ಈ ಘಟಕವನ್ನು ಅರ್ಥೈಸುವ ಪ್ರಕ್ರಿಯೆಯಲ್ಲಿ ನಡೆದಿರುವ ಚರ್ಚೆಗಳಲ್ಲಿ ವಿವಿಧ ವಿವರಣೆಗಳು ವ್ಯಕ್ತಪಟ್ಟಿವೆ. ಇದನ್ನು ಆ ಸರಕ್ಕೆ, ಆಸರಕ್ಕೆ, ಎಲ್ಲ ಭಟರಿಯಾ, ಕೆಲ್ಲಭಟರಿಯಾ- ಎಂದೆಲ್ಲಾ ಬಿಡಿಸಿ ಓದುವ ವಕ್ಖಾಣಿಸುವ ವಿದ್ವತ್ ಪ್ರಯತ್ನಗಳಾಗಿವೆ. ಬಲ್ಲಿದರ ಇಂತಹ ಬೌದ್ಧಿಕ ಕಸರತ್ತುಗಳಿಗೆ ಕೊನೆಯ ಪರದೆಯನ್ನೆಳೆದ ಡಾ. ಎಂ.ಬಿ. ನೇಗಿನ ಹಾಳ ಅವರು ಇದು ‘ಸರಕ್ಕೆಲ್ಲ’ ಎಂಬ ವಂಶವಾಚಕನಾದ ಸಮಾಸರೂಪವೆಂದೂ, ಇದೇ ರೂಪ ಮುಂದೆ ‘ಅರಕೆಲ್ಲ’ ಎಂದಾಗಿದೆಯೆಂದೂ ತೋರಿಸಿದ್ದಾರೆ. ಡಾ. ಪಿ.ಎನ್. ನರಸಿಂಹಮೂರ್ತಿ ಅವರೂ ಇದೇ ಅಭಿಪ್ರಾಯವನ್ನು ಬಹಳ ಹಿಂದೆಯೇ ಪ್ರತಿಪಾದಿಸಿದ್ದಾರೆ.

೨. ಕೆಲ್ಲ ಎಂಬುದು ಕರ್ನಾಟಕದಲ್ಲಿ ಆಗಿಹೋದ ಪ್ರಾಚೀನ ವಂಶ (ಕುಲ, ಮನೆತನ) ಗಳಲ್ಲೊಂದು. ಈ ಕೆಲ್ಲ ಮನೆತನವು ಆಳುವ ಒಂದು ಅರಸು ಕುಲವೂ ಆಗಿತ್ತು. ಹಲವು ಯುದ್ಧ ವೀರರು ಈ ಮನೆತನದಲ್ಲಿ ಆಗಿಹೋಗಿದ್ದಾರೆ. ಉತ್ತರ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲೇ ಅಲ್ಲದೆ, ಕರ್ನಾಟಕದ ಬೇರೆ ಕೆಲವು ಭಾಗಗಳಲ್ಲಿಯೂ ಈ ವಂಶದವರ ಹೆಸರುಗಳು ಶಾಸನೋಕ್ತವಾಗಿವೆ. ಹಲ್ಮಿಡಿ ಶಾಸನೋಕ್ತ ಅರಕೆಲ್ಲ ಭಟರಿ (೫. ಶ.), ಹೊನ್ನಾವರ ತಾಮ್ರಪಟ ಶಾಸನೋಕ್ತ ಚಿತ್ರಸೇನ ಮಾಹಾಕೆಲ್ಲ (೬ ಶ.), ಪೊಳಲಿ ಶಾಸನೋಕ್ತ ಸೇಬ್ಯಾರಕೆಲ್ಲ (೯ ಶ.) ಮತ್ತು ಉದಯಾವರ ಶಾಸನೋಕ್ತ ಅರಕೆಲ್ಲ (೯ ಶ) ಮೊದಲಾದವರು ಈ ಕುಲದ ಪ್ರಾಚೀನರು. ಇವರಲ್ಲದೆ ಇನ್ನೂ ಕೆಲವರು ಈ ವಂಶದ ಹಿರಿಯರು ಶಾಸನಗಳಲ್ಲಿ ಕಾಣಿಸಿ ಕೊಂಡಿದ್ದಾರೆ.

೩. ಕೆಲ್ಲ ಎಂಬ ಒಂದು ಪ್ರಾಚೀನ ಮನೆತನದ, ಮತ್ತು ಅದರೊಳಗಿನ ಒಳ ಭೇದಗಳೂ ಸೇರಿದಂತೆ, ಕೆಲವು ಮುಖ್ಯ ಹೆಸರುಗಳು :

ಅರಕೆಲ್ಲ : ಮೈ.ಆ.ರಿ. ೧೯೩೬.೧೬.೪೫೦ ಮತ್ತು ಎ.ಇ.೯.ಪು.೨೩.೯ ಶ
ಕಲಿಕೆಲ್ಲ : ಕೆಲ್ಲಪುತ್ತಿಗೆ ಶಾಸನ, ೧೦೬೩
ಕೆಲ್ಲ ಚಿತ್ರಸೇನ : ಎ.ಇ.೩೭. ಪು.೩೭
ಕೆಲ್ಲಬಸದಿ : ಎ.ಕ.೬.೧೬.೯- ೧೦ಶ. ಕ್ಯಾತನಹಳ್ಳಿ (ಮಂಡ್ಯ ಜಿ / ಪಾಂಡವಪುರ ತಾ) ಪು. ೧೧೪
ಕೆಲ್ಲಭಟರಿ : ೧೯೩೬.೧೬. ಕ್ರಿ.ಶ. ೪೫೦.
ಮಹಾಕೆಲ್ಲ : ಎ.ಇ.೩೭.ಪು. ೩೩-೩೭.೬.ಶ. ಹೊನ್ನಾವರ ತಾಮ್ರಪಟ
ಮಾಗ್ದುಣರ ಕೆಲ್ಲ : ಎ.ಕ.೫.೨೨೦.೧೦೦೬. ಕಲಿಯೂರು
ಮುರಸ ಕೆಲ್ಲ : ಮೈ.ಆ.ರಿ. ೧೯೧೪-೧೫. ಪು. ೩೯-೪೦. ೫ ಶ
ಸಿಯಕೆಲ್ಲ : ಎ.ಕ.೧೬ ತುಮಕೂರು. ೯೫.೮ ಶ.
ಸಿಯಗೆಲ್ಲ : ಎ.ಕ.೧೬ ತುಮಕೂರು. ೮೬. ೮ಶ.
ಸೇವ್ಯಗೆಲ್ಲ : ಸೌ.ಇ.ಇ.೭.೨೫೮.೧೨ಶ
ಸೇಬ್ಯಕೆಲ್ಲ : ಕೆಲ್ಲಪುತ್ತಿಗೆ ಶಾಸನ, ೧೧-೧೨ ಶ.

೪. ಕೆಲ್ಲಮನೆತನದವರು ಹೆಚ್ಚಾಗಿ ಇದ್ದ ಒಂದು ಊರು ಕೆಲ್ಲಪುತ್ತಿಗೆ. ದಕ್ಷಿಣ ಕನ್ನಡ ಜಿಲ್ಲೆಯ ಕೆಲ್ಲಪುತ್ತಿಗೆಯು ಕೆಲ್ಲರ ನೆಲೆವೀಡಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಶಾಸನಗಳಲ್ಲಿ ಕೆಲ್ಲರ ಶಾಸನಗಳೂ ಸಿಗುತ್ತವೆ. ತುಳುನಾಡಿನಲ್ಲಿ ಕೆಲ್ಲರಸರು ಎಂಬ ಜೈನ ಮನೆತನವಿತ್ತು. ಕೆಲ್ಲಪುತ್ತಿಗೆ, ಪೊಳಲಿ, ವೇಣೂರು ಶಾಸನಗಳಲ್ಲಿ ಈ ಮನೆತನದ ಮಾಹಿತಿಗಳಿವೆ. ಕೆಲ್ಲರು ಸ್ವಾಮಿ ನಿಷ್ಠರಾದ ಯೋಧರೂ ಹೌದೆಂಬುದನ್ನು ಇವರ ಶಾಸನಗಳು ಸಾರುತ್ತವೆ. ಡಾ.ಪಿ. ಎನ್. ನರಸಿಂಹಮೂರ್ತಿಯವರು, ಇಂದಿಗೂ, ತುಳುನಾಡಿನಲ್ಲಿ ಇರುವ ಜೈನ ಸಮಾಜದಲ್ಲಿ ಕೆಲ್ಲ ಎಂಬ ಹೆಸರು ಬಳಕೆಯಲ್ಲಿರುವುದನ್ನು ತಿಳಿಸಿದ್ದಾರೆ; Kellas Were Jains and they figure first in the HalmidiinscriptionofKadambaKakusthavarma (C. 430-450) ಎಂದೂ this Village is named kella Puttige giving due recognition to that meritorious family of Jain rulers ಎಂದೂ ಅಭಿಪ್ರಾಯ ಪಟ್ಟಿದ್ದಾರೆ. ಅಂದರೆ ಕನ್ನದದ ಮೊಟ್ಟಮೊದಲನೆಯ ಹಲ್ಮಿಡಿ ಶಾಸನೋಕ್ತರಾದ ಅರಕೆಲ್ಲಭಟರಿಯೂ ಅವನ ಮಗಾನಾದ ವಿಜ ಅರಸನೂ ಒಂದು ಜೈನ ಮನೆತನದ ಸಾಹಸಿಗಳೆಂದಾಯಿತು. ವಿಜಯಪ್ಪ, ವಿಜಯಣ್ಣ, ವಿಜಯಮ್ಮ, ಶ್ರೀವಿಜಯ ಎಂಬ ಹೆಸರುಗಳು ಜೈನ ಸಮಾಜದಲ್ಲಿ ಹೆಚ್ಚು ಪ್ರಸಾರದಲ್ಲಿ ಇರುವ ಈ ಪರಂಪರೆ ತುಂಬ ಪ್ರಾಚೀನವೆಂದು ತಿಳಿದುಬರುತ್ತದೆ.

೫. ಕೆಲ್ಲಪುತ್ತಿಗೆ ಎಂಬ ಒಂದು ಸ್ಥಳವಾಚಿಯು ಜೈನ ಮನೆತನದ ರಾಜಧಾನಿಯ ಹೆಸರೆಂಬುದನ್ನು ಗಮನಿಸುವಾಗ ಇಂತಹುದೇ ಇನ್ನೊಂದು, ಇನ್ನೂ ಪ್ರಾಚೀನ ವಾದ ಸದೃಶ ಸ್ಥಳನಾಮ ನೆನಪಾಗುತ್ತದೆ, ಅದೇ ಕೆಲ್ಲಂಗೆಱೆ ಎಂಬುದು. ಕೆಲ್ಲಂಗೆಱೆಯು ಜೈನರ ಆದಿತೀರ್ಥವೆಂದು ವಿಖ್ಯಾತವಾಗಿದೆ. ಶಾಸನಗಳಲ್ಲೂ ಈ ಸಂಗತಿ ದಾಖಲಾಗಿದೆ:

ಆ ಕೆಲ್ಲಂಗೆಱೆಯಾದಿ ತೀರ್ತ್ಥಂ : ಎ.ಕ. ೧೧(ಪ.) ೪೭೬ (೩೪೫) ೧೧೫೯. ಪು. ೨೫೯.
ಆ ಕೆಲ್ಲಂಗೆಱೆಯ ತ್ರಿಕೂಟರತ್ನತ್ರಯ ಎ.ಕ. ೯ (ಪ.) ಬೇ. ೩೨೩. ೧೩ ಶ. ಪು. ೩೦೬
ಇನ್ತು ಕೆಲ್ಲಙ್ಞಿಱೆಯಮ್ ಪಲರ್ ಪೊಗಱೆ : ಅದೇ, ಬೇ ೩೮೮.೯೫೪ ಬಸ್ತಿಹಳ್ಳಿ. ಪು. ೩೫೨
ಅ ಕೆಲ್ಲಂಗೆಱೆಯ ಚತುಃಸ್ಸೀಮಾ : ಅದೇ ಬೇ ೩೨೧. ೧೨೬೫. ಪು. ೨೯೯

ಆ ಕೆಲ್ಲಂಗೆೞಿ ಊರೂ ಸಹ ಜೈನರಾದ ಕೆಲ್ಲ ಮನೆತನದ ಹೆಸರಿನ ಸ್ಥಳ. ಇದು ಏಳನೆಯ ಶತಮಾನದ ವೇಳೆಗೆ ಪ್ರಸಿದ್ಧಿ ಪಡಿದಿತ್ತು. ಇಲ್ಲಿಯ ಬಸದಿಗಳೂ, ಮೋನಿಸಿದ್ಧಾಂತ ಭಟಾರರೂ ಪ್ರಸಿದ್ಧರು [ನಾಗರಾಜಯ್ಯ, ಹಂಪ. : ಸಾಂತರಾರು – ಒಂದು ಅಧ್ಯಯನಃ ೧೯೯೭ : ೧೬೪]. ಈ ಆದಿತೀರ್ಥವಾದ ಕೆಲ್ಲಂಗೆಱೆಯು ಪಾಳುಬಿದ್ದಾಗ ಮಹಾಭಂಡಾರಿ ಹುಳ್ಳಮಯ್ಯನು ಇದನ್ನು ಪುನರ್ಭರಣಗೊಳಿಸಿದ ಸಂಗತಿಯೂ ಶಾಸನೋಕ್ತವಾಗಿದೆ.

೬. ಕೆಲ್ಲಪುತ್ತಿಗೆ ಮತು ಕೆಲ್ಲಂಗೆಱೆ ಎಂಬುವು ಕೆಲ್ಲ ಎಂಬ ಜೈನ ಮನೆತನಕೆ ಸೇರಿದವುಗಳಾಗಿರುವಂತೆಯೇ ಇನ್ನೊಂದು ಇಷ್ಟೇ ಪ್ರಾಚೀನವಾದ ಇದೇ ಮೂಲಕ್ಕೆ ಸೇರಿದ ಸ್ಥಳವಿದೆ, ಅದೇ ‘ಕೆಲ್ಲಿಪುಸೂರು’. ಗಂಗರ ದೊರೆಯಾದ ಸೈಗೊಟ್ಟಶಿವಮಾರನ ಕಾಲದ ಪ್ರಾಚೀನ ಬಸದಿಯೊಂದು ‘ಕೊಡಗುನಾಡ ಕೆ(ಕಿ)ಲ್ಲಿ ಪುಸೂರು’ ಗ್ರಾಮದಲ್ಲಿತ್ತೆಂದು ಶಾಸನ ದಾಖಲಿಸಿದೆ [ಎ.ಕ ೪ (ಪ.) ಚಾನ. ೩೪೭.೭ ಶ. ಕುಲಗಾಣ (ಮೈಜಿ / ಚಾನತಾ) ಪು.೨೨೨] ಈ ಬಸದಿಯ ಜೈನಾಚಾರ್ಯರಾದ ಚಂದ್ರ ಸೇನಾ ಚಾರ್ಯರಿಗೆ ಅರಸನ ಅನುಮತಿಯಿಂದ ಪಲ್ಲವ ವೇಳಾರಸನೂ, ಗಂಗೈನಾಡ ಕಣ್ಣಮ್ಮನೂ ನೆಲವನ್ನು ದಾನವಿತ್ತರೆಂದು ಶಾಸನದಲ್ಲಿದೆ. ಇಲ್ಲಿ ಹೇಳಿರುವ ಕೆಲ್ಲಿಪುಸೂರು ಗ್ರಾಮವೇ ಈಗಿನ ಕೆಲಸೂರು. ಮೈಸೂರು ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಕೆಲಸೂರು ಗ್ರಾಮದಲ್ಲಿ ಇಂದಿಗೂ ಒಂದು ಚಂದ್ರಪ್ರಭ ಬಸದಿ ಇದೆ. ಕೊಡಗೂರ್ವಿಷಯೇ ಕೆಲ್ಲಿ ಪುಸುಗೂರ್ನಾಮ ಗ್ರಾಮೋ ಜಿನಾಲಯಾಯ ವಸದಿಕಾಲುಂ …. ಎಂಬಿತ್ಯಾದಿಯಾಗಿ ಶಾಸನದಲ್ಲಿ ಬರುತ್ತದೆ [IWG : ೧೯೮೪ : Bo. ೨೫:೭-೮ ಶಃಪು. ೧೩೫-೩೯; ಮೈ.ಆ.ರಿ. ೧೯೨೫. ೧೦೬. ಪು. ೯೦-೯೨; IWG : ೧೯೮೪ : ನಂ. ೩೬.: ೭-೮ ಶ.: ಪು. ೧೪೦-೪೧]. ಕೆಲ್ಲ-ಕೆಲ್ಲಿ ಇವೆರಡೂ ಒಂದೇ ಮೂಲದ ಜ್ಞಾತಿರೂಪ ಪ್ರಭೇದಗಳಾಗಿದ್ದು ಒಂದು ಜೈನ ಮನೆತನದ ಸ್ಥಳವಾಗಿದೆ. ಕೆಲ್ಲಿಪುಸೂರು (ಕೆಲಸೂರು).

೭. ರಾಷ್ಟ್ರಕೂಟರ ಸಾಮ್ರಾಜ್ಯದಲ್ಲಿ ಚೆಲ್ಲಕೇತನ ಮನೆತನವು ಒಂದು ಪ್ರತಿಷ್ಠಿತ, ಶಕ್ತಿವಂತ, ವೀರಯೋಧರ ಜೈನ ಕುಲವೆಂದು ಕನ್ನಡ ನಾಡಿನ ಚರಿತ್ರೆಯಲ್ಲಿ ಹೇಳಿದೆ. ಅಮೋಘವರ್ಷ ನೃಪತುಂಗನ ಮತ್ತು ತರುವಾಯದ ಕಾಲಘಟ್ಟದಲ್ಲಿ ಚೆಲ್ಲಕೇತನರು ರಾಷ್ಟ್ರಕೂಟ ಸಾಮ್ರಾಟರ ಸಂರಕ್ಷಣೆಗೆ ಟೊಂಕ ಕಟ್ಟಿದ್ದರು. ಅವರ ಹಲವು ಶಾಸನಗಳಲ್ಲಿ ಕೇವಲ ಮೂರುದೃಷ್ಟಾಂತಗಳನ್ನು ನೋಡಬಹುದು :

i. ಚೆಲ್ಲಕೇತನ ಶ್ರೀಮತ್ ಬಂಕೆಯರಸರ್ + ಬನವಾಸಿ ಪನ್ನಿರ್ಚ್ಛಾಸಿರಮು ಮಾನ್ + ಬೆಳ್ಗಲಿ ಮೂನೂಱುಮಾಂ ಕುನ್ದರಗೆ ಎೞ್ಪತ್ತುಮಾಂ ಕುನ್ದೂರಯ್ನೂ ಱುಮಾ ಪುರಿಗೆಱೆ ಮೂನೂಱುಮಾಂ ಬಂಕೆಯರಸರಾಳುತ್ತಿರೆ ಬಂಕೆಯನ ಮಗಂ ಕುನ್ದಟ್ಟೆ ನಿಡುಗುನ್ದಗೆ ಪನ್ನೆರಡು ಮಾಂನಾಳುತ್ತಿೞ್ದು [ಕ.ಇ.೧.೧೫.೯ ಶ. ಶಿಗ್ಗಾಂವಿ]

ii. ಮಾಸಾಮನ್ತ ಚಲ್ಲಧ್ವಜರಣದುತ್ತರಂಗನೆನ್ತು ಮೊಳ್ಳಿದಂ

[ಎ.ಕ. ೮ ಸೊರಬ. ೮೮.೯೧೨]

iii. ಮಹಾಸಾಮನ್ತಂ ಚೆಲ್ಲಕೇತನನ್ [ಸೌ.ಇ.ಇ.೧೮. ೨೩. ೯೨೮. ಹಳೇರಿತ್ತಿ]

ಚೆ(ಚ)ಲ್ಲ ಧ್ವಜರಾದ ಈ ಚೆಲ್ಲಕೇತ ಮನೆತನಕ್ಕೂ ‘ಕೆಲ್ಲ’ ವಂಶಕ್ಕೂ ಸಂಬಂಧವಿದ್ದು ಇವೆರಡೂ ಒಂದೇ ಮೂಲದ ಕುಲವೆಂದು ತೋರುತ್ತದೆ. ಕಕಾರ ಚಕಾರ ಸ್ವನ ವ್ಯತ್ಯಾಸವು ದ್ರಾವಿಡ ಭಾಷೆಗಳ ಇತಿಹಾಸದಲ್ಲಿ ಹೊಸದಲ್ಲವೆಂಬ ಭಾಷಾವಿಜ್ಞಾನ ಹಿನ್ನೆಲೆಯಲ್ಲೂ, ಕೆಲ್ಲರೂ ಚೆಲ್ಲರೂ ಜೈನರೆಂಬ ಹಿನ್ನೆಲೆಯಲ್ಲೂ ಇವರ ಏಕಮೂಲವನ್ನು ಪರಿಭಾವಿಸಬಹುದು.

೮. ಕೆಲ್ಲ ಎಂಬ ಜೈನ ಮನೆತನದ ಕೆಲವರು ಗದಗ ತಾಲೂಕು ಮತ್ತು ಅಣ್ಣಿಗೆರೆ (ನವಲ್ಗುಂದ ತಾಲೂಕು) ಸುತ್ತಮುತ್ತಲಿನ ಊರುಗಳಲ್ಲಿಯೂ ಇದ್ದರು. ಅಣ್ಣಿಗೆರೆಯ ಗಂಗೆ ಪೆರ್ಮಾನಡಿ ಬಸದಿಗೆ, ದತ್ತಿಯಾಗಿ ಹೊಲನೆಲ ಮನೆ ಹೊನ್ನು ಇವನ್ನು ಬಿಟ್ಟು ಕೊಟ್ಟ ಜೈನ ಶ್ರಾವಕ ಮನೆತನಗಳಲ್ಲಿ ಕೆಲ್ಲಕುಲದವರೂ ಸೇರಿರುವುದನ್ನು ಗಾವರವಾಡ ಶಾಸನ ನಮೂದಿಸಿದೆ [ಎ.ಇ. ೧೫. ೨೩. ೧೦೭೧ – ೭೨. ಗಾವರಿವಾಡ ಪು. ೩೪೩. ಸಾಲು : ೭೩ – ೭೪]: ಕೆಲ್ಲರ ಗೊರವಿ ಸೆಟ್ಟಿಯ ಸಾಮ್ಯಕ್ಕೆ ಮತ್ತರೆಂಟು ಮನೆವೊಂದು ಭೋಗವಾಡಗೆ ಗದ್ಯಾಣಂ ನಾಲ್ಕು.

೯. ವ್ಯಕ್ತಿವಾಚಕವಾಗಿಯೂ (ಕೆಲ್ಲಭಟರಿ), ಸ್ಥಳವಾಚಿಯಾಗಿಯೂ (ಕೆಲ್ಲಿಪುಸೂರು, ಕೆಲ್ಲಪುತ್ತಿಗೆ, ಕೆಲ್ಲಂಗೆಱೆ) ಈ ಒಂದು ಮನೆತನದ ಹೆಸರು ಬಳಕೆಯಾಗಿರು ವುದು ಈ ಶಬ್ಧ ಕಾಲಕ್ರಮೇಣ ಗಳಿಸಿದ ಅರ್ಥವ್ಯಾಪ್ತಿಗೆ ಸಾಕ್ಷಿಯಾಗಿದೆ. ಕೆಲ್ಲಎಂಬುದು, ಒಂದೂವರೆ ಸಾವಿರ ವರ್ಷಕ್ಕೂ ಹಿಂದಿನಿಂದ ಕನ್ನಡ ನಾಡಿನಲ್ಲಿ ಹಾಸುಹೊಕ್ಕಾಗಿ ಬೆರೆತು ಹೋದ, ಒಂದು ಹೆಸರಾಂತ ಮನೆತನದ ಮಾತೆಂಬುದು ಸಾಂಸ್ಕೃತಿಕವಾಗಿ ಮನನೀಯವಾಗಿದೆ. ಇಲ್ಲಿಯೇ ಹೇಳಬಹು ದಾದ ಮತ್ತೊಂದು ವಿಚಾರ : ಕೆಲ್ಲಿ ಎಂಬುದು ಒಂದು ಜಾತಿಯ ಮರ, ಹಾಗೂ ಕಿಲ್ಲಂಗಿ ಎಂಬುದು ಒಂದು ಜಾತಿಯ ಸಸ್ಯ – ಎಂಬ ಅರ್ಥವಿರುವ ಶಬ್ದಗಳಾಗಿರುವುದನ್ನು ಗಮನಿಸಿದರೆ ಕೆಲ್ಲ (ಲ್ಲಿ) ಚೆಲ್ಲ ಎಂಬುದೂ ಒಂದು ವೃಕ್ಷ ವಿಶೇಷ ನಾಮವೆಂದು ಹೇಳಬಹುದೆನಿಸುತ್ತದೆ.

ಆಕರಗಳು

೧. ನೇಗಿನಹಾಳ, ಡಾ.ಎಂ.ಬಿ.; ‘ಹಲ್ಮಿಡಿಶಾಸನದ ಅರ್ಥವಿವೇಚನೆ,’ ಬರಹಬಾಗಿನ, ೧೯೯೬ (ಡಾ. ಹಂಪನಾ ಗೌರವ ಗ್ರಂಥ, (ಸಂ) ಫ್ರೊ. ಎಚ್.ವಿ.ನಾಗೇಶ್.)

೨. ನರಸಿಂಹಮೂರ್ತಿ ಡಾ.ಪಿ.ಎನ್. : i. ಕಾರ್ಕಳ – ಒಂದು ಪ್ರಾದೇಶಿಕ ಅಧ್ಯಯನ, ‘ನೇತ್ರಾವತಿ’, ೧೯೮೫, ಪು. ೧-೨೫

ii. Some Interesting Names and Terms in the memorial Epigraphs from Kelliputtige, StudiesinIndianPlaceNames-VI.

೩. Ramesh, Dr.K.V., : A History of South Kanara, 1970

ii. (ed) Inscriptions of Western Gangas, 1984

iii. (ಸಂ.) ತುಳುನಾಡಿನ ಶಾಸನಗಳು

೪. ಶೆಟ್ಟಿ ಎಸ್.ಡಿ. : ‘ದಕ್ಷಿಣ ಕನ್ನಡ ಜಿಲ್ಲೆಯ ಧರ್ಮ ಪರಂಪರೆ’, ಬರಹ ಬಾಗಿನ, ೧೯೯೬, ಪು. ೨೨೭-೪೩

೫. ನಾಗರಾಜಯ್ಯ, ಹಂಪ .: ಸಾಂತರರು – ಒಂದು ಅಧ್ಯಯನ, ೧೯೯೭