ಸೃಷ್ಟಿಯ ಪ್ರತಿಯೊಂದು ಪದಾರ್ಥಕ್ಕೂ ಒಂದು ಹಿನ್ನೆಲೆ, ಇತಿಹಾಸ ಇರುತ್ತದೆ; ಪ್ರತಿಯೊಬ್ಬ ವ್ಯಕ್ತಿಗೂ, ಪ್ರತಿಯೊಂದು ಊರಿಗೂ ಚರಿತ್ರೆ ಇರುತ್ತದೆ. ವ್ಯಕ್ತಿಯ ಹೆಸರೂ, ಊರಿನ ಹೆಸರೂ ಬರಿಯ ಹೆಸರುಗಳಲ್ಲ. ಆ ಹೆಸರುಗಳ ಉಸಿರಲ್ಲಿ, ಬಸಿರಲ್ಲಿ ಆತ್ಮಚರಿತ್ರೆ ಇರುತ್ತದೆ. ಕನ್ನಡದ ಶಾಸನಗಳಲ್ಲಿ ಸಾವಿರಾರು ಊರುಗಳ ಹೆಸರುಗಳು ಸಿಗುತ್ತವೆ. ಅಂತಹ ಹೆಸರುಗಳಲ್ಲಿ ಅಡಗಿರುವ ನಾನಾ ಅಂಶಗಳನ್ನು ಅಧ್ಯಯನ ಮಾಡುವ ಪ್ರಯತ್ನಗಳೂ ನಡೆದಿವೆ. ಪ್ರಸ್ತುತ ಸಣ್ಣ ಹಂಪಬಂಧದಲ್ಲಿ ಜೈನ ಪಳೆಯುಳಿಕೆಯ ಕೆಲವು ಸ್ಥಳನಾಮಗಳನ್ನು ಗುರುತಿಸುವ ಪ್ರಯತ್ನವಿದೆ.ಚಂದ್ರಕೊಡೆ

೧. ಅರುವ(ಹ)ನಹಳ್ಳಿ: ಎ.ಕ. ೭ (ಪ) ಮದ್ದೂರು ೯೨ (೧೧೧ ಮವ ೧೧೮) ೧೩೮೦ ಅರುವನಹಳ್ಳಿ (ಮಂಡ್ಯಜಿ. / ಮದ್ದೂರು ತಾ.) ಪು. ೩೦೮.

ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನಲ್ಲಿರುವ ‘ಅರುವನಹಳ್ಳಿ’ಯಲ್ಲಿ ಒಟ್ಟು ೧೩ ಶಾಸನಗಳು ದೊರೆತಿವೆ [ಅದೇ, ೮೪ ರಿಂದ ೯೬; ಪು. ೩೦೩ ರಿಂದ ೩೧೧]. ಈ ಊರಿನ ಹೆಸರಿನ ಸರಿಯಾದ ರೂಪ ‘ಅರುಹನಹಳ್ಳಿ’ ಎಂಬುದು. ಇದು ಶಾಸನಗಳಲ್ಲಿ ದಾಖಲಾಗಿದೆ:

ಅರುಹನಹಳ್ಳಿಯ ಕೀರ್ತ್ತಿಯರ್ಸರ ಮಕ್ಕಳು, ಅದೇ ಪು. ೩೦೪
ಅರುಹನ ಹಳ್ಳಿಯ ಭಟ್ಟರ ಬಾ……………… ಪು. ೩೦೭
ಅರುಹನ ಹಳ್ಳಿಯಲ್ಲಿ ಕೆಂಪಣ್ಣವೊಡೆಯರು… ಪು. ೩೦೮
ಅರುಹನ ಹಳ್ಳಿಯ ಸಮಸ್ತ ಗಉಡು ಪ್ರಜೆ…….. ಪು. ೩೧೦

ಅರುಹನಹಳ್ಳಿ ಎಂಬುದು ಕ್ರಮೇಣ ಉಚ್ಛಾರ ಸೌಲಭ್ಯಕ್ಕಾಗಿ ಅರುವನಹಳ್ಳಿ ಎಂದಾಗಿದೆ. ಅರುಹ (ಅರ್ಹಂತ-ಜಿನ) ನ ಬಸದಿಗಳು ಪ್ರಮುಖವಾಗಿ ಇದ್ದುದರಿಂದ ಈ ಊರಿಗೆ ಅರುಹನಹಳ್ಳಿ ಎಂದು ಹೆಸರಾಗಿದೆ. ಇಲ್ಲಿನ ಶಾಸನಗಳಲ್ಲಿ ‘ಸಾಕ್ಷಿಗಳ ಒಪ್ಪ ಶ್ರೀವೀತರಾಗ ವೀತರಾಗ’ (ಅದೇ, ೮೯.೧೩೮೮. ಪು. ೩೦೭) ಎಂದು ಇರಬೇಕಾದ ಜೈನ ಪ್ರಭಾವ ನಿಚ್ಚಳವಾಗಿದೆ. ಆದರೆ ಇಂದು ಈ ಊರಿನಲ್ಲಿ ಜಿನಮಂದಿರದ ಕುರುಹುಗಳು ಉಳಿದಿಲ್ಲ.

೨. ಅರುಹನ ಹಳ್ಳಿ ಎ.ಕ. ೭ (ಪ) ನಾಮಂ. ೧೬೯ (೪ ನಾಮಂ ೯೪) ೧೧೪೨. ಕಸಲಗೆರೆ (ಮಂಡ್ಯಜಿ. / ನಾಮಂ ತಾ.) ಪು. ೧೬೭-೬೯

ಈ ಶಾಸನದಲ್ಲಿ ಬಸದಿಗೆ ವಾಯುವ್ಯದ ದೆಸೆಯಲ್ಲಿದ್ದ ಅರುಹನ ಹಳ್ಳಿಯ ಸೀಮಾಂತರವನ್ನು ಹೇಳಿದೆ [ಸಾಲು : ೪೨ ಮತ್ತು ೪೫].

ಮದ್ದೂರು ತಾಲೂಕಿನಲ್ಲಿ ಒಂದು ಅರುಹನಹಳ್ಳಿ ಹಾಗೂ ನಾಗಮಂಗಲ ತಾಲೂಕಿನಲ್ಲಿ ಒಂದು ಅರುಹನಹಳ್ಳಿ- ಹೀಗೆ ಎರಡು ಅರುಹನ ಹಳ್ಳಿಗಳನ್ನು ಶಾಸನಗಳು ದಾಖಲಿಸಿವೆ. ಈ ಪ್ರಸ್ತುತ ಶಾಸನದಲ್ಲಿ ಅತ್ತಿಮಬ್ಬೆಯ ಹೆಸರಿನ ಉಲ್ಲೇಖವೂ ಬಂದಿರುವುದು ಗಮನಾರ್ಹವಾಗಿದೆ.

ಅರುಹನಹಳ್ಳಿ ಎಂಬ ಊರಿನ ಹೆಸರನ್ನು ಪರಿಭಾವಿಸುವ ಸಂದರ್ಭದಲಿ ‘ಅರುಹನಕಲ್ಲ ಅಡ್ಡವಟ್ಟಿ’ [ಅದೇ, ನಾಮಂ. ೬೧ (೪ ಮತ್ತು ೨೮) ೧೧೩೮. ಲಾಲನಕೆರೆ (ಮಂಡ್ಯ ಜಿ. / ನಾಮಂ ತಾ.) ಪು. ೩೬] ಎಂಬೊಂದು ಗಡಿಕಲ್ಲ ಮೇರೆಯ ಸೂಚನೆಯನ್ನೂ ಗಮನಿಸಬಹುದು.

ಅರುಹನಹಳ್ಳಿ : ಬೆಳಗುಳದ ಜಿನಧರ್ಮಕ್ಕೆ ಬಿಟ್ಟಂಥಗ್ರಾಮ ಅರ್ಹನಹಳ್ಳಿ [ಎ.ಕ. ೨ (ಪ) ೩೫೧ (೨೪೯) ೧೭೨೩]

೩. ಜಿನನಾಥಪುರ ಶ್ರವಣಬೆಳಗೊಳ ಸಮೀಪದ ಪ್ರಖ್ಯಾತ ಬಸದಿ ಇರುವ ಒಂದು ಊರಿನ ಹೆಸರು ಈ ಜಿನನಾಥಪುರ. [ಎ.ಕ. ೨ (ಪ) ೫೨೪ (೩೭೮) ರಿಂದ ೫೩೯ (೩೮೯) ರವರೆಗಿನ ೧೬ ಶಾಸನಗಳು; ಪು. ೩೨೩ ರಿಂದ ೩೩೧.] ಜಿನನಾಥಪುರ ಎಂಬುದು ವ್ಯಾಖ್ಯಾನ ನಿರಪೇಕ್ಷವಾದ ಜೈನ ಗ್ರಾಮನಾಮ ರೂಪವಾಗಿದೆ.

೪. ಜಿನ್ನಹಳ್ಳಿ : ಇದು ಇಂದಿನ ಮೈಸೂರು ಜಿಲ್ಲೆಯ ಹೆಗ್ಗಡದೇವನ ಕೋಟೆ ತಾಲ್ಲೂಕಿನಲಿರುವ ಒಂದು ಹಳ್ಳಿಯ ಹೆಸರು. ಇಲ್ಲಿ ಮೂರು ಶಾಸನಗಳು ದೊರೆತಿವೆ. ಈ ಊರು ಗಂಗರ ಆಳ್ವಿಕೆಗೆ ಸೇರಿತ್ತೆಂದು ಈ ಶಾಸನಗಳಿಂದ ತಿಳಿದು ಬರುತ್ತದೆ: ಎ.ಕ. ೩ (ಪ) ಹೆಕೋ. ೨೪ (೪ ಹೆಕೋ ೧೦೮), ೨೫ (೪. ಹೆಕೋ ೧೦೯) ಮತ್ತು ೨೬ (೪ ಹೆಕೋ ೧೧೦). ಜಿನ್ನಹಳ್ಳಿಯ ಈ ೨೬ ನೆಯ ಶಾಸನವು ಕ್ರಿ.ಶ. ೯ – ೧೦ ನೆಯ ಶತಮಾನದ್ದಾಗಿದೆ.

೫. ಜಿನ್ನೇಹಳ್ಳಿ : ಇದು ಕೂಡ ಶ್ರವಣಬೆಳಗೊಳದ ನೆರೆಹೊರೆಯಲ್ಲಿ ಇರುವ ಹಳ್ಳಿಗಳಲ್ಲೊಂದು. ಒಂದು ಶಾಸನದಲ್ಲಿ ಈ ಹಳ್ಳಿಗೆ ‘ಪುಟಸಾಮಿ ಸೆಟ್ಟಿಯರ ಮಗ ಚೆಂನ್ನಣನು ಬಿಟ್ಟ ಜಿಂನೆಯನಹಳ್ಳಿಯ ಗ್ರಾಮ’ ಎಂದಿದೆ [ಎ.ಕ.೨ (ಪ) ೫೪೦ (೩೯೦) ೧೬೭೩. ಪು. ೩೩೨]. ಜಿಂನೆಯನಹಳ್ಳಿ ಎಂಬುದು ಜಿನ್ನೇನಹಳ್ಳಿ ಎಂಬುದಾಗಿ ಮಾರ್ಪಾಟು ಪಡೆದುಕೊಂಡಿದೆಯೆನ್ನಬಹುದು. ಇಲ್ಲಿ ದೊರೆತಿರುವ ೧೪ ನೆಯ ಶತಮಾನದ ಶಾಸನದಲ್ಲಿ [ಅದೇ, ೫೪೧ (೩೯೧)] ಈ ಜಿನ್ನೇನ ಹಳ್ಳಿಯು ಶ್ರೀ ಚಾಮುಂಡರಾಯನ ಬಸ್ತಿಯ ಒಳಪಟ್ಟಿತ್ತೆಂದು ಹೇಳಿದೆ.

೬. ಜಿನ್ನನ್ನಹಳ್ಳಿ : ಬೆಳಗುಳದ ಜಿನಧರ್ಮಕ್ಕೆ ಬಿಟ್ಟಂಥ ಗ್ರಾಮ ಜಿನ್ನನ್ನಹಳ್ಳಿ [ಎ.ಕ.೨ (ಪ) ೩೫೧ (೨೪೯) ೧೭೨೩, ಪು. ೨೦೨. ಸಾಲು : ೨೨].

೭. ತಿಪ್ಪೂರುತೀರ್ಥದಹಳ್ಳಿ ಮಂಡ್ಯಜಿಲ್ಲೆ, ಮದ್ದೂರುತಾಲ್ಲೂಕಿನ ಅರೆತಿಪ್ಪೂರು ಒಂದು ಪ್ರಸಿದ್ಧ, ಪ್ರಾಚೀನ ಜೈನ ಕೇಂದ್ರ. ಇದನ್ನು ಶಾಸನಗಳಲ್ಲಿ ತಿಪ್ಪೂರು ತೀರ್ಥಹಳ್ಳಿ ಎಂದು ಕರೆಯಲಾಗಿದೆ [ಎ.ಕ. ೭ (ಪ) ೧೦೬ (೧೧೧ ಮವ ೪೮) ೧೭೦೦. ಹಾಗಲಹಳ್ಳಿ, ಪು. ೩೧೯]. ಜೈನದೇವಾಲಯಗಳಿಂದಾಗಿ ಈ ಊರಿಗೆ ‘ತೀರ್ಥ’ ವೆಂದು ಹೆಸರಾಗಿದೆ.

೮. ಪಾರ್ಶ್ವನಾಥಪುರ – ಪಾರ್ಶ್ವಪುರ : ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕು ಯಲ್ಲಾದಹಳ್ಳಿಯ ಪ್ರಾಚೀನ ಹೆಸರು ಪಾರ್ಶ್ವನಾಥ ಪುರ, ಅದರ ಸಣ್ಣಿಸಿದ ರೂಪ ಪಾರ್ಶ್ವಪುರ. ಇದಕ್ಕೆ ಸೂರನಹಳ್ಳಿ ಎಂದೂ ಹೆಸರು. ಅನಂತರ ಯಲ್ಲಾದಹಳ್ಳಿ ಎಂದೂ ಮಾರ್ಪಾಟು ಪಡೆದಿದೆ.

            ಶ್ರೀ ಪಾರ್ಶ್ವಪುರಮಂ ಮಾಡಿ ದೇವರಾಜಗೆ ಧಾರಾಪೂರ್ವಕಂ ಮಾಡಿ
ಯಾಚಂದ್ರಾರ್ಕ್ಕತಾರಂ ಸಲುವಂತಾಗಿ ಕೊಟ್ಟ(ರ್)
            [ಎ.ಕ. ೭ (ಪ) ನಾಮಂ. ೬೪ (೪ ನಾಮಂ ೭೬) ೧೧೪೫. ಯಲ್ಲಾದಹಳ್ಳಿ ಪು. ೪೯]

೯. ಬಸದಿಹಳ್ಳಿ : (ಮಂಡ್ಯಜಿಲ್ಲೆ / ತಾಲ್ಲೂಕು) ಗುತ್ತಲು ಗ್ರಾಮದ ಶಾಸನದಲ್ಲಿ ಎರಡು ಕಡೆ ಬಸದಿಹಳ್ಳಿಯನ್ನು ಹೆಸರಿಸಿದೆ: ಬಸದಿಯೆಂದರೆ ಜೈನ ದೇವಾಲಯ – ಜಿನಾಲಯ. ಬಸದಿಯಿಂದಾಗಿ ಊರಿಗೆ ಬಸದಿಹಳ್ಳಿ ಎಂದು ಕರೆಯಲಾಗಿದೆ [ ಎ.ಕ. ೭ (ಪ) ಮಂ ೧೦೬ (೧೧೧ ಮಂ ೧೦೦) ೪೦. ಸಾಲು; ೯, ೧೮]. ಬಸದಿಹಳ್ಳಿ ಎಂಬುದು ಬಸ್ತಿ ಹಳ್ಳಿ ಎಂದಾಗಿ, ಅದು ಮತ್ತೆ ಕೇವಲ ಬಸ್ತಿ ಎಂಬ ರೂಪವನ್ನು ಪಡೆದ ಊರುಗಳು ಕನ್ನಡ ನಾಡಿನಲ್ಲಿ ಅನೇಕ ತಾಲ್ಲೂಕುಗಳಲ್ಲಿವೆ. ಅದು ಮತ್ತೆ ದೊಡ್ಡ ಬಸ್ತಿ, ಚಿಕ್ಕಬಸ್ತಿ, ಉಲ್ಲಾಳಬಸ್ತಿ, ಬಸ್ತಿಹೊಸಕೋಟೆ, ಬಸ್ತಿಪುರ, ಬಸ್ತಿತಿಪ್ಪೂರು [ಅದೇ, ಮದ್ದೂರು ೫೧. ೧೪ -೧೫ ಶ], ಬಸ್ತಿಹಳ್ಳಿ [ಎ.ಕ. ೯ (ಪ) ಬೇ. ೩೮೮ ರಿಂದ ೪೦೮] ಮತ್ತು [ಎ.ಕ. ೬ (ಪ) ಪಾಂಪು ೧೬ (೧೧೧ ಶ್ರೀಪ ೧೪೭) ೯ – ೧೦ ಶ.] ಕ್ಯಾತನಹಳ್ಳಿಯ (ಮಂಡ್ಯ ಜಿ. ಪಾಂಪು ತಾ.) ಪು. ೧೧೩], ಬಸ್ತಿಮಾದಳಿಗ್ರಾಮ [ಎ.ಕ. ೪ (ಪ) ಪು ೩೨ (೪ ಹು ೧೩೯) ೧೬೬೯ ತರೀಕಲ್ಲು (ಮೈಜಿ. / ಹು ತಾ.) ಪು. ೫೦೪]- ಎಂಬ ನಾನಾ ರೂಪಗಳಲ್ಲಿ ಶಾಸನಗಳಲ್ಲಿ ಕಂಡುಬರುತ್ತದೆ. ಬಸದಿಗಳ ಪ್ರಾಮುಖ್ಯ ಹಾಗೂ ಬಸದಿಗಳ ವಿಚಾರದಲ್ಲಿ ಜನ ತಳೆದ ಪವಿತ್ರವಾದ ಭಾವನೆ – ಇವು ಬಸದಿಗಳ ಹೆಸರಿನ ಎಡೆಗಳಿಂದ ಸ್ಪಷ್ಟವಾಗಿತ್ತವೆ.

೧೦. ಮಾಣಿಕದೊಡಲೂರು : ಶ್ರೀಮಾನ್ ಮಹಾದಂಡನಾಯಕ ಪುಣಿಸಮಯ್ಯ ಬಸದಿಯಂ ಮಾಡಿಸಿದ ಮಾಣಿಕದೊಡಲೂರು ಮಂ (ಎ.ಕ. ೬ (ಪ) ಕೃಪೇ ೧೦೭ (೪ ಕೃಪೇ ೩೭) ಅತೇದಿ. ಬಸ್ತಿ (ಮಂಡ್ಯ ಜಿ / ಕೃಪೇತಾ) ಪು. ೯೬].

ಮಾಣಿಕದೊಡಲೂರು ಎಂಬುದು ಅನಂತರದ ರೂಪ : ಈ ಸಮಾಸ ಶಬ್ದದಲ್ಲಿರುವ ಪೂರ್ವಪದ ತದ್ಭವರೂಪ. ಇದಕ್ಕೂ ಹಿಂದಿನ ರೂಪ ‘ಮಾಣಿಕ್ಯವೊೞಲ್’ ಎಂಬುದು:

ಶ್ರೀಮತು ಮಾಣಿಕ್ಯವೊೞಲ ಹೊಯ್ಸಳಜಿನಾಲಯ
            [ಎ.ಕ. ೬ (ಪ) ಕೃಪೇ ೧೦೬ (೪ ಕೃಪೇ ೩೬) ೧೧೬೫ ಬಸ್ತಿ ಪು. ೯೬ ಸಾಲು : ೬]
ರಿಶಿಯರಾಹಾರದಾನಕ ಮಾಣಿಕ್ಯವೊೞಲ ಮಾಡಿ [ಅದೇ, ಸಾಲು : ೮]

ಜೈನಧರ್ಮ – ಸಾಹಿತ್ಯದ ಹಿನ್ನೆಲೆಯಲ್ಲಿ ಇದು ಮಹತ್ವದ ಸ್ಥಳನಾಮ. ಮಾಣಿಕ್ಯಜಿನ, ಮಾಣಿಕ್ಯದೇವರು, ಮಾಣಿಕ್ಯಸ್ವಾಮಿ ಎಂದರೆ ಜೈನಧರ್ಮದ ಆದಿನಾಥ ತೀರ್ಥಂಕರರು. ಮಾಣಿಕ್ಯಜಿನಾಲಯವು ಆದಿನಾಥ (ವೃಷಭನಾಥ, ಪುರುದೇವ, ಆದಿದೇವ) ಜಿನಮಂದಿರ ಎಂದರ್ಥ. ಹೀಗಾಗಿ ಈ ಶಾಸನೋಕ್ತ ಹೊಯ್ಸಳ ಜಿನಾಲಯವು ಆದಿ ಜಿನಾಲಯವಾಗಿತ್ತು. ಆದಿಜಿನಾಲಯವಿದ್ದುದರಿಂದ ಆ ಊರಿಗೆ ಮಾಣಿಕ್ಯವೊೞಲ್ (ಮಾಣಿಕ್ಯ + ಪೊೞಲ್) ಎಂದು ಹೆಸರಾಯಿತು. ಇದು ಜನರ ಉಚ್ಛಾರದ ಅನುಕೂಲಕ್ಕಾಗಿ ಮಾಣಿಕದೊಡಲೂರು ಎಂದು ವ್ಯತ್ಯಾಸಹೊಂದಿ, ಮತ್ತೆ ಅಂತಿಮವಾಗಿ ಇದು ‘ಬಸ್ತಿ’ ಎಂಬ ಹೆಸರಿನಿಂದ ಇಂದು ಚಲಾವಣೆಯಲ್ಲಿದೆ. ಈ ಊರಿಗೆ ಇಂದು ಚಾಲ್ತಿಯಲ್ಲಿರುವ ಬಸ್ತಿ ಎಂಬ ಹೆಸರಿನಿಂದ ಇಂದು ಚಲಾವಣೆಯಲ್ಲಿದೆ. ಈ ಊರುಗೆ ಇಂದು ಚಾಲ್ತಿಯಲ್ಲಿರುವ ಬಸ್ತಿ ಎಂಬ ಹೆಸರೇ ಸ್ಪಷ್ಟವಾಗಿ ಸೂಚಿಸುವಂತೆ, ಈ ಹೆಸರು ಬಸದಿಯ ಕಾರಣದಿಂದ ಬಂದಿದೆ; ಅದರಂತೆ ಮಾಣಿಕ್ಯವೊೞಲು ಎಂಬುದೂ ಮಾಣಿಕ್ಯಜಿನನ ಬಸದಿಯಿಂದ ಬಂದ ಹೆಸರಾಗಿದೆ.

ಜೈನ ಸಮಾಜದಲ್ಲಿ ವ್ಯಕ್ತಿಗಳಿಗೆ ಇರುವ ಹೆಸರುಗಳಲ್ಲಿ ಆದೆಪ್ಪ, ಆದೆಣ್ಣ, ಆದಯ್ಯ, ಆದಿರಾಜು, ಮಾಣಿಕ್ಯರಾಜು, ಮಾಣಿಕ್ಯಪ್ಪ. ಮಾಣಿಕ್ಯಣ್ಣ – ಎಂಬುವೆಲ್ಲ ಆದಿಜಿನನಿಗೆ ಸಂಬಂಧಿಸಿದ ವ್ಯಕ್ತಿ ವಾಚಕ ಮಾತುಗಳು. ಮಾಣಿಕ್ಕಮ್ಮ, ಮಾಣಿಕ್ಯ, ಮಾಣಿಕ್ಯಕುಮಾರಿ – ಎಂದು ಹೆಂಗಸರಿಗೂ ಹೆಸರಿಡುತ್ತಾರೆ.

ಈ ಎಲ್ಲ ಹಿನ್ನೆಲೆಯಲ್ಲಿ ಮಾಣಿಕ್ಯವೊೞಲ್ ಎಂಬುದು ವಿಶಿಷ್ಟವಾದ ಜೈನರ ಸ್ಥಳ ನಾಮವಾಗಿದೆ.

೧೧. ಮುಕ್ಕೊಡೆಹಳ್ಳಿ (ಮುಕಡನಹಳ್ಳಿ / ಮುಕ್ಕೊಡ(ಹ)ಳ್ಳಿ / ಮುಕೊಡಿಹಳ್ಳಿ / ಮುಕ್ಕಡಿಹಳ್ಳಿ / ಮುಕ್ಕಡಿಹಳ್ಳಿ) : ಮೈಸೂರು ಜಿ / ಚಾಮರಾಜನಗರ ತಾಲೂಕು.

ಮಲೆಯೂರು ಗ್ರಾಮಕ್ಕೆ ಹತ್ತಿರದಲ್ಲಿ ಇರುವ ಇಂದಿನ ಮುಕಡನಹಳ್ಳಿಯ ಹಳೆಯ ಹೆಸರು ಮುಕ್ಕೊಡೆಹಳ್ಳಿ, ಇದರ ಸಂಸ್ಕೃತರೂಪವೇ ಛತ್ರತ್ರಯಪುರ. ಮುಕ್ಕೊಡೆಯು ಜಿನರಿಗೆ ಇರುವ ಎಂಟು ಮಹಿಮೆ (ಅಷ್ಟಮಹಾಪ್ರಾತಿಹಾರ್ಯ)ಗಳಲ್ಲಿ ಒಂದು. ಈ ಹಳ್ಳಿಯಲ್ಲಿ ಗಂಗರ ಕಾಲಕ್ಕೆ, ಸುಮಾರು ಏಳು – ಎಂಟನೆಯ ಶತಮಾನಕ್ಕೆ ಸೇರಿದ ಬಸದಿಯ ಭಗ್ನ ಅವಶೇಷಗಳಿವೆ. ಅಲ್ಲದೆ ಪ್ರಾಚೀನ ಜಿನಶಾಸನದೇವಿಯ ಮುರ್ತಿಯೊಂದು ಇಲ್ಲಿದ್ದು ಇಂದಿಗೂ ಇಲ್ಲಿ ಇಡೀ ಊರಿನ ಮುಖ್ಯದೇವತೆಯಾಗಿ ಆರಾಧನೆಗೊಳ್ಳುತ್ತಿದೆ. [ಎ.ಕ. ೪ (ಪ) ಚಾನ ೩೭೬, ೩೭೭]. ಶಾಸನಗಳಲ್ಲಿ ಸಹ ಮುಕೊಡಿಹಳ್ಳಿ ಎಂಬ ಪ್ರಯೋಗವಿದೆ; ಇವು ಕ್ರಮವಾಗಿ ಕ್ರಿ.ಶ. ೧೩೧೬ ಮತ್ತು ೧೬ನೆಯ ಶತಮಾನದ ಶಾಸನಗಳು [ಅದೇ, ಪು. ೨೪೯ -೫೦]. ಮುಕ್ಕೊಡೆಹಳ್ಳಿಯ ಪ್ರಾಚೀನ ಬಸದಿಯ ಅವಶೇಷಗಳನ್ನು ನೆರೆಯ ಊರಾದ ಕೆಲಸೂರಿನಲ್ಲಿರುವ ಚಂದ್ರಪ್ರಭ ಬಸದಿಯ ಆವರಣದಲ್ಲಿ ಸೇರಿಸಲಾಗಿದೆ. ಈ ಕೆಲಸೂರು ಪ್ರಾಚೀನ ಕಾಲದಿಂದಲೂ ಜೈನ ಕೇಂದ್ರವಾಗಿದೆ. ಗಂಗರ ಸೈಗೊಟ್ಟ ಶಿವಮಾರನ ಕಾಲದಲ್ಲಿಯೇ, ಇಲ್ಲೊಂದು ಬಸದಿಯಿದ್ದು ಅದಕ್ಕೆ ದತ್ತಿ ಕೊಡಲಾಗಿತ್ತು; ಕೆರ್ಲ್ಲಿಪುಸೂರು ಎಂಬುದು ಕೆಲಸೂರು ಗ್ರಾಮಕ್ಕೆ ಇದ್ದ ಹಳೆಯ ಹೆಸರು [ಅದೇ, ಚಾನ. ೩೪೭. ಕ್ರಿ.ಶ. ೭ ಶ. ಕುಲಗಾಣ (ಮೈಜಿ. / ಚಾನತಾ.). ಪು. ೨೨೨).

೧೨. ವಸದಿಗಾಲ್ : ಕೊಡಗೂರು ವಿಷಯದಲ್ಲಿ (ಕೊಡಗೂರ್ನಾಡು) ಅಂತರ್ಗತ ಕೆಲ್ಲಿಪುಸೂರು ಗ್ರಾಮದ ಚೈತ್ಯಾಲಯಕ್ಕೆ ಗಂಜೆನಾಡ ಕಣ್ಣಮ್ಮನ್ ಮತ್ತು ಇತರರು, ಗಂಗರಸನಾದಮುತ್ತರಸ (ವೃದ್ಧರಾಜ) ಶಿವಮಾರನ (೬೭೯ – ೭೨೬) ಒಪ್ಪಿಗೆ ಪಡೆದು ವಸದಿಗಾಲು ಗ್ರಾಮವನ್ನು ದತ್ತಿಯಾಗಿ ಬಿಟ್ಟು ಕೊಟ್ಟೂರು [ಮೈ.ಆ.ರಿ. ೧೯೨೫ – ೧೦೬; IWG; ೧೯೪೮; ನಂ ೩೫: ೧೩೫ – ೩೯; ಎ.ಕ. ೪ (ಪ) ಚಾಮರಾ. ೩೪೭. ೭ – ೮ ಶ. ಕುಲಗಾಣ ಪು. ೨೨೦ – ೨೪]. ಈ ವಸದಿಗಾಲು ಎಂಬ ಸ್ಥಳನಾಮವು ವಿಶೇಷ ಗಮನಿಕೆ ಅರ್ಹವಾಗಿದೆ. ವಸದಿಗಾಲು ಎಂಬುದು ಬಸದಿಯೂರು ಎಂಬರ್ಥದ ಪ್ರಾಚೀನ ರೂಪ. ಏಳು-ಎಂಟನೆಯ ಶತಮಾನದಲ್ಲಿಯ ಒಂದು ಊರಿಗೆ ಬ(ವ)ಸದಿಗಾಲು ಎಂಬ ಹೆಸರಿತ್ತೆಂಬುದು ಜೈನ ಸ್ಥಳನಾಮ ಅಧ್ಯಯನಕ್ಕೆ ಒಳ್ಳೆಯ ಆಕರವಾಗಿದೆ : Vasadikal as the name of a Village may be taken to indicate the predominance of Jainismthereat [Ramesh, K.V. : IWG; 1984 : 138n]

೧೩. ಶ್ರವಣನಹಳ್ಳಿ : ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಒಂದು ಹಳ್ಳಿಯ ಹೆಸರು ‘ಶ್ರವಣನಹಳ್ಳಿ’ ಎಂದು. ಇಲ್ಲಿ ವೀರ ಕೊಂಗಾಳ್ವ ಜಿನಾಲಯ ಪ್ರಸಿದ್ಧವಾಗಿತ್ತು. ಈ ರಾಜ ಬಸದಿಯಲ್ಲಿ ಜಿನಮುನಿಗಳು, ಶ್ರವಣರು ಇರುತ್ತಿದ್ದರು; ಅವರಿಂದಾಗಿ ಈ ಊರಿಗೆ ಶ್ರವಣನಹಳ್ಳಿ ಎಂದು ಹೆಸರಾಯಿತು. [ಎ.ಕ. ೬ (ಪ) ಕೃಪೇ. ೨೧ (ರಿ ೧೯೨೭ – ೧೫)]. ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕು ಕೊಡಿಗೇನಹಳ್ಳಿ ಹೋಬಳಿಯಲ್ಲಿ ‘ಶ್ರಾವಣ್ಡನಹಳ್ಳಿ’ ಎಂಬ ಗ್ರಾಮವಿದೆ; ಇದರ ನಿಷ್ಪತ್ತಿಯಲ್ಲೂ, ಪೂರ್ವ ಶಬ್ದವನ್ನು ‘ಶ್ರವಣ’ ಸಂಬಂಧದಿಂದ ಗುರುತಿಸಬಹುದು.

೧೪. ಸವಣನ ಕೆಱೆ : [ಎ.ಕ. ೭ – ೮ (೧೯೦೨) ಶಿವಮೊ, ೫೭. ೧೧೧೭ ನಿದಿಗೆ (ಶಿವಮೊ ಜಿ. / ತಾ.) ಪು. ೬೦. ಸಾಲು : ೬೬]. ಸಂಸ್ಕೃತದಲ್ಲಿ, ಜೈನ ಸನ್ಯಾಸಿ ಎಂಬರ್ಥದಲ್ಲಿರುವ ಶಬ್ದ ಶ್ರಮ(ವ)ಣ; ಇದು ಪ್ರಾಕೃತದಲ್ಲಿ ಸಮ(ವ)ಣ ಎಂದಾಗುತ್ತದೆ. ಕನ್ನಡದಲ್ಲಿ ಶ್ರಮಣ – ಶ್ರವಣ, ಸಮಣ – ಸವಣ ಎಂಬ ಎರಡೂ ರೂಪಗಳು ಬಳಕೆಯಾಗಿವೆ; ಶ್ರವಣ (ಬೆಳಗೊಳ) – ಒಳ್ಳೆಯ ಉದಾಹರಣೆ. ಈ ಶಾಸನದಲ್ಲಿ ಸವಣ ಎಂಬ ರೂಪ ಪ್ರಯೋಗವಾಗಿದೆ; ಇದು ಒಂದು ಕೆರೆಗೆ ಇರುವ ಹೆಸರಾಗಿ ಬಂದಿದೆ. ಧಾರವಾಡ ಜಿಲ್ಲೆ / ತಾಲೂಕು ಮುಗದದ ಶಾಸನೋಕ್ತ ‘ಸವಣ್ಗೆರೆ’ ಯೂ ಇದೇ ಅರ್ಥದ ಸ್ಥಳವಾಚಿಯಾಗಿದೆ [ಸೌ. ಇ. ಇ. ೧೧ – ೧. ೭೮ ೧೦೪೫. ಮುಗದ ಪು. ೭೧ ಸಾಲು. ೪೯ – ೫೦].

೧೫. ಸವಣನ ಬಿಳಿಲು : ಕುಂತಳ ವಿಷಯ ಬನವಸೆನಾಡು ಜಿಡ್ಡುಳಿಗೆ ೭೦ ರ ಉದ್ದರೆಯ ಪಂಚಬಸದಿಗೆ ಮಾರಸಿಂಗನ ತಂಗಿ ಸುಗ್ಗಿಯಬ್ಬರಿಸಿಯು ಸವಣನ ಬಿಳಿಲು ಎಂಬ ಹಳ್ಳಿಯನ್ನು ಒಪ್ಪಿಸಿದಳು [ಎ.ಕ. ೮ – ೨ (೧೯೦೨) ಸೊರಬ. ೨೩೩.೧೧೩೮ – ೩೯]

ಕನಕ ಜಿನಾಲಯವೆಸೆದಿರ
ಲನುಪಮನೆಕ್ಕಲನೃಪಾಳ ಸವಣನ ಬಿಳಿಲೊಳ್
ಜನನುತಮೆನೆ ಭಾನುಕೀರ್ತಿ
ಮುನಿಗೊಪ್ಪಿರೆ ಬಿಟ್ಟ ಮತ್ತರಂ ಪಂನ್ನೆರಡು
|| [ಅದೇ]

ಸವಣನ (ಜೈನ ಸನ್ಯಾಸಿಯ) ಹೆಸರಿನ ಈ ಊರು ೧೨ನೆಯ ಶತಮಾನದಲ್ಲಿ ಪ್ರಸಿದ್ಧವಾಗಿತ್ತು.

೧೬. ಸವಣನಹಳ್ಳಿ / ಸಾಣೇನಹಳ್ಳಿ : ಮೇಲೆ ವಿವರಿಸಿ ಹೆಸರಿಸಿರುವ ‘ಸವಣ’ (ಶ್ರಮಣ) ಶಬ್ದವನ್ನು ಹೊತ್ತ ಇನ್ನೊಂದು ಶಾಸನೋಕ್ತ ಗ್ರಾಮ ಸವಣನ ಹಳ್ಳಿ ಎಂಬುದು; ಇದು ಕ್ರಮೇಣ ಮಾರ್ಪಾಟು ಪಡೆದು ಸಾಣೇನಹಳ್ಳಿ ಎಂದಾಗಿದೆ [ಎ.ಕ. ೨ (ಪ) ೫೪೭ (೩೯೭) ೧೧೧೯. ಪು. ೩೩೪ – ೩೫; ಅದೇ, ೫೪೮ (೩೯೮) ೧೨ ಶ. ಪು. ೩೩೬; ಅದೇ, ೫೪೯ (೩೯೯) ೧೨ ಶ. ಪು. ೩೩೭ ಮತ್ತು ಅದೇ, ೫೫೦ (೪೦೦) ೧೨ ಶ. ಪು. ೩೩೭].

೧೭. ಸವಣೇರು : ಅಷ್ಟ ವಿಧಾರ್ಚ್ಚನೆಗಂ ರಿಷಿಯರಾಹಾರ ದಾನಕ್ಕಂ ಸವಣೇಱಂ ಬಿಡಿಸಿಕೊಟ್ಟದತ್ತಿ [ಎ.ಕ. ೨ (ಪ) ೨೭೫ (೧೭೮) ೧೨ ಶ.ಪು. ೧೬೦]; ದಾನಕಿಂ ಸವಣೇಱಂ ಬಿಡಿಸಿಕೊಟ್ಟರ್ [ಅದೇ, ೨೭೮ (೧೮೧) ೧೨ ರ ಪು. ೧೬೧]; ಸವಣೇಱ ಬೆಕ್ಕ ಕಗ್ಗೆಱೆಯ ಬೆಟ್ಟದತ್ತಿ [ಅದೇ, ೩೪೨ (೨೪೦) ೧೨ ಶ.ಪು. ೧೯೩] – ಇವೆಲ್ಲ ಪ್ರಯೋಗಗಳಲ್ಲಿರುವ ಸವಣೇರು ಗ್ರಾಮವು ಜೈನ ಸ್ಪರ್ಶದ ಹೆಸರು. ಸವಣೂರು, ಸವಣಪ್ಪನ ಗುಡ್ದ ಮೊದಲಾದ ಹೆಸರುಗಳೂ ಈ ಮೂಲಕ್ಕೆ ಸಲ್ಲುತ್ತವೆ.

೧೮. ಸವದತ್ತಿ : ಬೆಳಗಾವಿ ಜಿಲ್ಲೆಯ ಸವದತ್ತಿ ಪ್ರಸಿದ್ಧ ಎಲ್ಲಮ್ಮನ ಗುಡಿ ಇರುವ ಯತ್ರಾಸ್ಥಳ. ಜೈನರ ಪದ್ಮಾವತೀಯಕ್ಷಿಯೇ ಇಲ್ಲಿರುವ ಎಲ್ಲಮ್ಮಳೆಂದು ಸಂಶೋಧಕರು ಸ್ಪಷ್ಟಪಡಿಸಿದ್ದಾಗಿದೆ. ಅದರಂತೆ ಎಲ್ಲಮ್ಮ ದೇವಾಲಯವು ರಟ್ಟರ ಪಟ್ಟ ಜಿನಾಲಯವಾಗಿದ್ದ ಸಂಗತಿಯೂ ಬೆಳಕಿಗೆ ಬಂದಿದೆ. ಸವದತ್ತಿ ಎಂಬ ಹೆಸರು ಸಹ ‘ಸವಣದತ್ತಿ’ ಎಂಬ ಮೂಲರೂಪದ ಸಮೆದರೂಪವೆಂದು ನಾನು ಅನ್ಯತ್ರ ವಿವರವಾಗಿ ಪ್ರತಿಪಾದಿಸಿದ್ದೇನೆ. [ನಾಗರಾಜಯ್ಯ, ಹಂಪ: ಮೈಳಾಪತೀರ್ಥ – ಶಾಸನಗಳ ಆಧಾರ : ‘ಸಮ್ಮಿಲನ’ ೧೯೯೪; ೧೭ – ೨೦] ಸವಣದತ್ತಿ – ಸವಂದತ್ತಿ – ಸೌಂದತ್ತಿ – ಸವದತ್ತಿ – ಸೌದತ್ತಿ ಎಂಬ ವ್ಯತ್ಯಾಸಗಳನ್ನು ಪಡೆದುಕೊಂಡಿದೆ. ಸವಣರಿಗೆ ರಟ್ಟರು ಈ ಸ್ಥಳವನ್ನು ದತ್ತಿಯಾಗಿ ಕೊಟ್ಟಿದ್ದರು ಅದರಿಂದ ಸವಣದತ್ತಿ ಎಂಬ ಹೆಸರಾಯಿತು. ಇದನ್ನು ಮತ್ತೆ ಅತಿ ಸಂಸ್ಕೃತೀಕರಣಗೊಳಿಸಿ (HyperSanskritisation) ಸುಗಂಧವರ್ತ್ತಿ ಎಂದು ಹೇಳಲಾಗಿದೆ.

೧೯. ಕಂಬದಹಳ್ಳಿ : ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕು ಕಂಬದಹಳ್ಳಿಗೆ ಅಲ್ಲಿರುವ ಮಾನಸ್ತಂಭಗಳಿಂದ. ಅದರಲ್ಲಿಯೂ ಮುಖ್ಯವಾಗಿ ಎತ್ತರವಾದ ಬ್ರಹ್ಮದೇವರ ಕಂಬದಿಂದ ‘ಕಂಬದಹಳ್ಳಿ’ ಎಂಬ ಹೆಸರು ಬಂದಿದೆ [ಎ.ಕ. ೭ (ಪ) ನಾಮಂ. ೩೩ (೪ ನಾಮಂ ೧೯) ೧೧೧೮ – ೧೯ ಕಂಬದಹಳ್ಳಿ. ಪು. ೨೦ – ೨೨]

೨೦. ಗುಮ್ಮಟನಾಥಪುರ : ತೋಟಹಳ್ಳಿ ಎಂಬ ಹೆಸರಿನ ಗ್ರಾಮಕ್ಕೆ ಗುಂಮಟಪುರ ಎಂದು ಪುನರ್ ನಾಮಕರಣ ಮಾಡಲಾಗಿದೆ. [ಎ.ಕ. ೩ (ಪ) ಹೆಕೋ. ೯೧ (ಎಕ ೪ ಹೆಕೋ. ೧) ೧೪೨೩ ಸರಗೂರು.] ಅರುಂದಲೆಗಣದ ಅಗ್ರಗಣ್ಯರಾದ ಪಂಡಿತದೇವರ ಶಿಷ್ಯ ಬಯಿನಾಡ ಮಹಾಪ್ರಭು ಮಸಣೆಯಹಳಿಯ ಕಂಪಣಗವುಡರು ತಮಗೆ ಸ್ವರ್ಗಾಪವರ್ಗ ನಿಮಿತ್ತವಾಗಿ ಬೆಳಗುಳದ ಶ್ರೀ ಗುಂಮಟನಾಥ ಸ್ವಾಮಿಗಳ ಅಂಗರಂಗ ಭೋಗ ಸಂರಕ್ಷಣಾರ್ಥವಾಗಿ ತಮ್ಮ ಬಯನಾಡೊಳಗಣ ತೋಟಹಳ್ಇಯ ಗ್ರಾಮವನ್ನೂ, ಆ ಚತುಃಸೀಮೆಯೊಳಗಣ ಕೆರೆಗದ್ದೆ ಬೆದ್ದಲು ತೋಟತುಡಿಕೆ ಕುಳಹೊಂಬಳಿ ಆಯಹೊಂನು ಮೊದಲಾದುವನ್ನು ಆಚಂದ್ರಾರ್ಕ ಸಲುವಂತಾಗಿ ಬಿಟ್ಟುಕೊಟ್ಟನು. ಆಗ ತನ್ನ ತೋಟಹಳಿಗ್ರಾಮಕ್ಕೆ ಗುಂಮಟಪುರವೆಂದು ಹೆಸರಿಟ್ಟನು.

೨೧. ಕೆಲ್ಲಂಗೆಱೆ : ಕೆಲ್ಲಂಗೆಱೆಯು ಜೈನರ ಆದಿತೀರ್ಥವೆಂದೆನಿಸಿತ್ತು. ಗಂಗವಾಡಿಯ ಎಲ್ಲೆಯೊಳಗೆ ಇದ್ದ ಹಳೆಯ ಊರುಗಳಲ್ಲಿ ಒಂದಾದ ಈ ಕೆಲ್ಲಂಗೆರೆಯನ್ನು ಕುರಿತು ಶಾಸನಸಾಮಾಗ್ರಿಯಿದೆ [ಎ.ಕ. ೨ (ಪ) ೪೭೬ (೩೪೫) ೧೧೫೯ ಪು. ೨೮೯ – ೯೦. ಸಾಲು : ೪೫ – ೪೬; ಎ.ಕ. ೯ (ಪ) ಬೇ. ೨೮೮.೯೫೪. ಬಸ್ತಿಹಳ್ಳಿ; ಅದೇ ಬೇ ೩೨೩. ೧೩ ಶ. ಹಳೇಬೀಡು ಪು. ೩೦೬. ಇತ್ಯಾದಿ]. ಈ ಊರು ಪ್ರಸಿದ್ಧವೂ ಪ್ರಾಚೀನವೂ ಆದ ‘ಕೆಲ್ಲ’ ಎಂಬ ಒಂದು ಜೈನ ಮನೆತನದವರಿಂದ ಕೂಡಿತ್ತು, ಆ ಕೆಲ್ಲವಂಶದವರು ಕಟ್ಟಿಸಿದ ಕೆರೆಯೂ ಇಲ್ಲಿತ್ತು. ಜೈನಮನೆತನವಾದ ಕೆಲ್ಲಕುಲದವರು ಕಟ್ಟಿಸಿದ ಕೆರೆಯಿಂದಾಗಿ ಈ ಊರಿಗೆ ಕೆಲ್ಲಂಗೆರೆ ಎಂದು ಹೆಸರಾಯಿತು.

೨೨. ಕೆಲ್ಲಪುತ್ತಿಗೆ : ಮೇಲೆ ೨೧ನೆಯ ಸಂಖ್ಯೆಯಲ್ಲಿ ಹೇಳಿರುವ ಕೆಲ್ಲ ಎಂಬ ಜೈನವಂಶಕ್ಕೆ ಸೇರಿದ ಕೆಲ್ಲರಸರು ನೆಲೆವೀಡು ಮಾಡಿಕೊಂಡು ಆಳಿದ ಒಂದು ಊರು ಈ ಕೆಲ್ಲಪುತ್ತಿಗೆ; ಇದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿದೆ. ತುಳುನಾಡಿನ ಜೈನಮನೆತನಗಳಲ್ಲಿ ಇಂದಿಗೂ ಕೆಲ್ಲ ಎಂಬ ಹೆಸರು ಬಳಕೆಯಲ್ಲಿದೆ. [Narasimha Murthy, P.N.; Some interesting names and terms in the memorial epigraphs from Kellaputtige, Studies place Names – IV].

೨೩. ಕೆಲ್ಲಿಪುಸೂರು – ಕೆಲಸೂರು : ಗಂಗರಸ ಸೈಗೊಟ್ಟ ಶಿವಮಾರನ ಹಳೆಯ ಬಸದಿ ಕೊಡಗುನಾಡ ಕೆಲ್ಲಿ (ಲ್ಲ) ಪುಸೂರು ಎಂಬ ಹಳ್ಳಿಯಲ್ಲಿತ್ತೆಂದು ಶಾಸನ ಹೇಳುತ್ತದೆ [ಎ.ಕ. ೪ (ಪ) ಚಾನ. ೩೪೭. ಏಳನೆಯ ಶತಮಾನ ಕುಲಗಾಣ (ಮೈ ಜಿ. / ಚಾನತಾ.) ಪು. ೨೨೨]. ಇಲ್ಲಿ ಹೇಳಿರುವ ಕೆಲ್ಲಿಪುಸೂರು ಹಳ್ಳಿಕೂಡ, ಹಲ್ಮಿಡಿ ಶಾಸನ (೪೫೦) ಕಾಲದಿಂದ ಪ್ರಸಿದ್ಧ ಜೈನವಂಶವಾದ ಕೆಲ್ಲಕುಲದವರ ಕಾರಣದಿಂದ ರೂಢಿಗೆ ಬಂದಿದೆ. ಈ ಊರಿಗೆ ಈಗ ಕೆಲಸೂರು ಎಂದು ಹೆಸರಾಗಿದೆ. ಇಲ್ಲಿ ಇಂದಿಗೂ ಇರುವ ಏಳನೆಯ ಶತಮಾನದ ಚಂದ್ರಪ್ರಭ ಜಿನಾಲಯವು ಜೀರ್ಣೋದ್ಧಾರಗೊಂಡು ಸುಸ್ಥಿತಿಯಲ್ಲಿದೆ.