೧. ಒಂದು ಶಾಸನದಲ್ಲಿ ಬರುವ ಈ ಸಾಲುಗಳು ಕುತೂಹಲಕಾರಿಯಾಗಿವೆ:

ಶ್ರೀಜಿನಪದ ಪಂಕಜವಿ
ರಾಜಿತ ಮಧುಕರನೆನಿಪ್ಪ ಮಲ್ಲಿ ಕೊಟ್ಟಂ
ಪೂಜಿತವೆನೆ ತೀರ್ತ್ಥಂಕರ
ಭ್ರಾಜಿತ ಪ್ರತಿಕೃತಿಯನುಚಿತ ಕಡಿತಲೆಗೋತ್ರಂ
||
[ಮೈ.ಆ.ರಿ. ೧೯೪೩, ೩೬.೧೩ ಶತಮಾನ. ಸಾಲು ೫]

೧.೧. ಜಿನರಚರಣ ಕಮಲದಲ್ಲಿ ಕಂಗೊಳಿಸುವ ದುಂಬಿಯಂತೆ ಇದ್ದ ಮಲ್ಲಿ ಎಂಬಾತನು ತೀರ್ಥಂಕರರ ಪ್ರಕಾಶಮಾನವಾದ ಬಿಂಬವನ್ನು ದಾನವಾಗಿ ಮಾಡಿಸಿ ಕೊಟ್ಟನು; ಈ ಮಲ್ಲಿಯು ಕಡಿತಲೆಗೋತ್ರಕ್ಕೆ ಸೇರಿದವನು – ಎಂಬುದು ಮೇಲಿನ ಕಂದ ಪದ್ಯದ ಸಾರಾಂಶ.

೨. ‘ಕಡಿತಲೆಗೋತ್ರ’ ಎಂಬುದು ಒಂದು ವಿಶಿಷ್ಟ ಪ್ರಯೋಗ. ‘ಕಡಿತಲೆ’ ಎಂದರೆ ಕತ್ತಿ, ಖಡ್ಗ ಎಂದರ್ಥ; ತಲೆಯನ್ನು ಕಡಿಯುವ ಆಯುಧ ಸಾಧನವೇ ಕಡಿತಲೆ:

            ಸ್ವಸ್ತಿಶ್ರೀ ಜಯಕಾಮನ್ – ವೀರ ಪೆರ್ಬ್ಬಾಣನ್
ಕಡಿತಲೆ ಮಣ್ಡೆ ಮಾಡಿ ತೊಮ್ಭತ್ತೈವರ್ ಇಱೆದೊ

[ಎ.ಕ.೯, ದೊಡ್ಡಬ. ೩೨. ೯೦೦]

೨.೧. ಕಡಿತಲೆಯನ್ನು ವ್ಯಕ್ತಿಯು ಕಡಿತಲೆಗಾಱ (-ಕಾಱ). ಪಂಪ, ನಾಗಚಂದ್ರ, ನಯಸೇನಾದಿ ಹಳೆಗನ್ನಡ ಕವಿಗಳು ಕಡಿತಲೆಯನ್ನೂ ಕಡಿತಲೆಕಾಱನ್ನೂ ಯುದ್ಧವರ್ಣನೆಗಳಲ್ಲಿ ಪ್ರಸ್ತಾಪಿಸಿದ್ದಾರೆ.

೩. ಕಡಿತಲೆಯನ್ನು (ಕತ್ತಿ) ಹಿಡಿದು ಹೋರಾಡುವ ಒಂದು ಮನೆತನದ ಗೋತ್ರದ ಹೆಸರು ಕೂಡ ಹೀಗೆ ‘ಕಡಿತಲೆಗೋತ್ರ’ ಎಂದು ರೂಢಿಗೊಂಡಿರುವುದು ವಿಶೇಷವೂ ಅಪರೂಪವೂ ಆಗಿದೆ; ಕಡಿತಲೆಗೋತ್ರವು ಯುದ್ಧವೀರರ ಗೋತ್ರ ಎಂದಷ್ಟೇ ಶಬ್ದರ್ಥಕ್ಕೆ ಸೀಮಿತವೊ, ಇಲ್ಲವೆ ಇದಕ್ಕೆ ಅರ್ಥವ್ಯಾಪ್ತಿ ಇದೆಯೊ ಎಂಬುದು ಆಲೋಚನೀಯವಾಗಿದೆ.